Sunday, January 11, 2009

ಬಿರುಕು...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಸಂಜೆ ಆಫೀಸಿನಿಂದ ಬೇಗ ಬಂದಿದ್ದೆ, ಇವಳು ಮನೆಯಲ್ಲಿರಲಿಲ್ಲ, ಅದೇ ಯಾರದೋ ಮನೇಲಿ ಮಗುವಿನ ಹುಟ್ಟು ಹಬ್ಬವಿದೆ ಅಂತ ಮೊದಲೇ ಹೇಳಿದ್ದರಿಂದ ಅವಳಿಗೇನು ಫೊನು ಮಾಡಿರಲಿಲ್ಲ, ಸೀದಾ ಮನೆಗೆ ಬಂದವನೇ ನನಗೆ ನಾನೇ ಒಂದು ಕಪ್ಪು ಟೀ ಮಾಡಿಕೊಂಡು ಸೊಫಾದ ಮೇಲೆ ಇತ್ತ ಮಲಗಿದ ಹಾಗೂ ಇಲ್ಲ, ಇತ್ತ ಕೂತ ಹಾಗೂ ಅಲ್ಲ ಹಾಗೆ ಬಿದ್ದುಕೊಂಡು ಟೀ ಹೀರುತ್ತಿದ್ದೆ. ಪಕ್ಕದ ಟೀಪಾಯಿ ಮೇಲೆ ಏರಟೆಲ್ ಮೊಬೈಲು ಬಿಲ್ಲು ಪೊಸ್ಟ್ ಬಿದ್ದಿತ್ತು. ಎನೂ ಕೆಲಸವಿಲ್ಲದ ತಲೆ ದೆವ್ವದ ಮನೆಯೆನ್ನುವಂತೆ ಎಂದೂ ನೋಡದ ಬಿಲ್ಲು ನೋಡತೊಡಗಿದೆ, ಇತ್ತೀಚೆಗೆ ಮೊಬೈಲು ಬಿಲ್ಲುಗಳು ಪ್ರತೀ ಕರೆಯ ವಿವರವನ್ನೂ ಕೂಡ ಕೊಡತೊಡಗಿರುವುದರಿಂದ, ಕಂಪನಿಗಳಿಗೆ ಆಫರ್ ಎಂದು ನೂರಾರು ನಿಮಿಷ ಫ್ರೀ ಬೇರೇ ಇರೊದ್ರಿಂದ ಪುಕ್ಕಟೆ ಫೊನು ಮಾಡಿದ್ದೆ ಮಾಡಿದ್ದು ನಾಲ್ಕೈದು ಪುಟ ನಂಬರುಗಳೇ ತುಂಬಿದ್ದವು, ಎಲ್ಲಿಗೆ ಮಾಡಿದ್ದು, ಯಾವಾಗ, ಎಷ್ಟೊತ್ತು ಮಾತಾಡಿದ್ದು, ಎಲ್ಲ ಇತ್ತು. ಹಾಗೇ ನೋಡುತ್ತಿದ್ದವನಿಗೆ ಕಾಣಿಸಿದ್ದೊಂದು ಗೊತ್ತಿಲ್ಲದ ಮೊಬೈಲು ನಂಬರು ಒಂದೇ ದಿನದಲ್ಲಿ ಮೂರು ಗಂಟೆ ಮೂವತ್ತೈದು ನಿಮಿಷ ಮಾತಾಡಿದ್ದು....

ಇವಳು ನಾನು ಮದುವೆಗೆ ಮುಂಚೆ ಮಾತಾಡಿದಾಗ ಬಂದ ಬಿಲ್ಲುಗಳು ಸೇರಿಸಿದ್ದರೆ ಎಷ್ಟು ಕೇಜಿ ರದ್ದಿಯಾಗಿರುತ್ತಿತ್ತೊ ಏನೋ, ಈಗ ನಾನು ನನ್ನ ಕೆಲಸದಲ್ಲಿ ಬಿಜಿ, ಹೇಗೂ ಮನೆಯಲ್ಲಿದ್ದಾಳಲ್ಲ ಅಂತ ಉದಾಸೀನ ಬೇರ್‍ಏ, ಫೊನಿನಲ್ಲಿ ಮಾತೇ ಕಮ್ಮಿಯಾಗಿ ಹೋಗಿದೆ. ಅದರೂ ಇದ್ಯಾರು ಇವಳು ಯಾರ ಜೊತೆ ಇಷ್ಟೊತ್ತು ಮಾತಾಡಿದ್ದು, ನನಗೇ ಗೊತ್ತಿಲ್ಲದೇ ಅನುಮಾನದ ಎಳೆಯೊಂದು ಹೊರಹೊಮ್ಮಿತು... ಇಲ್ಲ ಇಲ್ಲ ಅಂತ ಮನಸು ಹೇಳುತ್ತಿದ್ದರೂ, ಮನೆಯ ಫೊನಿನಿಂದ ಒಂದು ಸಾರಿ ಫೊನು ಮಾಡಿದೆ, ಆಕಡೆಯಿಂದ ಅದ್ಯಾವುದೋ ದನಿ, ಅವನ್ಯಾರೋ ಗೊತ್ತಿಲ್ಲ, ಸುಮ್ಮನೆ "ವಿ ಅರ್ ಕಾಲಿಂಗ್ ಫ್ರಾಮ್ ಕಂಟ್ರಿ ಕ್ಲಬ್ ಸರ್.." ಅಂತ ಏನೊ ಬಡಬಡಿಸಿದೆ, ಆಕಡೆಯಿಂದ ಅದೇ ನಾ ಇಂಥ ಕರ್‍ಎಗಳಿಗೆ ಉತ್ತರಿಸುವಂತೆ "ನಾಟ್ ಇಂಟ್ರೆಸ್ಟೆಡ್.." ಮಾಮೂಲಿ ಉತ್ತರ ಬಂತು.
ಯಾರಿರಬಹುದು?, ಅದ್ಯಾಕೆ ಅವನ ಜೊತೆ ಅಷ್ಟೊತ್ತು ಮಾತಾಡಿದ್ದು? ಎಷ್ಟು ದಿನದಿಂದ ಹೀಗೆ? ಎಷ್ಟೊ ಪ್ರಶ್ನೆಗಳ ತಾಕಲಾಟ ನಡುನಡುವೆ ಇವಳು ಹಾಗಿಲ್ಲ, ಏನೊ ಬೇರೆ ಇರಬೇಕು, ಅಂತ ನನಗೆ ನನ್ನ ಮನಸೇ ಸಮಾಧಾನಿಸುವಂತಿತ್ತು...

ಇದೆಲ್ಲ ತಲೆ ತುಂಬಿ, ಕೊಲಾಹಲವೆದ್ದು ಕಲಸುಮೇಲೊಗರವಾಗಿ, ಟೆನ್ಷನ್ ನಿಂದ ತಲೆನೊವು ಶುರುವಾಗಿ ಇನ್ನೊಂದು ಕಪ್ಪು ಟೀ ಮಾಡಿ ಕುಡಿಯತೊಡಗಿದೆ, ಆದರೂ ಅದ್ಯಾಕೊ ರುಚಿಸಲಿಲ್ಲ, ಒಂದು ಯೊಚಿಸಹೋಗಿ ಇನ್ನೊಂದು ತಿಳಿಯುವಂತೆ, ಇನ್ನೂ ಮನೆಗೆ ಯಾಕೆ ಬಂದಿಲ್ಲ, ಈಗ ಎಲ್ಲಿ ಹೋಗಿದ್ದಾಳೆ, ಇಷ್ಟೊತ್ತಿಗೆಲ್ಲ ಬರಬೇಕಿತ್ತಲ್ಲ ಅಂತೆಲ್ಲ ತಲೆ ಚಚ್ಚಿಕೊಳ್ಳತೊಡಗಿದೆ.

ಅವಳು ಮನೆಗೆ ಬಂದಾಗ ಎಂಟೂವರೆ, ಅಷ್ಟೊತ್ತಿಗೆಲ್ಲ ನಾನು ಏನೇನೊ ಯೋಚಿಸಿಯಾಗಿತ್ತು. ಬರ್ತಿದ್ದಂಗೆ "ಏನು ಇಷ್ಟೊತ್ತು ಎಲ್ಲಿ ಹೋಗಿದ್ದೆ, ಬೇಗ ಬರಬೇಕಿತ್ತು" ಅಂತ ಹರಿಹಾಯ್ದೆ. ಎಂದೂ ಇಲ್ಲದ ನನ್ನ ಸಿಟ್ಟು ನೋಡಿ ಅವಳು ದಂಗುಬಡಿದಂತಿತ್ತು, "ಏನು ನೀವು ದಿನಾಲು ಬೇಗ ಬರೋ ಹಾಗೆ ಹೇಳ್ತಿದೀರಲ್ಲ, ಒಂದು ದಿನ ನಾನಿಲ್ಲದೇ ಕಾಯೋಕೆ ಬೇಜಾರಾ, ನಾನು ದಿನಾಲೂ ಕಾಯ್ತೀನಲ್ಲ" ಅಂತ ತಿರುಗಿಬಿದ್ಲು. ಸುಮ್ಮನಾದೆ, ಆದರೇನು ತಲೆಯಲ್ಲಿ ಇನ್ನೂ ಹುಳು ಕೊರೆದಂಗೆ ಆ ನಂಬರ್ರು ಕೊರೆಯುತ್ತಿತ್ತು. ಎಂದೂ ಶಾಂತವಾಗಿ ಊಟ ಮಾಡದ ನಾವಿಬ್ಬರೂ ಸುಮ್ಮನೆ ಊಟ ಮುಗಿಸಿ ಎದ್ದೆವು, ಮಾತನಾಡಲೇನು ಇರಲಿಲ್ಲ, ಎಲ್ಲ ತಲೆ ತುಂಬ ಹಲವು ಯೋಚನೆಗಳ ಕೊಲಾಹಲ ಮಾತ್ರ, ನನ್ನಲ್ಲಾದ ಬದಲಾವಣೆ ಅವಳು ಗಮನಿಸಿದ್ಲು, ಅವಳೂ ಮಾತಿಗಿಂತ ಮೌನ ಲೇಸು ಅಂದುಕೊಂಡಂತಿತ್ತು. ಇಲ್ಲಾಂದ್ರೆ ಸಾರು ಹೇಗಿದೆ ಅಂತಾನೊ, ಆಫೀಸಿನಲ್ಲಿ ನಿಮ್ಮ ಪಕ್ಕ ಕೂರೊ ಹುಡುಗಿ ಈವತ್ತು ಯಾವ ಡ್ರೆಸ ಹಾಕಿದ್ಲು ಅಂತಾನೊ, ಏನೊ ಒಂದು ಸುದ್ದಿ ತೆಗೆದು ಕೆದಕಿ ಮಾತಾಡೋಳು, ಅವಳಿಗೆ ಮಾತಾಡೋಕೆ ಮಾತು ಬೇಕು ಅಷ್ಟೇ. ಈಗ ಅವನ್ಯಾರೋ ಸಿಕ್ಕೀದಾನಲ್ಲ, ನನ್ನೊಂದಿಗೇನಿದೆ ಮಾತಾಡೋಕೆ ಅಂದುಕೊಂಡೆ.

ಕೇಳಿ ಬಿಡಲೇ ಯಾರದು ಅಂತ, ನಿಜವಾಗಲೂ ಅವನ್ಯಾರೋ ಇದ್ರೆ, ಇವಳ ಬಿಟ್ಟುಕೊಡಲಾಗುತ್ತಾ, ಯಾರೂ ಇಲ್ಲಾಂದ್ರೆ, ನಾನು ಅವಳ ಬಗ್ಗೆ ಹೇಗೆ ಯೊಚಿಸಿದೆನಲ್ಲ ಅಂತ ಏನಂದುಕೊಂಡಾಳು, ಹೀಗೆ ಏನೇನೊ ಯೋಚಿಸುತ್ತ ಹಾಸಿಗೆಯಲ್ಲಿ ಉರುಳಿದೆ. ನಿದ್ದೆಯಂತೂ ಯಾವಾಗಲೋ ಹಾರಿ ಹೋಗಿತ್ತು. ಇನ್ನೂ ಅವಳು ಏನೊ ಕೆಲಸದಲ್ಲಿದ್ಲು ಅಂತ ಕಾಣುತ್ತೆ ಬರುವುದು ಸ್ವಲ್ಪ ಹೊತ್ತಾಯಿತು, ಅದರೂ ನಾನಿನ್ನೂ ಏನೂ ನಿರ್ಣಯಕ್ಕೆ ಬಂದಿರಲಿಲ್ಲ, ಕೇಳುವುದೊ ಬೇಡವೊ ಅನ್ನೊ ತಾಕಲಾಟದಲ್ಲೇ ಇದ್ದೆ. ಬಂದು ಪಕ್ಕದಲ್ಲೇ ಸುಮ್ಮನೆ ಮಲಗಿದಳು, ನನಗೀಗ ಅವಳ ಮೌನ ಸಹಿಸಲಸಾಧ್ಯವಾಯ್ತು. ಸದಾ ಚಟಪಟ ಅಂತ ಮಾತಾಡುವ ಅವಳ ಕೆಲವೊಂದು ಸಾರಿ ನಾನೇ ಬೈದು ಸುಮ್ಮನಾಗಿಸಬೇಕು, ಅದೇಕೊ ಮನೆ ಭೂತಬಂಗಲೆಯಂತೆ ನಿಶಬ್ದವಾದಂತನಿಸಿತು. ಅವಳಿಗೂ ನಿದ್ರೆ ಬಂದಂತಿರಲಿಲ್ಲ, ನನ್ನ ಕಾಡದೇ ಅದೆಂದು ಮಲಗಿಯಾಳು, ತವರುಮನೆಗೆ ಹೋದಾಗಲೂ ಫೊನು ಮಾಡಿ ತಲೆ ತಿಂದಾಗಲೇ ಸಮಾಧಾನ.

ಮಗ್ಗಲು ಬದಲಿಸಿದೆ, ಯೊಚನೆಯೂ ಮಗ್ಗಲು ಬದಲಿಸಿದಂತಿತ್ತು, ಮತ್ತೆ ಮಂಥನ ಶುರು, ಆದರೆ ಈ ಸಾರಿ ತರ್ಕದ ತಕ್ಕಡಿಯಲ್ಲಿ ಪ್ರತಿಯೊಂದು ತೂಗುತ್ತಿದ್ದೆ, ಮದುವೆಯಾಗಿ ಇಷ್ಟು ವರ್ಷವಾಯ್ತು, ಎಂದಾದರೂ ಅವಳು ನನ್ನ ಯಾವತ್ತಾದರೂ ಹಾಗೆ ಅನುಮಾನದಿಂದ ನೋಡಿದ್ದಾಳಾ, ನನ್ನೀ ಚೆಲುವೆಯರ ಚೆಲ್ಲಾಟಗಳ ಬಗ್ಗೆ ಚಕಾರವೆತ್ತಿದ್ದಾಳಾ, ಹೋಗ್ಲಿ ಯಾರಯಾರಿಗೊ ಅಪ್ಸರೆ, ಅಪ್ಪಟ ಗೊಂಬೆಯಂತಿದ್ದಾಳೆ ಅಂದಾಗ ಅಸೂಯೆ ಪಟ್ಟಿದ್ದಾಳಾ. ಇಲ್ಲವಲ್ಲ ಅನುಮಾನ ಪಡಲು ಹಲವು ಅವಕಾಶಗಳಿದ್ದಾಗಲೂ ಅವಳಿಗೆಷ್ಟು ನಂಬಿಕೆ, ನಾನೋ ಯಾವುದೋ ಒಂದು ನಂಬರು, ಮಾತಾಡಿದ್ದು ಮೂರು ತಾಸು ಅಷ್ಟಕ್ಕೆ ಅನುಮಾನ ಪಟ್ಟೆನಲ್ಲ, ಛೀ... ಅನ್ನಿಸಿತು, ಪಕ್ಕದ ಮನೆ ಪದ್ದು, ಹಾಸಿನಿ ಎನ್ನುತ್ತ ಸುತ್ತುವ ನಾನು ಅವಳಿಗೆ ಯಾವ ಸಮ... ಅವಳಿಟ್ಟಿರುವ ಅಷ್ಟು ಪ್ರೀತಿಗೆ ನಾ ನಾಲಾಯಕ್ಕು ಅನ್ನಿಸಿ ಪಾಪಪ್ರಜ್ನೆ ಕಾಡತೊಡಗಿತು... ಹೇಳೊಕೂ ಆಗದೆ, ಬಿಡೊಕೂ ಆಗದೇ ನನ್ನಷ್ಟಕ್ಕೆ ನಾನೇ ಬೆವರಿದೆ... ಅವಳೆಡೆಗೆ ನೋಡಲೂ ಕೂಡ ನನಗೆ ನನ್ನಷ್ಟಕ್ಕೆ ನಾಚಿಕೆಯಾಯ್ತು, ಮತ್ತೆಂದೂ ಅವಳ ಬಗ್ಗೆ ಹಾಗೆ ಯೋಚಿಸೊಲ್ಲ ಅಂತನ್ನಕೊಳ್ಳತೊಡಗಿದೆ. ಅದ್ಯಾಕೊ ಇನ್ನು ತಡೆಯಲಾಗಲಿಲ್ಲ, ಕೈ ಹಿಡಿದು ಎಳೆದೆ, ಕೈ ಕೊಸರಿಕೊಂಡ್ಲು... ಅಯ್ಯೊ ಅವಳಿಗೆ ಸಿಟ್ಟು ಬಂದಂತಿದೆ, ಏನು ಮಾಡ್ಲಿ ಅಂತ ಯೊಚಿಸುವುದರಲ್ಲಿ, ನೀರವ ಮೌನ ಮುರಿದು ಅದೊ ಆಕಡೆಯಿಂದ ಪ್ರಶ್ನೆಯೊಂದು ತೂರಿ ಬಂತು "ನೀವೇನೊ ಮುಚ್ಚಿಡ್ತೀದೀರ..." ತಕ್ಷಣ ತಡವರಿಸುತ್ತ "ಇಲ್ಲ ಹಾಗೇನಿಲ್ಲ" ಅಂತಿದ್ದಂಗೆ " ಇದೊ ಸುಳ್ಳು ಬೇರೆ..." ಅಂತಂದ್ಲು. ಅಷ್ಟೇ ಮಾತೇ ಹೊರಡಲಿಲ್ಲ, ಬಿಸಿತುಪ್ಪ ಬಾಯಲ್ಲಿ ಬಿದ್ದಿತ್ತು, ಉಗುಳುವುದಾ, ನುಂಗುವುದಾ, ಎರಡೇ ಆಯ್ಕೆಗಳು.

ನಂಗೆ ಸುಳ್ಳು ಹೇಳೋಕೆ ಬರೊಲ್ಲ, ಬಂದರೂ ಅವಳ ಮುಂದೆ ಅಂತೂ ಅಸಾಧ್ಯ, ಮುಖ ನೊಡೇ ಗುರುತು ಹಿಡಿದು ಬಿಡ್ತಾಳೆ. ಈಗಂತೂ ಎಕ್ಸಪರ್ಟ್ ಆಗೀದಾಳೆ ಮುಖ ನೊಡದೇ ದನಿಯಲ್ಲೇ ಗೊತ್ತಾಗಿದೆ. ನಾ ಬಾತರೂಮಿನಲ್ಲಿದ್ದು ಬರುವುದು ತಡವಾಗಿಹೊದರೆ ಕರೆದಳೆಂದ್ರೆ, ಲೇ ಬನಿಯನ್ನು ಹಾಕೊತಿದೀನಿ ಬಂದೆ ಅಂದ್ರೆ, "ಆ ನಂಗೊತ್ತು ನಿಮ್ಮ ಬಾಡಿ ಮಸಲ್ಲು ನೊಡಿಕೊಂಡಿದ್ದು ಸಾಕು, ನೀವೇನೂ ಹೃತಿಕ್ ರೊಶನ್ನು ಆಗೊಲ್ಲ ಬನ್ನಿ" ಅಂತದಿರ್ತಾಳೆ "ನಿನಗೆ ಹೇಗೆ ಗೊತ್ತಾಯ್ತು ಬಾಗಿಲ ಸಂದಿಯಲ್ಲಿ ನೊಡ್ತಿದ್ಯಾ" ಅಂದ್ರೆ, "ನಿಮ್ಮ ಬಗ್ಗೆ ನಂಗೆ ಗೊತ್ತಿಲ್ವಾ, ಇಲ್ಲೆ ಕೂತ್ಕೊಂಡು ಎಲ್ಲ ಹೇಳ್ತೀನಿ" ಅಂತ ಸವಾಲೂ ಹಾಕಿರುತ್ತಾಳೆ... ಅದು ನಿಜಾನೆ ಅವಳ ನನ್ನ ಪ್ರತಿಯೊಂದು ನಡೆಯನ್ನೂ ಅರೆದು ಕುಡಿದಿದ್ದಾಳೆ.

"ಏನು ಯೋಚಿಸ್ತಿದೀರಾ, ಏನೊ ಕೇಳಬೇಕಿದೆ, ಆದರೆ ಆಗಲಿಂದ ಕೇಳುತ್ತಿಲ್ಲ" ಅಂತ ಮತ್ತೆ ಉಸುರಿದ್ಲು, ಬಿಸಿತುಪ್ಪ ಉಗುಳುವುದೇ ಸರಿಯೆನ್ನಿಸಿತು, ಗಂಟಲು ಸುಟ್ಟರೆ ತೊಂದ್ರೆ, ತುಪ್ಪ ಮತ್ತೆ ಕೊಂಡುಕೊಳ್ಳಬುದಲ್ವೆ. "ನಾನೀಗ ಹೇಳುವುದ ಕೇಳಿ ನೀನೇನು ಅಂದ್ಕೊತಿಯೇನೊ, ಏನಾದ್ರೂ ತಪ್ಪೆಲ್ಲ ನಂದೆ" ಅಂದ್ರೆ "ರೀ ಪುರಾಣ ಸಾಕು, ವಿಷಯಕ್ಕೆ ಬನ್ನಿ" ಅಂದ್ಲು, ಅವಳ ಕೈ ಗಟ್ಟಿಯಾಗಿ ಹಿಡಿದು ಒಂದೇಟಿಗೆ ಚಹ ಕುಡಿಯುವಾಗ ನೋಡಿದ ನಂಬರಿನಿಂದ, ಇದೊ ಈಗ ಪಕ್ಕದಲ್ಲಿ ಬಿಡ್ಕೊಂಡು ಯೊಚಿಸುತ್ತಿದ್ದದ್ದನ್ನೆಲ್ಲ ವರದಿ ಸಲ್ಲಿಸಿದೆ. ಎಲ್ಲಿ ಬಿಟ್ಟು ಓಡಿ ಹೋಗಿಯಾಳೆಂದು ಕೈಯಿನ್ನೂ ಬಿಗಿಯಾಗಿ ಹಿಡಿದಿದ್ದೆ, "ಬಿಡ್ರೀ ಕೈನಾ" ಚೀರಿದ್ಲು, ಸಿಟ್ಟು ಬಂದಿದೆ, ಇನ್ನು ಇವಳಿಲ್ಲಿರಲ್ಲ, ಅಷ್ಟೇ ಅಂತ ಪೆಚ್ಚು ಮೋರೆ ಹಾಕಿ ನೋಡಿದೆ. "ಇಷ್ಟೇನಾ?" ಅಂತ ನಿಟ್ಟುಸಿರು ಬಿಟ್ಟು "ಆ ನಂಬರ್ರು ಸುಧಾಕರಂದು" ಅಂದ್ಲು. ನಾನಿನ್ನು ಯಾರೀ ಸುಧಾಕರ ಏನು ಎತ್ತ ಎಂದು ಮತ್ತೆ ಯೋಚಿಸುವುದರೊಳಗೆ "ಅದೇ ನಮ್ಮ ಸೊಷಿಯಲ್ಲು ಕ್ಲಬ್ ಹುಡುಗಿ, ಸುಧಾ, ಆ ಸುಧಾ ತರಂಗ ಪತ್ರಿಕೆಯಲ್ಲೇ ತಲೆ ಹುದುಗಿಸಿ ಕೂಡುತ್ತಿದ್ದ ಹುಡುಗಿ, ನಾವೇ ಅಲ್ವೆ ಹೆಸರಿಟ್ಟಿದ್ದು, ಅವಳ ಕೈ(ಕರ) ಹಿಡಿಯಲಿರುವ ಹುಡುಗ, ಹೆಸರು ಗೊತ್ತಿಲ್ಲ ಅದ್ಕೆ, ಅವ್ನು ಸುಧಾ-ಕರ" ಅಂದ್ಲು, ಎನಿಲ್ಲ ಅವಳು ಮೊನ್ನೆ ಮನೆಗೆ ಬಂದಿದ್ದಾಳೆ, ಮದುವೆಗೆ ಮೊದಲು ಹುಡುಗ ಹುಡುಗಿ ಗಂಟೆಗಟ್ಲೆ ಮಾತಾಡೊಲ್ವೆ, ಮೊಬೈಲು ಬಿಲ್ಲು ಜಾಸ್ತಿ, ಅದ್ಕೆ ಇವಳು, ನನಗೆ ತಿಂಗಳಿಗೆ ಹತ್ತು ಗಂಟೆ ಫ್ರೀ ಮಾತಾಡು ಅಂತಾ ತನ್ನ ಮೊಬೈಲು ಕೊಟ್ಟೀದಾಳೆ, ಸಿಕ್ಕಿತು ಚಾನ್ಸು ಅಂತ ಸುಧಾ ಬರೊಬ್ಬರಿ ಮೂರೂವರೆ ಗಂಟೆ ಮಾತಾಡಿದ್ದಾಳೆ, ಅದೇ ನಾ ನೋಡಿ ಇಷ್ಟೆಲ್ಲ ರಾಧ್ಧಾಂತ ಮಾಡಿಕೊಂಡಿದ್ದು.

"ಸಮಾಧಾನ ಆಯ್ತಾ" ಅಂದ್ಲು ನನ್ನ ಕಣ್ಣಲ್ಲಿ ನೀರಾಡಿತು, ಮುಖ ತೋರಿಸಲಾಗದೆ ಮುಚ್ಚುತ್ತಿದೆ. "ರೀ ಯಾಕೆ" ಅಂದ್ಲು, "ಅಷ್ಟು ಒಳ್ಳೆಯವಳಾಗಬೇಡ ನನ್ನ ಮನ ಪೂರ್ತಿ ಬೈದು ಬಿಡು" ಅಂದೆ, "ರೀ ತಪ್ಪು ನಿಮ್ಮದಲ್ಲ, ನೀವು ನನ್ನ ಅಷ್ಟೊಂದು ಹಚ್ಚಿಕೊಂಡಿದೀರ" ಅಂದ್ಲು, ನನಗೇನೂ ತಿಳಿಯಲಿಲ್ಲ, ತಲೆಯ ಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಎದ್ದಿರಬೇಕು, ಅವಳೇ ಹೇಳತೊಡಗಿದಳು. "ಮಗುವಿಗೊಂದು ಗೊಂಬೆ ಕೊಡಿ ಅದನ್ನ ಅದು ಹಚ್ಚಿಕೊಂಡು ಬಿಡುತ್ತೆ, ಅದೊಂಥರ ಅಟ್ಯಾಚ್ಮೆಂಟ್, ಅದಕ್ಕೆ ಅಷ್ಟು ಪ್ರೀತಿ, ಬೇರೆ ಮಗು ಬರಲಿ ನೋಡಿ ಅದು ಗೊಂಬೆ ಕೊಟ್ರೆ ಕೇಳಿ! ಎಲ್ಲೊ ಕಳೆದುಕೊಂಡು ಬಿಡ್ತೀನಿ ಅನ್ನೊ ಭಯ, ಅದೇ ನೀವು... ಅದೇ ಮಗುವಿನ ಅಮ್ಮ ನೋಡಿ, ಮಗು ಅಪ್ಪನ ಹತ್ತಿರ ಹೋಗ್ಲಿ, ಇಲ್ಲ ಅಕ್ಕ, ಮಾಮನ ಹತ್ರ ಹೋಗ್ಲಿ ಬೇಜಾರಿಲ್ಲ, ಮತ್ತೆ ತನ್ನೆಡೆ ಬಂದೆ ಬರುತ್ತೆ ಅನ್ನೊದು ನಂಬಿಕೆ, ಅದು ನಿಜ ಕೂಡ ಮಗುವಿನ ಮೇಲೆ ಅವಳ ಪ್ರೀತಿ ಕಮ್ಮಿಯೇನಾಗಲ್ಲ. ಅದೇ ನಮಗೂ ಅನ್ವಯಿಸುತ್ತೆ" ಏನೊ ಪಕ್ಕಾ ಸಿಧ್ಧಾಂತ ಮಂಡಿಸಿದ್ಲು, ಕರ್ರೆಕ್ಟೆ ಅಲ್ವಾ. ಇನ್ನೂ ಮುಂದುವರೆಸಿ "ಇಲ್ಲಿ ನೀವು ಅನುಮಾನಿಸಿದಿರಿ ಅನ್ನೋದು ಮುಖ್ಯ ಅಲ್ಲ, ನಿಮಗೇ ಗೊತ್ತಿಲ್ಲದೆ ನಿಮ್ಮ ಮನಸು ಹಾಗೆ ಮಾಡಿಸಿತು, ಮನೆಯೆ ಗೊಡೆ ಬಿರುಕು ಬಿಡುವುದು ಸಹಜ, ಬಿರುಕು ಕಂದಕವಾಗುವ ಮುಂಚೆ ಬಿರುಕು ತುಂಬಿ ಬಣ್ಣ ಬಳಿದು ಬಿಡಬೇಕು, ಬೆಳೆಯ ಬಿಡಬಾರದು, ಮನಸಲ್ಲೆ ಹಾಗೆ ತೊಳಲಾಡುತ್ತಿರದೆ ಕೇಳಿ ಬಿಡಬೇಕಿತ್ತು" ಅಂದ್ಲು "ನೀನೇನೊ ಸರಿ ಎನೂ ಅಂದುಕೊಳ್ಳದೇ ಹೃದಯ ವೈಶಾಲ್ಯದಿಂದ ಒಪ್ಪಿಕೊಂಡೆ, ಆದ್ರೆ ಎಲ್ರೂ ಹಾಗೆ ಇರಲ್ಲಾ ಆದ್ರೆ ನನಗೆ ನಿನ್ನ ಮೇಲೆ ನಂಬಿಕೆ ಇರಬೇಕಿತ್ತು, ಅನುಮಾನಿಸಿದ್ದು ನನ್ನ ಮೊದಲ ತಪ್ಪು" ಅಂದೆ "ಅದೂ ಸರಿ ಬಿಡಿ, ಕೇಳಿದರೂ ವಿಕೋಪಕ್ಕೆ ಹೋಗೊ ಚಾನ್ಸುಗಳೂ ಇರ್ತವೆ, ಆದ್ರೆ ನನ್ನ ಮುಂದೆ ನೀವೇನು ಮುಚ್ಚಿಡಬೇಕಿಲ್ಲ" ಅಂತ ಫುಲಟೈಂ ಪರಮಿಷನ್ನು ಕೊಟ್ಲು, ಎನು ಕೇಳಲೂ ಲೈಸನ್ಸು ಸಿಕ್ಕಂತಾಯ್ತು, ಅದ್ರೂ ನಾನಿನ್ನೆಂದೂ ಕೇಳಲಿಕ್ಕಿಲ್ಲ.

ವೀಕೆಂಡಿನ ಸುಂದರ ಸಂಜೆಯೊಂದು ನಂಬರಿನಿಂದ ಹಾಳಾಗಿ ಹೋಗಿತ್ತು, ಆದರೂ ಬಿರುಕು ತುಂಬಿ ಸಂಭಂದ ಮತ್ತಷ್ಟು ಗಟ್ಟಿಯಾಗಿತ್ತು. ಕ್ಷಣ ಮಾತ್ರದಲ್ಲೆ ಆಕಡೆಯೆಲ್ಲೊ ಮುಖ ಸಿಂಡರಿಸಿಕೊಂಡು ಬಿದ್ದವಳು, ಕೊರಳಿಗೆ ಸುತ್ತಿಕೊಂಡಿದ್ಲು, ಹುಚ್ಚು ಯೊಚನೆಗಳ ಹೊಯ್ದಾಟದಲ್ಲಿ ತಲೆ ಹುಚ್ಚೆದ್ದು ನೋಯುತ್ತಿತ್ತು. ಅದರೂ ಏಕೊ ಮನಸು ಏನೊ ಭಾರ ಇಳಿಸಿದಂತೆ ನಿರಾಳವಾಗಿತ್ತು, ತಲೆ ನೋವಿದೆಯೆಂದದ್ದಕ್ಕೆ ಇವಳ ಬೆರಳುಗಳು ಹಣೆಯ ಮೆಲೆ ಪರ್‍ಏಡು ನಡೆಸಿದ್ದವು. ಬೊಂಬೆ ಸಿಕ್ಕ ಮಗುವಿನಂತೆ ಬಾಚಿ ಅಪ್ಪಿಕೊಂಡಿದ್ದೆ, ಯಾರೂ ಕಿತ್ತುಕೊಳ್ಳದಂತೆ. ಬಹಳ ಹೊತ್ತು ಅವಳು ಸುಮ್ಮನಿರುವುದಿಲ್ಲ... "ರೀ ನಾಳೆ ಫಿಲ್ಮಗೆ ಕರ್ಕೊಂಡೊ ಹೊಗ್ತೀರಾ" ಅಂದ್ಲು..."ಹೂಂ 'ಗಜಿನಿ' ಹೊಗೋಣಾ" ಅಂದೆ ಎನ್ ಬೇಡ ಅವನ ಹಾಗೆ ನೀವು ನನ್ನ ಮರೆತುಬಿಟ್ರೆ ಅಂತಾ ಕಿಚಾಯಿಸಿದ್ಲು, "ಸರೀ ನಾವಿಬ್ಬರೂ ಪರಫೆಕ್ಟು ಜೋಡಿ ಅಲ್ವಾ 'ರಬ್ ನೆ ಬನಾ ದಿ ಜೊಡಿ' ಹೊಗೊಣಾ" ಅಂದಿದ್ದಕ್ಕೆ " ರೀ ಯಾವುದಾದ್ರೂ ಕನ್ನಡ ಫಿಲ್ಮ ಹೊಗೋಣ 'ಗುಲಾಮ' ಹೇಗೆ" ಅಂದ್ಲು ನಾನೇನು ನಿನ್ನ ಗುಲಾಮ ಅಲ್ಲ ಬರಲ್ಲ ಹೋಗು ಅಂದೆ, ಕೊನೆಗೆ "ಸರಿ 'ನೀನ್ಯಾರೆ' ಹೊಗೋಣ" ಅಂದ್ರೆ..."ರೀ ನಾನ ಕಣ್ರಿ ನಿಮ್ ಹೆಂಡ್ತಿ ನೀನ್ಯಾರೆ ಅಂತ ಕೇಳ್ತಿದೀರಲ್ಲ" ಅಂತ ತುಂಟಾಟಕ್ಕಿಳಿದಳು, ಫಿಲ್ಮ ನಾಳೆ ನೋಡಿದ್ರಾಯ್ತು ತುಂಟಿ ಬಿಟ್ಟರೆ ಮಾತಾಡ್ತಾನೇ ಇರ್ತಾಳೆ ಅಂತ ತುಟಿಗೆ ತುಟಿ ಲೊಕ್... ಅಹಾ ಏನ್ ಇನ್ನೂ ನೊಡ್ತಿದೀರ... ನಮ್ಮನೆ ನಮ್ಮ ಸಂಸಾರ, ಏನೊ ಸ್ವಲ್ಪ ಜಗಳ ಆಗ್ತಿರತ್ತೆ... ಗಂಡ ಹೆಂಡ್ತಿ ಜಗಳ ಉಂಡು ಮಲಗೊ ತನಕ ಅಂತಾರೆ... ನೀವು ಅನುಮಾನಿಸಿ ನಿಮ್ಮನೇಲಿ ಬಿರುಕು ಬಿಡದಂದೆ ನೋಡಿಕೊಳ್ಳ ಹೋಗಿ... ಹ ಹ ಹ ಹ...

ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/biruku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Saturday, January 3, 2009

ನನ್ನವರ ನನ್ನವರಿಂದ ನನ್ನವರಿಗೋಸ್ಕರ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಮುಂಜಾನೆ ಏಳಾಗಿತ್ತು, ಅಪ್ಪನಿಗೆ ಎಂಟಾದ ಮೇಲೆ ಸೂರ್ಯೊದಯ, ಅದರೂ ನಾವು ಬಂದಿದ್ದೀವಲ್ಲ ಅಂತ ಬೇಗ ಎದ್ದು ಪೇಪರ್ ಓದುತ್ತ ಕುಳಿತಿದ್ರು, ಇವಳು ಪಾಕಶಾಲೆಯಿಂದ ಹೊರಬಂದು ಅಪ್ಪನಿಗೆ ಚಹ ಕೊಟ್ಲು, ನನಗೇ ಅಂದಿದ್ದಕ್ಕೆ, ಮಾಡ್ತಿದೀನೀ ತಾಳಿ ಅಂತ ಗದರಿದಳು. ಅಪ್ಪ ಚಹ ಒಂದು ಸಿಪ್ಪು ಹೀರಿ, ಪಕ್ಕಾ ಉತ್ತರಕರ್ನಾಟಕದ ಸ್ಟೈಲಿನಲ್ಲಿ "ಚಾ ಭಾಳ ಚಲೋ ಮಾಡೀವಾ! ಸಕ್ರೀ ಗಿಕ್ರೀ ಅಗ್ದೀ ಕರೆಕ್ಟ ಹಾಕೀ" ಅಂತ ಹೊಗಳುತ್ತಿದ್ದಂತೇ, "ಅಲ್ಲ ಹಾಕಿ ಮಾಡೀನ್ರಿ ಕೆಮ್ಮಾ ಕಫಾ ಎಲ್ಲ ಕ್ಲಿಯರ ಆಗತೈತ್ರಿ" (ಅಲ್ಲ ಅಂದ್ರೆ, ಅದ ಶುಂಟಿ, ಅದರಕ್, ಜಿಂಜರ್ ಅಂತಾರಲ್ಲ ಅದು) ಅಂತ ಕೊಚ್ಚಿಕೊಂಡ್ಲು. ಮುಖ ಇಷ್ಟಗಲಾ ಮಾಡಿಕೊಂಡು ಹೆಮ್ಮೆಯಿಂದ ಈಕಡೆ ಬರ್ತಿದ್ದಂಗೆ ಅಮ್ಮ ಹಾಲು ಖಾಲಿ ಮಾಡಿದ್ದಕ್ಕೆ ಇವಳ ಬಯ್ಯದೇ, "ಹಾಲಿನ್ಯಾಗ್ ಚಾ ಬೇಕ ನಿಮ್ಮ ಮಾವಾರಿಗೆ, ನೀನರ ಎನ್ ಮಾಡಿ ಬಿಡ" ಅಂತ ಸಪೊರ್‍ಟ್ ಮಾಡಿದ್ದು ಕೇಳ್ತು. ಶುಧ್ಧ ಪೆಕರನಂತೆ ನಾ ಕೂತಿದ್ದು ನೋಡಿ ತಂಗಿ ಇವ್ಳ ಕಿವಿಯಲ್ಲಿ ಏನೊ ಊದಿ ನಕ್ಕದ್ದು ಕಂಡಿತು...

ಊರಲ್ಲಿದ್ದೆ, ಅಪ್ಪ ಅಮ್ಮ ಎಲ್ಲ ನೋಡಿ ಮಾತಾಡಿ ಬರಲು ಹೊಗಿದ್ದೆ. ಇತ್ತೀಚೆಗೆ ನಾನೇ ಹೊರಗಿನವನೇನೋ ಅನ್ನುವಷ್ಟು ನನ್ನವಳು ಅವರೊಂದಿಗೆ ಬೆರೆತು ಹೋಗಿದ್ದಾಳೆ. ಅಮ್ಮ ಅವಳ ಸಪೊರ್‍ಟ್ ಮಾಡೋದೇನು, ಅಪ್ಪ ಅವಳ ಹೊಗಳುವುದೆನೋ, ತಂಗಿ ಅವಳು ಗೆಳತಿಯರಂತೆ ಗುಸುಗುಸು ಮಾತಾಡಿಕೊಳ್ಳೊದೇನು... ಒಂದೇ ಎರಡೇ... ಇದೆಲ್ಲ ಢಿಡೀರೆಂದು ಆದ ಬದಲಾವಣೆಯೇನಲ್ಲ... ಹೆಚ್ಚು ವರದಕ್ಷಿಣೆ ತಂದ ಸೊಸೆಗೆ ತೋರುವ ನಾಟಕದ ಪ್ರೀತಿಯಲ್ಲ... ಇದಕ್ಕೆಲ್ಲ ಕಾರಣ ನಾನು... ಹೌದು ನಾನೇ ಅಂತ ಹೆಮ್ಮೆಯಿಂದ ಬೇಕಾದರೆ ಜಂಭದಿಂದ ಹೇಳಿಕೊಳ್ಳುತ್ತೇನೆ.

ಮದುವೆಯಾದ ಹೊಸತರಲ್ಲಿ ಮೊದಲ ರಾತ್ರಿಗೆ ಎಲ್ಲರೂ ಸಾಕಷ್ಟು ಮಾತಾಡಿ ತಯ್ಯಾರಿ ಮಾಡಿಕೊಳ್ಳೊದು, ಆದ್ರೆ ನಾನು ಮೊದಲು ಬಿಟ್ಟು ಮುಂಬರುವ ಹಲವು ರಾತ್ರಿಗಳಿಗೆ ನಿದ್ರೆ ಬರದಂತೆ ಚಿಂತೆ ಹಚ್ಚಿ ಕಾಡುವ ಸಾಂಸಾರಿಕ ಗೊಂದಲಗಳು ಹುಟ್ಟದಂತೆ ಮಾಡಲು ಸಿದ್ದತೆ ಮಾಡುತ್ತಿದ್ದೆ... ಎಷ್ಟೊ ಮದುವೆಗಳ ನೋಡಿದ್ದ ನನಗೆ ನಾನೂ ಅವಲ್ಲೊಬ್ಬನಾಗಬಹುದು ಅನ್ನೊ ಭಯ ಬೇರೆ ಇತ್ತು. ಅದಕ್ಕೆ ಮದುವೆಗೆ ಮುಂಚೆ ನಾವಿಬ್ಬರೂ ಮಾತಾಡಿದಾಗಲೆಲ್ಲ, ಮನೆಯ ಪ್ರತೀ ಚಿಕ್ಕ ಪುಟ್ಟ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಶುಗರ್ ಕಾಯಿಲೆ ಇಲ್ದಿದ್ರೂ ಅಪ್ಪನ ಸಕ್ಕರೆಯಿಲ್ಲದ ಚಹ, ಅಮ್ಮನ ಇಷ್ಟದ ಧಾರಾವಾಹಿಗಳು, ತಂಗಿಯ ಫೆವರಿಟ್ ಸ್ಟಾರುಗಳು, ಅಷ್ಟೇ ಅಲ್ಲ ಮನೆಗೆ ಕೆಲಸಕ್ಕೆ ಬರುವ ಪ್ರತೀ ಮನೆಗೆಲಸದವರು, ಅವರ ಇಷ್ಟಾನಿಷ್ಟಗಳು ಅವಳಿಗೆ ಗೊತ್ತಾಗಿತ್ತು, ಅವಳೊ ಬೆರಳು ಕೊಟ್ರೆ ಕೈ ನುಂಗೊ ಜಾಯಮಾನದವಳು, ಚಹಕ್ಕೆ ಜಿಂಜರ ಸೇರಿಸಿ ಅಪ್ಪನ ಫುಲ್ ಇಂಪ್ರೆಸ್ ಮಾಡಿಬಿಟ್ಟಿದ್ಲು... ಹೌದು ಇದರಲ್ಲಿ ಅವಳ ಪಾತ್ರವೂ ಇದೆ, ನಾನು ಹೇಳಿದ್ದೆಲ್ಲ ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದು ಅವಳೇ ತಾನೆ...

ಇನ್ನೂ ನೆನಪಿದೆ, ಇವಳ ನೋಡಲು ಹೋಗಿದ್ದು, ಹುಡುಗಿ ನೋಡಿಯಾದ ಮೇಲೆ ನೀವಿಬ್ಬರೂ ಏನಾದ್ರೂ ಮಾತಾಡೋದು ಇದ್ರೆ ಅಂತಿದ್ದಂಗೆ ಅವಳು ಕೈಗೊಂದು ಪುಟಾಣಿ ಮರಿ(ಮಗು) ಎತ್ಕೊಂಡು ಮನೆಯ ಟೆರ್ರೆಸ್ಸಿಗೆ ಬಂದ್ಲು, ಆ ಪುಟಾಣಿ ಕಾವಲಿಗೆ ಬಂದಿದ್ದು, ಸೆಕ್ಯೂರಿಟಿ!, ಏನು ಇವಳ ತಿಂದು ಬಿಡ್ತಿದ್ನಾ!!! ನನಗೆ ಎಂಥ ಹೆಂಡತಿ ಬೇಕೆಂದು ನಾ ಕೊರೆಯದೆ, ನಿಮಗೆ ಎಂಥ ಗಂಡ ಬೇಕು ಅಂತದಿದ್ದಕ್ಕೆ, ನಿಮ್ಮಂತಿದ್ದರೆ ಸಾಕು ಅಂತ ಬಾಂಬ್ ಹಾಕಿ ಬಿಟ್ಟಿದ್ಲು, ಅವಳಿಗೆ ಇಂಥದ್ದೇ ಆದ ಕಲ್ಪನೆಗಳೇನಿಲ್ಲ ಅಂತ ಗೊತ್ತಾಗಿ ಹೋಗಿತ್ತು. ನಿಮಗೆ ಎಂಥ ಹೆಂಡತಿ ಬೇಕು ಅಂತ ಮರು ಪ್ರಶ್ನೆಯೊಂದು ತೂರಿ ಬಂದಿತ್ತು. ನನಗೆ ಹೆಂಡತಿಗಿಂತ ನಮ್ಮನೆಗೆ ಸೊಸೆ ಬೇಕು ಅಂತ ಸೂಚ್ಯವಾಗಿ ಹೇಳಿದ್ದಕ್ಕೆ, ನನಗೆ ಮನೆ ಮಗಳಾಗಿ ಬರುವ ಆಸೆ ಅಂತ ಜಾಣ ಉತ್ತರ ನೀಡಿ ಮನಸ ಗೆದ್ದು ಬಿಟ್ಟಿದ್ಲು.

ಮದುವೆಯಾಗಿ ಬಂದ ಮೊದಲ ದಿನದಿಂದಲೇ ಎಲ್ಲರ ಮೋಡಿ ಮಾಡಿ ಬಿಟ್ಲು, ಅಮ್ಮ ಮಾಡುತ್ತಿದ್ದ ಚಹಕ್ಕೆ ಎರಡು ನಿಂಬೆಯ ಎಳೇ ಎಲೆ ಹಾಕಿದ್ಲು ಅಷ್ಟೇ, ಎಲ್ರೂ ಲೆಮನ್ ಫ್ಲೇವರ್ ಟೀ ಮೆಚ್ಚಿದ್ದಕ್ಕೆ ಅಮ್ಮ ಸೊಸೆ ಮಾಡಿದ್ದು, ಸೊಸೆ ಮಾಡಿದ್ದು ಅಂತಾ ಹೇಳುತ್ತ ಹೆಮ್ಮೆಯಿಂದ ತಿರುಗಿದ್ದು ನೋಡಿ, ನನಗೇ ನಂಬಲಾಗಿರಲಿಲ್ಲ... ಆವತ್ತಿನ ಆ ಲೆಮನ್ ಟೀನಿಂದ ಇಂದಿನ ಈ ಜಿಂಜರ ಟೀವರೆಗೂ ಅವಳೊಂದಿನಿತೂ ಬದಲಾಗಿಲ್ಲ, ಅವಳ ಮೇಲಿನ ಎಲ್ಲರ ಪ್ರೀತಿ ಡಬಲ್ ಟ್ರಿಬಲ್ ಆಗುತ್ತ ಹೊರಟಿದೆ.

ಊರಿಗೆ ಹೋಗಿದ್ದೆ ತಡ ಅವಳು ಬಂದಿದ್ದು ಎಲ್ಲರಿಗೂ ಗೊತ್ತಾಗಿರುತ್ತೆ, ಮನೆಗೆಲಸದವರೂ ಮಗ ಸೊಸೆ ಬಂದಿದ್ದಾರೆ ಅವರ ಮನೆಗೆ ಬೇಗ ಹೋಗಬೇಕು ಅಂತ ಬೇರೆ ಮನೆ ಕೆಲಸ ಬಿಟ್ಟು ಓಡೊಡಿ ಬರ್ತಾರೆ. ಕೆಲಸದವರ ಮಗ ಮಗಳ ಹೆಸರಿನಿಂದ ಹಿಡಿದು ಯಾರು ಯಾವ ಕ್ಲಾಸಲ್ಲಿ ಓದ್ತಿದಾರೆ ಅನ್ನೋದು ಕೂಡ ನೆನಪಿಟ್ಟುಕೊಂಡು ಕೇಳ್ತಾಳೆ, ಕ್ಲಾಸಿಗೆ ಫಸ್ಟ್ ಬಂದ್ರೆ ಕೊಡಿಸ್ತೀನೆಂದ ಹೇಳಿ ಉಬ್ಬಿಸಿ ಓದುವಂತೆ ಮಾಡಿದ ಅವರ ಮಗನಿಗೆ ಬ್ಯಾಗು ಮರೆಯದೆ ತಂದಿರ್ತಾಳೆ, ಅದಕ್ಕೆ ಕೊಟ್ಟಿದ್ದು ನೂರೈವತ್ತೇ ಆದ್ರೂ, ಮನೆಗೆಲಸದವಳು ಊರಿಗೆಲ್ಲ ಟಾಂ ಟಾಂ ಅಂತಾ ಬೆಂಗಳೂರಿನಿಂದ ಬ್ಯಾಗು ತಂದು ಕೊಟ್ಟಿದ್ದಾರೆ ಅಂತ ಸಾರಿಕೊಂಡು ಬಂದಿರುತ್ತಾಳೆ. ನಿಜವಾಗ್ಲೂ ಕೆಲಸದವರ ಬಗ್ಗೆ ಕಾಳಜಿವಹಿಸಿ ನೋಡಿ ಮನೆಯ ನೆಮ್ಮದಿಯಲ್ಲಿ ಅವರ ಪಾಲೂ ಇರುತ್ತೆ, ಅದಕ್ಕೆ ಅಲ್ವೆ ನಾ ಮನೆಗೆಲಸದವರ ವಿವರವನ್ನೂ ಇವಳಿಗೆ ಹೇಳಿದ್ದು.

ಅಮ್ಮ ಎಣ್ಣೆ ಬಿಸಿ ಮಾಡಿ ತಲೆ ತುಂಬ ಹಚ್ಚಿ ಅವಳ ಎಣ್ಣೆ ಸ್ನಾನಕ್ಕೆ ರೆಡಿ ಮಾಡುತ್ತಿದ್ರು, ಹೋಗಿ ಕೂದಲ ಹಿಡಿದೆಳದು ತವರು ಮನೆಲೂ ನಿನಗಿಷ್ಟು ಆರೈಕೆ ಮಾಡ್ತಾರಿಲ್ಲೊ ಅಂತ ಛೇಡಿಸಿ ಬಂದೆ, ಅಮ್ಮನೂ ಅಷ್ಟೇ ಅವಳ ಮಗಳಂತೇ ನೋಡಿಕೊಂಡಿದಾರೆ, ಮದುವೆಗೆ ಹುಡುಗಿ ಹುಡುಕುವಾಗಲೇ ಈಗೆಲ್ಲ ಒಳ್ಳೆ ಸೊಸೆ ಸಿಗೊದು ಕಷ್ಟ ಅಂತ ಹೇಳ್ತಾ ಹೇಳ್ತಾ ಸೊಸೆ ಮೇಲಿನ ಅವರ ನಿರೀಕ್ಷೆ (ಎಕ್ಸಪೆಕ್ಟೇಶನ್) ಕಮ್ಮಿ ಮಾಡುತ್ತ ಬಂದಿದ್ದೆ, ಹೀಗಾಗಿ ಅವರೂ ಹೊಂದಾಣಿಕೆ ಮಾಡಿಕೊಳ್ಳಲು ಅಣಿಯಾಗಿದ್ರು. ಅದಕ್ಕೆ ಕೆಲವು ಸಾರಿ ಅವಳ ತಪ್ಪುಗಳನ್ನೂ ಕೂಡ ಅವರು ಸಮರ್ಥಿಸಿಕೊಳ್ಳೊದು.

ಸ್ನಾನ ಮುಗಿದು, ಅಮ್ಮನ ಕೈಯಡಿಗೆ ರುಚಿ ನೋಡಿ, ಬಾಯಿ ಚಪ್ಪರಿಸುತ್ತ ಹೊರ ಬಂದೆ, ಏನೇ ಅನ್ನಿ ಹೆಂಡತಿ ಎಷ್ಟೇ ಪಂಚ ಪಕ್ವಾನ್ನ ಮಾಡಿ ಹಾಕಲಿ ಅಮ್ಮನ ಕೈ ರುಚಿಯೇ ಬೇರೆ, ಇದು ಎಲ್ಲರೂ ಒಪ್ಪಲೇ ಬೇಕು. ಇಲ್ಲಿ ನೊಡಿದ್ರೆ ತಂಗಿ ಇವಳು ನನ್ನ ಲ್ಯಾಪಟಾಪ್ ತೆಗೆದು ಯಾವುದೊ ಫಿಲ್ಮ್ ನೊಡುತ್ತ ಕುಳಿತಿದ್ರು, ಇವಳು ನೊಡಿರ್ತಾಳೆ ಆದ್ರೂ ತಂಗಿಗೆ ಕಂಪನಿ ಕೊಡಲು ಕೂತಿದ್ಲು, ಮೇಲ್ ಚೆಕ್ ಮಾಡ್ಬೇಕು ಲ್ಯಾಪಟಾಪ್ ಕೊಡು ಅಂತಂದಿದ್ದಕ್ಕೆ ತಂಗಿ ಕೊಟ್ಟಿರೋಳು, ಇವಳು ನಡುವೆ ಬಾಯಿ ಹಾಕಿ "ರೀ ಇಂಜನೀಯರ್ರು ಸಾಹೇಬ್ರೆ, ಊರಿಗೆ ಬಂದಾಗ್ಲಾದ್ರೂ ಕಂಪ್ಯೂಟರ್ ಕುಟ್ಟೊದು ಬಿಡಿ" ಅಂತ ಬೈದು, ನನ್ನ ಲ್ಯಾಪ್ ಮೇಲೆ ಎರ್‍ಇ ಕುಳಿತು ಕಿವಿಯಲ್ಲಿ "ನಿಮಗೆ ಲ್ಯಾಪಟಾಪ್ ಬೇಕಿದ್ರೆ ನಾನಿದೀನಲ್ಲ" ಅಂತ ಉಸಿರಿದ್ಲು. ತಂಗಿ ಮುಸಿ ಮುಸಿ ನಗುತ್ತಿದ್ದು ನೋಡಿ ನಾಚಿ, ಅಪ್ಪನೊಂದಿಗೆ ಹರಟಲು ಹೊರಗೆ ಬಂದು ಕಟ್ಟೆ ಮೇಲೆ ಕುಳಿತೆ, ಇನ್ನು ಅಪ್ಪನೊಂದಿಗೆ ಹರಟೆ ಅಂದ್ರೆ ನಾ ತಾಸು ಎರಡು ತಾಸು ಆಕಡೆ ಸುಳಿಯಲ್ಲ ಅಂತ ಗ್ಯಾರಂಟಿಯಾಗಿ, ಅವರಿಬ್ರೂ ಕರೀನಾಳ ಹೊಸ ಬಾಯಫ್ರೆಂಡ ಯಾರು ಅಂತಾ ಚರ್ಚಿಸುತ್ತ ಫಿಲ್ಮ್ ನೋಡತೊಡಗಿದ್ರು.

ಸಂಜೆಯಾಗುತ್ತಿದ್ದಂತೆ ಟೀವೀ ನೊಡುತ್ತ ಕುಳಿತವನನ್ನು ರೀ ಧಾರಾವಾಹಿ ಟೈಮ್ ಆಯ್ತು ರಿಮೊಟು ಕೊಡಿ ಅಂದ್ಲು, ಅಮ್ಮನ ಫೇವರಿಟ್ಟು ಧಾರಾವಾಹಿ ಹತ್ತೋದಿರಬೇಕು, "ಧಾರಾವಾಹಿ ಯಾವುದು, ಮನೆಯೊಂದು ಮುರಿದ ಬಾಗಿಲಾ" ಅಂತ ಕೇಳಿದೆ ಅಲ್ಲ ಅಂತ ರಿಮೊಟು ಕಸಿದುಕೊಂಡು, "ಅತ್ತೆ ಮನೆಯೊಂದು ಮೂರು ಬಾಗಿಲು ಧಾರಾವಾಹಿ ಹತ್ತಿತು ಬನ್ನಿ" ಅಂತ ಚೀರಿದ್ಲು, "ಸ್ವರೂಪಾ ಬಂದ್ರೆ ಕರೀ" ಅಂತ ಎದ್ದು ಬಂದೆ, ಅದೇ "ಈ ಟೀವೀ" ಮನೆಯೊಂದು ಮೂರು ಬಾಗಿಲು ಧಾರಾವಾಹಿ ಕ್ಯಾರೆಕ್ಟರ್ರು ಸ್ವರೂಪಾ ನೊಡೋಕೆ ಚೆನ್ನಾಗಿದಾಳೆ, ಕಣ್ಣಲ್ಲೇ ನಟಿಸಿಬಿಡ್ತಾಳೆ, ಅದ್ಕೆ ಅಲ್ವೆ ನಾ ರಾತ್ರಿ ಒಂಬತ್ತರ ಮುಂದೆ ಅಮ್ಮ ನೊಡದಿದ್ರೂ ಆ "ಮುಕ್ತ ಮುಕ್ತ" ಧಾರಾವಾಹೀಲಿ ಕಲ್ಯಾಣಿಯಾಗಿಯೂ ಬರುವ ಅವಳ ನೋಡಲು ಕೂತ್ಕೊಳ್ಳೊದು, ಅದು ಇವಳಿಗೂ ಗೊತ್ತು, ಆಗ ಇವಳು ಅಮ್ಮ ಸೇರಿ ನನಗೆ ರಿಮೊಟು ಕೊಡದೆ ಸತಾಯಿಸಿ ಮಜಾ ತೊಗೊಳ್ಳೊದು ಕೇಳಲೇಬೇಡಿ...

ಹೀಗೆ ಬಂದುಳಿದು ಐದು ದಿನಗಳಾಗಿದ್ದು ಗೊತ್ತೇ ಆಗ್ಲಿಲ್ಲ, ಮತ್ತೆ ಬೆಂಗಳೂರಿಗೆ ಹೊರಡುವಾಗ ಅಮ್ಮ ಮಾಡಿದ ಉಪ್ಪಿನಕಾಯಿ ಶೇಂಗಾ(ನೆಲಗಡಲೆ, ಕಳ್ಳೆಕಾಯಿ) ಚಟ್ನಿ, ಬೆಳಗಾವಿ ಕುಂದಾ(ಸ್ವೀಟ್, ಪೇಡ ಹಾಗೆ ಇರುತ್ತೆ) ಎಲ್ಲ ಕಟ್ಟಿಸಿಕೊಂಡು ಒಂದು ದೊಡ್ಡ ಬ್ಯಾಗು ಮಾಡಿಕೊಂಡಿರ್ತಾಳೆ, ಇದೆಲ್ಲ ಹೊರೋಕೆ ಕತ್ತೆನೇ ಬೇಕು ಅಂದ್ರೆ ನೀವಿದೀರಲ್ಲ ಅಂತ ಕಾಂಪ್ಲಿಮೆಂಟು ಕೊಟ್ಟು ನನ್ನ ಕತ್ತೆ ಮಾಡಿರ್ತಾಳೆ. ಎಲ್ಲ ಹೊತ್ತುಕೊಂಡು ಬಸ್ಸು ಏರಿ ಕುಳಿತ್ರೆ, "ಅವ್ಳು ನಮ್ಮ ಇವರ ಸೊಸೆ ಅಲ್ವಾ, ಬಹಳ ಓಳ್ಳೆಯವ್ರು ಅಂತಾ ಕೇಳೀದೀನಿ" ಅಂತಾ ಇವಳ ಕಂಡು ಹಿಂದಿನ ಸೀಟಿನಲ್ಲಿ ಯಾರೊ ಮಾತಾಡಿದ್ದು ಕೇಳಿ, ಪ್ರೀತಿ ಉಕ್ಕಿ ಬಂದು ಸ್ಲೀಪರ ಕೊಚ್‍ನ ಪರದೆ ಎಳೆದು ಇವಳ ಬರಸೆಳೆದು ಮುತ್ತಿಡ್ತೀನಿ, ಈ ಬಸ್ಸಿನವ್ರು ಸ್ಲೀಪರ ಕೊಚ್ ಮಾಡಿ ದೊಡ್ಡ ತಪ್ಪು ಮಾಡಿದ್ರು ನೋಡಿ ಅಂತ ಗೊಣಗುತ್ತ ಕೊಸರಿಕೊಂಡು ಆ ಪಕ್ಕ ಜರುಗಿದ್ರೂ ಮತ್ತೆ ಸರಿದು ನನ್ನ ಸುತ್ತ ಒಂದು ಕೈ ಹಾಕಿ ನಿದ್ದೆ ಹೊದ್ಲು, ಎಷ್ಟೋ ಹೊತ್ತು ಮಲಗಿದವಳ ಮುಖ ಹಾಗೇ ನೊಡುತ್ತಿದ್ದೆ. ರಾತ್ರಿಯೆಲ್ಲ ಬಸ್ಸಿನ ಸದ್ದಿನಲ್ಲಿ ನಿದ್ದೆ ಹತ್ತದಿದ್ರೂ ಯಾಕೋ ಮನಸ್ಸಿಗೆ ನೆಮ್ಮದಿಯಿತ್ತು...

ಇಷ್ಟೆಲ್ಲ ನಾ ಮಾಡುತ್ತಿರುವುದು ನನ್ನವರಿಗೊಸ್ಕರ, ಮಾಡಿಸುತ್ತಿರುವುದೂ ನನ್ನವರಿಂದ, ಇದೆಲ್ಲ ನನ್ನವರದ್ದೇ... ಅದಕ್ಕೇ ಅಬ್ರಾಹ್ಂ ಲಿಂಕನ್ ಹೇಳಿದ್ದು ಜನರ, ಜನರಿಂದ, ಜನರಿಗೊಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಅಂತಾ, ಅದೇ ನಾ ತಿರುಚಿ ಬರೆದದ್ದು ನನ್ನವರ ನನ್ನವರಿಂದ ನನ್ನವರಿಗೋಸ್ಕರ ನಾ ನಡೆಸುತ್ತಿರುವ ಸಂಸಾರವೇ ಈ ನನ್ನ ಪ್ರಭುತ್ವ... ಹೆಸರೇ ಪ್ರಭು ಅಲ್ವೆ ಅಂತ ಇವಳು ಟೀಕಿಸಿದ್ದಕ್ಕೂ ಸರಿ ಹೊಯ್ತು...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/nannavara.pdf


ಬಹಳ ಜನ ಕೇಳ್ತಾ ಇದಾರೆ, ಮದುವೇನೆ ಆಗಿಲ್ಲ ಇಂಥ ಲೇಖನ ಯಾಕೆ ಮತ್ತು ಹೇಗೆ ಬರೀತಿದೀಯಾ ಏನು ಮದುವೆಗೆ ಅರ್ಜೆಂಟಾ ಅಂತಾ, ನಾ ಹೀಗೆ ಬರೆದ ಹಲವು ಲೇಖನ ಓದಿ, ರೀ ನಿಮ್ಮ ಅಡ್ಡ ಹೆಸರೂ ಸರೀ ಇದೆ ಮೂಗಿ ಅಂದ್ರೆ ಮಾತು ಬರಲ್ಲ ಅದಕ್ಕೆ ಬರವಣಿಗೆ ಮೂಲಕ ನಿಮ್ಮ ಆಸೆ ಕಲ್ಪನೆ ವಿವರಣೆ ಎಲ್ಲ ಕೊಡ್ತಾ ಇದೀರ ಎನು ಅಂತಾ ಒಬ್ರು ಛೇಡಿಸಿದ್ರು, ನಿಜ ಇದೆಲ್ಲ ನಾ ಮಾತಿನಲ್ಲಿ ಹೇಳಲಾಗದೆ ಬರೀತಿರೊದು, ಬರೆದದ್ದು ನನ್ನವಳಾಗುವವಳಿಗೆ ಅರ್ಥವಾಗಿ ಕಲ್ಪನೆಗಳಲ್ಲಿ ಕಿಂಚಿತ್ತು ನಿಜವಾದ್ರೂ ಬರೆದದ್ದು ಸಾರ್ಥಕ...

ಹಾಗೇ ಬ್ಲಾಗಿನ ಎಲ್ಲ ಅಭಿಮಾನಿ ಓದುಗರಿಗೆ, ಅಭಿಮಾನವಿಲ್ಲದೆಯೂ ಓದುವವರಿಗೆ, ಪ್ರೀತಿಯಿಂದ ಪತ್ರ (ಇ-ಅಂಚೆ -> ಇಂಚೆ) ಬರೆದವರಿಗೆ, ಕಾಮೆಂಟು ಕೊಟ್ಟವರಿಗೆ, ನನ್ನ ಹಾಗೂ ನನ್ನವಳ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ, ಹೂವು ಮಾರುವ ಗುಲಾಬಿ, ಪರಿಚಯದ ಪರಿಮಳ, ಕಿರಾಣಿ ಅಂಗಡಿಯ ಕೀರ್ತಿಯ ಪರವಾಗಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು



ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, December 21, 2008

ಹೆಲ್ಪು ಮಾಡಲು ಹೋಗಿ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಹೆಲ್ಪು ಮಾಡಲು ಹೋಗಿ...



ಅಂದು ಬೆಳಿಗ್ಗೆ ಯಾಕೋ ಇವಳು ಎದ್ದಿರಲಿಲ್ಲ, ಎಂದೂ ತಪ್ಪದೇ ಏಳೊ ಇವಳಿಗೆ ಎನಾಯ್ತು ಅಂತನಕೊಂಡು ಹಾಗೇ ಅಲುಗಿಸಿದೆ, ಇದೇನು ಇಷ್ಟು ಬಿಸಿ, ಮೊದ್ಲೆ ಹಾಟ್ ಆಂಡ್ ಸೆಕ್ಸಿ ಇವ್ಳು, ಅದ್ರೂ ಇವತ್ತು ಬಹಳೇ ಹಾಟು ಅನಿಸ್ತು, ಮಲಗಿದಲ್ಲಿಂದಲೇ ಜ್ವರ ಬಂದಿದೆ ಅಂತ ಕಾಣುತ್ತೆ ಅಂದ್ಲು. ಹಣೆ ಹಿಡಿದು ನೊಡುತ್ತಿದ್ದೆ, "ರೀ ಮೊಟ್ಟೆ ಇದ್ರೆ ತಂದು ಹಾಕಿ ಅಮ್ಲೆಟ್ ಆಗುತ್ತೆ, ನಿಮ್ಮ ಟಿಫಿನ್ ರೆಡಿ" ಅಂದ್ಲು. ಹೌದು ತುಂಬಾನೇ ಬಿಸಿಯಾಗಿತ್ತು, ಈಗ್ಲೂ ತುಂಟಾಟಕ್ಕೇನೂ ಕಮ್ಮಿಯಿಲ್ಲ, "ಕೊಡ್ತೀನ್ ನೊಡು ಒಂದು, ಸುಮ್ನೆ ಮಲಗಿರು" ಅಂತ ಮೇಲೆದ್ದೆ, "ಎನಿಲ್ಲ ಸ್ವಲ್ಪ ಮೈಬಿಸಿಯಾಗಿದೆ, ನಿಮ್ಗೆ ಲೇಟ್ ಆಯ್ತೂಂತ ಕಾಣುತ್ತೆ ಕಾಫಿ ಮಾಡ್ಬಿಡ್ತೀನಿ" ಅಂತ ಎದ್ದಳು, "ಎದ್ರೆ ಕಾಲು ಮುರಿದಾಕಿಬಿಡ್ತೀನಿ ಈವಾಗ್" ಅಂತ ಗದರಿಸಿದೆ, "ಮತ್ತಿನ್ನೇನು, ಕಾಫಿ ಪಕ್ಕದಮನೆ ಪದ್ದು ಮಾಡಿಕೊಡ್ತಾಳಾ" ಅಂದ್ಲು. ಹಾಗೇ ಸುಮ್ನೆ ನೊಡ್ದೆ, ಅವ್ಳಿಗೆ ಗೊತ್ತಾಯ್ತು, ಇನ್ನು ಸುಮ್ನಿರೊದೇ ವಾಸಿ ಅಂತ. ಅವ್ಳು ಹಾಗೇನೆ, ಸ್ವಲ್ಪ ಮಾತು ಜಾಸ್ತಿ ಯಾವಾಗ್ಲೂ ತರಲೆ, ಒಂದ್ನಿಮಿಷ್ ಸುಮ್ನಿರಲ್ಲ, ತಮಿಳು ಬರದಿದ್ರೂ ರೊಡ್ ಕೊನೆ ಮನೆ ತಮಿಳು ಪಾಟಿ (ಪಾಟಿ ಅಂದ್ರೆ ತಮಿಳಲ್ಲಿ ಅಜ್ಜಿ ಅಂತ) ಜತೆ ಹರಟೆ ಹೊಡೆದು ಬರ್ತಾಳೆ ಅಂದ್ರೆ ನೀವೆ ಊಹಿಸಿ.

ಇಂದು ಒಳ್ಳೆ ಚಾನ್ಸು ಸಿಕ್ಕಿದೆ ಅವಳ್ನ ಇಂಪ್ರೆಸ್ ಮಾಡೊಕೆ ಅನ್ಕೊಂಡು, ಈವತ್ತು ನಾನು ಕಾಫಿ, ಟಿಫಿನ್ ರೆಡಿ ಮಾಡಿದ್ರೆ ಹೇಗೆ ಅಂತ ಯೊಚಿಸಿ, "ನೀನು ಮಲಗಿರು ಇಂದು ಕಾಫಿ ಟಿಫಿನ್ ನಂದು" ಅಂದೆ, ಕೇಳಿ ಅವಳ ಟೆಂಪರೇಚರ್ ಇನ್ನೂ ಸ್ವಲ್ಪ ಜಾಸ್ತಿ ಆಯ್ತು ಅಂತ ಕಾಣುತ್ತೆ, "ಎನೂ ಬೇಡ ಹೊಟೇಲ್‍ನಲ್ಲಿ ತಿನ್ಕೊಂಡು ಹೋಗಿ, ನಂಗೆ ಹಸಿವಿಲ್ಲ ಮಧ್ಯಾಹ್ನ ಎನಾದ್ರೂ ಬೇಕಾದ್ರೆ ಬ್ರೆಡ್ ಇದೆ, ಕಾಫಿ ಬ್ರೆಡ್ ಸಾಕು ನಂಗೆ ಅಂದ್ಲು" ನಾನು ಕೇಳ್ಬೇಕಲ್ಲ "ಎನೂ ಬೇಡ ಅನ್ನ ಮಾಡಿದ್ತೀನಿ ಈಗ ಕಾಫಿನಾದ್ರೂ.." ಅಂತಿದ್ದೆ "ರೀ ಸುಮ್ನೆ ಆಫೀಸಿಗೆ ಹೊಗ್ತೀರೊ ಇಲ್ವೊ ಈಗ" ಅಂತ ರೇಗಿದ್ಲು, ಕೇಳೊರ್ಯಾರು...

ಫ್ರಿಜ್ನಲ್ಲಿರೊ ಹಾಲು ತೆಗೆದು ಅಡಿಗೆಮನೆ ಕಡೆ ಕಾಲಿಟ್ಟೆ, ಕಾಫಿ ಮಾಡೋಕೆ ಹೋಗಿ ಇದು ಕಷಾಯ ಮಾಡುತ್ತೆ ಅಂತ ಹಿಂದಿಂದ ಹೊದಿಕೆ ಹಾಗೇ ಹೊದ್ದುಕೊಂಡು ಹೊರಬಂದ್ಲು, ಲೇ ಹೋಗೆ ನಾನ್ ಮಾಡ್ತೀನಿ ಅಂದ್ರೆ, ಸುಮ್ನೆ ನೊಡ್ತಿನೀ ನೀವು ಮಾಡಿ ಅಂದ್ಲು, ಮುಂಜಾನೆ ಮುಂಜಾನೆ ಕಾಮಿಡಿ ಷೊ ಇದು ಅಂತಾ ಪಕ್ಕಾ ಗೊತ್ತಾಗಿತ್ತು ಅವ್ಳಿಗೆ. ಎನ್ ಬಹಳ ಹೆಲ್ಪ ಮಾಡೋರ ಹಾಗೆ, ಒಂದು ಕುರ್ಚಿ ಎಳೆದು ತಂದು ಕೊಟ್ಟು " ಹೂಂ ಹೊಗ್ಲೀ ಕೂತ್ಕೊ" ಅಂದೆ, ಹೊದಿಕೆ ಹೊದ್ಕೊಂಡು ರಾಣಿ ಆಸೀನರಾದ್ರು!!

ಹಾಲು ಕಾಯಿಸಲಿಟ್ಟು, ಪುಡಿ ಕಾಫಿ ಹುಡುಕತೊಡಗಿದೆ, ಅದೊ ಅಲ್ಲಿ ಬ್ರು ಕಾಫಿ ಬಾಟಲ್ಲು ಕಾಣಿಸ್ತು, ಎತ್ತಿ ನೋಡಿದೆ ಯಾಕೊ ಕಲರು ಬೇರ್‍ಎ ಕಾಣಿಸ್ತು, "ಎನೇ ಕಾಫಿ ಪುಡಿ ಕಲರ್ರು ಹೀಗಿದೆ" ಅಂದೆ ಎಲ್ಲಿ ತೊರ್ಸಿ ಅಂದೊಳು ನೊಡಿ "ಅದು ಮಸಾಲೆ ಪುಡಿ, ಕಾಫಿ ಖಾಲಿ ಆಗಿದೆ, ಅದೂ ಗೊತ್ತಾಗಲ್ಲ ನಿಮ್ಗೆ" ಅಂತ ಸಿಟ್ಟಿಗೆದ್ಲು. ಕಾಫಿ ಬಾಟಲಿನಲ್ಲಿ ಮಸಾಲೆ ಹಾಕಿಟ್ರೆ ನಂಗೆ ಹೇಗೆ ಗೊತ್ತಾಗ್ಬೇಕು, "ಸುಮ್ನೆ ನಿನ್ನ ಟೆಸ್ಟ ಮಾಡ್ತಿದ್ದೆ" ಅಂತ ರೀಲು ಬಿಟ್ಟೆ, ಹೇಳಿರದಿದ್ರೆ ಮಸಾಲೆ ಕಾಫಿ ರೆಡಿ ಆಗಿರೋದು!!!

ಪ್ಲಾನ್ ಚೇಂಜ್ ಆಯ್ತು, ಟೀ ಮಾಡೋಣ ಅಂತಾ ಡಿಸೈಡು ಮಾಡಿದೆ. ಟೀ ಯಾವ ದಬ್ಬದಲ್ಲಿದೆ ಅಂತ ಯಾರಿಗೆ ಗೊತ್ತು, ಈ ಸಾರಿ ರಿಸ್ಕು ಬೇಡ ಅಂತ ಅವಳ ಕೇಳಿ ದಬ್ಬ ತೆಗೆದೆ. ಇಷ್ಟರಲ್ಲೇ ಹಾಲು ಬಿಸಿಯಾಗಿ ಉಕ್ಕಿ ಬಂತು, ಹೊಸದಾಗಿ ಮನೆಗೆ ಬಂದಾಗ ಹಾಲು ಉಕ್ಕಿಸಿರಲಿಲ್ಲ, ಅದರ ಬಾಕಿ ಈಗ ತೀರಿತು ಅನ್ಸತ್ತೆ, ಅವಳು ನೋಡಿ ಚೀರಿದಾಗ ಎನೂ ತಿಳಿಯದೆ ಹಾಗೆ ಬರಿಗೈಯಿಂದ ಪಾತ್ರೆ ಇಳಿಸ ಹೊಗಿ ಕೈ ಸುಟ್ಕೊಂಡೆ, ಅದೇ ಭರದಲ್ಲಿ "ಮೊದ್ಲೇ ನೊಡ್ಬಾರದಿತ್ತಾ" ಅಂತ ಬೈದೆ, ಕೈ ಬೇರೆ ಸುಟ್ಟಿತ್ತಲ್ಲ ಸಿಟ್ಟು ಬಂದಿತ್ತು. "ಕಾಫಿ ಮಾಡ್ತೀನಿ ಅಂತ ಬಂದೊರಾರು ನಾನ್ ಮೊದ್ಲೇ ಬೇಡ ಅಂದೆ" ಅಂತ ತಿರುಗಿ ಬಿದ್ಲು, ತಪ್ಪು ನಂದಿತ್ತು... ಇರ್ಲಿ ಬಿಡು ಅಂತಾ ಮತ್ತೊಂದು ಪಾತ್ರೇಲೀ ಎರಡು ಕಪ್ಪು ಅಂತ ಅಳೆದು, ಹಾಲು ಹಾಕಿದ್ರೆ ಸರಿಯಾಗತ್ತೆ ಅಂತ ಎನೊ ಒಂದು ಮಹಾ ಲೆಕ್ಕ ಮಾಡಿ ನೀರು ಹಾಕಿದೆ, ಅಷ್ಟೇನಾ ಅಂದ ಅವಳಿಗೆ ನಾನೆಲ್ಲ ಲೆಕ್ಕ ಮಾಡಿ ಹಾಕೀದೀನಿ ಸರಿಯಾಗತ್ತೆ ಸುಮ್ನಿರು ಅಂತ ಬಾಯಿ ಮುಚ್ಚಿಸಿದ್ದೂ ಆಯ್ತು, ಆಫೀಸಿನಲ್ಲಿ ಶುಗರ್ ಕ್ಯೂಬ್ (ಅದೇ ಸಕ್ಕರೆಯ ಚೌಕಾಕಾರದ ಕಣ್ಣೆಗಳು) ಹಾಕಿ ರೂಢಿ ಈಗ ಸಕ್ಕರೆ ಎಷ್ಟು ಹಾಕಬೇಕು ಅಂತ ಯೊಚಿಸುತ್ತಲೇ ಟೀ ಕುದ್ದು ಕುದ್ದು ಎರಡು ಕಪ್ಪು ಹೊಗಿ ಒಂದು ಕಪ್ಪು ಆಗಿತ್ತು, ಅಂತೂ ಹಾಲು ಜಾಸ್ತಿ ಹಾಕಿದರಾಯ್ತೆಂದು ಸಕ್ಕರೆ ಒಂದಿಷ್ಟು ಸುರಿದೆ. ಹಾಗೂ ಹೀಗೂ ಮಾಡಿ ಒಂದೂವರೆ ಕಪ್ಪು ಟೀ ರೆಡಿಯಾಯ್ತು!!! ಅವಳೆಲ್ಲಿ ಬೇರೆ ಕಪ್ಪಲ್ಲಿ ಕುಡಿತಾಳೆ ನನ್ನ ಕಪ್ಪಿಂದಲೆ ಸಾಸರಿಗೊಂದಿಷ್ಟು ಹಾಕಿ ಹಿಡಿದ್ರೆ, ಕೈಯಿಂದ ಕಪ್ಪು ಕಿತ್ಕೊಂಡ್ಲು, "ನೀವ್ ಮಾಡಿದ್ದು ರುಚಿ ಹೇಗಿದೆ ನೊಡ್ಬೇಕು ನಂಗೇ ಜಾಸ್ತಿ" ಅಂದ್ಲು. ಸಾಸರಿನಲ್ಲಿ ನಾ ಮೊದಲು ರುಚಿ ನೊಡಿದೆ, ಟೀ ಪುಡಿ ಕುದ್ದದ್ದು ಜಾಸ್ತಿಯಾಗಿ ಕಹಿಯಾಗಿತ್ತು, ಮುಖಕ್ಕೆ ಎರಚುತ್ತಾಳೇನೊ ಅಂತ ಅವಳೆಡೆಗೆ ನೊಡಿದ್ರೆ, ಖಡಕ ಟೀ ಮಾಡೀದೀರಾ ಅಂತನ್ನುತ್ತ ಹೀರುತ್ತಿದ್ಲು... ನನಗೇಕೊ ನಾ ಅವಳ ಹೊಸರುಚಿ ಹೊಗಳಿದ್ದು ನೆನಪಿಗೆ ಬಂತು...

ಕುರ್ತುಕೋಟೆ ಅವಲಕ್ಕಿ ಮಾಡ್ಕೊತೀನಿ ಟಿಫಿನ್‍ಗೆ, ದ್ಯಟ್ಸ ಕನ್ನಡ ದಾಟ್ ಕಾಮ್‍ನಲ್ಲಿ ಯಾರೋ ಹೇಗೆ ಮಾಡೊದು ಅಂತ ಲೇಖನ ಬರ್ದೀದಾರೆ ಅಂತಂದೆ, "ರೀ ನಿಮ್ಗೇನು ಈವತ್ತು ರಜೇನಾ" ಅಂತ ಎಡವಟ್ಟು ಪ್ರಶ್ನೆ ಕೇಳಿದ್ಲು, ಪ್ರಶ್ನೆ ಅರ್ಥ ನನಗೆ ಆಗಿತ್ತು, ಆಯ್ತು ನಾರ್ಮಲ್ ಅವಲಕ್ಕೀನೇ ಮಾಡೋಣ ಅಂತಂದು ಈರುಳ್ಳಿ ಹೆಚ್ಚಲು ಕುಳಿತೆ, ಹೆಚ್ಚಿದ್ದಕ್ಕಿಂತ ಕಣ್ಣಲ್ಲಿನ ನೀರು ಒರೆಸಿಕೊಂಡಿದ್ದೇ ಜಾಸ್ತಿ ಆಯ್ತು, ನೋಡಿ ನೋಡಿ ಅವಳೂ ಸೆರಗಿಂದ ಒಂದಿಷ್ಟು ಕಣ್ಣೊರಿಸಿದ್ಲು, ಅದ್ ಹೇಗೆ ಫಾಸ್ಟ್ ಆಗಿ ಹೊಟೇಲಿನಲ್ಲಿ ಕತ್ತರಿಸುತ್ತಾರಲ್ಲ, ಹಾಗೆ ಕತ್ತರಿಸೋದು ಹೇಗೆ ಅಂತ ಅವಳಿಗೆ ತೋರಿಸ ಹೊಗಿ ಬೆರಳು ಕುಯ್ದುಕೊಂಡೆ. ರಕ್ತ ಚಿಮ್ಮಿದ್ದು ನೋಡಿ ಬೆರಳು ಬಾಯಿಗಿಟ್ಕೊಂಡು ಬಯ್ಯೊಕೆ ಬಾಯಿ ತೆರೆಯಲಾಗದೇ ಕಣ್ಣಲ್ಲೇ ಕೋಪ ತೊರಿಸಿದ್ಲು. ಇನ್ನು ಎನೂ ಮಾಡುವುದೂ ಆಗುವ ಹಾಗೆ ಕಾಣಲಿಲ್ಲ, ನಾನು ಮಾಡುತ್ತೇನಂದ್ರೂ ಅವಳು ಬಿಡಲು ಸಾಧ್ಯವಿಲ್ಲ ಅಂತ ಗೊತ್ತಾಗಿ ಮೇಲೆದ್ದೆ.

ನಾನವಳ ಡಾಕ್ಟರ್ ಕಡೆ ಕರೆದುಕೊಂದು ಹೊಗಬೇಕಿದ್ದು, ಈಗ ಅವಳೇ ನನ್ನ ಕರೆದೊಯ್ಯುವ ಹಾಗಾಗಿತ್ತು. ಇಬ್ಬರೂ ಹೋಗಿ ಡಾಕ್ಟರಿಗೆ ಇನ್ನೂರು ಚೆಲ್ಲಿ, ಬೆರಳು ಡ್ರೆಸ್ಸಿಂಗ ಮಾಡಿಸಿಕೊಂಡು, ಮಾತ್ರೆ ಬರೆಸಿಕೊಂಡು ಹೊರಬಂದಿದ್ದಾಯ್ತು. "ನರ್ಸ್ ನೋಡಿದ್ಯಾ" ಅಂತ ತರಲೆ ಪ್ರಶ್ನೆ ಹಾಕಿದೆ, "ಯಾಕೇ ವಾಪಸ್ಸು ಕರ್ಕೊಂಡು ಹೋಗಿ ನಿಮ್ಗೊಂದು ಚುಚ್ಚಿಸಿಕೊಂಡು ಬರ್ಲಾ, ಅವಳು ಇಂಜೆಕ್ಷನ್ ಚೆನ್ನಾಗಿ ಮಾಡ್ತಾಳೆ" ಅಂತ ರೇಗಿದ್ಲು. ಟೈಮು ಬೇರೆ ಆಗಿತ್ತು, ಶಾಂತಿ ಸಾಗರದಲ್ಲಿ (ಹೊಟೇಲು) ಶಾಂತಿಯಿಂದ ಇಬ್ಬರೂ ಇಡ್ಲಿ ತಿಂದ್ವಿ. ಅವಳ ಮನೆಗೆ ಬಿಟ್ಟು ಆಫೀಸಿಗೆ ಹೊರಟೆ... ದಾರಿಯಲ್ಲಿ... ಪಾಪ ಹುಶಾರಿಲ್ಲ್ ಮನೇಲಿ ಒಬ್ಳೆ ಹೇಗೆ? ನಾನಿದ್ದು ಎನಾದ್ರೂ ಹೆಲ್ಪ್ ಮಾಡೋಣ ಅಂತಾ ಯೋಚಿಸಿ, ಟೆಕ್ ಲೀಡ್ಗೆ ಫೊನ್ ಮಾಡಿ ಕೈ ಗಾಯ ಆಗಿದೆ ಆಫೀಸಿಗೆ ಬರ್ತಿಲ್ಲ ಅಂತ ಹೇಳಿ ಮನೆಗೆ ಮರಳಿದೆ... ಅವಳೊ ಬಾಗಿಲಲ್ಲೇ ಕಾಯ್ತಿದ್ಲು "ನಂಗೊತ್ತಿತ್ತು ನೀವು ವಾಪಸ್ಸು ಬರ್ತೀರಂತ, ಏನು ಹೆಲ್ಪ ಮಾಡೊದೂ ಬೇಕಿಲ್ಲ, ಮುಂಜಾನೆಯಿಂದ ಮಾಡಿದ್ದೆ ಸಾಕು ಹೊರಡಿ" ಅಂತ ಹೊರ ದಬ್ಬಿದ್ಲು... ಕೈ ಗಾಯ ನೊಯ್ತಿದೆ ಅಂತಾ ಎನೊ ಸಬೂಬು ಹೇಳಿ ಮನೆಗೆ ನುಗ್ಗಿದೆ... ಮತ್ತೆ ಹೆಲ್ಪ ಮಾಡೋಣ ಅಂತಾ " ಮಧ್ಯಾಹ್ನ ಊಟಕ್ಕೆ ಎನ್ ಮಾಡೊದು ಅಂತಾ" ಕೇಳಿದ ನನ್ನ ಹೀಗೇ ನೊಡಿದ್ಲು... ಅದೇ ಶಾಂತಿ ಇದಾಳಲ್ಲ... ಅಂದ್ರೆ ಶಾಂತಿ ಸಾಗರ ಇದೆಯಾಲ್ಲ ಅಂತಾ ನಗೆ ಬೀರಿದೆ... ನೀವ್ ಸುಧಾರಿಸಲ್ಲ ಅನ್ನುತ್ತ ಬಾಗಿಲ ತಳ್ಳಿದವಳು ನನ್ನ ತೆಕ್ಕೆ ಸೇರಿಕೊಂಡ್ಲು...

ಈ ಲೇಖನಗಳ ಓದಿ ಎಲ್ರೂ ನನ್ನ ಕೇಳ್ತಿದಾರೆ, ಯಾರದೂ ಅಂತಾ, ಒಬ್ಬರಂತೂ ನಿಮ್ಮಿಬ್ಬರೂ ದಂಪತಿಗಳನ್ನ ಒಂದು ಸಾರಿ ನೊಡಬೇಕು ಅಂತಾ ಇಂಚೆ (ಇ-ಅಂಚೆ) ಹಾಕಿದ್ರು... ಇದೆಲ್ಲ ಬರೀ ಕಾಲ್ಪನಿಕ... ಹುಡುಗನ ಹುಚ್ಚು ಯೊಚನೆಗಳು ಮಾತ್ರ... ನನಗಿನ್ನೂ ಮದುವೆಯಾಗಿಲ್ಲ, ಮದುವೆಯಾದ್ರೂ ಇಂಥವಳು ಜೊತೆಯಾಗುವಳೆಂದು ನಂಬಿಕೆಯೂ ಇಲ್ಲ... ಆದರೂ ಇದನ್ನ ಒದಿ ಒಂದು ದಿನ ನನ್ನೊಂದಿಗೆ ಹೀಗಿದ್ರೆ.. ನನಗದೇ ಹೆಚ್ಚು... ಬದುಕು ಅಂದದ ರಂಗೊಲಿ ಎಲ್ಲೆಲ್ಲಿ ಯಾವ ಬಣ್ಣ ತುಂಬಬೇಕು ಅನ್ನೊದು ನಿಮಗೆ ಬಿಟ್ಟಿದ್ದು... ನಾ ತುಂಬಲಿರುವ ಬಣ್ಣಗಳ ಬಗ್ಗೆ ಬರೆಯುತ್ತಿದ್ದೇನೆ.. ನಿಮಗೂ ಎನೋ ಹೆಲ್ಪು ಆಗಬಹುದು ಅಂತಾ...
ಅದ್ಯಾವತ್ತೊ ಬರೆದಿದ್ದೆ..

ಪ್ರೀತ್ಸೊರಿಗೆಲ್ಲ ಅವರ ಪ್ರಿಯತಮೆ ಸಿಕ್ಕಿದ್ರೆ
ನನ್ನವಳು ದ್ರೌಪದಿಯಲ್ಲ ಶತ್ಪದಿಯಾಗಬೇಕಿತ್ತು...
ನಾನಿಷ್ಟ ಪಟ್ಟವರೆಲ್ಲ ನನ್ನವರಾಗಿದ್ರೆ
ನಾ ಎಣಿಸುತ್ತಲೇ ಮುದುಕನಾಗಬೇಕಿತ್ತು...


ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/helpu.pdf

Sunday, December 14, 2008

ಸಿಗ್ನಲ್ಲಿನಲ್ಲಿ ಸೌಂದರ್ಯದೊಂದಿಗೆ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಸಿಗ್ನಲ್ಲಿನಲ್ಲಿ ಸೌಂದರ್ಯದೊಂದಿಗೆ...

ಮುಂಜಾನೆ ಎಂಟು ಗಂಟೆ ಅಂದ್ರೆ ರೋಡುಗಳೆಲ್ಲ ಕಿಕ್ಕಿರಿದ್ರು ತುಂಬಿರುತ್ತವೆ, ಆಫೀಸಿಗೆ ಹೊರಟ ನನ್ಹಂತ ಟೆಕ್ಕಿಗಳು, ಕಾಲೇಜಿಗೆ ಹೊರಟಿರುವ ಹಕ್ಕಿಗಳು, ಮತ್ತು ಶಾಲೆಗೆ ಹೊರಟಿರುವ ಚುಕ್ಕಿಗಳು ಎಲ್ಲಾರಿಗೂ ಅವಸರ... ಅದರ ನಡುವೆ ಈ ಸಿಗ್ನಲ್ಲುಗಳು, ಟ್ರಾಫಿಕ್ಕು ಜಾಮುಗಳು ಅಂತ ಎಲ್ಲರೂ ಬೈಕೊಂಡ್ರೂ ಆ ಬಗ್ಗೆ ನನಗೇಕೊ ಬಲು ಪ್ರೀತಿ. ನಾನು ಆಫೀಸಿಗೆ ತಲುಪುವಲ್ಲಿ ಎನಿಲ್ಲವೆಂದ್ರೂ ಹತ್ತು ಸಿಗ್ನಲ್ಲುಗಳು, ಹತ್ತಿರ ಹತ್ತಿರ ಇಪ್ಪತ್ತು ಕಿಲೊ ಮೀಟರು ಪಯಣ, ಆದ್ರೂ ಬೇಜಾರಿಲ್ಲ. ಇವಳಂತಾಳೇ "ಪಕ್ಕದ ಮನೆ ಪದ್ದೂಗೆ ಮನೆ ತಿರುವಿನಲ್ಲಿ ಸಿಗ್ನಲ್ಲು ಕೊಡೊರು ನೀವು, ಇನ್ನು ಸಿಗ್ನಲ್ಲಿರುವ ಸರ್ಕಲ್‍ ಸಿಕ್ರೆ ಬಿಡ್ತೀರಾ, ಮೊಬೈಲ್ ಟವರ್ ಆಗಿ ಎಲ್ರಿಗೂ ಸಿಗ್ನಲ್ಲು ಕೊಟ್ಟಿದ್ದೆ ಕೊಟ್ಟಿದ್ದು, ಟೆಲಿಕಾಂ ಇಂಜಿನಿಯರಿಂಗ್ ಕಲಿತದ್ದು ಸಾರ್ಥಕ ಆಯ್ತು!! ಹೀಗಿರೊವಾಗ ಅದ ಹೇಗಪ್ಪ ಬೇಜಾರಾಗುತ್ತೆ". ಅದೂ ಸರೀನೆ ಸ್ಕೂಟಿ ಕಣ್ಣಿಗೆ ಕಂಡ್ರಂತೂ ಹಚ್(ವೊಡಫೊನ್) ನಾಯಿಯಂತೆ ಫಾಲೋ ಕೂಡ ಮಾಡ್ತೇನೆ!!!.

ಮನೆಯಿಂದ ಹೊರಟ್ರೆ ಹೊತ್ತು ಹೊಗಿದ್ದೆ ಗೊತ್ತಾಗಲ್ಲ, ಅದ್ಯಾವುದೋ ಸಿಗ್ನಲ್ಲಿನಲ್ಲಿ ಡಿಸ್ಕ್ ಬ್ರೆಕ್ ಹಾಕಿ ಗಕ್ಕನೆ ನಿಂತಾಗಲೇ ಗೊತ್ತಾಗೋದು ಇಷ್ಟು ದೂರ ಬಂದಿದ್ದೀನಲ್ಲ ಅಂತ, ಡಿಸ್ಕ್ ಬ್ರೆಕ್ ಹಾಕಲೇ ಬೇಕಂಬಷ್ಟು ಜೊರಾಗಿ ಬೈಕು ಎನೂ ಓಡ್ಸಲ್ಲ ಆದ್ರೂ ಸ್ಟೈಲ್‍ಗೆ ಸುಮ್ನೆ "ನೋಡು ನನ್ನ ಬೈಕಿಗೆ ಡಿಸ್ಕ್ ಬ್ರೆಕ್ ಇದೆ" ಅಂತ ತೋರಿಸೊಕೆ ಅಷ್ಟೇ. ಇವಳನ್ನ ಮೊದಲ ಸಾರಿ ಬೈಕಿನಲ್ಲಿ ಸುತ್ತೊಕೆ ಕರ್ಕೊಂಡು ಹೊಗಿದ್ನಲ್ಲ ಅವಾಗ ಫ್ರಂಟ್ ಬ್ರೆಕ್ ಹಾಕಿದ್ದೆ ಹಾಕಿದ್ದು, ಸಿಟ್ಟಿಗೆದ್ದು "ರೀ ಇನ್ನೇನಾದ್ರೂ ಬ್ರೆಕ್ ಹಾಕಿದ್ರೊ,ಆ ಡಿಸ್ಕ್ ಬ್ರೆಕ್ ಕಿತ್ತು ಕೈಲಿ ಕೊಡ್ತೀನಿ" ಅಂತ ಬೈದಿದ್ಲು ಹೀ ಹೀ... ಈಗ್ಲೋ ರೀ ಬರ್ತೀನಿ ಕರ್ಕೊಂಡು ಹೊಗ್ರೀ ಅಂದ್ರೂ, "ಲೇ, ನೀ ಹಿಂದೆ ಕೂತ್ಕೊಂಡ್ರೆ ಅಷ್ಟೇ ನಾನ್ ಆ ರೇಸನಲ್ಲಿ ಮಾಡ್ತಾರಲ್ಲ ಹಾಗೆ ಮುಂದಿನ ವ್ಹೀಲ್ ಎದ್ದು ವ್ಹೀಲಿ ಮಾಡ್ಬೇಕಾಗುತ್ತೆ" ಅಂತ ಛೇಡಿಸ್ತಿರ್ತೀನಿ. ನಾನೇನು ಅಷ್ಟ ದಪ್ಪ ಆಗೀದೀನೆನ್ರೀ ಅಂತಾ ಕೇಳ್ತಾಳೆ, ಅದಕ್ಕೆ "ನೀನಿನ್ನೂ ಏಳು ಮಲ್ಲಿಗೆ ತೂಕದ ರಾಜಕುಮಾರಿ ಆದ್ರೆ ಮಲ್ಲಿಗೆ ತೂಕ ಜಾಸ್ತಿ ಆಗ್ಬಿಟ್ಟಿದೆ ಅಷ್ಟೇ" ಅಂತ ಸಮಾಧಾನ ಮಾಡ್ತಿರ್ತೀನಿ.

ಹಾಗೂ ಹೀಗೂ ಮಾಡಿ, ತರಕಾರಿ ತರಬೇಕಿದೆ ಮಾರ್ಕೆಟ್ಗೆ ಬಿಡ್ರಿ ಅಂತಾನೊ, ಮೊಸರಿಲ್ಲ ತರ್ತೀನಿ ಹಾಸಿನಿಯ ಹಾಲಿನಂಗಡಿಗೆ ಡ್ರಾಪ್ ಕೊಡಿ ಅಂತಾನೊ ಜೊತೆ ಬಂದ್ಬಿಡ್ತಾಳೆ, ಎಲ್ಲ ನೆಪ ಅಷ್ಟೇ ನನ್ ಜತೆ ಬರ್‍ಬೇಕಾಗಿರುತ್ತೆ ಅಷ್ಟೇ. ಹೀಗೆ ಬಂದೊಳು ಹಿಂದೆ ಕೂತು ಪಟಪಟಾಂತ ಹೊಗೊ ಬರೊರ್ ಕಾಮೆಂಟ್ರಿ ಶುರು ಮಾಡಿಬಿಡ್ತಾಳೆ, "ರೀ ಅಲ್ಲಿ ನೊಡ್ರ್‍ಇ ಅದೇ ಆ ಕೆಂಪು ಚೂಡಿದಾರ ಹಾಕೊಂಡಿದಾಳಲ್ಲ ಅಲ್ಲಿ" ಅವಳು ಮಾತು ಮುಗಿಸೊ ಮುಂಚೇನೆ "ಸಕತ್ತಾಗಿದಾಳಲ್ಲ!" ಅಂತೀನಿ, ಹೆಲ್ಮೆಟ್ಟನ್ನೆ ತಿವಿದು "ಆ ಚೂಡಿದಾರ ಚೆನ್ನಾಗಿದೆ ಅಲ್ವಾ ಅದ ನೋಡಿ ಅಂದಿದ್ದು" ಅಂತಾಳೆ. ಹೆಲ್ಮೆಟ್ಟು ಕಟ್ಟುನಿಟ್ಟು ಮಾಡಿದ್ದು ಒಳ್ಳೆದಾಯ್ತು ಅಂತನ್ಕೊಂಡು "ಒ ಅದಾ ನಾನೇನು ಕೊಡ್ಸಲ್ಲ ಬಿಡು" ಅಂತೀನಿ, "ಏನ್ ಬೇಡ ಅತ್ತೆ ಬರ್ತೀದಾರಲ್ಲ!!" ಅಂತಾಳೆ. ಅವ್ಳು ಆಗ್ಲೇ ಪ್ಲ್ಯಾನು ಮಾಡಿ ಆಗಿರತ್ತೆ, ಮುಂಜಾನೆಯಿಂದ ಸಂಜೆ ಇರೊ ಬರೊ ಎಲ್ಲಾ ಧಾರಾವಾಹಿಗಳನ್ನು ನೊಡಿ ಸೀರೆಗಳ ಆರಿಸಿಕೊಂಡಿರ್ತಾಳೆ, ಅಮ್ಮ ಬಂದಾಗ "ಅತ್ತೆ, ಮನೆಯೊಂದು ಮೂರು ಬಾಗಿಲು ಧಾರಾವಾಹೀಲಿ ಆ ಅಮ್ಮ ಉಟ್ಕೊಂಡಿರ್ತಾರಲ್ಲ ಅದೆ ಥರ ಸೀರೆ ಇದು ತುಗೊಳ್ಳಿ ಸುಪರ್ ಕಾಣುತ್ತೆ ನಿಮ್ಗೆ" ಅಂತಾ ನನ್ನ ಕ್ರೆಡಿಟ್ ಕಾರ್ಡನ ಖಜಾನೆಯ ಎಲ್ಲ ಬಾಗಿಲುಗಳನ್ನೂ ತೆಗೆದು ಬಿಟ್ಟಿರ್ತಾಳೆ.

ದಾರೀಲಿ ಸುಮ್ನೆ ಹಿಂದೆ ಕೂತಿದ್ದೊಳು, ಯಾವುದೊ ಸಿಗ್ನಲ್ಲಿನಲ್ಲಿ ಹಾಗೇ ನಡು ಬಳಿಸಿ ಹಿಂದಿನಿಂದ ಬಿಗಿಯಾಗಿ ಅಪ್ಪಿಕೊಂಡಳೆಂದರೆ, ನಾ ಜಾಗೃತನಾಗಿ ಬಿಡ್ತೇನೆ. ಅಕ್ಕಪಕ್ಕದಲ್ಲೆ ನಮ್ಮ ಕವರೇಜ್ ಎರಿಯಾನಲ್ಲಿ ಯಾವುದೋ ಸುಂದರ ಹುಡುಗಿ ನನ್ನ ನೊಡುತ್ತಿದೆಯೆಂದು ಗ್ಯಾರಂಟಿ ಆಗಿರತ್ತೆ!!! ಅದ್ಕೆ ಅಲ್ವೆ ಇವ್ಳು ನನ್ನ ಹಾಗೆ ಅಪ್ಪಿ ಇವನು ನನ್ನೊನು ಅಂತ ಸಿಗ್ನಲ್ಲು ಕೊಡ್ತಿರೊದು. ಮಿರರ್‍‍ನಲ್ಲಿ ನೊಡಿದ್ರೆ ಚಾಕಲೇಟು ಕಸಿದೊ ಕೊಳ್ಳೊಕೆ ಹೊದಾಗ ಮಗು ಮುಖ ಮಾಡುತ್ತಲ್ಲ ಥೇಟ್ ಹಾಗೆ ಕಾಣುತ್ತೆ ಇವಳ ಮುಖಾರವಿಂದ. ನಾನೋ ಜರ್ಕಿನ್ ಹಾಕಿಕೊಂಡು, ಕೈಗೆ ಗ್ಲೌಸು, ತಲೆಗೆ ಹೆಲ್ಮೆಟ್ಟು, ಮುಖಕ್ಕೆ ಮಾಸ್ಕ ಮುಚ್ಚಿಕೊಂಡು ಪಕ್ಕಾ ಟೆರರ್‍ಇಸ್ಟ್ ಥರ ಕಾಣ್ತಿರ್ತೀನಿ! ಅದೆಲ್ಲೊ ಗಾಬರಿಯಿಂದ ನೊಡ್ಬೇಕು ನನ್ನ ಯಾರಾದ್ರೂ!! ಇಲ್ಲಂದ್ರೆ ನನ್ನ ಮುಖಕ್ಕೆ ಅದ್ಯಾವ ಹುಡುಗಿ ಮಾರು ಹೊಗೋದು. ಸಿಗ್ನಲ್ಲುಗಳು ಇಷ್ಟ ಆಗೊಕೆ ಇದೊಂದೂ ಇನ್ನೊಂದು ಕಾರಣ, ಈ ಸಿಗ್ನಲ್ಲುಗಳಲ್ಲಿ ಕಾಣುವ ಎಲ್ರೂ ಸುಂದರಿಯರೇ, ಹೆಲ್ಮೆಟ್ಟುಗಳ ಅಡಿಯಲ್ಲಿ ಕಾಣೊದು ಅರೆ ಬರೆ ಮುಖ ಮಾತ್ರ, ಸೌಂದರ್ಯ ಅನ್ನೊದು ಮುಚ್ಚಿಸ್ಟಟ್ಟು ಹೆಚ್ಚಾಗುತ್ತದೆ.

ಅದಕ್ಕೆ ಅದೊಂದು ದಿನ ಬರೆದ ಚುಟುಕು ನೆನಪಾಗುತ್ತದೆ...
ಪಕ್ಕದಲ್ಲೊಂದು ಗಾಡಿ ಬಂದು ನಿಂತಿತು.
ತಿರುಗಿ ನೋಡಿದವಳ ಹೆಲ್ಮೆಟ್ ಅಡಿಯಲ್ಲಿ ಕಂಡದ್ದು ಕಣ್ಣುಗಳೆರಡು ಮಾತ್ರ.
ಹೃದಯ ಬಡಿತ ನಿಂತು ಹೊಯಿತು.
ಯಾಕೆಂದ್ರೆ ಅಷ್ಟರಲ್ಲೇ ಹೋಗಿತ್ತು ಹೃದಯ ಅವಳ ಹತ್ರ.


ಈಗ ಬಿಡಿ ಅದೇ ಚೋಟುದ್ದದ ಟೀಶರ್ಟ್ ಹಾಕೊಂಡು ಪದೇ ಪದೇ ಕೆಳೆಗೆಳುದುಕೊಳ್ಳುತ್ತ ಹೊಗೊದೇ ಫ್ಯಾಷನ್ನು, ಇನ್ನೂ ಕೆಲವರು ಹೈಬ್ರೀಡ ಬದನೆಕಾಯಿ ಥರ, ಇಷ್ಟುದ್ದದ ಜಡೆ(ಹೆರಳು) ಇದ್ದು ಮೊಣಕಾಲುದ್ದದ ಜೀನ್ಸ ಹಾಕಿಕೊಂಡು ಕಾಣಿಸುತ್ತಾರೆ, ಅದೇನೊ ಬದಲಾವಣೆ ಕಾಲದ ಸಾಕ್ಷಿಯೆನ್ನುವಂತೆ ಅತ್ತೂ ಇಲ್ಲ ಇತ್ತೂ ಇಲ್ಲ. ನನಗೇಕೊ ಅವರೆಂದೂ ಅಷ್ಟು ಸುಂದರಿಯರೆಂದೆನಿಸುವುದಿಲ್ಲ. ನನ್ನವಳಿಗೂ ಅದು ಇಷ್ಟವಿದ್ದಂತಿಲ್ಲ, ಅದೊಂದಿನ ಸಿಗ್ನಲ್ಲಿನಲ್ಲಿ ಕಂಡ ಆ ಡುಮ್ಮಿ ಟೈಟ್ ಜೀನ್ಸ ಹಾಕಿದ್ದು ನೊಡಿ "ರೀ ಅದ್‍ಹೆಗ್ರೀ ಅದ್ರೊಳಗೆ ತೂರಿಕೊಂಡ್ಲು" ಅಂತ ನಗಾಡಿದ್ಲು.

ಸೌಂದರ್ಯ ಹೇಗಿರಬೇಕೆಂದ್ರೆ...
ನಡುವಿಗೆ ಕಚಗುಳಿಯಿಡುವಷ್ಟು ಉದ್ದ ಕೂದಲು.
ಒಂದೇ ಕೈಯಲ್ಲಿ ಬಳಸಿ ಹಿಡಿಯಬಹುದಾದ ಬಳಕುವ ನಡು.
ಆ ನಡುವ ಸುತ್ತಿ ಕೈ ಮೇಲೆ ಜರಿದಿರುವ ಸೀರೆ ಸೆರಗು.
ನಡೆದರೆ ಗೆಜ್ಜೆ ಬಳೆಗಳ ಘಲಘಲ್ ಸದ್ದು.


ಸೀರೆ ಕೂಡಾ ಅಷ್ಟೇನು ಸೇಫ್ ಅಲ್ಲ ಅದೂ ಈ ಬೈಕಿನಲ್ಲಿ ಹೊಗುವಾಗಲಂತೂ ಮೊದಲೇ ಅಲ್ಲ. ಆದರೂ ನಮ್ಮ ಭಾರತೀಯ ಪರಂಪರೆಯ ಉಡುಗೆ ಚೆನ್ನಾಗಿದೆ, ಹೀಗಂದಾಗಲೆಲ್ಲ ನನ್ನವಳು ಛೇಡಿಸುತ್ತಾಳೆ "ನೀವ್ಯಾಕೆ ಧೊತಿ ಪೆಠ(ಪಟಗ) ಹಾಕೊಂಡು ಅಪಾಚೆ(ಬೈಕ್) ಒಡಿಸಬಾರ್ದು" ಅಂತ. ನಾನೆಂದೂ ಅವಳಿಗೆ ಜೀನ್ಸ ಟೀಷರ್ಟ್ ಹಾಕಬೇಡೆಂದಿಲ್ಲ, ಅದೇಕೊ ಅವಳು ಹಾಕುವುದೂ ಇಲ್ಲ. ನಾನು ಮಾತ್ರ ಅವಳಿಷ್ಟದಂತೆ ಯಾವತ್ತೋ ಒಂದೊಂದು ಫಂಕ್ಷನ್‍ಗಳಲ್ಲಿ ಧೋತಿ ಉಟ್ಟು ನಿಂತಿರುತ್ತೇನೆ. ಪದೇ ಪದೇ ಬಂದು "ರೀ ಎಳೆದು ಬಿಡ್ಲಾ, ಎಳೆದು ಬಿಡ್ಲಾ" ಅಂತಾ ಕಾಡಿರ್ತಾಳೆ, ನಾನೆಲ್ಲಿ ಧೋತಿ ಕೈಕೊಟ್ಟೀತೆಂದು ಒಳಗೆ ಬರ್ಮುಡ ಹಾಕಿಕೊಂಡು ತಯ್ಯಾರಿಯಲ್ಲಿರುತ್ತೇನೆ!!!

ಹೀಗೆ ಸಿಗ್ನಲ್ಲಿನಲ್ಲಿ ಕಾಣುವ ಪ್ರತಿಯೊಬ್ಬರನ್ನೂ ನನ್ನ ಸೌಂದರ್ಯದ ತಕ್ಕಡಿಯಲ್ಲಿ ತೂಗಿ ಅಳೆದು ನೊಡುತ್ತಿರುತ್ತೇನೆ. ಚುಟುಕುಗಳ ಬರೆಯಲು ಸ್ಪೂರ್ಥಿಯಾದವರೆಷ್ಟೊ, ಕಂಡೂ ಕಾಣದೇ ಕಣ್ಮರೆಯಾದವರೆಷ್ಟೋ, ಆದರೂ ಅದೊಂದು ಸುಂದರಿಯರ ಸ್ವರ್ಗ. ಮುಖ ಕಾಣಿಸದಿದ್ರೂ ಮೈ ಮಾಟದಲ್ಲಿ ಮೇನಕೆಯನ್ನೂ ಮೀರಿಸಿದವಳ ಸ್ಕೂಟಿ ಬೆಂಬಿದ್ದು ಮೂರು ಕಿಲೊಮೀಟರು ಎಲ್ಲೊ ದೂರ ಹೊಗಿ ಪೆಟ್ರೊಲು ವೇಸ್ಟು ಮಾಡಿಕೊಂಡು ಬಂದಿದ್ದು, "ವಿಜಯನಗರದ ಇಳುಕಲಿಗೆ ಬೈಕ್ ಆಫ್ ಮಾಡಿ ಒಡಿಸಿ ಉಳಿಸಿದ ಪೆಟ್ರೊಲ್ ಹೀಗೆ ವೇಸ್ಟು ಆಗದೇ ಇನ್ನೇನು" ಅಂತ ಇವ್ಳು ಹಂಗಿಸೊದು. ಸಿಗ್ನಲ್ಲಿನಲ್ಲಿ ಪಕ್ಕದಲ್ಲೊಂದು ಪರಿ(ದೇವಕನ್ಯೆ) ಕಂಡಾಗ, ಅರವತ್ತು ಎಣಿಸೋ ಸೆಕೆಂಡ ಬೋರ್ಡ್ ಯಾಕೆ ನೂರಿಪ್ಪತ್ತು ಎಣಿಸೊಲ್ಲ ಅಂತಾ ಬೈದುಕೊಳ್ಳೋದು. ಹೀಗೇ ಸಿಗ್ನಲ್ಲುಗಳು ದಿನೇ ದಿನೇ ಹೊಸತನ ತರುತ್ತಿರುತ್ತವೆ.

ಇವಳಿಗೆ ದಿನಾಲೂ ಸಿಗ್ನಲ್ಲಿನ ರಿಪೊರ್ಟು ಕೊಡಬೇಕು, ದಿನಾ ಸರಿಯಾಗಿ ನಾನು ಎಂಟಕ್ಕೆ ಎದ್ದು ಬಿದ್ದು ಓಡುತ್ತಿದ್ದೇನೆಂದರೆ ಅದ್ಯಾವುದೊ ಸಿಗ್ನಲ್ಲಿನಲ್ಲಿ ದಿನಾಲೂ ನಂಗೆ ಯಾವುದೊ ಹುಡುಗಿ ಕಾಣಿಸುತ್ತಿರಬೇಕು ಅಂತ ಇವಳಿಗೆ ಗೊತ್ತಾಗಿರುತ್ತದೆ ಅಷ್ಟರ ಮಟ್ಟಿಗೆ ಅವಳು ನನ್ನ ಅರ್ಥ ಮಾಡಿಕೊಂಡಿದ್ದಾಳೆ, ಅವರನ್ಯಾಕೆ ನೊಡುತ್ತೀರಿ ಮನೆಯಲ್ಲಿ ಮಡದಿಯೆಂದು ನಾನಿಲ್ಲವೇ ಎಂದು ಅವಳೆಂದೂ ಕೇಳಿಲ್ಲ, ಅದೆಲ್ಲ ಕ್ಷಣಿಕ, ಎಷ್ಟೇ ಸಿಗ್ನಲ್ಲುಗಳಿದ್ದರೂ ಅಲ್ಲೆಲ್ಲಿ ಗಾಡಿ ನಿಂತರೂ ಕೊನೆಗೆ ಮನೆಯೆಂಬ ಪಾರ್ಕಿಂಗೆ ಲಾಟಿಗೇ ಬರೊದು ಅಂತ ಅವಳಿಗೂ ಗೊತ್ತು. ನೋಡಿದರೂ ನೋಡದಂಗೆ ನಾಟಕ ಮಾಡುವರ ಮುಂದೆ, ನೋಡಿದ್ದು ನೋಡಿದಂಗೆ ಹೇಳುವ ನಾನೆಂದರೆ ಅವಳಿಗೆ ಹೆಮ್ಮೆ.

ಇಂದು ಸಂಜೆ ಪಾರ್ಟಿ ಇದೆ, ನನ್ನ ಕೊಲೀಗು ಜತೆ ಬರ್ತಿದಾಳೆ ಡ್ರಾಪ್ ಮಾಡಿ ಬರ್ತೀನಿ ಅಂತ ಫೊನ್ ಮಾಡಿದ್ದೆ, "ರೀ ನೊಡೋಕೆ ಚೆನ್ನಾಗಿದಾಳಾ, ಸಿಗ್ನಲ್‍ನಲ್ಲಿ ಸ್ಟೈಲ್ ಹೊಡೀರಿ ಅವ್ಳಗೂ ಫ್ರಂಟ್ ಬ್ರೆಕ್ ಹಾಕಿ ಹೆದರಿಸ್ತೀರಾ?" ಅಂತಾ ಕೇಳಿದ್ಲು ಅವ್ಳಿಗೆ ಗೊತ್ತು ನಾನ್ ಹಾಗೆ ಮಾಡಲ್ಲ ಅಂತಾ, ಸುಮ್ನೆ ಕೆದಕ್ತಾಳೆ, ನಾನ್ ಹೊಟ್ಟೆ ಉರಿಸೋಣ ಅಂತಾ ಫೊನ್ ಮಾಡಿದ್ರೆ ನನ್ನೇ ಏಮಾರಿಸಿ ಬಿಡ್ತಾಳೆ. ಸಿಗ್ನಲ್ಲಿನಲ್ಲಿ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕು ಲೇಟ್ ಆಗಿ ಬರುವ ಗಂಡನ ಅನುಮಾನಿಸುವ, ಮೊಬೈಲ್ ಸಿಗ್ನಲ್ ಸಿಗದೇ ಫೊನ್ ಮಾಡಲಾಗದ ಪತಿಯ ಶಂಕಿಸುವ ಪತ್ನಿಯರ ನಡುವೆ ಇವಳಂಥವರೂ ಇದ್ದಾರೆಂದರೆ ನನಗೇ ಅಚ್ಚರಿಯಾಗುತ್ತದೆ. ಹೀಗಿರುವಾಗ ಯಾವ ಅಪ್ಸರೆ, ಯಾವ ಸಿಗ್ನಲ್ಲಿನಲ್ಲಿ, ನನ್ನ ಮುಂದೆ ಸುಳಿದರೇನಂತೆ, ಮನಸ್ಸು ಮನೆಯೆಡೆಗೇ ಎಳೆಯುತ್ತದೆ... ಸರೀ, ಹೀಗೆ ನಿಮ್ಮೊಂದಿಗೆ ಸಿಗ್ನಲ್ಲಿನಲ್ಲಿ ನಿಂತು ಮಾತಾಡುತ್ತಿದ್ರೆ ಟ್ರಾಫಿಕ್ ಪೋಲಿಸ್ ಬಂದು ಹಿಡಕೊಂಡು ಹೋಗಿ ಬಿಡ್ತಾನೆ... ಮತ್ತೊಂದಿನಾ ಮತ್ತೊಂದು ವಿಷಯದೊಂದಿಗೆ ಸಿಕ್ತೀನೆ... ಒಕೆ ಬ್ಯೆ ಬ್ಯೆ... ಕೀಂ ಕೀಂ ಸರೀರಿ ಸಿಗ್ನಲ್ಲು ಬಿಟ್ತು...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/signallinalli.pdf

Sunday, December 7, 2008

ಆಫೀಸಿಗೆ ಹೊರಟಾಗ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಆಫೀಸಿಗೆ ಹೊರಟಾಗ...

ಮುಂಜಾನೆ ಏಳೂವರೆ ಆಗೋಷ್ಟೊತ್ತಿನಲ್ಲಿ ಸ್ನಾನ ಮುಗಿದಿರುತ್ತೆ. ತಲೆ ಒರೆಸಿಕೊಳ್ಳುತ್ತಾ ಅವಳ ಪಾಕಶಾಲೆಗೆ ಹೋಗಿ ಅವಳಿಗೊಂದಿಷ್ಟು ತಲೆಯಲ್ಲಿನ ನೀರು ಸಿಡಿಸಿ ಬೈಸಿಕೊಳ್ಳುತ್ತಿರುತ್ತೇನೆ. ಹೆಚ್ಚಿಟ್ಟ ತರಕಾರ್‍ಇಯಲ್ಲಿ ಒಂದು ಗಜ್ಜರಿಯೊ ಸೌತೆಕಾಯಿಯೊ ಎತ್ತಲು ಕೈ ಹಾಕಿ ಸೌಟಿನಲ್ಲಿ ಎಟು ತಿಂದು ಹೊರಗೆ ಬಂದು, ದೇವರಿಗೊಂದು ನಮಸ್ಕಾರ ಹೇಳಿ, ಇಂಥ ನೆಚ್ಚಿನ ಹುಡುಗಿ ಜೊತೆ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದು. ಆಫೀಸಿನಲ್ಲಿ ತಲೆ ತಿನ್ನುತ್ತಿರುವ ಕೋಡೊಂದು ಹೇಗಾದ್ರೂ ಮಾಡಿ ವರ್ಕ್ ಆಗೋ ಹಾಗೆ ಮಾಡಪ್ಪ ಅಂತಾನೊ, ಇಲ್ಲ ವೀಕೆಂಡಿಗೆ ಕೆಲಸ ಬರದಿರುವ ಹಾಗೆ ಮಾಡೊ ಅಂತಾನೊ ಏನೊ ಒಂದು ಬೇಡಿಕೆ ಸಲ್ಲಿಸಿ ಡ್ರೆಸ್ ಹಾಕಿಕೊಳ್ಳಲು ಬೆಡ್ ರೂಂಗೆ ಹೋಗುತ್ತ ಈ ವೀಕೆಂಡು ಕೆಲ್ಸ ಇದೆ ರಜೆ ಇಲ್ಲಾ ಅಂತ ಡಂಗುರ ಸಾರುತ್ತೇನೆ. "ಯಾಕ್ರೀ ಶಾಪಿಂಗ್ ಹೊಗೋಣ ಅಂತಾ ಕಾಡ್ತೀನಿ ಅಂತ ಆಫೀಸಿಗೆ ಹೊಗ್ತಿದಿರೊ ಹೇಗೆ" ಅಂತಾಳೆ, ಇಲ್ಲ ನಿಜ ಪ್ರೊಜೆಕ್ಟ್ ರಿಲೀಸು ಇದೆ ಅಂದ್ರೆ. ಏನ್ರಿ ಅದು ನಿಮ್ಮ ಪ್ರೊಜೆಕ್ಟ ಹೆಸ್ರು "ಬುಲ್ ಶಿಟ್ಟಾ" ಅಂತಾಳೆ. "ಲೇ ಇಂಗ್ಲೆಂಡಿನ ಮಹರಾಣಿ ನಿನ್ನ ಇಂಗ್ಲೀಶೋ ನೀನೊ ಎಲ್ಲಾ ಸರಿಯಾಗಿದೆ" ಅಂದ್ರೆ "ಮತ್ತಿನ್ನೇನ್ರಿ ಯಾವಾಗ್ಲೂ ಬುಲ್ ಶಿಟ್ ಪ್ರೊಜೆಕ್ಟ ಬುಲ್ ಶಿಟ್ ಪ್ರೊಜೆಕ್ಟ್ ಅಂತಿರ್ತೀರ ಅದಕ್ಕೆ ಅದೇ ಹೆಸ್ರೇನೊ ಅನ್ಕೊಂಡೆ" ಅಂತಾಳೆ. ಅದೂ ಕರೆಕ್ಟೆ ಬಿಡು ಅಂದು. ಹಾಸಿಗೆ ಮೇಲೆ ಅವಳು ತಾಸುಗಟ್ಟಲೆ ತಲೆ ಕೆಡಿಸಿಕೊಂಡು ತನಗಿಷ್ಟವಾದೊಂದು ಡ್ರೆಸ್ಸ್ ಆರಿಸಿ ತೆಗೆದಿಟ್ಟಿರುತ್ತಾಳೆ, ಅದರಲ್ಲಿ ತೂರಿಕೊಳ್ಳುತ್ತೇನೆ.

ಡಿಯೋಡ್ರಂಟ ಹಾಕಿಕೊಳ್ಳುತ್ತಿದ್ದಂತೇನೇ ಅದರ ಸುವಾಸನೆಗೆ "ಪರಿಮಳ" ನೆನಪಾಗಿ ಬಿಡ್ತಾರೆ, ಇವಳು ಸೇರಿಕೊಂಡಿರುವ ಸೊಷಿಯಲ್ ಕ್ಲಬ್ ಚೇರಮನ್ ಅವ್ರು, ಹೆಸ್ರೇನೊ ಬೇರೆ ಇದೆ, ಆದ್ರೆ ಅವರು ಹಾಕಿಕೊಳ್ಳೊ ಆ ಘಮ್ ಅಂತಿರೋ ಸೆಂಟ್ ವಾಸನೆ ನೋಡಿ "ಪರಿಮಳ" ಅಂತಾ ನಾವಿಟ್ಟಿರೊ ಹೆಸ್ರು, ಸೆಂಟು ಬಾಟಲಿನಲ್ಲೆ ಮುಳುಗಿ ಒಂದು ಡುಮುಕಿ ಹೊಡೆದು ಬಂದಿರ್ತಾರೆ ಅಂತ ಕಾಣುತ್ತೆ, ಇವ್ಳೊ ಮನೆಗೆ ಅವ್ರು ಬಂದಾಗ ಅದು ಇದು ತೊರಿಸ್ತೀನಿ ಅಂತ ಮನೆ ತುಂಬಾ ಸುತ್ತಾಡಿಸಿ ರೂಂ ಫ್ರೆಶ್ನರ್ ಖರ್ಚು ಉಳಿಸಿರ್ತಾಳೇ. ಲೇ ಪರಿಮಳ ಯಾವಾಗ ಬರ್ತಾರೇ ಅಂದ್ರೆ ಇನ್ನೇನು ಮುಂದಿನ ವಾರ ಕರೆಯೊಣಾ ಅಂತಿದೀನಿ ಅತ್ತೆ ಬರ್ತಿದಾರಲ್ಲ ಮನೆ ಘಮ್ ಅಂದ್ರೆ ಅವ್ರಿಗೂ ಖುಶಿಯಾಗುತ್ತೆ ಅಂದ್ಲು, ಒಳ್ಳೆ ಪ್ಲಾನೇ ಹಾಕಿರ್ತಾಳೆ ಅಮ್ಮನ್ನ ಇಂಪ್ರೆಸ್ ಮಾಡಿ ಅದೇ ಟೈಮಿನಲ್ಲಿ "ಲೇ ಕಂಜ್ಯೂಸಾ ಎರಡು ಸೀರೆ ಕೊಡ್ಸೊ ಅವ್ಳಿಗೆ" ಅಂತ ಬೈಸಿ ನಾಲ್ಕು ಸೀರೆ ತುಗೊಂಡು ನನ್ನ ಕ್ರೆಡಿಟ್ ಕಾರ್ಡ ಲಿಮಿಟ್ಟು ಮೀರಿಸಿ ಬಿಟ್ಟಿರ್ತಾಳೆ.

ಅಂತೂ ರೆಡಿಯಾಗಿ ಡೈನಿಂಗ್ ಟೇಬಲ್ಲಿಗೆ ಬಂದ್ರೆ, ತಿಂದು ಸ್ವಲ್ಪ ದಪ್ಪ ಆಗ್ಲಿ ಅಂತಾ ಅವಳು ನಾಲ್ಕು ಜನರಿಗಾಗುವಷ್ಟು ಹಾಕಿಟ್ಟ ಟಿಫಿನ್ನು ಅದೇ ಗಡಿಬಿಡಿಯಲ್ಲಿ ಹಾಗೆ ಹೀಗೆ ಮಾಡಿ ಮುಗಿಸಿ, ಇನ್ನೇನು ಮಧ್ಯಾನ್ಹ ಲಂಚ್ ಬೇಡವೇ ಬೇಡ ಅನ್ನಿಸಿದ್ರೂ, ಅದೊ ಅಲ್ಲಿ ಲಂಚ್ ಬಾಕ್ಸ ರೆಡಿ ಮಾಡಿರ್ತಾಳೆ. ನಾನೇನು ತಿಂದು ಹೃತಿಕ್ ರೋಷನ್ನು (ಅವಳ ಫೆವರಿಟ್ಟು!) ಆಗಲ್ಲಾ ಕಣೇ ಅಂದ್ರೂ ಅವ್ಳು ಕೇಳಲ್ಲ. ಮಾತಿಲ್ಲದೆ ಬಾಕ್ಸ್ ಬ್ಯಾಗಿಗೆ ಹಾಕಿಕೊಳ್ಳುತ್ತೇನೆ. ಹೊರಡಲು ಶೂ ಹಾಕಿಕೊಳ್ಳ ಹೋದ್ರೆ ಸಾಕ್ಸು ಸಿಗಲ್ಲ, "ಲೇ ತಗಡು ಸಾಕ್ಸ ಎಲ್ಲೇ" ಅಂತ ಚೀರುತ್ತೇನೆ, ಸಿಟ್ಟು ಎನ್ ಬಂದಿರಲ್ಲ, ತಗಡು ಅನ್ನೋದು ಅತೀ ಪ್ರೀತಿ ಬಂದಾಗ, ಯಾವಾಗ್ಲೊ ಚಿನ್ನಾ ಅಂದ್ರೆ ಹಳೆಯದಾಯಿತ್ರಿ ಅಂದ್ಲು, ಪ್ಲಾಟಿನಮ್ಮು ಅನ್ಲಾ ಅಂದ್ರೆ ಜಾಸ್ತಿ ಆಯ್ತು ಅಂದದ್ದಕ್ಕೆ ಪ್ರೀತಿಯಿಂದ ತಗಡು ಅಂತೀನಿ. ಸಾಕ್ಸು ಅಲ್ಲೇ ಬಿದ್ದಿರತ್ತೆ ನಂಗೆ ಮಾತ್ರ ಕಾಣಲ್ಲ ಬಂದು ಅವ್ಳು ಹುಡುಕಿ ಕೊಟ್ರೇ ಸಿಗ್ಬೇಕು.

ಅಪ್ಪಿ ಪಪ್ಪಿಯೊಂದು ಕೊಟ್ಟು ಹೊರಟರೆ, ಬಾಗಿಲಿ ಒರಗಿ ನಿಂತುಕೊಂಡು ನಾ ಬರುವುದು ರಾತ್ರಿಯೆಂದು ಗೊತ್ತಿದ್ರೂ "ಸಂಜೆ ಬೇಗ ಬನ್ರಿ" ಅಂತಿರುವ ಅವಳಿಗೆ ಕೈ ಮಾಡಿ ಬೈಕಿನ ಗೇರು ಹಾಕುತ್ತಿದ್ದರೆ ಕಿಟಕಿ ಸಂದಿಯಲ್ಲಿ ಪಕ್ಕದ ಮನೆ ಪದ್ದು ನೊಡುತ್ತಿರುತ್ತಾಳೆ. ಆಫೀಸಿನಲ್ಲಿ ಕೆಲಸ ಬಹಳ ಇದೆ, ಈ ಟ್ರಾಫಿಕ್ಕು ಬೇರೆ ಮತ್ತೊಂದಿನಾ ಸಿಗ್ನಲ್ಲಿನಲ್ಲಿ ಸಿಗುವ ಸುಂದರಿಯರೊಂದಿಗೆ ಭೇಟಿಯಾಗ್ತೇನೆ, ಬೈ ಬೈ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/officege-horataaga.pdf
you might as well like this
http://www.telprabhu.com/heegomdu-samje.pdf
http://www.telprabhu.com/nasukige.pdf