"ರೀ, ಆ ಕೊನೇಮನೇಲಿ ಒಂದು ಹುಡುಗಿ ಇತ್ತಲ್ಲ, ಕಪ್ಪಗಿದ್ರೂ ಮುಖದಲ್ಲಿ ಖಳೆಯಿದೆ, ಕೃಷ್ಣ ಸುಂದರಿ ಅಂತೆಲ್ಲ ಅಂತಿದ್ರಲ್ಲ ಆ ಹುಡುಗಿ, ಪ್ರೀತ್ಸಿ ಅದ್ಯಾವುದೊ ಹುಡುಗನ ಜತೆ ಓಡಿ ಹೋಗಿದಾಳಂತೆ. ಪಾಪ ಅವರಮ್ಮ ಗೊಳೊ ಅಂತ ಅಳ್ತಾ ಇದಾಳೆ" ಅನ್ನುತ್ತ ಹೊರಗೆ ಹೋದವಳು, ಅಲ್ಲೇ ನಿಂತು ಪಕ್ಕದ ಮನೆ ಪದ್ದು ಜತೆ ಅಂತೆ ಕಂತೆಗಳೆಲ್ಲ ಮಾತಾಡಿ ಬಂದಳು. ನಾನು ಅಲ್ಲೇ ಯೋಚಿಸ್ತಾ ಕೂತಿದ್ದೆ, "ಏನು ನೀವು ಪದ್ದು ಜತೆ ಓಡಿ ಹೋಗೊಕೇ ಏನಾದ್ರೂ ಪ್ಲಾನ ಮಾಡ್ತಾ ಇದೀರಾ, ಹೇಗೆ" ಅಂತ ಕೇಳಿದ್ಲು, ನಾ ತಿರುಗಿ ಕೇಳಿದ್ದು ಒಂದೇ ಪ್ರಶ್ನೇ "ಪ್ರೀತ್ಸೊದ್ ತಪ್ಪಾ?"...
ಸ್ವಲ್ಪ ಹೊತ್ತು ಅವಳಿಗೇನು ಹೇಳಬೇಕು ಹೊಳೀಲೇ ಇಲ್ಲ, ಚಹ ಮಾಡ್ತಾ ಇದ್ದೋಳು, ಸಕ್ಕರೆ ಬದಲಿ ಉಪ್ಪು ಹಾಕಿಯಾಳು ಅಂತ ಸಕ್ಕರೆ ಡಬ್ಬಿ ನಾನೇ ಎತ್ತಿ ಕೊಟ್ಟೆ, "ಆದ್ರೂ ಈ ಲವ್ವು ಗಿವ್ವು ಎಲ್ಲಾ ಯಾಕೋ ಸರಿ ಹೋಗಲ್ಲರೀ" ಅಂತ ವಿಷಯ ತೆಗೆದು ಹಾಕಲು ನೋಡಿದಳು. "ಲವ್ ಅಂದ್ರೇನು?", ನಾ ಪ್ರಶ್ನೇ ಕೇಳಿ ತಲೆ ತಿಂತೀನಿ ಅಂದ್ರೆ, ಇವರು ನಂಗೇ ಕೇಳ್ತಿದಾರಲ್ಲ ಅನ್ನೋ ಹಾಗೆ ನೋಡಿದವಳು, "ಲವ್ ಅಂದ್ರೆ ಪ್ರೀತಿ, ಪ್ರೇಮ..." ಅಂದ್ಲು, "ಮತ್ತೇ" ಅಂದೆ, "ರೀ ಇನ್ನೂ ಜಾಸ್ತಿ ಗೊತ್ತಿಲ್ಲ ಕಪಾಟಿನಲ್ಲಿ ಡಿಕ್ಷನರಿ ಇದೆ, ಬೇಕಾದ್ರೆ ತೆಗೆದು ನೋಡಿ" ಅಂದಳು. "ಹಾಗಾದ್ರೆ ಪ್ರೀತ್ಸೊದು ಎಲ್ಲ ಸರಿ ಹೋಗಲ್ಲ ಅನ್ನು, ನನ್ನ ಪ್ರೀತಿಸಬೇಡ ಹಾಗಾದ್ರೆ" ಅಂತಂದೆ, "ಯಾಕೆ ನಾನೇನು ನೀವ ಕೆಟ್ಟೊದ್ನಾ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ ಅಂತ ಯಾರ್ ಯಾರನ್ನೊ ಪ್ರೀತ್ಸೋಕೇ" ಅಂತ ಹುಸಿ ಮುನಿಸಿದಳು, "ಅಂದ್ರೆ ನಾನು ಅವರನ್ನ ಪ್ರೀತಿಸ್ತೀನಿ..." ಮರುಪ್ರಶ್ನೆ ಎಸೆದೆ, "ಇಲ್ಲಾ.. ಹಾಗೇನಿಲ್ಲ, ನೀವ ಯಾರನ್ನ ಪ್ರೀತಿಸ್ತೀರಿ ನಂಗೆ ಗೊತ್ತು" ಅಂದ್ಲು ಕಳ್ಳ ನೋಟದಿ ನೋಡುತ್ತ. "ಯಾರಾ ಬೆಡಗಿ" ಅಂದೆ, ನಾಚಿ "ಛೀ ಹೋಗ್ರೀ ಮುಂಜಾನೆ ಮುಂಜಾನೆ ಬೇರೆ ಕೆಲ್ಸ ಇಲ್ವಾ ನಿಮಗೆ" ಅಂತ ಬಯ್ಕೊಂಡು ಟೀ ಕಪ್ಪು ತಂದು ಕೈಲಿಟ್ಟಳು. "ಹಾಗಾದ್ರೆ ಪ್ರೀತ್ಸೊದ ತಪ್ಪಾ?" ಮತ್ತದೇ ಪ್ರಶ್ನೆ, "ಈ ಲವ್ ಎಲ್ಲ ಹುಚ್ಚು, ಆದ್ರೆ ನೀವ ನನ್ನ ಪ್ರೀತ್ಸೊದು ತಪ್ಪಲ್ಲ ಬಿಡಿ" ಅಂತ ಅರ್ಥ ಮಾಡಿಸ ನೋಡಿದವಳು, ಒಳಗೊಳಗೆ ತಾನೇ ಗೊಂದಲಕ್ಕೊಳಗಾದಳು. "ಮತ್ತೆ ನೀನೇ ಲವ ಅಂದ್ರೆ ಪ್ರೀತಿ ಅಂದೆ, ಈಗ ನೋಡಿದ್ರೆ, ನಾನ ಮಾಡಿದ್ರೆ ಸರಿ ಅಂತೀಯ, ಆ ಹುಡುಗಿ ಮಾಡಿದ್ರೆ ತಪ್ಪು ಅಂತೀಯ, ನಾನೇನು ದೊಣ್ಣೆನಾಯಕನಾ ನನಗೊಂದು ನ್ಯಾಯ, ಊರಿಗೊಂದು ನ್ಯಾಯಾ ಮಾಡೋಕೆ" ವಾದಕ್ಕಿಳಿದೆ. "ರೀ ಅವಳದು ಹುಚ್ಚು ಪ್ರೀತಿ ಅದಕ್ಕೇ ಹಾಗಂದಿದ್ದು", ಸಿಡುಕಿದಳು. "ಓಹ್ ಅದರಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನು" ಅಂತಂದರೆ, "ಎಷ್ಟು ವಿಧ ಅಂತ ಬೇಕಿದ್ರೆ, ಪ್ರೇಮಲೋಕದ ಹೀರೊ ರವಿಚಂದ್ರನ್ ಹತ್ರ ಹೋಗಿ ಕೇಳಿ ಹೇಳ್ತಾರೆ" ಅಂತ ಮಾರುತ್ತರವಿಟ್ಟಳು. ನಾ ಹೇಳುವುದು ಹೇಳಿಯಾಗಿತ್ತು ಇನ್ನು ಅವಳ ಚಿಂತನೆಗೆ ಬಿಟ್ಟು, ನಾ ಹೊರ ನಡೆದೆ.
ಟೀವೀ ಆನ್ ಮಾಡಿ ಕೂತರೆ, ಎಲ್ಲಾ ಚಾನಲ್ಲಿನಲ್ಲಿ ಪ್ರೀತಿ, ಪ್ರೇಮ... ಯಾರಿಗೂ ಅದೇನು ಅಂತ ಪೂರ್ಣ ಗೊತ್ತಿಲ್ಲ ಆದ್ರೂ ಫಿಲ್ಮ್, ಧಾರವಾಹಿ ನೂರು, ಕಾಲೇಜು ಹುಡುಗಿ, ಹುಡುಗ ಕರೆತಂದು ಪ್ರೇಮ ಅರಳಿತು ಅಂತ ತೋರಿಸಿಬಿಡ್ತಾರೆ. ಬೇಜಾರಾಗಿ ಆಫ್ ಮಾಡಿ ಕೂತಿದ್ದೆ, ಎಣಿಸಿದಂತೆ ಇವಳು ಬಂದಳು, ವಿಷಯ ತಲೆ ತಿಂತಿದೆ ಅದಕ್ಕೆ ಇಲ್ಲಿ ಬಂದಿದಾಳೆ ಅಂತ ಗೊತ್ತು, ಹತ್ತಿರ ಕೂತು, ನನ್ನ ಕೈಲಿದ್ದ ನಿಶ್ಚಿತಾರ್ಥ ಉಂಗುರ ಹಾಕಿ ತೆಗೆಯೋದು ಮಾಡುತ್ತ ಕೂತಳು, ಉಂಗುರ ತೆಗೆದು ಅವಳ ಕೈಗಿತ್ತೆ, ಏನು ಮಾತಾಡು, ಸಾಕು ಒಳಗೊಳಗೆ ತಳಮಳಿಸಿದ್ದು ಅನ್ನುವಂತೆ. "ರೀ ನಿಶ್ಚಿತಾರ್ಥದ ಉಂಗುರ ಅದು ಪ್ರೀತಿಯಿಂದ ಹಾಕಿದ್ದು, ಏನ್ ಹಾಗೆ ತೆಗೆದುಹಾಕ್ತೀರಾ" ಅಂತ ಮುಖ ಕೆಂಪಾಗಿಸಿದಳು, "ಒಹೋ ಉಂಗುರ ಹಾಕಲು ಪ್ರೀತಿ ಬೇಕು" ಅಂತ ಉದ್ಗಾರ ತೆಗೆದೆ. "ಹೂಂ ಮತ್ತೆ ನಮ್ಮ ಚಿಕ್ಕಪ್ಪನ ಮಗಳಿಗೆ ಅವಳ ಗಂಡ ಪ್ರೀತಿಯಿಂದ ಚಿನ್ನದ ನೆಕ್ಲೇಸ್ಸು, ಬಳೆ ತಂದುಕೊಟ್ಟೀದಾನೆ" ಅಂದ್ಲು. "ಪ್ರೀತಿಯನ್ನ ಚಿನ್ನದಲ್ಲಿ ಅಳೆಯಬಹುದು ಅಂದ್ರೆ, ನೀ ನನ್ನ ಒಂದು ಹತ್ತು ಗ್ರಾಮ್ ಪ್ರೀತಿಸ್ತೀಯಾ ಹಾಗಾದ್ರೆ, ಈ ಉಂಗುರ ಚೈನು ಅಷ್ಟಾಗ್ತದೆ" ಅಂತಂದೆ, "ಹೋಗ್ಲೀ ನೀವೇ ಹೇಳ್ರಿ ಪ್ರೀತಿ ಅಂದ್ರೆ ಏನು ಅಂತ, ನಾನೇನ್ ಹೇಳಿದ್ರೂ ತಪ್ಪೇ ನಿಮಗೆ, ಮೊದಲಿನಂಗೆ ಪ್ರೀತೀನೇ ಇಲ್ಲ" ಮತ್ತವಳ ಮಾತಿನಲ್ಲಿ ಪ್ರೀತಿ ಇಣುಕಿತ್ತು, ಆದರೆ ಈ ಸಾರಿ ಏನಾದ್ರೂ ಅದನ್ನು ಉದ್ಧರಿಸಿ ಏನಾದ್ರೂ ಹೇಳಿದ್ರೆ, ಏನಾಗುತ್ತೊ ಗೊತ್ತಿಲ್ಲ ಅನ್ನೋ ಭೀತಿ ಆಗಿ ಸುಮ್ಮನೇ "ನಂಗೂ ಗೊತ್ತಿಲ್ಲ" ಅಂದೆ. "ಗೊತ್ತಿಲ್ಲ ಅಂದ್ರೆ ಮುಂಜಾನೆಯಿಂದ ನನ್ನ ತಲೆ ಯಾಕೆ ತಿನ್ಬೇಕಿತ್ತು, ಈಗ ಏನಾದ್ರೂ ಸರಿ ಹೇಳಲೇಬೇಕು" ಅಂತ ಹಠ ಹಿಡಿದಳು. "ನಿನ್ನ ಫ್ರೆಂಡ ಪ್ರೀತಿ ಅಂತ ಇದ್ಲಲ್ಲ ಅವಳ ಪ್ರೀತಿ ಎಲ್ಲಿಗೆ ಬಂತು, ಅವಳನ್ನ ಕೇಳಿದ್ರೆ ಹೇಳ್ತಾಳೆ, ಎಕ್ಸಪರ್ಟ ಅವಳು" ಅಂದೆ, "ಅಯ್ಯೊ ಅವಳಾ, ಅವಳ ಹೆಸ್ರು ಪ್ರೀತಿ ಅಂತ ಅದಕ್ಕೇ ಇಟ್ಟಿದ್ದು, ಸ್ಕೂಲಲ್ಲೇ ನಾಲ್ಕು ಬಾಯ್ ಫ್ರೆಂಡ್ಸ ಇದ್ರು ಅವಳಿಗೆ, ಲವ್ವೇ ಲೈಫಾಗಿತ್ತು, ಬಟ್ಟೆ ಬದಲಿಸಿದ ಹಾಗೆ ಲವರ್ಸ ಬದಲಾಯಿಸ್ತಾ ಇದ್ಲು, ಫೋನು ಮಾಡಿದಾಗ ಒಮ್ಮೆ ಹೊಸ ಹುಡುಗನ ಹೆಸ್ರು, ಎಷ್ಟು ಅಂದ್ರೆ, ಹುಡುಗರ ಹೆಸರು ರಿಪೀಟ ಆಗಿ ಹಳೆ, ಹೊಸ ಅಂತ ಹೆಸರಿನ ಹಿಂದೆ ಸೇರಿಸಬೇಕಾಗಿತ್ತು ಅಷ್ಟು ಜನ... ಅವಳನ್ನೇನ್ ಕೇಳ್ತೀರಾ" ಅಂತ ಅವಳ ಜನ್ಮ ಜಾಲಾಡಿದಳು, "ಹೋಗ್ಲಿ ನನ್ನ ಲವ್ ಮಾಡ್ತಾಳ ಅಂತಾನಾದ್ರೂ ಕೇಳ್ತಿದ್ದೆ" ಅಂದೆ, "ಪ್ರೀತ್ಸೊಕೆ ಅಂತ ಮದುವೆಯಾಗಿ ಮಡದಿ ಅಂತ ನಾನಿಲ್ವಾ, ಅವಳ್ಯಾಕೆ ಬೇಕು ನಿಮ್ಗೆ" ಅಂತ ದುರುಗುಟ್ಟಿದಳು, "ಹಾಗಾದ್ರೆ, ಪ್ರೀತ್ಸೊಕೆ ಮದುವೆ ಆಗಬೇಕು, ಮದುವೆ ಆದಮೇಲೆ ಮಡದಿಯನ್ನೇ ಪ್ರೀತಿಸ್ಬೇಕು" ಕೇಳಿದಷ್ಟು ಕ್ಲಿಷ್ಟವಾಗುತ್ತಾ ನಡೆದಿತ್ತು ವಿಷಯ.
"ನಂಗೆ ಅಪ್ಪ ಅಮ್ಮ ಅಂದ್ರೆ ತುಂಬಾ ಪ್ರೀತಿ ಅಂತೀವಲ್ಲ ಅದೂ ಪ್ರೀತೀನಾ, ಅವರನ್ನ ಪ್ರೀತ್ಸೊದ ತಪ್ಪಾ" ಅಂತ ಇವಳು ನನ್ನ ಪ್ರಶ್ನೆ ನನಗೆ ತಿರುಗಿ ಕೊಟ್ಟಳು, "ಹಾಂ ಈಗ ಕರೆಕ್ಟ ವಿಷಯಕ್ಕೆ ಬಂದೆ ನೋಡು, ಪ್ರೀತ್ಸೊದು ತಪ್ಪಾ, ಸರೀನಾ ಅಂತ ಹೇಳಬೇಕೆಂದರೆ, ಪ್ರೀತಿ ಅನ್ನೋದು ಏನು ಅನ್ನೊದರ ಮೇಲೆ ನಿಂತಿದೆ" ಅಂದೆ. "ಅದಕ್ಕೇ ನೀವು ಆಗಲಿಂದ ಪ್ರೀತಿ ಅಂದ್ರೇನು ಅಂತ ಕೇಳ್ತಾ ಇದ್ದದು, ಸರಿ ನಂಗಂತೂ ಏನೂ ತಿಳೀತಿಲ್ಲ" ಅಂತ ಅಸಹಾಯಕತೆ ಪ್ರದರ್ಶಿಸಿದಳು. "ಮಡದಿಗೆ ಮನೇಲಿ ಮುದ್ದು ಕೊಡೊದು ಪ್ರೀತೀನಾ, ಲಾಲಬಾಗನಲ್ಲಿ ಲವರ್ಗೆ ಲೋಚಲೊಚ ಲಿಪ್ಕಿಸ್ಸು ಕೊಡೋದು ಪ್ರೀತೀನಾ" ಅಂತ ನಿರ್ಭಿಡೆಯಿಂದ ಕೇಳಿದೆ, ಅಷ್ಟೆ ನೇರವಾಗಿ ಅವಳೂ "ಎರಡಕ್ಕೂ ಲವ್ ಅಂತನೇ ಅಂತಾರೆ, ಆದ್ರೆ ನಂಗೊತ್ತಿಲ್ಲ ಯಾವುದು ಸರಿ ಅಂತ" ಹೇಳಿದಳು. "ಆಗಲಿಂದ ಹೇಳಿದ್ದು ಇದನ್ನೇ, ಪ್ರೀತಿಯ ನಿರ್ಧಿಷ್ಟ ವ್ಯಾಖ್ಯಾನ ಆಗುವವರೆಗೆ ಅದು ಸರಿ ತಪ್ಪು ಅಂತ ಹೇಗೆ ಹೇಳೊದು, ಈ ಸಂದಿಗ್ಧತೆ, ಅಸ್ಪಷ್ಟತೆ ಇರುವವರೆಗೆ ಅದಕ್ಕೆ ಉತ್ತರ ಏನು? ಪ್ರೀತಿ ಬಗ್ಗೆ ಬರೆದರೆ ಪ್ರಬಂಧ ಮಂಡಿಸುವಷ್ಟು ವಿಷಯವಿದೆ" ಅಂತ ಕೈಚೆಲ್ಲಿದೆ, "ಹಾಗಾದ್ರೆ, ಆ ಹುಡುಗಿ ಓಡಿ ಹೋಗಿದ್ದು ತಪ್ಪು ಸರಿ ಅಂತ ಹೇಳೊಕಾಗಲ್ಲ" ಅಂದ್ಲು. "ಹೇಳಬಹುದು, ಆದರೆ ಪ್ರೀತಿ ಬಗ್ಗೆ ಹೇಳೊಕೆ ಆಗಲ್ಲ, ಅವರು ಸುಖವಾಗಿ ಬಾಳಿದರೆ ಅಲ್ಲಿ ನಿಜವಾಗಿ ಪ್ರೀತಿ ಇತ್ತು, ಇಲ್ಲಾಂದ್ರೆ ಇಲ್ಲ, ಏನೇ ಆದರೂ ಆ ಹುಡುಗಿ ಮಾಡಿದ್ದು ನನ್ನ ಮಟ್ಟಿಗೆ ತಪ್ಪೇ" ಅಂದೆ "ಯಾಕೆ, ಪ್ರೀತಿ ಕುರುಡು ಅಂತಾರಲ್ಲ ಯಾರ ಮೇಲೊ ಬಂದು ಬಿಡುತ್ತದೆ" ಅಂದ್ಲು, "ಪ್ರೀತಿ ಕುರುಡಾ? ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿದವರು ನಾವು, ಆ ಬಂಧನಕ್ಕಿರಬೇಕಾದ ಗಟ್ಟಿತನ ಇಲ್ಲದೇ ಹುಳುಕು ಕಾಣದಿರಲಿ ಅಂತ... ಹದಿಹರೆಯದ ಹುಡುಗ ಹುಡುಗಿಯರದು ಇದೇ ತಪ್ಪು, ಹುಚ್ಚು ಆಕರ್ಷಣೆಯೇ ಪ್ರೀತಿ ಅಂದುಕೊಂಡು, ಪ್ರೀತಿ ಕುರುಡು, ಬಾಲಿಶ, ಮುಗ್ಧ ಅಂತ ಹಣೆಪಟ್ಟಿ ಕಟ್ಟಿಬಿಡುತ್ತಾರೆ, ಅಲ್ಲಿರುವುದು ಪ್ರೀತಿ ಅಲ್ಲ ಅದು ಆಕರ್ಷಣೆ" ಅಂದರೆ "ಆದ್ರೆ ಆಕರ್ಷಣೆಯಿಂದಲೇ ಪ್ರೀತಿ ಅಲ್ವೇ" ಅಂದ್ಲು. "ಅದೇ ಆಕರ್ಷಣೆಯೇ ಪ್ರೀತಿ ಅಲ್ಲವಲ್ಲ, ಹದಿಹರೆಯ ಹಾಗೇ, 'ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು' ಅಂತ ಕವಿಗಳು ಸುಮ್ನೇ ಹೇಳಿದ್ದಲ್ಲ, ಅಲ್ಲಿ ಆಕರ್ಷಣೆ ಸಹಜ, ಅದು ಪ್ರೀತಿ ಅಲ್ಲ ಅಂತ ತಿಳಿದರೆ ಉತ್ತಮ" ಅಂದೆ. "ಹೂಂ ಹೂಂ... ಮತ್ತೆ ನಿಮಗೆ ಯಾರ ಮೇಲೆ ಆಕರ್ಷಣೆ ಬೆಳೆದಿತ್ತು?" ಅಂತ ಹುಬ್ಬು ಹಾರಿಸಿದ್ಲು, ನಸು ನಕ್ಕೆ. "ಹೇಳ್ರೀ..." ಅಂತ ತಿವಿದಳು "ಲೇ ಎಣಿಕೆ ಮಾಡ್ತಾ ಇದೀನೀ ತಾಳೇ" ಅಂದೆ. "ಹಾಂ" ಅಂತ ಬರಿಗೈಯಲ್ಲಿ ಪಟ ಪಟ ಹೊಡೀತಾ ಇದ್ಲು ಪ್ರೀತಿಯಿಂದ... "ಪ್ರೀತಿಸ್ತಾ ಇರೋದು ನಿನ್ನ ಮಾತ್ರ, ಪ್ರೀತ್ಸೊದ ತಪ್ಪಾ" ಅಂದೆ... ಆ ತುಟಿಯಿಂದ ಉತ್ತರ ಬರಲಿಲ್ಲ... ಬೇರೆ ಎನು ಸಿಕ್ಕಿತು ಇಲ್ಲಿ ಹೇಳಬೇಕಿಲ್ಲ...
ಪ್ರೀತಿ ಅನ್ನೊ ಪದಕ್ಕೆ ಎನು ಅರ್ಥ ಎಂದು ಹೇಳೊದೆ ಕಷ್ಟ ಹಾಗಿರುವಾಗ, ಆಕರ್ಷಣೆಯೇ ಪ್ರೀತಿ ಅಂತ ಅಂದುಕೊಳ್ಳುವವರನ್ನು ನೋಡಿದ್ರೆ ಬೇಜಾರಾಗುತ್ತದೆ, ಪ್ರೀತಿಗೆ ಒಂದು ರೀತಿ ಬದ್ಧತೆ ಬೇಕು, ನಂಬಿಕೆ ಬೇಕು, ನಿಸ್ವಾರ್ಥ ಮನೊಭಾವಬೇಕು, ಅದೆಲ್ಲ ಎಲ್ಲೂ ಕಾಣುತ್ತಿಲ್ಲ, ಇಲ್ಲ ಅಂತ ನಾ ಹೇಳುತ್ತಿಲ್ಲ, ಆದರೆ ಎಲ್ಲೊ ಕೆಲವೊಂದು ನೂರಕ್ಕೊಂದು ಉದಾಹರಣೆ ಸಿಕ್ಕೀತು. ಈಗ ಏನಾಗಿದೆ ಅಂದ್ರೆ, ಮೊಬೈಲುಗಳಲ್ಲಿ ಎಸ್ಸೆಂಸ್ಸು ಫ್ರೀ ಅಂತ ದಿನಕ್ಕೆ ನೂರು ಸಂದೇಶ ಕಳಿಸಿ, ಆಕಾಶದೆತ್ತರಕ್ಕೆ ನಮ್ಮ ಪ್ರೀತಿ, ಸಮುದ್ರದಾಳದಷ್ಟು ಆಳವಾಗಿ(ಡೀಪ್ ಲವ್) ಪ್ರೀತಿಸ್ತೀನಿ ಅಂತೆಲ್ಲ ಮೇಸುಜು ಬರೆದು (ಅಕಾಶ ಮುಟ್ಟಿ ಬಾ ಅಂತ ಹೇಳ್ಬೇಕು, ಇಲ್ಲ ಸಮುದ್ರಕ್ಕೆ ಹಾರಿ ಆಳ ಅಳೆದು ಬಾ ಅನ್ಬೇಕು!), ಆರ್ಕುಟ ಫೇಸಬುಕನಲ್ಲಿ ಲವ್ಸ ಲವ್ಸ ಯೂ ಅಂದು, ಜೀ-ಟಾಕ, ಯಾಹೂನಲ್ಲಿ ಹಹಹ ಅಂತ ಸುಮ್ಸುಮ್ನೇ ನಕ್ಕು, ಮೇಲ್ನಲ್ಲಿ ಹೂವು, ಹಾಡು ಅಂತ ಪತ್ರಗಳ ಮಳೆಗರೆದು... ಲವ್ ಅನ್ಕೊಂಡು ಬಿಡ್ತಾ ಇದಾರೆ. ಇದೆಲ್ಲ ಪ್ರೀತಿ ಅನ್ಕೊಂಡು, ಅಲ್ಲ ಅಂತ ಆಮೇಲೆ ತಿಳಿದು, ಇಲ್ಲ ಇನ್ನು ಬೇರೆ ಯಾರೊ ಕಡೆಗೆ ಆಕರ್ಷಣೆಯಾಗಿ, ರಕ್ತದಲ್ಲಿ ಪತ್ರ ಬರೆದು(ತಮ್ಮದೇ ಇಲ್ದಿದ್ರೂ ಕೊಳೀದು ಆದೀತು), ಅತ್ತು ಕರೆದು, ಇಲ್ಲ ಸತ್ತೇ ಹೋಗಿಬಿಟ್ಟರೆ, ಇದನ್ನೇ ಪ್ರೀತಿ ಅಂದು... ಪ್ರೀತ್ಸೊದ್ ತಪ್ಪಾ ಅಂದ್ರೆ ಏನು ಹೇಳಬೇಕು... ಈ ಅಟೊಗಳ ಹಿಂದೆ ಚೂರಿ ಚುಚ್ಚಿದ ಹೃದಯದ ಚಿತ್ರಗಳ ಹಿಂದೆ ಒಂದು ಚಿತ್ರಕಥೆಗಾಗುವಷ್ಟು ಕಥೆಯಿರುತ್ತದೆ ಕೇಳಿ ನೋಡಿ... ಈ ಮನಸ್ಸು ದುಂಬಿಯ ಹಾಗೆ, ಇಂದು ಗುಲಾಬಿ ಅಂದ ನೋಡಿದ್ರೆ, ನಾಳೆ ಸಂಪಿಗೆ ಸುವಾಸನೆ ಬಂತು ಅಂತ ಅತ್ತ ಹೊರಟು ಬಿಡುತ್ತದೆ, ಅದಕ್ಕೇ ಏನೊ ಹಿರಿಯರು ಮದುವೆ ಅಂತ ಮಾಡಿ, ಪ್ರೀತಿಸಿಕೊಳ್ಳಿ ಅಂದು ಬಿಡ್ತಾ ಇದ್ದಿದ್ದು.
ಸಂಜೆ ಗಾರ್ಡನ್ನಿನಲ್ಲಿ ಸುತ್ತೋಕೆ ಹೋಗಿದ್ವಿ, ಅಮ್ಮನ ವಯಸ್ಸಿನ ಅಂಟಿಯೊಬ್ಬರು ಎದುರು ಬಂದು, "ನಿಮ್ದು ಲವ್ ಮ್ಯಾರೇಜಾ? ಏನು ಅನ್ಯೊನ್ಯವಾಗಿದೀರಾ" ಅಂದ್ರು... ಇಬ್ರೂ ಒಬ್ಬರ ಮುಖ ಒಬ್ರು ನೋಡ್ಕೊಂಡು ನಗುತ್ತ "ಒಂದ್ರೀತಿ ಹಾಗೇನೆ, ಆದ್ರೆ ಮ್ಯಾರೇಜ ಆದ್ಮೇಲೆ ಲವ್ ಮಾಡ್ತಾ ಇದೀವಿ" ಅಂದ್ವಿ. "ನನ್ನ ಮಗಾನೂ ಇದಾನೇ, ಲವ್ ಲವ್ ಅಂತ ಅದ್ಯಾವ್ದೋ ಹುಡುಗೀ ಹಿಂದೆ ಸುತ್ತತಾ ಇದಾನೇ" ಅಂತ ಗೊಣಗುತ್ತ ನಡೆದರು, ಮುಂದೆ ಹೊರಟಿದ್ವಿ, ಇವಳು ತಿರುಗಿ "ಅಂಟೀ ಪ್ರೀತ್ಸೊದ್ ತಪ್ಪಾ?" ಅಂತ ಕೇಳಿದ್ಲು... ಅವರಿಗೆ ಏನು ಹೇಳ್ಬೇಕೊ ತಿಳೀಲೇ ಇಲ್ಲ... ನಗ್ತಾ ಹೊರಟೇ ಹೋದ್ರು, ಇವಳು ನನ್ನ ಮುಖ ನೋಡಿ ನಗ್ತಾ ಇದ್ಲು. "ಏನೇ ಅನ್ನು ಕಣೇ, ಅಂಟೀನಾ ಪ್ರೀತ್ಸೊದು ತಪ್ಪೇ!!!" ಅಂತ ತರಲೇ ಮಾಡಿದೆ, ಹಿಡಿದ ಅಂಗೈ ಚಿವುಟಿದ್ಲು ಪ್ರೀತಿಯಿಂದ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/preetsod-tappaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, August 30, 2009
ಪ್ರೀತ್ಸೊದ್ ತಪ್ಪಾ?
Sunday, August 23, 2009
ಮದುವೆ ಯಾಕಾಗಬೇಕು?
ಮಧ್ಯರಾತ್ರಿ ಹನ್ನೆರಡಾಗಿತ್ತು, ಕರೆಂಟ ಬೇರೆ ಇಲ್ಲ, ನರಿ ಊಳಿಟ್ಟಹಾಗೆ ಶಬ್ದ, ನಡನಡುವೆ ಸಿಳ್ಳೆ ಹಾಕಿದ ಸದ್ದು, ಒಳ್ಳೆ ಹಾರರ(ಭಯಾನಕ) ಫಿಲ್ಮ ಹಿನ್ನೆಲೆ ಸಂಗೀತದಂತೆ... ಮಲಗಿದಲ್ಲೇ ಬೆವರಿದೆ, ಆದರೂ ಪಕ್ಕದಲ್ಲಿ ಇವಳಿದ್ದಾಳಲ್ಲ ಅಂತ ಖಾತ್ರಿ ಮಾಡಿಕೊಂಡು ಪುಕ್ಕುಲು ಮನಸ್ಸಿಗೆ ಧೈರ್ಯ ತಂದುಕೊಂಡು, ಏನದು ನೋಡೇ ಬಿಡುವಾ ಅಂತ ಮೇಲೆದ್ದೆ, ಹಾಸಿಗೆಯಿಂದಿಳಿದು ಶಬ್ದಬರುವ ದಿಕ್ಕಿನೆಡೆಗೆ ನಡೆಯುತ್ತಿದ್ದರೆ ಒಮ್ಮೆಲೇ ಅಕಸ್ಮಾತ "ಏನಾಯ್ತು" ಯಾರೊ ಕರೆದ ಹಾಗಾಯ್ತು, ಮೋಹಿನಿ ಹಾಗೆ! ಬೆಚ್ಚಿದೆ... ಎದೆ ಢಬ್ ಢಬ ಬಡ್ಕೊತಾ ಇದ್ರೆ... ಕರೆದವ್ಳು ಬೇರೆ ಯಾರೂ ಅಲ್ಲ ನನ್ನ ಮನಮೋಹಿನಿ, ನನ್ನಾಕೆಯೇ, ಅಬ್ಬ ಬದುಕಿದೆಯಾ ಬಡಜೀವಾ ಅಂತಂದುಕೊಂಡು, ಸಾವರಿಸಿಕೊಂಡು "ಸದ್ದು ಕೇಳಿಸ್ತಾ ಇದೆಯ" ಅಂದೆ, ಯಾವುದೊ ಮೋಹಿನಿ ನನ್ನಷ್ಟೇ ಕಾಡುತ್ತಿದ್ದರೆ ಎನ್ ಮಾಡೊದು, "ಹಾಂ ಕೇಳಿಸ್ತಿದೆ", ಒಹ್ ಹಾಗಾದ್ರೆ ಅವಳಿಗೂ ಕೇಳ್ತಿದೆ, "ಅದೇ ಏನು ಅಂತ ನೋಡೊಣ ಅಂತ ಹೊರಟಿದ್ದೆ ಬ್ಯಾಟರಿ ಎಲ್ಲಿದೆ" ಅಂದೆ. "ರೀ ಅದು ನಮ್ಮಪ್ಪ ಗೊರಕೆ ಹೋಡೀತಾ ಇದಾರೆ" ಅಂದ್ಲು, ಮನಸ್ಸು ನಿರಾಳವಾಯ್ತು. ಹೀಗೆ ರಾತ್ರಿ ಎಚ್ಚರವಾದ್ರೆ ಮತ್ತೆ ನಿದ್ರೆ ಬರಲು ಘಂಟೆ ಸಮಯವೇ ಬೇಕು, ಮರಳಿ ಮಲಗಿದ್ದೆ, ಇವಳು ತಿವಿದೆಬ್ಬಿಸಿ ಕೇಳಿದ್ಲು "ರೀ ಮದುವೆ ಯಾಕಾಗಬೇಕು?". #$@*%*@$# ಎಲ್ಲ ಕಣ್ಣ ಮುಂದೆ ತಿರುಗಾಡಿತು.
ಅಲ್ಲಾ ಮಧ್ಯರಾತ್ರಿ ನಿದ್ರೆ ಬರದೇ ಹೊರಳಾಡುತ್ತಿರಬೇಕಾದ್ರೆ, ಮಡದಿ ಎಬ್ಬಿಸಿ ಹೀಗೆ ಕೇಳಿದ್ರೆ ಇನ್ನೇನಾಗಬೇಡ. "ಹಾಂ!! ಏನಿಲ್ಲ ಮದುವೆ ಆಗಿ, ಮಾವ ಮನೇಲಿ ಬಂದು ಮಲಗಿ, ಹೀಗೆ ಗೊರಕೆ ಹೊಡೀಲಿ ಅಂತ ಆಗಬೇಕು" ಅಂದೆ. "ರೀ ನಿಜ ಹೇಳ್ರೀ" ಅಂತ ಗೋಗರೆದಳು. "ಲೇ ಮೊದಲೇ ನಿದ್ರೆ ಬರ್ತಾ ಇಲ್ಲ ಅಂತ ನಾನು, ಮಧ್ಯರಾತ್ರಿ ನಿಂದೊಳ್ಳೆ ಕಾಟ ಆಯ್ತಲ್ಲ" ಅಂತ ತಿರುಗಿ ಮಲಗಿದೆ, ತಲೇಲಿ ಹುಳು ಬಿಟ್ಟ ಹಾಗೆ ಆಗಿತ್ತು, ಅದೇ ವಿಷಯ ಕೊರೆತ ಶುರುವಾಯಿತು. ಇವಳಪ್ಪನ ಗೊರಕೆ ಒಂದೇ ಅಲ್ದೇ ಇದೂ ನಿದ್ರೆ ಹಾಳು ಮಾಡಲು ಸೇರಿಕೊಂಡಿತು. ಅವಳೆಡೆಗೆ ತಿರುಗಿ ನಾನೂ ಕೇಳಿದೆ "ಹೌದು ಯಾಕಾಗಬೇಕು" ಅಂತ, ಅವಳು ಗಲ್ಲಕ್ಕೆ ಕೈಕೊಟ್ಟು ಮೊಣಕೈ ಮೇಲೂರಿ ಮಲಗಿದಲ್ಲಿಂದಲೇ, "ನಾನೂ ಅದನ್ನೇ ಕೇಳಿದ್ದು" ಅಂದ್ಲು.
ಹಾಗೂ ಹೀಗೂ ಯೋಚಿಸಿ ಯೋಚಿಸಿ ಮಲಗಿರಬೇಕು, ಮುಂಜಾವು ಇನ್ನೇನು ಸ್ವಲ್ಪ ನಿದ್ರೆ ಬಂದಿರಬೇಕು, ಎಬ್ಬಿಸಿದವಳ ಮೊದಲ ಪ್ರಶ್ನೆ ಮತ್ತದೇ, ನಾನೇನು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಂಚಿಯಲ್ಲಿ ಕಟ್ಟಿಕೊಂಡು ತಿರುಗುತ್ತಿದ್ದೇನೆ ಅನ್ನೊ ಹಾಗೆ, ಇಕೊ ತೆಗೆದುಕೊ ಅಂತ ತೆಗೆದು ಕೊಡಬೇಕೇನೊ. "ಗೊತ್ತಿಲ್ಲ ಹೋಗೆ" ಅಂದೆ, "ಮತ್ತೆ ನೀವ್ಯಾಕೆ ಮದುವೆ ಆಗಿದ್ದು" ಅಂದ್ಲು, ಮೊದಲೇ ರಾತ್ರಿಯೆಲ್ಲ ನಿದ್ರೆಯಿಲ್ಲ ಹೀಗೆ ಜೊಂಪು ತೆಗೆದುಕೊಳ್ಳುವಾಗ ಎಬ್ಬಿಸಿದ್ರೆ, ರೇಜಿಗೆದ್ದು "ನಿಜವಾಗ್ಲೂ ಮದುವೆ ಆಗಲೇಬಾರದು, ದೊಡ್ಡ ತಪ್ಪು ಆಯ್ತು ಕಣೇ, ಆಗಲೇಬಾರದಿತ್ತು, ನನ್ನೀ ಮಹಾಪರಾಧವನ್ನು ಮನ್ನಿಸಿಬಿಡು ಮಹಾತಾಯಿ, ಮಲಗಲು ಬಿಡು" ಅಂತ ಬೇಡಿಕೊಂಡೆ. "ಆಗಿದ್ದು ಆಗಿ ಹೋಯ್ತು, ಈಗ ಯಾಕೆ ಆಗಬೇಕು ಅದನ್ನ ಹೇಳಿ" ಮತ್ತದೇ ರಾಗ. "ಆಗಿ ಹೋದ ಮೇಲೆ ಆ ಮಾತ್ಯಾಕೆ, ಈಗೇನು ನಿನಗೆ ಡಿವೊರ್ಸ್ ಬೇಕಾ, ಪೇಪರು ಕೊಡು ಎಲ್ಲಿ ಸೈನ್ ಬೇಕೊ ಅಲ್ಲಿ ಮಾಡ್ತೀನಿ, ಹೆಬ್ಬೆಟ್ಟು ಒತ್ತಬೇಕಾ, ಹೆಬ್ಬೆಟ್ಟು ಯಾಕೆ ಇಡೀ ಕೈ ಒತ್ತುತ್ತೀನಿ ಬೇಕಿದ್ರೆ" ಅಂತ ಹಾರಾಡಿದೆ, "ನಾನ್ ನಿಮ್ಮನ್ನ ಬಿಟ್ಟು ಕೊಡ್ತೀನಾ, ಅದೆಲ್ಲ ಏನೂ ಬೇಡ ನನ್ನ ಪ್ರಶ್ನೆಗೆ ಉತ್ತರಕೊಡಿ ಸಾಕು" ಅಂದ್ಲು, ಒಳ್ಳೆ ಜಿಡುಪು ಜಿಗಣೆ ತರಹ ಒಂದಕ್ಕೆ ಅಂಟಿಕೊಂಡರೆ ಬಿಡಲೊಲ್ಲಳು.
ನಿದ್ರೆಯಂತೂ ಹಾರಿ ಹೋಗಿತ್ತು, ಮಲಗಿದರೂ ಪ್ರಯೋಜನ ಇಲ್ಲವೆಂದು ಮೇಲೆದ್ದೆ, ಇವಳಪ್ಪ ಆಗಲೇ ಎದ್ದಿದ್ದರು, ಅವರ ತಲೆ ಕೂಡ ಸ್ವಲ್ಪ ಕೆಡಿಸಿದರಾಯ್ತು ಅಂತ, "ಒಳ್ಳೇ ನಿದ್ರೆಯಾಯ್ತು ಅಂತ ಕಾಣತ್ತೆ, ಟೀ ಆಯ್ತಾ" ಅಂದೆ, ಮತ್ತೆ ಗೊರಕೆ ಹೊಡೀತಿರಲಿಲ್ವಾ ಚೆನ್ನಾಗಾಯ್ತಾ ನಿದ್ರೆ ಅಂತೇನು ಕೇಳೊದು!. ಅಷ್ಟರಲ್ಲೇ ಅವಳು ಟೀ ಕೊಟ್ಲು, "ನಿಮ್ಮ ಮಗಳು ಮದುವೆ ಯಾಕಾಗಬೇಕು ಅಂತ ಕೇಳ್ತಿದಾಳೆ ನೋಡಿ" ಅಂದೆ, ಹಿರಿಯರು ಎನಾದ್ರೂ ಒಳ್ಳೆ ಉತ್ತರ ಕೊಟ್ಟಾರು ಅನ್ನೊ ಭರವಸೆಯೊಂದಿಗೆ, ಮುಗುಳ್ನಗುತ್ತ "ನಾವು ಮದುವೆ ಮಾಡಿಕೊಟ್ಟಾಯ್ತು, ಅವಳ ಪ್ರಶ್ನೆಗಳಿಗೆಲ್ಲ ಉತ್ತರ ನಿಮ್ದೇ" ಅಂತ ತಲೆಭಾರ ಕಳಚಿಕೊಂಡವರ ಹಾಗೆ ಹೊರಟು ಹೋದ್ರು. ಅವಳ ತರಲೆಗಳಲ್ಲಿ ಇದೂ ಒಂದು ಅಂದುಕೊಂಡಿರಬೇಕು.
ನನ್ನ ಹೆಗಲೇರಿದ ಈ ಪ್ರಶ್ನೆ ಕೆಳಗಿಳಿಯದಾಯಿತು, ಅವಳಪ್ಪ ಹೊರಟಾದ ಮೇಲೆ, ಅವಳು ಪಾಕಶಾಲೆಯಲ್ಲಿದ್ದಳು ಹೋಗಿ ಹಿಂದಿನಿಂದ ತಬ್ಬಿಕೊಂಡು, "ಇಂಥಹ ಮಧುರ ಕ್ಷಣಗಳಿಗಾಗಿ ಮದುವೆ ಆಗಬೇಕು" ಅಂದೆ, ಎನೂ ಮಾತಾಡಲಿಲ್ಲ, ಕೈಯಲ್ಲಿ ಸ್ಟೀಲಿನ ಪಾತ್ರೆಯಿತ್ತು ಅದನ್ನೇ ತೆಗೆದುಕೊಂಡು ಬಾರಿಸಿಯಾಳು ಅಂತ ದೂರ ಸರಿದು, ಅಂತೂ ಅವಳ ಬಾಯಿ ಮುಚ್ಚಿಸುವ ಉತ್ತರ ಕೊಟ್ಟೆನಲ್ಲ ಅಂತ ಹೆಮ್ಮೆಯಿಂದ "ಹೀಗೆ ನನ್ನ ಪತ್ನಿಯನ್ನು ನಾ ತಬ್ಬಿದರೆ ಯಾರೂ ಕೇಳಲ್ಲ, ಅದೇ ಪಕ್ಕದ ಮನೆ ಪದ್ದುಗೆ ಹೀಗೇ ಮಾಡೋಕೆ ಹೋದ್ರೆ ಅಷ್ಟೇ" ಅಂತ ವಿವರಣೆ ಬೇರೆ ಕೊಟ್ಟೆ. ತಿರುಗಿ "ಇಷ್ಟಕ್ಕೇ ಮದುವೆ ಆಗಬೇಕಾ?" ಅಂದ್ಲು. ನಾ ಹಲ್ಲು ಕಿರಿದು "ಕೈಲಿದೆಯಲ್ಲ, ಆ ಸ್ಟೀಲ ಪಾತ್ರೆ ಕೊಡು ನನ್ನ ತಲೆಗೆ ನಾನೇ ನಾಲ್ಕು ಕೊಟ್ಕೊತೀನಿ" ಅಂತಂದು ಹೊರಬಂದೆ.
ಇದರ ಉತ್ತರ ಯಾರು ಕೇಳಿದ್ರೆ ಸಿಗಬಹುದು ಅಂತ ಯೋಚಿಸಿದ್ರೆ, ಜೀವನದಲ್ಲಿ ಎಂಥಾ ಕಷ್ಟ ಬಂದ್ರೂ ಅಲುಗದೇ, ಕಲ್ಲಿನಂತೆ ನಿಂತು ಮುಂದೆ ಬಂದ ಗೆಳೆಯ ಕಲ್ಲೇಶಿ ನೆನಪಾದ, ಜೀವನ ಸಾಕಷ್ಟು ಪಾಠ ಕಲಿಸಿದೆ ಅವನಿಗೆ ಉತ್ತರ ಖಂಡಿತ ಗೊತ್ತಿರುತ್ತದೆ ಅಂತ ಅನಿಸಿತು, ಅವನಿಗೇ ಕರೆ ಮಾಡಿದೆ, ಕಲ್ಲೇಶಿ ಹೇಗಿದೀಯೋ ಅಂದ್ರೆ, ಗುಂಡುಕಲ್ಲು ಇದ್ದಹಾಗೆ ಇದೀನಿ ಅಂದ, ಸರಿ ಅವನು ಹಾಗೇ ಅದೇನೂ ಹೊಸದಲ್ಲ ಬಿಡಿ, ಹೆಸರೇ ಕಲ್ಲೇಶಿ ಬೇರೆ. "ಲೋ ಮದುವೆ ಯಾಕೊ ಆಗಬೇಕು" ಅಂದೆ, "ನಿಂದ್ ಮದುವೆ ಆಯ್ತಲ್ಲೊ, ಈಗ್ಯಾಕೆ ಈ ಪ್ರಶ್ನೇ" ಅಂದ, "ಕೇಳಿದ್ದಕ್ಕೆ ಉತ್ತರ ಹೇಳೊ ಅಂದ್ರೆ ನೀನೊಳ್ಳೆ, ಈಗ್ ನೀನ್ಯಾಕಪ್ಪ ಮದುವೆ ಆದೆ" ಅಂದೆ, ಹೀಗೆ ಕೇಳಿದ್ರೆ ಉತ್ತರ ಸಿಗಬಹುದು ಅಂತ. "ನಮ್ಮವ್ವ ಮದುವೆ ಆಗು ಅಂದ್ಲು ಆದೆ" ಅಂದ, ಒಳ್ಳೆ ಅಮ್ಮನ ಮಗ. "ಅದೆ ಯಾಕೆ ಆಗು ಅಂದಿದ್ದು", ಹೋಗಿ ಆಕೇನೇ ಕೇಳು, ಅನ್ಲಿಲ್ಲ ಸಧ್ಯಕ್ಕೆ. ಅವನೇ ಹೇಳಿದ "ಜೀವನದಲ್ಲಿ ಒಂದು ಹಂತ ತಲುಪಿದ್ನಾ, ಕೆಲ್ಸ ಮನೆ ಅಂತ ಇದ್ನಾ, ಅವ್ವ, ಮಗಾ ಕಷ್ಟ ಪಟ್ಟು ಮೇಲೆ ಬಂದೆ, ಇನ್ನು ಮದುವೆ ಆಗಿ ಸುಖವಾಗಿರು ಅಂದ್ಲು, ಅದಕ್ಕೇ ಆದೆ" ಅಂದ, ಛೆ ಎಷ್ಟು ಕರೆಕ್ಟ ಅಲ್ವಾ, ಇದು ನನಗೆ ಹೊಳೀಲೇ ಇಲ್ಲ, ಉತ್ತರ ಸಿಕ್ತು ಅಂತ, "ಮತ್ತೇನೊ ಸುಖವಾಗಿದೀಯಾ ಅನ್ನು" ಅಂದೆ. "ಅಯ್ಯೋ ಮದುವೆ ಆದಮೇಲೆ, ಹೆಂಡ್ತಿ ಮಕ್ಳು ಅಂತ ಆಗಿ, ಇನ್ನೂ ಕಷ್ಟ ಜಾಸ್ತಿ ಅಗಿದೇ ಕಣಲೋ" ಅಂದ. ಮತ್ತೆ ತಲೆ ಎತ್ತದಂತೆ ಕಲ್ಲು ಚಪ್ಪಡಿ ಎಳೆದು ಮುಚ್ಚಿದ್ದ ಪ್ರಶ್ನೇನಾ, ಕಲ್ಲೇಶಿಯೇ ಎಳೆದು ಹೊರತೆಗೆದ.
ಕಲ್ಲೇಶಿ ಕಥೆ ಕೇಳಿ ಬೇಜಾರಾಗಿ, ಕೂತವನಿಗೆ, ಕಲ್ಯಾಣಿ ನೆನಪಾದಳು, ಅದೇ ಕಲ್ಯಾಣ ಮಂಟಪದ(ಮದುವೆ ಛತ್ರ) ಮ್ಯಾನೇಜರ! ಇವಳ ಫ್ರೆಂಡ್ ಬೇರೆ, ಎಷ್ಟ ಮದುವೆ ನೋಡಿರಲಿಕ್ಕಿಲ್ಲ ಅವಳು, ಮದುವೆ ಕೂಡ ಮಾಡಿಸ್ತಾಳೆ, ಅವಳಿಗಲ್ಲದೇ ಬೇರೆ ಯಾರಿಗೆ ಗೊತ್ತಿದ್ದೀತು ಅಂತ, ಪಕ್ಕದ ರೋಡಿನಲ್ಲೆ ಛತ್ರ ಇದೆಯಂತ ಖುದ್ದು ಅಲ್ಲಿಗೇ ಹೋದೆ. "ಎನ್ ಸರ್ ಮದುವೆ ಆದ ಮೇಲೆ ಅಪರೂಪ ಆಗಿದೀರ, ಬಂದೇ ಇಲ್ಲ, ಯಾರ ಮದುವೆಗೆ ಛತ್ರ ಬುಕ್ ಮಾಡೊಕೆ ಬಂದಿರಿ" ಅಂತ ಬರಮಾಡಿಕೊಂಡಳು. "ಮದುವೆ ಯಾಕಾಗಬೇಕು ಅಂತ ಹೇಳಿದ್ರೆ, ನಾನೇ ಇನ್ನೊಂದು ಆಗೋಣ ಅಂತ" ಅಂದೆ. "ಎಲ್ರೂ ಆಗ್ತಾರೆ ಅದಕ್ಕೆ" ಅಂದ್ಲು "ಅದೇ ಯಾಕೆ", ನಾ ಅದನ್ನೇ ಕೇಳಲು ಬಂದದ್ದಲ್ಲವೇ. "ಸರ್ ಹೆಣ್ಣು ಎಷ್ಟು ದಿನ ಅಂತ ಒಬ್ಬಂಟಿಯಾಗಿ ಇರೋಕೆ ಸಾಧ್ಯ ಹೇಳಿ, ಸಮಾಜ ಮಾತಾಡತ್ತೆ, ಈಗೆಲ್ಲ ಹಾಗೂ ಇರ್ತಾರೆ, ಆದ್ರೂ ಮದುವೆಯಾಗಿ ಗಂಡನಮನೆ ಸೇರಿದ್ರೆ, ಸುರಕ್ಷಿತ, ಅಲ್ಲದೇ ಆರ್ಥಿಕವಾಗಿಯೂ ಬಲ ಸಿಗ್ತದೆ, ಅದಕ್ಕೆ ಮದುವೆ" ಅಂದ್ಲು, ಅವಳು ಹೇಳಿದ್ದೂ ಸರಿ ಅನ್ನಿಸಿತು "ಮತ್ತೆ ನೀವು ಅದಕ್ಕೆ ಆದದ್ದು, ಹಾಗಾದ್ರೆ" ಅಂದೆ, "ಆಗಿದ್ದೇನೊ ಹಾಗೆ ಅಂತ ಕನಸು ಹೊತ್ತು, ನಿಮ್ಮಲ್ಲೇನು ಮುಚ್ಚು ಮರೆ, ನಿಮ್ಮಾಕೆ ನಿಮ್ಮನ್ನು ಬಿಟ್ರೆ ನನಗೂ ಇಲ್ಲಿ ಹೇಳಿಕೊಳ್ಳೊಕೆ ಯಾರಿದಾರೆ, ಮನೆಗೆ ಹೋಗೊಕೆ ಹೆದರಿಕೆ ಆಗತ್ತೆ ಈಗೀಗ, ಕುಡಿದು ಮನೆಗೆ ಬರ್ತಾರೆ, ಸುಮ್ನೇ ಜಗಳ, ಹೊಡೆಯೋಕೆ ಬರ್ತಾರೆ, ಎಲ್ಲಿ ಸುರಕ್ಷಿತ ಸರ್, ನಾನು ಗಳಿಸಿದ್ದೂ ಅವರ ಕೈಗೇ ಕೊಡಬೇಕು, ಮನೆ ನಡೆಸೊದೇ ಕಷ್ಟ" ಅಂದ್ಲು. ಮದುವೆ ಯಾಕೆ ಆಗಬೇಕು ಅಂತ ಇದ್ದ ನನ್ನ ಪ್ರಶ್ನೆ ಈಗ, ಮದುವೆ ಯಾಕಾದ್ರೂ ಆಗಬೇಕು ಅಂತ ಆಗಿತ್ತು.
ಹೆದರಬೇಡ, ನಾವಿಲ್ವಾ, ಇನ್ನೊಮ್ಮೆ ಹಾಗೇನಾದ್ರೂ ಆದರೆ ನಮಗೆ ಫೊನು ಮಾಡು, ನನಗೆ ಸಾಧ್ಯ ಆದಷ್ಟು ಹೆಲ್ಪ ಮಾಡ್ತೀನಿ ಅಂತ ಹೇಳಿ ಮನೆಗೆ ಮರಳಿದೆ, ಬಟ್ಟೆ ಒಣಗಲು ಬಿಸಿಲಿಗೆ ಹಾಕುತ್ತ ಟೆರೆಸಿನಿಂದಲೇ ನನ್ನ ನೋಡಿರಬೇಕು ಇವಳು, ತಲೆ ಕೆಳಗೆ ಮಾಡಿಕೊಂಡು ಅದೇ ಕಲ್ಯಾಣಿ ಕಥೆಯ ಯೋಚನೆಯಲ್ಲೇ ಮನೆ ಸೇರಿದೆ, ಒಳಗೆ ಬಂದು "ರೀ, ನಾನೇನು ನಿಮ್ಗೆ ಡಿವೊರ್ಸ್ ಕೊಟ್ಟು ಎಲ್ಲೂ ಹೋಗಲ್ಲ, ಯಾಕೆ ಅಷ್ಟು ಬೇಜಾರಾಗಿದೀರಾ" ಅಂದ್ಲು. ಸುಮ್ನೇ ಕೂತಿದ್ದೆ... "ರೀ ಏನಾಯ್ತು?" ಅಂದ್ಲು, ಆಗಿದ್ದೆಲ್ಲ ಹೇಳಿದೆ, ಅವಳೂ ಮರುಕಪಟ್ಟಳು. "ರೀ ನಿಮ್ಮ ಫ್ರೆಂಡ್ ಕಲ್ಲೇಶಿ ನನ್ನ ಫ್ರೆಂಡ ಕಲ್ಯಾಣೀನಾ ಮದುವೆ ಆಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತಲ್ವಾ, ಇಬ್ರೂ ಒಳ್ಳೆ ಜೋಡಿ ಆಗಿರೋರು" ಅಂದ್ಲು, ಬ್ರಹ್ಮ ಬೆಸೆಯೋ ಬಂಧಗಳೇ ವಿಚಿತ್ರ, ಒಮ್ಮೆಲೇ, ಬದುಕನ್ನು ರಿವೈಂಡ ಮಾಡಿ ಮೂರುವರ್ಷ ಹಿಂದೆ ತೆಗೆದುಕೊಂಡು ಹೋಗಿ, ರೀಲು ಕತ್ತರಿಸಿ ಅವರಿಬ್ಬರನ್ನೂ ಜೋಡಿಸಿಬಿಡಲೇ ಅನ್ನಿಸಿತು, ಬದುಕು ಸಿನಿಮಾ ರೀಲಲ್ಲವಲ್ಲ!
ಮಾಡಿದ ಊಟ ರುಚಿಸಲಿಲ್ಲ, "ಯಾಕೇ ನಿನಗೆ ಆ ಪ್ರಶ್ನೆ ತಲೇಲಿ ಬಂದದ್ದು" ಅಂದೆ, "ರೀ, ನನ್ನ ತಮ್ಮ ಇದಾನಲ್ಲ, ಹುಡುಗಿ ನೋಡಿ ನೋಡಿ ಬೇಸತ್ತು, ಸಾಕಾಗಿ ಮದುವೆ ಯಾಕೆ ಆಗಬೇಕು ಅಂತ ಕೇಳಿದ, ಹೌದಲ್ವಾ ಯಾಕೆ ಆಗಬೇಕು? ಅಂತ ನನಗೂ ಅನ್ನಿಸಿತು ಅದಕ್ಕೇ ನಿಮ್ಗೂ ಕೇಳಿದೆ" ಅಂದ್ಲು. ಇದೆಕ್ಕೆಲ್ಲ ಮೂಲ ಕಾರಣ ಅಲ್ಲಿದೆ, ಒಂದಿಲ್ಲೊಂದು ತೊಂದ್ರೆ ತಂದಿಡ್ತಾನೆ ನನಗೆ, ಆಮೇಲೆ ನೋಡ್ಕೊತೀನಿ ಅವನನ್ನ. "ನಾನೂ ಇಂಥದ್ದೇ ಪ್ರಶ್ನೆ ಕೇಳಿದ್ದೆ, ಅದಕ್ಕೆ ಸೋದರ ಮಾಮ, ಯಾಕೆ ಆಗಬೇಕು ಅಂತ ಕೇಳ್ತಿದಾನೆ ಅಂದ್ರೆ, ಎಲ್ಲೊ ಸನ್ಯಾಸಿ ಆಗಿ ಎಲ್ಲಿ ಮಠ ಸೇರಿಕೊಂಡು ಬಿಡ್ತಾನೆ ಏನೊ ನೋಡು ಅಂತ, ಅಮ್ಮನ ಕಿವಿಯೂದಿದ ಮದುವೆ ಮಾಡಿ ಬಿಟ್ಟರು" ಅಂದೆ. "ಒಹ್ ಅದಕ್ಕಾ ಮದುವೆ ಆಗಿದ್ದು" ಅಂದ್ಲು, "ಅಷ್ಟೇ ಏನಲ್ಲ, ಈ ನನ್ನಾಕೆ ಅಂತ ಬ್ಲಾಗ, ಲೇಖನ ಬರೀತಿದ್ನಾ, ಹುಡುಗೀರ ಕಾಟ ಜಾಸ್ತಿ ಆಯ್ತು! ಮದುವೆ ಯಾವಾಗ ಆಗ್ತೀರ ಅಂತಾ ಬೇರೆ ಕೇಳತೊಡಗಿದ್ರು, ನನಗೂ ಬ್ಯಾಚುಲರ ಲೈಫ್ ಸಾಕಾಗಿ, ಹೊರಗೆ ಹೊಟೇಲಲ್ಲಿ ತಿಂದು ತಿಂದು ಬೇಜಾರಾಗಿ, ಮದುವೆಗೆ ಓಕೇ ಅಂದುಬಿಟ್ಟೆ" ಅಂದೆ. ಮನೇಲಿ ತೂಫಾನು ಎದ್ದಿತು "ಒಹೋ ಯಾರೊ ಹೇಳಿದ್ರು ಅಂತ ಮದುವೆ ಆದಿರಿ, ಅಡುಗೆ ಮಾಡೊಕೆ ಅಡುಗೆಯಾಕೆ ಬೇಕಿದ್ಲು, ಯಾರೊ ಕೆಲಸದಾಕೆನಾ ಮದುವೆ ಆಗಬೇಕಿತ್ತು" ಅಂತ ಬಯ್ಯುತ್ತ ಎದ್ದು ಹೋದವಳು ಮೂರು ದಿನ ಮಾತಾಡಲಿಲ್ಲ ಮುನಿಸಿಕೊಂಡು.
ಮಾನವ ಮೂಲತಃ ಸಂಘಜೀವಿ, ಒಬ್ಬಂಟಿ ಒಂಟಿ ಸಲಗಗಳೂ ಇದ್ದಾರೆ, ಸಾಧನೆ ಮಾಡಿದ ಸನ್ಯಾಸಿಗಳೂ ಇದ್ದಾರೆ. ಅದ್ರೆ ಸಾಮಾನ್ಯ ಮನುಷ್ಯ ತನಗೆ ತಾನೆ ಕಟ್ಟಿಕೊಂಡು ನಿರ್ಧಿಷ್ಟ ನೀತಿ ನಿಯಮಗಳೇ ಸೇರಿ ಸಮಾಜ ಆಗಿದೆ, ಮದುವೆ ಅದರಲ್ಲೊಂದು ಅಂಗ, ಮಾನವ ಜನಾಂಗದ ಮುಂದುವರಿಕೆಗೆ ಸಂತಾನೋತ್ಪತ್ತಿ ಅಂತ ಅದರ ಮೂಲ ಉದ್ದೇಶ ಕೂಡ, ನಾಯಿ ನರಿಗಳಂತೆ ಜೀವಿಸದೇ ಮೌಲ್ಯಗಳೊಂದಿಗೆ ಜೀವಿಸಲು ಕಟ್ಟಿಕೊಂಡ ಕಟ್ಟುಪಾಡುಗಳು. ನನ್ನ ಜತೆ ನೀನು, ನಿನಗೆ ನಾನು, ಅಂತ ಭಾವನಾತ್ಮಕ ಬೆಂಬಲ ಕೂಡ ಅದೇ, ದೈಹಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಎಲ್ಲರೀತಿಯಿಂದಲೂ ಅಗತ್ಯ ಮತ್ತು ಸಬಲತೆಯೇ ಇದರ ಸೂತ್ರ. ಹಾಗೊ ಹೀಗೊ ಎಲ್ಲರೂ ಮದುವೆ ಆಗುತ್ತಾರೆ ಏನೋ ಒಂದು ಕಾರಣದಿಂದ. ಊರಲ್ಲಿ ಖಾಲಿ ಅಲೆಯುವವನಿಗೆ ಮದುವೆ ಮಾಡಿದರೆ ಜವಾಬ್ದಾರಿ ಬರುತ್ತದೆಂದು ಮದುವೆ ಮಾಡಿದರೆ, ವಯಸ್ಸಾಯ್ತು ನಮ್ಮ ಜವಾಬ್ದಾರಿ ಕಳೆದುಕೊಳ್ಳೊಣ ಅಂತ ತಂದೆ ತಾಯಿ ಮಗಳ ಮದುವೆ ಮಾಡಿ ಹಾಕುತ್ತಾರೆ, ಇನ್ನೋ ದೊಡ್ಡ ದೊಡ್ಡ ಶ್ರೀಮಂತರೂ, ಬಿಸಿನೆಸ ಮ್ಯಾನಗಳ ಮಕ್ಕಳ ಮದುವೆ ಹಿಂದೆ ದೊಡ್ಡ ವ್ಯಾಪಾರಿ ತಂತ್ರವೇ ಅಡಗಿರುತ್ತದೆ, ಮದುವೆ ಮಾಡಿ ಹೊಸ ಕಂಪನಿಯ ಜವಾಬ್ದಾರಿ ಹೆಗಲಿಗೇರಿಸುತ್ತಾರೆ. ಹೀಗೇ ಮದುವೆ ಯಾಕೆ ಆಗಬೇಕು ಅನ್ನೊದಕ್ಕೆ ನಿರ್ಧಿಷ್ಟ ಕಾರಣಗಳಿಲ್ಲ ಅಂತ ನನ್ನನಿಸಿಕೆ, ಏನೊ ಕಾರಣ ಒಟ್ಟಿನಲ್ಲಿ ಮದುವೆ ಮಾತ್ರ ಅಗುತ್ತಾರೆ.
ಅವಳ ತಮ್ಮ ಒಬ್ಬನೇ ಸಿಕ್ಕ, "ಎನೊ ನನ್ನಾಕೆಗೆ ಎನೇನೊ ಪ್ರಶ್ನೆ ಕೇಳಿ, ತಲೆ ಕೆಡಿಸ್ತ ಇದೀಯ, ನನ್ನೊಂದಿಗೆ ಮಾತಾಡ್ತಾ ಇಲ್ಲ ಅವಳು ನಿನ್ನಿಂದಾಗಿ" ಅಂದೆ. "ಸಾರಿ ಭಾವ ನನ್ನಿಂದ ಎಷ್ಟು ತೊಂದ್ರೆ ನಿಮಗೆ" ಅಂತ ಚಡಪಡಿಸಿದ. "ಇನ್ನೊಮ್ಮೆ ಎನಾದ್ರೂ ಇಂಥ ತರಲೆ ಪ್ರಶ್ನೆ ಕೇಳಿದ್ರೆ, ಪ್ರಶ್ನೇನೆ ಕೇಳದ ಹಾಗೆ, ಬಾಬ್ ಕಟ್ ರೋಜಿ ಜತೆ ಮದುವೆ ಮಾಡಿಸಿಬಿಡ್ತೀನಿ" ಅಂತ ಧಮಕಿ ಹಾಕಿದೆ. "ಅವಳ್ನೆ ಮದುವೆ ಆಗಿಬಿಡ್ತೀನಿ, ನನಗೂ ಹುಡುಗಿ ಹುಡುಕಿ ಸಾಕಾಗಿದೆ" ಅಂತ ನಿರಾಸೆಯಿಂದ ನುಡಿದ, ಪಾಪ ಅನ್ನಿಸಿತು "ಏಯ್, ನಾನ್ ಜೊಕ್ ಮಾಡಿದ್ದೊ ಮಾರಾಯ, ಈಗ್ಲೆ ಹೀಗೆ ಸೋತರೆ ಹೇಗೆ ಇನ್ನೂ ಮದುವೆ ಆಗಬೇಕಿದೆ, ಎನೂ ಬೇಜರಾಗಬೇಡ, ನಾನು ನನ್ನಾಕೆ ಇಲ್ವಾ, ಒಳ್ಳೆ ಹುಡುಗಿ ತಂದು ಮದುವೆ ಮಾಡ್ತೀವಿ" ಅಂತ ಭರವಸೆ ತುಂಬಿದೆ ಹುಡುಗ ಚೇತರಿಸಿಕೊಂಡ, "ಎನಾದ್ರೂ ಲವ್... ಇದ್ರೆ ಹೇಳಪ್ಪ" ಅಂತ ಹುಬ್ಬು ಹಾರಿಸಿದೆ, ನಾಚಿ "ಇಲ್ಲ, ಎನೂ ಇಲ್ಲ ಭಾವ" ಅಂದ. "ನೀವೇ ನೋಡಿ, ನೀವು ಅಕ್ಕನೇ ಹುಡುಕೋದು" ಅಂದ. "ಬಿಡು ಮತ್ತೆ" ಅಂತ ಬೆನ್ನು ತಟ್ಟಿ ಹುರಿದುಂಬಿಸಿದೆ. "ಭಾವ ಅಕ್ಕ ಮಾತಾಡಿಸ್ತಾ ಇಲ್ವಲ್ಲ" ಅಂದ "ಏ, ಅದೇನು ಪ್ರಾಬ್ಲಂ ಅಲ್ಲ ಬಿಡು, ಅವಳು ನನ್ನಾಕೆ ಕಣೊ, ಮದುವೆ ಆಗು ನಿನಗೂ ಗೊತ್ತಾಗತ್ತೆ" ಅಂದೆ, ನಗುತ್ತಿದ್ದ.
ಮತ್ತೊಂದು ದಿನ ಹೀಗೇ ಮಲಗಿದ್ದೆ, ಅವರಪ್ಪನ ಗೊರಕೆ ಸದ್ದು ಇರಲಿಲ್ಲ, ನಿದ್ರೆ ಬರುವುದಿತ್ತು. ಮೌನ ವೃತದಲ್ಲಿದ್ದವಳು ಬಾಯಿ ಬಿಟ್ಟಳು "ರೀ" ಅಂತ ಅಲುಗಿಸಿದಳು, ಅಯ್ಯೋ ಮತ್ತಿನ್ಯಾವ ಪ್ರಶ್ನೇ ಹೊತ್ತು ತಂದಿದಾಳೊ ಅಂತ ಭಯ ಬಿದ್ದೆ. ಅವಳೆಡೆಗೆ ತಿರುಗಿದರೆ "ನಾ ಮಾತಾಡಿಸಲಿಲ್ಲ ಅಂದ್ರೆ, ನೀವೂ ಮಾತು ಬಿಡೊದಾ" ಅಂದ್ಲು, ಆ ಹೊದ್ದ ಹೊದಿಕೆಯ ಚುಂಗದಂತೆ ಬಂದ ದಾರಗಳನ್ನು ಕೈಯಲ್ಲಿ ಹೊಸೆಯುತ್ತ, ತಿರುಗಿಸುತ್ತ. ಇನ್ನೇನು ಇವಳು ಶಿಲಾಬಾಲಿಕೆಯ ಹಾಗೆ ಕಲ್ಲಿನಂತೆ ನಿಂತಿದ್ದರೆ ನಾ ಮುಂದೆ ನಿಂತು ಪೂಜಾರಿ ಮಂತ್ರ ಹೇಳಿದಂತೆ ಮಾತಾಡುತ್ತಿರಬೇಕೆ. ಗದ್ದ ಹಿಡಿದು, ಬಾಗಿದ್ದ ಅವಳ ಮುಖ ಮೇಲೆತ್ತಿದರೂ ನನ್ನಡೆಗೆ ದೃಷ್ಟಿಯಿಟ್ಟು ಮಾತಾಡುತ್ತಿರಲಿಲ್ಲ "ಕಲ್ಯಾಣಿ ಫೋನು ಮಾಡಿದ್ಲು", ಅಂದ್ಲು, "ಏನಾಯ್ತು" ಗಾಬರಿಯಾದೆ. "ಏನಿಲ್ಲ... ನಿನ್ನ ಗಂಡ ಏನ್ ಜಾದೂ ಮಾಡಿದ್ರೆ, ನಮ್ಮವರು ಪೀಡಿಸೋದು ದೂರದ ಮಾತು, ಕುಡಿಯೋದು ಕಮ್ಮಿಯಾಗಿದೆ, ಮೊನ್ನೆ ಫಿಲಂಗೆ ಕೂಡ ಕರ್ಕೊಂಡು ಹೋಗಿದ್ರು, ತುಂಬ ಥ್ಯಾಂಕ್ಸ ಕಣೇ, ನಿಮ್ಮ ಮದುವೆನೇನೊ ನಾನು ಮಾಡಿಸಿದೆ, ನನ್ನ ಮದುವೆನಾ ನೀವು ಕಾಪಾಡಿದ್ರಿ ಅಂತೆಲ್ಲ ಏನೇನೊ ಹೇಳಿದ್ಲು" ಅಂದ್ಲು. ನಿರಮ್ಮಳ ಭಾವ ಬಂತು, ಅಂತೂ ಒಳ್ಳೇದಾಯ್ತಲ್ಲ ಅಂತ. "ರೀ ಎನ್ ಮ್ಯಾಜಿಕ್ ಮಾಡಿದ್ರಿ" ಅಂದ್ಲು, "ಎನಿಲ್ಲ ಕಣೆ ಸ್ವಲ್ಪ ರಿಸ್ಕ ತೆಗೆದುಕೊಂಡೆ, ಆ ಏರಿಯ ಇನಸ್ಪೆಕ್ಟರ ನನ್ನ ಫ್ರೆಂಡ, ಹೆಲ್ಪ ಮಾಡು ಅಂದೆ, ಒಕೇ ಅಂದ, ಕಲ್ಯಾಣಿ ಗಂಡನ್ನ ಕರಿಸಿ 'ಕುಡಿದು ಗಲಾಟೆ ಮಾಡ್ತೀಯಾ, ಹೆಂಡ್ತಿ ಹೊಡೀತೀಯಾ, ಅಂತ ಕಂಪ್ಲೆಂಟ್ ಬಂದಿದೆ, ವಿಚಾರಣೆಗೆ ಹೋದ್ರೆ ನಿನ್ನ ಹೆಂಡ್ತಿ ನನ್ನ ಗೆಳೆಯನ ಕೈಲಿ ಫೊನು ಮಾಡಿಸಿ ಹೇಳಿಸಿದ್ಲು, ಅವನೂ ಹಾಗೇನಿಲ್ಲ ಅಂದಿದ್ದಕ್ಕೆ ಬಿಡ್ತಿದೀನಿ, ಅಷ್ಟೊಳ್ಳೆ ಹೆಂಡ್ತಿ ಇದಾಳೇ ಯಾಕೆ ಇದೆಲ್ಲ ನಿನಗೆ, ಇನ್ನೊಮ್ಮೆ ಕಂಪ್ಲೇಂಟ್ ಬಂದ್ರೆ.. ಗೊತ್ತಲ್ಲ..' ಅಂತ ಹೆದರಿಕೆ ಹಾಕಿಸಿದೆ, ಆಕೆ ಗಂಡನೂ ಹೆದರಿದ ಅನ್ಸತ್ತೆ ಎಲ್ಲ ಸರಿಯಾಗಿದೆ, ಸಮಾಧಾನ" ಅಂದೆ. ಅದಕ್ಕೆ ಪ್ರತಿಯಾಗಿ ನನ್ನಾಕೆಯಿಂದ ಹಣೆಗೊಂದು ಪಪ್ಪಿ ಸಿಕ್ತು, "ರೀ ಕಲ್ಲೇಶಿ" ಅಂದ್ಲು, "ವಿಮಾ ಏಜೆಂಟ ಕೊರ್ಸ್ ಮಾಡು ಅಂತ ಹೇಳಿದೀನಿ, ನನ್ನ ಕಾಂಟ್ಯಾಕ್ಟ್ಸ್ ಎಲ್ಲ ಕೊಟ್ಟಿದೀನಿ, ಆಗಲೇ ನಾಲ್ಕು ಜನ ಕಾಲ್ ಮಾಡಿ ಪಾಲಸಿ ಕೊಟ್ಟೀದಾರೆ ಅಂತಿದ್ದ, ಮುಂದೆ ಮ್ಯೂಚುವಲ ಫಂಡ ಮಾಡಿಸು ಅಂತ ಹೇಳಿದೀನಿ, ಕಮೀಷನ್ ಅಂತ ಆದರೆ ಜೀವನಕ್ಕೆ ಆಧಾರ ಅಗತ್ತೆ, ಮೊದಲೇ ಶ್ರಮಜೀವಿ, ಮಾಡ್ಕೊತಾನೆ ಅನ್ನೊ ನಿರೀಕ್ಷೆ ಇದೆ" ಅಂದೆ, ಈ ಸಾರಿ ಮುತ್ತಿನಮಳೆ ಸುರಿಯಿತು, "ಲೇ ಮದುವೆ ಯಾಕಾಗಬೇಕು?" ಅಂತ ಕೇಳಿದೆ. "ಯಾವ ಕಾರಣಕ್ಕೆ?, ಯಾಕೆ?... ನನಗೆ ಬೇಕಿಲ್ಲ, ಅದೇನೇ ಇರಲಿ ನೀವು ನನ್ನ ಮದುವೆ ಆದ್ರಲ್ಲ, ಅಷ್ಟ ಸಾಕು" ಅಂತಿದ್ದಳು. ಯಾಕೆ ಆದೆ ಅನ್ನೊಕಿಂತ, ಆಗಿದ್ದು ಒಳ್ಳೆದೇ ಆಯ್ತು ಅನಿಸುತ್ತಿತ್ತು ನನಗೂ... ನಿಮ್ಮಲ್ಲೂ ಹೀಗೆ ಅನೇಕ ಕಾರಣಗಳಿರಬಹುದು, ಹೊಸದಿದ್ದರೆ ಹಂಚಿಕೊಳ್ಳಿ, ಮತ್ತೆ ಮಂಥನದೊಂದಿಗೆ ಸಿಕ್ತೀವಿ. ನಾನು ನನ್ನಾಕೆ...
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು... ವಿಘ್ನನಿವಾರಕ ಎಲ್ಲರ ಬಾಳಲ್ಲೂ ವಿಘ್ನಗಳನ್ನ ಹೊಡೆದೋಡಿಸಿ ಹರ್ಷ ತರಲೆಂದು ಆಶಿಸುತ್ತೇನೆ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಈ ಲೇಖನ ಬರೆಯುವಾಗ, ಯಾಕೆ ಆಗಬೇಕು ಅನ್ನೊಕಿಂತ ಅಗಿದ್ದು ಒಳ್ಳೇದೆ ಅನ್ನೊ ಭಾವದಲ್ಲಿ ಬರೆಯಲಾಗಿದೆ, ಕೆಲವರಿಗೆ ಯಾಕಾದ್ರೂ ಆದೆವೊ ಅನ್ನೋ ಭಾವನೆಯೂ ಇರಬಹುದು, ಅವರವರು ಬದುಕು ನೋಡುವ ಭಾವದಲ್ಲಿ ಅಡಗಿದೆ, ನಿಜವಾಗಿಯೂ ಮದುವೆ ಅನುಭವವಂತೂ ಇಲ್ಲ, ಆ ಮಟ್ಟಿಗೆ ನಾನು ಅನನುಭವಿ, ಎನದ್ರೂ ತಪ್ಪು ಬರೆದಿದ್ರೆ, ಅನುಭವಿಗಳು ಮನ್ನಿಸಿ. ಮದುವೆ ಅಂತಿದ್ದಂಗೆ ಬೆಚ್ಚಿಬೀಳುವವರ ನಡುವೆ ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ನನ್ನದು, ಆದರೆ ಎಲ್ಲ ಒಳ್ಳೇದೆ ಆಗುತ್ತದೆ ಅಂತೇನೂ ನಾನು ರುಜುವಾತು ಮಾಡಿ ತೋರಿಸುತ್ತಿಲ್ಲ, ಅದಕ್ಕೆ ನಾ ತೆಗೆದುಕೊಂಡ ಉದಾಹರಣೆಗಳೇ ಸಾಕ್ಷಿ, ಅಲ್ಲದೇ ಅವನ್ನು ಬಗೆಹರಿಸಲು ನಾ ಕೊಟ್ಟ ಪರಿಹಾರಗಳೂ ಸಿನಿಕತೆಯಿಂದ ಕೂಡಿವೆ, ನಿಜ ಜೀವನದಲ್ಲಿ ಎಲ್ಲ ಹಾಗಾಗಲಿಕ್ಕಿಲ್ಲ, ಅಷ್ಟು ಸುಲಭವಾಗಿ ಕ್ಲಿಷ್ಟ ಸಮಸ್ಯೆಗಳ ಬಿಡಿಸಲು ಆಗುವುದಿಲ್ಲ ಆದರೂ... ಕಲ್ಪನೆಯಲ್ಲಾದರೂ ಸರಿ... ಬದುಕಿನತ್ತ ಆಶಾಭಾವನೆಯಿಂದ ನೋಡುವ ತುಡಿತ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/maduve-yaakaagabeku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, August 16, 2009
ವಯಸ್ಸಾಯ್ತಾ?
"ರೀ ತಯ್ಯಾರಿ ಆಯ್ತಾ, ಇನ್ನೂ ಎಷ್ಟೊತ್ತು, ಕನ್ನಡಿ ಮುಂದೇನೆ ಅರ್ಧ ಆಯಸ್ಸು ಕಳೀತು" ಅಂತ ಅವಳು ಕೂಗುತ್ತಿದ್ದಳು, ನನ್ನ ಪಾಡಿಗೆ ನಾ ತಲೆ ಬಾಚುತ್ತಿದ್ದೆ. ಎನೂ ಉತ್ತರ ಬರದಿದ್ದಾಗ, ಬಾಗಿಲು ತಳ್ಳಿ ಒಳಗೇ ಬಂದಳು, ಡ್ರೆಸ್ಸಿಂಗ್ ಟೇಬಲ್ಲಿನ ಉದ್ದ ಕನ್ನಡಿಗೆ ಹೆಗಲು ತಾಕಿಸಿ ಆತು ಕೈಕಟ್ಟಿ ನಿಂತು, ದಿಟ್ಟಿಸಿ ನೋಡತೊಡಗಿದಳು, ನನ್ನಾಕೆ ನನ್ನ ಹಾಗೆ ನೋಡಿದರೇನು ಹೊಸದು, ಅದಕ್ಕೆ ನನ್ನ ಪಾಡಿಗೆ ನಾನು ಮುಂಗಾರು ಮಳೆಗೆ ನೆನೆದು ಮೆದುವಾದ ಭೂಮಿಯನ್ನು ನೇಗಿಲಿನಲ್ಲಿ ಹರವು ಮಾಡಿ ಗೆರೆ ಕೊರೆದಂತೆ ಊಳುತ್ತಿರುವ ರೈತನಂತೆ, ಸ್ನಾನ ಮಾಡಿ ನೆನೆದ ಕೂದಲಿನಲ್ಲಿ ಬೈತಲೆ ತೆಗೆಯುತ್ತ ಬಾಚುತ್ತಿದ್ದೆ.
"ರೀ... ಇರೋವೆ ನಾಲ್ಕು ಕೂದಲು ಅಲ್ಲಿ ಇಲ್ಲಿ ಅಂತ ಸ್ವಲ್ಪ, ಅವನ್ನೂ ಹೀಗೇ ಬಾಚ್ತಾ ಇದ್ರೆ, ಎಲ್ಲ ಉದುರಿಹೋಗಿ ಅಷ್ಟೇ ಮತ್ತೆ, ಕೂದಲಿನ ಸಸಿ ನೆಡಿಸಬೇಕಾಗುತ್ತೇ" ಅಂತಂದ್ಲು. "ಹಾಗೆ ಕೂದಲಿನ ನಾಟಿ ಕೂಡ ಮಾಡ್ತಾರೆ ನಿಂಗೆ ಗೊತ್ತಾ" ಅಂದೆ, "ಹೂಂ ನಾನು ಅದಕ್ಕೆ ಎನಾದ್ರೂ, ಈ ಥರ ಬಾಚಿ ಬಾಚಿ ಕಿತ್ತು ಹಾಕ್ತಿದೀರೊ ಎನೋ ಅಂತಾನೇ ಕೇಳಿದ್ದು" ಅಂದ್ಲು. "ನಾನು ನನ್ನ ಹೇರ್ಸ್ಟೈಲು, ನೀನು ನೀಳವೇಣಿ ಕತ್ತರಿಸಬೇಕಾದ್ರೆ, ನಾನು ಗುಂಡು ಹೊಡಿಸ್ತೀನಿ, ನಿಂಗೇನು" ಅಂದೆ "ರೀ ಗುಂಡುನಾ, ಪ್ಲೀಜ್ ಪ್ಲೀಜ್ ಮಾಡಿಸ್ರಿ ಹೇಗೆ ಕಾಣ್ತೀರಾ ನೋಡೊಣ" ಅಂತ ಹರಿಬಿದ್ದಳು, ಇದೊಳ್ಳೆ ಆಯ್ತಲ್ಲ ನಾನೇನು ಚೇಷ್ಟೆಗೆ ಹೇಳಿದ್ರೆ, ಇವಳು ಅದನ್ನೇ ಪಟ್ಟು ಹಿಡಿಯೋದಾ, "ಲೇ ಹೋಗೆ, ನಿಂದೊಳ್ಳೆ ಆಸೆ, ಹಾಗೇನಾದ್ರೂ ಮಾಡಿಸಿದ್ರೆ ಪಕ್ಕದಮನೆ ಪದ್ದು ನನ್ನ ಕಣ್ಣೆತ್ತಿ ಕೂಡ ನೋಡಲ್ಲ" ಅಂತ ಸಿಡುಕಿದೆ, "ನಾನೂ ಹಾಗಾಗಲಿ ಅಂತಾನೇ ಹೇಳಿದ್ದು, ನನ್ನ ತಮ್ಮನಿಗೆ ಕನ್ಯಾ ನೋಡೊಕೆ ಹೋದ್ರೆ ನಿಮ್ಮನ್ನೇ ವರ ಅನ್ಕೋತಾರೆ, ಹಾಗೆ ಟಿಪ್ ಟಾಪ್ ಆಗಿ ಬರ್ತೀರಾ, ಅದಕ್ಕೆ ಗುಂಡು ಹೊಡಿಸಿದ್ರೆ ಒಳ್ಳೇದೇ ಅಂತ ಹೇಳಿದ್ದು" ಅಂತ ಗೂಡಾರ್ಥ ಬಿಚ್ಚಿಟ್ಟಳು. ಒಳ್ಳೇ ಕ್ರಿಮಿನಲ್ ಪ್ಲಾನ ಇವಳ್ದು. "ಮತ್ತೆ ಅವನಿಗೆ ಕನ್ಯಾ ನೋಡೊಕೆ ಹೋಗೊದಾದ್ರೆ ಹೇಳು, ಹೊಸ ಡ್ರೆಸ್ ಕೊಂಡ್ಕೊಂಡು ಹಾಕೊಂಡು ಬರ್ತೀನಿ" ಅಂದೆ, "ನಿಮ್ಮನ್ನ ಕರೆದುಕೊಂಡು ಹೋದ್ರೆ ತಾನೇ" ಅಂತ ನನ್ನ ಪ್ಲಾನಗೆ ನೀರು ಬಿಟ್ಟಳು. ಬಾಚಣಿಕೆಯಲ್ಲಿ ಬಾಚಿದ್ದು ಸಾಕಾಗದೇ ಅವಳ ಮುಂದೆ ನಿಂತು ಕೈ ಬೆರಳಲ್ಲಿ ಮತ್ತೆ ಬಾಚಿ ಸರಿ ಮಾಡಿಕೊಂಡೆ, ಸಿಟ್ಟಿನಿಂದ "ಕನ್ನಡಿ ಅಲ್ಲಿದೆ" ಅಂದ್ಲು, "ನಿನ್ನ ಕಣ್ಣೇ ನನ್ನ ಕನ್ನಡಿ" ಅಂದದ್ದಕ್ಕೆ "ಸಾಕು ಡೈಲಾಗೆಲ್ಲ, ರೀ ಏನು ವಯಸ್ಸಾಯ್ತು, ಇನ್ನೂ ಏನು ನಿಮ್ದು" ಅಂತ ಬಯ್ದಳು, ತಟ್ಟನೇ ಎನೊ ಹೇಳಬೇಕೆನಿಸಿದ್ರೂ ಹೇಳಲಿಲ್ಲ, ಒಂದು ಪ್ರಶ್ನೆ ತಲೆ ಕೊರೆಯತೊಡಗಿತು, ನಿಜವಾಗ್ಲೂ ವಯಸ್ಸಾಯ್ತಾ?
ಮುಂಜಾನೆ ಹೊರಟಿದ್ದ ಗಡಿಬಿಡಿಯಲ್ಲಿ ಮರೆತಿದ್ದ ಯೋಚನೆ ಮತ್ತೆ ತಿರುಗಿ ಬಂದು ಮನದಲ್ಲಿ ಕೂತು ಕೂಗಾಡುತ್ತಿತ್ತು. ಅದನ್ನು ಸುಮ್ಮನಾಗಿಸಲು ಮತ್ತೆ ನಾ ಮಾತಿಗಿಳಿಯಬೇಕಿತ್ತು. ಅವಳು ಅದೇ ಡ್ರೆಸ್ಸಿಂಗ್ ಟೇಬಲ್ಲಿನ ಮುಂದೆ ತಾನು ಕೂತು ಕಿವಿಯೋಲೆ ಬಿಚ್ಚಿಡುತ್ತಿದ್ದಳು, ಆ ಓಲೆಯ ಪಿರಿಕಿ(ಸ್ಕ್ರಿವ್) ಅಲ್ಲೇ ಜಾಮ್ ಆಗಿರಬೇಕು, ಬಿಚ್ಚಲು ಒದ್ದಾಡುತ್ತಿದ್ದಳು, "ರೀ ನೋಡ್ರೀ ಏನಾಗಿದೆ, ಬಿಚ್ಚುತ್ತಿಲ್ಲ" ಅಂದ್ಲು. ಅದ್ಯಾವ ಸಿಟ್ಟಿನಲ್ಲಿ ತಿರುಗಿಸಿದ್ದಳೊ, ಬರುತ್ತಲೇ ಇಲ್ಲ, "ಕಿವಿ ಹರಿದೇ ಹೊರತೆಗೆಯಬೇಕೇನೊ" ಅಂದೆ. ನಾನೀಗ ಹರಿದೇ ತೆಗೆದುಬಿಡ್ತೀನಿ ಅನ್ನೊ ಹಾಗೆ ನೋಡಿದಳು, "ಅದಕ್ಕೇ ಮುಂಜಾನೆ ಬೇಡ ಅಂತ ಹೇಳಿದ್ದು, ಚೆನ್ನಾಗಿ ಕಾಣ್ತೀಯಾ ಅದನ್ನೇ ಹಾಕು ಅಂತ ದುಂಬಾಲು ಬಿದ್ದು ಹಾಕಿಸಿದ್ದು ನೀವು, ನೀವೇ ಹೇಗೆ ತೆಗೆಯುತ್ತೀರೋ ನೋಡಿ" ಅಂತ ಅದನ್ನು ನನ್ನ ತಲೆ ಮೇಲೆ ಹೊರಿಸಿದಳು. ನಾನೂ ಸಾಕಷ್ಟು ಸಾಹಸ ಮಾಡಿದೆ ಆ ಓಲೆ ನಾನು ಅವಳ ಕಿವಿಯಲ್ಲೇ ಚೆನ್ನಾಗಿ ಕಾಣ್ತಿದೀನಿ ಬರಲೊಲ್ಲೆ ಅಂತ. ಅದನ್ನು ಕೈಬಿಟ್ಟು ಅವಳ ತಲೆಗೂದಲಲ್ಲಿ ಹೇನು ಹುಡುಕಿ ಒರೆಯುವವರ ಹಾಗೆ ಏನೋ ಹುಡುಕತೊಡಗಿದೆ, "ರೀ ಕಿವಿಯೋಲೆ ಕಿವಿಯಲ್ಲಿ ಇರತ್ತೆ ತಲೆಯಲ್ಲಿ ಅಲ್ಲ" ಅಂತ ಸಿಡುಕಿದಳು, "ಅಲ್ಲಾ ವಯಸ್ಸಾಯ್ತು ಅಂತಿದ್ದೆಯಲ್ಲ, ನಿನಗೂ ವಯಸ್ಸಾಯ್ತ ಅಂತ ನರೆಕೂದಲು ಏನಾದ್ರೂ ಸಿಗುತ್ತಾ ಅಂತ ಹುಡುಕ್ತಾ ಇದೀನಿ" ಅಂದೆ. ಎನೋ ಮಾಡು ಅಂದ್ರೆ ಅದನ್ನ ಬಿಟ್ಟು ಇನ್ನೇನೊ ಮಾಡುತ್ತೀನಿ ಅನ್ನೊ ಮೊಂಡನಂತೆ ಅನಿಸಿರಬೇಕು, ನನ್ನ ಕೈ ಬಿಡಿಸಿ ತಾನು ಮತ್ತೆ ಪ್ರಯತ್ನಿಸಿದಳು ಆಗಲಿಲ್ಲ ಕೈಚೆಲ್ಲಿ ನನ್ನತ್ತ ಬುಸುಗುಡುತ್ತ ನೋಡುತ್ತ ಕೂತಳು. "ಇಂದೊಂದು ದಿನ ಇರಲಿ ಬಿಡು ನಾಳೆ ಬರಬಹುದು" ಅಂತ ಭರವಸೆ ಕೊಟ್ಟೆ, "ನಾಳೆ ಬರದಿದ್ದರೆ" ಅಂದ್ಲು, "ವಯಸ್ಸಾಗುತ್ತ ಕಿವಿ ಜೋತು ಬೀಳುತ್ತಲ್ಲ ಆಗ ಕಿತ್ತು ತೆಗೆದರಾಯ್ತು" ಅಂದೆ. "ನಂಗೊತ್ತು ಮುಂಜಾನೇ ವಯಸ್ಸಾಯ್ತು ಅಂತ ಅಂದ್ನಲ್ಲ ಅದಕ್ಕೆ ಈಗ ಸೇಡು ತೀರಿಸ್ಕೊಳ್ತಾ ಇದೀರಲ್ವಾ" ಅಂತ ಬೇಜಾರಾದಳು. "ಹಾಗೇನಿಲ್ಲ ಆದ್ರೂ ವಯಸ್ಸಾಯ್ತು ಅಂತ ಯಾಕೆ ಅಂದೆ" ಅಂತ ಕೇಳಿದೆ, "ಮತ್ತಿನ್ನೇನು ಮದುವೆ ಆಯ್ತು, ಮಕ್ಕಳು ಆಗೋ ವಯಸ್ಸಾಯ್ತು, ಇನ್ಯಾರು ನೋಡ್ತಾರೆ ಅಂತ ಹಾಗೆ ಹೇಳಿದೆ" ಅಂದ್ಲು. "ನಿಂಗೆಷ್ಟು ವಯಸ್ಸು" ಅಂದೆ "ಅಯ್ಯೋ ಹುಡುಗಿ ವಯಸ್ಸು, ಹುಡುಗನ ಸಂಬಳ ಕೇಳಬಾರದ್ರಿ, ನಿಜ ಹೇಳಲ್ಲ" ಅಂತ ನಕ್ಕಳು, "ನೀನೇನು ಹುಡುಗೀನಾ" ಅಂದೆ, ಇದೇನು ಇಂಥಾ ಪ್ರಶ್ನೇ ಅಂತನ್ನೊ ಹಾಗೆ ನೋಡಿ, "ನಿಮ್ಮಷ್ಟು ವಯಸ್ಸಾಗಿಲ್ಲ ನಂಗೆ, ನಿಮಗಿಂತ ಇನ್ನೂ ಮೂರು ವರ್ಷ ಚಿಕ್ಕೊಳೇ" ಅಂದ್ಲು, "ಮತ್ತೆ ಆಗಲೇ ವಯಸ್ಸಾಯ್ತು ಅಂತೆಲ್ಲ ಮಾತಾಡ್ತಾ ಇದೀಯ" ಅಂದೆ. "ನನ್ಯಾರು ನೋಡ್ತಾರೆ ಮದುವೆ ಆಯ್ತು, ಇಷ್ಟು ವರ್ಷ ಆಯ್ತು, ಅಂತ ಸುಮ್ನೇ ಹಾಗಂದಿದ್ದು" ಅಂತ ಸರಿಪಡಿಸಲು ನೋಡಿದ್ಲು. ನಾ ಬಿಟ್ಟರೆ ತಾನೇ...
"ವಯಸ್ಸು ಯಾರಿಗೆ ಆಗಲ್ಲ ಹೇಳು, ಹುಟ್ಟಿದಾಗಿಂದ ವಯಸ್ಸಾಗ್ತನೇ ಇದೆ, ವರ್ಷದ ಪುಟ್ಟ ಮಗು ಇದ್ದೆ, ಅಂತ ಹಾಗೇ ಇರ್ತೀನಾ ಹಾಗೇ ಬೆಳಿತಾ.." ನಡುವೆ ಅವಳು "ನೀವು ಪುಟಾಣಿ ಪಾಪು ಇರ್ಒ ಫೊಟೊ ನೋಡಿದೀನ್ರೀ ಈಗ್ಲೂ ಹಾಗೆ ಇದ್ದಿದ್ರೆ, ಎತ್ಕೊಂಡು ನನ್ನ ಗಂಡ ಹೇಗಿದಾನೆ ನೋಡು ಕ್ಯೂಟ್ ಅಲ್ವಾ ಅಂತ ಎಲ್ರಿಗೂ ತೋರಿಸಬಹುದಿತ್ತು" ಅಂದ್ಲು ಎಲಾ ಇವಳಾ ಎನೇನು ಆಸೆ ಅಂತೀನಿ ಇವಳಿಗೆ, "ಪರವಾಗಿಲ್ಲ ಈಗ್ಲೂ ಎತ್ಕೊಬಹುದು ನಂಗೇನೊ ಬೇಜಾರಿಲ್ಲ" ಅಂದೆ, ಹುಬ್ಬು ಗಂಟಿಕ್ಕಿದಳು, ನಾ ಹುಬ್ಬು ಹಾರಿಸುತ್ತ ನಗುತ್ತಿದ್ದೆ. ಪುಟ್ಟ ಮಗುವಿನಂತೆ ಬಂದು ತೊಡೆಯೇರಿ ಕೂತಳು, "ಆಯ್ತಪ್ಪ ಈಗೇನು ನಿಮಗೆ ವಯಸ್ಸಾಗಿಲ್ಲ ಅಷ್ಟೆ ತಾನೇ" ಅಂತಂದಳು, "ವಿಷಯ ಬರೀ ಅದಲ್ಲ, ಯೋಚನೆ ಮಾಡು, ಮದುವೆ ಆಗ್ತಿದ್ದಂತೇ, ಏನೊ ಜೀವನದಲ್ಲಿ ಎಲ್ಲಾ ಮುಗಿದು ಹೋಯ್ತು, ಮಕ್ಕಳಾದರಂತೂ ಮುಗೀತು, ಇನ್ನೇನು ಯಮರಾಜ ಬಂದು ಕರೆದೊಯ್ಯಲೇ ಬೇಕೆಂದು ಕಾಯುತ್ತಿರುವವರ ಹಾಗೆ ಆಡತೊಡುಗುತ್ತಾರೆ ಕೆಲವರು(ಆ ಕೆಲವರ ಬಗ್ಗೇನೇ ನಾ ಹೇಳುತ್ತಿರುವುದು), ಒಂಥರಾ ಉದಾಸೀನತೆ ತಂದುಕೊಂಡು, ಜಿಗುಪ್ಸೆಗೆ ಇಳಿದುಬಿಡ್ತಾರೆ, ಯಾಕೆ ಅಂತ ನನ್ನ ಪ್ರಶ್ನೇ, ಅದೇ ಮೊದಲಿನ ಜೀವನದ ಉತ್ಸಾಹ ಯಾಕೆ ಉಳಿಸಿಕೊಳ್ಳಬಾರದು" ಅಂದೆ, "ಹೌದಲ್ವಾ ಮದುವೆ ಆದ ಮೇಲೆ ಇನ್ಯಾರು ನೋಡ್ತಾರೆ ಅಂತ ಹಾಗೆ ಆ ಉದಾಸೀನತೆ ಬರತ್ತೆರೀ" ಅಂದ್ಲು, "ಯಾರೋ ಯಾಕೆ ಅವರ ಪತಿ, ಪತ್ನಿಯೇ ನೋಡಲ್ವೇ ಅದಕ್ಕಾದರೂ..." ಅಂತಿದ್ದರೆ "ಮದುವೆ ಆಯ್ತಲ್ಲ ಇನ್ನೇನು ಹೊಸ ಆಕರ್ಷಣೆ ಉಳಿದಿಲ್ಲ ಅಂತ ಹಾಗೆ ಮಾಡ್ತಾರೆ" ಅಂದ್ಲು "ಅದು ನಾವು ಅನ್ಕೊಳ್ಳೊದು ಅಷ್ಟೇ, ಅದು ನಮ್ಮನ್ನು ನಾವೇ ಆ ಉದಾಸೀನತೆಗೆ ತಳ್ಳಿಕೊಳ್ಳೊದು" ಅಂದೆ... ನಿಧಾನವಾಗಿ ಆ ಇನ್ನೊಂದು ಓಲೆ ಮತ್ತೆ ಕಿವಿಗೇರಿಸುತ್ತಿದ್ದಳು.
ನಾವೇ ಹೀಗೆ, ಎಲ್ರೂ ಅಂತಲ್ಲ ಆದ್ರೆ ಬಹಳಷ್ಟು ಜನ, ಮದುವೆ ಆಯ್ತು ಇನ್ನೇನಪ್ಪಾ ಅಂತ, ಹೇಗೆ ಬೇಕೋ ಹಾಗಿರಲು ಶುರುವಿಡುತ್ತೇವೆ, ಕೇಳಿದ್ರೆ ಮದುವೆ ಆಯ್ತಲ್ಲ ಇನ್ಯಾರು ನೋಡೊರು? ಆದರೆ ಇಲ್ಲಿ ಈ ಮುಖದ ಮೇಲೆ ನಾಲ್ಕಿಂಚು ದಪ್ಪ ಮೇಕಪ್ಪು ಬಳಿದು, ತುಟಿಗೆ ರಂಗು ತೀಡಿ, ಹರೆಯದ ಹುಡುಗಿಯಂತೆ ಆಡುವವರೂ, ಇಲ್ಲ ಕೂದಲಿಗೆ ಬಣ್ಣ ಬಳಿದು, ಮೀಸೆ ತೆಗೆದು ಪೋಲಿ ಜೋಕು ಮಾಡುತ್ತ ತರುಣರಂತೆ ತೋರಿಸ್ಕೊಳ್ಳುವವರ ಬಗ್ಗೆ ನಾ ಹೇಳುತ್ತಿಲ್ಲ, ವಯಸ್ಸಿಗೆ ತಕ್ಕ ಯೋಗ್ಯವಾಗಿ ಬಟ್ಟೆ ಧರಿಸಿ, ಗೌರವಯುತರಾಗಿ ಕಾಣುವವರ ಬಗ್ಗೆ ಹೇಳುತ್ತಿರುವುದು. ನೀಟಾಗಿ ಇನ್ ಶರ್ಟ ಮಾಡಿ, ಹೊಂದಿಕೆಯಾಗುವ ತೊಡುಗೆ ಧರಿಸಿ, ಶಿಸ್ತಿನಿಂದ ಯಾಕೆ ಇರಬಾರದು, ಅದ ಬಿಟ್ಟು ಯಾವುದೊ ಶರ್ಟು, ಯಾವುದೊ ಪ್ಯಾಂಟೊ ಹಾಕಿ ಎತ್ತೆತ್ತಲೋ ತೊಳು ಮಡಚಿ, ಹೇಗೇಗೊ ಇದ್ದರೆ, ಕೆದರಿದ ಕೂದಲು ಬಿಟ್ಟು, ನೈಟಿಯಲ್ಲೇ ಮೇಲೆ ಒಂದು ದುಪಟ್ಟ ಹೊದ್ದು ಊರೆಲ್ಲ ತಿರುಗಿ ಬಂದರೆ ಯಾರೂ ಏನೂ ಕೇಳಲ್ಲ, ಯಾರಿಗೂ ಎನೂ ನಷ್ಟವಿಲ್ಲ, ಅದೇ ಉದಾಸೀನತೆ ನಮ್ಮನ್ನೇ ಆವರಿಸಿ, ಬೇಗ ಮುದುಕರಾಗಿಬಿಡುತ್ತೇವೆ, ಇಲ್ಲ ಹಾಗೆ ಆಡತೊಡುಗುತ್ತೇವೆ, ಅದೇ ಎಷ್ಟೊ ಇಳಿವಯಸ್ಸಿನಲ್ಲಿರುವವರನ್ನು ನೋಡಿ ಎಷ್ಟು ಸರಳವಾಗಿ ಸಭ್ಯರಾಗಿ ಕಾಣುತ್ತಾರೆ, ಜೀವನದಲ್ಲಿ ಲವಲವಿಕೆಯಿಂದಿರುತ್ತಾರೆ. ಹಾಗೇ ನಾವ್ಯಾಕೆ ಇರಬಾರದು, ಇದ್ದರೆ ನಮಗೆ ಒಳ್ಳೇದು.
ಮಾರನೇ ದಿನ, ಯಾವುದೋ ಮನೆ ಗೃಹ ಪ್ರವೇಶ ಸಮಾರಂಭವಿತ್ತು, ಹೊರಟು ತಯ್ಯಾರಾಗುತ್ತಿದ್ದಳು, "ಲೇ ಆಯ್ತೇನೆ, ಜಾಸ್ತಿ ಮೇಕಪ್ಪು ಮಾಡು ಅಂತ ನಾ ಹೇಳಿಲ್ಲ, ನೀಟಾಗಿರಲಿ ಅಂತ ಹೇಳಿದ್ದು" ಅಂತ ಚೀರುತ್ತಿದ್ದೆ, ಬಾಗಿಲು ತೆರೆದು ಹೊರಬಂದಳು, ಕ್ಷಣದಲ್ಲಿ ಸ್ತಂಭಿಭೂತನಾದೆ, ಜರಿ ದಡಿಯ ಹಸಿರು ಅಂಚಿನ ರೇಶಿಮೆ ಸೀರೆ ನೀಟಾಗಿ ತಿದ್ದಿ ತೀಡಿ ನೆರಿಗೆ ಹಾಕಿಯುಟ್ಟು, ಸೆರಗಿಗೆ ಪಿನ್ನು ಹಾಕಿ ಕಟ್ಟಿಟ್ಟು, ಹಿಂದಿನಿಂದೆಳೆದು ಕೈಲಿ ಹಿಡಿದಿದ್ದಳು ಪದರು ಪದರು ಹರಡುವಂತೆ, ಕೂದಲೆಳೆದು ಹಿಂದೆ ಕೂಡಿಸಿ ಕ್ಲಿಪ್ಪು ಹಾಕಿ ಬಂಧಿಸಿ, ಎರಡೇ ಎರಡು ಎಳೆ ಹೊರಗೆ ಹಾರಾಡಲು ಕಿವಿ ಮೇಲೆ ಸರಿಸಿಟ್ಟಿದ್ದಳು. ಮೂಗಿಗೆ ಮೂಗುತಿಯೊಂದಿಗೆ, ತುಟಿಗೆ ನಗು ಆಭರಣವಾಗಿಸಿದ್ದರೆ, ಕಿವಿಯೋಲೆ, ನಾನೂ ಇದ್ದೀನಿ ಅಂತ ಹೊಳೆಯುತ್ತಿತ್ತು. "ಏನು ಹಾಗೆ ನೋಡ್ತಾ ಇದೀರಾ, ಮೊದಲಸಾರಿ ನೋಡಿದ ಹಾಗೆ" ಅಂತ ನಾಚಿದಳು, ಕೆನ್ನೆಗೆ ಕೆಂಪಡರಿ ಇನ್ನೂ ಚೆಂದ ಕಾಣಿಸಿದಳು. ಕೈಗೆ ಸಿಕ್ಕ ಪೆನ್ನಿನಲ್ಲೇ ದೃಷ್ಟಿ ಬೊಟ್ಟು ಬರೆದೆ. ನಾನೂ ಒಳ ಹೋಗಿ ಗಡಿಬಿಡಿಯಲ್ಲಿ ಅವಳನ್ನು ನೋಡಿ ಅವ್ವಾಕ್ಕಾದ ಗುಂಗಿನಲ್ಲೇ ಕಪ್ಪು ಪ್ಯಾಂಟ್ಗೆ ಬಿಳಿ ಶರ್ಟ ಹಾಕಿ ಹೊರ ಬಂದೆ, "ರೀ ಕಲರ ಟೀವೀ ಪಕ್ಕ ಬ್ಲಾಕ್ ಆಂಡ ವೈಟ್ ಟೀವೀ ಇಟ್ಟ ಹಾಗೆ ಕಾಣಿಸ್ತೀವಿ ಇಬ್ರೂ" ಅಂತ ನಗೆಯಾಡಿದವಳು ಬೀರು ಕಿತ್ತಾಕಿ ಅದೇನೋ ಮ್ಯಾಚಿಂಗ ಅಂತ ಬಟ್ಟೆ ಎತ್ತಿ ಕೊಟ್ಟಳು, ನಾನು ಬಾಚಿದ ಕೂದಲು, ಸ್ವಲ್ಪ ಊದಿ ಹಾರಿಸಿದಳು, ಎನೊ ಚೆನ್ನಾಗೇ ಕಾಣಿಸ್ತು, ಹಾಗೇ ಕಿವಿಯಲ್ಲಿ "ಮುಂಜಾನೆ, ಸ್ನಾನ ಮಾಡೊವಾಗ ಸಾಬೂನು ಹಚ್ಚಿದ್ದಕ್ಕೆ ಕಿವಿಯೋಲೆ ಬಿಚ್ಚಿ ಬಂತು, ಆದ್ರೆ ನೀವು ಚೆನ್ನಾಗಿ ಕಾಣಿಸ್ತೀನಿ ಅಂದ್ರಲ್ಲ ಅದಕ್ಕೆ ಮತ್ತೆ ಹಾಕಿದೀನೀ" ಅಂತ ಉಸುರಿದಳು, ಮತ್ತಷ್ಟು ಪುಳಕಗೊಂಡೆ. ಹೊರಗೆ ಬಂದು ಹೊರಡಲನುವಾಗುತ್ತಿದ್ದರೆ ಪಕ್ಕದ ಮನೆಯ ಪದ್ದುನ ಅರಳಿದ ಕಣ್ಣುಗಳೇ ಕನ್ನಡಿಯಾಗಿದ್ದವು ನಮಗೆ.
ಎನ್ರೀ ನನ್ನಾಕೇನಾ ಹಾಗೆ ಕಣ್ಣು ಕಣ್ಣು ಬಿಟ್ಟು ನೋಡ್ತಿದೀರಾ, ದೃಷ್ಟಿಯಾದೀತು! ಮತ್ತೆ ಮುಂದಿನ ವಾರ ಸಿಕ್ತೀವೀ, ಹೊರಡೋಣ್ವಾ..
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/vayassaaytaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, August 9, 2009
ಅವಳ ಮಾತಿನಲ್ಲಿ...
"ರೀ ಎದ್ದೇಳ್ರೀ, ಟೀ ಕಾಫಿ ಏನು ಬೇಕು" ಅಂತ ಚೀರಿ ಕರೆದೆ, ಉಹೂಂ ಆಕಡೆಯಿಂದ ಮಿಸುಕಾಡಿದ ಸದ್ದು ಕೂಡ ಬರಲಿಲ್ಲ, ಆಫೀಸಿದ್ದರೆ ನೀಟಾಗಿ ಎದ್ದು ತಾವೇ ಹೊರಟು ಬಿಡುವರು, ಇಲ್ಲ ಅಂದ್ರೆ ಏಳಿಸಲು ಹರಸಾಹಸ ಮಾಡಬೇಕು, ಅತ್ತೆನ ಎಷ್ಟು ಸಾರಿ ಕೇಳಿದ್ದೀನಿ, "ನೀವು ಏಳಿಸುವಾಗಲೂ ಹೀಗೆ ಮಾಡ್ತಿದ್ರಾ" ಅಂತ, ಒಂದೊ ಪಾಪ ಮಗು ಮಲಗಿದೆ ಅಂತ ಏಳಿಸ್ತಿರಲಿಲ್ಲ ಅಂತೆ ಇಲ್ಲಾಂದ್ರೆ ತಾನೇ ಎದ್ದು ಬಿಡ್ತಿದ್ದ, ನೀನಂದ್ರೆ ಈ ರಗಳೆ ಅವನದು, ಅಂತ ನಗ್ತಿದ್ರು, ಅದೂ ನಿಜಾನೇ ನನಗೆ ಮಾತ್ರ ಇವರ ಕೀಟಲೆ ಕಾಟ, ನನಗೂ ಖುಷೀನೇ ದಿನಾ ಎನಾದ್ರೂ ಹೊಸ ಹೊಸ ಪ್ರಯೋಗಗಳ ಮಾಡ್ತೀನಿ. ಹಾಸಿಗೆ ಮೇಲೆ ಕೂತು ತಲೆ ಸವರಿದೆ, ಅದೇ ಕೈ ಹಿಡಿದುಕೊಂಡು ನನ್ನ ಕಾಲ ಮೇಲೇರಿ ಮಲಗಿದರು, ಇದೇನು ತೂಕಡಿಸುವವನಿಗೆ, ಹಾಸಿ ತಲೆದಿಂಬು ಕೊಟ್ಟಹಾಗಾಯ್ತು, ಅಂತನಿಸಿದರೂ ಗಾಢ ನಿದ್ರೆಯಲ್ಲಿರುವುದ ನೋಡಿ ಬಯ್ಯಲು ಮನಸು ಬರಲಿಲ್ಲ, ಹಾಗೆ ಸ್ವಲ್ಪ ಹೊತ್ತು ಕೂತಿದ್ದೆ, "ಏನು ಏಳಲ್ವಾ" ಅಂತ ಕೇಳಿದ್ದಕ್ಕೆ, "ಪ್ಲೀಜ" ಅಂತಂದು ಮಗ್ಗಲು ಬದಲಿಸಿದರು, ಮೊನ್ನೆ ತಾನೆ ಬೆಂಚು ಏನೂ ಕೆಲಸ ಇಲ್ಲ ಅಂತಿದ್ದವ್ರು, ಕಳೆದ ವಾರದಿಂದ ಅದೇನೊ ಟ್ರೇನಿಂಗ, ಮೀಟಿಂಗ ಅಂತ ಒಮ್ಮೆಲೇ ಬೀಜೀ ಆಗಿದ್ರು, ಅದೇನು ಸಾಫ್ಟವೇರ ಕೆಲಸಾನೊ, ಇದ್ರೆ ರಾಶಿ ರಾಶಿ ಕೆಲ್ಸ ಒಮ್ಮೊಮ್ಮೆ ಇಲ್ಲಾಂದ್ರೆ ಎನೂ ಇಲ್ಲ. ಮಲಗಲಿ ಬಿಡು ಅಂತ ಎದ್ದು ಬಂದೆ, ಆಗಲೇ ತಲೆಗೆ ಬಂತು ಈ ವಾರ ಅವರ ಬದಲಿಗೆ ನಾನು ಯಾಕೆ ಬರೆಯಬಾರದು ಅಂತ...
ನನ್ನ ಬಗ್ಗೆ ಅಂತೂ ಅವರು ಬಹಳ ಹೇಳಿರ್ತಾರೆ, ಯಾವಾಗಲೂ ಕೀಟಲೆ ತರಲೆ ಮಾಡೊ ತುಂಟಿ ಅಂತ, ನಾನೇನು ಅಷ್ಟು ತರಲೆ ಮೊದಲಿಂದಲೇ ಇರಲಿಲ್ಲ, ಎಲ್ಲ ಅವರಿಂದಾಗೆ ಆಗಿದ್ದು, ಅದ್ರೂ ಹಾಗನಿಸಿಕೊಳ್ಳಲು ಬೇಜಾರೇನಿಲ್ಲ. ಮದುವೆ ಆಗೊ ಮೊದಲು ಇವರು ಬರೆಯೋ ಲೇಖನ ಓದಿ, ನನ್ನ ಗೆಳತಿಯರೆಲ್ಲ, "ಅವರೇನೇನೋ ನಿರೀಕ್ಷೆ ಇಟ್ಕೊಂಡಿದಾರೆ ನೀನ್ ಹೇಗೆ ಸಂಭಾಳಿಸ್ತೀಯಾ", ಇಲ್ಲ "ಮೊದಲೇ ಬರೆಯೋ ಹುಚ್ಚು ಆದ ಮೇಲೂ ಹೀಗೆ ಬರೀತಾ ಕೂತ್ರೆ ಏನೇ ಮಾಡ್ತೀಯಾ" ಅಂತೆಲ್ಲಾ ಏನೆನೋ ಹೇಳಿ ಹೆದರಿಸಿಬಿಟ್ಟಿದ್ರು. ನನಗೂ ಹಾಗೇ ಅನ್ನಿಸಿತ್ತು ಮೊದಲೇ ನನ್ನ ಮಾತು ಅಪರೂಪ, ಇವರು ನೋಡಿದ್ರೆ ಅರಳು ಹುರಿದಂತೆ ಮಾತಾಡೋರು ಹೇಗಪ್ಪ ಅನ್ನೋ ಹಾಗಿತ್ತು. ಈಗ ಅಪ್ಪ ಅಂತಿರ್ತಾರೆ ಮದುವೆಗೆ ಮೊದಲು ಮಾತಾಡದೇ ಇದ್ದದ್ದೆಲ್ಲ ಈಗ ಮಾತಾಡಿ ತೀರಿಸಿಕೊಳ್ತಾ ಇದಾಳೆ ಅಂತ. ಆಗ ಅವರು ಹತ್ತು ಮಾತಾಡಿದರೆ ನಾನೊಂದು "ಹೂಂ", "ಹಾಂ" ಅಷ್ಟೇ, ಈಗ ಅವರೊಂದು ಶಬ್ದ, ತುಟಿ ಪಿಟಿಕ್ಕೆಂದರೆ, ನಾಲ್ಕು ಮಾತಾಡಿ ಬಾಯಿ ಮುಚ್ಚಿಸಿಬಿಡ್ತೀನಿ. ಮದುವೆಯಾದ ಹೊಸದರಲ್ಲಿ, ಎನಂದರೇನು ಕೀಟಲೆ, ಮೊದ ಮೊದಲು ಬಹಳ ಸಿಟ್ಟು ಬರೊದು, ಅತ್ತೆ ಕೂಡ "ಯಾಕೊ ಗೊಳುಹೊಯ್ಕೊತೀಯ ಅವಳ್ನಾ" ಅಂತ ನನ್ನ ಬೆಂಬಲಕ್ಕೆ ಬರೋರು, ಮೊದಲೇ ವಯಸ್ಸಿನ ಅಂತರ ದೊಡ್ಡೋರು, ಅಲ್ದೇ ಗಂಡ ಅಂತ ನನಗೆ ಹೆದರಿಕೆ, ಅಮ್ಮ ಅಪ್ಪನಿಗೆ ಹೆದರುತ್ತಿದ್ದುದ ನೋಡಿ ಬೆಳೆದಿದ್ದೆ. ಹೇಳಿದ್ದಕ್ಕೆ ತಿರುಗಿ ವಾದಿಸುವುದು ದೂರದ ಮಾತು, ಕೇಳಿದ್ದಕ್ಕೂ ಏನೂ ಹೇಳುತ್ತಿರಲಿಲ್ಲ, ಅವರು ಸಂಗಾತಿಯಲ್ಲಿ ಸ್ನೇಹಿತೆಯನ್ನು ಹುಡುಕುತ್ತಿದ್ದುದ್ದು ನನಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು, ತಡವಾದರೂ ತಿದ್ದಿಕೊಂಡೆನಲ್ಲ ಅನ್ನೋದೇ ಸಮಾಧಾನ.
ಆ ದಿನದ ಬಗ್ಗೆ ಹೇಳಲೇಬೇಕು, ರಾತ್ರಿ ಮನೆಗೆ ಬಂದವರೇ ಒಂದು ಸೀರೀಯಸ್ ವಿಷಯ ಹೇಳಬೇಕು ಅಂತಂದರು, ಊಟ ಆಗಿ ಕೂರುತ್ತಿದ್ದಂತೆ, "ಆ ಸಿಗ್ನಲ್ಲಿನಲ್ಲಿ ದಿನಾಲೂ ಸಿಗುವ ಹುಡುಗಿ ಮದುವೆ ಆಗಬೇಕು ಅಂತಿದೀನೀ" ಅಂದ್ರು. ಅಕಾಶಾನೇ ಕಡಿದುಕೊಂಡು ತಲೇ ಮೇಲೆ ಬಿದ್ದ ಹಾಗಾಯ್ತು, ಎನು ಅಂತ ಕೇಳಬೇಕು ಗೊತ್ತಾಗಲಿಲ್ಲ, ಸುಮ್ನೇ ಇದ್ದೆ. "ನಿನ್ನ ಅಭಿಪ್ರಾಯ ಏನು" ಅಂತ ಮತ್ತೆ ಕೇಳಿದ್ರು, ಎನು ಅವಳನ್ನ ಮದುವೆಯಾಗಿ ನಾಲ್ಕು ಮಕ್ಕಳಾಗಿ ಸುಖವಾಗಿರಿ ಅಂತಾನಾ ನನ್ನ ಅಭಿಪ್ರಾಯ ಇರತ್ತೆ, ಸಿಟ್ಟು ಬಂತು, "ಹೆಂಡ್ತೀ ಅಂತ ನಾನಿಲ್ವಾ" ಅಂದೆ, "ಇದೀಯಾ ಅವಳೂ ಹೆಂಡ್ತಿ ಅಂತ ಆಗಿರ್ತಾಳೆ" ಅಂದ್ರು, "ನಮ್ಮಪ್ಪನಿಗೆ ಫೋನು ಮಾಡ್ತೀನಿ ನಾನು" ಅಂತ ಮೇಲೆದ್ದೆ, "ನಿಮ್ಮಪ್ಪ ಅಲ್ಲ ನಿಮ್ಮಜ್ಜನಿಗೇ ಹೇಳು ನಾನು ಕೇಳಲ್ಲ, ಅವಳನ್ನ ಯಾಕೆ ಮದುವೆ ಆಗಬಾರದು ಹೇಳು ಮೊದಲು" ಅಂತ ಅಲ್ಲೇ ಹಿಡಿದು ಕೂರಿಸಿದ್ರು, ಏನೇ ಆದ್ರೂ ಅಪ್ಪನಿಗೆ ಹೇಳೋ ಬುಧ್ಧಿ ನನಗೆ ಆವಾಗ, ಈಗ ಇವರೊ ಬಿಡುತ್ತಿಲ್ಲ, ಏನಾದ್ರೂ ಹೇಳಲೇಬೇಕಿತ್ತು, "ನನ್ನ ಮದುವೆ ಆಗೀದೀರಾ" ಅಂದೆ, "ಅವಳನ್ನೂ ಆಗ್ತೀನಿ" ಅಂತಂದ್ರು, ಒಳ್ಳೆ ಹಠವಾದಿ ಸಹವಾಸ ಆಯ್ತಲ್ಲ ಅಂತ ಬಯ್ಕೊಂಡೆ. ಈಗ ಎನಾದ್ರೂ ಹಾಗೆ ಕೇಳಿದ್ರೆ "ರೀ ಕಲ್ಯಾಣ ಮಂಟಪ ಯಾವುದು ಬುಕ್ ಮಾಡಲಿ" ಅಂತ ಕೇಳಿರ್ತಿದ್ದೆ, ಇಲ್ಲ ದೊಡ್ಡ ವಾದ ಮಂಡಿಸಿರುತ್ತಿದ್ದೆ, ಆಗ ಎಲ್ಲ ಹೊಸದು, ಪ್ರತಿವಾದ ಮಾಡಲು ಬರುತ್ತಿರಲಿಲ್ಲ, ಆದರೂ "ಕೇಸು ಹಾಕ್ತೀನಿ" ಅಂತ ಹೆದರಿಸಿದೆ, "ಕೋರ್ಟ ಕಚೇರಿ ಅಲೀತಾ ಇರು, ಇಬ್ರೂ ಸತ್ತು ಹೋದ ತೀರ್ಪು ಹೊರಗೆ ಬರುತ್ತೆ" ಅಂದ್ರು. ಸಿಟ್ಟು ಸೆಡವು ಎಲ್ಲ ಸೇರಿತು, ವಾದಕ್ಕಿಳಿದಿದ್ದೆ. "ಅಂದವಾಗಿದಾಳ" ಅಂದೆ, "ಒಹ್ ನಿನಗಿಂತ ಎರಡು ಪಟ್ಟು" ಅಂತ ಹುಬ್ಬೇರಿಸಿದ್ರು, ಅದ್ಕೆ ಆ ಲಲನಾಮಣಿ ಬಲೆಗೆ ಬಿದ್ದಿರೋದು ಅಂತ, "ಹಾಗಿದ್ರೆ ನನ್ನ ಮದುವೆ ಆಗೊ ಮೊದಲೇ ಯೊಚಿಸಬೇಕಿತ್ತು" ಅಂದ್ರೆ "ಮದುವೆ ಆದ ಮೇಲೆ ತಾನೆ ಅವಳು ಕಾಣಿಸಿದ್ದು" ಅಂತ ಮಾರುತ್ತರ. "ಅವಳನ್ನ ಮದುವೆ ಆದಮೇಲೆ ಇನ್ಯಾರೊ ಇಷ್ಟ ಆದ್ರೆ" ಹೀಗಳೆಯಲು ಪ್ರಯತ್ನಿಸಿದೆ. "ಆ ಇನ್ಯಾರನ್ನೊ ಮದುವೆ ಆಗ್ತೀನಿ" ಅಂದ್ರು ನಿರಾಯಾಸವಾಗಿ, ಕೋಪದಲ್ಲೇ "ಎನು ಮದುವೆ ಆಗೊದ್ರಲ್ಲಿ ಗಿನ್ನಿಸ ರೆಕಾರ್ಡ ಮಾಡಬೇಕು ಅಂತಿದೆಯಾ" ಅಂದೆ, ನಕ್ಕರು. "ಮಕ್ಕಳು ಹುಟ್ಟಿಸೋದ್ರಲ್ಲೂ" ಅಂತ, ನನಗೂ ನಗು ಬಂತು ಆದ್ರೆ ವಿಷಯ ಗಂಭೀರವಾಗಿತ್ತಲ್ಲ, ನಗು ಎಲ್ಲಿ ಬರಬೇಕು. ಸರಿಯಾಗಿ ಮುಕ್ಕಲು ಘಂಟೆ ಕಿತ್ತಾಡಿದ್ವಿ, ಕೊನೆಗೆ "ಆ ಹುಡುಗೀನೇ ಮದುವೆ ಆಗೊದು ನಿಮ್ಮ ನಿರ್ಧಾರಾನ" ಅಂದ್ರೆ, "ಯಾರನ್ನ" ಅಂದ್ರು. "ಯಾರನ್ನ ಅಂದ್ರೆ, ಎನು ಇಬ್ರು ಮೂರು ಜನ ಇದಾರ, ಅದೇ ಸಿಗ್ನಲ ಹುಡುಗಿ" ಅಂದೆ "ಯಾವ ಸಿಗ್ನಲ್ಲು" ಅಂದ್ರು, ಕೋಪ ನೆತ್ತಿಗೇರಿತು "ಅದೇ ಇಷ್ಟೊತ್ತು ಮದುವೆ ಆಗ್ತೀನಿ ಅಂತಿದ್ರಲ್ಲ", ನನ್ನ ಕೆಂಪೇರಿದ ಮುಖ ನೋಡಿ ಹೊಟ್ಟೆ ಹಿಡಿದುಕೊಂಡು ನಗತೊಡಗಿದ್ರು, ಆಗ್ಲೇ ಗೊತ್ತಾಗಿದ್ದು ಇಷ್ಟೊತ್ತು ಮಾಡಿದ್ದೆಲ್ಲ ನಾಟಕ, ಚೇಷ್ಟೆ ಅಂತ. ತಲೆದಿಂಬು ಕೈಲಿತ್ತು ಅದ್ರಿಂದ ಒಂದು ಕೊಟ್ಟೆ, ಅದೇ ಮೊದಲು ಅನ್ಸತ್ತೆ, ಆಮೇಲೆ ಈಗ ಎಷ್ಟು ಏಟು ತಿಂದೀದಾರೊ ಲೆಕ್ಕ ಇಲ್ಲ. ತಲೆದಿಂಬು ಕಸಿದು ಅಪ್ಪಿಕೊಂಡಿದ್ರೂ ಬೆನ್ನ ಮೇಲೆ ಏಟು ಬೀಳುತ್ತಲೇ ಇತ್ತು, ಕಣ್ಣಲ್ಲಿ ನೀರು ನಗು ಎಲ್ಲ... "ಇಷ್ಟು ಮಾತಾಡ್ತೀಯಾ, ಯಾಕೆ ಯಾವಾಗಲೂ ಸುಮ್ಮನಿರ್ತೀಯಾ, ಹೀಗೆ ತರೆಲೇ ಮಾಡೊ ಗೆಳತಿ ನಿನ್ನಲಿ ಹುಡುಕಿದ್ದು, ಇಂದು ಸಿಕ್ಕಳು" ಅಂತಿದ್ದರು, ಅಗಲೂ ಅಷ್ಟು ಮಾತಾಡಿರಲಿಲ್ಲ, ನಿಧಾನ ಹೊಂದಿಕೊಂಡೆ. ಅಪ್ಪ ಅಂತೂ "ಏನು ಜಾದೂ ಮಾಡಿದೀರಾ ಅಳಿಯಂದ್ರೆ, ಚಟಪಟ ಅಂತ ಮಾತಾಡೊ ಹಾಗೆ ನನ್ನ ಮಗಳಿಗೆ" ಅಂತ ಕೇಳುವಷ್ಟು ಬದಲಾದೆ, "ಅವರು ಹಾಗೆ ಮಾಡ್ತಾರೆ, ಹೀಗೆ ಕಾಡ್ತಾರೆ, ಅದು ಇಷ್ಟ, ಇದು ಅಂದ್ರೆ ಕೋಪ" ಅಂತೆಲ್ಲ ಏನೇನೊ ಹೇಳಿ ತಲೆ ತಿನ್ನುತ್ತಿದ್ದೆ. ಕೊನೇಗಂತೂ ಅಮ್ಮ "ಈ ನಿಮ್ಮ ತುಂಟಿನಾ ಕರೆದುಕೊಂಡು ಹೋಗಿ, ಇಲ್ಲಿ ತಲೆ ತಿಂತೀದಾಳೆ" ಅಂತ ಇವರಿಗೆ ಫೋನು ಮಾಡಿದ್ಲು.
ಈಗ ಇಬ್ರೂ ಮಾತಾಡ್ತೀವೀ, ಆಫೀಸಿನಲ್ಲಿ ಬಾಸ ಬಯ್ದದ್ದರಿಂದ ಹಿಡಿದು, ದಾರೀಲಿ ಕಂಡ ಹುಡುಗಿ ಮುಗುಳ್ನಗೆ ಕೊಟ್ಟದ್ದರವರೆಗೆ ಎಲ್ಲಾ ವರದಿ ಕೊಡ್ತಾರೆ, ಎಲ್ಲ ಮುಚ್ಚು ಮರೆಯಿಲ್ದೇ ಮಾತಾಡ್ತೀವಿ, ಮಾತು ಬೆಳ್ಳಿ ಮೌನ ಬಂಗಾರ ಅಂತಾರೆ ಆದರೆ ದಂಪತಿಗಳಿಗೆ ಅದು ತದ್ವಿರುಧ್ಧ ಅನಿಸುತ್ತದೆ, ಹಿತ ಮಿತವಾದ ಮಾತು ಅದೂ ಗೆಳೆಯ ಗೆಳತಿಯರಂತೆ ಇದ್ದರೆ ಅದೇ ಬಂಗಾರ. ಅಯ್ಯೊ ನಿಮ್ಮೂಟ್ಟಿಗೆ ಮಾತಾಡ್ತಾ ಕೂತು ಸಮಯ ಆಗಿದ್ದೇ ಗೊತ್ತಾಗಲಿಲ್ಲ, ಇವರಿನ್ನೂ ಮಲಗಿದ್ರೆ ಹೇಗೆ, ಮತ್ತೆ ಸಿಕ್ತೀನಿ, ಇಲ್ಲ ಇವರೇ ನನ್ನ ಬಗ್ಗೆ ಬರೀತಾ ಇರ್ತಾರಲ್ಲ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/avala-maatinalli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, August 2, 2009
ಸ್ನೇಹ ಸಂದೇಶ...
ರಾತ್ರಿ ಎಷ್ಟೊತ್ತೊ ಏನೊ, ಕುಟು ಕುಟು ಅಂತ ಸದ್ದು ಕೇಳ್ತಾ ಇತ್ತು, ಮುಂಜಾನೆಯಿಂದ ಸಂಜೆವರೆಗೆ ಕೀಬೋರ್ಡ ಕುಟ್ಟಿ ಕುಟ್ಟಿ ಅದೇ ಸದ್ದು ಕಿವಿಯಲ್ಲಿ ಗುಂಯ್ಗುಡುತ್ತಿದೆಯೇನೊ ಅಂತ ಕಿವಿಯಲ್ಲಿ ಕಿರುಬೆರಳು ತೂರಿಸಿ ಕಟ್ಟಾಡಿಸಿಕೊಂಡೆ, ಕಿವಿಯಿನ್ನೂ ಚುರುಕಾಗಿ ಸದ್ದು ಜಾಸ್ತಿಯಾಯ್ತು. ಕಣ್ಣು ತೀಡುತ್ತ ಎದ್ದು ಸಮಯನಾದ್ರೂ ಎಷ್ಟು ನೋಡೊಣ ಅಂದ್ರೆ, ವಾಣಿನೂ (ಮೊಬೈಲೂ) ಕೈಗೆ ಸಿಗಲಿಲ್ಲ, ಅಲ್ಲೆ ಪಕ್ಕದಲ್ಲೇ ಬಿದ್ಕೊಂಡು ಕಣ್ಣುಹೊಡೀತಾ ಇರ್ತಿದ್ಲು (ಪಿಳಿ ಪಿಳಿ ಅನ್ನುವ ಮೊಬೈಲಿನ ಎಲ್.ಈ.ಡಿ ಲೈಟು ಇರುತ್ತಲ್ಲ). ಎಲ್ಲಿ ಕಾಣೆಯಾದ್ಲು ಅಂತ ಹುಡುಕಿದೆ, ಸಿಗಲಿಲ್ಲ, ಈ ಪಕ್ಕ ನನ್ನಾಕೆ ಮುಖ ಕಾಣದಂತೆ ಸೆರಗು ಹೊದ್ದಿರುವ ನವವಧುವಿನಂತೆ, ಮುಸುಕು ಹಾಕಿಕೊಂಡು ಮಲಗಿದ್ಲು, ಅವಳನಾದ್ರೂ ಎಬ್ಬಿಸಿ ಕೇಳೊಣ ಅಂತ ಅಲುಗಿಸಿದರೆ, "ಹೂಂ..." ಅಂದ್ಲು, ಅರೆ! ಇನ್ನೂ ಎಚ್ಚರವಾಗೇ ಇರೊ ಹಾಗೆ ಇದೆ ಅಂತ ಮುಸುಕೆಳೆದರೆ, "ರಾತ್ರಿ ಹನ್ನೆರಡಕ್ಕೆ ಏನ್ರೀ ನಿಮ್ದು" ಅಂತೆದ್ದಳು, ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ತು, ನನ್ನಾಕೆ ಜತೆ, ವಾಣಿ ಕೂಡ ಅಲ್ಲೇ ಇದ್ಲು, ಸದ್ದು ಕೂಡ ಅಲ್ಲಿಂದಲೇ ಬರುತ್ತಿತ್ತು, ಸಮಯ ಹನ್ನೆರಡಾಗಿತ್ತು.
"ಅದನ್ನೇ ಈಗ ನಾನು ಕೇಳಬೇಕು, ರಾತ್ರಿ ಹನ್ನೆರಡಕ್ಕೆ ಏನೇ ನಿಂದು, ಮೊಬೈಲನಲ್ಲಿ ಏನು ನೋಡ್ತಾ ಇದೀಯಾ, ಯಾರಾದ್ರೂ ಹುಡುಗಿಯರ ಎಸಎಂಎಸ್ ಸಿಗುತ್ತಾ ಅಂತ ಹುಡುಕ್ತಾ ಇದೀಯ, ಯಾರೂ ಇಲ್ಲ ಅನ್ನೊದಷ್ಟೇ ಅಲ್ಲ, ಕಳಿಸಿದ್ರೂ ಡಿಲೀಟಂತೂ ಮಾಡಿರ್ತೀನಿ, ನಿನಗೇನೂ ಸಿಗಲ್ಲ ಅಲ್ಲಿ" ಅಂತಂದೆ. "ಅದನ್ನ ಕಟ್ಕೊಂಡು ನನಗೇನು ಆಗ್ಬೇಕು, ಯಾವೊದೋ ಕಸ್ಟಮರ ಕೇರ್ ಹುಡುಗಿ ಕಾಲ್ ಬಂದಿದ್ರೂ ಕುಣಿದಾಡಿಬಿಡ್ತೀರ ಇನ್ನು ಹುಡುಗಿಯಿಂದ ಸ್ಪೇಷಲ್ ಎಸಎಂಎಸ್ ಎಲ್ಲಾ ಬಂದ್ರೆ ನಂಗೆ ಗೊತ್ತಾಗದೇ ಇರ್ತಾದಾ, ಮುಖದಲ್ಲೇ ಗೊತ್ತಾಗಿಬಿಡ್ತದೆ ನಂಗೆ.... ಮತ್ತೇನಿಲ್ಲ ನಾನು ಸ್ವಲ್ಪ ಎಸಎಂಎಸ್ ಕಳಿಸ್ತಾ ಇದ್ದೆ, ಸುಮ್ನೆ ಮಲ್ಕೊಳ್ಳಿ, ನಿಮಗೆ ಎಚ್ಚರಾಗಬಾರದು ಅಂತಾನೇ ಮುಸುಕು ಹಾಕಿಕೊಂಡಿದ್ದೆ" ಅಂದ್ಲು, ಅಲ್ಲಾ ನನ್ನ ಏನ್ ಚೆನ್ನಾಗಿ ಅರ್ಥ ಮಾಡಿಕೊಂಡಿದಾಳೆ ಇವ್ಳು ಅಂತೀನಿ, ಇನ್ನು ಮೇಲೆ ಯಾವ ಫೋನು ಬಂದ್ರೂ ಏನೂ ಮುಖದಲ್ಲಿ ತೋರಿಸಿಕೊಳ್ಳಬಾರದು ಅನ್ಕೊಂಡು, "ಅದ್ಯಾರಿಗೆ ಅದೂ ಇಷ್ಟೊತ್ತನಲ್ಲಿ" ಅಂತ ರಾಗ ಎಳೆದೆ. ದುರುಗುಟ್ಟಿ ನೋಡಿದ್ಲು, ಏನೋ ಕೇಳಬಾರದ್ದು ಕೇಳಿದಂತೆ. ಹೇಳದಿದ್ರೆ ಬಿಡು ಅಂತ, ಅವಳೆಡೆಗೆ ಬೆನ್ನು ಮಾಡಿ ಮಲಗಿದೆ. ನಿಧಾನವಾಗಿ, ಪಕ್ಕಕ್ಕೆ ಒರಗಿದ್ದ ಕೈತೋಳಿನ ಮೇಲೆ ಕತ್ತು ಇಟ್ಟು ಕೇಳಿದ್ಲು "ಎನ್ ಸಿಟ್ಟು ಬಂತಾ" ಅಂತ "ಇಲ್ಲಾ ಆನಂದ ಉಕ್ಕಿ ಬರ್ತಿದೆ" ಅಂದೆ, "ಅಯ್ಯೊ ಆನಂದನನ್ನೇ ಮರ್ತಿದ್ದೆ" ಅಂತನ್ನುತ್ತ ಇನ್ನೊಂದೇನೊ ಕುಟ್ಟಿ, ಕಳಿಸಿ ಮತ್ತೆ ಮರಳಿ, "ರೀ, ಯಾಕೆ ಬೇಜಾರು, ಫ್ರೆಂಡಶಿಪ್ ಡೇ ಅಲ್ವಾ ಮೆಸೇಜು ಕಳಿಸ್ತಾ ಇದ್ದೆ" ಅಂದ್ಲು. "ರಾತ್ರಿ ಹನ್ನೆರಡಕ್ಕೆ" ಅಂದೆ "ಮತ್ತೆ ನಾನೇ ಫಸ್ಟ್ ಎಲ್ರಿಗೂ ವಿಷ್ ಮಾಡಿದ್ದು ಗೊತ್ತಾ" ಅಂತ ಹೆಮ್ಮೆಯಿಂದ ನುಡಿದಳು. "ನಿಮ್ಮಿಂದಾಗೇ ಈ ಹೊಸಾ ವರ್ಷದ ರಾತ್ರಿ ಎಲ್ಲ ಫೋನು ನೆಟವರ್ಕ ಜಾಮ್ ಆಗೋದು" ಅಂದೆ. "ನೆಟವರ್ಕ ಜಾಮ್ ಆಗತ್ತೆ ಅಂತ ಮೆಸೆಜೇ ಕಳಿಸಬಾರದಾ" ಅಂದ್ಲು. "ಎಷ್ಟು ಕಳಿಸಿದೆ" ಅಂದೆ "ಜಾಸ್ತಿ ಏನಿಲ್ಲ ಒಂದಿಪ್ಪತ್ತು ಇರಬೇಕು" ಅಂತ ಮೊಬೈಲು ಆಕಡೆ ಇಟ್ಟಳು, "ನಿನ್ನ ಮೊಬೈಲ್ನಲ್ಲೇ ಕಳಿಸೊದು ತಾನೆ" ಅಂದೆ. "ರೀ ನಿಮ್ಮ ಮೊಬೈಲ್ನಲ್ಲಿ ಮೆಸೇಜು ಫ್ರೀ ಅದಕ್ಕೆ ಕಳಿಸಿದೆ" ಅಂದ್ಲು. "ಮೆಸೇಜು ಫ್ರೀ ಇಲ್ದೇ ಇದ್ರೆ?" ಅಂತ ಕೆದಕಿದೆ, "ನಾನೇನು ನಿಮ್ಮ ದುಡ್ಡು ಹಾಳು ಮಾಡಲ್ಲ ಬಿಡಿ, ಹಾಗಿದ್ರೆ ನಾಲ್ಕು ಕ್ಲೋಜ್ ಫ್ರೆಂಡ್ಸಗೆ ಮಾತ್ರ ಕಳಿಸ್ತಾ ಇದ್ದೆ" ಅಂತ ರೇಜಿಗೆದ್ದಳು. "ಪ್ರಶ್ನೇ ದುಡ್ಡಿನದಲ್ಲ, ಈಗ ನೀನು ಕಳಿಸಿದ ಮೆಸ್ಸೆಜಿನಲ್ಲಿ ನಾಲ್ಕು ಜನ ಮಾತ್ರ ಕ್ಲೋಜ್ ಫ್ರೆಂಡ್ಸ್, ಉಳಿದವರು ಹಾಗೆ ಸುಮ್ನೇ" ಅಂದೆ. "ಹಾಗೇನಿಲ್ಲ ಅವರೂ ಫ್ರೆಂಡ್ಸ, ಆದ್ರೆ ಅಷ್ಟು ಕ್ಲೋಜ ಅಲ್ಲ" ಅಂತಂದಳು "ಹೋಗ್ಲಿ ಆ ನಾಲ್ಕು ಜನರಲ್ಲಿ ಎಷ್ಟು ಜನರೊಂದಿಗೆ ಆಗಾಗ ಮಾತಾಡ್ತಾ ಇರ್ತೀಯಾ" ಅಂತ ಮತ್ತೆ ತನಿಖೆಗಿಳಿದೆ "ರೀ, ಎನ್ ಪೋಲಿಸ ವಿಚಾರಣೆ ಮಾಡಿದ ಹಾಗೆ ಮಾಡ್ತಾ ಇದೀರ" ಅಂತ ತಿರುಗಿ ಬಿದ್ದಳು, "ಈಗ ಹೇಳ್ತೀಯ ಇಲ್ವಾ" ಅಂದೆ, "ಇಬ್ರು" ಅಂತ ಹುಬ್ಬು ಗಂಟಿಕ್ಕಿದಳು. "ಹಾಗಾದ್ರೆ ಇಷ್ಟೊತ್ತು ಮೆಸೇಜ ಕಳಿಸಿದ್ದರಲ್ಲಿ, ಎರಡು ಮಾತ್ರ ಇಷ್ಟದಿಂದ ಕಳಿಸಿದ್ದು, ಉಳಿದದ್ದು ಎನೋ ಕಳಿಸಬೇಕಲ್ಲ ಅಂತ ಕಳಿಸಿದ್ದು" ಅಂದೆ. ಅವಳು ಮರು ಮಾತಾಡಲಿಲ್ಲ, ಏನೊ ಮನಸಿನಲ್ಲಿ ತಾಕಲಾಟ ನಡೆದಿತ್ತು.
ಬಹಳ ಹೊತ್ತು ಹಾಗೆ ಕೂತಿದ್ದಳು, ಇರಲಿ ಮಲಗು ನಾಳೆ ನೋಡೋಣ ಅಂತ ಉರುಳಿದರೆ, ಬೆನ್ನ ಮೇಲೊಂದು ಗುದ್ದಿ "ರೀ ಏಳ್ರೀ ಮೇಲೆ, ಇಷ್ಟೊತ್ತು ಏನೇನೊ ಹೇಳಿ, ತಲೆ ಕೆಡಿಸಿ ನಿದ್ದೆ ಹಾಳು ಮಾಡಿ, ನೀವ ಹಾಯಾಗಿ ನಿದ್ದೆ ಮಾಡಬೇಕು ಅಂತೀದೀರ" ಅಂದ್ಲು. ಅವಳ ಏಟಿಗೆ, ಇರೊ ಬರೊ ನಿದ್ರೆ ಎಲ್ಲ ಹಾರಿ ಹೋಗಿ ಕಣ್ಣು ನಿಚ್ಚಳಾದವು. "ನೀವು ಯಾರಿಗೂ ವಿಷ್ ಮಾಡಲ್ವೇ" ಅಂತ ಅಪರಾಧಿ ಜಡ್ಜನನ್ನು ತರಾಟೆಗೆ ತೆಗೆದುಕೊಂಡಂತೆ ಕೇಳಿದ್ಲು. "ಮಾಡ್ತೀನಲ್ಲ, ಹ್ಯಾಪಿ... ಫ್ರೆಂಡಶಿಪ್ ಡೇ...." ಅಂತ ಮಧ್ಯರಾತ್ರಿ ನರಿ ನಾಯಿ ಊಳಿಟ್ಟಂಗೆ ಉಸುರಿದೆ. "ರೀ ನೀವೇನ ಆಕಾಶವಾಣಿ ಧಾರವಾಡಾನಾ ಇಲ್ಲಿ ಕೂತು ಹೇಳಿದ್ರೆ ಊರೆಲ್ಲ ಕೇಳೋಕೆ, ದೊಡ್ಡ ಕಂಜ್ಯೂಸ ಕಣ್ರೀ ನೀವು, ಮೆಸೇಜ ಮಾಡೋಕೆ ಆಗಲ್ವಾ." ಅಂತ ಬಯ್ದಳು. "ಮೆಸೇಜೇನು ಕರೆ ಮಾಡಿ ಮಾತಾಡ್ತೀನಿ, ಆದ್ರೆ ಸುಮ್ನೇ ಹತ್ತು ಜನರಿಗೆ ಎಸಎಂಎಸ್ ಕಳಿಸಲ್ಲ, ನಾನೀಗ ವಿಷ್ ಮಾಡಿದ್ದು ನಿನಗೆ" ಅಂದೆ. "ಏನ್ರೀ ನಾನು ಫ್ರೆಂಡಾ, ನಾನು ನಿಮ್ಮ ಹೆಂಡತಿ, ಯಾಕೇ ತಾಳಿ ಕಟ್ಟಿದ್ದು ಮರೆತುಹೋಯ್ತಾ" ಅಂತಂದಳು. "ತಾಳಿ ಕಟ್ಟಿದಾಕ್ಷಣ, ಹೆಂಡ್ತಿ ಅಂದ್ರೆ ಫ್ರೆಂಡ ಆಗಿರಬಾರದಾ, ಪ್ರಾಣಸಖಿ ಅಂತ ಹೆಂಡ್ತಿ ಯಾಕೆ ಆಗಬಾರದು, ಫ್ರೆಂಡ ಇಸ್ ಸೆಕೆಂಡ ವೈಫ್ ಅಂತಾರೆ, ಅಂದ್ರೆ ಸ್ನೇಹಿತ ಎರಡನೇ ಹೆಂಡ್ತಿ ಇದ್ದಂತೆ" ಅಂದ್ರೆ "ನಂಗೂ ಇಂಗ್ಲೀಷ ಬರತ್ತೆ ಕನ್ನಡಾನುವಾದ ಎನ್ ಬೇಕಿಲ್ಲ ಗೊತ್ತು ಗೊತ್ತು" ಅಂತ ಮುನಿಸಿಕೊಂಡ್ಲು. "ಗೊತ್ತಿದ್ದ ಮೇಲೆ ಹೆಂಡತಿಯೇ ಸ್ನೇಹಿತೆ ಯಾಕೆ ಆಗಬಾರದು"... ನಿಶಬ್ದ ಸ್ವಲ್ಪ ಹೊತ್ತು...
"ಆಗಬಹುದು" ಅಂತನ್ನುತ್ತ ಹಾಗೇ ಕಾಲ ಮೇಲೆ ತಲೆಯಿರಿಸಿದಳು, ಆ ತಲೆ ನೇವರಿಸುತ್ತ "ಆಗಬಹುದು, ಅಲ್ಲ ನೀನು ಆಗಿದ್ದೀಯಾ, ಒಬ್ಬ ಸ್ನೇಹಿತ ಅಥವಾ ಸ್ನೇಹಿತೆಯ ಹತ್ತಿರ ಎನೂ ಮುಚ್ಚು ಮರೆಯಿಲ್ಲದೇ ಹಾಗೆ ಹೇಳಿಕೊಳ್ಳೊದು ಅಂತಿದ್ದರೆ ಅದು ನಿನ್ನೊಂದಿಗೆ ಮಾತ್ರ, ಬರೀ ನನ್ನ ಜೀವನ ಸಂಗಾತಿ ಅಲ್ಲ, ಜೀವದ ಗೆಳತಿ ಕೂಡ ಆಗೀದೀಯ" ಅಂತಿದ್ದರೆ, "ರೀ ಡೈಲಾಗು ಹೊಡೆದದ್ದು ಸಾಕು" ಅಂತ ತರಲೆಗಿಳಿದಳು "ಇದೇ... ಇದೇ ತುಂಟೀನೇ ನನ್ನ ಫ್ರೆಂಡ್" ಅಂದೆ. "ಅದಿರಲಿ, ಈಗ ನೀವು ಯಾರಿಗೂ ಶುಭಾಷಯ ಹೇಳಲ್ಲ ಹಾಗಿದ್ರೆ?" ಮತ್ತೆ ವಿಷಯಕ್ಕೆ ಮರಳಿದಳು "ಹೇಳಿದೆನಲ್ಲ ನಿಂಗೆ" ಅಂದೆ, ಮುಂದೆ ಹೇಳು ಅನ್ನುವಂತೆ ಓರೆ ನೋಟದಲ್ಲಿ ನೋಡಿದ್ಲು, "ಹೇಳ್ತೀನಿ ಇಲ್ಲ ಅಂತ ಅಲ್ಲ, ಈ ದಿನ ಶುಭಾಷಯ ಹೇಳೊದು ಗೆಳೆಯರೊಂದಿಗೆ ಮಾತಾಡಲು ಒಂದು ನೆಪಮಾತ್ರ ನನಗೆ, ನಾನು ಶುಭಾಷಯ ಹೇಳಲಿ ಬಿಡಲಿ ಅವರು ಗೆಳೆಯರಾಗೆ ಇರ್ತಾರೆ. ಹಾಗೇ ಕೆಲವು ಗೆಳೆಯರಿಗೆ ಖುದ್ದು ನಾನೇ ಏನೊ ಬರೆದು ಮೇಲ್ ಕಳಿಸ್ತೀನಿ, ವೈಯಕ್ತಿಕವಾಗಿ ಫೋನು ಮಾಡಿ ಮಾತಾಡ್ತೀನಿ, ಅದು ನನ್ನ ಶುಭಾಷಯ, ಯಾರೋ ಕಳಿಸಿದ ಮೆಸೇಜ ಇಪ್ಪತ್ತು ಮಂದಿಗೆ ಕಳಿಸಿ, ಫ್ರೆಂಡಶಿಪ ಡೇ ಆಯ್ತು ಅಂತ ಕೈತೊಳೆದುಕೊಂಡ್ರೆ, ಅಂಥ ಗೆಳೆಯರು ಮತ್ತೆ ಮುಂದಿನ ಫ್ರೆಂಡಶಿಪ ಡೇಗೆ ಮಾತ್ರ ನೆನಪಾಗುತ್ತಾರೆ." ಅಂದೆ. ಸುಮ್ಮನೇ ಕೇಳುತ್ತಿದ್ದವಳು. "ನಿಮ್ಮ ಭಾಷಣ ಮುಗೀತಾ" ಅಂತ ಆಕಳಿಸಿದ್ಲು, "ಕೇಳೊವರೆಗೆ ಕೇಳಿ ಈಗ ಭಾಷಣ ಅಂತೀಯ" ಕೆನ್ನೆ ಹಿಡಿದೆಳೆದೆ, "ರೀ, ನಿಮ್ಮ ಕ್ಲೋಜ ಫ್ರೆಂಡ್ಗೆ, ಫ್ರೆಂಡಶಿಪ್ ಡೇ ಗಿಫ್ಟ ಇದನ್ನಾ ಕೊಡೊದು" ಅಂತಂದಿದ್ದಕ್ಕೆ, ಕೆನ್ನೆಗೆ... ... ... "ಸರಿಹೊತ್ತಾಯ್ತು ಮಲಗಬೇಕು ಬಿಡ್ರೀ" ಅಂತ ಚೀರುತ್ತಿದ್ಲು...
ಯೋಚಿಸಿ ನೋಡಿ, ನಿಜವಾಗ್ಲೂ ಈ ಗೆಳೆತನಕ್ಕೆ ಆ ಎಸಎಂಸ್ಸು, ಕಾರ್ಡು, ಮೇಲ್ ಬೇಕಾ, ಅದಿಲ್ಲದಿದ್ದಾಗ ಗೆಳೆತನವೇ ಇರಲಿಲ್ವಾ, ಹೋಗ್ಲಿ ಶುಭಾಷಯ ಹೇಳಲೇ ಬೇಕಿದ್ದರೆ ನನಗೆ ಬಂದ ಮೆಸೇಜು ಹತ್ತಿಪ್ಪತ್ತು ಜನರಿಗೆ ಕಳಿಸಿಬಿಟ್ರೆ ಆಯ್ತಾ, ಇಲ್ಲ ಯಾರೊ ಫಾರವರ್ಡ ಮಾಡಿದ ಈ-ಮೇಲನಲ್ಲೇ ಹೆಸರು ಬದಲಿಸಿ, ಹತ್ತು ಜನರಿಗೆ ಸಿಸಿ(ಕಾರ್ಬನ್ ಕಾಪಿ, ಬಹಳ ಜನರಿಗೆ ಈ-ಮೇಲ ಕಳಿಸುವ ವಿಧಾನ) ಮಾಡಿ ಕಳಿಸಿದ್ರೆ ಶುಭಾಷಯ ಹೇಳಿದ ಹಾಗೆ ಆಯ್ತಾ, ಬಿಸಿಸಿ(ಬ್ಲೈಂಡ ಕಾರ್ಬನ್ ಕಾಪಿ, ಬಹಳ ಜನರಿಗೆ ಒಬ್ಬರಿಗೆ ಕಳಿಸಿದ್ದು ಇನ್ನೊಬ್ಬರಿಗೆ ಕಾಣದ ಹಾಗೆ ಈ-ಮೇಲ್ ಕಳಿಸುವ ವಿಧಾನ) ಮಾಡಿದ್ರು ಎಷ್ಟು ಜನರಿಗೆ ಕಳಿಸಿದ್ದು ಗೊತ್ತಾಗಲ್ಲವಾದರೂ ನನಗೆ ವೈಯಕ್ತಿಕವಾಗಿ ಕಳಿಸಿದ್ದು ಅಲ್ಲ ಅಂತನಾದ್ರೂ ಗೊತ್ತಾಗಿಬಿಡುತ್ತದೆ, ಹೀಗೆ ಹತ್ತು ಜನರಲ್ಲಿ ಒಬ್ಬರೆಂದಾದಾಗ ಅದು ಶುಭಾಷಯವೆಂದು, ನನಗೆ ಬಂದದ್ದು, ನನ್ನ ಗೆಳೆಯ ಕಳಿಸಿದ್ದು ಅಂತನಾದ್ರೂ ಅನಿಸೋದು ಹೇಗೆ. ಇಂಥ ಶುಭಾಷಯ ನಿಜಕ್ಕೂ ಬೇಕಾ, ನನಗೆ ಗೊತ್ತಿಲ್ಲ. ಆದರೆ ಹಾಗೆ ಮಾಡುವುದು ನನಗೆ ಇಷ್ಟವಿಲ್ಲ, ಅಷ್ಟೇ.
ಮುಂಜಾನೆ ಏಳಕ್ಕೆ ವಾಣಿ(ಮೊಬೈಲು) ಕಿರುಚುತ್ತಿದ್ಲು, ರಾತ್ರಿ ಇಪ್ಪತ್ತು ಮೆಸೇಜ ಕಳಿಸಿದ್ದಳಲ್ಲ, ಅದಕ್ಕೆ ಗೆಳೆಯರು ಅವರಿಗೂ ಗೆಳೆತನ ನೆನಪಾಗಿ ಎದ್ದು ತಮಗೆ ಯಾರೊ ಕಳಿಸಿದ ಮೆಸೇಜು ಫಾರವರ್ಡ ಮಾಡುತ್ತಿದ್ದರು, ಕೈಗೆತ್ತಿಕೊಂಡು ಸುಮ್ನಿರು ಅಂತ ಸುಮ್ಮನಾಗಿಸಿ, "ನಿನ್ನ ಗೆಳೆಯರು ಗೆಳತಿಯರು ಶುಭಾಷಯ ತಿಳಿಸ್ತಾ ಇದಾರೆ ನೋಡು, ಮೆಸೆಜ ಬಾಕ್ಸ್ ತುಂಬಿದೆ" ಅಂದೆ. "ನೀವೇ ನೋಡಿ ಡಿಲೀಟ್ ಮಾಡ್ರೀ, ಎನಾದ್ರೂ ವಿಶೇಷ ಇದ್ರೆ ಓದಿ ಹೇಳಿ" ಅಂದ್ಲು. ಒಂದೊಂದಾಗಿ ಡಿಲೀಟ ಮಾಡತೊಡಗಿದೆ, ಇವಳು ಕಳಿಸಿದ ಮೆಸೇಜುಗಳೂ ಹೀಗೆ ಎಲ್ಲೋ ಡಿಲೀಟ ಆಗಿ ಹೋಗುತ್ತಿರಬೇಕು ಅಂತಂದುಕೊಳ್ಳುತ್ತ... ಮತ್ತೆ ಸಿಗೋಣ ಹೀಗೆ ಏನೊ ಮೆಸೇಜು ಕಳಿಸುತ್ತ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/sneha.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, July 26, 2009
ಮಳೆ ಹುಡುಗಿ...
"ಇಂದಿನ ಹವಾಮಾನ ವರದಿ, ದಿನವಿಡೀ ಮೋಡ ಮುಸುಕಿದ ವಾತಾವರಣವಿದ್ದು, ಈಗ ಬಿರುಸಾಗಿ ಗಾಳಿ ಬೀಸುತ್ತಿದ್ದು, ಕಪ್ಪು ಮೋಡಗಳು ಕಟ್ಟಿಕೊಂಡಿವೆ, ಯಾವುದೇ ಕ್ಷಣದಲ್ಲಾದರೂ ಮಳೆ ಬೀಳುವ ಸಂಭವವಿದೆ. ಮಳೆ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಫೀಸುಗಳಲ್ಲಿ ಕೆಲಸ ಮಾಡುತ್ತಿರುವರೆಲ್ಲರೂ ಬೇಗ ಬೇಗ ತಮ್ಮ ಮನೆ ಸೇರಿಕೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ." ಅತ್ತ ಕಡೆಯಿಂದ ಚಿಲಿಪಿಲಿ ಅಂತ ಉಲಿಯುತ್ತಿದ್ದವಳು ಇವಳು, ಇದ್ಯಾವುದು ಆಕಾಶವಾಣಿ ಅಂದುಕೊಂಡಿರಾ, ಇಲ್ಲ ಇದು ಆಕೆವಾಣಿ, ನನ್ನಾಕೆವಾಣಿ! ಸಂಜೆ ಫೋನು ಮಾಡಿ ಅತ್ತಲಿಂದ ಹೀಗೆ ಹವಾಮಾನ ವರದಿ ಮಾಡಿ ಮನೆಗೆ ಬೇಗ ಬನ್ನಿ ಅಂತಿದ್ದಳು.
"ಹವಾಮಾನ ವರದಿಗಾರರೇ ನಿಮ್ಮ ಸುದ್ದಿಗಳು ಯಾವಾಗ್ಲೂ ನಿಜವಾಗಲ್ಲ, ಮೋಡ ಅಂತೀರಿ, ಬಿಸಿಲು ಚುರಗುಡತ್ತೆ, ಬಿಸಿಲು ಅಂತೀರಿ ಆಕಾಶವೇ ಕಡಿದುಕೊಂಡು ಬಿದ್ದ ಹಾಗೆ ಮಳೆಯಾಗುತ್ತದೆ, ಹೇಗೆ ನಂಬುವುದು" ಅಂದೆ "ರೀ ಏ.ಸಿ. (ಏರಕಂಡೀಷನ್) ಆಫೀಸಿನಲ್ಲಿ ತಲೆಕೆಳಗೆ ಮಾಡಿಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದರೆ ಹೇಗೆ ಗೊತ್ತಾಗಬೇಕು ಹೊರಗೆ ಬಂದು ತಲೆಯೆತ್ತಿ ನೋಡಿ" ಅಂತ ಅತ್ತಲಿಂದ ಹೀಗಳೆದಳು. "ಮಳೆ ಬಂತು ಅಂತ ಶಾಲೆಗೆ ರಜೆ ಸಿಗಬಹುದು ಆಫೀಸಿಗೆ ಯಾರು ಕೊಡ್ತಾರೆ, ಕೆಲಸ ಬಹಳ ಇದೆ, ರಾತ್ರಿ ಲೇಟಾಗುತ್ತದೆ ಅಷ್ಟೊತ್ತಿಗೆ ಮಳೆಯಾಗಿ ನಿಂತಿರತ್ತೆ" ಅಂದೆ "ಬಹಳ ಮಳೆ ಬರೋದಿದೆ ಆದಷ್ಟು ಬೇಗ ಬನ್ನಿ" ಅಂತ ಫೋನಿಟ್ಟಳು. ಹೊರಗೆ ಹೋಗಿ ನೋಡಲು ಪುರಸೊತ್ತು ಇರ್ಲಿಲ್ಲ, ಕೆಲಸ ಒಟ್ಟಿತ್ತು, ಅದರಲ್ಲೇ ಮಗ್ನನಾದೆ.
ರಾತ್ರಿ, ಹತ್ತು ಘಂಟೆಗೆ ಮತ್ತೊಮ್ಮೆ ಫೋನು ಮಾಡಿದಳು, "ಮಳೆ ಯಾಕೊ ಆಗಲೇ ಇಲ್ಲ, ಆದರೂ ಹೇಳೊಕಾಗಲ್ಲ ಬೇಗ ಬನ್ನಿ ಮಳೆ ಬಂದ್ರೆ ತೋಯಿಸಿಕೊಳ್ಳುತ್ತೀರಿ" ಅಂದ್ಲು "ಆಯ್ತು ಹೊರಟಿದ್ದೇನೆ, ನಿಮ್ಮ ಹವಾಮಾನ ವರದಿಗಳ ಕಥೇನೆ ಇಷ್ಟು, ತೊಯಿಸಿಕೊಂಡ್ರೆ ಬಂದು ಬೆಚ್ಚಗೆ ನಿನ್ನ ಮಡಿಲಲ್ಲಿ ಮಲಗಿಬಿಡ್ತೀನಿ" ಅಂದೆ "ರೀ, ಹೋಗ್ರೀ ನಿಮಗೆ ಯಾವಗ್ಲೂ ತಮಾಷೇನೆ" ಅಂತ ನಾಚಿ ಸುಮ್ಮನಾದಳು. ಹೇಗೂ ಮಳೆಯಾಗುತ್ತಿಲ್ಲ ಅಂತ ಎದ್ದು ಹೊರಟು ನಿಂತೆ, ಹೊರಗೆ ಬಂದು ಬೈಕನಲ್ಲಿ ಕಿಲೊಮೀಟರು ದೂರಕ್ಕೆ ಬರುತ್ತಿದ್ದಂತೆ, ಧೋ ಅಂತ ಮಳೆ ಸುರಿಯಲಾರಂಭಿಸಿತು, ಮೇಲೆ ಬಕೆಟ್ಟು ಹಿಡಿದುಕೊಂಡು ಬಾ ಹೊರಗೆ ನೀ, ನಾನು ಸುರೀತೀನಿ ಅಂತ ಕಾದಿತ್ತೇನೊ ಅನ್ನೊ ಹಾಗೆ ಧಾರಾಕಾರವಾಗಿ ಬೀಳತೊಡಗಿತು.
ನಿಂತರೆ ಕೂಡ ಎನೂ ಪ್ರಯೋಜನವಿಲ್ಲ ಅನ್ನುವಷ್ಟು ಆಗಲೇ ನೆನೆದಾಗಿತ್ತು ಹಾಗಾಗಿ ಮಳೆಯಲ್ಲೇ ನಡೆದೆ, ಮುಂದೊಂದು ಕಿಲೋಮೀಟರು ದಾಟಿ ಬಂದಿರಬೇಕು, ಮಳೆ ಬಹಳೇ ಜೋರಾಯಿತು, ಮುಂದೆ ದಾರಿ ಕಾಣದಷ್ಟು, ಬೇರೆ ದಾರಿಯಿಲ್ಲದೇ ಅಲ್ಲೆ ಕಾಣುತ್ತಿದ್ದ ಬಸ್ ನಿಲುಗಡೆಯಲ್ಲಿ ಇಳಿದು ನಿಂತೆ, ಬೂಟು ತೆಗೆದೆ, ಜಾಕೇಟಿನ ಜೇಬಿನಲ್ಲೂ ನೀರು ತುಂಬಿಕೊಂಡಿತ್ತು ಹೀಗೆ ನೀರು ಹೋಗಲೆಂದು ಬಟ್ಟೆ ಹಿಂಡುತ್ತಿದ್ದರೆ, ಅಲ್ಲೇ ಮರೆಯಲ್ಲಿ ನಿಂತವಳು ಕಾಣಿಸಿದಳು, ಮಳೆ ಹುಡುಗಿ(ಪೂಜಾ ಗಾಂಧಿ ಅಲ್ಲಾರೀ...), ಹೆಸರೇನು ಇಡಲಿ ಮ್... ವರ್ಷಾ!
ಬ್ಯಾಗು ಬೆನ್ನಿಗೇರಿಸಿ, ದುಪಟ್ಟ ತಲೆ ಮೇಲೆ ಹೊದ್ದು, ಮಳೆಯಲ್ಲಿ ನೆನೆದು ನಡಗುತ್ತ, ಕೈಯಲ್ಲಿನ ಮೊಬೈಲಿನಲ್ಲಿ ಏನೊ ಕುಟ್ಟುತ್ತಿದ್ದಳು, ಬಹುಶ ಸಂದೇಶ ಇರಬೇಕು, ಮೇಘ ಸಂದೇಶವೇ, ಮಳೆ ಕಡಿಮೆಯಾಗಲಿ ಅಂತ, ಏನೋ ಒಂದು. ನೋಡಲು ಅಂದವಾಗಿದ್ದಳು ಅಂತ ಬೇರೆ ಹೇಳಬೇಕಿಲ್ಲ, ಮಳೆ ಸುರಿಯುತ್ತಿದ್ದರೆ ಹೋಗಲಾಗದೇ ಚಡಪಡಿಸುವಂತಿತ್ತು, ಹೀಗೆ ಹೊತ್ತು ಹನ್ನೊಂದಾಯಿತು ಮಳೆ ಇನ್ನೂ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ, ಅವಳ ಮೇಘ ಸಂದೇಶ ನೆಟವರ್ಕ ಇಲ್ಲದೇ ತಲುಪಲಿಲ್ಲವೇನೊ. ಯಾವ ಬಸ್ಸು ಬಂದರೂ ಅವಳಂತೂ ಹತ್ತಿ ಹೋಗಲಿಲ್ಲ, ಇದ್ದ ಬದ್ದವರೆಲ್ಲ ಖಾಲಿಯಾದರು, ಉಳಿದವರು ನಾನು, ಅವಳು, ಮತ್ತೆ ಇನ್ನೊಬ್ಬ, ಆತನೋ ನೋಡಿದರೆ ನನಗೇ ಹೆದರಿಕೆ ಬರುವಂತಿದ್ದ, ನೋಡಲು ಹಾಗಿದ್ದ ಮಾತ್ರಕ್ಕೆ ಕೆಟ್ಟವನೇನಲ್ಲ, ಆದ್ರೆ ಏನೊ ಹೇಳೋಕಾಗುತ್ತೆ, ಅವಳನ್ನು ನೋಡಿದರೆ ದುರುಗುಟ್ಟಿದಳು, ಪಾಪ ಯಾರಿಗಾಗಿ ಕಾದಿದ್ದಳೊ ಏನೊ. ಸ್ವಲ್ಪ ಹೊತ್ತು ನಿಂತೆ, ಆಗಾಗ ಬರುವ ಕ್ಯಾಬ್(ಕಾರು) ಬಿಟ್ಟರೆ ರಸ್ತೆಯಲ್ಲಿ ಎನೂ ಇಲ್ಲ, ಕ್ಯಾಬ್ ನಿಂತು ಕೇಳಿದರೂ ಅವಳು ಹೋಗಿರಲಿಲ್ಲ, ಹೋಗಬೇಡ, ಹೋಗಬೇಡ ಅಂತ ನನ್ನ ಮನಸು ಕೂಡ ಅನ್ನುತ್ತಿತ್ತು, ನಾ ಅವಳನ್ನು ನೋಡುತ್ತಿರಲಿಕ್ಕೆ ಅಲ್ಲ, ಕ್ಯಾಬಗಳು ಸುರಕ್ಷಿತವಾಗಲಿಕ್ಕಿಲ್ಲ ಅಂತ ಹಾಗನಿಸಿದ್ದು. ಮಳೆ ನಿಲ್ಲದ ಹಾಗೆ ಕಾಣದಾದಾಗ ಹೊರಡಲು ಅನುವಾದೆ, ಆದರೆ ಪಾಪ ಯಾರೂ ಇಲ್ಲದೆ ಒಬ್ಬಳೇ ಕಾಯುತ್ತಿರುವ ಅವಳ ಕಂಡು ಬೇಡವೆಂದು, ಅವಳು ಹೋಗುವವರೆಗೂ ಅಲ್ಲೇ ಕಾಯುವ ತೀರ್ಮಾನಕ್ಕೆ ಬಂದೆ. ನನ್ನ ಯೋಚನೆಗಳೇ ಹಾಗೆ, ಎಲ್ಲಿ ಯಾರಾದರೂ ಬಂದು ಏನಾದರೂ ಆದರೆ, ಛೇ ಹಾಗಾಗದಿರಲಿ, ನಾನು ಸಹಾಯ ಮಾಡಬಲ್ಲೆನೇ ಅಷ್ಟು ಶಕ್ತಿಯಂತೂ ಇಲ್ಲ, ನಾಲ್ಕು ಜನ ಹಿಡಿದು ನೂಕಿದರೆ ಬಿದ್ದವನು ಮತ್ತೆ ಏಳಲಿಕ್ಕಿಲ್ಲ ಆದರೆ ನಾನು ಇದ್ದೀನೆಂದಾದರೂ ಯಾರೂ ಅಂಥ ಹುಚ್ಚು ಕೆಲಸಕ್ಕೆ ಕೈಹಾಕಲಿಕ್ಕಿಲ್ಲ ಅನ್ನೊ ಭಂಡ ಧೈರ್ಯ, ಅಲ್ಲೇ ನಿಂತೆ, ಇವನ್ಯಾರೊ ನನ್ನ ನೋಡಲೇ ನಿಂತಿದ್ದಾನೆಂದು ಅವಳಂದುಕೊಂಡಿರಬಹುದು, ಇಲ್ಲ ನನ್ನನ್ನೇ ನೋಡಿ ಆಗಲಿಂದ ಇಲ್ಲೇ ಕಾಯುತ್ತಿದ್ದಾನೆ, ಇವನೇನಾದರೂ ಮಾಡಿದರೆ ಅಂತ ಹೆದರಿದ್ದರೂ ಅಚ್ಚರಿಯಿಲ್ಲ. ಅವಳಿಗೆ ಸ್ವಲ್ಪ ನಾನು ಯಾರೋ ಕಳ್ಳ ದರೊಡೆಕೋರ ಅಲ್ಲ, ಅಂತ ಗೊತ್ತಾಗಲಿ ಅಂತ, ಅವಳಿಗೆ ಕಾಣುವಂತೆ ತೊಯ್ದಿದ್ದ ನನ್ನ ಕಂಪನಿ ಐ.ಡಿ. ಕಾರ್ಡು ಗಾಳಿಯಲ್ಲಿ ಆರಿಸುವಂತೆ ಬೀಸಿ ಊದಿದೆ... ತೋರಿಸಿದೆ!
ಅವಳಿಗೂ ಇದ್ಯಾವುದೊ ರಾತ್ರಿ ಸರಿಹೊತ್ತಿನವರೆಗೆ ಆಫೀಸಲ್ಲೇ ಕೊಳೆಯುವ ಸಾಫ್ಟವೇರ ಇಂಜನೀಯರು ಈಗ ಮನೆಯತ್ತ ನಡೆದಿದೆ, ಇದೇನೂ ಮಾಡಲಿಕ್ಕಿಲ್ಲ ಅಂತ ಅನಿಸಿರಬೇಕು, ಸ್ವಲ್ಪ ಮುಂದೆ ಬಂದು ನಿಂತಳು. ಮನೆಯಲ್ಲಿ ನನ್ನಾಕೆ ಒಬ್ಬಳೇ ಕಾಯುತ್ತಿರುತ್ತಾಳೆ, ಆದರೆ ಇಲ್ಲಿ ಕಾಯುತ್ತಿರುವ ಇವಳು, ಬಿಟ್ಟು ಹೋಗಲಾಗುತ್ತಿಲ್ಲ, ಹತ್ತಿರ ಹತ್ತಿರ ಹನ್ನೆರಡು ಆಗಿರಬೇಕು ಸ್ವಲ್ಪ ಮಳೆ ಕಮ್ಮಿಯಾಯಿತು, ನಾನು ಇನ್ನೂ ಯಾಕೆ ಹೋಗುತ್ತಿಲ್ಲ ಅನ್ನುವಂತೆ ಅವಳು ನೋಡಿದರೂ... ನಾನಲ್ಲೇ ಕಲ್ಲಿನಲ್ಲಿ ಕಟೆದ ಮೂರ್ತಿಯಂತೆ ನಿಂತೇ ಇದ್ದೆ, ಸ್ವಲ್ಪ ಸಮಯದ ನಂತರ, ನಿಧಾನವಾಗಿ ಆಕಡೆ ಈಕಡೆ ನೋಡಿ ತಲೆ ಮೇಲೆ ದುಪಟ್ಟ ಸರಿ ಮಾಡಿಕೊಂಡು ರಸ್ತೆ ಆಚೆ ಬದಿಯಲ್ಲಿ ನಡೆದಳು, ಅಲ್ಲೇ ಎಲ್ಲೊ ಮನೆಯಿರಬೇಕು, ಹಿಂದೆ ಹೋಗಿ ಅವಳು ಮನೆ ತಲುಪುವವರೆಗೆ ನೋಡಿ ಬರಲೇ ಅನಿಸಿದರೂ, ನಾನು ಹಾಗೆ ಹಿಂಬಾಲಿಸಿದರೆ ಸರಿ ಇರಲಿಕ್ಕಿಲ್ಲ ಅಂತ ದೂರದಲ್ಲಿ ಮರೆಯಾಗುವವರೆಗೆ ಕಾದು ನೋಡಿ ಮನೆಯತ್ತ ಮುಖ ಮಾಡಿದೆ, ಅವಳು ಮನೆ ತಲುಪಿರಬಹುದು ಅಂದುಕೊಳ್ಳುತ್ತಾ...
ಮನೆಯೊಳಗೆ ಕಾಲಿಟ್ಟೆ, ಮಳೆ ಮನೆಯಲ್ಲೇ ಆಗಿತ್ತೇನೊ ಅನಿಸಿತು, ನೀರು ನಿಂತು ಹೊಳೆಯಾಗಿತ್ತು. ಅಲ್ಲೇ ನೀರು ಎತ್ತಿ ಹೊರ ಹಾಕುತ್ತಿದ್ದ ನನ್ನಾಕೆ ಕಾಣಿಸಿದಳು, "ಕೆಲಸವೆಲ್ಲಾ ಮುಗಿಯಿತೊ ಇನ್ನೂ ಇದೆಯೋ, ಅಲ್ಲಿ ಟೇಬಲ್ಲು ಇನ್ನೂ ಹಸಿಯಾಗಿಲ್ಲ ಅಲ್ಲಿ ಬೇಕಾದರೆ ನಿಮ್ಮ ಲ್ಯಾಪಟಾಪ ಇಟ್ಟುಕೊಂಡು ಕೂರಬಹುದು" ಅಂತ ವ್ಯಂಗ್ಯವಾಗಿ ಚುಚ್ಚಿದಳು, ಅಲ್ಲಿ ಮಳೆ ಹುಡುಗಿ ಬಗ್ಗೆ ಹೇಳಬೇಕೆಂದು ಹೋದೆ... ಆದರೆ ಈಗ ಹೇಳಿದರೆ ಇಲ್ಲಿ ಅವಳು ಗುಡುಗು ಸಿಡಿಲು ಸಿಡಿಸುವ ಸೂಚನೆ ಕಾಣಿತು, ಸುಮ್ಮನೆ. ಎನೂ ಮಾತಿಲ್ಲದೇ, ಶರ್ಟ ಕೈತೋಳು ಮಡಚಿ ಮಗ್ ತೆಗೆದುಕೊಂಡು ನೀರು ಎತ್ತಿ ಹೊರಹಾಕಲು ತೊಡಗಿದೆ, ಎಲ್ಲ ನೀರು ಖಾಲಿ ಮಾಡಿ ಕೈತೊಳೆಯುವ ಹೊತ್ತಿಗೆ ಹೊಟ್ಟೆ ಚುರುಗುಡುತ್ತಿತ್ತು, ಆಗ ಅನ್ನಕ್ಕಿಟ್ಟಳು, ಮಳೆಯೊಂದಿಗೆ ಏಗುತ್ತ ಅಡಿಗೆಯೇ ಮಾಡಿರಲಿಲ್ಲ. ಹಸಿಯಾಗಿದ್ದ ಬಟ್ಟೆ ತೆಗೆಯುತ್ತ ಸೀನಿದೆ, ಪಾಕಶಾಲೆಯಿಂದ ಹೊರಬಂದು, "ಬೇಗ ಬಂದಿದ್ದರೆ ತೋಯಿಸಿಕೊಳ್ಳುತ್ತಿರಲಿಲ್ಲ" ಅಂದಳು. ನಾನೇನು ಬೇಕಂತಲೇ ಮಳೆ ಬರೋವರೆಗೆ ಕಾದಿದ್ದು ತೋಯಿಸಿಕೊಂಡು ಬಂದೆನೇನೋ ಅನ್ನುವಂತೆ. ಸುಮ್ಮನೇ ಒಳ ಹೋಗಿ ಬೇರೆ ಬಟ್ಟೆ ಹಾಕುತ್ತ ಇನ್ನೊಮ್ಮೆ ಸೀನಿದೆ ಬೇಕಂತಲೇ! "ಬರುತ್ತಿದ್ದಂತೇ ಬಟ್ಟೆಯಾದ್ರೂ ಬದಲಾಯಿಸಬಾರದಿತ್ತೇ, ಬರೀ ಕೆಲಸ, ಕೆಲಸ..." ಅಂತ ಬಯ್ಯುತ್ತ ಮತ್ತೆ ಪಾಕಶಾಲೆ ಸೇರಿದಳು, "ಆಗಲೇ ಹೊರಟೆ ಆದರೆ ಮಳೆ ಜೋರಾಗಿ ದಾರಿಯಲ್ಲಿ ನಿಂತೆ, ಅಲ್ಲಿ ಆ ಹುಡುಗಿ ಪಾಪ..." ಅಂತಿದ್ದರೆ ಮಧ್ಯದಲ್ಲೇ ಬಾಯಿ ಹಾಕಿ "ಮಳೆಯಲ್ಲಿ ಹುಡುಗಿ, ರೀ ಇಲ್ಲಿ ಮನೆಯಲ್ಲಿ ಹೆಂಡ್ತಿ ಕಾಯ್ತಾ ಇದಾಳೆ ಒಬ್ಬಳೇ, ಅನ್ನೊ ಪರಿಜ್ಞಾನ ಬೇಡ ನಿಮಗೆ" ಅಂತ ಬಯ್ಯಲು ಶುರುವಿಟ್ಟುಕೊಂಡಳು. "ಅಲ್ಲಿ ಅವಳೂ ಒಬ್ಬಳೇ ಇದ್ಲು" ಅಂದರೆ "ಹೂಂ, ಬೆಂಗಳೂರಿನ ತುಂಬ ಎಷ್ಟೊ ಹುಡುಗೀರು ಒಬ್ಬರೇ ಇರ್ತಾರೆ ಹೋಗಿ ಅವರನ್ನೆಲ್ಲ ನೋಡಿಕೊಂಡು ಬನ್ನಿ" ಅಂತ ಹರಿಹಾಯ್ದಳು. ಮಳೆಯಲ್ಲಿ ಮನೆ ತುಂಬ ನೀರು ತುಂಬಿ ಅದನ್ನೆಲ್ಲ ಹೊರ ಹಾಕಿ ಅವಳಿಗೆ ಸಿಟ್ಟು ಬಂದಿತ್ತು, "ನೀರು ಹೇಗೆ ಒಳಬಂತು" ಅಂದೆ "ಹೇಗೆ ಬಂದರೇನೀಗ, ನಾನಿದೀನಲ್ಲ ಎತ್ತಿ ಹಾಕೋಕೆ, ಮಾತು ಮರೆಸಬೇಡಿ" ಅಂತ ಸಿಡುಕಿದಳು ಮತ್ತೆ, ಮಾತಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.
ಊಟವಾಯ್ತು, ಬಿಸಿ ಬಿಸಿ ಅನ್ನ ನೆನೆದದ್ದರಿಂದ ಸ್ವಲ್ಪ ಹೆಚ್ಚಿಗೆಯೆ ಒಳ ಹೋಯ್ತು, ಹಾಸಿಗೆಯಲ್ಲಿ ಬಿದ್ದು ಇನ್ನೊಮ್ಮೆ ಸೀನಿದೆ ನಿಜವಾಗಿಯೂ, ಶೀತವಾಗುವಂತೆ ಕಾಣಿತು, ಪಾತ್ರೆಯೆಲ್ಲ ತೆಗೆದಿಟ್ಟು ಬಂದವಳು ಬದಿಗೆ ಬಿದ್ದುಕೊಂಡಳು, ನಾ ಸೀನುವುದು ಜಾಸ್ತಿಯಾಯ್ತು, ವಿಕ್ಸ ಎತ್ತಿಕೊಂಡು ಬಂದಳು, ಇಸಿದುಕೊಂಡು ಹಚ್ಚಿಕೊಳ್ಳಬೇಕೆಂದರೆ ತಾನೆ ಹಚ್ಚುತ್ತ, "ಯಾರವಳು" ಅಂದ್ಲು. ಅವಳು ಕೇಳಿದ್ದಕ್ಕೆ ಉತ್ತರಿಸಲಿಲ್ಲ, "ಮಾತಾಡಲ್ವಾ, ಏನೊ ಸಿಟ್ಟು ಬಂದಿತ್ತು ಹಾಗಾಡಿದೆ ಅದಕ್ಕೆ ಮುನಿಸಿಕೊಳ್ಳೋದಾ" ಅಂತ ರಮಿಸಿದಳು. "ನೀರು ಹೇಗೆ ಒಳಬಂತು" ಅಂದೆ, ಅಬ್ಬಾ ಮಾತಾಡಿದರಲ್ಲ ಅಂತ ಖುಷಿಯಾಗಿ, ಕಿಟಕಿಯ ಸಂದಿಯಿಂದ ಸೋರಿದ್ದು, ಬಾಗಿಲ ಕೆಳಗೆ ಬಂದಿದ್ದು, ಕರೆಂಟ್ ಹೋಗಿ ಗುಡುಗಿಗೆ ಹೆದರಿದ್ದು, ಎಲ್ಲ ಹೇಳಿ, ಅಡಮಳೆಗೆ ಹೀಗೆ ಆಗುತ್ತದೆಂದು ಸಮಜಾಯಿಸಿ ಕೂಡ ಕೊಟ್ಟಳು. ಆದರೆ ಅವಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಹಾಗಾಗಿ ನನ್ನ ಮಲಗಲು ಬಿಡುವಂತಿರಲಿಲ್ಲ, ಹಾಗೇ ಕಣ್ಣು ಮುಚ್ಚುತ್ತಿದ್ದವನನ್ನು ತದಕಿ ಕೇಳಿದಳು, "ಯಾರದು ಮಳೆ ಹುಡುಗಿ"
"ಇನ್ನೊಮ್ಮೆ ಎಲ್ಲೊ ಹಾಗೆ ಕಾಯುತ್ತ ನಿಲ್ಲಲ್ಲ ಬಿಡು" ಅಂದೆ "ನನಗದು ಬೇಕಿಲ್ಲ ಅವಳಾರು" ಅಂದ್ಲು. ಇನ್ನೊಮ್ಮೇ ವಿಷಯ ಒತ್ತಟ್ಟಿಗಿರಲಿ ಈಗಿನದು ಹೇಳು ಅಂತ. "ಯಾರೋ ಗೊತ್ತಿಲ್ಲ" ಅಂದೆ "ಹಾಗಂದ್ರೆ" ವಿವರವಾಗಿ ಹೇಳು ಅಂತ ಸೂಚ್ಯವಾಗಿ ನುಡಿದಳು, ಯಾರೋ ಅಲ್ಲಿ ನಿಂತಿದ್ದು ಅನ್ನೋದರಿಂದ ಶುರುವಾಗಿ, ಅವಳು ಮರೆಯಾಗುವವರೆಗೆ ಕಾದಿದ್ದು ಎಲ್ಲ ಹೇಳಿಯಾಯ್ತು. ನಿಟ್ಟುಸಿರು ಬಿಟ್ಟಳು "ಒಳ್ಳೆ ಹೆಸರು ವರ್ಷಾ!" ಅಂದ್ಲು. "ನೋಡೋಕೂ ಚೆನ್ನಾಗಿದ್ಲು" ಅಂದೆ, "ನನಗಿಂತ" ಅಂದ್ಲು, ದೊಡ್ಡ ಪೀಕಲಾಟಕ್ಕೆ ಸಿಕ್ಕಿಕೊಂಡೆ, ನಿಜ ಹೇಳಬೇಕೆಂದ್ರೆ "ಹೌದು" ಅಂದೆ. "ಅದಕ್ಕೇ ಸಾಹೇಬ್ರು ನೋಡುತ್ತ ನಿಂತಿದ್ದು" ಅಂತ ನಕ್ಕಳು. "ನಿನಗೇನು ಅನ್ನಿಸಲಿಲ್ವಾ" ಅಂದೆ. "ಯಾಕೆ ಅನ್ನಿಸಬೇಕು, ರೀ ಯಾರೊ ಹುಡುಗಿ, ಪಾಪ ಒಬ್ಳೇ ಇದ್ದದ್ದಕ್ಕೆ ಕಾದು ಅವಳು ಅಷ್ಟು ಹೆಲ್ಪು ಮಾಡಿ ಬಂದಿದ್ದೀರಿ, ಹೆಮ್ಮೆ ನನಗೆ" ಅಂದ್ಲು. "ಅಲ್ಲ ಅವಳು ಚೆನ್ನಾಗಿದ್ದಾಳೆ ಅಂದ್ನಲ್ಲ ಅದಕ್ಕೆ" ಅಂದ್ರೆ, "ಏನು ನಿಮ್ಮ ಹೆಂಡ್ತಿ ಬಿಟ್ಟು ಜಗತ್ತಿನಲ್ಲಿ ಯಾರೂ ಬೇರೆ ಸುಂದರಿಯರೇ ಇರಬಾರದಾ" ಅಂತ ತಿರುಗಿಬಿದ್ಲು. "ಹಾಗಲ್ಲ, ಆದ್ರೂ ಏನೊ ಬೇರೆ ಹುಡುಗಿ ಅಂದ ಹೊಗಳಿದೆನಲ್ಲ, ನಿನಗೆ ನನ್ನ ಮೇಲೆ ಅಷ್ಟು ನಂಬಿಕೆನಾ" ಅಂದ್ರೆ. "ನಂಬಿಕೆ ಎಲ್ಲ ಏನೂ ನನಗೆ ಗೊತ್ತಿಲ್ಲ, ನೀವು ನನ್ನವರು ಅದು ನನಗೆ ಗೊತ್ತು ಅಷ್ಟು ಸಾಕು, ಆದ್ರೆ ನಿಮ್ಮನ್ನು ಆ ಹುಡುಗಿ ನಂಬಿ ನಿಂತಿದ್ದಳೊ ಏನೊ" ಅಂತಂದಳು "ಅಯ್ಯೋ ನನ್ನನ್ನೂ ಯಾವುದೊ ಪೋಲಿ ಅಂದುಕೊಂಡಿರಬೇಕು, ಆದ್ರೂ ನನ್ನ ನೋಡಿದ್ರೆ ಹಾಗೇನೂ ಕಾಣಲ್ಲ ಬಿಡು" ಅಂದೆ "ಈ ಇಂಗ್ಲೀಷ್ ಫಿಲಂಗಳಲ್ಲಿ ದರೋಡೆಕೊರರು ಕೋಟು ಸೂಟಿನಲ್ಲೇ ಬರೋದು" ಅಂತ ಕಿಚಾಯಿಸಿದಳು, "ಈಗೇನು ಅವಳೇನು ಅಂದುಕೊಂಡ್ರೆ ನನಗೇನು, ನನಗೆ ಅಲ್ಲಿ ಆ ಸಮಯ ಸುರಕ್ಷಿತ ಅನಿಸಲಿಲ್ಲ ಅದಕ್ಕೆ ಕಾದಿದ್ದು ಬಂದೆ, ನನ್ನ ಮನದ ತೃಪ್ತಿಗಾಗಿ. ಅವಳಿಗೆ ಎನೂ ಆಗಲಿಲ್ಲ ಅದು ಸಮಾಧಾನ, ಅಷ್ಟು ಸಾಕು ನನಗೆ" ಅಂದೆ "ರೀ ಅಷ್ಟೊತ್ತು ಅಲ್ಲೇನು ಮಾಡ್ತಾ ಇದ್ಲು" ಅಂದ್ಲು "ಹೀಗೆ ನಮ್ಮಂಥ ಯಾವುದೋ ಕೆಲಸದಲ್ಲಿರಬೇಕು, ಲೇಟಾಗಿರಬೇಕು, ಪಾಪ, ಮಳೆ ಕಾದಿದ್ದಾಳೆ" ಅಂದೆ "ಅದೂ ಸರಿ ಈ ಕೆಲಸ ಎಲ್ಲ ಲೇಟಾಗಿ ಹಾಗಾಗತ್ತೆ, ಮನೆಗೆ ಡ್ರಾಪ್ ಮಾಡಿ ಬರಬೇಕಿತ್ತು" ಅಂತ ಕೀಟಲೆಗಿಳಿದಳು "ಲೇ ಅವಳನ್ನು ಹಾಗೆ ಕೇಳಿದ್ದರೆ ಕೊಟ್ಟಿರೋಳು ಒಂದು ಮುಖಕ್ಕೆ, ಒಂದು ಮಿತಿಯಲ್ಲಿ ನಾನು ಆ ಸಮಯದಲ್ಲಿ ಏನು ಮಾಡಬಹುದಾಗಿತ್ತೊ ಅದನ್ನು ಮಾಡಿದೆ, ಹಾಗೆಲ್ಲ ಮಾಡಿದರೆ ಬೆಂಗಳೂರಿನಲ್ಲಿ ಡ್ರಾಪ್ ಸರ್ವೀಸ ಮಾಡ್ತಾ ಇರಬೇಕಾಗತ್ತೆ ನಾನು" ಅಂದೆ. "ರೀ ಅವಳಿಗೆ ಯಾರಾದ್ರೂ ಬಂದು ಛೇಡಿಸಿದ್ರೆ, ಫೈಟಿಂಗ ಮಾಡ್ತಾ ಇದ್ರಾ ಡಿಶುಂ ಡಿಶುಂ ಅಂತಾ" ಅಂತ ನನಗೆ ಎರಡು ಕೊಟ್ಟಳು "ಲೇ ಛಳಿಯಾಗ್ತಿದೆ ಅದರಲ್ಲಿ ನೀನು ಹೊಡೀಬೇಡ, ಪೆಟ್ಟಾಗತ್ತೆ" ಅಂತನ್ನುತ್ತ ಅವಳನ್ನೇ ಹೊದ್ದು ಬೆಚ್ಚಗೆ ಮಲಗಿದೆ.
ಈ ಮಹಾನಗರಗಳು ರಾತ್ರಿ ಸುರಕ್ಷಿತವಾಗಿ ಉಳಿದಿಲ್ಲ, ಹೀಗೆ ಕೆಲಸ ಮುಗಿಸಿ ಲೇಟಾಗಿ ಬರುವ ಹೆಣ್ಣು ಮಕ್ಕಳಿಗಂತೂ ಬಹಳ ತೊಂದ್ರೆ, ಆದಷ್ಟು ನಮ್ಮ ಜಾಗರೂಕತೆ ನಮಗೇ ಮೇಲು, ಮಳೆಯಲ್ಲಿ ನೆನೆದಾದರೂ ಸರಿ ಬೇಗ ಮನೆ ತಲುಪುವುದೇ ಕ್ಷೇಮ, ಹಾಗೆ ಬಹಳೇ ಲೇಟಗುತ್ತಿದ್ದರೆ ಕಂಪನಿಯ ಕ್ಯಾಬ ಸೌಕರ್ಯ(ಅದೂ ಸಂಪೂರ್ಣ ಸುರಕ್ಷಿತವಾಗಿಲ್ಲ) ಉಪಯೋಗಿಸಿ, ಇಲ್ಲವಾದರೆ ನಿಮ್ಮ ನಂಬಿಕೆಯ ಸಹುದ್ಯೋಗಿಗೆ ಮನೆವರೆಗೆ ಜತೆಯಾಗಲು ನಿರ್ದಾಕ್ಷಿಣ್ಯವಾಗಿ ಕೇಳಿಕೊಳ್ಳಿ ಯಾರೂ ಇಲ್ಲವೆನ್ನಲ್ಲ.
ಮುಂಜಾನೆ ಆಫೀಸಿಗೆ ರೆಡಿಯಾಗುತ್ತಿದ್ದೆ, ಇಂದು ಕೂಡ ಮಳೆಯಲ್ಲಿ ನೆನೆಯಬೇಡಿ ಬೇಗ ಬನ್ನಿ ಅಂತಿದ್ದಳು ನನ್ನಾಕೆ. "ಬಾ ಮಳೆಯೇ ಬಾ... ಅತ್ತ ಮನೆಯೊಳಗೇ ಬಾರದಿರು... ನನ್ನ ನಲ್ಲೆ ಒದ್ದೆಯಾಗುವಂತೆ" ಅಂತ ನಾ ಹಾಡುತ್ತಿದ್ದರೆ "ಬಾ ಮಳೆಯೇ ಬಾ... ಬೇಗ ಬಂದು ಬಿಡು, ನನ್ನ ನಲ್ಲ ಬರುವ ದಾರಿಯಲ್ಲಿ ಅಡತಡೆಯಾಗದಂತೆ..." ಅಂತ ಅವಳೂ ದನಿ ಸೇರಿಸಿದಳು... ಇಬ್ಬರೂ ನಕ್ಕೆವು... "ರೀ ವರ್ಷಾ ಸಿಕ್ಕರೆ, ಈವತ್ತು ಮಳೆಯಲ್ಲಿ ಕಾಯುತ್ತಾಳಾ ಕೇಳಿ" ಅಂತಿದ್ದಳು ಇಂಥ ನನ್ನಾಕೆಯ ಪಡೆದ ನನ್ನ ಹರ್ಷಕ್ಕೆ ಪಾರವೇ ಇರಲಿಲ್ಲ, ವರ್ಷನಂಥವರು ವರ್ಷ ಕಾದರೂ ನನ್ನಾಕೆಗಾಗಿ ನಾ ಮನೆಯತ್ತಲೇ ಹೆಜ್ಜೆ ಹಾಕುತ್ತೇನೆ. ಮತ್ತೆ ಸಿಕ್ಕೋಣ ಎಲ್ಲೋ ಮಳೆಯಲ್ಲಿ ನೆನೆಯುತ್ತ....
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/male.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, July 12, 2009
ಹುಡುಕಾಟ ಹುಡುಗಾಟ...
ರಾತ್ರಿ ಬಂದದ್ದೇ ಲೇಟು, ಊಟ ಆಯ್ತು ಇನ್ನೇನು ಮಲಗಬೇಕು ಅಂತಿದ್ದೆ, ಆಗಲೇ ನೆನಪಾಗಿದ್ದು ಒಹ್ ನಾಳೆ ಕನ್ಯಾ ನೋಡೊಕೆ ಹೋಗಬೇಕಲ್ವಾ ಅಂತಾ, ಪಕ್ಕದಲ್ಲೇ ಇವಳು ಮಲಗಿದ್ದಳು, "ನಾಳೆನೇ ಅಲ್ವಾ ಹೋಗೋದು ಕನ್ಯಾ ನೋಡೋಕೆ" ಅಂದೆ, "ಹೂಂ ಇನ್ನೂ ನಾಳೆ... ಈಗಿಂದಲೇ ಏನೋ ತಯ್ಯಾರಿ ಮಾಡುತ್ತಿರುವ ಹಾಗಿದೆ..." ಅಂತಂದಳು. ಅಲ್ಲ ನಿಮಗೂ ಕುತೂಹಲ ಕಾಡುತ್ತಿರಬೇಕು ನನ್ನಾಕೆಯೊಂದಿಗೆ ನಾನ್ಯಾವ ಕನ್ಯೆ ನೋಡಲು ಹೊರಟಿದ್ದೇನೆಂದು, ಸಂಶಯವೇ ಬೇಡ, ಅತ್ತ ಸರಿದು ಮಲಗಿದ್ದವಳು, ನನ್ನೆಡೆಗೆ ತಿರುಗಿ "ರೀ ಕನ್ಯೆ ನೋಡೊಕೆ ಹೊರಟಿರೋದು ನನ್ನ ತಮ್ಮನಿಗೆ ನಿಮಗಲ್ಲ, ನೆನಪಿರಲಿ" ಅಂತ ಖಚಿತ ಮಾಡಿದಳು. "ಹೇಗೂ ನೋಡಲು ಹೊರಟಿದ್ದೇವೆ ಅದರಲ್ಲೇ ನನಗೂ ಇನ್ನೊಂದು ನೋಡಿಕೊಂಡು ಬರೊಣ ಅಂತಿದ್ದೆ" ಅಂದೆ. "ಏನು... ರಾತ್ರಿ ಅಲ್ಲಿ ಸೊಫಾ ಮೇಲೆ ಮಲಗೊ ಇರಾದೆ ಏನಾದ್ರೂ ಇದೆಯಾ" ಅಂತ ಧಮಕಿ ಹಾಕಿದ್ಲು, ಗುಮ್ಮನ ಹೆದರಿಕೆ ಹಾಕಿದಾಗ ಮಲಗುವ ಮಗುವಿನಂತೆ ತೆಪ್ಪಗೆ ತಲೆದಿಂಬಿಗೆ ಒರಗಿದೆ.
ಬೆಳಗಿನ ಜಾವ ನಾಲ್ಕೊ ಐದೋ ಆಗಿರಬೇಕು, ಬಾಗಿಲ ಬೆಲ್ ಸದ್ದಾಯಿತು, "ಯಾರಿರಬಹುದು" ಅಂತ ಏಳಬೇಕನ್ನುವಷ್ಟರಲ್ಲಿ ಇವಳು ಎದ್ದು ಹೊರಟಾಗಿತ್ತು, ಬೆಲ್ ಸದ್ದಿಗೇ ಕಾಯುತ್ತ ಮಲಗೇ ಇರಲಿಲ್ಲವೇನೊ, "ಅಮ್ಮ ಅಪ್ಪ ಬಂದಿರಬೇಕು" ಅನ್ನುತ್ತ, ಎನು ಉತ್ಸಾಹ ನೋಡಿ, "ಹೂಂ... ಹಾಗಿದ್ದರೆ ಸರಿ ಬಿಡು" ಅನ್ನುತ್ತ ಮತ್ತೆ ಮುಸುಕೆಳೆದೆ. ಮಾವ ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿದ್ದರು, ಮದುವೆಗೆ ಬಂದಂತೆ. ಬಾಗಿಲು ತೆಗೆದು ಅವರ ಕೂರಿಸಿ ಬಂದವಳು. "ರೀ, ಏಳ್ರೀ, ಅಪ್ಪ ಅಮ್ಮ ಬಂದೀದಾರೆ ಇನ್ನೂ ಏನು ಮಲಗೀದೀರ" ಅಂತ ಮುಸುಕೆಳೆದಳು, "ಈಗಲೇ ಏಳಬೇಕಾ, ಸೂರ್ಯ ಕೂಡ ಕಣ್ಣು ತೆರೆದಿಲ್ಲ" ಅಂದೆ. ಇವಳ ಕಣ್ಣು ಇನ್ನಷ್ಟು ತೆರೆದು ಸೂರ್ಯನಂತೆ ಕೆಂಪಾಗಿ ಮಿನುಗಿದವು.. ಇನ್ನು ಏಳದಿದ್ರೆ ಮುಕ್ಕಣ್ಣನ ಮೂರನೇ ಕಣ್ಣು ಇವಳಿಗೂ ಇದ್ರೆ ಅದನ್ನೂ ತೆರೆದಾಳು ಅನ್ನುತ್ತಾ "ಅವರಿಗೆ ಕಾಫಿ ಟೀ ಏನಾದ್ರೂ ಮಾಡು ಹೋಗು" ಎಂದು ಹೇಳಿ ಎದ್ದೆ.
ವರಾಂಡದಲ್ಲಿ ಇವಳಪ್ಪ ಅಲಿಯಾಸ ನನ್ನ ಮಾವ, ಇವಳ ತಮ್ಮ ಕೂತಿದ್ದರು ಭಾರತ ಪಾಕಿಸ್ತಾನ ಪ್ರಧಾನಿಗಳಂತೆ ಒಬ್ಬರು ಒಂದೊಂದು ವಿರುದ್ಧ ದಿಕ್ಕಿಗೆ ನೋಡುತ್ತ. ನಾ ಸಂಧಾನಕಾರರಂತೆ ಅಲ್ಲಿ ಪ್ರವೇಶಿಸಿದೆ, ಮಾವ ಎದ್ದು "ಅಯ್ಯೊ ಇನ್ನೂ ಬೆಳಗಿನ ಜಾವ ಬೇಗ ಯಾಕೆ ಏಳೋಕೆ ಹೋದಿರಿ" ಅಂತ ಸಂಕೋಚ ಪಟ್ಟುಕೊಂಡರು, ಇಷ್ಟು ಬೇಗ ಬಂದು ಎಬ್ಬಿಸಿದಮೇಲೆ ಯಾಕೆ ಎದ್ದಿರಿ ಅಂತ ಕೇಳಿದ್ರೆ ಏನ್ ಹೇಳಬೇಕು, "ನಿಮ್ಮ ಮಗಳು ಬಿಡಬೇಕಲ್ಲ, ನನಗೇನು ಇನ್ನೂ ಹೊತ್ತೇರುವವರೆಗೆ ಮಲಗಿರ್ತಿದ್ದೆ" ಅನ್ನುತ್ತ ಪ್ರಯಾಣ ಚೆನ್ನಾಗಿತ್ತಾ ಅಂತ ಕುಶಲೋಪರಿಗಿಳಿದೆ... ಅದೇ ಅವಳ ತಮ್ಮ ಅಲ್ಲೇ ಕೂತಿದ್ದ ಒಂದು ಸಾರಿ ದುರುಗುಟ್ಟಿ ನೋಡಿದೆ, ನನ್ನ ನೀಲವೇಣಿಯ nil ವೇಣಿ ಮಾಡಿದ ಕೋಪ ಇನ್ನೂ ಇತ್ತಲ್ಲ ಮತ್ತೆ ನನ್ನವಳ ಜಡೆ ಕತ್ತರಿಸಲು ಕಾರಣನಾದ ಅವನ ಮೇಲೆ ಸಿಟ್ಟಿರದೇ ಬಿಟ್ಟೀತೇ, ಅವನಿಗೂ ಗೊತ್ತಾಗಿರಬೇಕು "ಭಾವ ಸಾರಿ... ಅದು ಅಕ್ಕನ ಜತೆ ಆಟ ಮಾಡ್ತಾ, ಅವಳ ಜಡೆ..." ಅಂತ ತಲೆ ಕೆಳಗೆ ಮಾಡಿದ. ಸ್ವಲ್ಪ ಗಂಟಲು ಸರಿ ಮಾಡಿಕೊಂಡೆ ಮಾತಾಡಲಿಲ್ಲ ಅಳಿಯ ಅಂತ ಗತ್ತು ತೋರಿಸಬೇಕಲ್ಲ. ಮಾವ "ಏನೊ ಹುಡುಗಾಟ ಹಾಗಾಯ್ತು, ಬೇಜಾರ ಮಾಡ್ಕೋಬೇಡಿ" ಅಂತಂದರು. ಪಾಪ ಎಲ್ಲಿ ಅಳಿಯಂದ್ರಿಗೆ ಬಹಳ ಸಿಟ್ಟು ಬಂದಿದೆಯೇನೊ ಅನ್ನುವಂತೆ. "ಮದುವೆ ಆಗೊ ವಯಸ್ಸಾಯ್ತು ಇನ್ನಾದ್ರು ಹುಡುಗಾಟ ಕಮ್ಮಿ ಆಗಬೇಕಲ್ಲ" ಅಂತನ್ನುತ್ತ ಮಾವ ಅವರಿಗೆ ಫ್ರೆಷ್ ಆಗಿ ಅಂತ ಬಾತರೂಮ ಅಲ್ಲಿದೆ ಅಂತಿದ್ದೆ. ಇವಳು ಬಂದು "ಮದುವೆ ಆಗೀನೇ ನಿಮ್ಮ ಹುಡುಗಾಟ ಇನ್ನೂ ಕಮ್ಮಿಯಾಗಿಲ್ಲ, ಅವನಿಗೇನು ಹೇಳ್ತಿದೀರ" ಅಂತನ್ನುತ್ತ ಚಹ ಕಪ್ಪುಗಳ ತೆಗೆದುಕೊಂಡು ಬಂದಳು, ಎಷ್ಟೇ ಅಂದರೂ ತಮ್ಮನ ಮೇಲೆ ಪ್ರೀತಿ, ಅವನ ಪರ ವಹಿಸಿ ಮಾತಾಡದಿರುತ್ತಾಳಾ. ಹಾಗೇ ಒಮ್ಮೆ ವಾರೆ ನೋಟದಲ್ಲಿ ಅವಳತ್ತ ಸಿಟ್ಟಿನಿಂದ ನೋಡಿದೆ, ಗಂಭೀರವಾಗಿ ಹೇಳಿದ್ದನ್ನು ಅಷ್ಟು ಸಲೀಸಾಗಿ ತಳ್ಳಿಹಾಕುತ್ತಿದ್ದಳಲ್ಲ ಅನ್ನುವಂತೆ. ಅವಳಿಗೆ ಅರ್ಥವಾಗಿರಬೇಕು, ಅವನಿಗೆ ಟೀ ಕೊಡುತ್ತ "ನಿನ್ನ ಒಳ್ಳೆದಕ್ಕೇ ಹೇಳ್ತಿರೊದು ಅವರು... ಏನು?" ಅಂದ್ಲು ತಮ್ಮನಿಗೆ, ಅವನೂ ತಲೆಯಲ್ಲಾಡಿಸಿದ. ಪಾಕಶಾಲೆಯಿಂದ ಅವಳ ಅಮ್ಮ ಬಂದರು, ಆ ಹಸನ್ಮುಖಿ ಮುಖ ನೋಡುತ್ತಿದ್ದಂತೆ ಬಂದಿದ್ದ ಸಿಟ್ಟೆಲ್ಲ ಜರ್ರನೇ ಇಳಿದು ಹೋದಂತಾಯಿತು. ಎಂಥ ಪರಿಸ್ಥಿತಿಯಲ್ಲೂ ಆ ನಗು ಹಾಗೆ ಇದ್ದೆ ಇರುತ್ತದೆ, ಬಹುಶ: ಇವರಿಗೆ ಫೊಟೊ ತೆಗೆಯುವಾಗ ಯಾರೋ ಸ್ಮೈಲ್ ಪ್ಲೀಜ ಅಂತ ಹೇಳದೇ ಕೀಪ್ ಸ್ಮೈಲಿಂಗ್ ಪ್ಲೀಜ್ ಅಂದಿರಬೇಕು, ಮಾತಾಡಿದರೆ ಎಲ್ಲಿ ಮುತ್ತು ಉದುರೀತು ಅಂತ ಎಲ್ಲೊ ಎರಡು ಮಾತು ಮತ್ತೆ ಚಿಕ್ಕ ಕಿರುನಗು, ನನ್ನಾಕೆ ಥೇಟ ಇದೇ ಹೋಲಿಕೆ ಅದಕ್ಕೇ ಅಲ್ವೇ ನನಗೇ ಇಷ್ಟವಾಗಿದ್ದು. ಅವರ ನೋಡುತ್ತಿದ್ದಂತೆ ನನ್ನ ಮುಖದಲ್ಲೂ ಒಂದು ಮುಗುಳ್ನಗು ಮಿಂಚಿತು ಪರಿಸ್ಥಿತಿ ತಿಳಿಯಾಯ್ತು.
ಚಹ ಎಲ್ಲ ಆಯ್ತು, ಸ್ನಾನಕ್ಕೆ ಹೊರಟ ತಮ್ಮನಿಗೆ, "ಕಡಲೇ ಹಿಟ್ಟು ಇಟ್ಟೀದೀನಿ, ಅದನ್ನೇ ಹಚ್ಕೋ ಮುಖ ಸ್ವಲ್ಪ ಖಳೆ ಬರತ್ತೆ" ಅಂದ್ಲು. ಮುಸಿ ಮುಸಿ ನಕ್ಕೆ... "ಯಾಕ್ರೀ" ಹುಬ್ಬು ಗಂಟಿಕ್ಕಿದಳು, "ಆ ಮುಖಕ್ಕೆ ಏನು ಹಚ್ಚಿದರೂ ಅಷ್ಟೇ" ಅಂದೆ . "ಯಾಕ್ರೀ ನನ್ನ ತಮ್ಮನಿಗೆ ಏನಾಗಿದೆ" ಅಂತ ಜಗಳಕ್ಕೆ ಬಂದಳು, "ಎಯ್ ನಿನ್ನ ತಮ್ಮ ಹೃತಿಕ, ಹೃತಿಕ ಇದ್ದ ಹಾಗೇ ಇದಾನೆ" ಅಂದೆ. "ಹೃತಿಕ ಅಂತ ಹೇಳಿದ್ರೆ ಬಿಡ್ತೀನಿ ಅಂತ ಅನ್ಕೊಂಡಿದೀರಾ, ನನ್ನ ಮುದ್ದಿನ ಹೃತಿಕ್ ನೀವೇ ಮಾತ್ರ" ಅಂತನ್ನುತ್ತ ಹತ್ತಿರ ಬಂದಳು, ಅದ್ಯಾವ ಆಂಗಲ್ಲಿನಲ್ಲಿ ಅವಳಿಗೆ ಹಾಗೆ ಕಂಡೆನೊ ದೇವರೇ ಬಲ್ಲ. ಅವರಮ್ಮ ಅಲ್ಲಿ ಬಂದದ್ದರಿಂದ ಅಲ್ಲಿಂದ ಕಾಲು ಕಿತ್ತಳು, "ಅತ್ತೆ, ಮತ್ತೇನು ಸೊಸೆ ಬರ್ತಾಳೆ ಮನೆಗೆ ಇನ್ನ" ಅಂತ ಮಾತಿಗೆಳೆದೆ "ಹೂಂ ಏನು ಎಲ್ಲಾ ಹೊಂದಿಕೊಂಡು ಹೋದ್ರೆ ಸಾಕು, ಎಲ್ಲಾ ಅವನಿಷ್ಟ, ನೀವೆ ಮುಂದೆ ನಿಂತು ಮಾಡಬೇಕು" ಅಂತ ನಮ್ಮ ಮೇಲೆ ಭಾರ ಹಾಕಿದ್ರು. ಸ್ನಾನ ಮುಗಿಸಿ ಅವನೂ ಹೊರಬಂದ, "ನಿನ್ನ ತಮ್ಮ ಲಕ ಲಕ ಹೊಳೀತಾ ಇದಾನೇನು ನೋಡು" ಅವಳ ಕರೆದೆ, ಅತ್ತೇ ಸೋಫಾ ಮೇಲೆ ಆಸೀನರಾದರು ಮತ್ತದೇ ಮುಗುಳ್ನಗುವೊಂದಿಗೆ. "ಅತ್ತೆ, ನನಗೊಬ್ಳು ಬಾಬ ಕಟ್ ಮಾಡಿದ ಹುಡುಗಿ ಗೊತ್ತೀದ್ದಾಳ ನೋಡ್ತೀರಾ" ಅಂತ ಕಾಲೆಳೆದೆ, ಅಲ್ಲಿಂದಲೇ, ಅವ ಕೂಗಿದ "ಭಾವ ಬೇಡ ಭಾವ", ಇವಳು ಬಂದು "ರೀ ನಿಮ್ದು ಅತಿಯಾಯ್ತು, ಅವನ ಮೇಲೆ ಯಾಕ್ರೀ ನಿಮಗೇ ಅಷ್ಟು ಸಿಟ್ಟು, ಪಾಪ" ಅಂದಳು. "ಏನೊಪ್ಪಾ ನನಗೆ ಗೊತ್ತಿರೊ ಹುಡುಗಿ ಬಗ್ಗೆ ಹೇಳಿದೆ" ಅಂದೆ. "ಸಂಪ್ರದಾಯ ಮನೆತನದ ಸುಲಕ್ಷಣ ಹುಡುಗಿ ಯಾರಾದ್ರೂ ಗೊತ್ತಿದ್ರೆ ಹೇಳಿ" ಅಂದ್ಲು "ಹೂಂ ಸ್ವಲ್ಪ ಸ್ಮಾರ್ಟ್ ಆಗಿರೊ ಕೆಲಸ ಮಾಡ್ತಿರೋ ಹುಡುಗಿ ನೋಡ್ತಿದೀವಿ" ಅಂತ ಅವರಪ್ಪ ಬೇರೆ ದನಿಗೂಡಿಸಿದರು, "ಸ್ಮಾರ್ಟ್ ಹುಡುಗೀ ಬೇಕೇನೊ" ಅಂದೆ "ಹೂಂ" ಅನ್ನುತ ನಾಚಿದ "ಐಷ್ವರ್ಯಾ ರೈ ಗೆ ಕೇಳಬೇಕೆಂದ್ರೆ ಮದುವೆ ಆಗೊಯ್ತು." ಅಂತಿದ್ದಂಗೆ "ಪಾಪ ನಿಮಗಾಗೇ ಕಾಯ್ತಾ ಇದ್ಲು, ನೀವ್ ನನ್ನ ಮದುವೆ ಆದದ್ದು ಗೊತ್ತಾದ ಮೇಲೆ ಅವಳು ಬೇರೆ ಮದುವೆ ಆಗಿದ್ದು.. ಪ್ಚ್!" ಅಂತ ಇವಳಂದಳು, ಎಲ್ರೂ ನಕ್ರು.
ರೆಡಿಯಾದೆ, ಅವಳ ತಮ್ಮನಿಗಿಂತ ನಾನೇ ಟಿಪ್ ಟಾಪ್ ಆಗಿ, ಇವಳು ಅಸಹನೆಯಿಂದಲೇ ನೋಡುತ್ತಿದ್ದಳು ನಾ ಒಳಗೊಳಗೇ ನಗುತ್ತಿದ್ದೆ, ಮೊದಲ ಮನೆಯಲ್ಲಿ ಬರ್ಜರಿ ಸ್ವಾಗತವಾಯಿತು, ಭಲೇ ಶ್ರೀಮಂತರು ಅನಿಸತ್ತೆ ಒಬ್ಬಳೆ ಮಗಳು ಕಾರು ಬಂಗಲೆ ಎಲ್ಲ ಇದೆ ಅಂತ ಮೊದಲೇ ಕೇಳಿದ್ದೆ, ಯಾಕೊ ಅಷ್ಟು ಶ್ರೀಮಂತರು ಅಂದಿದ್ದಕ್ಕೆ ಎಲ್ಲ್ ಸಪೊರ್ಟ ಇರತ್ತೆ ಭಾವ ಅಂತ ಬೇರೆ ಇವನು ಹೇಳಿದ್ದ, ಮದುವೇ ಆಗೊನು ಅವನು ತಾನೆ ನನಗೇನು ಅಂತ ಹೊರಟಿದ್ದೆ, ಹುಡುಗಿ ಬಂದು ಕೂತಳಂತೆ ಕಾಣತ್ತೆ "ಎಲ್ಲೇ ಹುಡುಗಿ ಅಂದೆ", ಅದೋ ಅಲ್ಲಿ ಅಂತ ತೋರಿಸಿದಳು ಶ್ರೀಮಂತರು ತಿನ್ನೋಕೆ ಏನೂ ಕಡಿಮೆ ಮಾಡಿದಂತಿರಲಿಲ್ಲ, ಹುಡುಗಿಗೆ ಪಾಪ ಕೂರಲು ಚೇರು ಕೂಡ ಸಾಲುತ್ತಿರಲಿಲ್ಲ. "ನಾನಂತೂ ಹುಡುಗಿಯ ಅಮ್ಮ ಇರಬೇಕು ಅನ್ಕೊಂಡಿದ್ದೆ" ಅಂದೆ, ಇವಳು ಬಂದ ನಗು ತಡೆದುಕೊಂಡು "ರೀ ಸುಮ್ನಿರಿ" ಅಂದ್ಲು "ಅಲ್ಲ ಕಣೆ ಹುಡುಗೀ ಜತೆ ಕ್ರೇನ ಒಂದು ಫ್ರೀಯಾಗಿ ಕೊಡ್ತಾರಾ ಕೇಳು ನಿನ್ನ ತಮ್ಮ ಅಡಿಯಲ್ಲಿ ಸಿಕ್ರೆ ಎತ್ತೋಕೇ ಬೇಕಾಗತ್ತೆ" ಅಂದೆ. ಮಾವನಿಗೆ ಇಷ್ಟ ಇತ್ತು ಆಸ್ತಿ ಪಾಸ್ತಿ ಎಲ್ಲ ನೋಡಿ, ಅವಳಿಗಾಗೇ ಮನೆ ತುಂಬಾ ಸೊಫಾಗಳನ್ನೇ ಹಾಕಲು ಕೂಡ ಯೋಚಿಸಿರಬೇಕು!, ಇವನಿಗೆ ಹುಡುಗಿ ಹೇಗೆ ತಾನೇ ಇಷ್ಟವಾದಾಳೂ.
ಎರಡನೇ ಮನೆ ಎಲ್ಲಿ ಅಂದೆ, ಮನೆ ಅಲ್ಲ ಹೊಟೇಲು ಅಂದ್ಲು "ಹಾಂ ಹೊಟೇಲಾ" ಅಂದೆ "ರೀ ಹುಡುಗೀ ಒಬ್ಳೇ ಬರ್ತಾ ಇದಾಳೆ ಅವಳಿಗೆ ಓಕೇ ಆದ್ರೆ ಆಮೇಲೆ..." ಅದೂ ಸರಿ, ಅಂತ ಅಲ್ಲಿ ಹೋದರೆ ಕಾಲ ಮೇಲೆ ಕಾಲು ಹಾಕಿ ಮೊಬೈಲು ಅತ್ತಿಂದಿತ್ತ ತಿರುಗಿಸುತ್ತ ಕೂತ ಹುಡುಗಿ ಕಾಣಿಸಿತು, ಹುಡುಗ ಅವಳ ಮಾತಾಡಿಸುವ ಮುಂಚೆ ಅವಳೇ ಅವನ ಮೇಲೆ ಪ್ರಶ್ನೆಗಳು ಸುರಿಮಳೆಗರೆದಳು, ನನ್ನ ಕೆಲಸದ ಇಂಟರವೀವ್ ಕೂಡ ಅದಕಿನ್ನ ಪಾಡು. ನಮಗೇನು ಕೆಲಸ ಅಲ್ಲಿ ಅನ್ನುವಂತೆ ಟೆನ್ನಿಸ ನೋಡುವ ಹಾಗೆ ಅವಳನ್ನೊಮ್ಮೆ ಅವನನ್ನೊಮ್ಮೆ ನೋಡುತ್ತ ಕೂತದ್ದಾಯಿತು, ಅವರದೇ ಮಾತುಕತೆ ಮುಗಿದಾದ ಮೇಲೆ ಇನ್ನು ನೀವೇನಾದ್ರೂ ಮಾತೋಡೊದು ಇದೆಯಾ ಅಂತ ಕೇಳಿದ್ದಕ್ಕೆ, ಇವಳು "ಹೊರಡೋಣವಾ" ಅಂತಂದಳು. "ಐ ವಿಲ ಗೆಟ್ ಬ್ಯಾಕ ಟು ಯು(ನಾ ನಿಮಗೆ ಆಮೇಲೆ ಏನಂತ ಹೇಳ್ತೀನಿ)" ಅಂತ ಅ ಹುಡುಗಿ ಹೊರಟಳು ಥೇಟ್ ನಮ್ಮ ಕೆಲಸದ ಇಂಟರವೀವಗಳು ಆದ ಮೇಲೆ ಹೇಳುವ ಮ್ಯಾನೇಜರಗಳಂತೆ. ಅವನೋ ಹಿರಿ ಹಿರಿ ಹಿಗ್ಗಿದ್ದ, "ಭಾವ ಏನ್ ಕಾನ್ಫಿಡೆನ್ಸ(ಆತ್ಮವಿಶ್ವಾಸ) ಇತ್ತು ಅವಳಲ್ಲಿ ನೋಡಿದ್ರಾ" ಅಂತಂದ. ನಾನೇನೋ ಹೇಳೊ ಮುಂಚೆ ಅವರಮ್ಮ "ನಮ್ಮನೆಗೆ ಸರಿ ಹೋಗಲ್ಲ ಬಿಡು" ಅಂತ ತಳ್ಳಿಹಾಕಿದ್ರು.
"ಇನ್ನೆಲ್ಲಿ ಮನೆ ಹೊಟೇಲು ಆಯ್ತು ಪಾರ್ಕಾ" ಅಂದೆ. ಅವಳು "ನೀವು ನಿಮಗೆ ಬೇಕಿದ್ರೆ ಅಲ್ಲೇ ಹುಡುಕಿಕೊಳ್ಳಿ" ಅನ್ನುತ್ತಲೇ ಮತ್ತೊಂದು ಮನೆ ಮುಂದೆ ನಿಂತಿದ್ದೆವು ಪಕ್ಕ ಸಂಪ್ರದಾಯಸ್ತ ಕುಟುಂಬವಂತೆ, ಮನೆಗೆ ಹೋಗುತ್ತಲೇ ಕಾಲು ತೊಳೆಯಲು ನೀರು ಕೊಟ್ಟರು, ಇವನು ಸಾಕ್ಸ ಬಿಚ್ಚಲ್ಲ ಅಂತ ಹಾಗೆ ಒಳ ನಡೆದ. ಹಳೆ ಕಾಲದ ಮನೆ, ನನ್ನ ಮುಂದೆ ಒಂದು ಚೇರು ತಂದಿಟ್ಟರು, ಅದು ನನಗಲ್ಲ ಅನ್ನುವಂತೆ ಆ ಕಡೆ ದೂರ ಸರಿದು ನಿಂತೆ, ಮತ್ತೆ ಅಲ್ಲಿ ನನ್ನ ಮುಂದೆ ತಂದು ಪ್ರತಿಷ್ಟಾಪಿಸಿದ್ರು, ನನಗೋ ಗೊತ್ತಾಗಿ ಹೋಯ್ತು ನನ್ನೇ ವರ ಅಂತ ತಿಳಿದಿದ್ದಾರೆ ಅಂತ, "ಬಾರೋ ಕೂತ್ಕೊ ಅಂತ ಅವನ ಕರೆದೆ". "ಅವರು ಅಲ್ಲಿ ಕೂರ್ತಾರೆ, ನೀವು ಕೂತ್ಕೋಳ್ಳಿ" ಅಂತ ಹುಡುಗಿಯ ಅಪ್ಪ. ವರನ ಜತೆ ವರನ ಗೆಳೆಯ ಯಾರೊ ಬಂದಿರಬೇಕು ಅಂತ ಅವರನಿಸಿಕೆ, ಮತ್ತಿನ್ನೆನು, ಜೀನ್ಸು ಹಾಕಿಕೊಂಡು ಸಾಕ್ಸು ಕೂಡ ಕಳೆಯದೆ ಹಾಗೆ ಅವರ ಮನೆಗೆ ನುಗ್ಗಿದ ಇವನ್ಯಾರೊ ಬೇರೆ ಇರಬೇಕು ಅಂತ ಎಣಿಸಿದ್ದರೆ ಅವರದೇನು ತಪ್ಪು, ಅಷ್ಟರಲ್ಲಿ ಇದನ್ನು ಗಮನಿಸಿದ ನನ್ನಾಕೆ "ಏನ್ರೀ ಇಲ್ಲಿ ಬನ್ರಿ" ಅಂತ ಕರೆದಳು, "ನನ್ನ ಹೆಂಡತಿ ಕರೀತಿದಾಳೆ ಬಂದೆ" ಅಂತ ಅವನ ಕೂರಿಸಿ ಅವಳ ಪಕ್ಕ ಹೋಗಿ ಕೂತೆ ಆಗಲೇ ಅವರಿಗೆ ಗೊತ್ತಾಗಿದ್ದು, ಅಕ್ಕ ಭಾವ ಅಂತ. ಅಂತೂ ನೋಡಿಯಾದ ಮೇಲೆ, ಹೊರಬಂದರೆ, ಇವಳು ನನ್ನ ತಿವಿಯುತ್ತಾ "ಮೊದಲೇ ಹೇಳಿದೆ ನೀವ್ ಜಾಸ್ತಿ ಏನ್ ಟಿಪ್ ಟಾಪ್ ಆಗಿ ತಯ್ಯರಾಗೋದು ಬೇಡ ಅಂತ, ನೀವ್ ಕೇಳಬೇಕಲ್ಲ" ಅಂತ ಬಯ್ಯುತ್ತಿದ್ಲು, "ನೋಡಿದ್ಯಾ ನನಗಿನ್ನೂ ಮದುವೆಯಾಗಿದೆ ಅಂತ ಯಾರಿಗೂ ಅನಿಸಲ್ಲ" ಅಂತ ನಾ ಖುಷಿಯಾಗುತ್ತಿದ್ದೆ, ಆದರೆ ಇನ್ನು ಮುಂದೆ ನಾನು ಅವರೊಂದಿಗೇನು ಬರ್ಒದು ಬೇಡ ಅಂತ ಅವಳು ತೀರ್ಮಾನ ಮಾಡಿ ಆಗಿತ್ತು. ಒಳ್ಳೆದೇ ಅಯ್ತು ಅಂತ ಮನೆ ಕಡೆ ಹೊರಟೆ, ಅವರಮ್ಮನಿಗೆ ಬಹಳ ಹಿಡಿಸಿತ್ತು ಈ ಸಂಬಂಧ, "ಮನೇನಾ ಸರ್ಕಸ್ ಕಂಪನೀನ ಅದು" ಅಂತ ಆ ಅವಿಭಕ್ತ ಕುಟುಂಬ ಒಲ್ಲದಾಗಿದ್ದ ಮಗ. ನಾನನ್ಕೋತಾ ಇದ್ದೆ ಎಲ್ರಿಗೂ ಹಿಡಿಸಿದ್ರೂ ಅವರೇ ಮೊದಲು ಒಪ್ಪೋದಿಲ್ಲ ಹುಡುಗನ್ನ ಅಂತ...
ಇನ್ನೂ ನಾಲ್ಕೈದು ನೋಡಿ ಇವರು ಮನೆಗೆ ಬಂದಾಗ ರಾತ್ರಿಯಾಗಿತ್ತು, ಒಂದೂ ಇಷ್ಟವಾಗಿರಲಿಲ್ಲ, ಒಬ್ಬಳ ಮೂಗು ಸರಿ ಇಲ್ಲ ಅಂದ್ರೆ ಇನ್ನೊಬ್ಬಳ ನಡೆ ಸರಿ ಇಲ್ಲ, ಎಲ್ಲ ಸರಿ ಇದೆ ಎಂದಾದರೆ ಮನೆ ಚೆನ್ನಾಗಿಲ್ಲ, ಇನ್ನೇನು ಇಷ್ಟವಾದ್ರೆ ಅವರ ಒಪ್ಪಲಿಕ್ಕಿಲ್ಲ. ಅಂತೂ ಹುಡುಕಾಟ ಇನ್ನೂ ಜಾರಿಯಾಗಿರುವಂತೆ ಕಂಡಿತು.
ಈ ಒಳ್ಳೆ ಕನ್ಯೆಗಾಗಿ ಹುಡುಕಾಟದ ಕಾಟ ಯಾರಿಗೂ ತಪ್ಪಿದ್ದಲ್ಲ, ಎಲ್ಲೊ ಮೊದಲೇ ಮನೆಯಲ್ಲೆ ಸಂಬಂಧಿಕರ ಹುಡುಗಿ ಅಂತ ನಿರ್ಧರಿಸಿದ್ದರೆ, ಇಲ್ಲ ಹುಡುಗ ತಾನೆ ಯಾರನ್ನೋ ಹುಡುಕಿಕೊಂಡ ಹೊರತು ಇದೆಲ್ಲ ಆಗೋದೆ. ಎಲ್ಲರ ಇಷ್ಟ ಕಷ್ಟಗಳ ಹೊಂದಾಣಿಕೆ ಮಾಡಿ ಹೆಂಡತಿ ಅಂತ ಹುಡುಗನಿಗೆ ಸಿಗುವ ಹೊತ್ತಿಗೆ ರಾಮಾಯಣ ಮಹಾಭಾರತ ಕಥೆಗಳಾಗಿರುತ್ತವೆ ಮನೆಗಳಲ್ಲಿ, ಯಾಕೆಂದರೆ ಮನೆಗೆ ಬರುವವಳು ಬರೀ ಅವನ ಹೆಂಡ್ತಿಯಾಗಿರದೇ ಮನೆಯ ಸೊಸೆ ಕೂಡ ಆಗಿರುವುದರಿಂದ. ಈಗೇನು ಮ್ಯಾಟ್ರಿಮೋನಿಯಲ ಅಂತ ವೆಬಸೈಟುಗಳು, ಬ್ರೋಕರಗಳು ಬಂದೀದಾರೆ ಅವರಿಗೆ ದುಡ್ಡು ಸುರಿದರೆ ಸಾಕು ನಿಮ್ಮ ಎತ್ತರ, ತೂಕ, ಅಳತೆ, ಸ್ಟೇಟಸ್ಸು, ಜಾತಿ, ಊರು ಎಲ್ಲ ಸೇರಿ ಹೊಂದಿಕೆಯಾಗುವಂಥ ಹತ್ತಿಪ್ಪತ್ತು ಹುಡುಗಿಯರ ಹುಡುಕಿ ಕೊಟ್ಟುಬಿಡುತ್ತಾರೆ, ಅದರಲ್ಲೇ ಅಳೆದು ಸುರಿದು ಒಂದು ಆಯ್ಕೆ ಮಾಡಿಕೊಂಡು ಬಿಟ್ಟರೆ ಮದುವೆ ಕೂಡ ಅವರೇ ಮಾಡಿಸಿಬಿಡುತ್ತಾರೆ, ಸಧ್ಯ ಮಕ್ಕಳು ಕೂಡ ಹುಟ್ಟಿಸಿ ಕೊಡುತ್ತಿಲ್ಲ!. ಮೊದಲೇನೊ ಒಂಥರಾ ಚೆನ್ನಾಗಿತ್ತು ತಮ್ಮ ಮುಂದೆ ಬೆಳೆದ ಹುಡುಗ ಹುಡುಗಿಯರಲ್ಲಿ ಯಾರಿಗೆ ಯಾರು ಸರಿ ಹೋಗಬಹುದು ಅಂತ ಹಿರಿಯರು ನಿರ್ಧರಿಸಿ ಮದುವೆ ಮಾಡಿ ಬಿಡುತ್ತಿದ್ದರು (ಅದೇ ಚೆನ್ನಾಗಿತ್ತು ಅಂತಲ್ಲ, ಅದರಲ್ಲೂ ಸಾಧಕ ಬಾಧಕಗಳಿದ್ದವು). ಈಗೇನೊ ಚಾಟಿಂಗನಲ್ಲಿ ಸಿಕ್ಕು, ಒರ್ಕುಟನಲ್ಲಿ ಫೋಟೊ ನೋಡಿ, ಫೋನಲ್ಲಿ ಫಿಕ್ಸ್ ಮಾಡಿ, ಹೊಟೇಲಲ್ಲಿ ಮದುವೆಯಾಗಿ ಬಿಡ್ತಾರೆ.
ಅವರು ಮತ್ತೆ ಊರಿಗೆ ಹೊರಟು ರೆಡಿಯಾಗಿದ್ದರು, ಅಲ್ಲಿ ಮತ್ತಿನ್ನೂ ನೋಡೊದಿದೆ ಅಂತ. "ಹೀಗೇ ಹುಡುಕುತ್ತ ಹೋದ್ರೆ ಮುದುಕ ಆಗ್ತೀಯ, ನೀನೇ ಎಲ್ಲೊ ಒಂದು ನೋಡ್ಕೊಂಡು ಬಿಡು" ಅಂತಂದೆ "ಅದೇ ಒಳ್ಳೆದು ಅನಿಸ್ತಿದೆ" ಅಂದ, ಇವಳು "ರೀ ನಾನಿಲ್ವಾ ಹುಡುಕಿ ಮದುವೆ ಮಾಡ್ತೀನಿ ನನ್ನ ತಮ್ಮನಿಗೆ, ನೋಡ್ತಿರಿ" ಅಂದ್ಲು. ಅವರ ಬೀಳ್ಕೊಟ್ಟು ಮನೆಯೊಳಗೆ ಬಂದ್ವಿ ಸುಸ್ತಾಗಿತ್ತು ಹಾಗೆ ಹಾಸಿಗೆಗೆ ಜಾರಿದಳು, ಪಕ್ಕದಲ್ಲೇ ಕೂತ ನನ್ನ ಕೈ ಹಿಡಿದು "ರೀ ಏನೊ ಹೇಳ್ಬಿಟ್ಟೆ ನಾನಿದೀನಿ ಹುಡುಕ್ತೀನಿ ಅಂತ, ಎಲ್ರೀ ಹುಡುಕೋದು" ಅಂತ ಆತಂಕದಿಂದ ನುಡಿದಳು, ಅವಳಿಗೆ ನಿಜವಾಗಲೂ ಅದೊಂದು ಚಿಂತೆಯಾಗಿತ್ತು. "ಯಾಕೇ" ಅಂದೆ, "ಅಲ್ಲ ಈಗಾಗಲೇ ಹತ್ತಿಪ್ಪತ್ತು ನೋಡಿ ಆಯ್ತು ಯಾವುದು ಸರಿಹೋಗಿಲ್ಲ" ಅಂದ್ಲು. ಒಂದು ಹೇಳ್ತೀನಿ ಕೇಳ್ತೀರ ಅಂದೆ, ಏನು ಅನ್ನುವಂತೆ ನನ್ನೆಡೆಗೆ ಬಂದಳು ತೊಡೆ ಮೇಲೆ ತಲೆಯಿರಿಸಿದಳು, "ಮೊದಲು ನಿಮ್ಮ ಅಗತ್ಯ ಬೇಡಿಕೆಗಳನ್ನು ಕಡಿಮೆ ಮಾಡಿಕೊಳ್ಳಿ ಎಲ್ಲಾ ಸರಿ ಹೊಂದುವ ಹುಡುಗಿ ಸಿಗಲಿಕ್ಕಿಲ್ಲ, ಎರಡನೇದಾಗಿ ಸಿಕ್ಕ ಸಿಕ್ಕ ಹಾಗೆ ಗೊತ್ತಾದ ಎಲ್ಲವನ್ನೂ ನೋಡುತ್ತ ತಿರುಗಿದ್ರೆ, ಹೀಗೆ ಬ್ರೋಕರಗಳ ಹಿಂದೆ ಸುತ್ತುತ್ತಲೇ ಇರುತ್ತೀರಿ, ಅಲ್ಲೆ ಪರಿಚಯಸ್ತರ, ಸಂಬಂಧಿಗಳಲ್ಲಿ ಯಾರಾದರೂ ಮೊದಲಿಂದಲೂ ಗೊತ್ತಿರುವವರು ಇದ್ದರೆ ಪೂರ್ವ ತಪಾಸಣೆ ನಂತರ ಮುಂದುವರೆಯಿರಿ, ಸಿಕ್ತಾರೆ ಬ್ರಹ್ಮ ಎಲ್ಲೊ ಒಂದು ಜೋಡಿ ಸೃಷ್ಟಿ ಮಾಡಿಟ್ಟಿರ್ತಾನೆ" ಅಂದೆ "ನಿಮಗೆ ಮಾತ್ರ ನಾನು ಎಷ್ಟು ಸಲೀಸಾಗಿ ಸಿಕ್ಕೆ" ಅಂದ್ಲು "ಏನ್ ಮಾಡೊಡು ಬಾ ಇನ್ನೂ ಹುಡುಕಿದ್ರೆ ಮಿಸ್ ಇಂಡಿಯಾನೇ ಸಿಕ್ಕಿರೋಳು" ಅಂದೆ, "ಕನ್ನಡೀಲಿ ಮುಖಾ ನೊಡ್ಕೊಳ್ಳಿ, ನಾನೇ ಇರಲಿ ಕ್ಯೂಟ್ ಟೆಡ್ಡಿಬಿಯರ ಇದ್ದ ಹಾಗೆ ಇದೀರ ಅಂತ ಒಪ್ಕೊಂಡಿದ್ದು" ಅಂದ್ಲು. ನಿಜ ಹೇಳ್ಬೇಕು ಅಂದ್ರೆ ನನ್ನ ಪಾಲಿಗೆ ಸಿಕ್ಕ ಇವಳೆ ವಿಶ್ವ ಸುಂದರಿ ನನಗೆ. "ಅದಾಯ್ತು ನೋಡು ನಿನ್ನ ತಮ್ಮನಿಗೆ ಎಲ್ಲೂ ಸಿಗದಿದ್ರೆ ಹೇಳು ಆ ಬಾಬ್ ಕಟ ರೋಸಿನಾ ಬೇಕಾದ್ರೆ ಒಪ್ಸೊದು ನನ್ನ ಜವಾಬ್ದಾರಿ" ಅಂದೆ. "ಅವನಿಗೆ ನೀಲವೇಣಿನಾ ತಂದು ಮದುವೆ ಮಾಡಿಸ್ತೀನಿ" ಅಂದ್ಲು. "ತಿರುಪತಿಗೆ ಮುಡಿ ಕೊಡು ಅಂತ ಅವಳ ತಲೆ ನಾ ತುಂಬ್ತೀನಿ" ಅಂದೆ. "ರೀ ಯಾಕ್ರೀ ಅವನ ಮೇಲೆ ಅಷ್ಟು ಸಿಟ್ಟು, ಅವನ ತಪ್ಪಿಂದ ನನ್ನ ಜಡೆ ಕಟ ಆಗಿದ್ರೂ ಈಗ ಮತ್ತೆ ಬೆಳೆದಿದೆ ಗೊತ್ತ" ಅಂತ ನನ್ನ ಮುಖಕ್ಕೆ ಅದರಲ್ಲಿ ಕಚಗುಳಿಯಿಟ್ಟಳು, ವೇಣಿಯೊಂದಿಗೆ ಆಟಕ್ಕಿಳಿದೆ. ಹೀಗೇ ಎಲ್ಲೊ ಹುಡುಕಾಟದಲ್ಲಿ ಮತ್ತೆ ಸಿಗೋಣ..
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/hudukaata.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, July 5, 2009
ಹಾgay ಸುಮ್ಮನೇ...
"ಛೀ ಛೀ ಜಗತ್ತು ಹಾಳಾಗ್ತಾ ಇದೆ, ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ, ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ" ಅಂತೇನೊ ಬಡಬಡಿಸುತ್ತ ಪೇಪರು ಆಕಡೆ ಬೀಸಾಕಿ ಪಾಕಶಾಲೆಗೆ ನಡೆದಳು, ಅಲ್ಲಪ್ಪ ಜಗತ್ತಿನ ಯೋಚನೆ ಇವಳಿಗ್ಯಾಕೆ ಬಂತು ಅಂತೀನಿ, ಅದರಲ್ಲೂ ರಾಮ ಕೃಷ್ಣ ಅಂತಾ ಬೇರೆ ಎಲ್ಲ ಹಳೆ ಕಾಲದ ಮನೆ ಮೂಲೆ ಹಿಡಿದು ಕೂತಿರುವ ಮುದುಕಿಯಂತೆ ಇವಳ್ಯಾಕೆ ಮಾತಾಡ್ತಾ ಇದಾಳೆ, ನನ್ನ ಚಿರಯೌವನ ಚೆಲುವೆಗೇನಾದ್ರೂ ವಯಸ್ಸಾಯ್ತಾ, ಅಂತ ಸಂಶಯವಾಯ್ತು. "ಏನೇ ಇದೆ ಪೇಪರಿನಲ್ಲಿ" ಅಂತನ್ನುತ್ತ ಕೆಳಗೆ ಬಿದ್ದಿದ್ದ ಪೇಪರು ಎತ್ತಿ ನೋಡಿದೆ, ನನಗೇನೂ ಅದರಲ್ಲಿ ಅಂಥದ್ದು ವಿಶೇಷವೇನೂ ಕಾಣಲಿಲ್ಲ.
ಪಾಕಶಾಲೆಯತ್ತ ಹೆಜ್ಜೆ ಹಾಕುತ್ತಾ, "ಏನು ಕಲಿಯುಗ, ಕಲ್ಕಿ ಅಂತೆಲ್ಲ ಅಂತಿದ್ದೆ ಏನಾಯ್ತು, ಪೇಪರಿನಲ್ಲೇನಿದೆ ಅಂಥದ್ದು" ಅಂದೆ, "ಯಾಕೆ ಕಾಣಿಸಲಿಲ್ವಾ, ಅದೇನೊ ಗೇ ರೈಟ್ಸ ಅಂತೆ, 377 ಕಲಂ ತೆಗೆದು ಹಾಕಿ ಕಾನೂನು ಸಮ್ಮತ ಮಾಡ್ತಾರಂತೆ... ಕೃಷ್ಣ, ಕಲಿಯುಗ ಅಧಪತನಕ್ಕಿಳಿದಾಗ ಕಲ್ಕಿಯಾಗಿ ಬಂದು ವಿಶ್ವವನ್ನು ಪುನ: ರಚಿಸುತ್ತೇನೆ ಅಂತ ಹೇಳಿದ್ದನಂತೆ, ಇನ್ನೂ ಯಾಕೆ ಕಾಯ್ತಿದಾನೆ ಅಂತ" ಕೈಲಿದ್ದ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿದಳು, ನಾನೊಂದು ಚಿಕ್ಕ ಮುಗುಳ್ನಗು ಕೊಟ್ಟು ಹೊರಗೆ ಬಂದೆ, "ಅಲ್ರೀ ಈ ಜನರಿಗೆ ಬೇರೆ ಕೆಲಸಾನೆ ಇಲ್ವಾ" ಅಂತನ್ನುತ್ತಾ ಮತ್ತೆ ಹೊರಗೆ ಬಂದಳು, "ಕೆಲವರಿಗೆ ಅದೇ ಕೆಲಸ" ಅಂದೆ. ಅದೇನು ಹಾಗಂದ್ರೆ ಅನ್ನೊವಂತೆ ನೋಡಿದ್ಲು, "ಹೀಗೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂತ ಹೇಳಿಕೊಂಡು ಯಾವುದಾದರೂ ಕೆಲಸಕ್ಕೆ ಬಾರದ ವಿಷಯ ಎತ್ತಿ, ಸಮಾಜ ಸೇವೆ ಅಂತ ಸಮಾಜ ಹಾಳು ಮಾಡೊ ಕೆಲಸ ಮಾಡೋದು" ಅಂದೆ. "ಆದರೂ ಕೆಲವು ಒಳ್ಳೆ ಕೆಲ್ಸಾನೂ ಮಾಡ್ತಿವೆ ಅಲ್ರೀ" ಅಂದ್ಲು, "ನಾನೆಲ್ಲಿ ಇಲ್ಲ ಅಂದೆ, ಅದಕ್ಕೆ "ಕೆಲ" ಅಂತ ಹೇಳಿದ್ದು, ಆದರೆ ಒಳ್ಳೇದಕ್ಕಿಂತ ಇಂಥದ್ದೇ ಜಾಸ್ತಿ ಪ್ರಚಾರ ಆಗಿಬಿಡ್ತದೇ ಏನು ಮಾಡೊದು" ಅಂದೆ. "ಈ ಆಧುನಿಕತೆ ಅಂತ ಎಲ್ಲೊ ಹೋಗ್ತಾ ಇದೀವಿ ಏನೊ" ಅಂದ್ಲು, "ಹಾಗೆ ನೋಡಿದ್ರೆ ಇದೇನು ಆಧುನಿಕ ಜಗತ್ತಿನಲ್ಲೇ ಬಂದದ್ದೇನಲ್ಲ, ಪುರಾತನ ಕಾಲದಲ್ಲೂ ಇತ್ತು ಆದರೆ ಪಾಪ ಪ್ರಜ್ಞೆಯಿಂದ ಬಹಳ ಬೆಳಕಿಗೆ ಬಂದಿರಲಿಲ್ಲ ಅಷ್ಟೇ" ಅಂದೆ. "ಮತ್ತೆ ಮುಂದೇನು" ಅಂದಳು, "ಮುಂದೇನು ಅಂದ್ರೆ, ನಿನಗೆ ಮಗ ಹುಟ್ಟಿ ಮದುವೆ ವಯಸ್ಸಿಗೆ ಬಂದಾಗ ಅಮ್ಮ ನಾನೊಂದು ಹುಡುಗನ್ನ ಇಷ್ಟಪಡ್ತಿದೀನಿ ಅಂತ ಹೇಳದಿರಲಿ ಅಂತ ಬೇಡಿಕೊ ಅಷ್ಟೇ" ಅಂದೆ. "ಇನ್ನೇನು ಯಾವುದೋ ಹುಡುಗಿ ಇಷ್ಟ ಪಡ್ತಿದೀನಿ ಅಂದ್ರೆ ಏನು ಕುಲ ಗೊತ್ರಾ ಏನೂ ನೋಡದೆ ಮದುವೆ ಮಾಡಿಬಿಡೊದಾ?" ಅಂದ್ಲು "ಮತ್ತಿನ್ನೇನು ಹುಡುಗನ್ನ ಮದುವೆ ಆಗ್ತೀನಿ ಅನಲಿಲ್ಲ ಅಂತ ಖುಷಿ ಪಡಬೇಕು ಕಣೇ" ಅಂದೆ. "ಹಾಗೆಲ್ಲ ಆದ್ರೆ ಸಮಾಜ ಏನನ್ನುತ್ತೇರೀ" ಅಂದ್ಲು "ಸಮಾಜ ಏನನ್ನುತ್ತೇ, ಸಮಾಜ ಅನ್ನೊದು ಏನು ಹೇಳು ನಾವೇ ನಮ್ಮ ಸುತ್ತ ಹಾಕಿಕೊಂಡ ಪರಿಧಿ, ಬೇಲಿ ಹಾಗೆ... ಇದೇ ಹದ್ದು ಇದನ್ನು ಮೀರಬಾರದು ಅಂತ ನಮ್ಮವೇ ಕಟ್ಟುಪಾಡುಗಳು, ನಾವೇ ಬದಲಾಗುತ್ತ ನಡೆದರೆ ಆ ಪರಿಧಿಯನ್ನ ದೂರ ಸರಿಸುತ್ತಾ ಹೋಗುತ್ತೇವೆ." ಅಂದೆ.
"ಅರ್ಥ ಆಗ್ಲಿಲ್ಲ" ಅಂದ್ಲು. "ಮೊದಲು ಮದುವೆ ಅಂದ್ರೇನು?" ಅಂದೆ. "ಈ ಡೌಟ್ ಯಾಕೆ ಬಂತೀಗ, ಅದೂ ಮದುವೆ ಆಗಿ ವರ್ಷಗಳೇ ಆದಮೇಲೆ" ಅಂದ್ಲು "ವರ್ಷ ಆಯ್ತಲ್ಲ ಮರೆತು ಹೋಗಿದೆ" ಅಂದೆ "ಸಪ್ತ ಪದಿ ತುಳಿದು, ಏಳೇಳು ಜನ್ಮಕ್ಕೆ ನೀನೇ ನನ್ನ ಸಂಗಾತಿ ಅಂತ ಪ್ರಮಾಣ ಮಾಡಿದ್ದು ಮರೆತು ಹೋಯ್ತಾ?" ಅಂತ ಕಿವಿ ತಿರುವಿದಳು, "ಇನ್ನೂ ತಿರುವಿ ಬಿಡ್ಲಾ ಇಲ್ಲಾ ನೆನಪಿಗೆ ಬಂತಾ" ಅಂದ್ಲು "ಹಾಂ... ನೆನಪಿಗೆ ಬಂತು" ಅಂದೆ, ಕೆಂಪಗಾದ ಕಿವಿ ಸವರಿಕೊಳ್ಳುತ್ತ, "ಈ ಜನ್ಮ ಒಂದೇ ಅಲ್ದೇ ಏಳೇಳು ಜನ್ಮ ಬೇರೆ ಅಂತೆ, ಈಗಲೇ ಸಾಕಾಗಿದೆ" ಅಂತೇನೊ ಗೊಣಗಿದೆ. "ಏನದು ಏನೋ ಗುಸುಗುಸು ಅಂತೀದೀರಾ" ಅಂದ್ಲು "ಹೇ ಏನಿಲ್ಲ ಬರೀ ಏಳೇ ಜನ್ಮಾನಾ, ಇನ್ನೊಂದು ನಾಲ್ಕೈದು ಸೇರಿಸಿ ಒಂದು ಡಜನ್ನು ಮಾಡಿಬಿಡಬಹುದಿತ್ತಲ್ಲ ಅಂತಾ ಇದ್ದೆ.. ಹೀ ಹೀ ಹೀ" ಹಲ್ಲು ಕಿರಿದೆ. "ಏಳೇಳು ಜನ್ಮಾ ಏನೂ ಬೇಡ ಈ ಜನ್ಮದಲ್ಲಾದರೂ ನನ್ನ ಜತೇನೆ ಇದ್ರೆ ಸಾಕಪ್ಪ" ಅಂದ್ಲು. ಅಬ್ಬಾ ದೀಪಾವಳಿ ಬಟ್ಟೆ ಸೇಲಿನಲ್ಲಿ ಒಂದು ತೆಗೆದುಕೊಂಡ್ರೆ ಆರು ಫ್ರೀ ಅಂತ ಡಿಸ್ಕೌಂಟ ಸಿಕ್ಕಷ್ಟು ಖುಷಿಯಾಯ್ತು. "ಹಾಗಾದ್ರೆ ಮದುವೆಯಂದ್ರೆ ನೀನು ನಾನು ಜತೆಯಾಗಿ ಸಂಗಾತಿಗಳಾಗಿ ಜೀವನ ಮಾಡ್ತೀವಿ ಅಂತ ಜೊತೆಯಾಗೋದು ಅಂದ ಹಾಗಾಯ್ತು" ಅಂದೆ, "ಬರೀ ಅಷ್ಟೇ ಏನಲ್ಲ, ಆದರೂ ಚಿಕ್ಕಾದಾಗಿ ಹೇಳಬೇಕೆಂದ್ರೆ ಅದು ನಿಜ" ಅಂದ್ಲು. "ಹಾಗಾದ್ರೆ ಅದನ್ನೇ ಹುಡುಗ ಹುಡುಗಾನೇ, ರಾಮ್ ವೆಡ್ಸ ಶಾಮ್ ಅಂತ, ಇಲ್ಲ ಹುಡುಗಿ ಹುಡುಗಿಯೇ ರಿಂಕಿ ವೆಡ್ಸ ಪಿಂಕಿ ಅಂತಾನೊ ಯಾಕೆ ಮಾಡಬಾರದು, ಅವರೇ ಜತೆ ಜತೆಯಾಗಿ ಯಾಕೆ ಇರಬಾರದು ಅಂತಾನೇ ಅವರು ಕೇಳ್ತಿರೋದು" ಅಂದೆ, "ಅಲ್ಲ ಹುಡುಗೀರು ಹಾಗೇ ಕೇಳ್ತಿದಾರ?" ಅಂದ್ಲು "ಹೂಂ ಮತ್ತೆ , ಅವರಿಗೆ ಲೆಸ್ಬಿಯನ ಅಂತಾರೆ" ಅಂದೆ. "ಅಬ್ಬಾ, ಹುಡುಗೀರು ಇಷ್ಟು ಮುಂದುವರೆದೀದೀರಾ?" ಅಂದ್ಲು "ನೀನೆ ಹಿಂದೆ ಹೀಗೆ ಮನೇಲಿ ಕೂತಿರೋದು, ಲೀಡ ಏನಾದ್ರೂ ತೆಗೆದುಕೊಳ್ತೀಯಾ ಅವರ ಹೋರಾಟದಲ್ಲಿ" ಅಂದೆ, ಕೈಗೆ ಸಿಕ್ಕ ಸೊಫಾ ಮೇಲಿನ ಎಲ್ಲ ದಿಂಬುಗಳ ಪ್ರಹಾರ ನನ್ನ ಮೇಲಾಯ್ತು.
ಎಲ್ಲ ದಿಂಬುಗಳ ಅತ್ತ ಕಡೆ ಸರಿಯಾಗಿ ಪೇರಿಸಿಟ್ಟು, ಅವಳನ್ನೇ ದಿಂಬು ಮಾಡಿಕೊಂಡು ಒರಗಿದೆ, ಇನ್ನೂ ಕೆಂಪಾಗಿದ್ದ ಕಿವಿ ಸವರುತ್ತ, ಏನೋ ಮಹಾನ ಸಂಶೋಧನೆ ಮಾಡಿ ಕಂಡು ಹಿಡಿದ ಹಾಗೆ "ಸಂತತಿ ಹೇಗೆ ಬೆಳೆಯೋದು, ಅದಕ್ಕಾದರೂ ಹುಡುಗ ಹುಡುಗಿ ಮದುವೆಗೆ ಅರ್ಥ ಇದೆಯಲ್ಲ" ಅಂದ್ಲು. "ಮೊದಲೇ ಜನಸಂಖ್ಯೆ ಬೆಳೀತಿದೆ, ಯಾರಿಗೆ ಮಕ್ಕಳಾಗಿ ಏನಾಗಬೇಕಿದೆ, ಅನಾಥ ಮಕ್ಕಳು ದತ್ತು ತೆಗೆದುಕೊಳ್ತಾರೆ" ಅಂದೆ. "ಶಾಲೆಗೆ ಎಲ್ಲಾ ಸೇರಿಸಬೇಕಾದ್ರೆ ಫಾರ್ಮನಲ್ಲಿ ಅಪ್ಪ ಅಮ್ಮಾ ಅಂತ ಯಾರ ಹೆಸ್ರು ತುಂಬೋದು, ಹೇಳಿಬಿಟ್ರೆ ಸುಮ್ನೇನಾ" ಅಂತ ವಾದ ಮಂಡಿಸಿದಳು. "ಇಷ್ಟಕ್ಕೂ ಈಗ ಸದ್ಯ ಮದುವೆ ಆಗಬಹುದು ಅಂತ ಏನೂ ಸಮ್ಮತಿ ಕೊಟ್ಟಿಲ್ಲ(ವಿದೇಶದಲ್ಲಿ ಅದೂ ಆಗಿದೆ), ಅದು ಕಾನೂನುಬಾಹಿರವಲ್ಲ ಅಂತ ಮಾತ್ರ, ಅದರ ಮೇಲಿದ್ದ ಕಾನೂನನ್ನು ಕಿತ್ತು ಹಾಕೀದಾರೆ ಅಷ್ಟೇ, ಹಾಗೇನಾದ್ರೂ ನಾಳೆ ಮದುವೆಗೂ ಸಮ್ಮತಿ ಕೊಟ್ರೆ ಅದಕ್ಕೂ ಏನೊ ಒಂದು ಉಪಾಯ ಮಾಡ್ತಾರೆ ಬಿಡು" ಅಂದೆ. "ಕಾನೂನು ಅಂತ ಇತ್ತಲ್ಲ ಈಗ ಅದೂ ಇಲ್ಲ" ಅಂದ್ಲು. "ಅಲ್ಲ ಯಾವ ಕಾನೂನು ಇದ್ದು ಏನು ಆಗಿದೆ ಹೇಳು, ಕಾನೂನುಗಳು ಮಾಡಿದ್ದೇ ಅವುಗಳನ್ನು ಮುರಿಯೋಕೆ, ಮೀರಿ ಹೋಗೋಕೆ ಅನ್ನೊ ಹಾಗಿದೆ ಈಗಿನ ಪರಿಸ್ಥಿತಿ, ಹಾಗಿರುವಾಗ ಆ ಕಾನೂನು ಎಷ್ಟರ ಮಟ್ಟಿಗೆ ಉಪಯೋಗ ಆಗಿತ್ತು? ಆದರೆ ಈ ಕಾನೂನು ತೆಗೆದು ಹಾಕಿದ್ದು ಅವರಿಗೊಂದು ನೈತಿಕ ಜಯ ಸಿಕ್ಕ ಹಾಗೆ ಆಗಿದೆ ಅಷ್ಟೇ" ಅಂದೆ. "ಅಲ್ಲಾ ಆಗಲಿಂದ ನೋಡ್ತಾ ಇದೀನಿ, ಏನು ಬರೀ ಅವರ ಪರವಾಗೇ ವಕಾಲತ್ತು ನಡಿಸೀದೀರಾ ಏನ್ ಕಥೆ ನಿಮ್ದು" ಅಂತ ಹುಬ್ಬು ಹಾರಿಸಿದಳು. "ಲೇ ನನ್ನ ಮೇಲೆ ಯಾಕೆ ನಿನಗೇ ಡೌಟು?" ಅಂತ ಅವಳ ಕೈಗಳೆರಡನ್ನೂ ನನ್ನ ಕೈಯಲ್ಲಿ ಬಂಧಿಯಾಗಿಸಿದೆ, ಎಲ್ಲಿ ನನ್ನ ಬಿಟ್ಟು ಹೋದಾಳು ಅಂತ ಏನೋ. ಮುಗುಳ್ನಗುತ್ತಾ "ಯಾರು ಹೇಗೆ ಅಂತ ಏನು ಹೇಳೋದಪ್ಪ" ಅಂದ್ಲು. ಕೈಗಳನ್ನು ಇನ್ನಷ್ಟು ಬಿಗಿಯಾಗಿಸಿದೆ. "ಅವರದ್ದೆ ಆದ ಕೆಲವು ಗುರುತುಗಳಿವೆ, ಅದು ದೇಶದಿಂದ ದೇಶಕ್ಕೆ ಬೇರೆ ಬೇರೆ, ಕೆಲವು ಕಡೆ ಪಿಂಕ ಶರ್ಟು ಹಾಕಿದ್ರೆ" ಅಂತಿದ್ದಂಗೆ "ಅಯ್ಯೊ ಅಲ್ಲೂ ಪಿಂಕಾ, ವ್ಯಾಲೆಂಟೈನ ಡೇಗೆ ಪಿಂಕ ಚಡ್ಡಿ ಅಭಿಯಾನ, ನಿಮ್ಮ ಸಾಫ್ಟವೇರ ಕಂಪನೀಲಿ ಕೆಲಸದಿಂದ ತೆಗೆಯೋಕೆ ಪಿಂಕ ಸ್ಲಿಪ್ಪು, ಇನ್ನೂ ಇಲ್ಲಿ ಇದು ಬೇರೇನಾ, ಅಲ್ಲ ಪಾಪ ಆ ಪಿಂಕ ಕಲರು ಎನ್ ಪಾಪಾ ಮಾಡಿದೆ ಅಂತೀನಿ" ಅಂದವಳು "ಸ್ವಲ್ಪ ಏಳ್ರೀ ಮೇಲೆ ಬೀರುನಲ್ಲಿ ನಿಮ್ದು ಯಾವದಾದ್ರೂ ಪಿಂಕ ಶರ್ಟ ಇದೇನ ನೋಡಿ ಬರ್ತೀನಿ" ಅಂದ್ಲು, ಅಲ್ಲೇ ನನ್ನ ಕೈಯಲ್ಲಿದ್ದ ಅವಳ ಕೈ ಕಚ್ಚಿದೆ, "ಇಲ್ಲ... ಇಲ್ಲ... ಯಾವದೂ ಇಲ್ಲ ನಂಗೊತ್ತು ಬಿಡಿ ರೀ... ರೀ..." ಅಂತ ಚೀರಿದಳು. "ನೋಡು ನಿನ್ನ ಕೈ ಕೂಡ ಪಿಂಕ ಆಯ್ತು ಕಚ್ಚಿದಲ್ಲಿ" ಅಂದೆ ನಾಚಿದಳು ಗಲ್ಲ ಕೂಡ ಪಿಂಕ ಆಯ್ತು.
"ಇಷ್ಟೇನಾ ಇನ್ನೂ ಏನಾದ್ರೂ ಪಿಂಕ್ ಇದೇನಾ" ಅಂದವಳಿಗೆ "ಪಿಂಕಿ ರಿಂಗ ಅಂತಿದೆ, ಪಿಂಕಿ ಫಿಂಗರ್ ಅಂದ್ರೆ ಕಿರುಬೆರಳಿಗೆ ಸ್ಟೀಲ್ ರಿಂಗ್ ಹಾಕೋತಾರೆ" ಅಂದೆ. "ರಿಂಗ ಬೇರೆನಾ" ಅಂತ ಉದ್ಗಾರ ತೆಗೆದ್ಲು "ಬಲಕಿವೀಲಿ ಕಿವಿಯ ರಿಂಗ, ಕಿಲಿಯೋಲೆ ಹಾಕಿದ್ರೂ ಕೂಡ ಅದೇ ಸಂಕೇತ ಕೆಲವು ಕಡೆ" ಅಂತಂದೆ. ನನ್ನ ಕಿರುಬೆರಳು ಪರೀಕ್ಷೆಯಾಗುತ್ತಿತ್ತು ಆ ಕ್ಷಣದಲ್ಲಿ, "ಲೇ ನನ್ನ ಮೇಲೆ ಯಾಕೇ ನಿನಗೆ ಸಂಶಯ, ಆಗಲಿಂದ ನನ್ನೇ ಚೆಕ್ ಮಾಡ್ತಿದೀಯಾ" ಅಂದರೆ "ಅಲ್ಲ ಇಷ್ಟೆಲ್ಲ ಮಾಹಿತಿ ಎಲ್ಲಿಂದ ಬಂತು ಅಂತ" ಪ್ರಶ್ನಿಸಿದಳು, "ಭಾರತದಲ್ಲಿ ಇದಿನ್ನೂ ಆ ಮಟ್ಟಿಗೆ ಚಾಲ್ತಿಯಲ್ಲಿ ಇಲ್ಲ ಆದರೆ ವಿದೇಶದಲ್ಲಿ ಸ್ವಲ್ಪ ಹುಷಾರಾಗೇ ಇರಬೇಕು. ವಿದೇಶಕ್ಕೆ ಹೊರಟಿದ್ದ ಗೆಳೆಯನಿಗೆ ಕೊಲೀಗ(ಸಹುದ್ಯೋಗಿ) ಕೊಟ್ಟ ಮಾಹಿತಿ, ನನಗೂ ಆಗಲೇ ಇದೆಲ್ಲ ತಿಳಿದದ್ದು... ಇಲ್ಲೇನು ಬಿಡು ಗೆಳೆಯರಿಬ್ರು ಹೆಗಲ ಮೇಲೆ ಕೈ ಹಾಕಿಕೊಂಡು ಹೋದ್ರೂ ಯಾರೂ ಏನೂ ಅನ್ಕೊಳ್ಳಲ್ಲ ಆದರೆ ಕೆಲವು ವಿದೇಶಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟೋ ಹಾಗೆ ಕೂಡ ಇಲ್ಲ" ಅಂದೆ "ಹೌದಾ!" ಅಂತ ಅಶ್ಚರ್ಯಪಟ್ಟಳು, "ಅಷ್ಟೇ ಏನೂ ಹಾಕೊ ಒಂದು ಸಾಕ್ಸು ಬದಲಾದ್ರೂ ಏನೇನೋ ಅರ್ಥ ಬಂದು ಬಿಡತ್ತೆ" ಅಂದೆ. "ಸಾಕ್ಸಾ?!" ಅಂತ ಹೌಹಾರಿದಳು "ಹೂಂ ರೈನಬೊ, ಅದೇ ಕಾಮನಬಿಲ್ಲಿನ ಕಲರು ಸಾಕ್ಸ ಅವರೇ ಹಾಕೋಳ್ಳೋದು, ಅದನ್ನ ಬಿಡು ಕೆಲವು ಕಡೆ ಬಿಳಿ ಸಾಕ್ಸ ಕೂಡ ಅದರ ಗುರುತು" ಅಂದೆ. ಅದನ್ನೆಲ್ಲ ಕೇಳಿ ಅವಳಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು.
"ಹೀಗಾದ್ರೆ ಹೇಗೆ, ಏನು ಜನ ಹೀಗ್ಯಾಕೆ ಮಾಡ್ತಾರೆ" ಅಂದ್ಲು, "ಸ್ವಲ್ಪ ಈ ಪ್ಯಾಶನ್ನು ಇಂಡಸ್ಟ್ರಿನಲ್ಲಿ ಇದು ಇದೆ, ಎಲ್ರೂ ಅಲ್ಲ ಆದರೂ ಈ ದಿನಾಲು ಹುಡುಗಿಯರ ಗುಂಪಿನಿಂದಲೇ ಸುತ್ತುವರೆದಿರುವ ಅಲ್ಲಿನ ಕೆಲವರಿಗೆ ಇಂಥ ಯೋಚನೆಗಳು ಬಂದರೆ ಅಚ್ಚರಿಯಿಲ್ಲ ಒಂಥರಾ ಅಡುಗೆ ಭಟ್ಟರಿಗೆ ದಿನಾಲೂ ಅದೇ ಸ್ವೀಟು ಮಾಡಿ ಅದರ ಘಾಟು ಬಡಿದು ಬಡಿದು ಅವರೇ ಮಾಡಿದ ಸ್ವೀಟ ಅವರೇ ತಿನ್ನೊಕಾಗದಿರೋ ಹಾಗೆ ಬರುವ ವಾಕರಿಕೆ ನೀರಸತನ ಒಂದು ಕಾರಣವಾಗಿರಬಹುದು" "ಹೌದ್ರೀ, ಈ ಹೂರಣದ ಹೋಳಿಗೆ ಮಾಡಿದಾಗಲೆಲ್ಲ ನನಗೂ ಅದನ್ನ ತಿನ್ನೋಕೆ ಮನಸೇ ಆಗಲ್ಲ" ಅಂದ್ಲು ಹೂರಣದ ಹೋಳಿಗೆ ಹೆಸರು ಕೇಳಿ ಬಾಯಿ ನೀರೂರಿತು, "ಸ್ವಲ್ಪ ತಾಳು ಹಾಗಿದ್ರೆ, ನೀರು ಕುಡಿದು ಬರ್ತೀನಿ ಇನ್ನೊಂದು ಕಾರಣ ಬಂದು ಹೇಳ್ತೀನಿ, ಅಲ್ಲೀವರೆಗೆ ಆ ಪೇಪರು ಮೂರನೇ ಪೇಜು ಮಾತ್ರ ನೋಡಬೇಡ" ಅಂತ ಒಳಗೆ ಅಡುಗೆಮನೆಗೆ ಹೋದೆ.
ಬರುವಷ್ಟರಲ್ಲಿ ಮೂರನೇ ಪೇಜು ತೆಗೆದುಕೊಂಡು ಕೂತಿದ್ದಳು "ಏನಿದೆ ಮೂರನೇ ಪೇಜಿನಲ್ಲಿ ಅಂಥದ್ದು?" ಅಂದ್ಲು "ನನಗೇನು ಗೊತ್ತು, ನಿನಗೆ ನೋಡಬೇಡ ಅಂತ ಅಲ್ವಾ ಹೇಳಿದ್ದು, ಯಾಕೇ ನೋಡಿದೆ?" ಅಂದೆ ತಣ್ಣಗೆ ಮೂವತ್ತೆರಡು ಹಲ್ಲು ಕಾಣಿಸಿದಳು "ಸುಮ್ನೆ ಕುತೂಹಲ, ಈಗ ಏನಿದೆ ಅಂತ ಹೇಳ್ತೀರೊ ಇಲ್ವೊ" ಅಂದ್ಲು. "ಹೇಳೊದೇನು, ಅಲ್ಲೇನೂ ಇಲ್ಲ, ಬೇಡ ಅಂತ ಹೇಳಿ ಯಾವಾಗ ಮುಚ್ಚಿಡಲು ಶುರು ಮಾಡುತ್ತೇವೊ ಆಗ ಅಲ್ಲಿ ಕುತೂಹಲ ಜಾಸ್ತಿಯಾಗತ್ತೆ, ಅದೇ ಇಂಥ ವಿಷಯಗಳಲ್ಲಿ ಆಗೋದು" ಅಂದ್ರೇನು "ಶಾಲೇಗೊ ಹೋಗೊ ಮಗುಗೆ ಇದನ್ನೆಲ್ಲ ಹೇಳೊಕೆ ಆಗತ್ತ? ನಿಮ್ಮಂಗೆ ಪೋಲಿ ಆಗಿ ಹೋಗ್ತಾರೆ ಅಷ್ಟೇ" ಅಂದ್ಲು, "ಶಾಲೆಗೆ ಹೋಗೊ ಮಗೂಗೇ ಹೇಳು ಅಂದ್ನಾ" ಅಂತ ನಾ ಸಿಟ್ಟಿನಿಂದ ನೋಡಿದೆ, "ಪೋಲಿ ಅಂದದ್ದಕ್ಕೆ ಸಿಟ್ಟಾಗಬೇಡ ಪುಟ್ಟಾ" ಅಂದ್ಲು. ನಗು ಬಂತು ತಡೆದುಕೊಂಡು "ಸರಿಯಾದ ವಯಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರೋದು ಪೋಷಕರ ಕರ್ತವ್ಯ, ಹುಟ್ಟಿಸಿ ಬಿಟ್ರೆ ಆಯ್ತಾ, ನನ್ನೂ ಎಲ್ಲೊ ಬೊಂಬೆ ತರೊ ಅಂಗಡೀಲಿ ಕೊಂಡು ತಂದೀದಾರೆ ಅಂತ ಮಕ್ಕಳು ಅಂದುಕೋತಾರೆ ಅಷ್ಟೆ, ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ, ಸಮಾಜ, ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು, ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ.", "ರೀ ನಮ್ಮನೆಗೆ ಬೊಂಬೆ ಯಾವಾಗ ಬರೋದು" ಅಂತ ನಾಚಿದಳು "ಆರ್ಡರ ಕೊಡೋಣ್ವಾ!" ಅಂತ ಹತ್ತಿರ ಹೋದೆ, "ಆಸೇ ನೋಡು" ಅಂತ ದೂರ ತಳ್ಳಿದಳು.
ಸಮಾಜ ನಾವೇ ಕಟ್ಟಿಕೊಂಡ ಒಂದು ವ್ಯವಸ್ಥೆಯಾಗಿರುವಾಗ ಇಂದು ನಾಲ್ಕು ಜನ ಬೇಕೆಂದರು ಅಂತ ಕಟ್ಟುಗಳನ್ನು ಸಡಿಲ ಮಾಡಿದರೆ ಸಮಾಜ ಅನ್ನೋದು ಮುರಿದು ಬೀಳಲ್ಲವೇ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನೇ ಗಮನಿಸಿ, ಈಗಾಗಲೇ ಆಗಿರುವ ಎಷ್ಟೊ ಮಾರ್ಪಾಡುಗಳು, ಲಿವಿಂಗ ಟುಗೆದರ(ಜೊತೆಯಾಗಿ ಮದುವೆಯಾಗದೇ ಇರೋದು), ವೈಫ್ ಸ್ವಾಪಿಂಗ (ಹೆಂಡಂದಿರನ್ನು ಅದಲು ಬದಲಾಯಿಸಿಕೊಳ್ಳುವ) ಇಲ್ಲ ಡಿವೊರ್ಸ ಆಗಿರಬಹುದು, ಅನೈತಿಕ ಸಂಬಂಧಗಳೇ ಆಗಿರಬಹುದು ಇವೆಲ್ಲ ಒಂದಿಲ್ಲ ಒಂದು ರೀತಿ ಕುಟುಂಬ ಅನ್ನೋ ಪರಿಕಲ್ಪನೆಗೆ ಹೊಡೆತ ಕೊಡುತ್ತ ಬಂದಿವೆ, ಈವತ್ತು ಇದನ್ನು ಮಾನ್ಯ ಮಾಡಿದವರು, ನಾಳೆ ಇನ್ನೊಂದಕ್ಕೆ ಅನುಮತಿಯ ಮುದ್ರೆ ಒತ್ತುತ್ತ ಹೋಗಿ, ಹೀಗೆ ಕಟ್ಟುಪಾಡುಗಳೆಲ್ಲ ಕಳೆದುಹೋದರೆ ನಮಗೂ ನಾಯಿ ನರಿಗಳಂತ ಪ್ರಾಣಿಗಳಿಗೂ ಏನು ವ್ಯತ್ಯಾಸವಿರಲಿಕ್ಕಿಲ್ಲ, ಅಂಥ ಕಾಲ ಒಂದು ದಿನ ಬರಬಹುದು, ಯಾಕೆಂದರೆ ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕು ಅಂತ ಹೇಳುತ್ತ ನಾವೇ ಬದಲಾಗಿ ಕಾಲವನ್ನು ಬಯ್ದುಕೊಳ್ಳುತ್ತಾ ಸಾಗುತ್ತಿದ್ದೇವೆ, ಆದರೆ ಅಂಥ ಕಾಲದ ಬರುವನ್ನು ಸ್ವಲ್ಪ ಮುಂದೂಡಬಹುದೇನೊ ಅನ್ನೊ ಚಿಕ್ಕ ಆಶಯ ಮಾತ್ರ ನನ್ನದು.
ಮರುದಿನ ಆಫೀಸಿಗೆ ಹೊರಡಲು ಸ್ನಾನ ಮಾಡಿ ಬಂದರೆ ದಿನಾಲೂ ಇರುತ್ತಿದ್ದ ಶರ್ಟು ಪ್ಯಾಂಟು ಜತೆಗೆ ಪ್ಯಾಂಟಿನ ಕಲರಿಗೆ ಹೊಂದಿಕೆಯಾಗುವ ಸಾಕ್ಸ ಕೂಡ ಇಟ್ಟಿದ್ಲು ;) ... ಬೇಕೆಂತಲೇ "ಬಿಳಿ ಕಲರ ಸಾಕ್ಸ ಎಲ್ಲೇ ಇದೆ" ಅಂದೆ "ಇಟ್ಟಿರುವುದನ್ನು ಹಾಕಿಕೊಂಡು ಹೋಗ್ತೀರಾ ಇಲ್ಲಾ, ನಾಳೆ ಪಿಂಕ ಶರ್ಟು, ಪಿಂಕಿ ರಿಂಗೂ ತಂದಿಡ್ತೀನಿ" ಅಂತ ಪಾಕಶಾಲೆಯಿಂದಲೇ ಗದರಿಸಿದಳು... "ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ... ಮುದ್ದ್ ಮಾಡೊಕು ಕಾನೂನು ಒಂದು ಬೇಕಾ" ಅಂತ ಹಾಡುತ್ತ ಶರ್ಟು ಹಾಕಿಕೊಳ್ಳುತ್ತಿದ್ರೆ "ಅದು ಹುಡುಗರ ಹಾಡಲ್ಲ, ಹಾಡಿದ್ದು ಸಾಕು ಹೊರಡ್ತೀರೊ ಇಲ್ಲೋ ಆಫೀಸಿಗೆ, ಇಲ್ಲಾ ನಾ ಬರಬೇಕಾ ಅಲ್ಲೀಗ" ಅಂತಂದಳು "ಒಕೇ ಒಕೇ ಬೇರೆ ಹಾಡು ಹಾಡ್ತೀನಿ... ಮಾಯವಾಗಿದೆ ಮದುವೆ ಹಾ.. "ಗೇ".. ಸುಮ್ಮನೇ..." ಅಂತಾ ರಾಗ ಹಿಡಿದು ಹಾಡಲು ಪ್ರಯತ್ನಿಸುತ್ತಿದ್ದರೆ ಅವಳು ಪಾಕಾಶಾಲೆಯಿಂದ ಇತ್ತ ಬರುವ ಸದ್ದಾಯಿತು... ಅವಳು ಬರ್ತಾ ಇದಾಳೆ, ಕೈಲಿ ಏನಿದೆಯೋ? ಸೌಟಿದ್ರೆ ಪರವಾಗಿಲ್ಲ, ಚಾಕೂ ಎಲ್ಲಾ ಇದ್ರೆ ತೊಂದ್ರೆ, ಅಯ್ಯೋ ಓಡಬೇಕು ದಾರಿ ಬಿಡ್ರಿ ಮತ್ತೆ ಸಿಕ್ತೀನಿ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಈ ಲೇಖನ ಬರೆಯಲೊ ಬೇಡವೊ ಅಂತ ನಿನ್ನೆಯಿಂದ ಯೋಚಿಸಿ ಕೊನೆಗೂ ಬರೆದು ತೆಗೆದಿರುವೆ, ಎಲ್ಲೂ ಅಶ್ಲೀಲ ಅನ್ನಿಸದ ಹಾಗೆ ಜಾಗ್ರತೆವಹಿಸಿ ಬರೆದಿದ್ದೇನೆ, ಹಾಗೂ ಎಲ್ಲೊ ಎಲ್ಲೆ ಮೀರಿದ್ದರೆ ನನ್ನ ಕ್ಷಮಿಸಿ, ಪ್ರಸ್ತಾಪ ಮಾಡಿದ ಕೆಲ ವಿಷಯಗಳು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಇವೆಲ್ಲ ಕೇವಲ ನನ್ನ ಮನದಿಂದ ಹೊರಹಾಕಿದ ಯೋಚನೆಗಳು, ಇದು ಸರಿ ತಪ್ಪು ಅಂತ ಹೇಳೊ ಪ್ರಯತ್ನ ಅಂತಾನೂ ಅಂದುಕೊಳ್ಳಬೇಡಿ, ಎಲ್ಲರಿಗೂ ಅವರದೇ ಆದ ಅನಿಸಿಕೆಗಳಿರುತ್ತವೆ, ಹಾಗಾಗಿ ನಾ ಹೇಳಿದ್ದೆಲ್ಲ ಎಲ್ರಿಗೂ ಅನ್ವಯವಾಗುವುದಿಲ್ಲ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/haage-summane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, June 28, 2009
ಕಾಡಿನ codeಕೋಣ
ಮುಂಜಾನೆ ಎಂಟಾಗಿತ್ತು, ಏಳೋಕೆ ಮನಸೇ ಇರಲಿಲ್ಲ, ಹಾಗೆ ಹಾಸಿಗೆಯಲ್ಲೇ ಬಿದ್ದುಕೊಂಡು ರಾತ್ರಿ ಕನಸು ಕಂಡಿದ್ದು ಸಾಕಾಗಲಿಲ್ಲವೆಂದು, ಮುಂಜಾನೆ ಹಗಲುಗನಸು ಕಾಣುತ್ತಿದ್ದೆ, ಇವಳು ಸುಮಾರು ಏಳು ಘಂಟೆಗೇ ಎದ್ದಿರಬೇಕು, ದಿನಾಲೂ ಕಾಡಿಸಿ ಏಳಿಸೋದು ಇದ್ದೇ ಇದೆ, ಇಂದಾದರೂ ರಜೆ ಪಾಪ ಮಲಗಲಿ ಬಿಡು ಅಂತ ಅವಳೂ ಏಳಿಸಿರಲಿಲ್ಲ, ಕಿಟಕಿಯಲ್ಲಿ ಮೋಡ ಕವಿದು, ಚೂರು ಹನಿ ಹನಿ ಮಳೆಯಾಗಿ ತಣ್ಣನೆ ಸೂಸುಗಾಳಿ ಬೀಸುತ್ತಿದ್ದರೆ, ಹಾಸಿಗೆಯಲ್ಲಿ ಹೊದ್ದು ಮಲಗಿದ್ರೆ ಏನು ಸುಖ ಅಂತೀರಾ, ಈಗ ಬಿಸಿ ಬಿಸಿ ಚಹ, ಕೈಯಲ್ಲಿ ದಿನಪತ್ರಿಕೆಯೊಂದಿದ್ದರೆ, ಇನ್ನೂ ಘಂಟೆ ಎರಡು ಘಂಟೆ ಇಲ್ಲಿಂದ ಕದಲಿದರೆ ಕೇಳಿ.
ಅವಳ ಕರೆದು ಕೇಳಿದರಾಯ್ತು ಅಂತ ಎದ್ದು ಅಲ್ಲೇ ಕೂತೆ, "ರೀ" ಅಂದ್ಲು ಮಂಚ ಕದಲಿ ಸದ್ದು ಕೇಳಿರಬೇಕು, "ಹಾಂ ಎದ್ದೆ ಎದ್ದೆ ಟೀ ಕೊಡ್ತೀಯಾ" ಅಂದೆ, "ಹೂಂ ಹಾಲು ಕರೆಯೋಕೆ ಹೊಗೋಣಂತೆ, ನಿಮ್ಮ ಪ್ರೆಸಿಡೆಂಟ ಏನೊ ಹೇಳ್ತೀದಾರೆ ನೋಡಬನ್ನಿ ಇಲ್ಲಿ" ಅಂದ್ಲು, ಹಾಲು ಕರೆಯೋದಾ, ನಾವ್ಯಾವಾಗ ಎಮ್ಮೆ ಸಾಕಿದ್ವಿ, ಒಮ್ಮೆ ಚಿವುಟಿ ನೋಡಿಕೊಂಡೆ ಇನ್ನೂ ಕನಸಲ್ಲಿ ಇದ್ದೀನೇನೊ ಅಂತ,(ಹೇ ನಾನೇ ಚಿವುಟಿಕೊಂಡ್ರೆ ಕನಸಲ್ಲೂ ನೋವಾಗುತ್ತೆ!) ಅವಳನ್ನು ಒಮ್ಮೆ ಕೇಳಿ ಖಚಿತ ಮಾಡಿಕೊಂಡು ಬಿಡೋಣ ಅಂತ "ಇದೇನು ಕನಸಾ" ಅಂದೆ, "ಬಂದೆ ತಾಳಿ ಚಿವುಟಿ ಬಿಡ್ತೀನಿ" ಅಂದ್ಲು, ಅಯ್ಯೋ ಅವಳು ಚಿವುಟೋದಾ!, ಸಿಕ್ರೆ ಚಾನ್ಸು ಬಿಡ್ತಾಳಾ ಅಂತಾ ಹೆದರಿ, ಇದ್ದ ಸ್ವಲ್ಪ ನಿದ್ದೆ ಹಾರಿಹೋಗಿ "ಏ ಕನಸಲ್ಲ, ಕನಸಲ್ಲ... ಗೊತ್ತಾಯ್ತು ಬಿಡು, ಅಂದ ಹಾಗೆ ಏನೊ ನಮ್ಮ ಪ್ರೆಸಿಡೆಂಟು ಏನೋ ಹೇಳ್ತಾ ಇದಾರೆ ಅಂತಿದ್ದೆ, ಮೊದಲೇ ಮಹಿಳಾ ಪ್ರೆಸಿಡೆಂಟು ಮಹಿಳಾ ಮೀಸಲಾತಿ ಜಾರಿ ಮಾಡಿ ಬಿಟ್ರೊ ಏನ್ ಕಥೆ!" ಅಂದೆ, ಅದರಿಂದ ಏನು ಉಪಯೋಗ ಆಗುತ್ತೊ ಇಲ್ವೊ ಗೊತ್ತಿಲ್ಲ ಆದ್ರೆ, ಇವಳು ನನ್ನ ಸಂಬಳದಲ್ಲಿ ತನಗಿಷ್ಟು ಮೀಸಲು ಬೇಕು ಅಂತ ಹಕ್ಕು ಸಾಧಿಸಿ ಬಿಡ್ತಾಳೆ ಅನ್ನೊ ಭಯ ನಂಗೆ!. "ರೀ ಅದಲ್ಲ ಇಲ್ನೋಡಿ, ಸೇ ನೋ ಟು ಬ್ಯಾಂಗಲೋರ್, ಸೇ ಯೆಸ್ ಟು ಬಫೆಲೊ ಅಂತೀದಾರೆ, ಬೆಂಗಳೂರು ಬಿಟ್ಟು, ಎಮ್ಮೆ ಕೋಣಾ ಸಾಕಿಕೊಂಡು ಹಾಲು ಕರೆಯೋಕೆ ಹೋಗಿ ಅಂತೀದಾರೆ, ಅಲ್ಲ ನಿಮ್ಮ ಹಳ್ಳಿಲಿರೊ ಮಾವ ಏನದ್ರೂ ಅವರನ್ನ ಭೇಟಿ ಆಗಿ ಈ ಐಡಿಯಾ ಕೊಟ್ಟು ಬಂದ್ರಾ ಅಂತಾ.." ಅಂದ್ಲು, ಅಲ್ಲಾ ಅಮೇರಿಕಾ ಪ್ರೆಸಿಡೆಂಟು ನಮ್ಮ ಪ್ರೆಸಿಡೆಂಟು ಆಗಿದ್ದು ಯಾವಾಗ ಅಂತ, ಏನು ಅಮೇರಿಕಾ ಕಂಪನಿಗಳಿಗೆ ಕೆಲ್ಸಾ ಮಾಡ್ತೀವಿ ಅಂತ ಅಮೇರಿಕಾಕ್ಕೇ ಕಳಿಸಿಬಿಡ್ತೀದಾಳಲ್ಲ, ಅಂತಾ ತರಾಟೆಗೆ ತೆಗೆದುಕೊಳ್ಳೋಣ ಅನಿಸಿದ್ರೂ, ಬೇಡ ಬಿಡು ಅಂತ ಬಿಟ್ಟು, ಅವಳು ಅದನ್ನು ಅರ್ಥೈಸಿದ ರೀತಿಗೆ ನಗು ಬಂದು "ಲೇ ಬಫೆಲೊ ಅಂದ್ರೆ ಅಲ್ಲಿನ ಊರು, ಅಲ್ಲಿ ಕಂಪನಿ ಬೆಳೆಸಿ ಅಂತಾ ಹೇಳ್ತೀದಾರೆ, ನಮಗೆ ಎಮ್ಮೆ ಕೋಣ ಸಾಕಿ ಬೆಳೆಸಿ ಅಂತಲ್ಲ" ಅಂದೆ.
ಹಳ್ಳೀಲಿರೊ ಮಾವನಿಗೆ ರಿಸೆಶನ್ ಕೆಲ್ಸಾ ಎಲ್ಲ ಹೋಗ್ತಾ ಇವೆ ಅಂದಿದ್ದಕ್ಕೆ, "ಏಯ ಏನ್ ಚಿಂತೆ ಮಾಡ್ಬೇಡಾ ಎರಡು ಎಮ್ಮೆ ಸಾಕಿದರೆ ಜೀವನಾ ಅಗ್ತದೆ" ಅಂತ ಧೈರ್ಯ ಹೇಳಿದ್ದ! ಅವ್ನಿಗೆ ಗೊತ್ತಿದ್ದ ಮಟ್ಟಿಗೆ, ಈಗ ಅದ್ದನ್ನೇ ಇವರು ಹೇಳ್ತಾ ಇದಾರೆ ಅಂತ ನನ್ನಾಕೆ. ಅಲ್ಲದೆ ಬಫೆಲೊ, ಬೈಸನು, ಅಂದ್ರೆ ಕೋಣ, ಕಾಡುಕೋಣ ಹಾಗೆ ಎಮ್ಮೆ ಕೂಡ ಅಂದ ಮೇಲೆ ಅದನ್ನೇ ಹೇಳಿರಬೇಕು ಅಂತ ಅಂದುಕೊಂಡಿದ್ರೆ ಎನ್ ಮಾಡ್ತೀರಾ. ಅವಳು ಒಳಗೆ ಬಂದು ಕೂತು, "ನನಗೇ ಹೇಗ್ರೀ ಗೊತ್ತಾಗಬೇಕು, ಬಫೆಲೊ ಅಂತ ಊರು ಇರತ್ತೆ ಅಂತ, ನಮ್ಮಲ್ಲಿ ಇದೆಯಲ್ಲ ಕೋಣನಕುಂಟೆ, ಎಮ್ಮಿಕೇರಿ ಅಂತ ಆ ಥರ ಇದೂ ಬಿಡಿ ಹಾಗಾದ್ರೆ" ಅಂದ್ಲು, "ಹೂಂ ಅದೇ ನೋಡು" ಅಂದೆ. "ರೀ ಮತ್ತೆ ನಮ್ಮ ಕಥೆ" ಅಂದ್ಲು, "ನಮ್ಮ ಕಥೆನಾ, ಅದೊಂದು ಒಂಥರಾ ಹಸಿರು ಕಾನನದೂರಿನ ಕಥೆ" ಅಂದೆ "ಓಹ್, ಆ ಥರಾ ಕಥೆನಾ! ರೀ ಹೇಳಿ ಪ್ಲೀಜ್...." ಅಂತಂದ್ಲು, "ಲೇ ಮುಂಜಾನೆ ಮುಂಜಾನೆ ಕಥೆನಾ, ಕಥೆ ಎಲ್ಲಾ ರಾತ್ರಿ ಮಲಗೋವಾಗ" ಅಂತ ಎದ್ದೇಳೋಕೆ ನೋಡಿದೆ, ಹೊದಿಕೆಯೊಂದಿಗೆ ನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿ "ಈಗ ಹೇಳ್ತೀರೊ ಇಲ್ವೊ" ಅಂತೆ ರಚ್ಚೆ ಹಿಡಿದಳು, ಇನ್ನು ಕಥೇ ಹೇಳದೆ ಬೇರೆ ದಾರಿಯಿರಲಿಲ್ಲ, ಅವಳಿಗಾಗಿ ಕಥೆ ಕಟ್ಟತೊಡಗಿದೆ...
ಹಸಿರು ಕಾನನದೂರಿನಲ್ಲಿ ಚುನಾವಣೆ ನಡೆದಿತ್ತು, ಅದೇ ಸಮಯದಲ್ಲಿ ಬರಗಾಲ ಅಪ್ಪಳಿಸಿ, ಕಾನನದೂರು ತತ್ತರಿಸಿತ್ತು, ಆ ಬರಗಾಲದ ಕಾವು ಹಳ್ಳಿಯೂರಿಗೆ ತಟ್ಟಿತ್ತಲ್ಲ, ಹಳ್ಳಿಯೂರು ಕೂಡ ಕಾನನದ ಚುನಾವಣೆಯ ಎದುರು ನೋಡುತಿತ್ತು, ಆರಿಸಿ ಬರಲು, ಚುನಾವಣೆಗೆ ನಿಂತ ಹುಲಿರಾಯ, ಹೇಳಿಕೆಗಳ ಕೊಡುತ್ತಿದ್ದ, ಕಾನನದ ಪ್ರಾಣಿ ಪಕ್ಷಿಗಳೆಲ್ಲ ಅವನನ್ನೇ ಬೆಂಬಲಿಸುವಂತೆ... ಬೆರಳೆಣಿಕೆಯ ತೋಳಗಳನ್ನು ಸದೆ ಬಡೆಯುತ್ತೇನೆ, ಇಲ್ಲಿ ಭಯೋತ್ಪಾದನೆ ಮಾಡುವ ಯಾರನ್ನೂ ಬಿಡೋದಿಲ್ಲ, ಅಂತ ಕುರಿಗಳನ್ನೆಲ್ಲ ಸೆಳೆದರೆ, ಮರಗಳನ್ನು ನೆಡುತ್ತೇನೆ, ಹಸಿರು ಬೆಳೆಸುತ್ತೇನೆ ಅಂತಿದ್ದಂಗೆ ಪ್ರಾಣಿ ಪಕ್ಷಿಗಳಿಗೆ ಹಣ್ಣಿನಾಸೆಯಾಗಿ ಬಿಡುತ್ತಿತ್ತು. ಹೀಗಿರುವಾಗ ಕಾನನದ ಕೋಣಗಳಿಗೆ ಹೆಚ್ಚು ಹೊಲಗಳನ್ನು ಮಾಡಿ, ನಿಮಗೆ ಕೆಲಸ ಸಿಗುವಂತೆ ಮಾಡುತ್ತೇನೆ, ಅಂತ ಹೇಳಿಕೆ, ಹಳ್ಳಿಯೂರಿನ ಎತ್ತು ಹಸುಗಳು ಕಾನನದಲ್ಲಿ ಹೆಚ್ಚಾದವೆಂದು ನಮ್ಮ ಕೆಲಸ ಎಲ್ಲ ಹೋಗುತ್ತಿವೆಯೆಂದು ಬೇಸತ್ತಿದ್ದ ಅವೂ ಖುಷಿಯಾಗಿದ್ದವು, ಹಳ್ಳಿಯೂರಿನ ಹೋರಿಗಳೂ ಅಲ್ಲಿ ಹೊಲಗಳು ಹೆಚ್ಚಾದರೆ ನಮಗೂ ಕೆಲ್ಸ ಸಿಗುತ್ತೆಂದು ಖುಷಿ ಪಟ್ಟವು.
ಅಂತೂ ಇಂತೂ ಚುನಾವಣೆ ಮುಗಿಯಿತು, ಹುಲಿರಾಯ ಆರಿಸಿ ಬಂದ, ಕಾನನದ ತುಂಬ ಸಮಸ್ಯೆಗಳಿದ್ದವು, ಅದನ್ನೆಲ್ಲಾ ನಿಭಾಯಿಸಬೇಕಿತ್ತು, ಒಂದೊಂದೇ, ಕಾರ್ಯಕ್ರಮಗಳು ಶುರುವಾದವು, ಹಾಗೆ ಬಂದದ್ದೆ ಕಾನನದ ಕೆಲಸವಿಲ್ಲದ ಕೋಣಗಳ ಸಮಸ್ಯೆ, ಮೊದಲೇ ಬರಗಾಲ ಹೊಲಗಳಲ್ಲಿ ಬಿತ್ತನೆಯಿಲ್ಲ, ಬೆಳೆಯಿಲ್ಲ ಎಲ್ಲಿ ಕೆಲಸ, ಕೋಣಗಳು ಕಂಗಾಲಾಗಿದ್ದವು. ಹುಲಿರಾಯನ ಮುಂದೆ ಸಮಸ್ಯೆ ಬಂತು, ಮೊದಲೇ ಬರಗಾಲ ಕೋಣಗಳಿಗೆ ಕೆಲಸ ಕೊಡಿ ಅಂತ ಅಂದ್ರೆ ಜಮೀನುದಾರರು ಎಲ್ಲಿ ಕೆಲಸ ಕೊಟ್ಟಾರು, ಜಮೀನುದಾರರೇ, ಬಿತ್ತನೆ ಬೀಜಗಳಿಗೆ ಹುಲಿರಾಯನಿಂದ ಏನಾದರೂ ಕಡಿತ, ಸಬ್ಸಿಡಿ ಸಿಗುತ್ತೊ ಅಂತ ಎದುರು ನೋಡುತ್ತಿದ್ದರೆ, ಕೆಲಸ ಎಲ್ಲಿ. ಹುಲಿರಾಯ ಇಕ್ಕಟ್ಟಿನಲ್ಲಿ ಸಿಕ್ಕ, ಎಲ್ಲ ಅಂಕಿ ಅಂಶಗಳು ನೋಡಿದಾಗ ಕಾನನದ ಬಹಳ ಕೆಲಸ ಹಳ್ಳಿಯೂರಿನ ಹೋರಿ, ಎತ್ತುಗಳಿಂದಾಗುತ್ತಿದೆ ಅಂತ ತಿಳಿದು ಬಂತು, ಹುಲಿರಾಯನಿಗೆ ಸಧ್ಯದ ಪರಿಹಾರ ಬೇಕಿತ್ತು, ಅದಕ್ಕೇ "ಕೆಲಸಕ್ಕೆ ಹಳ್ಳಿಯೂರಿನ ಹೋರಿಗಳು ಬೇಡ, ಕಾನನದ ಕಾಡುಕೊಣಗಳೇ ಸರಿ" ಅಂತ ಫರ್ಮಾನು ಹೊರಡಿಸಿಬಿಟ್ಟ...
ಹಳ್ಳಿಯೂರಿನಲ್ಲಿ ಹಾಹಾಕಾರವೆದ್ದಿತು, ಹಳ್ಳಿಯೂರಿನ ಕಥೆ ಮುಗಿಯಿತು ಅಂದ್ರು, ಹಳ್ಳಿಯೂರಿನ ಹೋರಿ ಎತ್ತುಗಳು ಚಿಂತಾಕ್ರಾಂತರಾದವು, ಎತ್ತುಗಳ ಜೀವನ ಎತ್ತೊ ಎನ್ನೋಹಾಗೆ ಆಯಿತು, ಕಾನನದೂರಿನ ಕೋಣಗಳಿಗೆ ಖುಷಿಯಾಯ್ತು. ಆದರೆ ಜಮೀನುದಾರರಲ್ಲಿ ತಳಮಳ ಶುರುವಾಯ್ತು, ಕಾನನದ ಕೋಣಗಳಿಗೆ ಕೆಲಸ ಕೊಟ್ಟರೆ, ಸಬ್ಸಿಡಿ, ಬಿತ್ತನೆ ಬೀಜ, ಕಡಿಮೆ ದರದಲ್ಲಿ ಹೊಸ ಹೊಲಗಳು, ಕೊಡುವುದೇನೊ ಸರಿ ಆದರೆ ಇದೆಲ್ಲ ಸಾಧ್ಯವೇ ಅನ್ನೊ ಪ್ರಶ್ನೆ ಎದುರಾಯಿತು.
ಕಾನನದಲ್ಲಿ ಮೊದ ಮೊದಲು ಒಕ್ಕಲುತನ ಶುರುವಾದಾಗ ಬೆರಳೆಣಿಕೆಯಷ್ಟೇ ಕೋಣಗಳಿದ್ದವು ಅವೇ ಊಳುತ್ತಿದ್ದವು, ಬೆಳೆ ಬರುತ್ತಿತ್ತು, ಬೆಳೆ ಬೇಡಿಕೆ ಹೆಚ್ಚು ಹೆಚ್ಚು ಆಗುತ್ತಿದ್ದಂತೆ, ಹೊಲಗಳು ಹೆಚ್ಚಾದವು, ಊಳಲು, ನೇಗಿಲು ಎಳೆಯಲು ಬಂಡಿ(ಚಕ್ಕಡಿ) ಕಟ್ಟಲು, ಕೋಣಗಳು ಸಾಕಾಗಲಿಲ್ಲ, ಆಗ ಕಂಡಿದ್ದೇ, ಹಳ್ಳಿಯೂರಿನ ಹೋರಿಗಳು... ತಂದು ತರಬೇತಿ ಕೊಟ್ಟರೆ ಇನ್ನೂ ಹೆಚ್ಚು ಇಳುವರಿ ತೆಗೆಯಬಹುದು, ಅಂತ ಜಮೀನುದಾರರು ಅಂದರು ಕಾನನದ ಆಗಿನ ರಾಜ ಹೂಂಗುಟ್ಟಿದ್ದ, ಕಾನನಕ್ಕೆ ಹೋರಿಗಳು ಬಂದವು, ತರಬೇತಿ ಪಡೆದವು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರತೊಡಗಿತು, ಹೆಚ್ಚು ಕೆಲಸಗಳು, ಹಳ್ಳಿಯೂರಿಗೆ ಬಂದವು, ಕಾನನದ ಹೊಲದಲ್ಲಿ ಬಿತ್ತುವ ಬೀಜಗಳು ಹಳ್ಳಿಯಲ್ಲಿ ಹಸನಾದವು, ಬೆಳೆದ ಧಾನ್ಯಗಳು ಹಿಟ್ಟಾದವು, ಎಣ್ಣೆ ಕಾಳುಗಳಿಂದ ಎಣ್ಣೆ ಹಳ್ಳಿಯೂರಿನಲ್ಲಿ ತಯ್ಯಾರಾಯ್ತು, ಗಾಣಕ್ಕೆ ಹಳ್ಳಿಯೂರಿನ ಹೋರಿ ಎತ್ತುಗಳು ಸುತ್ತು ಹೊಡೆದವು. ಕಾನನದಿಂದ ನೇಗಿಲು, ಕೊಡಲಿ, ಕುಡುಗೋಲು, ಕುಂಟೆ, ಬಂಡಿಯ ಗಾಲಿ, ಎಲ್ಲದರ ರೂಪ ರೇಷೆಗಳು ಬಂದರೆ, ಇಲ್ಲಿ ತಯ್ಯಾರಾದವು. ಒಟ್ಟಿನಲ್ಲಿ ಹಳ್ಳಿಯೂರು ಹೋರಿಗಳು, ಕಾನನದ ಕೆಲಸಗಳನ್ನೆಲ್ಲ ಮಾಡತೊಡಗಿದವು ಅದೂ ಕಡಿಮೆ ಖರ್ಚಿನಲ್ಲಿ., ಜಮೀನುದಾರರು ಹೆಚ್ಚು ಹೆಚ್ಚು, ಕೆಲಸ ಇಲ್ಲಿ ಕಳಿಸಿದರು, ಹಿಡುವಳಿದಾರರು ಹಿಗ್ಗಿ ಹೋದರು. ಹಳ್ಳಿಯೂರು, ಕಾನನದೂರಿನ ಕೆಲಸದ ಕೇಂದ್ರಬಿಂದುವಾಯಿತು.
ಹೀಗೆ ಹಳ್ಳಿಯೂರಿನ ಹೋರಿಗಳ ಮೇಲೆ ಅವಲಂಬಿತರಾಗಿದ್ದ ಜಮೀನುದಾರರಿಗೆ ಒಮ್ಮೆಲೆ ಎಲ್ಲೆಡೆ ಕೋಣಗಳನ್ನು ಉಪಯೋಗಿಸಿ ಅಂತ ಫರ್ಮಾನು ಕಸಿವಿಸಿ ಉಂಟು ಮಾಡಿತು, ಹುಲಿರಾಯನ ಶೀಘ್ರ ಪರಿಹಾರ ಸರಿ ಹೋಗುವಂತೆ ಕಾಣಲಿಲ್ಲ, ಮೊದಲಿಗೆ ತರಬೇತಿ ಹೊಂದಿದ ಅಷ್ಟೊಂದು ಕೋಣಗಳ ಕೊರತೆ, ಎರಡನೆಯದಾಗಿ ಬರಗಾಲದಲ್ಲಿ ಮೊದಲೇ ಹುಲ್ಲಿನ ಕೊರತೆ, ಹಿಡಿ ಹುಲ್ಲಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಹೋರಿಗಳಿರುವಾಗ ಹೊರೆಗಟ್ಟಲೇ ಹುಲ್ಲು ತಿನ್ನುವ ಕೋಣಗಳಿಗೆ ಎಲ್ಲಿಂದ ಹುಲ್ಲು ತರಬೇಕೆಂಬ ಚಿಂತೆ. ಹೋರಿಗಳೊಂದಿಗೆ ಹೊಸ ಹೊಸ ಊಳುಮೆ ತಂತ್ರಗಳನ್ನು ಕಂಡು ಹಿಡಿದ ಹಿಡುವಳಿದಾರರಿಗೆ ಅವುಗಳನ್ನು ಬಿಟ್ಟುಬಿಡಲು ಹಿಂಜರಿಕೆ. ಇತ್ತ ಹುಲಿರಾಯನ ಅಪ್ಪಣೆ, ಅದೇ ಕಥೆ ಎಲ್ಲ ಕಡೆ, ಕೆಲ ಪತ್ರಿಕೆಗಳು ಬರೆದವು, ಚರ್ಚೆಗಳಾದವು ಇದೇ ಪರಿಹಾರ ಯಾರಲ್ಲೂ ಇಲ್ಲದಂಥ ಪರಿಸ್ಥಿತಿ ಆಯ್ತು.
ಅಷ್ಟೊತ್ತು ಕಥೆ ಕೇಳುತ್ತ ಸುಮ್ನೆ ಕೂತವಳು "ಮತ್ತೆ ಇನ್ನೇನಾಗತ್ತೆ ಹಳ್ಳಿಯೂರಿಗೆ ಪರಿಹಾರವಿಲ್ವಾ" ಅಂದ್ಲು, "ಹಾಗೆ ನೋಡಿದ್ರೆ ಈಗ ಕಾನನದೂರಿಗೂ ಪರಿಹಾರ ಸಿಕ್ಕಿಲ್ಲ", ಅಂದೆ "ಅಯ್ಯೋ ಕಾನನದೂರು ಹಾಳಾಗಿ ಹೋಗ್ಲಿ, ಹಳ್ಳಿಯೂರಿನ ಕಥೆ ಹೇಳಿ" ಅಂದ್ಲು. "ನೋಡು ಇದೆ ತಪ್ಪು" ಅಂದೆ, "ಏನ್ ತಪ್ಪು, ಹಳ್ಳಿಯೂರಿನ ಚಿಂತೆ ನಮಗೇ ಅಲ್ವಾ" ಅಂದ್ಲು, ಅವಳು ಭಾವುಕಳಾಗಿರುವುದು ಗೊತ್ತಾಗುತ್ತಿತ್ತು, ಈ ಕಥೆ ಬಿಡು ನಮ್ಮ ಕಥೆ ಏನು ನಾಳೆ ಅನ್ನೋ ಭೀತಿ ಆಗಿತ್ತು, ಹತ್ತಿರ ಕರೆದು ತಲೆ ನೇವರಿಸುತ್ತ "ಮಾವನಿಗೆ ಎರಡು ಎಮ್ಮೆ ಕೊಂಡು ಕೊಡು ಅಂತ ಫೋನು ಮಾಡೋದು" ಅಂದೆ, ಮುಖದಲ್ಲಿ ಮಂದಹಾಸ ಮಿನುಗಿತು, ಎದೆಗೆರಡು ತಟ್ಟಿ "ತರಲೆ ಬೇಡ ಪರಿಹಾರ ಹೇಳಿ" ಅಂದ್ಲು. "ಅಯ್ಯೋ ನಾನು ಪರಿಹಾರ ಕೊಡೊ ಹಾಗಿದ್ರೆ ಇಲ್ಲಿ ಯಾಕೆ ಇರ್ತಿದ್ದೆ ಆದ್ರೂ ಮನಸಿಗೆ ಅನಿಸಿದ್ದು ಹೇಳಬೇಕೆಂದ್ರೆ ಹೇಳಬಲ್ಲೆ" ಅಂದೆ. "ಹೇಳಿ ಮತ್ತೆ" ಅಂದ್ಲು.
ಇದು ಬರೀ ಹಳ್ಳಿಯೂರಿನ ಸಮಸ್ಯೆಯಲ್ಲ, ಕಾನನದ್ದೂ ಕೂಡ, ಹಾಗೆ ಕಾನನದ ಹುಲಿರಾಯ ಕೊಟ್ಟ ಪರಿಹಾರ ಕಾನನಕ್ಕೇ ಸರಿಹೋಗುತ್ತಿಲ್ಲ, ಆದರೆ ಹಾಗೆ ಮಾಡಿದ್ದಕ್ಕೆ ದೂರುವಂತಿಲ್ಲ, ಯಾಕೆಂದರೆ ಈಗ ನಾವು ಹಳ್ಳಿಯೂರಿನ ಬಗ್ಗೆ ಚಿಂತಿಸಿದಂತೆ.. ಕಾನನದ ರಾಜ ಕಾನನದ ಬಗ್ಗೆ ಚಿಂತಿಸಿದ್ದರಲ್ಲಿ ತಪ್ಪಿಲ್ಲ, ಆದರೆ ಸಮಸ್ಯೆ ಇಬ್ಬರದೂ ಆಗಿರುವುದರಿಂದ ಪರಿಹಾರ ಇಬ್ಬರಿಗೂ ಬೇಕು.
ಎಲ್ಲಾ ರಾಜಕೀಯ... ಈಗ ಜಮೀನುದಾರರು ಏನು ಮಾಡಬಹುದು, ಹುಲಿರಾಯನ ಚುನಾವಣೆಗೆ ಸಹಾಯ ಮಾಡಿದವರು ಇವರೇ, ಅವನ ಪ್ರಚಾರ ಸಭೆಗಳಿಗೆ ಜಾಗ, ಅಲ್ಲಲ್ಲಿ ಸಭೆಗಳಿಗೆ ತಿರುಗಲು ಬಂಡಿ ಕೊಟ್ಟು, ಹುಲ್ಲು ಹಣ್ಣುಗಳ ವ್ಯವಸ್ಥೆ ಎಲ್ಲ ಮಾಡಿದವ್ರು ಇವರು, ಈಗ ಈ ಫರ್ಮಾನು ಹಿಂತೆಗೆಯುವಂತೆ ಒತ್ತಡ ತರುವ (ಲಾಬಿ ಅಂತಾರೆ ಅದಕ್ಕೆ) ಕೆಲಸ ಮಾಡಬಹುದು, ಹಾಗೆ ಹುಲಿರಾಯ ಅದಕ್ಕೆ ಮಣಿದು ಒಪ್ಪಿಕೊಳ್ಳಲೂಬಹುದು, ಯಾಕೆಂದರೆ ಮತ್ತೆ ಚುನಾವಣೆಗೆ ಇವರಿಲ್ಲದೇ ಎನೂ ಆಗಲ್ಲ. ಹಾಗೇ ಹುಲಿರಾಯನ ಸಲಹೆಗಾರರೂ ಪರಿಸ್ಥಿತಿ ಅವಲೋಕನ ಮಾಡಿ ಇರುವ ಕೆಲವೇ ಕೋಣಗಳಿಂದ ಕೆಲಸ ಸಾಗದು, ಅಲ್ಲದೇ ಹೀಗೆ ಕಟ್ಟುನಿಟ್ಟು ನೀತಿಗಳು ಜಾರಿಗೆ ಬಂದ್ರೆ ಕೆಲವು ಜಮೀನುದಾರರು ಒಕ್ಕಲುತನವನ್ನೇ ಬಿಡಬಹುದು, ಮೊದಲೇ ಬರಗಾಲ ಅದರ ಮೇಲೆ ಇದು ಇನ್ನೂ ದುಷ್ಪರಿಣಾಮ ಮಾಡಬಹುದು ಅಂತ ಮನವರಿಕೆ ಮಾಡಿ ಕೊಡಬಹುದು. ಅಲ್ಲದೆ ಕಡಿಮೆ ಖರ್ಚು ಮತ್ತು ಕ್ವಾಲಿಟಿಗೆ ಹೆಸರಾದ ಹಳ್ಳಿಯೂರಿನೊಂದಿಗೆ ಸೇರಿ ಹುಲಿರಾಯ ಹಳ್ಳಿಯ ಸಹಭಾಗಿತ್ವದಲ್ಲಿ ಹನಿ ನೀರಾವರಿಯಂಥ ಪರಿಹಾರದ ಯೋಜನೆಗಳಿಗೆ ಪ್ರಯತ್ನಿಸಬೇಕು. ಕಾನನಕ್ಕಷ್ಟೆ ಅಲ್ಲದೇ ಹಳ್ಳಿಯೂರಿಗೂ ಹೀಗೆ ತಾತ್ಕಾಲಿಕ ಪರಿಹಾರ ಸಿಗಬಹುದು.
ಆದರೆ ಹುಲಿರಾಯ ಕಾನನದ ಚಿಂತೆ ಮಾಡೇ ಮಾಡುತ್ತಾನೆ, ಕೋಣಗಳ ಕಳವಳಕ್ಕೆ ಅವನು ಕಿವಿಯಾಗಾಲೇಬೇಕು, ಹಳ್ಳಿಯೂರಿಗೆ ಇದೊಂದು ಎಚ್ಚರಿಕೆ, ಸರಿಯಾಯಿತಲ್ಲ ಅಂತ ನಿಟ್ಟುಸಿರು ಬಿಡಲು ಸಾಧ್ಯವಿಲ್ಲ, ಹೀಗೆ ಸಧ್ಯ ಹಳ್ಳಿಯೂರಿನ ಸಮಸ್ಯೆಗೆ ಪರಿಹಾರ ಸಿಕ್ಕರೂ, ಮುಂದೆ ಭವಿಷ್ಯದಲ್ಲಿ ಹಳ್ಳಿಯೂರು ಎಲ್ಲದಕ್ಕೂ ಹಸಿರು ಕಾನನದತ್ತ ಮುಖಮಾಡಿ ನಿಲ್ಲದೇ ಸ್ವತಂತ್ರವಾಗಲು ಪ್ರಯತ್ನಿಸಬೇಕು, ಸರಿ ಆವಾಗ ಸಿಕ್ಕ ಕೆಲಸಗಳನ್ನು ತಂದು ಇಲ್ಲಿ ಮಾಡಿ ಕಾನನಕ್ಕೆ ಕಳಿಸಿದ್ದಾಯ್ತು, ಇನ್ನು ಹಳ್ಳಿಯೂರಲ್ಲೂ, ಭೂಮಿಯಿದೆ ಅದನ್ನೂ ಊಳಿದರೆ ಹೇಗೆ ಅಂತ ಚಿಂತಿಸಬೇಕು, ಪರಿಣಿತ ಎತ್ತು ಹೋರಿಗಳೂ ಇರುವ ಹಳ್ಳಿಯೂರಲ್ಲೂ ಹಸಿರು ಕ್ರಾಂತಿಯ ಶಕೆ ಶುರು ಮಾಡಬೇಕು, ಕಾನನದೂರಿನ ಗುತ್ತಿಗೆ ಕೆಲಸ ಮಾಡಿ ಗಳಿಸಿದ ಗುತ್ತಿಗೆದಾರರು, ಇಲ್ಲೂ ಬಿತ್ತನೆ ಕಾರ್ಯಕ್ಕೆ ಕೈ ಹಾಕಬೇಕು, ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗಲಿಕ್ಕಿಲ್ಲ, ಆದರೆ ಆ ಕಡೆಗೆ ಮುಂದಡಿಯಿಡಬೇಕು.
ಅವಳಿಗೂ ಸರಿಯೆನ್ನಿಸಿರಬೇಕು "ಹೀಗೆ ಆದ್ರೆ ಎಲ್ಲ ಚೆನ್ನಾಗಿರುತ್ತಲ್ವಾ" ಅಂದ್ಲು, "ಹೂಂ ಇರತ್ತೆ, ಆದರೆ ಎಲ್ಲ ಆಗಬೇಕಲ್ಲ, ಆಗತ್ತೆ ಅನ್ನೋ ಆಶಾಭಾವನೆ ಇರಬೇಕು ಅಷ್ಟೇ, ಅಲ್ದೆ ಇದು ಬರೀ ನನ್ನ ಅನಿಸಿಕೆ, ಸರಿಯೊ ತಪ್ಪೊ ನನಗೂ ಗೊತ್ತಿಲ್ಲ, ಬರಗಾಲ ಕಳೆದು ಬೇಗ ಮಳೆಗಾಲ ಬೇಗ ಬಂದು ಬಿಡಲಿ, ಬೆಳೆ ಬೆಳೆದು ಒಕ್ಕಿ, ರಾಶಿ ಹಾಕಿ ಜಾತ್ರೆ ಮಾಡಿಬಿಡೋಣ" ಅನ್ನೋಷ್ಟರಲ್ಲಿ, ಹೊರಗೆ ಚೂರು ಚೂರು ಹನಿಯಾಗುತ್ತಿದ್ದ ಮಳೆ ಧೋ ಎಂದು ಸುರಿಯತೊಡಗಿತು, ಸೂರು ಹನಿಗಳೆರಡು ಅವಳ ಕೆನ್ನೆಗೆ ಸಿಡಿದವು, ಅದ ತಪ್ಪಿಸಲು ನನ್ನ ಮತ್ತಷ್ಟು ಅವುಚಿಕೊಂಡಳು, "ಒಂದು ಕಪ್ಪು ಟೀ ಸಿಕ್ಕಿದ್ದರೆ ಚೆನ್ನಾಗಿರೋದು" ಅಂದೆ, "ಪಕೊಡಾ ಜತೆಗೆ" ಅಂದ್ಲು ಬಾಯಲ್ಲಿ ನೀರೂರಿತು... "ಚಹಕ್ಕೆ ಎಮ್ಮೆ ಹಾಲೇ ಹಾಕು ದಟ್ಟವಾಗಿರ್ತದೆ" ಅಂದೆ ಬೇಕಂತಲೇ... "ಕಾನನದೂರಿನಂತೆ ಎಮ್ಮೆ ಹಾಲೇ ಅಂದ್ರೆ ಆಗಲ್ಲಾರೀ, ಹಳ್ಳಿಯೂರಿಂದ ಹಸುಗಳ ಹಾಲು ಜಾಸ್ತಿ ಬರೋದು, ಎಲ್ಲ ಸೇರಿ ನಂದಿನಿಯಾಗೋದು, ನಂದಿನಿ ಹಾಲಿನದು ಚಹ ಸಿಗತ್ತೆ ಬೇಕಂದ್ರೆ, ಎಮ್ಮೆ ಹಾಲೇ ಅಂದ್ರೆ, ಮೊದಲು ಎಮ್ಮೆ ಸಾಕಿ ಅದು ಹಾಲು ಕರೆಯೋವರೆಗೆ ಕಾಯ್ತೀರಾ" ಅಂದ್ಲು. ನನ್ನ ಕಥೆ ಅರ್ಥವಾದಂತೆ ಕಾಣಿಸಿತು... "ಸಧ್ಯ ಬಾಯಾರಿದೆ, ಬೇಕಿರೊದು ಹಾಲಿನ ಚಹ ಅಲ್ವಾ ಅದೇ ತಾ" ಅಂದೆ. ನಸುನಗುತ್ತ ಪಾಕಶಾಲೆಗೆ ನಡೆದಳು... ಮಳೆ ಸುರಿಯುತ್ತಿದ್ದ ಕಿಟಕಿ ಕಡೆಗೆ ಮುಖ ಮಾಡಿ ಕುಳಿತೆ...
ಈ ಲೇಖನ ನನ್ನ ಅನಿಸಿಕೆ ಅಷ್ಟೆ ಇಲ್ಲಿ ಯಾರು ತಪ್ಪು ಯಾರು ಸರಿ ಅಂತ ಹೇಳುವ ಉದ್ದೇಶ ನನ್ನದಲ್ಲ, ಹಾಗೆ ಯಾವುದಕ್ಕೊ ಯಾರನ್ನೊ ಹೋಲಿಸಿ ಅವಮಾನಿಸಿಲ್ಲ, ಬರೀ ಸಮಸ್ಯೆಯ ಸರಳ ತಿಳುವಳಿಕೆಗೆ ತೆಗೆದುಕೊಂಡ ಉದಾಹರಣೆಗಳು ಮಾತ್ರ. ಕೊಟ್ಟ ಪರಿಹಾರವೊ ನನ್ನ ಮನಸಿಗನ್ನಿಸಿದ್ದು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಅದು ಸರಿಯಾಗಿರಲೂ ಬೇಕಿಲ್ಲ, ಹಸಿರು ಕಾನನದೂರಿನಿಂದ ಲೇಖನಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಈ ಲೇಖನ ಬರೆಯಲು ಪ್ರೇರಣೆ, ಇನ್ನೂ ಕೂಡ ದಿನಾಲೂ ಹತ್ತು ಹದಿನೈದು ಪ್ರತಿಕ್ರಿಯೆಗಳು ಬರುತ್ತಿರುತ್ತವೆ, ಎಲ್ಲರಿಗೂ(ಹೌದು ಪ್ರತಿಯೊಬ್ಬರಿಗೂ) ಮರುಪತ್ರ ಬರೆದಿದ್ದೇನೆ, ಯಾರಿಗಾದರೂ ಸಿಕ್ಕಿಲ್ಲದಿದ್ದಲ್ಲಿ ನಿಮ್ಮ ಕಂಪನಿಯ ಈ-ಮೇಲ ಗಳಲ್ಲಿ ಬ್ಲಾಕ ಆಗಿರಬಹುದು ಅಷ್ಟೇ, ಅದನ್ನು ಹಂಚಿ ಹಾಗೂ ಪ್ರತಿಕ್ರಿಯೆ ಬರೆದು ಪ್ರೊತ್ಸಾಹಿಸಿದ ಎಲ್ಲರಿಗೂ ನಾನು ಚಿರಋಣಿ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
Combined (hasiru kanana + codekoNa)Document in PDF format www.telprabhu.com/kaanan-kodakona.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, June 21, 2009
ನೀಳ.. ನೀಲವೇಣಿ, Nil ವೇಣಿಯಾದಾಗ
ಊರಲ್ಲಿ ಮದುವೆಯಿದೆ ಹೋಗಿ ಬರ್ತೀನಿ ಅಂದವಳು, ಇಂದು ಬರುವಳಿದ್ದಳು. ಅವಳು ಬಂದು ಫೋನು ಮಾಡಿ ಬನ್ನಿ ಅಂತ ಕರೆಯುವ ಮೊದಲೇ ನಾನೇ ಅಲ್ಲಿ ಹೋಗಿ ನಿಂತು ಕಾಯ್ದು ಅವಳಿಗೆ ಒಂದು ಸರಪ್ರೈಜ (ಅಶ್ಚರ್ಯ) ಕೊಡೋಣ ಅಂತ ತೀರ್ಮಾನಿಸಿದ್ದೆ. ಹಾಗಾಗಿ ಆರೂವರೆಗೆ ಬಸ್ ನಿಲ್ದಾಣದಲ್ಲಿದ್ದೆ, ಬಸ್ಸು ಯಾವಾಗ ಬರುತ್ತದೆಂದು ಕೇಳಿದ್ದು ಏಳೂವರೆ ಅಗಬಹುದು, ಬಸ್ ನಂ ಕೂಡ ಗೊತ್ತಾಗಿತ್ತು, ಏಳು ಘಂಟೆ ಇವಳ ಫೋನು ಬಂತು, "ರೀ ಬಸ್ ನಿಲ್ದಾಣಕ್ಕೆ ಕರೆಯೋಕೆ ಏನೂ ಬರಬೇಡಿ, ನಾನೇ ಬರ್ತೀನಿ" ಅಂತ ಅಂದ್ಲು, "ಲೇ ಬ್ಯಾಗ್ ಬಹಳ ಇರ್ತವೆ ನಾ ಬರ್ತೀನಿ" ಅಂತಂದೆ, "ಇಲ್ಲ ಬ್ಯಾಗ ಯಾವುದೂ ಇಲ್ಲ, ಇರೋದು ಒಂದೇ ಸೂಟಕೇಸ ನಾನೇ ಬರ್ತೀನಿ" ಅಂತ ಅವಳು. ನಾನಿಲ್ಲಿ ಬಂದು ನಿಂತೀದೀನಿ ಅಂತ ಹೇಗೆ ಹೇಳಲಿ, "ಇಲ್ಲಾ ನಾ ಬರ್ತೀನಿ" ಅಂತ ಫೋನಿಟ್ಟೆ. ಅವಳಿಗೂ ಅನಿಸಿರಬೇಕು ಯಾವಗ್ಲೂ ಬಾ ಅಂದ್ರೆ, ಬರಲೇಬೇಕಾ ಅನ್ನೋರು ಇಂದ್ಯಾಕೆ ಬರ್ತೀನಿ ಅಂತೀದಾರೆ, ಅಲ್ದೇ ಎದ್ದು ರೆಡಿ ಆಗಿರೊ ಹಾಗಿದೆ, ನಿದ್ದೆಗಣ್ಣಲ್ಲಿ ಮಾತಾಡೊರು, ಹಾಗೇನು ಅನಿಸಲಿಲ್ಲ ಇಂದು ಅಂತ.
ಅವಳು ಬರೊ ಹೊತ್ತಿಗೆ ಏಳೂವರೆ ಆಗಿತ್ತು, ಎರಡು ರೌಂಡ ಟೀ ಮುಗಿದಿತ್ತು, ಖಾಲಿ ಕೂತು ಬೇಜಾರು ಏನ್ ಮಾಡ್ಲಿ, ಟೀನಾದ್ರೂ ಕುಡಿಯೋಣ ಅಂತ. ಅದೇ ಬಸ್ಸು ನಂ ಕರೆಕ್ಟಾಗಿ ನೋಡಿದೆ, ಬಸ್ ನಿಲುಗಡೆ ಆಕಡೆ ಇತ್ತು, ಸರಿ ಅವಳು ಅಲ್ಲಿ ಇಳಿದು ಖಚಿತವಾಗಿ, ರೋಡಿನ ಆಕಡೆ ನೋಡುತ್ತ ನಿಂತಿರುತ್ತಾಳೆ, ಯಾಕೆಂದ್ರೆ ನಾ ಆಕಡೆಯಿಂದ ತಾನೇ ಯಾವಾಗ್ಲೂ ಬರೊದು ಅಂತ, ಈಕಡೆ ಹಿಂದಿನಿಂದ ನಿಧಾನವಾಗಿ ಹೋಗಿ ಅವಳಿಗೆ ಕಣ್ಣು ಮುಚ್ಚಿ ಹಿಡಿದು ಸರಪ್ರೈಜ್ ಮಾಡಬೇಕು ಅಂತ ಹೊರಟೆ. ಬಸ್ ಮರೆಗೆ ನಿಂತು ನೋಡುತ್ತಿದ್ದೆ, ಇಬ್ಬರು ಮೂರು ಜನ ಮಹಿಳೆಯರಿದ್ರು, ಇವಳು? ಅಲ್ಲಿಲ್ಲ, ಅಯ್ಯೊ ನನ್ನ ಪ್ಲಾನ ಗೊತ್ತಾಗಿ ಇಲ್ಲಿ ನನ್ನ ಹಿಂದೆ ಏನಾದ್ರೂ ಬಂದು ನಿಂತೀದಾಳ ಅಂತ ಹಿಂತಿರುಗಿ ನೋಡಿದೆ ಅಲ್ಲೂ ಯಾರೂ ಇಲ್ಲ, ಬೇರೆ ಎಲ್ಲಾದ್ರೂ ಇಳಿದಳಾ? ಬಸ್ಸು ಮುಂದೆ ಹೊರಟಿತು, ಮರೆ ಇಲ್ಲದಾಯಿತು, ಅದೊ ಅಲ್ಲಿ ಆ ಬಿಳಿ ಸೀರೆ ತಿಳಿ ನೀಲಿ ಅಂಚಿನದು ಎಲ್ಲೊ ನೋಡಿದ ಹಾಗಿದೆ, ಸೂಟಕೇಸ್ ಕೈಯಲ್ಲಿದೆ, ಅವಳೇನಾ, ಅಲ್ಲಲ್ಲ ಅವಳಿಗೆ ಉದ್ದ ಜಡೆಯಿದೆ ಇದ್ಯಾರೋ ಬೇರೆ!!! ಚೋಟುದ್ದ ಕೂದಲು ಇರುವ ಇವಳಾರೊ ಬೇರೆ ಇರಬೇಕೆಂದು ಅಂದುಕೊಂಡರೂ ನಿಧಾನಕ್ಕೆ ಗೊತ್ತಾಯಿತು ಅದು ನನ್ನಾಕೆಯೇ...
ಅವಳಿಗೆ ಸರಪ್ರೈಜ್ ಕೊಡಲು ಬಂದ ನನಗೇ ಆಶ್ಚರ್ಯವಾಗಿತ್ತು. ಅಲ್ಲಾ ಅಷ್ಟು ಉದ್ದ ಜಡೆ ಕತ್ತರಿಸಲು ಏನಾಗಿತ್ತು?. ಹೇಳಿದ್ಯಾರು ಕತ್ತರಿಸಲು? ಹೀಗೆ ಪ್ರಶ್ನೆಗಳು ಎಳುತ್ತಿದ್ದವು, ನಿಧಾನವಾಗಿ ಅವಳತ್ತ ನಡೆದೆ, ಕಣ್ಣು ಮುಚ್ಚಿ ಚಕಿತಗೊಳಿಸಲಂತೂ ಅಲ್ಲ, ಅಷ್ಟರಲ್ಲಿ ಅವಳೆ ಇತ್ತ ತಿರುಗಿದಳು. ಒಳ್ಳೇದೇ ಆಯ್ತು, ಕಂಗಳು ಅರಳಿದ್ದವು, ನಾ ಅವಳ ಮುಖದತ್ತ ನೋಡಲಿಲ್ಲ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕೆನಿಸಲಿಲ್ಲ, ಕಣ್ಣು ತಪ್ಪಿಸಿ, ಅವಳ ಸೂಟಕೇಸಗೆ ಕೈ ಚಾಚಿದೆ. ಕೊಡದೆ ಹಿಂತೆಗೆದಳು, ನಾನೇನು ಅನ್ನಲಿಲ್ಲ, "ಅಟೋ!!" ಅಂತ ಚೀರಿದೆ, ಅದನ್ನೇ ಕಾಯುತ್ತಿದ್ದವನಂತೆ ಅವನೋಡಿ ಬಂದ, "ಸೂಟಕೇಸ ಒಂದೇ ಇದೆ ಅಟೊ ಯಾಕೆ" ಅಂತ ಅವಳನ್ನುತ್ತಿದ್ದರೂ ನಾ ಹತ್ತಿ ಕುಳಿತಿದ್ದೆ.
ಅಟೊ ನಿಧಾನವಾಗಿ ಸಾಗುತ್ತಿದ್ದರೆ, ಅದೆಲ್ಲೊ ಆಚೆ ನೋಡುತ್ತ ಕುಳಿತಿದ್ದೆ, ಅಲ್ಲಿ ರೋಡಿನಲ್ಲೇನು ಇತ್ತು, ಅದೇನು ಮಹಾ ಪ್ರೇಕ್ಷಣೀಯ ಸ್ಥಳವಂತೂ ಅಲ್ಲ, ಅದೇ ಧೂಳು, ಹೊಗೆ, ನಾಲ್ಕು ಗಾಡಿಗಳು, ಸಾಲು ಸಾಲು ಅಂಗಡಿಗಳು, ಆದರೂ ಅಲ್ಲೆ ನೋಡುತ್ತಿದ್ದೆ, ಅವಳೊಂದಿಗೆ ಮಾತಾಡುವ ಮನಸಿರಲಿಲ್ಲ, ಅಷ್ಟರಲ್ಲಾಗಲೇ ಅವಳೀಗೂ ಗೊತ್ತಾಗಿತ್ತು ನನಗೆ ಬೇಜಾರಾಗಿದೆಯೆಂದು.
ಅವಳ ಕೂದಲು ಅವಳ ಜಡೆ ಅವಳು ಕತ್ತರಿಸಿದರೇನು ಉದ್ದ ಬೆಳೆಸಿದರೇನು ಅಲ್ವಾ, ಆದರೇನು ಮಾಡಲಿ ಅದರೊಂದಿಗೆ ನನ್ನ ಹಲವಾರು ಸುಂದರ ನೆನಪುಗಳು ಇದ್ದವಲ್ಲ, ಒಂದೇ ಎರಡೆ, ಅವಳ ನೋಡಲು ಹೋದಾಗ, ಅಮ್ಮ ಮೊದಲೇ ಹೇಳಿದ್ದಳು ಉದ್ದ ಜಡೆಯ ಹುಡುಗಿ ಅಂತ ಅಂತಿರ್ತೀಯಲ್ಲ ಈ ಹುಡುಗಿಯದಿದೆ ಅಂತ, ಅವಳು ಬಂದು ಮುಂದೆ ಕುಳಿತರೆ ನನಗೆ ಮುಖಕ್ಕಿಂತ ಆ ಉದ್ದ ಜಡೆ ನೋಡುವ ತವಕ. ಅಮ್ಮನಿಗೆ ಅದರಲ್ಲೂ ಸನ್ನೆ ಮಾಡಿ ಎಲ್ಲಿ ಕಾಣುತ್ತಿಲ್ಲ ಅಂತ ಹುಬ್ಬು ಹಾರಿಸಿದ್ದೆ, "ಲೋ ಪೆಕರ, ಮುಂದೆ ಕೂತೀದಾಳಲ್ಲ ಅವಳೇ ಹುಡುಗಿ" ಅಂತ ಕಿವಿಯಲ್ಲಿ ಪಿಸುಗುಟ್ಟಿದ್ದರು, ನಾ ಹುಡುಗಿ ಎಲ್ಲಿ ಅಂತ ಕೇಳಿದ್ದಿರಬೇಕು ಅಂತ ಅವರು ತಿಳಿದದ್ದು, "ಜಡೆ' ಅಂದಾಗ!!... ಅಮ್ಮನ ಮುಖ ಕೆಂಪಾಗಿತ್ತು, ಬರುತ್ತಿದ್ದ ನಗು ತಡೆದುಕೊಂಡು, "ಬಾಮ್ಮ ಇಲ್ಲಿ ನಮ್ಮ ಹತ್ರ ಕೂತ್ಕೊಬಾ" ಅಂತ ಹತ್ತಿರ ಕರೆದಾಗ ಅವಳು ಎದ್ದು ಬರುತ್ತಿರಬೇಕಾದರೆ, ಕಂಡಿತ್ತು ನನಗೆ ಆ ನೀಳ ನೀಲವೇಣಿ... ನೋಡಿ ಬಂದಾದ ಮೇಲೆ ಅಮ್ಮ ಕಾಡಿಸಿದ್ದೇ ಕಾಡಿಸಿದ್ದು ನೀ ಗಳಿಸಿದ್ದೆಲ್ಲಾ ಅವಳ ಕೂದಲಿಗೆ ಎಣ್ಣೆ, ಶಾಂಪೂಗೆ ಹಾಕೋದರಲ್ಲೇ ಖಾಲಿ ಆಗುತ್ತದೆ ಅಂತ. ಆ ಮೊದಲ ನೋಟದಲ್ಲೇ ಅಷ್ಟು ಆಕರ್ಷಿಸಿಬಿಟ್ಟಿತ್ತು. "ಹುಡುಗಿ ಹೇಗಿದಾಳೊ" ಅಂತ ಅಮ್ಮ ಕೇಳಿದ್ರೆ, "ಜಡೆ ಸೂಪರ್" ಅನ್ನೋನು, ಅಪ್ಪ "ಬರೀ ಜಡೆ ನೋಡಿ ಬಂದೀದಾನೆ ಏನು ನೋಡು, ಮುಖ ನೋಡಿದಂತೇ ಇಲ್ಲ" ಅನ್ನೋರು ಅಮ್ಮನಿಗೆ. ಅಪ್ಪನಿಗೂ ಖುಷಿ, ಸೊಸೆಯಾಗಿ ಅವಳು ಬಂದರೆ ಮುಂದೆ ಬೋಳಾಗಿರುವ ತನ್ನ ತಲೆಯಲ್ಲಿ ಕೂದಲು ಹುಟ್ಟಿಸಲು ಅವಳಲ್ಲಿ ಏನಾದ್ರೂ ಉಪಾಯ ಸಿಗಬಹುದೆಂದು!.
ಜಡೆಯೂ ಒಂದು ಕಾರಣ ಸೇರಿ ಅಂತೂ ಅವಳೇ ನನ್ನಾಕೆಯಾಗುವಳೆಂದು ತೀರ್ಮಾನವಾಗಿತ್ತು, ತಂಗಿ, "ಅಣ್ಣಾ, ನನಗೆ ಡೌಟು ಎಲ್ಲೊ ಸಪ್ಲಿಮೆಂಟ್ ಎನಾದ್ರೂ ಹಾಕಿದಾರಾ" ಅಂತ ಬೇರೆ ಅನುಮಾನಿಸಿ ನನಗೆ ನಿದ್ದೆ ಬಾರದ ಹಾಗೆ ಮಾಡಿಟ್ಟಿದ್ದಳು, ಅದು ನಿಜವಾದ ಕೂದಲೇ ಅನ್ನೊ ತನಿಖೆ ಮಾಡೊ ವರದಿ ಒಪ್ಪಿಸುವ ಕಾರ್ಯ ಅವಳಿಗೆ ಕೊಟ್ಟಿದ್ದೆ, ಅದಕ್ಕೆ ಪ್ರತಿಯಾಗಿ ಎರಡು ಡ್ರೆಸ್ಸು, ಒಂದು ಜತೆ ಚಪ್ಪಲಿ ತಂಗಿಗೆ ತನಿಖೆಯ ಶುಲ್ಕವಾಗಿ ಸಂದಾಯವಾಗಿತ್ತು, ವರದಿ ನೋಡಿ ಖುಷಿಯಾಗಿತ್ತು ಅನ್ನೋದು ಸಮಾಧಾನ. ಮದುವೆಗೆ ಕೇಶಾಲಂಕಾರಕ್ಕೆ ಮಲ್ಲಿಗೆ ದಂಡೆ(ಮುಡಿಯಿಂದ ಅಡಿವರೆಗೂ ಅಂದ್ರೆ ತಲೆ ಮೇಲೆ ಪೂರ್ತಿ ಹಾಗೂ ಜಡೆ ಉದ್ದದವರೆಗೂ ಆವರಿಸುವ ಹಾಗೆ ಕಟ್ಟುವ ಮಾಲೆ) ಮಾಡಿಸಲು ಹೋದರೆ ಅದಕ್ಕೆ ದುಪ್ಪಟ್ಟು ದುಡ್ಡು ತೆತ್ತಿದ್ದು, ಅಷ್ಟು ಉದ್ದದ ಜಡೆಯ ಅಲಂಕಾರದ ಕ್ಲೊಜಪ್ ಫೋಟೊ ಒಂದೇ ಫ್ರೇಮಿನಲ್ಲಿ ತೆಗೆಯಲು ಆ ಫೊಟೊಗ್ರಾಫರ ಹೆಣಗಾಡಿದ್ದು, ಕೇಳಲೇಬೇಡಿ.
ನಮ್ಮಲ್ಲಿ ಮದುವೆ ದಿನ ಮದುಮಕ್ಕಳಿಗೆ ಅರಿಷಿಣ ಹಚ್ಚಿ ತಲೆಗೆ ನೀರು ಹಾಕುವ ಸಂಪ್ರದಾಯವಿದೆ, ಹಾಗಾಗಿ ನಮ್ಮ ಮದುವೆಯ ಅರಿಷಿಣ ನೀರು ಸ್ನಾನಕ್ಕೆ ನೀರು ಹಾಕಿದರೆ ಅವಳ ಕೂದಲು ನೆನೆಯಲು ನೀರು ತಂದು ತಂದು ಹಾಕಿ ಕೈ ಸೋತು ಹೋಯ್ತು ಅಂತ ಕೆಲಸದಾಕೆ ಮುಲುಗಿದ್ದು ಅಮ್ಮನಿಂದ ಕೇಳಿ ನಕ್ಕಿದ್ದೆ. ಮದುವೆಯ ಅಕ್ಷತಾರೋಪಣೆಗೆ ಸ್ಟೇಜಿನಲ್ಲಿ ನಿಂತಾಗ ಅವಳ ಜಡೆ ಎರಡು ಸಾರಿ ಹಿಡಿದೆಳದದ್ದು ಅವಳ ಮುಖ ಮುನಿದು ಕೆಂಪಗಾಗಿದ್ದು, ಮದುವೆಯ ವಿಡಿಯೊನಲ್ಲಿ ಇನ್ನೂ ಭದ್ರವಾಗಿದೆ.
ಮದುವೆ ಆದ ಮೇಲೆ, ಅದೇ ಜಡೆಯಿಂದ ಎಷ್ಟು ಏಟು ತಿಂದಿದ್ದೆ, ಅಡುಗೆ ಮಾಡುತ್ತಿದ್ದ ಅವಳ ಹಿಂದೆ ಬಂದು ನಿಂತು ಅದನ್ನ ಎಳೆದರೆ ಸಿಟ್ಟು ಬರದೇ ಇದ್ದೀತೆ, ಅಮ್ಮ ಇಲ್ಲ ಅಂತ ಗೊತ್ತಗುತ್ತಿದ್ದಂತೇ, ಕೀಟಲೆ ಮಾಡುತ್ತಿದ್ದ ನನಗೆ ಅದರಿಂದಲೇ ಚಾವಟಿಯ ಏಟಿನಂತೆ ಎರಡು ಬಾರಿಸುತ್ತಿದ್ದಳು. ಮುಂಜಾನೆ ಏಳುವುದು ಅಷ್ಟೇ, ಅವಳು ಬಂದು ಅದೇ ಕೂದಲಿನ ತುದಿಯಿಂದ ಕಿವಿಯಲ್ಲಿ ಕಚಗುಳಿಯಿಟ್ಟು ಎಬ್ಬಿಸುವವಳು, ಹಾಗೆ ಮಾಡಿ ತಪ್ಪಿಸಿಕೊಂಡು ಓಡುತ್ತಿದ್ದರೆ ಅವಳ ಅದೇ ಜಡೆಯ ಬಳಸಿ ಹಿಡಿದುಬಿಡುತ್ತಿದ್ದೆ, ತರಲೆಗಿಳಿಯುತ್ತಿದ್ದ ನನ್ನ ಅವಳೆಷ್ಟು ಬಾರಿ ಅದೇ ಜಡೆಯಲ್ಲಿ ಕೈಕಟ್ಟಿ ಕೂರಿಸಿಲ್ಲ, ಕೈಕೊಳ ತೊಟ್ಟ ಅಪರಾಧಿಯಂತೆ ಅವಳ ಹಿಂದೆ ಸುಮ್ಮನೆ ಕೂರುತ್ತಿದ್ದೆ, ಕನಿಕರ ಬಂದು ಕಟ್ಟು ಬಿಚ್ಚಿ ಬಿಟ್ಟರೆ ಮತ್ತೆ ತರಲೆ ಶುರು. ತಲೆ ತೊಳೆದು ಕೂದಲು ಗಂಟು ಗಂಟಾಗಿ ಬಿಡಿಸಲಾಗದಂತಾದಾಗ, ಕತ್ತರಿಸಿ ಬಿಡ್ತೀನಿ ಸಾಕಾಗಿದೆ ಅಂತ ಅವಳು ಅನ್ನುತ್ತಿದ್ದರೆ, ಆ ಕಗ್ಗಂಟುಗಳ ಬಿಡಿಸಲು ನಾ ಸಹಾಯ ಮಾಡಿಲ್ಲವೇ, ಇಷ್ಟೆಲ್ಲ ಮಧುರ ನೆನಪುಗಳಿರುವ ಆ ನೀಳ ಕೂದಲು ಕತ್ತರಿಸಲು ಅವಳಿಗೆ ಮನಸಾದರೂ ಹೇಗೆ ಬಂತು, ಕತ್ತರಿಸಲೇ ಬೇಕಿದ್ದರೆ ಒಮ್ಮೆ... ಒಮ್ಮೆ... ನನ್ನ ಕೇಳಿದ್ದರೆ, ಅವಳ ಇಚ್ಛೆಗೆ ನಾ ಬೇಡ ಎನ್ನುತ್ತಿರಲಿಲ್ಲವಾದರೂ ಕೊನೇ ಸಾರಿ ಮುಟ್ಟಿ, ಬೆರಳುಗಳನ್ನೆ ಬಾಚಣಿಕೆ ಮಾಡಿ ಒಮ್ಮೆ ಬಾಚಿ, ಹಿಡಿದೆಳೆದು ಕೀಟಲೆ ಮಾಡಿ, ಕಚಗುಳಿಯಿಟ್ಟುಕೊಂಡು, ಕೊನೆ ಸ್ಮರಣೆಗಳನ್ನು ಕಾದಿಟ್ಟುಕೊಳ್ಳುತ್ತಿದ್ದೆನಲ್ಲ. ಕೊನೆ ಸಾರಿ ಕೊನೆ ಬೈ ಕೂಡ ಸರಿಯಾಗಿ ಹೇಳಲಾಗದಂತೆ, ಊರಲ್ಲೇ ಕತ್ತರಿಸಿ ಚೋಟುದ್ದ ಮಾಡಿಟ್ಟುಕೊಂಡು ಬಂದಿದ್ದಾಳಲ್ಲ.
ಹೀಗೆ ನನ್ನ ಯೋಚನೆಗಳೂ ಇನ್ನೂ ಸಾಗುತ್ತಿದ್ದವು, ಅಟೊಗಿಂತ, ಅದರ ಪಕ್ಕ ಹೋಗುವ ಬೈಕುಗಳಂತೆ ವೇಗವಾಗಿ... ಅವಳೆ ತಡವಿ ಕೇಳಿದ್ಲು, "ಯಾಕೊ ಒಂಥರಾ ಇದೀರಲ್ಲ" ಅಂತ, ಮತ್ತಿನ್ನೇನು ಇಷ್ಟೊತ್ತಿಗಾಗಲೇ, ಪ್ರಶ್ನೆಗಳ ಸುರಿಮಳೆಯೇ ಸುರಿಸುತ್ತಿದ್ದೆ ಅವಳ ಮೇಲೆ, ಹೀಗೆ ಒಮ್ಮೆಲೆ ಸುಮ್ಮನಾಗಿದ್ದರೆ... ಅಗಲಿದ ನೀಳವೇಣಿಗೆ ಶೃದ್ಧಾಂಜಲಿ ಅನ್ನುವಂತೆ ಮೌನಾಚರಣೆಯಲ್ಲಿದ್ದೆ. ಅವಳಿಗೂ ಗೊತ್ತಿತ್ತು ಆ ಜಡೆ ಮೇಲೆ ನನಗೆಷ್ಟು ಪ್ರೀತಿ ಅಂತ, ಅದಕ್ಕೆ ಬೇಜಾರಾಗಿದ್ದೀನಿ ಅಂತ, ಆದರೆ ನಾನೇ ನಾನಾಗಿ ಕೇಳುವವರೆಗೂ ಹೇಳುವುದು ಬೇಡ ಅಂದು ಸುಮ್ಮನಾಗಿದ್ಲು, ಅದಕ್ಕೆ ಅಲ್ವೆ ನಾ ಕರೆದುಕೊಂಡು ಹೋಗಲು ಬರ್ತೀನಿ ಅಂದ್ರೂ, ಬೇಡ ಅಂದಿದ್ದು. ಸುಮ್ನೇ ಅವಳ ಕಡೆ ತಿರುಗಿ, ಏನೂ ಹೇಳದೆ ಕೂತೆ, ಮತ್ತೆ ಕೇಳಿದ್ಲು "ಬಹಳ ಹೊತ್ತಾಗಿತ್ತು ಅನಿಸತ್ತೆ ಬಂದು, ಯಾಕೆ ಬೇಗ ಬಂದ್ರಿ" ಅಂತ, "ಏನಿಲ್ಲ ಹಾಗೆ ಸುಮ್ನೆ" ಅಂದೆ, ನನಗೆ ಜಾಸ್ತಿ ಮಾತಾಡಲು ಮನಸಿಲ್ಲ ಅನ್ನುವಂತೆ, ಅಟೊನವನು ಮಿರರನಲ್ಲಿ ನೋಡಿ, ಅವನ ಮಾತಿನ ಚಪಲಕ್ಕೆ, "ಸಾರ್ ಆರೂವರೆಯಿಂದ ಕಾಯ್ತಾ ಇದಾರೆ ಮೇಡಮ್" ಅಂದ, ಏಯ್ ನಿನ್ನ ಕೆಲಸ ನೋಡೋ ಅಂತ ಹರಿಹಾಯಬೇಕೆನಿಸಿತು. ಇವಳು ಅಶ್ಚರ್ಯವಾಗಿ "ಹೌದಾ ಅಷ್ಟು ಬೇಗ ಯಾಕೆ ಬಂದ್ರಿ" ಅಂದ್ಲು "ಹಂ, ಸುಮ್ನೇ" ಅಂದು ಮತ್ತೆ ರಸ್ತೆಮುಖಿಯಾದೆ... ಆಮೇಲೆ ಯಾರೂ ಮಾತಾಡಲಿಲ್ಲ, ಮನೆ ಹತ್ತಿರ ಬಂದಾಗ ತಿರುವುಗಳನ್ನು ಅವಳೇ ಹೇಳಿದ್ಲು, ಸುಮ್ನೆ ದುಡ್ಡು ತೆತ್ತು ಕೆಳಗಿಳಿದೆ. ಪಕ್ಕದಮನೆ ಪದ್ದು ಹೊರಗೆ ಬಂದಳಾದರೂ, ಅವಳ ಹೊಸ ಗೆಟಪ್ಪು.. Nil-ವೇಣಿ(ವೇಣಿಯಿಲ್ಲದ) ನೋಡಿ ಕೇಳಲೇಬೇಕೆಂದವಳು, ತುಟಿವರೆಗೆ ಬಂದ ಮಾತು ತಡೆದು ಒಳ ನಡೆದಳು ಒಂದು ಮುಗುಳ್ನಗೆ ಮಾತ್ರ ಕೊಟ್ಟು.
"ಟೀ ಬೇಕಾ" ಅಂದ್ಲು, ಒಳನಡೆಯುತ್ತಿದ್ದಂತೆ, "ಬೇಡ, ಆಗಲೇ ಎರಡು ಸಾರಿ ಆಯ್ತು" ಅಂದೆ. "ಅಷ್ಟು ಬೇಗ ಯಾಕೆ ಬರಬೇಕಿತ್ತು, ನಾ ಬರ್ತಿದ್ದೆನಲ್ಲ, ಸುಮ್ನೇ ಛಳೀಲಿ ಅಲ್ಲಿ ಕಾದಿದ್ದು" ಅಂದರೂ ಬರೀ ಹೂಂ ಹಾಂ ಗಳೇ ಎಷ್ಟೋ ಹೊತ್ತು ಉತ್ತರಗಳಾಗಿದ್ವು. ಟೀವೀ ಹಚ್ಚಿಕೊಂಡು ಕೂತರೆ, ಅದೇ ಚಾನಲು ಬದಲಿಸುತ್ತಿದ್ದರೆ ಸನಸಿಲ್ಕ ಶಾಂಪೂ ಜಾಹೀರಾತು ಬರಬೇಕೆ, ಗಾಯದ ಮೇಲೆ ಉಪ್ಪು ಸವರಿದಂತೆ. ಆಫ ಮಾಡಿದೆ.
ನಾನಿನ್ನು ಕೇಳೊದೇ ಇಲ್ಲ ಅಂತ ಅವಳಿಗೆ ಖಚಿತವಾಗಿರಬೇಕು, ಅದಕ್ಕೆ ಅವಳೆ ಮಾತು ತೆಗೆದಳು, "ಯಾಕೊ ಹೊಸ ಹೇರಸ್ಟೈಲ್ ನೋಡಿದಂತಿಲ್ಲ ನೀವು" ಅಂತ "ಕಾಣುತ್ತಿದೆಯಲ್ಲ" ಅಂದೆ ನೀರಸವಾಗಿ "ಹೇಗಿದೆ" ಅಂತ ಕೇಳಿದ್ದಕ್ಕೆ, "ಚೆನ್ನಾಗಿದೆ" ಅಂದೆ. "ನಿಮಗೆ ಇಷ್ಟ ಆಗಿಲ್ಲ ನನಗೆ ಗೊತ್ತು" ಅಂದ್ಲು, "ಮತ್ತೆ ಕೇಳೊದು ಯಾಕೆ, ನಿಂಗೆ ಗೊತ್ತಿದೆಯಂದ ಮೇಲೆ" ಅಂದೆ. "ಇದೇ ಈಗ ಹೊಸ ಫ್ಯಾಷನ್ನು ಕಣ್ರೀ" ಅಂದ್ಲು "ನಾನೇನು ಇಲ್ಲಾ ಅನಲಿಲ್ಲವಲ್ಲ" ಅಂತಂದೆ. "ನಿಮಗೇನು ಗೊತ್ತು, ಅಷ್ಟುದ್ದ ಕೂದಲು ಆರೈಕೆ ಮಾಡಿ ಕಾಯ್ದುಕೊಳ್ಳೊದು ಎಷ್ಟು ಕಷ್ಟ ಅಂತ", ಅಂತ ವಾದಕ್ಕಿಳಿದರೆ "ಬಾಬ್ ಕಟ್ ಮಾಡಿಸಬೇಕಿತ್ತು ಬಾಚೊ ತೊಂದ್ರೇನು ಇರ್ತಿರಲಿಲ್ಲ" ಅಂದು ಸುಮ್ಮನಾದೆ. "ನೀವ್ಯಾಕೆ ಮೀಸೆ ಬಿಡಲ್ಲ, ಕ್ಲೀನ್ ಶೇವ ಮಾಡ್ತೀರಿ" ಅಂತ ನನ್ನ ತಪ್ಪಿನಲ್ಲಿ ಸಿಕ್ಕಿ ಹಾಕಿಸನೋಡಿದ್ಲು. "ನಾನ್ ಮೀಸೆ ಬಿಡುವುದಕ್ಕೂ, ನಿನ್ನ ಕೂದಲಿಗೂ ಏನು ಸಂಬಂಧ" ಅಂತಂದೆ. "ಯಾಕಿಲ್ಲ, ನಾನಾದರೆ ಕೂದಲು ಉದ್ದ ಬಿಡಬೇಕು, ನೀವು ಮೀಸೆ ಬಿಡಲ್ಲ ಅಂತೀರಿ" ಅಂದ್ಲು, "ನಾನೇನು ಉದ್ದ ಕೂದಲು ಬಿಡು ಅಂತ ಕೇಳುತ್ತಿಲ್ಲವಲ್ಲ, ಅಲ್ಲದೆ ನಾನು ಮೀಸೆ ಬಿಟ್ಟು, ಪ್ರಯತ್ನ ಮಾಡಿದ್ದೆ ಅಮ್ಮ ತಂಗಿ ಸರಿ ಕಾಣುವುದಿಲ್ಲ ನಿನಗೆ ಅಂತ ಹಾಸ್ಯ ಮಾಡಿದ್ದಕ್ಕೆ ತೆಗೆದದ್ದು, ನೀ ಚೆನ್ನಾಗಿ ಕಾಣ್ತೀನಿ ಅಂದ್ರೆ ಟ್ರೈ ಮಾಡ್ತೀನಿ" ಅಂದೆ, "ಒಹ್ ಅತ್ತೆ ಹೇಳಿದ್ದು ನೆನಪಿದೆ, ಹೇಗೆ ಕಾಣ್ತಿದ್ರಿ ಅಂತ.. ತಂಗಿ 'ಒಳ್ಳೆ ಸ್ಲಂ-ಬಾಲ ಫಿಲಂ ವಿಜಯ ಥರಾ ಕಾಣ್ತಿದಿ' ಅಂತ ಕಾಡಿಸಿದಮೇಲೆ ಶೇವ ಮಾಡಿದ್ರಂತೆ, ಬೇಡ ಬಿಡ್ರೀ ನಿಮ್ಗೆ ಚೆನ್ನಾಗಿ ಕಾಣಲ್ಲ" ಅಂತ ನಕ್ಕಳು, ತಂಗಿ ಕಾಡಿಸಿದ್ದು ನೆನಪಾಗಿ ನಗು ಬಂತಾದರೂ, ಬಿಗುಮಾನಕ್ಕೆ ನಗದೇ ಇದ್ದು ಬಿಟ್ಟೆ.
ಈ ಫ್ಯಾಶನ್ನು ಅಂತ ಇತ್ತೀಚೆಗೆ ಹುಡುಗರು ಉದ್ದ ಉದ್ದ ಕೂದಲು ಬೆಳೆಸಿ, ಜುಟ್ಟು ಕಟ್ಟಿಕೊಂಡು ಕಿವಿಯಲ್ಲಿ ಕಿವಿಯೋಲೆ(ರಿಂಗ್) ಹಾಕಿಕೊಂಡು, ಕೈಗೆ ಚೈನು ಬಳೆ ಹಾಕಿಕೊಂಡ್ರೆ... ಹುಡುಗೀರು, ಬಾಬ್ ಕಟ ಮಾಡಿ ಕಿವಿಯೊಲೆ ಮೂಗು ನತ್ತು ಬಿಟ್ಟು, ಹೊಕ್ಕಳಿಗೆ ರಿಂಗ ಹಾಕಿಕೊಂಡು, ಜೀನ್ಸ ಪ್ಯಾಂಟ ಕೈಗೆ ಕಡಗ ಹಾಕಿ.. ಸಿಗರೇಟು ಹೊಗೆಯಲ್ಲಿ ಗಂಡಸ್ರಿಗೆ ನಾವೇನು ಕಮ್ಮಿ ಅಂತ ಕಳೆದುಹೋಗುತ್ತಿದ್ದಾರೆ, ನೋಡಿದ್ರೆ ಇದೇ ಲೇಟೇಸ್ಟ ಫ್ಯಾಷನ್ನು... ನನಗೆ ಏನೂ ಗೊತ್ತಿಲ್ಲ ಯಾವುದು ಸರಿ ಯಾವುದು ತಪ್ಪು ಅಂತ, ಆದ್ರೆ ಯಾರು ಹುಡುಗಿ ಯಾರು ಹುಡುಗ ಅಂತ ಗೊತ್ತಾಗದಷ್ಟು ಬದಲಾದಾಗ ಬೇಜಾರಗುತ್ತದೆ. ಹಾಗೆ ನೋಡಿದ್ರೆ, ನಮ್ಮ ಅಜ್ಜ, ಮುತ್ತಜ್ಜ ಈಗಿದ್ದಿದ್ರೆ, "ನಮ್ಮ ಕಾಲದಲ್ಲಿ, ದೋತಿ, ಟೊಪಿ, ಇಲ್ಲ ಪೇಠ(ಪಟಗ) ತಲೆಗೆ ಸುತ್ತಿ ಏನು ಚೆನ್ನಾಗಿತ್ತು, ಹೆಣ್ಣು ಮಕ್ಕಳು ಸೀರೆ, ಲಂಗ ದಾವಣಿಯಲ್ಲಿ ಏನು ಚೆನ್ನಾಗಿ ಕಾಣ್ತಾ ಇದ್ರು, ಇವು ನೋಡು ಹುಡುಗ್ರು ಪ್ಯಾಂಟ ಶರ್ಟ ಅಂತೆ, ಹುಡುಗೀರು ಚೂಡಿ, ಪ್ರಾಕು ಅಂತೆ ಎನೂ ಎಲ್ಲ ಬದಲಾಗಿ ಹೋಯ್ತು" ಅಂತ ಬಯ್ದುಕೊಳ್ಳುತ್ತಿದ್ದರೇನೊ. ಕಾಲ ಬದಲಾಗುತ್ತ ಹೋಗುತ್ತದೆ, ನಾವೂ ಬದಲಾಗುತ್ತ ಹೋಗುತ್ತೇವೆ ಆದರೆ ಹಳೆ ನೆನಪುಗಳು ಹಾಗೆ ಇನ್ನೂ ನಮ್ಮನ್ನು ಹಿಂಬಾಲಿಸಿ ಬರುತ್ತಿರುತ್ತವೆ...
ನನಗೆ ಅವಳು ಕೂದಲು ಕತ್ತರಿಸಿದ್ದಕ್ಕೆ ಸಿಟ್ಟೇನಿರಲಿಲ್ಲ, ಹಾಗೆ ಹೇಳುತ್ತಿದ್ದೀನೊ ಏನೊ... ಅದರೊಂದಿಗಿನ ಆ ಮಧುರ ನೆನಪುಗಳು ಕಳೆದುಹೋದವಲ್ಲ ಅನ್ನೋ ಬೇಜಾರಿತ್ತು. ಅವಳಿಗಿಷ್ಟವಿಲ್ಲದಾದ ಮೇಲೆ ನನ್ನದೇನು, ನನ್ನ ಅಭಿಪ್ರಾಯಗಳನ್ನು ಅವಳ ಮೇಲೆ ಯಾಕೆ ಹೇರಲಿ, ಚೋಟುದ್ದ ಕೂದಲಾದ್ರೂ ಅವಳಿಗೆ ಅದೂ ಚೆನ್ನಾಗೇ ಕಾಣ್ತಾ ಇತ್ತು, ಮೊದಲಿನಂತೆ ತಲೆ ತುಂಬ ಕಾಣುವಂತ ತುರುಬು ಅವಳು ಕಟ್ಟಲಿಕ್ಕಿಲ್ಲ, ಕೀಟಲೆ ಮಾಡಿ ತಪ್ಪಿಸಿಕೊಳ್ಳ ಹೋದರೆ, ಮೊದಲಿನಂತೆ ಜಡೆ ಹಿಡಿದು ಎಳೆಯಲಾಗದೇ ನನ್ನ ಕೈಗೆ ಸಿಗಲಿಕ್ಕಿಲ್ಲ, ಏಳುವಾಗ ಕಚಗುಳಿ, ಮಲಗುವಾಗ ಆಟವಾಡಲು ಜಡೆಯಿರಲಿಕ್ಕಿಲ್ಲ ಅಷ್ಟೇ.
ಮಧ್ಯಾಹ್ನ ಊಟ ಮಾಡುತ್ತ, "ಈ ಸ್ಟೈಲು ಚೆನ್ನಾಗಿ ಕಾಣ್ತಿದೆ, ನಿನಗೆ" ಅಂದೆ. "ಅತ್ತೆ ಏನಂತಾರೊ ಏನೊ" ಅಂದ್ಲು. "ಏನಾದ್ರೂ ಹೇಳಿದರಾಯ್ತು ಬಿಡು, ನಿನ್ಗೂ ಅರೈಕೆ ಮಾಡಿಕೊಳ್ಳಲು ಹೇಗೂ ತೊಂದ್ರೆ ಆಗಿತ್ತಲ್ಲ" ಅಂದೆ "ಇಲ್ಲಾ ಹಾಗೇನಿಲ್ಲ, ಎರಡು ಮೂರು ತಿಂಗಳು ಮತ್ತೆ ಉದ್ದ ಬಂದು ಬಿಡತ್ತೆ, ಅಮ್ಮ ಸ್ಪೇಷಲ್ ಕೇಶತೈಲ ಬೇರೆ ಕೊಟ್ಟೀದಾಳೇ, ನನ್ನ ಕೂದಲು ಬೆಳವಣಿಗೆ ಬೇಗ" ಅಂದ್ಲು, "ಅಲ್ಲ ನಿನಗೆ ಬೇಕಂತ ಹೊಸ ಕಟ್ ಮಾಡ್ಸಿದೀಯಾ, ಮತ್ಯಾಕೆ ಬೆಳೆಸೋದು" ಅಂದೆ, "ಪ್ಚ್.." ಅಂತ ಲೊಚಗುಟ್ಟಿದ್ಲು. ನನಗೇಕೊ ಅನುಮಾನ ಬಂತು, "ನಿಜ ನಿನಗಿಷ್ಟ ಅಂತಾನೆ ಕಟ್ ಮಾಡಿಸಿದ ಮೇಲೆ ಇರಲಿ ಬಿಡು" ಅಂದೆ, "ಹಾಂ, ಹಾಂ ಇಷ್ಟ" ಅಂದ್ಲು "ನಿಜ ಹೇಳು ನೀನೇನೊ ಮುಚ್ಚಿಡ್ತಾ ಇದೀಯಾ, ನನ್ನ ಮುಂದೆ ನಿನಗೆ ಸುಳ್ಳು ಹೇಳೊಕೆ ಬರಲ್ಲ" ಅಂದೆ, ನನಗೀಗ ಯಾಕೊ ಅನುಮಾನ ಧೃಢವಾಗಿತ್ತು, "ಇಲ್ಲ, ಇಲ್ಲ ಇಷ್ಟ ಅಂತಾನೆ ಕಟ ಮಾಡ್ಸಿದ್ದು" ಅಂದ್ಲು "ಆಯ್ತು ನಂಬಿದೆ" ಅಂದೆ.. ಈ ಇಲ್ಲ ಇಲ್ಲ.. ಅನ್ನೊದೇ ಅಲ್ಲೇನೊ ಇದೆ ಅಂತ ಸೂಚನೆ ಕೊಡುತ್ತಿತ್ತು... "ನಿಜವಾಗ್ಲೂ ರೀ" ಅಂದ್ಲು. ಅವಳಿಗೆ ಗೊತ್ತಾಗಿತ್ತು ನಾ ನಂಬಿಲ್ಲ ಅಂತ ಇನ್ನು ನಿಜ ಹೇಳೊವರೆಗೆ ಅದು ಸರಿ ಹೋಗಲ್ಲ ಅಂತ.. ಆದರೂ ಕಾದು ನೋಡಿದ್ಲು... ಕೊನೆಗೆ ಹೇಳುವ ತೀರ್ಮಾನ ಮಾಡಿದಂತಿತ್ತು...
ಊಟವಾದ ಮೇಲೆ ಹಾಗೇ ಒರಗಿದ್ದೆ, ಬಂದು ಎದೆಯ ಮೇಲೆ ತಲೆಯಿಟ್ಟು ಮಲಗಿದ್ಲು, ಅಭ್ಯಾಸ ಬಲದಿಂದ ಕೈ ಅವಳ ತಲೆಯತ್ತ ಹೋಯ್ತು, ಮೊದಲಿನಂತೆ ಜಡೆ ಕೈಗೆ ಸಿಗುತ್ತದೆಂದು... ಮತ್ತೆ ನೆನಪಾಗಿ, ಕೈ ಹಿಂದೆ ತಲೆಗೆ ಆಧಾರ ಮಾಡಿಕೊಂಡೆ. "ಸಿಟ್ಟಾಗಲ್ಲ ಅಂದ್ರೆ ನಿಜ ಹೇಳ್ತೀನಿ", ಅಂದ್ಲು... ಒಹ್ ನನ್ನ ಫೂಲ ಮಾಡಲು ಎಲ್ಲೊ ವಿಗ್ ಹಾಕಿಕೊಂಡೀದಾಳೊ ಅಂತ ಅನಿಸಿ, ಹಿಡಿದೆಳದು ಖಚಿತ ಮಾಡಿಕೊಂಡೆ "ರೀ.. ನಿಜವಾಗ್ಲೂ ಕಟ್ ಮಾಡಿದ್ದೆ" ಅಂತ ಚೀರಿದ್ಲು. "ಇಷ್ಟ ಇಲ್ದೆ ಕಟ್ ಮಾಡೀದೀಯ ಅಂತಾಯ್ತು" ಅಂದೆ. "ಕಟ್ ಮಾಡಲೇ ಬೇಕಿತ್ತು" ಅಂದ್ಲು, "ಅಂದ್ರೆ... ಬಿಡಿಸಿ ಹೇಳು"... "ಅದೂ, ನನ್ನ ತಮ್ಮ ಇದಾನಲ್ಲ..." ಅವಳು ಹೇಳುತ್ತಿದ್ರೆ "ಹೂಂ ನಿನ್ನ ತಮ್ಮ...." ಅಂದೆ... "ರೀ ನೀವು ಸಿಟ್ಟಗ್ತಿದೀರಾ... ಅದಕ್ಕೆ ನಾ ಹೇಳಲ್ಲ ಅಂದಿದ್ದು"... "ಇಲ್ಲ, ಇಲ್ಲ ಈಗ ಹೇಳು" ಅಂದೆ... "ಅದೇ ನನ್ನ ತಮ್ಮ ಇದಾನಲ್ಲ ಚಿವಿಂಗ(ಬಬಲ್) ಗಂ ತಿಂತಾನಾ... ಅದು ಏನೊ ಆಟ ಮಾಡೋಕೆ ಹೋಗಿ, ಚೇರಿಗೆ ಅಂಟಿಸಿದಾನಾ... ಅದು ನನ್ನ ಕೂದಲಿಗೆ ಅಂಟಿ ಬಿಡಿಸೋಕೆ ಬರದ ಹಾಗೆ ಆಗಿತ್ತಾ... ಆ ಕೊನೇ ಮನೆಲಿರ್ಒ ಇತ್ತೀಚೆಗೆ ಬ್ಯೂಟೀ ಪಾರ್ಲರ ಕೊರ್ಸ ಮಾಡಿರೋ ಹುಡುಗಿ ಅದನ್ನಷ್ಟೇ ಕಾಣದ ಹಾಗೆ ಕತ್ತರಿಸ್ತೀನಿ ಅಂತ ಹೋದ್ಲಾ, ಅದೇನೊ ಕತ್ತರಿಸಿದ್ಲೊ, ಒಂಥರಾ ವಿಕಾರವಾಗಿ ಕಾಣೋಕೆ ಶುರುವಾಯ್ತಾ, ಅದನ್ನ ಸರಿ ಮಾಡೊಕೆ ಅಂತ ಹೋಗಿ ಇನ್ನಷ್ಟು ಕತ್ತರಿಸಿದ್ಲಾ, ಕೊನೆಗೆ ಈ ಲೇವಲ್ಲಿಗೆ ಕತ್ತರಿಸ ಬೇಕಾಯ್ತು" ಅಂತ ನನ್ನ ಮುಖಾನೇ ನೋಡ್ತಾ ಇದ್ಲು... "ಚೇರಿಗೆ ಅಂಟಿಸಿದ್ನಾ... ಅದು ಅಷ್ಟು ಅಂಟಿತಾ" ಅಂದೆ. "ನಿಜ ಹೇಳಬೇಕೆಂದ್ರೆ, ಕೂದಲಿಗೇ ಅಂಟಿಸಿದ್ದ.." ಅಂದ್ಲು ನಿಧಾನವಾಗಿ... "ಕತ್ತೇ ಬಡವ... ಒಂದೊಯ್ದು, ನನ್ನಾಕೆ ಜಡೇನೆ ಸಿಕ್ಕಿತ್ತಾ ಅವನಿಗೆ, ಸಿಗಲಿ ನನ್ನ ಕೈಗೆ ತಲೆ ಬೋಳಿಸಿ... ಅಷ್ಟೇ ಯಾಕೆ ಹುಬ್ಬು, ಬಂದಿರೊ ಚಿಗುರು ಮೀಸೆ ಎಲ್ಲ ಬೋಳಿಸಿ ಗುರುತು ಹತ್ತದ ಹಾಗೆ ಮಾಡಿ ಕಳಿಸ್ತೀನಿ" ಅಂತ ಸಿಟ್ಟಿಗೆದ್ದೆ, "ಅದಕ್ಕೆ ನಾ ಸಿಟ್ಟಿಗೆ ಬರಲ್ಲ ಅಂದ್ರೆ ಹೇಳ್ತೀನಿ ಅಂದಿದ್ದು, ಏನೋ ಹುಡುಗ ಬುದ್ಧಿ ಹಾಗೆ ಮಾಡಿದೆ ಪಾಪ" ಅಂದ್ಲು. "ಅಯ್ಯೊ ಸಿಟ್ಟಿಗೆ ಯಾಕೆ... ಬೇಡ, ಪಾಪ ಪ್ರೀತಿಯಿಂದ್ಲೇ ಮೊಟ್ಟೇ ಮಾಡಿ ಕಳಿಸ್ತೀನಿ, ಸಿಗಲಿ... ಅವಳು ಪಾರ್ಲರ ಹುಡುಗಿ.. ಅವಳಿಗೆ ಬಾಬ ಕಟ ಗ್ಯಾರಂಟಿ..." ಅಂದೆ "ಅವಳು ಮೊದಲೇ ಬಾಬ್ ಕಟ" ಅಂತ ನಕ್ಳು. "ನಾನು ಹೇಳ್ದೆ ಕೇಳ್ದೆ ಕಟ್ ಮಾಡಿದೆ ಅಂತ ಮುಖ ಇಷ್ಟೊತ್ತು ಹೇಗೆ ಗಂಟು ಹಾಕಿತ್ತು, ನೋಡು" ಅಂತ ಮತ್ತೆ ಗಹಗಹಿಸಿ ನಗುತ್ತ ಅ ಚೊಟುದ್ದ ಕೂದಲುಗಳನ್ನೇ ನನ್ನ ಮುಖದ ಮೇಲೆ ಹರಡಿದಳು... ನನ್ನ ಮುಖ ನಾಚಿ ಕೆಂಪಾಗತೊಡಗಿತು... ಹಾಗೇ ಜಡೆಯ ಹಳೆಯ ನೆನಪುಗಳೊಂದೊಂದೇ ಹೊರಗಿಡುತ್ತ ಮಾತಾಡುತ್ತ ಸಮಯ ಕಳೆಯಿತು... ಸಂಜೆಯಾಯಿತು... ಹೀಗೆ ಮತ್ತೆ ಸಿಕ್ತೀನಿ, ಅವಳ ತಮ್ಮ ಎಲ್ಲಾದ್ರೂ ಕಾಣಿಸಿದ್ರೆ ತಿಳಿಸಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/neelaveni.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

