Sunday, April 11, 2010

ಅಪ್ಪಿಕೋ ಚಳುವಳಿ...

ಸುಮ್ಮನೇ ಕೂತಿದ್ದೆ, ಮಾತಿಲ್ಲದೇ... ಅವಳಿರುವಾಗ ಮಾತುಗಳಿಗೆ ಬರ ಬರಲು ಕಾರಣ ಮೊನ್ನೆ ಮೊನ್ನೆ ಜರುಗಿದ ಕದನ. ಇದೇನು ದೊಡ್ಡ ಪಾಣಿಪತ್ ಕದನವೇನಲ್ಲ, ಚಿಕ್ಕ ಕೋಳಿ ಕಲಹ. ಸುಖವಾಗಿದ್ದ ಸುಂದರ ಸಂಸಾರದಲ್ಲಿ ಇದೇನು ಸಮಸ್ಯೆ ಬಂತು ಅಂತಾನಾ, ಅದೇನು ದೊಡ್ಡ ಸಮಸ್ಯೆಯೇ ಅಲ್ಲ ಬಿಡಿ. ಆಗಾಗ ಹೀಗೆ ಚಿಕ್ಕ ಪುಟ್ಟ ಜಟಾಪಟಿಗಳು ಇರಲೇಬೇಕೆಂದು ಸುಮ್ಮನೆ ಕೂರದೆ ಕಾಲು ಕೆರೆದುಕೊಂಡು ಕಾಡಿಸಿ ಕೋಪ ಬರಿಸಿ ಕಿತ್ತಾಡಿಕೊಂಡುಬಿಡುವುದು. ಕದನದಲ್ಲೂ ಒಂಥರಾ ಖುಷಿಯಿದೆ ಅಂತ ಆಗಲೇ ಗೊತ್ತಾಗುವುದು. ಮೊನ್ನೆ ಆಗಿದ್ದು ಕೂಡಾ ಹೀಗೇ, "ತಿಳಿ ನೀಲಿ ಬಣ್ಣದ ಶರ್ಟ್ ಇತ್ತಲ್ಲ, ಎಲ್ಲೇ ಸಿಕ್ತಾ ಇಲ್ಲ" ಅಂತ ಕೂಗಿದ್ದಕ್ಕೆ, "ಹಳೆಯದಾಗಿತ್ತು ಅಂತ, ಪೇಂಟ್ ಮಾಡೊ ಹುಡುಗನಿಗೆ ಕೊಟ್ಟು ಬಿಟ್ಟೆ" ಅಂತ ಪಾಕಶಾಲೆಯಿಂದಲೇ ಹೇಳಿದ್ದಳು. ಮೊದಲೇ ಅದು ನನ್ನ ಮೆಚ್ಚಿನ ಶರ್ಟ ಅದನ್ನ ಹೀಗೆ ಕೊಟ್ಟಿದ್ದಾಳೆ ಅಂದರೆ ಸಿಟ್ಟು ಬಂದು ಬಿಟ್ಟಿತ್ತು, ಕೊಡುವ ಮೊದಲು ಒಂದು ಮಾತು ಕೂಡ ಕೇಳಿಲ್ಲವಲ್ಲ ಅನ್ನೋ ಬೇಸರ ಬೇರೆ. "ಯಾರೇ ಅದನ್ನ ಕೊಡು ಅಂತ ಹೇಳಿದ್ದು" ಅಂತ ದನಿ ಏರಿಸಿದ್ದೆ, ಅಡಿಗೆಯ ಖಾರದ ಘಾಟು ಮೂಗು ಸೇರಿ ಅವಳಿಗೂ ಕೋಪ ನೆತ್ತಿಗೇರಿ, "ಎಲ್ಲಿ ಹೊರಟರೂ ಅದನ್ನೇ ಹಾಕ್ಕೊಂಡು ನಿಲ್ತಾ ಇದ್ರಲ್ಲ, ಫೇವರಿಟ್ಟು ಫೇವರಿಟ್ಟು ಅಂತ... ಅದಕ್ಕೇ ಕೊಟ್ಟೆ" ಅಂತ ಚೀರಿದ್ದಳು. ಪಾಕಶಾಲೆಗೆ ಹೋಗಿ "ಇನ್ನೊಮ್ಮೆ ನನ್ನ ಶರ್ಟ್ ಮುಟ್ಟಿದ್ರೆ ನೋಡು" ಅಂತ ಎಚ್ಚರಿಕೆ ಕೊಟ್ಟು ಬಂದರೆ, ಹೊರಬಂದು ನನ್ನ ಶರ್ಟ್ ಒಮ್ಮೆ ಮುಟ್ಟಿದ್ದಲ್ಲದೇ ತೀಡಿ ಮುದ್ದೇ ಮಾಡಿ ಸುಕ್ಕಾಗಿಸಿ ಹೋಗಿದ್ದು ನೋಡಿ ಕುದ್ದು ಹೋದೆ. ಸಿಟ್ಟಿನಲ್ಲಿ ನೋಡಿ ಶೀತಲ ಸಮರಕ್ಕೆ ನಾಂದಿ ಹಾಡಿದಾಗಲೇ ಶುರುವಾಗಿದ್ದು ಅವಳ ಅಪ್ಪಿಕೋ ಚಳುವಳಿ...

ಏನಿದು ಅಪ್ಪಿಕೋ ಚಳುವಳಿ, ಮರಗಳನ್ನ ಕಡಿಯಬೇಡಿ ಅಂತ ಮರಗಳನ್ನು ಅಪ್ಪಿಕೊಂಡು ನಿಂತು ಕಾಪಾಡಲು ಪರಿಸರವಾದಿಗಳು ಮಾಡಿದ ಚಳುವಳಿ ಅಂತೆ, ಆದರೆ ಅದಕ್ಕೆ ಹೊಸ ಭಾಷ್ಯ ಕೊಟ್ಟದ್ದು ನನ್ನಾಕೆ. ಗೆಳೆಯನೊಬ್ಬ ಮಗುವಿನೊಂದಿಗೆ ಮನೆಗೆ ಬಂದಾಗ
ಇವಳು ಮುದ್ದುಗರೆದದ್ದು ನೋಡಿ ಮರಳಿ ಹೋಗಲೊಲ್ಲದೇ ಇವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತು ಬಿಟ್ಟಿತ್ತು, ಬಾರೋ ಹೋಗೋಣವೆಂದರೆ ಬಿಡಲೊಲ್ಲದು, ಆಗಲೇ ಅದನ್ನು ನನ್ನಾಕೆ ಅಪ್ಪಿಕೊ ಚಳುವಳಿ ಅಂದಿದ್ದು. ಅಂತೂ ಹರಸಾಹಸ ಮಾಡಿ ಬಿಡಿಸಿಕೊಂಡು ಹೋಗಿದ್ದ, ಆದರೂ ಅದೊಂದು ಒಳ್ಳೆಯ ತಂತ್ರ ಅಂತ ಕಂಡುಕೊಂಡಿದ್ದ ಮಗು ಈಗ ಅವನೆಲ್ಲಿ ಹೊರಟು ನಿಂತರೂ ನಾನೂ ಜತೆ ಬರುತ್ತೀನಿ ಅಂತ ಕಾಲಿಗೆ ಅಮರಿಕೊಂಡು ಅಪ್ಪಿ ಕಾಲು ಕಿತ್ತಿಡದಂತೆ ಕೂತುಬಿಡುತ್ತಿತ್ತಂತೆ, ನನ್ನ ಮಗ ಅಪ್ಪಿಕೋ ಚಳುವಳಿಗಿಳಿದಿದ್ದಾನೆ ಅಂತ ಗೆಳೆಯ ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದ. ಮಗುವಿನ ಪ್ರಯೋಗ ಯಶಸ್ವಿಯಾಗಿದ್ದು ಕಂಡು ನನ್ನಾಕೆ ಅದೇ ತಂತ್ರ ನನ್ನ ಮೇಲೆ ಮಾಡುತ್ತಿದ್ದಳು.

ಶರ್ಟ್ ಜಗಳ ಜೋರಾಗಿ, ಮೌನ ಸತ್ಯಾಗ್ರಹ ಶುರು ಮಾಡಿಬಿಟ್ಟಿದ್ದೆ, ಅವಳು ಕೂಗಿದಾಗ ಉತ್ತರಿಸದಾದಾಗ, ನನ್ನೊಂದಿಗೆ ಮಾತಾಡುತ್ತಿಲ್ಲ ಅಂತ ಅವಳಿಗೂ ಗೊತ್ತಾಗಿಹೋಗಿತ್ತು. ಅಂದು ಮುಂಜಾನೆ ಟೇಬಲ್ಲಿನ ಮೇಲೆ ಉಪ್ಪಿಟ್ಟು ಮಾಡಿಟ್ಟು ಕೈಲಿ ಚಮಚೆ ಹಿಡಿದು ನಿಂತಿದ್ದಳು, ಕೇಳಲಿ ಕೊಡೋಣ ಅಂತ. ಮಾತನಾಡಲೇ ಬಾರದು ಅಂತ ತೀರ್ಮಾನಿಸಿದ್ದ ನಾನು ಬಿಸಿ ಬಿಸಿಯಿದ್ದರೂ ಕೈ ಸುಟ್ಟರೂ ಪರವಾಗಿಲ್ಲ ಅಂತ ಕೈಯಲ್ಲೇ ತಿಂದು ಎದ್ದು ಹೋಗಿದ್ದೆ. ಆಗ ಶುರುವಾಗಿದ್ದ ಜಗಳ, ಇನ್ನೂ ಜಾರಿಯಲ್ಲಿತ್ತು. ಈ ಸಾರಿ ಸ್ವಲ್ಪ ಧೀರ್ಘಕಾಲೀನ ಸಮರವಿರಲಿ ಅಂತ ನಿರ್ಧರಿಸಿ, ಪಟ್ಟು ಸಡಲಿಸಿರಲಿಲ್ಲ.

ಎರಡು ದಿನದಿಂದ, ಅಪ್ಪಿಕೋ ಚಳುವಳಿ ಶುರುವಾಗಿತ್ತು, ಮಾತನಾಡುವುದಿಲ್ಲ ಅಂತ ಗೊತ್ತು, ಅದಕ್ಕೆ ಸರಿಯಾಗಿ ಅಫೀಸಿಗೆ ಹೊರಟು ರೆಡಿಯಾಗಿ ನಿಂತಿರುವಾಗ, ಹಿಂದಿನಿಂದ ಬಂದು ಗಪ್ಪನೆ ಅಪ್ಪಿಕೊಂಡು ನಿಂತು ಬಿಡುವವಳು, "ಬಿಡು ಅಂತ ಹೇಳಿ ಬಿಡ್ತೇನೇ, ಇಲ್ಲಾಂದ್ರೆ ಈವತ್ತು ಅಫೀಸಿಗೆ ಚಕ್ಕರ ಹೊಡಿಬೇಕಾಗತ್ತೆ" ಅಂತ ವಾರ್ನಿಂಗ್ ಬೇರೆ, ಹಾಗೂ ಹೀಗೂ ಕೊಸರಿಕೊಂಡು ತಪ್ಪಿಸಿಕೊಂಡು ಹೊರಟು ಹೋಗಿದ್ದೆ, ಎರಡು ದಿನವಂತೂ ಅವಳ ಅಪ್ಪಿಕೋ ಚಳುವಳಿ ಸಫಲವಾಗಿರಲಿಲ್ಲ, ನಿನ್ನೆಯಂತೂ ನಾನು ಪ್ರತಿಭಟಿಸಲೂ ಇಲ್ಲ ಅಂತಾದಾಗ, ತಾನೇ ಬಿಟ್ಟುಕೊಟ್ಟಿದ್ದಳು, ಆಗ ಅವಳ ಮುಖ ನೋಡಿ, ಪಾಪ ಕಾಡಿದ್ದು ಸಾಕೆನಿಸಿ ಮಾತಾಡಿಸಲೇ ಅನ್ನಿಸಿದರೂ ಇರಲಿ ಇನ್ನೊಂದು ಚೂರು... ಮಜವಾಗಿದೆ ಅಂತ ಸುಮ್ಮನಾಗಿದ್ದೆ.

ನನ್ನ ಅಪ್ಪಿಕೋ ಚಳುವಳಿಗಳು ಮಾತ್ರ ಯಾವಾಗಲೂ ಸಫಲವಾಗಿರುತ್ತಿದ್ದವು, ಸಮಯ ಸಾಧಿಸಿ ಸರಿಯಾಗಿ ತಪ್ಪಿಸಿಕೊಳ್ಳದಂತೆ ಬಾಹು ಬಂಧಿಸಿದರೆ ಸಡಲಿಸುತ್ತಿರಲಿಲ್ಲ, ಸಿಡಿಮಿಡಿಗೊಂಡು ಸೋತು ಬಾಯಿಬಿಟ್ಟಿರುತ್ತಿದ್ದಳು. ಅದಂತೂ ಸಫಲವಾಗದಾದಾಗ ಹೊಸ ವರಸೆ ತೆಗೆದಳು, ಅಂದು ಶನಿವಾರ ನಾನಂತೂ ಹೊರಗೆಲ್ಲೂ ಹೋಗುವುದಿಲ್ಲ ಅಂತ ಗೊತ್ತಿದ್ದರಿಂದ, ಗೋಡೆಗಳೊಂದಿಗೆ ಮಾತಾಡುವರಂತೆ ನನ್ನಡೆಗೂ ನೋಡದೇ ವಾರ್ತೆ ಓದತೊಡಗಿದಳು, "ಇಂದಿನ ಸುದ್ದಿಗಳು, ಮನೆಯಲ್ಲಿ ಶುರುವಾದ ಸಮರ, ಸಂಧಾನ ಯತ್ನ ವಿಫಲ, ಮೌನಸತ್ಯಾಗ್ರಹ... ಮನೆತುಂಬ ಕವಿದ ನೀರಸ ವಾತಾವರಣ. ಬಿಕೊ ಅನ್ನುತ್ತಿರುವ ಬೆಡರೂಮು, ಹಾಲ್‌ನಲ್ಲಿ ಹಗಲು ಹೊತ್ತಿನಲ್ಲೇ ಬಾಯಿಗಳಿಗೆ ಬೀಗ. ಯಜಮಾನರು ಮೂರುದಿನದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪಟ್ಟು ಸಡಲಿಸದಿರುವುದರಿಂದ, ಮುಂದುವರೆದ ಮುಷ್ಕರ, ಪಾಕಶಾಲೆಗೆ ಮೂರು ದಿನ ರಜೆ, ಹೊರಗಿನ ತಿಂಡಿ ತಿನಿಸು ತರದಂತೆ ನಿಷೇಧ. ಮನೆಯಿಂದ ಹೊರ ಹೋಗದಂತೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ, ಹೆಚ್ಚಿನ ಸುದ್ದಿಗಳಿಗಾಗಿ ಕೇಳುತ್ತಿರಿ ನಿಮ್ಮ ಮನೆವಾರ್ತೆ." ಅಂತ ಚಿಲಿಪಿಲಿಯೆನ್ನುವಂತೆ ಉಲಿದವಳು, ನಡುವಿಗೆ ಸೆರಗು ಸಿಕ್ಕಿಸಿ, ಸವಾಲು ಹಾಕಿ ಸಿದ್ಧವಾದಳು.

ಪಾಕಶಾಲೆಗೆ ರಜೆಯೆಂದರೆ ಬೇಳೆ ಏನೂ ಬೇಯುವಂತಿರಲಿಲ್ಲ, ಅಪ್ಪಿತಪ್ಪಿ ಕಾನೂನು ಮೀರಿ, ಪಾಕಶಾಲೆಗೆ ಕಾಲಿಟ್ಟರೆ, ಇಲ್ಲ ಪ್ರತಿಬಂಧಕಾಜ್ಞೆ ಮುರಿದು ಮನೆಯಿಂದ ಹೊರಬಿದ್ದರೆ ಮುಂದಿನ ತೀವ್ರ ಪರಿಣಾಮಗಳು ಊಹಿಸಲಸಾಧ್ಯ. ಅಲ್ಲದೇ ಹಾಗೆ ಮಾಡಿ ನಾನೇನೊ ಹೊರಗೇನಾದರೂ ತಿಂದು ಬರಬಹುದೇನೊ ಆದರೆ ಅವಳು ಮಾತ್ರ ಹಾಗೇ ಕೂತಾಳು ಅಂತನ್ನೊ ಬೇಸರ. ಏನು ಮಾಡಲೂ ತಿಳಿಯದಾಯಿತು, ಹಾಗೆ ಮನೆತುಂಬ ಶತಪಥ ತಿರುಗುತ್ತಿದ್ದರೆ ಕಂಡಿತು ಹಣ್ಣಿನ ಬುಟ್ಟಿ, ಅವಳು ಬೇಕಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಿ, ಫಲಾಹಾರ ಸೇವನೆಯಾದರೂ ಮಾಡೋಣ ಅಂತ ಅದನ್ನೇ ಎತ್ತಿಕೊಂಡು ಅವಳಿಗೆ ಕಾಣುವಂತೆ ಹೋಗಿ ಕೂತು, ಸದ್ದು ಮಾಡುತ್ತ ಸೇಬು ಮೆಲ್ಲತೊಡಗಿದೆ ಇನ್ನೊಂದು ಸೇಬುವಿಗೆ ಕೈ ಹಾಕುತ್ತಿದ್ದರೆ, ಕಸಿದುಕೊಂಡು ತಾನೂ ಒಂದು ತಿಂದಳು. ಸಧ್ಯದ ಸಮಸ್ಯೆಯೇನೊ ಬಗೆಹರಿಯಿತು, ಮಧ್ಯಾಹ್ನ ಊಟಕ್ಕೇನು ಮಾಡುವುದು ತಿಳಿಯದಾಯಿತು. ಬೇಗ ರಾಜಿಯಾಗುವ ಇರಾದೆಯೂ ನನಗಿರಲಿಲ್ಲ, ಅದಕ್ಕೆ ಅವಳಿಗೆ ಕೇಳುವಂತೆ "ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ, ಏನೊ ಒಂದು ಆಗುತ್ತೆ" ಅಂತ ಆಕಾಶದತ್ತ ಮುಖ ಮಾಡಿ ಕೈಮುಗಿದು ಹೊರಬಂದೆ.

ದೇವರೇ, ಅವಳನ್ನು ಇನ್ನಷ್ಟು ಕಾಡಿಸು ಅಂತ ಸಹಾಯ ಮಾಡಿದನೋ ಎನೊ, ಪಕ್ಕದಮನೆ ಪದ್ದು ಪಲಾವ್‌ನೊಂದಿಗೆ ಪ್ರತ್ಯಕ್ಷ ಆಗಬೇಕೆ, "ಏನ್ ಮಾಡ್ತಾ ಇದೀರಾ, ಸಂಡೇ ಸ್ಪೇಶಲ್ ಅಂತ ಅವರೇಕಾಳು ಪಲಾವ್ ಮಾಡಿದ್ದೆ, ತಂದೆ" ಅಂತನ್ನುತ್ತಿದ್ದಂತೆ, "ಬನ್ನಿ, ಬನ್ನಿ" ನಾ ಬರಮಾಡಿಕೊಂಡೆ. ಇವಳು ಓಡಿ ಬಂದು "ಅಯ್ಯೊ ಈಗ ತಾನೆ ಊಟ ಆಯ್ತಲ್ಲ, ಸುಮ್ನೇ ಹಾಳಾಗುತ್ತೆ, ಮತ್ತೆ ಮಾಡಿದಾಗ ಕೊಡುವಿರಂತೆ" ಅಂತ ಕಲ್ಲು ಹಾಕಲು ನೋಡಿದಳು, ತಕ್ಷಣ ನಾನು ಪರವಾಗಿಲ್ಲ "ನಾನು ಟೇಸ್ಟ್ ಮಾಡ್ತೀನಿ ಕೊಡಿ ನೀವು" ಅಂತ ಇಸಿದುಕೊಂಡು ಬಂದೆ, ಪದ್ದು ಫುಲ್ ಇಂಪ್ರೆಸ್ ಕೂಡ ಆದಳು. ಅವರೇಕಾಳು ಪಲಾವ್ ಅಲ್ಲ ದೇವರೇ ಕಾಡು ಅಂತ ಕಳುಹಿದ ಪಲಾವ್ ಅನ್ನುತ್ತ ತಂದು ಟೇಬಲ್ಲಿನ ಮೇಲಿಟ್ಟೆ.

ಪದ್ದು ಜತೆ ಮಾತಾಡಿ, ಕಳುಹಿಸಿಕೊಟ್ಟು ಬಂದಳು, ನಾನಂತೂ ತಿನ್ನಲು ಅಣಿಯಾಗಿ ಕೂತಿದ್ದೆ, ನನಗೊಂದು ಪ್ಲೇಟನಲ್ಲಿ ಸ್ವಲ್ಪ ಹಾಕಿಕೊಂಡು ಉಳಿದದ್ದು ಅವಳಿಗನ್ನುವಂತೆ ಇಟ್ಟು ಬಂದೆ, ಕೋಪದಲ್ಲಿ ಕಣ್ಣು ಕೆಂಪಾಗಿಸಿಕೊಂಡು ಬಂದು ಕೂತು ಅವಳೂ ತಿಂದು ಕೈತೊಳೆದುಕೊಂಡಳು. ನನ್ನಾಕೆ ಮಾಡುವ ಪಲಾವನಷ್ಟು ಟೇಸ್ಟ್ ಏನೂ ಆಗಿರಲಿಲ್ಲ ಬಿಡಿ ಆದರೂ ಹೊಟ್ಟೆ ಹಸಿದಾಗ ಸಿಕ್ಕದ್ದೇ ಪಂಚಾಮೃತವಾಗಿತ್ತು. ಇದೇನೂ ಕೆಲಸ ಮಾಡುವ ಹಾಗೆ ಕಾಣದಾದಾಗ ಕೊನೇದಾಗಿ ಅಮ್ಮನ ಹತ್ತಿರ ದೂರು ಕೊಡುತ್ತಾಳೆ ಇನ್ನು ಅಂತ ಗೊತ್ತಿತ್ತು, ಅಲ್ಲದೇ ಮಾತನಾಡಿಸದೇ ಮೂರು ದಿನಗಳು ಬೇರೆ ಆಗಿದ್ದರಿಂದ ನನಗೂ ಒಂಥರಾ ಚಡಪಡಿಕೆ ಶುರುವಾಗಿತ್ತು. ಸೋಲೊಪ್ಪಿಕೊಳ್ಳಬಾರದು ಅಂತ ಸುಮ್ಮನಿದ್ದೇ ಹೊರತು, ಸಿಟ್ಟು ಯಾವಾಗಲೋ ಹೊರಟು ಹೋಗಿತ್ತು.

ಸಾವಿಲ್ಲದ ಮನೆಯ ಸಾಸಿವೆ ಕಾಳು ತಂದರೆ ಬದುಕಿಸಿಕೊಡುತ್ತೇನೆ ನಿನ್ನ ಮಗನನ್ನು ಅಂತ ಬುಧ್ಧ ಹೇಳಿ ಸಾವಿಲ್ಲದ ಮನೆಯೇ ಇಲ್ಲ ಅಂತ ಹೇಗೆ ತಿಳಿಸಿದ್ದನೊ, ಜಗಳವಿಲ್ಲದ ಮನೆಯ ಜೀರಿಗೆ ತಂದು ಕೊಡಿ, ಜಗಳವಿಲ್ಲದ ಜೀವನ ಸೃಷ್ಟಿ ನಾನು ಮಾಡಿಕೊಡುತ್ತೇನೆ! :)
ಸಾವಿಲ್ಲದ ಮನೆ ಸಾಸಿವೆಕಾಳು ಹೇಗೆ ಸಿಗಲಿಕ್ಕಿಲ್ಲವೊ, ಜಗಳವಿಲ್ಲದ ಮನೆ ಜೀರಿಗೆ ಕೂಡ ಸಿಗಲಿಕ್ಕಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಜಗಳವಿಲ್ಲದ ಮನೆ ಕೂಡ ಇಲ್ಲ, ಎಲ್ಲೊ ದೊಡ್ಡ ದೊಡ್ಡ ರಂಪಾಟಗಳಾದರೆ ಇನ್ನೆಲ್ಲೊ, ಜೋರಿಲ್ಲದ ಜಟಾಪಟಿಗಳು ಆದಾವು. ಏನಿಲ್ಲವೆಂದರೂ ಹುಸಿಮುನಿಸು, ತುಸುಕೋಪ ಪ್ರದರ್ಶನಗಳಾದರೂ ಆಗಿರಲೇಬೇಕು. ಈ ಚಿಕ್ಕ ಪುಟ್ಟ ಫೈಟಿಂಗಳಾದ ಮೇಲಿನ ಪ್ರೀತಿಯಿದೆಯಲ್ಲ, ಅದು ಪದಗಳಲ್ಲಿ ಹೇಳಲಾಗದ್ದು. ಯಾರು ಸೋತರು ಯಾರು ಗೆದ್ದರು ಅನ್ನುವುದಕ್ಕಿಂತ, ಇಬ್ಬರೂ ಒಮ್ಮೆಲೇ ಒಬ್ಬರಿಗೊಬ್ಬರು ಸೋಲಲು ತಯ್ಯಾರಾಗಿಬಿಟ್ಟಿರುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳೇ ವಿಕೋಪಕ್ಕೆ ಹೋಗಬಹುದಾದರೂ ಹಾಗಾಗದಂತೆ ಬಿಡದಿದ್ದರೆ, ಸಾರಿಗೆ ಸಾಸಿವೆ ಜೀರಿಗೆಯ ವಗ್ಗರಣೆ ಹಾಕಿದಾಗ ಬರುವ ಚಟಪಟ ಸದ್ದಿನಂತೆ ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ಜಟಾಪಟಿಯಾಗಿ ಹೋದರೆ ಅಮೇಲೆ ಘಂಮ್ಮೆಂದು ಹರಡುವ ಸುವಾಸನೆಯಂತೇ ಸುಮಧುರವಾಗಿರುತ್ತದೆ ಜೀವನ.

ಸಂಜೆಗೆ ಕರ್ಫ್ಯೂ ತೆರವಾಗಿತ್ತು, ಹೊರಗೆ ಹೋಗಿ ಪಕೋಡ, ಬಜ್ಜಿ ಪಾರ್ಸೆಲ್ ಮಾಡಿಸಿಕೊಂಡು ಬಂದೆ. ಎರಡು ಕಪ್ಪು ಜಿಂಜರ್ ಟೀ ಮಾಡಿಕೊಂಡು ಬಂದು ಕೂತು ಪ್ಯಾಕೆಟ್ಟು ತೆರೆದು ಕೂತರೆ, "ಮಾಡುವುದೆಲ್ಲ ಮಾಡುವುದು, ಮತ್ತೆ ಮೇಲೆ ಮಾತಾಡದ ಮುನಿಸ್ಯಾಕೊ" ಅಂತನ್ನುತ್ತ, ಪಕೋಡವೊಂದು ಬಾಯಿಗಿಟ್ಟುಕೊಂಡು ಟೀ ಕಪ್ಪು ಹಿಡಿದು ಒಳ ಹೋದವಳು, ಹೊರಬಂದಾಗ ನೋಡಿದರೆ, ಥೇಟ್ ಬೆದರುಬೊಂಬೆಯಂತೇ ಕಾಣುತ್ತಿದ್ದಳು, ಉಟ್ಟಿರುವ ಸೀರೇ ಮೇಲೆ ಜಾಕೆಟ್ಟಿನಂತೆ ಅದೇ ನನ್ನ ಮೆಚ್ಚಿನ ತಿಳಿನೀಲಿ ಬಣ್ಣದ ಹೊಚ್ಚ ಹೊಸ ಶರ್ಟ ಹಾಕಿಕೊಂಡು ನಿಂತಿದ್ದಳು ನಗು ತಡೆಯಲಾಗದೇ ಪಕ್ಕನೇ ನಕ್ಕುಬಿಟ್ಟೆ. ಯಾವಗ ತಂದಿಟ್ಟಿದ್ದಳೊ... ಅಂಥದ್ದೇ ನನ್ನ ಮೆಚ್ಚಿನ ಶರ್ಟನಂತದ್ದೇ ಹುಡುಕಿ ತಂದಿದ್ದಳು. ಕೈಗಳಗಲಿಸಿ ಅವಳು ಕರೆದರೆ ಅಪ್ಪಿಕೋ ಚಳುವಳಿ ಒಪ್ಪಿಕೊಳ್ಳದೇ ಇರಲಾಗುವಂತಿರಲಿಲ್ಲ. ಹೋಗಿ ಬಾಚಿ ತಬ್ಬಿಕೊಂಡರೆ, ನನ್ನನ್ನೂ ಸೇರಿಸಿಕೊಂಡು ಶರ್ಟಿನ ಬಟನ್ನು ಹಾಕಲು ತಡಕಾಡುತ್ತಿದ್ದಳು...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/appiko.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

19 comments:

Nisha said...

Superagide ee appiko chaluvali.

sunaath said...

ಪ್ರಭುರಾಜ,
ಯಾಕೊ ಬಹಳಾ ದಿನಗಳಿಂದ ನಿಮ್ಮ ಭೆಟ್ಟಿ ಇಲ್ಲಲ್ಲಾ ಅಂತ ಅನ್ಕೋತಿದ್ದೆ. ಗೊತ್ತಾಯ್ತು ನೋಡಿ: ಇದು ಅಪ್ಪಿಕೊ ಚಳುವಳಿಯ ಫಲ ಅಂತ!
ಒಂದು ಹಿತವಚನ ನಿಮಗೆ ಹೇಳಲೆ ಬೇಕು. ಅಲ್ರೀ, ಮುಷ್ಕರವನ್ನ ಮೂರು ದಿನ,ಮೂರು ರಾತ್ರಿ ಯಾಕ್ರೀ ಮುಂದುವರೆಸಿದಿರಿ? ಜೇನ್-ಇರುಳಿನಲ್ಲಿ curfewಅನ್ನು relax ಮಾಡಬಾರದೇನ್ರಿ?
‘ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಮಾತ್ರ’ ಇರಬೇಕಯ್ಯಾ ರಾಜಾ!

Subrahmanya said...

ಹಹಹ್ಹ....ಅಂತೂ ಚಳುವಳಿ ಫಲ ಕೊಟ್ಟಿತಲ್ಲ. ಚೆನ್ನಗಿತ್ತು.

Manasa said...

superb appiko chaLuvaLi :)

ಸಾಗರದಾಚೆಯ ಇಂಚರ said...

wonderful appiko chaluvali
keep going

shivu.k said...

ಪ್ರಭು,

ಬೇಗ ಮದುವೆಯಾಗಿಬಿಟ್ಟರೆ...ನಿಮಗೂ ಗೊತ್ತಾಗುತ್ತದೆ. ಮೂರು ದಿನದ ಪರಿಣಾಮವೇನು ಅಂತ ಇವೆಲ್ಲಾ ಮೂರು ನಿಮಿಷದೊಳಗೆ ಮುಗಿಯಬೇಕು. ಇಲ್ಲದಿದ್ದಲ್ಲಿ ಇಬ್ಬರ egoismಗೆ ಕಾಲು ವಿರುದ್ಧ ದಿಕ್ಕಿನಲ್ಲಿ ಚಲಿಸಿಬಿಡುತ್ತವೆ...ಅವನ್ನು ಸಮಧಾರಿಯಲ್ಲಿ ತರುವುದು ತುಂಬಾ ಕಷ್ಟ....ಅದಕ್ಕೆ ಗಂಡ ಹೆಂಡತಿ ಜಗಳಗಳು ಹೀಗಿರಬೇಕು. ಒಂದು ನಿಮಿಷ ಗಂಡನ ಕೋಪದ ಮಾತು ಮತ್ತೊಂದು ನಿಮಿಷ ಹೆಂಡತಿಯ ಕೋಪದ ಮಾತು..ಮೂರನೇ ನಿಮಿಷ ಇಬ್ಬರ ಮಾತುಗಳನ್ನು ಮೌನವಾಗಿ ಇಬ್ಬರೂ ಅವಲೋಕಿಸಿವುದು...ನಾಲ್ಕನೇ ನಿಮಿಷಕ್ಕೆ ಇಬ್ಬರೂ ಮಾಡುತ್ತಿರುವುದು ತಪ್ಪು ಅಂತ ಗೊತ್ತಾಗಿಬಿಡುತ್ತದೆ. ಐದನೇ ನಿಮಿಷದಿಂದ...ಮತ್ತದೇ ಸರಸ ಸಲ್ಲಾಪ...
ಏನಂತೀರಿ...

ಬಾಲು said...

ಸುಂದರ್ ಲಾಲ್ ಬಹುಗುಣ ಮರ ಉಳಿಲಿ ಅಂತ ಅಪ್ಪಿಕೋ ಚಳುವಳಿ ಶುರು ಮಾಡಿದ್ರು,
ಇಲ್ಲಿ ನಮ್ಮ ಪ್ರಭು ರಾಜರು ಸಂಸಾರ ಸುಗಮ ಆಗ್ಲಿ ಅಂತ ಚಳುವಳಿ ಮಾಡಿದ್ರು.

ಒಳ್ಳೆ ಲೇಖನ, ಅಪ್ಪಿ ಕೊಳ್ಲೋರಿಗೆ ಜಯವಾಗಲಿ.

Ranjita said...

ಪ್ರಭು ಸರ್ ,

ಸಕ್ಕತ್ತಾಗಿದೆ ಚಳಿವಳಿ ....

ದಿನಕರ ಮೊಗೇರ said...

soopar......... hecchige jagala olleyadalla...... tumbaa romantic jagaLavanna tumbaa tumbaa tumbaa chennaagi barediddeeraa........

Unknown said...

Prabhu,

Superb yaar amazing...

Unknown said...

ಕ್ಷಮಿಸಿ, ಓದುತ್ತಾ ಸ್ವಲ್ಪ ಆಕಳಿಕೆ ಬಂದಿದ್ದು ನಿಜ !!!

ಮನಸಿನಮನೆಯವನು said...

ರೀ..
ಸರಸವೇ... ಹಾ.. ಹಾ.
ಸೂಪರ್..ಮುಂದುವರಿಯಲಿ ಅಪ್ಪಿಕೋ ಚಳುವಳಿ..

Annapoorna Daithota said...

ಹ ಹ ಹಾ !! ಚೆನ್ನಾಗಿದೆ :)

Veena A said...

ತುಂಬಾ ಚೆನ್ನಾಗಿದೆ ನಿಮ್ಮಾಕೆ "ಅಪ್ಪಿಕೊ ಚಳುವಳಿ"
ಬೇರೆ ಯಾವ್ದಾದ್ರು ಚಳುವಳಿ ಇದ್ರೆ ತಿಳಿಸಿ..
ಪ್ರಯೋಗಾ ಇವತ್ತಿಂದಾನೆ ಶುರು...:):):)

ಮನಸು said...

wonderful tumba chennagide.......

Greeshma said...

hahaha
sakkataagide! :)
aadru neev jaga jatti. 3 dina mataadde iddid saaku!

Prabhuraj Moogi said...

@Nisha
Thank you.

@sunaath
ಸರ್, ಇತ್ತೀಚೆಗೆ ಕಂಪನಿಯಲ್ಲಿ ಕೆಲಸ ಜಾಸ್ತಿಯಾಗಿ ಯಾವುದಕ್ಕೂ ಸಮಯ ಸಿಕ್ತಾ ಇಲ್ಲ, ಅದಕ್ಕೆ ಲೇಖನಗಳನ್ನೂ ಸರಿಯಾಗಿ ಬರೆಯಲಾಗುತ್ತಿಲ್ಲ, ತಪ್ಪದೇ ಓದಿ ನೀವು ಮೆಚ್ಚುಗೆ ಸೂಚಿಸುವುದು ನನಗೆ ತುಂಬಾ ಖುಷಿ ಕೊಡುತ್ತದೆ.
:) ಒಂದೇ ದಿನದಲ್ಲಿ ಮುಷ್ಕರ ಮುಗಿಯಬಹುದಿತ್ತು, ಆದ್ರೆ ಸ್ವಲ್ಪ ಹೆಚ್ಚಿಗೆ ಕಾಡಿಸಿದ್ರೆ ಹೇಗೆ ಅಂತ ಯೋಚಿಸಿ ಪ್ರಯತ್ನಿಸಿದ್ದು. ಆದರೂ ಇಂಥ ಚಿಕ್ಕಪುಟ್ಟ ಕಿತ್ತಾಟದ ನಂತರ ಪ್ರೀತಿ ಇನ್ನೂ ಜಾಸ್ತಿ ಆಗತ್ತೆ ಬಿಡಿ ;)

@Subrahmanya
ಮತ್ತೆ ಅವಳ ತಂತ್ರಗಳೆಂದರೆ ಸುಮ್ನೇನಾ... ನನ್ನಾಕೆ ಬಹಳ naughty ;)

@Manasa
Thank you.

@ಸಾಗರದಾಚೆಯ ಇಂಚರ
Thank you.

@shivu.k
ಸೂಪರ್ ಕಮೆಂಟ್ ಸರ್, ಕರೆಕ್ಟ್ ನಂಗಂತೂ ಮದುವೆಯಾಗಿಲ್ಲ ಅದಕ್ಕೆ ಅದು ಅನುಭವಕ್ಕೆ ಬಂದಿಲ್ಲ, ನಿಮ್ಮ ಸಲಹೆ ನನಗೆ ಸಹಾಯಕ...
ಸುಮ್ನೆ ಚಿಕ್ಕಪುಟ್ಟ ಕೋಳಿ ಜಗಳ ಮಾಡಿ ಆಮೇಲೆ ರಾಜಿಯಾದ್ರೆ ಪ್ರೀತಿ ದುಪ್ಪಟ್ಟಾಗುತ್ತೆ ಅನ್ನೊದಂತೂ ನಿಜ...
ನಿಮ್ಮ ಐದುನಿಮಿಶದ ಸೂತ್ರ ಬಹಳ ಚೆನ್ನಾಗಿದೆ, ಪ್ರಯತ್ನ ಮಾಡ್ತೀನಿ... ಈಗಲೇ ಅಲ್ಲ ಮದುವೆ ಆದ ಮೇಲೆ :)

@ಬಾಲು
ಸುಂದರ್‌ಲಾಲ್ ಅವರ ಪರಿಸರ ಚಳುವಳಿ, ನನ್ನಾkಯ ಪರಿವಾರ ಚಳುವಳಿ ಆಗಿದ್ದಂತೂ ನಿಜ...
ಒಟ್ಟಿನಲ್ಲಿ ನನ್ನಾkಯ ಚಳುವಳಿ ಕಚಗುಳಿ ನಿರಂತರ... ಹೀಗೇನೆ...

ಸೋತು ತಪ್ಪೊಪ್ಪಿಕೊಂಡರೆ ಅಪ್ಪಿಕೊಳ್ಳೊದ್ರಲ್ಲಿ ಜಯ ಗ್ಯಾರಂಟಿ...

@Ranjita
ಥ್ಯಾಂಕ್ಯೂ... ಅದು ನನ್ನಾkಯ ಪ್ರೀತಿಯ ಬಳುವಳಿ...

@ದಿನಕರ ಮೊಗೇರ..
ಮೆಚ್ಚಿನ ಮಡದಿಯೊಂದಿಗೆ ಹೆಚ್ಚಿಗೆ ಜಗಳ ಮಾಡಲ್ಲ ಬಿಡಿ ಸರ್, ಕೀಟಲೆ ಕಿತ್ತಾಟಗಳಿವು ಅಷ್ಟೇ...

@Shwetha
Thank you.

@vidyalakshmi
ಅದಕ್ಕೇ ನಿದ್ರೆಗೆಟ್ಟು ಓದಬೇಡಿ ಅಂತ ಹೇಳೊದು ನಾನು :)
ನಿಜವಾಗ್ಲೂ ಬೋರಿಂಗ ಇತ್ತಾ... ಹ್ಮ್ ಮುಂದಿನ ಸಾರಿ ಚೆನ್ನಾಗಿ ಬರೆಯಲು ಪ್ರಯತ್ನಿಸ್ತೀನಿ ಹಾಗಿದ್ರೆ...

@!! ಜ್ಞಾನಾರ್ಪಣಾಮಸ್ತು !!
ಹ್ಮ್... ಸರಸ ವಿರಸ ಎಲ್ಲಾ ಸರ್...
ಚಳುವಳಿ ಮುಗೀತು ಸರ್, ಅವಳ ಬೇಡಿಕೆ ಎಲ್ಲ ಈಡೇರಿದುವಲ್ಲ... :)

@Annapoorna Daithota
ಧನ್ಯವಾದಗಳು.

@Veena A
ಅಪ್ಪಿಕೋ ಚಳುವಳಿ ನಂತರ ಬೇರೆ ಚಳುವಳಿ ಅಂದ್ರೆ... ಅವಳನ್ನ ಕೇಳಿದ್ರೆ... ತುಂಟಿ ನನ್ನಾk "ಪಪ್ಪಿಕೋ ಚಳುವಳಿ ಮಾಡ್ಲಾ" ಅಂತ ಕೇಳಿದ್ಲು ಅಂತೀನಿ...
"ಪಪ್ಪಿ"ಕೋ ಚಳುವಳಿ ಏನು ಅಂತ ಬಿಡಿಸಿ ಹೇಳಬೇಕಿಲ್ಲ ತಾನೆ... :)

@ಮನಸು
ಥ್ಯಾಂಕ್ಯೂ...

@Greeshma
ಹ್ಮ್ ಅವಳು ಜಗಳಗಂಟಿ ಆದ್ರೆ ನಾ ಜಗಜಟ್ಟಿ ಆಗಲೇಬೇಕಾಗುತ್ತೆ ಅಲ್ವೇ... ಮೂರು ದಿನ ಮಾತಾಡ್ದೇ ಇದ್ದಿದ್ದೇ ಮೂರು ವರ್ಷ ಮಾತಾಡದ ಹಾಗಾಗಿತ್ತು ನಂಗೂ!...

ಗಿರೀಶ ರಾಜನಾಳ said...

ಸಖತ್ತಾಗಿದೆ ನಿಮ್ ಅಪ್ಪಿಕೋ ಚಳುವಳಿ...
ಆ ನಿಮ್ ನನ್ನಾಕೆ pdf ಅಂತೂ ಎಷ್ಟು ಜನಕ್ಕೆ ಫಾರ್ವರ್ಡ್ ಆಗಿದೆಯೋ ಗೊತ್ತಿಲ್ಲಾ..
ಅಷ್ಟು ಚೆನ್ನಾಗಿದೆ...

Prabhuraj Moogi said...

@ಗಿರೀಶ ರಾಜನಾಳ
ತುಂಬಾ ಥ್ಯಾಂಕ್ಸ ಗಿರೀಶ್, ಹ್ಮ್ ಈ PDF ಪ್ರತಿಗಳು ಬಹಳ ಜನರಿಗೆ ಫಾರವರ್ಡ ಆಗಿದೆ ಅನ್ನೋದಂತೂ ನಿಜ... ನನಗೆ ಮೇಲ್ ಪ್ರತಿಕ್ರಿಯೆ ಕೂಡ ಬಂದಿವೆ.. ಏನೋ ನಾಲ್ಕು ಜನ ಓದಿ ಖುಷಿ ಪಟ್ರೆ ನಮಗೂ ಸಂತೃಪ್ತಿ