Sunday, February 28, 2010

ನನ್ನತ್ತೆ...

"ಪಕ್ಕದಮನೆ ಪದ್ದು ಗಂಡನಿಗೆ ಪಕ್ಕದೂರಿಗೆ ಟ್ರಾನ್ಸಫರ್ ಆಗ್ಲಿ, ಹಾಲಿನಂಗಡಿ ಹಾಸಿನಿ ಹಾಲು ಮಾರೊ ಹುಡುಗನೊಂದಿಗೆ ಓಡಿ ಹೋಗ್ಲಿ, ಹೂವಾಡಗಿತ್ತಿ ಗುಲಾಬಿಗೆ ಮಾರೊಕೆ ಹೂವೇ ಸಿಗದಿರಲಿ, ನರ್ಗೀಸ್ ನರ್ಸಗೆ ನೈಟ್ ಶಿಫ್ಟ್ ಆಗ್ಲಿ..." ಅಂತ ಇನ್ನೇನೇನೊ ನನ್ನಾಕೆ ಶಾಪ ಹಾಕುತ್ತಿದ್ಲು. ನಾನೂ ಅಲ್ಲೇ ಕೂತು "ಪದ್ದು ಹೋದ್ರೆ ನೆರೆಮನೆಗೆ ನೂತನವಾಗಿ ನೂತನ್ ಬರಲಿ, ಹಾಸನದ ಹಾಸಿನಿ ಹೋದ್ರೆ, ಹೊನ್ನಾವರದಿಂದ ಹೊನ್ನಿನ ಜಿಂಕೆ ಹರಿಣಿ ಬರಲಿ, ಹೂವಿಲ್ಲದೇ ಗುಲಾಬಿ ಹೋದ್ರೆ, ಹಣ್ಣು ಮಾರಲು ಚಕ್ಕೊತ್ತಾ ಬೇಕಿತ್ತಾ ಅಂತ ಚಕೋರಿ ಬರಲಿ, ನರ್ಗೀಸಗೆ ನೈಟ್ ಶಿಫ್ಟ್ ಆದ್ರೆ, ಮಾರ್ನಿಂಗ್ ಶಿಫ್ಟಗೆ ಮಧುಬಾಲಾ ಬರಲಿ..." ಅಂತ ಶಾಪವೂ ವರವೇ ಅನ್ನುತ್ತಿದ್ದೆ. ಏನಂದರೂ ಜಗ್ಗದ ಜಟ್ಟಿ ಇದು ಅಂತ ಬುಸುಗುಡುತ್ತ ನೋಡಿ ಬಿರಬಿರನೆ ಹೊರಟು ಹೋದಳು. ಅದ್ಯಾಕೆ ಇಷ್ಟು ಸಿತ್ತಾಗಿದ್ದಾಳೆ ನನ್ನಾಕೆ ಅಂತಾನಾ ಅನುಮಾನ. ಇದಕ್ಕೆಲ್ಲ ಕಾರಣ ನನ್ನತ್ತೆ...

ಮಾತಾಡಿದರೆಲ್ಲಿ ಮುತ್ತು ಉದುರೀತು ಅಂತ ಮೂಲೆ ಹಿಡಿದು ಮೂಕವಾಗಿ ಕೂತುಬಿಡುವ ನನ್ನತ್ತೆ ಅಂಥದ್ದೇನು ಮಾಡಿಲ್ಲ ಬಿಡಿ. ಈ ಹೆಂಡತಿಯರ ಕೆಲ ಅಮ್ಮಂದಿರು ಹೇಗೆಂದರೆ ಮಗಳನ್ನು ಅವಳ ಅತ್ತೆ (ಗಂಡನ ತಾಯಿ) ಮೇಲೆ ಎತ್ತಿ ಕಟ್ಟುವುದರಲ್ಲಿ ಹೆಸರುವಾಸಿ ಅದಕ್ಕೊಂದು ಅಪವಾದ ಇದು. ಏನಿಲ್ಲ ಬೆಂಗಳೂರಿಗೆ ಮೊದಲ ಸಾರಿ ಬಂದಿರುವುದು, ಅದಕ್ಕೆ ಅವರನ್ನು ಬೆಂಗಳೂರು ಒಂದು ರೌಂಡ್ ಹಾಕಿಸಿಕೊಂಡು ಬರೋಣ ಅಂತ ಇವಳ ಪ್ಲಾನ್, ನನಗೂ ಜತೆ ಬಾ ಅಂದಿದ್ದಕ್ಕೆ, ನಾನು "ದಿನಾ ಸುತ್ತಿದ್ದೇ ಸಾಕಾಗಿದೆ ನಾನೊಲ್ಲೆ" ಅಂತ ನಿರಾಕರಿಸಿದ್ದೇ ತಪ್ಪಾಗಿತ್ತು. ಮನೆಯಲ್ಲಿ ಕೂತು ಪಕ್ಕದಮನೆ ಪದ್ದುಗೆ ಲೈನ ಹೊಡಿತೀರಾ ಅಂತ ಶಾಪ ಹಾಕುತ್ತಿದ್ದಳು.

ಸಂಜೆಗೆಲ್ಲ ಮತ್ತೆ ಸರಿಹೋಗುತ್ತಾಳೆ ಅಂತ ಸುಮ್ಮನಾಗಿದ್ದೆ, ಅಲ್ಲದೆ ಮಾವ, ಅವಳ ತಮ್ಮ ಬೇರೆ ಜತೆ ಇದ್ದಾಗ ನಾ ಹೋಗಲೇಬೇಕೆಂದೆನಿಸಿರಲಿಲ್ಲ. ಅತ್ತೆ ಅಷ್ಟು ದೂರದಲ್ಲಿ ಸುಮ್ಮನೇ ಕೂತಿದ್ದರೆ, "ಅತ್ತೆಗೆ ಕಾಫಿ ಟೀ ಏನಾದ್ರೂ ಕೊಡೇ" ಅಂತ ಆರ್ಡರ್ ಮಾಡಿದೆ. "ಹಾಗಲಕಾಯಿ ರಸ ಮಾತ್ರ ಕುಡಿಯೋದಲ್ವೇನಮ್ಮ ನೀನು, ಸ್ವಲ್ಪ ಡಯಾಬಿಟಿಸ್ ಆದಾಗಿಂದ" ಅಂತ ತಾನೇ ಹೇಳಿ, ಅವರಿಗೆ ಒಂದು ಕಪ್ಪು ಹಾಗಲಕಾಯಿ ರಸ, ನಂಗೆ ಟೀ ಕೊಟ್ಟು ಒಳಗೆ ಹೋದ್ಲು. ಮನಸ್ಸಿಲ್ಲದ ಮನಸಿಂದ ಅತ್ತೆ ಅದನ್ನು ಕುಡಿಯುವುದ ನೋಡುತ್ತಿದ್ದರೆ ನನಗೇಕೊ ನನ್ನ ಟೀ ಕೂಡ ರುಚಿಸಲಿಲ್ಲ. ಆಗ ಎದ್ದು ಬಂದ ಅತ್ತೆ, "ನೀವೂ ಬಂದ್ರೆ ಚೆನ್ನಾಗಿತ್ತು" ಅಂತ ಕ್ಷೀಣ ದನಿಯಲ್ಲಿ ಕೇಳಿದ್ದು ಅಚ್ಚರಿ ಮೂಡಿಸಿತು. ಅಷ್ಟರಲ್ಲಿ "ದಿನಾ ಸುತ್ತಿ ಬೇಜಾರಾಗಿದೆ ಅಂತ ಬಿಡಮ್ಮ" ಅಂತ ನನ್ನಾಕೆಯಂದಳು. ಅಬ್ಬ ಇಷ್ಟೊತ್ತು ಬರಲ್ಲ ಅಂದಿದ್ದಕ್ಕೆ ಜಗಳಕ್ಕಿಳಿದವಳು, ನನ್ನ ಪರವಾಗಿ ಮಾತಾಡೋದಾ. ನನ್ನಾಕೆಗೆ ಗೊತ್ತು, ಬರುವುದಾಗಿದ್ದರೆ ನಾ ಬರುತ್ತಿದ್ದೆ, ಅಲ್ಲದೇ ಸಿಕ್ಕ ಒಂದು ದಿನ ರಜೆ ಮನೆಯಲ್ಲಿದ್ದರಾಯ್ತು ಅನ್ನುವ ನನ್ನ ಪ್ಲಾನಗೆ ಯಾಕೆ ಕಲ್ಲು ಹಾಕಬೇಕು ಅನ್ನುವಷ್ಟು ನನ್ನ ಅರ್ಥ ಮಾಡಿಕೊಂಡಿದ್ದಾಳೆ. ಆದ್ರೂ ಸ್ವಲ್ಪ ಹುಸಿಕೋಪ ತೋರಿಸಿದಾಗಲೇ ಸಮಾಧಾನ.

ತಟ್ಟನೇ ಎದ್ದು, ಸ್ನಾನ ಮಾಡಿ ರೆಡಿಯಾಗಿಬಿಟ್ಟೆ, ಎಂದೂ ಕೇಳದ ಅತ್ತೆ ಕೇಳಿದಮೇಲೆ ಇಲ್ಲವೆನ್ನಲಾದೀತೇ ಅಂತ. ನನ್ನಾಕೆಯ ಕೋಪಕ್ಕೆ ತುಪ್ಪ ಏನು ಪೆಟ್ರೋಲೇ ಸುರಿದ ಹಾಗಾಯ್ತು. "ನಾ ಕರೆದ್ರೆ ಇಲ್ಲ, ಅಮ್ಮ ಕರೆದ್ರೆ... ಇರಲಿ ಇರಲಿ" ಅಂತ ಮೂಗುಮುರಿದು ತಾನೂ ರೆಡಿಯಾದಳು. ಎಲ್ಲಿಗೆ ಮೊದಲು ಅಂದರೆ ಸೀರೆ ಖರೀದಿ ಅಂದ್ಲು, "ಸುತ್ತಾಡಲು ಅಂತ ಹೇಳಿ ಇದೇನೇ ಶಾಪಿಂಗ್" ಅಂತ ಕೇಳಿದ್ದಕ್ಕೆ. "ಅಮ್ಮ ಸೀರೆ ಕೊಂಡಕೊಳ್ಬೇಕು ಅಂತಿದ್ದಳು, ಸುತ್ತಾಡಲೂ ಇನ್ನೂ ದಿನಗಳಿವೆ ಬಿಡಿ" ಅಂತಂದಳು. ಅವಳ ತಮ್ಮನಿಗೆ "ಇನ್ನು ಎರಡು ಮೂರು ಘಂಟೆ ನೊಣ ಹೊಡೆಯುವುದೇ ನಮ್ಮ ಕೆಲ್ಸ" ಅಂದ್ರೆ ಅವನು ಮುಗುಳ್ನಕ್ಕ. ಅವನ ಜತೆ ಬಂದಿದ್ದ ಅವರ ಸಂಬಂಧಿಕರ ಮಗು, "ಅಲ್ಲಿ ನೊಣ ಜಾಸ್ತಿನಾ ಅಂಕಲ್" ಅಂತು. "ಪುಟ್ಟಾ ಜಾಸ್ತಿ ಇಲ್ಲ, ಆದ್ರೂ ನಾವೇ ಹುಡುಕಿ ಹುಡುಕಿ ಹೊಡೀಬೇಕು, ಬೇರೆ ಮಾಡೊಕೆ ಕೆಲ್ಸ ಇರಲ್ಲ ನೋಡು" ಅಂದೆ, ಅದಕ್ಕೆ ಅದು ಅರ್ಥವಾಗಿದ್ದು ಅಷ್ಟಕ್ಕಷ್ಟೇ.

ಸೇಠು ಅಂಗಡಿಗೆ ಹೋಗ್ತಿದ್ದಂಗೆ ದೊಡ್ಡ ಸ್ವಾಗತಾ ಮಾಡಿದ, ಕಳೆದ ಸಾರಿ ಹಾಗೆ ಮತ್ತೆ ನನ್ನಾಕೆಗೆ ಗೊತ್ತಾಗದ ಹಾಗೆ ಅವಳಿಗೆ ಸರಪ್ರೈಜ್ ಮಾಡೊ ಸೀರೆ ಖರೀದಿಯೂ ಇದೆಯಾ ಅಂತ ಕೇಳಿಯೂ ಬಿಟ್ಟ. ಇಲ್ಲ ಅಂದಿದ್ದಕ್ಕೆ ನಿರಾಸೆಯಾಗಿರಬೇಕು, ಟೀ ಕೂಡ ತರಿಸಲಿಲ್ಲ. ಅತ್ತೆ ಒಂದು ಕೆಂಪು ಸೀರೆ ಸೆಲೆಕ್ಟ್ ಮಾಡಿದ್ದು ನೋಡಿದೆ, ಮಾವ ಅಲ್ಲೇ ಕೂತು ಅದಕ್ಕೆಷ್ಟು ಅಂತ ಕೇಳಿದ್ದಕ್ಕೆ "ಮುನ್ನೂರುಷ್ಟೇ" ಅಂತ ಸೇಲ್ಸಮನ್ ಹೇಳಿದ. "ಆಂ ಬರೀ ಮುನ್ನೂರಾ, ಒಳ್ಳೆ ಕಾಸ್ಟ್ಲಿ ಸೀರೆ ತೋರಿಸೊ" ಅಂತ ಅಬ್ಬರಿಸಿದರು. ಜತೆಗೆ ನನ್ನಾಕೆ ಕೂಡ "ಅಮ್ಮ ಕೆಂಪು ಕಲರ್ ಸರಿಹೋಗಲ್ಲ, ಆ ಥರ ಸೀರೆ ಏನು ಇದು ತೆಗೆದುಕೊ" ಅಂತ ಇನ್ನೊಂದು ತೆಗೆದಿಟ್ಟಳು. ನನ್ನಾಕೆ ಅವಳಪ್ಪ ಸೇರಿ ಕಾಸ್ಟ್ಲಿ, ಅಂತ ತಮಗಿಷ್ಟವಾದದ್ದೊಂದು ಆರಿಸಿದರೆ ಅತ್ತೆ ಅದನ್ನೇ ಎತ್ತಿಕೊಂಡು ಬಿಟ್ಟರು.
ಮಾವನಿಗೇನೊ ಒಳ್ಳೆ ಬೆಲೆ ಸೀರೆ ಕೊಡಿಸಿದೆ ಅಂತ, ನನ್ನಾಕೆಗೆ ಮಾರ್ಕೆಟನಲ್ಲಿ ಹೊಸ ಶೈಲಿ ಸೀರೆ ಕೊಡಿಸಿದೆ ಅಂತ ಹೆಮ್ಮೆ ಆಯ್ತೇನೊ, ಆದ್ರೆ ಅತ್ತೆಗೆ?

ಹೊಟ್ಟೆ ತಾಳ ಹಾಕುತ್ತಿತ್ತು, ಹೊಟೇಲಿಗೆ ನುಗ್ಗಿದೆವು. ಊಟ ಬೇಡವಾಗಿತ್ತು, ಅದಕ್ಕೆ ನಾನು ದೋಸೆ ಅಂದೆ, ಇವಳು ಇಡ್ಲಿವಡೆ, ಮಾವ ಮೊಸರುವಡೆ ಅಂದ್ರು. ಅತ್ತೆಗೆ ಕೇಳಿದ್ದಕ್ಕೆ "ದೋಸೆ" ಅಂತಿರಬೇಕಾದ್ರೆ, ಇವಳ ತಮ್ಮ "ಅಯ್ಯೊ ಎಣ್ಣೆ ಇರತ್ತೆ ಅಮ್ಮ, ಬೇಡ. ನಮಗೆ ಇಬ್ರಿಗೂ ಮೊಸರನ್ನ, ಹೊಟ್ಟೆಗೆ ಒಳ್ಳೇದು" ಅಂತ ಹೇಳಿಯೂಬಿಟ್ಟ. ನಾನೂ ದೋಸೆ ಕ್ಯಾನ್ಸಲ್ ಮಾಡಿ ಮೊಸರನ್ನ ಹೇಳಿದೆ. ಊಟವಾದ ಮೇಲೆ ಶಾಪಿಂಗ ಮಾಲ್ ನುಗ್ಗಿ ಮತ್ತಿನ್ನೇನೊ ಖರೀದಿ ಆಯ್ತು, ಎಲ್ಲ ಮನೆಬಳಕೆ ಸಾಮಗ್ರಿಗಳೇ. ಹೊರಗೆ ಬಂದ್ರೆ ಅಲ್ಲಿ ಪಾಪ್‌ಕಾರ್ನ್ ಮಾಡುತ್ತಿದ್ದು ನೋಡಿ ಜತೆ ಬಂದಿದ್ದ ಮಗು ಅದು ಬೇಕೆಂದು ರಚ್ಚೆ ಹಿಡಿಯಿತು. ಅದಕ್ಕೊಂದು ನಮಗೊಂದು ಅಂತ ಎರಡು ತಂದು ತಗೊಳ್ಳಿ ಅಂದ್ರೆ, ಅತ್ತೆ ಕೈಮುಂದೆ ಮಾಡಿದ್ದರೆ, ಮಾವ "ಈಗ ತಾನೇ ಊಟ ಆಯ್ತು, ಅದೇನು ಚಿಕ್ಕಮಕ್ಕಳ ಹಾಗೆ, ನಮಗೆ ಬೇಡ" ಅಂದಿದ್ದು ಕೇಳಿ, ಚಾಚಿದ ಕೈ ಹಿಂದೆ ಸರಿದಿದ್ದು ಗಮನಿಸಿದೆ. ಏನೊ ಹೇಳಬೇಕೆನ್ನಿಸಿದರೂ ಸರಿಯಾದ ಸಮಯ ಇದಲ್ಲ ಅಂತ ಸುಮ್ಮನಾದೆ.

ಸಂಜೆಯಾಗುತ್ತಿದ್ದಂತೇ, "ಕೊನೆದಾಗಿ ಇಸ್ಕಾನ್ ದೇವಸ್ಥಾನಕ್ಕೆ ಪಯಣ" ಅಂತ ಸಾರಿದಳು, ಒಳ್ಳೇ ಐಟಿ ಕಂಪನಿ ಇದ್ದ ಹಾಗೆ ಇದೆ ಅನ್ನುತ್ತ ಮಾವ ಓಡಾಡಿ ನೋಡುತ್ತಿದ್ದರು, ಅವರಿಗಿದು ನಾಲ್ಕನೇ ಸಾರಿ ಆದ್ರೂ ಅತ್ತೆಗೆ ಹೊಸದು ಅಂತ ಅದು ಇದು ತೋರಿಸುತ್ತಲೇ ನಡೆದಿದ್ದರು. ಅತ್ತೆ ನನ್ನಾಕೆಗೆ "ಶನಿವಾರ ಇಂದು, ಹತ್ತಿರದಲ್ಲಿ ಎಲ್ಲಿ ಮಾರುತಿ ದೇವಸ್ಥಾನ ಇಲ್ವ, ಅಲ್ಲಿ ಹೋಗಬಹುದಿತ್ತು." ಕೇಳುತ್ತಿದ್ರು. ಇವಳು "ಅಯ್ಯೊ ಇಸ್ಕಾನ್ ಪ್ರಸಿದ್ದ ಇಲ್ಲಿ, ಅದು ನೋಡಮ್ಮ" ಅಂತ ತಳ್ಳಿಹಾಕಿದಳು. ಹೊರ ಬರುವಾಗ ಹೊತ್ತಾಗಿದ್ದರಿಂದ, ನೇರ ಮನೆಗೆ ನಡೆದೆವು.

ಊಟದ ಶಾಸ್ತ್ರ ಮುಗಿಸಿ, ಬೇಗನೇ ಮೈಚೆಲ್ಲಿದ್ದರೆ. ಪಕ್ಕದಲ್ಲಿ ಮಲಗಿದ್ದ ಇವಳು ಅವಳ ಸುತ್ತು ಬಳಸಿದ ಕೈ ಎತ್ತಿ ಬೀಸಾಕಿದಳು, ಮತ್ತೆ ಅತ್ತೆ ಕೇಳಿದ್ದಕ್ಕೆ ಬಂದೆ, ಅವಳು ಕೇಳಿದ್ರೆ ಇಲ್ಲ ಅಂದಿದ್ದಕ್ಕೆ ಸಿಟ್ಟು ಇನ್ನೂ ಕಮ್ಮಿಯಾಗಿರಲಿಲ್ಲ. "ಅತ್ತೆನಾ ಹೊರಗೆ ಸುತ್ತಲು ಕರೆದೊಯ್ಯದಿದ್ದರೇ ಸರಿಯಿತ್ತು" ಅಂದೆ, "ರೀ, ನಿಮಗೆ ಬೇಡ ಆಗಿದ್ರೆ ಬರಬಾರದಿತ್ತು, ಅಮ್ಮ ಕೇಳಿದ್ಲು ಅಂತ ಅದ್ಯಾಕೆ ಬರುವ ತೊಂದ್ರೆ ತೆಗೆದುಕೊಂಡಿರಿ" ಅಂತ ಸಿಡುಕಿದಳು. ಸಿಡುಕದೇ ಮತ್ತಿನ್ನೇನು. ನಾ ಹೇಳಿದ್ದು ಇನ್ನೂ ಅವಳಿಗೆ ಅರ್ಥವಾಗಿರಲಿಲ್ಲ. "ನಾಳೇನೇ ಊರಿಗೆ ಕಳಿಸ್ತೀನಿ ಬಿಡಿ ನಿಮಗ್ಯಾಕೆ ತೊಂದ್ರೆ" ಅಂತ ಕೂಡ ಸೇರಿಸಿದಳು. ಈಗ ನಿಜಕ್ಕೂ ಅವಳಿಗೆ ಬೇಜಾರು ಸಿಟ್ಟು ಎರಡೂ ಆಗಿತ್ತು ಅನ್ನುವುದರಲ್ಲಿ ಸಂಶಯವಿರಲಿಲ್ಲ. "ಅರ್ಜೆಂಟ್ ಇದ್ರೆ ನಿಮ್ಮಪ್ಪ, ತಮ್ಮನಿಗೆ ಹೋಗು ಅಂತ ಹೇಳು, ಅತ್ತೆ ಇಲ್ಲೇ ಇರ್ತಾರೆ ನಾ ಅವರನ್ನೊಮ್ಮೆ ಹೊರಗೆ ಕರೆದುಕೊಂಡು ಹೋಗಿ ಬರ್ತೀನಿ" ಅಂದೆ. "ಏನು ಬೇಡ, ನಾನು ಸಿಟ್ಟಾಗಿದೀನಿ ಅಂತ ನನ್ನ ಸಮಾಧಾನಕ್ಕೆ ನೀವೇನೂ ಮಾಡೊದು ಬೇಡ" ಅಂತಂದು ಆಕಡೆ ತಿರುಗಿ ಮಲಗಿದಳು. "ನಿನ್ನ ಸಮಾಧಾನಕ್ಕೇನೂ ಅಲ್ಲ, ನನ್ನ ಮನದ ಸಮಾಧಾನಕ್ಕೆ, ಅತ್ತೆಗಾಗಿ... ಅಷ್ಟೇ" ಅಂತ ನಾನೂ ಮಗ್ಗಲು ಬದಲಿಸಿದೆ. ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಅತ್ತೆಗಾಗಿ ಅಂದ್ರೆ, ಅಮ್ಮನಿಗೇನಾಯ್ತು, ನಿಮಗೇನು ಬೇಜಾರು?" ಅಂತ ಕೆದಕಿದಳು. "ಮುಂಜಾನೆಯಿಂದ ನೋಡ್ತಾ ಇದೀನಿ, ಒಂದು ದಿನಾ ಟೀ ಕುಡಿದ್ರೆ ಏನಾಗತ್ತೆ, ಹಾಗಲಕಾಯಿ ರಸ ತಂದಿಟ್ಟೆ ಅತ್ತೆಗೆ, ಸೀರೆ ಕೆಂಪು ಯಾಕೆ ಅಂದೆ, ಮಾವಾನೊ ಕಾಸ್ಟ್ಲೀ ಸೀರೆ ಅಂತ... ನಿಮಗಿಷ್ಟವಾದದ್ದು ಆರಿಸಿದ್ರಿ, ಕೆಂಪೊ, ಹಸಿರೊ ಅವರಿಷ್ಟ ಅಂತ ಏನೂ ಇಲ್ವಾ, ನಿನಗೆ ಕೆಂಪು ಸರಿಯಿಲ್ಲ ಬಿಡು, ಅವರ ಇಷ್ಟ ನಿರ್ಧರಿಸೊಕೆ ನೀನಾರು? ಸಾವಿರಾರು ತೆತ್ತು ತಂದ್ರೂ ಇಷ್ಟಾನೆ ಇಲ್ಲದಮೇಲೆ ಅದೇನು. ಊಟಕ್ಕೆ ಹೋದ್ರೆ, ನಿಮ್ಮ ತಮ್ಮನ ಹೊಟ್ಟೆ ಸರಿ ಇಲ್ಲ, ತನಗೆ ಬೇಕಾದ್ರೆ ಮೊಸರನ್ನ ತಿನ್ನಲಿ. ಎಣ್ಣೆ ಹಾಕ್ದೆ ದೋಸೆನೇ ಆಗಲ್ವಾ? ಸುಮ್ನೇ ತಿಂದು ಎದ್ದು ಬಂದ್ರು ಅತ್ತೆ. ಪಾಪ್‌ಕಾರ್ನಗೆ ಕೈಚಾಚಿದ್ದ ಅತ್ತೆ, ಮಾವನ ಮಾತಿಗೆ ಹಿಂದೆಗೆದರು ನೋಡಿದ್ಯಾ? ದೊಡ್ಡದಾಗಿ ಇಸ್ಕಾನ್ ಸುತ್ತಿಸಿದೆ, ಅತ್ತೆಗೆ ಮಾರುತಿ ಮಂದಿರಕ್ಕೆ ಹೋಗಬೇಕಿತ್ತು, ಇಸ್ಕಾನ ಇನ್ನೊಮ್ಮೆ ನೋಡಬಹುದಿತ್ತು, ಭಕ್ತಿಯಿಂದ ತಪ್ಪದೇ ಹೋಗಬೇಕು ಅಂತ ಅವರಂದುಕೊಂಡಿದ್ದು ತಪ್ಪಿಸಿದಿರಲ್ಲ, ಯಾರ ಖುಷಿಗೆ ಹೋಗಿದ್ದೆವೊ ಅವರೇ ಖುಷಿಯಗಲಿಲ್ಲ ಅಂದ್ರೆ ಎಲ್ಲ ವ್ಯರ್ಥ" ಒಂದೇಟಿನಲ್ಲಿ ಮನದಲ್ಲಿದ್ದುದನೆಲ್ಲ ಹೊರಹಾಕಿದೆ. ಮರುಮಾತಾಡಬೇಕೆನಿಸಲಿಲ್ಲ.

ಸುತ್ತಲೂ ಒಮ್ಮೆ ನೋಡಿ, ಹೀಗೆ ನೋಡಿಯೇ ಇರುತ್ತೀರಿ. ಬೇರೆಯವರ ಅಭಿಪ್ರಾಯಗಳ ನಡುವೆ ಸಿಕ್ಕು ತೊಳಲಾಡುವ ಜೀವಗಳನ್ನು. ತಮ್ಮದೇ ಇಷ್ಟನಿಷ್ಟಗಳನ್ನು ಮರೆತು ಎಷ್ಟೊ ವರ್ಷಗಳಾಗಿರುತ್ತದೆ ಇಂಥವರು. ಹುಟ್ಟಿದಾಗ ಅಪ್ಪ, ಮದುವೆಯಾದಮೇಲೆ ಗಂಡ, ನಂತರ ಮಕ್ಕಳು ಎಲ್ಲರ ಹೇಳಿದ್ದು ಕೇಳಿ ಕೇಳಿ ತಮ್ಮಾಸೆಗಳನ್ನು ಹುಗಿದು ಸಮಾಧಿ ಮಾಡಿ ಎಷ್ಟೊ ದಿನವಾಗಿರುತ್ತದೆ ಅವರು. ತಮ್ಮತನ ಅನ್ನುವುದನ್ನು ಎಂದೊ ಕಳೆದುಕೊಂಡು, ಎಲ್ಲೊ ಕಳೆದುಹೋಗಿರುತ್ತಾರೆ. ಬೇರೆಯವರ ಅಭಿಪ್ರಾಯವನ್ನು ಎದುರಿಸುವ ದನಿ ಅಡಗಿಹೋಗಿರುತ್ತದೆ. ನಮ್ಮ ಅಭಿಪ್ರಾಯಗಳು, ನಮ್ಮಲ್ಲಿರಲಿ ಬೇರೆಯವರ ಮೇಲೆ ಯಾಕೆ ಹೇರುವುದು. ಮತ್ತೊಬ್ಬರಿಗೂ ಮನಸಿದೆ, ಅದರದೇ ಆದ ಆಸೆ ಆಕಾಂಕ್ಷೆಗಳಿವೆ ಅಂತ ನಮಗ್ಯಾಕೆ ತಿಳಿಯುವುದಿಲ್ಲ, ನಮಗನಿಸಿದ್ದು ಒಳ್ಳೆಯದೇ ಇರಬಹುದು, ಅವರ ಒಳ್ಳೆಯದಕ್ಕೇ ಇರಬಹುದು, ಆದರೂ ಆಯ್ಕೆ ಅವರದಾಗಿರಲಿ. ಕೆಂಪು ಸೀರೆ ಸರಿ ಕಾಣಲಿಕ್ಕಿಲ್ಲ ಅನ್ನಿ, ಆದರೆ ನಿರ್ಧಾರ ಅವರಿಗೇ ಬಿಡಿ,
ದೋಸೆಗೆ ಎಣ್ಣೆ ಜಾಸ್ತಿ ಅನ್ನಿ, ಎಣ್ಣೆ ರಹಿತ ದೋಸೆ ಕೂಡ ಇದೆ, ಕೇಳಲುಬಿಡಿ, ಪಾಪ್‌ಕಾರ್ನ್ ನಿಮಗೆ ಬೇಡ ಆಗಿರಬಹುದು, ಪಾಪ ಬೇರೆಯವರ ಬಾಯಿ ಕಟ್ಟದಿರಿ. ಮತ್ತೆ ಮೊದಲಿನಂತೆ ಅವರು ತಮ್ಮನ್ನು ತಾವು ವ್ಯಕ್ತಪಡಿಸಲಿಕ್ಕಿಲ್ಲ, ಆ ಸೂಕ್ಷ್ಮಗಳನ್ನು ನೋಡಿ, ಆ ಮಾತುಗಳು ಹೊರಬರಲು ಅವಕಾಶ ಕೊಡಬಾರದೇಕೆ. ಮತ್ತೊಬ್ಬರ ಪರ ವಕಾಲತ್ತು ವಹಿಸುವ ಅಗತ್ಯವೇನಿಲ್ಲ, ಅವರಿಷ್ಟಕ್ಕೆ ಅವರಿರಲು ಬಿಡಿ ಸಾಕು.

ಮತ್ತೆ ಶನಿವಾರ ಬಂತು, "ಅತ್ತೆ ಟೀ" ಅಂದೆ, "ಹಾಗಲಕಾಯಿ ರಸ ಮಾಡ್ತಾ ಇದಾಳೆ" ಅಂದ್ರು. "ಶುಗರ್‌ಫ್ರೀ ಅಂತ ಗುಳಿಗೆ ಹಾಕಿ ಕುಡೀಬಹುದು ನೋಡಿ" ಅಂದೆ, "ಬಹಳ ದಿನಾ ಆಯ್ತು, ಬಾಯೆಲ್ಲ ಕಹಿಯಾಗಿಬಿಟ್ಟಿದೆ, ಅವಳು ಕೊಡಲ್ಲ" ಅಂತ ನನ್ನಾಕೆ ಬಗ್ಗೆ ಹೇಳಿದ್ರು. ಮುಗುಳ್ನಕ್ಕು "ಎರಡು ಶುಗರಲೆಸ್ ಟೀ" ಅಂದೆ ನನ್ನಾಕೆಗೆ. "ಒಂದು ನಿಮಗೆ, ಮತ್ತೊಂದು ಪಕ್ಕದಮನೆ ಪದ್ದುಗೇನಾ" ಅಂದ್ಲು. "ಹಾಗಾದ್ರೆ ಮೂರು" ಅಂದೆ. ಸುಮ್ಮನೇ ಎರಡು ಕಪ್ಪು ಟೀ, ಒಂದು ಹಾಗಲಕಾಯಿ ರಸ ತಂದಿಟ್ಲು, ಟೀ ತನಗೇ ಅಂದುಕೊಂಡಿರಬೇಕು. ಒಂದು ಟೀ ಕಪ್ಪಿಗೆ ಶುಗರ್‌ಫ್ರೀ ಗುಳಿಗೆ ಹಾಕಿ ಅತ್ತೆಗೆ ಕೊಟ್ಟು, ನಾನೊಂದು ಎತ್ತಿಕೊಂಡೆ. "ಒಮ್ಮೆ ಹಾಗಲಕಾಯಿ ರಸ್ ಟ್ರೈ ಮಾಡು" ಅಂತ ನನ್ನಾಕೆಗಂದೆ ಒಂದು ಸಿಪ್ಪು ಹೀರಿದವಳ ಮುಖ ಇಂಗುತಿಂದ ಮಂಗನಂತಾಗಿತ್ತು. ಅತ್ತೆ ಅಮೃತವೇ ಸಿಕ್ಕಿದೆಯೇನೊ ಅಂತ ಒಂದೊಂದೆ ಗುಟುಕು ಹೀರುತ್ತಿದ್ದುದು ನೋಡುವಂತಿತ್ತು, ಸಿಕ್ಕ ಒಂದೇ ಚಾಕಲೇಟನ್ನು ಮಗು ಕಚ್ಚದೇ ಖಾಲಿಯಾದೀತೆಂದು ಅಷ್ಟಷ್ಟೇ ಸೀಪುವಂತೆ.

ಸ್ನಾನವಾದಮೇಲೆ "ಹತ್ತಿರದಲ್ಲೆ ವಿಜಯನಗರ ಮಾರುತಿ ಮಂದಿರವಿದೆ, ಹೋಗಬೇಕಾ" ಅಂತ ಅತ್ತೆಗಂದರೆ, ತಕ್ಷಣದಲ್ಲಿ ತಯ್ಯಾರಾಗಿದ್ದರು. ಅತ್ತೆ ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದರೆ, ನಾವಿಬ್ಬರೂ ಕೂತು ಹರಟೆ ಹೊಡೆದೆವು. ಬರಬೇಕಾದರೆ ಏನೊ ಸಮಾಧಾನ ಅತ್ತೆ ಮುಖದಲ್ಲಿ. ಕಳೆದವಾರ ತಪ್ಪಿಸಿದ್ದಕ್ಕೆ ಇನ್ನೆರಡು ಸುತ್ತು ಜಾಸ್ತಿಯೇ ಪ್ರದಕ್ಷಿಣೆ ಹಾಕಿದಂತಿತ್ತು. ಟಿಫಿನ್ನು ಮನೆಯಲ್ಲೇನು ಬೇಡ ಇಲ್ಲೇ ಮಾಡೋಣ ಅಂತ ಅವಳ ತಮ್ಮನನ್ನೂ ಅಲ್ಲೆ ಹೊಟೇಲಿಗೆ ಕರೆದೆವು, ಬೇಕೇಂತಲೇ ನಾ ಕರೆಸಿದೆ ಅಂದರೂ ತಪ್ಪಿಲ್ಲ. ಸರ್ವರ ಆರ್ಡರ ಅಂತಿದ್ದಂಗೆ ಎಂದಿನಂತೆ ಅವಳ ತಮ್ಮ "ನಂಗೆ ಅಮ್ಮಂಗೆ ಇಡ್ಲಿ, ಎಣ್ಣೆ ಎನೂ ಇರಲ್ಲ" ಅಂದ, ನಾ ಅದಕ್ಕೇ ಕಾಯುತ್ತಿದ್ದೆ. "ಏನೊ ಅಮ್ಮನ ಊಟ ತಿಂಡಿ ಕಾಂಟ್ರಾಕ್ಟ ನೀನು ತೆಗೆದುಕೊಂಡೀದೀಯಾ, ನಿನಗೆ ಹೊಟ್ಟೆ ಸರಿಯಿಲ್ಲ ಅಂದ್ರೆ ಇಡ್ಲಿನಾದ್ರೂ ತಿನ್ನು, ಮೊಸರನ್ನನಾದ್ರೂ ತಿನ್ನು, ಅವರಿಗೇನು ಬೇಕು ಅವರೇ ಹೇಳಲಿ" ಅಂತ ಕುಟುಕಿದೆ. "ಅಲ್ಲ, ಅಮ್ಮನ ಆರೋಗ್ಯಕ್ಕೆ ಒಳ್ಳೇದು ಅಂತ ನಾನೇ ಹೇಳ್ತಿದ್ದೆ" ಅಂದ. ಆದರೆ ನನ್ನ ಮಾತು ತಾಕುವಲ್ಲಿ ತಾಕಿಯಾಗಿತ್ತು. "ನನಗೆ ಎಣ್ಣೆ ಇಲ್ಲದ ದೋಸೆ" ಅಂದೆ. ಅತ್ತೆ "ಎಣ್ಣೆ ಇರಲ್ವಾ ದೋಸೇಲಿ" ಅಂದ್ರು. "ಹೇಳಿದ್ರೆ ಹಾಕಲ್ಲ, ಬೇಕಾದ್ರೆ ಟ್ರೈ ಮಾಡಿ" ಅಂದೆ. ದೋಸೆ ಆರ್ಡರ ಮೂರಾಯ್ತು, ನನ್ನಾಕೆ ಕೂಡ ಅದನ್ನೇ ಹೇಳಿದ್ಲು.

ಮರಳಿ ಮನೆಗೆ ಬಂದರೆ ಅತ್ತೆ ಇಂದೇ ಊರಿಗೆ ಹೊರಟಿದ್ದರು, ಮೊದಲಸಾರಿ ನಮ್ಮಲ್ಲಿಗೆ ಬಂದಿದ್ದಕ್ಕೆ ಅಂತ ಉಡುಗೊರೆ ಇದು ಅಂತ ಒಂದು ಪ್ಯಾಕ್ ಕೊಟ್ಟು, ಅರಿಷಿನ ಕುಂಕುಮ ಕೊಟ್ಟಳು ನನ್ನಾಕೆ. ತೆಗೆದು ನೋಡಿ ಅಂತ ಅಲ್ಲೇ ಕಾದೆವು ನಾನು ನನ್ನಾಕೆ. ಈಗೆಲ್ಲೆ ಇದು ಯಾಕೆ ಅನ್ನುತ್ತಲೇ ತೆಗೆದು ನೋಡಿದ
ಅತ್ತೆ, ಕಣ್ಣು ಕೆಂಪಾದವು, ಸಿಟ್ಟಿನಿಂದ ಅಲ್ಲ ಕಣ್ರೀ, ಸೀರೆ ಕೆಂಪು ಇತ್ತಲ್ಲ ಅದಕ್ಕೆ. ಸೇಠುಗೆ ಅದನ್ನು ಎತ್ತಿಡಲು ಹೇಳಿದ್ದೆವಲ್ಲ, ಅದೇ ಅತ್ತೆ ಆಸೆ ಪಟ್ಟದ್ದು. ಅತ್ತೆ ಅದನ್ನು ನೀವಿ ಮಡಿಕೆ ಸರಿ ಮಾಡುತ್ತಿದ್ದುದು ನೋಡುತ್ತಿದ್ದರೆ ಗೊತ್ತಾಗುತ್ತಿತ್ತು ಎಷ್ಟು ಇಷ್ಟವಾಗಿದೆ ಅಂತ. "ಉಟ್ಕೊಂಡು ಅಪ್ಪನ ಮುಂದೆ ಒಮ್ಮೆ ಹಾದು ಹೋಗು, ಇನ್ನೊಮ್ಮೆ ಹನಿಮೂನ್‌ಗೆ ಹೋಗೋಣ ನಡೆ ಅನ್ನಲಿಲ್ಲ ಅಂದ್ರೆ ಕೇಳು" ಅಂತ ಚಟಾಕಿ ಹಾರಿಸಿದಳು ನನ್ನಾಕೆ, ಅತ್ತೆ ನಾಚಿ ನೀರಾದರೆ ಕೆನ್ನೆಗೆ ಕೂಡ ಕೆಂಪಡರಿತ್ತು.

ಟ್ರೇನ್ ಹತ್ತಿಸಿ ಕಿಟಕಿಯಿಂದ ಅತ್ತೆ ಕೈಲಿ ಪಾಪ್‌ಕಾರ್ನ ಪ್ಯಾಕೆಟ್ ಕೊಟ್ಟು, ಮಾವನಿಗೂ ಕೇಳುವಂತೆ "ದಾರಿಯಲ್ಲಿ ಟೈಮ್‌ಪಾಸ್ ಆಗತ್ತೆ, ಬರೀ ಚಿಕ್ಕಮಕ್ಕಳೆ ತಿನ್ನಬೇಕಂತಿಲ್ಲ, ಇಷ್ಟವಾದವರು ತಿನ್ನಬಹುದು" ಅಂತ ಅತ್ತೆಗೆ ಹೇಳಿ, ಮಾವನಿಗೂ ಒಂದು ಶಾಕ್ ಕೊಟ್ಟೆ. ಮುಂದಿನ ಬಾರಿ ಬಂದಾಗ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಖಂಡಿತ ಆಗಿರುತ್ತದೆ ಅಂತನಿಸಿತು. ಟ್ರೇನ್ ಹೊರಟರೆ ಕಿಟಕಿಯಲ್ಲಿ ಕೈ ಬೀಸುತ್ತಿದ್ದ ಅತ್ತೆ ಕಣ್ಣಲ್ಲೆ ಕೃತಜ್ಞತೆ ಹೇಳಿದಂತಿತ್ತು. ಟ್ರೇನ ಹೊರಟಾದ ಮೇಲೆ ಮನೆಗೆ ಮರಳುತ್ತಿದ್ದರೆ "ರೀ ನೀವು ಮನಶಾಸ್ತ್ರಜ್ಞ ಆಗಬೇಕಿತ್ತು" ಅಂತ ನನ್ನಾಕೆ ಅಂದ್ಲು, "ಸೈಕೊಲೊಜಿ ಓದಿ ಸೈಕೊ ಆಗು ಅಂತೀಯಾ" ಅಂತ ಕೀಟಲೆ ಮಾಡಿದೆ. "ಅಮ್ಮನ ಬಗ್ಗೆ ಹೀಗೆಂದೂ ನನಗೆ ಅನ್ನಿಸಿರಲೇ ಇಲ್ಲ, ಅದು ಹೇಗೆ ನಿಮಗೆ ಆ ಸೂಕ್ಷ್ಮ ಸಂಗತಿಗಳು ಕಾಣುತ್ತವೆ ಅಂತೀನಿ" ಅಂತ ಕೇಳಿದಳು, "ಮೈಕ್ರೋಸ್ಕೊಪ್ ಹಾಕಿಕೊಂಡು ನೋಡಿದ್ರೆ ಕಾಣ್ತದೆ" ಅಂತ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಲಲನೆಯೆಡೆಗೆ ನೋಡುತ್ತಿದ್ದರೆ, ಟ್ರೇನ ಸ್ಟೇಶನ್ ಪ್ಲಾಟ್‌ಫಾರ್ಮ್ ಮೇಲಿದಿವೀ ಅನ್ನೊದು ಮರೆತು, ಕೈತೋಳು ಬಳಸಿ ಗಟ್ಟಿ ಹಿಡಿದುಕೊಂಡು ನಡೆದಳು, ಏನೊ ಸಾಧಿಸಿದ ಸಮಾಧಾನದೊಂದಿಗೆ ಹೆಜ್ಜೆಯಿಡತೊಡಗಿದೆ... ಮತ್ತೆ ಸಿಗೋಣ ಹೀಗೆ ಮನದ ಮಾತುಗಳೊಂದಿಗೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/nannatte.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, February 14, 2010

ಮಿಸ್(ಸ್) ವರ್ಡ...

ಮನೆ ತುಂಬಾ ಶಾಂತವಾಗಿತ್ತು, ಯಾವತ್ತೂ ಇರುವುದಿಲ್ಲ, ಇಂದೇಕೊ ಇದೆ, ಒಳ್ಳೆಯದೇ... ಅಂತ ನನ್ನ ಮೆಚ್ಚಿನ ಪುಸ್ತಕದ ಓದಿನಲ್ಲಿ ತಲ್ಲೀನನಾಗಿದ್ದೆ. ಅಚ್ಚುಮೆಚ್ಚಿನ ಪುಸ್ತಕವೆಂದರೆ ಪಕ್ಕದಮನೆ ಪದ್ದು ಪಕ್ಕ ಇದ್ದರೂ ಗೊತ್ತೇ ಇಲ್ಲದಂತೆ ಅದರಲ್ಲಿ ಮುಳುಗಿರುತ್ತೇನೆ. ಒಮ್ಮೆಲೆ ಇವಳ ದನಿ ಕೇಳಿತು "ಲೋ ಪಾಪಿ ಎಲ್ಲಿದೀಯಾ, ನನ್ನ ಫೇರ್ ಆಂಡ ಲವ್ಲೀ ಕ್ರೀಮ್ ಎಲ್ಲ ಮುಗಿಸಿ ಹಾಕೀದೀಯಾ" ಅಂತ ಚೀರುತ್ತಿದ್ದಳು. ಇದ್ಯಾವ ಪಾಪಿಗಳ ಲೋಕದಲ್ಲಿ ಬಂದೆ ಅಂದುಕೊಂಡಿರಾ. ಆ ಪಾಪಿ ಮತ್ತಾರೂ ಅಲ್ಲ, ಅವಳ ತಮ್ಮ. ಪುಟ್ಟ ಪಾಪ ಇದ್ದಾಗಿನಿಂದ ಪಾಪು ಅಂತ ಕರೆದು ಕರೆದು ಈಗ ಪಾಪಿ ಅನ್ನುವ ಮಟ್ಟಿಗೆ ಬೆಳೆದುನಿಂತಿದ್ದಾನೆ. ಆ ಪಾಪಿ ಅಲ್ಲಲ್ಲ, ಪಾಪು ಕ್ರೀಮು ಖಾಲಿ ಮಾಡಿದ್ದೇಕೆ?. ಪಾಪುವಿಗೆ ಬಾಲ್ಯವಿವಾಹ ಮಾಡುತ್ತಿದ್ದಾರೆ!, ಪುಟ್ಟ ಪಾಪ ಅಂದರೆ ಬಾಲ್ಯವಿವಾಹವೇ ತಾನೆ. ಹಾಗಂತ ಹೇಳಿ ಹಲವು ಸಾರಿ ಇವಳಿಂದ ಬೈಸಿಕೊಂಡಿದ್ದರೂ ನಾನು ಹಾಗೇ ಕರೆಯುವುದು. ಪಾಪುವಿಗೆ ಹುಡುಗಿ ಗೊತ್ತಾಯಿತೋ ಆಗಲೇ ನಾನು "ಲೋ ರವೆ ಉಂಡೆ ಪಕ್ಕ ರಾಗಿ ಮುದ್ದೆ ಇಟ್ಟ ಹಾಗೆ ಇದೆ ನಿಮ್ಮ ಜೋಡಿ" ಅಂತ ಕಾಡಿಸಿದ್ದೆ. ಹುಡುಗಿ ನೋಡಲು ಸುಂದರಿ, ಪಾಪು ನೋಡಲು ಸ್ವಲ್ಪ ಕಪ್ಪು, ಆದರೆ ಮುಖದಲ್ಲಿ ಖಳೆ ಇದೆ ಅನ್ನುವುದಂತೂ ಒಪ್ಪಲೇ ಬೇಕು, ಆದರೂ ಕಾಡಿಸಲಿಕ್ಕೇನೀಗ ಅಂತ ಕಾಲೆಳೆದಿದ್ದೆ. ಎನು ಮಾಡೊದು ನಮ್ಮಲ್ಲಿ ಹುಡುಗ ಹೇಗಿದ್ದರೂ ಸರಿ ಮಿಸೆಸ್ ಮಾತ್ರ ಮಿಸ್ ವರ್ಡನಂತೆ ಸುಂದರಿಯೇ ಆಗಿರಬೇಕು.

ಅವನಿಗಾಗಿ ಹುಡುಕಾಡಿ ಸುಸ್ತಾಗಿ ಬಂದು ಕೂತಳು ನನ್ನಾಕೆ, ಫೋನು ಮಾಡಿ ನೋಡು ಸಿಕ್ತಾನೆ ಅಂದೆ. ದುರುಗುಟ್ಟಿ ನೋಡಿದಳು. ಕ್ರೀಮ್ ಖಾಲಿ ಮಾಡಿದ್ದು ಕೇಳಲು ಫೋನು ಮಾಡುವುದಾ ಅಂತ. "ಸರಿ ಬಿಡು, ಹುಡುಗರಿಗೆ ಎಂಗೇಜಮೆಂಟ್ ಆಗ್ತಿದ್ದಂಗೆ ಅವರ ಮೊಬೈಲ್ ಫೋನೂ ಎಂಗೇಜ್ ಆಗಿಬಿಡತ್ತೆ, ಅವನಂತೂ ಸಿಗಲ್ಲ" ಅಂದಿದ್ದಕ್ಕೆ ನಸುನಕ್ಕು, "ರೀ ನೀವು ಹುಡುಗರಂತೂ ತೀರಾ ಅತಿಯಾಗಿ ಮಾಡ್ತೀರಾ. ರಾತ್ರಿ ಊಟ ಏನು ಮಾಡಿದೆ ಅಂತ ಕೇಳಲು ಫೋನು ಮಾಡಿ ಮುಂಜಾನೆ ಬ್ರೇಕ್‌ಫಾಸ್ಟ ಟೈಮ್‌ವರೆಗೂ ಮಾತಾಡ್ತೀರಾ" ಅಂತ ನನ್ನ ಮೇಲೆ ರೇಗಿದಳು. "ಹ್ಮ್ ಅದೆಲ್ಲ ನಿಮ್ಮಿಂದಾಗೇ, ನಾವೇನೊ ಊಟ ಆಯ್ತಾ ಅಂತ ಕೇಳಿ ಸುಮ್ಮನಾಗ್ತೀವಿ. ನೀವು ಹಾಗಲ್ಲ, ಏನು ಊಟ?, ಚಪಾತಿನಾ? ಯಾಕೆ ಅನ್ನ ಇಲ್ವಾ?, ಎಷ್ಟು ತಿಂದಿರಿ?, ಮೂರಾ?, ಬಕಾಸುರನ ವಂಶಾನಾ ನಿಮ್ದು? ನಂಗೆ ಚಪಾತಿ ಮಾಡೋಕೆ ಬರಲ್ಲ ಕಣ್ರೀ... ಅಂತ ಪಾಕ ಪುರಾಣ ತೆಗೆದುಬಿಡ್ತೀರಾ" ಅಂತ ತಿರುಗೇಟು ನೀಡಿದ್ದಕ್ಕೆ ಸುಮ್ಮನಾದಳು. "ಸರಿ ಈಗ ಅವನಿಗೆ ಕ್ರೀಮ್ ಹಚ್ಚಿಕೊಂಡು ಬೆಳ್ಳಗೆ ಆಗು ಅಂತ ಐಡಿಯಾ ಕೊಟ್ಟಿದ್ದು ನೀವೇ ತಾನೆ?" ಅಂತ ಮರುವಿಷಯಕ್ಕೆ ಬಂದಳು. ಮೆಲ್ಲಗೆ ಮುಗುಳ್ನಕ್ಕೆ, ನಾನೇ ಅದು ಅನ್ನುವುದನ್ನು ಒಪ್ಪಿಕೊಂಡು. "ನಂಗೊತ್ತಿತ್ತು, ನಮ್ಮ ಮದುವೆ ಮುಂಚೆ ಮನೇಲಿರೊ ಸೌತೆಕಾಯಿ ಎಲ್ಲ ನಿಮ್ಮ ಫೇಸ್‌ಪ್ಯಾಕ್ ಆಗುತ್ತಿತ್ತು ಅಂತ ನಿಮ್ಮ ತಂಗಿ ಹೇಳಿದ್ದಳಲ್ಲ. ಇಂಥ ಐಡಿಯಾ ನಿಮ್ಮದಲ್ಲದೇ ಮತ್ತಾರದು" ಅಂತ ನನ್ನ ಇತಿಹಾಸ ಕೆದಕಿದಳು. ಇಂಥ ಸಿಕ್ರೇಟುಗಳನ್ನೆಲ್ಲ ಹೊರಗೆಡವಿದ್ದಕ್ಕೆ ತಂಗಿಯನ್ನು ಶಪಿಸುತ್ತ "ನಾನು ನ್ಯಾಚುರಲ್ಲಿ ಸ್ಮಾರ್ಟ್ ಇದ್ದೆ" ಅಂತ ಹೊಗಳಿಕೊಂಡೆ. "ರೀ ಹುಡುಗರಿಗೆ ಅಂದ ಚಂದ ಯಾರು ನೋಡ್ತಾರೆ, ಕೈಕಾಲು ನೆಟ್ಟಗಿದ್ದು, ಕೆಲಸ, ಕೈತುಂಬ ಸಂಬಳ, ಕುಟುಂಬ, ಒಳ್ಳೆ ಮಾನ, ಮನೆತನ ಇದ್ರೆ ಮುಗೀತು" ಅಂತನ್ನುತ್ತ ಅಲ್ಲಿಂದ ಜಾಗ ಖಾಲಿ ಮಾಡಿದಳು, ನನ್ನ ತಲೆಯಲ್ಲಿ ಹುಳುಬಿಟ್ಟ ಹಾಗೆ ಆಯ್ತು.

ಹುಡುಗರಿಗೆ ಅಂದ ಚಂದ ಏನೂ ಬೇಕಿಲ್ವಾ, ಯಾಕೆ? ಅಂತ ಯೋಚನೆ ಶುರುವಾಯಿತು. ಈಗ ಹೇಳಿದವರನ್ನೇ ಕೇಳಿದರಾಯ್ತು ಅಂತ ಅವಳಲ್ಲಿಗೆ ನಡೆದೆ. "ನೀನು ನನ್ನ ಯಾಕೆ ಮದುವೆ ಆದೆ ಹಾಗಿದ್ರೆ?" ಅಂತ ನೇರ ಪ್ರಶ್ನೆ ಎಸೆದೆ. ತಲೆಯಿಂದ ಬುಡದವರೆಗೆ ಒಂದು ಸಾರಿ ನೋಡಿ "ಹ್ಮ್, ನಮ್ಮಪ್ಪ ಹುಡುಗ ಸಾಪ್ಟವೇರ್ ಇಂಜನೀಯರು, ಒಳ್ಳೆ ಮನೆತನ, ಇನ್ನೇನು ಜಾಸ್ತಿ ನೋಡೋದು ಮದುವೆ ಆಗು ಅಂದ್ರು, ಓಕೇ ಅಂದೆ" ಅಂತಂದಳು. "ಹೌದಾ?" ಅಂತ ಪೆಚ್ಚುಮೋರೆ ಹಾಕಿ ಹೊರ ನಡೆದೆ, ಕೈಹಿಡಿದು ಎಳೆದು "ಹುಡುಗ ಸ್ಮಾರ್ಟು, ಕ್ಯೂಟಾಗೂ ಇದ್ದ" ಅಂತ ಹುಬ್ಬುಹಾರಿಸಿದಳು. "ಸುಮ್ನೆ ಬೆಣ್ಣೆ ಸವರಬೇಡ, ನೋಡೊಕೆ ಚಿಂಪಾಂಜಿ ಕೂಡ ಕ್ಯೂಟ್ ಆಗೇ ಇರ್ತದೆ." ಅಂತ ಬೇಜಾರಾದರೆ. ತಲೆ ಕೂದಲು ಹಾಗೆ ಬಾಚಿದಂತೆ ಸವರಿ ಸ್ಟೈಲ್ ಮಾಡಿ "ಆದರೆ ಈ ಚಿಂಪಾಂಜಿ ಸ್ಮಾರ್ಟ ಕೂಡ ಇದೆ." ಅಂತ ನಕ್ಕಳು, ನಾನೂ ನಕ್ಕೆ.

"ಸರಿ ಬಿಡು, ಹುಡುಗೀರು ಹುಡುಗ ಶ್ರೀಮಂತ ಆಗಿದ್ರೆ ಓಕೆ ಅಂತಾರೆ, ಅಂದ ಹಾಗಾಯ್ತು." ಅಂದ್ರೆ, "ರೀ ಅದು ಹಾಗಲ್ಲ, ಒಂದು ಹುಡುಗಿಗೆ ಹುಡುಗನ್ನ ಹುಡುಕೋವಾಗ ಆರ್ಥಿಕ ಸಬಲತೆ ಮುಖ್ಯ ಆಗ್ತದೆ, ನಾಳೆ ಹೆಂಡತಿನಾ ಚೆನ್ನಾಗಿ ನೋಡ್ಕೊತಾನಾ ಇಲ್ವಾ, ಹುಡುಗನ ಸ್ವಭಾವ ಹೇಗೆ, ಮನೆತನ ಹೇಗೆ, ಅದಾದಮೇಲೆ ರೂಪಕ್ಕೆ ಮನ್ನಣೆ, ಆದರೆ ರೂಪಕ್ಕೆ ಅಷ್ಟು ಪ್ರಾಮುಖ್ಯತೆ ಇರೋದೇ ಇಲ್ಲ, ಲಕ್ಷಣವಾಗಿದ್ರೆ ಆಯ್ತು, ಅಂತಾರೆ ಶಹರದಲ್ಲಿ ಹುಡುಗೀರು ಹುಡುಗ ನೋಡೊಕೂ ಚೆನ್ನಾಗೂ ಇರಬೇಕು ಅಂತಾರೆ ಅದು ಬೇರೆ ಮಾತು" ಅಂದ್ಲು. "ಅದಕ್ಕೇ ಸುಂದರ ಹುಡುಗಿಯರು ಶ್ರೀಮಂತರನ್ನು ಮದುವೆಯಾಗಿಬಿಡುವುದು, ತನ್ನಂತೇ ಸುಂದರ ಹುಡುಗನನ್ನು ಮದುವೆ ಆಗಬೇಕು ಅಂತ ನಿಮಗೆ ಅನ್ನಿಸುವುದೇ ಇಲ್ವಾ?" ಅಂತ ಅವಳನ್ನೇ ಕೇಳಿದೆ, "ನಿಮಗೆ ಹೇಗೆ ಮಿಸ್ ವರ್ಡ ಬೇಕು ಅಂತ ಆಸೆ ಇರ್ತದೊ, ನಮಗೂ ಹಾಗೆ ಆಸೆಗಳು ಇರ್ತವೆ ಆದ್ರೆ ಜೀವನದಲ್ಲಿ ಸ್ವಲ್ಪ ಹೊಂದಾಣಿಕೆ ಅನಿವಾರ್ಯ ಆಗ್ತದೆ, ವರದಕ್ಷಣೆ ಕೊಡಲಾಗದೊ, ಮತ್ತೆ ಒಳ್ಳೆ ವರ ಸಿಕ್ಕಾನೊ ಇಲ್ವೋ ಅನ್ನೊ ಭೀತಿಯಲ್ಲಿ ತಂದೆ ತಾಯಿ ಕೂಡ ಒತ್ತಾಯ ಮಾಡಿ ಮದುವೆ ಮಾಡಿ ಬಿಡ್ತಾರೆ" ಅಂತ ಮನ ಬಿಚ್ಚಿಟ್ಟಳು. "ಬಡವರ ಮನೆಯಲ್ಲಿ ಸುಂದರ ಹುಡುಗಿ ಹುಟ್ಟುವುದೇ ತಪ್ಪು ಅನ್ನು." ಅಂದರೆ. "ಬಡವರ ಮನೆಯಲ್ಲಿ ಕುರೂಪಿಯಾಗಿ ಹುಟ್ಟುವುದು ಇನ್ನೂ ತೊಂದ್ರೆ, ಸುಂದರವಾಗಿದ್ರೆ ಹೇಗೊ ಮದುವೆಯಾಗುತ್ತದೆ" ಅಂತ ಇನ್ನೊಂದು ಹೆಜ್ಜೆ ಮುಂದೆ ಹೋದಳು. "ಆದರೆ ರೂಪ ಅವಳ ಕೈಲಿಲ್ಲವಲ್ಲ ಹುಟ್ಟಿನಿಂದ ಬಂದಿದ್ದು, ಅವಳದೇನು ತಪ್ಪು... ಹಾಗೇ ಒಬ್ಬ ಪೆದ್ದ, ಹುಟ್ಟಿನಿಂದಲೇ ಬುದ್ಧಿ ಕಮ್ಮಿ, ನೋಡಲು ಸುಂದರ ಏನು ಪ್ರಯೋಜನ, ಆರ್ಥಿಕವಾಗಿ ತನ್ನನ್ನು ತಾನು ನೋಡಿಕೊಳ್ಳಲಾಗಲ್ಲ ಇವರೆಲ್ಲರ ಬಗ್ಗೆ ಏನು ಹೇಳೊದು" ಅಂತ ಸುಮ್ಮನಾದೆ.

"ನೋಡ್ರೀ ಹುಡುಗಿಗೆ ರೂಪ, ಹುಡುಗನಿಗೆ ಪ್ರತಿಭೆ ಮುಖ್ಯ, ಈಗೇನು ಹಿಂದಿನ ಕಾಲದಲ್ಲೂ ಹೀಗೇ ಇತ್ತು, ಶೌರ್ಯ ಪರಾಕ್ರಮಿ ರಾಜರಿಗೇ ಸುಂದರ ರಾಣಿಯರನ್ನು ಮದುವೆ ಮಾಡಿಕೊಡಲಾಗುತ್ತಿತ್ತು. ಈಗ ಶೌರ್ಯ ಧೈರ್ಯ ಎಲ್ಲ ಕೇಳದೇ ಸಂಬಳ, ಸಂಪತ್ತು ಕೇಳ್ತಾರೆ" ಅಂತ ವಿವರಿಸಿದರೂ ಇನ್ನೂ ನನ್ನ ಪ್ರಶ್ನೆಗಳು ಮುಗಿದಿರಲಿಲ್ಲ. "
ರೂಪ ವಯಸ್ಸಿನೊಂದಿಗೆ ಕ್ಷಯಿಸಿ ಹೋಗ್ತದೆ, ಹಣ ವ್ಯಯಿಸಿ ಹೋಗ್ತದೆ ಇವುಗಳ ಮೇಲೆ ಸಂಬಂಧಗಳ ನಿರ್ಧಾರ ಎಷ್ಟು ಸರಿ" ಅಂದರೆ. "ಹಾಗಾದ್ರೆ ನೀವು ಯಾಕೆ ಕುರೂಪಿಯಾದರೂ ಗುಣವಂತ ಹುಡುಗಿ ಇದ್ರೆ ಸಾಕು ಅಂತ ಯಾಕೆ ಅನ್ನಲಿಲ್ಲ, ಹಾಗೆಯೇ ಗುಣ, ವ್ಯಕ್ತಿತ್ವ ಒಳ್ಳೆಯದು ಇದ್ರೆ ಸಾಕು ಹುಡುಗ ಬಡವನಾದರೂ ಸರಿ ಅಂತ ನಾನ್ಯಾಕೆ ಅನ್ನಲಿಲ್ಲ" ಅಂತ ಕೇಳಿದಳು. "ನಾನು ಹಾಗೆ ಅಂತಿದ್ದೆ ಏನೊ, ಆದ್ರೆ ಅದ್ಕೆ ಮುಂಚೆ ನೀನು ಸಿಕ್ಕು ಒಪ್ಪಿಬಿಟ್ಟೆ" ಅಂತ ಡೈಲಾಗು ಹೊಡೆದೆ. "ನಾನಿದ್ದರೂ ಇನ್ನೂ ಪಕ್ಕದಮನೆ ಪದ್ದು ಮೇಲೆ ಆಸೆ ಇದೆ, ನೀವು ಹಾಗೆ ಹೇಳ್ತಾ ಇದ್ರಾ" ಅಂತ ತಲೆ ಅಲ್ಲಾಡಿಸಿದಳು. ನಸುನಗುತ್ತ "ಎಷ್ಟು ಜನ ಮಿಸ್ ವರ್ಡೇ ಬೇಕು ಅಂತ ಹುಡುಕುತ್ತ ಹೋಗಿ, ಕೊನೆಗೆ ಸಿಕ್ಕಿದವಳೇ ಸುಂದರಿ ಅಂತ ಮದುವೆಯಾಗಿಲ್ಲ" ಅಂತ ವಾಸ್ತವಕ್ಕಿಳಿದೆ. "ಅದನ್ನೇ ನಾನು ಹೇಳಿದ್ದು, ಅದೆಲ್ಲ ಅವರವರ ಅನುಕೂಲಕ್ಕೆ ತಕ್ಕಂತೆ ಸಂಬಂಧಗಳು ಕೂಡುತ್ತವೆ, ಕೆಲವರು ಕಲಿತು ಕೆಲಸ ಮಾಡುವ ಹುಡುಗಿ ನೋಡಲು, ಲಕ್ಷಣವಾಗಿದ್ದರೆ ಸಾಕು ಅಂದರೆ, ರೂಪವತಿಯಾಗಿದ್ದರೆ ಸಾಕು ಓದಲು ಬಾರದಿದ್ದರೂ ಸರಿ ಅಂತ ಮತ್ತೊಬ್ಬರು. ಹಾಗೇ ಹುಡುಗ ಹೇಗಿದ್ದರೂ ಸರಿ ಶ್ರೀಮಂತನಾಗಿದ್ದರೆ ಸಾಕು ಅಂತ ಕೆಲವರೆಂದರೆ, ಬಡವನಾದರೂ ಸರಿ ಗುಣವಂತ ಬೇಕೆಂದು ಮತ್ತೊಬ್ಬರು. ಆಸ್ತಿ ಅಂತಸ್ತುಗಳಿಗೆ ಕೆಲವರು ಒಪ್ಪಿದರೆ, ವರದಕ್ಷಿಣೆಗೆ ಇನ್ನೊಬ್ಬರು." ಅಂತ ವಿಷಯಕ್ಕೆ ವಿರಾಮ ಹಾಕಿದಳು.

ಹುಡುಗರು ಹಾಗೇನೇ, ಮದುವೆಯಾಗಲು ಹುಡುಗಿ ಸುಂದರಿಯಾಗಿರಬೇಕೆಂದೇ ಬಯಸುತ್ತೇವೆ, ನಾವು ಹೇಗಿದ್ದರೂ ಸರಿ. ಹುಡುಕುತ್ತ ಹೊರಟು, ಹೊತ್ತುಗಳೆದಂತೆ ಹುಡುಗಿ ಸಿಕ್ಕರೆ ಸಾಕು ಅಂತ ತೀರ್ಮಾನಕ್ಕೆ ಬಂದು, ರಾಜಿಯಾಗಿಬಿಡುತ್ತೇವೆ. ರೂಪ ದಿನಗಳೆದಂತೆ ಕಳೆದುಹೋಗಬಹುದಾದರೂ, ಇರುವಷ್ಟು ದಿನವಂತೂ ಮನ್ನಣೆ ಪಡೆದೇ ಪಡೆಯುತ್ತದೆ. ಎಲ್ಲೋ ಓದಿದ ನೆನಪು ರೂಪವತಿ ಯುವತಿಯರು, ಪ್ರತಿಭಾವಂತ ಪುರುಷರ ಎಲ್ಲೆಡೆ ಸಲ್ಲುವರು ಅಂತ. ವ್ಯಕ್ತಿತ್ವ, ನೀತಿ, ನಿಯತ್ತು ಎಲ್ಲದರ ಬಗ್ಗೆ ಮಾತಾಡಿದ ಹುಡುಗ ಕೊನೆಗೆ ಕಂಪನಿಯಲ್ಲಿ ಕೆಲಸಕ್ಕಾಗಿ ಮಾಲಿಕನ ಮಗಳನ್ನು ಒಪ್ಪಬಹುದು. ತನಗೆ ಅನುರೂಪನಾದ ಹುಡುಗನನ್ನು ಇಷ್ಟಪಟ್ಟ ಹುಡುಗಿ, ಅವನಿಗೆ ಕೆಲಸವಿಲ್ಲ, ನಿಲ್ಲಲು ನೆಲೆಯಿಲ್ಲ ಅಂತ ನಿಲುವು ಬದಲಿಸಬಹುದು. ಮದುವೆ ಒಂದು ಬರೀ ಭಾವನಾತ್ಮಕ ಸಂಬಂಧವಲ್ಲ, ಸಾಮಾಜಿಕ ಬಂಧನ ಕೂಡ, ಅಲ್ಲಿ ಸಮಾಜದ ಎಲ್ಲ ನಿಯಮಗಳೂ ಅನುಗುಣವಾಗುತ್ತವೆ, ಜಾತಿ, ನೀತಿ, ಆಸ್ತಿ, ಅಂತಸ್ತು ಎಲ್ಲವೂ ಗಣನೆಗೆ ಬರುತ್ತದೆ. ಹುಡುಗಿಯರೂ ಆರ್ಥಿಕವಾಗಿ ಸಬಲರಾಗುತ್ತಿರುವುದರಿಂದ ಹುಡುಗ ಸುಂದರನೂ ಆಗಿರಲಿ ಅಂತ ಹುಡುಗಿಯರೂ ಕೇಳುತ್ತಿದ್ದಾರೆ, ಒಬ್ಬಂಟಿಯಾಗಿ ಜೀವನ ನಿಭಾಯಿಸುವುದು ಕಷ್ಟವಾಗಿರುವ ಹುಡುಗರು, ಕಲಿತು ಕೆಲಸ ಮಾಡುವ ಹುಡುಗಿಯಾದರೆ ರೂಪವತಿಯೇ ಆಗಿರಬೇಕೆಂದೇನಿಲ್ಲ ಅಂತ ಬದಲಾಗುತ್ತಿದ್ದಾರೆ ಕೂಡ.

"ಹ್ಮ್, ಪಾಪು ಕಪ್ಪಗಿದ್ದು, ಆ ಹುಡುಗಿ ಬೆಳ್ಳಗಿದ್ದರೇನಾಯ್ತು, ಕಪ್ಪನೇ ಟೀ ಕುದಿಸಿ ಅದಕ್ಕೆ ಬೆಳ್ಳನೇ ಹಾಲು ಹಾಕಿದಾಗಲೇ ಸೂಪರ ಟೀ ಆಗೊದು ಅಲ್ವಾ" ಅಂದೆ. "ರೀ, ಟೀ ಬೇಕಿದ್ರೆ ನೇರವಾಗಿ ಕೇಳಿ ಸುತ್ತು ಬಳಸಿ ಎಲ್ಲ ಬೇಡ" ಅಂತ ನೀರು ಹಾಕಿ ಪಾತ್ರೆ ಗ್ಯಾಸ ಸ್ಟವ್ ಮೇಲೆ ಇಟ್ಟಳು. "ಕಪ್ಪಗಿದ್ದವರ ಮುಖದಲ್ಲಿ ಖಳೆ ಇರ್ತದೆ, ನಮ್ಮಜ್ಜ ಏನಂತಿದ್ರು ಗೊತ್ತಾ ಪರಮನಂಟ್ ಕಲರು ಇದು, ಬಿಸಿಲಿರಲಿ, ಚಳಿಯಿರಲಿ ಒಂಚೂರೂ ಬದಲಾಗಲ್ಲ ಅಂತ." ಅಂತಿದ್ದರೆ "ನನ್ನ ಮುಂದೆ ಹೀಗೆ ಅಂತೀರಾ, ಆ ನನ್ನ ತಮ್ಮ ಪಾಪು ಕಂಡ್ರೆ ನಿಮ್ಮ ಜೋಡಿ ಬ್ಲಾಕ ಆಂಡ್ ವೈಟ್ ಟೀವೀ ಆಯ್ತಲ್ಲೊ ಅಂತ ಗೋಳುಹೊಯ್ಕೊತೀರಾ. ಅದಕ್ಕೇ ಕ್ರೀಮ ಪೂರಾ ಖಾಲಿ ಮಾಡಿ, ಪೌಡರ ಬಡಿದುಕೊಂಡು ಹಿಟ್ಟಿನಲ್ಲಿ ಬಿದ್ದ ಇಲಿಯ ಹಾಗೇ ಓಡಾಡ್ತಾ ಇರ್ತಾನೆ ಅವನೀಗ." ಅಂತ ಬಯ್ದಳು, ಅಲ್ಲಿಗೆ ಅವನು ಬರುವುದಕ್ಕೂ ಸರಿ ಹೋಯ್ತು. ಅಕ್ಕ, ತಮ್ಮ ಕ್ರೀಮು ಖಾಲಿ ಮಾಡಿದ್ದಕ್ಕೆ ಕಿತ್ತಾಡಿದರು, ಟೀ ಕುಡಿಯುತ್ತ ಕೂತು ಖುಶಿಪಟ್ಟೆ! "ಭಾವ ಈಗ ನೀವೇ ಹೇಳಿ, ಸುಂದರವಾಗಲು ನಾನೇನು ಮಾಡ್ಲಿ ಅಂತ" ನನ್ನನ್ನೇ ಕೇಳಿದ. "ಆ ಹುಡುಗಿ ರೂಪ ನೋಡಿದರೂ ನಿನ್ನ ಮೆಚ್ಚಿ ತಾನೆ ಮದುವೆಯಾಗ್ತಾ ಇರೋದು, ಇಲ್ಲದಿದ್ದರೆ ಬೇಡ ಅಂತ ಹೇಳಬಹುದಿತ್ತೊ ಇಲ್ವೊ, ಹೇಳಿಲ್ಲವೆಂದರೆ ಇನ್ನೇನೊ ಇಷ್ಟವಾಗಿದೆ. ಹಾಗಿರುವಾಗ ಚಿಂತೆ ಬಿಡು. ಒಂದು ಗೊತ್ತಾ, ನಮ್ಮಜ್ಜ ನಮ್ಮಜ್ಜಿನಾ ಮದುವೆ ಆದಾಗ ಕಾಗೆ ಬಾಯಲ್ಲಿ ಅಕ್ಕಿರೊಟ್ಟಿ ಕೊಟ್ಟಹಾಗೆ ಆಯ್ತಲ್ಲ ಅಂತ ಜನ ಮಾತಾಡಿದ್ದರಂತೆ, ಆದರೆ ನಮ್ಮಜ್ಜ ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ನನಗೆ ಈಗ ಅಷ್ಟು ಒಳ್ಳೇ ಬೇರೆ ಗಂಡ ನಮ್ಮಜ್ಜಿಗೆ ಸಿಕ್ತಾ ಇರಲಿಲ್ಲ ಅನ್ಸತ್ತೆ." ಅಂತ ಸಮಾಧಾನಿಸಿದೆ ಅವನ ಮುಖದೊಂದಿಗೆ ನನ್ನವಳ ಮುಖ ಕೂಡ ಅರಳಿತು. ಹುಡುಗಿ ಫೋನು ಕರೆ ಬಂತೆಂದು ಅವನು ಓಡಿದ. "ನಂಗೆ ಕೂಡ ಈ ಕೀಟಲೆ ಮಾಡೋ ಕೋತಿಗಿಂತ ಒಳ್ಳೆ ಹುಡುಗ ಸಿಕ್ತಾ ಇರಲಿಲ್ಲ" ಅಂತ ಅಪ್ಪಿ ಪಪ್ಪಿ ಕೊಟ್ಟಳು. "ಛೇ ನೀನು ಸಿಗುವ ಮುಂಚೆ ಪಕ್ಕದಮನೆ ಪದ್ದು ಏನಾದ್ರೂ ನನ್ನ ಕಣ್ಣಿಗೆ ಕಾಣಿಸಿದ್ದಿದ್ರೆ... " ಅಂತಿದ್ದಂಗೇ, ಲಟ್ಟಣಿಗೆ ತೆಗೆದುಕೊಂಡು ಬೆನ್ನು ಹತ್ತಿದಳು...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/miss-world.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು