ದಸರಾ ಹಬ್ಬ ಆಯುಧಪೂಜೆ ಅಂತ, ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ, ಇನ್ನೇನು ಈವತ್ತು ಗಾಡಿ ತೊಳೆದು ಪೂಜೆ ಮಾಡೊ ಹೊತ್ತಿಗೆ ಮಧ್ಯಾಹ್ನ ಆಗುತ್ತದೆಂದು, ನಾನೇ ತೊಳೆದರಾಯ್ತು ಅಂತ ಇವಳಿಗೆ ನೀರು ಕೇಳಿದೆ, "ರೀ ನಲ್ಲಿ ನೀರು ಬಂದು ಎರಡು ದಿನ ಆಯ್ತು, ಸ್ನಾನಕ್ಕೇ ನೀರಿಲ್ಲ ಅಂತ ನಾನಿದ್ದರೆ, ನೀವು ಬೈಕ ತೊಳೆಯೋದಕ್ಕೆ ನೀರೆಲ್ಲಿಂದ ತರಲಿ" ಅಂದ್ಲು. "ಹೇ, ಚಂದ್ರನಲ್ಲೂ ನೀರಿದೆ ಅಂತ ಇಸ್ರೋ ಚಂದ್ರಯಾನದಿಂದ ಪತ್ತೆ ಆಗಿದೆ, ಅಂಥಾದ್ದರಲ್ಲಿ ನಮ್ಮನೇಲಿ ನೀರಿಲ್ಲ ಅಂದ್ರೆ ಹೇಗೇ" ಅಂದೆ, ಖಾಲಿ ಬಕೆಟು ಒಂದು ತಂದಿಟ್ಟು, "ಹೌದಾ ಹಾಗಿದ್ರೆ, ಆ ನಿಮ್ಮ ಚಂದ್ರನಿಂದ ಒಂದು ಬಕೆಟ್ಟು ನೀರು ತುಗೊಂಬನ್ನಿ, ನಂಗೂ ಬಟ್ಟೆ ತೊಳೆಯೋಕಾಗತ್ತೆ." ಅಂತ ಹಲ್ಲು ಕಿರಿದಳು, "ಛೇ, ನನಗೆ ರೈಲು ಬಿಡೊದು ಗೊತ್ತು, ರಾಕೆಟ್ಟು ಹಾರಿಸೋದು ಗೊತ್ತಿಲ್ವೇ, ಇಲ್ಲಂದ್ರೆ ಹೋಗಿ ತರಬಹುದಿತ್ತೇನೊ" ಅಂತ ಒಂದು ರೈಲು ಬಿಟ್ಟೆ. "ಪಾಪ ಹೌದಲ್ವಾ, ಒಂದು ಕೆಲಸ ಮಾಡಿ ನೀವೇನು ಹೋಗೊದು ಬೇಡ, ನಮ್ಮನೆಗೇ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಿಬಿಡಿ" ಅಂದ್ಲು....
ಆಕಾಶಕ್ಕೇ ಏಣಿ ಕಟ್ಟೊರನ್ನ ನೋಡೀದೀನಿ, ನಲ್ಲಿ ಹಾಕಿಸಿದ್ರೆ ನಾನೇ ಮೊದಲಿಕೆ ಆಗಬಹುದೇನೊ, ನೀರಿಗಾಗಿ ಎಲ್ರೂ ಪಾತಾಳ ಅಂತರ್ಜಲದತ್ತ ಮುಖ ಮಾಡಿದ್ರೆ, ಅಪ್ಪಟ ವಿರುದ್ಧ ದಿಕ್ಕಿನಲ್ಲಿ ಆಕಾಶದೆಡೆಗೆ ಕೈ ಚಾಚು ಅಂತ ಇವಳು ಹೇಳ್ತಿದಾಳೆ. "ಅಲ್ಲೀವರೆಗೆ ಪೈಪು ಹಾಕ್ಸೊಕೆ ಬಹಳ ಖರ್ಚಾಗತ್ತೇ, ಅಷ್ಟೆಲ್ಲ ದುಡ್ಡು ಇರೋಕೆ, ನಾನೇನು ಬಿಲ್ ಗೇಟ್ಸಾ, ಸಿಲ್ಲಿ ಸಾಫ್ಟವೇರ ಇಂಜನೀಯರು ನಾನು" ಅಂದೆ, ಅದೇ ಬಕೆಟ್ಟಿಗೆ ನಾಲ್ಕು ಮಗ್ ನೀರು ಸುರಿದು, "ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಇಷ್ಟೇ ನೀರಲ್ಲಿ ಎಲ್ಲಾ ಮುಗಿಸಿ ಪೂಜೆ ಮಾಡಿ ಬನ್ನಿ, ನಿಮ್ ಜತೆ ಮಾತಾಡ್ತಾ ನಿಂತರೆ ಹೋಳಿಗೆ(ಒಬ್ಬಟ್ಟು) ಹೊತ್ತಿ ಹೋಗುತ್ತೆ" ಅಂತ ಪಾಕಶಾಲೆ ಸೇರಿದಳು, ಅವಳಿಗೆ ಕಾಣದಂತೆ ಇನ್ನೆರಡು ಮಗ ನೀರು ಸುರಿದುಕೊಂಡು ಬೈಕ್ ತೊಳೆದದ್ದಾಯ್ತು. ತುಪ್ಪು ಹಾಕಿಕೊಂಡು, ಹೋಳಿಗೆ ತಿನ್ನುತ್ತ, "ಈ ಹೋಳಿ ಹಬ್ಬ ಯಾವಾಗ ಬರತ್ತೇ" ಅಂದೆ, "ಇನ್ನೂ ದೂರ, ಅದ್ಯಾಕೆ ನೆನಪು ಬಂತು" ಅಂದ್ಲು. "ಏನಿಲ್ಲ ಹೋಳಿಗೆ ತಿಂತಾ ಹೋಳೀ ಹಬ್ಬ ನೆನಪು ಬಂತು, ಬಣ್ಣ ಓಕುಳಿ ಚೆನ್ನಾಗಿರ್ತದೆ" ಅಂತ ಖುಷಿಯಾದೆ, "ಹೂಂ ಚೆನ್ನಾಗಿರ್ತದೆ, ಆಮೇಲೆ ಬಣ್ಣ ಬಿದ್ದ ಅಂಗಳ ಎಲ್ಲ ತೊಳಿಯೋಕೆ ಎರಡು ಡ್ರಮ್ ನೀರೂ ಸಾಕಾಗಲ್ಲ" ಮತ್ತೆ ನೀರಾಟಕ್ಕಿಳಿದಳು, ಈ ಹೆಂಗಳೆಯರದು ಇದೊಂದು ದೊಡ್ಡ ಪ್ರಾಬ್ಲ್ಂ, ಮನೇಲಿ ನೀರಿಲ್ಲಾ ಅಂದ್ರೆ ಅದೇ ಗುಂಗಿನಲ್ಲೇ ಇರ್ತಾರೆ. ಊಟ ಮುಗಿಸಿ ನಿಧಾನಕ್ಕೆ ಎದ್ದು, ಹೋಗಿ ನಾನೇ ಲೋಟ ನೀರು ತೆಗೆದುಕೊಂಡು ಬಂದೆ, ಅವಳನ್ನು ಕೇಳಿದ್ರೆ ಎಲ್ಲಿ ಮತ್ತೆ ಖಾಲಿ ಬಾಟಲಿ ಕೊಟ್ಟು, ಹೋಗಿ ನಿಮ್ಮ ಚಂದ್ರನಿಂದ ತುಂಬಿಸಿಕೊಂಡು ಬನ್ನಿ ಅಂದಾಳು ಅಂತ. ನೀರು ಕುಡಿದರೆ ಯಾಕೋ ಟೇಸ್ಟ ಬೇರೆ ಇತ್ತು "ಎಲ್ಲಿ ನೀರು ಚಂದ್ರನಿಂದ ತಂದದ್ದಾ" ಅಂದೆ, ದುರುಗುಟ್ಟಿ ನೋಡುತ್ತ "ಪಕ್ಕದಮನೆ ಪದ್ದು ಬೋರವೆಲ್ ನೀರು" ಅಂದ್ಲು. "ಅದಕ್ಕೇ ಟೇಸ್ಟಿ ಇದೆ" ಅಂತ ಮುಗುಳ್ನಕ್ಕೆ, "ಗಡಸು ಉಪ್ಪು ನೀರದು, ಅದೆಲ್ಲಿಂದ ಟೇಸ್ಟ್ ಬಂತೋ" ಅಂತ ಉರಿದುಕೊಂಡಳು.
ಬೈಕ ತೊಳೆದದ್ದು ಇನ್ನೂ ಸಾಕಾಗಿರಲಿಲ್ಲ, ಆನೆಗೆ ಗಿಂಡಿ(ಚಿಕ್ಕ ಲೋಟ) ನೀರಲ್ಲಿ ಸ್ನಾನ ಮಾಡಿಸಿದಂತೆ ಕಾಣುತ್ತಿತ್ತು. "ಇನ್ನೊಮ್ಮೆ ಬೈಕ್ ತೊಳೆದುಬಿಡ್ತೀನಿ, ಹೇಗೂ ಪಕ್ಕದಮನೆ ಪದ್ದು ಬೋರವೆಲ್ ನೀರಿದೆಯಲ್ಲ" ಅಂದೆ, "ಏನೂ ಬೇಕಿಲ್ಲ, ಪದ್ದು ನೀರು ಕೊಡ್ತೀನಿ ಅಂದ್ರು ನಾನು ಬಿಡಲ್ಲ, ನಂಗೊತ್ತಿಲ್ವಾ, ನಿಮಗೆ ಮತ್ತೆ ನೀರು ಯಾಕೆ ಬೇಕಿದೆ ಅಂತ, ಎಲ್ಲ ನೆಪ ಪದ್ದು ನೋಡಲು" ಅಂತ ನನ್ನ ಪ್ಲಾನಗೆ ನೀರೆರೆಚಿದಳು!.
ಸಂಜೆ ಮಳೆಯಾಗಬಹುದಿತ್ತೇನೊ, ಅದಕ್ಕೆ ಮಧ್ಯಾಹ್ನಕ್ಕೆ ಸೆಕೆ, ಧಗೆ ಜಾಸ್ತಿ ಆಯ್ತು, ಹಣೆ ಮೇಲೆ ತುಂತುರು ನೀರು ಸೆಲೆಯೊಡೆಯುತ್ತಿತ್ತು, "ಲೇ ತಲೇಲಿ ನೀರು ಸೆಲೆ ಹುಟ್ಟಿದೆ, ಪರಮೇಶ್ವರನ ಜಡೆಯಲ್ಲಿ ಗಂಗೆ ಅವತರಿಸಿದಂತೆ, ನೀರು ತುಂಬಿಸ್ತೀಯಾ" ಅಂದೆ. "ಇಂಜನೀಯರ ಸಾಹೇಬ್ರೆ, ವಿಶ್ವೇಶ್ವರಯ್ಯ ಅವರು ಕಟ್ಟಿದಂಗೆ ಒಂದು ಆಣೆಕಟ್ಟೆ ಕಟ್ಟಿ ನೀರು ಹಿಡಿದಿಡಿ ಆಮೇಲೆ ತುಂಬಿಸ್ಕೋತೀನಿ" ಅಂತ ಮಾರುತ್ತರ ಕೊಟ್ಲು, "ಅಷ್ಟೆಲ್ಲಾ ತಲೆ ಇದ್ದಿದ್ರೆ ನಾನ್ಯಾಕೆ ಇಲ್ಲಿರ್ತಿದ್ದೆ, ಚಂದ್ರನಮೇಲೆ ಮನೆ ಕಟ್ಕೊಂಡು ಇರ್ತಿದ್ದೆ" ಅಂದರೆ, "ಹ್ಮ್... ಆದ್ರೆ ಪಕ್ಕದಮನೆ ಪದ್ದುನ ಮಿಸ್ ಮಾಡ್ಕೊತಾ ಇದ್ರಿ" ಅಂತ ಕಾಲೆದಳು. "ಹೇ ಹಾಗೇನಿಲ್ಲ, ನಮ್ಮ ವಿಜಯನಗರ ಬೆಳೆಸಿ ಅದರ ಪಕ್ಕ 'ಚಂದ್ರಾ'ಲೇಔಟ್ ಮಾಡೊ ಬದಲು ಅದನ್ನೂ ಸೇರಿಸಿಕೊಂಡು ಹೋಗಿ, ಅಲ್ಲೇ ದೊಡ್ಡ ಚಂದ್ರನ ಲೇಔಟೇ ಮಾಡ್ತಾ ಇದ್ವಿ ಬಿಡು" ಅಂತ ನಾನು ಮರು ಮಾತಿಟ್ಟೆ. "ಹೌದೂ, ನೀವ್ಯಾಕೆ ವಿಜ್ಞಾನಿ ಆಗಲಿಲ್ಲ" ಅಂತ ಬೆರಗಾದಳು, "ನಾನೂ ಆಗಬೇಕು ಅಂತ ಪರೀಕ್ಷೆ ಎಲ್ಲಾ ಕಟ್ಟಿದೆ, ಪಾಸೇ ಅಗಲಿಲ್ಲ" ಅಂತ ಬೇಸರಿಸಿದೆ. "ಆಗದಿದ್ದುದು ಒಳ್ಳೇದೆ ಆಯ್ತು ಬಿಡಿ, ನೀವೇನಾದ್ರೂ ಸ್ಯಾಟಲೈಟ್ ಬಿಟ್ಟಿದ್ರೆ, ಅದು ಕಂಟ್ರೊಲ್ ರೂಮಗೆ ಸಿಗ್ನಲ್ ಕಳಿಸೊ ಬದಲು, ಪಕ್ಕದಮನೆ ಪದ್ದುಗೆ ಸಿಗ್ನಲ್ ಕಳಿಸಿರೋದು." ಅಂತ ನಕ್ಕಳು, "ರಾಕೆಟ್ಟು ಬಿಟ್ಟರೆ, ಮೇಲೆ ಹಾರಿ ಮತ್ತೆ ತಿರುಗಿ ನಮ್ಮೆಡೆಗೆ ಬಂದಿರೋದು, ನಿನಗೆ ಪ್ರಶ್ನೆ ಕೇಳಿದ್ದವು ಎಲ್ಲ ನನಗೇ ತಿರುಗಬಾಣ ಆಗ್ತವಲ್ಲ ಹಾಗೆ" ಅಂತಂದು ನಾನೂ ನಕ್ಕೆ. "ಹಾಗಂದೆ ಅಂತ ಬೇಜಾರಾಯ್ತಾ" ಅಂತ ತಲೆ ಸವರಿದಳು, ಬೆವರ ಹನಿ ಸೆರಗಿಂದ ಒರೆಸುತ್ತ, "ನನಗೇನು ಬೇಜಾರಿಲ್ಲ ಪರದೇಶಿ ಕಂಪನಿಯಲ್ಲಿ ಪ್ರೊಗ್ರಾಮರ್ ಅಂತಿದೀನಿ ಅಂತ, ನನ್ನಿಂದ ಏನಾಗುತ್ತೊ ಅದನ್ನ ನಾನು ಮಾಡ್ತಾ ಇದೀನಿ, ಮನುಕುಲಕ್ಕೆ ಎನೋ ಸಹಾಯವಾಗುವಂತದ್ದು ನೇರವಾಗಿ ಮಾಡಿಲ್ಲದಿದ್ರೂ, ಪರೋಕ್ಷವಾಗಿಯಾದ್ರೂ ಯಾರಿಗೊ ಸಹಾಯ ಆಗಿದೆ, ದುಡಿದು ನಿಯತ್ತಾಗಿ ಟ್ಯಾಕ್ಸ ಕಟ್ತಾ ಇದೀನಲ್ಲ ಅದರಲ್ಲಿ ಹತ್ತು ಪೈಸೆನಾದ್ರೂ ಇಂಥ ಸಂಶೋಧನೆಗೆ ಬಳಕೆ ಆಗಿದೆ ಅಂತ ಸಮಾಧಾನ ಇದೆ" ಅಂದೆ.
"ಏನು ಸಂಶೋಧನೆನೊ ಏನೊ, ಚಂದ್ರನಮೇಲೆ ನೀರಿದೆ ಅಂದ್ರೆ, ಬಿಂದಿಗೆ ತೆಗೆದುಕೊಂಡು ಕ್ಯೂನಲ್ಲಿ ನಿಲ್ಲೋಕಾಗುತ್ತಾ" ಅಂತ ನೀರಸವಾಗಿ ನುಡಿದಳು, ಎಲ್ಲ ಶ್ರೀಸಾಮಾನ್ಯ ಹಾಗೇ ಅನ್ನಬಹುದಲ್ಲ, ಏನಾಗುತ್ತೆ ಇಂಥ ಸಂಶೊಧನೆಗಳಿಂದ ಅಂತ, ಆದರೆ ತಿಳಿಸಿ ಹೇಳಿದರೆ ಅರ್ಥ ಆದೀತು, ಅದನ್ನೇ ನನ್ನಾಕೆಗೆ ನಾ ಮಾಡಬೇಕಿದ್ದು, "ವ್ಯರ್ಥ ಅಂತೂ ಅಲ್ಲ, ಅಲ್ಲೂ ಜೀವಿಗಳಿರಬಹುದು" ಅಂದರೆ "ಅಲ್ಲ ಇಲ್ಲೇ ಕೋಟಿ ಕೋಟಿ ಜೀವಿಗಳಿದೀವೀ, ಇನ್ನ ಅಲ್ಲೂ ಇದ್ರೆ, ಅವರನ್ನೂ ಕರ್ಕೊಂಡು ಬಂದರೆ, ನಮಗೇ ನೀರು ಸಾಕಾಗ್ತಿಲ್ಲ, ಇನ್ನ ಅವರಿಗೆಲ್ಲಿಂದ" ಅಂದ್ಲು, "ಇಲ್ಲ ಬಿಡು, ಭೂಮಿಗೆ ಬರೊವಾಗ ನಿಮ್ಮ ನಿಮ್ಮ ವಾಟರ್ ಬಾಟಲ್ ನೀವೇ ತುಂಬ್ಕೊಂಡು ಬನ್ನಿ ಅಂತ ಶಾಲಾ ಮಕ್ಕಳಿಗೆ ಹೇಳಿದ ಹಾಗೆ ಹೇಳಿದ್ರಾಯ್ತು" ಅಂದ್ರೆ, ನಸುನಕ್ಕಳು. "ಮತ್ತೆ ಈ ಸಂಶೊಧನೆಯಿಂದ ಎನಾಗುತ್ತೆ ಹೇಳ್ರೀ" ಅಂತ ಸ್ವಲ್ಪ ಗಂಭೀರವಾದಳು. "ನಂಗೂ ಬಹಳ ಗೊತ್ತಿಲ್ಲ, ಅಲ್ಲಿಂದ ನೀರಂತೂ ಭೂಮಿಗೆ ತರುವುದಿಲ್ಲ, ಆದರೆ ಅಲ್ಲಿ ನೀರು ಹೇಗೆ ಬಂತು ಅಂತ ತಿಳಿಯಬಹುದು, ನೀರು ಉತ್ಪತ್ತಿ ಆಗೋ ವಿಧಾನ ಗೊತ್ತಾಗಬಹುದು, ಇಲ್ಲ ಅಷ್ಟು ಬಿಸಿ ಸುಡುವ ಚಂದ್ರನಲ್ಲಿ ಕೂಡ ಆವಿ ಆಗದ ನೀರು ಹೇಗಿದೆ ಅಂತ ತಿಳೀಬಹುದು, ಇಲ್ಲ ಸೂರ್ಯನೇ ಕಾಣದ ಚಂದ್ರನ ಭಾಗದಲ್ಲಿ ಇನ್ನೂ ಹೆಚ್ಚು ನೀರಿದೆ ಅಂತ ಗೊತ್ತಾದರೆ ಅಲ್ಲಿ ಹೋಗಿ ಮಾನವಜೀವಿಗಳು ಟೆಂಟು ಕೂಡ ಹಾಕಬಹುದು. ಇಲ್ಲ ಅದೇ ನೀರಿನಲ್ಲಿನ ಜಲಜನಕ(ಹೈಡ್ರೋಜನ್) ಬೇರ್ಪಡಿಸಿ ಇಂಧನ ಮಾಡಿಕೊಂಡು, ಅಲ್ಲಿ ಸ್ಪೇಸ್ ಸ್ಟೇಷನ್ನು ಕಟ್ಟಬಹುದು, ಇಲ್ಲ ಮಂಗಳ ಗ್ರಹಕ್ಕೆ ಹೋಗಲು ನಡುನಿಲ್ದಾಣದಂತೆ ಮಾಡಿ ಅಲ್ಲಿ ಇಂಧನ ತುಂಬಿಸಿಕೊಂಡು ಪ್ರಯಾಣ ಮಾಡಬಹುದು, ಹೀಗೆ ಸಾಧ್ಯತೆಗಳಿಗೆ ಲೆಕ್ಕವಿಲ್ಲ" ಅಂತ ವಿವರಿಸಿದೆ, ಬಹಳ ಕುತೂಹಲ ಹುಟ್ಟಿತು ಅವಳಿಗೆ, "ನನಗೇನೊ ಇಲ್ಲಿ ತೊಟ್ಟು ಕುಡಿಯೋಕೆ ನೀರು ಇಲ್ಲ, ಕೊಳಚೆ ನೀರು ಹರಿದು ಹೋಗೋಕೆ ಚರಂಡಿ, ಹೀಗೆ ಮೂಲಭೂತ ಸೌಲಭ್ಯಗಳು ಇಲ್ದೆ ಇರೋವಾಗ, ಕೊಟಿಗಟ್ಟಲೆ ಖರ್ಚು ಮಾಡಿ ಅಲ್ಲಿ ನೀರು ಕಂಡು ಹಿಡಿದು ಏನು ಮಾಡ್ತಾರೆ ಅನಿಸಿತ್ತು" ಅಂತ ಮುಗ್ಧತನ ವಿಶದಪಡಿಸಿದಳು. "ಹಾಗನ್ನಿಸೋದು ನಿಜ, ವಿದೇಶಿ ಕೆಲವರು, ಭಾರತದವರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಯಾಕೆ, ಅಂತ ಹೀಗಳೆದರು, ಆದರೆ ಇಂಥ ಸಂಶೋಧನೆಗಳು ಅವಶ್ಯಕ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಥ ಕೆಲಸಗಳಿಗೆ ಮೀಸಲಿಡುವ ಹಣ ಏನೇನೂ ಅಲ್ಲ, ಆದರೂ ಅದರಲ್ಲೇ ಇಷ್ಟೆಲ್ಲ ಮಾಡಲಿಕ್ಕಾಗುತ್ತದೆ ಅಂತ ತೋರಿಸಿದರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯಂತ್ರಗಳನ್ನು ಅಭಿವೃದ್ಧಿ ಮಾಡಿದ್ದು, ಅವೆಲ್ಲ ಸಾಧನೆಗಳೇ, ಬರೀ ಬಾಹ್ಯಾಕಾಶ ಅಷ್ಟೇ ಅಲ್ಲ, ದಿನನಿತ್ಯದ ಸಾಮಾನುಗಳಿಗೂ ಅವು ಉಪಯೋಗವಾಗಬಹುದು, ನೀರಷ್ಟೇ ಯಾಕೆ ಅಲ್ಲಿ ಬೇರೆ ಖನಿಜಗಳು ಸಿಕ್ಕರೂ ಸಾಕು, ಅದನ್ನ ಇಲ್ಲಿಗೆ ತರಬಹುದು ಕೂಡ" ಅಂದರೆ... "ಇನ್ನೇನಾದ್ರೂ ಸಿಕ್ಕರೆ ಟನ್‌ಗಟ್ಟಲೇ ಚಿನ್ನ(ಬಂಗಾರ) ಸಿಗಲಿರೀ" ಅಂತ ಕಣ್ಣು ಮಿಟಿಕಿಸಿದಳು, "ಹ್ಮ್ ಹಾಗೆ ಸಿಕ್ಕರೆ ನಾನೂ ಒಂದೆರಡು ಕೇಜಿ ತಂದು ನಿನಗೆ ಬಳೆ ಮಾಡಿಸಿಕೊಡ್ತೀನಿ ಬಿಡು" ಅಂದೆ.
ನನಗಂತೂ ನಮ್ಮ ಈ ಇಸ್ರೋ ಸಂಸ್ಥೆಯ ಈ ಸಾಧನೆ ಬಗ್ಗೆ ಬಹಳ ಹೆಮ್ಮೆಯಿದೆ, ಚಂದ್ರಯಾನ ವಿಫಲ ಅಂತ ಬೊಬ್ಬೆ ಹಾಕುತ್ತಿದ್ದವರಿಗೆ ತಕ್ಕ ಉತ್ತರವೂ ಸಿಕ್ಕಿದೆ, ಹಾಗೆ ನೋಡಿದರೆ ವಿಫಲತೆ ಅನ್ನೋದೇ ಇಲ್ಲ, ಈ ಸಂಶೋಧನೆ ಹೊರಬರದಿದ್ದರೂ, ಅದು ಒಂದು ಒಳ್ಳೇ ಪ್ರಯತ್ನ ಆಗಿತ್ತು ಅಂತಲೇ ನಾನು ಭಾವಿಸುತ್ತಿದ್ದೆ, ಪಿ.ಎಸ್.ಎಲ್.ವಿ ವಿಫಲತೆಯಾದಾಗ ಸುಮ್ಮನೆ ಕೈಚಲ್ಲದೆ, ಮತ್ತೆ ಪ್ರಯತ್ನಿಸಿದ್ದಕ್ಕೆ ಒಂದಾದಮೇಲೊಂದರಂತೆ ಸಫಲ ಸ್ಯಾಟಲೈಟ ಉಡಾವಣೆ ಮಾಡಿದ್ದು, ಮತ್ತೆ ಮರುಪ್ರಯತ್ನ ಇನ್ನೂ ಯಶಸ್ವಿ ಆಗುತ್ತದೆ ಅನ್ನೊದರಲ್ಲಿ ಸಂದೇಹವೇ ಇಲ್ಲವೆಂಬತೆ ತೊರ್‍ಇಸಿಕೊಟ್ಟಿದೆ. ಸೀಮಿತ ಬಜೆಟ್ಟು, ಸ್ವದೇಶಿ ತಂತ್ರಜ್ಞಾನ, ಕಡಿಮೆ ಸಂಬಳದ ಇಂಜನೀಯರುಗಳು, ಸರಕಾರದ ರಾಜಕೀಯಗಳು ಎಲ್ಲವನ್ನೂ ನಿಭಾಯಿಸಿ ಸಿಕ್ಕ ಅವಧಿಯಲ್ಲೆ ಇಷ್ಟು ಸಾಧನೆ ಮಾಡಿರುವುದಕ್ಕೆ ನಿಜಕ್ಕೂ ಅಭಿನಂದನೀಯ. ಯಾವಾಗ ನೋಡಿದರೂ ವಿಫಲತೆಗಳನ್ನೇ ಹಿರಿದಾಗಿಸಿ ಯಾಕೆ ನಾವು ನೋಡಬೇಕು. ಐಸ್ಯಾಕ, ಭಾರ್ಕ, ಡಿಅರ್‌ಡಿಓ, ಹೆಚ್‌ಏಎಲ್, ಎನ್‌ಏಎಲ್, ಬಿಈಎಲ್ ನಂತಹ ಇನ್ನೂ ಹಲವು ಪಟ್ಟಿ ಮಾಡಲಾಗಷ್ಟು ಸಂಸ್ಥೆಗಳು ಮಾಡಿದ ಸಾಧನೆಗಳೇನು ಕಮ್ಮಿಯೆ, ಒಂದು ಪರಮಾಣು ಬಾಂಬ, ಕ್ಷಿಪಣಿ ಇರಬಹುದು, ಇಲ್ಲ ಯುಧ್ಧ ವಿಮಾನ, ಹೆಲಿಕ್ಯಾಪ್ಟರ್, ರಾಡಾರ್ ಇರಬಹುದು, ಇಂದೇನಾದರೂ ನಮ್ಮ ದೇಶದ ಮೇಲೆ ಯಾರೂ ಕಣ್ಣೆತ್ತಿ ಕೂಡ ನೋಡದಂತೆ ಇರಲು, ಭಾರತದ ಮಾತಿಗೆ ಕಿಮ್ಮತ್ತು, ಗೌರವ ಬಂದಿರುವುದು ಸಾಧ್ಯವಾಗಿದ್ದರೆ ಇದೇ ಕಾರಣವಾಗಿಲ್ಲವೇ. ಚಿಕ್ಕೂನಿದ್ದಾಗ ನಾನು ನನ್ನ ಅಪ್ಪಾಜಿ ಈ ಸ್ಯಾಟಲೈಟ್ ಉಡಾವಣೆ ದೂರದರ್ಶನದಲ್ಲಿ ನೋಡಲು ಕೂರುತ್ತಿದ್ದುದು ಇನ್ನೂ ನೆನಪಿದೆ, ಬಹಳ ಖರ್ಚು ಮಾಡಿ ಇದನ್ನು ಮಾಡೀದಾರೆ, ಬಹಳ ಶ್ರಮ ಇದೆ ಇದರ ಹಿಂದೆ, ಹೇಗಾದರೂ ಸಫಲ ಆಗಲಿ ಅಂತ ಆಶಿಸುತ್ತಿದ್ದುದು, ನಾನೇ ಉಡಾವಣೆ ಪೈಲಟ್ಟು ಸೀಟಿನಲ್ಲಿ ಕೂತಷ್ಟು ಆತಂಕಪಟ್ಟದ್ದು ಎಲ್ಲ ಮರುಕಳಿಸುತ್ತದೆ, ಬಹುಶ ಬದ್ಧ ವೈರಿಗಳ ಕ್ರಿಕೆಟ್ಟು ಮ್ಯಾಚು, ಇಲ್ಲ ನನ್ನ ಪರೀಕ್ಷೆ ರಿಜಲ್ಟು ಕೂಡ ಅಷ್ಟು ಕುಕ್ಕರಗಾಲಿನಮೇಲೆ ಕೂತು ನೋಡಿರಲಿಕ್ಕಿಲ್ಲ. ಹೀಗೆ ಹೋದ ಸ್ಯಾಟಲೈಟುಗಳು, ಖನಿಜ ಪತ್ತೆ ಮಾಡಿದವು, ದೂರಸಂಪರ್ಕಕ್ರಾಂತಿ ಮಾಡಿದವು, ಅಂತರ್ಜಲ ಪತ್ತೆ ಹಚ್ಚಿದವು, ಒಂದೇ ಎರಡೇ... ವಿಜ್ಞಾನಿಗಳೇ ವಿಫಲತೆಯೋ ಸಾಫಲ್ಯವೋ ನೀವು ಮುಂದುವರೆಸಿ, ನಾವಿದ್ದೇವೆ ನಿಮ್ಮ ಹಿಂದೆ ಬೆಂಬಲಕ್ಕೆ. ಹ್ಯಾಟ್ಸ ಆಫ್...
ಹೀಗೆ ಮಾತಾಡುತ್ತ ಕೂತವರಿಗೆ, ಸಮಯ ಹೋಗಿದ್ದೆ ಗೊತ್ತಾಗಲಿಲ್ಲ, ಚಂದ್ರನಂತೇ ಅರಳಿತ್ತು ಇವಳ ಬೆಳ್ಳನೇ ಅಕ್ಕಿ ರೊಟ್ಟಿಯಂಥಹ ಮುಖ!, ಸಂಜೆ ಬೆಳದಿಂಗಳ ಚಂದ್ರ ಬರಲು ಇನ್ನೂ ಸಮಯ ಇದ್ರೂ. "ಚಂದ್ರನಂತೆ ಕಂಗೊಳಿಸ್ತಾ ಇದೀಯ, ಚಂದ್ರಯಾನ ಅಂತ ಮತ್ತೊಮ್ಮೆ ಮಧುಚಂದ್ರಕ್ಕೆ ಹೋಗೊಣ ನಡಿಯೇ" ಅಂದರೆ, "ರೀ ಚಂದ್ರನ ಮೇಲೆ ಮಧು(ಹನಿ, ಜೇನು) ಸಿಕ್ಕಿಲ್ಲ, ನೀರು ಸಿಕ್ಕಿದೆ... ಅದಕ್ಕೆ ಜಲಚಂದ್ರಕ್ಕೆ ಹೋಗೋಣ್ವಾ ಅಂತ ಹೇಳಿ" ಅಂದ್ಲು, "ಅದೂ ಸರಿಯೇ ಬಿಡು 'ನೀರುಹನಿ'ಮೂನ್ ಗೇ ಹೊಗೋಣ, ನೀರ ಬಗ್ಗೆ ಮಾತಾಡ್ತಾ ಹೊಟ್ಟೆಗೆ ತಣ್ಣೀರು ಬಟ್ಟೇನೆ ಗತಿಯೋ ಇಲ್ಲ ಏನಾದ್ರೂ ಬೇಯಿಸಿ ಹಾಕ್ತೀಯೊ" ಅಂತ ಕೇಳಿದ್ದಕ್ಕೆ, "ಆಗಲೇ ಹೊಟ್ಟೇ ಹಸಿವಾಯ್ತಾ" ಅಂತ ಚಂದ್ರನಂತೇ ಗುಂಡುಗುಂಡಾಗಿರುವ ಹೊಟ್ಟೆಗೆ ಏಟು ಕೊಟ್ಟು ಪಾಕಶಾಲೆ ಸೇರಿದಳು. ಆಗಲೇ ಧಾರಾಕಾರವಾಗಿ ಮಳೆ ಸುರಿಯತೊಡಗಿತು... "ಮಳೆ ನೀರು ತುಂಬಿಸ್ತೀಯ, ನೀರು ನೀರು ಅಂತಿದ್ದೆಯಲ್ಲ, ಮಳೆ ಹೇಗೆ ಸುರೀತಿದೆ ನೋಡು" ಅಂತ ಕೂಗಿ ಕರೆದೆ, ಅಲ್ಲಿಂದಲೇ "ಆ ನಿಮ್ಮ ಚಂದ್ರನ ಮೇಲಿನ ನೀರು ತುಂಬಿ ತುಳುಕುತ್ತಿರಬೇಕು, ಅದೇ ಬೀಳ್ತಾಯಿದೆಯೇನೊ ನೋಡಿ" ಅಂತ ಮತ್ತೆ ಕೀಟಲೆಗಿಳಿದಳು, ಈ ಪರಿಯ ಮಳೆ ನೋಡಿ, ರೋಡುಗಳಿಲ್ಲ ತುಂಬಿ, ಚರಂಡಿ ಕಿತ್ತು ಬಂದು ಕೊಚ್ಚೆ ಕೊಳೆಯಾಗಿ, ಪ್ರವಾಹವಾಗಿ, ಟ್ರಾಫಿಕ್ಕು ಜಾಮ ಆಗಿ, ಮರಗಳು ಬಿದ್ದು, ಕರೆಂಟು ಹೋಗಿ, ಇಡೀ ಊರಿಗೆ ಗ್ರಹಣ ಹಿಡಿದಂತೆ ಚಂದ್ರನಿಲ್ಲದ ಖಗ್ರಾಸು ಅಮವಾಸ್ಯೆಯಂತೆ ಕತ್ತಲಾದೀತೆನ್ನಿಸಿದರೂ, ಮನಸೇಕೊ ಇನ್ನೂ ಆ ಚಂದ್ರನ ಮೇಲೆ ಕಂಡ ನೀರ ತುಂತುರು ಹನಿಗಳ ಬಗ್ಗೇ ಯೋಚಿಸುತ್ತಿತ್ತು... ಪಕ್ಕದಲ್ಲಿ ಬಂದು ನಿಂತಿದ್ದ ಇವಳಿಗೆ ಎರಡು ಹನಿ ನೀರು ಸಿಡಿಸಿ, ನೀರಾಟಕ್ಕಿಳಿದರೆ... "ನೀರು ದೋಸೆ ಹುಯ್ದು ಕೊಡಲಾ ತಿನ್ನೊಕೆ" ಅಂತ ಕೇಳುತ್ತ ಒಳಗೋಡಿದಳು....
ದಸರಾ ಹಬ್ಬದ ಶುಭಾಷಯಗಳೊಂದಿಗೆ, ನಿಮ್ಮೆಲ್ಲರ ನಾನು ಮತ್ತು ನನ್ನಾk.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/chandra.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, September 27, 2009
ಚಂದ್ರನಿಂದ ನಲ್ಲಿ ಕನೆಕ್ಷನ್!
Sunday, September 20, 2009
ನಾ ಸತ್ತು ಹೋದರೆ?
"ಈ ಹಾಳು ಪೇಪರಿನವರಿಗೆ ಕೊಡಲು ಬೇರೆ ಸುದ್ದೀನೇ ಇಲ್ವೇನೊ, ಬರೀ ಅಲ್ಲಿ ಅಷ್ಟು ಜನ ಸತ್ತರು, ಇಲ್ಲಿ ಕೊಲೆ ಆಯ್ತು, ಮತ್ತೆ ಬಿಟ್ಟರೆ ಆತ್ಮಹತ್ಯೆಗಳು ಇದೇ ಸುದ್ದಿ, ಮುಂಜಾನೆ ಮುಂಜಾನೆ ಇದನ್ನ ನೋಡಿ ಎದ್ದೇಳಬೇಕೇನೊ" ಅಂತ ವಟಗುಡುತ್ತ ಪೇಪರು ಬೀಸಾಕಿ ಮೇಲೆದ್ದಳು, ಸತ್ತ ಹೆಣದಂತೆ ಥೇಟ್ ಶವಾಸನ ಹಾಕಿ ಬಿದ್ದುಕೊಂಡಿದ್ದ ನನಗೆ ಒಮ್ಮೆಲೆ ಜೀವ ಬಂದಂತಾಯಿತು, "ಏನಾಯ್ತು" ಅಂತ ಅವಳನ್ನು ತಡೆದೆ, "ಒಹ್ ಏನು ಬೇಗ ಎಚ್ಚರಾಗಿದೆ, ಏನಿಲ್ರೀ, ಪೇಪರು ಸುದ್ದಿ ನೋಡೊಣ ಅಂತ ತೆರೆದರೆ ಸಾಕು, ಬರೀ ಅವೇ ಸುದ್ದಿ ಅದಕ್ಕೆ ಹಾಗಂದೆ, ಈಗಂತೂ ಈ ಹಂದಿಜ್ವರದಿಂದ ಸಾಯೋರ ಅಂಕಿಅಂಶಗಳೇ ಪೇಪರು ತುಂಬ, ದಿನ ಸಾಯೋರಿಗೆ ಅಳೋರು ಯಾರು ಅನ್ನೊ ಹಾಗೆ ತೀರಾ ಸಾಮಾನ್ಯ ಆಗಿಬಿಟ್ಟಿದೆ" ಅಂದ್ಲು, "ಅದೇನೊ ಕೇಳಿದ್ದೀನಿ ಮೊದಲೆಲ್ಲ ಪ್ಲೇಗ ಎಲ್ಲಾ ಬಂದು ಊರಿಗೆ ಊರೇ ಖಾಲಿ ಆಗ್ತಿದ್ವಂತೆ, ಅಳೋರು ಬಿಡು ಹಿಡಿ ಮಣ್ಣು ಹಾಕೋರೂ ಯಾರೂ ಇರ್ತಿರಲಿಲ್ಲ ಅಂತೆ. ಒಂದು ವೇಳೆ ನಾ ಸತ್ತು ಹೋದರೆ?..." ಮುಂದೇನೂ ಬಾಯಿ ಬಿಡದಂತೆ ಗಟ್ಟಿಯಾಗಿ ಮುಚ್ಚಿದಳು, "ಬಿಟ್ತು ಅನ್ನಿ, ಏನಂತ ಮಾತು ಆಡ್ತೀರ, ಅಪಶಕುನ ಅದೂ ಮುಂಜಾನೆ..." ಅಂತ ಬಯ್ದು ಎದ್ದು ಹೋದಳು... ನಾನೂ ಎದ್ದು ಹಿಂಬಾಲಿಸಿದೆ, "ನಾ ಸತ್ತು ಹೋದರೆ..." ಅಂತನ್ನುತ್ತ...
ಮುಖ ತೊಳೆದುಕೊಂಡು ಬಂದು ನನ್ನೇ ದುರುಗುಟ್ಟಿ ನೋಡುತ್ತ ದೇವರ ಮುಂದೆ ದೀಪ ಹಚ್ಚಿಟ್ಟು ಕಣ್ಣು ಮುಚ್ಚಿ ಏನೊ ಬೇಡಿಕೊಂಡು ಬಂದಳು, "ಅಲ್ಲ ನಾ ಎನ್ ಹೇಳ್ತ ಇದ್ದೆ ಅಂದ್ರೆ, ನಾ..." ಅಂತಿದ್ದಂಗೆ... "ರೀ ಆ ವಿಷಯ ಎತ್ತಿದ್ರೆ ಕೊಂದ ಹಾಕ್ತೀನಿ ಇನ್ನ್" ಅಂತ ಜಬರಿಸಿದಳು ನಸು ನಗುತ್ತ ಹಲ್ಲುಜ್ಜಲು ನಡೆದೆ, "ಎನು ನಗ್ತೀರ?" ಅಂತ ಮತ್ತೆ ಕೆದಕಿದಳು, "ನೀ ಕೊಂದು ಹಾಕಿದರೆ ನಾ ಸತ್ತು ಹೋಗ್ತೀನಿ ಅದಕ್ಕೆ ನಗು ಬಂತು" ಅಂದೆ, ಅವಳಿಗೂ ತಾನು ಸಿಟ್ಟಿನ ಭರದಲ್ಲಿ ಏನು ಹೇಳಿದೆ ಅಂತ ಗೊತ್ತಾಗಿ ನಗು ಬಂತು, ಹಾಗೇ ಮುಗುಳ್ನಗುತ್ತ "ಆ ಸುದ್ದಿ ಇನ್ನು ಎತ್ತಿದರೆ ನೋಡಿ ನನ್ನ ಮೇಲಾಣೆ" ಅಂತಂದು ಮುಚ್ಚಿಹಾಕಲು ನೋಡಿದಳು, ಮತ್ತೆ ಮಾಮೂಲಿ ಅದೇ ವಿಷಯಕ್ಕೇ ಬಂದೆ "ನಾ ಆಣೆ ಪಾಲಿಸದೇ ನೀ ಸತ್ತು ಹೋದರೆ?"(ಆಣೆ ಪ್ರಮಾಣ ಪಾಲಿಸದಿದ್ದರೆ ಆಣೆ ಯಾರ ಮೇಲೆ ಹಾಕಿರುತ್ತೆವೊ ಅವರು ಸತ್ತು ಹೋಗ್ತಾರಂತೆ, ನಾನಂತೂ ಪ್ರಯೋಗ ಮಾಡಿ ನೋಡಿಲ್ಲ ಬಿಡಿ, ಮಾಡಬೇಕೆಂದರೂ ಯಾರೂ ಸಿಕ್ಕಿಲ್ಲ!) ಈಗಂತೂ ಬಹಳೆ ಕಿರಿಕಿರಿ ಆಯ್ತು ಅಂತ ಕಾಣುತ್ತದೆ, ಕಸ ಗುಡಿಸಲು ಪೊರಕೆ ಹಿಡಿದು ನಿಂತಿದ್ದವಳು "ರೀಈಈಈ... ಇದಕ್ಕೆ ಪೊರಕೆ ಅಂತಾರೆ ಗೊತ್ತಲ್ವಾ... ಕಸ ಗುಡಿಸೋದು ಅಷ್ಟೇ ಅಲ್ಲ ಬೇರೇನೂ ಉಪಯೋಗ ಆಗ್ತದೆ, ಇದರಲ್ಲೇ ನಾಲ್ಕು ಕೊಡ್ತೀನಿ ಈವಾಗ" ಅಂತ ಹೆದರಿಸಿದಳು... "ಹ್ಮ್... ಎರದೇಟು ಜೋರಾಗಿ ಕೊಟ್ಟು ನಾ ಸತ್ತು ಹೋದರೆ?" ಅಂದೆ ಅವ್ಳು ನನ್ನೆಡೆಗೇ ಬರುವ ಹಾಗೆ ಕಾಣಿತು, ನಿಜಕ್ಕೂ ಪೊರಕೆ ಪೂಜೆ ಆದೀತು ಅಂತ ಬಾತ್ರೂಮ್ ಒಳಗೋಡಿ ಬಾಗಿಲು ಹಾಕಿಕೊಂಡೆ, ಬಂದು ಬಾಗಿಲು ಬಾರಿಸಿ "ಎನ್ ದಿನ ಪೂರ್ತಿ ಅಲ್ಲೇ ಇರ್ತೀರಾ, ಬನ್ನಿ ಹೊರಗೆ... ತಿಥಿ ಮಾಡ್ತೀನಿ" ಅಂದ್ಲು "ಲೇ ಸತ್ತ ಮೇಲೆ ತಿಥಿ ಮಾಡೊದಲ್ವಾ" ಅಂತ ಅಲ್ಲಿಂದಲೇ ಕೂಗಿದೆ. ಬಾಗಿಲು ಜೋರಾಗಿ ಕುಟ್ಟಿ ಹೊರಟುಹೋದಳಂತೆ ಕಾಣುತ್ತದೆ, ಹೊರಹೋದರೆ ನನ್ನ ತಿಥಿಯಾಗುವುದು ಗ್ಯಾರಂಟಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಲ್ಲುಜ್ಜಿ ಮುಖ ತೊಳೆದು ನಿಧಾನವಾಗಿ ಬಾಗಿಲು ತೆರೆದು ಸ್ವಲ್ಪ ಇಣುಕಿ ನೋಡಿದೆ ಅಲ್ಲೇ ನಿಂತಿದ್ದಾಳೊ ಹೇಗೆ ಅನ್ನೊ ಹಾಗೆ. ಅದೋ ದೂರದಲ್ಲಿ ಕಸ ಗುಡಿಸುವ ಸದ್ದಾಗುತ್ತಿತ್ತು, ನಿಧಾನಕ್ಕೆ ಅಲ್ಲಿ ಹೋಗಿ ಹಿಂದಿನಿಂದ, ಕೈಗಳೆರಡೂ ಬಿಡಿಸಲಾಗದ ಹಾಗೆ ಬಾಚಿ ತಬ್ಬಿಕೊಂಡೆ, ಕೊಸರಾಡಿದಳು ಬಿಡಿಸಿಕೊಳ್ಳಲು, ಹಿಡಿತ ಸಡಲಿಸಲಿಲ್ಲ "ರೀ ಈಗ್ ಬಿಡ್ತಿರೋ ಇಲ್ವೊ" ಅಂತ ಕೇಳಿದಳು "ಏಟು ಕೊಡಲ್ಲ ಅಂತ ಆಣೆ ಮಾಡು ಬಿಡ್ತೀನಿ" ಅಂದ್ರೆ "ಆಣೆ ಪ್ರಮಾಣ ಮಾಡಿ ಮುರಿದು ಹಾಕೋ ಮನಸಿಲ್ಲ" ಅಂದ್ಲು, ಒಟ್ಟಿನಲ್ಲಿ ಏಟು ಗ್ಯಾರಂಟಿ ಅಂತನ್ನೊ ಹಾಗೆ. ಕೈಬಿಟ್ಟು ಓಟಕ್ಕಿತ್ತೆ, ಓಡಾಡಿಸಿ ಬರಿಗೈಯಲ್ಲೇ ಏಟು ಕೊಟ್ಟಳು, ಓಡಿ ಸುಸ್ತಾಗಿ ಎದೆ ಹಿಡಿದುಕೊಂಡು ಏದುಸಿರುಬಿಡುತ್ತ ಕೂತೆ, ಒಮ್ಮೆಲೇ ಗಾಬರಿಯಾದಳು. "ಏನಾಯ್ತು" ಅನ್ನುತ್ತ ಎದೆ ನೀವಿ, ಕೈಗೆ ಲೋಟ ನೀರಿತ್ತಳು, "ಏನಿಲ್ಲ ಬರೀ ಕೂತು ಕೆಲ್ಸ ಮಾಡೊನು ಹೀಗೆ ಒಮ್ಮೆಲೆ ಓಡಾಡಿದರೆ ಏನಾಗಬೇಡ, ಸುಸ್ತಾಗಿ ಕೂತೆ ಅಷ್ಟೇ... ಹಾರ್ಟ್ ಅಟ್ಯಾಕ ಎನಾದ್ರೂ ಆಗಿ ಸತ್ತು ಹೋಗ್ತೀನಿ ಅಂದುಕೊಂಡ್ಯಾ" ಅಂತಂದೆ. "ಈ ಸುಡುಗಾಡು ಪೇಪರು ಸುಟ್ಟು ಬರೋವಷ್ಟು ಸಿಟ್ಟು ಬರ್ತಿದೆ, ಎಲ್ಲ ಅದ್ರಿಂದಲೇ ಶುರುವಾಗಿದ್ದು" ಅಂತ ಸಿಡುಕಿದಳು "ಸುಡುಗಾಡು ಶವ ಸುಡೊಕಲ್ವೇ" ಅಂತ ಮತ್ತೆ ವಿಷಯಕ್ಕೆ ಮರಳಿದೆ. ನಾನಂತೂ ಈ ವಿಷಯ ಅಲ್ಲಿಗೇ ಬಿಡೊದಿಲ್ಲ ಅನ್ನೋದು ಅವಳಿಗೂ ಖಾತ್ರಿ ಆಯ್ತು, "ಅಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಸತ್ತು ಹೋಗೊ ವಿಷಯದ ಚಿಂತೆ ಯಾಕೆ?" ಅಂತ ಸಮಚಿತ್ತದಿಂದ ನುಡಿದಳು, ನನಗೂ ಅವಳು ಭಾವುಕತೆ ಬಿಟ್ಟು ವಾಸ್ತವಿಕವಾಗಿ ಮಾತಾಡುವುದೇ ಬೇಕಿತ್ತು. "ಮತ್ತೆ ಯಾವ ಹೊತ್ತಲ್ಲಿ ಮಾತಾಡೋಣ ಹೇಳು" ಅಂದೆ. ಪೊರಕೆ ಬೀಸಾಕಿ ಪಕ್ಕ ಬಂದು ಕೂತಳು, ಹೇಳು ಮಹರಾಯ ನಿನ್ನದೂ ಈಗಲೇ ಆಗಲಿ ಅಂತನ್ನೊ ಭಾವದಲ್ಲಿ.
"ಹೊತ್ತಲ್ಲದ ಹೊತ್ತಲ್ಲಿ ಅಂತ ಏನಿದೆ, ಯಮರಾಯ ಏನು ಹೇಳಿ ಕೇಳಿ ಮಹೂರ್ತ ತೆಗೆಸಿಟ್ಟುಕೊಂಡು, ವೀಕೆಂಡು ಫ್ರೀ ಇದೀಯಾ ಬರ್ತಾ ಇದೀನಿ ಅಂತ ಅಪಾಯಿಂಟಮೆಂಟ ತೆಗೆದುಕೊಂಡಾ ಬರ್ತಾನೇ" ಅಂದೆ, ನಸುನಗುತ್ತ "ಸಾಯೋಕೂ ಪುರೊಸೊತ್ತಿಲ್ಲದ ಸಾಫ್ಟವೇರ ಇಂಜನೀಯರಗಳು ನೀವು, ವೀಕೆಂಡೂ ಕೇಳಿಕೊಂಡೆ ಬರಬೇಕೇನೊ ಯಮ, ಹಾಗೇನಾದ್ರೂ ಬಂದರೆ ನನ್ನಾಕೆ ಹತ್ರ ಕೇಳು ಅಂತ ಕಳಿಸಿ, ನಾಳೆ ಅಲ್ಲ ನಾಡಿದ್ದು ಬಾ ಅಂತ ಅವನನ್ನೇ ಓಡಾಡಿಸಿ ಸೋತು ಸತ್ತು ಹೋಗುವಂತೆ ಮಾಡುತ್ತೇನೆ" ಅಂತ ಕಿಚಾಯಿಸಿದಳು. ಕೊಲ್ಲಲು ಬರುವ ಯಮನನ್ನೇ ಕೊಲ್ಲುವ ಯೋಚನೆ ಇವಳ್ದು ಒಳ್ಳೇ ಕ್ರಿಮಿನಲ ಐಡಿಯಾ... "ಹ್ಮ್ ಅದು ಬಿಡು ನಾ ಸತ್ತು ಹೋದರೆ ಅಳ್ತೀಯಾ" ಅಂದೆ "ಮತ್ತಿನ್ನೇನು" ಅಂದವಳ ಕಣ್ಣಾಲಿಗಳು ಆಗಲೇ ತುಂಬಿಕೊಂಡಿದ್ದವು, "ಆದ್ರೆ ನಿಜವಗ್ಲೂ ಅಳಬೇಕಾ?" ಅಂದ್ರೆ ಏನು ಇಂಥ ಎಡವಟ್ಟು ಪ್ರಶ್ನೇ ಅನ್ನೊ ಹಾಗೆ ನೋಡಿ, "ದುಖಃ ಅದರೆ ಅಳು ಬಂದೆ ಬರುತ್ತೇ" ಅಂದ್ಲು, "ಹಾಗಾದ್ರೆ ಎಷ್ಟು ದಿನ ಅಳ್ತೀಯಾ?" ಅಂದೆ "ಇನ್ನೇನು ಜೀವನ ಪೂರ್ತಿ ಅಳಕೊಂಡು ಕೂರೊಕಾಗುತ್ತಾ, ಕೆಲವು ದಿನ, ಆಮೇಲೆ ಮತ್ತೆ ಎಲ್ಲ್ ಮಾಮೂಲಿ ಆಗತ್ತೆ" ಅಂದ್ಲು. ಅವಳ ನಿರ್ಭಿಡೆಯ ಸತ್ಯವಾದ ಉತ್ತರ ಕೇಳಿ ಖುಷಿಯಾಯ್ತು, ಸ್ವಲ್ಪ ಹೊತ್ತು ಏನೊ ಯೋಚಿಸಿದವರಂತೆ ಮಾಡಿ "ರೀ ನೀವೇ ಇಲ್ಲದ ಮೇಲೆ ನಾನೇನು ಮಾಡ್ಲಿ ಇಲ್ಲಿ, ನಿಮಗೆ ಹೇಗೂ ಟಿಕೆಟ್ ಕೊಟ್ಟ ದೇವರಿಗೆ, ಅದರೊಂದಿಗೆ ನನಗೂ ಒಂದು ಫ್ರೀ ಟಿಕೆಟ್ ಕೊಟ್ಟು ಬಿಡು ಅಂತ ಕೇಳ್ತೀನ್ರಿ" ಅಂತಂದ್ಲು "ಲೇ ನೀ ಸ್ವಲ್ಪ ಲೇಟಾಗಿ ಬಾರೇ, ನಾನು ಹೋಗಿ ಸ್ವಲ್ಪ ಸ್ವರ್ಗ ಎಂಜಾಯ್ ಮಾಡ್ತೀನಿ" ಅಂದೆ, "ಸ್ವರ್ಗಕ್ಕೆ ಹೋಗ್ತೀರಿ ಅಂತ ಎನು ಗ್ಯಾರಂಟಿ, ನರಕಕ್ಕೇ ಹೋದ್ರೆ", "ಏಯ್ ನನ್ನ ಸ್ವರ್ಗದ ಕನಸುಗಳಿಗೆ ಕಲ್ಲು ಹಾಕಬೇಡ ಕಣೇ, ಇಂದ್ರ ನನ್ನ ಲೇಖನ ಓದಿಯಾದ್ರೂ ಪ್ರಭಾವಿತನಾಗಿ ಅಲ್ಲೇ ಕರಿಸಿಕೊಳ್ತಾನೆ ಅನ್ನೊ ಅಶಾಭಾವನೆ ಇದೆ ನಂಗೆ, ಒಂಥರಾ ಇಂದ್ರನ ಅಸಿಸ್ಟೆಂಟ ಹುದ್ದೆ ಕಬಳಿಸೊ ಯೋಚನೆ ಇದೆ, ಅವನ ಜತೆ ನಾನೂ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಸುರಾಪಾನ ಸುಧೆ ಹೀರುತ್ತ, ಗಂಧರ್ವರ ಹಾಡಿಗೆ ಕಾಲು ಕುಣಿಸುತ್ತ, ನರ್ತಿಸುತ್ತಿರುವ ರಂಭೆ ಮೇನಕೆ ಊರ್ವಶಿಯರನ್ನು ನೋಡುತ್ತ... ಆಹಾಹಾ" ಅಂತ ಕಲ್ಪನಾ ಲೋಕದಲ್ಲಿದ್ದರೆ, "ಅದಕ್ಕೇ ಏನೊ ಸಾಹೇಬ್ರಿಗೆ ಸಾಯೋ ಯೋಚನೆ ಬಂದಿದ್ದು, ದೇವರೇ, ಮೇಲೆ ಕರಿಸಿಕೊಂಡ ಮೇಲೆ, ಹಿಡಂಬೆ, ಮಂಥರೆ, ಶೂರ್ಪನಖಿಯರ ಸೆಲ್‌ನಲ್ಲೇ ಇವರನ್ನೂ ಕೂಡಿ ಹಾಕು" ಅಂತ ಆಕಾಶದತ್ತ ನೋಡಿ ಬೇಡಿಕೊಂಡಳು. "ಎಲ್ರೂ ಗಂಡನಿಗೆ ಒಳ್ಳೇದಾಗಲಿ ಅಂತ ಬೇಡಿಕೊಂಡರೆ ನೀನೇನೊ" ಅಂತ ಬೇಜಾರಾದ್ರೆ. "ರೀ ನಿಜಕ್ಕೂ ಸ್ವರ್ಗ ಅಂತಿದೆಯಾ?" ಅಂತ ಕೇಳಿದಳು ಕಣ್ಣರಳಿಸಿಕೊಂಡು. "ಅಲ್ಲಿದೆಯೋ ಇಲ್ವೊ ನಂಗೂ ಗೊತ್ತಿಲ್ಲ ಬಿಡು ಎಕ್ಸಪೀರಿಯನ್ಸ ಇಲ್ಲ ನೋಡು, ಇದ್ರೆ ಏನು ಪಿಕನಿಕ ಅಂತ ಹೋಗೋಕಾದ್ರೂ ಆಗುತ್ತಾ ಅದೂ ಇಲ್ಲ" ಅಂದೆ "ಎನು ಸ್ವರ್ಗನೊ ಎನೊ, ಸತ್ತರೆ ಸ್ವರ್ಗ ಬೇಕು ಎಲ್ರಿಗೂ, ಆದ್ರೆ ಸಾಯೋದು ಬೇಡ" ಅಂತ ವೇದಾಂತ ನುಡಿದಳು. "ಅಲ್ಲಿನೇ ಸ್ವರ್ಗ ಅಂತ ಯಾಕೆ ಅನ್ಕೊಬೇಕು, ಇಲ್ಲಿನೇ ಸ್ವರ್ಗ ಇಲ್ವಾ, ನೀನಿರುವ ನನ್ನ ಜೀವನ ಸ್ವರ್ಗನೇ ಆಗಿದೆ ಅಲ್ಲ" ಅಂತ ಪುಸಲಾಯಿಸಿದೆ. "ಮಹಾಪ್ರಭುಗಳೇ ಸುರಾಪಾನ ಬೇಕಾ" ಅಂತಂದಳು. "ಇಲ್ಲ ಸಧ್ಯ ಚಹಾಪಾನ ಸಾಕು" ಅಂದೆ ಚಹ ಮಾಡಲು ಮೇಲೆದ್ದಳು. ರಾಗವಾಗಿ "ನಯನ ಮನೋಹರಿ, ನಾಟ್ಯಮಯೂರಿ, ನನ್ನಾಕೆ... ನನಗ್ಯಾಕೆ ಆ... ಮೇನಕೆ... ರಂಭೆ ಊರ್ವಶಿ.. ಬೇಕೆ" ಅಂತ ಹಾಡುತ್ತಿದ್ದರೆ "ಇಲ್ಲೇ ಇದೆ ಇನ್ನೂ ಪೊರಕೆ... ಇನ್ನೆರಡು ಏಟು ಬೇಕೆ" ಅಂತ ಪೂರ್ಣಗೊಳಿಸುತ್ತ ಹಂಸ ನಡಿಗೆಯಲ್ಲಿ ಹೆಜ್ಜೆ ಹಾಕುತ್ತ ನಡೆದಳು.
ಚಹ ಹೀರುತ್ತ ಕೂತಿದ್ದವನಿಗೆ ಅವಳ ಪ್ರಶ್ನೇ ತೂರಿ ಬಂತು "ರೀ ಮುತ್ತೈದೇ ಸಾವು ಅಂತ, ನಾನೇ ಮೊದಲು ಸತ್ತು ಹೋದರೆ, ಮತ್ತೆ ಮದುವೆ ಆಗ್ತೀರ" ಅಂದ್ಲು. "ಆಗ ಪಕ್ಕದಮನೆ ಪದ್ದು ನನ್ನ ಮದುವೆ ಆಗ್ತಾಳೆ ಅಂತೀಯಾ" ಅಂದೆ. "ರೀ ಪದ್ದುಗೆ ಮದುವೆ ಆಗಿದೆ, ಅವಳೆಲ್ಲಿ ಆಗಬೇಕು" ಅಂದ್ಲು, "ಛೇ ಹೌದಲ್ವಾ, ಮತ್ತಿನ್ಯಾರು ಆಗ್ತಾರೆ ಬಿಡು" ಅಂದೆ. "ನಮ್ಮ ನರ್ಸ ನರ್ಗೀಸ್ ಕೇಳಿದ್ರೆ, ನಾನೇ ಬೇಕಾದ್ರೆ ಮಾತಾಡ್ತೀನಿ" ಅಂದ್ಲು, ಈಗಲೇ ಇನ್ನೊಂದು ಮದುವೆ ಮಾಡಿ ಬಿಡ್ತಾಳೆ ಅನ್ನೋ ಹಾಗಿತ್ತು. "ಲೇ ನಿನ್ನಂಥಾ ಹುಡುಗಿ ನನಗೆಲ್ಲೇ ಸಿಕ್ತಾಳೆ, ಒಂದು ವೇಳೆ ನಾನಿಲ್ಲ ಅಂದ್ರೆ ನೀನು ಬೇರೆ ಮದುವೆ ಆಗ್ತೀಯಾ" ಅಂದೆ, "ಅದನ್ನೆಲ್ಲ ಸಮಾಜ ಒಪ್ಪಲ್ಲ ಬಿಡಿ, ನೋಡು ಹೇಗೆ ಬೇರೆ ಮದುವೆ ಆದ್ಲು ಅಂತ ನಗಾಡತ್ತೇ" ಅಂದ್ಲು. "ಒಹೊ ಹಾಗಾದ್ರೆ ಹುಡುಗ ಮಾಡಿದ್ರೆ ತಪ್ಪಲ್ಲ, ಹುಡುಗಿ ಮಾಡಿದ್ರೆ ತಪ್ಪಾ" ಅಂದೆ. "ಸಮಾಜ ಇನ್ನೂ ಅಷ್ಟು ವಿಕಸಿತವಾಗಿಲ್ಲ" ಅಂದ್ಲು, "ಆಗಬೇಕು, ಯಾಕೇ ಯಾವುದೊ ಹುಡುಗಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದ್ರೆ ಕರ್ಮ ಅಂತ ಹಾಗೇ ಇರಬೇಕು, ಅವಳಿಗೂ ಆಸೆ ಆಕಾಂಕ್ಷೆ ಅಂತ ಇಲ್ವಾ, ಅವಳು ಎಷ್ಟು ದಿನ ಅಳಬೇಕು, ಎಷ್ಟು ದಿನದ ಮೇಲೆ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಬೇಕು, ಅಂತ ಈ ಸಮಾಜ ಯಾಕೆ ನಿರ್ಧರಿಸಬೇಕು, ವಿಧುರರು ಯಾಕೆ ಅಂಥವರ ಕೈ ಹಿಡಿಯಬಾರದು, ಸಮಾಜ ಕೂಡ ಬದಲಾಗ್ತಿದೆ, ಬದಲಾಗತ್ತೆ, ನಿಜಕ್ಕೂ ಒಳ್ಳೇ ಜೋಡಿ ಸಿಕ್ಕರೆ ಮದುವೆಯಾದರೆ ತಪ್ಪೇನಿದೆ" ಅಂದೆ. "ಹಾಗಾದಾಗ ನೋಡೋಣ ಬಿಡಿ, ಅಲ್ದೇ ಮಕ್ಕಳು ಎಲ್ಲ ಇದ್ರೆ ಇನ್ನೂ ತೊಂದ್ರೆ" ಅಂದ್ಲು, "ಅದೂ ಸರಿ, ಮಕ್ಕಳಿದ್ರೆ ಅವರ ಬಗ್ಗೆಯೂ ಯೋಚಿಸಬೇಕಾಗ್ತದೆ, ಅದ್ರೆ ಅವೆಲ್ಲ ಮೀರಿ, ಸಾಧ್ಯವಿದ್ದರೆ ಯಾಕಿಲ್ಲ, ಒಳ್ಳೆ ಜೋಡಿ ಸಿಕ್ರೆ ನೀನು ಮದುವೆ ಆಗ್ತೀನಿ ಅಂತ ಆಣೆ ಮಾಡು" ಅಂದೆ. "ನಿಮ್ಮೇಲೆ ಆಣೆ ಮಾಡಿದ್ರೆ ಏನು ಬಂತು ಸತ್ತೇ ಹೋದ ಮೇಲೆ, ಇನ್ನು ನನ್ನ ಮೇಲೆ ನಾ ಆಣೆ ಮಾಡಿಕೊಂಡು, ಪಾಲಿಸದೆ ನಾ ಸತ್ತು ಹೋದ್ರೆ, ಅದಕ್ಕೇ ಎನೂ ಬೇಡ, ಆದ್ರೆ ನೀವು ಹೇಳಿದ್ದು ಸರಿ ಒಪ್ಕೊತೀನಿ, ಇಂಥದ್ದೇ ತರಲೆ ತುಂಟ ಸಿಕ್ರೆ ಆಗ್ತೀನಿ ಆಯ್ತಾ" ಅಂದ್ಲು. ಎಷ್ಟೊ ಹೊತ್ತು ಮಾಡಿಸಿರುವ ಪಾಲಸಿಗಳು, ಬ್ಯಾಂಕ ಅಕೌಂಟಗಳು ಎಲ್ಲ ಮಾಹಿತಿ ನೀಡುತ್ತಿದ್ದೆ, ನಾನಿಲ್ಲದಿದ್ರೆ ಯರ್ಯಾರು ಎನು ಹೆಲ್ಪ ಮಾಡಬಹುದು, ಯಾರ್ಯಾರಿಗೆ ಏನು ಕೇಳಬಹುದು ಎಲ್ಲ ಮಾಹಿತಿ ಮನವರಿಕೆ ಮಾಡಿಕೊಟ್ಟೆ, ಸುಮ್ಮನೇ ಕೇಳುತ್ತಿದ್ಲು, ತಲೆಗೆ ಎಷ್ಟು ಹೋಯಿತೊ ಗೊತ್ತಿಲ್ಲ.
ಒಂದಿಲ್ಲೊಂದು ದಿನ ಸತ್ತು ಹೋಗೊದು ನಿಜವೇ ಆದ್ರೂ ಇಂದೇ ಆ ಬಗ್ಗೆ ಯೋಚಿಸಲೂ ಹಿಂದೇಟು ಹಾಕುತ್ತೇವೆ, ಯಾರಿಗೆ ಗೊತ್ತು ಯಾವ ಮುಸುಕಿನ ಜಾವದಲ್ಲಿ ಜವರಾಯನ ಕರೆಗೆ ಓಗೊಡಬೇಕಾಗುತ್ತದೋ ಏನೊ. ಇರುವಷ್ಟು ದಿನ ಎಲ್ಲ ಸರಿಯಾಗೇ ಇರುತ್ತದೇ, ನಮ್ಮ ಮೇಲೆ ಅವಲಂಬಿತರಾಗಿರುವವರ ಬಗ್ಗೆ ಇರುವಾಗಲೇ ಯೊಚಿಸುವುದೊಳಿತು, ಹಾಗಂತ ನಾನೇನು ಇನ್ಸೂರನ್ಸ ಕಂಪನಿ ಏಜೆಂಟ್ ಆಗಿದ್ದೇನೆಂದು ತಿಳಿಯಬೇಡಿ!, ಬರೀ ಆರ್ಥಿಕವಾಗಿ ಅಂತೇ ಅಲ್ಲ ಮಾನಸಿಕವಾಗಿ ಕೂಡ ಅವರಿಗೆ ಆಗಬಹುದಾದ ಎಲ್ಲವನ್ನೂ ಯೋಚಿಸಿ ಎಲ್ಲದಕ್ಕೂ ಪ್ಲಾನ ಮಾಡಿದ್ದರೆ ಒಳ್ಳೇದೆ ಅಲ್ವಾ. ನಾ ಸತ್ತು ಹೋದರೆ ಅಂತ ಒಮ್ಮೆ ಯೋಚಿಸಿ ಮುಂದಾಗಬಹುದಾದ ಎಲ್ಲ ಘಟನೆಗಳ ಬಗ್ಗೆ ಕ್ರಮ ಅಗತ್ಯ ಅಂತ ನನ್ನನಿಸಿಕೆ.
ರಾತ್ರಿ ಊಟ ಮಾಡಿ ಮಲಗಿದಾಗಲೂ ಅದೇ ಯೋಚನೆಗಳು ಇನ್ನೂ ತಲೆಯಲ್ಲಿದ್ದವು, "ರೀ ನಾ ಸತ್ತು ಹೋಗಿ ಮೋಹಿನಿ ಆಗಿ ಬಂದು ನಿಮ್ಮನ್ನ ಕಾಡಿದರೆ" ಅಂದ್ಲು, "ಹ್ಮ್ ಹಾಡು ಹಾಡ್ತಾ ಬಿಳಿ ಸೀರೆ ಉಟ್ಕೊಂಡು... ಗೆಜ್ಜೆ ಸದ್ದು ಮಾಡ್ತಾ ಹೋಗ್ತಾ ಇದ್ರೆ... ಲೇ ಹಾಗೇನಾದ್ರೊ ಅದ್ರೆ ನೀನು ಬಿಳಿ ಸೀರೆ ಹಾಕೋಬೇಡ, ನಂಗೆ ಈ ತಿಳಿ ನೀಲಿ ಇಷ್ಟ ಆ ಸೀರೇನೇ ಹಾಕೊ ಒಕೇನಾ" ಅಂದೆ "ರೀ ಅದು ಮೋಹಿನಿ, ಬಿಳಿ ಸೀರೆನೇ ಹಾಕೋದು, ಏನೊಪ್ಪಾ ಬೇಕಿದ್ರೆ ನಿಮ್ಗೆ ಅಂತ ನೀಲಿ ಬಾರ್ಡರ್ ಇರೋ ಬಿಳಿ ಸೀರೆ ಹಾಕೋತೀನಿ ಆಯ್ತಾ" ಅಂದ್ಲು. ಮೋಹಿನಿ ಮಾತಾಡಲು ಬಿಟ್ರೆ ಮಾತಾಡ್ತಾನೇ ಇರ್ತಾಳೆ ಅಂತ... "ಅದೋ ಅಲ್ಲಿ ಬಾಗಿಲ ಮರೆಯಲ್ಲಿ ಯಾರೊ ನಿಂತ ಹಾಗೆ ಕಾಣಿಸ್ತಾ ಇದೆ ಅಲ್ವಾ, ದೆವ್ವ ಎನಾದ್ರೂ... " ಅಂತಿದ್ದಂಗೇ, ನಿಧಾನಕ್ಕೆ ಸರಿದು ನನ್ನೆಡೆಗೆ ಬಂದು ಅವುಚಿಕೊಂಡು ಮಲಗಿದಳು, "ಅದೊ ನೋಡು ನಮ್ಮೆಡೆಗೇ ಬರ್ತಾ ಇರ್‍ಒ ಹಾಗೆ ಕಾಣ್ತಿದೆ" ಅಂದೆ. ಇನ್ನಷ್ಟು ಹತ್ತಿರವಾದಾಳು ಹೆದರಿ ಅಂತ. "ಯಾರೂ ಇಲ್ಲ ಅಲ್ಲಿ ನನ್ನೇ ಹೆದರಿಸ್ತೀರಾ" ಅಂತನ್ನುತ್ತ ತಳ್ಳಿದಳು... ಹಾಗೆ ನಿದ್ರೆ ಹೋದವನಿಗೆ ಸ್ವಲ್ಪ ಹೊತ್ತಿನಲ್ಲಿ "ತಂಗಾಳಿಯಲ್ಲಿ ನಾನು ತೇಲಿ ಬಂದೆ, ನಿನ್ನನ್ನು ಪ್ರೀತಿಯಿಂದ ಸೇರಲೆಂದೇ.. ಓ ಇನಿಯಾ... ನನ್ನನ್ನು ಸೇರಲೂ ಬಾ..." ಅಂತ ಹಾಡುವುದು ಕೇಳಬೇಕೇ... ಇವಳು ಎಲ್ಲಿ ನಿಜವಾಗಿಯೂ ಮೋಹಿನಿ ಆದಳೋ ಅಂತ ಹೆದರಿ ಬೆವರಿದೆ, ಪಕ್ಕದಲ್ಲಿದ್ದವಳ ಕೈ ಗಟ್ಟಿಯಾಗಿ ಹಿಡಿದೆ... "ಲೇ ಮೋಹಿನಿ" ಅಂತ ಚೀರಿದೆ... "ರೀ ಮೋಹಿನಿನೂ ಇಲ್ಲ ಏನೂ ಇಲ್ಲ, ಅದು ನನ್ನ ಮೊಬೈಲ್ ರಿಂಗಟೋನು" ಅಂತನ್ನುತ್ತ ಯಾರು ಇಷ್ಟೊತ್ತಿನಲ್ಲಿ ಫೋನು ಮಾಡುತ್ತಿರುವವರು ಅಂತ ನೋಡಲೆದ್ದಳು. ಒಂದು ಕ್ಷಣ ಹೆದರಿ ಸತ್ತೇ ಹೋಗಿದ್ದೆ ಅನಿಸುತ್ತಿತ್ತು.
ಈ ಲೇಖನ ಓದಿ ಯಾರಾದ್ರೂ ಹೀಗೆ ಪ್ರಶ್ನೆ ತಮ್ಮ ಪತ್ನಿಯನ್ನು ಕೇಳಿ ಏಟು ತಿಂದ್ರೆ ನಾನು ಹೊಣೆಯಲ್ಲ! ಜೀವನ ಎಷ್ಟು ಕ್ಷಣಿಕ ಅಲ್ವಾ ಅನ್ನಿಸಿ ಬರೆದ ಲೇಖನ, ಇಂದಿರೊರು ನಾಳೆ ಇರಲ್ಲ... ಹಾಗಂತ ನಾಳೆ ಸತ್ತು ಹೋಗುವವರಂತೆಯೂ ಜೀವಿಸಬೇಕಿಲ್ಲ, ಆದ್ರೂ ಎಲ್ಲ ಪ್ಲಾನ ಮಾಡಿಟ್ಟಿದ್ರೆ ಒಳ್ಳೇದು ಅಂತ ಹೇಳಲು ಮಾತ್ರ. ಹಾಂ ಅಂದ ಹಾಗೆ, ನಾ ಸತ್ತು ಹೋದ್ರೆ ನನ್ನ ಬ್ಲಾಗ ಓದುಗರಿಗೆ ಗೊತ್ತಾಗೊ ಹಾಗೆ ಕಮೆಂಟ ಒಂದು ಹಾಕು ಅಂತ ಗೆಳೆಯನಿಗೆ ಹೇಳಿಟ್ಟಿದ್ದೇನೆ, ಅವನು ಮರೆತರೂ ನಿಮಗೆ ಯಾರಿಗಾದ್ರೂ ಗೊತ್ತಾದ್ರೆ, ಇಲ್ಲ ಬಹಳ ದಿನ ಹೇಳದೇ ಕೇಳದೇ ನಾ ಬರೆಯುವುದು ಬಿಟ್ಟರೆ, ಒಂದು ಸಾರಿ ಕೆಳಗಿರುವ ಮೇಲ ಆಯ್.ಡಿಗೇ ಮೇಲ್ ಮಾಡಿ ಉತ್ತರ ಬರದೇ ಇದ್ರೆ, ಕಮೆಂಟ ಹಾಕಿದ್ರೆ ಸಾಕು(ಯಾಕೇಂದ್ರೆ ಎಲ್ಲ ಮೇಲ್‌ಗಳಿಗೂ ತಪ್ಪದೇ ಉತ್ತರಿಸುತ್ತೇನೆ), ಇಷ್ಟು ದಿನ ತಪ್ಪದೇ ಬರೆಯುತ್ತಿದ್ದವ ಎಲ್ಲಿ ಕಣ್ಮರೆಯಾದ ಅಂತ ಎಲ್ರೂ ಅನ್ಕೋಬಾರದು ನೋಡಿ :)
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/sattu-hodare.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Monday, September 14, 2009
ದುಡ್ಡು ದುಡ್ಡು
ಕೂತು ನಾಲ್ಕು ಸಾರಿ ಕೂಡಿ ಕಳೆದರೂ ಈ ಕ್ರೆಡಿಟ್ಟು ಕಾರ್ಡನ ಬ್ಯಾಲನ್ಸಿನ ಲೆಕ್ಕ ಸರಿ ಹೋಗುತ್ತಿರಲಿಲ್ಲ, ತಲೆ ಕೆರೆದುಕೊಂಡು ಮತ್ತೆ ತಿರುವಿ ಹಾಕುತ್ತಿದ್ದೆ, "ಮುನ್ನೂರು ಮೂವತ್ತು, ಐನೂರು ಹತ್ತು" ಅಂತಿರುವಾಗಲೇ, ಇವಳು ಕೂಗಿದಳು "ರೀ ಪೇಪರ್ ಬಿಲ್ಲಿನವ ಬಂದಿದ್ದ", "ಒಹೋ ಹಾಗೋ ಪೇಪರ್ ಸರಿಯಾಗಿ ಬರ್ತಿದೆ ಅಂತ ಹೇಳಬೇಕಿತ್ತು" ಅಂದೆ, "ಪೇಪರ್ ಸರಿಯಾಗೇ ಬರ್ತಿದೆ ಈಗ ಅವನಿಗೆ ಹಸಿರು ಹಸಿರು ಪೇಪರ್ ನೋಟು ಎಣಿಸಿ ಕೊಡಬೇಕಲ್ಲ" ಅಂದ್ಲು, "ಆಯ್ತು, ಅದೊಂದು ನೂರು ಅಂತ ಲೆಕ್ಕ ಮಾಡಿದೆ, ಲೇ ಪೇಪರ್ ಬೇಕೇನೆ ನಮ್ಗೆ, ನೀನ್ ಓದ್ತೀಯಾ" ಅಂದೆ, "ಅದೇ ಟೈಮ್ ಸಿಕ್ಕಾಗ ಮೇನ್ ಪೇಜ ಕಣ್ಣಾಡಿಸ್ತೀನಿ ಅಷ್ಟೇ, ಇಲ್ಲಾಂದ್ರೆ ಅದೂ ಇಲ್ಲ" ಅಂದ್ಲು. "ಓಕೇ ಹಾಗಾದ್ರೆ ಬರೀ ಮೇನ್ ಪೇಜ ಕೊಡ್ತಾರಾ ಕೇಳು, ಎನಾದ್ರೂ ಡಿಸ್ಕೌಂಟ್ ಸಿಕ್ರೆ ಒಳ್ಳೆದಾಗತ್ತೆ ದುಡ್ಡು ಉಳಿಯತ್ತೆ" ಅಂದೆ. ಪೇಪರನವ ಆ ಪ್ರಶ್ನೆ ಕೇಳಿದರೆ ಹೇಗೆ ಮುಖ ಮಾಡಬಹುದಿತ್ತೊ ಹಾಗೆ ಇವಳೇ ಮಾಡಿದ್ಲು. ಸಾಫ್ಟವೇರ ಕಂಪನಿಗಳಲ್ಲಿ ರಿಸೆಷನ ಅಂತ ಟಾಯ್ಲಿಟ್ಟಿನಲ್ಲಿಡುವ ಟಿಶ್ಯೂ ಪೇಪರ್ ಕೂಡ ಕಟ್ ಮಾಡಿದಂತೆ, ನಮ್ಮನೇ ಪೇಪರ ಮೇಲೆ ಕಣ್ಣು ಬಿದ್ದಿತ್ತು ನಂದು. "ವಾರದ ನಂತರ ಪಕ್ಕದ ಮನೆ ಪದ್ದು ಹೋಗಿ ಹೇಗೂ ರದ್ದಿ ಅಂಗಡಿಗೆ ಹಾಕ್ತಾಳೆ, ಅದನ್ನೇ ನಮ್ಮನೆಗೆ ಕೊಡು ಅಂತ ಹೇಳಿದರಾಯ್ತು ಬಿಡಿ" ಅಂದ್ಲು, ವಾರದ್ದೆಲ್ಲ ಸುದ್ದಿ ಒಮ್ಮೇ ಓದುವ ಯೋಚನೆ ಅವಳದು, ನಾನೇ ಚಾಪೆ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೆ ನುಸುಳುವವಳು. "ಒಳ್ಳೆ ಐಡಿಯಾ ಕೊಡ್ತೀಯಾ, ನೀನ ಯಾವುದಾದ್ರೂ ಕಂಪನಿಗೆ ಕನ್ಸಲ್ಟಂಟ ಅಂತ ಆಗಬಹುದಿತ್ತು" ಅಂದ್ರೆ, "ಕೊಡ್ರೀ ನನ್ನ ಕನ್ಸಲ್ಟಿಂಗ ಫೀಜು" ಅಂದ್ಲು... ಅಯ್ಯೋ ದುಡ್ಡು ಉಳಿಸೊದು ಹೇಳೊಕೂ ದುಡ್ಡಾ ತಲೆ ಚಚ್ಚಿಕೊಂಡು ಮತ್ತೆ ಲೆಕ್ಕ ಮಾಡತೊಡಗಿದೆ...
ಅಂತೂ ಲೆಕ್ಕ ಸೇರಿಸಿ, ಇವಳು ಕೊಟ್ಟ ದಿನಸಿ ಪಟ್ಟಿ ಹಿಡಿದು ಹೊರ ಹೊರಟೆ, ಮನೆ ಮಾಲೀಕರು ಕಾಣಿಸಿದರು, "ಏನು ಬಹಳ ದಿನಾ ಆಯ್ತು ಕಾಣಿಸಿಲ್ಲ" ಅಂದ್ರು. ಹೀ ಅಂತ ಹಲ್ಲು ಕಿರಿದೆ, ತಾರೀಖು ಹತ್ತು ಆಗಿ ಹೋಯ್ತು ಇನ್ನೂ ಬಾಡಿಗೇನೇ ಕೊಟ್ಟಿಲ್ಲ ಅಂತ ಕೇಳ್ತಿದಾರೆ ಅಂತ ಅನ್ಕೊಂಡು, "ಎರಡು ಸಾರಿ ಬಂದಿದ್ದೆ ತಾವೇ ಸಿಕ್ಕಲಿಲ್ಲ" ಅಂತ ಸುಳ್ಳು ರೈಲು ಬಿಟ್ಟು ಸಾವಿರದ ಕಂತೆಗಳನ್ನು ಎಣಿಸಿ ಅವರ ಕೈಗಿಟ್ಟೆ "ಅಯ್ಯೊ ಪರವಾಗಿಲ್ಲ, ನೀವೇನು ಕೊಟ್ಟೇ ಕೊಡ್ತೀರಲ್ಲಾ, ಅರ್ಜೆಂಟೇನಿರಲಿಲ್ಲ" ಅಂದ್ರು, ಪಾಪ ಒಳ್ಳೇವರು(ಬಾಡಿಗೇನೇ ಕೇಳದಿದ್ರೆ ಇನ್ನೂ ಒಳ್ಳೇವರು!!), "ಏನ್ ಮಾಡೊದು ಸಾರ್, ನಾಲ್ಕು ದಿನ ಹೆಚ್ಚಿಗೆ ಇಟ್ಟರೂ ಬ್ಯಾಂಕಿನಲ್ಲಿ ಏನು ಬಡ್ಡಿನೂ ಬರಲ್ಲ ಬಿಡಿ" ಅಂದೆ ನಗುತ್ತ, "ಲೇಟಾಗಿ ಕೊಟ್ರೆ ನಾವೇನು ದಂಡ(ಫೈನ್) ಹಾಕಲ್ಲ ಅಲ್ವಾ" ಅಂತಂದು ನಡೆದರು. ಬಡ್ಡಿನೂ ದುಡ್ಡೇ, ದಂಡಾನೂ ದುಡ್ಡೇ ಅಂತ ಯೋಚಿಸುತ್ತ, ನಾ ಕಿರಾಣಿ(ದಿನಸಿ) ಅಂಗಡಿಗೆ ಬಂದರೆ ಎಂದಿನಂತೆ ಕೀರ್ತಿ(ಕೀರುತಿ, ಕಿರುಚುತಿ, ನಮ್ಮ ನಾಮಕರಣವೇ) ಕಿರುಚುತ್ತಿದ್ಲು. ನನ್ನ ನೋಡಿ ಒಮ್ಮೇಲೆ ಮುಖದ ಮೇಲೆ ಇಷ್ಟು ದೊಡ್ಡ ನಗು ಹೊತ್ತು, "ಎನ್ ನಮ್ಮ ಅಂಗಡಿಗೆ ಬರೋದೇ ಇಲ್ಲಾ ಸರ್, ಡಿಸ್ಕೌಂಟ ಸಿಗತ್ತೇ, ಆಫರ ಅಂತ ಶಾಪಿಂಗ ಮಾಲ್‌ಗೆ ಹೋಗ್ತೀರಾ, ಅಲ್ಲಿ ಎಲ್ಲ ಹಳೇ ಮಾಲು, ನಮ್ಮಲ್ಲಿ ಎಲ್ಲಾ ಫ್ರೆಷ್" ಅಂದ್ಲು, "ಹಳೇದೊ ಹೊಸದೊ... ದುಡ್ಡು ಹಳೇದಾದ್ರೂ ಅದೇ ಬೆಲೆ, ಹೊಸದಿದ್ರೂ ಅದೇ ಬೆಲೆ" ಅಂದೆ ಅವಳಿಗೆ ತಿಳೀತೊ ಇಲ್ವೊ, ದೊಡ್ಡ ತತ್ವಜ್ಞಾನಿಯಂತೆ ಕಂಡಿರಬೇಕು, ಕಕ್ಕಾಬಿಕ್ಕಿಯಾಗಿ ನೊಡುತ್ತಿದ್ದವಳಿಗೆ ದಿನಸಿ ಪಟ್ಟಿ ಕೊಟ್ಟು, ಆ ಫ್ರೆಷ್ ಸಾಮಾನುಗಳಿಗೆ, ಗರಿಗರಿ ಫ್ರೆಷ್ ನೋಟುಗಳನ್ನೇ ಎಣಿಸಿ ಕೊಟ್ಟೆ(ರಿಜರ್ವ ಬ್ಯಾಂಕಿನಲ್ಲಿ ಪ್ರಿಂಟ ಆಗಿ ನೇರ ನನ್ನ ಕೈಗೇ ಬಂದಿರುವಂತವು.) ಅತ್ತಿತ್ತ ತಿರುವಿ ನಾಲ್ಕು ಬಾರಿ ಪರೀಕ್ಷಿಸಿ ನೋಡಿ ತೆಗೆದುಕೊಂಡಳು, ಅವಳ ಎಣ್ಣೆ, ಹಿಟ್ಟು ಮೆತ್ತಿದ ಕೈಗಳಲ್ಲಿ ಅವೂ ಹಳೆಯದಾದವು, ಖೊಟಾ ನೋಟು ಏನಲ್ಲ ಬಿಡು, ಅಷ್ಟಕ್ಕೂ ಅದೂ ಕೂಡ ದುಡ್ಡೇ ಅಲ್ವೇ ಖೊಟಾ ಅಂತ ಗೊತ್ತಾಗೊವರೆಗೆ... ಅಂತನ್ನಬೇಕೆನಿಸಿದರೂ ಜಾಸ್ತಿ ಮಾತಾಡಿದರೆ ಎಲ್ಲಿ ನಾನೇ ಪ್ರಿಂಟ ಮಾಡಿ ತಂದಿರುವೆ ಅಂತಂದಾಳು ಅಲ್ಲಲ್ಲ ಕಿರುಚಿಯಾಳು ಅಂತ ಹೆದರಿ ಸುಮ್ಮನಾದೆ, ಗಲ್ಲಾ ಪೆಟ್ಟಿಗೆ ಎಲ್ಲ ಸಾರಿಸಿ ಸಪಾಟ ಮಾಡುವ ಹಾಗೆ ಬಳಿದು, ಎಣಿಸಿ ನಾಣ್ಯಗಳನ್ನೇ ಕೊಟ್ಟಳು, ನೋಟಿಲ್ಲ ಬರೀ ಚೇಂಜ ಇದೆ ಅನ್ನುತ್ತ, ಅದೂ ದುಡ್ಡೆ ಅಲ್ವೇ, ಅದನ್ನೇ ಜೇಬಿನಲ್ಲಿಳಿಸಿ ನಡೆದೆ.
ಮನೆಗೆ ಬರುತ್ತಿದ್ದಂತೆ, ಜೇಬಿನಲ್ಲಿ ನಾಣ್ಯಗಳು ನಾಟ್ಯವಾಡಿದಂತಾಗಿ, ಗೆಜ್ಜೆ ಘಲ್ಲು ಘಲ್ಲು ಅನ್ನೊ ಹಾಗೆ ಸದ್ದು ಬರುತ್ತಿದ್ದು ಕೇಳಿ, "ರೀ ಕೀರ್ತಿ ಕಿರಾಣಿ ಅಂಗಡೀಲಿ ದಿನಸಿ ತುಗೊಂಬಾ ಅಂದ್ರೆ ಜತೆಗೆ ಅವಳನ್ನೂ ಕರೆತಂದಿರೋ ಹಾಗಿದೆ, ಏನು ಗೆಜ್ಜೆ ಸದ್ದು ಅದು" ಅಂದ್ಲು, "ಹೂಂ ದಿನಸಿ ಕೊಂಡ್ರೆ ಜತೆಗೆ ಫ್ರೀ ಅಂತ ಕೊಟ್ರು ಕಿರುಚೋಕೆ" ಅಂದೆ, "ಏನ್ ಫ್ರೀನೊ ಏನೊ ಫ್ರೀ ಅಂತ ಹೇಳೋಕಷ್ಟೇ ಅದಕ್ಕೂ ದುಡ್ಡು ಸೇರಿಸಿಯೇ ಇಟ್ಟಿರ್ತಾರೆ ಬಿಡಿ" ಅಂದು, ಅವಳಿಗೇನು ದುಡ್ಡಿನ ಸದ್ದು ಗೊತ್ತಾಗಲ್ವೇ... ತನ್ನ ಉಳಿತಾಯದ ಕುಡಿಕೆ, ಅದೇ ಆ ಹಂದಿ ಮರಿ ಬಾಕ್ಸ್ ಹಿಡಿದು ಹೊರಬಂದ್ಲು, ಸೇವಿಂಗ್ಸ ಮಾಡೊಕೆ ಅಂತ ಚಿಕ್ಕ ಹಂದಿಮರಿ ಆಕಾರದ ಬಾಕ್ಸ ಇರ್ತವಲ್ಲ, ಅದು, ಜೇಬಿನಿಂದ ತೆಗೆದು ಎರಡು ನಾಣ್ಯ ಅದರ ಬೆನ್ನಿನಲ್ಲಿನ ಕಿಂಡಿಗೆ ತಳ್ಳಿದೆ, ಹಂದಿಮರಿ ಖುಷಿಯಾದಂತೆ ಕಂಡರೂ ಇವಳು ಕಾಣಲಿಲ್ಲ, ಜೇಬಿನಲ್ಲಿದ್ದ ಎಲ್ಲ ನಾಣ್ಯ ತೆಗೆದು ಅವಳ ಕೈಗಿತ್ತು... "ದುಡ್ಡು ದುಡ್ಡು ದುಡ್ಡು... ಸಾಕಾಗಿದೆ ಮುಂಜಾನೆಯಿಂದ ಬರೀ ಕೊಡೋದೆ ಆಯ್ತು" ಅಂತ ಬೇಜಾರಿನಲ್ಲಿ ಅಂದರೆ, ನಾನೇ ಕೊಟ್ಟ ನಾಣ್ಯಗಳಲ್ಲಿನದೊಂದು ರೂಪಾಯಿ ನನ್ನ ಕೈಗಿತ್ತಳು ಭಿಕ್ಷೆ ಹಾಕಿದಂತೆ! ಕೊಟ್ಟಿದ್ದು ಯಾಕೆ ಬೇಡ ಅನ್ನಲಿ ಅಂತ ಕಣ್ಣಿಗೊತ್ತಿ ಇಟ್ಕೊಂಡೆ.
"ಅಲ್ಲ ನಾನೂ ನೋಡ್ತಾ ಇದೀನಿ, ಏನ್ ದುಡ್ಡು ದುಡ್ಡು ಅಂತೀದೀರಾ, ಎನಾದ್ರೂ ತೊಂದ್ರೇನಾ" ಅಂದ್ಲು, "ದುಡ್ಡು ಇದ್ರೂ ತೊಂದ್ರೆ, ಇಲ್ಲದಿದ್ರೂ ತೊಂದ್ರೆ ಬಿಡು" ಅಂದೆ, "ಇದ್ರೆ ಏನ್ ತೊಂದ್ರೆಪ್ಪಾ, ಜಾಸ್ತಿ ಆಗಿದ್ರೆ ನಂಗೆ ಕೊಡಿ" ಅಂದ್ಲು, "ಜಾಸ್ತಿ ಆಗಿದ್ದು ಕೊಟ್ಟೆನಲ್ಲ ಆಗಲೇ ಆ ಹಂದಿಮರಿಗೆ ತಿನ್ನಿಸಿದೆ" ಅಂದೆ, "ಹತ್ತಿಪ್ಪತ್ತು ರೂಪಾಯಿ ಜಾಸ್ತೀನಾ ನಿಮ್ಗೆ" ಅಂದ್ಲು "ಲೇ ಅಷ್ಟಕ್ಕೇ ದಿನಾ ಪೂರ್ತಿ ದುಡೀತಾರೆ ಕೆಲವು ದಿನಗೂಲಿಗಳು, ಅದು ಜಾಸ್ತೀನೆ" ಅಂದೆ, "ಅವರ ಹತ್ರಾ ದುಡ್ಡು ಜಾಸ್ತಿ ಇದ್ರೆ ತೊಂದ್ರೆನೇ ಇರಲ್ಲ, ಹಾಗಾದ್ರೆ ದುಡ್ಡಿದ್ರೂ ತೊಂದ್ರೆ ಅಂತ ಹೇಗೆ ಹೇಳ್ತೀರಿ" ಅಂತ ಮರುಪ್ರಶ್ನಿಸಿದಳು. "ಅದೇ ದಿನಗೂಲಿಗೆ ಹತ್ತು ಕೋಟಿ ರೂಪಾಯಿ ಲಾಟರಿ ಹತ್ತಿದ್ರೆ, ಹರಿದು ತಿಂದು ಬಿಡ್ತಾರೆ ಅವನನ್ನ, ಆಗ ದುಡ್ಡಿದ್ರೂ ತೊಂದ್ರೆ ಅಲ್ವಾ" ಅಂತ ಸಮಜಾಯಿಸಿದೆ. "ಅದೂ ಸರಿಯೇ... ದುಡ್ಡು ಇಲ್ದೆ ಇದ್ರೆ ಮಾತ್ರ ತೊಂದ್ರೆ ತಪ್ಪಿದ್ದಲ್ಲ" ಅಂದ್ಲು. "ಹಾಗೆ ನೋಡಿದ್ರೆ ಅಪ್ಪ ಕಳಿಸಿದ ಪಾಕೆಟ ಮನಿಯಲ್ಲಿ ಕಾಲೇಜಿನಲ್ಲೇ ಆರಾಮಾಗಿದ್ದೆ" ಅಂತ ಮಾತು ತಿರುವಿದೆ, "ಈಗೇನು ದೊಡ್ಡ ತೊಂದ್ರೆ ಹಾಗಿದ್ರೆ" ಗುರಾಯಿಸಿದಳು. "ಅದೇ ಹಾಸ್ಟೆಲ್ಲು ಊಟ, ಹೊರಗೊಂದು ಕಪ್ಪು ಟೀ ಅಷ್ಟೇ ಚೆನ್ನಾಗೇ ಇತ್ತು, ತಿಂಗಳ ಕೊನೆಗೆ ಖಾಲಿ, ಕಾಲೇಜು ಮುಗೀತು ಕೆಲ್ಸ ಸಿಕ್ತು, ಪಾಕೇಟ ಮನಿಗಿಂತ ಜಾಸ್ತಿ ಸಂಬಳ ಆಯ್ತು, ರೂಮು, ಶಾಪಿಂಗು, ಫಿಲಮ್ಮು, ಆಯ್ತು. ತಿಂಗಳ ಕೊನೆಗೆ ಮತ್ತೆ ಖಾಲಿ. ಪ್ರಮೋಷನ್ನು ಆಯ್ತು ಇನಕ್ರೀಮೆಂಟ ಆಯ್ತು, ಬಸ್ಸು ಹೋಯ್ತು ಬೈಕ ಬಂತು, ಸುತ್ತಿ ಪೆಟ್ರೊಲು ಸುಟ್ಟಿದ್ದೇ ಆಯ್ತು, ದೊಡ್ಡ ರೂಮು, ಬ್ರಾಂಡ ಬಟ್ಟೆ ಮತ್ತೆ ತಿಂಗಳ ಕೊನೆಗೆ ಲೊಟ್ಟೆ, ಮತ್ತೆ ಹೆಚ್ಚಿನ ಸಂಬಳ, ಮದುವೆ ಮಹರಾಣಿಯಂತ ಮಡದಿ, ಅರಮನೆಯಂತ ಮನೆ... ತಿಂಗಳ ಕೊನೆ!!!" ನಿಟ್ಟುಸಿರು ಬಿಟ್ಟೆ.... "ಹೂಂ ಮಹರಾಜರು ಓಡಾಡೊಕೆ ರಥ ಅದೇ ಕಾರು ಬೇರೆ ಬೇಕು ಅದು ಮುಂದಿನ ಕಂತು, ಕೋಟಿ ರೂಪಾಯಿ ಸಿಕ್ರೂ ಸಾಕಾಗಲ್ಲ ಬಿಡಿ" ಅಂದ್ಲು. "ಒಂದಂತೂ ನಿಜ ಜೀವಿಸುವ ಶೈಲಿ, ಸ್ಥರ ಬದಲಾಗುತ್ತ ಹೋಗಿದೆ, ಸೌಕರ್ಯಗಳು ಜಾಸ್ತಿ ಆಗಿವೆ, ದುಡ್ಡಿಲ್ಲದೇ ಜೀವನವಿಲ್ಲ, ಅದು ಎಷ್ಟಾದರೂ ಸಾಕಾಗಲ್ಲ ಅನ್ನೊ ಹಾಗೆ ಆಗಿದೆ" ಅಂದೆ. "ಸಾಕು ಹೊಟ್ಟೆಗೇನು ದುಡ್ಡೆ ತಿನ್ನೊಕಾಗಲ್ಲ, ಏನಾದ್ರೂ ಹೊರಗೆ ತಿನ್ಕೊಂಡು ಬಂದ್ರಾಯ್ತು, ನಿಮ್ಮ ಸೊಡೆಕ್ಸೊ ಫುಡ ಕೂಪನ್ ಇವೆ ಅಲ್ವ" ಅಂದ್ಲು "ಅದೂ ದುಡ್ಡೇ ಕಣೇ, ಸಂಬಳದಲ್ಲಿ ಕಟ್ ಮಾಡಿ ಕೊಡೋದು ಅಂತಿದ್ದರೆ" ತಳ್ಳಿಕೊಂಡು ಹೊರ ನಡೆದಳು, "ಮಾತಾಡಲು ಬಿಟ್ಟರೆ ದುಡ್ಡು ಖರ್ಚು ಆಗಲ್ಲ ಅಂತ ಮಾತಾಲ್ಲೇ ಹೊಟ್ಟೆ ತುಂಬಿಸಿಬಿಡ್ತಾರೆ" ಅಂತನ್ನುತ್ತ.
ದುಡ್ಡು, ಹಾಗೆ ನೋಡಿದ್ರೆ ಒಂದು ತುಣುಕು ಹಾಳೆ, ಚೂರು ಲೋಹ, ನಾವೇ ಅದಕ್ಕೆ ಬೆಲೆ, ಮೌಲ್ಯ ಅಂತ ಕೊಟ್ಟಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಈಗ. ಎಷ್ಟು ದುಡ್ಡಾದರೂ ಸಾಕಾಗಲ್ಲ, ಹಾಗೇ ಇನ್ನೂ ಹೆಚ್ಚು ಹೆಚ್ಚು ಅಂತ ಗಳಿಸುತ್ತಲೇ ಇರುತ್ತೇವೆ, ನಮ್ಮ ಅವಶ್ಯಕತೆಗಳು ಗಳಿಕೆಗೆ ತಕ್ಕಂತೆ ಬೆಳೆಯುತ್ತಲೇ ಹೋಗುತ್ತವೆ, ಬೆಳೆಸುತ್ತಲೂ ಹೋಗುತ್ತೇವೆ. ಕೊನೆಗೆ ಖುಷಿಯಾಗಿರೊಕೆ ದುಡ್ಡು ಅಂತ ಅನ್ನಿಸಿದಾಗ... ಅದಕ್ಕೆ ದುಡ್ಡೇ ಯಾಕೆ ಅನಿಸಿದರೂ, ದುಡ್ಡಿಲ್ಲದೆ ಖುಷಿಯೂ ಇಲ್ಲ ಅನಿಸುತ್ತದೆ, ದುಡ್ಡಿದ್ದರೆ ಖುಷಿಯೇ ಇರುತ್ತದೆ ಅಂತಲೂ ಇಲ್ಲ. ಅದ್ರೂ ದುಡ್ಡು ಬೇಕೇ ಬೇಕು, ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತದೆ ಅಂತ ಸುಮ್ನೇನಾ ಹೇಳಿದ್ದು ಹೆಣಕ್ಕೂ ಜೀವ ಬರಬೇಕೆಂದ್ರೆ, ಜೀವಿಸೊಕೆ ಅದು ಬೇಕೇ ಅಲ್ವೇ.
ಹೊಟೆಲಿನಲ್ಲಿ ಹೊಟ್ಟೆ ತುಂಬ ತಿಂದು, ಫುಡ್ ಕೂಪನ್ನು ಕೊಟ್ಟಾಗ ದುಡ್ಡು ಕೊಟ್ಟಂತೆ ಅನ್ನಿಸಲಿಲ್ಲ, ಆದರೂ ಕೊಟ್ಟಿದ್ದೂ ದುಡ್ಡೇ. ವೇಟರಗೆ ಟಿಪ್ಸ ಅಂತ ಹತ್ತು ರೂಪಾಯಿ ಇಟ್ಟರೆ, ಇವಳು ತೆಗೆದುಕೊಂಡು ಐದು ರೂಪಾಯಿ ಇಡುತ್ತ, "ಏನು ಹೈದರಾಬಾದ ನಿಜಾಮನ ಮೊಮ್ಮಗನಾ ನೀವು, ಟಿಪ್ಸ ಎಷ್ಟು ಇರಬೇಕೊ ಅಷ್ಟೇ..." ಅಂದ್ಲು. ಅದನೆತ್ತಿಕೊಂಡ ವೇಟರ ಮುಖದಲ್ಲಿ ಹತ್ತುರೂಪಾಯಿ ಮೂಡಿಸಬಹುದಾಗಿದ್ದ ನಗುವೇ ಐದು ರೂಪಾಯಿಗೂ ಮೂಡಿತ್ತು, ಅಲ್ಲಿನ ಅವಶ್ಯಕತೆ ಅಷ್ಟೇ ಇತ್ತು ಅದನ್ನ ಇವಳು ಮನಗಾಣಿಸಿದ್ದಳು. ಹೊರಬರುತ್ತ, "ರೀ ಅಮೇರಿಕಾದಲ್ಲಿ ದೊಸೆಗೂ ಹತ್ತಿಪ್ಪತ್ತು ಡಾಲರ ಅಂತೇ, ಏನ ಕಾಸ್ಟ್ಲೀ ಅಲ್ವಾ" ಅಂತಿದ್ಲು, ಇನ್ನೇನು ಇಲ್ಲೀ ಥರ ಹದಿನೈದು ರೂಪಾಯಿಗೆ ದೋಸೆ ಅಲ್ಲಿ ಸಿಗೋಕಾಗುತ್ತಾ, "ಲೇ ಡಾಲರೂ ದುಡ್ಡೇ ಕಣೆ" ಅಂದೆ, ಹೊಟ್ಟೆ ತುಂಬಿದ್ದರೂ ಈಗ ನನ್ನೇ ತಿಂದು ಬಿಡುವ ಹಾಗೇ ನೋಡಿದ್ಲು, "ನಗೇ... ನಗೋಕೇನೂ ದುಡ್ಡು ಕೊಡಬೇಕಾಗಿಲ್ಲ" ಅಂದೆ ಇಬ್ಬರೂ ಪುಕ್ಕಟೆಯಾಗಿ ನಗುನಗುತ್ತ ಹೊರಟೆವು ನಮ್ಮ ನಂದನವನದ ಕಡೆಗೆ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/duddu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, September 6, 2009
ಉಪ್ಪುಪ್ಪಿಟ್ಟು!
ಮುಂಜಾನೆ ಟಿಫಿನ್ನಿಗೆ ಅಂತ ಉಪ್ಪಿಟ್ಟು ಮಾಡಿದ್ಲು, ಅದೇ ಖಾರಭಾಥ್, ಉಪಮಾ ಅಂತಾರಲ್ಲ ಅದೇ ನಮ್ಮೂರಲ್ಲಿ ಉಪ್ಪಿಟ್ಟು. ನನಗೆ ಟೇಬಲ್ಲಿನ ಮೇಲೆ ಹಾಕಿಟ್ಟು ಸ್ನಾನಕ್ಕೆ ಹೋಗಿದ್ಲು, ಸ್ವಲ್ಪ ಸುಡು ಸುಡು ಬಿಸಿ ಇತ್ತು, ಆರಲಿ ಅಂತ ಕಾದು ಕೂತಿದ್ದೆ, ಸ್ನಾನ ಮುಗಿಸಿ, ನೀರು ಹೀರಲು ತಲೆಗೆ ಟವೆಲ್ಲು ಹಾಕಿ ತುರುಬು ಕಟ್ಟಿಕೊಳ್ಳುತ್ತ ಬಂದವಳು, ನನ್ನ ಮುಖದ ಮುಂದೆ ಕೈಯಾಡಿಸಿದಳು, ಡ್ರಾಪ್ ಕೇಳಲು ನಿಲ್ಲು ಅಂತ ಸೂಚಿಸುವರಂತೆ, "ಏನು ಧ್ಯಾನ ಮಾಡ್ತಾ ಇದೀರ, ಉಪ್ಪಿಟ್ಟು ಆರಿ ಹೋದರೆ ಏನು ಚೆನ್ನಾಗಿರ್ತದೆ ತಿನ್ನಿ" ಅಂದ್ಲು. "ಹೂಂ, ತಪಸ್ಸು ಮಾಡ್ತಾ ಇದ್ದೆ, ಊರ್ವಶಿ ಏನಾದರೂ ಪ್ರತ್ಯಕ್ಷ ಆಗ್ತಾಳೋ ಅಂತ" ಅಂದೆ, "ದೇವರು ಪ್ರತ್ಯಕ್ಷ ಆಗಲಿ ಅಂತ ಎಲ್ರೂ ತಪಸ್ಸು ಮಾಡಿದ್ರೆ ಊರ್ವಶಿಗಾಗಿ ತಪಸ್ಸು ಮಾಡೋರು ನೀವೆ ಅಂತ ಕಾಣ್ತದೆ, ಊರ್ವಶಿ ಎನೂ ಇಲ್ಲ... ನಿಮಗೆ ನಾನೇ ವಾಸಿ" ಅಂತ ಬುದ್ಧಿ ಹೇಳಿದಳು, ಬುದ್ಧಿ ಬಂತೋ ಇಲ್ವೊ ಗೊತ್ತಿಲ್ಲ, ಆ ಕಡೆ ನಡೆದಿದ್ದವಳ ಕೈ ಹಿಡಿದೆಳೆದು, ಯಾವಾಗಿನಂತೆ, ಆ ಕೇಶರಾಶಿಯ ಸುವಾಸನೆ ಎಳೆದು ಬಿಟ್ಟುಕೊಟ್ಟೆ, ಆಗ ತಾನೆ ಮಜ್ಜನಗೈದ ಮುಡಿಯ ಪರಿಮಳ ಮುದ ಕೊಡುತ್ತದೆ, ಕೈಸೆರೆ ಬಿಡಿಸಿಕೊಂಡು, ಧ್ಯಾನ ಮಾಡುತ್ತ ಪೂಜೆ ಮಾಡಲು ಹೊರಟಳು. ಇತ್ತ ಉಪ್ಪಿಟ್ಟು, "ನಿನ್ನ ಊರ್ವಶಿಯೊಂದಿಗಿನ ಸರಸ ಸಾಕು, ವಸಿ ನನ್ನ ಪರಿಮಳವೂ ನೋಡು" ಅಂತ ಬಿಸಿ ಉಗಿ(ಆವಿ) ಬಿಟ್ಟಿತು. ಒಂದು ತುತ್ತು ಊದಿ ಆರಿಸಿ ಬಾಯಿಗಿಟ್ಟೆ, ಉಪ್ಪಿಟ್ಟು ಉಪ್ಪುಪ್ಪಾಗಿತ್ತು.
ತುತ್ತು ತಿಂದವನು, ಇಂಗು ತಿಂದ ಮಂಗನಂತೆ ಮುಖ ಮಾಡಿಕೊಂಡು ಕೂತೆ, ಇನ್ನೂ ಪ್ಲೇಟು ತುಂಬ ಉಪ್ಪಿಟ್ಟು ಇತ್ತು, "ನಿನ್ನ ನಲ್ಲೆಯ ಸಿಹಿ ಮುತ್ತುಗಳೇ ಬೇಕೇ ನಿಂಗೆ, ತಿನ್ನು ಉಪ್ಪು ಉಪ್ಪು ಉಪ್ಪಿಟ್ಟು" ಅಂತ ಅಣಕಿಸುತ್ತಿತ್ತು. ಅಗರಬತ್ತಿಯ ಪರಿಮಳ ಸೂಸುತ್ತ ಹೊರಬಂದಳು, ನನ್ನ ಮುಖ ನೋಡಿ ಮಂತ್ರ ಪಟಿಸುತ್ತಲೇ, ಏನು ಅನ್ನುವಂತೆ ಹುಬ್ಬು ಮೇಲೇರಿಸಿದಳು, "ಉಪ್ಪಿಟ್ಟೂ ಅಂತ ಗೊತ್ತು... ಆದ್ರೆ, ಎನೂ ಇಲ್ಲ ಉಪ್ಪು ಬಿಟ್ಟು" ಅಂದೆ, "ಸ್...." ಅಂತ ತಲೆ ಮೇಲೆ ಕೈಯಿಂದ ಕುಟ್ಟಿಕೊಂಡವಳು, ಮಂತ್ರ ಮುಗಿಸಿ ಬಂದು ಹಲ್ಲು ಕಿರಿದಳು, "ಅಯ್ಯೊ... ಕೈಜಾರಿ ಸ್ವಲ್ಪ ಜಾಸ್ತಿ ಬಿದ್ದಿರಬೇಕು ರೀ..." ಅಂತ. ನಾ ನಗುತ್ತ ಮತ್ತೊಂದು ತುತ್ತಿಗೆ ಕೈ ಹಾಕುತ್ತಿದ್ದರೆ, ಬೇಡವೆಂದು ಕಸಿದುಕೊಂಡು ಪಾಕಶಾಲೆ ಸೇರಿದಳು, ನಾನೂ ಹಿಂಬಾಲಿಸಿದೆ "ಪರವಾಗಿಲ್ಲ ಕೊಡೆ ತಿಂತೀನಿ" ಅನ್ನುತ್ತ, ತಾನೂ ಸ್ವಲ್ಪ ಬಾಯಿಗಿಟ್ಟುಕೊಂಡು ರುಚಿ ನೋಡಿದವಳು, ಸಿಟ್ಟಿನಿಂದ ನೋಡಿ "ಅದ ಹೇಗೆ ತಿಂತೀರಾ, ಬಹಳ ಉಪ್ಪಾಗಿದೆ, ಬೀಪೀ ಜಾಸ್ತಿ ಆದರೆ ನನ್ನ ಮೇಲೆ ಹಾರಾಡ್ತೀರ.. ಎನೂ ಬೇಡ" ಅಂತ ತವೆ ಬಿಸಿ ಮಾಡಲಿಟ್ಟಳು, "ಬೇಗ ಬ್ರೆಡ ಟೋಸ್ಟ ಮಾಡಿ ಕೊಡ್ತೀನಿ ತಿಂದು ಹೋಗಿ" ಅಂತನ್ನುತ್ತ. "ಟೈಮಿದೆ ಬಿಡು ಇನ್ನೂ" ಅಂದು ಅಲ್ಲೇ ಇದ್ದ ಕಡಲೇಬೀಜ ನಾಲ್ಕು ತಿನ್ನುತ್ತ ಹೊರಬಂದೆ.
ಮತ್ತೆ ಡೈನಿಂಗ ಟೇಬಲ್ ಮೇಲೆ ಆಸೀನರಾದಾಗ ಮುಂದೆ ಬಿಸಿಬಿಸಿ ಟೋಸ್ಟಗಳಿದ್ದವು, ಅವಳು ಅಲ್ಲೇ ಚೇರು ಎಳೆದುಕೊಂಡು ಕುಳಿತಳು, "ನೀನು ತಿನ್ನಲ್ವಾ" ಅಂತ ಕೇಳಿದೆ, ಅಮೇಲೇ ಆ ಉಪ್ಪು ಉಪ್ಪಿಟ್ಟು ತಿನ್ನುವ ಪ್ಲಾನ ಏನಾದ್ರೂ ಮಾಡಿದ್ದಾಳೊ ಅಂತ ತಿಳಿದುಕೊಳ್ಳಲು, ಈ ಗೃಹಿಣಿಯರ ಮನೋಭಾವಗಳೇ ಹಾಗೆ, ಎಲ್ಲಿ ಹಾಳಾಗುತ್ತದೆ ಅಂತ ಉಪ್ಪಿದ್ದರೂ ತಿನ್ನಲು ನೋಡುತ್ತಾರೆ, ಆದರೆ ಅದು ತಿನ್ನಲು ಆಗಲ್ಲ ಅಂತ ಗೊತ್ತಾಗಿದ್ದರಿಂದ, ತನಗೂ ಟೊಸ್ಟ ಮಾಡಿಕೊಂಡಿದ್ದಳು, ಟೀ ಮಾಡಲಿಟ್ಟಿದ್ದೇನೆ, ಅದರ ಜತೆ ತನಗೂ ಟೊಸ್ಟ ತರುತ್ತೇನೆ ಅಂತದದ್ದು, ಕೇಳಿ ಸುಮ್ಮನಾದೆ.
ಹಾಗೇ ತಿನ್ನುತ್ತಿದ್ದವ ಏನೊ ನೆನಪಾಗಿ ಸುಮ್ಮನೇ ನಕ್ಕೆ, ಇವಳು ಇನ್ಯಾವ ತಪ್ಪು ಮಾಡಿದೆನೊ ಈ ಸಾರಿ, ಅಂತ ಗಾಬರಿಯಾಗಿ "ಮತ್ತೆ ಏನಾಯ್ತು, ಸರಿ ಇಲ್ವಾ" ಕೇಳಿದ್ಲು. "ಉಪ್ಪು!! ನೆನಪಿದೇನಾ..." ಅಂದೆ, ಹುಬ್ಬು ಗಂಟಿಕ್ಕಿದವಳು ನೆನಪಾಗಿ "ಒಹ್ ಅದ ಹೇಗೆ ಮರೆಯೋಕಾಗುತ್ತೆ" ಅಂದ್ಲು, ಅದು ಮರೆಯೋಕಾಗದ ಘಟನೆಯೇ ಸರಿ.
ಆಗ ಮದುವೆಯಾದ ಹೊಸತು, ಮೊದಲ ಬಾರಿ ಅಡುಗೆ ಮಾಡಲು ಪಾಕಶಾಲೆಗೆ ಕಾಲಿಟ್ಟಿದ್ದಳು, ಸೊಸೆ ಮಾಡುವ ಊಟದ ರುಚಿ ನೊಡಲು ಮನೆಯೇ ಕಾದಿತ್ತು, ಅಮ್ಮನಿಗೆ ಅವಳೆಲ್ಲ ಮಾಡ್ತಾಳೆ ಇಲ್ಲಿ ಬಾ ಕೂರು ಅಂದರೂ, ಆಗಾಗ ಹೋಗಿ ತರಕಾರಿ ಹೆಚ್ಚಿ ಕೊಡಲೇ, ಖಾರ ಅಲ್ಲಿದೆ, ಮೆಣಸು ಇಲ್ಲಿದೆ ಅಂತ ಹೇಳಿಬರುತ್ತಿದ್ದಳು, ನನ್ನ ಮಗನಿಗೆ ಇನ್ನು ಅಡಿಗೆ ಮಾಡಿ ಹಾಕುವಳು ಇವಳೇ, ಹೇಗೆ ಮಾಡುತ್ತಾಳೊ, ಹಾಸ್ಟೆಲ್ಲು ಹೊಟೇಲು ಅಂತ ತಿಂದವನಿಗೆ ಮನೆ ಅಡಿಗೆ ಮಾಡಿಹಾಕುವಳು, ಸರಿ ಇಲ್ಲದಿದ್ದರೆ ಹೇಗೆ ಅಂತ ಆತಂಕ ಬೇರೆ. ಮೊದಲ ಸಲ ಎಲ್ಲಿ ಯಾವ ಡಬ್ಬಿ ಎಲ್ಲಿದೆ ಸಿಗಲಿಕ್ಕಿಲ್ಲ ಅಂತಲೂ ಇರಬಹುದು, ಕೇಳಲು ಸಂಕೋಚ ಮಾಡಿಕೊಂಡಾಳು ಅಂತ ಕೂಡ ಏನೋ. ನಾನೂ ಒಳ ಹೋಗಿ ನೋಡಿದೆ, ಮೊದಲ ಬಾರಿ ಅತ್ತೆ ಮನೆಯಲ್ಲಿ ಅಡಿಗೆ, ಏನನ್ನುತ್ತಾರೊ, ರುಚಿಯಾಗಿರದಿದ್ದರೆ! ಇವಳ ಕಣ್ಣುಗಳಲ್ಲೂ ಭಯ ಕಂಡಿತು, ಕಣ್ಣು ಮುಚ್ಚಿ ನಿಧಾನವಾಗಿ ತೆರೆದು, ಕಣ್ಣಲ್ಲೇ ಎನೂ ಹೆದರಬೇಡ ಎಲ್ಲ ಸರಿಯಾಗುತ್ತದೆ ಮಾಡು, ಅಂತ ಹೇಳಿ ಬಂದೆ.
ಚಟಪಟ ಸದ್ದು ಕೇಳಿತು, ಸಾರಿಗೆ ವಗ್ಗರಣೆ ಹಾಕುತ್ತಿದ್ದಳು, ಅಮ್ಮ ಹೋಗಿ, ಪೂರ್ತಿ ಮಾಡುವವರೆಗೂ ತಡೆದುಕೊಳ್ಳಲು ಆಗದೇ, ರುಚಿ ನೋಡಲು ಸ್ವಲ್ಪ ಸೌಟಿನಲ್ಲಿ ತೆಗೆದುಕೊಂಡು ಸರಕ್ಕೆಂದು ಹೀರಿದ ಸದ್ದು ಬಂತು, ಅಮ್ಮನ ಮುಖ ಕಪ್ಪಿಟ್ಟಿರಬೇಕು, ಇವಳು ಹೇಗಾಗಿದೆ? ಅಂತ ಕೇಳಿದಳು ಅಂತ ಕಾಣುತ್ತದೇ, ಅಮ್ಮ "ಉಪ್ಪು ಜಾಸ್ತಿಯಾಗಿದೆ" ಅಂತನ್ನುತ್ತಿದ್ದಂತೇ, ಇದಕ್ಕೇ ಕಾಯುತ್ತಿದ್ದರೇನೊ ಅನ್ನುವಂತೆ ಸೋದರ ಸಂಬಂಧಿಯೊಬ್ಬರು, "ಈಗೀನ ಹುಡುಗೀರಿಗೆ ಅಡಿಗೆ ಮಾಡ್ಲಿಕ್ಕೆ ಎಲ್ಲಿ ಬರ್ತದೆ, ಓದಿದ್ದೇವೆ ಅಂತ ಅಡಿಗೆ ಮನೆಗೆ ಕಾಲಿಟ್ಟಿರಲ್ಲ" ಅಂತ ಮೂದಲಿಸಿದರು, ಅಡುಗೆ ಮನೆ ನಮ್ಮ ಡಿಪಾರ್ಟಮೆಂಟ ಅಲ್ಲ ಅಂತ ಇರಬೇಕಾಗಿದ್ದವ ನಾನು, ಈ ಪರಿಸ್ಥಿತಿ ಕೈಮೀರುವ ಎಲ್ಲ ಲಕ್ಷಣ ಕಂಡು ಅಲ್ಲಿಗೆ ಧಾವಿಸಿದೆ. ಈ ಮನೆಗಳಲ್ಲಿ ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೊಂದಿಗೆ ಸಂಬಂಧಗಳಿಗೆ ಉಪ್ಪಿಗಿಂತ ಜಾಸ್ತಿ ಹುಳಿ ಹಿಂಡಲು ಕಾದಿರುತ್ತಾರೆ ಕೆಲವರು... ಅದಕ್ಕೇ ಜಾಗರೂಕರಾಗಿರಬೇಕು.
ನಮ್ಮ ಮನೆಯಲ್ಲಿ ಅಜ್ಜಿಗೆ ಬೀಪೀ ಜಾಸ್ತಿಯಾದ ಮೇಲೆ, ಅಪ್ಪ "ಎಲ್ರೂ ಉಪ್ಪು ಕಮ್ಮಿ ತಿಂದರೇ ಒಳ್ಳೇದು" ಅಂತ ಹೇಳಿ, ಅಮ್ಮನಿಗೆ ಕಮ್ಮಿ ಉಪ್ಪು ಹಾಕು ಎಲ್ರಿಗೂ ಹೊಂದಿಕೆಯಾಗುತ್ತದೆ ಅಂತ ಕಟ್ಟಪ್ಪಣೆ ಮಾಡಿದರು, ಅಮ್ಮನ ಕೈಯಡುಗೆ ಉಪ್ಪು ಕಮ್ಮಿಯಾದರೂ ರುಚಿಕಳೆದುಕೊಳ್ಳಲಿಲ್ಲ, ನಮಗೂ ಕಡಿಮೆ ಉಪ್ಪಿನ ಊಟ ಒಗ್ಗಿ ಹೋಯಿತು, ಊರಿಂದ ಬಂದ ಸೋದರಮಾವ, ಉಪ್ಪು ಖಾರ ಇಲ್ಲದೆ ಸಪ್ಪೆ ಊಟ ಏನು ತಿಂತೀರಿ ಅಂತ, ಉಪ್ಪು ಉದುರಿಸಿಕೊಂಡು, ಹಸಿ ಕೆಂಪುಖಾರ ನಂಜಿಕೊಂಡೇ ಊಟ ಮಾಡುತ್ತಿದ್ದುದು ನಮ್ಮಲ್ಲಿ. ಹೀಗೆ ನಮ್ಮ ಮನೆಯಲ್ಲಿ ಉಪ್ಪಿನ ಉಪಯೋಗ ಕಮ್ಮಿಯಾಗಿತ್ತು, ಹೀಗಾಗಿ ಅವಳು ಸರಿ ಪ್ರಮಾಣ ಹಾಕಿದ್ದರೂ ಜಾಸ್ತಿ ಅಂತ ಅಮ್ಮನಿಗೆ ಅನಿಸಿದ್ದರೆ ಅಚ್ಚರಿಯಿರಲಿಲ್ಲ.
ಆ ಮೂದಲಿಸಿದ ಸಂಬಂಧಿಗೆ, ಇದೆಲ್ಲ ನಮ್ಮನೆಯಲ್ಲಿ ನಿನ್ನಾಟ ನಡೆಯಲ್ಲ ಅಂತ ತಿಳುವಳಿಕೆ ಬರುವಂತೆ "ಮೊದಲ ಸಲ ಅಲ್ವಾ, ಎನೊ ಮಿಸ್ಟೇಕು ಆಗುತ್ತದೆ, ಅಲ್ದೇ ನಮ್ಮನೇಲಿ ಉಪ್ಪು ಕಮ್ಮಿ ಉಪಯೋಗಿಸ್ತೀವಿ ಅಮ್ಮನಿಗೆ ಅದು ಗೊತ್ತಿದೆ" ಅಂತ ಮಧ್ಯಪ್ರವೇಶಿಸಿದೆ ಅಮ್ಮನ ಕಣ್ಣಿನಲ್ಲಿ ನೋಡುತ್ತ... "ಹೌದು, ಹೌದು ನಮ್ಮನೇಲಿ ಅಡಿಗೆಗೆ ಉಪ್ಪು ಕಮ್ಮಿ" ಅಮ್ಮ ಅಂತ ಅನುಮೋದಿಸಿದಳು. ಇವಳ ಹಣೆಯಲ್ಲಿ ಬೆವರು ಹನಿ ಮೂಡಿದ್ದವು ಭೀತಿಯಿಂದ, ಸೌಟು ಇಸಿದುಕೊಂಡು ಸ್ವಲ್ಪ ಕೈಯಲ್ಲಿ ಸಾರು ಹಾಕಿಕೊಂಡು ಆರಿಸಲು ಊದುತ್ತ... ಅವಳ ಹಣೆಗೂ ಸ್ವಲ್ಪ ಊದಿದೆ ಬೆವರ ಹನಿ ಹೋಗಲಾಡಿಸಲು... ರುಚಿ ನೋಡಿದೆ, ನಿಜವಾಗಲೂ ಉಪ್ಪು ಸ್ವಲ್ಪ ಜಾಸ್ತಿಯಾಗಿತ್ತು, ಅವಳಿಗೂ ಕೈಯಲ್ಲಿ ಹಾಕಿದೆ ರುಚಿ ನೋಡಿದವಳು, ನನ್ನಡೆಗೆ ಮುಂದೇನು ಅನ್ನುವಂತೆ ನೋಡಿದಳು, ನೋಟದಲ್ಲೇ ನೋ ಪ್ರಾಬ್ಲಂ ಅನ್ನುವಂತೆ ನಸುನಕ್ಕೆ.
ಎಲ್ಲೋ ಓದಿದ್ದ ಟಿಪ್ಸ ನೆನಪಿತ್ತು, ಅಮ್ಮನ ಹೊರಕಳಿಸಿ, ಟೀವೀ ನೋಡಹೋಗು ಅಂತಂದು, ಆಲೂಗಡ್ಡೆ(ಬಟಾಟಿ, ಪೊಟ್ಯಾಟೊ) ಕೊಡು ಅಂದೆ ನನ್ನಾಕೆಗೆ, ಹತ್ತುವರ್ಷ ಹೊರಗೇ ತಿಂದವನಿಗೇನು ಗೊತ್ತಿರಬಹುದು ಅನ್ನುವ ಅನುಮಾನದಲ್ಲೇ ತಂದುಕೊಟ್ಟಳು, ಚೆನ್ನಾಗಿ ತೊಳೆದು ಎರಡು ಹೋಳು ಮಾಡಿ, ಸಾರಿನಲ್ಲಿ ಮುಳುಗಿಸಿದೆ, ಒಂದು ಹದಿನೈದು ನಿಮಿಷ ಹಾಗೇ ಇರಲಿ ಹೆಚ್ಚಿನ ಉಪ್ಪು ಹೀರಿಕೊಳ್ಳುತ್ತವೆ, ಆಮೇಲೆ ಅವನ್ನ ತೆಗೆದುಹಾಕಿ, ಸ್ವಲ್ಪ ಚಿಟಿಕೆ ಬೆಲ್ಲ ಹಾಕಿ ಕುದಿಸಿಬಿಡು. ಊಟಕ್ಕೆ ನೀಡುವಾಗ, ತುಪ್ಪ ಹಾಕಿ ನೀಡು ಎಲ್ಲ ಸರಿ ಹೋಗುತ್ತದೆ ಅಂದೆ. ಅವಳ ಸೆರಗು ತೆಗೆದುಕೊಂಡು ಅವಳ ಹಣೆಗೆ ಒತ್ತಿದೆ, ಸ್ವಲ್ಪ ನಿರಾಳವಾದಳು... ಹೇಳಿದಂತೇ ಮಾಡಿದಳು, ಅಪ್ಪ ಎರಡನೇ ಬಾರಿ ಅನ್ನ ಹಾಕಿಸಿಕೊಂಡಾಗಲೇ ಗೊತ್ತಾಯ್ತು, ಇಷ್ಟವಾಗಿದೆ ಎಂದು. ಅಮ್ಮನ ಮುಖದಲ್ಲಿ ಲಾಸ್ಯ ಮನೆ ಮಾಡಿತ್ತು, ಉಪ್ಪಿನ ತಪ್ಪಾದರೂ ಮನೆ ಒಪ್ಪ ಓರಣವಾಗಿತ್ತು. ಅಮ್ಮ ಬಂದು ಏನೋ ಮಾಡಿದೆ ಅಂತ ಕೇಳುತ್ತಲೇ ಇದ್ದಳು, ಎಲ್ಲ ನಿನ್ನ ಸೊಸೆಯ ಮ್ಯಾಜಿಕ ಅನ್ನುತ್ತಿದ್ದೆ. ಅದರೊಂದಿಗೆ, ತಪ್ಪು ತಪ್ಪೇ, ಆದರೆ ತಪ್ಪು ತಿದ್ದಬಹುದು ಕೂಡ, ತಪ್ಪನ್ನೇ ದೊಡ್ಡದು ಮಾಡಿದರೆ ಅದೇ ದೊಡ್ಡ ತಪ್ಪು. ಈ ಮನೆಗೆ ಯಾರು ಹುಳಿ ಹಿಂಡಲು ಬಂದರೂ ಅಷ್ಟೇ ಏನೂ ಆಗದು, ಸಿಹಿ ಸಿಂಚನಗೈಯ್ಯಲಾಗದಿರಬಹುದು, ಆದ್ರೆ ಹುಳಿಯನ್ನಂತೂ ಇಂಗಿಸಿಕೊಳ್ಳುತ್ತೇವೆ ಅನ್ನುವ ಒಂದು ಸಂದೇಶ ಮನೆಯಲ್ಲಿ ಎಲ್ಲರಿಗೂ ರವಾನೆಯಾಗಿತ್ತು.
ಆದದ್ದನ್ನೆಲ್ಲ ಅಮ್ಮನಿಗೆ ಇವಳು ಹೇಳಿ, ಅಮ್ಮನ ಹೆಮ್ಮೆಯ ಮಗನನ್ನಾಗಿಸಿದಳು, ಎಷ್ಟೊ ಬಾರಿ ಅದನ್ನು ಪ್ರಸ್ತಾಪಿಸಿ ನಕ್ಕಿದ್ದೇವೆ, ಅಮ್ಮನ ಹತ್ತಿರ ಇವಳು ಇನ್ನೂ ಅಡುಗೆಯಲ್ಲಿ ಪಳಗಿದ್ದಾಳೆ, ಆ ಹುಳಿ ಸಾರಿನ ಪ್ರಸಂಗ ಇನ್ನೂ ನೆನಪಿದೆ, ಆ ನೆನಪು ಮಾತ್ರ ಸಿಹಿ ಸವಿ ನೆನಪಿನಂತೆ.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅಂತ ಸುಮ್ನೇ ಗಾದೆ ಬಂದಿದ್ದಾ, ಉಪ್ಪು ಹೆಚ್ಚಾದರೂ ತಪ್ಪೇ, ಕಡಿಮೆಯಾದರೂ ತಪ್ಪೇ, ಪ್ರಮಾಣಕ್ಕೆ ತಕ್ಕದಾಗಿದ್ದರೆ ಮಾತ್ರ ರುಚಿ, ಉಪ್ಪು ಜಾಸ್ತಿ ಆಗಿದೆ ಅಂತ ಬೀಪೀ ಏರಿಸಿಕೊಂಡು ಎಷ್ಟು ಮನೆಗಳಲ್ಲಿ ಜಗಳವಾಗಿಲ್ಲ, ಅದಕ್ಕೇ ರಾತ್ರಿ ಉಪ್ಪು ಕೇಳಬಾರದು ಮನೆಯಲ್ಲಿ ಜಗಳವಾಗುತ್ತದೆ ಅಂತ ಮೂಢನಂಬಿಕೆ ಬಂದಿದ್ದೇನೊ. ಅಂತೂ ಉಪ್ಪು ಮಾತ್ರ ಅಡಿಗೆಗೆ ಬೇಕೇ ಬೇಕು. ಉಪ್ಪಿನ ಸೇವನೆಯಿಂದ ಬೀಪೀ ಜಾಸ್ತಿ ಆಗುತ್ತದೆ ಅಂತ ವೈಜ್ಞಾನಿಕ ಕಾರಣವೇನೊ ಇದೆ ಆದರೆ ಉಪ್ಪು ಜಾಸ್ತಿ ಆದದ್ದಕ್ಕೇ, ಇನ್ನೂ ತಿನ್ನುವ ಮೊದಲೇ ಬೀಪೀ ಜಾಸ್ತಿ ಮಾಡಿಕೊಂಡು ಉಪ್ಪಿನ ಮೇಲೆ ಉರಿದುಬೀಳುವವರನ್ನು ನೋಡಿದ್ದೇನೆ. ಈ ಕ್ಷಣಿಕ ಆವೇಶ ತರವಲ್ಲ, ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡ ಕಂದಕಗಳನ್ನು ಸೃಷ್ಟಿಸಬಹುದು, ಸ್ವಲ್ಪ ಸಹನೆ ಇದ್ದರೆ ಸಾಕು, ನನ್ನನ್ನೂ ಸೇರಿಸಿಕೊಂಡು ಹೇಳುತ್ತಿರುವುದು, ನನಗಿದೆ ಬೇರೆಯವರಿಗೆ ಇಲ್ಲ ಅಂತಲ್ಲ. ಹಾಗಂತ ಉಪ್ಪು ಜಾಸ್ತಿಯಿದ್ದರೂ ತಿನ್ನಿ ಅಂತಲ್ಲ, ರಕ್ತದೊತ್ತಡ(ಬೀಪೀ) ಜಾಸ್ತಿ ಆಗಿ ಹೃದಯದ ಖಾಯಿಲೆಗಳು ಬಂದಾವು ಉಪ್ಪು ಸ್ವಲ್ಪ ಕಡಿಮೆ ಮಾಡಿ, ಅತ್ತ ಬಿಟ್ಟು ಬಿಟ್ಟರೆ ಐಯೋಡಿನ ಕೊರತೆಯಾದೀತು, ಅದಕ್ಕೆ ರುಚಿಗೆ ಹಿತ ಮಿತಕ್ಕೆ ತಕ್ಕಷ್ಟು ಇರಲಿ, ಆಗ ಜೀವನ ನಳಪಾಕವಾಗುತ್ತದೆ.
ಆ ಘಟನೆಯ ಮರು ಉಲ್ಲೇಖ ಇವಳ ಮೊಗದಲ್ಲಿ ನಗು ತಂದಿತ್ತು "ರೀ, ಉಪ್ಪಿಟ್ಟಿಗೂ ಏನಾದ್ರೂ ಐಡಿಯಾ ಇದೇನಾ" ಪ್ರಶ್ನಿಸಿದಳು, "ನಾನೇನು ಅಡುಗೆಭಟ್ಟ ಅನ್ಕೊಂಡಿದೀಯಾ" ಅಂದೆ. "ಮತ್ತೆ ಆಗ ಹೇಗೆ ಆ ಐಡಿಯಾ ಸಿಕ್ಕಿತ್ತು" ಅಂದ್ಲು. "ಎಲ್ಲೊ ಓದಿದ ನೆನಪಿತ್ತು, ಮತ್ತೆ ಈಗ ಏನ್ಮಾಡ್ತೀಯಾ" ಅಂದೆ. "ನಳ ಮಹರಾಜರೇ, ಪಾಕಶಾಲೆ ನಮಗೆ ಬಿಟ್ಟು, ನಿಮ್ಮ ಕಂಪ್ಯೂಟರ ಕುಟ್ಟಲು ಜಾಗ ಖಾಲಿ ಮಾಡಿ" ಅಂದಾಗಲೇ ಆಫೀಸಿನ ನೆನಪಾಯಿತು, "ಅಮ್ಮನಿಗೆ ಗೊತ್ತಿದ್ರೆ ಕೇಳು" ಅನ್ನುತ್ತ ಎದ್ದೆ, ಹಳೆ ನೆನಪಿನೊಂದಿಗೆ ಹರಟೆ ಹೊಡೆದರಾಯ್ತು ಅದನ್ನ ಕೇಳುವ ನೆಪದಲ್ಲಿ ಅಂತ, ಅಮ್ಮನಿಗೆ ಫೋನು ಮಾಡಲು ನಡೆದಳು. ಮತ್ತೆ ನನ್ನಾಕೆಯೊಂದಿಗೆ, ಉಪ್ಪು ಜಾಸ್ತಿಯಾದರೆ, ಸಕ್ಕರೆ ಹಾಕಿ, ಸಿಹಿಯಾದರೆ, ಖಾರ ಹಾಕಿ ಮತ್ತೆ ಇಂಥದ್ದೇ ಖಾರಾಬಾಥ... ಅಲ್ಲಲ್ಲ ಖಾಸಭಾತಗಳೊಂದಿಗೆ ಸಿಕ್ತೀನಿ
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/uppu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು