"ರೀ ಇಲ್ಲಿ ನೋಡ್ರಿ ಕಂಪನಿಗಳೂ ಕೆಲಸಗಾರರಿಗೆ ಲವ್ ಲೆಟರ ಕೊಡ್ತಿವೆ, ಪಿಂಕ್ ಸ್ಲಿಪ್ ಅಂತೆ" ಅಂತ ಚೀರಿದ್ಲು, ಕುಡಿಯುತ್ತಿದ್ದ ನೀರು ಗಂಟಲಿನಲ್ಲೇ ಸಿಕ್ಕಿಕೊಂಡು ಕೆಮ್ಮುತ್ತ ಹೊರಗೋಡಿ ಬಂದೆ... "ಲೇ ಎನೇ ಹೇಳ್ತಿದೀಯಾ" ಅಂದ್ರೆ "ಅದೇ ಪಿಂಕ್ ಚಡ್ಡಿ ಅಂತ ಇಷ್ಟು ದಿನಾ ಅದೇನೊ ಲವರ್ಸ್ ಡೇ ವಿರುಧ್ಧ ಮಾಡಿದರಲ್ಲ ಹಾಗೆ ಪಿಂಕ್ ಸ್ಲಿಪ್ ಅಂತ ಎನೋ ಮಾಡ್ತಿದಾರ್ರೀ" ಅಂದ್ಲು. "ಹೂಂ ಪ್ರೀತಿಯಿಂದ ಮನೆಗೆ ಹೋಗಿ ಅಂತ ಹೇಳ್ತಿದಾರೆ" ಅಂದೆ "ಒಹ್ ರಜೇನಾ, ನಿಮಗೂ ಸಿಗುತ್ತಾ" ಅಂದ್ಲು "ಹೂಂ ಅದೊಂಥರಾ ಪರಮನಂಟ್ ರಜೆ" ಅಂದೆ. ಕೈಲಿದ್ದ ಪತ್ರಿಕೆ ಅಲ್ಲೇ ಬೀಸಾಡಿ ಹತ್ತಿರ ಬಂದು ಕೂತು "ಎನ್ರೀ ಇದು, ನನಗೊಂದೂ ಅರ್ಥ ಆಗ್ತಿಲ್ಲ" ಅಂದ್ಲು. "ಎನ್ ಮಾಡೋದು ಕೆಲ್ಸ ಇಲ್ಲ ಮನೆಗೆ ಹೊಗಿ ಅಂತ ಹೊರದಬ್ಬತಾ ಇದಾರೆ, ಅದೇ ಪಿಂಕ ಸ್ಲಿಪ್ಪು ಅಂದೆ" "ಹಾಳಾದೋರಿಗೆ, ಕಲರು ಪಿಂಕೇ ಬೇಕಿತ್ತಾ, ರೆಡ್ಡು ಸ್ಲಿಪ್ಪು ಅನ್ನೊಕೇನಾಗಿತ್ತು" ಅಂತ ಬೈಕೊಂಡು ಒಳಗೆ ಹೋದವಳು ಮತ್ತೆ ಬಂದ್ಲು, "ಅಂದ ಹಾಗೆ ಕಂಪನಿಗಳಿಗೆ ಇಷ್ಟೊಂದು ಪ್ರೀತಿ ಯಾಕೆ ಬಂತು' ಅಂತ ಅಂದಿದ್ದಕ್ಕೆ "ಅದೊಂದು ದೊಡ್ಡ ಕಥೆ ಬಿಡು" ಅಂದ್ರೆ "ಒಹ್ ಕಥೇನಾ, ರೀ ಹೇಳ್ರಿ ಅದನ್ನ ಪ್ಲೀಜ" ಅಂಥ ಗೋಗರೆದಳು. "ಮುಂದೆ ಎನ್ ಕಥೆ ಅಂತ ನಾ ಕೂತಿದ್ದರೆ ಇವಳದೊಂದು ಕಥೆಯಾಯ್ತು" ಅಂತ ಬೈದಿದ್ದಕ್ಕೆ ಮುನಿಸಿಕೊಂಡು ಕೂತ್ಲು. ಇನ್ನು ಹೇಳದಿದ್ರೆ ಅಷ್ಟೇ ಇವಳು ಪಟ್ಟು ಸಡಲಿಸಲೊಳ್ಳಲು ಅಂತ "ಆಯ್ತು ಹೇಳ್ತೀನಿ ಕೇಳು" ಅಂತಿದ್ದಂಗೆ ಮಗ್ಗಲು ಬಂದು ಮಗುವಿನಂತೆ ಕೂತು ಕೂತಹಲಭರಿತ ಕಣ್ಣುಗಳನ್ನು ನನ್ನೆಡೆಗೆ ನೆಟ್ಟಳು. "ಒಂದಾನೊಂದು ಕಾಲದಲ್ಲಿ..." ಶುರುವಿಟ್ಟುಕೊಳ್ಳುತ್ತಿದ್ದಂತೆ "ರೀ ಕೆಲಸದ ಕಥೆ ಹೇಳು ಅಂದ್ರೆ ಇದೇನ್ರಿ ಅಡಗೂಲಜ್ಜಿ ಕಥೆ ಹೇಳ್ತಿದೀರಾ" ಅಂತ ಬಾಯಿ ಬಿಟ್ಲು. "ನಾ ಹೇಳಲ್ಲ ಹೋಗೇ, ನಡುನಡುವೆ ಬಾಯಿ ಹಾಕ್ತಿಯಾ ನೀನು, ಕಥೆ ಅಂದ್ರೆ ಒಂದಾನೊಂದು ಕಾಲದಲ್ಲೇ ಶುರುವಾಗೊದು" ಅಂತ ಸಿಡುಕಿದೆ. "ಪ್ಲೀಜ್ ಪ್ಲೀಜ ಹೇಳಿ" ಅಂತ ಕೊರಳಿಗೆ ಜೋತು ಬಿದ್ಲು. ಹೀಗೊಮ್ಮೆ ಸಿಟ್ಟಿನಿಂದ ನೋಡಿದೆ... "ಒಕೇ, ಒಕೇ, ನಡುವೆ ಮಾತಾಡಲ್ಲ, ಆಮೇಲೆ ಮಾತಾಡ್ತೀನಿ," ಅಂತ ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತ್ಲು.
ಅದೊಂದು ಹಳ್ಳಿಯೂರು, ಹಸು ಕರುಗಳು ಹಾಯಾಗಿ ಒಡಾಡಿಕೊಂಡಿದ್ದವು, ಹಸಿರು ಮೇಯಲು ಅಷ್ಟಕ್ಕಷ್ಟೇ ಇತ್ತು, ಮಳೆ ಬಂದರೆ ಜೊಳ ರಾಗಿ ಬೆಳೆದರೆ ಹೆಚ್ಚು, ಊಟ ಒಪ್ಪತ್ತು ಆದರೂ ಚೆನ್ನಾಗಿತ್ತು. ಅದೊಂದು ದಿನ ಹಸಿರು ಕಾನನದೂರಿನಿಂದ ಕೆಲವರು ಬಂದರು, ಇಲ್ಲಿನ ಹಸು ಕರುಗಳು ಚೆನ್ನಾಗಿವೆ, ಚೆನ್ನಾಗಿ ತಿನಿಸಿದರೆ ಹಾಲು ಹೆಚ್ಚು ಕೊಡುತ್ತವೆ, ಅಂದರು. ನಮ್ಮಲ್ಲಿ ಹಸಿರಿದೆ ಹಸುಗಳಿಲ್ಲ, ನಿಮ್ಮ ಹಸುಗಳಿಗೆ ನಾವು ಹಸಿರು ಹುಲ್ಲು ಕೊಡುತ್ತೇವೆ ನಮಗೆ ನಿಮಗೆ ಹಾಲು ಹಂಚಿಕೊಳ್ಳೋಣ ಅಂದರು. ಹಸುಗಳಿಗೂ ಹುಲ್ಲಿನ ಬಗ್ಗೆ ಕೇಳಿ ಬಾಯಲ್ಲಿ ನೀರೂರಿತು, ಒಣ ದಂಟು ಸೊಪ್ಪು ತಿಂದ ದನಗಳು ಹಸಿರು ಹುಲ್ಲು ತಿನ್ನಲು ತುದಿಗಾಲಿನ ಮೇಲೆ ನಿಂತವು.
ಒಂದು ದೊಡ್ಡಿ(ದನದಮನೆ, ದನ ಕರು ಕಟ್ಟುವ ಜಾಗ) ಶುರುವಾಯಿತು, ಹಸಿರು ಕಾನನದೂರಿನಿಂದ ಹುಲ್ಲು ಬಂತು, ಹುಲ್ಲಿನೊಂದಿಗೆ ಎರಡು ಹಸುಗಳೂ ಬಂದವು.ಅವು ಹುಚ್ಚೆದ್ದು ಹುಲ್ಲು ತಿನ್ನುತ್ತಿದ್ದವು ಹಂಡೆಗಟ್ಟಲೆ ಹಾಲು ಕರೆಯುತ್ತಿದ್ದವು.ಅವನ್ನು ನೋಡಿ ಹಳ್ಳಿಯೂರಿನ ಹಸುಗಳು ಅವ್ವಾಕ್ಕಾದವು. ಹೆದರಿದ ಕೆಲವು ಹಸುಗಳು ದೊಡ್ಡಿ ಸೇರಲಿಲ್ಲ, ಕೆಲವು ಹಸಿರು ಹುಲ್ಲಿನಾಸೆಗೆ ಸೇರಿದವು. ಹಳ್ಳಿಯೂರಿನ ಹಸುಗಳಿಗೆ ಒಂದಿಷ್ಟು ಹುಲ್ಲು ಹಾಕಿದರು ಮೊದಮೊದಲು ಕಡಿಮೆ ಹಾಲು ಕರೆದರೂ, ಬರಬರುತ್ತಿದ್ದಂತೆ ಪೈಪೊಟಿಯಲ್ಲಿ ಹಾಲು ಕರೆಯತೊಡಗಿದವು. ಹಸಿರು ಕಾನನದೂರಿನವರು ಖುಶಿಯಾದರು ಕಡಿಮೆ ಹುಲ್ಲಿಗೆ ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮೆಲ್ಲನೆ ಮೈ ಸವರಿ ಮತ್ತಷ್ಟು ಹುಲ್ಲು ಸುರಿದರು. ಅವರೆಷ್ಟು ಸುರಿದರೂ ಅದು ಹಸಿರು ಕಾನನದೂರಿನ ಹಸುಗಳಿಗಿಂತ ಕಡಿಮೆಯೇ. ಹಳ್ಳಿಯೂರಿನ ಹಸುಗಳು ಮತ್ತಷ್ಟು ಖುಶಿಯಾಗಿ ಹಾಲು ಕರೆದವು, ಹಸಿರು ಕಾನನದೂರಿನ ಹಸುಗಳು ಎರಡೇ ಎರಡು ಹೊತ್ತು ಸರಿಯಾಗಿ ಹಾಲು ಕರೆದರೆ, ಹಳ್ಳಿಯೂರಿನ ಹಸುಗಳು ಹಗಲು ರಾತ್ರಿಯೆನ್ನದೆ ಹಾಲು ಕರೆದವು. ಅವರು ಮತ್ತಷ್ಟು ಖುಶಿಯಾಗೆ ಒಮ್ಮೊಮ್ಮೆ ಹುಲ್ಲಿನೊಂದಿಗೆ ಧಾನ್ಯವನ್ನೂ ಹಾಕಿದರು ಅದರ ರುಚಿ ಹಚ್ಚಿಸಿದರು, ಧಾನ್ಯ ಬೇರೆ ಸಿಗುತ್ತದೆಂದು ಗೊತ್ತಾಗಿ ಹಸುಗಳು ಮತ್ತಷ್ಟು ಕರೆದವು.
ಹಸಿರು ಹುಲ್ಲು, ಧಾನ್ಯ ತಿಂದು ತಿಂದು ದೊಡ್ಡಿಯ ಹಸುಗಳು ದಷ್ಟಪುಷ್ಟವಾದವು, ಅವುಗಳ ನೋಡಿ ಮತ್ತಷ್ಟು ಹಸುಗಳು ದೊಡ್ಡಿ ಸೇರಲು ಬಂದವು, ಹೀಗೇ ಒಂದಿದ್ದ ದೊಡ್ಡಿ ಹತ್ತು ಹದಿನೈದು ದೊಡ್ಡಿಗಳಾದವು. ದೊಡ್ಡಿ ಸೇರುವ ಹಸುಗಳೂ ಹೆಚ್ಚಾದವು, ಹಸುಗಳಿಗೆ ದೊಡ್ಡಿ ಸೇರಲು ಮಾನದಂಡಗಳು ಜಾರಿಗೆ ಬಂದವು ಇಂತಿಷ್ಟು ಹಾಲು ಕರೆದರೆ ಮಾತ್ರ ಸೇರಿ ಅಂತ ಹೇಳಲಾಯ್ತು, ಹಸುಗಳು ಹಾಲು ಕರೆಯುವ ತರಬೇತಿ ಪಡೆಯತೊಡಗಿದವು, ಅದನ್ನು ಕಲಿಸುವ ಹಲವು ತರಬೇತಿ ಸಂಸ್ಥೆಗಳು ತಲೆಯೆತ್ತಿದವು. ಮಾಲೀಕರು ತಮ್ಮ ತಮ್ಮ ಹಸುಗಳನ್ನು ಅಲ್ಲಿ ಸೇರಿಸಿದರು, ಕಡಿಮೆ ಹುಲ್ಲು ತಿಂದು ಹೆಚ್ಚು ಹಾಲು ಕರೆಯುವ ಹಸುಗಳು ತಯ್ಯಾರಾದವು.
ಹಸುಗಳು ಹೆಚ್ಚು ಹುಲ್ಲು ಕೊಡುವ ದೊಡ್ಡಿಗೆ ಸೇರತೊಡಗಿದವು, ದೊಡ್ಡಿಗಳು ಪೈಪೊಟಿಗಿಳಿದು ನಾ ಹೆಚ್ಚು ನೀ ಹೆಚ್ಚು ಅಂತ ಹುಲ್ಲು ಕೊಡತೊಡಗಿದರು. ಹಸುಗಳೂ ದೊಡ್ಡಿಯಿಂದ ದೊಡ್ಡಿಗೆ ಜಿಗಿದಾಡಿದವು. ಹಸು ಹಿಡಿದು ಕೊಡುವ ಕಮೀಷನ್ನು ಏಜೆಂಟ್ರು ತಯ್ಯಾರಾದರು, ಹೆಚ್ಚು ಹಾಲು ಕರೆಯುವ ಹಸುಗಳನ್ನು ಹಿಡಿದು ತಂದು ದೊಡ್ಡಿಗೆ ದೂಡಿದರು. ಹಸುಗಳನ್ನು ಹುಲ್ಲುಗಾವಲಿಗೆ, ಹುಲ್ಲುಗಾವಲಿನಿಂದ ದೊಡ್ಡಿಗೆ ಸಾಗಿಸಲು ಗಾಡಿಗಳು ಬಂದವು, ಹಸು ಸಾಗಿಸುವ ಗಾಡಿಗಳ ಮಾಡಿ ಕೆಲವರು ಜೀವನ ಮಾಡಿದರು. ಹಸುಗಳನ್ನು ಅಲಂಕರಿಸಲು ಅಂಗಡಿಗಳು ಬಂದವು, ಅವುಗಳು ಕೋಡುಗಳಿಗೆ ಬಣ್ಣ ಬಳಿದದ್ದೇನು, ಬಾಲದ ಕೂದಲು ಕತ್ತರಿಸಿದ್ದೇನು, ಬಲು ಅಂದದಿ ಅವು ಬಳಕುತ್ತ ನಡೆದದ್ದೇನು. ಹಸುಗಳ ಹಾಲಿನ ಡೇರಿಗಳನ್ನು ಕೆಲವರು ತೆರೆದು ಲಾಭ ಮಾಡಿಕೊಂಡರೆ, ಕೆಲವರು ಹಾಲು ಕರೆದು ಬೇಸತ್ತ ಹಸುಗಳಿಗೆ ಸ್ವಚ್ಛಂದವಾಗಿ ತಿರುಗಾಡಲು ಪಾರ್ಕು ಕಟ್ಟಿದರು. ದೊಡ್ಡಿಯವರೂ ಹಸುಗಳನ್ನು ತಿಂಗಳು ಎರಡು ತಿಂಗಳಿಗೊಮ್ಮೆ ಇಂಥ ಪಾರ್ಕುಗಳಿಗೆ ಕರೆದೊಯ್ದರು. ಹಿರಿ ಹಿರಿ ಹಿಗ್ಗಿದ ಹಸುಗಳು ಇನ್ನಷ್ಟು ಹಾಲು ಕರೆದವು.
ಹಸುವಿಗೆ ಆರೋಗ್ಯ ಸರಿಯಿಲ್ಲದಿರೆ ನೋಡುವ ಡಾಕ್ಟರುಗಳು, ಗೆಜ್ಜೆ ಗಂಟೆ ಮಾರುವ ಅಂಗಡಿಗಳು, ಕಾಲಿಗೆ ನಾಲು ಬಡೆಯುವ ಜನರು, ಅವುಗಳಿಗೆ ಕುಡಿಯಲು ನೀರು ಸರಬರಾಜು ಮಾಡಲು ಟ್ಯಾಂಕರುಗಳು, ಕುಣಿಕೆ, ಕಟ್ಟುವ ಹಗ್ಗಗಳ ತಯ್ಯಾರಿಸುವವರು, ಕೊನೆಕೊನೆಗೆ ಅವು ಹಾಕಿದ ಸಗಣಿಯ ಬೆರಣಿ ತಟ್ಟಿ ಲಾಭ ಮಾಡಿಕೊಂಡರು. ಹೀಗೆ ಬೇರೆಯೂರಿಂದ ಮತ್ತಷ್ಟು ಹಸುಗಳು ಬಂದವು, ಆ ಹಸುಗಳು ತಂಗಲು ಇನ್ನಷ್ಟು ದೊಡ್ಡಿಗಳಿಗೆ ಜಾಗ ಮಾರಾಟವಾದವು. ಒಟ್ಟಿನಲ್ಲಿ ಹಸುಗಳ ಹಾಲಿನ ಕ್ರಾಂತಿಯಾಯಿತು, ಸರಕಾರ ಹಾಲಿನ ಮೇಲೆ ಸುಂಕ ಹೇರಿ ತೃಪ್ತಿಪಟ್ಟಿತು, ಕೆಲ ಪೇಪರು, ಪತ್ರಿಕೆಗಳು ಹಸುಗಳನ್ನು ಕೊಂಡಾಡಿದವು. ನಮ್ಮ ಹಸು ಇಷ್ಟು ಹುಲ್ಲು ತಿನ್ನುತ್ತದೆ, ನಮ್ಮದು ಇಷ್ಟು ಹೊರೆ ತಿನ್ನುತ್ತದೆ, ನಮ್ಮದು ಹತ್ತು ಲೀಟರು ಹಾಲು ಕರೆಯುತ್ತದೆ, ಒಹ್ ನಿಮ್ಮದು ಆರೇ ಲೀಟರಾ...
ಅನ್ನೊ ಮಾತುಗಳು ಹೆಚ್ಚಾದವು ಹಸುಗಳು ಹೆಮ್ಮೆಯಿಂದ ಹಿರಿ ಹಿಗ್ಗಿದವು, ಗೂಳಿಯಂತೆ ಹೂಂಕರಿಸಿದವು, ದೊಡ್ಡಿ ಸೇರದ ಹಸುಗಳ ಮುಂದೆ ಹೊಟ್ಟೆಕಿಚ್ಚುಪಡುವಂತೆ ಒಡಾಡಿದವು. ಕೆಲವು ಹಸುಗಳನ್ನು ಆರಿಸಿ ಹಸಿರು ಕಾನನದೂರಿಗೆ ಕಳಿಸಲಾಯಿತು, ಹಸಿರು ಕಾನನದಲ್ಲಿ ಸುತ್ತಿ ಕೆಲವು ಮರಳಿ ಬಂದರೆ ಕೆಲವು ಅಲ್ಲೇ ಯಾವುದೊ ದೊಡ್ಡಿ ಸೇರ್‍ಇ ಸೆಟಲ್ಲು ಆದವು. ಅಲ್ಲಿ ಹೋಗಿ ಬಂದ ಹಸುಗಳು ಇಲ್ಲಿನ ಹಸುಗಳಿಗೆ ಅದರ ವರ್ಣನೆ ಮಾಡಿದ್ದೇ ಮಾಡಿದ್ದು, ಅಷ್ಟೊಂದು ಝರಿಗಳಿಗೆ, ಜಲಪಾತಗಳಿವೆ ಅಲ್ಲಿ, ಜುಳು ಜುಳು ಹರಿವ ಸ್ಪಟಿಕದಂತೆ ಶುಧ್ದ ನೀರಿನ ಹರಿವುಗಳಿವೆ, ಹಸಿರು ತುಂಬಿ ತುಳುಕುತ್ತಿದೆ, ಹಸಿರು ಬಿಡಿ ಹೂವು ಪುಷ್ಪಗಳ ಬನಗಳಿವೆ, ಬಣ್ಣ ಬಣ್ಣದ ಕಾಮನ ಬಿಲ್ಲು ಕಾಣುತ್ತೆ ಅಂತನ್ನುವ ಹಲವು ಬಣ್ಣದ ಕಥೆಗಳ ಹೇಳಿದವು. ಹಸುಗಳ ಕಣ್ಣ ತುಂಬ ಹಸಿರು ಕಾನನದೂರಿನ ಕನಸುಗಳೆ ತುಂಬಿಕೊಂಡವು. ಹಸುಗಳಿಗೆ ಕಾನನದೂರಿಗೆ ಹೋಗಲು ಕಾನೂನುಗಳದವು, ದೊಡ್ಡಿ ಮಾಲೀಕರು ತಮ್ಮತಮ್ಮ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸುತ್ತಾಡಿಸಿಕೊಂಡು ಬಂದರು. ಹಳ್ಳಿಯೂರಿನಿಂದ, ಹಸಿರು ಕಾನನದೂರಿಗೆ ದೊಡ್ಡ ದೊಡ್ಡ ಪೈಪುಗಳನ್ನು ಹಾಕಿದರು, ಇಲ್ಲಿ ಹಾಲು ಕರೆದರೆ ಅಲ್ಲಿ ಬೀಳುವಂತೆ ವ್ಯವಸ್ಥೆ ಮಾಡಿದರು. ಅಲ್ಲಿ ಕುಳಿತೆ ಇಲ್ಲಿನ ಹಸುಗಳ ಹಾಲು ಕರೆಯುವಂತೆ ವ್ಯವಸ್ಥೆಗಳಾದವು. ಹಾಲು ಕರೆಯುವ ಮಶೀನುಗಳು ಬಂದವು, ಹುಲ್ಲು ಕತ್ತರಿಸಲು, ಹಂಚಲು, ಎಲ್ಲ ಮಶೀನುಗಳು ಹಸಿರು ಕಾನನದೂರಿನಿಂದ ಬಂದವು. ಎಲ್ಲರೂ ಹಾಲು ಕರೆದರೇ ಹೊರತು ಯಾರೂ ಹುಲ್ಲುಗಾವಲು ಬೆಳೆಸಲಿಲ್ಲ, ಹಾಲು ಕರೆಯುವ ಮಶೀನು ತಂದರೇ ಹೊರತು ತಯಾರಿಸಲಿಲ್ಲ... ಹೇಗೊ ಇದ್ದ ಹಳ್ಳಿಯೂರು ಹೇಗೊ ಬದಲಾಗಿ ಹೋಯಿತು.
ಹುಲ್ಲು ಬಂದು ಬೀಳುವುದು, ಹಸುಗಳು ಕರೆದ ಹಾಲು ಅಲ್ಲಿಗೆ ಹೋಗುವುದು, ಅಲ್ಲಿಂದ ಮತ್ತೆ ಹಾಲಿನ ಹಲವು ಉತ್ಪನ್ನಗಳಾಗಿ, ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪ ಬಂದವು, ಇಲ್ಲೂ ತಯ್ಯಾರಾದವು, ಖೋವ, ಪೇಡೆ, ಕುಂದಾ, ಹಲ್ವಾ, ಹಾಲಿನ ಪುಡಿ, ಕೆನೆ, ಕುಲ್ಫಿಗಳು ಒಂದೊ ಎರಡೊ ಸಾಕಷ್ಟು ಬಂದವು, ಎಲ್ಲರೂ ತಿಂದರು ತೃಪ್ತಿಪಟ್ಟರು. ಬೇಡಿಕೆ ಹೆಚ್ಚಾಯಿತು ಹಸುಗಳು ಹಾಲು ಹೆಚ್ಚು ಹೆಚ್ಚು ಕರೆಯಬೇಕಾಯಿತು, ಹಾಲು ಹಿಂಡಿ ಹೀರಿ ಹಿಪ್ಪೆಯಂತಾದವು, ಬೇರೆ ಗತ್ಯಂತರವಿಲ್ಲದೆ ಒತ್ತಡದಲ್ಲಿ ಹಾಲು ಹಿಂಡಿ, ಹಾಲಿನೊಟ್ಟಿಗೆ ರಕ್ತ ಹಿಂಡಿದವು. ಹಳೆಯ ಹಸುಗಳನ್ನು ಕಸಾಯಿಖಾನೆಗೆ ದೂಡಲಾಯಿತು. ಮತ್ತೆ ಹೊಸ ಹಸುಗಳು ಅಲ್ಲಿ ತುಂಬಿಕೊಂಡವು. ಹೊಸ ಹಸುಗಳೂ ಹುರುಪಿನಿಂದ ಹಾಲು ಕರೆದವು ಕುಣಿದು ಕುಪ್ಪಳಿಸಿದವು, ಜಂಬದಿಂದ ಜಿಗಿದಾಡಿದವು, ಹಸುಗಳ ಹಾರಾಟ ಹೆಚ್ಚಾಯಿತೆಂದು ಹಲವರು ತಗಾದೆ ತೆಗೆದರು, ಹೀಯಾಳಿಸಿದರು, ಹೀಗಳೆದರು, ಕೆಲ ಪತ್ರಿಕೆಗಳೂ ಬರೆದವು ಜರಿದವು. ಹಸಿರು ಕಾನನದೂರಿನಲ್ಲೂ ಹಳ್ಳಿಯೂರಿನ ಹಸುಗಳು ಜಾಸ್ತಿಯಾದವೆಂದೂ, ನಮ್ಮ ಹಸುಗಳಿಗೆ ಹುಲ್ಲಿಲ್ಲ ಅಂತ ಕೂಗು ಕೇಳಿಬಂದವು.
ಹೀಗೇ ಎಲ್ಲ ಸರಿಯಾಗಿ ಹೋಗುತ್ತಿರಬೇಕಾದರೆ, ಅದೊಂದು ಸಾರಿ ಹಸಿರು ಕಾನನದೂರಿಗೆ ಬರಗಾಲ ಅಪ್ಪಳಿಸಿಬಿಟ್ಟಿತು. ಹಸಿರಿಲ್ಲ, ಹುಲ್ಲಿಲ್ಲ, ಹಾಲೇನು ಮಾಡೋಣ ಅಂದವು ದೊಡ್ಡಿಗಳು. ಹುಲ್ಲು ತಿನ್ನುತ್ತ ಹಾಯಾಗಿದ್ದ ಹಸುಗಳಿಗೆ ನಡುಕ ಹುಟ್ಟಿತು. ಎಲ್ಲಿ ನೋಡಿದರೂ ಹಳ್ಳಿಯೂರಿನಲ್ಲಿ ಹಸಿರು ಕಾನನದ್ದೇ ಮಾತುಗಳು, ಕೊಲಾಹಲ ಶುರುವಾಯಿತು, ದೊಡ್ಡಿಗಳು ಹಳೆಯ ಹಸುಗಳನ್ನು ಹೊರದೂಡಿದವು, ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮಾತ್ರ ಜಾಗ ಕಲ್ಪಿಸಲಾಯಿತು. ಇದೇ ಸಮಯದಲ್ಲಿ ಇದೇ ಗುಲ್ಲು, ಹುಲ್ಲು ಗದ್ದಲದಲ್ಲಿ ಕೆಲವು ದೊಡ್ಡಿಗಳು ಹುಲ್ಲಿದ್ದರೂ ಹಸುಗಳ ಹೊರದೂಡತೊಡಗಿದವು. ಹಲವು ದೊಡ್ಡಿಗಳು ಮುಚ್ಚಿದವು, ಕೆಲವು ಹುಲ್ಲು ಕಡಿಮೆ ಮಾಡಿದವು...
ಹಸುಗಳು ಹೊರಬರುತ್ತಿದ್ದಂತೆ ಹುಚ್ಚರಂತಾದವು, ಎಲ್ಲೊ ಸಿಕ್ಕ ಸಿಕ್ಕ ದೊಡ್ಡಿ ಸೇರಿದವು, "ಗೂಳಿ ಬಿದ್ದರೆ ಆಳಿಗೊಂದು ಕಲ್ಲಂತೆ". ಗೂಳಿ ಹೂಂಕರಿಸಿ ಮೆರೆದಾಡಿರುತ್ತಲ್ಲ, ಕೆಳಗೆ ಬಿದ್ದಿದೆ ಅಂತಂದರೆ ಪ್ರತಿಯೊಬ್ಬನೂ ಕಲ್ಲು ಒಗೆಯುತ್ತಾನೆ, ಈಗಲೇ ಸಿಕ್ಕಿದೆ ಬಾ, ಕೆಳಗೆ ಬಿದ್ದಿದೆ ನೆಗೆದು ಬರಲಿಕ್ಕಿಲ್ಲವೆಂದು. ಕೆಲ ಪತ್ರಿಕೆ ಪೇಪರುಗಳು ಹಸುಗಳನ್ನೇ ಜರಿದವು, ಆ ದೊಡ್ಡಿಯಲ್ಲಿ ಹತ್ತು ಹಸುಗಳನ್ನು ತೆಗೆಯಲಾಗಿದೆ, ಈ ದೊಡ್ಡಿಯಿಂದ ನೂರು ಹಸುಗಳ ತೆಗೆಯಲಿದ್ದಾರೆ ಅಂತ ದೊಡ್ಡ ದೊಡ್ದ ಸುದ್ದಿ ಮಾಡಿದರು, ಕೆಲ ಅಂಕಿಆಂಶಗಳ ಚಾರ್ಟು, ಟೇಬಲ್ಲುಗಳನ್ನು ಪ್ರಕಟಿಸಿದರು... ಹುಲ್ಲು ತಿಂದದ್ದೆ ತಪ್ಪೆಂದರು, ಹಸುಗಳಿಗೂ ಗೊತ್ತಿಲ್ಲ ಏನು ಮಾಡಬೇಕೆಂದು. ಇಷ್ಟು ದಿನ ಎಲ್ಲರಿಗೂ ಬೇಕಾಗಿದ್ದ, ಬಂದಾಗ ಲಾಭ ಮಾಡಿಕೊಂಡ ಎಲ್ಲರದೂ ಒಂದೇ ವರಾತ, ಎಲ್ಲರೂ ಬೀದಿಗೆ ಬಂದರು, ಹಸುಗಳೂ ಕೂಡ... ಯಾರ ತಪ್ಪು, ಯಾರನ್ನು ಬೈಯಬೇಕು, ಎಲ್ಲ ತಪ್ಪು ಹಸುಗಳದಾ, ಇಲ್ಲಿ ಯಾಕೆ ಯಾವುದೇ ಹುಲ್ಲುಗಾವಲು ಬೆಳೆಯಲಿಲ್ಲ, ಇಲ್ಲಿ ಹಳ್ಳಿಯೂರಲ್ಲೂ ಹಸಿರು ಕಾನನ ಬೆಳೆಸಬಹುದಿತ್ತಲ್ಲ, ಇಲ್ಲೇ ಹಾಲು ಕರೆಯಬಹುದಿತ್ತಲ್ಲ, ಹಾಲು ಕರೆಯುವ ಮಶೀನುಗಳ ನಾವೇ ರೆಡಿಮಾಡಬಹುದಿತ್ತಲ್ಲ. ಇಲ್ಲಿ ಯಾಕೆ ಅದಾಗಲಿಲ್ಲ ಎಲ್ಲದಕ್ಕೂ ಹಸಿರು ಕಾನನದೂರಿನ ಮೇಲೆ ಅವಲಂಬಿಸಿದೆವು, ಅಲ್ಲಿ ಬರಬಾರದ ಬರಗಾಲ ಬಂತು ಇಲ್ಲಿ ಎಲ್ಲ ಅಲ್ಲೊಲಕಲ್ಲೋಲವಾಯಿತು. ಈಗ ಹಸುಗಳು ಹೆಚ್ಚಾಗಿವೆ, ಹೆಚ್ಚು ಹುಲ್ಲು ತಿನ್ನುತ್ತವೆ ಅಂದರೆ... ಅದಕ್ಕೆ ಬೀದಿಗೆ ಬಂದಿವೆ ಅಂದರೆ... ಮನಸು ತೃಪ್ತಿಯಾಗುವವವರೆಗೆ ಕಲ್ಲು ಒಗೆಯಿರಿ, ಅಟ್ಟಿಸಿಕೊಂಡು ಹೋಗಿ ಚಾವಟಿಯಿಂದ ಬಾರಿಸಿ, ಬೀದಿಯಲ್ಲಿ ನಿಲ್ಲಿಸಿ ಗುಂಡು ಹಾಕಿ. ತಪ್ಪು ಹಸುಗಳದೆ ಅಂದಾದರೆ ಅದೇ ಸರಿ, ಅಲ್ಲಿಗೆ ಕಥೆ ಮುಗಿಯುತ್ತದೆ, ಮುಗಿಯಲ್ಲಿಲ್ಲವೆಂದಾರೆ ಮುಗಿದಿದೆ ಅಂದುಕೊಳ್ಳಿ...
"ಹೂಂ ನಿನಗೂ ಕಲ್ಲು ಒಗೆಯಬೇಕೆನಿಸುತ್ತಾ, ಒಗಿ, ಕೈಗೆ ಎನು ಸಿಗುತ್ತದೊ ಅದನ್ನೇ ತೆಗೆದುಕೊಂಡು ಒಗಿ, ಅದಕ್ಕೆ ಗುಂಡು ಹಾಕು" ಇನ್ನು ಎನೇನೊ ಅರಚುತ್ತಿದ್ದೆ, ಹುಚ್ಚುಹಿಡಿದಂತಾಗಿಬಿಟ್ಟಿತ್ತು... ಅವಳು ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತು ಕಥೆ ಕೇಳುತ್ತಿದ್ದವಳು... ನನ್ನ ಬಾಯಿಮೇಲೆ ಬಟ್ಟಿಟ್ಟಾಗಲೇ ಸುಮ್ಮನಾದೆ.. ಆದರೂ ಇನ್ನೂ ಜೋರಾಗಿ ಅರಚಬೇಕೆನಿಸುತ್ತಿತ್ತು... ಮನೆಯತುಂಬ ಸೂತಕ ಕಳೆ ಆವರಿಸಿತ್ತು, ಎಷ್ಟೊ ಹೊತ್ತು ಹಾಗೇ ಕುಳಿತಿದ್ದೆವು, ಭವಿಷ್ಯದಲ್ಲಿ ಇನ್ನೂ ಏನು ಕಾದಿದೆಯೊ.. ಸಮಯವೂ ಮುಂದೆ ಹೋಗದೇ ಹಾಗೆ ಕುಳಿತರೆ ಎಷ್ಟು ಚೆನ್ನಾಗಿರುತ್ತದೆ ಅನಿಸುತ್ತಿತ್ತು.
ಸಮಯ ನಿಲ್ಲಲ್ಲ... ನಿಲ್ಲ ಕೂಡದು... ಸಂಜೆಯಾಯಿತು... ರಾತ್ರಿಯೂ ಆಗುತ್ತದೆ, ಮತ್ತೆ ಬೆಳಗಿದೆ ಅಷ್ಟೇ...ಚಹ ಮಾಡಿ ತಂದಳು, ಹಾಲು ಜಾಸ್ತಿ ಹಾಕಿದ್ದಳು!. ಕುಡಿಯುತ್ತ ಕುಡಿಯುತ್ತ... "ಕಥೆ ಕಥೆಯೆನಿಸಲಿಲ್ಲ..." ಅಂದ್ಲು. "ಕಥೆಗಳೆಲ್ಲ ಹಾಗೇ, ವಾಸ್ತವದ ತಳಹದಿಯ ಮೇಲೆ ಕಟ್ಟಿದ ಮಂಜಿಲಗಳು" ಅಂದೆ. "ನಾಳೆ ಎನಾಗುತ್ತೊ ಗೊತ್ತಿಲ್ಲ, ಇಂದು ಖುಶಿಯಾಗಿರೊಣ, ಇಷ್ಟು ದಿನ ಯಾಕೆ ನನಗೆ ಹೇಳಲಿಲ್ಲ" ಅಂದ್ಲು. "ನನಗೇ ಗೊತ್ತಿರಲಿಲ್ಲ, ಗೊತ್ತಾದರೂ ಏನು ಅಗಬಹುದಿತ್ತು" ಅಂದೆ. "ಮತ್ತೆ ಬರಗಾಲ ಕಳೆದು, ಮಳೆ ಬರಬಹುದು ಆಗ ಇಲ್ಲೂ ಹುಲ್ಲು ಬೆಳೆಯಬಹುದು" ಅಂತಿದ್ದಳು ಏನೊ ಸಮಾಧಾನದ ಮಾತಿರಬೇಕು. "ಅದು ಬಿಡು ಎನಾದರಾಗಲಿ ನಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ, ಏನೊ ಮಾಡೊಣ" ಅಂದೆ. "ಏನೂ ವಿಚಾರ ಮಾಡಬೇಡಿ, ಎರಡು ಒಳ್ಳೆ ತಳಿ ಹಸು ಸಾಕಿ ಬಿಡೊಣ, ಜೀವನ ಹೇಗೊ ಸಾಗುತ್ತದೆ" ಅಂದ್ಲು ತರಲೆ. "ನಿನಗೇನು ಹಸು ಹಾಲು ಕರೆಯಲು ಬರ್ತದಾ" ಅಂದೆ "ನೀವಿದೀರಲ್ಲ, ನಾ ಚಹ ಮಾಡಿ ಕೊಡ್ತೇನೆ ಬೇಕಾದ್ರೆ" ಅಂದ್ಲು ನಗುತ್ತಿದ್ದೆ, "ಇನ್ನೊಂದು ಕಪ್ಪು ಹಾಲಿನಲ್ಲೇ ಮಾಡಿದ ಚಹ ಬೇಕಾ" ಅಂದ್ಲು, ತಲೆ ಸಿಡಿಯುತ್ತಿತ್ತು, "ಹಾಲು ಹಾಲಾಹಲವೆನಿಸುತ್ತಿದೆ, ಸ್ಟ್ರಾಂಗ ಚಹ ಮಾಡಿ ಕಡಿಮೆ ಹಾಲು ಹಾಕಿ ತಾ" ಅಂದೆ... ತರಲು ಓಳಗೆ ಹೋದ್ಲು... ಅಷ್ಟು ಸುಲಭ ಅಲ್ಲ ಹೇಳೊಕೇನು ಏನೊ ಹೇಳಬಹುದು... ಹೀಗೇ ಮತ್ತೆ ಎನೊ ಹೇಳುತ್ತ ಸಿಗೊಣ...
ಇತ್ತೀಚಿನ ವಿದ್ಯಮಾನಗಳನ್ನು ಕೆಲ ನೋಡಿ ಪತ್ರಿಕೆ, ಪೇಪರಿನಲ್ಲಿ ಬರುವ ಸುದ್ದಿಗಳ ಓದಿ ಅದೇ ಗುಂಗಿನಲ್ಲಿ ಮನಸಿಗೆ ತೊಚಿದ್ದು ಗೀಚಿದೆ... ಗೆಳೆಯ ಹೇಳುತ್ತಿದ್ದ ಅವನ ಮನೆಗೆ ಹಾಲು ಹಾಕುವವ ಕೇಳುತ್ತಿದ್ದನಂತೆ "ಏನ್ ಸಾಮಿ ಕಂಪ್ಯೂಟರು ಬಿದ್ದೊಗದಂತೆ" ಅಂತ ಅದಕ್ಕೆ ಇವ "ಹಾಂ ಬಿದ್ದಿತ್ತು ಈಗ ಎತ್ತಿ ಟೇಬಲ್ ಮೇಲೆ ಇಟ್ಟೀದೀನಿ" ಅಂದನಂತೆ. ಮೂವತ್ತು ನಲವತ್ತು ಸಾವಿರ ಸಂಬಳ ಅಂತ ಕೊಚ್ಚಿಕೊಳ್ಳುವವರನ್ನು, ಬ್ಯಾಕಪ್ಯಾಕ ಐಡಿ ಕಾರ್ಡು ನೋಡುತ್ತಿದ್ದಂತೆ, ಮಾರು ದೂರ ಹೋಗಲು ನೂರು ಕೇಳುವ ಆಟೊಗಳನ್ನು, ಗಾಯದ ಮೇಲೆ ಉಪ್ಪುಸವರುವಂತೆ ಕೆಲ ಪತ್ರಿಕೆಗಳು ಬರೆದಿರುವುದನ್ನು, ಎಲ್ಲವನ್ನೂ ನೋಡಿದ ಮೇಲೆ ಬರೆಯಬೇಕೆನಿಸಿತು. ತಪ್ಪು ಇದರಲ್ಲಿ ಯಾರದು ಅನ್ನುವುದಕ್ಕಿಂತ ಇದನ್ನು ಹೇಗೆ ಸರಿ ಮಾಡುವುದು ಅಂತ ಯೋಚಿಸಬೇಕೆನಿಸಿತು. ನನ್ನ ಕೈಲಿಂದ ಏನಾಗುತ್ತೊ ನಾ ಮಾಡುತ್ತೇನೆ, ನಾ ಪ್ರೀತಿಯಿಂದ ಆರಿಸಿಕೊಂಡ ವೃತ್ತಿ ಇದು, ನನಗೇನು ನಾ ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆಯೂ ಇಲ್ಲ, ಹೆಮ್ಮೆ ಪಡುವಂಥದ್ದು ಮಾಡಿರುವೆನೆಂದೂ ಅನಿಸೋದಿಲ್ಲ, ಏನೊ ಕೆಲಸ ಮಾಡುತ್ತಿದ್ದೇನೆ, ಖಾಲಿ ಕೂತಿಲ್ಲ, ಮೋಸ ಮಾಡಿ ಗಳಿಸಿಲ್ಲ, ಹೆಚ್ಚು ಗಳಿಸುತ್ತಿದ್ದೇನೆಂಬ ಜಂಭವಂತೂ ಇಲ್ಲವೇ ಇಲ್ಲ, ಇಷ್ಟಕ್ಕೂ ಅಷ್ಟು ಗಳಿಸುತ್ತಲೂ ಇಲ್ಲ. ಏನೆನೊ ಕನಸುಗಳು, ಏನೊ ಸಾಧಿಸಬೇಕೆಂದುಕೊಂಡಿದ್ದು, ಎಲ್ಲ ಕಣ್ಣ ಮುಂದೆ ಕರಗಿಹೋಗುತ್ತಿರುವುದನ್ನು ನೋಡುತ್ತಿದ್ದೇನೆ. ಅದೇ ಅಂತಾರಲ್ಲ "ಎತ್ತು ಏರಿಗೆಳೆದರೆ, ಕೋಣ ಕೆರೆಗೆ ಎಳೆಯಿತಂತೆ" ಹಾಗೆ ಒಂದಕ್ಕೊಂದು ಸಂಬಂಧವಿಲ್ಲದವು ತಳಕು ಹಾಕಿಕೊಂಡು ಜೀವನದ ಬಂಡಿ ಎತ್ತೊ ಸಾಗುತ್ತಿದೆ ಅನ್ನೊ ಹಾಗಿದೆ. ಜೀವನದಲ್ಲಿ ಇನ್ನೇನು ಸೆಟಲ್ಲು ಆಗಬೇಕು ಅನ್ನೊ ಹೊತ್ತಿಗೆ, ಮತ್ತೆ ಸ್ಟ್ರಗಲ್ಲು ಶುರುವಾಗಿದೆ. ಜೀವನವೇ ಹಾಗೆ ಕಾಲಚಕ್ರ ತಿರುಗುತ್ತಿರುತ್ತದೆ, ಮೇಲೇರಿದ್ದು ಕೆಳಗಿಳಿಯಲೇಬೇಕು, ಕೆಳಗಿಳಿದದ್ದು ಮತ್ತೆ ಮೇಲೇರಲೇಬೇಕು ಅಲ್ಲಿಯವರೆಗೆ ಸಮಾಧಾನ ಸಹನೆ ಬೇಕು. ಎನೊ ನನಗನಿಸಿದ್ದು ಬರೆದಿದ್ದೇನೆ ನಿಮಗೂ ಸರಿಯೆನಿಸಬೇಕಿಲ್ಲ, ಸರಿಯೆನಿಸದೆ ಕಲ್ಲೆಸೆಯಬೇಕೆನಿಸಿದರೆ ಎಸೆಯಿರೆ ಅದರಿಂದಲೇ ಮನೆ ಕಟ್ಟಿಕೊಳ್ಳುತ್ತೇನೆ!...
ಕೊನೆಯಲ್ಲಿ ಎಂದೊ ಬರೆದ ಎರಡು ಸಾಲುಗಳು ನೆನಪಾದವು...
ಬದುಕೊಂದು ದಾರಿಯಂತೆ
ದೂರ ದೂರಕೆ ಹರಡಿದೆ.
ದಾರಿ ಪಕ್ಕದ ಮರದ ನೆರಳಲಿ ನಿಂತೆ
ಹಣ್ಣು ಕಿತ್ತು ತಿಂದು ಸಿಹಿಯೆಂದೆ.
ಸಿಹಿಯೆಂದು ಅಲ್ಲೇ ನಿಲ್ಲಲಾದೀತೆ
ಸಾಗಲಿನ್ನೂ ಸಾವಿರ ಮೈಲಿ ಕಾದಿದೆ.
ನಾಳೆ ದೀಪಾವಳಿಯೆಂದು ಇಂದು
ಕತ್ತಲೆಯಲ್ಲಿರಬೇಕೆ.
ಮೊನ್ನೆಯ ಅಮವಾಸ್ಯೆಯ ನೆನೆದು ಇಂದಿನ
ಬೆಳದಿಂಗಳಿಗೆ ಖುಷಿಯಾಗಬೇಕೆ.
ನಾಳೆ ಹೊಳೆಯುವ ನಕ್ಷತ್ರದ
ಕನಸು ಇಂದೇ ಯಾಕೆ.
ಇಂದು ಒಂದು ಮಿಣುಕು
ದೀಪವಾದರೂ ಇರದೇ ಇರಬೇಕೆ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/hasiru-kaananadoorininda.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು