"ಇಂದಿನ ಹವಾಮಾನ ವರದಿ, ದಿನವಿಡೀ ಮೋಡ ಮುಸುಕಿದ ವಾತಾವರಣವಿದ್ದು, ಈಗ ಬಿರುಸಾಗಿ ಗಾಳಿ ಬೀಸುತ್ತಿದ್ದು, ಕಪ್ಪು ಮೋಡಗಳು ಕಟ್ಟಿಕೊಂಡಿವೆ, ಯಾವುದೇ ಕ್ಷಣದಲ್ಲಾದರೂ ಮಳೆ ಬೀಳುವ ಸಂಭವವಿದೆ. ಮಳೆ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಫೀಸುಗಳಲ್ಲಿ ಕೆಲಸ ಮಾಡುತ್ತಿರುವರೆಲ್ಲರೂ ಬೇಗ ಬೇಗ ತಮ್ಮ ಮನೆ ಸೇರಿಕೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ." ಅತ್ತ ಕಡೆಯಿಂದ ಚಿಲಿಪಿಲಿ ಅಂತ ಉಲಿಯುತ್ತಿದ್ದವಳು ಇವಳು, ಇದ್ಯಾವುದು ಆಕಾಶವಾಣಿ ಅಂದುಕೊಂಡಿರಾ, ಇಲ್ಲ ಇದು ಆಕೆವಾಣಿ, ನನ್ನಾಕೆವಾಣಿ! ಸಂಜೆ ಫೋನು ಮಾಡಿ ಅತ್ತಲಿಂದ ಹೀಗೆ ಹವಾಮಾನ ವರದಿ ಮಾಡಿ ಮನೆಗೆ ಬೇಗ ಬನ್ನಿ ಅಂತಿದ್ದಳು.
"ಹವಾಮಾನ ವರದಿಗಾರರೇ ನಿಮ್ಮ ಸುದ್ದಿಗಳು ಯಾವಾಗ್ಲೂ ನಿಜವಾಗಲ್ಲ, ಮೋಡ ಅಂತೀರಿ, ಬಿಸಿಲು ಚುರಗುಡತ್ತೆ, ಬಿಸಿಲು ಅಂತೀರಿ ಆಕಾಶವೇ ಕಡಿದುಕೊಂಡು ಬಿದ್ದ ಹಾಗೆ ಮಳೆಯಾಗುತ್ತದೆ, ಹೇಗೆ ನಂಬುವುದು" ಅಂದೆ "ರೀ ಏ.ಸಿ. (ಏರಕಂಡೀಷನ್) ಆಫೀಸಿನಲ್ಲಿ ತಲೆಕೆಳಗೆ ಮಾಡಿಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದರೆ ಹೇಗೆ ಗೊತ್ತಾಗಬೇಕು ಹೊರಗೆ ಬಂದು ತಲೆಯೆತ್ತಿ ನೋಡಿ" ಅಂತ ಅತ್ತಲಿಂದ ಹೀಗಳೆದಳು. "ಮಳೆ ಬಂತು ಅಂತ ಶಾಲೆಗೆ ರಜೆ ಸಿಗಬಹುದು ಆಫೀಸಿಗೆ ಯಾರು ಕೊಡ್ತಾರೆ, ಕೆಲಸ ಬಹಳ ಇದೆ, ರಾತ್ರಿ ಲೇಟಾಗುತ್ತದೆ ಅಷ್ಟೊತ್ತಿಗೆ ಮಳೆಯಾಗಿ ನಿಂತಿರತ್ತೆ" ಅಂದೆ "ಬಹಳ ಮಳೆ ಬರೋದಿದೆ ಆದಷ್ಟು ಬೇಗ ಬನ್ನಿ" ಅಂತ ಫೋನಿಟ್ಟಳು. ಹೊರಗೆ ಹೋಗಿ ನೋಡಲು ಪುರಸೊತ್ತು ಇರ್ಲಿಲ್ಲ, ಕೆಲಸ ಒಟ್ಟಿತ್ತು, ಅದರಲ್ಲೇ ಮಗ್ನನಾದೆ.
ರಾತ್ರಿ, ಹತ್ತು ಘಂಟೆಗೆ ಮತ್ತೊಮ್ಮೆ ಫೋನು ಮಾಡಿದಳು, "ಮಳೆ ಯಾಕೊ ಆಗಲೇ ಇಲ್ಲ, ಆದರೂ ಹೇಳೊಕಾಗಲ್ಲ ಬೇಗ ಬನ್ನಿ ಮಳೆ ಬಂದ್ರೆ ತೋಯಿಸಿಕೊಳ್ಳುತ್ತೀರಿ" ಅಂದ್ಲು "ಆಯ್ತು ಹೊರಟಿದ್ದೇನೆ, ನಿಮ್ಮ ಹವಾಮಾನ ವರದಿಗಳ ಕಥೇನೆ ಇಷ್ಟು, ತೊಯಿಸಿಕೊಂಡ್ರೆ ಬಂದು ಬೆಚ್ಚಗೆ ನಿನ್ನ ಮಡಿಲಲ್ಲಿ ಮಲಗಿಬಿಡ್ತೀನಿ" ಅಂದೆ "ರೀ, ಹೋಗ್ರೀ ನಿಮಗೆ ಯಾವಗ್ಲೂ ತಮಾಷೇನೆ" ಅಂತ ನಾಚಿ ಸುಮ್ಮನಾದಳು. ಹೇಗೂ ಮಳೆಯಾಗುತ್ತಿಲ್ಲ ಅಂತ ಎದ್ದು ಹೊರಟು ನಿಂತೆ, ಹೊರಗೆ ಬಂದು ಬೈಕನಲ್ಲಿ ಕಿಲೊಮೀಟರು ದೂರಕ್ಕೆ ಬರುತ್ತಿದ್ದಂತೆ, ಧೋ ಅಂತ ಮಳೆ ಸುರಿಯಲಾರಂಭಿಸಿತು, ಮೇಲೆ ಬಕೆಟ್ಟು ಹಿಡಿದುಕೊಂಡು ಬಾ ಹೊರಗೆ ನೀ, ನಾನು ಸುರೀತೀನಿ ಅಂತ ಕಾದಿತ್ತೇನೊ ಅನ್ನೊ ಹಾಗೆ ಧಾರಾಕಾರವಾಗಿ ಬೀಳತೊಡಗಿತು.
ನಿಂತರೆ ಕೂಡ ಎನೂ ಪ್ರಯೋಜನವಿಲ್ಲ ಅನ್ನುವಷ್ಟು ಆಗಲೇ ನೆನೆದಾಗಿತ್ತು ಹಾಗಾಗಿ ಮಳೆಯಲ್ಲೇ ನಡೆದೆ, ಮುಂದೊಂದು ಕಿಲೋಮೀಟರು ದಾಟಿ ಬಂದಿರಬೇಕು, ಮಳೆ ಬಹಳೇ ಜೋರಾಯಿತು, ಮುಂದೆ ದಾರಿ ಕಾಣದಷ್ಟು, ಬೇರೆ ದಾರಿಯಿಲ್ಲದೇ ಅಲ್ಲೆ ಕಾಣುತ್ತಿದ್ದ ಬಸ್ ನಿಲುಗಡೆಯಲ್ಲಿ ಇಳಿದು ನಿಂತೆ, ಬೂಟು ತೆಗೆದೆ, ಜಾಕೇಟಿನ ಜೇಬಿನಲ್ಲೂ ನೀರು ತುಂಬಿಕೊಂಡಿತ್ತು ಹೀಗೆ ನೀರು ಹೋಗಲೆಂದು ಬಟ್ಟೆ ಹಿಂಡುತ್ತಿದ್ದರೆ, ಅಲ್ಲೇ ಮರೆಯಲ್ಲಿ ನಿಂತವಳು ಕಾಣಿಸಿದಳು, ಮಳೆ ಹುಡುಗಿ(ಪೂಜಾ ಗಾಂಧಿ ಅಲ್ಲಾರೀ...), ಹೆಸರೇನು ಇಡಲಿ ಮ್... ವರ್ಷಾ!
ಬ್ಯಾಗು ಬೆನ್ನಿಗೇರಿಸಿ, ದುಪಟ್ಟ ತಲೆ ಮೇಲೆ ಹೊದ್ದು, ಮಳೆಯಲ್ಲಿ ನೆನೆದು ನಡಗುತ್ತ, ಕೈಯಲ್ಲಿನ ಮೊಬೈಲಿನಲ್ಲಿ ಏನೊ ಕುಟ್ಟುತ್ತಿದ್ದಳು, ಬಹುಶ ಸಂದೇಶ ಇರಬೇಕು, ಮೇಘ ಸಂದೇಶವೇ, ಮಳೆ ಕಡಿಮೆಯಾಗಲಿ ಅಂತ, ಏನೋ ಒಂದು. ನೋಡಲು ಅಂದವಾಗಿದ್ದಳು ಅಂತ ಬೇರೆ ಹೇಳಬೇಕಿಲ್ಲ, ಮಳೆ ಸುರಿಯುತ್ತಿದ್ದರೆ ಹೋಗಲಾಗದೇ ಚಡಪಡಿಸುವಂತಿತ್ತು, ಹೀಗೆ ಹೊತ್ತು ಹನ್ನೊಂದಾಯಿತು ಮಳೆ ಇನ್ನೂ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ, ಅವಳ ಮೇಘ ಸಂದೇಶ ನೆಟವರ್ಕ ಇಲ್ಲದೇ ತಲುಪಲಿಲ್ಲವೇನೊ. ಯಾವ ಬಸ್ಸು ಬಂದರೂ ಅವಳಂತೂ ಹತ್ತಿ ಹೋಗಲಿಲ್ಲ, ಇದ್ದ ಬದ್ದವರೆಲ್ಲ ಖಾಲಿಯಾದರು, ಉಳಿದವರು ನಾನು, ಅವಳು, ಮತ್ತೆ ಇನ್ನೊಬ್ಬ, ಆತನೋ ನೋಡಿದರೆ ನನಗೇ ಹೆದರಿಕೆ ಬರುವಂತಿದ್ದ, ನೋಡಲು ಹಾಗಿದ್ದ ಮಾತ್ರಕ್ಕೆ ಕೆಟ್ಟವನೇನಲ್ಲ, ಆದ್ರೆ ಏನೊ ಹೇಳೋಕಾಗುತ್ತೆ, ಅವಳನ್ನು ನೋಡಿದರೆ ದುರುಗುಟ್ಟಿದಳು, ಪಾಪ ಯಾರಿಗಾಗಿ ಕಾದಿದ್ದಳೊ ಏನೊ. ಸ್ವಲ್ಪ ಹೊತ್ತು ನಿಂತೆ, ಆಗಾಗ ಬರುವ ಕ್ಯಾಬ್(ಕಾರು) ಬಿಟ್ಟರೆ ರಸ್ತೆಯಲ್ಲಿ ಎನೂ ಇಲ್ಲ, ಕ್ಯಾಬ್ ನಿಂತು ಕೇಳಿದರೂ ಅವಳು ಹೋಗಿರಲಿಲ್ಲ, ಹೋಗಬೇಡ, ಹೋಗಬೇಡ ಅಂತ ನನ್ನ ಮನಸು ಕೂಡ ಅನ್ನುತ್ತಿತ್ತು, ನಾ ಅವಳನ್ನು ನೋಡುತ್ತಿರಲಿಕ್ಕೆ ಅಲ್ಲ, ಕ್ಯಾಬಗಳು ಸುರಕ್ಷಿತವಾಗಲಿಕ್ಕಿಲ್ಲ ಅಂತ ಹಾಗನಿಸಿದ್ದು. ಮಳೆ ನಿಲ್ಲದ ಹಾಗೆ ಕಾಣದಾದಾಗ ಹೊರಡಲು ಅನುವಾದೆ, ಆದರೆ ಪಾಪ ಯಾರೂ ಇಲ್ಲದೆ ಒಬ್ಬಳೇ ಕಾಯುತ್ತಿರುವ ಅವಳ ಕಂಡು ಬೇಡವೆಂದು, ಅವಳು ಹೋಗುವವರೆಗೂ ಅಲ್ಲೇ ಕಾಯುವ ತೀರ್ಮಾನಕ್ಕೆ ಬಂದೆ. ನನ್ನ ಯೋಚನೆಗಳೇ ಹಾಗೆ, ಎಲ್ಲಿ ಯಾರಾದರೂ ಬಂದು ಏನಾದರೂ ಆದರೆ, ಛೇ ಹಾಗಾಗದಿರಲಿ, ನಾನು ಸಹಾಯ ಮಾಡಬಲ್ಲೆನೇ ಅಷ್ಟು ಶಕ್ತಿಯಂತೂ ಇಲ್ಲ, ನಾಲ್ಕು ಜನ ಹಿಡಿದು ನೂಕಿದರೆ ಬಿದ್ದವನು ಮತ್ತೆ ಏಳಲಿಕ್ಕಿಲ್ಲ ಆದರೆ ನಾನು ಇದ್ದೀನೆಂದಾದರೂ ಯಾರೂ ಅಂಥ ಹುಚ್ಚು ಕೆಲಸಕ್ಕೆ ಕೈಹಾಕಲಿಕ್ಕಿಲ್ಲ ಅನ್ನೊ ಭಂಡ ಧೈರ್ಯ, ಅಲ್ಲೇ ನಿಂತೆ, ಇವನ್ಯಾರೊ ನನ್ನ ನೋಡಲೇ ನಿಂತಿದ್ದಾನೆಂದು ಅವಳಂದುಕೊಂಡಿರಬಹುದು, ಇಲ್ಲ ನನ್ನನ್ನೇ ನೋಡಿ ಆಗಲಿಂದ ಇಲ್ಲೇ ಕಾಯುತ್ತಿದ್ದಾನೆ, ಇವನೇನಾದರೂ ಮಾಡಿದರೆ ಅಂತ ಹೆದರಿದ್ದರೂ ಅಚ್ಚರಿಯಿಲ್ಲ. ಅವಳಿಗೆ ಸ್ವಲ್ಪ ನಾನು ಯಾರೋ ಕಳ್ಳ ದರೊಡೆಕೋರ ಅಲ್ಲ, ಅಂತ ಗೊತ್ತಾಗಲಿ ಅಂತ, ಅವಳಿಗೆ ಕಾಣುವಂತೆ ತೊಯ್ದಿದ್ದ ನನ್ನ ಕಂಪನಿ ಐ.ಡಿ. ಕಾರ್ಡು ಗಾಳಿಯಲ್ಲಿ ಆರಿಸುವಂತೆ ಬೀಸಿ ಊದಿದೆ... ತೋರಿಸಿದೆ!
ಅವಳಿಗೂ ಇದ್ಯಾವುದೊ ರಾತ್ರಿ ಸರಿಹೊತ್ತಿನವರೆಗೆ ಆಫೀಸಲ್ಲೇ ಕೊಳೆಯುವ ಸಾಫ್ಟವೇರ ಇಂಜನೀಯರು ಈಗ ಮನೆಯತ್ತ ನಡೆದಿದೆ, ಇದೇನೂ ಮಾಡಲಿಕ್ಕಿಲ್ಲ ಅಂತ ಅನಿಸಿರಬೇಕು, ಸ್ವಲ್ಪ ಮುಂದೆ ಬಂದು ನಿಂತಳು. ಮನೆಯಲ್ಲಿ ನನ್ನಾಕೆ ಒಬ್ಬಳೇ ಕಾಯುತ್ತಿರುತ್ತಾಳೆ, ಆದರೆ ಇಲ್ಲಿ ಕಾಯುತ್ತಿರುವ ಇವಳು, ಬಿಟ್ಟು ಹೋಗಲಾಗುತ್ತಿಲ್ಲ, ಹತ್ತಿರ ಹತ್ತಿರ ಹನ್ನೆರಡು ಆಗಿರಬೇಕು ಸ್ವಲ್ಪ ಮಳೆ ಕಮ್ಮಿಯಾಯಿತು, ನಾನು ಇನ್ನೂ ಯಾಕೆ ಹೋಗುತ್ತಿಲ್ಲ ಅನ್ನುವಂತೆ ಅವಳು ನೋಡಿದರೂ... ನಾನಲ್ಲೇ ಕಲ್ಲಿನಲ್ಲಿ ಕಟೆದ ಮೂರ್ತಿಯಂತೆ ನಿಂತೇ ಇದ್ದೆ, ಸ್ವಲ್ಪ ಸಮಯದ ನಂತರ, ನಿಧಾನವಾಗಿ ಆಕಡೆ ಈಕಡೆ ನೋಡಿ ತಲೆ ಮೇಲೆ ದುಪಟ್ಟ ಸರಿ ಮಾಡಿಕೊಂಡು ರಸ್ತೆ ಆಚೆ ಬದಿಯಲ್ಲಿ ನಡೆದಳು, ಅಲ್ಲೇ ಎಲ್ಲೊ ಮನೆಯಿರಬೇಕು, ಹಿಂದೆ ಹೋಗಿ ಅವಳು ಮನೆ ತಲುಪುವವರೆಗೆ ನೋಡಿ ಬರಲೇ ಅನಿಸಿದರೂ, ನಾನು ಹಾಗೆ ಹಿಂಬಾಲಿಸಿದರೆ ಸರಿ ಇರಲಿಕ್ಕಿಲ್ಲ ಅಂತ ದೂರದಲ್ಲಿ ಮರೆಯಾಗುವವರೆಗೆ ಕಾದು ನೋಡಿ ಮನೆಯತ್ತ ಮುಖ ಮಾಡಿದೆ, ಅವಳು ಮನೆ ತಲುಪಿರಬಹುದು ಅಂದುಕೊಳ್ಳುತ್ತಾ...
ಮನೆಯೊಳಗೆ ಕಾಲಿಟ್ಟೆ, ಮಳೆ ಮನೆಯಲ್ಲೇ ಆಗಿತ್ತೇನೊ ಅನಿಸಿತು, ನೀರು ನಿಂತು ಹೊಳೆಯಾಗಿತ್ತು. ಅಲ್ಲೇ ನೀರು ಎತ್ತಿ ಹೊರ ಹಾಕುತ್ತಿದ್ದ ನನ್ನಾಕೆ ಕಾಣಿಸಿದಳು, "ಕೆಲಸವೆಲ್ಲಾ ಮುಗಿಯಿತೊ ಇನ್ನೂ ಇದೆಯೋ, ಅಲ್ಲಿ ಟೇಬಲ್ಲು ಇನ್ನೂ ಹಸಿಯಾಗಿಲ್ಲ ಅಲ್ಲಿ ಬೇಕಾದರೆ ನಿಮ್ಮ ಲ್ಯಾಪಟಾಪ ಇಟ್ಟುಕೊಂಡು ಕೂರಬಹುದು" ಅಂತ ವ್ಯಂಗ್ಯವಾಗಿ ಚುಚ್ಚಿದಳು, ಅಲ್ಲಿ ಮಳೆ ಹುಡುಗಿ ಬಗ್ಗೆ ಹೇಳಬೇಕೆಂದು ಹೋದೆ... ಆದರೆ ಈಗ ಹೇಳಿದರೆ ಇಲ್ಲಿ ಅವಳು ಗುಡುಗು ಸಿಡಿಲು ಸಿಡಿಸುವ ಸೂಚನೆ ಕಾಣಿತು, ಸುಮ್ಮನೆ. ಎನೂ ಮಾತಿಲ್ಲದೇ, ಶರ್ಟ ಕೈತೋಳು ಮಡಚಿ ಮಗ್ ತೆಗೆದುಕೊಂಡು ನೀರು ಎತ್ತಿ ಹೊರಹಾಕಲು ತೊಡಗಿದೆ, ಎಲ್ಲ ನೀರು ಖಾಲಿ ಮಾಡಿ ಕೈತೊಳೆಯುವ ಹೊತ್ತಿಗೆ ಹೊಟ್ಟೆ ಚುರುಗುಡುತ್ತಿತ್ತು, ಆಗ ಅನ್ನಕ್ಕಿಟ್ಟಳು, ಮಳೆಯೊಂದಿಗೆ ಏಗುತ್ತ ಅಡಿಗೆಯೇ ಮಾಡಿರಲಿಲ್ಲ. ಹಸಿಯಾಗಿದ್ದ ಬಟ್ಟೆ ತೆಗೆಯುತ್ತ ಸೀನಿದೆ, ಪಾಕಶಾಲೆಯಿಂದ ಹೊರಬಂದು, "ಬೇಗ ಬಂದಿದ್ದರೆ ತೋಯಿಸಿಕೊಳ್ಳುತ್ತಿರಲಿಲ್ಲ" ಅಂದಳು. ನಾನೇನು ಬೇಕಂತಲೇ ಮಳೆ ಬರೋವರೆಗೆ ಕಾದಿದ್ದು ತೋಯಿಸಿಕೊಂಡು ಬಂದೆನೇನೋ ಅನ್ನುವಂತೆ. ಸುಮ್ಮನೇ ಒಳ ಹೋಗಿ ಬೇರೆ ಬಟ್ಟೆ ಹಾಕುತ್ತ ಇನ್ನೊಮ್ಮೆ ಸೀನಿದೆ ಬೇಕಂತಲೇ! "ಬರುತ್ತಿದ್ದಂತೇ ಬಟ್ಟೆಯಾದ್ರೂ ಬದಲಾಯಿಸಬಾರದಿತ್ತೇ, ಬರೀ ಕೆಲಸ, ಕೆಲಸ..." ಅಂತ ಬಯ್ಯುತ್ತ ಮತ್ತೆ ಪಾಕಶಾಲೆ ಸೇರಿದಳು, "ಆಗಲೇ ಹೊರಟೆ ಆದರೆ ಮಳೆ ಜೋರಾಗಿ ದಾರಿಯಲ್ಲಿ ನಿಂತೆ, ಅಲ್ಲಿ ಆ ಹುಡುಗಿ ಪಾಪ..." ಅಂತಿದ್ದರೆ ಮಧ್ಯದಲ್ಲೇ ಬಾಯಿ ಹಾಕಿ "ಮಳೆಯಲ್ಲಿ ಹುಡುಗಿ, ರೀ ಇಲ್ಲಿ ಮನೆಯಲ್ಲಿ ಹೆಂಡ್ತಿ ಕಾಯ್ತಾ ಇದಾಳೆ ಒಬ್ಬಳೇ, ಅನ್ನೊ ಪರಿಜ್ಞಾನ ಬೇಡ ನಿಮಗೆ" ಅಂತ ಬಯ್ಯಲು ಶುರುವಿಟ್ಟುಕೊಂಡಳು. "ಅಲ್ಲಿ ಅವಳೂ ಒಬ್ಬಳೇ ಇದ್ಲು" ಅಂದರೆ "ಹೂಂ, ಬೆಂಗಳೂರಿನ ತುಂಬ ಎಷ್ಟೊ ಹುಡುಗೀರು ಒಬ್ಬರೇ ಇರ್ತಾರೆ ಹೋಗಿ ಅವರನ್ನೆಲ್ಲ ನೋಡಿಕೊಂಡು ಬನ್ನಿ" ಅಂತ ಹರಿಹಾಯ್ದಳು. ಮಳೆಯಲ್ಲಿ ಮನೆ ತುಂಬ ನೀರು ತುಂಬಿ ಅದನ್ನೆಲ್ಲ ಹೊರ ಹಾಕಿ ಅವಳಿಗೆ ಸಿಟ್ಟು ಬಂದಿತ್ತು, "ನೀರು ಹೇಗೆ ಒಳಬಂತು" ಅಂದೆ "ಹೇಗೆ ಬಂದರೇನೀಗ, ನಾನಿದೀನಲ್ಲ ಎತ್ತಿ ಹಾಕೋಕೆ, ಮಾತು ಮರೆಸಬೇಡಿ" ಅಂತ ಸಿಡುಕಿದಳು ಮತ್ತೆ, ಮಾತಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.
ಊಟವಾಯ್ತು, ಬಿಸಿ ಬಿಸಿ ಅನ್ನ ನೆನೆದದ್ದರಿಂದ ಸ್ವಲ್ಪ ಹೆಚ್ಚಿಗೆಯೆ ಒಳ ಹೋಯ್ತು, ಹಾಸಿಗೆಯಲ್ಲಿ ಬಿದ್ದು ಇನ್ನೊಮ್ಮೆ ಸೀನಿದೆ ನಿಜವಾಗಿಯೂ, ಶೀತವಾಗುವಂತೆ ಕಾಣಿತು, ಪಾತ್ರೆಯೆಲ್ಲ ತೆಗೆದಿಟ್ಟು ಬಂದವಳು ಬದಿಗೆ ಬಿದ್ದುಕೊಂಡಳು, ನಾ ಸೀನುವುದು ಜಾಸ್ತಿಯಾಯ್ತು, ವಿಕ್ಸ ಎತ್ತಿಕೊಂಡು ಬಂದಳು, ಇಸಿದುಕೊಂಡು ಹಚ್ಚಿಕೊಳ್ಳಬೇಕೆಂದರೆ ತಾನೆ ಹಚ್ಚುತ್ತ, "ಯಾರವಳು" ಅಂದ್ಲು. ಅವಳು ಕೇಳಿದ್ದಕ್ಕೆ ಉತ್ತರಿಸಲಿಲ್ಲ, "ಮಾತಾಡಲ್ವಾ, ಏನೊ ಸಿಟ್ಟು ಬಂದಿತ್ತು ಹಾಗಾಡಿದೆ ಅದಕ್ಕೆ ಮುನಿಸಿಕೊಳ್ಳೋದಾ" ಅಂತ ರಮಿಸಿದಳು. "ನೀರು ಹೇಗೆ ಒಳಬಂತು" ಅಂದೆ, ಅಬ್ಬಾ ಮಾತಾಡಿದರಲ್ಲ ಅಂತ ಖುಷಿಯಾಗಿ, ಕಿಟಕಿಯ ಸಂದಿಯಿಂದ ಸೋರಿದ್ದು, ಬಾಗಿಲ ಕೆಳಗೆ ಬಂದಿದ್ದು, ಕರೆಂಟ್ ಹೋಗಿ ಗುಡುಗಿಗೆ ಹೆದರಿದ್ದು, ಎಲ್ಲ ಹೇಳಿ, ಅಡಮಳೆಗೆ ಹೀಗೆ ಆಗುತ್ತದೆಂದು ಸಮಜಾಯಿಸಿ ಕೂಡ ಕೊಟ್ಟಳು. ಆದರೆ ಅವಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಹಾಗಾಗಿ ನನ್ನ ಮಲಗಲು ಬಿಡುವಂತಿರಲಿಲ್ಲ, ಹಾಗೇ ಕಣ್ಣು ಮುಚ್ಚುತ್ತಿದ್ದವನನ್ನು ತದಕಿ ಕೇಳಿದಳು, "ಯಾರದು ಮಳೆ ಹುಡುಗಿ"
"ಇನ್ನೊಮ್ಮೆ ಎಲ್ಲೊ ಹಾಗೆ ಕಾಯುತ್ತ ನಿಲ್ಲಲ್ಲ ಬಿಡು" ಅಂದೆ "ನನಗದು ಬೇಕಿಲ್ಲ ಅವಳಾರು" ಅಂದ್ಲು. ಇನ್ನೊಮ್ಮೇ ವಿಷಯ ಒತ್ತಟ್ಟಿಗಿರಲಿ ಈಗಿನದು ಹೇಳು ಅಂತ. "ಯಾರೋ ಗೊತ್ತಿಲ್ಲ" ಅಂದೆ "ಹಾಗಂದ್ರೆ" ವಿವರವಾಗಿ ಹೇಳು ಅಂತ ಸೂಚ್ಯವಾಗಿ ನುಡಿದಳು, ಯಾರೋ ಅಲ್ಲಿ ನಿಂತಿದ್ದು ಅನ್ನೋದರಿಂದ ಶುರುವಾಗಿ, ಅವಳು ಮರೆಯಾಗುವವರೆಗೆ ಕಾದಿದ್ದು ಎಲ್ಲ ಹೇಳಿಯಾಯ್ತು. ನಿಟ್ಟುಸಿರು ಬಿಟ್ಟಳು "ಒಳ್ಳೆ ಹೆಸರು ವರ್ಷಾ!" ಅಂದ್ಲು. "ನೋಡೋಕೂ ಚೆನ್ನಾಗಿದ್ಲು" ಅಂದೆ, "ನನಗಿಂತ" ಅಂದ್ಲು, ದೊಡ್ಡ ಪೀಕಲಾಟಕ್ಕೆ ಸಿಕ್ಕಿಕೊಂಡೆ, ನಿಜ ಹೇಳಬೇಕೆಂದ್ರೆ "ಹೌದು" ಅಂದೆ. "ಅದಕ್ಕೇ ಸಾಹೇಬ್ರು ನೋಡುತ್ತ ನಿಂತಿದ್ದು" ಅಂತ ನಕ್ಕಳು. "ನಿನಗೇನು ಅನ್ನಿಸಲಿಲ್ವಾ" ಅಂದೆ. "ಯಾಕೆ ಅನ್ನಿಸಬೇಕು, ರೀ ಯಾರೊ ಹುಡುಗಿ, ಪಾಪ ಒಬ್ಳೇ ಇದ್ದದ್ದಕ್ಕೆ ಕಾದು ಅವಳು ಅಷ್ಟು ಹೆಲ್ಪು ಮಾಡಿ ಬಂದಿದ್ದೀರಿ, ಹೆಮ್ಮೆ ನನಗೆ" ಅಂದ್ಲು. "ಅಲ್ಲ ಅವಳು ಚೆನ್ನಾಗಿದ್ದಾಳೆ ಅಂದ್ನಲ್ಲ ಅದಕ್ಕೆ" ಅಂದ್ರೆ, "ಏನು ನಿಮ್ಮ ಹೆಂಡ್ತಿ ಬಿಟ್ಟು ಜಗತ್ತಿನಲ್ಲಿ ಯಾರೂ ಬೇರೆ ಸುಂದರಿಯರೇ ಇರಬಾರದಾ" ಅಂತ ತಿರುಗಿಬಿದ್ಲು. "ಹಾಗಲ್ಲ, ಆದ್ರೂ ಏನೊ ಬೇರೆ ಹುಡುಗಿ ಅಂದ ಹೊಗಳಿದೆನಲ್ಲ, ನಿನಗೆ ನನ್ನ ಮೇಲೆ ಅಷ್ಟು ನಂಬಿಕೆನಾ" ಅಂದ್ರೆ. "ನಂಬಿಕೆ ಎಲ್ಲ ಏನೂ ನನಗೆ ಗೊತ್ತಿಲ್ಲ, ನೀವು ನನ್ನವರು ಅದು ನನಗೆ ಗೊತ್ತು ಅಷ್ಟು ಸಾಕು, ಆದ್ರೆ ನಿಮ್ಮನ್ನು ಆ ಹುಡುಗಿ ನಂಬಿ ನಿಂತಿದ್ದಳೊ ಏನೊ" ಅಂತಂದಳು "ಅಯ್ಯೋ ನನ್ನನ್ನೂ ಯಾವುದೊ ಪೋಲಿ ಅಂದುಕೊಂಡಿರಬೇಕು, ಆದ್ರೂ ನನ್ನ ನೋಡಿದ್ರೆ ಹಾಗೇನೂ ಕಾಣಲ್ಲ ಬಿಡು" ಅಂದೆ "ಈ ಇಂಗ್ಲೀಷ್ ಫಿಲಂಗಳಲ್ಲಿ ದರೋಡೆಕೊರರು ಕೋಟು ಸೂಟಿನಲ್ಲೇ ಬರೋದು" ಅಂತ ಕಿಚಾಯಿಸಿದಳು, "ಈಗೇನು ಅವಳೇನು ಅಂದುಕೊಂಡ್ರೆ ನನಗೇನು, ನನಗೆ ಅಲ್ಲಿ ಆ ಸಮಯ ಸುರಕ್ಷಿತ ಅನಿಸಲಿಲ್ಲ ಅದಕ್ಕೆ ಕಾದಿದ್ದು ಬಂದೆ, ನನ್ನ ಮನದ ತೃಪ್ತಿಗಾಗಿ. ಅವಳಿಗೆ ಎನೂ ಆಗಲಿಲ್ಲ ಅದು ಸಮಾಧಾನ, ಅಷ್ಟು ಸಾಕು ನನಗೆ" ಅಂದೆ "ರೀ ಅಷ್ಟೊತ್ತು ಅಲ್ಲೇನು ಮಾಡ್ತಾ ಇದ್ಲು" ಅಂದ್ಲು "ಹೀಗೆ ನಮ್ಮಂಥ ಯಾವುದೋ ಕೆಲಸದಲ್ಲಿರಬೇಕು, ಲೇಟಾಗಿರಬೇಕು, ಪಾಪ, ಮಳೆ ಕಾದಿದ್ದಾಳೆ" ಅಂದೆ "ಅದೂ ಸರಿ ಈ ಕೆಲಸ ಎಲ್ಲ ಲೇಟಾಗಿ ಹಾಗಾಗತ್ತೆ, ಮನೆಗೆ ಡ್ರಾಪ್ ಮಾಡಿ ಬರಬೇಕಿತ್ತು" ಅಂತ ಕೀಟಲೆಗಿಳಿದಳು "ಲೇ ಅವಳನ್ನು ಹಾಗೆ ಕೇಳಿದ್ದರೆ ಕೊಟ್ಟಿರೋಳು ಒಂದು ಮುಖಕ್ಕೆ, ಒಂದು ಮಿತಿಯಲ್ಲಿ ನಾನು ಆ ಸಮಯದಲ್ಲಿ ಏನು ಮಾಡಬಹುದಾಗಿತ್ತೊ ಅದನ್ನು ಮಾಡಿದೆ, ಹಾಗೆಲ್ಲ ಮಾಡಿದರೆ ಬೆಂಗಳೂರಿನಲ್ಲಿ ಡ್ರಾಪ್ ಸರ್ವೀಸ ಮಾಡ್ತಾ ಇರಬೇಕಾಗತ್ತೆ ನಾನು" ಅಂದೆ. "ರೀ ಅವಳಿಗೆ ಯಾರಾದ್ರೂ ಬಂದು ಛೇಡಿಸಿದ್ರೆ, ಫೈಟಿಂಗ ಮಾಡ್ತಾ ಇದ್ರಾ ಡಿಶುಂ ಡಿಶುಂ ಅಂತಾ" ಅಂತ ನನಗೆ ಎರಡು ಕೊಟ್ಟಳು "ಲೇ ಛಳಿಯಾಗ್ತಿದೆ ಅದರಲ್ಲಿ ನೀನು ಹೊಡೀಬೇಡ, ಪೆಟ್ಟಾಗತ್ತೆ" ಅಂತನ್ನುತ್ತ ಅವಳನ್ನೇ ಹೊದ್ದು ಬೆಚ್ಚಗೆ ಮಲಗಿದೆ.
ಈ ಮಹಾನಗರಗಳು ರಾತ್ರಿ ಸುರಕ್ಷಿತವಾಗಿ ಉಳಿದಿಲ್ಲ, ಹೀಗೆ ಕೆಲಸ ಮುಗಿಸಿ ಲೇಟಾಗಿ ಬರುವ ಹೆಣ್ಣು ಮಕ್ಕಳಿಗಂತೂ ಬಹಳ ತೊಂದ್ರೆ, ಆದಷ್ಟು ನಮ್ಮ ಜಾಗರೂಕತೆ ನಮಗೇ ಮೇಲು, ಮಳೆಯಲ್ಲಿ ನೆನೆದಾದರೂ ಸರಿ ಬೇಗ ಮನೆ ತಲುಪುವುದೇ ಕ್ಷೇಮ, ಹಾಗೆ ಬಹಳೇ ಲೇಟಗುತ್ತಿದ್ದರೆ ಕಂಪನಿಯ ಕ್ಯಾಬ ಸೌಕರ್ಯ(ಅದೂ ಸಂಪೂರ್ಣ ಸುರಕ್ಷಿತವಾಗಿಲ್ಲ) ಉಪಯೋಗಿಸಿ, ಇಲ್ಲವಾದರೆ ನಿಮ್ಮ ನಂಬಿಕೆಯ ಸಹುದ್ಯೋಗಿಗೆ ಮನೆವರೆಗೆ ಜತೆಯಾಗಲು ನಿರ್ದಾಕ್ಷಿಣ್ಯವಾಗಿ ಕೇಳಿಕೊಳ್ಳಿ ಯಾರೂ ಇಲ್ಲವೆನ್ನಲ್ಲ.
ಮುಂಜಾನೆ ಆಫೀಸಿಗೆ ರೆಡಿಯಾಗುತ್ತಿದ್ದೆ, ಇಂದು ಕೂಡ ಮಳೆಯಲ್ಲಿ ನೆನೆಯಬೇಡಿ ಬೇಗ ಬನ್ನಿ ಅಂತಿದ್ದಳು ನನ್ನಾಕೆ. "ಬಾ ಮಳೆಯೇ ಬಾ... ಅತ್ತ ಮನೆಯೊಳಗೇ ಬಾರದಿರು... ನನ್ನ ನಲ್ಲೆ ಒದ್ದೆಯಾಗುವಂತೆ" ಅಂತ ನಾ ಹಾಡುತ್ತಿದ್ದರೆ "ಬಾ ಮಳೆಯೇ ಬಾ... ಬೇಗ ಬಂದು ಬಿಡು, ನನ್ನ ನಲ್ಲ ಬರುವ ದಾರಿಯಲ್ಲಿ ಅಡತಡೆಯಾಗದಂತೆ..." ಅಂತ ಅವಳೂ ದನಿ ಸೇರಿಸಿದಳು... ಇಬ್ಬರೂ ನಕ್ಕೆವು... "ರೀ ವರ್ಷಾ ಸಿಕ್ಕರೆ, ಈವತ್ತು ಮಳೆಯಲ್ಲಿ ಕಾಯುತ್ತಾಳಾ ಕೇಳಿ" ಅಂತಿದ್ದಳು ಇಂಥ ನನ್ನಾಕೆಯ ಪಡೆದ ನನ್ನ ಹರ್ಷಕ್ಕೆ ಪಾರವೇ ಇರಲಿಲ್ಲ, ವರ್ಷನಂಥವರು ವರ್ಷ ಕಾದರೂ ನನ್ನಾಕೆಗಾಗಿ ನಾ ಮನೆಯತ್ತಲೇ ಹೆಜ್ಜೆ ಹಾಕುತ್ತೇನೆ. ಮತ್ತೆ ಸಿಕ್ಕೋಣ ಎಲ್ಲೋ ಮಳೆಯಲ್ಲಿ ನೆನೆಯುತ್ತ....
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/male.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
14 comments:
ಪ್ರಭುರಾಜ,
ಮಳೆಗಾಲವೇ ಹೀಗೆ.
ಮೈ ಒದ್ದೆಯಾದರೂ, ಮನಸ್ಸಿಗೆ ಉಲ್ಲಾಸ ತರುವಂತಹ ವರ್ಷಾ-ಕಾಲ!
ಪ್ರಭು ಅವರೇ,
ಯಾವಾಗಿನ ಹಾಗೆ ಸೊಗಸಾದ ಲೇಖನ . ಪ್ರಸ್ತುತ ಪರಿಸ್ಥಿತಿ ಗೆ ಕೈಗನ್ನಡಿ ಹಿಡಿದ್ದಿರಿ. .. ನಿಮ್ಮ ಪತ್ನಿ ಯಾ
"ನಂಬಿಕೆ ಎಲ್ಲ ಏನೂ ನನಗೆ ಗೊತ್ತಿಲ್ಲ, ನೀವು ನನ್ನವರು ಅದು ನನಗೆ ಗೊತ್ತು ಅಷ್ಟು ಸಾಕು" ಈ ಮಾತು ಅವಳ ವಿಶಾಲ
ಮನಸ್ಸನ್ನು ತೋರಿಸುತ್ತದೆ .. ಎಲ್ಲರಿಗೂ ಅವಳ೦ತಹ ಅರ್ಥ ಮಾಡಿ ಕೊಳ್ಳುವ ಪತ್ನಿ ಸಿಕ್ಕಿದರೆ ಮನೆ ಸಲ್ಪ ಸಹನೀಯ ವಾಗ ಬಹುದು ಎ೦ದು ಆಶಿಸುತ್ತೇನೆ ..
ಈ ವಾರದ ಥೀಮ್ ಪತಿ ಪತ್ನಿಯರಲ್ಲಿ ನ೦ಬಿಕೆ ಮುಖ್ಯ ಎ೦ದು .. ಹೇಳಿದ್ದಿರಿ .... ತು೦ಬಾ ಅರ್ಥ ಗರ್ಭಿತ ಲೇಖನ ..
Hi,
yendinanthe lekhana chennagide
abbbbba yest artamadkotari nim hendthiu nimana... oledu alwa..
jagathina yela hudgarigu iste olemanasina hendthi sikli antha bedkothini :)
Keep writing ...........
ಪ್ರಭು,
ಯಾವ ಬಸ್ ಸ್ಟಾಪ್ ಅದು? ನಾನು ಟ್ರೈ ಮಾಡ್ತೀನಿ. ನನಗೂ ಆ ವರ್ಷಾ ಸಿಗಬಹುದೇನೋ. ಮನೆವರಿಗೂ ಡ್ರಾಪ್ ಮಾಡೋದಕ್ಕೆ ಚಾನ್ಸ್ ಸಿಗಬಹುದೇನೋ.
ಮೊನ್ನೆ ತಾನೇ ನೀವು ಬೆಂಚ್ ಮೇಲೆ ಇದ್ರಿ? ಇವಾಗ ನೋಡಿದರೆ ತುಂಬಾ ಕೆಲಸ ಅಂತ ಹೇಳ್ತಿದಿರಾ? ಏನು ಸಮಾಚಾರ ಆಫೀಸ್ನಲ್ಲಿ? ಪಾಪ ನಿಮ್ಮಾಕೆ ಮನೇಲಿ ಒಬ್ಬರೇ ಇರ್ತಾರೆ. ಬೇಗ ಮನೆಗೆ ಹೋಗ್ಬಾರ್ದಾ?
sunaath ಅವರಿಗೆ
"ವರ್ಷಾ"-ಕಾಲದಲ್ಲಿ... ಕಾಯ್ದು ಕಾಯ್ದು ಕಾಲು ನೋವಾದರೂ ಕಲ್ಲಿನ ಮೂರ್ತಿ ಹಾಗೆ ಏನೇ ಆಗಲಿ, ಮಳೆ ಎಷ್ಟೇ ಬರಲಿ ಅಂತ ಅಚಲವಾಗಿ ನಿಲ್ಲಬಹುದು. :)
roopa ಅವರಿಗೆ
ಅವಳ ಮನಸ್ಸು ವಿಶಾಲ ಅನ್ನೊದರಲ್ಲಿ ಸಂಶಯ ಬೇಡ, ಅದರ ತುಂಬೆಲ್ಲ ನನ್ನನ್ನೇ ತುಂಬಿಕೊಳ್ಳುವ ಔದಾರ್ಯ ಬೇರೆ. ಅಂಥ ಪತ್ನಿ ಎಲ್ಲರಿಗೂ ಸಿಗುವುದಿಲ್ಲ ಆದರೆ, ಸಿಕ್ಕವರದು ಅದೃಷ್ಟ, ಅದರಲ್ಲಿ ನಾನೊಬ್ಬ ಆಗಲಿ ಅಂತ ನನ್ನಾಸೆ.
ಈ ವಾರದ ಥೀಮ, ನಂಬಿಕೆ ಬಗ್ಗೆ ಬರೆದಿದ್ದರೂ, ಕೆಲಸದ ಅನಿವಾರ್ಯತೆಗಳಲ್ಲೂ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡುವ ಬಗ್ಗೆ ಆಗಿತ್ತು. ಅಹಿತಕರ ಘಟನೆಗಳಾಗದಂತೆ ಮುಜಾಗರೂಕತೆ ತೆಗೆದುಕೊಳ್ಳಿ ಅಂತ ಹೇಳುವುದಾಗಿತ್ತು.
ಪ್ರೀತಿಯಿ೦ದ ವೀಣಾ :) ಅವರಿಗೆ
ಅರ್ಥಮಾಡಿಕೊಳ್ಳೋದು ಅಂತೂ ನಿಜ, ನನ್ನಾಸೆ ನನ್ನಾಕೆ ಮಾತ್ರ ಅಂತ ಅರ್ಥವಾಗಿರುವುದರಿಂದ ಅಪನಂಬಿಕೆಗೆ ಜಾಗವಿಲ್ಲ :)
ಎಲ್ಲ ಹುಡುಗರಿಗೂ ಇಂಥ ಹೆಂಡತಿ ಸಿಗುತ್ತಾಳೆ ಇಲ್ವೊ ಆದರೆ ನನ್ನ ಬ್ಲಾಗ ಓದುವ ಹುಡುಗಿಯರು, ಪತ್ನಿಯರೆಲ್ಲ ಹೀಗೇ ಇರಲು ಪ್ರಯತ್ನಿಸಿದರೆ... ಅಷ್ಟು ಹುಡುಗರಾದರೂ ಅದೃಷ್ಟವಂತರಾದಾರು ಯೋಚಿಸಿ ನೋಡಿ.
ರಾಜೀವ
ದೊಮ್ಮಲೂರು ಬಸ್ ಸ್ಟಾಪ ಸರ್, ಆದರೆ ಏನಾದರೂ ಎಡವಟ್ಟಾಗಿ ಕಪಾಳಮೊಕ್ಷವಾದರೆ ನಾನು ಜವಾಬ್ದಾರನಲ್ಲ :) ಅಲ್ಲಿ ನಿಜವಾಗಲೂ ಆದ ಘಟನೆ, ಇನ್ನೂ ಹೆಲ್ಪ ಮಾಡಬಹುದಿತ್ತೇನೊ ಆದರೆ ನನಗೇ ಎಲ್ಲಿ ಎನಂದುಕೊಂಡಾರು ಅಂತ ಹೆದರಿಕೆ ಆಯ್ತು, ಮೊದ್ಲೇ ಅಂದವಾದ ಹುಡುಗಿಯರು ಕಂಡರೆ ಸಾಕು ಹುಡುಗರು ಹಲ್ಲು ಗಿಂಜುತ್ತ ನಿಲ್ಲುತ್ತಾರೆ ಅನ್ನೊದು ಇದೆ, ನನಗೆ ನಿಜವಾಗಿ ಹೆಲ್ಪ ಮಾಡುವ ಉದ್ದೇಶವಿದ್ದರೂ ಅವರಿಗೆ ತಿಳಿಯಬೇಕಲ್ಲ, ಅಲ್ಲದೇ ಅಪರಿಚಿತ... ಹಾಗಾಗಿ ಒಂದು ಇತಿ ಮಿತಿಯಲ್ಲಿ ನಾನು ಏನು ಮಾಡಬಹುದಾಗಿತ್ತೊ ಅದನ್ನು ಮಾಡಿದೆ, ಅಷ್ಟೆ ತೃಪ್ತಿ.
ಬೆಂಚ ಮೇಲಿದ್ದರೂ ಟ್ರೇನಿಂಗ ಇವೆ ಸರ್, ಖಾಲಿ ಏನಿಲ್ಲ. ಇದು ಯಾವಗಲೋ ತಿಂಗಳು ಹಿಂದೆ ಆದ ಘಟನೆ ಬೇರೆ, ಆಗಿನ ಕಲ್ಪನೆಗೆ ನಾನು ಕೆಲಸದಲ್ಲೇ ಇದ್ದೆ.
ಪ್ರಭು-ಪ್ರಭಾ ಸಂಭಾಷಣೆ ಹೊತ್ತ ಸುಮಧುರ ಲೇಖನ ಏನು ಬಹಳ ದಿನದಿಂದ ಬರಲಿಲ್ಲ...??? ....ಓ..ಇದೋ...ಹಾಜರ್ ಅಂತ ಬರೆದೇ ಬಿಟ್ರಿ...
ನಿಮಾಕೆಯಂತೆ ಇತರಾಕೆಯರೂ ಅವರಾತನ ಮೇಲೆ ನಂಬಿಕೆಯಿಟ್ಟರೆ ಬೇರಾಕೆಯರು ತಮ್ಮಾತನರ ಮೇಲೆ ವಿನಾಕಾರಣ ...ಅವರ ಬ್ಯಾಟಿಂಗ್ ಸಾಮರ್ಥ್ಯ ಪರೀಕ್ಷಿಸ್ಸೋಕೆ ಹೋಗೊಲ್ಲ. ಅಲ್ಲವೇ..?? ನಿಮ್ಮ ಪ್ರಸ್ತಾವನಾ ಧಾಟಿ...ಸಿಂಪ್ಲಿ ಸೂಪರ್ ...ಬರ್ತಾ ಇರ್ಲೀ ಹೀಗೇ...ಮೆಲ್ಲ್ತಾಇರ್ತೇವೆ ನಾವೂ ಆ ಸವೀನ...
ಪ್ರಭು ರಾಜರೇ,
ಶಹಬ್ಬಾಸ್! ರಾಜ್ಯ ಕಾಯುವ ರಾಜನಾಗದಿದ್ದರೂ, ವರ್ಷಾ ಕಾಯುವ ರಾಜನಾಗಿ, ಕನ್ನಡ ನಾಡಿನ ಹೆಮ್ಮೆಯ ಪುತ್ರನಾಗಿ, ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದ್ದೀರ!!!
ಈ ರೀತಿಯ ಒಳ್ಳೆಯ ಮನಸ್ಸು ಈಗಿನ ಕಾಲದಲ್ಲಿ ಎಷ್ಟು ಜನರಿಗಿರುತ್ತದೆ ಹೇಳಿ. ಆದ್ದರಿಂದ ನೀವು ಗ್ರೇಟ್!
ನಿಮ್ಮ ಹಾಗೆ ರಕ್ಷಣೆ ಮಾಡುವವರು ಇದ್ದರೇ, ಎಲ್ಲಾ ಹೆಣ್ಣುಮಕ್ಕಳಿಗೂ ನೆಮ್ಮದಿ ಮತ್ತು ಅಭಯ ದೊರೆಯುತ್ತದೆ!
ಲೇಖನ ಸರಳವಾಗಿ ಓದಿಸಿಕೊಂಡು ಹೋಯಿತು. ದುರುದ್ದೇಶವಿರುವ ಹೆಣ್ಣು ಮಕ್ಕಳೂ ಇರುತ್ತಾರೆ, ಹುಷಾರು! ಈಗಿನ ಕಾಲದಲ್ಲಿ ಯಾರನ್ನೂ ಹಾಗೇ ನಂಬಲಿಕ್ಕೆ ಸಾಧ್ಯವಿಲ್ಲ. ಅಲ್ಲವೇ?
ಜಲನಯನ ಅವರಿಗೆ
ಪ್ರಭು- ಪ್ರಭಾ ಒಳ್ಳೆ ಹೆಸರು... ವಾರಕ್ಕೊಮ್ಮೆ ಬರೆಯುತ್ತೇನೆ ಸರ್ ಬಹಳ ದಿನಗಳೇನೂ ಆಗಿಲ್ಲ, ನನ್ನಾಕೆಯಂತೆ ಇತರರಾಕೆಯರೂ ಇದ್ದರೆ, ಅವರಾತನೂ ಅವರಾಕೆಯನ್ನು ಹೀಗೇ ಪ್ರೀತಿಸುತ್ತಾರೆ :)
ಹೀಗೇ ನಿಮ್ಮನಿಸಿಕೆಗಳು ಬರುತ್ತಿರಲಿ.
SSK ಅವರಿಗೆ
ನಿಮ್ಮ ಅನಿಸಿಕೆ ನೋಡಿ ಬಹಳ ಖುಷಿಯಾಗುತ್ತಿದೆ, ನಾಚಿ ಮುಖ ಕೆಂಪಾಗಿದೆ :) :) , ಏನೋ ಆ ಸಮಯದಲ್ಲಿ ಅಲ್ಲಿ ಅವಳನ್ನು ಹಾಗೇ ಬಿಟ್ಟು ಬರಲು ಮನಸಾಗಲಿಲ್ಲ, ನಾನಿದ್ದರೆ ಏನೋ ಒಂದು ಧೈರ್ಯ ಅವಳಿಗೂ ಇದ್ದೀತು ಅಂತ ಕಾದಿದ್ದು ಬಂದೆ, ಹೇಗೂ ಮನೆಗೆ ಬರುವುದೇ ಲೇಟು ಹಾಗಾಗಿ ನನಗೇನು ತೊಂದರೆ ಇರಲಿಲ್ಲ ಕಾಯಲು...
ಕೆಲವರಿಗೆ ಇರತ್ತೆ, ಆದ್ರೆ ಎಲ್ರಿಗೂ ಹಾಗೇ ಒಳ್ಳೆ ಮನಸು ಅಂತ ಇರಲ್ಲ, ನಾನು ಅಷ್ಟು ದೊಡ್ಡ ಗ್ರೇಟ ಹಾಗೇ ಅಂತೆನೂ ಇಲ್ಲ, ನಾನೇನೂ ಮಹಾ ಹೆಲ್ಪ್ ಮಾಡಿಲ್ಲ ಅಂತ ಮುಜುಗರ, ಸಂಕೋಚ... ಏನೋ ಸ್ವಲ್ಪ್ ಕಾದಿದ್ದೆ ಅಷ್ಟೇ. ಆದರೂ ನಿಮ್ಮ ಅಕ್ಕರೆಯ ನುಡಿಗಳಿಗೆ ಚಿರಋಣಿ... ನೀವು ಹೇಳಿದ್ದು ಸರಿ ಸ್ವಲ್ಪ ಅಂಥ ಸಮಯಗಳಲ್ಲಿ ನಮ್ಮ ಮನೆಯವರೆ ಇದ್ದಿದ್ದರೆ ಹೇಗೆ ಅಂತ ಯೋಚಿಸಿ ಹೆಲ್ಪ್ ಮಾಡಬೇಕು.
ಇನ್ನು ದುರುದ್ದೇಶ ಇರುವವರೂ ಇರುತ್ತಾರೆ ನೀವು ಹೇಳಿದ್ದು ನೂರಕ್ಕೆ ನೂರು ನಿಜ ಆದ್ರೆ ಬ್ಯಾಗು, ಮತ್ತೆ ಐಡಿ ಕಾರ್ಡು ಎಲ್ಲ ಇತ್ತು ಪಾಪ ಯಾವುದೋ ಕಂಪನಿ ಉದ್ಯೋಗಿ ಅಂತ ಅನಿಸುತ್ತದೆ, ಹಾಗೇ ಸ್ವಲ್ಪ್ ಎಚ್ಚರಿಕೆಯಲ್ಲಿ ಇರುತ್ತೇನೆ. ಹಾಗೇ ಬೇಗ ನಂಬುವುದಿಲ್ಲ ನೀವು ಎಚ್ಚಿರಿಸಿದ್ದೂ ಒಳ್ಳೆಯದೇ..
ಪ್ರಭು,
ನಿಮ್ಮ ಲೇಖನದ ಮಜವೇ ಒಂಥರ ಕಣ್ರೀ. ಸಕತ್ ರೋಮ್ಯಾಂಟಿಕ್ ಆಗಿ ಬರಿತೀರಿ. ಅಫೀಸಿನಿಂದ ಮನೆಯವರೆಗೆ ಒಳಗೆ ಎಲ್ಲಾವನ್ನು ಇಂಚಿಂಚು ಬಿಡದೆ ಅದು ಹೇಗೆ ಬರೆಯುತ್ತಿರಿ. ಮತ್ತೆ ಮಳೆಹುಡುಗಿಯ ಸಂದರ್ಭ ಒಂಥರ ನವಿರಾದ ಭಾವನೆಗಳಿಂದ ಕೂಡಿತ್ತು.
ನನಗಂತೂ ಬಸ್ ಸ್ಟಾಪ್ ನಲ್ಲಿ ನಿಂತು ಕಾಯುವ ಅಬ್ಯಾಸವಿಲ್ಲ. ಆದ್ರೆ ಬಸ್ ಸ್ಟಾಪಿನಲ್ಲಿ ನಿಂತವರನ್ನು ನೋಡದೇ ಮುಂದೆ ಹೋಗುವುದಿಲ್ಲ.
ಧನ್ಯವಾದಗಳು.
shivu ಅವರಿಗೆ
ಜೀವನ ರೊಮ್ಯಾಂಟಿಕ್ ಆಗಿರಲಿ ಅಂತ ಆಸೆ ಸರ್, ಅದಕ್ಕೆ ರೊಮ್ಯಾಂಟಿಕ್ ಕಲ್ಪನೆಗಳು... ಸನ್ನಿವೇಷ ಕಲ್ಪಿಸಿ ಅದರೊಳಗೆ ಇದ್ದುಕೊಂಡು ಬರೆಯುತ್ತೇನೆ, ಹಾಗಾಗಿ ಎಲ್ಲವನ್ನೂ ಬರೆಯಲಾಗುತ್ತದೆ.
ಮೊದಲು ಬೈಕ್ ಇಲ್ಲದಾಗ ಬಸ್ ಸ್ಟಾಪಿನಲ್ಲಿ ಕಾಯುತ್ತಿದ್ದೆ, ಖಾಯಂ ಕಾಯುವವರು ಕೆಲವು ಜನ ದಿನಾಲೂ ಸಿಕ್ಕಿರೋರು, ಏನೊ ಒಬ್ಬೊಬ್ಬರೂ ಒಂದೊಂದು ತರಹ, ಬರೆದರೆ ಒಬ್ಬೊಬ್ರೂ ಒಂದೊಂದು ಕಥೆಯಾಗುತ್ತಾರೆ. ಅವರಲ್ಲೆ ಕೆಲವರು ಕೆಲ ಸಾಲುಗಳಲ್ಲಿ, ಲೇಖನಗಳಲ್ಲಿ ಇಣುಕಿ ಹೋಗುತ್ತಿರುತ್ತಾರೆ...
ಹವಾಮಾನ ಇಲಾಖೆಯ ’ಪರಿಪೂರ್ಣ’ ಲೆಕ್ಕಾಚಾರದೊ೦ದಿಗೆ, ಮಳೆಹುಡುಗಿಯ ಸಮಸ್ಯೆಯೊ೦ದಿಗೆ, ಒ೦ದು ಎಚ್ಚರಿಕೆಯೊ೦ದಿಗೆ, ಒ೦ದಿನಿತು ಸಹಾಯ ಮಾಡುವ ಪರಿಯೊ೦ದಿಗೆ, ಮನೆಯಾಕೆಯ ಹಿತನುಡಿಗಳೊ೦ದಿಗೆ ಸುರಿದ ವರ್ಷಧಾರೆ ಚೆನ್ನಾಗಿದೆ.
ವಿನುತ ಅವರಿಗೆ
ಕಮೆಂಟ ಬಹಳ ಚೆನ್ನಾಗಿದೆ, ಅಲ್ಲಿ ವರ್ಷಳ ಸಮಸ್ಯೆ, ನನ್ನಾಕೆಯ ತರಲೆ, ಹಿತನುಡಿ ಎಲ್ಲ ಸೇರಿ ಧೋ ಅಂತ ಬಿರುಸಾಗಿ ಸುರಿದದ್ದಂತೂ ನಿಜ...
ಮಾಡುವೆ ಆಗಿಲ್ಲ ಅಂತಿರ, ಇಷ್ಟು ಚೆನ್ನಾಗಿ ಹೆಂಡತಿ ಹೇಳೋ ಮಾತು ಬರಿತಾ ಇರ್ತಿರಾ, ನನಗೇನೋ ಅನುಮಾನ! :)
yogaone ಅವರಿಗೆ
ಅನುಮಾನವೇ ಬೇಡ, ಮದುವೆಯಿನ್ನೂ ಆಗಿಲ್ಲ... ಸುಮ್ನೇ ಎಲ್ಲಾ ಕಲ್ಪನೆ ಪ್ರಪಂಚ... ನನ್ನಲ್ಲಿನ ನನ್ನಾk ಮಾತುಗಳು ಅವು ಅಷ್ಟೇ... :)
Post a Comment