Sunday, September 27, 2009

ಚಂದ್ರನಿಂದ ನಲ್ಲಿ ಕನೆಕ್ಷನ್!

ದಸರಾ ಹಬ್ಬ ಆಯುಧಪೂಜೆ ಅಂತ, ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ, ಇನ್ನೇನು ಈವತ್ತು ಗಾಡಿ ತೊಳೆದು ಪೂಜೆ ಮಾಡೊ ಹೊತ್ತಿಗೆ ಮಧ್ಯಾಹ್ನ ಆಗುತ್ತದೆಂದು, ನಾನೇ ತೊಳೆದರಾಯ್ತು ಅಂತ ಇವಳಿಗೆ ನೀರು ಕೇಳಿದೆ, "ರೀ ನಲ್ಲಿ ನೀರು ಬಂದು ಎರಡು ದಿನ ಆಯ್ತು, ಸ್ನಾನಕ್ಕೇ ನೀರಿಲ್ಲ ಅಂತ ನಾನಿದ್ದರೆ, ನೀವು ಬೈಕ ತೊಳೆಯೋದಕ್ಕೆ ನೀರೆಲ್ಲಿಂದ ತರಲಿ" ಅಂದ್ಲು. "ಹೇ, ಚಂದ್ರನಲ್ಲೂ ನೀರಿದೆ ಅಂತ ಇಸ್ರೋ ಚಂದ್ರಯಾನದಿಂದ ಪತ್ತೆ ಆಗಿದೆ, ಅಂಥಾದ್ದರಲ್ಲಿ ನಮ್ಮನೇಲಿ ನೀರಿಲ್ಲ ಅಂದ್ರೆ ಹೇಗೇ" ಅಂದೆ, ಖಾಲಿ ಬಕೆಟು ಒಂದು ತಂದಿಟ್ಟು, "ಹೌದಾ ಹಾಗಿದ್ರೆ, ಆ ನಿಮ್ಮ ಚಂದ್ರನಿಂದ ಒಂದು ಬಕೆಟ್ಟು ನೀರು ತುಗೊಂಬನ್ನಿ, ನಂಗೂ ಬಟ್ಟೆ ತೊಳೆಯೋಕಾಗತ್ತೆ." ಅಂತ ಹಲ್ಲು ಕಿರಿದಳು, "ಛೇ, ನನಗೆ ರೈಲು ಬಿಡೊದು ಗೊತ್ತು, ರಾಕೆಟ್ಟು ಹಾರಿಸೋದು ಗೊತ್ತಿಲ್ವೇ, ಇಲ್ಲಂದ್ರೆ ಹೋಗಿ ತರಬಹುದಿತ್ತೇನೊ" ಅಂತ ಒಂದು ರೈಲು ಬಿಟ್ಟೆ. "ಪಾಪ ಹೌದಲ್ವಾ, ಒಂದು ಕೆಲಸ ಮಾಡಿ ನೀವೇನು ಹೋಗೊದು ಬೇಡ, ನಮ್ಮನೆಗೇ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಿಬಿಡಿ" ಅಂದ್ಲು....

ಆಕಾಶಕ್ಕೇ ಏಣಿ ಕಟ್ಟೊರನ್ನ ನೋಡೀದೀನಿ, ನಲ್ಲಿ ಹಾಕಿಸಿದ್ರೆ ನಾನೇ ಮೊದಲಿಕೆ ಆಗಬಹುದೇನೊ, ನೀರಿಗಾಗಿ ಎಲ್ರೂ ಪಾತಾಳ ಅಂತರ್ಜಲದತ್ತ ಮುಖ ಮಾಡಿದ್ರೆ, ಅಪ್ಪಟ ವಿರುದ್ಧ ದಿಕ್ಕಿನಲ್ಲಿ ಆಕಾಶದೆಡೆಗೆ ಕೈ ಚಾಚು ಅಂತ ಇವಳು ಹೇಳ್ತಿದಾಳೆ. "ಅಲ್ಲೀವರೆಗೆ ಪೈಪು ಹಾಕ್ಸೊಕೆ ಬಹಳ ಖರ್ಚಾಗತ್ತೇ, ಅಷ್ಟೆಲ್ಲ ದುಡ್ಡು ಇರೋಕೆ, ನಾನೇನು ಬಿಲ್ ಗೇಟ್ಸಾ, ಸಿಲ್ಲಿ ಸಾಫ್ಟವೇರ ಇಂಜನೀಯರು ನಾನು" ಅಂದೆ, ಅದೇ ಬಕೆಟ್ಟಿಗೆ ನಾಲ್ಕು ಮಗ್ ನೀರು ಸುರಿದು, "ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಇಷ್ಟೇ ನೀರಲ್ಲಿ ಎಲ್ಲಾ ಮುಗಿಸಿ ಪೂಜೆ ಮಾಡಿ ಬನ್ನಿ, ನಿಮ್ ಜತೆ ಮಾತಾಡ್ತಾ ನಿಂತರೆ ಹೋಳಿಗೆ(ಒಬ್ಬಟ್ಟು) ಹೊತ್ತಿ ಹೋಗುತ್ತೆ" ಅಂತ ಪಾಕಶಾಲೆ ಸೇರಿದಳು, ಅವಳಿಗೆ ಕಾಣದಂತೆ ಇನ್ನೆರಡು ಮಗ ನೀರು ಸುರಿದುಕೊಂಡು ಬೈಕ್ ತೊಳೆದದ್ದಾಯ್ತು. ತುಪ್ಪು ಹಾಕಿಕೊಂಡು, ಹೋಳಿಗೆ ತಿನ್ನುತ್ತ, "ಈ ಹೋಳಿ ಹಬ್ಬ ಯಾವಾಗ ಬರತ್ತೇ" ಅಂದೆ, "ಇನ್ನೂ ದೂರ, ಅದ್ಯಾಕೆ ನೆನಪು ಬಂತು" ಅಂದ್ಲು. "ಏನಿಲ್ಲ ಹೋಳಿಗೆ ತಿಂತಾ ಹೋಳೀ ಹಬ್ಬ ನೆನಪು ಬಂತು, ಬಣ್ಣ ಓಕುಳಿ ಚೆನ್ನಾಗಿರ್ತದೆ" ಅಂತ ಖುಷಿಯಾದೆ, "ಹೂಂ ಚೆನ್ನಾಗಿರ್ತದೆ, ಆಮೇಲೆ ಬಣ್ಣ ಬಿದ್ದ ಅಂಗಳ ಎಲ್ಲ ತೊಳಿಯೋಕೆ ಎರಡು ಡ್ರಮ್ ನೀರೂ ಸಾಕಾಗಲ್ಲ" ಮತ್ತೆ ನೀರಾಟಕ್ಕಿಳಿದಳು, ಈ ಹೆಂಗಳೆಯರದು ಇದೊಂದು ದೊಡ್ಡ ಪ್ರಾಬ್ಲ್ಂ, ಮನೇಲಿ ನೀರಿಲ್ಲಾ ಅಂದ್ರೆ ಅದೇ ಗುಂಗಿನಲ್ಲೇ ಇರ್ತಾರೆ. ಊಟ ಮುಗಿಸಿ ನಿಧಾನಕ್ಕೆ ಎದ್ದು, ಹೋಗಿ ನಾನೇ ಲೋಟ ನೀರು ತೆಗೆದುಕೊಂಡು ಬಂದೆ, ಅವಳನ್ನು ಕೇಳಿದ್ರೆ ಎಲ್ಲಿ ಮತ್ತೆ ಖಾಲಿ ಬಾಟಲಿ ಕೊಟ್ಟು, ಹೋಗಿ ನಿಮ್ಮ ಚಂದ್ರನಿಂದ ತುಂಬಿಸಿಕೊಂಡು ಬನ್ನಿ ಅಂದಾಳು ಅಂತ. ನೀರು ಕುಡಿದರೆ ಯಾಕೋ ಟೇಸ್ಟ ಬೇರೆ ಇತ್ತು "ಎಲ್ಲಿ ನೀರು ಚಂದ್ರನಿಂದ ತಂದದ್ದಾ" ಅಂದೆ, ದುರುಗುಟ್ಟಿ ನೋಡುತ್ತ "ಪಕ್ಕದಮನೆ ಪದ್ದು ಬೋರವೆಲ್ ನೀರು" ಅಂದ್ಲು. "ಅದಕ್ಕೇ ಟೇಸ್ಟಿ ಇದೆ" ಅಂತ ಮುಗುಳ್ನಕ್ಕೆ, "ಗಡಸು ಉಪ್ಪು ನೀರದು, ಅದೆಲ್ಲಿಂದ ಟೇಸ್ಟ್ ಬಂತೋ" ಅಂತ ಉರಿದುಕೊಂಡಳು.

ಬೈಕ ತೊಳೆದದ್ದು ಇನ್ನೂ ಸಾಕಾಗಿರಲಿಲ್ಲ, ಆನೆಗೆ ಗಿಂಡಿ(ಚಿಕ್ಕ ಲೋಟ) ನೀರಲ್ಲಿ ಸ್ನಾನ ಮಾಡಿಸಿದಂತೆ ಕಾಣುತ್ತಿತ್ತು. "ಇನ್ನೊಮ್ಮೆ ಬೈಕ್ ತೊಳೆದುಬಿಡ್ತೀನಿ, ಹೇಗೂ ಪಕ್ಕದಮನೆ ಪದ್ದು ಬೋರವೆಲ್ ನೀರಿದೆಯಲ್ಲ" ಅಂದೆ, "ಏನೂ ಬೇಕಿಲ್ಲ, ಪದ್ದು ನೀರು ಕೊಡ್ತೀನಿ ಅಂದ್ರು ನಾನು ಬಿಡಲ್ಲ, ನಂಗೊತ್ತಿಲ್ವಾ, ನಿಮಗೆ ಮತ್ತೆ ನೀರು ಯಾಕೆ ಬೇಕಿದೆ ಅಂತ, ಎಲ್ಲ ನೆಪ ಪದ್ದು ನೋಡಲು" ಅಂತ ನನ್ನ ಪ್ಲಾನಗೆ ನೀರೆರೆಚಿದಳು!.

ಸಂಜೆ ಮಳೆಯಾಗಬಹುದಿತ್ತೇನೊ, ಅದಕ್ಕೆ ಮಧ್ಯಾಹ್ನಕ್ಕೆ ಸೆಕೆ, ಧಗೆ ಜಾಸ್ತಿ ಆಯ್ತು, ಹಣೆ ಮೇಲೆ ತುಂತುರು ನೀರು ಸೆಲೆಯೊಡೆಯುತ್ತಿತ್ತು, "ಲೇ ತಲೇಲಿ ನೀರು ಸೆಲೆ ಹುಟ್ಟಿದೆ, ಪರಮೇಶ್ವರನ ಜಡೆಯಲ್ಲಿ ಗಂಗೆ ಅವತರಿಸಿದಂತೆ, ನೀರು ತುಂಬಿಸ್ತೀಯಾ" ಅಂದೆ. "ಇಂಜನೀಯರ ಸಾಹೇಬ್ರೆ, ವಿಶ್ವೇಶ್ವರಯ್ಯ ಅವರು ಕಟ್ಟಿದಂಗೆ ಒಂದು ಆಣೆಕಟ್ಟೆ ಕಟ್ಟಿ ನೀರು ಹಿಡಿದಿಡಿ ಆಮೇಲೆ ತುಂಬಿಸ್ಕೋತೀನಿ" ಅಂತ ಮಾರುತ್ತರ ಕೊಟ್ಲು, "ಅಷ್ಟೆಲ್ಲಾ ತಲೆ ಇದ್ದಿದ್ರೆ ನಾನ್ಯಾಕೆ ಇಲ್ಲಿರ್ತಿದ್ದೆ, ಚಂದ್ರನಮೇಲೆ ಮನೆ ಕಟ್ಕೊಂಡು ಇರ್ತಿದ್ದೆ" ಅಂದರೆ, "ಹ್ಮ್... ಆದ್ರೆ ಪಕ್ಕದಮನೆ ಪದ್ದುನ ಮಿಸ್ ಮಾಡ್ಕೊತಾ ಇದ್ರಿ" ಅಂತ ಕಾಲೆದಳು. "ಹೇ ಹಾಗೇನಿಲ್ಲ, ನಮ್ಮ ವಿಜಯನಗರ ಬೆಳೆಸಿ ಅದರ ಪಕ್ಕ 'ಚಂದ್ರಾ'ಲೇಔಟ್ ಮಾಡೊ ಬದಲು ಅದನ್ನೂ ಸೇರಿಸಿಕೊಂಡು ಹೋಗಿ, ಅಲ್ಲೇ ದೊಡ್ಡ ಚಂದ್ರನ ಲೇಔಟೇ ಮಾಡ್ತಾ ಇದ್ವಿ ಬಿಡು" ಅಂತ ನಾನು ಮರು ಮಾತಿಟ್ಟೆ. "ಹೌದೂ, ನೀವ್ಯಾಕೆ ವಿಜ್ಞಾನಿ ಆಗಲಿಲ್ಲ" ಅಂತ ಬೆರಗಾದಳು, "ನಾನೂ ಆಗಬೇಕು ಅಂತ ಪರೀಕ್ಷೆ ಎಲ್ಲಾ ಕಟ್ಟಿದೆ, ಪಾಸೇ ಅಗಲಿಲ್ಲ" ಅಂತ ಬೇಸರಿಸಿದೆ. "ಆಗದಿದ್ದುದು ಒಳ್ಳೇದೆ ಆಯ್ತು ಬಿಡಿ,
ನೀವೇನಾದ್ರೂ ಸ್ಯಾಟಲೈಟ್ ಬಿಟ್ಟಿದ್ರೆ, ಅದು ಕಂಟ್ರೊಲ್ ರೂಮಗೆ ಸಿಗ್ನಲ್ ಕಳಿಸೊ ಬದಲು, ಪಕ್ಕದಮನೆ ಪದ್ದುಗೆ ಸಿಗ್ನಲ್ ಕಳಿಸಿರೋದು." ಅಂತ ನಕ್ಕಳು, "ರಾಕೆಟ್ಟು ಬಿಟ್ಟರೆ, ಮೇಲೆ ಹಾರಿ ಮತ್ತೆ ತಿರುಗಿ ನಮ್ಮೆಡೆಗೆ ಬಂದಿರೋದು, ನಿನಗೆ ಪ್ರಶ್ನೆ ಕೇಳಿದ್ದವು ಎಲ್ಲ ನನಗೇ ತಿರುಗಬಾಣ ಆಗ್ತವಲ್ಲ ಹಾಗೆ" ಅಂತಂದು ನಾನೂ ನಕ್ಕೆ. "ಹಾಗಂದೆ ಅಂತ ಬೇಜಾರಾಯ್ತಾ" ಅಂತ ತಲೆ ಸವರಿದಳು, ಬೆವರ ಹನಿ ಸೆರಗಿಂದ ಒರೆಸುತ್ತ, "ನನಗೇನು ಬೇಜಾರಿಲ್ಲ ಪರದೇಶಿ ಕಂಪನಿಯಲ್ಲಿ ಪ್ರೊಗ್ರಾಮರ್ ಅಂತಿದೀನಿ ಅಂತ, ನನ್ನಿಂದ ಏನಾಗುತ್ತೊ ಅದನ್ನ ನಾನು ಮಾಡ್ತಾ ಇದೀನಿ, ಮನುಕುಲಕ್ಕೆ ಎನೋ ಸಹಾಯವಾಗುವಂತದ್ದು ನೇರವಾಗಿ ಮಾಡಿಲ್ಲದಿದ್ರೂ, ಪರೋಕ್ಷವಾಗಿಯಾದ್ರೂ ಯಾರಿಗೊ ಸಹಾಯ ಆಗಿದೆ, ದುಡಿದು ನಿಯತ್ತಾಗಿ ಟ್ಯಾಕ್ಸ ಕಟ್ತಾ ಇದೀನಲ್ಲ ಅದರಲ್ಲಿ ಹತ್ತು ಪೈಸೆನಾದ್ರೂ ಇಂಥ ಸಂಶೋಧನೆಗೆ ಬಳಕೆ ಆಗಿದೆ ಅಂತ ಸಮಾಧಾನ ಇದೆ" ಅಂದೆ.

"ಏನು ಸಂಶೋಧನೆನೊ ಏನೊ, ಚಂದ್ರನಮೇಲೆ ನೀರಿದೆ ಅಂದ್ರೆ, ಬಿಂದಿಗೆ ತೆಗೆದುಕೊಂಡು ಕ್ಯೂನಲ್ಲಿ ನಿಲ್ಲೋಕಾಗುತ್ತಾ" ಅಂತ ನೀರಸವಾಗಿ ನುಡಿದಳು, ಎಲ್ಲ ಶ್ರೀಸಾಮಾನ್ಯ ಹಾಗೇ ಅನ್ನಬಹುದಲ್ಲ, ಏನಾಗುತ್ತೆ ಇಂಥ ಸಂಶೊಧನೆಗಳಿಂದ ಅಂತ, ಆದರೆ ತಿಳಿಸಿ ಹೇಳಿದರೆ ಅರ್ಥ ಆದೀತು, ಅದನ್ನೇ ನನ್ನಾಕೆಗೆ ನಾ ಮಾಡಬೇಕಿದ್ದು, "ವ್ಯರ್ಥ ಅಂತೂ ಅಲ್ಲ, ಅಲ್ಲೂ ಜೀವಿಗಳಿರಬಹುದು" ಅಂದರೆ "ಅಲ್ಲ ಇಲ್ಲೇ ಕೋಟಿ ಕೋಟಿ ಜೀವಿಗಳಿದೀವೀ, ಇನ್ನ ಅಲ್ಲೂ ಇದ್ರೆ, ಅವರನ್ನೂ ಕರ್ಕೊಂಡು ಬಂದರೆ, ನಮಗೇ ನೀರು ಸಾಕಾಗ್ತಿಲ್ಲ, ಇನ್ನ ಅವರಿಗೆಲ್ಲಿಂದ" ಅಂದ್ಲು, "ಇಲ್ಲ ಬಿಡು, ಭೂಮಿಗೆ ಬರೊವಾಗ ನಿಮ್ಮ ನಿಮ್ಮ ವಾಟರ್ ಬಾಟಲ್ ನೀವೇ ತುಂಬ್ಕೊಂಡು ಬನ್ನಿ ಅಂತ ಶಾಲಾ ಮಕ್ಕಳಿಗೆ ಹೇಳಿದ ಹಾಗೆ ಹೇಳಿದ್ರಾಯ್ತು" ಅಂದ್ರೆ, ನಸುನಕ್ಕಳು. "ಮತ್ತೆ ಈ ಸಂಶೊಧನೆಯಿಂದ ಎನಾಗುತ್ತೆ ಹೇಳ್ರೀ" ಅಂತ ಸ್ವಲ್ಪ ಗಂಭೀರವಾದಳು. "ನಂಗೂ ಬಹಳ ಗೊತ್ತಿಲ್ಲ, ಅಲ್ಲಿಂದ ನೀರಂತೂ ಭೂಮಿಗೆ ತರುವುದಿಲ್ಲ, ಆದರೆ ಅಲ್ಲಿ ನೀರು ಹೇಗೆ ಬಂತು ಅಂತ ತಿಳಿಯಬಹುದು, ನೀರು ಉತ್ಪತ್ತಿ ಆಗೋ ವಿಧಾನ ಗೊತ್ತಾಗಬಹುದು, ಇಲ್ಲ ಅಷ್ಟು ಬಿಸಿ ಸುಡುವ ಚಂದ್ರನಲ್ಲಿ ಕೂಡ ಆವಿ ಆಗದ ನೀರು ಹೇಗಿದೆ ಅಂತ ತಿಳೀಬಹುದು, ಇಲ್ಲ ಸೂರ್ಯನೇ ಕಾಣದ ಚಂದ್ರನ ಭಾಗದಲ್ಲಿ ಇನ್ನೂ ಹೆಚ್ಚು ನೀರಿದೆ ಅಂತ ಗೊತ್ತಾದರೆ ಅಲ್ಲಿ ಹೋಗಿ ಮಾನವಜೀವಿಗಳು ಟೆಂಟು ಕೂಡ ಹಾಕಬಹುದು. ಇಲ್ಲ ಅದೇ ನೀರಿನಲ್ಲಿನ ಜಲಜನಕ(ಹೈಡ್ರೋಜನ್) ಬೇರ್ಪಡಿಸಿ ಇಂಧನ ಮಾಡಿಕೊಂಡು, ಅಲ್ಲಿ ಸ್ಪೇಸ್ ಸ್ಟೇಷನ್ನು ಕಟ್ಟಬಹುದು, ಇಲ್ಲ ಮಂಗಳ ಗ್ರಹಕ್ಕೆ ಹೋಗಲು ನಡುನಿಲ್ದಾಣದಂತೆ ಮಾಡಿ ಅಲ್ಲಿ ಇಂಧನ ತುಂಬಿಸಿಕೊಂಡು ಪ್ರಯಾಣ ಮಾಡಬಹುದು, ಹೀಗೆ ಸಾಧ್ಯತೆಗಳಿಗೆ ಲೆಕ್ಕವಿಲ್ಲ" ಅಂತ ವಿವರಿಸಿದೆ, ಬಹಳ ಕುತೂಹಲ ಹುಟ್ಟಿತು ಅವಳಿಗೆ, "ನನಗೇನೊ ಇಲ್ಲಿ ತೊಟ್ಟು ಕುಡಿಯೋಕೆ ನೀರು ಇಲ್ಲ, ಕೊಳಚೆ ನೀರು ಹರಿದು ಹೋಗೋಕೆ ಚರಂಡಿ, ಹೀಗೆ ಮೂಲಭೂತ ಸೌಲಭ್ಯಗಳು ಇಲ್ದೆ ಇರೋವಾಗ, ಕೊಟಿಗಟ್ಟಲೆ ಖರ್ಚು ಮಾಡಿ ಅಲ್ಲಿ ನೀರು ಕಂಡು ಹಿಡಿದು ಏನು ಮಾಡ್ತಾರೆ ಅನಿಸಿತ್ತು" ಅಂತ ಮುಗ್ಧತನ ವಿಶದಪಡಿಸಿದಳು. "ಹಾಗನ್ನಿಸೋದು ನಿಜ, ವಿದೇಶಿ ಕೆಲವರು, ಭಾರತದವರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಯಾಕೆ, ಅಂತ ಹೀಗಳೆದರು, ಆದರೆ ಇಂಥ ಸಂಶೋಧನೆಗಳು ಅವಶ್ಯಕ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಥ ಕೆಲಸಗಳಿಗೆ ಮೀಸಲಿಡುವ ಹಣ ಏನೇನೂ ಅಲ್ಲ, ಆದರೂ ಅದರಲ್ಲೇ ಇಷ್ಟೆಲ್ಲ ಮಾಡಲಿಕ್ಕಾಗುತ್ತದೆ ಅಂತ ತೋರಿಸಿದರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯಂತ್ರಗಳನ್ನು ಅಭಿವೃದ್ಧಿ ಮಾಡಿದ್ದು, ಅವೆಲ್ಲ ಸಾಧನೆಗಳೇ, ಬರೀ ಬಾಹ್ಯಾಕಾಶ ಅಷ್ಟೇ ಅಲ್ಲ, ದಿನನಿತ್ಯದ ಸಾಮಾನುಗಳಿಗೂ ಅವು ಉಪಯೋಗವಾಗಬಹುದು, ನೀರಷ್ಟೇ ಯಾಕೆ ಅಲ್ಲಿ ಬೇರೆ ಖನಿಜಗಳು ಸಿಕ್ಕರೂ ಸಾಕು, ಅದನ್ನ ಇಲ್ಲಿಗೆ ತರಬಹುದು ಕೂಡ" ಅಂದರೆ... "ಇನ್ನೇನಾದ್ರೂ ಸಿಕ್ಕರೆ ಟನ್‌ಗಟ್ಟಲೇ ಚಿನ್ನ(ಬಂಗಾರ) ಸಿಗಲಿರೀ" ಅಂತ ಕಣ್ಣು ಮಿಟಿಕಿಸಿದಳು, "ಹ್ಮ್ ಹಾಗೆ ಸಿಕ್ಕರೆ ನಾನೂ ಒಂದೆರಡು ಕೇಜಿ ತಂದು ನಿನಗೆ ಬಳೆ ಮಾಡಿಸಿಕೊಡ್ತೀನಿ ಬಿಡು" ಅಂದೆ.

ನನಗಂತೂ ನಮ್ಮ ಈ ಇಸ್ರೋ ಸಂಸ್ಥೆಯ ಈ ಸಾಧನೆ ಬಗ್ಗೆ ಬಹಳ ಹೆಮ್ಮೆಯಿದೆ, ಚಂದ್ರಯಾನ ವಿಫಲ ಅಂತ ಬೊಬ್ಬೆ ಹಾಕುತ್ತಿದ್ದವರಿಗೆ ತಕ್ಕ ಉತ್ತರವೂ ಸಿಕ್ಕಿದೆ, ಹಾಗೆ ನೋಡಿದರೆ ವಿಫಲತೆ ಅನ್ನೋದೇ ಇಲ್ಲ, ಈ ಸಂಶೋಧನೆ ಹೊರಬರದಿದ್ದರೂ, ಅದು ಒಂದು ಒಳ್ಳೇ ಪ್ರಯತ್ನ ಆಗಿತ್ತು ಅಂತಲೇ ನಾನು ಭಾವಿಸುತ್ತಿದ್ದೆ, ಪಿ.ಎಸ್.ಎಲ್.ವಿ ವಿಫಲತೆಯಾದಾಗ ಸುಮ್ಮನೆ ಕೈಚಲ್ಲದೆ, ಮತ್ತೆ ಪ್ರಯತ್ನಿಸಿದ್ದಕ್ಕೆ ಒಂದಾದಮೇಲೊಂದರಂತೆ ಸಫಲ ಸ್ಯಾಟಲೈಟ ಉಡಾವಣೆ ಮಾಡಿದ್ದು, ಮತ್ತೆ ಮರುಪ್ರಯತ್ನ ಇನ್ನೂ ಯಶಸ್ವಿ ಆಗುತ್ತದೆ ಅನ್ನೊದರಲ್ಲಿ ಸಂದೇಹವೇ ಇಲ್ಲವೆಂಬತೆ ತೊರ್‍ಇಸಿಕೊಟ್ಟಿದೆ. ಸೀಮಿತ ಬಜೆಟ್ಟು, ಸ್ವದೇಶಿ ತಂತ್ರಜ್ಞಾನ, ಕಡಿಮೆ ಸಂಬಳದ ಇಂಜನೀಯರುಗಳು, ಸರಕಾರದ ರಾಜಕೀಯಗಳು ಎಲ್ಲವನ್ನೂ ನಿಭಾಯಿಸಿ ಸಿಕ್ಕ ಅವಧಿಯಲ್ಲೆ ಇಷ್ಟು ಸಾಧನೆ ಮಾಡಿರುವುದಕ್ಕೆ ನಿಜಕ್ಕೂ ಅಭಿನಂದನೀಯ. ಯಾವಾಗ ನೋಡಿದರೂ ವಿಫಲತೆಗಳನ್ನೇ ಹಿರಿದಾಗಿಸಿ ಯಾಕೆ ನಾವು ನೋಡಬೇಕು. ಐಸ್ಯಾಕ, ಭಾರ್ಕ, ಡಿಅರ್‌ಡಿಓ, ಹೆಚ್‌ಏಎಲ್, ಎನ್‌ಏಎಲ್, ಬಿಈಎಲ್ ನಂತಹ ಇನ್ನೂ ಹಲವು ಪಟ್ಟಿ ಮಾಡಲಾಗಷ್ಟು ಸಂಸ್ಥೆಗಳು ಮಾಡಿದ ಸಾಧನೆಗಳೇನು ಕಮ್ಮಿಯೆ, ಒಂದು ಪರಮಾಣು ಬಾಂಬ, ಕ್ಷಿಪಣಿ ಇರಬಹುದು, ಇಲ್ಲ ಯುಧ್ಧ ವಿಮಾನ, ಹೆಲಿಕ್ಯಾಪ್ಟರ್, ರಾಡಾರ್ ಇರಬಹುದು, ಇಂದೇನಾದರೂ ನಮ್ಮ ದೇಶದ ಮೇಲೆ ಯಾರೂ ಕಣ್ಣೆತ್ತಿ ಕೂಡ ನೋಡದಂತೆ ಇರಲು, ಭಾರತದ ಮಾತಿಗೆ ಕಿಮ್ಮತ್ತು, ಗೌರವ ಬಂದಿರುವುದು ಸಾಧ್ಯವಾಗಿದ್ದರೆ ಇದೇ ಕಾರಣವಾಗಿಲ್ಲವೇ. ಚಿಕ್ಕೂನಿದ್ದಾಗ ನಾನು ನನ್ನ ಅಪ್ಪಾಜಿ ಈ ಸ್ಯಾಟಲೈಟ್ ಉಡಾವಣೆ ದೂರದರ್ಶನದಲ್ಲಿ ನೋಡಲು ಕೂರುತ್ತಿದ್ದುದು ಇನ್ನೂ ನೆನಪಿದೆ, ಬಹಳ ಖರ್ಚು ಮಾಡಿ ಇದನ್ನು ಮಾಡೀದಾರೆ, ಬಹಳ ಶ್ರಮ ಇದೆ ಇದರ ಹಿಂದೆ, ಹೇಗಾದರೂ ಸಫಲ ಆಗಲಿ ಅಂತ ಆಶಿಸುತ್ತಿದ್ದುದು, ನಾನೇ ಉಡಾವಣೆ ಪೈಲಟ್ಟು ಸೀಟಿನಲ್ಲಿ ಕೂತಷ್ಟು ಆತಂಕಪಟ್ಟದ್ದು ಎಲ್ಲ ಮರುಕಳಿಸುತ್ತದೆ, ಬಹುಶ ಬದ್ಧ ವೈರಿಗಳ ಕ್ರಿಕೆಟ್ಟು ಮ್ಯಾಚು, ಇಲ್ಲ ನನ್ನ ಪರೀಕ್ಷೆ ರಿಜಲ್ಟು ಕೂಡ ಅಷ್ಟು ಕುಕ್ಕರಗಾಲಿನಮೇಲೆ ಕೂತು ನೋಡಿರಲಿಕ್ಕಿಲ್ಲ. ಹೀಗೆ ಹೋದ ಸ್ಯಾಟಲೈಟುಗಳು, ಖನಿಜ ಪತ್ತೆ ಮಾಡಿದವು, ದೂರಸಂಪರ್ಕಕ್ರಾಂತಿ ಮಾಡಿದವು, ಅಂತರ್ಜಲ ಪತ್ತೆ ಹಚ್ಚಿದವು, ಒಂದೇ ಎರಡೇ... ವಿಜ್ಞಾನಿಗಳೇ ವಿಫಲತೆಯೋ ಸಾಫಲ್ಯವೋ ನೀವು ಮುಂದುವರೆಸಿ, ನಾವಿದ್ದೇವೆ ನಿಮ್ಮ ಹಿಂದೆ ಬೆಂಬಲಕ್ಕೆ. ಹ್ಯಾಟ್ಸ ಆಫ್...

ಹೀಗೆ ಮಾತಾಡುತ್ತ ಕೂತವರಿಗೆ, ಸಮಯ ಹೋಗಿದ್ದೆ ಗೊತ್ತಾಗಲಿಲ್ಲ, ಚಂದ್ರನಂತೇ ಅರಳಿತ್ತು ಇವಳ ಬೆಳ್ಳನೇ ಅಕ್ಕಿ ರೊಟ್ಟಿಯಂಥಹ ಮುಖ!, ಸಂಜೆ ಬೆಳದಿಂಗಳ ಚಂದ್ರ ಬರಲು ಇನ್ನೂ ಸಮಯ ಇದ್ರೂ. "ಚಂದ್ರನಂತೆ ಕಂಗೊಳಿಸ್ತಾ ಇದೀಯ, ಚಂದ್ರಯಾನ ಅಂತ ಮತ್ತೊಮ್ಮೆ ಮಧುಚಂದ್ರಕ್ಕೆ ಹೋಗೊಣ ನಡಿಯೇ" ಅಂದರೆ, "ರೀ
ಚಂದ್ರನ ಮೇಲೆ ಮಧು(ಹನಿ, ಜೇನು) ಸಿಕ್ಕಿಲ್ಲ, ನೀರು ಸಿಕ್ಕಿದೆ... ಅದಕ್ಕೆ ಜಲಚಂದ್ರಕ್ಕೆ ಹೋಗೋಣ್ವಾ ಅಂತ ಹೇಳಿ" ಅಂದ್ಲು, "ಅದೂ ಸರಿಯೇ ಬಿಡು 'ನೀರುಹನಿ'ಮೂನ್ ಗೇ ಹೊಗೋಣ, ನೀರ ಬಗ್ಗೆ ಮಾತಾಡ್ತಾ ಹೊಟ್ಟೆಗೆ ತಣ್ಣೀರು ಬಟ್ಟೇನೆ ಗತಿಯೋ ಇಲ್ಲ ಏನಾದ್ರೂ ಬೇಯಿಸಿ ಹಾಕ್ತೀಯೊ" ಅಂತ ಕೇಳಿದ್ದಕ್ಕೆ, "ಆಗಲೇ ಹೊಟ್ಟೇ ಹಸಿವಾಯ್ತಾ" ಅಂತ ಚಂದ್ರನಂತೇ ಗುಂಡುಗುಂಡಾಗಿರುವ ಹೊಟ್ಟೆಗೆ ಏಟು ಕೊಟ್ಟು ಪಾಕಶಾಲೆ ಸೇರಿದಳು. ಆಗಲೇ ಧಾರಾಕಾರವಾಗಿ ಮಳೆ ಸುರಿಯತೊಡಗಿತು... "ಮಳೆ ನೀರು ತುಂಬಿಸ್ತೀಯ, ನೀರು ನೀರು ಅಂತಿದ್ದೆಯಲ್ಲ, ಮಳೆ ಹೇಗೆ ಸುರೀತಿದೆ ನೋಡು" ಅಂತ ಕೂಗಿ ಕರೆದೆ, ಅಲ್ಲಿಂದಲೇ "ಆ ನಿಮ್ಮ ಚಂದ್ರನ ಮೇಲಿನ ನೀರು ತುಂಬಿ ತುಳುಕುತ್ತಿರಬೇಕು, ಅದೇ ಬೀಳ್ತಾಯಿದೆಯೇನೊ ನೋಡಿ" ಅಂತ ಮತ್ತೆ ಕೀಟಲೆಗಿಳಿದಳು, ಈ ಪರಿಯ ಮಳೆ ನೋಡಿ, ರೋಡುಗಳಿಲ್ಲ ತುಂಬಿ, ಚರಂಡಿ ಕಿತ್ತು ಬಂದು ಕೊಚ್ಚೆ ಕೊಳೆಯಾಗಿ, ಪ್ರವಾಹವಾಗಿ, ಟ್ರಾಫಿಕ್ಕು ಜಾಮ ಆಗಿ, ಮರಗಳು ಬಿದ್ದು, ಕರೆಂಟು ಹೋಗಿ, ಇಡೀ ಊರಿಗೆ ಗ್ರಹಣ ಹಿಡಿದಂತೆ ಚಂದ್ರನಿಲ್ಲದ ಖಗ್ರಾಸು ಅಮವಾಸ್ಯೆಯಂತೆ ಕತ್ತಲಾದೀತೆನ್ನಿಸಿದರೂ, ಮನಸೇಕೊ ಇನ್ನೂ ಆ ಚಂದ್ರನ ಮೇಲೆ ಕಂಡ ನೀರ ತುಂತುರು ಹನಿಗಳ ಬಗ್ಗೇ ಯೋಚಿಸುತ್ತಿತ್ತು... ಪಕ್ಕದಲ್ಲಿ ಬಂದು ನಿಂತಿದ್ದ ಇವಳಿಗೆ ಎರಡು ಹನಿ ನೀರು ಸಿಡಿಸಿ, ನೀರಾಟಕ್ಕಿಳಿದರೆ... "ನೀರು ದೋಸೆ ಹುಯ್ದು ಕೊಡಲಾ ತಿನ್ನೊಕೆ" ಅಂತ ಕೇಳುತ್ತ ಒಳಗೋಡಿದಳು....
ದಸರಾ ಹಬ್ಬದ ಶುಭಾಷಯಗಳೊಂದಿಗೆ, ನಿಮ್ಮೆಲ್ಲರ ನಾನು ಮತ್ತು ನನ್ನಾk.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/chandra.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

21 comments:

ಮನಸು said...

ನಿಮಗೆ ಹಾಗು ನಿಮ್ಮಾಕೆಗೆ ದಸರಾ ಹಬ್ಬದ ಶುಭಾಶಯಗಳು...
ನೀರು ನೀರಾಗಿದೆ ನಿಮ್ಮ ಬರಹ ಹಹಹ... ನೀರುಮಯವೂ ನೀರುಮಯ....
ಚಂದ್ರನಲ್ಲಿನ ನೀರು ಕಂಡುಹಿಡಿದ ಸಾಹಸಿ ವಿಜ್ಜಾನಿಗಳಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಈ ವಿಷಯ ನಮಗೆಲ್ಲಾ ಹೆಮ್ಮೆಯವಿಷಯವೇ ಸರಿ!!!
ವಂದನೆಗಳು... ದಸರೆ ರಜೆಯಲ್ಲಿ ಪಕ್ಕದಮನೆ ಪದ್ದು ಮನೆಯಿಂದ ನೀರು ತರುವ ಕೆಲಸ ನಿಮ್ಮಾಕೆ ಕೊಟ್ಟಿಲ್ಲವೆಂದು ತಿಳಿಯುತ್ತೇವೆ...ಹಹಹಹ.....
ನಿಮಗೂ ನಿಮ್ಮಾಕೆಗು ಶುಭವಾಗಲಿ ನೀರಿನೊಂದಿಗೆ..ಹಹಹಹ

ದಿನಕರ ಮೊಗೇರ said...

ತುಂಬಾ ನೀರು ನೀರಾಗಿದೆ ನಿಮ್ಮ ಬರಹ.... ನಗಿಸಿ ನಗಿಸುತ್ತಲೇ ಚಂದ್ರಯಾನದ ಬಗ್ಗೆ ತುಂಬಾ ವಿಷಯ ಹೇಳಿದ್ದಿರಿ....

sunaath said...

ದಸರಾ ಹಬ್ಬದ ಶುಭಾಶಯಗಳು. ನಮ್ಮ ನಗರಪಾಲಿಕೆಯವರು ನೀರು ಕೇಳಿದವರಿಗೆಲ್ಲ ಈಗ ಚಂದ್ರನನ್ನು ತೋರಿಸುತ್ತಿದ್ದಾರೆ.

Keshav.Kulkarni said...

ಚೆನ್ನಾಗಿದೆ, ಚೆನ್ನಾಗಿದೆ!

Ittigecement said...

ಪ್ರಭು...

"ಜಲಚಂದ್ರ" ನೀರುಹನಿ ಮೂನ್" ಶಬ್ಧಗಳ
ಪರಿಕಲ್ಪನೆ ಇಷ್ಟವಾಯಿತು...

ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು...

ಚಂದ್ರನಲ್ಲಿ ನೀರು ಸಿಕ್ಕ ಸುದ್ಧಿ ನಮ್ಮಂಥಹ ಸಾಮಾನ್ಯರಮನೆಯಲ್ಲಿ
ಹೇಗೆ ಬಳಕೆಯಾಗುತ್ತದೆ ಅನ್ನುವದನ್ನು ಬಹಳ ಚಂದವಾಗಿ ಬಣ್ಣಿಸಿದ್ದೀರಿ...

ವಾರ ಪತ್ರಿಕೆಯ ಅಂಕಣಕಾರರಂತೆ ಬರೆಯುತ್ತೀರಿ ನೀವು..

ಅಭಿನಂದನೆಗಳು...

Unknown said...

ಪ್ರಭು ,
ಪ್ರತಿ ಶಬ್ದವು ಸು೦ದರವಾಗಿ ನಮ್ಮ ಇಸ್ರೋ ಸಂಸ್ಥೆಯ ಈ ಸಾಧನೆ ಬಗ್ಗೆ ನಿಮಗೆ ಇರುವ ಹೆಮ್ಮೆಯನ್ನು ನೀರು ನೀರಾಗಿ ನಮಗೆ "ನೀರ " ಕುಡಿದಷ್ಟೇ ಸ೦ತೊಷವಾಗುವ ಹಾಗೆ ಹೇಳಿದ್ದಿರಿ ..:-):-)
ತು೦ಬಾ ಸು೦ದರ ಬರಹ ನನಗೆ ತು೦ಬಾ ತು೦ಬಾ ಇಷ್ಟವಾಯಿತು ..

ಸಾಗರದಾಚೆಯ ಇಂಚರ said...

ಪ್ರಭು,
ದಸರಾ ಹಬ್ಬದ ಶುಭಾಶಯಗಳು
ನೀರು ಮತ್ತು ಚದ್ರನ ಕಥೆ ಚೆನ್ನಾಗಿದೆ,
ಒಳ್ಳೆಯ ಲೇಖನ

shivu.k said...

ಪ್ರಭು,

ನೀವು ಸಮಯೋಚಿತವಾಗಿ ಅದಕ್ಕೆ ನಿಮ್ಮದೇ ಶೈಲಿಯಲ್ಲಿ ನವಿರು ಹಾಸ್ಯಮಿಶ್ರಿತ ಲೇಖನವನ್ನು ಬರೆಯುವುದರಲ್ಲಿ ನೀವೇ ಸರಿ. ಚಂದ್ರನಲ್ಲಿ ನೀರು ವಿಚಾರವನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಂಡು ಬರೆದಿದ್ದೀರಿ...

"ಪಾಪ ಹೌದಲ್ವಾ, ಒಂದು ಕೆಲಸ ಮಾಡಿ ನೀವೇನು ಹೋಗೊದು ಬೇಡ, ನಮ್ಮನೆಗೇ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಿಬಿಡಿ" ಅಂದ್ಲು....

ಈ ಸಾಲಂತೂ ಸಕ್ಕತ್ ಇಷ್ಟವಾಗುತ್ತೆ....

ಧನ್ಯವಾದಗಳು.

ಬಾಲು said...

ಲೇಖನ ಚೆನ್ನಾಗಿದೆ. :)
ನೀವೆನಾದ್ರು ಚ೦ದ್ರ ನಿ೦ದ ನಲ್ಲಿ ಹಾಕಿಕೊ೦ಡರೆ ನನ್ ಮನೆಗು ಒ೦ದು ಕನೆಕ್ಷನ್ ಕೊಡಬೇಕಾಗಿ ವಿನ೦ತಿ. :)

Prabhuraj Moogi said...

ಮನಸು ಅವರಿಗೆ
ನಿಮಗೂ ದಸರಾ ಹಬ್ಬದ ಶುಭಾಶಯಗಳು.
ಚಂದ್ರನ ಮೇಲೇ ಹನಿ ನೀರು ಸಿಕ್ಕಿದ್ದರೂ ನಮಗೊ ಕಡಲು ಸಿಕ್ಕಷ್ಟೆ ಖುಷಿಯಾಗಿದೆ ಅದಕ್ಕೇ ಎಲ್ಲ ನೀರೊ ನೀರು...
ಪದ್ದು ಮನೆಯಿಂದ ನೀರು ತರುವ ಇರಾದೆ ಇತ್ತಾದರೂ, ನನ್ನಾk ಬಿಡಲಿಲ್ಲ :(

ಅದಕ್ಕೇ "ನೋಡು ಪದ್ದು ಕೂಡ ಚಂದ್ರ ಇದ್ದಂತೆ, ಅವಳ ಮನೇಲಿ ನೀರು ಸಿಕ್ತಿದೆ, ನಮ್ಮನೇಲಿ ಇಲ್ಲ" ಅಂದೆ, "ನಿಮ್ಮಂಥಾ ರಾಹು ಕೇತು ಗ್ರಹ ಮನೇಲಿದೆ ಅದಕ್ಕೆ ಗ್ರಹಗತಿ ಸರಿಯಾಗಿಲ್ಲ" ಅಂತ ಬೈದ್ಲು ಅಂತೀನಿ...

ದಿನಕರ ಮೊಗೇರ ಅವರಿಗೆ
ಹೀಗೆ ನೀರಾಟ ಚೀರಾಟ ನಮ್ಮನೆಯಲ್ಲಿ ನಿರಂತರ! ಚಂದ್ರಯಾನದ ಬಗ್ಗೆ ನನಗೆ ಗೊತ್ತಿದ್ದಷ್ಟು ಹೇಳುವ ಪ್ರಯತ್ನ ಅದು ನಿಮಗೆ ಇಷ್ಟವಾಗಿದ್ದರೆ ನನಗೂ ಖುಷಿ.

sunaath ಅವರಿಗೆ
ನಿಮಗೂ ದಸರಾ ಹಬ್ಬದ ಶುಭಾಶಯಗಳು. ಹಾಗೇನಾದರೂ ನಿಮ್ಮ ನಗರಪಾಲಿಕೆಯವರು ನೀರಿಗೆ ಚಂದ್ರನನ್ನು ತೋರಿಸುತ್ತಿದ್ದರೆ, ಜನ ಮುಂದಿನ ಎಲೆಕ್ಶನನಲ್ಲಿ ಅರ್ಧಚಂದ್ರ ಕೊಡಬಹುದು

*ಅರ್ಧಚಂದ್ರ ಅಂದರೆ ಕೈಯನ್ನು ಅರ್ಧಚಂದ್ರನ ಆಕಾರ ಮಾಡಿ ಕತ್ತುಹಿಡಿದು ದಬ್ಭುವುದು ಅಂತ.

Keshav Kulkarni ಅವರಿಗೆ
ಥ್ಯಾಂಕ್ಯೂ ಥ್ಯಾಂಕ್ಯೂ... :)

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಹ್ಮ್ ಎನೋ ಹಾಗೆ ಯೋಚಿಸುತ್ತಾ honeymoon ಅಂತಾರಲ್ಲ ಅಲ್ಲಿ honey ಸಿಕ್ಕಿದೆಯಾ ಇಲ್ಲವಲ್ಲ...water ಸಿಕ್ಕಿದೆ ಅದಕ್ಕೆ watermoon ಮಧುಚಂದ್ರ ಇದ್ದದ್ದು ಜಲ ಚಂದ್ರ, "ನೀರುಹನಿ"ಮೂನ್ ಅಂತ ಶಬ್ದಗಳು ಹೊಳೆದವು ಅದನ್ನೇ ಪ್ರಯೋಗಿಸಿದೆ.

ಎಲ್ರಿಗೂ ಅಲ್ಲಿ ನೀರು ಸಿಕ್ಕರೇನಾಯಿತು, ಏನು ಬಕೆಟ್ಟು ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬರಲಾಗುತ್ತ! ಅಂತ ತಕ್ಷ್ಣಣ ಅನ್ನಿಸಬಹುದು ಆದರೆ ಅದರ ಹಿಂದೆ ಕೂಡ ಹೀಗೆಲ್ಲ ಸಾಧ್ಯತೆಗಳಿವೆ ಅಂತ ತಿಳಿಸುವ ಪ್ರಯತ್ನ ಆಗಿತ್ತು.

ವಾರ ತಪ್ಪದೇ ಬರೆಯಬೇಕೆಂದುಕೊಂಡಿದ್ದೇನೆ, ಅನಿವಾರ್ಯ ಕಾರಣಗಳಿಂದ ಆಗದಿದ್ದರೆ ಅದರ ಹೊರತು... ಎಲ್ಲಿಯವರೆಗೆ ಆಗುತ್ತೋ ಅಲ್ಲೀವರೆಗೆ ನಿರಂತರ... ಆಮೇಲೆ ಹೆಚ್ಚಾಗಬಹುದು ಬರಹಗಳ ನಡುವಿನ ಅಂತರ...

roopa ಅವರಿಗೆ
ನನಗೆ ಚಿಕ್ಕವನಿದ್ದಾಗಿನಿಂದಲೂ ಕೆಲ ವಿಷಯಗಳ ಮೇಲೆ ಬಹಳ ಹೆಮ್ಮೆಯಿದೆ, ಅದರಲ್ಲಿ ನಮ್ಮ ಇಸ್ರೋ ಮತ್ತು ಆ ಸ್ಯಾಟಲೈಟಗಳು ಕೂಡ... ನಮ್ಮ ವಿಜ್ಞಾನಿಗಳ ಮೇಲೆ ನನಗೆ ಹೆಮ್ಮೆ ಇದ್ದೇ ಇದೆ, ಸಫಲರಾದರೂ.. ವಿಫಲರಾದರೂ ಕೂಡ...

ನಿಮ್ಮ ಕಮೆಂಟನಲ್ಲಿ ಕೂಡ ನೀರು! ಬಹಳ ಇಷ್ಟವಾಯಿತು... ನಿಮ್ಮೆಲ್ಲರಿಗೆ ಸಂತೊಷವಾದರೆ ನನಗೆ ತೃಪ್ತಿ...

ಸಾಗರದಾಚೆಯ ಇಂಚರ ಅವರಿಗೆ
ನಿಮಗೂ ದಸರಾ ಹಬ್ಬದ ಶುಭಾಶಯಗಳು. ಚಂದ್ರನ ಬೆಳದಿಂಗಳಲ್ಲಿ ನಮ್ಮ ನೀರಾಟ... ಧನ್ಯವಾದ ಸರ್ ನಿಮ್ಮ ಮೆಚ್ಚುಗೆಗೆ.

shivu ಅವರಿಗೆ
ವಾರಕ್ಕೊಮ್ಮೆ ಹಾಗೇ ಎನೋ ಬರೆಯಲು ಕೂತಾಗ, ವಾರದಲ್ಲಿ ನಡೆದ ಘಟನೆಗಳು ಬಂದು ನಿಂತು ನಾನು ನೀನು ಅಂತ ಸುತ್ತುತ್ತವೆ, ಅದರಲ್ಲೇ ಯಾವುದೋ ಒಂದು ಬರಹದಲ್ಲಿ ಚಿಕ್ಕ ಕಾಲನಿಕ ಸನ್ನಿವೇಷವಾಗಿ ಇಳಿಯುತ್ತದೆ ಅದೇ ಸರ್...

ಚಂದ್ರನಲ್ಲಿ ನೀರು ಸಿಕ್ಕದ್ದು ನಮಗೆ ವಾರದ ವಿಷಯವಾಗಿದ್ದು ಹೀಗೇ...ನಿಮಗೆಲ್ಲ ಮೆಚ್ಚುಗೆಯಾದರೆ ನನಗೆ ತೃಪ್ತಿ...

ಹ್ಮ್ ಚಂದ್ರನಿಂದ ನಲ್ಲಿ ಕನೆಕ್ಷನ್ ಬೇಕಂತೆ, ಕಾರ್ಪೋರೇಶನ ನಲ್ಲಿ ಕನೆಕ್ಷನ ಸಿಗೊದರಲ್ಲೇ ಸಾಕು ಸಾಕಾಗಿ ಹೋಗುತ್ತದೆ ಇನ್ನು ಅಲ್ಲಿಂದ ಎಲ್ಲಿ ಕನೆಕ್ಷನ ತರಲಿ ಅಂತ...

ಬಾಲು ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು :)

ಒಹ್ ನಿಮಗೂ ಆ ಚಂದ್ರನ ನಲ್ಲಿ ಕನೆಕ್ಷನ್ ಬೇಕಾ, ಖರ್ಚು ಬಹಳ ಆಗತ್ತೆ ಸರ್, ಈಗೊಂದು ನಾಲ್ಕೈದು ಕೋಟಿ ರೂಪಾಯಿ ಅಡವಾನ್ಸ ಅಂತ ಕೊಟ್ಟಿರಿ, ಉಳಿದದ್ದು ಆಮೇಲೆ ನೊಡೋಣ ಅಂತೆ!!! ;)

PARAANJAPE K.N. said...

ಪ್ರಭು, ಸಕಾಲಿಕ ವಿಚಾರಗಳನ್ನೇ ವಸ್ತುವಾಗಿಸಿ ನೀವು ಬರೆಯುವ ಪ್ರಬ೦ಧ ನವಿರು ಹಾಸ್ಯದಿಂದ ಕೂಡಿ ಚೆನ್ನಾಗಿರುತ್ತದೆ. ಚ೦ದ್ರನಿ೦ದ ನಿರು ತರಿಸುವ ನಿಮ್ಮ ಮತ್ತು ನಿಮ್ಮಾಕೆಯ ಯೋಜನೆ, ಯೋಚನೆ ಮತ್ತು ಅದರ ಹಿ೦ದಿನ ಸ೦ಭಾಷಣೆ ಎಲ್ಲವು ಸುಪರ್. ದಸರೆ ಕಳೆದಿದೆ, ಆದರು ಇಬ್ಬರಿಗೂ ತಡವಾಗಿ ದಸರೆಯ ಮತ್ತು ಬರಲಿರುವ ದೀಪಾವಳಿಯ ಶುಭಹಾರೈಕೆಗಳು.

ಸವಿಗನಸು said...

prabhu,
ನಿಮಗೆ ಹಾಗು ನಿಮ್ಮಾಕೆಗೆ ದಸರಾ ಹಬ್ಬದ ಶುಭಾಶಯಗಳು...
ಲೇಖನ ಚೆನ್ನಾಗಿದೆ. :)

Ranjita said...

ಪ್ರಭು ಅವರೇ ,
ತುಂಬಾ ಚೆನ್ನಾಗಿದೆ ನಿಮ್ಮಾಕೆ ಯೋಚಿಸೋ ಪರಿ ..
ನಂಗು ನಿಮ್ಮನೆಯಿಂದ ಒಂದು ಕನೆಕ್ಷನ್ ಕೊಟ್ರೆ ಸಾಕು ..ಪಕ್ಕದಮನೆ ಪದ್ದುನಾ ಮೀಟ್ ಮಾಡೋದಿಕ್ಕೆ ಏನಾದ್ರು ವ್ಯವಸ್ಥೆ ಮಾಡ್ತೀನಿ ಬಿಡಿ ..
( ನೋಡಿ ವಿಚಾರ ಮಾಡಿ )

ರಾಜೀವ said...

ಯಾಕ್ರಿ ಪ್ರಭು. ಭೂಮಿಯಲ್ಲಿ ಇರುವ ನೀರು ಸೆರಿಯಾಗಿ ಉಪಯೋಗಿಸದೆ ಚಂದ್ರದಿಂದ ನೀರು ತಂದು ಅದನ್ನೂ ವ್ಯರ್ಥ ಮಾಡಬೇಕೆ ;-) ಆಮೇಲೆ, ಮೂನ್ ವಾಟರ್ ಹಾರ್ವೆಸ್ಟಿಂಗ್ ಮಾಡ್ಬೇಕಾಗತ್ತೆ.

ಶಿವಪ್ರಕಾಶ್ said...

ಪ್ರಭು,
ನಿಮಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು..
ನೀರಾಯಣ ಚನ್ನಾಗಿತ್ತು... ಹ್ಹಾ ಹ್ಹಾ ಹ್ಹಾ

Prabhuraj Moogi said...

PARAANJAPE K.N. ಅವರಿಗೆ
ಎನೋ ಒಂದು ವಿಷಯ ಹಾಗೇ ಕಾಲ್ಪನಿಕ ಸನ್ನಿವೇಷವಾಗಿ ಬರುತ್ತದೆ...
ಚಂದ್ರನಿಂದ ನೀರೇನು ಸೂರ್ಯನಿಂದ ಬೆಂಕಿ ಕೂಡ ತಂದೇನು ಅನ್ನುತ್ತಾಳೆ ನನ್ನಾk.
ತಡವಾಗಿ ಆದರೂ ತಮಗೂ ದಸರಾ ಹಬ್ಬದ ಶುಭಾಶಯಗಳು..

ಸವಿಗನಸು ಅವರಿಗೆ
ತಮಗೂ ತಡವಾದರೂ ದಸರಾ ಹಬ್ಬದ ಶುಭಾಶಯಗಳು. ಓದುತ್ತಿರಿ.

Ranjita ಅವರಿಗೆ
ನನ್ನಾk ಎನು ಯೋಚಿಸುತ್ತಾಳೆ, ಯಾವಾಗ ನೋಡಿದರೂ ನನ್ನ ಇಕ್ಕಟ್ಟಿನಲ್ಲೇ ಸಿಕ್ಕಿಸುವ ಯೋಚನೆಗಳು...
ಅಯ್ಯೋ, ಚಂದ್ರನ ನಲ್ಲಿ ಕನೆಕ್ಷನ್ ನಮ್ಮನೆಗೆ ಹಾಕಿಸಿಬಿಟ್ಟರೆ, ಈಗ ಬೋರವೆಲ್ ನೀರು ಅಂತ ನೆಪ ಮಾಡಿಕೊಂಡು ಪಕ್ಕದಮನೆ ಪದ್ದು ಮನೆಗೆ ಹೋಗುವುದಕ್ಕೂ ಆಗಲ್ಲ... ಬೇಡ ಬಿಡಿ, ಈಗಲೇ ಪರವಾಗಿಲ್ಲ.
ಹಾಗೂ ನಿಮಗೆ ಕನೆಕ್ಷನ ಬೇಕಿದ್ದರೆ, ಬಾಲು ಅವರಿಗೆ ಮೇಲೆ ಹೇಳಿದಂತೆ ನಾಲ್ಕೈದು ಕೊಟಿ ಅಡವಾನ್ಸ ಕೊಟ್ಟಿರಿ ಮೂಂದೆ ನೊಡೋಣ ಅಂತೆ!!! :)

ರಾಜೀವ ಅವರಿಗೆ
ಭೂಮಿ ತುಂಬ ನೀರಿದೆ, ಕಡಲು ನೀರೆ, ಉಪಯೋಗಿಸಲೂ ಆಗದು. ಚಂದ್ರನ ನೀರು ಇಲ್ಲಿಗೆ ತಂದು ಉಪಯೋಗಿಸುವುದೂ ದೂರದ ಮಾತು ಬಿಡಿ.
ಅಲ್ಲಾ ಈಗಲೇ ಮಳೆ ನೀರು ಕೊಯ್ಲು ಮಾಡ್ತಾ ಇಲ್ಲ ಇನ್ನ ಚಂದ್ರನ ನೀರಿದೆ ಮಾಡ್ತಾರೆ ಅಂತೀರ...

ಶಿವಪ್ರಕಾಶ್ ಅವರಿಗೆ
ನಿಮಗೂ ತಡವಾದರೂ ದಸರಾ ಹಬ್ಬದ ಶುಭಾಶಯಗಳು, ಹೀಗೆ ನೀರಾಯಣ ಚಂದ್ರಾಯಣ ನಿರಂತರ ಓದುತ್ತಿರಿ.

ರಜನಿ. ಎಂ.ಜಿ said...

ನಾನು ಚಂದ್ರಯಾನದ ಬಗ್ಗೆ ಗಂಭೀರವಾಗಿ ಬರೆದಿದ್ದೇನೆ. ಆದರೆ ನಿಮ್ಮ ಲೇಖನದಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುವುದಿಲ್ಲ. :(

ವಿನುತ said...

ಶ್ರೀಸಾಮಾನ್ಯಳಾದರೂ ಅಪ್ ಟು ಡೇಟ್ ನಿಮ್ಮಾಕೆ, ಹಾಗೇ ಭಾರಿ ಕ್ರಿಯೇಟಿವ್ ಕೂಡ .. Necessity is the mother of inventions , ಆದ್ದರಿ೦ದ ನಿಮ್ಮಾಕೆಯ ನೀರಿನ ಅವಶ್ಯಕತೆಗೆ ಮು೦ದೊ೦ದು ದಿನ ಚ೦ದ್ರನಿ೦ದಲೇ ನಲ್ಲಿ ಕನೆಕ್ಷನ್ ಸಿಕ್ಕರೂ ಸಿಗಬಹುದು... :)
ಆದರೆ ನೀವು ಹೇಳಿರೋ ಒ೦ದು ಮಾತ೦ತೂ ಸತ್ಯ, ನಮ್ಮ ವಿಫಲತೆಗೆ ಸಿಕ್ಕ ಪ್ರಚಾರ ಸಫಲತೆಗೆ ಸಿಕ್ಕಲ್ಲ.. ಇಲ್ಲೊಬ್ರು "ಚ೦ದ್ರನ ಮೇಲೆ ಹೊರಟಿದ್ರ೦ತೆ, ಟುಸ್ ಆಯ್ತ೦ತೆ ಪ್ರಾಜೆಕ್ಟ್" ಅ೦ದ್ರು... ಸಖತ್ ಕೋಪ ಬ೦ತು.."ನಿಮ್ಮ ನಾಸಾ ದವ್ರು ಕೊಟ್ಟಿದ್ದ ಟೆ೦ಪರೇಚರ್ ಲೆಕ್ಕಾಚಾರ ತಪ್ಪಿತ್ತು, ಅದಕ್ಕೆ ಕೆಲವೊ೦ದು ಸೆನ್ಸರ್ ಕೆಲ್ಸ ಮಾಡ್ಲಿಲ್ಲ ಹೊರ್ತು, ಪ್ರಾಜೆಕ್ಟ್ ಪೂರ್ತಿ ಫ್ಲಾಪ್ ಅಲ್ಲ" ಅ೦ತ ಅವ್ರಿಗೆ ಅರ್ಥ ಮಾಡಿಸೋಷ್ಟರಲ್ಲಿ :( ಈಗ ನೋಡಿದ್ರೆ ನೀರು ಕ೦ಡುಹಿಡಿದಿರೋ ಪೂರ್ತಿ ಕ್ರೆಡಿಟ್ ತಗೊಳೋಕೆ ತುದಿಗಾಲಲ್ಲಿ ನಿ೦ತಿದಾರೆ..

ರೂpaश्री said...

ಪ್ರಭು ಅವರೆ,
ಸೂಪರ್ ಐಡಿಯಾ ನಿಮ್ಮkದು:-)

"ಛೇ, ನನಗೆ ರೈಲು ಬಿಡೊದು ಗೊತ್ತು, ರಾಕೆಟ್ಟು ಹಾರಿಸೋದು ಗೊತ್ತಿಲ್ವೇ"... ಇಂಥಾ ಸಾಲುಗಳು ನಿಮ್ಮ ಲೇಖನದ ಹೈಲೈಟ್!!

ಮಾರಿಷಸ್, ಸ್ವಿಸ್ ಎಲ್ಲಾ ಬಿಟ್ಟು ಇನ್ಮೇಲೆ ಜನ ಚಂದ್ರನಲ್ಲಿಗೆ ’ಜಲಚಂದ್ರ’ಕ್ಕೆ ಹೋಗ್ತಾರೆ ಅನ್ಸುತೆ:))

ಜಲನಯನ said...

ಅಲ್ರೀ ನನಗೊಂದು ಡೌಟು ಪ್ರಭು... ನೀವ್ ನಿಮ್ಮಾkey ನ ಕೇಳಾಖೋಗ್ಬ್ಯಾಡ್ರಿ ಮತ್ತ. ಅಲ್ಲ ಚಂದ್ರನ ಮೇಲೆ ನೀರಿದೆ ಅಂತ ಹೇಳಿದ್ದಾರೋ..ಅದಕ್ಕೆ ಹೋಲೊ..(not Hollow..) ಅಂಶ ಇದೆ ಅಂತ ಹೇಳಿದ್ದಾರೋ??
ಏನೇ ಆಗಲಪ್ಪ ನಿಮ್ಮಾkನ ಛೇಡಿಸೋಕೆ ನಿಮಗೆ ಯಾವ್ದೋ ಒಂದು ಪಾಪದ್ದು..ಸಿಕ್ಕೇ ಬಿಡ್ತದೆ..ಲವ್ ಆಯಿತು, ಸಾವು ಆಯಿತು, ಈವಾಗ ಚಂದ್ರ...
ಅಲ್ಲ ಇನ್ನೊಂದ್ ಡೌಟು..
ನಮ್ಮ ಸ್ಕೂಲ್ ಸಮಯದಲ್ಲಿ (ಈಗ್ಲೂ ಇದೆಯೋ ಎನೋ ಗೊತ್ತಿಲ್ಲ) ..ಒಂದು ಪದ್ಯ ಇತ್ತು..
ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೇ?...ಮೋಡ ಚಂದ್ರನ್ನ ಹಿಡಿದು ತಗೋ..ತಗೋ..ಅಂತ ಚನ್ನಾಗಿ ಸುರಿಸಿರಬೇಕು ಅಲ್ಲ್ವಾ..?? ಮಳೇನಾ...??
ಹೌದು ಅಂದಹಾಗೆ..ನಂದಿನ್ನೊಂದು ಡೌಟು......
"ಅಯ್ಯಯ್ಯಪ್ಪಾ..ನಿಮ್ಮಾk..ಸೌಟು ಬೀಸ್ತಾ ಇದ್ದಾರೆ..ನೀವು ಹುಷಾರು..!!!

Prabhuraj Moogi said...

ರಜನಿ. ಎಂ.ಜಿ ಅವರಿಗೆ
ನಮ್ಮ ತುಂಟ ಕಥೆಗಳೇ ಹೀಗೇ, ಗಂಭೀರ ವಿಷಯಗಳನ್ನೂ ಹೀಗೇ ಬರೆಯೋದು.
ನಿಮ್ಮ ಲೇಖನ ಮಾಹಿತಿಪೂರ್ಣವಾಗಿದೆ, ಇಷ್ಟವಾಯಿತು.

ವಿನುತ ಅವರಿಗೆ
:) ಅವಳು ಹಾಗೇನೆ ಮಾತಿಗೆ ಯಾವ ವಿಷಯ ಸಿಕ್ಕರೂ ಅಪ್ ಟು ಡೇಟ್ ಆಗೇ ಇರ್ತಾಳೆ.

ಕರೆಕ್ಟ ಅಲ್ವಾ ನಮ್ಮ ವಿಫಲತೆಗೆ ಸಿಕ್ಕ ಪ್ರಚಾರ ಸಫಲತೆಗೆ ಸಿಗೋದಿಲ್ಲ.

ಬಹಳೇ ಚೆನ್ನಾಗಿ ಹೇಳಿದ್ದೀರಿ ಆ ವ್ಯಕ್ತಿಗೆ, ಕೆಲವೊಮ್ಮೆ ತಪ್ಪುಗಳಾಗೋದು ಸಹಜ ಆದರೂ ಮತ್ತೆ ಮತ್ತೆ ಪ್ರಯತ್ನ ಮಾಡಿದರೆ ಸಫಲತೆ ಸಿಕ್ಕೇ ಸಿಗುತ್ತದೆ.

ರೂpaश्री ಅವರಿಗೆ
ನನ್ನಾk ಐಡಿಯಾಗಳೊ ಹಾಗೇನೇ, ಇಲ್ಲದ ತರಲೇ ತುಂಟ ಯೋಚನೆಗಳು.

ಆ ಸಾಲು ನನಗೂ ಇಷ್ಟವಾಗಿದ್ದು.

ಹೌದು ಹಾಗೆ ಜಲಚಂದ್ರ ಅಂತ ಮಧುಚಂದ್ರಕ್ಕೆ ಅಲ್ಲಿಗೆ ಹೋಗೊ ದಿನಗಳೂ ಬರಬಹುದು.

ಜಲನಯನ ಅವರಿಗೆ
ನನಗೆ ಗೊತ್ತಿರೋ ಮಟ್ಟಿದೆ ನೀರು ಅಂತಲೇ ಹೇಳಿದ್ದಾರೆ, ಮತ್ತಿನ್ನೇನೊ ಹೋಲುವ ಅಂಶದ ಬಗ್ಗೆ ಗೊತ್ತಿಲ್ಲ. ಯಾರಿಗೆ ಗೊತ್ತು ಏನಿದ್ದರೂ ಇರಬಹುದು.

ನನ್ನಾk ನನ್ನ ಮಾತುಗಳಿಗೆ ಯಾವ ವಿಷಯವಾದರೂ ಆದೀತು ಅನ್ನೊದಂತೂ ನಿಜ.

ಚಂದ್ರನಮೇಲೆ ಮಳೆಯೇ, ಅಬ್ಬ ಸುಂದರ ಕಲ್ಪನೆ, ಚೆನ್ನಾಗಿರಬಹುನೊ ಆದರೆ ಅಲ್ಲಿನ ವಾತಾವರಣದಲ್ಲಿ ಅದು ಸಾಧ್ಯವೊ ಇಲ್ವೊ. ಮಳೇ ಸುರಿದರೂ ಆಮ್ಲ(ಆಸಿಡ)ಮಳೆ ಸುರಿಯಬಹುದೇನೊ.

ಅವಳು ಸೌಟು ಬೀಸುತ್ತಲೇ ಇರ್ತಾಳೆ, ನೀವು ಹೇಳಿ... ಏಟು ಕೊಟ್ಟರೂ ನನ್ನ ತುಂಟತನವೇನೂ ಕಮ್ಮಿಯಾಗಲ್ಲ.