ಹಾಸಿಗೆಯಲ್ಲೇ ಬಿದ್ದು ಹೊರಳಾಡುತ್ತಿದ್ದೆ, ಯಾವ ಯಾವ ಕೋನ ತ್ರಿಕೋನಾಕಾರಗಳಲ್ಲಿ ಮೈಮುರಿಯಲು ಸಾಧ್ಯವಿತ್ತೊ ಅದೆಲ್ಲ ಮಾಡಿಯಾಗಿತ್ತು, ಆದರೂ ಇನ್ನೂ ಅವಳೇಕೇ ಬಂದು ಎಬ್ಬಿಸುತ್ತಿಲ್ಲ ಅಂತ ಯೋಚಿಸುತ್ತ ಬಿದ್ದುಕೊಂಡಿದ್ದೆ, ಏನಿಲ್ಲ ಎಬ್ಬಿಸಲು ಬಂದರೆ ಸ್ವಲ್ಪ ಕೀಟಲೆ ಮಾಡಿ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತದಂತ. ಅವಳೂ ಹಾಗೆ ಒಂದೊಂದು ದಿನ ಒಂದೊಂದು ಥರ ಏಳಿಸೊದು, ಒಂದು ದಿನ ಬಯ್ದು, ಬಡಿದು ಎಬ್ಬಿಸಿದರೆ, ಮತ್ತೊಂದು ದಿನ ಮಗು ಎಬ್ಬಿಸಿದ ಹಾಗೆ ಮೆಲ್ಲನೆ ಬಂದು ಮೈದಡುವವಳು. ಮಗುದೊಂದು ದಿನ "ಏಳಿ ಎದ್ದೇಳಿ.." ಅಂಥ ವಿವೇಕಾನಂದರ ಶೈಲಿಯಲ್ಲಿ ಹೊಸ ಹುರುಪುತುಂಬಿ ಎಬ್ಬಿಸೋದು... ಈ ವೈವಿಧ್ಯತೆಯಲ್ಲಿ ಏಕತೆ ಅನ್ನೊ ಹಾಗೆ ನಮ್ಮದು ವೈವಿಧ್ಯತೆಯಲ್ಲಿ ಏಳುವಿಕೆ. ಹೀಗೆ ಬರೆದರೆ ಏಳುವ ಬಗ್ಗೆ ನಾ ಪ್ರಬಂಧ ಮಂಡಿಸಬಹುದು.
ಇನ್ನೇನು ಅವಳು ಬರುವ ಹಾಗೆ ಕಾಣದಾದಾಗ ಎದ್ದೆ, ಎಲ್ಲಿರುವಳೆಂದು ಹುಡುಕಿದೆ ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ, ಅಯ್ಯೊ ದೇವದೂತರು ಬಂದು ದೇವಕನ್ಯೆಯೆಂದು ಎಲ್ಲಾದರೂ ಎತ್ತಿಕೊಂಡು ಹೋದರೋ ಅಂತ ಚಿಂತಿತನಾದೆ ಕೂಡ. ಮನೆ ಬಾಗಿಲು ಸ್ವಲ್ಪ ತೆರೆದಿರುವಂತೆ ಕಾಣಿತು, ಹೊರಬಂದು ನೋಡಿದರೆ ಅಲ್ಲಿರುವಳಲ್ಲ!!! ರಂಗೋಲಿ ಹಾಕುತ್ತಿದ್ದಾಳೆ. ಕುಕ್ಕರಗಾಲಿನಲ್ಲಿ ಕೂತು ಅದೇನೋ ಗಹನ ವಿಚಾರದಲ್ಲಿರುವಂತೆ ತನ್ಮಯತೆಯಿಂದ ಒಂದೊಂದೇ ರೇಖೆ ಎಳೆಯುತ್ತಿದ್ದಾಳೆ, ನಾನು ಸಾಫ್ಟವೇರ ಪ್ರೋಗ್ರಾಮ ಕೂಡ ಅಷ್ಟು ತನ್ಮಯತೆಯಿಂದ ಬರೆದಿರಲಿಕ್ಕಿಲ್ಲ. ಆದರೆ ರಂಗೋಲಿ ಬಿಡಿಸುತ್ತಿರುವುದು ಮತ್ತದೇ ನಾ ಬೇಡವೆಂದ ಜಾಗದಲ್ಲೇ! ಅದೇ ಗೇಟಿನ ಮುಂದೆ, ನನ್ನ ಬೈಕು ಹೊರ ತೆಗೆಯಲಾಗದಂತೆ...
ಇಂದಲ್ಲ ಇದು ನಿನ್ನೆ ಮೊನ್ನೆಯಿಂದಲೇ ನಡೆದಿರುವ ಶೀತಲ ಸಮರ, ಅದೊಂದು ದಿನ ನಾ ಬೇಗ ಆಫೀಸಿಗೆ ಹೋಗಬೇಕಿತ್ತು ಗೇಟಿನ ಮುಂದೆ ಇಷ್ಟು ಅಡ್ಡಗಲ ರಂಗೋಲಿ ಹಾಕಿಬಿಟ್ಟಿದ್ದಳು, ಅದನ್ನ ತುಳಿಯಲು ಮನಸಿಲ್ಲ, ಆದರೂ ಇನ್ನೇನು ಮಾಡಲಾಗುತ್ತೆ ಹಾಗೆ ಬೈಕು ಹೊರ ತೆಗೆದೆ, ರಂಗೊಲಿಯೆಲ್ಲ ಹಾಳಾಯಿತು, ಅಷ್ಟು ಇಷ್ಟಪಟ್ಟು ತೆಗೆದದ್ದು ಹಾಳಾಗಿದ್ದರಿಂದ ಅವಳೂ ಸಿಟ್ಟಿಗೆದ್ದು ಬಯ್ದಳು, ಅವಸರದಲ್ಲಿ ನಾ ಹಾಗೆ ಮಾಡಿದ್ದೆಂದರೂ, ಮುಂಜಾನೆಯೇ ಎದ್ದು ಬೈಕು ಹೊರಗಿಡಬೇಕಿತ್ತೆಂದು ಅವಳ ವಾದ, ನನಗೂ ಲೇಟಾಗಿದ್ದರಿಂದ ಆಕಡೆಯೆಲ್ಲಾದರೂ ಬಿಡಿಸಬೇಕಿತ್ತು ನಡೆದಾಡುವ ದಾರಿಯಲ್ಲಿ ಹಾಕಿದರೆ ಹೇಗೆ ಅಂತ ನಾನು, ಅಂತೂ ಮನಸ್ತಾಪವಾಗಿತ್ತು. ಹೀಗೆ ಕೆಲದಿನ ಅವಳು ಮತ್ತದೇ ಜಾಗದಲ್ಲಿ ರಂಗೋಲಿ ಬಿಡಿಸುವುದು.. ಮತ್ತದೇ ರಾಗ ಮತ್ತದೇ ತಾಳ... ಇಂದು ಅವಳು ತಾದ್ಯಾತ್ಮತೆಯಿಂದ ಆ ರಂಗೋಲಿ ಬಿಡಿಸುತ್ತಿರುವುದ ನೋಡುತ್ತಿದ್ದರೆ ಏನಿದು? ಏನಿದೆ ಈ ರಂಗೋಲಿಯಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ತೀರ್ಮಾನಿಸಿದೆ.
ಅವಳು ನನ್ನ ನೋಡಿರಲಿಲ್ಲ, ನೋಡಲೆಂದೇ ಜೋರಾಗಿ ಆಕಳಿಸಿ ಮೈಮುರಿದೆ, "ಏನೊ ಮಹರಾಜರಿಗೆ ಈಗ ಏಳೊಣವಾಯಿತೋ!" ಅಂತಂದಳು. ಹಲ್ಲುಜ್ಜದ ಹಲ್ಲುಗಳನ್ನೇ ತೆರೆದು ಹೀ.. ಅಂತ ಹಲ್ಲು ಗಿಂಜಿದೆ. "ಬಂದೆ ಟೀ ಇನ್ನೂ ಮಾಡಬೇಕು" ಅಂತ ಮತ್ತೆ ಉಲಿದಳು, "ಏನು ಮಹರಾಣಿಯವರು ಸ್ವತ: ಖುದ್ದಾಗಿ ರಾಜಬೀದಿಯನ್ನು ಅಲಂಕರಿಸುವಂತಿದೆ" ಅಂತ ಅವಳಿಗಿಂತ ನಾನೇನು ಕಮ್ಮಿ ಅನ್ನುವಂತೆ ಡೈಲಾಗು ಹೊಡೆದೆ. ಮುಖವೆತ್ತಿ ನೋಡಿದವಳು, ಹಲ್ಲು ಗಿಂಜುತ್ತಿದ್ದ ನನಗೆ "ಮೊದಲು ಹಲ್ಲು ಉಜ್ಜಿ ಹೋಗಿ, ಬರ್ತೇನೆ" ಅಂತ ಖಾರವಾದಳು. ಹಲ್ಲುಜ್ಜಿ ಬಂದವನು ಮತ್ತೆ ಹಾಗೇ ನೋಡತೊಡಗಿದೆ, ಬಹಳ ಅಂದವಾಗಿ ಬಿಡಿಸಿದ್ದಳು, ನಡುವೆಯೊಂದು ಗುಲಾಬಿ ಹೂವಿನ ತೊಟ್ಟು, ಸುತ್ತಲೂ ಹರಡಿರುವ ಪಕಳೆಗಳು, ಅಲ್ಲೊಂದು ಇಲ್ಲೊಂದು ಅನ್ನುವಂತೆ ಎಲೆಗಳು. ಮೊದಲೆಲ್ಲ ಅಷ್ಟು ಗಮನಿಸಿರಲಿಲ್ಲ, ನನ್ನ ಬೈಕು ತೆಗೆಯುವುದೇ ನನಗೆ ಹೆಚ್ಚಾಗಿತ್ತು. ಅವಳು ಬಿಡಿಸುತ್ತಿದ್ದಲ್ಲಿಗೇ ಹೋಗಿ ಕುಳಿತೆ, ಓರೆಯಾಗಿದ್ದ ಎಲೆಯ ಎಸಳೊಂದನ್ನು ಸರಿಪಡಿಸಿದೆ, ಅಷ್ಟರಲ್ಲಿ "ರೀ ಎದ್ದೇಳ್ರಿ, ಸಾಕು ನೀವೇನಿದು, ಯಾರಾದರೂ ಏನಂದುಕೊಂಡಾರು" ಅಂತ ಎದ್ದೇಳಿಸಿಯೇಬಿಟ್ಟಳು.
ಒಳಗೆ ಬಂದಮೇಲೆ ಬಿಸಿ ಬಿಸಿ ಟೀ ಸಿಕ್ಕಿತು, ಸ್ನಾನ ಮಾಡದೇ ಹಾಗೆ ಎದ್ದು ಹೊರಗೆ ಹೊರಟೆ, ಶರ್ಟು ಹಾಕಿಕೊಳ್ಳುತ್ತಿದ್ದಂತೇ "ಎಲ್ಲಿ" ಅಂತ ಬಂದು ಕೇಳಿದಳು, "ಈಗ ಬಂದೆ" ಅಂತ ಸುಮ್ಮನೇ ಏನೂ ಹೇಳದೇ ಹಾಗೆ ಹೊರಟೆ, ಹೊರಬಂದು ಹಲಗೆಯೊಂದು ತಂದು ಸ್ವಲ್ಪ ಎತ್ತರಿಸಿ ರಂಗೋಲಿ ಮೇಲಿಟ್ಟು ಅದು ಸ್ವಲ್ಪವೂ ಹಾಳಾಗದಂತೆ ಹರಸಾಹಸ ಮಾಡಿ ಬೈಕು ಹೊರತೆಗೆದೆ. ಅವಳು ನಿಂತು ಕಿಟಕಿಯಲ್ಲಿ ನೋಡುತ್ತಿದ್ದಳು, ಹೊರಗೆ ಬಂದು "ಪರವಾಗಿಲ್ಲ ಹಾಗೇ ಅದರ ಮೇಲೆ ಹೋಗಿ ಏನಾಗಲ್ಲ" ಅಂದ್ಲು ಆದ್ರೂ ರಂಗೋಲಿಗೇನೂ ಆಗದಂತೆ ಹೊರಬಂದೆ. ಸೀದಾ ಅಂಗಡಿಗೆ ಹೋಗಿ ನಾಲ್ಕು ಥರ ಕಲರು, ಅದನ್ನ ಹಾಕಿಡಲು ಚೌಕಾಕಾರದ ಖಾನೆಗಳಿರುವ ಡಬ್ಬಿ ಎಲ್ಲ ತೆಗೆದುಕೊಂಡು ಮನೆಗೆ ಬಂದು, ರಂಗೋಲಿಗೆ ಬಣ್ಣ ಮಿಶ್ರಣ ಮಾಡಿ ಅವಳ ಕೈಗಿತ್ತು ಅದರಲ್ಲಿ ಬಣ್ಣ ತುಂಬೆಂದೆ. ಒಂಥರ ನನ್ನ ಬದುಕೆಂಬ ರಂಗೊಲಿಯಲ್ಲಿ ಬಣ್ಣ ತುಂಬು ಅಂದಂಗಿತ್ತು.
"ಆಂ ಅಲ್ಲಿ ಹಸಿರು, ಅಲ್ಲಿ ತಿಳಿ ಹಸಿರು, ಗುಲಾಬಿ ಸ್ವಲ್ಪ ತಿಳೀಯಾದರೆ ಚೆನ್ನಾಗಿರುತ್ತದೆ" ಅಂತನ್ನುತ್ತ ಅವಳು ಬಣ್ಣ ತುಂಬುತ್ತಿರಬೇಕಾದರೆ ಅಲ್ಲೇ ಹತ್ತಿರ ಕುಳಿತಿದ್ದೆ, ಪಕ್ಕದ ಮನೆ ಪದ್ದು ನೋಡಿ ಅಸೂಯೆಪಟ್ಟಿದ್ದೆ ಪಟ್ಟಿದ್ದು. ಅಂತೂ ರಂಗೋಲಿ ತುಂಬ ಬಣ್ಣ ಬಳಿದದ್ದಾಯ್ತು. ಬಾಗಿಲು ತೆರೆದೇ ಇಟ್ಟಳು ರಂಗೋಲಿ ಕಾಣುತ್ತಿರಲೆಂದು, ಮತ್ತೊಂದು ರೌಂಡು ಅಂತ ಟೀ ಹೀರುತ್ತ ಅದೇ ರಂಗೋಲಿ ನೋಡುತ್ತ ಕುಳಿತವನ ಹತ್ತಿರ ಬಂದು ಅಂಟಿಕೊಂಡು ಕುಳಿತಳು, "ರೀ ಏನ್ ನೀವ್ ಇಷ್ಟೆಲ್ಲ ಮಾಡಿದ್ರೆ, ನಾ ಅಲ್ಲಿ ರಂಗೋಲಿ ಹಾಕದೇ ನಿಮ್ಮ ಬೈಕಿಗೆ ದಾರಿ ಬಿಡ್ತೀನಿ ಅನ್ಕೊಂಡಿದೀರಾ?" ಅಂತ ತಣ್ಣಗೆ ಕೇಳಿದಳು ಅವಳ ಅನುಮಾನವು ಸರಿಯಾಗಿತ್ತು, ದಿನಾಲೂ ರಂಗೊಲಿ ಹಾಕಿದ್ದಕ್ಕೆ ಬಯ್ಯೊವರು ಇಂದು ಅದರಲ್ಲಿ ಬಣ್ಣ ತುಂಬುತ್ತಾರೆಂದ್ರೆ ಅನುಮಾನ ಬಾರದಿರುತ್ತದೆಯೇ, ಇವಳು ಅಂತ ಕೇಳಿ ಪರೀಕ್ಷಿಸ್ತೀದಾಳೆ, ಬೇರೆಯವರಾಗಿದ್ರೆ, ಹಾಗೇ ಅಂದುಕೊಂಡು ಸುಮ್ಮನಾಗಿರುವವರು. "ಮರದ ಹಲಗೆ ಇದೆ, ಏನ್ ಪ್ರಾಬ್ಲಂ ಇಲ್ಲಾ, ನೀನೆಲ್ಲೇ ರಂಗೋಲಿ ಹಾಕು ನನಗೇನೂ ಅಭ್ಯಂತರವಿಲ್ಲ" ಅಂದೆ, "ನಂಗೊತ್ತು ಇಂದು ನಿಮಗೆ ರಂಗೋಲಿ ಇಷ್ಟವಾಗಿದೆ, ಇಲ್ಲಾಂದ್ರೆ ಬಣ್ಣ ಎಲ್ಲ ತಂದಿದ್ದು ಯಾಕೆ" ಅಂದ್ಲು... ನಾನೇನೂ ಹೇಳದೇ ನನಗೆ ರಂಗೋಲಿ ಇಷ್ಟವಾಗಿದ್ದನ್ನು ತಿಳಿಯಪಡಿಸಿದ್ದೆ. "ಮೊನ್ನೇನೂ ನೀನು ಚೆನ್ನಾಗೆ ಬಿಡಿಸಿರಬೇಕು, ನನಗೆ ನೋಡುವ ವ್ಯವಧಾನವಿರಲಿಲ್ಲ ಅಷ್ಟೇ, ನನಗೆ ಬೈಕು ತೆಗೆಯುವುದು ಮುಖ್ಯವಾಗಿತ್ತೇ ಹೊರತು ನೀ ಕಷ್ಟಪಟ್ಟು ಬಿಡಿಸಿದ ರಂಗೋಲಿಯನ್ನೆಲ್ಲ ನೋಡುವುದಲ್ಲ" ಅಂದೆ. "ಅಯ್ಯೊ ಅದರಲ್ಲೇನು ಮಹಾ, ಕಷ್ಟಪಡೋದು, ಸುಮ್ನೇ ಹಾಕಿದ್ದು" ಅಂದ್ಲು "ಯಾವಾಗ ಕಲಿತೆ" ಅಂದೆ. "ಅದಕ್ಕೇನು ಸ್ಕೂಲಾ ಟೀಚರಾ ಅಮ್ಮ ಬಿಡಿಸುವುದ ನೋಡಿ ಕಲಿತೆ" ಅಂದ್ಲು, ಮತ್ತೆ ಯಾವ ಯಾವ ಡಿಸೈನು ಹಾಕುತ್ತಾಳೆ, ಏನಾದ್ರು ಅಚ್ಚುಗಳನ್ನು ತಂದಿಟ್ಟಿದ್ದಾಳಾ, ಅಂತೆಲ್ಲ ಕೇಳಿ ತಿಳಿದುಕೊಂಡೆ, ಅವಳೂ ಬಲು ಹುರುಪಿನಿಂದ ಹೇಳಿದಳು, ಅದು ಬರೀ ಹೊಗಳಿಕೆಗಾಗಿ ಆಗಿರಲಿಲ್ಲ, ಅವಳ ಕಲೆಗೆ ನನ್ನ ಪ್ರಶಂಸೆಯಾಗಿತ್ತು, ಅದರಲ್ಲಿ ನಾ ಆಸಕ್ತಿ ತೋರಿಸಿದ್ದೆ, ಇಷ್ಟೆಲ್ಲ ದಿನ ಶೀತಲ ಸಮರಕ್ಕೂ ಕಾರಣ ಅವಳ ಆ ಕಲೆಯನ್ನು ನಾ ಗುರಿತಿಸಲಾಗದಿದ್ದದ್ದೇ, ಹಾಗೂ ಅದಕ್ಕೆ ತಕ್ಕ ಮನ್ನಣೆ ಕೊಡದಿದ್ದುದು ಅಷ್ಟೇ. ಅವಳಿಗೆ ಕೆಲವು ಹೊಸ ಹೊಸ ಆಧುನಿಕ ಡಿಸೈನುಗಳನ್ನೂ ಬರೆದು ಕೊಟ್ಟೆ, ಜತನವಾಗಿ ತೆಗೆದಿಟ್ಟುಕೊಂಡಳು.
ಎಷ್ಟೋ ಬಾರಿ ಏನೊ ಚೆನ್ನಾಗಿರುವುದ ನೊಡುತ್ತೇವೆ, ಅದನ್ನ ನಾವು ಹೊರಗೆ ಹೇಳಲ್ಲ, ರುಚಿಯಾಗಿ ಮಾಡಿದ ಒಂದು ಸಾರು ಪಲ್ಯವೇ ಇರಬಹುದು, ಇಷ್ಟ ಪಟ್ಟು ಧರಿಸಿದ ಉಡುಪೇ ಆಗಿರಬಹುದು, ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆಯ ಸಾಮಾನುಗಳೇ ಆಗಿರಬಹುದು, ಇಲ್ಲ ಚೆನ್ನಾಗಿ ಬಿಡಿಸಿದ ಈ ರಂಗೋಲಿಯೇ ಆಗಿರಬಹುದು, ಚೆನ್ನಾಗಿದೆ ಅಂತ ಮನಸಿನಲ್ಲಿ ಅಂದುಕೊಂಡುಬಿಟ್ಟರೆ ಹೇಗೆ, ಅದು ಅವರಿಗೆ ಗೊತ್ತಾಗುವುದು ಹೇಗೆ, ಯಾಕೆ ನಾವು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಸಡ್ಡೆ ತೋರಿಸುತ್ತೇವೆ. ಅದೇ, ಅನ್ನಕ್ಕೆ ಉಪ್ಪು ಜಾಸ್ತಿಯಾಗಿದ್ದರೆ ಹೇಳಲು ಮರೆಯುವುದಿಲ್ಲ, ಝಗಮಘ ಅನ್ನುವ ಸೀರೆ ಉಟ್ಟು ಅ-ಸಹ್ಯವಾಗಿ ಕಂಡರೆ ಟೀಕಿಸಲು ಮರೆಯುವುದಿಲ್ಲ, ಎಲ್ಲೋ ಬಿದ್ದಾಡುತ್ತಿರುವ ಸಾಮಾನುಗಳು ಎತ್ತಿ ಇಡುವುದಿಲ್ಲ, ಬೇಕಿದ್ದರೆ ಎತ್ತಿಡು ಅಂತ ಹಾರಾಡುತ್ತೇವೆ. ಯಾಕೆ ಹೀಗೆ ಯಾಕೋ ನನ್ನಲ್ಲೂ ಉತ್ತರವಿಲ್ಲ. ಆದರೂ ಬದುಕೇ ಒಂದು ಸುಂದರ ರಂಗೋಲಿಯೆಂದರೆ ಅದಕ್ಕೆ ಅವಳ ಕೈಯಲ್ಲಿ ನಾ ಬಣ್ಣ ತುಂಬಿಸುತ್ತಿದ್ದೇನೆ. ನಿಮ್ಮ ಮನೆಯ ರಂಗೋಲಿ ಏನು ತುಳಿದು ನಡೆದು ಹೋಗುತ್ತೀರೊ ಇಲ್ಲ... ಏನು ಮಾಡುತ್ತಿರೊ ನಿಮಗೆ ಬಿಟ್ಟಿದ್ದು.
ಮರುದಿನ ಎದ್ದು ಬೈಕು ತೆಗೆದೆ, ಮರದ ಹಲಗೆಯೇನೂ ಇಲ್ಲದೆ ಪ್ರಯಾಸವಿಲ್ಲದೇ, ಅವಳೇನು ರಂಗೋಲಿ ಹಾಕಿಲ್ಲ ಅಂದುಕೊಂಡಿರಾ ಇಲ್ಲ ಜಾಗ ಬದಲಾಯಿಸಿದಳೆಂದು ಅಂದುಕೊಂಡಿರಾ. ಏನೂ ಇಲ್ಲ, ಅದೇ ಗೇಟಿನ ಮುಂದೆ ರಂಗೋಲಿ ಹಾಕಿದ್ದಳು, ಮತ್ತೆ ನಾ ಹಾಳು ಮಾಡಿದೆನೆ ಇಲ್ಲ... ಮತ್ತದೇ ಹೂವುಗಳು ಮತ್ತದೇ ಎಲೆಗಳು, ಬೈಕು ದಾಟುವಷ್ಟು ಜಾಗ ಬಿಟ್ಟು, ಗೇಟಿನ ಇಕ್ಕೆಲಗಳಲ್ಲಿ ಬರುವಂತೆ ರಂಗೋಲಿ ಬಿಡಿಸಿದ್ದಳು, ಬೈಕು ಸರಾಗವಾಗಿ ದಾಟಿತ್ತು. ಬೈಕು ನಿಲ್ಲಿಸಿ ಇಳಿದು, ಅದೊಂದು ಎಸಳನ್ನು ಸರಿ ಮಾಡುತ್ತಿದ್ದೆ, ಕಿಟಕಿಯಲ್ಲಿ ನಿಂತು "ರೀ ಆಫೀಸಿಗೆ ಹೊಗುತ್ತೀರೊ, ಇಲ್ಲ ರಂಗೋಲಿ ಸರಿ ಮಾಡುತ್ತ ಇಲ್ಲೇ ಕೂಡುತ್ತೀರೊ" ಅಂತ ಚೀರಿದಳು, ಪಕ್ಕದ ಮನೆ ಪದ್ದು ಕೂಡ ಹೊರಗೆ ಬಂದಳು ಇವಳ ಬಾಯಿಗೆ, ಪದ್ದೂ ಕೂಡ ನಕ್ಕಳು ನಾ ರಂಗೋಲಿ ಸರಿ ಮಾಡುತ್ತಿರುವುದ ನೋಡಿ, ಎದ್ದು ಅಲ್ಲಿಂದ ಓಟಕ್ಕಿತ್ತೆ... ಅವಳು ಇಂದು ರಂಗೋಲಿಗೆ ಬಣ್ಣ ತುಂಬಿರಲಿಲ್ಲ, ಆದರೂ ಅದು ಬಣ್ಣದ ರಂಗೋಲಿಯೆಂತನಿಸುತ್ತಿತ್ತು ನನಗೆ...
ಮತ್ತೆ ಸಿಗುತ್ತೀನಿ ಅದೇ ನಮ್ಮನೆ ರಂಗೋಲಿ ಸರಿ ಮಾಡುತ್ತ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು