Sunday, April 25, 2010

ಮನೆ ಮ(ಮು)ದ್ದು...

ಮಲಗಿದ್ದೆ, ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ. ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ. ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ. ತೀರ ಕ್ಷೀಣದನಿ ಕೇಳಿತು "ಗುಂಡುಮರಿ, ಗುಂಡುಮರಿ..." ಅಂತ, ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ. "ಎದ್ದೇಳೊ ಗುಂಡುಮರಿ" ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು. ಅವಳು ಹೀಗೇನೆ, ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು, ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು "ಊಂ" ಅಂತ ಊಳಿಟ್ಟೆ, ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ. ಬೆಡ್‌ರೂಮಿಗೆ ಬಂದು, ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ, ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು, "ಹತ್ತುಗಂಟೆ" ಅಂದು ಮುಗುಳ್ನಕ್ಕು, ಹೊರ ಹೋದಳು. ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು. ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು, ಬೆರಳಿಗೆ ಕಟ್ಟಿದ್ದ "ಪೌಟಿಸ್" ಎಲ್ಲಿ, ಎಲ್ಲೊ ಬಿದ್ದು ಹೋಗಿದೆ, ಪೌಟಿಸ್! ಏನದು ಅಂತಾನಾ... ಹ್ಮ್ ಅದೊಂದು ಮನೆ ಮದ್ದು.

ಸ್ವಲ್ಪ ಫ್ಲಾಶ್‌ಬಾಕ್ ಹೋಗೊಣ್ವಾ, ನಿನ್ನೆ ಕೂಡ ರಜೆ ಇತ್ತು, ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ. ಸುಮ್ನೇ ಕೂತಿದ್ದೆ, ನಮಗೆ ರಜೆ ಇದ್ರ್‍ಏನಂತೆ, ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ. ಮೇಜು, ಟೀವಿ, ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು. ಹೇಗೂ ಖಾಲಿ ಕೂತಿದೀನಿ, ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ, "ನಂಗೆ ಕೊಡು ನಾ ಮಾಡ್ತೀನಿ" ಅಂದೆ. "ಏನು ಇಂಜನೀಯರ್ ಸಾಹೇಬ್ರು, ಈಮೇಲು, ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ" ಅಂತ ಹುಬ್ಬು ಹಾರಿಸಿದಳು. "ರಜಾ ದಿನಾ ಯಾವ ಈಮೇಲು, ಇನ್ನ ಫೀಮೇಲು ಅಂದ್ರೆ ನೀನೇ, ನಿನ್ನೇ ನೋಡ್ತಾ ಕೂತಿದ್ದಾಯ್ತು. ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ" ಅಂತ ಗುರಾಯಿಸಿದೆ. "ಹ್ಮ್ ರಜಾ ದಿನಾನೇ ಅಲ್ವಾ; ಪರ್ಸ್ssss...ನಲ್ ಮೇಲ್ ಚೆಕ್ ಮಾಡೋದು. ಫೀಮೇಲು ನಾನೋಬ್ಳೆನಾ, ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ, ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ... ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ, ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು..." ಅಂತ ತಿರುಗಿಬಿದ್ಲು. ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು. ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು, ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ, ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ.

ಟೀವೀ ಫ್ರಿಝ್ ಒರೆಸುವ ಹೊತ್ತಿಗೆ, ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು. "ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ" ಅಂತ ಹುಸಿನಗೆ ಬೀರಿದಳು, ಈ ಹುಡುಗೀರು ನೋಡಿ ನಕ್ಕರೆ, ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ. ಅದೇ ಆಯ್ತು, ಅವಳ ಮುಂದೆ ಸ್ಟೈಲ್ ಮಾಡಿ, ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ,
ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ, ನೇರ ಬೆರಳಲ್ಲಿ ತೂರಿಕೊಂಡಿತು. ಚಿಟ್ಟನೆ ಚೀರಿದೆ...

"ಅದಕ್ಕೇ ನಿಮಗೆ ಹೇಳಿದ್ದು, ಬೇಡ ಅಂತ, ನೀವೆಲ್ಲಿ ಕೇಳ್ತೀರಾ, ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ, ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು..." ಸಹಸ್ರನಾಮಾರ್ಚನೆ ನಡೆದಿತ್ತು. ಸಿಟ್ಟು ಅಂತೇನು ಅಲ್ಲ, ಅದೊಂಥರಾ ಕಾಳಜಿ, ಅದಕ್ಕೇ ಕೋಪ, ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ. ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು. ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು, ಮುರಿದು ಅರ್ಧ ಮಾತ್ರ ಹೊರಬಂದಿತ್ತು, ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು. ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ, "ನೋವಾಗ್ತಾ ಇದೇನಾ" ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು. ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ.

ರಕ್ತ ಬರುವುದು ಕಮ್ಮಿಯಾಗಿತ್ತು, "ಸ... ಸ್.. ಸ್" ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು. ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್‌ಫ್ಯೂಸ್ ಆಯ್ತು. ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು. "ನಡೀರಿ ಡಾಕ್ಟರ್ ಹತ್ರ ಹೋಗೋಣ" ಅಂದ್ಲು, "ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ, ಕಮ್ಮಿಯಾಗತ್ತೆ ಬಿಡು" ಅಂದೆ. ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ, ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು, ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು. "ರೀ ಅತ್ತೆಗೆ ಫೋನ್ ಮಾಡ್ಲಾ" ಅಂದ್ಲು, "ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು" ಅಂದ್ರೆ. "ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ, ಪ್ರಯತ್ನಿಸಿ. ನಾಳೆ ಡಾಕ್ಟರ್ ಹತ್ರ ಹೋದರಾಯ್ತು" ಅಂತ ಒಳ್ಳೇ ಐಡಿಯಾ ಕೊಟ್ಲು.

ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್... ಫೋನು ಕೆಳಗಿಟ್ಟವಳೇ, "ಅಮ್ಮ ಒಳ್ಳೆ ಮದ್ದು ಹೇಳಿದಾರೆ, ಏನ್ ಗೊತ್ತಾ, ಅದರ ಹೆಸ್ರು ಪೌಟಿಸ್ ಅಂತೆ, ಮಾಡೋದು ಸಿಂಪಲ್... ಒಂದು ಸಾರು ಹಾಕೊ ಸೌಟಿನಲ್ಲಿ, ಇಲ್ಲ ಚಿಕ್ಕ ಪಾತ್ರೇಲಿ, ಸ್ವಲ್ಪ ಹಾಲು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ, ಬಿಸಿ ಬಿಸಿ ಉಂಡೆ ಹಾಗೆ ಮಾಡಿ, ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ, ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ" ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು. ನಾನೂ ಅವಳ ಹಿಂಬಾಲಿಸಿದೆ. "ಬಿಸಿ ಬಿಸಿದೇ ಕಟ್ಟಬೇಕಾ" ಅಂತ ಆತಂಕದಲ್ಲಿ ಕೇಳಿದ್ರೆ. "ಸುಡು ಸುಡು ಹಾಗೆ ಕಟ್ಟಬೇಕಂತೆ, ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ" ಅಂತ ಇನ್ನೂ ಹೆದರಿಸಿದ್ಲು.

ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು, ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ, "ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್" ಅಂತ ಹಲ್ಲು ಗಿಂಜಿದೆ. "ಅತ್ತೆ ಹೇಳಿದ ಮೇಲೆ ಮುಗೀತು, ಒಳ್ಳೆ ಮದ್ದೇ ಇರತ್ತೆ, ಏನಾಗಲ್ಲ ಸುಮ್ನಿರಿ" ಅಂತ ಭರವಸೆ ಕೊಟ್ಲು. "ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ, ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ" ಅಂತ ಗೋಗರೆದೆ. ವಾರೆ ನೋಟದಲ್ಲಿ ನೋಡಿ, "ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ" ಅಂತ ಓಡಿಸಿದಳು. ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ.

ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ "ಡಾಕ್ಟರ್ ಹತ್ರಾನೇ ಹೋಗೋಣ ಕಣೇ" ಅಂತ ಮತ್ತೆ ಅವಳ ಮನವೊಲಿಸಲು ಹೋದೆ. "ಅತ್ತೆಗೆ ಫೋನು ಮಾಡ್ತೀನಿ ಈಗ, ಹೀಗೆ ಹಠ ಮಾಡ್ತಾ ಇದೀರಿ ಅಂತ" ಅಂತ ಧಮಕಿ ಹಾಕಿದ್ಲು. ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು, ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು. "ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ" ಅಂತ ಮತ್ತೆ ಮಾತಿಗಿಳಿದೆ. "ಆಹಾಹ್ ಏನ್ ರೂಪದರ್ಶಿ, ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್‌ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು" ಅಂತ ಹೀಯಾಳಿಸಿದ್ರೆ. "ಹ್ಮ್, ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ" ಅಂತ ರೈಲು ಬಿಟ್ಟೆ. "ಗಲ್ಲ, ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ" ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು. ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ. "
ಪ್ಲೀಜ್ ಕಣೆ, ಡಾಕ್ಟರ್ ಹತ್ರ ಹೋಗೊಣ, ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ, ಬೇಕಿದ್ರೆ ಪ್ರಮಾಣ್ ಮಾಡ್ತೀನಿ" ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ, ತಪ್ಪಿಸಿಕೊಂಡು "ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ, ಈವತ್ತು ಮನೆಮದ್ದೇ ಗತಿ, ನಾಳೆ ನೋಡೋಣ, ಕಡಿಮೆ ಆಗದಿದ್ರೆ ಡಾಕ್ಟರ್... ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ" ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ, ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ.

ಅವಳು ಅಡುಗೆ ಮಾಡಿದ್ದಾಯ್ತು, ಕೊನೆಸಾರಿ ಒಂದು ಪ್ರಯತ್ನ ಅಂತ, "ನೋವೆಲ್ಲ ಏನೂ ಇಲ್ಲ, ಎಲ್ಲಾ ಹೊರಟೊಯ್ತು, ನೋಡು" ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ. ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು, ನಗುತ್ತ "ಅಲ್ಲೇ ಕೂತಿರಿ, ಪೌಟಿಸ್ ಮಾಡಿ ತರ್ತೀನಿ" ಅಂತ ಹೋದಳು, ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ, ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ, ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ, ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು. ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು, ಹಲ್ಲು ಗಟ್ಟಿ ಹಿಡಿದು ಕೂತೆ, ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ. "ಕಣ್ಣು ಬಿಡಿ, ಏನಾಗಲ್ಲ" ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ. "ಏನೊ ಒಂದು ಬೆರಳಿಗೆ ಹಚ್ಚೋದು ತಾನೆ, ಕಣ್ಣು ಯಾಕೆ ತೆಗೆಯಬೇಕು, ನಂಗೆ ನೋಡೋಕಾಗಲ್ಲ, ಬೇಗ ಮೆತ್ತಿಬಿಡು" ಅಂದೆ. ಬೆರಳಿಗೆ ಟೋಪಿ ತೊಡಿಸಿದಂತೆ, ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು. ಹಿತವಾಗಿತ್ತು, ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ, ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ, ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ. ತುಟಿಯಗಲಿಸಿದೆ. "ನೋಡಿ ಇಷ್ಟೇ, ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ, ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ, ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು. ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ" ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು. ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ.

ಊಟಕ್ಕೆ ಅನ್ನ ಸಾರು ಬಡಿಸಿ, ಇಟ್ಟಳು. ಅವಳತ್ತ ನೋಡಿದ್ದಕ್ಕೆ "ಓಹ್ ನೋವಾಗಿದೆ ಅಲ್ವಾ" ಅಂತ ಕಲೆಸಿ ಚಮಚ ತಂದಿಟ್ಲು. ಇದೇ ಒಳ್ಳೆ ಸಮಯ ಅಂತ, ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ, ಕೈತುತ್ತು ತಿಂದೆ. ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ. "ನಾಲ್ಕೈದು ದಿನ ಹೀಗೇ ಕಟ್ಟು, ಚೆನ್ನಾಗಿ ಗುಣವಾಗ್ಲಿ" ಅಂದೆ, ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ. "ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ, ಡಾಕ್ಟರ ಹತ್ರ ಹೋಗಿ, ಕುಯ್ಯಿಸಿ ತೆಗೆಸಿ, ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ" ಅಂತ ನಾಟಕಕ್ಕೆ ತೆರೆ ಎಳೆದಳು. "ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ, ನಾಳೆ ಎಲ್ಲಾ ಸರಿ ಹೋಗುತ್ತೆ, ಅಮ್ಮ ಹೇಳಿದ ಮೇಲೆ ಸುಮ್ನೇನಾ" ಅಂತ ಸಂಭಾಳಿಸಿದೆ, ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ. ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ, ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ.

ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ. ಹಾಗಂತೆ ಗುಳಿಗೆ, ಸಿರಪ್ಪು, ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ, ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ. ಈ ಪೌಟಿಸ್ ನೋಡಿ... ಕಸ, ಗಾಜಿನ ಚೂರು, ಕಡ್ಡಿ ಏನೇ ಚುಚ್ಚಿದ್ರೂ, ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ. ಮಾರ್ಬಲ್‌ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ. ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ, ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು, ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು. ಬಾಯಿ ಹುಣ್ಣು, ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ, ಗಂಟಲ ಕೆರೆತ, ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ, ಒಂದೊ ಎರಡೊ.
ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ, ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು.

ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ. ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು, ಹಾಗೇ ಊತ ಕೂಡ ಕಮ್ಮಿಯಾಗಿತ್ತು. ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು. "ಏನನ್ನತ್ತೆ ಬೆರಳು" ಅಂತ ಕುಷಲತೆ ಕೇಳಿದ್ಲು. "ಪೌಟಿಸ್‌ನ ಬಿಸಿಯಪ್ಪುಗೆ ಇನ್ನೂ ಬೇಕಂತೆ" ಅಂದೆ. "ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ" ಅಂದ್ಲು. "ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ" ಅಂದೆ ಖುಷಿಯಲ್ಲಿ. ಕೈಯಲ್ಲಿ ಕಪ್ಪಿಟ್ಟು, ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ, "ಮನೆ ಮದ್ದೇನೊ ಸಿಕ್ತು, ಮನೆ ಮುದ್ದು???"... ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು, ಅದೆಲ್ಲ ಬರೆಯೋಕೆ ಅಗಲ್ಲ, ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ, ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ...

ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್‌ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/manemaddu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, April 11, 2010

ಅಪ್ಪಿಕೋ ಚಳುವಳಿ...

ಸುಮ್ಮನೇ ಕೂತಿದ್ದೆ, ಮಾತಿಲ್ಲದೇ... ಅವಳಿರುವಾಗ ಮಾತುಗಳಿಗೆ ಬರ ಬರಲು ಕಾರಣ ಮೊನ್ನೆ ಮೊನ್ನೆ ಜರುಗಿದ ಕದನ. ಇದೇನು ದೊಡ್ಡ ಪಾಣಿಪತ್ ಕದನವೇನಲ್ಲ, ಚಿಕ್ಕ ಕೋಳಿ ಕಲಹ. ಸುಖವಾಗಿದ್ದ ಸುಂದರ ಸಂಸಾರದಲ್ಲಿ ಇದೇನು ಸಮಸ್ಯೆ ಬಂತು ಅಂತಾನಾ, ಅದೇನು ದೊಡ್ಡ ಸಮಸ್ಯೆಯೇ ಅಲ್ಲ ಬಿಡಿ. ಆಗಾಗ ಹೀಗೆ ಚಿಕ್ಕ ಪುಟ್ಟ ಜಟಾಪಟಿಗಳು ಇರಲೇಬೇಕೆಂದು ಸುಮ್ಮನೆ ಕೂರದೆ ಕಾಲು ಕೆರೆದುಕೊಂಡು ಕಾಡಿಸಿ ಕೋಪ ಬರಿಸಿ ಕಿತ್ತಾಡಿಕೊಂಡುಬಿಡುವುದು. ಕದನದಲ್ಲೂ ಒಂಥರಾ ಖುಷಿಯಿದೆ ಅಂತ ಆಗಲೇ ಗೊತ್ತಾಗುವುದು. ಮೊನ್ನೆ ಆಗಿದ್ದು ಕೂಡಾ ಹೀಗೇ, "ತಿಳಿ ನೀಲಿ ಬಣ್ಣದ ಶರ್ಟ್ ಇತ್ತಲ್ಲ, ಎಲ್ಲೇ ಸಿಕ್ತಾ ಇಲ್ಲ" ಅಂತ ಕೂಗಿದ್ದಕ್ಕೆ, "ಹಳೆಯದಾಗಿತ್ತು ಅಂತ, ಪೇಂಟ್ ಮಾಡೊ ಹುಡುಗನಿಗೆ ಕೊಟ್ಟು ಬಿಟ್ಟೆ" ಅಂತ ಪಾಕಶಾಲೆಯಿಂದಲೇ ಹೇಳಿದ್ದಳು. ಮೊದಲೇ ಅದು ನನ್ನ ಮೆಚ್ಚಿನ ಶರ್ಟ ಅದನ್ನ ಹೀಗೆ ಕೊಟ್ಟಿದ್ದಾಳೆ ಅಂದರೆ ಸಿಟ್ಟು ಬಂದು ಬಿಟ್ಟಿತ್ತು, ಕೊಡುವ ಮೊದಲು ಒಂದು ಮಾತು ಕೂಡ ಕೇಳಿಲ್ಲವಲ್ಲ ಅನ್ನೋ ಬೇಸರ ಬೇರೆ. "ಯಾರೇ ಅದನ್ನ ಕೊಡು ಅಂತ ಹೇಳಿದ್ದು" ಅಂತ ದನಿ ಏರಿಸಿದ್ದೆ, ಅಡಿಗೆಯ ಖಾರದ ಘಾಟು ಮೂಗು ಸೇರಿ ಅವಳಿಗೂ ಕೋಪ ನೆತ್ತಿಗೇರಿ, "ಎಲ್ಲಿ ಹೊರಟರೂ ಅದನ್ನೇ ಹಾಕ್ಕೊಂಡು ನಿಲ್ತಾ ಇದ್ರಲ್ಲ, ಫೇವರಿಟ್ಟು ಫೇವರಿಟ್ಟು ಅಂತ... ಅದಕ್ಕೇ ಕೊಟ್ಟೆ" ಅಂತ ಚೀರಿದ್ದಳು. ಪಾಕಶಾಲೆಗೆ ಹೋಗಿ "ಇನ್ನೊಮ್ಮೆ ನನ್ನ ಶರ್ಟ್ ಮುಟ್ಟಿದ್ರೆ ನೋಡು" ಅಂತ ಎಚ್ಚರಿಕೆ ಕೊಟ್ಟು ಬಂದರೆ, ಹೊರಬಂದು ನನ್ನ ಶರ್ಟ್ ಒಮ್ಮೆ ಮುಟ್ಟಿದ್ದಲ್ಲದೇ ತೀಡಿ ಮುದ್ದೇ ಮಾಡಿ ಸುಕ್ಕಾಗಿಸಿ ಹೋಗಿದ್ದು ನೋಡಿ ಕುದ್ದು ಹೋದೆ. ಸಿಟ್ಟಿನಲ್ಲಿ ನೋಡಿ ಶೀತಲ ಸಮರಕ್ಕೆ ನಾಂದಿ ಹಾಡಿದಾಗಲೇ ಶುರುವಾಗಿದ್ದು ಅವಳ ಅಪ್ಪಿಕೋ ಚಳುವಳಿ...

ಏನಿದು ಅಪ್ಪಿಕೋ ಚಳುವಳಿ, ಮರಗಳನ್ನ ಕಡಿಯಬೇಡಿ ಅಂತ ಮರಗಳನ್ನು ಅಪ್ಪಿಕೊಂಡು ನಿಂತು ಕಾಪಾಡಲು ಪರಿಸರವಾದಿಗಳು ಮಾಡಿದ ಚಳುವಳಿ ಅಂತೆ, ಆದರೆ ಅದಕ್ಕೆ ಹೊಸ ಭಾಷ್ಯ ಕೊಟ್ಟದ್ದು ನನ್ನಾಕೆ. ಗೆಳೆಯನೊಬ್ಬ ಮಗುವಿನೊಂದಿಗೆ ಮನೆಗೆ ಬಂದಾಗ
ಇವಳು ಮುದ್ದುಗರೆದದ್ದು ನೋಡಿ ಮರಳಿ ಹೋಗಲೊಲ್ಲದೇ ಇವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತು ಬಿಟ್ಟಿತ್ತು, ಬಾರೋ ಹೋಗೋಣವೆಂದರೆ ಬಿಡಲೊಲ್ಲದು, ಆಗಲೇ ಅದನ್ನು ನನ್ನಾಕೆ ಅಪ್ಪಿಕೊ ಚಳುವಳಿ ಅಂದಿದ್ದು. ಅಂತೂ ಹರಸಾಹಸ ಮಾಡಿ ಬಿಡಿಸಿಕೊಂಡು ಹೋಗಿದ್ದ, ಆದರೂ ಅದೊಂದು ಒಳ್ಳೆಯ ತಂತ್ರ ಅಂತ ಕಂಡುಕೊಂಡಿದ್ದ ಮಗು ಈಗ ಅವನೆಲ್ಲಿ ಹೊರಟು ನಿಂತರೂ ನಾನೂ ಜತೆ ಬರುತ್ತೀನಿ ಅಂತ ಕಾಲಿಗೆ ಅಮರಿಕೊಂಡು ಅಪ್ಪಿ ಕಾಲು ಕಿತ್ತಿಡದಂತೆ ಕೂತುಬಿಡುತ್ತಿತ್ತಂತೆ, ನನ್ನ ಮಗ ಅಪ್ಪಿಕೋ ಚಳುವಳಿಗಿಳಿದಿದ್ದಾನೆ ಅಂತ ಗೆಳೆಯ ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದ. ಮಗುವಿನ ಪ್ರಯೋಗ ಯಶಸ್ವಿಯಾಗಿದ್ದು ಕಂಡು ನನ್ನಾಕೆ ಅದೇ ತಂತ್ರ ನನ್ನ ಮೇಲೆ ಮಾಡುತ್ತಿದ್ದಳು.

ಶರ್ಟ್ ಜಗಳ ಜೋರಾಗಿ, ಮೌನ ಸತ್ಯಾಗ್ರಹ ಶುರು ಮಾಡಿಬಿಟ್ಟಿದ್ದೆ, ಅವಳು ಕೂಗಿದಾಗ ಉತ್ತರಿಸದಾದಾಗ, ನನ್ನೊಂದಿಗೆ ಮಾತಾಡುತ್ತಿಲ್ಲ ಅಂತ ಅವಳಿಗೂ ಗೊತ್ತಾಗಿಹೋಗಿತ್ತು. ಅಂದು ಮುಂಜಾನೆ ಟೇಬಲ್ಲಿನ ಮೇಲೆ ಉಪ್ಪಿಟ್ಟು ಮಾಡಿಟ್ಟು ಕೈಲಿ ಚಮಚೆ ಹಿಡಿದು ನಿಂತಿದ್ದಳು, ಕೇಳಲಿ ಕೊಡೋಣ ಅಂತ. ಮಾತನಾಡಲೇ ಬಾರದು ಅಂತ ತೀರ್ಮಾನಿಸಿದ್ದ ನಾನು ಬಿಸಿ ಬಿಸಿಯಿದ್ದರೂ ಕೈ ಸುಟ್ಟರೂ ಪರವಾಗಿಲ್ಲ ಅಂತ ಕೈಯಲ್ಲೇ ತಿಂದು ಎದ್ದು ಹೋಗಿದ್ದೆ. ಆಗ ಶುರುವಾಗಿದ್ದ ಜಗಳ, ಇನ್ನೂ ಜಾರಿಯಲ್ಲಿತ್ತು. ಈ ಸಾರಿ ಸ್ವಲ್ಪ ಧೀರ್ಘಕಾಲೀನ ಸಮರವಿರಲಿ ಅಂತ ನಿರ್ಧರಿಸಿ, ಪಟ್ಟು ಸಡಲಿಸಿರಲಿಲ್ಲ.

ಎರಡು ದಿನದಿಂದ, ಅಪ್ಪಿಕೋ ಚಳುವಳಿ ಶುರುವಾಗಿತ್ತು, ಮಾತನಾಡುವುದಿಲ್ಲ ಅಂತ ಗೊತ್ತು, ಅದಕ್ಕೆ ಸರಿಯಾಗಿ ಅಫೀಸಿಗೆ ಹೊರಟು ರೆಡಿಯಾಗಿ ನಿಂತಿರುವಾಗ, ಹಿಂದಿನಿಂದ ಬಂದು ಗಪ್ಪನೆ ಅಪ್ಪಿಕೊಂಡು ನಿಂತು ಬಿಡುವವಳು, "ಬಿಡು ಅಂತ ಹೇಳಿ ಬಿಡ್ತೇನೇ, ಇಲ್ಲಾಂದ್ರೆ ಈವತ್ತು ಅಫೀಸಿಗೆ ಚಕ್ಕರ ಹೊಡಿಬೇಕಾಗತ್ತೆ" ಅಂತ ವಾರ್ನಿಂಗ್ ಬೇರೆ, ಹಾಗೂ ಹೀಗೂ ಕೊಸರಿಕೊಂಡು ತಪ್ಪಿಸಿಕೊಂಡು ಹೊರಟು ಹೋಗಿದ್ದೆ, ಎರಡು ದಿನವಂತೂ ಅವಳ ಅಪ್ಪಿಕೋ ಚಳುವಳಿ ಸಫಲವಾಗಿರಲಿಲ್ಲ, ನಿನ್ನೆಯಂತೂ ನಾನು ಪ್ರತಿಭಟಿಸಲೂ ಇಲ್ಲ ಅಂತಾದಾಗ, ತಾನೇ ಬಿಟ್ಟುಕೊಟ್ಟಿದ್ದಳು, ಆಗ ಅವಳ ಮುಖ ನೋಡಿ, ಪಾಪ ಕಾಡಿದ್ದು ಸಾಕೆನಿಸಿ ಮಾತಾಡಿಸಲೇ ಅನ್ನಿಸಿದರೂ ಇರಲಿ ಇನ್ನೊಂದು ಚೂರು... ಮಜವಾಗಿದೆ ಅಂತ ಸುಮ್ಮನಾಗಿದ್ದೆ.

ನನ್ನ ಅಪ್ಪಿಕೋ ಚಳುವಳಿಗಳು ಮಾತ್ರ ಯಾವಾಗಲೂ ಸಫಲವಾಗಿರುತ್ತಿದ್ದವು, ಸಮಯ ಸಾಧಿಸಿ ಸರಿಯಾಗಿ ತಪ್ಪಿಸಿಕೊಳ್ಳದಂತೆ ಬಾಹು ಬಂಧಿಸಿದರೆ ಸಡಲಿಸುತ್ತಿರಲಿಲ್ಲ, ಸಿಡಿಮಿಡಿಗೊಂಡು ಸೋತು ಬಾಯಿಬಿಟ್ಟಿರುತ್ತಿದ್ದಳು. ಅದಂತೂ ಸಫಲವಾಗದಾದಾಗ ಹೊಸ ವರಸೆ ತೆಗೆದಳು, ಅಂದು ಶನಿವಾರ ನಾನಂತೂ ಹೊರಗೆಲ್ಲೂ ಹೋಗುವುದಿಲ್ಲ ಅಂತ ಗೊತ್ತಿದ್ದರಿಂದ, ಗೋಡೆಗಳೊಂದಿಗೆ ಮಾತಾಡುವರಂತೆ ನನ್ನಡೆಗೂ ನೋಡದೇ ವಾರ್ತೆ ಓದತೊಡಗಿದಳು, "ಇಂದಿನ ಸುದ್ದಿಗಳು, ಮನೆಯಲ್ಲಿ ಶುರುವಾದ ಸಮರ, ಸಂಧಾನ ಯತ್ನ ವಿಫಲ, ಮೌನಸತ್ಯಾಗ್ರಹ... ಮನೆತುಂಬ ಕವಿದ ನೀರಸ ವಾತಾವರಣ. ಬಿಕೊ ಅನ್ನುತ್ತಿರುವ ಬೆಡರೂಮು, ಹಾಲ್‌ನಲ್ಲಿ ಹಗಲು ಹೊತ್ತಿನಲ್ಲೇ ಬಾಯಿಗಳಿಗೆ ಬೀಗ. ಯಜಮಾನರು ಮೂರುದಿನದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪಟ್ಟು ಸಡಲಿಸದಿರುವುದರಿಂದ, ಮುಂದುವರೆದ ಮುಷ್ಕರ, ಪಾಕಶಾಲೆಗೆ ಮೂರು ದಿನ ರಜೆ, ಹೊರಗಿನ ತಿಂಡಿ ತಿನಿಸು ತರದಂತೆ ನಿಷೇಧ. ಮನೆಯಿಂದ ಹೊರ ಹೋಗದಂತೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ, ಹೆಚ್ಚಿನ ಸುದ್ದಿಗಳಿಗಾಗಿ ಕೇಳುತ್ತಿರಿ ನಿಮ್ಮ ಮನೆವಾರ್ತೆ." ಅಂತ ಚಿಲಿಪಿಲಿಯೆನ್ನುವಂತೆ ಉಲಿದವಳು, ನಡುವಿಗೆ ಸೆರಗು ಸಿಕ್ಕಿಸಿ, ಸವಾಲು ಹಾಕಿ ಸಿದ್ಧವಾದಳು.

ಪಾಕಶಾಲೆಗೆ ರಜೆಯೆಂದರೆ ಬೇಳೆ ಏನೂ ಬೇಯುವಂತಿರಲಿಲ್ಲ, ಅಪ್ಪಿತಪ್ಪಿ ಕಾನೂನು ಮೀರಿ, ಪಾಕಶಾಲೆಗೆ ಕಾಲಿಟ್ಟರೆ, ಇಲ್ಲ ಪ್ರತಿಬಂಧಕಾಜ್ಞೆ ಮುರಿದು ಮನೆಯಿಂದ ಹೊರಬಿದ್ದರೆ ಮುಂದಿನ ತೀವ್ರ ಪರಿಣಾಮಗಳು ಊಹಿಸಲಸಾಧ್ಯ. ಅಲ್ಲದೇ ಹಾಗೆ ಮಾಡಿ ನಾನೇನೊ ಹೊರಗೇನಾದರೂ ತಿಂದು ಬರಬಹುದೇನೊ ಆದರೆ ಅವಳು ಮಾತ್ರ ಹಾಗೇ ಕೂತಾಳು ಅಂತನ್ನೊ ಬೇಸರ. ಏನು ಮಾಡಲೂ ತಿಳಿಯದಾಯಿತು, ಹಾಗೆ ಮನೆತುಂಬ ಶತಪಥ ತಿರುಗುತ್ತಿದ್ದರೆ ಕಂಡಿತು ಹಣ್ಣಿನ ಬುಟ್ಟಿ, ಅವಳು ಬೇಕಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಿ, ಫಲಾಹಾರ ಸೇವನೆಯಾದರೂ ಮಾಡೋಣ ಅಂತ ಅದನ್ನೇ ಎತ್ತಿಕೊಂಡು ಅವಳಿಗೆ ಕಾಣುವಂತೆ ಹೋಗಿ ಕೂತು, ಸದ್ದು ಮಾಡುತ್ತ ಸೇಬು ಮೆಲ್ಲತೊಡಗಿದೆ ಇನ್ನೊಂದು ಸೇಬುವಿಗೆ ಕೈ ಹಾಕುತ್ತಿದ್ದರೆ, ಕಸಿದುಕೊಂಡು ತಾನೂ ಒಂದು ತಿಂದಳು. ಸಧ್ಯದ ಸಮಸ್ಯೆಯೇನೊ ಬಗೆಹರಿಯಿತು, ಮಧ್ಯಾಹ್ನ ಊಟಕ್ಕೇನು ಮಾಡುವುದು ತಿಳಿಯದಾಯಿತು. ಬೇಗ ರಾಜಿಯಾಗುವ ಇರಾದೆಯೂ ನನಗಿರಲಿಲ್ಲ, ಅದಕ್ಕೆ ಅವಳಿಗೆ ಕೇಳುವಂತೆ "ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ, ಏನೊ ಒಂದು ಆಗುತ್ತೆ" ಅಂತ ಆಕಾಶದತ್ತ ಮುಖ ಮಾಡಿ ಕೈಮುಗಿದು ಹೊರಬಂದೆ.

ದೇವರೇ, ಅವಳನ್ನು ಇನ್ನಷ್ಟು ಕಾಡಿಸು ಅಂತ ಸಹಾಯ ಮಾಡಿದನೋ ಎನೊ, ಪಕ್ಕದಮನೆ ಪದ್ದು ಪಲಾವ್‌ನೊಂದಿಗೆ ಪ್ರತ್ಯಕ್ಷ ಆಗಬೇಕೆ, "ಏನ್ ಮಾಡ್ತಾ ಇದೀರಾ, ಸಂಡೇ ಸ್ಪೇಶಲ್ ಅಂತ ಅವರೇಕಾಳು ಪಲಾವ್ ಮಾಡಿದ್ದೆ, ತಂದೆ" ಅಂತನ್ನುತ್ತಿದ್ದಂತೆ, "ಬನ್ನಿ, ಬನ್ನಿ" ನಾ ಬರಮಾಡಿಕೊಂಡೆ. ಇವಳು ಓಡಿ ಬಂದು "ಅಯ್ಯೊ ಈಗ ತಾನೆ ಊಟ ಆಯ್ತಲ್ಲ, ಸುಮ್ನೇ ಹಾಳಾಗುತ್ತೆ, ಮತ್ತೆ ಮಾಡಿದಾಗ ಕೊಡುವಿರಂತೆ" ಅಂತ ಕಲ್ಲು ಹಾಕಲು ನೋಡಿದಳು, ತಕ್ಷಣ ನಾನು ಪರವಾಗಿಲ್ಲ "ನಾನು ಟೇಸ್ಟ್ ಮಾಡ್ತೀನಿ ಕೊಡಿ ನೀವು" ಅಂತ ಇಸಿದುಕೊಂಡು ಬಂದೆ, ಪದ್ದು ಫುಲ್ ಇಂಪ್ರೆಸ್ ಕೂಡ ಆದಳು. ಅವರೇಕಾಳು ಪಲಾವ್ ಅಲ್ಲ ದೇವರೇ ಕಾಡು ಅಂತ ಕಳುಹಿದ ಪಲಾವ್ ಅನ್ನುತ್ತ ತಂದು ಟೇಬಲ್ಲಿನ ಮೇಲಿಟ್ಟೆ.

ಪದ್ದು ಜತೆ ಮಾತಾಡಿ, ಕಳುಹಿಸಿಕೊಟ್ಟು ಬಂದಳು, ನಾನಂತೂ ತಿನ್ನಲು ಅಣಿಯಾಗಿ ಕೂತಿದ್ದೆ, ನನಗೊಂದು ಪ್ಲೇಟನಲ್ಲಿ ಸ್ವಲ್ಪ ಹಾಕಿಕೊಂಡು ಉಳಿದದ್ದು ಅವಳಿಗನ್ನುವಂತೆ ಇಟ್ಟು ಬಂದೆ, ಕೋಪದಲ್ಲಿ ಕಣ್ಣು ಕೆಂಪಾಗಿಸಿಕೊಂಡು ಬಂದು ಕೂತು ಅವಳೂ ತಿಂದು ಕೈತೊಳೆದುಕೊಂಡಳು. ನನ್ನಾಕೆ ಮಾಡುವ ಪಲಾವನಷ್ಟು ಟೇಸ್ಟ್ ಏನೂ ಆಗಿರಲಿಲ್ಲ ಬಿಡಿ ಆದರೂ ಹೊಟ್ಟೆ ಹಸಿದಾಗ ಸಿಕ್ಕದ್ದೇ ಪಂಚಾಮೃತವಾಗಿತ್ತು. ಇದೇನೂ ಕೆಲಸ ಮಾಡುವ ಹಾಗೆ ಕಾಣದಾದಾಗ ಕೊನೇದಾಗಿ ಅಮ್ಮನ ಹತ್ತಿರ ದೂರು ಕೊಡುತ್ತಾಳೆ ಇನ್ನು ಅಂತ ಗೊತ್ತಿತ್ತು, ಅಲ್ಲದೇ ಮಾತನಾಡಿಸದೇ ಮೂರು ದಿನಗಳು ಬೇರೆ ಆಗಿದ್ದರಿಂದ ನನಗೂ ಒಂಥರಾ ಚಡಪಡಿಕೆ ಶುರುವಾಗಿತ್ತು. ಸೋಲೊಪ್ಪಿಕೊಳ್ಳಬಾರದು ಅಂತ ಸುಮ್ಮನಿದ್ದೇ ಹೊರತು, ಸಿಟ್ಟು ಯಾವಾಗಲೋ ಹೊರಟು ಹೋಗಿತ್ತು.

ಸಾವಿಲ್ಲದ ಮನೆಯ ಸಾಸಿವೆ ಕಾಳು ತಂದರೆ ಬದುಕಿಸಿಕೊಡುತ್ತೇನೆ ನಿನ್ನ ಮಗನನ್ನು ಅಂತ ಬುಧ್ಧ ಹೇಳಿ ಸಾವಿಲ್ಲದ ಮನೆಯೇ ಇಲ್ಲ ಅಂತ ಹೇಗೆ ತಿಳಿಸಿದ್ದನೊ, ಜಗಳವಿಲ್ಲದ ಮನೆಯ ಜೀರಿಗೆ ತಂದು ಕೊಡಿ, ಜಗಳವಿಲ್ಲದ ಜೀವನ ಸೃಷ್ಟಿ ನಾನು ಮಾಡಿಕೊಡುತ್ತೇನೆ! :)
ಸಾವಿಲ್ಲದ ಮನೆ ಸಾಸಿವೆಕಾಳು ಹೇಗೆ ಸಿಗಲಿಕ್ಕಿಲ್ಲವೊ, ಜಗಳವಿಲ್ಲದ ಮನೆ ಜೀರಿಗೆ ಕೂಡ ಸಿಗಲಿಕ್ಕಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಜಗಳವಿಲ್ಲದ ಮನೆ ಕೂಡ ಇಲ್ಲ, ಎಲ್ಲೊ ದೊಡ್ಡ ದೊಡ್ಡ ರಂಪಾಟಗಳಾದರೆ ಇನ್ನೆಲ್ಲೊ, ಜೋರಿಲ್ಲದ ಜಟಾಪಟಿಗಳು ಆದಾವು. ಏನಿಲ್ಲವೆಂದರೂ ಹುಸಿಮುನಿಸು, ತುಸುಕೋಪ ಪ್ರದರ್ಶನಗಳಾದರೂ ಆಗಿರಲೇಬೇಕು. ಈ ಚಿಕ್ಕ ಪುಟ್ಟ ಫೈಟಿಂಗಳಾದ ಮೇಲಿನ ಪ್ರೀತಿಯಿದೆಯಲ್ಲ, ಅದು ಪದಗಳಲ್ಲಿ ಹೇಳಲಾಗದ್ದು. ಯಾರು ಸೋತರು ಯಾರು ಗೆದ್ದರು ಅನ್ನುವುದಕ್ಕಿಂತ, ಇಬ್ಬರೂ ಒಮ್ಮೆಲೇ ಒಬ್ಬರಿಗೊಬ್ಬರು ಸೋಲಲು ತಯ್ಯಾರಾಗಿಬಿಟ್ಟಿರುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳೇ ವಿಕೋಪಕ್ಕೆ ಹೋಗಬಹುದಾದರೂ ಹಾಗಾಗದಂತೆ ಬಿಡದಿದ್ದರೆ, ಸಾರಿಗೆ ಸಾಸಿವೆ ಜೀರಿಗೆಯ ವಗ್ಗರಣೆ ಹಾಕಿದಾಗ ಬರುವ ಚಟಪಟ ಸದ್ದಿನಂತೆ ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ಜಟಾಪಟಿಯಾಗಿ ಹೋದರೆ ಅಮೇಲೆ ಘಂಮ್ಮೆಂದು ಹರಡುವ ಸುವಾಸನೆಯಂತೇ ಸುಮಧುರವಾಗಿರುತ್ತದೆ ಜೀವನ.

ಸಂಜೆಗೆ ಕರ್ಫ್ಯೂ ತೆರವಾಗಿತ್ತು, ಹೊರಗೆ ಹೋಗಿ ಪಕೋಡ, ಬಜ್ಜಿ ಪಾರ್ಸೆಲ್ ಮಾಡಿಸಿಕೊಂಡು ಬಂದೆ. ಎರಡು ಕಪ್ಪು ಜಿಂಜರ್ ಟೀ ಮಾಡಿಕೊಂಡು ಬಂದು ಕೂತು ಪ್ಯಾಕೆಟ್ಟು ತೆರೆದು ಕೂತರೆ, "ಮಾಡುವುದೆಲ್ಲ ಮಾಡುವುದು, ಮತ್ತೆ ಮೇಲೆ ಮಾತಾಡದ ಮುನಿಸ್ಯಾಕೊ" ಅಂತನ್ನುತ್ತ, ಪಕೋಡವೊಂದು ಬಾಯಿಗಿಟ್ಟುಕೊಂಡು ಟೀ ಕಪ್ಪು ಹಿಡಿದು ಒಳ ಹೋದವಳು, ಹೊರಬಂದಾಗ ನೋಡಿದರೆ, ಥೇಟ್ ಬೆದರುಬೊಂಬೆಯಂತೇ ಕಾಣುತ್ತಿದ್ದಳು, ಉಟ್ಟಿರುವ ಸೀರೇ ಮೇಲೆ ಜಾಕೆಟ್ಟಿನಂತೆ ಅದೇ ನನ್ನ ಮೆಚ್ಚಿನ ತಿಳಿನೀಲಿ ಬಣ್ಣದ ಹೊಚ್ಚ ಹೊಸ ಶರ್ಟ ಹಾಕಿಕೊಂಡು ನಿಂತಿದ್ದಳು ನಗು ತಡೆಯಲಾಗದೇ ಪಕ್ಕನೇ ನಕ್ಕುಬಿಟ್ಟೆ. ಯಾವಗ ತಂದಿಟ್ಟಿದ್ದಳೊ... ಅಂಥದ್ದೇ ನನ್ನ ಮೆಚ್ಚಿನ ಶರ್ಟನಂತದ್ದೇ ಹುಡುಕಿ ತಂದಿದ್ದಳು. ಕೈಗಳಗಲಿಸಿ ಅವಳು ಕರೆದರೆ ಅಪ್ಪಿಕೋ ಚಳುವಳಿ ಒಪ್ಪಿಕೊಳ್ಳದೇ ಇರಲಾಗುವಂತಿರಲಿಲ್ಲ. ಹೋಗಿ ಬಾಚಿ ತಬ್ಬಿಕೊಂಡರೆ, ನನ್ನನ್ನೂ ಸೇರಿಸಿಕೊಂಡು ಶರ್ಟಿನ ಬಟನ್ನು ಹಾಕಲು ತಡಕಾಡುತ್ತಿದ್ದಳು...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/appiko.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು