ಊರಿಂದ ಬರ್ತಿದ್ದಂಗೆ, ಅಲ್ಲೇನೇನಾಯ್ತು ಅಂತ ಹೇಳಿ ಅಂತ ದುಂಬಾಲುಬಿದ್ದಳು, ಹೇಳ್ದಿದ್ರೆ ಎಲ್ಲಿ ಬಿಡ್ತಾಳೆ... "ಅಪ್ಪ ಅಮ್ಮ ಚೆನ್ನಾಗಿದಾರೆ, ನಿನ್ನ ತುಂಟಾಟಗಳ ಕೇಳಿ ಮನಸಾರೆ ನಕ್ಕರು, ತಂಗಿ ಚೆನ್ನಾಗಿ ಓದ್ತಿದ್ದಾಳೆ, ಮತ್ತೊಂದು ಸಾರಿ ನಿನ್ನ ಬಿಟ್ಟು ಬಂದ್ರೆ ಅಷ್ಟೇ ಊರಲ್ಲಿ ಕಾಲು ಇಡಲು ಬಿಡಲ್ಲ ಅಂತ ತಾಕೀತು ಮಾಡಿದಾಳೆ, ಮತ್ತೆ ಚಿನ್ನು ಕೂಡ ಚೆನ್ನಾಗಿದಾಳೆ" ಅಂದೆ, "ಆಂ ಚಿನ್ನು!!! ಯಾರ್ರೀ ಅದು, ನಾ ಬರಲಿಲ್ಲ ಅಂತ ಮನೇಲಿ ನಿಮ್ಗೆ ಇನ್ನೊಂದು ಮದುವೆಯೇನಾದ್ರೂ ಮಾಡಿ ಬಿಟ್ರೊ ಏನ್ ಕಥೆ" ಅಂದ್ಲು. "ಒಹೋ ನಾನಂದೆ.. ಅವಳಿಲ್ಲಾ... ಅದ್ಕೆ ಟೆಂಪರರಿ ಒಂದು ಹತ್ತು ದಿನಕ್ಕೆ ಅಂತ ಇನ್ನೊಂದು ಮದುವೆ ಇಲ್ಲೇ ಮಾಡಿ ಅಂತ, ಅಮ್ಮಾನೆ ಮಾಡಲಿಲ್ಲ.. ಛೆ!" ಅಂತ ಬಾಯಿಬಿಟ್ಟೆ... ಕಿವಿ ಹಿಂಡುತ್ತ "ಹೂಂ ಆಸೆ ನೋಡು, ಚಿನ್ನು ಯಾರು ಅಂತ ಹೇಳ್ತೀರೊ ಇಲ್ವೊ?" ಅಂದ್ಲು. "ನಿನಗೆ ಇನ್ನೊಬ್ಬ ನಾದಿನಿ(ಗಂಡನ ತಂಗಿ) ಅವಳು" ಅಂದೆ, ಅವಳು ಬಿಡಬೇಕಲ್ಲ ಬಿಡಿಸಿ ಹೇಳೊವರೆಗೆ ಇನ್ನಷ್ಟು ತಿರುವಿದಳು ಕಿವಿ ಕಿತ್ತು ಬರುವ ಹಾಗೆ..."ಅಮ್ಮ ಬೆಕ್ಕು ಸಾಕಿದಾಳೇ, ಮಗಳಂಗೆ ನೊಡ್ಕೊತಾ ಇದ್ರೆ ನಿಂಗೆ ನಾದಿನಿನೇ ತಾನೆ"... ಅಂತ ಚೀರಿದೆ ಬಿಟ್ಲು.
ಕಿವಿ ಕೆಂಪಗಾಗಿತ್ತು! ಮತ್ತೆ ಅವಳೇ ನೀವುತ್ತಿದ್ಲು, ಹಿತವಾಗಿತ್ತು... ಹೇಗಿದೆ ಅದು ಅಂದದ್ದಕ್ಕೆ ಫೊಟೊ ತೆಗೆದು ತೋರಿಸಿದೆ, "ಥೇಟ ನಿಮ್ಮ ಹೋಲಿಕೆ, ಎಷ್ಟೇ ಅಂದ್ರು ನಿಮ್ಮ ತಂಗಿ ಅಲ್ವೆ!" ಅಂದ್ಲು, "ಅದ್ಯಾವ ಆಂಗಲ್ಲಿನಲ್ಲಿ ನಾ ಹಾಗೆ ಕಾಣ್ತಿನೋ ತಮಗೆ" ಅಂದ್ರೆ ಕಿಲಕಿಲ ನಕ್ಳು. "ಎಲ್ಲಿಂದ ತಂದೀದಾರೆ" ಅಂದ್ಲು. ಅದೊಂದು ದೊಡ್ಡ ಕಥೆ ಅಂತಿದ್ದಂಗೆ ಅವಳ ಕಿವಿ ನೆಟ್ಟಗಾಯಿತು, ಕಥೆ ಅಂದ್ರೆ ಬಿಡ್ತಾಳಾ, ಹೇಳದಿದ್ರೆ ನನ್ನ ಕಿವಿ ಇನ್ನಷ್ಟು ಕೆಂಪಗಾಗುತ್ತೆ.
ಮನೇಲಿ ಇದು ಎಷ್ಟನೇ ಬೆಕ್ಕು ಗೊತ್ತಿಲ್ಲ, ಮೊದಲಿದ್ದದ್ದು "ಮೀನೂ(ಮಿನ್ನು)" ಅದು ತಂದು ಸಾಕಿದ್ದು, ಆಮೇಲೆ ಬಂದದ್ದು "ಜಾನಿ", ಆಗಾಗ ಬಂದು ಹೋಗುತ್ತಿದ್ದುದು "ಜಾಫ್ರಿ"(ಜಾಫ್ರಾಣಿ ಅಂತ ಒಂದು ಬೆಕ್ಕಿನ ತಳಿ), ಹೀಗೆ ಸಾಕಷ್ಟು ಬೆಕ್ಕು ಸಾಕಿ ಆಗಿದೆ ಈಗ ಎಲ್ಲಿಂದಲೊ ಬಂದು ನೆಲೆಯೂರಿರುವುದು "ಚಿನ್ನಿ ಅಲಿಯಾಸ ಚಿನ್ನು". ನಾವೆಲ್ಲ ಈಕಡೆ ಬಂದ ಮೇಲೆ ಅಮ್ಮನಿಗೆ ಜತೆಯಾಗಿದ್ದು ಅವೇ, ಅವನ್ನೇ ಮಕ್ಕಳಂತೆ ಸಾಕಿದ್ದಾಳೆ, ಹೀಗಾಗಿ ಅವು ನಮ್ಮ ಮನೆಯ ಸದಸ್ಯರ ಲಿಸ್ಟು ಸೇರಿಕೊಂಡಿದ್ದು. ಮೊದಲಿಗೆ ಒಂದೊಂದು ಬೆಕ್ಕು ಸತ್ತಾಗಲೂ ಅತ್ತಿದ್ದಾಳೆ ಅಮ್ಮ, ಅದೊಂಥರಾ ಭಾವನಾತ್ಮಕ ಸಂಭಂಧ. ಇತ್ತೀಚೆಗೆ ಆಸ್ತಿ, ಮನೆ ಅಂತ ವಿವಾದಗಳಿಂದ ಕೆಟ್ಟು ಹಳಸಿದ ಸಂಭಧಗಳಿಗಿಂತ ಅವೇ ನನಗೆ ಎಷ್ಟೋ ಚೆನ್ನಾಗಿವೆ ಅನಿಸತ್ತೆ, ಏನೂ ಬಯಸದೇ ನಿಸ್ವಾರ್ಥ ಪ್ರೀತಿ ನೀಡುವ ಅವು ನಿಜವಾದ ಸಂಭಂಧಿಗಳು.
ಆದರೂ ನನಗೆ ಬೆಕ್ಕುಗಳೆಂದರೆ ಅಷ್ಟಕ್ಕಷ್ಟೇ, ಮೊದಲಿಂದಲೂ ನಾಯಿ ಅಂದ್ರೆ ಅಚ್ಚುಮೆಚ್ಚು. ಆದರೆ ಅಮ್ಮ ಸಾಕಿದಾಗ ಬೇಡವೆಂದಿಲ್ಲ ಹಾಗೂ ಅವನ್ನೇನೂ ದೂರ ತಳ್ಳಿಲ್ಲ, ಆದರೂ ಬೆಕ್ಕಿಗೆ ಅಷ್ಟೊಂದು ಮನೆ ಮೇಲೆ ನಂಬುಗೆ ಕಡಿಮೆ ಅಂಥ ನನ್ನ ಭಾವನೆ, ಚೆನ್ನಾಗಿ ತಿನ್ನಲು ಸಿಗುವವರೆಗೆ ಇರುತ್ತವೆ ಇಲ್ಲದಿದ್ದರೆ ಇನ್ನೊಂದು ಮನೆ ಅಂಥ ಹೊರಡುತ್ತವೆ, ನಾಯಿ ಹಾಗಲ್ಲ ಒಂದು ರೊಟ್ಟಿ ತುಣುಕು ಹಾಕಿದ್ದರೂ, ಅದಕ್ಕೆ ನಂಬುಗೆ ಯಾವಾಗ್ಲೂ ಇದ್ದೆ ಇರುತ್ತೆ. ಮನೆಗೆ ನಾಯಿಯೊಂದು ಕೂಡ ಬರುತ್ತೆ, ಸೀದಾ ನಮ್ಮ ಮನೆಗೆ ಬರುತ್ತೆ ನೆನಪಿಟ್ಟುಕೊಂಡು, ಅದಕ್ಕೆ ಅಪ್ಪ "ಮಲ್ಲು" ಅಂತ ಹೆಸರಿಟ್ಟಿದ್ದಾರೆ, ಒಂದು ರೊಟ್ಟಿ ಹಾಕಿದ್ರೆ ಕೂತು ಒಂದು ಘಂಟೆ ಮನೆ ಕಾದು ಹೋಗತ್ತೆ, ಮನೇಲಿರೊ ಬೆಕ್ಕು ಹಾಲು ಹಾಕೊವರೆಗೆ ಮಾತ್ರ ಕಾಲ ಕಾಲಲ್ಲಿ ಬರುತ್ತೆ, ಆಮೇಲೆ ಕೈಗೆ ಸಿಕ್ಕರೆ ಕೇಳಿ. ಅಜ್ಜ ಸಾಕಿದ ನಾಯಿ "ಟಿಪ್ಪು" (ಟಿಪ್ಪುಸುಲ್ತಾನ) ಊರಿಗೆ ಪ್ರಸಿದ್ದ, ಅಜ್ಜ ಇರುವರೆಗೆ ಮಾತ್ರ ಮನೇಲಿದ್ದದ್ದು, ಆಮೇಲೆ ಮರಳಲೇ ಇಲ್ಲ, ಹಾಗೆ ನಂಬುಗೆಗೆ ಸಾಕ್ಷಿಯಾಗಿರುವ ಇವೆಲ್ಲ ನನ್ನ ನಾಯಿ ಪ್ರೀತಿ ಇನ್ನಷ್ಟು ಗಟ್ಟಿ ಮಾಡಿದ್ದವು.
"ರೀ ನಾವು ಸಾಕಿದ್ರೆ ಹೇಗೆ" ಅಂದ್ಲು ಇದನ್ನೆಲ್ಲ ಕೇಳಿ, "ಏನು" ಅಂದ್ರೆ "ಬೆಕ್ಕು ಬೇಕು" ಅಂದ್ಲು, "ಬೆಕ್ಕು ಬೇಡ ನಾಯಿ ಆದ್ರೆ ಓಕೇ" ಅಂತ ನಾನು. ಶುರುವಾಯಿತು ಮಾತಿನ ಚಕಮಕಿ... "ಅಮ್ಮ ಸಾಕೀದಾರೆ, ನಂಗೂ ಬೇಕು" ಅಂತ ಇವಳು, "ಅಮ್ಮ ಬೆಕ್ಕು ಸಾಕಿದ್ರೆ, ನಾವು ನಾಯಿ ಸಾಕೊಣ" ಅಂತ ನಾನು. ದೊಡ್ಡ ಕೊಳೀಜಗಳವೇ ಶುರುವಾಯ್ತು. ವಿರೋಧಿ ನಾಮ ಸಂವತ್ಸರ ದೊಡ್ಡ ವಿರೊಧವನ್ನೇ ಸೃಷ್ಟಿಸಿತ್ತು, "ಸಾಕಿದರೆ ನಾಯಿ, ಇಲ್ಲಾಂದ್ರೆ ಇಲ್ಲ" ಅಂತ ನಾನೂ ಪಟ್ಟು ಹಿಡಿದೆ.
"ಲೇ ಚಿಕ್ಕ ನಾಯಿಮರಿ ನಿನ್ನ ಹಿಂದೆ ಹಿಂದೆ ಒಡಾಡುತ್ತಿದ್ರೆ ಊಹಿಸಿಕೊಳ್ಳು ಎಷ್ಟು ಚೆನ್ನಾಗಿರ್ತದೆ ನೋಡು, ಬೆಕ್ಕು ಬರೀ ಹಾಲು, ಇಲ್ಲ ತಿನ್ನಲು ಏನಾದ್ರೂ ಬೇಕೆಂದಾಗ ಮಾತ್ರ ಬರುತ್ತೆ" ಅಂದೆ, "ನೀವಿದೀರಲ್ಲ ಹಿಂದೆ ಹಿಂದೆ ಓಡಾಡೋಕೆ, ಅದ್ಯಾಕೆ ಬೇಕು" ಅಂತಂದ್ಲು, "ರೀ... ಬೆಕ್ಕು ಹಾಗೆ ಮಡಿಲಲ್ಲಿ ಕೂತು, ತಲೆ ಸವರುತ್ತಿದ್ರೆ ಅದು ನಿದ್ದೆ ಹೋಗುತ್ತೆ, ಏನ್ ಚೆನ್ನಾಗಿರತ್ತೆ ಊಹಿಸಿ" ಅಂದ್ಲು "ಅದಕ್ಕೆ ಬೆಕ್ಕೇ ಯಾಕೆ ಬೇಕು ನನ್ನ ತಲೇನೆ ಸವರು ನಿದ್ದೆ ಹೋಗ್ತೀನಿ" ಅಂದೆ. ಫೋನು ಮಾಡಿ ಅಮ್ಮನ ಸಲಹೆ ಕೇಳಿದ್ಲು, ಅಮ್ಮ ಇವಳ ಸಪೊರ್ಟಿಗೆ ಬಂದ್ಲು, "ನಾಯಿ ಅಂದ್ರೆ ನ್ಯಾಯ" ತಿಳಿಸಿ ಹೇಳು ಅಂತ ಅಮ್ಮ. "ಅಲ್ಲ ನಾಯಿ ಅಂದ್ರೆ ನಂಬುಗೆ" ಅಂತ ನಾನು, "ಯಾರನ್ನಾದ್ರೂ ಕಚ್ಚಿದ್ರೆ" ಅಂದ್ರೆ, "ಕಚ್ಚೊ ನಾಯಿ ಬೇಡ, ಬೊಗಳೊ ನಾಯಿ ತರೋಣ" ಅಂತಂದೆ, "ರಾತ್ರಿಯೆಲ್ಲ ಬೊಗಳುತ್ತೆ, ನಿದ್ದೆ ಹೇಗೆ" ಅಂತ ಇವಳು ವಾದಕ್ಕಿಳಿದ್ಲು, ಹೌದಲ್ವ ರಾತ್ರಿ ಬೊಗಳತ್ತೆ ಅದೊಂದು ಪ್ರಾಬ್ಲ್‌ಂ... ಆದರೆ ಸೋಲೊ ಹಾಗಿಲ್ಲ "ಬೆಕ್ಕು ರಾತ್ರಿಯೆಲ್ಲ ಅಲ್ಲಿ ಇಲ್ಲಿ ಇಲಿ ಸಿಗುತ್ತೇನೊ ಅಂತ ಹುಡುಕಾಡತ್ತೆ, ಮನೇಲೇ ಸಾಮಾನು ಚೆಲ್ಲಾಪಿಲ್ಲಿಯಾಗತ್ತೆ" ಅಂತ ನಾನು, "ಅದೂ ಸರಿ ಸ್ವಲ್ಪ ಅಡ್ಜಸ್ಟ ಮಾಡ್ಕೊಬೇಕಪ್ಪ" ಅಂದ್ಲು ನಾನೂ "ನಾಯಿ ಬೊಗಳಿದ್ರೆ, ಸ್ವಲ್ಪ ಅಡ್ಜಸ್ಟ ಮಾಡ್ಕೊಬೇಕಪ್ಪ" ಅಂದೆ.
ಇದು ಮುಗಿಯದ ವಿವಾದ, ನಾಯಿ ಕಚ್ಚತ್ತೆ ಅಂದ್ರೆ ಬೆಕ್ಕು ಪರಚತ್ತೆ, ಹೀಗೆ ಆಯ್ತು... ಮಧ್ಯಾನದ ಹೊತ್ತಿಗೆ ಹೊಟ್ಟೆ ಹಸಿಯಿತು, ಅವಳೊ ಧರಣಿಗಿಳಿದಳು, ಬೆಕ್ಕಿನಂತೆ ಏನೊ ಸ್ವಲ್ಪ ತಿಂದು ಸುಮ್ಮನಾದ್ಲು, ನನಗೊ ನಾಯಿಯಂತೆ ಬ್ರೆಡ್ಡು ಬಿಸ್ಕಿಟ್ಟೆ ಗತಿಯಾಗುತ್ತೆ ಅನ್ನಿಸಿತು. ನಾನೂ ಯೋಚಿಸಿದೆ ಈ ನಾಯಿ ಸಾಕಿದ್ರೆ, ಬೊಗಳತ್ತೆ, ಕಚ್ಚಬಹುದು, ನಂಬುಗೆ ಪ್ರಾಣಿ, ಆದ್ರೆ ಊರಿಗೆ ಹೊರಟ್ರೆ ಎಲ್ಲಿ ಬಿಟ್ಟು ಹೋಗೋದು, ಬೆಕ್ಕಾದ್ರೆ ಮನೇಲಿರತ್ತೆ, ಮತ್ತೊಬ್ಬರಲ್ಲಿ ಕೊಟ್ಟು ಹೋದ್ರೂ ಇಟ್ಕೊತಾರೆ, ಬೊಗಳಲ್ಲ, ಕಚ್ಚೊದು ಕಮ್ಮಿ ತನ್ನ ಪಾಡಿಗೆ ತಾನಿರತ್ತೆ.
ಅವಳೂ ಯೋಚಿಸಿರಬೇಕು... ನಾಯಿ ಹಾಗೆ ಬೆಕ್ಕು ನಂಬಿಕೆಗೆ ಅರ್ಹವಲ್ಲ, ಹಾಲು ಎಲ್ಲ ಕದ್ದು ಕುಡಿಯತ್ತೆ, ನಾಯಿ ಹಾಕೊವರೆಗೆ ಸುಮ್ನೆ ಕೂತಿರತ್ತೆ ಆದ್ರೆ ದ್ರೊಹ ಮಾಡಲ್ಲ, ಮನೆ ಬೇರೆ ಕಾಯುತ್ತೆ, ನಾನೂ ಒಬ್ಳೆ ಇರ್ತೀನಿ ಜತೆಗೆ ಒಳ್ಳೆ ಸೆಕ್ಯೂರಿಟಿ ಆದ ಹಾಗಾಗುತ್ತೆ, ಬೆಕ್ಕು ಮನೇಲಿ ಒಂದು ಗಾಜಿನ ಸಾಮಾನೂ ಉಳಿಸಲಿಕ್ಕಿಲ್ಲ ಅಂತ.
ಸಂಜೆಗೆ ಮತ್ತೆ ಸಭೆ ಸೇರಿದಂತಿತ್ತು, "ರೀ" ಅಂದ್ಲು ಮೆಲ್ಲಗೆ ಬೆಕ್ಕು "ಮ್ಯಾಂ" ಅಂದ ಹಾಗೆ. "ಹೂಂ" ಅಂದೆ ನಾಯಿ "ಗುರ್‌ರ್" ಅಂದ ಹಾಗೆ, "ಟೀ, ಬೇಕಾ" ಅಂದ್ಲು, "ನಿನ್ನ ಬೆಕ್ಕಿಗೆ ಹಾಲು ಹಾಕಲು ಬೇಕಲ್ಲ, ನಮಗೆಲ್ಲಿ ಇನ್ನು ಟೀ ಸಿಗೊದು" ಅಂದೆ, ಟೀ ಮಾಡಿ ಜತೆಗೆ ಬಿಸ್ಕಿಟ್ಟು ತಂದಿಟ್ಟು "ನಾಯಿ ಬಿಸ್ಕಿಟ್ಟೇನಲ್ಲ ತುಗೊಳ್ಳಿ" ಅಂದ್ಲು. ಮೆಲ್ಲಗೆ ಒಂದೊಂದು ಬಿಸ್ಕಿಟ್ಟು ಚಹದಲ್ಲಿ ಅದ್ದಿ ತಿನ್ನುತ್ತ "ಅಮ್ಮನಿಗೇ ಹೇಳು, ಬೆಕ್ಕಿನ ಮರಿಯೊಂದನ್ನ ಕಳಿಸೊಕೇ!!!" ಅಂದೆ ನಾ ರಾಜಿಯಾಗಿದ್ದೆ... ಅವಳು ಎನ್ ಬೇಡ "ನಾಯಿಮರಿ ತುಗೊಂಬನ್ನಿ, ಯಾವುದಾದ್ರೂ ಒಳ್ಳೆ ಜಾತೀದು" ಅಂದ್ಲು, ಅಯ್ಯೋ ಇದೊಳ್ಳೆ ಕಥೆಯಾಯ್ತಲ್ಲ, ಇಷ್ಟೊತ್ತು ಬೆಕ್ಕು ಅಂತಿದ್ದವಳು ಈಗ ನಾಯಿ ಅಂತೀದಾಳೇ, ನಾನೋ ನಾಯಿ ಬಿಟ್ಟು ಬೆಕ್ಕಿಗೆ ಸೈ ಅಂದರೆ.
"ನೀನೇನು ನನಗಾಗಿ ತ್ಯಾಗ ಮಾಡಬೇಕಿಲ್ಲ, ಬೆಕ್ಕೆ ತರೋಣ ಬಿಡು" ಅಂದ್ರೆ, ನಾಯಿಮರಿ ಅಂತ ಹಠಕ್ಕಿಳಿದಳು, ಮತ್ತೆ ವಾದ ವಿವಾದವಾಯ್ತು, ಇಬ್ಬರ ನಿಲುವುಗಳು ಈ ಸಾರಿ ಅದಲು ಬದಲಾಗಿದ್ದವು. ಮಾವನಿಗೆ ಫೋನು ಮಾಡಿ ಕೇಳಿದ್ರೆ, "ನಾಯಿ ಬೆಕ್ಕು ಎನ್ ಸಾಕ್ತೀರ, ಎರಡು ಕೊಳೀನೊ ಎಮ್ಮೇನೊ ಸಾಕಿ, ಮೊಟ್ಟೆ, ಹಾಲಾದ್ರೂ ಆದೀತು" ಅಂದ. ಇವಳು ಸಗಣಿ ಬಳಿಯೋದು, ಹಾಲು ಕರೆಯಲು ಹೋಗಿ ಒದೆಸಿಕೊಳ್ಳೊದು... ನಾ ಕೊಳಿ ಹಿಡಿಯಲು ಒಡಾಡೊದು, ಹಿಡಿದು ಕುಕ್ಕಿಸಿಕೊಳ್ಳೊದು... ಊಹಿಸಿಯೇ ನಗು ಬಂತು. ಅದ ಕೇಳಿ, ಅವಳು "ಬೆಳ್ಳಿ ಮೂಡಿತೊ ಕೋಳಿ ಕೂಗಿತೊ" ಅಂತ ಹಾಡಿ ನಕ್ಕರೆ, "ಎಮ್ಮೇ ನಿನಗೆ ಸಾಟಿ ಯಾರು, ಅರೆ ಹೊಯ್‌ಂ ಅರೆ ಹೊಯ್‌ಂ..." ಅಂತನ್ನುತ್ತ ಬಿದ್ದುಬಿದ್ದು ನಕ್ಕೆ.
ಕೊನೆಗೆ "ಎರಡೂ ಸಾಕಿದರೆ ಹೇಗೆ" ಅಂತಂದೆ... "ಎಮ್ಮೆ ಕೊಳೀನಾ" ಅಂದ್ಲು, ದುರುಗುಟ್ಟಿ "ನಾಯಿ ಬೆಕ್ಕು" ಅಂದೆ... "ರೀ ಒಂದಕ್ಕೊಂದು ಕಚ್ಚಾಡಿದರೆ, ಈಗ ನಾವೇ ಇಲ್ವಾ ನಾಯಿ ಬೆಕ್ಕು ಅಂತ ಆಗಿಂದ ಕಾದಾಡುತ್ತಿದ್ದೇವೆ, ಇನ್ನು ಅವೆರಡೂ ಸೇರಿದ್ರೆ ಮುಗೀತು" ಅಂದ್ಲು. "ಎಲ್ಲ ಜತೆಯಾಗಿರ್ತವೆ ಎನಾಗಲ್ಲ" ಅಂದೆ. "ಹಾಗೆ ಎಮ್ಮೆ ಕೊಳೀನೂ ಸಾಕಿ ಚೆನ್ನಾಗಿರತ್ತೆ" ಅಂದ್ಲು, "ಏನ್ ಮನೇನಾ ಪ್ರಾಣಿ ಸಂಗ್ರಹಾಲಯ ಮಾಡ್ಬೇಕು ಅಂತೀದೀಯ, ಎಲ್ಲ ಸಾಕಿ" ಅಂತ ರೇಗಿದೆ.
ಹಾಗೂ ಹೀಗೂ ಮಾತಿನಲ್ಲೇ ರಾತ್ರಿಯಾಯ್ತು, ಬೆಕ್ಕಿನಂತೆ ಮಡಿಲಲ್ಲಿ ಬಿದ್ದುಕೊಂಡು ಮಾತಾಡುತ್ತಿದ್ಲು, ತಲೆ ಸವರುತ್ತಿದ್ದೆ, "ಲೇ ಹುಲಿ ಸಾಕಿದ್ರೆ ಹೇಗೆ' ಅಂದೆ, ಹೆದರಿ ಬಾಚಿ ತಬ್ಬಿಕೊಂಡ್ಲು ಗಟ್ಟಿಯಾಗಿ, "ಸಿಂಹ ಸಾಕಿದ್ರೆ" ಅಂದೆ, "ಏನ್ ಹೆದರಿಸಿದ್ರೂ ಅಷ್ಟೇ, ಇನ್ನೂ ಗಟ್ಟಿಯಾಗಿ ತಬ್ಬಿಕೊಳ್ಳೊದು ಏನ ಸಾಧ್ಯ ಇಲ್ಲ", ಅಂದ್ಲು ಹೆದರಿಸಿದ್ರೆ ಇನ್ನೂ ಗಟ್ಟಿ ತಬ್ಬಿಕೊಳ್ಳುವಳೆಂದು ಮಾಡಿದ್ದೆ!.. "ಹೂಂ ಮತ್ತೆ ಎನ್ ಸಾಕೊದು ತೀರ್ಮಾನ ಆಯ್ತು" ಅಂದೆ, 'ಕೊಳೀನೂ ಬೇಡ ಕುರೀನೂ ಬೇಡ" ಅಂದ್ಲು.. "ಕುರೀ ಬಗ್ಗೆ ಇನ್ನೂ ನಾವು ಮಾತಾಡಿಲ್ಲ" ಅಂದೆ, "ರೀ ಸಾಕು, ಯಾವ ಪ್ರಾಣಿನೂ ಬೇಡ ನಾವೇ ಇಬ್ಬರು ಇದೀವಲ್ಲ" ಅಂದ್ಲು "ಅದೇ ನಾಯಿಮರಿ ಹಾಗೆ ನಿನ್ನ ಹಿಂದ್‌ಹಿಂದೆ ಸುತ್ತಲು, ಕಚ್ಚಲು" ನಾನಿದೀನಲ್ಲ ಅಂತ ಗಲ್ಲ ಕಚ್ಚಿದೆ, ಚೀರಿ "ನಾನೂ ಇದೀನಲ್ಲ, ಬೆಕ್ಕಿನ ಹಾಗೆ ಪರಚಲು" ಅಂತ ತನ್ನ ಇಷ್ಟುದ್ದ ಉಗುರು ತೋರಿಸಿದಳು... ಅಲ್ಲಿಂದ ಓಟಕ್ಕಿತ್ತೆ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/naayi-bekku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು