ಅದೋ ಎಲ್ಲೊ ಅಪರೂಪಕ್ಕೆ ಸಿಕ್ಕಿತ್ತು, ನೀಟಾಗಿ ಟಾರು ಹಾಕಿ, ಗುಂಡಿಗಳಿಲ್ಲದಂತೆ ನಿರ್ವಹಿಸಿರುವ ಒಂದು ಉದ್ದ ನೇರ ರೋಡು, ಯಾರೂ ಇಲ್ಲ ಕೂಡ, ಮುಂಜಾನೆ ಏಳಕ್ಕೆ ಯಾರಿರುತ್ತಾರೆ ಹೇಳಿ, ಅರವತ್ತು ಎಪ್ಪತ್ತು ಸ್ಪೀಡಿನಲ್ಲಿ ಹೋಗುತ್ತಿದ್ದೆ ಅಗಾಗ ಎಂಬತ್ತು ಕಿಲೊ ಮೀಟರೂ ಮುಟ್ಟಿರಬಹುದು, ಅದಕ್ಕಿಂತ ಜಾಸ್ತಿ ಹೋದರೆ ಇವಳು ಉಸಿರುಗಟ್ಟುವಂತೆ ಗಟ್ಟಿಯಾಗಿ ಅಪ್ಪಿಕೊಂಡು ನಿಧಾನ ಅಂತಾಳೆ. ಭಾನುವಾರ ಆದರೂ ಸ್ವಲ್ಪ ಏನೊ ಕೆಲಸ ಇತ್ತು ಅಂತ ಆಫೀಸಿಗೆ ಹೊರಟಿದ್ದೆ, ಇತ್ತೀಚೆಗೆ ನನ್ನ ಹಸಿರು ಕಾನನದೂರಿನಿಂದ ಕಥೆ ಕೇಳಿದಾಗಿನಿಂದ ಕೆಲಸಕ್ಕೆ ಹೋಗಲು ಅವಳು ಬೇಡವೆನ್ನುವುದಿಲ್ಲ, ಮನೆಯಲ್ಲಿ ಕೂತಿದ್ದರೆ ಕೆಲಸದ ನಡುವೆಯೇನಾಗುತ್ತದೆಂದೂ ಅವಳಿಗೆ ಗೊತ್ತು, ಇವಳು ಒಬ್ಬಳೆ ಮನೆಯಲ್ಲಿ ಕೂತು ಏನು ಮಾಡಲಿ ನನ್ನ ಗೆಳತಿಯ ಮನೆಗೆ ಬಿಡಿ ಅಂತಂದಿದ್ದಕ್ಕೆ ಆಕಡೆ ಬೆಳೆದಿತ್ತು ಪ್ರಯಾಣ. ಮನೆಯಿಂದ ಹೊರಡುವಾಗಲೇ ಹೇಳಿದ್ದೆ ನನಗೆ ದಾರಿ ಗೊತ್ತಿಲ್ಲ ನೀ ಹೇಳುತ್ತ ಹೋದರೆ ಸರಿ ಅಂತ, ಅವಳೀಗೂ ಗೊತ್ತು ನನಗೆಷ್ಟು ದಾರಿಗಳು ನೆನಪಿರುತ್ತವೆ ಅಂತ. "ಇಲ್ಲಿ ಎಡಕ್ಕೆ, ಅಲ್ಲಿ ರೈಟು.." ಅಂತ ಹೇಳುತ್ತಲೇ ಇದ್ದಳು, ಈ ರೋಡು ಭಾರಿ ನೇರ ಇದೆ, ತಿರುವುಗಳೆಲ್ಲೂ ಹತ್ತಿರದಲ್ಲಿಲ್ಲ ಅಂತ ಭಲೇ ಜೊರಿನಲ್ಲೇ ಆಕ್ಸಲರೇಟರ್ ತಿರುವುತ್ತಿದ್ದೆ, ಒಮ್ಮೆಲೆ ಹಿಂದಿನಿಂದ ಚೀರಿದ್ಲು, "ರೀ ಇಲ್ಲೇ ಲೆಫ್ಟ್ ತುಗೊಳ್ಳಿ" ಅಂತ. ಆಗೇನಾದ್ರೂ ನಾ ಎಡಕ್ಕೆ ತಿರುವಿದ್ದರೆ, ನಾವಿಬ್ಬರೂ ಎಡಕ್ಕೆ ಹೋಗದೆ ಮೇಲಕ್ಕೆ ಹೋಗಿರ್ತಿದ್ವಿ!. ಅಲ್ಲೇ ದಾರಿ ತಪ್ಪಿದ್ದು...
ಹೀಗೆ ಎಷ್ಟು ಸಾರಿ ಆಗಿಲ್ಲ, ಇದೇ ಮೊದಲ ಬಾರಿಯೇನಲ್ಲ. ಇಂದು ಕೆಲಸವಿದೆ ಹೊರಡಬೇಕು ಅಂತಿದ್ದಂಗೆ "ನನ್ನ ಗೆಳತಿಯ ಮನೆಗೆ ಬಿಡಿ" ಅಂದ್ಲು, "ಒಹ್ ಗೆಳತೀನಾ, ಯಾರು ನಂಗೆ ಗೊತ್ತೇ ಇಲ್ಲ! ನೊಡೋಕೆ ಹೇಗಿದಾಳೆ" ಅಂದ್ರೆ ಅಸಂಭದ್ದ ಉತ್ತರ ಬಂತು "ಮದುವೆಯಾಗಿದೆ ಅವಳಿಗೆ" ಅಂತ "ನಾನೆಲ್ಲೆ ಮದುವೆ ಬಗ್ಗೆ ಕೇಳಿದ್ದು" ಅಂದ್ರೆ "ಗೊತ್ತಿದ್ರೆ ಒಳ್ಳೇದು ಅಂತ ಹೇಳಿದೆ" ಅಂದ್ಲು. "ರೀ ಸ್ನಾನ ಮುಗಿಸಿ ಬೇಗ ರೆಡಿಯಾಗಿ, ಏನು ಬಹಳ ಠೀಕು ಠಾಕು ಮೇಕಪ್ಪು ಎಲ್ಲ ಬೇಕಿಲ್ಲ, ನನ್ನ ಅಲ್ಲಿ ಡ್ರಾಪ್ ಮಾಡಿ ಜಾಗ ಖಾಲಿ ಮಾಡಬೇಕು ಅವಳ ಮನೆಗೆ ಏನೂ ನಿಮ್ಮನ್ನ ಕರೆದುಕೊಂಡು ಹೋಗಲ್ಲ" ಅಂತಂದ್ಲು, ಸ್ನಾನ ಮಾಡುತ್ತಿದ್ದವನು ಮೊದಲೇ ನೆನೆದಿದ್ದೆ, ಆಸೆಗೆ ಇನ್ನಷ್ಟು ತಣ್ಣಿರು ಎರಚಿದಂತಾಯ್ತು. "ಲೇ ಪಕ್ಕದ ಮನೆ ಪದ್ದುಗೆ ಮದುವೆ ಆಗಿಲ್ವ! ಅವಳ ಪರಿಚಯ ಮಾಡಿಸಿದ್ದು ನೀನೇ ಅಲ್ವಾ.. ನಿನ್ನ ಫ್ರೆಂಡು ನಂಗೆ ಪರಿಚಯ ಮಾಡಿಸಲ್ವಾ" ಅಂತೆಲ್ಲ ಗೊಗರೆದರೂ ಅವಳೇನು ಜಪ್ಪಯ್ಯ ಅನಲಿಲ್ಲ. ಹಾಗೂ ಹೀಗೂ ರೆಡಿ ಆದಾಗ ಮುಂಜಾನೆ ಏಳು ಆಗಲೇ ಹೊರಟಿದ್ದೇ ಹೀಗೆ ದಾರಿ ತಪ್ಪಿದರೂ ಸರಿ ಸಮಯಕ್ಕೆ ತಲುಪಬಹುದೆಂದು.. ಸರಿ ದಾರಿ ಗೊತ್ತಿದ್ದರೆ ಒಂದು ಘಂಟೆ ಸಾಕು, ನನ್ನ ಸ್ಪೀಡು, ದಾರಿಯ ಪ್ರತಾಪಗಳಿಂದಾಗಿ ಎಲ್ಲೇ ಹೊರಟರೂ ಬಹಳ ಮುಂಚಿತವಾಗಿಯೇ ಮನೆ ಬಿಡುವುದು ಇಂದು ಕೂಡ ಹಾಗೇ, ಅದೊ ರಿಂಗ್ ರೊಡು, ರೇಸು ಕೊರ್ಸಿನಲ್ಲಿ ಕುದುರೆ ಓಡಲು ಮಾಡಿದ ರಿಂಗನಂತೆ, ತಿರುವುಗಳು ಬಲು ಕಡಿಮೆ ಇಲ್ಲಿ ತಪ್ಪಿದರೆ ಮೈಲು ದೂರ ಹೋಗಿ ತಿರುಗಿ ಬರಬೇಕು. ಇವಳು ಸ್ಪೀಡಿನಲ್ಲಿರುವಾಗ ತಿರುವು ಅಂದ್ರೆ?.. ಅದಕ್ಕೇ ಹಾಗೆ ನೇರ ಮುಂದೆ ಬಂದೆ "ಮೊದಲೇ ಹೇಳೊಕೇನಾಗಿತ್ತು" ಅಂತ ತಿರುಗಿದೆ, "ಮೊದಲೇ ಹೇಳಿದರೆ ತಿರುವಿಲ್ಲದಲ್ಲಿಯೂ ತಿರುಗಿ ಬಿಡ್ತೀರ" ಅಂದ್ಲು. "ಈಗ ತಿರುಗಿದ್ದರೆ ಅಷ್ಟೆ ಮತ್ತೆ ಒಬ್ಬರೊನ್ನೊಬ್ಬರು ತಿರುಗಿ ನೋಡುತ್ತಿರಲಿಲ್ಲ, ಮೇಲೆ ಸ್ವರ್ಗ ಲೋಕದಲ್ಲಿ ಡ್ಯೂಯೆಟ್ಟು ಹಾಡಬೇಕಾಗುತ್ತಿತ್ತು" ಅಂದೆ, "ಅಷ್ಟು ಜೊರಾಗಿ ಹೋಗುವ ಅವಶ್ಯಕತೆಯೇನಿತ್ತು? ಮೊದಲೇ ರಿಂಗ್ ರೋಡು ಇಲ್ಲಿ ನಿಮ್ಮ ನೊಡೋಕೆ ಯಾರು ಹುಡುಗೀರು ಇರ್ತಾರೆ ಅದೂ ಇಷ್ಟೊತ್ತಿನಲ್ಲಿ, ಸ್ಟೈಲ್ ಮಾಡೊದೇ ಆಯ್ತು" ಅಂತ ತಿರುಗಿ ಬಿದ್ದಳು. "ಇಲ್ಲ ನಿನ್ನ ಬೇಗ ಬಿಟ್ಟು ಆಫೀಸಿಗೆ ಬೇಗ ಹೋದರಾಯಿತೆಂದು" ಅಂತ ಏನೊ ಸಮಜಾಯಿಸಿ ಹೇಳುತ್ತಿದ್ದರೆ "ಅಲ್ಲಿ ಆ ಸ್ಕೂಟಿ ಹಿಂದೆ ಹಾಕಿದ್ಯಾರು, ನಂಗೊತ್ತಿಲ್ವ" ಅಂದ್ಲು, ಸುಮ್ಮನಾದೆ, ಹೆಚ್ಚು ಮಾತಾಡಿದರೆ ನನಗೇ ಸಮಸ್ಯೆಯೆಂದು. ಮೈಲು ದೂರ ಹೋದ ಮೇಲೇ ಸಿಕ್ಕಿದ್ದು ಒಂದು ಯು ಟರ್ನ, ಅಲ್ಲಿಂದ ತಿರುಗಿ ಬಂದು ಅವಳ ಗೆಳತಿಯ ಮನೆಗೆ ಬಿಟ್ಟು ಆಫೀಸಿಗೆ ಹೊರಟೆ.
ದಾರಿ ತಪ್ಪೋದು ಎಲ್ಲರಿಂದ ಬೈಸಿಕೊಳ್ಳೊದು ನನಗೆ ಮಾಮೂಲು, ಅದೇನೊ ನನಗೆ ನೆನಪೇ ಉಳಿಯುವುದಿಲ್ಲ, ನಾ ಆಫೀಸಿಗೆ ದಿನಾ ದಾರಿ ತಪ್ಪದೇ ಹೋಗಿ ಬರೋದೆ ನನ್ನವಳ ಪಾಲಿಗೆ ನನ್ನ ದೊಡ್ಡ ಸಾಧನೆ. ಅಫೀಸಿನಲ್ಲಿಯೊಬ್ಬರು ಕೊಲೀಗು ಇದ್ದಾರೆ ಬೆಂಗಳೂರಿನ ಇಂಚು ಇಂಚು ಗೊತ್ತು, ಅದ ಬಿಡಿ ಬುಲೆಟ್ಟು ತೆಗೆದುಕೊಂಡು ವಿಕಿಮ್ಯಾಪಿಯಾದಲ್ಲಿ ದಾರಿ ನೋಡಿಕೊಂಡು ಅದೊಂದು ದಿನ ಜಮ್ಮು ಕಾಶ್ಮೀರ, ಕಾರ್ಗಿಲ್ಲಿಗೆ ಹೊರಟು ನಿಂತದ್ದು, ನಾನೆಲ್ಲಿ ಈ ಆಸಾಮಿ ದಾರಿ ತಪ್ಪಿ ಎಲ್ಲೊ ಹೋಗಿ ಸೇರುತ್ತೊ, ಇಲ್ಲ ಇಡೀ ಭಾರತ ಸುತ್ತಿ ಬರುತ್ತೊ ಅಂದಿದ್ದರೆ, ಸರಿಯಾಗಿ ಹೋಗಿ ಬಂದಿದ್ದಲ್ಲದೇ ಮತ್ತೆ ಹೋಗುವವರಿಗೆ ಇಲ್ಲೇ ಕುಳಿತು ದಾರಿ ಹೇಳುತ್ತಿರುತ್ತಾರೆ, ಅಂಥವರ ನಡುವೆ ನಾನೊಬ್ಬ, ಅವರೊಬ್ರೆ ಅಲ್ಲ ಹೆಂಡತಿಯನ್ನೂ ಕರೆದುಕೊಂಡು ಇನ್ನೂ ನಕ್ಷೆಯಲ್ಲಿ ದಾಖಲಾಗಿರದ ಎಷ್ಟೋ ಊರೂರು ಸುತ್ತಿ ಬರುತ್ತಾರೆ. ಅವರ ಸ್ಪೂರ್ಥಿಯಿಂದ ನಾನೂ ಒಮ್ಮೆ ಇವಳ ಕರೆದುಕೊಂಡು ನಮ್ಮೂರಿಗೆ ನನ್ನ ಗಾಡಿಯಲ್ಲಿ ಹೋಗಿ ಬರೋಣ ಅಂತಿದ್ದೆ, "ರೀ ನನಗಿನ್ನೊ ತೀರ್ಥಯಾತ್ರೆ ಮಾಡುವಷ್ಟು ವಯಸ್ಸಾಗಿಲ್ಲ" ಅಂತ ಆಡಿಕೊಂಡಿದ್ದಳು. "ಈ ವಿದೇಶಗಳಲ್ಲಿನ ಹಾಗೆ ಅದೇ ಕಾರಿನಲ್ಲಿ ಕೂರಿಸಿರುತ್ತಾರಲ್ಲ ಮ್ಯಾಪ್ ಹಾಗೆ ಇಲ್ಲೂ ಜೀ.ಪಿ.ಎಸ್ ಇದ್ದಿದ್ರೆ, ನಾನೆಲ್ಲಿದ್ರೂ ಎಲ್ಲಿ ಬೇಕಾದ್ರೂ ಹೋಗಬಹುದಿತ್ತು ಅದೂ ದಾರಿ ತಪ್ಪದೇ" ಅಂದರೆ "ನೀವೆಲ್ಲೊ ಫಾರಿನನಲ್ಲೇ ಹುಟ್ಟಬೇಕಾದವರು ದಾರಿ ತಪ್ಪಿ ಇಲ್ಲಿ ಬಂದು ಹುಟ್ಟೀದೀರಾ" ಅಂತ ಅಲ್ಲೂ ದಾರಿ ತಪ್ಪಿದವನಾಗಿಸಿಬಿಟ್ಟಳು. (ಜೀ.ಪಿ.ಎಸ್ ಈಗ ಭಾರತದಲ್ಲೂ ಬಂದಿವೆ, ಇನ್ನೂ ಬಹಳ ಚಾಲ್ತಿಯಲ್ಲಿಲ್ಲ) ನನ್ನ ದಾರಿ ತಪ್ಪುವ ಲೀಲೆಗಳೇ ಹಾಗೆ.
ಅದೊಂದು ದಿನ, ದಾರಿಯಲ್ಲಿ ಸಿಕ್ಕ ಸ್ಕೂಟಿ ಬೆನ್ನತ್ತಿ, ಅದೆಲ್ಲೋ ಮಾರಥಹಳ್ಳಿಯ ಮೂಲೆಗೆ ಹೋಗಿ ತಲುಪಿದ್ದೆ, ತಿರುಗಿ ಬರಲು ದಾರಿಯೆಲ್ಲಿ ಗೊತ್ತು, ಕೊಲೀಗಿಗೆ ಫೋನು ಮಾಡಿದ್ರೆ "ಹಾಗೆ ಅಲ್ಲೇ ಮಣ್ಣ ದಾರಿಯಲ್ಲಿ ಮುಂದೆ ಬಂದ್ರೆ ಅಲ್ಲೊಂದು ಪಾನ ಶಾಪ್ ಬರುತ್ತೆ, ನಾಲ್ಕಾರು ಜನ ನಿಂತಿರ್ತಾರೆ ಅಲ್ಲಿ ಕಾರ್ನರಿನಲ್ಲಿ ಟೆಲಿಫೊನು ಬೂತು ಕಾಣುತ್ತದೆ, ಅಲ್ಲಿ ಲೆಫ್ಟ ತುಗೊಂಡು ಮುಂದೆ ಬಂದ್ರೆ ಟಾರು ರೋಡು, ಲೇಡೀಸ ಹಾಸ್ಟೆಲ್ ಇದೆ, ಅಲ್ಲಿ ಅವರ ನೋಡುತ್ತ ನಿಲ್ಬೇಡ, ಅಲ್ಲಿ ರೈಟು.. ಮುಂದೆ ಇದೆ ಸಿಗ್ನಲ್ಲು ಅಲ್ಲಿಂದ ನೇರ ಬಂದ್ರೆ ದೊಮ್ಮಲೂರು" ಅಂತ ಹೇಳಿದ್ದು ಇನ್ನೂ ಕೇಳಿದ್ದರೆ ದಾರಿಯಲ್ಲಿ ಬರುವ ಗುಂಡಿ, ರಸ್ತೆತಡೆ, ಎಲ್ಲ ಹೇಳಿರೋರು. ಆದರೂ ಹಾಸ್ಟೆಲ್ಲಿನ ಹತ್ತಿರ ಒಂದು ಸ್ಟಾಪು ಹಾಕಿ, ಲೆಫ್ಟು ಬಂದು ದಾರಿ ತಪ್ಪಿ ಮತ್ತೆ ಫೋನು ಮಾಡಿ ದಾರಿ ಕೇಳಿ ಬಂದು ತಲುಪಿದ್ದು. ಎಷ್ಟೊ ಜನರಿಗೆ ದಾರಿ ತೋರಿದರೂ ನನಗೆ ಮಾತ್ರ ಸರಿ ದಾರಿ ನೆನಪಿಟ್ಟು ಬರುವುದು ಹೇಳಿಕೊಡಲಾಗಿಲ್ಲ... ಆ ಮಟ್ಟಿಗೆ ಇದೆ ನನ್ನ ಇಮೇಜು, ಎಲ್ಲಿ ಹೋಗಬೇಕಾದರೂ, ಯಾರಾದರೂ ದಾರಿ ಹೇಳುತ್ತ ಮೂರಕ್ಕಿಂತ ಹೆಚ್ಚು ಲೆಫ್ಟು ರೈಟು ಹೇಳಿದರೆ, ಹಲ್ಲು ಕಿರಿಯುತ್ತೇನೆ, ಒಂದೊ ದಾರಿ ಗೊತ್ತಿರುವವರೊ ನನ್ನ ಜತೆಗೆ ಬರುತ್ತಾರೆ ಇಲ್ಲ, ಯಾರನ್ನಾದರೂ ನಾ ಹಿಂಬಾಲಿಸಬೇಕು.
ಹಿಂಬಾಲಿಸಿಯಾದರೂ ಸರಿಯಾಗಿ ಬಂದು ತಲುಪುತ್ತೀನಾ ಅದೂ ಇಲ್ಲ, ಮೊನ್ನೆ ಅದೊಂದು ಹೊಟೇಲಿಗೆ ಹೋಗಬೇಕಿತ್ತು, ಹಿಂಬಾಲಿಸುತ್ತ ಹೊರಟವ, ನಡುವೆ ಲಾರಿಯೊಂದು ಬಂದು ಅವರೆಲ್ಲೋ ಮುಂದೆ ಹೋಗಿರಬಹುದೆಂದು, ಓಡಿಸಿದ್ದೇ ಓಡಿಸಿದ್ದು ಆಮೇಲೆ ಮತ್ತೆ ಮಾಮೂಲು ಯು ಟರ್ನ... ಲಾರಿ ಪಕ್ಕದಲ್ಲೇ ಹೊಟೇಲು ಇತ್ತು ಅವರು ಅಲ್ಲೇ ನಿಲ್ಲಿಸಿದ್ದರು, ನಾ ಮುಂದೆ ಹೋಗಿರುವರೆಂದು, ಹುಡುಕಿದ್ದೇ ಹುಡುಕಿದ್ದು... ಮತ್ತೆ ಯಾರನ್ನೊ ಕೇಳಿದೆ ಅವನೊ ಎಡಕ್ಕೆ ಕೈ ತೊರಿಸುತ್ತಾನೆ ರೈಟು ಟರ್ನು ಅಂತಾನೆ, ಮೊದಲೇ ಗೊಂದಲಕ್ಕೀಡಾದವ ಇನ್ನಷ್ಟು ಗೊಂದಲ... ಆದರೂ ಬೆಂಗಳೂರಿನಲ್ಲಿ ಅದೊಂದು ಒಳ್ಳೆಯದು, ಯಾರು ಕೇಳಿದರೂ ಬೇಜಾರಿಲ್ಲದೆ ದಾರಿ ಹೇಳುತ್ತಾರೆ, ಗೊತ್ತಿಲ್ಲದಿದ್ದರೆ ಪಕ್ಕದವರನ್ನು ಕೇಳಿಯಾದರೂ ಸರಿ. ಎಷ್ಟೋ ಸಾರಿ ನಾ ಹೋಗಬೇಕಾದ ಸ್ಠಳದವರೆಗೂ ಬಂದು ಬಿಟ್ಟೂ ಹೋಗಿದ್ದಾರೆ. ಹಾಗೆ ದಾರಿ ಕೇಳುತ್ತ ಎಲ್ಲರೂ ಊಟ ಮುಗಿಸಿ ಕೈ ತೊಳೆಯುವ ಮುಂಚೆ ಅಲ್ಲಿ ಹೊಟೇಲಿಗೆ ತಲುಪಿದ್ದೆ.
ಇನ್ನೊಂದು ದಿನ ಇವಳ ಎಂ ಜೀ ರೋಡಿಗೆ ಕರೆದುಕೊಂಡು ಹೊರಟಿದ್ದೆ, ಅದ್ಯಾವುದೋ ಸೇಲು ಬಂದಿದೆ ಅಂತ, ದಾರಿ ಗೊತ್ತಿತ್ತು, ಸೇಲು ಎಲ್ಲಿದೆ ಗೊತ್ತಿರಲಿಲ್ಲ, ಎಡಕ್ಕೆ ಗಾಡಿಗಳ ನಡುವೆ ಸಿಲುಕಿರುವಾಗ ಇವಳಿಗೆ ಅದು ಬಲಕ್ಕೆ ಕಂಡು ಬಿಡಬೇಕೇ, ಎಡದಿಂದ ಬಲಕ್ಕೆ ನಾ ಬರಲು ಈ ಟ್ರಾಫಿಕ್ಕಿನಲ್ಲಿ ಆಗಬೇಕಲ್ಲ. ನೇರ ಹೊರಟೆ "ರೀ ರೈಟಿನಲ್ಲಿದೆ" ಅಂದದ್ದು ಕೇಳದಂತೆ ಹೊರಟೆ, ನಾಕು ತಲೆಗೆ ಇಕ್ಕಿದಳು, ಹೆಲ್ಮೆಟ್ಟು ಇತ್ತು ಬಚಾವಾದೆ, ಅದೊ ಅಲ್ಲಿ ಎಲ್ಲೊ ದೂರ ಬ್ರಂಟನ್ ಟಾವರು ಹತ್ತಿರ ನಿಲ್ಲಿಸಿ ನಡೆದು ಬರುವಾಗ ಬಯ್ಯುತ್ತಲೇ ಇದ್ದಳು, ನನಗೊ ನಗು ಅಂದ್ರೆ ನಗು, ಬಿಸಿಲಿನಲ್ಲಿ ಬುರ್ಕಾದಂತೆ ದುಪಟ್ಟ ಹೊದ್ದು. ನಡೆದದ್ದೆ ನಡೆದದ್ದು. ಅವಳಿಗೊ ಈ ಎಂ ಜೀ ರೋಡಿನಲ್ಲಿ ಕಾಣುವ ಸುಂದರಿಯರ ನೋಡಲು ನಾ ಹಾಗೆ ಮಾಡಿದೆನೆಂದು ಗುಮಾನಿ, ಬಯ್ಯುತ್ತ ಬಡಿಯುತ್ತ ಅಷ್ಟು ದೂರ ಬಂದವಳು, ಮತ್ತೆ ಬಿಸಿಲಿದೆ ಬನ್ನಿ ಅಂತ ತನ್ನ ದುಪಟ್ಟಾದಲ್ಲಿ ನನಗೂ ನೆರಳು ಕಲ್ಪಿಸ ನೋಡಿದಳು.. ಕ್ಷಣದಲ್ಲಿ ಸಿಡುಕು, ಕ್ಷಣದಲ್ಲಿ ಮತ್ತೆ ಪ್ರೀತಿ ಅವಳಿಗ್ಯಾರು ಸಾಟಿ...
ಅಂತೂ ಅದೇ ಯೋಚನೆಗಳಲ್ಲಿ ಅಫೀಸಿಗೆ ಬಂದೆ, ಕೊಲೀಗ್ಗೆ ದಾರಿ ತಪ್ಪಿದ್ದು ಹೇಳಿದರೆ, "ಅಲ್ಲಿ ತನಕ ಹೋಗಿ ಯಾಕೆ ಯು ಟರ್ನ ತೆಗೆದುಕೊಂಡೆ, ಅಲ್ಲೇ ಇನ್ನೊಂದು ಲೆಫ್ಟು ತೆಗೆದುಕೊಂಡು ರೈಟಿಗೆ ಬಂದಿದ್ರೆ ಸಾಕಿತ್ತು" ಅಂದ... ನಾ ಹಲ್ಲು ಕಿರಿದೆ, ಅವ ನಗತೊಡಗಿದೆ, "ನನ್ನ ಬಗ್ಗೆ ಗೊತ್ತಲ್ಲ" ಅನ್ನುತ್ತ ಕೆಲಸದಲ್ಲಿ ಲೀನವಾದೆ, ಸಂಜೆ ಮತ್ತೆ ಅವಳ ಪಿಕ್ ಮಾಡಬೇಕು, ಬೇಗ ಹೊರಟೆ.
ಈ ರೋಡುಗಳು ಯಾಕೆ ಹೀಗೆ ಅಂತೀನಿ, ಹೋಗೋಕೊಂದು ದಾರಿಯಾದರೆ ಬರೋಕೊಂದು. ಮತ್ತೆ ದಾರಿ ಹೇಳುತ್ತ ಮನೆಗೆ ತಲುಪಿಸಿದಳು. ಮನೆಗೆ ಬಂದು ಶರ್ಟು ಬಿಚ್ಚುತ್ತ, "ನಾನೇ ಯಾಕೆ ಹೀಗೆ ದಾರಿ ತಪ್ಪುತ್ತೀನಿ ಅಂತೀನಿ" ಅಂದೆ, ಅದಕ್ಕವಳು ಒಂದು ಅಸಂಬದ್ಧ ಪ್ರಶ್ನೆ ಕೇಳಿದಳು "ದಾರಿಯಲ್ಲಿ ಆ ಹೊಂಡ ಅಕ್ಟಿವಾ ಮೇಲೆ ಕಂಡ ಹುಡುಗಿ ನೋಡಿದ್ರಾ" ಅಂತ. "ಯಾವುದು ನಂಜಪ್ಪ ಸರ್ಕಲ್ಲಿನಲ್ಲಿ ಕಂಡದ್ದೊ, ಇಲ್ಲ ಆ ಬಿಗ್ ಬಾಜಾರಿನ ಹತ್ತಿರ ಕಂಡದ್ದೊ" ಅಂದೆ, "ನೋಡಿ, ಪ್ರತೀ ತಿರುವಿನಲ್ಲಿ ಕಾಣುವ ಹುಡುಗಿ ನೆನಪಿರ್ತಾಳೆ ದಾರಿ ಯಾಕಿಲ್ಲ? ಗಮನ ಅಲ್ಲಿರಬೇಕಲ್ಲ" ಅಂತ ಬೈದಳು ಹಲ್ಲು ಕಿರಿದೆ. "ನಿಜ ಹೇಳೆ ನಾನೇನು ಬೇಕೇಂದೆ ಮಾಡ್ತೀನಾ?" ಅಂದ್ರೆ "ಮದುವೆಗೆ ಮುಂಚೆ, ನಿಮ್ಮಕ್ಕನ ಮನೆಗೆ ಕರೆದುಕೊಂಡು ಹೊಗ್ತೀನೀ ಅಂತ ಬೇಕೆಂದಲೇ ದಾರಿ ಗೊತ್ತಿಲ್ಲ ಅಂತ ಇಡೀ ಬೆಂಗಳೂರು ಸುತ್ತಿಸಿರಲಿಲ್ವಾ, ಕಿಲಾಡಿ ನೀವು ನಂಗೊತ್ತಿಲ್ವಾ" ಅಂತಂದ್ಲು. "ಅದ್ ಹೇಗೆ ನಿಂಗೆ ಗೊತ್ತಾಯ್ತು" ಅಂದ್ರೆ, "ಮಾಗಡಿ ರೋಡು ಅಂತ ನೀಟಾಗಿ ಬರೆದಿರೋ ಬೋರ್ಡು ಇದ್ರೂ ಅಲ್ಲಿ ತಿರುವು ತೆಗೆದುಕೊಂಡು ಬಂದಿದ್ರಿ, ನಂಗೂ ಸುತ್ತಬೇಕಿತ್ತು ಸುಮ್ಮನಿದ್ದೆ" ಅಂದ್ಲು ನಗುತ್ತ. "ಈಗ ಕಿಲಾಡಿ ನೀನೂ ಅಲ್ವಾ" ಅಂತಿದ್ದರೆ "ಸಾಕು ಬನ್ನಿ ಟೀ ಮಾಡ್ತೀನಿ" ಅಂತ ಪಾಕ ಶಾಲೆಗೆ ಹೊರಟಳು. ಅವಳು ಟೀ ಮಾಡುತ್ತಿದ್ದರೆ ಬರ್ಶನ್ನು ಕಟ್ಟೆ ಮೇಲೆ ಕೂತು ತಿರುವುಗಳೇ ತುಂಬಿರುವ ಚಕ್ಕಲಿ ತಿನ್ನುತ್ತ "ಅಂದೇನೊ ಸರಿ ಬೇಕೆಂತಲೇ ಮಾಡಿದ್ದು, ಆದರೆ ನನಗೇಕೊ ಈ ತಿರುವುಗಳು ನೆನೆಪೇ ಇರುವುದಿಲ್ಲ, ನನಗೆ ನಾನೇ ಗೊಂದಲಕ್ಕೀಡಾಗಿ ಬಿಡುತ್ತೇನೆ, ತಿರುವು ತುಂಬಿರುವ ಸಂದಿಗೊಂದಿಗಳಲ್ಲಿ ಹಾದು ಬರುವುದಕ್ಕಿಂತ ನೇರ ದೂರ ರಿಂಗ ರೊಡುಗಳೇ ಬೇಕೆನಿಸುತ್ತವೆ, ಈ ಶಾರ್ಟ್ಕಟ್ಗಳನ್ನು ಬಳಸಿ ಎಲ್ರೂ ನನಗಿಂತ ಮುಂದೆ ಹೋಗಿ ಬಿಡ್ತಾರೆ ನನಗೋ ದೂರ ದಾರಿ ಅಷ್ಟೆ ಗೊತ್ತಿರೋದು..." ಅಂತ ಭಾಶಣ ಬಿಗಿದೆ, ಅವಳೂ ನಗುತ್ತ, "ಈ ಟಾರು ರೋಡುಗಳಲ್ಲಿ ಎಷ್ಟು ದಾರಿ ತಪ್ಪಿದರೂ ನೀವು ನನಗೆ ಬೇಜಾರಿಲ್ಲ, ಬದುಕಿನ ದಾರಿ ಎಂದೂ ತಪ್ಪಿಲ್ಲ, ಎಷ್ಟು ತಿರುವುಗಳಿದ್ದವು ನಿಮ್ಮ ಮುಂದೆ, ಆದ್ರೆ ನೀವು ನೇರ ನೇರಕೆ ಇಷ್ಟು ದೂರ ಬಂದಿರುವಿರಿ, ಎಲ್ಲೂ ತಪ್ಪಿಲ್ಲ ಅದೇ ನನಗೆ ಹೆಮ್ಮೆ ನನಗಷ್ಟೆ ಸಾಕು" ಅಂತ ಭಾವನಾತ್ಮಕ ಮಾತುಗಳಾಡಿದಳು, ನನಗೊ ಖುಶಿ "ಆದರೂ ಎಲ್ಲಿ ಎಲ್ಲರೂ ಬಳಸಿದ ದಾರಿಯಲ್ಲಿ ಬಂದು ಹೊಸದನ್ನೇನು ಮಾಡಲಿಲ್ಲ ನಾ, ಆ ಮಣ್ಣ ದಾರಿ ಬಳಸಲೇ ಇಲ್ಲ, ಹೊಸದೇನೊ ಇರ್ತಿತ್ತು ಅನ್ನೊ ಪ್ರಶ್ನೆ ನನ್ನ ಕಾಡಿದೆ" ಅಂದೆ, "ಎಲ್ಲರಿಗೂ ಒಂದೊಂದು ದಾರಿಯಿದೆ, ನಿಮಗೆ ನೇರವಾದರೆ ಮತ್ತೊಬ್ಬರಿಗೆ ತಿರುವು, ಯೋಚನೆ ಬಹಳ ಬೇಡ, ಪಕ್ಕದ ಮನೆ ಪದ್ದು ಹತ್ರ ತಿರುವಿಬಿಟ್ಟೀರಿ, ನಮ್ಮನೆ ಈ ಕಡೆ ನೇರ ಇದೆ" ಅಂತ ತುಂಟಾಟಕ್ಕಿಳಿದಳು. ಅವಳ ಬಾಯಿಗೊಂದು ಚಕ್ಕಲಿಯ ತುಂಡಿನ ತಿರುವಿಟ್ಟೆ ಆಕಡೆಯ ತಿರುವು ಅವಳ ಬಾಯಲ್ಲಿದ್ದರೆ ಈಕಡೆ ತಿರುವಿನಿಂದ ನಾ ತಿನ್ನುತ್ತಿದ್ದೆ, ತಿರುವು ಕಡಿಮೆಯಾಗುತ್ತ ಬಂತು, ನಮ್ಮಿಬ್ಬರ ನಡುವಿನ ದೂರ ಕಡಿಮೆಯಾಗುತ್ತಿತ್ತು, ತಿರುವುಗಳಿಲ್ಲದೇ ನಮ್ಮ ಸಂಭಂಧ ಇನ್ನಷ್ಟು ನೇರ ನಿಶ್ಚಿತ ನಿಷ್ಕಲ್ಮಶವಾಗುತ್ತಿತ್ತು... ತಿರುಗಿ ಬರುತ್ತಿರಿ ಮತ್ತೆಲ್ಲೊ ತಿರುವಿನಲ್ಲಿ ದಾರಿ ಕೇಳುತ್ತ ಸಿಗುತ್ತೇನೆ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/tiruvinalli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
10 comments:
ಪ್ರಭು ನಿಮ್ಮ ಅನುಭವ ಚೆನ್ನಾಗಿದೆ..
ನಾನೂ ಕೂಡ ವಿಳಾಸ ಹುಡುಕುವದರಲ್ಲಿ ಬಹಳ ವೀಕು..
ಪದೆ ಪದೆ ರಸ್ತೆ ತಪ್ಪಿ ಹೋಗುತ್ತದೆ..
ನನ್ನದೇ , ಕಥೆ , ವ್ಯಥೆ ಬರೆದ ಹಾಗಿದೆ..
ಇಂಥಹುದೇ ಒಂದು ಘಟನೆ ನನ್ನ ಬ್ಲಾಗಿನಲ್ಲಿ ..
ಈಗತಾನೇ ಹಾಕಿರುವೆ.. ನೋಡಿ..
ಚಂದದ ಬರಹ.. ಬರವಣಿಗೆ..
ಧನ್ಯವಾದಗಳು..
ಪ್ರಭು,
ಬರಹ ಎಂದಿನಂತೆ.... ಇಲ್ಲಿ ವಿಶೇಷವೇನೆಂದರೆ ಮನೆಯಿಂದ ಹೊರಗೆ ರಸ್ತೆ, ತಿರುವು....ಅಲ್ಲೆಲ್ಲಾ ನಿಮ್ಮ ಬರಹದ ತುಂಟತನ ಹರಿದಾಡಿದೆ...
ಮತ್ತೆ ವಿಳಾಸ, ರಸ್ತೆ ತಿರುವುಗಳಲ್ಲಿ ನಾನು ನಿಮ್ಮ ಹಾಗೆ ಚುರುಕು..ಹುಡುಗಿಯರನ್ನು ನೋಡಲಿಕ್ಕಲ್ಲ...ಅಡ್ರೆಸ್ಸ್ ಹುಡುಕುವುದರಲ್ಲಿ....ಕಾರಣ ನನ್ನ ಉದ್ಯೋಗವೇ ರಸ್ತೆಯಲ್ಲಿ ಅಲೆಮಾರಿಯಂತೆ ತಿರುಗಾಡುವುದಲ್ಲವೇ....ಧನ್ಯವಾದಗಳು..ಮುಂದುವರಿಸಿ...
tumba chennagide....address hudukopaadu beda...nanna husbandge raste, mane nenapu irode illa ondu sari nodibandre mathomme idena aa road anta keltare ha ha ha..
heege bareyuttaliri..
Hi...
Chennagide nimma article.. Neevu balasuva padagalu thumba hidisithu.. Rastheya tiruvugalella jeevanada thiruvagalanthe.. nija ene thappadaru sariyadaru nanu arisodu nera thiruve... nice article.. thank u..
Hema.nth
ಪ್ರಭು,
ರಸ್ತೆ ತಪ್ಪಿಸಿಕೊಳ್ಳುವದರಲ್ಲಿ ನಾ ಒಬ್ನs ಜಾಣ ಅಂತ ತಿಳ್ಕೊಂಡಿದ್ದೆ. ನೀವು ನನ್ನನ್ನೂ
ಮಿರಿಸೀರಿ ಅಂತ ಅನಿಸಿ ಸಂತೋಷ ಆತು. ಆದರ, ನಾ ಹುಡಿಗೇರ್ನ ನೋಡ್ಕೋತ ಗಾಡಿ
turn ಮಾಡಲಿಕ್ಕೆ ಹೋಗೂದುಲ್ಲ. ಇದೊಂದs ಫರಕ ನೋಡ್ರಿ.
ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ನನ್ನಷ್ಟು ವೀಕು ಏನೂ ಇರಲಿಕ್ಕಿಲ್ಲ ಬಿಡಿ ಯಾವಗಲೂ ನಾನೂ ದಾರಿ ತಪ್ಪೋದು ಬೈಸಿಕೊಳ್ಳೋದು ಮಾಮೂಲಿ... ನಿಮ್ಮ ಪ್ರಯಾಣದ ಕಥೆ ಚೆನ್ನಾಗಿತ್ತು.
shivu ಅವರಿಗೆ:
ತುಂಟತನಕ್ಕೆ ಪರಿಧಿ ಇಲ್ಲ ಅಂದರೆ ಹೇಗಿರುತ್ತದೆ... ನಾನೇನಾದರೂ ಅಂಥ ಉದ್ಯೋಗದಲ್ಲಿದ್ದಿದ್ದರೆ ಯೋಚಿಸಿ... ಅಷ್ಟೇ ಅಧೋಗತಿಯಾಗುತ್ತಿತ್ತು...
ಮನಸು ಅವರಿಗೆ:
ರೋಡುಗಳೇ ಹಾಗೆ ಒಂದೇ ರೀತಿಯಿದ್ದು ಬಹಳ ಗೊಂದಲಕ್ಕೀಡುಮಾಡುತ್ತವೆ. ನಿಮ್ಮ ಪತಿರಾಯರೂ ನಮ್ಮ ಸಂಘದ ಮೆಂಬರು ಬಿಡಿ ಹಾಗಿದ್ದರೆ...
maaya ಅವರಿಗೆ:
ಪದಗಳು ನಿಮಗಿಷ್ಟವಾಗಿದ್ದು ಕೇಳಿ ಸಂತೋಷವಾಯಿತು, ಅಲ್ಲಲ್ಲಿ ಉತ್ತರ ಕರ್ನಾಟಕದ ಪದಗಳು ನನಗೆ ತಿಳಿಯದಂತೆ .. ಸೇರಿ ಬಿಡುತ್ತವೆ. ನೇರ ದಾರಿ ತಿರುವುಗಳು ಎಲ್ಲರ ಜೀವನದಲ್ಲೂ ಇವೆ ಆಯ್ಕೆ ಮಾತ್ರ ಕಷ್ಟ..
sunaath ಅವರಿಗೆ
ನೀವ್ ಒಬ್ರ ಹೆಂಗ ಆಗ್ತೇರಿ... ಕಂಪನಿ ಕೊಡಾಕ ನಾ ಇಲ್ಲೇನ... ನಾನೂ ಹುಡುಗೀರ್ನ ನೋಡಬೇಕ ಅಂತ ಅನಕೊಂಡಿರೂದುಲ್ಲ.. ಅದರೂ ಅವರ ಕಂಡ ಬಿಡ್ತಾರ ಅಂದ ಮ್ಯಾಲ ನಾನರ ಏನ್ ಮಾಡ್ಲಿ ಹೇಳ್ರಿ... ಚಲೋ ಕಾಮೆಂಟ್ ಬರದೀರಿ ಬಿಡ್ರಿ..
Hi Prabhu,
Nice article,your imaginations are simply superb!! but, i felt u hv dragged a bit about the way u hv lost in finding d correct path!!! rather than giving incidences you could hv related d same with some real life examples of youth losing their way in finding their true love,life n career ... indians are losing their track of own rich culture....
these are just my views..of losing the correct path!!
cheers ;-)
Khushi
To: Geethashri Ashwathaiah
Hi Khushi,
Your name itself is khushi, so comment Odi nanagoo khushiyaaytu...
May be it's true that I have dragged it, telling about the different incidents (As if I am thinking of incidents while riding.)...
thanks for pointing at that...The context of this article was about missing the routes and getting confused about the roads... and the funny things behind them...
I would rather write a different article about the youth and their career stuff than adding that in this article... I don't think it would be good in this article.. let me write sometime later about this loosing the correct path...
keep visiting...
Hi
very nice article.
To: Nisha
Thank you keep visiting..
Post a Comment