Monday, January 26, 2009

ಪರಿಧಿ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಮುಂಜಾನೆ ಗಣತಂತ್ರ ದಿನ ಅಂತಾ ಏನೊ ಸ್ವೀಟ ಮಾಡಿದ್ಲು, ಅದೇ ಕೇಸರೀಭಾತ, ಕಾರಾಭಾತ ಎರಡೂ ಸೇರಿಸಿ ಚೌಚೌ ಭಾತ.. ನಮ್ಮೂರಲ್ಲಿ ಶಿರ್‍ಆ ಉಪ್ಪಿಟ್ಟು ಅಂತೀವಿ. ಪ್ರತೀ ಗಣತಂತ್ರ ದಿನಾನೂ ರಜೆ ಇದೆ ಮಲಗಲು ಬಿಡೆ ಅಂದ್ರೂ ಬಿಡದೆ ಆರಕ್ಕೆ ಎಬ್ಬಿಸಿ ಎಳಕ್ಕೆ ಸರಿಯಾಗಿ ಹತ್ತಿರದಲ್ಲಿ ಯಾವುದಾದರೂ ಸರಿ ಒಂದು ಶಾಲೆಗೆ ಕರೆದೊಯ್ಯುತ್ತಾಳೆ, ಮಕ್ಕಳು ಧ್ವಜ ಹಾರಿಸುವುದನ್ನು ನೋಡಿ ಹೆಮ್ಮೆ ಪಟ್ಟು ಮನೆಗೆ ಬರೋದು. ಚಿಕ್ಕೊನಿದ್ದಾಗ ನಾನೂ ಹೀಗೆ... ನಾಳೆ ಅಗಸ್ಟ ಹದಿನೈದೊ, ಜನವರಿ ಇಪ್ಪತಾರೊ ಇದೆ ಅಂದ್ರೆ, ಹಿಂದಿನ ದಿನಾನೇ ಭಲೆ ತಯ್ಯಾರಿ ಮಾಡಿಕೊಳ್ಳೊದು, ಯುನಿಫಾರ್ಮ ಚೆನ್ನಾಗಿ ಒಗೆದು ಖಡಕ್ ಇಸ್ತ್ರಿ ಮಾಡಿ, ಬೂಟು ಮಿರ ಮಿರ ಮಿಂಚುವಂತೆ ಪಾಲೀಶು ಮಾಡಿ, ಮುಂಜಾನೆ ನಾಲ್ಕಕ್ಕೇ ಎದ್ದು, ಅಮ್ಮನ ಎಬ್ಬಿಸಿ ತಯ್ಯಾರಾಗಿ ಹೋಗಿ ಪರೇಡು ಮಾಡಿ ಬರೊದು, ಪರೇಡು ಲೀಡರ ಬೇರೆ ಆಗಿದ್ದರಿಂದ ಅದೊಂದು ಹೆಮ್ಮೆ ವಿಷಯ. ಪ್ರಭಾತ ಫೇರಿ ಅಂತಾ ಊರೆಲ್ಲ ಸುತ್ತೊದು ಆವತ್ತು, ಆಗ ಜಯಘೋಷಗಳ ಕೂಗಿ ಕೂಗಿ ಎರಡು ದಿನ ಗಂಟಲು ಕುಗ್ಗಿ, ಗೊಗ್ಗರು ದನಿಯಾಗಿರುತ್ತಿತ್ತು.

ಈಗ ಅದೂ ಮತ್ತೊಂದು ರಜಾ ದಿನ ಅನ್ನೊ ಮಟ್ಟಿಗೆ ಉದಾಸೀನನಾಗಿದ್ದೇನೆ, ಇಲ್ಲ ಬೇಕೆಂತಲೆ ಬೆಳೆಸಿಕೊಂಡಿದ್ದೇನೆ ಅಂದರೂ ತಪ್ಪಿಲ್ಲ. ಅದರೂ ನನ್ನ ದೇಶಪ್ರೇಮ, ಯಾರೂ ಪ್ರಶ್ನಿಸುವಂತಿಲ್ಲ. ನನಗೂ ನನ್ನ ದೇಶ, ನನ್ನ ಜನ, ನನ್ನ ನುಡಿ ಮೇಲೆ ಹೇಳಲಾಗದಷ್ಟು ಪ್ರೀತಿಯಿದೆ, ಹುಟ್ಟಿದ್ದೆ ನವೆಂಬರ ಒಂದರಂದು ಅಂದ ಮೇಲೆ ಕನ್ನಡದ ಮೇಲಂತೂ ಬಲು ಅಕ್ಕರೆ, ಆದರೆ ಬೇರೆ ಭಾಷೆಗಳ ದ್ವೇಷ ಮಾಡುವಂತಲ್ಲ, ನನ್ನ ಭಾಷೆ ನನ್ನ ಪ್ರೀತಿ, ಅವರದು ಅವರಿಗೆ ಅಷ್ಟೇ. ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಂಪ್ಯೂಟರ್ ಕುಟ್ಟುವ ಈ ಐಟೀ ಮಂದಿ ಇಷ್ಟೇ ಅಂತ ನೀವು ಭಾವಿಸಿದರೂ, ಅದರಲ್ಲಿ ನಿಮ್ಮ ತಪ್ಪಿಲ್ಲ, ತೀರ ಎಲ್ಲರೂ ಯೋಚಿಸುವುದು ಹಾಗೇನೆ. ಯಾರಾದರೂ ನೀವು ಐಟೀ ಮಂದಿ ಇಷ್ಟೆ ಅಂದಾಗ ನಮಗೂ ಎಷ್ಟು ನೋವಾಗುತ್ತದೆ ಅನ್ನೋದು ಅನುಭವಿಸಿದವರಿಗೇ ಗೊತ್ತು. ನಾನೂ ಇವಳು ಇದೇ ವಿಷಯದ ಮೇಲೆ ಎಷ್ಟೊ ಸಾರಿ ಜಗಳಾಡಿದ್ದೇವೆ. ಇಂದೂ ಹಾಗೆ ಆಯಿತು, ಆದರೆ ಕೊನೆಗೂ ನನ್ನ ವಿಚಾರ ಅವಳಿಗೂ ತಿಳೀಯಿತಲ್ಲಾ ಅನ್ನೋದೆ ಸಮಾಧಾನ.

ಪರೇಡು ನೋಡಿದ್ದು ಮುಗಿದು, ಪೇಪರು ಓದುತ್ತ ಕುಳಿತಿದ್ಲು, ಯಾವುದೋ ಉಗ್ರರ ಸುದ್ದಿ ನೋಡಿ, "ಇವರಿಗೆ, ನಮ್ಮವರ ಕಂಡ್ರೆ ಅದೇನು ಸಿಟ್ಟೊ, ಯಾವಾಗ ನೋಡಿದರೂ ತಗಾದೆ" ಅಂತ ಗೊಣಗಿದ್ಲು. ಸುಮ್ಮನೆ ಕುಳಿತಿದ್ದವನ ಕಿವಿ ಚುರುಕಾಯಿತು, "ಏನಂದೆ" ಅಂದೆ, "ನಿಮಗೆ ಕೇಳಿಸಿದೆ, ಸುಮ್ನೆ ನಾಟಕ ಮಾಡಬೇಡಿ, ನಾನೇನು ಹತ್ತಿರ ಬರಲ್ಲ, ನಿಮ್ಮ ತುಂಟಾಟ ಶುರು ಆಗುತ್ತೆ" ಅಂದ್ಲು. "ಆಯ್ತು, ನಾನೇ ಬಂದೆ ಅಂತ ಹತ್ತಿರ ಹೋಗಿ ಕುಳಿತರೆ, ಒಳ್ಳೇ ಆರಾಮ ಕುರ್ಚಿಯಲ್ಲಿ ಕೂತೊರಂತೆ ನನ್ನ ಮೇಲೆ ಒರಗಿ, ಎದೆಗೆ ಆತುಕೊಂಡು ಕೂತ್ಲು, ಈಗ ಪೇಪರು ಇಬ್ಬರೂ ಓದಬಹುದಿತ್ತು, "ಇದೇ ನಾ ಹೇಳುತ್ತಿದ್ದುದು" ಅಂತ ಲೇಖನ ತೋರ್‍ಇಸಿದ್ಲು. "ಇದೇ ಈಗ ಹೇಳಿದೆಯಲ್ಲ, ನಮ್ಮವರು ಅಂತ, ನಿನ್ನವರು ಯಾರು" ಅಂದೆ, ಕಣ್ಣು ಕೆಕ್ಕರಿಸಿ ನನ್ನೊಂದು ಸಾರಿ ನೋಡಿ "ಅದೇ ಭಾರತೀಯರು," ಅಂದ್ಲು. "ಹಾಗಾದ್ರೆ, ಅಮೇರಿಕದಲ್ಲಿ ಹುಟ್ಟಿರುವ ನಿಮ್ಮಕ್ಕನ ಮಗ, ನಿನ್ನ ಲಿಸ್ಟಿನಲ್ಲಿ ಇಲ್ಲ ಬಿಡು" ಅಂದೆ, "ರೀ ಅವನೂ ಮೂಲ ಭಾರತೀಯ ತಾನೆ", ಅಲ್ಲೇ ತೊಂದ್ರೆ ಬರೋದು,
ನಮಗೆ ಬೇಕಾದವರೆಲ್ಲ ಹಾಗೊ ಹೀಗೊ ಬೇಕು, ಬೇಡವಾದವರು ನಮ್ಮವರಲ್ಲ.

"ರೀ ಸರೀರಿ, ನನಗೆ ಕೆಲಸ ಇದೆ ನಿಮ್ ಜತೆ ಕೂತ್ಕೊಳ್ಳೋಕೆ ಟೈಂ ಇಲ್ಲ" ಅಂತ ಪಲಾಯನಗೈಯಲು ಪ್ರಯತ್ನಿಸಿದ್ಲು, ನಾ ಬಿಟ್ಟರೆ ತಾನೆ, ಕೈ ಬಳಸಿ ಬಿಗಿದು ಕಟ್ಟಿಹಾಕಿ ಕೂರಿಸಿಕೊಂಡೆ. "ಈಗ ನಿನ್ನವರು ಯಾರು ಅಂತ ಲಿಸ್ಟ ಮಾಡೋಣ, ಮೊದಲು ನೀನು ಯಾರು?" ಅಂದೆ ತರಲೆ ಉತ್ತರ ಬಂತು "ರೀ, ನಾನು ನಿಮ್ ಹೆಂಡ್ತಿ", ತಲೆಗೊಂದು ಏಟು ಕೊಟ್ಟು, ತರಲೆ ಬೇಡ ಅಂದ್ರೆ, ತಲೆ ಸವರಿಕೊಳ್ಳುತ್ತ, "ನಾನು ಭಾರತೀಯಳು" ಅಂತ ಹೆಮ್ಮೆಯಿಂದ ಹೇಳಿಕೊಂಡ್ಲು. "ಅದಕಿಂತ ಮೊದ್ಲು ನೀನು ಮನುಜಳು" ಅಂದದ್ದಕ್ಕೆ ಕಣ್ಣ ಕಣ್ಣು ಬಿಡುತ್ತ ನೋಡಿದ್ಲು, ನಾನೇನು ಬೇರೆ ಗ್ರಹದ ಜೀವಿ(ಏಲಿಯನ) ಅಂತನಕೊಂಡಿದ್ದರೇನೊ ಅಂತ ಅನುಮಾನ ಅವಳ ಕಾಡಿರಬೇಕು. ಈಗ ಲಿಸ್ಟು ಮಾಡತೊಡಗಿದೆವು...

"ಮೊದಲು ನೀನು, ಆಮೇಲೆ" ಅಂದೆ, ಅವಳಂದ್ಲು "ಆಮೇಲೆ ನೀವು, ನೀವು ನನ್ನೊರಲ್ವಾ" ಅಂದ್ಲು, ಅಪ್ಪ ಅಮ್ಮ ಅಂದದ್ದಕ್ಕೆ ಅತ್ತೆ ಮಾವ, ಅಪ್ಪ ಅಮ್ಮ ಲಿಸ್ಟಿಗೆ ಸೇರಿದ್ರು, ಒಟ್ಟಿನಲ್ಲಿ ನಿನ್ನವರು ಅಂದ್ರೆ ನಿನ್ನ ಕುಟುಂಬ ಅಷ್ಟೆ ಅಲ್ವೆ ಅಂದ್ರೆ, "ಇಲ್ಲಾಪ್ಪ, ಊರಲ್ಲಿ ಪರಿಚಯದವರು ಬಹಳ ಜನ ಇದಾರೆ ಅಂದ್ಲು" ಅಂದ್ರೆ "ಊರಲ್ಲಿರೋರೆಲ್ಲ, ಸರೀನಾ" ಹೂಂಗುಟ್ಟಿದ್ಲು, "ರೀ, ಹುಕ್ಕೇರಿನ್ಯಾಗ ನಮ್ಮ ಕಾಕಾ(ಚಿಕ್ಕಪ್ಪ) ಇದಾರೆ" ಅಂತ ಹೇಳಿದ್ದಕ್ಕೆ ಆಯ್ತು ಬೆಳಗಾವಿಯಲ್ಲಿರೊರೆಲ್ಲ, ಆದ್ರೆ ಧಾರವಾಡದ ನಿಮ್ಮ ಅಂಟಿ ಅಂತ ವಿಷಯ ಬಂದು, ಬೀದರಿನ ಅಜ್ಜ ನೆನಪಾಗಿ, "ರೀ ನಮ್ಮೊರು ಅಂದ್ರೆ ನಾವೆಲ್ಲ ಉತ್ತರ ಕರ್ನಾಟಕದವರು" ಅಂದ್ಲು, ಈಗೇನೊ ಅಧಿವೇಶನ ಇಲ್ಲಿ ನಡೀತಿದೆ, ಏನೊ ಸ್ವಲ್ಪ ನಮ್ಮನ್ನೂ ಎಲ್ರೂ ಕೇಳ್ತಿದಾರೆ ಅಂದ್ಲು, "ಹಾಗಾದ್ರೆ ನಾವ್ಯಾಕೆ ಬೆಂಗಳೂರಿನಲ್ಲಿರೋದು, ಬೆಂಗಳೂರಿನಲ್ಲಿರೊರು ನಮ್ಮವರಲ್ವಾ" ನನ್ನ ಮರುಪ್ರಶ್ನೆ "ಯಾಕೆ, ಪಕ್ಕದ ಮನೆ ಪದ್ದು ಬಿಟ್ಟೆ ಅಂತ ಬೇಜಾರಾ" ಅಂತ ಅಲ್ಲೂ ತುಂಟತನದ ಮಧ್ಯೆ "ರೀ, ನಾವೆಲ್ಲ ಕನ್ನಡಿಗರು, ಕರ್ನಾಟಕದವರು ಎಲ್ಲ ನಮ್ಮೋರು" ಅಂತ ಘೊಷಿಸಿದ್ಲು. "ಸರೀ, ನಾವೆಲ್ಲ ಕನ್ನಡಿಗರು, ನಾವೆಲ್ಲ ಒಂದು, ಮುಂಬಯಿನಲ್ಲಿ ಎನಾದರ್‍ಏನಂತೆ, ಹೇಗೂ ಬೆಳಗಾವಿ ಬೇಕೆಂದು ನಮ್ಮನ್ನು ಕಾಡುತ್ತರಲ್ಲ" ಅಂದೆ, ಬುಸುಗುಡುತ್ತ "ರೀ ನಾವೆಲ್ಲ ಭಾರತೀಯರು, ಭಾರತದ ತಂಟೆಗೆ ಯಾರಾದ್ರೂ ಬಂದ್ರೆ ಅಷ್ಟೇ" ಗರ್ಜಿಸಿದ್ಲು. "ಹೂಂ, ಮತ್ತೆ ನಾವು ನಾವೇ ಯಾಕೆ ಕಚ್ಚಾಡೋದು, ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಅಂತ ಬೇಧ ಭಾವ ಯಾಕೆ, ನಾವೆಲ್ಲ ಒಂದು ಅನ್ನೊದಾದ್ರೆ, ಮೊನ್ನೆ ನಿಮ್ಮ ಭಾವ ಫಾರಿನ್‌ನಿಂದ ಬಂದಾಗ ಹೇಳುತ್ತಿದ್ರಲ್ಲ, ಅಲ್ಲಿನ ಏಷಿಯನ್ನರ ಮೆಲಿನ ಭಾವನೆಗಳ ಬಗ್ಗೆ ಹೇಳುತ್ತಿದ್ದುದ ಕೇಳಿದ್ರೆ, ನಾವೆಲ್ಲ ಏಷಿಯನ್ನರು ಒಂದೇ ಅಂದ್ರೆ, ನಮ್ಮೊಂಗಿದೆ ಕಚ್ಚಾಡುವ ನಮ್ಮ ಅಕ್ಕಪಕ್ಕದ ದೇಶಗಳು ಎಲ್ಲಿ ಬಂದ್ವು, ಅವೂ ಏಷಿಯಾನಲ್ಲೆ ಇಲ್ವೆ". ಕೊಂಚ ಸಮಯ ಎನೂ ತಿಳಿಯದಂತೆ ಪೆಚ್ಚಗಾಗಿ, "ಹಾಗಾದ್ರೆ, ನಾವೆಲ್ಲ ಭೂಮಿ ಮೇಲಿನ ಮನುಜರೆಲ್ಲ ಒಂದೆ, ನಾವೆಲ್ಲ ಮಾನವರು, ಎಲ್ಲರೂ ನಮ್ಮವರಾ" ಕೇಳಿದ್ಲು, ಆ ಪ್ರಶ್ನೆಗೆ ನನ್ನಲ್ಲೂ ಉತ್ತರವಿಲ್ಲ, ಅದೇ ನನ್ನ ಗೊಂದಲ. "ರೀ, ನೀವು ಕನ್‌ಫ್ಯೂಜ ಆಗೋದಲ್ದೆ, ಈಗ ನನ್ನೂ ಮಾಡಿದ್ರಿ" ಅಂತ ಎದೆಗೊಂದು ಗುದ್ದು ಕೊಟ್ಟು ಎದೆಗೆ ತಲೆಯಾಣಿಸಿ ಮೇಲೆ ನನ್ನೆಡೆಗೆ ನೋಡತೊಡಗಿದ್ಲು. ನಾನಿನ್ನೂ ಗೊಂದಲಗಳ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿದ್ದೆ. ಇವೇ ನಮ್ಮ ಸುತ್ತಲಿನ ವೃತ್ತಗಳು, ಅವುಗಳ ಪರಿಧಿಗಳೆ ನಮ್ಮ ಎಲ್ಲೆಗಳು.

ನಾವೇ ನಮ್ಮ ಸುತ್ತ ಒಂದು ವೃತ್ತ ರಚಿಸಿಕೊಂಡು ಬಿಡುತ್ತೇವೆ, ನಾನು, ನನ್ನ ಹೆಂಡ್ತಿ, ನಮ್ಮ ಮಕ್ಕಳು, ನಮ್ಮ ಕುಟುಂಬ, ನಮ್ಮೂರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಖಂಡ, ನಮ್ಮ ಭೂಮಿ... ವೃತ್ತದ ಪರಿಧಿ ಬೆಳೆಯುತ್ತ ಹೋದಂತೆ ಎಲ್ಲ ನಮ್ಮದೇ... ಗಂಡು, ಹೆಣ್ಣು, ಜಾತಿ ಲೆಕ್ಕದಲ್ಲೆ ತೆಗೆದುಕೊಳ್ಳಿ, ಹೀಗೆ... ನಾನು ಲಿಂಗಾಯತ ಪಂಚಮಸಾಲಿ, ಬಣಜಿಗರೂ ಬೇಕೆಂದು ನೆಂಟಸ್ತಿಕೆ ಬೆಳೆಸಿ, ನಾವೆಲ್ಲ ಲಿಂಗಾಯತರು, ವೀರಶೈವರು, ಹಾಗಾದ್ರೆ ಬ್ರಾಹ್ಮಣ್ರು, ಕುರುಬರು, ಒಕ್ಕಲಿಗರು.. ಬೇಡವಾ, ಬೇಕು, ಸರಿ ಎಲ್ಲ ಸೇರಿ ಹಿಂದೂಗಳು... ಮುಸ್ಲಿಮರಲ್ಲೆ ಸುನ್ನಿ, ಶಿಯಾ, ಕ್ರಿಸ್ಟಿಯನ್ನರಲ್ಲಿ... ಕ್ಯಾಥೊಲಿಕ್ಕು, ಪ್ರೊಟೆಸ್ಟಂಟರು.. ಎಲ್ಲಿಡಲಿ ಪರಿಧಿ, ಎಲ್ಲಿಯವರೆಗೆ ಬೆಳಸಲಿ.

ಮೊದಲು ಮಾನವನಾಗು, ಕವಿವಾಣಿ ನೆನಪಾಗುತ್ತೆ. ಎಲ್ಲ ಉಳಿವಿಗಾಗಿ ಹೋರಾಟ, ನಾ ಬದುಕಬೇಕು , ನನ್ನವರೂ ಕೂಡ ಅಷ್ಟೇ.. ಆದಿಮಾನವನಿದ್ದಾಗಲೇ ಬುಡುಕಟ್ಟುಗಳ ಕಟ್ಟಿಕೊಂಡು ಬಡಿದಾಡಿದವರು ನಾವು,
ವೃತ್ತಗಳ ಎಳೆಯುತ್ತಲೇ ಇರುತ್ತೇವೆ. ಪರಿಧಿಗಳು ಸಂಕುಚಿತವಾದಂತೆ ಕೊನೆಗೆ ಉಳಿಯುವುದು ಎನೂ ಇಲ್ಲ, ಪರಿಧಿಯಿಲ್ಲದ ವೃತ್ತದ ಒಂದು ಕೇಂದ್ರಬಿಂದು ಮಾತ್ರ.

ಅವಳೂ ಆತ್ಮಾವಲೋಕನದಲ್ಲಿ ತೊಡಗಿದ್ಲು, ಅಲುಗಿಸಿದೆ... "ರೀ ಇದು ಬಹಳ ಗಹನವಾದ ವಿಚಾರ ನನ್ನ ಊಹೆಗೆ ನಿಲುಕದ್ದು" ಅಂದ್ಲು, "ನಾನನ್ನೊದೂ ಅಷ್ಟೇ, ನನಗೂ ಯೊಚಿಸಿದಷ್ಟು, ಯೋಚನೆಯ ಪರಿಧಿ ವಿಸ್ತಾರವಾಗುತ್ತಲೇ ಹೊಗುತ್ತೆ ಹೊರತು, ಉತ್ತರವಿಲ್ಲ, ಉತ್ತರ ಸಿಕ್ಕರೂ ಮತ್ತೊಂದು ಪ್ರಶ್ನೆ ಹುಟ್ಟಿ ಬಿಡುತ್ತೆ" ಅಂದೆ. ಮುಂದುವರೆಸಿ ಹೀಗೆ ಜೀವನ ಸಾಗುತ್ತಿರುತ್ತದೆ "ವೃತ್ತಗಳ ಎಳೆಯುತ್ತ, ಪರಿಧಿಯ ವಿಸ್ತರಿಸುತ್ತ, ಕುಗ್ಗಿಸುತ್ತ, ಬೇರೆ ವೃತ್ತಗಳಲ್ಲಿ ಸೇರಿಕೊಳ್ಳುತ್ತ ಸಾಗುತ್ತಲೇ ಇರಬೇಕು. ಇಂದು ನಮ್ಮ ವೃತ್ತ, ಭಾರತ, ನಾವು ಭಾರತೀಯರು, ಗಣತಂತ್ರ ದಿನ ಆಚರಿಸಿದೆವು, ವಿಸ್ತರಿಸಿದರೆ... ನಾಳೆ ಪರಿಸರದ ವಿಷಯ ಬಂದ್ರೆ, ಭೂಮಿ ನಮ್ಮ ವೃತ್ತ, ಕುಗ್ಗಿಸಿದರೆ... ನವೆಂಬರ ಒಂದಕ್ಕೆ, ಕರ್ನಾಟಕ ನಮ್ಮ ವೃತ್ತ", ಅವಳ ಕಣ್ಣುಗಳ ಹೊಳೆಯತೊಡಗಿದವು "ರ್‍ಈ ಈ ಕಲ್ಪನೆ ಚೆನ್ನಾಗಿದೆ, ನನಗೆ ಬಹಳ ಹಿಡಿಸಿತು, ಇನ್ನೆಂದೂ ನಿಮ್ಮನ್ನ ಐಟಿ ಮಂದಿ, ಫಾರಿನ ಕಂಪನೀನವ್ರು ಅಂತ ಹೀಯಾಳಿಸಲ್ಲ... ಯಾಕೆಂದ್ರೆ ನೀವು ಮನುಕುಲಕ್ಕೆ ಒಂದು ಒಳಿತಾಗುವ ಎನೊ ಕೆಲಸ ಮಾಡುತ್ತಿದ್ದೀರಿ, ನನ್ನ ಪರಿಧಿ ದೊಡ್ಡದಾಗಿ ಬಿಡುತ್ತೆ" ಅಂದ್ಲು. "ಕಳ್ಳೀ, ನನ್ನೇ ಒಲೈಸೊಕೆ ನೊಡ್ತೀಯ" ಅಂತ ಕಿವಿ ಹಿಂಡಿದೆ... ಕಿರುಚಿದ್ಲು... ಈಗ ಇನ್ನೊಂದು ಚಿಕ್ಕ ವೃತ್ತ, ಅದರ ಪರಿಧಿ ಚಿಕ್ಕದು, ಅಲ್ಲಿ ನಾನು ನೀನು, ಅಂತನ್ನುತ್ತ ಅವಳ ಸುತ್ತ ಆವರಿಸಿದೆ. "ರೀ ಬಿಡ್ರೀ ಅದ್ಕೆ ನಿಮ್ಮ ಹತ್ರ ನಾ ಬರೊಲ್ಲ ಅಂದಿದ್ದು, ನಿಮ್ಮ ವೃತ್ತ ಬೇಡ ನಂಗೆ", ಅಂತ ಕೊಸರಾಡಿದ್ಲು, ನನ್ನ ವೃತ್ತದ ಪರಿಧಿ ಚಿಕ್ಕದಾಗುತ್ತಲೇ ಹೋಯ್ತು...

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/paridhi.pdf


ಏನೊ ನನಗೆ ತೋಚಿದ್ದು, ತೋಚಿದಂತೆ ಬರೆದಿದ್ದೇನೆ, ಯಾವುದೇ ರೀತಿಯಲ್ಲಿ, ಯಾರಿಗೂ, ಯಾವುದೇ ಕೋಮಿಗೂ, ಊರಿಗೂ, ರಾಜ್ಯ, ದೇಶಕ್ಕೊ, ನೋವುಂಟು ಮಾಡುವುದಂತೂ ನನ್ನ ಉದ್ದೇಶವಲ್ಲ. ಆದಾಗ್ಯೂ ಯಾರ ಭಾವನೆಗಳಿಗೂ ಘಾಸಿಯುಂಟಾಗಿದ್ದಲ್ಲಿ ಮನಸಾ ಕ್ಷಮೆ ಕೇಳುತ್ತೇನೆ. ಎಲ್ಲರಿಗೂ ಇದು ಸರಿಯಿನಿಸಬೇಕೆಂದೇನಿಲ್ಲ, ಇಷ್ಟವಾಗದ್ದಲ್ಲಿ ಏನೊ ಹುಚ್ಚು ಹುಡುಗನ ಹತ್ತು ಹುಚ್ಚು ಕಲ್ಪನೆಗಳಲ್ಲಿ ಹನ್ನೊಂದನೆಯದೆಂದು, ಬಿಟ್ಟು ಬಿಡಿ.
ಹಾಗೇ ಬ್ಲಾಗಿನ ಎಲ್ಲ ಅಭಿಮಾನಿ ಓದುಗರಿಗೆ, ಅಭಿಮಾನವಿಲ್ಲದೆಯೂ ಓದುವವರಿಗೆ, ಪ್ರೀತಿಯಿಂದ ಪತ್ರ (ಇ-ಅಂಚೆ -> ಇಂಚೆ) ಬರೆದವರಿಗೆ, ಕಾಮೆಂಟು ಕೊಟ್ಟವರಿಗೆ, ನನ್ನ ಹಾಗೂ ನನ್ನವಳ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ, ಹೂವು ಮಾರುವ ಗುಲಾಬಿ, ಪರಿಚಯದ ಪರಿಮಳ, ಕಿರಾಣಿ ಅಂಗಡಿಯ ಕೀರ್ತಿಯ ಪರವಾಗಿ ಗಣತಂತ್ರ ದಿನದ ಹಾರ್ದಿಕ ಶುಭಾಶಯಗಳುಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Saturday, January 24, 2009

ಸೀರೆ ಖರೀದಿ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಮುಂಜಾನೆ ಬೇಗ ಎದ್ದು ಪೇಪರ್ರು ಹಿಡಿದು ಕೂತಿದ್ದೆ, ಭಾನುವಾರಗಳೆಲ್ಲ ಹಾಗೆ, ಇರುವ ರಜೆ ದಿನ ಪೂರ್ತಿ ಸವಿಯೊಣವೆಂದು ಆವತ್ತು ಮಾತ್ರ ಬಲುಬೇಗ ಏಳೊದು, ಲೇಟಾಗಿ ಎದ್ದರೆ ದಿನ ಕಳೆದುಹೋಗಿದ್ದೆ ಅರಿವಿಗೆ ಬರೊಲ್ಲ. ಶನಿವಾರ ಸೂರ್‍ಯ ನೆತ್ತಿಗೆ ಬರುವ ಹೊತ್ತಿಗೆ ಎದ್ದರೂ ಇನ್ನೂ ಹಾಸಿಗೆಯಲ್ಲೇ ಬಿದ್ದಿರುವುದರಿಂದ ಇಂದು ನಿದ್ದೆ ಬೇಕೆನಿಸುವುದಿಲ್ಲ. ಭಾನುವಾರ ಅವಳಿಗೂ ರಜೆ... ಮುಂಜಾನೆ ಬೇಗ ಏಳಬೇಕಿಲ್ಲ... ಇನ್ನೂ ಮಲಗಿದ್ದಳು, ನಾನೇ ಟೀ ಮಾಡಿಕೊಂಡು, ವಿಜಯ ಕರ್ನಾಟಕದ ವಿಶೇಷ ಅಂಕಣಗಳಲ್ಲಿ ತಲೆ ಹುದುಗಿಸಿ ಕೂತು ಓದುತ್ತಿದ್ದರೆ ಸಮಯ ಹೋಗಿದ್ದೆ ಗೊತ್ತಾಗಲ್ಲ.

ಯಾವುದೊ ವಿಶೇಷ ಲೇಖನ ಓದುತ್ತ ಮೈ ಮರೆತಿದ್ದೆ, ಅವಳು ಎದ್ದು ಹತ್ತಿರ ಬಂದಿದ್ದೂ ಗೊತ್ತಾಗಿರಲಿಲ್ಲ, ಹಿಂದಿನಿಂದ ಬಂದು ಚೀರಿ ಹೆದರಿಸಿಬಿಟ್ಲು, ಒಂದು ಕ್ಷಣ ಸಾವರಿಸಿಕೊಂಡು, ರೇಗಿದೆ, ನಸುನಗುತ್ತ ಎದ್ದು ಹೋದ್ಲು. ಕೀಟಲೆ ಮಾಡದಿದ್ರೆ ಅವಳಿಗೆಲ್ಲಿ ಸಮಾಧಾನ. ಅಬ್ಬ ಹೋದ್ಲಲ್ಲ, ಇನ್ನು ನಿರಾತಂಕವಾಗಿ ಓದಬಹುದು ಅಂತಾ ಮತ್ತೆ ಪೇಪರಿನಲ್ಲಿ ಮುಳುಗಿದೆ, ಯಾಕೊ ಮನಸು ಅಲ್ಲಿ ನಿಲ್ಲಲಿಲ್ಲ, ಕೂರಲಾಗದೆ, ಏನ್ ಮಾಡ್ತಾ ಇದಾಳೆ, ನಾನೊಂದು ಸ್ವಲ್ಪ ಕಾಡಿಸೋಣ ಎಂದು ಎದ್ದು ನಡೆದೆ.

ನಾ ಮಾಡಿಟ್ಟಿದ್ದ ಟೀ ಬಿಸಿ ಮಾಡುತ್ತಿದ್ಲು, ನನ್ನ ನೋಡಿ "ಏನ್ ರಾಯರ ಸವಾರಿ ಈಕಡೆ ಬಂತು, ಪೇಪರ್ ಓದಿದ್ದಾಯ್ತೊ" ಅಂದ್ಲು. "ಇಲ್ಲ, ಅಮ್ಮಾವ್ರು ಏನ್ ಮಾಡ್ತಿದೀರ ನೋಡಲು ಬಂದೆ" ಅಂದೆ. ಏನ್ ಮಾಡ್ಲಿ ಈವತ್ತು ಅಂದ್ಲು, ನಾನದಕ್ಕೆ "ಎರಡು ಮುದ್ದು ಮುದ್ದು ಮಾತು, ಸ್ವಲ್ಪ ಕೀಟಲೆಯ ಮಸಾಲೆ ಹಾಕಿ, ಪ್ರೀತಿ ಸವರಿ, ಒಂದು ತುತ್ತು ತಿನ್ನಿಸಿ ಬಿಡು ಸಾಕೆಂದೆ, ಹೊಟ್ಟೆ ತುಂಬಿಬಿಡುತ್ತೆ" ಅಂದೆ. "ಹೊಗ್ರೀ, ನಿಮ್ಮನ್ನ ಕೇಳಿದ್ದೆ ತಪ್ಪಾಯ್ತು, ಕೆಲಸ ಬಹಳ ಇದೆ, ಅಂದ ಹಾಗೆ ಇಂದೇನು ನಿಮ್ಮ ಪ್ಲಾನು" ಅಂದ್ಲು. ಏನಿಲ್ಲ ಅಂದಿದ್ದೆ ತಪ್ಪಾಯ್ತು, ಅವಳೊಂದಿಗೆ ಸೀರೆ ತರಲು ಬರಬೇಕೆಂದು ಒಪ್ಪಿಸಿದ್ಲು. ನನ್ನ ಕ್ರೆಡಿಟ್ಟು ಕಾರ್ಡು ಲೂಟಿಯಾಗುವುದನ್ನ ನಾ ನೋಡೊಕಾಗಲ್ಲ ಅಂದ್ರೂ ಕೇಳಲಿಲ್ಲ.

ಅಮ್ಮನ ಹುಟ್ಟುಹಬ್ಬಕ್ಕೆ ಇವಳು ಕೊಡುವ ಗಿಫ್ಟು ಅದು, ಇವಳಿಗೇನೂ ಅಲ್ಲವಲ್ಲ, ಹೀಗಾಗಿ ಬಹಳ ಹೊತ್ತಾಗಲಿಕ್ಕಿಲ್ಲ ಅಂದುಕೊಂಡೆ. ಆ ಅಂಗಡಿಯ ಮೆಟ್ಟಿಲು ಹತ್ತುತ್ತಿರಬೇಕಾದ್ರೆ, ಶೋಕೆಸಿನಲ್ಲಿ ನಿಲ್ಲಿಸಿದ ಅಂದದ ಬೊಂಬೆಗಳೆಲ್ಲ ನನ್ನೇ ನೊಡುತ್ತಿವೆಯೆನಿಸಿ ಖುಶಿಯಾಯ್ತು. ಆ ಬೊಂಬೆಗಳೇ ಹಾಗೆ ಯಾರು ನೋಡಿದರೂ ಅವರನ್ನೆ ನೊಡುತ್ತಿರುವಂತೆ ಅನಿಸೋದು, ಆ ತರ್ಕ ನನಗೇಕೆ ಬೇಕು ಹೇಳಿ. "ರೀ ಅದು ಬೊಂಬೆ" ಅಂತ ಇವಳು ಎಚ್ಚರಿಸಿದ್ಲು,
ಬೊಂಬೆಯಾದ್ರೇನಂತೆ ಅದು ಯಾವುದೊ ಕಲಾಕಾರನ ಕಲ್ಪನೆಯ ಕೂಸು, ಅವನ ಕನಸಿನ ಕನ್ಯೆಯ ಪ್ರತಿಕೃತಿಯೂ ಇರಬಹುದು, ಅದೆಲ್ಲಿ ಇವಳಿಗೆ ಅರ್ಥ ಆಗಬೇಕು, ಹೇಳಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.

ಅಂಗಡಿಯೊಳಗೆ ಕಾಲಿಡುತ್ತಿದ್ದಂತೆ ಮಾಲೀಕ ಮುಖ ಅರಳಿಸಿಕೊಂಡು, "ಎನ್ ಮ್ಯಾಡಮ ಬಹಳ ದಿನದ ಮೇಲೆ ಈಕಡೆ" ಅಂದ, ಮುಖ ಯಾಕೆ ಅರಳಲ್ಲ ಹೇಳಿ, ಬಂದಾಗೊಮ್ಮೆಯೂ ಬರಿಗೈಲಿ ಹೋಗದ ಇವಳು ಬಂದಿರಬೇಕಾದ್ರೆ, ಬಹಳ ದಿನಗಳ ಮೇಲೆ ಅಂತೆ, ಇನ್ನೆನೂ ದಿನಾಲೂ ಬರಬೇಕಾ, ಇವಳೇನು ಪ್ರಖ್ಯಾತ ಸಿನಿಮಾ ನಟಿನಾ, ಇಲ್ಲ ನಾನೇನು ಅಮೀರ ಕುಬೇರನಾ. ನನ್ನ ಕ್ರೆಡಿಟ್ಟು ಕಾರ್ಡು ಬಿಲ್ಲು ನೆನಪಾಗಿ ನನ್ನ ಮುಖ ಕಮರಿತ್ತು. "ಮತ್ತೇನು ಸೇಠು, ಹೊಸ ಸ್ಟಾಕು ಬಂದಿದೇನಾ" ಅಂತ ಒಳ ನುಗ್ಗಿದಳಿವಳು. ದಾಳಿಗೆ ಮೊದಲೇ ಸೋತ ಸೇನಾಪತಿಯಂತಾಗಿದ್ದೆ.

ಸೀರೆ ತೊರಿಸುವ ಹುಡುಗ, ಇವಳ್ಯಾಕಪ್ಪ ಬಂದ್ಲು ಅಂತನಕೊಂಡಿರಬೇಕು, ಇವತ್ತು ಎಕ್ಸ್ಟ್ರಾ ಡ್ಯೂಟಿ ಸಂಬಳ ಕೇಳಿದ್ರು ಕೇಳಬಹುದು. ರಾಶಿ ಸೀರೆ ತೆಗೆದುಹಾಕಿಸುತಾಳೆಂದು ಅವನ ತಗಾದೆ, ಹಾಗೆ ಸುಮ್ನೆ ಒಂದು ಸಾರಿ ಮುಗುಳು ನಕ್ಕೆ ಅವನೆಡೆಗೆ ನೋಡಿ, ನಮ್ಮಿಬರದೂ ಒಂದೆ ಪಾಡು, ನಾ ನಿನ್ನ ಜತೆಗಿದ್ದೇನೆ ಅನ್ನೋ ಹಾಗೆ... "ಹೊರಗೆ ಶೊಕೇಸಿನಲ್ಲಿ ಹಾಕೀದೀರಲ್ಲ, ಅದು.." ಇನ್ನೂ ಮಾತು ಮುಗಿಸಿರಲಿಲ್ಲ, ನಾ ನಡುವೆ "ಯಾವ ಬೊಂಬೆ ಅಂತ ನೋಡಿಕೊಂಡು ಬರಲಾ" ಅಂದೆ, ದುರುಗುಟ್ಟಿ ನೋಡಿದ್ಲು, ಹಲ್ಲು ಕಿರಿದು ತೆಪ್ಪಗಾದೆ. "ಅದಾ ಮ್ಯಾಡಮ ಹೊಸಾ ಫ್ಯಾಷನ್ನು ಈಗ..." ಅಂತ ಅದೇ ಹಳಸಲು ಮಾಲನ್ನು ಹೊಗಳತೊಡಗಿದ ಆ ಹುಡುಗ. ಆ ಸೀರೆ ಮೈ ಮೇಲೆ ಹೊದ್ದು, ಹೇಗೆ ಕಾಣುತ್ತೆ ಅಂತ ಕೇಳಿದ್ಲು, ಅಲ್ಲಾ ನಾವೀಗ ಬಂದಿರೋದು ಅಮ್ಮನಿಗೆ ಸೀರೆ ತರಲು, ಇದು ಬೇರೆ ಹೊಸ ಫ್ಯಾಷನ್ನು, ಇವಳು ತನಗೆ ಹೇಗೆ ಕಾಣುತ್ತೆ ಅಂತ ಕೇಳುತ್ತಿದ್ದಾಳೆ!!! ಏನೂ ತೊಚದೆ... "ಅಮ್ಮನಿಗೆ, ಹೊಸ ಫ್ಯಾಷನ್ನು ಇಷ್ಟ ಆಗಲಿಕ್ಕಿಲ್ಲ" ಅಂತಂದೆ... ಅರ್ಥ ಆಯಿತೆಂದು ಕಾಣುತ್ತೆ, ಒಂದೇ ಮಾತಿನಲ್ಲಿ ಎಲ್ಲ ಹೇಳಿದ್ದೆ.

ಆ ಸೀರೆ ಪಕ್ಕಕ್ಕೆ ಸರಿಸಿಟ್ಟು, "ಕಾಂಚೀವರಂ, ಇಲ್ಲಾ ಕೋಚಂಪಲ್ಲಿ ಸೀರೆನಲ್ಲಿ ಬೇರೆ ಬೇರೆ ವರೈಟಿ ತೋರಿಸು, ಬೇರೆ ರೇಶ್ಮೆ ಸೀರೆ ಇದ್ರೂ ತಗೊಂಬಾ" ಅಂತ ಹುಡುಕಾಟದಲ್ಲಿ ಮುಳುಗಿದ್ಲು, ಆ ಸೀರೆ ಅಲ್ಲೇ ಪಕ್ಕಕ್ಕಿತ್ತಲ್ಲ, ಹಾಗೆ ಅವಳು ಉಟ್ಟರೆ ಹೇಗಿರಬಹುದೆಂದು ಕಲ್ಪಿಸಿಕೊಂಡೆ, ಪರವಾಗಿಲ್ಲ ಚೆನ್ನಾಗೇ ಇತ್ತು, ಅದೇ ನನ್ನಿಷ್ಟದ
ತಿಳಿ ನೀಲಿ ಬಣ್ಣ, ಅಂಚಿನಲ್ಲಿ ಚಿಕ್ಕ ಬಿಳಿ ಬಳ್ಳಿಯಂಥ ಬಾರ್ಡರು, ಸೆರಗಿಗೆ ಸ್ವಲ್ಪ ಡಿಸೈನು.. ಮುಟ್ಟಿದರೆ ಗರಿ ಗರಿ, ಉಟ್ಟರೆ ಇವಳು ಪರಿ(ದೇವಕನ್ಯೆ) ಸುಪರ್... ಅವಳಿಗೆ ಹೇಳಿ ಮಾಡಿಸಿದಂತಿತ್ತು.

"ರೀ ಇದು ಹೇಗಿದೆ, ಅಮ್ಮನ ಕಲರ್‌ಗೆ ಸರಿ ಹೊಂದುತ್ತಲ್ವಾ" ಅಂತ ಅವಳು ಕೇಳಿದಾಗಲೇ ಕಲ್ಪನಾಲೋಕದಿಂದ ಈಚೆ ಬಂದೆ. ಹೂಂ ಹೂಂ ಅಂತೆನೊ ಬಡಬಡಿಸಿದೆ, ಇದು.. ಅಂತ ಇನ್ನೊಂದು ತೋರಿಸಿದ್ಲು, "ಒಹ್ ಇದೂ ಚೆನ್ನಾಗಿದೆ, ಇಲ್ಯಾಕೊ ಡಿಸೈನು ಇಲ್ಲ, ನೆಯ್ಗೆ ಹಾಕೊವಾಗ ಮರೆತರೆಂದು ಕಾಣುತ್ತೆ" ಅಂದೆ. "ರೀ ಅದು ಬ್ಲೌಜ್ ಪೀಸು, ಅದರೊಂದಿಗೇ ಬರುತ್ತೆ" ಅಂತ ಬಯ್ದ್ಲು, ಈ ವಿಷಯದಲ್ಲಿ ನನ್ನ ಅಪಾರ ಮೌಢ್ಯವನ್ನು ನಾ ಪ್ರದರ್ಶಿಸಿದ್ದೆ. "ಒಹ್ ಹಾಗಾ, ಸರಿ ಬಿಡು ಅದೇ ಇರಲಿ" ಅಂದೆ, ತಾಳಿ ಇನ್ನೂ ನೋಡೊಣ ಅಂದ್ಲು, ಇಷ್ಟು ಬೇಗ ಆರಿಸಿ ಕೊಂಡ್ರೆ ಹೇಗೆ, ಇನ್ನೂ ಒಂದು ಘಂಟೆ ಕೂಡಾ ಆಗಿಲ್ಲ. ಇನ್ನೊಂದು ರಾಶಿ ಸೀರೆ ಬೀಳುವುದು ಖಾತ್ರಿಯಾತು, ನಾನೆದ್ದು, ಸೇಠು ಕಡೆ ಹೋದೆ, "ಠೊಣಪ"(ಡುಮ್ಮ) ಕೂತಲ್ಲೆ ಹಲ್ಲು ಕಿರಿಯುತ್ತಿದ್ದ. ತಟಕ್ಕನೆ ಫೊನು ಮಾಡಿ "ಬಾಸ ಮೂರು ಟೀ ಕಳಿಸು" ಅಂದ "ಮೂರಲ್ಲ ನಾಲ್ಕು" ಅಂದೆ.. ಪಾಪ ಆ ಹುಡುಗ ಕೂಡ ಸೀರೆ ತೆಗೆದು ತೆಗೆದು ದಣಿದಿದ್ದ. ಸೇಠು ತಲೆ ಮೆಲೆದ್ದಿದ್ದ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವೆನ್ನುವಂತೆ, ಆ ಹುಡುಗನ ನೋಡಿ ನಕ್ಕೆ, ಕಣ್ಣಲ್ಲೆ ಅವನು ಧನ್ಯವಾದ ಹೇಳಿದಂತಿತ್ತು, ಸೇಠು ಮತ್ತೊಮ್ಮೆ ಹಲ್ಲು ಕಿರಿದ. "ಮತ್ತೆ ಹೇಗಿದೆ ಸೇಲ್ಸು" ಅಂತ ಮಾತಿಗೆಳೆದೆ, ಹೇಳಲೇ ಕಾದಿದ್ದವನಂತೆ, ಒಂದೆ ಸಮನೆ ಉಸುರುತ್ತಿದ್ದ, ನಾ ಕೇಳುತ್ತಿದ್ದೆ. ಒಳ್ಳೆ ಮಾತುಗಾರ ಅದಕ್ಕೆ ಅಲ್ವೆ ಇಷ್ಟು ಬಿಜಿನೆಸ್ಸು ಬೆಳೆದಿರೊದು, ಅದೆಲ್ಲೊ ಮೂಲೇಲಿದ್ದ ಚಿಕ್ಕ ಅಂಗಡಿಯಿಂದ ಇಂದು, ಇಷ್ಟು ದೊಡ್ಡ ಶೊರೂಮು ಬೆಳೆಸಿದ್ದಾನೆ. ನಾವೇ ಮೊದಲ ಗಿರಾಕಿ ಅವನಿಗೆ.. ಅದಕ್ಕೆ ನಮಗೆ ಡಿಸ್ಕೌಂಟೂ ಸಿಗುತ್ತೆ. ಹಾಗೆ ಕ್ವಾಲಿಟೀನಲ್ಲೂ ಮೊಸ ಮಾಡಲ್ಲ. ಹತ್ತಿರ ಕರೆದು, ಕಿವಿಯಲ್ಲಿ ಏನೊ ಪಿಸುಗುಟ್ಟಿದೆ(ಅದೇನೆಂದು ನಿಮಗೆ ಆಮೇಲೆ ಹೇಳುತ್ತೀನಿ ತಾಳಿ, ಮುಂದೆ ಓದಿ), ಅವ ಇನ್ನೊಂದು ರಾಜನಗೆ ಬೀರಿದ, ಟೀ ಮುಗಿದಿತ್ತು, ನಾ ಹೋಗಿ ಅವಳ ಪಕ್ಕ ಕುಳಿತೆ.

ಇದು ಕಲರು ಹೇಗಿದೆ, ಅಂತ ಇನ್ನಾವುದೊ ಸಾರಿ ತೊರಿಸಿದ್ಲು, ಒಹ್ ಗುಲಾಬಿ ಚೆನ್ನಾಗಿದೆ ಅಂದದ್ದಕ್ಕೆ, ಅಲ್ಲ ಅದು ರಾಣಿ ಕಲರ್ರು ಅಂದ್ಲು, "ಇದ್ಯಾವ ಹೊಸ ಕಲರು ಕೋಡ್, ನಮಗೆ ಗೊತ್ತಿಲ್ಲ ಬಿಡು" ಅಂದೆ. ಇನ್ಯಾವುದೊ ತೆಗೆದು ಇದೊ ಪಿಸ್ತಾ ಕಲರು ಹೇಗಿದೆ ಅಂತಾನೂ ಕೇಳಿದ್ಲು, ಏನೂ ತಿಳಿಯದೆ... ಹೀ ಹೀ ಅಂದೆ. ಕೇಳಿ ಪ್ರಯೊಜನವಿಲ್ಲವೆಂದು ಅವಳೇ ಆರಿಸತೊಡಗಿದ್ಲು. ಮಿರಿ ಮಿರಿ ಮಿಂಚುತ್ತಿದ್ದ ಸಾರೀಯೊಂದನ್ನು ಎತ್ತಿ, "ಏನಿದು ಜರಿ ತುಂಬಾ ಭಾರಿ ಇದೆ, ಜರಿಯಲ್ಲಿ ಬಂಗಾರ ಇರುತ್ತೇನೆ?" ಕೇಳ್ದೆ, ಸಿಟ್ಟು ಬಂತು ಅಂತಾ ಕಾಣುತ್ತೆ "ಹೂಂ ಒಂದು ಕೇಜೀ ಹಾಕಿರ್ತಾರೆ" ಅಂದ್ಲು. ಅಳೆದೂ ತೂಗಿ...
ಅಂಚಿನಗುಂಟ ಕೈ ಕುಸುರಿಯಂತೆ ಚಿಕ್ಕ ಜರಿ, ಸೆರಗಿನುದ್ದಕ್ಕೂ ಹರಡಿದ ಎಳೆಗಳ ಸಾಲು, ಅದಕ್ಕೆ ಎಳೆ ಬಿಚ್ಚದ ಹಾಗೆ ಕಟ್ಟಿದ ಗೊಂಡೆ ಕಟ್ಟುಗಳು, ತುಸು ಭಾರವೆನಿಸಿದರು, ಭಾರೀ ಆಡಂಬರವೆನಿಸದ ಒಂದು ಸೀರೆ ಆಯ್ಕೆ ಮಾಡಿದ್ದಾಯ್ತು. ಹಾಗೆ ಅಪ್ಪಾಜಿಗೆ, ಒಂದು ಜತೆ ಡ್ರೆಸ್ಸು, ತಂಗಿಗೆ ಒಂದು ಡ್ರೆಸ್ ಮಟೀರಿಯಲ್ಲು(ಹೊಲಿಗೆ ಹಾಕಲು) ಎತ್ತಿಕೊಂಡ್ಲು. "ಮತ್ತಿನ್ನೇನು, ಪದ್ದು, ಹಾಸಿನಿಗೆ ಸೀರೆ ಕೊಡಿಸಲ್ವಾ" ಅಂತಾ ಕೀಟಲೆ ಪ್ರಶ್ನೆಯೊಂದನ್ನು ಬಿಸಾಕಿದ್ಲು. ರಿಸೆಷನ್(ಆರ್ಥಿಕ ಹಿಂಜರಿತ) ಕಾಸ್ಟ ಕಟ್ಟಿಂಗ ನಡೆದಿದೆ, ಮತ್ತೊಮ್ಮೆ ನೊಡೋಣ ಎಂದು, ಕಿರಿಕ್ಕು ಉತ್ತರ ಕೊಟ್ಟೆ. ಮತ್ತೊಮ್ಮೆ ಮೊಟ್ಟ ಮೊದಲು ತರಿಸಿದ್ದ ಹೊಸ ಫ್ಯಾಷನ್ನು ಸೀರೆ ಇನ್ನೊಮ್ಮೆ ಹಾಗೆ ಸವರಿ ವಾಪಸ್ಸು ಕೊಟ್ಟು, ಉಳಿದದ್ದು ಪ್ಯಾಕ್ ಮಾಡಿ ಅಂದ್ಲು. ಆ ಸೀರೆ ಅವಳಿಗೆ ಬಹಳ ಇಷ್ಟ ಆಗಿತ್ತೆಂದು ಕಾಣುತ್ತೆ, ಖರೀದಿ ಖರ್ಚು ಬಹಳ ಆಯಿತೆಂದು ಬೇಡವೆಂದು ಬಿಟ್ಲು ಅನಿಸತ್ತೆ.

ಸೇಠು, ದಿಸ್ಕೌಂಟ್ ಅನ್ನುತ್ತ ಎದ್ದು ಬಿಲ್ ಕೌಂಟರ ಕಡೆ ನಡೆದ್ಲು, "ನೀವು ಕೇಳೊದೆ ಬೇಡ, ನಾನೆಲ್ಲ ಸರಿ ಹಾಕೀದೀನಿ" ಅಂದ, ಅದು ಹಾಗೆನೆ, ಅವನಿಗೂ ಗೊತ್ತು ನಾವು ಜಾಸ್ತಿ ಎನೂ ಕೇಳೊಲ್ಲವೆಂದು, ಅದಕ್ಕೇ ಏನೊ ಒಳ್ಳೇ ಬೆಲೆನೇ ಕೊಟ್ಟಿರ್ತಾನೆ. ಆಯ್ತು ನಾನು ಬಿಲ್ ಪೇ ಮಾಡಿ, ಪ್ಯಾಕ್ ತರ್ತೀನಿ, ನೀ ನಡಿ ಅಂದೆ. ಕಾರ್ಡು ಎಳೆದು ಪ್ಯಾಕು ಹೊತ್ತುಕೊಂಡು ಮೆಟ್ಟಲಿಳಿಯತೊಡಗಿದೆ. ಸಪ್ಪೆ ಮುಖ ಹೊತ್ತು ಸುಮ್ಮನೆ ನಡೆಯುತ್ತಿದ್ಲು, ಶೊಕೇಸಿನಲ್ಲಿ ನಿಂತ ಬೊಂಬೆ ನೋಡಿ ನಗುತ್ತಿತ್ತು.

ಮನೆಗೆ ಬಂದಿಳಿದಾಗ, ಮಧ್ಯಾಹ್ನ ಮೂರಾಗಿತ್ತು, ಭಾನುವಾರ ಸಣ್ಣ ಜೊಂಪು(ಅರೆನಿದ್ದೆ) ಹೊಡೆಯುವ ವೇಳೆಯಾಗಿತ್ತು. ಅದೆ ಶಾಂತಿಯ ದೊಸೆ ಇನ್ನೂ ಕರಗಿರಲಿಲ್ಲ, ಶಾಂತಿ ಅಂದ್ರೆ, ಶಾಂತಿ ಸಾಗರ ಹೊಟೆಲ್ಲು. ಹಾಸಿಗೆ ಮೇಲೆ ಹಾಗೆ ಕುಳಿತಿದ್ಲು, "ತಂದ ಸೀರೆಗಳ ನೊಡೋಲ್ವೆ" ಅಂದೆ, ಯಾಕೊ ಆಸಕ್ತಿಯಿದ್ದಂತೆ ಕಾಣಲಿಲ್ಲ, ನಾನೇ ಹೋಗಿ ಪ್ಯಾಕು ಎತ್ತಿಕೊಂಡು ಬಂದೆ, "ರೀ ಈಗ ಬೇಡಾ" ಅಂತ ದಯನೀಯವಾಗಿ ಕೇಳಿದ್ಲು. ಆದರೆ ನಾ ಬಿಡಬೇಕಲ್ಲ, ಒಂದು ಪ್ಯಾಕು ತೆಗೆದವನೆ, "ಸೀರೆಗೊಂದು ಸವಾಲ್ ಕಾರ್ಯಕ್ರಮಕ್ಕೆ ಸ್ವಾಗತಾ.. ಸುಸ್ವಾಗತ.. ಸೀರೆಯ ನಿಖರ ಬೆಲೆ ಹೇಳಿ ಈ ಸೀರೆ ನಿಮ್ಮದಾಗಿಸಿಕೊಳ್ಳಿ..." ನಾನು ಹೇಳುತ್ತಿದ್ರೆ ನನ್ನತ್ತ ಅವಳು ನೊಡುತ್ತಲೆ ಇಲ್ಲ, ತಲೆ ಕೆಳಗೆ ಮಾಡಿಕೊಂಡು ಹಾಗೆ ಕೂತಿದ್ದಾಳೆ, ಬಹಳ ಬೇಜಾರಾಗಿತ್ತನಿಸುತ್ತೆ, ನಾ ಹಾಗೆ ಮುಂದುವರಿಸಿದೆ "ಇದೊ ನೋಡಿ, ತಿಳಿ ನೀಲಿ ಬಣ್ಣ, ಅಂಚಿನಲ್ಲಿ ಚಿಕ್ಕ ಬಿಳಿ ಬಳ್ಳಿಯಂಥ ಬಾರ್ಡರು, ಸೆರಗಿಗೆ ಸ್ವಲ್ಪ ಡಿಸೈನು.. ಮುಟ್ಟಿದರೆ ಗರಿ ಗರಿ, ಉಟ್ಟರೆ ನೋಡಲು ಪರಿ.. ಈ ಸೀರೆ ಬೆಲೆ ಊಹಿಸಿ, ನಿಮ್ಮದಾಗಿಸಿಕೊಳ್ಳಿ" ಅಂತ ಕೂಗಿದೆ, ನಿಧಾನ ತಲೆ ಎತ್ತಿದಳು, ಯಾವುದೂ ತಿಳಿ ನೀಲಿ ಸಾರಿ ಕೊಂಡುಕೊಂಡಿಲ್ಲ ಇದ್ಯಾವುದು ಅಂತ ಅನುಮಾನವೆದ್ದಿರಬೇಕು... ನಾ ಪ್ಯಾಕು ತೆರೆದು ಕೈಲಿ ಸಾರಿ ಹಿಡಿದೆ, ಅವಳು ನೋಡುತ್ತಿದ್ದರೆ,
"ಸೀರೆಯ ನಿಖರ ಬೆಲೆ ಹೇಳಿ ಈ ಸೀರೆ ನಿಮ್ಮದಾಗಿಸಿಕೊಳ್ಳಿ..." ಮತ್ತೊಮ್ಮೆ ಸಾರಿದೆ... "ಮುನ್ನೂರ ಐವತ್ತು" ಅಂತಾ ಅದ್ಯಾವುದೊ ಮೂಲೆಯೆಂದಾ ಬಂದಂತೆ ಅವಳ ದನಿ ಬಂತು. ಓಡಿ ಬಂದವಳೇ, ಅಪ್ಪಿಕೊಂಡ್ಲು, "ಮ್ಯಾಡಮ್ ಮ್ಯಾಡಮ್ ನೀವು ಗೆದ್ದೀದೀರ, ನಿಮಗೇ ಕೊಡ್ತೀನಿ ತಾಳಿ" ಅಂತಿದ್ದರೂ ಸೀರೆ ಅವಳು ತೆಗೆದುಕೊಳ್ಳಲಿಲ್ಲ, ಈಗದು ಅವಳಿಗೆ ಬೇಕಾಗೂ ಇರಲಿಲ್ಲ.

ರಭಸದಿಂದ ಓಡಿ ಬಂದದ್ದರಿಂದ, ಕೆಳಗೆ ಕುಸಿದು ಹಾಸಿಗೆ ಮೇಲೆ ಕುಳಿತೆ, ಆ ಕಣ್ಣಂಚಿಂದ ನೀರು ತೊಟ್ಟಿಕ್ಕಿತ್ತು, "ಲೇ ಯಾಕೇ" ಅಂದೆ ಉತ್ತರವೇನೂ ಬರಲಿಲ್ಲ. ಹಾಗೇ ಎಷ್ಟೊ ಹೊತ್ತು ಮಡಿಲಲ್ಲೆ ಮಲಗಿದ್ಲು ಮುಖ ಮುಚ್ಚಿಕೊಂಡು, ಮಾತೇ ಇಲ್ಲದಂತೆ. ಬಹಳ ಹೊತ್ತಾದ ಮೇಲೆ ಮಿಸುಕಾಡಿದ್ಲು, ಅಲುಗಿಸಿದೆ... "ಆಗಲೇ ಯಾಕೆ ಹೇಳ್ಲಿಲ್ಲ, ಯಾವಾಗ್ ಪ್ಯಾಕ್ ಮಾಡಿಸಿದ್ರಿ, ಸತಾಯಿಸ್ತೀರಾ, ಮೊದಲೇ ಖರ್ಚು ಜಾಸ್ತಿಯಾಗಿತ್ತು, ಈಗಿದು ಬೇಕಿತ್ತಾ" ಧರ್ಮರಾಯನಿಗೆ ಯಕ್ಷ ಪ್ರಶ್ನೆ ಕೇಳಿದಂತೆ ಆಕಾಶವಾಣಿ ಕೇಳಿಸ್ತು. ನೀ ಮೊದಲು ಏಳು ಹೇಳ್ತೀನಿ ಅಂದ್ರೂ ಏಳಲಿಲ್ಲ, ಬದಲಿಗೆ ಸತಾಯಿಸ್ತೀರ ಅಂತ ಏಟು ಬಿತ್ತು. ಚೀರಿದೆ "ಇದೊಳ್ಳೆ ಆಯ್ತಲ್ಲ ನಿಂಗಿಷ್ಟಾ ಆಗಿತ್ತು ಅಂತಾ ತಂದ್ರೆ, ಏಟು ಕೊಡ್ತೀದೀಯಲ್ಲ" ಅಂದೆ. ಮ್ಯಾಡಮ್ಮು ಮುಖ ದರ್ಶನ ಆಯ್ತು, ತಿರುಗಿದ್ಲು, ಗಲ್ಲ ಉಬ್ಬಿಸಿಕೊಂಡು ಹಾಗೇ ನೊಡಿದ್ಲು. ನಗು ಬಂತು... "ಅದೆ ಟೀ ಕುಡಿಯೋಕೆ ಸೇಠು ಹತ್ರ ಹೋದ್ನಲ್ಲ ಆಗ ಅವನ ಕಿವಿಯಲ್ಲಿ, ನಿನಗೆ ಗೊತ್ತಾಗದಂತೆ ಆ ಸಾರಿ ಪ್ಯಾಕು ಮಾಡುವಂತೆ ಪಿಸುಗುಟ್ಟಿ ಬಂದಿದ್ದೆ" ಅಂದೆ "ತಾಳಿ ಸೇಠುನ ಮತ್ತೊಮ್ಮೆ ಹೋದಾಗ ನೊಡ್ಕೊತೀನಿ" ಅಂತಂದ್ಲು, "ಲೇ, ಪಾಪ ಅವನೇನೆ ಮಾಡ್ದ, ನಾನು ಹೇಳಿದೆ ಅಂತ ಕೊಟ್ಟ, ಭಲೇ ಇಂಪ್ರೆಸ್ಸ್ ಆಗಿ ದಿಸ್ಕೌಂಟೂ ಕೊಟ್ಟದ್ದಲ್ದೆ, ಮೇಲಿನ ನೂರಿಪ್ಪತ್ತು ಕೂಡ ಬಿಟ್ಟ" ಅಂದೆ. "ಮೂರು ಸಾವಿರ ಇದ್ರೂ ತರ್ತಿದ್ರಾ" ಅಂದ್ಲು "ಅದಕ್ಕೆಲ್ಲ ಮೌಲ್ಯ ಕಟ್ಟಬೇಡ, ನನ್ನ ಕೈಗೆಟುವ ಬೆಲೆ ಯಾವುದಾಗಿದ್ರೂ ಸರಿ ತರ್ತಿದ್ದೆ, ಕೊಟ್ಟಿದ್ದು ಬರೀ ಮುನ್ನೂರೈವತ್ತು, ಆದ್ರೆ ನನಗೆ ಮೂರು ಕೋಟಿ ಕೊಟ್ರೂ ಇಷ್ಟು ಸಂತೊಷ ಸಿಕ್ತಿರಲಿಲ್ಲ" ಅಂದೆ. ನಿಜ ನಮಗೆ ಕೈಗೆಟುವ ಬೆಲೆಯಲ್ಲೆ ಎಷ್ಟೊ ಆನಂದವಿದೆ, ನಾವ್ಯಾಕೆ ಅದನ್ನ ಕೊಳ್ಳಲ್ಲ, ಬರೀ ಅಳೆದು ತೂಗಿ ಮೌಲ್ಯ ಮಾಡುತ್ತೇವೆ ಹೊರತು, ಬೆಲೆ ಕಟ್ಟಲಾಗದ ಇಂಥ ಚಿಕ್ಕ ಚಿಕ್ಕ ಸಂತೋಷಗಳನ್ನ ನಾವು ಯಾಕೆ ಕಳೆದುಕೊಳ್ತೀವಿ. ಆ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ, ಉತ್ತರಿಸುವ ಪ್ರಮೇಯವೂ ಬರದಿರಲಿ.

ಬಿಟ್ಟರೆ ಇನ್ನೂ ಪ್ರಶ್ನೋತ್ತರ ನಡೆದಿರುತ್ತಿತ್ತು, ಕೌನ್ ಬನೆಗಾ ಕರೊಡಪತಿಯಂತೆ, ನಮ್ಮ ಕರೊಡಪತ್ನಿ ಇನ್ನೂ ಪ್ರಶ್ನೆ ಹಾಕುತ್ತಿರುತ್ತಿದ್ಲು. "ಪರಿ, ಗರಿ ಗರಿ ಸೀರೆ ಉಟ್ಟು ತೋರಿಸಲ್ವಾ" ಅಂದೆ, "ಉಹೂಂ" ಅಂದ್ಲು, ಬೇಡಬಿಡೆಂದು ಸುಮ್ಮನಾದೆ ಸಂಜೆ ಫ್ಯಾಶನ್ನು ಷೋ ಮಾಡಿ ಹೇಗೂ ತೋರಿಸುತ್ತಾಳೆ. ನಾ ಸಾಕು ಅನ್ನೊವರೆಗೂ, ಎಲ್ಲಿ ಹೋಗಿ ಬರೋದಾದ್ರೂ ಅದನ್ನೇ ಉಟ್ಟು ನಿಲ್ಲುತ್ತಾಳೆ, ಅಮ್ಮನ ಹತ್ತಿರ ನಡೆದದ್ದೆಲ್ಲ ಹೇಳಿ ಮುಜುಗರಕ್ಕೀಡು ಮಾಡೋದಲ್ದೆ, ಹೋದಲ್ಲಿ ಬಂದಲ್ಲಿ ಎಲ್ಲ ಇವ್ರು ಕೊಡಿಸಿದ್ದು, ಇವ್ರು ಕೊಡಿಸಿದ್ದು ಅಂತ ಹೇಳಿದ್ದೇ ಹೇಳಿದ್ದು. ಪದ್ದುಗೆ ಮೊದಲು ಹೇಳಿ ಹೊಟ್ಟೆ ಉರಿಸಿ ಬರೊದು ಗ್ಯಾರಂಟಿ.

ಅರೆನಿದ್ದೆ ಇನ್ನೇನು ಬೇಕೆನಿಸಲಿಲ್ಲ, ಎದ್ದೆ... ಲೇ ಎಲ್ಲಿ ಮುಖ ತೊರಿಸೆ ಅಂತ ಗಲ್ಲ ಹಿಡಿದೆ, ನಾಚುತ್ತ ಮುಖ ತೊಳೆಯಲೋಡಿದ್ಲು. ಸಂಜೆ ಟೀಯೊಂದಿಗೆ ಪಕೋಡ ಕೂಡ ಸಿಕ್ತು. ಸೀರೆ ಉಟ್ಟು ಸಂಭ್ರಮ ಪಟ್ಟಿದ್ದೆ ಪಟ್ಟಿದ್ದು, ಯಾಕೊ ಕೇಳಿದ್ಲು "ಎಲ್ರಿಗೂ ಹೊಸ ಬಟ್ಟೆಯಾಯ್ತು, ಮತ್ತೆ ನಿಮಗೆ" ಅಂದ್ಲು, "ಒಹ್, ನೀ ಆ ಸೀರೆ ಉಟ್ಟು, ದಂತದ ಬೊಂಬೆ, ನಿನ್ನ ಪಕ್ಕ ನಾ ದೃಷ್ಟಿಯಾಗದಿರಲೆಂದು ದೃಷ್ಟಿಬೊಂಬೆ" ಅಂದೆ.. ಈಗಾಗಿರುವ ಖರ್ಚೆ ಹೆಚ್ಚು, ಇನ್ನು ನನಗೆಲ್ಲಿ... ಇಷ್ಟಕ್ಕೂ ಮೆಚ್ಚಿನ ಮಡದಿ ಮನೆಯಲ್ಲಿರಬೇಕಾದ್ರೆ, ನಾ ಯಾರನ್ನ ಮೆಚ್ಚಿಸಬೇಕಿದೆ ಬಿಡಿ.

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/seere-khareedi.pdfಸೇಠು ಸೀರೆ ಅಂಗಡಿಯೆಲ್ಲಿದೆಯಂತ ಕೇಳ್ಬೇಡಿ, ನನ್ನವಳೇ ಕಲ್ಪನೆಯಂದ ಮೇಲೆ ಇಲ್ಲಿ ಎಲ್ಲ ಕಾಲ್ಪನಿಕ, ಸೀರೆಗಳ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದಕ್ಕೆ ಏನೊ ಮಸಾಲೆ ಸೇರಿಸಿ ಬರೆದಿದ್ದೀನಿ, ಎಲ್ಲೊ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಿ. ಕಳೆದ ವಾರವೇ ಶುರು ಮಾಡಿಕೊಂಡ ಈ ಲೇಖನ ಈಗ ಮುಗಿಯಿತು, ಬರೆಯಲು ಸಮಯ ಸಿಗುತ್ತಿಲ್ಲ, ಆದರೂ ವಾರಕ್ಕೊಂದು ಬರೆಯಲೇಬೇಕೆಂದು ಅಂದುಕೊಂಡಿದ್ದೇನೆ, ನೋಡೊಣ ಏನಾಗುತ್ತೆ. ಭೇಟಿ ಕೊಡುತ್ತಿರಿ.ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, January 18, 2009

ಆ ಒಂದು ದಿನ ನಿನಗೆಂದು...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇತ್ತೀಚೆಗೆ ಕೆಲಸದೊತ್ತಡ ಜಾಸ್ತಿಯಾಗಿ ವೀಕೆಂಡು ಸಿಗೋದೆ ಇಲ್ಲ, ವೀಕೆಂಡೂ ಆಫೀಸಿದೆ ಅಂತ ಹೊರಟರೆ, ಯಾವುದೊ ಮಂತ್ರಿ ನಿಧನರಾದರೆಂದು ಶಾಲೆಗೆ ರಜೆ ಎಂದುಕೊಂಡಿದ್ದು, ರಜೆ ಕ್ಯಾನ್ಸಲ್ಲು ಆಗಿದ್ದು ಕೇಳಿದ ಮಗುವಿನಂತಿರುತ್ತೆ ಅವಳ ಮುಖ. ಸ್ವಲ್ಪವೂ ಬೇಜಾರಿಲ್ಲದೆ ಅಂದೂ ಬೇಗ ಎದ್ದು ಏನೊ ಒಂದು ಬೇಯಿಸಿ ಹಾಕಿರುತ್ತಾಳೆ. ಅಂಥದ್ದರಲ್ಲಿ ಇಂದು ಶನಿವಾರ ಏನೂ ಕೆಲಸವಿರಲಿಲ್ಲ, ಬೇಗ ಎದ್ದು ಓಡುವ ಅವಸರವೇನಿರಲಿಲ್ಲ. ಆರಕ್ಕೇ ಎಚ್ಚರಾಗಿ ಮೇಲೆದ್ದಿದ್ದ ಇವಳ ಇವತ್ತೇನು ಬೇಗ ಏಳೋದು ಅಂತ ಬರಸೆಳೆದು ಬಿಗಿದಪ್ಪಿ ಮಲಗಿದ್ದೆ, ಹೊರಗಡೆ ಛಳಿ ಇನ್ನೂ ಜಾಸ್ತಿಯಿದ್ದದ್ದರಿಂದ ಬಿಸಿಯಪ್ಪುಗೆ ಹಿತವೆನಿಸಿರಬೇಕು ಏನೊ ಮುಲುಗುತ್ತ ಮುಸುಗೆಳೆದುಕೊಂಡಿದ್ದಳು. ಎಂಟಾದಾಗ ಮುಂಜಾನೆ ಎಳೆ ಬಿಸಿಲು ಕಿಟಕಿಯಿಂದ ಇಣುಕಿ ನೊಡತೊಡಗಿದಾಗಲೇ ಎಚ್ಚರವಾಗಿದ್ದು. ಎಚ್ಚರಾಗಿದ್ದರೂ ಏಳೊ ಮನಸು ಇಬ್ಬರಿಗೂ ಇದ್ದಂತಿರಲಿಲ್ಲ, ಏನೂ ಮಾತಾಡದೆ ಹಾಗಿ ಮೌನವಾಗಿದ್ದು ಬಿಡುತ್ತೇವೆ ಒಂದೊಂದು ಸಾರಿ, ಮೌನವೇ ಮಾತಾಡುತ್ತಿರುತ್ತೆ, ಇಲ್ಲಾ ಮನಸಿನಲ್ಲೇ ಏನೊ ಕೇಳಬೇಕೆಂದುಕೊಂಡಿದ್ದು, ಹೇಗೆ ಆರಂಭಿಸೋದು ಅಂತ ಯೋಚಿಸುತ್ತಿರುತ್ತೇವೆ. ಇಗಲೂ ಸ್ವಲ್ಪ ಹಾಗೇ ಆಗಿತ್ತು, ಇವತ್ತೇನು ಮಾಡೋದು ಅನ್ನೊ ಪ್ಲಾನುಗಳು ತಲೆಯಲ್ಲಿ ಒಡುತ್ತಿದ್ದವು.

ಎದೆಯ ಮೇಲೆ ತಲೆಯಿರಿಸಿ ಮಲಗಿದ್ದ ಅವಳ ತಲೆಯ ಮೇಲೆ ಕೈಯಿರಿಸಿದ್ದರಿಂದ ಕೈಗೆ ಆಟವಾಡಲು ಕಿವಿಯೋಲೆ ಸಿಕ್ಕಿತ್ತು, ನನ್ನ ಬೆರಳೊಂದು ಅವಳ ಕಿವಿಯ ಸುತ್ತ ಒಂದು ರೌಂಡು ಸುತ್ತು ಹಾಕಿ ಕಿವಿಯೋಲೆಯ ಜುಮಕಿಗೆ ಒಂದು ಸಾರಿ ಡಿಕ್ಕಿ ಹೊಡೆದು ಮತ್ತೆ ಮತ್ತೆ ಸುತ್ತು ಹಾಕುತ್ತಿತ್ತು, ದೇವಸ್ಠಾನದಲ್ಲಿ ಗರ್ಭ ಗುಡಿಯ ಸುತ್ತು ಪ್ರದಕ್ಷಿಣೆ ಹಾಕಿ ಬಂದು ಘಂಟೆ ಬಾರಿಸಿದಂತೆ. ಅವಳೋ ನನ್ನ ಅಂಗಿಯ ಅದೇ ಬಟನ್ನು ಹಾಕುವುದೂ ತೆಗೆಯುವುದೂ ಮಾಡುತ್ತಿದ್ದಳು, ಬಿಟ್ಟರೆ ಅತೀ ಹೆಚ್ಚು ಸಾರಿ ಬಟನ್ನು ಹಾಕಿ ತೆಗೆದ ಗಿನ್ನೆಸ್ ದಾಖಲೆ ಮಾಡಿರೊಳು, ಇನ್ನೇನು ಬಟನ್ನು ಕಿತ್ತು ಬರುವುದೆಂದು ಖಾತ್ರಿಯಾದ ಮೇಲೆ ಎಂದಿನಂತೆ ಅವಳೇ ಮೌನ ಮುರಿದು ಏನೊ ಹೇಳಬೇಕೆನ್ನುವಷ್ಟರಲ್ಲಿ ನಾನೂ ನಡುವೆ ಬಾಯಿ ತೆರೆದೆ.

ನೀನು ಹೇಳು ನೀವು ಹೇಳಿ ಅಂತ ಇಬ್ಬರೂ ಸ್ವಲ್ಪ ಹೊತ್ತು ಕಿತ್ತಾಡಿ, ಕೊನೆಗೆ ಮತ್ತೆ ಮೌನಿಗಳಾಗಿ, ಅವಳು ಪಟ್ಟು ಸಡಲಿಸದವರಂತೆ ಕಾಣದಾದಾಗ, ನಾನೇ ಮೊದಲು ಕೇಳಿದೆ, "ಏನಿಲ್ಲಾ, ಈವತ್ತು ರಜೆ ಏನು ಮಾಡೊದು ಅಂತ ಕೆಳೋನಿದ್ದೆ" ಅಂದೆ ಅಷ್ಟೇ... ನಮ್ಮ ಮ್ಯಾನೇಜರು ಪ್ರೊಜೆಕ್ಟು ಪ್ಲಾನು ಓದಿ ಹೇಳುವಂತೆ ಒಂದೇಟಿಗೆ ಮುಂಜಾನೆಯಿಂದ ಸಂಜೆವರೆಗೆ ಒಂದು ಪರ್‌ಫೆಕ್ಟು ಪ್ಲಾನು ಉಸುರಿದಳು, ಅದೇ ಪ್ಲಾನನ್ನೇ ಡೆವಲಪ್ಪರು ಏನು ಗತ್ಯಂತರವಿಲ್ಲದೇ ಒಪ್ಪಿಕೊಳ್ಳುವಂತೆ, ನಾನೂ ಒಪ್ಪಿದೆ. ವಾರದಲ್ಲಿ ಇಷ್ಟು ದಿನಾ ಕೆಲಸ ಕೆಲಸ ಅಂತ ಕಳೆದ ಮೇಲೆ ಅವಳಿಗೊಂದು ದಿನ ಮೀಸಲಿಡದಿದ್ದರೆ ಹೇಗೆ.

ಎದ್ದು ಬ್ರಷು ಮಾಡುತ್ತಿದ್ದರೆ, ಅವಳು ಆಗಲೇ ಚಹಕ್ಕಿಟ್ಟಿದ್ದಳು, ಚಹ ಕುಡಿದು ಬ್ಯಾಟರಿ ಚಾರ್ಜು ಆಯಿತೆಂದು ಕಾಣುತ್ತೆ ಹಾಡು ಹಾಕಿ ಹಾಗೆ ಸುಮ್ಮನೆ ಹೆಜ್ಜೆ ಹಾಕತೊಡಗಿದೆ... ಡ್ಯಾನ್ಸು ಎನೂ ಬರಲ್ಲ ಹಾಗೆ ಹೀಗೆ ಕಾಲು ಕೈ ಅಲ್ಲಾಡಿಸೋಕೇನು ಕಷ್ಟ... ಪಾಕಶಾಲೆಯಲ್ಲೇನೊ ವಗ್ಗರಣೆ ಹಾಕುತ್ತ ಹಾಡಿನ ತಾಳಕೆ ತಕ್ಕಂತೆ ಸೌಟು ತಿರುವುತ್ತಿದ್ದ ಅವಳ ಎಳೆದುಕೊಂಡು ಹಾಲ್‌ಗೆ ಬಂದೆ. ಅದೇ ಸೌಟಿನಂತೆ ಅವಳ ಎರಡು ಸಾರಿ ತಿರುಗಿಸಿ ಇಂಗ್ಲೀಷರ ಡ್ಯಾನ್ಸು ಕನ್ನಡ ಹಾಡಿಗೆ ತಂದದ್ದಾಯಿತು. ಕುಣಿದು ಕುಣಿದು ಸುಸ್ತಾಗಿ ನನ್ನ ಸ್ನಾನದ ಮನೆಗೆ ನೂಕಿದಳು, ಸ್ನಾನ ಮುಗಿಸಿ ಇನ್ನೆರಡು ಹೆಜ್ಜೆ(ಸ್ಟೆಪ್ಪು) ಹಾಕಿ, ಡ್ರೆಸ್ಸು ಹಾಕಿಕೊಂಡು ರೆಡಿಯಾದೆ. ಮಹರಾಣಿಯವರು ರೆಡಿಯಾಗುವುದು ಲೇಟೇನು ಆಗೊಲ್ಲ, ಇಂದಂತೂ ತುಂಬ ಸಿಂಪಲ್ಲಾಗೆ ಡಿಂಪಲ್ಲೊಂದೇ ಆಭರಣವೇನು ಅನ್ನುವಂತಿತ್ತು, ರಥ(ಬೈಕು) ಹೊರತೆಗೆದು ಸಾರಥಿಯಾದೆ...

ಮೊದಲೇ ಅವಳು ನಿರ್ಧರಿಸಿದಂತೆ ದೇವಸ್ಥಾನಕ್ಕೆ ಮೊದಲ ಭೇಟಿ, ಪ್ರೊಜೆಕ್ಟಿನಲ್ಲಿ ತಲೆತಿನ್ನುತ್ತಿರುವ ನಾಲ್ಕು ಬಗ್‌ಗಳು(ಕಿರಿಕಿರಿಗಳು!) ಸರಿಹೊಗುವಂತೆ ಮಾಡಪ್ಪ ಅಂತ ಬೇಡಿಕೆ ಮಂಡಿಸಿ, ನೋಡಿದರೆ ಇವಳಿನ್ನೂ ಎನೊ ಕೈಮುಗಿದು ದೊಡ್ಡ ಅಹವಾಲು ಪತ್ರವನ್ನೇ ಸಲ್ಲಿಸುತ್ತಿರುವಂತಿತ್ತು, ಏನು ಕೇಳಿಕೊಂಡೆ ಅಷ್ಟೊತ್ತು ಅಂದ್ರೆ ನನ್ನೇ ಮರುಪ್ರಶ್ನಿಸಿದಳು, "ಎಲ್ಲ ನಿನಗಾಗೆ ವರ ಕೇಳ್ದೆ, ನಿನ್ನ ಗಂಡನ ಸುಖವಾಗಿಡು ಅಂತ" ಹಾಗೇ ಕುಟುಕಿದೆ... ತಿರುಗು ಬಾಣ ಬಂತು, "ನಾನೂ ಅಷ್ಟೇ, ನಿಮ್ಮ ಎಲ್ಲ ಗರ್ಲ್‌ಫ್ರೆಂಡಗಳನ್ನ ಸುಖವಾಗಿಡು ಅಂತ ಬೇಡಿಕೊಂಡೆ ಎಲ್ಲರ ಹೆಸರು ಹೇಳುತ್ತಿದ್ದೆ, ಲಿಸ್ಟು ದೊಡ್ಡದಿತ್ತಲ್ಲ, ಅಷ್ಟೊತ್ತಾಯ್ತು" ಅಂದ್ಲು... ಇವಳೀ ಉತ್ತರ ಕೇಳಿ ಇವಳ ನಾನೇ ಸೃಷ್ಟಿಸಿದ್ದಾ ಅಂತಾ ಆ ದೇವರಿಗೂ ಡೌಟು(ಸಂಶಯ) ಬಂದಿರಬೇಕು.

ಅದ್ಯಾವುದೊ ಮಾಲ್ ಒಳಗೆ ಹೊಕ್ಕು ಮೇಲೆ ಕೆಳಗೆ ಸುತ್ತಿದ್ದಾಯ್ತು, ಡಿಸ್ಕೌಂಟು ಒಂದಕ್ಕೊಂದು ಫ್ರೀ ಇದೆ ಅಂತ, ನನಗೆರಡು ಶರ್ಟು ಕೊಡಿಸಿದಳು, ತನಗೆಂದು ಏನೇನು ಕೊಂಡಿದ್ದಳೊ ಯಾರಿಗೆ ಗೊತ್ತು, ನೋಡಿ ನನಗೆ ಸುಸ್ತಾಗಿ ತಲೆ ಸುತ್ತಿ ಬೀಳುವ ಇಚ್ಛೆಯೆನಿಲ್ಲದಿದ್ದರಿಂದ ಸುಮ್ಮನೆ ಕ್ರೆಡಿಟ್ಟು ಕಾರ್‍ಡು ಉಜ್ಜಿ, ಹೊರಬಂದೆ. ಅಷ್ಟೊತ್ತಿಗಾಗಲೇ ಸೂರ್‍ಯ ನೆತ್ತಿ ಮೇಲೆ ಬಂದಿದ್ದ, ಹೊಟ್ಟೆ ತಾಳ ಹಾಕುತ್ತಿತ್ತು, ಹೊರಗೇ ಏನೊ ತಿನ್ನೊಣವೆಂದ್ರೂ ಬಿಡದೆ ಮನೆಗೆ ಗಾಡಿ ತಿರುಗಿಸಿದಳು, ಸುತ್ತಿ ಸುತ್ತಿ ಬೇಸತ್ತಿದ್ದರಿಂದ ಏನೊ ಅನ್ನ ಸಾರು ತಿಂದು ಹಾಗೆ ಸೊಫಾದ ಮೇಲೆ ಮೈ ಚಾಚಿದೆ. ತಂದ ಅರಿವೆಗಳ ತೆಗೆದು ಹಾಕಿ ಟ್ರಯಲ್ಲು ನೋಡುತ್ತ ಇವಳೇನೊ ಫ್ಯಾಶನ್ನು ಷೋ ನಡೆಸಿದ್ದಳು.

ಸಂಜೆಗೆದ್ದು ಬುಕ್ಕಿಂಗು ಮಾಡಿಟ್ಟಿದ್ದ ಎರಡು ಟಿಕೆಟ್ಟು ತೆಗೆದುಕೊಂಡು ಸಿನಿಮಾ ನೊಡಲು ಸವಾರಿ ಹೊರಟಿತು, ದಾರಿಯಲ್ಲಿ ಕಂಡ ಪಾನಿ ಪುರಿ ನೋಡಿ ಬೇಕೆಂದು ದುಂಬಾಲು ಬಿದ್ದಳು, ಎರಡು ಪ್ಲೇಟು ತೆಗೆದುಕೊಂಡ್ರೂ ನನ್ನ ಪ್ಲೇಟಿನಲ್ಲಿನ ನಾಲ್ಕು ಎತ್ತಿಕೊಂಡ್ಲು. ಇನ್ನೊಂದು ಪ್ಲೇಟು ತಂದು, ತಿಂದು ತಿನಿಸಿ ಅವಳ ಸಂತೃಪ್ತಿಪಡಿಸಿದೆ. ಪಾನಿ ಪುರಿ ಅಂದ್ರೆ ಇನ್ನೊಂದು ಎಕ್ಸ್ಟ್ರಾ ಹೊಟ್ಟೆ ಬಂದು ಬಿಡುತ್ತೆ ಇವಳಿಗೆ. ಅಂತೂ ಸಿನಿಮಾ ಹಾಲ್‌ಗೆ ತಲುಪಲ್ಲಿಗೆ ಸಿನಿಮಾ ಶುರುವಾಗಿತ್ತು, ಮತ್ತೊಮ್ಮೆ ಸಪ್ತಪದಿಗೆ ಹೆಜ್ಜೆಹಾಕುತ್ತಿರುವವರ ಹಾಗೆ ಒಬ್ಬರ ಕೈ ಇನ್ನೊಬ್ಬರು ಹಿಡಿದು ಕತ್ತಲೆಯಲ್ಲಿ ನಡೆದು ಸೀಟು ಹುಡುಕಿಕೊಂಡು ಕುಳಿತೆವು. ಇನ್ನೂ ಕೈ ಬಿಟ್ಟಿರಲಿಲ್ಲ, "ರೀ ಇದು ಸಿನಿಮಾ ಹಾಲ್" ಅಂತ ಚಿವುಟಿದಳು, ಕೈಬಿಟ್ಟೆ. ಯಾವುದೋ ಎಮೊಶನಲ್(ಭಾವನತ್ಮಕ) ಸೀನು ಬಂದಾಗ ಕಣ್ತುಂಬ ನೀರು ತುಂಬಿಕೊಂಡು, ಇನ್ನೇನು ಕಣ್ಣೇರ ಕಟ್ಟೆಯೊಡೆಯಿತೆನ್ನುವಷ್ಟರಲ್ಲಿ, "ಅದು ಫಿಲ್ಮು, ರೀಲು.. ರಿಯಲ್ಲು ಅಲ್ಲ ಅದ್ಕಾಕೆ ಹಾಗೆ ಮುಖ ಮಾಡ್ಕೊಂಡಿದೀರಾ..." ಅಂತ ತಡವಿದಳು. ಅದೇನೊ ಕೆಲವು ಫಿಲ್ಮುಗಳ ಸನ್ನಿವೇಶಗಳಲ್ಲಿ ಎಮೊಶನಲ್ಲು ಆಗಿ ಬಿಡ್ತೇನೆ, ಮೊದಲಿಂದ್ಲೂ ಹಾಗೇನೆ... ಅದೊಂಥರಾ ಹೇಳೊಕಾಗಲ್ಲ...

ಸಿನಿಮಾ ಮುಗಿದಾಗ ಹತ್ತು ಗಂಟೆಯಾಗಿತ್ತು, ಯಾವುದಾದರೂ ಒಳ್ಳೇ ಹೊಟೇಲಿಗೆ ಊಟಕ್ಕೆ ಕರೆದುಕೊಂಡುಹೋಗೋಣ ಅಂದ್ರೆ, ಇಂಟರವಲ್ಲಿನಲ್ಲಿ ತಿಂದದ್ದೇ ಇನ್ನೂ ಕರಗಿಲ್ಲ, ಹಸಿವಿಲ್ಲ ಅಂದ್ಲು. ಈ ದಿನ ಅವಳದಾದ ಮೇಲೆ ಅವಳಿಗೇ ಹಸಿವಿಲ್ಲವೆಂದ್ರೆ ನನಗೆಲ್ಲಿಂದ... ಜ್ಯೂಸು ಕುಡಿದು ಹೋಗಿ ಬಿದ್ದುಕೊಂಡಾಗ ಹನ್ನೊಂದಾಗಿತ್ತು... ಹೀಗೆ ಇನ್ನೊಂದು ದಿನದ ಕೊನೆಯಾಗಿತ್ತು...

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

pdf document can be found here
http://www.telprabhu.com/aa-ondu-dina.pdf


ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, January 11, 2009

ಬಿರುಕು...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಸಂಜೆ ಆಫೀಸಿನಿಂದ ಬೇಗ ಬಂದಿದ್ದೆ, ಇವಳು ಮನೆಯಲ್ಲಿರಲಿಲ್ಲ, ಅದೇ ಯಾರದೋ ಮನೇಲಿ ಮಗುವಿನ ಹುಟ್ಟು ಹಬ್ಬವಿದೆ ಅಂತ ಮೊದಲೇ ಹೇಳಿದ್ದರಿಂದ ಅವಳಿಗೇನು ಫೊನು ಮಾಡಿರಲಿಲ್ಲ, ಸೀದಾ ಮನೆಗೆ ಬಂದವನೇ ನನಗೆ ನಾನೇ ಒಂದು ಕಪ್ಪು ಟೀ ಮಾಡಿಕೊಂಡು ಸೊಫಾದ ಮೇಲೆ ಇತ್ತ ಮಲಗಿದ ಹಾಗೂ ಇಲ್ಲ, ಇತ್ತ ಕೂತ ಹಾಗೂ ಅಲ್ಲ ಹಾಗೆ ಬಿದ್ದುಕೊಂಡು ಟೀ ಹೀರುತ್ತಿದ್ದೆ. ಪಕ್ಕದ ಟೀಪಾಯಿ ಮೇಲೆ ಏರಟೆಲ್ ಮೊಬೈಲು ಬಿಲ್ಲು ಪೊಸ್ಟ್ ಬಿದ್ದಿತ್ತು. ಎನೂ ಕೆಲಸವಿಲ್ಲದ ತಲೆ ದೆವ್ವದ ಮನೆಯೆನ್ನುವಂತೆ ಎಂದೂ ನೋಡದ ಬಿಲ್ಲು ನೋಡತೊಡಗಿದೆ, ಇತ್ತೀಚೆಗೆ ಮೊಬೈಲು ಬಿಲ್ಲುಗಳು ಪ್ರತೀ ಕರೆಯ ವಿವರವನ್ನೂ ಕೂಡ ಕೊಡತೊಡಗಿರುವುದರಿಂದ, ಕಂಪನಿಗಳಿಗೆ ಆಫರ್ ಎಂದು ನೂರಾರು ನಿಮಿಷ ಫ್ರೀ ಬೇರೇ ಇರೊದ್ರಿಂದ ಪುಕ್ಕಟೆ ಫೊನು ಮಾಡಿದ್ದೆ ಮಾಡಿದ್ದು ನಾಲ್ಕೈದು ಪುಟ ನಂಬರುಗಳೇ ತುಂಬಿದ್ದವು, ಎಲ್ಲಿಗೆ ಮಾಡಿದ್ದು, ಯಾವಾಗ, ಎಷ್ಟೊತ್ತು ಮಾತಾಡಿದ್ದು, ಎಲ್ಲ ಇತ್ತು. ಹಾಗೇ ನೋಡುತ್ತಿದ್ದವನಿಗೆ ಕಾಣಿಸಿದ್ದೊಂದು ಗೊತ್ತಿಲ್ಲದ ಮೊಬೈಲು ನಂಬರು ಒಂದೇ ದಿನದಲ್ಲಿ ಮೂರು ಗಂಟೆ ಮೂವತ್ತೈದು ನಿಮಿಷ ಮಾತಾಡಿದ್ದು....

ಇವಳು ನಾನು ಮದುವೆಗೆ ಮುಂಚೆ ಮಾತಾಡಿದಾಗ ಬಂದ ಬಿಲ್ಲುಗಳು ಸೇರಿಸಿದ್ದರೆ ಎಷ್ಟು ಕೇಜಿ ರದ್ದಿಯಾಗಿರುತ್ತಿತ್ತೊ ಏನೋ, ಈಗ ನಾನು ನನ್ನ ಕೆಲಸದಲ್ಲಿ ಬಿಜಿ, ಹೇಗೂ ಮನೆಯಲ್ಲಿದ್ದಾಳಲ್ಲ ಅಂತ ಉದಾಸೀನ ಬೇರ್‍ಏ, ಫೊನಿನಲ್ಲಿ ಮಾತೇ ಕಮ್ಮಿಯಾಗಿ ಹೋಗಿದೆ. ಅದರೂ ಇದ್ಯಾರು ಇವಳು ಯಾರ ಜೊತೆ ಇಷ್ಟೊತ್ತು ಮಾತಾಡಿದ್ದು, ನನಗೇ ಗೊತ್ತಿಲ್ಲದೇ ಅನುಮಾನದ ಎಳೆಯೊಂದು ಹೊರಹೊಮ್ಮಿತು... ಇಲ್ಲ ಇಲ್ಲ ಅಂತ ಮನಸು ಹೇಳುತ್ತಿದ್ದರೂ, ಮನೆಯ ಫೊನಿನಿಂದ ಒಂದು ಸಾರಿ ಫೊನು ಮಾಡಿದೆ, ಆಕಡೆಯಿಂದ ಅದ್ಯಾವುದೋ ದನಿ, ಅವನ್ಯಾರೋ ಗೊತ್ತಿಲ್ಲ, ಸುಮ್ಮನೆ "ವಿ ಅರ್ ಕಾಲಿಂಗ್ ಫ್ರಾಮ್ ಕಂಟ್ರಿ ಕ್ಲಬ್ ಸರ್.." ಅಂತ ಏನೊ ಬಡಬಡಿಸಿದೆ, ಆಕಡೆಯಿಂದ ಅದೇ ನಾ ಇಂಥ ಕರ್‍ಎಗಳಿಗೆ ಉತ್ತರಿಸುವಂತೆ "ನಾಟ್ ಇಂಟ್ರೆಸ್ಟೆಡ್.." ಮಾಮೂಲಿ ಉತ್ತರ ಬಂತು.
ಯಾರಿರಬಹುದು?, ಅದ್ಯಾಕೆ ಅವನ ಜೊತೆ ಅಷ್ಟೊತ್ತು ಮಾತಾಡಿದ್ದು? ಎಷ್ಟು ದಿನದಿಂದ ಹೀಗೆ? ಎಷ್ಟೊ ಪ್ರಶ್ನೆಗಳ ತಾಕಲಾಟ ನಡುನಡುವೆ ಇವಳು ಹಾಗಿಲ್ಲ, ಏನೊ ಬೇರೆ ಇರಬೇಕು, ಅಂತ ನನಗೆ ನನ್ನ ಮನಸೇ ಸಮಾಧಾನಿಸುವಂತಿತ್ತು...

ಇದೆಲ್ಲ ತಲೆ ತುಂಬಿ, ಕೊಲಾಹಲವೆದ್ದು ಕಲಸುಮೇಲೊಗರವಾಗಿ, ಟೆನ್ಷನ್ ನಿಂದ ತಲೆನೊವು ಶುರುವಾಗಿ ಇನ್ನೊಂದು ಕಪ್ಪು ಟೀ ಮಾಡಿ ಕುಡಿಯತೊಡಗಿದೆ, ಆದರೂ ಅದ್ಯಾಕೊ ರುಚಿಸಲಿಲ್ಲ, ಒಂದು ಯೊಚಿಸಹೋಗಿ ಇನ್ನೊಂದು ತಿಳಿಯುವಂತೆ, ಇನ್ನೂ ಮನೆಗೆ ಯಾಕೆ ಬಂದಿಲ್ಲ, ಈಗ ಎಲ್ಲಿ ಹೋಗಿದ್ದಾಳೆ, ಇಷ್ಟೊತ್ತಿಗೆಲ್ಲ ಬರಬೇಕಿತ್ತಲ್ಲ ಅಂತೆಲ್ಲ ತಲೆ ಚಚ್ಚಿಕೊಳ್ಳತೊಡಗಿದೆ.

ಅವಳು ಮನೆಗೆ ಬಂದಾಗ ಎಂಟೂವರೆ, ಅಷ್ಟೊತ್ತಿಗೆಲ್ಲ ನಾನು ಏನೇನೊ ಯೋಚಿಸಿಯಾಗಿತ್ತು. ಬರ್ತಿದ್ದಂಗೆ "ಏನು ಇಷ್ಟೊತ್ತು ಎಲ್ಲಿ ಹೋಗಿದ್ದೆ, ಬೇಗ ಬರಬೇಕಿತ್ತು" ಅಂತ ಹರಿಹಾಯ್ದೆ. ಎಂದೂ ಇಲ್ಲದ ನನ್ನ ಸಿಟ್ಟು ನೋಡಿ ಅವಳು ದಂಗುಬಡಿದಂತಿತ್ತು, "ಏನು ನೀವು ದಿನಾಲು ಬೇಗ ಬರೋ ಹಾಗೆ ಹೇಳ್ತಿದೀರಲ್ಲ, ಒಂದು ದಿನ ನಾನಿಲ್ಲದೇ ಕಾಯೋಕೆ ಬೇಜಾರಾ, ನಾನು ದಿನಾಲೂ ಕಾಯ್ತೀನಲ್ಲ" ಅಂತ ತಿರುಗಿಬಿದ್ಲು. ಸುಮ್ಮನಾದೆ, ಆದರೇನು ತಲೆಯಲ್ಲಿ ಇನ್ನೂ ಹುಳು ಕೊರೆದಂಗೆ ಆ ನಂಬರ್ರು ಕೊರೆಯುತ್ತಿತ್ತು. ಎಂದೂ ಶಾಂತವಾಗಿ ಊಟ ಮಾಡದ ನಾವಿಬ್ಬರೂ ಸುಮ್ಮನೆ ಊಟ ಮುಗಿಸಿ ಎದ್ದೆವು, ಮಾತನಾಡಲೇನು ಇರಲಿಲ್ಲ, ಎಲ್ಲ ತಲೆ ತುಂಬ ಹಲವು ಯೋಚನೆಗಳ ಕೊಲಾಹಲ ಮಾತ್ರ, ನನ್ನಲ್ಲಾದ ಬದಲಾವಣೆ ಅವಳು ಗಮನಿಸಿದ್ಲು, ಅವಳೂ ಮಾತಿಗಿಂತ ಮೌನ ಲೇಸು ಅಂದುಕೊಂಡಂತಿತ್ತು. ಇಲ್ಲಾಂದ್ರೆ ಸಾರು ಹೇಗಿದೆ ಅಂತಾನೊ, ಆಫೀಸಿನಲ್ಲಿ ನಿಮ್ಮ ಪಕ್ಕ ಕೂರೊ ಹುಡುಗಿ ಈವತ್ತು ಯಾವ ಡ್ರೆಸ ಹಾಕಿದ್ಲು ಅಂತಾನೊ, ಏನೊ ಒಂದು ಸುದ್ದಿ ತೆಗೆದು ಕೆದಕಿ ಮಾತಾಡೋಳು, ಅವಳಿಗೆ ಮಾತಾಡೋಕೆ ಮಾತು ಬೇಕು ಅಷ್ಟೇ. ಈಗ ಅವನ್ಯಾರೋ ಸಿಕ್ಕೀದಾನಲ್ಲ, ನನ್ನೊಂದಿಗೇನಿದೆ ಮಾತಾಡೋಕೆ ಅಂದುಕೊಂಡೆ.

ಕೇಳಿ ಬಿಡಲೇ ಯಾರದು ಅಂತ, ನಿಜವಾಗಲೂ ಅವನ್ಯಾರೋ ಇದ್ರೆ, ಇವಳ ಬಿಟ್ಟುಕೊಡಲಾಗುತ್ತಾ, ಯಾರೂ ಇಲ್ಲಾಂದ್ರೆ, ನಾನು ಅವಳ ಬಗ್ಗೆ ಹೇಗೆ ಯೊಚಿಸಿದೆನಲ್ಲ ಅಂತ ಏನಂದುಕೊಂಡಾಳು, ಹೀಗೆ ಏನೇನೊ ಯೋಚಿಸುತ್ತ ಹಾಸಿಗೆಯಲ್ಲಿ ಉರುಳಿದೆ. ನಿದ್ದೆಯಂತೂ ಯಾವಾಗಲೋ ಹಾರಿ ಹೋಗಿತ್ತು. ಇನ್ನೂ ಅವಳು ಏನೊ ಕೆಲಸದಲ್ಲಿದ್ಲು ಅಂತ ಕಾಣುತ್ತೆ ಬರುವುದು ಸ್ವಲ್ಪ ಹೊತ್ತಾಯಿತು, ಅದರೂ ನಾನಿನ್ನೂ ಏನೂ ನಿರ್ಣಯಕ್ಕೆ ಬಂದಿರಲಿಲ್ಲ, ಕೇಳುವುದೊ ಬೇಡವೊ ಅನ್ನೊ ತಾಕಲಾಟದಲ್ಲೇ ಇದ್ದೆ. ಬಂದು ಪಕ್ಕದಲ್ಲೇ ಸುಮ್ಮನೆ ಮಲಗಿದಳು, ನನಗೀಗ ಅವಳ ಮೌನ ಸಹಿಸಲಸಾಧ್ಯವಾಯ್ತು. ಸದಾ ಚಟಪಟ ಅಂತ ಮಾತಾಡುವ ಅವಳ ಕೆಲವೊಂದು ಸಾರಿ ನಾನೇ ಬೈದು ಸುಮ್ಮನಾಗಿಸಬೇಕು, ಅದೇಕೊ ಮನೆ ಭೂತಬಂಗಲೆಯಂತೆ ನಿಶಬ್ದವಾದಂತನಿಸಿತು. ಅವಳಿಗೂ ನಿದ್ರೆ ಬಂದಂತಿರಲಿಲ್ಲ, ನನ್ನ ಕಾಡದೇ ಅದೆಂದು ಮಲಗಿಯಾಳು, ತವರುಮನೆಗೆ ಹೋದಾಗಲೂ ಫೊನು ಮಾಡಿ ತಲೆ ತಿಂದಾಗಲೇ ಸಮಾಧಾನ.

ಮಗ್ಗಲು ಬದಲಿಸಿದೆ, ಯೊಚನೆಯೂ ಮಗ್ಗಲು ಬದಲಿಸಿದಂತಿತ್ತು, ಮತ್ತೆ ಮಂಥನ ಶುರು, ಆದರೆ ಈ ಸಾರಿ ತರ್ಕದ ತಕ್ಕಡಿಯಲ್ಲಿ ಪ್ರತಿಯೊಂದು ತೂಗುತ್ತಿದ್ದೆ, ಮದುವೆಯಾಗಿ ಇಷ್ಟು ವರ್ಷವಾಯ್ತು, ಎಂದಾದರೂ ಅವಳು ನನ್ನ ಯಾವತ್ತಾದರೂ ಹಾಗೆ ಅನುಮಾನದಿಂದ ನೋಡಿದ್ದಾಳಾ, ನನ್ನೀ ಚೆಲುವೆಯರ ಚೆಲ್ಲಾಟಗಳ ಬಗ್ಗೆ ಚಕಾರವೆತ್ತಿದ್ದಾಳಾ, ಹೋಗ್ಲಿ ಯಾರಯಾರಿಗೊ ಅಪ್ಸರೆ, ಅಪ್ಪಟ ಗೊಂಬೆಯಂತಿದ್ದಾಳೆ ಅಂದಾಗ ಅಸೂಯೆ ಪಟ್ಟಿದ್ದಾಳಾ. ಇಲ್ಲವಲ್ಲ ಅನುಮಾನ ಪಡಲು ಹಲವು ಅವಕಾಶಗಳಿದ್ದಾಗಲೂ ಅವಳಿಗೆಷ್ಟು ನಂಬಿಕೆ, ನಾನೋ ಯಾವುದೋ ಒಂದು ನಂಬರು, ಮಾತಾಡಿದ್ದು ಮೂರು ತಾಸು ಅಷ್ಟಕ್ಕೆ ಅನುಮಾನ ಪಟ್ಟೆನಲ್ಲ, ಛೀ... ಅನ್ನಿಸಿತು, ಪಕ್ಕದ ಮನೆ ಪದ್ದು, ಹಾಸಿನಿ ಎನ್ನುತ್ತ ಸುತ್ತುವ ನಾನು ಅವಳಿಗೆ ಯಾವ ಸಮ... ಅವಳಿಟ್ಟಿರುವ ಅಷ್ಟು ಪ್ರೀತಿಗೆ ನಾ ನಾಲಾಯಕ್ಕು ಅನ್ನಿಸಿ ಪಾಪಪ್ರಜ್ನೆ ಕಾಡತೊಡಗಿತು... ಹೇಳೊಕೂ ಆಗದೆ, ಬಿಡೊಕೂ ಆಗದೇ ನನ್ನಷ್ಟಕ್ಕೆ ನಾನೇ ಬೆವರಿದೆ... ಅವಳೆಡೆಗೆ ನೋಡಲೂ ಕೂಡ ನನಗೆ ನನ್ನಷ್ಟಕ್ಕೆ ನಾಚಿಕೆಯಾಯ್ತು, ಮತ್ತೆಂದೂ ಅವಳ ಬಗ್ಗೆ ಹಾಗೆ ಯೋಚಿಸೊಲ್ಲ ಅಂತನ್ನಕೊಳ್ಳತೊಡಗಿದೆ. ಅದ್ಯಾಕೊ ಇನ್ನು ತಡೆಯಲಾಗಲಿಲ್ಲ, ಕೈ ಹಿಡಿದು ಎಳೆದೆ, ಕೈ ಕೊಸರಿಕೊಂಡ್ಲು... ಅಯ್ಯೊ ಅವಳಿಗೆ ಸಿಟ್ಟು ಬಂದಂತಿದೆ, ಏನು ಮಾಡ್ಲಿ ಅಂತ ಯೊಚಿಸುವುದರಲ್ಲಿ, ನೀರವ ಮೌನ ಮುರಿದು ಅದೊ ಆಕಡೆಯಿಂದ ಪ್ರಶ್ನೆಯೊಂದು ತೂರಿ ಬಂತು "ನೀವೇನೊ ಮುಚ್ಚಿಡ್ತೀದೀರ..." ತಕ್ಷಣ ತಡವರಿಸುತ್ತ "ಇಲ್ಲ ಹಾಗೇನಿಲ್ಲ" ಅಂತಿದ್ದಂಗೆ " ಇದೊ ಸುಳ್ಳು ಬೇರೆ..." ಅಂತಂದ್ಲು. ಅಷ್ಟೇ ಮಾತೇ ಹೊರಡಲಿಲ್ಲ, ಬಿಸಿತುಪ್ಪ ಬಾಯಲ್ಲಿ ಬಿದ್ದಿತ್ತು, ಉಗುಳುವುದಾ, ನುಂಗುವುದಾ, ಎರಡೇ ಆಯ್ಕೆಗಳು.

ನಂಗೆ ಸುಳ್ಳು ಹೇಳೋಕೆ ಬರೊಲ್ಲ, ಬಂದರೂ ಅವಳ ಮುಂದೆ ಅಂತೂ ಅಸಾಧ್ಯ, ಮುಖ ನೊಡೇ ಗುರುತು ಹಿಡಿದು ಬಿಡ್ತಾಳೆ. ಈಗಂತೂ ಎಕ್ಸಪರ್ಟ್ ಆಗೀದಾಳೆ ಮುಖ ನೊಡದೇ ದನಿಯಲ್ಲೇ ಗೊತ್ತಾಗಿದೆ. ನಾ ಬಾತರೂಮಿನಲ್ಲಿದ್ದು ಬರುವುದು ತಡವಾಗಿಹೊದರೆ ಕರೆದಳೆಂದ್ರೆ, ಲೇ ಬನಿಯನ್ನು ಹಾಕೊತಿದೀನಿ ಬಂದೆ ಅಂದ್ರೆ, "ಆ ನಂಗೊತ್ತು ನಿಮ್ಮ ಬಾಡಿ ಮಸಲ್ಲು ನೊಡಿಕೊಂಡಿದ್ದು ಸಾಕು, ನೀವೇನೂ ಹೃತಿಕ್ ರೊಶನ್ನು ಆಗೊಲ್ಲ ಬನ್ನಿ" ಅಂತದಿರ್ತಾಳೆ "ನಿನಗೆ ಹೇಗೆ ಗೊತ್ತಾಯ್ತು ಬಾಗಿಲ ಸಂದಿಯಲ್ಲಿ ನೊಡ್ತಿದ್ಯಾ" ಅಂದ್ರೆ, "ನಿಮ್ಮ ಬಗ್ಗೆ ನಂಗೆ ಗೊತ್ತಿಲ್ವಾ, ಇಲ್ಲೆ ಕೂತ್ಕೊಂಡು ಎಲ್ಲ ಹೇಳ್ತೀನಿ" ಅಂತ ಸವಾಲೂ ಹಾಕಿರುತ್ತಾಳೆ... ಅದು ನಿಜಾನೆ ಅವಳ ನನ್ನ ಪ್ರತಿಯೊಂದು ನಡೆಯನ್ನೂ ಅರೆದು ಕುಡಿದಿದ್ದಾಳೆ.

"ಏನು ಯೋಚಿಸ್ತಿದೀರಾ, ಏನೊ ಕೇಳಬೇಕಿದೆ, ಆದರೆ ಆಗಲಿಂದ ಕೇಳುತ್ತಿಲ್ಲ" ಅಂತ ಮತ್ತೆ ಉಸುರಿದ್ಲು, ಬಿಸಿತುಪ್ಪ ಉಗುಳುವುದೇ ಸರಿಯೆನ್ನಿಸಿತು, ಗಂಟಲು ಸುಟ್ಟರೆ ತೊಂದ್ರೆ, ತುಪ್ಪ ಮತ್ತೆ ಕೊಂಡುಕೊಳ್ಳಬುದಲ್ವೆ. "ನಾನೀಗ ಹೇಳುವುದ ಕೇಳಿ ನೀನೇನು ಅಂದ್ಕೊತಿಯೇನೊ, ಏನಾದ್ರೂ ತಪ್ಪೆಲ್ಲ ನಂದೆ" ಅಂದ್ರೆ "ರೀ ಪುರಾಣ ಸಾಕು, ವಿಷಯಕ್ಕೆ ಬನ್ನಿ" ಅಂದ್ಲು, ಅವಳ ಕೈ ಗಟ್ಟಿಯಾಗಿ ಹಿಡಿದು ಒಂದೇಟಿಗೆ ಚಹ ಕುಡಿಯುವಾಗ ನೋಡಿದ ನಂಬರಿನಿಂದ, ಇದೊ ಈಗ ಪಕ್ಕದಲ್ಲಿ ಬಿಡ್ಕೊಂಡು ಯೊಚಿಸುತ್ತಿದ್ದದ್ದನ್ನೆಲ್ಲ ವರದಿ ಸಲ್ಲಿಸಿದೆ. ಎಲ್ಲಿ ಬಿಟ್ಟು ಓಡಿ ಹೋಗಿಯಾಳೆಂದು ಕೈಯಿನ್ನೂ ಬಿಗಿಯಾಗಿ ಹಿಡಿದಿದ್ದೆ, "ಬಿಡ್ರೀ ಕೈನಾ" ಚೀರಿದ್ಲು, ಸಿಟ್ಟು ಬಂದಿದೆ, ಇನ್ನು ಇವಳಿಲ್ಲಿರಲ್ಲ, ಅಷ್ಟೇ ಅಂತ ಪೆಚ್ಚು ಮೋರೆ ಹಾಕಿ ನೋಡಿದೆ. "ಇಷ್ಟೇನಾ?" ಅಂತ ನಿಟ್ಟುಸಿರು ಬಿಟ್ಟು "ಆ ನಂಬರ್ರು ಸುಧಾಕರಂದು" ಅಂದ್ಲು. ನಾನಿನ್ನು ಯಾರೀ ಸುಧಾಕರ ಏನು ಎತ್ತ ಎಂದು ಮತ್ತೆ ಯೋಚಿಸುವುದರೊಳಗೆ "ಅದೇ ನಮ್ಮ ಸೊಷಿಯಲ್ಲು ಕ್ಲಬ್ ಹುಡುಗಿ, ಸುಧಾ, ಆ ಸುಧಾ ತರಂಗ ಪತ್ರಿಕೆಯಲ್ಲೇ ತಲೆ ಹುದುಗಿಸಿ ಕೂಡುತ್ತಿದ್ದ ಹುಡುಗಿ, ನಾವೇ ಅಲ್ವೆ ಹೆಸರಿಟ್ಟಿದ್ದು, ಅವಳ ಕೈ(ಕರ) ಹಿಡಿಯಲಿರುವ ಹುಡುಗ, ಹೆಸರು ಗೊತ್ತಿಲ್ಲ ಅದ್ಕೆ, ಅವ್ನು ಸುಧಾ-ಕರ" ಅಂದ್ಲು, ಎನಿಲ್ಲ ಅವಳು ಮೊನ್ನೆ ಮನೆಗೆ ಬಂದಿದ್ದಾಳೆ, ಮದುವೆಗೆ ಮೊದಲು ಹುಡುಗ ಹುಡುಗಿ ಗಂಟೆಗಟ್ಲೆ ಮಾತಾಡೊಲ್ವೆ, ಮೊಬೈಲು ಬಿಲ್ಲು ಜಾಸ್ತಿ, ಅದ್ಕೆ ಇವಳು, ನನಗೆ ತಿಂಗಳಿಗೆ ಹತ್ತು ಗಂಟೆ ಫ್ರೀ ಮಾತಾಡು ಅಂತಾ ತನ್ನ ಮೊಬೈಲು ಕೊಟ್ಟೀದಾಳೆ, ಸಿಕ್ಕಿತು ಚಾನ್ಸು ಅಂತ ಸುಧಾ ಬರೊಬ್ಬರಿ ಮೂರೂವರೆ ಗಂಟೆ ಮಾತಾಡಿದ್ದಾಳೆ, ಅದೇ ನಾ ನೋಡಿ ಇಷ್ಟೆಲ್ಲ ರಾಧ್ಧಾಂತ ಮಾಡಿಕೊಂಡಿದ್ದು.

"ಸಮಾಧಾನ ಆಯ್ತಾ" ಅಂದ್ಲು ನನ್ನ ಕಣ್ಣಲ್ಲಿ ನೀರಾಡಿತು, ಮುಖ ತೋರಿಸಲಾಗದೆ ಮುಚ್ಚುತ್ತಿದೆ. "ರೀ ಯಾಕೆ" ಅಂದ್ಲು, "ಅಷ್ಟು ಒಳ್ಳೆಯವಳಾಗಬೇಡ ನನ್ನ ಮನ ಪೂರ್ತಿ ಬೈದು ಬಿಡು" ಅಂದೆ, "ರೀ ತಪ್ಪು ನಿಮ್ಮದಲ್ಲ, ನೀವು ನನ್ನ ಅಷ್ಟೊಂದು ಹಚ್ಚಿಕೊಂಡಿದೀರ" ಅಂದ್ಲು, ನನಗೇನೂ ತಿಳಿಯಲಿಲ್ಲ, ತಲೆಯ ಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಎದ್ದಿರಬೇಕು, ಅವಳೇ ಹೇಳತೊಡಗಿದಳು. "ಮಗುವಿಗೊಂದು ಗೊಂಬೆ ಕೊಡಿ ಅದನ್ನ ಅದು ಹಚ್ಚಿಕೊಂಡು ಬಿಡುತ್ತೆ, ಅದೊಂಥರ ಅಟ್ಯಾಚ್ಮೆಂಟ್, ಅದಕ್ಕೆ ಅಷ್ಟು ಪ್ರೀತಿ, ಬೇರೆ ಮಗು ಬರಲಿ ನೋಡಿ ಅದು ಗೊಂಬೆ ಕೊಟ್ರೆ ಕೇಳಿ! ಎಲ್ಲೊ ಕಳೆದುಕೊಂಡು ಬಿಡ್ತೀನಿ ಅನ್ನೊ ಭಯ, ಅದೇ ನೀವು... ಅದೇ ಮಗುವಿನ ಅಮ್ಮ ನೋಡಿ, ಮಗು ಅಪ್ಪನ ಹತ್ತಿರ ಹೋಗ್ಲಿ, ಇಲ್ಲ ಅಕ್ಕ, ಮಾಮನ ಹತ್ರ ಹೋಗ್ಲಿ ಬೇಜಾರಿಲ್ಲ, ಮತ್ತೆ ತನ್ನೆಡೆ ಬಂದೆ ಬರುತ್ತೆ ಅನ್ನೊದು ನಂಬಿಕೆ, ಅದು ನಿಜ ಕೂಡ ಮಗುವಿನ ಮೇಲೆ ಅವಳ ಪ್ರೀತಿ ಕಮ್ಮಿಯೇನಾಗಲ್ಲ. ಅದೇ ನಮಗೂ ಅನ್ವಯಿಸುತ್ತೆ" ಏನೊ ಪಕ್ಕಾ ಸಿಧ್ಧಾಂತ ಮಂಡಿಸಿದ್ಲು, ಕರ್ರೆಕ್ಟೆ ಅಲ್ವಾ. ಇನ್ನೂ ಮುಂದುವರೆಸಿ "ಇಲ್ಲಿ ನೀವು ಅನುಮಾನಿಸಿದಿರಿ ಅನ್ನೋದು ಮುಖ್ಯ ಅಲ್ಲ, ನಿಮಗೇ ಗೊತ್ತಿಲ್ಲದೆ ನಿಮ್ಮ ಮನಸು ಹಾಗೆ ಮಾಡಿಸಿತು, ಮನೆಯೆ ಗೊಡೆ ಬಿರುಕು ಬಿಡುವುದು ಸಹಜ, ಬಿರುಕು ಕಂದಕವಾಗುವ ಮುಂಚೆ ಬಿರುಕು ತುಂಬಿ ಬಣ್ಣ ಬಳಿದು ಬಿಡಬೇಕು, ಬೆಳೆಯ ಬಿಡಬಾರದು, ಮನಸಲ್ಲೆ ಹಾಗೆ ತೊಳಲಾಡುತ್ತಿರದೆ ಕೇಳಿ ಬಿಡಬೇಕಿತ್ತು" ಅಂದ್ಲು "ನೀನೇನೊ ಸರಿ ಎನೂ ಅಂದುಕೊಳ್ಳದೇ ಹೃದಯ ವೈಶಾಲ್ಯದಿಂದ ಒಪ್ಪಿಕೊಂಡೆ, ಆದ್ರೆ ಎಲ್ರೂ ಹಾಗೆ ಇರಲ್ಲಾ ಆದ್ರೆ ನನಗೆ ನಿನ್ನ ಮೇಲೆ ನಂಬಿಕೆ ಇರಬೇಕಿತ್ತು, ಅನುಮಾನಿಸಿದ್ದು ನನ್ನ ಮೊದಲ ತಪ್ಪು" ಅಂದೆ "ಅದೂ ಸರಿ ಬಿಡಿ, ಕೇಳಿದರೂ ವಿಕೋಪಕ್ಕೆ ಹೋಗೊ ಚಾನ್ಸುಗಳೂ ಇರ್ತವೆ, ಆದ್ರೆ ನನ್ನ ಮುಂದೆ ನೀವೇನು ಮುಚ್ಚಿಡಬೇಕಿಲ್ಲ" ಅಂತ ಫುಲಟೈಂ ಪರಮಿಷನ್ನು ಕೊಟ್ಲು, ಎನು ಕೇಳಲೂ ಲೈಸನ್ಸು ಸಿಕ್ಕಂತಾಯ್ತು, ಅದ್ರೂ ನಾನಿನ್ನೆಂದೂ ಕೇಳಲಿಕ್ಕಿಲ್ಲ.

ವೀಕೆಂಡಿನ ಸುಂದರ ಸಂಜೆಯೊಂದು ನಂಬರಿನಿಂದ ಹಾಳಾಗಿ ಹೋಗಿತ್ತು, ಆದರೂ ಬಿರುಕು ತುಂಬಿ ಸಂಭಂದ ಮತ್ತಷ್ಟು ಗಟ್ಟಿಯಾಗಿತ್ತು. ಕ್ಷಣ ಮಾತ್ರದಲ್ಲೆ ಆಕಡೆಯೆಲ್ಲೊ ಮುಖ ಸಿಂಡರಿಸಿಕೊಂಡು ಬಿದ್ದವಳು, ಕೊರಳಿಗೆ ಸುತ್ತಿಕೊಂಡಿದ್ಲು, ಹುಚ್ಚು ಯೊಚನೆಗಳ ಹೊಯ್ದಾಟದಲ್ಲಿ ತಲೆ ಹುಚ್ಚೆದ್ದು ನೋಯುತ್ತಿತ್ತು. ಅದರೂ ಏಕೊ ಮನಸು ಏನೊ ಭಾರ ಇಳಿಸಿದಂತೆ ನಿರಾಳವಾಗಿತ್ತು, ತಲೆ ನೋವಿದೆಯೆಂದದ್ದಕ್ಕೆ ಇವಳ ಬೆರಳುಗಳು ಹಣೆಯ ಮೆಲೆ ಪರ್‍ಏಡು ನಡೆಸಿದ್ದವು. ಬೊಂಬೆ ಸಿಕ್ಕ ಮಗುವಿನಂತೆ ಬಾಚಿ ಅಪ್ಪಿಕೊಂಡಿದ್ದೆ, ಯಾರೂ ಕಿತ್ತುಕೊಳ್ಳದಂತೆ. ಬಹಳ ಹೊತ್ತು ಅವಳು ಸುಮ್ಮನಿರುವುದಿಲ್ಲ... "ರೀ ನಾಳೆ ಫಿಲ್ಮಗೆ ಕರ್ಕೊಂಡೊ ಹೊಗ್ತೀರಾ" ಅಂದ್ಲು..."ಹೂಂ 'ಗಜಿನಿ' ಹೊಗೋಣಾ" ಅಂದೆ ಎನ್ ಬೇಡ ಅವನ ಹಾಗೆ ನೀವು ನನ್ನ ಮರೆತುಬಿಟ್ರೆ ಅಂತಾ ಕಿಚಾಯಿಸಿದ್ಲು, "ಸರೀ ನಾವಿಬ್ಬರೂ ಪರಫೆಕ್ಟು ಜೋಡಿ ಅಲ್ವಾ 'ರಬ್ ನೆ ಬನಾ ದಿ ಜೊಡಿ' ಹೊಗೊಣಾ" ಅಂದಿದ್ದಕ್ಕೆ " ರೀ ಯಾವುದಾದ್ರೂ ಕನ್ನಡ ಫಿಲ್ಮ ಹೊಗೋಣ 'ಗುಲಾಮ' ಹೇಗೆ" ಅಂದ್ಲು ನಾನೇನು ನಿನ್ನ ಗುಲಾಮ ಅಲ್ಲ ಬರಲ್ಲ ಹೋಗು ಅಂದೆ, ಕೊನೆಗೆ "ಸರಿ 'ನೀನ್ಯಾರೆ' ಹೊಗೋಣ" ಅಂದ್ರೆ..."ರೀ ನಾನ ಕಣ್ರಿ ನಿಮ್ ಹೆಂಡ್ತಿ ನೀನ್ಯಾರೆ ಅಂತ ಕೇಳ್ತಿದೀರಲ್ಲ" ಅಂತ ತುಂಟಾಟಕ್ಕಿಳಿದಳು, ಫಿಲ್ಮ ನಾಳೆ ನೋಡಿದ್ರಾಯ್ತು ತುಂಟಿ ಬಿಟ್ಟರೆ ಮಾತಾಡ್ತಾನೇ ಇರ್ತಾಳೆ ಅಂತ ತುಟಿಗೆ ತುಟಿ ಲೊಕ್... ಅಹಾ ಏನ್ ಇನ್ನೂ ನೊಡ್ತಿದೀರ... ನಮ್ಮನೆ ನಮ್ಮ ಸಂಸಾರ, ಏನೊ ಸ್ವಲ್ಪ ಜಗಳ ಆಗ್ತಿರತ್ತೆ... ಗಂಡ ಹೆಂಡ್ತಿ ಜಗಳ ಉಂಡು ಮಲಗೊ ತನಕ ಅಂತಾರೆ... ನೀವು ಅನುಮಾನಿಸಿ ನಿಮ್ಮನೇಲಿ ಬಿರುಕು ಬಿಡದಂದೆ ನೋಡಿಕೊಳ್ಳ ಹೋಗಿ... ಹ ಹ ಹ ಹ...

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/biruku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Saturday, January 3, 2009

ನನ್ನವರ ನನ್ನವರಿಂದ ನನ್ನವರಿಗೋಸ್ಕರ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಮುಂಜಾನೆ ಏಳಾಗಿತ್ತು, ಅಪ್ಪನಿಗೆ ಎಂಟಾದ ಮೇಲೆ ಸೂರ್ಯೊದಯ, ಅದರೂ ನಾವು ಬಂದಿದ್ದೀವಲ್ಲ ಅಂತ ಬೇಗ ಎದ್ದು ಪೇಪರ್ ಓದುತ್ತ ಕುಳಿತಿದ್ರು, ಇವಳು ಪಾಕಶಾಲೆಯಿಂದ ಹೊರಬಂದು ಅಪ್ಪನಿಗೆ ಚಹ ಕೊಟ್ಲು, ನನಗೇ ಅಂದಿದ್ದಕ್ಕೆ, ಮಾಡ್ತಿದೀನೀ ತಾಳಿ ಅಂತ ಗದರಿದಳು. ಅಪ್ಪ ಚಹ ಒಂದು ಸಿಪ್ಪು ಹೀರಿ, ಪಕ್ಕಾ ಉತ್ತರಕರ್ನಾಟಕದ ಸ್ಟೈಲಿನಲ್ಲಿ "ಚಾ ಭಾಳ ಚಲೋ ಮಾಡೀವಾ! ಸಕ್ರೀ ಗಿಕ್ರೀ ಅಗ್ದೀ ಕರೆಕ್ಟ ಹಾಕೀ" ಅಂತ ಹೊಗಳುತ್ತಿದ್ದಂತೇ, "ಅಲ್ಲ ಹಾಕಿ ಮಾಡೀನ್ರಿ ಕೆಮ್ಮಾ ಕಫಾ ಎಲ್ಲ ಕ್ಲಿಯರ ಆಗತೈತ್ರಿ" (ಅಲ್ಲ ಅಂದ್ರೆ, ಅದ ಶುಂಟಿ, ಅದರಕ್, ಜಿಂಜರ್ ಅಂತಾರಲ್ಲ ಅದು) ಅಂತ ಕೊಚ್ಚಿಕೊಂಡ್ಲು. ಮುಖ ಇಷ್ಟಗಲಾ ಮಾಡಿಕೊಂಡು ಹೆಮ್ಮೆಯಿಂದ ಈಕಡೆ ಬರ್ತಿದ್ದಂಗೆ ಅಮ್ಮ ಹಾಲು ಖಾಲಿ ಮಾಡಿದ್ದಕ್ಕೆ ಇವಳ ಬಯ್ಯದೇ, "ಹಾಲಿನ್ಯಾಗ್ ಚಾ ಬೇಕ ನಿಮ್ಮ ಮಾವಾರಿಗೆ, ನೀನರ ಎನ್ ಮಾಡಿ ಬಿಡ" ಅಂತ ಸಪೊರ್‍ಟ್ ಮಾಡಿದ್ದು ಕೇಳ್ತು. ಶುಧ್ಧ ಪೆಕರನಂತೆ ನಾ ಕೂತಿದ್ದು ನೋಡಿ ತಂಗಿ ಇವ್ಳ ಕಿವಿಯಲ್ಲಿ ಏನೊ ಊದಿ ನಕ್ಕದ್ದು ಕಂಡಿತು...

ಊರಲ್ಲಿದ್ದೆ, ಅಪ್ಪ ಅಮ್ಮ ಎಲ್ಲ ನೋಡಿ ಮಾತಾಡಿ ಬರಲು ಹೊಗಿದ್ದೆ. ಇತ್ತೀಚೆಗೆ ನಾನೇ ಹೊರಗಿನವನೇನೋ ಅನ್ನುವಷ್ಟು ನನ್ನವಳು ಅವರೊಂದಿಗೆ ಬೆರೆತು ಹೋಗಿದ್ದಾಳೆ. ಅಮ್ಮ ಅವಳ ಸಪೊರ್‍ಟ್ ಮಾಡೋದೇನು, ಅಪ್ಪ ಅವಳ ಹೊಗಳುವುದೆನೋ, ತಂಗಿ ಅವಳು ಗೆಳತಿಯರಂತೆ ಗುಸುಗುಸು ಮಾತಾಡಿಕೊಳ್ಳೊದೇನು... ಒಂದೇ ಎರಡೇ... ಇದೆಲ್ಲ ಢಿಡೀರೆಂದು ಆದ ಬದಲಾವಣೆಯೇನಲ್ಲ... ಹೆಚ್ಚು ವರದಕ್ಷಿಣೆ ತಂದ ಸೊಸೆಗೆ ತೋರುವ ನಾಟಕದ ಪ್ರೀತಿಯಲ್ಲ... ಇದಕ್ಕೆಲ್ಲ ಕಾರಣ ನಾನು... ಹೌದು ನಾನೇ ಅಂತ ಹೆಮ್ಮೆಯಿಂದ ಬೇಕಾದರೆ ಜಂಭದಿಂದ ಹೇಳಿಕೊಳ್ಳುತ್ತೇನೆ.

ಮದುವೆಯಾದ ಹೊಸತರಲ್ಲಿ ಮೊದಲ ರಾತ್ರಿಗೆ ಎಲ್ಲರೂ ಸಾಕಷ್ಟು ಮಾತಾಡಿ ತಯ್ಯಾರಿ ಮಾಡಿಕೊಳ್ಳೊದು, ಆದ್ರೆ ನಾನು ಮೊದಲು ಬಿಟ್ಟು ಮುಂಬರುವ ಹಲವು ರಾತ್ರಿಗಳಿಗೆ ನಿದ್ರೆ ಬರದಂತೆ ಚಿಂತೆ ಹಚ್ಚಿ ಕಾಡುವ ಸಾಂಸಾರಿಕ ಗೊಂದಲಗಳು ಹುಟ್ಟದಂತೆ ಮಾಡಲು ಸಿದ್ದತೆ ಮಾಡುತ್ತಿದ್ದೆ... ಎಷ್ಟೊ ಮದುವೆಗಳ ನೋಡಿದ್ದ ನನಗೆ ನಾನೂ ಅವಲ್ಲೊಬ್ಬನಾಗಬಹುದು ಅನ್ನೊ ಭಯ ಬೇರೆ ಇತ್ತು. ಅದಕ್ಕೆ ಮದುವೆಗೆ ಮುಂಚೆ ನಾವಿಬ್ಬರೂ ಮಾತಾಡಿದಾಗಲೆಲ್ಲ, ಮನೆಯ ಪ್ರತೀ ಚಿಕ್ಕ ಪುಟ್ಟ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಶುಗರ್ ಕಾಯಿಲೆ ಇಲ್ದಿದ್ರೂ ಅಪ್ಪನ ಸಕ್ಕರೆಯಿಲ್ಲದ ಚಹ, ಅಮ್ಮನ ಇಷ್ಟದ ಧಾರಾವಾಹಿಗಳು, ತಂಗಿಯ ಫೆವರಿಟ್ ಸ್ಟಾರುಗಳು, ಅಷ್ಟೇ ಅಲ್ಲ ಮನೆಗೆ ಕೆಲಸಕ್ಕೆ ಬರುವ ಪ್ರತೀ ಮನೆಗೆಲಸದವರು, ಅವರ ಇಷ್ಟಾನಿಷ್ಟಗಳು ಅವಳಿಗೆ ಗೊತ್ತಾಗಿತ್ತು, ಅವಳೊ ಬೆರಳು ಕೊಟ್ರೆ ಕೈ ನುಂಗೊ ಜಾಯಮಾನದವಳು, ಚಹಕ್ಕೆ ಜಿಂಜರ ಸೇರಿಸಿ ಅಪ್ಪನ ಫುಲ್ ಇಂಪ್ರೆಸ್ ಮಾಡಿಬಿಟ್ಟಿದ್ಲು... ಹೌದು ಇದರಲ್ಲಿ ಅವಳ ಪಾತ್ರವೂ ಇದೆ, ನಾನು ಹೇಳಿದ್ದೆಲ್ಲ ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದು ಅವಳೇ ತಾನೆ...

ಇನ್ನೂ ನೆನಪಿದೆ, ಇವಳ ನೋಡಲು ಹೋಗಿದ್ದು, ಹುಡುಗಿ ನೋಡಿಯಾದ ಮೇಲೆ ನೀವಿಬ್ಬರೂ ಏನಾದ್ರೂ ಮಾತಾಡೋದು ಇದ್ರೆ ಅಂತಿದ್ದಂಗೆ ಅವಳು ಕೈಗೊಂದು ಪುಟಾಣಿ ಮರಿ(ಮಗು) ಎತ್ಕೊಂಡು ಮನೆಯ ಟೆರ್ರೆಸ್ಸಿಗೆ ಬಂದ್ಲು, ಆ ಪುಟಾಣಿ ಕಾವಲಿಗೆ ಬಂದಿದ್ದು, ಸೆಕ್ಯೂರಿಟಿ!, ಏನು ಇವಳ ತಿಂದು ಬಿಡ್ತಿದ್ನಾ!!! ನನಗೆ ಎಂಥ ಹೆಂಡತಿ ಬೇಕೆಂದು ನಾ ಕೊರೆಯದೆ, ನಿಮಗೆ ಎಂಥ ಗಂಡ ಬೇಕು ಅಂತದಿದ್ದಕ್ಕೆ, ನಿಮ್ಮಂತಿದ್ದರೆ ಸಾಕು ಅಂತ ಬಾಂಬ್ ಹಾಕಿ ಬಿಟ್ಟಿದ್ಲು, ಅವಳಿಗೆ ಇಂಥದ್ದೇ ಆದ ಕಲ್ಪನೆಗಳೇನಿಲ್ಲ ಅಂತ ಗೊತ್ತಾಗಿ ಹೋಗಿತ್ತು. ನಿಮಗೆ ಎಂಥ ಹೆಂಡತಿ ಬೇಕು ಅಂತ ಮರು ಪ್ರಶ್ನೆಯೊಂದು ತೂರಿ ಬಂದಿತ್ತು. ನನಗೆ ಹೆಂಡತಿಗಿಂತ ನಮ್ಮನೆಗೆ ಸೊಸೆ ಬೇಕು ಅಂತ ಸೂಚ್ಯವಾಗಿ ಹೇಳಿದ್ದಕ್ಕೆ, ನನಗೆ ಮನೆ ಮಗಳಾಗಿ ಬರುವ ಆಸೆ ಅಂತ ಜಾಣ ಉತ್ತರ ನೀಡಿ ಮನಸ ಗೆದ್ದು ಬಿಟ್ಟಿದ್ಲು.

ಮದುವೆಯಾಗಿ ಬಂದ ಮೊದಲ ದಿನದಿಂದಲೇ ಎಲ್ಲರ ಮೋಡಿ ಮಾಡಿ ಬಿಟ್ಲು, ಅಮ್ಮ ಮಾಡುತ್ತಿದ್ದ ಚಹಕ್ಕೆ ಎರಡು ನಿಂಬೆಯ ಎಳೇ ಎಲೆ ಹಾಕಿದ್ಲು ಅಷ್ಟೇ, ಎಲ್ರೂ ಲೆಮನ್ ಫ್ಲೇವರ್ ಟೀ ಮೆಚ್ಚಿದ್ದಕ್ಕೆ ಅಮ್ಮ ಸೊಸೆ ಮಾಡಿದ್ದು, ಸೊಸೆ ಮಾಡಿದ್ದು ಅಂತಾ ಹೇಳುತ್ತ ಹೆಮ್ಮೆಯಿಂದ ತಿರುಗಿದ್ದು ನೋಡಿ, ನನಗೇ ನಂಬಲಾಗಿರಲಿಲ್ಲ... ಆವತ್ತಿನ ಆ ಲೆಮನ್ ಟೀನಿಂದ ಇಂದಿನ ಈ ಜಿಂಜರ ಟೀವರೆಗೂ ಅವಳೊಂದಿನಿತೂ ಬದಲಾಗಿಲ್ಲ, ಅವಳ ಮೇಲಿನ ಎಲ್ಲರ ಪ್ರೀತಿ ಡಬಲ್ ಟ್ರಿಬಲ್ ಆಗುತ್ತ ಹೊರಟಿದೆ.

ಊರಿಗೆ ಹೋಗಿದ್ದೆ ತಡ ಅವಳು ಬಂದಿದ್ದು ಎಲ್ಲರಿಗೂ ಗೊತ್ತಾಗಿರುತ್ತೆ, ಮನೆಗೆಲಸದವರೂ ಮಗ ಸೊಸೆ ಬಂದಿದ್ದಾರೆ ಅವರ ಮನೆಗೆ ಬೇಗ ಹೋಗಬೇಕು ಅಂತ ಬೇರೆ ಮನೆ ಕೆಲಸ ಬಿಟ್ಟು ಓಡೊಡಿ ಬರ್ತಾರೆ. ಕೆಲಸದವರ ಮಗ ಮಗಳ ಹೆಸರಿನಿಂದ ಹಿಡಿದು ಯಾರು ಯಾವ ಕ್ಲಾಸಲ್ಲಿ ಓದ್ತಿದಾರೆ ಅನ್ನೋದು ಕೂಡ ನೆನಪಿಟ್ಟುಕೊಂಡು ಕೇಳ್ತಾಳೆ, ಕ್ಲಾಸಿಗೆ ಫಸ್ಟ್ ಬಂದ್ರೆ ಕೊಡಿಸ್ತೀನೆಂದ ಹೇಳಿ ಉಬ್ಬಿಸಿ ಓದುವಂತೆ ಮಾಡಿದ ಅವರ ಮಗನಿಗೆ ಬ್ಯಾಗು ಮರೆಯದೆ ತಂದಿರ್ತಾಳೆ, ಅದಕ್ಕೆ ಕೊಟ್ಟಿದ್ದು ನೂರೈವತ್ತೇ ಆದ್ರೂ, ಮನೆಗೆಲಸದವಳು ಊರಿಗೆಲ್ಲ ಟಾಂ ಟಾಂ ಅಂತಾ ಬೆಂಗಳೂರಿನಿಂದ ಬ್ಯಾಗು ತಂದು ಕೊಟ್ಟಿದ್ದಾರೆ ಅಂತ ಸಾರಿಕೊಂಡು ಬಂದಿರುತ್ತಾಳೆ. ನಿಜವಾಗ್ಲೂ ಕೆಲಸದವರ ಬಗ್ಗೆ ಕಾಳಜಿವಹಿಸಿ ನೋಡಿ ಮನೆಯ ನೆಮ್ಮದಿಯಲ್ಲಿ ಅವರ ಪಾಲೂ ಇರುತ್ತೆ, ಅದಕ್ಕೆ ಅಲ್ವೆ ನಾ ಮನೆಗೆಲಸದವರ ವಿವರವನ್ನೂ ಇವಳಿಗೆ ಹೇಳಿದ್ದು.

ಅಮ್ಮ ಎಣ್ಣೆ ಬಿಸಿ ಮಾಡಿ ತಲೆ ತುಂಬ ಹಚ್ಚಿ ಅವಳ ಎಣ್ಣೆ ಸ್ನಾನಕ್ಕೆ ರೆಡಿ ಮಾಡುತ್ತಿದ್ರು, ಹೋಗಿ ಕೂದಲ ಹಿಡಿದೆಳದು ತವರು ಮನೆಲೂ ನಿನಗಿಷ್ಟು ಆರೈಕೆ ಮಾಡ್ತಾರಿಲ್ಲೊ ಅಂತ ಛೇಡಿಸಿ ಬಂದೆ, ಅಮ್ಮನೂ ಅಷ್ಟೇ ಅವಳ ಮಗಳಂತೇ ನೋಡಿಕೊಂಡಿದಾರೆ, ಮದುವೆಗೆ ಹುಡುಗಿ ಹುಡುಕುವಾಗಲೇ ಈಗೆಲ್ಲ ಒಳ್ಳೆ ಸೊಸೆ ಸಿಗೊದು ಕಷ್ಟ ಅಂತ ಹೇಳ್ತಾ ಹೇಳ್ತಾ ಸೊಸೆ ಮೇಲಿನ ಅವರ ನಿರೀಕ್ಷೆ (ಎಕ್ಸಪೆಕ್ಟೇಶನ್) ಕಮ್ಮಿ ಮಾಡುತ್ತ ಬಂದಿದ್ದೆ, ಹೀಗಾಗಿ ಅವರೂ ಹೊಂದಾಣಿಕೆ ಮಾಡಿಕೊಳ್ಳಲು ಅಣಿಯಾಗಿದ್ರು. ಅದಕ್ಕೆ ಕೆಲವು ಸಾರಿ ಅವಳ ತಪ್ಪುಗಳನ್ನೂ ಕೂಡ ಅವರು ಸಮರ್ಥಿಸಿಕೊಳ್ಳೊದು.

ಸ್ನಾನ ಮುಗಿದು, ಅಮ್ಮನ ಕೈಯಡಿಗೆ ರುಚಿ ನೋಡಿ, ಬಾಯಿ ಚಪ್ಪರಿಸುತ್ತ ಹೊರ ಬಂದೆ, ಏನೇ ಅನ್ನಿ ಹೆಂಡತಿ ಎಷ್ಟೇ ಪಂಚ ಪಕ್ವಾನ್ನ ಮಾಡಿ ಹಾಕಲಿ ಅಮ್ಮನ ಕೈ ರುಚಿಯೇ ಬೇರೆ, ಇದು ಎಲ್ಲರೂ ಒಪ್ಪಲೇ ಬೇಕು. ಇಲ್ಲಿ ನೊಡಿದ್ರೆ ತಂಗಿ ಇವಳು ನನ್ನ ಲ್ಯಾಪಟಾಪ್ ತೆಗೆದು ಯಾವುದೊ ಫಿಲ್ಮ್ ನೊಡುತ್ತ ಕುಳಿತಿದ್ರು, ಇವಳು ನೊಡಿರ್ತಾಳೆ ಆದ್ರೂ ತಂಗಿಗೆ ಕಂಪನಿ ಕೊಡಲು ಕೂತಿದ್ಲು, ಮೇಲ್ ಚೆಕ್ ಮಾಡ್ಬೇಕು ಲ್ಯಾಪಟಾಪ್ ಕೊಡು ಅಂತಂದಿದ್ದಕ್ಕೆ ತಂಗಿ ಕೊಟ್ಟಿರೋಳು, ಇವಳು ನಡುವೆ ಬಾಯಿ ಹಾಕಿ "ರೀ ಇಂಜನೀಯರ್ರು ಸಾಹೇಬ್ರೆ, ಊರಿಗೆ ಬಂದಾಗ್ಲಾದ್ರೂ ಕಂಪ್ಯೂಟರ್ ಕುಟ್ಟೊದು ಬಿಡಿ" ಅಂತ ಬೈದು, ನನ್ನ ಲ್ಯಾಪ್ ಮೇಲೆ ಎರ್‍ಇ ಕುಳಿತು ಕಿವಿಯಲ್ಲಿ "ನಿಮಗೆ ಲ್ಯಾಪಟಾಪ್ ಬೇಕಿದ್ರೆ ನಾನಿದೀನಲ್ಲ" ಅಂತ ಉಸಿರಿದ್ಲು. ತಂಗಿ ಮುಸಿ ಮುಸಿ ನಗುತ್ತಿದ್ದು ನೋಡಿ ನಾಚಿ, ಅಪ್ಪನೊಂದಿಗೆ ಹರಟಲು ಹೊರಗೆ ಬಂದು ಕಟ್ಟೆ ಮೇಲೆ ಕುಳಿತೆ, ಇನ್ನು ಅಪ್ಪನೊಂದಿಗೆ ಹರಟೆ ಅಂದ್ರೆ ನಾ ತಾಸು ಎರಡು ತಾಸು ಆಕಡೆ ಸುಳಿಯಲ್ಲ ಅಂತ ಗ್ಯಾರಂಟಿಯಾಗಿ, ಅವರಿಬ್ರೂ ಕರೀನಾಳ ಹೊಸ ಬಾಯಫ್ರೆಂಡ ಯಾರು ಅಂತಾ ಚರ್ಚಿಸುತ್ತ ಫಿಲ್ಮ್ ನೋಡತೊಡಗಿದ್ರು.

ಸಂಜೆಯಾಗುತ್ತಿದ್ದಂತೆ ಟೀವೀ ನೊಡುತ್ತ ಕುಳಿತವನನ್ನು ರೀ ಧಾರಾವಾಹಿ ಟೈಮ್ ಆಯ್ತು ರಿಮೊಟು ಕೊಡಿ ಅಂದ್ಲು, ಅಮ್ಮನ ಫೇವರಿಟ್ಟು ಧಾರಾವಾಹಿ ಹತ್ತೋದಿರಬೇಕು, "ಧಾರಾವಾಹಿ ಯಾವುದು, ಮನೆಯೊಂದು ಮುರಿದ ಬಾಗಿಲಾ" ಅಂತ ಕೇಳಿದೆ ಅಲ್ಲ ಅಂತ ರಿಮೊಟು ಕಸಿದುಕೊಂಡು, "ಅತ್ತೆ ಮನೆಯೊಂದು ಮೂರು ಬಾಗಿಲು ಧಾರಾವಾಹಿ ಹತ್ತಿತು ಬನ್ನಿ" ಅಂತ ಚೀರಿದ್ಲು, "ಸ್ವರೂಪಾ ಬಂದ್ರೆ ಕರೀ" ಅಂತ ಎದ್ದು ಬಂದೆ, ಅದೇ "ಈ ಟೀವೀ" ಮನೆಯೊಂದು ಮೂರು ಬಾಗಿಲು ಧಾರಾವಾಹಿ ಕ್ಯಾರೆಕ್ಟರ್ರು ಸ್ವರೂಪಾ ನೊಡೋಕೆ ಚೆನ್ನಾಗಿದಾಳೆ, ಕಣ್ಣಲ್ಲೇ ನಟಿಸಿಬಿಡ್ತಾಳೆ, ಅದ್ಕೆ ಅಲ್ವೆ ನಾ ರಾತ್ರಿ ಒಂಬತ್ತರ ಮುಂದೆ ಅಮ್ಮ ನೊಡದಿದ್ರೂ ಆ "ಮುಕ್ತ ಮುಕ್ತ" ಧಾರಾವಾಹೀಲಿ ಕಲ್ಯಾಣಿಯಾಗಿಯೂ ಬರುವ ಅವಳ ನೋಡಲು ಕೂತ್ಕೊಳ್ಳೊದು, ಅದು ಇವಳಿಗೂ ಗೊತ್ತು, ಆಗ ಇವಳು ಅಮ್ಮ ಸೇರಿ ನನಗೆ ರಿಮೊಟು ಕೊಡದೆ ಸತಾಯಿಸಿ ಮಜಾ ತೊಗೊಳ್ಳೊದು ಕೇಳಲೇಬೇಡಿ...

ಹೀಗೆ ಬಂದುಳಿದು ಐದು ದಿನಗಳಾಗಿದ್ದು ಗೊತ್ತೇ ಆಗ್ಲಿಲ್ಲ, ಮತ್ತೆ ಬೆಂಗಳೂರಿಗೆ ಹೊರಡುವಾಗ ಅಮ್ಮ ಮಾಡಿದ ಉಪ್ಪಿನಕಾಯಿ ಶೇಂಗಾ(ನೆಲಗಡಲೆ, ಕಳ್ಳೆಕಾಯಿ) ಚಟ್ನಿ, ಬೆಳಗಾವಿ ಕುಂದಾ(ಸ್ವೀಟ್, ಪೇಡ ಹಾಗೆ ಇರುತ್ತೆ) ಎಲ್ಲ ಕಟ್ಟಿಸಿಕೊಂಡು ಒಂದು ದೊಡ್ಡ ಬ್ಯಾಗು ಮಾಡಿಕೊಂಡಿರ್ತಾಳೆ, ಇದೆಲ್ಲ ಹೊರೋಕೆ ಕತ್ತೆನೇ ಬೇಕು ಅಂದ್ರೆ ನೀವಿದೀರಲ್ಲ ಅಂತ ಕಾಂಪ್ಲಿಮೆಂಟು ಕೊಟ್ಟು ನನ್ನ ಕತ್ತೆ ಮಾಡಿರ್ತಾಳೆ. ಎಲ್ಲ ಹೊತ್ತುಕೊಂಡು ಬಸ್ಸು ಏರಿ ಕುಳಿತ್ರೆ, "ಅವ್ಳು ನಮ್ಮ ಇವರ ಸೊಸೆ ಅಲ್ವಾ, ಬಹಳ ಓಳ್ಳೆಯವ್ರು ಅಂತಾ ಕೇಳೀದೀನಿ" ಅಂತಾ ಇವಳ ಕಂಡು ಹಿಂದಿನ ಸೀಟಿನಲ್ಲಿ ಯಾರೊ ಮಾತಾಡಿದ್ದು ಕೇಳಿ, ಪ್ರೀತಿ ಉಕ್ಕಿ ಬಂದು ಸ್ಲೀಪರ ಕೊಚ್‍ನ ಪರದೆ ಎಳೆದು ಇವಳ ಬರಸೆಳೆದು ಮುತ್ತಿಡ್ತೀನಿ, ಈ ಬಸ್ಸಿನವ್ರು ಸ್ಲೀಪರ ಕೊಚ್ ಮಾಡಿ ದೊಡ್ಡ ತಪ್ಪು ಮಾಡಿದ್ರು ನೋಡಿ ಅಂತ ಗೊಣಗುತ್ತ ಕೊಸರಿಕೊಂಡು ಆ ಪಕ್ಕ ಜರುಗಿದ್ರೂ ಮತ್ತೆ ಸರಿದು ನನ್ನ ಸುತ್ತ ಒಂದು ಕೈ ಹಾಕಿ ನಿದ್ದೆ ಹೊದ್ಲು, ಎಷ್ಟೋ ಹೊತ್ತು ಮಲಗಿದವಳ ಮುಖ ಹಾಗೇ ನೊಡುತ್ತಿದ್ದೆ. ರಾತ್ರಿಯೆಲ್ಲ ಬಸ್ಸಿನ ಸದ್ದಿನಲ್ಲಿ ನಿದ್ದೆ ಹತ್ತದಿದ್ರೂ ಯಾಕೋ ಮನಸ್ಸಿಗೆ ನೆಮ್ಮದಿಯಿತ್ತು...

ಇಷ್ಟೆಲ್ಲ ನಾ ಮಾಡುತ್ತಿರುವುದು ನನ್ನವರಿಗೊಸ್ಕರ, ಮಾಡಿಸುತ್ತಿರುವುದೂ ನನ್ನವರಿಂದ, ಇದೆಲ್ಲ ನನ್ನವರದ್ದೇ... ಅದಕ್ಕೇ ಅಬ್ರಾಹ್ಂ ಲಿಂಕನ್ ಹೇಳಿದ್ದು ಜನರ, ಜನರಿಂದ, ಜನರಿಗೊಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಅಂತಾ, ಅದೇ ನಾ ತಿರುಚಿ ಬರೆದದ್ದು ನನ್ನವರ ನನ್ನವರಿಂದ ನನ್ನವರಿಗೋಸ್ಕರ ನಾ ನಡೆಸುತ್ತಿರುವ ಸಂಸಾರವೇ ಈ ನನ್ನ ಪ್ರಭುತ್ವ... ಹೆಸರೇ ಪ್ರಭು ಅಲ್ವೆ ಅಂತ ಇವಳು ಟೀಕಿಸಿದ್ದಕ್ಕೂ ಸರಿ ಹೊಯ್ತು...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/nannavara.pdf


ಬಹಳ ಜನ ಕೇಳ್ತಾ ಇದಾರೆ, ಮದುವೇನೆ ಆಗಿಲ್ಲ ಇಂಥ ಲೇಖನ ಯಾಕೆ ಮತ್ತು ಹೇಗೆ ಬರೀತಿದೀಯಾ ಏನು ಮದುವೆಗೆ ಅರ್ಜೆಂಟಾ ಅಂತಾ, ನಾ ಹೀಗೆ ಬರೆದ ಹಲವು ಲೇಖನ ಓದಿ, ರೀ ನಿಮ್ಮ ಅಡ್ಡ ಹೆಸರೂ ಸರೀ ಇದೆ ಮೂಗಿ ಅಂದ್ರೆ ಮಾತು ಬರಲ್ಲ ಅದಕ್ಕೆ ಬರವಣಿಗೆ ಮೂಲಕ ನಿಮ್ಮ ಆಸೆ ಕಲ್ಪನೆ ವಿವರಣೆ ಎಲ್ಲ ಕೊಡ್ತಾ ಇದೀರ ಎನು ಅಂತಾ ಒಬ್ರು ಛೇಡಿಸಿದ್ರು, ನಿಜ ಇದೆಲ್ಲ ನಾ ಮಾತಿನಲ್ಲಿ ಹೇಳಲಾಗದೆ ಬರೀತಿರೊದು, ಬರೆದದ್ದು ನನ್ನವಳಾಗುವವಳಿಗೆ ಅರ್ಥವಾಗಿ ಕಲ್ಪನೆಗಳಲ್ಲಿ ಕಿಂಚಿತ್ತು ನಿಜವಾದ್ರೂ ಬರೆದದ್ದು ಸಾರ್ಥಕ...

ಹಾಗೇ ಬ್ಲಾಗಿನ ಎಲ್ಲ ಅಭಿಮಾನಿ ಓದುಗರಿಗೆ, ಅಭಿಮಾನವಿಲ್ಲದೆಯೂ ಓದುವವರಿಗೆ, ಪ್ರೀತಿಯಿಂದ ಪತ್ರ (ಇ-ಅಂಚೆ -> ಇಂಚೆ) ಬರೆದವರಿಗೆ, ಕಾಮೆಂಟು ಕೊಟ್ಟವರಿಗೆ, ನನ್ನ ಹಾಗೂ ನನ್ನವಳ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ, ಹೂವು ಮಾರುವ ಗುಲಾಬಿ, ಪರಿಚಯದ ಪರಿಮಳ, ಕಿರಾಣಿ ಅಂಗಡಿಯ ಕೀರ್ತಿಯ ಪರವಾಗಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳುಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು