ಅದೇ ಆಗ ಎದ್ದು ಆಕಳಿಸುತ್ತ ಮೈಮುರಿದು ಕಣ್ಣು ತೀಡುತ್ತ ಹೊರಗೆ ಬಂದೆ, ಇವಳು ಉಗುರು ಕತ್ತರಿಸಿ ರಂಗು, ಅದೇ ನೇಲ್ ಪಾಲೀಶು ಹಾಕಿಕೊಳ್ಳುತ್ತಾ ಕುಳಿತಿದ್ಲು, ಅವಳ ಕೈಯಿಂದ ಬಾಟಲಿ ಕಸಿದುಕೊಂಡು ಬೆರಳೊಂದಕ್ಕೆ ರಂಗು ಬಳಿದು, ಆರಲೆಂದು ಗಾಳಿ ಊದಿದೆ, ಕಚಗುಳಿಯಿಟ್ಟಂತಾಯಿತು ಅನಿಸತ್ತೆ "ಛೀ, ಸಾಕು ಏಳ್ರೀ ಮೇಲೆ ನಾನು ಹಚ್ಕೊತೀನೆ" ಅಂತ ನೂಕಿದ್ಲು, ಸರಿದು ಗೋಡೆಗೆ ಒರಗಿ ಕೂತು ಅವಳನ್ನೇ ದಿಟ್ಟಿಸಿ ನೊಡುತ್ತಿದ್ದೆ, "ಟೀ ಮಾಡಿಟ್ಟೀದೀನಿ" ಅಂತ, ಎದ್ದು ಹೋಗು ನೋಡಿದ್ದು ಸಾಕಿನ್ನು ಅನ್ನೊ ಧಾಟಿಯಲ್ಲಿ ಸೂಚ್ಯವಾಗಿ ಹೇಳಿದ್ಲು. ಎದ್ದು ಟೀ ಸುರಿದುಕೊಂಡು ಬಂದೆ, ಸಾಸರಿನಲ್ಲಿ ಹಾಕಿ ಅವಳಿಗೊಂದು ಗುಟುಕು ಕುಡಿಸಿ, ಉಳಿದದ್ದು ನಾ ಹೀರತೊಡಗಿದೆ. ಟೀ ಮುಗೀತು ಕಪ್ಪು ಪಕ್ಕಕ್ಕಿಟ್ಟು ಮತ್ತೆ ನೋಡುತ್ತ ಕುಳಿತುಕೊಂಡೆ, ದುರುಗುಟ್ಟಿ ನೋಡಿದ್ಲು, ಬಸ್ ಸ್ಟಾಪಿನಲ್ಲಿ ಕಾಡುವ ಪಡ್ಡೆ ಹುಡುಗನನ್ನು ಹುಡುಗಿ ನೋಡುವಂತೆ. ನನಗೇನೂ ಆಗಿಲ್ಲವೆನ್ನುವಂತೆ ಹಾಗೆ ಕುಳಿತಿದ್ದೆ, ನನ್ನ ಹೆಂಡ್ತಿ ನಾ ನೋಡಲೇನು, ಇನ್ನೇನು ಪಕ್ಕದ ಮನೆ ಪದ್ದುನ ಹಾಗೆ ನೋಡೊಕಾಗುತ್ತ! ಕೊನೆಗೆ ಕಣ್ಸನ್ನೆ ಅರ್ಥವಾಗಿಲ್ಲ ಅಂತ "ರೀ ಏನೂ ಕೆಲ್ಸಾ ಇಲ್ವಾ, ಎನು ಹಾಗೆ ನೋಡುತ್ತ ಕುಳಿತು ಬಿಟ್ಟಿದ್ದೀರೀ" ಅಂದ್ಲು. ಹಲ್ಲು ಕಿರಿದೆ ಅಷ್ಟೇ.. ಮತ್ತಷ್ಟು ಕೋಪ ಬಂತು, "ಕೂತ್ಕೊಂಡ್ರೆ ಮುಗೀತು ಅಕ್ಕಿ ಮೂಟೆ ಜಲಿಸಿ ಜರುಗಿಸಿಟ್ಟಂತೆ ಕುಸಿದು ಕುಳೀತು ಬಿಡ್ತೀರ, ಹೊಟ್ಟೆ ನೊಡ್ಕೊಳ್ಳಿ ಅದನ್ನ" ಅಂತ ಬೈದ್ಲು. ನೊಡ್ಕೊಂಡೆ, ಹೌದಲ್ಲ ಗುಡಾಣವಾಗುತ್ತಿದೆ.. ಯಾಕೆ ಇಷ್ಟು ದಿನ ಇಲ್ಲದ್ದು ಈವತ್ತು ಇದು ಇವಳಿಗಿಷ್ಟು ಕಿರಿಕಿರಿ ಮಾಡಿದೆ. ಎದ್ದು ನಡೆದೆ, ಕೂತಿದ್ರೆ ಎಲ್ಲಿ ಇನ್ನೂ ಬಯ್ಯುತ್ತಾಳೇನೊ ಅಂದುಕೊಂಡು. ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಓದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಇದೇನು ಇಂದು ನಿನ್ನೆಯದಲ್ಲ, ವರ್ಷಾನು ವರ್ಷಗಳಿಂದ ಸಾಕಿ ಸಲಹಿ ಬೆಳೆಸಿಕೊಂಡು ಬಂದದ್ದು, ಸುಖಜೀವಿಯ ಸಂಕೇತ. ಇನ್ನೇನು ಮತ್ತೆ, ಸಾಫ್ಟವೇರ್ ಕಂಪನಿಯಲ್ಲಿ ಕೆಲಸ, ಕೂತಲ್ಲೆ ಎಲ್ಲ ಕೋನಗಳಲ್ಲೂ ತಿರುಗುವ ಕುಶನ್ನು ಕುರ್ಚಿಯಲ್ಲಿ ಕುಳಿತು, ತಂಬೂರಿ ನುಡಿಸಿದಂತೆ ಬೆರೆಳು ಅಲ್ಲಾಡಿಸುತ್ತ ಕೀಬೊರ್ಡು ಕುಟ್ಟೊದು, ನಡುನಡುವೆ ತಬಲದಲ್ಲಿ ತಕಧೀಂ ಅಂದಂತೆ ಮೌಸು ಅಮುಕೋದು. ಬೈಕಿನಲ್ಲಿ ಕೂತು ಮನೆಯಿಂದ ಅಫೀಸಿನವರೆಗೆ ಪ್ರಯಾಣ, ಲಿಫ್ಟಿನಲ್ಲಿ ನಾಲ್ಕು ಮಂಜಿಲಕ್ಕೆ ಏರೊದು, ಕಂಪನಿಯ ಪುಕ್ಕಟೆ ಹಾಲು ಬೂಸ್ಟು, ಹೆಂಡತಿಯ ಕೈ ಬಗೆಬಗೆಯ ಪಕ್ವಾನ್ನ, ಸಂಜೆಗೆ ಕುರುಕಲು ತಿಂಡಿಗಳು, ಸಂಸಾರ ಜಂಜಡಗಳಿಲ್ಲದೆ ಸುಖನಿದ್ರೆ... ಇಷ್ಟೆಲ್ಲ ಇರುವಾಗ ಹೊಟ್ಟೆ ಬಲೂನು ಉಬ್ಬಿದಂತೆ ಉಬ್ಬದೇ ಇನ್ನೇನು. ಹಾಗಂತ ಸಾಫ್ಟವೇರು ಕೆಲ್ಸ ಸಲೀಸು ಅಂತೇನಲ್ಲ ಅಲ್ಲಿರುವ ಟೆನ್ಶನ್ನು, ತಲೆಬಿಸಿಗಳು ಅಲ್ಲಿನವರಿಗೇ ಗೊತ್ತು, ಭದ್ರತೆಯಿಲ್ಲದ ಭವಿಷ್ಯ ಗೊತ್ತಿಲ್ಲದ ಬದುಕು. ಆದರೂ ತಲೆಗೆ ಕೆಲಸವಿದ್ದು, ಮೈ ಕೈಗೆ ಒಂದಿಷ್ಟೂ ವ್ಯಾಯಾಮವನ್ನುವುದು ಇಲ್ಲವೆಂದರೆ ಸರಿ. ಹೀಗಾಗಿ ಹೊಟ್ಟೆ ಪಾಡಿಗೆ ಮಾಡುವ ಕೆಲಸದಿಂದ ಹೊಟ್ಟೆ ಬಂದಿದ್ದೇನು ಅತಿಶಯವಲ್ಲ.
ಕನ್ನಡಿ ಮುಂದೆ ನಿಂತು ನಾನೇ ನೋಡಿಕೊಳ್ಳುತ್ತಿದ್ದೆ, ಹಿಂದಿನಿಂದ ಬಂದು ಹೊಟ್ಟೆ ಬಳಸಿ ಎರಡೂ ಕೈ ಸೇರಿ ಬಿಗಿದು ಕಟ್ಟಲು ತಡಕಾಡಿ, ಹಾಗೊ ಹೀಗೋ ನಿಲುಕಿಸಿಕೊಂಡು ಅಪ್ಪಿಕೊಂಡು ನಿಂತ್ಲು, ಹೊಟ್ಟೆ ಅಷ್ಟು ಬಂದಿದೆಯಲ್ಲ, "ಏನು, ಹಾಗಂದೆ ಅಂತ ಬೇಜಾರಾಯ್ತಾ ಸುಮ್ಮನಾಗಿ ಬಿಟ್ರಿ" ಅಂದ್ಲು "ಇಲ್ಲ, ನಿಜ ನಾ ಗಮನಿಸಿರಲಿಲ್ಲ" ಅಂದೆ. "ರೀ ಮೊನ್ನೆ ಪರಿಮಳ ಬಂದಿದ್ರು ಮುಂಜಾನೆ ವಾಕಿಂಗ, ಜಾಗಿಂಗ ಮಾಡಿದ್ರೆ ಏನೆಲ್ಲ ಪ್ರಯೋಜನ ಇದೆ ಅಂತ ಹೇಳ್ತಿದ್ರು" ಅಂದ್ಲು, ಇದೋ ವಿಷ್ಯ ಪರಿಮಳ ಕಿವಿಯೂದಿದ್ದಾರಾ, ಅದಕ್ಕೆ ಎಂದೂ ಇಲ್ಲದೆ ಇಂದು ಇವಳು ಹೀಗಂದಿದ್ದು ಅಂದುಕೊಂಡೆ. "ಹೀಗೇ ನನ್ನ ನೋಡುತ್ತ ಕೂರೊ ಬದಲು ಮುಂಜಾನೆ ಬೇಗ ಎದ್ದು ಯಾಕೆ ನೀವು ವಾಕಿಂಗ ಹೋಗಬಾರದು" ಅಂದ್ಲು "ಹೌದಲ್ಲ ಅಲ್ಲಿ ಬಹಳ ಹುಡುಗೀರೂ ವಾಕಿಂಗ ಬರ್ತಾರೆ ಅವರ ನೋಡಿಕೊಂಡು ಬರಬಹುದು" ಅಂದೆ "ನೀವ ಸುಧಾರಿಸಲ್ಲ, ನಾಳೆಯಿಂದ ನಾವಿಬ್ಬರೂ ವಾಕಿಂಗ ಹೋಗ್ತಿದೀವಿ ಅಷ್ಟೆ" ಅಂದ್ಲು "ಯಾಕೆ ನಾನೊಬ್ಬನೆ ಹೋದ್ರೆ ಎಲ್ಲಿ ವಾಕಿಂಗಗಿಂತ ಹುಡುಗೀರ ನೋಡ್ತ ಸ್ಟಾಪಿಂಗ ಜಾಸ್ತಿ ಆಗುತ್ತೆ ಅನ್ನೋ ಭಯಾನಾ" ಅಂತ ಕುಟುಕಿದೆ. "ನಂದೂ ತೂಕ ಜಾಸ್ತಿಯಾಗ್ತಿದೆ, ಏಳು ಮಲ್ಲಿಗೆ ತೂಕದ ರಾಜಕುಮಾರಿಯಾಗಿರಬೇಡ್ವಾ ನಾನೂ" ಅಂತನ್ನುತ್ತ ಹೊಟ್ಟೆ ಮೇಲೆರಡು ಬಾರಿಸಿದ್ಲು, "ಲೇ ಬಾರಿಸೊಕೆ ಅದೇನು ಡೋಲು ತಮಟೆನಾ" ಅಂತ ಕಿವಿ ಹಿಂಡಿದೆ ಕೈ ಬಿಡಿಸಿ ಕೊಂಡು ಓಡಿದ್ಲು.
ಮೊದಲೇ ನಿರ್ಧರಿಸಿದಂತೆ ಮುಂಜಾನೆ ಬೇಗ ಎಬ್ಬಿಸಿದ್ಲು, ಎದ್ದು ಯಾವುದೋ ಪ್ಯಾಂಟು ಏರಿಸಿಕೊಂಡು ಎಲ್ಲೊ ಬಿದ್ದಿದ್ದ ಆಕ್ಷನ್ನು ಶೂಜು ಹಾಕಿಕೊಂಡು ತಯ್ಯಾರಾದೆ, ಹಾಕಿಕೊಳ್ಳಲೆಂದು ವುಲನ್ ಟೋಪಿ, ಸ್ಕಾರ್ಪು ಕೊಟ್ಲು ಛಳಿಯಿರುತ್ತೆಂದು, "ಮುಂಜಾನೆ ಗಾಳಿ ಸವಿಯಬೇಕು, ಅದೆಲ್ಲ ಎನೂ ಬೇಡ, ವಾಕಿಂಗ ಹೋಗೋದೇ ಹೊಸ ಗಾಳಿ ಸವಿಯಲು" ಅಂತಂದು ಬಿಟ್ಟು ಹೊರಟೆ. ನಾನ್ಯಾರಾರನ್ನೊ ನೋಡುತ್ತಿದ್ರೆ ಇವಳು ನನ್ನ ಚಿವುಟುತ್ತ, ಅದಿದು ಹರಟತ್ತು, ಆಗಾಗ ಕೈ ಬೀಸುತ್ತ, ಏನೊ ಕ್ರಿಕೆಟ್ಟು ಬಾಲರ್ ಇರಬೇಕು ಎನ್ನುವಂತೆ ಬಾಲ್ ಹಾಕುವ ಹಾಗೆ ಮಾಡುತ್ತ, ನಡುನಡುವೆ ಕಸ ಆಯುವವರ ಹಾಗೆ ಬಾಗಿ ಮೇಲೆಳುತ್ತ, ಸಾಗಿತ್ತು ನಮ್ಮಿಬ್ಬರ ವಿಹಾರ. ಮೊದಲದಿನದ ಉಮ್ಮೇದಿಗೆ ನಡೆದದ್ದೆ ನಡೆದದ್ದು ಇಂದೆ ನಾಲ್ಕು ಕೇಜೀ ತೂಕ ಇಳಿದು ಬಿಡುವುದೇನೊ ಅನ್ನುವಂತೆ ಅವಳೂ ನಡೆದಳು.
ಮನೆಗೆ ಬಂದು "ಇಂದು ಬಹಳ ಫ್ರೆಷ್ ಅನಿಸ್ತಿದೆ, ಪರಫೆಕ್ಟು ಫಿಟ್ ಆಗ್ತೀನಿ ನೋಡ್ತಿರು" ಅಂದೆ, "ಒಂದೇ ದಿನದಲ್ಲಿ ಏನೂ ಆಗಲ್ಲ, ಅದಕ್ಕಿನ್ನೂ ಟೈಮ್ ಬೇಕು" ಅಂದ್ಲು. ಅದೇ ಜೊಶ್‌ನಲ್ಲಿ ಆಫೀಸಿಗೆ ರೆಡಿ ಆಗುತ್ತಿದ್ದೆ, "ರೀ ಅಲ್ಲಿ ಆ ಗ್ರೇ(ಬೂದು) ಕಲರ ಟ್ರಾಕ ಪ್ಯಾಂಟು ಶರ್ಟು ಹಾಕಿಕೊಂಡು ಜೋಡಿಯೊಂದು ಬಂದಿತಲ್ಲ ನೋಡಿದ್ರ, ಆ ಥರ ನಾವೂ ವಾಕಿಂಗ್‌ಗೆ ಡ್ರೆಸ್ ತುಗೋಬೇಕು" ಅಂದ್ಲು, ಬಂತಲ್ಲಪ್ಪ ಜೇಬಿಗೆ ಕತ್ತರಿ ಅಂದೆ, ತೂಕ ಇಳಿಯತ್ತೊ ಇಲ್ವೊ, ಜೇಬಿನ ತೂಕ ಇಳಿಯೋದಂತೂ ಗ್ಯಾರಂಟಿಯಾಯ್ತು. ಸಂಜೆ ಬರುವಾಗ ತರುವೆನೆಂದೆ. ಒಂದೇ ಜತೆ ಸಾಕಾಗಲ್ಲ ದಿನಾಲೂ ಅದೇ ಹೇಗೆ ಹಾಕಲಾಗುತ್ತೆ ಅಂತ ಎರಡೆರಡು ಜತೆ ತಂದದ್ದಾಯ್ತು.
ಹೊಸ ಡ್ರೆಸ್ಸು ಹಾಕಿದ ಖುಶಿಯಲ್ಲಿ ಇನ್ನೂ ದೂರ ನಡೆದೆವು, ನಡುನಡುವೆ ನಾ ಓಡಿದೆ ಕೂಡ, ಮೊದಲೆ ನಡೆದು ರೂಡಿಯಿಲ್ಲ ಇನ್ನು ಓಡಿದ್ದು ಬೇರೆ ರಾತ್ರಿಗೆ ಕಾಲುಗಳು ಮಾತಾಡತೊಡಗಿದವು, ಆದರೇನಂತೆ ಇವಳು ಸ್ವಲ್ಪ ಹಿಚುಕಿ, ಮಸಾಜು ಮಾಡಿ ಮೊದ ಮೊದಲು ಹೀಗಾಗುತ್ತೆ ಅಮೇಲೆ ಎಲ್ಲ ಸರಿಯಾಗುತ್ತೆ ಅಂತ ಪುಸಲಾಯಿಸಿ ಮತ್ತೆ ಮಾರನೆ ದಿನವೂ ಕರೆದೊಯ್ದಳು. ಬಹಳ ದೂರವಲ್ಲದಿದ್ರೂ ನಡೆದು ಬಂದು ಕೂತವನೇ ಜೋರಾಗಿ ಸೀನಿದೆ!!!.. ಶೀತ ಬರುವ ಮುನ್ಸೂಚನೆ ಕೊಟ್ಟು ಬಿಟ್ಟಿತು, ಅವಳೂ "ನಾನು ಅದಕ್ಕೆ ಟೊಪಿ ಸ್ಕಾರ್ಫು ಕೊಟ್ಟಿರಲಿಲ್ವ ಹೀಗಾಗತ್ತೆ ಅಂತ ಗೊತ್ತಿತ್ತು" ಅಂತು ಬೈದ್ಲು. ಶೀತ, ತಲೆ ಸಿಡಿತ ಅಂತ ಮೂಗು ಸುರಿದು, ಕೆಮ್ಮಿ ಎರಡು ದಿನ ವಾಕಿಂಗ ಅಷ್ಟೆ ಯಾಕೆ ಆಫೀಸಿಗೂ ಚಕ್ಕರ ಹೊಡೆದದ್ದಾಯ್ತು. ಹಾಗೂ ಹೀಗೂ ಮತ್ತೆರಡು ದಿನ ಹೋದವರು, ಛಳಿಯಾಗಿಬರದೇ ಮತ್ತೆರಡು ದಿನ ಹೋಗಲಿಲ್ಲ, ಅದೂ ಅಲ್ಲದೆ ಅದೇನೊ ವಾಕಿಂಗ ಆದ ಮೇಲೆ ಸೌತೆ ಕಾಯಿ ರಸ, ಗಜ್ಜರಿ ರಸ ಕುಡಿದರೆ ಒಳ್ಳೇದು ಎಂದು ಅದೂ ಕುಡಿದು ಹೊಟ್ಟೆ ಕೆಟ್ಟು ಟಾಯ್ಲೆಟ್ಟಿಗೆ ಓಡಾಡಿ ಅದೇ ವಾಕಿಂಗ್‌ಗಿಂತ ಜಾಸ್ತಿಯಾಗಿ ಸೋತು ಸುಣ್ಣವಾಗಿ ಹೋದೆ.
ಹಾಗೆ ಅಫೀಸಿನಲ್ಲಿ ಮಾತಿಗೆ ಕುಳಿತಾಗ ವಾಕಿಂಗ ಪ್ರಹಸನ ಹೇಳಿದಾಗ ಕೊಲೀಗು ಏರೊಬಿಕ್ಸು ಬಗ್ಗೆ ಹೇಳಿದ. ಏರೊಬಿಕ್ಸು ಸೇರಿ ಹೊಟ್ಟೆ ಇಳಿಸೊಕಿಂತ ಅಲ್ಲಿನ ಕೊಚ್ ಹುಡುಗಿಯ ವರ್ಣನೆ ಕೇಳಿ ಅದನ್ನ ಯಾಕೆ ಪ್ರಯತ್ನಿಸಬಾರದು ಅಂತ ದುಡ್ಡು ತೆತ್ತು ಅಲ್ಲಿ ಸೇರಿದೆ. ಒನ್ ಟೂ ಥ್ರೀ ಫೊರ್ ಅಂತ ಇಂಗ್ಲೀಷು ಹಾಡಿಗೆ ಕುಣಿದದ್ದೆ ಕುಣಿದದ್ದು, ಮನೆಗೆ ಬಂದು ಇವಳ ಜತೆಗೂ ಡ್ಯಾನ್ಸು... ತನಗೂ ಕಲಿಸಿ ಅಂತ ತಾಕೀತು ಮಾಡಿದ್ದಳಲ್ಲ, ಕೊನೆಕೊನೆಗೆ ಕುಣಿತ ಕರಡಿ ಕುಣಿತವಾಗಿ ಬಿಟ್ಟಿತು, ಸ್ಟೆಪ್ಪುಗಳು ಎಲ್ಲಿ ನೆನಪಿರಬೇಕು ಗಮನವೆಲ್ಲ ಕೊಚನ್ನು ನೋಡುವುದರಲ್ಲೇ ಇರಬೇಕಾದ್ರೆ. ಹೊಟ್ಟೆ ಇಳಿಸುವುದು ಒತ್ತಟ್ಟಿಗಿರಲಿ, ಕೊಚ್‌ಳ ಬಗ್ಗೆ ಹೇಳಿ ಹೇಳಿ ಇವಳ ಹೊಟ್ಟೆ ಉರಿಸತೊಡಗಿದೆ.
ಏನೊ ಒಟ್ಟಿನಲ್ಲಿ ನಡೆದದ್ದು, ಕುಣಿದದ್ದೂ ಸೇರಿ ಮೈ ಹುಶಾರಿಲ್ಲದೇ ಸೊರಗಿ ಹೊಟ್ಟೆ ಒಂದು ಲೇವಲ್ಲಿಗೆ ಸಪೂರವಾಯ್ತು. ಇಂಗ್ಲೀಷು ಹಾಡಿ ಕುಣಿದು ಕುಣಿದು ಬೇಜಾರಾಗಿ, ಏನು ಎರೊಬಿಕ್ಸನಲ್ಲಿ ಏನು ಮಹ ಕಲಿಸುತ್ತಾರೆ ನಾನೇ ಮನೆಯಲ್ಲೆ ಹಾಡು ಹಾಕಿ ಜಿಗಿದಾಡಿದರಾಯ್ತು ಅಂತ ಅದನ್ನೂ ಬಿಟ್ಟೆ, ಇವಳೂ ನಿರಾಳವಾದ್ಲು ಹೊಟ್ಟೆ ಕರಗಿಸಿದೆನೆಂದಲ್ಲ, ಆ ಕೊಚು ಸಹವಾಸ ತಪ್ಪಿತಲ್ಲ ಅಂದು. ಇನ್ನೊಬ್ಬ ಕೊಲೀಗು ಎರೊಬಿಕ್ಸು ಎನು ಹೋಗ್ತೀಯ ಇಲ್ಲೇ ಯೋಗ ಪ್ರಾಣಾಯಾಮ ಕಲಿಸುತ್ತಾರೆ ಅಪ್ಪಟ ನಮ್ಮ ಭಾರತೀಯ ಪ್ರಾಚೀನ ಕಾಲದ ಕಲೆ, ಆರೋಗ್ಯಕ್ಕೆ ಅತ್ಯಂತ ಸೂಕ್ತ ಅಂದ. ಫೀಜು ಕೇಳಿ ಸಧ್ಯ ಏನೂ ಬೇಡ ಅಂತ ನಿರ್ಧರಿಸಿದ್ದಾಯ್ತು.
ಅದೊಂದು ದಿನ ಮಧ್ಯಾಹ್ನ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ, ಪಕ್ಕ ಬಂದು ತೆಕ್ಕೆ ಸೇರಿದವಳು, ಹೊಟ್ಟೆ ಸವರಿದ್ಲು, ತಟ್ಟನೆ "ನನ್ನ ಕೈಲಿ ಇಷ್ಟೆ ಕರಗಿಸಲಾಗಿದ್ದು, ಇನ್ನೂ ಕರಗಿಸಲಾಗಲ್ಲ ಕಣೇ" ಅಂದೆ. ಎಲ್ಲಿ ಇನ್ನೂ ಯಾವುದೊ ಕೊರ್ಸೊ ಇಲ್ಲ ಕಸರತ್ತೊ ಮಾಡಲೊ ಹೇಳುತ್ತಾಳೇನೊ ಅಂತ ಭಯದಿಂದ ನೋಡುತ್ತಿದೆ. "ನಾನೇನು ನನ್ನ ಫೇವರಿಟ್ಟು ಹೃತಿಕ್ (ರೊಶನ್) ಹಾಗೆ ಸಿಕ್ಸ್ ಪ್ಯಾಕ್ ಬಾಡಿ ಮಾಡಿ ಅಂತ ಕೇಳಿರಲಿಲ್ಲ, ಅದು ನನಗೆ ಬೇಕೂ ಇಲ್ಲ, ಪತಿರಾಯ ಗಣಪತಿಯಂತೆ ಡುಮ್ಮ ಆಗಿರದಿರಲಿ ಅಂತ ಆಸೆಯಿತ್ತು ಅಷ್ಟೆ" ಅಂದ್ಲು. ಕೇಳಿ ಸಮಾಧಾನ ಆಯ್ತು. "ನನಗೂ ಏನೂ ಏಳು ಮಲ್ಲಿಗೆ ತೂಕದ ರಾಜಕುಮಾರಿ ಬೇಕಿಲ್ಲ, ನಾನೆತ್ತಿ ಮುದ್ದಾಡುವಷ್ಟಿದ್ದರೆ ಸಾಕು" ಅಂದೆ "ಮತ್ತೆ ನಿಮ ಎರೊಬಿಕ್ಸು ಕೊಚು ಎನಾದ್ಲು" ಅಂದ್ಲು "ಕೊಲೀಗಿಗೆ ಬಿಟ್ ಕೊಟ್ಬಿಟ್ಟೆ" ಅಂದೆ "ಅಹಾಹಾ ಏನು ಮಹಾ ನಿಮ್ಮ ಜತೆ ಎರಡು ಡ್ಯುಯೆಟ್ಟಿಗೆ ಹೆಜ್ಜೆ ಹಾಕಿ ನಿಮ್ಮವಳೇ ಆಗಿಬಿಟ್ಟಿದ್ಲು ನೋಡಿ, ಬಿಟ್ಟು ಕೊಡೋಕೆ" ಅಂತ ತಿವಿದಳು. ಎಷ್ಟೋ ಹಾಡುಗಳಿಗೆ ಹೆಜ್ಜೆಯಂತೂ ಹಾಕಿದ್ಳಲ್ಲ ಆದ್ರೂ, ಇವಳಿರಬೇಕಾದ್ರೆ ನನಗೆ ಬೇರೆಯವರು ಯಾಕೆ ಬೇಕು ಹೇಳಿ. "ಇನ್ನು ನೀನು ಎಷ್ಟು ತಿಂಗ್ಳು ಅಂತ ಕೇಳಿ ನನ್ನ ಕಾಡಿಸೋಕೆ ಆಗಲ್ಲ ಬಿಡು ಅಂದೆ"... "ಹೂಂ, ಅಲ್ವಾ ಅದೂ ಸರಿ, ಆದ್ರೆ ನಂಗೆ ಕಾಡಿಸೊಕೆ ವಿಷಯಗಳ ಕೊರತೆಯೇನಿಲ್ಲ ಬಿಡಿ... ಏನೂ ಹೆರಿಗೆ ಯಾವಾಗ ಆಯ್ತು ಮಗು ಹೆಣ್ಣಾ ಗಂಡಾ ಅಂತ ಕೇಳ್ತೀನಿ" ಅಂದ್ಲು. "ತುಂಟಿ ನಿನ್ನ ತರಲೆ ಮಾಡೊದ್ರಲ್ಲಿ ಮೀರಿಸೊಕಾಗಲ್ಲ.." ಅಂತ ತಲೆಗೊಂದು ಏಟು ಕೊಟ್ಟೆ ಕಿಲಕಿಲ ನಗುತ್ತ ಮಗುವಿನಂತೆ ಬಾಚಿ ತಬ್ಬಿಕೊಂಡ್ಲು, ನಮ್ಮಿಬ್ಬರ ನಡುವಿನ ಅಂತರ ಮತ್ತಷ್ಟು ಕಡಿಮೆಯಾಗಿತ್ತು, ಹೊಟ್ಟೆ ಕರಗಿದ್ದರಿಂದ ಅಷ್ಟೇ ಏನಲ್ಲ, ಇಂಥ ದಿನನಿತ್ಯದ ಅವಳ ತರಲೆಗಳಿಂದ ಕೂಡ..
ಹೊಟ್ಟೆ ತುಂಬಾ ಊಟಕ್ಕೆ ಒಂದು ಉಪ್ಪಿನಕಾಯಿಯಿರಲೆಂದು ಯಾವಾಗಲೊ ಬರೆದದ್ದು ಹಾಗೇ ಕೇಳಿ..
ಜೋಗಿಂಗ್ ಹೊಗೋಣ
ಬೇಗ ಎದ್ದೇಳಿ ಅಂದ್ಲು..
ಮುಂದೆ ಹೋಗ್ತಿರು ಯಾರಾದ್ರೂ
ಚುಡಾಯಿಸಿದ್ರೆ ಹಿಂದಿರ್ತೀನಿ ಅಂದೆ..
ಆಹಾ! ನೀವ್ ಗೊತ್ತಿಲ್ವ ಇರೊಬರೋ
ಹುಡುಗೀರ್ನೆಲ್ಲ ನೊಡ್ಕೊಂಡ್ ಬರ್ತೀರ ಅಂದ್ಲು..
ಅದ್ಕೆ ಬೇಡ ಬಿಡೆಂದು ಬರಸೆಳೆದು
ಮುಸುಗೆಳೆದುಕೊಂಡೆ..
ಮತ್ತೆ ಸಿಗೊಣ ಎಲ್ಲೋ ವಾಕಿಂಗು ಮಾಡುತ್ತ...
http://www.telprabhu.com/hotte-paadige.pdf
ಆ ಎರೊಬಿಕ್ಸು ಸೆಂಟರು ಎಲ್ಲಿದೆ ಅಂತ ನನ್ನ ಕೇಳ್ಬೇಡಿ ನೀವೇ ಹುಡುಕಿಕೊಳ್ಳಿ. ಹೊಟ್ಟೆಯಿದ್ದವರು ಏನು ನಮ್ಮ ಬಗ್ಗೆ ಹೀಗೆಲ್ಲ ಬರೆದಿದ್ದಾನಲ್ಲ ಅಂತ ಬೇಜಾರು ಮಾಡಿಕೊಳ್ಳದೆ ಹುಡುಗನ ಹುಡುಗಾಟವೆಂದು ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ, ಹಾಗೂ ಹೊಟ್ಟೆ ಕರಗಿಸಲು ಸ್ವಲ್ಪ ಪ್ರಯತ್ನವನ್ನೂ ಮಾಡಿ. ನಿಮ್ಮ ಹೊಟ್ಟೆ ಪಾಡಿನ ಕಥೆಗಳಿದ್ದರೆ ಹಂಚಿಕೊಳ್ಳಿ, ಹೊಟ್ಟೆ ಹುಣ್ಣಾಗುವಂತೆ ನಗೊಣ.
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
13 comments:
ಪ್ರಭು..
ಇದು ನಾನು ಹೊಟ್ಟೆ ಕರಗಿಸಲು ಪಟ್ಟ ಪ್ರಯತ್ನ ಇದ್ದಂತಿದೆ
ಚೆನ್ನಾಗಿ ರಸವತ್ತಾಗಿ ಬಣ್ಣಿಸಿದ್ದೀರಿ...
ಅಭಿನಂದನೆಗಳು..
ಪ್ರಭು,
ನಿಮ್ಮ ಕಲ್ಪನೆಯ ಕತೆ ನನ್ನ ನಿಜ ಕತೆ ನೆನಪಿಗೆ ಬಂತು...
ನಾನು ನನ್ನ ಸಂಜೆ ಈಗಲೂ ಬಿಡುವು ಮಾಡಿಕೊಂಡು ನಮ್ಮ ಮೆಚ್ಚಿನ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ ವಾಕಿಂಗ್ ಹೋಗುತ್ತೇವೆ...ಆಗ ನಡೆಯುವ ರಂಪಾಟಗಳೆಲ್ಲಾ...ನಿಮ್ಮ ಲೇಖನಗಳಂತದ್ದೆ....ಖುಷಿಯಾಯಿತು...
ಆಗಂತ ನಾವೇನು ದಪ್ಪವಾಗಿಲ್ಲ...ಮತ್ತು ಹೊಟ್ಟ ಬಂದಿಲ್ಲ...ಇಬ್ಬರು ಒಟ್ಟಿಗೆ ಹೊರ ಹೋಗಲಿಕ್ಕೆ ಒಂದು ನೆಪ ಅಷ್ಟೆ....ತುಂಟತನದ ಬರಹ ಇಷ್ಟವಾಯ್ತು....
Nimma kathe, kalpan(a)e galige neeve saati. Lekhana thumba chennagide, odi ishtavaayithu mathu khushiyaayithu.!
ತುಂಬಾ ವಿನೋದಮಯವಾದ ಉಲ್ಲಾಸದ ಬರಹ.
ವಾಕಿಂಗ್ ಮಾಡ್ತಾ ಇರಿ.
ಹೊಟ್ಟೆ ಬಗ್ಗೆ ಬರೆದು... ಹೊಟ್ಟೆ ಹುಣ್ಣಾಗುವಂತೆ ನಗಿಸಿ... ನಮ್ಮ ಹೊಟ್ಟೆ ಸವರಿಕೊಂಡು... ಟೈರು ಟ್ಯೂಬು ಬೆಳೆದಿರುವುದ ನೋಡಿ...
ಅಲ್ಲಾ ಸ್ವಾಮಿ, ಏನು ಕೆಲಸ ಕೊಡ್ತೀರಿ ನೋಡಿ...
ಎಲ್ಲಾರ ಮನೆ ದೋಸೆ ತೂತು.. ಅನ್ನುವಂತೆ.. ಎಲ್ಲರ ಹೊಟ್ಟೆನೂ ಗುಡಾಣವೇ...
ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಹೊಟ್ಟೆ ಕರಗಿದ್ದರೆ ಸರಿ, ಇಲ್ಲಾಂದ್ರೆ ಪ್ರಯತ್ನ ಬಿಡಬೇಡಿ... ಪ್ರತಿಕ್ರಿಯೆಗೆ ಧನ್ಯವಾದಗಳು.
ಶಿವು ಅವರಿಗೆ:
ವಾಕಿಂಗ ಅಂದ ಮೇಲೆ ಮಾತಿರಲೇಬೇಕು, ರಂಪಾಟಗಳಾಗುತ್ತವೆಂದು ಕೇಳಿ ನಗು ಬಂತು, ನಿಜ, ಹೊರ ಹೊಗಿ ಮನಸು ಬಿಚ್ಚಿ ಮಾತಾಡಲು ಇದೊಂದು ನೆಪವಾದರೂ ಸರಿ ಹೋಗಬೇಕು...
To: SSK
ನನ್ನ ಕಲ್ಪನೆಯ ಹುಡುಗಿ ಅಷ್ಟು ತುಂಟಿ ನಾನಾದರೂ ಎನು ಮಾಡಲಿ ಅವಳ ತುಂಟತನ ಬರೆಯುತ್ತೇನೆ ಅಷ್ಟೇ. ಮತ್ತೆ ಮತ್ತೆ ಬರುತ್ತಿರಿ..
To: sunaath
ವಾಕಿಂಗ ಮಾಡಲು ಜತೆಯಾಗಲು ಇನ್ನೂ ಅವಳಂಥ ಹುಡುಗಿ ಸಿಕ್ಕಿಲ್ಲ, ಅಲ್ಲಿವರೆಗೆ ಸರ್ಚಿಂಗ ಮಾಡಬಹುದಷ್ಟೆ, ಇಲ್ಲಾಂದ್ರೆ ಕಲ್ಪನೆಗಳಲ್ಲೆ ವಾಕಿಂಗ ಮಾಡಬಹುದು, ತಮ್ಮಷ್ಟು ಗಹನವಾದ ವಿಚಾರಗಳ ಬಗ್ಗೆ ಬರೆಯಲು ಆಗಲ್ಲ, ವಿನೊದಮಯ ಬರಹಕ್ಕಷ್ಟೇ ನಾನು ಸೀಮಿತ. ನೀವು ಪ್ರತಿಕ್ರಿಯೆ ನೀಡಿದ್ದು ಬಹಳ ಖುಷಿ ತಂದಿತು.
ಮಲ್ಲಿಕಾರ್ಜುನ.ಡಿ.ಜಿ. ಅವರಿಗೆ
ಹೊಟ್ಟೆಯೇ ಹಾಗೆ ಸಾರ್ ಬಿಟ್ಟರೆ ಗುಡಾಣದಂತೆ ಬೆಳೆದು ಬಿಡುತ್ತದೆ... ಎಲ್ಲರ ಹೊಟ್ಟೆಯೂ ಗುಡಾಣವಾಗುವುದರಲ್ಲಿ ಸಂಶಯವಿಲ್ಲ. ಮತ್ತೆ ಬರುತ್ತಿರಿ.
ಪ್ರಭು,
ನೀವು ಸುನಾಥರವರ ಬ್ಲಾಗಿನಲ್ಲಿ ನಿರ್ದೇಶಕರ ಆಶಯ ಲೇಖನಕ್ಕೆ ಪ್ರತಿಕ್ರಿಯಿಸಿ...children of heavan ಸಿನಿಮಾ ನೋಡಲೇ ಬೇಕೆಂಬ ಆಸೆ ವ್ಯಕ್ತಪಡಿಸಿದ್ದೀರಿ...ಒಂದು ಒಳ್ಳೆಯ ಸಿನಿಮಾವನ್ನು ನೋಡಿ ನಾವು ಮತ್ತಷ್ಟು ಒಳ್ಳೆಯವರಾಗುವುದಿದೆಯಲ್ಲ ಅದು ಜೀವನದ ಒಳ್ಳೆಯ ಆಶಯ.
ನನ್ನ ಬ್ಲಾಗಿನಲ್ಲಿ " ಈ ಸಿನಿಮಾ ನೋಡಿದ್ದೀರಾ" ಎನ್ನುವ ಶೀರ್ಷಿಕೆಯಲ್ಲಿ children of heavan ಬಗ್ಗೆ ಒಂದು ಸಂಪೂರ್ಣ ವಿಮರ್ಶೆ [ನಿರ್ದೇಶನ, ತಾಂತ್ರಿಕತೆ, ನಟನೆ ದೃಶ್ಯಾವಳಿಗಳ ಟೇಕಿಂಗ್ಸ್, ವಾಸ್ತವಿಕತೆಯ ಆಸಹಾಯಕತೆ, ಅದನ್ನು ನಿರ್ದೇಶಕ ಬಳಸಿಕೊಂಡಿರುವ ರೀತಿ,,ಇತ್ಯಾದಿಗಳ ಬಗ್ಗೆ ]ಬರೆದಿದ್ದೇನೆ...ಮೊದಲನೆ ಬಾರಿಗೆ ನನ್ನ ಕಾಮೆಂಟುಗಳು ಐವತ್ತರ ಮಟ್ಟಕ್ಕೆ ತಲುಪಿದ್ದು ಈ ಲೇಖನದಿಂದಲೇ...ಸಿನಿಮಾ ನೊಡುವ ಬದಲು ನೀವೊಮ್ಮೆ ನನ್ನ ಬ್ಲಾಗಿಗೆ ಬಂದು ಇದನ್ನು ಓದಿ...ನಿಮಗೆ ಮತ್ತಷ್ಟು ವಿಚಾರ ತಿಳಿಯಬಹುದು....
ಪ್ರಭು,
ತುಂಬ ಚೆನ್ನಾಗಿದೆ, ನಗೆಮಯವಾಗಿದೆ.. ಹ ಹ .. ಆರೋಗ್ಯಕ್ಕೆ ಆರಾಮದಾಯಕ,
ಕೊನೆಯ ಸಾಲುಗಳು ಬಲು ಚೆನ್ನಾಗಿವೆ.......
ಈಗ ಜನ ನಗುವನ್ನೇ ಮರೆತಿದ್ದಾರೆ, ನಿಮ್ಮ ಬರಹದ ಮೂಲಕ ಕೆಲವಾರು ಜನರಿಗೆ ನಗು ಅರಳಿದರೆ ಅದು ಒಂದು ರೀತಿ ವಾಕಿಂಗ್ಗೆ ಸಮಾನ..
ಹೀಗೆ ನಗು ತುಂಬಿರಲಿ ನಿಮ್ಮ ಬರಹದಲ್ಲಿ... ನಗೆ ಕೂಟಕ್ಕೆ ಪಾರ್ಕಗೆ ಹೋಗದೆ ಇಲ್ಲೇ ತಣಿಯಲಿ ಎಲ್ಲರು
hai,,,
Chennagide Hotteya paadige... Nimma ee kalpanegala kathegalu ivathina nija jeevanadalli hadu hokkide... nimage nijavaglu maduve jeevana nadesalu kashta enisuvudilla.... idanthu sathya....
abhinandanegalu..
hema.nth
ಶಿವು ಅವರಿಗೆ:
ಹೌದು ಅದು ನೊಡಲೇಬೇಕೆನ್ನುವಂಥ ಚಿತ್ರ ಅಂತ ಕೇಳಿದೆ... ಅವಶ್ಯವಾಗಿ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟು ಆ ಲೇಖನ ಓದುತ್ತೇನೆ. ಆ ಲೇಖನದೆಡೆಗೆ ಗಮನ ಸೆಳೆದಿದ್ದಕ್ಕೆ ತುಂಬಾ ಧನ್ಯವಾದಗಳು.
ಮನಸು ಅವರಿಗೆ:
ನೀವನ್ನೋದೂ ಸರಿ ಜನ ನಗುವನ್ನು ಮರೆತಿದ್ದಾರೆ, ವಾಕಿಂಗನಂತೆ ನಗು ಬಳಗಗಳೂ ಹಲವಾರಿವೆ ಅದರ ಬಗ್ಗೆಯೂ ಒಮ್ಮೆ ಬರೆಯುತ್ತೇನೆ.. ತಮ್ಮ ಹಾರೈಕೆಗಳಿಗೆ ಧನ್ಯವಾದಗಳು.
To: maaya
ನಮ್ಮದೊಂಥರಾ ನಿಜ ಜೀವನದ ಕಲ್ಪನೆ ಅಂದರೆ ಹೇಗಿರುತ್ತದೆ... ಮದುವೆ ಜೀವನ ಹೇಗಿರುತ್ತದೊ ಎನೊ ನನಗೆ ಗೊತ್ತಿಲ್ಲ, ಎಲ್ಲಾ ಬಾಳಸಂಗಾತಿಯಾಗಿ ಬರುವವಳ ಮೇಲೆ ಅವಲಂಬಿಸಿದೆ...
ನವಿರು ಹಾಸ್ಯದಿಂದ ಕೂಡಿದ, ಹೊಟ್ಟೆ ಬಗೆಗಿನ ಈ ಬರವಣಿಗೆ ಬಹಳ ಚೆನ್ನಾಗಿದೆ. ಕೊನೆಗ ಬರೆದ ಪದ್ಯ ಕೂಡ ಸೂಪರ್. :)
ನಾನು ಕೂಡ ಹೊಟ್ಟೆ ಕರಗಿಸಲು ಪಾಡು ಪಟ್ಟಿದ್ದೇನೆ! ಹೊಟ್ಟೆಯ ಬಗ್ಗೆ ನಾನು ಕೂಡ ಬರೆದೆ, ಸಮಯ ಸಿಕ್ಕಾಗ ಇಲ್ಲಿ ಓದಿ.
http://guruve.blogspot.com/2009/01/blog-post_23.html
guruve ಅವರಿಗೆ,
ನೀವು ಹೊಟ್ಟೆ ಪಾಡಿಗೆ ಕಷ್ಟಪಟ್ಟಿದ್ದೀರಿ ಅಂದ ಹಾಗಾಯಿತು.. ನಿಮ್ಮ ಲೇಖನ ಖಂಡಿತ ಓದುತ್ತೇನೆ.. ಹೀಗೆ ಬರುತ್ತಿರಿ
Post a Comment