Sunday, January 3, 2010

ರೆಸೊಲುಶನ್, ಸಂಕಲ್ಪ.. someಕಲ್ಪನೆ...

ಹೊಸ ವರ್ಷದ ಮೊದಲನೇ ದಿನ, ಆರು ತಿಂಗಳು ಪೂರ್ತಿ ನಿದ್ರೆ ಮಾಡುವ ಕುಂಭಕರ್ಣನಂತೇ ಬಿದ್ದುಕೊಂಡಿದ್ದೆ ಎದ್ದೇಳಲೇಬಾರದು ಅಂತ. ಮತ್ತೆ ಹೊಸವರ್ಷ ಅಂತ ಅಪರಾತ್ರಿವರೆಗೆ ನಿದ್ರೆಗೆಟ್ಟು "ಹ್ಯಾಪಿ ನಿವ್ ಇಯರ್, ಹೊಸ ವರ್ಷದ ಶುಭಾಶಯ..." ಅಂತ ಮಲಗಿದ್ದವರಿಗೆಲ್ಲ ಎದ್ದೇಳಿಸಿ ಹಾರೈಸಿ, ಹೊಸವರ್ಷ ಆಚರಿಸಿದ ಮೇಲೆ ಇನ್ನೇನಾಗಬೇಡ. ಯಾವ ವರ್ಷ ಆದರೇನು ಯಾವ ದಿನ ಆದರೇನು ನಾ ಮುಂಜಾನೆ ಆರಕ್ಕೆಂದರೆ ಏದ್ದೇಳೊದೇ ಅಂತ ಏಳೊದಕ್ಕೆ ನಾನೇನು ಸೂರ್ಯನಾ. ರಾತ್ರಿ ಬೆಳಗಿ ಮುಂಜಾವಿಗೆ ಕಾಣೆಯಾಗುವ ಹುಣ್ಣಿಮೆ ಚಂದ್ರನಂತೆ ನನ್ನಾಕೆ ನನ್ನ ಪಕ್ಕ ಕಾಣದಾಗಿದ್ದಳು. ಎದ್ದು ಏನೊ ಒಂದು ಮಾಡುತ್ತಿರುತ್ತಾಳೆ, ನನಗೊ ಬೆಳಗ್ಗೆ ಒಂಭತ್ತು ಘಂಟೆ ರಾತ್ರಿ ಸರಿಹೊತ್ತಿಗೆ ಸಮನಾಗಿತ್ತು, ಹೀಗಿರುವಾಗ ಇವಳು ಬಂದು "ಈಗ ಒಂಭತ್ತು ಘಂಟೆ, ಎದ್ದೇಳೊಕೇ ಹೋಗಬೇಡಿ ಹಾಗೇ ಮಲಗಿರಿ, ಇನ್ನೊಂದು ಹೊದಿಕೆ ಬೇಕಾ" ಅಂತಂದಳು. ಅಬ್ಬ ಹೊಸ ವರ್ಷದಲ್ಲಿ ಭಾರೀ ನಕ್ಷತ್ರಗಳ ಬದಲಾವಣೆಯೇ ಆಗಿದೆ, ಎದ್ದೇಳಿ ಅನ್ನೋದು ಬಿಟ್ಟು ಮಲಗಿ ಅಂತಿದಾಳೆ ಅಂತ ಖುಷಿಯಾಗಿ ನಾನಂತೂ ಕಣ್ಣೂ ಕೂಡ ತೆರೆಯದೇ "ಥ್ಯಾಂಕ್ಸ್" ಅಂತಂದು ಅವಳ ತಲೆದಿಂಬನ್ನೂ ನನ್ನ ತಲೆಗಿರಿಸಿಕೊಂಡು ಕುಂಭಕರ್ಣನೊಂದಿಗೆ ಕಾಂಪಿಟೇಷನ ಮಾಡಲು ತಯ್ಯಾರಾದೆ. ಕುಂಭಕರ್ಣ ಅಂತಿದ್ದಂಗೆ, ಯಾರೋ ಕರ್ಣ(ಕಿವಿ) ಹಿಂಡಿದ ಹಾಗಾಯ್ತು, ಕರ್ಣಕಠೋರವಾಗಿ ಕಿರುಚಿದೆ, ಕೈಬಿಟ್ಟಳು. "ಇಂದಾದರೂ ಬೇಗ ಎದ್ದೇಳಬಾರದೇ, ಹೊಸವರ್ಷ ಹೇಳಿಸಿಕೊಳ್ಳದೇ ಎದ್ದೇಳುತ್ತೇನೆ ಅಂತ ರೆಸೊಲುಶನ್ ಮಾಡಿಕೊಳ್ಳಿ" ಅಂತ ಬಯ್ದಳು. ಒಮ್ಮೆಲೇ ಕಿವುಚಿದ ಕರ್ಣ ಅಲ್ಲಲ್ಲ ಕಿವಿ ನೆಟ್ಟಗಾಯಿತು!... ಹ್ಮ್ ರೆಸೊಲೂಶನ್, ಹೊಸವರ್ಷ ಎಲ್ಲರೂ ಕೇಳುವುದೇ, ಎನು ಹೊಸವರ್ಷದ ರೆಸೊಲೂಶನ್ ಅಂತ. ಇನ್ನು ನಿದ್ರೆ ಬರುವಹಾಗಿರಲಿಲ್ಲ ಎಚ್ಚರಾದೆ.

"ಏನದು ರೆಸೊಲೂಶನ್?" ಕೇಳಿದೆ, "ಅದೇ ಹೊಸವರ್ಷಕ್ಕೆ ಒಂದು ಹೊಸ ನಿರ್ಧಾರ ಮಾಡ್ತೀವಲ್ಲ, ಸಂಕಲ್ಪ ಅಂತ ಕನ್ನಡದಲ್ಲಿ ಹೇಳಬಹುದೇನೊ..." ಅಂತ ವಿವರಿಸಿದಳು. "ಒಹ್ ಹಾಗಾದ್ರೆ, ನನ್ನ ಬೇಗ ಏಳಿಸೊಲ್ಲ ಅಂತ ನೀ ರೆಸೊಲೂಶನ್ ಮಾಡಿಕೋ" ಅಂತ ಹಲ್ಲು ಕಿರಿದೆ. "ಯಾಕೆ ಎದ್ದೇಳಿಸೋದೆ ಇಲ್ಲ ಬಿಡಿ" ಅಂದ್ಲು. "ಹಾಗಂದ್ರೆ ಹೇಗೆ ದಿನ ದಿನ ಹೊಸ ಹೊಸದಾಗಿ ಎದ್ದೇಳಿಸುವ ಕೀಟಲೆಗಳು ಇಲ್ಲದಿದ್ರೆ ಹೇಗೆ" ಅಂದೆ. "ರೀ ರೆಸೊಲೂಶನ್ ಅಂದ್ರೆ, ಯಾವೊದೋ ಒಳ್ಳೆ ಕೆಲಸ, ಹವ್ಯಾಸ ಏನಾದರೂ ಇರಬೇಕು" ಅಂತ ತಿಳಿಹೇಳಿದಳು. "ನಿದ್ರೆ ಮಾಡೊದು ಒಳ್ಳೆದಲ್ವಾ!" ಅಂತ ಮತ್ತೆ ಕೇಳಿದ್ದು ನೋಡಿ, "ಬಹಳ ಒಳ್ಳೇದು ಹೀಗೆ ಮಲಗಿರಿ" ಅಂತ ಹೊದಿಕೆ ಮತ್ತೆ ಹೊದೆಸಿ, ಸ್ವಲ್ಪ ತಲೆ ಚಪ್ಪಡಿಸಿ (ಚಪ್ಪಡಿಸಿ ಅನ್ನೊದಕ್ಕಿಂತ ತಲೆ ಕುಟ್ಟಿ ಅಂದರೇ ಸರಿ!...) ಹೊರ ಹೋದಳು, ಆದರೆ ನಾ ಎದ್ದು ಹಿಂಬಾಲಿಸಿದೆ.

"ಸರಿ ನಿನ್ನ ರೆಸೊಲೂಶನ್ ಏನು ಈ ವರ್ಷ" ಅಂತ ಕೇಳಿದೆ. "ಇದೇ ಈಗ ಪಕ್ಕದಮನೆ ಪದ್ದು ಕೂಡ ಅದನ್ನೇ ಕೇಳಿದ್ಲು, ಇನ್ನೂ ಏನೂ ಯೋಚಿಸಿಲ್ಲ" ಅಂತಂದ್ಲು, "ಪಕ್ಕದಮನೆ ಪದ್ದುದು ಏನು ರೆಸೊಲೂಶನ್ ಅಂತೆ, ರಾತ್ರಿ ನಾ ಆಫೀಸಿಂದ ಬರುವವರೆಗೆ ಕಾಯೋದಲ್ದೇ, ಮುಂಜಾನೆ ಹೋಗುವಾಗ ಬೈ ಹೇಳಲು ಬೇಗ ಕೂಡ ಏಳ್ತಾಳಂತಾ?" ಅಂತ ಕೆರಳಿಸಿದೆ, "ಇಲ್ಲ ಇನ್ಮೇಲೆ ನಿಮ್ಮ ಜತೇನೇ ಆಫೀಸಿಗೂ ಬರ್ತಾಳಂತೆ, ಪಕ್ಕದಮನೇಲಿ ಇರೋದಲ್ದೇ, ಪಕ್ಕದ ಸೀಟಿನಲ್ಲಿ ಕೂಡ ಕೂರ್ತಾಳಂತೆ" ಅಂತ ಗುರಾಯಿಸಿದಳು. "ನಿಜವಾಗ್ಲೂ!" ಅಂತ ಹೌಹಾರಿದ್ರೆ, "ಅಹಾ. ಆಸೇ ನೋಡು... ಗಂಡನ ಜತೆ ಇನ್ಮೇಲೆ ಜಗಳಾಡಲ್ಲ ಅಂತೆ" ಅಂತ ಸತ್ಯ ಉಸುರಿದಳು, "ಎರಡೇ ಎರಡು ದಿನ ಅಷ್ಟೇ, ಮೂರನೇ ದಿನ ಜಗಳಾಡಲಿಲ್ಲ ಅಂದ್ರೆ ಕೇಳು" ಅಂದದ್ದಕ್ಕೆ ನಿಜವೇ ಎನ್ನುವಂತೆ ನಕ್ಕಳು.

"ನಾವಿಬ್ರೂ ಜಗಳಾಡಿದ್ದೇ ಕಮ್ಮಿ, ಅದಕ್ಕೇ ವರ್ಷ ಪೂರ್ತಿ ಪ್ರತಿದಿನಾ ತಪ್ಪದೇ ಜಗಳಾಡ್ತೀವಿ ಅಂತ ರೆಸೊಲೂಶನ್ ಮಾಡಿದ್ರೆ ಹೇಗೆ" ಅಂತ ಅವಳೆಡೆಗೆ ನೋಡಿದೆ, "ಬನ್ನಿ ಅದೇ ವಿಷಯವಾಗಿ ಈಗ ಜಗಳ ಮಾಡಿಬಿಡೋಣ" ಅಂತ ಕೈಲಿದ್ದ ಬಳೆ ಏರಿಸಿಕೊಂಡು ಸಿದ್ಧವಾದಳು, ದೊಡ್ಡ ಯುದ್ಧವೇ ಆದೀತೆಂದು ಸುಮ್ಮನಾದೆ. "ಸರಿ ನೀನೇ ಹೇಳು ಏನು ರೆಸೊಲೂಶನ್ ಅಂತ" ಅಂತ ಚೆಂಡು ಅವಳ ಅಂಗಳಕ್ಕೆ ನೂಕಿಬಿಟ್ಟೆ, "ಅದನ್ನೇ ನಾನೂ ಕೇಳಿದ್ದು,
ಏನೊ ಜನ ಸಿಗರೇಟು ಸೇವನೆ ಮಾಡಲ್ಲ, ಕುಡಿಯೋದಿಲ್ಲ ಅಂತ ರೆಸೊಲೂಶನ್ ಮಾಡ್ತಾರೆ, ಹಾಗೇ ನಾವೂ ಏನೋ ಒಂದು ಮಾಡಿದರಾಯ್ತು, ಈಗ ನಿಮ್ಮದೇನು ಹೇಳ್ತೀರೊ ಇಲ್ವೊ" ಅಂತ ನನೆಡೆಗೇ ತಿರುಗಿ ಶಾಟ್ ಹೊಡೆದಳು. ಒಳ್ಳೇ ಐಡಿಯಾ ಕೊಟ್ಟಳು ಅಂತ "ನಾನೂ ಸಿಗರೇಟು, ಕುಡಿಯೋದು ಎಲ್ಲಾ ಏನೂ ಮಾಡಲ್ಲ ಅಂತ ರೆಸೊಲೂಶನ್ ಮಾಡ್ತೀನಿ" ಅಂದೆ. "ಅಲ್ಲ ಬಿಟ್ಟು ಬಿಡೋಕೆ ಸಿಗರೇಟು, ಡ್ರಿಂಕ್ಸ್ ಶುರು ಮಾಡಿಕೊಂಡಿದ್ದಾದರೂ ಯಾವಾಗ" ಅಂತ ಅನುಮಾನಿಸಿದಳು. "ಶುರು ಮಾಡಿಲ್ಲ, ಇನ್ನು ಮುಂದೆ ಮಾಡಲ್ಲ ಅಂತ ರೆಸೊಲೂಶನ್" ಅಂತ ಸಮಜಾಯಿಸಿ ನೀಡಿದರೆ. "ಟೀ ಮಾಡಿ ಕೊಡ್ತೀನಿ ಕುಡಿದು ತೆಪ್ಪಗೆ ಕುಳಿತುಕೊಳ್ಳಿ, ಏನು ಬೇರೆ ಕುಡಿಯುವುದೂ ಬೇಡ, ನಿಮ್ಮ ರೆಸೊಲೂಶನ್ನೂ ಬೇಡ" ಅಂತ ಪಾಕಶಾಲೆಗೆ ನಡೆದಳು.

ಟೀ ಅಂತಿದ್ದಂಗೆ ನೆನಪಾಯಿತು, "ಟೀ ಕುಡಿಯುವುದನ್ನೇ ಬಿಡ್ತೀನಿ ಕಣೆ" ಅಂದೆ, ಒಂದು ಕ್ಷಣ ಸ್ತಂಭಿಭೂತಳಾದಳು, ಟೀ ಇಲ್ಲದೇ ಇರೋಕೇ ಆಗಲ್ಲ ಅಂತಿರುವವನು ಟೀ ಕುಡಿಯೋದೆ ಇಲ್ಲ ಅಂದರೆ ಹೇಗಾಗಬೇಡ, "ಯಾಕ್ರೀ ಟೀ ಯಾಕೆ ಕುಡಿಯಲ್ಲ, ಏನಾಯ್ತು" ಅಂತ ಕೇಳಿದಳು, "ಅಯ್ಯೋ ಯಾರ ದೃಷ್ಟಿ ತಾಗಿತೊ ಏನೊ, ಕಂಪನೀಲಿ ಮಗ್ ತುಂಬ ಪುಕ್ಕಟೆ ಟೀ ಕುಡೀತೀನಿ ಅಂತೆಲ್ಲ ಹೇಳ್ತಾ ಇದ್ನಾ, ಈಗ ಹೊಸ ಕಂಪನಿಯಲ್ಲಿ ಪುಕ್ಕಟೆ ಟೀ ಇಲ್ಲ. ಅದಕ್ಕೆ ಬಿಟ್ಟು ಬಿಡ್ತೀನಿ" ಅಂತಂದರೆ, "ಒಳ್ಳೇ ಕಂಜೂಸ್ ಕಣ್ರೀ ನೀವು, ಟೀ ಬೇಕೇ ಬೇಕು ಅದಿಲ್ಲದೆ ನಾವಿಬ್ರೂ ಹರಟೆ ಹೊಡೆಯುವುದಾದ್ರೂ ಹೇಗೆ... ಅದೆಲ್ಲ ಏನೂ ರೆಸೊಲೂಶನ್ ಬೇಡ" ಅಂತ ಅದನ್ನೂ ನಿರಾಕರಿಸಿದಳು.

"ರೀ ಡೈರೀ ಬರೆಯೊ ರೆಸೊಲೂಶನ್ ಮಾಡಿಕೊಳ್ಳಿ" ಅಂತ ಮತ್ತೊಂದು ಐಡಿಯಾ ಕೊಟ್ಟಳು, "ಅಲ್ಲ ವಾರಕ್ಕೆ ಒಂದು ಬ್ಲಾಗ್ ಲೇಖನ ಬರೆಯೋಕೆ ಆಗ್ತಿಲ್ಲ ಇನ್ನ ದಿನಾಲೂ ಡೈರೀ ಬರೀತೀನಾ, ಏನು ಮಹಾ ಘನ ಕಾರ್ಯ ಮಾಡ್ತೀನಿ ಅಂತ ಬರೀಲಿ, ಮುಂಜಾನೆ ಪಕ್ಕದ ಮನೆ ಪದ್ದು ನೋಡಿದೆ, ಹಾಲಿನಂಗಡಿ ಹಾಸಿನಿ ನನ್ನ ನೋಡಿ ನಕ್ಕಳು, ಸಿಗ್ನಲ್ಲಿನಲ್ಲಿ ಅಪ್ಸರೆ ಕಂಡು ಮಾಯವಾದಳು ಇದನ್ನೇ ಬರೆಯೋದಾ" ಅಂದೆ ಮುಗುಳ್ನಕ್ಕಳು. "ಇಲ್ಲ ಕಣೆ ನಂದು ಯಾಕೋ ಅತಿಯಾಯ್ತು, ಇನ್ಮೇಲೆ ಯಾವ ಹುಡುಗಿ ಕಣ್ಣೆತ್ತಿ ಕೂಡ ನೋಡಲ್ಲ ಅದೇ ನನ್ನ ರೆಸೊಲೂಶನ್" ಅಂತ ನಿರ್ಧರಿಸಿದೆ. "ಕಣ್ಣೆತ್ತಿ ನೋಡಲ್ಲ ಅಂದ್ರೆ ಓರೆಗಣ್ಣಲ್ಲಿ ನೋಡ್ತೀರಾ, ಹ ಹ ಹ... ರೀ ಹೀಗಂದ್ರೆ ಹೇಗೆ, ಮತ್ತೆ ನಂಗೆ ಕೀಟಲೆ ಮಾಡೋಕೆ ವಿಷಯಗಳೇ ಇರಲ್ಲ, ಅದೆಲ್ಲ ಏನೂ ಬೇಡ" ಅಂತ ಅದಕ್ಕೂ ಕಲ್ಲು ಹಾಕಿದಳು.

ಮತ್ತೇನೂ ರೆಸೊಲೂಶನ್ ವಿಷಯಗಳೇ ಸಿಗುತ್ತಿಲ್ಲ ಅಂತ, ಗೆಳೆಯನಿಗೆ ಫೋನು ಮಾಡಿ ಏನೊ ನಿನ್ನ ರೆಸೊಲೂಶನ್ ಅಂದ್ರೆ "1024X768" ಅಂತ ತನ್ನ ಕಂಪ್ಯೂಟರ್ ಮಾನಿಟರ್ ರೆಸೊಲೂಶನ್ ಹೇಳಿದ, "ಅದು ಹಳೆ ಜೋಕು ಹೊಸದೇನೊ ಹೇಳೊ" ಅಂದ್ರೆ, "ದಿನಾಲೂ ಆಫೀಸು ಕಂಪ್ಯೂಟರ್ ಆಫ್ ಮಾಡಿ ಬರ್ತೀನಿ ಕಣೊ ಕರೆಂಟ್ ಉಳಿತಾಯ ಆಗುತ್ತೆ" ಅಂದ, ನಾನಂತೂ ಅದು ಮೊದಲಿಂದಲೇ ಮಾಡ್ತೀನಿ... ಈ ಐಟಿ ಗೆಳೆಯರನ್ನು ಕೇಳಿದ್ರೆ ಇಂಥದೇ ರೆಸೊಲೂಶನ್ ಹೇಳ್ತಾರೆ ಅಂತ ಊರಲ್ಲಿನ ಗೆಳೆಯ ಕಲ್ಲೇಶಿಗೆ ಫೋನು ಮಾಡಿದ್ರೆ ಅವನಿಗೆ ಈ ರೆಸೊಲೂಶನ್ ಅಂದ್ರೆ ಏನು ಅಂತ ತಿಳಿ ಹೇಳುವುದರಲ್ಲೇ ಸಾಕು ಸಾಕಾಯ್ತು. ಈ ರೆಸೊಲೂಶನ್‌ಗೆ ಒಂದು ಸೊಲೂಶನ್ ಸಿಗದಾಯ್ತು.

ಇವಳ ಅಮ್ಮ, ಅದೇ ನನ್ನ ಅತ್ತೆ ಫೋನು ಮಾಡಿದರು ಶುಭಾಶಯ ಹೇಳಲು, ಅವರನ್ನೇ ಕೇಳಿದೆ "ಏನತ್ತೆ, ಏನು ನಿಮ್ಮ ರೆಸೊಲೂಶನ್" ಅಂತ, "ಏನಪ್ಪ ದಿನಾ ಯಾವುದಾದ್ರೂ ದೇವಸ್ಥಾನಕ್ಕೆ ತಪ್ಪದೇ ಹೋಗಬೇಕು ಅಂತಿದೀನಿ" ಅಂದ್ರು. "ಸರಿ ನಾನೂ ಹಾಗೆ ಮಾಡ್ತೀನಿ ದೇವರು ಸ್ವಲ್ಪ ಒಳ್ಳೇ ಬುದ್ಧಿನಾದ್ರೂ ಕೊಡ್ತಾನೆ" ಅಂತ ನಾನಂದೆ. ಇವಳು "ಅಲ್ಲಿ ದೇವರ ದರ್ಶನಕ್ಕೇ ನೀವು ಹೋಗಲ್ಲ ನಂಗೊತ್ತು, ಅಲ್ಲಿ ಬರುವ ದೇವಿಯರ ಮೇಲೆ ನಿಮ್ಮ ಕಣ್ಣಿರುತ್ತದೆ, ಮನೇಲಿ ಕೈಮುಗಿದರೆ ಸಾಕು ದೇವರು ಎಲ್ಲೆಡೆ ಇರ್ತಾನೆ" ಅಂದ್ಲು. ಅದೂ ಸರಿಯೇ ವಯಸ್ಸಾಯ್ತು ಅಂದಮೇಲೆ ದೇವರು, ವೇದಾಂತ ಎಲ್ಲ ಅವರಿಗೇ ಸರಿಯಾಗಿರತ್ತೇ ಆ ರೆಸೊಲೂಶನ್. "ಅತ್ತೆ ದೇವಸ್ಥಾನಕ್ಕೆ ಹೋಗ್ತಾರಂತೆ ಸರಿ, ಮಾವ ನೀವೇನು ಮಾಡ್ತೀರಾ" ಅಂತ ಇವಳ ಅಪ್ಪನನ್ನು ಕೇಳಿದೇ "ಅಳಿಯಂದ್ರೆ ಈ ಸಾರಿಯ
ಹೊಸವರ್ಷದ ರೆಸೊಲೂಶನ್ ಅಂದ್ರೆ ತೀರ್ಥಯಾತ್ರೆ ಸ್ವಲ್ಪ ಕಮ್ಮಿ ಮಾಡ್ತೀನಿ, 'ತೀರ್ಥ...' ಅಂದ್ರೆ ಗೊತ್ತಲ್ಲ ಹ ಹ ಹ" ಅಂತ ವಿಷಣ್ಣ ನಗೆ ನಕ್ಕರು, ತೀರ್ಥ ಅಂದ್ರೆ ಅದೇ ಡ್ರಿಂಕ್ಸು... ಈ ವಯಸ್ಸಲ್ಲಿ ಇನ್ನೂ ಕಮ್ಮಿ ಮಾಡ್ದೇ ಇದ್ರೆ ಹೇಗೆ, ಆರೋಗ್ಯ ಎಕ್ಕುಟ್ಟೊಗತ್ತೆ. ಈ ರೆಸೊಲೂಶನ್ನೂ ನಮಗೆ ಉಪಯೋಗವಿಲ್ಲ ಅಂತ, ಇವಳ ತಮ್ಮನನ್ನು ಕೇಳಿದೆ. "ಭಾವ ಬಬಲ್ ಗಮ್ ತಿಂತಿದ್ನಾ, ಅದು ಅಕ್ಕನ ನೀಲವೇಣಿಗೆ ಮೆತ್ತಿಕೊಂಡು ಕೂದಲು ಕತ್ತರಿಸಬೇಕಾಯ್ತಲ್ಲ, ಅದೇ ತಪ್ಪಿಗೆ ಈ ಸಾರಿ ಈ ಬಬಲ್ ಗಮ್ ಅಗಿಯೋದನ್ನು ಬಿಡಬೇಕು ಅಂತಿದೀನಿ" ಅಂದ. "ಒಳ್ಳೇ ಕೆಲ್ಸ ಮೊದಲು ಮಾಡು" ಅಂದೆ, ನಡುವೆ ಪಚ್ ಪಚ್ ಸದ್ದು ಕೇಳಿತು... "ಈಗ ಅದನ್ನೇ ತಿಂತಿದೀಯಾ ತಾನೆ, ಉಗಿಯೋ ಅದನ್ನ" ಅಂತ ಉಗಿದೆ. "ಸಾರಿ ಭಾವ ಇದೇ ಕೊನೇದು" ಅಂತ ಫೋನಿಟ್ಟ. ನಂಗೊತ್ತು ಮುಂದಿನವಾರ ಮತ್ತೆ ಶುರು ಮಾಡಿಕೊಂಡಿರ್ತಾನೆ ಅಂತ.

ನನ್ನ ಅಪ್ಪ ಅಮ್ಮನನ್ನ ಕೇಳೋಕೆ ಹೋಗಲಿಲ್ಲ, ಅವರು ಈ ಹೊಸವರ್ಷವನ್ನೇ ಆಚರಿಸಲ್ಲ ಅಂತ, ಏನಿದ್ದರೂ ಯುಗಾದಿಯೇ ಹಬ್ಬ ಅವರಿಗೆ. ತಂಗಿಗೆ ಕೇಳಿದ್ರೆ, "ಹೋದವರ್ಷದ ರೆಸೊಲೂಶನ್ ಕಥೆ ಏನಾಯ್ತು ಅಂತ ನಿಂಗೆ ಗೊತ್ತೇ ಇದೆಯಲ್ಲ, ಅದಕ್ಕೆ ಈ ವರ್ಷ ಅದರ ತಂಟೆಗೇ ಹೋಗಿಲ್ಲ" ಅಂದ್ಲು. ತಿಂಗಳು ಕೂಡ ಪಾಲಿಸಲಾಗಲಿಲ್ಲ ಅಂದ್ರೆ ರೆಸೊಲೂಶನ್ ಮಾಡಿಕೊಂಡು ಏನು ಪ್ರಯೋಜನ ಅಂತ ಅವಳು ಅಂದಿದ್ದೂ ಸರಿಯೆನ್ನಿಸಿತು.

ಪ್ರತೀ ವರ್ಷ ಹೊಸ ವರ್ಷದ ದಿನ ಎಲ್ಲರೂ ಕೇಳ್ತಾರೆ ರೆಸೊಲೂಶನ್ ಏನೊ ಅಂತ, ಆದರೆ ಕಳೆದ ವರ್ಷದ ರೆಸೊಲೂಶನ್ ಏನಾಯ್ತು ಅಂತ ಯಾರೂ ಕೇಳಲ್ಲ. ತಿಂಗಳು ಎರಡು ತಿಂಗಳಿಗೆ ರೆಸೊಲೂಶನ್ ಮರೆತೇ ಹೋಗಿರುತ್ತದೆ ಬಹಳ ಜನರಿಗೆ. ಹಾಗಿದ್ದಲ್ಲಿ ನಿಜಕ್ಕೂ ಈ ರೆಸೊಲೂಶನ್ ಬೇಕಾ, ಬೇಕೆಂದರೆ ಪಾಲಿಸದೇ ಇದ್ದರೆ ಮತ್ಯಾಕೆ, ನಂಗಂತೂ ಗೊತ್ತಿಲ್ಲ. ಸಿಗರ್‍ಏಟು ಸೇವನೆ ಬಿಡ್ತೀನಿ ಅನ್ನೊದು ಬಹಳ ಸಾಮಾನ್ಯ. ಹೀಗೇ ಒಮ್ಮೆಲೇ ರೆಸೊಲೂಶನ್ ಅಂತ ಬಿಟ್ಟವರು ಅಷ್ಟೇ ವೇಗದಲ್ಲಿ ಮತ್ತೆ ಶುರುವಿಟ್ಟುಕೊಂಡಿರುತ್ತಾರೆ, ಅದಕ್ಕೆ ತಿಂಗಳಿನ ಇಲ್ಲ ವಾರದ ಲೆಕ್ಕದಲ್ಲಿ ಇಂತಿಷ್ಟು ಅಂತ ಕಮ್ಮಿ ಮಾಡುತ್ತ ಬಂದರೆ ಹೇಗೆ, ಒಮ್ಮೆಲೇ ಬಿಡುವುದರಿಂದ ಆಗುವ ತೀವ್ರ ವಿರುದ್ಧ ಪರಿಣಾಮಗಳನ್ನೂ ತಪ್ಪಿಸಬಹುದಲ್ಲ. ಯಾವಾಗ ನಾವು ಹೀಗೆ ದೂರದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುತ್ತೇವೊ ಆಗ ಆ ಧೀರ್ಘ ಸಮಯದವರೆಗೆ ಆ ಸಂಯಮ ಕಾಪಾಡಿಕೊಳ್ಳಲು ಆಗಲಿಕ್ಕಿಲ್ಲವಲ್ಲವೇ. ಆದರೆ ಒಂದು ಬದ್ಧತೆ ಇದ್ದರೆ ರೆಸೊಲೂಶನ್, ಈ ಸಂಕಲ್ಪ ಬಹಳ ಒಳ್ಳೇದು, ತಪ್ಪದೇ ಕಟ್ಟುನಿಟ್ಟು ಮಾಡಿ ಮನಸಿನ ಮೇಲೆ ಹಿಡಿತ ಸಾಧಿಸಿ ಹತೋಟಿಯಲ್ಲಿಟ್ಟುಕೊಂಡರೆ ನಮ್ಮ ಯೋಚನೆಗಳ ಮೇಲೂ ನಾವು ನಿಯಂತ್ರಣ ಸಾಧಿಸಿಬಿಡುತ್ತೇವೆ. ಸಾಧಿಸಬಹುದಾದ ಚಿಕ್ಕದೇ ಆದರೂ ಸರಿ ಗುರಿ ಇಟ್ಟುಕೊಂಡರೆ ನಮ್ಮಿಂದಲೂ ಎನೋ ಸಾಧ್ಯ ಅನ್ನುವ ಹುರುಪು ಮನಸಿಗೆ ಬಂದೀತು.

ಏನೆಲ್ಲ ತಲೆ ಚಚ್ಚಿಕೊಂಡರೂ ನನಗೊಂದು ರೆಸೊಲೂಶನ್ ಸಿಗಲೇ ಇಲ್ಲ, ಅವಳಂತೂ ರೆಸೊಲೂಶನ್ ಏನೂ ಬೇಡ ಅಂತ ಬಿಟ್ಟು ಹಾಯಾಗಿ ಮಲಗಿಬಿಟ್ಟಿದ್ದಳು, ಏಳಿಸಿ "ಏನೇ ನಿನ್ನ ರೆಸೊಲೂಶನ್" ಅಂದೆ, "ರೀ ಬೇಗ ಮಲಗಿ ಬೇಗ ಏಳ್ತೀನಿ ಅದೇ ನನ್ನ ರೆಸೊಲೂಶನ್, ಈಗ ಮಲಗಲು ಬಿಡಿ" ಅಂದ್ಲು, "ಆದರೆ ನಾ ನಿನ್ನ ಬೇಗನೇ ಮಲಗಲು ಬಿಟ್ಟರೆ ತಾನೆ, ಆಫೀಸಿನ ವಿಷಯಗಳ ತಲೆ ತಿಂದು ಬಿಡ್ತೀನಲ್ಲ" ಅಂತಿದ್ದಂಗೆ, ಹೊದ್ದು ಮಲಗಿದ್ದಳು ನಿಚ್ಚಳಾಗಿ ಎದ್ದು ಕೂತು "ಏನ್ರೀ ಏನೂ ಬಾಯಿ ಬಿಡ್ತಿಲ್ಲ, ಹೊಸ ಕಂಪನಿ, ಹೊಸ ಹುಡುಗಿಯರು... ಏನ್ ಕಥೆ ನಿಮ್ದು" ಅಂತ ಹರಟೆಗಿಳಿದಳು. ಅಲ್ಲಿಗೆ ಅವಳು ಮಾಡಿಕೊಂಡಿದ್ದ ರೆಸೊಲೂಶನ್‌ಗೆ ಎಳ್ಳು ನೀರು ಬಿಟ್ಟಾಯಿತು. ಹನ್ನೊಂದು ಹನ್ನೆರಡಾದರೂ ಮಾತಿಗೆ ಕೊನೆಯಿರಲಿಲ್ಲ, "ಏನೇ ಬೇಗ ಮಲಗ್ತೀನಿ ಅನ್ನೊ ನಿನ್ನ ರೆಸೊಲೂಶನ್ ಇಂದೇ ಬ್ರೇಕ್ ಆಯ್ತಲ್ಲ" ಅಂದರೆ. "ಪ್ಲಾನ ಸ್ವಲ್ಪ ಚೇಂಜ್ ಆಯ್ತು, ಇನ್ಮೇಲೆ ಲೇಟಾಗಿ ಮಲಗಿ ಲೇಟಾಗಿ ಏಳ್ತೀನಿ" ಅಂದ್ಲು, "ಹಾಗಾದ್ರೆ ನನ್ಯಾರೇ ಆಫೀಸಿಗೇ ಹೋಗಲು ಏಳಿಸೋದು" ಅಂತ ಕೇಳಿದ್ರೆ "ನಿಮ್ಮ ಬಾಸ್" ಅಂತ ತರಲೇ ಉತ್ತರಕೊಟ್ಟು ಮಲಗಿಬಿಟ್ಟಳು, ಬೇಗ ಏಳುವ ರೆಸೊಲೂಶನ್ ನಾನೇ ಮಾಡಿಕೊಂಡರೆ ಒಳ್ಳೇದು ಅಂದುಕೊಳ್ಳುತ್ತ ತಲೆದಿಂಬಿಗೆ ಒರಗಿದೆ. ದಿಂಬು ಕಸಿದುಕೊಂಡು ತುಂಟಾಟಕ್ಕಿಳಿದಳು.

ಹೊಸ ವರ್ಷದ ಶುಭಾಶಯಗಳೊಂದಿಗೆ...
ನಾನು, ನನ್ನಾk.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/sankalpa.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

22 comments:

Nisha said...

ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ರೆಸೊಲೂಶನ್ ಕಥನ ಚೆನ್ನಾಗಿದೆ. ನಾನು ಕೂಡ ಒಂದು ರೆಸೊಲೂಶನ್ ಮಾಡಿದ್ದೇನೆ, ಎಷ್ಟರ ಮಟ್ಟಿಗೆ ಜಾರಿಯಾಗುತ್ಹೋ ನೋಡಬೇಕು.

ಆನಂದ said...

Nice one, like always :)

New year greetings!

ಜಲನಯನ said...

ಪ್ರಭು, ಹ್ಯಾಪ್-ನ್ಯೂ ಇಯರ್...sorry ಕಣ್ರೀ ಹೊಸವರ್ಷದ ಶುಭಾಷಯಗಳು...ನಿಮ್ಮಾK ಮಾಡೋ ತರಹ ಯಾವುದೇ ರೆಸಲ್ಯೂಶನ್ ಗೆ ಹೋಗದೆ ವರ್ಷವಿಡೀ ಆದ ಪ್ರಾಬ್ಲಮ್ ಗಳಿಗೆ ಸಲ್ಯೂಷನ್ ಕಂಡುಕೊಳ್ಳಬೇಕಾಗಿದೆ...ಪ್ರತಿ ಸರ್ತಿಯಂತೆ ಈ ಬಾರಿಯೂ ಸಮಂಜಸ ವಿಷಯವನ್ನು ಸಮರ್ಪಕವಾಗಿ ಮುಂದಿಟ್ಟೀದ್ದೀರಿ...

ಚುಕ್ಕಿಚಿತ್ತಾರ said...

"ರೆಸೊಲುಶನ್, ಸಂಕಲ್ಪ.. someಕಲ್ಪನೆ..." ಚೆನ್ನಾಗಿದೆ.. ವರ್ಷದ ರೆಸೊಲುಶನ್ಗಿ೦ತಾ ದಿನದ ರೆಸೊಲುಶನ್ ಸ್ವಲ್ಪ ಪರಿಣಾಮಕಾರಿ..
ಹೊಸ ವರುಷ ತರಲಿ ಹರುಷ.

ಸವಿಗನಸು said...

ಪ್ರಭು,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.....
ಸಂಕಲ್ಪ ಲೇಖನ ಬಹಳ ಚೆನ್ನಾಗಿದೆ....
ವಾರಕ್ಕೊಂದು ಲೇಖನ ತಪ್ಪದೆ ಬರೆಯುತ್ತೀನಿ ಅಂತ ರೆಸೊಲೂಶನ್ ಮಾಡಿ.....

ರಾಜೀವ said...

ಪ್ರಭು,

ಚೆಳಿಗಾಲದಲ್ಲಿ ಬೆಳಗ್ಗೆ ಬೇಗ ಏಳುವ ರೆಸೊಲ್ಯೂಶನ್ ಮಾಡಿದ್ದೀರಲ್ಲ? ಅದು ಸಾಧ್ಯವೇ?
ಇರಲಿ, ಎರಡು ವಾರದ ನಂತರ ಇದರ ಬಗ್ಗೆ ಏನಾಯಿತೆಂದು ತಿಳಿಸಿ.
ಹಾಪ್ಪಿ ೨೦೧೦.

ಮನಮುಕ್ತಾ said...

someಕಲ್ಪನೆ ಅ೦ತ ಇಷ್ಟೊ೦ದು ಕಲ್ಪಿಸಿದ್ದೀರಾ...
ತು೦ಬಾ ಚೆನ್ನಾಗಿದೆ ಬರೆದದ್ದು.
ನೀವು ಮು೦ಚೆ ಬರೆದ ಬರಹಗಳನ್ನು ಇನ್ನೂ ಓದಿಲ್ಲ..ನಿಧಾನವಾಗಿ ಓದುತ್ತೇನೆ.
ಶುಭಹಾರೈಕೆಗಳು..

ಸಾಗರದಾಚೆಯ ಇಂಚರ said...

ಕಲ್ಪನೆ ತುಂಬಾ ಚೆನ್ನಾಗಿದೆ
ಹೊಸ ವರ್ಷಕ್ಕೆ ಭರ್ಜರಿಯಾಗಿದೆ
ಎಂದಿನಂತೆ ಉತ್ತಮ ಬರಹ

sunaath said...

ಪ್ರಭುರಾಜ,
(ನಿಮ್ಮ ಕಲ್ಪನೆಯ)ನಿಮ್ಮಾ-k ನಿಮಗೆ ಕೀಟಲೆ ಕೊಡ್ತಾನೆ ಇರಲಿ, ನೀವು ಆ ಸರಸ ಸುರಸವನ್ನು ನಮಗೆ ರವಾನಿಸ್ತಾನೇ ಇರಲಿ ಅಂತ ಹೊಸ ವರ್ಷದಂದು ದೇವರಲ್ಲಿ ಬೇಡಿಕೊಳ್ತೀನಿ.
Happy New Year!

ದಿನಕರ ಮೊಗೇರ said...

ಪ್ರಭು ಸರ್,
ಸಕತ್ತಾಗಿದೆ ನಿಮ್ಮ ರೆಸೊಲ್ಯೂಶನ್ ಕಥೆ..... ಎಂದಿನಂತೆ........ ನಿಮ್ಮಾ k ತುಂಬಾ ಪ್ರಯತ್ನ ಪಟ್ಟು ಲೇಟ್ ಏಳುತ್ತಾರೆ, ನಾನಂತೂ ತುಂಬಾ ಇಸಿ ಯಾಗಿ ಲೇಟ್ ಏಳುತ್ತೇನೆ...... ನಿಮಗೂ ಹೊಸ ವರ್ಷದಶುಭಾಶಯಗಳು......

ವಿನುತ said...

Long term goals ಗಿಂತ, short term goals ನಲ್ಲೇ ವಿಶ್ವಾಸ ಜಾಸ್ತಿ! :)
ನಿಮಗೂ ಹೊಸ ವರ್ಷದ ಶುಭಾಶಯಗಳು. Resolution ಏನಾದ್ರೂ ಇದ್ರೆ, ಪಾಲಿಸೋ ಶಕ್ತಿನೂ ಇರ್ಲಿ ಅಂತ ಆಶಿಸ್ತೀನಿ.

Veena A said...

ಪ್ರಭು,

ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ನಿಮ್ಮ್ ಬ್ಲಾಗ ಗಳನಾ ತಪ್ಪದೆ ಒದ್ಬೆಕು ಅಂತಾ ಸಂಕಲ್ಪಾ ಮಾಡ್ಕೋಬೇಕು ಅನ್ಕೋಳ್ತಿದ್ದೆ...

ಆದ್ರೆ resolution follow ಮಾಡ್ದಿದ್ರೆ ಬೇಜಾರು ಅಗುತ್ತೆ ಅಲ್ಲ್ವಾ

Good writing as usual...

Veena A

Annapoorna Daithota said...

ಹೊಸ ವರ್ಷದ ಶುಭಾಶಯಗಳು, ನಿಮಗೂ,‘ನಮ್ಮಾಕೆ’ಗೂ....

ಏನಪ್ಪಾ ಇದೂ, ಈ ಸಲ ‘ಟೀ’ ಬಂದೇ ಇಲ್ವಲ್ಲಾ ಲೇಖನದಲ್ಲಿ ಅಂದ್ಕೊತಿದ್ದ್ ಹಾಗೆ ಬಂದೇ ಬಿಡ್ತು :D

ಲೇಖನ ಎಂದಿನಂತೇ ರಸಮಯ, ಟೀಮಯ, ಪದ್ದುಮಯ ವಾಗಿ ಸುಂದರವಾಗಿದೆ :-)

Paulo Tennis said...

Hi, nice blog! Keep doing.
If you want, you can visit my blog.

Happy new year!

Prabhuraj Moogi said...

ಎಂದಿನಂತೆ! ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ, ಸಮಯದ ಅಭಾವ ಅನುಸರಿಸಿಕೊಳ್ಳಿ.

@Nisha
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ನಾನಂತೂ ರೆಸೊಲೂಶನ್ ಮಾಡಿಲ್ಲ, ಮಾಡಿದರೂ ಪಾಲಿಸಲು ಕಷ್ಟ ಅಂತ ಗೊತ್ತು. ನೀವು ಮಾಡಿದ್ದರೆ ಖಂಡಿತ ಪಾಲಿಸಿ.

@ಆನಂದ
Thank you :) wish you too the same...

@ಜಲನಯನ
ಸರ್ ಹೊಸ ವರ್ಷದ ಶುಭಾಶಯ, ನಂದೂ ಅದೇ ಕಥೆ, ಇನ್ನು ಬರಲಿರುವ ಪ್ರಾಬ್ಲಂಗಳಿಗೆ ಸಲ್ಯೂಷನ್ ಕಂಡುಹಿಡಿಯಬೇಕಿದೆ... ಏನೊ ವರ್ಷ ಶುರುವಾಗುತ್ತಿದ್ದಂತೇ ರೆಸೊಲೂಶನ್ ಕೇಳ್ತಾರಲ್ಲ ಅದನ್ನೇ ಬರೆದೆ.

@ಚುಕ್ಕಿಚಿತ್ತಾರ
ದಿನಕ್ಕೊಂದು ರೆಸೊಲೂಶನ್!!! ನನ್ನಾk ದಿನಾಲೂ ಏನೊ ಒಂದು ರೆಸೊಲೂಶನ್ ಹೇಳಿ ಅಂತ ತಲೆ ತಿಂದು ಬಿಡ್ತಾಳೆ ಅಷ್ಟೇ! :)
ಹೊಸ ವರುಷ ನಿಮಗೂ ಹರುಷ ತರಲಿ.

@ಸವಿಗನಸು
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ವಾರಕ್ಕೊಂದು ಲೇಖನ! ಮೊದಲು ಬರೀತಾ ಇದ್ದೆ, ಸರ್ ಈಗೀಗ ತಿಂಗಳಿಗೊಂದೂ ಬರೆಯಲೂ ಕಷ್ಟ ಆಗ್ತಿದೆ, ಸಮಯ ಸಿಕ್ತಾ ಇಲ್ಲ... ಲೈಫ್ ಒಂಥರಾ ಓಟಕ್ಕಿಳಿದುಬಿಟ್ಟಿದೆ, ಓಡೊದೇ ಕೆಲಸ ಆಗೋಗಿದೆ.
ಈಗ ನಾನು ವಾರಕ್ಕೊಮ್ಮೆ ಕಮೆಂಟ ಬರೀಬಹುದು ಅಷ್ಟೇ! :)

@ರಾಜೀವ
ನಾನಂತೂ ಮಾಡಿಲ್ಲ ಬಿಡಿ, ಮಾಡೊಕಾಗಲ್ಲ ಅಂತ ಬಿಟ್ಟುಬಿಟ್ಟಿದ್ದೀನಿ, ಆದರೂ ನನ್ನ ಪ್ರತಿದಿನ ಮುಂಜಾನೆ ಆರುಘಂಟೆಗೆ ಶುರುವಾಗುತ್ತದೆ (ವಾರಾಂತ್ಯ ಹೊರತುಪಡಿಸಿ)... ಆಫೀಸಿಗೆ ಓಡಬೇಕಲ್ಲ ಅಂತ ಏಳೊದು :)
ಹ್ಯಾಪಿ ೨೦೧೦...

@manamukta
:) ಬ್ಲಾಗ್ ತುಂಬ ಬರೀ ಕಲ್ಪನೆಗಳೇ ಇವೆ... ಅದಕ್ಕೆ ಹೋಲಿಸಿದರೆ ಇದು ಏನೂ ಅಲ್ಲ, ಅದಕ್ಕೆ someಕಲ್ಪನೆ.
ಸಮಯಸಿಕ್ಕರೇ ಓದಿ..(ಯಾಕೆಂದ್ರೆ ಸಮಯದ ಅಭಾವ ಹೇಗಿರುತ್ತದೆ ಅಂತ ನನಗೂ ಅನುಭವ ಆಗುತ್ತಿದೆ)
ತಮಗೂ ಶುಭವಾಗಲಿ.

@ಸಾಗರದಾಚೆಯ ಇಂಚರ
ಧನ್ಯವಾದ ಸರ್, ಹೊಸವರ್ಷ ಹೊಸತು ಹೊಸತು...ಕಲ್ಪನೆ...

@sunaath
;) ಅವಳ ಕೀಟಲೆ ಜಾಸ್ತಿಯಾದರೆ ಖುಷಿಯೇ, ಹೀಗೆ ಈ ಕಲ್ಪನೆಗಳು ನಿಜವಾದರೆ ಇನ್ನೂ...
ಸಾಧ್ಯವಾದಷ್ಟು ಬರೆಯುತ್ತಿರುತ್ತೇನೆ, ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ.
Happy new year to you too...

@ದಿನಕರ ಮೊಗೇರ..
ಧನ್ಯವಾದಗಳು, ಅವಳು ನಾನು ಇಬ್ಬರೂ ಪೈಪೋಟಿಯಲ್ಲಿ ಲೇಟಾಗಿ ಏಳ್ತಿದೀವಿ ಅಂದ್ರೂ ಗೆಲುವು ಮಾತ್ರ ನನ್ನದೇ :)
ನಿಮಗೂ ಹೊಸ ವರ್ಷದ ಶುಭಾಶಯಗಳು...

@ವಿನುತ
short term goalsನಲ್ಲೇ ನನಗೂ ವಿಶ್ವಾಸ... ಹೀಗೇ ಗೊಲ್ ಸೆಟ್ ಮಾಡಿ ಹಾಗೆ ರಿಜಲ್ಟ್ ನೊಡಿಬಿಡ್ತೀನಿ :)
ನಿಮಗೂ ಹೊಸ ವರ್ಷದ ಶುಭಾಶಯಗಳು... ಪಾಲಿಸೋಕೆ ಆಗಲ್ಲ ಅಂತ ರೆಸೊಲೂಶನ ಗೊಡವೆಗೇ ಹೋಗಿಲ್ಲ.

@Veena A
ಅಬ್ಬಾ ನನ್ನ ಬ್ಲಾಗಗಳನ್ನಾ ತಪ್ಪದೇ ಓದೊ ಸಂಕಲ್ಪನಾ! ಬೇರೆ ಏನಾದ್ರೂ ಒಳ್ಳೆ ರೆಸೊಲೂಶನ್ ಮಾಡ್ರಿ. ನನ್ನ ತರಲೆಗಳನ್ನೊ ಓದಿ ಏನ್ಮಾಡ್ತೀರಾ.
thank you...

@Annapoorna Daithota
:) "ನಮ್ಮಾಕೆ" ಅಂತ ಹೇಳ್ತೀರಲ್ಲ... ಹ್ಮ್ ನಿಮ್ಮ ಈ ಹುಡುಗಿ ಬಹಳ ತರಲೆ ಮಾಡ್ತಿದಾಳೆ, ಹೊಸವರ್ಷಕ್ಕೆ ಸ್ವಲ್ಪ ಬಯ್ದು ಬುದ್ಧಿ ಹೇಳಿ :)

ಟೀ ಇಲ್ದೇ ಹೇಗೆ ಹೇಳಿ, ಆದರೂ ಯಾರ ದೃಷ್ಟಿ ತಾಕಿತೋ ಏನೊ ಹೊಸ ಕಂಪನಿಯಲ್ಲಿ ಪುಕ್ಕಟೆ ಟೀ ಇಲ್ಲ :( ಅದ್ಕೇ ನೋಡಿ ಹೊಸ ಲೇಖನಗಳು ಕಮ್ಮಿ ಆಗಿವೆ!!!

ಟೀ,ಪದ್ದು ಇವೆಲ್ಲ ಲೇಖನಕ್ಕೆ ಅವಿಭಾಜ್ಯ ಅಂಗಗಳಾಗಿವೆ :)

@Paulo Tennis
Hi, Thank you, I will visit... Happy new year to you too...

Annapoorna Daithota said...

ಪ್ರಭೂ...
ಹುಡುಗಿ ನಿಮ್ಮಾಕೆನೇ,
ಆದ್ರೆ ನಾವೂ ಆಕೆಯ ಭಾವನೆಗಳಿಗೆ ಸ್ಪಂದಿಸೋದ್ರಿಂದ ಆಕೆ ನಮ್ಮಾಕೆ ಯಾಗಿದ್ದಾಳೆ :)

Prabhuraj Moogi said...

@Annapoorna Daithota
ಅದೇ... ನೀವು ಹೀಗೆ ಸ್ಪಂದಿಸಿ ಬೆಂಬಲ ಕೊಡೊದಕ್ಕೆ ಅವಳ ತರಲೆ ಜಾಸ್ತಿ ಆಗ್ತಿದೆ :)ಅದಕ್ಕೆ ಸ್ವಲ್ಪ ಬುದ್ಧಿ ಹೇಳಿ ಅಂತ ಕೇಳಿಕೊಂಡಿದ್ದು!

ARUN MANIPAL said...

ಹಿಂದೊಮ್ಮೆ ತರಂಗದಲ್ಲಿ ಈಶ್ವರಯ್ಯ ಬರೆಯುತ್ತಿದ್ದ "ಸರಸ" ಲಲಿತ ಬರಹ ಮಾಲಿಕೆಯ ನಕಲಿನ ಹಾಗೆ ಇದೆ ಇದು.
ಯಾಕೆ ಹೀಗೆ ಬೇರಯವ್ರ ಐಡಿಯಾ ಕಾಪಿ ಮಾಡ್ತೀರ..???

Prabhuraj Moogi said...

@ARUN MANIPAL
ಈಶ್ವರಯ್ಯ ಅವರು ಬರೆಯುತ್ತಿದ್ದ "ಸರಸ" ಬಗ್ಗೆ ಗೊತ್ತು, ಹಿಂದೆ ಕೂಡ ಬ್ಲಾಗನಲ್ಲಿ ಆ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಹತ್ತನೇ ತರಗತಿಯಲ್ಲಿದ್ದಾಗ ಎರಡು ಲೇಖನಗಳು ಓದಿದ್ದು ಬಿಟ್ಟರೆ ಆಮೇಲೆ ಅವರ ಲೇಖನಗಳನ್ನು ಓದಿಲ್ಲ. ಓದಿದ ಲೇಖನಗಳೂ ನೆನಪಿಲ್ಲ, ಮತ್ತೆ ಓದಲು ಕೂಡ ಸಿಕ್ಕಿಲ್ಲ ಪುಸ್ತಕ ಪ್ರತಿಗಳೆಲ್ಲ ಮಾರಾಟ ಆಗಿ ಹೋಗಿವೆಯಂತೆ, ಮತ್ತೆ ಮರುಮುದ್ರಣ ಕಳೆದ ವರ್ಷ ಆಗಬೇಕಿತ್ತು ಆದರೆ ಆ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಅವರಷ್ಟು ಸ್ವಾರಸ್ಯಕರವಾಗಿ ಬರೆಯಲು ನನಗೆ ಬರುವುದಿಲ್ಲ, ನನ್ನ ಮನಸ್ಸಿಗೆ ಬಂದ ಕಲ್ಪನೆಗಳನ್ನು ಬರೆಯುತ್ತಿರುತ್ತೇನೆ. ಇಲ್ಲಿ ನಾನು ಯಾರ ನಕಲು ಮಾಡಲು ಪ್ರಯತ್ನಿಸುತ್ತಿಲ್ಲ. ಇಷ್ಟಕ್ಕೂ ನಾನೊಬ್ಬ ಲೇಖಕನೂ ಅಲ್ಲ, ಯಾಕೆಂದರೆ ಒಬ್ಬ ಲೇಖಕನಿಗಿರಬೇಕಾದ ಪರಿಪೂರ್ಣತೆ, ಜ್ಞಾನ, ಶೈಲಿ ನನ್ನಲಿಲ್ಲ,ಇದು ಬರೀ ನನ್ನ ಹವ್ಯಾಸ.

Anonymous said...

Enu helodu.. english nyag helbekandra "Just Superb"

Prabhuraj Moogi said...

@Anonymous
ಥ್ಯಾಂಕ್ಯೂ... ಓದ್ತಾ ಇರಿ...

Anonymous said...

Powerhouses similar to Evolution and NetEnt are famend for his or her revolutionary games that have damaged new ground latest years|in 1xbet korea latest times|lately} and pushed the boundaries of capabilities. Evolution Gaming has turn out to be the benchmark in Live Dealer over the past 10 years, with 9 studios worldwide. This permits us to raised select a product and studio environment to properly with|swimsuit} new client's market focus OR through the use of of} devoted language tables to facilitate new market entry.