ಮುಂಜಾವು ಇನ್ನೂ ನಾಲ್ಕು ಐದು ಘಂಟೆಯೇನೊ ಆಗಿರುತ್ತೆ ದಿನಾಲೂ ಭೂಕಂಪ ಆಗುತ್ತೆ ನಮ್ಮನೆಲೀ, ನಾನೆಲ್ಲಿ ಬೇರೆ ಜಗತ್ತಿನಲ್ಲಿ ಇದ್ದೇನೆಂದು ತಿಳಿಯಬೇಡಿ, ಎನಿಲ್ಲ ನನ್ನವಳು ಆವಾಗ ಏಳುತ್ತಾಳೆ, ಮಂಚ ಕೊಂಚ ಅಲುಗಾಡುತ್ತೆ ಅಷ್ಟೆ. ಈ ಮೊಬೈಲಿನಲ್ಲಿ ರಿಂಗ್ ಆಗೋ ಮುಂಚೆ ವೈಬೇಟ್(ಕಂಪನ) ಆಗುತ್ತಲ ಹಾಗೇ ಇದೂ, ಇನ್ನಿವಳು ರಿಂಗಣಿಸಲು ಶುರು ಮಾಡ್ತಾಳೆ ಅಂತ ಸೂಚನೆ!!!
ಅವಳು ಎದ್ದಾಗಲೇ ಅರೆ ಎಚ್ಚರವಾಗಿರ್ತೇನೆ, ಇದೊಂಥರಾ ಅರೆನಿದ್ರೆ ಟೈಮ್ ನಂಗೆ. ಅಡುಗೆ ಮನೇಲಿ ಒಂದೊಂದೇ ಪಾತ್ರೆ ಸದ್ದಾಗದ ಹಾಗೆ ತೊಳೆದು ನನ್ನ ಟಿಫ಼ಿನ್ ಬಾಕ್ಸ ತುಂಬಲು ನಾನಾ ತರದ ತಿಂಡಿ ಮಾಡಲು ಅಣಿಯಾಗುತ್ತಿರ್ತಾಳೆ, ಅದಕ್ಕೆ ನಮ್ಮ ಆಫ಼ೀಸಿನಲ್ಲಿ ಎಲ್ಲರಿಗೂ ನನ್ನ ಬಾಕ್ಸ ಕಂಡ್ರೆ ಅಷ್ಟು ಹೊಟ್ಟೇಯುರಿ, "ಎಲ್ಲೋ ಹೊಟೇಲಿನಿಂದ ತಂದು ಹೆಂಡ್ತಿ ಮಾಡಿದ್ದು ಅಂತಾನೆ" ಅಂತ ಆಡಿಕೊಳ್ಳೋರು ಕಮ್ಮಿಯೇನಿಲ್ಲ. ಆರು ಆಗೋಷ್ಟರಲ್ಲಿ ಸ್ನಾನ ಮಾಡಿ, ಪೂಜೆ ಮಾಡುತ್ತಿರುತ್ತಾಳೆ. ಕೋಗಿಲೆ ಕಂಠ ಎನಲ್ಲದಿದ್ರೂ ತನ್ನಷ್ಟಕ್ಕೆ ತಾನೆ ನಾಕು ಸ್ತೊತ್ರ ವಚನಗಳ ಗುನುಗುನಿಸುತ್ತಿರುವಾಗ ಅಗರಬತ್ತಿ ವಾಸನೆ ಹೀರಲು ಮುಸುಕು ತೆಗೆಯುತ್ತೇನೆ. ಮತ್ತೆ ಮುಸುಕು ಮೇಲೆಳೆದು ಇನ್ನೊಂದು ಜೊಂಪು ಹತ್ತುತ್ತಿರಬೇಕು, "ಆ ಹೂವೂ, ಮಲ್ಲಿಗೆ ಕಾಕಡಾ ಮಾಲೆ ಬೇಕೇನಮ್ಮ" ಅಂತಾ ದನಿ ಕೇಳುತ್ತೆ, ಒಡುತ್ತ ಬಂದವಳೇ "ರೀ ಮಾಲೆ" ಅಂತ ತಿವಿದು ಎಬ್ಬಿಸ್ತಾಳೆ, ಅದೊ ಅಲ್ಲಿ ಪಾಕೆಟ್ ಇದೆ ಎಷ್ಟು ಬೇಕೊ ಅಷ್ಟು ಮಾಲೆ ತುಗೊ ನನ್ನ ಏಳು ಅನಬೇಡ ಅಂತೀನಿ. ಅವಳೆಲ್ಲಿ ಕೆಳ್ಬೇಕು ನಾನ ಕೊಂಡು ಕೊಟ್ರೆ ಸರೀ, ಎನಿದ್ರೂ ದುಡ್ಡು ನಂದೇ ತಾನೆ, ನಾನ ಕೊಟ್ರೇನು ನೀನ್ ತುಗೊಂಡ್ರೆನು ಅಂದ್ರೂ ಬಿಡಲ್ಲ, ಎದ್ದು ತಂದು ಅವಳ ಕೈಗಿಟ್ಟು ಮತ್ತೆ ಬಿದ್ಕೊತೇನೆ. ಮೊದ್ಲೆಲ್ಲ ನಾನೇ ಎದ್ದು ಕಾಯ್ತಿರ್ತಿದ್ದೆ ಗುಲಾಬಿ( ಅದು ನಾವು ಹೂವು ಮಾರೊಳಿಗಿಟ್ಟ ಹೆಸ್ರು) ಬರ್ತಿದ್ಲಲ್ಲ ಆವಾಗ, ಈಗಾದ್ರೆ ಈ ಮುಳ್ಳು ಅದೇ ಅವಳ ಗಂಡ ಬರ್ತಾನೆ. "ಲೇ ಮುಂಜಾನೆ ಮುಂಜಾನೆ ಆ ಮುಳ್ಳು ಮುಖ ನೋಡೊಕಾಗಲ್ಲ ನನ್ನ ಎಬ್ಬಿಸ್ಭೇಡ" ಅಂದೆ, ಸರೀ ಬಿಡಿ ಎನೊ ಮೊನ್ನೆ ಪಕ್ಕದ ಮನೆ ಪದ್ದು ನಿಮ್ಮೇಲೆ ಫ಼ುಲ್ ಇಂಪ್ರೆಸ್ ಆಗಿದ್ಲು, "ನೊಡ್ರಿ ನಿಮ್ಮೆಜಮಾನ್ರು ಮುಂಜಾನೆ ಎದ್ದು ಹೂವು ಬರೊವರೆಗೆ ಕಾದು ಮಾಲೆ ಕೊಡಿಸ್ತಾರೆ, ನಮ್ದೂ ಇದೆ ಹಾಲು ತುಗೊಂಬರೋಕು ಹೋಗಲ್ಲ" ಅಂತಿದ್ಲು ಅವ್ಳಿಗೇನು ಗೊತ್ತು ನೀವ್ ಗುಲಾಬಿಗೆ ಕಾಯಿದ್ರಿ ಅಂತಾ ಅಂತಾ ನಸು ನಕ್ಳು. ನಂಗೊತ್ತು ನಾಳೆ ನಾನು ಪದ್ದು ಇಂಪ್ರೆಸ್ ಮಾಡಕೆ ಅಂತಾನಾದ್ರೂ ಎಳ್ಲಿ ಅಂತಾನೆ ಹಾಗೆ ಹೇಳಿದ್ದು, ನಾಳೆಗೆ ಮೊಬೈಲಿನಲ್ಲಿ ರಿಮೈಂಡರ್ ಇಟ್ಟೆ, ಚಾನ್ಸ ಯಾಕೆ ಮಿಸ್ಸ್ ಮಾಡ್ಕೊಬೇಕು!!!
ಮತ್ತೆ ಹಾಸಿಗೆಯಲ್ಲಿ ಬಿದ್ದು ಹೆಬ್ಬಾವಿನಂತೆ ಹೊರಳಾಡುತ್ತಿರುತ್ತೇನೆ, ಕಾಫ಼ಿ ಕಪ್ಪೊಂದು ಹಿಡಿದು ಬರ್ತಾಳೆ, ಬೆಡ್ ಕಾಫ಼ಿ ಇದು, ಕೈಲೊಂದು ಸಾಸರ್ ಹಿಡಿದು ಮುಂದೆ ಕೂತ್ಕೊತಾಳೆ, ದಿನಾ ಹೀಗೇನೇ ನನಗೆ ಮಾಡಿದ ಆ ಕಪ್ಪು ಕಾಫ಼ಿಯಲ್ಲೇ ಅವಳಿಗೂ ಒಂದು ಸಿಪ್ಪು ಬೇಕು!! ಅವಳ ಸಾಸರಿಗೊಂದಿಷ್ಟು ಸುರಿದು ಒಂದು ಗುಟುಕಿನಲ್ಲಿ ಕಾಫ಼ಿ ಮುಗಿಸುತ್ತೇನೆ, ನಾವು ಕಂಪನಿಯಲ್ಲಿ ಪುಕ್ಕಟೆ ಅಂತಾ ಇಷ್ಟಿಷ್ಟು ದೊಡ್ಡ ಮಗ್ ನಲ್ಲಿ ಕಾಫ಼ೀ ಟೀ ಕುಡಿಯೋರು ಇದೆಲ್ಲಿ ನಮ್ ಹೊಟ್ಟೆಗೆ ಹತ್ಬೇಕು! ಆದ್ರೂ ಈ ಕಾಫ಼ಿ ರುಚಿನೇ ಬೇರೆ, ಕೆಲವೊಂದು ಸಾರಿ ಸುಮ್ನೇ ಸಕ್ರೇನೆ ಹಾಕಿಲ್ಲ ಅಂತ ಬೈದು, ಅವ್ಳು ರುಚಿ ನೋಡಿದ ಮೇಲೆ, ತುಟೀಲೇನು ಜೇನು ಇಟ್ಕೊಂಡಿದೀಯ ಈಗ ಸರಿಯಾಗಿದೆ, ಅಂತ ಛೇಡಿಸಿರ್ತೀನಿ. ಬೆಚ್ಚಗೆ ಹೊದ್ಕೊಂಡು ಕೂತಿದ್ದ ಹೊದಿಕೆ ಕಿತ್ಕೊಂಡು ಓಡ್ತಾಳೆ, ವಿಧಿಯಿಲ್ದೆ ಎದ್ದೇಳಲೇಬೇಕಾಗುತ್ತೆ, ಅಟ್ಟಿಸಿಕೊಂಡು ಹೋದ ನನ್ನ ನೂಕಿ, ಸ್ನಾನಕ್ಕೆ ಬಿಸಿ ನೀರಿದೆ ಹೋಗಿ ಅಂತಾಳೆ, ಬಿಸಿಬಿಸಿ ನೀನು ಜತೆಗಿದ್ರೆ ಬಿಸಿನೀರ್ಯಾಕೆ ಅಂತ ಅನ್ನುತ್ತ ಬಾತ್ ರೂಮ್ ಸೇರಿಕೊಳ್ತೇನೆ... ನನ್ನ ಕರ್ಕಷ ಕಂಠದಲಿ ನನ್ನದೇ ಸಾಹಿತ್ಯದ ಹಾಡೊಂದೊ ಹೊರ ಹೊಮ್ಮತೊಡುಗುತ್ತೆ... ಮತ್ತೊಂದಿನಾ ಆಫ಼ೀಸಿ ಹೊರಡೊ ಮುಂಚೆ ಸಿಕ್ತೀನಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/nasukige.pdf
you might as well like this http://www.telprabhu.com/heegomdu-samje.pdf