ಹಲ್ಲುಜ್ಜದೇ ಹಾಳು ಮುಖದಲ್ಲಿ ಹಾಗೇ ಎದ್ದು ಕೂತಿದ್ದೆ, ಆಕಳಿಸುತ್ತ ಅತ್ತಿತ್ತ ನೋಡುತ್ತ ಎನೂ ಮಾತಿಲ್ಲದೇ, ಮಾತನಾಡಲೇಬೇಕೆನ್ನಿಸುತ್ತಿರಲಿಲ್ಲ. ಅವಳೊ ಆಗಲೇ ಎದ್ದು ಏನೋ ಕೆಲಸದಲ್ಲಿ ನಿರತಳಾಗಿದ್ದಳು, ಎಂದಿನಂತಾಗಿದ್ದರೆ ಎನೋ ತುಂಟಾಟ ಮಾಡುತ್ತ ಅವಳ ಕಾಡಿಸುತ್ತಿದ್ದೆ, ಇಂದೇಕೊ ಮನಸಿರಲಿಲ್ಲ, ಮನದಲ್ಲಿನ ಮಾತುಗಳೆಲ್ಲ ಮಾತಾಡಿ ಮಾತಾಡಿ ಖಾಲಿಯಾಗಿ ಹೋದವೇನೊ ಅನ್ನಿಸುತ್ತಿತ್ತು. ಮತ್ತೆ ಹೊದ್ದು ಎದ್ದೇಳದಂತೆ ಮಲಗಿಬಿಡಲೇನೊ ಅಂದರೂ ನಿದ್ರೆ ಕೂಡ ಹತ್ತಿರ ಸುಳಿಯದಂತೆ ಓಡಿ ಹೋಗಿತ್ತು, ಮನೆಯಲ್ಲಿ ವಟಗುಡುತ್ತಿರುವ ಎಫ್‌ಎಂನ ರೇಡಿಯೋ ಜಾಕಿ, ಹೊರಗೆ ಚಿಲಿಪಿಲಿಗುಡುತ್ತಿರುವ ಹಕ್ಕಿ, ಕಸಗುಡಿಸುತ್ತಿರುವ ಪಕ್ಕದಮನೆ ಪದ್ದುನ ಪೊರಕೆ ಸದ್ದು, ಓಣಿಯಲ್ಲಿ ಪ್ರತಿದ್ವನಿಸುತ್ತಿದ್ದ ಹೂವಾಡಗಿತ್ತಿ ಗುಲಾಬಿಯ ಕೂಗು, ಏನೊಂದು ಕೇಳಿದರೂ ಕೇಳಿಸದಂತೆ ಆವರಿಸಿತ್ತು ನಿಶಬ್ದ, ನನ್ನ ಮೌನಕ್ಕೆ ಜತೆಯಾಗಲೆಂದು. ಆ ನೀರಸ ಮೌನಕ್ಕು ಕೂಡ ನಿಶಬ್ದ ಜತೆಯಾದರೆ, ನಾನೊಬ್ಬನೇ ಯಾಕೊ ಒಬ್ಬಂಟಿಯಾದಂತಿತ್ತು.
ಮದುವೆಯಾಗಿ ಮಡದಿ ಮನೆಯಲ್ಲಿದ್ದು, ಮನೆತುಂಬ ಮಕ್ಕಳಿರಲವ್ವ ಅಂತ ಹರಸುವ ಹೊತ್ತಿನಲ್ಲಿ, ಇವನ್ಯಾಕೆ ಒಬ್ಬಂಟಿಯಾದಾನು ಅಂದಿರಾ, ಸುತ್ತ ಸಂತೆ ಸೇರಿದ್ದರೂ ಒಮ್ಮೊಮ್ಮೆ ಹೀಗೆ ಏಕಾಂಗಿ ಅನಿಸಿಬಿಡುತ್ತದೆ, ಈ ಮನಸೇ ಹಾಗೆ, ಯಾರೂ ಇಲ್ಲದ ಹೊತ್ತಿನಲ್ಲಿ ಯಾರನ್ನೊ ಕಲ್ಪಿಸಿಕೊಂಡು ಕನಸು ಕಟ್ಟುವ ಮನಸು, ಎಲ್ಲರಿದ್ದರೂ ಎಲ್ಲೊ ದೂರ ಹೋಗಿ ಒಬ್ಬಂಟಿಯಂತೆ ನಿಂತು ಬಿಡುತ್ತದೆ. ಇನ್ನೊಂದು ಬಾರಿ ಬಾಯಿತುಂಬ ಆಕಳಿಸಿ, ಮೈಮುರಿದು ಮೇಲೆದ್ದವನು ಮತ್ತೇನೂ ಮಾಡಲು ಇಲ್ಲವೇನೊ ಅನ್ನುವಂತೆ ಮತ್ತೆ ಅಲ್ಲೇ ಕುಳಿತೆ, ಅವಳು ಬಂದಳು.
ದಿಕ್ಕೆಟ್ಟು ದೇವರ ನೆನೆಸುತ್ತಿದ್ದಂತೆ ಕೂತವನನ್ನು ನೋಡಿ, ಅಲುಗಿಸಿ ಏನಾಯ್ತು ಅನ್ನೊವಂತೆ ಹುಬ್ಬು ಹಾರಿಸಿದಳು, ಸುಮ್ಮನೇ ನಕ್ಕೆ, "ಏನು ಮೌನವೃತಾನಾ, ಮಾತಾಡೊಲ್ವಾ" ಅಂತಂದಳು, ಅವಳಿಗೆ ಗೊತ್ತಾಗಿತ್ತು ಒಂದು ಮಾತಾಡಿದರೆ ಹತ್ತು ಹಲವು ಹರಟೆ ಹೊಡೆಯುವವ ಸುಮ್ಮನೇ ಕೂತಿದ್ದರೆ ಗೊತ್ತಾಗದಿದ್ದೀತೆ. ಮತ್ತೇನೂ ಮಾತೇ ಹೊರಡದಿದ್ದಾಗ, ಅವಳೂ ಒಂದು ಸಾರಿ ಹಲ್ಲು ಕಿರಿದು ಹೊರಟು ಹೋದಳು, ಈ ಮಾತಿನ ಮಷೀನಿನ ಬ್ಯಾಟರಿ ಬಿಸಿಯಾಗಲು ಸ್ವಲ್ಪ ಸಮಯ ಬೇಕೇನೊ, ಇನ್ನೊಂದಿಷ್ಟು ಹೊತ್ತಾದರೆ ತಾನೇ ಸರಿಹೊಗುತ್ತದೆಂದು. ಮೌನ ಮಾತಾಡು ನೋಡೊಣ ಅಂತ ಮುಂದೆ ಕೂತಿದ್ದರೂ ಮತ್ತೆ ನಾನು ಒಬ್ಬಂಟಿಯೇ.
ಹಲ್ಲಿನೊಂದಿಗೆ ಬ್ರಷು ತೆಕ್ಕೆ ಹಾಯ್ದು ನಾನಿನ್ನ ಜತೆಯಿದ್ದೇನೆ ಅನ್ನುತ್ತಿದೆಯೇನೊ ಅನ್ನುವಂತೆ ಹಲ್ಲುಜ್ಜಿದೆ, ಬಕೆಟ್ಟಿಗೆ ಜತೆಯಾಗಿ ತೂಗುಬಿದ್ದಿದ್ದ ಮಗ್ ಕಿತ್ತುಕೊಂಡು ಮುಖ ತೊಳೆದರೆ, ನೀರಿಗೆ ಜತೆಯಾಗಿ ಸೋಪು ತೊಳೆದು ಹೋಯ್ತು. ಜಗತ್ತಿನಲ್ಲಿ ಎಲ್ಲ ಜತೆ ಜತೆಯಾಗೇ ಇದೆ, ನಾನೊಬ್ಬನೇ ಒಬ್ಬಂಟಿಯೇನೊ ಅಂತ ಅಣಕಿಸಿದಂತೆ. ಹಾಗೆ ನೋಡಿದರೆ ನಾನೆಲ್ಲಿ ಒಬ್ಬಂಟಿ ಇದ್ದಾಳಲ್ಲ ನನ್ನಾಕೆ ಅಂತ ಅವಳಿದ್ದಲ್ಲಿಗೇ ಹೋದೆ, ಮಾತಾಡುವ ಮಲ್ಲಿ, ಮಾತಿಲ್ಲದೇ ಕೈಗೆ ಕಾಫಿ ಕಪ್ಪಿತ್ತಳು, ಕಪ್ಪಿನ ಜತೆ ಬಸಿ(ಸಾಸರ್) ಕೂಡ ಬಂತು ಜತೆಯಾಗಿ. ಹಾಗೇ ಹೊರಗೆ ಬಂದು ಓದಲೆಂದು ಪೇಪರು ಕೈಗೆತ್ತಿಕೊಂಡೆ ಸಪ್ಲಿಮೆಂಟು ಉಚಿತವಾಗಿ ಅದರ ಜತೆ ಸೇರಿಕೊಂಡಿತ್ತು. ಓದಲೂ ಮನಸಿಲ್ಲದೇ ಅದನ್ನಲ್ಲೇ ಬೀಸಾಕಿ, ಬಿಸಿ ಬಿಸಿ ಕಾಫಿ ಹೀರಿದರೆ ಕಾಫಿ ಪುಡಿಗೆ ಹಾಲು ಸಕ್ಕರೆ ಕೂಡಿತ್ತು.
ಅಲ್ಲೇ ಬಂದು ಅವಳೂ ಪಕ್ಕ ಕೂತಳು, "ಮುಂಜಾನೆಯಿಂದ ನೋಡ್ತಾ ಇದೀನಿ, ಏನಾಗಿದೆ ನಿಮಗೆ, ಮಾತಿಲ್ಲ ಕಥೆಯಿಲ್ಲ" ಅಂತ ಮತ್ತೆ ಕೆದಕಿದಳು, ಧೀರ್ಘ ನಿಟ್ಟುಸಿರು ಬಿಟ್ಟು, "ಯಾಕೊ ಒಬ್ಬಂಟಿ ಅಂತ ಅನಿಸ್ತಾ ಇದೆ, ಮಾತನಾಡಲೇ ಮನಸಿಲ್ಲ, ಒಂಥರಾ ಬೇಜಾರು" ಅಂತ ಹೇಳಿದೆ, ಅವಳಿಗೇನು ಹೇಳಬೇಕೊ ತಿಳಿಯಲಿಲ್ಲ, ಸಪ್ತಪದಿ ತುಳಿದು ಸಂಗಾತಿಯಾಗಿರುತ್ತೇನೆ ಅಂತ ವಚನವಿತ್ತವನೇ, ಯಾಕೊ ಒಬ್ಬಂಟಿ ಅನಿಸ್ತಾ ಇದೆ, ಅಂದರೆ ಏನು ಹೇಳಿಯಾಳು. "ನಾನಿಲ್ಲವೇ ಇಲ್ಲಿ, ನೀವ್ಯಾಕೆ ಒಬ್ಬಂಟಿ, ಏನೇನೊ ಮಾತಾಡಬೇಡಿ ನೀವು" ಅಂತ ಹತ್ತಿರ ಬಂದು ಕೈಹಿಡಿದುಕೊಂಡು ಕೂತಳು, ಅವಳಿಗೇನು ಅಂತ ಹೇಳಲಿ, ಅವಳು ನಾನು ಅಂತ ಬೇರೆ ಬೇರೆಯಾದರೆ ಅವಳಿಗೆ ನಾ ಜತೆ, ನನಗವಳು ಆಗಬಹುದೇನೊ, ಆದರೆ, ನಾನು ನನ್ನಾಕೆ ಒಂದೇ ಆದರೆ... ಅಲ್ಲಿ ಜತೆ ಯಾರು. ನನಗವಳು ಜತೆ ಅಂತ ಹೇಳಿ ಅವಳ ನನ್ನಿಂದ ಬೇರೆ ಮಾಡಲೇ, ನಾನು ಅವಳು ಇಬ್ಬರೇ?, ಇಬ್ಬರೂ ಸೇರಿ ಒಬ್ಬರೇ? ಒಬ್ಬರೇ ಆದರೆ ಒಬ್ಬಂಟಿ ಅಲ್ಲವೇ... ಅಂತ ಏನೇನು ಹುಚ್ಚು ಯೋಚನೆಗಳು ಸುತ್ತ ಮುತ್ತಿಕೊಂಡವು. ಆ ಯೋಚನೆಗಳ ನಡುವೆ ನಾನೊಬ್ಬನೇ ಒಬ್ಬಂಟಿ ಬಂಧಿಯಾಗಿದ್ದೆ.
ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಒಮ್ಮೊಮ್ಮೆ ಹಾಗೇ ಒಬ್ಬಂಟಿ ಅನಿಸಿಬಿಡುತ್ತದೆ, ಆದರೆ ಅದ್ಯಾಕೊ ಗೊತ್ತಿಲ್ಲ" ಅಂತ ತನ್ನ ಅಂತರಾಳ ತೆರೆದಳು, ನಾನು ಒಬ್ಬಂಟಿ ಅಂದಿದ್ದಕ್ಕೆ ಅವಳಿಗೂ ಹಾಗೇ ಅನ್ನಿಸಿತೇನೊ ಪಾಪ ಅಂತ "ನಾ ನಿನ್ನೊಂದಿಗೇ ಇದ್ದೇನೆ, ಆದರೂ ಯಾಕೊ ಹೀಗೆ ಅನಿಸ್ತಾ ಇದೆ" ಅಂತ ನನ್ನ ದುಗುಡ ಹೊರತೆಗೆದೆ. "ಒಂದೊಂದು ದಿನ ಮನೇಲಿ ಒಬ್ಳೆ ಇರ್ತೀನಲ್ಲ, ಆಗಲೂ ಹಾಗೆ ಅನಿಸಿಬಿಡುತ್ತದೆ, ಏನು ಮಾಡಲೂ ತಿಳಿಯುವುದಿಲ್ಲ, ಯಾರಿಗೊ ಫೋನು ಮಾಡಿ ಹರಟುತ್ತೇನೆ" ಅಂತ ತನ್ನನುಭವ ಹೇಳಿದರೆ, "ನನಗೇನೊ ಯಾರೊಂದಿಗೂ ಮಾತಾಡಲೂ ಮನಸಿಲ್ಲ" ಅಂತ ನಾನಂದೆ, ಅವಳೊಂದಿಗೂ ಕೂಡ ಅಂತ ಸುಮ್ಮನೇ ಕೂತಳು.
ಬಹಳ ಹೊತ್ತು ಹಾಗೇ ಕೂತಿದ್ದರೆ ಎಲ್ಲಿ ನಿಜವಾಗಲೂ ಒಬ್ಬಂಟಿಯಾದೇನೊ ಅನ್ನಿಸಿರಬೇಕು ಅವಳಿಗೆ "ನೀವು ಹೀಗೇ ಕೂರೋದಾದ್ರೆ, ಕೂತು ಬಿಡಿ ಒಬ್ಬಂಟಿ ಅಂತ, ನಾ ತವರುಮನೆಗೆ ಹೋಗಿ ಬಿಡ್ತೀನಿ" ಅಂತ ಹೆದರಿಸಿದಳು, "ಮೊದಲೇ ಒಬ್ಬಂಟಿ ಅನಿಸ್ತಾ ಇದೆ, ನೀನೂ ಹೋದರೆ" ಅಂದರೆ, "ಇದಾಳಲ್ಲ ನಿಮ್ಮ ಜತೆ ಪಕ್ಕದ ಮನೆ ಪದ್ದು" ಅಂತ ಕೀಟಲೆಗಿಳಿದಳು, "ಪಕ್ಕದಮನೆ ಬಿಡು, ನನಗೇನೊ ಊರು ಬಿಟ್ಟು ಎಲ್ಲೊ ದೂರ ದಟ್ಟಡವಿಯಲ್ಲಿ ಹೋಗಿ ಸುಮ್ಮನೇ ಕೂತುಬಿಡಬೇಕೆನ್ನಿಸಿದೆ ಒಬ್ಬಂಟಿಯಾಗಿ" ಅಂದೆ. "ಬಟ್ಟೆ ಎಷ್ಟು ಪ್ಯಾಕ್ ಮಾಡಲಿ" ಅಂದ್ಲು, ಈಗ ನಾನು ಕಾಡಿಗೆ ಹೊರಟಿದ್ದೇನೇನೊ ಅನ್ನುವಂತೆ. "ಹಾಗಲ್ಲ, ಅದು ಅನಿಸಿಕೆ ಮಾತ್ರ, ಎಲ್ಲೊ ದೂರ ಬೆಟ್ಟದ ಮೇಲೆ ಹತ್ತಿ ಅದರ ತುಟ್ಟತುದಿಗೆ ಕೂತು ಬಿಡಬೇಕು ಅನ್ನಿಸುತ್ತದೆ" ಅಂದರೆ, "ಇಲ್ಲೇ ಈ ಏಣಿ ಮೇಲೆ ಏರಿ ಕೂರಲೇ ಭಯ, ಇನ್ನು ಬೆಟ್ಟವಂತೂ ದೂರದ ಮಾತು" ಅಂತ ತಳ್ಳಿಹಾಕಿದಳು. "ನಾನೂ ಅದನ್ನೇ ಹೇಳುತ್ತಿರುವುದು, ಅಷ್ಟು ಏಕಾಂಗಿಯಾಗಿಬಿಡಬೇಕು ಅನ್ನಿಸುತ್ತದೆ, ಆದರೆ ಆಗುವುದಿಲ್ಲ, ಅದರೂ ಅನ್ನಿಸುವುದೇಕೆ ಅಂತ ಗೊತ್ತಿಲ್ಲ, ಕಡಲತೀರದಲ್ಲಿ ಕಾಲಿಗೆ ಅಲೆ ತಾಕುತ್ತಿದ್ದರೆ ಉಸುಕಿನಲ್ಲಿ ಬಿದ್ದುಕೊಂಡು ಒಬ್ಬನೇ ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಬೇಕೆನ್ನಿಸುತ್ತದೆ." ಅಂದರೆ, "ರೀ ನಾನೂ ಜತೆ ಬರ್ತೀನಿ, ಎಣಿಸೋಕೆ ನಿಮ್ಮ ಕೈಬೆರಳು ಸಾಕಾಗಲ್ಲ, ನಾನು ಸ್ವಲ್ಪ ಹೆಲ್ಪ ಮಾಡ್ತೀನಿ" ಅಂತ ದುಂಬಾಲು ಬಿದ್ದಳು. "ಹಾಗೆ ಹೋಗಲು ಬೆಂಗಳೂರಲ್ಲಿ ಯಾವ ಕಡಲೂ ಇಲ್ಲ, ನಾನು ಹೊರಟೂ ಇಲ್ಲ, ಆದರೆ ಹಾಗೆ ಅನಿಸುತ್ತದೆ ಅಂತ ಹೇಳ್ತಾ ಇದೀನಿ" ಅಂದರೆ, "ಏನು ಅನಿಸಿಕೆನೊ ಏನೊ, ಅದೇ ನೆಪದಲ್ಲಿ ಮಂಗಳೂರು ಟ್ರಿಪ್ ಆಗುತ್ತೇನೊ ಅಂತ ನಾನೆಣಿಸಿದ್ದೆ" ಅಂತವಳು. "ಎಲ್ಲೊ ದೂರದ ಊರಿಗೆ ಹೋಗುತ್ತಿರುವ ಬಸ್ಸಿನಲ್ಲಿ ಒಬ್ಬನೇ ಕಿಟಕಿ ಪಕ್ಕ ಕೂತು ದೂರ ದೂರಕೆ ದಾರಿಯುದ್ದಕ್ಕೂ ನೋಡುತ್ತಿರಬೇಕು ಅನಿಸುತ್ತದೆ" ಅಂದರೆ, "ಟಿಕೆಟ್ಟು ಎಲ್ಲೀವರೆಗೆ ಅಂತ ತೆಗೆದುಕೊಳ್ಳೊದು" ಅಂತ ಕೇಳಿದ್ಲು, ನಾನು ಪಕ್ಕದ ದಾರಿ ನೋಡುತ್ತಿರುವ ಭಾವನೆ ಬಗ್ಗೆ ಮಾತಾಡುತ್ತಿದ್ದರೆ, ಇವಳಿಗೆ ಟಿಕೆಟ್ಟಿನ ಚಿಂತೆ, "ಅದು ಹಾಗಲ್ಲ" ಅಂತ ಸಮಜಾಯಿಸಿ ನೀಡಲು ಹೋದಾಗ, "ನೀವು ಹೇಳುವುದೆಲ್ಲ ಅರ್ಥವಾಗಿದೆ, ಆದರೆ ನಿಮ್ಮ ಆ ಒಂಟಿತನಕ್ಕೆ ಕಡಿವಾಣ ಹಾಕಲೇ ನಾನೀ ಕೀಟಲೆಗಿಳಿದಿದ್ದು" ಅಂದಳು. ಹೌದಲ್ಲ, ಮಾತನಾಡಲೇ ಮನಸಿಲ್ಲ ಅಂತ ಕೂತವನನ್ನು ಕೆದಕಿ ಏನೇನೊ ಮಾತಾಡಿಸಿ ಒಂಟಿತನದ ಆ ಭಾವನೆಯನ್ನೇ ದೂರ ಮಾಡಿದ್ದಳಲ್ಲ, ಇವಳು ನನ್ನೊಂದಿಗಿರುವವರೆಗೆ ನಾನೇನು ಒಬ್ಬಂಟಿಯಾಗಲಿಕ್ಕಿಲ್ಲ ಅಂತ ಅನ್ನಿಸತೊಡಗಿತ್ತು.
ಏನೊ ಒಮ್ಮೆ, ಒಂದು ದಿನ ಹೀಗೆ ಎಲ್ಲರಿಗೂ ಒಬ್ಬಂಟಿ ಅಂತ ಅನ್ನಿಸಿರಲೇಬೇಕು, ಎಲ್ಲರ ಜತೆಗಿದ್ದರೂ, ಎಲ್ಲರ ನಡುವಿದ್ದರೂ ಎಲ್ಲೊ ಕಳೆದುಹೋದಂತೆ, ಯಾರೂ ಇಲ್ಲದೇ ಒಬ್ಬಂಟಿಯಾಗಿದ್ದಂತೆ, ಏನೂ ಮಾತಾಡದೇ ಮೌನವಾಗಿ ಕೂತುಬಿಡಬೇಕು ಅಂತ ಅನಿಸಿರಬೇಕು. ಒಂದು ದಿನವಾದರೆ ಪರವಾಗಿಲ್ಲ ಆದರೆ ಹಾಗೇ ಆ ಭಾವನೆ ಉಳಿದುಹೋಗಬಾರದು, ಸಂಘಜೀವಿ ಮಾನವನೇನೂ ಒಂಟಿಸಲಗವೇನಲ್ಲ, ಒಂಟಿಯಾಗಿದ್ದವರಿಗೂ ಯಾರೋ ಒಬ್ಬ ಗೆಳೆಯನಾದರೂ ಇದ್ದೇ ಇರುತ್ತಾನೆ. ಇಲ್ಲ ಒಮ್ಮೊಮ್ಮೆ ಇನ್ನೊಂದು ತರಹದ ಭಾವನೆ, ಎಲ್ಲ ಇದ್ದರೂ ಬಿಟ್ಟು ಎಲ್ಲೋ ದೂರ ಒಬ್ಬಂಟಿಯಾಗಿ ಹೋಗಬೇಕು ಅನ್ನೊವಂತೆ, ಹಾಗೆ ಹೋಗಲೂ ಆಗುವುದಿಲ್ಲ, ಸಂಸಾರ, ಸಂಗಾತಿ, ಸ್ನೇಹಿತರು ಅಂತೆಲ್ಲ ಇರುವಾಗ, ಮತ್ತೊಂದು ದಿನ ಆ ಒಬ್ಬಂಟಿ ಬದುಕೂ ಬೇಡವಾಗಬಹುದು.
ಮಾತಿಲ್ಲದೇ, ಹಾಗೆ ಎಷ್ಟೋ ಹೊತ್ತು ಕುಳಿತಿದ್ದೆವು, ಮಾತನಾಡಬೇಕು ಅಂತ ಅನಿಸದೇ. ಮನೆಯಲ್ಲಿ ಇಬ್ಬರಿದ್ದರೂ ಯಾರಿಲ್ಲವೇನೊ ಅನ್ನೊವಂತೆ ಮನೆಯೇ ಒಬ್ಬಂಟಿಯಾಗಿತ್ತು. ಅಷ್ಟರಲ್ಲಿ ವಾಣಿ, ಅದೇ ನಮ್ಮ ದೂರವಾಣಿ ಮೊಬೈಲು ಕಿರುಚಿಕೊಂಡಳು, ನನ್ನ ಜತೆಗಾದರೂ ಮಾತಾಡಿ ಅಂತ. ನನ್ನೊಂದಿಗೇ ಮಾತಾಡುತ್ತಿಲ್ಲ ಇನ್ನು ನಿನ್ನೊಂದಿಗೇನು ಮಾತಾಡುತ್ತಾರೆ ಅಂತ ಅದರ ತಲೆಗೊಂದು ಕುಕ್ಕಿ ಪಕ್ಕಕ್ಕಿಟ್ಟಳು, ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಕೂಗಿಕೊಂಡಿತು, ಯಾರೋ ಏಕಾಂತಕ್ಕೆ ದಾಳಿಯಿಡಲು ಬಂದರೇನೊ ಅನ್ನುವಂತೆ, ಬಾಗಿಲು ತೆರೆದರೆ ಒಬ್ಬಂಟಿ, ಒಬ್ಬ ಅಂಟಿ ಬಂದಿದ್ದರು, ಒಬ್ಳೆ ಕೂತು ಬೇಜಾರಾಗಿತ್ತು ಸುಮ್ನೇ ಹಾಗೇ ಮಾತಾಡಿಸಿಕೊಂಡು ಹೋಗೊಣವೆಂದು ಬಂದೆ ಅಂತ... ಮತ್ತೆ ಹೀಗೆ ಒಬ್ಬಂಟಿಯಾಗಿ, ಅಲ್ಲಲ್ಲ ನನ್ನಾkಯೊಂದಿಗೆ ಸಿಗುತ್ತೇನೆ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/obbanti.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
21 comments:
ಪ್ರಭು,
ಯಾವಾಗಿನ ಹಾಗೆ ಸೊಗಸಾದ ಬರಹ . ನಿಮ್ಮ ಮಾತು ಸರಿ ಒ೦ದೋ೦ದು ಸಾರಿ ಎಲ್ಲರು ಹತ್ತಿರ ಇದ್ದರೂ ನಾವು ಒ೦ಟಿ ಎ೦ದು ಅನ್ನಿಸುತ್ತದೆ . ಯಾಕೆ ಹಾಗೆ ?? ಗೊತ್ತಿಲ್ಲ . ಒ೦ದೋ೦ದು ಸಾರಿ ನನಗೂ ಆ ಅನುಭವ ಆಗಿದೆ . ಅದು ನಮ್ಮನ್ನು ನಮ್ಮ ಬಗ್ಗೆ ಚಿ೦ತಿಸಲು ಕೊಟ್ಟ ಅವಕಾಶ ಎ೦ದು ಗ್ರಹಿಸಿ ನಮ್ಮ ಬಗ್ಗೆ ನಾವೇ ಮಾಡಿ ಕೊಳ್ಳುವ ಸ್ವ ವಿಮರ್ಶೆ ಎ೦ದು ನಾನು ಗ್ರಹಿಸಿ ಕೊಳ್ಳುತ್ತೇನೆ .
ಪ್ರಭು
ಚೆನ್ನಾಗಿದೆ . ತುಂಬಾ ದಿನ ಆಗಿತ್ತು ನಿಮ್ಮ ಬ್ಲಾಗಲ್ಲ್ಲಿ ಕಾಮೆಂಟ್ ಮಾಡಿ. ಒಬ್ಬಂಟಿ ಅನ್ಸೋದು ಯಾವಾಗ ಅಂದರೆ ನಮ್ಮ ಮನಸಲ್ಲಿ ಇರುವ ಆಲೋಚೆನೇ ಮತ್ತೊಬ್ಬರ ಬಳಿ ಹೇಳಿಕೊಳ್ಳೋಕೆ ಆಗದೇ ಇದ್ದಾಗ ಆ ಆಲೋಚನೆಗಳ ಸುಳಿಯಲ್ಲಿ ನಾವು ಒಬ್ಬರೇ ತೇಲುತ್ತ್ತಿದಾಗ ನಮ್ಮ ಜೊತೆ ಯಾರೂ ಇಲ್ಲ ಅಂತ ಅನ್ನಿಸಿಬಿಡೋದು ಸಾಮಾನ್ಯಾ. ಹಾಗಾಗೇ ಮನಸಲ್ಲಿನ ಮಾತು ಕಣ್ಣಲ್ಲಿನ ನೀರು ಹೊರಗೆ ಹಾಕಿಬಿಡಬೇಕು ಅಂತ ನಾನು ಅನ್ನುವುದು
ಎಂದಿನಂತೆ ಬರಹ ಚೆನ್ನಾಗಿದೆ... ಇಂದು ಬೆಳ್ಳಿಗೆ ಆಫೀಸಿಗೆ ಕಾರಿನಲ್ಲಿ ಬರುವಾಗ ನನ್ನವರು ಕೇಳಿದರು ಏಕೋ ರಾತ್ರಿ ಪ್ರಭು ನನ್ನಾಕೆ ಬರಹ ಆಕಿರಲಿಲ್ಲ ಎಂದರು ಹಹಹ, ನಾನು ಅದಕ್ಕೆ late Night Edition...ಪ್ರಭು ಅವರದು ಎಂದೇಳಿದೆ ಅದು ನಿಜವಾಯಿತು ಹಹಹಹ್..
ಯಾರೇ ಇರಲಿ ಯಾರಿಗು ಯಾರಿಲ್ಲ ಅವರವರಿಗೆ ಅವರೇ ಎಲ್ಲ... ಹುಟ್ಟುವಾಗ ಒಂಟಿ..ಹೋಗುವಾಗ ಒಂಟಿ ಜೀವನದಲ್ಲಿ ಬಂದು ಹೋಗುವವರು ನೀಗಲಾರರು ಈ ಒಂಟಿತವನ್ನು...
ಇನ್ನೊಂದು ಒಂಟಿಯಾಗಿದ್ದಾಗ ನಮ್ಮಲ್ಲಿ ಹಲವಾರು ವಿಷಯಗಳು ಹುಟ್ಟುತ್ತವೆ ಜೊತೆಗೆ ಹಲವು ಪ್ರಶ್ನೆಗಳಿಗೆ ಉತ್ತರವೂ ಸಿಗುತ್ತೆ.
ಮನೆಯಲ್ಲಿದ್ದಾಗ ಒಂಟಿತನ ನನಗೆ ತುಂಬಾ ಇಷ್ಟ... ಯಾಕೆ ಗೊತ್ತ ಮನೆ ಕೆಲಸಗಳು ಬೇಗ ಮುಗಿಯುತ್ತವೆ ಹಹಹ
ಎಲ್ಲರ ಮದ್ಯದಲ್ಲಿದ್ದಾಗಲು ಒಮ್ಮೊಮ್ಮೆ ಒಂಟಿತನ ಕಾಡಿಸುತ್ತದೆ, ಆ ಕ್ಷಣದಲ್ಲಿ ಯಾರು ಮಾತನಾಡಿಸದಿದ್ದರು ನನ್ನವರಾರು ಇಲ್ಲ ಎನ್ನುವ ನೋವು, ಯಾರಾದರು ಮಾತನಾಡಿಸಿದರು ಅಕಾರಣವಾಗಿ ಕಣ್ಣಂಚಿನಲ್ಲಿ ಚಿಮ್ಮುವ ನೀರು, ಎಂದೋ, ಯಾರೋ ಅಂದಿದ್ದ ಮಾತಿಗೆ ಇಂದು ಅಳು, ಎಲ್ಲೋ ಓದಿದ ಕಥೆಗೆ ನಾವೇ ದುರಂತ ನಾಯಕ(ಕಿ) ಯಾದಂತೆ ಭಾಸವಾಗುವ ಆ ಅಸಹಾಯ ಸ್ಥಿತಿ ಯಾರಿಗೂ ಬೇಡ. ಅಂತಹ ನೋವಿನ ಭಾವನೆಯನ್ನು ಹಗುರವಾಗಿ ಬರೆದ ನಿಮಗೆ ವಂದನೆಗಳು.
ಪ್ರಭು,
ಎಂದಿನಂತೆ ಸೊಗಸಾದ ನಿರೂಪಣೆ....ಕೆಲವೊಮ್ಮೆ ಒಬ್ಬಂಟಿ ಅಂತ ಅನಿಸೋದು ಸಹಜ...ನನಗೂ ಅನೇಕ ಭಾರಿ ಅನ್ನಿಸಿದೆ.....ಅನೇಕ ಯೋಚನೆಗಳು ಆಗ ಬರುತ್ತವೆ...
ಆಗ ನನ್ನಾkಯನ್ನು ನೆನೆದು ಎಲ್ಲಾ ಮರೆಯುತ್ತೇನೆ....ಆದ್ರೆ ನಿಮಗೆ ಯಾಕೆ ಅನ್ನಿಸಿದ್ದು ಅಂತ ಹೇಳಲೆ ಇಲ್ಲವಲ್ಲ ಲೇಖನದಲ್ಲಿ....
ಪ್ರಭುರಾಜ,
ನಮ್ಮ ವೇದಾಂತಗಳಲ್ಲಿಯೇ ಹೇಳಿದೆಯಲ್ಲ:
"ಒಬ್ಬ್ಬನೇ ಇದ್ದ ದೇವರು ಬೇಜಾರಾಗಿದ್ದರಿಂದ ಇಬ್ಬರಾದ; ಆಮೇಲೆ ಬಹುವಾದ."
ಬಹುವಾದ ಮೇಲೆ ಅವನಿಗೆ ಮತ್ತೆ ಬೇಜಾರಾಗಿರಬಹುದೇನೊ?!
ಪ್ರಭು,
ಸಕ್ಕತ್ ಲೇಖನ. ಒಂದೊಂದು ಸಲ ಒಬ್ಬಂಟಿತನ ಕಾಡಬೇಕು. ಆಗಲೇ ನಾವು ನಮ್ಮೊಳಗಿನ ಭಾವನೆಗಳನ್ನು ಹೊರಗೆಳೆಯಲು ಸಾಧ್ಯ. ಹೊರಗಿನ ಲೋಕ ನೋಡಿ ನೋಡಿ, ಅದೇ ನಿಜ ಎಂದು ತಿಳಿದು ಅದರ ರೀತಿಯಲ್ಲೇ ನದೆಯುತ್ತಾ, ನಮ್ಮ ಅಂತರಂಗವನ್ನು ಮರೆತುಬುಡುತ್ತೇವೆ.
ಆದರೆ ಹೆಚ್ಚು ಸಮಯ ಒಂಟಿತನ ಕಾಡಿದರೆ ಅದು ನರಕಯಾತನೆ. ಅದಕ್ಕಿಂತ ದೊಡ್ಡದಾದ ಶಿಕ್ಷೆ ಇನ್ನಿಲ್ಲ.
ಪ್ರಭು
ಒಂಟಿತನ ಎಲ್ಲರನ್ನೂ ಕಾಡುವ ಪ್ರಷೆನ್ ಹಾಗೂ ಉತ್ತರ, ದಿನದ ಕೆಲವು ಸಮಯವಾದರೂ ಮನುಷ್ಯ ಒಬ್ಬಂಟಿಯಾಗಿರಬೇಕು . ನಮ್ಮನ್ನು ನಾವು ತಿಳಿಯಲು ಒಂಟಿತನ ಮಹಾನ ವೈದ್ಯನಿದ್ದಂತೆ.ಒಳ್ಳೆಯ ಲೇಖನ
ಪ್ರಭು
ಮತ್ತೊಂದು ಸೊಗಸಾದ ಬರಹ. ಸಲೀಸಾಗಿ ಓದಿಸಿಕೊ೦ಡು ಹೋಗುವ ಚೆನ್ನಾದ ನಿರೂಪಣೆಯ ಹಂದರವಿರುವ ಇ೦ತಹ ನಿಮ್ಮ ಬರಹಗಳು ನನಗಿಷ್ಟ. ಇನ್ನಷ್ಟು ಬರೆಯಿರಿ. ನಿಮ್ಮ ಬರಹಗಳ ಗುಚ್ಹ , ಪುಸ್ತಕ ರೂಪದಲ್ಲಿ ಬರಬೇಕು.
ಪ್ರಭು,
ಮೊದಲ ಬಾರಿಗೆ ಒಂದು ವಿಷಾದದ ಬರಹ. ನಿಮ್ಮದೇ ಶೈಲಿಯಲ್ಲಿದ್ದರೂ ವಿಚಾರವೇ ವಿಷಾದವಿರುವಾಗ ಹೀಗೆ ಇರುತ್ತೆ ಬಿಡಿ. ಮತ್ತೆ ಜೊತೆ ವಿಚಾರದಲ್ಲಿ ಕಾಫಿಗೆ ಸಕ್ಕರೆ, ಬಕೆಟ್ಟಿಗೆ ಮಗ್, ಹೀಗೆ ಚೆನ್ನಾಗಿ ಉದಾಹರಿಸಿದ್ದೀರಿ...
ಕೆಲವೊಮ್ಮೆ ಹೀಗೆ ಬೇಸರವೆನ್ನಿಸಿಬಿಡುತ್ತದೆ. ಆಗ ನಾನು ಕ್ಯಾಮೆರಾವನ್ನು ಎತ್ತಿಕೊಂಡು ಹೊರಗೆ ಹೋಗಿಬಿಡುತ್ತೇನೆ...ಎಲ್ಲಿ ಹೋಗುತ್ತೇನೋ ಗೊತ್ತಿಲ್ಲ ಸುಮ್ಮನೆ ಊರು ಸುತ್ತಿ ಬರುತ್ತೇನೆ...ಬಂದಮೇಲೆ ಎಷ್ಟೋಂದು ಫೋಟೊಗೆಳೆಯರು ಸಿಕ್ಕಿರುತ್ತಾರೆ...
ಇದು ಒಬ್ಬಂಟಿತನದಿಂದ ಹೊರಬರುವ ನನ್ನ ಪ್ರಯತ್ನ.
ಅಲ್ರೀ ಪ್ರಭು ನಿಮಗ್ ಹ್ಯಾಂಗ್ ಹೊಳೀತಾವ್ ರೀ ಈ ಪಾಟಿ ಐಡಿಯಾಗಳು..ಅಲ್ರೀ ಅದಕೂ ಜತೆ ಬೇಕಲ್ರೀ..?? ಯೋಚನೆಗೆ ಜತೆ ಬುದ್ಧಿ..?? ಮತ್ತೆ ನಿಮ್ಮ ಈ ಐಡೀರಿಯಾ ಪೋಸ್ಟ್ ಮಾಡ್ಲಿಕ್ಕ್ ಹಾರ್ಡ್ ವೇರ್ ಜತೀಗ್ ಸಾಫ್ಟ್ವೇರು..?? ಅಧ್ಯಾಂಗ್ ಆಕ್ಕತೀ..ಒಂಟಿ ಯಾವ್ದೂ ಆಗೊಲ್ದ್ರೀ ...
ಚನ್ನಾಗಿದೆ ಪ್ರಭು...ಈ ಗಲೂ ಹಾಗೇ ಒಬ್ಬಂಟಿ ಅಂತ ಕೂತಿರ್ತೀರೇನೋ ಅಂತ ಸ್ವಲ್ಪ ನಿಮಗೆ ಕಚಗುಳಿ ಇಡೋದಿಕ್ಕೆ ಪ್ರಯತ್ನಿಸ್ತಾ ಇದ್ದೀನಿ....
ಪೂರ್ಣತೆಯಲ್ಲಿ ಅಪೂರ್ಣತೆಯನ್ನು ಕಾಣುವ ಮನಸ್ಥಿತಿಗೆ ಖಿನ್ನತೆ ಅನ್ನಬೇಕು..ನಿರಾಶಾವಾದ ಅನ್ನಬೇಕು..ಅದೇ ಇಲ್ಲಎನ್ನುವುದರಲ್ಲಿದೆಯೆಲ್ಲಾ...ಎಂದರೆ ಹುಮ್ಮಸ್ಸಿನ-ಮನ ಅಹ್ಲಾದಕರ ವಾತಾವರ್ಣ ಮತ್ತು ಆಶಾವಾದ...ಅಲ್ಲವೇ..??
ಯಾಕೋ ನಿಮ್ಮ ಎಲ್ಲಾ ಬರಹಗಳಿಗಿಂತ ಕೊಂಚಾ ಭಿನ್ನವಾಗಿತ್ತು..... ನಿಮ್ಮಾ ಕೆ ಸಂಗಡ ಸಲ್ಲಾಪ ಬಿಟ್ಟು ವಿಷಾದ ದಿಂದ ಇದ್ದೀರಲ್ಲ ಅದಕ್ಕೆ ನಮಗೂ ಬೇಸರವಾಯಿತು...... ನಿಮ್ಮ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು....
ಪ್ರಭುವರೆ,
ತುಂಬಾ ಚೆನ್ನಾಗೆ ಹೇಳಿದಿರಿ. ನಿಮ್ಮ ಪಕ್ಕದಲ್ಲೇ ನಿಮ್ಮಾಕೆ ಇದ್ದರೂ ಒಬ್ಬಂಟಿ ಆಗಿದ್ದೀರಿ.
ಒಬ್ಬಂಟಿಗತನವನ್ನು ಕಳೆದ ಎರಡು ತಿಂಗಳುಗಳ one-site ಜೀವನದಿಂದ ಅನುಭವಿಸಿದ್ದೀನಿ. ಈ ಮರಳುಗಾಡು ಬೇರೆ ....
ಅಬ್ಬ!!! ತುಂಬ ಕಷ್ಟಾ! ಈ ಮನಸ್ಸೇ ಹೀಗೆ. ತುಂಬಾ ಹಠಮಾರಿ. ಅದೆಷ್ಟು ಬಾರಿ ಸಮಾಧಾನ ಹೇಳಿದ್ದೇನೋ.
ವಿಲವಿಲನೆ ಒದ್ದಾಡುತ್ತೆ. ನೀರಿನಿಂದ ಹೊರತೆಗೆದ ಮೀನಿನಂತೆ.
ಒಂದು ಒಳ್ಳೆ ನಗು ನಗಿಸಿವ ಲೇಖನ ನಿಮ್ಮಿಂದ ಬರಬೇಕಾಗಿ ವಿನಂತಿ :)
ಏಕಾಂಗಿತನವನ್ನ ಏಕಾಂತವನ್ನು ಮಾಡಿಕೊಂಡರೆ ಜೀವನ ಕುಶಿ ಆಗುತ್ತೆ ಅಲ್ವ? ಚೆನ್ನಾಗಿದೆ ಲೇಖನ.
ಅಷ್ಟಕ್ಕೂ ತೀರ ಬೇಜಾರ ಆದ್ರೆ ಪಕ್ಕದಲ್ಲಿ ಪದ್ದು ಮನೆ ಇದೆ ಅಲ್ವ?
ಚೆನ್ನಾಗಿದೆ ನವಿರಾದ ಹಾಸ್ಯದ ಏಕಾಂಗಿ ಬರಹ. ನವದಂಪತಿಗಳ ದಾಂಪತ್ಯದ ಸವಿ ಇಷ್ಟು ಬೇಗ ಕಡಿಮೆಯಾಯಿತೇ?!!ನಿಮ್ಮ ಇತ್ತೀಚಿನ ಎರಡು ಬರಹಗಳು, ಮೊದಲಿನವುಗಳಿಗೆ ಹೋಲಿಸಿದರೆ ಆ ರಸಮಿನಿಷಗಳನ್ನು ಕಳೆದುಕೊಳ್ಳುತ್ತಿವೆಯೇನೋ ಅನ್ನಿಸಿತು. ನಿಜವಾಗಿಯೂ ಕಮ್ಮಿಯಾಗಿದೆಯೋ ಅಥವಾ ನಾನು ಓದಿದ ರೀತಿ ಸರಿಯಿಲ್ಲವೋ ಗೊತ್ತಿಲ್ಲ :( ಅಥವಾ ನನ್ನ ನಿರೀಕ್ಷೆ ಹೆಚ್ಚಾಗಿದೆಯೋ?!!
roopa ಅವರಿಗೆ
ನಿಜ ಎಲ್ಲ್ರರೂ ಇದ್ದೂ ಕೆಲವೊಮ್ಮೆ ಒಂಟಿ ಅನ್ನಿಸುವುದಿದೆ, ಸ್ವ-ವಿಮರ್ಷೆಗೆ ಅವಕಾಶ ಅಂದಿದ್ದು ಇಷ್ಟವಾಯಿತು, ನಾನೂ ಹಾಗೆ ಅನ್ನಿಸಿದಾಗ ಸ್ವ-ವಿಮರ್ಷೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.
ರೂಪಾ ಅವರಿಗೆ
ನಮ್ಮಾಲೋಚನೆ ಯಾರಿಗೂ ಹೇಳಿಕೊಳ್ಳಲಾಗದಾದಾಗಲೇ ಹಾಗನ್ನಿಸೋದು ನಿಜ, ತಲೆ ಚಿಟ್ಟು ಹಿಡಿಯುವ ಹಾಗೆ ಆಲೋಚನೆಗಳು ಸುತ್ತ ಗಿರಗಿಟ್ಟಲೆ ಮಾಡತೊಡಗಿದಾಗಲೇ ಅದರ ನಡುವೆ ಒಬ್ಬಂಟಿ ಅನಿಸುವುದಿದೆ.
ಮನಸು ಅವರಿಗೆ
ಹ ಹ ಹ, late night edition!!! ಸೂಪರ್... ಹೌದೌದು ಕೆಲವೊಮ್ಮೆ ದಿನದಲ್ಲಿ ಸಮಯ ಸಿಗದೆ ಅಪರಾತ್ರಿ ಕೂತು ಆಕಳಿಸುತ್ತ ಕೂಡ ಬರೆದಿರುತ್ತೇನೆ. ಮತ್ತೆ ಈ ಭಾನುವಾರ ಬರಹಕ್ಕೆ ದೀಪಾವಳಿ ನಿಮಿತ್ತ ರಜೆ, ಲೇಖನ ಬರಲಿಲ್ಲವೆಂದು ಬೇಜಾರಾಗಬೇಡಿ.
ಹುಟ್ಟುವಾಗ ಒಂಟಿ, ಹೊಗುವಾಗ ಕೂಡ ಕೆಲವೊಂಮ್ಮೆ ಒಬ್ಬಂಟಿಯೇ, ಇರುವಾಗ ಕೂಡ ಹೀಗೆ ಕೆಲವೊಮ್ಮೆ ಅನಿಸಿಬಿಡುವುದು ವಿಚಿತ್ರ. ನನಗೂ ಕೂಡ ಈ ಒಂಟಿತನ ಕೆಲವೊಮ್ಮೆ ಇಷ್ಟ, ನನ್ನಾkಯ ಬಗೆಗೆ ಹಲವು ಕಲ್ಪನೆಗಳು ಹುಟ್ಟುವ ಸಮಯ ಅದು ಅದಕ್ಕೆ...
Jayalakshmi ಅವರಿಗೆ
ಬಹಳ ಚೆನ್ನಾಗಿದೆ ನಿಮ್ಮ ಕಮೆಂಟ್, ಯಾರೂ ಮಾತಾಡಿಸಲಿಲ್ಲ ಅಂತ ಒಂಟಿಯಾಗುವ ಮನಸ್ಸು, ಕೆಲವೊಮ್ಮೆ ಯಾರೂ ಮಾತಾಡಿಸದಂತೆ ಒಂಟಿಯಾಗಿರಬೇಕು ಅಂದುಕೊಳ್ಳುತ್ತದೆ ಅದೇ ಅದರ ವೈಚಿತ್ರ್ಯ. ಈ ದುರಂತ ನಾಯಕನಾಗುವ ಅನುಬವವಂತೂ ಬೇಡವೇ ಬೇಡ, ನನ್ನ ಕಲ್ಪನೆಯಲ್ಲಿ ನನಗೆ ಕಿರಿಕಿರಿಯಾಗುವಷ್ಟು ದುರಂತಗಳು ಸೃಷ್ಟಿಯಾಗುತ್ತಿರುತ್ತವೆ, ಮತ್ತೆ ವಾಸ್ತವವೇ ಎಷ್ಟೊ ಚೆನ್ನ ಅನಿಸುತ್ತಿರುತ್ತದೆ...
ಸವಿಗನಸು ಅವರಿಗೆ
ನಿಮಗೂ ಅನ್ನಿಸಿದೆಯೆ, ಹಲವು ಯೊಚನೆಗಳ ನಡುವೆ ತಾಕಲಾಟ ನಡೆಯುವಾಗಲೇ ಹೀಗನ್ನಿಸುವುದು.
ನನಗೆ ಹೀಗೆ ಒಬ್ಬಂಟಿಯನ್ನಿಸುವುದು ಹೊಸದೇನಲ್ಲ, ಹಾಗೆ ಈ ಸಾರಿ ಹಾಗೇ ಅನ್ನಿಸಿದಾಗ ಅದನ್ನೇ ಬರೆದುಬಿಡಬೇಕೆನ್ನಿಸಿ ಬರೆದುಬಿಟ್ಟೆ.
sunaath ಅವರಿಗೆ
ಒಹ್ ದೇವರಿಗೂ ಒಬ್ಬಂಟಿ ಅನಿಸಿದೆಯಾ!!! ಇಂದ್ರನಿಗೆ ಬೇಜಾರಾದರೆ ಕಂಪನಿಕೊಡಲು ನನ್ನ ಕರೆದರೆ ಒಳ್ಳೆಯದೇನೊ, ನನಗೂ ಅಪ್ಸರೆ ಊರ್ವಶಿಯರ ಜತೆಯಾದರೂ ಸಿಕ್ಕೀತು!!! :)
ರಾಜೀವ ಅವರಿಗೆ
ಅಂತರಂಗದಲ್ಲಿ ನಡೆಯುವ ಏಕಪಾತ್ರಾಭಿನಯದ ನಾಟಕವೇ ಒಂಟಿತನ ಅಂದರೆ ಸರಿಯಾಗಬಹುದೇನೊ. ನಿಜ ಒಮ್ಮೊಮ್ಮೆ ಹೀಗೆ ಒಂಟಿಯಾಗಿರಬೇಕು, ಅಂತರಂಗ ಮಂಥನವಾಗುತ್ತದೆ.
ನಿಜ, ಹೆಚ್ಚು ಸಮಯ ಕಾಡಿದರೆ ವೈದ್ಯರ ಬಳಿ ಓಡಬೇಕಾಗುತ್ತದೆ :)
ಸಾಗರದಾಚೆಯ ಇಂಚರ ಅವರಿಗೆ
ನಮ್ಮನ್ನು ನಾವು ತಿಳಿಯಲು ಒಂಟಿಯಾಗಿದ್ದಾಗಲೇ ಸಾಧ್ಯ, ಬರೀ ಬೇರೆಯವರ ಕಣ್ಣಲ್ಲಿ ನಮ್ಮನು ನೋಡಿಕೊಂಡ ನಮಗೆ, ಈ ಒಂಟಿತನ ಅಂತರಂಗದ ಕನ್ನಡಿ...
PARAANJAPE K.N. ಅವರಿಗೆ
ಇತ್ತೀಚೆಗೆಕೊ ನನಗೂ ಕೆಲಸದೊತ್ತಡದಲ್ಲಿ ಸಮಯ ಸಿಕ್ಕುತ್ತಿಲ್ಲ, ಸಾಧ್ಯವಾದಷ್ಟು ಬರೆಯುತ್ತಿದ್ದೇನೆ. ನಿಮ್ಮ ಮೆಚ್ಚುಗೆ ಇನ್ನ್ಶಷ್ಟು ಬರೆಯಲು ಪ್ರೇರಣೆ.
ಪುಸ್ತಕದ ಬಗ್ಗೆ ಸಧ್ಯ ಯೋಚನೆಯಿಲ್ಲ, ಆ ಮಟ್ಟದ ಬರವಣಿಗೆ ಇನ್ನೂ ಸಾಧಿಸಿಲ್ಲ ಅಲ್ಲೀವರೆಗೆ ಬ್ಲಾಗ್ ಇದೆಯಲ್ಲ.
shivu ಅವರಿಗೆ
ಹೌದು ಸರ್ ವಿಷಾದ ಬರಹ, ಬರೆಯಲೋ ಬೇಡವೊ ಅಂತಲೇ ಬರೆದೆ, ಸ್ವಲ್ಪ ಮೂಡ ಕೂಡ ಹಾಗೆ ಇದ್ದದ್ದರಿಂದ ಏನೊ ನನ್ನಾk ಕೂಡ ಸುಮ್ಮನೇ ಇದ್ದುಬಿಟ್ಟಳು.
ಬಹಳ ಒಳ್ಳೇ ಐಡಿಯಾ, ಎಲ್ಲಾದ್ರೂ ಎದ್ದು ಸುಮ್ಮನೇ ಹೊರಟುಬಿಡಬೇಕು, ಏನೊ ಒಂದು ಕೆಲಸದಲ್ಲಿ ನಿರತರಾಗಿಬಿಡಬೇಕು ಆಗ ಒಂಟಿತನ ಇರಲಿಕ್ಕಿಲ್ಲ. ಆದರೆ ಕೆಲವೊಮ್ಮೆ ಹಾಗೆ ಕೂತು ನಮ್ಮ ಬಗ್ಗೆ ನಾವೇ ಯೋಚಿಸಲು ಕೂಡ ಇದು ಒಳ್ಳೇ ಸಮಯ.
ಜಲನಯನ ಅವರಿಗೆ
ಹೆಂಗ ಅಂತ ಅದ್‌ಹೆಂಗ ಹೇಳಲ್ರಿ ಸರ್, ಸುಮ್ನ್ ಕೂತಿದ್ರ ಏನೊ ತಲೀ ತಿನ್ನುವ ಇಂಥ ಪ್ರಶ್ನೆ ಬಂದ ಬಿಡ್ತಾವ.
ನಿಮ್ಮ ಉದಾಹರಣೆಗಳು ಬಹಳ ಚೆನ್ನಾಗಿದ್ವು. ನಾನು ಒಬ್ಬಂಟಿಯಾಗಲು ನನ್ನಾk ಎಲ್ಲಿಬಿಡ್ತಾಳೆ, ಬಂದು ಮನದಲ್ಲಿ ಕೂತು ಬಿಡ್ತಾಳೆ.
ನಿರಾಶಾವಾದ ಮತ್ತು ಆಶಾವಾದಾದ ನಿರೂಪಣೆ ಚೆನ್ನಾಗಿದೆ, ಖಿನ್ನತೆ, ಒಂಟಿತನ ಕೆಲವೊಮ್ಮೆ ಸಹಜ, ಮತ್ತೆ ಹಾಗೇ ಎಲ್ಲ ಸರಿಹೋಗಿಬಿಡುತ್ತದೆ ಸ್ವಲ್ಪ ಸಮಯ ಬೇಕು ಅಷ್ಟೇ.
ದಿನಕರ ಮೊಗೇರ ಅವರಿಗೆ
ಹ್ಮ್, ಎಲ್ಲ ಬರಹಗಳಲ್ಲಿ ವಿಭಿನ್ನ, ವಿಷಾದವಿತ್ತು ಇದರಲ್ಲಿ, ನನ್ನ ಮೂಡ್ ಹಾಗಿದ್ದರಿಂದಲೋ ಏನೊ ಆ ರೀತಿಯೇ ಬರೆದುಬಿಟ್ಟೆ. ಬೇಸರವಾಗದಿರಿ ಮತ್ತೆ ನನ್ನಾkಯ ತುಂಟತನ ಇದ್ದೇ ಇರುತ್ತದೆ.
damu ಅವರಿಗೆ
ಎಲ್ಲರಿದ್ದೂ ಒಂಟಿಯೆನ್ನಿಸುವದಿದೆಯಲ್ಲ ಅದೇ ಇದು. ಮರಳುಗಾಡಿನಲ್ಲಿ ನಿಮಗೆ "ಒಂಟಿ"ಯೆನ್ನಿಸಿದೆಯಾ... ಅಬ್ಬ ಅಲ್ಲಿ ಜತೆ ಅಂತ "ಒಂಟೆ"ಗಳು ಇರಬೇಕಲ್ಲ :) ತಮಾಷೇ ಮಾಡಿದೆ.
ಅಹುದು ಮನಸು ಕೆಲವೊಂದು ಸಾರಿ ಬಹಳೇ ಹಠಮಾರಿ, ಮುನಿಸಿಕೊಂಡು ಕೂತುಬಿಡುತ್ತದೆ.
ನನಗೂ ನಗಿಸುವ ನಲಿವಿನ ಲೇಖನ ಬರೆಯಬೇಕೆಂದಲೇ ಆಸೆ ಆದರೆ ಎಕೋ ಮೂಡ್ ಹಾಗಿತ್ತು ಹಾಗೇ ಬರೆದೆ... ಓದುತ್ತಿರಿ.
ಬಾಲು ಅವರಿಗೆ
ಏಕಾಂತ, ಏಕಾಂಗಿ ಯ ಪದಗಳ ಅರ್ಥ ಚೆನ್ನಾಗಿಯೇ ಹೇಳಿದ್ದೀರಿ. ಪದ್ದು ಮನೆ ಕಡೆ ನೋಡಿದ್ರೆ ನನ್ನಾk ನನ್ನ ಒಂಟಿ ಮಾಡಿ ತವರಿಗೆ ಹೋಗುತ್ತೇನೆ ಅಂತಾಳೆ ಅದಕ್ಕೆ ಏನು ಮಾಡಲಿ.
ವಿನುತ ಅವರಿಗೆ
ನವದಂಪತಿಗಳ ನಲಿವು ಕಮ್ಮಿಯಾಗಲ್ಲ ಬಿಡಿ, ಅದು ಇದ್ದೇ ಇರುತ್ತದೆ.
ನೀವು ಹೇಳಿದ್ದು ನೂರಕ್ಕೆ ನೂರು ನಿಜ ಕಳೆದೆರಡು ಲೇಖನಗಳು ರಸನಿಮಿಷಗಳನ್ನು ಕಳೆದುಕೊಂಡಿದ್ದು ನನಗೂ ಅನಿಸಿದೆ. ಬರಹಗಳೆಲ್ಲ ನನ್ನ ಮೂಡ್ ಮೇಲೆ ಅವಲಂಬಿತ, ಈ ಬಹಳ ಕೆಲಸ, ವೈಯಕ್ತಿಕ ಜಂಜಾಟಗಳ, ಹಲವು ಕಿರಿಕಿರಿಗಳು ಎಲ್ಲದರ ನಡುವೆ ಕಲ್ಪನೆಗಳು ಅರಳುತ್ತಿಲ್ಲವಾಗಿ ಹಾಗೆ ಆಗಿದೆಯೇನೊ.
ವಾರಾಂತ್ಯ ಕೂಡ ನನ್ನಷ್ಟಕ್ಕೆ ನಾನೇ ಕೂತು ಏನೂ ಮಾಡಲಾಗುತ್ತಿಲ್ಲ, ಒಮ್ಮೆಲೆ ಜೀವನದಲ್ಲಿ ಎಲ್ಲ ಕೆಲಸಗಳು ಜವಾಬ್ದಾರಿಗಳು ಎದ್ದು ನಿಂತು, ನಾನು, ನನ್ನ ಬಗ್ಗೆ ಗಮನ ಕೊಡು, ಇದೇನು ಮಾಡ್ತೀಯಾ, ಅಂತೆಲ್ಲ ಕೇಳುತ್ತಿವೆಯೇನೊ ಅನ್ನುವಂತೆ ಆಗಿದೆ. ಎಲ್ಲವೂ ಒಟ್ಟಿಗೆ ಆಕ್ರಮಣ ಮಾಡಿದಂತಹ ಪರಿಸ್ಥಿತಿ. ಯಾವುದನ್ನೂ ಮುಂದೆ ತಳ್ಳದಂತೆ, ಮಾಡದಿರದಂತೆ... ಒಟ್ಟಿನಲ್ಲಿ ಒಮ್ಮೆಲೇ ಬಿರುಗಾಳಿ ಎದ್ದಂತೆ ಆಗಿದೆ, ಹೆಚ್ಚಿಗೆ ಇಲ್ಲಿ ಬರೆಯಲಾಗುವುದಿಲ್ಲ, ಹೀಗೆ ಎಲ್ಲದರ ನಡುವೆ ಸಿಕ್ಕ್ಕಿ ನನ್ನಾk ನಲುಗಿದಳೇನೊ ಅನ್ನಿಸಿದೆ. ಅದೇ ಎಲ್ಲ ಕಾರಣಗಳ ನಡುವೆ ಹಲವು ಕೆಲಸಗಳೊಂದಿಗೆ ಈ ವಾರ ಲೇಖನ ಕೂಡ ಬರೆಯುತ್ತಿಲ್ಲ.
ನಿಮ್ಮ ನಿರೀಕ್ಷೆಗೆ ತಕ್ಕಂತೆ ಮತ್ತೆ ಬರೆಯುವ ಪ್ರಯತ್ನ ಮಾಡುತ್ತೇನೆ, ಅದಕ್ಕೆ ಸ್ವಲ್ಪ ಸಮಯಬೇಕಾಗಬಹುದೇನೊ.
ಮೊನ್ನೆ ಚಾಂಪಿಯನ್ಸ್ ಲೀಗ್ ಮ್ಯಾಚ್ ನೋಡೋಕೆ ಹೋಗಿದ್ದೆ.....ಸ್ವಲ್ಪ ಹೊತ್ತು ಸಾವಿರುರಾರು ಜನರ ನಡುವೆ ಒಂಟಿ ಅನಿಸಿತ್ತು..... ನಾನು ಗಮನಿಸಿದ ಹಾಗೆ ಒಂಟಿತನ ತುಂಬಾ ಪವರ್ಫುಲ್. ನಮ್ಮ ಜೀವನ ಹೆಚ್ಚಿನ ನಿರ್ಧಾರಗಳು ಈ ಸಂದರ್ಭದಲ್ಲೇ ಆಗುತ್ತವೆ ಅಂತ ನನ್ನ ಅನಿಸಿಕೆ. ಆದರೆ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳೋರು ಕಡಿಮೆ.
ಎಲ್ಲರ ಮನಹೊಕ್ಕು ವಿಷಯವನ್ನು ಸಾದರಪಡಿಸಿದಂತಿದೆ.......
ನವೀನ್
'ಒಬ್ಬಂಟಿ'ಯಲ್ಲಿ ನೀವು ನಿಜವಾಗಲು 'ಏಕಾಂಗಿ'. 'ಒಬ್ಬಂಟಿ' ಓದಿದ ನಂತರ ಏನ್ ಆಯಿತೋ ಏನೋ ನನ್ನನ್ನ ಸ್ವಲ್ಪ ಹೊತ್ತು ಅದು 'ಏಕಾಂಗಿ' ಮಾಡಿದೆ. ಒ೦ಟಿ ಮನಸ್ಸಿನ ಆಲೋಚನೆಗಳನ್ನ ಲೆಕ್ಕ ಹಾಕಲಿಕ್ಕೆ ಹೋಗೋಲ್ಲ ಅಂತ ಅನ್ಸ್ಥ ಇದೆ. 'ಒಬ್ಬಂಟಿ'ಯಿಂದ 'ಏಕಾಂಗಿ'ಯಾಗಿ 'ಒಬ್ಬಂಟಿ'ಗಾಗಿ ಬರೆದ ಒಂದು ಸಣ್ಣ ಕವಿತೆ. ನನ್ನ ಬ್ಲಾಗ್ ನಲ್ಲಿ ಹಾಕುವ ಮುನ್ನ ಎಲ್ಲಿಂದ ಕವನ ಆರಂಭ ಆಯಿತೋ ಅಲ್ಲಿಂದಲೇ ಪ್ರಾರಂಭ ಮಾಡೋಣ ಅಂದು ಕೊಂಡೆ.
ಏಕಾಂಗಿ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ಕಂಬನಿ ಒರೆಸುವ ಕೈಗಳಿಲ್ಲ
ನೊಂದ ಭಾವಕೆ ಸಾಂತ್ವನ ಹೇಳುವವರಿಲ್ಲ
ಮನ ತುಂಬಿ ನಗುವ ಮನ ನನ್ನಲ್ಲಿ ಇಂದಿಲ್ಲ
ನಗಿಸುವ ಗುಣ ಯಾರಲ್ಲೂ ಇಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ಇರುಳಲಿ ಚಂದ್ರನ ಸುಳಿವಿಲ್ಲ
ಹಗಲೆಂಬ ಬದುಕಿನಲಿ ರವಿಯ ಬೆಳಕಿಲ್ಲ
ಕೂತಲ್ಲಿಂದ ಕದಲುವ ಮನಸ್ಸಿಲ್ಲ
ಕನಸುಗಳು ಮರಿ ಹಾಕುವ ಲಕ್ಷಣವಿಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ನೆನಪುಗಳನ್ನು ಇಂದು ಕಾಯುವವರಿಲ್ಲ
ಅವುಗಳದ್ದೇ ಕಾರು ಬಾರು ಮನದೂರಲೆಲ್ಲಾ
ದೇವರಿಲ್ಲದ ಗುಡಿಯು, ನಿರ್ಜಿವ ಸೂರಿರುವ ಊರು
ಇಂದು ಈ ಏಕಾಂಗಿಯ ಊರಾಗಿದೆ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ನಿಮ್ಮವ,
ರಾಘು.
chennagide sir:)
ಮೊದಲಿಗೆ ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ, ದೀಪಾವಳಿ ರಜೆ ಅಂತ ಹೋದವನು, ವೈಯಕ್ತಿಕ ಕೆಲಸಗಳಲ್ಲಿ ಬಹಳ ವ್ಯಸ್ಥನಾಗಿದ್ದೆ.
ನವೀನ್ ಅವರಿಗೆ:
ನಿಮಗೂ ಒಬ್ಬಂಟಿ ಅನಿಸಿದೆಯಾ, ಹೌದು ನಿಜ ರಚನಾತ್ಮಕವಾಗಿ ಬಳಸಿದರೆ ಅದೂ ಒಳ್ಳೇದೆ, ಮಹತ್ವದ ವಿಚಾರ ಮಂಥನಕ್ಕೇ ಏಕಾಂತವೇ ಸರಿ.
Raghu ಅವರಿಗೆ
ನಿಮಗೂ ಓದಿ ಒಬ್ಬಂಟಿ ಅನಿಸಿತಾ, ಈ ಏಕಾಂತ ಬಳು ವಿಚಿತ್ರ ಇದ್ದರೂ ಒಳ್ಳೇದೇ ಇಲ್ಲದಿದ್ದರೂ ಕೂಡ.. ನೋಡಿ ಏಕಾಂಗಿಯಾಗಿ ನಿಮ್ಮಿಂದ ಒಂದು ಸುಂದರ ಕವನ ಬರೆಸಿದೆ.
ಎರಡನೇ ಪ್ಯಾರಾ ಅಂತೂ ಬಹಳ ಹಿಡಿಸಿತು... ಒಟ್ಟಿನಲ್ಲಿ ಲೇಖನಕ್ಕೆ ಕವನ ಪೂರಕ ಭಾವನೆ ಕೊಟ್ಟಿತು... ತುಂಬಾ ಧನ್ಯವಾದಗಳು.
ಗೌತಮ್ ಹೆಗಡೆ ಅವರಿಗೆ
ಧನ್ಯವಾದಗಳು :)
Post a Comment