ಹೆಲ್ಪು ಮಾಡಲು ಹೋಗಿ...
ಅಂದು ಬೆಳಿಗ್ಗೆ ಯಾಕೋ ಇವಳು ಎದ್ದಿರಲಿಲ್ಲ, ಎಂದೂ ತಪ್ಪದೇ ಏಳೊ ಇವಳಿಗೆ ಎನಾಯ್ತು ಅಂತನಕೊಂಡು ಹಾಗೇ ಅಲುಗಿಸಿದೆ, ಇದೇನು ಇಷ್ಟು ಬಿಸಿ, ಮೊದ್ಲೆ ಹಾಟ್ ಆಂಡ್ ಸೆಕ್ಸಿ ಇವ್ಳು, ಅದ್ರೂ ಇವತ್ತು ಬಹಳೇ ಹಾಟು ಅನಿಸ್ತು, ಮಲಗಿದಲ್ಲಿಂದಲೇ ಜ್ವರ ಬಂದಿದೆ ಅಂತ ಕಾಣುತ್ತೆ ಅಂದ್ಲು. ಹಣೆ ಹಿಡಿದು ನೊಡುತ್ತಿದ್ದೆ, "ರೀ ಮೊಟ್ಟೆ ಇದ್ರೆ ತಂದು ಹಾಕಿ ಅಮ್ಲೆಟ್ ಆಗುತ್ತೆ, ನಿಮ್ಮ ಟಿಫಿನ್ ರೆಡಿ" ಅಂದ್ಲು. ಹೌದು ತುಂಬಾನೇ ಬಿಸಿಯಾಗಿತ್ತು, ಈಗ್ಲೂ ತುಂಟಾಟಕ್ಕೇನೂ ಕಮ್ಮಿಯಿಲ್ಲ, "ಕೊಡ್ತೀನ್ ನೊಡು ಒಂದು, ಸುಮ್ನೆ ಮಲಗಿರು" ಅಂತ ಮೇಲೆದ್ದೆ, "ಎನಿಲ್ಲ ಸ್ವಲ್ಪ ಮೈಬಿಸಿಯಾಗಿದೆ, ನಿಮ್ಗೆ ಲೇಟ್ ಆಯ್ತೂಂತ ಕಾಣುತ್ತೆ ಕಾಫಿ ಮಾಡ್ಬಿಡ್ತೀನಿ" ಅಂತ ಎದ್ದಳು, "ಎದ್ರೆ ಕಾಲು ಮುರಿದಾಕಿಬಿಡ್ತೀನಿ ಈವಾಗ್" ಅಂತ ಗದರಿಸಿದೆ, "ಮತ್ತಿನ್ನೇನು, ಕಾಫಿ ಪಕ್ಕದಮನೆ ಪದ್ದು ಮಾಡಿಕೊಡ್ತಾಳಾ" ಅಂದ್ಲು. ಹಾಗೇ ಸುಮ್ನೆ ನೊಡ್ದೆ, ಅವ್ಳಿಗೆ ಗೊತ್ತಾಯ್ತು, ಇನ್ನು ಸುಮ್ನಿರೊದೇ ವಾಸಿ ಅಂತ. ಅವ್ಳು ಹಾಗೇನೆ, ಸ್ವಲ್ಪ ಮಾತು ಜಾಸ್ತಿ ಯಾವಾಗ್ಲೂ ತರಲೆ, ಒಂದ್ನಿಮಿಷ್ ಸುಮ್ನಿರಲ್ಲ, ತಮಿಳು ಬರದಿದ್ರೂ ರೊಡ್ ಕೊನೆ ಮನೆ ತಮಿಳು ಪಾಟಿ (ಪಾಟಿ ಅಂದ್ರೆ ತಮಿಳಲ್ಲಿ ಅಜ್ಜಿ ಅಂತ) ಜತೆ ಹರಟೆ ಹೊಡೆದು ಬರ್ತಾಳೆ ಅಂದ್ರೆ ನೀವೆ ಊಹಿಸಿ.
ಇಂದು ಒಳ್ಳೆ ಚಾನ್ಸು ಸಿಕ್ಕಿದೆ ಅವಳ್ನ ಇಂಪ್ರೆಸ್ ಮಾಡೊಕೆ ಅನ್ಕೊಂಡು, ಈವತ್ತು ನಾನು ಕಾಫಿ, ಟಿಫಿನ್ ರೆಡಿ ಮಾಡಿದ್ರೆ ಹೇಗೆ ಅಂತ ಯೊಚಿಸಿ, "ನೀನು ಮಲಗಿರು ಇಂದು ಕಾಫಿ ಟಿಫಿನ್ ನಂದು" ಅಂದೆ, ಕೇಳಿ ಅವಳ ಟೆಂಪರೇಚರ್ ಇನ್ನೂ ಸ್ವಲ್ಪ ಜಾಸ್ತಿ ಆಯ್ತು ಅಂತ ಕಾಣುತ್ತೆ, "ಎನೂ ಬೇಡ ಹೊಟೇಲ್‍ನಲ್ಲಿ ತಿನ್ಕೊಂಡು ಹೋಗಿ, ನಂಗೆ ಹಸಿವಿಲ್ಲ ಮಧ್ಯಾಹ್ನ ಎನಾದ್ರೂ ಬೇಕಾದ್ರೆ ಬ್ರೆಡ್ ಇದೆ, ಕಾಫಿ ಬ್ರೆಡ್ ಸಾಕು ನಂಗೆ ಅಂದ್ಲು" ನಾನು ಕೇಳ್ಬೇಕಲ್ಲ "ಎನೂ ಬೇಡ ಅನ್ನ ಮಾಡಿದ್ತೀನಿ ಈಗ ಕಾಫಿನಾದ್ರೂ.." ಅಂತಿದ್ದೆ "ರೀ ಸುಮ್ನೆ ಆಫೀಸಿಗೆ ಹೊಗ್ತೀರೊ ಇಲ್ವೊ ಈಗ" ಅಂತ ರೇಗಿದ್ಲು, ಕೇಳೊರ್ಯಾರು...
ಫ್ರಿಜ್ನಲ್ಲಿರೊ ಹಾಲು ತೆಗೆದು ಅಡಿಗೆಮನೆ ಕಡೆ ಕಾಲಿಟ್ಟೆ, ಕಾಫಿ ಮಾಡೋಕೆ ಹೋಗಿ ಇದು ಕಷಾಯ ಮಾಡುತ್ತೆ ಅಂತ ಹಿಂದಿಂದ ಹೊದಿಕೆ ಹಾಗೇ ಹೊದ್ದುಕೊಂಡು ಹೊರಬಂದ್ಲು, ಲೇ ಹೋಗೆ ನಾನ್ ಮಾಡ್ತೀನಿ ಅಂದ್ರೆ, ಸುಮ್ನೆ ನೊಡ್ತಿನೀ ನೀವು ಮಾಡಿ ಅಂದ್ಲು, ಮುಂಜಾನೆ ಮುಂಜಾನೆ ಕಾಮಿಡಿ ಷೊ ಇದು ಅಂತಾ ಪಕ್ಕಾ ಗೊತ್ತಾಗಿತ್ತು ಅವ್ಳಿಗೆ. ಎನ್ ಬಹಳ ಹೆಲ್ಪ ಮಾಡೋರ ಹಾಗೆ, ಒಂದು ಕುರ್ಚಿ ಎಳೆದು ತಂದು ಕೊಟ್ಟು " ಹೂಂ ಹೊಗ್ಲೀ ಕೂತ್ಕೊ" ಅಂದೆ, ಹೊದಿಕೆ ಹೊದ್ಕೊಂಡು ರಾಣಿ ಆಸೀನರಾದ್ರು!!
ಹಾಲು ಕಾಯಿಸಲಿಟ್ಟು, ಪುಡಿ ಕಾಫಿ ಹುಡುಕತೊಡಗಿದೆ, ಅದೊ ಅಲ್ಲಿ ಬ್ರು ಕಾಫಿ ಬಾಟಲ್ಲು ಕಾಣಿಸ್ತು, ಎತ್ತಿ ನೋಡಿದೆ ಯಾಕೊ ಕಲರು ಬೇರ್‍ಎ ಕಾಣಿಸ್ತು, "ಎನೇ ಕಾಫಿ ಪುಡಿ ಕಲರ್ರು ಹೀಗಿದೆ" ಅಂದೆ ಎಲ್ಲಿ ತೊರ್ಸಿ ಅಂದೊಳು ನೊಡಿ "ಅದು ಮಸಾಲೆ ಪುಡಿ, ಕಾಫಿ ಖಾಲಿ ಆಗಿದೆ, ಅದೂ ಗೊತ್ತಾಗಲ್ಲ ನಿಮ್ಗೆ" ಅಂತ ಸಿಟ್ಟಿಗೆದ್ಲು. ಕಾಫಿ ಬಾಟಲಿನಲ್ಲಿ ಮಸಾಲೆ ಹಾಕಿಟ್ರೆ ನಂಗೆ ಹೇಗೆ ಗೊತ್ತಾಗ್ಬೇಕು, "ಸುಮ್ನೆ ನಿನ್ನ ಟೆಸ್ಟ ಮಾಡ್ತಿದ್ದೆ" ಅಂತ ರೀಲು ಬಿಟ್ಟೆ, ಹೇಳಿರದಿದ್ರೆ ಮಸಾಲೆ ಕಾಫಿ ರೆಡಿ ಆಗಿರೋದು!!!
ಪ್ಲಾನ್ ಚೇಂಜ್ ಆಯ್ತು, ಟೀ ಮಾಡೋಣ ಅಂತಾ ಡಿಸೈಡು ಮಾಡಿದೆ. ಟೀ ಯಾವ ದಬ್ಬದಲ್ಲಿದೆ ಅಂತ ಯಾರಿಗೆ ಗೊತ್ತು, ಈ ಸಾರಿ ರಿಸ್ಕು ಬೇಡ ಅಂತ ಅವಳ ಕೇಳಿ ದಬ್ಬ ತೆಗೆದೆ. ಇಷ್ಟರಲ್ಲೇ ಹಾಲು ಬಿಸಿಯಾಗಿ ಉಕ್ಕಿ ಬಂತು, ಹೊಸದಾಗಿ ಮನೆಗೆ ಬಂದಾಗ ಹಾಲು ಉಕ್ಕಿಸಿರಲಿಲ್ಲ, ಅದರ ಬಾಕಿ ಈಗ ತೀರಿತು ಅನ್ಸತ್ತೆ, ಅವಳು ನೋಡಿ ಚೀರಿದಾಗ ಎನೂ ತಿಳಿಯದೆ ಹಾಗೆ ಬರಿಗೈಯಿಂದ ಪಾತ್ರೆ ಇಳಿಸ ಹೊಗಿ ಕೈ ಸುಟ್ಕೊಂಡೆ, ಅದೇ ಭರದಲ್ಲಿ "ಮೊದ್ಲೇ ನೊಡ್ಬಾರದಿತ್ತಾ" ಅಂತ ಬೈದೆ, ಕೈ ಬೇರೆ ಸುಟ್ಟಿತ್ತಲ್ಲ ಸಿಟ್ಟು ಬಂದಿತ್ತು. "ಕಾಫಿ ಮಾಡ್ತೀನಿ ಅಂತ ಬಂದೊರಾರು ನಾನ್ ಮೊದ್ಲೇ ಬೇಡ ಅಂದೆ" ಅಂತ ತಿರುಗಿ ಬಿದ್ಲು, ತಪ್ಪು ನಂದಿತ್ತು... ಇರ್ಲಿ ಬಿಡು ಅಂತಾ ಮತ್ತೊಂದು ಪಾತ್ರೇಲೀ ಎರಡು ಕಪ್ಪು ಅಂತ ಅಳೆದು, ಹಾಲು ಹಾಕಿದ್ರೆ ಸರಿಯಾಗತ್ತೆ ಅಂತ ಎನೊ ಒಂದು ಮಹಾ ಲೆಕ್ಕ ಮಾಡಿ ನೀರು ಹಾಕಿದೆ, ಅಷ್ಟೇನಾ ಅಂದ ಅವಳಿಗೆ ನಾನೆಲ್ಲ ಲೆಕ್ಕ ಮಾಡಿ ಹಾಕೀದೀನಿ ಸರಿಯಾಗತ್ತೆ ಸುಮ್ನಿರು ಅಂತ ಬಾಯಿ ಮುಚ್ಚಿಸಿದ್ದೂ ಆಯ್ತು, ಆಫೀಸಿನಲ್ಲಿ ಶುಗರ್ ಕ್ಯೂಬ್ (ಅದೇ ಸಕ್ಕರೆಯ ಚೌಕಾಕಾರದ ಕಣ್ಣೆಗಳು) ಹಾಕಿ ರೂಢಿ ಈಗ ಸಕ್ಕರೆ ಎಷ್ಟು ಹಾಕಬೇಕು ಅಂತ ಯೊಚಿಸುತ್ತಲೇ ಟೀ ಕುದ್ದು ಕುದ್ದು ಎರಡು ಕಪ್ಪು ಹೊಗಿ ಒಂದು ಕಪ್ಪು ಆಗಿತ್ತು, ಅಂತೂ ಹಾಲು ಜಾಸ್ತಿ ಹಾಕಿದರಾಯ್ತೆಂದು ಸಕ್ಕರೆ ಒಂದಿಷ್ಟು ಸುರಿದೆ. ಹಾಗೂ ಹೀಗೂ ಮಾಡಿ ಒಂದೂವರೆ ಕಪ್ಪು ಟೀ ರೆಡಿಯಾಯ್ತು!!! ಅವಳೆಲ್ಲಿ ಬೇರೆ ಕಪ್ಪಲ್ಲಿ ಕುಡಿತಾಳೆ ನನ್ನ ಕಪ್ಪಿಂದಲೆ ಸಾಸರಿಗೊಂದಿಷ್ಟು ಹಾಕಿ ಹಿಡಿದ್ರೆ, ಕೈಯಿಂದ ಕಪ್ಪು ಕಿತ್ಕೊಂಡ್ಲು, "ನೀವ್ ಮಾಡಿದ್ದು ರುಚಿ ಹೇಗಿದೆ ನೊಡ್ಬೇಕು ನಂಗೇ ಜಾಸ್ತಿ" ಅಂದ್ಲು. ಸಾಸರಿನಲ್ಲಿ ನಾ ಮೊದಲು ರುಚಿ ನೊಡಿದೆ, ಟೀ ಪುಡಿ ಕುದ್ದದ್ದು ಜಾಸ್ತಿಯಾಗಿ ಕಹಿಯಾಗಿತ್ತು, ಮುಖಕ್ಕೆ ಎರಚುತ್ತಾಳೇನೊ ಅಂತ ಅವಳೆಡೆಗೆ ನೊಡಿದ್ರೆ, ಖಡಕ ಟೀ ಮಾಡೀದೀರಾ ಅಂತನ್ನುತ್ತ ಹೀರುತ್ತಿದ್ಲು... ನನಗೇಕೊ ನಾ ಅವಳ ಹೊಸರುಚಿ ಹೊಗಳಿದ್ದು ನೆನಪಿಗೆ ಬಂತು...
ಕುರ್ತುಕೋಟೆ ಅವಲಕ್ಕಿ ಮಾಡ್ಕೊತೀನಿ ಟಿಫಿನ್‍ಗೆ, ದ್ಯಟ್ಸ ಕನ್ನಡ ದಾಟ್ ಕಾಮ್‍ನಲ್ಲಿ ಯಾರೋ ಹೇಗೆ ಮಾಡೊದು ಅಂತ ಲೇಖನ ಬರ್ದೀದಾರೆ ಅಂತಂದೆ, "ರೀ ನಿಮ್ಗೇನು ಈವತ್ತು ರಜೇನಾ" ಅಂತ ಎಡವಟ್ಟು ಪ್ರಶ್ನೆ ಕೇಳಿದ್ಲು, ಪ್ರಶ್ನೆ ಅರ್ಥ ನನಗೆ ಆಗಿತ್ತು, ಆಯ್ತು ನಾರ್ಮಲ್ ಅವಲಕ್ಕೀನೇ ಮಾಡೋಣ ಅಂತಂದು ಈರುಳ್ಳಿ ಹೆಚ್ಚಲು ಕುಳಿತೆ, ಹೆಚ್ಚಿದ್ದಕ್ಕಿಂತ ಕಣ್ಣಲ್ಲಿನ ನೀರು ಒರೆಸಿಕೊಂಡಿದ್ದೇ ಜಾಸ್ತಿ ಆಯ್ತು, ನೋಡಿ ನೋಡಿ ಅವಳೂ ಸೆರಗಿಂದ ಒಂದಿಷ್ಟು ಕಣ್ಣೊರಿಸಿದ್ಲು, ಅದ್ ಹೇಗೆ ಫಾಸ್ಟ್ ಆಗಿ ಹೊಟೇಲಿನಲ್ಲಿ ಕತ್ತರಿಸುತ್ತಾರಲ್ಲ, ಹಾಗೆ ಕತ್ತರಿಸೋದು ಹೇಗೆ ಅಂತ ಅವಳಿಗೆ ತೋರಿಸ ಹೊಗಿ ಬೆರಳು ಕುಯ್ದುಕೊಂಡೆ. ರಕ್ತ ಚಿಮ್ಮಿದ್ದು ನೋಡಿ ಬೆರಳು ಬಾಯಿಗಿಟ್ಕೊಂಡು ಬಯ್ಯೊಕೆ ಬಾಯಿ ತೆರೆಯಲಾಗದೇ ಕಣ್ಣಲ್ಲೇ ಕೋಪ ತೊರಿಸಿದ್ಲು. ಇನ್ನು ಎನೂ ಮಾಡುವುದೂ ಆಗುವ ಹಾಗೆ ಕಾಣಲಿಲ್ಲ, ನಾನು ಮಾಡುತ್ತೇನಂದ್ರೂ ಅವಳು ಬಿಡಲು ಸಾಧ್ಯವಿಲ್ಲ ಅಂತ ಗೊತ್ತಾಗಿ ಮೇಲೆದ್ದೆ.
ನಾನವಳ ಡಾಕ್ಟರ್ ಕಡೆ ಕರೆದುಕೊಂದು ಹೊಗಬೇಕಿದ್ದು, ಈಗ ಅವಳೇ ನನ್ನ ಕರೆದೊಯ್ಯುವ ಹಾಗಾಗಿತ್ತು. ಇಬ್ಬರೂ ಹೋಗಿ ಡಾಕ್ಟರಿಗೆ ಇನ್ನೂರು ಚೆಲ್ಲಿ, ಬೆರಳು ಡ್ರೆಸ್ಸಿಂಗ ಮಾಡಿಸಿಕೊಂಡು, ಮಾತ್ರೆ ಬರೆಸಿಕೊಂಡು ಹೊರಬಂದಿದ್ದಾಯ್ತು. "ನರ್ಸ್ ನೋಡಿದ್ಯಾ" ಅಂತ ತರಲೆ ಪ್ರಶ್ನೆ ಹಾಕಿದೆ, "ಯಾಕೇ ವಾಪಸ್ಸು ಕರ್ಕೊಂಡು ಹೋಗಿ ನಿಮ್ಗೊಂದು ಚುಚ್ಚಿಸಿಕೊಂಡು ಬರ್ಲಾ, ಅವಳು ಇಂಜೆಕ್ಷನ್ ಚೆನ್ನಾಗಿ ಮಾಡ್ತಾಳೆ" ಅಂತ ರೇಗಿದ್ಲು. ಟೈಮು ಬೇರೆ ಆಗಿತ್ತು, ಶಾಂತಿ ಸಾಗರದಲ್ಲಿ (ಹೊಟೇಲು) ಶಾಂತಿಯಿಂದ ಇಬ್ಬರೂ ಇಡ್ಲಿ ತಿಂದ್ವಿ. ಅವಳ ಮನೆಗೆ ಬಿಟ್ಟು ಆಫೀಸಿಗೆ ಹೊರಟೆ... ದಾರಿಯಲ್ಲಿ... ಪಾಪ ಹುಶಾರಿಲ್ಲ್ ಮನೇಲಿ ಒಬ್ಳೆ ಹೇಗೆ? ನಾನಿದ್ದು ಎನಾದ್ರೂ ಹೆಲ್ಪ್ ಮಾಡೋಣ ಅಂತಾ ಯೋಚಿಸಿ, ಟೆಕ್ ಲೀಡ್ಗೆ ಫೊನ್ ಮಾಡಿ ಕೈ ಗಾಯ ಆಗಿದೆ ಆಫೀಸಿಗೆ ಬರ್ತಿಲ್ಲ ಅಂತ ಹೇಳಿ ಮನೆಗೆ ಮರಳಿದೆ... ಅವಳೊ ಬಾಗಿಲಲ್ಲೇ ಕಾಯ್ತಿದ್ಲು "ನಂಗೊತ್ತಿತ್ತು ನೀವು ವಾಪಸ್ಸು ಬರ್ತೀರಂತ, ಏನು ಹೆಲ್ಪ ಮಾಡೊದೂ ಬೇಕಿಲ್ಲ, ಮುಂಜಾನೆಯಿಂದ ಮಾಡಿದ್ದೆ ಸಾಕು ಹೊರಡಿ" ಅಂತ ಹೊರ ದಬ್ಬಿದ್ಲು... ಕೈ ಗಾಯ ನೊಯ್ತಿದೆ ಅಂತಾ ಎನೊ ಸಬೂಬು ಹೇಳಿ ಮನೆಗೆ ನುಗ್ಗಿದೆ... ಮತ್ತೆ ಹೆಲ್ಪ ಮಾಡೋಣ ಅಂತಾ " ಮಧ್ಯಾಹ್ನ ಊಟಕ್ಕೆ ಎನ್ ಮಾಡೊದು ಅಂತಾ" ಕೇಳಿದ ನನ್ನ ಹೀಗೇ ನೊಡಿದ್ಲು... ಅದೇ ಶಾಂತಿ ಇದಾಳಲ್ಲ... ಅಂದ್ರೆ ಶಾಂತಿ ಸಾಗರ ಇದೆಯಾಲ್ಲ ಅಂತಾ ನಗೆ ಬೀರಿದೆ... ನೀವ್ ಸುಧಾರಿಸಲ್ಲ ಅನ್ನುತ್ತ ಬಾಗಿಲ ತಳ್ಳಿದವಳು ನನ್ನ ತೆಕ್ಕೆ ಸೇರಿಕೊಂಡ್ಲು...
ಈ ಲೇಖನಗಳ ಓದಿ ಎಲ್ರೂ ನನ್ನ ಕೇಳ್ತಿದಾರೆ, ಯಾರದೂ ಅಂತಾ, ಒಬ್ಬರಂತೂ ನಿಮ್ಮಿಬ್ಬರೂ ದಂಪತಿಗಳನ್ನ ಒಂದು ಸಾರಿ ನೊಡಬೇಕು ಅಂತಾ ಇಂಚೆ (ಇ-ಅಂಚೆ) ಹಾಕಿದ್ರು... ಇದೆಲ್ಲ ಬರೀ ಕಾಲ್ಪನಿಕ... ಹುಡುಗನ ಹುಚ್ಚು ಯೊಚನೆಗಳು ಮಾತ್ರ... ನನಗಿನ್ನೂ ಮದುವೆಯಾಗಿಲ್ಲ, ಮದುವೆಯಾದ್ರೂ ಇಂಥವಳು ಜೊತೆಯಾಗುವಳೆಂದು ನಂಬಿಕೆಯೂ ಇಲ್ಲ... ಆದರೂ ಇದನ್ನ ಒದಿ ಒಂದು ದಿನ ನನ್ನೊಂದಿಗೆ ಹೀಗಿದ್ರೆ.. ನನಗದೇ ಹೆಚ್ಚು... ಬದುಕು ಅಂದದ ರಂಗೊಲಿ ಎಲ್ಲೆಲ್ಲಿ ಯಾವ ಬಣ್ಣ ತುಂಬಬೇಕು ಅನ್ನೊದು ನಿಮಗೆ ಬಿಟ್ಟಿದ್ದು... ನಾ ತುಂಬಲಿರುವ ಬಣ್ಣಗಳ ಬಗ್ಗೆ ಬರೆಯುತ್ತಿದ್ದೇನೆ.. ನಿಮಗೂ ಎನೋ ಹೆಲ್ಪು ಆಗಬಹುದು ಅಂತಾ...
ಅದ್ಯಾವತ್ತೊ ಬರೆದಿದ್ದೆ..
ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮೆ ಸಿಕ್ಕಿದ್ರೆ
ನನ್ನವಳು ದ್ರೌಪದಿಯಲ್ಲ ಶತ್ಪದಿಯಾಗಬೇಕಿತ್ತು...
ನಾನಿಷ್ಟ ಪಟ್ಟವರೆಲ್ಲ ನನ್ನವರಾಗಿದ್ರೆ
ನಾ ಎಣಿಸುತ್ತಲೇ ಮುದುಕನಾಗಬೇಕಿತ್ತು...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/helpu.pdf