ಮುಂಜಾನೆ ಗಣತಂತ್ರ ದಿನ ಅಂತಾ ಏನೊ ಸ್ವೀಟ ಮಾಡಿದ್ಲು, ಅದೇ ಕೇಸರೀಭಾತ, ಕಾರಾಭಾತ ಎರಡೂ ಸೇರಿಸಿ ಚೌಚೌ ಭಾತ.. ನಮ್ಮೂರಲ್ಲಿ ಶಿರ್‍ಆ ಉಪ್ಪಿಟ್ಟು ಅಂತೀವಿ. ಪ್ರತೀ ಗಣತಂತ್ರ ದಿನಾನೂ ರಜೆ ಇದೆ ಮಲಗಲು ಬಿಡೆ ಅಂದ್ರೂ ಬಿಡದೆ ಆರಕ್ಕೆ ಎಬ್ಬಿಸಿ ಎಳಕ್ಕೆ ಸರಿಯಾಗಿ ಹತ್ತಿರದಲ್ಲಿ ಯಾವುದಾದರೂ ಸರಿ ಒಂದು ಶಾಲೆಗೆ ಕರೆದೊಯ್ಯುತ್ತಾಳೆ, ಮಕ್ಕಳು ಧ್ವಜ ಹಾರಿಸುವುದನ್ನು ನೋಡಿ ಹೆಮ್ಮೆ ಪಟ್ಟು ಮನೆಗೆ ಬರೋದು. ಚಿಕ್ಕೊನಿದ್ದಾಗ ನಾನೂ ಹೀಗೆ... ನಾಳೆ ಅಗಸ್ಟ ಹದಿನೈದೊ, ಜನವರಿ ಇಪ್ಪತಾರೊ ಇದೆ ಅಂದ್ರೆ, ಹಿಂದಿನ ದಿನಾನೇ ಭಲೆ ತಯ್ಯಾರಿ ಮಾಡಿಕೊಳ್ಳೊದು, ಯುನಿಫಾರ್ಮ ಚೆನ್ನಾಗಿ ಒಗೆದು ಖಡಕ್ ಇಸ್ತ್ರಿ ಮಾಡಿ, ಬೂಟು ಮಿರ ಮಿರ ಮಿಂಚುವಂತೆ ಪಾಲೀಶು ಮಾಡಿ, ಮುಂಜಾನೆ ನಾಲ್ಕಕ್ಕೇ ಎದ್ದು, ಅಮ್ಮನ ಎಬ್ಬಿಸಿ ತಯ್ಯಾರಾಗಿ ಹೋಗಿ ಪರೇಡು ಮಾಡಿ ಬರೊದು, ಪರೇಡು ಲೀಡರ ಬೇರೆ ಆಗಿದ್ದರಿಂದ ಅದೊಂದು ಹೆಮ್ಮೆ ವಿಷಯ. ಪ್ರಭಾತ ಫೇರಿ ಅಂತಾ ಊರೆಲ್ಲ ಸುತ್ತೊದು ಆವತ್ತು, ಆಗ ಜಯಘೋಷಗಳ ಕೂಗಿ ಕೂಗಿ ಎರಡು ದಿನ ಗಂಟಲು ಕುಗ್ಗಿ, ಗೊಗ್ಗರು ದನಿಯಾಗಿರುತ್ತಿತ್ತು. ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಈಗ ಅದೂ ಮತ್ತೊಂದು ರಜಾ ದಿನ ಅನ್ನೊ ಮಟ್ಟಿಗೆ ಉದಾಸೀನನಾಗಿದ್ದೇನೆ, ಇಲ್ಲ ಬೇಕೆಂತಲೆ ಬೆಳೆಸಿಕೊಂಡಿದ್ದೇನೆ ಅಂದರೂ ತಪ್ಪಿಲ್ಲ. ಅದರೂ ನನ್ನ ದೇಶಪ್ರೇಮ, ಯಾರೂ ಪ್ರಶ್ನಿಸುವಂತಿಲ್ಲ. ನನಗೂ ನನ್ನ ದೇಶ, ನನ್ನ ಜನ, ನನ್ನ ನುಡಿ ಮೇಲೆ ಹೇಳಲಾಗದಷ್ಟು ಪ್ರೀತಿಯಿದೆ, ಹುಟ್ಟಿದ್ದೆ ನವೆಂಬರ ಒಂದರಂದು ಅಂದ ಮೇಲೆ ಕನ್ನಡದ ಮೇಲಂತೂ ಬಲು ಅಕ್ಕರೆ, ಆದರೆ ಬೇರೆ ಭಾಷೆಗಳ ದ್ವೇಷ ಮಾಡುವಂತಲ್ಲ, ನನ್ನ ಭಾಷೆ ನನ್ನ ಪ್ರೀತಿ, ಅವರದು ಅವರಿಗೆ ಅಷ್ಟೇ. ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಂಪ್ಯೂಟರ್ ಕುಟ್ಟುವ ಈ ಐಟೀ ಮಂದಿ ಇಷ್ಟೇ ಅಂತ ನೀವು ಭಾವಿಸಿದರೂ, ಅದರಲ್ಲಿ ನಿಮ್ಮ ತಪ್ಪಿಲ್ಲ, ತೀರ ಎಲ್ಲರೂ ಯೋಚಿಸುವುದು ಹಾಗೇನೆ. ಯಾರಾದರೂ ನೀವು ಐಟೀ ಮಂದಿ ಇಷ್ಟೆ ಅಂದಾಗ ನಮಗೂ ಎಷ್ಟು ನೋವಾಗುತ್ತದೆ ಅನ್ನೋದು ಅನುಭವಿಸಿದವರಿಗೇ ಗೊತ್ತು. ನಾನೂ ಇವಳು ಇದೇ ವಿಷಯದ ಮೇಲೆ ಎಷ್ಟೊ ಸಾರಿ ಜಗಳಾಡಿದ್ದೇವೆ. ಇಂದೂ ಹಾಗೆ ಆಯಿತು, ಆದರೆ ಕೊನೆಗೂ ನನ್ನ ವಿಚಾರ ಅವಳಿಗೂ ತಿಳೀಯಿತಲ್ಲಾ ಅನ್ನೋದೆ ಸಮಾಧಾನ.
ಪರೇಡು ನೋಡಿದ್ದು ಮುಗಿದು, ಪೇಪರು ಓದುತ್ತ ಕುಳಿತಿದ್ಲು, ಯಾವುದೋ ಉಗ್ರರ ಸುದ್ದಿ ನೋಡಿ, "ಇವರಿಗೆ, ನಮ್ಮವರ ಕಂಡ್ರೆ ಅದೇನು ಸಿಟ್ಟೊ, ಯಾವಾಗ ನೋಡಿದರೂ ತಗಾದೆ" ಅಂತ ಗೊಣಗಿದ್ಲು. ಸುಮ್ಮನೆ ಕುಳಿತಿದ್ದವನ ಕಿವಿ ಚುರುಕಾಯಿತು, "ಏನಂದೆ" ಅಂದೆ, "ನಿಮಗೆ ಕೇಳಿಸಿದೆ, ಸುಮ್ನೆ ನಾಟಕ ಮಾಡಬೇಡಿ, ನಾನೇನು ಹತ್ತಿರ ಬರಲ್ಲ, ನಿಮ್ಮ ತುಂಟಾಟ ಶುರು ಆಗುತ್ತೆ" ಅಂದ್ಲು. "ಆಯ್ತು, ನಾನೇ ಬಂದೆ ಅಂತ ಹತ್ತಿರ ಹೋಗಿ ಕುಳಿತರೆ, ಒಳ್ಳೇ ಆರಾಮ ಕುರ್ಚಿಯಲ್ಲಿ ಕೂತೊರಂತೆ ನನ್ನ ಮೇಲೆ ಒರಗಿ, ಎದೆಗೆ ಆತುಕೊಂಡು ಕೂತ್ಲು, ಈಗ ಪೇಪರು ಇಬ್ಬರೂ ಓದಬಹುದಿತ್ತು, "ಇದೇ ನಾ ಹೇಳುತ್ತಿದ್ದುದು" ಅಂತ ಲೇಖನ ತೋರ್‍ಇಸಿದ್ಲು. "ಇದೇ ಈಗ ಹೇಳಿದೆಯಲ್ಲ, ನಮ್ಮವರು ಅಂತ, ನಿನ್ನವರು ಯಾರು" ಅಂದೆ, ಕಣ್ಣು ಕೆಕ್ಕರಿಸಿ ನನ್ನೊಂದು ಸಾರಿ ನೋಡಿ "ಅದೇ ಭಾರತೀಯರು," ಅಂದ್ಲು. "ಹಾಗಾದ್ರೆ, ಅಮೇರಿಕದಲ್ಲಿ ಹುಟ್ಟಿರುವ ನಿಮ್ಮಕ್ಕನ ಮಗ, ನಿನ್ನ ಲಿಸ್ಟಿನಲ್ಲಿ ಇಲ್ಲ ಬಿಡು" ಅಂದೆ, "ರೀ ಅವನೂ ಮೂಲ ಭಾರತೀಯ ತಾನೆ", ಅಲ್ಲೇ ತೊಂದ್ರೆ ಬರೋದು,ನಮಗೆ ಬೇಕಾದವರೆಲ್ಲ ಹಾಗೊ ಹೀಗೊ ಬೇಕು, ಬೇಡವಾದವರು ನಮ್ಮವರಲ್ಲ.
"ರೀ ಸರೀರಿ, ನನಗೆ ಕೆಲಸ ಇದೆ ನಿಮ್ ಜತೆ ಕೂತ್ಕೊಳ್ಳೋಕೆ ಟೈಂ ಇಲ್ಲ" ಅಂತ ಪಲಾಯನಗೈಯಲು ಪ್ರಯತ್ನಿಸಿದ್ಲು, ನಾ ಬಿಟ್ಟರೆ ತಾನೆ, ಕೈ ಬಳಸಿ ಬಿಗಿದು ಕಟ್ಟಿಹಾಕಿ ಕೂರಿಸಿಕೊಂಡೆ. "ಈಗ ನಿನ್ನವರು ಯಾರು ಅಂತ ಲಿಸ್ಟ ಮಾಡೋಣ, ಮೊದಲು ನೀನು ಯಾರು?" ಅಂದೆ ತರಲೆ ಉತ್ತರ ಬಂತು "ರೀ, ನಾನು ನಿಮ್ ಹೆಂಡ್ತಿ", ತಲೆಗೊಂದು ಏಟು ಕೊಟ್ಟು, ತರಲೆ ಬೇಡ ಅಂದ್ರೆ, ತಲೆ ಸವರಿಕೊಳ್ಳುತ್ತ, "ನಾನು ಭಾರತೀಯಳು" ಅಂತ ಹೆಮ್ಮೆಯಿಂದ ಹೇಳಿಕೊಂಡ್ಲು. "ಅದಕಿಂತ ಮೊದ್ಲು ನೀನು ಮನುಜಳು" ಅಂದದ್ದಕ್ಕೆ ಕಣ್ಣ ಕಣ್ಣು ಬಿಡುತ್ತ ನೋಡಿದ್ಲು, ನಾನೇನು ಬೇರೆ ಗ್ರಹದ ಜೀವಿ(ಏಲಿಯನ) ಅಂತನಕೊಂಡಿದ್ದರೇನೊ ಅಂತ ಅನುಮಾನ ಅವಳ ಕಾಡಿರಬೇಕು. ಈಗ ಲಿಸ್ಟು ಮಾಡತೊಡಗಿದೆವು...
"ಮೊದಲು ನೀನು, ಆಮೇಲೆ" ಅಂದೆ, ಅವಳಂದ್ಲು "ಆಮೇಲೆ ನೀವು, ನೀವು ನನ್ನೊರಲ್ವಾ" ಅಂದ್ಲು, ಅಪ್ಪ ಅಮ್ಮ ಅಂದದ್ದಕ್ಕೆ ಅತ್ತೆ ಮಾವ, ಅಪ್ಪ ಅಮ್ಮ ಲಿಸ್ಟಿಗೆ ಸೇರಿದ್ರು, ಒಟ್ಟಿನಲ್ಲಿ ನಿನ್ನವರು ಅಂದ್ರೆ ನಿನ್ನ ಕುಟುಂಬ ಅಷ್ಟೆ ಅಲ್ವೆ ಅಂದ್ರೆ, "ಇಲ್ಲಾಪ್ಪ, ಊರಲ್ಲಿ ಪರಿಚಯದವರು ಬಹಳ ಜನ ಇದಾರೆ ಅಂದ್ಲು" ಅಂದ್ರೆ "ಊರಲ್ಲಿರೋರೆಲ್ಲ, ಸರೀನಾ" ಹೂಂಗುಟ್ಟಿದ್ಲು, "ರೀ, ಹುಕ್ಕೇರಿನ್ಯಾಗ ನಮ್ಮ ಕಾಕಾ(ಚಿಕ್ಕಪ್ಪ) ಇದಾರೆ" ಅಂತ ಹೇಳಿದ್ದಕ್ಕೆ ಆಯ್ತು ಬೆಳಗಾವಿಯಲ್ಲಿರೊರೆಲ್ಲ, ಆದ್ರೆ ಧಾರವಾಡದ ನಿಮ್ಮ ಅಂಟಿ ಅಂತ ವಿಷಯ ಬಂದು, ಬೀದರಿನ ಅಜ್ಜ ನೆನಪಾಗಿ, "ರೀ ನಮ್ಮೊರು ಅಂದ್ರೆ ನಾವೆಲ್ಲ ಉತ್ತರ ಕರ್ನಾಟಕದವರು" ಅಂದ್ಲು, ಈಗೇನೊ ಅಧಿವೇಶನ ಇಲ್ಲಿ ನಡೀತಿದೆ, ಏನೊ ಸ್ವಲ್ಪ ನಮ್ಮನ್ನೂ ಎಲ್ರೂ ಕೇಳ್ತಿದಾರೆ ಅಂದ್ಲು, "ಹಾಗಾದ್ರೆ ನಾವ್ಯಾಕೆ ಬೆಂಗಳೂರಿನಲ್ಲಿರೋದು, ಬೆಂಗಳೂರಿನಲ್ಲಿರೊರು ನಮ್ಮವರಲ್ವಾ" ನನ್ನ ಮರುಪ್ರಶ್ನೆ "ಯಾಕೆ, ಪಕ್ಕದ ಮನೆ ಪದ್ದು ಬಿಟ್ಟೆ ಅಂತ ಬೇಜಾರಾ" ಅಂತ ಅಲ್ಲೂ ತುಂಟತನದ ಮಧ್ಯೆ "ರೀ, ನಾವೆಲ್ಲ ಕನ್ನಡಿಗರು, ಕರ್ನಾಟಕದವರು ಎಲ್ಲ ನಮ್ಮೋರು" ಅಂತ ಘೊಷಿಸಿದ್ಲು. "ಸರೀ, ನಾವೆಲ್ಲ ಕನ್ನಡಿಗರು, ನಾವೆಲ್ಲ ಒಂದು, ಮುಂಬಯಿನಲ್ಲಿ ಎನಾದರ್‍ಏನಂತೆ, ಹೇಗೂ ಬೆಳಗಾವಿ ಬೇಕೆಂದು ನಮ್ಮನ್ನು ಕಾಡುತ್ತರಲ್ಲ" ಅಂದೆ, ಬುಸುಗುಡುತ್ತ "ರೀ ನಾವೆಲ್ಲ ಭಾರತೀಯರು, ಭಾರತದ ತಂಟೆಗೆ ಯಾರಾದ್ರೂ ಬಂದ್ರೆ ಅಷ್ಟೇ" ಗರ್ಜಿಸಿದ್ಲು. "ಹೂಂ, ಮತ್ತೆ ನಾವು ನಾವೇ ಯಾಕೆ ಕಚ್ಚಾಡೋದು, ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಅಂತ ಬೇಧ ಭಾವ ಯಾಕೆ, ನಾವೆಲ್ಲ ಒಂದು ಅನ್ನೊದಾದ್ರೆ, ಮೊನ್ನೆ ನಿಮ್ಮ ಭಾವ ಫಾರಿನ್‌ನಿಂದ ಬಂದಾಗ ಹೇಳುತ್ತಿದ್ರಲ್ಲ, ಅಲ್ಲಿನ ಏಷಿಯನ್ನರ ಮೆಲಿನ ಭಾವನೆಗಳ ಬಗ್ಗೆ ಹೇಳುತ್ತಿದ್ದುದ ಕೇಳಿದ್ರೆ, ನಾವೆಲ್ಲ ಏಷಿಯನ್ನರು ಒಂದೇ ಅಂದ್ರೆ, ನಮ್ಮೊಂಗಿದೆ ಕಚ್ಚಾಡುವ ನಮ್ಮ ಅಕ್ಕಪಕ್ಕದ ದೇಶಗಳು ಎಲ್ಲಿ ಬಂದ್ವು, ಅವೂ ಏಷಿಯಾನಲ್ಲೆ ಇಲ್ವೆ". ಕೊಂಚ ಸಮಯ ಎನೂ ತಿಳಿಯದಂತೆ ಪೆಚ್ಚಗಾಗಿ, "ಹಾಗಾದ್ರೆ, ನಾವೆಲ್ಲ ಭೂಮಿ ಮೇಲಿನ ಮನುಜರೆಲ್ಲ ಒಂದೆ, ನಾವೆಲ್ಲ ಮಾನವರು, ಎಲ್ಲರೂ ನಮ್ಮವರಾ" ಕೇಳಿದ್ಲು, ಆ ಪ್ರಶ್ನೆಗೆ ನನ್ನಲ್ಲೂ ಉತ್ತರವಿಲ್ಲ, ಅದೇ ನನ್ನ ಗೊಂದಲ. "ರೀ, ನೀವು ಕನ್‌ಫ್ಯೂಜ ಆಗೋದಲ್ದೆ, ಈಗ ನನ್ನೂ ಮಾಡಿದ್ರಿ" ಅಂತ ಎದೆಗೊಂದು ಗುದ್ದು ಕೊಟ್ಟು ಎದೆಗೆ ತಲೆಯಾಣಿಸಿ ಮೇಲೆ ನನ್ನೆಡೆಗೆ ನೋಡತೊಡಗಿದ್ಲು. ನಾನಿನ್ನೂ ಗೊಂದಲಗಳ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿದ್ದೆ. ಇವೇ ನಮ್ಮ ಸುತ್ತಲಿನ ವೃತ್ತಗಳು, ಅವುಗಳ ಪರಿಧಿಗಳೆ ನಮ್ಮ ಎಲ್ಲೆಗಳು.
ನಾವೇ ನಮ್ಮ ಸುತ್ತ ಒಂದು ವೃತ್ತ ರಚಿಸಿಕೊಂಡು ಬಿಡುತ್ತೇವೆ, ನಾನು, ನನ್ನ ಹೆಂಡ್ತಿ, ನಮ್ಮ ಮಕ್ಕಳು, ನಮ್ಮ ಕುಟುಂಬ, ನಮ್ಮೂರು, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ಖಂಡ, ನಮ್ಮ ಭೂಮಿ... ವೃತ್ತದ ಪರಿಧಿ ಬೆಳೆಯುತ್ತ ಹೋದಂತೆ ಎಲ್ಲ ನಮ್ಮದೇ... ಗಂಡು, ಹೆಣ್ಣು, ಜಾತಿ ಲೆಕ್ಕದಲ್ಲೆ ತೆಗೆದುಕೊಳ್ಳಿ, ಹೀಗೆ... ನಾನು ಲಿಂಗಾಯತ ಪಂಚಮಸಾಲಿ, ಬಣಜಿಗರೂ ಬೇಕೆಂದು ನೆಂಟಸ್ತಿಕೆ ಬೆಳೆಸಿ, ನಾವೆಲ್ಲ ಲಿಂಗಾಯತರು, ವೀರಶೈವರು, ಹಾಗಾದ್ರೆ ಬ್ರಾಹ್ಮಣ್ರು, ಕುರುಬರು, ಒಕ್ಕಲಿಗರು.. ಬೇಡವಾ, ಬೇಕು, ಸರಿ ಎಲ್ಲ ಸೇರಿ ಹಿಂದೂಗಳು... ಮುಸ್ಲಿಮರಲ್ಲೆ ಸುನ್ನಿ, ಶಿಯಾ, ಕ್ರಿಸ್ಟಿಯನ್ನರಲ್ಲಿ... ಕ್ಯಾಥೊಲಿಕ್ಕು, ಪ್ರೊಟೆಸ್ಟಂಟರು.. ಎಲ್ಲಿಡಲಿ ಪರಿಧಿ, ಎಲ್ಲಿಯವರೆಗೆ ಬೆಳಸಲಿ.
ಮೊದಲು ಮಾನವನಾಗು, ಕವಿವಾಣಿ ನೆನಪಾಗುತ್ತೆ. ಎಲ್ಲ ಉಳಿವಿಗಾಗಿ ಹೋರಾಟ, ನಾ ಬದುಕಬೇಕು , ನನ್ನವರೂ ಕೂಡ ಅಷ್ಟೇ.. ಆದಿಮಾನವನಿದ್ದಾಗಲೇ ಬುಡುಕಟ್ಟುಗಳ ಕಟ್ಟಿಕೊಂಡು ಬಡಿದಾಡಿದವರು ನಾವು, ವೃತ್ತಗಳ ಎಳೆಯುತ್ತಲೇ ಇರುತ್ತೇವೆ. ಪರಿಧಿಗಳು ಸಂಕುಚಿತವಾದಂತೆ ಕೊನೆಗೆ ಉಳಿಯುವುದು ಎನೂ ಇಲ್ಲ, ಪರಿಧಿಯಿಲ್ಲದ ವೃತ್ತದ ಒಂದು ಕೇಂದ್ರಬಿಂದು ಮಾತ್ರ.
ಅವಳೂ ಆತ್ಮಾವಲೋಕನದಲ್ಲಿ ತೊಡಗಿದ್ಲು, ಅಲುಗಿಸಿದೆ... "ರೀ ಇದು ಬಹಳ ಗಹನವಾದ ವಿಚಾರ ನನ್ನ ಊಹೆಗೆ ನಿಲುಕದ್ದು" ಅಂದ್ಲು, "ನಾನನ್ನೊದೂ ಅಷ್ಟೇ, ನನಗೂ ಯೊಚಿಸಿದಷ್ಟು, ಯೋಚನೆಯ ಪರಿಧಿ ವಿಸ್ತಾರವಾಗುತ್ತಲೇ ಹೊಗುತ್ತೆ ಹೊರತು, ಉತ್ತರವಿಲ್ಲ, ಉತ್ತರ ಸಿಕ್ಕರೂ ಮತ್ತೊಂದು ಪ್ರಶ್ನೆ ಹುಟ್ಟಿ ಬಿಡುತ್ತೆ" ಅಂದೆ. ಮುಂದುವರೆಸಿ ಹೀಗೆ ಜೀವನ ಸಾಗುತ್ತಿರುತ್ತದೆ "ವೃತ್ತಗಳ ಎಳೆಯುತ್ತ, ಪರಿಧಿಯ ವಿಸ್ತರಿಸುತ್ತ, ಕುಗ್ಗಿಸುತ್ತ, ಬೇರೆ ವೃತ್ತಗಳಲ್ಲಿ ಸೇರಿಕೊಳ್ಳುತ್ತ ಸಾಗುತ್ತಲೇ ಇರಬೇಕು. ಇಂದು ನಮ್ಮ ವೃತ್ತ, ಭಾರತ, ನಾವು ಭಾರತೀಯರು, ಗಣತಂತ್ರ ದಿನ ಆಚರಿಸಿದೆವು, ವಿಸ್ತರಿಸಿದರೆ... ನಾಳೆ ಪರಿಸರದ ವಿಷಯ ಬಂದ್ರೆ, ಭೂಮಿ ನಮ್ಮ ವೃತ್ತ, ಕುಗ್ಗಿಸಿದರೆ... ನವೆಂಬರ ಒಂದಕ್ಕೆ, ಕರ್ನಾಟಕ ನಮ್ಮ ವೃತ್ತ", ಅವಳ ಕಣ್ಣುಗಳ ಹೊಳೆಯತೊಡಗಿದವು "ರ್‍ಈ ಈ ಕಲ್ಪನೆ ಚೆನ್ನಾಗಿದೆ, ನನಗೆ ಬಹಳ ಹಿಡಿಸಿತು, ಇನ್ನೆಂದೂ ನಿಮ್ಮನ್ನ ಐಟಿ ಮಂದಿ, ಫಾರಿನ ಕಂಪನೀನವ್ರು ಅಂತ ಹೀಯಾಳಿಸಲ್ಲ... ಯಾಕೆಂದ್ರೆ ನೀವು ಮನುಕುಲಕ್ಕೆ ಒಂದು ಒಳಿತಾಗುವ ಎನೊ ಕೆಲಸ ಮಾಡುತ್ತಿದ್ದೀರಿ, ನನ್ನ ಪರಿಧಿ ದೊಡ್ಡದಾಗಿ ಬಿಡುತ್ತೆ" ಅಂದ್ಲು. "ಕಳ್ಳೀ, ನನ್ನೇ ಒಲೈಸೊಕೆ ನೊಡ್ತೀಯ" ಅಂತ ಕಿವಿ ಹಿಂಡಿದೆ... ಕಿರುಚಿದ್ಲು... ಈಗ ಇನ್ನೊಂದು ಚಿಕ್ಕ ವೃತ್ತ, ಅದರ ಪರಿಧಿ ಚಿಕ್ಕದು, ಅಲ್ಲಿ ನಾನು ನೀನು, ಅಂತನ್ನುತ್ತ ಅವಳ ಸುತ್ತ ಆವರಿಸಿದೆ. "ರೀ ಬಿಡ್ರೀ ಅದ್ಕೆ ನಿಮ್ಮ ಹತ್ರ ನಾ ಬರೊಲ್ಲ ಅಂದಿದ್ದು, ನಿಮ್ಮ ವೃತ್ತ ಬೇಡ ನಂಗೆ", ಅಂತ ಕೊಸರಾಡಿದ್ಲು, ನನ್ನ ವೃತ್ತದ ಪರಿಧಿ ಚಿಕ್ಕದಾಗುತ್ತಲೇ ಹೋಯ್ತು...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...
The PDF document can be found at http://www.telprabhu.com/paridhi.pdf
ಏನೊ ನನಗೆ ತೋಚಿದ್ದು, ತೋಚಿದಂತೆ ಬರೆದಿದ್ದೇನೆ, ಯಾವುದೇ ರೀತಿಯಲ್ಲಿ, ಯಾರಿಗೂ, ಯಾವುದೇ ಕೋಮಿಗೂ, ಊರಿಗೂ, ರಾಜ್ಯ, ದೇಶಕ್ಕೊ, ನೋವುಂಟು ಮಾಡುವುದಂತೂ ನನ್ನ ಉದ್ದೇಶವಲ್ಲ. ಆದಾಗ್ಯೂ ಯಾರ ಭಾವನೆಗಳಿಗೂ ಘಾಸಿಯುಂಟಾಗಿದ್ದಲ್ಲಿ ಮನಸಾ ಕ್ಷಮೆ ಕೇಳುತ್ತೇನೆ. ಎಲ್ಲರಿಗೂ ಇದು ಸರಿಯಿನಿಸಬೇಕೆಂದೇನಿಲ್ಲ, ಇಷ್ಟವಾಗದ್ದಲ್ಲಿ ಏನೊ ಹುಚ್ಚು ಹುಡುಗನ ಹತ್ತು ಹುಚ್ಚು ಕಲ್ಪನೆಗಳಲ್ಲಿ ಹನ್ನೊಂದನೆಯದೆಂದು, ಬಿಟ್ಟು ಬಿಡಿ.
ಹಾಗೇ ಬ್ಲಾಗಿನ ಎಲ್ಲ ಅಭಿಮಾನಿ ಓದುಗರಿಗೆ, ಅಭಿಮಾನವಿಲ್ಲದೆಯೂ ಓದುವವರಿಗೆ, ಪ್ರೀತಿಯಿಂದ ಪತ್ರ (ಇ-ಅಂಚೆ -> ಇಂಚೆ) ಬರೆದವರಿಗೆ, ಕಾಮೆಂಟು ಕೊಟ್ಟವರಿಗೆ, ನನ್ನ ಹಾಗೂ ನನ್ನವಳ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ, ಹೂವು ಮಾರುವ ಗುಲಾಬಿ, ಪರಿಚಯದ ಪರಿಮಳ, ಕಿರಾಣಿ ಅಂಗಡಿಯ ಕೀರ್ತಿಯ ಪರವಾಗಿ ಗಣತಂತ್ರ ದಿನದ ಹಾರ್ದಿಕ ಶುಭಾಶಯಗಳು
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು