Sunday, March 21, 2010

ನನ್ನಾಕೆಯಲ್ಲಿನ ನನ್ನಮ್ಮ

ಕಂಪ್ಯೂಟರ್ ಮುಂದೆ ಕೂತು ಏನೊ ಓದುತ್ತಿದ್ದವ ಸುಮ್ನೇ ನಗುತ್ತಿದ್ದೆ, "ಸುಮ್ ಸುಮ್ನೇ ಹಾಗೆ ಒಬ್ರೇ ನಕ್ಕರೆ ಏನಂತಾರೆ ಗೊತ್ತಾ?" ಅಂದ್ಲು. "ಹಸನ್ಮುಖಿ ಅಂತಾರಾ" ಅಂದ್ರೆ "ಇಲ್ಲಾಪ್ಪ, ಹುಚ್ಚ ಫಿಲಂ ಕಿಚ್ಚ ಅಂತಾರೆ" ಅಂತ ನಿಮ್ಹಾನ್ಸ ಪೇಶಂಟ್ ಅಂತ ಸುತ್ತುಬಳಸಿ ಹೇಳಿದ್ಲು. ಇನ್ನೊಂದು ಬಾರಿ ಹಲ್ಲು ಕಿರಿದೆ "ಕೋತಿ..." ಅಂತ ಬಯ್ದು ಎದ್ದು ಹೋದ್ಲು. ಅವಳಿಗೆ ಹೇಳದೇ ಒಬ್ನೇ ಯಾಕೆ ನಗ್ತಾ ಇದೀನಿ ಅಂತ ಸಿಟ್ಟು. ಹೇಳೊಕೇನೂ ದೊಡ್ಡ ಜೋಕ್ ಇರಲಿಲ್ಲ "ಏನಿಲ್ಲ ಕಣೆ, ಮೊನ್ನೆ ಮಹಿಳಾ ದಿನಾಚರಣೆ ಅಂತ ಆಫೀಸಲ್ಲಿ ಏನೊ ಸೆಲೆಬ್ರೇಷನ್ ಮಾಡಿದ್ರು, ನಿಮ್ಮ ಜೀವನದಲ್ಲಿನ ಅತೀ ಪ್ರಭಾವಿ ಮಹಿಳೆ ಬಗ್ಗೆ ಲೇಖನ ಬರೆಯಲು ಕೇಳಿದ್ರು. ಬಹುಮಾನಿತ ಲೇಖನಗಳೆಲ್ಲ 'ಅಮ್ಮ' ಬಗ್ಗೆಯೇ ಇವೆ. ಮೊದಲೇ ಊಹಿಸಿದ್ದೆ ಅದಕ್ಕೆ ಮುಗುಳ್ನಗ್ತಾ ಇದ್ದೆ" ಅಂತ ವಿವರಿಸಿದೆ. "ಹೌದಾ... ನೀವ್ ಬರೀಬೇಕಿತ್ತು, ಪಕ್ಕದಮನೆ ಪದ್ದು ಬಗ್ಗೆ" ಅಂತ ಕಿಚಾಯಿಸಿದಳು. "ಬರೀತಿದ್ದೆ ಆದ್ರೆ ಮುಂದಿನಮನೆ ಮೀನಾಕ್ಷಿ ಎಲ್ಲಿ ಬೇಜಾರು ಮಾಡ್ಕೊತಾಳೊ ಅಂತ ಬಿಟ್ಟೆ" ಅಂದೆ. ಕೈಯಲ್ಲಿ ಟೀ ಕಪ್ಪು ಕೊಟ್ಟು ಹೊರ ನೂಕಿದಳು, ನಿಮ್ಮ ಜತೆ ಮಾತಾಡೊಕೆ ನನಗೆ ಸಮಯ ಇಲ್ಲಾಂತಾ... ಹೊರಗೆ ಬಂದು ಕೂತು ಯೋಚಿಸತೊಡಗಿದೆ. ನಾ ಬರೆಯುವುದೇ ಆಗಿದ್ದರೆ ಯಾರ ಬಗ್ಗೆ ಬರೀತಿದ್ದೆ ಅಂತ ಎಷ್ಟು ಬಾರಿ ಯೊಚಿಸಿದರೂ ಅಮ್ಮ ಅಂತಲೇ ಅನಿಸಿತು. ಹಾಗೂ ಒಂದು ವೇಳೆ ಬೇರೆ ಬರೆಯುವುದೇ ಆಗಿದ್ದರೆ ಅದು ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆಯೂ ಇರಬಹುದಿತ್ತೇನೊ...

"ಹೌದು ಯಾಕೆ ಬರೀಲಿಲ್ಲ" ಅಂತ ಕೆಲಸ ಮುಗಿಸಿದವಳು ಬಂದು ಮುಂದೆ ಒಂದು ಕುರ್ಚಿ ಎಳೆದುಕೊಂಡು ಕೂತಳು, ಅವಳ ಕೈಲಿದ್ದ ಟೀ ಕಪ್ಪಿನೆಡೆಗೆ ಅಸೆಯಿಂದ ನೋಡಿದ್ದಕ್ಕೆ "ಬೇಕಾ" ಅಂತ ಒಂದು ಸಿಪ್ಪು ಕೊಟ್ಟಳು. "ಕೆಲಸದ ಪ್ರಭಾವ ಜಾಸ್ತಿ ಇತ್ತು ಅದಕ್ಕೆ ಪ್ರಭಾವಿ ಮಹಿಳೆ ಬಗ್ಗೆ ಬರೆಯಲಾಗಲಿಲ್ಲ, ಆದರೆ ಬರೆಯುವುದೇ ಆಗಿದ್ದರೆ ಅಮ್ಮ ಬಗ್ಗೇನೆ ಬರೀತಿದ್ದೆ ಏನೊ" ಅಂತಂದೆ. "ಹೌದು ಅಮ್ಮ ಅನ್ನೊ ಕ್ಯಾರೆಕ್ಟರ್ ಹಾಗೇ ಅಲ್ವೇ ಅಷ್ಟು ಪ್ರಭಾವ ಬೀರುತ್ತದೆ" ಅಂತ ಒಪ್ಪಿಕೊಂಡಳು. "ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆ ಬರೆದಿದ್ರೆ" ಅಂತ ಹುಬ್ಬು ಹಾರಿಸಿದ್ರೆ, "ನನ್ನಲ್ಲಿ ನಿಮ್ಮಮ್ಮ!!!" ಅಂತ ಹೌಹಾರಿದಳು. "ಹೌದು, ಈ ಅಮ್ಮನ ಕೆಲ ಗುಣಗಳನ್ನು ನಿನ್ನಲ್ಲಿ ಹುಡುಕ್ತೀನಿ" ಅಂದಿದ್ದೇ "ಏನದು, ಏನದು" ಅಂತ ಕುತೂಹಲಿಯಾದಳು. "ನಂಗೊತ್ತಿಲ್ಲ, ಹೀಗೆ ಒಂದೇ ಎರಡು ಅಂತಿಲ್ಲ, ನನಗೇ ಗೊತ್ತಿಲ್ಲದೇ ನನ್ನಮ್ಮನನ್ನ ನಿನ್ನಲ್ಲಿ ಹುಡುಕುತ್ತೇನೆ." ಅಂದರೆ "ಅಮ್ಮನ ಬಗ್ಗೆ ಹೇಳಿ, ನಾನು ಊಹಿಸಿಕೊಳ್ತೀನಿ" ಅಂತಂದಳು.

"
ಅಮ್ಮ, ಯಾರದೇ ಜೀವನದಲ್ಲೂ ಮೊಟ್ಟ ಮೊದಲಿಗೆ ಪರಿಚಯವಾದ ಮಹಿಳೆ, ಜಗತ್ತಿಗೆ ಬರ್ತಿದ್ದಂಗೇ ಮೊಟ್ಟ ಮೊದಲಿಗೆ ಅಮ್ಮನನ್ನೇ ನೋಡಿದ್ದು" ಅಂತ ಹೇಳ್ತಾ ಇದ್ರೆ "ರೀ ಸುಳ್ಳು ಹೇಳಬೇಡಿ, ನೀವ್ ಫರ್ಸ್ಟ್ ನರ್ಸ್ ನೋಡಿರಬೇಕು" ಅಂತ ತುಂಟಿ ತರಾಟೆಗೆ ತೆಗೆದುಕೊಂಡಳು. "ಇರಬಹುದು, ನೆನಪಿಲ್ಲ ನೋಡು." ಅಂತ ತಪ್ಪಿಸಿಕೊಂಡೆ. "ಊಟ ಮಾಡೋಕೆ ಕೈತುತ್ತು ತಿನಿಸಿದವಳು ಅವಳು, ಎಷ್ಟು ಸಾರಿ ಕೈ ಕಚ್ಚಿದೀನೊ ಏನೊ" ಅಂದ್ರೆ, "ನನ್ನ ಕೈ ಮೂರು ಸಾರಿ ಕಚ್ಚಿದೀರ, ನಾನು ಲೆಕ್ಕ ಇಟ್ಟೀದೀನಿ" ಅಂದ್ಲು, ಇನ್ನು ಕೈತುತ್ತು ತಿನಿಸಿದ್ದು ಯಾಕೆ ಅಂತ ಕೇಳಬೇಡಿ. "ಚಿಕ್ಕಂದಿನಲ್ಲಿ ಅಮ್ಮನ ಕೈಯಿಂದ ಏಟು ತಿಂದೀದೀನಿ, ಏನೊ ತುಂಟಾಟ ಮಾಡಿ, ಒಮ್ಮೆ ಅಂತೂ ಅಮ್ಮ ಒಂದು ವಾರ ಮಾತಾಡಿರಲಿಲ್ಲ. ಆದ್ರೂ ಮತ್ತೆ ಅಮ್ಮ ಅಮ್ಮಾನೆ ಮತ್ತದೇ ಪ್ರೀತಿ... ನಿನ್ನ ಜತೆಗೂ ಈಗ್ ತುಂಟಾಟ ಮಾಡಿ ಏಟು ತಿಂತಾ ಇರ್ತೀನಿ ಅಲ್ವಾ" ಅಂತಿದ್ದಂಗೇ ನನ್ನಾಕೆಗೆ ಎನೊ ನೆನಪು ಬಂತು "ರೀ ಅದೊಂದು ಸಾರಿ, ಫುಲ್ ಫೈಟಿಂಗ್ ಆಗಿತ್ತು ನೆನಪಿದೆಯಾ" ಅಂದ್ಲು. "ಒಹ್ ಯಾಕೆ ನೆನಪಿಲ್ಲ, ವರ್ಡ್ ವಾರ್ ಒನ್ ಅದು. ವಾರ ಏನು, ಹದಿನೈದು ದಿನ ಮಾತಾಡಿರಲಿಲ್ಲ ನೀನು" ಅಂದ್ರೆ. "ಹ್ಮ್, ಒಂದು ವಾರ ಆದಮೇಲೆ ಗೂಗಲ್ ಟಾಕ್‌ನಲ್ಲಿ ಚಾಟ್ ಮಾಡಿದ್ದೆ, ಟ್ವಿಟ್ಟರ್ ಅಲ್ಲಿ ಟ್ವೀಟ್ ಮಾಡಿರಲಿಲ್ವಾ. ನೀವೇ ಮೌನ ವೃತ ಮಾಡಿದ್ದು, ಒಂದು ರಿಪ್ಲೈ ಕೂಡ ಮಾಡಿರಲಿಲ್ಲ." ಅಂತ ಮುಖ ಗಂಟಿಕ್ಕಿದಳು. ಮುಖ ನನ್ನೆಡೆಗೆ ತಿರುಗಿಸಿಕೊಂಡರೂ ನನ್ನೆಡೆಗೆ ನೋಡಲಿಲ್ಲ. "ಮಾತಾಡೊದಿದ್ರೆ ಡೈರೆಕ್ಟ್ ಮಾತಾಡಬೇಕಿತ್ತಪ್ಪ" ಅಂತ ನಾನಂದೆ. "ಒಟ್ಟಿನಲ್ಲಿ ಮಾತಾಡಿದ್ದೆ ಅಲ್ವಾ" ಅಂದ್ಲು. "ಅಮ್ಮನ ಹಾಗೇನೆ, ಇನ್ನೆಂದೂ ಮಾತಾಡಲ್ವೇನೊ ಅನ್ನೊ ಹಾಗೆ ಕೋಪಗೊಂಡ್ರೂ ಮತ್ತೆ ಅದೇ ಪ್ರೀತಿ" ತೋರಗೊಡಬಾರದೆಂದರೂ ಅವಳ ಮುಖದಲ್ಲೊಂದು ಮಂದಹಾಸ ಮೂಡಿತು.

ಇನ್ನಷ್ಟು ಹತ್ತಿರ ಬಂದು ಕೂತಳು, ಅಲ್ಲೆ ಸ್ವಲ್ಪ ಜಾಗ ಮಾಡಿಕೊಂಡು ಉರುಳಿದೆ, ಅವಳ ಮಡಿಲಲ್ಲಿ ತಲೆ ಇಟ್ಟು. ಅವಳ ಕೈಗಳಿಗೊಂದು ಕೆಲ್ಸ ಸಿಕ್ಕಿತು, ನನ್ನ ಕೂದಲಿನೊಂದಿಗೆ ಆಟಕ್ಕಿಳಿದಳು. "ಹೀಗೆ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿ ಬಿಡ್ತಿದ್ದೆ ಅನ್ಸತ್ತೆ. ಜಗತ್ತಿನಲ್ಲಿರೊ ಯಾವ ಟೆನ್ಷನ್ ತಲೇಲಿದ್ರೂ ಓಡಿ ಹೋಗಬೇಕು." ಅಂದ್ರೆ, "ಚಿಕ್ಕಂದಿನಲ್ಲಿ ಯಾವ ಟೆನ್ಷನ್ ಇತ್ತಪ್ಪಾ ನಿಮ್ಗೆ" ಅಂತ ಕೇಳಿದ್ಲು. "ಪಕ್ಕದ ಬೆಂಚಲ್ಲಿ ಕೂರೊ ಹುಡುಗಿ ನನ್ನಡೆಗೆ ಯಾಕೆ ನೋಡ್ತ ಇದಾಳೆ ಅನ್ನೊದೂ ಟೆನ್ಷನ್ ಆವಾಗ" ಅಂದ್ರೆ "ಯಾರ್ರೀ ಆಕೆ ನಂಗೆ ಹೇಳೇ ಇಲ್ಲಾ ಆಕೆ ಬಗ್ಗೆ" ಅಂದ್ಲು. "ಲೇ ಸುಮ್ನೇ ಉದಾಹರಣೆ ಅಂತ ಹೇಳಿದೆ" ಅಂತ ಸುಮ್ಮನಾಗಿಸಿದೆ. "ಹ್ಮ್ ಈಗ ನನ್ನ ಮಡಿಲಲ್ಲಿ ಹೀಗೆ ಮಲಗಿದ್ರೆ ಟೆನ್ಷನ್ ಮಾಯ ಆಗತ್ತಾ?" ಅಂತ ಮತ್ತೊಂದು ಪ್ರಶ್ನೆ ಎದ್ದಿತು ಅವಳಿಗೆ "ಆವಾಗ ಅನಿಸೋದು, ಏನು ದೊಡ್ಡ ತೊಂದ್ರೆ ಇದ್ರೂ ಏನು... ಅಮ್ಮ ಇದಾಳಲ್ಲ, ನಂಗೇನು ಟೆನ್ಷನ್ ಅಂತ. ಈಗ ನಿನ್ನೊಂದಿಗೆ ಅನಿಸತ್ತೆ, ಏನಾದರಾಗಲಿ, ನನ್ನ ಜತೆ ನೀನ್ ಇದೀಯಲ್ಲ, ಅಮ್ಮನ ಹಿಂದೆ ಅಡಗಿಕೊಂಡು ತಪ್ಪಿಸಿಕೊಳ್ಳಬಹುದಿದಿತ್ತೇನೊ, ಆದರೀಗ ಮುಂದೆ ನಿಂತು ಎದುರಿಸ್ತೀನಿ ಏನೇ ಪ್ರಸಂಗ ಬಂದ್ರೂ, ಹಿಂದೆ ಬೆಂಬಲಕ್ಕೆ ನೀನಿದೀಯಲ್ಲ ಅಂತ. ಏನ್ ಗೊತ್ತಾ, ಟೆನ್ಷನ್ ಆಗಿ ತಲೆ ಸಿಡೀತಾ ಇರುವಾಗ ಹೀಗೆ ನೀ ಹಣೆಮೇಲೆ ಬೆರಳು ಆಡಿಸುತ್ತಿದ್ರೆ ತಲೆನೋವು ಮಾಯ ಆಗಿ ನಿದ್ರೆ ಬಂದು ಬಿಡತ್ತೆ" ಅಂದೆ, ಖುಷಿಯಾದ್ಲು. "ಎದ್ದೇಳ್ರೀ, ಅಡುಗೆ ಮಾಡಬೇಕು, ನೀವ್ ಹೀಗೆ ಮಲಗಿದ್ರೆ ಮಧ್ಯಾಹ್ನ ಊಟ ಏನ್ ಮಾಡೊದು, ಅಂದಹಾಗೆ ಏನು ಬೇಕು? ಸಂಡೇ ಸ್ಪೇಶಲ್ ಈವತ್ತು." ಅಂತ ಪಾಕಶಾಲೆಗೆ ನಡೆದಳು. "ಅಮ್ಮಂಗೆ ನಂಗೇನು ಬೇಕು ಅಂತ ಹೇಗೆ ಗೊತ್ತಾಗುತ್ತೊ ಏನೊ, ಏನು ಮಾಡಿ ಹಾಕಿದ್ರು ಅದೇ ಸ್ಪೇಷಲ್ ಅನಿಸತ್ತೆ, ನಂಗೆ ಎಷ್ಟು ಬೇಕು ಅಂತ ಕೂಡ ಗೊತ್ತು, ಅನ್ನ ಹಾಕಿದ್ದು ಒಮ್ಮೊಮ್ಮೆ ಜಾಸ್ತಿ ಅನಿಸಿದ್ರೂ ಆವತ್ತೇ ಹೊಟ್ಟೇ ತುಂಬ ತಿಂದೆ ಅನಿಸತ್ತೆ" ಅಂತನ್ನುತ್ತ ನಾನೂ ನಡೆದೆ.

"ಈವತ್ತು, ಪಲಾವ್ ಮಾಡ್ತೀನಿ, ತರಕಾರಿ ಹೆಚ್ಚಿ ಹಾಕಿ" ಅಂದ್ಲು, "ಜತೆ ಸ್ವಲ್ಪ ಬಟಾಣಿ ಹಾಕು ಟೇಸ್ಟ್ ಇರತ್ತೆ, ಅದೇ ತಿನ್ನೋಣ ಅನಿಸಿತ್ತು" ಅಂದೆ. "ಆಹಾಹಾ.. ಡೈಲಾಗ್ ಎಲ್ಲಾ ಬೇಡ, ಬೇರೆ ಏನಾದ್ರೂ ಬೇಕಿದ್ರೆ ಹೇಳಿ, ಅತ್ತೆ ಹಾಗೇ ನಿಮ್ಮ ಇಷ್ಟ ನಂಗೊತ್ತಾಗಲ್ಲ" ಅಂತ ಬೆಣ್ಣೆ ಮಾತು ಸಾಕಂದ್ಲು. "ಗೊತ್ತಾಗಲ್ಲ, ಸರಿ ಆದ್ರೆ... ಅಮ್ಮ ಬಂದಾಗ ಏನೇನು ಮಾಡ್ತಾಳೆ, ನೋಡಿಟ್ಟುಕೊಳ್ತೀಯಾ. ಅವಲಕ್ಕಿ ಮಾಡೋವಾಗ ಅರಿಷಿನ ವಗ್ಗರಣೆಗೆ ಹಾಕಿದ್ರೆ ಒಂದು ಟೇಸ್ಟ, ಅವಲಕ್ಕಿ ವಗ್ಗರಣೆಯಲ್ಲಿ ಕಲಿಸೋವಾಗ ಮೇಲೆ ಉದುರಿಸಿದ್ರೆ ಒಂದು ಟೇಸ್ಟ್ ಅನ್ನೊವಂಥ ಚಿಕ್ಕ ಪುಟ್ಟ ಟಿಪ್ಸ್ ಕೇಳಿ ನೆನಪಿಟ್ಟುಕೊಂಡು, ಆಮೇಲೆ ಪ್ರಯತ್ನಿಸ್ತೀ ಅಲ್ವಾ" ಅಂತ ಬರೀ ಬೊಗಳೆ ಏನೂ ಬಿಡ್ತಿಲ್ಲ ಅಂದೆ. "ಆವತ್ತು ಹುಷಾರಿಲ್ದೆ ಇರೊವಾಗ ಅನ್ನ ತುಪ್ಪ ಕಲಿಸಿ ನಿಂಬೆಹಣ್ಣು ಹಿಂಡಿ ಕೊಟ್ಟು ಸರಪ್ರೈಜ್ ಮಾಡಿದ್ದೆ ನೆನಪಿದೆಯಾ" ಅಂತ ಕೇಳಿದ್ಲು "ಅದನ್ನೇ ನಾನೂ ಹೇಳ್ತಿರೊದು, ಅದೇ ನಿನ್ನಲ್ಲಿನ ನನ್ನಮ್ಮ." ಅಂದೆ.

ಊಟ ಆಯ್ತು, ಏನು ಸೊರಗಿ ಸಣಕಲಾಗ್ತಾ ಇದೀರಾ ಅಂತ ಬಯ್ಯುತ್ತ ಜಾಸ್ತಿನೇ ಅನ್ನ ಬಡಿಸಿದ್ಲು, ಅಮ್ಮನ ಹಾಗೇನೆ. ಮತ್ತೊಂದಿನಾ ಹೊಟ್ಟೆ ಬರ್ತಿದೆರೀ ವ್ಯಾಯಾಮ, ಡಯೆಟ್ ಮಾಡಿ ಅಂತ ಬಯ್ಯುತ್ತಾಳೆ ಕೂಡ. ಅಮ್ಮ ಅಂತೂ ಊಟದ ಮೆನು ಹಿಂದೇನೇ ಇರ್ತಾಳೆ, ಫೋನು ಮಾಡಿದ್ರೆ ಮೊದಲು ಕೇಳೋದೇ, ಊಟ ಆಯ್ತಾ ಅಂತ. ಇನ್ನು ನನ್ನಾಕೆ ಊರಿಗೆ ಹೋದ್ರೆ ಕೂಡ ಅದನ್ನೇ ಮಾಡೊದು, ಯಾವ ಹೊಟೆಲ್‌ನಲ್ಲಿ ಏನು ತಿಂದೆ ಅಂತ ವರದಿ ಒಪ್ಪಿಸಬೇಕು. ತವರಿನಲ್ಲಿ ನಾಲ್ಕು ದಿನ ಇದ್ದು, ಅಯ್ಯೊ ಹೊಟೇಲ್ ಊಟ ಅವರಿಗೆ ತೊಂದ್ರೆ ಅಂತ ನೆಪ ಹೇಳಿ ಓಡಿ ಬಂದು ಬಿಡ್ತಾಳೆ. ಅಮ್ಮನ ಹಾಗೆ ಸೀರೆ ಉಡ್ತಾಳೆ, ಅಮ್ಮ ತಲೆ ಮೇಲೆ ಸೆರಗು ಹೊದ್ದು ದೇವರಿಗೆ ನಮಿಸುತ್ತಿದ್ರೆ, ತಾನೂ ಸೆರಗು ಹೊದ್ದು, ಹೇಗೇ ಕಾಣ್ತಾ ಇದೀನಿ ಅಂತ ಕಣ್ಣಲ್ಲೇ ಕೇಳ್ತಾಳೆ. ಅಮ್ಮ ಕೈಹಿಡಿದು ಅಂಬೆಗಾಲಿಡಿಸಿದಳು, ನನ್ನಾಕೆ ಚಿಕ್ಕ ಮಕ್ಕಳ ಹಾಗೆ ನನ್ನ ಪಾದದಮೇಲೆ ಹತ್ತಿ ನಿಂತು ನಡೆದಾಡು ಅಂತಾಳೆ. ಪೆನ್ಸಿಲ್, ಪೆನ್ನು ತೆಗೆದುಕೊಳ್ಳೊಕೂ ಅಪ್ಪನ ಹತ್ರ ಅಮ್ಮಾನೆ ಕೇಳಿ ಕೊಡಿಸ್ತಾ ಇದ್ದದ್ದು, ನಾ ಕೇಳಿದ್ರೂ ಸಿಗೋದು, ಆದ್ರೆ ಅಮ್ಮ ಕೇಳಿದ್ರೆ ಇಲ್ಲ ಅನ್ನಲ್ಲ ಅಂತ ಅವಳನ್ನೆ ಮುಂದೆ ಮಾಡುತ್ತಿದ್ದುದು. ಈಗ ಏನ್ ಪರಮೀಷನ್ ಬೇಕಿದ್ರೂ ಸೊಸೆಗೆ ಇಲ್ಲ ಅನ್ನಲ್ಲ ಅಂತ ಇವಳನ್ನೇ ಕಳಿಸ್ತೀನಿ. ಹೀಗೇ ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆ ಹೇಳಿಲಿಕ್ಕೆ ಬಹಳ ಇದೆ.

ಅಮ್ಮ, ತಾಯಿ, ಅವ್ವ, ಏನೆಲ್ಲ ಹೆಸರು ಅದೇ ಪ್ರೀತಿ, ಅದೇ ವಾತ್ಸಲ್ಯ. ನಾವು ಹುಡುಗರೇ(ಎಲ್ಲರೂ ಅಂತಲ್ಲ) ಹೀಗೇ ಏನೊ, ನಮ್ಮಾಕೆಯಲ್ಲಿ ಅಮ್ಮನ ಕೆಲ ಗುಣಗಳನ್ನು ಹುಡುಕುತ್ತೇವೇನೊ. ಏನಿಲ್ಲವೆಂದರೂ ಅಮ್ಮನ ಕೈರುಚಿಯಂತೆ ಅಡುಗೆಯಾದ್ರೂ ಮಾಡಲಿ ಅಂತ ಆಸೆ ಇದ್ದೇ ಇರುತ್ತದೆ. ಅಪ್ಪ ಸ್ವಲ್ಪ ನೇರ ದಿಟ್ಟ ನಿರ್ಧಾರಗಳಿಂದ ಸ್ವಲ್ಪ ನಮಗೆ ದೂರವೇ,
ಅಮ್ಮ ತಪ್ಪು ಮಾಡಿದರೂ ಕ್ಷಮಿಸುತ್ತ ಮೃದುಧೋರಣೆ ತಳೆಯುತ್ತ, ತುಸು ಜಾಸ್ತಿ ಸಲಿಗೆಯೇ ಕೊಟ್ಟಿರುತ್ತಾಳೆ. ಹೆತ್ತವರಿಗೆ ಹೆಗ್ಗಣವೂ ಮುದ್ದು ಅನ್ನೊವಂತೆ, ನಾವು ಹೇಗಿದ್ದರೂ ಅಮ್ಮನ ಪ್ರೀತಿ ನಮ್ಮ ಮೇಲೇ ಜಾಸ್ತಿ. ಅದೂ ಅಲ್ಲದೇ ಮಗಳಾದ್ರೆ ಮದುವೆ ಮಾಡಿ ಕೊಟ್ರೆ ಹೊರ ಹೋಗುತ್ತಾಳೆ, ಮನೆ ಮಗನಾಗಿ ಜತೆ ನಿಲ್ಲುವನಿವನೇ ಅನ್ನೊ ಭಾವ ಬೇರೆ. ಮಗಳಿಗೆ ತುಸು ಮನೆಕೆಲಸ ಕಲಿಸುವ ಭರದಲ್ಲಿ ಸ್ವಲ್ಪ ಸಿಟ್ಟು ಗಿಟ್ಟು ಮಾಡಿಕೊಂಡರೂ, ಮಗನಿಗೆ ಮಾತ್ರ ಹಾಗೇನಿರುವುದಿಲ್ಲ, ಅದಕ್ಕೇ ಏನೊ ನಿಮಗೆ ಮಗನ ಮೇಲೆ ಪ್ರೀತಿ ಜಾಸ್ತಿ ಅಂತ ಹೆಣ್ಣುಮಕ್ಕಳು ಅಮ್ಮನ ಜತೆ ಮುನಿಸಿಕೊಳ್ಳೋದು. ಹೀಗಿರುವ ಅಮ್ಮ ನಿಜವಾಗಲೂ ನಮಗೆ ಮಾದರಿಯಾಗಿಬಿಟ್ಟಿರುತ್ತಾಳೆ ಅದಕ್ಕೆ ಅದೇ ಗುಣಗಳನ್ನೇ ಮಡದಿಯಲ್ಲಿ ಹುಡುಕುವುದೇನೊ. ಹುಡುಗನ ಅಮ್ಮನನ್ನು ಹುಡುಗಿ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೋ ಅಷ್ಟು ಒಳ್ಳೇ ಹೆಂಡತಿಯಾಗುತ್ತ ಸಾಗಬಲ್ಲಳೇನೊ.

ಸಕತ್ತಾಗಿ ಊಟ ಆಯ್ತು, ಸ್ವಲ್ಪ ನಿದ್ದೆ ಹೊಡೆದರಾಯ್ತು ಅಂತ ಕಾಲು ಚಾಚಿದ್ರೆ. ಪಕ್ಕದಲ್ಲೇ ಕೂತು ಇವಳು ಪೇಪರು ಓದುತ್ತಿದ್ಲು. "ನಿಂಗೆ ನನ್ನಲ್ಲಿ ನಿಮ್ಮಪ್ಪನ್ನ ಏನಾದ್ರೂ ಹುಡುಕಬೇಕು ಅನಿಸತ್ತಾ" ಅಂತ ಕೇಳಿದೆ. "ಹ್ಮ್ ಹೌದು ಕಣ್ರಿ, ನಮ್ಮಪ್ಪನ ಹಾಗೆ ಹುರಿ ಮೀಸೆ ಬಿಡ್ತೀರಾ!!!" ಅಂದ್ಲು. "ಚೆನ್ನಾಗಿ ಕಾಣಲ್ಲ ಕಣೆ, ಪ್ರಯತ್ನ ಮಾಡ್ಲಾ" ಅಂದೆ. "ರೀ ಜೋಕ್ ಮಾಡಿದೆ, ಹೀಗೇ ಚಾಕಲೇಟ್ ಹೀರೊ ಹಾಗಿದೀರಾ ಸಾಕು. ಇಲ್ಲಾಂದ್ರೆ ಇಷ್ಟೇ ಬಾಡಿ, ಇಷ್ಟುದ್ದ ಮೀಸೆ ಬಿಟ್ಟು ವೀರಪ್ಪನ್ ಥರ ಕಾಣ್ತೀರ ಮತ್ತೆ" ಅಂದ್ಲು. ಅದೇನು ಹೊಗಳಿದ್ಲೊ ತೆಗಳಿದ್ಲೊ ಯಾರಿಗೆ ಗೊತ್ತು. ಕಣ್ಣು ಮುಚ್ಚುತ್ತಿದ್ದೆ, "ರೀ ಪೇಪರನಲ್ಲಿ ಈ ಗಗನಸಖಿ ಫೋಟೊ ನೋಡಿದ್ರಾ, ಸೂಪರಾಗಿದೆ" ಅಂದ್ಲು. "ಎಲ್ಲಿ ಎಲ್ಲಿ" ಅಂತೆದ್ದು ಕೂತೆ. ಪೇಪರ್ ಕೊಡಲ್ಲ ಅಂತ ಕಾಡಿಸಿದ್ಲು, ಕೊನೆಗೂ ಕಿತ್ತಾಡಿ ಎಳೆದು ಹರಿದು, ಆ ಫೊಟೊ ಎರಡು ತುಂಡು ಹಾಳೆ ಸೇರಿಸಿ ನೋಡಿದ್ದಾಯ್ತು. ಅವಳು ಪೇಪರ ಬೀಸಾಕಿ ಪಕ್ಕ ಪವಡಿಸಿದರೆ, ಅನಿಸಿತು, ಅಮ್ಮ ಕೂಡ ಹೀಗೆ ಅಲ್ವಾ ಅಂತ. ಅಂಕಲ್, ಅಂಟಿ, ಅಕ್ಕ ಏನೊ ಆಟಿಕೆ ಕೊಟ್ಟರು ಅಂತ ಆಸೆಗೆ ಮಗು ಅವರ ಹತ್ರ ಹೋದರೂ ಕೊನೆಗೆ ನನ್ನಲ್ಲೇ ಬರುತ್ತದೆ ಬಿಡು ಅಂತ ನಂಬಿಕೆ ಅಮ್ಮನಿಗೆ, ಎರಡು ಘಂಟೆ ಆಟಿಕೆಯೊಂದಿಗಾಡಿದರೂ ಅಮೇಲೆ ಏನು ಕೊಟ್ಟರೂ ಅಮ್ಮ ಅಂತಲೇ ಮಗು ರಚ್ಚೆ ಹಿಡಿಯುತ್ತದೆ. ಪಕ್ಕದಮನೆಯಿಂದ ಹಿಡಿದು ಪಕ್ಕದ ಆಫೀಸಿನ ಕನ್ಯಾಮಣಿಗಳ ಕನವರಿಕೆಯಲ್ಲೇ ಅವಳ ಕಾಡಿಸುತ್ತಿದ್ದರೂ ನನ್ನವನೇ ಅನ್ನೊ ನಂಬಿಕೆ ನನ್ನಾಕೆಗೆ... ನಿರಾಳವಾಗಿ ನಿಚ್ಚಿಂತೆಯಿಂದ ನಿದ್ರೆ ಹೋಗಿದ್ದಳು, ಗಗನಸಖಿಯ ಫೋಟೊ ಬೀಸಾಕಿ, ನನ್ನಸಖಿಯ ನೋಡುತ್ತಿದ್ದರೆ ನಿದ್ರೆ ಬೇಕೆನಿಸಲಿಲ್ಲ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/nannakeyalli-nannamma.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು