Sunday, January 24, 2010

ಐಟಿ ಸಿಟಿಯಿಂದ - ಮೇಟಿ ಭೇಟಿ

ಮುಂಜಾನೆ ಆರ ಗಂಟೇಕ್ ಬಂದ್ ಇವಳ ನೋಡಿದ್ರ್ ನಾ ಇರಲಿಲ್ಲ ಅಲ್ಲಿ!!! ಅಯ್ಯ ಹೊಸಾ ವರ್ಷದ ರೆಸೊಲೂಶನ್ ಅಂತ, ಮುಂಜಾನೆ ಜಲ್ದಿ(ಬೇಗ) ಎದ್ದೇಳುದು ಅಂತ ಪಾಲಿಸಾಕತ್ತೇನಿ ಅನ್ಕೊಂಡಿರೇನ್. ಇಲ್ಲ ಬಿಡ್ರಿ ಅಂಥಾ ಒಳ್ಳೆ ಬುದ್ಧಿ ಇನ್ನೂ ಬಂದಿಲ್ಲ!. ಕೆಲಸಕ್ಕ ರಜಾ ಅಂತ ಊರಿಗೆ ಬಂದಿನ್ನಿ, ಮಲಗೋದಂತೂ ಐತಿ, ರಜಾ ಪೂರ್ತಿ ಮಜಾ ಮಾಡಿದಂಗೂ ಆತು, ಅಪ್ಪಾಜಿ, ಅವ್ವಾನ ಮುಂದ ಮಗಾ ಸುಧಾರಿಸಿದಾನ್ ಅಂತನ್ನೊ ಹಂಗ ಪೋಸು ಕೊಟ್ಟಂಗೂ ಆತು, ಅಂತ ಎದ್ದ ಕುಂತಿದ್ನಿ. ಇವಳ ಬಿಡಬೇಕ್ಲಾ ಅವ್ವಾನ ಮುಂದ ಹೋಗಿ "ಅತ್ಯಾ(ಅತ್ತೆ), ದಿನಾ ಏಳ್ರೀ ಏಳ್ರೀ ಅಂತ ಬಡಕೊಂಡ್ರೂ ಏಳೂದುಲ್ಲ, ಎನ್ ಭಾರಿ ದಿನಾ ಜಲ್ದಿ ಏಳ್ತಾರೇನೋ ಅನ್ನುವಂಗ ಇಂದ ಎದ್ದ ಕುಂತಾರ ನೋಡ್ರಿ" ಅಂತ ಬತ್ತಿ ಇಟ್ಳು. ಇನ್ನೇನ ನಮ್ಮ ನಾಟಕ ನಡ್ಯೂದುಲ್ಲ ಅಂತ ಗೊತ್ತ ಆಗಿ "ಚಾ ಮಾಡೀರೇನ" ಅಂತ ನಾ ಹೋಗಿ ನಿಂತರ ನನ್ನಾಕಿ ನನ್ನ್ ನೋಡಿ ನಗಾಕತ್ತಿದ್ಲು. ಅವ್ವಾ ಚಾ ಸೋಸಿ ಕೊಟ್ಟ "ಹೆಂಗೂ ಜಲ್ದಿ ಎದ್ದೀ ಜಳಕಾ ಮಾಡಿ ಅಜ್ಜಿ ಮನಿಗ ಅರ ಹೋಗಿಬಾ" ಅಂತಂದ್ಲು. "ರೀ ಹೊಲಕ್ಕ ಹೋಗಿ ಎಷ್ಟ ವರ್ಸ ಆತೇನೊ, ಹೋಗೂಣ ನಡೀರಿ" ಅಂತ ತಾನೂ ಹೊಂಟ ನಿಂತ್ಲು ಇವ್ಳು. "ಈ ಐಟಿ ಮನಷ್ಯಾಗ ಹೊಲದಾಗ ಏನ್ ಕೆಲ್ಸ" ಅಂತ ಸುಮ್ನ ಅಕಿಗಿ ಸ್ವಲ್ಪ ಚಾಷ್ಟೀ(ಚೇಷ್ಟೆ) ಮಾಡಿದ್ರ್, "ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅಂತ ಕೇಳಿಲ್ಲೇನ್ರಿ, ಈ ಐಟಿ ಹೈಟೆಕ್ ಸಿಟಿಗಿಂತ, ಮೇಟಿ ಮಾಡೊ ಹಳ್ಳಿ ಚಂದ" ಅಂತ ಐಟಿಗೆ ಮೇಟಿ(ಒಕ್ಕಲುತನ) ಭೇಟಿ ಮಾಡಿಸಲಿಕ್ಕ ತಯ್ಯಾರಾದಳ.

ಫೋನು ಮಾಡಿ "ಮಾಮಾ ಊರಿಗಿ ಬರಾಕತ್ತೇನಿ" ಅಂತಂದ್ರ "ಮುಂಜಾನೇ ಹತ್ತರ ಬಸ್ಸಿಗಿ ಬಾ ಹಗಂದ್ರ, ಬಾರಾ(ಹನ್ನೆರಡು ಘಂಟೆ) ಅನ್ನೂದ್ರಾಗ ಇಲ್ಲಿರ್ತೀ" ಅಂದ. "ಅಲ್ಲಾ, ಬರೀ ಐದು ಕಿಲೊಮೀಟರ್ ದೂರ ಐತಿ ಅಷ್ಟ್ಯಾಕ ಟೈಮ್, ಇದೇನ್ ಬೆಂಗ್ಳೂರ... ಟ್ರಾಫಿಕ್ ಇರ್ತತಿ ಅನ್ನಾಕ. ಹನ್ನೆರಡ ಎನೂ ಆಗೂದಿಲ್ಲ ಅರ್ಧಾ ತಾಸಿನ್ಯಾಗ ಬರ್ತನಿ" ಅಂದನಿ, "ಬಾ ನಿಂಗ ಗೊತ್ತ ಆಕ್ಕತಿ" ಅಂತ ಫೋನಿಟ್ಟ. ಬಸ್ ಸ್ಟಾಂಡಿಗೆ ಹೋಗಿ ನಿಂತ್ರ ಹತ್ತರ ಬಸ್ಸ ಹನ್ನೊಂದಾದ್ರೂ ಪತ್ತೇನ ಇಲ್ಲ. ಬಿಸಿಲ ಚುರುಗುಡಾಕ ಹತ್ತಿತ್ತು, ಇವ್ಳು ಸೆರಗ ತಲಿ ಮ್ಯಾಲ ಹೊದ್ಕೊಂಡ ನಿಂತ್ಲು. ಇದೇನ ಕೆಲ್ಸ ಆಗೂ ಹಂಗ ಕಾಣಲಿಲ್ಲ ಅಂತ ಅಟೊ ರಿಕ್ಷಾ ನಿಂತಿತ್ತು. ಅದರಾಗ ಹೋದರಾತು ಅಂತ "ಬರತೀ ಏನ್ಪಾ" ಅಂದ್ರ ಊರ ಹೆಸರ ಕೇಳಿ "ನೂರಾಐವತ್ತ ರೂಪಾಯಿ ಕೊಡ್ರೀ ಸರ್, ವಾಪಸ್ಸಾ ಬರೂವಾಗ ಯಾರೂ ಸಿಗೂದುಲ್ಲ, ನಾವು ಇಲ್ಲೇ ಊರಾಗ ಓಡಾಡಿಕೊಂಡ ಇರ್ತೇವಿ, ಹಿಂಗ ಹಳ್ಳಿಗೆಲ್ಲಾ ಬರೂದುಲ್ಲ, ರಸ್ತಾ ಭಾಳ ಸುಮಾರ(ಕೆಟ್ಟದಾಗಿ) ಇರ್ತಾವ್, ಧಡಕೀಗಿ(ಕುಲುಕುವಿಕೆ) ಗಾಡಿ ಪಾರ್ಟ್ ಒಂದೊಂದ್ ಉಚ್ಚಿ ಬೀಳ್ತಾವ್" ಅಂದ. ಅಲ್ಲಾ ಬೆಂಗಳೂರಾಗ ಅಷ್ಟ ಚಾರ್ಜ್ ಭಾಳ ಕೇಳ್ತಾರ ಅಂದ್ಕೊಂಡಿದ್ರ್ ಇಲ್ಲೂ ಅದ ಪರಿಸ್ಥಿತಿ ಐತ್ಲಾ ಅಂತ ಬಯ್ಕೊಂಡ. ಇನ್ನ ಬಾಳೊತ್ತ ನಿಂತಿದ್ರ ಮಲ್ಲಿಗೆಯಂತಾ ನನ್ನ ಹೆಂಡ್ತಿ ಬಾಡಿ ಹೋಗ್ಯಾಳು ಅಂತ "ಆತ್ ನಡೀಪಾ" ಅಂತ ಹತ್ತಿದ್ವಿ. "ರೀ ರಿಕ್ಷಾ ಯಾಕ, ಇನ್ನೇನ ಬಸ್ಸ್ ಬರ್ತಿತ್ಲಾ" ಅಂತ ಸಿಟ್ಟ ಮಾಡಿದ್ಲು. "ಏಯ್ ಮಾಮಾ, ಬಾರಾ ಅಂದ್ರ ಬರ್ತೀರಿ ಅಂದ, ಆದ್ರ ಇಂದನೋ ಇಲ್ಲಾ ನಾಳೆ ಬಾರಾನೊ ಏನೂ ಹೇಳಲಿಲ್ಲ. ಈ ಬಸ್ಸಿಗಿ ಕಾಯೂದ ನೋಡಿದ್ರ ನಾಳೇ ತಲಪತೀವಿ ಅಂತ ಅನಿಸ್ತದ" ಅಂತ ನಗಾಕತ್ತಿದ್ರ "ಭಾಳ ಖರೇ(ನಿಜ) ಹೇಳಿದ್ರಿ ನೋಡ್ರಿ" ಅಂತ ಡ್ರೈವರೂ ನಕ್ಕ. ಇವಳೂ ಸ್ವಲ್ಪ ಮುಗುಳ್ನಕ್ಳು. ನಮ್ಮ ಸವಾರಿ ಹೊಂಟಿತು ಕುಲುಕುತ್ತ ಬಳುಕುತ್ತ.

"ಸರ್ ಇನ್ನ ಮುಂದ ಹೋಗಾಕ ಆಗೂದಿಲ್ರೀ, ಒನ್ ವೇ ಐತ್ರಿ ಇಲ್ಲಿ" ಅಂದ.
"ಏಯ್ ಇದ್ಯಾವ ಸಿಟಿನೊ ಒನವೇ ಇರಾಕ" ಅಂತ ಮುಂದ ನೋಡಿದ್ರ ಅಂವ್ ಹೇಳಿದ್ದು ಖರೇನ ಅನಿಸ್ತು. "ಆಕಡೆ ಹೋದ್ರ ಗಾಡಿ ಹೊಳ್ಳಿಸಾಕ ಬರೂದಿಲ್ರಿ, ಅದಕ ಒನ್ ವೇ ಅಂತ ಹೇಳಿದ್ನಿ" ಅಂತ ತನ್ನ ಹಾಸ್ಯಪ್ರಜ್ಞೆ ತೋರಿಸಿದಾ. "ಭಾಳ್ ಮಜಾಕ ಮಾಡ್ತೀಪಾ ನೀ, ಇಲ್ಲೇ ನಿಲ್ಲಿಸಿ ಬಿಡ" ಅಂತ ಹೇಳಿದ್ನಿ, ಇನ್ನ ಮುಂದ ಹೋಗಿ ಗಾಡಿ ಪಂಚರ್ ಏನಾದ್ರೂ ಆತ ಅಂದ್ರ ಅದಕಷ್ಟ ರೊಕ್ಕಾ(ದುಡ್ಡು) ಕೊಡಬೇಕಾಕಕ್ಕತಿ ಅಂತ, ರಸ್ತಾ ಅಷ್ಟ ಹದಗೆಟ್ಟಿತ್ತು. "ನಿಮ್ಮ ಅಜ್ಜಾರ ಗೊತ್ರಿ ನನಗ" ಅಂದ. ಅದೆಂಗ್ ಅಂತನ್ನೂವಂಗ ನೋಡಿದ್ರ್ "ಗೌಡ್ರ್ ಮನೀಗ ಬರಾಕತ್ತೇರಿ, ಮಾಮಾ ಅಂತ ಅನ್ನಾಕತ್ತೇರಿ ಅಂದ್ರ ಇಲ್ಲಿ ಬೀಗತನ ನಿಮ್ಮ ಮನೆತನದವ್ರ್ ಒಬ್ರ ಮಾಡೀದಾರು, ಅದಕ್ಕ ಗೊತ್ತ ಆತ್ರಿ" ಅಂತ ಬಿಡಿಸಿ ಹೇಳಿದ. ನಮ್ಮೂರ ಕಡೆ ಹಿಂಗ ಸಂಬಂಧಿಕರನ್ ಗುರುತ ಹಿಡಿಯೂದ ಹೊಸಾದೇನ ಅಲ್ಲ. ಆದ್ರೂ ಇಂವ ಒಳ್ಳೆ ಊಹಾ ಮಾಡಿದಾನ ಅಂತ, ಹೌದ ನಾ ಅವರ ಮೊಮ್ಮಗ ಅಂತ ಸ್ವಲ್ಪ ಅದು ಇದು ಮಾತಾಡಿ, ತುಗೋಪಾ ಅಂತ ರೊಕ್ಕಾ ಕೊಡಾಕ ಹೋದ್ರ, "ನಿಮ್ಮಾಜ್ಜಾ ಭಾಳ್ ಹೆಲ್ಪ್ ಮಾಡ್ರ್ಯಾರ್ರಿ ನಮಗ ಬ್ಯಾಡ" ಅಂತನ್ನಾಕ ಹತ್ತಿದಾ. ನನಗೂ ನಮ್ಮಜ್ಜನ ಮ್ಯಾಲ ಸ್ವಲ್ಪ್ ಹೆಮ್ಮೆ ಆತು. "ಗಾಡಿಗಿ ಏನ್ ನೀರ ಹಾಕಿ ಓಡಸತೀ ಏನ್, ಪೆಟ್ರೊಲ್ ಹಂಗ ಬರ್ತತಿ" ಅಂತ ಜಬರ್ಸಸ್ತಿ ಮಾಡಿ ರೊಕ್ಕಾ ಕೊಡಬೇಕಾತು. ಜತೆಗೆ ಇವಳೂ "ಬೆಂಗಳೂರಾಗ ತುಟಿಪಿಟಕ್ಕನದ ಕೇಳಿದಷ್ಟು ಕೊಟ್ಟ ಬರತೇವಿ, ಪಾಪ ಇಲ್ಲೀತನಕಾ ಬಂದೀ ತುಗೊ" ಅಂತ ಹೇಳಿದ್ಲು, ಯಾಕೋ ಜಾಸ್ತಿ ಏನೂ ಕೊಟ್ಟಂಗ ನನಗೂ ಅನಿಸಲಿಲ್ಲ.

"ಇಲ್ಲಿಂದ ಪಾದಯಾತ್ರೆ ಅಂತ ಕಾಣ್ತದಿ" ಅಂತ ಬ್ಯಾಗ ಹೊತ್ಕೊಂಡ್ ನಡದ್ರ, ಆಳಮನಷ್ಯಾ ಓಡಿಕೊಂತ ಬಂದ. "ಏನ್ ನಿಂಗಪ್ಪ ಅರಾಮಾ" ಅಂತ ಕೇಳ್ತಿದ್ದಂಗ, "ಬಸ್ಸಿಗ ಬರ್ತೇರಿ ಅಂತ್ ಅಲ್ಲಿ ಕಾಕೊಂತ ನಿಂತಿದ್ನಿ, ಅದಕ ಬರೂದ ತಡಾ ಆತ್ರಿ, ತಂಗ್ಯವ್ವ ತತಾ, ನೀವೇನು ಬ್ಯಾಗ ಹೊತ್ಕೊಂಡ ಬರಾತೇರಿ" ಅಂತ ಅವಳ ಇರಲಿ ಬಿಡ ಅಂದ್ರೂ ಕೇಳದ, ಎಲ್ಲಾ ತನ್ನ ತಲಿ ಮ್ಯಾಲ ಹೊತ್ಕೊಂಡ ನಡದ, ಅವನೀಗ ಅಲ್ಲಿ ಸ್ವಲ್ಪ್ ತಡಾ ಮಾಡಿ ಬಂದದ್ದು ದೊಡ್ಡ ತಪ್ಪೇನೊ ಅಂತ ಅನಿಸಿತ್ತ, ರಿಕ್ಷಾ ಬರೂದ ನೋಡಿ ಓಡಿಕೊಂತ ಬಂದಿದ್ದ. ಹಂಗ ನಡಕೊಂತ ಹೊಂಟಿರಬೇಕಾದ್ರ ಬೋರವೆಲ್ ನೀರ ತುಂಬಾಕತ್ತಿದ್ದ ಹೆಣ್ಣಮಕ್ಳು "ಗೌಡರ ಮೊಮ್ಮಗಾ, ಬೆಂಗಳೂರಿನ್ಯಾಗ ಇರ್ತಾನ್ ಅಂತ. ಅಕೇನಾ ಹೆಂಡ್ತಿ, ನೋಡಿದರ ನದರ(ದೃಷ್ಟಿ) ಆಗೂವಂಗ ಅದಾಳ, ಗೌಡತಿಗೀ ನದರ ತಗದ ಕಳ್ಸ ಅಂತ ಹೇಳಬೇಕ" ಅಂತ ಮಾತಾಡಿಕೊಳ್ಳಾಕತ್ತಿದ್ದು ಕೇಳಸತಿತ್ತ... ನನ್ನ ನನ್ನಾಕೆ ನಾಚಿ ಇನ್ನ ಚಂದ ಕಾಣಾಕತ್ತಿದ್ಲು.

"ಅರಾಮ್ರೀ ಮಾಮಾರಿ" ಅಂತ ಆಳಮಕ್ಕಳು ಓಡಿ ಬಂದವು, "ಯಾಕಲೇ ಸಾಲಿಗಿ ಹೋಗಿಲ್ಲಾ ಏನ್ ಮಾಡಾತೇರಿ ಇಲ್ಲಿ" ಅಂತ ಪ್ರೀತಿಯಿಂದ ಕೇಳಿದ್ನಿ, ಇಲ್ಲಿ ಸ್ವಲ್ಪ ಯಾಕಲೇ ಅಂದ್ರ ಪ್ರೀತಿ ಜಾಸ್ತಿ ಅಂತ ಭಾವನಾ. ಮತ್ತ ಸಿನಿಮಾದಾಗ ಎಲ್ಲಾ ತೋರಿಸ್ತಾರ ನೋಡ್ರಿ ಈ ಕಡಿ ಶೈಲೀ ಅಂತ ಬರೀ ಬಯ್ಯೂದನ್ನ, ಆ ಪರಿ ಎನೂ ಇಲ್ಲಿ ಮಾತಾಡೂದುಲ್ಲ ಬಿಡ್ರಿ. ಈ ಧಾರವಾಡಕ್ಕೆಲ್ಲಾ ಬಂದ ಮಾತ ಕೇಳಿ ನೋಡ್ರಿ. ಅಕ್ಕಾರಾ, ಅಣ್ಣಾರ ಅಂತ ಏನ ಚಂದ ಮಾತಾಡತಾರ ಅಂತನಿ. ಆ ಮಕ್ಕಳು "ಮಾಸ್ತರ ಕಬ್ಬ ಕಡಿಸಾಕ ಹೋಗ್ಯಾರ ಸೂಟಿ(ರಜೆ) ಐತಿ ಈವತ್ತ..." ಅಂತ ಓಡಿ ಹೋದವು. ಅದೂ ಖರೇನ ಬಿಡ ಮತ್ತ ಮಾಸ್ತರ ಅವರ್ದು ಹೊಲಾ ಇದ್ರ ಇನ್ನೇನ ಮಾಡ್ತಾರ.

ಮನೀಗ ಹೋಗತಿದ್ದಂಗ ಎಲಿ ಅಡಕಿ ಹಾಕೊಂಡ ಕಟ್ಟೀ ಮ್ಯಾಲ ಮಾಮಾ ಕುಂತಿದ್ದ, "ಈಗ ಬಂದ್ರಿ, ಬರ್ರಿ... ನಾ ಹೇಳ್ಲಿಲ್ಲ ಬಾರಾಕ ಬರ್ತೀರಂತ್" ಅಂತಂದ "ಬಸ್ಸಿಗ ಬಂದಿದ್ರ ನಾಳೆ ಬಾರಾ ಆಕ್ಕಿತ್ತು, ರಿಕ್ಷಾಕ ಬನ್ನಿ" ಅಂತಿದ್ದಂಗ, "ಈಗ ಬಂದ್ರಿ, ಕಾಲಿಗಿ ನೀರ ತುಗೋರಿ" ಅಂತ ಆಳಮಗಳು ಬಂದ್ಲು. "ಮತ್ತೇನವಾ ಆರಾಮ, ಮಕ್ಳ ಜೋರ್ ಆಗ್ಯಾವ ಬಿಡ" ಅಂತಂದ್ನಿ, "ಅರಾಮ್ರಿ" ಅಂತಂದು ನಾಚಿ ಮನಿ ಒಳಗ ಓಡಿದ್ಲು. ಕೈ ಕಾಲು ತೊಳಕೊಂಡ ಮನಿ ಒಳ್ಗ ಕಾಲಿಟ್ನಿ, ಇಲ್ಲಿ ಹೊರಗಿನಿಂದ ಯಾರ ಬಂದ್ರೂ ಬಾಗಿಲ್ನ್ಯಾಗ ಕಾಲ ತೊಳಕೊಂಡ ಒಳಗ ಬರೂದು, ಎನ ಹಳೀಕಾಲದ ಮಂದೀ ಪದ್ದತಿ ಅಂತನಿ, ನಾವ್ ಚಪ್ಪಲಿ ಹಾಕೊಂಡ ಮನಿ ಎಲ್ಲಾ ಅಡ್ಡಾಡಿಬಿಡ್ತೀವಿ ಅನಿಸ್ತು. ಒಂದ ಚರಗಿ(ಚೊಂಬು) ಮ್ಯಾಲ ವಾಟೆ(ಲೋಟ) ಇಟ್ಕೊಂಡ, ಮಣ್ಣಿನ ಹರವೀ ಒಳಗಿನ ತಂಪನ್ನ ತಣ್ಣೀರು ತುಗೊಂಡ ಮಾಮಿ(ಮಾಮನ ಹೆಂಡತಿ, ಅತ್ತೆ) ಬಂದ್ಲು "ಆರಾಮಾ, ಈಗ ಬಂದ್ರಿ" ಅಂತನಕೊಂತ, ಇಲ್ಲಿ ಯಾರ ಬಂದ್ರೂ ಮೊದಲ ಈಗ ಬಂದ್ರಿ ಅಂತ ಎಲ್ಲಾರೂ ಕೇಳೂದ.. ಕೇಳೂದ. "ಊರಿಗಿ ಬಂದ ಬಾಳ ದಿನಾ ಆತು, ಇಲ್ಲಿಗಿ ಇಂದ ಬರಾಕ್ ಆತ ನೋಡ್ರಿ" ಅಂತ ಅದು ಇದ ಉಭಯ ಕುಶಲೋಪರಿ ಆದೂವು, ನಡುವ ಒಂದು ವಾಟೆ ಅರೆದ್ ಹಸೀ ಖಾರ ಹಾಕಿದ ಮಸಾಲಿ ಮಜ್ಜಗಿ ಸಪ್ಲೈ ಆತು, ನನ್ನಾಕೆ ಅಡಗೀಮನಿಗಿ ಹೋಗಿ ಸೇರಿಕೊಂಡ್ಲು. ಅಜ್ಜೀ ಜತಿ ಕುಂತ ಮನೀ ವಿಷಯಾ ಮಾತಾಡಿ. ಬೆಂಗಳೂರಿನಿಂದ ಬಂದ ಮುಟ್ಟಿದ ಬಗ್ಗೇ ವರದಿ ಒಪ್ಪಿಸಿದ್ದಾತು. ಯಾವ ಬಸ್ಸಿನ್ಯಾಗ ಬನ್ನಿ ಅನ್ನೂದರಿಂದ ಊಟಕ್ಕ ಎಲ್ಲಿ ನಿಲ್ಲಿಸಿದ್ದ ಅನ್ನೂದು ಎಲ್ಲಾ ಮಾತಾಡತೇವಿ ಅದಕ್ಕ ಅದನ್ನ ವರದೀ ಅನ್ನೂದು.

ಮಧ್ಯಾನ ಊಟಕ್ಕ ಇನ್ನೂ ಟೈಮ ಐತಿ ಅಂತ ಹೊರ ಬಂದ್ರ, ಬಸು ಮಾಮಾ ಕಾಣಿಸಿದ, ವಾರಗಿ ಒಳಗ ನನ್ನ ವಯಸ್ಸ ಆದ್ರೂ ಸಂಬಂಧದಾಗ ಮಾಮಾ, ಮಾತಾಡಾಕ ಒಳ್ಳೇ ಕಂಪನಿ ಸಿಕ್ಕಿತು ಅಂತ. "ಮತ್ತೇನ ಮಾಮಾ, ಆರಾಮ" ಅಂತ ಶುರು ಮಾಡಿದ್ರ "ಅಲೆಲೆ ಯಾವಾಗ ಬಂದಿ" ಅಂತ ಬಂದ ಕಟ್ಟೀ ಮ್ಯಾಲ ಕುಂತ, ನಾನೂ ಕಟ್ಟಿ ಮ್ಯಾಲ ಕುಂಡರಬೇಕ ಅಂದ್ರ "ಅಣ್ಣಾರ ಕುರ್ಚಿ ಹಿಡೀರಿ" ಅಂತ ಹುಡುಗ ಒಬ್ಬ ಓಡಿ ಬಂದಾ, "ಯಪ್ಪಾ ಕಂಪನಿ ಒಳಗ ಕುಷನ ಚೇರ ಮ್ಯಾಲ ಕುಂತ ಕುಂತ ಸಾಕಾಗೇತಿ, ತಂಪಗೆ ಕಟ್ಟೀ ಮ್ಯಾಲ ಕುಂಡ್ರಾಕ ಬಿಡಪಾ" ಅಂತ ಅದನ್ನ ಅಲ್ಲೇ ಸರಿಸಿಟ್ಟ ನೆಲದ್ ಮ್ಯಾಲ ಕೂಡೂದ್ರೊಳಗ ತನ್ನ ಹೆಗಲ ಮ್ಯಾಲಿನ ವಸ್ತ್ರ ತಗದ ಒಮ್ಮಿ ನೆಲ ಜಾಡಿಸಿ ಸ್ವಚ್ಚ ಮಾಡಿಕೊಟ್ಟ. "ಎನೋಪಾ ಐಟಿ ಮಂದಿ ನೆಲದ ಮ್ಯಾಲ ಕುಂತ ರೂಢಿ ಇರೂದುಲ್ಲ" ಅಂತ ಮಾಮಾ ಕೆಣಕಿದ, "ಹೇಳ್ರಿಪಾ ಮೇಟಿ ಮಂದಿ, ಹೇಳಾಕ ಅಷ್ಟ ಮೆತ್ತಗೆ ಚೇರನ್ಯಾಗ ಏಸೀ ರೂಮನ್ಯಾಗ ಕುಂತಿರತೇವಿ, ತಲಿ ಸುಟ್ಟ ಸ್ಫೋಟ ಆಗೂದೊಂದ ಬಾಕಿ ಇರತೇತಿ.
ಬಿಸಿಲಿನ್ಯಾಗ ಹೊಲದಾಗ ಕೆಲ್ಸ ಮಾಡಿದ್ರೂ, ಬೆವರ ಇಳಿಸಿ, ಗಿಡದ ಕೆಳಗ ಹೋಗಿ ಕುಂತರ ಏಸೀಗಿಂತ ತಂಪ ಇರತೈತಿ" ಅಂತ ವಾಪಾಸ್ಸ ಉತ್ತರಾ ಕೊಟ್ನಿ. ಇನ್ನ ಮಾತ ಬಹಳ ಜೋರ ಆಗತೇತಿ ಅಂತ ಗೊತ್ತಾತು...

"ಮತ್ತ ನಲವತ್ತ ಐವತ್ತ ಸಾವಿರಾ ಹಂಗ ಕೊಡತಾರೇನ, ಕೆಲಸ ಇರೂದನ... ತಿಂಗಳ ಕೊನೀಗ ಹಂಗ ಕಂತಿ ಕಂತಿ ಎಣಿಸ್ತೀರಿ, ರೈತರ ಬಾಳೇ ಏನಂತೀಪಾ ಮಳೀ ಆದ್ರ ಬೆಳಿ ಇಲ್ಲಾಂದ್ರ ಎನೂ ಇಲ್ಲ... ವರ್ಷಾನತನ ಕಾಯಬೇಕ" ಅಂತ ಬಸು ಮಾಮಾ ಬೇಜಾರಾದಾ. "ಮತ್ತ ಒಮ್ಮಿ ಬೆಳಿ ಬಂತಂದ್ರ ಲಕ್ಷಗಟ್ಲೆ ತಗೀತೀಪಾ ನೀನೂ, ಹಳ್ಯಾಗ ಖರ್ಚನೂ ಕಮ್ಮಿ, ನಮ್ಮದೇನ ಹೆಸರಿಗಷ್ಟ ಪಗಾರಾ, ಟ್ಯಾಕ್ಸ ಎಲ್ಲಾ ಕಟ ಆಗಿ ಕೈಗಿ ಬಂದ ಹತ್ತೂದ ಕಮ್ಮಿ. ಮತ್ತ ಮ್ಯಾಲ ಮನೀ ಬಾಡಗಿ, ಫೋನ ಬಿಲ್ಲಾ, ಲೈಟ ಬಿಲ್ಲಾ, ಪೆಟ್ರೋಲಾ ಅಂತ ಎಲ್ಲಾ ಖರ್ಚ ಆಗಿ ಕೈಯ್ಯಾಗ ಏನೂ ಉಳೀದುಲ್ಲ" ಅಂತ ನಮ್ಮ ಕಥಿ ನಾ ತಗದ್ನಿ. ಅಷ್ಟರಾಗ ನನ್ನಾಕೆನೂ ಅಲ್ಲಿ ಬಂದ ಕೂತ್ಲ "ವೈನಿ(ಅತ್ತಿಗೆ), ಇಲ್ಲಿ ಕೂತಗೋರಿ" ಅಂತ ಆ ಹುಡುಗ ಈ ಸಾರಿ ಚಾಪೀ ಹಾಸಿದಾ. "ಈ ನಿಮ್ಮ ವೈನಿ ಕರಕೊಂಡ ಒಮ್ಮಿ ದೊಡ್ಡ ಪಿವಿಆರ್ ಅಂಥಾ ಥಿಯೇಟರನ್ಯಾಗ ಹೋಗಿ ಬಂದ್ರ ಸಾವಿರ ರೂಪಾಯಿ ಖರ್ಚ ಅದಕ್ಕ ಆಕ್ಕೇತಿ" ಅಂತ ನನ್ನಾಕಿನೂ ಕೆಣಕಿದೆ. "ನಾ ಏನ್ ಹೋಗೂಣ ಅಂತೀನೇನ, ಏನೊ ದಿನಾ ಮನ್ಯಾಗ ಇದ್ದ ಬೇಜಾರ ಆಗೇತಿ ಅಂತ ವೀಕೆಂಡಿಗೆ ಹೋಗತೇವಿ, ಬರೀ ಕೆಲ್ಸ ಮಾಡಿ ರೊಕ್ಕಾ ಗಳಿಸಿದ್ರ ಎನ ಮಾಡೂದೈತಿ, ಜತಿ ಇರಾಕ ಸ್ವಲ್ಪನೂ ಟೈಮ್ ಇಲ್ಲಂದ್ರ, ಯಾವಾಗ ನೋಡಿದ್ರೂ ಕೆಲ್ಸ ಕೆಲ್ಸ" ಅಂತ ಸಿಡುಕಿದ್ಲು. "ನಿಮ್ಮ ಪಗಾರಿಗಿ ತಕ್ಕಂಗ ಖರ್ಚನ ಅದಾವ ಬಿಡ, ನಮಗರ ಎನ್ ಕಮ್ಮೀ ಅಂತೀ ಏನ್, ಲಕ್ಷಗಟ್ಲೇ ಬಂದ್ರೂ, ಮಾರಿದ ಕಮೀಶನ್, ಆಳಿನ ಪಗಾರಾ, ಬೀಜಾ, ರಸಗೊಬ್ಬರಾ, ಕೀಟನಾಶಕ ಎಣ್ಣಿ, ಎಲ್ಲಾ ಲಾಗವಾಡ ತಗದ ಅದಕ ಮಾಡಿದ ಸಾಲಾ, ಬಡ್ಡೀ ತುಂಬಿದ್ರ ಉಳೀದೂ ಅಷ್ಟ, ಮತ್ತಾ ಮ್ಯಾಲ ನಿಮ್ಮ ಮಾಮೀಗಿ ಬಂಗಾರ ಬಳಿನ ಬೇಕಾಕ್ಕೇತಿ, ಇಲ್ಲ ಮೂಗನತ್ತ ಬೇಕಂತಾರೂ... ಇಲ್ಯೂ ಅದ ಪರಿಸ್ಥಿತಿನಪಾ" ಅಂತ ತನ್ನ ಹೆಂಡ್ತಿ ಅವನೂ ಸಿಟ್ಟಿಗೆಬ್ಬಿಸಿದಾ, "ಮದವೀಗದೂ ಹಾಕೊಂಡ ಹೋಗಾಕ ಒಂದ ಜತೀ ಚಂದನ ಬಳೀನೂ ಬ್ಯಾಡಾ, ಇದ್ದ ಬಂಗಾರ ಎಲ್ಲಾ ಸಾಲಕ್ಕ ಅಡವ ಇಟ್ಟತೀ" ಅಂತ ಮಾಮಿ ಕೆಂಡಕಾರಿದಳು. ಸಂಸಾರ ತಾಪತ್ರಯ ಎಲ್ಲೂ ತಪ್ಪಿದ್ದಲ್ಲ ಅನಿಸ್ತು.

"ಮಾಮಾ, ಈ ಸಲಿ ಬೆಳಿ ಹೆಂಗ ಐತಿ" ಅಂತ ಕೇಳಿದ್ನಿ, "ಎಲ್ಲಿ ಬೆಳಿನೋ ಅತಿವೃಷ್ಟಿ ಅಂತ ಮಳಿ ಆಗಿ ಇದ್ದ ಬಣವಿಗೋಳೂ ಎಲ್ಲಾ ಕೊಚ್ಚಿಕೊಂಡ ಹೋಗ್ಯಾವು, ನಿನಗ ಗೊತ್ತ ಐತ್ಲಾ. ನಲವತ್ತ ಚೀಲ ಆಗಬೇಕಾಗಿದ್ದ ಸೊಯಾಬಿನ ನಾಲ್ಕ ಚೀಲ ಆಗೇತಿ, ಹಾಕಿದ ಬೀಜ ಹೊಳ್ಳಿ ಬಂದಂಗ" ಅಂತಂದ. "ನಮಗ ಬರಗಾಲ ಬಂದಿತ್ತ, ರಿಸೆಷನ ಅಂತ ಹೇಳಿ. ಇದ್ದ ಪಗಾರಗೋಳೂ ಕಟ್ ಅಗಿದಾವು ಕೆಲಸ ಇನ್ನೂ ಐತಿ ಅನ್ನೂದನ ಸಮಾಧಾನ" ಅಂತ ನನ್ನ ದುಖಃ ನಾ ತೋಡಿಕೊಂಡನಿ. "ನಾನೂ ಪೇಪರಿನ್ಯಾಗ್ ಓದಿದ್ನಿ, ಸರಕಾರ ಎನೂ ಮಾಡಿಲ್ಲೇನ" ಅಂದ. "ನಮಗ್ಯಾವ ಸರ್ಕಾರ, ನಾವೇನೂ ವೋಟ ಹಾಕೂದಿಲ್ಲ, ಹಾಕಿದ್ರೂ ಎನೂ ಉಪ್ಯೋಗ ಇಲ್ಲ. ಪರದೇಶಕ್ಕ ಕೆಲಸಾ ಮಾಡತೇವಿ ಅಂತ ಯಾರ ದಾದ್ ಮಾಡೂದುಲ್ಲ. ನಿಮಗೇನಪಾ, ರೈತರ ಪರ ಸರ್ಕಾರಾ. ಮಳಿ ಬೆಳಿ ಪರಿಹಾರ, ಸಾಲ ಮನ್ನಾ, ವಿಧವಾ ವೇತನ, ವೃದ್ಧರ ಪಿಂಚಣಿ, ಪುಕಟ ಕರೆಂಟಾ, ಸಾಲಿಗಿ ಹೋಗಾಕ ಸೈಕಲ್, ಉದ್ಯೋಗ ಖಾತರಿ ಯೋಜನಾ ಒಂದ ಎರಡ." ಅಂತ ಅವರಿಗಿ ಇರೂ ಎಲ್ಲ ವ್ಯವಸ್ಥಾ ಹೇಳಿದ್ನಿ. "ತಡಿಪಾ, ರೈತರ ಸರಕಾರ ಅಂತೀ ಏನ್ ಆಗೇತಿ ಅಂತ ಪೂರಾ ಹೇಳತೇನಿ ನಿನಗ... ಈ ಮಳಿ ಪರಿಹಾರ ಅಂದಿಲಾ, ಒಂದೊಂದ್ ಎಕರೆ ಹೊಲಕ್ಕ ಎರಡ, ಮೂರ ಸಾವಿರ ಪರಿಹಾರ ಕೊಟ್ಟಾರ್, ಕಳೆ(ಕಸ) ಕೀಳಿಸಿದ ಆಳಿನ ಪಗಾರ ಆಗೂದುಲ್ಲ ಅದ. ಸಾಲ ಮನ್ನಾ ಅಂತೀಲಾ, ಈ ಖಾಲಿ ಪುಕಟ ಸಾಲ ಮಾಡ ರೊಕ್ಕಾ ಹಾಳ ಮಾಡೀದಾರಲಾ ಅವರಿಗ ಅದ ಉಪಯೋಗ ಆಗೇತಿ, ನಿಜವಾದ ರೈತರ ಎಲ್ಲಿ ಬ್ಯಾಂಕ ಅಡ್ಡಾಡಿ ಸಾಲ ಮಾಡಿದಾರೂ. ಎಲ್ಲೊ ಇಲ್ಲೇ ಫೈನಾನ್ಸನ್ಯಾಗ್ ಸಾಲ ತೆಗದಿರ್ತಾರ. ಇಲ್ಲ ಅಂದ್ರೂ ಹಿಂಗ ಸಾಲ ಮನ್ನಾ ಮಾಡಿದ್ರ ಏನೂ ಉಪಯೋಗ ಇಲ್ಲೊ. ಜನ ಸುಮ್ನ ಸಾಲ ಮನ್ನಾ ಆಕ್ಕೇತಿ ಅಂತ ಸಾಲಾ ಮಾಡಿ ಚೈನೀ(ಶೋಕಿ, ಅನಗತ್ಯ ಆಡಂಬರ) ಮಾಡತಾರು ಕೆಲಸಾನ್ ಮಾಡವಲ್ರು. ಮತ್ತ ಈ ವೇತನ ಪಿಂಚಣಿ ಎಲ್ಲಿ ಉಪಯೋಗ ಅಗೇತಿ, ಅದನ್ನ ಕೊಡಸಾಕ ಏಜೆಂಟಗೋಳ ಆಗ್ಯರ, ಅವರ ಕಮೀಶನ ಕಟ್ ಆಗಿ ರೊಕ್ಕ ಕೈಯಾಗ ಬಂದ್ರ ಅದನ್ನ ಮಕ್ಳ ಉಪಯೋಗ ಮಾಡಿ ಹಾಕ್ತಾರ ವೃದ್ಧರಿಗೆಲ್ಲಿ ಕೈಗಿ ರೊಕ್ಕ ಸಿಗೂದಿಲ್ಲ. ಪುಕಟ ಕರೆಂಟಾ ಯಾವಾಗ ಕರೆಂಟ್ ಇರತೇತಿ ಇಲ್ಲಿ ಇಪ್ಪತ್ನಾಕೂ ತಾಸ ಲೈಟ್ ಇಲ್ಲ. ಸಾಲಿಗಿ ಸೈಕಲ್ಲ, ಮನಿ ಕೆಲ್ಸ ಮಾಡೂದ ಬಿಟ್ಟ ಮನ್ಯಾಗ ಹೆಣ್ಣಮಕ್ಳ ಎಲ್ಲಿ ಸಾಲಿಗಿ ಹೊಕ್ಕಾವು." ಅಂತ ಇನ್ನೂ ಹೇಳಾಕ ಹತ್ತಿದ್ರ ನಡುವ ತಡದ ಕೇಳಿದ್ನಿ, "ಏಯ್ ಮತ್ತ ರೈತರಿಗಿ ಯೋಜನಾ ಭಾಳ ಅದಾವ ಬಿಡ ಅಂತ ಮಾಡಿದ್ನಲಾ ನಾ." ಅಂತಿದ್ದಂಗ "ರೀ ಸಾಕ ಬರ್ರಿ ಇನ್ನ, ಊಟಾ ಮಾಡಿ ಒಂದ ತಾಸ ಮಕ್ಕೊಳ್ಳ ಹೋಗರಿ" ಅಂತ ಮಾಮಿ ಮಾಮಾಗ ಊಟಕ್ಕ ಕರದ್ಲು. ನಮ್ಮ ಮಾತು ಇನ್ನೂ ಮುಗಿದಿರಲಿಲ್ಲ.

ರೊಟ್ಟಿ, ಉದರಬ್ಯಾಳಿ ಪಲ್ಲೇ, ಜುಣಕದ ಚಕಳಿ, ಶೇಂಗಾ ಚಟ್ನಿ, ಕೆನಿ ಮೊಸರಾ, ಕಡ್ಕೊಳ್ಳಾಕ ಗಜ್ಜರಿ, ಸೌತಿಕಾಯಿ, ಉಳ್ಳೆಗಡ್ಡಿ, ಕರಿದ ಹಸಿ ಮೆಣಿಸಿನ ಕಾಯಿ, ಅನ್ನ, ಖಾರಬ್ಯಾಳಿ, ಭರಟಿ ಒಳಗಿನ ಮಾವಿನ ಉಪ್ಪಿನಕಾಯಿ, ಮೊಸರನ್ನ, ಬಾನಾ, ನುಚ್ಚ ಎಲ್ಲಾ ಜಬರದಸ್ತ ಊಟಾ ಹೊಡದ ಮುಗಿಸಿದಿವಿ. ನಡು ನಡುವ ನನ್ನಾಕೆ ಇದನ ಹೆಂಗ್ ಮಾಡೇರಿ ಅಂತೆಲ್ಲ ಕೇಳಿಕೊಳ್ಳಾತಿದ್ಲು, ಬೆಂಗಳೂರಾಗೂ ಮಾಡಿಕೊಟ್ಟಾಳು ಅಂತ ಆಸೆ ಹುಟ್ಟಿತು ಆದರೂ ಇಲ್ಲಿನ ಫ್ರೆಷ್ ಕಾಯಿಪಲ್ಲೆ ರುಚಿ ಅಲ್ಲಿ, ಫ್ರಿಜ್ ಒಳ್ಗ ಇಟ್ಟ ಬಾಡಿದ ಪಲ್ಲೆದಾಗ ಬರೂದುಲ್ಲ ಅನಿಸ್ತು.

"ಮತ್ತೆನ್ ಮಾಮಾ ಭಾರೀ ಚಲೊ ಐತಿ ಬಿಡಪಾ ನಿನದ, ಮಧ್ಯಾನೂ ನಿದ್ದಿ ಮಾಡತಿ" ಅಂತ ಮತ್ತೊಂದು ಸುತ್ತಿನ ಮಾತಿಗೆಳೆದೆ, "ಎಲ್ಲಿ ನಿದ್ದಿ, ರಾತ್ರಿ ನೀರ ಹಾಸಾಕ ಹೋಗಬೇಕ ಇಲ್ಲಂದ್ರ ಕಬ್ಬ ಒಣಗತೈತಿ, ರಾತ್ರೀ ಹನ್ನೆರಡ ಒಂದ ಗಂಟೇಕ ಯಾವಾಗ ಬೇಕಂದ್ರ ಆವಾಗ ಮೂರ ಫೇಜ್ ಕರೆಂಟ ಕೊಡ್ತಾರ. ಅವಾಗ ನೀರ ಹಾಸೂದು, ಕತ್ತಲ್ನ್ಯಾಗ ಕಾಣೂದುಲ್ಲ ಬ್ಯಾರೇ, ಟೈಮ ಸರಿಯಾಗಿ ಕರೆಂಟ್ ಕೊಡ್ರಿ ಅಂತ ಹೆಂಗ ಕೇಳೂದು...
ಪುಕಟ ಕರೆಂಟ ಕೊಟ್ಟಾಗ ತುಗೋರಿ ಅಂತಾರ, ಇದಕಿಂತ ರೊಕ್ಕಾ ಕೊಟ್ಟ ತುಗೋಳೂದು ಚಲೊ ಇತ್ತ, ಪುಕಟ ಕೊಟ್ಟ ಎನೂ ಉಪ್ಯೋಗ ಇಲ್ಲ" ಅಂತಂದರ, ಮಾಮಿ "ಕತ್ತಲನ್ಯಾಗ ಅದೆಂಗ ಹೋಗ್ತಾರೊ ಎನೊ, ಎಲ್ಲಿ ಹಾವ ಚೇಳಾ ಹೊಲದಾಗ ಇರ್ತಾವೊ ಎನೊ ನಂಗರ ಹೆದರಿಕೀನ ಬರತತಿ." ಅಂತ ತನ್ನ ಆತಂಕ ಹೇಳಿಕೊಂಡ್ಲು. ಅದನ್ನ ನೋಡಿ ನನ್ನಾಕೆ "ಅಯ್ಯ ಕಾಕೂ(ಚಿಕ್ಕಮ್ಮ), ನನಗೂ ಅದ ಚಿಂತಿ, ಇವರದೇನ ಕಮ್ಮಿ ಅಂತೀ ಎನ, ವಾರದಾಗ ಶನಿವಾರ ರವಿವಾರ ರಜಾ ಅಂತ ಹೇಳಾಕ, ಅಂದೂ ಕೆಲ್ಸಕ್ಕ ಹೋಗ್ತಾರ, ಇನ್ನ ದಿನಾ ರಾತ್ರಿ ಬರ್ರೂದೂ ಲೇಟ. ಭಾಳ ಸರಿ ರಾತ್ರಿ ಹನ್ನೆರಡ ಒಂದ ಗಂಟೆಕ್ ಬರ್ತಾರ್ ಕೆಲಸ ಭಾಳ ಇತ್ತಂದ್ರ. ಮತ್ತ ಅಮೇರಿಕಾದಾಗ ಅವಕ್ಕ ಆವಾಗ ಬೆಳಿಗ್ಗಿ ಆಗಿರತೇತ್ ನೋಡ ಅವರ ಜತೀ ಮೀಟೀಂಗ ಅಂತ ಆಗ ಆಗಬೇಕಲಾ... ಅಲ್ಲಿ ಮೊದಲ ಶಹರ(ಸಿಟಿ), ರಾತ್ರಿ ಎಲ್ಲ ದರೋಡೆ ಜಾಸ್ತಿ, ರಸ್ತಾದಾಗೂ ಕುಡದ ಎಲ್ಲಾ ಗಾಡಿ ಓಡಿಸ್ತಿರ್ತಾರು, ಬೈಕ ಮ್ಯಾಲ ಬರಕತ್ತಾರ ಅಂದ್ರನ ನನಗ ಭಯಾ ಆಕ್ಕೇತಿ." ಅಂದ್ಲು. "ಕೆಲಸ ಅಂದ ಮ್ಯಾಲ ಅದೆಲ್ಲ ಹಂಗನ, ಏನ್ ಅಂತೀ ಮಾಮಾ" ಅಂತಂದ ಮಾಮಾಗ ಕೇಳಿದರ ಅವನೂ ಹೂಂಗುಟ್ಟಿ ನಮ್ಮ ನಮ್ಮ ಹೆಂಡತಿರನ್ನ ಶಾಂತ ಮಾಡಿದ್ದಾತು. ನೀನು ಸ್ವಲ್ಪ ಜಲ್ದಿ ಬಾಪಾ ಅಂತ ಮಾಮಾ ನಂಗ ಹೇಳಿದ್ರ, ನಾ ರಾತ್ರಿ ಸ್ವಲ್ಪ ನೋಡಿಕೊಂಡ ಹೋಗ ಅಂತ ಹೇಳಿ ಕಾಳಜಿ ಮಾಡಿಕೊಂಡೆವು.

"ಈ ಉದ್ಯೊಗ ಖಾತರಿ ಯೋಜನಾ ಅಂದಿಲಾ ಅದಂತನೂ ದೊಡ್ಡ ಉದ್ಯೋಗ ಖತರಾ ಯೋಜನಾ ಆಗೇತಿ" ಅಂತ ಮಾಮಾ ಅಂದ. "ಯಾಕ" ಅಂದ್ರ. "ಮತ್ತೇನೊಪಾ, ಈ ಸರ್ಕಾರ ಕೊಟಿಗಟ್ಲೆ ರೊಕ್ಕಾ ಯೋಜನಾಕ ಕೊಟ್ಟತಿ, ಈ ತಹಶೀಲದಾರೂ ಆಫೀಸರಿಗೂ ಇಷ್ಟ ಮಂದಿಗಿ ಉದ್ಯೋಗ ಕೊಡಬೇಕ ಅಂತ ಟಾರಗೆಟ್ ಹಾಕಿದಾರ. ಅವರೂ ಬಂದ ಇಲ್ಲಿ ಈ ಹೊಲಕ್ಕ ಕಳೇ ಕೀಳುದು, ಬಿತ್ತೂದು, ಹತ್ತಿಬಿಡಿಸೂದು, ಕಬ್ಬ ಕಡೀದು ಅಂತ ಕೆಲಸಕ್ಕ ಹೋಗೂ ಜನ ಹಿಡಿತಾರು. ಮತ್ತ ಎಲ್ಲರ ರೊಡ ಮ್ಯಾಗ ನಿಂತ ಕೈಯ್ಯಾಗ ಸಲಕಿ, ಪಿಕಾಷಿ, ಗುದ್ಲಿ, ಕೊಡಲಿ ಕೊಟ್ಟ ಫೋಟೊ ತಕ್ಕೊಂಡ ಅವರಿಗಿ ದಿನಕ್ಕ ನೂರು ರೂಪಾಯಿ ಕೊಡತಾರು. ಹಿಂಗ ಆದ್ರ ಕಬ್ಬ ಕಡಿಯಾಕ ದಿನಕ್ಕ ನಲವತ್ತ ಕೊಡತೇನಿ ಅಂದ್ರ ಯಾರ ಬರತಾರೂ, ಕೆಲಸ ಇಲ್ಲದ ನೂರು ರೂಪಾಯಿ ಸಿಗೂವಾಗ" ಅಂದ ಕೇಳಿ ಬೆಚ್ಚಿಬಿದ್ದೆ ಹಿಂಗೂ ಆಗಾತೇತಿ ಅಂತ. "ಇನ್ನ ಕೆಲಸಕ್ಕ ಯಾರದ್ರೂ ಬಂದ್ರ, ದಿನಕ್ಕ ಎರಡಸಾರಿ ದನಕ್ಕ ಮೇವ ಅಂತ ಎಲ್ಲ ಹೊಲದಾಂದ ಕಿತ್ಕೊಂಡ ಹೋಗತಾರ, ಎರಡೆರಡ ಆಕಳಾ ಎಮ್ಮಿ ಮಾಡಿದಾರು ಡೈರೀಗಿ ಹಾಲ ಹಾಕಿ ಜೀವನ ಮಾಡತಾರು, ಕೆಲ್ಸ ಜಾಸ್ತಿ ಆತ ಅಂದ್ರ, ಮೇವ ಒಯ್ಯಬ್ಯಾಡ್ರಿ, ಅಂದ್ರ ಬರೂದನ ಇಲ್ಲ, ಉದ್ಯೋಗ ಖಾತರಿ ಯೋಜನಾದಾಗ ನೂರ ರೂಪಾಯಿ ಬರತತಿ ಹೋಗ್ರೀ ಅಂತಾರು" ಅಂತ ಆಳಿನ ಸಮಸ್ಯೆ ಹೇಳಿದ. "ಮತ್ತ ನಿಮಗ ಎನೂ ಉದ್ಯೋಗ ಖಾತರಿ ಯೋಜನಾ ಮಾಡಿಲ್ಲೇನ ಸರಕಾರ, ನಿಮನ ಎಲ್ಲ ಕಂಪನಿ ಕೆಲಸದಿಂದ ತೆಗೆದ ಹಾಕಾತಿದ್ರು ಅಂತ ಪೇಪರಿನಾಗ ಓದಿದ್ನಿ" ಅಂತ ನಮ್ಮ ಬಗ್ಗೆ ಕೇಳಿದ.
"ಈ ಐಟಿ ಮಂದಿಗಿ ಉದ್ಯೋಗ ಖಾತರಿ ಯೋಜನಾ ಇಲ್ಲ, ಉದ್ಯೋಗ ಕತ್ತರಿ ಯೋಜನಾ ಜಾರಿ ಮಾಡಿದಾರು" ಅಂತ ನಾ ಅಂದ್ರ ಬಿದ್ದ ಬಿದ್ದ ನಕ್ಕ. "ಹೂಂ ನಮ್ಮ ಕಥೀನು ನಿಮ್ಮಂಗ, ಐಟೀನಲ್ಲಿ ಬೇರೆ ಕಡೀ ಎಲ್ಲೂ ಕೆಲ್ಸ ಸಿಗೂದಿಲ್ಲ ಈಗ ರಿಸೆಷನ್ ಅಂತ ಇರೂ ಜನರಿಗಿ ಜಾಸ್ತಿ ಕೆಲ್ಸ ಕೊಡಾತಾರು, ಜಾಸ್ತಿ ಮಾತಾಡಿದರ ಮನಿಗಿ ಹೋಗ ಅಂತಾರು" ಅಂತ ನಮ್ಮ ಕೆಲ್ಸದ ಬವಣೆ ಬಿಚ್ಚಿ ಇಟ್ಟಿನಿ.

ಐಟಿ ಇರ್ಲಿ ಮೇಟಿ ಇರಲಿ ಎಲ್ಲಾ ಕಡಿ ಕೆಲಸದಾಗ ಕಷ್ಟ ಅನ್ನೂದು ಐತಿ. ದೂರದಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ಸಿಟಿ ಒಳಗ ಕುಂತ ರೈತರಿಗೆ ಭಾಳ ಯೋಜನಾ ಅದಾವು ಅವರದೇನು ಕೆಲ್ಸ ಒಮ್ಮೆ ಬಿತ್ತಿ ಬಂದ್ರ ಬೆಳಿ ಬರತತಿ ಅಂತ ಸಿಟಿಯಲ್ಲಿರೊ ನಾವ ಅಂದ್ರ, ನಲವತ್ತ ಐವತ್ತ ಸಾವಿರ ಪಗಾರಾ ಏಸಿ ರೂಮನ್ಯಾಗ ಕುಷನ ಚೇರ ಮ್ಯಾಲ ಕುಂತ ಕೆಲ್ಸ ಅಂತ ರೈತರು ಅಂತಾರು. ಆದರ ಹತ್ತಿರ ಹೋಗಿ ನೋಡಿದ್ರ ಅವರಗಿ ಅವರಿಗಿ ಅವರದ ಆದ ಕಷ್ಟ ಅದಾವು. ಹತ್ತಿರ ಹೋದಾಗಲೇ ಬೆಟ್ಟದಲ್ಲಿನ ಕಲ್ಲು ಮುಳ್ಳು ಕಾಣೂದು. ಅಲ್ಲಿಂದ ಮಗ ಕಲಿತು ಬೆಂಗಳೂರಿಗೆ ಹೋದರ ಎನೋ ಗಳಿಸತಾನ ಅಂತ ಅವರ ಅನ್ಕೊಂಡ್ರ, ಬ್ಯಾಂಕ ಬಾಲನ್ಸ ಇಲ್ಲದ ಸಾಲ ಮಾಡಿ ಕೊಂಡ ಕಾರಿನೊಳಗ ಸ್ಲಿಪ್ ಡಿಸ್ಕ, ಬ್ಯಾಕ ಪೇನ್ ಅಂತ ಇವರು ತೂರಿಕೊಳ್ತಾರ. ಹತ್ತಾರು ಲಕ್ಷ ಕೊಟ್ಟ ಕೊಂಡ ಮನಿ ಒಳಗ ಸಾಲದ ಚಿಂತಿಗೆ ಚಂದಗೆ ನಿದ್ದಿ ಕೂಡ ಮಾಡಾಕ ಆಗದ ಒದ್ದಾಡತಾರ, ಟೆನ್ಷನ್, ರಕ್ತದೊತ್ತಡ, ಅಂತ ವಯಸ್ಸಿಗಿ ಮುಂಚೇ ಮುದುಕರಾಗತಾರು. ಅಲ್ಲಿ ರೈತರು ಇರೂ ನಾಲ್ಕ ಎಕರೇ ಜಮೀನಿನೊಳಗ ಬಿತ್ತಿ, ಮಳಿ ಬಂದ್ರ ಬಂತ ಇಲ್ಲಂದ್ರ ಇಲ್ಲ, ಬಂದ್ರ ಎಲ್ಲ ಕೊಚ್ಚಿಕೊಂಡ ಹೋತು. ಹಂಗೂ ಹಿಂಗೂ ಫಸಲು ಬಂದ್ರೂ ಒಳ್ಳೆ ಬೆಲೆ ಇಲ್ದ, ಬಂದಷ್ಟು ಎಲ್ಲ ರಸಗೊಬ್ಬರ, ಕೀಟನಾಶಕಕ್ಕೆ ಆತು ಅಂತ ನರಳತಾರು. ಆದರೂ ಒಮ್ಮೊಮ್ಮೆ ಒಳ್ಳೆ ಬೆಳಿ ಬಂದು ಎಲ್ಲಾ ಮಾರಿ, ಸಾಲಾ ತೀರಿಸಿ, ಸ್ವಲ್ಪ ಅವರೂ ಕುಶಿ ಪಡ್ತಾರು, ನಮಗೂ ಕೆಲ್ಸದಾಗ ಪ್ರಮೊಶನ ಬೋನಸ ಸಿಕ್ಕಿತಂದ್ರ ನಾವೂ ಸಂತೋಷ ಪಡ್ತೇವಿ. ಈ ಜೀವನ ಅಂದ್ರ ಹಿಂಗ ಕಷ್ಟ ಎಲ್ಲಿ ಇಲ್ಲ, ಅದರ ನಡುವೇನೂ ಅಲ್ಲಲ್ಲಿ ಸ್ವಲ್ಪ ಖುಷಿನೂ ಐತಿ... ಬೇರೆಯಾರೋ ಭಾಳ ಆರಾಮ ಇದಾರ ಅಂತ ಕೊರಗದ ಇದು ಎಲ್ಲರಿಗೂ ಇದ್ದದ್ದ ಅಂತ ಮುಂದ ಸಾಗೋಣ.

"ಮಾಮಾ ಅಂದ್ರೂ ಈ ಸಾರಿ ಕೆಲ್ಸ ಚೆಂಜ ಮಾಡೀನಲಾ, ಸ್ವಲ್ಪ ಪಗಾರ ಜಾಸ್ತೀ ಆಗೇತಿ. ಎಲ್ಲಾ ಅಡ್ಜಸ್ಟ ಆಗೇತಿ, ಎನ್ ಅದ ವೀಕೆಂಡ ಅಂತ ಕಾಯೂದ, ಎರಡ ದಿನಾ ಅಂತ ಬಂದ ಹೋಗೂದು ಅಂತ ಈ ಸರಿ ನನ್ನಾಕಿನ ಕರಕೊಂಡ ಸ್ವಲ್ಪ ದಿನಾ ರಜಾ ತುಗೊಂಡ ಅದಕ ಊರಿಗಿ ಬಂದನಿ. ಕೆಲಸ ಇದ್ದ ಇರತತಿ ಅಂತ. ಭಾಳ ಖುಷಿ ಆಗೀದಾಳು, ಭಾಳ ದಿನಾ ಅಗಿತ್ತು ಇಬ್ರೂ ಹಿಂಗ ಜತೀಗೆ ಇದ್ದ, ಒಡಾಡಿ. ರೊಕ್ಕಾ ತುಗೊಂಡ ಎನ್ ಮಾಡ್ಲಿ ಇಂಥಾ ಖುಷಿನಾ ಇಲ್ಲದಿದ್ದರ" ಅಂತ ನಾನಂದರ... "ನಿಮಗ ಹಿಂಗ ಜತೀ ಕಳ್ಯಾಕ ಟೈಮ್ ಸಿಕ್ಕದ್ದ ಬಂಗಾರ ಆಗಿದ್ರ, ನಾವ ಯಾವಾಗ್ಲೂ ಜತೀನ ಇರ್ತೀವಿ, ನಿಮ್ಮ ಮಾಮಿಗೆ ಬಂಗಾರ ಬೇಕಿತ್ಲಾ, ಸ್ವಲ್ಪ ಹೊಲದಾಗ ಕಾಯಿಪಲ್ಲೇ ಮಾಡಿದ್ನಲಾ ಅದಕ್ಕ ಬೆಲೆ ಜಾಸ್ತಿ ಬಂದ ಲಾಭ ಆಗಿತ್ತ. ನಿನ್ನ ಹೆಂಡತಿಗೆ ಹೇಳಿ ಬೆಂಗಳೂರಿನಿಂದ ಹೊಸ ಡಿಸೈನ್ ಮೂಗನತ್ತು, ಕಿವಿಓಲೆ ತರಿಸಿದೀನಿ, ಅವಳಿಗಿ ತೋರಿಸಿದ್ನಿ ಅಂದ್ರ ಏನ್ ಖುಷಿ ಆಗತಾಳ ಅಂತೇನಿ" ಅಂದ. "ಏಯ್ ಭಾರೀ ಜೋರ ಐತಿ ಬಿಡ ಹಂಗಿದ್ರ" ಅಂತಿದ್ದಂಗ, ಹೊರಡೊ ಸಮಯ ಆಗಿತ್ತು. "ರಾತ್ರಿ ನೀರ ಹಾಸಾಕ ಹೋಗಬೇಕಪಾ, ಈಗ ಸ್ವಲ್ಪ ಮಲಕೊಂಡ ಏಳತೇನಿ" ಅಂತ ಮಾಮ ಎದ್ದ ಹೊಂಟ, "ನಾನೂ ನಾಳೆ ಬೆಂಗಳೂರಿಗೆ ಹೋಗಬೇಕ, ಕೆಲಸ ಶುರು ರಜಾ ಮುಗೀತು" ಅಂತ ಊರಿನ ಕಡೆ ಮುಖ ಮಾಡಿದೆ.


"ಬಹಳ ದಿನಗಳಿಂದ ಉತ್ತರಕರ್ನಾಟಕದ ಶೈಲಿಯಲ್ಲಿ ಬರೆಯಲು ಬಹಳ ಜನ ಕೇಳುತ್ತಿದ್ದರು, ಅಲ್ಲದೆ ವಿಷಯ ಕೂಡ ಪೂರಕವಾಗಿದ್ದರಿಂದ ಅದಕ್ಕೆ ಈ ಪ್ರಯತ್ನ ಮಾಡಿದೆ, ಬಹಳ ಶಬ್ದಗಳು ಅರ್ಥವಾಗಲಿಕ್ಕಿಲ್ಲ ಆದರೂ ಪ್ರಯತ್ನಿಸಿ ನೋಡಿ ಹಳ್ಳಿ ಸೊಗಡಿನ ಭಾಷೆ ಖುಷಿ ಕೊಡಬಹುದು"
ಇಲ್ಲಿ ಯಾರನ್ನೂ ಕೀಳಾಗಿ ಇಲ್ಲ ಮೇಲಾಗಿ ಚಿತ್ರಿಸುವ ಪ್ರಯತ್ನ ನಾನು ಮಾಡಿಲ್ಲ, ಹಾಗೆ ಎಲ್ಲ ಕಡೆ ಹೀಗೆ ಪರಿಸ್ಥಿತಿ ಇರಲಿಕ್ಕೂ ಇಲ್ಲ. ಕೆಲ ದಿನಗಳ ಹಿಂದೆ ಹೀಗೇ ಊರಿಗೆ ಹೋದಾಗ ಅಲ್ಲಿ ಮಾತಾಡಿದ ಕೆಲವು ಸಂಗತಿಗಳ ಆಧಾರದ ಮೇಲೆ ಬರೆದಿರುವೆ. ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮಿಸಿ, ಹುಚ್ಚು ಹುಡುಗನ ಹತ್ತು ಹಲವು ಯೋಚನೆಗಳಲ್ಲಿ ಇದೂ ಒಂದು ಅಂತ ಮರೆತುಬಿಡಿ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/aiti-meti.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, January 3, 2010

ರೆಸೊಲುಶನ್, ಸಂಕಲ್ಪ.. someಕಲ್ಪನೆ...

ಹೊಸ ವರ್ಷದ ಮೊದಲನೇ ದಿನ, ಆರು ತಿಂಗಳು ಪೂರ್ತಿ ನಿದ್ರೆ ಮಾಡುವ ಕುಂಭಕರ್ಣನಂತೇ ಬಿದ್ದುಕೊಂಡಿದ್ದೆ ಎದ್ದೇಳಲೇಬಾರದು ಅಂತ. ಮತ್ತೆ ಹೊಸವರ್ಷ ಅಂತ ಅಪರಾತ್ರಿವರೆಗೆ ನಿದ್ರೆಗೆಟ್ಟು "ಹ್ಯಾಪಿ ನಿವ್ ಇಯರ್, ಹೊಸ ವರ್ಷದ ಶುಭಾಶಯ..." ಅಂತ ಮಲಗಿದ್ದವರಿಗೆಲ್ಲ ಎದ್ದೇಳಿಸಿ ಹಾರೈಸಿ, ಹೊಸವರ್ಷ ಆಚರಿಸಿದ ಮೇಲೆ ಇನ್ನೇನಾಗಬೇಡ. ಯಾವ ವರ್ಷ ಆದರೇನು ಯಾವ ದಿನ ಆದರೇನು ನಾ ಮುಂಜಾನೆ ಆರಕ್ಕೆಂದರೆ ಏದ್ದೇಳೊದೇ ಅಂತ ಏಳೊದಕ್ಕೆ ನಾನೇನು ಸೂರ್ಯನಾ. ರಾತ್ರಿ ಬೆಳಗಿ ಮುಂಜಾವಿಗೆ ಕಾಣೆಯಾಗುವ ಹುಣ್ಣಿಮೆ ಚಂದ್ರನಂತೆ ನನ್ನಾಕೆ ನನ್ನ ಪಕ್ಕ ಕಾಣದಾಗಿದ್ದಳು. ಎದ್ದು ಏನೊ ಒಂದು ಮಾಡುತ್ತಿರುತ್ತಾಳೆ, ನನಗೊ ಬೆಳಗ್ಗೆ ಒಂಭತ್ತು ಘಂಟೆ ರಾತ್ರಿ ಸರಿಹೊತ್ತಿಗೆ ಸಮನಾಗಿತ್ತು, ಹೀಗಿರುವಾಗ ಇವಳು ಬಂದು "ಈಗ ಒಂಭತ್ತು ಘಂಟೆ, ಎದ್ದೇಳೊಕೇ ಹೋಗಬೇಡಿ ಹಾಗೇ ಮಲಗಿರಿ, ಇನ್ನೊಂದು ಹೊದಿಕೆ ಬೇಕಾ" ಅಂತಂದಳು. ಅಬ್ಬ ಹೊಸ ವರ್ಷದಲ್ಲಿ ಭಾರೀ ನಕ್ಷತ್ರಗಳ ಬದಲಾವಣೆಯೇ ಆಗಿದೆ, ಎದ್ದೇಳಿ ಅನ್ನೋದು ಬಿಟ್ಟು ಮಲಗಿ ಅಂತಿದಾಳೆ ಅಂತ ಖುಷಿಯಾಗಿ ನಾನಂತೂ ಕಣ್ಣೂ ಕೂಡ ತೆರೆಯದೇ "ಥ್ಯಾಂಕ್ಸ್" ಅಂತಂದು ಅವಳ ತಲೆದಿಂಬನ್ನೂ ನನ್ನ ತಲೆಗಿರಿಸಿಕೊಂಡು ಕುಂಭಕರ್ಣನೊಂದಿಗೆ ಕಾಂಪಿಟೇಷನ ಮಾಡಲು ತಯ್ಯಾರಾದೆ. ಕುಂಭಕರ್ಣ ಅಂತಿದ್ದಂಗೆ, ಯಾರೋ ಕರ್ಣ(ಕಿವಿ) ಹಿಂಡಿದ ಹಾಗಾಯ್ತು, ಕರ್ಣಕಠೋರವಾಗಿ ಕಿರುಚಿದೆ, ಕೈಬಿಟ್ಟಳು. "ಇಂದಾದರೂ ಬೇಗ ಎದ್ದೇಳಬಾರದೇ, ಹೊಸವರ್ಷ ಹೇಳಿಸಿಕೊಳ್ಳದೇ ಎದ್ದೇಳುತ್ತೇನೆ ಅಂತ ರೆಸೊಲುಶನ್ ಮಾಡಿಕೊಳ್ಳಿ" ಅಂತ ಬಯ್ದಳು. ಒಮ್ಮೆಲೇ ಕಿವುಚಿದ ಕರ್ಣ ಅಲ್ಲಲ್ಲ ಕಿವಿ ನೆಟ್ಟಗಾಯಿತು!... ಹ್ಮ್ ರೆಸೊಲೂಶನ್, ಹೊಸವರ್ಷ ಎಲ್ಲರೂ ಕೇಳುವುದೇ, ಎನು ಹೊಸವರ್ಷದ ರೆಸೊಲೂಶನ್ ಅಂತ. ಇನ್ನು ನಿದ್ರೆ ಬರುವಹಾಗಿರಲಿಲ್ಲ ಎಚ್ಚರಾದೆ.

"ಏನದು ರೆಸೊಲೂಶನ್?" ಕೇಳಿದೆ, "ಅದೇ ಹೊಸವರ್ಷಕ್ಕೆ ಒಂದು ಹೊಸ ನಿರ್ಧಾರ ಮಾಡ್ತೀವಲ್ಲ, ಸಂಕಲ್ಪ ಅಂತ ಕನ್ನಡದಲ್ಲಿ ಹೇಳಬಹುದೇನೊ..." ಅಂತ ವಿವರಿಸಿದಳು. "ಒಹ್ ಹಾಗಾದ್ರೆ, ನನ್ನ ಬೇಗ ಏಳಿಸೊಲ್ಲ ಅಂತ ನೀ ರೆಸೊಲೂಶನ್ ಮಾಡಿಕೋ" ಅಂತ ಹಲ್ಲು ಕಿರಿದೆ. "ಯಾಕೆ ಎದ್ದೇಳಿಸೋದೆ ಇಲ್ಲ ಬಿಡಿ" ಅಂದ್ಲು. "ಹಾಗಂದ್ರೆ ಹೇಗೆ ದಿನ ದಿನ ಹೊಸ ಹೊಸದಾಗಿ ಎದ್ದೇಳಿಸುವ ಕೀಟಲೆಗಳು ಇಲ್ಲದಿದ್ರೆ ಹೇಗೆ" ಅಂದೆ. "ರೀ ರೆಸೊಲೂಶನ್ ಅಂದ್ರೆ, ಯಾವೊದೋ ಒಳ್ಳೆ ಕೆಲಸ, ಹವ್ಯಾಸ ಏನಾದರೂ ಇರಬೇಕು" ಅಂತ ತಿಳಿಹೇಳಿದಳು. "ನಿದ್ರೆ ಮಾಡೊದು ಒಳ್ಳೆದಲ್ವಾ!" ಅಂತ ಮತ್ತೆ ಕೇಳಿದ್ದು ನೋಡಿ, "ಬಹಳ ಒಳ್ಳೇದು ಹೀಗೆ ಮಲಗಿರಿ" ಅಂತ ಹೊದಿಕೆ ಮತ್ತೆ ಹೊದೆಸಿ, ಸ್ವಲ್ಪ ತಲೆ ಚಪ್ಪಡಿಸಿ (ಚಪ್ಪಡಿಸಿ ಅನ್ನೊದಕ್ಕಿಂತ ತಲೆ ಕುಟ್ಟಿ ಅಂದರೇ ಸರಿ!...) ಹೊರ ಹೋದಳು, ಆದರೆ ನಾ ಎದ್ದು ಹಿಂಬಾಲಿಸಿದೆ.

"ಸರಿ ನಿನ್ನ ರೆಸೊಲೂಶನ್ ಏನು ಈ ವರ್ಷ" ಅಂತ ಕೇಳಿದೆ. "ಇದೇ ಈಗ ಪಕ್ಕದಮನೆ ಪದ್ದು ಕೂಡ ಅದನ್ನೇ ಕೇಳಿದ್ಲು, ಇನ್ನೂ ಏನೂ ಯೋಚಿಸಿಲ್ಲ" ಅಂತಂದ್ಲು, "ಪಕ್ಕದಮನೆ ಪದ್ದುದು ಏನು ರೆಸೊಲೂಶನ್ ಅಂತೆ, ರಾತ್ರಿ ನಾ ಆಫೀಸಿಂದ ಬರುವವರೆಗೆ ಕಾಯೋದಲ್ದೇ, ಮುಂಜಾನೆ ಹೋಗುವಾಗ ಬೈ ಹೇಳಲು ಬೇಗ ಕೂಡ ಏಳ್ತಾಳಂತಾ?" ಅಂತ ಕೆರಳಿಸಿದೆ, "ಇಲ್ಲ ಇನ್ಮೇಲೆ ನಿಮ್ಮ ಜತೇನೇ ಆಫೀಸಿಗೂ ಬರ್ತಾಳಂತೆ, ಪಕ್ಕದಮನೇಲಿ ಇರೋದಲ್ದೇ, ಪಕ್ಕದ ಸೀಟಿನಲ್ಲಿ ಕೂಡ ಕೂರ್ತಾಳಂತೆ" ಅಂತ ಗುರಾಯಿಸಿದಳು. "ನಿಜವಾಗ್ಲೂ!" ಅಂತ ಹೌಹಾರಿದ್ರೆ, "ಅಹಾ. ಆಸೇ ನೋಡು... ಗಂಡನ ಜತೆ ಇನ್ಮೇಲೆ ಜಗಳಾಡಲ್ಲ ಅಂತೆ" ಅಂತ ಸತ್ಯ ಉಸುರಿದಳು, "ಎರಡೇ ಎರಡು ದಿನ ಅಷ್ಟೇ, ಮೂರನೇ ದಿನ ಜಗಳಾಡಲಿಲ್ಲ ಅಂದ್ರೆ ಕೇಳು" ಅಂದದ್ದಕ್ಕೆ ನಿಜವೇ ಎನ್ನುವಂತೆ ನಕ್ಕಳು.

"ನಾವಿಬ್ರೂ ಜಗಳಾಡಿದ್ದೇ ಕಮ್ಮಿ, ಅದಕ್ಕೇ ವರ್ಷ ಪೂರ್ತಿ ಪ್ರತಿದಿನಾ ತಪ್ಪದೇ ಜಗಳಾಡ್ತೀವಿ ಅಂತ ರೆಸೊಲೂಶನ್ ಮಾಡಿದ್ರೆ ಹೇಗೆ" ಅಂತ ಅವಳೆಡೆಗೆ ನೋಡಿದೆ, "ಬನ್ನಿ ಅದೇ ವಿಷಯವಾಗಿ ಈಗ ಜಗಳ ಮಾಡಿಬಿಡೋಣ" ಅಂತ ಕೈಲಿದ್ದ ಬಳೆ ಏರಿಸಿಕೊಂಡು ಸಿದ್ಧವಾದಳು, ದೊಡ್ಡ ಯುದ್ಧವೇ ಆದೀತೆಂದು ಸುಮ್ಮನಾದೆ. "ಸರಿ ನೀನೇ ಹೇಳು ಏನು ರೆಸೊಲೂಶನ್ ಅಂತ" ಅಂತ ಚೆಂಡು ಅವಳ ಅಂಗಳಕ್ಕೆ ನೂಕಿಬಿಟ್ಟೆ, "ಅದನ್ನೇ ನಾನೂ ಕೇಳಿದ್ದು,
ಏನೊ ಜನ ಸಿಗರೇಟು ಸೇವನೆ ಮಾಡಲ್ಲ, ಕುಡಿಯೋದಿಲ್ಲ ಅಂತ ರೆಸೊಲೂಶನ್ ಮಾಡ್ತಾರೆ, ಹಾಗೇ ನಾವೂ ಏನೋ ಒಂದು ಮಾಡಿದರಾಯ್ತು, ಈಗ ನಿಮ್ಮದೇನು ಹೇಳ್ತೀರೊ ಇಲ್ವೊ" ಅಂತ ನನೆಡೆಗೇ ತಿರುಗಿ ಶಾಟ್ ಹೊಡೆದಳು. ಒಳ್ಳೇ ಐಡಿಯಾ ಕೊಟ್ಟಳು ಅಂತ "ನಾನೂ ಸಿಗರೇಟು, ಕುಡಿಯೋದು ಎಲ್ಲಾ ಏನೂ ಮಾಡಲ್ಲ ಅಂತ ರೆಸೊಲೂಶನ್ ಮಾಡ್ತೀನಿ" ಅಂದೆ. "ಅಲ್ಲ ಬಿಟ್ಟು ಬಿಡೋಕೆ ಸಿಗರೇಟು, ಡ್ರಿಂಕ್ಸ್ ಶುರು ಮಾಡಿಕೊಂಡಿದ್ದಾದರೂ ಯಾವಾಗ" ಅಂತ ಅನುಮಾನಿಸಿದಳು. "ಶುರು ಮಾಡಿಲ್ಲ, ಇನ್ನು ಮುಂದೆ ಮಾಡಲ್ಲ ಅಂತ ರೆಸೊಲೂಶನ್" ಅಂತ ಸಮಜಾಯಿಸಿ ನೀಡಿದರೆ. "ಟೀ ಮಾಡಿ ಕೊಡ್ತೀನಿ ಕುಡಿದು ತೆಪ್ಪಗೆ ಕುಳಿತುಕೊಳ್ಳಿ, ಏನು ಬೇರೆ ಕುಡಿಯುವುದೂ ಬೇಡ, ನಿಮ್ಮ ರೆಸೊಲೂಶನ್ನೂ ಬೇಡ" ಅಂತ ಪಾಕಶಾಲೆಗೆ ನಡೆದಳು.

ಟೀ ಅಂತಿದ್ದಂಗೆ ನೆನಪಾಯಿತು, "ಟೀ ಕುಡಿಯುವುದನ್ನೇ ಬಿಡ್ತೀನಿ ಕಣೆ" ಅಂದೆ, ಒಂದು ಕ್ಷಣ ಸ್ತಂಭಿಭೂತಳಾದಳು, ಟೀ ಇಲ್ಲದೇ ಇರೋಕೇ ಆಗಲ್ಲ ಅಂತಿರುವವನು ಟೀ ಕುಡಿಯೋದೆ ಇಲ್ಲ ಅಂದರೆ ಹೇಗಾಗಬೇಡ, "ಯಾಕ್ರೀ ಟೀ ಯಾಕೆ ಕುಡಿಯಲ್ಲ, ಏನಾಯ್ತು" ಅಂತ ಕೇಳಿದಳು, "ಅಯ್ಯೋ ಯಾರ ದೃಷ್ಟಿ ತಾಗಿತೊ ಏನೊ, ಕಂಪನೀಲಿ ಮಗ್ ತುಂಬ ಪುಕ್ಕಟೆ ಟೀ ಕುಡೀತೀನಿ ಅಂತೆಲ್ಲ ಹೇಳ್ತಾ ಇದ್ನಾ, ಈಗ ಹೊಸ ಕಂಪನಿಯಲ್ಲಿ ಪುಕ್ಕಟೆ ಟೀ ಇಲ್ಲ. ಅದಕ್ಕೆ ಬಿಟ್ಟು ಬಿಡ್ತೀನಿ" ಅಂತಂದರೆ, "ಒಳ್ಳೇ ಕಂಜೂಸ್ ಕಣ್ರೀ ನೀವು, ಟೀ ಬೇಕೇ ಬೇಕು ಅದಿಲ್ಲದೆ ನಾವಿಬ್ರೂ ಹರಟೆ ಹೊಡೆಯುವುದಾದ್ರೂ ಹೇಗೆ... ಅದೆಲ್ಲ ಏನೂ ರೆಸೊಲೂಶನ್ ಬೇಡ" ಅಂತ ಅದನ್ನೂ ನಿರಾಕರಿಸಿದಳು.

"ರೀ ಡೈರೀ ಬರೆಯೊ ರೆಸೊಲೂಶನ್ ಮಾಡಿಕೊಳ್ಳಿ" ಅಂತ ಮತ್ತೊಂದು ಐಡಿಯಾ ಕೊಟ್ಟಳು, "ಅಲ್ಲ ವಾರಕ್ಕೆ ಒಂದು ಬ್ಲಾಗ್ ಲೇಖನ ಬರೆಯೋಕೆ ಆಗ್ತಿಲ್ಲ ಇನ್ನ ದಿನಾಲೂ ಡೈರೀ ಬರೀತೀನಾ, ಏನು ಮಹಾ ಘನ ಕಾರ್ಯ ಮಾಡ್ತೀನಿ ಅಂತ ಬರೀಲಿ, ಮುಂಜಾನೆ ಪಕ್ಕದ ಮನೆ ಪದ್ದು ನೋಡಿದೆ, ಹಾಲಿನಂಗಡಿ ಹಾಸಿನಿ ನನ್ನ ನೋಡಿ ನಕ್ಕಳು, ಸಿಗ್ನಲ್ಲಿನಲ್ಲಿ ಅಪ್ಸರೆ ಕಂಡು ಮಾಯವಾದಳು ಇದನ್ನೇ ಬರೆಯೋದಾ" ಅಂದೆ ಮುಗುಳ್ನಕ್ಕಳು. "ಇಲ್ಲ ಕಣೆ ನಂದು ಯಾಕೋ ಅತಿಯಾಯ್ತು, ಇನ್ಮೇಲೆ ಯಾವ ಹುಡುಗಿ ಕಣ್ಣೆತ್ತಿ ಕೂಡ ನೋಡಲ್ಲ ಅದೇ ನನ್ನ ರೆಸೊಲೂಶನ್" ಅಂತ ನಿರ್ಧರಿಸಿದೆ. "ಕಣ್ಣೆತ್ತಿ ನೋಡಲ್ಲ ಅಂದ್ರೆ ಓರೆಗಣ್ಣಲ್ಲಿ ನೋಡ್ತೀರಾ, ಹ ಹ ಹ... ರೀ ಹೀಗಂದ್ರೆ ಹೇಗೆ, ಮತ್ತೆ ನಂಗೆ ಕೀಟಲೆ ಮಾಡೋಕೆ ವಿಷಯಗಳೇ ಇರಲ್ಲ, ಅದೆಲ್ಲ ಏನೂ ಬೇಡ" ಅಂತ ಅದಕ್ಕೂ ಕಲ್ಲು ಹಾಕಿದಳು.

ಮತ್ತೇನೂ ರೆಸೊಲೂಶನ್ ವಿಷಯಗಳೇ ಸಿಗುತ್ತಿಲ್ಲ ಅಂತ, ಗೆಳೆಯನಿಗೆ ಫೋನು ಮಾಡಿ ಏನೊ ನಿನ್ನ ರೆಸೊಲೂಶನ್ ಅಂದ್ರೆ "1024X768" ಅಂತ ತನ್ನ ಕಂಪ್ಯೂಟರ್ ಮಾನಿಟರ್ ರೆಸೊಲೂಶನ್ ಹೇಳಿದ, "ಅದು ಹಳೆ ಜೋಕು ಹೊಸದೇನೊ ಹೇಳೊ" ಅಂದ್ರೆ, "ದಿನಾಲೂ ಆಫೀಸು ಕಂಪ್ಯೂಟರ್ ಆಫ್ ಮಾಡಿ ಬರ್ತೀನಿ ಕಣೊ ಕರೆಂಟ್ ಉಳಿತಾಯ ಆಗುತ್ತೆ" ಅಂದ, ನಾನಂತೂ ಅದು ಮೊದಲಿಂದಲೇ ಮಾಡ್ತೀನಿ... ಈ ಐಟಿ ಗೆಳೆಯರನ್ನು ಕೇಳಿದ್ರೆ ಇಂಥದೇ ರೆಸೊಲೂಶನ್ ಹೇಳ್ತಾರೆ ಅಂತ ಊರಲ್ಲಿನ ಗೆಳೆಯ ಕಲ್ಲೇಶಿಗೆ ಫೋನು ಮಾಡಿದ್ರೆ ಅವನಿಗೆ ಈ ರೆಸೊಲೂಶನ್ ಅಂದ್ರೆ ಏನು ಅಂತ ತಿಳಿ ಹೇಳುವುದರಲ್ಲೇ ಸಾಕು ಸಾಕಾಯ್ತು. ಈ ರೆಸೊಲೂಶನ್‌ಗೆ ಒಂದು ಸೊಲೂಶನ್ ಸಿಗದಾಯ್ತು.

ಇವಳ ಅಮ್ಮ, ಅದೇ ನನ್ನ ಅತ್ತೆ ಫೋನು ಮಾಡಿದರು ಶುಭಾಶಯ ಹೇಳಲು, ಅವರನ್ನೇ ಕೇಳಿದೆ "ಏನತ್ತೆ, ಏನು ನಿಮ್ಮ ರೆಸೊಲೂಶನ್" ಅಂತ, "ಏನಪ್ಪ ದಿನಾ ಯಾವುದಾದ್ರೂ ದೇವಸ್ಥಾನಕ್ಕೆ ತಪ್ಪದೇ ಹೋಗಬೇಕು ಅಂತಿದೀನಿ" ಅಂದ್ರು. "ಸರಿ ನಾನೂ ಹಾಗೆ ಮಾಡ್ತೀನಿ ದೇವರು ಸ್ವಲ್ಪ ಒಳ್ಳೇ ಬುದ್ಧಿನಾದ್ರೂ ಕೊಡ್ತಾನೆ" ಅಂತ ನಾನಂದೆ. ಇವಳು "ಅಲ್ಲಿ ದೇವರ ದರ್ಶನಕ್ಕೇ ನೀವು ಹೋಗಲ್ಲ ನಂಗೊತ್ತು, ಅಲ್ಲಿ ಬರುವ ದೇವಿಯರ ಮೇಲೆ ನಿಮ್ಮ ಕಣ್ಣಿರುತ್ತದೆ, ಮನೇಲಿ ಕೈಮುಗಿದರೆ ಸಾಕು ದೇವರು ಎಲ್ಲೆಡೆ ಇರ್ತಾನೆ" ಅಂದ್ಲು. ಅದೂ ಸರಿಯೇ ವಯಸ್ಸಾಯ್ತು ಅಂದಮೇಲೆ ದೇವರು, ವೇದಾಂತ ಎಲ್ಲ ಅವರಿಗೇ ಸರಿಯಾಗಿರತ್ತೇ ಆ ರೆಸೊಲೂಶನ್. "ಅತ್ತೆ ದೇವಸ್ಥಾನಕ್ಕೆ ಹೋಗ್ತಾರಂತೆ ಸರಿ, ಮಾವ ನೀವೇನು ಮಾಡ್ತೀರಾ" ಅಂತ ಇವಳ ಅಪ್ಪನನ್ನು ಕೇಳಿದೇ "ಅಳಿಯಂದ್ರೆ ಈ ಸಾರಿಯ
ಹೊಸವರ್ಷದ ರೆಸೊಲೂಶನ್ ಅಂದ್ರೆ ತೀರ್ಥಯಾತ್ರೆ ಸ್ವಲ್ಪ ಕಮ್ಮಿ ಮಾಡ್ತೀನಿ, 'ತೀರ್ಥ...' ಅಂದ್ರೆ ಗೊತ್ತಲ್ಲ ಹ ಹ ಹ" ಅಂತ ವಿಷಣ್ಣ ನಗೆ ನಕ್ಕರು, ತೀರ್ಥ ಅಂದ್ರೆ ಅದೇ ಡ್ರಿಂಕ್ಸು... ಈ ವಯಸ್ಸಲ್ಲಿ ಇನ್ನೂ ಕಮ್ಮಿ ಮಾಡ್ದೇ ಇದ್ರೆ ಹೇಗೆ, ಆರೋಗ್ಯ ಎಕ್ಕುಟ್ಟೊಗತ್ತೆ. ಈ ರೆಸೊಲೂಶನ್ನೂ ನಮಗೆ ಉಪಯೋಗವಿಲ್ಲ ಅಂತ, ಇವಳ ತಮ್ಮನನ್ನು ಕೇಳಿದೆ. "ಭಾವ ಬಬಲ್ ಗಮ್ ತಿಂತಿದ್ನಾ, ಅದು ಅಕ್ಕನ ನೀಲವೇಣಿಗೆ ಮೆತ್ತಿಕೊಂಡು ಕೂದಲು ಕತ್ತರಿಸಬೇಕಾಯ್ತಲ್ಲ, ಅದೇ ತಪ್ಪಿಗೆ ಈ ಸಾರಿ ಈ ಬಬಲ್ ಗಮ್ ಅಗಿಯೋದನ್ನು ಬಿಡಬೇಕು ಅಂತಿದೀನಿ" ಅಂದ. "ಒಳ್ಳೇ ಕೆಲ್ಸ ಮೊದಲು ಮಾಡು" ಅಂದೆ, ನಡುವೆ ಪಚ್ ಪಚ್ ಸದ್ದು ಕೇಳಿತು... "ಈಗ ಅದನ್ನೇ ತಿಂತಿದೀಯಾ ತಾನೆ, ಉಗಿಯೋ ಅದನ್ನ" ಅಂತ ಉಗಿದೆ. "ಸಾರಿ ಭಾವ ಇದೇ ಕೊನೇದು" ಅಂತ ಫೋನಿಟ್ಟ. ನಂಗೊತ್ತು ಮುಂದಿನವಾರ ಮತ್ತೆ ಶುರು ಮಾಡಿಕೊಂಡಿರ್ತಾನೆ ಅಂತ.

ನನ್ನ ಅಪ್ಪ ಅಮ್ಮನನ್ನ ಕೇಳೋಕೆ ಹೋಗಲಿಲ್ಲ, ಅವರು ಈ ಹೊಸವರ್ಷವನ್ನೇ ಆಚರಿಸಲ್ಲ ಅಂತ, ಏನಿದ್ದರೂ ಯುಗಾದಿಯೇ ಹಬ್ಬ ಅವರಿಗೆ. ತಂಗಿಗೆ ಕೇಳಿದ್ರೆ, "ಹೋದವರ್ಷದ ರೆಸೊಲೂಶನ್ ಕಥೆ ಏನಾಯ್ತು ಅಂತ ನಿಂಗೆ ಗೊತ್ತೇ ಇದೆಯಲ್ಲ, ಅದಕ್ಕೆ ಈ ವರ್ಷ ಅದರ ತಂಟೆಗೇ ಹೋಗಿಲ್ಲ" ಅಂದ್ಲು. ತಿಂಗಳು ಕೂಡ ಪಾಲಿಸಲಾಗಲಿಲ್ಲ ಅಂದ್ರೆ ರೆಸೊಲೂಶನ್ ಮಾಡಿಕೊಂಡು ಏನು ಪ್ರಯೋಜನ ಅಂತ ಅವಳು ಅಂದಿದ್ದೂ ಸರಿಯೆನ್ನಿಸಿತು.

ಪ್ರತೀ ವರ್ಷ ಹೊಸ ವರ್ಷದ ದಿನ ಎಲ್ಲರೂ ಕೇಳ್ತಾರೆ ರೆಸೊಲೂಶನ್ ಏನೊ ಅಂತ, ಆದರೆ ಕಳೆದ ವರ್ಷದ ರೆಸೊಲೂಶನ್ ಏನಾಯ್ತು ಅಂತ ಯಾರೂ ಕೇಳಲ್ಲ. ತಿಂಗಳು ಎರಡು ತಿಂಗಳಿಗೆ ರೆಸೊಲೂಶನ್ ಮರೆತೇ ಹೋಗಿರುತ್ತದೆ ಬಹಳ ಜನರಿಗೆ. ಹಾಗಿದ್ದಲ್ಲಿ ನಿಜಕ್ಕೂ ಈ ರೆಸೊಲೂಶನ್ ಬೇಕಾ, ಬೇಕೆಂದರೆ ಪಾಲಿಸದೇ ಇದ್ದರೆ ಮತ್ಯಾಕೆ, ನಂಗಂತೂ ಗೊತ್ತಿಲ್ಲ. ಸಿಗರ್‍ಏಟು ಸೇವನೆ ಬಿಡ್ತೀನಿ ಅನ್ನೊದು ಬಹಳ ಸಾಮಾನ್ಯ. ಹೀಗೇ ಒಮ್ಮೆಲೇ ರೆಸೊಲೂಶನ್ ಅಂತ ಬಿಟ್ಟವರು ಅಷ್ಟೇ ವೇಗದಲ್ಲಿ ಮತ್ತೆ ಶುರುವಿಟ್ಟುಕೊಂಡಿರುತ್ತಾರೆ, ಅದಕ್ಕೆ ತಿಂಗಳಿನ ಇಲ್ಲ ವಾರದ ಲೆಕ್ಕದಲ್ಲಿ ಇಂತಿಷ್ಟು ಅಂತ ಕಮ್ಮಿ ಮಾಡುತ್ತ ಬಂದರೆ ಹೇಗೆ, ಒಮ್ಮೆಲೇ ಬಿಡುವುದರಿಂದ ಆಗುವ ತೀವ್ರ ವಿರುದ್ಧ ಪರಿಣಾಮಗಳನ್ನೂ ತಪ್ಪಿಸಬಹುದಲ್ಲ. ಯಾವಾಗ ನಾವು ಹೀಗೆ ದೂರದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುತ್ತೇವೊ ಆಗ ಆ ಧೀರ್ಘ ಸಮಯದವರೆಗೆ ಆ ಸಂಯಮ ಕಾಪಾಡಿಕೊಳ್ಳಲು ಆಗಲಿಕ್ಕಿಲ್ಲವಲ್ಲವೇ. ಆದರೆ ಒಂದು ಬದ್ಧತೆ ಇದ್ದರೆ ರೆಸೊಲೂಶನ್, ಈ ಸಂಕಲ್ಪ ಬಹಳ ಒಳ್ಳೇದು, ತಪ್ಪದೇ ಕಟ್ಟುನಿಟ್ಟು ಮಾಡಿ ಮನಸಿನ ಮೇಲೆ ಹಿಡಿತ ಸಾಧಿಸಿ ಹತೋಟಿಯಲ್ಲಿಟ್ಟುಕೊಂಡರೆ ನಮ್ಮ ಯೋಚನೆಗಳ ಮೇಲೂ ನಾವು ನಿಯಂತ್ರಣ ಸಾಧಿಸಿಬಿಡುತ್ತೇವೆ. ಸಾಧಿಸಬಹುದಾದ ಚಿಕ್ಕದೇ ಆದರೂ ಸರಿ ಗುರಿ ಇಟ್ಟುಕೊಂಡರೆ ನಮ್ಮಿಂದಲೂ ಎನೋ ಸಾಧ್ಯ ಅನ್ನುವ ಹುರುಪು ಮನಸಿಗೆ ಬಂದೀತು.

ಏನೆಲ್ಲ ತಲೆ ಚಚ್ಚಿಕೊಂಡರೂ ನನಗೊಂದು ರೆಸೊಲೂಶನ್ ಸಿಗಲೇ ಇಲ್ಲ, ಅವಳಂತೂ ರೆಸೊಲೂಶನ್ ಏನೂ ಬೇಡ ಅಂತ ಬಿಟ್ಟು ಹಾಯಾಗಿ ಮಲಗಿಬಿಟ್ಟಿದ್ದಳು, ಏಳಿಸಿ "ಏನೇ ನಿನ್ನ ರೆಸೊಲೂಶನ್" ಅಂದೆ, "ರೀ ಬೇಗ ಮಲಗಿ ಬೇಗ ಏಳ್ತೀನಿ ಅದೇ ನನ್ನ ರೆಸೊಲೂಶನ್, ಈಗ ಮಲಗಲು ಬಿಡಿ" ಅಂದ್ಲು, "ಆದರೆ ನಾ ನಿನ್ನ ಬೇಗನೇ ಮಲಗಲು ಬಿಟ್ಟರೆ ತಾನೆ, ಆಫೀಸಿನ ವಿಷಯಗಳ ತಲೆ ತಿಂದು ಬಿಡ್ತೀನಲ್ಲ" ಅಂತಿದ್ದಂಗೆ, ಹೊದ್ದು ಮಲಗಿದ್ದಳು ನಿಚ್ಚಳಾಗಿ ಎದ್ದು ಕೂತು "ಏನ್ರೀ ಏನೂ ಬಾಯಿ ಬಿಡ್ತಿಲ್ಲ, ಹೊಸ ಕಂಪನಿ, ಹೊಸ ಹುಡುಗಿಯರು... ಏನ್ ಕಥೆ ನಿಮ್ದು" ಅಂತ ಹರಟೆಗಿಳಿದಳು. ಅಲ್ಲಿಗೆ ಅವಳು ಮಾಡಿಕೊಂಡಿದ್ದ ರೆಸೊಲೂಶನ್‌ಗೆ ಎಳ್ಳು ನೀರು ಬಿಟ್ಟಾಯಿತು. ಹನ್ನೊಂದು ಹನ್ನೆರಡಾದರೂ ಮಾತಿಗೆ ಕೊನೆಯಿರಲಿಲ್ಲ, "ಏನೇ ಬೇಗ ಮಲಗ್ತೀನಿ ಅನ್ನೊ ನಿನ್ನ ರೆಸೊಲೂಶನ್ ಇಂದೇ ಬ್ರೇಕ್ ಆಯ್ತಲ್ಲ" ಅಂದರೆ. "ಪ್ಲಾನ ಸ್ವಲ್ಪ ಚೇಂಜ್ ಆಯ್ತು, ಇನ್ಮೇಲೆ ಲೇಟಾಗಿ ಮಲಗಿ ಲೇಟಾಗಿ ಏಳ್ತೀನಿ" ಅಂದ್ಲು, "ಹಾಗಾದ್ರೆ ನನ್ಯಾರೇ ಆಫೀಸಿಗೇ ಹೋಗಲು ಏಳಿಸೋದು" ಅಂತ ಕೇಳಿದ್ರೆ "ನಿಮ್ಮ ಬಾಸ್" ಅಂತ ತರಲೇ ಉತ್ತರಕೊಟ್ಟು ಮಲಗಿಬಿಟ್ಟಳು, ಬೇಗ ಏಳುವ ರೆಸೊಲೂಶನ್ ನಾನೇ ಮಾಡಿಕೊಂಡರೆ ಒಳ್ಳೇದು ಅಂದುಕೊಳ್ಳುತ್ತ ತಲೆದಿಂಬಿಗೆ ಒರಗಿದೆ. ದಿಂಬು ಕಸಿದುಕೊಂಡು ತುಂಟಾಟಕ್ಕಿಳಿದಳು.

ಹೊಸ ವರ್ಷದ ಶುಭಾಶಯಗಳೊಂದಿಗೆ...
ನಾನು, ನನ್ನಾk.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/sankalpa.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು