ಸಿಗ್ನಲ್ಲಿನಲ್ಲಿ ಸೌಂದರ್ಯದೊಂದಿಗೆ...
ಮುಂಜಾನೆ ಎಂಟು ಗಂಟೆ ಅಂದ್ರೆ ರೋಡುಗಳೆಲ್ಲ ಕಿಕ್ಕಿರಿದ್ರು ತುಂಬಿರುತ್ತವೆ, ಆಫೀಸಿಗೆ ಹೊರಟ ನನ್ಹಂತ ಟೆಕ್ಕಿಗಳು, ಕಾಲೇಜಿಗೆ ಹೊರಟಿರುವ ಹಕ್ಕಿಗಳು, ಮತ್ತು ಶಾಲೆಗೆ ಹೊರಟಿರುವ ಚುಕ್ಕಿಗಳು ಎಲ್ಲಾರಿಗೂ ಅವಸರ... ಅದರ ನಡುವೆ ಈ ಸಿಗ್ನಲ್ಲುಗಳು, ಟ್ರಾಫಿಕ್ಕು ಜಾಮುಗಳು ಅಂತ ಎಲ್ಲರೂ ಬೈಕೊಂಡ್ರೂ ಆ ಬಗ್ಗೆ ನನಗೇಕೊ ಬಲು ಪ್ರೀತಿ. ನಾನು ಆಫೀಸಿಗೆ ತಲುಪುವಲ್ಲಿ ಎನಿಲ್ಲವೆಂದ್ರೂ ಹತ್ತು ಸಿಗ್ನಲ್ಲುಗಳು, ಹತ್ತಿರ ಹತ್ತಿರ ಇಪ್ಪತ್ತು ಕಿಲೊ ಮೀಟರು ಪಯಣ, ಆದ್ರೂ ಬೇಜಾರಿಲ್ಲ. ಇವಳಂತಾಳೇ "ಪಕ್ಕದ ಮನೆ ಪದ್ದೂಗೆ ಮನೆ ತಿರುವಿನಲ್ಲಿ ಸಿಗ್ನಲ್ಲು ಕೊಡೊರು ನೀವು, ಇನ್ನು ಸಿಗ್ನಲ್ಲಿರುವ ಸರ್ಕಲ್ ಸಿಕ್ರೆ ಬಿಡ್ತೀರಾ, ಮೊಬೈಲ್ ಟವರ್ ಆಗಿ ಎಲ್ರಿಗೂ ಸಿಗ್ನಲ್ಲು ಕೊಟ್ಟಿದ್ದೆ ಕೊಟ್ಟಿದ್ದು, ಟೆಲಿಕಾಂ ಇಂಜಿನಿಯರಿಂಗ್ ಕಲಿತದ್ದು ಸಾರ್ಥಕ ಆಯ್ತು!! ಹೀಗಿರೊವಾಗ ಅದ ಹೇಗಪ್ಪ ಬೇಜಾರಾಗುತ್ತೆ". ಅದೂ ಸರೀನೆ ಸ್ಕೂಟಿ ಕಣ್ಣಿಗೆ ಕಂಡ್ರಂತೂ ಹಚ್(ವೊಡಫೊನ್) ನಾಯಿಯಂತೆ ಫಾಲೋ ಕೂಡ ಮಾಡ್ತೇನೆ!!!.
ಮನೆಯಿಂದ ಹೊರಟ್ರೆ ಹೊತ್ತು ಹೊಗಿದ್ದೆ ಗೊತ್ತಾಗಲ್ಲ, ಅದ್ಯಾವುದೋ ಸಿಗ್ನಲ್ಲಿನಲ್ಲಿ ಡಿಸ್ಕ್ ಬ್ರೆಕ್ ಹಾಕಿ ಗಕ್ಕನೆ ನಿಂತಾಗಲೇ ಗೊತ್ತಾಗೋದು ಇಷ್ಟು ದೂರ ಬಂದಿದ್ದೀನಲ್ಲ ಅಂತ, ಡಿಸ್ಕ್ ಬ್ರೆಕ್ ಹಾಕಲೇ ಬೇಕಂಬಷ್ಟು ಜೊರಾಗಿ ಬೈಕು ಎನೂ ಓಡ್ಸಲ್ಲ ಆದ್ರೂ ಸ್ಟೈಲ್‍ಗೆ ಸುಮ್ನೆ "ನೋಡು ನನ್ನ ಬೈಕಿಗೆ ಡಿಸ್ಕ್ ಬ್ರೆಕ್ ಇದೆ" ಅಂತ ತೋರಿಸೊಕೆ ಅಷ್ಟೇ. ಇವಳನ್ನ ಮೊದಲ ಸಾರಿ ಬೈಕಿನಲ್ಲಿ ಸುತ್ತೊಕೆ ಕರ್ಕೊಂಡು ಹೊಗಿದ್ನಲ್ಲ ಅವಾಗ ಫ್ರಂಟ್ ಬ್ರೆಕ್ ಹಾಕಿದ್ದೆ ಹಾಕಿದ್ದು, ಸಿಟ್ಟಿಗೆದ್ದು "ರೀ ಇನ್ನೇನಾದ್ರೂ ಬ್ರೆಕ್ ಹಾಕಿದ್ರೊ,ಆ ಡಿಸ್ಕ್ ಬ್ರೆಕ್ ಕಿತ್ತು ಕೈಲಿ ಕೊಡ್ತೀನಿ" ಅಂತ ಬೈದಿದ್ಲು ಹೀ ಹೀ... ಈಗ್ಲೋ ರೀ ಬರ್ತೀನಿ ಕರ್ಕೊಂಡು ಹೊಗ್ರೀ ಅಂದ್ರೂ, "ಲೇ, ನೀ ಹಿಂದೆ ಕೂತ್ಕೊಂಡ್ರೆ ಅಷ್ಟೇ ನಾನ್ ಆ ರೇಸನಲ್ಲಿ ಮಾಡ್ತಾರಲ್ಲ ಹಾಗೆ ಮುಂದಿನ ವ್ಹೀಲ್ ಎದ್ದು ವ್ಹೀಲಿ ಮಾಡ್ಬೇಕಾಗುತ್ತೆ" ಅಂತ ಛೇಡಿಸ್ತಿರ್ತೀನಿ. ನಾನೇನು ಅಷ್ಟ ದಪ್ಪ ಆಗೀದೀನೆನ್ರೀ ಅಂತಾ ಕೇಳ್ತಾಳೆ, ಅದಕ್ಕೆ "ನೀನಿನ್ನೂ ಏಳು ಮಲ್ಲಿಗೆ ತೂಕದ ರಾಜಕುಮಾರಿ ಆದ್ರೆ ಮಲ್ಲಿಗೆ ತೂಕ ಜಾಸ್ತಿ ಆಗ್ಬಿಟ್ಟಿದೆ ಅಷ್ಟೇ" ಅಂತ ಸಮಾಧಾನ ಮಾಡ್ತಿರ್ತೀನಿ.
ಹಾಗೂ ಹೀಗೂ ಮಾಡಿ, ತರಕಾರಿ ತರಬೇಕಿದೆ ಮಾರ್ಕೆಟ್ಗೆ ಬಿಡ್ರಿ ಅಂತಾನೊ, ಮೊಸರಿಲ್ಲ ತರ್ತೀನಿ ಹಾಸಿನಿಯ ಹಾಲಿನಂಗಡಿಗೆ ಡ್ರಾಪ್ ಕೊಡಿ ಅಂತಾನೊ ಜೊತೆ ಬಂದ್ಬಿಡ್ತಾಳೆ, ಎಲ್ಲ ನೆಪ ಅಷ್ಟೇ ನನ್ ಜತೆ ಬರ್‍ಬೇಕಾಗಿರುತ್ತೆ ಅಷ್ಟೇ. ಹೀಗೆ ಬಂದೊಳು ಹಿಂದೆ ಕೂತು ಪಟಪಟಾಂತ ಹೊಗೊ ಬರೊರ್ ಕಾಮೆಂಟ್ರಿ ಶುರು ಮಾಡಿಬಿಡ್ತಾಳೆ, "ರೀ ಅಲ್ಲಿ ನೊಡ್ರ್‍ಇ ಅದೇ ಆ ಕೆಂಪು ಚೂಡಿದಾರ ಹಾಕೊಂಡಿದಾಳಲ್ಲ ಅಲ್ಲಿ" ಅವಳು ಮಾತು ಮುಗಿಸೊ ಮುಂಚೇನೆ "ಸಕತ್ತಾಗಿದಾಳಲ್ಲ!" ಅಂತೀನಿ, ಹೆಲ್ಮೆಟ್ಟನ್ನೆ ತಿವಿದು "ಆ ಚೂಡಿದಾರ ಚೆನ್ನಾಗಿದೆ ಅಲ್ವಾ ಅದ ನೋಡಿ ಅಂದಿದ್ದು" ಅಂತಾಳೆ. ಹೆಲ್ಮೆಟ್ಟು ಕಟ್ಟುನಿಟ್ಟು ಮಾಡಿದ್ದು ಒಳ್ಳೆದಾಯ್ತು ಅಂತನ್ಕೊಂಡು "ಒ ಅದಾ ನಾನೇನು ಕೊಡ್ಸಲ್ಲ ಬಿಡು" ಅಂತೀನಿ, "ಏನ್ ಬೇಡ ಅತ್ತೆ ಬರ್ತೀದಾರಲ್ಲ!!" ಅಂತಾಳೆ. ಅವ್ಳು ಆಗ್ಲೇ ಪ್ಲ್ಯಾನು ಮಾಡಿ ಆಗಿರತ್ತೆ, ಮುಂಜಾನೆಯಿಂದ ಸಂಜೆ ಇರೊ ಬರೊ ಎಲ್ಲಾ ಧಾರಾವಾಹಿಗಳನ್ನು ನೊಡಿ ಸೀರೆಗಳ ಆರಿಸಿಕೊಂಡಿರ್ತಾಳೆ, ಅಮ್ಮ ಬಂದಾಗ "ಅತ್ತೆ, ಮನೆಯೊಂದು ಮೂರು ಬಾಗಿಲು ಧಾರಾವಾಹೀಲಿ ಆ ಅಮ್ಮ ಉಟ್ಕೊಂಡಿರ್ತಾರಲ್ಲ ಅದೆ ಥರ ಸೀರೆ ಇದು ತುಗೊಳ್ಳಿ ಸುಪರ್ ಕಾಣುತ್ತೆ ನಿಮ್ಗೆ" ಅಂತಾ ನನ್ನ ಕ್ರೆಡಿಟ್ ಕಾರ್ಡನ ಖಜಾನೆಯ ಎಲ್ಲ ಬಾಗಿಲುಗಳನ್ನೂ ತೆಗೆದು ಬಿಟ್ಟಿರ್ತಾಳೆ.
ದಾರೀಲಿ ಸುಮ್ನೆ ಹಿಂದೆ ಕೂತಿದ್ದೊಳು, ಯಾವುದೊ ಸಿಗ್ನಲ್ಲಿನಲ್ಲಿ ಹಾಗೇ ನಡು ಬಳಿಸಿ ಹಿಂದಿನಿಂದ ಬಿಗಿಯಾಗಿ ಅಪ್ಪಿಕೊಂಡಳೆಂದರೆ, ನಾ ಜಾಗೃತನಾಗಿ ಬಿಡ್ತೇನೆ. ಅಕ್ಕಪಕ್ಕದಲ್ಲೆ ನಮ್ಮ ಕವರೇಜ್ ಎರಿಯಾನಲ್ಲಿ ಯಾವುದೋ ಸುಂದರ ಹುಡುಗಿ ನನ್ನ ನೊಡುತ್ತಿದೆಯೆಂದು ಗ್ಯಾರಂಟಿ ಆಗಿರತ್ತೆ!!! ಅದ್ಕೆ ಅಲ್ವೆ ಇವ್ಳು ನನ್ನ ಹಾಗೆ ಅಪ್ಪಿ ಇವನು ನನ್ನೊನು ಅಂತ ಸಿಗ್ನಲ್ಲು ಕೊಡ್ತಿರೊದು. ಮಿರರ್‍ನಲ್ಲಿ ನೊಡಿದ್ರೆ ಚಾಕಲೇಟು ಕಸಿದೊ ಕೊಳ್ಳೊಕೆ ಹೊದಾಗ ಮಗು ಮುಖ ಮಾಡುತ್ತಲ್ಲ ಥೇಟ್ ಹಾಗೆ ಕಾಣುತ್ತೆ ಇವಳ ಮುಖಾರವಿಂದ. ನಾನೋ ಜರ್ಕಿನ್ ಹಾಕಿಕೊಂಡು, ಕೈಗೆ ಗ್ಲೌಸು, ತಲೆಗೆ ಹೆಲ್ಮೆಟ್ಟು, ಮುಖಕ್ಕೆ ಮಾಸ್ಕ ಮುಚ್ಚಿಕೊಂಡು ಪಕ್ಕಾ ಟೆರರ್‍ಇಸ್ಟ್ ಥರ ಕಾಣ್ತಿರ್ತೀನಿ! ಅದೆಲ್ಲೊ ಗಾಬರಿಯಿಂದ ನೊಡ್ಬೇಕು ನನ್ನ ಯಾರಾದ್ರೂ!! ಇಲ್ಲಂದ್ರೆ ನನ್ನ ಮುಖಕ್ಕೆ ಅದ್ಯಾವ ಹುಡುಗಿ ಮಾರು ಹೊಗೋದು. ಸಿಗ್ನಲ್ಲುಗಳು ಇಷ್ಟ ಆಗೊಕೆ ಇದೊಂದೂ ಇನ್ನೊಂದು ಕಾರಣ, ಈ ಸಿಗ್ನಲ್ಲುಗಳಲ್ಲಿ ಕಾಣುವ ಎಲ್ರೂ ಸುಂದರಿಯರೇ, ಹೆಲ್ಮೆಟ್ಟುಗಳ ಅಡಿಯಲ್ಲಿ ಕಾಣೊದು ಅರೆ ಬರೆ ಮುಖ ಮಾತ್ರ, ಸೌಂದರ್ಯ ಅನ್ನೊದು ಮುಚ್ಚಿಸ್ಟಟ್ಟು ಹೆಚ್ಚಾಗುತ್ತದೆ.
ಅದಕ್ಕೆ ಅದೊಂದು ದಿನ ಬರೆದ ಚುಟುಕು ನೆನಪಾಗುತ್ತದೆ...
ಪಕ್ಕದಲ್ಲೊಂದು ಗಾಡಿ ಬಂದು ನಿಂತಿತು.
ತಿರುಗಿ ನೋಡಿದವಳ ಹೆಲ್ಮೆಟ್ ಅಡಿಯಲ್ಲಿ ಕಂಡದ್ದು ಕಣ್ಣುಗಳೆರಡು ಮಾತ್ರ.
ಹೃದಯ ಬಡಿತ ನಿಂತು ಹೊಯಿತು.
ಯಾಕೆಂದ್ರೆ ಅಷ್ಟರಲ್ಲೇ ಹೋಗಿತ್ತು ಹೃದಯ ಅವಳ ಹತ್ರ.
ಈಗ ಬಿಡಿ ಅದೇ ಚೋಟುದ್ದದ ಟೀಶರ್ಟ್ ಹಾಕೊಂಡು ಪದೇ ಪದೇ ಕೆಳೆಗೆಳುದುಕೊಳ್ಳುತ್ತ ಹೊಗೊದೇ ಫ್ಯಾಷನ್ನು, ಇನ್ನೂ ಕೆಲವರು ಹೈಬ್ರೀಡ ಬದನೆಕಾಯಿ ಥರ, ಇಷ್ಟುದ್ದದ ಜಡೆ(ಹೆರಳು) ಇದ್ದು ಮೊಣಕಾಲುದ್ದದ ಜೀನ್ಸ ಹಾಕಿಕೊಂಡು ಕಾಣಿಸುತ್ತಾರೆ, ಅದೇನೊ ಬದಲಾವಣೆ ಕಾಲದ ಸಾಕ್ಷಿಯೆನ್ನುವಂತೆ ಅತ್ತೂ ಇಲ್ಲ ಇತ್ತೂ ಇಲ್ಲ. ನನಗೇಕೊ ಅವರೆಂದೂ ಅಷ್ಟು ಸುಂದರಿಯರೆಂದೆನಿಸುವುದಿಲ್ಲ. ನನ್ನವಳಿಗೂ ಅದು ಇಷ್ಟವಿದ್ದಂತಿಲ್ಲ, ಅದೊಂದಿನ ಸಿಗ್ನಲ್ಲಿನಲ್ಲಿ ಕಂಡ ಆ ಡುಮ್ಮಿ ಟೈಟ್ ಜೀನ್ಸ ಹಾಕಿದ್ದು ನೊಡಿ "ರೀ ಅದ್‍ಹೆಗ್ರೀ ಅದ್ರೊಳಗೆ ತೂರಿಕೊಂಡ್ಲು" ಅಂತ ನಗಾಡಿದ್ಲು.
ಸೌಂದರ್ಯ ಹೇಗಿರಬೇಕೆಂದ್ರೆ...
ನಡುವಿಗೆ ಕಚಗುಳಿಯಿಡುವಷ್ಟು ಉದ್ದ ಕೂದಲು.
ಒಂದೇ ಕೈಯಲ್ಲಿ ಬಳಸಿ ಹಿಡಿಯಬಹುದಾದ ಬಳಕುವ ನಡು.
ಆ ನಡುವ ಸುತ್ತಿ ಕೈ ಮೇಲೆ ಜರಿದಿರುವ ಸೀರೆ ಸೆರಗು.
ನಡೆದರೆ ಗೆಜ್ಜೆ ಬಳೆಗಳ ಘಲಘಲ್ ಸದ್ದು.
ಸೀರೆ ಕೂಡಾ ಅಷ್ಟೇನು ಸೇಫ್ ಅಲ್ಲ ಅದೂ ಈ ಬೈಕಿನಲ್ಲಿ ಹೊಗುವಾಗಲಂತೂ ಮೊದಲೇ ಅಲ್ಲ. ಆದರೂ ನಮ್ಮ ಭಾರತೀಯ ಪರಂಪರೆಯ ಉಡುಗೆ ಚೆನ್ನಾಗಿದೆ, ಹೀಗಂದಾಗಲೆಲ್ಲ ನನ್ನವಳು ಛೇಡಿಸುತ್ತಾಳೆ "ನೀವ್ಯಾಕೆ ಧೊತಿ ಪೆಠ(ಪಟಗ) ಹಾಕೊಂಡು ಅಪಾಚೆ(ಬೈಕ್) ಒಡಿಸಬಾರ್ದು" ಅಂತ. ನಾನೆಂದೂ ಅವಳಿಗೆ ಜೀನ್ಸ ಟೀಷರ್ಟ್ ಹಾಕಬೇಡೆಂದಿಲ್ಲ, ಅದೇಕೊ ಅವಳು ಹಾಕುವುದೂ ಇಲ್ಲ. ನಾನು ಮಾತ್ರ ಅವಳಿಷ್ಟದಂತೆ ಯಾವತ್ತೋ ಒಂದೊಂದು ಫಂಕ್ಷನ್‍ಗಳಲ್ಲಿ ಧೋತಿ ಉಟ್ಟು ನಿಂತಿರುತ್ತೇನೆ. ಪದೇ ಪದೇ ಬಂದು "ರೀ ಎಳೆದು ಬಿಡ್ಲಾ, ಎಳೆದು ಬಿಡ್ಲಾ" ಅಂತಾ ಕಾಡಿರ್ತಾಳೆ, ನಾನೆಲ್ಲಿ ಧೋತಿ ಕೈಕೊಟ್ಟೀತೆಂದು ಒಳಗೆ ಬರ್ಮುಡ ಹಾಕಿಕೊಂಡು ತಯ್ಯಾರಿಯಲ್ಲಿರುತ್ತೇನೆ!!!
ಹೀಗೆ ಸಿಗ್ನಲ್ಲಿನಲ್ಲಿ ಕಾಣುವ ಪ್ರತಿಯೊಬ್ಬರನ್ನೂ ನನ್ನ ಸೌಂದರ್ಯದ ತಕ್ಕಡಿಯಲ್ಲಿ ತೂಗಿ ಅಳೆದು ನೊಡುತ್ತಿರುತ್ತೇನೆ. ಚುಟುಕುಗಳ ಬರೆಯಲು ಸ್ಪೂರ್ಥಿಯಾದವರೆಷ್ಟೊ, ಕಂಡೂ ಕಾಣದೇ ಕಣ್ಮರೆಯಾದವರೆಷ್ಟೋ, ಆದರೂ ಅದೊಂದು ಸುಂದರಿಯರ ಸ್ವರ್ಗ. ಮುಖ ಕಾಣಿಸದಿದ್ರೂ ಮೈ ಮಾಟದಲ್ಲಿ ಮೇನಕೆಯನ್ನೂ ಮೀರಿಸಿದವಳ ಸ್ಕೂಟಿ ಬೆಂಬಿದ್ದು ಮೂರು ಕಿಲೊಮೀಟರು ಎಲ್ಲೊ ದೂರ ಹೊಗಿ ಪೆಟ್ರೊಲು ವೇಸ್ಟು ಮಾಡಿಕೊಂಡು ಬಂದಿದ್ದು, "ವಿಜಯನಗರದ ಇಳುಕಲಿಗೆ ಬೈಕ್ ಆಫ್ ಮಾಡಿ ಒಡಿಸಿ ಉಳಿಸಿದ ಪೆಟ್ರೊಲ್ ಹೀಗೆ ವೇಸ್ಟು ಆಗದೇ ಇನ್ನೇನು" ಅಂತ ಇವ್ಳು ಹಂಗಿಸೊದು. ಸಿಗ್ನಲ್ಲಿನಲ್ಲಿ ಪಕ್ಕದಲ್ಲೊಂದು ಪರಿ(ದೇವಕನ್ಯೆ) ಕಂಡಾಗ, ಅರವತ್ತು ಎಣಿಸೋ ಸೆಕೆಂಡ ಬೋರ್ಡ್ ಯಾಕೆ ನೂರಿಪ್ಪತ್ತು ಎಣಿಸೊಲ್ಲ ಅಂತಾ ಬೈದುಕೊಳ್ಳೋದು. ಹೀಗೇ ಸಿಗ್ನಲ್ಲುಗಳು ದಿನೇ ದಿನೇ ಹೊಸತನ ತರುತ್ತಿರುತ್ತವೆ.
ಇವಳಿಗೆ ದಿನಾಲೂ ಸಿಗ್ನಲ್ಲಿನ ರಿಪೊರ್ಟು ಕೊಡಬೇಕು, ದಿನಾ ಸರಿಯಾಗಿ ನಾನು ಎಂಟಕ್ಕೆ ಎದ್ದು ಬಿದ್ದು ಓಡುತ್ತಿದ್ದೇನೆಂದರೆ ಅದ್ಯಾವುದೊ ಸಿಗ್ನಲ್ಲಿನಲ್ಲಿ ದಿನಾಲೂ ನಂಗೆ ಯಾವುದೊ ಹುಡುಗಿ ಕಾಣಿಸುತ್ತಿರಬೇಕು ಅಂತ ಇವಳಿಗೆ ಗೊತ್ತಾಗಿರುತ್ತದೆ ಅಷ್ಟರ ಮಟ್ಟಿಗೆ ಅವಳು ನನ್ನ ಅರ್ಥ ಮಾಡಿಕೊಂಡಿದ್ದಾಳೆ, ಅವರನ್ಯಾಕೆ ನೊಡುತ್ತೀರಿ ಮನೆಯಲ್ಲಿ ಮಡದಿಯೆಂದು ನಾನಿಲ್ಲವೇ ಎಂದು ಅವಳೆಂದೂ ಕೇಳಿಲ್ಲ, ಅದೆಲ್ಲ ಕ್ಷಣಿಕ, ಎಷ್ಟೇ ಸಿಗ್ನಲ್ಲುಗಳಿದ್ದರೂ ಅಲ್ಲೆಲ್ಲಿ ಗಾಡಿ ನಿಂತರೂ ಕೊನೆಗೆ ಮನೆಯೆಂಬ ಪಾರ್ಕಿಂಗೆ ಲಾಟಿಗೇ ಬರೊದು ಅಂತ ಅವಳಿಗೂ ಗೊತ್ತು. ನೋಡಿದರೂ ನೋಡದಂಗೆ ನಾಟಕ ಮಾಡುವರ ಮುಂದೆ, ನೋಡಿದ್ದು ನೋಡಿದಂಗೆ ಹೇಳುವ ನಾನೆಂದರೆ ಅವಳಿಗೆ ಹೆಮ್ಮೆ.
ಇಂದು ಸಂಜೆ ಪಾರ್ಟಿ ಇದೆ, ನನ್ನ ಕೊಲೀಗು ಜತೆ ಬರ್ತಿದಾಳೆ ಡ್ರಾಪ್ ಮಾಡಿ ಬರ್ತೀನಿ ಅಂತ ಫೊನ್ ಮಾಡಿದ್ದೆ, "ರೀ ನೊಡೋಕೆ ಚೆನ್ನಾಗಿದಾಳಾ, ಸಿಗ್ನಲ್‍ನಲ್ಲಿ ಸ್ಟೈಲ್ ಹೊಡೀರಿ ಅವ್ಳಗೂ ಫ್ರಂಟ್ ಬ್ರೆಕ್ ಹಾಕಿ ಹೆದರಿಸ್ತೀರಾ?" ಅಂತಾ ಕೇಳಿದ್ಲು ಅವ್ಳಿಗೆ ಗೊತ್ತು ನಾನ್ ಹಾಗೆ ಮಾಡಲ್ಲ ಅಂತಾ, ಸುಮ್ನೆ ಕೆದಕ್ತಾಳೆ, ನಾನ್ ಹೊಟ್ಟೆ ಉರಿಸೋಣ ಅಂತಾ ಫೊನ್ ಮಾಡಿದ್ರೆ ನನ್ನೇ ಏಮಾರಿಸಿ ಬಿಡ್ತಾಳೆ. ಸಿಗ್ನಲ್ಲಿನಲ್ಲಿ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕು ಲೇಟ್ ಆಗಿ ಬರುವ ಗಂಡನ ಅನುಮಾನಿಸುವ, ಮೊಬೈಲ್ ಸಿಗ್ನಲ್ ಸಿಗದೇ ಫೊನ್ ಮಾಡಲಾಗದ ಪತಿಯ ಶಂಕಿಸುವ ಪತ್ನಿಯರ ನಡುವೆ ಇವಳಂಥವರೂ ಇದ್ದಾರೆಂದರೆ ನನಗೇ ಅಚ್ಚರಿಯಾಗುತ್ತದೆ. ಹೀಗಿರುವಾಗ ಯಾವ ಅಪ್ಸರೆ, ಯಾವ ಸಿಗ್ನಲ್ಲಿನಲ್ಲಿ, ನನ್ನ ಮುಂದೆ ಸುಳಿದರೇನಂತೆ, ಮನಸ್ಸು ಮನೆಯೆಡೆಗೇ ಎಳೆಯುತ್ತದೆ... ಸರೀ, ಹೀಗೆ ನಿಮ್ಮೊಂದಿಗೆ ಸಿಗ್ನಲ್ಲಿನಲ್ಲಿ ನಿಂತು ಮಾತಾಡುತ್ತಿದ್ರೆ ಟ್ರಾಫಿಕ್ ಪೋಲಿಸ್ ಬಂದು ಹಿಡಕೊಂಡು ಹೋಗಿ ಬಿಡ್ತಾನೆ... ಮತ್ತೊಂದಿನಾ ಮತ್ತೊಂದು ವಿಷಯದೊಂದಿಗೆ ಸಿಕ್ತೀನೆ... ಒಕೆ ಬ್ಯೆ ಬ್ಯೆ... ಕೀಂ ಕೀಂ ಸರೀರಿ ಸಿಗ್ನಲ್ಲು ಬಿಟ್ತು...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/signallinalli.pdf
7 comments:
hi........again hema.nth....
nice article... i enjoyed much........ when ever i read ur articles i wil share wit my colgs and my hubby...... nice.......
with warm regards
hems
Super!!!
thumba chennagidhe nimma article.......... i liked it
ಸಕತ್ತಾಗಿದೆ ... ತುಂಬಾ ಚೆನ್ನಾಗಿ ಬರೆದಿದ್ದೀರ .. ಟೈಮ್ ಸಿಕ್ಕಿದಾಗ ... ನನ್ನ ಬ್ಲಾಗ್ ವಿಸಿಟ್ ಮಾಡಿ .. ಹೊಸ ಪತ್ರ, ಕ್ರೈಸಿಸ್ಸು ಬರ್ದಿದ್ದೀನಿ
Thanks hema for continued support.. Ella anaamika odugarige feedback kaLisiddakke tumbaa thanks... saMtosh nim blagage bheTi koDteeni...
Dude, for a while I really forgot myself. Really I miss those bike rides, smiles and those funs I used to have in bangalore. thanks for making me to smile and feel those cool moments of life from this hectic work. Guess what? your article clearly gives an important message, "Have fun in each moments of life, Life is really beutiful when we make it so."
Looking forward for many more articles like this.
Siraj DH, Dubai
Very happy to receive a nice complement from you, I feel contentment of writing after someone find its really worth... Ya I really enjoy the life here in Bangalore... You got the exact message of all these writings... Life is full of happy moments unless we wont look out for the happiness... in short its the pursuit of happiness... keep visiting...
Post a Comment