Sunday, August 30, 2009

ಪ್ರೀತ್ಸೊದ್ ತಪ್ಪಾ?

"ರೀ, ಆ ಕೊನೇಮನೇಲಿ ಒಂದು ಹುಡುಗಿ ಇತ್ತಲ್ಲ, ಕಪ್ಪಗಿದ್ರೂ ಮುಖದಲ್ಲಿ ಖಳೆಯಿದೆ, ಕೃಷ್ಣ ಸುಂದರಿ ಅಂತೆಲ್ಲ ಅಂತಿದ್ರಲ್ಲ ಆ ಹುಡುಗಿ, ಪ್ರೀತ್ಸಿ ಅದ್ಯಾವುದೊ ಹುಡುಗನ ಜತೆ ಓಡಿ ಹೋಗಿದಾಳಂತೆ. ಪಾಪ ಅವರಮ್ಮ ಗೊಳೊ ಅಂತ ಅಳ್ತಾ ಇದಾಳೆ" ಅನ್ನುತ್ತ ಹೊರಗೆ ಹೋದವಳು, ಅಲ್ಲೇ ನಿಂತು ಪಕ್ಕದ ಮನೆ ಪದ್ದು ಜತೆ ಅಂತೆ ಕಂತೆಗಳೆಲ್ಲ ಮಾತಾಡಿ ಬಂದಳು. ನಾನು ಅಲ್ಲೇ ಯೋಚಿಸ್ತಾ ಕೂತಿದ್ದೆ, "ಏನು ನೀವು ಪದ್ದು ಜತೆ ಓಡಿ ಹೋಗೊಕೇ ಏನಾದ್ರೂ ಪ್ಲಾನ ಮಾಡ್ತಾ ಇದೀರಾ, ಹೇಗೆ" ಅಂತ ಕೇಳಿದ್ಲು, ನಾ ತಿರುಗಿ ಕೇಳಿದ್ದು ಒಂದೇ ಪ್ರಶ್ನೇ "ಪ್ರೀತ್ಸೊದ್ ತಪ್ಪಾ?"...

ಸ್ವಲ್ಪ ಹೊತ್ತು ಅವಳಿಗೇನು ಹೇಳಬೇಕು ಹೊಳೀಲೇ ಇಲ್ಲ, ಚಹ ಮಾಡ್ತಾ ಇದ್ದೋಳು, ಸಕ್ಕರೆ ಬದಲಿ ಉಪ್ಪು ಹಾಕಿಯಾಳು ಅಂತ ಸಕ್ಕರೆ ಡಬ್ಬಿ ನಾನೇ ಎತ್ತಿ ಕೊಟ್ಟೆ, "ಆದ್ರೂ ಈ ಲವ್ವು ಗಿವ್ವು ಎಲ್ಲಾ ಯಾಕೋ ಸರಿ ಹೋಗಲ್ಲರೀ" ಅಂತ ವಿಷಯ ತೆಗೆದು ಹಾಕಲು ನೋಡಿದಳು. "ಲವ್ ಅಂದ್ರೇನು?", ನಾ ಪ್ರಶ್ನೇ ಕೇಳಿ ತಲೆ ತಿಂತೀನಿ ಅಂದ್ರೆ, ಇವರು ನಂಗೇ ಕೇಳ್ತಿದಾರಲ್ಲ ಅನ್ನೋ ಹಾಗೆ ನೋಡಿದವಳು, "ಲವ್ ಅಂದ್ರೆ ಪ್ರೀತಿ, ಪ್ರೇಮ..." ಅಂದ್ಲು, "ಮತ್ತೇ" ಅಂದೆ, "ರೀ ಇನ್ನೂ ಜಾಸ್ತಿ ಗೊತ್ತಿಲ್ಲ ಕಪಾಟಿನಲ್ಲಿ ಡಿಕ್ಷನರಿ ಇದೆ, ಬೇಕಾದ್ರೆ ತೆಗೆದು ನೋಡಿ" ಅಂದಳು. "ಹಾಗಾದ್ರೆ ಪ್ರೀತ್ಸೊದು ಎಲ್ಲ ಸರಿ ಹೋಗಲ್ಲ ಅನ್ನು, ನನ್ನ ಪ್ರೀತಿಸಬೇಡ ಹಾಗಾದ್ರೆ" ಅಂತಂದೆ, "ಯಾಕೆ ನಾನೇನು ನೀವ ಕೆಟ್ಟೊದ್ನಾ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ ಅಂತ ಯಾರ್ ಯಾರನ್ನೊ ಪ್ರೀತ್ಸೋಕೇ" ಅಂತ ಹುಸಿ ಮುನಿಸಿದಳು, "ಅಂದ್ರೆ ನಾನು ಅವರನ್ನ ಪ್ರೀತಿಸ್ತೀನಿ..." ಮರುಪ್ರಶ್ನೆ ಎಸೆದೆ, "ಇಲ್ಲಾ.. ಹಾಗೇನಿಲ್ಲ, ನೀವ ಯಾರನ್ನ ಪ್ರೀತಿಸ್ತೀರಿ ನಂಗೆ ಗೊತ್ತು" ಅಂದ್ಲು ಕಳ್ಳ ನೋಟದಿ ನೋಡುತ್ತ. "ಯಾರಾ ಬೆಡಗಿ" ಅಂದೆ, ನಾಚಿ "ಛೀ ಹೋಗ್ರೀ ಮುಂಜಾನೆ ಮುಂಜಾನೆ ಬೇರೆ ಕೆಲ್ಸ ಇಲ್ವಾ ನಿಮಗೆ" ಅಂತ ಬಯ್ಕೊಂಡು ಟೀ ಕಪ್ಪು ತಂದು ಕೈಲಿಟ್ಟಳು. "ಹಾಗಾದ್ರೆ ಪ್ರೀತ್ಸೊದ ತಪ್ಪಾ?" ಮತ್ತದೇ ಪ್ರಶ್ನೆ, "ಈ ಲವ್ ಎಲ್ಲ ಹುಚ್ಚು, ಆದ್ರೆ ನೀವ ನನ್ನ ಪ್ರೀತ್ಸೊದು ತಪ್ಪಲ್ಲ ಬಿಡಿ" ಅಂತ ಅರ್ಥ ಮಾಡಿಸ ನೋಡಿದವಳು, ಒಳಗೊಳಗೆ ತಾನೇ ಗೊಂದಲಕ್ಕೊಳಗಾದಳು. "ಮತ್ತೆ ನೀನೇ ಲವ ಅಂದ್ರೆ ಪ್ರೀತಿ ಅಂದೆ, ಈಗ ನೋಡಿದ್ರೆ, ನಾನ ಮಾಡಿದ್ರೆ ಸರಿ ಅಂತೀಯ, ಆ ಹುಡುಗಿ ಮಾಡಿದ್ರೆ ತಪ್ಪು ಅಂತೀಯ, ನಾನೇನು ದೊಣ್ಣೆನಾಯಕನಾ ನನಗೊಂದು ನ್ಯಾಯ, ಊರಿಗೊಂದು ನ್ಯಾಯಾ ಮಾಡೋಕೆ" ವಾದಕ್ಕಿಳಿದೆ. "ರೀ ಅವಳದು ಹುಚ್ಚು ಪ್ರೀತಿ ಅದಕ್ಕೇ ಹಾಗಂದಿದ್ದು", ಸಿಡುಕಿದಳು. "ಓಹ್ ಅದರಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನು" ಅಂತಂದರೆ, "ಎಷ್ಟು ವಿಧ ಅಂತ ಬೇಕಿದ್ರೆ,
ಪ್ರೇಮಲೋಕದ ಹೀರೊ ರವಿಚಂದ್ರನ್ ಹತ್ರ ಹೋಗಿ ಕೇಳಿ ಹೇಳ್ತಾರೆ" ಅಂತ ಮಾರುತ್ತರವಿಟ್ಟಳು. ನಾ ಹೇಳುವುದು ಹೇಳಿಯಾಗಿತ್ತು ಇನ್ನು ಅವಳ ಚಿಂತನೆಗೆ ಬಿಟ್ಟು, ನಾ ಹೊರ ನಡೆದೆ.

ಟೀವೀ ಆನ್ ಮಾಡಿ ಕೂತರೆ, ಎಲ್ಲಾ ಚಾನಲ್ಲಿನಲ್ಲಿ ಪ್ರೀತಿ, ಪ್ರೇಮ... ಯಾರಿಗೂ ಅದೇನು ಅಂತ ಪೂರ್ಣ ಗೊತ್ತಿಲ್ಲ ಆದ್ರೂ ಫಿಲ್ಮ್, ಧಾರವಾಹಿ ನೂರು, ಕಾಲೇಜು ಹುಡುಗಿ, ಹುಡುಗ ಕರೆತಂದು ಪ್ರೇಮ ಅರಳಿತು ಅಂತ ತೋರಿಸಿಬಿಡ್ತಾರೆ. ಬೇಜಾರಾಗಿ ಆಫ್ ಮಾಡಿ ಕೂತಿದ್ದೆ, ಎಣಿಸಿದಂತೆ ಇವಳು ಬಂದಳು, ವಿಷಯ ತಲೆ ತಿಂತಿದೆ ಅದಕ್ಕೆ ಇಲ್ಲಿ ಬಂದಿದಾಳೆ ಅಂತ ಗೊತ್ತು, ಹತ್ತಿರ ಕೂತು, ನನ್ನ ಕೈಲಿದ್ದ ನಿಶ್ಚಿತಾರ್ಥ ಉಂಗುರ ಹಾಕಿ ತೆಗೆಯೋದು ಮಾಡುತ್ತ ಕೂತಳು, ಉಂಗುರ ತೆಗೆದು ಅವಳ ಕೈಗಿತ್ತೆ, ಏನು ಮಾತಾಡು, ಸಾಕು ಒಳಗೊಳಗೆ ತಳಮಳಿಸಿದ್ದು ಅನ್ನುವಂತೆ. "ರೀ ನಿಶ್ಚಿತಾರ್ಥದ ಉಂಗುರ ಅದು ಪ್ರೀತಿಯಿಂದ ಹಾಕಿದ್ದು, ಏನ್ ಹಾಗೆ ತೆಗೆದುಹಾಕ್ತೀರಾ" ಅಂತ ಮುಖ ಕೆಂಪಾಗಿಸಿದಳು, "ಒಹೋ ಉಂಗುರ ಹಾಕಲು ಪ್ರೀತಿ ಬೇಕು" ಅಂತ ಉದ್ಗಾರ ತೆಗೆದೆ. "ಹೂಂ ಮತ್ತೆ ನಮ್ಮ ಚಿಕ್ಕಪ್ಪನ ಮಗಳಿಗೆ ಅವಳ ಗಂಡ ಪ್ರೀತಿಯಿಂದ ಚಿನ್ನದ ನೆಕ್ಲೇಸ್ಸು, ಬಳೆ ತಂದುಕೊಟ್ಟೀದಾನೆ" ಅಂದ್ಲು. "ಪ್ರೀತಿಯನ್ನ ಚಿನ್ನದಲ್ಲಿ ಅಳೆಯಬಹುದು ಅಂದ್ರೆ, ನೀ ನನ್ನ ಒಂದು ಹತ್ತು ಗ್ರಾಮ್ ಪ್ರೀತಿಸ್ತೀಯಾ ಹಾಗಾದ್ರೆ, ಈ ಉಂಗುರ ಚೈನು ಅಷ್ಟಾಗ್ತದೆ" ಅಂತಂದೆ, "ಹೋಗ್ಲೀ ನೀವೇ ಹೇಳ್ರಿ ಪ್ರೀತಿ ಅಂದ್ರೆ ಏನು ಅಂತ, ನಾನೇನ್ ಹೇಳಿದ್ರೂ ತಪ್ಪೇ ನಿಮಗೆ, ಮೊದಲಿನಂಗೆ ಪ್ರೀತೀನೇ ಇಲ್ಲ" ಮತ್ತವಳ ಮಾತಿನಲ್ಲಿ ಪ್ರೀತಿ ಇಣುಕಿತ್ತು, ಆದರೆ ಈ ಸಾರಿ ಏನಾದ್ರೂ ಅದನ್ನು ಉದ್ಧರಿಸಿ ಏನಾದ್ರೂ ಹೇಳಿದ್ರೆ, ಏನಾಗುತ್ತೊ ಗೊತ್ತಿಲ್ಲ ಅನ್ನೋ ಭೀತಿ ಆಗಿ ಸುಮ್ಮನೇ "ನಂಗೂ ಗೊತ್ತಿಲ್ಲ" ಅಂದೆ. "ಗೊತ್ತಿಲ್ಲ ಅಂದ್ರೆ ಮುಂಜಾನೆಯಿಂದ ನನ್ನ ತಲೆ ಯಾಕೆ ತಿನ್ಬೇಕಿತ್ತು, ಈಗ ಏನಾದ್ರೂ ಸರಿ ಹೇಳಲೇಬೇಕು" ಅಂತ ಹಠ ಹಿಡಿದಳು. "ನಿನ್ನ ಫ್ರೆಂಡ ಪ್ರೀತಿ ಅಂತ ಇದ್ಲಲ್ಲ ಅವಳ ಪ್ರೀತಿ ಎಲ್ಲಿಗೆ ಬಂತು, ಅವಳನ್ನ ಕೇಳಿದ್ರೆ ಹೇಳ್ತಾಳೆ, ಎಕ್ಸಪರ್ಟ ಅವಳು" ಅಂದೆ, "ಅಯ್ಯೊ ಅವಳಾ, ಅವಳ ಹೆಸ್ರು ಪ್ರೀತಿ ಅಂತ ಅದಕ್ಕೇ ಇಟ್ಟಿದ್ದು, ಸ್ಕೂಲಲ್ಲೇ ನಾಲ್ಕು ಬಾಯ್ ಫ್ರೆಂಡ್ಸ ಇದ್ರು ಅವಳಿಗೆ, ಲವ್ವೇ ಲೈಫಾಗಿತ್ತು, ಬಟ್ಟೆ ಬದಲಿಸಿದ ಹಾಗೆ ಲವರ್ಸ ಬದಲಾಯಿಸ್ತಾ ಇದ್ಲು, ಫೋನು ಮಾಡಿದಾಗ ಒಮ್ಮೆ ಹೊಸ ಹುಡುಗನ ಹೆಸ್ರು, ಎಷ್ಟು ಅಂದ್ರೆ, ಹುಡುಗರ ಹೆಸರು ರಿಪೀಟ ಆಗಿ ಹಳೆ, ಹೊಸ ಅಂತ ಹೆಸರಿನ ಹಿಂದೆ ಸೇರಿಸಬೇಕಾಗಿತ್ತು ಅಷ್ಟು ಜನ... ಅವಳನ್ನೇನ್ ಕೇಳ್ತೀರಾ" ಅಂತ ಅವಳ ಜನ್ಮ ಜಾಲಾಡಿದಳು, "ಹೋಗ್ಲಿ ನನ್ನ ಲವ್ ಮಾಡ್ತಾಳ ಅಂತಾನಾದ್ರೂ ಕೇಳ್ತಿದ್ದೆ" ಅಂದೆ, "ಪ್ರೀತ್ಸೊಕೆ ಅಂತ ಮದುವೆಯಾಗಿ ಮಡದಿ ಅಂತ ನಾನಿಲ್ವಾ, ಅವಳ್ಯಾಕೆ ಬೇಕು ನಿಮ್ಗೆ" ಅಂತ ದುರುಗುಟ್ಟಿದಳು, "ಹಾಗಾದ್ರೆ, ಪ್ರೀತ್ಸೊಕೆ ಮದುವೆ ಆಗಬೇಕು, ಮದುವೆ ಆದಮೇಲೆ ಮಡದಿಯನ್ನೇ ಪ್ರೀತಿಸ್ಬೇಕು" ಕೇಳಿದಷ್ಟು ಕ್ಲಿಷ್ಟವಾಗುತ್ತಾ ನಡೆದಿತ್ತು ವಿಷಯ.

"ನಂಗೆ ಅಪ್ಪ ಅಮ್ಮ ಅಂದ್ರೆ ತುಂಬಾ ಪ್ರೀತಿ ಅಂತೀವಲ್ಲ ಅದೂ ಪ್ರೀತೀನಾ, ಅವರನ್ನ ಪ್ರೀತ್ಸೊದ ತಪ್ಪಾ" ಅಂತ ಇವಳು ನನ್ನ ಪ್ರಶ್ನೆ ನನಗೆ ತಿರುಗಿ ಕೊಟ್ಟಳು, "ಹಾಂ ಈಗ ಕರೆಕ್ಟ ವಿಷಯಕ್ಕೆ ಬಂದೆ ನೋಡು, ಪ್ರೀತ್ಸೊದು ತಪ್ಪಾ, ಸರೀನಾ ಅಂತ ಹೇಳಬೇಕೆಂದರೆ, ಪ್ರೀತಿ ಅನ್ನೋದು ಏನು ಅನ್ನೊದರ ಮೇಲೆ ನಿಂತಿದೆ" ಅಂದೆ. "ಅದಕ್ಕೇ ನೀವು ಆಗಲಿಂದ ಪ್ರೀತಿ ಅಂದ್ರೇನು ಅಂತ ಕೇಳ್ತಾ ಇದ್ದದು, ಸರಿ ನಂಗಂತೂ ಏನೂ ತಿಳೀತಿಲ್ಲ" ಅಂತ ಅಸಹಾಯಕತೆ ಪ್ರದರ್ಶಿಸಿದಳು. "ಮಡದಿಗೆ ಮನೇಲಿ ಮುದ್ದು ಕೊಡೊದು ಪ್ರೀತೀನಾ, ಲಾಲಬಾಗನಲ್ಲಿ ಲವರ್‌ಗೆ ಲೋಚಲೊಚ ಲಿಪ್‌ಕಿಸ್ಸು ಕೊಡೋದು ಪ್ರೀತೀನಾ" ಅಂತ ನಿರ್ಭಿಡೆಯಿಂದ ಕೇಳಿದೆ, ಅಷ್ಟೆ ನೇರವಾಗಿ ಅವಳೂ "ಎರಡಕ್ಕೂ ಲವ್ ಅಂತನೇ ಅಂತಾರೆ, ಆದ್ರೆ ನಂಗೊತ್ತಿಲ್ಲ ಯಾವುದು ಸರಿ ಅಂತ" ಹೇಳಿದಳು. "ಆಗಲಿಂದ ಹೇಳಿದ್ದು ಇದನ್ನೇ, ಪ್ರೀತಿಯ ನಿರ್ಧಿಷ್ಟ ವ್ಯಾಖ್ಯಾನ ಆಗುವವರೆಗೆ ಅದು ಸರಿ ತಪ್ಪು ಅಂತ ಹೇಗೆ ಹೇಳೊದು, ಈ ಸಂದಿಗ್ಧತೆ, ಅಸ್ಪಷ್ಟತೆ ಇರುವವರೆಗೆ ಅದಕ್ಕೆ ಉತ್ತರ ಏನು? ಪ್ರೀತಿ ಬಗ್ಗೆ ಬರೆದರೆ ಪ್ರಬಂಧ ಮಂಡಿಸುವಷ್ಟು ವಿಷಯವಿದೆ" ಅಂತ ಕೈಚೆಲ್ಲಿದೆ, "ಹಾಗಾದ್ರೆ, ಆ ಹುಡುಗಿ ಓಡಿ ಹೋಗಿದ್ದು ತಪ್ಪು ಸರಿ ಅಂತ ಹೇಳೊಕಾಗಲ್ಲ" ಅಂದ್ಲು. "ಹೇಳಬಹುದು, ಆದರೆ ಪ್ರೀತಿ ಬಗ್ಗೆ ಹೇಳೊಕೆ ಆಗಲ್ಲ, ಅವರು ಸುಖವಾಗಿ ಬಾಳಿದರೆ ಅಲ್ಲಿ ನಿಜವಾಗಿ ಪ್ರೀತಿ ಇತ್ತು, ಇಲ್ಲಾಂದ್ರೆ ಇಲ್ಲ, ಏನೇ ಆದರೂ ಆ ಹುಡುಗಿ ಮಾಡಿದ್ದು ನನ್ನ ಮಟ್ಟಿಗೆ ತಪ್ಪೇ" ಅಂದೆ "ಯಾಕೆ, ಪ್ರೀತಿ ಕುರುಡು ಅಂತಾರಲ್ಲ ಯಾರ ಮೇಲೊ ಬಂದು ಬಿಡುತ್ತದೆ" ಅಂದ್ಲು, "ಪ್ರೀತಿ ಕುರುಡಾ? ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿದವರು ನಾವು, ಆ ಬಂಧನಕ್ಕಿರಬೇಕಾದ ಗಟ್ಟಿತನ ಇಲ್ಲದೇ ಹುಳುಕು ಕಾಣದಿರಲಿ ಅಂತ... ಹದಿಹರೆಯದ ಹುಡುಗ ಹುಡುಗಿಯರದು ಇದೇ ತಪ್ಪು, ಹುಚ್ಚು ಆಕರ್ಷಣೆಯೇ ಪ್ರೀತಿ ಅಂದುಕೊಂಡು, ಪ್ರೀತಿ ಕುರುಡು, ಬಾಲಿಶ, ಮುಗ್ಧ ಅಂತ ಹಣೆಪಟ್ಟಿ ಕಟ್ಟಿಬಿಡುತ್ತಾರೆ, ಅಲ್ಲಿರುವುದು ಪ್ರೀತಿ ಅಲ್ಲ ಅದು ಆಕರ್ಷಣೆ" ಅಂದರೆ "ಆದ್ರೆ ಆಕರ್ಷಣೆಯಿಂದಲೇ ಪ್ರೀತಿ ಅಲ್ವೇ" ಅಂದ್ಲು. "ಅದೇ ಆಕರ್ಷಣೆಯೇ ಪ್ರೀತಿ ಅಲ್ಲವಲ್ಲ, ಹದಿಹರೆಯ ಹಾಗೇ, 'ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು' ಅಂತ ಕವಿಗಳು ಸುಮ್ನೇ ಹೇಳಿದ್ದಲ್ಲ, ಅಲ್ಲಿ ಆಕರ್ಷಣೆ ಸಹಜ, ಅದು ಪ್ರೀತಿ ಅಲ್ಲ ಅಂತ ತಿಳಿದರೆ ಉತ್ತಮ" ಅಂದೆ. "ಹೂಂ ಹೂಂ... ಮತ್ತೆ ನಿಮಗೆ ಯಾರ ಮೇಲೆ ಆಕರ್ಷಣೆ ಬೆಳೆದಿತ್ತು?" ಅಂತ ಹುಬ್ಬು ಹಾರಿಸಿದ್ಲು, ನಸು ನಕ್ಕೆ. "ಹೇಳ್ರೀ..." ಅಂತ ತಿವಿದಳು "ಲೇ ಎಣಿಕೆ ಮಾಡ್ತಾ ಇದೀನೀ ತಾಳೇ" ಅಂದೆ. "ಹಾಂ" ಅಂತ ಬರಿಗೈಯಲ್ಲಿ ಪಟ ಪಟ ಹೊಡೀತಾ ಇದ್ಲು ಪ್ರೀತಿಯಿಂದ... "ಪ್ರೀತಿಸ್ತಾ ಇರೋದು ನಿನ್ನ ಮಾತ್ರ, ಪ್ರೀತ್ಸೊದ ತಪ್ಪಾ" ಅಂದೆ... ಆ ತುಟಿಯಿಂದ ಉತ್ತರ ಬರಲಿಲ್ಲ... ಬೇರೆ ಎನು ಸಿಕ್ಕಿತು ಇಲ್ಲಿ ಹೇಳಬೇಕಿಲ್ಲ...

ಪ್ರೀತಿ ಅನ್ನೊ ಪದಕ್ಕೆ ಎನು ಅರ್ಥ ಎಂದು ಹೇಳೊದೆ ಕಷ್ಟ ಹಾಗಿರುವಾಗ, ಆಕರ್ಷಣೆಯೇ ಪ್ರೀತಿ ಅಂತ ಅಂದುಕೊಳ್ಳುವವರನ್ನು ನೋಡಿದ್ರೆ ಬೇಜಾರಾಗುತ್ತದೆ, ಪ್ರೀತಿಗೆ ಒಂದು ರೀತಿ ಬದ್ಧತೆ ಬೇಕು, ನಂಬಿಕೆ ಬೇಕು, ನಿಸ್ವಾರ್ಥ ಮನೊಭಾವಬೇಕು, ಅದೆಲ್ಲ ಎಲ್ಲೂ ಕಾಣುತ್ತಿಲ್ಲ, ಇಲ್ಲ ಅಂತ ನಾ ಹೇಳುತ್ತಿಲ್ಲ, ಆದರೆ ಎಲ್ಲೊ ಕೆಲವೊಂದು ನೂರಕ್ಕೊಂದು ಉದಾಹರಣೆ ಸಿಕ್ಕೀತು. ಈಗ ಏನಾಗಿದೆ ಅಂದ್ರೆ, ಮೊಬೈಲುಗಳಲ್ಲಿ ಎಸ್ಸೆಂಸ್ಸು ಫ್ರೀ ಅಂತ ದಿನಕ್ಕೆ ನೂರು ಸಂದೇಶ ಕಳಿಸಿ, ಆಕಾಶದೆತ್ತರಕ್ಕೆ ನಮ್ಮ ಪ್ರೀತಿ, ಸಮುದ್ರದಾಳದಷ್ಟು ಆಳವಾಗಿ(ಡೀಪ್ ಲವ್) ಪ್ರೀತಿಸ್ತೀನಿ ಅಂತೆಲ್ಲ ಮೇಸುಜು ಬರೆದು (ಅಕಾಶ ಮುಟ್ಟಿ ಬಾ ಅಂತ ಹೇಳ್ಬೇಕು, ಇಲ್ಲ ಸಮುದ್ರಕ್ಕೆ ಹಾರಿ ಆಳ ಅಳೆದು ಬಾ ಅನ್ಬೇಕು!), ಆರ್ಕುಟ ಫೇಸಬುಕನಲ್ಲಿ ಲವ್ಸ ಲವ್ಸ ಯೂ ಅಂದು, ಜೀ-ಟಾಕ, ಯಾಹೂನಲ್ಲಿ ಹಹಹ ಅಂತ ಸುಮ್‌ಸುಮ್ನೇ ನಕ್ಕು, ಮೇಲ್‌ನಲ್ಲಿ ಹೂವು, ಹಾಡು ಅಂತ ಪತ್ರಗಳ ಮಳೆಗರೆದು... ಲವ್ ಅನ್ಕೊಂಡು ಬಿಡ್ತಾ ಇದಾರೆ. ಇದೆಲ್ಲ ಪ್ರೀತಿ ಅನ್ಕೊಂಡು, ಅಲ್ಲ ಅಂತ ಆಮೇಲೆ ತಿಳಿದು, ಇಲ್ಲ ಇನ್ನು ಬೇರೆ ಯಾರೊ ಕಡೆಗೆ ಆಕರ್ಷಣೆಯಾಗಿ, ರಕ್ತದಲ್ಲಿ ಪತ್ರ ಬರೆದು(ತಮ್ಮದೇ ಇಲ್ದಿದ್ರೂ ಕೊಳೀದು ಆದೀತು), ಅತ್ತು ಕರೆದು, ಇಲ್ಲ ಸತ್ತೇ ಹೋಗಿಬಿಟ್ಟರೆ, ಇದನ್ನೇ ಪ್ರೀತಿ ಅಂದು... ಪ್ರೀತ್ಸೊದ್ ತಪ್ಪಾ ಅಂದ್ರೆ ಏನು ಹೇಳಬೇಕು...
ಈ ಅಟೊಗಳ ಹಿಂದೆ ಚೂರಿ ಚುಚ್ಚಿದ ಹೃದಯದ ಚಿತ್ರಗಳ ಹಿಂದೆ ಒಂದು ಚಿತ್ರಕಥೆಗಾಗುವಷ್ಟು ಕಥೆಯಿರುತ್ತದೆ ಕೇಳಿ ನೋಡಿ... ಈ ಮನಸ್ಸು ದುಂಬಿಯ ಹಾಗೆ, ಇಂದು ಗುಲಾಬಿ ಅಂದ ನೋಡಿದ್ರೆ, ನಾಳೆ ಸಂಪಿಗೆ ಸುವಾಸನೆ ಬಂತು ಅಂತ ಅತ್ತ ಹೊರಟು ಬಿಡುತ್ತದೆ, ಅದಕ್ಕೇ ಏನೊ ಹಿರಿಯರು ಮದುವೆ ಅಂತ ಮಾಡಿ, ಪ್ರೀತಿಸಿಕೊಳ್ಳಿ ಅಂದು ಬಿಡ್ತಾ ಇದ್ದಿದ್ದು.

ಸಂಜೆ ಗಾರ್ಡನ್ನಿನಲ್ಲಿ ಸುತ್ತೋಕೆ ಹೋಗಿದ್ವಿ, ಅಮ್ಮನ ವಯಸ್ಸಿನ ಅಂಟಿಯೊಬ್ಬರು ಎದುರು ಬಂದು, "ನಿಮ್ದು ಲವ್ ಮ್ಯಾರೇಜಾ? ಏನು ಅನ್ಯೊನ್ಯವಾಗಿದೀರಾ" ಅಂದ್ರು... ಇಬ್ರೂ ಒಬ್ಬರ ಮುಖ ಒಬ್ರು ನೋಡ್ಕೊಂಡು ನಗುತ್ತ "ಒಂದ್ರೀತಿ ಹಾಗೇನೆ, ಆದ್ರೆ ಮ್ಯಾರೇಜ ಆದ್ಮೇಲೆ ಲವ್ ಮಾಡ್ತಾ ಇದೀವಿ" ಅಂದ್ವಿ. "ನನ್ನ ಮಗಾನೂ ಇದಾನೇ, ಲವ್ ಲವ್ ಅಂತ ಅದ್ಯಾವ್ದೋ ಹುಡುಗೀ ಹಿಂದೆ ಸುತ್ತತಾ ಇದಾನೇ" ಅಂತ ಗೊಣಗುತ್ತ ನಡೆದರು, ಮುಂದೆ ಹೊರಟಿದ್ವಿ, ಇವಳು ತಿರುಗಿ "ಅಂಟೀ ಪ್ರೀತ್ಸೊದ್ ತಪ್ಪಾ?" ಅಂತ ಕೇಳಿದ್ಲು... ಅವರಿಗೆ ಏನು ಹೇಳ್ಬೇಕೊ ತಿಳೀಲೇ ಇಲ್ಲ... ನಗ್ತಾ ಹೊರಟೇ ಹೋದ್ರು, ಇವಳು ನನ್ನ ಮುಖ ನೋಡಿ ನಗ್ತಾ ಇದ್ಲು. "ಏನೇ ಅನ್ನು ಕಣೇ, ಅಂಟೀನಾ ಪ್ರೀತ್ಸೊದು ತಪ್ಪೇ!!!" ಅಂತ ತರಲೇ ಮಾಡಿದೆ, ಹಿಡಿದ ಅಂಗೈ ಚಿವುಟಿದ್ಲು ಪ್ರೀತಿಯಿಂದ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/preetsod-tappaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, August 23, 2009

ಮದುವೆ ಯಾಕಾಗಬೇಕು?

ಮಧ್ಯರಾತ್ರಿ ಹನ್ನೆರಡಾಗಿತ್ತು, ಕರೆಂಟ ಬೇರೆ ಇಲ್ಲ, ನರಿ ಊಳಿಟ್ಟಹಾಗೆ ಶಬ್ದ, ನಡನಡುವೆ ಸಿಳ್ಳೆ ಹಾಕಿದ ಸದ್ದು, ಒಳ್ಳೆ ಹಾರರ(ಭಯಾನಕ) ಫಿಲ್ಮ ಹಿನ್ನೆಲೆ ಸಂಗೀತದಂತೆ... ಮಲಗಿದಲ್ಲೇ ಬೆವರಿದೆ, ಆದರೂ ಪಕ್ಕದಲ್ಲಿ ಇವಳಿದ್ದಾಳಲ್ಲ ಅಂತ ಖಾತ್ರಿ ಮಾಡಿಕೊಂಡು ಪುಕ್ಕುಲು ಮನಸ್ಸಿಗೆ ಧೈರ್ಯ ತಂದುಕೊಂಡು, ಏನದು ನೋಡೇ ಬಿಡುವಾ ಅಂತ ಮೇಲೆದ್ದೆ, ಹಾಸಿಗೆಯಿಂದಿಳಿದು ಶಬ್ದಬರುವ ದಿಕ್ಕಿನೆಡೆಗೆ ನಡೆಯುತ್ತಿದ್ದರೆ ಒಮ್ಮೆಲೇ ಅಕಸ್ಮಾತ "ಏನಾಯ್ತು" ಯಾರೊ ಕರೆದ ಹಾಗಾಯ್ತು, ಮೋಹಿನಿ ಹಾಗೆ! ಬೆಚ್ಚಿದೆ... ಎದೆ ಢಬ್ ಢಬ ಬಡ್ಕೊತಾ ಇದ್ರೆ... ಕರೆದವ್ಳು ಬೇರೆ ಯಾರೂ ಅಲ್ಲ ನನ್ನ ಮನಮೋಹಿನಿ, ನನ್ನಾಕೆಯೇ, ಅಬ್ಬ ಬದುಕಿದೆಯಾ ಬಡಜೀವಾ ಅಂತಂದುಕೊಂಡು, ಸಾವರಿಸಿಕೊಂಡು "ಸದ್ದು ಕೇಳಿಸ್ತಾ ಇದೆಯ" ಅಂದೆ, ಯಾವುದೊ ಮೋಹಿನಿ ನನ್ನಷ್ಟೇ ಕಾಡುತ್ತಿದ್ದರೆ ಎನ್ ಮಾಡೊದು, "ಹಾಂ ಕೇಳಿಸ್ತಿದೆ", ಒಹ್ ಹಾಗಾದ್ರೆ ಅವಳಿಗೂ ಕೇಳ್ತಿದೆ, "ಅದೇ ಏನು ಅಂತ ನೋಡೊಣ ಅಂತ ಹೊರಟಿದ್ದೆ ಬ್ಯಾಟರಿ ಎಲ್ಲಿದೆ" ಅಂದೆ. "ರೀ ಅದು ನಮ್ಮಪ್ಪ ಗೊರಕೆ ಹೋಡೀತಾ ಇದಾರೆ" ಅಂದ್ಲು, ಮನಸ್ಸು ನಿರಾಳವಾಯ್ತು. ಹೀಗೆ ರಾತ್ರಿ ಎಚ್ಚರವಾದ್ರೆ ಮತ್ತೆ ನಿದ್ರೆ ಬರಲು ಘಂಟೆ ಸಮಯವೇ ಬೇಕು, ಮರಳಿ ಮಲಗಿದ್ದೆ, ಇವಳು ತಿವಿದೆಬ್ಬಿಸಿ ಕೇಳಿದ್ಲು "ರೀ ಮದುವೆ ಯಾಕಾಗಬೇಕು?". #$@*%*@$# ಎಲ್ಲ ಕಣ್ಣ ಮುಂದೆ ತಿರುಗಾಡಿತು.

ಅಲ್ಲಾ ಮಧ್ಯರಾತ್ರಿ ನಿದ್ರೆ ಬರದೇ ಹೊರಳಾಡುತ್ತಿರಬೇಕಾದ್ರೆ, ಮಡದಿ ಎಬ್ಬಿಸಿ ಹೀಗೆ ಕೇಳಿದ್ರೆ ಇನ್ನೇನಾಗಬೇಡ. "ಹಾಂ!! ಏನಿಲ್ಲ ಮದುವೆ ಆಗಿ, ಮಾವ ಮನೇಲಿ ಬಂದು ಮಲಗಿ, ಹೀಗೆ ಗೊರಕೆ ಹೊಡೀಲಿ ಅಂತ ಆಗಬೇಕು" ಅಂದೆ. "ರೀ ನಿಜ ಹೇಳ್ರೀ" ಅಂತ ಗೋಗರೆದಳು. "ಲೇ ಮೊದಲೇ ನಿದ್ರೆ ಬರ್ತಾ ಇಲ್ಲ ಅಂತ ನಾನು, ಮಧ್ಯರಾತ್ರಿ ನಿಂದೊಳ್ಳೆ ಕಾಟ ಆಯ್ತಲ್ಲ" ಅಂತ ತಿರುಗಿ ಮಲಗಿದೆ, ತಲೇಲಿ ಹುಳು ಬಿಟ್ಟ ಹಾಗೆ ಆಗಿತ್ತು, ಅದೇ ವಿಷಯ ಕೊರೆತ ಶುರುವಾಯಿತು. ಇವಳಪ್ಪನ ಗೊರಕೆ ಒಂದೇ ಅಲ್ದೇ ಇದೂ ನಿದ್ರೆ ಹಾಳು ಮಾಡಲು ಸೇರಿಕೊಂಡಿತು. ಅವಳೆಡೆಗೆ ತಿರುಗಿ ನಾನೂ ಕೇಳಿದೆ "ಹೌದು ಯಾಕಾಗಬೇಕು" ಅಂತ, ಅವಳು ಗಲ್ಲಕ್ಕೆ ಕೈಕೊಟ್ಟು ಮೊಣಕೈ ಮೇಲೂರಿ ಮಲಗಿದಲ್ಲಿಂದಲೇ, "ನಾನೂ ಅದನ್ನೇ ಕೇಳಿದ್ದು" ಅಂದ್ಲು.

ಹಾಗೂ ಹೀಗೂ ಯೋಚಿಸಿ ಯೋಚಿಸಿ ಮಲಗಿರಬೇಕು, ಮುಂಜಾವು ಇನ್ನೇನು ಸ್ವಲ್ಪ ನಿದ್ರೆ ಬಂದಿರಬೇಕು, ಎಬ್ಬಿಸಿದವಳ ಮೊದಲ ಪ್ರಶ್ನೆ ಮತ್ತದೇ, ನಾನೇನು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಂಚಿಯಲ್ಲಿ ಕಟ್ಟಿಕೊಂಡು ತಿರುಗುತ್ತಿದ್ದೇನೆ ಅನ್ನೊ ಹಾಗೆ, ಇಕೊ ತೆಗೆದುಕೊ ಅಂತ ತೆಗೆದು ಕೊಡಬೇಕೇನೊ. "ಗೊತ್ತಿಲ್ಲ ಹೋಗೆ" ಅಂದೆ, "ಮತ್ತೆ ನೀವ್ಯಾಕೆ ಮದುವೆ ಆಗಿದ್ದು" ಅಂದ್ಲು, ಮೊದಲೇ ರಾತ್ರಿಯೆಲ್ಲ ನಿದ್ರೆಯಿಲ್ಲ ಹೀಗೆ ಜೊಂಪು ತೆಗೆದುಕೊಳ್ಳುವಾಗ ಎಬ್ಬಿಸಿದ್ರೆ, ರೇಜಿಗೆದ್ದು "ನಿಜವಾಗ್ಲೂ ಮದುವೆ ಆಗಲೇಬಾರದು, ದೊಡ್ಡ ತಪ್ಪು ಆಯ್ತು ಕಣೇ, ಆಗಲೇಬಾರದಿತ್ತು, ನನ್ನೀ ಮಹಾಪರಾಧವನ್ನು ಮನ್ನಿಸಿಬಿಡು ಮಹಾತಾಯಿ, ಮಲಗಲು ಬಿಡು" ಅಂತ ಬೇಡಿಕೊಂಡೆ. "ಆಗಿದ್ದು ಆಗಿ ಹೋಯ್ತು, ಈಗ ಯಾಕೆ ಆಗಬೇಕು ಅದನ್ನ ಹೇಳಿ" ಮತ್ತದೇ ರಾಗ. "ಆಗಿ ಹೋದ ಮೇಲೆ ಆ ಮಾತ್ಯಾಕೆ,
ಈಗೇನು ನಿನಗೆ ಡಿವೊರ್ಸ್ ಬೇಕಾ, ಪೇಪರು ಕೊಡು ಎಲ್ಲಿ ಸೈನ್ ಬೇಕೊ ಅಲ್ಲಿ ಮಾಡ್ತೀನಿ, ಹೆಬ್ಬೆಟ್ಟು ಒತ್ತಬೇಕಾ, ಹೆಬ್ಬೆಟ್ಟು ಯಾಕೆ ಇಡೀ ಕೈ ಒತ್ತುತ್ತೀನಿ ಬೇಕಿದ್ರೆ" ಅಂತ ಹಾರಾಡಿದೆ, "ನಾನ್ ನಿಮ್ಮನ್ನ ಬಿಟ್ಟು ಕೊಡ್ತೀನಾ, ಅದೆಲ್ಲ ಏನೂ ಬೇಡ ನನ್ನ ಪ್ರಶ್ನೆಗೆ ಉತ್ತರಕೊಡಿ ಸಾಕು" ಅಂದ್ಲು, ಒಳ್ಳೆ ಜಿಡುಪು ಜಿಗಣೆ ತರಹ ಒಂದಕ್ಕೆ ಅಂಟಿಕೊಂಡರೆ ಬಿಡಲೊಲ್ಲಳು.

ನಿದ್ರೆಯಂತೂ ಹಾರಿ ಹೋಗಿತ್ತು, ಮಲಗಿದರೂ ಪ್ರಯೋಜನ ಇಲ್ಲವೆಂದು ಮೇಲೆದ್ದೆ, ಇವಳಪ್ಪ ಆಗಲೇ ಎದ್ದಿದ್ದರು, ಅವರ ತಲೆ ಕೂಡ ಸ್ವಲ್ಪ ಕೆಡಿಸಿದರಾಯ್ತು ಅಂತ, "ಒಳ್ಳೇ ನಿದ್ರೆಯಾಯ್ತು ಅಂತ ಕಾಣತ್ತೆ, ಟೀ ಆಯ್ತಾ" ಅಂದೆ, ಮತ್ತೆ ಗೊರಕೆ ಹೊಡೀತಿರಲಿಲ್ವಾ ಚೆನ್ನಾಗಾಯ್ತಾ ನಿದ್ರೆ ಅಂತೇನು ಕೇಳೊದು!. ಅಷ್ಟರಲ್ಲೇ ಅವಳು ಟೀ ಕೊಟ್ಲು, "ನಿಮ್ಮ ಮಗಳು ಮದುವೆ ಯಾಕಾಗಬೇಕು ಅಂತ ಕೇಳ್ತಿದಾಳೆ ನೋಡಿ" ಅಂದೆ, ಹಿರಿಯರು ಎನಾದ್ರೂ ಒಳ್ಳೆ ಉತ್ತರ ಕೊಟ್ಟಾರು ಅನ್ನೊ ಭರವಸೆಯೊಂದಿಗೆ, ಮುಗುಳ್ನಗುತ್ತ "ನಾವು ಮದುವೆ ಮಾಡಿಕೊಟ್ಟಾಯ್ತು, ಅವಳ ಪ್ರಶ್ನೆಗಳಿಗೆಲ್ಲ ಉತ್ತರ ನಿಮ್ದೇ" ಅಂತ ತಲೆಭಾರ ಕಳಚಿಕೊಂಡವರ ಹಾಗೆ ಹೊರಟು ಹೋದ್ರು. ಅವಳ ತರಲೆಗಳಲ್ಲಿ ಇದೂ ಒಂದು ಅಂದುಕೊಂಡಿರಬೇಕು.

ನನ್ನ ಹೆಗಲೇರಿದ ಈ ಪ್ರಶ್ನೆ ಕೆಳಗಿಳಿಯದಾಯಿತು, ಅವಳಪ್ಪ ಹೊರಟಾದ ಮೇಲೆ, ಅವಳು ಪಾಕಶಾಲೆಯಲ್ಲಿದ್ದಳು ಹೋಗಿ ಹಿಂದಿನಿಂದ ತಬ್ಬಿಕೊಂಡು, "ಇಂಥಹ ಮಧುರ ಕ್ಷಣಗಳಿಗಾಗಿ ಮದುವೆ ಆಗಬೇಕು" ಅಂದೆ, ಎನೂ ಮಾತಾಡಲಿಲ್ಲ, ಕೈಯಲ್ಲಿ ಸ್ಟೀಲಿನ ಪಾತ್ರೆಯಿತ್ತು ಅದನ್ನೇ ತೆಗೆದುಕೊಂಡು ಬಾರಿಸಿಯಾಳು ಅಂತ ದೂರ ಸರಿದು, ಅಂತೂ ಅವಳ ಬಾಯಿ ಮುಚ್ಚಿಸುವ ಉತ್ತರ ಕೊಟ್ಟೆನಲ್ಲ ಅಂತ ಹೆಮ್ಮೆಯಿಂದ "ಹೀಗೆ ನನ್ನ ಪತ್ನಿಯನ್ನು ನಾ ತಬ್ಬಿದರೆ ಯಾರೂ ಕೇಳಲ್ಲ, ಅದೇ ಪಕ್ಕದ ಮನೆ ಪದ್ದುಗೆ ಹೀಗೇ ಮಾಡೋಕೆ ಹೋದ್ರೆ ಅಷ್ಟೇ" ಅಂತ ವಿವರಣೆ ಬೇರೆ ಕೊಟ್ಟೆ. ತಿರುಗಿ "ಇಷ್ಟಕ್ಕೇ ಮದುವೆ ಆಗಬೇಕಾ?" ಅಂದ್ಲು. ನಾ ಹಲ್ಲು ಕಿರಿದು "ಕೈಲಿದೆಯಲ್ಲ, ಆ ಸ್ಟೀಲ ಪಾತ್ರೆ ಕೊಡು ನನ್ನ ತಲೆಗೆ ನಾನೇ ನಾಲ್ಕು ಕೊಟ್ಕೊತೀನಿ" ಅಂತಂದು ಹೊರಬಂದೆ.

ಇದರ ಉತ್ತರ ಯಾರು ಕೇಳಿದ್ರೆ ಸಿಗಬಹುದು ಅಂತ ಯೋಚಿಸಿದ್ರೆ, ಜೀವನದಲ್ಲಿ ಎಂಥಾ ಕಷ್ಟ ಬಂದ್ರೂ ಅಲುಗದೇ, ಕಲ್ಲಿನಂತೆ ನಿಂತು ಮುಂದೆ ಬಂದ ಗೆಳೆಯ ಕಲ್ಲೇಶಿ ನೆನಪಾದ, ಜೀವನ ಸಾಕಷ್ಟು ಪಾಠ ಕಲಿಸಿದೆ ಅವನಿಗೆ ಉತ್ತರ ಖಂಡಿತ ಗೊತ್ತಿರುತ್ತದೆ ಅಂತ ಅನಿಸಿತು, ಅವನಿಗೇ ಕರೆ ಮಾಡಿದೆ, ಕಲ್ಲೇಶಿ ಹೇಗಿದೀಯೋ ಅಂದ್ರೆ, ಗುಂಡುಕಲ್ಲು ಇದ್ದಹಾಗೆ ಇದೀನಿ ಅಂದ, ಸರಿ ಅವನು ಹಾಗೇ ಅದೇನೂ ಹೊಸದಲ್ಲ ಬಿಡಿ, ಹೆಸರೇ ಕಲ್ಲೇಶಿ ಬೇರೆ. "ಲೋ ಮದುವೆ ಯಾಕೊ ಆಗಬೇಕು" ಅಂದೆ, "ನಿಂದ್ ಮದುವೆ ಆಯ್ತಲ್ಲೊ, ಈಗ್ಯಾಕೆ ಈ ಪ್ರಶ್ನೇ" ಅಂದ, "ಕೇಳಿದ್ದಕ್ಕೆ ಉತ್ತರ ಹೇಳೊ ಅಂದ್ರೆ ನೀನೊಳ್ಳೆ, ಈಗ್ ನೀನ್ಯಾಕಪ್ಪ ಮದುವೆ ಆದೆ" ಅಂದೆ, ಹೀಗೆ ಕೇಳಿದ್ರೆ ಉತ್ತರ ಸಿಗಬಹುದು ಅಂತ. "ನಮ್ಮವ್ವ ಮದುವೆ ಆಗು ಅಂದ್ಲು ಆದೆ" ಅಂದ, ಒಳ್ಳೆ ಅಮ್ಮನ ಮಗ. "ಅದೆ ಯಾಕೆ ಆಗು ಅಂದಿದ್ದು", ಹೋಗಿ ಆಕೇನೇ ಕೇಳು, ಅನ್ಲಿಲ್ಲ ಸಧ್ಯಕ್ಕೆ. ಅವನೇ ಹೇಳಿದ "ಜೀವನದಲ್ಲಿ ಒಂದು ಹಂತ ತಲುಪಿದ್ನಾ, ಕೆಲ್ಸ ಮನೆ ಅಂತ ಇದ್ನಾ, ಅವ್ವ, ಮಗಾ ಕಷ್ಟ ಪಟ್ಟು ಮೇಲೆ ಬಂದೆ, ಇನ್ನು ಮದುವೆ ಆಗಿ ಸುಖವಾಗಿರು ಅಂದ್ಲು, ಅದಕ್ಕೇ ಆದೆ" ಅಂದ, ಛೆ ಎಷ್ಟು ಕರೆಕ್ಟ ಅಲ್ವಾ, ಇದು ನನಗೆ ಹೊಳೀಲೇ ಇಲ್ಲ, ಉತ್ತರ ಸಿಕ್ತು ಅಂತ, "ಮತ್ತೇನೊ ಸುಖವಾಗಿದೀಯಾ ಅನ್ನು" ಅಂದೆ. "ಅಯ್ಯೋ ಮದುವೆ ಆದಮೇಲೆ, ಹೆಂಡ್ತಿ ಮಕ್ಳು ಅಂತ ಆಗಿ, ಇನ್ನೂ ಕಷ್ಟ ಜಾಸ್ತಿ ಅಗಿದೇ ಕಣಲೋ" ಅಂದ. ಮತ್ತೆ ತಲೆ ಎತ್ತದಂತೆ ಕಲ್ಲು ಚಪ್ಪಡಿ ಎಳೆದು ಮುಚ್ಚಿದ್ದ ಪ್ರಶ್ನೇನಾ, ಕಲ್ಲೇಶಿಯೇ ಎಳೆದು ಹೊರತೆಗೆದ.

ಕಲ್ಲೇಶಿ ಕಥೆ ಕೇಳಿ ಬೇಜಾರಾಗಿ, ಕೂತವನಿಗೆ, ಕಲ್ಯಾಣಿ ನೆನಪಾದಳು, ಅದೇ ಕಲ್ಯಾಣ ಮಂಟಪದ(ಮದುವೆ ಛತ್ರ) ಮ್ಯಾನೇಜರ! ಇವಳ ಫ್ರೆಂಡ್ ಬೇರೆ, ಎಷ್ಟ ಮದುವೆ ನೋಡಿರಲಿಕ್ಕಿಲ್ಲ ಅವಳು, ಮದುವೆ ಕೂಡ ಮಾಡಿಸ್ತಾಳೆ, ಅವಳಿಗಲ್ಲದೇ ಬೇರೆ ಯಾರಿಗೆ ಗೊತ್ತಿದ್ದೀತು ಅಂತ, ಪಕ್ಕದ ರೋಡಿನಲ್ಲೆ ಛತ್ರ ಇದೆಯಂತ ಖುದ್ದು ಅಲ್ಲಿಗೇ ಹೋದೆ. "ಎನ್ ಸರ್ ಮದುವೆ ಆದ ಮೇಲೆ ಅಪರೂಪ ಆಗಿದೀರ, ಬಂದೇ ಇಲ್ಲ, ಯಾರ ಮದುವೆಗೆ ಛತ್ರ ಬುಕ್ ಮಾಡೊಕೆ ಬಂದಿರಿ" ಅಂತ ಬರಮಾಡಿಕೊಂಡಳು. "ಮದುವೆ ಯಾಕಾಗಬೇಕು ಅಂತ ಹೇಳಿದ್ರೆ, ನಾನೇ ಇನ್ನೊಂದು ಆಗೋಣ ಅಂತ" ಅಂದೆ. "ಎಲ್ರೂ ಆಗ್ತಾರೆ ಅದಕ್ಕೆ" ಅಂದ್ಲು "ಅದೇ ಯಾಕೆ", ನಾ ಅದನ್ನೇ ಕೇಳಲು ಬಂದದ್ದಲ್ಲವೇ. "ಸರ್ ಹೆಣ್ಣು ಎಷ್ಟು ದಿನ ಅಂತ ಒಬ್ಬಂಟಿಯಾಗಿ ಇರೋಕೆ ಸಾಧ್ಯ ಹೇಳಿ, ಸಮಾಜ ಮಾತಾಡತ್ತೆ, ಈಗೆಲ್ಲ ಹಾಗೂ ಇರ್ತಾರೆ, ಆದ್ರೂ ಮದುವೆಯಾಗಿ ಗಂಡನಮನೆ ಸೇರಿದ್ರೆ, ಸುರಕ್ಷಿತ, ಅಲ್ಲದೇ ಆರ್ಥಿಕವಾಗಿಯೂ ಬಲ ಸಿಗ್ತದೆ, ಅದಕ್ಕೆ ಮದುವೆ" ಅಂದ್ಲು, ಅವಳು ಹೇಳಿದ್ದೂ ಸರಿ ಅನ್ನಿಸಿತು "ಮತ್ತೆ ನೀವು ಅದಕ್ಕೆ ಆದದ್ದು, ಹಾಗಾದ್ರೆ" ಅಂದೆ, "ಆಗಿದ್ದೇನೊ ಹಾಗೆ ಅಂತ ಕನಸು ಹೊತ್ತು, ನಿಮ್ಮಲ್ಲೇನು ಮುಚ್ಚು ಮರೆ, ನಿಮ್ಮಾಕೆ ನಿಮ್ಮನ್ನು ಬಿಟ್ರೆ ನನಗೂ ಇಲ್ಲಿ ಹೇಳಿಕೊಳ್ಳೊಕೆ ಯಾರಿದಾರೆ, ಮನೆಗೆ ಹೋಗೊಕೆ ಹೆದರಿಕೆ ಆಗತ್ತೆ ಈಗೀಗ, ಕುಡಿದು ಮನೆಗೆ ಬರ್ತಾರೆ, ಸುಮ್ನೇ ಜಗಳ, ಹೊಡೆಯೋಕೆ ಬರ್ತಾರೆ, ಎಲ್ಲಿ ಸುರಕ್ಷಿತ ಸರ್, ನಾನು ಗಳಿಸಿದ್ದೂ ಅವರ ಕೈಗೇ ಕೊಡಬೇಕು, ಮನೆ ನಡೆಸೊದೇ ಕಷ್ಟ" ಅಂದ್ಲು. ಮದುವೆ ಯಾಕೆ ಆಗಬೇಕು ಅಂತ ಇದ್ದ ನನ್ನ ಪ್ರಶ್ನೆ ಈಗ, ಮದುವೆ ಯಾಕಾದ್ರೂ ಆಗಬೇಕು ಅಂತ ಆಗಿತ್ತು.

ಹೆದರಬೇಡ, ನಾವಿಲ್ವಾ, ಇನ್ನೊಮ್ಮೆ ಹಾಗೇನಾದ್ರೂ ಆದರೆ ನಮಗೆ ಫೊನು ಮಾಡು, ನನಗೆ ಸಾಧ್ಯ ಆದಷ್ಟು ಹೆಲ್ಪ ಮಾಡ್ತೀನಿ ಅಂತ ಹೇಳಿ ಮನೆಗೆ ಮರಳಿದೆ, ಬಟ್ಟೆ ಒಣಗಲು ಬಿಸಿಲಿಗೆ ಹಾಕುತ್ತ ಟೆರೆಸಿನಿಂದಲೇ ನನ್ನ ನೋಡಿರಬೇಕು ಇವಳು, ತಲೆ ಕೆಳಗೆ ಮಾಡಿಕೊಂಡು ಅದೇ ಕಲ್ಯಾಣಿ ಕಥೆಯ ಯೋಚನೆಯಲ್ಲೇ ಮನೆ ಸೇರಿದೆ, ಒಳಗೆ ಬಂದು "ರೀ, ನಾನೇನು ನಿಮ್ಗೆ ಡಿವೊರ್ಸ್ ಕೊಟ್ಟು ಎಲ್ಲೂ ಹೋಗಲ್ಲ, ಯಾಕೆ ಅಷ್ಟು ಬೇಜಾರಾಗಿದೀರಾ" ಅಂದ್ಲು. ಸುಮ್ನೇ ಕೂತಿದ್ದೆ... "ರೀ ಏನಾಯ್ತು?" ಅಂದ್ಲು, ಆಗಿದ್ದೆಲ್ಲ ಹೇಳಿದೆ, ಅವಳೂ ಮರುಕಪಟ್ಟಳು. "ರೀ ನಿಮ್ಮ ಫ್ರೆಂಡ್ ಕಲ್ಲೇಶಿ ನನ್ನ ಫ್ರೆಂಡ ಕಲ್ಯಾಣೀನಾ ಮದುವೆ ಆಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತಲ್ವಾ, ಇಬ್ರೂ ಒಳ್ಳೆ ಜೋಡಿ ಆಗಿರೋರು" ಅಂದ್ಲು, ಬ್ರಹ್ಮ ಬೆಸೆಯೋ ಬಂಧಗಳೇ ವಿಚಿತ್ರ,
ಒಮ್ಮೆಲೇ, ಬದುಕನ್ನು ರಿವೈಂಡ ಮಾಡಿ ಮೂರುವರ್ಷ ಹಿಂದೆ ತೆಗೆದುಕೊಂಡು ಹೋಗಿ, ರೀಲು ಕತ್ತರಿಸಿ ಅವರಿಬ್ಬರನ್ನೂ ಜೋಡಿಸಿಬಿಡಲೇ ಅನ್ನಿಸಿತು, ಬದುಕು ಸಿನಿಮಾ ರೀಲಲ್ಲವಲ್ಲ!

ಮಾಡಿದ ಊಟ ರುಚಿಸಲಿಲ್ಲ, "ಯಾಕೇ ನಿನಗೆ ಆ ಪ್ರಶ್ನೆ ತಲೇಲಿ ಬಂದದ್ದು" ಅಂದೆ, "ರೀ, ನನ್ನ ತಮ್ಮ ಇದಾನಲ್ಲ, ಹುಡುಗಿ ನೋಡಿ ನೋಡಿ ಬೇಸತ್ತು, ಸಾಕಾಗಿ ಮದುವೆ ಯಾಕೆ ಆಗಬೇಕು ಅಂತ ಕೇಳಿದ, ಹೌದಲ್ವಾ ಯಾಕೆ ಆಗಬೇಕು? ಅಂತ ನನಗೂ ಅನ್ನಿಸಿತು ಅದಕ್ಕೇ ನಿಮ್ಗೂ ಕೇಳಿದೆ" ಅಂದ್ಲು. ಇದೆಕ್ಕೆಲ್ಲ ಮೂಲ ಕಾರಣ ಅಲ್ಲಿದೆ, ಒಂದಿಲ್ಲೊಂದು ತೊಂದ್ರೆ ತಂದಿಡ್ತಾನೆ ನನಗೆ, ಆಮೇಲೆ ನೋಡ್ಕೊತೀನಿ ಅವನನ್ನ. "ನಾನೂ ಇಂಥದ್ದೇ ಪ್ರಶ್ನೆ ಕೇಳಿದ್ದೆ, ಅದಕ್ಕೆ ಸೋದರ ಮಾಮ, ಯಾಕೆ ಆಗಬೇಕು ಅಂತ ಕೇಳ್ತಿದಾನೆ ಅಂದ್ರೆ, ಎಲ್ಲೊ ಸನ್ಯಾಸಿ ಆಗಿ ಎಲ್ಲಿ ಮಠ ಸೇರಿಕೊಂಡು ಬಿಡ್ತಾನೆ ಏನೊ ನೋಡು ಅಂತ, ಅಮ್ಮನ ಕಿವಿಯೂದಿದ ಮದುವೆ ಮಾಡಿ ಬಿಟ್ಟರು" ಅಂದೆ. "ಒಹ್ ಅದಕ್ಕಾ ಮದುವೆ ಆಗಿದ್ದು" ಅಂದ್ಲು, "ಅಷ್ಟೇ ಏನಲ್ಲ, ಈ ನನ್ನಾಕೆ ಅಂತ ಬ್ಲಾಗ, ಲೇಖನ ಬರೀತಿದ್ನಾ, ಹುಡುಗೀರ ಕಾಟ ಜಾಸ್ತಿ ಆಯ್ತು! ಮದುವೆ ಯಾವಾಗ ಆಗ್ತೀರ ಅಂತಾ ಬೇರೆ ಕೇಳತೊಡಗಿದ್ರು, ನನಗೂ ಬ್ಯಾಚುಲರ ಲೈಫ್ ಸಾಕಾಗಿ, ಹೊರಗೆ ಹೊಟೇಲಲ್ಲಿ ತಿಂದು ತಿಂದು ಬೇಜಾರಾಗಿ, ಮದುವೆಗೆ ಓಕೇ ಅಂದುಬಿಟ್ಟೆ" ಅಂದೆ. ಮನೇಲಿ ತೂಫಾನು ಎದ್ದಿತು "ಒಹೋ ಯಾರೊ ಹೇಳಿದ್ರು ಅಂತ ಮದುವೆ ಆದಿರಿ, ಅಡುಗೆ ಮಾಡೊಕೆ ಅಡುಗೆಯಾಕೆ ಬೇಕಿದ್ಲು, ಯಾರೊ ಕೆಲಸದಾಕೆನಾ ಮದುವೆ ಆಗಬೇಕಿತ್ತು" ಅಂತ ಬಯ್ಯುತ್ತ ಎದ್ದು ಹೋದವಳು ಮೂರು ದಿನ ಮಾತಾಡಲಿಲ್ಲ ಮುನಿಸಿಕೊಂಡು.

ಮಾನವ ಮೂಲತಃ ಸಂಘಜೀವಿ, ಒಬ್ಬಂಟಿ ಒಂಟಿ ಸಲಗಗಳೂ ಇದ್ದಾರೆ, ಸಾಧನೆ ಮಾಡಿದ ಸನ್ಯಾಸಿಗಳೂ ಇದ್ದಾರೆ. ಅದ್ರೆ ಸಾಮಾನ್ಯ ಮನುಷ್ಯ ತನಗೆ ತಾನೆ ಕಟ್ಟಿಕೊಂಡು ನಿರ್ಧಿಷ್ಟ ನೀತಿ ನಿಯಮಗಳೇ ಸೇರಿ ಸಮಾಜ ಆಗಿದೆ, ಮದುವೆ ಅದರಲ್ಲೊಂದು ಅಂಗ, ಮಾನವ ಜನಾಂಗದ ಮುಂದುವರಿಕೆಗೆ ಸಂತಾನೋತ್ಪತ್ತಿ ಅಂತ ಅದರ ಮೂಲ ಉದ್ದೇಶ ಕೂಡ, ನಾಯಿ ನರಿಗಳಂತೆ ಜೀವಿಸದೇ ಮೌಲ್ಯಗಳೊಂದಿಗೆ ಜೀವಿಸಲು ಕಟ್ಟಿಕೊಂಡ ಕಟ್ಟುಪಾಡುಗಳು. ನನ್ನ ಜತೆ ನೀನು, ನಿನಗೆ ನಾನು, ಅಂತ ಭಾವನಾತ್ಮಕ ಬೆಂಬಲ ಕೂಡ ಅದೇ, ದೈಹಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಎಲ್ಲರೀತಿಯಿಂದಲೂ ಅಗತ್ಯ ಮತ್ತು ಸಬಲತೆಯೇ ಇದರ ಸೂತ್ರ. ಹಾಗೊ ಹೀಗೊ ಎಲ್ಲರೂ ಮದುವೆ ಆಗುತ್ತಾರೆ ಏನೋ ಒಂದು ಕಾರಣದಿಂದ. ಊರಲ್ಲಿ ಖಾಲಿ ಅಲೆಯುವವನಿಗೆ ಮದುವೆ ಮಾಡಿದರೆ ಜವಾಬ್ದಾರಿ ಬರುತ್ತದೆಂದು ಮದುವೆ ಮಾಡಿದರೆ, ವಯಸ್ಸಾಯ್ತು ನಮ್ಮ ಜವಾಬ್ದಾರಿ ಕಳೆದುಕೊಳ್ಳೊಣ ಅಂತ ತಂದೆ ತಾಯಿ ಮಗಳ ಮದುವೆ ಮಾಡಿ ಹಾಕುತ್ತಾರೆ, ಇನ್ನೋ ದೊಡ್ಡ ದೊಡ್ಡ ಶ್ರೀಮಂತರೂ, ಬಿಸಿನೆಸ ಮ್ಯಾನಗಳ ಮಕ್ಕಳ ಮದುವೆ ಹಿಂದೆ ದೊಡ್ಡ ವ್ಯಾಪಾರಿ ತಂತ್ರವೇ ಅಡಗಿರುತ್ತದೆ, ಮದುವೆ ಮಾಡಿ ಹೊಸ ಕಂಪನಿಯ ಜವಾಬ್ದಾರಿ ಹೆಗಲಿಗೇರಿಸುತ್ತಾರೆ. ಹೀಗೇ ಮದುವೆ ಯಾಕೆ ಆಗಬೇಕು ಅನ್ನೊದಕ್ಕೆ ನಿರ್ಧಿಷ್ಟ ಕಾರಣಗಳಿಲ್ಲ ಅಂತ ನನ್ನನಿಸಿಕೆ, ಏನೊ ಕಾರಣ ಒಟ್ಟಿನಲ್ಲಿ ಮದುವೆ ಮಾತ್ರ ಅಗುತ್ತಾರೆ.

ಅವಳ ತಮ್ಮ ಒಬ್ಬನೇ ಸಿಕ್ಕ, "ಎನೊ ನನ್ನಾಕೆಗೆ ಎನೇನೊ ಪ್ರಶ್ನೆ ಕೇಳಿ, ತಲೆ ಕೆಡಿಸ್ತ ಇದೀಯ, ನನ್ನೊಂದಿಗೆ ಮಾತಾಡ್ತಾ ಇಲ್ಲ ಅವಳು ನಿನ್ನಿಂದಾಗಿ" ಅಂದೆ. "ಸಾರಿ ಭಾವ ನನ್ನಿಂದ ಎಷ್ಟು ತೊಂದ್ರೆ ನಿಮಗೆ" ಅಂತ ಚಡಪಡಿಸಿದ. "ಇನ್ನೊಮ್ಮೆ ಎನಾದ್ರೂ ಇಂಥ ತರಲೆ ಪ್ರಶ್ನೆ ಕೇಳಿದ್ರೆ, ಪ್ರಶ್ನೇನೆ ಕೇಳದ ಹಾಗೆ, ಬಾಬ್ ಕಟ್ ರೋಜಿ ಜತೆ ಮದುವೆ ಮಾಡಿಸಿಬಿಡ್ತೀನಿ" ಅಂತ ಧಮಕಿ ಹಾಕಿದೆ. "ಅವಳ್ನೆ ಮದುವೆ ಆಗಿಬಿಡ್ತೀನಿ, ನನಗೂ ಹುಡುಗಿ ಹುಡುಕಿ ಸಾಕಾಗಿದೆ" ಅಂತ ನಿರಾಸೆಯಿಂದ ನುಡಿದ, ಪಾಪ ಅನ್ನಿಸಿತು "ಏಯ್, ನಾನ್ ಜೊಕ್ ಮಾಡಿದ್ದೊ ಮಾರಾಯ, ಈಗ್ಲೆ ಹೀಗೆ ಸೋತರೆ ಹೇಗೆ ಇನ್ನೂ ಮದುವೆ ಆಗಬೇಕಿದೆ, ಎನೂ ಬೇಜರಾಗಬೇಡ, ನಾನು ನನ್ನಾಕೆ ಇಲ್ವಾ, ಒಳ್ಳೆ ಹುಡುಗಿ ತಂದು ಮದುವೆ ಮಾಡ್ತೀವಿ" ಅಂತ ಭರವಸೆ ತುಂಬಿದೆ ಹುಡುಗ ಚೇತರಿಸಿಕೊಂಡ, "ಎನಾದ್ರೂ ಲವ್... ಇದ್ರೆ ಹೇಳಪ್ಪ" ಅಂತ ಹುಬ್ಬು ಹಾರಿಸಿದೆ, ನಾಚಿ "ಇಲ್ಲ, ಎನೂ ಇಲ್ಲ ಭಾವ" ಅಂದ. "ನೀವೇ ನೋಡಿ, ನೀವು ಅಕ್ಕನೇ ಹುಡುಕೋದು" ಅಂದ. "ಬಿಡು ಮತ್ತೆ" ಅಂತ ಬೆನ್ನು ತಟ್ಟಿ ಹುರಿದುಂಬಿಸಿದೆ. "ಭಾವ ಅಕ್ಕ ಮಾತಾಡಿಸ್ತಾ ಇಲ್ವಲ್ಲ" ಅಂದ "ಏ, ಅದೇನು ಪ್ರಾಬ್ಲಂ ಅಲ್ಲ ಬಿಡು,
ಅವಳು ನನ್ನಾಕೆ ಕಣೊ, ಮದುವೆ ಆಗು ನಿನಗೂ ಗೊತ್ತಾಗತ್ತೆ" ಅಂದೆ, ನಗುತ್ತಿದ್ದ.

ಮತ್ತೊಂದು ದಿನ ಹೀಗೇ ಮಲಗಿದ್ದೆ, ಅವರಪ್ಪನ ಗೊರಕೆ ಸದ್ದು ಇರಲಿಲ್ಲ, ನಿದ್ರೆ ಬರುವುದಿತ್ತು. ಮೌನ ವೃತದಲ್ಲಿದ್ದವಳು ಬಾಯಿ ಬಿಟ್ಟಳು "ರೀ" ಅಂತ ಅಲುಗಿಸಿದಳು, ಅಯ್ಯೋ ಮತ್ತಿನ್ಯಾವ ಪ್ರಶ್ನೇ ಹೊತ್ತು ತಂದಿದಾಳೊ ಅಂತ ಭಯ ಬಿದ್ದೆ. ಅವಳೆಡೆಗೆ ತಿರುಗಿದರೆ "ನಾ ಮಾತಾಡಿಸಲಿಲ್ಲ ಅಂದ್ರೆ, ನೀವೂ ಮಾತು ಬಿಡೊದಾ" ಅಂದ್ಲು, ಆ ಹೊದ್ದ ಹೊದಿಕೆಯ ಚುಂಗದಂತೆ ಬಂದ ದಾರಗಳನ್ನು ಕೈಯಲ್ಲಿ ಹೊಸೆಯುತ್ತ, ತಿರುಗಿಸುತ್ತ. ಇನ್ನೇನು ಇವಳು ಶಿಲಾಬಾಲಿಕೆಯ ಹಾಗೆ ಕಲ್ಲಿನಂತೆ ನಿಂತಿದ್ದರೆ ನಾ ಮುಂದೆ ನಿಂತು ಪೂಜಾರಿ ಮಂತ್ರ ಹೇಳಿದಂತೆ ಮಾತಾಡುತ್ತಿರಬೇಕೆ. ಗದ್ದ ಹಿಡಿದು, ಬಾಗಿದ್ದ ಅವಳ ಮುಖ ಮೇಲೆತ್ತಿದರೂ ನನ್ನಡೆಗೆ ದೃಷ್ಟಿಯಿಟ್ಟು ಮಾತಾಡುತ್ತಿರಲಿಲ್ಲ "ಕಲ್ಯಾಣಿ ಫೋನು ಮಾಡಿದ್ಲು", ಅಂದ್ಲು, "ಏನಾಯ್ತು" ಗಾಬರಿಯಾದೆ. "ಏನಿಲ್ಲ... ನಿನ್ನ ಗಂಡ ಏನ್ ಜಾದೂ ಮಾಡಿದ್ರೆ, ನಮ್ಮವರು ಪೀಡಿಸೋದು ದೂರದ ಮಾತು, ಕುಡಿಯೋದು ಕಮ್ಮಿಯಾಗಿದೆ, ಮೊನ್ನೆ ಫಿಲಂಗೆ ಕೂಡ ಕರ್ಕೊಂಡು ಹೋಗಿದ್ರು, ತುಂಬ ಥ್ಯಾಂಕ್ಸ ಕಣೇ, ನಿಮ್ಮ ಮದುವೆನೇನೊ ನಾನು ಮಾಡಿಸಿದೆ, ನನ್ನ ಮದುವೆನಾ ನೀವು ಕಾಪಾಡಿದ್ರಿ ಅಂತೆಲ್ಲ ಏನೇನೊ ಹೇಳಿದ್ಲು" ಅಂದ್ಲು. ನಿರಮ್ಮಳ ಭಾವ ಬಂತು, ಅಂತೂ ಒಳ್ಳೇದಾಯ್ತಲ್ಲ ಅಂತ. "ರೀ ಎನ್ ಮ್ಯಾಜಿಕ್ ಮಾಡಿದ್ರಿ" ಅಂದ್ಲು, "ಎನಿಲ್ಲ ಕಣೆ ಸ್ವಲ್ಪ ರಿಸ್ಕ ತೆಗೆದುಕೊಂಡೆ, ಆ ಏರಿಯ ಇನಸ್ಪೆಕ್ಟರ ನನ್ನ ಫ್ರೆಂಡ, ಹೆಲ್ಪ ಮಾಡು ಅಂದೆ, ಒಕೇ ಅಂದ, ಕಲ್ಯಾಣಿ ಗಂಡನ್ನ ಕರಿಸಿ 'ಕುಡಿದು ಗಲಾಟೆ ಮಾಡ್ತೀಯಾ, ಹೆಂಡ್ತಿ ಹೊಡೀತೀಯಾ, ಅಂತ ಕಂಪ್ಲೆಂಟ್ ಬಂದಿದೆ, ವಿಚಾರಣೆಗೆ ಹೋದ್ರೆ ನಿನ್ನ ಹೆಂಡ್ತಿ ನನ್ನ ಗೆಳೆಯನ ಕೈಲಿ ಫೊನು ಮಾಡಿಸಿ ಹೇಳಿಸಿದ್ಲು, ಅವನೂ ಹಾಗೇನಿಲ್ಲ ಅಂದಿದ್ದಕ್ಕೆ ಬಿಡ್ತಿದೀನಿ, ಅಷ್ಟೊಳ್ಳೆ ಹೆಂಡ್ತಿ ಇದಾಳೇ ಯಾಕೆ ಇದೆಲ್ಲ ನಿನಗೆ, ಇನ್ನೊಮ್ಮೆ ಕಂಪ್ಲೇಂಟ್ ಬಂದ್ರೆ.. ಗೊತ್ತಲ್ಲ..' ಅಂತ ಹೆದರಿಕೆ ಹಾಕಿಸಿದೆ, ಆಕೆ ಗಂಡನೂ ಹೆದರಿದ ಅನ್ಸತ್ತೆ ಎಲ್ಲ ಸರಿಯಾಗಿದೆ, ಸಮಾಧಾನ" ಅಂದೆ. ಅದಕ್ಕೆ ಪ್ರತಿಯಾಗಿ ನನ್ನಾಕೆಯಿಂದ ಹಣೆಗೊಂದು ಪಪ್ಪಿ ಸಿಕ್ತು, "ರೀ ಕಲ್ಲೇಶಿ" ಅಂದ್ಲು, "ವಿಮಾ ಏಜೆಂಟ ಕೊರ್ಸ್ ಮಾಡು ಅಂತ ಹೇಳಿದೀನಿ, ನನ್ನ ಕಾಂಟ್ಯಾಕ್ಟ್ಸ್ ಎಲ್ಲ ಕೊಟ್ಟಿದೀನಿ, ಆಗಲೇ ನಾಲ್ಕು ಜನ ಕಾಲ್ ಮಾಡಿ ಪಾಲಸಿ ಕೊಟ್ಟೀದಾರೆ ಅಂತಿದ್ದ, ಮುಂದೆ ಮ್ಯೂಚುವಲ ಫಂಡ ಮಾಡಿಸು ಅಂತ ಹೇಳಿದೀನಿ, ಕಮೀಷನ್ ಅಂತ ಆದರೆ ಜೀವನಕ್ಕೆ ಆಧಾರ ಅಗತ್ತೆ, ಮೊದಲೇ ಶ್ರಮಜೀವಿ, ಮಾಡ್ಕೊತಾನೆ ಅನ್ನೊ ನಿರೀಕ್ಷೆ ಇದೆ" ಅಂದೆ, ಈ ಸಾರಿ ಮುತ್ತಿನಮಳೆ ಸುರಿಯಿತು, "ಲೇ ಮದುವೆ ಯಾಕಾಗಬೇಕು?" ಅಂತ ಕೇಳಿದೆ. "ಯಾವ ಕಾರಣಕ್ಕೆ?, ಯಾಕೆ?... ನನಗೆ ಬೇಕಿಲ್ಲ, ಅದೇನೇ ಇರಲಿ ನೀವು ನನ್ನ ಮದುವೆ ಆದ್ರಲ್ಲ, ಅಷ್ಟ ಸಾಕು" ಅಂತಿದ್ದಳು. ಯಾಕೆ ಆದೆ ಅನ್ನೊಕಿಂತ, ಆಗಿದ್ದು ಒಳ್ಳೆದೇ ಆಯ್ತು ಅನಿಸುತ್ತಿತ್ತು ನನಗೂ... ನಿಮ್ಮಲ್ಲೂ ಹೀಗೆ ಅನೇಕ ಕಾರಣಗಳಿರಬಹುದು, ಹೊಸದಿದ್ದರೆ ಹಂಚಿಕೊಳ್ಳಿ, ಮತ್ತೆ ಮಂಥನದೊಂದಿಗೆ ಸಿಕ್ತೀವಿ. ನಾನು ನನ್ನಾಕೆ...

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು... ವಿಘ್ನನಿವಾರಕ ಎಲ್ಲರ ಬಾಳಲ್ಲೂ ವಿಘ್ನಗಳನ್ನ ಹೊಡೆದೋಡಿಸಿ ಹರ್ಷ ತರಲೆಂದು ಆಶಿಸುತ್ತೇನೆ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


ಈ ಲೇಖನ ಬರೆಯುವಾಗ, ಯಾಕೆ ಆಗಬೇಕು ಅನ್ನೊಕಿಂತ ಅಗಿದ್ದು ಒಳ್ಳೇದೆ ಅನ್ನೊ ಭಾವದಲ್ಲಿ ಬರೆಯಲಾಗಿದೆ, ಕೆಲವರಿಗೆ ಯಾಕಾದ್ರೂ ಆದೆವೊ ಅನ್ನೋ ಭಾವನೆಯೂ ಇರಬಹುದು, ಅವರವರು ಬದುಕು ನೋಡುವ ಭಾವದಲ್ಲಿ ಅಡಗಿದೆ, ನಿಜವಾಗಿಯೂ ಮದುವೆ ಅನುಭವವಂತೂ ಇಲ್ಲ, ಆ ಮಟ್ಟಿಗೆ ನಾನು ಅನನುಭವಿ, ಎನದ್ರೂ ತಪ್ಪು ಬರೆದಿದ್ರೆ, ಅನುಭವಿಗಳು ಮನ್ನಿಸಿ. ಮದುವೆ ಅಂತಿದ್ದಂಗೆ ಬೆಚ್ಚಿಬೀಳುವವರ ನಡುವೆ ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ನನ್ನದು, ಆದರೆ ಎಲ್ಲ ಒಳ್ಳೇದೆ ಆಗುತ್ತದೆ ಅಂತೇನೂ ನಾನು ರುಜುವಾತು ಮಾಡಿ ತೋರಿಸುತ್ತಿಲ್ಲ, ಅದಕ್ಕೆ ನಾ ತೆಗೆದುಕೊಂಡ ಉದಾಹರಣೆಗಳೇ ಸಾಕ್ಷಿ, ಅಲ್ಲದೇ ಅವನ್ನು ಬಗೆಹರಿಸಲು ನಾ ಕೊಟ್ಟ ಪರಿಹಾರಗಳೂ ಸಿನಿಕತೆಯಿಂದ ಕೂಡಿವೆ, ನಿಜ ಜೀವನದಲ್ಲಿ ಎಲ್ಲ ಹಾಗಾಗಲಿಕ್ಕಿಲ್ಲ, ಅಷ್ಟು ಸುಲಭವಾಗಿ ಕ್ಲಿಷ್ಟ ಸಮಸ್ಯೆಗಳ ಬಿಡಿಸಲು ಆಗುವುದಿಲ್ಲ ಆದರೂ... ಕಲ್ಪನೆಯಲ್ಲಾದರೂ ಸರಿ... ಬದುಕಿನತ್ತ ಆಶಾಭಾವನೆಯಿಂದ ನೋಡುವ ತುಡಿತ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...


PDF format www.telprabhu.com/maduve-yaakaagabeku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, August 16, 2009

ವಯಸ್ಸಾಯ್ತಾ?

"ರೀ ತಯ್ಯಾರಿ ಆಯ್ತಾ, ಇನ್ನೂ ಎಷ್ಟೊತ್ತು, ಕನ್ನಡಿ ಮುಂದೇನೆ ಅರ್ಧ ಆಯಸ್ಸು ಕಳೀತು" ಅಂತ ಅವಳು ಕೂಗುತ್ತಿದ್ದಳು, ನನ್ನ ಪಾಡಿಗೆ ನಾ ತಲೆ ಬಾಚುತ್ತಿದ್ದೆ. ಎನೂ ಉತ್ತರ ಬರದಿದ್ದಾಗ, ಬಾಗಿಲು ತಳ್ಳಿ ಒಳಗೇ ಬಂದಳು, ಡ್ರೆಸ್ಸಿಂಗ್ ಟೇಬಲ್ಲಿನ ಉದ್ದ ಕನ್ನಡಿಗೆ ಹೆಗಲು ತಾಕಿಸಿ ಆತು ಕೈಕಟ್ಟಿ ನಿಂತು, ದಿಟ್ಟಿಸಿ ನೋಡತೊಡಗಿದಳು, ನನ್ನಾಕೆ ನನ್ನ ಹಾಗೆ ನೋಡಿದರೇನು ಹೊಸದು, ಅದಕ್ಕೆ ನನ್ನ ಪಾಡಿಗೆ ನಾನು ಮುಂಗಾರು ಮಳೆಗೆ ನೆನೆದು ಮೆದುವಾದ ಭೂಮಿಯನ್ನು ನೇಗಿಲಿನಲ್ಲಿ ಹರವು ಮಾಡಿ ಗೆರೆ ಕೊರೆದಂತೆ ಊಳುತ್ತಿರುವ ರೈತನಂತೆ, ಸ್ನಾನ ಮಾಡಿ ನೆನೆದ ಕೂದಲಿನಲ್ಲಿ ಬೈತಲೆ ತೆಗೆಯುತ್ತ ಬಾಚುತ್ತಿದ್ದೆ.

"ರೀ... ಇರೋವೆ ನಾಲ್ಕು ಕೂದಲು ಅಲ್ಲಿ ಇಲ್ಲಿ ಅಂತ ಸ್ವಲ್ಪ, ಅವನ್ನೂ ಹೀಗೇ ಬಾಚ್ತಾ ಇದ್ರೆ, ಎಲ್ಲ ಉದುರಿಹೋಗಿ ಅಷ್ಟೇ ಮತ್ತೆ, ಕೂದಲಿನ ಸಸಿ ನೆಡಿಸಬೇಕಾಗುತ್ತೇ" ಅಂತಂದ್ಲು. "ಹಾಗೆ ಕೂದಲಿನ ನಾಟಿ ಕೂಡ ಮಾಡ್ತಾರೆ ನಿಂಗೆ ಗೊತ್ತಾ" ಅಂದೆ, "ಹೂಂ ನಾನು ಅದಕ್ಕೆ ಎನಾದ್ರೂ, ಈ ಥರ ಬಾಚಿ ಬಾಚಿ ಕಿತ್ತು ಹಾಕ್ತಿದೀರೊ ಎನೋ ಅಂತಾನೇ ಕೇಳಿದ್ದು" ಅಂದ್ಲು. "ನಾನು ನನ್ನ ಹೇರ್‌ಸ್ಟೈಲು, ನೀನು ನೀಳವೇಣಿ ಕತ್ತರಿಸಬೇಕಾದ್ರೆ, ನಾನು ಗುಂಡು ಹೊಡಿಸ್ತೀನಿ, ನಿಂಗೇನು" ಅಂದೆ "ರೀ ಗುಂಡುನಾ, ಪ್ಲೀಜ್ ಪ್ಲೀಜ್ ಮಾಡಿಸ್ರಿ ಹೇಗೆ ಕಾಣ್ತೀರಾ ನೋಡೊಣ" ಅಂತ ಹರಿಬಿದ್ದಳು, ಇದೊಳ್ಳೆ ಆಯ್ತಲ್ಲ ನಾನೇನು ಚೇಷ್ಟೆಗೆ ಹೇಳಿದ್ರೆ, ಇವಳು ಅದನ್ನೇ ಪಟ್ಟು ಹಿಡಿಯೋದಾ, "ಲೇ ಹೋಗೆ, ನಿಂದೊಳ್ಳೆ ಆಸೆ, ಹಾಗೇನಾದ್ರೂ ಮಾಡಿಸಿದ್ರೆ ಪಕ್ಕದಮನೆ ಪದ್ದು ನನ್ನ ಕಣ್ಣೆತ್ತಿ ಕೂಡ ನೋಡಲ್ಲ" ಅಂತ ಸಿಡುಕಿದೆ, "ನಾನೂ ಹಾಗಾಗಲಿ ಅಂತಾನೇ ಹೇಳಿದ್ದು, ನನ್ನ ತಮ್ಮನಿಗೆ ಕನ್ಯಾ ನೋಡೊಕೆ ಹೋದ್ರೆ ನಿಮ್ಮನ್ನೇ ವರ ಅನ್ಕೋತಾರೆ, ಹಾಗೆ ಟಿಪ್ ಟಾಪ್ ಆಗಿ ಬರ್ತೀರಾ, ಅದಕ್ಕೆ ಗುಂಡು ಹೊಡಿಸಿದ್ರೆ ಒಳ್ಳೇದೇ ಅಂತ ಹೇಳಿದ್ದು" ಅಂತ ಗೂಡಾರ್ಥ ಬಿಚ್ಚಿಟ್ಟಳು. ಒಳ್ಳೇ ಕ್ರಿಮಿನಲ್ ಪ್ಲಾನ ಇವಳ್ದು. "ಮತ್ತೆ ಅವನಿಗೆ ಕನ್ಯಾ ನೋಡೊಕೆ ಹೋಗೊದಾದ್ರೆ ಹೇಳು, ಹೊಸ ಡ್ರೆಸ್ ಕೊಂಡ್ಕೊಂಡು ಹಾಕೊಂಡು ಬರ್ತೀನಿ" ಅಂದೆ, "ನಿಮ್ಮನ್ನ ಕರೆದುಕೊಂಡು ಹೋದ್ರೆ ತಾನೇ" ಅಂತ ನನ್ನ ಪ್ಲಾನಗೆ ನೀರು ಬಿಟ್ಟಳು. ಬಾಚಣಿಕೆಯಲ್ಲಿ ಬಾಚಿದ್ದು ಸಾಕಾಗದೇ ಅವಳ ಮುಂದೆ ನಿಂತು ಕೈ ಬೆರಳಲ್ಲಿ ಮತ್ತೆ ಬಾಚಿ ಸರಿ ಮಾಡಿಕೊಂಡೆ, ಸಿಟ್ಟಿನಿಂದ "ಕನ್ನಡಿ ಅಲ್ಲಿದೆ" ಅಂದ್ಲು, "ನಿನ್ನ ಕಣ್ಣೇ ನನ್ನ ಕನ್ನಡಿ" ಅಂದದ್ದಕ್ಕೆ "ಸಾಕು ಡೈಲಾಗೆಲ್ಲ, ರೀ ಏನು ವಯಸ್ಸಾಯ್ತು, ಇನ್ನೂ ಏನು ನಿಮ್ದು" ಅಂತ ಬಯ್ದಳು, ತಟ್ಟನೇ ಎನೊ ಹೇಳಬೇಕೆನಿಸಿದ್ರೂ ಹೇಳಲಿಲ್ಲ, ಒಂದು ಪ್ರಶ್ನೆ ತಲೆ ಕೊರೆಯತೊಡಗಿತು, ನಿಜವಾಗ್ಲೂ ವಯಸ್ಸಾಯ್ತಾ?

ಮುಂಜಾನೆ ಹೊರಟಿದ್ದ ಗಡಿಬಿಡಿಯಲ್ಲಿ ಮರೆತಿದ್ದ ಯೋಚನೆ ಮತ್ತೆ ತಿರುಗಿ ಬಂದು ಮನದಲ್ಲಿ ಕೂತು ಕೂಗಾಡುತ್ತಿತ್ತು. ಅದನ್ನು ಸುಮ್ಮನಾಗಿಸಲು ಮತ್ತೆ ನಾ ಮಾತಿಗಿಳಿಯಬೇಕಿತ್ತು. ಅವಳು ಅದೇ ಡ್ರೆಸ್ಸಿಂಗ್ ಟೇಬಲ್ಲಿನ ಮುಂದೆ ತಾನು ಕೂತು ಕಿವಿಯೋಲೆ ಬಿಚ್ಚಿಡುತ್ತಿದ್ದಳು, ಆ ಓಲೆಯ ಪಿರಿಕಿ(ಸ್ಕ್ರಿವ್) ಅಲ್ಲೇ ಜಾಮ್ ಆಗಿರಬೇಕು, ಬಿಚ್ಚಲು ಒದ್ದಾಡುತ್ತಿದ್ದಳು, "ರೀ ನೋಡ್ರೀ ಏನಾಗಿದೆ, ಬಿಚ್ಚುತ್ತಿಲ್ಲ" ಅಂದ್ಲು. ಅದ್ಯಾವ ಸಿಟ್ಟಿನಲ್ಲಿ ತಿರುಗಿಸಿದ್ದಳೊ, ಬರುತ್ತಲೇ ಇಲ್ಲ, "ಕಿವಿ ಹರಿದೇ ಹೊರತೆಗೆಯಬೇಕೇನೊ" ಅಂದೆ. ನಾನೀಗ ಹರಿದೇ ತೆಗೆದುಬಿಡ್ತೀನಿ ಅನ್ನೊ ಹಾಗೆ ನೋಡಿದಳು, "ಅದಕ್ಕೇ ಮುಂಜಾನೆ ಬೇಡ ಅಂತ ಹೇಳಿದ್ದು, ಚೆನ್ನಾಗಿ ಕಾಣ್ತೀಯಾ ಅದನ್ನೇ ಹಾಕು ಅಂತ ದುಂಬಾಲು ಬಿದ್ದು ಹಾಕಿಸಿದ್ದು ನೀವು, ನೀವೇ ಹೇಗೆ ತೆಗೆಯುತ್ತೀರೋ ನೋಡಿ" ಅಂತ ಅದನ್ನು ನನ್ನ ತಲೆ ಮೇಲೆ ಹೊರಿಸಿದಳು. ನಾನೂ ಸಾಕಷ್ಟು ಸಾಹಸ ಮಾಡಿದೆ ಆ ಓಲೆ ನಾನು ಅವಳ ಕಿವಿಯಲ್ಲೇ ಚೆನ್ನಾಗಿ ಕಾಣ್ತಿದೀನಿ ಬರಲೊಲ್ಲೆ ಅಂತ. ಅದನ್ನು ಕೈಬಿಟ್ಟು ಅವಳ ತಲೆಗೂದಲಲ್ಲಿ ಹೇನು ಹುಡುಕಿ ಒರೆಯುವವರ ಹಾಗೆ ಏನೋ ಹುಡುಕತೊಡಗಿದೆ, "ರೀ ಕಿವಿಯೋಲೆ ಕಿವಿಯಲ್ಲಿ ಇರತ್ತೆ ತಲೆಯಲ್ಲಿ ಅಲ್ಲ" ಅಂತ ಸಿಡುಕಿದಳು, "ಅಲ್ಲಾ ವಯಸ್ಸಾಯ್ತು ಅಂತಿದ್ದೆಯಲ್ಲ, ನಿನಗೂ ವಯಸ್ಸಾಯ್ತ ಅಂತ ನರೆಕೂದಲು ಏನಾದ್ರೂ ಸಿಗುತ್ತಾ ಅಂತ ಹುಡುಕ್ತಾ ಇದೀನಿ" ಅಂದೆ. ಎನೋ ಮಾಡು ಅಂದ್ರೆ ಅದನ್ನ ಬಿಟ್ಟು ಇನ್ನೇನೊ ಮಾಡುತ್ತೀನಿ ಅನ್ನೊ ಮೊಂಡನಂತೆ ಅನಿಸಿರಬೇಕು, ನನ್ನ ಕೈ ಬಿಡಿಸಿ ತಾನು ಮತ್ತೆ ಪ್ರಯತ್ನಿಸಿದಳು ಆಗಲಿಲ್ಲ ಕೈಚೆಲ್ಲಿ ನನ್ನತ್ತ ಬುಸುಗುಡುತ್ತ ನೋಡುತ್ತ ಕೂತಳು. "ಇಂದೊಂದು ದಿನ ಇರಲಿ ಬಿಡು ನಾಳೆ ಬರಬಹುದು" ಅಂತ ಭರವಸೆ ಕೊಟ್ಟೆ, "ನಾಳೆ ಬರದಿದ್ದರೆ" ಅಂದ್ಲು, "ವಯಸ್ಸಾಗುತ್ತ ಕಿವಿ ಜೋತು ಬೀಳುತ್ತಲ್ಲ ಆಗ ಕಿತ್ತು ತೆಗೆದರಾಯ್ತು" ಅಂದೆ. "ನಂಗೊತ್ತು ಮುಂಜಾನೇ ವಯಸ್ಸಾಯ್ತು ಅಂತ ಅಂದ್ನಲ್ಲ ಅದಕ್ಕೆ ಈಗ ಸೇಡು ತೀರಿಸ್ಕೊಳ್ತಾ ಇದೀರಲ್ವಾ" ಅಂತ ಬೇಜಾರಾದಳು. "ಹಾಗೇನಿಲ್ಲ ಆದ್ರೂ ವಯಸ್ಸಾಯ್ತು ಅಂತ ಯಾಕೆ ಅಂದೆ" ಅಂತ ಕೇಳಿದೆ, "ಮತ್ತಿನ್ನೇನು ಮದುವೆ ಆಯ್ತು, ಮಕ್ಕಳು ಆಗೋ ವಯಸ್ಸಾಯ್ತು, ಇನ್ಯಾರು ನೋಡ್ತಾರೆ ಅಂತ ಹಾಗೆ ಹೇಳಿದೆ" ಅಂದ್ಲು. "ನಿಂಗೆಷ್ಟು ವಯಸ್ಸು" ಅಂದೆ
"ಅಯ್ಯೋ ಹುಡುಗಿ ವಯಸ್ಸು, ಹುಡುಗನ ಸಂಬಳ ಕೇಳಬಾರದ್ರಿ, ನಿಜ ಹೇಳಲ್ಲ" ಅಂತ ನಕ್ಕಳು, "ನೀನೇನು ಹುಡುಗೀನಾ" ಅಂದೆ, ಇದೇನು ಇಂಥಾ ಪ್ರಶ್ನೇ ಅಂತನ್ನೊ ಹಾಗೆ ನೋಡಿ, "ನಿಮ್ಮಷ್ಟು ವಯಸ್ಸಾಗಿಲ್ಲ ನಂಗೆ, ನಿಮಗಿಂತ ಇನ್ನೂ ಮೂರು ವರ್ಷ ಚಿಕ್ಕೊಳೇ" ಅಂದ್ಲು, "ಮತ್ತೆ ಆಗಲೇ ವಯಸ್ಸಾಯ್ತು ಅಂತೆಲ್ಲ ಮಾತಾಡ್ತಾ ಇದೀಯ" ಅಂದೆ. "ನನ್ಯಾರು ನೋಡ್ತಾರೆ ಮದುವೆ ಆಯ್ತು, ಇಷ್ಟು ವರ್ಷ ಆಯ್ತು, ಅಂತ ಸುಮ್ನೇ ಹಾಗಂದಿದ್ದು" ಅಂತ ಸರಿಪಡಿಸಲು ನೋಡಿದ್ಲು. ನಾ ಬಿಟ್ಟರೆ ತಾನೇ...

"ವಯಸ್ಸು ಯಾರಿಗೆ ಆಗಲ್ಲ ಹೇಳು, ಹುಟ್ಟಿದಾಗಿಂದ ವಯಸ್ಸಾಗ್ತನೇ ಇದೆ, ವರ್ಷದ ಪುಟ್ಟ ಮಗು ಇದ್ದೆ, ಅಂತ ಹಾಗೇ ಇರ್ತೀನಾ ಹಾಗೇ ಬೆಳಿತಾ.." ನಡುವೆ ಅವಳು "ನೀವು ಪುಟಾಣಿ ಪಾಪು ಇರ್‍ಒ ಫೊಟೊ ನೋಡಿದೀನ್ರೀ ಈಗ್ಲೂ ಹಾಗೆ ಇದ್ದಿದ್ರೆ, ಎತ್ಕೊಂಡು ನನ್ನ ಗಂಡ ಹೇಗಿದಾನೆ ನೋಡು ಕ್ಯೂಟ್ ಅಲ್ವಾ ಅಂತ ಎಲ್ರಿಗೂ ತೋರಿಸಬಹುದಿತ್ತು" ಅಂದ್ಲು ಎಲಾ ಇವಳಾ ಎನೇನು ಆಸೆ ಅಂತೀನಿ ಇವಳಿಗೆ, "ಪರವಾಗಿಲ್ಲ ಈಗ್ಲೂ ಎತ್ಕೊಬಹುದು ನಂಗೇನೊ ಬೇಜಾರಿಲ್ಲ" ಅಂದೆ, ಹುಬ್ಬು ಗಂಟಿಕ್ಕಿದಳು, ನಾ ಹುಬ್ಬು ಹಾರಿಸುತ್ತ ನಗುತ್ತಿದ್ದೆ. ಪುಟ್ಟ ಮಗುವಿನಂತೆ ಬಂದು ತೊಡೆಯೇರಿ ಕೂತಳು, "ಆಯ್ತಪ್ಪ ಈಗೇನು ನಿಮಗೆ ವಯಸ್ಸಾಗಿಲ್ಲ ಅಷ್ಟೆ ತಾನೇ" ಅಂತಂದಳು, "ವಿಷಯ ಬರೀ ಅದಲ್ಲ, ಯೋಚನೆ ಮಾಡು, ಮದುವೆ ಆಗ್ತಿದ್ದಂತೇ, ಏನೊ ಜೀವನದಲ್ಲಿ ಎಲ್ಲಾ ಮುಗಿದು ಹೋಯ್ತು, ಮಕ್ಕಳಾದರಂತೂ ಮುಗೀತು, ಇನ್ನೇನು ಯಮರಾಜ ಬಂದು ಕರೆದೊಯ್ಯಲೇ ಬೇಕೆಂದು ಕಾಯುತ್ತಿರುವವರ ಹಾಗೆ ಆಡತೊಡುಗುತ್ತಾರೆ ಕೆಲವರು(ಆ ಕೆಲವರ ಬಗ್ಗೇನೇ ನಾ ಹೇಳುತ್ತಿರುವುದು), ಒಂಥರಾ ಉದಾಸೀನತೆ ತಂದುಕೊಂಡು, ಜಿಗುಪ್ಸೆಗೆ ಇಳಿದುಬಿಡ್ತಾರೆ, ಯಾಕೆ ಅಂತ ನನ್ನ ಪ್ರಶ್ನೇ, ಅದೇ ಮೊದಲಿನ ಜೀವನದ ಉತ್ಸಾಹ ಯಾಕೆ ಉಳಿಸಿಕೊಳ್ಳಬಾರದು" ಅಂದೆ, "ಹೌದಲ್ವಾ ಮದುವೆ ಆದ ಮೇಲೆ ಇನ್ಯಾರು ನೋಡ್ತಾರೆ ಅಂತ ಹಾಗೆ ಆ ಉದಾಸೀನತೆ ಬರತ್ತೆರೀ" ಅಂದ್ಲು, "ಯಾರೋ ಯಾಕೆ ಅವರ ಪತಿ, ಪತ್ನಿಯೇ ನೋಡಲ್ವೇ ಅದಕ್ಕಾದರೂ..." ಅಂತಿದ್ದರೆ "ಮದುವೆ ಆಯ್ತಲ್ಲ ಇನ್ನೇನು ಹೊಸ ಆಕರ್ಷಣೆ ಉಳಿದಿಲ್ಲ ಅಂತ ಹಾಗೆ ಮಾಡ್ತಾರೆ" ಅಂದ್ಲು "ಅದು ನಾವು ಅನ್ಕೊಳ್ಳೊದು ಅಷ್ಟೇ, ಅದು ನಮ್ಮನ್ನು ನಾವೇ ಆ ಉದಾಸೀನತೆಗೆ ತಳ್ಳಿಕೊಳ್ಳೊದು" ಅಂದೆ... ನಿಧಾನವಾಗಿ ಆ ಇನ್ನೊಂದು ಓಲೆ ಮತ್ತೆ ಕಿವಿಗೇರಿಸುತ್ತಿದ್ದಳು.

ನಾವೇ ಹೀಗೆ, ಎಲ್ರೂ ಅಂತಲ್ಲ ಆದ್ರೆ ಬಹಳಷ್ಟು ಜನ, ಮದುವೆ ಆಯ್ತು ಇನ್ನೇನಪ್ಪಾ ಅಂತ, ಹೇಗೆ ಬೇಕೋ ಹಾಗಿರಲು ಶುರುವಿಡುತ್ತೇವೆ, ಕೇಳಿದ್ರೆ ಮದುವೆ ಆಯ್ತಲ್ಲ ಇನ್ಯಾರು ನೋಡೊರು? ಆದರೆ ಇಲ್ಲಿ ಈ ಮುಖದ ಮೇಲೆ ನಾಲ್ಕಿಂಚು ದಪ್ಪ ಮೇಕಪ್ಪು ಬಳಿದು, ತುಟಿಗೆ ರಂಗು ತೀಡಿ, ಹರೆಯದ ಹುಡುಗಿಯಂತೆ ಆಡುವವರೂ, ಇಲ್ಲ ಕೂದಲಿಗೆ ಬಣ್ಣ ಬಳಿದು, ಮೀಸೆ ತೆಗೆದು ಪೋಲಿ ಜೋಕು ಮಾಡುತ್ತ ತರುಣರಂತೆ ತೋರಿಸ್ಕೊಳ್ಳುವವರ ಬಗ್ಗೆ ನಾ ಹೇಳುತ್ತಿಲ್ಲ, ವಯಸ್ಸಿಗೆ ತಕ್ಕ ಯೋಗ್ಯವಾಗಿ ಬಟ್ಟೆ ಧರಿಸಿ, ಗೌರವಯುತರಾಗಿ ಕಾಣುವವರ ಬಗ್ಗೆ ಹೇಳುತ್ತಿರುವುದು. ನೀಟಾಗಿ ಇನ್ ಶರ್ಟ ಮಾಡಿ, ಹೊಂದಿಕೆಯಾಗುವ ತೊಡುಗೆ ಧರಿಸಿ, ಶಿಸ್ತಿನಿಂದ ಯಾಕೆ ಇರಬಾರದು, ಅದ ಬಿಟ್ಟು ಯಾವುದೊ ಶರ್ಟು, ಯಾವುದೊ ಪ್ಯಾಂಟೊ ಹಾಕಿ ಎತ್ತೆತ್ತಲೋ ತೊಳು ಮಡಚಿ, ಹೇಗೇಗೊ ಇದ್ದರೆ, ಕೆದರಿದ ಕೂದಲು ಬಿಟ್ಟು, ನೈಟಿಯಲ್ಲೇ ಮೇಲೆ ಒಂದು ದುಪಟ್ಟ ಹೊದ್ದು ಊರೆಲ್ಲ ತಿರುಗಿ ಬಂದರೆ ಯಾರೂ ಏನೂ ಕೇಳಲ್ಲ, ಯಾರಿಗೂ ಎನೂ ನಷ್ಟವಿಲ್ಲ, ಅದೇ ಉದಾಸೀನತೆ ನಮ್ಮನ್ನೇ ಆವರಿಸಿ, ಬೇಗ ಮುದುಕರಾಗಿಬಿಡುತ್ತೇವೆ, ಇಲ್ಲ ಹಾಗೆ ಆಡತೊಡುಗುತ್ತೇವೆ, ಅದೇ
ಎಷ್ಟೊ ಇಳಿವಯಸ್ಸಿನಲ್ಲಿರುವವರನ್ನು ನೋಡಿ ಎಷ್ಟು ಸರಳವಾಗಿ ಸಭ್ಯರಾಗಿ ಕಾಣುತ್ತಾರೆ, ಜೀವನದಲ್ಲಿ ಲವಲವಿಕೆಯಿಂದಿರುತ್ತಾರೆ. ಹಾಗೇ ನಾವ್ಯಾಕೆ ಇರಬಾರದು, ಇದ್ದರೆ ನಮಗೆ ಒಳ್ಳೇದು.

ಮಾರನೇ ದಿನ, ಯಾವುದೋ ಮನೆ ಗೃಹ ಪ್ರವೇಶ ಸಮಾರಂಭವಿತ್ತು, ಹೊರಟು ತಯ್ಯಾರಾಗುತ್ತಿದ್ದಳು, "ಲೇ ಆಯ್ತೇನೆ, ಜಾಸ್ತಿ ಮೇಕಪ್ಪು ಮಾಡು ಅಂತ ನಾ ಹೇಳಿಲ್ಲ, ನೀಟಾಗಿರಲಿ ಅಂತ ಹೇಳಿದ್ದು" ಅಂತ ಚೀರುತ್ತಿದ್ದೆ, ಬಾಗಿಲು ತೆರೆದು ಹೊರಬಂದಳು, ಕ್ಷಣದಲ್ಲಿ ಸ್ತಂಭಿಭೂತನಾದೆ, ಜರಿ ದಡಿಯ ಹಸಿರು ಅಂಚಿನ ರೇಶಿಮೆ ಸೀರೆ ನೀಟಾಗಿ ತಿದ್ದಿ ತೀಡಿ ನೆರಿಗೆ ಹಾಕಿಯುಟ್ಟು, ಸೆರಗಿಗೆ ಪಿನ್ನು ಹಾಕಿ ಕಟ್ಟಿಟ್ಟು, ಹಿಂದಿನಿಂದೆಳೆದು ಕೈಲಿ ಹಿಡಿದಿದ್ದಳು ಪದರು ಪದರು ಹರಡುವಂತೆ, ಕೂದಲೆಳೆದು ಹಿಂದೆ ಕೂಡಿಸಿ ಕ್ಲಿಪ್ಪು ಹಾಕಿ ಬಂಧಿಸಿ, ಎರಡೇ ಎರಡು ಎಳೆ ಹೊರಗೆ ಹಾರಾಡಲು ಕಿವಿ ಮೇಲೆ ಸರಿಸಿಟ್ಟಿದ್ದಳು. ಮೂಗಿಗೆ ಮೂಗುತಿಯೊಂದಿಗೆ, ತುಟಿಗೆ ನಗು ಆಭರಣವಾಗಿಸಿದ್ದರೆ, ಕಿವಿಯೋಲೆ, ನಾನೂ ಇದ್ದೀನಿ ಅಂತ ಹೊಳೆಯುತ್ತಿತ್ತು. "ಏನು ಹಾಗೆ ನೋಡ್ತಾ ಇದೀರಾ, ಮೊದಲಸಾರಿ ನೋಡಿದ ಹಾಗೆ" ಅಂತ ನಾಚಿದಳು, ಕೆನ್ನೆಗೆ ಕೆಂಪಡರಿ ಇನ್ನೂ ಚೆಂದ ಕಾಣಿಸಿದಳು. ಕೈಗೆ ಸಿಕ್ಕ ಪೆನ್ನಿನಲ್ಲೇ ದೃಷ್ಟಿ ಬೊಟ್ಟು ಬರೆದೆ. ನಾನೂ ಒಳ ಹೋಗಿ ಗಡಿಬಿಡಿಯಲ್ಲಿ ಅವಳನ್ನು ನೋಡಿ ಅವ್ವಾಕ್ಕಾದ ಗುಂಗಿನಲ್ಲೇ ಕಪ್ಪು ಪ್ಯಾಂಟ್ಗೆ ಬಿಳಿ ಶರ್ಟ ಹಾಕಿ ಹೊರ ಬಂದೆ, "ರೀ ಕಲರ ಟೀವೀ ಪಕ್ಕ ಬ್ಲಾಕ್ ಆಂಡ ವೈಟ್ ಟೀವೀ ಇಟ್ಟ ಹಾಗೆ ಕಾಣಿಸ್ತೀವಿ ಇಬ್ರೂ" ಅಂತ ನಗೆಯಾಡಿದವಳು ಬೀರು ಕಿತ್ತಾಕಿ ಅದೇನೋ ಮ್ಯಾಚಿಂಗ ಅಂತ ಬಟ್ಟೆ ಎತ್ತಿ ಕೊಟ್ಟಳು, ನಾನು ಬಾಚಿದ ಕೂದಲು, ಸ್ವಲ್ಪ ಊದಿ ಹಾರಿಸಿದಳು, ಎನೊ ಚೆನ್ನಾಗೇ ಕಾಣಿಸ್ತು, ಹಾಗೇ ಕಿವಿಯಲ್ಲಿ "ಮುಂಜಾನೆ, ಸ್ನಾನ ಮಾಡೊವಾಗ ಸಾಬೂನು ಹಚ್ಚಿದ್ದಕ್ಕೆ ಕಿವಿಯೋಲೆ ಬಿಚ್ಚಿ ಬಂತು, ಆದ್ರೆ ನೀವು ಚೆನ್ನಾಗಿ ಕಾಣಿಸ್ತೀನಿ ಅಂದ್ರಲ್ಲ ಅದಕ್ಕೆ ಮತ್ತೆ ಹಾಕಿದೀನೀ" ಅಂತ ಉಸುರಿದಳು, ಮತ್ತಷ್ಟು ಪುಳಕಗೊಂಡೆ. ಹೊರಗೆ ಬಂದು ಹೊರಡಲನುವಾಗುತ್ತಿದ್ದರೆ ಪಕ್ಕದ ಮನೆಯ ಪದ್ದುನ ಅರಳಿದ ಕಣ್ಣುಗಳೇ ಕನ್ನಡಿಯಾಗಿದ್ದವು ನಮಗೆ.

ಎನ್ರೀ ನನ್ನಾಕೇನಾ ಹಾಗೆ ಕಣ್ಣು ಕಣ್ಣು ಬಿಟ್ಟು ನೋಡ್ತಿದೀರಾ, ದೃಷ್ಟಿಯಾದೀತು! ಮತ್ತೆ ಮುಂದಿನ ವಾರ ಸಿಕ್ತೀವೀ, ಹೊರಡೋಣ್ವಾ..



ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/vayassaaytaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, August 9, 2009

ಅವಳ ಮಾತಿನಲ್ಲಿ...

"ರೀ ಎದ್ದೇಳ್ರೀ, ಟೀ ಕಾಫಿ ಏನು ಬೇಕು" ಅಂತ ಚೀರಿ ಕರೆದೆ, ಉಹೂಂ ಆಕಡೆಯಿಂದ ಮಿಸುಕಾಡಿದ ಸದ್ದು ಕೂಡ ಬರಲಿಲ್ಲ, ಆಫೀಸಿದ್ದರೆ ನೀಟಾಗಿ ಎದ್ದು ತಾವೇ ಹೊರಟು ಬಿಡುವರು, ಇಲ್ಲ ಅಂದ್ರೆ ಏಳಿಸಲು ಹರಸಾಹಸ ಮಾಡಬೇಕು, ಅತ್ತೆನ ಎಷ್ಟು ಸಾರಿ ಕೇಳಿದ್ದೀನಿ, "ನೀವು ಏಳಿಸುವಾಗಲೂ ಹೀಗೆ ಮಾಡ್ತಿದ್ರಾ" ಅಂತ, ಒಂದೊ ಪಾಪ ಮಗು ಮಲಗಿದೆ ಅಂತ ಏಳಿಸ್ತಿರಲಿಲ್ಲ ಅಂತೆ ಇಲ್ಲಾಂದ್ರೆ ತಾನೇ ಎದ್ದು ಬಿಡ್ತಿದ್ದ, ನೀನಂದ್ರೆ ಈ ರಗಳೆ ಅವನದು, ಅಂತ ನಗ್ತಿದ್ರು, ಅದೂ ನಿಜಾನೇ ನನಗೆ ಮಾತ್ರ ಇವರ ಕೀಟಲೆ ಕಾಟ, ನನಗೂ ಖುಷೀನೇ ದಿನಾ ಎನಾದ್ರೂ ಹೊಸ ಹೊಸ ಪ್ರಯೋಗಗಳ ಮಾಡ್ತೀನಿ. ಹಾಸಿಗೆ ಮೇಲೆ ಕೂತು ತಲೆ ಸವರಿದೆ, ಅದೇ ಕೈ ಹಿಡಿದುಕೊಂಡು ನನ್ನ ಕಾಲ ಮೇಲೇರಿ ಮಲಗಿದರು, ಇದೇನು ತೂಕಡಿಸುವವನಿಗೆ, ಹಾಸಿ ತಲೆದಿಂಬು ಕೊಟ್ಟಹಾಗಾಯ್ತು, ಅಂತನಿಸಿದರೂ ಗಾಢ ನಿದ್ರೆಯಲ್ಲಿರುವುದ ನೋಡಿ ಬಯ್ಯಲು ಮನಸು ಬರಲಿಲ್ಲ, ಹಾಗೆ ಸ್ವಲ್ಪ ಹೊತ್ತು ಕೂತಿದ್ದೆ, "ಏನು ಏಳಲ್ವಾ" ಅಂತ ಕೇಳಿದ್ದಕ್ಕೆ, "ಪ್ಲೀಜ" ಅಂತಂದು ಮಗ್ಗಲು ಬದಲಿಸಿದರು, ಮೊನ್ನೆ ತಾನೆ ಬೆಂಚು ಏನೂ ಕೆಲಸ ಇಲ್ಲ ಅಂತಿದ್ದವ್ರು, ಕಳೆದ ವಾರದಿಂದ ಅದೇನೊ ಟ್ರೇನಿಂಗ, ಮೀಟಿಂಗ ಅಂತ ಒಮ್ಮೆಲೇ ಬೀಜೀ ಆಗಿದ್ರು, ಅದೇನು ಸಾಫ್ಟವೇರ ಕೆಲಸಾನೊ, ಇದ್ರೆ ರಾಶಿ ರಾಶಿ ಕೆಲ್ಸ ಒಮ್ಮೊಮ್ಮೆ ಇಲ್ಲಾಂದ್ರೆ ಎನೂ ಇಲ್ಲ. ಮಲಗಲಿ ಬಿಡು ಅಂತ ಎದ್ದು ಬಂದೆ, ಆಗಲೇ ತಲೆಗೆ ಬಂತು ಈ ವಾರ ಅವರ ಬದಲಿಗೆ ನಾನು ಯಾಕೆ ಬರೆಯಬಾರದು ಅಂತ...

ನನ್ನ ಬಗ್ಗೆ ಅಂತೂ ಅವರು ಬಹಳ ಹೇಳಿರ್ತಾರೆ, ಯಾವಾಗಲೂ ಕೀಟಲೆ ತರಲೆ ಮಾಡೊ ತುಂಟಿ ಅಂತ, ನಾನೇನು ಅಷ್ಟು ತರಲೆ ಮೊದಲಿಂದಲೇ ಇರಲಿಲ್ಲ, ಎಲ್ಲ ಅವರಿಂದಾಗೆ ಆಗಿದ್ದು, ಅದ್ರೂ ಹಾಗನಿಸಿಕೊಳ್ಳಲು ಬೇಜಾರೇನಿಲ್ಲ. ಮದುವೆ ಆಗೊ ಮೊದಲು ಇವರು ಬರೆಯೋ ಲೇಖನ ಓದಿ, ನನ್ನ ಗೆಳತಿಯರೆಲ್ಲ, "ಅವರೇನೇನೋ ನಿರೀಕ್ಷೆ ಇಟ್ಕೊಂಡಿದಾರೆ ನೀನ್ ಹೇಗೆ ಸಂಭಾಳಿಸ್ತೀಯಾ", ಇಲ್ಲ "ಮೊದಲೇ ಬರೆಯೋ ಹುಚ್ಚು ಆದ ಮೇಲೂ ಹೀಗೆ ಬರೀತಾ ಕೂತ್ರೆ ಏನೇ ಮಾಡ್ತೀಯಾ" ಅಂತೆಲ್ಲಾ ಏನೆನೋ ಹೇಳಿ ಹೆದರಿಸಿಬಿಟ್ಟಿದ್ರು. ನನಗೂ ಹಾಗೇ ಅನ್ನಿಸಿತ್ತು ಮೊದಲೇ ನನ್ನ ಮಾತು ಅಪರೂಪ, ಇವರು ನೋಡಿದ್ರೆ ಅರಳು ಹುರಿದಂತೆ ಮಾತಾಡೋರು ಹೇಗಪ್ಪ ಅನ್ನೋ ಹಾಗಿತ್ತು. ಈಗ ಅಪ್ಪ ಅಂತಿರ್ತಾರೆ ಮದುವೆಗೆ ಮೊದಲು ಮಾತಾಡದೇ ಇದ್ದದ್ದೆಲ್ಲ ಈಗ ಮಾತಾಡಿ ತೀರಿಸಿಕೊಳ್ತಾ ಇದಾಳೆ ಅಂತ. ಆಗ ಅವರು ಹತ್ತು ಮಾತಾಡಿದರೆ ನಾನೊಂದು "ಹೂಂ", "ಹಾಂ" ಅಷ್ಟೇ, ಈಗ ಅವರೊಂದು ಶಬ್ದ, ತುಟಿ ಪಿಟಿಕ್ಕೆಂದರೆ, ನಾಲ್ಕು ಮಾತಾಡಿ ಬಾಯಿ ಮುಚ್ಚಿಸಿಬಿಡ್ತೀನಿ. ಮದುವೆಯಾದ ಹೊಸದರಲ್ಲಿ, ಎನಂದರೇನು ಕೀಟಲೆ, ಮೊದ ಮೊದಲು ಬಹಳ ಸಿಟ್ಟು ಬರೊದು, ಅತ್ತೆ ಕೂಡ "ಯಾಕೊ ಗೊಳುಹೊಯ್ಕೊತೀಯ ಅವಳ್ನಾ" ಅಂತ ನನ್ನ ಬೆಂಬಲಕ್ಕೆ ಬರೋರು, ಮೊದಲೇ ವಯಸ್ಸಿನ ಅಂತರ ದೊಡ್ಡೋರು, ಅಲ್ದೇ ಗಂಡ ಅಂತ ನನಗೆ ಹೆದರಿಕೆ, ಅಮ್ಮ ಅಪ್ಪನಿಗೆ ಹೆದರುತ್ತಿದ್ದುದ ನೋಡಿ ಬೆಳೆದಿದ್ದೆ. ಹೇಳಿದ್ದಕ್ಕೆ ತಿರುಗಿ ವಾದಿಸುವುದು ದೂರದ ಮಾತು, ಕೇಳಿದ್ದಕ್ಕೂ ಏನೂ ಹೇಳುತ್ತಿರಲಿಲ್ಲ, ಅವರು
ಸಂಗಾತಿಯಲ್ಲಿ ಸ್ನೇಹಿತೆಯನ್ನು ಹುಡುಕುತ್ತಿದ್ದುದ್ದು ನನಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು, ತಡವಾದರೂ ತಿದ್ದಿಕೊಂಡೆನಲ್ಲ ಅನ್ನೋದೇ ಸಮಾಧಾನ.

ಆ ದಿನದ ಬಗ್ಗೆ ಹೇಳಲೇಬೇಕು, ರಾತ್ರಿ ಮನೆಗೆ ಬಂದವರೇ ಒಂದು ಸೀರೀಯಸ್ ವಿಷಯ ಹೇಳಬೇಕು ಅಂತಂದರು, ಊಟ ಆಗಿ ಕೂರುತ್ತಿದ್ದಂತೆ, "ಆ ಸಿಗ್ನಲ್ಲಿನಲ್ಲಿ ದಿನಾಲೂ ಸಿಗುವ ಹುಡುಗಿ ಮದುವೆ ಆಗಬೇಕು ಅಂತಿದೀನೀ" ಅಂದ್ರು. ಅಕಾಶಾನೇ ಕಡಿದುಕೊಂಡು ತಲೇ ಮೇಲೆ ಬಿದ್ದ ಹಾಗಾಯ್ತು, ಎನು ಅಂತ ಕೇಳಬೇಕು ಗೊತ್ತಾಗಲಿಲ್ಲ, ಸುಮ್ನೇ ಇದ್ದೆ. "ನಿನ್ನ ಅಭಿಪ್ರಾಯ ಏನು" ಅಂತ ಮತ್ತೆ ಕೇಳಿದ್ರು, ಎನು ಅವಳನ್ನ ಮದುವೆಯಾಗಿ ನಾಲ್ಕು ಮಕ್ಕಳಾಗಿ ಸುಖವಾಗಿರಿ ಅಂತಾನಾ ನನ್ನ ಅಭಿಪ್ರಾಯ ಇರತ್ತೆ, ಸಿಟ್ಟು ಬಂತು, "ಹೆಂಡ್ತೀ ಅಂತ ನಾನಿಲ್ವಾ" ಅಂದೆ, "ಇದೀಯಾ ಅವಳೂ ಹೆಂಡ್ತಿ ಅಂತ ಆಗಿರ್ತಾಳೆ" ಅಂದ್ರು, "ನಮ್ಮಪ್ಪನಿಗೆ ಫೋನು ಮಾಡ್ತೀನಿ ನಾನು" ಅಂತ ಮೇಲೆದ್ದೆ, "ನಿಮ್ಮಪ್ಪ ಅಲ್ಲ ನಿಮ್ಮಜ್ಜನಿಗೇ ಹೇಳು ನಾನು ಕೇಳಲ್ಲ, ಅವಳನ್ನ ಯಾಕೆ ಮದುವೆ ಆಗಬಾರದು ಹೇಳು ಮೊದಲು" ಅಂತ ಅಲ್ಲೇ ಹಿಡಿದು ಕೂರಿಸಿದ್ರು, ಏನೇ ಆದ್ರೂ ಅಪ್ಪನಿಗೆ ಹೇಳೋ ಬುಧ್ಧಿ ನನಗೆ ಆವಾಗ, ಈಗ ಇವರೊ ಬಿಡುತ್ತಿಲ್ಲ, ಏನಾದ್ರೂ ಹೇಳಲೇಬೇಕಿತ್ತು, "ನನ್ನ ಮದುವೆ ಆಗೀದೀರಾ" ಅಂದೆ, "ಅವಳನ್ನೂ ಆಗ್ತೀನಿ" ಅಂತಂದ್ರು, ಒಳ್ಳೆ ಹಠವಾದಿ ಸಹವಾಸ ಆಯ್ತಲ್ಲ ಅಂತ ಬಯ್ಕೊಂಡೆ. ಈಗ ಎನಾದ್ರೂ ಹಾಗೆ ಕೇಳಿದ್ರೆ "ರೀ ಕಲ್ಯಾಣ ಮಂಟಪ ಯಾವುದು ಬುಕ್ ಮಾಡಲಿ" ಅಂತ ಕೇಳಿರ್ತಿದ್ದೆ, ಇಲ್ಲ ದೊಡ್ಡ ವಾದ ಮಂಡಿಸಿರುತ್ತಿದ್ದೆ, ಆಗ ಎಲ್ಲ ಹೊಸದು, ಪ್ರತಿವಾದ ಮಾಡಲು ಬರುತ್ತಿರಲಿಲ್ಲ, ಆದರೂ "ಕೇಸು ಹಾಕ್ತೀನಿ" ಅಂತ ಹೆದರಿಸಿದೆ, "ಕೋರ್‍ಟ ಕಚೇರಿ ಅಲೀತಾ ಇರು, ಇಬ್ರೂ ಸತ್ತು ಹೋದ ತೀರ್ಪು ಹೊರಗೆ ಬರುತ್ತೆ" ಅಂದ್ರು. ಸಿಟ್ಟು ಸೆಡವು ಎಲ್ಲ ಸೇರಿತು, ವಾದಕ್ಕಿಳಿದಿದ್ದೆ. "ಅಂದವಾಗಿದಾಳ" ಅಂದೆ, "ಒಹ್ ನಿನಗಿಂತ ಎರಡು ಪಟ್ಟು" ಅಂತ ಹುಬ್ಬೇರಿಸಿದ್ರು, ಅದ್ಕೆ ಆ ಲಲನಾಮಣಿ ಬಲೆಗೆ ಬಿದ್ದಿರೋದು ಅಂತ, "ಹಾಗಿದ್ರೆ ನನ್ನ ಮದುವೆ ಆಗೊ ಮೊದಲೇ ಯೊಚಿಸಬೇಕಿತ್ತು" ಅಂದ್ರೆ "ಮದುವೆ ಆದ ಮೇಲೆ ತಾನೆ ಅವಳು ಕಾಣಿಸಿದ್ದು" ಅಂತ ಮಾರುತ್ತರ. "ಅವಳನ್ನ ಮದುವೆ ಆದಮೇಲೆ ಇನ್ಯಾರೊ ಇಷ್ಟ ಆದ್ರೆ" ಹೀಗಳೆಯಲು ಪ್ರಯತ್ನಿಸಿದೆ. "ಆ ಇನ್ಯಾರನ್ನೊ ಮದುವೆ ಆಗ್ತೀನಿ" ಅಂದ್ರು ನಿರಾಯಾಸವಾಗಿ, ಕೋಪದಲ್ಲೇ "ಎನು ಮದುವೆ ಆಗೊದ್ರಲ್ಲಿ ಗಿನ್ನಿಸ ರೆಕಾರ್ಡ ಮಾಡಬೇಕು ಅಂತಿದೆಯಾ" ಅಂದೆ, ನಕ್ಕರು. "ಮಕ್ಕಳು ಹುಟ್ಟಿಸೋದ್ರಲ್ಲೂ" ಅಂತ, ನನಗೂ ನಗು ಬಂತು ಆದ್ರೆ ವಿಷಯ ಗಂಭೀರವಾಗಿತ್ತಲ್ಲ, ನಗು ಎಲ್ಲಿ ಬರಬೇಕು. ಸರಿಯಾಗಿ ಮುಕ್ಕಲು ಘಂಟೆ ಕಿತ್ತಾಡಿದ್ವಿ, ಕೊನೆಗೆ "ಆ ಹುಡುಗೀನೇ ಮದುವೆ ಆಗೊದು ನಿಮ್ಮ ನಿರ್ಧಾರಾನ" ಅಂದ್ರೆ, "ಯಾರನ್ನ" ಅಂದ್ರು. "ಯಾರನ್ನ ಅಂದ್ರೆ, ಎನು ಇಬ್ರು ಮೂರು ಜನ ಇದಾರ, ಅದೇ ಸಿಗ್ನಲ ಹುಡುಗಿ" ಅಂದೆ "ಯಾವ ಸಿಗ್ನಲ್ಲು" ಅಂದ್ರು, ಕೋಪ ನೆತ್ತಿಗೇರಿತು "ಅದೇ ಇಷ್ಟೊತ್ತು ಮದುವೆ ಆಗ್ತೀನಿ ಅಂತಿದ್ರಲ್ಲ", ನನ್ನ ಕೆಂಪೇರಿದ ಮುಖ ನೋಡಿ ಹೊಟ್ಟೆ ಹಿಡಿದುಕೊಂಡು ನಗತೊಡಗಿದ್ರು, ಆಗ್ಲೇ ಗೊತ್ತಾಗಿದ್ದು ಇಷ್ಟೊತ್ತು ಮಾಡಿದ್ದೆಲ್ಲ ನಾಟಕ, ಚೇಷ್ಟೆ ಅಂತ. ತಲೆದಿಂಬು ಕೈಲಿತ್ತು ಅದ್ರಿಂದ ಒಂದು ಕೊಟ್ಟೆ, ಅದೇ ಮೊದಲು ಅನ್ಸತ್ತೆ, ಆಮೇಲೆ ಈಗ ಎಷ್ಟು ಏಟು ತಿಂದೀದಾರೊ ಲೆಕ್ಕ ಇಲ್ಲ. ತಲೆದಿಂಬು ಕಸಿದು ಅಪ್ಪಿಕೊಂಡಿದ್ರೂ ಬೆನ್ನ ಮೇಲೆ ಏಟು ಬೀಳುತ್ತಲೇ ಇತ್ತು, ಕಣ್ಣಲ್ಲಿ ನೀರು ನಗು ಎಲ್ಲ... "ಇಷ್ಟು ಮಾತಾಡ್ತೀಯಾ, ಯಾಕೆ ಯಾವಾಗಲೂ ಸುಮ್ಮನಿರ್ತೀಯಾ, ಹೀಗೆ ತರೆಲೇ ಮಾಡೊ ಗೆಳತಿ ನಿನ್ನಲಿ ಹುಡುಕಿದ್ದು, ಇಂದು ಸಿಕ್ಕಳು" ಅಂತಿದ್ದರು, ಅಗಲೂ ಅಷ್ಟು ಮಾತಾಡಿರಲಿಲ್ಲ, ನಿಧಾನ ಹೊಂದಿಕೊಂಡೆ. ಅಪ್ಪ ಅಂತೂ "ಏನು ಜಾದೂ ಮಾಡಿದೀರಾ ಅಳಿಯಂದ್ರೆ, ಚಟಪಟ ಅಂತ ಮಾತಾಡೊ ಹಾಗೆ ನನ್ನ ಮಗಳಿಗೆ" ಅಂತ ಕೇಳುವಷ್ಟು ಬದಲಾದೆ, "ಅವರು ಹಾಗೆ ಮಾಡ್ತಾರೆ, ಹೀಗೆ ಕಾಡ್ತಾರೆ, ಅದು ಇಷ್ಟ, ಇದು ಅಂದ್ರೆ ಕೋಪ" ಅಂತೆಲ್ಲ ಏನೇನೊ ಹೇಳಿ ತಲೆ ತಿನ್ನುತ್ತಿದ್ದೆ. ಕೊನೇಗಂತೂ ಅಮ್ಮ "ಈ ನಿಮ್ಮ ತುಂಟಿನಾ ಕರೆದುಕೊಂಡು ಹೋಗಿ, ಇಲ್ಲಿ ತಲೆ ತಿಂತೀದಾಳೆ" ಅಂತ ಇವರಿಗೆ ಫೋನು ಮಾಡಿದ್ಲು.

ಈಗ ಇಬ್ರೂ ಮಾತಾಡ್ತೀವೀ, ಆಫೀಸಿನಲ್ಲಿ ಬಾಸ ಬಯ್ದದ್ದರಿಂದ ಹಿಡಿದು, ದಾರೀಲಿ ಕಂಡ ಹುಡುಗಿ ಮುಗುಳ್ನಗೆ ಕೊಟ್ಟದ್ದರವರೆಗೆ ಎಲ್ಲಾ ವರದಿ ಕೊಡ್ತಾರೆ, ಎಲ್ಲ ಮುಚ್ಚು ಮರೆಯಿಲ್ದೇ ಮಾತಾಡ್ತೀವಿ, ಮಾತು ಬೆಳ್ಳಿ ಮೌನ ಬಂಗಾರ ಅಂತಾರೆ ಆದರೆ ದಂಪತಿಗಳಿಗೆ ಅದು ತದ್ವಿರುಧ್ಧ ಅನಿಸುತ್ತದೆ, ಹಿತ ಮಿತವಾದ ಮಾತು ಅದೂ ಗೆಳೆಯ ಗೆಳತಿಯರಂತೆ ಇದ್ದರೆ ಅದೇ ಬಂಗಾರ. ಅಯ್ಯೊ ನಿಮ್ಮೂಟ್ಟಿಗೆ ಮಾತಾಡ್ತಾ ಕೂತು ಸಮಯ ಆಗಿದ್ದೇ ಗೊತ್ತಾಗಲಿಲ್ಲ, ಇವರಿನ್ನೂ ಮಲಗಿದ್ರೆ ಹೇಗೆ, ಮತ್ತೆ ಸಿಕ್ತೀನಿ, ಇಲ್ಲ ಇವರೇ ನನ್ನ ಬಗ್ಗೆ ಬರೀತಾ ಇರ್ತಾರಲ್ಲ.



ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/avala-maatinalli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, August 2, 2009

ಸ್ನೇಹ ಸಂದೇಶ...

ರಾತ್ರಿ ಎಷ್ಟೊತ್ತೊ ಏನೊ, ಕುಟು ಕುಟು ಅಂತ ಸದ್ದು ಕೇಳ್ತಾ ಇತ್ತು, ಮುಂಜಾನೆಯಿಂದ ಸಂಜೆವರೆಗೆ ಕೀಬೋರ್ಡ ಕುಟ್ಟಿ ಕುಟ್ಟಿ ಅದೇ ಸದ್ದು ಕಿವಿಯಲ್ಲಿ ಗುಂಯ್‍ಗುಡುತ್ತಿದೆಯೇನೊ ಅಂತ ಕಿವಿಯಲ್ಲಿ ಕಿರುಬೆರಳು ತೂರಿಸಿ ಕಟ್ಟಾಡಿಸಿಕೊಂಡೆ, ಕಿವಿಯಿನ್ನೂ ಚುರುಕಾಗಿ ಸದ್ದು ಜಾಸ್ತಿಯಾಯ್ತು. ಕಣ್ಣು ತೀಡುತ್ತ ಎದ್ದು ಸಮಯನಾದ್ರೂ ಎಷ್ಟು ನೋಡೊಣ ಅಂದ್ರೆ, ವಾಣಿನೂ (ಮೊಬೈಲೂ) ಕೈಗೆ ಸಿಗಲಿಲ್ಲ, ಅಲ್ಲೆ ಪಕ್ಕದಲ್ಲೇ ಬಿದ್ಕೊಂಡು ಕಣ್ಣುಹೊಡೀತಾ ಇರ್ತಿದ್ಲು (ಪಿಳಿ ಪಿಳಿ ಅನ್ನುವ ಮೊಬೈಲಿನ ಎಲ್.ಈ.ಡಿ ಲೈಟು ಇರುತ್ತಲ್ಲ). ಎಲ್ಲಿ ಕಾಣೆಯಾದ್ಲು ಅಂತ ಹುಡುಕಿದೆ, ಸಿಗಲಿಲ್ಲ, ಈ ಪಕ್ಕ ನನ್ನಾಕೆ ಮುಖ ಕಾಣದಂತೆ ಸೆರಗು ಹೊದ್ದಿರುವ ನವವಧುವಿನಂತೆ, ಮುಸುಕು ಹಾಕಿಕೊಂಡು ಮಲಗಿದ್ಲು, ಅವಳನಾದ್ರೂ ಎಬ್ಬಿಸಿ ಕೇಳೊಣ ಅಂತ ಅಲುಗಿಸಿದರೆ, "ಹೂಂ..." ಅಂದ್ಲು, ಅರೆ! ಇನ್ನೂ ಎಚ್ಚರವಾಗೇ ಇರೊ ಹಾಗೆ ಇದೆ ಅಂತ ಮುಸುಕೆಳೆದರೆ, "ರಾತ್ರಿ ಹನ್ನೆರಡಕ್ಕೆ ಏನ್ರೀ ನಿಮ್ದು" ಅಂತೆದ್ದಳು, ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ತು, ನನ್ನಾಕೆ ಜತೆ, ವಾಣಿ ಕೂಡ ಅಲ್ಲೇ ಇದ್ಲು, ಸದ್ದು ಕೂಡ ಅಲ್ಲಿಂದಲೇ ಬರುತ್ತಿತ್ತು, ಸಮಯ ಹನ್ನೆರಡಾಗಿತ್ತು.

"ಅದನ್ನೇ ಈಗ ನಾನು ಕೇಳಬೇಕು, ರಾತ್ರಿ ಹನ್ನೆರಡಕ್ಕೆ ಏನೇ ನಿಂದು, ಮೊಬೈಲನಲ್ಲಿ ಏನು ನೋಡ್ತಾ ಇದೀಯಾ, ಯಾರಾದ್ರೂ ಹುಡುಗಿಯರ ಎಸಎಂಎಸ್ ಸಿಗುತ್ತಾ ಅಂತ ಹುಡುಕ್ತಾ ಇದೀಯ, ಯಾರೂ ಇಲ್ಲ ಅನ್ನೊದಷ್ಟೇ ಅಲ್ಲ, ಕಳಿಸಿದ್ರೂ ಡಿಲೀಟಂತೂ ಮಾಡಿರ್ತೀನಿ, ನಿನಗೇನೂ ಸಿಗಲ್ಲ ಅಲ್ಲಿ" ಅಂತಂದೆ. "ಅದನ್ನ ಕಟ್ಕೊಂಡು ನನಗೇನು ಆಗ್ಬೇಕು, ಯಾವೊದೋ ಕಸ್ಟಮರ ಕೇರ್ ಹುಡುಗಿ ಕಾಲ್ ಬಂದಿದ್ರೂ ಕುಣಿದಾಡಿಬಿಡ್ತೀರ ಇನ್ನು ಹುಡುಗಿಯಿಂದ ಸ್ಪೇಷಲ್ ಎಸಎಂಎಸ್ ಎಲ್ಲಾ ಬಂದ್ರೆ ನಂಗೆ ಗೊತ್ತಾಗದೇ ಇರ್ತಾದಾ, ಮುಖದಲ್ಲೇ ಗೊತ್ತಾಗಿಬಿಡ್ತದೆ ನಂಗೆ.... ಮತ್ತೇನಿಲ್ಲ ನಾನು ಸ್ವಲ್ಪ ಎಸಎಂಎಸ್ ಕಳಿಸ್ತಾ ಇದ್ದೆ, ಸುಮ್ನೆ ಮಲ್ಕೊಳ್ಳಿ, ನಿಮಗೆ ಎಚ್ಚರಾಗಬಾರದು ಅಂತಾನೇ ಮುಸುಕು ಹಾಕಿಕೊಂಡಿದ್ದೆ" ಅಂದ್ಲು, ಅಲ್ಲಾ ನನ್ನ ಏನ್ ಚೆನ್ನಾಗಿ ಅರ್ಥ ಮಾಡಿಕೊಂಡಿದಾಳೆ ಇವ್ಳು ಅಂತೀನಿ, ಇನ್ನು ಮೇಲೆ ಯಾವ ಫೋನು ಬಂದ್ರೂ ಏನೂ ಮುಖದಲ್ಲಿ ತೋರಿಸಿಕೊಳ್ಳಬಾರದು ಅನ್ಕೊಂಡು, "ಅದ್ಯಾರಿಗೆ ಅದೂ ಇಷ್ಟೊತ್ತನಲ್ಲಿ" ಅಂತ ರಾಗ ಎಳೆದೆ. ದುರುಗುಟ್ಟಿ ನೋಡಿದ್ಲು, ಏನೋ ಕೇಳಬಾರದ್ದು ಕೇಳಿದಂತೆ. ಹೇಳದಿದ್ರೆ ಬಿಡು ಅಂತ, ಅವಳೆಡೆಗೆ ಬೆನ್ನು ಮಾಡಿ ಮಲಗಿದೆ. ನಿಧಾನವಾಗಿ, ಪಕ್ಕಕ್ಕೆ ಒರಗಿದ್ದ ಕೈತೋಳಿನ ಮೇಲೆ ಕತ್ತು ಇಟ್ಟು ಕೇಳಿದ್ಲು "ಎನ್ ಸಿಟ್ಟು ಬಂತಾ" ಅಂತ "ಇಲ್ಲಾ ಆನಂದ ಉಕ್ಕಿ ಬರ್ತಿದೆ" ಅಂದೆ, "ಅಯ್ಯೊ ಆನಂದನನ್ನೇ ಮರ್ತಿದ್ದೆ" ಅಂತನ್ನುತ್ತ ಇನ್ನೊಂದೇನೊ ಕುಟ್ಟಿ, ಕಳಿಸಿ ಮತ್ತೆ ಮರಳಿ, "ರೀ, ಯಾಕೆ ಬೇಜಾರು, ಫ್ರೆಂಡಶಿಪ್ ಡೇ ಅಲ್ವಾ ಮೆಸೇಜು ಕಳಿಸ್ತಾ ಇದ್ದೆ" ಅಂದ್ಲು. "ರಾತ್ರಿ ಹನ್ನೆರಡಕ್ಕೆ" ಅಂದೆ "ಮತ್ತೆ ನಾನೇ ಫಸ್ಟ್ ಎಲ್ರಿಗೂ ವಿಷ್ ಮಾಡಿದ್ದು ಗೊತ್ತಾ" ಅಂತ ಹೆಮ್ಮೆಯಿಂದ ನುಡಿದಳು. "ನಿಮ್ಮಿಂದಾಗೇ ಈ ಹೊಸಾ ವರ್ಷದ ರಾತ್ರಿ ಎಲ್ಲ ಫೋನು ನೆಟವರ್ಕ ಜಾಮ್ ಆಗೋದು" ಅಂದೆ. "ನೆಟವರ್ಕ ಜಾಮ್ ಆಗತ್ತೆ ಅಂತ ಮೆಸೆಜೇ ಕಳಿಸಬಾರದಾ" ಅಂದ್ಲು. "ಎಷ್ಟು ಕಳಿಸಿದೆ" ಅಂದೆ "ಜಾಸ್ತಿ ಏನಿಲ್ಲ ಒಂದಿಪ್ಪತ್ತು ಇರಬೇಕು" ಅಂತ ಮೊಬೈಲು ಆಕಡೆ ಇಟ್ಟಳು, "ನಿನ್ನ ಮೊಬೈಲ್ನಲ್ಲೇ ಕಳಿಸೊದು ತಾನೆ" ಅಂದೆ. "ರೀ ನಿಮ್ಮ ಮೊಬೈಲ್ನಲ್ಲಿ ಮೆಸೇಜು ಫ್ರೀ ಅದಕ್ಕೆ ಕಳಿಸಿದೆ" ಅಂದ್ಲು. "ಮೆಸೇಜು ಫ್ರೀ ಇಲ್ದೇ ಇದ್ರೆ?" ಅಂತ ಕೆದಕಿದೆ, "ನಾನೇನು ನಿಮ್ಮ ದುಡ್ಡು ಹಾಳು ಮಾಡಲ್ಲ ಬಿಡಿ, ಹಾಗಿದ್ರೆ ನಾಲ್ಕು ಕ್ಲೋಜ್ ಫ್ರೆಂಡ್ಸಗೆ ಮಾತ್ರ ಕಳಿಸ್ತಾ ಇದ್ದೆ" ಅಂತ ರೇಜಿಗೆದ್ದಳು. "ಪ್ರಶ್ನೇ ದುಡ್ಡಿನದಲ್ಲ, ಈಗ ನೀನು ಕಳಿಸಿದ ಮೆಸ್ಸೆಜಿನಲ್ಲಿ ನಾಲ್ಕು ಜನ ಮಾತ್ರ ಕ್ಲೋಜ್ ಫ್ರೆಂಡ್ಸ್, ಉಳಿದವರು ಹಾಗೆ ಸುಮ್ನೇ" ಅಂದೆ. "ಹಾಗೇನಿಲ್ಲ ಅವರೂ ಫ್ರೆಂಡ್ಸ, ಆದ್ರೆ ಅಷ್ಟು ಕ್ಲೋಜ ಅಲ್ಲ" ಅಂತಂದಳು "ಹೋಗ್ಲಿ ಆ ನಾಲ್ಕು ಜನರಲ್ಲಿ ಎಷ್ಟು ಜನರೊಂದಿಗೆ ಆಗಾಗ ಮಾತಾಡ್ತಾ ಇರ್ತೀಯಾ" ಅಂತ ಮತ್ತೆ ತನಿಖೆಗಿಳಿದೆ "ರೀ, ಎನ್ ಪೋಲಿಸ ವಿಚಾರಣೆ ಮಾಡಿದ ಹಾಗೆ ಮಾಡ್ತಾ ಇದೀರ" ಅಂತ ತಿರುಗಿ ಬಿದ್ದಳು, "ಈಗ ಹೇಳ್ತೀಯ ಇಲ್ವಾ" ಅಂದೆ, "ಇಬ್ರು" ಅಂತ ಹುಬ್ಬು ಗಂಟಿಕ್ಕಿದಳು. "ಹಾಗಾದ್ರೆ ಇಷ್ಟೊತ್ತು
ಮೆಸೇಜ ಕಳಿಸಿದ್ದರಲ್ಲಿ, ಎರಡು ಮಾತ್ರ ಇಷ್ಟದಿಂದ ಕಳಿಸಿದ್ದು, ಉಳಿದದ್ದು ಎನೋ ಕಳಿಸಬೇಕಲ್ಲ ಅಂತ ಕಳಿಸಿದ್ದು" ಅಂದೆ. ಅವಳು ಮರು ಮಾತಾಡಲಿಲ್ಲ, ಏನೊ ಮನಸಿನಲ್ಲಿ ತಾಕಲಾಟ ನಡೆದಿತ್ತು.

ಬಹಳ ಹೊತ್ತು ಹಾಗೆ ಕೂತಿದ್ದಳು, ಇರಲಿ ಮಲಗು ನಾಳೆ ನೋಡೋಣ ಅಂತ ಉರುಳಿದರೆ, ಬೆನ್ನ ಮೇಲೊಂದು ಗುದ್ದಿ "ರೀ ಏಳ್ರೀ ಮೇಲೆ, ಇಷ್ಟೊತ್ತು ಏನೇನೊ ಹೇಳಿ, ತಲೆ ಕೆಡಿಸಿ ನಿದ್ದೆ ಹಾಳು ಮಾಡಿ, ನೀವ ಹಾಯಾಗಿ ನಿದ್ದೆ ಮಾಡಬೇಕು ಅಂತೀದೀರ" ಅಂದ್ಲು. ಅವಳ ಏಟಿಗೆ, ಇರೊ ಬರೊ ನಿದ್ರೆ ಎಲ್ಲ ಹಾರಿ ಹೋಗಿ ಕಣ್ಣು ನಿಚ್ಚಳಾದವು. "ನೀವು ಯಾರಿಗೂ ವಿಷ್ ಮಾಡಲ್ವೇ" ಅಂತ ಅಪರಾಧಿ ಜಡ್ಜನನ್ನು ತರಾಟೆಗೆ ತೆಗೆದುಕೊಂಡಂತೆ ಕೇಳಿದ್ಲು. "ಮಾಡ್ತೀನಲ್ಲ, ಹ್ಯಾಪಿ... ಫ್ರೆಂಡಶಿಪ್ ಡೇ...." ಅಂತ ಮಧ್ಯರಾತ್ರಿ ನರಿ ನಾಯಿ ಊಳಿಟ್ಟಂಗೆ ಉಸುರಿದೆ. "ರೀ ನೀವೇನ ಆಕಾಶವಾಣಿ ಧಾರವಾಡಾನಾ ಇಲ್ಲಿ ಕೂತು ಹೇಳಿದ್ರೆ ಊರೆಲ್ಲ ಕೇಳೋಕೆ, ದೊಡ್ಡ ಕಂಜ್ಯೂಸ ಕಣ್ರೀ ನೀವು, ಮೆಸೇಜ ಮಾಡೋಕೆ ಆಗಲ್ವಾ." ಅಂತ ಬಯ್ದಳು. "ಮೆಸೇಜೇನು ಕರೆ ಮಾಡಿ ಮಾತಾಡ್ತೀನಿ, ಆದ್ರೆ ಸುಮ್ನೇ ಹತ್ತು ಜನರಿಗೆ ಎಸಎಂಎಸ್ ಕಳಿಸಲ್ಲ, ನಾನೀಗ ವಿಷ್ ಮಾಡಿದ್ದು ನಿನಗೆ" ಅಂದೆ. "ಏನ್ರೀ ನಾನು ಫ್ರೆಂಡಾ, ನಾನು ನಿಮ್ಮ ಹೆಂಡತಿ, ಯಾಕೇ ತಾಳಿ ಕಟ್ಟಿದ್ದು ಮರೆತುಹೋಯ್ತಾ" ಅಂತಂದಳು. "ತಾಳಿ ಕಟ್ಟಿದಾಕ್ಷಣ, ಹೆಂಡ್ತಿ ಅಂದ್ರೆ ಫ್ರೆಂಡ ಆಗಿರಬಾರದಾ, ಪ್ರಾಣಸಖಿ ಅಂತ ಹೆಂಡ್ತಿ ಯಾಕೆ ಆಗಬಾರದು, ಫ್ರೆಂಡ ಇಸ್ ಸೆಕೆಂಡ ವೈಫ್ ಅಂತಾರೆ, ಅಂದ್ರೆ ಸ್ನೇಹಿತ ಎರಡನೇ ಹೆಂಡ್ತಿ ಇದ್ದಂತೆ" ಅಂದ್ರೆ "ನಂಗೂ ಇಂಗ್ಲೀಷ ಬರತ್ತೆ ಕನ್ನಡಾನುವಾದ ಎನ್ ಬೇಕಿಲ್ಲ ಗೊತ್ತು ಗೊತ್ತು" ಅಂತ ಮುನಿಸಿಕೊಂಡ್ಲು. "ಗೊತ್ತಿದ್ದ ಮೇಲೆ ಹೆಂಡತಿಯೇ ಸ್ನೇಹಿತೆ ಯಾಕೆ ಆಗಬಾರದು"... ನಿಶಬ್ದ ಸ್ವಲ್ಪ ಹೊತ್ತು...

"ಆಗಬಹುದು" ಅಂತನ್ನುತ್ತ ಹಾಗೇ ಕಾಲ ಮೇಲೆ ತಲೆಯಿರಿಸಿದಳು, ಆ ತಲೆ ನೇವರಿಸುತ್ತ "ಆಗಬಹುದು, ಅಲ್ಲ ನೀನು ಆಗಿದ್ದೀಯಾ, ಒಬ್ಬ ಸ್ನೇಹಿತ ಅಥವಾ ಸ್ನೇಹಿತೆಯ ಹತ್ತಿರ ಎನೂ ಮುಚ್ಚು ಮರೆಯಿಲ್ಲದೇ ಹಾಗೆ ಹೇಳಿಕೊಳ್ಳೊದು ಅಂತಿದ್ದರೆ ಅದು ನಿನ್ನೊಂದಿಗೆ ಮಾತ್ರ, ಬರೀ ನನ್ನ ಜೀವನ ಸಂಗಾತಿ ಅಲ್ಲ, ಜೀವದ ಗೆಳತಿ ಕೂಡ ಆಗೀದೀಯ" ಅಂತಿದ್ದರೆ, "ರೀ ಡೈಲಾಗು ಹೊಡೆದದ್ದು ಸಾಕು" ಅಂತ ತರಲೆಗಿಳಿದಳು "ಇದೇ... ಇದೇ ತುಂಟೀನೇ ನನ್ನ ಫ್ರೆಂಡ್" ಅಂದೆ. "ಅದಿರಲಿ, ಈಗ ನೀವು ಯಾರಿಗೂ ಶುಭಾಷಯ ಹೇಳಲ್ಲ ಹಾಗಿದ್ರೆ?" ಮತ್ತೆ ವಿಷಯಕ್ಕೆ ಮರಳಿದಳು "ಹೇಳಿದೆನಲ್ಲ ನಿಂಗೆ" ಅಂದೆ, ಮುಂದೆ ಹೇಳು ಅನ್ನುವಂತೆ ಓರೆ ನೋಟದಲ್ಲಿ ನೋಡಿದ್ಲು, "ಹೇಳ್ತೀನಿ ಇಲ್ಲ ಅಂತ ಅಲ್ಲ, ಈ ದಿನ ಶುಭಾಷಯ ಹೇಳೊದು ಗೆಳೆಯರೊಂದಿಗೆ ಮಾತಾಡಲು ಒಂದು ನೆಪಮಾತ್ರ ನನಗೆ, ನಾನು ಶುಭಾಷಯ ಹೇಳಲಿ ಬಿಡಲಿ ಅವರು ಗೆಳೆಯರಾಗೆ ಇರ್ತಾರೆ. ಹಾಗೇ ಕೆಲವು ಗೆಳೆಯರಿಗೆ ಖುದ್ದು ನಾನೇ ಏನೊ ಬರೆದು ಮೇಲ್ ಕಳಿಸ್ತೀನಿ, ವೈಯಕ್ತಿಕವಾಗಿ ಫೋನು ಮಾಡಿ ಮಾತಾಡ್ತೀನಿ, ಅದು ನನ್ನ ಶುಭಾಷಯ,
ಯಾರೋ ಕಳಿಸಿದ ಮೆಸೇಜ ಇಪ್ಪತ್ತು ಮಂದಿಗೆ ಕಳಿಸಿ, ಫ್ರೆಂಡಶಿಪ ಡೇ ಆಯ್ತು ಅಂತ ಕೈತೊಳೆದುಕೊಂಡ್ರೆ, ಅಂಥ ಗೆಳೆಯರು ಮತ್ತೆ ಮುಂದಿನ ಫ್ರೆಂಡಶಿಪ ಡೇಗೆ ಮಾತ್ರ ನೆನಪಾಗುತ್ತಾರೆ." ಅಂದೆ. ಸುಮ್ಮನೇ ಕೇಳುತ್ತಿದ್ದವಳು. "ನಿಮ್ಮ ಭಾಷಣ ಮುಗೀತಾ" ಅಂತ ಆಕಳಿಸಿದ್ಲು, "ಕೇಳೊವರೆಗೆ ಕೇಳಿ ಈಗ ಭಾಷಣ ಅಂತೀಯ" ಕೆನ್ನೆ ಹಿಡಿದೆಳೆದೆ, "ರೀ, ನಿಮ್ಮ ಕ್ಲೋಜ ಫ್ರೆಂಡ್ಗೆ, ಫ್ರೆಂಡಶಿಪ್ ಡೇ ಗಿಫ್ಟ ಇದನ್ನಾ ಕೊಡೊದು" ಅಂತಂದಿದ್ದಕ್ಕೆ, ಕೆನ್ನೆಗೆ... ... ... "ಸರಿಹೊತ್ತಾಯ್ತು ಮಲಗಬೇಕು ಬಿಡ್ರೀ" ಅಂತ ಚೀರುತ್ತಿದ್ಲು...

ಯೋಚಿಸಿ ನೋಡಿ, ನಿಜವಾಗ್ಲೂ ಈ ಗೆಳೆತನಕ್ಕೆ ಆ ಎಸಎಂಸ್ಸು, ಕಾರ್ಡು, ಮೇಲ್ ಬೇಕಾ, ಅದಿಲ್ಲದಿದ್ದಾಗ ಗೆಳೆತನವೇ ಇರಲಿಲ್ವಾ, ಹೋಗ್ಲಿ ಶುಭಾಷಯ ಹೇಳಲೇ ಬೇಕಿದ್ದರೆ ನನಗೆ ಬಂದ ಮೆಸೇಜು ಹತ್ತಿಪ್ಪತ್ತು ಜನರಿಗೆ ಕಳಿಸಿಬಿಟ್ರೆ ಆಯ್ತಾ, ಇಲ್ಲ ಯಾರೊ ಫಾರವರ್ಡ ಮಾಡಿದ ಈ-ಮೇಲನಲ್ಲೇ ಹೆಸರು ಬದಲಿಸಿ, ಹತ್ತು ಜನರಿಗೆ ಸಿಸಿ(ಕಾರ್ಬನ್ ಕಾಪಿ, ಬಹಳ ಜನರಿಗೆ ಈ-ಮೇಲ ಕಳಿಸುವ ವಿಧಾನ) ಮಾಡಿ ಕಳಿಸಿದ್ರೆ ಶುಭಾಷಯ ಹೇಳಿದ ಹಾಗೆ ಆಯ್ತಾ, ಬಿಸಿಸಿ(ಬ್ಲೈಂಡ ಕಾರ್ಬನ್ ಕಾಪಿ, ಬಹಳ ಜನರಿಗೆ ಒಬ್ಬರಿಗೆ ಕಳಿಸಿದ್ದು ಇನ್ನೊಬ್ಬರಿಗೆ ಕಾಣದ ಹಾಗೆ ಈ-ಮೇಲ್ ಕಳಿಸುವ ವಿಧಾನ) ಮಾಡಿದ್ರು ಎಷ್ಟು ಜನರಿಗೆ ಕಳಿಸಿದ್ದು ಗೊತ್ತಾಗಲ್ಲವಾದರೂ ನನಗೆ ವೈಯಕ್ತಿಕವಾಗಿ ಕಳಿಸಿದ್ದು ಅಲ್ಲ ಅಂತನಾದ್ರೂ ಗೊತ್ತಾಗಿಬಿಡುತ್ತದೆ, ಹೀಗೆ ಹತ್ತು ಜನರಲ್ಲಿ ಒಬ್ಬರೆಂದಾದಾಗ ಅದು ಶುಭಾಷಯವೆಂದು, ನನಗೆ ಬಂದದ್ದು, ನನ್ನ ಗೆಳೆಯ ಕಳಿಸಿದ್ದು ಅಂತನಾದ್ರೂ ಅನಿಸೋದು ಹೇಗೆ. ಇಂಥ ಶುಭಾಷಯ ನಿಜಕ್ಕೂ ಬೇಕಾ, ನನಗೆ ಗೊತ್ತಿಲ್ಲ. ಆದರೆ ಹಾಗೆ ಮಾಡುವುದು ನನಗೆ ಇಷ್ಟವಿಲ್ಲ, ಅಷ್ಟೇ.

ಮುಂಜಾನೆ ಏಳಕ್ಕೆ ವಾಣಿ(ಮೊಬೈಲು) ಕಿರುಚುತ್ತಿದ್ಲು, ರಾತ್ರಿ ಇಪ್ಪತ್ತು ಮೆಸೇಜ ಕಳಿಸಿದ್ದಳಲ್ಲ, ಅದಕ್ಕೆ ಗೆಳೆಯರು ಅವರಿಗೂ ಗೆಳೆತನ ನೆನಪಾಗಿ ಎದ್ದು ತಮಗೆ ಯಾರೊ ಕಳಿಸಿದ ಮೆಸೇಜು ಫಾರವರ್ಡ ಮಾಡುತ್ತಿದ್ದರು, ಕೈಗೆತ್ತಿಕೊಂಡು ಸುಮ್ನಿರು ಅಂತ ಸುಮ್ಮನಾಗಿಸಿ, "ನಿನ್ನ ಗೆಳೆಯರು ಗೆಳತಿಯರು ಶುಭಾಷಯ ತಿಳಿಸ್ತಾ ಇದಾರೆ ನೋಡು, ಮೆಸೆಜ ಬಾಕ್ಸ್ ತುಂಬಿದೆ" ಅಂದೆ. "ನೀವೇ ನೋಡಿ ಡಿಲೀಟ್ ಮಾಡ್ರೀ, ಎನಾದ್ರೂ ವಿಶೇಷ ಇದ್ರೆ ಓದಿ ಹೇಳಿ" ಅಂದ್ಲು. ಒಂದೊಂದಾಗಿ ಡಿಲೀಟ ಮಾಡತೊಡಗಿದೆ, ಇವಳು ಕಳಿಸಿದ ಮೆಸೇಜುಗಳೂ ಹೀಗೆ ಎಲ್ಲೋ ಡಿಲೀಟ ಆಗಿ ಹೋಗುತ್ತಿರಬೇಕು ಅಂತಂದುಕೊಳ್ಳುತ್ತ... ಮತ್ತೆ ಸಿಗೋಣ ಹೀಗೆ ಏನೊ ಮೆಸೇಜು ಕಳಿಸುತ್ತ...



ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/sneha.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು