ರಜೆ ಅಂದರೆ ಮುಂಜಾವನ್ನು ಸ್ವಲ್ಪ ಮುಂದೂಡಿ ಮಲಗಿಬಿಡುವುದರಿಂದ, ಏಳಾದರೂ ಏಳಲೇಬೇಕೆನ್ನಿಸಿರಲಿಲ್ಲ, ಬಹಳ ಚಳಿ ಅಲ್ವಾ ಅದಕ್ಕೆ ನನ್ನ ಬಳಿಯಿಂದ ಬಿಡುಗಡೆ ಸಿಗದೇ ಬೆಚ್ಚಗೆ ತಾಚಿ ಮಾಡುತ್ತಿದ್ದಳು ತುಂಟಿ ನನ್ನಾಕೆ ನನ್ನ ಜತೆಗೇ... ಹೀಗಿರುವುದನ್ನು ನೋಡಲಾಗದೇ ಹೊಟ್ಟೆಯುರಿದು ವಾಣಿ(ದೂರವಾಣಿ) ಕಿರುಚಿಕೊಂಡಳು, "ಇವರಿಗೇನು ಹೆಂಡ್ತಿ ಮಕ್ಳು ಇಲ್ವಾ ಹೊತ್ಕೊಂಡು ಹಾಯಾಗಿ ಮಲಗೋದು ಬಿಟ್ಟು ಹೊತ್ತೇರೊ ಮುಂಚೇನೆ ಕರೆ ಮಾಡಿದಾರೆ" ಅಂತ ಗೊಣಗುತ್ತಲೇ ಫೋನೆತ್ತಿದರೆ, ಹಿನ್ನೆಲೆ ಸಂಗೀತದಂತೆ "ಎಲ್ರೂ ನಿಮ್ಮಂತೆ ಸುಖಜೀವಿಗಳಲ್ಲ ಬಿಡಿ" ಅನ್ನುತ್ತ ಹೆಗಲಿಗೆ ತಲೆಯಾನಿಸಿ ಹುಲ್ಲಿನ ಹೊರೆಗೆ ಹುರಿ(ಹಗ್ಗ) ಕಟ್ಟುವರಂತೆ ಬಿಗಿದಪ್ಪಿ ಬಿದ್ದುಕೊಂಡಳು, ಹಾಗಾಗಿ ಎದ್ದೇಳದೇ ಬಿದ್ದಲ್ಲಿಂದಲೇ ಮಾತಾಡತೊಡಗಿದೆ ಅವಳೂ ಕಿವಿಯಾದಳು, ಪರಿಚಯದವರೊಬ್ಬರು ಕರೆ ಮಾಡಿದ್ದರು, "ಮಲಗಿದ್ದಿರಿ ಅಂತ ಕಾಣ್ತದೆ" ಅಂತ ಆಕಡೆಯಿಂದ ಅಂದರೆ, ನಾವು ಹೀಗೆ ಮಲಗಿರುವುದು ಅವರಿಗೆ ಕಾಣ್ತಿದೆಯೋ ಏನೊ ಅನ್ನೊ ಸಂಶಯ ಬಂದು "ಏನು ನಿಮಗೆ ಕಾಣ್ತಿದೆಯೆ" ಅಂದೆ, "ಇಲ್ಲ ಹಾಗೆ ಊಹಿಸಿದೆ" ಅಂದ್ರು, ಹಾಗೋ ಸರಿ ಒಳ್ಳೆದಾಯ್ತು ಅಂದುಕೊಂಡು, ಅದೂ ಇದೂ ಹಾಳು ಮೂಳು ಮಾತಾಡಿದ್ದು ಆಯ್ತು, ಕೊನೆಗೆ "ಮತ್ತೇನು ವಿಶೇಷಾ, ಏನಂತಾರೆ ನಿಮ್ಮಾಕೆ" ಅಂತ ಸಾಂದರ್ಭಿಕವಾಗಿ ಕೇಳಿದರು, "ನನ್ನಾಕೆ ಏನಂತಾರೆ ಐವತ್ತು ಆಯ್ತಲ್ಲ" ಅಂದೆ, ಅಲ್ಲೇ ಮುಖ ತಿರುಗಿಸಿ ಹುಬ್ಬು ಗಂಟಿಕ್ಕಿ, ಹುರಿದು ತಿಂದು ಬಿಡುವಂತೆ ನೋಡಿದಳು, ಮತ್ತಿನ್ನೇನು ಇನ್ನೂ ಮೂವತ್ತೂ ಆಗದವಳಿಗೆ ಐವತ್ತು ಆಯಿತೆಂದರೆ, ಆಕಡೆಯಿಂದ ಅವರೂ "ಐವತ್ತಾ, ಜೋಕ್ ಮಾಡ್ತಿಲ್ಲ ತಾನೆ" ಅಂದ್ರು. ಇಬ್ಬರಿಗೂ ಉತ್ತರಿಸುವಂತೆ "ನನ್ನಾk ಲೇಖನಗಳು ಐವತ್ತು ಆಯ್ತು", ಅಂದೆ. ಫೋನಿಡುವುದಕ್ಕೂ ಬಿಡದೆ ಇವಳು ಉತ್ಸುಕತೆಯಲ್ಲಿ "ರೀ ಹೌದೇನ್ರಿ" ಅಂತ ಪುಟಿದೆದ್ದು ಕೂತು ಕೈಕುಲುಕಿ ಅಭಿನಂದಿಸಿಯೂಬಿಟ್ಟಳು, ವಾಣಿಯ ಪಕ್ಕ ಸರಿಸಿಟ್ಟು ಮೇಲೆದ್ದು ಕೂತರೆ "ರೀ ಏನಾದ್ರೂ ಹೊಸದು ಮಾಡೋಣ ಐವತ್ತನೇ ಲೇಖನಕ್ಕೆ" ಅಂತ ತಲೆ ಕೆರೆದುಕೊಳ್ಳುತ್ತ ಹೊಸ ಐಡಿಯಾಗಾಗಿ ತಡಕಾಡಿದಳು "ಏನೊ ಒಂದು ಬರೆದರಾಯ್ತು ಬಿಡು" ಅಂತಿದ್ದರೂ ಕೇಳದೇ, "ಈ ದೊಡ್ಡ ದೊಡ್ಡ ಸಾಹಿತಿಗಳಿಗೆ ಐವತ್ತೊ ನೂರೊ ವಯಸ್ಸಾದಾಗ ಪುಟ್ಟ ಸಂದರ್ಶನ ಮಾಡೊದಿಲ್ವೇ ಹಾಗೆ ಸಂದರ್ಶನ ಮಾಡುತ್ತೀನಿ ತಾಳಿ" ಅಂತ ಸಿದ್ಧವಾದಳು, ಸಾಹಿತಿ.. ನೀ ಸಾಯುತಿ ಅಂತ ಸಾಯಿಸ್ತಾಳೆ ಇಂದು ನಿಜವಾಗಲೂ ಅಂತ ಅನಿಸುತ್ತಿತ್ತು.
ಅವಳು ಸಂದರ್ಶಕಿಯಾದರೆ, ನಾನು ಉತ್ತರಿಸಲು ಕೂತೆ, "ಒನ್ ಟೂ ತ್ರೀ ಮೈಕ್ ಟೆಸ್ಟಿಂಗ ಮೈಕ್ ಟೆಸ್ಟಿಂಗ್" ಅಂತ ಪಕ್ಕದಲ್ಲಿದ್ದ ಟಾರ್ಚನ್ನೇ ಮೈಕನಂತೆ ಹಿಡಿದಳು, "ಲೇ ಒಳ್ಳೆ ಚುನಾವಣಾ ರ್‍ಯಾಲಿನಲ್ಲಿ ಭಾಶಣದ ಮೈಕ್ ಟೆಸ್ಟ ಮಾಡಿದ ಹಾಗೆ ಮಾಡ್ತಾ ಇದೀಯಾ, ಸಂದರ್ಶನದಲ್ಲಿ ಎಲ್ಲ ಹಾಗೆ ಮಾಡಲ್ಲ" ಅಂದ್ರೆ, "ಈಗ ಸಂದರ್ಶಕಿ ಯಾರು, ನಾನು... ಸುಮ್ನೇ ಕೂತ್ಕೊಳ್ಳಿ" ಅಂತ ಅಬ್ಬರಿಸಿದಳು.
"ಈ ದಿನ ನಮ್ಮ ಜತೆ ನನ್ನಾk ಲೇಖನ ಬರೆಯುವ ಲೇಖk, ಗಣk ಅಭಿಯಾಂತ್ರಿk, ಯುವk ನಮ್ಮೊಂದಿಗಿದ್ದಾರೆ, ಅವರ ಬಗ್ಗೆ ಜಾಸ್ತಿ ಏನು ಹೇಳೊದು ಹುಟ್ಟಿನಿಂದ ಹೊಟ್ಟೆ ಹೊರೆಯುವ ಉದ್ಯೋಗದವರೆಗೆ ಅವರ ವೆಬಸೈಟಿನಲ್ಲಿ ಉದ್ದುದ್ದಕ್ಕೆ ಬರೆದುಕೊಂಡಿದ್ದಾರೆ, ಹೊಗಳಿಕೊಂಡಿದ್ದಾರೆ, ಅದೆಲ್ಲಾ ನಂಬೋಕೇ ಹೋಗಬೇಡಿ, ನಂಬಿದರೆ ಕಿವಿಮೇಲೆ ಹೂವ ಏನು ಹೂವಿನ ಕುಂಡವನ್ನೇ ಇಡ್ತಾರೆ, ಅದನ್ನ ಬಿಟ್ಟು ಹೊಸದನ್ನೇನಾದರೂ ಕೇಳೊಣ ಅಂತ ಇಲ್ಲಿ ನಮ್ಮೊಂದಿಗಿದ್ದಾರೆ, ಬನ್ನಿ ಮಾತಾಡೋಣ..." ಅಂತ ಚಿಕ್ಕ ಕಿರು ಪರಿಚಯ ನೀಡಿದಳು "ಅಲ್ಲಾ ನೀವು ಏನು ಹೊಗಳ್ತಾ ಇದೀರೊ, ತೆಗಳ್ತಾ ಇದೀರೊ ಏನ್ ಕಥೆ, ರೇಶಿಮೇ ವಸ್ತ್ರದಲ್ಲಿ ಮುಚ್ಚಿ ಚಪ್ಪಲಿಯಲ್ಲಿ ಏಟು ಕೊಟ್ಟಹಾಗಿದೆ" ಅಂದೆ. "ನಾವು ಕೇಳೊ ಪ್ರಶ್ನೆಗಳಿಗೆ ಉತ್ತರ ಕೊಡ್ರಿ, ನಮಗೆ ಹೇಗೆ ಬೇಕೊ ಹಾಗೆ ತಿರುಚಿ ಬರೆದುಕೊಳ್ತೀವಿ" ಅಂತ ಪಕ್ಕಾ ಸಂದರ್ಶನದ ಬಿಸಿ ತಲುಪಿಸಿದಳು, ಹಾಟ್ ಸೀಟ್ ಮೇಲೆ ಕುಳಿತಾಗಿದೆ ಎನೂ ಮಾಡೊಕಾಗಲ್ಲ ಅಂತ ಸುಮ್ಮನಾದೆ.
***
ಸಂದರ್ಶಕಿ: ಕೆಲ ದಿನಗಳ ಹಿಂದೆ, ನಿಮಗೆ ಅಪಘಾತ ಆಗಿತ್ತು ಹೇಗೊ ದೇವರ ದಯೆ ಇಂದು ನಮ್ಮೊಂದಿಗೆ ಕೂತು ಮಾತಾಡುತ್ತಿದ್ದೀರಿ, ಆ ದಿನ ರಸ್ತೇಲಿ ಹಾಗೆ ಬಿದ್ದುಕೊಂಡಿದ್ದರಲ್ಲ ಹೇಗನ್ನಿಸ್ತಾ ಇತ್ತು ನಿಮಗೆ?
ನಾನು: ಬಹಳ ಚೆನ್ನಾಗಿತ್ತು, ಯಾರಾದ್ರೂ ಬಂದು ಹೊದಿಕೆ ಒಂದು ಹೊದಿಸಿ ಒಂದು ತಲೆದಿಂಬು ಕೊಟ್ರೆ ಇನ್ನೂ ಚೆನ್ನಾಗಿರುತ್ತೆ ಅನಿಸ್ತಾ ಇತ್ತು, ರೀ ಎನ್ ಪ್ರಶ್ನೇ ಅಂತಾ ಕೇಳ್ತೀರಾ, ರಸ್ತೆ ನಡುವೆ ಬಿದ್ಕೊಂಡಿದ್ದೆ, ಹಿಂದೆ ಏನಾದ್ರೂ ಕಾರು ಗೀರು ಬಂದ್ರೆ ಏನಾಗಿರಬೇಡ, ಹೇಗನ್ನಿಸುತ್ತೇ ಅಂತೆ, ಅಪಘಾತದ ಆಘಾತದ ಬಗ್ಗೆ ಏನ್ರೀ ಗೊತ್ತು ನಿಮಗೆ, ಒಳ್ಳೆ ನ್ಯೂಜ್ ಚಾನಲ್ಲಿನವರ ಹಾಗೆ ಎಲ್ಲೊ ಅಪಘಾತದಲ್ಲಿ ಸಿಲುಕಿ ಗಾಯ ಅಗಿರುವವರ ಮುಂದೆ ನಿಂತು 'ಹೇಗನಿಸ್ತಾ ಇದೆ ನಿಮಗೆ ಈಗ' ಅಂತ ಕೇಳಿದ ಹಾಗೆ ಕೇಳ್ತಿದೀರಾ
ನಾನು ಹಾಗೆ ಸಿಡುಕಿದ್ದು ನೋಡಿ, ಸಂದರ್ಶಕಿ ಹೆದರಿ, ಇಲ್ಲ ಬಿಡಿ ಆ ವಿಷಯ ಬೇಡ ಅಂತ ಹೊಸ ಬೇರೆ ಏನಾದ್ರೂ ಮಾತಾಡೊಣ ಅಂತ ವಿಷಯ ಬದಲಾಯಿಸಿದಳು.
***
ಸಂ: ನಿಮ್ಮ ಜತೆ ನಿಮ್ಮಾಕೆಯನ್ನೂ ಕರೆತರಬಹುದಿತ್ತಲ್ಲ, ಯಾಕೆ ಬಂದಿಲ್ಲ, ಏನಾದ್ರೂ...?
ನಾ: ಅವಳು ತವರುಮನೆಗೆ ಹೋಗಿದಾಳೆ, ಇಲ್ಲಾಂದ್ರೆ ಬಂದಿರ್ತಾ ಇದ್ಲು, ನೀವು ಹೀಗೆ ಪ್ರಶ್ನೆ ಕೇಳಿ ಏನು ಜಗಳ ಇಲ್ದೇ ಇದ್ರೂನೂ, ಏನೊ ಕಥೆ ಹುಟ್ಟಿಸಿ ಬಿರುಕು ಮೂಡಿಸಿಬಿಡ್ತೀರಾ ನಂಗೊತ್ತಿಲ್ವಾ.
ಹಾಗಂದು ಅವರಿಗೆ ಸರಿಯಾದ ತಿರುಗೇಟೇ ನೀಡಿದೆ.
***
ಸಂ: ಸರಿ ಸರಿ, ನಿಮ್ಮಾಕೆ ತವರುಮನೆಗೆ ಹೋಗಿದಾರೆ ಒಪ್ಕೋತೀವಿ, ಹಾಗೆ ಒಂದು ದಿನ ನಿಮ್ಮಾಕೆ ನಿಮ್ಮನ್ನ ಬಿಟ್ಟು ಹೊರಟು ಹೋದ್ರೆ ಏನ್ ಮಾಡ್ತೀರಾ? ಹಾಗಾಗದಿರಲಿ ಅಂತಾನೇ ನಮ್ಮಾಸೆ ಆದರೆ ಹಾಗೆ ಬಿಟ್ಟು ಹೋದರೆ?
ನಾ: ಅವಳೆಲ್ಲಿ ಹೋಗ್ತಾಳೆ? ಎಲ್ಲೂ ಹೋಗಲ್ಲ ನನ್ನ ಮನಸಲ್ಲಿ ಸದಾ ಇದ್ದೇ ಇರ್ತಾಳೆ, ಹಾಗೊಂದು ವೇಳೆ ಬಿಟ್ಟು ಹೋದರೂ ಹುಚ್ಚನಾಗಿ ನಿಮಗೆ ಇನ್ನೊಂದು ಸುದ್ದಿಯಂತೂ ಆಗಲ್ಲ ಬಿಡಿ, ಅವಳೊಂದು ಕನಸು, ಆ ಕನಸು ಕಮರಲು ಬಿಡುವುದಿಲ್ಲ, ನಾನಿರುವವರೆಗೆ ನನ್ನಾk ನನ್ನೊಂದಿಗೇ...
***
ಸಂ: ನೀವು ಅತ್ಯಂತ ಪ್ರೀತಿಸುವ ಹುಡುಗಿ ಯಾರು?
ನಾ: ಹೀಗೆ ಥಟ್ ಅಂತ ಹೇಳಿ ಅಂತ ಕೇಳಿದ್ರೆ ಯಾರು ಅಂತ ಹೇಳೊದು... ಆಯ್ಕೆ ಕೊಡ್ರಿ ಆರಿಸೋಕೆ.
ಹಾಂ, ಇದಕ್ಕೆ ಆಯ್ಕೆ ಬೇರೆ ಬೇಕಾ ನಿಮಗೆ, ಎಷ್ಟು ಜನರನ್ನ ಪ್ರೀತಿಸ್ತೀರಾ? ಅಂತ ಕಿವಿ ಹಿಡಿದಳು, "ಲೇ ಲೇ ಬಿಡೆ ನಿನ್ನಲ್ಲದೇ ಇನ್ಯಾರನ್ನೇ ಪ್ರೀತ್ಸೊದು" ಅಂತ ಬಿಡಿಸಿಕೊಂಡೆ.
***
ಸಂ: ನಿಮ್ಮಾಕೆಯನ್ನ ಬಿಟ್ಟರೆ, ಇನ್ನೊಬ್ಬರು ಯಾರನ್ನ ಬಿಟ್ಟಿರೊಕೆ ನಿಮ್ಮಿಂದ ಆಗಲ್ಲ?
ನಾ: ವಾಣಿನಾ... ವಾಣಿ ಅಂದ್ರೆ ಬೇರೆ ಯಾರೊ ಹುಡುಗಿ ಅಲ್ಲ ಕಣ್ರೀ, ಮತ್ತೆ ಹೊಸ ಗಾಸಿಪ್ಪು ಏನೂ ಹುಟ್ಟು ಹಾಕಬೇಡಿ, ವಾಣಿ ಅಂದ್ರೆ ದೂರವಾಣಿ, ನನ್ನ ಮೊಬೈಲು, ಅವಳಿಲ್ದೇ ಒಂದು ದಿನ ಕೂಡ ಊಹಿಸಲಾಗಲ್ಲ :)
***
ಸಂ: ಸಿಟ್ಟು ಜಾಸ್ತಿ ಅಂತೆ ನಿಮಗೆ? ನಿಮಗೆ ತುಂಬಾ ಸಿಟ್ಟು ಬಂದ ಪ್ರಸಂಗ ಯಾವುದಾದ್ರೂ ನಮ್ಮೊಂದಿಗೆ ಹಂಚಿಕೊಳ್ತೀರಾ?
ನಾ: ಹೂಂ, ಸ್ವಲ್ಪ ಮುಂಗೋಪ, ಈಗೀಗ ಬಹಳ ಕಮ್ಮಿಯಾಗಿದೆ ಆದ್ರೂ ಬಹಳ ಸಿಟ್ಟು ಬಂದದ್ದು ಅಂದ್ರೆ, ಅದೊಂದು ದಿನ ನನ್ನಾk ಊರಿಂದ ವಾಪಾಸು ಬಂದಾಗ ನೀಲವೇಣಿಯಿಂದ nilವೇಣಿ ಆಗಿಬಿಟ್ಟಿದ್ಲು, ಅಲ್ಲಾ ಅಷ್ಟುದ್ದ ಅಂದವಾದ ಕೂದಲು ಯಾಕೆ ಹಾಗೆ ಹೇಳದೇ ಕೇಳದೆ ಕತ್ತರಿಸಿಹಾಕಿದ್ಲು ಅಂತ ತುಂಬಾ ಸಿಟ್ಟು ಬಂದಿತ್ತು, ಮತ್ತೆ ಬರದೇ ಇರುತ್ತಾ ಆ ವೇಣಿಯೊಂದಿಗೆ ಹಲವು ಕೀಟಲೆ ಮಾಡಿದ್ದು ಎಲ್ಲಾ ಅಳಿಸಿ ಹಾಕಿದಂತಾಗಿತ್ತಲ್ಲ. ಈಗ ಮತ್ತೆ ಅವಳು ನೀಲವೇಣಿಯೇ...
ಹಾಗನ್ನೋದೇ ತಡ, ಖುಷಿಯಾಗಿ ತನ್ನ ಜಡೆ ತುದಿ ಕೂದಲಿನಲ್ಲಿ ಕಚಗುಳಿಯಿಟ್ಟಳು.
***
ಸಂ: ನೀವು ವೃತ್ತಿಯಲ್ಲಿ ಐಟಿ ಉದ್ಯೋಗಿ, ಕೋಡು ಕುಟ್ಟೋದು ಬಿಟ್ಟು ಈ ಕಥೆ ಕವನದ ಗೀಳು ಹೇಗೆ ಬಂತು?
ನಾ: ಹಾಗೆ ನೋಡಿದರೆ ನಾನು ಕಾನನದ codeಕೋಣವೇ ಸರಿ, ಕೋಡ ಬರೆಯುವುದ ಬಿಟ್ಟರೆ ಬೇರೇ ಏನೂ ಜಾಸ್ತಿ ಗೊತ್ತಿಲ್ಲ, ಅದು ವೃತ್ತಿ, ಇನ್ನು ಪ್ರವೃತ್ತಿ ಅಂತ ಒಂದಿರುತ್ತೆ ನೋಡಿ, ಅದೇ ಇದು, ಮನದಲ್ಲಿನ ಹಲವು ವಿಚಿತ್ರ, ಹುಚ್ಚು ಕನಸುಗಳನ್ನು ಬರೆಯುವ ಪ್ರಯತ್ನ.
***
ಸಂ: ಸರಿ ಈ ನನ್ನಾk ಅಂತ ಪಾತ್ರ ಸೃಷ್ಟಿ ಮಾಡಿ ಬರೆಯೋಕೆ ಶುರು ಮಾಡಿದ್ದು ಹೇಗೆ?
ನಾ: ಹಾಗೇ ಸುಮ್ಮನೇ, ಅಂತ ಹೇಳಿದ್ರೆ ಸಿನಿಮಾ ಹೆಸರು ಅಂತೀರಾ, ಆದ್ರೆ ಶುರುವಾಗಿದ್ದೇ ಹಾಗೇ... ಒಂದಿನಾ ಸಹುದ್ಯೊಗಿ ಕಳಿಸಿದ ಒಂದು ಈ ಥರದ ರಸನಿಮಿಷಗಳ ಕಥೆ ಓದಿ, ತಲೆಯಲ್ಲಿ ಒಂದು ಐಡಿಯಾ ಬಂತು ನನ್ನಾಕೆ ಅಂತ ಒಬ್ಬಳಿದ್ದಿದ್ದರೆ ಹೇಗೆಲ್ಲ ನಾನಿರುತ್ತಿದ್ದೆ ಅಂತ ಬರೆಯಬೇಕನಿಸಿತು, ಅದನ್ನೇ ಬರೆದೆ... ಚೆನ್ನಾಗಿದೆ ಬ್ಲಾಗಗೆ ಹಾಕು ಅಂದ್ರು ಗೆಳೆಯರು... ಹಾಕಿದೆ, ಬಹಳ ಜನ ಓದಿ ಬೆಂಬಲಿಸಿದರು, ಹಾಗೆ ಇಲ್ಲೀವರೆಗೆ ಬಂದು ತಲುಪಿಬಿಟ್ಟೆ.
***
ಸಂ: ಮದುವೇನೇ ಆಗಿಲ್ಲ ಅಂತೀರಾ? ನಿಜಾನಾ?
ನಾ: ಇಲ್ಲ ಇನ್ನೂ ಆಗಿಲ್ಲ, ಇದೊಂಥರಾ ಹುಡುಗಾಟ, ಹುಡುಕಾಟ ಕೂಡ ಇನ್ನೂ ಶುರುವಾಗಿಲ್ಲ, ಇಲ್ಲಿ ಬರುವ ನನ್ನಾk ಒಂದು ಸುಂದರ ಕಲ್ಪನೆ ಮಾತ್ರ.
ಇದನ್ನ ಕೇಳಿ, ಅವಳು ಬೇಜಾರಾಗಿ "ಏನಂದ್ರಿ, ನಾನು ಬರೀ ಕಲ್ಪನೆನಾ?" ಅಂತ ಪೆಚ್ಚುಮೋರೆ ಹಾಕಿದ್ಲು, "ಹ್ಮ್ ಹಾಗಲ್ಲ ಕಣೇ, ವಾಸ್ತವಾಗಲು ಕಾದಿರುವ ಕನಸು ನೀನು, ಒಂದಲ್ಲ ಒಂದು ದಿನ ಈ ಕಲ್ಪನೆ ನನ್ನ ಕಣ್ಣ ಮುಂದೆ ನಿಂತಿರುತ್ತೆ" ಅಂತ ಸಮಾಧಾನಿಸಬೇಕಾಯ್ತು, ಆ ಮಾತಿಗೆ ಪುಳಕಗೊಂಡಳು.
***
ಸಂ: ಅಲ್ಲಾ ಇಷ್ಟೆಲ್ಲ ಬರೆಯೋಕೆ ಯಾವಾಗ ಸಮಯ ಸಿಗುತ್ತೇ ನಿಮಗೆ? ಯಾವಾಗ ನೋಡಿದ್ರೂ ಬೀಜೀ ಅಂತೀರಾ ಮತ್ತೆ.
ನಾ: ವೀಕೆಂಡಿನಲ್ಲಿ ಹಾಗೆ ಸ್ವಲ್ಪ ಸಮಯ ಮಾಡ್ಕೊತೀನಿ, ಬೇರೆ ಎನೂ ಇಲ್ದೇ ಸುಮ್ನೇ ಕೂರೊದಂದ್ರೆ ಸುಮ್ನೇನಾ, ಸಾಧ್ಯ ಆದಾಗಲೆಲ್ಲ ಕಂಡ ಕನಸುಗಳನ್ನೆಲ್ಲ ಪೋಣಿಸಿ ಬರೆದು ಬೀಸಾಕುತ್ತೇನೆ, ಪ್ರತೀ ದಿನ ಪ್ರತೀ ಘಟನೆಯಲ್ಲೂ ನನ್ನಾಕೆ ಇದ್ದಿದ್ದರೆ ಹೇಗಿರುತ್ತಿತ್ತು ಅಂತ ಯೋಚನೆ ಇದ್ದೇ ಇರುತ್ತದೆ, ಅದರಲ್ಲೇ ಯಾವುದೋ ಒಂದು ಹೆಕ್ಕಿ ತೆಗೆದು ಬರೆದರೆ ಒಂದು ಲೇಖನವಾಯ್ತು.
***
ಸಂ: ಈ ನಿಮ್ಮ ಕಲ್ಪನೆಗೆ ಸ್ಪೂರ್ಥಿ ಯಾರು?
ನಾ: ಸ್ಪೂರ್ಥಿನಾ, ಯಾರ್ಯಾರು ಅಂತ ಹೇಳಲಿ, ಬಸ್ಸಿನಲ್ಲಿ ಕಂಡ ಬೆಡಗಿ, ಟ್ರಾಫಿಕ್ ಸಿಗ್ನಲ್ಲಿನಲ್ಲಿ ಸಿಕ್ಕ ಹುಡುಗಿ, ಯಾರದೋ ಕಣ್ಣು, ಯಾರದೊ ನಗು, ಯಾರದೋ ನಡೆ ನುಡಿ, ಮತ್ತಿನ್ಯಾರದೋ ಮೌನ... ಹೀಗೆ ಬರೆಯಲು ಸ್ಪೂರ್ಥಿಯಾದವರೊ ಎಷ್ಟೊ ನನಗೇ ಗೊತ್ತಿಲ್ಲ... ಧೋ ಅಂತ ಮಳೆ ಸುರಿಯುತ್ತಿದ್ದರೆ ನೀರು ತೊಟ್ಟಿಕ್ಕುವಂತೆ ನೆನೆದಿದ್ದ ಆ ಮಳೆ ಹುಡುಗಿ ಕೂಡ ಸ್ಪೂರ್ಥಿಯೇ.
***
ಸಂ: ಓದುಗರ ಪ್ರತಿಕ್ರಿಯೆ ಹೇಗಿದೆ? ಪ್ರೇಮ ಪತ್ರ ಎಲ್ಲ ಬಂದಿದೆಯಾ? :)
ನಾ: ಸಧ್ಯ ಪ್ರೇಮ ಸಂದೇಶ ಯಾವುದೂ ಬಂದಿಲ್ಲ, ಬಂದಿರುವುದೆಲ್ಲ ಸ್ನೇಹ ಸಂದೇಶಗಳೇ, ಅನ್ನೊದೇ ಖುಷಿ, ಬಹಳ ಜನ ಪರಿಚಯವಾಗಿದ್ದಾರೆ, ಸ್ನೇಹಿತರಾಗಿದ್ದಾರೆ, ಹಿತೈಷಿಗಳಾಗಿದ್ದಾರೆ, ಅವರಿಗೆಲ್ಲ ನಾ ಚಿರಋಣಿ.
***
ಸಂ: ನಿಮ್ಮಾಕೆ ಏನಂತಾರೆ ನಿಮ್ಮ ಬಗ್ಗೆ?
ನಾ: ಅವಳ ಮಾತಿನಲ್ಲೇ ಹೇಳೊದಾದ್ರೆ... "ಹತ್ತು ಹಲವು ಕಲ್ಪನೆಗಳ ಹುಚ್ಚು ಹುಡುಗ", ಅಂಥ ಹುಚ್ಚುತನವನ್ನೇ ಮೆಚ್ಚುವ ಹುಚ್ಚಿ ಅವಳು.
***
ಸಂ: ಈ ವಯಸ್ಸಿನಲ್ಲೇ ಇಷ್ಟೆಲ್ಲ ಕನಸುಗಳಾ?
ನಾ: ಅಯ್ಯೋ ಕನಸು ಕಾಣದಿರಲು ನನಗೇನು ವಯಸ್ಸಾಯ್ತಾ? ಇಷ್ಟಕ್ಕೂ ಕನಸಿಗೂ ವಯಸ್ಸಿಗೂ ಏನು ಸಂಭಂದ. ಈ ವಯಸ್ಸಿನಲ್ಲಿ ಹೀಗೆ ಕನಸುಗಳಿರದೇ ಏನಿರಲು ಸಾಧ್ಯ, ನನ್ನ ಕನಸುಗಳಿಗೆ ಕೊನೆಯುಸಿರುವರೆಗೂ ಕೊನೆಯಿಲ್ಲ.
***
ಸಂ: ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಾ: ಅಲ್ಲ ನನ್ನ ಈ ಐವತ್ತು ಲೇಖನ ಓದಿದಮೇಲೂ ಮದುವೆ ಯಾಕಾಗಬೇಕು ಅಂತನಿಸಿದರೆ ಆಗಲೇಬೇಡಿ. ಮಾನವ ಸಂಘಜೀವಿ ಕಣ್ರೀ, ಜೀವಕ್ಕೆ ಜೊತೆಯಾಗಿ ಸಂಗಾತಿ ಇರಲಿ ಅಂತಾನೆ ಮದುವೆ ಮಾಡಿದ್ದು.
***
ಸಂ: ಆಯ್ತು ಮದುವೆ ಬಿಡಿ, ಹಾಗಾದ್ರೆ ಪ್ರೀತಿ ಬಗ್ಗೆ ಏನಂತೀರ?
ನಾ: ಪ್ರೀತ್ಸೊದ ತಪ್ಪಾ? ಮದುವೆ ಆದಮೇಲೂ ಪ್ರೀತಿ ತಾನೆ ಆ ಬಂಧನವನ್ನು ಗಟ್ಟಿಯಾಗಿಡೊದು. ಆದರೆ ಈ ಹದಿಹರೆಯದ ಆಕರ್ಷಣೆಯೇ ಪ್ರೀತಿ ಅಂತಂದುಕೊಳ್ಳೋದು ತಪ್ಪು, ಹಾಗೆ ತಪ್ಪುಗಳಾಗುವುದನ್ನು ನೋಡಿದರೆ ಬೇಜಾರಾಗುತ್ತದೆ.
***
ಸಂ: ಪಾಕಶಾಲೆ ಬಗ್ಗೆ ಬಹಳ ಬರೀತಾ ಇರ್ತೀರಾ? ಅಡುಗೆ ಮಾಡೊಕೆ ಬರ್ತದಾ?
ನಾ: ನಾನೇನೊ ಮಾಡ್ತೀನಿ ಅಂದ್ರೂ ಅವಳು ಬಿಡಲ್ಲ, ನಳಪಾಕವಂತೂ ಬರಲ್ಲ, ನಾ ಮಾಡಿದ್ದು ನಾ ತಿನ್ನುವ ಮಟ್ಟಿಗಾದರೂ ಚೆನ್ನಾಗಿರುತ್ತದೆ, ಆದ್ರೂ ಏನೇ ಅನ್ನಿ ಉಪ್ಪು ಹೆಚ್ಚಾದರೂ ಅವಳು ಮಾಡಿದ್ದರೆ ಉಪ್ಪುಪ್ಪಿಟ್ಟು ಕೂಡ ರುಚಿಯಾಗಿರುತ್ತದೆ.
***
ಸಂ: ಮೊದಲೆಲ್ಲ ಬರೀ ಹಾಸ್ಯ ಕಥೆ ಇರ್ತಾ ಇತ್ತು, ಲೇಖನದಲ್ಲಿ ಏನೊ ಒಳ್ಳೇ ಒಳ್ಳೇ ಮೆಸೇಜು ಕೊಡ್ತಾ ಇದೀರಲ್ಲ, ಏನು ಸಮಾಜ ಸೇವೆನಾ?
ನಾ: ಹೌದು ಬರೀ ನಗಿಸುವ ನಲಿವಿನ ಲೇಖನಗಳೆ ಬರೆಯುತ್ತಿದ್ದೆ, ಸಮಾಜ ಸೇವೆ ಅಂತೇನೂ ಇಲ್ಲ, ಒಬ್ರು ಇದರ ಜತೆಗೆ ಒಳ್ಳೇ ಮೆಸೇಜು ಕೊಡಿ ಅಂತ ಸಲಹೆ ನೀಡಿದ್ರು ನನಗೂ ಸರಿಯೆನ್ನಿಸಿತು, ಬರೀ ದುಡ್ಡು ದುಡ್ಡು ಅಂತ ಕೆಲ್ಸ ಮಾಡ್ತಾ ಇದ್ರೆ, ಜೀವನದ ಮೌಲ್ಯಗಳ ಅರಿವು ಆಗೋದು ಯಾವಾಗ? ಅದಕ್ಕೆ ಆ ಮೌಲ್ಯಗಳ ಬಗ್ಗೆ ಬರೆಯತೊಡಗಿದೆ, ತೀರ ಗಂಭೀರವಾಗಿ ಹೇಳಿದ್ರೆ ಯಾರೂ ಓದಲ್ಲ ಅಂತ ಹಾಸ್ಯದೊಂದಿಗೆ ಹಾಗೆ ಒಂದು ಮೆಸೇಜು ಇರ್ತದೆ.
***
ಸಂ: ಇಷ್ಟೆಲ್ಲಾ ಕಷ್ಟಪಟ್ಟು ಇದೆಲ್ಲ ಮಾಡಿ ನಿಮಗೇನು ಲಾಭ?
ನಾ: ಹತ್ತರಲ್ಲಿ ಹನ್ನೊಂದರಂತೆ ಹೀಗೆ ಹುಟ್ಟಿ ಸತ್ತು ಹೋದರೆ ಏನಾಯ್ತು ಹೇಳಿ, ನಾಳೆ ಹೀಗೊಬ್ಬ ಇದ್ದ, ಹೀಗೆ ಬರೀತಾ ಇದ್ದ ಅಂತ ಜನ ನೆನಪಿಡ್ತಾರಲ್ಲ, ಅದೇ ಸಾಕು, ಎಷ್ಟೊ ದಂಪತಿಗಳು ನಿಮ್ಮ ಲೇಖನ ಓದಿ ನಮ್ಮ ಜೀವನ ಸ್ವಲ್ಪ ಸುಧಾರಿಸಿದೆ ಅಂತಾನೋ, ಯಾರೊ ತಮ್ಮ ಭಾವಿ ಜೀವನಕ್ಕೆ ನಿಮ್ಮಿಂದ ಇನ್ನಷ್ಟು ಕನಸುಗಳು ಸಿಕ್ಕಿವೆ ಅಂತಾನೊ ಪತ್ರ ಬರೀತಾರಲ್ಲ ಅದರ ಮುಂದೆ ಇನ್ನಾವ ಲಾಭ ಬೇಕು ಹೇಳಿ, ಆ ತೃಪ್ತಿಯೆ ನನಗೆ ಲಾಭ, ನಾಳೆ ನನ್ನಾಕೆ ಇದನ್ನ ಓದಿ ಕನಸುಗಳು ನನಸಾದ್ರೆ ಅದಕ್ಕಿಂತ ಲಾಭ ಏನಿದೆ.
***
ಸಂ: ಒಂದು ವೇಳೆ ನಿಮಗೆ ಕೋಟಿ ರೂಪಾಯಿ ಲಾಟರಿಯಲ್ಲಿ ಸಿಕ್ರೆ ಏನ್ ಮಾಡ್ತೀರಾ?
ನಾ: ಅಷ್ಟು ದುಡ್ಡಿನಲ್ಲಿ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಲಂತೂ ಆಗಲ್ಲ, ಕೊನೇ ಪಕ್ಷ ಯಾವುದೋ ಕೆರೆಯಿಂದಾದರೂ ಕನೆಕ್ಷನ ಹಾಕಿಸ್ತೀನಿ, ನೀರಿನದು ದೊಡ್ಡ ಪ್ರಾಬ್ಲ್ಂ ಕಣ್ರೀ ನಮಗೆ.
"ಅಯ್ಯೋ ನಾನೇನೊ ನಾಲ್ಕು ಜನಕ್ಕೇ ಒಳ್ಳೇದಾಗೊ ಕೆಲಸ ಮಾಡ್ತೀರ ಅಂತ ಕೇಳಿದ್ರೆ ನೀವೇನ್ರಿ" ಅಂತ ಮೂಗು ಮುರಿದಳು, "ಸರಿ ಹಾಗಾದ್ರೆ ಬೋರವೆಲ್ ಕೆಟ್ಟರೆ ಪಕ್ಕದಮನೆ ಪದ್ದುಗೆ ನೀರು ಕೊಟ್ಟರಾಯ್ತು" ಅಂದೆ, "ಪಬ್ಲಿಕಗೆ ಹೆಲ್ಪ ಮಾಡು ಅಂದ್ರೆ ಪದ್ದುಗೆ ಹೆಲ್ಪ ಮಾಡ್ತಾರಂತೆ" ಅಂತ ಬಯ್ದಳು.
***
ಸಂ: ಯಾವ ಬಣ್ಣ ಇಷ್ಟ ನಿಮಗೆ?
ನಾ: ಹಾಗೆ ನೋಡಿದರೆ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲ ಬಣ್ಣಗಳೂ ಇಷ್ಟ, ಎಲ್ಲ ಬಣ್ಣ ಸೇರಿದ ಬಿಳಿ ಬಣ್ಣವೂ ಇಷ್ಟ ಅದರಲ್ಲೇ ಬಹಳ ಇಷ್ಟವಾಗುವ ಬಣ್ಣ ತಿಳಿನೀಲಿ ಬಣ್ಣ.
***
ಸಂ: ಬೇಜಾರಾದ್ರೆ, ಬಹಳ ದುಖಃ ಆದ್ರೆ ಏನ್ ಮಾಡ್ತೀರ?
ನಾ: ಅವಳಿದ್ರೆ ಕೀಟಲೆ, ಇಲ್ಲಾಂದ್ರೆ ಒಬ್ಬಂಟಿಯಾಗಿ ಕೂತು ಬಿಡ್ತೀನಿ, ಮನಸ್ಸಿನಲ್ಲಿ ಓಡುವ ಯೋಚನೆಗಳನ್ನು ಬೆಂಬತ್ತಿ ಹಿಡಿಯಲು ಪ್ರಯತ್ನಿಸುತ್ತ, ಕಾಡುವ ನೆನಪುಗಳ ಕೈಯಿಂದ ತಪ್ಪಿಸಿಕೊಳ್ಳುತ್ತ.
***
ಸಂ: ನಿಮಗಿಷ್ಟವಾದ ತಿಂಡಿ ತಿನಿಸು?
ನಾ: ಇಂಥದ್ದೇ ಅಂತೇನೂ ಇಲ್ಲ, ಅಮ್ಮನ ಕೈಯಡುಗೆ ರುಚಿ ಬಿಟ್ಟರೆ, ಅವಳು ಮಾಡುವ ತರ ತರನೆಯ ಹೊಸರುಚಿ ಟೀ ಕೂಡ ನನಗೆ ಇಷ್ಟ, ಅದಕ್ಕೆ ಓದುಗರೊಬ್ಬರು ನಿಮ್ಮ ಲೇಖನಗಳಲ್ಲಿ ಎಣಿಸಲಾಗದಷ್ಟು ಬಾರಿ ಟೀ ಹೀರಿದ್ದೀರಿ ಅಂತ ಬರೆದಿದ್ದರು!
***
ಸಂ: ಸರಿ, ಟೀ ಅಂತಿದ್ದಂತೆ ನೆನಪಾಯ್ತು, ನಮ್ಮ ಟೀ ಟೈಮ್ ಆಯ್ತು, ಕೊನೆಗೆ ನಿಮಗೇನಾದ್ರೂ ಕೇಳಬೇಕು ಅಂತಿದೆಯಾ?
ನಾ: ಪ್ರಳಯ ಆಗುತ್ತಂತೆ ನಿಜಾನಾ? ಯಾರಿಗಾದ್ರೂ ಗೊತ್ತಿದ್ರೆ ಹೇಳಿ ಪ್ಲೀಜ್, ಆಗೊದೇ ಆದ್ರೆ ಎರಡೇ ವರ್ಷದಲ್ಲಿ ಎರಡು ದಶಕದ ಜೀವನ ಜೀವಿಸಿಬಿಡ್ತೀನಿ :)
"ಈ ನಿಮ್ಮ ಪ್ರಳಯ ಆಗುತ್ತೊ ಇಲ್ವೋ ಮಾತಾಡುತ್ತ ಕೂತರೆ ಸಮಯ ಆಗತ್ತೆ ಏಳಿ, ಟೀ ಮಾಡ್ತೀನಿ" ಅಂತ ಎದ್ದು ಹೊರಟಳು, "ಕೇಳಿದ್ದಕ್ಕೆಲ್ಲ ಇಲ್ಲ ಅನ್ನದೇ ಉತ್ತರಿಸಿದೆ, ಕೊನೆಗೆ ಕೇಳು ಅಂದಿದಕ್ಕೆ ಒಂದು ಪ್ರಶ್ನೇ ಕೇಳಿದ್ರೆ ಹೀಗೆ ಉತ್ತರ ಕೊಡೊದಾ" ಅನ್ನುತ್ತ ಪಾಕಶಾಲೆಯೆಡೆಗೆ ನಡೆದರೆ "ರೀ ಹಾಲು ಖಾಲಿ, ಹಾಲಿನಂಗಡಿಯ ಹಾಸಿನಿನಾ ನೊಡ್ಕೊಂಡು ಬರಹೋಗಿ" ಅಂತ ಹಾಲು ತರಲು ಕಳಿಸಿದಳು, ಹಾಸಿನಿ ನೋಡುವ ಹುಮಸ್ಸಿನಲ್ಲಿ ಹೊರಟೆ... ಮತ್ತೆ ಸಿಕ್ತೀನಿ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಕಳೆದ ವರ್ಷ ಇದೇ ದಿನವೇ(22 Nov 2008) ನನ್ನ ಮೊದಲ ನನ್ನಾಕೆ ಲೇಖನ ಬ್ಲಾಗಿಗೆ ಹಾಕಿದ್ದು, ಇಂದೇ ಈ ಲೇಖನದೊಂದಿಗೆ ಒಟ್ಟಿಗೆ ಐವತ್ತು ಲೇಖನಗಳಾಗಿವೆ, ಮೊದಲು ಬರೆದ ಇಪ್ಪತ್ತೈದು ಲೇಖನಗಳ ಬಗ್ಗೆ ಈ ಪತ್ರದಲ್ಲಿ ನೀವು ಓದಿರಬಹುದು, ಮೇಲಿನ ಉತ್ತರಗಳಲ್ಲಿ ಅನುಕ್ರಮವಾಗಿ ಮತ್ತೊಂದಿಷ್ಟು ಲೇಖನಗಳ ಹೆಸರು ಹುದುಗಿಸಿದ್ದೇನೆ, ಆಸಕ್ತಿಯಿದ್ದವರು ಅವನ್ನೂ ಓದಬಹುದು, ಎಲ್ಲ ಲೇಖನಗಳನ್ನೂ ಸೇರಿಸಿ, ನನ್ನಾk++ ಅಂತ ಐವತ್ತು ಲೇಖನಗಳ ಸಂಕಲನ ಕೊಡುತ್ತಿದ್ದೇನೆ, ನನ್ನ ಸೈಟಿನಿಂದ ಡೌನಲೋಡ ಮಾಡಿಕೊಂಡು ಸಮಯ ಸಿಕ್ಕಾಗ ಓದಬಹುದು ಹಾಗೂ ಸ್ನೇಹಿತರಿಗೂ ಹಂಚಬಹುದು, ಆ ಹೆಸರು ಯಾಕೆ ಅಂತೀರಾ, ಮೊದಲೇ ಐಟಿ ಉದ್ಯೋಗಿ, ಈ C ಆದಮೇಲೆ C++ ಅಂತ ಪ್ರೊಗ್ರಾಮಿಂಗ ಭಾಷೆ ಬರಲಿಲ್ಲವೇ ಹಾಗೆ ಇದೂ ಕೂಡ ನನ್ನಾk ನಂತರ ನನ್ನಾk++... :-), ಹೀಗೆ ನಿಮ್ಮ ಪ್ರೊತ್ಸಾಹ ಚಿರಕಾಲ ಇರಲಿ ಎಂಬ ಕೋರಿಕೆಯೊಂದಿಗೆ...
ನನ್ನಾk++ - 50 Posts single PDF document
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
34 comments:
ಪ್ರಭು,
ನಿಮ್ಮ ಐವತ್ತಕ್ಕೆ ಮತ್ತು ನಿಮ್ಮ ಲೇಖನ ಪ್ರಾರಂಭವಾಗಿ ಒಂದು ವರ್ಷವಾಯಿತೆಂದಿರಿ. ಅದಕ್ಕೆ ಅಭಿನಂದನೆಗಳು.
ಸಂದರ್ಶನ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ಅದರಲ್ಲಿ ನಿಮ್ಮೆಲ್ಲಾ ರಸಿಕತೆ, ಹಾಸ್ಯ ಎಂದಿನಂತೆ ಇದೆ. ಲೇಖನ ಪೂರ್ತ ನಿಮ್ಮ ಹಳೆಯ ಲೇಖನಗಳ ಲಿಂಕ್ ಮಾಡಿ ಓದಿಲ್ಲದವರು ಓದುವಂತೆ ಮಾಡಿದ್ದೀರಿ.
ಮತ್ತೆ "ಹುಲ್ಲಿನ ಹೊರೆಗೆ ಹುರಿ(ಹಗ್ಗ) ಕಟ್ಟುವವರಂತೆ" ನಾನು ಪ್ರಯೋಗಿಸಬಹುದಲ್ವೇ[ನಗು]
ಮುಂದಿನ ಲೇಖನಗಳಿಗೆ all the best.
ಪ್ರಭುರವರೆ, ಸೂಪರ್ ಕಣ್ರಿ ಅಬ್ಬಾ ಏನು ಊಹೆ ನಿಮ್ಮದು..? ಹಾರ್ದಿಕ ಶುಭಾಶಯಗಳು ನಿಮ್ಮ ೫೦ನೆ ಬರಹಕ್ಕೆ - ನಿಮ್ಮಾಕೆಗೆ ; ಅವಳು ಇಲ್ಲಾನ್ದಿದ್ರೆ ಈ ಸಾಧನೆ ಬರೀಶೂನ್ಯ
ಊಟ ಹಾಕ್ಸೀ ಪಾ ಯಾವತ್ತಾದರೂ - ಬರೀ ಟೀ ನಲ್ಲೇ ಸಾಗಿಸ ಬೇಡಿ ...............
ಪ್ರೀತಿಯಿಂದ, ಗೀತ
5೦ನೇ ಬರಹಕ್ಕೆ Congratulation ಪ್ರಭು ಸರ್ . .
ಜೊತೆಗಿಲ್ಲದ ನಿಮ್ಮಾಕೆಯ ಕಲ್ಪನೆಯೊಂದಿಗಿನ ಸಂದರ್ಶನ ಸೂಪರ್ ..
ಊಟ ನಿದ್ದೆಗೂ ಸಮಯವಿಲ್ಲದ ನಿಮ್ಮ ಕೋಡ್ ಕೆಲಸದೊಂದಿಗೆ ನಿಮ್ಮಾಕೆಯ ಮೇಲಿನ ಬರಹಗಳೂ ಹೀಗೆ ಬರ್ತಾ ಇರಲಿ ..
ಪ್ರಭುಅವರೆ ನಿಮ್ಮ ೫೦ನೇ ಲೇಖನದ ಆಚರಣೆ ರೀತಿ ತುಂಬಾ ಚೆನ್ನಾಗಿದೆ ... ಹಳೆಯ ಲೇಖನಗಳ ತಲೆಬರಹಗಳನ್ನೂ ಸಂದರ್ಶನದಲ್ಲಿ ಉಪಯೋಗಿಸಿದ ರೀತಿ ನಿಜಕ್ಕೂ ಮೆಚ್ಚಬೇಕಾದ್ದೆ...
ನಿಮಗೆ ಮತ್ತು ನಿಮ್ಮಾk ಗೆ ಹೃತ್ಪೂರ್ವಕ ಅಭಿನಂದನೆಗಳು ....
- ಮಂಜುನಾಥ
ನಿಮಗೆ ಮತ್ತು ನಿಮ್ಮಾk ಗೆ ಹೃತ್ಪೂರ್ವಕ ಅಭಿನಂದನೆಗಳು
೫೦ರ ಸಂಚಿಕೆಗೆ ಶುಭಾಶಯಗಳು. ಏನು ಸಂದರ್ಶ ಹೇಳೋಕ್ಕೆ ಆಗೋಲ್ಲ ಬಿಡಿ ಹಹಹ. ನಿಮ್ಮ ಕಲ್ಪನೆಗೆ ಭೇಷ್!!!
ಗೆಳೆಯನೊಬ್ಬ ಕಳಿಸಿದ PDFನಲ್ಲಿದ್ದ ಲಿಂಕ್ ಹುಡಿಕಿಕೊಂಡು ಬಂದರೆ, ಇಲ್ಲಿ ೫೦ ರ ಸಂಭ್ರಮ :)
ನಿಮ್ಮ-ನಿನ್ನಾkಯ ಪ್ರಸಂಗಗಳು ತುಂಬಾ ಚೆನ್ನಾಗಿವೆ.
ನಿನ್ನಾಕೆ.net ಗಾಗಿ ಕಾಯ್ತಾ ಇರ್ತೀನಿ :)
ಪ್ರಭು,
ಲೇಖನದ ತಲೆಬರಹ ನನಗೆ ಕುತೂಹಲವನ್ನುಂಟುಮಾಡಿತು. ಏನಪ್ಪ ಇದು ಐವತ್ತು ಅಂತ ಆಷ್ಚರ್ಯವಾಯಿತು.
ಐವತ್ತರ ಸಂಭ್ರಮವನ್ನು ಎಂದಿನಂತೆ ನಿಮ್ಮ ವಿಶಿಷ್ಟ ಶೈಲಿಯಲ್ಲಿ ಆಚರಿದ್ದೀರ. ಶುಭಾಶಯಗಳು, ನಿಮಗೆ ಮತ್ತು ನಿಮ್ಮಾkಗೆ.
ಪ್ರಭು,
ಹಳೆಯ ಲೇಖನಗಳ ತಲೆಬರಹಗಳನ್ನ ಆದರಿಸಿ ಒಳ್ಳೆ ಸಂದರ್ಶನವನ್ನಾಗಿಸಿ ೫೦ನೇ ಲೇಖನ ನಮಗೆ ಉಣಬಡಿಸಿದ್ದೀರ....
೫೦ ಲೇಖನ ನೂರಾಗಿ ಸಾವಿರಗಳಾಗಲಿ ಅಂದು ಹಾರೈಸುತ್ತೇನೆ....
ನಿಮಗೆ ಮತ್ತು ನಿಮ್ಮಾkಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ....
ನಿಮ್ಮ (ನಿಮ್ಮಾK) ೫೦ ರ ಲೇಖನಕ್ಕೆ ನನ್ನ ಹಾರ್ದಿಕ ಶುಭಾಶಯಗಳು :) ನಿಮ್ಮ ಸಂದರ್ಶನ ಜೊತೆ ಹಳೆ ಸಂಚಿಕೆಗಳ ಲಿಂಕ್ ಕೊಟ್ಟ ಕಲ್ಪನೆ ತುಂಬಾ ಚೆನ್ನಾಗಿದೆ. ನಿಮ್ಮ ಈ ಲೇಖನಗಳ ಸರಮಾಲೆ ಹೀಗೆ ಮುಂದುವರಿಯಲಿ ಆಶಿಸುತ್ತೇನೆ.
ಪ್ರಭು, ೫೦ ರ ಸಂಭ್ರಮಕ್ಕೆ ಅಭಿನಂದನೆಗಳು
ಸಂದರ್ಶನ ಮಜವಾಗಿದೆ
ನಿಮ್ಮ ಹಾಸ್ಯ ದೊಳಗಿನ ಗಂಭೀರ ಚಿಂತನೆಯ ಬರಹಗಳು ಮುಂದುವರೆಯಲಿ
ಅಭಿನಂದನೆಗಳು
namste prabhu,
50 ra hagu 1 varshadha sambramake nana hardika shubhashayagalu.....
Nimma sambashane super..... prashnagalige yela sakath utharagalu ...
Nimma kalpane galige mithine ella ri..... ee nimma lekhanagalu bari 50 athva 100 eshtake mislagdhe....
enu hechu hechu bariyutiri....... odalu kandita nav edheve........ :-)
Shwetha
ಪ್ರಭು ರಾಜರೇ,
ನಿಮ್ಮಾಕೆ ಗೆ ೫೦ ಆಯಿತು, ಆದ್ದರಿಂದ ನಿಮ್ಮಾಕೆಗೆ ಅಭಿನಂದನೆಗಳು.
ಸಂಸಾರ ಅನ್ನೋ ಕಲ್ಪನೆ ಅಥವಾ ಗಂಡ ಹೆಂಡತಿ ಅನ್ನುವ ಸಂಬಂದ ತೆಳು ಆಗುತ್ತಾ ಬಂದಿರುವ ಕಾಲದಲ್ಲಿ ನಿಮ್ಮ ಲೇಖನಗಳು ಸಂಸಾರಿಕ ಜೀವನದ ಸಾಮರಸ್ಯ ವನ್ನು ವಿವರಿಸುತ್ತದೆ.
ನಿಮಗೆ ಬೇಗನೆ ಮದುವೆ ಆಗಿ, ನಮ್ಮೆಲ್ಲರಿಗೂ ಊಟ ಹಾಕಿಸುವಂತೆ ಆಗಲೇನು ಹಾರೈಸುವೆ.
ಪ್ರಭುಗಳೇ,
ನಿಮ್ಮ ಸಚಿನ್ ೫೦ ಹೊಡೆದ, ೧೦೦ ಹೊಡೆದ ಎನ್ನೋದು ಹಳೆ ನ್ಯೂಸ್... ಇಗ ಏನಿದ್ರೂ ಬ್ಲಾಗ್ ದುನಿಯಾದ ಸ್ಪೋರ್ಟ್ಸ್ ನ್ಯೂಸ್... ಪ್ರಭುಗಳು ೫೦ ಬಾರ್ಸಿದ್ರಂತೆ ಹೌದಾ ಅಂತ ಕೇಳಬೇಕು ಅನ್ನೋವಸ್ಟರಲ್ಲಿ 'ನನ್ನಾk' ಪ್ಲಸ್ ಪ್ಲಸ್ ಅಂತ ಹೇಳಿಯೇಬಿಡೋದ... 'ನನ್ನಾk' ಮುಖದ ಮಂದಹಾಸ ಈ ಲೇಖನದಲ್ಲಿ ಗೊತ್ ಆಗ್ತಾ ಇದೆ... ! :) ಪ್ರಭುಗಳೇ 'ನನ್ನಾk' ಪ್ಲಸ್ ಪ್ಲಸ್ ಗೆ ಯಾವ ವರ್ಶನ್ ಕಂಟ್ರೋಲ್ ಯುಸ್ ಮಾಡ್ತಾ ಇದ್ದೀರಾ... ಹ್ಹ ಹ್ಹ ಹ್ಹ ... :) ಸೂಪರ್ ಆಗಿ ಇದೆ ಸರ್...
ನಿಮ್ಮವ,
ರಾಘು.
congrats on your half century. I really like your style of writing. One of the best Kannada blogs!
- Keshav
ಪ್ರಭುರಾಜ,
ಐವತ್ತರ ಸಂದರ್ಶನ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲ ಹಳೆಯ
ಶೀರ್ಷಿಕೆಗಳನ್ನು ಸಮರ್ಪಕವಾಗಿ ಪೋಣಿಸಿದ್ದೀರಿ. ನಿಮ್ಮ ಕನಸುಗಳು ವಾಸ್ತವಾಗಲಿ; ನಿಮ್ಮನ್ನು ನಿಮ್ಮ ರೀತಿಯಲ್ಲಿಯೇ ಚುಡಾಯಿಸುವ ‘ನಿಮ್ಮಾ-k' ಬೇಗನೇ ಸಿಗಲಿ ಎಂದು ಹಾರೈಸುತ್ತೇನೆ.
P.S: ಶತಕದ ಸಂದರ್ಶನವೂ ಬೇಗನೇ ಬರಲಿ!
shivu ಅವರಿಗೆ
ನಿಮ್ಮ ಹಾರೈಕೆಗೆ ಧನ್ಯವಾದಗಳು.
ಹೀಗೆ ಏನೊ ಹೊಸತನ್ನು ಮಾಡುವುದಲ್ಲದೇ ಹಳೆ ಲೇಖನಗಳ ಮೆಲಕು ಹಾಕೋಣ ಅಂತ ಎಲ್ಲ ಲಿಂಕ್ ಮಾಡಿದೆ.
"ಹುಲ್ಲಿನ ಹೊರೆಗೆ ಹುರಿ(ಹಗ್ಗ) ಕಟ್ಟುವವರಂತೆ" ಅನ್ನುವುದನ್ನು ಅವಶ್ಯವಾಗಿ ಪ್ರಯೋಗಿಸಿ ಮಾತಿನಲ್ಲೂ... ನಡೆಯಲ್ಲೂ ;)
Geethashri Ashwathaiah ಅವರಿಗೆ
ಊಹೆ ಏನೂ ಇಲ್ಲ ಕಣ್ರಿ, ಸುಮ್ನೇ ಏನೊ ಒಂದು ಬರೆದುಕೊಂಡು ಹೋಗೊದು...
ಅವಳದೇ ಬ್ಲಾಗ್ ಅಂದಮೇಲೆ ಅವಳಿಲ್ಲದೇ ಏನಿದೆ ಹೇಳಿ.
ಹಬ್ಬದೂಟವನ್ನೇ ಹಾಕಿಸುತ್ತೇವೆ.. ಸವಿಯೋಣ ಅಂತ ಬನ್ನಿ...
Ranjita ಅವರಿಗೆ
ಹಾರೈಕೆಗೆ ಧನ್ಯವಾದಗಳು, ಜೊತೆಯಿಲ್ಲದಿದ್ದರೂ ಜೊತೆಯಿರುವಂತೇ ಕಲ್ಪನೆ... ಒಂದಿಲ್ಲೊಂದು ದಿನ ಜೊತೆಯಾಗುತ್ತಾಳೆ ಅನ್ನೊ ಭರವಸೆ :)
ನಿಮ್ಮ ಪ್ರೊತ್ಸಾಹ ಹೀಗೆ ಇದ್ದರೆ ಬರೆಯುತ್ತಲೇ ಇರುತ್ತೇನೆ.
Manjunath ಅವರಿಗೆ
ಏನಾದರೂ ಹೊಸತು ಇರಲಿ ಅಂತ ಹಾಗೆ ಮಾಡಿದ್ದು, ಹಳೆ ಲೇಖನಗಳು ಮತ್ತೆ ನೋಡುವಂತಾಗಲಿ ಅಂತ ಕೂಡ.
ಮೆಚ್ಚುಗೆಗೆ, ಹಾರೈಕೆಗೆ ಧನ್ಯವಾದಗಳು
Nisha ಅವರಿಗೆ
ಹಾರೈಕೆಗೆ ತುಂಬಾ ಧನ್ಯವಾದಗಳು.
ಮನಸು ಅವರಿಗೆ
ಹ್ಮ್, ಎಲ್ಲಾ ಅವಳದೇ ಕೆಲಸ, ಸುಮ್ಮನಿರಲು ಬಿಡದೇ ಸಂದರ್ಶನ ಅಂತ ಕೂರಿಸಿಬಿಟ್ಟಳು.
ಧನ್ಯವಾದಗಳು, ಹೀಗೇ ಓದುತ್ತಿರಿ.
ಆನಂದ ಅವರಿಗೆ
PDF ಫೈಲ್ ಮೇಲಗಳಲ್ಲಿ ಓಡಾಡುತ್ತಿದೆ, ಅದೇ ನಿಮಗೆ ಸಿಕ್ಕಿರಬೇಕು.
C,C++ ಆದಮೇಲೇ C#... ಹಾಗೇ ನನ್ನಾk,ನನ್ನಾk++ ಆದಮೇಲೆ ನನ್ನಾk# ಬಂದರೆ ಹೇಗೆ... :)
asp ಆದಮೇಲೆ aspx ಬಂತು ಹಾಗೆ ನನ್ನಾkx ಬಂದ್ರೂ ಬಂದೀತು ಏನಂತೀರಾ...
ರಾಜೀವ ಅವರಿಗೆ
ತಲೆಬರಹಗಳ ಸಂಕಲನಕ್ಕೆ ಏನೂ ಹೆಸರು ತೋಚಲಿಲ್ಲ ಅದೇ ಬರೆದೆ.
ಹೀಗೆ ಎನೊ ವಿಶಿಷ್ಟ ಶೈಲಿಯಲ್ಲಿ ಮಾಡುತ್ತಿರುವುದು, ಎಲ್ಲಾ ನಿಮ್ಮ ಪ್ರೊತ್ಸಾಹ ಹೀಗೆ ಇರಲಿ.
ಸವಿಗನಸು ಅವರಿಗೆ
ತಲೆಬರಹಗಳನ್ನು ತಲೆತುರಿಸಿಕೊಂಡು ಬರಹವನ್ನಾಗಿಸಿದ್ದು ಒಳ್ಳೆದೇ ಆಯ್ತು ಹಾಗಾದ್ರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನೂರು ಆಗಲೇ ಇನ್ನೂ ಸಮಯ ಬೇಕು, ಆಮೇಲೆ ನನ್ನಾಕೆ ಬಂದು ಎಲ್ಲಿ ಬರೆಯಲು ಸಮಯ ಸಿಗುತ್ತದೊ ಇಲ್ವೋ ಯಾರಿಗೆ ಗೊತ್ತು.
Mahantesh Kabadagi ಅವರಿಗೆ
ಶುಭಾಶಯಗಳಿಗೆ ಧನ್ಯವಾದಗಳು, ಹೊಸದೇನಾದರೂ ಹಳೇ ನಂಟು(ಲಿಂಕ್) ಬಿಡಬಾರದು ಅಂತ, ಅಲ್ಲ ಲಿಂಕಗಳು ಬಂದವು :)
ಸಾಗರದಾಚೆಯ ಇಂಚರ ಅವರಿಗೆ
ಧನ್ಯವಾದಗಳು ಸರ್, ಹಾಸ್ಯ ಗಂಭೀರ ವಿಧ ವಿಧವಾಗಿ ಬರೆಯುತ್ತೇನೆ ಓದುತ್ತಿರಿ.
Shwetha ಅವರಿಗೆ
ಶುಭಾಶಯಗಳಿಗೆ ಧನ್ಯವಾದಗಳು..
ಅವಳು ಕೇಳುವ ಪ್ರಶ್ನೆಗಳಿಗೆ ಸಕತ್ತು ಉತ್ತರಗಳ ಕೊಡುತ್ತಲೇ ಸಾಕಾಯ್ತು.
ಕಲ್ಪನೆಗೆ ಮಿತಿ ಇಲ್ಲದಾಗಿ ಮಿತಿ ಮೀರಿ ಬೆಳೆಯುತ್ತಿದೆ, ಎಲ್ಲಿ ಕಲ್ಪನೆಗಳಲ್ಲಿ ಕಳೆದುಹೋಗುತ್ತೀನೊ ಅಂತ ಭಯ.
ನೀವು ಓದುತ್ತೀರೆಂದರೆ ಬರೆಯಲು ನಾನು ಇದ್ದೇನೆ... ತಮ್ಮ ಪ್ರೋತ್ಸಾಹ ಹೀಗೆ ಇರಲಿ.
ಬಾಲು ಅವರಿಗೆ
ಸರ್ ಅವಳಿಗೆ ಐವತ್ತು ಆಗಿಲ್ಲವಂತೆ ಬರೀ ಒಂದು ವರ್ಷ ಆಗಿದೆ ಅಂತೆ... ಹುಡುಗಿಯರಿಗೆ ವಯಸ್ಸಾಯ್ತು ಅಂತ ಹೇಳಿದ್ರೆ ಎಲ್ಲಿ ಕೇಳ್ತಾರೆ :)
ನಿಜ ನಿಮ್ಮನಿಸಿಕೆ ಅಂತೆ ಈ ಸಂಬಂಧಗಳು ತೆಳುವಾಗುತ್ತ ಬಂದಿವೆ, ಆದರೆ ಆ ಗಟ್ಟಿತನ ಇದ್ದರೆ ಹೇಗಿರುತ್ತದೆ ಅಂತ ತೋರಿಸುವ, ಹಾಗೆ ಇರಲು ಬಯಸುವ ಪ್ರಯತ್ನ.
ಮದುವೆ ಊಟ ಹಾಕಿಸೋಣವಂತೆ ತಾಳಿ... ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು.
Raghu ಅವರಿಗೆ
ಬ್ಲಾಗ ದುನಿಯಾದ ಪುಟ್ಟ ಬ್ಯಾಟ್ಸಮನ್ ನಾನು ದೈತ್ಯರ ಮುಂದೆ ಕುಬ್ಜ ನಿಮ್ಮೆಲ್ಲರ ಪ್ರೋತ್ಸಾಹವೇ ಇಷ್ಟು ಬರೆಯಲು ಕಾರಣ.
ನನ್ನಾkಗೆ... ವರ್ಶನ್ ಕಂಟ್ರೋಲ್ ಅಂತ We Yes Yes (VSS-Visual Source Safe) ಯೂಜ್ ಮಾಡ್ತಾ ಇದೀವಿ... :)
ನಾನೂ ಯೆಸ ಅಂತೀನಿ ಅವಳೂ ಯೆಸ್ ಅಂತಾಳೆ ನಾವು ಆಗ್ತೀವಿ...
To: Keshav Kulkarni
Thank you sir, just writing some random thoughts, happy to to appreciated by some of veteran bloggers like you.
sunaath ಅವರಿಗೆ
ಶೀರ್ಷಿಕೆಗಳ ಒಂದೊಂದೇ ಪೋಣಿಸಿ ಸರಮಾಲೆಯಾಯ್ತು.
ಕನಸುಗಳು ವಾಸ್ತವಾಗಲೇ ಕಾದಿದ್ದೇನೆ ಸರ್, ಎಲ್ಲೊ ಅಳುಕು ಎಲ್ಲಿ ಎಲ್ಲ ಕನಸು ನುಚ್ಚುನೂರಾಗುತ್ತೋ ಅಂತ, ಆದರೂ ಕನಸುಗಳಿಗೆ ಕೊನೆ ಎಲ್ಲಿ...
ನಿಮ್ಮ ಹಾರೈಕೆಗೆ ಧನ್ಯವಾದಗಳು, ಶತಕವಾದರೆ ಇನ್ನೂ ಸಕತ್ತಾಗಿ ಏನೊ ಹೊಸದು ಮಾಡುತ್ತೀವಿ ನೋಡಿ...
ಸಕತ್ ಕ್ರಿಯೇಟಿವೆ ಇದೆ, ಹಳೆಯದನ್ನು ಮೆಲುಕು ಹಾಕುತ್ತ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುವ ಪರಿ. ಅಭಿನಂದನೆಗಳು, ನಿಮಗೂ ನಿಮ್ಮಾಕೆಗೂ. ನಿಮ್ಮಾಕೆ++ ನ ಇನ್ಫೈನೈಟ್ ಲೂಪ್ ನಲ್ಲಿ ಎಕ್ಸೆಕ್ಯೂಟ್ ಮಾಡಿ :)
ಪ್ರಭುರಾಜ್ ಸರ್,
ನಿಮ್ಮ ಐವತ್ತರ ಸಂಭ್ರಮಾಚರಣೆ ನಿಜಕ್ಕೋ ಸಕತ್ತಾಗಿದೆ.... ಹಿಂದಿನದನ್ನು ಮೆಲಕು ಹಾಕುತ್ತಾ, ಓದುಗರಿಗೂ ಹೇಳುತ್ತಾ ಸಾಗುವ ಪರಿ ಚೆನ್ನಾಗಿದೆ.. ಹೀಗೆ ಸಾಗಿರಿ ನೀವು ನಿಮ್ಮಾ k ಜೊತೆ..... ಕಳೆದ ಸಾರಿ ಟೀ ಮಾಡಲು t . v . ಯಲ್ಲಿ ಹೊಸ ರುಚಿ ಮಾಡಲು ಬಂದಿದ್ದೀರಿ.... ಈ ಸಂದರ್ಶನ ಯಾವ ಚಾನೆಲ್ ನಲ್ಲಿ ಬರತ್ತೆಹೇಳಿಬಿಡಿ....
ಪ್ರಭು, ಭಾಳ್ ಮಸ್ತ್ ಅದರಿ ನಿಮ್ ಆಚರಣೆ ಸ್ಟೈಲ್ ......
ನಾವು ನಮ್ಮ ಸಾಧನೆ ನಾ ಆಚರಿಸುವಾಗ, ನಾವು ನಡೆದು ಬಂದ ದಾರಿ ಮೆಲುಕು ಹಾಕಬೇಕು ಅನ್ನೋ ಸಂದೇಶ ಕೊಡ್ತದ ನಿಮ್ಮ ಬ್ಲಾಗ್....
ಹಾರ್ದಿಕ ಶುಭಾಶಯಗಳು ...
-ಪವನ
ಪ್ರಭು ಅವರೇ,
ಈವತ್ತು ಬೆಳಗ್ಗೆ, ಎಂದಿನಂತೆ ಹಾಲು ಕಾಯಿಸಲು ಒಲೆ ಮೇಲಿಟ್ಟು ಹಾಗೆ ಯೋಚನೆಯಲ್ಲಿ ಮುಳುಗಿದ್ದೆ! ಅದೇನೆಂದರೆ, ನಾನು ಲೇಖನ ಬರೆದು ತಿಂಗಳಾಗುತ್ತಾ ಬಂತು, ಕಂಪ್ಯೂಟರ್ ಹತ್ತಿರ ಸುಳಿಯಲೂ ಬಿಡುವಾಗುತ್ತಿಲ್ಲಾ!! ಹಾಗಾಗಿ ಬೇರೆ ಯಾರ ಲೇಖನವೂ ಓದಲಾಗಲಿಲ್ಲ. ಪ್ರಭು, ಶಿವೂ ಇವರೆಲ್ಲಾ ತುಂಬಾ ಲೇಖನಗಳನ್ನು ಬರೆದಿರುತ್ತಾರೆ ಮಿಸ್ ಮಾಡದೆ ಎಲ್ಲಾ ಓದಬೇಕು. ಮತ್ತೆ ಪ್ರಭು ಅವರಿಗೇನಾದರೂ ಈ ಗ್ಯಾಪ್ ನಲ್ಲಿ ಮದುವೇ ಏನಾದರೂ ಆಗಿದೆಯೋ ಏನೋ ..........??!! ಹೀಗೆ ಯೋಚನೆಯಲ್ಲಿ ಮೈ ಮರೆತಿದ್ದ ನನಗೆ ಹಾಲು ಕಾದು ಉಕ್ಕಿ ಚೆಲ್ಲಿದಾಗಲೇ ವಾಸ್ತವಕ್ಕೆ ಬಂದದ್ದು ನಾನು.
ಹೇಗಾದರೂ ಮಾಡಿ ಈ ದಿನ ಕೆಲವು ಲೇಖನಗಳನ್ನಾದರೂ ಓದಲೇ ಬೇಕು ಎಂದು ಮನಸ್ಸು ಮಾಡಿ ಬ್ಲಾಗ್ ಪ್ರಪಂಚಕ್ಕೆ ಹಿಂದಿರುಗಿ ಬಂದು ನಿಮ್ಮ ಲೇಖನವೇ ಮೊದಲು ಓದಿದೆ. ನೀವು ನೋಡಿದರೆ ಆಗಲೇ ನಿಮ್ಮಾಕೆಯೊಂದಿಗೆ ಗೋಲ್ಡನ್ ಜುಬಿಲೀ ಆಚರಿಸಿಕೊಂಡಿದ್ದೀರಾ.......?!!
ಇರಲಿ, ಹಾಲು ಉಕ್ಕಿದ್ದೂ ಒಂದು ಶುಭ ಸೂಚನೆ! ಇಷ್ಟರಲ್ಲೇ (ಅಂದರೆ ಮುಂದಿನ ವರ್ಷ) ನಿಮ್ಮ ಮದುವೇ ಗ್ಯಾರಂಟೀ !!!!!
ಯಾಕೆಂದರೆ ಈಗ ಸಧ್ಯಕ್ಕೆ ಅಂದರೆ ಸಂಕ್ರಾಂತಿ ಕಳೆಯುವವರೆಗೂ ಯಾವುದೇ ಮುಹೂರ್ತಗಳಿರುವುದಿಲ್ಲ ಅಲ್ಲವೇ ಅದಕ್ಕೆ !!
ನಿಮ್ಮೆಲ್ಲಾ ಸಾಧನೆಗಳಿಗೂ ನನ್ನ ಹಾರ್ದಿಕ ಅಭಿನಂದನೆಗಳು!
ಮೊದಲಿಗೆ ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ, ಕೆಲಸದೊತ್ತಡದಲ್ಲಿ ಎಲ್ಲ ಏರುಪೇರು... ವಾರಂತ್ಯಕ್ಕೆ ಊರಿಗೆ ಪರಾರಿಯಾಗಿದ್ದೆ ಕೂಡ!
ವಿನುತ ಅವರಿಗೆ
ಎನೊ ಹೊಸದಾಗಿ ಏನಾದರೂ ಮಾಡೊದು, ಅದಕ್ಕೇ ಅಲ್ವೇ... telprabhu - nothing but creativity ಅಂತ ಟ್ಯಾಗ್ ಲೈನ್...
"ಇನ್ಫೈನೈಟ್ ಲೂಪ್ ನಲ್ಲಿ ಎಕ್ಸೆಕ್ಯೂಟ್ ಮಾಡಿ" ಅಂದಿದ್ದು ಬಹಳ ಚೆನ್ನಾಗಿತ್ತು, ನನಗೇನೊ ಅದೇ ಆಸೆ ಆದರೆ ಎಲ್ಲಿ ಸಿಸ್ಟೆಮ್ ಹ್ಯಾಂಗ್(hang) ಆಗುತ್ತೊ ಅಂತ ಭಯ :)
ದಿನಕರ ಮೊಗೇರ.. ಅವರಿಗೆ
ನಿಮಗಿಷ್ಟ್ ಆಗಿದ್ದು ನನಗೆ ಖುಷಿ, ಅವಳೇ ಕೂತು ಸಂದರ್ಶನ ಅಂತ ಮಾತಿಗೆಳೆದು ಏನೇನೊ ಮಾತಾಡಿಸಿಬಿಟ್ಟಳು :)
ಅದನ್ನು ಸಂದರ್ಶಕರು(ನನ್ನಾk) ಇನ್ನೂ ನಿರ್ಧರಿಸಿಲ್ಲವಂತೆ... ಪ್ರೋಗ್ರಾಮಗೆ ಜಾಹೀರಾತು ಸಿಗುವವರೆಗೆ ಯಾವ ಚಾನಲ್ಲಿನಲ್ಲೂ ಬರಲ್ಲ ಅಂತೀದಾರೆ :)
Complicated.. ಅವರಿಗೆ
ಪವನ, ಯೂಜರ್ನೇಮ ಕಾಂಪ್ಲಿಕೇಟೆಡ ಅಂತಿದ್ರೂ ಸಿಂಪಲ್ಲಾಗಿ ಸೂಪರ ಕಮೆಂಟ್ ಕೊಟ್ಟೀದೀರಾ :) ಭಾಳ ಚಲೋ ಅನಿಸ್ತರಿ...
ಹಳೆಯದು ಹೇಗೆ ಮರೆಯಲಾಗುತ್ತದೆ, ಅದಕ್ಕೇ ಮತ್ತೊಂದು ಮೆಲಕು...
ಹಾರೈಕೆಗೆ ಧನ್ಯವಾದಗಳು.
SSK ಅವರಿಗೆ
ಅಬ್ಬಾ ಎಷ್ಟೊಂದು ಸಮಯ ವ್ಯಯಿಸಿ ಒಂದು ಸುಂದರ ಪ್ರತಿಕ್ರಿಯೆ ಬರೆದಿದ್ದೀರಿ, ತುಂಬಾ ತುಂಬಾ ಧನ್ಯವಾದಳು...
ನನ್ನದೂ ಅದೇ ಕಥೆ, ಕಳೆದೊಂದು ತಿಂಗಳಿಂದ ಹೆಚ್ಚಿನ ಕೆಲಸದೊತ್ತಡ, ವೈಯಕ್ತಿಕ ಕೆಲಸಗಳು, ವಾರಾಂತ್ಯಕ್ಕೆ ಊರಿಗೆ ಪಯಣ... ಹೀಗೆ ಬ್ಲಾಗ ಬರೆಯಲೂ ಆಗುತ್ತಿಲ್ಲ, ಓದಲೂ ಆಗುತ್ತಿಲ್ಲ ನನಗೂ...
ಈ ನಡುವೆ ಮದುವೆ ಯಾವಾಗ ಆಗಬೇಕು ಹೇಳಿ, ಅದೂ ನಿಮಗೆ ಹೇಳದೇ... ಕರೆಯೋಲೆ ಕಳಿಸದೇ...
ಹಾಲು ಉಕ್ಕಿದ್ದಂತೂ ಶುಭ ಸೂಚನೆ, ಹಾಗೆ ನಿಮ್ಮ ಬ್ಲಾಗನಲ್ಲೂ ಬರಹಗಳು ಉಕ್ಕಿ ಬರಲಿ...
ನಿಮ್ಮ ಹಾರೈಕೆ ನಿಜವಾದರೆ ಹಾಗೆ ಹೊಸ ಮನೆ ಮಾಡಿ ಹಾಲು ಉಕ್ಕಿಸುವ ಸಂಪ್ರದಾಯ ಆಚರಿಸಿಯೇ ಬಿಟ್ಟೇನು ಕಾದು ನೋಡೋಣ...[ಸಧ್ಯ ಬ್ಯಾಚುಲರ... ಹಾಗೆ ರೂಮನಲ್ಲಿದ್ದೇನೆ ಅದಕ್ಕೆ :) ]
ಹೀಗೇ ನಿಮ್ಮ ಪ್ರೋತ್ಸಾಹ ಚಿರಕಾಲ ಇರಲಿ.
ಪ್ರಭುರಾಜನ ಸುವರ್ಣ ಸಂಭ್ರಮಕ್ಕೆ, ನಮ್ಮೆಲ್ಲರ ಶುಭಹಾರೈಕೆ, ಭೇತಾಳನ ಬೆಂಬಿಡದ ಶತವಿಕ್ರಮನಂತೆ...ನನ್ನಾkಯನ್ನು ...ಸಾರಿ..ನಿಮ್ಮಾk ಯನ್ನು ಬಿಡದೆ, ಮಗುವಿನ ಪ್ರಶ್ನೆಗೆ ಗೊತ್ತಿಲ್ಲ ಮಗು ಎನ್ನದೇ, ಪ್ರಳಯಕ್ಕೂ ಪ್ರಣಯದ ಪಾಠಹೇಳಿಕೊಟ್ಟು ಪುಸಲಾಯಿಸುವ ..ಪ್ರಭುರಾಜ..ಯವಾಗಪಪ್ಪಾ...ನಿಜೆ ಮೋಜ?? ಅಂದ್ರೆ ಮದುವೇನಪ್ಪಾ...ತಿಳಿಸ್ದೇ ಅಗ್ಬಿಡ್ಬ್ಯಾಡಾ ಮತ್ತ್...
ತಮ್ಮ ಹಾರೈಕೆಗೆ ಧನ್ಯವಾದಗಳು ಸರ್,
ನಿಜವಾದ ಮೋಜು... ನಿಜವಾಗುತ್ತೊ ಇಲ್ವೊ ಗೊತ್ತಿಲ್ಲ ಒಂಥರಾ ಜೂಜು, ಹತ್ತಿದರೆ ಲಾಟರಿ... ಇಲ್ಲದಿದ್ರೆ ಪಾಪರ್ ರೀ... ಹೇಳದೇ ಅದು ಹೇಗೆ ಆಗಲಾಗುತ್ತದೆ, ಖಂಡಿತ ಕರೆಯೋಲೆ ಕಳಿಸುತ್ತೇನೆ, ಅದಕ್ಕಿನ್ನೂ ಸಮಯವಿದೆ...
ಎಲ್ಲ ಲೇಖನಗಳು ಸೂಪರ್ :)
ನಿಮ್ಮಾK ಐವತ್ತರ ಸಂಭ್ರಮಕ್ಕೆ ನನ್ನ ಶುಭಾಶಯಗಳು. Keep Writing. ;-)
All the BEST.
-- ನವೀನ್ ಕೆ.ಎಸ್.
ಪ್ರಭುರವರೇ, ನಿಮ್ಮ ೫೦ನೇ ಬರಹಕ್ಕೆ ಅಭಿನಂದನೆಗಳು..ಬಹಳ ಚೆನ್ನಾಗಿ ಬಂದಿದೆ ಸಂದರ್ಶನ..ಹೀಗೆ ಬರೀತಾ ಇರಿ...ನಿಮ್ಮ ಬ್ಲಾಗಲ್ಲಿ ಮಗುವಿನ ಕಿಲಕಿಲ ಯಾವಾಗ?? :-)
ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ
@Anonymous
ಧನ್ಯವಾದಗಳು :) ಹೆಸರು ಬರೆದಿದ್ದರೆ ಚೆನ್ನಾಗಿತ್ತು.
@ನವೀನ್
ನನ್ನ ಹಾಗೂ ನನ್ನಾkಯ ಧನ್ಯವಾದಗಳು ಸರ್, keep visiting.
@Srikanth
ಧನ್ಯವಾದಗಳು, ಹೀಗೇ someದರ್ಶನಗಳು ಬರುತ್ತಿರುತ್ತವೆ ಓದುತ್ತಿರಿ.
ಮದುವೆಯಾಗದೇ ಮಡದಿ ಬಗ್ಗೆ ಬರೀತಾ ಇದೀನಿ, ಇನ್ನು ಮಗು ಬೇರೆ ಈಗಲೇ ಬೇಕಾ :) ಬೇಡ ಸರ್... ನವ ದಂಪತಿಗಳು ಸ್ವಲ್ಪ ಹಾಯಾಗಿರಲಿ ಬಿಡಿ, ಆಮೇಲೆ ಇದ್ದಿದ್ದೇ ಮಗುವಿನ ಕಿಲಕಿಲ ಕಿರಿಕಿರಿ...
ಹೆಸರಿನಲ್ಲೇನಿದೆ ಬಿಡಿ... ೫೨ ಲೇಖನಗಳಲ್ಲಿ ಬಂದಿರುವ ನಿಮ್ಮಾಕೆಯ ಹೆಸರೇ ನಮಗೆ ಗೊತ್ತಿಲ್ಲ;)
@Anonymous
ಅದೂ ಸರಿಯೇ ಬಿಡಿ... ಹೆಸರಲ್ಲೇನಿದೆ... ನನ್ನಾk ಹೆಸರೇ ಗೊತ್ತಿಲ್ಲದಿರುವಾಗ ನಾನಾದರೂ ಏನು ಅಂತ ಬರೆದೇನು... ಮೊದಲೇನೊ "ಮಾನಸಿ" ಅಂತ ಚುಟುಕು ಸಾಲುಗಳ ಬರೆಯುತ್ತಿದ್ದೆ, ಈಗ ಮಾನಸಿ ಅಂತ ಹುಡುಗಿ ಯಾರು ಅಂತ ಹುಡುಕಬೇಡಿ! ಮಾನಸಿ ಅಂದ್ರೆ ಮನದಲ್ಲಿ ಜನಿಸಿದವಳು.. ಈ ಕಲ್ಪನೆಗಳೆಲ್ಲ ಮನದಲ್ಲೇ ಹುಟ್ಟಿದ್ದಲ್ವಾ ಅದಕ್ಕೆ ಅದೇ ಹೆಸರಿಟ್ಟಿದ್ದೆ...
ಈ ನನ್ನಾk ಅದೇ ಮಾನಸಿಯಾ ಅಂತ ಬಹಳ ಜನ ಕೇಳಿದ್ದಾರೆ... ನಂಗೂ ಗೊತ್ತಿಲ್ಲ... ಕಲ್ಪನೆಗಳಿಗೆ ಹೆಸರಿನ ಹಂಗು ಯಾಕೆ ಬಿಡಿ, ನನಗೇ ಆ ಬಗ್ಗೆ ಗೊಂದಲವಿದೆ...
ಹಳೆ ಗೆಳೆಯರಾದರೂ ಸಿಕ್ಕರೆ ನನ್ನ ಬಗ್ಗೆ ಕೇಳೋ ಮುಂಚೇನೆ "ಮಾನಸಿ ಸಿಕ್ಳಾ" ಅಂತ ಕೇಳ್ತಾರೆ, ಹೊಸಬರೋ ನನ್ನಾk telprabhu ಅಂದ್ರೆ ಮಾತ್ರ ಗುರುತು ಹಿಡಿಯುತ್ತಾರೆ... ಹೀಗೆ ನನ್ನ ಐಡೆಂಟಿಟಿಯೇ ಬದಲಾಗಿ ಹೋಗಿದೆ...
ಆದರೂ ನನ್ನಾkನಾ ಪ್ರೀತಿ ಉಕ್ಕಿ ಬಂದಾಗ ತಗಡು ಅಂತಾನೆ ಕರೀತೀನಿ, ಯಾಕೆಂದ್ರೆ ಚಿನ್ನಾ, ಬಂಗಾರಿ ಹಳೆದಾಯ್ತು ಕಣ್ರಿ!!!
*ಬಹಳ ಜನ ಹೆಸರು ಕೇಳುವುದರಿಂದ ಇಲ್ಲಿ ಅದರ ಬಗ್ಗೆ ಬರೆಯಬೇಕೆನಿಸಿತು
Namaskaara Prabhu Teliyavre...
Naanu Mahantesh Hosatti antaa.
Neevu bareda "Nannaakeya bagge ondu..." baala hidastu. Tumbaa chennaagide. Ee lakhanadallirodu nanage mattu nanna Raanige(Nanna handati) tumbaa holutte. Mundeyu
neevu heege bareyutta iri endu aashisuva nimma preetiya Mahantesh.
@Mahantesh
Thanks you Mahantesh, ನಿಮಗೆ ಅಷ್ಟು ಒಳ್ಳೆಯ ಹೆಂಡತಿ ಸಿಕ್ಕಿರುವುದು ಅದೃಷ್ಟ ಹಾಗಿದ್ದರೆ... ನಿಮ್ಮ ಜೀವನ ಹೀಗೆ ನನ್ನ ಲೇಖನಗಳಂತೆ ಇದೆ ಅಂದದ್ದು ಕೇಳಿ ಖುಷಿಯಾಯ್ತು... ನಿಮ್ಮ ದಾಂಪತ್ಯ ಜೀವನ ಹೀಗೆ ಸುಖವಾಗಿರಲಿ, ಸುಂದರವಾಗಿರಲಿ ಎಂದು ಹಾರೈಸುವ... ನಾನು - ನನ್ನಾk...
Post a Comment