Saturday, February 21, 2009

ಕೆಲಸದ ನಡುವೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


ಶನಿವಾರ ಎದ್ದು ಹಲ್ಲು ಉಜ್ಜದೇ ಹಾಗೆ ಹಾಸಿಗೆಯಲ್ಲಿ ಕುಳಿತೇ ಲ್ಯಾಪಟಾಪ್ ತೆಗೆದು ಏನೊ ಕುಟ್ಟುತ್ತಿದೆ ರಾತ್ರಿ ಎರಡೊ ಮೂರೊ ಮಲಗಿದ್ದು ಮತ್ತೆ ಆರಕ್ಕೇ ಎದ್ದಿದ್ದು, ಅದೇ ಬಗ್ಗುಗಳು(ಸಾಫ್ಟವೇರಿನಲ್ಲಿ ಬರುವ ದೋಷಗಳು), ಕ್ಲಿಕ್ ಮಾಡಿದರೆ ಪೇಜು ಬರುತ್ತಿಲ್ಲ, ಪೇಜು ಬಂದರೆ ಎಡಕ್ಕೆ ಬರಬೇಕಾದ ಗೆರೆಯೊಂದು ಬಲಕ್ಕೆ ಬಂದಿದೆಯೆಂದೊ, ಅದರಲ್ಲಿನ ಯಾವುದೊ ಲೆಕ್ಕದಲ್ಲಿ ಮೂರನೇ ದಶಾಂಶದಲ್ಲಿ ಉತ್ತರ ಸರಿ ಬರುತ್ತಿಲ್ಲವೆಂದೊ, ಸರಿಬಂದರೆ ಅದರ ಫಾಂಟು(ಅಕ್ಷರ) ಸರಿಯಿಲ್ಲ ಅನ್ನುವ ಸಣ್ಣ ಪುಟ್ಟ ತಪ್ಪುಗಳನ್ನೇ ಮಾರುದ್ದದ ಮೇಲ್ ಬರೆದು ದೊಡ್ಡ ದೊಡ್ಡ ರಾದ್ದಾಂಥಗಳನ್ನು ಮಾಡಿ ಬಿಟ್ಟಿರುತ್ತಾರೆ... ಅದನ್ನು ಸರಿ ಮಾಡಲು ಶನಿವಾರ, ರವಿವಾರ ರಜೆಯೆನ್ನದೆ ಕೆಲಸ ಮಾಡಬೇಕು ಅದಕ್ಕೇ ಸಿಟ್ಟಿನಿಂದಲೇ ಕುಟ್ಟುತ್ತಿರಬೇಕು, ಸದ್ದು ಬಹಳ ಆಗಿ, ಅವಳೆದ್ದಳೆಂದು ಕಾಣುತ್ತದೆ. ಮಲಗಿದಲ್ಲೇ ಹೊರಳಿ ನೋಡಿದಳು, ನಾನೇನು ತಿರುಗಿ ನೋಡಲಿಲ್ಲ ಅಂತ ಮತ್ತೆ ಮುಸುಕೆಳೆದುಕೊಂಡು ಮಲಗಲು ನೋಡಿದ್ಲು, ನಾನಿನ್ನೂ ಭರದಿಂದ ಕುಟ್ಟತೊಡಗಿದೆ, ಮಲಗಲಾಗದೇ ಮತ್ತೆ ಮುಸುಕು ತೆಗೆದು ನೋಡುತ್ತಿದ್ಲು, ನನ್ನ ಪಾಡಿಗೆ ನಾನು ಕೆಲಸದಲ್ಲಿದ್ದೆ, ಮತ್ತೆ ಮುಸುಕಿನಲ್ಲಿ ಮುಳುಗಿದಳು, ಅತ್ತ ತಿರುಗಿ ನೋಡಿ ಈ ಸಾರಿ ನಾ ಅವಳ ಮುಸುಕೆಳೆದು, ಮತ್ತೆ ಏನೂ ಆಗಿಲ್ಲವೆನ್ನುವಂತೆ ಕುಟ್ಟತೊಡಗಿದೆ, ಸಿಟ್ಟಿನಿಂದ ಬುಸುಗುಡುತ್ತ ನೋಡತೊಡಗಿದ್ಲು, ನಿದ್ರೆಯಂತೂ ಹಾರಿ ಹೋಗಿತ್ತು, ನಾನಿನ್ನು ಮಲಗಲು ಬಿಡುವುದಿಲ್ಲ ಅಂತ ಅವಳಿಗೂ ಗೊತ್ತಾಗಿತ್ತು. "ಏನೂ!!!" ಅಂದ್ಲು, ನಾನೂ ಏನು ಅನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿ, ಮತ್ತೆ ಮೌಸ್ ಬೆನ್ನ ಚಪ್ಪರಿಸುವಂತೆ ಕ್ಲಿಕ್ಕಿಸುತ್ತ ಕುಟ್ಟತೊಡಗಿದೆ. ಕೈಯಲ್ಲಿದ್ದ ಮೌಸು ಬಿಡಿಸಿ ಕುಟ್ಟದಂತೆ ಕೈ ತಡೆದಳು, ಕೈ ಕೊಸರಿಕೊಂಡು ಮತ್ತೆ ಶುರುವಿಟ್ಟುಕೊಂಡೆ ಏನೊ ಕಿರಿಕ್ಕು ತಪ್ಪು ಸರಿಹೊಗದೇ ತಲೆ ತಿನ್ನುತ್ತಿತ್ತು, ತಲೆ ಬಿಸಿಯಾಗಿತ್ತು, ಅವಳೂ ರೇಜಿಗೆದ್ದಳು, "ರೀ ಮತ್ಯಾಕೆ ನನ್ನ ಎಬ್ಬಿಸಿದ್ದು, ಏನೀಗ ಟೀ ಬೇಕು ಅಷ್ಟೇ ತಾನೆ, ಈ ಆಫೀಸು ಮನೆಗೆ ಯಾಕೆ ತೆಗೆದುಕೊಂಡು ಬರುತ್ತೀರೊ" ಅಂತ ಬೈಯುತ್ತ ಎದ್ದು ಹೊದಿಕೆ ಕೂಡ ಮಡಿಚಿಡದೇ ಹೋದಳು... ಇತ್ತ ಏನೊ ಪ್ರಾಬ್ಲಮ ಸರಿ ಹೋಗುತ್ತಿಲ್ಲ ಅನ್ನೊ ತಲೆನೋವು, ಇವಳು ಬೇರೆ ಬೈದದ್ದು ಸೇರಿ ಮತ್ತಷ್ಟು ಟೆನ್ಷನ್‌ನಲ್ಲಿ ಬಂದೆ, ಏನೀಗ ನಾನೇನು ಟೀ ಬೇಕೆಂದು ಕೇಳಲಿಲ್ಲವಲ್ಲ, ತಾನೇ ಎಲ್ಲ ಕಲ್ಪಿಸಿಕೊಂಡು ನನ್ನ ಬೈಯುತಿದ್ದಾಳಲ್ಲ ಯಾರಿಗೆ ಬೇಕು ಇವಳ ಟೀ ಅಂತ ಮನಸಲ್ಲೇ ಬೈದುಕೊಂಡು ಮತ್ತೆ ಕೀಪ್ಯಾಡು ಕಿತ್ತು ಬರುವಂತೆ ಕುಟ್ಟತೊಡಗಿದೆ.

ಹೀಗೆ ಹೋದವಳು ಹತ್ತು ನಿಮಿಷದಲ್ಲಿ ಮತ್ತೆ ಹಾಜರಾದಳು, ಕೈಲಿ ಕಪ್ಪು ಟೀ ಇತ್ತು, ಸಾಸರು ಕಾಣಲಿಲ್ಲ, ತಂದು ಟೀಪಾಯಿ ಮೇಲಿಟ್ಟವಳೇ, ತೆಗೆದುಕೊಳ್ಳಲೂ ಹೇಳದೆ ಮತ್ತೆ ಹೊದಿಕೆ ಹೊಕ್ಕಳು. ಎಂದೂ ಕಪ್ಪು ಟೀ ಪೂರ್ತಿ ನನಗೇ ಕುಡಿಯಲು ಬಿಟ್ಟವಳಲ್ಲ, ಅವಳ ಸಾಸಿರಿಗೊಂದಿಷ್ಟು ಸುರಿಯಲೇಬೇಕು, ಅದನ್ನು ಹೀರಿ ನಗುವೊಂದು ಬೀರುವವಳು, ಇಂದೇನಿಲ್ಲ ಟೀಪಾಯಿ ಮೇಲಿಟ್ಟು ಮಾತಿಲ್ಲದೇ ಮಲಗಿದಳಲ್ಲ, ಅಂತ ಬೇಜಾರಾಯಿತು. ಯಾರಿಗೆ ಬೇಕು ಆ ಟೀ, ಸಿಟ್ಟಿನಿಂದ ಮಾಡಿ ತಂದಿಟ್ಟದ್ದು ಅಂತ ನಾ ಮೂಸಿ ಕೂಡ ನೋಡಲಿಲ್ಲ. ಟೀ ಅಲ್ಲೇ ಕುಳಿತಿತು, ನಾನಲ್ಲೇ ಕುಳಿತು ಹಾಗೆ ಕೆಲಸದಲ್ಲಿ ಮುಳುಗಿದೆ.

ಬಹಳ ಹೊತ್ತಿನ ನಂತರ ಎದ್ದವಳು, ಟೀಪಾಯಿ ಮೇಲಿದ್ದ ಟೀಯನ್ನು ನೋಡಿ ಹಾಗೆ ಎದ್ದು ಹೋದಳು, ಮಾತಿಲ್ಲ ಕಥೆಯಿಲ್ಲ... ಟೀ ಕಡೆ ನೋಡಿದರೆ ಅದು "ಕುಡಿಯೊ ಟೀ ಇಲ್ಲದಿರೆ ತಲೆನೊವು ಶುರುವಾಗುತ್ತೆ ನಿನ್ಗೆ" ಅಂತ ಬೈದಂತೆ ಭಾಸವಾಯಿತು, "ನೀ ಹೇಳಿದ್ರೆ ಕುಡಿಯಲಾಗುತ್ತಾ, ಹೇಳುವವರು ಹೇಳಬೇಕು" ಅಂತ ಅದನ್ನೇ ತಿರುಗಿ ಬೈದು, ಅದನಲ್ಲೇ ಬಿಟ್ಟು ಮೇಲೆದ್ದೆ. ಹಲ್ಲು ಉಜ್ಜಿ, ಮುಖ ತೊಳೆದು ಮುಖ ಒರೆಸಿಕೊಳ್ಳುತ್ತ, ಬಂದರೆ ಮತ್ತೆ ಲ್ಯಾಪಟಾಪನಲ್ಲಿ "ಟುಂಗ್ ಟುಂಗ್ ಟುಂಗ್..." ಅಂತ ಸದ್ದು ಬರುತ್ತಿತ್ತು ಅದೇ ಮತ್ತೆ ಯಾರೋ ಗೂಗಲ್ಲು ಟಾಕ್‌ನಲ್ಲಿ ಪಿಂಗ(ಮೆಸೇಜು) ಮಾಡುತ್ತಿರಬೇಕು, ಏನಾಯಿತು ಕೆಲಸ ಮುಗೀತಾ ಅಂದು. ಮತ್ತೆ ಕುಳಿತೆ...

ಮತ್ತೆ ಬಂದು ಮತ್ತೊಂದು ಸಾರಿ ಹಾಗೇ ವಿಚಿತ್ರವಾಗಿ ನೋಡಿದ್ಲು, ಕಣ್ಣಿಗೆ ಕಣ್ಣು ಸೇರಿಸಿ ನೋಡಲಾಗದೆ ಮತ್ತೆ ತಲೆ ಕೆಳಗೆ ಮಾಡಿ ಕೆಲಸದಲ್ಲಿ ಮುಳುಗಿದೆ, ಏನೊ ಟಿಫಿನ್ನು ಮಾಡಿಟ್ಟಿರಬೇಕು, ಅವಳು ಯಾವುದೋ ಮನೆ ಫಂಕ್ಷನ್‌ಗೆ ಹೋಗುವವಳಿದ್ಲು ನಿನ್ನೇನೆ ಹೇಳಿದ್ಳಲ್ಲ, ಹೊರಟು ಹೋದ್ಲು. ಟಿಫಿನ್ನು ಮಾಡಬೇಕೆನಿಸಲಿಲ್ಲ, ಇನ್ನೂ ಟೀ ಕೂಡ ಹಾಗೆ ಕುಳಿತಿತ್ತು. ಈ ಕೆಲಸವೇ ಹೀಗೆ ಊಟ ತಿಂಡಿ ಏನೂ ಬೇಡ ಕೆಲಸ ಮುಗಿದರೆ ಸಾಕಪ್ಪ ಅನ್ನೋ ಹಾಗೆ ಮಾಡಿಬಿಡುತ್ತದೆ. ಅಫೀಸಿನಲ್ಲೂ ಹಾಗೆ ಟೀ ಕಾಫಿ ಕುಡಿಯುತ್ತ ಊಟವಿಲ್ಲದೇ ಹಲವು ಬಾರಿ ಕೆಲಸ ಮಾಡಿದ್ದಿದೆ. ಏನು ತಲೆ ಚಚ್ಚಿಕೊಂಡ್ರೂ ಇಂದು ಇದು ಮುಗಿಯುತ್ತಿಲ್ಲ.

ಮಧ್ಯಾಹ್ನ ಮೂರಾಗಿರಬೇಕು ತಲೆ ಸಿಡಿದು ಬರುವ ಹಾಗಾಗತೊಡಗಿತು, ಅಲ್ಲೇ ಸ್ವಲ್ಪ ಉರುಳಿದೆ, ರಾತ್ರಿ ಸರಿಯಾಗಿ ನಿದ್ದೆಯಿಲ್ಲ ಹಾಗೆ ಒಂದು ಜೊಂಪು ನಿದ್ದೆ ಹತ್ತಿತು. ಮತ್ತೆ ಮೊಬೈಲು ಚೀರತೊಡಗಿದಾಗಲೇ ಎಚ್ಚರವಾಗಿದ್ದು, ಅರೆನಿದ್ರೆಯಲ್ಲಿ ಎದ್ದು ಕೊಲೀಗು ಜತೆ ಮಾತಾಡುತ್ತಿದ್ದೆ ಇವಳು ಬಂದ್ಲು... ಕೊನೆಗೆ ಅವನ ಕೆಲಸವೂ ಮುಗಿದಿಲ್ಲ ನಾಳೆ ಅಫೀಸಿಗೇ ಹೊಗುತ್ತೇನೆ ಅಂದ, ಸರಿ ನಂದೂ ಅದೇ ಹಾಡು ನಾನೂ ಬರ್ತೇನೆ ಅಂದೆ ಇವಳೂ ಕೇಳಿಸಿಕೊಂಡ್ಲು. ಅಡುಗೆ ಮನೆಗೆ ಹೋಗಿ ನೋಡಿ ಬಂದಿರಬೇಕು ಟಿಫಿನ್ನು ಹಾಗೇ ಇದೆ, ಇಲ್ಲಿ ಟೀ ಹಾಗೆ ಕುಳಿತಿದೆ, ಅವಳಿಗೆ ನಾನೇನು ತಿಂದಿಲ್ಲ ಅಂತ ಗೊತ್ತಾಗಿತ್ತು. ಇನ್ನೂ ತಲೆ ನೋವು ಜಾಸ್ತಿಯಾಗಿತ್ತು... ಬಂದವಳೇ ಸಿಟ್ಟಿನಿಂದ "ಏನು ಮಾಡ್ತಿದೀರಾ, ನಿನ್ನೆಯಿಂದ ನೋಡ್ತಾ ಇದೀನಿ, ಆಫೀಸು ಕೆಲ್ಸ ಕೆಲ್ಸಾ ಅಂತಾ ಕೂತಿದೀರ, ಏನೂ ತಿಂದಿಲ್ಲ ಬೇರೆ, ಎನು ಮಾಡ್ತಿದೀರಾ ವಾರವೆಲ್ಲ ಕೆಲ್ಸ ಕೆಲ್ಸಾ ವಾರಾಂತ್ಯಕ್ಕದರೂ ಹೆಂಡತಿ ಮನೆ ಬೇಡವಾ, ಅಫೀಸನ್ನೆ ಮದ್ವೆ ಆಗಬೇಕಿತ್ತು" ಅಂತಾ ಬೈದ್ಲು "ಮತ್ತೆ ನಾಳೆ ಬೇರೆ ಆಫೀಸಿಗೆ ಹೋಗ್ತಾರಂತೆ" ಇನ್ನೂ ಏನೇನೊ ಅಂತಿದ್ಲು, ನನಗೋ ತಲೆ ಕಿತ್ತು ತೆಗೆದಿಡುವಂತಾಯಿತು, ಅರೆನಿದ್ದೆಯಲ್ಲಿ ಎದ್ದಿದ್ದೆ ಬೇರೆ, ಹೊಟ್ಟೇಲೇನಿಲ್ಲ, ಕೆಲಸ ಮುಗಿದಿಲ್ಲ, ನಾಳೆ ಬೇರೆ ರಜೆಯಿಲ್ಲ ಎಲ್ಲಾ ಸೇರಿ ಅವಳ ಮೇಲೆ ಹರಿಹಾಯ್ದುಬಿಡಬೇಕೆನಿಸಿತು, ಆದರೆ ಹಾಗೆ ಅಲ್ಲೇ ಉರುಳಿ, ನನ್ನ ತಲೆ ನಾನೇ ಒತ್ತಿಕೊಳ್ಳತೊಡಗಿದೆ. ಹೊರಗೆ ಹೋಗಿ ಅವಳೂ ಸುಮ್ಮನೆ ಕುಳಿತಿರಬೇಕು, ಮತ್ತೆ ಮಾತಿಲ್ಲ ಕಥೆಯಿಲ್ಲ... ನಿಶಬ್ದ ಹಿತವೆನೆಸಿತು.

ಮತ್ತೆ ಬಂದು ನೋಡಿ, ಪಕ್ಕದಲ್ಲಿ ಕುಳಿತು ತಲೆ ಒತ್ತಬೇಕೆಂದ್ಲು, ಅವಳ ಕೈ ನೂಕಿದೆ, "ಯಾಕೆ ಮಾತೆ ಆಡುತ್ತಿಲ್ಲ, ಸಿಟ್ಟಿದ್ದರೆ ಬೈದು ಬಿಡಿ, ಯಾಕೆ ಸುಮ್ಮನೇ ಇದ್ದು ಸತಾಯಿಸ್ತೀರಾ" ಅಂಥ ಭಾವನಾತ್ಮಕವಾಗಿ ಉಲಿದಳು, ಇನ್ನೂ ನಾನು ಮಾತಾಡದಿದ್ರೆ, ಅಷ್ಟೇ... ಅವಳ ನೋಡಿದೆ ಕಣ್ಣಲ್ಲೇ ಏನೆನೋ ಕೇಳುತ್ತಿದ್ಲು. ಉತ್ತರ ಮಾತ್ರ ನನ್ನಲ್ಲಿಲ್ಲ, ಅದರೂ ಮಾತನಾಡೋಣ ಅಂದು, "ಹಾಗೇನಿಲ್ಲ, ಸ್ವಲ್ಪ ಕೆಲ್ಸ ಬಹಳ ಇದೆ" ಅಂದೆ, ಅಷ್ಟೇ ಸಾಕಿತ್ತು ಅವಳಿಗೆ, ಏರಿ ಬಂದು ಕುಳಿತವಳೇ ಅವಳ ನೂಕದಂತೆ ಕೈ ಕಟ್ಟಿ ಹಾಕಿ ತಲೆ ಒತ್ತತೊಡಗಿಡಳು. ತಲೆ ಮೇಲೆ ಯಾರೋ ಕೀಬೊರ್ಡು ಕುಟ್ಟಿದಂತಾಗುತ್ತಿತ್ತು, ಅದರೂ ಏನೊ ಸುಖವೆನಿಸಿತು. ಅವಳ ಪ್ರಶ್ನೆಗಳಿನ್ನೂ ಮುಗಿದಿರಲಿಲ್ಲ, "ನಿಮಗೆ ಬಹಳ ಸಿಟ್ಟು ಬಂದಿದೆ ಅಲ್ವಾ, ಹೊರಗೆ ತೋರಿಸುತ್ತಿಲ್ಲ" ಅಂದ್ಲು, "ಹಾಗೇನಿಲ್ಲ" ಅಂದ್ರೆ "ಸುಳ್ಳು ಹೇಳ್ಬೇಡಿ" ಅಂತಂದ್ಲು. "ಹೌದು ಸಿಟ್ಟು ಬಂದಿದೆ ಈಗ, ಹಾಗಂತ ಯಾರನ್ನ ಬೈಯಲಿ, ಇಷ್ಟಕ್ಕೂ ಯಾರನ್ನು ಬೈದು ಏನು ಪ್ರಯೋಜನ, ನಿನಗೆ ಹೇಳಿದರೆ ಅರ್ಥವಾಗಲಿಕ್ಕಿಲ್ಲ ಬಿಡು" ಅಂದೆ "ತಾಳಿ, ಮೊದಲು ಊಟ ಆಮೇಲೆ ಮಾತು, ಅನ್ನ ಸಾರು ಮಾಡ್ತೇನೇ" ಅಂದ್ಲು, ಬೇಡ ಮುಂಜಾನೆ ಮಾಡಿಟ್ಟ ಟಿಫಿನ್ನು ಬಿಸಿ ಮಾಡಿದರೆ ಸಾಕು ಅಂದೆ, ಬಿಸಿಬಿಸಿ ಒಂದಿಷ್ಟು ಹೊಟ್ಟೆಗೆ ಬಿದ್ದ ಮೇಲೇ ಸ್ವಲ್ಪ ಹಾಯೆನಿಸಿತು.

ಮತ್ತೆ, ಲ್ಯಾಪಟಾಪ್ ಶುರು ಮಾಡಲು ಕೇಬಲ್ಗೆ ತಡಕಾಡುತ್ತಿದ್ದೆ, ಅವಳು ಬಂದ್ಲು "ಅದನ್ನ ತುಗೊಂಡು ಹೋಗಿ ಹೊರಗೆ ಎಸೆದು ಬರ್ತೀನಿ" ಅಂತ ಗದರಿದ್ಲು, ನಾ ನಕ್ಕೆ, "ಅಬ್ಬ ರಾಜಕುಮಾರ ಈಗ ನಕ್ಕ" ಅಂತ ಛೇಡಿಸಿದ್ಲು ಮತ್ತೆ ಮುಗುಳ್ನಕ್ಕೆ, "ಈಗ ಹೇಳಿ", ಅಂದ್ಲು ಏನು ಅನ್ನುವಂತೆ ನೋಡಿದ್ದಕ್ಕೆ "ಮುಂಜಾನೆಯಿಂದ ನಾನಿಷ್ಟು ಬೈದೆ, ಯಾಕೆ ನೀವೇನೂ ಅನ್ನಲಿಲ್ಲ" ಅಂದ್ಲು "ಓಹ್ ಅದಾ ಮೌನವೃತ ಮಾಡ್ತಾ ಇದ್ದೆ" ಅಂದೆ "ರೀ ಈಗ ಹೇಳ್ತೀರೊ ಇಲ್ವೊ" ಅಂತ ದುಂಬಾಲು ಬಿದ್ಲು. "ಮೊದಲು ನೀನು ಯಾಕೆ ಬೈದೆ ಅದನ್ನ ಹೇಳು" ಅಂದೆ "ನಾ ಬಯ್ಯಬಾರ್ದಿತ್ತು ಪ್ಚ್" ಅಂತ ಲೊಚಗುಟ್ಟಿದ್ಲು, "ಯಾಕೆ???" ನನ್ನ ಪ್ರಶ್ನೆ ಮತ್ತೆ ಬಿತ್ತು, "ಅಲ್ಲ ನಿನ್ನೆಯಿಂದ ನೋಡ್ತಿದೀನಿ ಒಂದೆ ಸಮನೆ ಕೆಲ್ಸ ಕೆಲ್ಸಾ, ಆರೋಗ್ಯ ಎನಾಗಬೇಡ, ವಾರವೆಲ್ಲ ಮನೆಯಲ್ಲಿ ನಾನೊಬ್ಬಳೇ ಈ ಗೋಡೆ ಕಿಡಕಿಗಳ ಜತೆ ಮಾತಾಡುತ್ತಿರಬೇಕು, ವಾರಂತ್ಯವಾದ್ರೂ ನನ್ನ ಜತೆ ಇರದೇ ಹೀಗೆ ಕೂತರೆ ನಾನಾದರೂ ಏನು ಮಾಡಲಿ, ನಿಮ್ಗೆ ಕೆಲಸದ ಮೇಲೆ ಪ್ರೀತಿ ಜಾಸ್ತಿ" ಅಂತ ಮನಬಿಚ್ಚಿ ಹೇಳಿದ್ಲು ಅವಳು ಹಾಗೆ ಮನಸಿನಲ್ಲಿ ಏನೂ ಇಟ್ಟುಕೊಳ್ಳಲ್ಲ, ಕಣ್ಣಲ್ಲಿ ಕಣ್ಣಿಟ್ಟು "ಏನು ನನಗೆ ಕೆಲಸದ ಮೇಲೆ ಪ್ರೀತಿ ಜಾಸ್ತಿನಾ?" ಅಂದೆ, ಸೀರೆ ಸೆರಗಿನ ತುದಿಯ ಚುಂಗ ತಿರುಗಿಸಿ ತೀಡುತ್ತ ನಾಚಿ "ಹಾಗೇನಿಲ್ಲಾ.." ಅನ್ನುತ್ತ ತಲೆ ಕೆಳಗೆ ಹಾಕಿದ್ಲು.

ನಾ ಹೇಳತೊಡಗಿದೆ "ನನಗೂ ಸಿಟ್ಟು ಬಂದಿದೆ ಹಾಗಂತ ನಿನ್ನ ಮೇಲೆ ಹಾರಾಡಿದೆ, ಕೂಗಾಡಿದೆ, ಅಂತ ಇಟ್ಕೊ, ಆಗ ನಾನೇನು ಸಾಧಿಸಿದೆ, ನಮ್ಮಿಬ್ಬರ ಸಂಭಂದ ಹಳಸುತ್ತೆ ಅಷ್ಟೇ, ಹೌದು ವಾರವೆಲ್ಲ ತಲೆ ತುರಿಸಿಕೊಂಡು ಕೆಲಸ ಮಾಡಿ ವಾರಂತ್ಯಕ್ಕೂ ಅದನ್ನೇ ಮಾಡಲು ನನಗೇನು ಹುಚ್ಚಾ, ಇಲ್ವಲ್ಲ. ಆದರೆ ಯಾಕೆ... ನನ್ನ ಕೆಲಸ ಹಾಗಿದೆ, ಪ್ರತೀ ಕ್ಷಣವೂ ಒತ್ತಡ, ತಲೆಬಿಸಿ, ಅದು ಇದ್ದದ್ದೆ. ಇತ್ತೀಚೆಗೆ ಅಭದ್ರತೆ ಕೂಡ ಕಾಡುತ್ತಿದೆ. ಆದರೆ ಇದು ನಾ ಆರಿಸಿಕೊಂಡ ವೃತ್ತಿ, ಅದರಲ್ಲೆ ಸಂತೋಷ ಕಾಣಬೇಕು, ನಾನು ಮಾಡುತ್ತಿರುವುದು ನಮ್ಮ ಕುಟುಂಬಕ್ಕಾಗಿಯೇ, ಗಳಿಸಿ ಸಿರಿವಂತನಾಗಲೇನಲ್ಲ ಇಷ್ಟಕ್ಕೂ ಈಗ ಈ ವಾರಂತ್ಯದ ಕೆಲಸಕ್ಕೆ ಎನು ಹೆಚ್ಚಿಗೆ ದುಡ್ಡು ಸಿಗುವುದಿಲ್ಲ, ಎಲ್ಲ ಕೆಲಸ ನಿರ್ಧಾರಿತ ಸಮಯದಲ್ಲಿ ಮುಗಿಸಲೇಬೇಕು, ಇಲ್ಲವೆಂದರೆ ಎಲ್ಲಿ ಕೆಲಸವಿಲ್ಲದಾದೀತೊ ಅನ್ನೊ ಭಯ, ಕೆಲವೊಮ್ಮೆ ಹೀಗೆ ಕೆಲಸ ಬರುವುದು ಸಹಜ ಆಗ ಹೊಂದಾಣಿಕೆ ಮುಖ್ಯ" ಅಂದೆ. ಅವಳಿಗೆ ಅರ್ಥವಾಯಿತೊ ಇಲ್ವೊ ಗೊತ್ತಿಲ್ಲ ಆದರೂ ನನ್ನ ಮನ ಹಗುರಾಯಿತು. "ಆದರೂ ಆರೋಗ್ಯದ ಕಡೆ ಗಮನ ಬೇಡವೇ" ಅಂದ್ಲು "ಅದು ಸರಿ ಅದಕ್ಕೆ ಬೈದು ಸರಿ ಮಾಡಲು ನೀನಿದ್ದೀಯಲ್ಲ, ನಿನ್ನ ಸಿಟ್ಟಿನ ಹಿಂದಿದ್ದದ್ದು ಕಾಳಜಿ ಅದಕ್ಕೇ ನಾ ಏನೂ ಅನ್ನಲಿಲ್ಲ" ಅಂದೆ. "ನಾಳೆ ಹೋಗಲೇಬೇಕಾ" ಅಂದ್ಲು, "ಈವತ್ತೂ ಹೋಗಬೇಕಿತ್ತು, ನಿನಗಾಗಿ ಕೆಲ್ಸ ಮನೆಗೆ ತಂದೆ, ಇಷ್ಟೆಲ್ಲ ರಾಧ್ಧಾಂತವಾಯಿತು" ಅಂದೆ. "ಸರಿ ಈಗ ಲ್ಯಾಪಟಾಪ ಬೇಕಾ, ಕೆಲ್ಸಾ ಮಾಡೋರಿದ್ರೆ ಮಾಡಿ ಕೊಡ್ತೀನಿ, ನಾ ಕಾಡಿಸಲ್ಲ" ಅಂದ್ಲು. "ಆ ಲ್ಯಾಪಟಾಪ ಎನೂ ಬೇಡ ಈ ಲ್ಯಾಪಟಾಪ ಬೇಕು" ಅಂತನ್ನುತ್ತ ಕೈ ಹಿಡಿದೆಳೆದೆ ತಟ್ಟನೆ ಜಿಗಿದು ಏರಿ ಬಂದು ನನ್ನ ಲ್ಯಾಪ ಮೇಲೆ ಕುಳಿತುಬಿಟ್ಲು. ಅವಳ ಹಣೆಗೆರಡು ಸಾರಿ ಕೀಬೊರ್ಡು ಕುಟ್ಟಿದಂತೆ ಮುಷ್ಟಿಯಿಂದ ಮೆಲ್ಲನೆ ಗುದ್ದು ಕೊಟ್ಟೆ. "ರೀ ತಲೆನೊವು ಕಡಿಮೆ ಆಯ್ತಾ" ಅಂದ್ಲು "ಇಲ್ಲ ಸ್ವಲ್ಪ ಇದೆ ಆದ್ರೂ ಪರವಾಗಿಲ್ಲ" ಅಂದದ್ದಕ್ಕೆ ಟೀ ಮಾಡಿ ತರಲಾ ಅಂದ್ಲು, ಪಕ್ಕದಲ್ಲಿ ನೋಡಿದ್ರೆ ಟೀಪಾಯಿ ಮೇಲೆ ಇನ್ನೂ ಮುಂಜಾನೆ ಅವಳು ಮಾಡಿ ತಂದಿಟ್ಟ ಕಪ್ಪು ಹಾಗೇ ಇತ್ತು, ಅದು "ಲೋ, ಮುಂಜಾನೆಯಿಂದ ಕಾಯ್ತಾ ಇದೀನಿ ಕುಡಿಯೋ ಬೇಗ, ನನ್ನ ಮೇಲೆ ಯಾಕೊ ನಿಂಗೆ ಸಿಟ್ಟು, ಇನ್ನೇನು ನನ್ನ ಬಿಸಿಯಿಲ್ಲ ಅಂತ ಬಚ್ಚಲಿಗೆ ಚೆಲ್ತೀರಾ ಬಿಡು" ಗೊಳಾಡುತ್ತಿದ್ದಂತೆ ಅನಿಸಿತು, ಪಾಪ ಅದೇ ಅಲ್ವಾ ನನ್ನ ಕೆಲ್ಸಕ್ಕೆ ಸ್ಪೂರ್ಥಿ, ತಾಜಾತನ ತುಂಬೊದು ಅದನ್ನ ಯಾಕೆ ಬೇಜಾರು ಮಾಡಿಸಲಿ ಅಂದು. ಅವಳಿಗೆ ಅದನ್ನೇ ಎತ್ತಿ ಕೊಟ್ಟು ಬಿಸಿ ಮಾಡಿ ತಾ ಅಂದೆ, ಅವಳು ಮುಂಜಾನೆ ಮಾಡಿದ್ದು ಬೇಡ ಅಂದ್ಲು, ಅದೇ ಬೇಕು ಅಂತ ಹಟ ಹಿಡಿದೆ. "ಅದೇ ಬೇಕೆಂದರೆ ಆಗಲೇ ಕುಡಿಯಬೇಕಿತ್ತು, ಯಾಕೆ ಕುಡಿಯಲಿಲ್ಲ" ಅಂತ ಕೇಳಿದ್ಲು "ಅದರಲ್ಲಿ ಸಿಟ್ಟು ತುಂಬಿತ್ತು, ಪ್ರೀತಿಯಿರಲಿಲ್ಲ, ಈಗ ಪ್ರೀತಿಯಿಂದ ಬಿಸಿ ಮಾಡಿ ತಾ ಕುಡಿಯುತ್ತೇನೆ" ಅಂದೆ. "ಇಂಥ ಮಾತುಗಳಿಗೇನು ಕಮ್ಮಿಯಿಲ್ಲ" ಅಂತನ್ನುತ್ತ ಬಿಸಿ ಮಾಡಲು ಪಾಕಶಾಲೆಗೆ ಹೋದ್ಲು, ಇತ್ತ ಕೊಲೀಗು ಫೋನು ಮಾಡಿ ಯಾವುದೋ ಪ್ರಾಬ್ಲ್ಂ ಒಂದು ಹೇಳಿದೆ, ಮತ್ತೆ ಲ್ಯಾಪಟಾಪ ತೆಗೆದು ಕುಳಿತೆ. ಈ ಸಾರಿ ಸಾಸರಿನೊಂದಿಗೆ ಬಿಸಿಬಿಸಿ ಟೀ ಬಂತು, ಸಾಸರಿಗೆ ಹಾಕಲ್ಲ ಅಂದ್ರೆ ಕಸಿದುಕೊಂಡು ತಾನೇ ಹಾಕಿಕೊಂಡು ನನಗೊಂದಿಷ್ಟು ಕೊಟ್ಟು ತಾನೂ ಗುಟುಕರಿಸಿದಳು. ಟೀ ಬಹಳ ರುಚಿಯಾಗಿತ್ತು, ಪ್ರೀತಿ ಸ್ವಲ್ಪ ಜಾಸ್ತಿಯಾಗಿತ್ತು ಅಂತ ಕಾಣುತ್ತದೆ.

ಮತ್ತೆ ಹುಮಸ್ಸಿನಿಂದ ಕೆಲಸಕ್ಕೆ ಶುರು ಮಾಡಿದೆ, ಇವಳೂ ನಡು ನಡುವೆ ಮೂಗು ತೂರಿಸುತ್ತಿದ್ಲು, "ಇಂಟ" ಅಂದ್ರೇನು, "ಕ್ಲಾಸ್" ಅಂದ್ರೇನು(ಕಂಪ್ಯೂಟರ ಪ್ರೋಗ್ರಾಮುಗಳಲ್ಲಿ ಬರುವ ಪದಗಳು). ಎರಡನೇ ಕ್ಲಾಸು ಮೂರನೇ ಕ್ಲಾಸು ಅಂತ ಮಕ್ಕಳು ಹೋಗ್ತಾರಲ್ಲ ಶಾಲೆಗೆ... ಅದಾ ಅಂತ ಗೊತ್ತಿದ್ದರೂ ಶುಧ್ಧ ತರಲೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ಲು, ಅವಳಿಗೆ ತರಲೇ ಉತ್ತರಗಳ ಕೊಡುತ್ತ ಕೆಲಸ ಮುಗಿದದ್ದೇ ಗೊತ್ತಾಗಲಿಲ್ಲ, ನಾಳೆ ಒಂದೆರಡು ಗಂಟೆ ಆಫೀಸಿಗೆ ಹೋಗಿ ಬಂದರಾಯಿತು, ಬಹಳ ಇಲ್ಲ ಇನ್ನು ಅಂದದ್ದಕ್ಕೆ ಖುಷಿಯಾದ್ಲು. "ಕಂಪ್ಯೂಟರಿನ ಪ್ರೋಗ್ರಾಮುಗಳ ಮಾಡಿದ್ದು ಸಾಕು ಇನ್ನು ನಾಳೆ ನಮ್ಮದೇನು ಪ್ರೋಗ್ರಾಮು" ಅಂದೆ... "ಬರೀ ಪ್ರೋಗ್ರಾಮು ಅಂತ ಕೆಲ್ಸ ಮಾಡಿ ಮಾಡಿ ಸಾಕಾಗಿಲ್ವಾ, ನಾಳೇನು ಪ್ರೋಗ್ರಾಮು ಇಲ್ಲ ಮನೆಯಲ್ಲೇ ರೆಸ್ಟು" ಅಂದ್ಲು, ಕೆಲಸವಂತೂ ಮುಗಿದಿತ್ತು, ಬಹಳ ಖುಶಿಯಾಗಿತ್ತು ಅವಳೊಂದಿಗೆ ತರಲೆಗಿಳಿದೆ, "ರೀ ನಿನ್ನೇನೂ ನಿದ್ದೆಯಿಲ್ಲ ಮಲಗಿ" ಅಂತ ಬಯ್ಯುತ್ತಿದ್ಲು, ಅವಳ ಮಾತಿನ ತಾಳಕ್ಕೆ ತಕ್ಕಂತೆ ಮತ್ತೆ ಲ್ಯಾಪಟಾಪನಲ್ಲಿ ಗೂಗಲ್ಲು ಟಾಕನ ಮೆಸ್ಸೆಜುಗಳ ಸದ್ದು "ಟುಂಗ್ ಟುಂಗ್ ಟುಂಗ್..." ಎಂದು ಬರುತ್ತಲೇ ಇತ್ತು (ಮತ್ತೆ ಯಾವುದೊ ಪ್ರಾಬ್ಲ್ಂ ಕೊಲೀಗು ಕಳಿಸುತ್ತಿರಬೇಕು) ನಾನು ಅವಾವುದರ ಅರಿವಿಲ್ಲದಂತೆ ಅವಳ ಮಡಿಲಲ್ಲಿ ನಿದಿರೆಗೆ ಜಾರುತ್ತಿದ್ದೆ... ಮತ್ತೆ ಮುಂಜಾನೆ ಎದ್ದರೆ ಅದೇ... ಕೆಲಸ ಇದೆಯಲ್ಲ ಹಾಗೂ ಕೆಲಸದ ನಡುವೆ ಇವಳ ಕೀಟಲೆಯೂ ಇದೆಯಲ್ಲಾ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಓದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

pdf can be found here http://www.telprabhu.com/kelasada-naduve.pdf


ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

22 comments:

Keshav.Kulkarni said...

"ತಲೆ ಮೇಲೆ ಯಾರೋ ಕೀಬೊರ್ಡು ಕುಟ್ಟಿದಂತಾಗುತ್ತಿತ್ತು,
ಆ ಲ್ಯಾಪಟಾಪ ಎನೂ ಬೇಡ ಈ ಲ್ಯಾಪಟಾಪ ಬೇಕು
ಅವಳ ಹಣೆಗೆರಡು ಸಾರಿ ಕೀಬೊರ್ಡು ಕುಟ್ಟಿದಂತೆ ಮುಷ್ಟಿಯಿಂದ ಮೆಲ್ಲನೆ ಗುದ್ದು ಕೊಟ್ಟೆ."
ಕಂಪ್ಯೂಟರಿನ ಹೊಸ ರೂಪಕಗಳು ಚೆನ್ನಾಗಿವೆ.
- ಕೇಶವ (www.kannada-nudi.blogspot.com

ಮಲ್ಲಿಕಾರ್ಜುನ.ಡಿ.ಜಿ. said...

"ಸಫ್ಟ್ ವೇರ್ ಉದ್ಯೋಗಿಯ ಸರಸಗಳು" ಸೊಗಸಾಗಿದೆ. ಒಂದು ಚಲನಚಿತ್ರದಲ್ಲಿ ನೋಡಿದಂತೆ ಭಾಸವಾಗುವಂತೆ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ.

Ittigecement said...

ಪ್ರಭು...

ನಿಮ್ಮ ಉದ್ಯೋಗವನ್ನು ಬಹುವಾಗಿ ಇಷ್ಟುಪಡುತ್ತೀರಲ್ಲವೇ..?
ಚಂದವಾದ ನಿರೂಪಣೆ...!

ರಮೇಶ್ ಸಿನೇಮಾ ನೋಡಿದಂತಿತ್ತು...

ಅಭಿನಂದನೆಗಳು..

Prabhuraj Moogi said...

Keshav Kulkarni ಅವರಿಗೆ:
ನನ್ನ ಬ್ಲಾಗಗೆ ಸ್ವಾಗತ ಏನೋ ಒಂದಿಷ್ಟು ಪ್ರಾಸ ಬಧ್ಧವಾಗಿ ಬರೀತೀನಿ ನಿಮಗಿಷ್ಟವಾಗಿದ್ದು ಕೇಳಿ ಹರ್ಷವಾಯಿತು...

ಮಲ್ಲಿಕಾರ್ಜುನ.ಡಿ.ಜಿ. ಅವರಿಗೆ:
ಸಾಫ್ಟವೇರ್ ಉದ್ಯೋಗಿಗಳೂ ಲೈಫ ಎಂಜಾಯ್ ಮಾಡ್ತಾರೆ, ಹಾಗೇ ಅವರಿಗೂ ಕಷ್ಟ ದುಃಖ ದುಮ್ಮಾನಗಳಿವೆ ಅದನ್ನು ಮನೆಯವರೂ ಅರ್ಥ ಮಾಡಿಕೊಳ್ಳಬೇಕು... ಹಾಗೂ ಅವರಿಗೆ ಭಾವನಾತ್ಮಕ ನೆರವು ನೀಡಬೇಕು... ಅನ್ನೋದು ಹೇಳೋಕೆ ಲೇಖನ ಬರೆದದ್ದು. ಕಣ್ಣಿಗೆ ಕಟ್ಟುವ ಹಾಗೆ ಬರೆಯುವ ಪ್ರಯತ್ನ ಮಾತ್ರ... ಇನ್ನೂ ಸಾಕಷ್ಟು ಸುಧಾರಣೆಗಳು ಮಾಡಬೇಕು ಇನ್ನೂ ನನ್ನ ಬರವಣಿಗೆ ನನಗೆ ತೃಪ್ತಿ ನೀಡಿಲ್ಲ.

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಚಿಕ್ಕಂದಿನಿಂದ ಸಾಫ್ಟವೇರ್ ಉದ್ಯೋಗಿ ಆಗಬೇಕು ಬೆಂಗಳೂರಿಗೆ ಬಂದು ನೆಲೆಸಬೇಕು ಅಂತ ಕನಸು ಕಟ್ಟಿಕೊಂಡು ಬೆಳೆದವ ನಾನು.. ಏನೇ ಅಂದರೂ ನನಗದು ಇಷ್ಟ... ನಾನಿಷ್ಟಪಟ್ಟ ಉದ್ಯೋಗ ನನಗೆ ಸಿಕ್ಕಿದ್ದು ನನ್ನ ಅದೃಷ್ಟ... ರಮೇಶ್ ಸಿನಿಮಾಗಳು ನನಗೂ ಇಷ್ಟ.. ವಾಸ್ತವದ ತಿರುಳನ್ನು ಹಾಸ್ಯದಲ್ಲಿ ಹೇಳುವ ಅವರ ಕಲೆ ಬಹಳ ಚೆನ್ನಾಗಿದೆ..

ಮನಸು said...

ಪ್ರಭು,

ಬಹಳ ಚೆನ್ನಾಗಿ ಬರೆದಿದ್ದೀರಿ, ಕೆಲಸದ ಒತ್ತಡದಲ್ಲಿ ಮನೆ ಮಡದಿ ಕಡೆ ಗಮನ ಕೊಡಲಾಗದೆ ಎಷ್ಟೋ ಮನೆಗಳಲ್ಲಿ ತೊಂದರೆ ಮನಸ್ತಾಪಗಳು ಬರುತ್ತವೆ.. ನಿಮ್ಮ ಬರಹದಲ್ಲಿ ಕೆಲವು ಕಿವಿಮಾತು ಕೂಡ ಇದೆ ತುಂಬ ಇಷ್ಟವಾಯಿತು.

ಆಫೀಸನ್ನೆ ಮದುವೆಯಾದರೆ ಮನೆಯೇ ಬೇಡ ಅಲ್ಲವೇ...? ಹ ಹ ಹ

ಇಂದು ಬೇಗ ಕೆಲಸ ಮುಗಿಸಿ ಮನೆಗೆ ಹೋಗಿ ಪಾಪ ಕಾಯುತ್ತಿರುತ್ತಾರೆ ಹ ಹ ಹ ....

sunaath said...

"ಈ ಸಮಯಾ ಶೃಂಗಾರಮಯಾ!
ಈ ಸಮಯಾ ಆನಂದಮಯಾ!"

Prabhuraj Moogi said...

ಮನಸು ಅವರಿಗೆ:
ಕೆಲಸ ಮನೆ ಹೀಗೆ ಎಲ್ಲ ತೂಗಿಸಿಕೊಂಡು ಹೋಗೋದು ಬಹಳ ಕಷ್ಟ, ಆದರೆ ಮನದಿಚ್ಛೆ ಅರಿತು ನಡೆವ ಸತಿ ಸಿಕ್ಕರೆ ಎಲ್ಲ ಸರಾಗ ಸುಗಮ, ಮನೆಯಲ್ಲಿರುವ ಮಡದಿಯ ಕಷ್ಟ ನಮಗೂ ಅರ್ಥವಾಗುತ್ತೆ ಆದ್ರೆ ಅವರೂ ಹಾಗೇ ನಾವೇನು ಬೇಕೆಂದೇ ಹಾಗೆ ಬರೀ ಕೆಲಸ ಕೆಲಸ ಅಂತ ಕೂರುತ್ತಿಲ್ಲ ಅನ್ನೋದು ತಿಳಿಯಬೇಕು..
ಇಂದು ಬೇಗ ಹೋಗುತ್ತೇನೆ ಆದರೆ ಮನೆಯಲ್ಲಿ ಕಾಯುವ ಮಡದಿಯಿನ್ನೂ ಬಂದಿಲ್ಲ!!!... ಬಂದಾಗ ಇನ್ನಷ್ಟು ಬೇಗ ಹೋದರಾಯಿತು ಹ ಹ ಹ

sunaath ಅವರಿಗೆ:
ಲೇಖನಕ್ಕೊಂದು ಮೌಲ್ಯ ತಂದಿರಿ, ನಿಮ್ಮ ಕಾಮೆಂಟಿಗೆ ಏನೆಂದು ಕಾಮೆಂಟು ಕೊಡಲಿ... ಸಮಯೋಚಿತ ಹಾಗೂ ಶೃಂಗಾರಭರಿತ..

SSK said...

Sittyako, sidukyako nana jaana.... nina mele ittivni nana praana......! Anta haaduttaa tarale maaduva olleya manasina sangaati nimage hendatiyagi doreyali endu haaraisuteene.

Aaga neevu bari swargakke alla, software companygo kitchu haccha bahudu alve prabhu(vagna)!!!

Santhosh Rao said...

Prabhu..tumba chennagi barididdira. Tumba ishta aayitu :)

Dhanyavaadagalu

shivu.k said...

ಪ್ರಭು,

ನಿಮ್ಮ ಲೇಖನವನ್ನು ನಿನ್ನೆ ನಾನು ಮೊದಲು ಓದಿ ಕಾಮೆಂಟಿಸಿದಾಗ network ತೊಂದರೆಯಿಂದ ಆಗಲಿಲ್ಲ.....

ಆಫೀಸನ್ನು ಮನೆಗೆ ತಂದ ನಂತರದ ಸನ್ನೀವೇಶಗಳನ್ನೆಲ್ಲಾ ಇಂಚಿಂಚಾಗಿ ತುಂಟತನದಿಂದ ಹೇಳಿಕೊಂಡಿದ್ದೀರಿ...ಚೆನ್ನಾಗಿದೆ...

Prabhuraj Moogi said...

To: SSK
ha ha ha bahaLa chennagi barediddeeri... tarale maaDuva huDugiya bagegina harike njavaadre khaMDita tiLisuttEne...
ayyo companyge kichchu hachchidare kelasa illvaadeetu...

To: ಸಂತೋಷ್ ಚಿದಂಬರ್
dhanywaada saMTosha.

To: shivu
aapheesu manege taMdiddu avaLigaagi aadaroo ishTella radhdhaaMtavaayitu... tuMTaaTada halavu lEkhanagaLu innoo baralive... baruttiri.

Anonymous said...

chennagi bardiddira..

Prabhuraj Moogi said...

To: Anonymous
Thank you, tamma hesaru barediddare inno chenngiruttittu...

maaya said...

hi,,,
Nice Article u written.. Article subject is nice..

Hema.nth

Prabhuraj Moogi said...

To: maaya
Thank you very much, and thanks a lot for regularly reading and giving sweet feedbacks... Initially had kept some other Title but just before the posting changed it as that didn't suit the context of article. keep visiting

Nisha said...

Well written prabhu. I am a working women working from home in the BPO field, this is the same thing which happens at my house. My daughter also joins with her papa to trouble me, but it will be a sweet disturbance. Wish many more tales come from you. Wish all your wonderful dreams come true.

Prabhuraj Moogi said...

To: Nisha
Thanks Nisha, Working from home will be always like that... Work and Life balance always critical... If you have kid then it become much more critical, as kids too expect from you [you play with them, talk to them like that...] as you said its not an irritating disturbance, its sweet disturbance... keep visiting... more tales about to come..

Veena DhanuGowda said...

int, class ha ha ha
bitre c, c++ nu helkodo hagidira nim akkege :)
preethi thumbide ri nimma barahadali.. adake yelrigu istavaguta
chennagide :)

Prabhuraj Moogi said...

ಪ್ರೀತಿಯಿ೦ದ ವೀಣಾ :)ಅವರಿಗೆ:
int class ಎಲ್ಲ ಅವಳಿಗೆ ಗೊತ್ತು ಆದರೂ ನನ್ನ ತಲೆ ತಿನ್ನುತ್ತಾಳೆ ಏನು ಮಾಡಲಿ... ಅವಳೆಂದರೆ ತುಂಬಾ ಇಷ್ಟ ಅದಕ್ಕೆ ಪ್ರೀತಿ ತುಂಬಿ ಬರೀತೀನಿ

Anonymous said...

nimma lekhana bahala chennagide, eeshwaraia avara 'sarasa'lannu nenapisitu

Prabhuraj Moogi said...

To Anonymous
ನನಗೂ ಈಶ್ವರಯ್ಯ ಅವರ ಸರಸ ಅಂಕಣ ಬಹಳ ಇಷ್ಟ... ಹೀಗೆ ಬರ್ತಾ ಇರಿ .

Anonymous said...

Wagers can be placed on 카지노 사이트 particular person numbers or groups of numbers on the betting layout. When the ball involves rest on the roulette wheel, the vendor places a marker on the successful quantity on the table layout and pays the successful bets. It is a major attraction in each land-based casinos and on-line live on line casino platforms.