Sunday, February 8, 2009

ಪ್ರೀತಿಯಿಂದ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಒಂದೊಂದು ದಿನ ರಜೆಯಿದ್ದಾಗ ಬಿಸಿಲು ಕಾಯಿಸುತ್ತ ಕುಳಿತಿರುತ್ತೇನೆ... ದಿನವಿಡೀ ಏಸೀ ರೂಮಿನ ಆಫೀಸುಗಳಲ್ಲಿ ಕಾಲ ಕಳೆಯುವುದರಿಂದ ಸೂರ್ಯನ ಕಣ್ಣಿಗೆ ಕಾಣುವುದು ಕಮ್ಮಿ. ಮನೆಯಲ್ಲಿಟ್ಟಿರುವ ಹೂ ಕುಂಡಗಳನ್ನು ವಾರಕ್ಕೊಂದು ದಿನ ಹೊರಗಿಟ್ಟು ಬಿಸಿಲು ಕಾಣಿಸಿದಂತೆ, ನಾನೂ ವಾರಾಂತ್ಯದ ಒಂದು ದಿನ ಸಮಯ ಸಿಕ್ಕಾಗ ಪೇಪರು ಓದುತ್ತಲೊ, ಇಲ್ಲ ಟೀ ಹೀರುತ್ತಲೊ ಮುಂಜಾನೆಯ ಎಳೆ ಬಿಸಿಲಿಗೆ ಹೊರಗೆ ಕೂತು ಬಿಡುತ್ತೇನೆ, ಹಾಗೇ ಇಂದು ಕೂತಿದ್ದೆ, ಟೀ ಪೇಪರು ಎನಿಲ್ಲದಿದ್ದರಿಂದ ಆಕಾಶದತ್ತ ಮುಖ ಮಾಡಿ ಆರಾಮ್ ಕುರ್ಚಿಯಲ್ಲಿ ಒರಗಿದ್ದೆ. ಏನೊ ನೆರಳು ಬಂದಂತಾಯಿತು, ಅರೇ ಸೂರ್ಯನೇನಾದ್ರೂ ಕಾಣೆಯಾದನೊ, ಇಲ್ಲ ಮೋಡದಲ್ಲಿ ಮರೆಯಾದನೊ ಅಂತ ಕಣ್ಣು ತೆರೆದೆ, ಬಿಸಿಲಲ್ಲಿ ಕಣ್ಣು ಪಾಪೆ ಹಿರಿದಾಗಿ ನೆರೆಳಾಗಿ ನಿಂತ ಆಕೃತಿ ಯಾರೆಂದು ಕಾಣದಿದ್ದರೂ, ದೇವಲೊಕದಿಂದಲೇ ಯಾರೋ ಪ್ರತ್ಯಕ್ಷ ಆದರೇನೊ ಅನ್ನುವಂತೆ, ಇವಳೇ ಇರಬಹುದೆಂದು "ಯಾರಿದು ದೇವದೂತೆ" ಅಂದೆ. "ಅಲ್ಲ, ಇದು ಪ್ರೇಮದೂತೆ, ನಿನಗೇನು ವರ ಬೇಕು ಕೇಳುವಂತವನಾಗು" ಅಂತ ನಾಟಕದ ಡೈಲಾಗು ಒಂದು ಹೇಳಿದಳು. "ಸ್ವಲ್ಪ ಪಕ್ಕ ಸರಿದು ಸೂರ್ಯನ ನೋಡಲು ಬಿಟ್ಟ್ರೆ ಸಾಕು" ಅಂದೆ. "ಪ್ರೇಮದೂತೆಯಲ್ಲಿ ಪ್ರೀತಿಯಿಂದ ಎನಾದ್ರೂ ಕೇಳಿಕೊಳ್ಳಲ್ವ" ಅಂದ್ಲು. ಇವಳಿನ್ನು ಇಲ್ಲಿ ಕೂರಲು ಬಿಡುವುದಿಲ್ಲ ಅಂತ ಗೊತ್ತಾಗಿ ಒಳನಡೆದೆ, ಬಾಲಂಗೋಚಿಯಂತೆ ಹಿಂದಹಿಂದೆ ಬಂದ್ಲು.

ಬೆವರಿದ್ದರಿಂದ ಮುಖ ತೊಳೆದು ಬರುತ್ತಿದ್ದಂತೆ, ಟೀ ಕಪ್ಪು ಹಿಡಿದು ಹಾಜರಾಗಿದ್ಲು, ಇದೇನು ಇಷ್ಟು ಉಪಚಾರ ನಡೆದಿದೆ ಇದರ ಹಿಂದೆ ಏನೊ ಇದೆ ಸಂಶಯ ಬಂತು "ಪ್ರೇಮದೂತೆ ವರ ಕೊಡುತ್ತಿಲ್ಲ, ಅವಳಿಗೇ ವರ ಬೇಕಿರುವಂತಿದೆ" ಅಂದೆ. ಕಳ್ಳಿ ಸಿಕ್ಕಿ ಬಿದ್ಲು, "ಇಲ್ಲಪ್ಪ ಏನೂ ಇಲ್ಲ" ಅಂತಿದ್ದಂಗೆ ಏನೊ ಇದೆಯೆನ್ನುವುದಂತೂ ಗೊತ್ತಾಗಿತ್ತು. ಸುಮ್ಮನೆ ಟೀ ಹೀರುತ್ತಿದ್ದವನಿಗೆ ಪ್ರಶ್ನೆಯೊಂದನ್ನ ತೂರಿಬಿಟ್ಲು.
"ರೀ ಈ ತಿಂಗಳು ಹದಿನಾಲ್ಕು ಏನಿದೆ" ಹೇಳಿ ಅಂದ್ಲು. ಅಯ್ಯೊ ಎಡವಟ್ಟಾಯಿತಲ್ಲ, ನಮ್ಮ ಮದುವೆಯಾದ ದಿನಾನೋ, ಇಲ್ಲ ಯಾರದೋ ಜನ್ಮದಿನಾನೊ ಏನೊ ಇರಬೇಕು, ಇಲ್ಲ ಇವಳದೇ ಜನ್ಮದಿನ ಇದೆಯೊ, ಏನೂ ನೆನಪಿಗೆ ಬರುತ್ತಿಲ್ಲವಲ್ಲ. ಹೇಗೆ ನೆನಪಿರುತ್ತೆ ಹೇಳಿ, ಅದೆ ಇ-ಮೇಲ್ ಕ್ಯಾಲೆಂಡರ, ಇಲ್ಲ ಫೊನು ರಿಮೈಂಡರಗಳು ನಾಲ್ಕು ಸರಿ ನೆನಪು ಮಾಡಿದಾಗಲೇ ಏನೊ ಒಂದು ಶುಭಾಶಯ ಅಂತ ಬರೆದು ಮೇಲ್ ಇಲ್ಲ ಎಸ್‌ಎಂಎಸ್ ಮಾಡೊ ನನಗೆ, ಈ ಥರ ಒಮ್ಮೆಲೆ ಕೇಳಿದರೆ ಏನು ಹೇಳಲಾಗುತ್ತದೆ. ಸುಮ್ಮನೆ ಹಲ್ಲು ಕಿರಿದೆ. ಸಿಟ್ಟಿನಿಂದ ನೋಡಿದ್ಲು, "ಹಾಂ, ಅಂಬೇಡ್ಕರ್ ಜಯಂತಿ" ಅಂದೆ ಅದೂ ಯಾವುದೊ ಹದಿನಾಲ್ಕು ದಿನಾಂಕಾನೇ ಅಲ್ವ ಅದೇ ಇರಬಹುದೆಂದು ಊಹಿಸಿದ್ದೆ. "ಅದು ಏಪ್ರೀಲ್ ಹದಿನಾಲ್ಕು" ಅಂತ ಬುಸುಗುಟ್ಟಿದ್ಲು. ಇನ್ನು ನಾನು ಏನು ಅಂತ ಸರಿಯಾಗಿ ಹೇಳದಿದ್ರೆ, ಅಂದು ನನ್ನ ತಿಥಿಯಾಗುವುದಂತೂ ಗ್ಯಾರಂಟಿಯಾಯಿತು. ತಲೆ ಕೆರೆದುಕೊಂಡೆ, ಅಂತೂ ಟ್ಯೂಬಲೈಟ್ ಉರಿಯಿತು.." ಅಲೆಲೆ ಫೆಬ್ರವರಿ ಹದಿನಾಲ್ಕು ಪ್ರೇಮಿಗಳ ದಿನ ಅಲ್ವ" ಅಂದೆ. ಖುಷಿಯಾಗಿ, ಅವಳ ಮುಖವೂ ಒಂದು ನೂರು ವ್ಯಾಟ್ ಮರ್ಕ್ಯುರಿ ಬಲ್ಬು ಉರಿದಂತೆ ಮಿನುಗಿತು, ಪುಣ್ಯಾತ್ಮ ನೆನಪು ಮಾಡಿಕೊಂಡನಲ್ಲ ಅಂತ ಇರಬೇಕು. ನಾನೂ ಹಿಗ್ಗಿ ಹೀರೆಕಾಯಿಯಾದೆ, ಇಲ್ಲದಿದ್ರೆ ಹುತಾತ್ಮ.. ಹೂತಾತ್ಮ ಆಗಬೇಕಿತ್ತಲ್ಲ ಅದು ತಪ್ಪಿತೆಂದು.

ಮತ್ತೆ ಟೀ ಹೀರತೊಡಗಿದೆ. ಪ್ರಶ್ನೆಗೆ ಉತ್ತರ ಹೇಳಿಯಾಯ್ತಲ್ಲ ಅಂತ, ಆದ್ರೆ ಬೇತಾಳ ಎಲ್ಲಿ ಬಿಡಬೇಕು. ಬರೀ ಉತ್ತರಕ್ಕಾಗಿ ಕೇಳಿದ ಪ್ರಶ್ನೆ ಅದಲ್ಲ. ಇನ್ನೂ ದಿಟ್ಟಿಸಿ ನೋಡುತ್ತಿದ್ಲು. ನಂಗೆ ಗೊತ್ತಾಯ್ತು ಆವತ್ತಿಗೆ ಏನೊ ಉಡುಗೊರೆ ಕೊಡಬೇಕು, ಏನೊ ಪ್ಲಾನು ಹಾಕಬೇಕು, ಅದೇ ಇವಳು ಕೇಳುತ್ತಿರುವುದೆಂದು. "ಏನೇ ನಾವದನ್ನು ಆಚರಿಸಬೇಕ ಅದೆಲ್ಲ ಪ್ರ್‍ಏಮಿಗಳಿಗೆ" ಅಂದೆ, ಕಾದ ದೋಸೆ ಹಂಚಿನ ಮೇಲೆ ನೀರು ಹಾಕಿದಂತಿತ್ತು, "ಏನದರರ್ಥ, ನಿಮಗೆ ನನ್ನ ಮೇಲೆ ಪ್ರೀತೀನೆ ಇಲ್ವಾ" ಅಂದ್ಲು. ನಾ ಹೇಳುತ್ತಿರುವುದು ಅವಳಿಗೆ ಅರ್ಥವಾಗುವಂತಿರಲಿಲ್ಲ, ಅದಕ್ಕೇ ಹೆಚ್ಚು ವಾದ ಬೇಡವೆಂದು "ಸರಿ, ಎಲ್ಲ ಪ್ಲಾನು ನಿಂದು ಫುಲ್ ಡೇ ನಿನ್ನಿಷ್ಟ" ಅಂದೆ. ಮುಂಜಾನೆ ದೇವಸ್ಥಾನಕ್ಕೆ ಭೇಟಿ, ಮಧ್ಯಾಹ್ನ ಅವಳ ಕೈಯಡುಗೆಯ ರುಚಿ ನೋಡಿ, ಸಂಜೆಗೆ ಫಿಲ್ಮು, ರಾತ್ರಿ ಹೊರಗೆ ಊಟ ಅಂತ ಒಂದು ಲಿಸ್ಟು ಕೊಟ್ಲು. "ಓಕೇಸ್... ಡನ್" ಅಂದೆ.

ಟೀವೀ ಹಚ್ಚಿದೆ, ಅದೇ ಯಾವ ಚಾನಲ್ಲು ಬದಲಿಸಿದ್ರೂ ಪ್ರೇಮಿಗಳ ದಿನದ ವಿಶೇಷಗಳ ಪ್ರಚಾರ, ಇಲ್ಲ ಅದ ವಿರೋಧಿಸುವರ ಸುದ್ದಿ, ಬಿಟ್ರೆ ಕಂಪನಿಗಳ ಆ ದಿನದ ಡಿಸ್ಕೌಂಟಗಳ ಅಡವರಟೈಜಮೆಂಟುಗಳು ಅಷ್ಟೆ. ಅದ ಆಫ್ ಮಾಡಿ ಪೇಪರು ತೆಗೆದೆ, ಇನ್ನು ಬೇರೇನು ಹೇಳಬೇಕಿಲ್ಲ... ಅದೂ ಬೀಸಾಕಿ. ಸುಮ್ಮನೆ ಸೊಫಾದಲ್ಲಿ ಮೈ ಚೆಲ್ಲಿದೆ, ಇವಳು ಬಂದು ಸೊಫಾದಲ್ಲಿ ಕುಳಿತವಳು, ತಲೆಗೆ ದಿಂಬಿನಂತೆ ಮಡಿಲ ಆಸರೆ ಕೊಟ್ಟು ಕೂದಲಿನಲ್ಲಿ ಬೆರಳಿನಿಂದ ಹುಲ್ಲಿನ ಮೇಲೆ ಲಾನ ಮಶೀನು ಓಡುವಂತೆ ಸವರತೊಡಗಿದ್ಲು. ಅಮ್ಮನ ಮಡಿಲಲ್ಲಿ ಮಗು ಮಲಗಿದಂತೆ ಕಣ್ಣು ಮುಚ್ಚಿದೆ, ಮಲಗಲು ಅವಳು ಬಿಡಬೇಕಲ್ಲ. "ಯಾಕೊ ನಿಮಗೆ ಪ್ಲಾನು ಹಿಡಿಸಿದಂತಿಲ್ಲ" ಅಂದ್ಲು. "ಇಲ್ಲ ಹಾಗೇನಿಲ್ಲ" ನಾನಂದೆ, ಅವಳೇನು ನನ್ನ ಮನಸಿಂದ ಡೈರೆಕ್ಟು ಟೆಲಿಫೊನು ಲೈನು ಎಳೆದುಕೊಂಡಿದ್ದಾಳೋ ಏನೊ ನಾ ಮನಸಿನಲ್ಲಿ ಅಂದುಕೊಂಡಿದ್ದೆಲ್ಲ ಅವಳಿಗೆ ಗೊತ್ತಾಗಿರುತ್ತದೆ. "ಸುಳ್ಳು" ಒಂದೇ ಒಂದು ಶಬ್ದ ಉಸುರಿ ಸುಮ್ಮನಾದ್ಲು, ಅದರರ್ಥ ಇನ್ನು ನಿಜ ಹೇಳು ಇಲ್ಲಂದ್ರೆ ನಾನೇನು ಕೇಳಲ್ಲ ಅಂತ.

ಸ್ವಲ್ಪ ಹೊತ್ತು ಸುಮ್ಮನಿದ್ದವನು, ಮಧ್ಯಾಹ್ನ ಏನು ಅಡುಗೆ ಅಂದೆ, ಉತ್ತರ ಬರಲಿಲ್ಲ, ಬರುವುದೆಂದು ನನಗೂ ಅನಿಸಿರಲಿಲ್ಲ. ಇನ್ನು ಸುಮ್ಮನಿದ್ದು ಪ್ರಯೋಜನವಿರಲಿಲ್ಲ,
"ನೀ ನನ್ನ ಎಷ್ಟು ಪ್ರೀತಿಸ್ತೀಯ?" ಪ್ರಶ್ನೆ ಹಾಕ್ದೆ, ಉತ್ತರ ಬರಲೇಬೇಕಿತ್ತು. "ಒಂದು ಎರಡೂವರೆ ಕೇಜೀ" ಅಂದ್ಲು. ಅಲ್ಲೇ ಚಿವುಟಿದೆ, ಚೀರಿದ್ಲು, ನಗುತ್ತ ದೂರ ನೂಕಲು ನೋಡಿದ್ಲು, ಆಗಲಿಲ್ಲ. ಗಲ್ಲ ಹಿಗ್ಗಿಸಿ ಹಿಡಿದೆಳೆದು "ಮತ್ತಿನ್ನೇನ್ರಿ, ಪ್ರೀತಿ ಎಷ್ಟು ಮಾಡ್ತೀಯ ಅಂತ ಕೇಳಿದ್ರೆ ಅದೇನು ಟೊಮ್ಯಾಟೊನಾ ಇಷ್ಟು ಕೇಜೀ ಅಂತ ಹೇಳಲು" ಅಂತಂದ್ಲು, ನನಗೆ ಬೇಕಾಗಿದ್ದು ಅದೇ ಉತ್ತರ. "ಯಾಕೆ ಇಡೀ ಆಕಾಶದ ವಿಸ್ತಾರದಷ್ಟು, ಸಾಗರ ಎಲ್ಲೆಯಷ್ಟು, ಗಾಳಿ ಭೂಮಿಯ ಆವರಿಸಿರುವಷ್ಟು.. ಅಂತ ಹೇಳಬಹುದಲ್ಲಾ" ಅಂದೆ. "ರೀ ಅದು ತೀರಾ ನಾಟಕೀಯ ಆಗೋಗತ್ತೆ, ಅದೊಂಥರಾ ಮನಸಿನಲ್ಲಿರೋ ಭಾವನೆ ಅಳತೆ ಮಾಡಲಾಗದು, ಹೇಳಲಾಗದು, ಅದೆಲ್ಲ ಬರೀ ಸಿನಿಮಾದಲ್ಲಿ ಸರಿ ಕಾಣುತ್ತೆ" ಅಂದ್ಲು. ಸರಿ ಹಾಗಾದ್ರೆ "ಪ್ರೇಮಿಗಳ ದಿನ ಇರುವುದ್ಯಾಕೆ?" ಅಂತ ಮರುಪ್ರಶ್ನೆ ಹಾಕಿದೆ. "ಪ್ರೀತಿಸುವವರಲ್ಲಿ ಪ್ರಪೋಸು ಮಾಡಿ.." ಅಂತ ಏನೊ ಹೇಳೋಕೆ ಹೋದವಳು ಅರ್ಧಕ್ಕೆ ನಿಲ್ಲಿಸಿದ್ಲು. ನಾನಂದುಕೊಂಡದ್ದು ನಾ ಹೇಳಿಯಾಗಿತ್ತು, ಅವಳಿನ್ನೂ ಯೋಚಿಸುತ್ತಿದ್ಲು...

ಮನಸು ನಿರಾಳವಾಗಿ ನಾ ಮಲಗಿದೆ, ಅವಳು ಗೊಂದಲಕ್ಕೊಳಗಾಗಿ ತಲೆ ಚಚ್ಚಿಕೊಳ್ಳುತಿದ್ಲು, "ರೀ, ಈಗ ನನ್ನ ಕನ್‌ಫ್ಯೂಜ ಮಾಡಿ ನೀವು ಮಲಗ್ತೀರಾ, ಅಂತ ಬಡಿದೆಬ್ಬಿಸಿದ್ಲು. "ಈಗೇನು ಪ್ರೇಮಿಗಳ ದಿನ ಆಚರಿಸೊರೆಲ್ಲ, ಪ್ರೀತಿಸಲ್ವಾ?" ಅಂದ್ಲು "ನಾನೆಲ್ಲಿ ಹಾಗೆ ಹೇಳಿದೆ" ಅಂದೆ "ಸರಿ ಬಿಡಿಸಿ ಹೇಳ್ತೀರ ಇಲ್ವಾ" ಅಂತ ಗುರಾಯಿಸಿದ್ಲು. ಇನ್ನು ಹೇಳದೆ ವಿಧಿಯಿಲ್ಲ ಶುರುವುಟ್ಟುಕೊಂಡೆ. "ಕೇಳು ನಾ ಹೇಳುವುದೆಲ್ಲ ಸರಿ ಎಂದಲ್ಲ, ಅದ ನೀ ನಂಬಲೂ ಬೇಕಿಲ್ಲ, ನಾನ್ಯಾವುದರ ವಿರೋಧಿಯೂ ಅಲ್ಲ ಪರನೂ ಅಲ್ಲ..." ನಾ ಹೇಳುತ್ತಿದ್ರೆ "ರೀ ಎನು ಕೊರ್ಟ್ ಕಟಕಟೆಯಲ್ಲಿ ಸ್ಟೇಟಮೆಂಟ್ ಕೊಟ್ಟ ಹಾಗೆ ಹೇಳ್ತೀದೀರಲ್ಲ, ಸರಿ ವಿಷಯಕ್ಕೆ ಬನ್ನಿ ಅಂದ್ಲು.

ಪ್ರೀತಿ ಅಂದ್ರೇನು? ಅದೊಂದು ಭಾವನೆ, ಮನಸಿನಲ್ಲಿ ಹುಟ್ಟುವುದು.. ಮನಸಿಂದ ಮನಸಿಗೆ ಅದಲು ಬದಲಾಗುವುದು, ಅದೊಂಥರ ಬಿಚ್ಚಿಡಲಾಗದ ಅನುಭೂತಿ,
ಆಯ್ ಲವ್ ಯು ಅಂದುಬಿಟ್ಟರೆ ಮುಗಿಯಲ್ಲ, ಅದು ಪ್ರೀತಿಯ ವ್ಯಕ್ತಗೊಳಿಸುವ ಒಂದು ಪ್ರಯತ್ನ ಮಾತ್ರ, ಅದೇ ಪ್ರೀತಿಯಲ್ಲ. ಅದೊಂದು ಅವ್ಯಕ್ತ ಭಾವ... ಪ್ರೀತಿ ಅಂದ್ರೆ ವ್ಯಾಲೆಂಟೈನ್ ಡೆ ಅಂದು, ಗುಲಾಬಿ ಗುಚ್ಚ ತಂದು ಕೊಟ್ಟು, ಯಾವುದೋ ಲೇಖಕ ಬರೆದ ನಾಲ್ಕು ಸಾಲುಗಳ ಗ್ರೀಟಿಂಗ ಕಾರ್ಡು ಇಟ್ಟು, ಮೊಬೈಲಿನಲ್ಲಿ ಎಸ್‌ಎಂಎಸ್ ಕಳಿಸಿ ಬಿಟ್ಟರೆ ಆಯಿತಾ... ಮುಂದಿನ ವ್ಯಾಲೆಂಟೈನ್ ಡೇಗೆ ಮತ್ತೇನು ನೆನಪಿರೊಲ್ಲ, ಪ್ರೀತಿಯೆಂದ್ರೆ ಬಧ್ಧತೆ, ಒಂದು ದಿನಕ್ಕಲ್ಲ, ಅನುದಿನಕ್ಕೆ, ಪ್ರತಿದಿನ ಆ ಗುಲಾಬಿಯಂತೆ ಅರಳುತ್ತಿರಬೇಕು ಮನಗಳು, ನಾಲ್ಕೆ ನಾಲ್ಕು ಮಾತಾದರೂ ಸರಿ ಮನ ನಾಟುವ ಮಾತುಗಳಿರಬೇಕು, ಲೈಫಟೈಮ್ ಮೊಬೈಲು ಸಿಮ್ ಕಾರ್ಡಿನಂತೆ ಪ್ರತೀ ತಿಂಗಳು ರೀಚಾರ್ಜು ಕೇಳದೆ ಜೀವನವಿಡೀ ಜೊತೆಯಿರಬೇಕು. ನಾನು ನಿನ್ನ ಇಷ್ಟು ಪ್ರೀತಿಸ್ತೀನಿ ಅಂತ ಅದೇ ನೀ ಹೇಳಿದ ಹಾಗೆ ಇಷ್ಟು ಕೇಜೀ ಅಂತ ಹೇಳಿದ್ದೀನಾ, ಆದರೆ ನಾ ಪ್ರೀತಿಸುತ್ತೀನಿ ಅಂತ ನಿನಗೆ ಗೊತ್ತು, ಅದು ಹೇಳದಿದ್ರೂ ಹೇಗೆ ನಿನಗೆ ಗೊತ್ತು, ಎಷ್ಟು ಪ್ರೀತಿಸ್ತೀನಿ ನಿನಗೆ ಗೊತ್ತು, ಅಳತೆ ಮಾಡಿ ಹೇಳು ನೊಡೋಣ, ಆದರೆ ಅಳತೆ ಮಾಡದಿದ್ರೂ ಅದು ಎಷ್ಟೆಂದು ನಿನಗೆ ಗೊತ್ತು ತಾನೆ. ಪ್ರೀತಿಯೆನ್ನುವುದು ಪ್ರತಿದಿನ ಹಾಸುಹೊಕ್ಕಾಗಿದೆ ಅದು ಪ್ರೇಮಿಗಳ ದಿನಕ್ಕೆ ಸೀಮಿತವಲ್ಲ, ಈಗ ಹೇಳು, ನಾನೆಷ್ಟು ಪ್ರೀತಿಸ್ತೀನಿ ಅಂತ ಪ್ರೇಮಿಗಳ ದಿನ ನಾ ನಿನಗೆ ಹೇಳಬೇಕಾ, ಭಾವನೆಗಳಿಗೆ ದಿನ, ತಿಂಗಳುಗಳ ಬಂಧವೇಕೆ. ಅದೊಂಥರಾ ಆವೇಶದಲ್ಲಿ ಬಂದು ಇನ್ನೂ ಹೇಳುತಿದ್ದೆ, ಅವಳೇ ತಡೆದ್ಲು. ಅವಳಿಗೆ ಅರ್ಥವಾಗಿತ್ತು...

ಅದಕ್ಕೆ ಆ ಒಂದು ದಿನ ಬರೆದದ್ದು
ಪ್ರೇಮಿಗಳ ದಿನ
ಪ್ರೀತಿಸಲು ಅನುದಿನ.
ತುಂಬಿ ತನು ಮನ
ಮಾಡಿ ಹೃದಯಗಳ ಮಿಲನ.
ಮುರಿದು ಮೌನ
ತೆರೆದು ಮನ.
ಕೊಟ್ಟು ವಚನ
ನಿಭಾಯಿಸಿ ಕೊನೆತನ.


"ಸರೀ, ನೀವನ್ನೊದು ಸರಿ ಹಾಗಾದ್ರೆ ಪ್ರೀತಿಸ್ತೀನಿ ಅಂತ ಹೇಳಲೇಬಾರದಾ" ಅಂದ್ಲು, "ಹೇಳು ನಾನೆಲ್ಲಿ ಬೇಡ ಅಂದೆ, ಅದು ಪ್ರೀತಿ ವ್ಯಕ್ತ ಪಡಿಸಲು ಮಾಡಿದ ಒಂದು ಪ್ರಯತ್ನ ಮಾತ್ರ, ಅದಷ್ಟೇ ಪ್ರೀತಿಯಲ್ಲ, ಅದ ಹೇಳಲು ಯಾವುದೊ ದಿನಕ್ಕೆ ಯಾಕೆ ಕಾಯುತ್ತೀಯ ಈಗಲೇ ಹೇಳು, ಪ್ರತಿದಿನ ಹೇಳು, ಹೇಳಲೇಬೇಕೆಂದೂ ಇಲ್ಲ". ಈಗ ಅವಳು ನಿರಾಳವಾದ್ಲು. ಎಲ್ಲದಕ್ಕೂ ಒಂದೊಂದು ದಿನ ಮಾಡಿ ಉಳಿದದಿನ ಅದ ಮರೆತು ಇರಬೇಕಾ, ಮದರ್ಸ್ ಡೆ ಅಂತ ಆವತ್ತು ಅಮ್ಮನಿಗೆ ಫೋನು ಮಾಡಿ ನಿನ್ನ ಮಿಸ್ ಮಾಡ್ಕೊತಿದೀನಿ ಅಂತ ಹೇಳಬೇಕೆ, ಅದೆಲ್ಲ ನಾಟಕೀಯವಾಗಿ ಹೋಗಿದೆ ಈಗ, ದಿನವಿದ್ದದ್ದನ್ನು, ವಾರಗಳಾಗಿ ಮಾಡಿದ್ದೇವೆ ಈಗ, ವ್ಯಾಲೆಂಟೈನ್ ಡೇ ಹೋಗಿ ವ್ಯಾಲೆಂಟೈನ್ ವೀಕು ಅಂತಾಗಿದೆ, ಬರೀ ಟೇವೀಗಳಲ್ಲಿ ಥರಥರದ ಶೊಗಳ ಮಾಡಲು, ಗ್ರೀಟಿಂಗು ಕಾರ್ಡುಗಳ ಮಾರಲು, ಎಸ್‌ಎಂಎಸ್ ಕಳಿಸಿ ಗಿಫ್ಟು ಪಡೆಯಲು, ಡಿಸ್ಕೌಂಟು ವ್ಯಾಪಾರಗಳ ಮಾಡಲು, ಪಾರ್ಟಿ, ಊಟ ಅಂತ ಹೊಟೇಲುಗಳ ತುಂಬಲು, ಆಚರಣೆ ಹೆಸರಿಗೆ ಮಾತ್ರ ಉಳಿದು ಹೋಗಿ ಭಾವನೆಗಳು ಸತ್ತು ಹೋಗುತ್ತಿವೆ. ಅಂದೆ.

ಅವಳ ಕೈ ಬೆರಳುಗಳು ನನ್ನ ಬೆರಳುಗಳ ನಡುವೆ ಜಾಗ ಮಾಡಿಕೊಂಡು ಬೆಸೆದು ಕೊಳ್ಳುತ್ತಿದ್ದವು, ಅದೂ ಪ್ರೀತಿ ವ್ಯಕ್ತಗೊಳಿಸುವ ಪ್ರಯತ್ನ ಮಾತ್ರ. "ಆಯ್ತು, ಪ್ಲಾನು ಕ್ಯಾನ್ಸಲ್" ಅಂದ್ಲು, "ಯಾಕೆ ಈವತ್ತೇ ಫಿಲ್ಮಗೆ ಹೊಗೋಣ, ಹೊರಗೆ ಊಟ ಮಾಡಿಬರೋಣ, ಆ ದಿನಕ್ಕೆ ನಾವೇಕೆ ಕಾಯಬೇಕು" ಅಂತ ಮೇಲೆದ್ದೆ, "ಸರಿ, ಹಾಗಾದ್ರೆ ನಿಮಗೆಂದು ಅಂದು ಕೊಡಲು ಪ್ರೀತಿಯಿಂದ ಶರ್ಟ ತಂದಿದ್ದೆ, ಈವತ್ತೇ ಹಾಕೊಳ್ಳಿ" ಅಂದ್ಲು ಬಹಳ ಖುಶಿಯಾಯ್ತು ಶರ್ಟ ಸಿಕ್ಕಿತಂದೆಲ್ಲ, ನನ್ನ ಭಾವನೆ ಅವಳಿಗರ್ಥವಾಯಿತೆಂದು. ಮತ್ತೆ ತುಂಟತನ ಶುರುವಾಯ್ತು, "ಅಬ್ಬ! ಹಾಗಾದ್ರೆ, ನೀವು ಪಕ್ಕದ ಮನೆ ಪದ್ದು ಹತ್ರ ಪ್ರಪೋಸ ಮಾಡಲ್ಲ ಬಿಡಿ" ಅಂದ್ಲು ಅವಳು ಪ್ರೀತಿಯಿಂದ ತಂದಿದ್ದ ಶರ್ಟು ಹಾಕಿಕೊಳ್ಳುತ್ತ ನಗತೊಡಗಿದೆ. "ಹೂಂ ವಿಚಾರ ಮಾಡೊಣ" ಅನ್ನೊದೇ ತಡ, ಬಂದು ರಪ ರಪ ಎದೆಗೆ ಬಡಿದು ಅಪ್ಪಿಕೊಂಡ್ಲು, ಅವಳನ್ನೂ ಶರ್ಟಿನಲ್ಲಿ ಸೇರಿಸಿಕೊಂಡು ಬಟನ್ನು ಹಾಕತೊಡಗಿದೆ, ಬಿಡಿಸಿಕೊಳ್ಳಲು ಕೊಸರಾಡುತ್ತಿದ್ಲು, ಇದೂ ನಮ್ಮ ಪ್ರೀತಿಯ ವ್ಯಕ್ತ ಮಾಡುವ ಪ್ರಯತ್ನ ಮಾತ್ರ.. ಇದೇ ಪ್ರೀತಿಯಲ್ಲ.

ಕೊನೆಗೆ ಹಾಗೆ ಎಂದೊ ಬರೆದದ್ದು ನೆನೆಪಾಯಿತು...
ಅಂದರು ಪ್ರೀತಿಯೆಂದರೆ
ಮನಸ ಕೊಡುವುದೆಂದು.
ಕೊಟ್ಟೆ, ಗೊತ್ತಾಗಲಿಲ್ಲ ಕೊಟ್ಟ
ಮನಸ ನೋಯಿಸದಿರುವುದೆಂದು.
ಅಂದರು ಪ್ರೀತಿಯೆಂದರೆ
ಕನಸ ಕಾಣುವುದೆಂದು.
ಕಂಡೆ ಗೊತ್ತಾಗಲಿಲ್ಲ ಕಂಡ
ಕನಸು ನನಸಾಗಿಸುವುದೆಂದು.
ಅಂದರು ಪ್ರೀತಿಯೆಂದರೆ
ಒಂದಾಗುವುದೆಂದು.
ಗೊತ್ತಾಗಲಿಲ್ಲ ದೂರವಿದ್ದರೂ
ಒಂದಾಗಿರುವುದೆಂದು.
ಅಂದವರ ಮಾತು
ಕೇಳಿದೆನಂದು.
ಅವಳಿಲ್ಲ
ನನ್ನೊಂದಿಗಿಂದು.


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಓದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

http://www.telprabhu.com/preetiyimda.pdf


ಇಲ್ಲಿ ಬರೆದಿರುವುದೆಲ್ಲ ಕೇವಲ ನನ್ನ ವಿಚಾರಗಳು ಮಾತ್ರ, ನೀವು ಒಪ್ಪಬೇಕೆಂದಿಲ್ಲ, ಬರೆದಿರುವುದೆಲ್ಲವೂ ಸರಿಯೆಂದೂ ಹೇಳುತ್ತಿಲ್ಲ, ಇದು ನನ್ನ ಮನದಲ್ಲಿ ಅನಿಸಿದ್ದನ್ನು ಅನಿಸಿದ ಹಾಗೆ ಹೇಳಲು ಮಾಡಿದ ಪ್ರಯತ್ನ ಮಾತ್ರ.
ಇಂತೀ ಪ್ರೀತಿಯಿಂದ, ತಮ್ಮವ...


ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

18 comments:

Ittigecement said...

ಪ್ರಭು...

ತುಂಬಾ ಚಂದವಾದ ಕಲ್ಪನೆಯೊಂದಿಗೆ ಬರೆದು..

ವಾಸ್ತವದ ತಳಹದಿಯಲ್ಲಿ ಪ್ರೀತಿಯನ್ನು ವ್ಯಾಖ್ಯಾನಿಸಿದ್ದೀರಿ...

ಈ ಪ್ರೀತಿ, ಪ್ರೇಮ ಹಾಗೇನೆ...!

ಎಷ್ಟೊಂದು ಜನ..ಅದನ್ನ ವಿವರಿಸಿದ್ದಾರೆ, ಕವನಗಳಲ್ಲಿ..,ಲೇಖನಗಳಲ್ಲಿ..

ಆದರೂ ಮುಗಿದಿಲ್ಲ..

ಇನ್ನೂ ಕವಿತೆಗಳು, ಲೇಖನಗಳು..
ಬರುತ್ತಲೇ ಇವೆ..

ನಿಮ್ಮಜೀವನದಲ್ಲೂ
ಪ್ರೀತಿ, ಪ್ರೇಮಗಳ ನದಿ ನಿರಂತರವಾಗಿ.. ಹರಿಯುತ್ತಲೇ ಇರಲಿ..

ಚಂದವಾದ ಲೇಖನಕ್ಕಾಗಿ..

ಅಭಿನಂದನೆಗಳು...

shivu.k said...

ಪ್ರಭು,

ಪ್ರೀತಿಯ ಬಗ್ಗೆ ನಿಮ್ಮದು ಅದ್ಭುತವಾದ ಕಲ್ಪನೆ....ನಿಮ್ಮ ಪ್ರೀತಿಯ ಕಲ್ಪನೆಗಳೆಲ್ಲಾ ನನಸಾಗಲಿ ಅಂತ ಹಾರೈಸುತ್ತೇನೆ....
ಕೊನೆಯ ಕವನ ನನಗೆ ತುಂಬಾ ಇಷ್ಟವಾಯ್ತು...ಹೀಗೆ ಬರೆಯುತ್ತಿರಿ...
ಈ ವಯಸ್ಸಿನಲ್ಲಿ ಹೀಗೆ ತಾನೆ ಬರೆಯೋದು..ಅಹ....ಅಹ...gook keep it up!

Anonymous said...

ಪ್ರಭು ಅವರೇ,
ಸುಂದರವಾದ ಮಾತು, ತುಂಬಾ ಚೆನ್ನಾಗಿದೆ.
ಇನ್ನು ಯಾರಾದರೂ ನನ್ನನ್ನ ಪ್ರೇಮಿಗಳ ದಿನ ಏನು ಸ್ಪೆಶಲ್ ಅಂತ ಕೇಳಿದರೆ ನಿಮ್ಮ ಬ್ಲಾಗಿನ ಲಿಂಕ್ ಕೊಡುತ್ತೇನೆ!

Santhosh Rao said...

Tumba chennagide...

maaya said...

hi,,,,, :)
Chennagide nimma pada varnane preethiya bagge.. eegina ee acharanegale haage ondu dina preethi.. ondu dina desha bhakti.. yaaro barditta kavithegal hanchikeyalli ee acharanegalu nadiyuthe.. preethi success agutho ilvo.. cards mathu gifts gala business chennagi aguthe.. so nimma article madariyagide... thanx for writing such a nice article..
Hema.nth

ಮನಸು said...

ಪ್ರೀತಿಯ, ಪ್ರೇಮಿಗಳ ದಿನದ ವಿಶ್ಲೇಷಣೆ........ತುಂಬಾ ಚೆನ್ನಾಗಿದೆ .... ಎಲ್ಲರಿಗು ಅದರ ಅರ್ಥ ಮನದಟ್ಟಾಗಲೆಂದು ಬಯಸುತ್ತೇನೆ..

sunaath said...

ಪ್ರಭು.
ತುಂಬ ರೋಚಕವಾದ ಕಲ್ಪನೆ! ಎರಡೂ ಕವನಗಳು ಇಷ್ಟವಾದವು.
ನಿಮಗೆ ಒಂದೇ ವಿನಂತಿ: ಈ ಸಲ ಫೆಬ್ರುವರಿ ೧೪ರಂದು ದಯವಿಟ್ಟು Valentine
Day ಅನ್ನು ನಿಮ್ಮ ಪ್ರೇಮಿಯೊಡನೆ ಆಚರಿಸಿರಿ. Good luck!

ವಿ.ರಾ.ಹೆ. said...

Fineaagide . iShTa aaythu ..

Prabhuraj Moogi said...

ಮೊದಲಿಗೆ ಎಲ್ಲ ಪ್ರತಿಕ್ರಿಯೆ ಬರೆದವರಿಗೆ ನನ್ನ "ಪ್ರೀತಿಯ" ಧನ್ಯವಾದಗಳು, ಇಷ್ಟು ಪ್ರತಿಕ್ರಿಯೆಗಳು ಬರುತ್ತವೆಂದು ಅನಿಸಿಕೆ ಇರಲಿಲ್ಲ ಬಹಳ ಖುಷಿಯಾಯ್ತು..

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ವಿವರಿಸಲಾಗದ ಅವ್ಯಕ್ತ ಭಾವನೆಯೇ ಪ್ರೇಮ ಅಂದರೂ ತಪ್ಪಿಲ್ಲ, ವಿವರಿಸಿದಷ್ಟು ಇನ್ನೂ ಏನೋ ಉಳಿದಿರುತ್ತದೆ.. ತಮ್ಮ ಹಾರೈಕೆಗೆ ಕೃತಜ್ನತೆಗಳು

shivu ಅವರಿಗೆ:
ಪ್ರೀತಿಯ ಕಲ್ಪನೆಗಳೆಲ್ಲ ನನಸಾಗುತ್ತವಿಲ್ಲೋ ಗೊತ್ತಿಲ್ಲ ಬರೆಯಲಂತೂ ನನಗೆ ಖುಷಿ, ನೀವಂದದ್ದು ಸರಿ ಈ ವಯಸ್ಸೇ ಹೀಗೆ ಹುಚ್ಚು ಮನಸು ಹಲವು ಕನಸು...

ಜ್ಯೋತಿ ಅವರಿಗೆ:
ಪ್ರೇಮಿಗಳ ದಿನ ಏನು ಸ್ಪೆಷಲ್ಗೆ ನಿಮ್ಮ ಬ್ಲಾಗಿನ ಲಿಂಕ್ ಕೊಡುತ್ತೇನೆ! ಅಂದದ್ದು ಕೇಳಿ ಹೆಮ್ಮೆಯೆನಿಸಿತು, ಬರೆದ ಭಾವ ಅರ್ಥವಾಗಿರುವುದು ಸಮಾಧಾನ ತಂದಿತು

ಸಂತೋಷ್ ಚಿದಂಬರ್ ಅವರಿಗೆ:
ಥ್ಯಾಂಕ್ಸ, ಮತ್ತೆ ಮತ್ತೆ ಬರುತ್ತಿರಿ

maaya ಅವರಿಗೆ:
ಪ್ರೀತಿಯೇ ಅಷ್ಟು ಸುಂದರ ಇನ್ನು ನಾನೆಷ್ಟು ವರ್ಣಿಸಲಿ, ಏನೋ ಒಂದು ಪ್ರಯತ್ನ ಮಾತ್ರ. ಲೇಖನದ ಸಾರ ತಮಗೆ ಸಂಪೂರ್ಣ ಅರ್ಥವಾಗಿದೆ...

ಮನಸು ಅವರಿಗೆ:
ನನ್ನ ಆಸೆಯೂ ಅದೇ, ಬರೆದ ವಿಶ್ಲೇಷಣೆ ಅರ್ಥವಾದರೆ ಸಾಕು...

sunaath ಅವರಿಗೆ:
ನಿಮ್ಮ ವಿನಂತಿಯೇನೋ ಸರಿ, ಸಧ್ಯಕ್ಕೆ ಯಾರು ಪ್ರೇಮಿ ಅಂತ ಇಲ್ಲ, ಹಾಗಾಗಿ ಅದು ಸಾಧ್ಯವಾಗಲಿಕ್ಕಿಲ್ಲ [ಯಾರಾದರೂ ಅದೃಷ್ಟವಶಾತ್ ಸಿಕ್ಕರೆ ಆಗಬಹುದು...] ಅಲ್ಲದೆ ನಮ್ಮದು ಅನುದಿನದ ಪ್ರೀತಿ... ಒಂದೇ ದಿನಕ್ಕೆ ಯಾಕೆ ಮೀಸಲು ಹೇಳಿ..

ವಿಕಾಸ್ ಹೆಗಡೆ ಅವರಿಗೆ:
ಥ್ಯಾಂಕ್ಸ, ಮತ್ತೆ ಬರುತ್ತಿರಿ...

Raghavendra said...

a good thought about celebrating days...
artcile chennagide... particluraly the poems suites the situation as well as adds glory to the article.. heege nimma baravnige bharajarigyaagi munnadeyali ....

Prabhuraj Moogi said...

To: Raghavendra
The poem lines have been written long back, just added them where the context suits... keep visiting...

SSK said...

Prabhu avare, nimma preethiyinda.... lekhana thumba chennagide. nanage thumba ishtavaayithu.

(eshtu ishtavaayithu endu thislisabekillavashte....!!)(Just joking)

ಚಿತ್ರಾ ಸಂತೋಷ್ said...

ಎಲ್ಲಾ ದೂತರ ಬಗ್ಗೆ ಕೇಳಿದ್ದೆ..'ಪ್ರೇಮದೂತೆ' ಬಗ್ಗೆ ಕೇಳಿರಲೇ ಇಲ್ಲ ಸಾರ್.
ಮಾರುದ್ಧ ಬರೆದರೂ, ಇಷ್ಟ ಆಯಿತು ...ಹಾಗಾಗಿ ಇ-ಅಂಚೆಗೆ ಹೋಗಿ ಚುಚ್ಚಲು ಮನಸ್ಸು ಬರಲಿಲ್ಲ. ನಾನೂ ಹೇಳೋದಿಷ್ಟೇ .."ಕೊಟ್ಟು ವಚನ
ನಿಭಾಯಿಸಿ ಕೊನೆತನ.." ಕಲ್ಪನೆಗಳು ನನಸಾಗಲೀ...
-ಚಿತ್ರಾ

Prabhuraj Moogi said...

To : SSK
ehsTu ishTa aaytu aMtaa enoo hELalEbEkeMdenilla biDi, neevu pratikriye barediddeeralla ashTE saaku bahaLa khushiyaaytu...

ಚಿತ್ರಾ ಕರ್ಕೇರಾ ಅವರಿಗೆ:
ಪ್ರೇಮ ದೇವತೆ ಅಂತ ಕೇಳಿರಬಹುದು, ಅವಳ ದೂತಳಾಗಿ ಬಂದ ನನ್ನವಳಿಗೆ ನಾನಿಟ್ಟ ಹೆಸರು ಪ್ರೇಮದೂತೆ... ಏನೋ ಬರೀತಾ ಬರೀತಾ ಮಾರುದ್ದ ಲೇಖನ ಆಯ್ತು, ನಂಗೆ ಚಿಕ್ಕದಾಗಿ ಚೊಕ್ಕದಾಗಿ ಬರಿಯೋಕೆ ಬರಲ್ಲ ಬಿಡಿ, ಕಲ್ಪನೆಗಳು ನನಸಾಗಲೆಂದು ಬಯಕೆ ನನ್ನದೂ ಕೂಡ ಆದರೆ ಆಗಬೇಕಲ್ಲ...

Anonymous said...

cho chweeeeeeeeeeeeeet article!!:)should give some award to your creativity and imagination!!
:-)...ನಿಮಗೆ ಅದೃಷ್ಟ ಇದ್ರೆ ಅಲ್ಲ...ಹುಡುಗಿಗೆ ಅದೃಷ್ಟ ಇದ್ರೆ ನಿಮಂಥ ಪ್ರೇಮಿ ಸಿಕ್ತಾರೆ...just kidding ok....anyways enjoyed the article..keep writing.

XYZ

Prabhuraj Moogi said...

To: Anonymous
ha ha ha your feedbacks are the awards for me...
ಇಬ್ಬರೂ ಒಬ್ಬರಿಗೊಬ್ಬರು ಅಂಥ ಹುಟ್ಟಿದ್ದರೆ, ಜೊತೆಯಾಗಲು ಇಬ್ಬರಿಗೂ ಅದೃಷ್ಟ ಬೇಕು ಬಿಡಿ... it would have been nice to see if you had put your name... but what's there in name anyway... keep visiting...

Veena DhanuGowda said...

Hi prabhu :)

tadavadrhu tondre illa
nima yella article dinake ondaranthe odthidini
Yelalrigu intha srimaathi ye sikidali
varshavidi valentines day alwa??
[ ur blog is very refreshing kelsada naduve ome odri full fresh agthini]

Thank u :)

Prabhuraj Moogi said...

TO: ಪ್ರೀತಿಯಿ೦ದ ವೀಣಾ :)
Abbaa nimage aShTu iSTvaadavaa lEkhanagaLu... odi odi haage anisike kooDaa tiLisuttiri... neevu refreshing blog aMdaddu kELi bahaLa kushiyaaytu...