Sunday, November 1, 2009

ಹೊಸರುಚಿ: ಚಹ ಮಾಡೊದು ಹೇಗೆ.

"ಒಂದು ರುಚಿ ರುಚಿಯಾದ ಸ್ಪೇಸ...ಲ್ ಟೀ..." ಅಂತ ಟೀವೀ ಆನ್ ಮಾಡುತ್ತಾ ಕೂಗಿದೆ, "ಎನು ರುಚಿ ರುಚಿ ಸ್ಪೇ...ಷಲ್ಲು ಟೀ ಅಂತೀದೀರಿ, ಅದೇನು ಹೊಸ ರುಚಿ ಅಡುಗೇನಾ, ಅದೇ ಚಹಪುಡಿ ಸಕ್ರೆ, ಇಷ್ಟು ಹಾಲು, ಅದರಲ್ಲೇನು ವಿಶೇಷ" ಅಂದ್ಲು. "ಮಾಡೋ ರೀತಿ ಮಾಡಿದ್ರೆ ಎಲ್ಲಾನೂ ವಿಶೇಷಾನೇ" ಅಂತನ್ನುತ್ತ ಚಾನೆಲ್ಲು ಬದಲಾಯಿಸುತ್ತಿದ್ದವನ ಕೈಯಿಂದ ರಿಮೋಟು ಕಿತ್ತುಕೊಂಡು, "ಒಂದು ಹೊಸರುಚಿ ಕಾರ್ಯಕ್ರಮ ಬರತ್ತೆ ತಾಳಿ, ಬಾಳೆಹಣ್ಣಿನ ಬಜ್ಜಿ ಮಾಡೊದು ತೋರಿಸ್ತಾರೆ" ಅಂತ ಬಂದು ಕೂತಳು, ಮುಂಜಾನೆ ಮುಂಜಾನೆ ಇಂಥ ಅನಾಹುತಕಾರಿ!!! ಕಾರ್ಯಕ್ರಮಗಳನ್ನು ಯಾಕಾದರೂ ತೋರಿಸುತ್ತಾರೋ ಅಂದುಕೊಳ್ಳುತ್ತ, ಎದ್ದು ಹೊರಟಿದ್ದೆ, ಸರಿಯಾಗಿ ಅದೇ ಸಮಯಕ್ಕೆ ಕರೆಂಟು ಹೋಯ್ತು, ಕೇಪೀಟೀಸೀಎಲ್‌ನವರಿಗೆ ಇಂಥ ಒಳ್ಳೆಯ ಸಮಯೋಚಿತ ಕೆಲಸ ಮಾಡಿದ್ದಕ್ಕೆ ಅಭಿನಂದಿಸುತ್ತ, ಈ ಕಾರ್ಯಕ್ರಮ ನೋಡಿ, ನನ್ನಂತೆ ಎಷ್ಟೊ ನರಪ್ರಾಣಿಗಳು ಈ ಹೊಸರುಚಿಯ ಪರೀಕ್ಷೆಗೆ ಪಾಲಾಗುವುದು ತಪ್ಪಿತಲ್ಲ ಅಂತ ಖುಷಿಯಾದೆ. ಇವಳೋ ಶಪಿಸಿ ನಟಿಕೆ ಮುರಿದಳು, ಆ ಶಾಪಕ್ಕಿಂತ ನಮ್ಮನ್ನುಳಿಸಿದ ಪುಣ್ಯವೇ ಹೆಚ್ಚು ಬಿಡು ಅಂತಂದು, ಕೂತಿದ್ದವಳಿಗೆ ಹಿಂದಿನಿಂದ ತೆಕ್ಕೆಬಿದ್ದು, "ಬೈ ಟೂ ಟೀ" ಅಂದೆ. "ನಿಮಗೆ ಅರ್ಧ ಮತ್ತೆ ಇನ್ನರ್ಧ ಯಾರಿಗೆ?" ಅಂತ ಕೇಳಿದ್ದಕ್ಕೆ "ಪಕ್ಕದಮನೆ ಪದ್ದುಗೆ" ಅಂತ ಬಿಸಿ ಮುಟ್ಟಿಸಿದರೆ, ತಣ್ಣಗೆ, "ಹೋಗಿಪ್ಪಾ ಬೈಟೂ ಟೀ ನನಗಿಲ್ಲ ಅಂದ್ರೆ, ನಿಮ್ಮ ಜತೆ ಟೂ... ಟೂ ಟೂ..." ಅಂತ ಚಿಕ್ಕ ಮಕ್ಕಳ ಹಾಗೆ ಗೆಳೆತನ ಬಿಡುವಂತೆ ಮಾಡಿದಳು. "ನನ್ನ ಟೀ ನಿನ್ನ ಜತೆ ಹಂಚಿಕೊಳ್ದೆ ಇನ್ನಾರ ಜತೆ ಹಂಚಿಕೊಳ್ತೀನಿ, ಅದೂ ಕೇಳೋ ಪ್ರಶ್ನೇನಾ" ಅಂತನ್ನುತ್ತ ಅವಳ ಹಾಗೇ ಏಳಿಸಿ ನೂಕುತ್ತ ಪಾಕಶಾಲೆಗೆ ನಡೆದೆ... "ಸ್ವಾಗತ... ಸುಸ್ವಾಗತ... ಸುಡು ಸುಡು ಸ್ವಾಗತ...(ವಾರ್ಮ್ ವೆಲಕಮ್ ಅಂತಾರಲ್ಲ ಹಾಗೆ!), ನಮ್ಮ 'ರುಚಿ ಕಿಚಿಪಿಚಿ' ಕಾರ್ಯಕ್ರಮಕ್ಕೆ, ಇಂದಿನ ಹೊಸ ರುಚಿ 'ಚಹ'" ಅಂತ ಘೊಷಣೆ ಮಾಡುತ್ತ...

"ರೀ ಏನ್ರೀ ಇದು ರುಚಿ ಕಿಚಿಪಿಚಿ... ಏನದು ಹೆಸರು" ಅಂದ್ಲು. "ಮೇಡಮ್, ರುಚಿ ಮಾಡಲು ಅದು ಇದು ಎಲ್ಲ ಸೇರಿಸಿ ಕಿವುಚಿ, ಕೀಸರಿಟ್ಟು, ಕೆಸರು ಮಾಡಿದ ಹೊಸರುಚಿ; ರಾಡಿಯಲ್ಲಿ ಕಾಲಿಟ್ಟರೆ ಅನಿಸುವಂತೆ ಕಿಚಿಪಿಚಿ, ಪಿಚಿಪಿಚಿ ಆಗಿರುತ್ತದೆ ಅದನ್ನು, ಕಣ್ಣು ಮುಚ್ಚಿ, ಪಿಚ ಪಿಚ ಪಿಚಕ್ಕಂತ ಲೊಚಗುಟ್ಟದೇ ತಿನ್ನುವ ಕಾರ್ಯಕ್ರಮ ಇದಾಗಿದ್ದರಿಂದ, ಅದನ್ನೇ ಹೆಸರು ಮಾಡಿದ್ದೇವೆ... ಹೀ ಹೀ ಹೀ" ಅಂತ ವಿವರಿಸಿದೆ, "ಅಬ್ಬ ಎನು ಒಳ್ಳೆ ಕಾರ್ಯಕ್ರಮ ಇದು, ನನಗೆ ಇದರಲ್ಲಿ ಭಾಗವಹಿಸುತ್ತಿದ್ದೇನೆ ಅಂತ ಬಹಳ ಹೆಮ್ಮೆ ಇದೆ, ಸರಿ ನಾನು ಒಂದು ಹೊಸ ರು'ಛೀ...' ರು'ಛೀ...' ಯಾದ ಹೊಸರುಚಿ ತೋರಿಸುತ್ತೇನೆ" ಅಂತ ಅವಳೂ ಬೋಗಿಯಿಲ್ಲದ ರೈಲು ಬಿಟ್ಟಳು. ಅಲ್ಲಿಗೆ ನಮ್ಮ ಕಾರ್ಯಕ್ರಮ ಶುರುವಾಯಿತು.

"ವೀಕ್ಷಕರೇ, ಈವತ್ತು ನಮ್ಮ ಜತೆ ಈ ರುಚಿ ಕಿಚಿಪಿಚಿ ಕಾರ್ಯಕ್ರಮದಲ್ಲಿ ನನ್ನಾಕೆ ಇದಾರೆ, ಇವರು ನಿಮಗೆ ಹೊಸರುಚಿ ಅಂತ ಚಹ ಮಾಡುವುದು ಹೇಗೆ ಹೇಳಿಕೊಡಲಿದ್ದಾರೆ, ಬನ್ನಿ ಅವರಿಗೆ ಸ್ವಾಗತ ಕೋರೋಣ" ಅಂತ ಅವಳ ಪಕ್ಕ ಬರ್ಶನ್ನು ಮುಂದೆ ನಿಂತಾಯಿತು, "ನಮಸ್ಕಾರ" ಅಂತ ನಕ್ಕಳು. "ಈ ಹೊಸರುಚಿಗೆ ಏನೇನು ತಯಾರಿ ಮಾಡಿಕೊಂಡು ಬಂದೀದೀರಾ" ಅಂತ ಮಾತಿಗಿಳಿದೆ, "ಕಾರ್ಯಕ್ರಮಕ್ಕೆ ಬರೋದು ಅಂತ ಗೊತ್ತಾದ ತಕ್ಷಣಾನೇ, ಹೊಸ ಸೀರೆ ಮ್ಯಾಚಿಂಗ ಬ್ಲೌಜು ಎಲ್ಲ ರೆಡಿ, ಮಾಡಿಕೊಂಡೆ, ಮತ್ತೆ ನಿನ್ನೆ ಎರಡುಸಾರಿ ಮಾತ್ರ! ಬ್ಯೂಟಿಪಾರ್ಲರಗೆ ಹೋಗಿದ್ದೆ, ಯು ನೋ(ಇದೇ ರೀತಿ ಇನ್ನೂ ಇಂಗ್ಲೀಶಲ್ಲಿ ಅನ್ನೊ ಚಾಳಿ ನಮ್ಮಲ್ಲಿ ಬಹಳ ಇರ್ತದೆ), ಮಾರ್ನಿಂಗ ಒಂದೇ ಘಂಟೆ ಮೇಕಪ ಮಾಡಿಕೊಂಡಿದ್ದು, ಆಕ್ಚುಲಿ ಈ ಆಭರಣ ಎಲ್ಲಾ ಸೇಫ ಅಲ್ಲ, ಅದ್ರೂ ಸಿಂಪಲ್ಲಾಗಿ, ಈ ನೆಕ್ಲೆಸ್, ಸರ, ನಾಲ್ಕು ಬಳೆ, ಮೂರು ಉಂಗುರ, ಕಿವಿಯೋಲೆ, ಕಾಲುಗೆಜ್ಜೆ ಅಷ್ಟೇ ಹಾಕೊಂಡು ಬಂದಿರೊದು." ಅಂತ ವಿದಿಶಪಡಿಸಿದಳು, "ಮೇಡಮ್ ನಾನು ಹೊಸರುಚಿ ಮಾಡೋಕೆ ಏನು ತಯ್ಯಾರಿ ಅಂತ ಕೇಳಿದ್ದು, ಆದ್ರೂ ಇದೂ ಅದೇ ಬಿಡಿ, ನಿಮ್ಮ ಕಾಲುಗೆಜ್ಜೆ ವೀಕ್ಷಕರಿಗೆ ಕಾಣಲಿಕ್ಕಿಲ್ಲ ಹ್ಮ್" ಅಂದೆ. "ಅದೂ ಸರಿ ಬಿಡಿ, ಆದ್ರೆ ನಿಮಗೆ ಕಾಣುತ್ತಲ್ಲ" ಅಂತ ಕಣ್ಣು ಮಿಟಿಕಿಸಿದಳು.

"ಮೇಡಮ್ ನೀವು ಈ ಚಹದಂತಹ ಸಾಮಾನ್ಯ ರುಚಿ ಯಾಕೆ ಆರಿಸಿಕೊಂಡಿರಿ ಅಂತ ನಮ್ಮ ವೀಕ್ಷಕರಿಗೆ ತಿಳಿಸಿಕೊಡ್ತೀರಾ" ಅಂತ ಕೇಳಿದೆ, "ಅಕ್ಚುಲಿ ಮೊದಲು ಬಿಸಿನೀರು ಕಾಯಿಸೊದು ಹೇಗೆ ಅಂತ ತಿಳಿಸಿಕೊಡೋಣ ಅಂತ ಇದ್ದೆ, ಬಟ್ ನಮ್ಮ ಯಜಮಾನ್ರು ಬೇಡ ಆಟ್ಲೀಸ್ಟ್ ಟೀನಾದ್ರೂ ಮಾಡು ಅಂದ್ರು ಅದಕ್ಕೆ ಕಷ್ಟಪಟ್ಟು ಅದನ್ನೇ ಹೇಳ್ತಾ ಇದೀನಿ" ಅಂತಂದಳು. "ಒಹ್ ನಿಮ್ಮ ಹಿಂದಿರುವ ಸ್ಪೂರ್ಥಿ ನಿಮ್ಮ ಯಜಮಾನ್ರು ಅಂತ ಆಯ್ತು, ನಿಮಗೆ ಇಷ್ಟು ಮುಂದುವರೆಯಲು ಅವಕಾಶ ಮಾಡಿಕೊಟ್ಟ ಅವರು ನಿಜಕ್ಕೂ ಗ್ರೇಟ್" ಅಂತ ಹೊಗಳಿದೆ. "ಹೌದೌದು ಅವರ ಬೆಂಬಲದಿಂದಲೇ ಇದೆಲ್ಲ ಸಾಧ್ಯ ಆಗಿರೋದು, ಏನೇ ಕೆಟ್ಟದಾಗಿ ಮಾಡಿದ್ರು ಚೆನ್ನಾಗಿದೆ ಚೆನ್ನಾಗಿದೆ ಅಂತ ಹೊಗಳಿ ಹುರಿದುಂಬಿಸ್ತಾರೆ, ನನ್ನ ಹೊಸರುಚಿ ಮೊದಲು ಟೇಸ್ಟ್ ಮಾಡೊದೇ ಅವರು" ಅಂತ ಹೆಮ್ಮೆ ಪಟ್ಟಳು.

ಶುರು ಮಾಡೋಣ ಅಂತ, "ಮೊದಲಿಗೆ ಸ್ವಲ್ಪ ನೀರು ಒಂದು ಸ್ಟೀಲ್ ಪಾತ್ರೇಲಿ ತುಗೋಬೇಕು" ಅಂದ್ಲು. "ಮೇಡಮ ಈಗ ಮನೇಲಿ ಸ್ಟೀಲ್ ಪಾತ್ರೆ ಇಲ್ದೇ ಇದ್ರೆ" ಅಂದೆ, "ಸ್ಟೀಲ್ ಪಾತ್ರೆ ಇಲ್ಲ ಅಂದ್ರೂ ಓಕೇ, ಅಲ್ಯೂಮಿನಿಯಮ್ ಪಾತ್ರೆನೂ ಉಪಯೋಗಿಸಬಹುದು" ಅಂತ ಹೇಳಿದ್ದಕ್ಕೆ "ನೋಡಿ ವೀಕ್ಷಕರೆ ಯಾವ ಪಾತ್ರೆನಲ್ಲಿ ಬೇಕಾದ್ರೂ ಮಾಡಬಹುದು, ಇಂಥದೇ ಪಾತ್ರೆ ಬೇಕು ಅಂತಿಲ್ಲ, ಅದೇ ವೈಶಿಷ್ಟ್ಯ" ಅಂತ ಅದರ ಹಿರಿಮೆ ಹೇಳಿದೆ. ಪಾತ್ರೆ ಬರ್ಶನ್ ಮೇಲಿಟ್ಟು ಲೈಟರನಿಂದ ಹೊತ್ತಿಸಿದಳು, ಇನ್ನೇನು ನಾನು ಲೈಟರ್ ಇಲ್ದಿದ್ರೆ ಅಂತ ಕೇಳ್ತೀನಿ ಅಂತ ಅವಳೇ "ಈಗ ಕೆಲವರ ಮನೇಲಿ ಲೈಟರ್ ಇರಲ್ಲ ಅವ್ರು ಬೆಂಕಿಪೊಟ್ಟಣ ಕೂಡ ಉಪಯೋಗಿಸಬಹುದು" ಅಂತ ಸಂದೇಹ ದೂರ ಮಾಡಿದಳು. ನೀರು ಬಿಸಿಯಾಗುತ್ತಿದ್ರೆ "ನೀರು ಕುದಿಯೋಕೆ ಬಿಡಬೇಕು" ಅಂದ್ಲು. "ಒಹ್ ಹೌದಾ, ಎಷ್ಟು ಡಿಗ್ರೀ ಬಿಸಿ ಆಗಲು ಬಿಡಬೇಕು" ಅಂತ ಮರು ಪ್ರಶ್ನೆ ನನ್ನಿಂದ ಹೊರಟಿತು, ಕೆಂಗಣ್ಣಿನಿಂದ ನೋಡುತ್ತ "ಇಷ್ಟೇ ಡಿಗ್ರೀ ಅಂತಿಲ್ಲ, ಬಿಸಿಯಾಗಿ ಕುದಿದು ಗುರುಳೆ ಬರೋಕೆ ಶುರು ಮಾಡಿದ್ರೆ ಸಾಕು" ಅಂದ್ಲು. ಬಹಳ ಸಿಟ್ಟಾದಾಳು ಅಂತ ಅವಳನ್ನು ತಣ್ಣಗಾಗಿಸಲು ತರಲೆ ಅಂತ, ಅವಳ ಜಡೆ ಹಿಡಿದು ಒಮ್ಮೆ ಎಳೆದೆ, "ರೀ" ಅಂತ ಚೀರುತ್ತ ಓರೆಗಣ್ಣಲ್ಲಿ ನೋಡಿ ನಕ್ಕವಳು
"ವೀಕ್ಷಕರೇ, ಹೀಗೆ ಹೆಂಡ್ತಿ ಚಹ ಮಾಡೊವಾಗ ಕೀಟಲೆ ಮಾಡಿದ್ರೆ ಚಹ ಇನ್ನೂ ರುಚಿಯಾಗಿರತ್ತೆ" ಅಂತ ಟಿಪ್ ಹೇಳಿದಳು, ಅಷ್ಟು ಹೇಳೊದೇ ತಡ, ಹಿಂದಿನಿಂದ ಬಾಚಿ ತಬ್ಬಿಕೊಂಡು "ಚಹ ಬೇಗ ಮಾಡೇ" ಅಂತ ಗೋಗರೆದೆ. "ರೀ ಪ್ರೋಗ್ರಾಮ್ ನಡೀತಿದೆ ಲೈವ್" ಅಂತ ದೂರ ತಳ್ಳಿದಳು. "ವೀಕ್ಷಕರೇ, ಸ್ವಲ್ಪ ತಾಂತ್ರಿಕ ತೊಂದರೆಯಿಂದ ಪ್ರಸಾರದಲ್ಲಿ ಕಡಿತವಾಯ್ತು ಅದಕ್ಕೆ ವಿಷಾದಿಸುತ್ತೇವೆ." ಅಂತ ಸಂಭಾಳಿಸಿದೆ.

ನೀರು ಕುದಿಯುತ್ತಿದ್ದಂತೆ "ಈಗ ಎರಡು ಸ್ಪೂನ್ ಚಹಪುಡಿ ಹಾಕಬೇಕು." ಅಂತ ಅದಕ್ಕೆ ಚಹ ಪುಡಿ ಹಾಕಿದಳು, "ಈಗ ಎರಡು ಸ್ಪೂನ ಅಂತ ಹೇಳಿದ್ರಲ್ಲ, ಅನ್ನ ನೀಡುವ ಸ್ಪೂನನಲ್ಲಿ ಎರಡು ಹಾಕೋದಾ" ಅಂದೆ, "ನೀವು ಟೀ ಎಸ್ಟೇಟ್ ಮಾಲೀಕರಾಗಿದ್ರೆ ಹಾಗೆ ಮಾಡಬಹುದು, ಇಲ್ಲಾಂದ್ರೆ ಚಿಕ್ಕ ಟೀ ಸ್ಪೂನನಲ್ಲಿ ಎರಡು ಸಾಕು" ಅಂತ ತಿರುಗೇಟು ನೀಡಿದ್ಲು. "ಮತ್ತೆ ಚಹಪುಡಿ ಯಾವುದು ಉಪಯೋಗಿಸಬೇಕು?" ಅಂತ ಕೇಳಿದೆ, ಅವಳು ಕಿವಿಯಲ್ಲಿ ಪಿಸುಮಾತಲ್ಲಿ ಕೇಳಿದಳು "ನಿಮ್ಮ ಪ್ರೋಗ್ರಾಮ್ ಸ್ಪಾನ್ಸರ ಮಾಡಿ ಟೀ ಕಂಪನಿಯವರು ಅಡವರ್ಟೈಜಮೆಂಟ್ ಯಾರಾದ್ರೂ ಕೊಟ್ಟೀದಾರಾ?" ಅಂತ, "ಇಲ್ಲ" ಅಂದೆ. "ಹಾಗಿದ್ರೆ ಅದೆಲ್ಲ ನಿಮಗ್ಯಾಕೆ? ಯಾವುದು ಹಾಕಿದರೇನಂತೆ?" ಅಂತಂದಳು, ಅದೂ ಸರಿಯೇ ಅಂತ ಸುಮ್ಮನಾದೆ. ಟೀ ಕುದಿಯಲು ಇನ್ನೂ ಸಮಯವಿದ್ದದ್ದರಿಂದ ಒಂದು ಬ್ರೆಕ್ ಕೊಡಬಹುದಲ್ಲ ಅಂತ, "ಈಗ ಒಂದು ಬ್ರೇಕನ ನಂತರ ಮತ್ತೆ ಮುಂದುವರೆಯುತ್ತದೆ ರುಚಿ ಕಿಚಿಪಿಚಿ" ಅಂತ ಹೇಳುತ್ತಿದ್ದಂತೆ... "ವಾಶಿಂಗ ಪೌಡರ್ ನಿರ್ಮಾ, ವಾಶಿಂಗ ಪೌಡರ್ ನಿರ್ಮಾ, ಹಾಲಿನಂತ ಬಿಳುಪು ನಿರ್ಮಾನಿಂದ ಬಂತು... ನಮ್ಮಯ ನೆಚ್ಚಿನ ನಿರ್ಮಾ..." ಅಂತ ಅಲ್ಲೇ ತೂಗುಬಿದ್ದಿದ್ದ ಬಿಳಿ ಕೈ ವಸ್ತ್ರ ಹಾರಾಡಿಸಿದ್ದೂ ಆಯ್ತು.

ಜಾಹೀರಾತಿನ ನಂತರ ಮತ್ತೆ ಸ್ವಾಗತ ಕೋರುವಷ್ಟರಲ್ಲಿ, ಚಹ ಕುದಿಯತೊಡಗಿತ್ತು, "ಎರಡು ಚಮಚ ಸಕ್ಕರೆ ಹಾಕಿ ಸ್ವಲ್ಪ ಹೊತ್ತು ಬಿಡಿ" ಅಂದ್ಲು, "ಎರಡು ಸಾಕಾ" ಅಂತ ನಾ ಕೇಳಿದ್ದಕ್ಕೆ "ಸಕ್ಕರೆ ಪಾನಕದಂತೆ ಕುಡಿಯಬೇಕಿದ್ದರೆ ನಾಲ್ಕು ಕೂಡ ಹಾಕಿಕೊಳ್ಳಬಹುದು" ಅಂತ ದುರುಗುಟ್ಟಿದಳು, "ಈಗ ಈ ಮಧುಮೇಹಿಗಳು ಸಕ್ಕರೆ ಉಪಯೋಗಿಸುವಂತಿಲ್ಲ, ಹಾಗಾಗಿ ಅವರಂತೂ ನಿಮ್ಮ ಹೊಸರುಚಿ ಮುಟ್ಟುವಂತಿಲ್ಲ" ಅಂತ ಸುಮ್ಮನೆ ಕೆದಕಿದೆ, "ಹ್ಮ್ ಹಾಗೇನಿಲ್ಲ, ಸಕ್ಕರೆ ಉಪಯೋಗಿಸಲೇಬೇಕೆಂದೇನಿಲ್ಲ ಹಾಗೇ ಕೂಡ ಮಾಡಬಹುದು, ಇಲ್ಲ ಸಕ್ಕರೆಯಿಲ್ಲದೇ ಮಾಡಿ ಸಕ್ಕರೆ ರುಚಿಯ ಮಾತ್ರೆ ಹಾಕಿಕೊಂಡು ಕೂಡ ಕುಡಿಯಬಹುದು, ನಮ್ಮ ಹೊಸರುಚಿ ಏನು ಸುಮ್ನೇ ಅಂದುಕೊಂಡಿರಾ, ಇದರ ಬಗ್ಗೆ ಆಗಾಗ ಸಂಶೋಧನೆ ನಡೆಯುತ್ತಲೇ ಇರುತ್ತದೆ ಒಮ್ಮೆ ಚಹ ಆರೋಗ್ಯಕ್ಕೆ ಒಳ್ಳೇದು ಅಂದರೆ ಕೆಲವೊಮ್ಮೆ ಹಾನಿಕಾರಕ ಅಂತ ವಾದ ವಿವಾದ ಮಾಡುತ್ತಲೇ ಇರುತ್ತಾರೆ ಅದೂ ಅಂತರರಾಷ್ಟ್ರೀಯ ಮಟ್ಟದಲ್ಲಿ..." ಅಂತ ತನ್ನ ಹೊಸರುಚಿಯ ಸಮರ್ಥಿಸಿಕೊಂಡಳು. "ನೋಡಿ ವೀಕ್ಷಕರೇ ಎಂಥ ಅಂತರರಾಷ್ಟ್ರೀಯ ಹೊಸರುಚಿ ಇದು. ಇದನ್ನ ನೀವು ನಮಗೆ ಹೇಳಿಕೊಡ್ತಾ ಇರೋದಕ್ಕೆ ನಮಗೆ ಖುಷಿಯಾಗ್ತಿದೆ" ಅಂತ ಹೊಗಳಿದೆ. ಇಷ್ಟೊತ್ತಿಗೆ ಇನ್ನು ಚಹ ಸಿಕ್ಕರೆ ಸಾಕು ಅನ್ನುವ ಹಾಗಾಗಿತ್ತು, ಅವಳು ಹಾಲು ಹಾಕಿ ಕುದಿಸುತ್ತಿದ್ದರೆ, ಆಕಳ ಹಾಲಾ ಎಮ್ಮೇ ಹಾಲಾ ಅಂತ ಕಾಡಿಸುವ ಮನಸಾದರೂ, ಸುಮ್ಮನಾದೆ.

ಪಾತ್ರೆ ಇಳಿಸಿ, ಚಹಪುಡಿ ಸೋಸಿ ಕಪ್ಪಿಗೆ ಸುರಿದು ಕೊಟ್ಟಳು, ಒಂದು ಸ್ವಲ್ಪ ಹೀರಿ "ವಾವ್... ಸೂಪರ್..." ಅಂತ ಉದ್ಗಾರ ತೆಗೆದೆ. "ಹೊಸರುಚಿ, ಅಷ್ಟೇ ರುಚಿ ನೋಡಬೇಕು, ಜಾಸ್ತಿ ಬೇಡ, ಈ ಹೊಸರುಚಿ ಕಾರ್ಯಕ್ರಮಗಳಲ್ಲಿ ಒಂದೇ ಚಮಚ ಮಾತ್ರ ರುಚಿ ನೋಡುವುದಿಲ್ಲವೇ ಹಾಗೆ." ಅಂತ ಕಪ್ಪು ಕಸಿದುಕೊಂಡು ತಾನೇ ಅರ್ಧ ಖಾಲಿ ಮಾಡಿಟ್ಟಳು. ಆಫೀಸಿನಲ್ಲಿ ಪುಕ್ಕಟೆ ಅಂತ ಮಗ್ ತುಂಬ ಚಹ ಹೀರುವ ನನಗೆ ಈ ಗುಟುಕು ಚಹ ಎಲ್ಲಿ ಸಾಕಾದೀತು ಅಂತ, ಪೆಪ್ಪರುಮೆಂಟ್ ಕಸಿದುಕೊಂಡ ಮಗುವಿನಂತೆ ಮುಖ ಮಾಡಿದ್ದಕ್ಕೆ, "ಚಹ ಅಂದ್ರೆ ಸಾಕು, ಎಕ್ಸ್ಟ್ರಾ ಹೊಟ್ಟೆ ಬಂದು ಬಿಡುತ್ತದೆ, ಎಷ್ಟಾದರೂ ಸಾಕಾಗಲ್ಲ" ಅಂತ ಹುಸಿಮುನಿಸು ತೋರಿಸುತ್ತ ಇನ್ನಷ್ಟು ಬಸಿದು ಕೊಟ್ಟಳು, ಹಿರಿ ಹಿರಿ ಹಿಗ್ಗಿ ಸ್ವಲ್ಪ ಮತ್ತೆ ಹೀರಿ "ನೀ ರುಚಿ ನೋಡಿದ ಮೇಲಂತೂ ರುಚಿ ದುಪ್ಪಟ್ಟಾಗಿದೆ ಬಿಡು" ಅಂದರೆ, "ಆಹಾಹ ಸಾಕು ಹೊಗಳಿದ್ದು, ಹೊರಡಿ" ಅಂತ ಹೊರ ತಳ್ಳಿದಳು.

ಚಹ ಹೊಸರುಚಿಯಾಗಬಹುದಾ, ಯಾಕಾಗಲಿಕ್ಕಿಲ್ಲ ಹೊಸ ಹೊಸ ರೀತಿಯಲ್ಲಿ ಮಾಡಿದರೆ ಅದೂ ಹೊಸರುಚಿಯೇ, ಹಾಲು ಹಾಕಿ ಕುದಿಸಿದರೆ ಒಂದು ರುಚಿ, ಕುದಿಸದೇ ಹಸಿ ಹಾಲು ಹಾಗೇ ಹಾಕಿದರೆ ಒಂದು ರುಚಿ, ಸರಿಯಾಗಿ ಸಕ್ಕರೆ ಹಾಕಿದರೆ ಸರಿ ಇಲ್ಲದಿದ್ದರೆ ಸಕ್ಕರೆ ಪಾನಕವೇ ರೆಡಿ, ಸಕ್ಕರೆ ಬದಲಿ ಬೆಲ್ಲ ಬಳಸಿದರೆ ಬರುವದು ಇನ್ನೊಂದು ರುಚಿ, ನಿಂಬೆ ಎಲೆಯೋ, ಇಲ್ಲ ಶುಂಟಿಯ(ಜಿಂಜರ್) ತುಣುಕೊ ಹಾಕಿದರೆ ಬರುವ ಸುವಾಸನೆ ಸ್ವಾದವೇ ಬೇರೆ. ಗೆಳೆಯ ಗೆಳತಿಯರು ಸೇರಿದರೆ ಸುಮ್ಮನೇ ಮಾತುಕಥೆಗೆ ಪೀಠಿಕೆಯೇ ಬೈಟೂ ಟೀ. ಮನೆಗೆ ಬಂದವರಿಗೆ ಸ್ವಾಗತ ಪಾನೀಯ, ಮನೆಯಲ್ಲಿರುವವರಿಗೆ ದಿನದ ಶುರುವಾತಿಗೆ ಬೇಕೇ ಬೇಕು ಚಹ, ಹೇಳಲು ಕುಳಿತರೆ ಹೇಳುತ್ತ ಹೇಳುತ್ತ ನಾಲ್ಕು ಕಪ್ಪು ಚಹ ಕುಡಿದು ಮುಗಿಸಬಹುದಾದಷ್ಟು ಇದೆ ಇದರ ಮಹಿಮೆ. ಜಾಸ್ತಿಯಾದರೆ ಆಸಿಡಿಟಿ, ಹುಳಿ ತೇಗುಬರುವಂತೆ ಆಗಬಹುದಾದರೂ, ನೀರಸ ಸಂಜೆಗೆ ಒಂದು ಕಪ್ಪು ಖಡಕ ಚಹ ಆಹ್ಲಾದವನ್ನೀಯಬಲ್ಲುದು, ಹಾಗಾಗಿ ಹಿತಮಿತವಾಗಿ ಚಹ ಸೇವಿಸಿದರೆ ಸಾಕು. ಏನು ದಿನಾಲು ಅದೇ ಚಹ ಅಂತ ನೀರಾಸೆಯಾಗದೇ ಅದರಲ್ಲೂ ಹೊಸತನವಿದೆ ಹೊಸರುಚಿಯಿದೆ ಅಂದುಕೊಂಡು, ಕೀಟಲೆ ಮಾಡುತ್ತ ಸಂಗಾತಿಯೊಂದಿಗಿನ ಹರಟೆಯೊಂದಿಗೆ ಸಂಜೆಗೆ ಒಂದು ಕಪ್ಪು ಚಹ ಇದ್ದರೆ ಅದಕ್ಕಿಂತ ಸಂತೋಷ ಇನ್ನೇನಿದೆ.

ಚಹ ಕುಡಿದು, ಚೂರು ಪಾರು ಚಾನಲ್ಲು ಬದಲಿಸಿ ಬದಲಿಸಿ ಟೀವೀ ನೋಡುವ ಹೊತ್ತಿಗೆ, ಮಧ್ಯಾಹ್ನವೇ ಆಗಿತ್ತು, ಇವಳು ಊಟಕ್ಕೆ ಅಡಿಗೆ ಏನಾದರೂ ಮಾಡಿದರಾಯ್ತು ಅಂತ ಪಾಕಶಾಲೆಯತ್ತ ಪಾದ ಬೆಳೆಸಿದರೆ, "ಮತ್ತೆ ಏನು ಹೊಸರುಚಿ ತೋರಿಸುತ್ತೀರಾ ಮೇಡಮ್" ಅಂತ ಹೋದರೆ, "ಚಪಾತಿ ಮಾಡುವಳಿದ್ದೇನೆ, ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಏಟಿನ ರುಚಿ ತೋರಿಸುತ್ತೇನೆ ಬೇಕಾ" ಅಂದಳು. "ಸಾರಿನ ಸೌಟ ಕೂಡ ಇದೆಯಲ್ಲ" ಅಂದೆ. "ಪಾಕಶಾಲೆಗೆ ಬಂದ್ರೆ ಯಾವುದರಲ್ಲಿ ಬೇಕೊ ಅದರಲ್ಲೇ ವಿಧ ವಿಧವಾಗಿ ಹೊಸ ಹೊಸತಾಗಿ ಕೊಡುತ್ತೇನೆ" ಅಂದ್ಲು. ಇನ್ನು ಹೋದರೆ ಏಟು ಮಾತ್ರ ಗ್ಯಾರಂಟಿ ಅಂತ, ರುಚಿಸದಿದ್ದರೂ ಯಾವುದೊ ಕಾರ್ಯಕ್ರಮ ನೋಡುತ್ತ ಕುಳಿತೆ... ಮತ್ತೆ ಹೀಗೆ ಚಹ ಹೀರುತ್ತ ಸಿಗುತ್ತೇನೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/hosaruchi.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

24 comments:

Keshav.Kulkarni said...

ಚಹಾದ ಟಿವಿ ಕಾರ್ಯಕ್ರಮ ನೋಡಿ ಆನಂದಿಸಿದೆ, ಆಫ್ ಕೋರ್ಸ್, ಚಹಾ ಹೀರುತ್ತ!

- ಕೇಶವ (www.kannada-nudi.blogspot.com)

ಮನಸು said...

ಹಹಹ ಚಹಾ ರುಚಿ ಚೆನ್ನಾಗಿದೆ... ನಿರೊಪಕರ ಹುದ್ದೆ ಕಾದಿರಿಸಲಾಗಿದೆ ...ಯಾವ ಚಾನೆಲ್ ಅಂತೀರಾ ನನ್ನಾಕೆ ಚಾನೆಲ್ ನಲ್ಲಿ.....ಹಹಹ

Ittigecement said...

ಪ್ರಭು ...

ಬಲು ಚಂದವಾದ ನಿರೂಪಣೆ...
ಓದಿ ಫ್ರೆಷ್ ಆದೆ...!

ಹೊಸ ರು ಛೀ.." ಯಾಗಿರದೇ..
ಬಲುರುಚಿಯಾಗಿತ್ತು....

ಅಭಿನಂದನೆಗಳು...

ಸವಿಗನಸು said...

ಪ್ರಭು,
ನಿರೂಪಣೆ ಚೆನ್ನಾಗೆ ಮಾಡ್ತೀರ.....ಕಾರ್ಯಕ್ರಮ ಚೆನ್ನಾಗಿತ್ತು....ಮರುಪ್ರಸಾರ ಮಾಡಿ ಅಂತ ಬೇಡಿಕೆ ಬರುತ್ತಿದೆ ವೀಕ್ಷಕರಿಂದ.....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು....

Heege Summane said...

ಚಹಾ ತುಂಬಾ ರುಚಿಯಾಗಿತ್ತು. ಊಟಕ್ಕೆ ಹೋಗುವ ಮೊದಲು ಚಹಾ ಕುಡಿದೆ.
ಥ್ಯಾಂಕ್ಸ್ ಫಾರ್ ದಿ ನೈಸ್ blog.

ರಾಜೀವ said...

ಪ್ರಭು,

ಮಸ್ತಾಗಿದೆ ಟೀ.
ಮುಂದೆ ಎಂದಾದರೂ ಬಿಸಿ ನೀರು ಕಾಯಿಸುವುದು ಹೇಗೆ ಅಂತ ಕೂಡ ಪ್ರಸಾರವಾಗಬಹುದೇನೋ. ಬೆಂಗಳೂರಿನಲ್ಲಿ ಕೆಲವಗಿಗೆ ಅದು ಕೂಡ ಗೊತ್ತಿರುವುದಿಲ್ಲ.
ನಿಮ್ಮ ಐಟಿ ಕೆಲಸ ಬೋರ್ ಹೊಡೆದರೆ, ನೀವು ಯಾವುದಾದರು ಒಂದು ಚಾನಲ್ ನಲ್ಲಿ ಅಪ್ಪ್ಲೈ ಮಾಡಬಹುದು. ಅದರಲ್ಲೂ ನಿಮಗೆ ಒಳ್ಳೆ ಭವಿಷ್ಯ ಇರುವಹಾಗಿದೆ ;-)

ಸಾಗರದಾಚೆಯ ಇಂಚರ said...

ಪ್ರಭು,
ನಾನು ಚಹಾ ಮಾಡುವುದನ್ನು ಕಲಿತೆ :)
ಒಳ್ಳೆಯ ವಿವರಣೆ

sunaath said...

ಪ್ರಭುರಾಜ,
ತುಂಬಾ ರುಚಿಯಾದ ಚಹಾ. (ಅಥವಾ ಕೇಟೀ ಅನ್ನಬಹುದು.)
ನಿಮ್ಮಿಂದ ಇನ್ನಷ್ಟು ಹೊಸಾ ರುಚಿ ಸವಿಯಲು ಕುತೂಹಲದಿಂದಿದ್ದೇನೆ.

Veena DhanuGowda said...

Hello,

barri chahaa nalle hotte thumbisho hage kansithira
nimmake ge heli bere bere olle ruchi heliskodri :)
Kalyoke nav ready
adrusta andre chahaa kudithane nim Blog odidu :)

Raghu said...

ಕೈಯಲ್ಲಿ ಒಂದು ಲೋಟ ಕಾಫಿ ಹಿಡಿದು ನಿಮ್ಮ ಕಿಚಿಪಿಚಿ ಪ್ರೊಗ್ರಾಮ್ ನೋಡ್ಲಿಕ್ಕೆ ಸ್ಟಾರ್ಟ್ ಮಾಡಿದೆ. ಇವತ್ತು ನಾನು ಮಾಡಿದ ಕಾಫಿ ರುಚಿ ಜಾಸ್ತಿ ಆಗಿದೆಯೆಲ್ಲ ಅಂತ ಅನ್ಕೊಂಡೆ ಪ್ಪ್ರೊಗ್ರಾಮ್ ನೋಡ್ತಾ ನೋಡ್ತಾ ಹೋದೆ. Add ಬಂದ್ರು ಏಳಲಿಲ್ಲ. ಇಂಟರೆಸ್ಟ್ ಜಾಸ್ತಿ ಆಗ್ತಾ ಆಗ್ತಾ ಹೋಯ್ತು ಕಾಫಿ ಕಾಲಿ ಆಗ್ತಾ ಆಗ್ತಾ ಬಂತು. ಪ್ರೊಗ್ರಾಮ್ ಅದ ಮೇಲೆ ಮುಂದಿನ ಸಂಚಿಕೆಯಲ್ಲಿ ಏನು ಬರುತ್ತೆ ತೋರಿಸ್ಬಹುದೇನೋ ಅಂತ ಕೂತೆ. ಟೀ ಗೆ ಬೇಕಾದ ಸಾಮಗ್ರೀಗಳನ್ನೂ ಲಿಸ್ಟ್ ಮಾಡಿ ಹಾಕಿ ಮುಂದಿನ ಸಂಚಿಕೆಯವರೆಗೆ 'ಟೀ'ಯಾ ಸವಿ ಸವಿಯಿರಿ ಅಂತ ಬಂತು...
ಸರಿ, ಇನ್ನು ಕಾಫಿ ಸಾಕು ಟೀ ಮಾಡೋಣ ಅಂತ ಅನ್ಸ್ತು. ಇದೋ ಇಗ ಹೊರಟೆ...
ಚೆನ್ನಾಗಿದೆ ಪ್ರಭು ನಿಮ್ಮ ಪ್ರೊಗ್ರಾಮ್...
ನಿಮ್ಮವ,
ರಾಘು.

ದಿನಕರ ಮೊಗೇರ said...

ಪ್ರಭು ಸರ್,
ನಿರೂಪಣೆ ಚೆನ್ನಾಗಿದೆ ಅಂತ ಹೇಳಿ ಹೇಳಿ ಸಾಕಾಗಿದೆ...... ಈ ಸಾರಿ ರುಚಿಯಾಗಿತ್ತು ಅನ್ನಲಾ? ನಂಗೆ ಚಾಹಾ ಮಾಡಲು , ಊಟ ತಿಂಡಿ ಮಾಡಲು ಬರತ್ತೆ, ಆದ್ರೆ ನೀವು ಹೇಳಿದ ರೀತಿ ಮಾಡಿದ್ರೆ ತುಂಬಾ ರುಚಿಯಾಗಿ ಮಾಡಬಹುದು ಅಂತ ನನ್ನ ಹೆಂಡತಿಯೂ ಸಹ ಹೇಳ್ತಿದಾಳೆ.... ಟ್ರೈ ಮಾಡಿ ಹೇಳ್ತೀನಿ....ನೆಕ್ಷ್ತ ಟೈಮ್ ನಿಮ್ಮ ಚಾನಲ್ ನಲ್ಲಿ ನಮಗೂ ಒಂದು ಚಾನ್ಸ್ ಕೊಡಿ....

Prabhuraj Moogi said...

Keshav Kulkarni ಅವರಿಗೆ
ಕಾಫಿ ವಿತ್ ಕರಣ್ ಅನ್ನೊ ಹಾಗೆ ಟೀ ವಿತ್ ಟೆಲ್‌ಪ್ರಭು ಕೂಡ ಆಯ್ತು ಅನ್ನಿ... :)

ಮನಸು ಅವರಿಗೆ
ನೀವು ರುಚಿ ನೋಡಿದಿರಾ, ಒಳ್ಳೆದಾಯ್ತು ರುಛೀ ಆಗಿಲ್ಲವಲ್ಲ... ಅಯ್ಯೋ ನನ್ನಾk ಚಾನಲ್ಲಾ... ಬ್ಲಾಗ್ ಬರೆಯೊಕೇ ಆಗ್ತಿಲ್ಲ, ಇನ್ನು ಅದೆಲ್ಲಿ ಮಾಡಲಿ :)

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಹೊಸ ರುಚಿ ಬಲುರುಚಿ ಯಾಗಿತ್ತಾ, ಚಹ ಕುಡಿದಷ್ಟೇ ಪ್ರೆಷ್ ಆಗಿದ್ದರೆ ನನಗೂ ಸಂತೋಷ...

ಸವಿಗನಸು ಅವರಿಗೆ
ಸೂಪರ್ ಕಮೆಂಟ್, ಮರುಪ್ರಸಾರ ಮಾಡಬೇಕಾ, ಮಾಡಬಹುದಿತ್ತು ಆದ್ರೆ ನನ್ನಾk ಈ ಸಾರಿ ನನಗೆ ಟೀ ಮಾಡಲು ಹೇಳಿ ತಾನು ನಿರೂಪಕಿ ಆಗುತ್ತೀನಿ ಅಂತಿದಾಳೆ!
ನಿಮಗೂ ರಾಜ್ಯೋತ್ಸವದ ಶುಭಾಶಯಗಳು...

pummy ಅವರಿಗೆ
ಚಹ ರುಚಿಯಾಗಿದ್ದರೆ ಅದರ ಸಂಪೂರ್ಣ ಶ್ರೇಯ ನನ್ನಾkಗೆ ಸೇರಬೇಕು. ಚಹ ಏನು ಮೃಷ್ಟಾನ್ನ ಭೋಜನವೇ ಮಾಡಿ ಹಾಕುತ್ತಾಳೆ ನನ್ನಾk, ಹೀಗೆ ಓದುತ್ತಿರಿ...

ರಾಜೀವ ಅವರಿಗೆ
ಬಹಳ ಸರಿಯಾಗಿ ಹೇಳಿದಿರಿ ಅದೂ ಗೊತ್ತಿಲ್ಲದವರೂ ಇದ್ದಾರೆ, ಒಲೆ ಹೊತ್ತಿಸದೇ, ಪಾತ್ರೆಯಲ್ಲಿ ಎಲ್ಲ ಸುರಿದು ಇನ್ನೂ ಹೊಸರುಚಿ ತಯಾರಾಗಿಲ್ಲ ಅಂದವರೂ ಇದ್ದಾರೆ.
ಹ್ಮ್, ಅಷ್ಟೇ ಮಾಡುವಾ, ಯಾವುದಾದರೂ ಚಾನಲ್ಲಿನಲ್ಲಿ ರುಚಿ ನೋಡೊಣ ಅಂತೆ. :)

ಸಾಗರದಾಚೆಯ ಇಂಚರ ಅವರಿಗೆ
:) ಖಂಡಿತ ಈ ರೀತಿ ನಿಮ್ಮಾಕೆಯೊಂದಿಗೆ ಒಮ್ಮೆ ಚಹ ಮಾಡಿ ನೋಡಿ ರುಚಿಯಾಗಿರದಿದ್ದರೆ ಕೇಳಿ.

sunaath ಅವರಿಗೆ
ಬರೀ ಹಾಲಿನಲ್ಲಿ ಮಾಡಿದ ರುಚಿಕಟ್ಟಾದ ಟೀಗೆ ಕೇಟಿ ಅಂತಾರಲ್ಲವೇ, ನನ್ನಾk ಜತೆಯಿದ್ದರೆ ನಳಪಾಕವೇ ಸವಿಯಲು ಕೊಡುತ್ತೇವೆ ಬಿಡಿ...

ಪ್ರೀತಿಯಿ೦ದ ವೀಣಾ :) ಅವರಿಗೆ
ಹ್ಮ್ ಕೆಲವೊಮ್ಮೆ ಕೆಲಸ ಜಾಸ್ತಿಯಿದ್ದಾಗ ಚಹದಲ್ಲೇ ಹೊಟ್ಟೆ ತುಂಬಿರತ್ತೆ ಕೂಡ...
ಖಂಡಿತ ನನ್ನಾk ಬೇರೆ ಬೇರೆ ಹೊಸರುಚಿ ಹೇಳಿಕೊಡುತ್ತಾಳಂತೆ, ಆದರೆ ನಾನು ಮಾತ್ರ ನಿರೂಪಕನಾಗಿ ಬರಬಾರದಂತೆ :)... ಏನು ಮಾಡಲಿ.

Raghu ಅವರಿಗೆ
:) ಬಹಳೆ ಚೆನ್ನಾಗಿದೆ ನಿಮ್ಮ ಕಮೆಂಟ್, ಅಡವರ್ಟೈಸ್ ಬಂದ್ರೂ ಏಳದಿದ್ದುದು ಒಳ್ಳೆದಾಯ್ತು ನೋಡಿ, ನಮ್ಮ ಪ್ರೋಗ್ರಾಮ್‌ಗೂ ಹೆಚ್ಚಿನ ಜಾಹೀರಾತು ಸಿಕ್ತವೆ ಅಂತೀನಿ.
ಹೌದದು ಮುಂದಿನ ಸಂಚಿಕೆಯ ಸಸ್ಪೆನ್ಸ ಹಾಗೇ ಇರಬೇಕಲ್ಲ ಅದಕ್ಕೆ ಈಗಲೇ ಹೇಗೆ ಹೇಳೊದು :)
ಕಾಫಿ ಟೀ ಏನೇ ಮಾಡಿ, ಖುಷಿಯಾಗಿ ರುಚಿ ನೋಡಿ...

ದಿನಕರ ಮೊಗೇರ.. ಅವರಿಗೆ
ಹೇಗಂದರೂ ಸರಿ, ನಿಮ್ಮ ಅನಿಸಿಕೆ ಹೇಗಿದ್ದರೂ ನನಗೆ ಖುಷಿ...
ಖಂಡಿತ ಟ್ರೈ ಮಾಡಿ, ನೀವು ಹೊಸರುಚಿ ತಯ್ಯಾರು ಮಾಡುತ್ತಿದ್ದರೆ ನಿಮ್ಮಾಕೆ ನನ್ನಾkಗಿಂತ ಜಾಸ್ತಿ ತರಲೆ ತುಂಟತನ ಮಾಡಲಿ ಅಂತ ಹಾರೈಸ್ತೇನೆ :)
ಒಹ್ ಮುಂದಿನ ಚಾನ್ಸ್ ನಿಮಗೇ...(ಹೊಸರುಚಿಗೆ ತಯ್ಯಾರಿ ಅಂತ ಹೊಸ ಬಟ್ಟೆ ಖರೀದಿ ಎಲ್ಲಾ ಬೇಗ ಮುಗಿಸಿಬಿಡಿ!)

ಬಾಲು said...

ರಾಜರೇ ನಿಮ್ಮ ಟೀ ಕಾರ್ಯಕ್ರಮ ಚೆನ್ನಾಗಿತ್ತು.

ನಾನು ಕೆಲವು ಕಾರ್ಯಕ್ರಮಕ್ಕೆ ಸಲಹೆ ಕೊಡಬಯಸುವೆ. ಈ ಕೆಳಕಂಡ ಪಾನೀಯ ಗಳನ್ನೂ ಮಾಡುವುದು ಹೇಗೆಂದು ವೀಕ್ಷಕರಿಗೆ ತೋರಿಸಿ.

ಜಿ ಟಿ - ಗುಡ್ ಟಿ
ವಿ ಜಿ ಟಿ - ವೆರಿ ಗುಡ್ ಟಿ
ಬಿ ಟಿ - ಬಯೋ ಟೆಕ್ ಅಲ್ಲ, ಬ್ಯಾಡ್ ಟಿ ಅಂತ.
ಕೆ ಟಿ - ಕೆಟ್ಟ ಟಿ
ಕೆ ಜಿ ಟಿ - ಕುಲ ಗೆಟ್ಟ ಟಿ

Annapoorna Daithota said...

ತುಂಬಾ ಚೆನ್ನಾಗಿದೆ ಲೇಖನ :)

ಕಿವಿಮಾತು: ಚಹಾಕ್ಕೆ ದಾಸರಾಗಬೇಡಿ, ಆರೋಗ್ಯಕ್ಕೆ ಒಳ್ಳೇದಲ್ಲ, ಹಾಗೇ ‘ನಿಮ್ಮಾಕೆ’ ಗೆ ಕೂಡಾ :D

shivu.k said...

ಪ್ರಭು,

ಇದು ನಿಜಕ್ಕೂ ರೊಮ್ಯಾಂಟಿಕ್ ಚಹ!

ಒಂದು ಚಹ ಮಾಡುವ ವಿಧಾನವನ್ನು ಎಷ್ಟು ಚೆನ್ನಾಗಿ ಬರೆದಿದ್ದೀರಿ ಅಂದರೆ ಅಷ್ಟು ದೀರ್ಘವಾಗಿದ್ದರೂ ಬೇಸರವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ನಡುವೆ ಅಲ್ಲಲ್ಲಿ ಬರುವ ಪಂಚ್‍ಗಳು ತುಂಬಾ ಇಷ್ಟವಾದವು.

ಜಲನಯನ said...

ಹೊಸ ರುಚಿ ಬರದೇ ಇರೋ ಚಾನಲ್ಲೇ ಇಲ್ಲ, ಇತ್ತೀಚೆಗೆ ಒಂದು ಚಾನಲಲ್ಲಿ ನೀವು ಈಗ ಮಾಡುವ ಅಡುಗೆಯನ್ನು ಹೇಗೆ ಕಲಿತ್ರಿ ಅಂದದ್ದಕ್ಕೆ ಆ ಮಹರಾಯ್ತಿ ಏನಂದದ್ದು ಗೊತ್ತಾ..? ಪುಸ್ತಕ ಓದಿ, ವೆಬ್ ಸೈಟಲ್ಲಿ ನೋಡಿ ಬರೆದುಕೊಂಡೆ ಮತ್ತೆ ಮನೇಲಿ ಎರಡು ಸರ್ತಿ ಮಾಡಿ ನನ್ನ ಎಂಟು ವರ್ಷದ ಮಗನಿಗೆ ತಿನ್ನಿಸಿದೆ ಅವನು ಅಮ್ಮಾ ತುಂಬಾ ಚನ್ನಾಗಿದೆ ನೀನು ಟೀವೀಲಿ ಹೊಸರುಚಿಗೆ ಕೊಡು ಅಂದ..ಹಾಗಾಗಿ ಇಲ್ಲಿಗೆ ಬಂದೆ...ಎನ್ನೋದೇ...?? ಅಲ್ಲ, ಎಂಟು ವರ್ಷದ ಮಗನಿಗೆ ಏನು ತಿಳಿಯಬೇಕು..? ಅವನಿಗೆ ಟೀವೀಲಿ ಅಮ್ಮ ಬರೋದು ಮುಖ್ಯ ತನ್ನ ಸ್ನೇಹಿತರಹತ್ರ ಜಂಭ ಕೊಚ್ಚಿಕೊಳ್ಳೋಕೆ...
ಈಗಿನ ಬಿಸಿ-ಬಿಸಿ ಚಾನಲ್ ಸಮಾಚಾರ (ಹೊಸ ರುಚಿ ಬಿಟ್ರೆ ಇನ್ನೇನು??) ನಿಮ್ಮ (ನೀವು, ನಿಮ್ಮಾK ಮತ್ತು ಎಂದಿನಂತೆ ಪದ್ದು ಜೊತೆ) ಚಾನಲ್ ನಲ್ಲಿ ಮೂಡಿದ್ದು ಖುಷಿಯಾಯ್ತು.....ರಿಪೀಟ್ ಟೆಲಿಕಾಸ್ಟ್ ಯಾವಾಗ ತಿಳಿಸಿ....ಹಹಹಹ

Mahantesh Kabadagi said...

ಟೀ ಸಕ್ಕತ್ ಆಗಿತ್ತು ಪ್ರಭು. ಹೊಸ ರುಚಿಗೆ ತಯ್ಯಾರಿ ತುಂಬಾನೇ ಚೆನ್ನಾಗಿತ್ತು (ಬ್ಯೂಟಿ ಪಾರ್ಲರ್, ಮೇಕಪ್ಪು . . . .) ಹಾ ಹಾ

ಗೌತಮ್ ಹೆಗಡೆ said...

chaha first class:)

Prabhuraj Moogi said...

ಮೊದಲಿಗೆ ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ, ಬಹಳ ಕೆಲಸದಲ್ಲಿ ಸಮಯವೇ ಸಿಗದಾಗಿದೆ, ಹಾಗಾಗಿಯೇ ಈ ವಾರದ ಲೇಖನ ಕೂಡ ಬರೆಯಲಾಗಿಲ್ಲ.

ಬಾಲು ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಒಳ್ಳೇ ಸಲಹೆ ಕೊಟ್ಟೀದೀರಾ... ಕುಲಗೆಟ್ಟ ಟೀ ಅಂತೂ ಸೂಪರ್,
ಕಲಗಚ್ಚು ತಯ್ಯಾರಿಸೋದು ಹೇಳೋಣ ಅಂತ ಇದ್ವಿ ಅದಾದ ನಂತರ ನೀವು ಹೇಳಿದ ರುಚಿಪಾಕಗಳೇ...

Annapoorna Daithota
ಮೆಚ್ಚುಗೆಗೆ ಧನ್ಯವಾದಗಳು.
ಕಿವಿಮಾತು ಚೆನ್ನಾಗಿದೆ, ಕೇಳುವ ಕಿವಿಗೆ ಮಾತ್ರ, ಬಾಯಿ ಚಪಲ ಬಿಡಬೇಕಲ್ಲ :)
ಚಹ ಬೇಡ ಅಂದರೂ ಓಕೇ ಆದರೆ ನನ್ನಾkಯ ಹೇಗೆ ಬಿಡಲಿ!

shivu ಅವರಿಗೆ
:) ರಸಮಯವಾಗಿತ್ತು ಅನ್ನಿ, ಸರಸದೊಂದಿಗೆ.
ನೀರು, ಹಾಲು, ಸಕ್ಕರೆ, ಚಹಪುಡಿ, ನನ್ನಾk ಹೀಗೆ ಪಂಚ ಪಕ್ವಾನ್ನಗಳು ಸೇರಿದಮೇಲೆ ಪಂಚ್ ಇರಲೇಬೇಕಲ್ಲವೇ...

ಜಲನಯನ ಅವರಿಗೆ
ಹೀಗೆ ಪುಸ್ತಕ ಓದಿ, ಟೀವೀ ನೋಡಿ ಕಲಿತವರೇ ಜಾಸ್ತಿ.
ನೀವು ಹೇಳಿದ್ದು ಸರಿ ಆ ಮಗುವಿಗೇನು ತಿಳಿದೀತು. ಸ್ನೇಹಿತರ ಮುಂದೆ ನಮ್ಮಮ್ಮ ಅಂತ ಹೇಳಲಾದರೆ ಆಯ್ತು ಅಂತಿದೆ.
ಆದರೂ ಅಮ್ಮನ ಕೈರುಚಿಯೇ ಬೇರೆ ಏನಂತೀರಾ...
ಬಿಸಿ ಬಿಸಿ ಸುದ್ದಿಗಳ ಚಾನಲ್ಲುಗಳು ಈಗಂತೂ ಜಾಸ್ತಿ ಆಗಿವೆ, ಹಾಗಂತ ಟೀವೀ ಮುಂದೆ ಗೃಹಿಣಿಯರು ಕುಳಿತರೆ ಗಂಡಂದಿರಿಗೆ ಬಿಸಿ ಅಡುಗೆ ಕೂಡ ದಕ್ಕುವುದಿಲ್ಲ :)
ರಿಪೀಟ ಯಾಕೆ ಸರ್, ಮತ್ತೆ ಹೊಸರುಚಿಯೋದಿಗೆ ಬರುತ್ತೀವಿ ಬಿಡಿ.

mahan ಅವರಿಗೆ
ಈಗಿನ ಶೋಗಳಲ್ಲಿ ಬರುವವರು ಹೀಗೆ ತಾನೆ ತಯ್ಯಾರಿ ಮಾಡಿಕೊಳ್ಳುವುದು :), ಮೆಚ್ಚುಗೆಗೆ ಧನ್ಯವಾದಗಳು ಓದುತ್ತಿರಿ.

ಗೌತಮ್ ಹೆಗಡೆ ಅವರಿಗೆ
ಒಕೇಸ್... ಗೌತಮ್ ಸರ್ ಗೇ ಇನ್ನೊಂದು ಕಪ್ಪು ಸ್ಪೇಸಲ್ ಟೀ...

Annapoorna Daithota said...

ಛೇ ! ಛೇ ! ನಿಮ್ಮಾಕೆಗೆ ದಾಸರಾಗಬೇಡಿ ಅಂತಲ್ಲ, ಚಹಾಕ್ಕೆ ದಾಸ ಆದ್ರೆ ನಿಮ್ಮ ಹಾಗೂ ನಿಮ್ಮಾಕೆಯ ಆರೋಗ್ಯಕ್ಕೆ ಒಳ್ಳೇದಲ್ಲ ಅಂತಂದಿದ್ದು ನಾನು !!

ನೀವು ನಿಮ್ಮಾಕೆನ ಬಿಟ್ರೆ, ನಮ್ಮೆಲ್ಲರ ಆರೋಗ್ಯಕ್ಕೂ ಒಳ್ಳೇದಲ್ಲ, ಯಾಕೇಂದ್ರೆ ಈಗ ಆಕೆ ಬರೀ ನಿಮ್ಮಾಕೆ ಅಲ್ಲ ನಮ್ಮಾಕೆ ಕೂಡಾ :-)

Prabhuraj Moogi said...

Annapoorna Daithota ಅವರಿಗೆ
ಓಹ್ ಹೌದಾ, ಸರಿ ಸರಿ... ಅವಳಿಗೆ ಹೇಳಿದೆ ಚಹ ಆರೊಗ್ಯಕ್ಕೆ ಒಳ್ಳೆದಲ್ಲ ಅಂತ "ನೀವು ಕುಡಿಯುವಾಗಲೊಮ್ಮೆ ನಾನು ಚಹ ಕುಡಿಯೋದು, ನಿಮ್ಮಿಂದಲೇ ಕಲಿತದ್ದು, ಮೊದಲು ನೀವು ಬಿಡಿ" ಅಂತ ನನ್ನೇ ಬಯ್ದಳು.
ನನ್ನಾಕೆಯನ್ನು ನಿಮ್ಮಾಕೆ ಕೂಡ ಅಂತ ಹೇಳಿದ್ದು ಕೇಳಿ ಬಹಳ ಖುಷಿಯಾಯ್ತು.

Ranjita said...

ಹೊಸಾ ರುಚಿ Tea ಸೂಪರ್ ಸರ್ ..
ನಿಮ್ಮಕೆಯಾಗುವಾಕೆಗೆ ಮೊದಲೇ ನಿಮ್ಮ ಬ್ಲಾಗ್ ತೋರಿಸಬೇಡಿ .. ನೀವು ನಿಮ್ಮಕೆಯನ್ನಾ ಕಾಲು ಎಳೆಯೋ ರೀತಿ ನೋಡಿ ಮುನಿಸಿಕೊಂಡಾರು.. ಇಲ್ಲ ಅವರೂ ನಿಮಗೆ ತಿರುಗೇಟು ಕೊಡಲು ಮೊದಲೇ ರೆಡಿ ಆಗಬಹುದು :)

Prabhuraj Moogi said...

Ranjita ಅವರಿಗೆ
ನನ್ನಾಕೆಯಾಗುವಾಕೆಗೇ ಈ ಎಲ್ಲ ಲೇಖನಗಳು.. ಅವಳೇ ಓದದಿದ್ದರೆ ಹೇಗೆ :) ಓದಲಿ ಬಿಡಿ... ಅವಳು ಏನು ತಿರುಗೇಟು ಕೊಟ್ಟರೂ, ನನ್ನ ಕೀಟಲೆಗಳಿಗೇನೂ ಕೊರತೆ ಇರಲಾರದು.

Anonymous said...

Best free spins casino bonus: 100+ online slots
【 United 메리트카지노 States 】⚡ Best free spins 카지노 casino 10bet bonus: 100+ online slots. Play casino games for free, with no deposit required.