Sunday, May 17, 2009

ಅಪಘಾತ ಆಘಾತ...


ರಾತ್ರಿ ಹನ್ನೊಂದಾಗಿರಬೇಕು, ಆಫೀಸೀನವರೆಲ್ಲ ಸೇರಿ ಪಾರ್ಟಿಗೆ ಹೋಗಿದ್ದು ಸ್ವಲ್ಪ ಲೇಟಾಗಿ ಮನೆಗೆ ಹಿಂದಿರುಗುತ್ತಿದ್ದೆ, ಪಾರ್ಟಿ ಅಂದ್ರೆ ಲೇಟ ಆಗೇ ಆಗುತ್ತೆ, ಆ ಸಮಯದಲ್ಲಿ ವಾಹನ ಸಂಚಾರ ಕೂಡಾ ಕಮ್ಮಿ, ರಸ್ತೆಗಳು ಬಿಕೊ ಅನ್ನುತ್ತಿರುತ್ತವೆ ಅಲ್ಲಲ್ಲಿ ಕಾರು ಬೈಕುಗಳು ಶರವೇಗದಲ್ಲಿ ಸರ್ರೆಂದು ನುಗ್ಗುತ್ತಿರುತ್ತವೆ, ಬೈಕು ಕೊಂಡು ವರ್ಷವಾಯ್ತು, ಇತ್ತೀಚೆಗೆ ಸ್ವಲ್ಪ ಬೈಕು ಓಡಾಡಿಸಿ ರೂಢಿಯಾಗಿ ನಾನೂ ಸ್ವಲ್ಪ ವೇಗವಾಗಿ ಚಲಾಯಿಸುತ್ತೇನೆ ಆದರೂ ಗೆಳೆಯರೆಲ್ಲ ನನಗಿಂತ ಯಾವಾಗಲೂ ಮುಂದು, ತಕ್ಕಮಟ್ಟಿಗೆ ವೇಗ ಬಂದಿದೆಯೆಂದ್ರೆ ಸರಿ, ಹೀಗಾಗಿ ನಾನೂ ಸ್ವಲ್ಪ ವೇಗದಲ್ಲೇ ಹೊರಟಿದ್ದೆ, ಅದು ಮೈಸೂರು ರೋಡ್ ಶಿರ್ಸಿ ಸರ್ಕಲ್ ಹತ್ತಿರ ಫ್ಲೈ ಓವರ ಇಳಿಯುತ್ತಿದ್ದಂತೆ ಮುಂದೆ ಒಂದು ಕಾರು ಹೋಗುತ್ತಿತ್ತು ಹಿಂದೆ ಸ್ವಲ್ಪ ದೂರದಲ್ಲಿ ನಾನು, ಕಾರು ದಾಟಿ ಹೋಯ್ತು, ನಾ ಹಿಂದೆ ಬರಬೇಕು, ರೋಡಲ್ಲಿ ಹಿಡಿಗಾತ್ರದ ಕೆಲವು ಕಲ್ಲುಗಳು ಚೆಲ್ಲಪಿಲ್ಲಿಯಾಗಿ ಹರಡಿದ್ದವು, ಕತ್ತಲೆಯಲ್ಲಿ ವೇಗದಲ್ಲಿ, ನನ್ನ ಗಮನ ಆಕಡೆ ಹರಿಯದೇ ಕಲ್ಲುಗಳಲ್ಲಿ ಬೈಕು ಓಡಿತು, ಮುಂದಿನ ಚಕ್ರ ನಿಯಂತ್ರಣ ತಪ್ಪಿತು, ಧಡ್! ಅಂತ ಶಬ್ದದೊಂದಿಗೆ ಪಲ್ಟಿ ಹೊಡೆದು, ನೆಲಕ್ಕೆ ಉಜ್ಜುತ್ತ ಸ್ವಲ್ಪ ದೂರ ಹೋಗಿ ಬಿದ್ದೆ, ಬೈಕು ಕೈ ತಪ್ಪಿ ನನಗಿಂತ ಮುಂದೆ ಸ್ವಲ್ಪ ದೂರದಲ್ಲಿ ಹೋಗಿ ಬಿತ್ತು...

ಸ್ವಲ್ಪ ಹೊತ್ತು ಹಾಗೆ ಬಿದ್ದಿದ್ದೆ, ಮುಂದೆ ಬೈಕು ಇನ್ನೂ ಸದ್ದು ಮಾಡುತ್ತ ತಿರುಗುತ್ತಿತ್ತು... ಅಪಘಾತವಾಗಿತ್ತು... ಏನಾಗಿದೆ, ಏನಾಗುತ್ತಿದೆ, ಯಾಕಾಯ್ತು, ಏನೂ ತಿಳಿಯುತ್ತಿಲ್ಲ ಆಘಾತ ಆಗ ಶುರುವಾಗಿತ್ತು, ಕೂಡಲೇ ಸಾವರಿಸಿಕೊಂಡು ಮೇಲೇಳಲು ಪ್ರಯತ್ನಿಸಿದೆ ಆಗುತ್ತಿರಲಿಲ್ಲ, ಆಗಲೇ ಹತ್ತಿರದಲ್ಲಿರುವ ಕೆಲ ಜನ ಬಂದು ಏಳಿಸಿದ್ದು, ಯಾರೊ ಬೈಕು ಎತ್ತಿ ತಂದರು, ಬೈಕು ತೆಗೆದುಕೊಂಡು ದಾರಿ ಪಕ್ಕಕ್ಕೆ ಬಂದೆ, ಎಲ್ಲರಿಗೂ ಅನಿಸಿರಬೇಕು ಯಾರೋ ಡ್ರಿಂಕ್ಸ ಮಾಡಿ ನಿಯಂತ್ರಣವಿಲ್ಲದೇ ಬಿದ್ದಿರಬೇಕೆಂದು, ಆಗಲ್ಲೇ ಬಂದ ಪೋಲೀಸಗಂತೂ(ಟ್ರಾಫಿಕ ಅಲ್ಲ ಸಿವಿಲ್ ಸಧ್ಯ, ಇಲ್ಲಾಂದ್ರೆ ಎಲ್ಲಿ ಏನು ಕಾರಣ ಹೇಳಿ ಫೈನು ಹಾಕುತ್ತಿದ್ದರೊ) ಅದೇ ಅನುಮಾನ ಕಾಡಿರಬೇಕು, ಎನಾಯ್ತು ಅನ್ನೊದನ್ನ ಸ್ವತಃ ಪ್ರತ್ಯಕ್ಷದರ್ಶಿಯೊಬ್ಬ ವಿವರಿಸಿದಾಗಲೇ ನನಗೂ ಗೊತ್ತಾಗಿದ್ದು, ಹೇಗೆ ನನಗೆ ನಿಯಂತ್ರಣ ತಪ್ಪಿತೆಂದು, ಆಗಲೇ ನಾ ನೋಡಿದ್ದು ಆ ಚೆಲ್ಲಾಪಿಲ್ಲಿ ಕಲ್ಲುಗಳನ್ನು... ನಾ ನೋಡಿದ್ದರೆ ಅದಹೇಗೆ ಆಗುತ್ತಿತ್ತು... ಅಂತೂ ಪೋಲಿಸಗೆ ಎನಾಗಿದೆ ಅಂತ ಖಾತ್ರಿ ಆಯಿತು ಸ್ವಲ್ಪ ಸುಧಾರಿಸಿಕೊಳ್ಳಲು ಹೇಳಿ ಅಲ್ಲೆ ನಿಂತರು, ನಾ ಡ್ರಿಂಕ್ಸ ಮಾಡೋದಿಲ್ಲ(ಹಾಗಂತ ನೀರೂ ಕುಡಿಯೋದಿಲ್ಲ ಅನ್ಕೋಬೇಡಿ!) ಮಾಡೋರಿಗೆ ಮಾತ್ರ ಕಂಪನಿ ಕೊಡುತ್ತೇನೆ, ಕೂತು ಕೊಲ್ಡಡ್ರಿಂಕ್ಸೊ ಜ್ಯೂಸೊ ಯಾವುದೊ ಹೀರುತ್ತ ಎಲ್ಲರೊಡನೆ ಹಿರಿಹಿರಿ ಹಿಗ್ಗುತ್ತಿದ್ದರೆ ಹೆಚ್ಚು, ಅದೇನು ನನ್ನ ದೊಡ್ದತನವೆಂದು ನಾ ಹೇಳಿಕೊಳ್ಳುವುದಿಲ್ಲ, ಅದು ನನ್ನ ವೈಯಕ್ತಿಕ ಆಯ್ಕೆ, ನನಗಿಷ್ಟವಿಲ್ಲ ಅಷ್ಟೇ. ಸ್ವಲ್ಪ ಕೂತವನು ಕೂರಲಾಗದೇ, ಮತ್ತೆ ಮೇಲೆದ್ದು ಹೊರಟೆ.

ಹಾಗೂ ಹೀಗೂ ಮನೆಗೆ ಬಂದು ತಲುಪಿದೆ, ಗಿಯರ್ ಲೀವರು ಮಣಿದು ಗಿಯರು ಸರಿಯಾಗಿ ಹಾಕಲು ಬರುತ್ತಿಲ್ಲದೇ ಪಡಿಪಾಟಲು ಪಟ್ಟೆ, ಗೇಟಿನಲ್ಲಿ ಗಾಡಿ ನಿಲ್ಲಿಸುವಾಗ ಪಕ್ಕದ ಮನೆ ಪದ್ದುಗೆ ಸಿಗ್ನಲ್ಲು ಕೊಡಬೇಕಲ್ಲ, ಇಂಡಿಕೇಟರ ಒಡೆದಿತ್ತು ನೋಡಿ ಅವಳೂ ಗಾಬರಿಯಾದ್ರೆ? ಅದಕ್ಕೆ ಸುಮ್ಮನೆ ಮನೆಯೊಳಕ್ಕೆ ಸೇರಿಕೊಂಡೆ. ಇವಳು ಮಲಗಿದ್ಲು, ಎಬ್ಬಿಸಲೋ ಬೇಡವೊ ಯೋಚಿಸಿದೆ, ಏಳಿಸಿದ್ರೆ ಹೆದರಿ ಕಂಗಾಲಾಗುವುದು ಗ್ಯಾರಂಟಿ, ಏಳಿಸದಿದ್ರೆ ನಾಳೆ ನಾ ಕಂಗಾಲಾಗಬೇಕು ಅಷ್ಟು ಬಯ್ಯುತ್ತಾಳೆ, ಏಳಿಸೋದೇ ವಾಸಿ ಅಂತ ಮೆತ್ತಗೆ ಕರೆದೆ. ಎದ್ದು ಕಣ್ಣು ತೀಡುತ್ತ ಹೊರಬಂದ್ಲು, ಬೂಟು ತೆರೆಯಲಾಗದೇ ಹಾಲಿನಲ್ಲಿ ಕುಸಿದು ಕೂತಿದ್ದೆ, ಬಂದವಳೇ ನನ್ನ ನೋಡಿ "ರೀ ಏನಾಯ್ತು!!!" ಅಂತ ಹೌಹಾರಿದ್ಲು. ಈಗ ಅವಳಿಗೆ ಆಘಾತವಾಗಿತ್ತು ನಿಜಕ್ಕೂ... "ಏನಿಲ್ಲ ಸ್ವಲ್ಪ ಆಕ್ಸಿಡೆಂಟು ಆಯ್ತು" ಅಂದೆ "ಏನು, ಸ್ವಲ್ಪ ಆಕ್ಸಿಡೆಂಟ್ ಆಯ್ತಾ, ನೋಡಿ ಇದು" ಅಂತ ಜಾಕೆಟ್ಟು(ಜರ್ಕಿನ್) ತೊರಿಸಿದ್ಲು... ಹೌದು ಎಡ ಭಾಗ ಎಲ್ಲ ಕೆತ್ತಿ ಕಿತ್ತು ಬಂದಿತ್ತು, ಗ್ಲೌಸು ಬಿಚ್ಚಿಟ್ಟೆ, ಕೈಗೆ ಸ್ವಲ್ಪ ತರಚು ಗಾಯಗಳಾಗಿದ್ವು, ಮೊಣಕಾಲಿಗೆ ಏಟು ಬಿದ್ದು ಉಬ್ಬಿತ್ತು, ಎಡ ಪಕ್ಕೆಲುಬು ನೋವಾಗುತ್ತಿತ್ತು. "ಇದು ಸ್ವಲ್ಪಾನಾ ನಿಮ್ಗೆ, ಏನ್ ಮಾಡ್ಕೊಂಡ್ರಿ" ಅಂತನ್ನುತ್ತ ಬೂಟು ತೆಗೆಯಲು ಹೆಲ್ಪ ಮಾಡಿದ್ಲು, ಅವಳ ಕಣ್ಣಲ್ಲಿ ನೀರಾಡುತ್ತಿತ್ತು, ಹೆದರಿಕೆ, ಸಿಡುಕು, ದುಃಖ ಎಲ್ಲ ಭಾವನೆಗಳ ಮಿಶ್ರಣ ಮೂಡಿತ್ತು.

ಎದ್ದು ಕೈಕಾಲು ತೊಳೆದು ಬಂದೆ, ಪಕ್ಕೆಲುಬಿಗೆ ಸ್ವಲ್ಪ ಜಾಸ್ತಿಯೆ ನೋವಾದಂತಿತ್ತು, ನಡೆಯಲು ಸರಿಯಾಗಿ ಬರುತ್ತಿರಲಿಲ್ಲ ಅವಳು ಊರುಗೋಲಾದಳು... ಕೈ ತರಚು ಗಾಯಕ್ಕೆ ಡೆಟಾಲ್ ತಂದಳು, ಹತ್ತಿಯಲ್ಲಿ ಅದ್ದಿ ಅಲ್ಲಲ್ಲಿ ಹಚ್ಚತೊಡಗಿದ್ಲು ತಾನೆ "ಸ.. ಸ್... ಸ...." ಅಂತ ವಸಗುಡುತ್ತ... ನೋವಾಗುತ್ತಿದ್ದದ್ದು ನನಗಾದ್ರೂ ಅವಳು ಕಿವುಚುತ್ತಿದ್ದ ಮುಖ ನೋಡಿ ನನಗೆ ಅಂಥದ್ದರಲ್ಲೂ ನಗು ಬಂತು, ನಾ ನಗುತ್ತಿರುವುದ ನೋಡಿ ಸಿಡುಕಿದ್ಲು "ಏನ್ ನಗ್ತೀದೀರಾ, ಬೇಕಿತ್ತಾ ಇದು, ನೋವಾಗ್ತಿಲ್ವಾ" ಅಂದ್ಲು "ನೋವಾಗ್ತಿದೆ, ಎನ್ ಮಾಡ್ಲಿ ನನಗಿಂತ ನಿನಗೇ ಜಾಸ್ತಿ ಅನಿಸತ್ತೆ" ಅಂದೆ. "ಇಂಥ ಡೈಲಾಗುಗಳಿಗೆ ಏನ್ ಕಮ್ಮಿ ಇಲ್ಲ, ಅಂದಹಾಗೆ ಹೇಗಾಯ್ತು ಇದೆಲ್ಲ,
ಯಾವ ಹುಡುಗೀ ನೊಡೋಕೆ ಹೋಗಿ ಬಿದ್ರಿ" ಅಂದ್ಲು "ಲೇ ರಾತ್ರಿ ಹನ್ನೊಂದಕ್ಕೆ ಯಾವ ಹುಡುಗಿ ಇರ್ತಾಳೇ ರಸ್ತೇಲೀ, ನೀನೊಳ್ಳೇ ಸರಿಹೋಯ್ತು.." ಅಂತ ಬಯ್ಯುತ್ತ ಆದದ್ದೆಲ್ಲ ಸವಿವರವಾಗಿ ವರದಿ ಒಪ್ಪಿಸಿದೆ.

"ಅದ ಹೇಗೆ ನಿಮಗೆ ಕಲ್ಲುಗಳು ಕಾಣಲಿಲ್ಲ, ರಸ್ತೇ ನೋಡಿಕೊಂಡು ಬರೋಕೆ ಆಗಲ್ವಾ, ನಿದಾನವಾಗಿ ಎಲ್ಲ ಕಡೆ ಗಮನ ಇಟ್ಕೊಂಡು ಗಾಡಿ ಓಡಿಸಬೇಕು" ಅಂತ ಉಪದೇಶ ಮಾಡಿದ್ಲು, "ಇಲ್ಲ ಕಲ್ಲು ಕಾಣಿಸಿದ್ವು, ಅದರಮೇಲೆ ಹತ್ತಿಸಿದ್ರೆ ಹೇಗೆ ಬೀಳ್ತೀನಿ ಅಂತ ಪ್ರಯೋಗ ಮಾಡಿ ನೋಡಿದೆ" ಅಂತ ಕಿರಿಕ್ಕು ಉತ್ತರಕೊಟ್ಟೆ, "ಒಳ್ಳೇದಕ್ಕೆ ಹೇಳಿದ್ರೆ ಜೊಕ್ ಮಾಡ್ತೀರಾ" ಅಂತ ಒಂದು ಗುದ್ದು ಕೊಟ್ಲು, ಅದೇ ಪೆಟ್ಟಾದ ಭುಜಕ್ಕೆ "ಅಮ್ಮಾ" ಅಂತ ಚೀರಿದೆ, "ರೀ ರೀ ಸಾರಿ ಸಾರಿ" ಅಂತನ್ನುತ್ತ ಮೆಲ್ಲಗೆ ನವಿರಾಗಿ ಸವರಿದ್ಲು, ಹಿತವಾಗಿತ್ತು. "ಅಮ್ಮ ಅಂತ ಚೀರಿದಿರಲ್ವಾ ಅವರಿಗೇ ಹೇಳ್ತೀನಿ ತಾಳಿ" ಅಂತಾ ಹೆದರಿಸಿದ್ಲು, "ಪ್ಲೀಜ ಅವರಿಗೆಲ್ಲ ಗೊತ್ತಾಗೋದು ಬೇಡ, ಸುಮ್ಮನೇ ಗಾಬರಿಯಾಗ್ತಾರೆ" ಅಂದೆ, "ಇನ್ನೊಮ್ಮೆ ಆಕ್ಸಿಡೆಂಟ್ ಮಾಡ್ಕೋತೀರಾ ಹಾಗಾದ್ರೆ, ಇಲ್ಲ ತಾನೆ ಆಣೆ ಮಾಡಿ" ಅಂತಂದ್ಲು "ಲೇ ಎನ್ ಹೇಳಿ ಕೇಳಿ ಮಹೂರ್ತ ಎಲ್ಲ ನೋಡಿಕೊಂಡು, ಮಾಡ್ಕೊಳ್ಳೊಕೆ ಅದೇನು ಮದುವೆನಾ, ಮದುವೆನೂ ದೊಡ್ಡ ಆಕ್ಸಿಡೆಂಟೆ ಬಿಡು ಆ ಮಾತು ಬೇರೆ" ಅಂದೆ ದುರುಗುಟ್ಟಿ ನೋಡಿದ್ಲು, ಮತ್ತೆ ಸಮಾಧಾನಿಸಲು ಮುಂದುವರೆಸಿದೆ "ಅಲ್ಲಾ ಕಣೆ, ಆಕ್ಸಿಡೆಂಟ್ ಅಂದ್ರೇನು, ಆಕಸ್ಮಿಕ, ಅಪಘಾತ... ಅದು ಆಕಸ್ಮಿಕವಾಗಿ ಆಗೋದು, ಕೆಲಸಾರಿ ತಪ್ಪು ಇರುತ್ತದೆ ಆದ್ರೆ ಬೇಕೆಂತಲೇ ಯಾರೂ ಆಕ್ಸಿಡೆಂಟ್ ಮಾಡ್ಕೋಳಲ್ಲ ಆಗಿ ಹೋಗುತ್ತೆ, ನಮ್ಮ ಎಚ್ಚರಿಕೆ ಎಲ್ಲ ನಾವು ತುಗೋತೀವಿ ಆದ್ರೂ ಕೆಲ ಸಾರಿ ಎನ್ ಮಾಡೋದು ದುರಾದೃಷ್ಟ" ಅಂದೆ, "ಅದ್ಯಾವ ಹುಡುಗೀ ದೃಷ್ಟೀ ತಾಗಿದೆಯೊ ನಿಮ್ಗೆ" ಅಂತಂದು ಪೊರಕೆಯ ನಾಲ್ಕು ಕಡ್ಡಿ ತಂದು ಅದೇನೋ ಬಡಬಡಿಸಿ, ಮೂಲೇಲಿಟ್ಟು ಸುಟ್ಟಳು, ಚಟಪಟಾಂತ ಸದ್ದು ಮಾಡಿ ಅದು ಉರಿಯುತ್ತಿದ್ದರೆ ನೋಡಿ ಎಷ್ಟು ದೃಷ್ಟಿ ಆಗಿದೆ ಅಂತನ್ನುತ್ತಿದ್ಲು, ನಾವೆಲ್ಲ ಹೀಗೆ ನಮ್ಮ ನಮ್ಮ ಸಮಾಧಾನಕ್ಕೆ ಹೀಗೆ ಎನೊ ನಂಬಿಕೆಗೆ ಮೊರೆ ಹೋಗುತ್ತೇವೆ, ನಮ್ಮ ದುರ್ಬಲವಾದ ಮನಸಿಗೆ ಅದೋಂಥರ ಆಸರೆಯಾಗಿ ನೆಮ್ಮದಿ ಸಿಗುತ್ತದೆ, ಅದರಿಂದ ಅವಳ ಮನಸು ಸ್ವಲ್ಪ ನಿರಾಳವಾಗಿ ಆಘಾತ ಕಮ್ಮಿಯಾಗುತ್ತದೆ ಅಂದ್ರೆ ನಾ ಎನು ನಂಬಲೂ ಸಿದ್ಧ. ಅಪಘಾತಗಳಾದಾಗ ಆಘಾತವಾಗೊದು ಸಹಜ ಅದನ್ನು ಸರಿಯಾಗಿ ನಿರ್ವಹಿಸಬೇಕು ಅಷ್ಟೇ, ಎಲ್ಲ ಮುಗಿದುಹೊಯ್ತು ಅನ್ನೊ ಮನೊ ಸ್ಥಿತಿಗೆ ಹೋಗಬಾರದು, ಮತ್ತೆ ಮರಳಿ ಸಹಜತೆ ಮರಳಿದರೇ ಜೀವನ...

ಅದೃಷ್ಟ ದುರಾದೃಷ್ಟಗಳ ಮಾತಿನಲ್ಲೇ "ನನ್ನ ಅದೃಷ್ಟ, ಹಿಂದೆ ಯಾವ ಗಾಡಿ ಬರುತ್ತಿರಲಿಲ್ಲ, ಹಿಂದೆ ಕಾರೊ ಬಸ್ಸೊ ಲಾರಿಯೊ ಬಂದಿದ್ರೆ, ಸೀದಾ ನಟ್ಟ ನಡುವೆ ರಸ್ತೇಲಿ ಬಿದ್ದುಕೊಂಡಿದ್ದೆ..." ಅವಳೇ ತಡೆದಳು ಮುಂದೇನೂ ಹೇಳದಂತೆ "ಬಿಟ್ತು ಅನ್ನಿ, ಎಲ್ಲ ಒಳ್ಳೇದಾಯ್ತು, ಅಷ್ಟು ಸಾಕು" ಅಂದ್ಲು.
ಒಂದೇ ಒಂದು ಘಟನೆಯಲ್ಲಿ ಅದೃಷ್ಟ, ದುರಾದೃಷ್ಟ ಹೇಗೆ ಮಿಳಿತವಾಗಿರುತ್ತಲ್ಲ ಅಂತ ನನಗೆ ಸೋಜಿಗವೆನಿಸಿತು. "ಇನ್ಮೆಲೆ ಬಸ್ಸಿನಲ್ಲೇ ಓಡಾಡಿ, ಬೈಕು ಬೇಡ" ಅಂತ ರಾಗ ತೆಗೆದ್ಲು, "ನನಗೇಕೊ ಹೆದರಿಕೆ, ಏನಾದ್ರೂ ಆದ್ರೆ" ಅಂತ ಬಾಚಿ ತಬ್ಬಿಕೊಂಡ್ಲು, ಎದೆಗವಳು ಆತುಕೊಂಡಿದ್ದಕ್ಕೆ ಪಕ್ಕೆಲುಬು ಮತ್ತಷ್ಟು ನೊವಾಯ್ತು ನಾ ಹೇಳಲಿಲ್ಲ, ಅವಳಿಗೆ ನನ್ನದೇ ಚಿಂತೆಯಾಗಿ ಭಯ ಮೂಡಿತ್ತು, ಅದನ್ನ ನಾ ಹೋಗಲಾಡಿಸಬೇಕಿತ್ತು. "ನೀ ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡ್ರೆ ಎನ್ ಮಾಡ್ತೀಯಾ" ಅಂದೆ, "ಡೆಟಾಲ್ ಹಚ್ಚಿಕೊಂಡು ಪಟ್ಟಿ ಕಟ್ತೀನಿ" ಅಂದ್ಲು "ಆಮೇಲೆ ಮತ್ತೆ ಉಳಿದ ಈರುಳ್ಳಿ ಹೆಚ್ಚುತ್ತೀಯೋ ಇಲ್ಲ ಈರುಳ್ಳಿ ಹೆಚ್ಚುವುದೇ ಬಿಡುತ್ತೀಯೊ?" ಅಂತ ಪ್ರಶ್ನಿಸಿದೆ "ಹೆಚ್ತೀನೀ ಸ್ವಲ್ಪ ನೋಡಿಕೊಂಡು ಹೆಚ್ತೀನಿ" ಅಂದ್ಲು "ಅದೇ, ಅಪಘಾತ ಆಯ್ತು ಅಂತ ಬೈಕ್ ಬೇಡ ಅಂದ್ರೆ, ಬಸ್ಸು ಎಲ್ಲ ಸಂಪೂರ್ಣ ಸುರಕ್ಷಿತಾನಾ? ಅಲ್ಲಿ ಎಲ್ಲೊ ಸೀಟು ಸಿಗದೇ ಜೊತು ಬಿದ್ದು ಬರುವಾಗ ಜಾರಿ ಬಿದ್ದರೆ, ಕಾಯುವಾಗಲೇ ಫುಟ್ಪಾತ್ ಮೇಲೆ ಬಸ್ಸು ಏರಿದ್ರೆ, ಅಪಘಾತ ಎಲ್ಲಿ ಬೇಕಾದ್ರೂ ಆಗಬಹುದು, ಅದೂ ಬರೀ ಇಲ್ಲೆ ಅಂತ ನಿರ್ದಿಷ್ಟ ಸ್ಥಾನದಲ್ಲಿ ಅಲ್ಲ, ನಿಜ ಇನ್ನು ಮೆಲೆ ಬೈಕು ಹುಷಾರಾಗಿ ಓಡಿಸು ಅಂತಂದ್ರೆ ಸರಿ, ಬಿಟ್ಟು ಬಿಡು ಅಂದ್ರೆ ಹೇಗೆ" ಅಂದೆ, "ನೀವು ಏನೊ ಒಂದು ಮಾತು ಹೇಳಿ ನನ್ನ ಒಪ್ಪಿಸಿಬಿಡ್ತೀರಿ" ಅಂತ ಕುಸುಗುಟ್ಟಿದ್ಲು. "ಆಯ್ತು ಜೊರಾಗಿ ಓಡಿಸಬೇಡಿ, ನೀವು ಲೇಟಾಗಿ ಬಂದ್ರೂ ನಾನೇನೂ ಕಾಡಿಸಲ್ಲ, ಜಗಳ ಮಾಡಲ್ಲ, ಎನ ನೀವೇನೂ ರೆಸಿಂಗ್ ಬೈಕ್ ಓಡಿಸೊರ ಹಾಗೆ ಆ ಗ್ಲೌಸು, ಜಾಕೆಟ್ಟು ಹಾಕೊಂಡು ಹುಡಿಗೀರ ಮುಂದೆ ಸ್ಟೈಲು ಹೊಡೆಯೊದು ಏನ್ ಬೇಡ" ಅಂದ್ಲು, "ಲೇ ನಾ ಜೋರಾಗಿ ಓಡಿಸಲ್ಲ, ನಿನಗೇ ಗೊತ್ತು, ಏನೊ ರಸ್ತೆ ಖಾಲಿ ಇತ್ತು ಅಂತ ಸ್ವಲ್ಪ ಸ್ಪೀಡಿನಲ್ಲಿದ್ದೆ, ಇನ್ನು ಆ ಜಾಕೆಟ್ಟು ಗ್ಲೌಸು ಹಾಕಿಕೊಂಡಿದ್ದರಿಂದಲೇ ಕೈಯೆಲ್ಲ ಸ್ವಲ್ಪ್ ತರಚುಗಾಯಗಳೊಂದಿಗೆ ಬಚಾವಾಗಿದ್ದು, ಅದಿಲ್ಲದಿದ್ರೆ ಅಷ್ಟೆ" ಅಂದೆ "ಹಾಂ ಹಾಂ ಅದೂ ಸರಿ ಗ್ಲೌಸ್ ಹಾಕೊಳ್ಳಿ ಸ್ಟೈಲ್ ಎಲ್ಲ ಬೇಡ" ಅಂದ್ಲು. ಜಾಕೆಟ್ಟು ಒಂದು ಪಕ್ಕ ಕಿತ್ತು ಬಂದಿತ್ತು, ಗ್ಲೌಸ್ ಹರಿದಿತ್ತು, ನಾನೇ ಹೊಸದು ಕೊಡಿಸುತ್ತೇನೆ ಅಂದ್ಲು, ನಾನೂ ಖುಶಿಯಾದೆ...

"ಎದೆಗೆ ಸ್ವಲ್ಪ ಜೊರಾಗಿ ಪೆಟ್ಟು ಬಿದ್ದಿದೆ ಅನಿಸತ್ತೆ" ಅಂದ್ಲು "ಆ ಎದೆಯೊಳ್ಗಿರುವ ನಿನಗೇನು ಆಗಿಲ್ಲ ಬಿಡು" ಅಂದ್ರೆ ನಸುನಗುತ್ತ ನಾಚಿದಳು, ಅಯೊಡಿಕ್ಸ ತೆಗೆದುಕೊಂಡು ಪಕ್ಕೆಲುಬಿಗೆ ಸ್ವಲ್ಪ ಹಚ್ಚುತ್ತ ಪಕ್ಕದಲ್ಲೆ ಮಲಗಿದಳು, "ನಾಳೆ ಡಾಕ್ಟರ ಹತ್ರ ಹೋಗೊಣ, ಏನಕ್ಕೂ ಒಂದು ಸಾರಿ ಪಕ್ಕೆಲುಬು ತೋರಿಸಿಕೊಂಡು ಬರೊಣ, ಬಹಳ ಉಬ್ಬಿದೆ" ಅಂದ್ಲು "ಸರಿ ಆ ಮೊನ್ನೆ ಹೋಗಿದ್ವಲ್ಲ ಅದೇ ಕ್ಲಿನಿಕಗೆ ಕರಕೊಂಡು ಹೋಗ್ತೀಯಲ್ಲ, ನರ್ಸು ಅದೇ ನಮ್ಮ ನರ್ಗೀಸ್ ಹತ್ರ" ಅಂದೆ "ಹಾಂ!.. ಹೂಂ ಅಲ್ಲೇ ಕರಕೊಂಡು ಹೋಗ್ತೀನಿ, ಅದೇ ನಿಮ್ಮ ನರ್ಗಿಸಗೆ ಹೇಳ್ತೀನಿ, ಪಕ್ಕೆಲುಬು ಮುರಿದಿಲ್ಲ ಅಂದ್ರೂ, ಮುರಿದು ಕಳಿಸು ಅಂತ ನಾಲ್ಕು ದಿನಾ ಮನೇಲಿ ಬಿದ್ಕೊಳ್ಲಿ ಗೊತ್ತಾಗುತ್ತೆ" ಅಂತದ್ಲು. ನೋವಿತ್ತು ಆದ್ರೂ ನಗು ಬರುತ್ತಿತ್ತು, ನಿದ್ದೆ ಬರುವ ಹಾಗಿರಲಿಲ್ಲ ಪೇನ ಕಿಲ್ಲರ(ನೋವುನಿವಾರಕ) ಥರ ಅವಳ ಮಾತುಗಳು ನೋವು ಮರೆಸುತ್ತಿದ್ವು...

ಮತ್ತೆ ಸಿಗೊಣ ಹೀಗೆ ಅಪಘಾತದಲ್ಲಿ... ಅಯ್ಯೊ ಬಿಟ್ತು ಅನ್ನಿ... ಮತ್ತೆ ಮಾತುಕತೆಗಳಲ್ಲಿ...


ಮೊನ್ನೆ ಗುರುವಾರ ಸ್ವಲ್ಪ ಚಿಕ್ಕ ಆಕ್ಸಿಡೆಂಟ ಆಯ್ತು, ಎನೂ ಬಹಳ ಪೆಟ್ಟಾಗಿಲ್ಲ, ಸಧ್ಯ ದೇವರ ದಯೆಯಿಂದ ಚೆನ್ನಾಗಿದ್ದೇನೆ, ಮತ್ತೆ ಬರೆಯುತ್ತಿದ್ದೇನೆ ಕೂಡ, ಅದೃಷ್ಟ ನನ್ನ ಹಿಂದೆ ಯಾವ ವಾಹನವೂ ಬರ್ತಿರಲಿಲ್ಲ, ಅಂತೂ ಬದುಕು ಒಂದು ಹೊಸಾ ಅನುಭವ ಕೊಟ್ಟಿದೆ, ನನಗಾದ ಅನುಭವದ ಆಧಾರದ ಮೇಲೆ ಕೆಲ ಉಪದೇಶ.. ಛೆ ಛೆ.. ಸಲಹೆ ಕೊಡುತ್ತಿದ್ದೇನೆ ಸರಿಯೆನ್ನಿಸಿದರೆ ಅಳವಡಿಸಿಕೊಳ್ಳಿ, ನನಗಾಗಿರುವುದು ಹೀಗೆ ಯಾರಿಗೊ ಆಗದಿರಲಿ ಅನ್ನೋದೆ ನನ್ನ ಆಶಯ..
>ರಾತ್ರಿ ರಸ್ತೆಗಳು ಖಾಲಿ ಇದ್ದರೂ ಎಲ್ಲಿಂದ ಯಾವಕಡೆ ವಾಹನ ಬರುತ್ತವೆ ಗೊತ್ತಾಗಲ್ಲ ತಿರುವುಗಳಲ್ಲೆಲ್ಲ ಹುಷಾರಾಗಿದ್ದರೆ ಒಳ್ಳೇದು
>ಕತ್ತಲೆಯಲ್ಲಿ ರಸ್ತೆಯ ಗುಂಡಿ, ಕಲ್ಲುಗಳು ಸರಿಯಾಗಿ ಕಾಣಿಸುವುದಿಲ್ಲ, ಅದಕ್ಕೆ ರಸ್ತೆಯತ್ತ ವಿಶೇಷ ಗಮನವಿರಲಿ.
>ಸಾಧ್ಯವಾದಷ್ಟು ಕಾರು ಬಸ್ಸು ಹಿಂಬಾಲಿಸದಿರಿ, ಅಂತರ ಕಾಯ್ದುಕೊಳ್ಳಿ ಈ ನಾಲ್ಕು ಚಕ್ರದ ವಾಹನಗಳ ಕೆಳಗೆ ಗುಂಡಿಗಳೆಲ್ಲ ಕಾಣದೆ ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪುವ ಸಂಭವ ಜಾಸ್ತಿ.
>ಮುಖ್ಯವಾಗಿ ದೇಹದ ಬಹು ಪಾಲು ಮುಚ್ಚುವಂತೆ, ಬೂಟು, ಒಳ್ಳೆ ಗುಣಮಟ್ಟದ ಜಾಕೆಟ್ಟು, ಗ್ಲೌಸು (ಸಂಪೂರ್ಣ ಕೈಬೆರಳು ಮುಚ್ಚುವ) ಧರಿಸಿ, ನನ್ನ ಮಟ್ಟಿಗೆ ಕೆಲವೇ ಕೆಲವು ತರಚು ಗಾಯಗಳೊಂದಿಗೆ ನಾ ಬಚಾವಾಗಿದ್ದು ಸಂಪೂರ್ಣ ಎನೂ ಹೊರಗಿರದ ಹಾಗೆ ಇದೆಲ್ಲ ಧರಿಸಿದ್ದೆ ಕಾರಣ.
>ಹೆಲ್ಮೆಟ್ಟು ಹೇಗೂ ಕಡ್ಡಾಯವಿದೆ ಅದನ್ನು ಪಾಲಿಸಿ.
>ಅನವಶ್ಯಕ ಸ್ಪೀಡಿನಲ್ಲಿ ಹೋಗೊದು ಬೇಡ ಒಂದೈದು ನಿಮಿಷ ಲೇಟಾದರೂ ಪರವಾಗಿಲ್ಲ, ಆದರೆ ಐದು ನಿಮಿಷ ಉಳಿಸಲು ಹೋಗಿ ಮುಂದಿನ ಬದುಕಲ್ಲಿ ಬರುವ ವರ್ಷಗಳೆಲ್ಲ ಕಳೆದುಕೊಳ್ಳೋದು ಬೇಡ, ಇದು ನನಗೂ ಅನ್ವಯ ಆಗುತ್ತದೆ.

ಹೀಗೆ ನಿಮ್ಮಲ್ಲೂ ಇವನ್ನು ಬಿಟ್ಟು ಕೆಲ ಇನ್ನೂ ಒಳ್ಳೆಯ ಸಲಹೆಗಳಿದ್ದರೆ ಹಂಚಿಕೊಳ್ಳಿ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/apaghaata.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

29 comments:

ಬಾಲು said...

maraire ega hegiddiri? pakke novutta ide antha barediddiri? ega hegide? moole doctor na bheti madiri.

innu mele nadu rathre ya party galanna aadashtu avoid madi. haagu hogale bekiddare aadashtu echharike inda hogodu olithu.

shivu.k said...

ಪ್ರಭು,

ಅಪಘಾತದಲ್ಲೂ ನರ್ಗೀಸ್ ಬೇಕಾ....ನಿಮ್ಮಾಕೆ ತಲೆ ಮೇಲೆ ಮೊಟುಕಿದ್ದರೆ ಚೆನ್ನಿತ್ತು....[ತಮಾಷೆಗೆ]ಬರಹದಲ್ಲಿ ಎಂದಿನಂತೆ ಅದೇ ತುಂಟತನ...

ಅಪಘಾತದ ಬಗ್ಗೆ ನಿಮಗಿರುವ ಕಾಳಜಿ ಮತ್ತು ಕೊಟ್ಟಿರುವ ಟಿಪ್ಸ್‌ಗೆ ಧನ್ಯವಾದಗಳು.

Prabhuraj Moogi said...

ಬಾಲು ಅವರಿಗೆ
ಬಾಲು ಸರ್ ನಿಮ್ಮ ಕಾಳಜಿಗೆ ತುಂಬಾ ಧನ್ಯವಾದಗಳು... ಸಾಕಷ್ಟು ಚೇತರಿಸಿಕೊಂಡಿದ್ದೇನೆ, ನೋವು ಕಮ್ಮಿಯಾಗಿದೆ, ಡಾಕ್ಟರ ಭೇಟಿ ಮಾಡಿದ್ದೆ, ಎನೂ ಪ್ರಾಕ್ಚರ ಎಲ್ಲ ಆಗಿಲ್ಲ ಅಂತ ಆಯಿಂಟಮೆಂಟ, ಟ್ಯಾಬ್ಲೆಟ ಎಲ್ಲ ಕೊಟ್ಟಿದ್ದಾರೆ. ಸಧ್ಯ ಜಾಕೆಟ್ಟು, ಗ್ಲೌಸು ಹೆಲ್ಮೆಟ್ಟಿನಿಂದ ಬಚಾವು... ಪಾರ್ಟಿಗಳನ್ನು ಬಿಟ್ಟರೂ ಕೆಲವು ಸಾರಿ ಕೆಲ್ಸದಿಂದ ಬರುವುದೇ ಲೇಟು ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತೇನೆ..

shivu ಅವರಿಗೆ
ಅಪಘಾತವಾದರೇನಂತೆ ನಮ್ಮ ತುಂಟತನಗಳು ಹೀಗೆ... ಆಕೆ ಮೊಟಕಿರೋಳು ಮೊದಲೇ ಪೆಟ್ಟಾಗಿದೆ ಅಂತ ಸುಮ್ಮನಿದ್ದಾಳೆ. ಏನೊ ನನಗಾಗಿರುವುದು ಇನ್ನೊಬ್ಬರಿಗೆ ಆಗದಿರಲಿ ಅನ್ನೊಕೆ ಟಿಪ್ಸ ಕೊಟ್ಟೆ...

Nisha said...

ಹಲೋ ಪ್ರಭು
ನೀವು ಅಪಘಾತ ಮಾಡಿಕೊಂಡು ನಮಗೆ ಆಘಾತ ನೀಡಿಬಿಟ್ಟಿರಿ. ಈಗ ಹೇಗಿದ್ದೀರಿ? ಸ್ವಲ್ಪ ಹುಷಾರಾಗಿ ಗಾಡಿ ಓಡಿಸಿ ಮಾರಾಯರೇ. ನೋವಿನಲ್ಲೂ ನರ್ಸ್ ನರ್ಗೀಸಳನ್ನು ನೆನಿಸಿಕೊಂಡಿದ್ದನ್ನು ನೋಡಿ ನಗು ಬಂತು. ನೀವು ಕೊಟ್ಟಿರುವ ಸಲಹೆಗಳನ್ನು ಪಾಲಿಸಿದರೆ ಸಾಕು ೫೦% ಅಪಘಾತಗಳನ್ನು ನಿವಾರಿಸಬಹುದು. ಸಲಹೆಗಳಿಗೆ ಧನ್ಯವಾದಗಳು.

Prabhuraj Moogi said...

Nisha ಅವರಿಗೆ:
ಈಗ ಪರವಾಗಿಲ್ಲ, ಹುಷಾರಾಗೇ ಓಡಿಸುತ್ತೇನೆ ಏನೊ ನನ್ನ ದುರಾದೃಷ್ಟಕ್ಕೆ ಹಾಗಾಯ್ತು, ಆದ್ರೆ ಅದೃಷ್ಟ ಕಮ್ಮಿ ಪೆಟ್ಟಾಯಿತು... ನೊವಾದರೂ ಎಲ್ಲ ಮರೆಯಲೇ ಬೇಕಲ್ಲ ಮತ್ತೆ ಮುಂದುವರೆಯಲು ಬೇಕಲ್ಲ, ನರ್ಗೀಸ ನರ್ಸ್ ನೆನಪಾಗಿದ್ದು ಪೇನ ಕಿಲ್ಲರ ಥರ... ಈ ಅಪಘಾತದ ಬಗ್ಗೆ ಬರೆಯಲೋ ಬೇಡವೊ ಅಂತ ಹಲ ಬಾರಿ ಯೋಚಿಸಿದೆ, ಆದರೆ ಎಲ್ಲರಿಗೂ ನನ್ನ ಅನುಭವದಿಂದ ಕಿಂಚಿತ್ತಾದರೂ ಸಹಾಯವಾಗಲಿ ಅಂತ ಬರೆದೆ...

SSK said...

ಪ್ರಭು ಅವರೇ, ಮೊದಲಿಗೆ, ನೀವು ಬೇಗ ಚೇತರಿಸಿಕೊಂಡು ಮೊದಲಿನಂತೆ ಚೆನ್ನಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ! ನಿಮಗೆ ಬಂದಿದ್ದ ಬೆಟ್ಟದಂತಾ ಕಂಟಕ ಬೆರಳಿನ ತುದಿಯಷ್ಟರಲ್ಲಿ ಕಳೆಯಿತು, ದೇವರು ದೊಡ್ಡವನು!!!
ಇವೆಲ್ಲಾ ನಿಮ್ಮ ಶ್ರೀಮತಿಯವರ ಪೂಜೆಯ ಪುಣ್ಯಫಲ!!

ನಿಮಗಾದರೆ ಅಪಘಾತವಾಗಿದ್ದಕ್ಕೆ ಆಘಾತವಾಗಿದೆ! ನಾನಾದರೋ ಈ ಬೆಂಗಳೂರಿನ ಟ್ರಾಫಿಕ್ನಲ್ಲಿ, ಗಾಡಿ ಓಡಿಸುವಾಗ ನನ್ನ ಮನಸ್ಸು ಸದಾ ಆತಂಕ ಮತ್ತು ಆಘಾತದಿಂದ ಕೂಡಿರುತ್ತದೆ . ಮುಖ್ಯವಾಗಿ ಈ ಆಟೋ ಓಡಿಸುವವರ ಕಾರಣದಿಂದ.
ಗಾಡಿ ಹತ್ತಿ ಹೊರಟೆನೆಂದರೆ, ನಾನು ತಲುಪುವ ಸ್ಥಳ ಸೇರುವಷ್ಟರಲ್ಲಿ ಕಡಿಮೆ ಎಂದರೆ ಒಂದು ಹತ್ತು ಜನರನ್ನಾದರೂ ಮನಸ್ಸಿನಲ್ಲಿ ಬೈದುಕೊಂದಿರುತ್ತೇನೆ!!!!! ಹೇಳುತ್ತಾ ಹೋದರೆ ಈ ಟ್ರಾಫಿಕ್ ನ ಕಥೆ ಮುಗಿಯುವುದೇ ಇಲ್ಲ.
ನಿಮ್ಮ ಕಲ್ಪನೆಯ/ಅನುಭವದ ಬರಹಗಳು ಪ್ರತಿಯೊಬ್ಬರ ಬದುಕಿನ ನೈಜ ಘಟನೆಯೊಂದಿಗೆ ಬೆಸೆದುಕೊಂಡಿರುತ್ತವೆ!! ಎಂದಿನಂತೆ ನಿಮ್ಮ ಈ ಲೇಖನ ವಿಶೇಷವಾಗಿ ಮೂಡಿಬಂದಿದೆ!
ಆತಂಕದಲ್ಲೂ ನಗುವ, ನಗಿಸುವ ನಿಮ್ಮ ವಿಶೇಷ ಗುಣಕ್ಕೆ ಶಿರಸಾಭಿವಂದನೆಗಳು!!

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಭು
ಹೇಗಿದ್ದೀರಿ ಈಗ ??? ಬರಹ ಚೆನ್ನಾಗಿದೆ ಅದರಲ್ಲಿ ಎರಡು ಮಾತಿಲ್ಲ. ನೀವು ಬಿಡೀಪ ರಸಿಕೋತ್ತಮರು ಅಪಘಾತದಲ್ಲೂ ನರ್ಗೀಸ್ ಬೇಕು ಅಂತ ಡಿಮ್ಯಾಂಡು ಮಾಡೋರು.

Veena DhanuGowda said...

Hi,
I was shocked, story andkonde
nijvaglu accident madkondidira
take care...
Be careful :)

PARAANJAPE K.N. said...

ಪ್ರಭು,
ಅಪಘಾತದ ನೋವಿನಿ೦ದ ಬೇಗ ಚೇತರಿಸಿಕೊಳ್ಳಿರೆ೦ದು ಹಾರೈಸುವೆ. ಬರಹ ಎ೦ದಿನ೦ತೆ ಚೆನ್ನಾಗಿದೆ, ತು೦ಟತನ, ಹಾಸ್ಯ, ರಸಿಕತೆಯ ಸಮಪಾಕವಿದೆ. ಬೈಕ್ ಸವಾರರಿಗೆ ಕೊಟ್ಟಿರುವ ಟಿಪ್ಸ್ ಕೂಡ ಸಮಯೋಚಿತ.

ಮನಸು said...

ಪ್ರಭು,
ಎಂದಿನಂತೆ ಇಂದು ಮತ್ತೊಂದು ಬರಹವನಿಟ್ಟಿದ್ದೀರಿ... ನೀವು ಏನು ಪೊರಕೆ ದ್ರಿಷ್ಟಿ ಎಲ್ಲಾ ತೆಗೆಸ್ಕೋತೀರ ಹ ಹಾ ಹಾ ಹಾ....ನಿಮ್ಮ ಜೀವನದಲ್ಲಿ ಬರುವ ಹೆಣ್ಣು ಇದೆಲ್ಲಾ ಮಾಡಬೇಕು ಅಂತ ಈಗಲೇ ಎಲ್ಲಾ ಬರೆಯುತ್ತೀರಾ ಹಹಹ... ಹಾಸ್ಯ ಲಾಸ್ಯ ವಾಗಿದೆ ನಿಮ್ಮ ಬರಹ... ಅಪಘಾತವೇನು ನಿಜವೋ ಅಥವಾ ನಿಮ್ಮಾಕೆ ತರ ಬರಹಕ್ಕೆ ಮೀಸಲಿಟ್ಟು ಬರೆದಿದ್ದೇನೋ ಎಂದುಕೊಂಡಿದ್ದೇ ಆದರೆ ನಿಜವಾಗಿಯೊ ಅಪಘಾತವಾಗಿದೆ.... ಕುಡಿದವರು ಚೆನ್ನಾಗಿ ಓಡಿಸುತ್ತಾರೆ ನೀವು ಕುಡಿದೇ ಇಲ್ಲ ನೋಡಿ ಹಾಗೆ ಬಿದ್ದಿರಿ... ಆದರೊ ಹುಷಾರಾಗಿರಿ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಆದಷ್ಟು ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ.
ಒಳ್ಳೆಯ ಬರಹ ಮುಂದುವರಿಸಿ ನಿಜ ಘಟನೆಗಳು ಹಾಗು ಹಲವೊ ವಿಷಯ ವಿನಿಮಯ ನೆಡೆಯಲಿ
ಧನ್ಯವಾದಗಳು

maaya said...

ಏನ್ರೀ ಸರ್ರಾ,
ಬೆಳಿಗ್ಗೆ ಎದ್ದು ದೇವರಮುಖ ಸರಿಯಾಗಿ ನೋಡ್ರಿ, ಪಕ್ಕದ ಮನೆ ಪದ್ದು ನೋಡಬೇಡಿ, ನಿಮ್ಮ ಕಥೆ ಓದುತ್ತಲೇ ನನಗೆ ತಿಳಿತು ನೀವು ಎಲ್ಲೋ ಬಿದ್ದು ಬಂದಿದ್ದಿರಾ ಅಂತ, ಕಾರಣ ಅನುಭವ ಇಲ್ಲದೆ ನೋವನ್ನು ಇಷ್ಟು ಚೆನ್ನಾಗಿ ವರ್ಣಿಸಲು ಆಗೋಲ್ಲ, ನೀವು ಹೇಳಿದ್ದು ನಿಜ ಈ ನಾಲ್ಕು ಚಕ್ರದ ವಾಹನಗಳನ್ನು ಆಟೋಗಳನ್ನೂ ಹಿಂಬಾಲಿಸಬರದು, ಎಲ್ಲಿ ಹಳ್ಳ ಕೊಳ್ಳಗಳು ತಿಳಿಯೋದೇ ಇಲ್ಲ.. ನನಗೂ ಈ ಅನುಭವ ಬಹಳ ಚೆನ್ನಾಗಿ ಆಗಿದೆ, ಆದರು ಈ ಈಗಿನ ಹುಡುಗರು ಸ್ವಲ್ಪ ಜಾಸ್ತಿನೇ ಸ್ಪೀಡು, ಸ್ವಲ್ಪ ಹುಷಾರಾಗಿ ಇರಿ,,,,,, ಲೇಖನ ಚೆನ್ನಾಗಿ ತಿಳಿಯಾಗಿ ಇತ್ತು...

ಹೇಮಾ

ಧರಿತ್ರಿ said...

ಎಂಥದ್ದು ಮಾರಾಯ್ರೆ...ಜೋಪಾನ ಮಾರಾಯ್ರೆ. ಸೇಫಾಗಿ ಹೋಗಕ್ಕೆ ಕಲೀಬೇಕಪ್ಪಾ..ಬೇಗ ಹುಷಾರಾಗಿ. ಹೊಸ ಪೋಸ್ಟ್ ಬೇಗ ಹಾಕಿ..ಆದರೆ ಸ್ವಲ್ಪ ಚಿಕ್ಕದಾಗಿರಲಿ..!!!!!!! ಹೀಗಂದೆ ಅಂತ ಬೈಬೇಡಿ..ಒಮ್ಮೊಮ್ಮೆ ಕೆಲಸದ ನಡುವೆ ಓದಿ ಹೋಗೋಣ ಅಂದ್ರೆ ಬೇಗ ಓದಿ ಮುಗಿಯಲ್ಲ ಅದ್ಕೆ!!ಹಿಹಿಹಿ
-ಧರಿತ್ರಿ

Anonymous said...

ಪ್ರಭು ಅವರೇ,
ಈಗ ಹೇಗಿದ್ದೀರಿ? ಬೇಗ ಹುಷಾರಾಗಿ.
ಬರಹ ಎಂದಿನಂತೆ ಚೆನ್ನಾಗಿದೆ.

ಶಿವಪ್ರಕಾಶ್ said...

ಪ್ರಭು,
ಲೇಖನ ಚೆನ್ನಾಗಿತ್ತು...
ಆದ್ರೆ, ಸ್ವಲ್ಪ ಹುಷಾರಾಗಿ ಗಾಡಿ ಓಡಿಸ್ರಿ.
ನಾನು ಇದುವರೆಗೂ ನಾಲ್ಕು ಸರಿ ಬೈಕ್ ಮೇಲಿಂದ ಬಿದ್ದಿದೀನಿ, ಆದ್ರೆ ನಾಲ್ಕು ಸಾರಿನು ಬೇರೆಯವರು ಗಾಡಿ ಹೊಡಿತಾ ಇದ್ರೂ.
ನಾನು ನಾಲ್ಕು ಸಾರಿ ಬಿದ್ದ ನೆನಪುಗಳು, ಒಳ್ಳೆ ಹಾಸ್ಯಮಯವಾಗಿವೆ.

sunaath said...

ಪ್ರಭುರಾಜ,
ಅಪಘಾತದಿಂದ ಪಾರಾಗುವದು ಹೆಂಡತಿಯ ತಾಳಿಯ ಪುಣ್ಯದಿಂದ! ತಿಳೀತೇನ್ರಿ?
ಅದಕ್ಕೆ ಆ ಹೆಣ್ಣುಮಗೂನ್ನ ಭಕ್ತಿಯಿಂದ ನೋಡ್ಕೊಳ್ರಪ್ಪಾ. ಪಕ್ಕದ್ಮನೆ ಪದ್ದಮ್ಮ, ನರ್ಗೀಸ್ ನರ್ಸಮ್ಮ ಕಡೆವರ್ಗೆ ಬರ್ತಾರೇನ್ರಿ?

Prabhuraj Moogi said...

SSK ಅವರಿಗೆ
ತಮ್ಮ ಕಾಳಜಿಗೆ ಏನು ಹೇಳಲಿ, ಶ್ರೀಮತಿ ಪುಣ್ಯ ಫಲ ಅಂದಿದ್ದಕ್ಕೆ ಹಿರಿ ಹಿರಿ ಹಿಗ್ಗಿದ್ದಾಳೆ, ಮತ್ತೆ ನಿಮಗೆ ಧನ್ಯವಾದ ತಿಳಿಸಿದ್ದಾಳೆ.
ನಿಜ ಬೆಂಗಳೂರಿನ ಟ್ರಾಫಿಕ್ಕು ಬಹಳ ಹದಗೆಟ್ಟಿದೆ, ಏನು ಮಾಡೊದು ನಮಗೆಲ್ಲ ಅನಿವಾರ್ಯ ನೀವು ಹುಷಾರಾಗಿರಿ... ನೋವಿನಲ್ಲಿ ನಕ್ಕರೆ ನೋವು ಸ್ವಲ್ಪ ಕಮ್ಮಿಯಾದೀತೆಂಬ ಹಂಬಲ, ಅದಕ್ಕೆ ನಗು ಎಲ್ಲ...

Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ
ಚೆನ್ನಾಗಿದ್ದೇನೆ ಸರ್... ಹ ಹ ಹ.. ನನ್ನಾಕೆ ಕಾಡಿಸೋಕೆ ಮಾತ್ರ ನರ್ಗೀಸ್ ಬೇಕೆಂದಿದ್ದು, ನನ್ನಾಕೆ ನನ್ನ ಜತೆಗಿದ್ದರೆ ಸಾಕು ಅವಳ ಮುಂದೆ ನರ್ಗೀಸ್ ನರ್ಸ ಎಲ್ಲ ನೀವಾಳಿಸಿ ಹಾಕಬೇಕು...

ಪ್ರೀತಿಯಿ೦ದ ವೀಣಾ :) ಅವರಿಗೆ:
ನಿಜವಾಗ್ಲೂ ಆಯ್ತು ಹಾಗೆ ಅದಕ್ಕೆ ಸ್ವಲ್ಪ ಕಲ್ಪನೆ ಸೇರಿಸಿ ನನ್ನವಳ ನನ್ನ ತುಂಟಾಟ ಸೇರಿಸಿ ಬರೆದೆ, ಎಲ್ರಿಗೂ ಒಂದು ಒಳ್ಳೇ ಸಂದೇಶ ಕೊಟ್ಟ ಹಾಗೆ ಆಗುತ್ತದೆ ಅಂತ...

PARAANJAPE K.N. ಅವರಿಗೆ
ನಿಮ್ಮ ಹಾರೈಕೆಗೆ ಧನ್ಯವಾದಗಳು, ಈಗ ತೊಂದ್ರೆ ಏನಿಲ್ಲ... ಬೈಕ್ ಸವಾರರಿಗೆ ನನ್ನ ತಪ್ಪು, ಅದರ ಅನುಭವ.. ಟಿಪ್ಸ ಆಗಿದೆ...

ಮನಸು ಅವರಿಗೆ:
ದೃಷ್ಟಿ ತೆಗೆಯೋದು ನಮ್ಮಲ್ಲಿ ಬಹಳ... ಮನೇಲಿ ಅಜ್ಜಿ ತಗೀತಿದ್ರು... ಬರುವವಳು ಮಾಡುತ್ತಾಳೊ ಇಲ್ವೊ ಗೊತ್ತಿಲ್ಲ, ಏನೊ ಚೆನ್ನಾಗಿರುತ್ತದೆ ಅದು.. ಒಂಥರಾ ಕಾಳಜಿ ವ್ಯಕ್ತಪಡಿಸೋ ರೀತಿ... ನನ್ನಾಕೆ ಮಾತ್ರ ಕಲ್ಪನೆ, ಉಳಿದದ್ದು ನಿಜ... ಕುಡಿದೋರು ಎಲ್ಲಿ ಬೀಳ್ತೀವೊ ಅಂತ ಹೆದರಿ ಬಹಳ ಹುಷಾರಾಗಿರ್ತಾರೆ ಅದು ನಿಜ... ತಮಾಷೆ ಅಂದ್ರೆ ಆವತ್ತು ಡ್ರಿಂಕ್ಸ ಮಾಡಿದ ಗೆಳೆಯನನ್ನು ಮನೆಗೆ ತಲುಪಿಸಿದ್ದೆ, ಅಲ್ಲದೆ ಎಲ್ರಿಗೂ ಮನೆ ತಲುಪಿ ಎಸ್ಸೆಂಸ್ ಮಾಡಲು ಹೇಳಿ ಹೊರಟಿದ್ದ ನಾನು ಈ ರೀತಿ ಮಾಡಿಕೊಂಡಿದ್ದು!!
ವಿಷಯಗಳು ವಾರಕ್ಕೊಂದು ಬರುತ್ತಿರುತ್ತವೆ, ನೀವೂ ಬರುತ್ತಿರಿ...

maaya ಅವರಿಗೆ:
ಮುಂಜಾನೆ ಪದ್ದು ಮುಖ ನೋಡದೆ ಬೇರೆ ಯಾರದೊ ಮುಖ ನೋಡಿರಬೇಕು ಅನಿಸತ್ತೆ ಪದ್ದು ಮುಖ ನೋಡಿದ್ರೆ ದಿನಾ ಚೆನ್ನಾಗಿರತ್ತೆ(ನನ್ನಾಕೆಗೆ ಹೇಳ್ಬೇಡಿ ಪ್ಲೀಜ್), ನಿಜ ನಾಲ್ಕು ಚಕ್ರದ ವಾಹನ ಹಿಂಬಾಲಿಸಲೇಬಾರ್ದು ಅದರಲ್ಲೂ ಅಟೊ ಮಾತ್ರ ಬೇಡವೇ ಬೇಡ.. ನಾನು ಜಾಸ್ತಿ ಸ್ಪೀಡ್ ಓಡಿಸಲ್ಲ, ಎಲ್ರೂ ನಾ ನಿಧಾನ ಓಡಿಸೋದನ್ನ ಆಡಿಕೊಳ್ತಾರೆ ಅಷ್ಟು ಕಮ್ಮಿ, ಆವತ್ತ ರಸ್ತೆ ಖಾಲಿ ಇತ್ತು ಅಂತ ಸ್ವಲ್ಪ ವೇಗವಾಗಿ ಬಂದಿದ್ದು.

ಧರಿತ್ರಿ ಅವರಿಗೆ
ಏನೊ ನನಗಾದದ್ದು ಇನ್ನೊಬ್ಬರಿಗೆ ಪಾಠವಾಗಲಿ ಅಂತ ಬರೆದೆ.. ಮೊದಲೂ ಒಬ್ಬರು ಹೀಗೆ ಹೇಳಿದ್ರು.. ಸಲಹೆ ಚೆನ್ನಾಗಿದೆ ನಾನ್ಯಾಕೆ ನಿಮ್ಮನ್ನ ಬಯ್ಯೊದು, ನನಗೆ ಚಿಕ್ಕದಾಗಿ ಬರೆಯಲು ಬರುವುದಿಲ್ಲ ಬಿಡಿ, ಹಿಂದೆ ಒಂದು ಸಾರಿ(ಬೇವು ಬೆಲ್ಲ ಲೇಖನ) ಪ್ರಯತ್ನಿಸಿದ್ದೆ ಆದರೆ ಅದು ಅಪೂರ್ಣವೆನಿಸಿತ್ತು. ಹಾಗಾಗಿ ನಾ ಚಿಕ್ಕದಾಗಿ ಬರೆಯಲಿಕ್ಕಿಲ್ಲ ಕ್ಷಮಿಸಿ.. ಬಿಡುವಾದಾಗ ಬಂದು ಓದಿ ಇಲ್ಲದಿದ್ದರೆ ಪ್ರತೀ ಲೇಖನದಲ್ಲೂ PDF file ಮಾಡಿ ಲಿಂಕ್ ಕೊಟ್ಟಿರುತ್ತೇನೆ ಡೌನಲೋಡ ಮಾಡಿಕೊಂಡು ಮನೆಯಲ್ಲೂ ಓದಬಹುದು... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು, ಬರುತ್ತಿರಿ...

ಜ್ಯೋತಿ ಅವರಿಗೆ;
ಈಗ ಚೆನ್ನಾಗಿದ್ದೇನೆ, ತೊಂದ್ರೆ ಇಲ್ಲ, ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು, ಬರುತ್ತಿರಿ...

ಶಿವಪ್ರಕಾಶ್ ಅವರಿಗೆ:
ಈ ಘಟನೆ ನಂತರ ಇನ್ನೂ ಹುಷಾರಾಗಿದ್ದೇನೆ... ನಿಮ್ಮ ಅನುಭವಗಳನ್ನೂ ಬರೆಯಿರಿ, ಎಲ್ಲರಿಗೂ ತಪ್ಪು ಮಾಡದಂತೆ ಮುನ್ನೆಚ್ಚರಿಕೆಯಾದೀತು..

sunaath ಅವರಿಗೆ
ಸುನಾಥ್ ಸರ್, ಪದ್ದು ನರ್ಸ್ ಎಲ್ಲ ಹುಷಾರಾಗಿಲ್ಲದಾಗಿನ ಪೇನಕಿಲ್ಲರ ಥರ, ನನ್ನಾಕೆ ದಿನ ನಿತ್ಯದ ಹೊಟ್ಟೆ ತುಂಬುವ ಅನ್ನ ನೀರು ಉಸಿರಿನ ಥರ, ಅವಳಿಲ್ಲದೆ ಏನಿದೆ, ಅದೆಲ್ಲ ಸುಮ್ನೆ ಅವಳ ಗೋಳು ಹೊಯ್ದುಕೊಳ್ಳಲು ಮಾತ್ರ.

ಜಲನಯನ said...

ಪ್ರಭು,
ಇದ್ಯಾಕ್ಲ ಬಡ್ಡೆತ್ತದೆ..ಕುಡ್ದಿರ್ನಿಲ್ಲ ಅಂತೀಯೆ..ಆ ಪಾಟಿ ಎಂಡ್ರ್ ಬೈಕಳ್ಳಂಗೆ ಅಲ್ಲಲ್ಲ ಒಟ್ಟೆಉರ್ಕೊಳ್ಳಂಗೆ ಬ್ಯಾರೆ ಉಡಿಗೀರ್ಬಗ್ಗೆ ಏಳುದ್ರೆ..ನಿಜವಗ್ಲೂ ನಿಂಗಾಕ್ಸೆಂಟು ಆಗೈತೆ ಅಂತ ಅಂದ್ಕೊಳ್ಳಕಾಯ್ತದಾ...ಮೂದೇವಿ ತಂದು..ಅಲ್ ಕಲಾ..ಪೆಪ್ಸಿ ಅನ್ಬುಟ್ಟು ನಿನ್ ಸ್ನೇಯಿತ್ರು ಮಿಕ್ಸ್ ಮಾಡಿ ಕುಡ್ಸ್ ಬುಟ್ರೋ ಎಂಗೆ...? ಕುಡಿದಿದ್ರೆ ಏನಾತ್ಲ..ಕುಡುಕ್ರ ಸವಾಸ ಮಾಡೀಯೇ ಅಂತ ಗಿಣೀಗೇಳ್ದಂಗೆ ಎಸ್ಟ್ ದಪ ಏಳಿವ್ನಿ...ಒಸಿ..ಉಸಾರ್ ಕಣ್ಮಗ ಇನ್ಮ್ಯಾಕಾದ್ರ್ರೂ.....

ಚನ್ನಾಗಿ ಬರೆದಿದ್ದೀರ ಪ್ರಭು...ನನ್ನ ಪ್ರತಿಕ್ರಿಯೆ ಇಷ್ಟ ಆಯಿತು ಅಂದ್ಕೋತೇನೆ...ಒಳ್ಳೆ understanding ಬಾಳ ಸಂಗತಿಯನ್ನ ಬಿಂಬಿಸಿದ್ದೀರ...ಬ್ಲಾಗಿಗಳು...ತಮ್ಮ ಬಾಳ ಸಂಗಾತಿಯರಿಗೆ ಬಲವಂತವಗಿಯಾದರೂ ಇದನ್ನು ಓದಿಸಬೇಕು...

Greeshma said...

ಬಿದ್ದು, ಪೆಟ್ಟು ಮಾಡ್ಕೊಂಡು ಬಂದೂ ಲೇಖನ ಬರೆದಿದ್ದೀರಲ್ಲ... ನಿಮ್ಮ interest ನ ಮೆಚ್ಚಬೇಕಾಗಿದ್ದೆ!
take care.
ನನ್ನದೊಂದು ಸಲಹೆ ನಿಮ್ಮದರ ಜೊತೆಗೆ . ರಾತ್ರೋ ರಾತ್ರಿ ಅನಾವಶ್ಯಕವಾಗಿ ಓಡಾಡೋದನ್ನ ಬಿಡಿ. specially ಆ ಮದ್ದೂರು cofee day ಗೆ.

Ittigecement said...

ಪ್ರಭು....

ಈಗ ಹೇಗಿದ್ದೀರಿ...?

ತುಂಟ ಮನಸ್ಸಿದ್ದರೆ ಎಲ್ಲಿ, ಯಾವ ಸಂದರ್ಭದಲ್ಲೂ..
ನಗಿಸಬಹುದು ಅನ್ನೋದಕ್ಕೆ ನಿಮ್ಮೀ ಬರಹ ಸಾಕ್ಷಿ.

ಹುಷಾರಾಗಿ ಗಾಡಿ ಓಡಿಸಿ.

ಚಂದದ ಬರಹಕ್ಕೆ ಅಭಿನಂದನೆಗಳು.

Prabhuraj Moogi said...

ಜಲನಯನ ಅವರಿಗೆ:
ಆಕ್ಸಿಡೆಂಟು ಆಗಿದ್ದು ದಿಟ ಕಣಣ್ಣ... ಕಣ್ಗೆ ಕಲ್ಲ ಕಾಣ್ಲಿಲ್ಲ, ಅಂಗೆಯಾ ಅದರಮ್ಯಾಲೆ ಹತ್ತುಸ್ಬುಟ್ಟೆ... ಸ್ನೇಯಿತ್ರು ಒಳ್ಳೆರವ್ರೆ, ಪಾಪ ಬಿದ್ದೆ ಅಂದ್ರೆ ಬೊ ದುಃಖ ಮಾಡ್ಕೊಂಡ್ವು ಅಂತೀನಿ... ಇನ್ ಮ್ಯಾಕೆ ಉಸಾರಾಗಿ ಓಡಿಸ್ತೀನಿ ಕಣಣ್ಣ.. ಇಂಗೆ ವಸಿ ಬೈದು ಬುದ್ದಿ ಹೇಳ್ತಿರು, ಚಂದಾಕದೆ ಬರ್ದದ್ದು..
ತಮ್ಮ ಅನಿಸಿಕೆ ಬಹಳ ಚೆನ್ನಗಿತ್ತು.. ಹೀಗೆ ಬರ್ತಾ ಇರಿ.. ಬರೀತಾನೂ ಇರಿ...

Greeshma ಅವರಿಗೆ
ಬಹಳ ಪೆಟ್ಟು ಆಗಿರಲಿಲ್ಲ ಹಾಗೆ ಎಲ್ರಿಗೂ ಏನಾದರೂ ಮೆಸೇಜ್ ಕೊಡಬಹುದು ಅಂತ ಬರೆದೆ.. ಆಫೀಸಿಂದ ರಾತ್ರಿ ಬರೋದು ಲೇಟ ಆಗ್ತದೆ ಏನ್ ಮಾಡೋದು.. ಕೆಲ್ಸಾ ಮಾಡಬೇಕಲ್ಲ.. ಮದ್ದೂರ್ ಕಾಫಿ ಡೇ ಹತ್ರ ಏನಾದರೂ ಪ್ರಾಬ್ಲಂ ಇದೆಯಾ..

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಈಗ ಚೆನ್ನಾಗಿದೀನಿ, ನಗೋಕೆ ಏನಾದರೂ ಅವಕಾಶ್ ಸಿಕ್ರೆ ಯಾಕೆ ಬಿಡಬೇಕು ಹೇಳಿ... ಜೀವನ ನಮ್ಮನ್ನ ಅಳಿಸೊದಂತೂ ಇದ್ದೆ ಇದೆ.. ಬರ್ತಾ ಇರಿ

Greeshma said...

ನಿಮ್ಮನ್ನಷ್ಟೇ ಅಲ್ಲ ಎಲ್ಲರನ್ನು ಉದ್ದೇಶಿಸಿ ಹೇಳಿದ್ದು ಅದು . blore-mysore ರಸ್ತೆ ಸ್ವಲ್ಪ ಜಾಸ್ತಿನೇ ಅಪಾಯಕಾರಿ. ವಿಶೇಷವಾಗಿ ಅರ್ಧ ರಾತ್ರಿ ಆದಮೇಲೆ, ಮದ್ದೂರ್ ಕಾಫೀ ಡೇ ಗೆ ಹೋಗೋ ನಮ್ಮ ಕಾಲೇಜಿನ ಹುಡುಗರ ಜೀವವೇ ಸುಮಾರ್ ಹೋಗಿದೆ. ಹಾಗಾಗಿ ಹೇಳಿದೆ.

Prabhuraj Moogi said...

Greeshma ಅವರಿಗೆ
ಒಹ್ ಹಾಗಾ, ನನ್ನ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ... ನಿಮ್ಮ ಕಾಮೆಂಟು ನೋಡಿ ಅಲ್ಲೇನಿದೆ ಅಂತ ಕುತೂಹಲವಾಗಿತ್ತು... ಮೈಸೂರು ರಸ್ತೆ ಸ್ವಲ್ಪ ಅಪಾಯಕಾರಿ ಆಗಿದೆ... ಅಲ್ಲದೆ ವೀಕೆಂಡಿಗೆ ಬಹಳ ಜನ ಈ ಥರ ಕಾಫಿ ಡೇ ತಟ್ಟೆ ಇಡ್ಲಿ ಅಂತ ಅಲ್ಲಿ ಬಹಳ ಹೋಗ್ತಾರೆ, ನಿಮ್ಮ ಕಾಲೇಜಿನ ಹುಡುಗರಿಗೆ ಹಾಗಾಗಿದ್ದು ದುರಾದೃಷ್ಟ... ಎಚ್ಚರಿಕೆ ನೀಡಿದ್ದು ಒಳ್ಳೇದು ಆಯ್ತು.. ಕಾಲೇಜಿನಲ್ಲಿದ್ದಾಗ ಅದೊಂಥರಾ ಜೋಶ ಇರುತ್ತೆ ಆದ್ರೆ ಅದು ಸ್ವಲ್ಪ್ ಹಿಡಿತದಲ್ಲಿದ್ರೆ ಒಳ್ಳೇದು...

guruve said...

ಬೈಕ್ ಯಾವ್ದು?? ನಾನು ನನ್ನ ಸ್ಪ್ಲೆಂಡರ್ ಗಾಡೀಲ್ಲಿ ಸುಮಾರು ಸಾರ್ತಿ ಬಿದ್ದು (ಬೇರೆಯವರ ತಪ್ಪಿಂದಲೇ).. ಗಾಡೀ ಓಡ್ಸೋದ್ದೆ ಕಡ್ಮೆ ಮಾಡ್ಬಿಟ್ಟೆ.. ನೀವು ಹೇಳಿದ ಹಾಗೆ ದ್ವಿಚಕ್ರ ವಾಹನ ಓಡಿಸ್ಬೇಕಾದ್ರೆ ಬಹಳ ಎಚ್ಚರಿಕೆ ಬೇಕು.. ಎಂದಿನಂತೆ ಅಂಕಣ ಚಂದ..

Prabhuraj Moogi said...

guruve ಅವರಿಗೆ:
ನನ್ನ ಬೈಕ ಟಿವಿಎಸ್ ಅಪಾಚೆ RTR-160, ನನ್ನದೂ ತಪ್ಪಿತ್ತು ಇಲ್ಲಿ ಜೊರಾಗಿ ಹೋಗಬಾರದಿತ್ತು ಆದ್ರೆ ಯಾರೂ ಇಲ್ಲ ಅಂತ ಹಾಗೆ ಬಂದೆ, ಸ್ವಲ್ಪ ಹುಷಾರಾಗಿದ್ರೆ ಒಳ್ಳೇದು

ವಿನುತ said...

ಅನುಭವ ಕಥನ ಚೆನ್ನಾಗಿದೆ (ಆದರೆ ನಿಮ್ಮ ಅನುಭವ ಚೆನ್ನಾಗಿಲ್ಲ :( ). ಅ೦ದು ನಿಜವಾಗಿಯೂ, ಮನೆಗೆ ಬಂದಾಗ ಇ೦ಥದೊ೦ದು ಆರೈಕೆ ಸಿಕ್ಕಿದ್ದರೆ ಎನಿಸುತ್ತಿತ್ತೇನೋ? :)

Prabhuraj Moogi said...

ವಿನುತ ಅವರಿಗೆ:
ಹೌದು ಹಾಗೆ ಅನಿಸಿದ್ದು ನಿಜ, ಅದಕ್ಕೆ ಅದೇ ಕಲ್ಪನೆಯಲ್ಲೇ ಬರೆದೆ... ಆದರೆ ನಿಜವಾಗಿ ಆದದ್ದು ಸ್ವಾರೈಕೆ!!!(ಸ್ವ-ಆರೈಕೆ)

Anonymous said...

ಅದಕೆ ಬೇಗ ಮದ್ವೆ ಆಗಿ ಆಗ ಇದೆ ಥರ (ನಿಮ್ಮ ಕಥನ ದಲ್ಲಿ ಇರೋ ಥರ) ಆರೈಕೆ ಸಿಕ್ಕೇ ಸಿಗುಥೆ :):)

Prabhuraj Moogi said...

Anonymous ಅವರಿಗೆ
ಬೇಗ ಆಗಬೇಕು.. ಆದ್ರೆ ಎಲ್ಲದಕ್ಕೊ ಕಾಲ ಕೂಡಿ ಬರಬೇಕು, ಸ್ವಲ್ಪ ಇರುವ ಅನಿಶ್ಚತೆಗಳೆಲ್ಲ ದೂರವಾಗಲಿ ತಾಳಿ.. ಬರುವ ನನ್ನಾk ಹೀಗೆ ಆರೈಕೆ ಮಾಡಿಯಾಳಾ? ಕಾಲವೇ ಉತ್ತರಿಸಬೇಕು :)

ರಂಗನಾಥ್ said...

ನನಗೆ ನೀವ್ಯಾರೋ ಗೊತ್ತಿಲ್ಲ ಆದ್ರೂ ನಿಮಗೆ ಆಕ್ಸಿಡೆಂಟ್
ಆಗಿದೆ ಅಂತ ತಿಳಿದಾಗ ಹಾರೈಸಬೇಕು ಅನ್ನಿಸ್ತು
ಬೇಗ ಹುಷಾರಾಗಿ ನಿಮ್ಮ ಸ್ನೇಹಿತರಿಗೆ ಹಲೋ ಹೇಳಿ