Sunday, December 21, 2008

ಹೆಲ್ಪು ಮಾಡಲು ಹೋಗಿ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಹೆಲ್ಪು ಮಾಡಲು ಹೋಗಿ...ಅಂದು ಬೆಳಿಗ್ಗೆ ಯಾಕೋ ಇವಳು ಎದ್ದಿರಲಿಲ್ಲ, ಎಂದೂ ತಪ್ಪದೇ ಏಳೊ ಇವಳಿಗೆ ಎನಾಯ್ತು ಅಂತನಕೊಂಡು ಹಾಗೇ ಅಲುಗಿಸಿದೆ, ಇದೇನು ಇಷ್ಟು ಬಿಸಿ, ಮೊದ್ಲೆ ಹಾಟ್ ಆಂಡ್ ಸೆಕ್ಸಿ ಇವ್ಳು, ಅದ್ರೂ ಇವತ್ತು ಬಹಳೇ ಹಾಟು ಅನಿಸ್ತು, ಮಲಗಿದಲ್ಲಿಂದಲೇ ಜ್ವರ ಬಂದಿದೆ ಅಂತ ಕಾಣುತ್ತೆ ಅಂದ್ಲು. ಹಣೆ ಹಿಡಿದು ನೊಡುತ್ತಿದ್ದೆ, "ರೀ ಮೊಟ್ಟೆ ಇದ್ರೆ ತಂದು ಹಾಕಿ ಅಮ್ಲೆಟ್ ಆಗುತ್ತೆ, ನಿಮ್ಮ ಟಿಫಿನ್ ರೆಡಿ" ಅಂದ್ಲು. ಹೌದು ತುಂಬಾನೇ ಬಿಸಿಯಾಗಿತ್ತು, ಈಗ್ಲೂ ತುಂಟಾಟಕ್ಕೇನೂ ಕಮ್ಮಿಯಿಲ್ಲ, "ಕೊಡ್ತೀನ್ ನೊಡು ಒಂದು, ಸುಮ್ನೆ ಮಲಗಿರು" ಅಂತ ಮೇಲೆದ್ದೆ, "ಎನಿಲ್ಲ ಸ್ವಲ್ಪ ಮೈಬಿಸಿಯಾಗಿದೆ, ನಿಮ್ಗೆ ಲೇಟ್ ಆಯ್ತೂಂತ ಕಾಣುತ್ತೆ ಕಾಫಿ ಮಾಡ್ಬಿಡ್ತೀನಿ" ಅಂತ ಎದ್ದಳು, "ಎದ್ರೆ ಕಾಲು ಮುರಿದಾಕಿಬಿಡ್ತೀನಿ ಈವಾಗ್" ಅಂತ ಗದರಿಸಿದೆ, "ಮತ್ತಿನ್ನೇನು, ಕಾಫಿ ಪಕ್ಕದಮನೆ ಪದ್ದು ಮಾಡಿಕೊಡ್ತಾಳಾ" ಅಂದ್ಲು. ಹಾಗೇ ಸುಮ್ನೆ ನೊಡ್ದೆ, ಅವ್ಳಿಗೆ ಗೊತ್ತಾಯ್ತು, ಇನ್ನು ಸುಮ್ನಿರೊದೇ ವಾಸಿ ಅಂತ. ಅವ್ಳು ಹಾಗೇನೆ, ಸ್ವಲ್ಪ ಮಾತು ಜಾಸ್ತಿ ಯಾವಾಗ್ಲೂ ತರಲೆ, ಒಂದ್ನಿಮಿಷ್ ಸುಮ್ನಿರಲ್ಲ, ತಮಿಳು ಬರದಿದ್ರೂ ರೊಡ್ ಕೊನೆ ಮನೆ ತಮಿಳು ಪಾಟಿ (ಪಾಟಿ ಅಂದ್ರೆ ತಮಿಳಲ್ಲಿ ಅಜ್ಜಿ ಅಂತ) ಜತೆ ಹರಟೆ ಹೊಡೆದು ಬರ್ತಾಳೆ ಅಂದ್ರೆ ನೀವೆ ಊಹಿಸಿ.

ಇಂದು ಒಳ್ಳೆ ಚಾನ್ಸು ಸಿಕ್ಕಿದೆ ಅವಳ್ನ ಇಂಪ್ರೆಸ್ ಮಾಡೊಕೆ ಅನ್ಕೊಂಡು, ಈವತ್ತು ನಾನು ಕಾಫಿ, ಟಿಫಿನ್ ರೆಡಿ ಮಾಡಿದ್ರೆ ಹೇಗೆ ಅಂತ ಯೊಚಿಸಿ, "ನೀನು ಮಲಗಿರು ಇಂದು ಕಾಫಿ ಟಿಫಿನ್ ನಂದು" ಅಂದೆ, ಕೇಳಿ ಅವಳ ಟೆಂಪರೇಚರ್ ಇನ್ನೂ ಸ್ವಲ್ಪ ಜಾಸ್ತಿ ಆಯ್ತು ಅಂತ ಕಾಣುತ್ತೆ, "ಎನೂ ಬೇಡ ಹೊಟೇಲ್‍ನಲ್ಲಿ ತಿನ್ಕೊಂಡು ಹೋಗಿ, ನಂಗೆ ಹಸಿವಿಲ್ಲ ಮಧ್ಯಾಹ್ನ ಎನಾದ್ರೂ ಬೇಕಾದ್ರೆ ಬ್ರೆಡ್ ಇದೆ, ಕಾಫಿ ಬ್ರೆಡ್ ಸಾಕು ನಂಗೆ ಅಂದ್ಲು" ನಾನು ಕೇಳ್ಬೇಕಲ್ಲ "ಎನೂ ಬೇಡ ಅನ್ನ ಮಾಡಿದ್ತೀನಿ ಈಗ ಕಾಫಿನಾದ್ರೂ.." ಅಂತಿದ್ದೆ "ರೀ ಸುಮ್ನೆ ಆಫೀಸಿಗೆ ಹೊಗ್ತೀರೊ ಇಲ್ವೊ ಈಗ" ಅಂತ ರೇಗಿದ್ಲು, ಕೇಳೊರ್ಯಾರು...

ಫ್ರಿಜ್ನಲ್ಲಿರೊ ಹಾಲು ತೆಗೆದು ಅಡಿಗೆಮನೆ ಕಡೆ ಕಾಲಿಟ್ಟೆ, ಕಾಫಿ ಮಾಡೋಕೆ ಹೋಗಿ ಇದು ಕಷಾಯ ಮಾಡುತ್ತೆ ಅಂತ ಹಿಂದಿಂದ ಹೊದಿಕೆ ಹಾಗೇ ಹೊದ್ದುಕೊಂಡು ಹೊರಬಂದ್ಲು, ಲೇ ಹೋಗೆ ನಾನ್ ಮಾಡ್ತೀನಿ ಅಂದ್ರೆ, ಸುಮ್ನೆ ನೊಡ್ತಿನೀ ನೀವು ಮಾಡಿ ಅಂದ್ಲು, ಮುಂಜಾನೆ ಮುಂಜಾನೆ ಕಾಮಿಡಿ ಷೊ ಇದು ಅಂತಾ ಪಕ್ಕಾ ಗೊತ್ತಾಗಿತ್ತು ಅವ್ಳಿಗೆ. ಎನ್ ಬಹಳ ಹೆಲ್ಪ ಮಾಡೋರ ಹಾಗೆ, ಒಂದು ಕುರ್ಚಿ ಎಳೆದು ತಂದು ಕೊಟ್ಟು " ಹೂಂ ಹೊಗ್ಲೀ ಕೂತ್ಕೊ" ಅಂದೆ, ಹೊದಿಕೆ ಹೊದ್ಕೊಂಡು ರಾಣಿ ಆಸೀನರಾದ್ರು!!

ಹಾಲು ಕಾಯಿಸಲಿಟ್ಟು, ಪುಡಿ ಕಾಫಿ ಹುಡುಕತೊಡಗಿದೆ, ಅದೊ ಅಲ್ಲಿ ಬ್ರು ಕಾಫಿ ಬಾಟಲ್ಲು ಕಾಣಿಸ್ತು, ಎತ್ತಿ ನೋಡಿದೆ ಯಾಕೊ ಕಲರು ಬೇರ್‍ಎ ಕಾಣಿಸ್ತು, "ಎನೇ ಕಾಫಿ ಪುಡಿ ಕಲರ್ರು ಹೀಗಿದೆ" ಅಂದೆ ಎಲ್ಲಿ ತೊರ್ಸಿ ಅಂದೊಳು ನೊಡಿ "ಅದು ಮಸಾಲೆ ಪುಡಿ, ಕಾಫಿ ಖಾಲಿ ಆಗಿದೆ, ಅದೂ ಗೊತ್ತಾಗಲ್ಲ ನಿಮ್ಗೆ" ಅಂತ ಸಿಟ್ಟಿಗೆದ್ಲು. ಕಾಫಿ ಬಾಟಲಿನಲ್ಲಿ ಮಸಾಲೆ ಹಾಕಿಟ್ರೆ ನಂಗೆ ಹೇಗೆ ಗೊತ್ತಾಗ್ಬೇಕು, "ಸುಮ್ನೆ ನಿನ್ನ ಟೆಸ್ಟ ಮಾಡ್ತಿದ್ದೆ" ಅಂತ ರೀಲು ಬಿಟ್ಟೆ, ಹೇಳಿರದಿದ್ರೆ ಮಸಾಲೆ ಕಾಫಿ ರೆಡಿ ಆಗಿರೋದು!!!

ಪ್ಲಾನ್ ಚೇಂಜ್ ಆಯ್ತು, ಟೀ ಮಾಡೋಣ ಅಂತಾ ಡಿಸೈಡು ಮಾಡಿದೆ. ಟೀ ಯಾವ ದಬ್ಬದಲ್ಲಿದೆ ಅಂತ ಯಾರಿಗೆ ಗೊತ್ತು, ಈ ಸಾರಿ ರಿಸ್ಕು ಬೇಡ ಅಂತ ಅವಳ ಕೇಳಿ ದಬ್ಬ ತೆಗೆದೆ. ಇಷ್ಟರಲ್ಲೇ ಹಾಲು ಬಿಸಿಯಾಗಿ ಉಕ್ಕಿ ಬಂತು, ಹೊಸದಾಗಿ ಮನೆಗೆ ಬಂದಾಗ ಹಾಲು ಉಕ್ಕಿಸಿರಲಿಲ್ಲ, ಅದರ ಬಾಕಿ ಈಗ ತೀರಿತು ಅನ್ಸತ್ತೆ, ಅವಳು ನೋಡಿ ಚೀರಿದಾಗ ಎನೂ ತಿಳಿಯದೆ ಹಾಗೆ ಬರಿಗೈಯಿಂದ ಪಾತ್ರೆ ಇಳಿಸ ಹೊಗಿ ಕೈ ಸುಟ್ಕೊಂಡೆ, ಅದೇ ಭರದಲ್ಲಿ "ಮೊದ್ಲೇ ನೊಡ್ಬಾರದಿತ್ತಾ" ಅಂತ ಬೈದೆ, ಕೈ ಬೇರೆ ಸುಟ್ಟಿತ್ತಲ್ಲ ಸಿಟ್ಟು ಬಂದಿತ್ತು. "ಕಾಫಿ ಮಾಡ್ತೀನಿ ಅಂತ ಬಂದೊರಾರು ನಾನ್ ಮೊದ್ಲೇ ಬೇಡ ಅಂದೆ" ಅಂತ ತಿರುಗಿ ಬಿದ್ಲು, ತಪ್ಪು ನಂದಿತ್ತು... ಇರ್ಲಿ ಬಿಡು ಅಂತಾ ಮತ್ತೊಂದು ಪಾತ್ರೇಲೀ ಎರಡು ಕಪ್ಪು ಅಂತ ಅಳೆದು, ಹಾಲು ಹಾಕಿದ್ರೆ ಸರಿಯಾಗತ್ತೆ ಅಂತ ಎನೊ ಒಂದು ಮಹಾ ಲೆಕ್ಕ ಮಾಡಿ ನೀರು ಹಾಕಿದೆ, ಅಷ್ಟೇನಾ ಅಂದ ಅವಳಿಗೆ ನಾನೆಲ್ಲ ಲೆಕ್ಕ ಮಾಡಿ ಹಾಕೀದೀನಿ ಸರಿಯಾಗತ್ತೆ ಸುಮ್ನಿರು ಅಂತ ಬಾಯಿ ಮುಚ್ಚಿಸಿದ್ದೂ ಆಯ್ತು, ಆಫೀಸಿನಲ್ಲಿ ಶುಗರ್ ಕ್ಯೂಬ್ (ಅದೇ ಸಕ್ಕರೆಯ ಚೌಕಾಕಾರದ ಕಣ್ಣೆಗಳು) ಹಾಕಿ ರೂಢಿ ಈಗ ಸಕ್ಕರೆ ಎಷ್ಟು ಹಾಕಬೇಕು ಅಂತ ಯೊಚಿಸುತ್ತಲೇ ಟೀ ಕುದ್ದು ಕುದ್ದು ಎರಡು ಕಪ್ಪು ಹೊಗಿ ಒಂದು ಕಪ್ಪು ಆಗಿತ್ತು, ಅಂತೂ ಹಾಲು ಜಾಸ್ತಿ ಹಾಕಿದರಾಯ್ತೆಂದು ಸಕ್ಕರೆ ಒಂದಿಷ್ಟು ಸುರಿದೆ. ಹಾಗೂ ಹೀಗೂ ಮಾಡಿ ಒಂದೂವರೆ ಕಪ್ಪು ಟೀ ರೆಡಿಯಾಯ್ತು!!! ಅವಳೆಲ್ಲಿ ಬೇರೆ ಕಪ್ಪಲ್ಲಿ ಕುಡಿತಾಳೆ ನನ್ನ ಕಪ್ಪಿಂದಲೆ ಸಾಸರಿಗೊಂದಿಷ್ಟು ಹಾಕಿ ಹಿಡಿದ್ರೆ, ಕೈಯಿಂದ ಕಪ್ಪು ಕಿತ್ಕೊಂಡ್ಲು, "ನೀವ್ ಮಾಡಿದ್ದು ರುಚಿ ಹೇಗಿದೆ ನೊಡ್ಬೇಕು ನಂಗೇ ಜಾಸ್ತಿ" ಅಂದ್ಲು. ಸಾಸರಿನಲ್ಲಿ ನಾ ಮೊದಲು ರುಚಿ ನೊಡಿದೆ, ಟೀ ಪುಡಿ ಕುದ್ದದ್ದು ಜಾಸ್ತಿಯಾಗಿ ಕಹಿಯಾಗಿತ್ತು, ಮುಖಕ್ಕೆ ಎರಚುತ್ತಾಳೇನೊ ಅಂತ ಅವಳೆಡೆಗೆ ನೊಡಿದ್ರೆ, ಖಡಕ ಟೀ ಮಾಡೀದೀರಾ ಅಂತನ್ನುತ್ತ ಹೀರುತ್ತಿದ್ಲು... ನನಗೇಕೊ ನಾ ಅವಳ ಹೊಸರುಚಿ ಹೊಗಳಿದ್ದು ನೆನಪಿಗೆ ಬಂತು...

ಕುರ್ತುಕೋಟೆ ಅವಲಕ್ಕಿ ಮಾಡ್ಕೊತೀನಿ ಟಿಫಿನ್‍ಗೆ, ದ್ಯಟ್ಸ ಕನ್ನಡ ದಾಟ್ ಕಾಮ್‍ನಲ್ಲಿ ಯಾರೋ ಹೇಗೆ ಮಾಡೊದು ಅಂತ ಲೇಖನ ಬರ್ದೀದಾರೆ ಅಂತಂದೆ, "ರೀ ನಿಮ್ಗೇನು ಈವತ್ತು ರಜೇನಾ" ಅಂತ ಎಡವಟ್ಟು ಪ್ರಶ್ನೆ ಕೇಳಿದ್ಲು, ಪ್ರಶ್ನೆ ಅರ್ಥ ನನಗೆ ಆಗಿತ್ತು, ಆಯ್ತು ನಾರ್ಮಲ್ ಅವಲಕ್ಕೀನೇ ಮಾಡೋಣ ಅಂತಂದು ಈರುಳ್ಳಿ ಹೆಚ್ಚಲು ಕುಳಿತೆ, ಹೆಚ್ಚಿದ್ದಕ್ಕಿಂತ ಕಣ್ಣಲ್ಲಿನ ನೀರು ಒರೆಸಿಕೊಂಡಿದ್ದೇ ಜಾಸ್ತಿ ಆಯ್ತು, ನೋಡಿ ನೋಡಿ ಅವಳೂ ಸೆರಗಿಂದ ಒಂದಿಷ್ಟು ಕಣ್ಣೊರಿಸಿದ್ಲು, ಅದ್ ಹೇಗೆ ಫಾಸ್ಟ್ ಆಗಿ ಹೊಟೇಲಿನಲ್ಲಿ ಕತ್ತರಿಸುತ್ತಾರಲ್ಲ, ಹಾಗೆ ಕತ್ತರಿಸೋದು ಹೇಗೆ ಅಂತ ಅವಳಿಗೆ ತೋರಿಸ ಹೊಗಿ ಬೆರಳು ಕುಯ್ದುಕೊಂಡೆ. ರಕ್ತ ಚಿಮ್ಮಿದ್ದು ನೋಡಿ ಬೆರಳು ಬಾಯಿಗಿಟ್ಕೊಂಡು ಬಯ್ಯೊಕೆ ಬಾಯಿ ತೆರೆಯಲಾಗದೇ ಕಣ್ಣಲ್ಲೇ ಕೋಪ ತೊರಿಸಿದ್ಲು. ಇನ್ನು ಎನೂ ಮಾಡುವುದೂ ಆಗುವ ಹಾಗೆ ಕಾಣಲಿಲ್ಲ, ನಾನು ಮಾಡುತ್ತೇನಂದ್ರೂ ಅವಳು ಬಿಡಲು ಸಾಧ್ಯವಿಲ್ಲ ಅಂತ ಗೊತ್ತಾಗಿ ಮೇಲೆದ್ದೆ.

ನಾನವಳ ಡಾಕ್ಟರ್ ಕಡೆ ಕರೆದುಕೊಂದು ಹೊಗಬೇಕಿದ್ದು, ಈಗ ಅವಳೇ ನನ್ನ ಕರೆದೊಯ್ಯುವ ಹಾಗಾಗಿತ್ತು. ಇಬ್ಬರೂ ಹೋಗಿ ಡಾಕ್ಟರಿಗೆ ಇನ್ನೂರು ಚೆಲ್ಲಿ, ಬೆರಳು ಡ್ರೆಸ್ಸಿಂಗ ಮಾಡಿಸಿಕೊಂಡು, ಮಾತ್ರೆ ಬರೆಸಿಕೊಂಡು ಹೊರಬಂದಿದ್ದಾಯ್ತು. "ನರ್ಸ್ ನೋಡಿದ್ಯಾ" ಅಂತ ತರಲೆ ಪ್ರಶ್ನೆ ಹಾಕಿದೆ, "ಯಾಕೇ ವಾಪಸ್ಸು ಕರ್ಕೊಂಡು ಹೋಗಿ ನಿಮ್ಗೊಂದು ಚುಚ್ಚಿಸಿಕೊಂಡು ಬರ್ಲಾ, ಅವಳು ಇಂಜೆಕ್ಷನ್ ಚೆನ್ನಾಗಿ ಮಾಡ್ತಾಳೆ" ಅಂತ ರೇಗಿದ್ಲು. ಟೈಮು ಬೇರೆ ಆಗಿತ್ತು, ಶಾಂತಿ ಸಾಗರದಲ್ಲಿ (ಹೊಟೇಲು) ಶಾಂತಿಯಿಂದ ಇಬ್ಬರೂ ಇಡ್ಲಿ ತಿಂದ್ವಿ. ಅವಳ ಮನೆಗೆ ಬಿಟ್ಟು ಆಫೀಸಿಗೆ ಹೊರಟೆ... ದಾರಿಯಲ್ಲಿ... ಪಾಪ ಹುಶಾರಿಲ್ಲ್ ಮನೇಲಿ ಒಬ್ಳೆ ಹೇಗೆ? ನಾನಿದ್ದು ಎನಾದ್ರೂ ಹೆಲ್ಪ್ ಮಾಡೋಣ ಅಂತಾ ಯೋಚಿಸಿ, ಟೆಕ್ ಲೀಡ್ಗೆ ಫೊನ್ ಮಾಡಿ ಕೈ ಗಾಯ ಆಗಿದೆ ಆಫೀಸಿಗೆ ಬರ್ತಿಲ್ಲ ಅಂತ ಹೇಳಿ ಮನೆಗೆ ಮರಳಿದೆ... ಅವಳೊ ಬಾಗಿಲಲ್ಲೇ ಕಾಯ್ತಿದ್ಲು "ನಂಗೊತ್ತಿತ್ತು ನೀವು ವಾಪಸ್ಸು ಬರ್ತೀರಂತ, ಏನು ಹೆಲ್ಪ ಮಾಡೊದೂ ಬೇಕಿಲ್ಲ, ಮುಂಜಾನೆಯಿಂದ ಮಾಡಿದ್ದೆ ಸಾಕು ಹೊರಡಿ" ಅಂತ ಹೊರ ದಬ್ಬಿದ್ಲು... ಕೈ ಗಾಯ ನೊಯ್ತಿದೆ ಅಂತಾ ಎನೊ ಸಬೂಬು ಹೇಳಿ ಮನೆಗೆ ನುಗ್ಗಿದೆ... ಮತ್ತೆ ಹೆಲ್ಪ ಮಾಡೋಣ ಅಂತಾ " ಮಧ್ಯಾಹ್ನ ಊಟಕ್ಕೆ ಎನ್ ಮಾಡೊದು ಅಂತಾ" ಕೇಳಿದ ನನ್ನ ಹೀಗೇ ನೊಡಿದ್ಲು... ಅದೇ ಶಾಂತಿ ಇದಾಳಲ್ಲ... ಅಂದ್ರೆ ಶಾಂತಿ ಸಾಗರ ಇದೆಯಾಲ್ಲ ಅಂತಾ ನಗೆ ಬೀರಿದೆ... ನೀವ್ ಸುಧಾರಿಸಲ್ಲ ಅನ್ನುತ್ತ ಬಾಗಿಲ ತಳ್ಳಿದವಳು ನನ್ನ ತೆಕ್ಕೆ ಸೇರಿಕೊಂಡ್ಲು...

ಈ ಲೇಖನಗಳ ಓದಿ ಎಲ್ರೂ ನನ್ನ ಕೇಳ್ತಿದಾರೆ, ಯಾರದೂ ಅಂತಾ, ಒಬ್ಬರಂತೂ ನಿಮ್ಮಿಬ್ಬರೂ ದಂಪತಿಗಳನ್ನ ಒಂದು ಸಾರಿ ನೊಡಬೇಕು ಅಂತಾ ಇಂಚೆ (ಇ-ಅಂಚೆ) ಹಾಕಿದ್ರು... ಇದೆಲ್ಲ ಬರೀ ಕಾಲ್ಪನಿಕ... ಹುಡುಗನ ಹುಚ್ಚು ಯೊಚನೆಗಳು ಮಾತ್ರ... ನನಗಿನ್ನೂ ಮದುವೆಯಾಗಿಲ್ಲ, ಮದುವೆಯಾದ್ರೂ ಇಂಥವಳು ಜೊತೆಯಾಗುವಳೆಂದು ನಂಬಿಕೆಯೂ ಇಲ್ಲ... ಆದರೂ ಇದನ್ನ ಒದಿ ಒಂದು ದಿನ ನನ್ನೊಂದಿಗೆ ಹೀಗಿದ್ರೆ.. ನನಗದೇ ಹೆಚ್ಚು... ಬದುಕು ಅಂದದ ರಂಗೊಲಿ ಎಲ್ಲೆಲ್ಲಿ ಯಾವ ಬಣ್ಣ ತುಂಬಬೇಕು ಅನ್ನೊದು ನಿಮಗೆ ಬಿಟ್ಟಿದ್ದು... ನಾ ತುಂಬಲಿರುವ ಬಣ್ಣಗಳ ಬಗ್ಗೆ ಬರೆಯುತ್ತಿದ್ದೇನೆ.. ನಿಮಗೂ ಎನೋ ಹೆಲ್ಪು ಆಗಬಹುದು ಅಂತಾ...
ಅದ್ಯಾವತ್ತೊ ಬರೆದಿದ್ದೆ..

ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮೆ ಸಿಕ್ಕಿದ್ರೆ
ನನ್ನವಳು ದ್ರೌಪದಿಯಲ್ಲ ಶತ್ಪದಿಯಾಗಬೇಕಿತ್ತು...
ನಾನಿಷ್ಟ ಪಟ್ಟವರೆಲ್ಲ ನನ್ನವರಾಗಿದ್ರೆ
ನಾ ಎಣಿಸುತ್ತಲೇ ಮುದುಕನಾಗಬೇಕಿತ್ತು...


ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/helpu.pdf

Sunday, December 14, 2008

ಸಿಗ್ನಲ್ಲಿನಲ್ಲಿ ಸೌಂದರ್ಯದೊಂದಿಗೆ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಸಿಗ್ನಲ್ಲಿನಲ್ಲಿ ಸೌಂದರ್ಯದೊಂದಿಗೆ...

ಮುಂಜಾನೆ ಎಂಟು ಗಂಟೆ ಅಂದ್ರೆ ರೋಡುಗಳೆಲ್ಲ ಕಿಕ್ಕಿರಿದ್ರು ತುಂಬಿರುತ್ತವೆ, ಆಫೀಸಿಗೆ ಹೊರಟ ನನ್ಹಂತ ಟೆಕ್ಕಿಗಳು, ಕಾಲೇಜಿಗೆ ಹೊರಟಿರುವ ಹಕ್ಕಿಗಳು, ಮತ್ತು ಶಾಲೆಗೆ ಹೊರಟಿರುವ ಚುಕ್ಕಿಗಳು ಎಲ್ಲಾರಿಗೂ ಅವಸರ... ಅದರ ನಡುವೆ ಈ ಸಿಗ್ನಲ್ಲುಗಳು, ಟ್ರಾಫಿಕ್ಕು ಜಾಮುಗಳು ಅಂತ ಎಲ್ಲರೂ ಬೈಕೊಂಡ್ರೂ ಆ ಬಗ್ಗೆ ನನಗೇಕೊ ಬಲು ಪ್ರೀತಿ. ನಾನು ಆಫೀಸಿಗೆ ತಲುಪುವಲ್ಲಿ ಎನಿಲ್ಲವೆಂದ್ರೂ ಹತ್ತು ಸಿಗ್ನಲ್ಲುಗಳು, ಹತ್ತಿರ ಹತ್ತಿರ ಇಪ್ಪತ್ತು ಕಿಲೊ ಮೀಟರು ಪಯಣ, ಆದ್ರೂ ಬೇಜಾರಿಲ್ಲ. ಇವಳಂತಾಳೇ "ಪಕ್ಕದ ಮನೆ ಪದ್ದೂಗೆ ಮನೆ ತಿರುವಿನಲ್ಲಿ ಸಿಗ್ನಲ್ಲು ಕೊಡೊರು ನೀವು, ಇನ್ನು ಸಿಗ್ನಲ್ಲಿರುವ ಸರ್ಕಲ್‍ ಸಿಕ್ರೆ ಬಿಡ್ತೀರಾ, ಮೊಬೈಲ್ ಟವರ್ ಆಗಿ ಎಲ್ರಿಗೂ ಸಿಗ್ನಲ್ಲು ಕೊಟ್ಟಿದ್ದೆ ಕೊಟ್ಟಿದ್ದು, ಟೆಲಿಕಾಂ ಇಂಜಿನಿಯರಿಂಗ್ ಕಲಿತದ್ದು ಸಾರ್ಥಕ ಆಯ್ತು!! ಹೀಗಿರೊವಾಗ ಅದ ಹೇಗಪ್ಪ ಬೇಜಾರಾಗುತ್ತೆ". ಅದೂ ಸರೀನೆ ಸ್ಕೂಟಿ ಕಣ್ಣಿಗೆ ಕಂಡ್ರಂತೂ ಹಚ್(ವೊಡಫೊನ್) ನಾಯಿಯಂತೆ ಫಾಲೋ ಕೂಡ ಮಾಡ್ತೇನೆ!!!.

ಮನೆಯಿಂದ ಹೊರಟ್ರೆ ಹೊತ್ತು ಹೊಗಿದ್ದೆ ಗೊತ್ತಾಗಲ್ಲ, ಅದ್ಯಾವುದೋ ಸಿಗ್ನಲ್ಲಿನಲ್ಲಿ ಡಿಸ್ಕ್ ಬ್ರೆಕ್ ಹಾಕಿ ಗಕ್ಕನೆ ನಿಂತಾಗಲೇ ಗೊತ್ತಾಗೋದು ಇಷ್ಟು ದೂರ ಬಂದಿದ್ದೀನಲ್ಲ ಅಂತ, ಡಿಸ್ಕ್ ಬ್ರೆಕ್ ಹಾಕಲೇ ಬೇಕಂಬಷ್ಟು ಜೊರಾಗಿ ಬೈಕು ಎನೂ ಓಡ್ಸಲ್ಲ ಆದ್ರೂ ಸ್ಟೈಲ್‍ಗೆ ಸುಮ್ನೆ "ನೋಡು ನನ್ನ ಬೈಕಿಗೆ ಡಿಸ್ಕ್ ಬ್ರೆಕ್ ಇದೆ" ಅಂತ ತೋರಿಸೊಕೆ ಅಷ್ಟೇ. ಇವಳನ್ನ ಮೊದಲ ಸಾರಿ ಬೈಕಿನಲ್ಲಿ ಸುತ್ತೊಕೆ ಕರ್ಕೊಂಡು ಹೊಗಿದ್ನಲ್ಲ ಅವಾಗ ಫ್ರಂಟ್ ಬ್ರೆಕ್ ಹಾಕಿದ್ದೆ ಹಾಕಿದ್ದು, ಸಿಟ್ಟಿಗೆದ್ದು "ರೀ ಇನ್ನೇನಾದ್ರೂ ಬ್ರೆಕ್ ಹಾಕಿದ್ರೊ,ಆ ಡಿಸ್ಕ್ ಬ್ರೆಕ್ ಕಿತ್ತು ಕೈಲಿ ಕೊಡ್ತೀನಿ" ಅಂತ ಬೈದಿದ್ಲು ಹೀ ಹೀ... ಈಗ್ಲೋ ರೀ ಬರ್ತೀನಿ ಕರ್ಕೊಂಡು ಹೊಗ್ರೀ ಅಂದ್ರೂ, "ಲೇ, ನೀ ಹಿಂದೆ ಕೂತ್ಕೊಂಡ್ರೆ ಅಷ್ಟೇ ನಾನ್ ಆ ರೇಸನಲ್ಲಿ ಮಾಡ್ತಾರಲ್ಲ ಹಾಗೆ ಮುಂದಿನ ವ್ಹೀಲ್ ಎದ್ದು ವ್ಹೀಲಿ ಮಾಡ್ಬೇಕಾಗುತ್ತೆ" ಅಂತ ಛೇಡಿಸ್ತಿರ್ತೀನಿ. ನಾನೇನು ಅಷ್ಟ ದಪ್ಪ ಆಗೀದೀನೆನ್ರೀ ಅಂತಾ ಕೇಳ್ತಾಳೆ, ಅದಕ್ಕೆ "ನೀನಿನ್ನೂ ಏಳು ಮಲ್ಲಿಗೆ ತೂಕದ ರಾಜಕುಮಾರಿ ಆದ್ರೆ ಮಲ್ಲಿಗೆ ತೂಕ ಜಾಸ್ತಿ ಆಗ್ಬಿಟ್ಟಿದೆ ಅಷ್ಟೇ" ಅಂತ ಸಮಾಧಾನ ಮಾಡ್ತಿರ್ತೀನಿ.

ಹಾಗೂ ಹೀಗೂ ಮಾಡಿ, ತರಕಾರಿ ತರಬೇಕಿದೆ ಮಾರ್ಕೆಟ್ಗೆ ಬಿಡ್ರಿ ಅಂತಾನೊ, ಮೊಸರಿಲ್ಲ ತರ್ತೀನಿ ಹಾಸಿನಿಯ ಹಾಲಿನಂಗಡಿಗೆ ಡ್ರಾಪ್ ಕೊಡಿ ಅಂತಾನೊ ಜೊತೆ ಬಂದ್ಬಿಡ್ತಾಳೆ, ಎಲ್ಲ ನೆಪ ಅಷ್ಟೇ ನನ್ ಜತೆ ಬರ್‍ಬೇಕಾಗಿರುತ್ತೆ ಅಷ್ಟೇ. ಹೀಗೆ ಬಂದೊಳು ಹಿಂದೆ ಕೂತು ಪಟಪಟಾಂತ ಹೊಗೊ ಬರೊರ್ ಕಾಮೆಂಟ್ರಿ ಶುರು ಮಾಡಿಬಿಡ್ತಾಳೆ, "ರೀ ಅಲ್ಲಿ ನೊಡ್ರ್‍ಇ ಅದೇ ಆ ಕೆಂಪು ಚೂಡಿದಾರ ಹಾಕೊಂಡಿದಾಳಲ್ಲ ಅಲ್ಲಿ" ಅವಳು ಮಾತು ಮುಗಿಸೊ ಮುಂಚೇನೆ "ಸಕತ್ತಾಗಿದಾಳಲ್ಲ!" ಅಂತೀನಿ, ಹೆಲ್ಮೆಟ್ಟನ್ನೆ ತಿವಿದು "ಆ ಚೂಡಿದಾರ ಚೆನ್ನಾಗಿದೆ ಅಲ್ವಾ ಅದ ನೋಡಿ ಅಂದಿದ್ದು" ಅಂತಾಳೆ. ಹೆಲ್ಮೆಟ್ಟು ಕಟ್ಟುನಿಟ್ಟು ಮಾಡಿದ್ದು ಒಳ್ಳೆದಾಯ್ತು ಅಂತನ್ಕೊಂಡು "ಒ ಅದಾ ನಾನೇನು ಕೊಡ್ಸಲ್ಲ ಬಿಡು" ಅಂತೀನಿ, "ಏನ್ ಬೇಡ ಅತ್ತೆ ಬರ್ತೀದಾರಲ್ಲ!!" ಅಂತಾಳೆ. ಅವ್ಳು ಆಗ್ಲೇ ಪ್ಲ್ಯಾನು ಮಾಡಿ ಆಗಿರತ್ತೆ, ಮುಂಜಾನೆಯಿಂದ ಸಂಜೆ ಇರೊ ಬರೊ ಎಲ್ಲಾ ಧಾರಾವಾಹಿಗಳನ್ನು ನೊಡಿ ಸೀರೆಗಳ ಆರಿಸಿಕೊಂಡಿರ್ತಾಳೆ, ಅಮ್ಮ ಬಂದಾಗ "ಅತ್ತೆ, ಮನೆಯೊಂದು ಮೂರು ಬಾಗಿಲು ಧಾರಾವಾಹೀಲಿ ಆ ಅಮ್ಮ ಉಟ್ಕೊಂಡಿರ್ತಾರಲ್ಲ ಅದೆ ಥರ ಸೀರೆ ಇದು ತುಗೊಳ್ಳಿ ಸುಪರ್ ಕಾಣುತ್ತೆ ನಿಮ್ಗೆ" ಅಂತಾ ನನ್ನ ಕ್ರೆಡಿಟ್ ಕಾರ್ಡನ ಖಜಾನೆಯ ಎಲ್ಲ ಬಾಗಿಲುಗಳನ್ನೂ ತೆಗೆದು ಬಿಟ್ಟಿರ್ತಾಳೆ.

ದಾರೀಲಿ ಸುಮ್ನೆ ಹಿಂದೆ ಕೂತಿದ್ದೊಳು, ಯಾವುದೊ ಸಿಗ್ನಲ್ಲಿನಲ್ಲಿ ಹಾಗೇ ನಡು ಬಳಿಸಿ ಹಿಂದಿನಿಂದ ಬಿಗಿಯಾಗಿ ಅಪ್ಪಿಕೊಂಡಳೆಂದರೆ, ನಾ ಜಾಗೃತನಾಗಿ ಬಿಡ್ತೇನೆ. ಅಕ್ಕಪಕ್ಕದಲ್ಲೆ ನಮ್ಮ ಕವರೇಜ್ ಎರಿಯಾನಲ್ಲಿ ಯಾವುದೋ ಸುಂದರ ಹುಡುಗಿ ನನ್ನ ನೊಡುತ್ತಿದೆಯೆಂದು ಗ್ಯಾರಂಟಿ ಆಗಿರತ್ತೆ!!! ಅದ್ಕೆ ಅಲ್ವೆ ಇವ್ಳು ನನ್ನ ಹಾಗೆ ಅಪ್ಪಿ ಇವನು ನನ್ನೊನು ಅಂತ ಸಿಗ್ನಲ್ಲು ಕೊಡ್ತಿರೊದು. ಮಿರರ್‍‍ನಲ್ಲಿ ನೊಡಿದ್ರೆ ಚಾಕಲೇಟು ಕಸಿದೊ ಕೊಳ್ಳೊಕೆ ಹೊದಾಗ ಮಗು ಮುಖ ಮಾಡುತ್ತಲ್ಲ ಥೇಟ್ ಹಾಗೆ ಕಾಣುತ್ತೆ ಇವಳ ಮುಖಾರವಿಂದ. ನಾನೋ ಜರ್ಕಿನ್ ಹಾಕಿಕೊಂಡು, ಕೈಗೆ ಗ್ಲೌಸು, ತಲೆಗೆ ಹೆಲ್ಮೆಟ್ಟು, ಮುಖಕ್ಕೆ ಮಾಸ್ಕ ಮುಚ್ಚಿಕೊಂಡು ಪಕ್ಕಾ ಟೆರರ್‍ಇಸ್ಟ್ ಥರ ಕಾಣ್ತಿರ್ತೀನಿ! ಅದೆಲ್ಲೊ ಗಾಬರಿಯಿಂದ ನೊಡ್ಬೇಕು ನನ್ನ ಯಾರಾದ್ರೂ!! ಇಲ್ಲಂದ್ರೆ ನನ್ನ ಮುಖಕ್ಕೆ ಅದ್ಯಾವ ಹುಡುಗಿ ಮಾರು ಹೊಗೋದು. ಸಿಗ್ನಲ್ಲುಗಳು ಇಷ್ಟ ಆಗೊಕೆ ಇದೊಂದೂ ಇನ್ನೊಂದು ಕಾರಣ, ಈ ಸಿಗ್ನಲ್ಲುಗಳಲ್ಲಿ ಕಾಣುವ ಎಲ್ರೂ ಸುಂದರಿಯರೇ, ಹೆಲ್ಮೆಟ್ಟುಗಳ ಅಡಿಯಲ್ಲಿ ಕಾಣೊದು ಅರೆ ಬರೆ ಮುಖ ಮಾತ್ರ, ಸೌಂದರ್ಯ ಅನ್ನೊದು ಮುಚ್ಚಿಸ್ಟಟ್ಟು ಹೆಚ್ಚಾಗುತ್ತದೆ.

ಅದಕ್ಕೆ ಅದೊಂದು ದಿನ ಬರೆದ ಚುಟುಕು ನೆನಪಾಗುತ್ತದೆ...
ಪಕ್ಕದಲ್ಲೊಂದು ಗಾಡಿ ಬಂದು ನಿಂತಿತು.
ತಿರುಗಿ ನೋಡಿದವಳ ಹೆಲ್ಮೆಟ್ ಅಡಿಯಲ್ಲಿ ಕಂಡದ್ದು ಕಣ್ಣುಗಳೆರಡು ಮಾತ್ರ.
ಹೃದಯ ಬಡಿತ ನಿಂತು ಹೊಯಿತು.
ಯಾಕೆಂದ್ರೆ ಅಷ್ಟರಲ್ಲೇ ಹೋಗಿತ್ತು ಹೃದಯ ಅವಳ ಹತ್ರ.


ಈಗ ಬಿಡಿ ಅದೇ ಚೋಟುದ್ದದ ಟೀಶರ್ಟ್ ಹಾಕೊಂಡು ಪದೇ ಪದೇ ಕೆಳೆಗೆಳುದುಕೊಳ್ಳುತ್ತ ಹೊಗೊದೇ ಫ್ಯಾಷನ್ನು, ಇನ್ನೂ ಕೆಲವರು ಹೈಬ್ರೀಡ ಬದನೆಕಾಯಿ ಥರ, ಇಷ್ಟುದ್ದದ ಜಡೆ(ಹೆರಳು) ಇದ್ದು ಮೊಣಕಾಲುದ್ದದ ಜೀನ್ಸ ಹಾಕಿಕೊಂಡು ಕಾಣಿಸುತ್ತಾರೆ, ಅದೇನೊ ಬದಲಾವಣೆ ಕಾಲದ ಸಾಕ್ಷಿಯೆನ್ನುವಂತೆ ಅತ್ತೂ ಇಲ್ಲ ಇತ್ತೂ ಇಲ್ಲ. ನನಗೇಕೊ ಅವರೆಂದೂ ಅಷ್ಟು ಸುಂದರಿಯರೆಂದೆನಿಸುವುದಿಲ್ಲ. ನನ್ನವಳಿಗೂ ಅದು ಇಷ್ಟವಿದ್ದಂತಿಲ್ಲ, ಅದೊಂದಿನ ಸಿಗ್ನಲ್ಲಿನಲ್ಲಿ ಕಂಡ ಆ ಡುಮ್ಮಿ ಟೈಟ್ ಜೀನ್ಸ ಹಾಕಿದ್ದು ನೊಡಿ "ರೀ ಅದ್‍ಹೆಗ್ರೀ ಅದ್ರೊಳಗೆ ತೂರಿಕೊಂಡ್ಲು" ಅಂತ ನಗಾಡಿದ್ಲು.

ಸೌಂದರ್ಯ ಹೇಗಿರಬೇಕೆಂದ್ರೆ...
ನಡುವಿಗೆ ಕಚಗುಳಿಯಿಡುವಷ್ಟು ಉದ್ದ ಕೂದಲು.
ಒಂದೇ ಕೈಯಲ್ಲಿ ಬಳಸಿ ಹಿಡಿಯಬಹುದಾದ ಬಳಕುವ ನಡು.
ಆ ನಡುವ ಸುತ್ತಿ ಕೈ ಮೇಲೆ ಜರಿದಿರುವ ಸೀರೆ ಸೆರಗು.
ನಡೆದರೆ ಗೆಜ್ಜೆ ಬಳೆಗಳ ಘಲಘಲ್ ಸದ್ದು.


ಸೀರೆ ಕೂಡಾ ಅಷ್ಟೇನು ಸೇಫ್ ಅಲ್ಲ ಅದೂ ಈ ಬೈಕಿನಲ್ಲಿ ಹೊಗುವಾಗಲಂತೂ ಮೊದಲೇ ಅಲ್ಲ. ಆದರೂ ನಮ್ಮ ಭಾರತೀಯ ಪರಂಪರೆಯ ಉಡುಗೆ ಚೆನ್ನಾಗಿದೆ, ಹೀಗಂದಾಗಲೆಲ್ಲ ನನ್ನವಳು ಛೇಡಿಸುತ್ತಾಳೆ "ನೀವ್ಯಾಕೆ ಧೊತಿ ಪೆಠ(ಪಟಗ) ಹಾಕೊಂಡು ಅಪಾಚೆ(ಬೈಕ್) ಒಡಿಸಬಾರ್ದು" ಅಂತ. ನಾನೆಂದೂ ಅವಳಿಗೆ ಜೀನ್ಸ ಟೀಷರ್ಟ್ ಹಾಕಬೇಡೆಂದಿಲ್ಲ, ಅದೇಕೊ ಅವಳು ಹಾಕುವುದೂ ಇಲ್ಲ. ನಾನು ಮಾತ್ರ ಅವಳಿಷ್ಟದಂತೆ ಯಾವತ್ತೋ ಒಂದೊಂದು ಫಂಕ್ಷನ್‍ಗಳಲ್ಲಿ ಧೋತಿ ಉಟ್ಟು ನಿಂತಿರುತ್ತೇನೆ. ಪದೇ ಪದೇ ಬಂದು "ರೀ ಎಳೆದು ಬಿಡ್ಲಾ, ಎಳೆದು ಬಿಡ್ಲಾ" ಅಂತಾ ಕಾಡಿರ್ತಾಳೆ, ನಾನೆಲ್ಲಿ ಧೋತಿ ಕೈಕೊಟ್ಟೀತೆಂದು ಒಳಗೆ ಬರ್ಮುಡ ಹಾಕಿಕೊಂಡು ತಯ್ಯಾರಿಯಲ್ಲಿರುತ್ತೇನೆ!!!

ಹೀಗೆ ಸಿಗ್ನಲ್ಲಿನಲ್ಲಿ ಕಾಣುವ ಪ್ರತಿಯೊಬ್ಬರನ್ನೂ ನನ್ನ ಸೌಂದರ್ಯದ ತಕ್ಕಡಿಯಲ್ಲಿ ತೂಗಿ ಅಳೆದು ನೊಡುತ್ತಿರುತ್ತೇನೆ. ಚುಟುಕುಗಳ ಬರೆಯಲು ಸ್ಪೂರ್ಥಿಯಾದವರೆಷ್ಟೊ, ಕಂಡೂ ಕಾಣದೇ ಕಣ್ಮರೆಯಾದವರೆಷ್ಟೋ, ಆದರೂ ಅದೊಂದು ಸುಂದರಿಯರ ಸ್ವರ್ಗ. ಮುಖ ಕಾಣಿಸದಿದ್ರೂ ಮೈ ಮಾಟದಲ್ಲಿ ಮೇನಕೆಯನ್ನೂ ಮೀರಿಸಿದವಳ ಸ್ಕೂಟಿ ಬೆಂಬಿದ್ದು ಮೂರು ಕಿಲೊಮೀಟರು ಎಲ್ಲೊ ದೂರ ಹೊಗಿ ಪೆಟ್ರೊಲು ವೇಸ್ಟು ಮಾಡಿಕೊಂಡು ಬಂದಿದ್ದು, "ವಿಜಯನಗರದ ಇಳುಕಲಿಗೆ ಬೈಕ್ ಆಫ್ ಮಾಡಿ ಒಡಿಸಿ ಉಳಿಸಿದ ಪೆಟ್ರೊಲ್ ಹೀಗೆ ವೇಸ್ಟು ಆಗದೇ ಇನ್ನೇನು" ಅಂತ ಇವ್ಳು ಹಂಗಿಸೊದು. ಸಿಗ್ನಲ್ಲಿನಲ್ಲಿ ಪಕ್ಕದಲ್ಲೊಂದು ಪರಿ(ದೇವಕನ್ಯೆ) ಕಂಡಾಗ, ಅರವತ್ತು ಎಣಿಸೋ ಸೆಕೆಂಡ ಬೋರ್ಡ್ ಯಾಕೆ ನೂರಿಪ್ಪತ್ತು ಎಣಿಸೊಲ್ಲ ಅಂತಾ ಬೈದುಕೊಳ್ಳೋದು. ಹೀಗೇ ಸಿಗ್ನಲ್ಲುಗಳು ದಿನೇ ದಿನೇ ಹೊಸತನ ತರುತ್ತಿರುತ್ತವೆ.

ಇವಳಿಗೆ ದಿನಾಲೂ ಸಿಗ್ನಲ್ಲಿನ ರಿಪೊರ್ಟು ಕೊಡಬೇಕು, ದಿನಾ ಸರಿಯಾಗಿ ನಾನು ಎಂಟಕ್ಕೆ ಎದ್ದು ಬಿದ್ದು ಓಡುತ್ತಿದ್ದೇನೆಂದರೆ ಅದ್ಯಾವುದೊ ಸಿಗ್ನಲ್ಲಿನಲ್ಲಿ ದಿನಾಲೂ ನಂಗೆ ಯಾವುದೊ ಹುಡುಗಿ ಕಾಣಿಸುತ್ತಿರಬೇಕು ಅಂತ ಇವಳಿಗೆ ಗೊತ್ತಾಗಿರುತ್ತದೆ ಅಷ್ಟರ ಮಟ್ಟಿಗೆ ಅವಳು ನನ್ನ ಅರ್ಥ ಮಾಡಿಕೊಂಡಿದ್ದಾಳೆ, ಅವರನ್ಯಾಕೆ ನೊಡುತ್ತೀರಿ ಮನೆಯಲ್ಲಿ ಮಡದಿಯೆಂದು ನಾನಿಲ್ಲವೇ ಎಂದು ಅವಳೆಂದೂ ಕೇಳಿಲ್ಲ, ಅದೆಲ್ಲ ಕ್ಷಣಿಕ, ಎಷ್ಟೇ ಸಿಗ್ನಲ್ಲುಗಳಿದ್ದರೂ ಅಲ್ಲೆಲ್ಲಿ ಗಾಡಿ ನಿಂತರೂ ಕೊನೆಗೆ ಮನೆಯೆಂಬ ಪಾರ್ಕಿಂಗೆ ಲಾಟಿಗೇ ಬರೊದು ಅಂತ ಅವಳಿಗೂ ಗೊತ್ತು. ನೋಡಿದರೂ ನೋಡದಂಗೆ ನಾಟಕ ಮಾಡುವರ ಮುಂದೆ, ನೋಡಿದ್ದು ನೋಡಿದಂಗೆ ಹೇಳುವ ನಾನೆಂದರೆ ಅವಳಿಗೆ ಹೆಮ್ಮೆ.

ಇಂದು ಸಂಜೆ ಪಾರ್ಟಿ ಇದೆ, ನನ್ನ ಕೊಲೀಗು ಜತೆ ಬರ್ತಿದಾಳೆ ಡ್ರಾಪ್ ಮಾಡಿ ಬರ್ತೀನಿ ಅಂತ ಫೊನ್ ಮಾಡಿದ್ದೆ, "ರೀ ನೊಡೋಕೆ ಚೆನ್ನಾಗಿದಾಳಾ, ಸಿಗ್ನಲ್‍ನಲ್ಲಿ ಸ್ಟೈಲ್ ಹೊಡೀರಿ ಅವ್ಳಗೂ ಫ್ರಂಟ್ ಬ್ರೆಕ್ ಹಾಕಿ ಹೆದರಿಸ್ತೀರಾ?" ಅಂತಾ ಕೇಳಿದ್ಲು ಅವ್ಳಿಗೆ ಗೊತ್ತು ನಾನ್ ಹಾಗೆ ಮಾಡಲ್ಲ ಅಂತಾ, ಸುಮ್ನೆ ಕೆದಕ್ತಾಳೆ, ನಾನ್ ಹೊಟ್ಟೆ ಉರಿಸೋಣ ಅಂತಾ ಫೊನ್ ಮಾಡಿದ್ರೆ ನನ್ನೇ ಏಮಾರಿಸಿ ಬಿಡ್ತಾಳೆ. ಸಿಗ್ನಲ್ಲಿನಲ್ಲಿ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕು ಲೇಟ್ ಆಗಿ ಬರುವ ಗಂಡನ ಅನುಮಾನಿಸುವ, ಮೊಬೈಲ್ ಸಿಗ್ನಲ್ ಸಿಗದೇ ಫೊನ್ ಮಾಡಲಾಗದ ಪತಿಯ ಶಂಕಿಸುವ ಪತ್ನಿಯರ ನಡುವೆ ಇವಳಂಥವರೂ ಇದ್ದಾರೆಂದರೆ ನನಗೇ ಅಚ್ಚರಿಯಾಗುತ್ತದೆ. ಹೀಗಿರುವಾಗ ಯಾವ ಅಪ್ಸರೆ, ಯಾವ ಸಿಗ್ನಲ್ಲಿನಲ್ಲಿ, ನನ್ನ ಮುಂದೆ ಸುಳಿದರೇನಂತೆ, ಮನಸ್ಸು ಮನೆಯೆಡೆಗೇ ಎಳೆಯುತ್ತದೆ... ಸರೀ, ಹೀಗೆ ನಿಮ್ಮೊಂದಿಗೆ ಸಿಗ್ನಲ್ಲಿನಲ್ಲಿ ನಿಂತು ಮಾತಾಡುತ್ತಿದ್ರೆ ಟ್ರಾಫಿಕ್ ಪೋಲಿಸ್ ಬಂದು ಹಿಡಕೊಂಡು ಹೋಗಿ ಬಿಡ್ತಾನೆ... ಮತ್ತೊಂದಿನಾ ಮತ್ತೊಂದು ವಿಷಯದೊಂದಿಗೆ ಸಿಕ್ತೀನೆ... ಒಕೆ ಬ್ಯೆ ಬ್ಯೆ... ಕೀಂ ಕೀಂ ಸರೀರಿ ಸಿಗ್ನಲ್ಲು ಬಿಟ್ತು...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/signallinalli.pdf

Sunday, December 7, 2008

ಆಫೀಸಿಗೆ ಹೊರಟಾಗ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಆಫೀಸಿಗೆ ಹೊರಟಾಗ...

ಮುಂಜಾನೆ ಏಳೂವರೆ ಆಗೋಷ್ಟೊತ್ತಿನಲ್ಲಿ ಸ್ನಾನ ಮುಗಿದಿರುತ್ತೆ. ತಲೆ ಒರೆಸಿಕೊಳ್ಳುತ್ತಾ ಅವಳ ಪಾಕಶಾಲೆಗೆ ಹೋಗಿ ಅವಳಿಗೊಂದಿಷ್ಟು ತಲೆಯಲ್ಲಿನ ನೀರು ಸಿಡಿಸಿ ಬೈಸಿಕೊಳ್ಳುತ್ತಿರುತ್ತೇನೆ. ಹೆಚ್ಚಿಟ್ಟ ತರಕಾರ್‍ಇಯಲ್ಲಿ ಒಂದು ಗಜ್ಜರಿಯೊ ಸೌತೆಕಾಯಿಯೊ ಎತ್ತಲು ಕೈ ಹಾಕಿ ಸೌಟಿನಲ್ಲಿ ಎಟು ತಿಂದು ಹೊರಗೆ ಬಂದು, ದೇವರಿಗೊಂದು ನಮಸ್ಕಾರ ಹೇಳಿ, ಇಂಥ ನೆಚ್ಚಿನ ಹುಡುಗಿ ಜೊತೆ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದು. ಆಫೀಸಿನಲ್ಲಿ ತಲೆ ತಿನ್ನುತ್ತಿರುವ ಕೋಡೊಂದು ಹೇಗಾದ್ರೂ ಮಾಡಿ ವರ್ಕ್ ಆಗೋ ಹಾಗೆ ಮಾಡಪ್ಪ ಅಂತಾನೊ, ಇಲ್ಲ ವೀಕೆಂಡಿಗೆ ಕೆಲಸ ಬರದಿರುವ ಹಾಗೆ ಮಾಡೊ ಅಂತಾನೊ ಏನೊ ಒಂದು ಬೇಡಿಕೆ ಸಲ್ಲಿಸಿ ಡ್ರೆಸ್ ಹಾಕಿಕೊಳ್ಳಲು ಬೆಡ್ ರೂಂಗೆ ಹೋಗುತ್ತ ಈ ವೀಕೆಂಡು ಕೆಲ್ಸ ಇದೆ ರಜೆ ಇಲ್ಲಾ ಅಂತ ಡಂಗುರ ಸಾರುತ್ತೇನೆ. "ಯಾಕ್ರೀ ಶಾಪಿಂಗ್ ಹೊಗೋಣ ಅಂತಾ ಕಾಡ್ತೀನಿ ಅಂತ ಆಫೀಸಿಗೆ ಹೊಗ್ತಿದಿರೊ ಹೇಗೆ" ಅಂತಾಳೆ, ಇಲ್ಲ ನಿಜ ಪ್ರೊಜೆಕ್ಟ್ ರಿಲೀಸು ಇದೆ ಅಂದ್ರೆ. ಏನ್ರಿ ಅದು ನಿಮ್ಮ ಪ್ರೊಜೆಕ್ಟ ಹೆಸ್ರು "ಬುಲ್ ಶಿಟ್ಟಾ" ಅಂತಾಳೆ. "ಲೇ ಇಂಗ್ಲೆಂಡಿನ ಮಹರಾಣಿ ನಿನ್ನ ಇಂಗ್ಲೀಶೋ ನೀನೊ ಎಲ್ಲಾ ಸರಿಯಾಗಿದೆ" ಅಂದ್ರೆ "ಮತ್ತಿನ್ನೇನ್ರಿ ಯಾವಾಗ್ಲೂ ಬುಲ್ ಶಿಟ್ ಪ್ರೊಜೆಕ್ಟ ಬುಲ್ ಶಿಟ್ ಪ್ರೊಜೆಕ್ಟ್ ಅಂತಿರ್ತೀರ ಅದಕ್ಕೆ ಅದೇ ಹೆಸ್ರೇನೊ ಅನ್ಕೊಂಡೆ" ಅಂತಾಳೆ. ಅದೂ ಕರೆಕ್ಟೆ ಬಿಡು ಅಂದು. ಹಾಸಿಗೆ ಮೇಲೆ ಅವಳು ತಾಸುಗಟ್ಟಲೆ ತಲೆ ಕೆಡಿಸಿಕೊಂಡು ತನಗಿಷ್ಟವಾದೊಂದು ಡ್ರೆಸ್ಸ್ ಆರಿಸಿ ತೆಗೆದಿಟ್ಟಿರುತ್ತಾಳೆ, ಅದರಲ್ಲಿ ತೂರಿಕೊಳ್ಳುತ್ತೇನೆ.

ಡಿಯೋಡ್ರಂಟ ಹಾಕಿಕೊಳ್ಳುತ್ತಿದ್ದಂತೇನೇ ಅದರ ಸುವಾಸನೆಗೆ "ಪರಿಮಳ" ನೆನಪಾಗಿ ಬಿಡ್ತಾರೆ, ಇವಳು ಸೇರಿಕೊಂಡಿರುವ ಸೊಷಿಯಲ್ ಕ್ಲಬ್ ಚೇರಮನ್ ಅವ್ರು, ಹೆಸ್ರೇನೊ ಬೇರೆ ಇದೆ, ಆದ್ರೆ ಅವರು ಹಾಕಿಕೊಳ್ಳೊ ಆ ಘಮ್ ಅಂತಿರೋ ಸೆಂಟ್ ವಾಸನೆ ನೋಡಿ "ಪರಿಮಳ" ಅಂತಾ ನಾವಿಟ್ಟಿರೊ ಹೆಸ್ರು, ಸೆಂಟು ಬಾಟಲಿನಲ್ಲೆ ಮುಳುಗಿ ಒಂದು ಡುಮುಕಿ ಹೊಡೆದು ಬಂದಿರ್ತಾರೆ ಅಂತ ಕಾಣುತ್ತೆ, ಇವ್ಳೊ ಮನೆಗೆ ಅವ್ರು ಬಂದಾಗ ಅದು ಇದು ತೊರಿಸ್ತೀನಿ ಅಂತ ಮನೆ ತುಂಬಾ ಸುತ್ತಾಡಿಸಿ ರೂಂ ಫ್ರೆಶ್ನರ್ ಖರ್ಚು ಉಳಿಸಿರ್ತಾಳೇ. ಲೇ ಪರಿಮಳ ಯಾವಾಗ ಬರ್ತಾರೇ ಅಂದ್ರೆ ಇನ್ನೇನು ಮುಂದಿನ ವಾರ ಕರೆಯೊಣಾ ಅಂತಿದೀನಿ ಅತ್ತೆ ಬರ್ತಿದಾರಲ್ಲ ಮನೆ ಘಮ್ ಅಂದ್ರೆ ಅವ್ರಿಗೂ ಖುಶಿಯಾಗುತ್ತೆ ಅಂದ್ಲು, ಒಳ್ಳೆ ಪ್ಲಾನೇ ಹಾಕಿರ್ತಾಳೆ ಅಮ್ಮನ್ನ ಇಂಪ್ರೆಸ್ ಮಾಡಿ ಅದೇ ಟೈಮಿನಲ್ಲಿ "ಲೇ ಕಂಜ್ಯೂಸಾ ಎರಡು ಸೀರೆ ಕೊಡ್ಸೊ ಅವ್ಳಿಗೆ" ಅಂತ ಬೈಸಿ ನಾಲ್ಕು ಸೀರೆ ತುಗೊಂಡು ನನ್ನ ಕ್ರೆಡಿಟ್ ಕಾರ್ಡ ಲಿಮಿಟ್ಟು ಮೀರಿಸಿ ಬಿಟ್ಟಿರ್ತಾಳೆ.

ಅಂತೂ ರೆಡಿಯಾಗಿ ಡೈನಿಂಗ್ ಟೇಬಲ್ಲಿಗೆ ಬಂದ್ರೆ, ತಿಂದು ಸ್ವಲ್ಪ ದಪ್ಪ ಆಗ್ಲಿ ಅಂತಾ ಅವಳು ನಾಲ್ಕು ಜನರಿಗಾಗುವಷ್ಟು ಹಾಕಿಟ್ಟ ಟಿಫಿನ್ನು ಅದೇ ಗಡಿಬಿಡಿಯಲ್ಲಿ ಹಾಗೆ ಹೀಗೆ ಮಾಡಿ ಮುಗಿಸಿ, ಇನ್ನೇನು ಮಧ್ಯಾನ್ಹ ಲಂಚ್ ಬೇಡವೇ ಬೇಡ ಅನ್ನಿಸಿದ್ರೂ, ಅದೊ ಅಲ್ಲಿ ಲಂಚ್ ಬಾಕ್ಸ ರೆಡಿ ಮಾಡಿರ್ತಾಳೆ. ನಾನೇನು ತಿಂದು ಹೃತಿಕ್ ರೋಷನ್ನು (ಅವಳ ಫೆವರಿಟ್ಟು!) ಆಗಲ್ಲಾ ಕಣೇ ಅಂದ್ರೂ ಅವ್ಳು ಕೇಳಲ್ಲ. ಮಾತಿಲ್ಲದೆ ಬಾಕ್ಸ್ ಬ್ಯಾಗಿಗೆ ಹಾಕಿಕೊಳ್ಳುತ್ತೇನೆ. ಹೊರಡಲು ಶೂ ಹಾಕಿಕೊಳ್ಳ ಹೋದ್ರೆ ಸಾಕ್ಸು ಸಿಗಲ್ಲ, "ಲೇ ತಗಡು ಸಾಕ್ಸ ಎಲ್ಲೇ" ಅಂತ ಚೀರುತ್ತೇನೆ, ಸಿಟ್ಟು ಎನ್ ಬಂದಿರಲ್ಲ, ತಗಡು ಅನ್ನೋದು ಅತೀ ಪ್ರೀತಿ ಬಂದಾಗ, ಯಾವಾಗ್ಲೊ ಚಿನ್ನಾ ಅಂದ್ರೆ ಹಳೆಯದಾಯಿತ್ರಿ ಅಂದ್ಲು, ಪ್ಲಾಟಿನಮ್ಮು ಅನ್ಲಾ ಅಂದ್ರೆ ಜಾಸ್ತಿ ಆಯ್ತು ಅಂದದ್ದಕ್ಕೆ ಪ್ರೀತಿಯಿಂದ ತಗಡು ಅಂತೀನಿ. ಸಾಕ್ಸು ಅಲ್ಲೇ ಬಿದ್ದಿರತ್ತೆ ನಂಗೆ ಮಾತ್ರ ಕಾಣಲ್ಲ ಬಂದು ಅವ್ಳು ಹುಡುಕಿ ಕೊಟ್ರೇ ಸಿಗ್ಬೇಕು.

ಅಪ್ಪಿ ಪಪ್ಪಿಯೊಂದು ಕೊಟ್ಟು ಹೊರಟರೆ, ಬಾಗಿಲಿ ಒರಗಿ ನಿಂತುಕೊಂಡು ನಾ ಬರುವುದು ರಾತ್ರಿಯೆಂದು ಗೊತ್ತಿದ್ರೂ "ಸಂಜೆ ಬೇಗ ಬನ್ರಿ" ಅಂತಿರುವ ಅವಳಿಗೆ ಕೈ ಮಾಡಿ ಬೈಕಿನ ಗೇರು ಹಾಕುತ್ತಿದ್ದರೆ ಕಿಟಕಿ ಸಂದಿಯಲ್ಲಿ ಪಕ್ಕದ ಮನೆ ಪದ್ದು ನೊಡುತ್ತಿರುತ್ತಾಳೆ. ಆಫೀಸಿನಲ್ಲಿ ಕೆಲಸ ಬಹಳ ಇದೆ, ಈ ಟ್ರಾಫಿಕ್ಕು ಬೇರೆ ಮತ್ತೊಂದಿನಾ ಸಿಗ್ನಲ್ಲಿನಲ್ಲಿ ಸಿಗುವ ಸುಂದರಿಯರೊಂದಿಗೆ ಭೇಟಿಯಾಗ್ತೇನೆ, ಬೈ ಬೈ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/officege-horataaga.pdf
you might as well like this
http://www.telprabhu.com/heegomdu-samje.pdf
http://www.telprabhu.com/nasukige.pdf