Monday, December 7, 2009

ಕಂಪನಿ ಕಪ್ಪು...

ಅದೊಂದು ದಿನ ಶೋಕೇಸಿನಲ್ಲಿದ್ದ ಸಾಮಾನುಗಳನ್ನೆಲ್ಲ ಒರೆಸಿ ಒರೆಸಿ ಪೇರಿಸಿ ಇಡುತ್ತಿದ್ದಳು, ಆ ಗಾಜಿನ ಹಿಂದೆ ಕೂಡ ಅಷ್ಟು ಧೂಳು ಹೇಗೆ ಹೋಗುತ್ತದೋ ನನಗಂತೂ ಗೊತ್ತಿಲ್ಲ, ಹಾಳು ಧೂಳಿನಿಂದಾಗಿ ಇರೋ ಕೆಲಸಗಳೇ ಸಾಕಾಗಲಿಲ್ಲವೇನೊ ಅನ್ನೊ ಹಾಗೆ ಇದೊಂದು ಕೆಲಸ ಬೇರೆ, ಏನೊ ಒಬ್ಳೆ ಮಾಡ್ತಾ ಇದ್ದದ್ದು ನೋಡಿ ಹೆಲ್ಪ ಮಾಡೊಣ ಅಂತ, ಹೋದೆ.
"ನಾನು ಒರೆಸಿ ಕೊಡ್ತೀನಿ ಕೊಡು" ಅಂದೆ. "ಬೇಡ ಬಿಡಿ, ನಾನು ಮಾಡ್ಕೊತೀನಿ" ಅಂತ ನಿರಾಕರಿಸಿದಳು, ಅದರೂ ನಾನು ಇನ್ನೂ ಅಲ್ಲೇ ಇದ್ದದ್ದು ನೋಡಿ, "ಆಯ್ತು, ಜೋಡಿಸಿ ಇಡಿ" ಅಂತ ಬಿಟ್ಟುಕೊಟ್ಟಳು, ಅವಳು ಒರೆಸಿಕೊಡುತ್ತಿದ್ದರೆ ಜೋಡಿಸಿ ಇಡತೊಡಗಿದೆ, ಆಗಲೇ ಕಂಡದ್ದು ಈ ಕಂಪನಿ ಕಪ್ಪು!

ಕಂಪನಿ ಕಪ್ಪು, ಅಂದ್ರೆ, ಅದೇ ಟೀ ಕಾಫಿ ಮಗ್. ಅವಳು ಎಷ್ಟು ಸಾರಿ ಮಗ್ ಅನ್ನಿ ಅಂತ ಹೇಳಿದರೂ, ನಾನು ಮಾತ್ರ ಕಪ್ಪು ಅಂತಾನೇ ಅನ್ನೋದು, ನನ್ನ ಲೆಕ್ಕಕ್ಕೆ ಅದು ಕಪ್ಪೇ ಸರಿ, ಈ ನಮ್ಮ ಕಂಪನಿಗಳಲ್ಲಿ ಆಗಾಗ ಹೀಗೆ ಏನಾದ್ರೂ ಕಪ್ಪು ಗಿಪ್ಪು ಕೊಡ್ತಾ ಇರ್ತಾರೆ, ಕೆಲವೊಮ್ಮೆ ಕೈಗೆ ಚಿಪ್ಪು ಕೂಡ ಕೊಡ್ತಾರೆ! ಆದರೂ ಹೀಗೆ ಪುಕ್ಕಟೆಯಾಗಿ ಕೊಟ್ಟ ಗಿಫ್ಟಗಳೆಂದ್ರೆ ಏನಾದ್ರೂ ಸರಿ ತೆಗೆದುಕೊಳ್ಳುತ್ತೇವೆ. ನಾವು ಕೆಲವೊಂದಿಷ್ಟು(ಎಲ್ರೂ ಅಲ್ಲ) ಸಾಫ್ಟವೇರ ಇಂಜನೀಯರುಗಳು ಹೀಗೇ. ಹೀಗೆ ಕಂಪನಿಯಲ್ಲಿ ಕೊಟ್ಟ ವಸ್ತುಗಳನ್ನು ಬಹಳ ಜತನವಾಗಿಡುತ್ತೇವೆ, ಸಾವಿರ ರೂಪಾಯಿ ಕೊಟ್ಟು ತಂದ ಶರ್ಟ ಚೆನ್ನಾಗಿ ಇಟ್ಕೊತೀವೊ ಇಲ್ವೊ ಆದ್ರೆ ಕಂಪನಿಯಲ್ಲಿ ಕೊಟ್ಟ ಪುಕ್ಕಟೆ ಟೀಶರ್ಟ್ ಮಾತ್ರ ಹೊಸದರಂತೇ ಕಾಪಾಡಿರುತ್ತೇವೆ. ಎಲ್ಲಿ ಹೊರಟು ನಿಂತರೂ ಅದನ್ನೇ ಹಾಕಿಕೊಂಡು ನಿಲ್ಲೋದು, "ನೀವೇನು ನಿಮ್ಮ ಕಂಪನಿ ಬ್ರಾಂಡ್ ಅಂಬ್ಯಾಸಿಡರಾ, ಬೇರೆ ಹಾಕೊಳ್ಳಿ" ಅಂತ ಇವಳು ಬಯ್ದಾಗಲೇ ಬಿಡೋದು. ಇನ್ನೂ ಹುಟ್ಟೂರಿಗೆ ಹೊರಟು ನಿಂತರೆ ಬಸ್ಸು ತುಂಬಾ ಕಾಣುವುದು ಈ ಕಂಪನಿಯ ಟೀಶರ್ಟಗಳೇ, ಹೆಚ್ಚು ಕಮ್ಮಿ ಎಲ್ರೂ ಅವನ್ನೇ ಹಾಕಿಕೊಂಡು ಬಂದಿರ್ತಾರೆ, ನಾನಿಲ್ಲೇ ಕೆಲಸ ಮಾಡೋದು ಅಂತ ಹೆಮ್ಮೆಯಿಂದ ತೋರಿಸಿಕೊಳ್ಳೋಕೆ. ಊರಲ್ಲಿ ಎಲ್ರೂ ಇವನಿಗೇನು ಬೇರೆ ಬಟ್ಟೆನೇ ಇಲ್ವೇನೊ ಯಾವಾಗ ನೋಡಿದ್ರೂ ಅದೇ ಟೀಶರ್ಟನಲ್ಲಿ ಊರಿಗೆ ಬರ್ತಾನೇ ಅಂದ್ರೂ ಪರವಾಗಿಲ್ಲ. ಈ ತೋರಿಕೆ ಇಲ್ಲೇ ನಿಲ್ಲಲ್ಲ, ಕಂಪನಿಯಲ್ಲಿ ಒಂದು ದಿನ ಐಡಿ ಕಾರ್ಡು ಹಾಕಿಕೊಂಡು ಇರ್ತೀವೋ ಇಲ್ವೊ, ಆದ್ರೆ ಅದನ್ನ ಹಾಕಿಕೊಂಡು ಊರೆಲ್ಲ ಸುತ್ತಿ ಬರ್ತೀವಿ. ಒಂದು ಕಂಪನಿಯಲ್ಲಿ ಕೊಟ್ಟ ಜಾಕೆಟ್ಟು, ಬ್ಯಾಗು, ಪೆನ್ನು, ಪೇಪರು, ಬುಕ್ ಏನೇ ಇರಲಿ ಅದೊಂಥರಾ ಅಕ್ಕರೆ, ನಾವಿರೋದೇ ಹಾಗೆ... ಹಾಗೇ ಈ ಕಂಪನಿ ಕಪ್ಪು ಕೂಡಾ... ಟೀ ಕಾಫಿ ಕುಡಿಯೋ ಅಂತ ಅವರು ಕೊಟ್ಟಿದ್ದರೆ, ತಂದು ಜೋಪಾನವಾಗಿ ಶೋಕೇಸಿನಲ್ಲಿಟ್ಟಿದ್ದೆ,
ಕಪಿಲದೇವ್ ಗೆದ್ದ ವರ್ಡ್ ಕಪ್ ಅವನಿಗೇ ಕೊಟ್ಟಿದ್ರೆ ಅವನು ಕೂಡ ಅಷ್ಟು ಚೆನ್ನಾಗಿ ಇಟ್ಕೊಳ್ಳಲಿಕ್ಕಿಲ್ಲ. ಯಾವುದೋ ದೊಡ್ಡ ಚಾಂಪಿಯನಶಿಪ್ ಗೆದ್ದು ತಂದು ಕಪ್ ಏನೋ ಅನ್ನೊವಂತೆ, ಯಾರು ಕೇಳಿದರೂ, ಕೇಳದಿದ್ರೂ, ಬಂದವರಿಗೆಲ್ಲ ಕಂಪನೀಲಿ ಕೊಟ್ಟಿದ್ದು ಅಂತ ಹೇಳಿಕೊಳ್ಳೊದು.

ಅಂತೂ ಅದನ್ನು ಅವಳು ಒರೆಸಿ ಕೊಡುತ್ತಿದ್ದಂತೆ, "ನಮ್ಮ ಕಂಪನೀಲಿ ಕೊಟ್ಟಿದ್ದು ಎರಡು ವರ್ಷದ ಹಿಂದೆ" ಅಂತ ಅವಳಿಗೆ ತೋರಿಸಿದೆ.
ಒಂದು ನಗೆ ಬೀರೀ "ಗೊತ್ತು, ಆಮೇಲೆ ಮತ್ತೇನೊ ಕೊಟ್ಟಿಲ್ವೇ" ಅಂದ್ಲು.
"ಅಯ್ಯೋ ರಿಸೆಷನ್ ಅಂತ ಕಂಪನೀಲಿ ಟೀ ಕಾಫಿ ಕೊಡೋದು ನಿಲ್ಲಿಸಿದ್ರು ಇನ್ನು ಕಪ್ಪು ಎಲ್ಲಿಂದ ಕೊಡ್ತಾರೆ, ಕೊಟ್ರೂ ಏನ್ ಮಾಡೋದು"
"ಏನ್ ಮಾಡೋದಾ! ಕೊಟ್ರೆ ಅದರಲ್ಲಿ ಕಾಫಿ ಟೀನಾ ನೀವೆಲ್ಲಿ ಕುಡೀತೀರ, ತಂದು ಇಲ್ಲೇ ಶೋಕೇಸಿನಲ್ಲಿ, ದಸರಾ ಬೊಂಬೆ ತರಹ ಜೋಡಿಸಿ ಇಡೊದು" ಅಂತ ಅಣಕಿಸಿದಳು.
"ಮಾಡಿ ಕೊಟ್ಟರೆ ಕುಡಿಯಬಹುದೇನೊ"
"ನಮ್ಮ ಮದುವೆ ಆದಾಗಿಂದ ಒಂದು ಸಾರಿ ಕೂಡ ಅದರಲ್ಲಿ ಕಾಫಿ ಕುಡಿದದ್ದು ನೋಡಿಲ್ಲ, ಅದಕ್ಕೇ ನಾನೂ ಅದನ್ನ ಮುಟ್ಟಿರಲಿಲ್ಲ, ಅಲ್ಲೇ ಇತ್ತು" ಅಂತ ನನ್ನ ನೋಡಿದಳು, ಒಂದು ಸಾರಿ ಹಲ್ಲು ಕಿರಿದೆ.

ಹೇಗೊ ಅಲ್ಲಿಗೆ ಎಲ್ಲ ಸಾಮಾನು ಶೋಕೇಸಿನಲ್ಲಿ ಜೋಡಿಸಿ ಆಗಿತ್ತು, ಟೀ ಮಾಡಿ ಅದರಲ್ಲೇ ಕೊಡ್ತೀನಿ ಅಂತ ಕಂಪನಿ ಕಪ್ಪು ಎತ್ತಿಕೊಂಡು ಪಾಕಶಾಲೆಗೆ ನಡೆದಳು, ನಾನೇನೊ ಬೇರೆ ಕೆಲಸದಲ್ಲಿ ನಿರತನಾದೆ. ಏಲಕ್ಕಿ ಪರಿಮಳ ಬಂದಾಗಲೇ ಗೊತ್ತಾಯ್ತು, ಸ್ಪೇಷಲ್ ಟೀ ರೆಡಿ ಆಗ್ತಿದೆ ಅಂತ, ಸವಿಯಲು ಕಾತುರತೆಯಿಂದಲೇ ಕಾದು ಕೂತೆ. ಸುವಾಸನೆ ಮಾತ್ರ ಬರುತ್ತಿದ್ದುದು, ಒಮ್ಮೆಲೆ ಹಿನ್ನೆಲೆಗೆ ಸೌಂಡ ಕೂಡ ಬೇಕೇನೊ ಅನ್ನೊವಂತೆ, "ಠಳ್!!!..." ಅಂತ ಸದ್ದು ಬಂತು... ಎದ್ದು ಶಬ್ದ ಬಂದತ್ತ ಓಡಿದೆ.

ನೋಡಿದರೆ, ಟೀ ಹಾಲ್ ತುಂಬೆಲ್ಲ ಚೆಲ್ಲಿದೆ, ಕಪ್ಪು ಒಡೆದು ಚೂರು ಚೂರಾಗಿದೆ, ಬಿಸಿ ಬಿಸಿ ಟೀ ಕೈಮೇಲೆಲ್ಲ ಬಿದ್ದು ಕೆಂಪಾಗಿ ನೋವಿನಲ್ಲಿ ಕಣ್ಣೀರು ಕೆನ್ನೆಗಿಳಿದು ಬಂದು ಕುಸಿದು ಕೂತಿದ್ದಾಳೆ ಇವಳು... ಒಮ್ಮೆಲೇ ತಲೆ ತುಂಬ ನೂರಾರು ಯೋಚನೆಗಳು ಓಡಾಡಿದವು, ಮೆಚ್ಚಿನ ಕಪ್ಪು ಒಡೆದಿದ್ದಕ್ಕೆ ಸಿಟ್ಟು ಬರಬೇಕೇ, ನೋವಿನಲ್ಲಿರುವ ಅವಳ ಮೇಲೆ ಅನುಕಂಪ ಬರಬೇಕೆ ಮನಸಿಗೇ ಗೊಂದಲ, ಒಂದು ಕ್ಷಣ ಎಲ್ಲ ಸ್ಥಬ್ದ... ಆ ಸಮಯದಲ್ಲಿ ಆವೇಶದ ಭರದಲ್ಲಿ ಬಯ್ದು ಬಿಡುತ್ತಿದ್ದೆ, ಆದರೇನೊ ಹಾಗೇ ಮಾಡಲೇ ಇಲ್ಲ... ಕೂಡಲೇ ಅಲ್ಲೇ ಇದ್ದ ಮಗ್‌ನಲ್ಲಿ ನೀರು ತೆಗೆದುಕೊಂಡು ಅವಳ ಕೈಮೇಲೆ ಸುರಿದೆ, ಸ್ವಲ್ಪ ಸುಧಾರಿಸಿಕೊಂಡಳು, "ರೀ ಅದು ಅದೂ... ಕೈ ಜಾರಿ..." ಅಂತೇನೊ ಹೇಳಲು ನೋಡಿದಳು, ಅವಳಿಗೊ ಕಪ್ಪು ಒಡೆದು ಹೋಯ್ತುಲ್ಲ ಅಂತ ನೋವು, ನಾ ಕೇಳಲೇ ಇಲ್ಲ "ಬರ್ನಾಲ್ ಕ್ರೀಮ ಎಲ್ಲಿ" ಅಂತನ್ನುತ್ತ... ಕಪಾಟು ತಡಕಾಡಿದೆ, ಸಧ್ಯ ಅಲ್ಲೇ ಇತ್ತು, ಸ್ವಲ್ಪ ಅದನ್ನೇ ನಿಧಾನವಾಗಿ ಸವರಿ ಈಚೆ ಕರೆತಂದು "ಸ್ವಲ್ಪ್ ಇಲ್ಲೇ ಕೂತಿರು" ಅಂದೆ. ಎಲ್ಲಿ ಕಾಲಿಗೆ ಚುಚ್ಚಿದರೆ ಅಂತ ಒಂದೊಂದೇ ಚೂರು ಅರಿಸಿ ಆಕಡೆ ತೆಗೆದಿಟ್ಟೆ. ಸ್ವಲ್ಪ ನೀರು ಚುಮುಕಿಸಿ, ಎಲ್ಲ ಮೂಲೆಗೆ ನೂಕಿದೆ, "ನಾನ್ ಮಾಡ್ತೀನಿ ಬಿಡಿ" ಅಂತ ಅವಳಂದ್ರೂ ಕೇಳದಂತೆ, ಎಲ್ಲ ಎತ್ತಿ ದಸ್ಟಬಿನ್ ತುಂಬಿದೆ.

ಮನಸ್ಸಿನಲ್ಲಿ ಇನ್ನೂ ತಾಕಲಾಟ ನಡೆದೇ ಇತ್ತು, ಕ್ಷಣ ಆವೇಶದ ಭರದಲ್ಲಿ ಏನೋ ಅಂದು ಬಿಡುತ್ತಿದ್ದೆನಲ್ಲ, ತಡೆದದ್ದೇ ಒಳ್ಳೇದಾಯ್ತು. ಬಂದು ಸೊಫಾ ಮೇಲೆ ಕೂತೆ, ಅವಳು ಕೂತಲ್ಲಿಂದಲೇ ತಲೆ ಎತ್ತದೇ ಹಾಗೆ ಓರೆ ನೊಟದಲ್ಲಿ ನನ್ನತ್ತ ನೋಡುತ್ತಿದ್ದಳು, ಒಂದು ಅಪರಾಧೀ ಭಾವನೆ ಅವಳ ಕಾಡುತ್ತಿದ್ದಂತಿತ್ತು. ಮನೆಯಲ್ಲಿ ಸ್ವಲ್ಪ ಹೊತ್ತು ನೀರವ ಮೌನ ನಿರ್ಭಾವುಕ ಭಾವ ತುಂಬಿದಂತಿತ್ತು. ಮೆಚ್ಚಿನ ಕಪ್ಪು ಒಡೆದ ಬೇಸರದಲ್ಲಿ ಎಲ್ಲಿ ನಾನು ಏನಾದರೂ ಮಾತಾಡಿ ಅವಳಿಗೆ ಬೇಜಾರು ಮಾಡಿಬಿಡುತ್ತೀನೊ ಅಂತ ನಾನೂ ಸುಮ್ಮನಿದ್ದೆ. ಸುಮ್ಮನೇ ಶೋಕೇಸಿನಲ್ಲಿ ಇಟ್ಟಿರುವುದ ಬಿಟ್ಟು, ಅಣಕಿಸಿ ಹೊರ ತೆಗೆದು ಹೀಗೆ ಹಾಳು ಮಾಡಿಟ್ಟೆನಲ್ಲ, ಈಗ ಏನಂತ ಹೇಳಲಿ ಅಂತ ಅವಳು.

ನಾನೇ ಬಹಳ ಹೊತ್ತು ಕಾದು ಕೂತವ, ಹಾಗೆ ಕೂರಲಾಗದೇ, "ಈಗ ಹೇಗಿದೆ, ಡಾಕ್ಟರ್ ಹತ್ರ ಹೋಗೋಣ್ವಾ" ಅಂತಂದೆ, "ಬೇಡ" ಅಂತ ಕ್ಷೀಣ ದನಿ ಹೊರಬಂತು. ಜಾಸ್ತಿ ಮಾತಾಡಲೂ ಸಂಕೋಚವಾದಂತೆ, "ಇಲ್ಲ, ಹೋಗೊಣ ಬಾ ಸುಮ್ನೇ ಅದು ಜಾಸ್ತಿ ನೋವು ಆಗೋದು ಬೇಡ" ಅಂತ, ಸ್ವಲ್ಪ ಮಾತಾಡಲು ಪ್ರೇರೇಪಿಸಿದೆ, "ಇಲ್ಲ ಸ್ವಲ್ಪ ಕೆಂಪಗಾಗಿದೆ, ಸುಟ್ಟಿಲ್ಲ, ಬರ್ನಾಲ್ ಕ್ರೀಮ್ ಸಾಕು" ಅಂತ ಹೇಳಿ ಸುಮ್ಮನಾದಳು.

ಮತ್ತೆ ಟೀ ಬೇಕೆನಿಸಲಿಲ್ಲ, ಪೇಪರು ಓದುತ್ತ ಕೂತೆ, ಅವಳು ಒಳಗೆ ಏನೋ ಮಾಡಲು ಹೋದಳು, ಮಾತು ಇಬ್ಬರಿಗೂ ಬೇಕಾಗಿರಲಿಲ್ಲ, ಸುಮ್ಮನೇ ಉಳಿದೆವು, ಮಧ್ಯಾಹ್ನಕ್ಕೆ ಅನ್ನ ಸಾರು ಮಾಡಿದ್ದಳು ಊಟಕ್ಕೆ ಕೂತಾಗಲೂ ಏನೂ ಮಾತಾಡಲು ತೋಚಲೇ ಇಲ್ಲ. ಅವಳಿಗಿನ್ನೂ ತಾನೇನೊ ದೊಡ್ಡ ತಪ್ಪು ಮಾಡಿಬಿಟ್ಟೆ ಅನ್ನೊ ಹಾಗೆ ಆಗಿತ್ತು, ಒಂದು ದಿನ ಮತ್ತೆ ಸರಿ ಹೋಗುತ್ತಾಳೆ ಬಿಡು ಅಂತ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಊಟದ ನಂತರ ಹಾಗೇ ಟೀವಿ ನೋಡುತ್ತ ಕೂತಿರಬೇಕಾದರೆ, ರೆಡಿಯಾಗಿ, ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಎಲ್ಲೊ ಹೊರಟು ನಿಂತಳು, "ಎಲ್ಲಿ, ಡಾಕ್ಟ್ರ ಹತ್ರನಾ?" ಅಂತ ಕೇಳಿದೆ, "ಈಗ ಬಂದೆ, ಹಾಲು ತರಲು" ಅಂತ ಹೊರ ಹೋದಳು, ಮತ್ತೆ ಯಾವಾಗಲೋ ಆಗಿದ್ದರೆ, "ಹಾಲಿನಂಗಡಿ ಹಾಸಿನಿನಾ ನೊಡ್ಕೊಂಡು ಬರ್ತೀನೀ, ನಾನೇ ತರ್ತೀನಿ" ಅಂತ ಹೊರಟು ಬಿಡುತ್ತಿದ್ದೆ. ಏನೂ ಹೇಳದೇ ಸುಮ್ಮನಾದೆ, ಮತ್ತೆ ಟೀ ಮಾಡಲಿರಬೇಕು ಬಿಡು ಅಂತ.

ಸ್ವಲ್ಪ ಹೊತ್ತಿನಲ್ಲಿ ಮರಳಿದಳು, ನಾನು ಏನೊ ವಿಶೇಷ ಅಂಕಣ ಓದುವುದರಲ್ಲಿ ಮಗ್ನನಾಗಿದ್ದೆ, ಸೀದಾ ಪಾಕಶಾಲೆಗೆ ನುಗ್ಗಿದಳು, ಸರಿ ಬಿಡು ಟೀ ಸಿಗುತ್ತದೆ ಅಂತ ಖಾತ್ರಿಯಾಯ್ತು. ಮತ್ತೆ ಟೀ ಪರಿಮಳ ಬರಲಿಕ್ಕೂ ಅವಳು ಅದೇ ಹೊತ್ತಿಗೆ ಹೊರಗೆ ಬರುವುದಕ್ಕೂ ಸರಿ ಹೋಯ್ತು. ಬಂದವಳೇ ಮುಂದೆ ಟೀಪಾಯಿ ಮೇಲೆ ಇಟ್ಟು ಹೋದಳು, ಸರಿ ಮಾತಾಡಲು ಇನ್ನೂ ಬೇಸರಿಕೆಯೇನೊ ಅಂತ ಅದಕ್ಕೇ ಹಾಗೆ ಇಟ್ಟು ಸುಮ್ಮನೇ ಹೋದಳು ಬಿಡು ಅಂತ ಪೇಪರು ಸರಿಸಿಟ್ಟು ನೋಡಿದರೆ, ಅಲ್ಲೇನೊ ಬೇರೆ ಇದೆ, ಟೀ ತಂದಳೇನೊ ಅಂತ ನಾನಂದುಕೊಂಡರೆ, ಕೆಂಪು ಬಣ್ಣ ವೆಲ್ವೇಟು ಪೇಪರು ಸುತ್ತಿ, ಬಿಳಿ ಬಣ್ಣದ ಲೇಸು ಕಟ್ಟಿದ ಡಬ್ಬಿ ಇದೆ.

ಅದರಲ್ಲೇನಿದೆ ಅಂತ ಬೇರೆ ಹೇಳಲೇಬೇಕಾಗಿಲ್ಲ, ಸಂತೋಷವೋ ಏನೊ ಕಣ್ಣಲ್ಲಿ ನೀರಾಡಿತು, ಮಾತೇ ಹೊರಡಲಿಲ್ಲ ತುಟಿಗಳ ಒಳಗೇ ಅಮುಕಿಕೊಂಡು, ಭಾವನೆಗಳ ಒತ್ತರವನ್ನು ತಡೆದೆ, ಅದನ್ನು ಎತ್ತಿಕೊಂಡು ಪಾಕಶಾಲೆಯತ್ತ ನಡೆದೆ, ಅಲ್ಲಿ ನೋಡಿದರೆ, ಸೀರೆ ಸೆರಗಿನ ತುದಿಯನ್ನು ಸುರುಳಿ ಸುತ್ತುತ್ತ ತಲೆ ಕೆಳಗೆ ಮಾಡಿಕೊಂಡು ಗ್ಯಾಸಿನ ಕಟ್ಟೆ ಮುಂದೆ ನಿಂತಿದ್ದಾಳೆ ಇವಳು, ಒಳ್ಳೇ ಪರೀಕ್ಷೇ ಫಲಿತಾಂಶಕ್ಕೆ ಕಾದಂತೆ. "ಏನಿದು" ಅಂದೆ ಏನೊ ಗೊತ್ತಿಲ್ಲವೇನೊ ಅನ್ನುವ ಹಾಗೆ, ತಿರುಗಿ ನೋಡದೇ "ನೀವೇ ನೋಡಿ" ಅಂದ್ಲು. ಬೆನ್ನು ಮಾಡಿ ನಿಂತಿರುವವಳ ಹಿಂದೆ ಹೋಗಿ, ಅವಳ ಮುಂದೆ ಆ ಡಬ್ಬಿ ಇಟ್ಟು ಅವಳನ್ನು ಬಳಸಿ ನಿಂತು, ಭುಜಕ್ಕೆ ಕತ್ತು ಇರಿಸಿ, ಅವಳ ಕೈಗಳೆರಡು ನನ್ನ ಕೈಯಲ್ಲಿ ಹಿಡಿದು ಆ ಪ್ಯಾಕ ಅವಳಿಂದಲೇ ತೆಗೆಯಿಸತೊಡಗಿದೆ. ಹೊರತೆಗೆದರೆ ಸುಂದರ ಕಾಫಿ ಮಗ್ ಇತ್ತು, ಮೊದಲೇ ಗೊತ್ತಾಗಿದ್ದರೂ ಅದು ಹೇಗಿರಬಹುದೆಂಬ ಕುತೂಹಲವಿತ್ತು, ಶುಭ್ರ ಬಿಳಿಬಣ್ಣ, ಅದರ ಮೇಲೆ ಓರೆಯಾಗಿ "SORRY" ಅಂತ ಬರೆದಿತ್ತು ಪಕ್ಕದಲ್ಲೊಂದು ಕಿವಿ ಹಿಡಿದು ಕ್ಷಮೆ ಕೇಳುವಂತಿರುವ ಚಿಕ್ಕ ಚಿತ್ರ, ಎಂತಹ ತಪ್ಪು ಇದ್ದರೂ ಮರೆತು ನಕ್ಕು ಬಿಡುವಂತೆ... ಆಗಲೇ ಮಾಡಿಟ್ಟಿದ್ದ ಟೀ ಅವಳ ಕೈಯಲ್ಲೇ ಅದಕ್ಕೇ ಸುರಿದು, ಅವಳ ತುಟಿಗಳ ಮುಂದೆ ಹಿಡಿದೆ, "ಅದು ನಿಮಗೆ" ಅಂತ ಮುಖ ತಿರುಗಿಸಿದಳು, ಮತ್ತೆ ಆಕಡೆ ಹಿಡಿದೆ ಏನೂ ಮಾತಾಡದೇ, ಈ ಬಾಹು ಬಂಧನದಲ್ಲಿ ಸಿಕ್ಕಿರುವಾಗ ಇನ್ನು ಬಿಡುವುದಿಲ್ಲ ಅಂತ ಅವಳಿಗೂ ಗೊತ್ತಾಗಿದ್ದರಿಂದ ಒಂದು ಗುಟುಕು ಹೀರಿದಳು. ಅಲ್ಲೇ ಒಂದು ಚೂರು ನಾನೂ ಗುಟುಕರಿಸಿ, "ಸೂಪರ" ಅಂತಂದು, ಅವಳನ್ನು ಸೆರೆಯಿಂದ ಮುಕ್ತ ಮಾಡಿ ಹೊರಬಂದೆ.

ಕ್ಷಣ ಆವೇಶದಲ್ಲಿ ಏನೇನೊ ಆಗಿಬಿಡುತ್ತದಲ್ಲ, ಯಾವುದೊ ನಮ್ಮ ಮೆಚ್ಚಿನ ವಸ್ತು ಯಾರೋ ಹೀಗೆ ಹಾಳು ಮಾಡಿದಾಗ ಹಿಂದೆ ಮುಂದೆ ನೋಡದೇ ಸುಮ್ಮನೇ ರೇಗಿ ಬಿಟ್ಟಿರುತ್ತೇವೆ,
ಕವಡೆ ಕಿಮ್ಮತ್ತೂ ಇಲ್ಲದ ಸಾಮಾನಿಗಾಗಿ ಮೌಲ್ಯ ಕಟ್ಟಲಾಗದಂತಹ ಸುಂದರ ಸಂಬಂಧಗಳು ಹಾಳಾಗಿ ಹೋಗಿರುತ್ತವೆ ಅಲ್ವೇ, ಹಾಳಾಗುವುದಂತೂ ಹಾಳಾಗಿ ಹೋಗಿದೆ ಇನ್ನು ಸರಿ ಮಾಡಲಂತೂ ಬರಲಿಕ್ಕಿಲ್ಲ, ಅದೇ ಭರದಲ್ಲಿ ಸಂಬಂಧಗಳೂ ಹಾಳಾಗುವಂತೆ ನಡೆದುಕೊಳ್ಳಬೇಕೆ? ಈ ಸಂದರ್ಭದಲ್ಲೇ ನೋಡಿದರೆ ಅದೇನು ದೊಡ್ಡ ವಸ್ತು, ಕಂಪನಿಯಲ್ಲಿ ಪುಕ್ಕಟೆಯಾಗಿ ಕೊಟ್ಟ ಕಪ್ಪು, ಬೆಲೆ ಇನ್ನೂರೋ ಮುನ್ನೂರೋ ಇದ್ದೀತು, ಅಷ್ಟಕ್ಕಾಗಿ ಅವಳ ಮೇಲೆ ಹರಿಹಾಯ್ದಿದ್ದರೆ, ಕಪ್ಪೇನೊ ಒಡೆದು ಹೋಗಿತ್ತು ಸಂಬಂಧದಲ್ಲಿ ದೊಡ್ಡ ಒಡಕು ಮೂಡುತ್ತಿತ್ತು.

ಟೀ ಕುಡಿದು ಮುಗಿಸಿ, ತೊಳೆದು ನೀಟಾಗಿ ಒರೆಸಿ, ಮೊದಲು ಕಂಪನಿ ಕಪ್ಪು ಇದ್ದ ಜಾಗದಲ್ಲಿ ಇಟ್ಟೆ, ಇನ್ನೂ ಪಾಕಶಾಲೆಲ್ಲೇ ಇದ್ದ ಅವಳ ಕರೆತಂದು ತೋರಿಸಿದೆ, ಅವಳು ಅದನ್ನು ನೋಡಿ ನನ್ನತ್ತ ಇನ್ನೂ ಅಪರಾಧಿ ಪ್ರಜ್ಞೆಯಲ್ಲಿಯೇ ನೋಡುತ್ತಿದ್ದಳು, ನನ್ನ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.
"ನಿಮಗೆ ಸಿಟ್ಟು ಬಂದಿದ್ರೆ ಬಯ್ದು ಬಿಡಿ, ಹೀಗೇ ಸುಮ್ಮನಿರಬೇಡಿ" ಅಂದ್ಲು.
"ಸುಮ್ನೇ ಇದನ್ನು ಯಾಕೆ ತರೋಕೆ ಹೋದೆ" ಅಂತ ಮಾತು ಬದಲಿಸಿದೆ.
"ನಿಮಗೆ ಸಿಟ್ಟೆ ಬರಲಿಲ್ವಾ, ಬೇಜಾರು ಆಗ್ಲೇ ಇಲ್ವಾ? ಸುಳ್ಳು ಹೇಳ್ಬೇಡಿ, ನಾನು ಅದನ್ನು ತೆಗೆದುಕೊಂಡು ಬರ್ತಾ ಇದ್ನಾ, ಆಗಲೇ ತೊಳೆದಿದ್ದರಿಂದ ಇನ್ನೂ ನೀರಿತ್ತು ಜಾರುತ್ತಿತ್ತು, ಬಿಸಿ ತಾಕಿ ಕೈ ಬದಲಿಸಲು ಹೋದೆ ಬಿತ್ತು" ಅಂತ ಒಂದೇ ಸಮನೆ ಪಟಪಟ ಅಂತ ಹೇಳಿಕೊಂಡಳು.
"ಈಗ ಏನಾಯ್ತು ಅಂತ ನಾ ಕೇಳಿದೆನಾ, ನನಗೂ ಗೊತ್ತು ಯಾರೂ ಬೇಕೆಂತಲೇ ಚೆಲ್ಲಿ ಒಡೆಯುವುದಿಲ್ಲ ಅಂತ, ಎನೊ ಆಗಿರಬೇಕೆಂದು ಊಹಿಸಿದ್ದೆ, ಆ ಕ್ಷಣ ಆವೇಶ ಇತ್ತು, ಆದರೆ ಕೋಪ ಮಾಡಿಕೊಳ್ಳಲೇಬೇಕೆನಿಸಲಿಲ್ಲ, ಅದು ಒಡೆದು ಹೋಯ್ತಲ್ಲ ಅಂತ ಬೇಸರವಾಗಿತ್ತೇ ಹೊರತು ನೀನು ಒಡೆದೆ ಅಂತ ಅಲ್ಲ, ಇಷ್ಟಕ್ಕೂ ಸಿಟ್ಟು ಬಂದು ನಿನ್ನ ಬಯ್ದಿದ್ದರೆ ಏನಾಗುತ್ತಿತ್ತು, ಸುಮ್ನೇ ಬೇಜಾರಾಗುತ್ತಿತ್ತು ಇಬ್ಬರಿಗೂ... ಈಗ ನೋಡು ನನಗೆ ಮತ್ತೊಂದು ಸುಂದರ ಮಗ್ ಸಿಕ್ತು" ಅಂತ ನಕ್ಕೆ, ಸ್ವಲ್ಪ ನಿರಾಳವಾದಳು.
"ನಾನಾಗಿದ್ದರೆ ನಿಮ್ಮನ್ನು ಬಯ್ಯುತ್ತಿದ್ದೆ ಏನೊ", ಅಂತ ಮುಚ್ಚು ಮರೆಯಿಲ್ಲ ಮನದಲ್ಲಿದ್ದುದು ಹಾಗೆ ಹೇಳಿದಳು, ನಾನೂ ಹಾಗೆ ಮಾಡುತ್ತಿದ್ದೆ ಏನೊ, ಆದರೆ ಕ್ಷಣ ಹೊತ್ತು ಯೋಚಿಸಿದ್ದಕ್ಕೆ, ಹೀಗೆ ಆವೇಶದ ಭರದಲ್ಲಿ ಏನೂ ಮಾತಾಡಕೂಡದು ಅಂತ ಮೊದಲೇ ಅಂದುಕೊಂಡಿದ್ದಕ್ಕೆ ಎಲ್ಲ ಸರಿ ಹೋಯ್ತು.
"ಮತ್ತೆ, ಇನ್ನೂ ನೋವಿದೆಯಾ" ಅಂತ ಕೈ ಹಿಡಿದು ಕೇಳಿದೆ
"ಇಲ್ಲ ಪರವಾಗಿಲ್ಲ" ಅಂದವಳು, "ರೀ, ಕಂಪನಿಯಲ್ಲಿ ಕೇಳ್ರೀ ಇನ್ನೊಂದು ಕಪ್ಪು ಕೊಡ್ತಾರಾ" ಅಂತ ಕೇಳಿದಳು, ಅವಳು ಇನ್ನೂ ಆ ಕಪ್ಪಿನ ಗುಂಗಿನಲ್ಲೇ ಇದ್ದಳು.
"ಲೇ ಸುಮ್ನಿರೇ, ಮೊದಲೇ ಈಗ ರೆಸೆಷನಿಂದ ಹೊರಗೆ ಬರ್ತಾ ಇದಾರೆ, ಹೀಗೆಲ್ಲ ಹೋಗಿ ಕಪ್ಪು ಕೇಳಿದ್ರೆ ಕೈಗೆ ಚೊಂಬು ಕೊಡ್ತಾರೆ ಅಷ್ಟೇ" ಅಂದೆ ಇಬ್ಬರೂ ಮನಪೂರ್ತಿ ನಕ್ಕೆವು. "ಈ ನೋವಿಗೆ ನನ್ನ ಹತ್ರ ಒಂದು ಒಳ್ಳೆ ನೋವು ನಿವಾರಕ ಇದೆ ಕೊಡ್ತೀನಿ ತಾಳು" ಅಂತ ಅವಳ ಕೈ ನನ್ನ ತುಟಿಯೆಡೆಗೆ ಒಯ್ದೆ, "ಈ ತುಂಟಾಟಕ್ಕೇನು ಕಮ್ಮಿಯಿಲ್ಲ" ಅಂತ ಕೊಸರಿಕೊಂಡು ಓಡಿದಳು ನಸುನಗುತ್ತ. ಮತ್ತೆ ಹೀಗೆ ಏನೊ ಸನ್ನಿವೇಷದೊಂದಿಗೆ ಸಿಕ್ತೀನಿ ಕಂಪನಿ ಕೊಡ್ತೀರಾ ತಾನೇ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/kappu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

25 comments:

ರಾಜೀವ said...

ಈ ಲೇಖನದಿಂದ ನಾನು ಅರಿತದ್ದು "ಹೆಂಡತಿ ಜೊತೆ ಮನೆ ಕೆಲಸಗಳನ್ನು ಮಾಡಬರದು" ಎಂದು ;-)
ಆದರೂ ಶೃಂಗಾರಮಯವಾಗಿದೆ ನಿಮ್ಮಲ್ಲಿರುವ ಕವಿಯ ಅನುಭವ.

ನಾನು ಇಂತಹ ಕಪ್ಪುಗಳನ್ನು "ಪೆಂಸಿಲ್ ಸ್ಟಾಂಡ್" ಮಾಡಿಕೊಂಡಿದ್ದೇನೆ.
ಯಾಕೋ ಅದರಲ್ಲಿ ಕಾಪಿ-ಟೀ ಕುಡಿದರೆ ತೃಪ್ತಿ ಆಗೋದಿಲ್ಲ.

ಸವಿಗನಸು said...

chennagide...endinathe intersting.....

ಬಾಲು said...

ಅತ್ಯಂತ ಶೃಂಗಾರ ಮಯವಾಗಿ ಇದೆ. ಅತ್ಯಂತ ಸಮಯೋಚಿತ ವರ್ತನೆ ಬಗ್ಗೆ ವಿವರಿಸಿದ್ದೀರಿ, ಅದೂ ನಿಮ್ಮ ಶೈಲಿಯಲ್ಲಿ. ಕುಶಿ ಯಾಯಿತು.

ಆಮೇಲೆ ಕಂಡ ಕಂಡಲ್ಲಿ ಬಣ್ಣ ಹೋದ ಕಂಪನಿ ಟಿ ಶರ್ಟ್ ಹಾಕಿ ಕೊಳ್ಳುವವರಿಗೆ "ಹೊಸ ಬಟ್ಟೆ ಕೊಳ್ಳಲು" ಒಂದು ನಿಧಿ ಮಾಡಬೇಕು ಅಂತ ನನ್ನ ಅಭಿಪ್ರಾಯ.

ದಿನಕರ ಮೊಗೇರ said...

ಪ್ರಭುರಾಜ್ ಸರ್,
ಎಂದಿನಂತೆ ತುಂಬಾ ಚೆನ್ನಾಗಿದೆ.... ಸ್ವಲ್ಪ ಸರಸ, ಇನ್ನು ಸ್ವಲ್ಪ ವಿರಸವೂ ಇತ್ತು..... ಆದರೂ ನೀವು ಇದರ ಮೂಲಕ ಹೇಳಿದ ಮಾತುಗಳು ತುಂಬಾ ತೂಕವುಳ್ಳದ್ದು ..... ಕಂಪನಿಯ ಪೆನ್ಸಿಲ್ ಸಹ ಉಪಯೋಗಿಸದೆ ಕೆಲವೊಮ್ಮೆ ಕಾಪಾಡುತ್ತೇವೆ......

Jyoti Hebbar said...

tumba tumba chennagide...tumba khushi aaytu odi...

Unknown said...

Hi Prabhu,
Thumbha Chanagidhe....
Nan companilu kappu kotidare nanu nimhage badhravagi showcase nalli etidini... Ee companili kotta vastugalu thumbha dooda vastugalu aladidhru,... yen ontara sentiment... nam company vastu anta...
Matomme oleya baraha....
Thanks... :)

ಸಾಗರದಾಚೆಯ ಇಂಚರ said...

ಪ್ರಭು
ಒಂದು ಕ್ಷಣದ ಕೋಪ ಜೀವನದ ಎಷ್ಟೋ ಸಂಭಂಧಗಳಿಗೆ ಇತಿಶ್ರೀ ಹಾಡಿದೆ
ಕೋಪವನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ
ಇಲ್ಲದಿದ್ದರೆ ನಮಗೆ ಪ್ರಾಣಿಗಳಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ
ಸುಂದರ ಲೇಖನದ ಮೂಲಕ ಒಳ್ಳೆಯ ಸಂದೇಶ ನೀಡಿದ್ದಿರ

Veena DhanuGowda said...

yeno kushi aytu Mr prabhu....
bahaala dinnagala nanthara nim blog ge betti kottidini.... manasige samdhana kudda andkolli

kushi aytu :)

sunaath said...

ಪ್ರಭುರಾಜ,
ಗಂಡ ಹೆಂಡಿರ ನಡುವಿನ ನಾನಾ ಭಾವನೆಗಳಿಗೆ ಸುಂದರ ರೂಪ ಕೊಟ್ಟಿದ್ದೀರಿ. ಸರಸಮಯವಾದ ಬರವಣಿಗೆ.

ಮನಸು said...

ತುಂಬಾ ಚೆನ್ನಾಗಿದೆ!!!! ನಿಮ್ಮ ಸರಸ ಸಲ್ಲಾಪ ನಗುತರುತ್ತದೆ... ಒಳ್ಳೆಯ ನಿರೂಪಣೆ

Raghu said...

ಪ್ರಭುಗಳೇ,
ಹೇಳಲೇಬೇಕಿಲ್ಲ...! ತುಂಬಾ ಚೆನ್ನಾಗಿದೆ.. ಗಂಡ-ಹೆಂಡಿರ ಜಗಳ ಉಂಡು ಮಲಗುವತನಕ.. ಪ್ರಭುಗಳ ಸರಸ-ವಿರಸ ಲೇಖನದ ಕೊನೆ ತನಕ..!! ಅಲ್ವ..? :)
ನಿಮ್ಮವ,
ರಾಘು.

Keshav.Kulkarni said...

chennaagide

keshav

Unknown said...

ತಮಾಷೆಯಾಗಿ ಬರೀತೀರಾ.. :)

Nisha said...

Romantic and superb write up

Annapoorna Daithota said...

ಲೇಖನ ಎಂದಿನಂತೆ... ಸರಳ, ಸುಂದರ, ಭಾವಪೂರಿತವಾಗಿದೆ.

ಏನೇ ಹೇಳಿ, ಕಾಫಿ ಮಗ್ ನಲ್ಲಿ ಕಾಫಿ ಕುಡುದ್ರೆ ಅದ್ರ ಮಜಾನೇ ಬೇರೆ ! It's my passion drinking coffee in coffee mugs :) ದಿನಾ ಬೆಳಗ್ಗೆ ಮಗ್ ನಲ್ಲೇ ಕಾಫಿ ಕುಡೀತೀನಿ :-)

Prabhuraj Moogi said...

ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ, ಏನು ಮಾಡಲಿ ಲೈಫ್ ಒಂಥರಾ ಫಾಸ್ಟ್ ಫಾರವರ್ಡ್ ಮೋಡ್‌ಗೆ ಬಂದಿದೆ.. ನಾಗಾಲೋಟಕ್ಕಿಳಿದಿದೆ... ಬೇರೆ ಬ್ಲಾಗಿಗರ ಲೇಖನ ಕೂಡ ಓದಲಾಗುತ್ತಿಲ್ಲ, ಅದು ಬಿಡಿ ನನ್ನ ಬ್ಲಾಗ್ ಕಮೆಂಟ್‌ಗಳಿಗೆ ಉತ್ತರಿಸಲಾಗುತ್ತಿಲ್ಲ ಇನ್ನು ಎಲ್ಲಿಂದ ಓದಲಿ. ನಿಮ್ಮ ಬ್ಲಾಗ್ ಓದಿಲ್ಲ ಅಂತ ಬೇಜಾರು ಬೇಡ, ಸಮಯ ಸಿಕ್ಕಾಗ ಖಂಡಿತ ಓದುತ್ತೇನೆ, ನನ್ನನಿಸಿಕೆ ತಿಳಿಸುತ್ತೇನೆ.

@ರಾಜೀವ
ಮಾಡಬೇಕು ಸರ್, ಈ ಥರ ಕೀಟಲೆ ಮಾಡುವ ಥ್ರಿಲ್ ಬೇರೇನೇ... :)
ಹೌದು ಪೆನ್ಸಿಲ್ ಸ್ಟಾಂಡ್ ಮಾಡಲೂ ಚೆನ್ನಾಗಿರುತ್ತದೆ. ಮನೆಯಲ್ಲಿ ಅಂತೂ ಅದರಲ್ಲಿ ಟೀ,ಕಾಫಿ ಕುಡಿಯಲು ಆಗಲಿಕ್ಕಿಲ್ಲ, ಕಂಪನಿಯಲ್ಲಿ ಪುಕ್ಕಟೆ ಅಂತ ಕುಡಿಯಬಹುದೇನೊ :)

@ಸವಿಗನಸು
ಧನ್ಯವಾದಗಳು

@ಬಾಲು
ನಮ್ಮ ವರ್ತನೆ ನಮಗೆ ಕೆಲವೊಮ್ಮೆ ಬೇಸರ್ ಮೂಡಿಸಿಬಿಡುತ್ತದೆ, ಇದಕ್ಕೆ ನಾನೂ ಹೊರತಲ್ಲ, ಎಷ್ಟೊ ಸಾರಿ ಹೀಗೆ ಮೂಂಗೋಪದಿಂದ ಏನೊ ಮಾತಾಡಿ ಆಮೇಲೆ ಪಶ್ಚಾತಾಪ ಪಟ್ಟಿದ್ದಿದ್ದೆ.
ಬಣ್ಣ ಹೋದ ಕಂಪನಿ ಟಿ ಶರ್ಟ್ ಇದ್ದರೆ, ಹೊಸ ಟೀ ಶರ್ಟ್ ಕಂಪನಿಯೇ ಕೊಡಬೇಕು ಏನಂತೀರಾ!!!

@ದಿನಕರ ಮೊಗೇರ..
ಸರಸ ವಿರಸ ಎಲ್ಲ ಸೇರಿ ಸಮರಸವೇ ಜೀವನ ಅಲ್ಲವೇ...
ಕಂಪನಿಯ ಪೆನ್ಸಿಲ್ ಕೂಡ ಉಪಯೋಗಿಸ್ದೇ ಇದ್ರೆ ಅದು ತೀರಾ ಅತಿಯಾಗತ್ತೆ ಅಲ್ವೇ.

@Jyoti Sheegepal
ಧನ್ಯವಾದಗಳು,ನಿಮಗೆ ಖುಷಿಯಾದ್ರೆ ನನಗೂ ಖುಷಿ.

@Shwetha
ಕರೆಕ್ಟ್ ಆಗಿ ಹೇಳಿದ್ರಿ, ಈ ಕಂಪನಿಯಲ್ಲಿ ಕೊಟ್ಟ ವಸ್ತುಗಳು ಅಷ್ಟೇನೂ ಹೆಚ್ಚು ಮೌಲ್ಯದವು ಅಲ್ಲದಿದ್ದರೂ ಅದೇನೋ ಸೆಂಟಿಮೆಂಟ್, ಅದೇನೊ ಹೆಮ್ಮೆ, ತುಂಬಾ ಜತನವಾಗಿ ಕಾಪಾಡುತ್ತೇವೆ.
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಸಾಗರದಾಚೆಯ ಇಂಚರ
ಕ್ಷಣದ ಕೋಪ ಸಂಬಂಧಗಳಿಗೆ ಇತಿಶ್ರೀ ಹಾಡಿದ್ದಂತೂ ನಿಜ, ಕೋಪ ನಿಗ್ರಹ ಸುಲಭ ಏನಲ್ಲ, ಬಹಳ ಕಷ್ಟ ಅನ್ನುವ ಸ್ವತಃ ಅನುಭವ ಇದೆ.

@ಪ್ರೀತಿಯಿ೦ದ ವೀಣಾ :)
ನಿಮ್ಮ ಖುಷಿಯೇ ನನಗೆ ಖುಷಿ... ಬಹಳ ದಿನಗಳಾದರೂ ಮರೆಯದೆ ಓದುತ್ತಿರಲ್ಲ ಅದೇ ಹೆಮ್ಮೆಯ ವಿಷಯ.

@sunaath
ಒಂಥರಾ ಭಾವನಾತ್ಮಕ ಸಂಬಂಧ ಅದು, ನಾನಾ ನಮೂನೆಯ ಭಾವನೆಗಳ ಸಂಗಮ.

@ಮನಸು
ಮೆಚ್ಚಿದ್ದಕ್ಕೆ ಧನ್ಯವಾದಗಳು, ಸರಸ ಸಲ್ಲಾಪ... ಇದೊಂಥರಾ ಸ್ವಾರಸ್ಯ ಸ್ವಲ್ಪ ಕೂಡ...

@Raghu
ಜಗಳ ಜಾಸ್ತಿ ಇರದೇ, ಸ್ವಲ್ಪ ಮುನಿಸಿ ಮತ್ತೆ ಮುಗುಳ್ನಗು ಇದ್ದರೇ ಚೆನ್ನ.
ಒಂದು ದಿನದ ಮುಂಜಾವಿಗೆ ಶುರುವಾಗುವ ಲೇಖನ, ಮಲಗೋ ವೇಳೆಗೆ ಮುಗಿದಿರುತ್ತದೆ... ಮಧ್ಯಾಹ್ನದ ಸುಡುಬಿಸಿಲಿನ ನಂತರ ಸಂಜೆ ತಂಪು ಇರಲೇಬೇಕಲ್ಲವೇ.

@Keshav Kulkarni
ಧನ್ಯವಾದಗಳು

@aak
ಎನೋ ಹೀಗೇ ತಮಾಷೆ... ಗಹನ ವಿಷಯದ ತಾತ್ಪರ್ಯ ಇದೇ ಲೇಖನ...
ಮೆಚ್ಚಿದ್ದಕ್ಕೆ ಧನ್ಯವಾದಗಳು.

@Nisha
Thank you, just "roam"ing around "once" in my dreams is romance! and an a"tic"le about it is romantic :)

@Annapoorna Daithota
ಮೆಚ್ಚುಗೆಗೆ ಧನ್ಯವಾದಗಳು.
ಹ್ಮ್ ಕಾಫಿ ಮಗ್‌ನಲ್ಲಿ ಕಾಫಿ ಕುಡಿಯೊ ಮಜಾನೇ ಬೇರೆ ನಿಜ, ನಮ್ಮ ಆಫೀಸಲ್ಲಿ ಕೊಲೀಗ್ ಒಬ್ರು ದಿನಾ ದಿನಾ ಥರ ಥರ ಹೊಸ ತರಹದ ಮಗ್‌ನಲ್ಲಿ ಕಾಫಿ ಕುಡೀತಾರೆ... It's also a passion...
ನಾನೂ ಮಗ್‌ನಲ್ಲಿ ಕುಡೀತೀನಿ ಅಂದ್ರೆ ನನ್ನಾk ಕೊಡೋದೇ ಇಲ್ಲ, ಬಹಳ ಟೀ ಆರೋಗ್ಯಕ್ಕೆ ಒಳ್ಳೆದಲ್ಲ ಅಂತ ನೀವು ಹೇಳಿದಾಗಿನಿಂದ, ಕಪ್ಪು ಸೈಜ್ ಚಿಕ್ಕದಾಗಿ ಬಿಟ್ಟಿದೆ :)

ಜಲನಯನ said...

ಪ್ರಭು ಒಂದಂತೂ ನಿಜ, ನಿಮ್ಮಾK ಆಗುವಾk ಬಹಳ ಅದೃಷ್ಟಮಾಡಿರುವಾk ಆಗಿರುತ್ತಾಳಾk. ಏನಂತೀರಿ?
ನನ್ನ ಅನುಭವಕ್ಕೂ ಬಂದಿದೆ..ಕ್ಷಣ ತಡೆದರ ಇಂತಹ ಘಟನೆ ನೆಡದಾಗ ಮತ್ತೆ ನಮ್ಮ ಪ್ರತಿಕ್ರಿಯೆ ಸ್ವರೂಪವೇ ಪೂರ್ಣ ಬದಲಾಗಿರುತ್ತೆ....ಕೋಪಕ್ಕೆ ಬಾಯ್ಕೊಡಬಾರದು ಅನ್ನೋ ನಿಮ್ಮ ಬಾಯಿ..ಅಲ್ಲಲ್ಲ..ಕಿವಿ ಮಾತು...ಎಲ್ಲ ತಮ್ಮಾk ಹೊಂದಿರುವವರಿಗೆ..ಅನ್ವಯಿಸೋದೇ.....ಎನ್ನೂ ಎಶ್ಟು ದಿನಾರೀ..ನಿಮ್ಮ ಹುಸಿ ನಿಮ್ಮಾk ಮೇಲೆ ಹುಸಿ ಮುನಿಸು..ನಿಜ ನಿಮ್ಮಾk ಬಂದಾಗ್ ತಿಳಿಸಿ..ನಿಮ್ಮ ಎಲ್ಲ ಈ ನಿಮ್ಮಾk ಯನ್ನು ನೀವು ಪೂಸಿ ಹೊಡೆಯೋ ಲೇಖನಗಲನ್ನ ಬೈಂಡ್ ಮಾಡ್ಸಿ ಇಟ್ಟಿದ್ದೀನಿ..ಕೊಡೋಕೆ ಕಾಣಿಕೆ...ಹಹಹ

shivu.k said...

ಪ್ರಭು,

ಒಂದು ಕಾಫಿ ಕಪ್ಪನ್ನು ಹಿಡಿದುಕೊಂಡು ಎಷ್ಟೆಲ್ಲಾ [ನವರಸಗಳಲ್ಲಿ]ರಸಗಳನ್ನು ಕೊಟ್ಟಿದ್ದೀರಿ ಲೇಖನದಲ್ಲಿ. ಓದಿ ತುಂಬಾ ಖುಷಿಯಾಯ್ತು. ನನಗೂ ದಿನಪತ್ರಿಕೆ ವಿತರಣೆಯಲ್ಲಿ ತುಂಬಾ ಗಿಫ್ಟ್ ಬರುತ್ತವೆ. ಅದರಲ್ಲಿ ಹೆಚ್ಚಾಗಿ ಜಾಕೆಟ್ಟುಗಳು ಪ್ರತಿಯೊಂದರ ಮೇಲು ಅವರ[ಪ್ರಜಾವಾಣಿ, ಮಿಡ್‍ಡೇ, ಟೈಮ್ಸ್, ಡೆಕ್ಕನ್ ಕ್ರಾನಿಕಲ್, ಇತ್ಯಾದಿ]ಬ್ರಾಂಡ್ ನೇಮ್ ಇದ್ದೇ ಇರುತ್ತೆ. ನಾನು ನಿಮ್ಮಂತೆ ಹಾಕಿಕೊಂಡು ತಿರುಗುತ್ತಿದೆ. ನನ್ನಾಕೆ ಬೇಸರವಾಗಿ ಚೆನ್ನಾಗಿ ಬೈಯ್ದಾಗ ಈಗ ಹೊಸದಾಗಿ ಯಾವುದೇ ಬ್ರಾಂಡಿಲ್ಲದ ಸೊಗಸಾದ ನನ್ನದೇ ಸೈಜಿನ ನನ್ನ ಶ್ರೀಮತಿ ಇಷ್ಟಪಡುವ ಮಳೆ ಜಾಕೆಟ್ ಹಾಕಿಕೊಂಡು ಓಡಾಡುತ್ತೇನೆ. [ಸ ಜಾಕೆಟ್
ಇದ್ದರೆ ಮಾತ್ರ ನನ್ನ ಜೊತೆ ಬರುವುದು ಅಂತ ಷರತ್ತು ಹಾಕಿದ್ದಳು]

ಮತ್ತೆ ನನಗೂ ಕೆಲಸದ ಒತ್ತಡದಿಂದಾಗಿ ಬ್ಲಾಗಿಗೆ ಬರಲಾಗುತ್ತಿಲ್ಲ. ಸದ್ಯ ಈಗ ಸ್ವಲ್ಪ ಬಿಡುವಾಗಿದ್ದೇನೆ...

ನವೀನ್ said...

ಕೋಪವನ್ನು ಪ್ರದರ್ಶಿಸುವ ಬದಲು ಒಂದು ಕ್ಷಣ ತಡೆದದ್ದರಿಂದ ಎಷ್ಟು ಉಪಯೋಗ ಇದೆ ಎನ್ನುವುದು ನಿಮ್ಮ ಲೇಖನದಿಂದ ಮತ್ತೊಮ್ಮೆ ಸಾಬೀತಾಗಿದೆ. ಉತ್ತಮ ಬರಹಕ್ಕೆ ವಂದನೆಗಳು.

-- ನವೀನ ಕೆ.ಎಸ್.

nagaraj said...

goood

Prabhuraj Moogi said...

ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ

@ಜಲನಯನ
ನನ್ನಾಕೆಯಾಗುವವಳು ನನ್ನಾkಯಂತಿದ್ದರೆ ನಾನೂ ಅದೃಷ್ಟವಂತನೇ ಅಂತ ನನ್ನನಿಸಿk.
ನನಗೂ ಹೀಗೇ ಬಹಳ ಅನುಭವಗಳಾಗಿವೆ, ಮುಂಗೋಪ ಜಾಸ್ತಿ ಈಗ ಬಹಳ ಸಮಚಿತ್ತ ತಂದುಕೊಂಡಿದ್ದೇನೆ, ಆದರೂ ಕೆಲವೊಮ್ಮೆ ದುಡುಕಿರುತ್ತೇನೆ ಬೇಕೆಂತಲೇ ಏನಲ್ಲ ಅದು ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತಾರಲ್ಲ ಹಾಗೆ ಮುಂಗೊಪ ಬಂದುಬಿಟ್ಟಿರುತ್ತದೆ.
ಹುಸಿ ನನ್ನಾk ನಿಜ ನನ್ನಾಕೆ ಬರುವವರೆಗೆ :) ಎಲ್ಲಾದಕ್ಕೂ ಟೈಮ್ ಬರಬೇಕು ಸರ್, ಸ್ವಲ್ಪ ಕಾದು ನೋಡಿ.
ಒಹ್ ಒಳ್ಳೇ ಕಾಣಿಕೆಯೇ, ನನ್ನಾಕೆಯಾಗುವ ಮೊದಲೇ ಅವಳೆಲ್ಲ ಓದಲಿ ಅಂತ ನನ್ನಾಸೆ, ಹುಡುಗಿ ನೋಡಿದ ಮೇಲೆ ಬ್ಲಾಗ್ ಹೆಸರು ಹೇಳಿ ಹೀಗೊಂದು ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲ ಇದ್ದರೆ ನನ್ನಾkಯಾಗು ಅಂತ ಹೇಳಬೇಕೆಂದಿದ್ದೇನೆ ಏನಂತೀರಿ?...

@shivu
ಹೀಗೆ ಆಫೀಸಿನಲ್ಲಿ ಕೊಲೀಗ್ ಒಬ್ರು ದಿನ ದಿನ ತರಹೇವಾರಿ ಕಪ್ಪುಗಳಲ್ಲಿ ಕಾಫಿ ಹೀರುತ್ತಾರೆ ಅದನ್ನು ನೋಡಿ ಈ ಸ್ಪೂರ್ಥಿ ಬಂತು ನೋಡಿ...
ಅದೂ ನಿಜವೇ, ಬ್ರಾಂಡ ನೇಮ್ ಇಲ್ಲದ ಬ್ರಾಂಡ್ ನಿವ್ ಜಾಕೆಟ್ಟು ಹಾಕಿಕೊಳ್ಳೋದು ಒಳ್ಳೇದೇ ಇಲ್ಲಾಂದ್ರೆ ಕಂಪನಿ ಬ್ರಾಂಡ ಅಂಬ್ಯಾಸಿಡರ್ ಆಗಿಬಿಡುತ್ತೇವೆ.

ನನಗೂ ಈಗೀಗ ಬಿಡುವೇ ಸಿಗುತ್ತಿಲ್ಲ, ಅದಕ್ಕೇ ನನ್ನ ಲೇಖನಗಳಿಗೆ ಕೂಡ ಬರ ಬಂದಿದೆ ನೋಡಿ.

@ನವೀನ್
ಕೋಪ ಒಂಥರಾ ವಿಚಿತ್ರ, ನಾವು ಪ್ರದರ್ಶಿಸದಿದ್ದರೂ ಕೆಲವೊಮ್ಮೆ ಪರರಿಗೆ ಗೊತ್ತಾಗಿಬಿಟ್ಟಿರುತ್ತದೆ.
ಸ್ವಲ್ಪ ತಾಳ್ಮೆ ಇದ್ದರೆ ಎಲ್ಲ ಸುಗಮ... ಅನಿಸಿಕೆಗೆ ಧನ್ಯವಾದಗಳು, ಓದುತ್ತಿರಿ.

@nagraj
thaaank youuuu...

ವಿನುತ said...

ಎಂದಿನಂತೆ ಉತ್ತಮ ಸಂದೇಶದೊಂದಿಗೆ ಸರಸಮಯ ನಿರೂಪಣೆ. ಚೆನ್ನಾಗಿದೆ.

Prabhuraj Moogi said...

@ವಿನುತ
ಧನ್ಯವಾದಗಳು

veenashree said...

ತುಂಬಾ ಚೆನಾಗಿದೆ ಸಂದೇಶ .

Prabhuraj Moogi said...

@veenashree
ಥ್ಯಾಂಕ್ಯೂ..