Sunday, October 11, 2009

ಒಬ್ಬಂಟಿ

ಹಲ್ಲುಜ್ಜದೇ ಹಾಳು ಮುಖದಲ್ಲಿ ಹಾಗೇ ಎದ್ದು ಕೂತಿದ್ದೆ, ಆಕಳಿಸುತ್ತ ಅತ್ತಿತ್ತ ನೋಡುತ್ತ ಎನೂ ಮಾತಿಲ್ಲದೇ, ಮಾತನಾಡಲೇಬೇಕೆನ್ನಿಸುತ್ತಿರಲಿಲ್ಲ. ಅವಳೊ ಆಗಲೇ ಎದ್ದು ಏನೋ ಕೆಲಸದಲ್ಲಿ ನಿರತಳಾಗಿದ್ದಳು, ಎಂದಿನಂತಾಗಿದ್ದರೆ ಎನೋ ತುಂಟಾಟ ಮಾಡುತ್ತ ಅವಳ ಕಾಡಿಸುತ್ತಿದ್ದೆ, ಇಂದೇಕೊ ಮನಸಿರಲಿಲ್ಲ, ಮನದಲ್ಲಿನ ಮಾತುಗಳೆಲ್ಲ ಮಾತಾಡಿ ಮಾತಾಡಿ ಖಾಲಿಯಾಗಿ ಹೋದವೇನೊ ಅನ್ನಿಸುತ್ತಿತ್ತು. ಮತ್ತೆ ಹೊದ್ದು ಎದ್ದೇಳದಂತೆ ಮಲಗಿಬಿಡಲೇನೊ ಅಂದರೂ ನಿದ್ರೆ ಕೂಡ ಹತ್ತಿರ ಸುಳಿಯದಂತೆ ಓಡಿ ಹೋಗಿತ್ತು, ಮನೆಯಲ್ಲಿ ವಟಗುಡುತ್ತಿರುವ ಎಫ್‌ಎಂನ ರೇಡಿಯೋ ಜಾಕಿ, ಹೊರಗೆ ಚಿಲಿಪಿಲಿಗುಡುತ್ತಿರುವ ಹಕ್ಕಿ, ಕಸಗುಡಿಸುತ್ತಿರುವ ಪಕ್ಕದಮನೆ ಪದ್ದುನ ಪೊರಕೆ ಸದ್ದು, ಓಣಿಯಲ್ಲಿ ಪ್ರತಿದ್ವನಿಸುತ್ತಿದ್ದ ಹೂವಾಡಗಿತ್ತಿ ಗುಲಾಬಿಯ ಕೂಗು, ಏನೊಂದು ಕೇಳಿದರೂ ಕೇಳಿಸದಂತೆ ಆವರಿಸಿತ್ತು ನಿಶಬ್ದ, ನನ್ನ ಮೌನಕ್ಕೆ ಜತೆಯಾಗಲೆಂದು. ಆ ನೀರಸ ಮೌನಕ್ಕು ಕೂಡ ನಿಶಬ್ದ ಜತೆಯಾದರೆ, ನಾನೊಬ್ಬನೇ ಯಾಕೊ ಒಬ್ಬಂಟಿಯಾದಂತಿತ್ತು.

ಮದುವೆಯಾಗಿ ಮಡದಿ ಮನೆಯಲ್ಲಿದ್ದು, ಮನೆತುಂಬ ಮಕ್ಕಳಿರಲವ್ವ ಅಂತ ಹರಸುವ ಹೊತ್ತಿನಲ್ಲಿ, ಇವನ್ಯಾಕೆ ಒಬ್ಬಂಟಿಯಾದಾನು ಅಂದಿರಾ, ಸುತ್ತ ಸಂತೆ ಸೇರಿದ್ದರೂ ಒಮ್ಮೊಮ್ಮೆ ಹೀಗೆ ಏಕಾಂಗಿ ಅನಿಸಿಬಿಡುತ್ತದೆ, ಈ ಮನಸೇ ಹಾಗೆ, ಯಾರೂ ಇಲ್ಲದ ಹೊತ್ತಿನಲ್ಲಿ ಯಾರನ್ನೊ ಕಲ್ಪಿಸಿಕೊಂಡು ಕನಸು ಕಟ್ಟುವ ಮನಸು, ಎಲ್ಲರಿದ್ದರೂ ಎಲ್ಲೊ ದೂರ ಹೋಗಿ ಒಬ್ಬಂಟಿಯಂತೆ ನಿಂತು ಬಿಡುತ್ತದೆ. ಇನ್ನೊಂದು ಬಾರಿ ಬಾಯಿತುಂಬ ಆಕಳಿಸಿ, ಮೈಮುರಿದು ಮೇಲೆದ್ದವನು ಮತ್ತೇನೂ ಮಾಡಲು ಇಲ್ಲವೇನೊ ಅನ್ನುವಂತೆ ಮತ್ತೆ ಅಲ್ಲೇ ಕುಳಿತೆ, ಅವಳು ಬಂದಳು.

ದಿಕ್ಕೆಟ್ಟು ದೇವರ ನೆನೆಸುತ್ತಿದ್ದಂತೆ ಕೂತವನನ್ನು ನೋಡಿ, ಅಲುಗಿಸಿ ಏನಾಯ್ತು ಅನ್ನೊವಂತೆ ಹುಬ್ಬು ಹಾರಿಸಿದಳು, ಸುಮ್ಮನೇ ನಕ್ಕೆ, "ಏನು ಮೌನವೃತಾನಾ, ಮಾತಾಡೊಲ್ವಾ" ಅಂತಂದಳು, ಅವಳಿಗೆ ಗೊತ್ತಾಗಿತ್ತು ಒಂದು ಮಾತಾಡಿದರೆ ಹತ್ತು ಹಲವು ಹರಟೆ ಹೊಡೆಯುವವ ಸುಮ್ಮನೇ ಕೂತಿದ್ದರೆ ಗೊತ್ತಾಗದಿದ್ದೀತೆ. ಮತ್ತೇನೂ ಮಾತೇ ಹೊರಡದಿದ್ದಾಗ, ಅವಳೂ ಒಂದು ಸಾರಿ ಹಲ್ಲು ಕಿರಿದು ಹೊರಟು ಹೋದಳು, ಈ ಮಾತಿನ ಮಷೀನಿನ ಬ್ಯಾಟರಿ ಬಿಸಿಯಾಗಲು ಸ್ವಲ್ಪ ಸಮಯ ಬೇಕೇನೊ, ಇನ್ನೊಂದಿಷ್ಟು ಹೊತ್ತಾದರೆ ತಾನೇ ಸರಿಹೊಗುತ್ತದೆಂದು. ಮೌನ ಮಾತಾಡು ನೋಡೊಣ ಅಂತ ಮುಂದೆ ಕೂತಿದ್ದರೂ ಮತ್ತೆ ನಾನು ಒಬ್ಬಂಟಿಯೇ.

ಹಲ್ಲಿನೊಂದಿಗೆ ಬ್ರಷು ತೆಕ್ಕೆ ಹಾಯ್ದು ನಾನಿನ್ನ ಜತೆಯಿದ್ದೇನೆ ಅನ್ನುತ್ತಿದೆಯೇನೊ ಅನ್ನುವಂತೆ ಹಲ್ಲುಜ್ಜಿದೆ, ಬಕೆಟ್ಟಿಗೆ ಜತೆಯಾಗಿ ತೂಗುಬಿದ್ದಿದ್ದ ಮಗ್ ಕಿತ್ತುಕೊಂಡು ಮುಖ ತೊಳೆದರೆ, ನೀರಿಗೆ ಜತೆಯಾಗಿ ಸೋಪು ತೊಳೆದು ಹೋಯ್ತು. ಜಗತ್ತಿನಲ್ಲಿ ಎಲ್ಲ ಜತೆ ಜತೆಯಾಗೇ ಇದೆ, ನಾನೊಬ್ಬನೇ ಒಬ್ಬಂಟಿಯೇನೊ ಅಂತ ಅಣಕಿಸಿದಂತೆ. ಹಾಗೆ ನೋಡಿದರೆ ನಾನೆಲ್ಲಿ ಒಬ್ಬಂಟಿ ಇದ್ದಾಳಲ್ಲ ನನ್ನಾಕೆ ಅಂತ ಅವಳಿದ್ದಲ್ಲಿಗೇ ಹೋದೆ, ಮಾತಾಡುವ ಮಲ್ಲಿ, ಮಾತಿಲ್ಲದೇ ಕೈಗೆ ಕಾಫಿ ಕಪ್ಪಿತ್ತಳು, ಕಪ್ಪಿನ ಜತೆ ಬಸಿ(ಸಾಸರ್) ಕೂಡ ಬಂತು ಜತೆಯಾಗಿ. ಹಾಗೇ ಹೊರಗೆ ಬಂದು ಓದಲೆಂದು ಪೇಪರು ಕೈಗೆತ್ತಿಕೊಂಡೆ ಸಪ್ಲಿಮೆಂಟು ಉಚಿತವಾಗಿ ಅದರ ಜತೆ ಸೇರಿಕೊಂಡಿತ್ತು. ಓದಲೂ ಮನಸಿಲ್ಲದೇ ಅದನ್ನಲ್ಲೇ ಬೀಸಾಕಿ, ಬಿಸಿ ಬಿಸಿ ಕಾಫಿ ಹೀರಿದರೆ ಕಾಫಿ ಪುಡಿಗೆ ಹಾಲು ಸಕ್ಕರೆ ಕೂಡಿತ್ತು.

ಅಲ್ಲೇ ಬಂದು ಅವಳೂ ಪಕ್ಕ ಕೂತಳು, "ಮುಂಜಾನೆಯಿಂದ ನೋಡ್ತಾ ಇದೀನಿ, ಏನಾಗಿದೆ ನಿಮಗೆ, ಮಾತಿಲ್ಲ ಕಥೆಯಿಲ್ಲ" ಅಂತ ಮತ್ತೆ ಕೆದಕಿದಳು, ಧೀರ್ಘ ನಿಟ್ಟುಸಿರು ಬಿಟ್ಟು, "ಯಾಕೊ ಒಬ್ಬಂಟಿ ಅಂತ ಅನಿಸ್ತಾ ಇದೆ, ಮಾತನಾಡಲೇ ಮನಸಿಲ್ಲ, ಒಂಥರಾ ಬೇಜಾರು" ಅಂತ ಹೇಳಿದೆ, ಅವಳಿಗೇನು ಹೇಳಬೇಕೊ ತಿಳಿಯಲಿಲ್ಲ, ಸಪ್ತಪದಿ ತುಳಿದು ಸಂಗಾತಿಯಾಗಿರುತ್ತೇನೆ ಅಂತ ವಚನವಿತ್ತವನೇ, ಯಾಕೊ ಒಬ್ಬಂಟಿ ಅನಿಸ್ತಾ ಇದೆ, ಅಂದರೆ ಏನು ಹೇಳಿಯಾಳು. "ನಾನಿಲ್ಲವೇ ಇಲ್ಲಿ, ನೀವ್ಯಾಕೆ ಒಬ್ಬಂಟಿ, ಏನೇನೊ ಮಾತಾಡಬೇಡಿ ನೀವು" ಅಂತ ಹತ್ತಿರ ಬಂದು ಕೈಹಿಡಿದುಕೊಂಡು ಕೂತಳು, ಅವಳಿಗೇನು ಅಂತ ಹೇಳಲಿ, ಅವಳು ನಾನು ಅಂತ ಬೇರೆ ಬೇರೆಯಾದರೆ ಅವಳಿಗೆ ನಾ ಜತೆ, ನನಗವಳು ಆಗಬಹುದೇನೊ, ಆದರೆ, ನಾನು ನನ್ನಾಕೆ ಒಂದೇ ಆದರೆ... ಅಲ್ಲಿ ಜತೆ ಯಾರು. ನನಗವಳು ಜತೆ ಅಂತ ಹೇಳಿ ಅವಳ ನನ್ನಿಂದ ಬೇರೆ ಮಾಡಲೇ,
ನಾನು ಅವಳು ಇಬ್ಬರೇ?, ಇಬ್ಬರೂ ಸೇರಿ ಒಬ್ಬರೇ? ಒಬ್ಬರೇ ಆದರೆ ಒಬ್ಬಂಟಿ ಅಲ್ಲವೇ... ಅಂತ ಏನೇನು ಹುಚ್ಚು ಯೋಚನೆಗಳು ಸುತ್ತ ಮುತ್ತಿಕೊಂಡವು. ಆ ಯೋಚನೆಗಳ ನಡುವೆ ನಾನೊಬ್ಬನೇ ಒಬ್ಬಂಟಿ ಬಂಧಿಯಾಗಿದ್ದೆ.

ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಒಮ್ಮೊಮ್ಮೆ ಹಾಗೇ ಒಬ್ಬಂಟಿ ಅನಿಸಿಬಿಡುತ್ತದೆ, ಆದರೆ ಅದ್ಯಾಕೊ ಗೊತ್ತಿಲ್ಲ" ಅಂತ ತನ್ನ ಅಂತರಾಳ ತೆರೆದಳು, ನಾನು ಒಬ್ಬಂಟಿ ಅಂದಿದ್ದಕ್ಕೆ ಅವಳಿಗೂ ಹಾಗೇ ಅನ್ನಿಸಿತೇನೊ ಪಾಪ ಅಂತ "ನಾ ನಿನ್ನೊಂದಿಗೇ ಇದ್ದೇನೆ, ಆದರೂ ಯಾಕೊ ಹೀಗೆ ಅನಿಸ್ತಾ ಇದೆ" ಅಂತ ನನ್ನ ದುಗುಡ ಹೊರತೆಗೆದೆ. "ಒಂದೊಂದು ದಿನ ಮನೇಲಿ ಒಬ್ಳೆ ಇರ್ತೀನಲ್ಲ, ಆಗಲೂ ಹಾಗೆ ಅನಿಸಿಬಿಡುತ್ತದೆ, ಏನು ಮಾಡಲೂ ತಿಳಿಯುವುದಿಲ್ಲ, ಯಾರಿಗೊ ಫೋನು ಮಾಡಿ ಹರಟುತ್ತೇನೆ" ಅಂತ ತನ್ನನುಭವ ಹೇಳಿದರೆ, "ನನಗೇನೊ ಯಾರೊಂದಿಗೂ ಮಾತಾಡಲೂ ಮನಸಿಲ್ಲ" ಅಂತ ನಾನಂದೆ, ಅವಳೊಂದಿಗೂ ಕೂಡ ಅಂತ ಸುಮ್ಮನೇ ಕೂತಳು.

ಬಹಳ ಹೊತ್ತು ಹಾಗೇ ಕೂತಿದ್ದರೆ ಎಲ್ಲಿ ನಿಜವಾಗಲೂ ಒಬ್ಬಂಟಿಯಾದೇನೊ ಅನ್ನಿಸಿರಬೇಕು ಅವಳಿಗೆ "ನೀವು ಹೀಗೇ ಕೂರೋದಾದ್ರೆ, ಕೂತು ಬಿಡಿ ಒಬ್ಬಂಟಿ ಅಂತ, ನಾ ತವರುಮನೆಗೆ ಹೋಗಿ ಬಿಡ್ತೀನಿ" ಅಂತ ಹೆದರಿಸಿದಳು, "ಮೊದಲೇ ಒಬ್ಬಂಟಿ ಅನಿಸ್ತಾ ಇದೆ, ನೀನೂ ಹೋದರೆ" ಅಂದರೆ, "ಇದಾಳಲ್ಲ ನಿಮ್ಮ ಜತೆ ಪಕ್ಕದ ಮನೆ ಪದ್ದು" ಅಂತ ಕೀಟಲೆಗಿಳಿದಳು, "ಪಕ್ಕದಮನೆ ಬಿಡು, ನನಗೇನೊ ಊರು ಬಿಟ್ಟು ಎಲ್ಲೊ ದೂರ ದಟ್ಟಡವಿಯಲ್ಲಿ ಹೋಗಿ ಸುಮ್ಮನೇ ಕೂತುಬಿಡಬೇಕೆನ್ನಿಸಿದೆ ಒಬ್ಬಂಟಿಯಾಗಿ" ಅಂದೆ. "ಬಟ್ಟೆ ಎಷ್ಟು ಪ್ಯಾಕ್ ಮಾಡಲಿ" ಅಂದ್ಲು, ಈಗ ನಾನು ಕಾಡಿಗೆ ಹೊರಟಿದ್ದೇನೇನೊ ಅನ್ನುವಂತೆ. "ಹಾಗಲ್ಲ, ಅದು ಅನಿಸಿಕೆ ಮಾತ್ರ, ಎಲ್ಲೊ ದೂರ ಬೆಟ್ಟದ ಮೇಲೆ ಹತ್ತಿ ಅದರ ತುಟ್ಟತುದಿಗೆ ಕೂತು ಬಿಡಬೇಕು ಅನ್ನಿಸುತ್ತದೆ" ಅಂದರೆ, "ಇಲ್ಲೇ ಈ ಏಣಿ ಮೇಲೆ ಏರಿ ಕೂರಲೇ ಭಯ, ಇನ್ನು ಬೆಟ್ಟವಂತೂ ದೂರದ ಮಾತು" ಅಂತ ತಳ್ಳಿಹಾಕಿದಳು. "ನಾನೂ ಅದನ್ನೇ ಹೇಳುತ್ತಿರುವುದು, ಅಷ್ಟು ಏಕಾಂಗಿಯಾಗಿಬಿಡಬೇಕು ಅನ್ನಿಸುತ್ತದೆ, ಆದರೆ ಆಗುವುದಿಲ್ಲ, ಅದರೂ ಅನ್ನಿಸುವುದೇಕೆ ಅಂತ ಗೊತ್ತಿಲ್ಲ,
ಕಡಲತೀರದಲ್ಲಿ ಕಾಲಿಗೆ ಅಲೆ ತಾಕುತ್ತಿದ್ದರೆ ಉಸುಕಿನಲ್ಲಿ ಬಿದ್ದುಕೊಂಡು ಒಬ್ಬನೇ ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಬೇಕೆನ್ನಿಸುತ್ತದೆ." ಅಂದರೆ, "ರೀ ನಾನೂ ಜತೆ ಬರ್ತೀನಿ, ಎಣಿಸೋಕೆ ನಿಮ್ಮ ಕೈಬೆರಳು ಸಾಕಾಗಲ್ಲ, ನಾನು ಸ್ವಲ್ಪ ಹೆಲ್ಪ ಮಾಡ್ತೀನಿ" ಅಂತ ದುಂಬಾಲು ಬಿದ್ದಳು. "ಹಾಗೆ ಹೋಗಲು ಬೆಂಗಳೂರಲ್ಲಿ ಯಾವ ಕಡಲೂ ಇಲ್ಲ, ನಾನು ಹೊರಟೂ ಇಲ್ಲ, ಆದರೆ ಹಾಗೆ ಅನಿಸುತ್ತದೆ ಅಂತ ಹೇಳ್ತಾ ಇದೀನಿ" ಅಂದರೆ, "ಏನು ಅನಿಸಿಕೆನೊ ಏನೊ, ಅದೇ ನೆಪದಲ್ಲಿ ಮಂಗಳೂರು ಟ್ರಿಪ್ ಆಗುತ್ತೇನೊ ಅಂತ ನಾನೆಣಿಸಿದ್ದೆ" ಅಂತವಳು. "ಎಲ್ಲೊ ದೂರದ ಊರಿಗೆ ಹೋಗುತ್ತಿರುವ ಬಸ್ಸಿನಲ್ಲಿ ಒಬ್ಬನೇ ಕಿಟಕಿ ಪಕ್ಕ ಕೂತು ದೂರ ದೂರಕೆ ದಾರಿಯುದ್ದಕ್ಕೂ ನೋಡುತ್ತಿರಬೇಕು ಅನಿಸುತ್ತದೆ" ಅಂದರೆ, "ಟಿಕೆಟ್ಟು ಎಲ್ಲೀವರೆಗೆ ಅಂತ ತೆಗೆದುಕೊಳ್ಳೊದು" ಅಂತ ಕೇಳಿದ್ಲು, ನಾನು ಪಕ್ಕದ ದಾರಿ ನೋಡುತ್ತಿರುವ ಭಾವನೆ ಬಗ್ಗೆ ಮಾತಾಡುತ್ತಿದ್ದರೆ, ಇವಳಿಗೆ ಟಿಕೆಟ್ಟಿನ ಚಿಂತೆ, "ಅದು ಹಾಗಲ್ಲ" ಅಂತ ಸಮಜಾಯಿಸಿ ನೀಡಲು ಹೋದಾಗ, "ನೀವು ಹೇಳುವುದೆಲ್ಲ ಅರ್ಥವಾಗಿದೆ, ಆದರೆ ನಿಮ್ಮ ಆ ಒಂಟಿತನಕ್ಕೆ ಕಡಿವಾಣ ಹಾಕಲೇ ನಾನೀ ಕೀಟಲೆಗಿಳಿದಿದ್ದು" ಅಂದಳು. ಹೌದಲ್ಲ, ಮಾತನಾಡಲೇ ಮನಸಿಲ್ಲ ಅಂತ ಕೂತವನನ್ನು ಕೆದಕಿ ಏನೇನೊ ಮಾತಾಡಿಸಿ ಒಂಟಿತನದ ಆ ಭಾವನೆಯನ್ನೇ ದೂರ ಮಾಡಿದ್ದಳಲ್ಲ, ಇವಳು ನನ್ನೊಂದಿಗಿರುವವರೆಗೆ ನಾನೇನು ಒಬ್ಬಂಟಿಯಾಗಲಿಕ್ಕಿಲ್ಲ ಅಂತ ಅನ್ನಿಸತೊಡಗಿತ್ತು.

ಏನೊ ಒಮ್ಮೆ, ಒಂದು ದಿನ ಹೀಗೆ ಎಲ್ಲರಿಗೂ ಒಬ್ಬಂಟಿ ಅಂತ ಅನ್ನಿಸಿರಲೇಬೇಕು, ಎಲ್ಲರ ಜತೆಗಿದ್ದರೂ, ಎಲ್ಲರ ನಡುವಿದ್ದರೂ ಎಲ್ಲೊ ಕಳೆದುಹೋದಂತೆ, ಯಾರೂ ಇಲ್ಲದೇ ಒಬ್ಬಂಟಿಯಾಗಿದ್ದಂತೆ, ಏನೂ ಮಾತಾಡದೇ ಮೌನವಾಗಿ ಕೂತುಬಿಡಬೇಕು ಅಂತ ಅನಿಸಿರಬೇಕು. ಒಂದು ದಿನವಾದರೆ ಪರವಾಗಿಲ್ಲ ಆದರೆ ಹಾಗೇ ಆ ಭಾವನೆ ಉಳಿದುಹೋಗಬಾರದು, ಸಂಘಜೀವಿ ಮಾನವನೇನೂ ಒಂಟಿಸಲಗವೇನಲ್ಲ, ಒಂಟಿಯಾಗಿದ್ದವರಿಗೂ ಯಾರೋ ಒಬ್ಬ ಗೆಳೆಯನಾದರೂ ಇದ್ದೇ ಇರುತ್ತಾನೆ. ಇಲ್ಲ ಒಮ್ಮೊಮ್ಮೆ ಇನ್ನೊಂದು ತರಹದ ಭಾವನೆ, ಎಲ್ಲ ಇದ್ದರೂ ಬಿಟ್ಟು ಎಲ್ಲೋ ದೂರ ಒಬ್ಬಂಟಿಯಾಗಿ ಹೋಗಬೇಕು ಅನ್ನೊವಂತೆ, ಹಾಗೆ ಹೋಗಲೂ ಆಗುವುದಿಲ್ಲ, ಸಂಸಾರ, ಸಂಗಾತಿ, ಸ್ನೇಹಿತರು ಅಂತೆಲ್ಲ ಇರುವಾಗ, ಮತ್ತೊಂದು ದಿನ ಆ ಒಬ್ಬಂಟಿ ಬದುಕೂ ಬೇಡವಾಗಬಹುದು.

ಮಾತಿಲ್ಲದೇ, ಹಾಗೆ ಎಷ್ಟೋ ಹೊತ್ತು ಕುಳಿತಿದ್ದೆವು, ಮಾತನಾಡಬೇಕು ಅಂತ ಅನಿಸದೇ. ಮನೆಯಲ್ಲಿ ಇಬ್ಬರಿದ್ದರೂ ಯಾರಿಲ್ಲವೇನೊ ಅನ್ನೊವಂತೆ ಮನೆಯೇ ಒಬ್ಬಂಟಿಯಾಗಿತ್ತು. ಅಷ್ಟರಲ್ಲಿ ವಾಣಿ, ಅದೇ ನಮ್ಮ ದೂರವಾಣಿ ಮೊಬೈಲು ಕಿರುಚಿಕೊಂಡಳು, ನನ್ನ ಜತೆಗಾದರೂ ಮಾತಾಡಿ ಅಂತ. ನನ್ನೊಂದಿಗೇ ಮಾತಾಡುತ್ತಿಲ್ಲ ಇನ್ನು ನಿನ್ನೊಂದಿಗೇನು ಮಾತಾಡುತ್ತಾರೆ ಅಂತ ಅದರ ತಲೆಗೊಂದು ಕುಕ್ಕಿ ಪಕ್ಕಕ್ಕಿಟ್ಟಳು, ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಕೂಗಿಕೊಂಡಿತು, ಯಾರೋ ಏಕಾಂತಕ್ಕೆ ದಾಳಿಯಿಡಲು ಬಂದರೇನೊ ಅನ್ನುವಂತೆ, ಬಾಗಿಲು ತೆರೆದರೆ ಒಬ್ಬಂಟಿ, ಒಬ್ಬ ಅಂಟಿ ಬಂದಿದ್ದರು, ಒಬ್ಳೆ ಕೂತು ಬೇಜಾರಾಗಿತ್ತು ಸುಮ್ನೇ ಹಾಗೇ ಮಾತಾಡಿಸಿಕೊಂಡು ಹೋಗೊಣವೆಂದು ಬಂದೆ ಅಂತ... ಮತ್ತೆ ಹೀಗೆ ಒಬ್ಬಂಟಿಯಾಗಿ, ಅಲ್ಲಲ್ಲ ನನ್ನಾkಯೊಂದಿಗೆ ಸಿಗುತ್ತೇನೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/obbanti.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, October 4, 2009

ಕಾಮನ್-ಬಿಲ್ಲು!

ಸುಳ್ಳೇ ಗೊರಕೇ ಸದ್ದು ಮಾಡ್ತಾ ಮಲಗಿದ್ದೆ, ಇವಳು ಪಾಪ ಗಾಢ ನಿದ್ರೇಲೀ ಇದೀನಿ ಅಂತ ಏಳಿಸದಿರಲಿ ಅಂತ, "ರೀ ಸುಮ್ನೇ ಏಳಿ ನಂಗೊತ್ತು ನೀವು ನಿದ್ರೇಲೀ ಗೊರಕೆ ಸದ್ದೆಲ್ಲ ಮಾಡಲ್ಲ, ನಾಟಕ ಸಾಕು" ಅಂತ ಇವಳು ಬಂದು ಅಲಾರ್ಮಿನಂತೆ ಗೊಣಗಿದಳು, ಅಲಾರ್ಮ್ ಸದ್ದು ಮಾಡಿದ್ರೆ ಏನ್ ಎದ್ದೇಳ್ತೀವಾ, ಬೆಳಗಾಯ್ತು ಅಂತ ಗೊತ್ತಾಗ್ತದೆ ಅಷ್ಟೇ, ನಾವೆದ್ದೇಳೋದು ನಮಗಿಷ್ಟ ಬಂದಾಗಲೇ, ಅಂತನಕೊಂಡು ಇನ್ನು ಜೋರು ಸದ್ದು ಮಾಡುತ್ತ ಮಲಗಿದೆ, "ಇದು ಜಾಸ್ತಿ ಆಯ್ತು" ಅಂತ ಮತ್ತೊಂದು ವಾರ್ನಿಂಗ್ ಕೊಟ್ಟಳು, ಅಲ್ಲೇ ಮಲಗಿದಲ್ಲಿಂದಲೇ "ಒಮ್ಮೊಮ್ಮೇ ಸುಸ್ತಾಗಿ ಮಲಗಿದಾಗ ಗೊರಕೆ ಸದ್ದು ಎಲ್ರೂ ಮಾಡ್ತಾರೆ" ಅಂತ ಉತ್ತರಿಸಿದೆ. "ಓಹೋ, ನಿದ್ರ್‍ಎಲೀ ಉತ್ತರ ಕೂಡಾ ಕೊಡ್ತಾರೆ ಅಲ್ವಾ" ಅಂತ ಅಲ್ಲಿಗೇ ಬಂದು ತಡವಿದಳು. ಇನ್ನೂ ಎದ್ದೇಳದಿದ್ದಾಗ "ಈಗ ಎದ್ದರೆ ಸರಿ ಇಲ್ಲಾಂದ್ರೆ ಪೇಂಟ್ ತಂದು ಸುರೀತೀನಿ" ಅಂದ್ಲು. ಇದೇನಿದು ಹೊಸದು ನೀರು ಸುರಿಯೋ ಬದಲು ಪೇಂಟ್ ಅಂತೀದಾಳೆ ಅಂತ ಅನುಮಾನ ಬೇಡ, ಅಂದು ಮನೆ ಪೇಂಟ್ ಮಾಡಿಸೋರು ಇದೀವಿ ಅಂತ ಆಗಲೇ ನನಗೂ ನೆನಪಾಗಿದ್ದು. ತಡಬಡಿಸಿ ಎದ್ದೆ, "ಪೇಂಟರ್ ಬಂದಿದೀದಾನಾ" ಅನ್ನುತ್ತ. "ಇನ್ನೂ ಇಲ್ಲ, ಪೇಂಟ ತಂದಿಡಿ ಬರ್ತಾನೆ" ಅಂದ್ಲು. "ಯಾವ ಬಣ್ಣ ಇನ್ನೂ ನಿರ್ಧರಿಸೇ ಇಲ್ಲ" ಅಂದ್ರೆ. "ಒಂದು ನಾಲ್ಕೈದು ಬಣ್ಣ ಸ್ವಲ್ಪ ಸ್ವಲ್ಪ ತಂದಿಡಿ, ನೊಡೋಣ" ಅಂತ ಹೇಳಿದಳು, "ಇದೇನು ಮನೇನಾ ಕಾಮನಬಿಲ್ಲುನಾ, ಮನೆಗೆ ಪೇಂಟ ಮಾಡ್ತಾ ಇರೋದು ಕಣೇ, ಕಾಮನಬಿಲ್ಲು ಬಿಡಿಸ್ತಾ ಇಲ್ಲ, ಬಿಲ್ಲು ಎಷ್ಟಾಗುತ್ತೊ ಏನೊ" ಅಂತ ಕಣ್ಣುಜ್ಜುತ್ತ ಹೊರಬಂದೆ.

ಈರುಳ್ಳಿ ಮೆನಸಿನಕಾಯಿ ಹೆಚ್ಚುತ್ತ ಕುಳಿತಿದ್ದವಳು "ಇದೋ ಈ ಮೆಣಸಿನಕಾಯಿ ಇದೆಯಲ್ಲ, ಈ ಬಣ್ಣ ಇಲ್ಲಿ ಸರಿಯಾಗಿರತ್ತೇ" ಅಂತ ಗೊಡೆಯೊಂದನ್ನು ತೋರಿಸಿದಳು. "ಹೂಂ ಮತ್ತೆ ಅಲ್ಲಿ, ಯಾವುದು, ಸೌತೇಕಾಯಿ, ಗಜ್ಜರಿ ತಂದು ಕೊಡಲಾ ಬಣ್ಣ ಹೇಳಲು" ಅಂದ್ರೆ. "ರೀ ಗಜ್ಜರಿ ಬಣ್ಣ ಅಲ್ಲಿ ಸೂಪರ್" ಅಂತಂದಳು. "ಸರಿ ಬಿಡು ಬಣ್ಣ ತರುವ ಮೊದಲು ತರಕಾರಿ ಮಾರ್ಕೆಟಗೇ ಹೋಗಬೇಕು ಅಂತಾಯ್ತು, ಪೇಂಟ ಅಂಗಡೀಲಿ ತರಕಾರಿ ಹಿಡಿದು ನಿಲ್ಬೇಕು ಅಷ್ಟೇ" ಅಂತ ಬಯ್ದರೂ, ಮತ್ತೆ "ಈ ಕೆನೆ ಬಣ್ಣ ಬೆಡರೂಮಿಗೆ" ಅಂತ ಹಾಲಿನ ಪಾತ್ರೆ ತೋರಿಸಿದಳು. "ಸರಿ ಮೊದಲು ಹಾಲು ತರ್ತೀನಿ ಹಾಗಾದ್ರೆ, ಹಾಲಿನಂಗಡಿ ಹಾಸಿನಿ ನೋಡಿ ಬಹಳ ದಿನ ಬೇರೆ ಆಯ್ತು" ಅಂತ ನಡೆದರೆ, ದುರುಗುಟ್ಟಿಕೊಂಡು ನೋಡಿದಳು.

ಟೀ ಹೀರುತ್ತ ಕೂತವರ ಮಾತು ಮತ್ತೆ ಬಣ್ಣದೆಡೆಗೆ ಮರಳಿತು, "ಮನೆಯೆಲ್ಲ ಕ್ರೀಮ, ಕೆನೆ ಬಣ್ಣ ಮಾಡಿಸೋಣ ಬೆಳಕು ಚೆನ್ನಾಗಿರ್ತದೆ" ಅಂತ ನಾನಂದೆ,
"ಮನೆ ಪೂರಾ ಒಂದೇ ಬಣ್ಣ ಮಾಡಿಸೋಕೇ ಇದೇನು ವೈಟಹೌಸಾ" ಅಂತ ತಿರುಗಿಬಿದ್ಲು. ಇವಳಂತೂ ಕಾಮನಬಿಲ್ಲು ಮಾಡೊ ಯೋಚನೆಯಲ್ಲೆ ಇದ್ದಂತಿತ್ತು, "ಅದೂ ಒಳ್ಳೆ ಐಡಿಯಾನೇ, ಮನೆಯೆಲ್ಲ ಬಿಳಿ ಬಣ್ಣ ಪೇಂಟ್ ಮಾಡಿಸಿ, ಯಾವ ರೂಮಲ್ಲಿ ಯಾವ ಬಣ್ಣ ಬೇಕೊ ಆ ಬಣ್ಣದ ಲೈಟು ಹಾಕಿದ್ರೆ, ಹಾಲ್ ಒಂದಿನಾ ಹಸಿರು, ಮತ್ತೊಂದಿನಾ ಕೆಂಪು" ಅಂತಿದ್ದರೆ, "ಇನ್ನೊಂದು ದಿನಾ ಕೇಸರಿ... ಸರಿಯಾಗಿರ್ತದೆ, ಮನೇನಾ ಟ್ರಾಫಿಕ ಸಿಗ್ನಲ್ಲಾ, ಕರೆಂಟು ಬಿಲ್ಲು ಯಾರು ಕಟ್ಟೊದು" ಅಂತ ಸಿಡುಕಿದಳು. "ನಿಂಗೆ ಯಾವ ಬಣ್ಣ ಬೇಕೊ ಅದೇ ಮಾಡಿಸ್ಕೊ ಹೋಗು, ದಿನದ ಹನ್ನೆರಡು ಘಂಟೆ ಆಫೀಸಲ್ಲೇ ಇರ್ತೀನಿ, ಮನೆ ಬಣ್ಣ ಯಾವುದಿದ್ರೆ ಏನಂತೆ" ಅಂತ ಕೈಚೆಲ್ಲಿದೆ. ಪಕ್ಕದಲ್ಲಿ ಬಂದು ಆತುಕೊಂಡು ಕೂತು ಬಣ್ಣ ಬಿಟ್ಟು ಬೆಣ್ಣೆ ಹಚ್ಚತೊಡಗಿದಳು "ಬೇಜಾರಾಯ್ತಾ" ಅಂತ. "ನನಗ್ಯಾಕೆ ಬೇಜಾರು ನಿನ್ಗೆ ಹೇಗೆ ಬೇಕೋ ಹಾಗೆ ಬಣ್ಣ ಮಾಡಿಸು, ಬಣ್ಣದಲ್ಲಿ ಹೆಣ್ಮಕ್ಕಳಿಗೇ ಜಾಸ್ತಿ ತಿಳಿಯೋದು" ಅಂದೆ. "ಏಳು ಬಣ್ಣ ಸೇರಿನೇ ಬಿಳಿ ಬಣ್ಣ ಆಗೋದು ಅನ್ನೊ ಹಾಗೆ ಇಬ್ರೂ ಸೇರಿನೇ ನಿರ್ಧರಿಸೋದು" ಅಂದ್ಲು, "ಅದೇ ಬಿಳಿ ಬಣ್ಣ ಮಾಡಿಸಿ, ಅದರಲ್ಲಿ ನಿನ್ನಿಷ್ಟದ ಬಣ್ಣ ನನ್ನಿಷ್ಟದ ಬಣ್ಣ ಎಲ್ಲ ಇದೇ ಅನ್ಕೊಂಡರೆ" ಅಂದೆ, "ರೀ ಈಗೇನು ಬಿಳಿ ತಾನೆ ಅದೇ ಮಾಡಿಸಿ, ಆಮೇಲೆ ಧೂಳು ಕೂತು ಕಲೆಯಾದರೆ ನನ್ನ ಕೇಳ್ಬೇಡಿ" ಅಂತ ಈಗಲೇ ಎಚ್ಚರಿಸಿದಳು. ಅದೂ ನಿಜವೆನಿಸಿತು, ಅಲ್ದೆ ಇದೇನು ವೈಟಹೌಸೂ ಅಲ್ಲ ಆ ಬಣ್ಣ ಮಾಡಿಸೊಕೆ ಅಂತ.

"ಪಿಂಕ ಹೇಗಿರ್ತದೆ" ಅಂದೆ ಹುಡುಗಿಯರಿಗೆ ಅದು ಇಷ್ಟ ಆಗಬಹುದು ಅಂತ. "ಪಿಂಕ ಚಡ್ಡಿ, ಪಿಂಕ ಸ್ಲಿಪ್, ಪಿಂಕಿ ಫಿಂಗರ್ರು ಅಂತೆಲ್ಲ ಕೇಳಿ ಕೇಳಿ ಸಾಕಾಗಿಲ್ವಾ, ಮನೇನೂ ಅದೇ ಬಣ್ಣ ಬೇಕಾ" ಅಂತ ತಿರುಗಿಬಿದ್ಲು, "ನಂಗೂ ಇಷ್ಟ ಇರಲಿಲ್ಲ ಬಿಡು, ನಿನ್ಗೆ ಇಷ್ಟ ಎನೊ ಅಂತ ಕೇಳಿದೆ" ಅಂದೆ. "ನನ್ನಿಷ್ಟ ಎಲ್ಲ ಬೇಡ ನಿಮ್ಮಿಷ್ಟ ಹೇಳಿ" ಅಂತ ಕೇಳಿದ್ದಕ್ಕೆ "ಸುತ್ತಲೂ ತಿಳಿ ಹಸಿರು ಗಾರ್ಡನ್ನಿನಂತೆ ವಾಲ ಪೇಂಟಿಂಗ್, ಅದೊ ಆ ಗೋಡೆಯಲ್ಲಿ ನೀರಿಗೆ ಹೊರಟು ನಿಂತು ತಿರುಗಿ ನೋಡುತ್ತಿರುವಂತ ಹುಡುಗಿ, ಅಲ್ಲಿ ಪಕ್ಕದಲ್ಲಿ ಹುಲ್ಲು ಮೇಯುತ್ತಿರುವ ಹಸು, ಇಲ್ಲಿ ನೀರ ಝರಿ, ಆ ಪಿಲ್ಲರ ಸುತ್ತ ಹರಡಿರುವ ಬಳ್ಳಿ ಅಲ್ಲಲ್ಲಿ ಬಿಳಿ ಬಿಳಿ ಹೂವು, ಮೇಲೆ ತಿಳಿ ನೀಲಿ ಆಕಾಶ, ಮೋಡಗಳು, ಕತ್ತಲಾದರೆ ಈ ಬೆಡ್ ಮೇಲೆ ಮಲಗಿ ಮೇಲೆ ನೋಡುತ್ತಿದ್ದರೆ ಅಲ್ಲಲ್ಲಿ ಮಿನುಗುವ ನಕ್ಷತ್ರದಂತ ಚಿಕ್ಕ ಚಿಕ್ಕ ಎಲ್.ಈ.ಡೀ ಲೈಟುಗಳು. ಪಕ್ಕದಲ್ಲಿ ಚಂದ್ರನಂತೆ ನೀನು" ಅಂದೆ. ಕನಸುಗಣ್ಣುಗಳನ್ನು ತೆರೆದು ನೋಡುತ್ತಲೇ ಇದ್ಲು, ಅಲುಗಿಸಿದೆ ಮತ್ತೆ ಕಲ್ಪನೆಯಿಂದ ಹೊರಬಂದಳು, ಮತ್ತೆ ಹೇಳಿದೆ "ಇದು ನನ್ನಿಷ್ಟ, ಆದರೆ ಈ ರೀತಿ ಬಣ್ಣ ಮಾಡಿಸಿದರೆ ಬರುವ ಬಿಲ್ಲು ಎದೆಗೇ ನಾಟುತ್ತದೆ ಬಾಣದಂತೆ, ಅಲ್ಲದೇ ಬಾಡಿಗೆ ಮನೆ ಬೇರೆ, ಸ್ವಂತದ್ದಾದರೆ ನಮ್ಮಿಷ್ಟ ಏನು ಮಾಡಿದರೂ ಓಕೇ" ಅಂದೆ. "ಐಡಿಯಾ ಎನೋ ಬಹಳೇ ಚೆನ್ನಾಗಿದೆ, ಆದ್ರೆ ಕಾಸ್ಟ್ಲಿ" ಅಂತ ಸುಮ್ಮನಾದಳು.

ಅಷ್ಟರಲ್ಲಿ ಮನೆ ಮಾಲೀಕರು ಬಂದರು, ಈಗಿರುವ ಬಣ್ಣವೇ ಮಾಡಿಸಿ ಅಂತಂದರು, ನಮ್ಮ ಬದಲಾವಣೆ ಯೋಜನೆಗಳನ್ನು ಹೇಳಬೇಕೆನಿಸಿದರೂ ಮನೆ ಅವರದಲ್ಲವೇ ಅಂತ ಸುಮ್ಮನಾದೆವು, ಹಾಗೂ ಹೀಗೂ ಇವಳು ತಿಳಿನೀಲಿ ಬಣ್ಣ ಎಲ್ಲ ಕಡೆ ಒಂದೇ ರೀತಿ ಆಗುತ್ತದೆ ಅಂತ ಹೇಳಿ ಒಪ್ಪಿಸಿದಳು, ಹಾಲ್‌ನಲ್ಲಿನ ತಿಳಿ ಹಸಿರು ಬಣ್ಣಕ್ಕೆ ವಿದಾಯ ಹೇಳಿಯಾಯ್ತು. ಪೇಂಟರ್ ಬೇರೆ ಒಂದೇ ಬಣ್ಣವಾದರೆ ಅವನಿಗೂ ಅನುಕೂಲ ಅಂದ, ಅಲ್ಲದೇ ಉಳಿತಾಯ ಕೂಡ ಆಗುತ್ತದೆ ಅಂದದ್ದು ಕೇಳಿ ಖುಷಿಯಯ್ತು. ಇನ್ನೇನು ಹೊರಡಬೇಕೆನ್ನುವಲ್ಲಿ "ಬಾರ್ಡರಗೆ ಯಾವ ಬಣ್ಣ" ಅಂತ ಕೇಳಿದಳು. ನಾನು "ಇದೇನು ಸೀರೆನಾ, ಬಾರ್ಡರ ಬಣ್ಣ ಬೇರೆ ಮಾಡಿ ಗೊಂಡೆ ಕಟ್ಟೊದಕ್ಕೆ" ಅಂದೆ, ಅಷ್ಟರಲ್ಲಿ ಪೇಂಟರ್ "ಸರ್ ಸೀಲಿಂಗ ಬಾರ್ಡರ್ ಕಲರು ಬೇರೆ ಇರ್ತದೆ" ಅಂದ. ಗೊತ್ತಿಲ್ಲದೇ ಏನೊ ಹೇಳಹೋದ ನನ್ನ ಪೆಚ್ಚು ಮೋರೆ ನೋಡಿ ನಕ್ಕಳು "ಅದು ಮೇಡಮ್ ಇಷ್ಟ" ಅಂತ ಸಂಭಾಳಿಸಿದೆ.

ಅಂತೂ ಇಂತೂ ಮುಂಜಾನೆಯಿಂದ ಸಂಜೇವರೆಗೆ ಪೇಂಟರ ಹಿಂದೆ ಸುತ್ತಿ, ಅಲ್ಲಿ ಕೆತ್ತು, ಇಲ್ಲಿ ಮೆತ್ತು ಅಂತ ಏನೇನೊ ಹೇಳಿ ಪೇಂಟ್ ಮಾಡಿಸಿದಳು, ಸಂಜೇ ಹೊತ್ತಿಗೆ, ಅವಳ ಮುಖದಲ್ಲೂ ಬಣ್ಣ ಮೆತ್ತಿತ್ತು, "ಬಾರೆ ಇಲ್ಲಿ ಮೀಸೆ ಕೊರೆಯುತ್ತೀನಿ" ಅಂತ ಅಂದವನಿಗೆ ಗಲ್ಲದ ಮೇಲೆ ಅವಳು ಕೊರೆದ ಎರಡು ಗೆರೆಗಳೊಂದಿಗೆ ಥೇಟ್ ಆದಿವಾಸಿಗಳಂತೆ ಕಾಣುತ್ತಿದ್ದೆ, ನಾ ಕೊರೆದ ಮೀಸೆ ತಿರುವಿಕೊಂಡು, ನನ್ನ ಅವಳು ಹೆದರಿಸುತ್ತಿದ್ದುದು ನೋಡಿ ಪೇಂಟರ ಕೂಡ ನಗುತ್ತಿದ್ದ.

ಎನೇನೊ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತೇವೆ, ಬದುಕೇ ಬಣ್ಣ ತುಂಬಿ ಕಾಮನಬಿಲ್ಲು ಆಗಲಿ ಅನ್ನುತ್ತೇವೆ, ಅದರೆ ಅದೇ ಕಾಮನ್ ಮ್ಯಾನ, ಶ್ರೀಸಾಮಾನ್ಯನ ಪ್ರಾಬ್ಲ್ಂ ಅಂತ ಬಿಲ್ಲು ಧುತ್ತೆಂದು ಮುಂದೆ ಬಂದು ನಿಂತಾಗ ಕನಸುಗಳ ಬಣ್ಣ ಬಿಳಚಿಕೊಂಡುಬಿಡುತ್ತದೆ. ಒಬ್ಬರಿಗೆ ಹಸಿರು ಇಷ್ಟವಾರದೆ, ಇನ್ನೊಬ್ಬರಿಗೆ ಕೆಂಪು, ಮತ್ತೊಬ್ಬರಿಗೆ ನೀಲಿ... ಎಲ್ಲವನ್ನೂ ಸೇರಿಸಿದರೆ ಬಿಳಿ ಅಂತ ಹೀಗೆ ಬದುಕು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಸುತ್ತದೆ. ಹಾಗಂತ ಕನಸು ಕಾಣಲೇಬಾರದೆಂದಿಲ್ಲ, ಕಾಣಬೇಕು ಕನಸು ನನಸಾಗಿಸಲು ಶ್ರಮಿಸಬೇಕು, ನನಸಾಗದಿದ್ದರೆ ನಸುನಗುತ್ತ ಬಂದದ್ದನ್ನು ಸ್ವೀಕರಿಸಲೂ ಸಿದ್ಧರಾಗಿರಬೇಕು.

ನಮ್ಮಿಬ್ಬರ ಕಾಮನ್ ಇಷ್ಟವಾದ ತಿಳಿನೀಲಿ ಬಣ್ಣ ಮನೆ ತುಂಬ ಬಳಿದಾಗಿತ್ತು, ಬಿಲ್ಲು ಕೂಡ ಕಮ್ಮಿಯಾಗಿತ್ತು, ಒಂಥರಾ ಕಾಮನಬಿಲ್ಲೇ ಆಗಿತ್ತು. ಎಲ್ಲ ತೊಳೆದು ಮತ್ತೆ ಸಾಮಾನೆಲ್ಲ ಜೋಡಿಸಿ ಪೇರಿಸಿಟ್ಟು ಸುಸ್ತಾಗಿತ್ತು. ಬೆಡ್ ಮೇಲೆ ಮಲಗಿಕೊಂಡು ಪಕ್ಕದಲ್ಲಿದ್ದವಳಿಗೆ ಕೇಳಿದೆ "ಇಷ್ಟ ಆಯ್ತಾ ಬಣ್ಣ" ಅಂತ. "ನಿಮ್ಮ ಕನಸಿನ ಬಣ್ಣದಷ್ಟೇನೂ ಅಲ್ಲ, ಆದ್ರೆ ನಮ್ಮಿಬ್ಬರ ಇಷ್ಟದ ತಿಳಿನೀಲಿ ಆದರೂ ಇದೆ ಅಂತ ಸಮಾಧಾನ ಆಯ್ತು, ರೀ ಒಂದು ಕೆಲ್ಸ ಮಾಡೊಣ ಈ ಮೇಲಿನ ಸ್ಲ್ಯಾಬ ಕಿತ್ತು ತೆಗೆಸಿದ್ರೆ ಮೇಲೆ ಆಕಾಶ ನಕ್ಷತ್ರ ಎಲ್ಲ ಕಾಣಿಸ್ತದೆ" ಅಂದ್ಲು. "ಮಳೆ ಆದ್ರೆ ಮನೆಯಲ್ಲ ನೀರು ಸುರಿದು ಇಲ್ಲಿ ನೀರ ಝರಿ ಕೂಡ ಹರಿಯುತ್ತದೆ, ಹಾಗೆ ಹೊರಗೆ ಕಾಮನಬಿಲ್ಲೂ ಕಾಣ್ತದೆ" ಅಂದೆ, "ಅಲ್ಲಿ ನೀರಿಗಾಗಿ ಹೊರಟ ಹುಡುಗಿಯಂತೆ ಬಿಂದಿಗೆ ಹಿಡಿದುಕೊಂಡು ತಿರುಗಿ ನೋಡುತ್ತ ಬೇಕಾದ್ರೆ ನಾನು ನಿಲ್ತೀನಿ, ಹಸು ಒಂದು ತಂದರಾಯ್ತು ನೋಡಿ" ಅಂದ್ಲು. "ಬಕೆಟ್ಟು ತೆಗೆದುಕೊಂಡು ಝರಿಯ ನೀರು ಹೊರಹಾಕುತ್ತ ನಾ ನಿಲ್ಲಬಹುದುಲ್ಲ" ಅಂದೆ ನಕ್ಕಳು, "ನಮ್ಮನೆ ಅಂತ ಆದರೆ ಹಾಗೇ ಬಣ್ಣ ಮಾಡಿಸೋಣ, ಸಧ್ಯಕ್ಕೆ ನಮ್ಮಿಬ್ಬರ ಇಷ್ಟದ ಒಂದು ಬಣ್ಣವಾದರೂ ಇದೆಯಲ್ಲ" ಅಂತಂದೆ, "ನಮ್ಮನೆ ಆದರೆ ಕಾಮನಬಿಲ್ಲು ಮಾಡೊಣ" ಅಂತಿದ್ದಳು, ಹಾಗೇ ಕನಸುಗಳೊಂದಿಗೆ ನಿದ್ರೆಗೆ ಜಾರಿದೆವು, ಮತ್ತೆ ಹೀಗೆ ಬದುಕಿನ ಬಣ್ಣ ಬಣ್ಣದ ಕನಸುಗಳೊಂದಿಗೆ ಮತ್ತೆ ಸಿಗುತ್ತೇನೆ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/kamanabillu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು