Sunday, February 20, 2011

ಏನೇ ಈರುಳ್ಳಿ...

ಅವಳು ಮಗ್ಗಲು ಬದಲಿಸಿ, ಅಮರಿಕೊಂಡಿರುವ ಕೈಗಳ ಅಗಲಿಸಿ ಏಳುವಾಗಲೇ ನನಗೂ ಎಚ್ಚರವಾಗಿರುತ್ತದೆ ಆದರೂ ಎನೋ ಅವಳಿಂದ ತೆಗಳಿಸಿ ತಿವಿಸಿಕೊಂಡು ಎದ್ದಾಗಲೇ ಸಮಾಧಾನ. ಬೇಗ ಎದ್ದು ಏಳಿಸುವ ತಾಪತ್ರಯ ಮಾತ್ರ ಅವಳಿಗೆ ತಪ್ಪುವುದಿಲ್ಲ. ತನ್ನ ಪಾಡಿಗೆ ತನಗಿರಲು ಅವಳಿಗೂ ಆಗುವುದಿಲ್ಲ, ತನ್ನಷ್ಟಕ್ಕೆ ತಾನೇ ಏಳುತ್ತೀನೇನೋ ಅಂತ ಕಾಯ್ದು, ಸೂರ್ಯ ಪಶ್ಚಿಮಕ್ಕೆ ಹುಟ್ಟಿದ ದಿನ ಮಾತ್ರ ಅದು ಸಾಧ್ಯವೆಂದು ಕೂಗಿ ಕರೆದು ಎದ್ದೇಳಿಸದೇ ವಿಧಿಯಿಲ್ಲ. ಇಂದು ಕೂಡ ಮಾಡಿದ್ದು ಅದನ್ನೇ ಆದರೂ ಎದ್ದೇಳಿಸಿ ಕೀಟಲೆಗಿಳಿಯದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಅವಳ ಪಾಡಿಗೆ ಅವಳಿದ್ದರೆ ನನಗೇನೊ ಕಸಿವಿಸಿ, ನಾ ಮನೆಯಲ್ಲಿದ್ದರೆ, ಅವಳನ್ನು ಗೋಳುಹೊಯ್ದುಕೊಂಡಾಗಲೇ ಸಮಾಧಾನ. ಪೇಪರು ಓದುತ್ತಿದ್ದವನಿಗೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಕಂಡಿತ್ತು ಅದೇ ಸುದ್ದಿ ನನ್ನಾಕೆಯನ್ನು ಮುದ್ದಿನಿಂದ ಕರೆಯಲು ಕಲ್ಪನೆ ತಂದಿತು. ಕೂಗಿದೆ "ಏನೇ ಈರುಳ್ಳಿ, ಈರುಳ್ಳಿ ಪುಟ್ಟಾ, ಎಲ್ಲಿದೀಯಾ?". ಈರುಳ್ಳಿಯೇ ಹೆಚ್ಚುತ್ತಿದ್ದಳೇನೊ, ನಸುನಗುತ್ತ ಹೊರಬಂದು, "ಈ ಈರುಳ್ಳಿನೇ ಎಸೀತೀನಿ ನೋಡಿ, ಈರುಳ್ಳಿ ಪುಟ್ಟಾ ಅಂತೆ" ಅಂದು ಈರುಳ್ಳಿ ಎಸೆದಂತೆ ಮಾಡಿ ಹೋದಳು. "ಅಯ್ಯೋ ಎನು ತಪ್ಪೇ, ಎಲ್ರೂ ಏನೇ ಚಿನ್ನಾ, ಬಂಗಾರಿ ಪುಟ್ಟಾ ಅಂತಾರೆ, ಬೆಲೆ ಏರಿದೆ ಅಂತ ಈರುಳ್ಳಿ ಅಂದೆ" ಅಂತನ್ನುತ್ತ ಪಾಕಶಾಲೆಗೆ ಪಾದಾರ್ಪಣೆ ಮಾಡಿದರೆ, ಈರುಳ್ಳಿಯೇ ಹೆಚ್ಚುತ್ತಿದ್ದಳು, ಕಣ್ಣಲ್ಲಿ ಮಾತ್ರ ಒಂದು ಹನಿ ಕಣ್ಣೀರಿಲ್ಲ. "ಏನು ಈರುಳ್ಳಿ ಹೆಚ್ತಾ ಇದ್ರೂ ಕಣ್ಣಲ್ಲಿ ನೀರಿಲ್ಲ" ಅಂದ್ರೆ. "ಈಗಿನ ಕಾಲದ ಈ ಹೈಬ್ರೀಡ್ ಈರುಳ್ಳಿ ಘಾಟು ಎಲ್ಲಿರತ್ತೇರೀ, ಕೊಳ್ಳೋವಾಗ ಬೆಲೆ ಕೇಳಿ ಕಣ್ಣೀರು ಬಂದರೆ ಬರಬೇಕು ಅಷ್ಟೇ" ಅಂತನ್ನುತ್ತ ಹೆಚ್ಚಲು ಇನ್ನೊಂದು ಈರುಳ್ಳಿ ಎತ್ತಿಕೊಂಡಳು, "ಏನು ಈರುಳ್ಳಿ ಬಾಜಿ(ಪಲ್ಯ) ಮಾಡ್ತಾ ಇದೀಯಾ?" ಅಂದೆ, ಕೇಳಿದ್ದೇ ಮಹಾಪರಾಧವಾಯಿತೊ ಏನೊ ಅನ್ನುವಂತೆ ನೋಡಿದಳು, "ಈರುಳ್ಳಿ ಬಾಜಿ, ಚಪಾತಿ ಸೂಪರ್ ಕಾಂಬಿನೇಶನ್ ಇರತ್ತೆ" ಅಂದುಕೊಳ್ಳುತ್ತ ಹೊರಬಂದೆ, ಏನು ಸಿಗೊದಿಲ್ಲ, ಬೆಲೆ ಜಾಸ್ತಿ ಅನ್ಸತ್ತೋ ಅದೇ ಬೇಕೆನಿಸತ್ತೆ, ಅದೊಂಥರ ಇರುವುದು ಬಿಟ್ಟು ಇರದುದರೆಡೆಗಿನ ತುಡಿತ, ಈ ನನ್ನ ಮನಸು ತಿಂಡಿಪೋತ.

ಪಕ್ಕದಲ್ಲೊಂದು ಟೀ ಲೋಟ ಇಟ್ಟು, ಕೂತಳು, ಒಂದು ನಗೆಯಿಲ್ಲ, ಪ್ರೀತಿಯಿಂದ ಕೊಡಲೂ ಇಲ್ಲ. "ಮುಗುಳು ನಗುವಿಗೂ ಬೆಲೆಯೇರಿಕೆ ಬಿಸಿಯೋ, ಪ್ರೀತಿಯದೊಂದು ಮಾತು ತುಟಿಯಿಂದ ಬರದಷ್ಟು ತುಟ್ಟಿಯೋ" ಅಂತ ಕಾವ್ಯಮಯವಾಗಿ ಕೇಳಿದ್ದಕ್ಕೆ, ಉತ್ತರ ಕೂಡ ಹಾಗೇ ಬಂತು "ಪ್ರೀತಿಯಾ ಮಾತಲ್ಲಿ ಅಳೆಯಬೇಕೆ, ಮಾತಲ್ಲೇ ಚಿನ್ನ ಬಂಗಾರಿ ಅಂದರೆ ಸಾಕೇ". ಸುಮ್ಮನಿರದೇ ಪರಚಿಕೊಂಡ ಹಾಗಾಯ್ತು, ಅದರೂ ಜಗ್ಗದೆ, "ನಾನೆಲ್ಲಿ ಚಿನ್ನ ಅಂದೆ, ಈರುಳ್ಳಿ ಅಂದೆ" ಅಂದರೆ. "ಹೋಗ್ಲಿ ಬಿಡಿ ನಿಮ್ಮದು ಬರೀ ಮಾತಾಯಿತು, ಪಕ್ಕದಮನೆ ಪದ್ದುಗೆ ಅವಳ ಗಂಡ ಅವಲಕ್ಕಿ ಸರ ಮಾಡಿಸಿಕೊಟ್ಟಿದ್ದಾರೆ ಗೊತ್ತಾ" ಅಂತ ಮೂಗು ಮುರಿದಳು.
"ಹೇಳಬೇಕಿತ್ತು, ನನ್ನವರು ಈರುಳ್ಳಿ ಸರ ಮಾಡಿಸಿಕೊಡ್ತೀನಿ ಅಂದಿದಾರೆ ಅಂತ"
"ಹ್ಮ್ ಈರುಳ್ಳಿ ಸರ ಅಂತೆ, ಅವಲಕ್ಕಿ ಸರ ಅಂದ್ರೆ ಅವಲಕ್ಕಿ ಅಲ್ಲ, ಅದು ಚಿನ್ನದ್ದು"
"ಹೌದಾ, ಹ್ಮ್ ಮತ್ತೆ, ನನಗಂತೂ ಪದ್ದುಗೆ ಸರ ಕೊಡಿಸಲು ಆಗ್ತಾ ಇರಲಿಲ್ಲ, ಅವಳ ಗಂಡ ಆದ್ರೂ ಕೊಡಿಸಿದನಲ್ಲ ಬಿಡು" ಅಂದೆ ವಿಕಟ ನಗೆ ಸೂಸುತ್ತ.
"ಓಹೋ, ಬೇಡ ಅಂದವರು ಯಾರೋ, ಅವಳಿಗೇ ಕೊಡ್ಸಿ" ಅಂದು ಎದ್ದು ಹೋದಳು.

ಸರಿ ಮುನಿದವಳ ಮನ ತಣಿಸಲು ಏನಾದರೂ ತಂದರಾಯಿತು, ಅವಳಿಗೇನೂ ಅವಲಕ್ಕಿ ಸರವೇ ಬೇಕಂತಿಲ್ಲ, ಪ್ರೀತಿಯಿಂದ ಪುಟ್ಟ ಮೂಗುತಿ ತಂದರೂ ಆದೀತು ಅಂದು, ಚಿನ್ನದ ಬೆಲೆ ಗಮನಿಸಿದರೆ, ಬರೊಬ್ಬರಿ ಇಪ್ಪತ್ತು ಸಾವಿರಕ್ಕೆ ಏರಿ ಕೂತಿದ್ದು ಕಂಡು, ಈರುಳ್ಳಿಯೇ ಎರಡು ಕೇಜಿ ಜಾಸ್ತಿ ತಂದರಾಯಿತಂದುಕೊಂಡೆ. "ಏನೇ ಇದು ಚಿನ್ನದ ಬೆಲೆ ನೋಡಿದ್ಯಾ" ಕೇಳಿದೆ. "ದಿನಾಲೂ ನೋಡ್ತಾನೇ ಇದೀನಿ" ಅಂದ್ಲು ನಿರಾಳವಾಗಿ. "ಹ್ಮ್, ಚಿನ್ನದ ಬೆಲೆ ಹೀಗೇ ಜಾಸ್ತಿ ಆಗ್ತಿದೆ ಅಂದ್ರೆ, ಹೋದವರ್ಷ ಹನ್ನೊಂದು ಸಾವಿರ ಇರೋವಾಗ ಒಂದು ಎರಡು ಕೇಜಿ ತೆಗೆದುಕೊಂಡಿದ್ರೆ" ಅಂತ ಬೇಸರಿಸಿದೆ.
"ಓಹೊ ಏನು ಮಹರಾಜರಿಗೆ ಕಿರೀಟ ಮಾಡಿಸುವುದಿತ್ತೊ?" ಅಂತ ಹಿಯಾಳಿಸಬೇಕೆ. "ಇಲ್ಲ, ಮಹರಾಣಿಯವರು ಅವಲಕ್ಕಿ ಸರ ಇಲ್ಲ ಅಂತ ಅಲವತ್ತುಕೊಳ್ಳುವುದು ತಪ್ಪುತ್ತಿತ್ತು" ಅಂತ ತಿರುಗೇಟು ಕೊಟ್ಟೆ. ಮೂಗು ಮುರಿದು ಹೋದವಳ ಮೂಗುತಿಯೇಕೊ ಮಂಕಾದ ಹಾಗೆ ಕಾಣಿತು.

ಪಾಕಶಾಲೆಯಲ್ಲಿ ಮತ್ತಿನ್ನೇನು ಕುದಿಯಲಿಟ್ಟು ಬಂದು ಮತ್ತೆ ಕೂತಳು ನನ್ನ ಜತೆ. ಪೇಪರಿನಲ್ಲಿ ಅದಿನ್ನೇನನ್ನೊ ಹುಡುಕಾಡಿದಂತೆ ಚರ ಪರ ಸದ್ದು ಮಾಡುತ್ತ ಆಕಡೆ ಈಕಡೆ ಪುಟಗಳ ತಿರುವಿ, ಕೊನೆಗೆ ಕೊಡವಿ ನೀಟಾಗಿ ಮಡಿಚಿ ಕೊಳವೆಯಂತೆ ಸುತ್ತಿ, ಕೋಲಿನಂತೆ ಮಾಡಿಕೊಂಡು ತಲೆಗೊಂದು ಕೊಟ್ಟು, ಹುಬ್ಬುಹಾರಿಸಿದಳು. ಏನು ಯೋಚನೆ ಮಾಡ್ತಾ ಇದೀಯಾ ಅಂತ ಕೇಳಿದಂಗೆ ಇತ್ತು. "ಲೇ, ಸುಮ್ನಿರೇ. ದೇಶದ ಬಗ್ಗೆ ಎಲ್ಲಾ ಹಾಗೆ ಗಹನವಾಗಿ ಚಿಂತನೆ ಮಾಡ್ತಾ ಇರಬೇಕಾದ್ರೆ ತೊಂದ್ರೆ ಕೊಡಬೇಡ" ಅಂದೆ.
"ಹ್ಮ್ ಹೌದು, ಅದೇ ಈ ಬೆಲೆ ಯಾಕೆ ಜಾಸ್ತಿ ಆಗತ್ತೆ?"
"ಅದೇ ಈ ಬೆಲೆ ಮಾತ್ರ ಯಾಕೆ ಜಾಸ್ತಿ ಆಗತ್ತೆ? ಬೆಲೆ ಜತೆ ಸಂಬಳ ಕೂಡ ಜಾಸ್ತಿ ಆಗಲ್ವೇ" ಅಂತ ಬೇಸರಿಸಿದೆ.
"ಬೆಲೆನೂ ಜಾಸ್ತಿ ಆಗಬಾರದು, ಸಂಬಳಾನೂ ಕೂಡ. ಹಾಗೆ ಮಾಡೋಕೆ ಆಗಲ್ವೇ, ಆಗ ಎಲ್ಲಾ ಸೂಪರ್ ಆಗಿರತ್ತೆ"
"ಹ್ಮ್, ರಿಸರ್ವ್ ಬ್ಯಾಂಕ್ ಗವರ್ನರ್ ನೀನೇ ಆಗಬೇಕಿತ್ತು ಒಳ್ಳೇದಾಗಿರೋದು" ಅಂದ್ರೆ
"ರೀ, ಹೇಳ್ರಿ ಬೆಲೆ ಹೇಗೆ ಜಾಸ್ತಿ ಆಗತ್ತೆ?" ಅಂತ ದುಂಬಾಲು ಬಿದ್ದಳು.
"ಇದಕ್ಕೆ ಡಿಮಾಂಡ್ ಆಂಡ್ ಸಪ್ಲಾಯ್ ಚೇನ್ ಅಂತಿದೆ ಅಂದ್ರೆ, ಬೇಡಿಕೆಗೆ ತಕ್ಕ ಪೂರೈಕೆ, ಈಗ ಏನಾಗತ್ತೆ ಅಂದ್ರೆ, ಮಳೆ ಜಾಸ್ತಿ ಆಯ್ತು ಅಂತಿಟ್ಕೊ, ಬೆಳೆ ಎಲ್ಲ ಹಾಳಾಯ್ತು, ಬಂದಿದ್ದೇ ಮೂರು ಮೂಟೆ, ಆದರೆ ಬೇಕಿರುವುದು ಆರು ಮೂಟೆ ಆರು ಜನ ಕಾದು ನಿಂತಿದ್ದರೆ, ಹೆಚ್ಚು ಬೆಲೆ ತೆತ್ತಾದರೂ ಕೊಳ್ಳುತ್ತೀವಿ ಅನ್ನುವ ಹಾಗಿದ್ರೆ, ಅಷ್ಟು ಬೇಡಿಕೆ ಇದೆ ಆದರೆ ಪೂರೈಕೆ ಇಲ್ಲ, ನನಗೂ ಬೇಕು, ನನಗೂ ಬೇಕು ಅಂತ ಆ ಆರು ಜನ ಮೂರು ಮೂಟೆಗೆ ಹೆಚ್ಚು ಬೆಲೆ ಕೊಡಲು ನಿಂತರೆ, ಆಗ ಬೆಲೆ ಜಾಸ್ತಿ ಆಗತ್ತೆ. ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳು, ಈಗ ನಂಗೆ ಮೂರು ಮುತ್ತು ಬೇಕಿದೆ ಹೆಂಡ್ತಿ ಕೊಡಲ್ಲ ಅಂತಾಳೆ, ಆದ್ರೆ ನಂಗೆ ಬೇಕು..."
"ನಂಗರ್ಥ ಆಯ್ತು ಬಿಡಿ, ಈ ಬೇರೆ ಉದಾಹರಣೆ ಏನೂ ಬೇಕಿಲ್ಲ" ಅಂತ ಹೊರಟೆದ್ದು ನಿಂತಳು."ಕೇಳಿದ ಮೇಲೆ ಪೂರ್ತಿ ಉತ್ತರ ಕೇಳಬೇಕು, ಅದೆಲ್ಲ ಆಗಲಿಕ್ಕಿಲ್ಲ" ಅಂತ ಎಳೆದು ಕೂರಿಸಿದೆ.
"ಹ್ಮ್, ಹೆಂಡ್ತಿ ಕೊಡೊದೇ ಇಲ್ಲ ಅಂತಾಳೆ, ಆಗೇನು ಎಷ್ಟು ಬೆಲೆ ತೆತ್ತರೂ ಕೂಡ ಕೊಡಲ್ಲ ಅಂತಾಳೆ ಆಗೇನು..." ಅಂತ ಕೈ ಮುಷ್ಟಿ ಮಾಡಿ ಅಂಗೈ ಮೇಲೆ ಗುದ್ದಿಕೊಳ್ಳುತ್ತ ಕೇಳಿದಳು. "ಹ್ಮ್, ಆಗ ಏನಾಗತ್ತೆ ಅಂದ್ರೆ, ಅಂಥ ಪರಿಸ್ಥಿತಿಯಲ್ಲಿ ಬೇಕಾದದ್ದನ್ನು ಹೊರಗಡೆಯಿಂದ ಆಮದು ಮಾಡಿಕೊಳ್ಳಬೇಕಾಗತ್ತೆ ಅದೇ ಇಂಪೋರ್ಟ್ ಅಂತಾರಲ್ಲ ಅದು, ಸ್ವಲ್ಪ ಹೆಚ್ಚು ಬೆಲೆ ತೆರಬೇಕಾಗಬಹುದು. ಆಗ ಕೂಡ ಬೆಲೆ ಜಾಸ್ತಿ ಆಗತ್ತೆ ಅಷ್ಟೇ" ಅಂದು ಕಳ್ಳ ನೋಟ ಬೀರಿದೆ. "ಹ್ಮ್, ಹೂಂ... ಈ ಹೊರಗಡೆ ಅಂದ್ರೆ ಅದೆಲ್ಲಿ, ಆಂ... ಎನು ಕಥೆ, ಯಾಕೆ ಅಂತ, ಎಲ್ಲ ಇಲ್ಲೇ ಇದೆ, ಹೊರಗಡೆ ಏನಾದ್ರೂ ಅಂದ್ರೆ ಅಷ್ಟೇ ಮುಷ್ಕರ ಹೂಡ್ತೀನಿ..." ಅಂತ ಹೆದರಿಸಿದಳು. "ಇದೇ ನೋಡು ಇಲ್ಲಿ ಎಲ್ಲ ಇದ್ದರೂ, ತಾತ್ಕಾಲಿಕ ಅಭಾವ ಸೃಷ್ಟಿ ಮಾಡೋದು ಅಂತ, ಇದ್ದರೂ ಮುಚ್ಚಿಟ್ಟು ಇಲ್ಲ ಅನ್ನೋದು, ಆಗ ಗ್ರಾಹಕ ಹೆಚ್ಚು ಬೆಲೆ ತೆರಲು ಸಿಧ್ದವಾದರೆ, ಪೂರೈಕೆ ಮಾಡಿ ಲಾಭ ಮಾಡಿಕೊಳ್ಳುವ ದಲ್ಲಾಳಿಗಳ ತಂತ್ರ" ಅಂತ ವಿವರಿಸಿದೆ, ಖುಶಿಯಾದ್ಲು. "ಸೂಪರ್, ಚೆನ್ನಾಗಿದೆ, ಇದೆಲ್ಲ ಹೇಳಿದ್ದಕ್ಕೆ ಅಂತ ಒಂದು... ಉಮ್ಮ್" ಅಂತೊಂದು ಮುದ್ದು ಕೊಟ್ಟು, ಕಾಲು ಕಿತ್ತಳು. "ಲೇ ಇನ್ನೂ ಎರಡು... ಬೇಡಿಕೆ ಮೂರು ಇದೆ, ಒಂದೇ ಪೂರೈಕೆಯಾದದ್ದು..." ಅಂತ ಚೀರುತ್ತಿದ್ದರೆ. "ಅದಕ್ಕೆ ಜಾಸ್ತಿ ಬೆಲೆ ತೆರಬೇಕು..." ಅನ್ನಬೇಕೇ. "ಜಾಸ್ತಿ ಬೆಲೆ ಅಂದ್ರೆ, ಎರಡು ಕೇಜಿ ಈರುಳ್ಳಿ ತಂದರಾಯಿತು ಬಿಡು" ಅಂತನ್ನುತ್ತ ನಾನೂ ಮೇಲೆದ್ದೆ...

ಏನಪ್ಪಾ ಈರುಳ್ಳಿ ರೇಟು, ನಲವತ್ತು, ಐವತ್ತು ಅಂತ ತೊಂಬತ್ತು ನೂರು ರೂಪಾಯಿವರೆಗೆ ಏರಿಬಿಟ್ಟಿತ್ತು, ಈರುಳ್ಳಿ ಇಲ್ಲದೇ ಅಡುಗೆ ಇಲ್ಲ, ಮಾಡಲೇಬೇಕು ಅಂದ್ರೆ ಹೆಚ್ಚು ಬೆಲೆ ತೆರಲೇಬೇಕು. ರೈತನಿಗಂತೂ ಲಾಭ ಆಗಿದ್ದು ಅಷ್ಟಕ್ಕಷ್ಟೇ, ಬೆಲೆ ಬರುತ್ತಂತ ಕಾದು ಕೂತವರಂತೂ, ರೋಡಿಗೆ ಈರುಳ್ಳಿ ಸುರಿವ ಮಟ್ಟಿಗೆ ಬೆಲೆ ಕುಸಿತ ಕೂಡ ಕಂಡರು. ದಲ್ಲಾಳಿಗಳ ಅಕ್ರಮ ದಾಸ್ತಾನು ಒಂದೆಡೆ ಬೆಲೆ ಏರಿಸಿದ್ದು, ಇನ್ನೊಂದೆಡೆಗೆ ಬೇರೆ ದೇಶದಿಂದ ಆಮದು ಮಾಡಿಕೊಳ್ಳುವ ಸರಕಾರದ ನಿರ್ಧಾರದಿಂದ ಮಾರುಕಟ್ಟೆ ಬಂದಿಳಿದ ಈರುಳ್ಳಿ, ಏರಿದಷ್ಟೇ ಬೆಲೆ ಇಳಿಕೆ ಆಯ್ತು. ಇನ್ನೂ ಬೆಲೆ ಜಾಸ್ತಿಯಾದೀತೆಂದು ಎರಡು ಕೇಜಿ ಜಾಸ್ತಿ ಈರುಳ್ಳಿ ತಂದಿದ್ದ ಅಮ್ಮ ಕೂಡ ಬಯ್ದುಕೊಂಡಳು. ಈ ಬೆಲೆ ಏರಿಕೆ ಇಳಿಕೆ ಇದ್ದದ್ದೇ, ಏರಿತೆಂದು ಸರ್ಕಾರದ ಮೇಲೆ ಹಾರಾಡಿ, ಇಳಿಯಿತೆಂದು ಚೆಲ್ಲಿ ಚಲ್ಲಾಪಿಲ್ಲಿ ಮಾಡುವರೂ ನಾವೇ. ಪೆಟ್ರೊಲ್, ಡೀಸಲ್ ಬೆಲೆಯಂತೂ ಏರುತ್ತಲೇ ಇದೆ, ಅದು ಏರಿದಂತೆ ಎಲ್ಲ ಬೆಲೆ ಏರಲೇಬೇಕು.
ಈರುಳ್ಳಿ ಬೆಲೆ ಇಳಿಯಿತು, ಹಾಲು ಕುಡಿದಷ್ಟು ಸಂತೋಷವಾಯ್ತು ಅನ್ನಬೇಕೆನ್ನುವಷ್ಟರಲ್ಲಿ ಹಾಲಿನ ಬೆಲೆ ಲೀಟರಿಗೆ ಎರಡು ರೂಪಾಯಿ ಏರಬೇಕೆ...

"ರೀ, ಹಾಲಿನ ಬೆಲೆ ಜಾಸ್ತಿ ಆಯ್ತು, ಟೀ ಕುಡಿಯುವುದನ್ನು ಕಡಿಮೆ ಮಾಡಿ" ಅಂತನ್ನುತ್ತ ತಪ್ಪದೇ ಟೈಮ್ ಟೈಮ್‌ಗೆ ಟೀ ಸಪ್ಲೈ ಮಾಡುವ ನನ್ನಾಕೆಗೆ "ಹಾಲು ಬೆಲೆ ಜಾಸ್ತಿ ಅದ್ರೆ ಅಲ್ಕೊಹಾಲು ಕುಡಿದರೆ ಹೇಗೆ?" ಅಂದೆ. "ಯಾಕೆ ಎಂದೂ ಇಲ್ಲದ್ದು, ಅದು ಬೇರೆ ಶುರು ಮಾಡಿಕೊಳ್ಳುವ ಇರಾದೆಯಾಗಿದೆಯೋ" ಅಂತ ಬಯ್ಯುತ್ತ, "ಹಾಗೇನಾದರೂ ಇದ್ದರೆ, ಮನೆಗೇ ತನ್ನಿ, ಹಾಲಾಹಲ ಕುಡಿದು ಕೋಲಾಹಲ ಮಾಡೋಣ" ಅಂತ ತಾನೂ ಸಜ್ಜಾದಳು. ಈರುಳ್ಳಿ ಬೆಲೆ ಜಾಸ್ತಿ ಇದ್ದರೇನಂತೆ, ನನಗೆ ಬೇಕೆಂದ ಮೇಲೆ ಚಪ್ಪಾತಿ ಈರುಳ್ಳಿ ಬಾಜಿಯೇ ಮಾಡಿದ್ದಳು. ಚೆನ್ನಾಗಿತ್ತು, ಜಾಸ್ತಿಯೇ ತಿಂದು ತೇಗಿದೆ. ರಾತ್ರಿ ಮಲಗಲು ಹೊದಿಕೆ ಹೊಂದಿಸುತ್ತಿದ್ದರೆ, "ಕಣ್ಣು ಮುಚ್ಚು" ಅಂದೆ. "ಈ ಟ್ರಿಕ್ ಎಲ್ಲ ಬೇಡ, ಸುಮ್ನೇ ಮಲಗಿ" ಅಂತ ತಳ್ಳಿದಳು. "ಹೇಳಿದ ಮೇಲೆ ಕೇಳಬೇಕು" ಅಂತ ಕಣ್ಣಿಗೆ ಕೈ ಅಡ್ಡ ಹಿಡಿದೆ, ಕಣ್ಣು ಮುಚ್ಚಿಕೊಂಡಳು, ಕಣ್ತೆರೆದಾಗ, ಮುಂದೆ ಚಿನ್ನದ ಸಾಮಾನುಗಳ ಪುಟ್ಟ ಬಾಕ್ಸಿನಲ್ಲಿ, ಪುಟಾಣಿ ಈರುಳ್ಳಿ ಇಟ್ಟು ಮುಂದೆ ಹಿಡಿದಿದ್ದೆ. "ರೀ...!!!.. ಈರುಳ್ಳಿ ಕೊಡ್ತೀರಾ" ಅಂತ ಪಟ ಪಟ ಬಡಿದು ನಗತೊಡಗಿದಳು. ಬಡಿಯುತ್ತಿದ್ದ ಕೈಗಳ ಹಿಡಿದು ಮುಷ್ಟಿ ಮಾಡಿಸಿ, ಆಗಲೇ ತಂದಿಟ್ಟಿದ್ದ ಚಿನ್ನದ ಮೂಗುತಿ ಇರಿಸಿದೆ. ತೆಗೆದು ನೋಡಿ. "ಈಗ ಇದೆಲ್ಲ ಬೇಕಿತ್ತಾ" ಅಂತ ಇನ್ನೊಂದು ಕೊಟ್ಟಳು. "ವಜ್ರ, ಅದನ್ನ ಕೂಡಿಸಿರುವ ಸ್ಟೈಲ್ ಚೆನ್ನಾಗಿದೆ" ಅಂದ್ಲು ಅದನ್ನೇ ದಿಟ್ಟಿಸಿ ನೋಡುತ್ತ. "ವಜ್ರದ ಬದಲು ಒಂದು ಚಿಕ್ಕ ಈರುಳ್ಳಿ ಕೂರಿಸಲಾಗತ್ತ ಅಂತ ಕೇಳಿದೆ ಕಣೆ, ಆಗಲ್ಲ ಅಂದ್ರು, ವಿಧಿಯಿಲ್ಲದೇ ಇದನ್ನೇ ತಂದೆ" ಅಂದೆ. "ಸ್ಮಾರ್ಟಿ" ಅಂತ ಕೆನ್ನೆ ಗಿಲ್ಲಿದಳು. "ಈ ಬಡಪಾಯಿ ಕೈಲಿ ತರಲಾದದ್ದು ಇಷ್ಟೇ, ಬೇಡಿಕೆ ಈಡೇರಬೇಕೆಂದರೆ, ಬೆಲೆ ತೆರಬೇಕಲ್ಲವೇ, ಬೆಲೆ ತೆತ್ತ ಮೇಲೆ ಪೂರೈಕೆ ಮಾಡಿ" ಅಂದೆ. ಏನು ಅನ್ನುವಂತೆ ನೋಡಿದಳು. "ಮಧ್ಯಾಹ್ನ ಕೊಟ್ಟಿದ್ದು ಒಂದೇ ಮುತ್ತು, ಬೇಡಿಕೆಯಿದ್ದದ್ದು ಮೂರು" ಅಂದ್ರೆ, "ಮೂರು ಸಾಕಾ, ನೂರು ಬೇಕಾ?" ಅಂತನ್ನಬೇಕೆ ತುಂಟಿ... ಮುಂದೇನಾಗಿರಬಹುದೆಂದು ಊಹಿಸಿಕೊಳ್ಳಿ, ಹಾಗೆಲ್ಲ ಬರೆಯಲಾಗದು... ಒಂದು ತುಂಬಾ ಬೆಲೆ ಬಾಳುವ ಸಲಹೆ ಪುಕ್ಕಟೆಯಾಗಿ ಕೊಡುತ್ತೀನಿ ಕೇಳಿ, ಬಾಳಿನಲ್ಲಿ ಇಂಥ ಚಿಕ್ಕಪುಟ್ಟ ಸಂತೋಷಗಳು ಬಹಳ ಇವೆ ಅವಕ್ಕೇನು ಬೆಲೆ ಏರಿಕೆಯ ಬಿಸಿಯಿಲ್ಲ, ಬಳಸಿ ನೋಡಿ ಅಷ್ಟೇ... ಮತ್ತೆ ಸಿಗೋಣ...

ಬಹಳ ದಿನಗಳಾದ ಮೇಲೆ ಬರೆಯುತ್ತಿದ್ದೇನೆ, ಈರುಳ್ಳಿ ಬೆಲೆಯೇರಿದಾಗ ಶುರುವಿಟ್ಟುಕೊಂಡ ಲೇಖನ, ಬೆಲೆ ಇಳಿದಾಗ ಪೂರ್ತಿ ಆಗಿದೆ ನೋಡಿ, ಮೂರು ನಾಲ್ಕು ವಾರಗಳಿಂದ, ಅಷ್ಟು ಇಷ್ಟು ಬರೆದು ಇಟ್ಟಿದ್ದೇ ಆಯ್ತು, ಇಂದು ಬರೆದು ಮುಗಿಸಲೇಬೇಕೆಂದು ಪಟ್ಟು ಹಿಡಿದು ಕೂತಿದ್ದಕ್ಕೆ ಸಾಧ್ಯವಾಯ್ತು. ಬ್ಲಾಗ್ ಓದಲು ಬರುವವರನ್ನಂತೂ ಬಿಡಿ, ನನ್ನ ಬ್ಲಾಗ್‌ಗೆ ನಾನೇ ಬಂದು ಎಷ್ಟೋ ದಿನಗಳಾಗಿತ್ತು. ಬ್ಲಾಗ್‌ಗಿಂತ ಇತ್ತೀಚೆಗೆ ಈ ಮೈಕ್ರೊಬ್ಲಾಗಿಂಗ್ ಅಂತ ಟ್ವಿಟ್ಟರಿನಲ್ಲಿ (@telprabhu) ಚಿಲಿಪಿಲಿಗುಟ್ಟಿದ್ದೇ ಜಾಸ್ತಿ. ಮತ್ತೆ ಸಾಧ್ಯವಾದಾಗ ಬರೆಯುತ್ತೇನೆ, ಓದುತ್ತಿರಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/eerulli.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, October 3, 2010

US & us - ಯುಎಸ್ ಮತ್ತು ನಮ್ಮ ಬಗ್ಗೆ...

ಮಲಗಿದ್ದೆ, ಇನ್ನೂ ಹತ್ತು ಘಂಟೆಯಾಗಿದ್ದರೂ... ಅವಳೂ ಎದ್ದೇಳಿಸುವ ಗೋಜಿಗೆ ಹೋಗಿರಲಿಲ್ಲ, ರಾತ್ರಿ ಎಲ್ಲ ಜಾಗರಣೆ ಮಾಡಿ ಈಗ ಸ್ವಲ್ಪ ಕಣ್ಣು ಮುಚ್ಚಿದೆ ಬಿಡು ಅಂತ, ಆದ್ರೆ ನಾನಾಗಲೇ ಕಣ್ಣು ಬಿಟ್ಟದ್ದು. ಅಲ್ಲೇ ಪಕ್ಕದಲ್ಲೇ ಕೂತಿದ್ದಳು ನನ್ನನ್ನೇ ನೋಡುತ್ತ, ಮತ್ತೆ... ಅದೇ ತಿಂಗಳುಗಟ್ಟಲೇ ಬಿಟ್ಟು ಇದ್ದವಳಲ್ಲ, ವಾರ ದೂರವಿದ್ದರೇ ಜಾಸ್ತಿ, ಅದಕ್ಕೇ ಏನೊ ಎಂದೂ ಕಾಣದ ಹಾಗೆ ನನ್ನನ್ನೇ ಎವೆಯಿಕ್ಕದೇ ನೋಡುತ್ತ ಕೂತಿದ್ದಳೇನೊ. "ಯಾಕೆ ನಿದ್ರೆ ಬರಲಿಲ್ವಾ? ಹಾಗೇ ಕಣ್ಣು ಮುಚ್ಚಿ ಪ್ರಯತ್ನಿಸಿ, ಬರತ್ತೆ" ಅಂತಂದ್ಲು, ಮತ್ತೆ ಹಾಗೇ ನೋಡುತ್ತ ಕೂತಳು. ನಾನೂ ಕಣ್ಣು ಮತ್ತೆ ಮುಚ್ಚಿದವ, ಒಂದೇ ಒಂದು ಅರೆಗಣ್ಣು ತೆರೆದು ನೋಡಿದೆ, ಅರೇ ಇನ್ನೂ ನನ್ನೇ ನೋಡುತ್ತಿದ್ದಾಳೆ. ಹೀಗೆ ನೋಡುತ್ತಿದ್ದರೆ ನಾನು ನಿದ್ರೆ ಮಾಡುವುದಾದರೂ ಹೇಗೆ? ಏನು ಅಂತನ್ನುವ ಹಾಗೆ ಹುಬ್ಬು ಕುಣಿಸಿದೆ. ಹುಬ್ಬು ಗಂಟಿಕ್ಕಿ ಏನಿಲ್ಲ ಅಂತನ್ನುವ ಹಾಗೆ ತಲೆ ಅಲ್ಲಾಡಿಸಿದಳು. ಜೆಟ್ ಲ್ಯಾಗ್ ಅಂತ ನಿದ್ರೆಯೆಲ್ಲ ಎಡವಟ್ಟಾಗಿತ್ತು. ಎದ್ದು ಕೂತೆ. ಅಬ್ಬ ಮೊಟ್ಟ ಮೊದಲಿಗೆ ಬಾರಿಗೆ ಇರಬೇಕು ನನ್ನಾಕೆ ಮಲಗಿ ಅಂತ ಬಯ್ದಿದ್ದು.. "ಮಲಗಿ ಇನ್ನೂ ಕಣ್ಣು ಕೆಂಪಗಿದೆ, ರಾತ್ರಿಯೆಲ್ಲ ಮಲಗಿಲ್ಲ, ಯುಎಸ್‌ನಲ್ಲಿ ಈಗ ರಾತ್ರಿಯೇ". ಅವಳು ಹೇಳುವ ಸಬೂಬೂ ಕೇಳಿ ನಗು ಬಂತು. ಕೈಯಗಲಿಸಿ ಬಾ ಅಂತ ಕರೆದೆ, "ಹೊತ್ತು ಗೊತ್ತು ಏನೂ ಇಲ್ಲಾಪ್ಪಾ ನಿಮಗೆ" ಅಂತ ಎದ್ದು ಹೊರಟವಳ ತಡೆದು "ಯುಎಸ್ ಬಗ್ಗೆ ಹೇಳ್ತೀನೀ ಕೇಳಲ್ವಾ..." ಅಂದೆ. ಯುಎಸ್ ಅಂದ್ರೆ ಅವಳಿಗೇನೊ ಕುತೂಹಲ ಇಲ್ಲವೆನ್ನಲ್ಲ ಅಂತ ಗೊತ್ತಿತ್ತು. ಪಕ್ಕ ಒರಗಿದವಳು ಎದೆಗೆರಡು ಮೆಲ್ಲಗೆ ಗುದ್ದಿ, ಕೈ ಊರಿ ಕೆನ್ನೆಗೆ ಕೈಯಾನಿಸಿ "ಹೇಳ್ರಿ ಯುಎಸ್ ಬಗ್ಗೆ, ಯುಎಸ್ ಆಂಡ್ ಅಸ್, ಹೌ ಡು ಯು ಫೀಲ್!" ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು.

ಏನಂತ ಹೇಳಲಿ, ನನ್ನೊಳಗೇ ನನಗೇ ಗೊಂದಲ. ಹೇಳ್ತೀನಿ ಅಂದದ್ದೇನೊ ಸರಿ, ಹೀಗೆ ಒಮ್ಮೆಲೆ ಹೋಲಿಕೆ ಮಾಡು ಅಂದ್ರೆ ಏನಂತ ಶುರು ಮಾಡುವುದು. ಮಾತಿನಲ್ಲೇ ಮರಳು ಮಾಡಲು, "ಲೇ, ಏನು ವಿದೇಶಕ್ಕೆ ಹೋಗಿ ಬಂದ್ರೆ ಇಂಗ್ಲೀಷಲ್ಲೇ ಪ್ರಶ್ನೇನಾ!" ಅಂತ ಮಾತು ತಿರುವಿದೆ. "ಏನೊಪ್ಪಾ, ಇಲ್ಲೇ ಕಾನ್ವೆಂಟ್ ಶಾಲೆಗೆ ಮಕ್ಳು ಸೇರಿಸಿದ್ರೆ ಸಾಕು ಮನೇಲಿ ಇಂಗ್ಲೀಷೇ ಮಾತಾಡ್ತಾರೆ, ನೀವೂನೂ ವಿದೇಶ ಸುತ್ತಿ ಬಂದೀದೀರಾ, ನಿಮ್ಮ ಹೆಂಡ್ತಿ ಅಂತ ಸ್ವಲ್ಪ್ ಸ್ಟೈಲ್ ಮಾಡ್ದೆ ಅಷ್ಟೇ" ಅಂತ ಕಣ್ಣು ಹೊಡೆದಳು. ಅವಳು ಹಾಗೇನೇ ಎಲ್ಲಕ್ಕೂ ಉತ್ತರ ಸಿದ್ಧವಿಟ್ಟುಕೊಂಡೆ ಮಾತಿಗಿಳಿಯುವುದು. "ಅಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲ ಏನ್ ಚೆನ್ನಾಗಿ ಇಂಗ್ಲೀಷ್ ಮಾತಾಡ್ತವೆ ಅಂತೆ" ಕೇಳಿದಳು. "ಇದೊಳ್ಳೆ ಪ್ರಶ್ನೇ ಕಣೇ, ನಮ್ಮೂರಲ್ಲಿ ಚಿಕ್ಕ ಮಕ್ಳು ಕನ್ನಡ ಚೆನ್ನಾಗೇ ಮಾತಾಡಲ್ವಾ, ಅದು ಅವಕ್ಕೆ ಮಾತೃಭಾಷೆ ಮಾತಾಡದೇ ಇನ್ನೇನು, ನಮಗೆ ಇಂಗ್ಲೀಷ್ ಬರಲ್ಲ ಅಂತ ನಾವು ಬೆರಗಾಗಿ ನೋಡ್ತೀವಿ ಅಷ್ಟೇ" ಅಂದ್ರೆ. "ಹೌದಲ್ವಾ! ವಿದೇಶದಲ್ಲೇ ಇರೊ ದೊಡ್ಡಮ್ಮನ ಮಗ, ನಮ್ಮ ಅಣ್ಣ ಏನ್ ಅದೇ ದೊಡ್ಡ ವಿಷ್ಯ ಅಂತನ್ನೊ ಹಾಗೆ ಹೇಳ್ತಿದ್ದ" ಅಂತಂದು. "ಹೂಂ ಮತ್ತೆ ಯು ಎಸ್ ಬಗ್ಗೆ ಹೇಳ್ತೀನಿ ಅಂದ್ರಲ್ಲ ಹೇಳಿ" ಅಂತ ಮತ್ತದೇ ಟ್ರ್ಯಾಕಿಗೆ ಬಂದಳು. "ಯು.ಎಸ್. ಅಂದ್ರೆ ಯುನೈಟೆಡ್ ಸ್ಟೇಟ್ಸ ಅಂತ ಅಷ್ಟೇ... ಸಿಂಪಲ್!" ಅಂದೆ ಈ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ.
"ಇಲ್ಲ ಮತ್ತೆ, ನಾನೇನು ಯು.ಎಸ್. ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್.. ಅಂತದ್ನಾ" ಅಂತ ಕಣ್ಣು ಕೆಂಪಾಗಿಸಿದಳು. ಉಪ್ಪಿಟ್ಟು ಅಂತಿದ್ದಂಗೇ ಬಾಯಲ್ಲಿ ನೀರೂರಿತು. "ಉಪ್ಪಿಟ್ಟು ಮಾಡಿ ಕೊಡ್ತೀಯಾ?" ಅಂತ ಆಸೆಗಣ್ಣಿಂದ ಕೇಳಿದೆ, ಅವಳಿಗೂ ಅರ್ಥವಾಗಿರಬೇಕು "ಹಸಿವಾ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ!!!" ಅಂತ ಅನುಕಂಪದಿಂದ ನೋಡಿ, ಪಾಕಶಾಲೆಗೆ ನಡೆದಳು, ಬಸುರಿ ಬಯಕೆಗೆ ಬೇಡ ಅನಬೇಡ ಅಂತಾರಲ್ಲ ಹಾಗೇ ಈ ಬೇರೆ ದೇಶದಿಂದ ಬರಗೆಟ್ಟು ಬಂದ ನನ್ನ ಬಯಕೆಗೂ ಬೇಡವೆನ್ನಬಾರದಂತಲೋ ಏನೊ.

ಹಲ್ಲುಜ್ಜಿ, ಮುಖ ತೊಳೆದು ಪಾಕಶಾಲೆಗೆ ಬಂದ್ರೆ, "ಅಮೇರಿಕದಲ್ಲೇನು ತಿನ್ನೊಕೆ ಸಿಗಲಿಲ್ವಾ, ಏನು ಹೀಗೆ ಸೊರಗಿ ಸಣಕಲಾಗಿದೀರಿ" ಅಂತ ಮತ್ತೆ ಪ್ರಶ್ನೆ ಮಾಲಿಕೆ ಶುರುವಾಯ್ತು. "ಅಯ್ಯೊ ಅಲ್ಲಿ ಸಸ್ಯಾಹಾರಿಗಳು ಹುಲ್ಲು ಹುಳು ತಿಂದೇ ಬದುಕಬೇಕು ಅಷ್ಟೇ" ಅಂದ್ರೆ. "ಹುಲ್ಲು ಹುಳು?" ಹಣೆಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿತು, "ಅದೇ ಕಣೇ, ಹಸಿರು ಸೊಪ್ಪು, ತರಕಾರಿನೇ ಹುಲ್ಲು, ಮ್ಯಾಗಿ ನೂಡಲ್ಸು ಅನ್ನೊ ಹುಳುಗಳು" ಅಂದ್ರೆ. "ನೀವೊ ನಿಮ್ಮ ಹೋಲಿಕೆಗಳೊ" ಅಂತ ತಲೆ ಚಚ್ಚಿಕೊಂಡಳು. "ನಿಜವಾಗ್ಲೂ ಅಲ್ಲಿ ನನಗೆ ತಿನ್ನೊಕಾಗಿದ್ದು ಅದೇ, ವೆಜಿಟೇರಿಯನ್ ಅಂದ್ರೆ.. ಎರಡು ಬ್ರೆಡ್ ನಡುವೆ ಹಸಿರು ಸೊಪ್ಪು ಕತ್ತರಿಸಿ ಇಡೋರು" ಅಂದ್ರೆ ನಗುತ್ತ ವಗ್ಗರಣೆ ಘಾಟು ಏರಿಸಿದಳು, ವಾಸನೆಗೆ ಮತ್ತೆ ಬಾಯಲ್ಲಿ ನೀರು ಒತ್ತರಿಸಿ ಬಂತು. "ಹಾಂ ಅಲ್ಲಿ ಮೆಕ್ಸಿಕನ್ ಅಡಿಗೆ ಸ್ವಲ್ಪ ನಮ್ಮ ಹಾಗೆ ಇರತ್ತೆ, ಬರಿಟೊ, ಟೊರ್ಟಿಲಾಸ್ ಅಂತ ನಮ್ಮ ಚಪಾತಿ ಹಾಗೆ ಏನೊ ತಿನ್ನೋಕೆ ಸಿಗತ್ತೆ" ಅಂದೆ. ಹಾಗೇ ನನ್ನ ಅಡುಗೆ ಆವಾಂತರಗಳನ್ನು ಮಾತಾಡುತ್ತ ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿಯಾಯ್ತು. ಅನ್ನ ಮಾಡಲು ಕುಕ್ಕರ್ ತುಂಬ ನೀರಿಟ್ಟು ಸ್ಟವ್ ಮೇಲೆಲ್ಲ ಉಕ್ಕಿಸಿದ್ದು, ಆಮ್ಲೇಟ್ ಮಾಡಲು ಹೋಗಿ ಎಗ್ ಬುರ್ಜಿಯಾಗಿದ್ದು, ಕೆಲವೊಮ್ಮೆ ಹೊತ್ತಿ ಕಲ್ಲಿದ್ದಲಾಗಿದ್ದು ಕೇಳುತ್ತ ಚಹ ಹೀರುತ್ತ ನಕ್ಕಿದ್ದಾಯ್ತು.

"ಊಟದ್ದೆಲ್ಲ ಕೇಳಿಯಾಯಾಯ್ತು, ಓಡಾಟದ ಕಥೆ ಏನು?" ಅಂತ ವಿಷಯ ಪಲ್ಲಟ ಮಾಡಿದಳು. "ಅಲ್ಲಿ ಎಲ್ಲ ಕಾರ್‍ ಜಾಸ್ತಿ ಕಣೇ, ಬೈಕಲ್ಲಿ ಯಾರೂ ಕಾಣಲ್ಲ, ಇನ್ನೂ ಸೈಕಲ್ ಉಪಯೋಗಿಸ್ತಾರೆ" ಅಂದೆ. "ಕಾರ್ ಇಲ್ಲದವರ ಗತಿ?" ಅಂದ್ರೆ ನಿನ್ನ ಗತಿ ಏನು ಅಂತಲೇ ಪ್ರಶ್ನೆ. "ಪುಕ್ಕಟೆ ಪಬ್ಲಿಕ್ ಬಸ್ ಇತ್ತು, ಅಲ್ಲಿ ಒಬ್ಳು ಮೆಕ್ಸಿಕನ್ ಹುಡುಗಿ ದಿನಾ ನನ್ನ ಜತೆ ಬರ್ತಾ ಇದ್ಲು" ಅಂತ ಹಲ್ಲು ಕಿರಿದೆ. "ನಾನ್ ಬಸ್ ಬಗ್ಗೆ ಕೇಳಿದ್ದು, ಬಸ್ಸಲ್ಲಿನ ಹುಡುಗಿ ಬಗ್ಗೆ ಅಲ್ಲ" ಅಂತ ಮುನಿಸಿಕೊಂಡ್ಲು. "ಏನೊಪ್ಪಾ ಮೆಕ್ಸಿಕನ್ ಜನ ಥೇಟ್ ನೋಡಲು ನಮ್ಮಂಗೇ ಇರ್ತಾರೆ ಅದಕ್ಕೆ ಹೇಳಿದೆ" ಅಂದ್ರೆ "ಹ್ಮ್, ನಮ್ಮಂಗೇ ಇರ್ತಾರೆ ಹಾಗೆ ಪ್ರೆಂಡಶಿಪ್ ಮಾಡ್ಕೊಂಡು ಅವಳ್ನೇ ಮದುವೆ ಆಗಿ ಅಲ್ಲೇ ಸೆಟಲ್ ಆಗಬೇಕಿತ್ತು, ಮನೇಲಿ ಬರಿಟೊ, ಟೊರ್ಟಿಲಾಸ್ ಅನ್ನೊ ಚಪಾತಿ ಮಾಡಿ ಹಾಕ್ತಾ ಇದ್ಲು" ಅಂತ ಸಿಡುಕಿದಳು. ಹೀಗೆ ಬಿಟ್ಟರೆ ಮಧ್ಯಾಹ್ನದ ಚಪಾತಿಗೆ ಕುತ್ತು ಬರುತ್ತೆ ಅನಿಸಿ ಮತ್ತೆ ಮಾತು ತಿರುವಿದೆ. "ಎಲೆಕ್ಟ್ರಿಕ್ ಬಸ್ಸು, ಮಾಜಿ ಕಾಲದ ಟ್ರೇನುಗಳು ಒಡಾಡ್ತವೆ ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಗೊತ್ತಾ". "ಹೌದಾ ಮತ್ತೆ, ಹ್ಮ್ ಪುಕ್ಕಟೆ ಬಸ್ ಯಾಕೆ?" ಅಂತ ಕೇಳಿದ್ಲು. "ಅಲ್ಲಿ ಅದೊಂದು ಹಾಗೆ ಜನರಿಗೆ ಸರ್ವೀಸ್ ಅಂತ ಮಾಡ್ತಾರೆ" ಅಂದ್ರೆ. "ನಮ್ಮಲ್ಲೂ ಬಿಎಂಟಿಸಿ ಹಾಗೇ ಮಾಡಿದ್ರೆ ಚೆನ್ನಾಗಿರತ್ತೆ ಅಲ್ವಾ" ಅನ್ನಬೇಕೆ. "ಆಗೊಯ್ತು, ಹಾಗೇನಾದ್ರೂ ಆದ್ರೆ ಅರ್ಧ ಬೆಂಗಳೂರು ಬಸನಲ್ಲೇ ಇರತ್ತೆ, ಕೆಲಸ ಇರ್ಲಿ ಇಲ್ಲದಿರಲಿ ಬಸ್ಸಲ್ಲಿ ಸುತ್ತೋರೆ ಜಾಸ್ತಿ ಆಗ್ತಾರೆ, ಅಲ್ಲಿ ಆ ಪಬ್ಲಿಕ್ ಟ್ರಾನ್ಸಪೋರ್ಟ್ ಉಪಯೋಗಿಸೊ ಜನ ಕಮ್ಮಿ ಅದಕ್ಕೆ ಅಲ್ಲಿ ಅದು ಸರಿಹೋಗತ್ತೆ" ಅಂತ ತಿಳಿ ಹೇಳಬೇಕಾಯ್ತು. "ಅಲ್ಲಿ ಟ್ರಾಫಿಕ್ ಜಾಮ್ ಎಲ್ಲಾ ಆಗಲ್ಲ ಅಂತೆ ಸೂಪರ್ ಅಲ್ವಾ" ಅಂದ್ಲು. "ಯಾರ್ ಹೇಳಿದ್ದು? ಅಲ್ಲೂ ಟ್ರಾಫಿಕ್ ಜಾಮ್ ಆಗ್ತವೆ... ಆದ್ರೆ ಜನಕ್ಕೆ ಶಿಸ್ತು ಜಾಸ್ತಿ, ಸಾಲಾಗಿ ನಿಂತು ಸರಿಯಾಗಿ ಹೋಗ್ತಾರೆ, ಅಲ್ಲದೇ ಅಲ್ಲಿ ದೊಡ್ಡ ಊರುಗಳು ಇರೊ ಜನ ಕಮ್ಮಿ ಅದಕ್ಕೆ ಎಲ್ಲಾ ಸರಿಯಾಗಿರತ್ತೆ" ಅಂದೆ. ನಮ್ಮಲ್ಲಿನ ಹಾಗೆ ಇಷ್ಟೇ ಇಷ್ಟು ಊರುಗಳು ಲಕ್ಷಾನುಗಟ್ಟಲೇ ಜನ ಇದ್ದಿದ್ದರೆ ಅಲ್ಲೂ ಪರಿಸ್ಥಿತಿ ಬೇರೆಯೇ ಇರ್ತಿತ್ತೊ ಏನೊ. "ಮತ್ತೆ ಅಲ್ಲಿ ಜನ ಪ್ರಾಮಾಣಿಕವಾಗಿ ನಿಯತ್ತಾಗಿ ಇರ್ತಾರಂತೆ ಅದಕ್ಕೆ ಎಲ್ಲಾ ರೂಲ್ಸ್ ಸರಿಯಾಗಿ ಪಾಲಿಸ್ತಾರೆ ಬಿಡಿ" ಅಂದ್ಲು. "ಎಲ್ರೂ ಅಂತೇನಿಲ್ಲ, ಅಲ್ಲೂ ಸಿಗ್ನಲ್ ಜಂಪ್ ಮಾಡಿ ಟಿಕೆಟ್ ತೆಗೆದುಕೊಳ್ಳೊರು ಇದಾರೆ, ಟಿಕೆಟ್ ಅಂದ್ರೆ ಅಲ್ಲಿ ದಂಡ ಕಟ್ಟೊ ರಸೀತಿ, ರೋಡಲ್ಲಿ ಎಲ್ಲಾ ಕ್ಯಾಮೆರ ಇಟ್ಟು ಕಾಯ್ತಾರೆ ಅಂಥವರನ್ನ. ಆದ್ರೂ ನೀನಂದ ಹಾಗೆ ನಿಯತ್ತಿರೋ, ಶಿಸ್ತು ಇರೊ ಜನರ ಪ್ರಮಾಣ ಜಾಸ್ತಿ ಅದಕ್ಕೆ ಅಲ್ಲಿ ಎಲ್ಲಾ ಚೆನ್ನಾಗಿದೆ ಅನಿಸ್ತದೆ" ಅಂದೆ. "ಹ್ಮ್ ಅದೂ ನಿಜಾನೆ, ನಮ್ಮಲ್ಲೂ ಅಲ್ಲಿ ಇಲ್ಲಿ ಕೆಲವ್ರು ಒಳ್ಳೆವ್ರು ಸಿಕ್ತಾರಲ್ಲ ಹಾಗೆ ಅನ್ನಿ" ಅಂತ ನಿಟ್ಟುಸಿರು ಬಿಟ್ಟಳು. "ರೋಡ್ ಕ್ರಾಸ್ ಮಾಡೋಕೆ ನಾವೇನಾದ್ರೂ ನಿಂತಿದ್ರೆ ಸಾಕು, ಕಾರು ಅಷ್ಟು ದೂರದಲ್ಲಿ ನಿಧಾನ ಮಾಡಿ ಸ್ಟಾಪ್ ಮಾಡ್ತಾರೆ, ಪಾದಚಾರಿಗೆ ಮೊದಲ ಆದ್ಯತೆ ಅಲ್ಲಿ" ಅಂತ ಹೇಳಿದ್ದು ಕೇಳಿ "ಇಲ್ಲಿ ಎಲ್ಲಿ ಯಾರು ಬೇಕಾದ್ರೂ ನುಗ್ತಾರೆ, ನುಗ್ಗಿ ನಡೆ ಮುಂದೆ ಅಂತ ಹೋದವರಿಗೇ ಹೋಗಲಾಗ್ತದೆ ಇಲ್ಲಾಂದ್ರೆ ಅಷ್ಟೇ" ಅಂತಂದ್ಲು. "ಇಲ್ಲಿ ಪಾದಚಾರಿಗಳೇ ಜಾಸ್ತಿ ಕಣೇ, ಅಲ್ಲಿನ ಹಾಗೆ ನಿಲ್ಲಿಸ್ತಾ ಹೋದ್ರೆ, ಇಂದು ಹೊರಟವ ಆಫೀಸಿಗೆ ನಾಳೆ ತಲುಪಿದರೆ ಅದೃಷ್ಟ, ಅಲ್ಲಿ ಮಾಡಿರೋ ರೊಡುಗಳು ಅಷ್ಟು ಚೆನ್ನಾಗಿರ್ತವೆ, ಓಡಾಡೊ ಜನಾನೂ ಕಮ್ಮಿ, ಇಲ್ಲಿ ಹತ್ತು ಗಾಡಿಗಳಿಗೆ ರೋಡು ಮಾಡಿದ್ರೆ ಓಡಾಡೋದು ನೂರು, ಮಾಡಿರೋ ರೋಡು ಒಂದು ಮಳೆಗೆ ಕಿತ್ತು ಬರಬೇಕು. ಕಿತ್ತು ಬರದಿದ್ರೂ, ಚರಂಡಿ, ಕೇಬಲ್ ಹಾಕಲು ಅಂತ ಅಗೆದು ಗುಂಡಿ ಮಾಡಲು ಬೇರೆ ಡಿಪಾರ್ಟಮೆಂಟ್‌ಗಳಿವೆ. ಅಲ್ಲಿನ ಹಾಗೆ ಇಲ್ಲಿ ಆಗಲ್ಲ, ಇಲ್ಲಿನ ಹಾಗೆ ಅಲ್ಲಿ ಆಗಲ್ಲ" ಅಂದದ್ದು ಕೇಳಿ ಅವಳಿಗೂ ಸರಿಯೆನ್ನಿಸಿತೇನೋ ಸುಮ್ಮನಾದಳು.

"ಮತ್ತಿನ್ನೇನಿದೆ ಯುಎಸ್‌ನಲ್ಲಿ" ಅಂತಂದವಳಿಗೆ, "ಮತ್ತಿನ್ನೇನು, ಯುಎಸ್‌ನಲ್ಲಿ ಏನಿಲ್ಲ, ಎಲ್ಲಾ ಇದೆ, ನೀಟಾದ ರಸ್ತೆಗಳು ಕ್ಯೂಟ್ ಆದ ಮಕ್ಕಳು, ಚೂಟಿ ಚೆಲುವೆಯರುಗಳು. ಉದ್ದ ಫ್ಲೈ ಓವರಗಳು, ಎತ್ತರದ ಟಾವರುಗಳು, ಬಹುಮಹಡಿ ಬಿಲ್ಡಿಂಗಗಳು, ಭಾರಿ ಬ್ರಿಡ್ಜಗಳು, ರಭಸದ ರೈಲುಗಳು, ಎಲೆಕ್ಟ್ರಿಕ್ ಏಸಿ ಬಸ್ಸುಗಳು, ಕಾಸ್ಟ್ಲಿ ಕಾರುಗಳು. ಮಾಡೊದೆಲ್ಲ ಮಶೀನುಗಳು, ದುಡ್ಡಂದ್ರೆ ಡಾಲರ್ ಸೆಂಟ್‌ಗಳು, ಮಾರಾಟಕ್ಕೆ ಮಾಲ್‌ಗಳು, ಸೆಳೆಯಲು ಸೇಲ್‌ಗಳು, ತೆರೆದು ಬೀಳಲು ತೀರಗಳು, ಬಾಯಿಗೆ ಬರ್ಗರುಗಳು, ಕುಡಿಯಲು ಕೋಕ್ ಬಿಯರುಗಳು..." ಇನ್ನೂ ಹೇಳುತ್ತಿದ್ದವನನ್ನು ನಡುವೇ ನಿಲ್ಲಿಸಿ "ಪಂಚರಂಗಿ ಫಿಲ್ಮ್ ಏನಾದ್ರೂ ನೋಡಿದೀರಾ?" ಅಂತ ಕೇಳಿದ್ಲು, "ಇಲ್ಲ, ಯಾಕೇ?" ಅಂದ್ರೆ "ಈ 'ಗಳು'ಗಳು ಜಾಸ್ತಿ ಆಯ್ತು, ಅದಕ್ಕೆ" ಅಂದು ಫೋಟೊಗಳನ್ನು ನೋಡುತ್ತ ಕೂತಳು, ಅದೇನು ಇದೇನು ಅಂತ ಕೇಳುತ್ತ.

ಕೆಲವರಿಗೆ ಯುಎಸ್ ಇಷ್ಟ ಆಗಬಹುದು, ಕೆಲವರಿಗೆ ನಮ್ಮ ಭಾರತವೇ ಸರಿಯೆನ್ನಿಸಬಹುದು. ಹೋಲಿಕೆ ಮಾಡಲು ಕೂತರೆ ಭಿನ್ನತೆಗಳಿಗೆ ಬರವೇ ಇಲ್ಲ. ಆ ಆ ದೇಶಕ್ಕೆ ಅದರದೇ ಆದ ಸ್ವಂತಿಕೆಯಿದೆ, ನಮ್ಮ ದೇಶ ಹೆಚ್ಚು ಅದು ಕೀಳು ಅಂತೆಲ್ಲ ಹೇಳಲೇ ಆಗದು. ಹಾವಾಡಿಗರು, ಬಿಕ್ಷುಕರ ದೇಶ ಭಾರತ ಅದನ್ನುವುದ ಕೇಳಿದ್ದ ನನಗೆ... ಶಿಸ್ತು, ಶ್ರೀಮಂತಿಕೆಗೆ ಹೆಸರಾಗಿರುವ ಅಮೇರಿಕದ ಸ್ಯಾನ್‌ಫ್ರಾನ್ಸಿಸ್ಕೊನಲ್ಲಿ ಸುತ್ತಾಡುವಾಗ ಕಂಡ
"ವಾಯ್ ಲೈ, ಆಯ್ ನೀಡ್ ಬೀಯರ್ (ಯಾಕೆ ಸುಳ್ಳು ಹೇಳಲಿ, ನನಗೆ ಬೀಯರ್ ಬೇಕಿದೆ)" ಅಂತ ಬೋರ್ಡ್ ಬರೆದುಕೊಂಡು ಬೇಡುವ ಸೋಫೇಸ್ಟಿಕೇಟೆಡ್ ಭಿಕ್ಷುಕರು, ದಾರಿಯಲ್ಲಿ ನಿಂತು ಏನೊ ವಾದ್ಯ ಊದಿ, ಬಾರಿಸಿ, ನಮ್ಮಲ್ಲಿನ ದೊಂಬರಾಟದ ಹಾಗೆ ಕಸರತ್ತು ಮಾಡುವ "ಸ್ಟ್ರೀಟ್ ಪರಫಾರಮರ್ಸ್" ಎಲ್ಲ ನಮ್ಮಲ್ಲಿಗಿಂತ ಬೇರೆಯೆಂದೇನೆನಿಸಲಿಲ್ಲ. ಅಲ್ಲಿ ಮನೆ ಮಕ್ಕಳು ಏನೂ ಇಲ್ಲ, ಕಲ್ಚರ್ ಇಲ್ಲ ಅನ್ನುವುದ ಕೇಳಿದವನಿಗೆ, ಅವರು ಪಾಲಿಸುವ ಶಿಸ್ತು, ಮಕ್ಕಳಿಗೆ ಕೊಡುವ ಸ್ವಾತಂತ್ರ್ಯ, ಕತ್ತೆಯಂತೆ ಆಫೀಸಿನಲ್ಲಿ ಕೊಳೆಯದೇ ಪರಸನಲ್ ಟೈಮ್‌ಗೆ ಕೊಡುವ ಪ್ರಾಮುಖ್ಯತೆ ನೋಡಿದಾಗ ನಮಗೇ ಮನೆ ಮಕ್ಳು ಹೆಂಡ್ತಿ ಇಲ್ವೇನೊ, ಕೆಲಸ ಮಾಡುವ ಕಂಪನಿಗೇ ನಮ್ಮನ್ನು ನಾವು ಬರೆದು ಕೊಟ್ಟಿದ್ದೇವೇನೊ ಅನ್ನಿಸದಿರಲಿಲ್ಲ. ಒಂದೊಂದು ಒಂಥರಾ ಒಳ್ಳೆಯದು. ಅಲ್ಲಿನ ಶಿಸ್ತು, ನಿಯತ್ತು, ಸಮಯ ಪ್ರಜ್ಞೆ ಬಹಳ ಇಷ್ಟವಾಗಿದ್ದು, ಹಾಗೇ ನಮ್ಮಲ್ಲಿನ ವಿಭಿನ್ನ ಯೋಚನಾ ಮನೋಭಾವ, ಕುಟುಂಬ ಕಲ್ಪನೆ, ಸಾಮಾಜಿಕ ಜೀವನ, ಸಂಪ್ರದಾಯಗಳು ಬಹಳ ಅಚ್ಚುಮೆಚ್ಚು. ಈ ವಿದೇಶದಿಂದ ಬರುತ್ತಿದ್ದಂತೆ ಕೇಳುವುದು ಹೇಗನ್ನಿಸಿತು ಆ ದೇಶ ಅಂತ... ಇವೆಲ್ಲ ಕೇವಲ ಕೆಲವು ಅನಿಸಿಕೆಗಳಷ್ಟೇ... ಅಭಿಪ್ರಾಯ ಹೇಳಲು ನಾನು ಯುಎಸ್ ಪೂರ್ತಿ ಸುತ್ತಿಲ್ಲ, ಅದು ಬಿಡಿ ಭಾರತವೇ ಬಹುಪಾಲು ಕಂಡಿಲ್ಲ.

ಇಷ್ಟೆಲ್ಲ ಕಂತೆ ಪುರಾಣ ಹರಟುವ ಹೊತ್ತಿಗೆ, ಇಲ್ಲಿ ಮಧ್ಯಾಹ್ನವಾಗಿತ್ತು ಯುಎಸ್‌ನಲ್ಲಿ ಮಧ್ಯರಾತ್ರಿ... ನಿಧಾನವಾಗಿ ಕಣ್ಣು ಎಳೆಯುತ್ತಿತ್ತು. ಸರಕಾರಿ ಕಛೇರಿಯಲ್ಲಿ ಕುರ್ಚಿಯಲ್ಲೇ ತೂಕಡಿಸಿದಂತೆ, ತೂಗಿ ಅವಳ ಮೇಲೆ ವಾಲಿದೆ. ಭುಜ ತಟ್ಟಿ ಏಳಿಸಿದವಳು, ನಿದ್ರೆನಾ ಅಂತ ಕಣ್ಣಲ್ಲೇ ಕೇಳಿದಳು, ನಾ ಹೇಳಲೂ ಕೂಡ ಆಗದಷ್ಟು ಜೊಂಪಿನಲ್ಲಿದ್ದೆ, ಅವಳೇ ತಲೆದಿಂಬಾಗಿದ್ದು ಎದ್ದಾಗಲೇ ಗೊತ್ತಾಗಿದ್ದು. ಎದ್ದೇಳುತ್ತಿದ್ದಂತೇ ಚಹ, ಬಿಸ್ಕಿಟ್ಟು ಕೂತಲ್ಲೇ ಸರ್ವ್ ಆಯ್ತು. ಚಹ ಹೀರುತ್ತಿದ್ದರೆ ನನ್ನೇ ತಿಂದು ಬಿಡುವಂತೆ ನೋಡುತ್ತ "ರೀ ಕ್ಯೂಟ್ ಆಗಿ ಕಾಣ್ತಾ ಇದೀರಾ" ಅಂತ ಕಾಂಪ್ಲಿಮೆಂಟು ಕೊಟ್ಟು ಮಾದಕ ನಗೆಯಿತ್ತಳು. ನೋಟದಲ್ಲೇ ಹುಡುಗಾಟಿಕೆ ಕಾಣುತ್ತಿತ್ತು, "ಏನೊಪ್ಪಾ ಇತ್ತೀಚೆಗೆ ನಿಮಗೆ ಪಕ್ಕದ ಮನೆ ಪದ್ದು ನೆನಪೇ ಆಗಲ್ಲ? ಪರದೇಶಿ ಪಕ್ಕದ ರೂಮ್ ಪರ್ಲ್ ಸಿಕ್ಳು ಅಂತ ಹೀಗೆಲ್ಲ ಮರೆತುಬಿಡೋದಾ?" ಅಂತ ತಗಾದೆ ತೆಗೆದಳು, ತುಂಟಿ! ಪರದೇಶದಲ್ಲಿ ತನ್ನ ನೆನಪು ಕಾಡಿಲ್ಲವಾ ಅಂತ ಕೇಳಲ್ಲ, ಏನಿದ್ದರೂ ಪಕ್ಕದಮನೆ ಪದ್ದು ನೆಪ ಬೇಕು... "ಪಕ್ಕದಲ್ಲಿ ನನ್ನಾಸೆಗಳ ಪರಮಾವಧಿಯಾದ ನನ್ನಾಕೆಯಿರಬೇಕಾದರೆ, ಪರರ ಧ್ಯಾನ ನನಗೇಕೆ" ಅನ್ನುತ್ತ ಹತ್ತಿರ ಹೋದರೆ, "ರೀ ಇದು ಯುಎಸ್ ಅಲ್ಲ ಪಬ್ಲಿಕ್‌ನಲ್ಲಿ ಹೀಗೆಲ್ಲ ಮಾಡೋಕೇ, ಬಾಲ್ಕನಿಯಲ್ಲಿ ಇದೀರಾ ಬೆಡ್‌ರೂಮ ಅಲ್ಲ" ಅಂತ ತಳ್ಳಿದಳು, ಅಪ್ಪಟ ಭಾರತೀಯ ನಾರಿಯ ಭಾರ ಅತಿಯಾದರೂ ಹೊತ್ತುಕೊಂಡು ಒಳ ನಡೆದೆ... ಕಿರುಚಿ ಕೊಸರಾಡುತ್ತಿದ್ದರೂ...


Updated Title Oct/4/2010

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/USandUS.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Wednesday, July 7, 2010

WEದೇಶ - ನಾನು ನನ್ನಾಕೆ & ವಿದೇಶ...

ಒಳ್ಳೆ ನಿದ್ದೆಯಲ್ಲಿದ್ದೆ, ಕನಸು ಬಿದ್ದರೂ ನಿದ್ದೆ ಮಾಡುವ ಕನಸೇ ಬೀಳುವಷ್ಟು... ಇಂಥ ಸಮಯದಲ್ಲಿ ಇವಳು ಏಳಿಸಿದರೆ ಹೇಗಾಗಬೇಡ... "ರೀ ಎದ್ದೇಳ್ರಿ ಇನ್ನೂ ಎಷ್ಟೊತ್ತು ಅಂತ ಮಲಗೋದು" ಅಂತ ಚೀರುತ್ತಿದ್ದಳು... ಮಲಗಿದಲ್ಲಿಂದಲೇ ಕೇಳಿದೆ "ಟೈಮ್ ಎಷ್ಟು ಈಗ?", ಉತ್ತರ ಬಂತು, "ಹ್ಮ್... ರಾತ್ರಿ ಹನ್ನೊಂದೂವರೆ..." ಅಲ್ರೀ ನೀವೇ ಹೇಳಿ ಈ ಟೈಮ್ಗೆ ಯಾರಾದ್ರೂ ಎಳಿಸ್ತಾರಾ... ಮುಂಜಾನೆ ತಾನೇ ಎದ್ದೇಳಿಸಬೇಕು... ಅದಕ್ಕೆ ತರಾಟೆ ತೆಗೆದುಕೊಳ್ಳುವ ಮೂಡಿನಲ್ಲಿ "ರಾತ್ರಿ ಈ ಟೈಮ್ಗೆ ಮಲಗಿರದೆ ಇನ್ನೇನೇ ಮಾಡೋಕಾಗುತ್ತೆ?..." ಅಂದೆ... "ಯಜಮಾನ್ರೆ, ಟೈಮ್ ಇಲ್ಲಿ ರಾತ್ರಿ ಹನ್ನೊಂದೂವರೆ, ಅಲ್ಲಿ ಈಗ ಮುಂಜಾನೆ ಹನ್ನೊಂದಾಗಿದೆ. ಕಿಟಕಿ ಪರದೆ ಸ್ವಲ್ಪ ಸರಿಸಿ ಸೂರ್ಯ ದರ್ಶನ ಮಾಡಿ" ಅಂದ್ಲು... ನಾನೇನು ಈ ಸೂರ್ಯನ ಟೈಮ್ ಕೀಪರಾ... ಅವನು ಟೈಮ್ ಟೈಮ್ಗೆ ಸರಿಯಾಗಿ ಬಂದು ಹೋಗ್ತಾನಾ ಇಲ್ವಾ ಅಂತ ನೋಡೋಕೆ ಇನ್ನು ದೇವರ ದರ್ಶನ ಅಂತ ಮಾಡೋದಾದ್ರೆ ಚಂದ್ರದೇವ ದರ್ಶನ್ ಮಾಡಿದ್ರಾಯ್ತು ಅಲ್ವಾ... ಅಂತ ಮನದಲ್ಲೇ ಮಂಥನ ನಡೆಸಿದ್ರೆ... "ವಿದೇಶದಲ್ಲಿದೀರಿ... ನಿದ್ರೆ ಮಂಪರಿನಲ್ಲಿ ಅದೂ ಮರೆತು ಹೋಯ್ತಾ?" ಅಂತ ಕೇಳಿದಾಗಲೇ ನಿದ್ರಾದೇವಿಯ ಮಡಿಲಿನಿಂದಿಳಿದು ವಾಸ್ತವಕ್ಕೆ ಬಂದು... "ಹೀ ಹೀ..." ಅಂತ ಹಲ್ಲು ಕಿರಿದೆ... "ಎಲ್ಲಿದ್ರೂ ನೀವಂತೂ ಸುಧಾರಿಸಲ್ಲ" ಅಂತ ಬಯ್ದಳು "ಎಲ್ಲಿದ್ದರೇನಂತೆ, ನಾವು ನಾವೇ ಅಲ್ವೇ ಅದಕ್ಕೆ ವಿದೇಶದಲ್ಲಿ ನಾವು ಅಂದ್ರೆ, WEದೇಶ" ಅಂದಿದ್ದಕ್ಕೆ "ಇಂಥ ಮಾತಿಗೇನು ಕಮ್ಮಿಯಿಲ್ಲ" ಅಂದು ಫೋನಿಟ್ಟಳು...

ಎರಡು ಸಾರಿ ಹೊರಟು ಕ್ಯಾನ್ಸಲ್ ಆಗಿದ್ದರಿಂದ ಈ ಸಾರಿ ಅವಳಿಗೆ ಕೊನೆವರೆಗೂ ಹೇಳಿಯೇ ಇರಲಿಲ್ಲ, ಅದೊಂದು ದಿನ ಟಿಕೆಟ್ಟು ಕೈಗೆ ಬಂದಾಗ... ಕೋಳಿ ಜಗಳ ಸೃಷ್ಟಿ ಮಾಡಿ, ಕೊನೆಗೆ "ಲೇ ನಿಂಜತೆ ಇದ್ದು ಇದ್ದು ಇನ್ನು ಸಾಕಾಯ್ತು ಕಣೆ, ದೇಶಾಂತರ ಹೊರಟೋಗಿಬಿಡ್ತೀನಿ" ಅಂದಿದ್ದಕ್ಕೆ, "ಆಫ್ರಿಕಾ ಕಾಡಿಗೆ ಇಲ್ಲ, ಅರಬಸ್ಥಾನದ ಮರಳುಗಾಡಿಗೆ ಹೋಗಿ" ಅಂತ ಶಾಪ ಹಾಕಿದರೆ, "ಆಫ್ರಿಕಾ ಯಾಕೆ ಅಮೇರಿಕಾ ಹೊರಟೀದೀನಿ" ಅಂತ ಟಿಕೆಟ್ಟು ತೋರಿಸಿದಾಗ ಮುದ್ದು ಗುದ್ದುಗಳ ಸುರಿಮಳೆಯೇ ಆಗಿತ್ತು. ಈಗಲೇ ಎಲ್ಲಿ ಹಾರಿ ಹೊರಟು ಹೋಗುತ್ತೇನೋ ಅನ್ನುವಂತೆ ಅವುಚಿಕೊಂಡು ಕೂತುಬಿಟ್ಟಿದ್ದಳು. ಸ್ವಲ್ಪ ಹೊತ್ತಿನ ನಂತರ ಪ್ರಶ್ನೆಗಳ ಸೋನೆ ಮಳೆ ಶುರುವಾಗಿತ್ತು...

"ಹ್ಮ್ ಮತ್ತೆ ಫ್ಲೈಟ್ ನಲ್ಲಿ ಹೋಗ್ತೀರಾ ಹಾಗಿದ್ರೆ?" ಹುಬ್ಬು ಹಾರಿಸಿದ್ಲು, "ಇಲ್ಲಾ ಸೈಕಲ್ ತೆಗೆದುಕೊಂಡು ಹೋದ್ರೆ ಹೇಗೆ ಅಂತ ಯೋಚ್ನೆ ಮಾಡ್ತಾ ಇದೀನಿ" ಅಂತ ಕಿಚಾಯಿಸಿದೆ. ಕಣ್ಣು ಕೆಕ್ಕರಿಸಿ ನೋಡಿದ್ಲು, ನಾ ನಕ್ಕೆ. "ಯಾವ್ ಫ್ಲೈಟ್ ಸಿಕ್ಕಿದೆ?" ಕೇಳಿದ್ಲು,
"ಕಿಂಗ್ ಫಿಷರ್ ಸಿಕ್ಕಿದ್ರೆ ಚೆನ್ನಾಗಿತ್ತು ಏನ್ ಮಾಡೋದು ಅಲ್ಲಿಗೆ ಅವರ ಸರ್ವೀಸ್ ಇಲ್ವೆ" ಅಂದರೆ, "ಯಾಕೆ ಕಿಂಗ್ ಫಿಷರ್ ಟೈಮ್ ಸರಿಯಾಗಿ ಹೋಗುತ್ತಾ?" ಅಂತ ಮುಗ್ಧ ಪ್ರಶ್ನೆ ಬಂತು, "ಆ ಫ್ಲೈಟ್ ಲೇಟಾಗಿ ಹೋದಷ್ಟು ಒಳ್ಳೇದೆ ಕಣೇ, ಗಗನ ಸಖಿಯರು ಹೇಗೆ ಇರ್ತಾರೆ ಗೊತ್ತಾ? ಅಂತಿದ್ದರೆ, ಮುನಿಸಿಕೊಂಡು ಸುತ್ತುಬಳಸಿದ್ದ ಕೈ ಬಿಡಿಸಿಕೊಂಡು ಎದ್ದು ಹೋದಳು, ನಂಗೊತ್ತು ಇನ್ನೊಂದಿಷ್ಟು ಹೊತ್ತಲ್ಲಿ ಬಂದು ಮತ್ತೆ ಮಾಮೂಲಿ ಮಾತಿಗಿಳಿಯುತ್ತಾಳೆ ಎಂದು. ಹಾಗೇ ಆಯ್ತು ಒಳ್ಳೇ ಒಂದು ಕಪ್ಪು ಟೀ ಮಾಡಿಕೊಂಡು ಬಂದು ಕೂತಳು, ನಿಂಗೆ ಕೊಡಲ್ಲ ಹೋಗು ಅನ್ನುವಂತೆ ನನಗೇನೂ ಕೊಡದೇ. "ಗಗನ ಸಖಿಯರು ಬಹಳ ಸ್ಮಾರ್ಟ್ ಇರ್ತಾರೆ ಅಲ್ವಾ?" ಅಂದ್ಲು ಒಂದೇ ಒಂದು ಸಿಪ್ಪು ಹೀರುತ್ತಾ. "ಇರ್ತಾರೆ ನಿನ್ನಷ್ಟು ಸ್ಮಾರ್ಟ್ ಇರಲ್ಲ ಬಿಡು" ಅಂತ ಸ್ವಲ್ಪ್ ಬೆಣ್ಣೆ ಸವರಲು ನೋಡಿದೆ, ಇಲ್ಲಾಂದ್ರೆ ಟೀ ಸಿಗಲ್ಲವಲ್ಲ ಅದಕ್ಕೆ... "ಆಹಾಹಾ ಈ ಡೈಲಾಗ್ ಎಲ್ಲ ಬೇಡ" ಅಂತ ಮುಖ ತಿರುವಿ ಕೂತಳು, ಸುಂದರಿ ಮುಖ ತೋರಿಸಲು ನಾಚಿದಂತೆ. ಖುಷಿಯಾಗಿದ್ದಾಳೆ ಅಂತ ಖಾತರಿ ಆಗುತ್ತಿದ್ದಂತೆ, ಹಿಂದಿನಿಂದ ಆವರಿಸಿಕೊಂಡು ಒಂದು ಸಿಪ್ಪು ಅವಳ ಕಪ್ಪಿನಿಂದಲೇ ಹೀರಿದೆ. ಕೊಸರಿಕೊಂಡು "ಪಾಕಶಾಲೆಯಲ್ಲಿ ಇನ್ನೊಂದು ಕಪ್ಪಿದೆ ನಿಮಗೆ" ಅಂತ ತಳ್ಳಿದಳು. ನಂಗೊತ್ತು, ಟೀ ಮಾಡಿದರೆ ನನಗೆ ಇಲ್ಲದೆ ಅವಳು ಹೇಗೆ ಒಬ್ಬಳೇ ತನಗಾಗಿ ಮಾಡಿಕೊಂಡಾಳು ಅಂತ. ಟೀ ಹೊಟ್ಟೆಗೆ ಬಿದ್ದ ಮೇಲೆ ಸಮಾಧಾನ ಆಯ್ತು.

ಟೀ, ಮುಗಿಯುತ್ತಿದ್ದಂತೆ ಅವಳ ತುಟಿಗಳಿಗೆ ಬೇರೆ ಕೆಲಸ ಬೇಕಲ್ಲವೇ, ಮುತ್ತುಗಳಿಗೆ ಸಮಯ ಇದಲ್ಲವಾದ್ದರಿಂದ ಮತ್ತೆ ಕೆಲ ಪ್ರಶ್ನೆಗಳನ್ನೇ ಉದುರಿಸಿದಳು. "ಯಾವಾಗ ಹೊರಡ್ತೀರಿ?" ಅಂದ್ಲು. "ನಾಳೆ ನಾಡಿದ್ದು..." ಅಂದೆ. "ಮೊದಲೇ ಹೇಳೋಕೇನಾಗಿತ್ತು? ಹೀಗೆಲ್ಲ ದಿಢೀರನೆ ಹೊರಟು ನಿಂತರೆ ಹೇಗೆ?" ಅಂತ ತಿವಿದಳು, "ಅದನ್ನ ನಮ್ಮ ಮ್ಯಾನೆಜರಗೆ ಕೇಳು, ನನಗೂ ಇಂದೇ ಗೊತ್ತಾಗಿದ್ದು" ಅಂದೆ. "ಎಷ್ಟು ದಿನ?..." ಹೋಗೋದು ಹೋಗ್ತೀಯಾ ಬೇಗಾ ಆದರೂ ಬರ್ತೀಯ ಅಂತ ಕೇಳಿದಂತಿತ್ತು. "ಕೆಲವೇ ತಿಂಗಳು ಅಷ್ಟೇ" ಸಮಾಧಾನಿಸುವಂತೆ ಹೇಳಿದೆ. "ತವರುಮನೆಗೆ ನಾಲ್ಕು ದಿನ ಹೋದ್ರೆ ಎಷ್ಟೋ ದಿನಗಳಾದಂತೆ ಅನಿಸತ್ತೆ, ಕೆಲವೇ ತಿಂಗಳು ಅಂತ ಏನು ಸಲೀಸಾಗಿ ಹೇಳ್ತೀರಾ ನೀವು" ಅಂತ ಭಾವುಕಳಾದಳು. "ಅದಕ್ಕೆ ಯೋಚ್ನೆ ಮಾಡ್ತಾ ಇದೀನಿ ಅಲ್ಲೊಂದು ಟೆಂಪರರಿ ಮದುವೆ ಆದ್ರೆ ಹೇಗೆ ಅಂತಾ" ಅಂತ ಹೇಳಿ ನಗಿಸಿದ್ರೆ, "ಹ್ಮ್ ಒಂದು ಕೆಂಪು ಟೊಮ್ಯಾಟೋ ಹಣ್ಣಿನಂತಾ ಹುಡುಗಿ ಸಿಕ್ರೆ ನೋಡಿ..." ಅಂತ ಮತ್ತೆ ತುಂಟಾಟಕ್ಕಿಳಿದಳು. "ರೀ... ಅಷ್ಟು ದಿನಾ ಹೋಗ್ತಾ ಇದೀರಾ, ಪಕ್ಕದಮನೆ ಪದ್ದುನಾ ಮಿಸ್ ಮಾಡ್ಕೊತೀರ ಪಾಪ..." ಅಂದ್ಲು. ತನ್ನ ಮಿಸ್ ಮಾಡ್ಕೊತೀನಾ ಇಲ್ವಾ ಅನ್ನೋದು ಕೇಳದಿದ್ದರೂ ಪರವಾಗಿಲ್ಲ ಪದ್ದು ಬಗ್ಗೆ ಕೇಳದೆ ಇರಲಾರಳು ನನ್ನಾಕೆ. "ಪದ್ದುಗೆ ಹೇಗೆ ಹೇಳೋದು ಅನ್ನೋದೇ ಚಿಂತೆ ಆಗಿದೆ ನಂಗೆ" ಅಂತಿದ್ದಂಗೆ, ಇಂಥ ವಿಷಯ ಎಲ್ಲ ಹೇಳಿ ಪದ್ದು ಹೊಟ್ಟೆ ಉರಿಸೋದರಲ್ಲಿ ತಾನೇ ಮೇಲು ಅನ್ನುವಂತೆ "ನಾನಿದೀನಲ್ಲ, ಇಂಥಾ ಚಾನ್ಸ್ ಹೇಗೆ ಮಿಸ್ ಮಾಡ್ಲಿ" ಅಂತ ಎದ್ದೊಡಿದಳು. ಇನ್ನು ಪದ್ದು ಜತೆ ಘಂಟೆ ಕಾಲ ಮಾತಾಡಿ, ಪದ್ದು ಹೊಟ್ಟೇಲಿ ಖಾರ ಕಲಿಸಿ ಇಟ್ಟು ಬರಲಿಲ್ಲ ಅಂದ್ರೆ ಕೇಳಿ.

ಊರಲ್ಲಿ ಎಲ್ರಿಗೂ ಫೋನು ಮಾಡಿ ಹೇಳಿದ್ದಾಯ್ತು, ಅಜ್ಜಿಗೆ ಭೇಟಿ ಮಾಡಿ "ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟೀದೀನಿ" ಅಂದ್ರೆ, ಅಷ್ಟರಲ್ಲೇ ಮನೆಕೆಲಸದ ಪಾರಮ್ಮಜ್ಜಿ "ಸಣ್ಣ ಪರಾನ್ಸಿಸ್ಕೋಕ ಹೊರಟೀ.. ನಮ್ಮಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಂಗ್ ಅಲ್ಲಿ ಸಣ್ಣ ಪರಾನ್ಸಿಸ್ಕೋ, ದೊಡ್ಡ ಪರಾನ್ಸಿಸ್ಕೋ ಅದಾವೇನು" ಅಂತ ಕೇಳಬೇಕೆ. ನಮ್ಮಜ್ಜಿ "ಅಲ್ಲಿ ಕನ್ನಡ ಮಾತಾಡ್ತಾರೆನ್ ಪಾರಮ್ಮ, ಎಲ್ಲ ಇಂಗ್ಲೀಸ್ ಅಲ್ಲಿ, ಅದ ಇಂಗ್ಲೀಸ್ ಹೆಸರ ಇರಬೇಕ" ಅಂತ ತಿಳಿಹೇಳಿದಳು. "ಅದ ಸ್ಪಾನಿಶ್ ಹೆಸರ" ಅಂದೆ. ತನ್ನ ಬಗ್ಗೆ ಹೇಳಿಕೊಳ್ಳಲೇ ಕಾದಿದ್ದನೇನೋ ಅನ್ನುವಂತೆ ವಿದೇಶ ಪ್ರಯಾಣ ಮಾಡಿದ್ದ ದೊಡ್ಡಪ್ಪನ ಮಗ ತನ್ನ ವಿದೇಶ ಜ್ಞಾನ ತೆರೆದಿಟ್ಟ, ಅಲ್ಲಿ ಬಗ್ಗೆ ಎಲ್ಲ ಹೇಳತೊಡಗಿದ. ಅವರಿಗೆ ಅವನನ್ನ ಜತೆ ಮಾಡಿ ಮಾತಾಡಲು ಬಿಟ್ಟು ಬಂದರೆ ಪಾರಮ್ಮಜ್ಜಿ ಮುಗ್ಧ ಪ್ರಶ್ನೆ ನನಗೆ ನನ್ನಾಕೆಗೆ ನಗೆ ಬುಗ್ಗೆ ಉಬ್ಬರಿಸಿತ್ತು...

ಅದೊಂದು ದಿನ ಹೊರಡುವ ಸಮಯ ಬಂದೇ ಬಿಟ್ಟಿತು, ನಮ್ಮೂರಲ್ಲಿ ಬೆಂಗಳೂರಿಗೆ ಹೊರಟರೇ ಸಾಕು ಆ ಹೈಟೆಕ್ ಬಸ್ ವರೆಗೆ ಬೀಳ್ಕೊಡಲು ಸಹ ಕುಟುಂಬ ಪರಿವಾರ ಸಮೇತರಾಗಿ ಬರುವಾಗ... ಇನ್ನು ವಿದೇಶಕ್ಕೆ ವಿಮಾನದಲ್ಲಿ ಅಂದ್ರೆ ಕೇಳಬೇಕೆ... ಅಪ್ಪ ಅಂತೂ... "ಬೆಂಗಳೂರಿನವರೆಗೆ ಎಲ್ರಿಗೂ ಒಂದು ಬಸ್ ಮಾಡಿಕೊಂಡು ಬರಬೇಕಾಗತ್ತೆ ನಿನ್ನ ವಿದೇಶಕ್ಕೆ ಬೀಳ್ಕೊಡಲು" ಅಂತ ನಗಾಡಿದ್ದರು. ವಿದೇಶಕ್ಕೆ ಹೊರಟರೆ ಸಾಕು ದಿನಪತ್ರಿಕೆಯಲ್ಲಿ ಫೋಟೋ ಹಾಕಿ ಶುಭಾಶಯ ಬೇರೆ ಕೋರುತ್ತಾರೆ. ಅಲ್ಲೇನೋ ಒಂದು ಹೆಮ್ಮೆ, ಪ್ರೀತಿ ಅದಕ್ಕೆ ಏನೂ ಹೇಳಲಾಗಲ್ಲ... ಅಂತೂ ಎಲ್ಲ ಟಿಕೆಟ್ಟು ತೆಗೆದುಕೊಂಡವರ ಫೋಟೋಗಳ ಮಧ್ಯೆ ನನ್ನ ಫೋಟೋ ಕೂಡ ರಾರಾಜಿಸಿತ್ತು. ಎಲ್ಲ ಟಿಕೆಟ್ಟು ತೆಗೆದುಕೊಂಡವರು ಅಂದ್ರೆ, ಸತ್ತು ಸ್ವರ್ಗಕ್ಕೆ ಟಿಕೆಟ್ಟು ತೆಗೆದುಕೊಂಡವರು, ಇಲ್ಲ ಚುನಾವಣೆ ಪಾರ್ಟಿ ಟಿಕೆಟ್ಟು ತೆಗೆದುಕೊಂಡವರು, ವಿದೇಶಕ್ಕೆ ವಿಮಾನದ ಟಿಕೆಟ್ಟು ತೆಗೆದುಕೊಂಡವರು ಎಲ್ಲರನ್ನೂ ಸೇರಿಸಿ ದಿನಪತ್ರಿಕೆಯವರು ಒಂದೇ ಕಡೆ ಕ್ಲಾಸಿಫೈಡ್ ಹಾಕಿರುವುದರಿಂದ, ಹಾಗಂದರೇ ಸರಿಯೇನೋ. ಅಮ್ಮ ನನ್ನಾಕೆ ಸೇರಿ ಬ್ಯಾಗು ಒತ್ತರಿಸಿ ತುಂಬಿಯಾಗಿತ್ತು, ನಾ ಅಡಿಗೆ ಮಾಡಿಕೊಂಡು ತಿನ್ನುವುದು ಅಷ್ಟರಲ್ಲೇ ಇದೆ ಅಂತ ಮ್ಯಾಗಿ ನೂಡಲ್ಸ್ ಪ್ಯಾಕೆಟ್ಟು ಕೂಡ ಸ್ಥಾನ ಆಕ್ರಮಿಸಿಕೊಂಡಿದ್ದವು, ಅಲ್ಲಿ ತೂಕದ ಮಿತಿಯಿದೆ ಎಲ್ಲ ಹೊತ್ತುಕೊಂಡು ಹೋಗಲಾಗಲ್ಲ ಅಂತ ತಿಳಿಹೇಳಿ ಕೆಲ ಸಾಮಗ್ರಿ ಎತ್ತಿಟ್ಟು ಪ್ರೀತಿಯ ಭಾರ ಕಮ್ಮಿ ಮಾಡಿಕೊಳ್ಳುವ ಹೊತ್ತಿಗೆ ನನಗೆ ಸಾಕಾಗಿತ್ತು. ಅಮ್ಮನಿಗೋ ನನ್ನ ಊಟದ ಚಿಂತೆ, "ಹಣ್ಣು ಸಿಕ್ರೆ ತಿನ್ನು, ಬ್ರೆಡ್ಡು ಎಲ್ಲ ಸಿಗತ್ತಂತೆ ಅಲ್ಲಿ" ಹೇಳುತ್ತಲೇ ಇದ್ದಳು.


ನಿಲ್ದಾಣದಲ್ಲಿ ಬೀಳ್ಕೊಡಲು ನಿಂತಾಗ, ಅದೇ ವಾರ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಮಂಗಳೂರಿನ ವಿಮಾನ ಅಪಘಾತ ಅಮ್ಮನ ಧೃತಿಗೆಡಿಸಿತ್ತು. "ವಿಮಾನ ಸೇಫ್ ಇರತ್ತಲ್ಲ" ಅಂತ ಸಂಕೊಚದಲ್ಲೇ ಕೇಳಿದ್ದಳು. ನನ್ನಾಕೆ "ಅತ್ತೆ, ಅಲ್ಲಿ ವಿದೇಶದಲ್ಲಿ ನಿಲ್ದಾಣ ಎಲ್ಲ ಸರಿ ಇರ್ತವೆ ಏನಾಗಲ್ಲ ಬಿಡಿ" ಅಂತ ಸಮಾಧಾನ ಹೇಳುತ್ತಿದ್ದರೂ ಅವಳ ಮುಖದಲ್ಲೂ ಆತಂಕದ ಗೆರೆಗಳು ಮೂಡಿದ್ದವು... ಅಪ್ಪ ದೂರದಲ್ಲಿ ನಿಂತು ನಂಬಿಕೆ ಇದೆ ಬಿಡು.. ಹೋಗಿ ಬಾ ಏನಾಗಲ್ಲ ಅಂತ ಹೇಳಿದಂತಿತ್ತು... ಅಮ್ಮ "ದೇವರ ನೆನೆಯುತ್ತಾ ಕೂತು ಬಿಡು ಏನಾಗಲ್ಲ" ಅಂತಿದ್ದಳು. "ಸುತ್ತಲೂ ಸುಂದರ ಅಪ್ಸರೆಯಂತಾ ಗಗನಸಖಿಯರು ಸುತ್ತುವರೆದಿದ್ದರೆ ದೇವರ ಧ್ಯಾನ್ ಎಲ್ಲಿ ಮಾಡೋಕಾಗತ್ತೆ" ಅಂತಂದು ಎಲ್ಲರನ್ನೂ ನಗಿಸಿ ಪರಿಸ್ಥಿತಿ ತಿಳಿಯಾಗಿಸಿದೆ. ನನ್ನಾಕೆ, "ರೀ ಯಾವ ಗಗನಸಖಿಯನ್ನೂ ನೋಡಲ್ಲ, ಅಂತ ಪ್ರಮಾಣ ಮಾಡ್ರೀ" ಅಂತ ಗಂಟು ಬಿದ್ದಿದ್ದಳು.

ಹಾಂಗಕಾಂಗ್ ಮೂಲಕ ಪ್ರಯಾಣಿಸುತ್ತಿದ್ದರಿಂದ, ಪಕ್ಕದ ಸೀಟಿನಲ್ಲಿ ಹಾಂಗಕಾಂಗ್ ಹುಡುಗಿ ಕೂರಬೇಕೆ!... ನನ್ನಾಕೆಗೆ ಕಾಡಿಸಲು ಒಳ್ಳೆ ವಿಷಯ ಸಿಕ್ತು ಅಂದುಕೊಂಡೆ, ಅವಳೋ ಕಣ್ಣು ತೆರೆದಿದ್ದಳೋ ಇಲ್ಲ ಮುಚ್ಚಿದ್ದಳೋ ಒಂದೂ ತಿಳಿಯದು, ಕಣ್ಣುಗಳೇ ಅಷ್ಟು ಚಿಕ್ಕವು. ನನಗೂ ಎಲ್ಲ ಹೊಸದು... ಕಿಟಕಿ ತೆರೆ ತೆರೆದು ಮೋಡಗಳ ನೋಡುತ್ತಿದ್ದರೆ ಆ ಪುಟ್ಟ ಕಣ್ಣುಗಳಲ್ಲೇ ತನಗೆ ಕಿರಿಕಿರಿಯಾಗುತ್ತಿದೆಯಂತ ಹೇಳಿದ್ದಂತೂ ಅಚ್ಚರಿಯೇ ಸರಿ. ಸರಿ ಕಿಟಕಿ ಮುಚ್ಚಿ ಕೂತೆ, ನಮ್ಮ ಸಿಟಿ ಬಸ್ಸಿನಂತಾಗಿದ್ದರೆ ಗಾಳಿ ಬರಲೆಂದು ತೆರೆದಿದ್ದೇನೆ ಅಂತ ಹೇಳಬಹುದಿತ್ತೇನೋ ಆದರೆ ಇಲ್ಲಿ ಅದೂ ಸಾಧ್ಯವಿರಲಿಲ್ಲ. ಅಷ್ಟರಲ್ಲೇ ಅಪ್ಸರೆ ಬಂದು.. ಅಲ್ಲಲ್ಲ ಗಗನಸಖಿ ಬಂದು, ತಿನ್ನಲು ತಿಂಡಿ ತಂದಿಟ್ಟಳು. ಅವಳಿಗೆ ವೆಜಿಟೇರಿಯನ್, ಸಸ್ಯಹಾರಿ ಊಟ ಕೇಳಿದರೆ ಮೊದಲೇ ಟಿಕೆಟ್ಟಿನಲ್ಲಿ ನಮೂದಿಸಿರಬೇಕೆಂದಳು, ಟಿಕೆಟ್ಟು ಮಾಡಿದ ಏಜೆಂಟ ಶಪಿಸಿದೆ, ಒಂದು ಮುಗುಳ್ನಗೆ ಇತ್ತಿದ್ದಕ್ಕೆ, ಕೊನೆಗೆ ಹೇಗೋ
ಒಂದು ಸಸ್ಯಹಾರಿ ಊಟ ಸಿಕ್ತು, ನಿಜಕ್ಕೂ ಸಸ್ಯಾಹಾರಿಯೇ... ಸಸ್ಯಗಳನ್ನು ಹಾಗೇ ಕತ್ತರಿಸಿ ಇಟ್ಟಿದ್ದರು... ವಿಧಿಯಿಲ್ಲದೇ ಪಾಲಿಗೆ ಬಂದಿದ್ದು ತಿಂದದ್ದಾಯ್ತು.

ಸ್ಯಾನ್ ಫ್ರಾನ್ಸಿಸ್ಕೋಗೆ ಬರುತ್ತಿದ್ದಂತೇ ಸಮುದ್ರ ಇನ್ನೂ ಹತ್ತಿರ ಹತ್ತಿರವಾಗುತ್ತ ಬಂದು ಕಾಣತೊಡಗಿತು, ಅಪ್ಪಿ ತಪ್ಪಿ ಅವಘಡವಾಗಿ ಎಲ್ಲಾದ್ರೂ ದೂರ ದ್ವೀಪದಲ್ಲಿ (ಐಲ್ಯಾನ್ಡ) ಹೋಗಿ ಬಿದ್ರೆ ಅಂತ ಯೋಚಿಸಿದೆ, ಹಾಗೇನಾದರೂ ಆದ್ರೆ ಅಪ್ಪಾ ದೇವ್ರೇ ಇರೋ ನಾಲ್ಕು ಗಗನಸಖಿಯರಲ್ಲಿ ಯಾರನ್ನಾದರೂ ನನ್ನ ಜತೆ ಮಾಡು ಅಂತ ಬೇಡಿಕೊಂಡೆ! ಅದನ್ನ ನನ್ನಾಕೆಗೆ ಹೇಳಿ ಉಗಿಸಿಕೊಂಡೆ ಕೂಡ... ಅಂತೂ ಇಂತೂ ಅಮೇರಿಕ ತಲುಪಿಯಾಗಿತ್ತು. ಹೋಟೆಲಿಗೆ ಬಂದು ಇಳಿದುಕೊಳ್ಳುತ್ತಿದ್ದಂತೆ ನನ್ನಾಕೆ ಆಗಲೇ ನಾಲ್ಕು ಸಾರಿ ಫೋನು ಮಾಡಿಯಾಗಿತ್ತು, ಕೊನೆಗಂತೂ "ಇದೇನು ನಮ್ಮ ಸಿಟಿ ಬಸ್ನಲ್ಲಿ ಮೆಜೆಸ್ಟಿಕ್ ಬಂದಂತೆ ಅನ್ಕೊಂಡಿದೀಯ" ಅಂದ್ರೆ, "ರೀ ಹೋಟೆಲ್ ರಿಸೆಪ್ಶನಿಸ್ಟ್ ನೋಡೋಕೆ ಹೇಗಿದಾಳೆ? ಕೇಳೋಕೆ ದ್ವನಿ ಸೂಪರಾಗಿದೆ..." ಅಂತ ಶುರುವಿಟ್ಟುಕೊಳ್ಳಬೇಕೆ... "ಛೆ ನಾನು ಅವಳ್ನಾ ನೋಡಲೇ ಇಲ್ವೆ" ಅಂದೆ.. "ನಂಬಿದೆ.." ಅಂದ್ಲು, ಇಂಥ ಸುಳ್ಳುಗಳೆಲ್ಲ ಅವಳು ನಂಬಿದಂತೆಯೇ... ವಿದೇಶದಲ್ಲಿದ್ದರೂ ನಮ್ಮ ತುಂಟಾಟಗಳಿಗೇನೂ ಕೊನೆಯಿಲ್ಲ ಬಿಡು ಅನಿಸ್ತು...

ವಿದೇಶ ಪ್ರಯಾಣ ವಿಮಾನ ಯಾನ ಒಂಥರಾ ಹೊಸ ಅನುಭವ, ಹೊಸ ದೇಶ, ಹೊಸ ಜನ... ಹೊಸಾ ಭಾಷೆ... ಎಲ್ಲ ಹೊಸತು... ಮೊಟ್ಟ ಮೊದಲ ಪ್ರಯಾಣಕ್ಕೆ ಸ್ವಲ್ಪ ತಯ್ಯಾರಿ ಅತ್ಯಗತ್ಯ, ಯಾರಾದರೂ ಮೊದಲೇ ಹೋಗಿ ಬಂದವರನ್ನು ಕೇಳಿ ತಿಳಿಯುವುದೊಳಿತು. ಎಲ್ಲಿ ಬ್ಯಾಗ ಕೊಡಬೇಕು, ಎಲ್ಲಿ ಯಾವ ಸೈಜ್ ಬ್ಯಾಗ ಇರಬೇಕು, ಎಷ್ಟು ತೂಕಕ್ಕೆ ಅನುಮತಿಯಿದೆ, ಏನೇನು ತೆಗೆದುಕೊಂಡು ಹೋಗಬಹುದು, ಎಲ್ಲ ಗೊತ್ತಿದ್ದರೆ ಒಳ್ಳೆಯದು ಇಲ್ಲವಾದರೆ ಅನಗತ್ಯ ಗೊಂದಲ ಉಂಟಾಗುತ್ತದೆ. ಕೆಲ ಸಲಹೆ ಕೊಡುವುದಾದರೆ ಕ್ಯಾಬಿನ್ ಬ್ಯಾಗ್ನಲ್ಲಿ ಒಂದು ಜತೆ ಬಟ್ಟೆ ಇರಲಿ, ಕೆಲವೊಮ್ಮೆ ಚೆಕ್ ಇನ್ ಮಾಡಿದ ಬ್ಯಾಗ ಬರುವುದು ತಡವಾಗಬಹುದು. ತೀರ ಸಣ್ಣ ಪುಟ್ಟ ಖಾಯಿಲೆಗಳಿಗೆಲ್ಲ ಸೇರಿಸಿ ವೈದ್ಯರ ಪ್ರಿಸ್ಕ್ರಿಪ್ಶನ್ ಸಮೇತ ಕೆಲ ಮಾತ್ರೆ ಗುಳಿಗೆ ತೆಗೆದುಕೊಳ್ಳುವುದು ಉಚಿತ. ವಿಮಾನ ಎತ್ತರದಿಂದ ಇಳಿಯುವಾಗ ವಾತಾವರಣದ ಒತ್ತಡದಿಂದಾಗಿ ಅಸಾಧ್ಯ ಕಿವಿ ನೋವು ಕಾಣಿಸಿಕೊಳ್ಳುವುದುಂಟು, ಬಬಲ್ ಗಂ ಅಗಿಯುವುದು ಇಲ್ಲ, ಸುಮ್ಮನೆ ಬಾಯಿ ತೆರೆದು ಮುಚ್ಚಿ ಆಕಳಿಸಿದಂತೆ ಮಾಡಿದರೆ ಸ್ವಲ್ಪ ಸರಿ ಹೋಗುತ್ತದೆ. ಜೆಟ್ ಲ್ಯಾಗ್ ಅಂತ ಕೆಲ ದಿನ ಹಗಲೆಲ್ಲ ನಿದ್ರೆ ಬರುವುದು, ರಾತ್ರಿ ನಿದ್ರೆ ಬರದೆ ಇರುವುದು ಸಾಮಾನ್ಯ. ಎರಡು ದಿನ ಹಗಲು ಒತ್ತಾಯದಿಂದ ಎಚ್ಚರಿದ್ದರೆ ಎಲ್ಲ ಸರಿಯಾಗುತ್ತದೆ, ತಪ್ಪಿ ಹಗಲು ಸಮಯವಿದೆ ನಿದ್ರೆ ಬರುತ್ತಿದೆ ಎಂದು ಮಲಗಿದರೆ ಅಷ್ಟೇ, ಹೊಂದಾಣಿಕೆ ಕಷ್ಟವಾಗುತ್ತದೆ. ಏನೇ ಹೇಳಿ ಮೊದಲ ಸಾರಿ ಒಂಥರಾ ಏನೋ ಖುಷಿಯಾಗಿರುತ್ತದೆ...

ಅಂತೂ ನನ್ನಾಕೆ ನನ್ನ ಏಳಿಸುವುದರಲ್ಲಿ ಸಫಲಳಾಗಿದ್ದಳು , ಬಾತ್ ಟಬ್ಬಿನಲ್ಲಿ ಬಿದ್ದುಕೊಂಡು ಸ್ವಲ್ಪ್ ಬಾತ್ ಚೀತ್... ಖಾಸ್ ಬಾತ್ ಮಾಡಿಯಾಯ್ತು... ಮತ್ತೇನೂ ಮಾಡಲಾಗದ ನಮ್ಮಂಥವರಿಗೆ ಅಂಥ ತಯ್ಯಾರಾದ ಮ್ಯಾಗಿ ನೂಡಲ್ಸು ಕುದಿಸಿ ಮಾಡಿಟ್ಟಿದ್ದು ತಿಂದೆ. ನಾಲ್ಕು ಬ್ರೆಡ್ಡು ಹಸಿಬಿಸಿ ಬೇಯಿಸಿ ಬ್ಯಾಗಿಗೆ ಹಾಕಿಕೊಂಡು... ಆಫೀಸಿಗೆ ಹೊರಟು ನಿಂತರೆ ಅರೆ ತೆರೆದ ಬಾಗಿಲಲ್ಲಿ ತುಸು ಬಾಗಿ ನಿಂತು ಕೈಬೀಸುವ ನನ್ನಾಕೆ ನೆನಪಾದಳು... ತುಸು ದೂರ ಹೋಗುತ್ತಿದ್ದಂತೆ ಕಾಣುತ್ತಿದ್ದ ಪಕ್ಕದ ಮನೆ ಪದ್ದು ಕೂಡ ನೆನಪಾದಳು.. ಪಕ್ಕದಮನೆ ಪದ್ದು ಇಲ್ಲಾಂದ್ರೆ ಏನಂತೆ?... ಮುತ್ತಿನಂತಾ ಮೂವತ್ತೆರಡೂ ಹಲ್ಲುಗಳು ಕಾಣುವಂತೆ ಮುಗುಳ್ನಗುತ್ತಿದ್ದ ಪಕ್ಕದ ರೂಮ್ ಪರ್ಲ್ ಕಾಣಿಸಬೇಕೆ... ಅವಳು ಯಾರಂತ ಕೇಳಬೇಡಿ... ಯಾರೋ ಏನೋ... ಕಾಣಿಸಿದಾಗೊಮ್ಮೆ ಮುಗುಳ್ನಕ್ಕು ಗುಡ್ ಮಾರ್ನಿಂಗ್ ಹೇಳೋ ಪಕ್ಕದ ರೂಮ್ ಹುಡುಗಿ, ಮುತ್ತಿನಂತ ಹಲ್ಲು ನೋಡಿ ಪರ್ಲ ಅಂತ ಹೆಸರಿಟ್ಟಿದೀನಿ... ನಾವು ಎಲ್ಲಿದ್ರೆನಂತೆ ನಾವು ನಾವೇ.. Weದೇಶದಲ್ಲಿ ಹೀಗೆ ಮತ್ತೆ ಪಕ್ಕದ ರೂಮ್ ಪರ್ಲ್ ಗೆ ಹಾಯ್ ಹೇಳ್ತಾ ಮತ್ತೆ ಸಿಕ್ತೀನಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/wedesha.pdf

ಸಧ್ಯ ವಿದೇಶದಲ್ಲಿರುವುದರಿಂದ,ಸಾಕಷ್ಟು ಸಮಯ ಸಿಗದೇ ಬಹಳ ದಿನಗಳಿಂದ ಬರೆಯಲಾಗಿರಲಿಲ್ಲ ಅದಕ್ಕೆ ಕ್ಷಮಿಸಿ, ಪ್ರತಿಕ್ರಿಯೆಗಳಿಗೂ ಉತ್ತರಿಸದೇ ತಿಂಗಳಾಗಿದೆ... ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ... ಓದುತ್ತಿರಿ.. PDF ಪ್ರತಿ ಕೂಡ ಸಧ್ಯ ಮಾಡಲಾಗಿಲ್ಲ, ಅಲ್ಲಿಯವರೆಗೆ ಬ್ಲಾಗಿನಲ್ಲೇ ಲೇಖನ ಓದಿ...

ಹಸಿರು ಕಾನನದೂರಿನಿಂದ...
ನಿಮ್ಮ ಪ್ರಭು..
Updated Aug/8/2010

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, April 25, 2010

ಮನೆ ಮ(ಮು)ದ್ದು...

ಮಲಗಿದ್ದೆ, ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ. ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ. ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ. ತೀರ ಕ್ಷೀಣದನಿ ಕೇಳಿತು "ಗುಂಡುಮರಿ, ಗುಂಡುಮರಿ..." ಅಂತ, ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ. "ಎದ್ದೇಳೊ ಗುಂಡುಮರಿ" ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು. ಅವಳು ಹೀಗೇನೆ, ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು, ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು "ಊಂ" ಅಂತ ಊಳಿಟ್ಟೆ, ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ. ಬೆಡ್‌ರೂಮಿಗೆ ಬಂದು, ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ, ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು, "ಹತ್ತುಗಂಟೆ" ಅಂದು ಮುಗುಳ್ನಕ್ಕು, ಹೊರ ಹೋದಳು. ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು. ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು, ಬೆರಳಿಗೆ ಕಟ್ಟಿದ್ದ "ಪೌಟಿಸ್" ಎಲ್ಲಿ, ಎಲ್ಲೊ ಬಿದ್ದು ಹೋಗಿದೆ, ಪೌಟಿಸ್! ಏನದು ಅಂತಾನಾ... ಹ್ಮ್ ಅದೊಂದು ಮನೆ ಮದ್ದು.

ಸ್ವಲ್ಪ ಫ್ಲಾಶ್‌ಬಾಕ್ ಹೋಗೊಣ್ವಾ, ನಿನ್ನೆ ಕೂಡ ರಜೆ ಇತ್ತು, ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ. ಸುಮ್ನೇ ಕೂತಿದ್ದೆ, ನಮಗೆ ರಜೆ ಇದ್ರ್‍ಏನಂತೆ, ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ. ಮೇಜು, ಟೀವಿ, ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು. ಹೇಗೂ ಖಾಲಿ ಕೂತಿದೀನಿ, ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ, "ನಂಗೆ ಕೊಡು ನಾ ಮಾಡ್ತೀನಿ" ಅಂದೆ. "ಏನು ಇಂಜನೀಯರ್ ಸಾಹೇಬ್ರು, ಈಮೇಲು, ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ" ಅಂತ ಹುಬ್ಬು ಹಾರಿಸಿದಳು. "ರಜಾ ದಿನಾ ಯಾವ ಈಮೇಲು, ಇನ್ನ ಫೀಮೇಲು ಅಂದ್ರೆ ನೀನೇ, ನಿನ್ನೇ ನೋಡ್ತಾ ಕೂತಿದ್ದಾಯ್ತು. ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ" ಅಂತ ಗುರಾಯಿಸಿದೆ. "ಹ್ಮ್ ರಜಾ ದಿನಾನೇ ಅಲ್ವಾ; ಪರ್ಸ್ssss...ನಲ್ ಮೇಲ್ ಚೆಕ್ ಮಾಡೋದು. ಫೀಮೇಲು ನಾನೋಬ್ಳೆನಾ, ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ, ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ... ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ, ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು..." ಅಂತ ತಿರುಗಿಬಿದ್ಲು. ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು. ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು, ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ, ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ.

ಟೀವೀ ಫ್ರಿಝ್ ಒರೆಸುವ ಹೊತ್ತಿಗೆ, ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು. "ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ" ಅಂತ ಹುಸಿನಗೆ ಬೀರಿದಳು, ಈ ಹುಡುಗೀರು ನೋಡಿ ನಕ್ಕರೆ, ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ. ಅದೇ ಆಯ್ತು, ಅವಳ ಮುಂದೆ ಸ್ಟೈಲ್ ಮಾಡಿ, ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ,
ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ, ನೇರ ಬೆರಳಲ್ಲಿ ತೂರಿಕೊಂಡಿತು. ಚಿಟ್ಟನೆ ಚೀರಿದೆ...

"ಅದಕ್ಕೇ ನಿಮಗೆ ಹೇಳಿದ್ದು, ಬೇಡ ಅಂತ, ನೀವೆಲ್ಲಿ ಕೇಳ್ತೀರಾ, ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ, ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು..." ಸಹಸ್ರನಾಮಾರ್ಚನೆ ನಡೆದಿತ್ತು. ಸಿಟ್ಟು ಅಂತೇನು ಅಲ್ಲ, ಅದೊಂಥರಾ ಕಾಳಜಿ, ಅದಕ್ಕೇ ಕೋಪ, ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ. ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು. ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು, ಮುರಿದು ಅರ್ಧ ಮಾತ್ರ ಹೊರಬಂದಿತ್ತು, ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು. ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ, "ನೋವಾಗ್ತಾ ಇದೇನಾ" ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು. ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ.

ರಕ್ತ ಬರುವುದು ಕಮ್ಮಿಯಾಗಿತ್ತು, "ಸ... ಸ್.. ಸ್" ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು. ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್‌ಫ್ಯೂಸ್ ಆಯ್ತು. ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು. "ನಡೀರಿ ಡಾಕ್ಟರ್ ಹತ್ರ ಹೋಗೋಣ" ಅಂದ್ಲು, "ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ, ಕಮ್ಮಿಯಾಗತ್ತೆ ಬಿಡು" ಅಂದೆ. ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ, ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು, ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು. "ರೀ ಅತ್ತೆಗೆ ಫೋನ್ ಮಾಡ್ಲಾ" ಅಂದ್ಲು, "ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು" ಅಂದ್ರೆ. "ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ, ಪ್ರಯತ್ನಿಸಿ. ನಾಳೆ ಡಾಕ್ಟರ್ ಹತ್ರ ಹೋದರಾಯ್ತು" ಅಂತ ಒಳ್ಳೇ ಐಡಿಯಾ ಕೊಟ್ಲು.

ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್... ಫೋನು ಕೆಳಗಿಟ್ಟವಳೇ, "ಅಮ್ಮ ಒಳ್ಳೆ ಮದ್ದು ಹೇಳಿದಾರೆ, ಏನ್ ಗೊತ್ತಾ, ಅದರ ಹೆಸ್ರು ಪೌಟಿಸ್ ಅಂತೆ, ಮಾಡೋದು ಸಿಂಪಲ್... ಒಂದು ಸಾರು ಹಾಕೊ ಸೌಟಿನಲ್ಲಿ, ಇಲ್ಲ ಚಿಕ್ಕ ಪಾತ್ರೇಲಿ, ಸ್ವಲ್ಪ ಹಾಲು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ, ಬಿಸಿ ಬಿಸಿ ಉಂಡೆ ಹಾಗೆ ಮಾಡಿ, ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ, ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ" ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು. ನಾನೂ ಅವಳ ಹಿಂಬಾಲಿಸಿದೆ. "ಬಿಸಿ ಬಿಸಿದೇ ಕಟ್ಟಬೇಕಾ" ಅಂತ ಆತಂಕದಲ್ಲಿ ಕೇಳಿದ್ರೆ. "ಸುಡು ಸುಡು ಹಾಗೆ ಕಟ್ಟಬೇಕಂತೆ, ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ" ಅಂತ ಇನ್ನೂ ಹೆದರಿಸಿದ್ಲು.

ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು, ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ, "ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್" ಅಂತ ಹಲ್ಲು ಗಿಂಜಿದೆ. "ಅತ್ತೆ ಹೇಳಿದ ಮೇಲೆ ಮುಗೀತು, ಒಳ್ಳೆ ಮದ್ದೇ ಇರತ್ತೆ, ಏನಾಗಲ್ಲ ಸುಮ್ನಿರಿ" ಅಂತ ಭರವಸೆ ಕೊಟ್ಲು. "ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ, ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ" ಅಂತ ಗೋಗರೆದೆ. ವಾರೆ ನೋಟದಲ್ಲಿ ನೋಡಿ, "ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ" ಅಂತ ಓಡಿಸಿದಳು. ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ.

ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ "ಡಾಕ್ಟರ್ ಹತ್ರಾನೇ ಹೋಗೋಣ ಕಣೇ" ಅಂತ ಮತ್ತೆ ಅವಳ ಮನವೊಲಿಸಲು ಹೋದೆ. "ಅತ್ತೆಗೆ ಫೋನು ಮಾಡ್ತೀನಿ ಈಗ, ಹೀಗೆ ಹಠ ಮಾಡ್ತಾ ಇದೀರಿ ಅಂತ" ಅಂತ ಧಮಕಿ ಹಾಕಿದ್ಲು. ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು, ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು. "ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ" ಅಂತ ಮತ್ತೆ ಮಾತಿಗಿಳಿದೆ. "ಆಹಾಹ್ ಏನ್ ರೂಪದರ್ಶಿ, ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್‌ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು" ಅಂತ ಹೀಯಾಳಿಸಿದ್ರೆ. "ಹ್ಮ್, ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ" ಅಂತ ರೈಲು ಬಿಟ್ಟೆ. "ಗಲ್ಲ, ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ" ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು. ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ. "
ಪ್ಲೀಜ್ ಕಣೆ, ಡಾಕ್ಟರ್ ಹತ್ರ ಹೋಗೊಣ, ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ, ಬೇಕಿದ್ರೆ ಪ್ರಮಾಣ್ ಮಾಡ್ತೀನಿ" ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ, ತಪ್ಪಿಸಿಕೊಂಡು "ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ, ಈವತ್ತು ಮನೆಮದ್ದೇ ಗತಿ, ನಾಳೆ ನೋಡೋಣ, ಕಡಿಮೆ ಆಗದಿದ್ರೆ ಡಾಕ್ಟರ್... ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ" ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ, ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ.

ಅವಳು ಅಡುಗೆ ಮಾಡಿದ್ದಾಯ್ತು, ಕೊನೆಸಾರಿ ಒಂದು ಪ್ರಯತ್ನ ಅಂತ, "ನೋವೆಲ್ಲ ಏನೂ ಇಲ್ಲ, ಎಲ್ಲಾ ಹೊರಟೊಯ್ತು, ನೋಡು" ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ. ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು, ನಗುತ್ತ "ಅಲ್ಲೇ ಕೂತಿರಿ, ಪೌಟಿಸ್ ಮಾಡಿ ತರ್ತೀನಿ" ಅಂತ ಹೋದಳು, ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ, ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ, ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ, ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು. ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು, ಹಲ್ಲು ಗಟ್ಟಿ ಹಿಡಿದು ಕೂತೆ, ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ. "ಕಣ್ಣು ಬಿಡಿ, ಏನಾಗಲ್ಲ" ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ. "ಏನೊ ಒಂದು ಬೆರಳಿಗೆ ಹಚ್ಚೋದು ತಾನೆ, ಕಣ್ಣು ಯಾಕೆ ತೆಗೆಯಬೇಕು, ನಂಗೆ ನೋಡೋಕಾಗಲ್ಲ, ಬೇಗ ಮೆತ್ತಿಬಿಡು" ಅಂದೆ. ಬೆರಳಿಗೆ ಟೋಪಿ ತೊಡಿಸಿದಂತೆ, ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು. ಹಿತವಾಗಿತ್ತು, ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ, ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ, ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ. ತುಟಿಯಗಲಿಸಿದೆ. "ನೋಡಿ ಇಷ್ಟೇ, ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ, ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ, ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು. ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ" ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು. ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ.

ಊಟಕ್ಕೆ ಅನ್ನ ಸಾರು ಬಡಿಸಿ, ಇಟ್ಟಳು. ಅವಳತ್ತ ನೋಡಿದ್ದಕ್ಕೆ "ಓಹ್ ನೋವಾಗಿದೆ ಅಲ್ವಾ" ಅಂತ ಕಲೆಸಿ ಚಮಚ ತಂದಿಟ್ಲು. ಇದೇ ಒಳ್ಳೆ ಸಮಯ ಅಂತ, ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ, ಕೈತುತ್ತು ತಿಂದೆ. ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ. "ನಾಲ್ಕೈದು ದಿನ ಹೀಗೇ ಕಟ್ಟು, ಚೆನ್ನಾಗಿ ಗುಣವಾಗ್ಲಿ" ಅಂದೆ, ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ. "ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ, ಡಾಕ್ಟರ ಹತ್ರ ಹೋಗಿ, ಕುಯ್ಯಿಸಿ ತೆಗೆಸಿ, ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ" ಅಂತ ನಾಟಕಕ್ಕೆ ತೆರೆ ಎಳೆದಳು. "ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ, ನಾಳೆ ಎಲ್ಲಾ ಸರಿ ಹೋಗುತ್ತೆ, ಅಮ್ಮ ಹೇಳಿದ ಮೇಲೆ ಸುಮ್ನೇನಾ" ಅಂತ ಸಂಭಾಳಿಸಿದೆ, ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ. ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ, ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ.

ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ. ಹಾಗಂತೆ ಗುಳಿಗೆ, ಸಿರಪ್ಪು, ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ, ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ. ಈ ಪೌಟಿಸ್ ನೋಡಿ... ಕಸ, ಗಾಜಿನ ಚೂರು, ಕಡ್ಡಿ ಏನೇ ಚುಚ್ಚಿದ್ರೂ, ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ. ಮಾರ್ಬಲ್‌ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ. ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ, ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು, ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು. ಬಾಯಿ ಹುಣ್ಣು, ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ, ಗಂಟಲ ಕೆರೆತ, ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ, ಒಂದೊ ಎರಡೊ.
ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ, ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು.

ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ. ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು, ಹಾಗೇ ಊತ ಕೂಡ ಕಮ್ಮಿಯಾಗಿತ್ತು. ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು. "ಏನನ್ನತ್ತೆ ಬೆರಳು" ಅಂತ ಕುಷಲತೆ ಕೇಳಿದ್ಲು. "ಪೌಟಿಸ್‌ನ ಬಿಸಿಯಪ್ಪುಗೆ ಇನ್ನೂ ಬೇಕಂತೆ" ಅಂದೆ. "ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ" ಅಂದ್ಲು. "ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ" ಅಂದೆ ಖುಷಿಯಲ್ಲಿ. ಕೈಯಲ್ಲಿ ಕಪ್ಪಿಟ್ಟು, ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ, "ಮನೆ ಮದ್ದೇನೊ ಸಿಕ್ತು, ಮನೆ ಮುದ್ದು???"... ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು, ಅದೆಲ್ಲ ಬರೆಯೋಕೆ ಅಗಲ್ಲ, ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ, ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ...

ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್‌ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/manemaddu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, April 11, 2010

ಅಪ್ಪಿಕೋ ಚಳುವಳಿ...

ಸುಮ್ಮನೇ ಕೂತಿದ್ದೆ, ಮಾತಿಲ್ಲದೇ... ಅವಳಿರುವಾಗ ಮಾತುಗಳಿಗೆ ಬರ ಬರಲು ಕಾರಣ ಮೊನ್ನೆ ಮೊನ್ನೆ ಜರುಗಿದ ಕದನ. ಇದೇನು ದೊಡ್ಡ ಪಾಣಿಪತ್ ಕದನವೇನಲ್ಲ, ಚಿಕ್ಕ ಕೋಳಿ ಕಲಹ. ಸುಖವಾಗಿದ್ದ ಸುಂದರ ಸಂಸಾರದಲ್ಲಿ ಇದೇನು ಸಮಸ್ಯೆ ಬಂತು ಅಂತಾನಾ, ಅದೇನು ದೊಡ್ಡ ಸಮಸ್ಯೆಯೇ ಅಲ್ಲ ಬಿಡಿ. ಆಗಾಗ ಹೀಗೆ ಚಿಕ್ಕ ಪುಟ್ಟ ಜಟಾಪಟಿಗಳು ಇರಲೇಬೇಕೆಂದು ಸುಮ್ಮನೆ ಕೂರದೆ ಕಾಲು ಕೆರೆದುಕೊಂಡು ಕಾಡಿಸಿ ಕೋಪ ಬರಿಸಿ ಕಿತ್ತಾಡಿಕೊಂಡುಬಿಡುವುದು. ಕದನದಲ್ಲೂ ಒಂಥರಾ ಖುಷಿಯಿದೆ ಅಂತ ಆಗಲೇ ಗೊತ್ತಾಗುವುದು. ಮೊನ್ನೆ ಆಗಿದ್ದು ಕೂಡಾ ಹೀಗೇ, "ತಿಳಿ ನೀಲಿ ಬಣ್ಣದ ಶರ್ಟ್ ಇತ್ತಲ್ಲ, ಎಲ್ಲೇ ಸಿಕ್ತಾ ಇಲ್ಲ" ಅಂತ ಕೂಗಿದ್ದಕ್ಕೆ, "ಹಳೆಯದಾಗಿತ್ತು ಅಂತ, ಪೇಂಟ್ ಮಾಡೊ ಹುಡುಗನಿಗೆ ಕೊಟ್ಟು ಬಿಟ್ಟೆ" ಅಂತ ಪಾಕಶಾಲೆಯಿಂದಲೇ ಹೇಳಿದ್ದಳು. ಮೊದಲೇ ಅದು ನನ್ನ ಮೆಚ್ಚಿನ ಶರ್ಟ ಅದನ್ನ ಹೀಗೆ ಕೊಟ್ಟಿದ್ದಾಳೆ ಅಂದರೆ ಸಿಟ್ಟು ಬಂದು ಬಿಟ್ಟಿತ್ತು, ಕೊಡುವ ಮೊದಲು ಒಂದು ಮಾತು ಕೂಡ ಕೇಳಿಲ್ಲವಲ್ಲ ಅನ್ನೋ ಬೇಸರ ಬೇರೆ. "ಯಾರೇ ಅದನ್ನ ಕೊಡು ಅಂತ ಹೇಳಿದ್ದು" ಅಂತ ದನಿ ಏರಿಸಿದ್ದೆ, ಅಡಿಗೆಯ ಖಾರದ ಘಾಟು ಮೂಗು ಸೇರಿ ಅವಳಿಗೂ ಕೋಪ ನೆತ್ತಿಗೇರಿ, "ಎಲ್ಲಿ ಹೊರಟರೂ ಅದನ್ನೇ ಹಾಕ್ಕೊಂಡು ನಿಲ್ತಾ ಇದ್ರಲ್ಲ, ಫೇವರಿಟ್ಟು ಫೇವರಿಟ್ಟು ಅಂತ... ಅದಕ್ಕೇ ಕೊಟ್ಟೆ" ಅಂತ ಚೀರಿದ್ದಳು. ಪಾಕಶಾಲೆಗೆ ಹೋಗಿ "ಇನ್ನೊಮ್ಮೆ ನನ್ನ ಶರ್ಟ್ ಮುಟ್ಟಿದ್ರೆ ನೋಡು" ಅಂತ ಎಚ್ಚರಿಕೆ ಕೊಟ್ಟು ಬಂದರೆ, ಹೊರಬಂದು ನನ್ನ ಶರ್ಟ್ ಒಮ್ಮೆ ಮುಟ್ಟಿದ್ದಲ್ಲದೇ ತೀಡಿ ಮುದ್ದೇ ಮಾಡಿ ಸುಕ್ಕಾಗಿಸಿ ಹೋಗಿದ್ದು ನೋಡಿ ಕುದ್ದು ಹೋದೆ. ಸಿಟ್ಟಿನಲ್ಲಿ ನೋಡಿ ಶೀತಲ ಸಮರಕ್ಕೆ ನಾಂದಿ ಹಾಡಿದಾಗಲೇ ಶುರುವಾಗಿದ್ದು ಅವಳ ಅಪ್ಪಿಕೋ ಚಳುವಳಿ...

ಏನಿದು ಅಪ್ಪಿಕೋ ಚಳುವಳಿ, ಮರಗಳನ್ನ ಕಡಿಯಬೇಡಿ ಅಂತ ಮರಗಳನ್ನು ಅಪ್ಪಿಕೊಂಡು ನಿಂತು ಕಾಪಾಡಲು ಪರಿಸರವಾದಿಗಳು ಮಾಡಿದ ಚಳುವಳಿ ಅಂತೆ, ಆದರೆ ಅದಕ್ಕೆ ಹೊಸ ಭಾಷ್ಯ ಕೊಟ್ಟದ್ದು ನನ್ನಾಕೆ. ಗೆಳೆಯನೊಬ್ಬ ಮಗುವಿನೊಂದಿಗೆ ಮನೆಗೆ ಬಂದಾಗ
ಇವಳು ಮುದ್ದುಗರೆದದ್ದು ನೋಡಿ ಮರಳಿ ಹೋಗಲೊಲ್ಲದೇ ಇವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತು ಬಿಟ್ಟಿತ್ತು, ಬಾರೋ ಹೋಗೋಣವೆಂದರೆ ಬಿಡಲೊಲ್ಲದು, ಆಗಲೇ ಅದನ್ನು ನನ್ನಾಕೆ ಅಪ್ಪಿಕೊ ಚಳುವಳಿ ಅಂದಿದ್ದು. ಅಂತೂ ಹರಸಾಹಸ ಮಾಡಿ ಬಿಡಿಸಿಕೊಂಡು ಹೋಗಿದ್ದ, ಆದರೂ ಅದೊಂದು ಒಳ್ಳೆಯ ತಂತ್ರ ಅಂತ ಕಂಡುಕೊಂಡಿದ್ದ ಮಗು ಈಗ ಅವನೆಲ್ಲಿ ಹೊರಟು ನಿಂತರೂ ನಾನೂ ಜತೆ ಬರುತ್ತೀನಿ ಅಂತ ಕಾಲಿಗೆ ಅಮರಿಕೊಂಡು ಅಪ್ಪಿ ಕಾಲು ಕಿತ್ತಿಡದಂತೆ ಕೂತುಬಿಡುತ್ತಿತ್ತಂತೆ, ನನ್ನ ಮಗ ಅಪ್ಪಿಕೋ ಚಳುವಳಿಗಿಳಿದಿದ್ದಾನೆ ಅಂತ ಗೆಳೆಯ ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದ. ಮಗುವಿನ ಪ್ರಯೋಗ ಯಶಸ್ವಿಯಾಗಿದ್ದು ಕಂಡು ನನ್ನಾಕೆ ಅದೇ ತಂತ್ರ ನನ್ನ ಮೇಲೆ ಮಾಡುತ್ತಿದ್ದಳು.

ಶರ್ಟ್ ಜಗಳ ಜೋರಾಗಿ, ಮೌನ ಸತ್ಯಾಗ್ರಹ ಶುರು ಮಾಡಿಬಿಟ್ಟಿದ್ದೆ, ಅವಳು ಕೂಗಿದಾಗ ಉತ್ತರಿಸದಾದಾಗ, ನನ್ನೊಂದಿಗೆ ಮಾತಾಡುತ್ತಿಲ್ಲ ಅಂತ ಅವಳಿಗೂ ಗೊತ್ತಾಗಿಹೋಗಿತ್ತು. ಅಂದು ಮುಂಜಾನೆ ಟೇಬಲ್ಲಿನ ಮೇಲೆ ಉಪ್ಪಿಟ್ಟು ಮಾಡಿಟ್ಟು ಕೈಲಿ ಚಮಚೆ ಹಿಡಿದು ನಿಂತಿದ್ದಳು, ಕೇಳಲಿ ಕೊಡೋಣ ಅಂತ. ಮಾತನಾಡಲೇ ಬಾರದು ಅಂತ ತೀರ್ಮಾನಿಸಿದ್ದ ನಾನು ಬಿಸಿ ಬಿಸಿಯಿದ್ದರೂ ಕೈ ಸುಟ್ಟರೂ ಪರವಾಗಿಲ್ಲ ಅಂತ ಕೈಯಲ್ಲೇ ತಿಂದು ಎದ್ದು ಹೋಗಿದ್ದೆ. ಆಗ ಶುರುವಾಗಿದ್ದ ಜಗಳ, ಇನ್ನೂ ಜಾರಿಯಲ್ಲಿತ್ತು. ಈ ಸಾರಿ ಸ್ವಲ್ಪ ಧೀರ್ಘಕಾಲೀನ ಸಮರವಿರಲಿ ಅಂತ ನಿರ್ಧರಿಸಿ, ಪಟ್ಟು ಸಡಲಿಸಿರಲಿಲ್ಲ.

ಎರಡು ದಿನದಿಂದ, ಅಪ್ಪಿಕೋ ಚಳುವಳಿ ಶುರುವಾಗಿತ್ತು, ಮಾತನಾಡುವುದಿಲ್ಲ ಅಂತ ಗೊತ್ತು, ಅದಕ್ಕೆ ಸರಿಯಾಗಿ ಅಫೀಸಿಗೆ ಹೊರಟು ರೆಡಿಯಾಗಿ ನಿಂತಿರುವಾಗ, ಹಿಂದಿನಿಂದ ಬಂದು ಗಪ್ಪನೆ ಅಪ್ಪಿಕೊಂಡು ನಿಂತು ಬಿಡುವವಳು, "ಬಿಡು ಅಂತ ಹೇಳಿ ಬಿಡ್ತೇನೇ, ಇಲ್ಲಾಂದ್ರೆ ಈವತ್ತು ಅಫೀಸಿಗೆ ಚಕ್ಕರ ಹೊಡಿಬೇಕಾಗತ್ತೆ" ಅಂತ ವಾರ್ನಿಂಗ್ ಬೇರೆ, ಹಾಗೂ ಹೀಗೂ ಕೊಸರಿಕೊಂಡು ತಪ್ಪಿಸಿಕೊಂಡು ಹೊರಟು ಹೋಗಿದ್ದೆ, ಎರಡು ದಿನವಂತೂ ಅವಳ ಅಪ್ಪಿಕೋ ಚಳುವಳಿ ಸಫಲವಾಗಿರಲಿಲ್ಲ, ನಿನ್ನೆಯಂತೂ ನಾನು ಪ್ರತಿಭಟಿಸಲೂ ಇಲ್ಲ ಅಂತಾದಾಗ, ತಾನೇ ಬಿಟ್ಟುಕೊಟ್ಟಿದ್ದಳು, ಆಗ ಅವಳ ಮುಖ ನೋಡಿ, ಪಾಪ ಕಾಡಿದ್ದು ಸಾಕೆನಿಸಿ ಮಾತಾಡಿಸಲೇ ಅನ್ನಿಸಿದರೂ ಇರಲಿ ಇನ್ನೊಂದು ಚೂರು... ಮಜವಾಗಿದೆ ಅಂತ ಸುಮ್ಮನಾಗಿದ್ದೆ.

ನನ್ನ ಅಪ್ಪಿಕೋ ಚಳುವಳಿಗಳು ಮಾತ್ರ ಯಾವಾಗಲೂ ಸಫಲವಾಗಿರುತ್ತಿದ್ದವು, ಸಮಯ ಸಾಧಿಸಿ ಸರಿಯಾಗಿ ತಪ್ಪಿಸಿಕೊಳ್ಳದಂತೆ ಬಾಹು ಬಂಧಿಸಿದರೆ ಸಡಲಿಸುತ್ತಿರಲಿಲ್ಲ, ಸಿಡಿಮಿಡಿಗೊಂಡು ಸೋತು ಬಾಯಿಬಿಟ್ಟಿರುತ್ತಿದ್ದಳು. ಅದಂತೂ ಸಫಲವಾಗದಾದಾಗ ಹೊಸ ವರಸೆ ತೆಗೆದಳು, ಅಂದು ಶನಿವಾರ ನಾನಂತೂ ಹೊರಗೆಲ್ಲೂ ಹೋಗುವುದಿಲ್ಲ ಅಂತ ಗೊತ್ತಿದ್ದರಿಂದ, ಗೋಡೆಗಳೊಂದಿಗೆ ಮಾತಾಡುವರಂತೆ ನನ್ನಡೆಗೂ ನೋಡದೇ ವಾರ್ತೆ ಓದತೊಡಗಿದಳು, "ಇಂದಿನ ಸುದ್ದಿಗಳು, ಮನೆಯಲ್ಲಿ ಶುರುವಾದ ಸಮರ, ಸಂಧಾನ ಯತ್ನ ವಿಫಲ, ಮೌನಸತ್ಯಾಗ್ರಹ... ಮನೆತುಂಬ ಕವಿದ ನೀರಸ ವಾತಾವರಣ. ಬಿಕೊ ಅನ್ನುತ್ತಿರುವ ಬೆಡರೂಮು, ಹಾಲ್‌ನಲ್ಲಿ ಹಗಲು ಹೊತ್ತಿನಲ್ಲೇ ಬಾಯಿಗಳಿಗೆ ಬೀಗ. ಯಜಮಾನರು ಮೂರುದಿನದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪಟ್ಟು ಸಡಲಿಸದಿರುವುದರಿಂದ, ಮುಂದುವರೆದ ಮುಷ್ಕರ, ಪಾಕಶಾಲೆಗೆ ಮೂರು ದಿನ ರಜೆ, ಹೊರಗಿನ ತಿಂಡಿ ತಿನಿಸು ತರದಂತೆ ನಿಷೇಧ. ಮನೆಯಿಂದ ಹೊರ ಹೋಗದಂತೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ, ಹೆಚ್ಚಿನ ಸುದ್ದಿಗಳಿಗಾಗಿ ಕೇಳುತ್ತಿರಿ ನಿಮ್ಮ ಮನೆವಾರ್ತೆ." ಅಂತ ಚಿಲಿಪಿಲಿಯೆನ್ನುವಂತೆ ಉಲಿದವಳು, ನಡುವಿಗೆ ಸೆರಗು ಸಿಕ್ಕಿಸಿ, ಸವಾಲು ಹಾಕಿ ಸಿದ್ಧವಾದಳು.

ಪಾಕಶಾಲೆಗೆ ರಜೆಯೆಂದರೆ ಬೇಳೆ ಏನೂ ಬೇಯುವಂತಿರಲಿಲ್ಲ, ಅಪ್ಪಿತಪ್ಪಿ ಕಾನೂನು ಮೀರಿ, ಪಾಕಶಾಲೆಗೆ ಕಾಲಿಟ್ಟರೆ, ಇಲ್ಲ ಪ್ರತಿಬಂಧಕಾಜ್ಞೆ ಮುರಿದು ಮನೆಯಿಂದ ಹೊರಬಿದ್ದರೆ ಮುಂದಿನ ತೀವ್ರ ಪರಿಣಾಮಗಳು ಊಹಿಸಲಸಾಧ್ಯ. ಅಲ್ಲದೇ ಹಾಗೆ ಮಾಡಿ ನಾನೇನೊ ಹೊರಗೇನಾದರೂ ತಿಂದು ಬರಬಹುದೇನೊ ಆದರೆ ಅವಳು ಮಾತ್ರ ಹಾಗೇ ಕೂತಾಳು ಅಂತನ್ನೊ ಬೇಸರ. ಏನು ಮಾಡಲೂ ತಿಳಿಯದಾಯಿತು, ಹಾಗೆ ಮನೆತುಂಬ ಶತಪಥ ತಿರುಗುತ್ತಿದ್ದರೆ ಕಂಡಿತು ಹಣ್ಣಿನ ಬುಟ್ಟಿ, ಅವಳು ಬೇಕಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಿ, ಫಲಾಹಾರ ಸೇವನೆಯಾದರೂ ಮಾಡೋಣ ಅಂತ ಅದನ್ನೇ ಎತ್ತಿಕೊಂಡು ಅವಳಿಗೆ ಕಾಣುವಂತೆ ಹೋಗಿ ಕೂತು, ಸದ್ದು ಮಾಡುತ್ತ ಸೇಬು ಮೆಲ್ಲತೊಡಗಿದೆ ಇನ್ನೊಂದು ಸೇಬುವಿಗೆ ಕೈ ಹಾಕುತ್ತಿದ್ದರೆ, ಕಸಿದುಕೊಂಡು ತಾನೂ ಒಂದು ತಿಂದಳು. ಸಧ್ಯದ ಸಮಸ್ಯೆಯೇನೊ ಬಗೆಹರಿಯಿತು, ಮಧ್ಯಾಹ್ನ ಊಟಕ್ಕೇನು ಮಾಡುವುದು ತಿಳಿಯದಾಯಿತು. ಬೇಗ ರಾಜಿಯಾಗುವ ಇರಾದೆಯೂ ನನಗಿರಲಿಲ್ಲ, ಅದಕ್ಕೆ ಅವಳಿಗೆ ಕೇಳುವಂತೆ "ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ, ಏನೊ ಒಂದು ಆಗುತ್ತೆ" ಅಂತ ಆಕಾಶದತ್ತ ಮುಖ ಮಾಡಿ ಕೈಮುಗಿದು ಹೊರಬಂದೆ.

ದೇವರೇ, ಅವಳನ್ನು ಇನ್ನಷ್ಟು ಕಾಡಿಸು ಅಂತ ಸಹಾಯ ಮಾಡಿದನೋ ಎನೊ, ಪಕ್ಕದಮನೆ ಪದ್ದು ಪಲಾವ್‌ನೊಂದಿಗೆ ಪ್ರತ್ಯಕ್ಷ ಆಗಬೇಕೆ, "ಏನ್ ಮಾಡ್ತಾ ಇದೀರಾ, ಸಂಡೇ ಸ್ಪೇಶಲ್ ಅಂತ ಅವರೇಕಾಳು ಪಲಾವ್ ಮಾಡಿದ್ದೆ, ತಂದೆ" ಅಂತನ್ನುತ್ತಿದ್ದಂತೆ, "ಬನ್ನಿ, ಬನ್ನಿ" ನಾ ಬರಮಾಡಿಕೊಂಡೆ. ಇವಳು ಓಡಿ ಬಂದು "ಅಯ್ಯೊ ಈಗ ತಾನೆ ಊಟ ಆಯ್ತಲ್ಲ, ಸುಮ್ನೇ ಹಾಳಾಗುತ್ತೆ, ಮತ್ತೆ ಮಾಡಿದಾಗ ಕೊಡುವಿರಂತೆ" ಅಂತ ಕಲ್ಲು ಹಾಕಲು ನೋಡಿದಳು, ತಕ್ಷಣ ನಾನು ಪರವಾಗಿಲ್ಲ "ನಾನು ಟೇಸ್ಟ್ ಮಾಡ್ತೀನಿ ಕೊಡಿ ನೀವು" ಅಂತ ಇಸಿದುಕೊಂಡು ಬಂದೆ, ಪದ್ದು ಫುಲ್ ಇಂಪ್ರೆಸ್ ಕೂಡ ಆದಳು. ಅವರೇಕಾಳು ಪಲಾವ್ ಅಲ್ಲ ದೇವರೇ ಕಾಡು ಅಂತ ಕಳುಹಿದ ಪಲಾವ್ ಅನ್ನುತ್ತ ತಂದು ಟೇಬಲ್ಲಿನ ಮೇಲಿಟ್ಟೆ.

ಪದ್ದು ಜತೆ ಮಾತಾಡಿ, ಕಳುಹಿಸಿಕೊಟ್ಟು ಬಂದಳು, ನಾನಂತೂ ತಿನ್ನಲು ಅಣಿಯಾಗಿ ಕೂತಿದ್ದೆ, ನನಗೊಂದು ಪ್ಲೇಟನಲ್ಲಿ ಸ್ವಲ್ಪ ಹಾಕಿಕೊಂಡು ಉಳಿದದ್ದು ಅವಳಿಗನ್ನುವಂತೆ ಇಟ್ಟು ಬಂದೆ, ಕೋಪದಲ್ಲಿ ಕಣ್ಣು ಕೆಂಪಾಗಿಸಿಕೊಂಡು ಬಂದು ಕೂತು ಅವಳೂ ತಿಂದು ಕೈತೊಳೆದುಕೊಂಡಳು. ನನ್ನಾಕೆ ಮಾಡುವ ಪಲಾವನಷ್ಟು ಟೇಸ್ಟ್ ಏನೂ ಆಗಿರಲಿಲ್ಲ ಬಿಡಿ ಆದರೂ ಹೊಟ್ಟೆ ಹಸಿದಾಗ ಸಿಕ್ಕದ್ದೇ ಪಂಚಾಮೃತವಾಗಿತ್ತು. ಇದೇನೂ ಕೆಲಸ ಮಾಡುವ ಹಾಗೆ ಕಾಣದಾದಾಗ ಕೊನೇದಾಗಿ ಅಮ್ಮನ ಹತ್ತಿರ ದೂರು ಕೊಡುತ್ತಾಳೆ ಇನ್ನು ಅಂತ ಗೊತ್ತಿತ್ತು, ಅಲ್ಲದೇ ಮಾತನಾಡಿಸದೇ ಮೂರು ದಿನಗಳು ಬೇರೆ ಆಗಿದ್ದರಿಂದ ನನಗೂ ಒಂಥರಾ ಚಡಪಡಿಕೆ ಶುರುವಾಗಿತ್ತು. ಸೋಲೊಪ್ಪಿಕೊಳ್ಳಬಾರದು ಅಂತ ಸುಮ್ಮನಿದ್ದೇ ಹೊರತು, ಸಿಟ್ಟು ಯಾವಾಗಲೋ ಹೊರಟು ಹೋಗಿತ್ತು.

ಸಾವಿಲ್ಲದ ಮನೆಯ ಸಾಸಿವೆ ಕಾಳು ತಂದರೆ ಬದುಕಿಸಿಕೊಡುತ್ತೇನೆ ನಿನ್ನ ಮಗನನ್ನು ಅಂತ ಬುಧ್ಧ ಹೇಳಿ ಸಾವಿಲ್ಲದ ಮನೆಯೇ ಇಲ್ಲ ಅಂತ ಹೇಗೆ ತಿಳಿಸಿದ್ದನೊ, ಜಗಳವಿಲ್ಲದ ಮನೆಯ ಜೀರಿಗೆ ತಂದು ಕೊಡಿ, ಜಗಳವಿಲ್ಲದ ಜೀವನ ಸೃಷ್ಟಿ ನಾನು ಮಾಡಿಕೊಡುತ್ತೇನೆ! :)
ಸಾವಿಲ್ಲದ ಮನೆ ಸಾಸಿವೆಕಾಳು ಹೇಗೆ ಸಿಗಲಿಕ್ಕಿಲ್ಲವೊ, ಜಗಳವಿಲ್ಲದ ಮನೆ ಜೀರಿಗೆ ಕೂಡ ಸಿಗಲಿಕ್ಕಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಜಗಳವಿಲ್ಲದ ಮನೆ ಕೂಡ ಇಲ್ಲ, ಎಲ್ಲೊ ದೊಡ್ಡ ದೊಡ್ಡ ರಂಪಾಟಗಳಾದರೆ ಇನ್ನೆಲ್ಲೊ, ಜೋರಿಲ್ಲದ ಜಟಾಪಟಿಗಳು ಆದಾವು. ಏನಿಲ್ಲವೆಂದರೂ ಹುಸಿಮುನಿಸು, ತುಸುಕೋಪ ಪ್ರದರ್ಶನಗಳಾದರೂ ಆಗಿರಲೇಬೇಕು. ಈ ಚಿಕ್ಕ ಪುಟ್ಟ ಫೈಟಿಂಗಳಾದ ಮೇಲಿನ ಪ್ರೀತಿಯಿದೆಯಲ್ಲ, ಅದು ಪದಗಳಲ್ಲಿ ಹೇಳಲಾಗದ್ದು. ಯಾರು ಸೋತರು ಯಾರು ಗೆದ್ದರು ಅನ್ನುವುದಕ್ಕಿಂತ, ಇಬ್ಬರೂ ಒಮ್ಮೆಲೇ ಒಬ್ಬರಿಗೊಬ್ಬರು ಸೋಲಲು ತಯ್ಯಾರಾಗಿಬಿಟ್ಟಿರುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳೇ ವಿಕೋಪಕ್ಕೆ ಹೋಗಬಹುದಾದರೂ ಹಾಗಾಗದಂತೆ ಬಿಡದಿದ್ದರೆ, ಸಾರಿಗೆ ಸಾಸಿವೆ ಜೀರಿಗೆಯ ವಗ್ಗರಣೆ ಹಾಕಿದಾಗ ಬರುವ ಚಟಪಟ ಸದ್ದಿನಂತೆ ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ಜಟಾಪಟಿಯಾಗಿ ಹೋದರೆ ಅಮೇಲೆ ಘಂಮ್ಮೆಂದು ಹರಡುವ ಸುವಾಸನೆಯಂತೇ ಸುಮಧುರವಾಗಿರುತ್ತದೆ ಜೀವನ.

ಸಂಜೆಗೆ ಕರ್ಫ್ಯೂ ತೆರವಾಗಿತ್ತು, ಹೊರಗೆ ಹೋಗಿ ಪಕೋಡ, ಬಜ್ಜಿ ಪಾರ್ಸೆಲ್ ಮಾಡಿಸಿಕೊಂಡು ಬಂದೆ. ಎರಡು ಕಪ್ಪು ಜಿಂಜರ್ ಟೀ ಮಾಡಿಕೊಂಡು ಬಂದು ಕೂತು ಪ್ಯಾಕೆಟ್ಟು ತೆರೆದು ಕೂತರೆ, "ಮಾಡುವುದೆಲ್ಲ ಮಾಡುವುದು, ಮತ್ತೆ ಮೇಲೆ ಮಾತಾಡದ ಮುನಿಸ್ಯಾಕೊ" ಅಂತನ್ನುತ್ತ, ಪಕೋಡವೊಂದು ಬಾಯಿಗಿಟ್ಟುಕೊಂಡು ಟೀ ಕಪ್ಪು ಹಿಡಿದು ಒಳ ಹೋದವಳು, ಹೊರಬಂದಾಗ ನೋಡಿದರೆ, ಥೇಟ್ ಬೆದರುಬೊಂಬೆಯಂತೇ ಕಾಣುತ್ತಿದ್ದಳು, ಉಟ್ಟಿರುವ ಸೀರೇ ಮೇಲೆ ಜಾಕೆಟ್ಟಿನಂತೆ ಅದೇ ನನ್ನ ಮೆಚ್ಚಿನ ತಿಳಿನೀಲಿ ಬಣ್ಣದ ಹೊಚ್ಚ ಹೊಸ ಶರ್ಟ ಹಾಕಿಕೊಂಡು ನಿಂತಿದ್ದಳು ನಗು ತಡೆಯಲಾಗದೇ ಪಕ್ಕನೇ ನಕ್ಕುಬಿಟ್ಟೆ. ಯಾವಗ ತಂದಿಟ್ಟಿದ್ದಳೊ... ಅಂಥದ್ದೇ ನನ್ನ ಮೆಚ್ಚಿನ ಶರ್ಟನಂತದ್ದೇ ಹುಡುಕಿ ತಂದಿದ್ದಳು. ಕೈಗಳಗಲಿಸಿ ಅವಳು ಕರೆದರೆ ಅಪ್ಪಿಕೋ ಚಳುವಳಿ ಒಪ್ಪಿಕೊಳ್ಳದೇ ಇರಲಾಗುವಂತಿರಲಿಲ್ಲ. ಹೋಗಿ ಬಾಚಿ ತಬ್ಬಿಕೊಂಡರೆ, ನನ್ನನ್ನೂ ಸೇರಿಸಿಕೊಂಡು ಶರ್ಟಿನ ಬಟನ್ನು ಹಾಕಲು ತಡಕಾಡುತ್ತಿದ್ದಳು...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/appiko.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು