ಸುಳ್ಳೇ ಗೊರಕೇ ಸದ್ದು ಮಾಡ್ತಾ ಮಲಗಿದ್ದೆ, ಇವಳು ಪಾಪ ಗಾಢ ನಿದ್ರೇಲೀ ಇದೀನಿ ಅಂತ ಏಳಿಸದಿರಲಿ ಅಂತ, "ರೀ ಸುಮ್ನೇ ಏಳಿ ನಂಗೊತ್ತು ನೀವು ನಿದ್ರೇಲೀ ಗೊರಕೆ ಸದ್ದೆಲ್ಲ ಮಾಡಲ್ಲ, ನಾಟಕ ಸಾಕು" ಅಂತ ಇವಳು ಬಂದು ಅಲಾರ್ಮಿನಂತೆ ಗೊಣಗಿದಳು, ಅಲಾರ್ಮ್ ಸದ್ದು ಮಾಡಿದ್ರೆ ಏನ್ ಎದ್ದೇಳ್ತೀವಾ, ಬೆಳಗಾಯ್ತು ಅಂತ ಗೊತ್ತಾಗ್ತದೆ ಅಷ್ಟೇ, ನಾವೆದ್ದೇಳೋದು ನಮಗಿಷ್ಟ ಬಂದಾಗಲೇ, ಅಂತನಕೊಂಡು ಇನ್ನು ಜೋರು ಸದ್ದು ಮಾಡುತ್ತ ಮಲಗಿದೆ, "ಇದು ಜಾಸ್ತಿ ಆಯ್ತು" ಅಂತ ಮತ್ತೊಂದು ವಾರ್ನಿಂಗ್ ಕೊಟ್ಟಳು, ಅಲ್ಲೇ ಮಲಗಿದಲ್ಲಿಂದಲೇ "ಒಮ್ಮೊಮ್ಮೇ ಸುಸ್ತಾಗಿ ಮಲಗಿದಾಗ ಗೊರಕೆ ಸದ್ದು ಎಲ್ರೂ ಮಾಡ್ತಾರೆ" ಅಂತ ಉತ್ತರಿಸಿದೆ. "ಓಹೋ, ನಿದ್ರ್‍ಎಲೀ ಉತ್ತರ ಕೂಡಾ ಕೊಡ್ತಾರೆ ಅಲ್ವಾ" ಅಂತ ಅಲ್ಲಿಗೇ ಬಂದು ತಡವಿದಳು. ಇನ್ನೂ ಎದ್ದೇಳದಿದ್ದಾಗ "ಈಗ ಎದ್ದರೆ ಸರಿ ಇಲ್ಲಾಂದ್ರೆ ಪೇಂಟ್ ತಂದು ಸುರೀತೀನಿ" ಅಂದ್ಲು. ಇದೇನಿದು ಹೊಸದು ನೀರು ಸುರಿಯೋ ಬದಲು ಪೇಂಟ್ ಅಂತೀದಾಳೆ ಅಂತ ಅನುಮಾನ ಬೇಡ, ಅಂದು ಮನೆ ಪೇಂಟ್ ಮಾಡಿಸೋರು ಇದೀವಿ ಅಂತ ಆಗಲೇ ನನಗೂ ನೆನಪಾಗಿದ್ದು. ತಡಬಡಿಸಿ ಎದ್ದೆ, "ಪೇಂಟರ್ ಬಂದಿದೀದಾನಾ" ಅನ್ನುತ್ತ. "ಇನ್ನೂ ಇಲ್ಲ, ಪೇಂಟ ತಂದಿಡಿ ಬರ್ತಾನೆ" ಅಂದ್ಲು. "ಯಾವ ಬಣ್ಣ ಇನ್ನೂ ನಿರ್ಧರಿಸೇ ಇಲ್ಲ" ಅಂದ್ರೆ. "ಒಂದು ನಾಲ್ಕೈದು ಬಣ್ಣ ಸ್ವಲ್ಪ ಸ್ವಲ್ಪ ತಂದಿಡಿ, ನೊಡೋಣ" ಅಂತ ಹೇಳಿದಳು, "ಇದೇನು ಮನೇನಾ ಕಾಮನಬಿಲ್ಲುನಾ, ಮನೆಗೆ ಪೇಂಟ ಮಾಡ್ತಾ ಇರೋದು ಕಣೇ, ಕಾಮನಬಿಲ್ಲು ಬಿಡಿಸ್ತಾ ಇಲ್ಲ, ಬಿಲ್ಲು ಎಷ್ಟಾಗುತ್ತೊ ಏನೊ" ಅಂತ ಕಣ್ಣುಜ್ಜುತ್ತ ಹೊರಬಂದೆ.
ಈರುಳ್ಳಿ ಮೆನಸಿನಕಾಯಿ ಹೆಚ್ಚುತ್ತ ಕುಳಿತಿದ್ದವಳು "ಇದೋ ಈ ಮೆಣಸಿನಕಾಯಿ ಇದೆಯಲ್ಲ, ಈ ಬಣ್ಣ ಇಲ್ಲಿ ಸರಿಯಾಗಿರತ್ತೇ" ಅಂತ ಗೊಡೆಯೊಂದನ್ನು ತೋರಿಸಿದಳು. "ಹೂಂ ಮತ್ತೆ ಅಲ್ಲಿ, ಯಾವುದು, ಸೌತೇಕಾಯಿ, ಗಜ್ಜರಿ ತಂದು ಕೊಡಲಾ ಬಣ್ಣ ಹೇಳಲು" ಅಂದ್ರೆ. "ರೀ ಗಜ್ಜರಿ ಬಣ್ಣ ಅಲ್ಲಿ ಸೂಪರ್" ಅಂತಂದಳು. "ಸರಿ ಬಿಡು ಬಣ್ಣ ತರುವ ಮೊದಲು ತರಕಾರಿ ಮಾರ್ಕೆಟಗೇ ಹೋಗಬೇಕು ಅಂತಾಯ್ತು, ಪೇಂಟ ಅಂಗಡೀಲಿ ತರಕಾರಿ ಹಿಡಿದು ನಿಲ್ಬೇಕು ಅಷ್ಟೇ" ಅಂತ ಬಯ್ದರೂ, ಮತ್ತೆ "ಈ ಕೆನೆ ಬಣ್ಣ ಬೆಡರೂಮಿಗೆ" ಅಂತ ಹಾಲಿನ ಪಾತ್ರೆ ತೋರಿಸಿದಳು. "ಸರಿ ಮೊದಲು ಹಾಲು ತರ್ತೀನಿ ಹಾಗಾದ್ರೆ, ಹಾಲಿನಂಗಡಿ ಹಾಸಿನಿ ನೋಡಿ ಬಹಳ ದಿನ ಬೇರೆ ಆಯ್ತು" ಅಂತ ನಡೆದರೆ, ದುರುಗುಟ್ಟಿಕೊಂಡು ನೋಡಿದಳು.
ಟೀ ಹೀರುತ್ತ ಕೂತವರ ಮಾತು ಮತ್ತೆ ಬಣ್ಣದೆಡೆಗೆ ಮರಳಿತು, "ಮನೆಯೆಲ್ಲ ಕ್ರೀಮ, ಕೆನೆ ಬಣ್ಣ ಮಾಡಿಸೋಣ ಬೆಳಕು ಚೆನ್ನಾಗಿರ್ತದೆ" ಅಂತ ನಾನಂದೆ, "ಮನೆ ಪೂರಾ ಒಂದೇ ಬಣ್ಣ ಮಾಡಿಸೋಕೇ ಇದೇನು ವೈಟಹೌಸಾ" ಅಂತ ತಿರುಗಿಬಿದ್ಲು. ಇವಳಂತೂ ಕಾಮನಬಿಲ್ಲು ಮಾಡೊ ಯೋಚನೆಯಲ್ಲೆ ಇದ್ದಂತಿತ್ತು, "ಅದೂ ಒಳ್ಳೆ ಐಡಿಯಾನೇ, ಮನೆಯೆಲ್ಲ ಬಿಳಿ ಬಣ್ಣ ಪೇಂಟ್ ಮಾಡಿಸಿ, ಯಾವ ರೂಮಲ್ಲಿ ಯಾವ ಬಣ್ಣ ಬೇಕೊ ಆ ಬಣ್ಣದ ಲೈಟು ಹಾಕಿದ್ರೆ, ಹಾಲ್ ಒಂದಿನಾ ಹಸಿರು, ಮತ್ತೊಂದಿನಾ ಕೆಂಪು" ಅಂತಿದ್ದರೆ, "ಇನ್ನೊಂದು ದಿನಾ ಕೇಸರಿ... ಸರಿಯಾಗಿರ್ತದೆ, ಮನೇನಾ ಟ್ರಾಫಿಕ ಸಿಗ್ನಲ್ಲಾ, ಕರೆಂಟು ಬಿಲ್ಲು ಯಾರು ಕಟ್ಟೊದು" ಅಂತ ಸಿಡುಕಿದಳು. "ನಿಂಗೆ ಯಾವ ಬಣ್ಣ ಬೇಕೊ ಅದೇ ಮಾಡಿಸ್ಕೊ ಹೋಗು, ದಿನದ ಹನ್ನೆರಡು ಘಂಟೆ ಆಫೀಸಲ್ಲೇ ಇರ್ತೀನಿ, ಮನೆ ಬಣ್ಣ ಯಾವುದಿದ್ರೆ ಏನಂತೆ" ಅಂತ ಕೈಚೆಲ್ಲಿದೆ. ಪಕ್ಕದಲ್ಲಿ ಬಂದು ಆತುಕೊಂಡು ಕೂತು ಬಣ್ಣ ಬಿಟ್ಟು ಬೆಣ್ಣೆ ಹಚ್ಚತೊಡಗಿದಳು "ಬೇಜಾರಾಯ್ತಾ" ಅಂತ. "ನನಗ್ಯಾಕೆ ಬೇಜಾರು ನಿನ್ಗೆ ಹೇಗೆ ಬೇಕೋ ಹಾಗೆ ಬಣ್ಣ ಮಾಡಿಸು, ಬಣ್ಣದಲ್ಲಿ ಹೆಣ್ಮಕ್ಕಳಿಗೇ ಜಾಸ್ತಿ ತಿಳಿಯೋದು" ಅಂದೆ. "ಏಳು ಬಣ್ಣ ಸೇರಿನೇ ಬಿಳಿ ಬಣ್ಣ ಆಗೋದು ಅನ್ನೊ ಹಾಗೆ ಇಬ್ರೂ ಸೇರಿನೇ ನಿರ್ಧರಿಸೋದು" ಅಂದ್ಲು, "ಅದೇ ಬಿಳಿ ಬಣ್ಣ ಮಾಡಿಸಿ, ಅದರಲ್ಲಿ ನಿನ್ನಿಷ್ಟದ ಬಣ್ಣ ನನ್ನಿಷ್ಟದ ಬಣ್ಣ ಎಲ್ಲ ಇದೇ ಅನ್ಕೊಂಡರೆ" ಅಂದೆ, "ರೀ ಈಗೇನು ಬಿಳಿ ತಾನೆ ಅದೇ ಮಾಡಿಸಿ, ಆಮೇಲೆ ಧೂಳು ಕೂತು ಕಲೆಯಾದರೆ ನನ್ನ ಕೇಳ್ಬೇಡಿ" ಅಂತ ಈಗಲೇ ಎಚ್ಚರಿಸಿದಳು. ಅದೂ ನಿಜವೆನಿಸಿತು, ಅಲ್ದೆ ಇದೇನು ವೈಟಹೌಸೂ ಅಲ್ಲ ಆ ಬಣ್ಣ ಮಾಡಿಸೊಕೆ ಅಂತ.
"ಪಿಂಕ ಹೇಗಿರ್ತದೆ" ಅಂದೆ ಹುಡುಗಿಯರಿಗೆ ಅದು ಇಷ್ಟ ಆಗಬಹುದು ಅಂತ. "ಪಿಂಕ ಚಡ್ಡಿ, ಪಿಂಕ ಸ್ಲಿಪ್, ಪಿಂಕಿ ಫಿಂಗರ್ರು ಅಂತೆಲ್ಲ ಕೇಳಿ ಕೇಳಿ ಸಾಕಾಗಿಲ್ವಾ, ಮನೇನೂ ಅದೇ ಬಣ್ಣ ಬೇಕಾ" ಅಂತ ತಿರುಗಿಬಿದ್ಲು, "ನಂಗೂ ಇಷ್ಟ ಇರಲಿಲ್ಲ ಬಿಡು, ನಿನ್ಗೆ ಇಷ್ಟ ಎನೊ ಅಂತ ಕೇಳಿದೆ" ಅಂದೆ. "ನನ್ನಿಷ್ಟ ಎಲ್ಲ ಬೇಡ ನಿಮ್ಮಿಷ್ಟ ಹೇಳಿ" ಅಂತ ಕೇಳಿದ್ದಕ್ಕೆ "ಸುತ್ತಲೂ ತಿಳಿ ಹಸಿರು ಗಾರ್ಡನ್ನಿನಂತೆ ವಾಲ ಪೇಂಟಿಂಗ್, ಅದೊ ಆ ಗೋಡೆಯಲ್ಲಿ ನೀರಿಗೆ ಹೊರಟು ನಿಂತು ತಿರುಗಿ ನೋಡುತ್ತಿರುವಂತ ಹುಡುಗಿ, ಅಲ್ಲಿ ಪಕ್ಕದಲ್ಲಿ ಹುಲ್ಲು ಮೇಯುತ್ತಿರುವ ಹಸು, ಇಲ್ಲಿ ನೀರ ಝರಿ, ಆ ಪಿಲ್ಲರ ಸುತ್ತ ಹರಡಿರುವ ಬಳ್ಳಿ ಅಲ್ಲಲ್ಲಿ ಬಿಳಿ ಬಿಳಿ ಹೂವು, ಮೇಲೆ ತಿಳಿ ನೀಲಿ ಆಕಾಶ, ಮೋಡಗಳು, ಕತ್ತಲಾದರೆ ಈ ಬೆಡ್ ಮೇಲೆ ಮಲಗಿ ಮೇಲೆ ನೋಡುತ್ತಿದ್ದರೆ ಅಲ್ಲಲ್ಲಿ ಮಿನುಗುವ ನಕ್ಷತ್ರದಂತ ಚಿಕ್ಕ ಚಿಕ್ಕ ಎಲ್.ಈ.ಡೀ ಲೈಟುಗಳು. ಪಕ್ಕದಲ್ಲಿ ಚಂದ್ರನಂತೆ ನೀನು" ಅಂದೆ. ಕನಸುಗಣ್ಣುಗಳನ್ನು ತೆರೆದು ನೋಡುತ್ತಲೇ ಇದ್ಲು, ಅಲುಗಿಸಿದೆ ಮತ್ತೆ ಕಲ್ಪನೆಯಿಂದ ಹೊರಬಂದಳು, ಮತ್ತೆ ಹೇಳಿದೆ "ಇದು ನನ್ನಿಷ್ಟ, ಆದರೆ ಈ ರೀತಿ ಬಣ್ಣ ಮಾಡಿಸಿದರೆ ಬರುವ ಬಿಲ್ಲು ಎದೆಗೇ ನಾಟುತ್ತದೆ ಬಾಣದಂತೆ, ಅಲ್ಲದೇ ಬಾಡಿಗೆ ಮನೆ ಬೇರೆ, ಸ್ವಂತದ್ದಾದರೆ ನಮ್ಮಿಷ್ಟ ಏನು ಮಾಡಿದರೂ ಓಕೇ" ಅಂದೆ. "ಐಡಿಯಾ ಎನೋ ಬಹಳೇ ಚೆನ್ನಾಗಿದೆ, ಆದ್ರೆ ಕಾಸ್ಟ್ಲಿ" ಅಂತ ಸುಮ್ಮನಾದಳು.
ಅಷ್ಟರಲ್ಲಿ ಮನೆ ಮಾಲೀಕರು ಬಂದರು, ಈಗಿರುವ ಬಣ್ಣವೇ ಮಾಡಿಸಿ ಅಂತಂದರು, ನಮ್ಮ ಬದಲಾವಣೆ ಯೋಜನೆಗಳನ್ನು ಹೇಳಬೇಕೆನಿಸಿದರೂ ಮನೆ ಅವರದಲ್ಲವೇ ಅಂತ ಸುಮ್ಮನಾದೆವು, ಹಾಗೂ ಹೀಗೂ ಇವಳು ತಿಳಿನೀಲಿ ಬಣ್ಣ ಎಲ್ಲ ಕಡೆ ಒಂದೇ ರೀತಿ ಆಗುತ್ತದೆ ಅಂತ ಹೇಳಿ ಒಪ್ಪಿಸಿದಳು, ಹಾಲ್‌ನಲ್ಲಿನ ತಿಳಿ ಹಸಿರು ಬಣ್ಣಕ್ಕೆ ವಿದಾಯ ಹೇಳಿಯಾಯ್ತು. ಪೇಂಟರ್ ಬೇರೆ ಒಂದೇ ಬಣ್ಣವಾದರೆ ಅವನಿಗೂ ಅನುಕೂಲ ಅಂದ, ಅಲ್ಲದೇ ಉಳಿತಾಯ ಕೂಡ ಆಗುತ್ತದೆ ಅಂದದ್ದು ಕೇಳಿ ಖುಷಿಯಯ್ತು. ಇನ್ನೇನು ಹೊರಡಬೇಕೆನ್ನುವಲ್ಲಿ "ಬಾರ್ಡರಗೆ ಯಾವ ಬಣ್ಣ" ಅಂತ ಕೇಳಿದಳು. ನಾನು "ಇದೇನು ಸೀರೆನಾ, ಬಾರ್ಡರ ಬಣ್ಣ ಬೇರೆ ಮಾಡಿ ಗೊಂಡೆ ಕಟ್ಟೊದಕ್ಕೆ" ಅಂದೆ, ಅಷ್ಟರಲ್ಲಿ ಪೇಂಟರ್ "ಸರ್ ಸೀಲಿಂಗ ಬಾರ್ಡರ್ ಕಲರು ಬೇರೆ ಇರ್ತದೆ" ಅಂದ. ಗೊತ್ತಿಲ್ಲದೇ ಏನೊ ಹೇಳಹೋದ ನನ್ನ ಪೆಚ್ಚು ಮೋರೆ ನೋಡಿ ನಕ್ಕಳು "ಅದು ಮೇಡಮ್ ಇಷ್ಟ" ಅಂತ ಸಂಭಾಳಿಸಿದೆ.
ಅಂತೂ ಇಂತೂ ಮುಂಜಾನೆಯಿಂದ ಸಂಜೇವರೆಗೆ ಪೇಂಟರ ಹಿಂದೆ ಸುತ್ತಿ, ಅಲ್ಲಿ ಕೆತ್ತು, ಇಲ್ಲಿ ಮೆತ್ತು ಅಂತ ಏನೇನೊ ಹೇಳಿ ಪೇಂಟ್ ಮಾಡಿಸಿದಳು, ಸಂಜೇ ಹೊತ್ತಿಗೆ, ಅವಳ ಮುಖದಲ್ಲೂ ಬಣ್ಣ ಮೆತ್ತಿತ್ತು, "ಬಾರೆ ಇಲ್ಲಿ ಮೀಸೆ ಕೊರೆಯುತ್ತೀನಿ" ಅಂತ ಅಂದವನಿಗೆ ಗಲ್ಲದ ಮೇಲೆ ಅವಳು ಕೊರೆದ ಎರಡು ಗೆರೆಗಳೊಂದಿಗೆ ಥೇಟ್ ಆದಿವಾಸಿಗಳಂತೆ ಕಾಣುತ್ತಿದ್ದೆ, ನಾ ಕೊರೆದ ಮೀಸೆ ತಿರುವಿಕೊಂಡು, ನನ್ನ ಅವಳು ಹೆದರಿಸುತ್ತಿದ್ದುದು ನೋಡಿ ಪೇಂಟರ ಕೂಡ ನಗುತ್ತಿದ್ದ.
ಎನೇನೊ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತೇವೆ, ಬದುಕೇ ಬಣ್ಣ ತುಂಬಿ ಕಾಮನಬಿಲ್ಲು ಆಗಲಿ ಅನ್ನುತ್ತೇವೆ, ಅದರೆ ಅದೇ ಕಾಮನ್ ಮ್ಯಾನ, ಶ್ರೀಸಾಮಾನ್ಯನ ಪ್ರಾಬ್ಲ್ಂ ಅಂತ ಬಿಲ್ಲು ಧುತ್ತೆಂದು ಮುಂದೆ ಬಂದು ನಿಂತಾಗ ಕನಸುಗಳ ಬಣ್ಣ ಬಿಳಚಿಕೊಂಡುಬಿಡುತ್ತದೆ. ಒಬ್ಬರಿಗೆ ಹಸಿರು ಇಷ್ಟವಾರದೆ, ಇನ್ನೊಬ್ಬರಿಗೆ ಕೆಂಪು, ಮತ್ತೊಬ್ಬರಿಗೆ ನೀಲಿ... ಎಲ್ಲವನ್ನೂ ಸೇರಿಸಿದರೆ ಬಿಳಿ ಅಂತ ಹೀಗೆ ಬದುಕು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಸುತ್ತದೆ. ಹಾಗಂತ ಕನಸು ಕಾಣಲೇಬಾರದೆಂದಿಲ್ಲ, ಕಾಣಬೇಕು ಕನಸು ನನಸಾಗಿಸಲು ಶ್ರಮಿಸಬೇಕು, ನನಸಾಗದಿದ್ದರೆ ನಸುನಗುತ್ತ ಬಂದದ್ದನ್ನು ಸ್ವೀಕರಿಸಲೂ ಸಿದ್ಧರಾಗಿರಬೇಕು.
ನಮ್ಮಿಬ್ಬರ ಕಾಮನ್ ಇಷ್ಟವಾದ ತಿಳಿನೀಲಿ ಬಣ್ಣ ಮನೆ ತುಂಬ ಬಳಿದಾಗಿತ್ತು, ಬಿಲ್ಲು ಕೂಡ ಕಮ್ಮಿಯಾಗಿತ್ತು, ಒಂಥರಾ ಕಾಮನಬಿಲ್ಲೇ ಆಗಿತ್ತು. ಎಲ್ಲ ತೊಳೆದು ಮತ್ತೆ ಸಾಮಾನೆಲ್ಲ ಜೋಡಿಸಿ ಪೇರಿಸಿಟ್ಟು ಸುಸ್ತಾಗಿತ್ತು. ಬೆಡ್ ಮೇಲೆ ಮಲಗಿಕೊಂಡು ಪಕ್ಕದಲ್ಲಿದ್ದವಳಿಗೆ ಕೇಳಿದೆ "ಇಷ್ಟ ಆಯ್ತಾ ಬಣ್ಣ" ಅಂತ. "ನಿಮ್ಮ ಕನಸಿನ ಬಣ್ಣದಷ್ಟೇನೂ ಅಲ್ಲ, ಆದ್ರೆ ನಮ್ಮಿಬ್ಬರ ಇಷ್ಟದ ತಿಳಿನೀಲಿ ಆದರೂ ಇದೆ ಅಂತ ಸಮಾಧಾನ ಆಯ್ತು, ರೀ ಒಂದು ಕೆಲ್ಸ ಮಾಡೊಣ ಈ ಮೇಲಿನ ಸ್ಲ್ಯಾಬ ಕಿತ್ತು ತೆಗೆಸಿದ್ರೆ ಮೇಲೆ ಆಕಾಶ ನಕ್ಷತ್ರ ಎಲ್ಲ ಕಾಣಿಸ್ತದೆ" ಅಂದ್ಲು. "ಮಳೆ ಆದ್ರೆ ಮನೆಯಲ್ಲ ನೀರು ಸುರಿದು ಇಲ್ಲಿ ನೀರ ಝರಿ ಕೂಡ ಹರಿಯುತ್ತದೆ, ಹಾಗೆ ಹೊರಗೆ ಕಾಮನಬಿಲ್ಲೂ ಕಾಣ್ತದೆ" ಅಂದೆ, "ಅಲ್ಲಿ ನೀರಿಗಾಗಿ ಹೊರಟ ಹುಡುಗಿಯಂತೆ ಬಿಂದಿಗೆ ಹಿಡಿದುಕೊಂಡು ತಿರುಗಿ ನೋಡುತ್ತ ಬೇಕಾದ್ರೆ ನಾನು ನಿಲ್ತೀನಿ, ಹಸು ಒಂದು ತಂದರಾಯ್ತು ನೋಡಿ" ಅಂದ್ಲು. "ಬಕೆಟ್ಟು ತೆಗೆದುಕೊಂಡು ಝರಿಯ ನೀರು ಹೊರಹಾಕುತ್ತ ನಾ ನಿಲ್ಲಬಹುದುಲ್ಲ" ಅಂದೆ ನಕ್ಕಳು, "ನಮ್ಮನೆ ಅಂತ ಆದರೆ ಹಾಗೇ ಬಣ್ಣ ಮಾಡಿಸೋಣ, ಸಧ್ಯಕ್ಕೆ ನಮ್ಮಿಬ್ಬರ ಇಷ್ಟದ ಒಂದು ಬಣ್ಣವಾದರೂ ಇದೆಯಲ್ಲ" ಅಂತಂದೆ, "ನಮ್ಮನೆ ಆದರೆ ಕಾಮನಬಿಲ್ಲು ಮಾಡೊಣ" ಅಂತಿದ್ದಳು, ಹಾಗೇ ಕನಸುಗಳೊಂದಿಗೆ ನಿದ್ರೆಗೆ ಜಾರಿದೆವು, ಮತ್ತೆ ಹೀಗೆ ಬದುಕಿನ ಬಣ್ಣ ಬಣ್ಣದ ಕನಸುಗಳೊಂದಿಗೆ ಮತ್ತೆ ಸಿಗುತ್ತೇನೆ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/kamanabillu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
23 comments:
ಸ್ವಲ್ಪ ಉತ್ತರ ಕರ್ನಾಟಕದ ಸಂಕಷ್ಟದ ಬಗ್ಗೆ ಬರೆದರೆ ಒಳಿತು,swalpa ಟೈಮ್ ಹೆಂಡ್ತಿ ಜೊತೆ ಮಾತುಕತೆ ವಿಷಯ ಕಡಿಮೆ ಮಾಡಿದ್ರೆ ಚೆನ್ನಾಗಿರ್ರುತ್ತೆ.
ಪ್ರಭು ,
ಸು೦ದರ ಬರಹ.ನಿಮ್ಮ ಜೀವನವು ಕಾಮನ ಬಿಲ್ಲಿನ೦ತೆ ಸು೦ದರವಾಗಿ ಇರಲಿ ಹಾಗು ಆದಸ್ಟು ಬೇಗ ನೀವು ನಿಮ್ಮ ಸ್ವ೦ತ ಮನೆಗೆ ಹೋಗುವ೦ತೆ ಆಗಲಿ ಎ೦ದು ಹಾರೈಸುತ್ತೇನೆ .
ಪ್ರಭು,
ಬಾಡಿಗೆ ಮನೆಯಲ್ಲಿರುವವರು, "ನಮ್ಮದೇ ಮನೆ ಇದ್ದಿದ್ದರೆ ನಮ್ಮ ಇಶ್ಟದಂತೆ ಮಾಡಿಸಬಹುದಿತ್ತು" ಎಂದು ಹೇಳುತ್ತರೆ. ಆದರೆ ಸ್ವಂತ ಮನೆಯಲ್ಲಿರುವವರೂ ಕೋಡ ತಮ್ಮ ಕನಸಿನ ಲೋಕದಿಂದ ವಾಸ್ತವಕ್ಕೆ ಇಳಿಯಲೇಬೇಕು. ಪಾಪ ಮನೆ ಕಾಟಿಸಕ್ಕೆ ಅದೆಷ್ಟು ಸಾಲ ಮಾಡಿರುತ್ತಾರೋ ;-)
ನಿಮ್ಮ ಕಲ್ಪನೆ ಚೆನ್ನಾಗಿದೆ. ಹಸಿರು ವಾತಾವರಣ, ಹಸು, ನೀರು ... ಇಂತ ಪರಿಸರದ ಮಧ್ಯದಲ್ಲಿ ಇರುವುದು ನಿಜಕ್ಕೂ ಸೊಗಸು. ಬೇಗ ನಿಮ್ಮ ಕನಸು ನನಸಾಗಲಿ.
chennagide baraha....
odtha odtha vishuvardhan ravara
"bana, ollavina bana" nenpagthithu
hage duet hadidre inu chanda irthithu :)
ಪ್ರಭು,
ಹೆಂಡತಿಯ ಜೊತೆ ಉತ್ತರ ಕರ್ನಾಟಕದಲ್ಲಿ ತೊಳೆದು ಹೋದವರ ಬಣ್ಣದ ಬಗೆಗೂ ಚರ್ಚಿಸಿ,
ಎಂದಿನಂತೆ ಉತ್ತಮ ಶೈಲಿ, ಬರಹ ಎರಡೂ
ಪ್ರಭುರಾಜ,
ಕಾಮನ ಬಿಲ್ಲಿನ ಬಣ್ಣದ ಬಾಳನ್ನು ಕಟ್ಟುವ ಹರಟೆ ತುಂಬ ಚೆನ್ನಾಗಿದೆ. In fact ನಿಮ್ಮ ಎಲ್ಲ ಬರಹಗಳೂ ಕಾಮನ ಬಿಲ್ಲಿನಂತೆ ಸೊಗಸಾಗಿವೆ.
ಹೌದು, ಬಣ್ಣ ಬಣ್ಣದ ಕನಸು ಕಾಣಬೇಕು, ಬದುಕು ಸುಂದರವಾಗಿದೆ :-)
"ಕನಸು ನನಸಾಗಿಸಲು ಶ್ರಮಿಸಬೇಕು, ನನಸಾಗದಿದ್ದರೆ ನಸುನಗುತ್ತ ಬಂದದ್ದನ್ನು ಸ್ವೀಕರಿಸಲೂ ಸಿದ್ಧರಾಗಿರಬೇಕು"
ಸತ್ಯವಾದ ಮಾತು :-)
ಪ್ರಭು,
ತುಂಬಾ ಚೆನ್ನಾಗಿದೆ.... ಬಣ್ಣ ಬಣ್ಣದ ಲೇಖನ ಹಹಹ... ಬಾಡಿಗೆ ಮನೆಗೆ ಬಣ್ಣ ಬಳಿಸಲು ಯೋಚಿಸಲೇಬೇಕು ಮಾಲೀಕರು ಹೇಳಿದ ಹಾಗೆ ನಾವುಗಳು ಮಾಡಬೇಕು..ನಮ್ಮ ಮನೆಯಲ್ಲಿ ನಾವು ಈಗ ಬಣ್ಣ ಮಾಡಿಸಲು ನನ್ನವರಿಗೆ ಹೇಳಿ ೬ ತಿಂಗಳಾಯಿತು ಪೈಂಟ್ ಡಬ್ಬ ತಂದು ಇಟ್ಟಿದ್ದಾರೆ ಆದರೆ ಪೈಂಟ್ ಮಾಡಿಸಲು ನೀ ಊರಿಗೆ ಹೋದಾಗ ಮಾಡಿಸುವೆ ಎಂದು ಹೇಳಿದವರು ನಾ ಊರಿಂದ ಬಂದು ೨ ತಿಂಗಳಾದರು ಆ ಕೆಲಸ ನೆರೆವೇರಲಿಲ್ಲ ಹಹಹ... ದಿನಾ ನಾನು ನಮ್ಮ ಮನೆ ಪೈಂಟ್ ಯಾವಾಗ ಆಗುತ್ತೆ ಎಂದು ಕಾಯುತ್ತಲೇ ಇದ್ದೀನಿ ಹಹಹಹ...
ನಿಮ್ಮ ಲೇಖನ ನಮ್ಮ ಮನೆ ಪೈಂಟ್ ಬಗ್ಗೆ ನೆನಪು ಮಾಡಿಸಿತು ಹಹ
ವಂದನೆಗಳು...
ಪ್ರಭು,
ನಿಮ್ಮ ಕಲ್ಪನೆ ಸೊಗಸಾಗಿದೆ....ಎಂದಿನಂತೆ ನಿಮ್ಮ ಶೈಲಿ ವಿಭಿನ್ನ...
ಹೆಂಡತಿ ಜೊತೆ ಮಾತಿನಲ್ಲೆ ಬಣ್ಣ ಹೊಡೆದಿದ್ದೀರಾ....
ಮಹೇಶ್!
Anantkumar ಅವರಿಗೆ
ಸಂಕಷ್ಟದ ಬಗ್ಗೆ ಬರೆಯಬಹುದಿತ್ತು, ಆದರೆ ಅದನ್ನು ನೇರ ನೋಡಿಲ್ಲ, ಇಲ್ಲಿ ಬೆಚ್ಚಗೆ ಬೆಂಗಳೂರಿನಲ್ಲಿ ಕೂತು ನನಗೆ ಸುಮ್ಮನೇ ಕಲ್ಪಿಸಿ ಬರೆಯಲು ಆಗಲಿಕ್ಕಿಲ್ಲ. ಊರಿಗೆ ಹೋಗಿದ್ದರೆ ಖಂಡಿತ ಬರೆಯುತ್ತಿದ್ದೆ.
ಈ ಮತುಕತೆಗಳೆ ನನ್ನ ಬರಹ, ಅದು ಕಮ್ಮಿಯಾಗಲಿಕ್ಕಿಲ್ಲ.
roopa ಅವರಿಗೆ
ನಿಮ್ಮ ಹಾರೈಕೆಗೆ ಧನ್ಯವಾದಗಳು, ನೊಡೋಣ ಜೀವನ ಕಾಮನಬಿಲ್ಲು ಆಗುತ್ತದೊ ಇಲ್ಲ ಬರೀ ಬಿಳಿ ಬೆಳದಿಂಗಳಾಗುತ್ತೊ ಅಂತ.
ಸ್ವಂತ ಮನೆ ಅದರಲ್ಲೂ ಬೆಂಗಳೂರಿನಲ್ಲಿ! ಸಧ್ಯಕ್ಕೆ ಅದು ಕನಸಿನ ಮಾತೇ ಸರಿ :)
ರಾಜೀವ ಅವರಿಗೆ
ನೂರಕ್ಕೆ ನೂರರಷ್ಟು ನಿಜವಾದ ಮಾತು ಹೇಳಿದಿರಿ, ಮನೆ ಕಟ್ಟೊ ಹೊತ್ತಿಗೆ ಆದ ಸಾಲ ಕೈಯಲ್ಲಿರುವ ಕಟ್ಟದಿರುವ ಬಿಲ್ಲುಗಳು ಎಲ್ಲ ಸೇರಿ ಕಾಮನಬಿಲ್ಲಿನ ಕನಸನ್ನು ಕಮರಿಸಿಬಿಡುತ್ತವೆ.
ಎಲ್ಲೊ ಮೇಲ್ ನಲ್ಲಿ ಪಾರವರ್ಡ್ ಆಗಿ ಬಂದ ಕೆಲವು ಚಿತ್ರಗಳನ್ನು ನೋಡಿದ್ದೆ, ಅದರಲ್ಲಿ ಇಂಥ ಸುಂದರ ವಾಲ್ ಪೇಂಟಿಂಗಗಳ ನೋಡಿ ನಮ್ಮನೆಯಲ್ಲೂ ಹೀಗೆ ಮಾಡಿಸಿದರೆ ಹೇಗೆ ಅಂತ ಅನಿಸಿತ್ತು.
ಪ್ರೀತಿಯಿ೦ದ ವೀಣಾ :) ಅವರಿಗೆ
:) ಹ ಹ ಹ.. ಒಳ್ಳೆ ಹಾಡು ನೆನಪಾಗಿದೆ ನಿಮಗೆ. ಬರೆಯುವಾಗ ಹೀಗೆ ಕಲ್ಪನೆ ಬರಲಿಲ್ಲ ನನಗೆ, ಡ್ಯುಎಟ್ ಕೂಡ ಹಾಡಬಹುದು ಒಂದು ದಿನ.
ಸಾಗರದಾಚೆಯ ಇಂಚರ ಅವರಿಗೆ
ಮೇಲೆ ಹೇಳಿದಂತೆ, ನನಗೆ ನೇರ ನೋಡಲಾಗಿಲ್ಲ,ಅದರ ಅನುಭವ ಆಗಿಲ್ಲ, ಆಗಿದ್ದರೆ ಬರೆಯಬಹುದಿತ್ತೇನೊ. ಮೊದಲೇ ಸಂಕಷ್ಟದಲ್ಲಿರುವವರ ಬಗ್ಗೆ ಹಾಗೆ ಹರಟೆ ಮಾಡಲೂ ಮನಸಾಗುತ್ತಿಲ್ಲ ಅದಕ್ಕೆ ಬರೆದಿಲ್ಲ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
sunaath ಅವರಿಗೆ
ನಿಮ್ಮ ಮೆಚ್ಚುಗೆ ನೋಡಿ ಬಹಳ ಖುಷಿಯಾಯ್ತು ಸರ್, ಬದುಕು ಕಾಮನಬಿಲ್ಲು ಮಾಡಬೇಕೆಂದು ಬಣ್ಣಗಳ ಕೂಡಿಸಿ ಸಂಗ್ರಹಿಸುತ್ತಿದ್ದೇನೆ ಆದರೆ ಎಲ್ಲಿ ಎಲ್ಲ ಚೆಲ್ಲಿಬಿಡುವುದೋ ಅನ್ನೊ ಆತಂಕ ಕಾಡದಿರುವುದಿಲ್ಲ.
Annapoorna Daithota ಅವರಿಗೆ
ಬಣ್ಣ ಹೇಗೆ ಕಾಣುವುದು, ಬೆಳಕು ವಸ್ತುವಿನ ಮೇಲೆ ಬಿದ್ದು ಅದರಲ್ಲಿ ಎಲ್ಲ ಬಣ್ಣ ಹೀರಿಕೊಂಡು ಅದು ಪ್ರತಿಫಲಿಸುವ ಒಂದು ಬಣ್ಣ ಮಾತ್ರ ನಮಗೆ ಅದರ ಬಣ್ಣವಾಗುತ್ತದೆ.
ಹಾಗೆ ಬದುಕು ಕೂಡ ಎಲ್ಲ ಬಣ್ಣಗಳ ಕಾಮನ ಬಿಲ್ಲಿನಂತೆ, ನಾವು ನೋಡುವ ನೋಟದ ಮೇಲೆ ನಿಂತಿದೆ...
ಮನಸು ಅವರಿಗೆ
ಮಾಲೀಕರು ಹೇಳಿದ ಬಣ್ಣ ಮಾಡಿಸಬೇಕಲ್ಲವೆ ಎಷ್ಟಾದರೂ ಅದು ಅವರ ಮನೆ. ಸ್ವಂತ ಮನೆಯಿದ್ದರೆ, ಮನೆತುಂಬ ಓಕುಳಿಯಾಡಿದರೂ ಪರವಾಗಿಲ್ಲ :)
ನಾವೂ ಹೀಗೆ ಮುಂದೂಡುತ್ತ ಬಂದು ಈ ವಾರ ಪೇಂಟ ಮಾಡಿಸಿದೆವು.
ನನ್ನ ಲೇಖನ ಓದಿದ ಅವರಿಗೂ ಸಧ್ಯ ಒಳ್ಳೋಳ್ಳೆ ಬಣ್ಣ ಬಣ್ಣದ ಕಲ್ಪನೆಗಳು ಬಂದಿರಬೇಕು ಈಗ ಮಾಡಿಸುತ್ತಾರೆ ನೋಡಿ. ಮನೆಗೆ ಬೇಗ ಬಣ್ಣ ಮಾಡಿಸಿ, ನಿಮ್ಮ ಬದುಕು ಕೂಡ ಅಷ್ಟೇ ಬಣ್ಣ ಬಣ್ಣಗಳಿಂದ ಕೂಡಿ ಕಾಮನಬಿಲ್ಲಾಗಲಿ ಅಂತ ನನ್ನ ಹಾರೈಕೆ.
ಸವಿಗನಸು ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದ ಸರ್, ಸುಮ್ಮನೆ ಎನೋ ಬಣ್ಣ ಬಣ್ಣದ ಮಾತುಗಳಲ್ಲೇ ಕಾಮನಬಿಲ್ಲಾಯ್ತು ನಮ್ಮನೆ.
ಬಣ್ಣಗಳಿಗೆ...ಕೊನೆ ಎಲ್ಲಿ ಮೊದಲೆಲ್ಲಿ.. ಪ್ರಭು.??.ನಿಮ್ಮ ವಿಷಯಗಳಿಗೆ ಮೊದಲೆಲ್ಲಿ? ಕೊನೆಯೆಲ್ಲಿ..ರಾಜ???..ನಿಮ್ಮ ಈ ಪೋಸ್ಟ್ಗಳು ನೋಡಿ ನೋಡಿ..ನನ್ನ ಮೂಗಿ..ನ ತುದಿ ಬೆಳೀತಿದೆ....
ಕಾಮನಬಿಲ್ಲಿನ ಎಕ್ಸಾಂಪಲ್ ಕೊಟ್ರಿ..ನಿಜಕ್ಕೂ ಪ್ರಕೃತಿಯ ವಿಸ್ಮಯ ಅದು..ಸೂರ್ಯನ ಕುಂಚ..ಮಳೆಯುದುರಿಸುವ ಪರದೆ ಕ್ಯಾನವಾಸು ಅದರ ಮೇಲೆ ಮೂಡಿಸೋ ಬಣ್ಣಗಳ ಚಿತ್ತಾರ..
ಮನೆಗೆ ಬಣ್ಣ ಬಳಿಯೋ ವಿಷಯ ಹಿಡಿದು ನಮ್ಮ ಮನಗಳ ಬಣ್ಣ ಕದಡಿ ನಾವೂ ಒಂದು ಚಿತ್ರ ನಮ್ಮ ನಮ್ಮ ಶೈಲೀಲಿ ಬಿಡಿಸೋಕೆ ಬಿಟ್ರಿ..ಅದ್ಕೇ ತಗೋಳಿ ಇದು ನನ್ನ ಚಿತ್ರ.....
ಪ್ರಭು,
ಮನೆಗೆ ಬಣ್ಣ ಹೊಡೆಸುವ, ಮತ್ತು ಕಾಮನ್ ಬಿಲ್ಲು ಕಾನ್ಸೆಪ್ಟು...ಅದಕ್ಕೆ ತಕ್ಕಂತೆ ನಿಮ್ಮ ಮಾತುಕತೆ, ಕೊನೆಯಲ್ಲಿ ಮೀಸೆಕತೆ ಓದಿ ನನ್ನ ಮನೆ ಕತೆ ನೆನಪಾಯಿತು.
ನಮ್ಮ ಹಾಲ್ ಮತ್ತು ಬೆಡ್ ರೂಮಿನ ರೂಫಿಗೆ ನಕ್ಷತ್ರಗಳನ್ನು ತಂದು ಹಾಕಿದರೆ ತುಂಬಾ ಚೆನ್ನಾಗಿರುತ್ತೆ ಅಂತ ನಾನು ಹೇಳಿದಾಗ ನನ್ನ ಶ್ರೀಮತಿ ನಕ್ಕುಬಿಟ್ಟಳು. ಕೊನೆಗೊಂದು ದಿನ ಅವಳಿಲ್ಲದ ದಿನ ನೋಡಿ ಅದನ್ನು ತಂದು ರಾತ್ರಿಯವರೆಗೆ ಕಾಯ್ದು, ಬೆಂಚು ಹತ್ತಿ ರೂಪಿಗೆಲ್ಲಾ ಅಂಟಿಸಿದೆ.[ನಕಲಿ ನಕ್ಷತ್ರಗಳು ಮೆಜೆಸ್ಟಿಕ್, ಎಸ್,ಪಿ,ರೋಡಿನಲ್ಲಿ ಸಿಗುತ್ತೆ] ಮರುದಿನ ಸಂಜೆ ಅವಳು ಬಂದಳು. ರಾತ್ರಿ ದೀಪ ಆರಿಸಿದಾಗ ಥೇಟ್ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿವೆ ನಮ್ಮ ಬೆಡ್ ರೂಮಿನಲ್ಲಿ ಮತ್ತು ಹಾಲಿನಲ್ಲಿ! ಅವಳಿಗೆ ಆಶ್ಚರ್ಯ!
ಇದೇನ್ರಿ ಇದು ಸಕ್ಕತ್ತಾಗಿದೆ ಅಂದಾಗ ನಾನು ಎಲ್ಲಾ ವಿವರಿಸಿ ಹೇಳಿದೆ. ಆಗ ಅವಳು ಖುಷಿಯಿಂದ ಕಣ್ಣರಳಿಸಿದ್ದನ್ನು ನೋಡಿ ನನಗಂತೂ ನಕ್ಷತ್ರಗಳೇ ಕೈಗೆಟುಕಿದಂತಾಗಿತ್ತು.
ಧನ್ಯವಾದಗಳು.
ಪ್ರಭು ಎಂದಿನಂತೆ ಲೇಖನ ಚೆನ್ನಾಗಿದೆ ..
ಲೇಖನದ ಕೊನೆಯಲ್ಲಿಯ ವಾಕ್ಯ "ಬಕೆಟ್ಟು ತೆಗೆದುಕೊಂಡು ಝರಿಯ ನೀರು ಹೊರಹಾಕುತ್ತ ನಾ ನಿಲ್ಲಬಹುದುಲ್ಲ" ನಮ್ಮೂರಿನ ನೆನಪಾಯಿತು ... ನಮ್ಮ ತಂದೆ ಹೇಳ್ತಿದ್ರು - ಇತ್ತೀಚಿಗೆ ಮಳೆ ಹೆಚ್ಚಾಗಿ ಮನಇಂದ ನೀರು ಹೊರಹಾಕುವ ದೃಶ್ಯ ಸಾಮಾನ್ಯವಾಗಿದೆ ಅಂತೆ...
ಹೀಗೆ ಬರಿತಿರಿ..
ಪ್ರಭು ಅವರೇ,
ಕಾಮನಬಿಲ್ಲಿನ ಐಡಿಯಾ ಚನ್ನಾಗಿದೆ...
ಲೇಖನ ಕೂಡ ಚನ್ನಾಗಿದೆ... :)
ಜಲನಯನ ಅವರಿಗೆ
ಬಣ್ಣಗಳಂತೂ ಬಹಳ, ಎಲ್ಲ ಸೇರಿಸಿ ಬಳಿದರೆ ಕಲಸುಮೇಲೋಗರ, ಅದೇ ಸರಿಯಾದ ಏಳು ಬಣ್ಣಗಳು ಸೇರಿದರೆ ಕಾಮನಬಿಲ್ಲು ಅದೇ ವಿಸ್ಮಯ.
ಏನೊ ಸರ್ ಬದುಕಿನಲ್ಲಿ ಹೊಸ ಹೊಸ ಬಣ್ಣಗಳು ಕಾಣಿಸುತ್ತವೆ ಅವನ್ನೇ ಬಳಿದು ಚಿತ್ರ ಬಿಡಿಸಿಡುತ್ತೇನೆ, ನಿಮ್ಮ ಮೆಚ್ಚುಗೆಗಳು ಆ ಬಣ್ಣಗಳ ತೀಕ್ಷ್ಣತೆಯನ್ನು ಹೆಚ್ಚಿಸುತ್ತವೆ.
ಮನಸಿನ ಕಾಮನೆಗಳು ಹಲವು ಅವೆಲ್ಲ ಸೇರಿಯೇ ಈ ಕಾಮನಬಿಲ್ಲು.
ಜಲನಯನದ ವಿಭಿನ್ನ ನಯನದಲ್ಲಿ ಸುಂದರ ಜಲವರ್ಣದ ಚಿತ್ರದಂತೆಯೇ ಇದೆ ನಿಮ್ಮ ಅನಿಸಿಕೆ. ತುಂಬಾ ಧನ್ಯವಾದಗಳು.
shivu ಅವರಿಗೆ
ಹ್ಮ್ ನಿಮ್ಮದೂ ಮೀಸೆ ಕಥೆಯಿದೆಯನ್ನಿ ಹಾಗಾದ್ರೆ ನನ್ನ ಲೇಖನ ಅದರ ಮಧುರ ನೆನಪು ಮರುಕಳಿಸಿ ಮೆಲಕುಹಾಕುವಂತೆ ಮಾಡಿದ್ದರೆ ನನಗೆ ಖುಷಿ.
ಈ ನಕಲಿ ನಕ್ಷತ್ರಗಳ ಐಡಿಯಾ ಬಹಳ ಇಷ್ಟ ಆಯ್ತು, ನಿಮ್ಮಾಕೆಯನ್ನು ಒಳ್ಳೆ ರೀತಿ ವಿಸ್ಮಯಗೊಳಿಸಿದ್ದೀರಿ. ನಮ್ಮೆಲ್ಲರೊಂದಿಗೆ ಅದನ್ನು ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು.
ನನ್ನಾkಗೆ ಕೂಡ ಹೀಗೇ ಮಾಡಬಹುದೇನೊ ಅಂತ ಯೋಚಿಸುತ್ತಿದ್ದೇನೆ :)
ಹೀಗೆ ನನಗೆ ಈ ಎಲ್ಈಡಿ ಬಳಸಿ ಹೀಗೆ ಮಾಡುವ ಐಡಿಯಾ ಇದೆ, ಹೇಗೆ ಕಾರ್ಯಗತವಾಗುತ್ತದೋ ಗೊತ್ತಿಲ್ಲ, ನಮ್ಮನೆಯ ಗಣೇಶ ಹಬ್ಬದ ಅಲಂಕಾರದಲ್ಲಿ ಅದನ್ನೆಲ್ಲ ಮಾಡಿ, ಜತೆಗೆ ಸ್ಯಾಟಲೈಟಗಳನ್ನೆಲ್ಲ ಮಾಡಿ ತಿರುಗುವಂತೆ ಮಾಡಿದ್ದೆವು, ಅದರ ಫೊಟೊಗಳು ನನ್ನ ಸೈಟನಲ್ಲಿ ಅಲ್ಬಮ್ನಲ್ಲಿವೆ ಸಮಯ ಸಿಕ್ಕರೆ ನೀವು ನೋಡಿ.
Manjunath ಅವರಿಗೆ
ಹೌದು ಮಂಜುನಾಥ ನಮ್ಮೂರಲ್ಲೂ ಅದೇ ಪರಿಸ್ಥಿತಿ ಇದೆಯಂತೆ, ಅದೃಷ್ಟವಶಾತ ನಮ್ಮನೇ ಎತ್ತರದಲ್ಲಿರುವುದರಿಂದ ಮನೆಗೆ ನೀರು ನುಗ್ಗಿಲ್ಲ. ಆದರೆ ಮಳೆಯ ಅವಕೃಪೆಯಿಂದ ಬಹಳ ನಷ್ಟವಾಗಿದೆಯನ್ನುವುದಂತೂ ನಿಜ.
ಶಿವಪ್ರಕಾಶ್ ಅವರಿಗೆ
ಮೆಚ್ಚುಗೆಗೆ ಧನ್ಯವಾದಗಳು, ಹೀಗೆ ಬಣ್ಣ ಬಣ್ಣದ ಕಥೆಗಳನ್ನು ಓದುತ್ತಿರಿ.
ನಿಮ್ಮ ಕಾಮನ್ ಬಿಲ್ಲು ಚೆನ್ನಾಗಿದೆ. :)
ನಿಮ್ಮ ಕಾಮನ್ ಬಿಲ್ ತುಂಬಾ ತುಂಬಾ ಚೆನ್ನಾಗಿದೆ ......... ಉತ್ತರ ಕರ್ನಾಟಕದ ಬಗ್ಗೆ ಬರಯಬಹುದು ಆದ್ರೆ ಅದನ್ನ ಫೀಲ್ ಮಾಡದೆ ಬರೆದ್ರೆ ಸರಿಹೊಗಲ್ಲ..... ನಮಗೆಲ್ಲ ಅದರ ಬಗ್ಗೆ ನೋವಿದೆ, ಅದಕ್ಕಾಗಿ ನಮ್ಮ ಶಕ್ತಿಯ ಅನುಸಾರ ಕೈಲಾದಸ್ತು ಸಹಾಯ ಮಾಡೋಣ.... ಆದ್ರೆ ಒಂದೇ ದುಃಖ ಎಂದರೆ, ಈ ಹಣವನ್ನ ಈ ರಾಜಕಾರಣಿಗಳು ಸರಿಯಾಗಿ ಉಪಯೋಗಿಸುತ್ತಾರೋ , ಅವರೇ ತಿಂತಾರೋ ಅಂತ..... ನಿಮ್ಮಾಕೆಯ ಸಂಗಡ ನಿಮ್ಮ ಸಲ್ಲಾಪ ಮುಂದುವರೆಸಿ....
ಬಾಲು ಅವರಿಗೆ
ಧನ್ಯವಾದಗಳು.
ದಿನಕರ.. ಅವರಿಗೆ
ಉತ್ತರ ಕರ್ನಾಟಕದ ಬಗ್ಗೆ ನೋಡಿದ್ದರೆ ಬರೆಯಬಹುದಿತ್ತೇನೊ, ನೋಡೊಣ ಸಾಧ್ಯವಾದರೆ ಕೇಳಿಯಾದರು ಬರೆಯಲು ಪ್ರಯತ್ನಿಸಬಹುದು. ಸಹಾಯ ಸಾಧ್ಯವಾದರೆ ನೇರವಾಗಿ ಮಾಡಿದರೇ ಒಳ್ಳೇದೇನೊ, ಈ ರಾಜಕಾರಣಿಗಳು ಯಾವ ದುಡ್ಡು ತಿನ್ನದೇ ಬಿಡುವುದಿಲ್ಲವೇನೊ.
"ಎನೇನೊ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತೇವೆ, ಬದುಕೇ ಬಣ್ಣ ತುಂಬಿ ಕಾಮನಬಿಲ್ಲು ಆಗಲಿ ಅನ್ನುತ್ತೇವೆ, ಅದರೆ ಅದೇ ಕಾಮನ್ ಮ್ಯಾನ, ಶ್ರೀಸಾಮಾನ್ಯನ ಪ್ರಾಬ್ಲ್ಂ ಅಂತ ಬಿಲ್ಲು ಧುತ್ತೆಂದು ಮುಂದೆ ಬಂದು ನಿಂತಾಗ ಕನಸುಗಳ ಬಣ್ಣ ಬಿಳಚಿಕೊಂಡುಬಿಡುತ್ತದೆ." ಈ ಸಾಲುಗಳು ಇಷ್ಟವಾದವು. ಎಂದಿನಂತೆ ಉತ್ತಮ ಲೇಖನ.....ನಿಮ್ಮ ಬ್ಲಾಗಿಗೆ ಭೇಟಿ ಕೊಡದೆ ತುಂಬಾ ದಿನಗಳಾಗಿದ್ದವು. ಹ್ಯಾಗ್ರಿ ಬರೀತೀರಿ ಇಷ್ಟೊಂದು ಚೆನ್ನಾಗಿ.
ಅಭಿನಂದನೆಗಳೊಂದಿಗೆ......
ನವೀನ್
ನವೀನ್ ಅವರಿಗೆ
ಆ ಸಾಲು ವಾಸ್ತವದ ಇನ್ನೊಂದು ಮುಖ ತೋರಿಸುತ್ತದಲ್ಲವೇ, ನನಗೂ ಹಾಗೆ ಯಾವ ಬ್ಲಾಗಗೂ ಭೇಟಿ ಕೊಡಲೇ ಆಗಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ತುಂಬಾ ಬೀಜೀ,ನಿಮ್ಮ ಬ್ಲಾಗನಲ್ಲೂ ಓದಲು ಹಲವು ಲೇಖನಗಳು ಬಾಕಿ ಇವೆ... ಏನೊ ಕಲ್ಪನೆಗಳು ಗೀಚಿಬಿಡುವುದು ಸರ್ ಹೆಚ್ಚಿನದೇನಿಲ್ಲ...
ನಮಸ್ಕಾರಗಳು.ನನ್ನ ಹೆಸರು ರಮ್ಯ ಅಂತ ನಿಮ್ಮ "ನನ್ನಾಕೆ" ನ "ನನ್ನವರು " ಇನ್ಚೆ (ಇ-ಅಂಚೆ) ಮುಖಾಂತರ ಕಳಿಸಿದ್ರು.ಅವ್ರು ಓದಿದ್ರು ,ಮತ್ತೆ ನನ್ನನ್ನು ಓದೋಕೆ ಹೇಳಿದ್ರು ಓದಿದೆ,ತುಂಬಾ ಖುಷಿ ಆಯ್ತು ಪಾತ್ರಗಳ ನಿಮ್ಮ ಕಲ್ಪನೆ ನಮ್ಮ ವಾಸ್ತವ ಜೀವನ ಅಂತ ಇಬ್ಬರಿಗೂ ಅನ್ನಿಸ್ತು,ಮಿಗಿಲಾಗಿ ನಾವು ನಮ್ಮ ಕಥೆನೇ ಓದ್ತಿದಿವಿ ಅಂತ ಅನ್ನಿಸ್ತಿತ್ತು.ನಿಮ್ಮ ಲೇಖನಗಳು ಕನ್ನಡದ ಸಿರಿಯನ್ನು ಹೆಚ್ಚಿಸಲಿ.ಶುಭವಾಗಲಿ, ಧನ್ಯವಾದಗಳು.
50ra bagge yeloke padaane sigata illa ashttu channagide....nimm 50 lekanagalu tumbane channagide...
Anonymous ಅವರಿಗೆ
ನಮಸ್ಕಾರ ರಮ್ಯ,
ನನ್ನ ನನ್ನಾಕೆ ನಿಮಗೆಲ್ಲ ಇಷ್ಟವಾಗಿದ್ದು ನನಗೂ ಖುಷಿ... ನಿಮ್ಮ ವಾಸ್ತವ ಜೀವನ ನನ್ನ ಕಲ್ಪನೆಯಂತಿದೆಯಂದ್ರೆ ನೀವು ತುಂಬಾ ಅದೃಷ್ಟವಂತರು, ಹೀಗೂ ದಂಪತಿಗಳಿದ್ದಾರೆ ಅಂತ ಕೇಳಿದಾಗಲೆಲ್ಲ...ನನ್ನ ಕನಸುಗಳು ಕೈಗೆಟುಕದ ನಕ್ಷತ್ರಗಳೇನಲ್ಲ, ನನ್ನ ಜೀವನವೂ ಹೀಗೆಯೇ ಇರಬಹುದು ಅನ್ನುವ ಭರವಸೆ ಮೂಡುತ್ತದೆ. ಹೀಗೆ ಓದುತ್ತಿರಿ, ಹಾಗೇ ಇಲ್ಲಿನ ಕೆಲವು ತುಂಟ ಸನ್ನಿವೇಷಗಳನ್ನು ಆಸ್ವಾದಿಸಿ, ನಿಮ್ಮ ಬದುಕು ಇನ್ನಷ್ಟು ಸುಂದರ ಸಿಹಿಯಾಗಲಿ ಅಂತ ನನ್ನ ಹಾರೈಕೆ.
Vidya ಅವರಿಗೆ
:) ಐವತ್ತು ವಯಸ್ಸು ಆಯ್ತಂತ ಕೊರಗಬಹುದು, ಐವತ್ತು ಲೇಖನ ಆಯ್ತಂದರೆ ನನಗೆ ಹಿಗ್ಗೊ ಹಿಗ್ಗು... ಅದೇ ಖುಷಿಯಲ್ಲಿ ಬರೆದೆ... ನಿಮಗಿಷ್ಟವಾಗಿದ್ದು ನನಗೆ ಸಂತಸ... ಹೀಗೇ ಓದುತ್ತಿರಿ ಇನ್ನೊಂದು ಐವತ್ತು ಬರೆದುಬಿಡುತ್ತೇನೆ...
Post a Comment