Sunday, January 18, 2009

ಆ ಒಂದು ದಿನ ನಿನಗೆಂದು...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇತ್ತೀಚೆಗೆ ಕೆಲಸದೊತ್ತಡ ಜಾಸ್ತಿಯಾಗಿ ವೀಕೆಂಡು ಸಿಗೋದೆ ಇಲ್ಲ, ವೀಕೆಂಡೂ ಆಫೀಸಿದೆ ಅಂತ ಹೊರಟರೆ, ಯಾವುದೊ ಮಂತ್ರಿ ನಿಧನರಾದರೆಂದು ಶಾಲೆಗೆ ರಜೆ ಎಂದುಕೊಂಡಿದ್ದು, ರಜೆ ಕ್ಯಾನ್ಸಲ್ಲು ಆಗಿದ್ದು ಕೇಳಿದ ಮಗುವಿನಂತಿರುತ್ತೆ ಅವಳ ಮುಖ. ಸ್ವಲ್ಪವೂ ಬೇಜಾರಿಲ್ಲದೆ ಅಂದೂ ಬೇಗ ಎದ್ದು ಏನೊ ಒಂದು ಬೇಯಿಸಿ ಹಾಕಿರುತ್ತಾಳೆ. ಅಂಥದ್ದರಲ್ಲಿ ಇಂದು ಶನಿವಾರ ಏನೂ ಕೆಲಸವಿರಲಿಲ್ಲ, ಬೇಗ ಎದ್ದು ಓಡುವ ಅವಸರವೇನಿರಲಿಲ್ಲ. ಆರಕ್ಕೇ ಎಚ್ಚರಾಗಿ ಮೇಲೆದ್ದಿದ್ದ ಇವಳ ಇವತ್ತೇನು ಬೇಗ ಏಳೋದು ಅಂತ ಬರಸೆಳೆದು ಬಿಗಿದಪ್ಪಿ ಮಲಗಿದ್ದೆ, ಹೊರಗಡೆ ಛಳಿ ಇನ್ನೂ ಜಾಸ್ತಿಯಿದ್ದದ್ದರಿಂದ ಬಿಸಿಯಪ್ಪುಗೆ ಹಿತವೆನಿಸಿರಬೇಕು ಏನೊ ಮುಲುಗುತ್ತ ಮುಸುಗೆಳೆದುಕೊಂಡಿದ್ದಳು. ಎಂಟಾದಾಗ ಮುಂಜಾನೆ ಎಳೆ ಬಿಸಿಲು ಕಿಟಕಿಯಿಂದ ಇಣುಕಿ ನೊಡತೊಡಗಿದಾಗಲೇ ಎಚ್ಚರವಾಗಿದ್ದು. ಎಚ್ಚರಾಗಿದ್ದರೂ ಏಳೊ ಮನಸು ಇಬ್ಬರಿಗೂ ಇದ್ದಂತಿರಲಿಲ್ಲ, ಏನೂ ಮಾತಾಡದೆ ಹಾಗಿ ಮೌನವಾಗಿದ್ದು ಬಿಡುತ್ತೇವೆ ಒಂದೊಂದು ಸಾರಿ, ಮೌನವೇ ಮಾತಾಡುತ್ತಿರುತ್ತೆ, ಇಲ್ಲಾ ಮನಸಿನಲ್ಲೇ ಏನೊ ಕೇಳಬೇಕೆಂದುಕೊಂಡಿದ್ದು, ಹೇಗೆ ಆರಂಭಿಸೋದು ಅಂತ ಯೋಚಿಸುತ್ತಿರುತ್ತೇವೆ. ಇಗಲೂ ಸ್ವಲ್ಪ ಹಾಗೇ ಆಗಿತ್ತು, ಇವತ್ತೇನು ಮಾಡೋದು ಅನ್ನೊ ಪ್ಲಾನುಗಳು ತಲೆಯಲ್ಲಿ ಒಡುತ್ತಿದ್ದವು.

ಎದೆಯ ಮೇಲೆ ತಲೆಯಿರಿಸಿ ಮಲಗಿದ್ದ ಅವಳ ತಲೆಯ ಮೇಲೆ ಕೈಯಿರಿಸಿದ್ದರಿಂದ ಕೈಗೆ ಆಟವಾಡಲು ಕಿವಿಯೋಲೆ ಸಿಕ್ಕಿತ್ತು, ನನ್ನ ಬೆರಳೊಂದು ಅವಳ ಕಿವಿಯ ಸುತ್ತ ಒಂದು ರೌಂಡು ಸುತ್ತು ಹಾಕಿ ಕಿವಿಯೋಲೆಯ ಜುಮಕಿಗೆ ಒಂದು ಸಾರಿ ಡಿಕ್ಕಿ ಹೊಡೆದು ಮತ್ತೆ ಮತ್ತೆ ಸುತ್ತು ಹಾಕುತ್ತಿತ್ತು, ದೇವಸ್ಠಾನದಲ್ಲಿ ಗರ್ಭ ಗುಡಿಯ ಸುತ್ತು ಪ್ರದಕ್ಷಿಣೆ ಹಾಕಿ ಬಂದು ಘಂಟೆ ಬಾರಿಸಿದಂತೆ. ಅವಳೋ ನನ್ನ ಅಂಗಿಯ ಅದೇ ಬಟನ್ನು ಹಾಕುವುದೂ ತೆಗೆಯುವುದೂ ಮಾಡುತ್ತಿದ್ದಳು, ಬಿಟ್ಟರೆ ಅತೀ ಹೆಚ್ಚು ಸಾರಿ ಬಟನ್ನು ಹಾಕಿ ತೆಗೆದ ಗಿನ್ನೆಸ್ ದಾಖಲೆ ಮಾಡಿರೊಳು, ಇನ್ನೇನು ಬಟನ್ನು ಕಿತ್ತು ಬರುವುದೆಂದು ಖಾತ್ರಿಯಾದ ಮೇಲೆ ಎಂದಿನಂತೆ ಅವಳೇ ಮೌನ ಮುರಿದು ಏನೊ ಹೇಳಬೇಕೆನ್ನುವಷ್ಟರಲ್ಲಿ ನಾನೂ ನಡುವೆ ಬಾಯಿ ತೆರೆದೆ.

ನೀನು ಹೇಳು ನೀವು ಹೇಳಿ ಅಂತ ಇಬ್ಬರೂ ಸ್ವಲ್ಪ ಹೊತ್ತು ಕಿತ್ತಾಡಿ, ಕೊನೆಗೆ ಮತ್ತೆ ಮೌನಿಗಳಾಗಿ, ಅವಳು ಪಟ್ಟು ಸಡಲಿಸದವರಂತೆ ಕಾಣದಾದಾಗ, ನಾನೇ ಮೊದಲು ಕೇಳಿದೆ, "ಏನಿಲ್ಲಾ, ಈವತ್ತು ರಜೆ ಏನು ಮಾಡೊದು ಅಂತ ಕೆಳೋನಿದ್ದೆ" ಅಂದೆ ಅಷ್ಟೇ... ನಮ್ಮ ಮ್ಯಾನೇಜರು ಪ್ರೊಜೆಕ್ಟು ಪ್ಲಾನು ಓದಿ ಹೇಳುವಂತೆ ಒಂದೇಟಿಗೆ ಮುಂಜಾನೆಯಿಂದ ಸಂಜೆವರೆಗೆ ಒಂದು ಪರ್‌ಫೆಕ್ಟು ಪ್ಲಾನು ಉಸುರಿದಳು, ಅದೇ ಪ್ಲಾನನ್ನೇ ಡೆವಲಪ್ಪರು ಏನು ಗತ್ಯಂತರವಿಲ್ಲದೇ ಒಪ್ಪಿಕೊಳ್ಳುವಂತೆ, ನಾನೂ ಒಪ್ಪಿದೆ. ವಾರದಲ್ಲಿ ಇಷ್ಟು ದಿನಾ ಕೆಲಸ ಕೆಲಸ ಅಂತ ಕಳೆದ ಮೇಲೆ ಅವಳಿಗೊಂದು ದಿನ ಮೀಸಲಿಡದಿದ್ದರೆ ಹೇಗೆ.

ಎದ್ದು ಬ್ರಷು ಮಾಡುತ್ತಿದ್ದರೆ, ಅವಳು ಆಗಲೇ ಚಹಕ್ಕಿಟ್ಟಿದ್ದಳು, ಚಹ ಕುಡಿದು ಬ್ಯಾಟರಿ ಚಾರ್ಜು ಆಯಿತೆಂದು ಕಾಣುತ್ತೆ ಹಾಡು ಹಾಕಿ ಹಾಗೆ ಸುಮ್ಮನೆ ಹೆಜ್ಜೆ ಹಾಕತೊಡಗಿದೆ... ಡ್ಯಾನ್ಸು ಎನೂ ಬರಲ್ಲ ಹಾಗೆ ಹೀಗೆ ಕಾಲು ಕೈ ಅಲ್ಲಾಡಿಸೋಕೇನು ಕಷ್ಟ... ಪಾಕಶಾಲೆಯಲ್ಲೇನೊ ವಗ್ಗರಣೆ ಹಾಕುತ್ತ ಹಾಡಿನ ತಾಳಕೆ ತಕ್ಕಂತೆ ಸೌಟು ತಿರುವುತ್ತಿದ್ದ ಅವಳ ಎಳೆದುಕೊಂಡು ಹಾಲ್‌ಗೆ ಬಂದೆ. ಅದೇ ಸೌಟಿನಂತೆ ಅವಳ ಎರಡು ಸಾರಿ ತಿರುಗಿಸಿ ಇಂಗ್ಲೀಷರ ಡ್ಯಾನ್ಸು ಕನ್ನಡ ಹಾಡಿಗೆ ತಂದದ್ದಾಯಿತು. ಕುಣಿದು ಕುಣಿದು ಸುಸ್ತಾಗಿ ನನ್ನ ಸ್ನಾನದ ಮನೆಗೆ ನೂಕಿದಳು, ಸ್ನಾನ ಮುಗಿಸಿ ಇನ್ನೆರಡು ಹೆಜ್ಜೆ(ಸ್ಟೆಪ್ಪು) ಹಾಕಿ, ಡ್ರೆಸ್ಸು ಹಾಕಿಕೊಂಡು ರೆಡಿಯಾದೆ. ಮಹರಾಣಿಯವರು ರೆಡಿಯಾಗುವುದು ಲೇಟೇನು ಆಗೊಲ್ಲ, ಇಂದಂತೂ ತುಂಬ ಸಿಂಪಲ್ಲಾಗೆ ಡಿಂಪಲ್ಲೊಂದೇ ಆಭರಣವೇನು ಅನ್ನುವಂತಿತ್ತು, ರಥ(ಬೈಕು) ಹೊರತೆಗೆದು ಸಾರಥಿಯಾದೆ...

ಮೊದಲೇ ಅವಳು ನಿರ್ಧರಿಸಿದಂತೆ ದೇವಸ್ಥಾನಕ್ಕೆ ಮೊದಲ ಭೇಟಿ, ಪ್ರೊಜೆಕ್ಟಿನಲ್ಲಿ ತಲೆತಿನ್ನುತ್ತಿರುವ ನಾಲ್ಕು ಬಗ್‌ಗಳು(ಕಿರಿಕಿರಿಗಳು!) ಸರಿಹೊಗುವಂತೆ ಮಾಡಪ್ಪ ಅಂತ ಬೇಡಿಕೆ ಮಂಡಿಸಿ, ನೋಡಿದರೆ ಇವಳಿನ್ನೂ ಎನೊ ಕೈಮುಗಿದು ದೊಡ್ಡ ಅಹವಾಲು ಪತ್ರವನ್ನೇ ಸಲ್ಲಿಸುತ್ತಿರುವಂತಿತ್ತು, ಏನು ಕೇಳಿಕೊಂಡೆ ಅಷ್ಟೊತ್ತು ಅಂದ್ರೆ ನನ್ನೇ ಮರುಪ್ರಶ್ನಿಸಿದಳು, "ಎಲ್ಲ ನಿನಗಾಗೆ ವರ ಕೇಳ್ದೆ, ನಿನ್ನ ಗಂಡನ ಸುಖವಾಗಿಡು ಅಂತ" ಹಾಗೇ ಕುಟುಕಿದೆ... ತಿರುಗು ಬಾಣ ಬಂತು, "ನಾನೂ ಅಷ್ಟೇ, ನಿಮ್ಮ ಎಲ್ಲ ಗರ್ಲ್‌ಫ್ರೆಂಡಗಳನ್ನ ಸುಖವಾಗಿಡು ಅಂತ ಬೇಡಿಕೊಂಡೆ ಎಲ್ಲರ ಹೆಸರು ಹೇಳುತ್ತಿದ್ದೆ, ಲಿಸ್ಟು ದೊಡ್ಡದಿತ್ತಲ್ಲ, ಅಷ್ಟೊತ್ತಾಯ್ತು" ಅಂದ್ಲು... ಇವಳೀ ಉತ್ತರ ಕೇಳಿ ಇವಳ ನಾನೇ ಸೃಷ್ಟಿಸಿದ್ದಾ ಅಂತಾ ಆ ದೇವರಿಗೂ ಡೌಟು(ಸಂಶಯ) ಬಂದಿರಬೇಕು.

ಅದ್ಯಾವುದೊ ಮಾಲ್ ಒಳಗೆ ಹೊಕ್ಕು ಮೇಲೆ ಕೆಳಗೆ ಸುತ್ತಿದ್ದಾಯ್ತು, ಡಿಸ್ಕೌಂಟು ಒಂದಕ್ಕೊಂದು ಫ್ರೀ ಇದೆ ಅಂತ, ನನಗೆರಡು ಶರ್ಟು ಕೊಡಿಸಿದಳು, ತನಗೆಂದು ಏನೇನು ಕೊಂಡಿದ್ದಳೊ ಯಾರಿಗೆ ಗೊತ್ತು, ನೋಡಿ ನನಗೆ ಸುಸ್ತಾಗಿ ತಲೆ ಸುತ್ತಿ ಬೀಳುವ ಇಚ್ಛೆಯೆನಿಲ್ಲದಿದ್ದರಿಂದ ಸುಮ್ಮನೆ ಕ್ರೆಡಿಟ್ಟು ಕಾರ್‍ಡು ಉಜ್ಜಿ, ಹೊರಬಂದೆ. ಅಷ್ಟೊತ್ತಿಗಾಗಲೇ ಸೂರ್‍ಯ ನೆತ್ತಿ ಮೇಲೆ ಬಂದಿದ್ದ, ಹೊಟ್ಟೆ ತಾಳ ಹಾಕುತ್ತಿತ್ತು, ಹೊರಗೇ ಏನೊ ತಿನ್ನೊಣವೆಂದ್ರೂ ಬಿಡದೆ ಮನೆಗೆ ಗಾಡಿ ತಿರುಗಿಸಿದಳು, ಸುತ್ತಿ ಸುತ್ತಿ ಬೇಸತ್ತಿದ್ದರಿಂದ ಏನೊ ಅನ್ನ ಸಾರು ತಿಂದು ಹಾಗೆ ಸೊಫಾದ ಮೇಲೆ ಮೈ ಚಾಚಿದೆ. ತಂದ ಅರಿವೆಗಳ ತೆಗೆದು ಹಾಕಿ ಟ್ರಯಲ್ಲು ನೋಡುತ್ತ ಇವಳೇನೊ ಫ್ಯಾಶನ್ನು ಷೋ ನಡೆಸಿದ್ದಳು.

ಸಂಜೆಗೆದ್ದು ಬುಕ್ಕಿಂಗು ಮಾಡಿಟ್ಟಿದ್ದ ಎರಡು ಟಿಕೆಟ್ಟು ತೆಗೆದುಕೊಂಡು ಸಿನಿಮಾ ನೊಡಲು ಸವಾರಿ ಹೊರಟಿತು, ದಾರಿಯಲ್ಲಿ ಕಂಡ ಪಾನಿ ಪುರಿ ನೋಡಿ ಬೇಕೆಂದು ದುಂಬಾಲು ಬಿದ್ದಳು, ಎರಡು ಪ್ಲೇಟು ತೆಗೆದುಕೊಂಡ್ರೂ ನನ್ನ ಪ್ಲೇಟಿನಲ್ಲಿನ ನಾಲ್ಕು ಎತ್ತಿಕೊಂಡ್ಲು. ಇನ್ನೊಂದು ಪ್ಲೇಟು ತಂದು, ತಿಂದು ತಿನಿಸಿ ಅವಳ ಸಂತೃಪ್ತಿಪಡಿಸಿದೆ. ಪಾನಿ ಪುರಿ ಅಂದ್ರೆ ಇನ್ನೊಂದು ಎಕ್ಸ್ಟ್ರಾ ಹೊಟ್ಟೆ ಬಂದು ಬಿಡುತ್ತೆ ಇವಳಿಗೆ. ಅಂತೂ ಸಿನಿಮಾ ಹಾಲ್‌ಗೆ ತಲುಪಲ್ಲಿಗೆ ಸಿನಿಮಾ ಶುರುವಾಗಿತ್ತು, ಮತ್ತೊಮ್ಮೆ ಸಪ್ತಪದಿಗೆ ಹೆಜ್ಜೆಹಾಕುತ್ತಿರುವವರ ಹಾಗೆ ಒಬ್ಬರ ಕೈ ಇನ್ನೊಬ್ಬರು ಹಿಡಿದು ಕತ್ತಲೆಯಲ್ಲಿ ನಡೆದು ಸೀಟು ಹುಡುಕಿಕೊಂಡು ಕುಳಿತೆವು. ಇನ್ನೂ ಕೈ ಬಿಟ್ಟಿರಲಿಲ್ಲ, "ರೀ ಇದು ಸಿನಿಮಾ ಹಾಲ್" ಅಂತ ಚಿವುಟಿದಳು, ಕೈಬಿಟ್ಟೆ. ಯಾವುದೋ ಎಮೊಶನಲ್(ಭಾವನತ್ಮಕ) ಸೀನು ಬಂದಾಗ ಕಣ್ತುಂಬ ನೀರು ತುಂಬಿಕೊಂಡು, ಇನ್ನೇನು ಕಣ್ಣೇರ ಕಟ್ಟೆಯೊಡೆಯಿತೆನ್ನುವಷ್ಟರಲ್ಲಿ, "ಅದು ಫಿಲ್ಮು, ರೀಲು.. ರಿಯಲ್ಲು ಅಲ್ಲ ಅದ್ಕಾಕೆ ಹಾಗೆ ಮುಖ ಮಾಡ್ಕೊಂಡಿದೀರಾ..." ಅಂತ ತಡವಿದಳು. ಅದೇನೊ ಕೆಲವು ಫಿಲ್ಮುಗಳ ಸನ್ನಿವೇಶಗಳಲ್ಲಿ ಎಮೊಶನಲ್ಲು ಆಗಿ ಬಿಡ್ತೇನೆ, ಮೊದಲಿಂದ್ಲೂ ಹಾಗೇನೆ... ಅದೊಂಥರಾ ಹೇಳೊಕಾಗಲ್ಲ...

ಸಿನಿಮಾ ಮುಗಿದಾಗ ಹತ್ತು ಗಂಟೆಯಾಗಿತ್ತು, ಯಾವುದಾದರೂ ಒಳ್ಳೇ ಹೊಟೇಲಿಗೆ ಊಟಕ್ಕೆ ಕರೆದುಕೊಂಡುಹೋಗೋಣ ಅಂದ್ರೆ, ಇಂಟರವಲ್ಲಿನಲ್ಲಿ ತಿಂದದ್ದೇ ಇನ್ನೂ ಕರಗಿಲ್ಲ, ಹಸಿವಿಲ್ಲ ಅಂದ್ಲು. ಈ ದಿನ ಅವಳದಾದ ಮೇಲೆ ಅವಳಿಗೇ ಹಸಿವಿಲ್ಲವೆಂದ್ರೆ ನನಗೆಲ್ಲಿಂದ... ಜ್ಯೂಸು ಕುಡಿದು ಹೋಗಿ ಬಿದ್ದುಕೊಂಡಾಗ ಹನ್ನೊಂದಾಗಿತ್ತು... ಹೀಗೆ ಇನ್ನೊಂದು ದಿನದ ಕೊನೆಯಾಗಿತ್ತು...

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

pdf document can be found here
http://www.telprabhu.com/aa-ondu-dina.pdf


ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

8 comments:

ಮನಸು said...

ಹ ಹ ಹ ಹ ಅನಿಸಿಕೆ ಏನು ಬರೆಯೋದು!!!
ನಿಮ್ಮದೇ ದಿನ ನಿಮಗೆ ಹೇಗೆ ಬೇಕೋ ಹಾಗೆ ಸಂಗಾತಿಯೊಂದಿಗೆ ಕಾಲ ಕೆಳೆದಿದ್ದೀರಿ, ನಾವೇನು ಹೇಳುವುದು ಹ ಹ ಹ ಹ ಅಲ್ಲವೇ?

ನಿಮ್ಮ ಅಪ್ಪಾಜಿ ಅಮ್ಮಂಗೆ ಈ ಅಂಕಣ ಓದಲು ಕೊಡಿ ಹ ಹ ಹ ಅವರೇ ಅನಿಸಿಕೆ ಹೇಳ್ತಾರೆ.....

Prabhuraj Moogi said...

ಕಾಲ ಕಳೆದದ್ದಲ್ಲ, ಬರೀ ಕಾಲ್ಪನಿಕ... ಅಯ್ಯೊ ಅಪ್ಪಾಜಿ ಅಮ್ಮಂಗೆ ಓದಲು ಕೊಟ್ರೆ, ಈಗಲೇ ಹೀಗೆ ಇನ್ನು ಮದುವೆಯಾದ್ರೆ ಹೇಗೆ ಅಂದುಬಿಡುತ್ತಾರಷ್ಟೆ... ಹ ಹ ಹ...

maaya said...

hi,,
Sakkathagi ide... nice.. enjoy madide.... atleast varakkondu dina hendathi ge meesalu anno idea eegale idyalla.. punyavanthe.. good.. hahahaha...

hema.hemant

Prabhuraj Moogi said...

Hi,
Thanks for feedback, vaarakkoMdu dina meesalEno sari, aadare varakkoMdu dina raje sigutto ilvo gottilla... kelsaa bamdre weekend kooDa raje irallaa... avaLu puNyavaMte annokiMtaa... antha huDugi sikre ellaa appa ammaa maaDida puNya... nanaMtooo enoo puNya baro kelsaa maaDillaa biDi.

sunaath said...

Dream plan for a holiday!
ಈಗಲೇ ಇಷ್ಟು ಚೆನ್ನಾಗಿ plan ಮಾಡ್ತಾ ಇದ್ದೀರಿ, ಮುಂದೆ ಹ್ಯಾಗೊ?

Prabhuraj Moogi said...

To: sunaath
ಮುಂದೆ ಹೇಗೋ ಏನೋ ಗೊತ್ತಿಲ್ಲ ಸರ್, ಒಳ್ಳೆ ಹೆಂಡ್ತಿ ಸಿಕ್ರೆ "ಆ ಒಂದು ದಿನ ನಿನಗೆಂದು", ಇಲ್ಲಾಂದ್ರೆ "ಯಾಕೆ ಈ ವೀಕೆಂಡು" ಅಷ್ಟೆ...

Anonymous said...

Very nice article!!...PDF link pls...

Prabhuraj Moogi said...

To: Anonymous
Post updated Link added please check it.