Sunday, July 26, 2009

ಮಳೆ ಹುಡುಗಿ...

"ಇಂದಿನ ಹವಾಮಾನ ವರದಿ, ದಿನವಿಡೀ ಮೋಡ ಮುಸುಕಿದ ವಾತಾವರಣವಿದ್ದು, ಈಗ ಬಿರುಸಾಗಿ ಗಾಳಿ ಬೀಸುತ್ತಿದ್ದು, ಕಪ್ಪು ಮೋಡಗಳು ಕಟ್ಟಿಕೊಂಡಿವೆ, ಯಾವುದೇ ಕ್ಷಣದಲ್ಲಾದರೂ ಮಳೆ ಬೀಳುವ ಸಂಭವವಿದೆ. ಮಳೆ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಫೀಸುಗಳಲ್ಲಿ ಕೆಲಸ ಮಾಡುತ್ತಿರುವರೆಲ್ಲರೂ ಬೇಗ ಬೇಗ ತಮ್ಮ ಮನೆ ಸೇರಿಕೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ." ಅತ್ತ ಕಡೆಯಿಂದ ಚಿಲಿಪಿಲಿ ಅಂತ ಉಲಿಯುತ್ತಿದ್ದವಳು ಇವಳು, ಇದ್ಯಾವುದು ಆಕಾಶವಾಣಿ ಅಂದುಕೊಂಡಿರಾ, ಇಲ್ಲ ಇದು ಆಕೆವಾಣಿ, ನನ್ನಾಕೆವಾಣಿ! ಸಂಜೆ ಫೋನು ಮಾಡಿ ಅತ್ತಲಿಂದ ಹೀಗೆ ಹವಾಮಾನ ವರದಿ ಮಾಡಿ ಮನೆಗೆ ಬೇಗ ಬನ್ನಿ ಅಂತಿದ್ದಳು.

"ಹವಾಮಾನ ವರದಿಗಾರರೇ ನಿಮ್ಮ ಸುದ್ದಿಗಳು ಯಾವಾಗ್ಲೂ ನಿಜವಾಗಲ್ಲ, ಮೋಡ ಅಂತೀರಿ, ಬಿಸಿಲು ಚುರಗುಡತ್ತೆ, ಬಿಸಿಲು ಅಂತೀರಿ ಆಕಾಶವೇ ಕಡಿದುಕೊಂಡು ಬಿದ್ದ ಹಾಗೆ ಮಳೆಯಾಗುತ್ತದೆ, ಹೇಗೆ ನಂಬುವುದು" ಅಂದೆ "ರೀ ಏ.ಸಿ. (ಏರಕಂಡೀಷನ್) ಆಫೀಸಿನಲ್ಲಿ ತಲೆಕೆಳಗೆ ಮಾಡಿಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದರೆ ಹೇಗೆ ಗೊತ್ತಾಗಬೇಕು ಹೊರಗೆ ಬಂದು ತಲೆಯೆತ್ತಿ ನೋಡಿ" ಅಂತ ಅತ್ತಲಿಂದ ಹೀಗಳೆದಳು. "ಮಳೆ ಬಂತು ಅಂತ ಶಾಲೆಗೆ ರಜೆ ಸಿಗಬಹುದು ಆಫೀಸಿಗೆ ಯಾರು ಕೊಡ್ತಾರೆ, ಕೆಲಸ ಬಹಳ ಇದೆ, ರಾತ್ರಿ ಲೇಟಾಗುತ್ತದೆ ಅಷ್ಟೊತ್ತಿಗೆ ಮಳೆಯಾಗಿ ನಿಂತಿರತ್ತೆ" ಅಂದೆ "ಬಹಳ ಮಳೆ ಬರೋದಿದೆ ಆದಷ್ಟು ಬೇಗ ಬನ್ನಿ" ಅಂತ ಫೋನಿಟ್ಟಳು. ಹೊರಗೆ ಹೋಗಿ ನೋಡಲು ಪುರಸೊತ್ತು ಇರ್ಲಿಲ್ಲ, ಕೆಲಸ ಒಟ್ಟಿತ್ತು, ಅದರಲ್ಲೇ ಮಗ್ನನಾದೆ.

ರಾತ್ರಿ, ಹತ್ತು ಘಂಟೆಗೆ ಮತ್ತೊಮ್ಮೆ ಫೋನು ಮಾಡಿದಳು, "ಮಳೆ ಯಾಕೊ ಆಗಲೇ ಇಲ್ಲ, ಆದರೂ ಹೇಳೊಕಾಗಲ್ಲ ಬೇಗ ಬನ್ನಿ ಮಳೆ ಬಂದ್ರೆ ತೋಯಿಸಿಕೊಳ್ಳುತ್ತೀರಿ" ಅಂದ್ಲು "ಆಯ್ತು ಹೊರಟಿದ್ದೇನೆ, ನಿಮ್ಮ ಹವಾಮಾನ ವರದಿಗಳ ಕಥೇನೆ ಇಷ್ಟು, ತೊಯಿಸಿಕೊಂಡ್ರೆ ಬಂದು ಬೆಚ್ಚಗೆ ನಿನ್ನ ಮಡಿಲಲ್ಲಿ ಮಲಗಿಬಿಡ್ತೀನಿ" ಅಂದೆ "ರೀ, ಹೋಗ್ರೀ ನಿಮಗೆ ಯಾವಗ್ಲೂ ತಮಾಷೇನೆ" ಅಂತ ನಾಚಿ ಸುಮ್ಮನಾದಳು. ಹೇಗೂ ಮಳೆಯಾಗುತ್ತಿಲ್ಲ ಅಂತ ಎದ್ದು ಹೊರಟು ನಿಂತೆ, ಹೊರಗೆ ಬಂದು ಬೈಕನಲ್ಲಿ ಕಿಲೊಮೀಟರು ದೂರಕ್ಕೆ ಬರುತ್ತಿದ್ದಂತೆ, ಧೋ ಅಂತ ಮಳೆ ಸುರಿಯಲಾರಂಭಿಸಿತು,
ಮೇಲೆ ಬಕೆಟ್ಟು ಹಿಡಿದುಕೊಂಡು ಬಾ ಹೊರಗೆ ನೀ, ನಾನು ಸುರೀತೀನಿ ಅಂತ ಕಾದಿತ್ತೇನೊ ಅನ್ನೊ ಹಾಗೆ ಧಾರಾಕಾರವಾಗಿ ಬೀಳತೊಡಗಿತು.

ನಿಂತರೆ ಕೂಡ ಎನೂ ಪ್ರಯೋಜನವಿಲ್ಲ ಅನ್ನುವಷ್ಟು ಆಗಲೇ ನೆನೆದಾಗಿತ್ತು ಹಾಗಾಗಿ ಮಳೆಯಲ್ಲೇ ನಡೆದೆ, ಮುಂದೊಂದು ಕಿಲೋಮೀಟರು ದಾಟಿ ಬಂದಿರಬೇಕು, ಮಳೆ ಬಹಳೇ ಜೋರಾಯಿತು, ಮುಂದೆ ದಾರಿ ಕಾಣದಷ್ಟು, ಬೇರೆ ದಾರಿಯಿಲ್ಲದೇ ಅಲ್ಲೆ ಕಾಣುತ್ತಿದ್ದ ಬಸ್ ನಿಲುಗಡೆಯಲ್ಲಿ ಇಳಿದು ನಿಂತೆ, ಬೂಟು ತೆಗೆದೆ, ಜಾಕೇಟಿನ ಜೇಬಿನಲ್ಲೂ ನೀರು ತುಂಬಿಕೊಂಡಿತ್ತು ಹೀಗೆ ನೀರು ಹೋಗಲೆಂದು ಬಟ್ಟೆ ಹಿಂಡುತ್ತಿದ್ದರೆ, ಅಲ್ಲೇ ಮರೆಯಲ್ಲಿ ನಿಂತವಳು ಕಾಣಿಸಿದಳು, ಮಳೆ ಹುಡುಗಿ(ಪೂಜಾ ಗಾಂಧಿ ಅಲ್ಲಾರೀ...), ಹೆಸರೇನು ಇಡಲಿ ಮ್... ವರ್ಷಾ!

ಬ್ಯಾಗು ಬೆನ್ನಿಗೇರಿಸಿ, ದುಪಟ್ಟ ತಲೆ ಮೇಲೆ ಹೊದ್ದು, ಮಳೆಯಲ್ಲಿ ನೆನೆದು ನಡಗುತ್ತ, ಕೈಯಲ್ಲಿನ ಮೊಬೈಲಿನಲ್ಲಿ ಏನೊ ಕುಟ್ಟುತ್ತಿದ್ದಳು, ಬಹುಶ ಸಂದೇಶ ಇರಬೇಕು, ಮೇಘ ಸಂದೇಶವೇ, ಮಳೆ ಕಡಿಮೆಯಾಗಲಿ ಅಂತ, ಏನೋ ಒಂದು. ನೋಡಲು ಅಂದವಾಗಿದ್ದಳು ಅಂತ ಬೇರೆ ಹೇಳಬೇಕಿಲ್ಲ, ಮಳೆ ಸುರಿಯುತ್ತಿದ್ದರೆ ಹೋಗಲಾಗದೇ ಚಡಪಡಿಸುವಂತಿತ್ತು, ಹೀಗೆ ಹೊತ್ತು ಹನ್ನೊಂದಾಯಿತು ಮಳೆ ಇನ್ನೂ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ, ಅವಳ ಮೇಘ ಸಂದೇಶ ನೆಟವರ್ಕ ಇಲ್ಲದೇ ತಲುಪಲಿಲ್ಲವೇನೊ. ಯಾವ ಬಸ್ಸು ಬಂದರೂ ಅವಳಂತೂ ಹತ್ತಿ ಹೋಗಲಿಲ್ಲ, ಇದ್ದ ಬದ್ದವರೆಲ್ಲ ಖಾಲಿಯಾದರು, ಉಳಿದವರು ನಾನು, ಅವಳು, ಮತ್ತೆ ಇನ್ನೊಬ್ಬ, ಆತನೋ ನೋಡಿದರೆ ನನಗೇ ಹೆದರಿಕೆ ಬರುವಂತಿದ್ದ, ನೋಡಲು ಹಾಗಿದ್ದ ಮಾತ್ರಕ್ಕೆ ಕೆಟ್ಟವನೇನಲ್ಲ, ಆದ್ರೆ ಏನೊ ಹೇಳೋಕಾಗುತ್ತೆ, ಅವಳನ್ನು ನೋಡಿದರೆ ದುರುಗುಟ್ಟಿದಳು, ಪಾಪ ಯಾರಿಗಾಗಿ ಕಾದಿದ್ದಳೊ ಏನೊ. ಸ್ವಲ್ಪ ಹೊತ್ತು ನಿಂತೆ, ಆಗಾಗ ಬರುವ ಕ್ಯಾಬ್(ಕಾರು) ಬಿಟ್ಟರೆ ರಸ್ತೆಯಲ್ಲಿ ಎನೂ ಇಲ್ಲ, ಕ್ಯಾಬ್ ನಿಂತು ಕೇಳಿದರೂ ಅವಳು ಹೋಗಿರಲಿಲ್ಲ, ಹೋಗಬೇಡ, ಹೋಗಬೇಡ ಅಂತ ನನ್ನ ಮನಸು ಕೂಡ ಅನ್ನುತ್ತಿತ್ತು, ನಾ ಅವಳನ್ನು ನೋಡುತ್ತಿರಲಿಕ್ಕೆ ಅಲ್ಲ, ಕ್ಯಾಬಗಳು ಸುರಕ್ಷಿತವಾಗಲಿಕ್ಕಿಲ್ಲ ಅಂತ ಹಾಗನಿಸಿದ್ದು. ಮಳೆ ನಿಲ್ಲದ ಹಾಗೆ ಕಾಣದಾದಾಗ ಹೊರಡಲು ಅನುವಾದೆ, ಆದರೆ ಪಾಪ ಯಾರೂ ಇಲ್ಲದೆ ಒಬ್ಬಳೇ ಕಾಯುತ್ತಿರುವ ಅವಳ ಕಂಡು ಬೇಡವೆಂದು, ಅವಳು ಹೋಗುವವರೆಗೂ ಅಲ್ಲೇ ಕಾಯುವ ತೀರ್ಮಾನಕ್ಕೆ ಬಂದೆ. ನನ್ನ ಯೋಚನೆಗಳೇ ಹಾಗೆ, ಎಲ್ಲಿ ಯಾರಾದರೂ ಬಂದು ಏನಾದರೂ ಆದರೆ, ಛೇ ಹಾಗಾಗದಿರಲಿ, ನಾನು ಸಹಾಯ ಮಾಡಬಲ್ಲೆನೇ ಅಷ್ಟು ಶಕ್ತಿಯಂತೂ ಇಲ್ಲ, ನಾಲ್ಕು ಜನ ಹಿಡಿದು ನೂಕಿದರೆ ಬಿದ್ದವನು ಮತ್ತೆ ಏಳಲಿಕ್ಕಿಲ್ಲ ಆದರೆ ನಾನು ಇದ್ದೀನೆಂದಾದರೂ ಯಾರೂ ಅಂಥ ಹುಚ್ಚು ಕೆಲಸಕ್ಕೆ ಕೈಹಾಕಲಿಕ್ಕಿಲ್ಲ ಅನ್ನೊ ಭಂಡ ಧೈರ್ಯ, ಅಲ್ಲೇ ನಿಂತೆ, ಇವನ್ಯಾರೊ ನನ್ನ ನೋಡಲೇ ನಿಂತಿದ್ದಾನೆಂದು ಅವಳಂದುಕೊಂಡಿರಬಹುದು, ಇಲ್ಲ ನನ್ನನ್ನೇ ನೋಡಿ ಆಗಲಿಂದ ಇಲ್ಲೇ ಕಾಯುತ್ತಿದ್ದಾನೆ, ಇವನೇನಾದರೂ ಮಾಡಿದರೆ ಅಂತ ಹೆದರಿದ್ದರೂ ಅಚ್ಚರಿಯಿಲ್ಲ. ಅವಳಿಗೆ ಸ್ವಲ್ಪ ನಾನು ಯಾರೋ ಕಳ್ಳ ದರೊಡೆಕೋರ ಅಲ್ಲ, ಅಂತ ಗೊತ್ತಾಗಲಿ ಅಂತ, ಅವಳಿಗೆ ಕಾಣುವಂತೆ ತೊಯ್ದಿದ್ದ ನನ್ನ ಕಂಪನಿ ಐ.ಡಿ. ಕಾರ್ಡು ಗಾಳಿಯಲ್ಲಿ ಆರಿಸುವಂತೆ ಬೀಸಿ ಊದಿದೆ... ತೋರಿಸಿದೆ!

ಅವಳಿಗೂ ಇದ್ಯಾವುದೊ ರಾತ್ರಿ ಸರಿಹೊತ್ತಿನವರೆಗೆ ಆಫೀಸಲ್ಲೇ ಕೊಳೆಯುವ ಸಾಫ್ಟವೇರ ಇಂಜನೀಯರು ಈಗ ಮನೆಯತ್ತ ನಡೆದಿದೆ, ಇದೇನೂ ಮಾಡಲಿಕ್ಕಿಲ್ಲ ಅಂತ ಅನಿಸಿರಬೇಕು, ಸ್ವಲ್ಪ ಮುಂದೆ ಬಂದು ನಿಂತಳು. ಮನೆಯಲ್ಲಿ ನನ್ನಾಕೆ ಒಬ್ಬಳೇ ಕಾಯುತ್ತಿರುತ್ತಾಳೆ, ಆದರೆ ಇಲ್ಲಿ ಕಾಯುತ್ತಿರುವ ಇವಳು, ಬಿಟ್ಟು ಹೋಗಲಾಗುತ್ತಿಲ್ಲ, ಹತ್ತಿರ ಹತ್ತಿರ ಹನ್ನೆರಡು ಆಗಿರಬೇಕು ಸ್ವಲ್ಪ ಮಳೆ ಕಮ್ಮಿಯಾಯಿತು, ನಾನು ಇನ್ನೂ ಯಾಕೆ ಹೋಗುತ್ತಿಲ್ಲ ಅನ್ನುವಂತೆ ಅವಳು ನೋಡಿದರೂ... ನಾನಲ್ಲೇ ಕಲ್ಲಿನಲ್ಲಿ ಕಟೆದ ಮೂರ್ತಿಯಂತೆ ನಿಂತೇ ಇದ್ದೆ, ಸ್ವಲ್ಪ ಸಮಯದ ನಂತರ, ನಿಧಾನವಾಗಿ ಆಕಡೆ ಈಕಡೆ ನೋಡಿ ತಲೆ ಮೇಲೆ ದುಪಟ್ಟ ಸರಿ ಮಾಡಿಕೊಂಡು ರಸ್ತೆ ಆಚೆ ಬದಿಯಲ್ಲಿ ನಡೆದಳು, ಅಲ್ಲೇ ಎಲ್ಲೊ ಮನೆಯಿರಬೇಕು, ಹಿಂದೆ ಹೋಗಿ ಅವಳು ಮನೆ ತಲುಪುವವರೆಗೆ ನೋಡಿ ಬರಲೇ ಅನಿಸಿದರೂ, ನಾನು ಹಾಗೆ ಹಿಂಬಾಲಿಸಿದರೆ ಸರಿ ಇರಲಿಕ್ಕಿಲ್ಲ ಅಂತ ದೂರದಲ್ಲಿ ಮರೆಯಾಗುವವರೆಗೆ ಕಾದು ನೋಡಿ ಮನೆಯತ್ತ ಮುಖ ಮಾಡಿದೆ, ಅವಳು ಮನೆ ತಲುಪಿರಬಹುದು ಅಂದುಕೊಳ್ಳುತ್ತಾ...

ಮನೆಯೊಳಗೆ ಕಾಲಿಟ್ಟೆ, ಮಳೆ ಮನೆಯಲ್ಲೇ ಆಗಿತ್ತೇನೊ ಅನಿಸಿತು, ನೀರು ನಿಂತು ಹೊಳೆಯಾಗಿತ್ತು. ಅಲ್ಲೇ ನೀರು ಎತ್ತಿ ಹೊರ ಹಾಕುತ್ತಿದ್ದ ನನ್ನಾಕೆ ಕಾಣಿಸಿದಳು, "ಕೆಲಸವೆಲ್ಲಾ ಮುಗಿಯಿತೊ ಇನ್ನೂ ಇದೆಯೋ, ಅಲ್ಲಿ ಟೇಬಲ್ಲು ಇನ್ನೂ ಹಸಿಯಾಗಿಲ್ಲ ಅಲ್ಲಿ ಬೇಕಾದರೆ ನಿಮ್ಮ ಲ್ಯಾಪಟಾಪ ಇಟ್ಟುಕೊಂಡು ಕೂರಬಹುದು" ಅಂತ ವ್ಯಂಗ್ಯವಾಗಿ ಚುಚ್ಚಿದಳು, ಅಲ್ಲಿ ಮಳೆ ಹುಡುಗಿ ಬಗ್ಗೆ ಹೇಳಬೇಕೆಂದು ಹೋದೆ... ಆದರೆ ಈಗ ಹೇಳಿದರೆ ಇಲ್ಲಿ ಅವಳು ಗುಡುಗು ಸಿಡಿಲು ಸಿಡಿಸುವ ಸೂಚನೆ ಕಾಣಿತು, ಸುಮ್ಮನೆ. ಎನೂ ಮಾತಿಲ್ಲದೇ, ಶರ್ಟ ಕೈತೋಳು ಮಡಚಿ ಮಗ್ ತೆಗೆದುಕೊಂಡು ನೀರು ಎತ್ತಿ ಹೊರಹಾಕಲು ತೊಡಗಿದೆ, ಎಲ್ಲ ನೀರು ಖಾಲಿ ಮಾಡಿ ಕೈತೊಳೆಯುವ ಹೊತ್ತಿಗೆ ಹೊಟ್ಟೆ ಚುರುಗುಡುತ್ತಿತ್ತು, ಆಗ ಅನ್ನಕ್ಕಿಟ್ಟಳು, ಮಳೆಯೊಂದಿಗೆ ಏಗುತ್ತ ಅಡಿಗೆಯೇ ಮಾಡಿರಲಿಲ್ಲ. ಹಸಿಯಾಗಿದ್ದ ಬಟ್ಟೆ ತೆಗೆಯುತ್ತ ಸೀನಿದೆ, ಪಾಕಶಾಲೆಯಿಂದ ಹೊರಬಂದು, "ಬೇಗ ಬಂದಿದ್ದರೆ ತೋಯಿಸಿಕೊಳ್ಳುತ್ತಿರಲಿಲ್ಲ" ಅಂದಳು. ನಾನೇನು ಬೇಕಂತಲೇ ಮಳೆ ಬರೋವರೆಗೆ ಕಾದಿದ್ದು ತೋಯಿಸಿಕೊಂಡು ಬಂದೆನೇನೋ ಅನ್ನುವಂತೆ. ಸುಮ್ಮನೇ ಒಳ ಹೋಗಿ ಬೇರೆ ಬಟ್ಟೆ ಹಾಕುತ್ತ ಇನ್ನೊಮ್ಮೆ ಸೀನಿದೆ ಬೇಕಂತಲೇ! "ಬರುತ್ತಿದ್ದಂತೇ ಬಟ್ಟೆಯಾದ್ರೂ ಬದಲಾಯಿಸಬಾರದಿತ್ತೇ, ಬರೀ ಕೆಲಸ, ಕೆಲಸ..." ಅಂತ ಬಯ್ಯುತ್ತ ಮತ್ತೆ ಪಾಕಶಾಲೆ ಸೇರಿದಳು, "ಆಗಲೇ ಹೊರಟೆ ಆದರೆ ಮಳೆ ಜೋರಾಗಿ ದಾರಿಯಲ್ಲಿ ನಿಂತೆ, ಅಲ್ಲಿ ಆ ಹುಡುಗಿ ಪಾಪ..." ಅಂತಿದ್ದರೆ ಮಧ್ಯದಲ್ಲೇ ಬಾಯಿ ಹಾಕಿ "ಮಳೆಯಲ್ಲಿ ಹುಡುಗಿ, ರೀ ಇಲ್ಲಿ ಮನೆಯಲ್ಲಿ ಹೆಂಡ್ತಿ ಕಾಯ್ತಾ ಇದಾಳೆ ಒಬ್ಬಳೇ, ಅನ್ನೊ ಪರಿಜ್ಞಾನ ಬೇಡ ನಿಮಗೆ" ಅಂತ ಬಯ್ಯಲು ಶುರುವಿಟ್ಟುಕೊಂಡಳು. "ಅಲ್ಲಿ ಅವಳೂ ಒಬ್ಬಳೇ ಇದ್ಲು" ಅಂದರೆ "ಹೂಂ, ಬೆಂಗಳೂರಿನ ತುಂಬ ಎಷ್ಟೊ ಹುಡುಗೀರು ಒಬ್ಬರೇ ಇರ್ತಾರೆ ಹೋಗಿ ಅವರನ್ನೆಲ್ಲ ನೋಡಿಕೊಂಡು ಬನ್ನಿ" ಅಂತ ಹರಿಹಾಯ್ದಳು. ಮಳೆಯಲ್ಲಿ ಮನೆ ತುಂಬ ನೀರು ತುಂಬಿ ಅದನ್ನೆಲ್ಲ ಹೊರ ಹಾಕಿ ಅವಳಿಗೆ ಸಿಟ್ಟು ಬಂದಿತ್ತು, "ನೀರು ಹೇಗೆ ಒಳಬಂತು" ಅಂದೆ "ಹೇಗೆ ಬಂದರೇನೀಗ, ನಾನಿದೀನಲ್ಲ ಎತ್ತಿ ಹಾಕೋಕೆ, ಮಾತು ಮರೆಸಬೇಡಿ" ಅಂತ ಸಿಡುಕಿದಳು ಮತ್ತೆ, ಮಾತಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.

ಊಟವಾಯ್ತು, ಬಿಸಿ ಬಿಸಿ ಅನ್ನ ನೆನೆದದ್ದರಿಂದ ಸ್ವಲ್ಪ ಹೆಚ್ಚಿಗೆಯೆ ಒಳ ಹೋಯ್ತು, ಹಾಸಿಗೆಯಲ್ಲಿ ಬಿದ್ದು ಇನ್ನೊಮ್ಮೆ ಸೀನಿದೆ ನಿಜವಾಗಿಯೂ, ಶೀತವಾಗುವಂತೆ ಕಾಣಿತು, ಪಾತ್ರೆಯೆಲ್ಲ ತೆಗೆದಿಟ್ಟು ಬಂದವಳು ಬದಿಗೆ ಬಿದ್ದುಕೊಂಡಳು, ನಾ ಸೀನುವುದು ಜಾಸ್ತಿಯಾಯ್ತು, ವಿಕ್ಸ ಎತ್ತಿಕೊಂಡು ಬಂದಳು, ಇಸಿದುಕೊಂಡು ಹಚ್ಚಿಕೊಳ್ಳಬೇಕೆಂದರೆ ತಾನೆ ಹಚ್ಚುತ್ತ, "ಯಾರವಳು" ಅಂದ್ಲು. ಅವಳು ಕೇಳಿದ್ದಕ್ಕೆ ಉತ್ತರಿಸಲಿಲ್ಲ, "ಮಾತಾಡಲ್ವಾ, ಏನೊ ಸಿಟ್ಟು ಬಂದಿತ್ತು ಹಾಗಾಡಿದೆ ಅದಕ್ಕೆ ಮುನಿಸಿಕೊಳ್ಳೋದಾ" ಅಂತ ರಮಿಸಿದಳು. "ನೀರು ಹೇಗೆ ಒಳಬಂತು" ಅಂದೆ, ಅಬ್ಬಾ ಮಾತಾಡಿದರಲ್ಲ ಅಂತ ಖುಷಿಯಾಗಿ, ಕಿಟಕಿಯ ಸಂದಿಯಿಂದ ಸೋರಿದ್ದು, ಬಾಗಿಲ ಕೆಳಗೆ ಬಂದಿದ್ದು, ಕರೆಂಟ್ ಹೋಗಿ ಗುಡುಗಿಗೆ ಹೆದರಿದ್ದು, ಎಲ್ಲ ಹೇಳಿ, ಅಡಮಳೆಗೆ ಹೀಗೆ ಆಗುತ್ತದೆಂದು ಸಮಜಾಯಿಸಿ ಕೂಡ ಕೊಟ್ಟಳು. ಆದರೆ ಅವಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಹಾಗಾಗಿ ನನ್ನ ಮಲಗಲು ಬಿಡುವಂತಿರಲಿಲ್ಲ, ಹಾಗೇ ಕಣ್ಣು ಮುಚ್ಚುತ್ತಿದ್ದವನನ್ನು ತದಕಿ ಕೇಳಿದಳು, "ಯಾರದು ಮಳೆ ಹುಡುಗಿ"

"ಇನ್ನೊಮ್ಮೆ ಎಲ್ಲೊ ಹಾಗೆ ಕಾಯುತ್ತ ನಿಲ್ಲಲ್ಲ ಬಿಡು" ಅಂದೆ "ನನಗದು ಬೇಕಿಲ್ಲ ಅವಳಾರು" ಅಂದ್ಲು. ಇನ್ನೊಮ್ಮೇ ವಿಷಯ ಒತ್ತಟ್ಟಿಗಿರಲಿ ಈಗಿನದು ಹೇಳು ಅಂತ. "ಯಾರೋ ಗೊತ್ತಿಲ್ಲ" ಅಂದೆ "ಹಾಗಂದ್ರೆ" ವಿವರವಾಗಿ ಹೇಳು ಅಂತ ಸೂಚ್ಯವಾಗಿ ನುಡಿದಳು, ಯಾರೋ ಅಲ್ಲಿ ನಿಂತಿದ್ದು ಅನ್ನೋದರಿಂದ ಶುರುವಾಗಿ, ಅವಳು ಮರೆಯಾಗುವವರೆಗೆ ಕಾದಿದ್ದು ಎಲ್ಲ ಹೇಳಿಯಾಯ್ತು. ನಿಟ್ಟುಸಿರು ಬಿಟ್ಟಳು "ಒಳ್ಳೆ ಹೆಸರು ವರ್ಷಾ!" ಅಂದ್ಲು. "ನೋಡೋಕೂ ಚೆನ್ನಾಗಿದ್ಲು" ಅಂದೆ, "ನನಗಿಂತ" ಅಂದ್ಲು, ದೊಡ್ಡ ಪೀಕಲಾಟಕ್ಕೆ ಸಿಕ್ಕಿಕೊಂಡೆ, ನಿಜ ಹೇಳಬೇಕೆಂದ್ರೆ "ಹೌದು" ಅಂದೆ. "ಅದಕ್ಕೇ ಸಾಹೇಬ್ರು ನೋಡುತ್ತ ನಿಂತಿದ್ದು" ಅಂತ ನಕ್ಕಳು. "ನಿನಗೇನು ಅನ್ನಿಸಲಿಲ್ವಾ" ಅಂದೆ. "ಯಾಕೆ ಅನ್ನಿಸಬೇಕು, ರೀ ಯಾರೊ ಹುಡುಗಿ, ಪಾಪ ಒಬ್ಳೇ ಇದ್ದದ್ದಕ್ಕೆ ಕಾದು ಅವಳು ಅಷ್ಟು ಹೆಲ್ಪು ಮಾಡಿ ಬಂದಿದ್ದೀರಿ, ಹೆಮ್ಮೆ ನನಗೆ" ಅಂದ್ಲು. "ಅಲ್ಲ ಅವಳು ಚೆನ್ನಾಗಿದ್ದಾಳೆ ಅಂದ್ನಲ್ಲ ಅದಕ್ಕೆ" ಅಂದ್ರೆ, "ಏನು ನಿಮ್ಮ ಹೆಂಡ್ತಿ ಬಿಟ್ಟು ಜಗತ್ತಿನಲ್ಲಿ ಯಾರೂ ಬೇರೆ ಸುಂದರಿಯರೇ ಇರಬಾರದಾ" ಅಂತ ತಿರುಗಿಬಿದ್ಲು. "ಹಾಗಲ್ಲ, ಆದ್ರೂ ಏನೊ ಬೇರೆ ಹುಡುಗಿ ಅಂದ ಹೊಗಳಿದೆನಲ್ಲ, ನಿನಗೆ ನನ್ನ ಮೇಲೆ ಅಷ್ಟು ನಂಬಿಕೆನಾ" ಅಂದ್ರೆ. "ನಂಬಿಕೆ ಎಲ್ಲ ಏನೂ ನನಗೆ ಗೊತ್ತಿಲ್ಲ, ನೀವು ನನ್ನವರು ಅದು ನನಗೆ ಗೊತ್ತು ಅಷ್ಟು ಸಾಕು, ಆದ್ರೆ ನಿಮ್ಮನ್ನು ಆ ಹುಡುಗಿ ನಂಬಿ ನಿಂತಿದ್ದಳೊ ಏನೊ" ಅಂತಂದಳು "ಅಯ್ಯೋ ನನ್ನನ್ನೂ ಯಾವುದೊ ಪೋಲಿ ಅಂದುಕೊಂಡಿರಬೇಕು, ಆದ್ರೂ ನನ್ನ ನೋಡಿದ್ರೆ ಹಾಗೇನೂ ಕಾಣಲ್ಲ ಬಿಡು" ಅಂದೆ "ಈ ಇಂಗ್ಲೀಷ್ ಫಿಲಂಗಳಲ್ಲಿ ದರೋಡೆಕೊರರು ಕೋಟು ಸೂಟಿನಲ್ಲೇ ಬರೋದು" ಅಂತ ಕಿಚಾಯಿಸಿದಳು, "ಈಗೇನು ಅವಳೇನು ಅಂದುಕೊಂಡ್ರೆ ನನಗೇನು, ನನಗೆ ಅಲ್ಲಿ ಆ ಸಮಯ ಸುರಕ್ಷಿತ ಅನಿಸಲಿಲ್ಲ ಅದಕ್ಕೆ ಕಾದಿದ್ದು ಬಂದೆ, ನನ್ನ ಮನದ ತೃಪ್ತಿಗಾಗಿ. ಅವಳಿಗೆ ಎನೂ ಆಗಲಿಲ್ಲ ಅದು ಸಮಾಧಾನ, ಅಷ್ಟು ಸಾಕು ನನಗೆ" ಅಂದೆ "ರೀ ಅಷ್ಟೊತ್ತು ಅಲ್ಲೇನು ಮಾಡ್ತಾ ಇದ್ಲು" ಅಂದ್ಲು "ಹೀಗೆ ನಮ್ಮಂಥ ಯಾವುದೋ ಕೆಲಸದಲ್ಲಿರಬೇಕು, ಲೇಟಾಗಿರಬೇಕು, ಪಾಪ, ಮಳೆ ಕಾದಿದ್ದಾಳೆ" ಅಂದೆ "ಅದೂ ಸರಿ ಈ ಕೆಲಸ ಎಲ್ಲ ಲೇಟಾಗಿ ಹಾಗಾಗತ್ತೆ, ಮನೆಗೆ ಡ್ರಾಪ್ ಮಾಡಿ ಬರಬೇಕಿತ್ತು" ಅಂತ ಕೀಟಲೆಗಿಳಿದಳು "ಲೇ ಅವಳನ್ನು ಹಾಗೆ ಕೇಳಿದ್ದರೆ ಕೊಟ್ಟಿರೋಳು ಒಂದು ಮುಖಕ್ಕೆ, ಒಂದು ಮಿತಿಯಲ್ಲಿ ನಾನು ಆ ಸಮಯದಲ್ಲಿ ಏನು ಮಾಡಬಹುದಾಗಿತ್ತೊ ಅದನ್ನು ಮಾಡಿದೆ, ಹಾಗೆಲ್ಲ ಮಾಡಿದರೆ ಬೆಂಗಳೂರಿನಲ್ಲಿ ಡ್ರಾಪ್ ಸರ್ವೀಸ ಮಾಡ್ತಾ ಇರಬೇಕಾಗತ್ತೆ ನಾನು" ಅಂದೆ.
"ರೀ ಅವಳಿಗೆ ಯಾರಾದ್ರೂ ಬಂದು ಛೇಡಿಸಿದ್ರೆ, ಫೈಟಿಂಗ ಮಾಡ್ತಾ ಇದ್ರಾ ಡಿಶುಂ ಡಿಶುಂ ಅಂತಾ" ಅಂತ ನನಗೆ ಎರಡು ಕೊಟ್ಟಳು "ಲೇ ಛಳಿಯಾಗ್ತಿದೆ ಅದರಲ್ಲಿ ನೀನು ಹೊಡೀಬೇಡ, ಪೆಟ್ಟಾಗತ್ತೆ" ಅಂತನ್ನುತ್ತ ಅವಳನ್ನೇ ಹೊದ್ದು ಬೆಚ್ಚಗೆ ಮಲಗಿದೆ.

ಈ ಮಹಾನಗರಗಳು ರಾತ್ರಿ ಸುರಕ್ಷಿತವಾಗಿ ಉಳಿದಿಲ್ಲ, ಹೀಗೆ ಕೆಲಸ ಮುಗಿಸಿ ಲೇಟಾಗಿ ಬರುವ ಹೆಣ್ಣು ಮಕ್ಕಳಿಗಂತೂ ಬಹಳ ತೊಂದ್ರೆ, ಆದಷ್ಟು ನಮ್ಮ ಜಾಗರೂಕತೆ ನಮಗೇ ಮೇಲು, ಮಳೆಯಲ್ಲಿ ನೆನೆದಾದರೂ ಸರಿ ಬೇಗ ಮನೆ ತಲುಪುವುದೇ ಕ್ಷೇಮ, ಹಾಗೆ ಬಹಳೇ ಲೇಟಗುತ್ತಿದ್ದರೆ ಕಂಪನಿಯ ಕ್ಯಾಬ ಸೌಕರ್ಯ(ಅದೂ ಸಂಪೂರ್ಣ ಸುರಕ್ಷಿತವಾಗಿಲ್ಲ) ಉಪಯೋಗಿಸಿ, ಇಲ್ಲವಾದರೆ ನಿಮ್ಮ ನಂಬಿಕೆಯ ಸಹುದ್ಯೋಗಿಗೆ ಮನೆವರೆಗೆ ಜತೆಯಾಗಲು ನಿರ್ದಾಕ್ಷಿಣ್ಯವಾಗಿ ಕೇಳಿಕೊಳ್ಳಿ ಯಾರೂ ಇಲ್ಲವೆನ್ನಲ್ಲ.

ಮುಂಜಾನೆ ಆಫೀಸಿಗೆ ರೆಡಿಯಾಗುತ್ತಿದ್ದೆ, ಇಂದು ಕೂಡ ಮಳೆಯಲ್ಲಿ ನೆನೆಯಬೇಡಿ ಬೇಗ ಬನ್ನಿ ಅಂತಿದ್ದಳು ನನ್ನಾಕೆ. "ಬಾ ಮಳೆಯೇ ಬಾ... ಅತ್ತ ಮನೆಯೊಳಗೇ ಬಾರದಿರು... ನನ್ನ ನಲ್ಲೆ ಒದ್ದೆಯಾಗುವಂತೆ" ಅಂತ ನಾ ಹಾಡುತ್ತಿದ್ದರೆ "ಬಾ ಮಳೆಯೇ ಬಾ... ಬೇಗ ಬಂದು ಬಿಡು, ನನ್ನ ನಲ್ಲ ಬರುವ ದಾರಿಯಲ್ಲಿ ಅಡತಡೆಯಾಗದಂತೆ..." ಅಂತ ಅವಳೂ ದನಿ ಸೇರಿಸಿದಳು... ಇಬ್ಬರೂ ನಕ್ಕೆವು... "ರೀ ವರ್ಷಾ ಸಿಕ್ಕರೆ, ಈವತ್ತು ಮಳೆಯಲ್ಲಿ ಕಾಯುತ್ತಾಳಾ ಕೇಳಿ" ಅಂತಿದ್ದಳು ಇಂಥ ನನ್ನಾಕೆಯ ಪಡೆದ ನನ್ನ ಹರ್ಷಕ್ಕೆ ಪಾರವೇ ಇರಲಿಲ್ಲ, ವರ್ಷನಂಥವರು ವರ್ಷ ಕಾದರೂ ನನ್ನಾಕೆಗಾಗಿ ನಾ ಮನೆಯತ್ತಲೇ ಹೆಜ್ಜೆ ಹಾಕುತ್ತೇನೆ. ಮತ್ತೆ ಸಿಕ್ಕೋಣ ಎಲ್ಲೋ ಮಳೆಯಲ್ಲಿ ನೆನೆಯುತ್ತ....ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/male.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, July 19, 2009

ಸುಮ್ನೆ ಕೂರೋದಂದ್ರೆ ಸುಮ್ನೇನಾ...

"ರೀ ರವಿವಾರ ಅಲ್ಲ ಇಂದು, ರವಿ ಕಣ್ಣು ಬಿಡೊವರೆಗೆ ಅಂತ ಕಾಯ್ತಾ ಮಲಗೋಕೇ, ಸೋಮವಾರ ಆಫೀಸಿಗೆ ಹೊಗ್ಬೇಕು ಎದ್ದೇಳೀ" ಇದು ನಾಲ್ಕನೇ ಸಾರಿ ಏಳಿಸಿರಬೇಕು ಅವಳು, ಇನ್ನು ಏಳಿಸಲ್ಲ ಏಳೊ ಹಾಗೆ ಮಾಡ್ತಾಳೆ ಅಷ್ಟೇ, ಅಲ್ಲೇ ಮಲಗಿದಲ್ಲೇ "ಆಫೀಸಿಗೆ ಹೋಗಿಯಾದ್ರೂ ಯಾವ ಘನ ಕಾರ್ಯ ಮಾಡಬೇಕಿದೆ, ಮಲಗಲು ಬಿಡೆ, ಬೆಂಚಗೆ ಹಾಕೀದಾರೆ" ಅಂತಂದೆ. "ಅಯ್ಯೊ ರೆಸೆಷನ್ ಅಂತ ಹೀಗಾ ಮಾಡೊದು, ಕಾಸ್ಟ್ ಕಟಿಂಗ ಅಂತಾ ಇರೊ ಚೇರು ಕಿತ್ಕೊಳ್ಳೊದಾ?" ಅಂದ್ಲು, "ಕೆಲ್ಸ ಇದ್ರೆ ಸರಿ ತಲೇ ಮೇಲೆ ಬೇಕಾದ್ರೂ ಕೂರಿಸಿಕೊಳ್ಳೋರು, ಇಲ್ಲಾಂದ್ರೆ ನೆಲದ ಮೇಲೂ ಕೂರಿಸ್ತಾರೆ, ಏನ್ ಮಾಡ್ತೀಯ" ಅಂತ ಅಲವತ್ತುಕೊಂಡೆ. "ಸರಿ ಬೆಂಚು, ಅಂದ್ರೆ ಕುಷನ ಇರೊ ಮೆತ್ತನೆ ಚೇರಿಲ್ಲ ಅಂತ, ಮನೇಲಿ ಹೀಗೆ ಮಲಗೋಕಾಗುತ್ತಾ, ಎದ್ದೇಳ್ರೀ" ಅಂತ ದನಿಯೇರಿಸಿದಳು. "ಲೇ, ಬೆಂಚ ಅಂದ್ರೆ ನಿಜವಾದ ಬೆಂಚ್ ಅಲ್ಲ, ಯಾವುದೇ ಪ್ರೊಜೆಕ್ಟ್ ಕೆಲಸ ಇಲ್ಲದೇ ಹಾಗೇ ಕೂರಿಸಿರೋದು, ಮತ್ತೊಂದು ಪ್ರೊಜೆಕ್ಟು ಬರೊವರೆಗೆ ಕಾಯ್ರಿ ಅಂತ" ಬೆಂಚಿನಲ್ಲಿ ಕೂತ ಸಿಟ್ಟಿನಲ್ಲಿ ಘರ್ಜಿಸಿದೆ. "ಒಹೋ ಹಾಗಾ, ನನಗೇನ್ರಿ ಗೊತ್ತಾಗಬೇಕು, ಬೆಂಚ್ ಅಂದ್ರೆ ಮರದ ಕಟ್ಟಿಗೇಲಿ ಮಾಡಿರೋ ಸ್ಟೂಲು ಅನ್ಕೊಂಡಿದ್ದೆ, ಮ್... ಈ ಕ್ಲಿನಿಕನಲ್ಲಿ ಡಾಕ್ಟ್ರು ಬರೊವರೆಗೆ ಕಾಯ್ರಿ ಅಂತ ಬೆಂಚ್ ಹಾಕಿ ಕ್ಯೂನಲ್ಲಿ ಕೂರಿಸಿರ್ತಾರಲ್ಲ ಹಾಗನ್ನಿ" ಅಂದ್ಲು "ಹಾಂ... ಅದೇ ನರ್ಸು, ನರ್ಗೀಸು ಯಾವಾಗ ಬರತಾಳೆ ಅಂತ..." ಅಂತಿದ್ದಂಗೆ ಮಧ್ಯದಲ್ಲಿ "ಮ್, ಯಾವಗ ಬರ್ತಾಳೇ, ಯಾವ ಇಂಜೆಕ್ಷನ್ ಕೊಡ್ತಾಳೆ ಅಂತ ಕಾಯ್ತೀರಲ್ಲ, ಹಾಗಲ್ವಾ" ಅಂತ ರೇಗಿಸಿದಳು. "ಅದೂ ಸರಿನೇ ಯಾವ ಪ್ರೊಜೆಕ್ಟ ಬರತ್ತೆ ಏನ್ ತಲೆನೋವು ತರತ್ತೆ ಅಂತಾನೇ ಕಾಯ್ತೀವಿ" ಅಂದೆ. "ಸರಿ ಈವತ್ತು ಲೇಟಾಗಿ ಹೋಗ್ತೀರ ಹಾಗಿದ್ರೆ" ಅಂತ ಅಲ್ಲಿಗೆ ಬಂದಳು, "ಬೇಡ ಅಂದ್ರೆ ಹೋಗೋದೂ ಇಲ್ಲ" ಅಂದೆ. "ಹೋಗದಿದ್ರೆ ಅಷ್ಟೇ, ಹೊರಗೆ ಬೆಂಚು ಹಾಕಿ, ವಾಚಮನ್ ಮಾಡಿ ಆಫೀಸಾದ್ರೂ ಕಾಯು ಅಂತಾರೆ" ಅಂದ್ಲು. ಮೊದಲೇ ರಿಸೇಷನ್ ಎಲ್ಲಿ ಹಾಗೇ ಮಾಡಿಯಾರು ಅಂತ ಮೇಲೆದ್ದೆ.

ಸ್ನಾನ ಮಾಡಿ ಬರ್ತಿದ್ದಂಗೆ, ಬಿಸಿ ಬಿಸಿ ಉಪ್ಪಿಟ್ಟು(ಉಪಮಾ, ಖಾರಾಭಾತ್, ಕಾಂಕ್ರೀಟು!) ಮಾಡಿದ್ಲು. ರುಚಿಯಾಗಿತ್ತು, ಇನ್ನಷ್ಟು ಹಾಕು ಅಂದ್ರೆ "ಗಡದ್ದಾಗಿ ತಿಂದ್ರೆ ಅಷ್ಟೇ ಮೊದ್ಲೇ ಕೆಲ್ಸ ಇಲ್ಲ ಅಂತೀದೀರ ನಿದ್ರೆ ಬರತ್ತೆ ಸಾಕು" ಅಂದ್ಲು, ಆಸೆಗಣ್ಣಿಂದ ಇನ್ನೊಮ್ಮೆ ನೋಡಿದ್ದಕ್ಕೆ ಮತ್ತೆ ಕೇಳಿದ್ದಕ್ಕಿಂತ ಜಾಸ್ತಿಯೇ ಬಡಿಸಿದಳು. "ಬೆಂಚ್ ಮೇಲೆ ಅಂದ್ರೆ ಏನ್ರೀ ಮಾಡಿತೀರಾ ಆಫೀಸಲ್ಲಿ" ಅಂತ ಮತ್ತೆ ಮಾತಿಗಿಳಿದಳು "ಆಂ, ಬೆಂಚ್ ಮೇಲೆ ಕೂತು ಬೆಂಚ್ ಬಿಸಿ ಮಾಡ್ತೀವಿ ಕೋಳಿ ಮೊಟ್ಟೆಗೆ ಕಾವು ಕೊಟ್ಟ ಹಾಗೆ." ಅಂತಂದರೆ, ನಗುತ್ತ "ರೀ ನಿಜ ಹೇಳ್ರೀ ಏನ್ ಮಾಡ್ತೀರಾ" ಅಂದ್ಲು. "ಎನ್ ಮಾಡೋದು ಅಂದ್ರೆ, ಇರೋಬರ್‍ಒ ಎಲ್ಲ ಈಮೈಲ ಐಡಿ ಎಲ್ಲ ನೆನಪು ಮಾಡಿ ಮಾಡಿಕೊಂಡು ಇಪ್ಪತ್ತು ಸಾರಿ ತೆಗೆದುನೋಡೋದು, ಎಲ್ಲ ಆನಲೈನ್ ಪೇಪರು ಮೂಲೇ ಮೂಲೆ ಕೂಡ ಬಿಡದೇ ಓದಿ, ಎರಡು ಗೇಮು ಆಡಿ, ಟೀಗೆ ಅಂತ ಹೋಗಿ ತಾಸು ಹರಟೆ ಹೊಡೆದು, ಮತ್ತೆ ಬಂದು ಕೂತು ಬೆಂಚ್ ಬಿಸಿ ಮಾಡೋದು" ಅಂದೆ, "ಇದೆಲ್ಲ ಮಾಡೋಕೆ ನಿಮಗೆ ಕಂಪನಿ ಸಂಬಳ ಕೊಡಬೇಕು" ಅಂದ್ಲು, "ಯಾಕೆ ಇಷ್ಟು ದಿನ ಕತ್ತೆ ಥರ ಕೆಲಸಾ ಮಾಡಿಲ್ವಾ, ಸ್ಟವ ಮೇಲೆ ಕಟ್ಟಿ ಕೂರಿಸಿ, ಮಾಡು ಮಾಡು ಅಂತ ನಾಲ್ಕು ಜನರ ಕೆಲಸ ಒಬ್ಬನ ಕೈಲಿ ಮಾಡಿಸಿ, ಅವರು ಕಂತೆ ಕಂತೆ ದುಡ್ಡು ಎಣಿಸಿಲ್ವಾ" ಅಂದೆ, "ಅದೂ ಸರಿಯೇ, ಮುಂಜಾನೆ ಏಳಕ್ಕೆ ಹೋದ್ರೆ, ರಾತ್ರಿ ಏಳಕ್ಕೆ ಮರಳಿ ಹೊರಟರೆ ಹಾಫ್ ಡೇನಾ ಅಂತ ಕೇಳಿದ್ದ ಬಗ್ಗೆ ಹೇಳಿದ್ರಲ್ಲ" ಅಂತ ಮರುಕಪಟ್ಟಳು.
"ನಮ್ಮ ಕೆಲಸಾನೇ ಹಾಗೇ ಇದ್ರೆ ರಾಶಿ ರಾಶಿ ಇರತ್ತೆ, ಇಲ್ಲಾಂದ್ರೆ ಏನೂ ಇಲ್ಲ" ಅಂದೆ. "ಅಲ್ಲ ನಿಮ್ಮನ್ನ ಹೀಗೆ ಖಾಲಿ ಕೂರಿಸಿ ಸಂಬಳ ಕೊಟ್ರೆ ಅವರಿಗೇನು ಲಾಭ" ಮರುಪ್ರಶ್ನಿಸಿದಳು "ಈ ಕಂಪನಿಗಳು ಯಾವಗ್ಲೂ ಎಂಬತ್ತು ಪರ್ಸೆಂಟು ಮಾತ್ರ ಕೆಲಸಗಾರರು ಕಾರ್ಯನಿರತಾಗಿರುವ ಹಾಗೇ ನೋಡಿಕೋತಾರೆ, ಉಳಿದವರು ಹೊಸ ಕೆಲಸ ಬರ್ತಿದ್ದಂಗೆ ಇರಲಿ ಅಂತ ಇಟ್ಕೊತಾರೆ. ಅಲ್ಲೀವರೆಗೆ, ಯಾವುದೊ ಒಂದು ಟ್ರೇನಿಂಗ ಇಲ್ಲ ಕೆಲ್ಸಕ್ಕೆ ಬಾರದ ಪ್ರೊಜೆಕ್ಟು ಕೊಟ್ಟು ಕೂರಿಸಿರ್ತಾರೆ" ಅಂದೆ. "ಹೂಂ ಮತ್ತೆ ಎಷ್ಟು ದಿನಾ ಹೀಗೆ", "ಬಹಳ ದಿನ ಏನೂ ಇರಲ್ಲ, ತಿಂಗಳುಗಟ್ಟಲೇ ಕೂತವರೂ ಇದ್ದಾರೆ ಆದ್ರೂ, ಬಹಳ ದಿನ ಆದ್ರೆ ಕಿತ್ತು ಹಾಕ್ತಾರೆ, ಇಲ್ಲ ಅವರೇ ಯಾವುದೊ ಹೊಸ ಕೆಲಸ ನೋಡಿಕೊಂಡು ಹೊರಟು ಬಿಡುತ್ತಾರೆ" ಅಂತನ್ನುತ್ತ ಟೀ ಎಲ್ಲಿ ಅಂದೆ, "ಕೆಲಸ ಇಲ್ಲ ಅಂದ್ರೆ ಆಫೀಸಲ್ಲೇ ಹತ್ತು ಸಾರಿ ಟೀಗೆ ಹೋಗ್ತೀರ ನನಗೆ ಗೊತ್ತು, ಅಲ್ಲೇ ಕುಡಿಯಹೋಗಿ" ಅಂತಂದ್ಲು "ಮ್... ಟೀ ಸಿಗರೇಟು ಅಂತ ನಾಲ್ಕಾರು ಸಾರಿ ಒಡಾಡಿದರೆ ಟೈಮ್ ಪಾಸ್ ಆಗತ್ತೆ ಬಿಡು" ಅಂದೆ, "ರೀ, ಸಿಗರೇಟಾ... ಅದೇನಾದ್ರೂ ಶುರು ಮಾಡಿಕೊಂಡ್ರೆ ಅಷ್ಟೇ ಮನೆ ದಾರೀನ ಮರೆತುಬಿಡಿ, ಮನೆಗೆ ಸೇರಿಸೋದೇ ಇಲ್ಲ" ಅಂತ ಎಚ್ಚರಿಕೆ ಕೊಟ್ಲು. "ಬೇರೆಯವರ ಜತೆ ಹಾಗೇ ಸುಮ್ನೆ ಹೋಗ್ತೀನಿ ಅಷ್ಟೇ" ಅಂದೆ. "ಹಾಗೆ ಸುಮ್ನೇನೆ ವಾಪಸ್ಸು ಬರಬೇಕು" ಅಂತ ಅಪ್ಪಣೆಯಾಯಿತು.

ಇನ್ನೇನು ಹೊರಡಬೇಕು ಅಂತಿದ್ದರೆ "ಹೇಗೂ ಖಾಲಿ ಅಲ್ವಾ, ನನ್ನ ಸ್ವಲ್ಪ ಮಾರ್ಕೆಟವರೆಗೆ ಡ್ರಾಪ್ ಮಾಡಿ ಹೋಗ್ರೀ" ಅಂದ್ಲು ಇದೊಳ್ಳೆ ಹೇಳಿದ್ದೆ ತಪ್ಪಾಯಿತಲ್ಲ, ಏನೊ ಸ್ವಲ್ಪ ಕೆಲಸ ಇಲ್ಲ ಅಂತಂದರೆ ಇವಳು ಬೇರೆ ಏನೂ ಇಲ್ಲವೇನೊ ಅನ್ನೊ ಹಾಗೆ ಮಾಡ್ತಿದಾಳೆ, ಇರಲಿ ಅಂತ ಅವಳ ಕರೆದೊಯ್ದು, ಮಾರ್ಕೆಟನಲ್ಲಿ ಇಳಿಸಿದರೆ, "ಇನ್ನೊಂದು ಸ್ವಲ್ಪ ಕಾಯ್ದರೆ, ತರಕಾರಿ ತೆಗೆದುಕೊಂಡು ಬಂದು ಬಿಡ್ತೀನಿ ಮತ್ತೆ ನನ್ನ ಮನೆಗೆ ಡ್ರಾಪ್ ಮಾಡಿ ಹೊರಡಬಹುದಲ್ಲ" ಅಂದ್ಲು "ಅದೊ ಅಲ್ಲಿ ನೋಡು ಅವಕ್ಕೆ ಆಟೊ ಅಂತಾರೆ ಅದನ್ನ ತೆಗೆದುಕೊಂಡು ಮನೆಗೆ ಹೋಗಬಹುದು" ಅಂತ ಅಲ್ಲಿರುವ ಅಟೊಗಳತ್ತ ಕೈಮಾಡಿ ಅಂದರೆ ನಗುತ್ತ ಸಂತೆಯಲ್ಲಿ ಮಾಯವಾದಳು...

ಲೇಟಾಗಿ ಹೊರಟದ್ದರಿಂದ ಟ್ರಾಫಿಕ್ಕಿನಲ್ಲಿ ಸಿಕ್ಕು ಆಫೀಸು ತಲುಪುವಲ್ಲಿ ಸಾಕು ಸಾಕಾಗಿ ಹೋಗಿತ್ತು, ಆಗಲೇ ನನ್ನ ಬೆಂಚುಮೇಟುಗಳು(ಈ ಕ್ಲಾಸಮೇಟಗಳ ಹಾಗೆ) ಬಂದು ಬಿಸಿ ಟೀ ಹೀರಲು ಹೋಗಿದ್ದರು ನಾನೂ ಸೀದ ಅಲ್ಲಿಗೇ ಹೋದೆ, ನಾನು ಬಂದದ್ದು ನೋಡಿ ಅವರಿಗೂ ಖುಷಿ, ಇವನೊಂದಿಗೆ ಇನ್ನಷ್ಟು ಹೊತ್ತು ಹರಟೆ ಹೊಡೆದರಾಯ್ತು ಅಂತ. ಮನೇಲಿರೊ ಹೆಂಡತಿಯಿಂದ ಹಿಡಿದು ದಾರಿಯಲ್ಲಿ ಕಾಣುವ ದಾರಿಹೋಕರ ತನಕ ಯಾವುದನ್ನೂ ಬಿಡದೇ ಎಲ್ಲದರ ಬಗ್ಗೆ ಮಾತಾಡಿ ಆಯ್ತು. ಮತ್ತೆ ಬಂದು ಬೆಂಚಿನಲ್ಲಿ ಸಾರಿ... ಚೇರಿನಲ್ಲಿ ಕೂತವರು ಇರೊಬರೊ ಸೈಟುಗಳನ್ನೆಲ್ಲ ತೆಗೆದು ನೋಡಿ ಇಂಟರನೆಟ್ಟಿನಲ್ಲೂ ದಟ್ಟಣೆ ಜಾಸ್ತಿಯಾದಮೇಲೆ ಮುಂದೇನು?... ಅನ್ನುವ ಪ್ರಶ್ನೆ ಎದ್ದಿತು. ಕೆಲವರು ಮೊದಲೇ ತಂದಿದ್ದ ಟಿ.ಟಿ ಬ್ಯಾಟಗಳನ್ನು ತೆಗೆದುಕೊಂಡು ಸ್ಪೋರ್ಟ್ಸ್ ರೂಮಿಗೆ ನುಗ್ಗಿದರೆ, ಶಾಲೇ ಆಟದ ಪಿರಿಯಡನಲ್ಲೇ ಆಡದವ ಇಲ್ಲೇನು ಆಟ ಆಡಿಯೇನು ಅಂತ, ಇವಳೇನು ಮಾಡುತ್ತಿದ್ದಾಳೆ ಅಂತ ನೋಡಲು ರಿಂಗಣಿಸಿದೆ. ಆಕಡೆಯಿಂದ ಉತ್ತರವೇ ಇಲ್ಲ, ಮತ್ತೆರಡು ಸಾರಿ ಫೋನು ಮಾಡಿದ ಮೇಲೆ ಸಿಕ್ಕಳು "ಏನ್ರೀ" ಅಂದ್ಲು, "ಎಷ್ಟು ಸಾರಿ ಫೋನು ಮಾಡಿದರೂ ಸಿಕ್ತಿಲ್ಲ ಏನ್ ಮಾಡ್ತಾ ಇದ್ದೆ" ಅಂದೆ "ನಿಮ್ಮಂಗೆ ಎನು ಬೆಂಚಮೇಲೆ ಇದೀನಾ, ಮನೇ ಕೆಲಸ ಇತ್ತು ಮಾಡ್ತಾ ಇದ್ದೆ" ಅಂತ ಕಿಚಾಯಿಸಿದಳು, "ಕೆಲಸ ಇದ್ರೆ ಮಾಡಬಹುದು ಇಲ್ಲ ಅಂದ್ರೆ ಸುಮ್ನೆ ಕೂರೋದಂದ್ರೆ ಸುಮ್ನೇನಾ" ಅಂದೆ. "ಬನ್ನಿ ಮನೆಗೆ ಹಾಗಿದ್ರೆ, ಸೊಪ್ಪು ಕತ್ತರಿಸಿ ಕೊಡುವಿರಂತೆ ನನಗೆ" ಅಂದ್ಲು, "ನಾಳೆಯಿಂದ ಬ್ಯಾಗಲ್ಲಿ ಹಾಕಿ ಬಿಡು, ಕೀಬೋರ್ಡು ಸರಿಸಿಟ್ಟು ಇಲ್ಲೇ ಕತ್ತರಿಸುತ್ತ ಕೂರುತ್ತೇನೆ" ಅಂತ ಫೋನಿಟ್ಟೆ. ಗೂಗಲ್ಲು ಟಾಕ್ (ಮೆಸ್ಸೆಂಜರ, ಒಂಥರ ಚಿಕ್ಕ ಅಂಚೆ ಕಳಿಸುವ ಹಾಗೆ ಸಂದೇಶ ಬರೆದು ಮಾತಾಡುವ ಸಾಫ್ಟವೇರ್, ಹಾಗೆ ಮಾತಾಡುವುದಕ್ಕೆ ಚಾಟಿಂಗ ಅಂತಾರೆ) ಚಾಟಿಂಗನಲ್ಲಿ ಸಿಕ್ಕವರಿಗೆಲ್ಲ, ಹೈ ಹೇಳಿ ಬಂದಾಯ್ತು, ನನ್ನ ತಂಟೆಯಿಂದ ಬೇಸತ್ತು ಎಲ್ರೂ ಬೀಜೀ ಅಂತ ತಮ್ಮ ತಮ್ಮ ಸ್ಟೇಟಸ್ಸು ಬದಲಾಯಿಸಿದರು, ಕೆಲವರೋ ನಾನು ಪುಟಗಟ್ಟಲೇ ಮೆಸೇಜು ಬರೆದರೆ ಒಂದೊಂದು ಸ್ಮೈಲೀ [ನಗು ಮುಖದ ಸಂಕೇತ :) ] ಹಾಕಿ, ಇಲ್ಲ ಹೂಂ... ಹಾಂ... ಅಂತ ಉತ್ತರಿಸಿ... ಖಾಲಿ, ಕೆಲಸ ಇಲ್ಲದೇ ಕೂತು ನಮ್ಮ ತಲೆ ತಿಂತಿದಾನೆ ಅಂತ ಬಯ್ದುಕೊಂಡು ಮಾತು ಮುಗಿಸಿದರು.

ಮಧ್ಯಾಹ್ನ ಊಟದ ಸಮಯವಾಗುವ ಹೊತ್ತಿಗೆ ನಾಲ್ಕು ಸಾರಿ ಫೋನು ಮಾಡಿಯಾಗಿತ್ತು ಅವಳಿಗೆ, ಕೊನೆಗಂತೂ ನಿಮ್ಮ ಮ್ಯಾನೇಜರ ನಂಬರು ಕೊಡಿ, ಕೆಲಸ ಕೊಡ್ತೀರಾ ಇಲ್ಲ ಅಂತ ಅವರನ್ನೇ ತರಾಟೆಗೆ ತೆಗೆದುಕೋತೀನಿ ಅಂತಂದಳು, ಮತ್ತೆ ಫೋನು ಮಾಡುವ ಧೈರ್ಯವಾಗಲಿಲ್ಲ. ಎಷ್ಟೊ ಸಾರಿ ಊಟ ಕೂಡ ಮಾಡದೆ ಹಾಗೇ ಕೆಲಸ ಮಾಡುತ್ತಿದ್ದವ ಎಲ್ಲ ಸರಿಯಾಗಿ ಊಟಕ್ಕೆ ಹಾಜರಾಗಿದ್ದೆ. ಅಲ್ಲಿಯಾದರೂ ಸಮಯ ಕಳೆದೀತು ಅಂತ.

ಊಟವಾದ ನಂತರ ಹಾಗೆ ಒಂದು ಸುತ್ತು ಸುತ್ತಿ ಬಂದದ್ದಾಯ್ತು, ಸುತ್ತಾಡುವಾಗ ಕಂಡ ಸುಂದರಿಯರ ನೋಡಿದಾಗ, ಪಕ್ಕದಮನೆ ಪದ್ದು ಜತೆಗೆ ಇನ್ನೂ ಕೆಲವು ಪಕ್ಕದ ಕಂಪನಿಯ ಕನ್ಯಾಮಣಿಯರೂ ಸೇರಿಕೊಂಡರು ನನ್ನ ಲಿಸ್ಟಿಗೆ, ಇಂದು ಇವಳಿಗೆ ಹೇಳಿ ಕಾಡಲು ಹೊಸ ಮುಖಗಳು ಸಿಕ್ಕ ಖುಷಿಯಾಯ್ತು. ವಾಪಸ್ಸು ಬಂದು ನೋಡಿದರೆ ಇವಳಿಂದ ಮಿಸ ಕಾಲ್ ಬಂದಿದ್ದವು, ಅವಸರದಲ್ಲಿ ಮೊಬೈಲು ಮರೆತು ಹೋಗಿದ್ದೆ, ಕಾಲ್ ಮಾಡಿದ್ರೆ "ರೀ ಕೆಲಸ ಇಲ್ಲ ಅಂದ ಮೇಲೆ ಯಾವ ಮೀಟಿಂಗ ಇತ್ತು, ನನ್ನ ಕಾಲ್ ಯಾಕೆ ರಿಸೀವ ಮಾಡಲಿಲ್ಲ" ಅಂತ ಜಗಳಕ್ಕಿಳಿದಳು. "ಇಲ್ಲಾ ಕಣೆ ನಮ್ಮ ಹೆಚ್.ಆರ್ ಡಿಪಾರ್ಟಮೆಂಟಗೆ (ಮಾನವ ಸಂಪನ್ಮೂಲ ಇಲಾಖೆ) ಹೋಗಿದ್ದೆ, ಹೊಸ ಕೆಲಸ ಏನಾದ್ರೂ ಬರುವುದಿದೆಯಾ ಅಂತ ಕೇಳಿ ಬರಲು" ಅಂದರೆ "ಅಲ್ಲಿ ಯಾವ ಹೊಸ ಹುಡುಗಿ ಹುಡುಕೀದೀರಾ? ಸುಮ್ನೇ ಕೆಲಸದ ನೆಪ ಮಾಡಿ ಮಾತಾಡಿಸಿ ಬರಲು" ಅಂತ ಸಂಶಯಿಸಿದಳು. "ಪಕ್ಕದ ಕಂಪನೀಲಿ ಹೊಸ ಹೊಸಾ ಹುಡುಗೀರು ಇರೊವಾಗ, ನಮಗಿಲ್ಲೇನು ಕೆಲಸ" ಅಂತ ಬಾಣ ಬಿಟ್ಟೆ "ರೀ ನಿಮ್ಮ ಕಂಪನೀಲಿ ಕೆಲಸ ಇಲ್ಲ ಅಂತ ಪಕ್ಕದ ಕಂಪನಿಗೂ ನಿಮ್ಮ ಕಾರ್ಯಕ್ಷೇತ್ರ ಬೆಳೆಸಿಕೊಂಡೀದೀರಾ, ಈ ಬೆಂಚ ಅಂದ್ರೆ, ಅದಕ್ಕೆ ಕಟ್ಟಿ ಹಾಕಿ ಕೂರಿಸಬೇಕು ನಿಮ್ಮನ್ನ, ಸುತ್ತಾಡೊಕೆ ಬಿಡ್ತಾರಲ್ಲ ಅದೇ ತಪ್ಪು" ಅಂತ ಬಯ್ದುಕೊಂಡಳು.

ಸಂಜೆ ನಾಲ್ಕಕ್ಕೆ ಇನ್ನೊಂದು ರೌಂಡು ಟೀ, ಹರಟೆ ಮುಗಿಸಿ, ಬಂದು ಕೂತರೆ ಮತ್ತಷ್ಟು ಬೇಸರವಾಗುತ್ತಿತ್ತು, ಹಾಗೂ ಹೀಗೂ ಸಮಯ ಸಾಗಿಸಿ ಐದೂವರೆಗೆ ಮನೆಕಡೆ ನಡೆದೆ, ಮಳೆಯಲ್ಲಿ ತೋಯಿಸಿಕೊಂಡು ಮನೆ ಸೇರಿದೆ, ಏನು ಬೇಗ ಬಂದೀದಾರೆ ಅಂತ ಪಕ್ಕದ ಮನೆ ಪದ್ದು ಕೂಡ ಆಶ್ಚರ್ಯದಿಂದ ನೋಡುತಿದ್ದಳು. ಏಷ್ಟೋ ದಿನಗಳ ನಂತರ ಬೇಗ ಮನೆಗೆ ಬಂದಿರುವೆ ಅಂತ ನನ್ನಾಕೆಗೊ ಖುಷಿ, ಬಿಸಿ ಮಿರ್ಚಿ ಬಜ್ಜಿ, ಮಾಡಿಕೊಟ್ಟಳು ತಿನ್ನುತ್ತ ಆಫೀಸಿನಲ್ಲಿ ಮಾಡಿದ ಕಿತಾಪತಿಗಳನ್ನೆಲ್ಲ ಹರಟಿದೆವು, "ನಾಳೆನೂ ಹೀಗೇನಾ" ಅಂದ್ಲು, "ಅಬ್ಬಾ ನನ್ನ ಕೈಲಾಗಲ್ಲ ಕೆಲಸ ಇಲ್ದೇ ಖಾಲಿ ಕೂರೊಕೆ" ಅಂದೆ, "ಮತ್ತೇನು ಮಾಡ್ತೀರಾ?" ಅಂತ ಕೇಳಿದ್ದಕ್ಕೆ "ಯಾವುದೋ ಟ್ರ್‍ಏನಿಂಗ ಸೇರಿ ಬಿಡ್ತೀನಿ, ಸಮಯ ಸದುಪಯೋಗ ಆಗುತ್ತೆ" ಅಂದೆ. "ಸ್ವಲ್ಪ ದಿನ ವಿಶ್ರಾಂತಿ ಇರಲಿ, ಏನವಸರ ಕೆಲಸ ಮತ್ತೆ ಇದ್ದೇ ಇದೆಯಲ್ಲ" ಅಂದ್ಲು "ವಿಶ್ರಾಂತಿ ಅಂದರೆ ಖಾಲಿ ಕೂತರೆ ಮಾತ್ರ ಅಂತಲ್ಲ ಪ್ರತೀದಿನ ಮಾಡುವ ಕೆಲಸ ಬಿಟ್ಟು ಹೊಸದನ್ನೇದಾರೂ ಮಾಡಿದರೂ ಅದರಲ್ಲೂ ವಿಶ್ರಾಂತಿ ಸಿಕ್ಕಂತೆಯೇ, ಅದರಲ್ಲೂ ಇಷ್ಟು ದಿನ ಖಾಲಿ ಒಂದು ದಿನ ಕೂಡ ಕೂರದೇ ಇರೋದ್ರಿಂದ ನನಗಾಗಲ್ಲ" ಅಂದದ್ದಕ್ಕೆ "ಸರಿ ಹಾಗದ್ರೆ ನಾಳೆ ತರಕಾರಿ ಸೊಪ್ಪಿನ ಜತೆ ಎರಡು ಈರುಳ್ಳಿನೂ ಹಾಕ್ತೀನಿ ಕತ್ತರಿಸಿಕೊಂಡು ಬನ್ನಿ" ಅಂದ್ಲು. "ಈ ಎರಡು ಟೊಮ್ಯಾಟೋನೂ ಬೇಕು ಕಚ್ಚಿ ತಿನ್ನೋಕೆ" ಅಂತ ಅವಳ ಕೆಂಪು ಕೆನ್ನೆ(ಗಲ್ಲ) ಹಿಚುಕಿದೆ, ಕೊಸರಿಕೊಂಡು ಓಡಿದಳು.

ನಾವೆಲ್ಲ ಹೀಗೇನೆ ಕೆಲಸ ಇದ್ರೆ, ಜಾಸ್ತಿ ಇದೆ ಅಂತ ಹಲುಬಿದರೆ, ಇಲ್ಲದಾಗ, ಖಾಲಿ ಬೇಜಾರು ಅಂತ ಕೊರಗುತ್ತೇವೆ. ಇರುವುದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ ಅಂತಾರಲ್ಲ ಹಾಗೆ. ಇರೊ ಪ್ರತೀದಿನವೂ ಹೊಸತು, ಕೆಲಸ ಇರಲಿ ಇಲ್ಲದಿರಲಿ ಆನಂದವಾಗಿರಲು ಪ್ರಯತ್ನಿಸಿದರೆ. ನಾವೇ ಏನೊ ಒಂದು ರಚನಾತ್ಮಕ ಸೃಜನಾತ್ಮಕ ಕೆಲಸ ಹುಡುಕಿಕೊಂಡು ಅದರಲ್ಲಿ ತೊಡಗಿಸಿಕೊಂಡರೆ, ಬೇಜಾರು ಅನ್ನೊ ಪದ ನಮ್ಮ ಹತ್ತಿರ ಕೂಡ ಸುಳಿಯಲಿಕ್ಕಿಲ್ಲ, ಕೆಲವೊಮ್ಮೆ ಅದೂ ಬೇಜಾರಾಗಬಹುದಾದರೂ ತಕ್ಕಮಟ್ಟಿಗೆ ಬೇಜಾರು ಕಮ್ಮಿಯಾದೀತು ಅಲ್ಲವೇ.

ರಾತ್ರಿ ಮಲಗುವಾಗ ಕೇಳುತ್ತಿದ್ದಳು, "ನಾಳೆ ಏನ್ ಮಾಡ್ತೀರಾ ಹಾಗಿದ್ರೆ" , "ಖಾಲಿ ಅಂತೂ ಕೂರೊದಿಲ್ಲ ಏನೊ ಒಂದು ಕೆಲ್ಸ ಹುಡುಕಿಕೊಂಡು ಮಾಡುತ್ತೇನೆ, ಯಾವದಾದ್ರೂ ಹೊಸ ವಿಷಯ ಕಲಿಯುತ್ತೇನೇ, ಇಲ್ಲ ಹೊಸದನ್ನು ಪ್ರಯತ್ನಿಸುತ್ತೇನೆ, ನಿನ್ನ ಕೆಲಸ ಏನಾದ್ರೂ ಆಗಬೇಕಿದ್ರೆ ಹೇಳು, ತರಕಾರಿ ಹೆಚ್ಚುವುದು ಬಿಟ್ಟು" ಅಂತ ಪೂರ್ವ ಶರತ್ತಿನೊಂದಿಗೆ ಕೇಳಿದರೆ, "ದಿನಸಿ ಪಟ್ಟಿ ಬರೆಯುವ ಸಾಫ್ಟವೇರ ಎನಾದ್ರೂ ಮಾಡಿಕೊಡ್ತೀರಾ" ಅಂತ ಬೇಡಿಕೆ ಇಟ್ಟವಳಿಗೆ "ಪೇಪರು ಪೆನ್ನು ಕೊಡು ಕೈಯಲ್ಲೇ ಬರೆದು ಕೊಡ್ತೀನಿ, ಕೀಬೋರ್ಡು ಕುಟ್ಟಿದ್ದು ಜಾಸ್ತಿ ಆಗಿದೆ, ಬರೆದರೆ ಕೈಬರಹವಾದರೂ ಸುಧಾರಿಸೀತು." ಅಂತ ಹೊಸ ಪ್ರಯತ್ನಕ್ಕೆ ಮುನ್ನಡಿಯಿಟ್ಟೆ.ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/sumne.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, July 12, 2009

ಹುಡುಕಾಟ ಹುಡುಗಾಟ...

ರಾತ್ರಿ ಬಂದದ್ದೇ ಲೇಟು, ಊಟ ಆಯ್ತು ಇನ್ನೇನು ಮಲಗಬೇಕು ಅಂತಿದ್ದೆ, ಆಗಲೇ ನೆನಪಾಗಿದ್ದು ಒಹ್ ನಾಳೆ ಕನ್ಯಾ ನೋಡೊಕೆ ಹೋಗಬೇಕಲ್ವಾ ಅಂತಾ, ಪಕ್ಕದಲ್ಲೇ ಇವಳು ಮಲಗಿದ್ದಳು, "ನಾಳೆನೇ ಅಲ್ವಾ ಹೋಗೋದು ಕನ್ಯಾ ನೋಡೋಕೆ" ಅಂದೆ, "ಹೂಂ ಇನ್ನೂ ನಾಳೆ... ಈಗಿಂದಲೇ ಏನೋ ತಯ್ಯಾರಿ ಮಾಡುತ್ತಿರುವ ಹಾಗಿದೆ..." ಅಂತಂದಳು. ಅಲ್ಲ ನಿಮಗೂ ಕುತೂಹಲ ಕಾಡುತ್ತಿರಬೇಕು ನನ್ನಾಕೆಯೊಂದಿಗೆ ನಾನ್ಯಾವ ಕನ್ಯೆ ನೋಡಲು ಹೊರಟಿದ್ದೇನೆಂದು, ಸಂಶಯವೇ ಬೇಡ, ಅತ್ತ ಸರಿದು ಮಲಗಿದ್ದವಳು, ನನ್ನೆಡೆಗೆ ತಿರುಗಿ "ರೀ ಕನ್ಯೆ ನೋಡೊಕೆ ಹೊರಟಿರೋದು ನನ್ನ ತಮ್ಮನಿಗೆ ನಿಮಗಲ್ಲ, ನೆನಪಿರಲಿ" ಅಂತ ಖಚಿತ ಮಾಡಿದಳು. "ಹೇಗೂ ನೋಡಲು ಹೊರಟಿದ್ದೇವೆ ಅದರಲ್ಲೇ ನನಗೂ ಇನ್ನೊಂದು ನೋಡಿಕೊಂಡು ಬರೊಣ ಅಂತಿದ್ದೆ" ಅಂದೆ. "ಏನು... ರಾತ್ರಿ ಅಲ್ಲಿ ಸೊಫಾ ಮೇಲೆ ಮಲಗೊ ಇರಾದೆ ಏನಾದ್ರೂ ಇದೆಯಾ" ಅಂತ ಧಮಕಿ ಹಾಕಿದ್ಲು, ಗುಮ್ಮನ ಹೆದರಿಕೆ ಹಾಕಿದಾಗ ಮಲಗುವ ಮಗುವಿನಂತೆ ತೆಪ್ಪಗೆ ತಲೆದಿಂಬಿಗೆ ಒರಗಿದೆ.

ಬೆಳಗಿನ ಜಾವ ನಾಲ್ಕೊ ಐದೋ ಆಗಿರಬೇಕು, ಬಾಗಿಲ ಬೆಲ್ ಸದ್ದಾಯಿತು, "ಯಾರಿರಬಹುದು" ಅಂತ ಏಳಬೇಕನ್ನುವಷ್ಟರಲ್ಲಿ ಇವಳು ಎದ್ದು ಹೊರಟಾಗಿತ್ತು, ಬೆಲ್ ಸದ್ದಿಗೇ ಕಾಯುತ್ತ ಮಲಗೇ ಇರಲಿಲ್ಲವೇನೊ, "ಅಮ್ಮ ಅಪ್ಪ ಬಂದಿರಬೇಕು" ಅನ್ನುತ್ತ, ಎನು ಉತ್ಸಾಹ ನೋಡಿ, "ಹೂಂ... ಹಾಗಿದ್ದರೆ ಸರಿ ಬಿಡು" ಅನ್ನುತ್ತ ಮತ್ತೆ ಮುಸುಕೆಳೆದೆ. ಮಾವ ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿದ್ದರು, ಮದುವೆಗೆ ಬಂದಂತೆ. ಬಾಗಿಲು ತೆಗೆದು ಅವರ ಕೂರಿಸಿ ಬಂದವಳು. "ರೀ, ಏಳ್ರೀ, ಅಪ್ಪ ಅಮ್ಮ ಬಂದೀದಾರೆ ಇನ್ನೂ ಏನು ಮಲಗೀದೀರ" ಅಂತ ಮುಸುಕೆಳೆದಳು, "ಈಗಲೇ ಏಳಬೇಕಾ, ಸೂರ್ಯ ಕೂಡ ಕಣ್ಣು ತೆರೆದಿಲ್ಲ" ಅಂದೆ. ಇವಳ ಕಣ್ಣು ಇನ್ನಷ್ಟು ತೆರೆದು ಸೂರ್ಯನಂತೆ ಕೆಂಪಾಗಿ ಮಿನುಗಿದವು.. ಇನ್ನು ಏಳದಿದ್ರೆ ಮುಕ್ಕಣ್ಣನ ಮೂರನೇ ಕಣ್ಣು ಇವಳಿಗೂ ಇದ್ರೆ ಅದನ್ನೂ ತೆರೆದಾಳು ಅನ್ನುತ್ತಾ "ಅವರಿಗೆ ಕಾಫಿ ಟೀ ಏನಾದ್ರೂ ಮಾಡು ಹೋಗು" ಎಂದು ಹೇಳಿ ಎದ್ದೆ.

ವರಾಂಡದಲ್ಲಿ ಇವಳಪ್ಪ ಅಲಿಯಾಸ ನನ್ನ ಮಾವ, ಇವಳ ತಮ್ಮ ಕೂತಿದ್ದರು ಭಾರತ ಪಾಕಿಸ್ತಾನ ಪ್ರಧಾನಿಗಳಂತೆ ಒಬ್ಬರು ಒಂದೊಂದು ವಿರುದ್ಧ ದಿಕ್ಕಿಗೆ ನೋಡುತ್ತ. ನಾ ಸಂಧಾನಕಾರರಂತೆ ಅಲ್ಲಿ ಪ್ರವೇಶಿಸಿದೆ, ಮಾವ ಎದ್ದು "ಅಯ್ಯೊ ಇನ್ನೂ ಬೆಳಗಿನ ಜಾವ ಬೇಗ ಯಾಕೆ ಏಳೋಕೆ ಹೋದಿರಿ" ಅಂತ ಸಂಕೋಚ ಪಟ್ಟುಕೊಂಡರು, ಇಷ್ಟು ಬೇಗ ಬಂದು ಎಬ್ಬಿಸಿದಮೇಲೆ ಯಾಕೆ ಎದ್ದಿರಿ ಅಂತ ಕೇಳಿದ್ರೆ ಏನ್ ಹೇಳಬೇಕು, "ನಿಮ್ಮ ಮಗಳು ಬಿಡಬೇಕಲ್ಲ, ನನಗೇನು ಇನ್ನೂ ಹೊತ್ತೇರುವವರೆಗೆ ಮಲಗಿರ್ತಿದ್ದೆ" ಅನ್ನುತ್ತ ಪ್ರಯಾಣ ಚೆನ್ನಾಗಿತ್ತಾ ಅಂತ ಕುಶಲೋಪರಿಗಿಳಿದೆ... ಅದೇ ಅವಳ ತಮ್ಮ ಅಲ್ಲೇ ಕೂತಿದ್ದ ಒಂದು ಸಾರಿ ದುರುಗುಟ್ಟಿ ನೋಡಿದೆ, ನನ್ನ ನೀಲವೇಣಿಯ nil ವೇಣಿ ಮಾಡಿದ ಕೋಪ ಇನ್ನೂ ಇತ್ತಲ್ಲ ಮತ್ತೆ ನನ್ನವಳ ಜಡೆ ಕತ್ತರಿಸಲು ಕಾರಣನಾದ ಅವನ ಮೇಲೆ ಸಿಟ್ಟಿರದೇ ಬಿಟ್ಟೀತೇ, ಅವನಿಗೂ ಗೊತ್ತಾಗಿರಬೇಕು "ಭಾವ ಸಾರಿ... ಅದು ಅಕ್ಕನ ಜತೆ ಆಟ ಮಾಡ್ತಾ, ಅವಳ ಜಡೆ..." ಅಂತ ತಲೆ ಕೆಳಗೆ ಮಾಡಿದ. ಸ್ವಲ್ಪ ಗಂಟಲು ಸರಿ ಮಾಡಿಕೊಂಡೆ ಮಾತಾಡಲಿಲ್ಲ ಅಳಿಯ ಅಂತ ಗತ್ತು ತೋರಿಸಬೇಕಲ್ಲ. ಮಾವ "ಏನೊ ಹುಡುಗಾಟ ಹಾಗಾಯ್ತು, ಬೇಜಾರ ಮಾಡ್ಕೋಬೇಡಿ" ಅಂತಂದರು. ಪಾಪ ಎಲ್ಲಿ ಅಳಿಯಂದ್ರಿಗೆ ಬಹಳ ಸಿಟ್ಟು ಬಂದಿದೆಯೇನೊ ಅನ್ನುವಂತೆ.
"ಮದುವೆ ಆಗೊ ವಯಸ್ಸಾಯ್ತು ಇನ್ನಾದ್ರು ಹುಡುಗಾಟ ಕಮ್ಮಿ ಆಗಬೇಕಲ್ಲ" ಅಂತನ್ನುತ್ತ ಮಾವ ಅವರಿಗೆ ಫ್ರೆಷ್ ಆಗಿ ಅಂತ ಬಾತರೂಮ ಅಲ್ಲಿದೆ ಅಂತಿದ್ದೆ. ಇವಳು ಬಂದು "ಮದುವೆ ಆಗೀನೇ ನಿಮ್ಮ ಹುಡುಗಾಟ ಇನ್ನೂ ಕಮ್ಮಿಯಾಗಿಲ್ಲ, ಅವನಿಗೇನು ಹೇಳ್ತಿದೀರ" ಅಂತನ್ನುತ್ತ ಚಹ ಕಪ್ಪುಗಳ ತೆಗೆದುಕೊಂಡು ಬಂದಳು, ಎಷ್ಟೇ ಅಂದರೂ ತಮ್ಮನ ಮೇಲೆ ಪ್ರೀತಿ, ಅವನ ಪರ ವಹಿಸಿ ಮಾತಾಡದಿರುತ್ತಾಳಾ. ಹಾಗೇ ಒಮ್ಮೆ ವಾರೆ ನೋಟದಲ್ಲಿ ಅವಳತ್ತ ಸಿಟ್ಟಿನಿಂದ ನೋಡಿದೆ, ಗಂಭೀರವಾಗಿ ಹೇಳಿದ್ದನ್ನು ಅಷ್ಟು ಸಲೀಸಾಗಿ ತಳ್ಳಿಹಾಕುತ್ತಿದ್ದಳಲ್ಲ ಅನ್ನುವಂತೆ. ಅವಳಿಗೆ ಅರ್ಥವಾಗಿರಬೇಕು, ಅವನಿಗೆ ಟೀ ಕೊಡುತ್ತ "ನಿನ್ನ ಒಳ್ಳೆದಕ್ಕೇ ಹೇಳ್ತಿರೊದು ಅವರು... ಏನು?" ಅಂದ್ಲು ತಮ್ಮನಿಗೆ, ಅವನೂ ತಲೆಯಲ್ಲಾಡಿಸಿದ. ಪಾಕಶಾಲೆಯಿಂದ ಅವಳ ಅಮ್ಮ ಬಂದರು, ಆ ಹಸನ್ಮುಖಿ ಮುಖ ನೋಡುತ್ತಿದ್ದಂತೆ ಬಂದಿದ್ದ ಸಿಟ್ಟೆಲ್ಲ ಜರ್ರನೇ ಇಳಿದು ಹೋದಂತಾಯಿತು. ಎಂಥ ಪರಿಸ್ಥಿತಿಯಲ್ಲೂ ಆ ನಗು ಹಾಗೆ ಇದ್ದೆ ಇರುತ್ತದೆ, ಬಹುಶ: ಇವರಿಗೆ ಫೊಟೊ ತೆಗೆಯುವಾಗ ಯಾರೋ ಸ್ಮೈಲ್ ಪ್ಲೀಜ ಅಂತ ಹೇಳದೇ ಕೀಪ್ ಸ್ಮೈಲಿಂಗ್ ಪ್ಲೀಜ್ ಅಂದಿರಬೇಕು, ಮಾತಾಡಿದರೆ ಎಲ್ಲಿ ಮುತ್ತು ಉದುರೀತು ಅಂತ ಎಲ್ಲೊ ಎರಡು ಮಾತು ಮತ್ತೆ ಚಿಕ್ಕ ಕಿರುನಗು, ನನ್ನಾಕೆ ಥೇಟ ಇದೇ ಹೋಲಿಕೆ ಅದಕ್ಕೇ ಅಲ್ವೇ ನನಗೇ ಇಷ್ಟವಾಗಿದ್ದು. ಅವರ ನೋಡುತ್ತಿದ್ದಂತೆ ನನ್ನ ಮುಖದಲ್ಲೂ ಒಂದು ಮುಗುಳ್ನಗು ಮಿಂಚಿತು ಪರಿಸ್ಥಿತಿ ತಿಳಿಯಾಯ್ತು.

ಚಹ ಎಲ್ಲ ಆಯ್ತು, ಸ್ನಾನಕ್ಕೆ ಹೊರಟ ತಮ್ಮನಿಗೆ, "ಕಡಲೇ ಹಿಟ್ಟು ಇಟ್ಟೀದೀನಿ, ಅದನ್ನೇ ಹಚ್ಕೋ ಮುಖ ಸ್ವಲ್ಪ ಖಳೆ ಬರತ್ತೆ" ಅಂದ್ಲು. ಮುಸಿ ಮುಸಿ ನಕ್ಕೆ... "ಯಾಕ್ರೀ" ಹುಬ್ಬು ಗಂಟಿಕ್ಕಿದಳು, "ಆ ಮುಖಕ್ಕೆ ಏನು ಹಚ್ಚಿದರೂ ಅಷ್ಟೇ" ಅಂದೆ . "ಯಾಕ್ರೀ ನನ್ನ ತಮ್ಮನಿಗೆ ಏನಾಗಿದೆ" ಅಂತ ಜಗಳಕ್ಕೆ ಬಂದಳು, "ಎಯ್ ನಿನ್ನ ತಮ್ಮ ಹೃತಿಕ, ಹೃತಿಕ ಇದ್ದ ಹಾಗೇ ಇದಾನೆ" ಅಂದೆ. "ಹೃತಿಕ ಅಂತ ಹೇಳಿದ್ರೆ ಬಿಡ್ತೀನಿ ಅಂತ ಅನ್ಕೊಂಡಿದೀರಾ, ನನ್ನ ಮುದ್ದಿನ ಹೃತಿಕ್ ನೀವೇ ಮಾತ್ರ" ಅಂತನ್ನುತ್ತ ಹತ್ತಿರ ಬಂದಳು, ಅದ್ಯಾವ ಆಂಗಲ್ಲಿನಲ್ಲಿ ಅವಳಿಗೆ ಹಾಗೆ ಕಂಡೆನೊ ದೇವರೇ ಬಲ್ಲ. ಅವರಮ್ಮ ಅಲ್ಲಿ ಬಂದದ್ದರಿಂದ ಅಲ್ಲಿಂದ ಕಾಲು ಕಿತ್ತಳು, "ಅತ್ತೆ, ಮತ್ತೇನು ಸೊಸೆ ಬರ್ತಾಳೆ ಮನೆಗೆ ಇನ್ನ" ಅಂತ ಮಾತಿಗೆಳೆದೆ "ಹೂಂ ಏನು ಎಲ್ಲಾ ಹೊಂದಿಕೊಂಡು ಹೋದ್ರೆ ಸಾಕು, ಎಲ್ಲಾ ಅವನಿಷ್ಟ, ನೀವೆ ಮುಂದೆ ನಿಂತು ಮಾಡಬೇಕು" ಅಂತ ನಮ್ಮ ಮೇಲೆ ಭಾರ ಹಾಕಿದ್ರು. ಸ್ನಾನ ಮುಗಿಸಿ ಅವನೂ ಹೊರಬಂದ, "ನಿನ್ನ ತಮ್ಮ ಲಕ ಲಕ ಹೊಳೀತಾ ಇದಾನೇನು ನೋಡು" ಅವಳ ಕರೆದೆ, ಅತ್ತೇ ಸೋಫಾ ಮೇಲೆ ಆಸೀನರಾದರು ಮತ್ತದೇ ಮುಗುಳ್ನಗುವೊಂದಿಗೆ. "ಅತ್ತೆ, ನನಗೊಬ್ಳು ಬಾಬ ಕಟ್ ಮಾಡಿದ ಹುಡುಗಿ ಗೊತ್ತೀದ್ದಾಳ ನೋಡ್ತೀರಾ" ಅಂತ ಕಾಲೆಳೆದೆ, ಅಲ್ಲಿಂದಲೇ, ಅವ ಕೂಗಿದ "ಭಾವ ಬೇಡ ಭಾವ", ಇವಳು ಬಂದು "ರೀ ನಿಮ್ದು ಅತಿಯಾಯ್ತು, ಅವನ ಮೇಲೆ ಯಾಕ್ರೀ ನಿಮಗೇ ಅಷ್ಟು ಸಿಟ್ಟು, ಪಾಪ" ಅಂದಳು. "ಏನೊಪ್ಪಾ ನನಗೆ ಗೊತ್ತಿರೊ ಹುಡುಗಿ ಬಗ್ಗೆ ಹೇಳಿದೆ" ಅಂದೆ. "ಸಂಪ್ರದಾಯ ಮನೆತನದ ಸುಲಕ್ಷಣ ಹುಡುಗಿ ಯಾರಾದ್ರೂ ಗೊತ್ತಿದ್ರೆ ಹೇಳಿ" ಅಂದ್ಲು "ಹೂಂ ಸ್ವಲ್ಪ ಸ್ಮಾರ್ಟ್ ಆಗಿರೊ ಕೆಲಸ ಮಾಡ್ತಿರೋ ಹುಡುಗಿ ನೋಡ್ತಿದೀವಿ" ಅಂತ ಅವರಪ್ಪ ಬೇರೆ ದನಿಗೂಡಿಸಿದರು, "ಸ್ಮಾರ್ಟ್ ಹುಡುಗೀ ಬೇಕೇನೊ" ಅಂದೆ "ಹೂಂ" ಅನ್ನುತ ನಾಚಿದ "ಐಷ್ವರ್ಯಾ ರೈ ಗೆ ಕೇಳಬೇಕೆಂದ್ರೆ ಮದುವೆ ಆಗೊಯ್ತು." ಅಂತಿದ್ದಂಗೆ "ಪಾಪ ನಿಮಗಾಗೇ ಕಾಯ್ತಾ ಇದ್ಲು, ನೀವ್ ನನ್ನ ಮದುವೆ ಆದದ್ದು ಗೊತ್ತಾದ ಮೇಲೆ ಅವಳು ಬೇರೆ ಮದುವೆ ಆಗಿದ್ದು.. ಪ್ಚ್!" ಅಂತ ಇವಳಂದಳು, ಎಲ್ರೂ ನಕ್ರು.

ರೆಡಿಯಾದೆ, ಅವಳ ತಮ್ಮನಿಗಿಂತ ನಾನೇ ಟಿಪ್ ಟಾಪ್ ಆಗಿ, ಇವಳು ಅಸಹನೆಯಿಂದಲೇ ನೋಡುತ್ತಿದ್ದಳು ನಾ ಒಳಗೊಳಗೇ ನಗುತ್ತಿದ್ದೆ, ಮೊದಲ ಮನೆಯಲ್ಲಿ ಬರ್ಜರಿ ಸ್ವಾಗತವಾಯಿತು, ಭಲೇ ಶ್ರೀಮಂತರು ಅನಿಸತ್ತೆ ಒಬ್ಬಳೆ ಮಗಳು ಕಾರು ಬಂಗಲೆ ಎಲ್ಲ ಇದೆ ಅಂತ ಮೊದಲೇ ಕೇಳಿದ್ದೆ, ಯಾಕೊ ಅಷ್ಟು ಶ್ರೀಮಂತರು ಅಂದಿದ್ದಕ್ಕೆ ಎಲ್ಲ್ ಸಪೊರ್ಟ ಇರತ್ತೆ ಭಾವ ಅಂತ ಬೇರೆ ಇವನು ಹೇಳಿದ್ದ, ಮದುವೇ ಆಗೊನು ಅವನು ತಾನೆ ನನಗೇನು ಅಂತ ಹೊರಟಿದ್ದೆ, ಹುಡುಗಿ ಬಂದು ಕೂತಳಂತೆ ಕಾಣತ್ತೆ "ಎಲ್ಲೇ ಹುಡುಗಿ ಅಂದೆ", ಅದೋ ಅಲ್ಲಿ ಅಂತ ತೋರಿಸಿದಳು ಶ್ರೀಮಂತರು ತಿನ್ನೋಕೆ ಏನೂ ಕಡಿಮೆ ಮಾಡಿದಂತಿರಲಿಲ್ಲ, ಹುಡುಗಿಗೆ ಪಾಪ ಕೂರಲು ಚೇರು ಕೂಡ ಸಾಲುತ್ತಿರಲಿಲ್ಲ.
"ನಾನಂತೂ ಹುಡುಗಿಯ ಅಮ್ಮ ಇರಬೇಕು ಅನ್ಕೊಂಡಿದ್ದೆ" ಅಂದೆ, ಇವಳು ಬಂದ ನಗು ತಡೆದುಕೊಂಡು "ರೀ ಸುಮ್ನಿರಿ" ಅಂದ್ಲು "ಅಲ್ಲ ಕಣೆ ಹುಡುಗೀ ಜತೆ ಕ್ರೇನ ಒಂದು ಫ್ರೀಯಾಗಿ ಕೊಡ್ತಾರಾ ಕೇಳು ನಿನ್ನ ತಮ್ಮ ಅಡಿಯಲ್ಲಿ ಸಿಕ್ರೆ ಎತ್ತೋಕೇ ಬೇಕಾಗತ್ತೆ" ಅಂದೆ. ಮಾವನಿಗೆ ಇಷ್ಟ ಇತ್ತು ಆಸ್ತಿ ಪಾಸ್ತಿ ಎಲ್ಲ ನೋಡಿ, ಅವಳಿಗಾಗೇ ಮನೆ ತುಂಬಾ ಸೊಫಾಗಳನ್ನೇ ಹಾಕಲು ಕೂಡ ಯೋಚಿಸಿರಬೇಕು!, ಇವನಿಗೆ ಹುಡುಗಿ ಹೇಗೆ ತಾನೇ ಇಷ್ಟವಾದಾಳೂ.

ಎರಡನೇ ಮನೆ ಎಲ್ಲಿ ಅಂದೆ, ಮನೆ ಅಲ್ಲ ಹೊಟೇಲು ಅಂದ್ಲು "ಹಾಂ ಹೊಟೇಲಾ" ಅಂದೆ "ರೀ ಹುಡುಗೀ ಒಬ್ಳೇ ಬರ್ತಾ ಇದಾಳೆ ಅವಳಿಗೆ ಓಕೇ ಆದ್ರೆ ಆಮೇಲೆ..." ಅದೂ ಸರಿ, ಅಂತ ಅಲ್ಲಿ ಹೋದರೆ ಕಾಲ ಮೇಲೆ ಕಾಲು ಹಾಕಿ ಮೊಬೈಲು ಅತ್ತಿಂದಿತ್ತ ತಿರುಗಿಸುತ್ತ ಕೂತ ಹುಡುಗಿ ಕಾಣಿಸಿತು, ಹುಡುಗ ಅವಳ ಮಾತಾಡಿಸುವ ಮುಂಚೆ ಅವಳೇ ಅವನ ಮೇಲೆ ಪ್ರಶ್ನೆಗಳು ಸುರಿಮಳೆಗರೆದಳು, ನನ್ನ ಕೆಲಸದ ಇಂಟರವೀವ್ ಕೂಡ ಅದಕಿನ್ನ ಪಾಡು. ನಮಗೇನು ಕೆಲಸ ಅಲ್ಲಿ ಅನ್ನುವಂತೆ ಟೆನ್ನಿಸ ನೋಡುವ ಹಾಗೆ ಅವಳನ್ನೊಮ್ಮೆ ಅವನನ್ನೊಮ್ಮೆ ನೋಡುತ್ತ ಕೂತದ್ದಾಯಿತು, ಅವರದೇ ಮಾತುಕತೆ ಮುಗಿದಾದ ಮೇಲೆ ಇನ್ನು ನೀವೇನಾದ್ರೂ ಮಾತೋಡೊದು ಇದೆಯಾ ಅಂತ ಕೇಳಿದ್ದಕ್ಕೆ, ಇವಳು "ಹೊರಡೋಣವಾ" ಅಂತಂದಳು. "ಐ ವಿಲ ಗೆಟ್ ಬ್ಯಾಕ ಟು ಯು(ನಾ ನಿಮಗೆ ಆಮೇಲೆ ಏನಂತ ಹೇಳ್ತೀನಿ)" ಅಂತ ಅ ಹುಡುಗಿ ಹೊರಟಳು ಥೇಟ್ ನಮ್ಮ ಕೆಲಸದ ಇಂಟರವೀವಗಳು ಆದ ಮೇಲೆ ಹೇಳುವ ಮ್ಯಾನೇಜರಗಳಂತೆ. ಅವನೋ ಹಿರಿ ಹಿರಿ ಹಿಗ್ಗಿದ್ದ, "ಭಾವ ಏನ್ ಕಾನ್ಫಿಡೆನ್ಸ(ಆತ್ಮವಿಶ್ವಾಸ) ಇತ್ತು ಅವಳಲ್ಲಿ ನೋಡಿದ್ರಾ" ಅಂತಂದ. ನಾನೇನೋ ಹೇಳೊ ಮುಂಚೆ ಅವರಮ್ಮ "ನಮ್ಮನೆಗೆ ಸರಿ ಹೋಗಲ್ಲ ಬಿಡು" ಅಂತ ತಳ್ಳಿಹಾಕಿದ್ರು.

"ಇನ್ನೆಲ್ಲಿ ಮನೆ ಹೊಟೇಲು ಆಯ್ತು ಪಾರ್ಕಾ" ಅಂದೆ. ಅವಳು "ನೀವು ನಿಮಗೆ ಬೇಕಿದ್ರೆ ಅಲ್ಲೇ ಹುಡುಕಿಕೊಳ್ಳಿ" ಅನ್ನುತ್ತಲೇ ಮತ್ತೊಂದು ಮನೆ ಮುಂದೆ ನಿಂತಿದ್ದೆವು ಪಕ್ಕ ಸಂಪ್ರದಾಯಸ್ತ ಕುಟುಂಬವಂತೆ, ಮನೆಗೆ ಹೋಗುತ್ತಲೇ ಕಾಲು ತೊಳೆಯಲು ನೀರು ಕೊಟ್ಟರು, ಇವನು ಸಾಕ್ಸ ಬಿಚ್ಚಲ್ಲ ಅಂತ ಹಾಗೆ ಒಳ ನಡೆದ. ಹಳೆ ಕಾಲದ ಮನೆ, ನನ್ನ ಮುಂದೆ ಒಂದು ಚೇರು ತಂದಿಟ್ಟರು, ಅದು ನನಗಲ್ಲ ಅನ್ನುವಂತೆ ಆ ಕಡೆ ದೂರ ಸರಿದು ನಿಂತೆ, ಮತ್ತೆ ಅಲ್ಲಿ ನನ್ನ ಮುಂದೆ ತಂದು ಪ್ರತಿಷ್ಟಾಪಿಸಿದ್ರು, ನನಗೋ ಗೊತ್ತಾಗಿ ಹೋಯ್ತು ನನ್ನೇ ವರ ಅಂತ ತಿಳಿದಿದ್ದಾರೆ ಅಂತ, "ಬಾರೋ ಕೂತ್ಕೊ ಅಂತ ಅವನ ಕರೆದೆ". "ಅವರು ಅಲ್ಲಿ ಕೂರ್ತಾರೆ, ನೀವು ಕೂತ್ಕೋಳ್ಳಿ" ಅಂತ ಹುಡುಗಿಯ ಅಪ್ಪ. ವರನ ಜತೆ ವರನ ಗೆಳೆಯ ಯಾರೊ ಬಂದಿರಬೇಕು ಅಂತ ಅವರನಿಸಿಕೆ, ಮತ್ತಿನ್ನೆನು, ಜೀನ್ಸು ಹಾಕಿಕೊಂಡು ಸಾಕ್ಸು ಕೂಡ ಕಳೆಯದೆ ಹಾಗೆ ಅವರ ಮನೆಗೆ ನುಗ್ಗಿದ ಇವನ್ಯಾರೊ ಬೇರೆ ಇರಬೇಕು ಅಂತ ಎಣಿಸಿದ್ದರೆ ಅವರದೇನು ತಪ್ಪು, ಅಷ್ಟರಲ್ಲಿ ಇದನ್ನು ಗಮನಿಸಿದ ನನ್ನಾಕೆ "ಏನ್ರೀ ಇಲ್ಲಿ ಬನ್ರಿ" ಅಂತ ಕರೆದಳು, "ನನ್ನ ಹೆಂಡತಿ ಕರೀತಿದಾಳೆ ಬಂದೆ" ಅಂತ ಅವನ ಕೂರಿಸಿ ಅವಳ ಪಕ್ಕ ಹೋಗಿ ಕೂತೆ ಆಗಲೇ ಅವರಿಗೆ ಗೊತ್ತಾಗಿದ್ದು, ಅಕ್ಕ ಭಾವ ಅಂತ. ಅಂತೂ ನೋಡಿಯಾದ ಮೇಲೆ, ಹೊರಬಂದರೆ, ಇವಳು ನನ್ನ ತಿವಿಯುತ್ತಾ "ಮೊದಲೇ ಹೇಳಿದೆ ನೀವ್ ಜಾಸ್ತಿ ಏನ್ ಟಿಪ್ ಟಾಪ್ ಆಗಿ ತಯ್ಯರಾಗೋದು ಬೇಡ ಅಂತ, ನೀವ್ ಕೇಳಬೇಕಲ್ಲ" ಅಂತ ಬಯ್ಯುತ್ತಿದ್ಲು, "ನೋಡಿದ್ಯಾ ನನಗಿನ್ನೂ ಮದುವೆಯಾಗಿದೆ ಅಂತ ಯಾರಿಗೂ ಅನಿಸಲ್ಲ" ಅಂತ ನಾ ಖುಷಿಯಾಗುತ್ತಿದ್ದೆ, ಆದರೆ ಇನ್ನು ಮುಂದೆ ನಾನು ಅವರೊಂದಿಗೇನು ಬರ್‍ಒದು ಬೇಡ ಅಂತ ಅವಳು ತೀರ್ಮಾನ ಮಾಡಿ ಆಗಿತ್ತು. ಒಳ್ಳೆದೇ ಅಯ್ತು ಅಂತ ಮನೆ ಕಡೆ ಹೊರಟೆ, ಅವರಮ್ಮನಿಗೆ ಬಹಳ ಹಿಡಿಸಿತ್ತು ಈ ಸಂಬಂಧ, "ಮನೇನಾ ಸರ್ಕಸ್ ಕಂಪನೀನ ಅದು" ಅಂತ ಆ ಅವಿಭಕ್ತ ಕುಟುಂಬ ಒಲ್ಲದಾಗಿದ್ದ ಮಗ. ನಾನನ್ಕೋತಾ ಇದ್ದೆ ಎಲ್ರಿಗೂ ಹಿಡಿಸಿದ್ರೂ ಅವರೇ ಮೊದಲು ಒಪ್ಪೋದಿಲ್ಲ ಹುಡುಗನ್ನ ಅಂತ...

ಇನ್ನೂ ನಾಲ್ಕೈದು ನೋಡಿ ಇವರು ಮನೆಗೆ ಬಂದಾಗ ರಾತ್ರಿಯಾಗಿತ್ತು, ಒಂದೂ ಇಷ್ಟವಾಗಿರಲಿಲ್ಲ, ಒಬ್ಬಳ ಮೂಗು ಸರಿ ಇಲ್ಲ ಅಂದ್ರೆ ಇನ್ನೊಬ್ಬಳ ನಡೆ ಸರಿ ಇಲ್ಲ, ಎಲ್ಲ ಸರಿ ಇದೆ ಎಂದಾದರೆ ಮನೆ ಚೆನ್ನಾಗಿಲ್ಲ, ಇನ್ನೇನು ಇಷ್ಟವಾದ್ರೆ ಅವರ ಒಪ್ಪಲಿಕ್ಕಿಲ್ಲ. ಅಂತೂ ಹುಡುಕಾಟ ಇನ್ನೂ ಜಾರಿಯಾಗಿರುವಂತೆ ಕಂಡಿತು.

ಈ ಒಳ್ಳೆ ಕನ್ಯೆಗಾಗಿ ಹುಡುಕಾಟದ ಕಾಟ ಯಾರಿಗೂ ತಪ್ಪಿದ್ದಲ್ಲ, ಎಲ್ಲೊ ಮೊದಲೇ ಮನೆಯಲ್ಲೆ ಸಂಬಂಧಿಕರ ಹುಡುಗಿ ಅಂತ ನಿರ್ಧರಿಸಿದ್ದರೆ, ಇಲ್ಲ ಹುಡುಗ ತಾನೆ ಯಾರನ್ನೋ ಹುಡುಕಿಕೊಂಡ ಹೊರತು ಇದೆಲ್ಲ ಆಗೋದೆ. ಎಲ್ಲರ ಇಷ್ಟ ಕಷ್ಟಗಳ ಹೊಂದಾಣಿಕೆ ಮಾಡಿ ಹೆಂಡತಿ ಅಂತ ಹುಡುಗನಿಗೆ ಸಿಗುವ ಹೊತ್ತಿಗೆ ರಾಮಾಯಣ ಮಹಾಭಾರತ ಕಥೆಗಳಾಗಿರುತ್ತವೆ ಮನೆಗಳಲ್ಲಿ, ಯಾಕೆಂದರೆ ಮನೆಗೆ ಬರುವವಳು ಬರೀ ಅವನ ಹೆಂಡ್ತಿಯಾಗಿರದೇ ಮನೆಯ ಸೊಸೆ ಕೂಡ ಆಗಿರುವುದರಿಂದ. ಈಗೇನು ಮ್ಯಾಟ್ರಿಮೋನಿಯಲ ಅಂತ ವೆಬಸೈಟುಗಳು, ಬ್ರೋಕರಗಳು ಬಂದೀದಾರೆ ಅವರಿಗೆ ದುಡ್ಡು ಸುರಿದರೆ ಸಾಕು ನಿಮ್ಮ ಎತ್ತರ, ತೂಕ, ಅಳತೆ, ಸ್ಟೇಟಸ್ಸು, ಜಾತಿ, ಊರು ಎಲ್ಲ ಸೇರಿ ಹೊಂದಿಕೆಯಾಗುವಂಥ ಹತ್ತಿಪ್ಪತ್ತು ಹುಡುಗಿಯರ ಹುಡುಕಿ ಕೊಟ್ಟುಬಿಡುತ್ತಾರೆ, ಅದರಲ್ಲೇ ಅಳೆದು ಸುರಿದು ಒಂದು ಆಯ್ಕೆ ಮಾಡಿಕೊಂಡು ಬಿಟ್ಟರೆ ಮದುವೆ ಕೂಡ ಅವರೇ ಮಾಡಿಸಿಬಿಡುತ್ತಾರೆ, ಸಧ್ಯ ಮಕ್ಕಳು ಕೂಡ ಹುಟ್ಟಿಸಿ ಕೊಡುತ್ತಿಲ್ಲ!. ಮೊದಲೇನೊ ಒಂಥರಾ ಚೆನ್ನಾಗಿತ್ತು ತಮ್ಮ ಮುಂದೆ ಬೆಳೆದ ಹುಡುಗ ಹುಡುಗಿಯರಲ್ಲಿ ಯಾರಿಗೆ ಯಾರು ಸರಿ ಹೋಗಬಹುದು ಅಂತ ಹಿರಿಯರು ನಿರ್ಧರಿಸಿ ಮದುವೆ ಮಾಡಿ ಬಿಡುತ್ತಿದ್ದರು (ಅದೇ ಚೆನ್ನಾಗಿತ್ತು ಅಂತಲ್ಲ, ಅದರಲ್ಲೂ ಸಾಧಕ ಬಾಧಕಗಳಿದ್ದವು).
ಈಗೇನೊ ಚಾಟಿಂಗನಲ್ಲಿ ಸಿಕ್ಕು, ಒರ್ಕುಟನಲ್ಲಿ ಫೋಟೊ ನೋಡಿ, ಫೋನಲ್ಲಿ ಫಿಕ್ಸ್ ಮಾಡಿ, ಹೊಟೇಲಲ್ಲಿ ಮದುವೆಯಾಗಿ ಬಿಡ್ತಾರೆ.

ಅವರು ಮತ್ತೆ ಊರಿಗೆ ಹೊರಟು ರೆಡಿಯಾಗಿದ್ದರು, ಅಲ್ಲಿ ಮತ್ತಿನ್ನೂ ನೋಡೊದಿದೆ ಅಂತ. "ಹೀಗೇ ಹುಡುಕುತ್ತ ಹೋದ್ರೆ ಮುದುಕ ಆಗ್ತೀಯ, ನೀನೇ ಎಲ್ಲೊ ಒಂದು ನೋಡ್ಕೊಂಡು ಬಿಡು" ಅಂತಂದೆ "ಅದೇ ಒಳ್ಳೆದು ಅನಿಸ್ತಿದೆ" ಅಂದ, ಇವಳು "ರೀ ನಾನಿಲ್ವಾ ಹುಡುಕಿ ಮದುವೆ ಮಾಡ್ತೀನಿ ನನ್ನ ತಮ್ಮನಿಗೆ, ನೋಡ್ತಿರಿ" ಅಂದ್ಲು. ಅವರ ಬೀಳ್ಕೊಟ್ಟು ಮನೆಯೊಳಗೆ ಬಂದ್ವಿ ಸುಸ್ತಾಗಿತ್ತು ಹಾಗೆ ಹಾಸಿಗೆಗೆ ಜಾರಿದಳು, ಪಕ್ಕದಲ್ಲೇ ಕೂತ ನನ್ನ ಕೈ ಹಿಡಿದು "ರೀ ಏನೊ ಹೇಳ್ಬಿಟ್ಟೆ ನಾನಿದೀನಿ ಹುಡುಕ್ತೀನಿ ಅಂತ, ಎಲ್ರೀ ಹುಡುಕೋದು" ಅಂತ ಆತಂಕದಿಂದ ನುಡಿದಳು, ಅವಳಿಗೆ ನಿಜವಾಗಲೂ ಅದೊಂದು ಚಿಂತೆಯಾಗಿತ್ತು. "ಯಾಕೇ" ಅಂದೆ, "ಅಲ್ಲ ಈಗಾಗಲೇ ಹತ್ತಿಪ್ಪತ್ತು ನೋಡಿ ಆಯ್ತು ಯಾವುದು ಸರಿಹೋಗಿಲ್ಲ" ಅಂದ್ಲು. ಒಂದು ಹೇಳ್ತೀನಿ ಕೇಳ್ತೀರ ಅಂದೆ, ಏನು ಅನ್ನುವಂತೆ ನನ್ನೆಡೆಗೆ ಬಂದಳು ತೊಡೆ ಮೇಲೆ ತಲೆಯಿರಿಸಿದಳು, "ಮೊದಲು ನಿಮ್ಮ ಅಗತ್ಯ ಬೇಡಿಕೆಗಳನ್ನು ಕಡಿಮೆ ಮಾಡಿಕೊಳ್ಳಿ ಎಲ್ಲಾ ಸರಿ ಹೊಂದುವ ಹುಡುಗಿ ಸಿಗಲಿಕ್ಕಿಲ್ಲ, ಎರಡನೇದಾಗಿ ಸಿಕ್ಕ ಸಿಕ್ಕ ಹಾಗೆ ಗೊತ್ತಾದ ಎಲ್ಲವನ್ನೂ ನೋಡುತ್ತ ತಿರುಗಿದ್ರೆ, ಹೀಗೆ ಬ್ರೋಕರಗಳ ಹಿಂದೆ ಸುತ್ತುತ್ತಲೇ ಇರುತ್ತೀರಿ, ಅಲ್ಲೆ ಪರಿಚಯಸ್ತರ, ಸಂಬಂಧಿಗಳಲ್ಲಿ ಯಾರಾದರೂ ಮೊದಲಿಂದಲೂ ಗೊತ್ತಿರುವವರು ಇದ್ದರೆ ಪೂರ್ವ ತಪಾಸಣೆ ನಂತರ ಮುಂದುವರೆಯಿರಿ, ಸಿಕ್ತಾರೆ ಬ್ರಹ್ಮ ಎಲ್ಲೊ ಒಂದು ಜೋಡಿ ಸೃಷ್ಟಿ ಮಾಡಿಟ್ಟಿರ್ತಾನೆ" ಅಂದೆ "ನಿಮಗೆ ಮಾತ್ರ ನಾನು ಎಷ್ಟು ಸಲೀಸಾಗಿ ಸಿಕ್ಕೆ" ಅಂದ್ಲು "ಏನ್ ಮಾಡೊಡು ಬಾ ಇನ್ನೂ ಹುಡುಕಿದ್ರೆ ಮಿಸ್ ಇಂಡಿಯಾನೇ ಸಿಕ್ಕಿರೋಳು" ಅಂದೆ, "ಕನ್ನಡೀಲಿ ಮುಖಾ ನೊಡ್ಕೊಳ್ಳಿ, ನಾನೇ ಇರಲಿ ಕ್ಯೂಟ್ ಟೆಡ್ಡಿಬಿಯರ ಇದ್ದ ಹಾಗೆ ಇದೀರ ಅಂತ ಒಪ್ಕೊಂಡಿದ್ದು" ಅಂದ್ಲು. ನಿಜ ಹೇಳ್ಬೇಕು ಅಂದ್ರೆ ನನ್ನ ಪಾಲಿಗೆ ಸಿಕ್ಕ ಇವಳೆ ವಿಶ್ವ ಸುಂದರಿ ನನಗೆ. "ಅದಾಯ್ತು ನೋಡು ನಿನ್ನ ತಮ್ಮನಿಗೆ ಎಲ್ಲೂ ಸಿಗದಿದ್ರೆ ಹೇಳು ಆ ಬಾಬ್ ಕಟ ರೋಸಿನಾ ಬೇಕಾದ್ರೆ ಒಪ್ಸೊದು ನನ್ನ ಜವಾಬ್ದಾರಿ" ಅಂದೆ. "ಅವನಿಗೆ ನೀಲವೇಣಿನಾ ತಂದು ಮದುವೆ ಮಾಡಿಸ್ತೀನಿ" ಅಂದ್ಲು. "ತಿರುಪತಿಗೆ ಮುಡಿ ಕೊಡು ಅಂತ ಅವಳ ತಲೆ ನಾ ತುಂಬ್ತೀನಿ" ಅಂದೆ. "ರೀ ಯಾಕ್ರೀ ಅವನ ಮೇಲೆ ಅಷ್ಟು ಸಿಟ್ಟು, ಅವನ ತಪ್ಪಿಂದ ನನ್ನ ಜಡೆ ಕಟ ಆಗಿದ್ರೂ ಈಗ ಮತ್ತೆ ಬೆಳೆದಿದೆ ಗೊತ್ತ" ಅಂತ ನನ್ನ ಮುಖಕ್ಕೆ ಅದರಲ್ಲಿ ಕಚಗುಳಿಯಿಟ್ಟಳು, ವೇಣಿಯೊಂದಿಗೆ ಆಟಕ್ಕಿಳಿದೆ. ಹೀಗೇ ಎಲ್ಲೊ ಹುಡುಕಾಟದಲ್ಲಿ ಮತ್ತೆ ಸಿಗೋಣ..


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/hudukaata.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, July 5, 2009

ಹಾgay ಸುಮ್ಮನೇ...

"ಛೀ ಛೀ ಜಗತ್ತು ಹಾಳಾಗ್ತಾ ಇದೆ, ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ, ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ" ಅಂತೇನೊ ಬಡಬಡಿಸುತ್ತ ಪೇಪರು ಆಕಡೆ ಬೀಸಾಕಿ ಪಾಕಶಾಲೆಗೆ ನಡೆದಳು, ಅಲ್ಲಪ್ಪ ಜಗತ್ತಿನ ಯೋಚನೆ ಇವಳಿಗ್ಯಾಕೆ ಬಂತು ಅಂತೀನಿ, ಅದರಲ್ಲೂ ರಾಮ ಕೃಷ್ಣ ಅಂತಾ ಬೇರೆ ಎಲ್ಲ ಹಳೆ ಕಾಲದ ಮನೆ ಮೂಲೆ ಹಿಡಿದು ಕೂತಿರುವ ಮುದುಕಿಯಂತೆ ಇವಳ್ಯಾಕೆ ಮಾತಾಡ್ತಾ ಇದಾಳೆ, ನನ್ನ ಚಿರಯೌವನ ಚೆಲುವೆಗೇನಾದ್ರೂ ವಯಸ್ಸಾಯ್ತಾ, ಅಂತ ಸಂಶಯವಾಯ್ತು. "ಏನೇ ಇದೆ ಪೇಪರಿನಲ್ಲಿ" ಅಂತನ್ನುತ್ತ ಕೆಳಗೆ ಬಿದ್ದಿದ್ದ ಪೇಪರು ಎತ್ತಿ ನೋಡಿದೆ, ನನಗೇನೂ ಅದರಲ್ಲಿ ಅಂಥದ್ದು ವಿಶೇಷವೇನೂ ಕಾಣಲಿಲ್ಲ.

ಪಾಕಶಾಲೆಯತ್ತ ಹೆಜ್ಜೆ ಹಾಕುತ್ತಾ, "ಏನು ಕಲಿಯುಗ, ಕಲ್ಕಿ ಅಂತೆಲ್ಲ ಅಂತಿದ್ದೆ ಏನಾಯ್ತು, ಪೇಪರಿನಲ್ಲೇನಿದೆ ಅಂಥದ್ದು" ಅಂದೆ, "ಯಾಕೆ ಕಾಣಿಸಲಿಲ್ವಾ, ಅದೇನೊ ಗೇ ರೈಟ್ಸ ಅಂತೆ, 377 ಕಲಂ ತೆಗೆದು ಹಾಕಿ ಕಾನೂನು ಸಮ್ಮತ ಮಾಡ್ತಾರಂತೆ... ಕೃಷ್ಣ, ಕಲಿಯುಗ ಅಧಪತನಕ್ಕಿಳಿದಾಗ ಕಲ್ಕಿಯಾಗಿ ಬಂದು ವಿಶ್ವವನ್ನು ಪುನ: ರಚಿಸುತ್ತೇನೆ ಅಂತ ಹೇಳಿದ್ದನಂತೆ, ಇನ್ನೂ ಯಾಕೆ ಕಾಯ್ತಿದಾನೆ ಅಂತ" ಕೈಲಿದ್ದ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿದಳು, ನಾನೊಂದು ಚಿಕ್ಕ ಮುಗುಳ್ನಗು ಕೊಟ್ಟು ಹೊರಗೆ ಬಂದೆ, "ಅಲ್ರೀ ಈ ಜನರಿಗೆ ಬೇರೆ ಕೆಲಸಾನೆ ಇಲ್ವಾ" ಅಂತನ್ನುತ್ತಾ ಮತ್ತೆ ಹೊರಗೆ ಬಂದಳು, "ಕೆಲವರಿಗೆ ಅದೇ ಕೆಲಸ" ಅಂದೆ. ಅದೇನು ಹಾಗಂದ್ರೆ ಅನ್ನೊವಂತೆ ನೋಡಿದ್ಲು, "ಹೀಗೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂತ ಹೇಳಿಕೊಂಡು ಯಾವುದಾದರೂ ಕೆಲಸಕ್ಕೆ ಬಾರದ ವಿಷಯ ಎತ್ತಿ, ಸಮಾಜ ಸೇವೆ ಅಂತ ಸಮಾಜ ಹಾಳು ಮಾಡೊ ಕೆಲಸ ಮಾಡೋದು" ಅಂದೆ. "ಆದರೂ ಕೆಲವು ಒಳ್ಳೆ ಕೆಲ್ಸಾನೂ ಮಾಡ್ತಿವೆ ಅಲ್ರೀ" ಅಂದ್ಲು, "ನಾನೆಲ್ಲಿ ಇಲ್ಲ ಅಂದೆ, ಅದಕ್ಕೆ "ಕೆಲ" ಅಂತ ಹೇಳಿದ್ದು, ಆದರೆ ಒಳ್ಳೇದಕ್ಕಿಂತ ಇಂಥದ್ದೇ ಜಾಸ್ತಿ ಪ್ರಚಾರ ಆಗಿಬಿಡ್ತದೇ ಏನು ಮಾಡೊದು" ಅಂದೆ. "ಈ ಆಧುನಿಕತೆ ಅಂತ ಎಲ್ಲೊ ಹೋಗ್ತಾ ಇದೀವಿ ಏನೊ" ಅಂದ್ಲು, "ಹಾಗೆ ನೋಡಿದ್ರೆ ಇದೇನು ಆಧುನಿಕ ಜಗತ್ತಿನಲ್ಲೇ ಬಂದದ್ದೇನಲ್ಲ, ಪುರಾತನ ಕಾಲದಲ್ಲೂ ಇತ್ತು ಆದರೆ ಪಾಪ ಪ್ರಜ್ಞೆಯಿಂದ ಬಹಳ ಬೆಳಕಿಗೆ ಬಂದಿರಲಿಲ್ಲ ಅಷ್ಟೇ" ಅಂದೆ. "ಮತ್ತೆ ಮುಂದೇನು" ಅಂದಳು, "ಮುಂದೇನು ಅಂದ್ರೆ, ನಿನಗೆ
ಮಗ ಹುಟ್ಟಿ ಮದುವೆ ವಯಸ್ಸಿಗೆ ಬಂದಾಗ ಅಮ್ಮ ನಾನೊಂದು ಹುಡುಗನ್ನ ಇಷ್ಟಪಡ್ತಿದೀನಿ ಅಂತ ಹೇಳದಿರಲಿ ಅಂತ ಬೇಡಿಕೊ ಅಷ್ಟೇ" ಅಂದೆ. "ಇನ್ನೇನು ಯಾವುದೋ ಹುಡುಗಿ ಇಷ್ಟ ಪಡ್ತಿದೀನಿ ಅಂದ್ರೆ ಏನು ಕುಲ ಗೊತ್ರಾ ಏನೂ ನೋಡದೆ ಮದುವೆ ಮಾಡಿಬಿಡೊದಾ?" ಅಂದ್ಲು "ಮತ್ತಿನ್ನೇನು ಹುಡುಗನ್ನ ಮದುವೆ ಆಗ್ತೀನಿ ಅನಲಿಲ್ಲ ಅಂತ ಖುಷಿ ಪಡಬೇಕು ಕಣೇ" ಅಂದೆ. "ಹಾಗೆಲ್ಲ ಆದ್ರೆ ಸಮಾಜ ಏನನ್ನುತ್ತೇರೀ" ಅಂದ್ಲು "ಸಮಾಜ ಏನನ್ನುತ್ತೇ, ಸಮಾಜ ಅನ್ನೊದು ಏನು ಹೇಳು ನಾವೇ ನಮ್ಮ ಸುತ್ತ ಹಾಕಿಕೊಂಡ ಪರಿಧಿ, ಬೇಲಿ ಹಾಗೆ... ಇದೇ ಹದ್ದು ಇದನ್ನು ಮೀರಬಾರದು ಅಂತ ನಮ್ಮವೇ ಕಟ್ಟುಪಾಡುಗಳು, ನಾವೇ ಬದಲಾಗುತ್ತ ನಡೆದರೆ ಆ ಪರಿಧಿಯನ್ನ ದೂರ ಸರಿಸುತ್ತಾ ಹೋಗುತ್ತೇವೆ." ಅಂದೆ.

"ಅರ್ಥ ಆಗ್ಲಿಲ್ಲ" ಅಂದ್ಲು. "ಮೊದಲು ಮದುವೆ ಅಂದ್ರೇನು?" ಅಂದೆ. "ಈ ಡೌಟ್ ಯಾಕೆ ಬಂತೀಗ, ಅದೂ ಮದುವೆ ಆಗಿ ವರ್ಷಗಳೇ ಆದಮೇಲೆ" ಅಂದ್ಲು "ವರ್ಷ ಆಯ್ತಲ್ಲ ಮರೆತು ಹೋಗಿದೆ" ಅಂದೆ "ಸಪ್ತ ಪದಿ ತುಳಿದು, ಏಳೇಳು ಜನ್ಮಕ್ಕೆ ನೀನೇ ನನ್ನ ಸಂಗಾತಿ ಅಂತ ಪ್ರಮಾಣ ಮಾಡಿದ್ದು ಮರೆತು ಹೋಯ್ತಾ?" ಅಂತ ಕಿವಿ ತಿರುವಿದಳು, "ಇನ್ನೂ ತಿರುವಿ ಬಿಡ್ಲಾ ಇಲ್ಲಾ ನೆನಪಿಗೆ ಬಂತಾ" ಅಂದ್ಲು "ಹಾಂ... ನೆನಪಿಗೆ ಬಂತು" ಅಂದೆ, ಕೆಂಪಗಾದ ಕಿವಿ ಸವರಿಕೊಳ್ಳುತ್ತ, "ಈ ಜನ್ಮ ಒಂದೇ ಅಲ್ದೇ ಏಳೇಳು ಜನ್ಮ ಬೇರೆ ಅಂತೆ, ಈಗಲೇ ಸಾಕಾಗಿದೆ" ಅಂತೇನೊ ಗೊಣಗಿದೆ. "ಏನದು ಏನೋ ಗುಸುಗುಸು ಅಂತೀದೀರಾ" ಅಂದ್ಲು "ಹೇ ಏನಿಲ್ಲ ಬರೀ ಏಳೇ ಜನ್ಮಾನಾ, ಇನ್ನೊಂದು ನಾಲ್ಕೈದು ಸೇರಿಸಿ ಒಂದು ಡಜನ್ನು ಮಾಡಿಬಿಡಬಹುದಿತ್ತಲ್ಲ ಅಂತಾ ಇದ್ದೆ.. ಹೀ ಹೀ ಹೀ" ಹಲ್ಲು ಕಿರಿದೆ. "ಏಳೇಳು ಜನ್ಮಾ ಏನೂ ಬೇಡ ಈ ಜನ್ಮದಲ್ಲಾದರೂ ನನ್ನ ಜತೇನೆ ಇದ್ರೆ ಸಾಕಪ್ಪ" ಅಂದ್ಲು. ಅಬ್ಬಾ ದೀಪಾವಳಿ ಬಟ್ಟೆ ಸೇಲಿನಲ್ಲಿ ಒಂದು ತೆಗೆದುಕೊಂಡ್ರೆ ಆರು ಫ್ರೀ ಅಂತ ಡಿಸ್ಕೌಂಟ ಸಿಕ್ಕಷ್ಟು ಖುಷಿಯಾಯ್ತು. "ಹಾಗಾದ್ರೆ ಮದುವೆಯಂದ್ರೆ ನೀನು ನಾನು ಜತೆಯಾಗಿ ಸಂಗಾತಿಗಳಾಗಿ ಜೀವನ ಮಾಡ್ತೀವಿ ಅಂತ ಜೊತೆಯಾಗೋದು ಅಂದ ಹಾಗಾಯ್ತು" ಅಂದೆ, "ಬರೀ ಅಷ್ಟೇ ಏನಲ್ಲ, ಆದರೂ ಚಿಕ್ಕಾದಾಗಿ ಹೇಳಬೇಕೆಂದ್ರೆ ಅದು ನಿಜ" ಅಂದ್ಲು. "ಹಾಗಾದ್ರೆ ಅದನ್ನೇ ಹುಡುಗ ಹುಡುಗಾನೇ, ರಾಮ್ ವೆಡ್ಸ ಶಾಮ್ ಅಂತ, ಇಲ್ಲ ಹುಡುಗಿ ಹುಡುಗಿಯೇ ರಿಂಕಿ ವೆಡ್ಸ ಪಿಂಕಿ ಅಂತಾನೊ ಯಾಕೆ ಮಾಡಬಾರದು, ಅವರೇ ಜತೆ ಜತೆಯಾಗಿ ಯಾಕೆ ಇರಬಾರದು ಅಂತಾನೇ ಅವರು ಕೇಳ್ತಿರೋದು" ಅಂದೆ, "ಅಲ್ಲ ಹುಡುಗೀರು ಹಾಗೇ ಕೇಳ್ತಿದಾರ?" ಅಂದ್ಲು "ಹೂಂ ಮತ್ತೆ , ಅವರಿಗೆ ಲೆಸ್ಬಿಯನ ಅಂತಾರೆ" ಅಂದೆ. "ಅಬ್ಬಾ, ಹುಡುಗೀರು ಇಷ್ಟು ಮುಂದುವರೆದೀದೀರಾ?" ಅಂದ್ಲು "ನೀನೆ ಹಿಂದೆ ಹೀಗೆ ಮನೇಲಿ ಕೂತಿರೋದು, ಲೀಡ ಏನಾದ್ರೂ ತೆಗೆದುಕೊಳ್ತೀಯಾ ಅವರ ಹೋರಾಟದಲ್ಲಿ" ಅಂದೆ, ಕೈಗೆ ಸಿಕ್ಕ ಸೊಫಾ ಮೇಲಿನ ಎಲ್ಲ ದಿಂಬುಗಳ ಪ್ರಹಾರ ನನ್ನ ಮೇಲಾಯ್ತು.

ಎಲ್ಲ ದಿಂಬುಗಳ ಅತ್ತ ಕಡೆ ಸರಿಯಾಗಿ ಪೇರಿಸಿಟ್ಟು, ಅವಳನ್ನೇ ದಿಂಬು ಮಾಡಿಕೊಂಡು ಒರಗಿದೆ, ಇನ್ನೂ ಕೆಂಪಾಗಿದ್ದ ಕಿವಿ ಸವರುತ್ತ, ಏನೋ ಮಹಾನ ಸಂಶೋಧನೆ ಮಾಡಿ ಕಂಡು ಹಿಡಿದ ಹಾಗೆ "ಸಂತತಿ ಹೇಗೆ ಬೆಳೆಯೋದು, ಅದಕ್ಕಾದರೂ ಹುಡುಗ ಹುಡುಗಿ ಮದುವೆಗೆ ಅರ್ಥ ಇದೆಯಲ್ಲ" ಅಂದ್ಲು. "ಮೊದಲೇ ಜನಸಂಖ್ಯೆ ಬೆಳೀತಿದೆ, ಯಾರಿಗೆ ಮಕ್ಕಳಾಗಿ ಏನಾಗಬೇಕಿದೆ, ಅನಾಥ ಮಕ್ಕಳು ದತ್ತು ತೆಗೆದುಕೊಳ್ತಾರೆ" ಅಂದೆ. "ಶಾಲೆಗೆ ಎಲ್ಲಾ ಸೇರಿಸಬೇಕಾದ್ರೆ ಫಾರ್ಮನಲ್ಲಿ ಅಪ್ಪ ಅಮ್ಮಾ ಅಂತ ಯಾರ ಹೆಸ್ರು ತುಂಬೋದು, ಹೇಳಿಬಿಟ್ರೆ ಸುಮ್ನೇನಾ" ಅಂತ ವಾದ ಮಂಡಿಸಿದಳು. "ಇಷ್ಟಕ್ಕೂ ಈಗ ಸದ್ಯ ಮದುವೆ ಆಗಬಹುದು ಅಂತ ಏನೂ ಸಮ್ಮತಿ ಕೊಟ್ಟಿಲ್ಲ(ವಿದೇಶದಲ್ಲಿ ಅದೂ ಆಗಿದೆ), ಅದು ಕಾನೂನುಬಾಹಿರವಲ್ಲ ಅಂತ ಮಾತ್ರ, ಅದರ ಮೇಲಿದ್ದ ಕಾನೂನನ್ನು ಕಿತ್ತು ಹಾಕೀದಾರೆ ಅಷ್ಟೇ, ಹಾಗೇನಾದ್ರೂ ನಾಳೆ ಮದುವೆಗೂ ಸಮ್ಮತಿ ಕೊಟ್ರೆ ಅದಕ್ಕೂ ಏನೊ ಒಂದು ಉಪಾಯ ಮಾಡ್ತಾರೆ ಬಿಡು" ಅಂದೆ. "ಕಾನೂನು ಅಂತ ಇತ್ತಲ್ಲ ಈಗ ಅದೂ ಇಲ್ಲ" ಅಂದ್ಲು. "ಅಲ್ಲ ಯಾವ ಕಾನೂನು ಇದ್ದು ಏನು ಆಗಿದೆ ಹೇಳು, ಕಾನೂನುಗಳು ಮಾಡಿದ್ದೇ ಅವುಗಳನ್ನು ಮುರಿಯೋಕೆ, ಮೀರಿ ಹೋಗೋಕೆ ಅನ್ನೊ ಹಾಗಿದೆ ಈಗಿನ ಪರಿಸ್ಥಿತಿ, ಹಾಗಿರುವಾಗ ಆ ಕಾನೂನು ಎಷ್ಟರ ಮಟ್ಟಿಗೆ ಉಪಯೋಗ ಆಗಿತ್ತು? ಆದರೆ ಈ ಕಾನೂನು ತೆಗೆದು ಹಾಕಿದ್ದು ಅವರಿಗೊಂದು ನೈತಿಕ ಜಯ ಸಿಕ್ಕ ಹಾಗೆ ಆಗಿದೆ ಅಷ್ಟೇ" ಅಂದೆ. "ಅಲ್ಲಾ ಆಗಲಿಂದ ನೋಡ್ತಾ ಇದೀನಿ, ಏನು ಬರೀ ಅವರ ಪರವಾಗೇ ವಕಾಲತ್ತು ನಡಿಸೀದೀರಾ ಏನ್ ಕಥೆ ನಿಮ್ದು" ಅಂತ ಹುಬ್ಬು ಹಾರಿಸಿದಳು. "ಲೇ ನನ್ನ ಮೇಲೆ ಯಾಕೆ ನಿನಗೇ ಡೌಟು?" ಅಂತ ಅವಳ ಕೈಗಳೆರಡನ್ನೂ ನನ್ನ ಕೈಯಲ್ಲಿ ಬಂಧಿಯಾಗಿಸಿದೆ, ಎಲ್ಲಿ ನನ್ನ ಬಿಟ್ಟು ಹೋದಾಳು ಅಂತ ಏನೋ. ಮುಗುಳ್ನಗುತ್ತಾ "ಯಾರು ಹೇಗೆ ಅಂತ ಏನು ಹೇಳೋದಪ್ಪ" ಅಂದ್ಲು. ಕೈಗಳನ್ನು ಇನ್ನಷ್ಟು ಬಿಗಿಯಾಗಿಸಿದೆ. "ಅವರದ್ದೆ ಆದ ಕೆಲವು ಗುರುತುಗಳಿವೆ, ಅದು ದೇಶದಿಂದ ದೇಶಕ್ಕೆ ಬೇರೆ ಬೇರೆ, ಕೆಲವು ಕಡೆ ಪಿಂಕ ಶರ್ಟು ಹಾಕಿದ್ರೆ" ಅಂತಿದ್ದಂಗೆ "ಅಯ್ಯೊ ಅಲ್ಲೂ ಪಿಂಕಾ, ವ್ಯಾಲೆಂಟೈನ ಡೇಗೆ ಪಿಂಕ ಚಡ್ಡಿ ಅಭಿಯಾನ, ನಿಮ್ಮ ಸಾಫ್ಟವೇರ ಕಂಪನೀಲಿ ಕೆಲಸದಿಂದ ತೆಗೆಯೋಕೆ ಪಿಂಕ ಸ್ಲಿಪ್ಪು, ಇನ್ನೂ ಇಲ್ಲಿ ಇದು ಬೇರೇನಾ, ಅಲ್ಲ ಪಾಪ ಆ ಪಿಂಕ ಕಲರು ಎನ್ ಪಾಪಾ ಮಾಡಿದೆ ಅಂತೀನಿ" ಅಂದವಳು "ಸ್ವಲ್ಪ ಏಳ್ರೀ ಮೇಲೆ
ಬೀರುನಲ್ಲಿ ನಿಮ್ದು ಯಾವದಾದ್ರೂ ಪಿಂಕ ಶರ್ಟ ಇದೇನ ನೋಡಿ ಬರ್ತೀನಿ" ಅಂದ್ಲು, ಅಲ್ಲೇ ನನ್ನ ಕೈಯಲ್ಲಿದ್ದ ಅವಳ ಕೈ ಕಚ್ಚಿದೆ, "ಇಲ್ಲ... ಇಲ್ಲ... ಯಾವದೂ ಇಲ್ಲ ನಂಗೊತ್ತು ಬಿಡಿ ರೀ... ರೀ..." ಅಂತ ಚೀರಿದಳು. "ನೋಡು ನಿನ್ನ ಕೈ ಕೂಡ ಪಿಂಕ ಆಯ್ತು ಕಚ್ಚಿದಲ್ಲಿ" ಅಂದೆ ನಾಚಿದಳು ಗಲ್ಲ ಕೂಡ ಪಿಂಕ ಆಯ್ತು.

"ಇಷ್ಟೇನಾ ಇನ್ನೂ ಏನಾದ್ರೂ ಪಿಂಕ್ ಇದೇನಾ" ಅಂದವಳಿಗೆ "ಪಿಂಕಿ ರಿಂಗ ಅಂತಿದೆ, ಪಿಂಕಿ ಫಿಂಗರ್ ಅಂದ್ರೆ ಕಿರುಬೆರಳಿಗೆ ಸ್ಟೀಲ್ ರಿಂಗ್ ಹಾಕೋತಾರೆ" ಅಂದೆ. "ರಿಂಗ ಬೇರೆನಾ" ಅಂತ ಉದ್ಗಾರ ತೆಗೆದ್ಲು "ಬಲಕಿವೀಲಿ ಕಿವಿಯ ರಿಂಗ, ಕಿಲಿಯೋಲೆ ಹಾಕಿದ್ರೂ ಕೂಡ ಅದೇ ಸಂಕೇತ ಕೆಲವು ಕಡೆ" ಅಂತಂದೆ. ನನ್ನ ಕಿರುಬೆರಳು ಪರೀಕ್ಷೆಯಾಗುತ್ತಿತ್ತು ಆ ಕ್ಷಣದಲ್ಲಿ, "ಲೇ ನನ್ನ ಮೇಲೆ ಯಾಕೇ ನಿನಗೆ ಸಂಶಯ, ಆಗಲಿಂದ ನನ್ನೇ ಚೆಕ್ ಮಾಡ್ತಿದೀಯಾ" ಅಂದರೆ "ಅಲ್ಲ ಇಷ್ಟೆಲ್ಲ ಮಾಹಿತಿ ಎಲ್ಲಿಂದ ಬಂತು ಅಂತ" ಪ್ರಶ್ನಿಸಿದಳು, "ಭಾರತದಲ್ಲಿ ಇದಿನ್ನೂ ಆ ಮಟ್ಟಿಗೆ ಚಾಲ್ತಿಯಲ್ಲಿ ಇಲ್ಲ ಆದರೆ ವಿದೇಶದಲ್ಲಿ ಸ್ವಲ್ಪ ಹುಷಾರಾಗೇ ಇರಬೇಕು. ವಿದೇಶಕ್ಕೆ ಹೊರಟಿದ್ದ ಗೆಳೆಯನಿಗೆ ಕೊಲೀಗ(ಸಹುದ್ಯೋಗಿ) ಕೊಟ್ಟ ಮಾಹಿತಿ, ನನಗೂ ಆಗಲೇ ಇದೆಲ್ಲ ತಿಳಿದದ್ದು... ಇಲ್ಲೇನು ಬಿಡು ಗೆಳೆಯರಿಬ್ರು ಹೆಗಲ ಮೇಲೆ ಕೈ ಹಾಕಿಕೊಂಡು ಹೋದ್ರೂ ಯಾರೂ ಏನೂ ಅನ್ಕೊಳ್ಳಲ್ಲ ಆದರೆ ಕೆಲವು ವಿದೇಶಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟೋ ಹಾಗೆ ಕೂಡ ಇಲ್ಲ" ಅಂದೆ "ಹೌದಾ!" ಅಂತ ಅಶ್ಚರ್ಯಪಟ್ಟಳು, "ಅಷ್ಟೇ ಏನೂ ಹಾಕೊ ಒಂದು ಸಾಕ್ಸು ಬದಲಾದ್ರೂ ಏನೇನೋ ಅರ್ಥ ಬಂದು ಬಿಡತ್ತೆ" ಅಂದೆ. "ಸಾಕ್ಸಾ?!" ಅಂತ ಹೌಹಾರಿದಳು "ಹೂಂ ರೈನಬೊ, ಅದೇ ಕಾಮನಬಿಲ್ಲಿನ ಕಲರು ಸಾಕ್ಸ ಅವರೇ ಹಾಕೋಳ್ಳೋದು, ಅದನ್ನ ಬಿಡು ಕೆಲವು ಕಡೆ ಬಿಳಿ ಸಾಕ್ಸ ಕೂಡ ಅದರ ಗುರುತು" ಅಂದೆ. ಅದನ್ನೆಲ್ಲ ಕೇಳಿ ಅವಳಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು.

"ಹೀಗಾದ್ರೆ ಹೇಗೆ, ಏನು ಜನ ಹೀಗ್ಯಾಕೆ ಮಾಡ್ತಾರೆ" ಅಂದ್ಲು, "ಸ್ವಲ್ಪ ಈ ಪ್ಯಾಶನ್ನು ಇಂಡಸ್ಟ್ರಿನಲ್ಲಿ ಇದು ಇದೆ, ಎಲ್ರೂ ಅಲ್ಲ ಆದರೂ ಈ ದಿನಾಲು ಹುಡುಗಿಯರ ಗುಂಪಿನಿಂದಲೇ ಸುತ್ತುವರೆದಿರುವ ಅಲ್ಲಿನ ಕೆಲವರಿಗೆ ಇಂಥ ಯೋಚನೆಗಳು ಬಂದರೆ ಅಚ್ಚರಿಯಿಲ್ಲ ಒಂಥರಾ ಅಡುಗೆ ಭಟ್ಟರಿಗೆ ದಿನಾಲೂ ಅದೇ ಸ್ವೀಟು ಮಾಡಿ ಅದರ ಘಾಟು ಬಡಿದು ಬಡಿದು ಅವರೇ ಮಾಡಿದ ಸ್ವೀಟ ಅವರೇ ತಿನ್ನೊಕಾಗದಿರೋ ಹಾಗೆ ಬರುವ ವಾಕರಿಕೆ ನೀರಸತನ ಒಂದು ಕಾರಣವಾಗಿರಬಹುದು" "ಹೌದ್ರೀ, ಈ ಹೂರಣದ ಹೋಳಿಗೆ ಮಾಡಿದಾಗಲೆಲ್ಲ ನನಗೂ ಅದನ್ನ ತಿನ್ನೋಕೆ ಮನಸೇ ಆಗಲ್ಲ" ಅಂದ್ಲು ಹೂರಣದ ಹೋಳಿಗೆ ಹೆಸರು ಕೇಳಿ ಬಾಯಿ ನೀರೂರಿತು, "ಸ್ವಲ್ಪ ತಾಳು ಹಾಗಿದ್ರೆ, ನೀರು ಕುಡಿದು ಬರ್ತೀನಿ ಇನ್ನೊಂದು ಕಾರಣ ಬಂದು ಹೇಳ್ತೀನಿ, ಅಲ್ಲೀವರೆಗೆ ಆ ಪೇಪರು ಮೂರನೇ ಪೇಜು ಮಾತ್ರ ನೋಡಬೇಡ" ಅಂತ ಒಳಗೆ ಅಡುಗೆಮನೆಗೆ ಹೋದೆ.

ಬರುವಷ್ಟರಲ್ಲಿ ಮೂರನೇ ಪೇಜು ತೆಗೆದುಕೊಂಡು ಕೂತಿದ್ದಳು "ಏನಿದೆ ಮೂರನೇ ಪೇಜಿನಲ್ಲಿ ಅಂಥದ್ದು?" ಅಂದ್ಲು "ನನಗೇನು ಗೊತ್ತು, ನಿನಗೆ ನೋಡಬೇಡ ಅಂತ ಅಲ್ವಾ ಹೇಳಿದ್ದು, ಯಾಕೇ ನೋಡಿದೆ?" ಅಂದೆ ತಣ್ಣಗೆ ಮೂವತ್ತೆರಡು ಹಲ್ಲು ಕಾಣಿಸಿದಳು "ಸುಮ್ನೆ ಕುತೂಹಲ, ಈಗ ಏನಿದೆ ಅಂತ ಹೇಳ್ತೀರೊ ಇಲ್ವೊ" ಅಂದ್ಲು. "ಹೇಳೊದೇನು, ಅಲ್ಲೇನೂ ಇಲ್ಲ, ಬೇಡ ಅಂತ ಹೇಳಿ ಯಾವಾಗ ಮುಚ್ಚಿಡಲು ಶುರು ಮಾಡುತ್ತೇವೊ ಆಗ ಅಲ್ಲಿ ಕುತೂಹಲ ಜಾಸ್ತಿಯಾಗತ್ತೆ, ಅದೇ ಇಂಥ ವಿಷಯಗಳಲ್ಲಿ ಆಗೋದು" ಅಂದ್ರೇನು "ಶಾಲೇಗೊ ಹೋಗೊ ಮಗುಗೆ ಇದನ್ನೆಲ್ಲ ಹೇಳೊಕೆ ಆಗತ್ತ? ನಿಮ್ಮಂಗೆ ಪೋಲಿ ಆಗಿ ಹೋಗ್ತಾರೆ ಅಷ್ಟೇ" ಅಂದ್ಲು, "ಶಾಲೆಗೆ ಹೋಗೊ ಮಗೂಗೇ ಹೇಳು ಅಂದ್ನಾ" ಅಂತ ನಾ ಸಿಟ್ಟಿನಿಂದ ನೋಡಿದೆ, "ಪೋಲಿ ಅಂದದ್ದಕ್ಕೆ ಸಿಟ್ಟಾಗಬೇಡ ಪುಟ್ಟಾ" ಅಂದ್ಲು. ನಗು ಬಂತು ತಡೆದುಕೊಂಡು "ಸರಿಯಾದ ವಯಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರೋದು ಪೋಷಕರ ಕರ್ತವ್ಯ, ಹುಟ್ಟಿಸಿ ಬಿಟ್ರೆ ಆಯ್ತಾ, ನನ್ನೂ ಎಲ್ಲೊ ಬೊಂಬೆ ತರೊ ಅಂಗಡೀಲಿ ಕೊಂಡು ತಂದೀದಾರೆ ಅಂತ ಮಕ್ಕಳು ಅಂದುಕೋತಾರೆ ಅಷ್ಟೆ, ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ, ಸಮಾಜ, ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು, ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ.", "ರೀ ನಮ್ಮನೆಗೆ ಬೊಂಬೆ ಯಾವಾಗ ಬರೋದು" ಅಂತ ನಾಚಿದಳು "ಆರ್ಡರ ಕೊಡೋಣ್ವಾ!" ಅಂತ ಹತ್ತಿರ ಹೋದೆ, "ಆಸೇ ನೋಡು" ಅಂತ ದೂರ ತಳ್ಳಿದಳು.

ಸಮಾಜ ನಾವೇ ಕಟ್ಟಿಕೊಂಡ ಒಂದು ವ್ಯವಸ್ಥೆಯಾಗಿರುವಾಗ ಇಂದು ನಾಲ್ಕು ಜನ ಬೇಕೆಂದರು ಅಂತ ಕಟ್ಟುಗಳನ್ನು ಸಡಿಲ ಮಾಡಿದರೆ ಸಮಾಜ ಅನ್ನೋದು ಮುರಿದು ಬೀಳಲ್ಲವೇ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನೇ ಗಮನಿಸಿ, ಈಗಾಗಲೇ ಆಗಿರುವ ಎಷ್ಟೊ ಮಾರ್ಪಾಡುಗಳು, ಲಿವಿಂಗ ಟುಗೆದರ(ಜೊತೆಯಾಗಿ ಮದುವೆಯಾಗದೇ ಇರೋದು), ವೈಫ್ ಸ್ವಾಪಿಂಗ (ಹೆಂಡಂದಿರನ್ನು ಅದಲು ಬದಲಾಯಿಸಿಕೊಳ್ಳುವ) ಇಲ್ಲ ಡಿವೊರ್ಸ ಆಗಿರಬಹುದು, ಅನೈತಿಕ ಸಂಬಂಧಗಳೇ ಆಗಿರಬಹುದು ಇವೆಲ್ಲ ಒಂದಿಲ್ಲ ಒಂದು ರೀತಿ ಕುಟುಂಬ ಅನ್ನೋ ಪರಿಕಲ್ಪನೆಗೆ ಹೊಡೆತ ಕೊಡುತ್ತ ಬಂದಿವೆ, ಈವತ್ತು ಇದನ್ನು ಮಾನ್ಯ ಮಾಡಿದವರು, ನಾಳೆ ಇನ್ನೊಂದಕ್ಕೆ ಅನುಮತಿಯ ಮುದ್ರೆ ಒತ್ತುತ್ತ ಹೋಗಿ, ಹೀಗೆ ಕಟ್ಟುಪಾಡುಗಳೆಲ್ಲ ಕಳೆದುಹೋದರೆ ನಮಗೂ ನಾಯಿ ನರಿಗಳಂತ ಪ್ರಾಣಿಗಳಿಗೂ ಏನು ವ್ಯತ್ಯಾಸವಿರಲಿಕ್ಕಿಲ್ಲ, ಅಂಥ ಕಾಲ ಒಂದು ದಿನ ಬರಬಹುದು, ಯಾಕೆಂದರೆ
ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕು ಅಂತ ಹೇಳುತ್ತ ನಾವೇ ಬದಲಾಗಿ ಕಾಲವನ್ನು ಬಯ್ದುಕೊಳ್ಳುತ್ತಾ ಸಾಗುತ್ತಿದ್ದೇವೆ, ಆದರೆ ಅಂಥ ಕಾಲದ ಬರುವನ್ನು ಸ್ವಲ್ಪ ಮುಂದೂಡಬಹುದೇನೊ ಅನ್ನೊ ಚಿಕ್ಕ ಆಶಯ ಮಾತ್ರ ನನ್ನದು.

ಮರುದಿನ ಆಫೀಸಿಗೆ ಹೊರಡಲು ಸ್ನಾನ ಮಾಡಿ ಬಂದರೆ ದಿನಾಲೂ ಇರುತ್ತಿದ್ದ ಶರ್ಟು ಪ್ಯಾಂಟು ಜತೆಗೆ ಪ್ಯಾಂಟಿನ ಕಲರಿಗೆ ಹೊಂದಿಕೆಯಾಗುವ ಸಾಕ್ಸ ಕೂಡ ಇಟ್ಟಿದ್ಲು ;) ... ಬೇಕೆಂತಲೇ "ಬಿಳಿ ಕಲರ ಸಾಕ್ಸ ಎಲ್ಲೇ ಇದೆ" ಅಂದೆ "ಇಟ್ಟಿರುವುದನ್ನು ಹಾಕಿಕೊಂಡು ಹೋಗ್ತೀರಾ ಇಲ್ಲಾ, ನಾಳೆ ಪಿಂಕ ಶರ್ಟು, ಪಿಂಕಿ ರಿಂಗೂ ತಂದಿಡ್ತೀನಿ" ಅಂತ ಪಾಕಶಾಲೆಯಿಂದಲೇ ಗದರಿಸಿದಳು... "ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ... ಮುದ್ದ್ ಮಾಡೊಕು ಕಾನೂನು ಒಂದು ಬೇಕಾ" ಅಂತ ಹಾಡುತ್ತ ಶರ್ಟು ಹಾಕಿಕೊಳ್ಳುತ್ತಿದ್ರೆ "ಅದು ಹುಡುಗರ ಹಾಡಲ್ಲ, ಹಾಡಿದ್ದು ಸಾಕು ಹೊರಡ್ತೀರೊ ಇಲ್ಲೋ ಆಫೀಸಿಗೆ, ಇಲ್ಲಾ ನಾ ಬರಬೇಕಾ ಅಲ್ಲೀಗ" ಅಂತಂದಳು "ಒಕೇ ಒಕೇ ಬೇರೆ ಹಾಡು ಹಾಡ್ತೀನಿ... ಮಾಯವಾಗಿದೆ ಮದುವೆ ಹಾ.. "ಗೇ".. ಸುಮ್ಮನೇ..." ಅಂತಾ ರಾಗ ಹಿಡಿದು ಹಾಡಲು ಪ್ರಯತ್ನಿಸುತ್ತಿದ್ದರೆ ಅವಳು ಪಾಕಾಶಾಲೆಯಿಂದ ಇತ್ತ ಬರುವ ಸದ್ದಾಯಿತು... ಅವಳು ಬರ್ತಾ ಇದಾಳೆ, ಕೈಲಿ ಏನಿದೆಯೋ? ಸೌಟಿದ್ರೆ ಪರವಾಗಿಲ್ಲ, ಚಾಕೂ ಎಲ್ಲಾ ಇದ್ರೆ ತೊಂದ್ರೆ, ಅಯ್ಯೋ ಓಡಬೇಕು ದಾರಿ ಬಿಡ್ರಿ ಮತ್ತೆ ಸಿಕ್ತೀನಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಈ ಲೇಖನ ಬರೆಯಲೊ ಬೇಡವೊ ಅಂತ ನಿನ್ನೆಯಿಂದ ಯೋಚಿಸಿ ಕೊನೆಗೂ ಬರೆದು ತೆಗೆದಿರುವೆ, ಎಲ್ಲೂ ಅಶ್ಲೀಲ ಅನ್ನಿಸದ ಹಾಗೆ ಜಾಗ್ರತೆವಹಿಸಿ ಬರೆದಿದ್ದೇನೆ, ಹಾಗೂ ಎಲ್ಲೊ ಎಲ್ಲೆ ಮೀರಿದ್ದರೆ ನನ್ನ ಕ್ಷಮಿಸಿ, ಪ್ರಸ್ತಾಪ ಮಾಡಿದ ಕೆಲ ವಿಷಯಗಳು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಇವೆಲ್ಲ ಕೇವಲ ನನ್ನ ಮನದಿಂದ ಹೊರಹಾಕಿದ ಯೋಚನೆಗಳು, ಇದು ಸರಿ ತಪ್ಪು ಅಂತ ಹೇಳೊ ಪ್ರಯತ್ನ ಅಂತಾನೂ ಅಂದುಕೊಳ್ಳಬೇಡಿ, ಎಲ್ಲರಿಗೂ ಅವರದೇ ಆದ ಅನಿಸಿಕೆಗಳಿರುತ್ತವೆ, ಹಾಗಾಗಿ ನಾ ಹೇಳಿದ್ದೆಲ್ಲ ಎಲ್ರಿಗೂ ಅನ್ವಯವಾಗುವುದಿಲ್ಲ.


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/haage-summane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು