Sunday, December 27, 2009

ನಿರುದ್ಯೋಗಿ ನೀ ಇರು ಉದ್ಯೋಗಿ...

ಅಂದು ಬೇಗ ಎದ್ದು, ಸ್ವಲ್ಪ ಫ್ರೆಷ್ ಆಗಿ ಒಂದು ದೊಡ್ಡ ಮಗ್ ತುಂಬಾ ಟೀ ಮಾಡಿಕೊಂಡು ಬಂದು, ಸ್ವಲ್ಪ ಚಳಿ ಇದೆ ಅಂತ ಹಾಗೆ ಸ್ವಲ್ಪ ಹೊದಿಕೆ ಹೊದ್ದು ಪೇಪರು ಹಿಡಿದುಕೊಂಡು ಕೂತು ಟೀ ಹೀರುತ್ತಿದ್ದೆ, ಇವಳು ಪಕ್ಕದಲ್ಲೇ ಮಲಗಿದ್ದಳು. ಮುಂಗುರುಳು ಮುಂಜಾರಿ ಮುಖದ ಮೇಲೆ ಬಿದ್ದು ಕಚಗುಳಿಯಿಡುತ್ತಿರುವುದೂ ಕೂಡ ಪರಿವೆಯಿಲ್ಲದೇ ಪವಡಿಸುತ್ತಿರುವವಳು ಏಳಲು ಇನ್ನೂ ಸಮಯವಿತ್ತು, ಯಾಕೆ ತೊಂದ್ರೆ ಮಾಡೋದು ಅಂತ ನನ್ನ ಪಾಡಿಗೆ ನಾ ಓದುತ್ತಿದ್ದೆ, ಪೇಪರಿನ ಚರ್ ಪರ್ ಸದ್ದಿಗೆ ಎಚ್ಚರಾಯಿತು ಅಂತ ಕಾಣುತ್ತದೆ, "ಏನು ಸಾಹೇಬ್ರು ಬೇಗ ಎದ್ದು, ಆಗಲೇ ಟೀ ಮಗ್ ಹಿಡಿದು ಕೂತಿದೀರಾ" ಅಂತ ಕಣ್ಣು ತೀಡುತ್ತ ಕೇಳಿದಳು, "ಹಾಗೇ ಸುಮ್ನೇ ಬಾಸ್" ಅಂದೆ. ಏನು ನನಗೇ ಬಾಸ್ ಅಂತೀದಾರಲ್ಲ, ಅಶ್ಚರ್ಯದಿಂದ ಕಣ್ಣರಳಿಸಿ, "ನನಗೇ ಬಾಸ್ ಅಂತ ಹೇಳ್ತಾ ಕೂತ್ರೆ ಅಷ್ಟೇ, ಏಳಿ ತಯ್ಯಾರಾಗಿ, ಇಲ್ಲಾಂದ್ರೆ ನಿಮ್ಮ ಬಾಸ್ ಫೋನ್ ಬರತ್ತೆ ನೋಡಿ" ಅಂತಂದಳು, ಸುಮ್ನೇ ಒಂದು ಮುಗುಳ್ನಗು ಕೊಟ್ಟೆ. "ಎದ್ದೇಳ್ರೀ... ಆಫೀಸಿಗೇನು ನಿಮ್ಮ ತಾತ ಹೋಗ್ತಾನಾ" ಅಂತ ಸ್ವಲ್ಪ ಜೋರಾದಳು. "ನಮ್ಮ ತಾತ ಅಂತೂ ಇಲ್ಲ ನಿಮ್ಮ ತಾತನಿಗೇ ಹೋಗು ಅಂತ ಹೇಳು" ಅಂತ ನಾನಂದೆ. "ಇದೊಳ್ಳೆ ರಗಳೆ ಆಯ್ತಲ್ಲ ಕೆಲಸಕ್ಕೆ ಹೋಗಿ ಅಂತ ಏಳಿಸೋದೇ ಒಂದು ಕೆಲಸ ಆಗಿದೆ ನಂಗೆ, ಟೈಮ್ ಬೇರೆ ಎಷ್ಟಾಯಿತೊ" ಅಂತ ಎದ್ದೇಳಲು ನೋಡಿದ್ಲು, "ಇನ್ನೂ ಆರು ಘಂಟೆ ಕೂಡ ಆಗಿಲ್ಲ ನೋಡು" ಅಂತ ವಾಚ್ ತೋರಿಸಿದೆ, "ಅರೇ ಇದೇನಿದು ಹೊಸ ವಾಚ್" ಅಂತ ಆಶ್ಚರ್ಯಗೊಂಡಳು, ಇವತ್ತೇನು ಎಲ್ಲಾ ಹೊಸ ಹೊಸದಾಗಿದೆ, ಅಂತ ಅನಿಸಿರಬೇಕು "ಏನ್ರೀ ವಿಷಯ, ಹೇಳದೇ ಕೇಳದೇ ಹೊಸ ವಾಚ್ ತೆಗೆದುಕೊಂಡೀದೀರಾ" ಅಂತ ಕೇಳಿದಳು. "ಕೊಂಡ್ಕೊಂಡಿದ್ದು ಅಲ್ಲ, ಅದು ಗಿಫ್ಟ್ ಬಂದಿದ್ದು" ಅಂದೆ. "ನಿಮ್ಮ ಈ ಗಿಫ್ಟ ವಿಷಯ ಆಮೇಲೆ ಮಾತಾಡೋಣ ಅಂತೆ, ಆಫೀಸಿಗೆ ಲೇಟಾಗತ್ತೇ" ಅಂತಂದಳು, "ನಿನ್ನೇನೇ ಅಫೀಸಿಗೆ ಕೊನೇ ದಿನ, ಅದಕ್ಕೇ, ಜತೆ ಕೆಲಸ ಮಾಡೊರೆಲ್ಲ ಸೇರಿ ಕೊಟ್ಟ ಗಿಫ್ಟ ಅದು, ನಾನೀಗ ನಿರುದ್ಯೋಗಿ!" ಅಂದೆ...

ಕಣ್ಣ ಕಣ್ಣ ಬಿಟ್ಟು ನೋಡಿ, "ಅರೇ ಮತ್ತೆ ನಿನ್ನೆ ಹೇಳಲೇ ಇಲ್ಲ" ಅಂದ್ಲು. "ಹ್ಮ್, ಹೇಳಬೇಕು ಅಂತಿದ್ದೆ, ಆದ್ರೆ ಯಾಕೊ ಬಹಳ ಬೇಜಾರಾಗಿತ್ತು, ಸುಮ್ನೇ ಬಂದು ಮಲಗಿಬಿಟ್ಟೆ" ಅಂತ ಮುಖ ಕಿರಿದು ಮಾಡಿದೆ, "ಅನ್ಕೊಂಡೆ ನಿನ್ನೆ ಏನೊ ಆಗಿದೆ ಅಂತ, ನೀವೇ ಹೇಳ್ತೀರಾ ಅಂತ ಸುಮ್ಮನಾಗಿದ್ದೆ, ನೀವೆ ಕಂಪನಿ ಬಿಟ್ಟದ್ದು ಅಲ್ವಾ, ಮತ್ಯಾಕೆ ಬೇಜಾರು" ಅಂತ ಕೇಳಿದ್ಲು. "ಬೇಜಾರಾಗದೇ ಮತ್ತಿನ್ನೇನೆ, ಮೂರುವರ್ಷದ ಮೇಲಾಯ್ತು ಅದೇ ಕಂಪನಿಯಲ್ಲಿ ಇದ್ದು. ಪೀಠಾರೋಹಣ ಮಾಡಿ ಪಟ್ಟಾಗಿ ಕೂತಿದ್ದು, ಕಿರೀಟವಿಲ್ಲದಿದ್ರೂ ರಾಜನಂತಿದ್ದೆ ಗೊತ್ತಾ" ಅಂದೆ. "ಹ್ಮ್ ಗೊತ್ತು ಗೊತ್ತು, ಯಾವಾಗ ನೋಡಿದ್ರೂ ನಮ್ಮ ಟೀಮ್ ಹಾಗೆ, ನಮ್ಮ ಟೀಮ್ ಹೀಗೆ, ಅಂತ ಹೇಳಿದ್ದೇ ಹೇಳಿದ್ದು,
ಕಂಪನಿ ಈಗ ಕೃಷ್ಣನಿಲ್ಲದ ಮಥುರಾನಂತಾಗಿದೆ ಅನ್ನಿ, ಗೋಪಿಕೆಯರೆಲ್ಲ ನಿಟ್ಟುಸಿರು ಬಿಟ್ಟಿರಬೇಕು" ಅಂತ ಚುಡಾಯಿಸಿದಳು. "ನಾ ಸೀತಾಪತಿ ರಾಮನಂತೇ, ಆದ್ರೂ ಹೂವಿನಂತಿದ್ದ ಹುಡುಗಿಯರ ಮುಖಗಳೆಲ್ಲ ಬಾಡಿಹೋಗಿತ್ತು ನಾ ಹೊರಟಿದ್ದೇನೆ ಅಂತ" ಅಂದು ತಿರುಗೇಟು ಕೊಟ್ಟೆ. "ಕೀತಾಪತಿ ಕೃಷ್ಣ ನೀವು, ಹಾಳಾದೋನ ಹಾವಳಿ ಜಾಸ್ತಿಯಾಗಿತ್ತು ಹೋದ ನೋಡು ಅಂತ ಖುಷಿಯಾಗಿರಬೇಕು ಅವ್ರು" ಅಂತ ನಕ್ಕಳು.

ಹೇಗೂ ಲೇಟಾದರೂ ಪರವಾಗಿಲ್ಲ ಅಂತ ಸ್ವಲ್ಪ ಹೊತ್ತು ಅಲ್ಲೇ ಮಲಗಿದಳು, ನಿದ್ರೆ ಬರದಾದಾಗ ನಾ ಓದುತ್ತಿದ್ದ ಪೇಪರು ಕಸಿದುಕೊಂಡು ಓದಲು ಕೂತಳು, "ರೀ ಹೇಗೂ ಕೆಲ್ಸ ಇಲ್ಲ, ಹೋಗ್ರಿ ನಂಗೊಂದು ಕಪ್ಪು ಟೀ ಮಾಡ್ಕೊಂಡು ಬನ್ನಿ" ಅಂತ ಆರ್ಡರ್ ಮಾಡಿದಳು, "ಅದರೊಂದಿಗೆ, ಬ್ರೆಡ ಟೊಸ್ಟ್ ಬೇಕಾ, ಇಲ್ಲ ಆಮ್ಲೆಟ್ ಬೇಕಾ ಮೇಡಮ್" ಅಂದೆ. ಪೇಪರು ತುಸು ಸರಿಸಿ ಬಾಗಿಸಿ ಅದರ ಮರೆಯಲ್ಲೇ ಇಣುಕಿ ನೋಡಿ ಹುಬ್ಬು ಹಾರಿಸಿದಳು. "ಬೇಕೇನೇ, ಮಾಡ್ತೀನಿ" ಅಂದ್ರೆ, "ರೀ ತಮಾಷೇ ಮಾಡಿದೆ" ಅಂತಂದವಳು, ನನ್ನ ಕೈಲಿದ್ದ ಕಪ್ಪು ಕಸಿದುಕೊಂಡು ಒಂದು ಸಿಪ್ಪು ಹೀರಿ, "ಸೂಪರ್ ಸೂಪರ್" ಅಂತ ಬಾಯಿ ಚಪ್ಪರಿಸಿದಳು. ಕಪ್ಪು ಕಸಿದುಕೊಂಡಿದ್ದಕ್ಕೆ ಕನಿಕರ ಬರುವಂತೆ ನೋಡುತ್ತಿದ್ದರೆ, "ರೀ ಇನ್ನೊಂದು ಕಪ್ಪು ಮಾಡಿ ಕೊಡ್ತೀನಿ ಆಯ್ತಾ" ಅಂತೆದ್ದು ಹೋದಳು.

ದಿನವಿಡೀ ಇದ್ದೇ ಇದೆಯಲ್ಲ, ಪೇಪರು ಆಮೇಲೆ ಓದಿದರಾಯ್ತು ಅಂತ ಆದನ್ನು ಅಲ್ಲೇ ಬೀಸಾಕಿ ಹೊರಬಂದೆ, ಸ್ನಾನವಾದರೂ ಮಾಡಿದರಾಯ್ತು ಅಂತ ನಡೆದರೆ "ರೀ, ನಾನು ಸ್ನಾನ ಮಾಡ್ತೀನಿ ತಾಳಿ, ನಿಮಗೇನು ಅರ್ಜೆಂಟ್ ಇಲ್ಲ, ಆಮೇಲೆ ಮಾಡುವಿರಂತೆ" ಅಂತ ಅಡ್ಡಗಾಲು ಹಾಕಿದಳು, ಹೋಗಲಿ ಬಿಡು ಅಂತಿದ್ದರೆ, ಬಾತ್‌ರೂಮಿನಿಂದ ಕೂಗು ಕೇಳಿತು "ಒಲೆ ಮೇಲೆ ಕಾಯಿಸಲು ಹಾಲಿಟ್ಟೀದೀನಿ, ಸ್ವಲ್ಪ ನೋಡಿ" ಅಂತ. ಸಧ್ಯ ಅಡುಗೆ ಮಾಡಿ ಅಂತ ಹೇಳಲಿಲ್ಲ ಅಲ್ಲ, ಹಾಲು ಕಾಯಿಸೋದು ತಾನೆ ಅಂತ ನೋಡಿ ಬಂದು ಕೂತೆ, ಟೀವೀನಾದ್ರೂ ನೋಡೋಣ ಅಂತ ಆನ್ ಮಾಡಿದ್ರೆ ಏನೂ ಬರುತ್ತಿಲ್ಲ. "ಟೀವೀಗೆ ಏನಾಯ್ತೇ" ಅಂತ ಕೇಳಿದ್ರೆ "ಬೆಳಗ್ಗೆ ಬೆಳಗ್ಗೆ ಅದೇನು ಟೀವೀ ನೋಡ್ತಾ ಕೂರ್ತೀರಾ, ಮೊನ್ನೆ ಅಲ್ಲಿ ವಯರು ಕಟ್ಟಾಗಿದೆ ಅಂತೆ ಹೋಗಿ ಅದನ್ನಾದರೂ ರಿಪೇರಿ ಮಾಡ್ಸಿ" ಅಂತ ಉಪದೇಶವಾಯ್ತು, ಟೆರೆಸ್ಸು ಏರಿ ಕಿತ್ತು ಹೋಗಿದ್ದ ವಯರು ಜೋಡಿಸಿ ಬಂದು ಸ್ನಾನ ಮಾಡಿ ಬಂದು ಕೂರಬೇಕೆನ್ನುವಷ್ಟರಲ್ಲಿ, "ಹೇಗೂ ರೆಡಿ ಆಗಿದ್ದೀರಲ್ಲ ಕರೆಂಟ್ ಬಿಲ್ ತುಂಬಬೇಕಿತ್ತು" ಅಂತ ರಾಗ ತೆಗೆದಳು. ಸರಿ ಕರೆಂಟ್ ಬಿಲ್ ತಾನೇ ಅಂತ ಹೊರಟು ನಿಂತರೆ "ಆಕಡೆಯೇ ಹೋಗುತ್ತೀರಿ, ಅಲ್ಲೇ ಮಾರ್ಕೆಟ್ನಲ್ಲಿ ತರಕಾರಿ ಸ್ವಲ್ಪ ತೆಗೆದುಕೊಂಡು ಬನ್ನಿ" ಅಂತ ಹಲ್ಲು ಕಿರಿದಳು. ಇನ್ನು ಎಲ್ಲಿ ಇಲ್ಲವೆನ್ನಲಾಗುತ್ತದೆ, ಸರಿ ಹೋಗಿ ಮಾರುದ್ದ ಕ್ಯೂನಲ್ಲಿ ನಿಂತು ಬಿಲ್ಲು ತುಂಬಿ, ಮಾರ್ಕೆಟ್ ಸುತ್ತಿ ತರಕಾರಿ ಆಯ್ದುಕೊಳ್ಳುವ ಹೊತ್ತಿಗೆ ಹೊತ್ತೇರುವಷ್ಟು ಸಮಯವಾಗಿತ್ತು, ನಡುವೆ ಫೋನು ಬೇರೆ ಮಾಡಿ ರವೆ ಅಕ್ಕಿ ತರುವುದಕ್ಕೂ ಹೇಳಿದ್ದಳು. ಆಫೀಸಿನ ಏ.ಸೀ ರೂಮಿನಲ್ಲಿ ಕಾಲು ಚಾಚಿ ಕೂತಿರುವವನಿಗೆ ಕಾಲುನಡಿಗೆ ಕಷ್ಟವಾಗದಿದ್ದೀತೇ, ಸುತ್ತಿ ಸುಸ್ತಾಗಿ ಮನೆ ಸೇರುವಾಗ ಘಂಟೆ ಒಂದು ಆಗಿತ್ತು.

ಇತ್ತ ಊಟಕ್ಕೂ ಸಮಯವಲ್ಲ, ತಿಂಡಿ ಕೂಡ ತಿನ್ನಲಾಗಲ್ಲ ಹಾಗಾಗಾಗಿತ್ತು, ಇನ್ನೊಂದು ಸ್ವಲ್ಪ ತಡೆದು ಊಟವೇ ಮಾಡಿದರಾಯ್ತು ಅಂತ ಕೂತವನು ಟೀ ಬೇಕೆಂದು ಕೇಳಿದೆ, "ಇಷ್ಟೊತ್ತಿನಲ್ಲಿ ಟೀ ಏನು, ಆಗಲೇ ಎರಡು ಸಾರಿ ಆಗಿದೆ" ಅಂತ ಅವಳು ಅದನ್ನೂ ಕೊಡಲಿಲ್ಲ, ಕಂಪನಿಯಲ್ಲಿ ಪುಕ್ಕಟೆ ಮಗ್‌ಗಟ್ಟಲೆ ಸಿಗುತ್ತಿದ್ದ ಟೀ ನೆನಪಾಯಿತು, ಕೆಲಸ ಮಾಡುತ್ತೀವೊ ಇಲ್ವೊ ಅದಂತೂ ಸಿಗುತ್ತಿತ್ತು, ಇಲ್ಲಿ ಕೆಲಸ ಮಾಡಿದರೂ ಕೊಡುತ್ತಿಲ್ಲ ಅಂತ ಗೊಣಗಿಕೊಂಡು ಸ್ವಲ್ಪ ಕಾಲ ತಳ್ಳಿದವನಿಗೆ, ತಟ್ಟೆ ಸದ್ದು ಕೇಳಿ ಹೊಟ್ಟೆ ತುಂಬ ಹೋಳಿಗೆ ಊಟ ಮಾಡಿದಷ್ಟೇ ಸಂತೋಷವಾಯ್ತು. ಊಟಕ್ಕೆ ಅನ್ನ ಸಾರು ಉಪ್ಪಿನಕಾಯಿ ಮಾತ್ರ ಇತ್ತು, ಲಂಚಬಾಕ್ಸಿಗೆ ತರಹೇವಾರಿ ಹೊಸರುಚಿಗಳನ್ನು ಮಾಡಿಕೊಡುತ್ತಿದ್ದವಳು, ಮನೆಯಲ್ಲೇ ಇರುವಾಗ ಏನು ಹೊಸದು ಅಂತ ಅನ್ನ ಸಾರು ಮಾತ್ರ ಮಾಡಿದ್ದಳು, ಸಿಕ್ಕಿದ್ದು ಶಿವಾಯನಮಃ ಅಂತ ಅದನ್ನೇ ತಿಂದು ತೇಗಿದ್ದಾಯ್ತು.

ಊಟ ಆಯ್ತು ಇನ್ನೇನು ಬೇರೆ ಕೆಲಸ ಇಲ್ಲ ಅಂತ ಕೂತಿದ್ದವಳನ್ನು ಕೆಣಕಿ ಕೀಟಲೆಯಾದರೂ ಮಾಡಿದರಾಯ್ತು ಅಂತ ಬಂದರೆ, "ರೀ ರಜೆ ಅಂತೂ ನಿಮಗೆ ಸಿಗೊಲ್ಲ, ಇಂದು ಕೆಲಸ ಇಲ್ಲಾಂತಾ ಖಾಲಿ ಈಗಲೇ ಸಿನಿಮಾ ನೋಡಿ ಬರೊಣ್ವಾ, ಮತ್ತೆ ಯಾವಾಗ ಹೀಗೇ ಸಮಯ ಸಿಗುತ್ತೊ" ಅಂತ ಪ್ಲಾನ್ ಹಾಕಿದಳು, "ಟಿಕೆಟ್ಟು ನಿನ್ನದು ಹಾಗಿದ್ರೆ, ನಾನು ನಿರುದ್ಯೋಗಿ ದುಡ್ಡಿಲ್ಲ" ಅಂದೆ. "ಕಂಜ್ಯೂಸ್" ಅಂತ ಹೀಗಳೆದಳು. "ಯಾವ ಫಿಲ್ಮ್" ಅಂದ್ರೆ "ಅವತಾರ್" ಅಂದ್ಲು. ಇದೇನು ದೇವರ ಮೇಲೆ ಭಕ್ತಿ ಬಂದಿರೋ ಹಾಗಿದೆ ಯಾವ ಅವತಾರ, ಯಾವ ದೇವರ ಅವತಾರ್ ಅಂತಂದು "ಯಾವದು ಅದು ವಿಷ್ಣು ವರಾಹ ಅವತಾರ್ ಫಿಲ್ಮಾ" ಅಂತ ಕೇಳಿದೆ. "ಹ್ಮ್.. ದುರ್ಗಾ ಕಾಳಿ ಅವತಾರ್.... ರೀ ಅದು ಇಂಗ್ಲಿಷ್ ಫಿಲ್ಮ್ 'ಅವತಾರ್' ಅಂತ... ಚೆನ್ನಾಗಿದೆ ಅಂತೆ" ಅಂತ ಕೂತಲ್ಲೇ ರೀಲು ಬಿಟ್ಟಳು. ಇನ್ನು ಇಲ್ಲಾಂದ್ರೆ ಇವಳು ದುರ್ಗಾವತಾರ ತಾಳುವುದು ಗ್ಯಾರಂಟಿ ಅಂತ, ಹೋಗಿ ಫಿಲ್ಮ್ ನೋಡಿ, ಪಕ್ಕದಲ್ಲೇ ಚೈನೀಜ್ ಅಂತ ಅದೇನೊ ಹುಲ್ಲು... ಹುಳು ಹುಳು(ನೂಡಲ್), ಹೂವು(ಪ್ಲವರ್, ಗೋಬಿ) ತಿಂದು, ಎರಡು ಹಸಿರು ಗಾಂಧಿ ನೋಟು ಖಾಲಿ ಮಾಡಿ ಬಂದಾಯ್ತು.

ಕೆಲಸ ಇಲ್ಲದೇ ಖಾಲಿ ಇರುವುದು ಸುಮ್ಮನೇ ಅಲ್ಲ, ಖಾಲಿ ಪೀಲಿ ಖರ್ಚುಗಳು ಆಗಲೇ ಜಾಸ್ತಿ ಆಗೋದು. ನಿರುದ್ಯೋಗಿಯಾಗಿ ನಿರಮ್ಮಳವಾಗಿ ನಿಶ್ಚಿಂತೆಯಿಂದ ಎರಡು ದಿನ ಕಳೆದರಾಯ್ತು ಅಂತಿದ್ದರೆ, ನಿರುದ್ಯೋಗಿ...
ನೀ ಇರು ಉದ್ಯೋಗಿ ಆಗಬೇಡ ನಿರುದ್ಯೋಗಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೇಗೂ ಏನೂ ಕೆಲಸ ಇಲ್ಲ, ಇದು ಮಾಡು ಅದು ಮಾಡು ಅಂತ ಆಗಲೇ ಹೆಚ್ಚು ಕೆಲಸ ಬರುತ್ತವೆ. ಕೆಲಸದಲ್ಲಿದ್ದರೆ ಒಹ್ ದುಡಿದು ದಣಿದು ಬಂದಿರಬಹುದೆಂದು ಆದರಾಥಿತ್ಯ ಸಿಕ್ಕರೆ, ಕೆಲಸವಿಲ್ಲದೇ ಖಾಲಿಯಾದರೆ... ಕೂತಿದ್ದರೆ ಉಂಡದ್ದು ಕರಗುವುದು ಯಾವಾಗ ಅಂತ ಎದ್ದೋಡಿಸಲಾಗುತ್ತದೆ. ಕತ್ತೆ ಹಾಗೆ ಕುತ್ತಿಗೆಗೆ ಕುತ್ತು ಬಂದು ಸತ್ತು ಹೋಗುವಷ್ಟು ಒಮ್ಮೊಮ್ಮೆ ಕೆಲಸ ಮಾಡಿದ ಮೇಲೆ, ಒಂದು ದಿನ ಹೀಗೆ ಸುಮ್ಮನೇ ಕೂತು ಬಿಡಬೇಕು... ಊಟ ನಿದ್ರೆಯ ಪರಿವೆ ಕೂಡ ಇಲ್ಲದ ಹಾಗೆ ಎನೂ ಮಾಡದೇ... ಅನ್ನಿಸದಿರಲಿಕ್ಕಿಲ್ಲ. ಆದರೆ... ಜೀವನ ಹಾಗೆ ಕೂರಲು ಬಿಟ್ಟರೆ ತಾನೇ, ಮತ್ತೆ ಎತ್ತಲೋ ಎಳೆದುಕೊಂಡು ಹೊರಟುಬಿಡುತ್ತದೆ.

ರಾತ್ರಿಗೆ ಇವಳು ಏನೂ ಪ್ಲಾನ್ ಮಾಡದಿದ್ರೆ ಸಾಕು ಅಂತ ದೇವರಲ್ಲಿ ಬೇಡಿಕೊಂಡೆ, ಊಟ ಮಾಡಲು ಮನಸಿರಲಿಲ್ಲ, ಸಂಜೆ ತಿಂದಿದ್ದ ಚೈನೀಜ್ ಇನ್ನೂ ಹೊಟ್ಟೆ ತುಂಬ ತುಳುಕುತ್ತಿತ್ತು. ದಿನವಿಡೀ ಕೆಲಸ ಮಾಡಿದ್ದರೂ ಹೀಗೆ ದಣಿಯುತ್ತಿರಲಿಲ್ಲ ಅಷ್ಟು ದಣಿವಾಗಿತ್ತು. ಬೆಡ್ ಮೇಲೆ ಬಿದ್ದುಕೊಂಡು ಮಾತಿಗಿಳಿದರೆ "ರೀ ಇನ್ನೂ ಎಷ್ಟು ದಿನ ನಿರುದ್ಯೋಗಿ ನೀವು" ಅಂದ್ಲು, ಪೂರಾ ಒಂದು ವಾರಕ್ಕೆ ಪ್ಲಾನ ಮಾಡುವದಕ್ಕೇ ಕೇಳಿರಬೇಕು. "ನಾಳೆಯೇ ಹೊಸ ಕೆಲಸಕ್ಕೆ ಹೊರಟುಬಿಡುತ್ತೇನೆ" ಅಂದೆ, "ಪ್ಚ್ ಇನ್ನೂ ಸ್ವಲ್ಪ ದಿನ ಇತ್ತೇನೊ ಅನ್ಕೊಂಡಿದ್ದೆ, ರೇಶನ್ ಕಾರ್ಡಿನಲ್ಲಿ ಹೆಸರು ಎಂಟ್ರಿ ಮಾಡಿಸಬೇಕು, ವೋಟರ್ ಕಾರ್ಡನಲ್ಲಿ ಹೆಸರು ಚೇಂಜ್ ಮಾಡಿಸಬೇಕು, ಗ್ಯಾಸ್ ಸಿಲಿಂಡರ್ ವರ್ಗಾವಣೆ, ಬ್ಯಾಂಕನಲ್ಲಿ ಅಡ್ರೆಸ್ ಬದಲಾವಣೆ..." ಇನ್ನೂ ಅವಳ ಪಟ್ಟಿ ಬೆಳೆಯುತ್ತಲೇ ಇತ್ತು, ನಿರುದ್ಯೋಗ ಬೇಡಪ್ಪಾ... ನೀ ಇರು ಉದ್ಯೋಗಿ ಅಂತ ಹೊದ್ದು ಮಲಗಿದೆ... ನಾಳೆ ಇನ್ಯಾವದೋ ಕ್ಯೂನಲ್ಲಿ ಮತ್ತೆ ಸಿಕ್ತೇನೆ... ಬೈ ಬೈ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/nirudyogi.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Monday, December 7, 2009

ಕಂಪನಿ ಕಪ್ಪು...

ಅದೊಂದು ದಿನ ಶೋಕೇಸಿನಲ್ಲಿದ್ದ ಸಾಮಾನುಗಳನ್ನೆಲ್ಲ ಒರೆಸಿ ಒರೆಸಿ ಪೇರಿಸಿ ಇಡುತ್ತಿದ್ದಳು, ಆ ಗಾಜಿನ ಹಿಂದೆ ಕೂಡ ಅಷ್ಟು ಧೂಳು ಹೇಗೆ ಹೋಗುತ್ತದೋ ನನಗಂತೂ ಗೊತ್ತಿಲ್ಲ, ಹಾಳು ಧೂಳಿನಿಂದಾಗಿ ಇರೋ ಕೆಲಸಗಳೇ ಸಾಕಾಗಲಿಲ್ಲವೇನೊ ಅನ್ನೊ ಹಾಗೆ ಇದೊಂದು ಕೆಲಸ ಬೇರೆ, ಏನೊ ಒಬ್ಳೆ ಮಾಡ್ತಾ ಇದ್ದದ್ದು ನೋಡಿ ಹೆಲ್ಪ ಮಾಡೊಣ ಅಂತ, ಹೋದೆ.
"ನಾನು ಒರೆಸಿ ಕೊಡ್ತೀನಿ ಕೊಡು" ಅಂದೆ. "ಬೇಡ ಬಿಡಿ, ನಾನು ಮಾಡ್ಕೊತೀನಿ" ಅಂತ ನಿರಾಕರಿಸಿದಳು, ಅದರೂ ನಾನು ಇನ್ನೂ ಅಲ್ಲೇ ಇದ್ದದ್ದು ನೋಡಿ, "ಆಯ್ತು, ಜೋಡಿಸಿ ಇಡಿ" ಅಂತ ಬಿಟ್ಟುಕೊಟ್ಟಳು, ಅವಳು ಒರೆಸಿಕೊಡುತ್ತಿದ್ದರೆ ಜೋಡಿಸಿ ಇಡತೊಡಗಿದೆ, ಆಗಲೇ ಕಂಡದ್ದು ಈ ಕಂಪನಿ ಕಪ್ಪು!

ಕಂಪನಿ ಕಪ್ಪು, ಅಂದ್ರೆ, ಅದೇ ಟೀ ಕಾಫಿ ಮಗ್. ಅವಳು ಎಷ್ಟು ಸಾರಿ ಮಗ್ ಅನ್ನಿ ಅಂತ ಹೇಳಿದರೂ, ನಾನು ಮಾತ್ರ ಕಪ್ಪು ಅಂತಾನೇ ಅನ್ನೋದು, ನನ್ನ ಲೆಕ್ಕಕ್ಕೆ ಅದು ಕಪ್ಪೇ ಸರಿ, ಈ ನಮ್ಮ ಕಂಪನಿಗಳಲ್ಲಿ ಆಗಾಗ ಹೀಗೆ ಏನಾದ್ರೂ ಕಪ್ಪು ಗಿಪ್ಪು ಕೊಡ್ತಾ ಇರ್ತಾರೆ, ಕೆಲವೊಮ್ಮೆ ಕೈಗೆ ಚಿಪ್ಪು ಕೂಡ ಕೊಡ್ತಾರೆ! ಆದರೂ ಹೀಗೆ ಪುಕ್ಕಟೆಯಾಗಿ ಕೊಟ್ಟ ಗಿಫ್ಟಗಳೆಂದ್ರೆ ಏನಾದ್ರೂ ಸರಿ ತೆಗೆದುಕೊಳ್ಳುತ್ತೇವೆ. ನಾವು ಕೆಲವೊಂದಿಷ್ಟು(ಎಲ್ರೂ ಅಲ್ಲ) ಸಾಫ್ಟವೇರ ಇಂಜನೀಯರುಗಳು ಹೀಗೇ. ಹೀಗೆ ಕಂಪನಿಯಲ್ಲಿ ಕೊಟ್ಟ ವಸ್ತುಗಳನ್ನು ಬಹಳ ಜತನವಾಗಿಡುತ್ತೇವೆ, ಸಾವಿರ ರೂಪಾಯಿ ಕೊಟ್ಟು ತಂದ ಶರ್ಟ ಚೆನ್ನಾಗಿ ಇಟ್ಕೊತೀವೊ ಇಲ್ವೊ ಆದ್ರೆ ಕಂಪನಿಯಲ್ಲಿ ಕೊಟ್ಟ ಪುಕ್ಕಟೆ ಟೀಶರ್ಟ್ ಮಾತ್ರ ಹೊಸದರಂತೇ ಕಾಪಾಡಿರುತ್ತೇವೆ. ಎಲ್ಲಿ ಹೊರಟು ನಿಂತರೂ ಅದನ್ನೇ ಹಾಕಿಕೊಂಡು ನಿಲ್ಲೋದು, "ನೀವೇನು ನಿಮ್ಮ ಕಂಪನಿ ಬ್ರಾಂಡ್ ಅಂಬ್ಯಾಸಿಡರಾ, ಬೇರೆ ಹಾಕೊಳ್ಳಿ" ಅಂತ ಇವಳು ಬಯ್ದಾಗಲೇ ಬಿಡೋದು. ಇನ್ನೂ ಹುಟ್ಟೂರಿಗೆ ಹೊರಟು ನಿಂತರೆ ಬಸ್ಸು ತುಂಬಾ ಕಾಣುವುದು ಈ ಕಂಪನಿಯ ಟೀಶರ್ಟಗಳೇ, ಹೆಚ್ಚು ಕಮ್ಮಿ ಎಲ್ರೂ ಅವನ್ನೇ ಹಾಕಿಕೊಂಡು ಬಂದಿರ್ತಾರೆ, ನಾನಿಲ್ಲೇ ಕೆಲಸ ಮಾಡೋದು ಅಂತ ಹೆಮ್ಮೆಯಿಂದ ತೋರಿಸಿಕೊಳ್ಳೋಕೆ. ಊರಲ್ಲಿ ಎಲ್ರೂ ಇವನಿಗೇನು ಬೇರೆ ಬಟ್ಟೆನೇ ಇಲ್ವೇನೊ ಯಾವಾಗ ನೋಡಿದ್ರೂ ಅದೇ ಟೀಶರ್ಟನಲ್ಲಿ ಊರಿಗೆ ಬರ್ತಾನೇ ಅಂದ್ರೂ ಪರವಾಗಿಲ್ಲ. ಈ ತೋರಿಕೆ ಇಲ್ಲೇ ನಿಲ್ಲಲ್ಲ, ಕಂಪನಿಯಲ್ಲಿ ಒಂದು ದಿನ ಐಡಿ ಕಾರ್ಡು ಹಾಕಿಕೊಂಡು ಇರ್ತೀವೋ ಇಲ್ವೊ, ಆದ್ರೆ ಅದನ್ನ ಹಾಕಿಕೊಂಡು ಊರೆಲ್ಲ ಸುತ್ತಿ ಬರ್ತೀವಿ. ಒಂದು ಕಂಪನಿಯಲ್ಲಿ ಕೊಟ್ಟ ಜಾಕೆಟ್ಟು, ಬ್ಯಾಗು, ಪೆನ್ನು, ಪೇಪರು, ಬುಕ್ ಏನೇ ಇರಲಿ ಅದೊಂಥರಾ ಅಕ್ಕರೆ, ನಾವಿರೋದೇ ಹಾಗೆ... ಹಾಗೇ ಈ ಕಂಪನಿ ಕಪ್ಪು ಕೂಡಾ... ಟೀ ಕಾಫಿ ಕುಡಿಯೋ ಅಂತ ಅವರು ಕೊಟ್ಟಿದ್ದರೆ, ತಂದು ಜೋಪಾನವಾಗಿ ಶೋಕೇಸಿನಲ್ಲಿಟ್ಟಿದ್ದೆ,
ಕಪಿಲದೇವ್ ಗೆದ್ದ ವರ್ಡ್ ಕಪ್ ಅವನಿಗೇ ಕೊಟ್ಟಿದ್ರೆ ಅವನು ಕೂಡ ಅಷ್ಟು ಚೆನ್ನಾಗಿ ಇಟ್ಕೊಳ್ಳಲಿಕ್ಕಿಲ್ಲ. ಯಾವುದೋ ದೊಡ್ಡ ಚಾಂಪಿಯನಶಿಪ್ ಗೆದ್ದು ತಂದು ಕಪ್ ಏನೋ ಅನ್ನೊವಂತೆ, ಯಾರು ಕೇಳಿದರೂ, ಕೇಳದಿದ್ರೂ, ಬಂದವರಿಗೆಲ್ಲ ಕಂಪನೀಲಿ ಕೊಟ್ಟಿದ್ದು ಅಂತ ಹೇಳಿಕೊಳ್ಳೊದು.

ಅಂತೂ ಅದನ್ನು ಅವಳು ಒರೆಸಿ ಕೊಡುತ್ತಿದ್ದಂತೆ, "ನಮ್ಮ ಕಂಪನೀಲಿ ಕೊಟ್ಟಿದ್ದು ಎರಡು ವರ್ಷದ ಹಿಂದೆ" ಅಂತ ಅವಳಿಗೆ ತೋರಿಸಿದೆ.
ಒಂದು ನಗೆ ಬೀರೀ "ಗೊತ್ತು, ಆಮೇಲೆ ಮತ್ತೇನೊ ಕೊಟ್ಟಿಲ್ವೇ" ಅಂದ್ಲು.
"ಅಯ್ಯೋ ರಿಸೆಷನ್ ಅಂತ ಕಂಪನೀಲಿ ಟೀ ಕಾಫಿ ಕೊಡೋದು ನಿಲ್ಲಿಸಿದ್ರು ಇನ್ನು ಕಪ್ಪು ಎಲ್ಲಿಂದ ಕೊಡ್ತಾರೆ, ಕೊಟ್ರೂ ಏನ್ ಮಾಡೋದು"
"ಏನ್ ಮಾಡೋದಾ! ಕೊಟ್ರೆ ಅದರಲ್ಲಿ ಕಾಫಿ ಟೀನಾ ನೀವೆಲ್ಲಿ ಕುಡೀತೀರ, ತಂದು ಇಲ್ಲೇ ಶೋಕೇಸಿನಲ್ಲಿ, ದಸರಾ ಬೊಂಬೆ ತರಹ ಜೋಡಿಸಿ ಇಡೊದು" ಅಂತ ಅಣಕಿಸಿದಳು.
"ಮಾಡಿ ಕೊಟ್ಟರೆ ಕುಡಿಯಬಹುದೇನೊ"
"ನಮ್ಮ ಮದುವೆ ಆದಾಗಿಂದ ಒಂದು ಸಾರಿ ಕೂಡ ಅದರಲ್ಲಿ ಕಾಫಿ ಕುಡಿದದ್ದು ನೋಡಿಲ್ಲ, ಅದಕ್ಕೇ ನಾನೂ ಅದನ್ನ ಮುಟ್ಟಿರಲಿಲ್ಲ, ಅಲ್ಲೇ ಇತ್ತು" ಅಂತ ನನ್ನ ನೋಡಿದಳು, ಒಂದು ಸಾರಿ ಹಲ್ಲು ಕಿರಿದೆ.

ಹೇಗೊ ಅಲ್ಲಿಗೆ ಎಲ್ಲ ಸಾಮಾನು ಶೋಕೇಸಿನಲ್ಲಿ ಜೋಡಿಸಿ ಆಗಿತ್ತು, ಟೀ ಮಾಡಿ ಅದರಲ್ಲೇ ಕೊಡ್ತೀನಿ ಅಂತ ಕಂಪನಿ ಕಪ್ಪು ಎತ್ತಿಕೊಂಡು ಪಾಕಶಾಲೆಗೆ ನಡೆದಳು, ನಾನೇನೊ ಬೇರೆ ಕೆಲಸದಲ್ಲಿ ನಿರತನಾದೆ. ಏಲಕ್ಕಿ ಪರಿಮಳ ಬಂದಾಗಲೇ ಗೊತ್ತಾಯ್ತು, ಸ್ಪೇಷಲ್ ಟೀ ರೆಡಿ ಆಗ್ತಿದೆ ಅಂತ, ಸವಿಯಲು ಕಾತುರತೆಯಿಂದಲೇ ಕಾದು ಕೂತೆ. ಸುವಾಸನೆ ಮಾತ್ರ ಬರುತ್ತಿದ್ದುದು, ಒಮ್ಮೆಲೆ ಹಿನ್ನೆಲೆಗೆ ಸೌಂಡ ಕೂಡ ಬೇಕೇನೊ ಅನ್ನೊವಂತೆ, "ಠಳ್!!!..." ಅಂತ ಸದ್ದು ಬಂತು... ಎದ್ದು ಶಬ್ದ ಬಂದತ್ತ ಓಡಿದೆ.

ನೋಡಿದರೆ, ಟೀ ಹಾಲ್ ತುಂಬೆಲ್ಲ ಚೆಲ್ಲಿದೆ, ಕಪ್ಪು ಒಡೆದು ಚೂರು ಚೂರಾಗಿದೆ, ಬಿಸಿ ಬಿಸಿ ಟೀ ಕೈಮೇಲೆಲ್ಲ ಬಿದ್ದು ಕೆಂಪಾಗಿ ನೋವಿನಲ್ಲಿ ಕಣ್ಣೀರು ಕೆನ್ನೆಗಿಳಿದು ಬಂದು ಕುಸಿದು ಕೂತಿದ್ದಾಳೆ ಇವಳು... ಒಮ್ಮೆಲೇ ತಲೆ ತುಂಬ ನೂರಾರು ಯೋಚನೆಗಳು ಓಡಾಡಿದವು, ಮೆಚ್ಚಿನ ಕಪ್ಪು ಒಡೆದಿದ್ದಕ್ಕೆ ಸಿಟ್ಟು ಬರಬೇಕೇ, ನೋವಿನಲ್ಲಿರುವ ಅವಳ ಮೇಲೆ ಅನುಕಂಪ ಬರಬೇಕೆ ಮನಸಿಗೇ ಗೊಂದಲ, ಒಂದು ಕ್ಷಣ ಎಲ್ಲ ಸ್ಥಬ್ದ... ಆ ಸಮಯದಲ್ಲಿ ಆವೇಶದ ಭರದಲ್ಲಿ ಬಯ್ದು ಬಿಡುತ್ತಿದ್ದೆ, ಆದರೇನೊ ಹಾಗೇ ಮಾಡಲೇ ಇಲ್ಲ... ಕೂಡಲೇ ಅಲ್ಲೇ ಇದ್ದ ಮಗ್‌ನಲ್ಲಿ ನೀರು ತೆಗೆದುಕೊಂಡು ಅವಳ ಕೈಮೇಲೆ ಸುರಿದೆ, ಸ್ವಲ್ಪ ಸುಧಾರಿಸಿಕೊಂಡಳು, "ರೀ ಅದು ಅದೂ... ಕೈ ಜಾರಿ..." ಅಂತೇನೊ ಹೇಳಲು ನೋಡಿದಳು, ಅವಳಿಗೊ ಕಪ್ಪು ಒಡೆದು ಹೋಯ್ತುಲ್ಲ ಅಂತ ನೋವು, ನಾ ಕೇಳಲೇ ಇಲ್ಲ "ಬರ್ನಾಲ್ ಕ್ರೀಮ ಎಲ್ಲಿ" ಅಂತನ್ನುತ್ತ... ಕಪಾಟು ತಡಕಾಡಿದೆ, ಸಧ್ಯ ಅಲ್ಲೇ ಇತ್ತು, ಸ್ವಲ್ಪ ಅದನ್ನೇ ನಿಧಾನವಾಗಿ ಸವರಿ ಈಚೆ ಕರೆತಂದು "ಸ್ವಲ್ಪ್ ಇಲ್ಲೇ ಕೂತಿರು" ಅಂದೆ. ಎಲ್ಲಿ ಕಾಲಿಗೆ ಚುಚ್ಚಿದರೆ ಅಂತ ಒಂದೊಂದೇ ಚೂರು ಅರಿಸಿ ಆಕಡೆ ತೆಗೆದಿಟ್ಟೆ. ಸ್ವಲ್ಪ ನೀರು ಚುಮುಕಿಸಿ, ಎಲ್ಲ ಮೂಲೆಗೆ ನೂಕಿದೆ, "ನಾನ್ ಮಾಡ್ತೀನಿ ಬಿಡಿ" ಅಂತ ಅವಳಂದ್ರೂ ಕೇಳದಂತೆ, ಎಲ್ಲ ಎತ್ತಿ ದಸ್ಟಬಿನ್ ತುಂಬಿದೆ.

ಮನಸ್ಸಿನಲ್ಲಿ ಇನ್ನೂ ತಾಕಲಾಟ ನಡೆದೇ ಇತ್ತು, ಕ್ಷಣ ಆವೇಶದ ಭರದಲ್ಲಿ ಏನೋ ಅಂದು ಬಿಡುತ್ತಿದ್ದೆನಲ್ಲ, ತಡೆದದ್ದೇ ಒಳ್ಳೇದಾಯ್ತು. ಬಂದು ಸೊಫಾ ಮೇಲೆ ಕೂತೆ, ಅವಳು ಕೂತಲ್ಲಿಂದಲೇ ತಲೆ ಎತ್ತದೇ ಹಾಗೆ ಓರೆ ನೊಟದಲ್ಲಿ ನನ್ನತ್ತ ನೋಡುತ್ತಿದ್ದಳು, ಒಂದು ಅಪರಾಧೀ ಭಾವನೆ ಅವಳ ಕಾಡುತ್ತಿದ್ದಂತಿತ್ತು. ಮನೆಯಲ್ಲಿ ಸ್ವಲ್ಪ ಹೊತ್ತು ನೀರವ ಮೌನ ನಿರ್ಭಾವುಕ ಭಾವ ತುಂಬಿದಂತಿತ್ತು. ಮೆಚ್ಚಿನ ಕಪ್ಪು ಒಡೆದ ಬೇಸರದಲ್ಲಿ ಎಲ್ಲಿ ನಾನು ಏನಾದರೂ ಮಾತಾಡಿ ಅವಳಿಗೆ ಬೇಜಾರು ಮಾಡಿಬಿಡುತ್ತೀನೊ ಅಂತ ನಾನೂ ಸುಮ್ಮನಿದ್ದೆ. ಸುಮ್ಮನೇ ಶೋಕೇಸಿನಲ್ಲಿ ಇಟ್ಟಿರುವುದ ಬಿಟ್ಟು, ಅಣಕಿಸಿ ಹೊರ ತೆಗೆದು ಹೀಗೆ ಹಾಳು ಮಾಡಿಟ್ಟೆನಲ್ಲ, ಈಗ ಏನಂತ ಹೇಳಲಿ ಅಂತ ಅವಳು.

ನಾನೇ ಬಹಳ ಹೊತ್ತು ಕಾದು ಕೂತವ, ಹಾಗೆ ಕೂರಲಾಗದೇ, "ಈಗ ಹೇಗಿದೆ, ಡಾಕ್ಟರ್ ಹತ್ರ ಹೋಗೋಣ್ವಾ" ಅಂತಂದೆ, "ಬೇಡ" ಅಂತ ಕ್ಷೀಣ ದನಿ ಹೊರಬಂತು. ಜಾಸ್ತಿ ಮಾತಾಡಲೂ ಸಂಕೋಚವಾದಂತೆ, "ಇಲ್ಲ, ಹೋಗೊಣ ಬಾ ಸುಮ್ನೇ ಅದು ಜಾಸ್ತಿ ನೋವು ಆಗೋದು ಬೇಡ" ಅಂತ, ಸ್ವಲ್ಪ ಮಾತಾಡಲು ಪ್ರೇರೇಪಿಸಿದೆ, "ಇಲ್ಲ ಸ್ವಲ್ಪ ಕೆಂಪಗಾಗಿದೆ, ಸುಟ್ಟಿಲ್ಲ, ಬರ್ನಾಲ್ ಕ್ರೀಮ್ ಸಾಕು" ಅಂತ ಹೇಳಿ ಸುಮ್ಮನಾದಳು.

ಮತ್ತೆ ಟೀ ಬೇಕೆನಿಸಲಿಲ್ಲ, ಪೇಪರು ಓದುತ್ತ ಕೂತೆ, ಅವಳು ಒಳಗೆ ಏನೋ ಮಾಡಲು ಹೋದಳು, ಮಾತು ಇಬ್ಬರಿಗೂ ಬೇಕಾಗಿರಲಿಲ್ಲ, ಸುಮ್ಮನೇ ಉಳಿದೆವು, ಮಧ್ಯಾಹ್ನಕ್ಕೆ ಅನ್ನ ಸಾರು ಮಾಡಿದ್ದಳು ಊಟಕ್ಕೆ ಕೂತಾಗಲೂ ಏನೂ ಮಾತಾಡಲು ತೋಚಲೇ ಇಲ್ಲ. ಅವಳಿಗಿನ್ನೂ ತಾನೇನೊ ದೊಡ್ಡ ತಪ್ಪು ಮಾಡಿಬಿಟ್ಟೆ ಅನ್ನೊ ಹಾಗೆ ಆಗಿತ್ತು, ಒಂದು ದಿನ ಮತ್ತೆ ಸರಿ ಹೋಗುತ್ತಾಳೆ ಬಿಡು ಅಂತ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಊಟದ ನಂತರ ಹಾಗೇ ಟೀವಿ ನೋಡುತ್ತ ಕೂತಿರಬೇಕಾದರೆ, ರೆಡಿಯಾಗಿ, ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಎಲ್ಲೊ ಹೊರಟು ನಿಂತಳು, "ಎಲ್ಲಿ, ಡಾಕ್ಟ್ರ ಹತ್ರನಾ?" ಅಂತ ಕೇಳಿದೆ, "ಈಗ ಬಂದೆ, ಹಾಲು ತರಲು" ಅಂತ ಹೊರ ಹೋದಳು, ಮತ್ತೆ ಯಾವಾಗಲೋ ಆಗಿದ್ದರೆ, "ಹಾಲಿನಂಗಡಿ ಹಾಸಿನಿನಾ ನೊಡ್ಕೊಂಡು ಬರ್ತೀನೀ, ನಾನೇ ತರ್ತೀನಿ" ಅಂತ ಹೊರಟು ಬಿಡುತ್ತಿದ್ದೆ. ಏನೂ ಹೇಳದೇ ಸುಮ್ಮನಾದೆ, ಮತ್ತೆ ಟೀ ಮಾಡಲಿರಬೇಕು ಬಿಡು ಅಂತ.

ಸ್ವಲ್ಪ ಹೊತ್ತಿನಲ್ಲಿ ಮರಳಿದಳು, ನಾನು ಏನೊ ವಿಶೇಷ ಅಂಕಣ ಓದುವುದರಲ್ಲಿ ಮಗ್ನನಾಗಿದ್ದೆ, ಸೀದಾ ಪಾಕಶಾಲೆಗೆ ನುಗ್ಗಿದಳು, ಸರಿ ಬಿಡು ಟೀ ಸಿಗುತ್ತದೆ ಅಂತ ಖಾತ್ರಿಯಾಯ್ತು. ಮತ್ತೆ ಟೀ ಪರಿಮಳ ಬರಲಿಕ್ಕೂ ಅವಳು ಅದೇ ಹೊತ್ತಿಗೆ ಹೊರಗೆ ಬರುವುದಕ್ಕೂ ಸರಿ ಹೋಯ್ತು. ಬಂದವಳೇ ಮುಂದೆ ಟೀಪಾಯಿ ಮೇಲೆ ಇಟ್ಟು ಹೋದಳು, ಸರಿ ಮಾತಾಡಲು ಇನ್ನೂ ಬೇಸರಿಕೆಯೇನೊ ಅಂತ ಅದಕ್ಕೇ ಹಾಗೆ ಇಟ್ಟು ಸುಮ್ಮನೇ ಹೋದಳು ಬಿಡು ಅಂತ ಪೇಪರು ಸರಿಸಿಟ್ಟು ನೋಡಿದರೆ, ಅಲ್ಲೇನೊ ಬೇರೆ ಇದೆ, ಟೀ ತಂದಳೇನೊ ಅಂತ ನಾನಂದುಕೊಂಡರೆ, ಕೆಂಪು ಬಣ್ಣ ವೆಲ್ವೇಟು ಪೇಪರು ಸುತ್ತಿ, ಬಿಳಿ ಬಣ್ಣದ ಲೇಸು ಕಟ್ಟಿದ ಡಬ್ಬಿ ಇದೆ.

ಅದರಲ್ಲೇನಿದೆ ಅಂತ ಬೇರೆ ಹೇಳಲೇಬೇಕಾಗಿಲ್ಲ, ಸಂತೋಷವೋ ಏನೊ ಕಣ್ಣಲ್ಲಿ ನೀರಾಡಿತು, ಮಾತೇ ಹೊರಡಲಿಲ್ಲ ತುಟಿಗಳ ಒಳಗೇ ಅಮುಕಿಕೊಂಡು, ಭಾವನೆಗಳ ಒತ್ತರವನ್ನು ತಡೆದೆ, ಅದನ್ನು ಎತ್ತಿಕೊಂಡು ಪಾಕಶಾಲೆಯತ್ತ ನಡೆದೆ, ಅಲ್ಲಿ ನೋಡಿದರೆ, ಸೀರೆ ಸೆರಗಿನ ತುದಿಯನ್ನು ಸುರುಳಿ ಸುತ್ತುತ್ತ ತಲೆ ಕೆಳಗೆ ಮಾಡಿಕೊಂಡು ಗ್ಯಾಸಿನ ಕಟ್ಟೆ ಮುಂದೆ ನಿಂತಿದ್ದಾಳೆ ಇವಳು, ಒಳ್ಳೇ ಪರೀಕ್ಷೇ ಫಲಿತಾಂಶಕ್ಕೆ ಕಾದಂತೆ. "ಏನಿದು" ಅಂದೆ ಏನೊ ಗೊತ್ತಿಲ್ಲವೇನೊ ಅನ್ನುವ ಹಾಗೆ, ತಿರುಗಿ ನೋಡದೇ "ನೀವೇ ನೋಡಿ" ಅಂದ್ಲು. ಬೆನ್ನು ಮಾಡಿ ನಿಂತಿರುವವಳ ಹಿಂದೆ ಹೋಗಿ, ಅವಳ ಮುಂದೆ ಆ ಡಬ್ಬಿ ಇಟ್ಟು ಅವಳನ್ನು ಬಳಸಿ ನಿಂತು, ಭುಜಕ್ಕೆ ಕತ್ತು ಇರಿಸಿ, ಅವಳ ಕೈಗಳೆರಡು ನನ್ನ ಕೈಯಲ್ಲಿ ಹಿಡಿದು ಆ ಪ್ಯಾಕ ಅವಳಿಂದಲೇ ತೆಗೆಯಿಸತೊಡಗಿದೆ. ಹೊರತೆಗೆದರೆ ಸುಂದರ ಕಾಫಿ ಮಗ್ ಇತ್ತು, ಮೊದಲೇ ಗೊತ್ತಾಗಿದ್ದರೂ ಅದು ಹೇಗಿರಬಹುದೆಂಬ ಕುತೂಹಲವಿತ್ತು, ಶುಭ್ರ ಬಿಳಿಬಣ್ಣ, ಅದರ ಮೇಲೆ ಓರೆಯಾಗಿ "SORRY" ಅಂತ ಬರೆದಿತ್ತು ಪಕ್ಕದಲ್ಲೊಂದು ಕಿವಿ ಹಿಡಿದು ಕ್ಷಮೆ ಕೇಳುವಂತಿರುವ ಚಿಕ್ಕ ಚಿತ್ರ, ಎಂತಹ ತಪ್ಪು ಇದ್ದರೂ ಮರೆತು ನಕ್ಕು ಬಿಡುವಂತೆ... ಆಗಲೇ ಮಾಡಿಟ್ಟಿದ್ದ ಟೀ ಅವಳ ಕೈಯಲ್ಲೇ ಅದಕ್ಕೇ ಸುರಿದು, ಅವಳ ತುಟಿಗಳ ಮುಂದೆ ಹಿಡಿದೆ, "ಅದು ನಿಮಗೆ" ಅಂತ ಮುಖ ತಿರುಗಿಸಿದಳು, ಮತ್ತೆ ಆಕಡೆ ಹಿಡಿದೆ ಏನೂ ಮಾತಾಡದೇ, ಈ ಬಾಹು ಬಂಧನದಲ್ಲಿ ಸಿಕ್ಕಿರುವಾಗ ಇನ್ನು ಬಿಡುವುದಿಲ್ಲ ಅಂತ ಅವಳಿಗೂ ಗೊತ್ತಾಗಿದ್ದರಿಂದ ಒಂದು ಗುಟುಕು ಹೀರಿದಳು. ಅಲ್ಲೇ ಒಂದು ಚೂರು ನಾನೂ ಗುಟುಕರಿಸಿ, "ಸೂಪರ" ಅಂತಂದು, ಅವಳನ್ನು ಸೆರೆಯಿಂದ ಮುಕ್ತ ಮಾಡಿ ಹೊರಬಂದೆ.

ಕ್ಷಣ ಆವೇಶದಲ್ಲಿ ಏನೇನೊ ಆಗಿಬಿಡುತ್ತದಲ್ಲ, ಯಾವುದೊ ನಮ್ಮ ಮೆಚ್ಚಿನ ವಸ್ತು ಯಾರೋ ಹೀಗೆ ಹಾಳು ಮಾಡಿದಾಗ ಹಿಂದೆ ಮುಂದೆ ನೋಡದೇ ಸುಮ್ಮನೇ ರೇಗಿ ಬಿಟ್ಟಿರುತ್ತೇವೆ,
ಕವಡೆ ಕಿಮ್ಮತ್ತೂ ಇಲ್ಲದ ಸಾಮಾನಿಗಾಗಿ ಮೌಲ್ಯ ಕಟ್ಟಲಾಗದಂತಹ ಸುಂದರ ಸಂಬಂಧಗಳು ಹಾಳಾಗಿ ಹೋಗಿರುತ್ತವೆ ಅಲ್ವೇ, ಹಾಳಾಗುವುದಂತೂ ಹಾಳಾಗಿ ಹೋಗಿದೆ ಇನ್ನು ಸರಿ ಮಾಡಲಂತೂ ಬರಲಿಕ್ಕಿಲ್ಲ, ಅದೇ ಭರದಲ್ಲಿ ಸಂಬಂಧಗಳೂ ಹಾಳಾಗುವಂತೆ ನಡೆದುಕೊಳ್ಳಬೇಕೆ? ಈ ಸಂದರ್ಭದಲ್ಲೇ ನೋಡಿದರೆ ಅದೇನು ದೊಡ್ಡ ವಸ್ತು, ಕಂಪನಿಯಲ್ಲಿ ಪುಕ್ಕಟೆಯಾಗಿ ಕೊಟ್ಟ ಕಪ್ಪು, ಬೆಲೆ ಇನ್ನೂರೋ ಮುನ್ನೂರೋ ಇದ್ದೀತು, ಅಷ್ಟಕ್ಕಾಗಿ ಅವಳ ಮೇಲೆ ಹರಿಹಾಯ್ದಿದ್ದರೆ, ಕಪ್ಪೇನೊ ಒಡೆದು ಹೋಗಿತ್ತು ಸಂಬಂಧದಲ್ಲಿ ದೊಡ್ಡ ಒಡಕು ಮೂಡುತ್ತಿತ್ತು.

ಟೀ ಕುಡಿದು ಮುಗಿಸಿ, ತೊಳೆದು ನೀಟಾಗಿ ಒರೆಸಿ, ಮೊದಲು ಕಂಪನಿ ಕಪ್ಪು ಇದ್ದ ಜಾಗದಲ್ಲಿ ಇಟ್ಟೆ, ಇನ್ನೂ ಪಾಕಶಾಲೆಲ್ಲೇ ಇದ್ದ ಅವಳ ಕರೆತಂದು ತೋರಿಸಿದೆ, ಅವಳು ಅದನ್ನು ನೋಡಿ ನನ್ನತ್ತ ಇನ್ನೂ ಅಪರಾಧಿ ಪ್ರಜ್ಞೆಯಲ್ಲಿಯೇ ನೋಡುತ್ತಿದ್ದಳು, ನನ್ನ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.
"ನಿಮಗೆ ಸಿಟ್ಟು ಬಂದಿದ್ರೆ ಬಯ್ದು ಬಿಡಿ, ಹೀಗೇ ಸುಮ್ಮನಿರಬೇಡಿ" ಅಂದ್ಲು.
"ಸುಮ್ನೇ ಇದನ್ನು ಯಾಕೆ ತರೋಕೆ ಹೋದೆ" ಅಂತ ಮಾತು ಬದಲಿಸಿದೆ.
"ನಿಮಗೆ ಸಿಟ್ಟೆ ಬರಲಿಲ್ವಾ, ಬೇಜಾರು ಆಗ್ಲೇ ಇಲ್ವಾ? ಸುಳ್ಳು ಹೇಳ್ಬೇಡಿ, ನಾನು ಅದನ್ನು ತೆಗೆದುಕೊಂಡು ಬರ್ತಾ ಇದ್ನಾ, ಆಗಲೇ ತೊಳೆದಿದ್ದರಿಂದ ಇನ್ನೂ ನೀರಿತ್ತು ಜಾರುತ್ತಿತ್ತು, ಬಿಸಿ ತಾಕಿ ಕೈ ಬದಲಿಸಲು ಹೋದೆ ಬಿತ್ತು" ಅಂತ ಒಂದೇ ಸಮನೆ ಪಟಪಟ ಅಂತ ಹೇಳಿಕೊಂಡಳು.
"ಈಗ ಏನಾಯ್ತು ಅಂತ ನಾ ಕೇಳಿದೆನಾ, ನನಗೂ ಗೊತ್ತು ಯಾರೂ ಬೇಕೆಂತಲೇ ಚೆಲ್ಲಿ ಒಡೆಯುವುದಿಲ್ಲ ಅಂತ, ಎನೊ ಆಗಿರಬೇಕೆಂದು ಊಹಿಸಿದ್ದೆ, ಆ ಕ್ಷಣ ಆವೇಶ ಇತ್ತು, ಆದರೆ ಕೋಪ ಮಾಡಿಕೊಳ್ಳಲೇಬೇಕೆನಿಸಲಿಲ್ಲ, ಅದು ಒಡೆದು ಹೋಯ್ತಲ್ಲ ಅಂತ ಬೇಸರವಾಗಿತ್ತೇ ಹೊರತು ನೀನು ಒಡೆದೆ ಅಂತ ಅಲ್ಲ, ಇಷ್ಟಕ್ಕೂ ಸಿಟ್ಟು ಬಂದು ನಿನ್ನ ಬಯ್ದಿದ್ದರೆ ಏನಾಗುತ್ತಿತ್ತು, ಸುಮ್ನೇ ಬೇಜಾರಾಗುತ್ತಿತ್ತು ಇಬ್ಬರಿಗೂ... ಈಗ ನೋಡು ನನಗೆ ಮತ್ತೊಂದು ಸುಂದರ ಮಗ್ ಸಿಕ್ತು" ಅಂತ ನಕ್ಕೆ, ಸ್ವಲ್ಪ ನಿರಾಳವಾದಳು.
"ನಾನಾಗಿದ್ದರೆ ನಿಮ್ಮನ್ನು ಬಯ್ಯುತ್ತಿದ್ದೆ ಏನೊ", ಅಂತ ಮುಚ್ಚು ಮರೆಯಿಲ್ಲ ಮನದಲ್ಲಿದ್ದುದು ಹಾಗೆ ಹೇಳಿದಳು, ನಾನೂ ಹಾಗೆ ಮಾಡುತ್ತಿದ್ದೆ ಏನೊ, ಆದರೆ ಕ್ಷಣ ಹೊತ್ತು ಯೋಚಿಸಿದ್ದಕ್ಕೆ, ಹೀಗೆ ಆವೇಶದ ಭರದಲ್ಲಿ ಏನೂ ಮಾತಾಡಕೂಡದು ಅಂತ ಮೊದಲೇ ಅಂದುಕೊಂಡಿದ್ದಕ್ಕೆ ಎಲ್ಲ ಸರಿ ಹೋಯ್ತು.
"ಮತ್ತೆ, ಇನ್ನೂ ನೋವಿದೆಯಾ" ಅಂತ ಕೈ ಹಿಡಿದು ಕೇಳಿದೆ
"ಇಲ್ಲ ಪರವಾಗಿಲ್ಲ" ಅಂದವಳು, "ರೀ, ಕಂಪನಿಯಲ್ಲಿ ಕೇಳ್ರೀ ಇನ್ನೊಂದು ಕಪ್ಪು ಕೊಡ್ತಾರಾ" ಅಂತ ಕೇಳಿದಳು, ಅವಳು ಇನ್ನೂ ಆ ಕಪ್ಪಿನ ಗುಂಗಿನಲ್ಲೇ ಇದ್ದಳು.
"ಲೇ ಸುಮ್ನಿರೇ, ಮೊದಲೇ ಈಗ ರೆಸೆಷನಿಂದ ಹೊರಗೆ ಬರ್ತಾ ಇದಾರೆ, ಹೀಗೆಲ್ಲ ಹೋಗಿ ಕಪ್ಪು ಕೇಳಿದ್ರೆ ಕೈಗೆ ಚೊಂಬು ಕೊಡ್ತಾರೆ ಅಷ್ಟೇ" ಅಂದೆ ಇಬ್ಬರೂ ಮನಪೂರ್ತಿ ನಕ್ಕೆವು. "ಈ ನೋವಿಗೆ ನನ್ನ ಹತ್ರ ಒಂದು ಒಳ್ಳೆ ನೋವು ನಿವಾರಕ ಇದೆ ಕೊಡ್ತೀನಿ ತಾಳು" ಅಂತ ಅವಳ ಕೈ ನನ್ನ ತುಟಿಯೆಡೆಗೆ ಒಯ್ದೆ, "ಈ ತುಂಟಾಟಕ್ಕೇನು ಕಮ್ಮಿಯಿಲ್ಲ" ಅಂತ ಕೊಸರಿಕೊಂಡು ಓಡಿದಳು ನಸುನಗುತ್ತ. ಮತ್ತೆ ಹೀಗೆ ಏನೊ ಸನ್ನಿವೇಷದೊಂದಿಗೆ ಸಿಕ್ತೀನಿ ಕಂಪನಿ ಕೊಡ್ತೀರಾ ತಾನೇ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/kappu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು