Monday, April 13, 2009

ನಾನ್ಯಾಕೆ?... ನನ್ನಾಕೆ...


ಮಧ್ಯಾಹ್ನ ಅದೇ ಆಗ ಮಲಗಿದ್ದೆ, ತಲೆ ನೋವು, ನೋವಲ್ಲ ಸಿಡಿತ ಅಂದ್ರೇನೇ ಸರಿ. ತಲೆ ನೋವು ಬಂದ್ರೆ ಅದೂ ನನಗೆ ಅಂತೂ ತಡೆದುಕೊಳ್ಳಲಾಗಲ್ಲ, ಸ್ವಲ್ಪ ಮಲಗಿ ಎದ್ರೆ ಸರಿ ಹೋಗುತ್ತದೆ ಇಲ್ಲಾಂದ್ರೆ, ಇವಳು ತಲೆ ಒತ್ತಬೇಕು, ಹಿತವಾಗಿರುತ್ತೆ. ಅವಳು ಇರಲಿಲ್ಲ, ಅದೇ ಪಕ್ಕದ ಮನೆ ಪದ್ದು ಹತ್ರ ಹರಟೆ ಹೊಡೀತಿರಬೇಕು. ಅದಕ್ಕೆ ಹಾಗೆ ಉರುಳಿದ್ದೆ, ಇನ್ನೇನು ನಿದ್ರೆ ಹತ್ತುತ್ತಿರಬೇಕು. ಒಳಗೆ ಬಂದವಳೇ ಧಡ್ ಅಂತ ಬಾಗಿಲು ಹಾಕಿದ್ಲು. ಹತ್ತುತ್ತಿದ್ದ ನಿದ್ರೆ ಹಾರಿ ಹೊಯ್ತು, ಸಿಟ್ಟು ಬಂದಿತ್ತು ಆದರೂ ತಡೆದುಕೊಂಡು, ಮತ್ತೆ ಮಲಗೊಣ ಅಂತ ಪ್ರಯತ್ನಿಸುತ್ತಿರಬೇಕಾದ್ರೆ, ಬಂದು ಪಕ್ಕ ಬಿದ್ದುಕೊಂಡವಳೇ ಸೀರೆ ಸೆರಗಿನ ತುದಿಯ ಚುಂಗವನ್ನು ತಿರುಗಿಸಿ ತೀಡಿ ಉದ್ದಮಾಡಿ ಕಿವಿಯಲಿ ಕಚಗುಳಿಯಿಟ್ಲು. "ಲೇ ತಲೆ ನೊಯ್ತಿದೆ, ಮಲಗೀದೀನಿ ಬಿಡು" ಅಂದೆ, ಅವಳಿಗೆ ಸುಳ್ಳು ಹೇಳಿದೆನೆಂದು ಅನಿಸಿರಬೇಕು. ಮತ್ತೆ ಅಲುಗಾಡಿಸಿ ಕೀಟಲೆಗಿಳಿದಳು. ಸಿಟ್ಟು ನೆತ್ತಿಗೇರಿತು, "ತಲೆ ನೋವಿದೆ ಅಂದ್ರೆ ಅರ್ಥ ಆಗಲ್ಲ, ಒಂದಿಷ್ಟೊತ್ತು ಮಲಗೋಣ ಅಂದ್ರೂ ಬಿಡಲ್ಲ, ಬಾಗಿಲು ಧಡಾರಂತ ಬಡಿದೆ, ಈಗ ನೋಡಿದ್ರೆ ಬಂದು ತರಲೇ ಬೇರೆ, ಸಾಕಾಗಿ ಹೋಗಿದೆ ನಂಗೆ" ಅಂತ ಬಯ್ದು, ಎದೆ ಮೇಲೆ ಇರಿಸಿ ಮಲಗಿದ್ದ ಅವಳ ಕೈ ಎತ್ತಿ ಆಕಡೆ ಹಾಕಿ, ತಿರುಗಿ ಮಲಗಿದೆ. ಸುಮ್ಮನೇ ಎದ್ದು ಹೊರ ನಡೆದಳು. ಬಾಗಿಲು ಹಾಕಿದ್ದೇ ಗೊತ್ತಾಗಲಿಲ್ಲ ಆ ರೀತಿ ಎಳೆದುಕೊಂದು ಹೋಗಿದ್ದಳು.

ಸ್ವಲ್ಪ ಜಾಸ್ತಿಯೇ ಬಯ್ದೆ, ತಲೆ ನೋವಿತ್ತಲ್ಲ, ಸಿಟ್ಟು ತಾಳಲಾಗಲಿಲ್ಲ, ಅದು ಹಾಗೇನೆ ನನಗೆ ನಿದ್ದೆ ಹತ್ತುತ್ತಿದೆ ಅನ್ನುವಾಗ ಹೀಗೆ ಯಾರಾದ್ರೂ ಹಾಳು ಮಾಡಿದ್ರೆ ಎಲ್ಲೂ ಇಲ್ಲದ ಕೋಪ ಬರುತ್ತದೆ, ಏನು ಮಾಡೋದು ತಡೆದುಕೊಳ್ಳಲಾಗಲ್ಲ, ಆದರೂ ಆ ರೀತಿ ಎಂದೂ ಬಯ್ದಿರಲಿಲ್ಲ, ಅದಕ್ಕೆ ಅವಳ ಮನಸ್ಸಿಗೆ ನಾಟಿತ್ತು. ಒಳ್ಳೇದೇ ಆಯ್ತು ಸ್ವಲ್ಪ ಹೊತ್ತು ಶಾಂತವಾಗಿ ಮಲಗಬಹುದು ಅಂತ ಮಲಗಲು ಪ್ರಯತ್ನಿಸಿದೆ ಆಗಲಿಲ್ಲ, ಅವಳಿಗೆ ಬಯ್ದ ಅಪರಾಧೀ ಭಾವನೆ ಕಾಡತೊಡಗಿತು, ನಿಜವಾಗಲೂ ಮನಸು ನೋಯಿಸಿದೆನೆ, ಅವಳೇನು ಅಂದುಕೊಂಡಿರಬಹುದು. ಹೀಗೆ ಯೊಚನೆಗಳೇ ಸಾಗಿತ್ತು ಮನದಲ್ಲಿ ನಿದ್ರೆ ಎಲ್ಲಿಂದ ಬಂದೀತು.

ಸ್ವಲ್ಪ ಹೊತ್ತಾದ ಮೇಲೆ ಇನ್ನು ನಿದ್ರೆ ಬರಲಿಕ್ಕಿಲ್ಲ ಅಂತ ಗೊತ್ತಾದ ಮೇಲೆ, ಎದ್ದೆ. ಮುಖ ತೊಳೆಯಲು ಬಾತರೂಮಿಗೆ ಹೋಗುತ್ತ ಅವಳೆಲ್ಲಿದ್ದಾಳೆ ಅಂತ ನೋಡಿದೆ, ಹಿತ್ತಿಲಲ್ಲಿ ನಿಂತು ಒರಳಿನಲ್ಲಿ ಏನೊ ಕುಟ್ಟುತ್ತಿದ್ದಳು, ಎಲ್ಲಿ ಮತ್ತೆ ನನಗೆ ಶಬ್ದವಾದೀತೆಂದು ಅಲ್ಲಿ ಹೋಗಿರಬೇಕು. ಹಾಗೆ ಮುಖ ತೊಳೆದು ಹಿತ್ತಲಿಗೆ ನಡೆದೆ, ನನ್ನ ನೋಡಿಯೂ ನೋದದವರಂತೆ ಹಾಗೆ ಒಳಗೆ ಬಂದು ಪಾಕಶಾಲೆ (ನಮ್ಮ ಅಡುಗೆಮನೆ, ನಾ ಹಾಗೆ ಕರೆಯೋದು) ಸೇರಿದಳು. ಬೇಜಾರಾಗಿತ್ತು, ಅದಕ್ಕೆ ಮುನಿಸಿಕೊಂಡಿದ್ದಾಳೆ ಮಾತಾಡುತ್ತಿಲ್ಲ, ನೋಡುತ್ತಲೂ ಇಲ್ಲ. ಸ್ವಲ್ಪ ಹೊತ್ತಾದಮೇಲೆ ಎಲ್ಲ ಸರಿಹೋಗುತ್ತದೆ ಅಂದುಕೊಂಡು, ಒಳ ಬಂದು ಆರಾಮ್ ಕುರ್ಚಿಯಲ್ಲಿ ಒರಗಿದೆ, ಇನ್ನೂ ತಲೆ ನೋಯುತ್ತಿತ್ತು. ಹೊರಬಂದವಳು, ಟೀಪಾಯಿ ಮೇಲೆ ಗ್ಲಾಸಿನಲ್ಲಿ ಟೀ ಇಟ್ಟು ಹೋದಳು. ಏನೂ ಹೇಳಲೇ ಇಲ್ಲ, ತೆಗೆದುಕೊಳ್ಳಲೊ ಬೇಡವೋ ಅಂತ ಯೋಚಿಸಿದೆ, ಮಸಾಲೆ ಟೀ ಘಂ ಅಂತ ಸುವಾಸನೆ ಬಂತು, ಇನ್ಯಾವಾಗಲೋ ಆಗಿದ್ದರೆ ಬಿಡಬಹುದಿತ್ತು, ನಾನ್ಯಾಕೆ ಸೋಲಲಿ ಅಂತ, ಆದ್ರೆ ಈಗ ಟೀ ಅತ್ಯಂತ ಅವಶ್ಯಕವಾಗಿತ್ತು, ತಲೆ ಸಿಡಿತಕ್ಕೆ ಮಸಾಲೆ ಟೀ ಅಂದ್ರೆ ಕೇಳ್ತೀರಾ. ಸುಮ್ನೆ ಏನೂ ಆಗದಿರುವಂತೆ ಟೀ ತೆಗೆದುಕೊಂಡು ಹೀರತೊಡಗಿದೆ, ಆಹಾ ಸೂಪರ್, ಆದ್ರೆ ಹೇಳೋ ಹಾಗಿಲ್ಲ!.

ಗ್ಲಾಸು ಎತ್ತಿಕೊಂಡು ಹಾಗೆ ತೊಳೆಯಲಿಟ್ಟವರ ಹಾಗೆ ಮಾಡಿ ಏನು ಮಾಡುತ್ತಿದಾಳೋ ನೋಡಿದರಾಯ್ತು ಅಂತ ಪಾಕಶಾಲೆಗೆ ನಡೆದೆ. ಏನೊ ತೊಳೆಯುತ್ತಿದ್ಲು, ಅದೂ ಸದ್ದಿಲ್ಲದ ಹಾಗೆ, ಒಂದೊಂದೇ ತೊಳೆದು ಬೊರಲಾಗಿ ಶಬ್ದವಾಗದಂತೆ ಮೆಲ್ಲನೆ ಇಡುತ್ತಿದ್ದಳು. ಅಲ್ಲೇ ಇದನ್ನೊಂದು ಇಟ್ಟು ನಿಂತೆ, ನನ್ನೆಡೆಗೆ ನೋಡಲೂ ಇಲ್ಲ, ಇನ್ನೂ ಕಾವೇರಿದ ವಾತಾವರಣವಿದೆ ಅಂತ ಹೊರಗೆ ಬಂದು, ಕೂತೆ. ಇನ್ನೂ ತಲೆ ನೋವಿತ್ತು. ತಲೆ ನೊವಿಗೆಲ್ಲ ಮಾತ್ರೆ ಯಾವಾಗಲೂ ತೆಗೆದುಕೊಳ್ಳೋದಿಲ್ಲ, ಇಂದು ಯಾಕೊ ಜಾಸ್ತಿಯೇ ಆಗಿತ್ತು, ತಡೆಯಲಾಗದೇ, ಮಾತ್ರೆ ಎಲ್ಲಿದೆ ಅಂತ ಡ್ರಾವರ ತೆಗೆದು ಹುಡುಕತೊಡಗಿದೆ, ಎಲ್ಲಿ ಸಿಗುತ್ತದೆ?... ಹುಡುಕಿ ಗೊತ್ತಿದ್ದರೆ ತಾನೇ, ಏನು ಸಿಗಲಿಲ್ಲವೆಂದರೂ... ಲೇ ಅದು ಎಲ್ಲಿದೆ, ಲೇ ಇದು ಎಲ್ಲಿದೆ ಅಂತ ಕೇಳಿ ಗೊತ್ತೇ ಹೊರತು, ಹುಡುಕಿಯಲ್ಲ, ಈಗ ಕೇಳಲಾಗಲ್ಲ, ಮತ್ತದು ಸಿಗಲಿಲ್ಲ.

ಬೆಡ್‌ರೂಮಿನಲ್ಲಿ ಎಲ್ಲಾದ್ರೂ ಇರಬಹುದೆಂದು ಅಲ್ಲಿ ಕಿತ್ತಾಡುತ್ತಿದ್ದೆ, ಅಲ್ಲೂ ಸಿಗಲಿಲ್ಲ ಮತ್ತೆ ಹೊರಬಂದು ಕೂತೆ ಹಾಗೆ ಟೀಪಾಯಿ ಕಡೆ ನೋಡಿದ್ರೆ, ಒಂದು ಮಾತ್ರೆ, ನೀರು ಇತ್ತು!!!.
ಅವಳಿಗೇನು ನನ್ನ ತಲೆಯಿಂದ ನೇರ ಸಂಪರ್ಕವಿದೆಯೇನೋ, ನಾ ಯೋಚಿಸುತ್ತಿರುವುದೆಲ್ಲ ಹೇಗೆ ಗೊತ್ತಾಗುತ್ತದೆ ಅಂತ, ನಾನೀಗ ಮಾತ್ರೆ ಹುಡುಕುತ್ತಿರುವೆ ಅಂತ, ಹೇಳೇ ಇಲ್ಲ ಆದ್ರೆ ಅದ್‍ಹೇಗೆ ಗೊತ್ತಾಯ್ತು. ಅಂತೂ ಮಾತ್ರೆ ಸಿಕ್ಕಿತಲ್ಲ ಅಂತ ಗಂಟಲಿಗಿಳಿಸಿ ಗುಟುಕರಿಸಿದೆ.

ರಾತ್ರಿ ಎಂಟಾಯಿತು ಅಲ್ಲೇ ಬಿದ್ದುಕೊಂಡಿದ್ದೆ, ದಿನಾಲೂ ಅದ್ಯಾವುದೊ ಧಾರಾವಾಹಿಯೋ ಇಲ್ಲ ಪ್ರೊಗ್ರಾಮೊ ಇದೆಯಂತ ನೋಡುತ್ತ ಟೀವೀ ಮುಂದೆ ಕೂರುತ್ತಿದ್ದವಳು ಹೊರಗೆ ಹೋಗಿ ಕೂತಿದ್ದಳು, ಮನೆಯಲ್ಲಿ ಬಹಳ ಸೆಕೆ ಅಲ್ವಾ ಹೊರಗೆ ತಂಗಾಳಿ ಅಂತ ಕೂತಿರಬೇಕು ಅಂತ ನನ್ನ ನಾನೇ ಸಮಾಧಾನಿಸಿಕೊಂಡೆ, ನನಗೂ ಗೊತ್ತು ಮುನಿಸಿಕೊಂಡಿದಾಳೆ ಅಂತ, ಅದರೂ ಮನಸು ಏನೊ ಒಂದು ನೆಪ ಸೃಷ್ಟಿಸಿಕೊಳ್ಳುತ್ತಿತ್ತು. ಮೊದಲೇ ಬಾಗಿಲು ಹಾಕಿದ್ದಕೆ ಬಯ್ದೆ ಇನ್ನು, ಟೀವೀ ಹಾಕಿ ಶಬ್ದ ಮಾಡಿದರೆ ಹೇಗೆ ಅಂತ ಅವಳು ಯೋಚಿಸಿರಬೇಕು, ಏನೊ ತಲೆ ತುಂಬಾ ಯೋಚನೆಗಳು, ತಲೆ ನೋವಿಗಿಂತ ಅವೇ ಜಾಸ್ತಿಯಾಯ್ತು.

ಸ್ವಲ್ಪ ಸಮಯದ ನಂತರ ಬಂದು ಮತ್ತೆ ಪಾಕಶಾಲೆ ಸೇರಿದಳು, ರಾತ್ರಿಗೆ ಅಡಿಗೆ ಮಾಡುತ್ತಿರಬೇಕು, ಅಯ್ಯೋ ಪಜೀತಿ ಆಯ್ತುಲ್ಲ, ಈಗ ನನಗೆ ಊಟ ಮಾಡಲು ಮನಸಿಲ್ಲ, ಹಾಗೇ ನಾಲಗೆ ರುಚಿಸಲೊಲ್ಲದು, ಹುಶಾರಿಲ್ಲದಾಗ ಏನೂ ತಿನ್ನಲು ಮನಸಿರುವುದಿಲ್ಲ, ಅಡಿಗೆ ಮಾಡಿದ ಮೇಲೆ ತಿನ್ನಲ್ಲ ಅನ್ನಲಾಗಲ್ಲ, ಈಗ ಹೇಳುವುದು ಹೇಗೆ. ಮಾತನಾಡಿಸಿಬಿಡಲೇ ಅಂತ ಯೋಚಿಸಿದೆ, ಆದರೆ ಪ್ರತೀ ಬಾರಿ ರಾಜಿಯಾಗುವುದು ನಾನೇ, ಮತ್ತೆ ಇಂದೂ ಕೂಡ "ನಾನ್ಯಾಕೆ?", ಹೌದು ನಾನೇ ಯಾಕೆ, ಅವಳು ಮಾತನಾಡಿಸಿದರೇನು ಗಂಟು ಹೋಗುತ್ತೆ, ಹೌದು ಬಯ್ದೆ ಏನೀಗ, ಬೇಕೆಂತಲೇ ಬಯ್ದಿಲ್ಲವಲ್ಲ, ತಲೆ ನೋವಿತ್ತು, ಹಾಗಾಯ್ತು ಅದನ್ನ ಅವಳೂ ಅರ್ಥ ಮಾಡಿಕೊಳ್ಳಬೇಕಲ್ಲ ಅಂತ ನನ್ನದೇ ವಾದಗಳನ್ನು ಹುಟ್ಟಿಸಿಕೊಂಡು ಸುಮ್ಮನಾದೆ.

ಅವಳೂ ಹಾಗೇ ಯೊಚಿಸಿರಬೇಕು, ಏನು ನನಗೆ ಹೇಗೆ ಗೊತ್ತಾಗಬೇಕು ತಲೆ ನೋವಿದೆಯೆಂದು, ಹೇಳಿದರೆ ತಾನೆ, ನಾನೇನು ಬೇಕೆಂತಲೇ ಬಾಗಿಲು ನೂಕಿ ಸದ್ದು ಮಾಡಿದೆನೆ, ಹಾಗೇ ಯಾವಾಗಲೂ ತೆರೆಯುವಂತೆ ತೆರೆದೆ... ಸದ್ದು ಮಾಡಿದರೆ ನಾನೇನು ಮಾಡಬೇಕು,
ಬಾಗಿಲಿಗೂ ಇವರಿಗೆ ತಲೆನೋವಿದೆ ಸದ್ದು ಮಾಡಬಾರದು ಅಂತ ಯೋಚಿಸಲು ತಲೆಯಿದೆಯೇ. ನನಗೇನೊ ಹೇಳಿದರು, ಸುಮ್ನೆ ಸುಳ್ಳು ಹೇಳುತ್ತಿರಬೇಕೆಂದು ಮತ್ತೆ ತುಂಟಾಟಕ್ಕಿಳಿದೆ, ಮತ್ತೊಮ್ಮೆ ನಿಜಾವಾಗ್ಲೂ ತಲೆ ನೋವಿದೆ ಅಂದಿದ್ರೆ ಇವರ ಗಂಟೇನು ಹೋಗುತ್ತಿತ್ತು, ತಪ್ಪೆಲ್ಲ ಅವರದೇ.. ಅವರೇ ಮಾತಾಡಿಸಲಿ "ನಾನ್ಯಾಕೆ?" ಮಾತಾಡಿಸಲಿ, ಅಂತ ಅವಳೂ ವಾದಗಳ ಸೃಷ್ಟಿಸಿಕೊಂಡಿರಬೇಕು. ಅದಕ್ಕೇ ಮಾತನಾಡಿಸಿಲ್ಲ.

ಈ "ನಾನ್ಯಾಕೆ" ಅಂತ ಯಾವಾಗ ಶುರುವಾಗತ್ತೊ ಆಗ, "ನಾವು" ಅನ್ನೊದಕ್ಕೆ ಅರ್ಥ ಕಡಿಮೆಯಾಗತೊಡಗುತ್ತೆ. "ನಾನು" ಅನ್ನೋದೆ ಅಹಂಭಾವದ ಮೊದಲ ಪದ, ಅದಕ್ಕೆ "ಯಾಕೆ" ಸೇರಿದರೆ ಮುಗೀತು, ಅದೇ ಮುಂದುವರಿದು "ನಾವ್ಯಾಕೆ" ಅಂತಾಗಿ, "ನಾನು", "ನೀನು" ಅಂತ ಬೇರೆಯಾಗೋಣ ಬಿಡು, "ನಾವು" ಯಾಕೆ ಅನ್ನೊ ಹಂತಕ್ಕೆ ಬಂದು ತಲುಪುತ್ತೆ. ಇದೆಲ್ಲ ಗೊತ್ತಿದ್ದರೂ ಪ್ರತೀ ಬಾರಿ ರಾಜಿಯಾಗಿದ್ದ ನನಗೆ ಈ ಸಾರಿ ಸೋಲಲು ಮನಸಿರಲಿಲ್ಲ, ಸೋಲಲ್ಲಿ ಗೆಲುವಿದ್ದರೂ, ಗೆಲ್ಲಲು ಹೊರಡುವ ನ್ಯಾಯಾಲಯದ ಕಟ್ಟೆಯೇರಿದ ಶ್ರೀಸಾಮಾನ್ಯನಂತೆ ಯೋಚಿಸುತ್ತಿದ್ದೆ, ನ್ಯಾಯದ ಕಟ್ಟೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅಂತಾರೆ ಹಾಗಿದ್ದರೂ ವಾದ, ವಿವಾದ, ವ್ಯಾಜ್ಯಗಳು ನಿಂತಿಲ್ಲ. ನಾನಿಲ್ಲಿ ಗೆಲ್ಲುವುದಕ್ಕಿಂತ "ನಾನ್ಯಾಕೆ" ಅನ್ನೊದು ಹೆಚ್ಚಾಗಿ, ಸೋಲಲ್ಲಿ ಗೆಲುವಿದ್ದರೂ, ಗೆದ್ದು ಸೋಲಲು ನಿರ್ಧರಿಸಿದಂತಿತ್ತು.

ಊಟಕ್ಕೆ ತಟ್ಟೆ ಡೈನಿಂಗ್ ಟೇಬಲ್ಲಿನ ಮೇಲೆ, ತಂದಿಟ್ಟಳು, ಅಡಿಗೆ ತಯ್ಯಾರಾಗಿದೆ ಊಟ ಮಾಡಬಹುದು ಅನ್ನೋದರ ಸೂಚನೆಯೆನ್ನುವಂತೆ. ಅವಳ ಮೇಲಿನ ಸಿಟ್ಟು ಅನ್ನದ ಮೇಲೆ ಯಾಕೆ ಅಂತ ಕೈತೊಳೆದು ಕೂತೆ, ಬಿಸಿ ಅನ್ನ ತಂದು ಪ್ಲೇಟಿಗೆ ಹಾಕಿದಳು, ಸ್ವಲ್ಪ ಹಾಕುತ್ತಿದ್ದಂತೆ ಸಾಕೆನ್ನುವಂತೆ ಕೈ ಮಾಡಿದೆ ಆದರೆ, ನನ್ನ ಮೇಲೆ ಸಿಟ್ಟಿಗೆ ಹೊಟ್ಟೆ ಯಾಕೆ ಹಸಿದುಕೊಂಡಿರುತ್ತೀರಿ ಅನ್ನೋ ಹಾಗೆ ಸುಮ್ಮನೆ ಇನ್ನೂ ಜಾಸ್ತಿ ಹಾಕಿದಳು, ಕೊನೆಗೆ ಅನ್ನದ ಚಮಚೆ ಕಸಿದು ಕೆಳಗಿಟ್ಟೆ. ಒಳಗಿನಿಂದ ತುಪ್ಪ ತೆಗೆದುಕೊಂಡು ಬಂದ್ಲು, ಇಷ್ಟೇ ಇಷ್ಟು ಸುರಿದಳು, ಇನ್ನೂ ಜಾಸ್ತಿ ಬೇಕಾಗಿತ್ತು, ಆದ್ರೆ ಕೇಳೋದು ಹೇಗೆ, ಬೇಕೆಂದದ್ದು ಸಿಗಲ್ಲ, ಬೇಡವೆಂದದ್ದು ಜಾಸ್ತಿ. ಇನ್ನು ಸಾರು ತರುತ್ತಾಳೆ, ತಿನ್ನಲು ಮನಸಿಲ್ಲ, ಏನು ಮಾಡೊದು ಅಂತಿದ್ದಂಗೆ, ನಿಂಬೆ ಹಣ್ಣಿನ ಎರಡು ಹೋಳು ತಂದು, ಇಟ್ಟಳು. ಹಿರಿ ಹಿರಿ ಹಿಗ್ಗಿದೆ...ಯಾಕೆ ಗೊತ್ತಾ, ಅಮ್ಮ ನನಗೆ ಹುಶಾರಿಲ್ಲದಾಗೆ ಹೀಗೆ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿ, ನಿಂಬೆ ಹಿಂಡಿ, ಕಲಸಿ ಉಂಡೆ ಮಾಡಿ ಕೊಡುತ್ತಿದ್ಲು, ಬೇಕೆಂದರೆ ನಂಜಿಕೊಳ್ಳಲು ನಿಂಬೆ ಉಪ್ಪಿನಕಾಯಿ ಜತೆಯಿರುತ್ತಿತ್ತು, ಪ್ರಯತ್ನಿಸಿ ನೋಡಿ, ಎಲ್ಲ ಸರಿಯಾದ ಪ್ರಮಾಣದಲ್ಲಿ ಹದವಾಗಿ ಬೆರೆಸಿ ಬಿಸಿಬಿಸಿ ಅನ್ನ ಇದ್ದರೆ ಅದರ ರುಚಿಯೇ ಬೇರೆ. ಅದು ಇವಳಿಗೆ ಗೊತ್ತಾದದ್ದೆಲ್ಲಿ, ಅಮ್ಮ ಸೊಸೆಗೆ ನಾಲೇಜು ಟ್ರಾನ್ಸಫರ್(ಈ ಸಾಫ್ಟವೇರಿನ ಉದ್ಯೊಗದಲ್ಲಿ ಒಬ್ಬ ಕೆಲಸ ಬಿಡಬೇಕಾದ್ರೆ ಮಾಡಿದ ಎಲ್ಲ ಪ್ರೊಜೆಕ್ಟಿನ ಮಾಹಿತಿ ಮತ್ತೊಬ್ಬನಿಗೆ ನೀಡುತ್ತಾನೆ ಅದೇ ಇದು..) ಮಾಡಿದ್ದು ಯಾವಾಗ??. ಖುಶಿಯಾಗೆ ಬರಸೆಳೆದು ಮುತ್ತಿಕ್ಕಲೇ ಅನ್ನಿಸಿತು, ಮತ್ತೆ ನೆನಪಾಯಿತು.. "ನಾನ್ಯಾಕೆ?"...

ಚೆನ್ನಾಗಿ ಕಲಸಿ ತಿನ್ನುತ್ತಿದ್ದರೆ ಉಪ್ಪಿನಕಾಯಿ ಕಳೆದುಕೊಂಡಂತಾಯಿತು, ಬೇಕೆಂತಲೇ ತಂದಿಲ್ಲ ಅವಳು ಕೇಳಿದರೆ ಕೊಡೊಣವೆಂದು, ನಾ ಕೇಳಬೇಕಲ್ಲ?. ಮೊದಲು ಉಪ್ಪಿನಕಾಯಿ ಬಾಟಲಿ ಇರುತ್ತಿದ್ದ ಜಾಗದಲ್ಲಿ ಹುಡುಕಾಡಿದಂತೆ ಮಾಡಿದೆ, ಅವಳಿಗೆ ಗೊತ್ತಾಗಲಿ ಅಂತ, ಕ್ಷಣ ಮಾತ್ರದಲ್ಲಿ ಉಪ್ಪಿನಕಾಯಿ ಪ್ರತ್ಯಕ್ಷ! ತಂದಿಟ್ಟಿಳಲ್ಲ, ತಟ್ಟೆ ನೆಕ್ಕಿ ತೊಳೆಯೊದೇ ಬೇಡ ಹಾಗೆ ಮಾಡಿಟ್ಟೆ. ಇನ್ನೂ ಕೈ ನೆಕ್ಕುತ್ತಿದ್ದೆ, ಆಸೆಗಣ್ಣಿನಿಂದ ನೊಡುತ್ತ, ಅವಳಿಗೆ ನಗು ಬಂದಿರಬೇಕು, ಹಾಗೇ ತಡೆದುಕೊಂಡು ಮತ್ತಿಷ್ಟು ನೀಡಿದಳು, ಅವಳ ಮುಖದಲ್ಲಿ ಮುಗುಳ್ನಗು ಹೊರ ಬರಲು ಕಾಯುತ್ತಿತ್ತು, ಅವಳು ಬಿಟ್ಟರೆ ತಾನೆ, "ನಾನ್ಯಾಕೆ??" ಅಂತ ಅವಳೂ ಕೂಡ...

ಅಂತೂ ಊಟ ಮುಗಿಸಿ, ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡೆ, ಇನ್ನೂ ಸ್ವಲ್ಪ ತಲೆ ನೋವಿತ್ತು, ಅವಳೂ ಬಂದು ಉರುಳಿದಳು, ನಡುವೆ ಅಂತರವಿತ್ತು, ನಿದ್ರೆ ಮಾತ್ರ ಬರುತ್ತಿಲ್ಲ, ಆಕಡೆ ಈಕಡೆ ಹೊರಳಾಡುತ್ತಿದೆ, ಬಹಳ ಹೊತ್ತಿನವರೆಗೆ... ನಾಳೆ ನಾನೇ ಮಾತಾಡಿಸಿಬಿಡೋಣ ಎನು ಮಹಾ ವಿಷಯ, ತಪ್ಪು ನಂದೇ ಅಲ್ಲವೇ, ಇನ್ನೊಂದು ಬಾರಿ ನಾನೇ ರಾಜಿಯಾದರೆ ಏನಾಗುತ್ತೆ, ಈಗ ಮಲಗಿದ್ದಾಳೆ ಇಲ್ಲದಿದ್ರೆ ಈಗಲೇ... ಅಂತ ಯೊಚನೆಯಲ್ಲೇ ಇದ್ದೆ. ಅವಳೀಗೂ ಪಾಪ ತಲೆ ನೋವು ಇನ್ನೂ ಕಡಿಮೆಯಾಗಿಲ್ಲವೇನೋ ಅನಿಸಿರಬೇಕು, ಪ್ರತೀ ಬಾರಿ ನಾನೇ ಹಠ ಸಾಧಿಸುತ್ತೇನೆ, ಇಂದು ನಾನೇ ಯಾಕೆ ಸೋಲಬಾರದು, ಅದೇ ಯಾವಾಗ್ಲೂ "ಅವರ್‍ಯಾಕೆ" ಅಂತ... ನಿಧಾನವಾಗಿ ಹತ್ತಿರ ಬಂದಳು, ಹಣೆಮೇಲೆ ಕೈಯಿಟ್ಟು ನಿಧಾನವಾಗಿ ಒತ್ತತೊಡಗಿದಳು, "ನಿದ್ರೆ ಬರ್ತಿಲ್ವಾ" ಅಂತಿದ್ಲು... ಬಾಯಿಮೇಲೆ ಕೈಯಿಟ್ಟೆ, ನಾ ಸೋತು ಗೆಲ್ಲಬೇಕೆಂದಿದ್ದರೆ, ಸೋತು ಗೆದ್ದುಬಿಟ್ಟಿದ್ಲು, ಕಣ್ಣಾಲಿಗಳು ತುಂಬಿ ಬಂದವು ಸಧ್ಯ ಕತ್ತಲೆಯಿತ್ತು ಅವಳಿಗೆ ಕಾಣಲಿಕ್ಕಿಲ್ಲ, "ನಿನ್ಮೇಲೆ ಸುಮ್ನೇ ರೇಗಿದೆ.. " ಅಂತ ಏನೋ ಹೇಳ ಹೋದೆ, ಅವಳು ಬಾಯಿ ಮುಚ್ಚಿಬಿಟ್ಲು, ಇಷ್ಟೊತ್ತು ಮಾತಾಡಲು ಹಾತೊರೆಯುತ್ತಿದ್ದವರಿಗೆ ಮಾತೇ ಬೇಡವಾಗಿತ್ತು, ಎದೆ ಮೇಲೆ ಎರಡು ಹನಿ ಬಿದ್ದಂತಾಯಿತು, ನನ್ನದೋ??? ಅವಳದೂ ಜಿನುಗಿರಬಹುದು, ಯಾರದಾದರೇನು ಯಾರು ಸೋತರು, ಯಾರು ಗೆದ್ದರು, ಅದೆಲ್ಲ "ನಾನ್ಯಾಕೆ" ಯೋಚಿಸಲಿ, ಅಲ್ಲಲ್ಲ ಅದೆಲ್ಲ "ನಮಗ್ಯಾಕೆ"...
"ನಾನ್ಯಾಕೆ?" ಅಂತ "ನಾನ್ಯಾಕೆ" ಹಠ ಸಾಧಿಸಲಿ, ಎಷ್ಟೆಂದರೂ ಅವಳು "ನನ್ನಾಕೆ"...

ಹೀಗೇ ಬರುತ್ತಿರಿ, ನನ್ನಾಕೆಯೊಂದಿಗೆ ಮತ್ತೆ ಸಿಗುತ್ತೇನೆ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


The PDF document can be found at http://www.telprabhu.com/naanyaake.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

28 comments:

Keshav.Kulkarni said...

ಚೆನ್ನಾಗಿದೆ ಕತೆ! ವ್ಯಾಸರಾಯರು ತುಂಬಿದ ಸಭೆಯಲ್ಲಿ "ನಾನು ಸ್ವರ್ಗಕ್ಕೆ ಹೋಗುತ್ತೇನಾ?" ಎಂದು ಕೇಳಿದಾಗ, ಕನಕದಾಸರು ಹೇಳಿದರಂತೆ, "ಇಲ್ಲ ಸ್ವಾಮಿ, ನಾನು ಹೋದರೆ ಹೋದೇನು"! ಉಳಿದ ಎಲ್ಲರೂ "ಎಲಾ ಕನಕನ ಸೊಕ್ಕೇ!" ಎನ್ನುತ್ತಿರುವಾಗ, ವ್ಯಾಸರಾಯರು ಗುಟ್ಟನ್ನು ಬಿಡಿಸಿದರಂತೆ: "ನಾನು" ಅನ್ನುವುದು ಹೊರಟುಹೋದರೆ ಯಾರು ಬೇಕಾರರೂ ಸ್ವರ್ಗಕ್ಕೆ ಹೋಗಬಹುದು, ಎಂದು. "ನಾನು" ಹೋದರೆ ಹೋದೇನು! ನಿಮ್ಮ ಕತೆಯ "ನಾನ್ಯಾಕೆ?" ಓದಿ ಇದೆಲ್ಲ ನೆನಪಾಯಿತು.

- ಕೇಶವ (www.kannada-nudi.blogspot.com)

guruve said...

ಬಹಳ ಸೊಗಸಾಗಿದೆ... ಹೊಗಳಲು ಬೇರೇನೂ ವಿಶೇಷಣಗಳಿಲ್ಲ...

maaya said...

ಪ್ರಭು ಅವರೇ,
ತುಂಬಾ ಚೆನ್ನಾಗಿದೆ, ಸಂಸಾರ ಎಂಬ ತಕ್ಕಡಿಯಲ್ಲಿ ನಾನು ನಾನ್ಯಾಕೆ ಎಂಬ ಪದಕ್ಕೆ ಜಾಗವಿದ್ದರೆ ಜೀವನ ಸುಗಮವಾಗಿ ಸಾಗುವಿದಿಲ್ಲ, ಸೋಲುವುದರಲ್ಲಿ ಇರೋ ಸುಖ ಗೆಲ್ಲುವುದರಲ್ಲಿ ಇರುವುದಿಲ್ಲ, ನಿಜ ನಿಮ್ಮ ಮಾತು.. ತುಂಬಾ ಹಿಡಿಸಿತು, ಧನ್ಯವಾದಗಳು,
ಹೇಮಾ

ವಿನುತ said...

ಈ EGO ಗಳು ಅತಿಯಾದರೆ ಹೇಗೆ ನಮ್ಮ ಜೀವನವನ್ನು ಹಾಳು ಮಾಡಬಹುದು ಅನ್ನೋದನ್ನ ಚೆನ್ನಾಗಿ ಹೇಳಿದಿರ. ಸರಿಯಾಗಿ ಅರ್ಥ ಮಾಡಿಕೊಂಡಿರೋ ದಾ೦ಪತ್ಯದಲ್ಲಿ, ಗ೦ಡ ಹೆ೦ಡಿರ ಜಗಳ ಉ೦ಡು ಮಲಗುವ ತನಕ ಮಾತ್ರ ಅಂತ ಬಲ್ಲವರು ಹೇಳ್ತಾರೆ. ನಮ್ಮ ಬರಹದಿ೦ದ ಗೊತ್ತಾಯ್ತು

Nisha said...

ಸೋಲು ಗೆಲುವಿನ ಮೆಟ್ಟಿಲು ಎಂದು ಸೊಗಸಾಗಿ ಚಿತ್ರಿಸಿದ್ದೀರ. ಸಂಸಾರದಲ್ಲಿ ಯಾವತ್ಹಿದ್ದರು ಸೋತು ಗೆಲ್ಲಬೇಕು. ನಾನು ನನ್ನದು ಎನ್ನುವುದನ್ನು ಬಿಟ್ಟರೆ ಸಂಸಾರ ಯಾವತ್ಹಿದ್ದರು ಸುಖದ ಸಾಗರ. ನಿಮ್ಮ ಕಲ್ಪನೆಯ ಅನುಭವದ ನುಡಿಗಳು ಹೀಗೆ ಹರಿದು ಬರುತಿರಲಿ.

SSK said...

ನಿಮ್ಮನ್ನು ಮತ್ತು ನಿಮ್ಮ ಲೇಖನವನ್ನು ಹೊಗಳಿ ಬರೆಯಲು ಪ್ರಯತ್ನಿಸಿದಾಗ, ನನಗೆ ಶಬ್ದ ಕೋಶದಲ್ಲಿ ಯಾವುದೇ ಪದಗಳು ಹೊಳೆಯಲಿಲ್ಲ!!!!!
ಹಾಗಾಗಿ ನಾನು ಇಷ್ಟು ಮಾತ್ರ ಹೇಳಬಲ್ಲೆ, ನಿಮ್ಮ ಲೇಖನ SIMPLY SUPERB!!!

Anonymous said...

Super :)

ಶಿವಪ್ರಕಾಶ್ said...

ಪ್ರಭು,
ತುಂಬಾ ಚನ್ನಾಗಿದೆ...
ಧನ್ಯವಾದಗಳು...

Prabhuraj Moogi said...

Keshav Kulkarni ಅವರಿಗೆ:
ಕನಕದಾಸರ ಆ ಕಥೆ ಕೇಳಿದ್ದೆ, ಇಲ್ಲಿ ಎಷ್ಟು ಪ್ರಸ್ತುತ ಅದು. ಬರೀ ಒಂದು ವಾಕ್ಯದಲ್ಲೇ ಎಲ್ಲ ಅರ್ಥ ಬರುವಂತೆ ಅವರು ಹೇಳಿದ್ದನ್ನು, ನಾ ಪುಟಗಟ್ಟಲೆ ಬರೆದಿರುವೆ, ನಾನ್ಯಾಕೆ ಕೂಡ ಅದೇ ಹೇಳೋದು, ನಿಮ್ಮನಿಸಿಕೆ ಬಹಳ ಚೆನ್ನಾಗಿತ್ತು.

guruve ಅವರಿಗೆ:
ಓದಿ ಅನಿಸಿಕೆ ಬರೆದದ್ದಕ್ಕೆ ಧನ್ಯವಾದಗಳು, ಹೊಗಳಬೇಡಿ, ಹೀಗೇ ಹೊಗಳಿದರೆ ನನಗೂ "ನಾನು" ಅನ್ನೊದು ಬಂದು ಬಿಟ್ಟೀತು...

maaya ಅವರಿಗೆ:
ಸಂಸಾರದ ತಕ್ಕಡಿಗೆ ಎರಡೂ ಕಡೆ ಭಾರ ಸರಿಯಾಗಿದ್ದರೆ ಎಲ್ಲ ಸರಿ ಸ್ವಲ್ಪ ಒಂದು ಕಡೆ "ನಾನು" ಅನ್ನೋದು ಜಾಸ್ತಿಯಾದರೆ ತೂಕ ತಪ್ಪಿ ಜಾರಿಬಿಡುತ್ತದೆ. ತಮ್ಮ ನಿರಂತರ ಪ್ರೊತ್ಸಾಹಕ್ಕೆ ಧನ್ಯವಾದಗಳು.

Vinutha ಅವರಿಗೆ:
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅಂದಿದ್ದು ಬಹಳ ಚೆನ್ನಾಗಿತ್ತು, ಕೆಲವು ಸಾರಿ ಗಂಡ ಹೆಂಡಿರ ಜಗಳ ಉಂಡು ಮಲಗಿದ ಬಳಿಕ ಕೂಡ ಶುರುವಾಗುತ್ತವೆ, ಆಗ ಏನು ಮಾಡೊದು?(ಸುಮ್ನೆ) ತಮಾಷೆ ಮಾಡಿದೆ. ವನ್ನು ಇಗೋ ನಾ ಬಿಟ್ಟುಬಿಟ್ಟೆ ಅಂತ ಬಿಟ್ಟುಬಿಡಬೇಕು ಅಲ್ಲವೇ. ಹೀಗೆ ಬರುತ್ತಿರಿ.

Nisha ಅವರಿಗೆ:
ನಾನು ನನ್ನದು ಹೋಗಿ ನಾವು ನಮ್ಮದು ಆದರೆ ಆದರೆ ಅದೇ ಸಂಸಾರ ಅಂದರೆ ಹೇಗೆ. ಹೀಗೇ ನಿಮ್ಮ ಪ್ರೊತ್ಸಾಹವಿದ್ದರೆ ನನ್ನ ಕಲ್ಪನೆಗಳಿಗೆ ಬರವಿಲ್ಲ, ಬರುತ್ತಿರಿ, ನಾ ಬರೆಯುತ್ತಿರುತ್ತೇನೆ...

SSK ಅವರಿಗೆ:
ಅಯ್ಯೋ ಬಹಳ ಹೊಗಳಿ, ಹಿಗ್ಗಿಸಿ ಬಿಡಬೇಡಿ, ನಾನು, ನಾನೇ ಅಂತ ನನಗೂ ಅಹಂಕಾರ ಬಂದೀತು, ನಾನಿನ್ನು ಬರಹಲೋಕಕ್ಕೆ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವವ, ಮುಗ್ಗರಿಸುತ್ತ, ಮುಂದಡಿಯಿಡುತ್ತಿರುವೆ, ನಿಮ್ಮ ಸಲಹೆ, ಅನಿಸಿಕೆಗಳು ಬಹಳ ಅವಶ್ಯ. ಹೀಗೆ ಬರುತ್ತಿರಿ.

Anonymous ಅವರಿಗೆ:
ಅನಾಮಧೇಯರಿಗೆ ಧನ್ಯವಾದಗಳು, "ನಾನ್ಯಾರು", "ನಿನಗ್ಯಾಕೆ" ಅಂತ ಹೆಸರು ಬರೆದಿಲ್ಲವೆಂದು ಕಾಣುತ್ತದೆ.

ಶಿವಪ್ರಕಾಶ್ ಅವರಿಗೆ:
ಧನ್ಯವಾದಗಳು, ಬರುತ್ತಿರಿ, ಇನ್ನೂ ಬಹಳ ಬರುವುದಿದೆ..

Ittigecement said...

ಪ್ರಭು...
ಬರಲು ತಡವಾಗಿದ್ದಕ್ಕೆ ಕ್ಷಮೆ ಇರಲಿ....

ಸಣ್ಣ ಅಹಂಭಾವ..,
ನವಿರಾದ ಹಾಸ್ಯದೊಂದಿಗೆ...
ಒಳ್ಳೆಯ ರುಚಿ...

ನೀವು ಕಥೆ ಬರೆಯುವ ಕೆ.ಎಸ್.ನ.....!

ಬಹಳ ಇಷ್ಟವಾಯಿತು...
ಅಭಿನಂದನೆಗಳು...

shivu.k said...

ಪ್ರಭುರಾಜ್,

ನಿಮ್ಮೆಲ್ಲಾ ಬರವಣಿಗೆಗಿಂತ ಇದರಲ್ಲಿ ಸಂಸಾರದ ಸಾರವಿದೆ...ಭಾವನೆಗಳ ಒಳ ಅರ್ಥವಿದೆ...ಆಹಂ...ಮತ್ತು ಶರಣಾಗತಿಯ ಸ್ವರ್ಧೆಯಿದೆ...ಇದೆಲ್ಲಕ್ಕೂ ಮೀರಿದ ನಾನ್ಯಾಕೆಯಿಂದ ನಾವ್ಯಾಕೆವರಿಗಿನ ಅದ್ಯಾತ್ಮಿಕ ಸ್ಪರ್ಶವಿಧೆ.....
ತುಂಬಾ ಉತ್ತಮವಾದ ಬರಹ...ಮುಂದುವರಿಸಿ...
ಅಭಿನಂದನೆಗಳು...

ಮನಸು said...

ಹಾಸ್ಯಮಯ ಹಮ್ಮು ಬಿಮ್ಮಿನ ವಿವರಣೆ ಎಲ್ಲವು ಚೆನ್ನಾಗಿದೆ...

ಸಾಗರದಾಚೆಯ ಇಂಚರ said...

ಪ್ರಭುರಾಜ್ ಅವರೇ,
ತುಂಬಾ ಚೆನ್ನಾಗಿ ಹಾಸ್ಯದ ಮೂಲಕ ವಿವರಣೆ ಮನ ತಟ್ಟಿತು. ಹೀಗೆಯೇ ಬರೆಯುತ್ತಿರಿ

Prabhuraj Moogi said...

shivu ಅವರಿಗೆ:
ಥ್ಯಾಂಕ್ಸ್ ಶಿವು ಸರ್, ನಾನು ನಾವು ನಡುವಿನ ಅಂತರ ತಿಳಿಸುವ ಪ್ರಯತ್ನ ಮಾಡಿದ್ದೇನೆ ಅಷ್ಟೇ.

ಮನಸು ಅವರಿಗೆ:
ಹಾಸ್ಯದೊಂದಿಗೆ ಸ್ವಲ್ಪ ಏನೋ ತಿಳಿದ ಮಟ್ಟಿನ ತಿಳುವಳಿಕೆ ಕೊಡಲು ಪ್ರಯತ್ನ

ಸಾಗರದಾಚೆಯ ಇಂಚರ ಅವರಿಗೆ:
ತಮಗೆ ನನ್ನ ಬ್ಲಾಗ್ ಗೆ ಸ್ವಾಗತ, ಹೀಗೆ ಬರುತ್ತಿರಿ..

Prabhuraj Moogi said...

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ತಾವು ಬರುತ್ತೀರೆನ್ನುವುದೇ ನನಗೆ ಹೆಮ್ಮೆ, ಸಮಯ ಸಿಕ್ಕಾಗ ಬನ್ನಿ.. ಕೆ ಎಸ್ ಎನ್ ರಿಗೆ ಎಲ್ಲ ಹೋಲಿಸಬೇಡಿ,ನಾನು ಅವರ ಲೆಕ್ಕಕ್ಕೆ ತೃಣ ಸಮಾನ... ತಪ್ಪು ಒಪ್ಪ್ಪುಗಳನ್ನು ಹೇಳಿ ತಿದ್ದಿ, ನಿಮ್ಮಂತ ಹಿರಿಯ ಬ್ಲಾಗಿಗರ ಸಲಹೆ ನನಗೆ ಅವಶ್ಯಕ...

ಮಲ್ಲಿಕಾರ್ಜುನ.ಡಿ.ಜಿ. said...

ನಾನೇನು ಬರೆಯಲಿ, ನೀವಷ್ಟು ಚೆನ್ನಾಗಿ ಬರೆದಿರುವಾಗ. ಓದುವ ಭಾಗ್ಯ ಸಾಲದೇ.Comment ಅನ್ನುವ ದೃಷ್ಟಿಬೊಟ್ಯಾಕೆ? ನಿಜಕ್ಕೂ ಸಂಸಾರದ ಸ್ವಾರಸ್ಯ ಎಷ್ಟೂ ರಸಗಳೊಂದಿಗಿದೆ ನಿಮ್ಮ ಬರಹದಲ್ಲಿ.

ಬಾಲು said...

thumba chennagi barediruviri!!! idu hogalige matahalla!!!

idannu oduttidda haage nange Sivayya avaru vaara pathrike yalli baareetha idda Sarasa anno ankana nenanpige banthu. ( tharanga or sudha sariyagi nenapilla)

Prabhuraj Moogi said...

ಮಲ್ಲಿಕಾರ್ಜುನ.ಡಿ.ಜಿ. ಅವರಿಗೆ:
ನೀವು ಓದುಗರು ಬಂದು ಓದುತ್ತಿರುವುದೇ ನನಗೆ ಹೆಮ್ಮೆ, ಸ್ವಾರಸ್ಯಕರವಾಗಿ ಬರೆಯಲು ಪ್ರಯತ್ನಿಸುತ್ತಿದ್ದೇನೆ ಸ್ವಲ್ಪ್ ಅದರಲ್ಲಿ ಸಫಲನಾಗಿದ್ದರೆ ಅದೇ ಹೆಚ್ಚು

ಬಾಲು ಅವರಿಗೆ:
ನೀವು ಹೇಳಿದ್ದು ಸರಿ, ಸರಸ ಅಂತ ಸುಧಾ ಪತ್ರಿಕೆಯಲ್ಲಿ ಇದೆ ತರಹದ ಅಂಕಣ ಬರ್ತಾ ಇತ್ತು, ಅದೇ ನನಗೆ ಹೀಗೆ ಬರೆಯಲು ಸ್ಪೂರ್ತಿ ಕೂಡಾ, ನಾನಾಗ ನನ್ನ ಹತ್ತನೆ ಕ್ಲಾಸಿನಲ್ಲಿ ಇದ್ದೆ ಅನಿಸತ್ತೆ, ಅದನ್ನ ಓದೋದು ನೋಡಿ ಅತ್ತೆ ಹತ್ರ ಬೈಸಿಕೊಂಡಿದ್ದೂ ಇದೆ... ಆದ್ರೆ ಓದಿದ್ದು ಯಾವುದೂ ನೆನಪಿಲ್ಲ ಈಗ(ಚೆನಾಗಿತ್ತು ಅನ್ನೋದು ಮಾತ್ರ ಗೊತ್ತು).. ಎಲ್ಲಿಯಾದರೂ ಓದೋಕೆ ಸಿಗುತ್ತೆ ಅಂದ್ರೆ ಹೇಳಿ ಮತ್ತೆ ಓದಬೇಕಿದೆ.

ಬಾಲು said...

Prabhu avare adu pustaka roopadalli bandide, nanu adanna odiruve kooda. adu college lib nalli ittu.
nanu adanna sudha dalli odutta ide, avaga nanu kooda highschool!!

e bhanuvaara sapna dalli vicharisuve.

Prabhuraj Moogi said...

To: ಬಾಲು
tumbaa thanks sir, oh book release aagideyaa, hesaru gottu maaDikoMdu hELi, I am desperate to read that... I recommend my blog readers also to read that book... his [sarasa]articles were really very good...

Ittigecement said...

ಪ್ರಭು../ ಬಾಲು....

ದಯವಿಟ್ಟು ನನಗೂ ಅ ಪುಸ್ತಕ ಬೇಕು..
ನಾನೂ ಇಷ್ಟಪಟ್ಟು ಓದುತ್ತಿದ್ದೆ...
ಸಿಕ್ಕರೆ ದಯವಿಟ್ಟು ತಿಳಿಸಿ...

ಪ್ರಭು...

ನಾನು ಮುಖಸ್ಥುತಿ ಮಾಡುತ್ತಿಲ್ಲ....

ನಿಮ್ಮ ಬರಹದಲ್ಲಿ
ಚಂದವಾದ ರಸಾನುಭೂತಿ ಇರುತ್ತದೆ...

Prabhuraj Moogi said...

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಪುಸ್ತಕಕ್ಕಾಗಿ ಬಹಳ ಹುಡುಕಾಡಿ ಬಂದೆ ಇಂದು, ಇನ್ನೂ ಸಿಕ್ಕಿಲ್ಲ. "ಅಂಕಿತ" ಪುಸ್ತಕ ಮಳಿಗೆಯಲ್ಲಿ ಕೇಳಿದಂತೆ, ಪುಸ್ತಕ ಬಂದು ಬಹಳ ವರ್ಷಗಳಾಯಿತಂತೆ, ಪ್ರತಿಗಳು ಮುಗಿದು ಸುಮಾರು ಎರಡು ವರ್ಷಗಳಾಗಿದೆಯಂತೆ, ಆದರೆ "ಅಂಕಿತ"ದವರು ಅದನ್ನು ಮತ್ತೆ ಮರುಮುದ್ರಣ ಮಾಡುವರಿದ್ದಾರಂತೆ ಎರಡು ತಿಂಗಳಾಗಬಹುದು ಅಂತಂದರು. ಹಾಗೆ "ಸಪ್ನ"ದಲ್ಲೂ ಕೇಳಿ ಬಂದೆ ಅಲ್ಲೂ ಸಿಕ್ಕಿಲ್ಲ. ನನ್ನ ಬ್ಲಾಗ್ ಓದುಗರೊಬ್ಬರು ಲೇಖಕರ ಊರಿನವರೇ, ಅವರು ನನಗೆ ಪುಸ್ತಕ ಪಡೆಯಲು ಸಹಾಯ ಮಾಡುವುದಾಗಿ ಹೇಳಿದ್ದಾರೆ, ಸಿಕ್ಕರೆ ಖಂಡಿತ ಹೇಳುತ್ತೇನೆ. ಪುಸ್ತಕ "ಸರಸ" ಲೇಖಕರು ಈಶ್ವರಯ್ಯ, ಎರಡು ಸಂಪುಟಗಳಿವೆಯಂತೆ, ನೀವೂ ಸಾಧ್ಯವಾದರೆ ಹುಡುಕಿ.

ನನ್ನ ಲೇಖನ ಮೆಚ್ಚಿದ ನೀವು ಅವರ ಪುಸ್ತಕ ಓದಿ ಸರ್, ನಾನೇನೂ ಅಲ್ಲ ಅವರ ಮುಂದೆ. ನಾನು ಆವಾಗಲಿನ್ನೂ ಹತ್ತನೆ ತರಗತಿಯಲ್ಲಿದ್ದೆ (1998ರಲ್ಲಿ) ನಾನು ಹೆಚ್ಚಿಗೆ ಓದಲಾಗಲಿಲ್ಲ, ಎರಡು ಮೂರು ಲೇಖನ ಓದಿರಬೇಕು ಆಗ ಮನೆಯಲ್ಲಿ ಅತ್ತೆಗೆ ಅದು ಗೊತ್ತಾಗಿ ಅಮ್ಮನ ಮುಂದೆ ನಿನ್ನ ಮಗ ಏನೇನು ಓದುತ್ತಿದ್ದಾನೆ ನೋಡು ಅಂತ ಬಯ್ದು ಬಿಟ್ಟರು, ಮನೆಯಲ್ಲಿ ದೊಡ್ಡ ಮಂಗಳಾರತಿಯಾಯ್ತು, ಮತ್ತೆ ಓದುವ ಸಾಹಸ ಮಾಡಲಿಲ್ಲ(ಆವಾಗಿನ್ನೂ ಈ ರೀತಿಯ ವೈವಾಹಿಕ ಜೀವನದ ಲೇಖನಗಳ ಓದುವ ಪ್ರಭುಧ್ಧತೆ ನನ್ನಲ್ಲಿರಲಿಲ್ಲ ಬಿಡಿ). ಓದಿದ್ದ ಸ್ವಲ್ಪವೂ ನೆನಪಿಲ್ಲ ಈಗ.

Raghavendra said...

dine dine nimma baraha tumba chennagi bartide... heege baritaa iri.. naavu odta irtivi :)

Prabhuraj Moogi said...

To: Raghavendra
tamma aniskege tuMbaa dhnyavaadagaLu.. neevellaa heege protsaahisuttiddare naa bareyuttiruttEne... heege baruttiri...

Veena DhanuGowda said...

Hello
Prabhu,

nange thumbha ista aytu
prathi ondu scene kan mudhe nadithirohage
baredidiri :)
its wonderfull :)

Prabhuraj Moogi said...

ಪ್ರೀತಿಯಿ೦ದ ವೀಣಾ :)ಅವರಿಗೆ
ಸೀನುಗಳ ಕಲ್ಪನೆ ಮಾಡಿಕೊಂಡು ಬರೆಯುತ್ತೇನೆ ಹಾಗಾಗಿ ಅದು ನಿಮಗೆ ಹಿಡಿಸಿರಬಹುದು... ಇನ್ನೂ ಕಲ್ಪನೆಗಳು ಬರಹವಾಗಲು ಸಾಕಷ್ಟು ಕಾದಿವೆ, ಹೀಗೆ ಬರುತ್ತಿರಿ..

Unknown said...

ನಿಮ್ಮನ್ನ ನೀವು ಅರ್ಥ ಮಾಡಿಕೊಂಡು ಮತ್ತೆ ನಿಮ್ಮ ಹೆಂಡತಿ ನಿಮ್ಮನ್ನ ಅರ್ಥ ಮಾಡಿ ಕೊಂಡಿರುವ ನಿಮ್ಮ ಈ ಬ್ಲಾಗ್ ಗೆ ಥ್ಯಾಂಕ್ಸ್
ಸುಖ ಸಂಸಾರದ ಸಣ್ಣ ಸಣ್ಣ ಸೂತ್ರಗಳು ಇವು. ನಿಮ್ಮ ಬರಹದ ವಿಚಾರ ಬೇರೆಯವರಿಗೆ ಮಾದರಿ.

Prabhuraj Moogi said...

Rani ಅವರಿಗೆ
ಚೆನ್ನಾಗಿತ್ತು ನಿಮ್ಮ ಅನಿಸಿಕೆ.. ಪರಸ್ಪರ ಅರ್ಥ ಮಾಡಿಕೊಂಡರೆ ಜೀವನವೇ ಅರ್ಥಪೂರ್ಣ ಅಲ್ಲವೇ ಹೀಗೆ ಬರ್ತಾ ಇರಿ..