Sunday, August 16, 2009

ವಯಸ್ಸಾಯ್ತಾ?

"ರೀ ತಯ್ಯಾರಿ ಆಯ್ತಾ, ಇನ್ನೂ ಎಷ್ಟೊತ್ತು, ಕನ್ನಡಿ ಮುಂದೇನೆ ಅರ್ಧ ಆಯಸ್ಸು ಕಳೀತು" ಅಂತ ಅವಳು ಕೂಗುತ್ತಿದ್ದಳು, ನನ್ನ ಪಾಡಿಗೆ ನಾ ತಲೆ ಬಾಚುತ್ತಿದ್ದೆ. ಎನೂ ಉತ್ತರ ಬರದಿದ್ದಾಗ, ಬಾಗಿಲು ತಳ್ಳಿ ಒಳಗೇ ಬಂದಳು, ಡ್ರೆಸ್ಸಿಂಗ್ ಟೇಬಲ್ಲಿನ ಉದ್ದ ಕನ್ನಡಿಗೆ ಹೆಗಲು ತಾಕಿಸಿ ಆತು ಕೈಕಟ್ಟಿ ನಿಂತು, ದಿಟ್ಟಿಸಿ ನೋಡತೊಡಗಿದಳು, ನನ್ನಾಕೆ ನನ್ನ ಹಾಗೆ ನೋಡಿದರೇನು ಹೊಸದು, ಅದಕ್ಕೆ ನನ್ನ ಪಾಡಿಗೆ ನಾನು ಮುಂಗಾರು ಮಳೆಗೆ ನೆನೆದು ಮೆದುವಾದ ಭೂಮಿಯನ್ನು ನೇಗಿಲಿನಲ್ಲಿ ಹರವು ಮಾಡಿ ಗೆರೆ ಕೊರೆದಂತೆ ಊಳುತ್ತಿರುವ ರೈತನಂತೆ, ಸ್ನಾನ ಮಾಡಿ ನೆನೆದ ಕೂದಲಿನಲ್ಲಿ ಬೈತಲೆ ತೆಗೆಯುತ್ತ ಬಾಚುತ್ತಿದ್ದೆ.

"ರೀ... ಇರೋವೆ ನಾಲ್ಕು ಕೂದಲು ಅಲ್ಲಿ ಇಲ್ಲಿ ಅಂತ ಸ್ವಲ್ಪ, ಅವನ್ನೂ ಹೀಗೇ ಬಾಚ್ತಾ ಇದ್ರೆ, ಎಲ್ಲ ಉದುರಿಹೋಗಿ ಅಷ್ಟೇ ಮತ್ತೆ, ಕೂದಲಿನ ಸಸಿ ನೆಡಿಸಬೇಕಾಗುತ್ತೇ" ಅಂತಂದ್ಲು. "ಹಾಗೆ ಕೂದಲಿನ ನಾಟಿ ಕೂಡ ಮಾಡ್ತಾರೆ ನಿಂಗೆ ಗೊತ್ತಾ" ಅಂದೆ, "ಹೂಂ ನಾನು ಅದಕ್ಕೆ ಎನಾದ್ರೂ, ಈ ಥರ ಬಾಚಿ ಬಾಚಿ ಕಿತ್ತು ಹಾಕ್ತಿದೀರೊ ಎನೋ ಅಂತಾನೇ ಕೇಳಿದ್ದು" ಅಂದ್ಲು. "ನಾನು ನನ್ನ ಹೇರ್‌ಸ್ಟೈಲು, ನೀನು ನೀಳವೇಣಿ ಕತ್ತರಿಸಬೇಕಾದ್ರೆ, ನಾನು ಗುಂಡು ಹೊಡಿಸ್ತೀನಿ, ನಿಂಗೇನು" ಅಂದೆ "ರೀ ಗುಂಡುನಾ, ಪ್ಲೀಜ್ ಪ್ಲೀಜ್ ಮಾಡಿಸ್ರಿ ಹೇಗೆ ಕಾಣ್ತೀರಾ ನೋಡೊಣ" ಅಂತ ಹರಿಬಿದ್ದಳು, ಇದೊಳ್ಳೆ ಆಯ್ತಲ್ಲ ನಾನೇನು ಚೇಷ್ಟೆಗೆ ಹೇಳಿದ್ರೆ, ಇವಳು ಅದನ್ನೇ ಪಟ್ಟು ಹಿಡಿಯೋದಾ, "ಲೇ ಹೋಗೆ, ನಿಂದೊಳ್ಳೆ ಆಸೆ, ಹಾಗೇನಾದ್ರೂ ಮಾಡಿಸಿದ್ರೆ ಪಕ್ಕದಮನೆ ಪದ್ದು ನನ್ನ ಕಣ್ಣೆತ್ತಿ ಕೂಡ ನೋಡಲ್ಲ" ಅಂತ ಸಿಡುಕಿದೆ, "ನಾನೂ ಹಾಗಾಗಲಿ ಅಂತಾನೇ ಹೇಳಿದ್ದು, ನನ್ನ ತಮ್ಮನಿಗೆ ಕನ್ಯಾ ನೋಡೊಕೆ ಹೋದ್ರೆ ನಿಮ್ಮನ್ನೇ ವರ ಅನ್ಕೋತಾರೆ, ಹಾಗೆ ಟಿಪ್ ಟಾಪ್ ಆಗಿ ಬರ್ತೀರಾ, ಅದಕ್ಕೆ ಗುಂಡು ಹೊಡಿಸಿದ್ರೆ ಒಳ್ಳೇದೇ ಅಂತ ಹೇಳಿದ್ದು" ಅಂತ ಗೂಡಾರ್ಥ ಬಿಚ್ಚಿಟ್ಟಳು. ಒಳ್ಳೇ ಕ್ರಿಮಿನಲ್ ಪ್ಲಾನ ಇವಳ್ದು. "ಮತ್ತೆ ಅವನಿಗೆ ಕನ್ಯಾ ನೋಡೊಕೆ ಹೋಗೊದಾದ್ರೆ ಹೇಳು, ಹೊಸ ಡ್ರೆಸ್ ಕೊಂಡ್ಕೊಂಡು ಹಾಕೊಂಡು ಬರ್ತೀನಿ" ಅಂದೆ, "ನಿಮ್ಮನ್ನ ಕರೆದುಕೊಂಡು ಹೋದ್ರೆ ತಾನೇ" ಅಂತ ನನ್ನ ಪ್ಲಾನಗೆ ನೀರು ಬಿಟ್ಟಳು. ಬಾಚಣಿಕೆಯಲ್ಲಿ ಬಾಚಿದ್ದು ಸಾಕಾಗದೇ ಅವಳ ಮುಂದೆ ನಿಂತು ಕೈ ಬೆರಳಲ್ಲಿ ಮತ್ತೆ ಬಾಚಿ ಸರಿ ಮಾಡಿಕೊಂಡೆ, ಸಿಟ್ಟಿನಿಂದ "ಕನ್ನಡಿ ಅಲ್ಲಿದೆ" ಅಂದ್ಲು, "ನಿನ್ನ ಕಣ್ಣೇ ನನ್ನ ಕನ್ನಡಿ" ಅಂದದ್ದಕ್ಕೆ "ಸಾಕು ಡೈಲಾಗೆಲ್ಲ, ರೀ ಏನು ವಯಸ್ಸಾಯ್ತು, ಇನ್ನೂ ಏನು ನಿಮ್ದು" ಅಂತ ಬಯ್ದಳು, ತಟ್ಟನೇ ಎನೊ ಹೇಳಬೇಕೆನಿಸಿದ್ರೂ ಹೇಳಲಿಲ್ಲ, ಒಂದು ಪ್ರಶ್ನೆ ತಲೆ ಕೊರೆಯತೊಡಗಿತು, ನಿಜವಾಗ್ಲೂ ವಯಸ್ಸಾಯ್ತಾ?

ಮುಂಜಾನೆ ಹೊರಟಿದ್ದ ಗಡಿಬಿಡಿಯಲ್ಲಿ ಮರೆತಿದ್ದ ಯೋಚನೆ ಮತ್ತೆ ತಿರುಗಿ ಬಂದು ಮನದಲ್ಲಿ ಕೂತು ಕೂಗಾಡುತ್ತಿತ್ತು. ಅದನ್ನು ಸುಮ್ಮನಾಗಿಸಲು ಮತ್ತೆ ನಾ ಮಾತಿಗಿಳಿಯಬೇಕಿತ್ತು. ಅವಳು ಅದೇ ಡ್ರೆಸ್ಸಿಂಗ್ ಟೇಬಲ್ಲಿನ ಮುಂದೆ ತಾನು ಕೂತು ಕಿವಿಯೋಲೆ ಬಿಚ್ಚಿಡುತ್ತಿದ್ದಳು, ಆ ಓಲೆಯ ಪಿರಿಕಿ(ಸ್ಕ್ರಿವ್) ಅಲ್ಲೇ ಜಾಮ್ ಆಗಿರಬೇಕು, ಬಿಚ್ಚಲು ಒದ್ದಾಡುತ್ತಿದ್ದಳು, "ರೀ ನೋಡ್ರೀ ಏನಾಗಿದೆ, ಬಿಚ್ಚುತ್ತಿಲ್ಲ" ಅಂದ್ಲು. ಅದ್ಯಾವ ಸಿಟ್ಟಿನಲ್ಲಿ ತಿರುಗಿಸಿದ್ದಳೊ, ಬರುತ್ತಲೇ ಇಲ್ಲ, "ಕಿವಿ ಹರಿದೇ ಹೊರತೆಗೆಯಬೇಕೇನೊ" ಅಂದೆ. ನಾನೀಗ ಹರಿದೇ ತೆಗೆದುಬಿಡ್ತೀನಿ ಅನ್ನೊ ಹಾಗೆ ನೋಡಿದಳು, "ಅದಕ್ಕೇ ಮುಂಜಾನೆ ಬೇಡ ಅಂತ ಹೇಳಿದ್ದು, ಚೆನ್ನಾಗಿ ಕಾಣ್ತೀಯಾ ಅದನ್ನೇ ಹಾಕು ಅಂತ ದುಂಬಾಲು ಬಿದ್ದು ಹಾಕಿಸಿದ್ದು ನೀವು, ನೀವೇ ಹೇಗೆ ತೆಗೆಯುತ್ತೀರೋ ನೋಡಿ" ಅಂತ ಅದನ್ನು ನನ್ನ ತಲೆ ಮೇಲೆ ಹೊರಿಸಿದಳು. ನಾನೂ ಸಾಕಷ್ಟು ಸಾಹಸ ಮಾಡಿದೆ ಆ ಓಲೆ ನಾನು ಅವಳ ಕಿವಿಯಲ್ಲೇ ಚೆನ್ನಾಗಿ ಕಾಣ್ತಿದೀನಿ ಬರಲೊಲ್ಲೆ ಅಂತ. ಅದನ್ನು ಕೈಬಿಟ್ಟು ಅವಳ ತಲೆಗೂದಲಲ್ಲಿ ಹೇನು ಹುಡುಕಿ ಒರೆಯುವವರ ಹಾಗೆ ಏನೋ ಹುಡುಕತೊಡಗಿದೆ, "ರೀ ಕಿವಿಯೋಲೆ ಕಿವಿಯಲ್ಲಿ ಇರತ್ತೆ ತಲೆಯಲ್ಲಿ ಅಲ್ಲ" ಅಂತ ಸಿಡುಕಿದಳು, "ಅಲ್ಲಾ ವಯಸ್ಸಾಯ್ತು ಅಂತಿದ್ದೆಯಲ್ಲ, ನಿನಗೂ ವಯಸ್ಸಾಯ್ತ ಅಂತ ನರೆಕೂದಲು ಏನಾದ್ರೂ ಸಿಗುತ್ತಾ ಅಂತ ಹುಡುಕ್ತಾ ಇದೀನಿ" ಅಂದೆ. ಎನೋ ಮಾಡು ಅಂದ್ರೆ ಅದನ್ನ ಬಿಟ್ಟು ಇನ್ನೇನೊ ಮಾಡುತ್ತೀನಿ ಅನ್ನೊ ಮೊಂಡನಂತೆ ಅನಿಸಿರಬೇಕು, ನನ್ನ ಕೈ ಬಿಡಿಸಿ ತಾನು ಮತ್ತೆ ಪ್ರಯತ್ನಿಸಿದಳು ಆಗಲಿಲ್ಲ ಕೈಚೆಲ್ಲಿ ನನ್ನತ್ತ ಬುಸುಗುಡುತ್ತ ನೋಡುತ್ತ ಕೂತಳು. "ಇಂದೊಂದು ದಿನ ಇರಲಿ ಬಿಡು ನಾಳೆ ಬರಬಹುದು" ಅಂತ ಭರವಸೆ ಕೊಟ್ಟೆ, "ನಾಳೆ ಬರದಿದ್ದರೆ" ಅಂದ್ಲು, "ವಯಸ್ಸಾಗುತ್ತ ಕಿವಿ ಜೋತು ಬೀಳುತ್ತಲ್ಲ ಆಗ ಕಿತ್ತು ತೆಗೆದರಾಯ್ತು" ಅಂದೆ. "ನಂಗೊತ್ತು ಮುಂಜಾನೇ ವಯಸ್ಸಾಯ್ತು ಅಂತ ಅಂದ್ನಲ್ಲ ಅದಕ್ಕೆ ಈಗ ಸೇಡು ತೀರಿಸ್ಕೊಳ್ತಾ ಇದೀರಲ್ವಾ" ಅಂತ ಬೇಜಾರಾದಳು. "ಹಾಗೇನಿಲ್ಲ ಆದ್ರೂ ವಯಸ್ಸಾಯ್ತು ಅಂತ ಯಾಕೆ ಅಂದೆ" ಅಂತ ಕೇಳಿದೆ, "ಮತ್ತಿನ್ನೇನು ಮದುವೆ ಆಯ್ತು, ಮಕ್ಕಳು ಆಗೋ ವಯಸ್ಸಾಯ್ತು, ಇನ್ಯಾರು ನೋಡ್ತಾರೆ ಅಂತ ಹಾಗೆ ಹೇಳಿದೆ" ಅಂದ್ಲು. "ನಿಂಗೆಷ್ಟು ವಯಸ್ಸು" ಅಂದೆ
"ಅಯ್ಯೋ ಹುಡುಗಿ ವಯಸ್ಸು, ಹುಡುಗನ ಸಂಬಳ ಕೇಳಬಾರದ್ರಿ, ನಿಜ ಹೇಳಲ್ಲ" ಅಂತ ನಕ್ಕಳು, "ನೀನೇನು ಹುಡುಗೀನಾ" ಅಂದೆ, ಇದೇನು ಇಂಥಾ ಪ್ರಶ್ನೇ ಅಂತನ್ನೊ ಹಾಗೆ ನೋಡಿ, "ನಿಮ್ಮಷ್ಟು ವಯಸ್ಸಾಗಿಲ್ಲ ನಂಗೆ, ನಿಮಗಿಂತ ಇನ್ನೂ ಮೂರು ವರ್ಷ ಚಿಕ್ಕೊಳೇ" ಅಂದ್ಲು, "ಮತ್ತೆ ಆಗಲೇ ವಯಸ್ಸಾಯ್ತು ಅಂತೆಲ್ಲ ಮಾತಾಡ್ತಾ ಇದೀಯ" ಅಂದೆ. "ನನ್ಯಾರು ನೋಡ್ತಾರೆ ಮದುವೆ ಆಯ್ತು, ಇಷ್ಟು ವರ್ಷ ಆಯ್ತು, ಅಂತ ಸುಮ್ನೇ ಹಾಗಂದಿದ್ದು" ಅಂತ ಸರಿಪಡಿಸಲು ನೋಡಿದ್ಲು. ನಾ ಬಿಟ್ಟರೆ ತಾನೇ...

"ವಯಸ್ಸು ಯಾರಿಗೆ ಆಗಲ್ಲ ಹೇಳು, ಹುಟ್ಟಿದಾಗಿಂದ ವಯಸ್ಸಾಗ್ತನೇ ಇದೆ, ವರ್ಷದ ಪುಟ್ಟ ಮಗು ಇದ್ದೆ, ಅಂತ ಹಾಗೇ ಇರ್ತೀನಾ ಹಾಗೇ ಬೆಳಿತಾ.." ನಡುವೆ ಅವಳು "ನೀವು ಪುಟಾಣಿ ಪಾಪು ಇರ್‍ಒ ಫೊಟೊ ನೋಡಿದೀನ್ರೀ ಈಗ್ಲೂ ಹಾಗೆ ಇದ್ದಿದ್ರೆ, ಎತ್ಕೊಂಡು ನನ್ನ ಗಂಡ ಹೇಗಿದಾನೆ ನೋಡು ಕ್ಯೂಟ್ ಅಲ್ವಾ ಅಂತ ಎಲ್ರಿಗೂ ತೋರಿಸಬಹುದಿತ್ತು" ಅಂದ್ಲು ಎಲಾ ಇವಳಾ ಎನೇನು ಆಸೆ ಅಂತೀನಿ ಇವಳಿಗೆ, "ಪರವಾಗಿಲ್ಲ ಈಗ್ಲೂ ಎತ್ಕೊಬಹುದು ನಂಗೇನೊ ಬೇಜಾರಿಲ್ಲ" ಅಂದೆ, ಹುಬ್ಬು ಗಂಟಿಕ್ಕಿದಳು, ನಾ ಹುಬ್ಬು ಹಾರಿಸುತ್ತ ನಗುತ್ತಿದ್ದೆ. ಪುಟ್ಟ ಮಗುವಿನಂತೆ ಬಂದು ತೊಡೆಯೇರಿ ಕೂತಳು, "ಆಯ್ತಪ್ಪ ಈಗೇನು ನಿಮಗೆ ವಯಸ್ಸಾಗಿಲ್ಲ ಅಷ್ಟೆ ತಾನೇ" ಅಂತಂದಳು, "ವಿಷಯ ಬರೀ ಅದಲ್ಲ, ಯೋಚನೆ ಮಾಡು, ಮದುವೆ ಆಗ್ತಿದ್ದಂತೇ, ಏನೊ ಜೀವನದಲ್ಲಿ ಎಲ್ಲಾ ಮುಗಿದು ಹೋಯ್ತು, ಮಕ್ಕಳಾದರಂತೂ ಮುಗೀತು, ಇನ್ನೇನು ಯಮರಾಜ ಬಂದು ಕರೆದೊಯ್ಯಲೇ ಬೇಕೆಂದು ಕಾಯುತ್ತಿರುವವರ ಹಾಗೆ ಆಡತೊಡುಗುತ್ತಾರೆ ಕೆಲವರು(ಆ ಕೆಲವರ ಬಗ್ಗೇನೇ ನಾ ಹೇಳುತ್ತಿರುವುದು), ಒಂಥರಾ ಉದಾಸೀನತೆ ತಂದುಕೊಂಡು, ಜಿಗುಪ್ಸೆಗೆ ಇಳಿದುಬಿಡ್ತಾರೆ, ಯಾಕೆ ಅಂತ ನನ್ನ ಪ್ರಶ್ನೇ, ಅದೇ ಮೊದಲಿನ ಜೀವನದ ಉತ್ಸಾಹ ಯಾಕೆ ಉಳಿಸಿಕೊಳ್ಳಬಾರದು" ಅಂದೆ, "ಹೌದಲ್ವಾ ಮದುವೆ ಆದ ಮೇಲೆ ಇನ್ಯಾರು ನೋಡ್ತಾರೆ ಅಂತ ಹಾಗೆ ಆ ಉದಾಸೀನತೆ ಬರತ್ತೆರೀ" ಅಂದ್ಲು, "ಯಾರೋ ಯಾಕೆ ಅವರ ಪತಿ, ಪತ್ನಿಯೇ ನೋಡಲ್ವೇ ಅದಕ್ಕಾದರೂ..." ಅಂತಿದ್ದರೆ "ಮದುವೆ ಆಯ್ತಲ್ಲ ಇನ್ನೇನು ಹೊಸ ಆಕರ್ಷಣೆ ಉಳಿದಿಲ್ಲ ಅಂತ ಹಾಗೆ ಮಾಡ್ತಾರೆ" ಅಂದ್ಲು "ಅದು ನಾವು ಅನ್ಕೊಳ್ಳೊದು ಅಷ್ಟೇ, ಅದು ನಮ್ಮನ್ನು ನಾವೇ ಆ ಉದಾಸೀನತೆಗೆ ತಳ್ಳಿಕೊಳ್ಳೊದು" ಅಂದೆ... ನಿಧಾನವಾಗಿ ಆ ಇನ್ನೊಂದು ಓಲೆ ಮತ್ತೆ ಕಿವಿಗೇರಿಸುತ್ತಿದ್ದಳು.

ನಾವೇ ಹೀಗೆ, ಎಲ್ರೂ ಅಂತಲ್ಲ ಆದ್ರೆ ಬಹಳಷ್ಟು ಜನ, ಮದುವೆ ಆಯ್ತು ಇನ್ನೇನಪ್ಪಾ ಅಂತ, ಹೇಗೆ ಬೇಕೋ ಹಾಗಿರಲು ಶುರುವಿಡುತ್ತೇವೆ, ಕೇಳಿದ್ರೆ ಮದುವೆ ಆಯ್ತಲ್ಲ ಇನ್ಯಾರು ನೋಡೊರು? ಆದರೆ ಇಲ್ಲಿ ಈ ಮುಖದ ಮೇಲೆ ನಾಲ್ಕಿಂಚು ದಪ್ಪ ಮೇಕಪ್ಪು ಬಳಿದು, ತುಟಿಗೆ ರಂಗು ತೀಡಿ, ಹರೆಯದ ಹುಡುಗಿಯಂತೆ ಆಡುವವರೂ, ಇಲ್ಲ ಕೂದಲಿಗೆ ಬಣ್ಣ ಬಳಿದು, ಮೀಸೆ ತೆಗೆದು ಪೋಲಿ ಜೋಕು ಮಾಡುತ್ತ ತರುಣರಂತೆ ತೋರಿಸ್ಕೊಳ್ಳುವವರ ಬಗ್ಗೆ ನಾ ಹೇಳುತ್ತಿಲ್ಲ, ವಯಸ್ಸಿಗೆ ತಕ್ಕ ಯೋಗ್ಯವಾಗಿ ಬಟ್ಟೆ ಧರಿಸಿ, ಗೌರವಯುತರಾಗಿ ಕಾಣುವವರ ಬಗ್ಗೆ ಹೇಳುತ್ತಿರುವುದು. ನೀಟಾಗಿ ಇನ್ ಶರ್ಟ ಮಾಡಿ, ಹೊಂದಿಕೆಯಾಗುವ ತೊಡುಗೆ ಧರಿಸಿ, ಶಿಸ್ತಿನಿಂದ ಯಾಕೆ ಇರಬಾರದು, ಅದ ಬಿಟ್ಟು ಯಾವುದೊ ಶರ್ಟು, ಯಾವುದೊ ಪ್ಯಾಂಟೊ ಹಾಕಿ ಎತ್ತೆತ್ತಲೋ ತೊಳು ಮಡಚಿ, ಹೇಗೇಗೊ ಇದ್ದರೆ, ಕೆದರಿದ ಕೂದಲು ಬಿಟ್ಟು, ನೈಟಿಯಲ್ಲೇ ಮೇಲೆ ಒಂದು ದುಪಟ್ಟ ಹೊದ್ದು ಊರೆಲ್ಲ ತಿರುಗಿ ಬಂದರೆ ಯಾರೂ ಏನೂ ಕೇಳಲ್ಲ, ಯಾರಿಗೂ ಎನೂ ನಷ್ಟವಿಲ್ಲ, ಅದೇ ಉದಾಸೀನತೆ ನಮ್ಮನ್ನೇ ಆವರಿಸಿ, ಬೇಗ ಮುದುಕರಾಗಿಬಿಡುತ್ತೇವೆ, ಇಲ್ಲ ಹಾಗೆ ಆಡತೊಡುಗುತ್ತೇವೆ, ಅದೇ
ಎಷ್ಟೊ ಇಳಿವಯಸ್ಸಿನಲ್ಲಿರುವವರನ್ನು ನೋಡಿ ಎಷ್ಟು ಸರಳವಾಗಿ ಸಭ್ಯರಾಗಿ ಕಾಣುತ್ತಾರೆ, ಜೀವನದಲ್ಲಿ ಲವಲವಿಕೆಯಿಂದಿರುತ್ತಾರೆ. ಹಾಗೇ ನಾವ್ಯಾಕೆ ಇರಬಾರದು, ಇದ್ದರೆ ನಮಗೆ ಒಳ್ಳೇದು.

ಮಾರನೇ ದಿನ, ಯಾವುದೋ ಮನೆ ಗೃಹ ಪ್ರವೇಶ ಸಮಾರಂಭವಿತ್ತು, ಹೊರಟು ತಯ್ಯಾರಾಗುತ್ತಿದ್ದಳು, "ಲೇ ಆಯ್ತೇನೆ, ಜಾಸ್ತಿ ಮೇಕಪ್ಪು ಮಾಡು ಅಂತ ನಾ ಹೇಳಿಲ್ಲ, ನೀಟಾಗಿರಲಿ ಅಂತ ಹೇಳಿದ್ದು" ಅಂತ ಚೀರುತ್ತಿದ್ದೆ, ಬಾಗಿಲು ತೆರೆದು ಹೊರಬಂದಳು, ಕ್ಷಣದಲ್ಲಿ ಸ್ತಂಭಿಭೂತನಾದೆ, ಜರಿ ದಡಿಯ ಹಸಿರು ಅಂಚಿನ ರೇಶಿಮೆ ಸೀರೆ ನೀಟಾಗಿ ತಿದ್ದಿ ತೀಡಿ ನೆರಿಗೆ ಹಾಕಿಯುಟ್ಟು, ಸೆರಗಿಗೆ ಪಿನ್ನು ಹಾಕಿ ಕಟ್ಟಿಟ್ಟು, ಹಿಂದಿನಿಂದೆಳೆದು ಕೈಲಿ ಹಿಡಿದಿದ್ದಳು ಪದರು ಪದರು ಹರಡುವಂತೆ, ಕೂದಲೆಳೆದು ಹಿಂದೆ ಕೂಡಿಸಿ ಕ್ಲಿಪ್ಪು ಹಾಕಿ ಬಂಧಿಸಿ, ಎರಡೇ ಎರಡು ಎಳೆ ಹೊರಗೆ ಹಾರಾಡಲು ಕಿವಿ ಮೇಲೆ ಸರಿಸಿಟ್ಟಿದ್ದಳು. ಮೂಗಿಗೆ ಮೂಗುತಿಯೊಂದಿಗೆ, ತುಟಿಗೆ ನಗು ಆಭರಣವಾಗಿಸಿದ್ದರೆ, ಕಿವಿಯೋಲೆ, ನಾನೂ ಇದ್ದೀನಿ ಅಂತ ಹೊಳೆಯುತ್ತಿತ್ತು. "ಏನು ಹಾಗೆ ನೋಡ್ತಾ ಇದೀರಾ, ಮೊದಲಸಾರಿ ನೋಡಿದ ಹಾಗೆ" ಅಂತ ನಾಚಿದಳು, ಕೆನ್ನೆಗೆ ಕೆಂಪಡರಿ ಇನ್ನೂ ಚೆಂದ ಕಾಣಿಸಿದಳು. ಕೈಗೆ ಸಿಕ್ಕ ಪೆನ್ನಿನಲ್ಲೇ ದೃಷ್ಟಿ ಬೊಟ್ಟು ಬರೆದೆ. ನಾನೂ ಒಳ ಹೋಗಿ ಗಡಿಬಿಡಿಯಲ್ಲಿ ಅವಳನ್ನು ನೋಡಿ ಅವ್ವಾಕ್ಕಾದ ಗುಂಗಿನಲ್ಲೇ ಕಪ್ಪು ಪ್ಯಾಂಟ್ಗೆ ಬಿಳಿ ಶರ್ಟ ಹಾಕಿ ಹೊರ ಬಂದೆ, "ರೀ ಕಲರ ಟೀವೀ ಪಕ್ಕ ಬ್ಲಾಕ್ ಆಂಡ ವೈಟ್ ಟೀವೀ ಇಟ್ಟ ಹಾಗೆ ಕಾಣಿಸ್ತೀವಿ ಇಬ್ರೂ" ಅಂತ ನಗೆಯಾಡಿದವಳು ಬೀರು ಕಿತ್ತಾಕಿ ಅದೇನೋ ಮ್ಯಾಚಿಂಗ ಅಂತ ಬಟ್ಟೆ ಎತ್ತಿ ಕೊಟ್ಟಳು, ನಾನು ಬಾಚಿದ ಕೂದಲು, ಸ್ವಲ್ಪ ಊದಿ ಹಾರಿಸಿದಳು, ಎನೊ ಚೆನ್ನಾಗೇ ಕಾಣಿಸ್ತು, ಹಾಗೇ ಕಿವಿಯಲ್ಲಿ "ಮುಂಜಾನೆ, ಸ್ನಾನ ಮಾಡೊವಾಗ ಸಾಬೂನು ಹಚ್ಚಿದ್ದಕ್ಕೆ ಕಿವಿಯೋಲೆ ಬಿಚ್ಚಿ ಬಂತು, ಆದ್ರೆ ನೀವು ಚೆನ್ನಾಗಿ ಕಾಣಿಸ್ತೀನಿ ಅಂದ್ರಲ್ಲ ಅದಕ್ಕೆ ಮತ್ತೆ ಹಾಕಿದೀನೀ" ಅಂತ ಉಸುರಿದಳು, ಮತ್ತಷ್ಟು ಪುಳಕಗೊಂಡೆ. ಹೊರಗೆ ಬಂದು ಹೊರಡಲನುವಾಗುತ್ತಿದ್ದರೆ ಪಕ್ಕದ ಮನೆಯ ಪದ್ದುನ ಅರಳಿದ ಕಣ್ಣುಗಳೇ ಕನ್ನಡಿಯಾಗಿದ್ದವು ನಮಗೆ.

ಎನ್ರೀ ನನ್ನಾಕೇನಾ ಹಾಗೆ ಕಣ್ಣು ಕಣ್ಣು ಬಿಟ್ಟು ನೋಡ್ತಿದೀರಾ, ದೃಷ್ಟಿಯಾದೀತು! ಮತ್ತೆ ಮುಂದಿನ ವಾರ ಸಿಕ್ತೀವೀ, ಹೊರಡೋಣ್ವಾ..ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/vayassaaytaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

18 comments:

Unknown said...

ಪ್ರಭು ಅವರೆ,
ಸೊಗಸಾದ ಬರಹ . ವಾ !! ವಾ ! ! ... ಇಷ್ಟು ಸೊಗಸಾಗಿ ನಾವು ಜೀವನವನ್ನು ನೋಡ ಬೇಕು ಎ೦ದು ಹೇಳಿದ್ದಿರಿ ... ವಯಸ್ಸು ಎ೦ಬುದು ದೇಹಕ್ಕೆ ಹೊರತು ಮನಸ್ಸಿ ಗಲ್ಲ ಎ೦ದು ತು೦ಬಾ ಸೊಗಸಾದ ರೀತಿಯಲ್ಲಿ ಹೇಳಿದ್ದಿರಿ ...
ಮನತಟ್ಟುವ ಶೈಲಿ ..

Anonymous said...

ಯಾವಾಗಲೂ ಏನನ್ನೊ ಕಳೆದುಕೊಂಡವರ ಹಾಗೆ ಇರುವುದರ ಬದಲು ನೀಟಾಗಿ, ಶಿಸ್ತಿನಿಂದ ಡ್ರೆಸ್ ಮಾಡಿಕೊಳ್ಳುವುದರಿಂದ ನಾವೇನು ಕಳೆದುಕೊಳ್ಳುವುದಿಲ್ಲವಲ್ಲ... ಬದಲು ನಮಗೆ ನಮ್ಮದೇ ಆದ ಒಂದು ಗೌರವ ಸಿಗುತ್ತದೆ.. ನಿಮ್ಮದೇ ಡಿಫರೆಂಟ್ ಶೈಲಿಯ ಈ ಬರಹ ಸೂಪರ್ ಪ್ರಭುರವರೇ... ತುಂಬಾ ಇಷ್ಟವಾಯಿತು... Sapna

ಮನಸು said...

prabhu!!!

nimma lekhana ondalla ondu visheshate soochisutte.. bahala istavayitu

vandanegaLu..

ಸವಿಗನಸು said...

ಮಹಾ ಪ್ರಭು,
ನನ್ನಾk ಈ ಲೇಖನದ ಲಿಂಕ್ ಕಳಿಸಿದ್ರು....ನೋಡಿ ಸುಸ್ತಾದೆ ನಾನು...
ಮದುವೆ ಆಗಿಲ್ವಾ ಪ್ರಭುಗೆ ಅಂತ ವಾದ ಮಾಡಿದೆ....ಅವಳು ಆಗಿಲ್ಲ ಪ್ರಭುಗೆ ನೋಡಿ ಹೇಗೆ ಬರೆದವರೇ ಅಂದಾಗ....ನಿಜವಾಗಲೂ ಮಹಾಪ್ರಭು ನೆ ನೀವು ಬಿಡಿ...
ಸೂಪರ್ ಲೇಖನ...ಸಖತ್ತಾಗಿತ್ತು....
ಇನ್ನು ಮೇಲೆ ಇನ್ನು ಸೂಪರಾಗಿ ಡ್ರೆಸ್ ಮಾಡಬೇಕು....ಯಾಕಂದ್ರೆ ಇನ್ನು ವಯಸ್ಸಾಗಿಲ್ಲ ಅನಿಸಿತು...
ಆದರೆ ಪಕ್ಕದಮನೇಲಿ ಪದ್ದು ಇಲ್ಲ ಇಲ್ಲಿ.....ಹಹಹಹಾಹ

ರಾಜೀವ said...

ಪ್ರಭು,

ಬಹಳ ಗಂಭೀರ ವಿಷಯದ ಬಗ್ಗೆ ಬರೆದಿದ್ದೀರಿ. ೪೦ ವರುಷ ಆಗುತ್ತಲೇ, ಈ ಜೀವನದ ಮೇಲೆ ಜಿಗುಪ್ಸೆ ಬಂದಿರುವ ಹಾಗೆ ವರ್ತಿಸುತ್ತಾರೆ. ಮನುಷ್ಯ ಬರೀ ದುಡ್ಡು, ಹೆಸರು ಮತ್ತಿತರ ಭೌತಿಕ ವಸ್ತುಗಳ ಮೇಲೆ ಇರುವ ಆಸೆಯಿಂದ ಹೀಗಿರಬಹುದೇ? ೩೫-೪೦ ವಯಸ್ಸಿಗೆ, ತನ್ನ ಆಸೆಗಳು ತೀರದೆ, ಅಸಹಾಯಕತೆಯಿಂದ ಜೀವನದ ಧ್ಯೇಯವನ್ನು ಕಳೆದುಕೊಂದುಬಿದುತ್ತಾನೆ ಅನ್ಸತ್ತೆ.

ನೀವಂತೂ ನಿಮ್ಮ ಬರೆಯುವ ಚಟವನ್ನು ಬಿಡಬೇಡಿ, ಎಷ್ಟು ವಯಸಾದರೂ.

shivu.k said...

ಪ್ರಭು,

ಎಂಥ ರಸಿಕತೆಯಿದೆ ನಿಮ್ಮಲ್ಲಿ. ಅದನ್ನು ಬರವಣಿಗೆಯಲ್ಲಿ ಎಷ್ಟು ಚೆನ್ನಾಗಿ ಬರೆದಿದ್ದೀರಿ...ಹೆಂಡತಿ ಸೀರೆ, ಸೆರಗಿನ ಕ್ಲಿಪ್ಪು, ತಲೆಗೂದಲು, ಕಿವಿಯೋಲೆ....ಒಹ್! ಎಲ್ಲಾ ಸೂಪರ್....

Prabhuraj Moogi said...

roopa ಅವರಿಗೆ
ಜೀವನ ಹೇಗಿರುತ್ತದೆ ಅನ್ನೋದು ನಾವು ಹೇಗೆ ಅದನ್ನು ನೋಡುತ್ತೇವೆ ಅನ್ನೋದರ ಮೇಲೆ ಕೂಡ ನಿಂತಿದೆ, ಅದು ನಿಜ. ಸರಿಯಾಗಿ ತೀಳಿದಿದ್ದೀರಿ ವಯಸ್ಸಾಗೋದು ದೇಹಕ್ಕೆ ಹೊರತು ಮನಸ್ಸಿಗಲ್ಲ, ಮನಸ್ಸು ಉಲ್ಲಸಿತವಾಗಿದ್ದರೆ ದೇಹಸ್ಥಿತಿ ಕೂಡ ಸ್ವಲ್ಪ ಸುಧಾರಿಸುತ್ತದೆ

Anonymous ಅವರಿಗೆ
ಸಪ್ನಾ, ನೀಟಾಗಿರೋದ್ರಿಂದ ನಮ್ಮ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಹೊರತು ಕಮ್ಮಿಯೇನಲ್ಲ ಅದೂ ಸರಿಯೆ, ಆದ್ರೆ ಕೆಲವ್ರು ಮದುವೆ ಆಗ್ತಿದ್ದಂಗೆ ನನ್ಯಾರು ನೋಡೊರಿದಾರೆ ಅಂತ ಹೇಗೆ ಬೇಕಂಗೆ ಇರ ತೊಡಗುತ್ತಾರಲ್ಲ ಅವರಿಗೇ ವಯಸ್ಸಾಗೋದು. ವಾರಕ್ಕೊಂದು ಏನೊ ಬರೀತೀನಿ ಹೊಸದು ಹೊಸದು ಹೆಕ್ಕಿ. ಬರುತ್ತಿರಿ

ಮನಸು ಅವರಿಗೆ
ಏನೊ ಹಾಗೆ ಮನಸಿಗೆ ಒಂದೊಂದು ವಿಷಯಗಳು ಬರುತ್ತವೆ ರಸವ್ತಾಗಿ ಬರೆಯಲು ಪ್ರಯತ್ನಿಸುತ್ತೇನೆ, ನಿಮ್ಮ ಮುಂದಿಡುತ್ತೇನೆ, ನಿಮಗೆ ಇಷ್ಟವಾಗಿದ್ದು ನನಗೂ ಖುಷಿ.

ಸವಿಗನಸು ಅವರಿಗೆ
ಮದುವೆ ಆಗಿಲ್ಲ ಸರ್ ಅದು ನಿಜ, ಅದಕ್ಕೆ ಹೀಗೆಲ್ಲ ಬರೆಯಲಾಗುತ್ತದೋ ಏನೊ!!! ಮದುವೆಯಾಗಿದ್ದರೆ ಸಾಧ್ಯವಿತ್ತೊ ಇಲ್ವೋ ಗೊತ್ತಿಲ್ಲ.
ಸೂಪರಾಗಿ ಡ್ರೆಸ್ ಮಾಡಿ ಸರ್ ಎಲ್ರಿಗೂ ಖುಷಿಯಾಗುತ್ತೆ.
ಪಕ್ಕದ ಮನೇಲಿ ಪದ್ದು ಇಲ್ದಿದ್ದ್ರೆ ಏನಂತೆ, "ಸವಿಗನಸು" "ನನಸು" ಮಾಡುವರು ಯಾರಾದ್ರೂ ಇದ್ದಾರ ನೋಡಿ, "ಮನಸು" ಮೇಡಂ ಸಿಟ್ಟಾದರೆ ನಾನು ಜವಾಬ್ದಾರನಲ್ಲ :) ಈ ಕ್ರಿಮಿನಲ್ ಐಡಿಯಾ ನಾನು ಕೊಟ್ಟಿದ್ದು ಅಂತ ಖಂಡಿತ ಹೇಳಲೇಬೇಡಿ!

ರಾಜೀವ ಅವರಿಗೆ
ನಲವತ್ತಕ್ಕೆ ಎಪ್ಪತಾದಂತೆ ಮಾಡುತಾರೆ ಸರ್, ಈಗಂತೂ ನಿಜ ಜೀವನ ಶುರುವಾಗೋದೇ ನಲವತ್ತಕ್ಕೆ, ಕಲಿತು ಡುಡಿದು, ಮದುವೆ ಆಗಿ ಒಂದು ಹಂತಕ್ಕೆ ಬರೋದಕ್ಕೆ ನಲವತ್ತರ ಹತ್ತಿರ ಹತ್ತಿರ ಆಗಿರುತ್ತದೆ. ಎಲ್ಲದರ ಜತೆ ಲವಲವಿಕೆ ಕಾಪಾಡಿಕೊಂಡರೆ ಸಾಕಲ್ಲವೇ.
ನಾನಂತೂ ಬರೆಯೊದನ್ನ ನಿಲ್ಲಿಸಲ್ಲ ಬಿಡಿ, ಎಂಬತ್ತಾದರೂ ಇಪ್ಪತ್ತರ ಹುಡುಗನ ಹಾಗೆ ಬರೀತೀನಿ :) [ಅಷ್ಟು ಆಯಸ್ಸು ಇದ್ದರೆ.]

shivu ಅವರಿಗೆ
ತರುಣನ ತರಲೇ ಕಲ್ಪನೆಗಳು ಸರ್, ಒಂದು ನನ್ನಾಕೆ ಅಂತ ಸುಂದರ ಕಲ್ಪನೆ ಮನದಲ್ಲೇ ಸುಳಿದಾಡುತ್ತಿರುತ್ತದೆ, ಹಾಗೆ ನನ್ನ ಮುಂದೆ ಹಿಡಿದು ನಿಲ್ಲಿಸಿಟ್ಟುಕೊಂಡು ಹೇಗೆ ಕಾಣಬಹುದೆಂದು, ಎಲ್ಲೋ ಯಾರೋ ಉಟ್ಟಿದ್ದು ನೋಡಿದ್ದು ನನ್ನಾಕೆಗೆ ಅಲಂಕರಿಸಿ, ಅದನ್ನೇ ಬರವಣಿಗೆಯಲ್ಲಿ ಇಳಿಸಿದ್ದು, ನಾ ಬರೆದ ಅಲಂಕಾರಿಕ ವರ್ಣನೆಗಳಲ್ಲಿ "ಸೀರೆ ಖರೀದಿ" ಲೇಖನ ಬಿಟ್ಟರೆ ಇದೇ ನನಗೂ ಬಹಳ ಇಷ್ಟವಾಗಿದ್ದು.

Roopa said...

ಪ್ರಭು ಅವರೆ,
ಸೂಪರ್ ಲೇಖನ!! ನಿಮ್ಮಾKಯ ಮೇಕಪ್ ವರ್ಣಿಸಿದ ಪದಗಳು "ಸೆರಗಿಗೆ ಪಿನ್ನು ಹಾಕಿ ಕಟ್ಟಿಟ್ಟು, ಹಿಂದಿನಿಂದೆಳೆದು ಕೈಲಿ ಹಿಡಿದಿದ್ದಳು ಪದರು ಪದರು ಹರಡುವಂತೆ" ವಾಹ್ ವಾಹ್ ...

ಮದ್ವೆಯಾಗಿ, ಮಕ್ಕಳಾಗುತ್ತಲೇ ಡ್ರೆಸ್ಸಿಂಗ್ ಸೆನ್ಸ್ ಕಮ್ಮಿಯಾಗೋದು ಬಹಳಷ್ಟು ಜನರಲ್ಲಿ ನೋಡಿದ್ದೀವಿ. ’ನಮನ್ಯಾರು ನೋಡ್ತಾರೆ’ ಅನ್ನೋದು ಕೆಲವರ ಮಾತಾದ್ರೆ ’ಮಗಳನ್ನ ರೆಡಿ ಮಾಡಿದ್ರೆ ಸಾಕು ಸಾಕಾಗುತ್ತೆ, ಇನ್ನು ನನಗೆಲ್ಲಿದೆ ಪುರುಸೊತ್ತು’ ಅನ್ನೋದು ಇನ್ನು ಕೆಲವರ ಮಾತು...

ಹೀಗೆ ಬರಿತಾಯಿರಿ..

ವಿನುತ said...

ನಾರಿಯರು ಸೀರೆ ಉಡುವ ಪರಿಯನ್ನೂ ಅದೆಷ್ಟು ರಸವತ್ತತೆಯಿ೦ದ ವರ್ಣಿಸಿದ್ದೀರಿ!! ನಿಜಕ್ಕೂ ಈ ಮಟ್ಟಿಗೆ ಸುತ್ತಲಿನ ಲೋಕವನ್ನು ಹುಡುಗರು ಆಸ್ವಾದಿಸುತ್ತಾರೆ೦ದು ಇವತ್ತೇ ತಿಳಿದದ್ದು!! ನಿಮ್ಮ ಮದುವೆಯಾದ ನ೦ತರವೂ ನಿರ೦ತರವಾಗಿ ಈ ಬರಹಗಳು ಮು೦ದುವರೆದರೆ... ನಿಮ್ಮ ಈ ಬರಹದ ಸ೦ದೇಶ ಸಾರ್ಥಕವಾಗುತ್ತದೆ :)

ಬಾಲು said...

ನಿಮಗೆ ಒಳ್ಳೆಯ ಡೆಸ್ಸಿಂಗ್ ಸೆನ್ಸ್ ಇದೆ (ನಿಮ್ಮಾಕೆಯ ಡ್ರೆಸ್ ಬಗ್ಗೆ ನೂ)....
ಕೆಲವರು ಮದುವೆ ಆಗಿ ಒಂದು ಮಗು ಆಗ್ತಾ ಇದ್ದ ಹಾಗೆ, ಜೀವನ ಮುಗಿದ ತಾರಾ ಆಡ್ತಾರೆ, ನಮ್ಮನ್ನ ಯಾರು ನೋಡ್ತಾರೆ? ಮಕ್ಕಳನ್ನು ರೆಡಿ ಮಾಡಿದರೆ ಸಾಕು ಅನ್ನೋ ಮನೋಭಾವ.
ಗಂಬೀರ ವಾದ ವಿಷ್ಯ, ಒಳ್ಳೆಯ ಲೇಖನ.

sunaath said...

ಪ್ರಭು,
ಹೆಣ್ಣುಮಕ್ಕಳ dressing ಬಗೆಗೆ ಎಷ್ಟು ಸೊಗಸಾದ ಕಲ್ಪನೆಗಳಿವೆ ನಿಮಗೆ. ನಿಮ್ಮ ಕೈಹಿಡಿಯುವವಳೇ ಧನ್ಯಳು.

Veena DhanuGowda said...

hello prabhu,

houdre thumba drushti thagide nim wife ge,bega manege hogi drushiti tagisi.... :)
interesting thing in ur blog is u'll select serious topics n drag it in a simple way...
adake yelargu thumba manasige hidisuthe
waiting for next monday :)

Prabhuraj Moogi said...

ಪುಟ್ಟಿಯ ಅಮ್ಮ ಅವರಿಗೆ
ರೀ ನಿಮ್ಮ ಹೆಸರು ಬಹಳ ಇಷ್ಟ ಆಯ್ತು :)
ನನ್ನಾಕೆ ಈ ಶಬ್ದಗಳಲ್ಲಿ ಹಿಡಿದಿಡಲಾಗದಷ್ಟು ಸುಂದರಿ, ಏನೊ ಆಗಾಗ ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತೇನೆ ಅಷ್ಟೇ.
ಹೌದು ಮದುವೆಯಾಗಿ ಮಕ್ಕಳಾದ್ರೆ ಈ ಡ್ರೆಸಿಂಗ್ ಸೆನ್ಸ್ ಕಮ್ಮಿಯಾಗಿಬಿಡುತ್ತದೆ, ಮಕ್ಕಳು ರೆಡಿ ಆಗಿ ಚೆನ್ನಾಗಿ ಕಾಣಿಸಿದ್ರೆ ಸಾಕು ಅಂತ, ಅದರೆ ಅದೇ ನಮ್ಮನ್ನ ವಯಸ್ಸಾಯ್ತು ಅಂತ ಸೋಮಾರಿಗಳನ್ನಾಗಿಸುತ್ತದೆ. ಲವಲವಿಕೆ ಕಳೆದುಹೋಗಿಬಿಡುತ್ತದೆ.

ವಿನುತ ಅವರಿಗೆ
ಹುಡುಗರಿಗೆ ಬಹಳೆ ಕಲ್ಪನೆಗಳಿರುತ್ತವೆ ಆದರೆ ಹೊರಗೆ ಹೇಳಿಕೊಳ್ಳಲು ಹಿಂಜರಿತ, ನನಗೋ ಅತಿಯಾದ ಕಲ್ಪನೆಗಳು ಒಳಗಿರಲಾಗದೇ ಹೊರಜಿಗಿದು ಬಂದು ಲೇಖನಗಳಾಗುತ್ತವೆ :) ಹೌದು ಮುಂದುವರೆಸುವ ಯೊಚನೆ ಇದೆ, ಅದು ನನ್ನಾಕೆಯಾಗಿ ಬರುವವಳ ಮೇಲೂ ಅವಲಂಬಿಸಿದೆ, ಅವಳು ಹಾಗಿಲ್ಲದೇ ಇದ್ದರೆ, ಎನು ಮಾಡೊದು... ಸಾಕ್ರಟೀಸನಂತೆ ತತ್ವಜ್ಞಾನಿ ಆಗೋದು :)

ಬಾಲು ಅವರಿಗೆ
ಎನೋ ಸ್ವಲ್ಪ ನೀಟಾಗಿದ್ದರೆ ಸರಿ ಇಲ್ಲದಿದ್ದರೆ ನೀರಸತನ ಬಂದುಬಿಡುತ್ತದೆ ಅನಿಸುತ್ತದೆ, ಅದಕ್ಕೇ ನನ್ನಾಕೆಯೂ ಹಾಗೇ ನೀರಸಳಾಗದಿರಲಿ ಅಂತ ಆಸೆ. ಮಕ್ಕಳೊಂದಿಗೆ ಮತ್ತೆ ಮಕ್ಕಳಾಗಿ ನಲಿದರೆ ಕೂಡ ಚೆನ್ನ.

sunaath ಅವರಿಗೆ
ಎನೋ ಎಲ್ಲೆಲ್ಲೊ ಅಲಂಕರಿಸಿಕೊಂಡವರ ನೋಡಿದ್ದೆಲ್ಲ ಕೂಡಿಸಿ ಕಲಿಸಿ ಕಲ್ಪಿಸಿ ಬರೆದದ್ದು. ಅಂಥಾಕೆ ಸಿಕ್ಕರೆ ನಾನೂ ಧನ್ಯ...

ಪ್ರೀತಿಯಿ೦ದ ವೀಣಾ :)
ದೃಷ್ಟಿ ಬೊಟ್ಟನ್ನ ಆಗಲೇ ಸಿಕ್ಕ್ ಪೆನ್ನಿನಲ್ಲೇ ಬರೆದಿದ್ದೇನೆ :) ಈ ದೃಷ್ಟಿಗೊಂಬೆ(ಹೊಸ ಮನೆಗಳಿಗೆ ಕಪ್ಪು ಬಟ್ಟೆಯಲ್ಲಿ ಮಾಡಿದ ಬೊಂಬೆ ಕಟ್ಟಿರುತ್ತಾರಲ್ಲ!) ತರಹ ಅವಳ ಜತೆ ನಾನು ಯಾವಾಗಲೂ ಇರುತ್ತೀನಲ್ಲ ಹೇಗೆ ದೃಷ್ಟಿಯಾಗುತ್ತದೆ ಅಂತೀನೆ :)
ಬಹಳ ಸೀರಿಯಸ್ಸಾಗಿ ಹೇಳಿದ್ರೆ ಯಾರೂ ಕೇಳಲ್ಲ ಅದಕ್ಕೆ ಮಸಾಲೆ ಸೇರಿಸಿ ಮೃಷ್ಟಾನ್ನ ಭೋಜನ ಏರ್ಪಡಿಸುವುದು. ಅಲ್ಲದೆ ನನ್ನಾಕೆ ತುಂಟಿ ನನ್ನ ಸೀರಿಯಸ್ಸಾಗಿರಲು ಬಿಡುವುದೇ ಇಲ್ವೇ, ಮತ್ತೆ ಸೋಮವಾರ ಬನ್ನಿ, ಬರುತ್ತಿರಿ

ಧರಿತ್ರಿ said...

ಎಷ್ಟು ಚೆನ್ನಾಗ್ ಬರೆದಿರಿ. ಸ್ವಲ್ಪ ಹೊಟ್ಟೆಕಿಚ್ಚಾಯ್ತು. ಉತ್ತಮ ಬರಹ. ಧನ್ಯವಾದಗಳು ಸರ್.
-ಧರಿತ್ರಿ

Prabhuraj Moogi said...

ಧರಿತ್ರಿ ಅವರಿಗೆ
:) ಹೊಟ್ಟೆಕಿಚ್ಚುಪಟ್ಟರೇನೂ ಬೇಜಾರಿಲ್ಲ, ಅದರೆ ನನ್ನಾಕೆಗೆ ದೃಷ್ಟಿ ತಾಕಿಸದಿರಿ.

Prabhuraj Moogi said...

ಪುಟ್ಟಿಯ ಅಮ್ಮ
ರೂಪಶ್ರಿ ಮೇಡಮ, ಹೆಸರು ಬಹಳೆ ಚೆನ್ನಾಗಿದೆ, ಈ ಹೆತ್ತವರೇ ಹಾಗೆ... ಮಕ್ಕಳ ಮೇಲೆ ಅಷ್ಟು ಪ್ರೀತಿ, ಅವರಲ್ಲೇ ತಮ್ಮನ್ನು ತಾವು ಕಾಣತೊಡಗುತ್ತಾರೆ.
ಮಕ್ಕಳು ರೆಡಿ ಆದ್ರೆ ಸಾಕು ಅನ್ನೊ ಗುಂಪಿಗೆ ಸೇರಬೇಡಿ, ಬೇಜಾರಾಗಲ್ಲ ಅಂದ್ರೆ ಹೇಳ್ತೀನಿ ಕೇಳಿ, ಪುಟ್ಟಿ ಅಮ್ಮ ಸರಿ, ಹಾಗೆ ಪುಟ್ಟಿಯ ಪಪ್ಪನ ಪತ್ನಿ ಕೂಡ ಅಲ್ವೇ... ಹಾಗಂತ ಅಂದುಕೊಂಡು, ಪುಟ್ಟಿ ಜತೆ ತಾವೂ ರೆಡಿಯಾಗಿ, ಚೆನ್ನಾಗಿರುತ್ತದೆ (ನನ್ನ ಅಭಿಪ್ರಾಯ ಸರಿಯೆನಿಸದಿದ್ದರೆ ಕ್ಷಮಿಸಿ).
ಪುಟ್ಟಿ ಫೋಟೊಗಳನ್ನು ನೋಡಿದ್ದೆ ಪ್ರತಿಕ್ರಿಯೆ ನೀಡಲಾಗಿರಲಿಲ್ಲ ಅಷ್ಟೇ, ಖಂಡಿತ ಬ್ಲಾಗಗೆ ಭೇಟಿಕೊಡುತ್ತೇನೆ.

Nandini said...

ಹೈ, ನಾನು ನಿಮ್ಮ ದೊಡ್ಡ ಫ್ಯಾನ್. ನಾನು ಬೆಳಗಾಂ ದವಳೇ. ನಿಮ್ಮ ಕಥೆಗಳು ತುಂಬಾ ಚೆನ್ನಾಗಿ ಇರುತ್ತೆ. ಓದುತ್ತಿದ್ದರೆ ಹೊತ್ತು ಹೋಗಿದ್ದೆ ಗೊತ್ತಾಗಲ್ಲ. ನನಗೆ ಒಂದು ಪ್ರಶ್ನೆ ತುಂಬಾ ಕಾಡುತ್ತಿದೆ. ಅದು ಏನು ಅಂದ್ರೆ, ನಿಮಗೆ ಮದುವೆ ಆಗಿದೆಯಾ? ಇಸ್ಟೊಂದು ಇಮಗಿನೆ ಮಾಡೋಕೆ ಹೇಗೆ ಸಾದ್ಯ!!! ನಿಮ್ಮ ಕಥೆಗಳನ್ನು ಓದುತ್ತಿದ್ದರೆ, ನಮ್ಮ ನಿಜಜೀವನದ ಕಥೆ ತರ ಇದೆ.

Prabhuraj Moogi said...

Nandini ಅವರಿಗೆ
ನೀವೂ ಬೆಳಗಾವಿಯವರಂತ ಕೇಳಿ ಖುಷಿಯಾಯ್ತು, ನಮ್ಮೂರಲ್ಲೂ ನನ್ನ ಬ್ಲಾಗ ಓದುತ್ತಿದ್ದಾರೆ ಅಂತಾಯ್ತು :)
ನಿಮ್ಮ ಪ್ರಶ್ನೆ ಸಹಜ, ಏನಪ್ಪಾ ಹೀಗೆಲ್ಲ ಬರೀತಾನೆ, ಮದುವೆ ಆಗಿಲ್ಲ ಅಂತಾನೇ ಅಂತ. ಬಹಳ ಜನರಿಗೆ ಆ ಸಂದೇಹ ಇದ್ದೇ ಇದೆ.
ಇಲ್ಲ, ನಿಜವಾಗ್ಲೂ ಇನ್ನೂ ಮದುವೆಯಾಗಿಲ್ಲ, ಎಲ್ಲಾ ಬರೀ ಕಲ್ಪನೆಗಳು, ನಡೆದ ಚಿಕ್ಕ ಘಟನೆಗಳ ಮೇಲೆ ಕಟ್ಟಿದ ಕಟ್ಟುಕಥೆಗಳು. ಹೀಗಿದ್ದರೆ ಹೇಗೆ ಅಂತ ಅಂದಕೊಂಡು ಬರೆದವು... ಓದುತ್ತಿರಿ ಅನಿಸಿಕೆ ತಿಳಿಸುತ್ತಿರಿ