Sunday, April 26, 2009

ರಂಗೋಲಿ


ಹಾಸಿಗೆಯಲ್ಲೇ ಬಿದ್ದು ಹೊರಳಾಡುತ್ತಿದ್ದೆ, ಯಾವ ಯಾವ ಕೋನ ತ್ರಿಕೋನಾಕಾರಗಳಲ್ಲಿ ಮೈಮುರಿಯಲು ಸಾಧ್ಯವಿತ್ತೊ ಅದೆಲ್ಲ ಮಾಡಿಯಾಗಿತ್ತು, ಆದರೂ ಇನ್ನೂ ಅವಳೇಕೇ ಬಂದು ಎಬ್ಬಿಸುತ್ತಿಲ್ಲ ಅಂತ ಯೋಚಿಸುತ್ತ ಬಿದ್ದುಕೊಂಡಿದ್ದೆ, ಏನಿಲ್ಲ ಎಬ್ಬಿಸಲು ಬಂದರೆ ಸ್ವಲ್ಪ ಕೀಟಲೆ ಮಾಡಿ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತದಂತ. ಅವಳೂ ಹಾಗೆ ಒಂದೊಂದು ದಿನ ಒಂದೊಂದು ಥರ ಏಳಿಸೊದು, ಒಂದು ದಿನ ಬಯ್ದು, ಬಡಿದು ಎಬ್ಬಿಸಿದರೆ, ಮತ್ತೊಂದು ದಿನ ಮಗು ಎಬ್ಬಿಸಿದ ಹಾಗೆ ಮೆಲ್ಲನೆ ಬಂದು ಮೈದಡುವವಳು. ಮಗುದೊಂದು ದಿನ "ಏಳಿ ಎದ್ದೇಳಿ.." ಅಂಥ ವಿವೇಕಾನಂದರ ಶೈಲಿಯಲ್ಲಿ ಹೊಸ ಹುರುಪುತುಂಬಿ ಎಬ್ಬಿಸೋದು... ಈ ವೈವಿಧ್ಯತೆಯಲ್ಲಿ ಏಕತೆ ಅನ್ನೊ ಹಾಗೆ ನಮ್ಮದು ವೈವಿಧ್ಯತೆಯಲ್ಲಿ ಏಳುವಿಕೆ. ಹೀಗೆ ಬರೆದರೆ ಏಳುವ ಬಗ್ಗೆ ನಾ ಪ್ರಬಂಧ ಮಂಡಿಸಬಹುದು.

ಇನ್ನೇನು ಅವಳು ಬರುವ ಹಾಗೆ ಕಾಣದಾದಾಗ ಎದ್ದೆ, ಎಲ್ಲಿರುವಳೆಂದು ಹುಡುಕಿದೆ ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ, ಅಯ್ಯೊ ದೇವದೂತರು ಬಂದು ದೇವಕನ್ಯೆಯೆಂದು ಎಲ್ಲಾದರೂ ಎತ್ತಿಕೊಂಡು ಹೋದರೋ ಅಂತ ಚಿಂತಿತನಾದೆ ಕೂಡ. ಮನೆ ಬಾಗಿಲು ಸ್ವಲ್ಪ ತೆರೆದಿರುವಂತೆ ಕಾಣಿತು, ಹೊರಬಂದು ನೋಡಿದರೆ ಅಲ್ಲಿರುವಳಲ್ಲ!!! ರಂಗೋಲಿ ಹಾಕುತ್ತಿದ್ದಾಳೆ. ಕುಕ್ಕರಗಾಲಿನಲ್ಲಿ ಕೂತು ಅದೇನೋ ಗಹನ ವಿಚಾರದಲ್ಲಿರುವಂತೆ ತನ್ಮಯತೆಯಿಂದ ಒಂದೊಂದೇ ರೇಖೆ ಎಳೆಯುತ್ತಿದ್ದಾಳೆ, ನಾನು ಸಾಫ್ಟವೇರ ಪ್ರೋಗ್ರಾಮ ಕೂಡ ಅಷ್ಟು ತನ್ಮಯತೆಯಿಂದ ಬರೆದಿರಲಿಕ್ಕಿಲ್ಲ. ಆದರೆ ರಂಗೋಲಿ ಬಿಡಿಸುತ್ತಿರುವುದು ಮತ್ತದೇ ನಾ ಬೇಡವೆಂದ ಜಾಗದಲ್ಲೇ! ಅದೇ ಗೇಟಿನ ಮುಂದೆ, ನನ್ನ ಬೈಕು ಹೊರ ತೆಗೆಯಲಾಗದಂತೆ...

ಇಂದಲ್ಲ ಇದು ನಿನ್ನೆ ಮೊನ್ನೆಯಿಂದಲೇ ನಡೆದಿರುವ ಶೀತಲ ಸಮರ, ಅದೊಂದು ದಿನ ನಾ ಬೇಗ ಆಫೀಸಿಗೆ ಹೋಗಬೇಕಿತ್ತು ಗೇಟಿನ ಮುಂದೆ ಇಷ್ಟು ಅಡ್ಡಗಲ ರಂಗೋಲಿ ಹಾಕಿಬಿಟ್ಟಿದ್ದಳು, ಅದನ್ನ ತುಳಿಯಲು ಮನಸಿಲ್ಲ, ಆದರೂ ಇನ್ನೇನು ಮಾಡಲಾಗುತ್ತೆ ಹಾಗೆ ಬೈಕು ಹೊರ ತೆಗೆದೆ, ರಂಗೊಲಿಯೆಲ್ಲ ಹಾಳಾಯಿತು, ಅಷ್ಟು ಇಷ್ಟಪಟ್ಟು ತೆಗೆದದ್ದು ಹಾಳಾಗಿದ್ದರಿಂದ ಅವಳೂ ಸಿಟ್ಟಿಗೆದ್ದು ಬಯ್ದಳು, ಅವಸರದಲ್ಲಿ ನಾ ಹಾಗೆ ಮಾಡಿದ್ದೆಂದರೂ, ಮುಂಜಾನೆಯೇ ಎದ್ದು ಬೈಕು ಹೊರಗಿಡಬೇಕಿತ್ತೆಂದು ಅವಳ ವಾದ, ನನಗೂ ಲೇಟಾಗಿದ್ದರಿಂದ ಆಕಡೆಯೆಲ್ಲಾದರೂ ಬಿಡಿಸಬೇಕಿತ್ತು ನಡೆದಾಡುವ ದಾರಿಯಲ್ಲಿ ಹಾಕಿದರೆ ಹೇಗೆ ಅಂತ ನಾನು, ಅಂತೂ ಮನಸ್ತಾಪವಾಗಿತ್ತು. ಹೀಗೆ ಕೆಲದಿನ ಅವಳು ಮತ್ತದೇ ಜಾಗದಲ್ಲಿ ರಂಗೋಲಿ ಬಿಡಿಸುವುದು.. ಮತ್ತದೇ ರಾಗ ಮತ್ತದೇ ತಾಳ... ಇಂದು ಅವಳು ತಾದ್ಯಾತ್ಮತೆಯಿಂದ ಆ ರಂಗೋಲಿ ಬಿಡಿಸುತ್ತಿರುವುದ ನೋಡುತ್ತಿದ್ದರೆ ಏನಿದು? ಏನಿದೆ ಈ ರಂಗೋಲಿಯಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ತೀರ್ಮಾನಿಸಿದೆ.

ಅವಳು ನನ್ನ ನೋಡಿರಲಿಲ್ಲ, ನೋಡಲೆಂದೇ ಜೋರಾಗಿ ಆಕಳಿಸಿ ಮೈಮುರಿದೆ, "ಏನೊ ಮಹರಾಜರಿಗೆ ಈಗ ಏಳೊಣವಾಯಿತೋ!" ಅಂತಂದಳು. ಹಲ್ಲುಜ್ಜದ ಹಲ್ಲುಗಳನ್ನೇ ತೆರೆದು ಹೀ.. ಅಂತ ಹಲ್ಲು ಗಿಂಜಿದೆ. "ಬಂದೆ ಟೀ ಇನ್ನೂ ಮಾಡಬೇಕು" ಅಂತ ಮತ್ತೆ ಉಲಿದಳು, "ಏನು ಮಹರಾಣಿಯವರು ಸ್ವತ: ಖುದ್ದಾಗಿ ರಾಜಬೀದಿಯನ್ನು ಅಲಂಕರಿಸುವಂತಿದೆ" ಅಂತ ಅವಳಿಗಿಂತ ನಾನೇನು ಕಮ್ಮಿ ಅನ್ನುವಂತೆ ಡೈಲಾಗು ಹೊಡೆದೆ. ಮುಖವೆತ್ತಿ ನೋಡಿದವಳು, ಹಲ್ಲು ಗಿಂಜುತ್ತಿದ್ದ ನನಗೆ "ಮೊದಲು ಹಲ್ಲು ಉಜ್ಜಿ ಹೋಗಿ, ಬರ್ತೇನೆ" ಅಂತ ಖಾರವಾದಳು. ಹಲ್ಲುಜ್ಜಿ ಬಂದವನು ಮತ್ತೆ ಹಾಗೇ ನೋಡತೊಡಗಿದೆ, ಬಹಳ ಅಂದವಾಗಿ ಬಿಡಿಸಿದ್ದಳು,
ನಡುವೆಯೊಂದು ಗುಲಾಬಿ ಹೂವಿನ ತೊಟ್ಟು, ಸುತ್ತಲೂ ಹರಡಿರುವ ಪಕಳೆಗಳು, ಅಲ್ಲೊಂದು ಇಲ್ಲೊಂದು ಅನ್ನುವಂತೆ ಎಲೆಗಳು. ಮೊದಲೆಲ್ಲ ಅಷ್ಟು ಗಮನಿಸಿರಲಿಲ್ಲ, ನನ್ನ ಬೈಕು ತೆಗೆಯುವುದೇ ನನಗೆ ಹೆಚ್ಚಾಗಿತ್ತು. ಅವಳು ಬಿಡಿಸುತ್ತಿದ್ದಲ್ಲಿಗೇ ಹೋಗಿ ಕುಳಿತೆ, ಓರೆಯಾಗಿದ್ದ ಎಲೆಯ ಎಸಳೊಂದನ್ನು ಸರಿಪಡಿಸಿದೆ, ಅಷ್ಟರಲ್ಲಿ "ರೀ ಎದ್ದೇಳ್ರಿ, ಸಾಕು ನೀವೇನಿದು, ಯಾರಾದರೂ ಏನಂದುಕೊಂಡಾರು" ಅಂತ ಎದ್ದೇಳಿಸಿಯೇಬಿಟ್ಟಳು.

ಒಳಗೆ ಬಂದಮೇಲೆ ಬಿಸಿ ಬಿಸಿ ಟೀ ಸಿಕ್ಕಿತು, ಸ್ನಾನ ಮಾಡದೇ ಹಾಗೆ ಎದ್ದು ಹೊರಗೆ ಹೊರಟೆ, ಶರ್ಟು ಹಾಕಿಕೊಳ್ಳುತ್ತಿದ್ದಂತೇ "ಎಲ್ಲಿ" ಅಂತ ಬಂದು ಕೇಳಿದಳು, "ಈಗ ಬಂದೆ" ಅಂತ ಸುಮ್ಮನೇ ಏನೂ ಹೇಳದೇ ಹಾಗೆ ಹೊರಟೆ, ಹೊರಬಂದು ಹಲಗೆಯೊಂದು ತಂದು ಸ್ವಲ್ಪ ಎತ್ತರಿಸಿ ರಂಗೋಲಿ ಮೇಲಿಟ್ಟು ಅದು ಸ್ವಲ್ಪವೂ ಹಾಳಾಗದಂತೆ ಹರಸಾಹಸ ಮಾಡಿ ಬೈಕು ಹೊರತೆಗೆದೆ. ಅವಳು ನಿಂತು ಕಿಟಕಿಯಲ್ಲಿ ನೋಡುತ್ತಿದ್ದಳು, ಹೊರಗೆ ಬಂದು "ಪರವಾಗಿಲ್ಲ ಹಾಗೇ ಅದರ ಮೇಲೆ ಹೋಗಿ ಏನಾಗಲ್ಲ" ಅಂದ್ಲು ಆದ್ರೂ ರಂಗೋಲಿಗೇನೂ ಆಗದಂತೆ ಹೊರಬಂದೆ. ಸೀದಾ ಅಂಗಡಿಗೆ ಹೋಗಿ ನಾಲ್ಕು ಥರ ಕಲರು, ಅದನ್ನ ಹಾಕಿಡಲು ಚೌಕಾಕಾರದ ಖಾನೆಗಳಿರುವ ಡಬ್ಬಿ ಎಲ್ಲ ತೆಗೆದುಕೊಂಡು ಮನೆಗೆ ಬಂದು, ರಂಗೋಲಿಗೆ ಬಣ್ಣ ಮಿಶ್ರಣ ಮಾಡಿ ಅವಳ ಕೈಗಿತ್ತು ಅದರಲ್ಲಿ ಬಣ್ಣ ತುಂಬೆಂದೆ. ಒಂಥರ ನನ್ನ ಬದುಕೆಂಬ ರಂಗೊಲಿಯಲ್ಲಿ ಬಣ್ಣ ತುಂಬು ಅಂದಂಗಿತ್ತು.

"ಆಂ ಅಲ್ಲಿ ಹಸಿರು, ಅಲ್ಲಿ ತಿಳಿ ಹಸಿರು, ಗುಲಾಬಿ ಸ್ವಲ್ಪ ತಿಳೀಯಾದರೆ ಚೆನ್ನಾಗಿರುತ್ತದೆ" ಅಂತನ್ನುತ್ತ ಅವಳು ಬಣ್ಣ ತುಂಬುತ್ತಿರಬೇಕಾದರೆ ಅಲ್ಲೇ ಹತ್ತಿರ ಕುಳಿತಿದ್ದೆ, ಪಕ್ಕದ ಮನೆ ಪದ್ದು ನೋಡಿ ಅಸೂಯೆಪಟ್ಟಿದ್ದೆ ಪಟ್ಟಿದ್ದು. ಅಂತೂ ರಂಗೋಲಿ ತುಂಬ ಬಣ್ಣ ಬಳಿದದ್ದಾಯ್ತು. ಬಾಗಿಲು ತೆರೆದೇ ಇಟ್ಟಳು ರಂಗೋಲಿ ಕಾಣುತ್ತಿರಲೆಂದು, ಮತ್ತೊಂದು ರೌಂಡು ಅಂತ ಟೀ ಹೀರುತ್ತ ಅದೇ ರಂಗೋಲಿ ನೋಡುತ್ತ ಕುಳಿತವನ ಹತ್ತಿರ ಬಂದು ಅಂಟಿಕೊಂಡು ಕುಳಿತಳು, "ರೀ ಏನ್ ನೀವ್ ಇಷ್ಟೆಲ್ಲ ಮಾಡಿದ್ರೆ, ನಾ ಅಲ್ಲಿ ರಂಗೋಲಿ ಹಾಕದೇ ನಿಮ್ಮ ಬೈಕಿಗೆ ದಾರಿ ಬಿಡ್ತೀನಿ ಅನ್ಕೊಂಡಿದೀರಾ?" ಅಂತ ತಣ್ಣಗೆ ಕೇಳಿದಳು ಅವಳ ಅನುಮಾನವು ಸರಿಯಾಗಿತ್ತು, ದಿನಾಲೂ ರಂಗೊಲಿ ಹಾಕಿದ್ದಕ್ಕೆ ಬಯ್ಯೊವರು ಇಂದು ಅದರಲ್ಲಿ ಬಣ್ಣ ತುಂಬುತ್ತಾರೆಂದ್ರೆ ಅನುಮಾನ ಬಾರದಿರುತ್ತದೆಯೇ, ಇವಳು ಅಂತ ಕೇಳಿ ಪರೀಕ್ಷಿಸ್ತೀದಾಳೆ, ಬೇರೆಯವರಾಗಿದ್ರೆ, ಹಾಗೇ ಅಂದುಕೊಂಡು ಸುಮ್ಮನಾಗಿರುವವರು. "ಮರದ ಹಲಗೆ ಇದೆ, ಏನ್ ಪ್ರಾಬ್ಲಂ ಇಲ್ಲಾ, ನೀನೆಲ್ಲೇ ರಂಗೋಲಿ ಹಾಕು ನನಗೇನೂ ಅಭ್ಯಂತರವಿಲ್ಲ" ಅಂದೆ, "ನಂಗೊತ್ತು ಇಂದು ನಿಮಗೆ ರಂಗೋಲಿ ಇಷ್ಟವಾಗಿದೆ, ಇಲ್ಲಾಂದ್ರೆ ಬಣ್ಣ ಎಲ್ಲ ತಂದಿದ್ದು ಯಾಕೆ" ಅಂದ್ಲು... ನಾನೇನೂ ಹೇಳದೇ ನನಗೆ ರಂಗೋಲಿ ಇಷ್ಟವಾಗಿದ್ದನ್ನು ತಿಳಿಯಪಡಿಸಿದ್ದೆ. "ಮೊನ್ನೇನೂ ನೀನು ಚೆನ್ನಾಗೆ ಬಿಡಿಸಿರಬೇಕು, ನನಗೆ ನೋಡುವ ವ್ಯವಧಾನವಿರಲಿಲ್ಲ ಅಷ್ಟೇ, ನನಗೆ ಬೈಕು ತೆಗೆಯುವುದು ಮುಖ್ಯವಾಗಿತ್ತೇ ಹೊರತು ನೀ ಕಷ್ಟಪಟ್ಟು ಬಿಡಿಸಿದ ರಂಗೋಲಿಯನ್ನೆಲ್ಲ ನೋಡುವುದಲ್ಲ" ಅಂದೆ. "ಅಯ್ಯೊ ಅದರಲ್ಲೇನು ಮಹಾ, ಕಷ್ಟಪಡೋದು, ಸುಮ್ನೇ ಹಾಕಿದ್ದು" ಅಂದ್ಲು "ಯಾವಾಗ ಕಲಿತೆ" ಅಂದೆ. "ಅದಕ್ಕೇನು ಸ್ಕೂಲಾ ಟೀಚರಾ ಅಮ್ಮ ಬಿಡಿಸುವುದ ನೋಡಿ ಕಲಿತೆ" ಅಂದ್ಲು, ಮತ್ತೆ ಯಾವ ಯಾವ ಡಿಸೈನು ಹಾಕುತ್ತಾಳೆ, ಏನಾದ್ರು ಅಚ್ಚುಗಳನ್ನು ತಂದಿಟ್ಟಿದ್ದಾಳಾ, ಅಂತೆಲ್ಲ ಕೇಳಿ ತಿಳಿದುಕೊಂಡೆ, ಅವಳೂ ಬಲು ಹುರುಪಿನಿಂದ ಹೇಳಿದಳು, ಅದು ಬರೀ ಹೊಗಳಿಕೆಗಾಗಿ ಆಗಿರಲಿಲ್ಲ, ಅವಳ ಕಲೆಗೆ ನನ್ನ ಪ್ರಶಂಸೆಯಾಗಿತ್ತು, ಅದರಲ್ಲಿ ನಾ ಆಸಕ್ತಿ ತೋರಿಸಿದ್ದೆ, ಇಷ್ಟೆಲ್ಲ ದಿನ ಶೀತಲ ಸಮರಕ್ಕೂ ಕಾರಣ ಅವಳ ಆ ಕಲೆಯನ್ನು ನಾ ಗುರಿತಿಸಲಾಗದಿದ್ದದ್ದೇ, ಹಾಗೂ ಅದಕ್ಕೆ ತಕ್ಕ ಮನ್ನಣೆ ಕೊಡದಿದ್ದುದು ಅಷ್ಟೇ. ಅವಳಿಗೆ ಕೆಲವು ಹೊಸ ಹೊಸ ಆಧುನಿಕ ಡಿಸೈನುಗಳನ್ನೂ ಬರೆದು ಕೊಟ್ಟೆ, ಜತನವಾಗಿ ತೆಗೆದಿಟ್ಟುಕೊಂಡಳು.

ಎಷ್ಟೋ ಬಾರಿ ಏನೊ ಚೆನ್ನಾಗಿರುವುದ ನೊಡುತ್ತೇವೆ, ಅದನ್ನ ನಾವು ಹೊರಗೆ ಹೇಳಲ್ಲ, ರುಚಿಯಾಗಿ ಮಾಡಿದ ಒಂದು ಸಾರು ಪಲ್ಯವೇ ಇರಬಹುದು, ಇಷ್ಟ ಪಟ್ಟು ಧರಿಸಿದ ಉಡುಪೇ ಆಗಿರಬಹುದು, ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆಯ ಸಾಮಾನುಗಳೇ ಆಗಿರಬಹುದು, ಇಲ್ಲ ಚೆನ್ನಾಗಿ ಬಿಡಿಸಿದ ಈ ರಂಗೋಲಿಯೇ ಆಗಿರಬಹುದು, ಚೆನ್ನಾಗಿದೆ ಅಂತ ಮನಸಿನಲ್ಲಿ ಅಂದುಕೊಂಡುಬಿಟ್ಟರೆ ಹೇಗೆ, ಅದು ಅವರಿಗೆ ಗೊತ್ತಾಗುವುದು ಹೇಗೆ, ಯಾಕೆ ನಾವು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಸಡ್ಡೆ ತೋರಿಸುತ್ತೇವೆ. ಅದೇ, ಅನ್ನಕ್ಕೆ ಉಪ್ಪು ಜಾಸ್ತಿಯಾಗಿದ್ದರೆ ಹೇಳಲು ಮರೆಯುವುದಿಲ್ಲ, ಝಗಮಘ ಅನ್ನುವ ಸೀರೆ ಉಟ್ಟು ಅ-ಸಹ್ಯವಾಗಿ ಕಂಡರೆ ಟೀಕಿಸಲು ಮರೆಯುವುದಿಲ್ಲ, ಎಲ್ಲೋ ಬಿದ್ದಾಡುತ್ತಿರುವ ಸಾಮಾನುಗಳು ಎತ್ತಿ ಇಡುವುದಿಲ್ಲ, ಬೇಕಿದ್ದರೆ ಎತ್ತಿಡು ಅಂತ ಹಾರಾಡುತ್ತೇವೆ. ಯಾಕೆ ಹೀಗೆ ಯಾಕೋ ನನ್ನಲ್ಲೂ ಉತ್ತರವಿಲ್ಲ. ಆದರೂ
ಬದುಕೇ ಒಂದು ಸುಂದರ ರಂಗೋಲಿಯೆಂದರೆ ಅದಕ್ಕೆ ಅವಳ ಕೈಯಲ್ಲಿ ನಾ ಬಣ್ಣ ತುಂಬಿಸುತ್ತಿದ್ದೇನೆ. ನಿಮ್ಮ ಮನೆಯ ರಂಗೋಲಿ ಏನು ತುಳಿದು ನಡೆದು ಹೋಗುತ್ತೀರೊ ಇಲ್ಲ... ಏನು ಮಾಡುತ್ತಿರೊ ನಿಮಗೆ ಬಿಟ್ಟಿದ್ದು.

ಮರುದಿನ ಎದ್ದು ಬೈಕು ತೆಗೆದೆ, ಮರದ ಹಲಗೆಯೇನೂ ಇಲ್ಲದೆ ಪ್ರಯಾಸವಿಲ್ಲದೇ, ಅವಳೇನು ರಂಗೋಲಿ ಹಾಕಿಲ್ಲ ಅಂದುಕೊಂಡಿರಾ ಇಲ್ಲ ಜಾಗ ಬದಲಾಯಿಸಿದಳೆಂದು ಅಂದುಕೊಂಡಿರಾ. ಏನೂ ಇಲ್ಲ, ಅದೇ ಗೇಟಿನ ಮುಂದೆ ರಂಗೋಲಿ ಹಾಕಿದ್ದಳು, ಮತ್ತೆ ನಾ ಹಾಳು ಮಾಡಿದೆನೆ ಇಲ್ಲ... ಮತ್ತದೇ ಹೂವುಗಳು ಮತ್ತದೇ ಎಲೆಗಳು, ಬೈಕು ದಾಟುವಷ್ಟು ಜಾಗ ಬಿಟ್ಟು, ಗೇಟಿನ ಇಕ್ಕೆಲಗಳಲ್ಲಿ ಬರುವಂತೆ ರಂಗೋಲಿ ಬಿಡಿಸಿದ್ದಳು, ಬೈಕು ಸರಾಗವಾಗಿ ದಾಟಿತ್ತು. ಬೈಕು ನಿಲ್ಲಿಸಿ ಇಳಿದು, ಅದೊಂದು ಎಸಳನ್ನು ಸರಿ ಮಾಡುತ್ತಿದ್ದೆ, ಕಿಟಕಿಯಲ್ಲಿ ನಿಂತು "ರೀ ಆಫೀಸಿಗೆ ಹೊಗುತ್ತೀರೊ, ಇಲ್ಲ ರಂಗೋಲಿ ಸರಿ ಮಾಡುತ್ತ ಇಲ್ಲೇ ಕೂಡುತ್ತೀರೊ" ಅಂತ ಚೀರಿದಳು, ಪಕ್ಕದ ಮನೆ ಪದ್ದು ಕೂಡ ಹೊರಗೆ ಬಂದಳು ಇವಳ ಬಾಯಿಗೆ, ಪದ್ದೂ ಕೂಡ ನಕ್ಕಳು ನಾ ರಂಗೋಲಿ ಸರಿ ಮಾಡುತ್ತಿರುವುದ ನೋಡಿ, ಎದ್ದು ಅಲ್ಲಿಂದ ಓಟಕ್ಕಿತ್ತೆ... ಅವಳು ಇಂದು ರಂಗೋಲಿಗೆ ಬಣ್ಣ ತುಂಬಿರಲಿಲ್ಲ, ಆದರೂ ಅದು ಬಣ್ಣದ ರಂಗೋಲಿಯೆಂತನಿಸುತ್ತಿತ್ತು ನನಗೆ...

ಮತ್ತೆ ಸಿಗುತ್ತೀನಿ ಅದೇ ನಮ್ಮನೆ ರಂಗೋಲಿ ಸರಿ ಮಾಡುತ್ತ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

21 comments:

Anonymous said...

ಚೆನ್ನಾಗಿ ಹೇಳಿದಿರಿ. ಎಂದಿನಂತೆ ಬರಹ ತುಂಬಾ ಚೆನ್ನಾಗಿದೆ.
ನೀವ್ಯಾಕೆ ಎಲ್ಲವನ್ನೂ ಸೇರಿಸಿ ಪುಸ್ತಕ ಮಾಡಬಾರದು?

ಮನಸು said...

ಪ್ರಭು,
ತುಂಬಾ ಚೆನ್ನಾಗಿದೆ!! ನೀವು ಹೇಳಿದ ಹಾಗೆ ಚೆನ್ನಾಗಿರುವುದು, ಒಳ್ಳೆಯದು ಎಲ್ಲವನ್ನು ಹೇಳಿಬಿಡಬೇಕು .... ರಂಗೋಲಿಯ ಈ ಅಂಕಣ ಮೂಡಿಸಿದೆ ಬಣ್ಣ ಬಣ್ಣದ ಹೂಬನ...ನಿಮ್ಮ ಲೇಖನದಿಂದೆ ಒಂದು ನೀತಿ ಪಾಠವೂ ಇರುತ್ತದೆ. ಈ ಲೇಖನದ ನೀತಿಯಿಂದ ನಾವು ಕಲಿಯುವುದು ಬಹಳವಿದೆ.

ಇವೆಲ್ಲವನ್ನು ನಿಮ್ಮ ಅಪ್ಪ ಅಮ್ಮರಿಗು ಕಳಿಸುತ್ತಾ ಇದ್ದೀರಿ ತಾನೆ..? ಹ ಹ ಹ

ಶುಭದಿನ
ಧನ್ಯವಾದಗಳು

Umesh Balikai said...

ಪ್ರಭು,

ಹೌದು, ಚಿಕ್ಕ ಪುಟ್ಟ ಕಂಪ್ಲೈಂಟ್ ಗಳನ್ನು ತುಂಬಾ ಶ್ರದ್ಧೆಯಿಂದ ಮಾಡುವ ನಾವು ಬೇರೆಯವರು ಮಾಡಿರುವ ಒಂದು ಒಳ್ಳೆಯ ಕೆಲಸಕ್ಕೆ ಒಂದು ಚಿಕ್ಕ ಕಾಂಪ್ಲಿಮೆಂಟ್ ಕೊಡೋಕೆ ತುಂಬಾ ಜಿಪುಣತೆ ತೋರಿಸ್ತೀವಿ. ಈ ಮನೋಭಾವ ಬದಲಾಗಬೇಕಿದೆ; ಕಡೆ ಪಕ್ಷ, ನಮ್ಮ ಪ್ರೀತಿ ಪಾತ್ರರಿಗೋಸ್ಕರ.

ತಿಳಿಹಾಸ್ಯದ, ಚಂದದ ಬರಹಕ್ಕೆ ಅಭಿನಂದನೆಗಳು.

- ಉಮೇಶ್

PARAANJAPE K.N. said...

ಪ್ರಭು,
ರ೦ಗೋಲಿ ಬಗ್ಗೆ ನಿಮ್ಮ ಬರಹ ಚೆನ್ನಾಗಿದೆ. ಜೀವನದ ರ೦ಗೋಲಿ ಚೆದುರದೆ ಇರಬೇಕಾದರೆ ಇದೆಲ್ಲ ಅನಿವಾರ್ಯ. ಚೆನ್ನಾಗಿದೆ.

Unknown said...

Really a nice post ... i liked the last but one para very much ... why we are very stringe in giving appreciation ..

maaya said...

Hi gud one...
Yes its true u should appreciate and u should give always compliments to ur partner but if its relly gud.. then they loves u more u know... thank u for nice article....

hema

Veena DhanuGowda said...

Hello,

chennagide nimma baraha :)
inmelinda nanu officege hogovaga appi thappi nu
amma bidisiro rangoli thuliyala :)[ nice moral behind the story]
keep writing :)

ವಿನುತ said...

ಹೊಗಳಿಕೆ / Appreciation, ಎಷ್ಟು ಮುಖ್ಯ ಅನ್ನೋದನ್ನ ನಿಮ್ಮ ಬರಹದಲ್ಲಿ ಸಾರ್ಥಕವಾಗಿ ಮೂಡಿಸಿದ್ದೀರ. ನಮ್ಮ ತ೦ದೆಯೂ ಅಷ್ಟೇ, ಮೊದಲು ಎದ್ದು ಬೈಕ್ ಆಚೆ ಇಡ್ತಾರೆ, ಇಲ್ಲಾ೦ದ್ರೆ ನಾನೇ ಇಡ್ತೀನಿ. ರ೦ಗೋಲಿ ಹಾಕೋವಾಗ ಒಳ್ಳೆ ಸಲಹೆಗಳನ್ನೂ ಕೊಡ್ತಾರೆ. ಅ೦ಗಳ ಸಾರಿಸಿ, ಬಣ್ಣದ ರ೦ಗೋಲಿ ಹಾಕದೆ ಇದ್ರೆ, ಹಬ್ಬಾನೆ ಅಲ್ಲ. ಅವರ ಆ ಪ್ರೋತ್ಸಾಹವೇ ನನಗೆ ಇನ್ನಷ್ಟು ಕಲಿಯಲು ಪ್ರೇರಣೆ.

SSK said...

ಪ್ರಭು ಅವರೇ, ಬಣ್ಣ ಬಣ್ಣದ ರಂಗೋಲಿಯ ಲೇಖನ ಚೆನ್ನಾಗಿ ಮೂಡಿ ಬಂದಿದೆ!
ಮತ್ತೊಂದು ವಿಚಾರವೇನೆಂದರೆ ನಾವುಗಳು ಜೀವನದಲ್ಲಿ ಯಾವುದೇ ಒಳ್ಳೆಯ ಬದಲಾವಣೆಗಳನ್ನೂ ಬಯಸಿದರೂ ಅದು ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ಅದು ಪ್ರಶಂಸೆಯಾಗಲಿ, ಆಚಾರ, ವಿಚಾರ ಅಥವಾ ಇನ್ಯಾವುದೇ ಆಲೋಚನೆ, ಮುಂತಾದುವು. ಮೊದಲ ಹೆಜ್ಜೆ ನಮ್ಮಿಂದಲೇ ಶುರುವಾಗಲಿ, ನೀವೇನಂತೀರಾ.....?!

shivu.k said...

ಪ್ರಭು,

ಸಂಸಾರದ ವಿಚಾರವನ್ನು ಬರೆಯುವುದರಲ್ಲಿ ನೀವು ಎತ್ತಿದ ಕೈ ಬಿಡ್ರಿ....ಎಲ್ಲಾ ವಿಚಾರದಲ್ಲೂ ಕೈಯಾಡಿಸಿಬಿಡ್ತಿರಲ್ರಿ....ರಂಗೋಲಿಯನ್ನು ಸಂಸಾರ ಸಾರದೊಳಗೆ ಸೇರಿಸಿ ಬರೆಯುವುದು ನಿಮಗೊಬ್ಬರಿಗೇ ಸಾಧ್ಯ...

ಮುಂದುವರಿಸಿ....ನೋಡೋಣ ಎಲ್ಲಿಯವರೆಗೆ ಸಾಗುತ್ತದೋ ಈ ಪಯಣ..

ಅಭಿನಂದನೆಗಳು...

ಶಿವಪ್ರಕಾಶ್ said...

ha ha ha

Prabhuraj Moogi said...

ಜ್ಯೋತಿ ಅವರಿಗೆ:
ಸಧ್ಯಕ್ಕೆ ಇಪ್ಪತ್ತರ ಮೇಲೆ ಬರಹವಾಗಿವೆ, ಇಪ್ಪತ್ತೈದು ಆದ ಮೇಲೆ PDF format ಬುಕ್ ಮಾಡೋಣ ಅಂತ ಇದ್ದೀನಿ, ನೋಡೋಣ ಏನಾಗುತ್ತೆ... ಪೇಪರ್ ಬುಕ್ ಮಾಡೋಕೆ ಆಗಲ್ಲ ಬಿಡಿ... ಲೇಖನಗಳು ಇನ್ನೂ ಆ ರೀತಿಯಲ್ಲಿ ಪಕ್ವವಾಗಿಲ್ಲ...

ಮನಸು ಅವರಿಗೆ:
ಒಳ್ಳೆಯದನ್ನು ಹೇಳಿದರೆ ಏನು ಕೇಡು ಅಲ್ವೇ... ಅದಕ್ಕೆ ಅದನ್ನೇ ಬರೆದೆ.. ಅಪ್ಪ ಅಮ್ಮನಿಗೆ ಹೊಸ ಲೇಖನ ಓದಲು ಕಳಿಸಲಾಗಿಲ್ಲ, ಹಳೆಯದೇ ಇನ್ನೂ ಓದುತ್ತಿದ್ದಾರೆ.. ಮತ್ತೊಮ್ಮೆ ಊರಿಗೆ ಹೋದಾಗ ಕೊಟ್ಟು ಬರಬೇಕು..

ಉಮೇಶ ಬಾಳೀಕಾಯಿ ಅವರಿಗೆ:
ನನ್ನ ಬ್ಲಾಗ್ಗೆ ಸ್ವಾಗತ.. ಕಂಪ್ಲೈಂಟ್ ಗಳನ್ನು ತುಂಬಾ ಶ್ರದ್ಧೆಯಿಂದ ಮಾಡುವ ನಾವು ಕಾಂಪ್ಲಿಮೆಂಟುಗಳನ್ನೂ ಧಾರಾಳವಾಗಿ ಮಾಡಲಿ ಅನ್ನೋದೇ ನನ್ನ ಉದ್ದೇಶ

PARAANJAPE K.N.ಅವರಿಗೆ
ರಂಗೋಲಿ ಚೆದುರದೆಯೂ ಇರಲಿ ಹಾಗೂ ಬಣ್ಣ ತುಂಬಿ ಚೆಂದವಾಗಿಯೂ ಇರಲಿ ಎಂದು ನನ್ನ ಆಶಯ

To roopa
I too dont have an answer for that, but at least you (for giving nice comment to the post) and me(for writing & appreciating) are not stingy...

To maaya
"compliment to ur partner but if its really gud" yes that's true.. if you start complimenting for everything then it looses its value...

ಪ್ರೀತಿಯಿ೦ದ ವೀಣಾ :) ಅವರಿಗೆ
ನನ್ನ ಬ್ಲಾಗ್ಗೆ ಸ್ವಾಗತ.. ಅಮ್ಮನ ರಂಗೋಲಿಗೂ ನೀವು ಮಹತ್ವ ಕೊಡಬಹುದೆಂದು ಹೇಳಿ ನನ್ನ ಲೇಖನದ ಪರಿಧಿ ವಿಸ್ತರಿಸಿದ್ದೀರೀ, ಜೊತೆಗೆ ಹಾಗೆ ಒಮ್ಮೆ ಸುಂದರವಾಗಿ ಬರೆದ ಒಂದು ರಂಗೋಲಿ ಚೆನ್ನಾಗಿದೆ ನನಗೂ ಕಲಿಸಿಕೊಡು ಅಂತ ಅಂದು ನೋಡಿ ಆಗ ಅವರ ಸಂತೋಷಕ್ಕೆ ಪಾರವೇ ಇರಲಿಕ್ಕಿಲ್ಲ.

Vinutha ಅವರಿಗೆ
ಅಪ್ಪನೂ ಹೇಗೆ ಮಗಳ ಹುರಿದುಂಬಿಸಬಹುದು ನೋಡಿ... ಪ್ರಶಂಸೆ ಹಾಗಿರಬೇಕು.. ರಂಗೋಲಿ ಇಲ್ಲದಿದ್ದರೆ ಹಬ್ಬದ ವಾತಾವರಣವೇ ಇರುವುದಿಲ್ಲ ಬಿಡಿ.

SSK ಅವರಿಗೆ
ನೀವಂದದ್ದು ಸರಿ.. ಮೊದಲು ನಮ್ಮಿಂದ ಶುರುವಾಗಲಿ ನಮ್ಮವರು ಜತೆ ಜತೆ ಬರ್ತಾರೆ.. ನಾನಂತೂ ಮೊದಲ ಹೆಜ್ಜೆ ಇಟ್ಟಿದ್ದೇನೆ.. ನೋಡೋಣ ನನ್ನ ಜತೆಗೆ ಸಪ್ತ ಹೆಜ್ಜೆ (ಸಪ್ತಪದಿ) ಇದುವವಳು ಏನು ಮಾಡುತ್ತಾಳೆ ಎಂದು...

shivu ಅವರಿಗೆ:
ಅನನುಭವಿ ಆದರೂ ಏನೋ ಒಂದು ಪ್ರಯತ್ನ... ನನ್ನ ಪಯಣದಲ್ಲಿ ಬಂದು ಯಾವಾಗಲೂ ಶುಭ ಹಾರೈಸುವ ನಿಮಗೆ ನನ್ನ ಧನ್ಯವಾದಗಳು..

ಶಿವಪ್ರಕಾಶ್ ಅವರಿಗೆ:
:) ಮತ್ತಷ್ಟು ನಗಲು ಬರ್ತಾ ಇರಿ ..

Raghavendra said...

sanna sanna vishayagalannae adbhut reetiyalli barididira... nimma baravanigeya shaili tumba ishta aitu.. neevelodu nijaane namge complain madakke barutte horatu complement madakkalla...
helidre yelli tale mel hatti kontkotaareno anta :)

u keep writing .. wl b keep visiting :)

Prabhuraj Moogi said...

To : Raghavendra
jeevanadalli saNNa saNNa vihshayagaLE bahu mukhya... compliment koDoke kaliyoNa aaga ella sariyaagatte... bartaa iri...

Nisha said...

ಸುಂದರವಾದ ರಂಗೋಲಿ ಬಿಡಿಸಿ ಅಂದವಾದ ಬಣ್ಣಗಳನ್ನು ತುಂಬಿದ್ಧೀರಿ. ಸೊಗಸಾದ ಬರಹ.

sunaath said...

ನೀತಿಪಾಠ:
ರಂಗೋಲಿಯನ್ನು appreciate ಮಾಡಿರಿ.
ರಂಗೋಲಿ ತೆಗೆದವರನ್ನು ಹೊಗಳಿರಿ.
ಆದರೆ ರಂಗೋಲಿಗೆ ಬಣ್ಣ ತುಂಬಲು ಕೂತುಕೊಳ್ಳದಿರಿ!

Prabhuraj Moogi said...

Nisha ಅವರಿಗೆ:
ಬದುಕು ಬಣ್ಣ ಬಣ್ಣದ ರಂಗೋಲಿಯಾಗಲೆಂದು ಆಸೆ ಅದಕ್ಕೆ ಈ ಬರಹ..

sunaath ಅವರಿಗೆ:
ರಂಗೋಲಿಗೆ ಬಣ್ಣ ತುಂಬಿಸಿದರೆ ಹೇಗೆ... ನಾ ನನ್ನಾಕೆಯೆಂದ ತುಂಬಿಸುತ್ತೇನೆ.. ಆಗ ಚೆನ್ನಾಗಿರುತ್ತದೆ ಅಲ್ವಾ...

PaLa said...

ಹೇಳೋದೆಲ್ಲ ಮೇಲೆ ಹೇಳಿದಾರೆ, ಮೊದಲನೇ ಬಾರಿಗೆ ನಿಮ್ಮ ಬ್ಲಾಗಿಗೆ ಬರ್ತಾ ಇದೀನಿ, ಸುಂದರ ಭಾವನೆ, ಸುಂದರ ಬರಹ

Prabhuraj Moogi said...

PaLa ಅವರಿಗೆ
ನನ್ನ ಬ್ಲಾಗ್ಗೆ ಸ್ವಾಗತ.. ಬರ್ತಾ ಇರಿ..

ಬಾಲು said...

olleya baraha prabhu avare. oduganige ananda haagu sundara anubhoothi siguttade.

nivu idanna pustaka roopa dalli thanni. avaga idu blog lokavannu meeri, ellede pasarisuttade.

Prabhuraj Moogi said...

ಬಾಲು ಅವರಿಗೆ
ಸರ್ ಪುಸ್ತಕ ರೂಪದಲ್ಲಿ ತರುವಷ್ಟು ಲೇಖನಗಳು ಪಕ್ವವಾಗಿಲ್ಲ ಅಂತ ನನ್ನ ಅನಿಸಿಕೆ ಅದಕ್ಕೆ ಸಧ್ಯಕ್ಕೆ ಮಾಡಿಲ್ಲ.. ಆದರೆ PDF ರೂಪದಲ್ಲಿ ಸಂಗ್ರಹ ಬಿಡುಗಡೆ ಮಾಡುವನಿದ್ದೇನೆ, ಇಪ್ಪತ್ತೈದು ಲೇಖನವಾಗಲು ಕಾಯುತ್ತಿದ್ದೇನೆ.