Sunday, March 29, 2009

ನಾಯಿ ಬೆಕ್ಕು, ನಾವು...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.



ಊರಿಂದ ಬರ್ತಿದ್ದಂಗೆ, ಅಲ್ಲೇನೇನಾಯ್ತು ಅಂತ ಹೇಳಿ ಅಂತ ದುಂಬಾಲುಬಿದ್ದಳು, ಹೇಳ್ದಿದ್ರೆ ಎಲ್ಲಿ ಬಿಡ್ತಾಳೆ... "ಅಪ್ಪ ಅಮ್ಮ ಚೆನ್ನಾಗಿದಾರೆ, ನಿನ್ನ ತುಂಟಾಟಗಳ ಕೇಳಿ ಮನಸಾರೆ ನಕ್ಕರು, ತಂಗಿ ಚೆನ್ನಾಗಿ ಓದ್ತಿದ್ದಾಳೆ, ಮತ್ತೊಂದು ಸಾರಿ ನಿನ್ನ ಬಿಟ್ಟು ಬಂದ್ರೆ ಅಷ್ಟೇ ಊರಲ್ಲಿ ಕಾಲು ಇಡಲು ಬಿಡಲ್ಲ ಅಂತ ತಾಕೀತು ಮಾಡಿದಾಳೆ, ಮತ್ತೆ ಚಿನ್ನು ಕೂಡ ಚೆನ್ನಾಗಿದಾಳೆ" ಅಂದೆ, "ಆಂ ಚಿನ್ನು!!! ಯಾರ್ರೀ ಅದು, ನಾ ಬರಲಿಲ್ಲ ಅಂತ ಮನೇಲಿ ನಿಮ್ಗೆ ಇನ್ನೊಂದು ಮದುವೆಯೇನಾದ್ರೂ ಮಾಡಿ ಬಿಟ್ರೊ ಏನ್ ಕಥೆ" ಅಂದ್ಲು. "ಒಹೋ ನಾನಂದೆ.. ಅವಳಿಲ್ಲಾ... ಅದ್ಕೆ ಟೆಂಪರರಿ ಒಂದು ಹತ್ತು ದಿನಕ್ಕೆ ಅಂತ ಇನ್ನೊಂದು ಮದುವೆ ಇಲ್ಲೇ ಮಾಡಿ ಅಂತ, ಅಮ್ಮಾನೆ ಮಾಡಲಿಲ್ಲ.. ಛೆ!" ಅಂತ ಬಾಯಿಬಿಟ್ಟೆ... ಕಿವಿ ಹಿಂಡುತ್ತ "ಹೂಂ ಆಸೆ ನೋಡು, ಚಿನ್ನು ಯಾರು ಅಂತ ಹೇಳ್ತೀರೊ ಇಲ್ವೊ?" ಅಂದ್ಲು. "ನಿನಗೆ ಇನ್ನೊಬ್ಬ ನಾದಿನಿ(ಗಂಡನ ತಂಗಿ) ಅವಳು" ಅಂದೆ, ಅವಳು ಬಿಡಬೇಕಲ್ಲ ಬಿಡಿಸಿ ಹೇಳೊವರೆಗೆ ಇನ್ನಷ್ಟು ತಿರುವಿದಳು ಕಿವಿ ಕಿತ್ತು ಬರುವ ಹಾಗೆ..."ಅಮ್ಮ ಬೆಕ್ಕು ಸಾಕಿದಾಳೇ, ಮಗಳಂಗೆ ನೊಡ್ಕೊತಾ ಇದ್ರೆ ನಿಂಗೆ ನಾದಿನಿನೇ ತಾನೆ"... ಅಂತ ಚೀರಿದೆ ಬಿಟ್ಲು.

ಕಿವಿ ಕೆಂಪಗಾಗಿತ್ತು! ಮತ್ತೆ ಅವಳೇ ನೀವುತ್ತಿದ್ಲು, ಹಿತವಾಗಿತ್ತು... ಹೇಗಿದೆ ಅದು ಅಂದದ್ದಕ್ಕೆ ಫೊಟೊ ತೆಗೆದು ತೋರಿಸಿದೆ, "ಥೇಟ ನಿಮ್ಮ ಹೋಲಿಕೆ, ಎಷ್ಟೇ ಅಂದ್ರು ನಿಮ್ಮ ತಂಗಿ ಅಲ್ವೆ!" ಅಂದ್ಲು, "ಅದ್ಯಾವ ಆಂಗಲ್ಲಿನಲ್ಲಿ ನಾ ಹಾಗೆ ಕಾಣ್ತಿನೋ ತಮಗೆ" ಅಂದ್ರೆ ಕಿಲಕಿಲ ನಕ್ಳು. "ಎಲ್ಲಿಂದ ತಂದೀದಾರೆ" ಅಂದ್ಲು. ಅದೊಂದು ದೊಡ್ಡ ಕಥೆ ಅಂತಿದ್ದಂಗೆ ಅವಳ ಕಿವಿ ನೆಟ್ಟಗಾಯಿತು, ಕಥೆ ಅಂದ್ರೆ ಬಿಡ್ತಾಳಾ, ಹೇಳದಿದ್ರೆ ನನ್ನ ಕಿವಿ ಇನ್ನಷ್ಟು ಕೆಂಪಗಾಗುತ್ತೆ.

ಮನೇಲಿ ಇದು ಎಷ್ಟನೇ ಬೆಕ್ಕು ಗೊತ್ತಿಲ್ಲ, ಮೊದಲಿದ್ದದ್ದು "ಮೀನೂ(ಮಿನ್ನು)" ಅದು ತಂದು ಸಾಕಿದ್ದು, ಆಮೇಲೆ ಬಂದದ್ದು "ಜಾನಿ", ಆಗಾಗ ಬಂದು ಹೋಗುತ್ತಿದ್ದುದು "ಜಾಫ್ರಿ"(ಜಾಫ್ರಾಣಿ ಅಂತ ಒಂದು ಬೆಕ್ಕಿನ ತಳಿ), ಹೀಗೆ ಸಾಕಷ್ಟು ಬೆಕ್ಕು ಸಾಕಿ ಆಗಿದೆ ಈಗ ಎಲ್ಲಿಂದಲೊ ಬಂದು ನೆಲೆಯೂರಿರುವುದು "ಚಿನ್ನಿ ಅಲಿಯಾಸ ಚಿನ್ನು". ನಾವೆಲ್ಲ ಈಕಡೆ ಬಂದ ಮೇಲೆ
ಅಮ್ಮನಿಗೆ ಜತೆಯಾಗಿದ್ದು ಅವೇ, ಅವನ್ನೇ ಮಕ್ಕಳಂತೆ ಸಾಕಿದ್ದಾಳೆ, ಹೀಗಾಗಿ ಅವು ನಮ್ಮ ಮನೆಯ ಸದಸ್ಯರ ಲಿಸ್ಟು ಸೇರಿಕೊಂಡಿದ್ದು. ಮೊದಲಿಗೆ ಒಂದೊಂದು ಬೆಕ್ಕು ಸತ್ತಾಗಲೂ ಅತ್ತಿದ್ದಾಳೆ ಅಮ್ಮ, ಅದೊಂಥರಾ ಭಾವನಾತ್ಮಕ ಸಂಭಂಧ. ಇತ್ತೀಚೆಗೆ ಆಸ್ತಿ, ಮನೆ ಅಂತ ವಿವಾದಗಳಿಂದ ಕೆಟ್ಟು ಹಳಸಿದ ಸಂಭಧಗಳಿಗಿಂತ ಅವೇ ನನಗೆ ಎಷ್ಟೋ ಚೆನ್ನಾಗಿವೆ ಅನಿಸತ್ತೆ, ಏನೂ ಬಯಸದೇ ನಿಸ್ವಾರ್ಥ ಪ್ರೀತಿ ನೀಡುವ ಅವು ನಿಜವಾದ ಸಂಭಂಧಿಗಳು.

ಆದರೂ ನನಗೆ ಬೆಕ್ಕುಗಳೆಂದರೆ ಅಷ್ಟಕ್ಕಷ್ಟೇ, ಮೊದಲಿಂದಲೂ ನಾಯಿ ಅಂದ್ರೆ ಅಚ್ಚುಮೆಚ್ಚು. ಆದರೆ ಅಮ್ಮ ಸಾಕಿದಾಗ ಬೇಡವೆಂದಿಲ್ಲ ಹಾಗೂ ಅವನ್ನೇನೂ ದೂರ ತಳ್ಳಿಲ್ಲ, ಆದರೂ ಬೆಕ್ಕಿಗೆ ಅಷ್ಟೊಂದು ಮನೆ ಮೇಲೆ ನಂಬುಗೆ ಕಡಿಮೆ ಅಂಥ ನನ್ನ ಭಾವನೆ, ಚೆನ್ನಾಗಿ ತಿನ್ನಲು ಸಿಗುವವರೆಗೆ ಇರುತ್ತವೆ ಇಲ್ಲದಿದ್ದರೆ ಇನ್ನೊಂದು ಮನೆ ಅಂಥ ಹೊರಡುತ್ತವೆ, ನಾಯಿ ಹಾಗಲ್ಲ ಒಂದು ರೊಟ್ಟಿ ತುಣುಕು ಹಾಕಿದ್ದರೂ, ಅದಕ್ಕೆ ನಂಬುಗೆ ಯಾವಾಗ್ಲೂ ಇದ್ದೆ ಇರುತ್ತೆ. ಮನೆಗೆ ನಾಯಿಯೊಂದು ಕೂಡ ಬರುತ್ತೆ, ಸೀದಾ ನಮ್ಮ ಮನೆಗೆ ಬರುತ್ತೆ ನೆನಪಿಟ್ಟುಕೊಂಡು, ಅದಕ್ಕೆ ಅಪ್ಪ "ಮಲ್ಲು" ಅಂತ ಹೆಸರಿಟ್ಟಿದ್ದಾರೆ, ಒಂದು ರೊಟ್ಟಿ ಹಾಕಿದ್ರೆ ಕೂತು ಒಂದು ಘಂಟೆ ಮನೆ ಕಾದು ಹೋಗತ್ತೆ, ಮನೇಲಿರೊ ಬೆಕ್ಕು ಹಾಲು ಹಾಕೊವರೆಗೆ ಮಾತ್ರ ಕಾಲ ಕಾಲಲ್ಲಿ ಬರುತ್ತೆ, ಆಮೇಲೆ ಕೈಗೆ ಸಿಕ್ಕರೆ ಕೇಳಿ. ಅಜ್ಜ ಸಾಕಿದ ನಾಯಿ "ಟಿಪ್ಪು" (ಟಿಪ್ಪುಸುಲ್ತಾನ) ಊರಿಗೆ ಪ್ರಸಿದ್ದ, ಅಜ್ಜ ಇರುವರೆಗೆ ಮಾತ್ರ ಮನೇಲಿದ್ದದ್ದು, ಆಮೇಲೆ ಮರಳಲೇ ಇಲ್ಲ, ಹಾಗೆ ನಂಬುಗೆಗೆ ಸಾಕ್ಷಿಯಾಗಿರುವ ಇವೆಲ್ಲ ನನ್ನ ನಾಯಿ ಪ್ರೀತಿ ಇನ್ನಷ್ಟು ಗಟ್ಟಿ ಮಾಡಿದ್ದವು.

"ರೀ ನಾವು ಸಾಕಿದ್ರೆ ಹೇಗೆ" ಅಂದ್ಲು ಇದನ್ನೆಲ್ಲ ಕೇಳಿ, "ಏನು" ಅಂದ್ರೆ "ಬೆಕ್ಕು ಬೇಕು" ಅಂದ್ಲು, "ಬೆಕ್ಕು ಬೇಡ ನಾಯಿ ಆದ್ರೆ ಓಕೇ" ಅಂತ ನಾನು. ಶುರುವಾಯಿತು ಮಾತಿನ ಚಕಮಕಿ... "ಅಮ್ಮ ಸಾಕೀದಾರೆ, ನಂಗೂ ಬೇಕು" ಅಂತ ಇವಳು, "ಅಮ್ಮ ಬೆಕ್ಕು ಸಾಕಿದ್ರೆ, ನಾವು ನಾಯಿ ಸಾಕೊಣ" ಅಂತ ನಾನು. ದೊಡ್ಡ ಕೊಳೀಜಗಳವೇ ಶುರುವಾಯ್ತು. ವಿರೋಧಿ ನಾಮ ಸಂವತ್ಸರ ದೊಡ್ಡ ವಿರೊಧವನ್ನೇ ಸೃಷ್ಟಿಸಿತ್ತು, "ಸಾಕಿದರೆ ನಾಯಿ, ಇಲ್ಲಾಂದ್ರೆ ಇಲ್ಲ" ಅಂತ ನಾನೂ ಪಟ್ಟು ಹಿಡಿದೆ.

"ಲೇ ಚಿಕ್ಕ ನಾಯಿಮರಿ ನಿನ್ನ ಹಿಂದೆ ಹಿಂದೆ ಒಡಾಡುತ್ತಿದ್ರೆ ಊಹಿಸಿಕೊಳ್ಳು ಎಷ್ಟು ಚೆನ್ನಾಗಿರ್ತದೆ ನೋಡು, ಬೆಕ್ಕು ಬರೀ ಹಾಲು, ಇಲ್ಲ ತಿನ್ನಲು ಏನಾದ್ರೂ ಬೇಕೆಂದಾಗ ಮಾತ್ರ ಬರುತ್ತೆ" ಅಂದೆ, "ನೀವಿದೀರಲ್ಲ ಹಿಂದೆ ಹಿಂದೆ ಓಡಾಡೋಕೆ, ಅದ್ಯಾಕೆ ಬೇಕು" ಅಂತಂದ್ಲು, "ರೀ... ಬೆಕ್ಕು ಹಾಗೆ ಮಡಿಲಲ್ಲಿ ಕೂತು, ತಲೆ ಸವರುತ್ತಿದ್ರೆ ಅದು ನಿದ್ದೆ ಹೋಗುತ್ತೆ, ಏನ್ ಚೆನ್ನಾಗಿರತ್ತೆ ಊಹಿಸಿ" ಅಂದ್ಲು "ಅದಕ್ಕೆ ಬೆಕ್ಕೇ ಯಾಕೆ ಬೇಕು ನನ್ನ ತಲೇನೆ ಸವರು ನಿದ್ದೆ ಹೋಗ್ತೀನಿ" ಅಂದೆ. ಫೋನು ಮಾಡಿ ಅಮ್ಮನ ಸಲಹೆ ಕೇಳಿದ್ಲು, ಅಮ್ಮ ಇವಳ ಸಪೊರ್ಟಿಗೆ ಬಂದ್ಲು, "ನಾಯಿ ಅಂದ್ರೆ ನ್ಯಾಯ" ತಿಳಿಸಿ ಹೇಳು ಅಂತ ಅಮ್ಮ. "ಅಲ್ಲ ನಾಯಿ ಅಂದ್ರೆ ನಂಬುಗೆ" ಅಂತ ನಾನು, "ಯಾರನ್ನಾದ್ರೂ ಕಚ್ಚಿದ್ರೆ" ಅಂದ್ರೆ, "ಕಚ್ಚೊ ನಾಯಿ ಬೇಡ, ಬೊಗಳೊ ನಾಯಿ ತರೋಣ" ಅಂತಂದೆ, "ರಾತ್ರಿಯೆಲ್ಲ ಬೊಗಳುತ್ತೆ, ನಿದ್ದೆ ಹೇಗೆ" ಅಂತ ಇವಳು ವಾದಕ್ಕಿಳಿದ್ಲು, ಹೌದಲ್ವ ರಾತ್ರಿ ಬೊಗಳತ್ತೆ ಅದೊಂದು ಪ್ರಾಬ್ಲ್‌ಂ... ಆದರೆ ಸೋಲೊ ಹಾಗಿಲ್ಲ "ಬೆಕ್ಕು ರಾತ್ರಿಯೆಲ್ಲ ಅಲ್ಲಿ ಇಲ್ಲಿ ಇಲಿ ಸಿಗುತ್ತೇನೊ ಅಂತ ಹುಡುಕಾಡತ್ತೆ, ಮನೇಲೇ ಸಾಮಾನು ಚೆಲ್ಲಾಪಿಲ್ಲಿಯಾಗತ್ತೆ" ಅಂತ ನಾನು, "ಅದೂ ಸರಿ ಸ್ವಲ್ಪ ಅಡ್ಜಸ್ಟ ಮಾಡ್ಕೊಬೇಕಪ್ಪ" ಅಂದ್ಲು ನಾನೂ "ನಾಯಿ ಬೊಗಳಿದ್ರೆ, ಸ್ವಲ್ಪ ಅಡ್ಜಸ್ಟ ಮಾಡ್ಕೊಬೇಕಪ್ಪ" ಅಂದೆ.

ಇದು ಮುಗಿಯದ ವಿವಾದ, ನಾಯಿ ಕಚ್ಚತ್ತೆ ಅಂದ್ರೆ ಬೆಕ್ಕು ಪರಚತ್ತೆ, ಹೀಗೆ ಆಯ್ತು... ಮಧ್ಯಾನದ ಹೊತ್ತಿಗೆ ಹೊಟ್ಟೆ ಹಸಿಯಿತು, ಅವಳೊ ಧರಣಿಗಿಳಿದಳು, ಬೆಕ್ಕಿನಂತೆ ಏನೊ ಸ್ವಲ್ಪ ತಿಂದು ಸುಮ್ಮನಾದ್ಲು, ನನಗೊ ನಾಯಿಯಂತೆ ಬ್ರೆಡ್ಡು ಬಿಸ್ಕಿಟ್ಟೆ ಗತಿಯಾಗುತ್ತೆ ಅನ್ನಿಸಿತು. ನಾನೂ ಯೋಚಿಸಿದೆ ಈ ನಾಯಿ ಸಾಕಿದ್ರೆ, ಬೊಗಳತ್ತೆ, ಕಚ್ಚಬಹುದು, ನಂಬುಗೆ ಪ್ರಾಣಿ, ಆದ್ರೆ ಊರಿಗೆ ಹೊರಟ್ರೆ ಎಲ್ಲಿ ಬಿಟ್ಟು ಹೋಗೋದು, ಬೆಕ್ಕಾದ್ರೆ ಮನೇಲಿರತ್ತೆ, ಮತ್ತೊಬ್ಬರಲ್ಲಿ ಕೊಟ್ಟು ಹೋದ್ರೂ ಇಟ್ಕೊತಾರೆ, ಬೊಗಳಲ್ಲ, ಕಚ್ಚೊದು ಕಮ್ಮಿ ತನ್ನ ಪಾಡಿಗೆ ತಾನಿರತ್ತೆ.

ಅವಳೂ ಯೋಚಿಸಿರಬೇಕು... ನಾಯಿ ಹಾಗೆ ಬೆಕ್ಕು ನಂಬಿಕೆಗೆ ಅರ್ಹವಲ್ಲ, ಹಾಲು ಎಲ್ಲ ಕದ್ದು ಕುಡಿಯತ್ತೆ, ನಾಯಿ ಹಾಕೊವರೆಗೆ ಸುಮ್ನೆ ಕೂತಿರತ್ತೆ ಆದ್ರೆ ದ್ರೊಹ ಮಾಡಲ್ಲ, ಮನೆ ಬೇರೆ ಕಾಯುತ್ತೆ, ನಾನೂ ಒಬ್ಳೆ ಇರ್ತೀನಿ ಜತೆಗೆ ಒಳ್ಳೆ ಸೆಕ್ಯೂರಿಟಿ ಆದ ಹಾಗಾಗುತ್ತೆ, ಬೆಕ್ಕು ಮನೇಲಿ ಒಂದು ಗಾಜಿನ ಸಾಮಾನೂ ಉಳಿಸಲಿಕ್ಕಿಲ್ಲ ಅಂತ.

ಸಂಜೆಗೆ ಮತ್ತೆ ಸಭೆ ಸೇರಿದಂತಿತ್ತು, "ರೀ" ಅಂದ್ಲು ಮೆಲ್ಲಗೆ ಬೆಕ್ಕು "ಮ್ಯಾಂ" ಅಂದ ಹಾಗೆ. "ಹೂಂ" ಅಂದೆ ನಾಯಿ "ಗುರ್‌ರ್" ಅಂದ ಹಾಗೆ, "ಟೀ, ಬೇಕಾ" ಅಂದ್ಲು, "ನಿನ್ನ ಬೆಕ್ಕಿಗೆ ಹಾಲು ಹಾಕಲು ಬೇಕಲ್ಲ, ನಮಗೆಲ್ಲಿ ಇನ್ನು ಟೀ ಸಿಗೊದು" ಅಂದೆ, ಟೀ ಮಾಡಿ ಜತೆಗೆ ಬಿಸ್ಕಿಟ್ಟು ತಂದಿಟ್ಟು "ನಾಯಿ ಬಿಸ್ಕಿಟ್ಟೇನಲ್ಲ ತುಗೊಳ್ಳಿ" ಅಂದ್ಲು. ಮೆಲ್ಲಗೆ ಒಂದೊಂದು ಬಿಸ್ಕಿಟ್ಟು ಚಹದಲ್ಲಿ ಅದ್ದಿ ತಿನ್ನುತ್ತ "ಅಮ್ಮನಿಗೇ ಹೇಳು, ಬೆಕ್ಕಿನ ಮರಿಯೊಂದನ್ನ ಕಳಿಸೊಕೇ!!!" ಅಂದೆ ನಾ ರಾಜಿಯಾಗಿದ್ದೆ... ಅವಳು ಎನ್ ಬೇಡ "ನಾಯಿಮರಿ ತುಗೊಂಬನ್ನಿ, ಯಾವುದಾದ್ರೂ ಒಳ್ಳೆ ಜಾತೀದು" ಅಂದ್ಲು, ಅಯ್ಯೋ ಇದೊಳ್ಳೆ ಕಥೆಯಾಯ್ತಲ್ಲ, ಇಷ್ಟೊತ್ತು ಬೆಕ್ಕು ಅಂತಿದ್ದವಳು ಈಗ ನಾಯಿ ಅಂತೀದಾಳೇ, ನಾನೋ ನಾಯಿ ಬಿಟ್ಟು ಬೆಕ್ಕಿಗೆ ಸೈ ಅಂದರೆ.

"ನೀನೇನು ನನಗಾಗಿ ತ್ಯಾಗ ಮಾಡಬೇಕಿಲ್ಲ, ಬೆಕ್ಕೆ ತರೋಣ ಬಿಡು" ಅಂದ್ರೆ, ನಾಯಿಮರಿ ಅಂತ ಹಠಕ್ಕಿಳಿದಳು, ಮತ್ತೆ ವಾದ ವಿವಾದವಾಯ್ತು, ಇಬ್ಬರ ನಿಲುವುಗಳು ಈ ಸಾರಿ ಅದಲು ಬದಲಾಗಿದ್ದವು. ಮಾವನಿಗೆ ಫೋನು ಮಾಡಿ ಕೇಳಿದ್ರೆ,
"ನಾಯಿ ಬೆಕ್ಕು ಎನ್ ಸಾಕ್ತೀರ, ಎರಡು ಕೊಳೀನೊ ಎಮ್ಮೇನೊ ಸಾಕಿ, ಮೊಟ್ಟೆ, ಹಾಲಾದ್ರೂ ಆದೀತು" ಅಂದ. ಇವಳು ಸಗಣಿ ಬಳಿಯೋದು, ಹಾಲು ಕರೆಯಲು ಹೋಗಿ ಒದೆಸಿಕೊಳ್ಳೊದು... ನಾ ಕೊಳಿ ಹಿಡಿಯಲು ಒಡಾಡೊದು, ಹಿಡಿದು ಕುಕ್ಕಿಸಿಕೊಳ್ಳೊದು... ಊಹಿಸಿಯೇ ನಗು ಬಂತು. ಅದ ಕೇಳಿ, ಅವಳು "ಬೆಳ್ಳಿ ಮೂಡಿತೊ ಕೋಳಿ ಕೂಗಿತೊ" ಅಂತ ಹಾಡಿ ನಕ್ಕರೆ, "ಎಮ್ಮೇ ನಿನಗೆ ಸಾಟಿ ಯಾರು, ಅರೆ ಹೊಯ್‌ಂ ಅರೆ ಹೊಯ್‌ಂ..." ಅಂತನ್ನುತ್ತ ಬಿದ್ದುಬಿದ್ದು ನಕ್ಕೆ.

ಕೊನೆಗೆ "ಎರಡೂ ಸಾಕಿದರೆ ಹೇಗೆ" ಅಂತಂದೆ... "ಎಮ್ಮೆ ಕೊಳೀನಾ" ಅಂದ್ಲು, ದುರುಗುಟ್ಟಿ "ನಾಯಿ ಬೆಕ್ಕು" ಅಂದೆ... "ರೀ ಒಂದಕ್ಕೊಂದು ಕಚ್ಚಾಡಿದರೆ, ಈಗ ನಾವೇ ಇಲ್ವಾ ನಾಯಿ ಬೆಕ್ಕು ಅಂತ ಆಗಿಂದ ಕಾದಾಡುತ್ತಿದ್ದೇವೆ, ಇನ್ನು ಅವೆರಡೂ ಸೇರಿದ್ರೆ ಮುಗೀತು" ಅಂದ್ಲು. "ಎಲ್ಲ ಜತೆಯಾಗಿರ್ತವೆ ಎನಾಗಲ್ಲ" ಅಂದೆ. "ಹಾಗೆ ಎಮ್ಮೆ ಕೊಳೀನೂ ಸಾಕಿ ಚೆನ್ನಾಗಿರತ್ತೆ" ಅಂದ್ಲು, "ಏನ್ ಮನೇನಾ ಪ್ರಾಣಿ ಸಂಗ್ರಹಾಲಯ ಮಾಡ್ಬೇಕು ಅಂತೀದೀಯ, ಎಲ್ಲ ಸಾಕಿ" ಅಂತ ರೇಗಿದೆ.

ಹಾಗೂ ಹೀಗೂ ಮಾತಿನಲ್ಲೇ ರಾತ್ರಿಯಾಯ್ತು, ಬೆಕ್ಕಿನಂತೆ ಮಡಿಲಲ್ಲಿ ಬಿದ್ದುಕೊಂಡು ಮಾತಾಡುತ್ತಿದ್ಲು, ತಲೆ ಸವರುತ್ತಿದ್ದೆ, "ಲೇ ಹುಲಿ ಸಾಕಿದ್ರೆ ಹೇಗೆ' ಅಂದೆ, ಹೆದರಿ ಬಾಚಿ ತಬ್ಬಿಕೊಂಡ್ಲು ಗಟ್ಟಿಯಾಗಿ, "ಸಿಂಹ ಸಾಕಿದ್ರೆ" ಅಂದೆ, "ಏನ್ ಹೆದರಿಸಿದ್ರೂ ಅಷ್ಟೇ, ಇನ್ನೂ ಗಟ್ಟಿಯಾಗಿ ತಬ್ಬಿಕೊಳ್ಳೊದು ಏನ ಸಾಧ್ಯ ಇಲ್ಲ", ಅಂದ್ಲು ಹೆದರಿಸಿದ್ರೆ ಇನ್ನೂ ಗಟ್ಟಿ ತಬ್ಬಿಕೊಳ್ಳುವಳೆಂದು ಮಾಡಿದ್ದೆ!.. "ಹೂಂ ಮತ್ತೆ ಎನ್ ಸಾಕೊದು ತೀರ್ಮಾನ ಆಯ್ತು" ಅಂದೆ, 'ಕೊಳೀನೂ ಬೇಡ ಕುರೀನೂ ಬೇಡ" ಅಂದ್ಲು.. "ಕುರೀ ಬಗ್ಗೆ ಇನ್ನೂ ನಾವು ಮಾತಾಡಿಲ್ಲ" ಅಂದೆ, "ರೀ ಸಾಕು, ಯಾವ ಪ್ರಾಣಿನೂ ಬೇಡ ನಾವೇ ಇಬ್ಬರು ಇದೀವಲ್ಲ" ಅಂದ್ಲು "ಅದೇ ನಾಯಿಮರಿ ಹಾಗೆ ನಿನ್ನ ಹಿಂದ್‌ಹಿಂದೆ ಸುತ್ತಲು, ಕಚ್ಚಲು" ನಾನಿದೀನಲ್ಲ ಅಂತ ಗಲ್ಲ ಕಚ್ಚಿದೆ, ಚೀರಿ "ನಾನೂ ಇದೀನಲ್ಲ, ಬೆಕ್ಕಿನ ಹಾಗೆ ಪರಚಲು" ಅಂತ ತನ್ನ ಇಷ್ಟುದ್ದ ಉಗುರು ತೋರಿಸಿದಳು... ಅಲ್ಲಿಂದ ಓಟಕ್ಕಿತ್ತೆ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/naayi-bekku.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Friday, March 27, 2009

ಬೇವು ಬೆಲ್ಲ ಬೇರೇನಿಲ್ಲ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


ಇಂದೇ ಯುಗಾದಿಯಲ್ವ... ಯುಗ ಯುಗ ಕಳೆದರೂ ಮತ್ತೆ ಮತ್ತೆ ಬರುತಿದೆ ಅಂತ ಅಸಡ್ಡೆಯೇನೊ?.. ಮರೆತುಬಿಟ್ಟವರ ಹಾಗೆ ಕೇಳಿದೆ... ಹಾಗೆ ಅಲ್ವೇ ಮತ್ತೆ.. ನಮ್ಮ ಹೊಸ ವರ್ಷ ಯುಗಾದಿಯಿಂದ ಶುರು, ಎಲ್ರಿಗೂ ಜನೇವರಿ ಒಂದು ಗೊತ್ತು, ಯುಗಾದಿ ಮರೆತೇ ಬಿಟ್ಟಿರೊ ಹಾಗಿದೆ. ಹಬ್ಬಕ್ಕೆ ರಜೆ ಸಿಕ್ಕಿತ್ತು ಊರಲ್ಲಿದ್ದೆ ಒಬ್ಬನೇ... ಇವಳು ತವರುಮನೆಗೆ ಹೋಗೀದಾಳೆ...

ಬೇಡ ಬೇಡ ಈಗಲೇ ಕರಿದ ಹಪ್ಪಳದ ಹಾಗಿದೀನಿ ಅಂದ್ರೂ ಕೇಳದೇ ಅಮ್ಮ ಎಣ್ಣೆ ಸುರಿದು ಅಭ್ಯಂಜನ ಸ್ನಾನ ಮಾಡಿಸಿ ಆರತಿ ಮಾಡಿ, ಊಟಕ್ಕಿಟ್ಲು. ತರಹೇವಾರಿ ತಿಂಡಿ ಮಾಡಿಟ್ಟಿರ್ತಾಳೆ ಅಮ್ಮ, ತಿನ್ನೋಕೆ... ಎರಡು ಕಣ್ಣು, ಎರಡು ಕಿವಿ, ಕೊಟ್ಟ ದೇವ್ರು ಎರಡು ಹೊಟ್ಟೆ ಯಾಕೆ ಕೊಡಲಿಲ್ಲ ಅಂತ ಬಯ್ಕೋಬೇಕು ಅಷ್ಟು ಚೆನ್ನಾಗಿತ್ತು ಲಿಮಿಟ್ಟು ಮೀರಿ ತಿಂದೆ, ಹೊಟ್ಟೆ ಪಾಡಿನ ಚಿಂತೆಯಿಲ್ದೇ. ಬೇವು ಬೆಲ್ಲ ಜತೆಗೆ ತುಪ್ಪ ಶಾವಿಗೆ ಸೇರಿಸಿ ತಿಂದಿದ್ದು, ಬೇವು ಹಾಕಿ ಕಾಸಿದ ಬಿಸಿ ಬಿಸಿ ನೀರು ತಲೆ ಮೇಲೆ ಬಿದ್ದದ್ದು ಎಲ್ಲ ಸೇರಿ ಕೂತಲ್ಲೇ ತೂಕಡಿಸುತ್ತಿದ್ದೆ, ಇವಳ ಫೋನು ಬಂತು, ಬೆಲ್ಲದಂತ ಸಿಹಿ ನಿದ್ದೇಲಿ ಬೇವಿನಂತಾ ಕಹಿ ಕನಸು ಬಿದ್ದ ಹಾಗೆ.

ಅದೆಲ್ಲಿತ್ತೊ ಮೊಬೈಲು, ಊರಿಗೆ ಹೋದ್ರೆ ಎಲ್ಲಾದ್ರೂ ದೂರ ಬೀಸಾಡಿ ಬಿಟ್ಟಿರ್ತೇನೆ, ಅಮ್ಮ ಹುಡುಕಿ ಮಾತಾಡುತ್ತಿದ್ಲು, ಅವರಿಬ್ಬರ ಮಾತು ಮುಗಿಯೋ ಹೊತ್ತಿಗೆ ನನ್ನ ಇನ್ನೊಂದು ಜೊಂಪು ನಿದ್ದೆ ಮುಗಿಸಬಹುದು. ಅಂತೂ ಮೊಬೈಲು ಕೈಗೆ ಬಂತು, "ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳೂಊಊ..." ನರಿ ಊಳಿಟ್ಟಂಗೆ! ಚೀರಿದ್ಲು. "ನಿಂಗೂ ನಂದು ಒಂದು ಅಂಥದ್ದೆ ಶುಭಾಶಯ ಇಟ್ಕೊ" ಅಂದೆ. "ಬಾಯಿಬಿಟ್ಟು ಶುಭಾಶಯ ಹೇಳಿದ್ರೆ ಏನು ಗಂಟು ಹೊಗತ್ತೇ, ನಾನೇ ಫೋನು ಮಾಡ್ಬೇಕು, ಆವಾಗ್ಲೂ ಹೀಗೆ" ಅಂತ ದಬಾಯಿಸಿದ್ಲು, "ಗಂಟು ಖರ್ಚಾಗತ್ತೆ, ಮೊಬೈಲು ಬಿಲ್ಲು ಬರತ್ತಲ್ಲ" ಅಂದೆ, ಇಂಥ ಹಬ್ಬ ಹರಿದಿನಗಳಂದು ಹತ್ತಿಪ್ಪತ್ತು ಫೋನು ಮಾಡಿರ್ತಾಳೆ, ಮೊಬೈಲು ಬಿಲ್ಲು ಬರದೇ ಏನು.

ಮಾತು ಸಾಗಿತ್ತು, "ಮತ್ತೆ ಏನು ಊಟ ಆಯ್ತಾ?" ಅಂದ್ಲು, "ಇಲ್ಲ ಈವತ್ತು ಉಪವಾಸ" ಅಂದೆ, ಮತ್ತಿನ್ನೇನು ಹಬ್ಬ ಊಟ ಮಾಡದೇ ಇರೋಕಾಗುತ್ತಾ, ಕೇಳೊದು ನೋಡಿ... "ನಿಮ್ಮ ಉಪವಾಸ ನಂಗೆ ಗೊತ್ತಿಲ್ವ, ಅಮ್ಮ ಮಾಡಿದ್ದು ಅಂತ ಗಡದ್ದಾಗಿ ತಿಂದು ಹೊಟ್ಟೆ ಇನ್ನಷ್ಟು ಊದಿಸಿಕೊಂಡು ಬರ್ತೀರ, ಬೆಂಗಳೂರಲ್ಲಿ ನೋಡ್ತೀನಿ" ಅಂದ್ಲು "ಇಲ್ಲ ಹಾಗೇನಿಲ್ಲ ಬಿಡು, ಎನ್ ಹೊಟ್ಟೆ ಅಳತೆನಾ ಮಾಡಿಟ್ಟುಕೊಂಡೀದೀಯಾ, ನಿಂಗೆ ಹೇಗ್ ಗೊತ್ತಾಗತ್ತೆ" ಅಂದ್ರೆ, "ಓಹ್ ಅಳತೆ ಇದೆಯಲ್ಲ, ಹಿಂದಿನಿಂದ ತಬ್ಬಿಕೊಂಡ್ರೆ, ಎರಡೂ ಕೈ ಸೇರಿ ಮೇಲೆ ನಾಲ್ಕು ಬೆರಳು ಜಾಗ ಉಳಿಯತ್ತೆ, ಒಂದೇ ಲೆಕ್ಕ ತಪ್ಪಿದ್ರೆ ನಾಲ್ಕು ದಿನಾ ಊಟಾನೇ ಹಾಕಲ್ಲ" ಅಂದ್ಲು ಊರಿಗೆ ಹೊದಮೇಲೆ ಇದ್ದೆ ಇದೆಯಲ್ಲ ನಿನ್ನ ಕೈ ಕಿರಿದಾಗಿವೆ ಅಂತ ವಾದಕ್ಕಿಳಿಯೋದು ಅಂತ ಸುಮ್ಮನಾದೆ. "ರೀ ಬೇವು ಬೆಲ್ಲ ತಿಂದ್ರಾ" ಅಂದ್ಲು. "ಒಹ್ ಅಮ್ಮ ಮಾಡಿದ್ಲು ಸೂಪರ್" ಅಂದೆ, "ನಾನೂ ಮಾಡೀದೀನಿ ಆದ್ರೆ ನೀವಿಲ್ಲಿ ಇಲ್ಲ ಕೊಡಬೇಕೆಂದ್ರೆ" ಅಂದ್ಲು. "ಇಷ್ಟೊತ್ತು ಬಯ್ದು ಬಯ್ದು ಬೇವು ಕೊಟ್ಟೀದೀಯಾ, ಇನ್ನು ಮುದ್ದೊಂದು ಕೊಡು ಬೆಲ್ಲದಂತೆ, ಬೇವು ಬೆಲ್ಲ ಸರಿಯಾಗತ್ತೇ" ಅಂದೆ, "ಛೀ ತುಂಟ" ಅಂತ ನಾಚಿ ಫೋನಿಟ್ಟವಳು ಮತ್ತೊಂದಿಷ್ಟು ಹೊತ್ತಿಗೆ ಮತ್ತೆ ಫೋನು ಮಾಡಿ ಬೆಲ್ಲ ಕೊಟ್ಲು!!!

ಹೀಗೆ ಬೇವು ಬೆಲ್ಲದಂತೆ ನಮ್ಮ ಜೀವನ ಸಾಗಿದೆ, ಮೊದಲೇ ವಿರೋಧಿ ನಾಮ ಸಂವತ್ಸರ, ವಿರೋಧಿಗಳು ಹೆಚ್ಚಾಗದಿರಲಿ, ನಮ್ಮಿಬ್ಬರ ನಡುವೆಯಂತೂ ಯಾವ ವಿರೋಧ ಬರದೇ ಹೀಗೆ ಚೆನ್ನಾಗಿರಲಿ ಎಂಬ ಆಶಯದೊಂದಿಗೆ,

ನಿಮಗೆಲ್ಲರಿಗೂ, ಯುಗಾದಿಯ ಹಾರ್ಧಿಕ ಶುಭಾಶಯಗಳುಊಊ!!!....


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, March 15, 2009

ನಶೆಯೇರದೆ ನಟಿಸಿದಾಗ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


ಮುಂಜಾನೆ ಬ್ರೆಕ್‌ಫಾಸ್ಟ ಮಾಡ್ತಿದ್ದೆ, ಬ್ರೆಡ್ ಟೋಸ್ಟ ಮಾಡಿದ್ಲು ಫಾಸ್ಟ ಆಗಿ ಆಗುತ್ತಲ್ಲ ಅಂತ. ನಾ ಬೇಗ ಹೊರಟಿದ್ದೆ, ಎನಾದ್ರೂ ಬೇಗ ಮಾಡು ಅಂದಿದ್ದಕ್ಕೆ ಟೋಸ್ಟ ಸಿಕ್ಕಿತ್ತು, ಬಹಳಾನೇ ಬೇಗ ಆಯ್ತು ಅಂತ ಕಾಣುತ್ತೆ, ಆಫೀಸಿಗೆ ಹೋಗಲು ಇನ್ನೂ ಸಾಕಷ್ಟು ಟೈಮು ಇತ್ತು, ಡೈನಿಂಗ ಟೇಬಲ್ ಮೇಲೆ ಕೂತು ತಿನ್ನುತ್ತ ಹಾಗೆ ಮಾತಿಗೆಳೆದೆ...

"ರಾತ್ರಿ ಬರೋದು ಲೇಟ್ ಆಗಬಹುದು, ಪಾರ್ಟಿ ಇದೆ, ಊಟ ಅಲ್ಲೇ ಆಗುತ್ತೆ" ಅಂದೆ, "ಏನ್ ವಿಶೇಷ, ಯಾರದಾದ್ರೂ ಎಂಗೇಜಮೆಂಟು, ಮದುವೆ ಎನಾದ್ರೂ ಆಯ್ತಾ" ಅಂದ್ಲು. "ಛೇ, ಅಂಥ ದುಃಖಕರ ಸುದ್ದಿಗಳನ್ನೆಲ್ಲ ಸೆಲೆಬ್ರ್‍ಏಟ್ ಮಾಡೋಕಾಗಲ್ಲ ಹ ಹ ಹ, ಪ್ರೊಜೆಕ್ಟ ರಿಲೀಸ್ ಅಂದ್ರೆ ಒಂದು ಹಂತದ ಕೆಲ್ಸ ಮುಗಿದ ಖುಶಿಗೆ ಪಾರ್ಟಿ" ಅಂತ ಕಿಚಾಯಿಸಿದೆ. "ಯಾಕ್ರೀ, ಅದೆಲ್ಲ ದುಃಖಕರ ಸುದ್ದಿ ಅಂತೀರಾ" ಅಂತ ದುರುಗುಟ್ಟಿದ್ಲು," ಮತ್ತಿನ್ನೇನೆ ಮೊನ್ನೆ ಮೊನ್ನೆ ಎಂಗೇಜಮೆಂಟಾದ ಹುಡುಗನ ಮುಖ ನೋಡಿದ್ರೆ, ಆಕಾಶಾನೇ ಕಡಿದುಕೊಂಡು ತಲೆ ಮೇಲೆ ಬಿದ್ದಿದೆಯೇನೊ ಅನ್ನೊ ಹಾಗಿರ್ತಾನೆ"... ಮತ್ತೊಂದು ಟೊಸ್ಟ್ ಬಾಯಿಗಿಟ್ಟೆ.. ಸ್ವಲ್ಪ ಹೊತ್ತು ಮೌನ ಮತ್ತೆ ಮಾತು ಶುರುವಾಯ್ತು... "ಎಂಗೇಜಮೆಂಟ್ಗೆ ಬೇರೆ ಪಾರ್ಟಿ ಇದೆ, ಸತ್ಯನಲ್ಲಿ" ಅಂದೆ, "ಸತ್ಯ, ಏನೂ ರೆಸ್ಟೊರೆಂಟಾ" ಮರುಪ್ರಶ್ನೆ ಬಂತು. "ಅಲ್ಲ ಅಲ್ಲ.. ಬಾರ್ ಆಂಡ್ ರೆಸ್ಟೊರೆಂಟ್" ಅಂದೆ. "ಒಹೋ, ದುಃಖ ಎಲ್ಲ ಮರೆಯೋಕೆ ಅನ್ನಿ" ಅಂತಂದ್ಲು "ಹಂ.... ಅದೂ ಸರಿ ಆದ್ರೆ ಇಂದೂ ಇರುತ್ತೆ, ಪಾರ್ಟಿ ಅಲ್ವ, ಆದ್ರೆ ಇಂದು ಖುಶಿಯಲ್ಲಿ, ಒಟ್ಟಿನಲ್ಲಿ ಏನು ನೆಪ ಸಿಕ್ಕರೂ ಆಯ್ತು" ಅಂದೆ. "ಲೇಟು ಅಂದ್ರೆ ಎಷ್ಟೊತ್ತಿಗೆ ಬರ್ತೀರ" ಅಂದ್ಲು. "ನೋಡೋಣ ಫೋನು ಮಾಡ್ತೇನೆ" ಅಂತನ್ನುತ್ತ ಟಿಫಿನ್ನು ಮುಗಿಸಿ ಎದ್ದೆ.

ಬಿಸಿ ಬಿಸಿ ಟೀ ಹೀರುತ್ತ, "ಕೊಲೀಗು ಬರ್ತಾಳಲ್ಲ ಜತೆಗೆ, ಅವಳ ಮನೆಗೆ ಬಿಡಬೇಕು, ಬೇಗ ಬರ್ತೀನಿ ಬಿಡು" ಅಂದೆ, "ಹುಡುಗೀರು ಪಾರ್ಟಿಗೆ ಬರ್ತಾರ" ಅಂದ್ಲು, "ಲೇ ಪ್ರಾಜೆಕ್ಟ ಪಾರ್ಟಿ ಅಂದ್ರೆ ಎಲ್ರೂ ಬರ್ತಾರೆ" ಅಂದೆ. ಇನ್ನೂ ಅವಳ ಪ್ರಶ್ನೆಗಳು ಮುಗಿದಿರಲಿಲ್ಲ, "ಮತ್ತೆ ಮನೆಗೆ ಹೇಗೆ ಹೋಗ್ತಾರೆ?"... "ಲೇಟಾದ್ರೆ, ನಾನೀದಿನಲ್ಲ, ಎಲ್ರನ್ನೂ ಮನೆಗೆ ತಲುಪಿಸ್ತೀನಿ" ಅಂದೆ "ಒಳ್ಳೇ ನಿಮ್ಮನ್ನ ನಂಬ್ತಾರಲ್ಲ ಎಲ್ರೂ" ಅಂತ ಕೀಟಲೆಗಿಳಿದ್ಲು... ನಾ ದುರುಗುಟ್ಟಿ ನೋಡಿ ಹೊರಟು ನಿಂತೆ, "ನೀವು ಡ್ರಿಂಕ್ಸ ಮಾಡಿ ಟೈಟ ಆದ್ರೆ (ಭಾರಿ ನಶೆಯೇರೊದಕ್ಕೆ ಹಾಗೆ ಟೈಟಾಗೋದು ಅಂತಾರೆ)" ಅಂದ್ಲು, "ಅದಾಗಲ್ಲ ಬಿಡು" ಅಂದೆ.

"ರೀ ರೀ ಪ್ಲೀಜ್ ಒಂದು ಸಾರಿ ಡ್ರಿಂಕ್ಸ್ ಮಾಡಿ ಟೈಟಾಗಿ ಬನ್ರಿ" ಅಂದ್ಲು. ಅಯ್ಯೋ ಇದೊಳ್ಳೆ ರಗಳೆ ಆಯ್ತಲ್ಲ, ಎಲ್ರೂ ಕುಡೀದೇ ಗಂಡ ಮನೆಗೆ ಬರ್ಲಿ ಅಂದ್ರೆ ಹೋಗೀ ಹೋಗೀ ಇವಳು ಬರೀ ಕುಡಿದಲ್ಲ, ಟೈಟಾಗಿ ಬನ್ರೀ ಅಂತೀದಾಳಲ್ಲ. "ಯಾಕೇ ನಿಂಗೆ ಇಂಥ ದುರ್ಬುಧ್ಧಿ ಬಂತು" ಅಂದ್ರೆ ನಗುತ್ತ "ಏನಿಲ್ಲ ಕುಡಿದ್ರೆ ಎಲ್ರೂ ನಿಜ ಹೇಳ್ತಾರಂತೆ, ನಿಮಗೆಷ್ಟು ಗರ್ಲಫ್ರೆಂಡ್ಸು, ಅವರ ಹೆಸರೇನು, ಎಲ್ಲ ಬಯೊಡಾಟ ಹೊರಹಾಕಿಸಬಹುದು ಅಂತಾ..." ಅಂತಿದ್ದಂಗೆ "ತರಲೆ" ಅಂತ ಬಯ್ದು ಹೊರಬಿದ್ದೆ...

ಅದೇ ಯೋಚಿಸುತ್ತ ಅಫೀಸಿಗೆ ನಡೆದೆ, ಮದುವೆಗೆ ಮುನ್ನ ಹುಡುಗ ಇಂಜನೀಯರು ಅಂತಿದ್ದಂಗೆ ಯಾರೋ ಡ್ರಿಂಕ್ಸ ಮಾಡೇ ಮಾಡ್ತಾರೆ ಅಂತ ಇವಳ ಕಿವಿಯೂದಿದ್ದರು, ಇವಳೊ ನಾ ಮದುವೆಯಾಗಲ್ಲ ಹುಡುಗ ಕುಡಿತಾನಂತೆ ಅಂತ ರಚ್ಚೆ ಹಿಡಿದಿದ್ಲಂತೆ, ಅವಳಿಗೇನೊ ಗೊತ್ತಿತ್ತು ನಾ ಸುಪಾರಿ ತಿನ್ನಲೂ ಹಿಂದೆ ಮುಂದೆ ನೋಡ್ತೀನಿ ಅಂತ, ಹಾಗೂ ಹೀಗೂ ಇವಳಪ್ಪ, ಅದೇ ನಮ್ಮ ಮಾವ, ಈಗ ಯಾರು ಡ್ರಿಂಕ್ಸ್ ಮಾಡಲ್ಲ, ಎಲ್ಲ ಸೋಷಿಯಲ್ಲಾಗಿ ಪಾರ್ಟಿಗಳಲ್ಲಿ ಮಾಡ್ತಾರೆ, ಅದಕ್ಯಾಕೆ ಅಷ್ಟು ಯೊಚಿಸ್ತೀಯಾ ಅಂತ ಸಮಾಧಾನಿಸಿದಾಗಲೇ ಒಪ್ಪಿದ್ದಂತೆ, ಹೀಗಿದ್ದವಳು ಇಂದು ಟೈಟಾಗಿ ಬನ್ರೀ ಪ್ಲೀಜ ಅಂದ್ರೆ ಏನ್ ಕಥೆ ಅಂತೀನಿ... ಇವಳಿಗೆ ಇಂದು ಶಾಕ್ ಕೊಡಲೇ ಬೇಕು ಅಂತ ತೀರ್ಮಾನಿಸಿದೆ.

ಕೊಲೀಗಗೆ ಹೇಳಿದ್ರೆ, "ಒಹ್, ಗ್ರೇಟ್ ಈಗ್ಲೆ ಸತ್ಯಾಜಗೆ(ಬಾರ್) ಹೊರಡೋಣ್ವ" ಅಂದ, ನಾ ನಕ್ಕೆ, "ಮತ್ತಿನ್ನೇನು" ಅಂದ "ಎನಿಲ್ಲ ಸುಮ್ನೆ ಶಾಕ ಕೊಡಬೇಕು.. ಕರೆಂಟ ಇಲ್ದೇ" ಅಂದೆ "ಗೊತ್ತಾಯ್ತು ಬಿಡು, ಓಕೇಜ ನೊ ಪ್ರಾಬ್ಲಮ್ಸ" ಅಂದ. ಪಾರ್ಟಿಗೆ ಹೋಗಿ ಕೂತದ್ದಾಯ್ತು, ಒಂದು ರೌಂಡು, ಎರಡು, ಮೂರು... ಅಷ್ಟರಲ್ಲಿ ನಾನೂ ಎರಡು ಸ್ಪ್ರೈಟ್ (ಕೂಲಡ್ರಿಂಕ್ಸ್) ಖಾಲಿ ಮಾಡಿದ್ದೆ, ಲಾಸ್ಟ ಲಾಸ್ಟ
ಅನ್ನುತ್ತ ನಾಲ್ಕು ಐದು ಆಯ್ತು... ಈ ದೊಡ್ಡ ದೊಡ್ಡ ಹೊಟೆಲುಗಳಲ್ಲಿರುವ ಮೆನು ನನಗಂತೂ ಅರ್ಥ ಆಗಲ್ಲ, ಅದ್ಯಾವ ಹೆಸರಿನ ತಿಂಡಿಗಳಿರುತ್ತವೊ ದೇವರ್‍ಏ ಬಲ್ಲ, ಅಂತೂ ಎರಡು ರೋಟಿ, ಮೊಸರನ್ನ, ಮುಗಿಸಿ ಮೇಲೆದ್ದೆ.

ಶಾಕ ಕೊಡಬೇಕು ಕರೆಂಟು ಇಲ್ದೇ ಅಂದಿದ್ದೆನಲ್ಲ, ಅದಕ್ಕೇ
ಪೂಜಾರಿ ತೀರ್ಥ ಪ್ರೋಕ್ಷಣೆ ಮಾಡುವ ಹಾಗೆ ವಿಸ್ಕಿನೊ ರಮ್ಮೋ ಯಾರಿಗೆ ಗೊತ್ತು, ತೀರ್ಥ ಶರ್ಟಿಗೆ ಸಿಂಪಡಿಸಿದರು, ಘಂಮ್ಮೆಂದು ವಾಸನೆ ಬಂತು, ವಾಸನೆ ಹೋಗದಂತೆ ಮೇಲೆ ಜಾಕೆಟ್ಟು ಹಾಕಿಕೊಂಡು, ಬಾಯಿಗೊಂದು ಪಾನ್(ಬೀಡ, ಎಲೆ ಅಡಿಕೆ) ಹಾಕಿ, ಕುಡಿದು ಮರೆಮಾಚುವವರಂತೆ ತಯ್ಯಾರಾದೆ. ಟೆಸ್ಟ ಮಾಡೋಣಾಂತ, ನಾನೆಂದೂ ಕುಡಿಯಲಿಕ್ಕಿಲ್ಲ ಎನ್ನುವ ಕೊಲೀಗ ಒಬ್ಬರಿದ್ದಾರೆ ಅವರ ಮುಂದೆ ಹೋಗಿ ನಿಂತೆ, "ಒಹ್ ಏನಿದು ನೀನೂ ಇವತ್ತು ಡ್ರಿಂಕ್ಸ ಮಾಡೀದೀಯಾ?" ಅಂತತಿದ್ದಂಗೆ ಅವಳೂ ಅನುಮಾನಿಸಿದಳೆಂದರೆ, ತಯ್ಯಾರಿ ಸರಿಯಾಗಿದೆ ಅಂತಾಯಿತು... ಮನೆಯ ದಾರಿ ಹಿಡಿದೆ.

ಮನೆ ತಲುಪುತ್ತಿದ್ದಂತೆ ಕಣ್ಣು ತೀಡಿ ಕೆಂಪು ಮಾಡಿಕೊಂಡು, ಗೇಟ್ ತೆರೆಯುತ್ತ ದೊಡ್ಡ ಸದ್ದು ಮಾಡಿದೆ, ಕುಡಿದರೆ ಹಾಗೆ ಏನೂ ಕಾಣಲ್ಲವಲ್ಲ ಹಾಗೆ... ನಟನೆ ಮನೆ ಹೊರಗಿನಿಂದಲೇ ಶುರುವಾಯ್ತು.. ಮನೆಯಲ್ಲಿನ ಲೈಟು ಉರಿಯಿತು, ಅವಳು ಕೇಳಿಸಿಕೊಂಡಿರಬೇಕು, ಹೊರಗೆ ಬಂದ್ಲು, ಬೈಕು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದೆ, ಸರಿಯಾಗಿ ನಿಲ್ಲಿಸಿದರೆ ಹೇಗೆ, ಅವಳಿಗೆ ಅನುಮಾನ ಬರಬೇಕಲ್ಲ. ಮನೆಯೊಳಗೆ ನಡೆದೆ ಹಿಂಬಾಲಿಸಿದಳು, ಬಾಗಿಲು ತೆರೆಯಲು ಹಿಡಿದೆಳೆಯತೊಡಗಿದೆ... "ರೀ ನೂಕಿ" ಅಂದ್ಲು "ಒಹ್ ಇದು ಮನೆ ಅಲ್ವ, ಪುಷ್(ನೂಕುವ) ಡೋರು ಆಫೀಸು ಪುಲ್(ಎಳೆಯುವ) ಡೋರು" ಅಂದೆ ನಗುತ್ತ "ಯಾಕ್ರೀ ಏನಾಯ್ತು ನಿಮ್ಗೆ" ಅನ್ನುತ್ತ ಬಾಗಿಲು ನೂಕಿ ಮನೆಯೊಳಗೆ ಬಂದ್ಲು, ಈಗ ಅನುಮಾನ ಬಂದಾಗಿತ್ತು.

ನಿಲ್ಲಲಾಗದವರಂತೆ ಕುಸಿದು ಸೋಫಾದ ಮೇಲೆ ಕುಳಿತೆ, ಅವಳು ಹತ್ತಿರ ಬರುತ್ತಿದ್ದಂತೆ ಜಾಕೆಟ್ಟು ತೆಗೆದೆ, ಸುವಾಸನೆ ಹರಡಿತು, ಪಾನು ತಿಂದು ಕೆಂಪಾಗಿದ್ದ ಬಾಯಲ್ಲಿ ಮೂವತ್ತೆರಡೂ ಕಾಣುವಂತೆ ಹಲ್ಲು ಕಿರಿದೆ... ಮೂಗು ಮುಚ್ಚಿಕೊಂಡು ದೂರ ಸರಿದು ಕೂತಳು, ಅವಳ ಮುಖ ನೋಡಬೇಕಿತ್ತು ಆಗ, ಯಾಕಾದ್ರೂ ಮುಂಜಾನೆ ಕುಡಿದು ಟೈಟಾಗುವಂತೆ ಹೇಳಿದೆನೋ ಅಂತ ಯೋಚಿಸುತ್ತಿರಬೇಕು. ನಾ ಮತ್ತೆ ಶುರುವಿಟ್ಟುಕೊಂಡೆ "ಊಟ ಆಯ್ತಾ ಡಾರ್ಲಿಂಗ!!!" ಅಂದೆ ಜೀವನದಲ್ಲಿ ಮೊದಲ ಬಾರಿಗೆ ಡಾರ್ಲಿಂಗ ಅಂದಿರಬೇಕು, ಲೇ, ತಗಡು, ತರಲೇ, ತುಂಟಿ ಅಂತಾ ಕರೆಯೋನು ಈವತ್ತು ಸ್ಪೇಶಲ್ ಎಫೆಕ್ಟ ಕೊಟ್ಟಿದ್ದೆ. ಈಗಂತೂ ಅವಳಿಗೆ ಪಕ್ಕಾ ಖಾತ್ರಿಯಾಯ್ತು, ನಶೆಯೇರಿರಬೇಕೆಂದು. ಉತ್ತರ ಬರಲಿಲ್ಲ, ಬರುವುದಿಲ್ಲವೆಂದೂ ಗೊತ್ತಿತ್ತು.

"ಡ್ರಿಂಕ್ಸ ಮಾಡೀದೀರಾ ತಾನೆ" ಅಂದ್ಲು, ಹಾಗೇ ಒಪ್ಪಿಬಿಟ್ಟರೆ ಹೇಗೆ, ಅದಕ್ಕೆ "ಓ ಇಲ್ಲಪ್ಪಾ" ಅಂದೆ, "ಮತ್ತೇನು ಘಮ ಘಮ ಅಂತೀದೀರಲ್ಲ" ಅಂದ್ಲು. "ಪಾರ್ಟಿ ಇದ್ದದ್ದು ಬಾರ್ ಆಂಡ್ ರೆಸ್ಟೊರಂಟ ಅಲ್ವ ಅದಕ್ಕೆ.. ಹೀ ಹೀ ಹೀಹ್ ಹೀ" ಮತ್ತೆ ಹಲ್ಲು ಕಿರಿದೆ, "ಯಾಕ್ರೀ ಸುಳ್ಳು ಹೇಳ್ತೀರಾ ನಿಲ್ಲೊಕಾಗ್ತಾ ಇಲ್ಲ ನಿಮ್ಗೆ" ಅಂದ್ಲು ಸುಮ್ನೇ ವಾದ ಮಾಡುವರ ಹಾಗೆ "ನನಗೆ ನಿಲ್ಲೋಕೆ ಆಗ್ತಿಲ್ವಾ, ನನ್ನ ಕಾಲ ಮೇಲೆ ನಾ ನಿಂತ್ಕೊಂಡಿದೀನಿ, ಯಾರಿಗೂ ಭಾರ ಆಗಿಲ್ಲ..." ಅಂತೇನೇನೋ ಬಡಬಡಿಸಿದೆ... "ನನ್ನಾಣೆಗೂ..." ಅಂದ್ಲು "ಇದ್ಕೆಲ್ಲ ಆಣೆ ಯಾಕೆ" ಅಂತ ಮತ್ತಷ್ಟು ವಾದವಿಟ್ಟೆ. ಅವಳೇನೂ ಮಾತಾಡದೇ ಮೌನವಾಗಿ ಕೂತೊಡನೆ ನಿಜ ಹೇಳುವರ ಹಾಗೆ ಮೆಲ್ಲಗೆ ಉಲಿಯತೊಡಗಿದೆ.

"ಸ್ವಲ್ಪ ಮಾತ್ರ... ಜಾಸ್ತಿ ಇಲ್ಲ, ಫಸ್ಟ್ ಟೈಮ ಅಲ್ವಾ ಜಾಸ್ತಿ ಕಿಕ್ಕು(ನಶೆ) ಕೊಟ್ಟಿದ್ದೆ ಐ ಆಮ್ ಓಕೇ... ಓಕೆ" ಅಂತ ಇಂಗ್ಲೀಷನಲ್ಲೂ ಹೇಳಿದೆ. ಕುಡಿದಾಗ ಇಂಗ್ಲೀಷು ಜಾಸ್ತಿ ಬರುತ್ತೆ ಅಂತಾರಲ್ಲ ಅದಕ್ಕೆ.... ಹಾಗೆ ವಾದ ಸಮರ್ಥಿಸಿಕೊಳ್ಳಲು... "ನೀನೇ ಹೇಳಿದೆಯಲ್ಲ ಮುಂಜಾನೆ ಅದಕ್ಕೆ.. ಯು ಟೋಲ್ಡ್ ಮೀ..." ಅಂದು ಸುಮ್ಮನಾದೆ. "ನಾನ್ ಸುಮ್ನೇ ಜೋಕಿಗೆ ಹೇಳಿದ್ದು, ಹೀಗಾಗತ್ತೆ ಅಂತ ಗೊತ್ತಿರಲಿಲ್ಲ.." ಅನ್ನುತ್ತ ತಲೆಗೆ ಕೈ ಹಿಡಿದುಕೊಂಡು ಕೂತ್ಲು... ಈಗ ಒಂದು ಭಾಶಣ ಕೊಡಬಹುದು ಅಂತ ಅನ್ಕೊಂಡು "ಕುಡಿಯೊದು ತಪ್ಪಲ್ಲ, ಯಾಕೆ ತಪ್ಪು ಅಂತೀನಿ, ಕುಡಿದ್ರೆ ದುಡ್ಡು ಸರ್ಕಾರಕ್ಕೆ ಹೋಗುತ್ತೆ ಅದರಿಂದ ದೇಶ ಉಧ್ಧಾರ ಆಗ್ತಿದೆ, ಮಲ್ಯ ಅಂಕಲ್ಲು(ಅದ್ಯಾವಾಗ ನಮ್ಮ ಅಂಕಲ್ ಆದ್ರೊ), ಗ್ರೇಟ್ ಅಂಕಲ್ಲು!!! ಗಾಂಧಿಜೀ ಸಾಮಾನುಗಳನ್ನು ಕೊಂಡು ತಂದರಲ್ಲ ದುಡ್ಡು ಎಲ್ಲಿಂದ ಬಂತು...(ಮದ್ಯದ ಬಿಜಿನೆಸ್ ಮಾಡುವ ಮಲ್ಯ, ಇತ್ತೀಚೆಗೆ ಗಾಂಧೀಜಿಯವರ ಸಾಮಾನುಗಳನ್ನು ಹರಾಜಿನಲ್ಲಿ ಕೊಂಡು ತಂದರು) ದೇಶ ಪ್ರೇಮ ನಮ್ದು" ಅಂದು "ಜೈ ಕರ್ನಾಟಕ್ ಮಾತೆ, ವಂದೇಮಾತರಂ, ಟಿಪ್ಪುಸುಲ್ತಾನ" ಅಂತ ರಂಗಾಯಣ ರಘುರವರ ಫಿಲ್ಮ್ ಡೈಲಾಗೂ ಹಾಕಿದೆ... ಅಂತೂ ಒಳ್ಳೆ ಸೀನು ಮಾಡಿಟ್ಟೆ.

ಈಗ ವಾತಾವರಣ ರಂಗೇರಿತ್ತು, ಅವಳ ನೋಡಿದ್ರೆ ಎಲ್ಲ ಹೇಳಿಬಿಡೊಣ ಅನ್ನಿಸುತ್ತಿತ್ತು, ಆದರೂ ಮತ್ತೆ ಮುಂದುವರೆಸಿದೆ, "ಡಾರ್ಲಿಂಗ, ಗರ್ಲಫ್ರೆಂಡ್ಸ ಎಣಿಸೋಣ ಓಕೇ..." ಅಂದು... "ಒಂದು ಎರಡು ನಾಲ್ಕು (ಕುಡಿದಾಗ ಎಣಿಕೇನು ತಪ್ಪುತ್ತಲ್ಲ ಅದಕ್ಕೆ.. ಎರಡು ಆದ ಮೇಲೆ ಸೀದಾ ನಾಲ್ಕು)" ಅಂತ ಕೈ ಬೆರಳಲ್ಲಿ ಎಣಿಸತೊಡಗಿದೆ... "ಒಹ ಬಹಳ ಜನ ಇದಾರೆ, ನನ್ನ ಬೆರಳು ಸಾಕಗ್ತಿಲ್ಲ, ನಿನ್ನ ಬೆರಳೂ ಕೊಡು" ಅನ್ನುತ್ತ ಅವಳತ್ತ ಮುಂದುವರೆದೆ, "ಹತ್ತಿರ ಬಂದ್ರೆ ನೋಡಿ" ಅಂತ ಮತ್ತಷ್ಟೂ ದೂರ ಸರಿದಳು. "ನಿಮ್ಗೆ ಜೋಕು ಮಾಡೊದು ಅರ್ಥ ಆಗಲ್ವಾ ನಾ ಸುಮ್ನೆ ಹೇಳಿದ್ದು, ನಿಜವಾಗ್ಲೂ ಮಾಡಿಬಿಡೊದಾ.." ಅನ್ನುತ್ತ ಬೆಡ್‌ರೂಮಿಗೆ ಹೊರಟಳು... "ಒನ್ ಸೆಕೆಂಡ್... ಕೇಳಿಲ್ಲಿ... ನೀ ಹೇಳಿದ ಮೇಲೆ ಹೇಗೆ ಮಾಡದಿರಲಿ".... "ಐ ಲವ್ಸ್ ಯು" ಅಂತ ಪ್ರಕಾಶ ರಾಜ್(ರೈ) ಅವರ ಫಿಲ್ಮ ಡೈಲಾಗೂ ಎಸೆದೆ.... ಬೆಡ್‌ರೂಮಿನ ಬಾಗಿಲು ದಢ್ ಅಂತ ಸದ್ದಿನೊಂದಿಗೆ ಹಾಕಿದಳು. ಪ್ಲಾನು ಚೆನ್ನಾಗಿ ಕಾರ್ಯಗತವಾಗಿತ್ತು...

ಸ್ವಲ್ಪ ಹೊತ್ತು ಯಾವುದೊ ಹಳೆ ಚಿತ್ರ ಗೀತೆಗಳ ಗುನುಗುನಿಸುತ್ತಿದ್ದೆ, "ಸಾಕು ಅಲ್ಲೆ ಮಲಗಿ ಇನ್ನ, ಅಕ್ಕಪಕ್ಕ ಏನು ಅನ್ಕೊತಾರೆ, ಜಾಸ್ತಿ ಗಲಾಟೆ ಮಾಡಬೇಡಿ" ಅಂತಂದ್ಲು ಅಷ್ಟೇನೂ ಜೋರಾಗಿ ಸದ್ದು ಮಾಡುತ್ತಿರಲಿಲ್ಲ ಬಿಡಿ ಆದರೂ ಅವಳು ಸುಮ್ಮನಾಗಿಸಲು ಹಾಗೆ ಹೇಳಿದ್ದು... "ಯಾರು ಏನಂತಾರೆ, ನಮ್ಮ ಮನೆ ನಾ ಹಾಡ್ತಿದೀನಿ, ಯಾರ್ ಕೇಳ್ತಾರೆ ಈಗ್ಲೆ ಬಾಗಿಲು ತೆಗೆದು ಹೇಳಿ ಬರ್ತೀನಿ. ಧೈರ್ಯ ಇದ್ರೆ ಯಾರಾದ್ರೂ ಬರ್ಲಿ" ಅಂತ ಬಾಗಿಲೆಡೆಗೆ ನಡೆದ ಹಾಗೆ ಮಾಡಿದೆ.. ಅಯ್ಯೋ ಇನ್ನು ದೊಡ್ಡ ರಾಧ್ಧಂತ ಮಾಡಿಬಿಡುತ್ತೆ ಇದು, ಅಂತ ಹೊರಬಂದು ತಡೆದಳು, ಮತ್ತೆ ಅವಳ ಹೊರಗೆ ಕರೆತರುವಲ್ಲಿ ಸಫಲನಾದೆ. "ಮಲ್ಕೊಳ್ಳಿ ಇನ್ನ ಸಾಕು ನಾಳೆ ಮಾತಾಡೋಣ" ಅಂತಿದ್ದಂಗೆ "ಈಗ್ಲೆ ಮಾತಾಡೊಣ, ರಾತ್ರಿ ಎಲ್ಲ ಟೈಮಿದೆ... ಕೂಲ್ ಡ್ರಿಂಕ್ಸ ಎನಾದ್ರೂ ಇದೆನಾ" ಅಂತ ಫ್ರಿಡ್ಜ್ ತಡಕಾಡಲು ಹೋದೆ "ಕೂಲ್ ಡ್ರಿಂಕ್ಸ ಯಾಕೆ ಆ ಹಾಳು ಹಾಟ್ ಡ್ರಿಂಕ್ಸೇ ತುಗೊಂಬನ್ನಿ" ಅಂತ ಬಯ್ಯುತ್ತ ಒಳಗೆ ಹೋಗಿ ತಲೆದಿಂಬೂ ಒಂದು ಹೊದಿಕೆ ಎಸೆದು ಬಾಗಿಲು ಕುಕ್ಕಿಕೊಂಡ್ಲು... "ಲೇ ಡಾರ್ಲಿಂಗ.." ಅಂತ ಏನೋ ಹೇಳ ಹೋದ್ರೆ.. "ಈವತ್ತು ಸೋಫಾನೆ ಗತಿ, ಎನೂ ಕೇಳೊದಿಲ್ಲ, ಸೊಫಾನೆ ನಿಮ್ಮ ಡಾರ್ಲಿಂಗ್ ಹೋಗೀ" ಅಂತ ಒಳಗಿಂದಲೇ ರೇಗಿದ್ಲು...

ಇನ್ನು ಹೇಳದಿದ್ರೆ ಸೊಫಾನೇ ಗತಿ ಅನ್ನೊದು ಗೊತ್ತಾದ ಮೇಲೆ, ಹೇಳೊದು ವಾಸಿ ಅವಳ ಗೊಳು ಹೊಯ್ದುಕೊಂಡಿದ್ದು ಸಾಕಿನ್ನು, ಅಂದು ಬಾಗಿಲು ತಟ್ಟಿದೆ, "ರೀ ಸುಮ್ನೆ ಮಲಗ್ತೀರಾ ಇಲ್ಲ ಅತ್ತೆಗೆ ಫೊನು ಮಾಡ್ತೀನಿ ನೋಡಿ" ಅಂತ ಹೆದರಿಸಿದ್ಲು. ಅಮ್ಮನಿಗೆ ಗೊತ್ತಾದ್ರೆ ಅಷ್ಟೆ ನನ್ನ ಕಥೆ... ಅನ್ನುತ್ತ, ಹೇಗೆ ಅವಳ ಹೊರಗೆ ಕರೆಯುವುದು ಅಂತ ಯೊಚಿಸಿ ಅವಳ ಬಾಣ ಅವಳಿಗೇ ತಿರುಗಿಸಿದೆ, "ಅಮ್ಮನಿಗೆ ಫೊನು ಮಾಡ್ತೀಯಾ, ನಿಮ್ಮ ಅಪ್ಪನಿಗೆ ಫೋನು ಮಾಡಿ ತರಾಟೆಗೆ ತುಗೊತೀನೀ ತಾಳು, ಮೊಬೈಲು ಎಲ್ಲಿ ಸಿಕ್ತಾ ಇಲ್ಲ" ಅಂತ ಮೊಬೈಲು ಹುಡುಕುವವರ ಹಾಗೆ ಮಾಡಿದೆ, ಎಲ್ಲಿ ಫೋನು ಮಾಡಿ ಬಿಡ್ತೀನೊ ಅಂತ... ಓಡಿ ಬಂದು ಬಾಗಿಲು ತೆರೆದ್ಲು.

ಬಹಳ ಹೆದರಿದ್ಲು ಅನಿಸತ್ತೆ, ಅವಳ ಮುಖ ನೋಡಿದ್ರೆ... ನನಗೆ ನಗು ತಡೆಯಲಾಗಲಿಲ್ಲ, ಹೊಟ್ಟೆ ಹಿಡಿದು ಬಿದ್ದು ಬಿದ್ದು ನಗತೊಡಗಿದೆ... ಮತ್ತಿನ್ನೇನಾಯ್ತಪ್ಪ ಇದಕ್ಕೆ ಅಂತ ಅವಳು ಯೋಚಿಸುತ್ತಿರಬೇಕು... ಗೊತ್ತಾಯ್ತು ಅವಳಿಗೆ.. "ನೀವ್ ಡ್ರಿಂಕ್ಸ ಮಾಡಿಲ್ಲ ತಾನೆ, ಸುಳ್ಳು ಹೇಳ್ತೀರಾ... ನನ್ನ ಗೊಳಾಡಿಸ್ತೀರಾ!!!" ಅನ್ನುತ್ತ ಕೈಗೆ ಸಿಕ್ಕ ತಲೆದಿಂಬು ತೆಗೆದುಕೊಂಡು ಅಟ್ಟಿಸಿಕೊಂಡು ಬಂದು ಮನೆ ತುಂಬ ಓಡಾಡಿಸಿ ಕೊಟ್ಲು... ಓಡಾಡಿ ಓಡಾಡಿ ಸುಸ್ತಾಗಿ ಸೊಫಾದ ಮೇಲೆ ಕುಳಿತೆ, ತಲೆದಿಂಬು ಕಸಿದು ಬೀಸಾಡಿದೆ, ಇನ್ನೂ ಬರಿಗಯ್ಯಿಂದ ಬಡಿಯುತ್ತಿದ್ಲು, ಸ್ವಲ್ಪ ಸಮಯ ನಂತರ ಸುಮ್ಮನಾದ್ಲು, ಅವಳ ಕೈ ಬೆರೆಳು ಹಿಡಿದು ಗರ್ಲಫ್ರೆಂಡ್ಸ ಎಣಿಸೊಣ ಬಾ ಅಂದೆ... ಇನ್ನೊಂದು ಕೊಟ್ಲು...

ಏಳು ಮೊದಲು ಡ್ರೆಸ್ ಚೇಂಜ್ ಮಾಡ್ತೀನಿ ಅಂತ ಎದ್ದು ಮುಖ ತೊಳೆಯಲು ನಡೆದೆ... ಮೊದಲು ಆ ಶರ್ಟ್ ತೆಗೆದು ನೀರಲ್ಲಿ ಹಾಕಿ ಅಂತ ತಾಕೀತು ಮಾಡಿದ್ಲು. "ಹಾಟ ಡ್ರಿಂಕ್ಸ ಸಿಗುತ್ತಾ" ಅಂದೆ "ರೀ..." ಅಂತ ಗುರಾಯಿಸಿದ್ಲು, "ಲೇ ಹಾಟ್ ಟೀ ಕೇಳಿದ್ದು ಓಡಾಡಿ ಸುಸ್ತಾಗಿದೆ ಅದ್ಕೆ" ಅಂದೆ, ಖುಶಿ ಖುಶಿಯಾಗಿ ಪಾಕಶಾಲೆಗೆ ಓಡಿದ್ಲು... ಮುಖ ತೊಳೆದು ಟೀ ಕುಡಿದು ಸೋಫಾದ ಮೇಲೆ ಕುಳಿತೆ... ಬಂದು ಎದೆಗಾತು ಅಂಟಿಕೊಂಡು ಕೂತ್ಲು, "ಏನು ಇಷ್ಟೊತ್ತು ಹತ್ತಿರಾನೆ ಬರ್ತಿರಲಿಲ್ಲ" ಅಂದ್ರೆ ಇನ್ನಷ್ಟು ಹತ್ತಿರ ಬಂದ್ಲು, ನಾ ಮುಸಿ ಮುಸಿ ನಗ್ತಿದ್ದೆ, ಇಷ್ಟೊತ್ತು ಆಗಿದ್ದು ಮರು ಮೆಲಕು ಹಾಕುತ್ತ... "ನಗ್ತೀರಾ... ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗಾಯ್ತು, ಎಷ್ಟು ಬೇಜಾರಾಗಿತ್ತು ಗೊತ್ತಾ" ಅಂದ್ಲು "ಸೊರಿ.. ಸೊರಿ.. ಸುಮ್ನೆ ತಮಾಶೆಗೆ ಕಾಡಿಸೋಣ ಅಂತ ಹಾಗೆ ಮಾಡಿದೆ" ಅಂದೆ "ನಿಮ್ಗೆ ಎಲ್ಲ ತಮಾಷೇನೆ" ಅಂತನ್ನುತ್ತ ಇನ್ನೊಂದು ಗುದ್ದು ಕೊಟ್ಲು, ತರಲೆ ಮತ್ತೆ ಶುರುವಾಯ್ತು "ರೀ ಡ್ರಿಂಕ್ಸ್ ಟೇಸ್ಟ ಹೇಗಿರುತ್ತೆ" ಅಂತ ಕೇಳಿದ್ಲು "ಅಯ್ಯೊ ಒಳ್ಳೆ ನನ್ನ ಕೇಳ್ತಿದೀಯಲ್ಲ, ಒಂದು ಸಾರೀನು ಒಂದು ಹನಿ ಕೂಡ ಟೇಸ್ಟ ನೋಡಿಲ್ಲ, ಏನೋ ಓಂಥರಾ ಹುಳಿ ಒಗರು ಇದ್ದಂಗೆ ಇರ್ತದಂತೆ ಅಂತಾರೆ"... ಅಂದೆ

"ಒಂದು ಸಾರಿ ಟೇಸ್ಟ ನೋಡ್ಬೇಕ್ರಿ" ಅಂದ್ಲು... ಇಷ್ಟೊತ್ತು ನನ್ನ ಬಯ್ದವಳು ಈಗ ತಾನೇ ಟೇಸ್ಟ ನೋಡ್ಬೇಕು ಅಂತಾಳೆ, ಅರ್ಥಾನೇ ಆಗಲ್ಲ ಇವಳು... "ಹೂಂ ಒಂದು ಬಾಟಲ್ಲು ತರ್ತೀನಿ, ಇಬ್ರೂ ಕುಡಿದು ಟೈಟಾಗಿ ಬಿಡೋಣಾಂತೆ.. ಸರಿಯಾಗಿರತ್ತೆ ಜೋಡಿ ಆಗ" ಅಂದೆ...

"ಯಾಕ್ರೀ ಕುಡೀತಾರೆ ಅದನ್ನ ರುಚಿನೇ ಇರಲ್ಲ ಅಂದ್ರೆ" ಅಂತಂದ್ಲು. "ಏನೊ ಎಲ್ಲಾ ಮರೆತು ಹೋದ ಹಾಗಾಗಿ ಒಂಥರಾ ಮನಸು ರಿಲ್ಯಾಕ್ಸ ಆಗತ್ತಂತೆ ಅದಕ್ಕೇ... ಒಂಥರ ಕಿಕ್ಕು ಕೊಡತ್ತೆ ಅಂತಾರೆ ಯಾರಿಗೆ ಗೊತ್ತು ಏನಾಗತ್ತೆ ಅಂತ" ಅಂದೆ "ಕುಡಿದ್ರೆ ಸಮಸ್ಯೆ ಏನೂ ಪರಿಹಾರ ಅಗಲ್ಲ ಅಲ್ವಾ, ಮರೆತು ಹೋಗತ್ತೆ ಅದೂ ಕ್ಷಣಿಕ ಆಮೇಲೆ ಮತ್ತೆ ಅದೇ ಸಮಸ್ಯೆಯೊಂದಿಗೆ ಏಗಬೇಕಲ್ಲ" ಅಂದ್ಲು "ಅದೂ ಸರಿ ಆದ್ರೆ ಪಾಪ ಈ ದಿನಗೂಲಿ ಮಾಡೊರು, ಕಷ್ಟದ ಕೆಲಸ ಮಾಡಿ ಬಂದು ರಾತ್ರಿ ನಿದ್ದೆ ಹತ್ತಲ್ಲ, ಪಾಪ ನಿದ್ದೆ ಹತ್ತಲ್ಲ ಅಂತ ಕುಡೀತಾರೆ, ದೇವದಾಸನಂಥವರು ಪ್ರೇಯಸಿ ಮರೆಯಲು ಕುಡೀತಾರೆ, ಕೆಲವರು ದುಡ್ಡಿರತ್ತೆ ಸ್ಟೈಲಿಗೆ ಅಂತ ಕುಡೀತಾರೆ... ಅವರವರಿಗೆ ಅವರದೇ ಕಾರಣಗಳಿರುತ್ತವೆ, ದೇವರೇ ಸೊಮರಸ ಪಾನ ಮಾಡ್ತಿದ್ರು ಅಂತಾರೆ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಹೇಳೋದು, ನನಗೆ ಇಷ್ಟ ಇಲ್ಲ, ಮನೇಲೂ ಶಾಂತಿ, ನೆಮ್ಮದಿಯಿದೆ, ಅದು ಯಾವ ಸಮಸ್ಯೆಗೂ ಪರಿಹಾರ ಅಂತ ನನಗನಿಸಲ್ಲ, ಹಾಗಾಗಿ ನಾ ಮಾಡಲ್ಲ, ಮಾಡೊರಿಗೆ ಬೇಡ ಅನ್ನಲ್ಲ"... ನನ್ನ ಅಭಿಪ್ರಾಯ ಯಾರ ಮೇಲೋ ಒತ್ತಾಯದಿಂದ ನಾನು ಯಾಕೆ ಹಾಕಬೇಕು "ಆದ್ರೂ ಎಲ್ಲ ಮಿತಿಯಲ್ಲಿದ್ದರೆ ಸರಿ ಅತಿಯಾದ್ರೆ ಅಮೃತಾನೂ ವಿಷವಂತೆ" ಅಂದೆ...

"ಕರೆಕ್ಟು ಬಿಡಿ... ದಾರಿ ತಪ್ಪಿ ಪಕ್ಕದ ಪದ್ದು ಮನೆಗೆ ಹೋಗಿಲ್ಲ ಅಷ್ಟು ಸಾಕು... ಕುಡಿದ್ರೂ ನನಗೇನು ಓಕೆ... ಅಲ್ಲ ಆ ವಾಸನೆ ಬರೋ ಹಾಗೆ ಮಾಡಿಕೊಂಡು ಬಂದು ಸುಪರ ಆಗಿ ನಟಿಸಿದ್ರಲ್ಲ, ಹೇಗೆ" ಅಂದ್ಲು "ತೀರ್ಥ ಪ್ರೊಕ್ಷಣೆಯಿಂದ ಹಿಡಿದು ಮಾಡಿದ ಒಂದೊಂದು ವಿಚಾರಾನೂ ಹೇಳ್ತಿದ್ರೆ, ಮನಪೂರ್ತಿ ನಗ್ತಿದ್ಲು... ನಂಗೆ ಕಂಠಪೂರ್ತಿ ಕುಡಿದು ಬಂದಿದ್ರೂ ಇಷ್ಟು ನೆಮ್ಮದಿ ಸಿಕ್ತಿರಲಿಲ್ಲ ಅನಿಸ್ತು. "ಏನು ನನ್ನ ಹೊರಗೆ ಹಾಕ್ತೀಯಾ, ಸೊಫಾನೆ ಗತೀನಾ" ಅಂತ ತಲೆಗೆರಡು ಏಟು ಕೊಟ್ಟೆ, ಹೌದು ಸೊಫಾನೇ ಗತಿಯೆನ್ನುತ್ತ, ಇಕ್ಕಟ್ಟಿನಲ್ಲಿ ಜಾಗ ಮಾಡಿಕೊಂಡು ಅಲ್ಲೇ ಮಲಗಿದ್ಲು, ಇಕಟ್ಟಿದ್ದರೂ ಅದೇ ಇಷ್ಟವಾಯ್ತು ಮತ್ತೆ ಡೈಲಾಗು ಹಾಕಿದೆ "ಐ ಲವ್ಸ್ ಯು" ಅಂತ ನಗುತ್ತ. ಬಾಚಿ ತಬ್ಬಿಕೊಂಡ್ಲು, "ಟೈಟಾಗಿ!"... ನಶೆಯೇರತೊಡಗಿತು... ಮತ್ತೆ ಸಿಗೊಣ.. ಯಾವುದೋ ಬಾರಿನಿಂದ ಕುಡಿಯದೇ ಹೊರಗೆ ಬರುತ್ತ...



ಕುಡಿಯೊದು ತಪ್ಪೊ ಸರೀನೊ ನನಗೆ ಗೊತ್ತಿಲ್ಲ, ಬೇಡ ಅಥವಾ ಮಾಡಿ ಅಂತ ನಾನೇನು ಉಪದೇಶ ಕೊಡಲ್ಲ... ನಾ ಮಾಡಲ್ಲ ಅದು ನನ್ನ ವೈಯಕ್ತಿಕ ಆಯ್ಕೆ.. ಆದ್ರೆ ಮಿತಿಯಲ್ಲಿರಲಿ ಎನೇ ಆದ್ರೂ... ಕೆಲವರು ಕುಡಿದು ತೂರಾಡುವಾವರು, ಗಟರು, ಚರಂಡಿ ಪಕ್ಕ ಬಿದ್ದಿರುವವರು, ನಶೆಯೇರಿ ಹೆಂಡತಿ ಮಕ್ಕಳ ಹೊಡೆಯುತ್ತಿರುವವರನ್ನು ಎಲ್ಲ ಕಂಡಾಗ ಮನಸಿಗೆ ಬೇಜಾರಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಕಲ್ಪಿಸಿ, ಯಾರೂ ಬೇಕೆಂದಲೇ ಹಾಗೆ ಮಾಡಲ್ಲ(ಕೆಲವು ಅಪವಾದಗಳನ್ನು ಹೊರತುಪಡಿಸಿ), ಅದನ್ನ ಗೃಹಿಣಿಯರೂ ಅರ್ಥ ಮಾಡಿಕೊಂಡ್ರೆ ಅಷ್ಟೇ ಒಳ್ಳೆಯದು. ಸಮಸ್ಯೆಯ ಪರಿಹಾರ ಮಾಡಲು ಪ್ರಯತ್ನಿಸೋಣ ಕ್ಶ್ಯಣಿಕವಾಗಿ ಮರೆತು ಬಿಡಲಲ್ಲ. ಇದನ್ನು ಬರೆಯುವಾಗ ನೀವೆಲ್ಲ ಹೇಗೆ ಸ್ವೀಕರಿಸುವಿರೊ ಅನ್ನೊ ಅಳುಕು ನನ್ನ ಕಾಡಿದೆ, ಯಾಕೇಂದ್ರೆ ನನ್ನ ವೈಯಕ್ತಿಕ ಅಭಿಪ್ರಾಯಗಳು ಎಲ್ರಿಗೂ ಇಷ್ಟವಾಗಬೇಕೆಂದೇನಿಲ್ಲ.

ಹಾಗೆ ಒಬ್ಬರು ಪತ್ರ(ಇಂಚೆ) ಬರೆದು ಇಂಗ್ಲೀಷು ಪದಗಳನ್ನ ಬಹಳ ಉಪಯೋಗಿಸ್ತೀಯ ಅಂತ ಅಂದಿದ್ದರೂ, ಬೇಕೇಂತಲೇ ಪದಗಳನ್ನು ಉಪಯೊಗಿಸುವುದಿಲ್ಲ ಸಮಯ ಸನ್ನಿವೇಶಕ್ಕೆ ತಕ್ಕ ಹಾಗೆ ಕೆಲವು ಕಡೆ ಅದೇ ನೈಜ ಅನಿಸಿದಾಗ ಹಾಗೆ ಬರೆದಿರುತ್ತೇನೆ, ಹಾಗೆ ನನ್ನ ಪದ ಭಂಡಾರವೂ ಎಲ್ಲ ಭಾವನೆಗಳನ್ನು ಹಿಡಿದಿಡಿವಷ್ಟು ದೊಡ್ಡದಿಲ್ಲ ಏನು ಮಾಡಲಿ... ಆದರೂ ಪ್ರಯತ್ನಿಸುತ್ತೇನೆ ಕಂಗ್ಲೀಷು ಕಮ್ಮಿ ಮಾಡಲು... ಹೀಗೆ ಬರುತ್ತಿರಿ ಹಾಗೂ ಬರೆಯುತ್ತಿರಿ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/nasheyerade.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, March 8, 2009

ತಿರುವಿನಲ್ಲಿ ದಾರಿ ತಪ್ಪಿ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಅದೋ ಎಲ್ಲೊ ಅಪರೂಪಕ್ಕೆ ಸಿಕ್ಕಿತ್ತು, ನೀಟಾಗಿ ಟಾರು ಹಾಕಿ, ಗುಂಡಿಗಳಿಲ್ಲದಂತೆ ನಿರ್ವಹಿಸಿರುವ ಒಂದು ಉದ್ದ ನೇರ ರೋಡು, ಯಾರೂ ಇಲ್ಲ ಕೂಡ, ಮುಂಜಾನೆ ಏಳಕ್ಕೆ ಯಾರಿರುತ್ತಾರೆ ಹೇಳಿ, ಅರವತ್ತು ಎಪ್ಪತ್ತು ಸ್ಪೀಡಿನಲ್ಲಿ ಹೋಗುತ್ತಿದ್ದೆ ಅಗಾಗ ಎಂಬತ್ತು ಕಿಲೊ ಮೀಟರೂ ಮುಟ್ಟಿರಬಹುದು, ಅದಕ್ಕಿಂತ ಜಾಸ್ತಿ ಹೋದರೆ ಇವಳು ಉಸಿರುಗಟ್ಟುವಂತೆ ಗಟ್ಟಿಯಾಗಿ ಅಪ್ಪಿಕೊಂಡು ನಿಧಾನ ಅಂತಾಳೆ. ಭಾನುವಾರ ಆದರೂ ಸ್ವಲ್ಪ ಏನೊ ಕೆಲಸ ಇತ್ತು ಅಂತ ಆಫೀಸಿಗೆ ಹೊರಟಿದ್ದೆ, ಇತ್ತೀಚೆಗೆ ನನ್ನ ಹಸಿರು ಕಾನನದೂರಿನಿಂದ ಕಥೆ ಕೇಳಿದಾಗಿನಿಂದ ಕೆಲಸಕ್ಕೆ ಹೋಗಲು ಅವಳು ಬೇಡವೆನ್ನುವುದಿಲ್ಲ, ಮನೆಯಲ್ಲಿ ಕೂತಿದ್ದರೆ ಕೆಲಸದ ನಡುವೆಯೇನಾಗುತ್ತದೆಂದೂ ಅವಳಿಗೆ ಗೊತ್ತು, ಇವಳು ಒಬ್ಬಳೆ ಮನೆಯಲ್ಲಿ ಕೂತು ಏನು ಮಾಡಲಿ ನನ್ನ ಗೆಳತಿಯ ಮನೆಗೆ ಬಿಡಿ ಅಂತಂದಿದ್ದಕ್ಕೆ ಆಕಡೆ ಬೆಳೆದಿತ್ತು ಪ್ರಯಾಣ. ಮನೆಯಿಂದ ಹೊರಡುವಾಗಲೇ ಹೇಳಿದ್ದೆ ನನಗೆ ದಾರಿ ಗೊತ್ತಿಲ್ಲ ನೀ ಹೇಳುತ್ತ ಹೋದರೆ ಸರಿ ಅಂತ, ಅವಳೀಗೂ ಗೊತ್ತು ನನಗೆಷ್ಟು ದಾರಿಗಳು ನೆನಪಿರುತ್ತವೆ ಅಂತ. "ಇಲ್ಲಿ ಎಡಕ್ಕೆ, ಅಲ್ಲಿ ರೈಟು.." ಅಂತ ಹೇಳುತ್ತಲೇ ಇದ್ದಳು, ಈ ರೋಡು ಭಾರಿ ನೇರ ಇದೆ, ತಿರುವುಗಳೆಲ್ಲೂ ಹತ್ತಿರದಲ್ಲಿಲ್ಲ ಅಂತ ಭಲೇ ಜೊರಿನಲ್ಲೇ ಆಕ್ಸಲರೇಟರ್ ತಿರುವುತ್ತಿದ್ದೆ, ಒಮ್ಮೆಲೆ ಹಿಂದಿನಿಂದ ಚೀರಿದ್ಲು, "ರೀ ಇಲ್ಲೇ ಲೆಫ್ಟ್ ತುಗೊಳ್ಳಿ" ಅಂತ. ಆಗೇನಾದ್ರೂ ನಾ ಎಡಕ್ಕೆ ತಿರುವಿದ್ದರೆ, ನಾವಿಬ್ಬರೂ ಎಡಕ್ಕೆ ಹೋಗದೆ ಮೇಲಕ್ಕೆ ಹೋಗಿರ್ತಿದ್ವಿ!. ಅಲ್ಲೇ ದಾರಿ ತಪ್ಪಿದ್ದು...

ಹೀಗೆ ಎಷ್ಟು ಸಾರಿ ಆಗಿಲ್ಲ, ಇದೇ ಮೊದಲ ಬಾರಿಯೇನಲ್ಲ. ಇಂದು ಕೆಲಸವಿದೆ ಹೊರಡಬೇಕು ಅಂತಿದ್ದಂಗೆ "ನನ್ನ ಗೆಳತಿಯ ಮನೆಗೆ ಬಿಡಿ" ಅಂದ್ಲು, "ಒಹ್ ಗೆಳತೀನಾ, ಯಾರು ನಂಗೆ ಗೊತ್ತೇ ಇಲ್ಲ! ನೊಡೋಕೆ ಹೇಗಿದಾಳೆ" ಅಂದ್ರೆ ಅಸಂಭದ್ದ ಉತ್ತರ ಬಂತು "ಮದುವೆಯಾಗಿದೆ ಅವಳಿಗೆ" ಅಂತ "ನಾನೆಲ್ಲೆ ಮದುವೆ ಬಗ್ಗೆ ಕೇಳಿದ್ದು" ಅಂದ್ರೆ "ಗೊತ್ತಿದ್ರೆ ಒಳ್ಳೇದು ಅಂತ ಹೇಳಿದೆ" ಅಂದ್ಲು. "ರೀ ಸ್ನಾನ ಮುಗಿಸಿ ಬೇಗ ರೆಡಿಯಾಗಿ, ಏನು ಬಹಳ ಠೀಕು ಠಾಕು ಮೇಕಪ್ಪು ಎಲ್ಲ ಬೇಕಿಲ್ಲ, ನನ್ನ ಅಲ್ಲಿ ಡ್ರಾಪ್ ಮಾಡಿ ಜಾಗ ಖಾಲಿ ಮಾಡಬೇಕು ಅವಳ ಮನೆಗೆ ಏನೂ ನಿಮ್ಮನ್ನ ಕರೆದುಕೊಂಡು ಹೋಗಲ್ಲ" ಅಂತಂದ್ಲು, ಸ್ನಾನ ಮಾಡುತ್ತಿದ್ದವನು ಮೊದಲೇ ನೆನೆದಿದ್ದೆ, ಆಸೆಗೆ ಇನ್ನಷ್ಟು ತಣ್ಣಿರು ಎರಚಿದಂತಾಯ್ತು. "ಲೇ ಪಕ್ಕದ ಮನೆ ಪದ್ದುಗೆ ಮದುವೆ ಆಗಿಲ್ವ! ಅವಳ ಪರಿಚಯ ಮಾಡಿಸಿದ್ದು ನೀನೇ ಅಲ್ವಾ.. ನಿನ್ನ ಫ್ರೆಂಡು ನಂಗೆ ಪರಿಚಯ ಮಾಡಿಸಲ್ವಾ" ಅಂತೆಲ್ಲ ಗೊಗರೆದರೂ ಅವಳೇನು ಜಪ್ಪಯ್ಯ ಅನಲಿಲ್ಲ. ಹಾಗೂ ಹೀಗೂ ರೆಡಿ ಆದಾಗ ಮುಂಜಾನೆ ಏಳು ಆಗಲೇ ಹೊರಟಿದ್ದೇ ಹೀಗೆ ದಾರಿ ತಪ್ಪಿದರೂ ಸರಿ ಸಮಯಕ್ಕೆ ತಲುಪಬಹುದೆಂದು.. ಸರಿ ದಾರಿ ಗೊತ್ತಿದ್ದರೆ ಒಂದು ಘಂಟೆ ಸಾಕು, ನನ್ನ ಸ್ಪೀಡು, ದಾರಿಯ ಪ್ರತಾಪಗಳಿಂದಾಗಿ ಎಲ್ಲೇ ಹೊರಟರೂ ಬಹಳ ಮುಂಚಿತವಾಗಿಯೇ ಮನೆ ಬಿಡುವುದು ಇಂದು ಕೂಡ ಹಾಗೇ, ಅದೊ ರಿಂಗ್ ರೊಡು, ರೇಸು ಕೊರ್ಸಿನಲ್ಲಿ ಕುದುರೆ ಓಡಲು ಮಾಡಿದ ರಿಂಗನಂತೆ, ತಿರುವುಗಳು ಬಲು ಕಡಿಮೆ ಇಲ್ಲಿ ತಪ್ಪಿದರೆ ಮೈಲು ದೂರ ಹೋಗಿ ತಿರುಗಿ ಬರಬೇಕು. ಇವಳು ಸ್ಪೀಡಿನಲ್ಲಿರುವಾಗ ತಿರುವು ಅಂದ್ರೆ?.. ಅದಕ್ಕೇ ಹಾಗೆ ನೇರ ಮುಂದೆ ಬಂದೆ "ಮೊದಲೇ ಹೇಳೊಕೇನಾಗಿತ್ತು" ಅಂತ ತಿರುಗಿದೆ, "ಮೊದಲೇ ಹೇಳಿದರೆ ತಿರುವಿಲ್ಲದಲ್ಲಿಯೂ ತಿರುಗಿ ಬಿಡ್ತೀರ" ಅಂದ್ಲು.
"ಈಗ ತಿರುಗಿದ್ದರೆ ಅಷ್ಟೆ ಮತ್ತೆ ಒಬ್ಬರೊನ್ನೊಬ್ಬರು ತಿರುಗಿ ನೋಡುತ್ತಿರಲಿಲ್ಲ, ಮೇಲೆ ಸ್ವರ್ಗ ಲೋಕದಲ್ಲಿ ಡ್ಯೂಯೆಟ್ಟು ಹಾಡಬೇಕಾಗುತ್ತಿತ್ತು" ಅಂದೆ, "ಅಷ್ಟು ಜೊರಾಗಿ ಹೋಗುವ ಅವಶ್ಯಕತೆಯೇನಿತ್ತು? ಮೊದಲೇ ರಿಂಗ್ ರೋಡು ಇಲ್ಲಿ ನಿಮ್ಮ ನೊಡೋಕೆ ಯಾರು ಹುಡುಗೀರು ಇರ್ತಾರೆ ಅದೂ ಇಷ್ಟೊತ್ತಿನಲ್ಲಿ, ಸ್ಟೈಲ್ ಮಾಡೊದೇ ಆಯ್ತು" ಅಂತ ತಿರುಗಿ ಬಿದ್ದಳು. "ಇಲ್ಲ ನಿನ್ನ ಬೇಗ ಬಿಟ್ಟು ಆಫೀಸಿಗೆ ಬೇಗ ಹೋದರಾಯಿತೆಂದು" ಅಂತ ಏನೊ ಸಮಜಾಯಿಸಿ ಹೇಳುತ್ತಿದ್ದರೆ "ಅಲ್ಲಿ ಆ ಸ್ಕೂಟಿ ಹಿಂದೆ ಹಾಕಿದ್ಯಾರು, ನಂಗೊತ್ತಿಲ್ವ" ಅಂದ್ಲು, ಸುಮ್ಮನಾದೆ, ಹೆಚ್ಚು ಮಾತಾಡಿದರೆ ನನಗೇ ಸಮಸ್ಯೆಯೆಂದು. ಮೈಲು ದೂರ ಹೋದ ಮೇಲೇ ಸಿಕ್ಕಿದ್ದು ಒಂದು ಯು ಟರ್ನ, ಅಲ್ಲಿಂದ ತಿರುಗಿ ಬಂದು ಅವಳ ಗೆಳತಿಯ ಮನೆಗೆ ಬಿಟ್ಟು ಆಫೀಸಿಗೆ ಹೊರಟೆ.

ದಾರಿ ತಪ್ಪೋದು ಎಲ್ಲರಿಂದ ಬೈಸಿಕೊಳ್ಳೊದು ನನಗೆ ಮಾಮೂಲು, ಅದೇನೊ ನನಗೆ ನೆನಪೇ ಉಳಿಯುವುದಿಲ್ಲ, ನಾ ಆಫೀಸಿಗೆ ದಿನಾ ದಾರಿ ತಪ್ಪದೇ ಹೋಗಿ ಬರೋದೆ ನನ್ನವಳ ಪಾಲಿಗೆ ನನ್ನ ದೊಡ್ಡ ಸಾಧನೆ. ಅಫೀಸಿನಲ್ಲಿಯೊಬ್ಬರು ಕೊಲೀಗು ಇದ್ದಾರೆ ಬೆಂಗಳೂರಿನ ಇಂಚು ಇಂಚು ಗೊತ್ತು, ಅದ ಬಿಡಿ ಬುಲೆಟ್ಟು ತೆಗೆದುಕೊಂಡು ವಿಕಿಮ್ಯಾಪಿಯಾದಲ್ಲಿ ದಾರಿ ನೋಡಿಕೊಂಡು ಅದೊಂದು ದಿನ ಜಮ್ಮು ಕಾಶ್ಮೀರ, ಕಾರ್ಗಿಲ್ಲಿಗೆ ಹೊರಟು ನಿಂತದ್ದು, ನಾನೆಲ್ಲಿ ಈ ಆಸಾಮಿ ದಾರಿ ತಪ್ಪಿ ಎಲ್ಲೊ ಹೋಗಿ ಸೇರುತ್ತೊ, ಇಲ್ಲ ಇಡೀ ಭಾರತ ಸುತ್ತಿ ಬರುತ್ತೊ ಅಂದಿದ್ದರೆ, ಸರಿಯಾಗಿ ಹೋಗಿ ಬಂದಿದ್ದಲ್ಲದೇ ಮತ್ತೆ ಹೋಗುವವರಿಗೆ ಇಲ್ಲೇ ಕುಳಿತು ದಾರಿ ಹೇಳುತ್ತಿರುತ್ತಾರೆ, ಅಂಥವರ ನಡುವೆ ನಾನೊಬ್ಬ, ಅವರೊಬ್ರೆ ಅಲ್ಲ ಹೆಂಡತಿಯನ್ನೂ ಕರೆದುಕೊಂಡು ಇನ್ನೂ ನಕ್ಷೆಯಲ್ಲಿ ದಾಖಲಾಗಿರದ ಎಷ್ಟೋ ಊರೂರು ಸುತ್ತಿ ಬರುತ್ತಾರೆ. ಅವರ ಸ್ಪೂರ್ಥಿಯಿಂದ ನಾನೂ ಒಮ್ಮೆ ಇವಳ ಕರೆದುಕೊಂಡು ನಮ್ಮೂರಿಗೆ ನನ್ನ ಗಾಡಿಯಲ್ಲಿ ಹೋಗಿ ಬರೋಣ ಅಂತಿದ್ದೆ, "ರೀ ನನಗಿನ್ನೊ ತೀರ್ಥಯಾತ್ರೆ ಮಾಡುವಷ್ಟು ವಯಸ್ಸಾಗಿಲ್ಲ" ಅಂತ ಆಡಿಕೊಂಡಿದ್ದಳು. "ಈ ವಿದೇಶಗಳಲ್ಲಿನ ಹಾಗೆ ಅದೇ ಕಾರಿನಲ್ಲಿ ಕೂರಿಸಿರುತ್ತಾರಲ್ಲ ಮ್ಯಾಪ್ ಹಾಗೆ ಇಲ್ಲೂ ಜೀ.ಪಿ.ಎಸ್ ಇದ್ದಿದ್ರೆ, ನಾನೆಲ್ಲಿದ್ರೂ ಎಲ್ಲಿ ಬೇಕಾದ್ರೂ ಹೋಗಬಹುದಿತ್ತು ಅದೂ ದಾರಿ ತಪ್ಪದೇ" ಅಂದರೆ
"ನೀವೆಲ್ಲೊ ಫಾರಿನನಲ್ಲೇ ಹುಟ್ಟಬೇಕಾದವರು ದಾರಿ ತಪ್ಪಿ ಇಲ್ಲಿ ಬಂದು ಹುಟ್ಟೀದೀರಾ" ಅಂತ ಅಲ್ಲೂ ದಾರಿ ತಪ್ಪಿದವನಾಗಿಸಿಬಿಟ್ಟಳು. (ಜೀ.ಪಿ.ಎಸ್ ಈಗ ಭಾರತದಲ್ಲೂ ಬಂದಿವೆ, ಇನ್ನೂ ಬಹಳ ಚಾಲ್ತಿಯಲ್ಲಿಲ್ಲ) ನನ್ನ ದಾರಿ ತಪ್ಪುವ ಲೀಲೆಗಳೇ ಹಾಗೆ.

ಅದೊಂದು ದಿನ, ದಾರಿಯಲ್ಲಿ ಸಿಕ್ಕ ಸ್ಕೂಟಿ ಬೆನ್ನತ್ತಿ, ಅದೆಲ್ಲೋ ಮಾರಥಹಳ್ಳಿಯ ಮೂಲೆಗೆ ಹೋಗಿ ತಲುಪಿದ್ದೆ, ತಿರುಗಿ ಬರಲು ದಾರಿಯೆಲ್ಲಿ ಗೊತ್ತು, ಕೊಲೀಗಿಗೆ ಫೋನು ಮಾಡಿದ್ರೆ "ಹಾಗೆ ಅಲ್ಲೇ ಮಣ್ಣ ದಾರಿಯಲ್ಲಿ ಮುಂದೆ ಬಂದ್ರೆ ಅಲ್ಲೊಂದು ಪಾನ ಶಾಪ್ ಬರುತ್ತೆ, ನಾಲ್ಕಾರು ಜನ ನಿಂತಿರ್ತಾರೆ ಅಲ್ಲಿ ಕಾರ್ನರಿನಲ್ಲಿ ಟೆಲಿಫೊನು ಬೂತು ಕಾಣುತ್ತದೆ, ಅಲ್ಲಿ ಲೆಫ್ಟ ತುಗೊಂಡು ಮುಂದೆ ಬಂದ್ರೆ ಟಾರು ರೋಡು, ಲೇಡೀಸ ಹಾಸ್ಟೆಲ್ ಇದೆ, ಅಲ್ಲಿ ಅವರ ನೋಡುತ್ತ ನಿಲ್ಬೇಡ, ಅಲ್ಲಿ ರೈಟು.. ಮುಂದೆ ಇದೆ ಸಿಗ್ನಲ್ಲು ಅಲ್ಲಿಂದ ನೇರ ಬಂದ್ರೆ ದೊಮ್ಮಲೂರು" ಅಂತ ಹೇಳಿದ್ದು ಇನ್ನೂ ಕೇಳಿದ್ದರೆ ದಾರಿಯಲ್ಲಿ ಬರುವ ಗುಂಡಿ, ರಸ್ತೆತಡೆ, ಎಲ್ಲ ಹೇಳಿರೋರು. ಆದರೂ ಹಾಸ್ಟೆಲ್ಲಿನ ಹತ್ತಿರ ಒಂದು ಸ್ಟಾಪು ಹಾಕಿ, ಲೆಫ್ಟು ಬಂದು ದಾರಿ ತಪ್ಪಿ ಮತ್ತೆ ಫೋನು ಮಾಡಿ ದಾರಿ ಕೇಳಿ ಬಂದು ತಲುಪಿದ್ದು. ಎಷ್ಟೊ ಜನರಿಗೆ ದಾರಿ ತೋರಿದರೂ ನನಗೆ ಮಾತ್ರ ಸರಿ ದಾರಿ ನೆನಪಿಟ್ಟು ಬರುವುದು ಹೇಳಿಕೊಡಲಾಗಿಲ್ಲ... ಆ ಮಟ್ಟಿಗೆ ಇದೆ ನನ್ನ ಇಮೇಜು, ಎಲ್ಲಿ ಹೋಗಬೇಕಾದರೂ, ಯಾರಾದರೂ ದಾರಿ ಹೇಳುತ್ತ ಮೂರಕ್ಕಿಂತ ಹೆಚ್ಚು ಲೆಫ್ಟು ರೈಟು ಹೇಳಿದರೆ, ಹಲ್ಲು ಕಿರಿಯುತ್ತೇನೆ, ಒಂದೊ ದಾರಿ ಗೊತ್ತಿರುವವರೊ ನನ್ನ ಜತೆಗೆ ಬರುತ್ತಾರೆ ಇಲ್ಲ, ಯಾರನ್ನಾದರೂ ನಾ ಹಿಂಬಾಲಿಸಬೇಕು.

ಹಿಂಬಾಲಿಸಿಯಾದರೂ ಸರಿಯಾಗಿ ಬಂದು ತಲುಪುತ್ತೀನಾ ಅದೂ ಇಲ್ಲ, ಮೊನ್ನೆ ಅದೊಂದು ಹೊಟೇಲಿಗೆ ಹೋಗಬೇಕಿತ್ತು, ಹಿಂಬಾಲಿಸುತ್ತ ಹೊರಟವ, ನಡುವೆ ಲಾರಿಯೊಂದು ಬಂದು ಅವರೆಲ್ಲೋ ಮುಂದೆ ಹೋಗಿರಬಹುದೆಂದು, ಓಡಿಸಿದ್ದೇ ಓಡಿಸಿದ್ದು ಆಮೇಲೆ ಮತ್ತೆ ಮಾಮೂಲು ಯು ಟರ್ನ... ಲಾರಿ ಪಕ್ಕದಲ್ಲೇ ಹೊಟೇಲು ಇತ್ತು ಅವರು ಅಲ್ಲೇ ನಿಲ್ಲಿಸಿದ್ದರು, ನಾ ಮುಂದೆ ಹೋಗಿರುವರೆಂದು, ಹುಡುಕಿದ್ದೇ ಹುಡುಕಿದ್ದು... ಮತ್ತೆ ಯಾರನ್ನೊ ಕೇಳಿದೆ ಅವನೊ ಎಡಕ್ಕೆ ಕೈ ತೊರಿಸುತ್ತಾನೆ ರೈಟು ಟರ್ನು ಅಂತಾನೆ, ಮೊದಲೇ ಗೊಂದಲಕ್ಕೀಡಾದವ ಇನ್ನಷ್ಟು ಗೊಂದಲ... ಆದರೂ ಬೆಂಗಳೂರಿನಲ್ಲಿ ಅದೊಂದು ಒಳ್ಳೆಯದು, ಯಾರು ಕೇಳಿದರೂ ಬೇಜಾರಿಲ್ಲದೆ ದಾರಿ ಹೇಳುತ್ತಾರೆ, ಗೊತ್ತಿಲ್ಲದಿದ್ದರೆ ಪಕ್ಕದವರನ್ನು ಕೇಳಿಯಾದರೂ ಸರಿ. ಎಷ್ಟೋ ಸಾರಿ ನಾ ಹೋಗಬೇಕಾದ ಸ್ಠಳದವರೆಗೂ ಬಂದು ಬಿಟ್ಟೂ ಹೋಗಿದ್ದಾರೆ. ಹಾಗೆ ದಾರಿ ಕೇಳುತ್ತ ಎಲ್ಲರೂ ಊಟ ಮುಗಿಸಿ ಕೈ ತೊಳೆಯುವ ಮುಂಚೆ ಅಲ್ಲಿ ಹೊಟೇಲಿಗೆ ತಲುಪಿದ್ದೆ.

ಇನ್ನೊಂದು ದಿನ ಇವಳ ಎಂ ಜೀ ರೋಡಿಗೆ ಕರೆದುಕೊಂಡು ಹೊರಟಿದ್ದೆ, ಅದ್ಯಾವುದೋ ಸೇಲು ಬಂದಿದೆ ಅಂತ, ದಾರಿ ಗೊತ್ತಿತ್ತು, ಸೇಲು ಎಲ್ಲಿದೆ ಗೊತ್ತಿರಲಿಲ್ಲ, ಎಡಕ್ಕೆ ಗಾಡಿಗಳ ನಡುವೆ ಸಿಲುಕಿರುವಾಗ ಇವಳಿಗೆ ಅದು ಬಲಕ್ಕೆ ಕಂಡು ಬಿಡಬೇಕೇ, ಎಡದಿಂದ ಬಲಕ್ಕೆ ನಾ ಬರಲು ಈ ಟ್ರಾಫಿಕ್ಕಿನಲ್ಲಿ ಆಗಬೇಕಲ್ಲ. ನೇರ ಹೊರಟೆ "ರೀ ರೈಟಿನಲ್ಲಿದೆ" ಅಂದದ್ದು ಕೇಳದಂತೆ ಹೊರಟೆ, ನಾಕು ತಲೆಗೆ ಇಕ್ಕಿದಳು, ಹೆಲ್ಮೆಟ್ಟು ಇತ್ತು ಬಚಾವಾದೆ, ಅದೊ ಅಲ್ಲಿ ಎಲ್ಲೊ ದೂರ ಬ್ರಂಟನ್ ಟಾವರು ಹತ್ತಿರ ನಿಲ್ಲಿಸಿ ನಡೆದು ಬರುವಾಗ ಬಯ್ಯುತ್ತಲೇ ಇದ್ದಳು, ನನಗೊ ನಗು ಅಂದ್ರೆ ನಗು, ಬಿಸಿಲಿನಲ್ಲಿ ಬುರ್ಕಾದಂತೆ ದುಪಟ್ಟ ಹೊದ್ದು. ನಡೆದದ್ದೆ ನಡೆದದ್ದು. ಅವಳಿಗೊ ಈ ಎಂ ಜೀ ರೋಡಿನಲ್ಲಿ ಕಾಣುವ ಸುಂದರಿಯರ ನೋಡಲು ನಾ ಹಾಗೆ ಮಾಡಿದೆನೆಂದು ಗುಮಾನಿ, ಬಯ್ಯುತ್ತ ಬಡಿಯುತ್ತ ಅಷ್ಟು ದೂರ ಬಂದವಳು, ಮತ್ತೆ ಬಿಸಿಲಿದೆ ಬನ್ನಿ ಅಂತ ತನ್ನ ದುಪಟ್ಟಾದಲ್ಲಿ ನನಗೂ ನೆರಳು ಕಲ್ಪಿಸ ನೋಡಿದಳು.. ಕ್ಷಣದಲ್ಲಿ ಸಿಡುಕು, ಕ್ಷಣದಲ್ಲಿ ಮತ್ತೆ ಪ್ರೀತಿ ಅವಳಿಗ್ಯಾರು ಸಾಟಿ...

ಅಂತೂ ಅದೇ ಯೋಚನೆಗಳಲ್ಲಿ ಅಫೀಸಿಗೆ ಬಂದೆ, ಕೊಲೀಗ್‌ಗೆ ದಾರಿ ತಪ್ಪಿದ್ದು ಹೇಳಿದರೆ, "ಅಲ್ಲಿ ತನಕ ಹೋಗಿ ಯಾಕೆ ಯು ಟರ್ನ ತೆಗೆದುಕೊಂಡೆ, ಅಲ್ಲೇ ಇನ್ನೊಂದು ಲೆಫ್ಟು ತೆಗೆದುಕೊಂಡು ರೈಟಿಗೆ ಬಂದಿದ್ರೆ ಸಾಕಿತ್ತು" ಅಂದ... ನಾ ಹಲ್ಲು ಕಿರಿದೆ, ಅವ ನಗತೊಡಗಿದೆ, "ನನ್ನ ಬಗ್ಗೆ ಗೊತ್ತಲ್ಲ" ಅನ್ನುತ್ತ ಕೆಲಸದಲ್ಲಿ ಲೀನವಾದೆ, ಸಂಜೆ ಮತ್ತೆ ಅವಳ ಪಿಕ್ ಮಾಡಬೇಕು, ಬೇಗ ಹೊರಟೆ.

ಈ ರೋಡುಗಳು ಯಾಕೆ ಹೀಗೆ ಅಂತೀನಿ, ಹೋಗೋಕೊಂದು ದಾರಿಯಾದರೆ ಬರೋಕೊಂದು. ಮತ್ತೆ ದಾರಿ ಹೇಳುತ್ತ ಮನೆಗೆ ತಲುಪಿಸಿದಳು. ಮನೆಗೆ ಬಂದು ಶರ್ಟು ಬಿಚ್ಚುತ್ತ, "ನಾನೇ ಯಾಕೆ ಹೀಗೆ ದಾರಿ ತಪ್ಪುತ್ತೀನಿ ಅಂತೀನಿ" ಅಂದೆ, ಅದಕ್ಕವಳು ಒಂದು ಅಸಂಬದ್ಧ ಪ್ರಶ್ನೆ ಕೇಳಿದಳು "ದಾರಿಯಲ್ಲಿ ಆ ಹೊಂಡ ಅಕ್ಟಿವಾ ಮೇಲೆ ಕಂಡ ಹುಡುಗಿ ನೋಡಿದ್ರಾ" ಅಂತ. "ಯಾವುದು ನಂಜಪ್ಪ ಸರ್ಕಲ್ಲಿನಲ್ಲಿ ಕಂಡದ್ದೊ, ಇಲ್ಲ ಆ ಬಿಗ್ ಬಾಜಾರಿನ ಹತ್ತಿರ ಕಂಡದ್ದೊ" ಅಂದೆ, "ನೋಡಿ, ಪ್ರತೀ ತಿರುವಿನಲ್ಲಿ ಕಾಣುವ ಹುಡುಗಿ ನೆನಪಿರ್ತಾಳೆ ದಾರಿ ಯಾಕಿಲ್ಲ? ಗಮನ ಅಲ್ಲಿರಬೇಕಲ್ಲ" ಅಂತ ಬೈದಳು ಹಲ್ಲು ಕಿರಿದೆ. "ನಿಜ ಹೇಳೆ ನಾನೇನು ಬೇಕೇಂದೆ ಮಾಡ್ತೀನಾ?" ಅಂದ್ರೆ "ಮದುವೆಗೆ ಮುಂಚೆ, ನಿಮ್ಮಕ್ಕನ ಮನೆಗೆ ಕರೆದುಕೊಂಡು ಹೊಗ್ತೀನೀ ಅಂತ ಬೇಕೆಂದಲೇ ದಾರಿ ಗೊತ್ತಿಲ್ಲ ಅಂತ ಇಡೀ ಬೆಂಗಳೂರು ಸುತ್ತಿಸಿರಲಿಲ್ವಾ, ಕಿಲಾಡಿ ನೀವು ನಂಗೊತ್ತಿಲ್ವಾ" ಅಂತಂದ್ಲು. "ಅದ್ ಹೇಗೆ ನಿಂಗೆ ಗೊತ್ತಾಯ್ತು" ಅಂದ್ರೆ, "ಮಾಗಡಿ ರೋಡು ಅಂತ ನೀಟಾಗಿ ಬರೆದಿರೋ ಬೋರ್ಡು ಇದ್ರೂ ಅಲ್ಲಿ ತಿರುವು ತೆಗೆದುಕೊಂಡು ಬಂದಿದ್ರಿ, ನಂಗೂ ಸುತ್ತಬೇಕಿತ್ತು ಸುಮ್ಮನಿದ್ದೆ" ಅಂದ್ಲು ನಗುತ್ತ. "ಈಗ ಕಿಲಾಡಿ ನೀನೂ ಅಲ್ವಾ" ಅಂತಿದ್ದರೆ "ಸಾಕು ಬನ್ನಿ ಟೀ ಮಾಡ್ತೀನಿ" ಅಂತ ಪಾಕ ಶಾಲೆಗೆ ಹೊರಟಳು. ಅವಳು ಟೀ ಮಾಡುತ್ತಿದ್ದರೆ ಬರ್ಶನ್ನು ಕಟ್ಟೆ ಮೇಲೆ ಕೂತು ತಿರುವುಗಳೇ ತುಂಬಿರುವ ಚಕ್ಕಲಿ ತಿನ್ನುತ್ತ "ಅಂದೇನೊ ಸರಿ ಬೇಕೆಂತಲೇ ಮಾಡಿದ್ದು, ಆದರೆ ನನಗೇಕೊ ಈ ತಿರುವುಗಳು ನೆನೆಪೇ ಇರುವುದಿಲ್ಲ, ನನಗೆ ನಾನೇ ಗೊಂದಲಕ್ಕೀಡಾಗಿ ಬಿಡುತ್ತೇನೆ,
ತಿರುವು ತುಂಬಿರುವ ಸಂದಿಗೊಂದಿಗಳಲ್ಲಿ ಹಾದು ಬರುವುದಕ್ಕಿಂತ ನೇರ ದೂರ ರಿಂಗ ರೊಡುಗಳೇ ಬೇಕೆನಿಸುತ್ತವೆ, ಈ ಶಾರ್ಟ್‌ಕಟ್‌ಗಳನ್ನು ಬಳಸಿ ಎಲ್ರೂ ನನಗಿಂತ ಮುಂದೆ ಹೋಗಿ ಬಿಡ್ತಾರೆ ನನಗೋ ದೂರ ದಾರಿ ಅಷ್ಟೆ ಗೊತ್ತಿರೋದು..." ಅಂತ ಭಾಶಣ ಬಿಗಿದೆ, ಅವಳೂ ನಗುತ್ತ, "ಈ ಟಾರು ರೋಡುಗಳಲ್ಲಿ ಎಷ್ಟು ದಾರಿ ತಪ್ಪಿದರೂ ನೀವು ನನಗೆ ಬೇಜಾರಿಲ್ಲ, ಬದುಕಿನ ದಾರಿ ಎಂದೂ ತಪ್ಪಿಲ್ಲ, ಎಷ್ಟು ತಿರುವುಗಳಿದ್ದವು ನಿಮ್ಮ ಮುಂದೆ, ಆದ್ರೆ ನೀವು ನೇರ ನೇರಕೆ ಇಷ್ಟು ದೂರ ಬಂದಿರುವಿರಿ, ಎಲ್ಲೂ ತಪ್ಪಿಲ್ಲ ಅದೇ ನನಗೆ ಹೆಮ್ಮೆ ನನಗಷ್ಟೆ ಸಾಕು" ಅಂತ ಭಾವನಾತ್ಮಕ ಮಾತುಗಳಾಡಿದಳು, ನನಗೊ ಖುಶಿ "ಆದರೂ ಎಲ್ಲಿ ಎಲ್ಲರೂ ಬಳಸಿದ ದಾರಿಯಲ್ಲಿ ಬಂದು ಹೊಸದನ್ನೇನು ಮಾಡಲಿಲ್ಲ ನಾ, ಆ ಮಣ್ಣ ದಾರಿ ಬಳಸಲೇ ಇಲ್ಲ, ಹೊಸದೇನೊ ಇರ್ತಿತ್ತು ಅನ್ನೊ ಪ್ರಶ್ನೆ ನನ್ನ ಕಾಡಿದೆ" ಅಂದೆ, "ಎಲ್ಲರಿಗೂ ಒಂದೊಂದು ದಾರಿಯಿದೆ, ನಿಮಗೆ ನೇರವಾದರೆ ಮತ್ತೊಬ್ಬರಿಗೆ ತಿರುವು, ಯೋಚನೆ ಬಹಳ ಬೇಡ, ಪಕ್ಕದ ಮನೆ ಪದ್ದು ಹತ್ರ ತಿರುವಿಬಿಟ್ಟೀರಿ, ನಮ್ಮನೆ ಈ ಕಡೆ ನೇರ ಇದೆ" ಅಂತ ತುಂಟಾಟಕ್ಕಿಳಿದಳು. ಅವಳ ಬಾಯಿಗೊಂದು ಚಕ್ಕಲಿಯ ತುಂಡಿನ ತಿರುವಿಟ್ಟೆ ಆಕಡೆಯ ತಿರುವು ಅವಳ ಬಾಯಲ್ಲಿದ್ದರೆ ಈಕಡೆ ತಿರುವಿನಿಂದ ನಾ ತಿನ್ನುತ್ತಿದ್ದೆ, ತಿರುವು ಕಡಿಮೆಯಾಗುತ್ತ ಬಂತು, ನಮ್ಮಿಬ್ಬರ ನಡುವಿನ ದೂರ ಕಡಿಮೆಯಾಗುತ್ತಿತ್ತು, ತಿರುವುಗಳಿಲ್ಲದೇ ನಮ್ಮ ಸಂಭಂಧ ಇನ್ನಷ್ಟು ನೇರ ನಿಶ್ಚಿತ ನಿಷ್ಕಲ್ಮಶವಾಗುತ್ತಿತ್ತು... ತಿರುಗಿ ಬರುತ್ತಿರಿ ಮತ್ತೆಲ್ಲೊ ತಿರುವಿನಲ್ಲಿ ದಾರಿ ಕೇಳುತ್ತ ಸಿಗುತ್ತೇನೆ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...


The PDF document can be found at http://www.telprabhu.com/tiruvinalli.pdf



ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು