"ಪಕ್ಕದಮನೆ ಪದ್ದು ಗಂಡನಿಗೆ ಪಕ್ಕದೂರಿಗೆ ಟ್ರಾನ್ಸಫರ್ ಆಗ್ಲಿ, ಹಾಲಿನಂಗಡಿ ಹಾಸಿನಿ ಹಾಲು ಮಾರೊ ಹುಡುಗನೊಂದಿಗೆ ಓಡಿ ಹೋಗ್ಲಿ, ಹೂವಾಡಗಿತ್ತಿ ಗುಲಾಬಿಗೆ ಮಾರೊಕೆ ಹೂವೇ ಸಿಗದಿರಲಿ, ನರ್ಗೀಸ್ ನರ್ಸಗೆ ನೈಟ್ ಶಿಫ್ಟ್ ಆಗ್ಲಿ..." ಅಂತ ಇನ್ನೇನೇನೊ ನನ್ನಾಕೆ ಶಾಪ ಹಾಕುತ್ತಿದ್ಲು. ನಾನೂ ಅಲ್ಲೇ ಕೂತು "ಪದ್ದು ಹೋದ್ರೆ ನೆರೆಮನೆಗೆ ನೂತನವಾಗಿ ನೂತನ್ ಬರಲಿ, ಹಾಸನದ ಹಾಸಿನಿ ಹೋದ್ರೆ, ಹೊನ್ನಾವರದಿಂದ ಹೊನ್ನಿನ ಜಿಂಕೆ ಹರಿಣಿ ಬರಲಿ, ಹೂವಿಲ್ಲದೇ ಗುಲಾಬಿ ಹೋದ್ರೆ, ಹಣ್ಣು ಮಾರಲು ಚಕ್ಕೊತ್ತಾ ಬೇಕಿತ್ತಾ ಅಂತ ಚಕೋರಿ ಬರಲಿ, ನರ್ಗೀಸಗೆ ನೈಟ್ ಶಿಫ್ಟ್ ಆದ್ರೆ, ಮಾರ್ನಿಂಗ್ ಶಿಫ್ಟಗೆ ಮಧುಬಾಲಾ ಬರಲಿ..." ಅಂತ ಶಾಪವೂ ವರವೇ ಅನ್ನುತ್ತಿದ್ದೆ. ಏನಂದರೂ ಜಗ್ಗದ ಜಟ್ಟಿ ಇದು ಅಂತ ಬುಸುಗುಡುತ್ತ ನೋಡಿ ಬಿರಬಿರನೆ ಹೊರಟು ಹೋದಳು. ಅದ್ಯಾಕೆ ಇಷ್ಟು ಸಿತ್ತಾಗಿದ್ದಾಳೆ ನನ್ನಾಕೆ ಅಂತಾನಾ ಅನುಮಾನ. ಇದಕ್ಕೆಲ್ಲ ಕಾರಣ ನನ್ನತ್ತೆ...
ಮಾತಾಡಿದರೆಲ್ಲಿ ಮುತ್ತು ಉದುರೀತು ಅಂತ ಮೂಲೆ ಹಿಡಿದು ಮೂಕವಾಗಿ ಕೂತುಬಿಡುವ ನನ್ನತ್ತೆ ಅಂಥದ್ದೇನು ಮಾಡಿಲ್ಲ ಬಿಡಿ. ಈ ಹೆಂಡತಿಯರ ಕೆಲ ಅಮ್ಮಂದಿರು ಹೇಗೆಂದರೆ ಮಗಳನ್ನು ಅವಳ ಅತ್ತೆ (ಗಂಡನ ತಾಯಿ) ಮೇಲೆ ಎತ್ತಿ ಕಟ್ಟುವುದರಲ್ಲಿ ಹೆಸರುವಾಸಿ ಅದಕ್ಕೊಂದು ಅಪವಾದ ಇದು. ಏನಿಲ್ಲ ಬೆಂಗಳೂರಿಗೆ ಮೊದಲ ಸಾರಿ ಬಂದಿರುವುದು, ಅದಕ್ಕೆ ಅವರನ್ನು ಬೆಂಗಳೂರು ಒಂದು ರೌಂಡ್ ಹಾಕಿಸಿಕೊಂಡು ಬರೋಣ ಅಂತ ಇವಳ ಪ್ಲಾನ್, ನನಗೂ ಜತೆ ಬಾ ಅಂದಿದ್ದಕ್ಕೆ, ನಾನು "ದಿನಾ ಸುತ್ತಿದ್ದೇ ಸಾಕಾಗಿದೆ ನಾನೊಲ್ಲೆ" ಅಂತ ನಿರಾಕರಿಸಿದ್ದೇ ತಪ್ಪಾಗಿತ್ತು. ಮನೆಯಲ್ಲಿ ಕೂತು ಪಕ್ಕದಮನೆ ಪದ್ದುಗೆ ಲೈನ ಹೊಡಿತೀರಾ ಅಂತ ಶಾಪ ಹಾಕುತ್ತಿದ್ದಳು.
ಸಂಜೆಗೆಲ್ಲ ಮತ್ತೆ ಸರಿಹೋಗುತ್ತಾಳೆ ಅಂತ ಸುಮ್ಮನಾಗಿದ್ದೆ, ಅಲ್ಲದೆ ಮಾವ, ಅವಳ ತಮ್ಮ ಬೇರೆ ಜತೆ ಇದ್ದಾಗ ನಾ ಹೋಗಲೇಬೇಕೆಂದೆನಿಸಿರಲಿಲ್ಲ. ಅತ್ತೆ ಅಷ್ಟು ದೂರದಲ್ಲಿ ಸುಮ್ಮನೇ ಕೂತಿದ್ದರೆ, "ಅತ್ತೆಗೆ ಕಾಫಿ ಟೀ ಏನಾದ್ರೂ ಕೊಡೇ" ಅಂತ ಆರ್ಡರ್ ಮಾಡಿದೆ. "ಹಾಗಲಕಾಯಿ ರಸ ಮಾತ್ರ ಕುಡಿಯೋದಲ್ವೇನಮ್ಮ ನೀನು, ಸ್ವಲ್ಪ ಡಯಾಬಿಟಿಸ್ ಆದಾಗಿಂದ" ಅಂತ ತಾನೇ ಹೇಳಿ, ಅವರಿಗೆ ಒಂದು ಕಪ್ಪು ಹಾಗಲಕಾಯಿ ರಸ, ನಂಗೆ ಟೀ ಕೊಟ್ಟು ಒಳಗೆ ಹೋದ್ಲು. ಮನಸ್ಸಿಲ್ಲದ ಮನಸಿಂದ ಅತ್ತೆ ಅದನ್ನು ಕುಡಿಯುವುದ ನೋಡುತ್ತಿದ್ದರೆ ನನಗೇಕೊ ನನ್ನ ಟೀ ಕೂಡ ರುಚಿಸಲಿಲ್ಲ. ಆಗ ಎದ್ದು ಬಂದ ಅತ್ತೆ, "ನೀವೂ ಬಂದ್ರೆ ಚೆನ್ನಾಗಿತ್ತು" ಅಂತ ಕ್ಷೀಣ ದನಿಯಲ್ಲಿ ಕೇಳಿದ್ದು ಅಚ್ಚರಿ ಮೂಡಿಸಿತು. ಅಷ್ಟರಲ್ಲಿ "ದಿನಾ ಸುತ್ತಿ ಬೇಜಾರಾಗಿದೆ ಅಂತ ಬಿಡಮ್ಮ" ಅಂತ ನನ್ನಾಕೆಯಂದಳು. ಅಬ್ಬ ಇಷ್ಟೊತ್ತು ಬರಲ್ಲ ಅಂದಿದ್ದಕ್ಕೆ ಜಗಳಕ್ಕಿಳಿದವಳು, ನನ್ನ ಪರವಾಗಿ ಮಾತಾಡೋದಾ. ನನ್ನಾಕೆಗೆ ಗೊತ್ತು, ಬರುವುದಾಗಿದ್ದರೆ ನಾ ಬರುತ್ತಿದ್ದೆ, ಅಲ್ಲದೇ ಸಿಕ್ಕ ಒಂದು ದಿನ ರಜೆ ಮನೆಯಲ್ಲಿದ್ದರಾಯ್ತು ಅನ್ನುವ ನನ್ನ ಪ್ಲಾನಗೆ ಯಾಕೆ ಕಲ್ಲು ಹಾಕಬೇಕು ಅನ್ನುವಷ್ಟು ನನ್ನ ಅರ್ಥ ಮಾಡಿಕೊಂಡಿದ್ದಾಳೆ. ಆದ್ರೂ ಸ್ವಲ್ಪ ಹುಸಿಕೋಪ ತೋರಿಸಿದಾಗಲೇ ಸಮಾಧಾನ.
ತಟ್ಟನೇ ಎದ್ದು, ಸ್ನಾನ ಮಾಡಿ ರೆಡಿಯಾಗಿಬಿಟ್ಟೆ, ಎಂದೂ ಕೇಳದ ಅತ್ತೆ ಕೇಳಿದಮೇಲೆ ಇಲ್ಲವೆನ್ನಲಾದೀತೇ ಅಂತ. ನನ್ನಾಕೆಯ ಕೋಪಕ್ಕೆ ತುಪ್ಪ ಏನು ಪೆಟ್ರೋಲೇ ಸುರಿದ ಹಾಗಾಯ್ತು. "ನಾ ಕರೆದ್ರೆ ಇಲ್ಲ, ಅಮ್ಮ ಕರೆದ್ರೆ... ಇರಲಿ ಇರಲಿ" ಅಂತ ಮೂಗುಮುರಿದು ತಾನೂ ರೆಡಿಯಾದಳು. ಎಲ್ಲಿಗೆ ಮೊದಲು ಅಂದರೆ ಸೀರೆ ಖರೀದಿ ಅಂದ್ಲು, "ಸುತ್ತಾಡಲು ಅಂತ ಹೇಳಿ ಇದೇನೇ ಶಾಪಿಂಗ್" ಅಂತ ಕೇಳಿದ್ದಕ್ಕೆ. "ಅಮ್ಮ ಸೀರೆ ಕೊಂಡಕೊಳ್ಬೇಕು ಅಂತಿದ್ದಳು, ಸುತ್ತಾಡಲೂ ಇನ್ನೂ ದಿನಗಳಿವೆ ಬಿಡಿ" ಅಂತಂದಳು. ಅವಳ ತಮ್ಮನಿಗೆ "ಇನ್ನು ಎರಡು ಮೂರು ಘಂಟೆ ನೊಣ ಹೊಡೆಯುವುದೇ ನಮ್ಮ ಕೆಲ್ಸ" ಅಂದ್ರೆ ಅವನು ಮುಗುಳ್ನಕ್ಕ. ಅವನ ಜತೆ ಬಂದಿದ್ದ ಅವರ ಸಂಬಂಧಿಕರ ಮಗು, "ಅಲ್ಲಿ ನೊಣ ಜಾಸ್ತಿನಾ ಅಂಕಲ್" ಅಂತು. "ಪುಟ್ಟಾ ಜಾಸ್ತಿ ಇಲ್ಲ, ಆದ್ರೂ ನಾವೇ ಹುಡುಕಿ ಹುಡುಕಿ ಹೊಡೀಬೇಕು, ಬೇರೆ ಮಾಡೊಕೆ ಕೆಲ್ಸ ಇರಲ್ಲ ನೋಡು" ಅಂದೆ, ಅದಕ್ಕೆ ಅದು ಅರ್ಥವಾಗಿದ್ದು ಅಷ್ಟಕ್ಕಷ್ಟೇ.
ಸೇಠು ಅಂಗಡಿಗೆ ಹೋಗ್ತಿದ್ದಂಗೆ ದೊಡ್ಡ ಸ್ವಾಗತಾ ಮಾಡಿದ, ಕಳೆದ ಸಾರಿ ಹಾಗೆ ಮತ್ತೆ ನನ್ನಾಕೆಗೆ ಗೊತ್ತಾಗದ ಹಾಗೆ ಅವಳಿಗೆ ಸರಪ್ರೈಜ್ ಮಾಡೊ ಸೀರೆ ಖರೀದಿಯೂ ಇದೆಯಾ ಅಂತ ಕೇಳಿಯೂ ಬಿಟ್ಟ. ಇಲ್ಲ ಅಂದಿದ್ದಕ್ಕೆ ನಿರಾಸೆಯಾಗಿರಬೇಕು, ಟೀ ಕೂಡ ತರಿಸಲಿಲ್ಲ. ಅತ್ತೆ ಒಂದು ಕೆಂಪು ಸೀರೆ ಸೆಲೆಕ್ಟ್ ಮಾಡಿದ್ದು ನೋಡಿದೆ, ಮಾವ ಅಲ್ಲೇ ಕೂತು ಅದಕ್ಕೆಷ್ಟು ಅಂತ ಕೇಳಿದ್ದಕ್ಕೆ "ಮುನ್ನೂರುಷ್ಟೇ" ಅಂತ ಸೇಲ್ಸಮನ್ ಹೇಳಿದ. "ಆಂ ಬರೀ ಮುನ್ನೂರಾ, ಒಳ್ಳೆ ಕಾಸ್ಟ್ಲಿ ಸೀರೆ ತೋರಿಸೊ" ಅಂತ ಅಬ್ಬರಿಸಿದರು. ಜತೆಗೆ ನನ್ನಾಕೆ ಕೂಡ "ಅಮ್ಮ ಕೆಂಪು ಕಲರ್ ಸರಿಹೋಗಲ್ಲ, ಆ ಥರ ಸೀರೆ ಏನು ಇದು ತೆಗೆದುಕೊ" ಅಂತ ಇನ್ನೊಂದು ತೆಗೆದಿಟ್ಟಳು. ನನ್ನಾಕೆ ಅವಳಪ್ಪ ಸೇರಿ ಕಾಸ್ಟ್ಲಿ, ಅಂತ ತಮಗಿಷ್ಟವಾದದ್ದೊಂದು ಆರಿಸಿದರೆ ಅತ್ತೆ ಅದನ್ನೇ ಎತ್ತಿಕೊಂಡು ಬಿಟ್ಟರು. ಮಾವನಿಗೇನೊ ಒಳ್ಳೆ ಬೆಲೆ ಸೀರೆ ಕೊಡಿಸಿದೆ ಅಂತ, ನನ್ನಾಕೆಗೆ ಮಾರ್ಕೆಟನಲ್ಲಿ ಹೊಸ ಶೈಲಿ ಸೀರೆ ಕೊಡಿಸಿದೆ ಅಂತ ಹೆಮ್ಮೆ ಆಯ್ತೇನೊ, ಆದ್ರೆ ಅತ್ತೆಗೆ?
ಹೊಟ್ಟೆ ತಾಳ ಹಾಕುತ್ತಿತ್ತು, ಹೊಟೇಲಿಗೆ ನುಗ್ಗಿದೆವು. ಊಟ ಬೇಡವಾಗಿತ್ತು, ಅದಕ್ಕೆ ನಾನು ದೋಸೆ ಅಂದೆ, ಇವಳು ಇಡ್ಲಿವಡೆ, ಮಾವ ಮೊಸರುವಡೆ ಅಂದ್ರು. ಅತ್ತೆಗೆ ಕೇಳಿದ್ದಕ್ಕೆ "ದೋಸೆ" ಅಂತಿರಬೇಕಾದ್ರೆ, ಇವಳ ತಮ್ಮ "ಅಯ್ಯೊ ಎಣ್ಣೆ ಇರತ್ತೆ ಅಮ್ಮ, ಬೇಡ. ನಮಗೆ ಇಬ್ರಿಗೂ ಮೊಸರನ್ನ, ಹೊಟ್ಟೆಗೆ ಒಳ್ಳೇದು" ಅಂತ ಹೇಳಿಯೂಬಿಟ್ಟ. ನಾನೂ ದೋಸೆ ಕ್ಯಾನ್ಸಲ್ ಮಾಡಿ ಮೊಸರನ್ನ ಹೇಳಿದೆ. ಊಟವಾದ ಮೇಲೆ ಶಾಪಿಂಗ ಮಾಲ್ ನುಗ್ಗಿ ಮತ್ತಿನ್ನೇನೊ ಖರೀದಿ ಆಯ್ತು, ಎಲ್ಲ ಮನೆಬಳಕೆ ಸಾಮಗ್ರಿಗಳೇ. ಹೊರಗೆ ಬಂದ್ರೆ ಅಲ್ಲಿ ಪಾಪ್‌ಕಾರ್ನ್ ಮಾಡುತ್ತಿದ್ದು ನೋಡಿ ಜತೆ ಬಂದಿದ್ದ ಮಗು ಅದು ಬೇಕೆಂದು ರಚ್ಚೆ ಹಿಡಿಯಿತು. ಅದಕ್ಕೊಂದು ನಮಗೊಂದು ಅಂತ ಎರಡು ತಂದು ತಗೊಳ್ಳಿ ಅಂದ್ರೆ, ಅತ್ತೆ ಕೈಮುಂದೆ ಮಾಡಿದ್ದರೆ, ಮಾವ "ಈಗ ತಾನೇ ಊಟ ಆಯ್ತು, ಅದೇನು ಚಿಕ್ಕಮಕ್ಕಳ ಹಾಗೆ, ನಮಗೆ ಬೇಡ" ಅಂದಿದ್ದು ಕೇಳಿ, ಚಾಚಿದ ಕೈ ಹಿಂದೆ ಸರಿದಿದ್ದು ಗಮನಿಸಿದೆ. ಏನೊ ಹೇಳಬೇಕೆನ್ನಿಸಿದರೂ ಸರಿಯಾದ ಸಮಯ ಇದಲ್ಲ ಅಂತ ಸುಮ್ಮನಾದೆ.
ಸಂಜೆಯಾಗುತ್ತಿದ್ದಂತೇ, "ಕೊನೆದಾಗಿ ಇಸ್ಕಾನ್ ದೇವಸ್ಥಾನಕ್ಕೆ ಪಯಣ" ಅಂತ ಸಾರಿದಳು, ಒಳ್ಳೇ ಐಟಿ ಕಂಪನಿ ಇದ್ದ ಹಾಗೆ ಇದೆ ಅನ್ನುತ್ತ ಮಾವ ಓಡಾಡಿ ನೋಡುತ್ತಿದ್ದರು, ಅವರಿಗಿದು ನಾಲ್ಕನೇ ಸಾರಿ ಆದ್ರೂ ಅತ್ತೆಗೆ ಹೊಸದು ಅಂತ ಅದು ಇದು ತೋರಿಸುತ್ತಲೇ ನಡೆದಿದ್ದರು. ಅತ್ತೆ ನನ್ನಾಕೆಗೆ "ಶನಿವಾರ ಇಂದು, ಹತ್ತಿರದಲ್ಲಿ ಎಲ್ಲಿ ಮಾರುತಿ ದೇವಸ್ಥಾನ ಇಲ್ವ, ಅಲ್ಲಿ ಹೋಗಬಹುದಿತ್ತು." ಕೇಳುತ್ತಿದ್ರು. ಇವಳು "ಅಯ್ಯೊ ಇಸ್ಕಾನ್ ಪ್ರಸಿದ್ದ ಇಲ್ಲಿ, ಅದು ನೋಡಮ್ಮ" ಅಂತ ತಳ್ಳಿಹಾಕಿದಳು. ಹೊರ ಬರುವಾಗ ಹೊತ್ತಾಗಿದ್ದರಿಂದ, ನೇರ ಮನೆಗೆ ನಡೆದೆವು.
ಊಟದ ಶಾಸ್ತ್ರ ಮುಗಿಸಿ, ಬೇಗನೇ ಮೈಚೆಲ್ಲಿದ್ದರೆ. ಪಕ್ಕದಲ್ಲಿ ಮಲಗಿದ್ದ ಇವಳು ಅವಳ ಸುತ್ತು ಬಳಸಿದ ಕೈ ಎತ್ತಿ ಬೀಸಾಕಿದಳು, ಮತ್ತೆ ಅತ್ತೆ ಕೇಳಿದ್ದಕ್ಕೆ ಬಂದೆ, ಅವಳು ಕೇಳಿದ್ರೆ ಇಲ್ಲ ಅಂದಿದ್ದಕ್ಕೆ ಸಿಟ್ಟು ಇನ್ನೂ ಕಮ್ಮಿಯಾಗಿರಲಿಲ್ಲ. "ಅತ್ತೆನಾ ಹೊರಗೆ ಸುತ್ತಲು ಕರೆದೊಯ್ಯದಿದ್ದರೇ ಸರಿಯಿತ್ತು" ಅಂದೆ, "ರೀ, ನಿಮಗೆ ಬೇಡ ಆಗಿದ್ರೆ ಬರಬಾರದಿತ್ತು, ಅಮ್ಮ ಕೇಳಿದ್ಲು ಅಂತ ಅದ್ಯಾಕೆ ಬರುವ ತೊಂದ್ರೆ ತೆಗೆದುಕೊಂಡಿರಿ" ಅಂತ ಸಿಡುಕಿದಳು. ಸಿಡುಕದೇ ಮತ್ತಿನ್ನೇನು. ನಾ ಹೇಳಿದ್ದು ಇನ್ನೂ ಅವಳಿಗೆ ಅರ್ಥವಾಗಿರಲಿಲ್ಲ. "ನಾಳೇನೇ ಊರಿಗೆ ಕಳಿಸ್ತೀನಿ ಬಿಡಿ ನಿಮಗ್ಯಾಕೆ ತೊಂದ್ರೆ" ಅಂತ ಕೂಡ ಸೇರಿಸಿದಳು. ಈಗ ನಿಜಕ್ಕೂ ಅವಳಿಗೆ ಬೇಜಾರು ಸಿಟ್ಟು ಎರಡೂ ಆಗಿತ್ತು ಅನ್ನುವುದರಲ್ಲಿ ಸಂಶಯವಿರಲಿಲ್ಲ. "ಅರ್ಜೆಂಟ್ ಇದ್ರೆ ನಿಮ್ಮಪ್ಪ, ತಮ್ಮನಿಗೆ ಹೋಗು ಅಂತ ಹೇಳು, ಅತ್ತೆ ಇಲ್ಲೇ ಇರ್ತಾರೆ ನಾ ಅವರನ್ನೊಮ್ಮೆ ಹೊರಗೆ ಕರೆದುಕೊಂಡು ಹೋಗಿ ಬರ್ತೀನಿ" ಅಂದೆ. "ಏನು ಬೇಡ, ನಾನು ಸಿಟ್ಟಾಗಿದೀನಿ ಅಂತ ನನ್ನ ಸಮಾಧಾನಕ್ಕೆ ನೀವೇನೂ ಮಾಡೊದು ಬೇಡ" ಅಂತಂದು ಆಕಡೆ ತಿರುಗಿ ಮಲಗಿದಳು. "ನಿನ್ನ ಸಮಾಧಾನಕ್ಕೇನೂ ಅಲ್ಲ, ನನ್ನ ಮನದ ಸಮಾಧಾನಕ್ಕೆ, ಅತ್ತೆಗಾಗಿ... ಅಷ್ಟೇ" ಅಂತ ನಾನೂ ಮಗ್ಗಲು ಬದಲಿಸಿದೆ. ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಅತ್ತೆಗಾಗಿ ಅಂದ್ರೆ, ಅಮ್ಮನಿಗೇನಾಯ್ತು, ನಿಮಗೇನು ಬೇಜಾರು?" ಅಂತ ಕೆದಕಿದಳು. "ಮುಂಜಾನೆಯಿಂದ ನೋಡ್ತಾ ಇದೀನಿ, ಒಂದು ದಿನಾ ಟೀ ಕುಡಿದ್ರೆ ಏನಾಗತ್ತೆ, ಹಾಗಲಕಾಯಿ ರಸ ತಂದಿಟ್ಟೆ ಅತ್ತೆಗೆ, ಸೀರೆ ಕೆಂಪು ಯಾಕೆ ಅಂದೆ, ಮಾವಾನೊ ಕಾಸ್ಟ್ಲೀ ಸೀರೆ ಅಂತ... ನಿಮಗಿಷ್ಟವಾದದ್ದು ಆರಿಸಿದ್ರಿ, ಕೆಂಪೊ, ಹಸಿರೊ ಅವರಿಷ್ಟ ಅಂತ ಏನೂ ಇಲ್ವಾ, ನಿನಗೆ ಕೆಂಪು ಸರಿಯಿಲ್ಲ ಬಿಡು, ಅವರ ಇಷ್ಟ ನಿರ್ಧರಿಸೊಕೆ ನೀನಾರು? ಸಾವಿರಾರು ತೆತ್ತು ತಂದ್ರೂ ಇಷ್ಟಾನೆ ಇಲ್ಲದಮೇಲೆ ಅದೇನು. ಊಟಕ್ಕೆ ಹೋದ್ರೆ, ನಿಮ್ಮ ತಮ್ಮನ ಹೊಟ್ಟೆ ಸರಿ ಇಲ್ಲ, ತನಗೆ ಬೇಕಾದ್ರೆ ಮೊಸರನ್ನ ತಿನ್ನಲಿ. ಎಣ್ಣೆ ಹಾಕ್ದೆ ದೋಸೆನೇ ಆಗಲ್ವಾ? ಸುಮ್ನೇ ತಿಂದು ಎದ್ದು ಬಂದ್ರು ಅತ್ತೆ. ಪಾಪ್‌ಕಾರ್ನಗೆ ಕೈಚಾಚಿದ್ದ ಅತ್ತೆ, ಮಾವನ ಮಾತಿಗೆ ಹಿಂದೆಗೆದರು ನೋಡಿದ್ಯಾ? ದೊಡ್ಡದಾಗಿ ಇಸ್ಕಾನ್ ಸುತ್ತಿಸಿದೆ, ಅತ್ತೆಗೆ ಮಾರುತಿ ಮಂದಿರಕ್ಕೆ ಹೋಗಬೇಕಿತ್ತು, ಇಸ್ಕಾನ ಇನ್ನೊಮ್ಮೆ ನೋಡಬಹುದಿತ್ತು, ಭಕ್ತಿಯಿಂದ ತಪ್ಪದೇ ಹೋಗಬೇಕು ಅಂತ ಅವರಂದುಕೊಂಡಿದ್ದು ತಪ್ಪಿಸಿದಿರಲ್ಲ, ಯಾರ ಖುಷಿಗೆ ಹೋಗಿದ್ದೆವೊ ಅವರೇ ಖುಷಿಯಗಲಿಲ್ಲ ಅಂದ್ರೆ ಎಲ್ಲ ವ್ಯರ್ಥ" ಒಂದೇಟಿನಲ್ಲಿ ಮನದಲ್ಲಿದ್ದುದನೆಲ್ಲ ಹೊರಹಾಕಿದೆ. ಮರುಮಾತಾಡಬೇಕೆನಿಸಲಿಲ್ಲ.
ಸುತ್ತಲೂ ಒಮ್ಮೆ ನೋಡಿ, ಹೀಗೆ ನೋಡಿಯೇ ಇರುತ್ತೀರಿ. ಬೇರೆಯವರ ಅಭಿಪ್ರಾಯಗಳ ನಡುವೆ ಸಿಕ್ಕು ತೊಳಲಾಡುವ ಜೀವಗಳನ್ನು. ತಮ್ಮದೇ ಇಷ್ಟನಿಷ್ಟಗಳನ್ನು ಮರೆತು ಎಷ್ಟೊ ವರ್ಷಗಳಾಗಿರುತ್ತದೆ ಇಂಥವರು. ಹುಟ್ಟಿದಾಗ ಅಪ್ಪ, ಮದುವೆಯಾದಮೇಲೆ ಗಂಡ, ನಂತರ ಮಕ್ಕಳು ಎಲ್ಲರ ಹೇಳಿದ್ದು ಕೇಳಿ ಕೇಳಿ ತಮ್ಮಾಸೆಗಳನ್ನು ಹುಗಿದು ಸಮಾಧಿ ಮಾಡಿ ಎಷ್ಟೊ ದಿನವಾಗಿರುತ್ತದೆ ಅವರು. ತಮ್ಮತನ ಅನ್ನುವುದನ್ನು ಎಂದೊ ಕಳೆದುಕೊಂಡು, ಎಲ್ಲೊ ಕಳೆದುಹೋಗಿರುತ್ತಾರೆ. ಬೇರೆಯವರ ಅಭಿಪ್ರಾಯವನ್ನು ಎದುರಿಸುವ ದನಿ ಅಡಗಿಹೋಗಿರುತ್ತದೆ. ನಮ್ಮ ಅಭಿಪ್ರಾಯಗಳು, ನಮ್ಮಲ್ಲಿರಲಿ ಬೇರೆಯವರ ಮೇಲೆ ಯಾಕೆ ಹೇರುವುದು. ಮತ್ತೊಬ್ಬರಿಗೂ ಮನಸಿದೆ, ಅದರದೇ ಆದ ಆಸೆ ಆಕಾಂಕ್ಷೆಗಳಿವೆ ಅಂತ ನಮಗ್ಯಾಕೆ ತಿಳಿಯುವುದಿಲ್ಲ, ನಮಗನಿಸಿದ್ದು ಒಳ್ಳೆಯದೇ ಇರಬಹುದು, ಅವರ ಒಳ್ಳೆಯದಕ್ಕೇ ಇರಬಹುದು, ಆದರೂ ಆಯ್ಕೆ ಅವರದಾಗಿರಲಿ. ಕೆಂಪು ಸೀರೆ ಸರಿ ಕಾಣಲಿಕ್ಕಿಲ್ಲ ಅನ್ನಿ, ಆದರೆ ನಿರ್ಧಾರ ಅವರಿಗೇ ಬಿಡಿ, ದೋಸೆಗೆ ಎಣ್ಣೆ ಜಾಸ್ತಿ ಅನ್ನಿ, ಎಣ್ಣೆ ರಹಿತ ದೋಸೆ ಕೂಡ ಇದೆ, ಕೇಳಲುಬಿಡಿ, ಪಾಪ್‌ಕಾರ್ನ್ ನಿಮಗೆ ಬೇಡ ಆಗಿರಬಹುದು, ಪಾಪ ಬೇರೆಯವರ ಬಾಯಿ ಕಟ್ಟದಿರಿ. ಮತ್ತೆ ಮೊದಲಿನಂತೆ ಅವರು ತಮ್ಮನ್ನು ತಾವು ವ್ಯಕ್ತಪಡಿಸಲಿಕ್ಕಿಲ್ಲ, ಆ ಸೂಕ್ಷ್ಮಗಳನ್ನು ನೋಡಿ, ಆ ಮಾತುಗಳು ಹೊರಬರಲು ಅವಕಾಶ ಕೊಡಬಾರದೇಕೆ. ಮತ್ತೊಬ್ಬರ ಪರ ವಕಾಲತ್ತು ವಹಿಸುವ ಅಗತ್ಯವೇನಿಲ್ಲ, ಅವರಿಷ್ಟಕ್ಕೆ ಅವರಿರಲು ಬಿಡಿ ಸಾಕು.
ಮತ್ತೆ ಶನಿವಾರ ಬಂತು, "ಅತ್ತೆ ಟೀ" ಅಂದೆ, "ಹಾಗಲಕಾಯಿ ರಸ ಮಾಡ್ತಾ ಇದಾಳೆ" ಅಂದ್ರು. "ಶುಗರ್‌ಫ್ರೀ ಅಂತ ಗುಳಿಗೆ ಹಾಕಿ ಕುಡೀಬಹುದು ನೋಡಿ" ಅಂದೆ, "ಬಹಳ ದಿನಾ ಆಯ್ತು, ಬಾಯೆಲ್ಲ ಕಹಿಯಾಗಿಬಿಟ್ಟಿದೆ, ಅವಳು ಕೊಡಲ್ಲ" ಅಂತ ನನ್ನಾಕೆ ಬಗ್ಗೆ ಹೇಳಿದ್ರು. ಮುಗುಳ್ನಕ್ಕು "ಎರಡು ಶುಗರಲೆಸ್ ಟೀ" ಅಂದೆ ನನ್ನಾಕೆಗೆ. "ಒಂದು ನಿಮಗೆ, ಮತ್ತೊಂದು ಪಕ್ಕದಮನೆ ಪದ್ದುಗೇನಾ" ಅಂದ್ಲು. "ಹಾಗಾದ್ರೆ ಮೂರು" ಅಂದೆ. ಸುಮ್ಮನೇ ಎರಡು ಕಪ್ಪು ಟೀ, ಒಂದು ಹಾಗಲಕಾಯಿ ರಸ ತಂದಿಟ್ಲು, ಟೀ ತನಗೇ ಅಂದುಕೊಂಡಿರಬೇಕು. ಒಂದು ಟೀ ಕಪ್ಪಿಗೆ ಶುಗರ್‌ಫ್ರೀ ಗುಳಿಗೆ ಹಾಕಿ ಅತ್ತೆಗೆ ಕೊಟ್ಟು, ನಾನೊಂದು ಎತ್ತಿಕೊಂಡೆ. "ಒಮ್ಮೆ ಹಾಗಲಕಾಯಿ ರಸ್ ಟ್ರೈ ಮಾಡು" ಅಂತ ನನ್ನಾಕೆಗಂದೆ ಒಂದು ಸಿಪ್ಪು ಹೀರಿದವಳ ಮುಖ ಇಂಗುತಿಂದ ಮಂಗನಂತಾಗಿತ್ತು. ಅತ್ತೆ ಅಮೃತವೇ ಸಿಕ್ಕಿದೆಯೇನೊ ಅಂತ ಒಂದೊಂದೆ ಗುಟುಕು ಹೀರುತ್ತಿದ್ದುದು ನೋಡುವಂತಿತ್ತು, ಸಿಕ್ಕ ಒಂದೇ ಚಾಕಲೇಟನ್ನು ಮಗು ಕಚ್ಚದೇ ಖಾಲಿಯಾದೀತೆಂದು ಅಷ್ಟಷ್ಟೇ ಸೀಪುವಂತೆ.
ಸ್ನಾನವಾದಮೇಲೆ "ಹತ್ತಿರದಲ್ಲೆ ವಿಜಯನಗರ ಮಾರುತಿ ಮಂದಿರವಿದೆ, ಹೋಗಬೇಕಾ" ಅಂತ ಅತ್ತೆಗಂದರೆ, ತಕ್ಷಣದಲ್ಲಿ ತಯ್ಯಾರಾಗಿದ್ದರು. ಅತ್ತೆ ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದರೆ, ನಾವಿಬ್ಬರೂ ಕೂತು ಹರಟೆ ಹೊಡೆದೆವು. ಬರಬೇಕಾದರೆ ಏನೊ ಸಮಾಧಾನ ಅತ್ತೆ ಮುಖದಲ್ಲಿ. ಕಳೆದವಾರ ತಪ್ಪಿಸಿದ್ದಕ್ಕೆ ಇನ್ನೆರಡು ಸುತ್ತು ಜಾಸ್ತಿಯೇ ಪ್ರದಕ್ಷಿಣೆ ಹಾಕಿದಂತಿತ್ತು. ಟಿಫಿನ್ನು ಮನೆಯಲ್ಲೇನು ಬೇಡ ಇಲ್ಲೇ ಮಾಡೋಣ ಅಂತ ಅವಳ ತಮ್ಮನನ್ನೂ ಅಲ್ಲೆ ಹೊಟೇಲಿಗೆ ಕರೆದೆವು, ಬೇಕೇಂತಲೇ ನಾ ಕರೆಸಿದೆ ಅಂದರೂ ತಪ್ಪಿಲ್ಲ. ಸರ್ವರ ಆರ್ಡರ ಅಂತಿದ್ದಂಗೆ ಎಂದಿನಂತೆ ಅವಳ ತಮ್ಮ "ನಂಗೆ ಅಮ್ಮಂಗೆ ಇಡ್ಲಿ, ಎಣ್ಣೆ ಎನೂ ಇರಲ್ಲ" ಅಂದ, ನಾ ಅದಕ್ಕೇ ಕಾಯುತ್ತಿದ್ದೆ. "ಏನೊ ಅಮ್ಮನ ಊಟ ತಿಂಡಿ ಕಾಂಟ್ರಾಕ್ಟ ನೀನು ತೆಗೆದುಕೊಂಡೀದೀಯಾ, ನಿನಗೆ ಹೊಟ್ಟೆ ಸರಿಯಿಲ್ಲ ಅಂದ್ರೆ ಇಡ್ಲಿನಾದ್ರೂ ತಿನ್ನು, ಮೊಸರನ್ನನಾದ್ರೂ ತಿನ್ನು, ಅವರಿಗೇನು ಬೇಕು ಅವರೇ ಹೇಳಲಿ" ಅಂತ ಕುಟುಕಿದೆ. "ಅಲ್ಲ, ಅಮ್ಮನ ಆರೋಗ್ಯಕ್ಕೆ ಒಳ್ಳೇದು ಅಂತ ನಾನೇ ಹೇಳ್ತಿದ್ದೆ" ಅಂದ. ಆದರೆ ನನ್ನ ಮಾತು ತಾಕುವಲ್ಲಿ ತಾಕಿಯಾಗಿತ್ತು. "ನನಗೆ ಎಣ್ಣೆ ಇಲ್ಲದ ದೋಸೆ" ಅಂದೆ. ಅತ್ತೆ "ಎಣ್ಣೆ ಇರಲ್ವಾ ದೋಸೇಲಿ" ಅಂದ್ರು. "ಹೇಳಿದ್ರೆ ಹಾಕಲ್ಲ, ಬೇಕಾದ್ರೆ ಟ್ರೈ ಮಾಡಿ" ಅಂದೆ. ದೋಸೆ ಆರ್ಡರ ಮೂರಾಯ್ತು, ನನ್ನಾಕೆ ಕೂಡ ಅದನ್ನೇ ಹೇಳಿದ್ಲು.
ಮರಳಿ ಮನೆಗೆ ಬಂದರೆ ಅತ್ತೆ ಇಂದೇ ಊರಿಗೆ ಹೊರಟಿದ್ದರು, ಮೊದಲಸಾರಿ ನಮ್ಮಲ್ಲಿಗೆ ಬಂದಿದ್ದಕ್ಕೆ ಅಂತ ಉಡುಗೊರೆ ಇದು ಅಂತ ಒಂದು ಪ್ಯಾಕ್ ಕೊಟ್ಟು, ಅರಿಷಿನ ಕುಂಕುಮ ಕೊಟ್ಟಳು ನನ್ನಾಕೆ. ತೆಗೆದು ನೋಡಿ ಅಂತ ಅಲ್ಲೇ ಕಾದೆವು ನಾನು ನನ್ನಾಕೆ. ಈಗೆಲ್ಲೆ ಇದು ಯಾಕೆ ಅನ್ನುತ್ತಲೇ ತೆಗೆದು ನೋಡಿದ ಅತ್ತೆ, ಕಣ್ಣು ಕೆಂಪಾದವು, ಸಿಟ್ಟಿನಿಂದ ಅಲ್ಲ ಕಣ್ರೀ, ಸೀರೆ ಕೆಂಪು ಇತ್ತಲ್ಲ ಅದಕ್ಕೆ. ಸೇಠುಗೆ ಅದನ್ನು ಎತ್ತಿಡಲು ಹೇಳಿದ್ದೆವಲ್ಲ, ಅದೇ ಅತ್ತೆ ಆಸೆ ಪಟ್ಟದ್ದು. ಅತ್ತೆ ಅದನ್ನು ನೀವಿ ಮಡಿಕೆ ಸರಿ ಮಾಡುತ್ತಿದ್ದುದು ನೋಡುತ್ತಿದ್ದರೆ ಗೊತ್ತಾಗುತ್ತಿತ್ತು ಎಷ್ಟು ಇಷ್ಟವಾಗಿದೆ ಅಂತ. "ಉಟ್ಕೊಂಡು ಅಪ್ಪನ ಮುಂದೆ ಒಮ್ಮೆ ಹಾದು ಹೋಗು, ಇನ್ನೊಮ್ಮೆ ಹನಿಮೂನ್‌ಗೆ ಹೋಗೋಣ ನಡೆ ಅನ್ನಲಿಲ್ಲ ಅಂದ್ರೆ ಕೇಳು" ಅಂತ ಚಟಾಕಿ ಹಾರಿಸಿದಳು ನನ್ನಾಕೆ, ಅತ್ತೆ ನಾಚಿ ನೀರಾದರೆ ಕೆನ್ನೆಗೆ ಕೂಡ ಕೆಂಪಡರಿತ್ತು.
ಟ್ರೇನ್ ಹತ್ತಿಸಿ ಕಿಟಕಿಯಿಂದ ಅತ್ತೆ ಕೈಲಿ ಪಾಪ್‌ಕಾರ್ನ ಪ್ಯಾಕೆಟ್ ಕೊಟ್ಟು, ಮಾವನಿಗೂ ಕೇಳುವಂತೆ "ದಾರಿಯಲ್ಲಿ ಟೈಮ್‌ಪಾಸ್ ಆಗತ್ತೆ, ಬರೀ ಚಿಕ್ಕಮಕ್ಕಳೆ ತಿನ್ನಬೇಕಂತಿಲ್ಲ, ಇಷ್ಟವಾದವರು ತಿನ್ನಬಹುದು" ಅಂತ ಅತ್ತೆಗೆ ಹೇಳಿ, ಮಾವನಿಗೂ ಒಂದು ಶಾಕ್ ಕೊಟ್ಟೆ. ಮುಂದಿನ ಬಾರಿ ಬಂದಾಗ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಖಂಡಿತ ಆಗಿರುತ್ತದೆ ಅಂತನಿಸಿತು. ಟ್ರೇನ್ ಹೊರಟರೆ ಕಿಟಕಿಯಲ್ಲಿ ಕೈ ಬೀಸುತ್ತಿದ್ದ ಅತ್ತೆ ಕಣ್ಣಲ್ಲೆ ಕೃತಜ್ಞತೆ ಹೇಳಿದಂತಿತ್ತು. ಟ್ರೇನ ಹೊರಟಾದ ಮೇಲೆ ಮನೆಗೆ ಮರಳುತ್ತಿದ್ದರೆ "ರೀ ನೀವು ಮನಶಾಸ್ತ್ರಜ್ಞ ಆಗಬೇಕಿತ್ತು" ಅಂತ ನನ್ನಾಕೆ ಅಂದ್ಲು, "ಸೈಕೊಲೊಜಿ ಓದಿ ಸೈಕೊ ಆಗು ಅಂತೀಯಾ" ಅಂತ ಕೀಟಲೆ ಮಾಡಿದೆ. "ಅಮ್ಮನ ಬಗ್ಗೆ ಹೀಗೆಂದೂ ನನಗೆ ಅನ್ನಿಸಿರಲೇ ಇಲ್ಲ, ಅದು ಹೇಗೆ ನಿಮಗೆ ಆ ಸೂಕ್ಷ್ಮ ಸಂಗತಿಗಳು ಕಾಣುತ್ತವೆ ಅಂತೀನಿ" ಅಂತ ಕೇಳಿದಳು, "ಮೈಕ್ರೋಸ್ಕೊಪ್ ಹಾಕಿಕೊಂಡು ನೋಡಿದ್ರೆ ಕಾಣ್ತದೆ" ಅಂತ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಲಲನೆಯೆಡೆಗೆ ನೋಡುತ್ತಿದ್ದರೆ, ಟ್ರೇನ ಸ್ಟೇಶನ್ ಪ್ಲಾಟ್‌ಫಾರ್ಮ್ ಮೇಲಿದಿವೀ ಅನ್ನೊದು ಮರೆತು, ಕೈತೋಳು ಬಳಸಿ ಗಟ್ಟಿ ಹಿಡಿದುಕೊಂಡು ನಡೆದಳು, ಏನೊ ಸಾಧಿಸಿದ ಸಮಾಧಾನದೊಂದಿಗೆ ಹೆಜ್ಜೆಯಿಡತೊಡಗಿದೆ... ಮತ್ತೆ ಸಿಗೋಣ ಹೀಗೆ ಮನದ ಮಾತುಗಳೊಂದಿಗೆ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/nannatte.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
30 comments:
Super prabhu. Computer gala manassina jothe manushyana manassannu yestu chennagi artha madkondideeri. Nanagu kooda nimmanthaha aliyane sigali antha eegalindane prathisthini :-) :-).
Well said Prabhuraj,
ತುಂಬಾ ಚೆನ್ನಾಗಿ ಬರೆದಿದ್ದೀರಿ. ಇದು ಎಷ್ಟೋ ಮನೆಯ ಪ್ರತಿನಿತ್ಯದ ಘಟನೆ!!
ಪ್ರಭು ಸರ್ ,
ಪ್ರತಿಯೊಬ್ಬ ಅಳಿಯಂದಿರು ತಿಳ್ಕೊಬೇಕದ್ದ್ದು ಹೇಳಿದಿರಿ .. ನೈಸ್ ಅರ್ಟಿಕಲ್
ಎಲ್ಲರೂ ಇಂತಹ ಸೂಕ್ಷ್ಮತೆ ಅರಿತರೆ ಸಂಬಂದಗಳು ಎಷ್ಟು ಚೆನ್ನಾಗಿರತ್ತೆ ಅಲ್ವ :)
ಎಲ್ಲ ಅತ್ತೆಯಂದಿರಿಗೂ ನಿಮ್ಮಂತಹ ಅಳಿಯ ಸಿಗಲಿ ....
"ಇಲ್ಲಿ ಸ್ಟಾರ್ಟ್ಇಂಗ್ ನಲ್ಲೇ ಪದ್ದು" .. :D
ತುಂಬಾ ಚೆನ್ನಾಗಿದೆ ಪ್ರಭು ಮನೆ ಮನಗಳ ಕಥೆ.
ಅತ್ತೆಯನ್ನು ತೆಗಳುವ ಅಳಿಯಂದಿರನ್ನು ನೋಡಿದ್ದೇನೆ. ಆದರೆ ಈ ರೀತಿ ಅತ್ತೆಯನ್ನು ಅರ್ಥಮಾಡಿಕೊಂಡು ಅವರ ಪರವಾಗಿ ನಿಂತದ್ದು ನೀವೇ ಮೊದಲಿರಬೇಕು ;-)
tumbaa chennaagi barediddeeri..... ellara maneyalli nadeyuva prasangavannu saraLavaagi bidisi baredideeri... ellarigoo tammade aada manasside...... tumbaa uttama lekhana.....
ಪ್ರಭು,
ತುಂಬಾ ಚೆನ್ನಾಗಿ ಬರೆದಿದ್ದೀರ ....
ಅಳಿಯನ ಪಾತ್ರ ಚೆನ್ನಾಗಿ ಹೇಳಿದ್ದೀರ....
ವಾಹ್! ‘ಅತ್ತೆ ಮೆಚ್ಚಿದ ಅಳಿಯ!’
ಸತಿಯೊಡನೆ ಸರಸವಾಡುವದಲ್ಲದೇ, ಅತ್ತೆಗೆ ಆದರ ತೋರಿಸುವದನ್ನೂ ಕಲಿಸಿದ್ದೀರಿ.
ಅಲ್ಲಾರೀ,
ಅನುಭವದ ತಲೆ ಮೇಲೆ ಹೊಡದಂಗೆ ಬರಿತಿರಲ್ಲ!!
ಸಕತ್ತಾಗಿದೆ :)
ಮನೆ ಮನೆ ರಾಮಾಯಣ :)
tumba chennagide... nija innobbara ishtavanna naave nirdharisi bidtivi tumba sala...
ಆಹಾ! ಎಲ್ಲಿಂದ ಹುಡುಕಿ ತೆಗೀತೀರಿ ಪ್ರಭುಗಳೇ, ಇಂಥಾ ಸೂಕ್ಷ್ಮವಾದ ಎಳೆಗಳನ್ನ !!
ಅದ್ಭುತವಾದ observation !!
ತುಂಬಾ ಚೆನ್ನಾಗಿದೆ, ಮನಮುಟ್ಟಿ, ತಟ್ಟಿ, ಕಣ್ಣಲ್ಲಿ ನೀರಾಗಿ ಇಳಿಯುವಂತೆ ಮಾಡಿದೆ ಈ ಲೇಖನ.
ಪಾಪ, ಪದ್ದೂಗೂ ಇಂಥಾ ಗಂಡ ಸಿಕ್ಕಿದ್ದಿದ್ರೆ :-)
hee hee... Paddu, Tea :D
ಪ್ರೀತಿಯನೆ ಇಟ್ಟಿಗೆಯಾಗಿಸಿ...
ರಾಶಿ ಕಾಳಜಿಯಲಿ ಬಿರುಕುಗಳ ತುಂಬಿ....
ನಿನ್ನ ಭಾವನೆಗಳು ಹೊರಬಾರದಂತೆ
ಕೋಟೆ ಕಟ್ಟುವವರಿಗೊಮ್ಮೆ ಓ ಜೀವವೇ...
ಓದ ಹೇಳು ಈ ಪುಟ್ಟ ಬರಹವ...
ಒಂದು ಸಲವಾದರೂ.....!!!
ಪ್ರಭುರಾಜ ಸರ್,
ಮತ್ತೊಂದು ಉತ್ತಮ ಬರಹ
ಸರಿಯಾಗಿ ಹೇಳಿದ್ದಿರಿ
Prabhu avare,
tumbaa chennaagi barediddeeri. anubhavada tale mele hoDeda haage kalpisiddeeri. Thanks for a good article.
Meena jois
ಚೆನ್ನಾಗಿದೆ ಎಂದಷ್ಟೇ ಚಿಕ್ಕದಾಗಿ ಹೇಳುತ್ತೇನೆ! ಗುಡ್
ಪ್ರಭುವೇ...ಗುರುವೇ...ಯಾಪಾಟಿ ಬರೀತೀಯೋ ಯಪ್ಪಾ...ಮದ್ವಿ ಗಿದ್ವಿ ಆಗೀಯೋ ಇಲ್ಲೋ..?? ಅಲ್ಲಾ ನೀ ಮದ್ವಿ ಆಕ್ಕೀನಿ ಅಂತ ಹೊಂಟ್ರೆ...ನೋಡಪಾ...ಹುಡ್ಗಿ ಒಪ್ಗಿ ಕೊಡ್ತಾಳೋ ಇಲ್ಲೋ ಖರೇ ಹೇಳ್ಲಾರೆ...ಅಂದ್ರ..ಅವ್ರ್ ಅಮ್ಮ ಗಬಕ್ ಅಂತ ಹೊಡ್ಕಂತಾಳ್ ನೋಡ್..ಅಯ್ಯೋ..ನಿನ್ ಜಾತ್ಕಾನೋ ಮಾರಾಯಾ.. ಅಲ್ಲಾ ...ಅದು...!!..!!????
ಛೇ..ಹೋಗ್ಲಿ ಬಿಡಪಾ...ಸುಮ್ನ್ ಭಾವೀ ಅತ್ತೀರ್ನೋಡ್ಯಾರು ಈ ನನ್ ಕಾಮೆಂಟ್ನ ಆಮ್ಯಾಲೆ ಡಬ್ಬಲ್ ತೊಂದ್ರಿ ನಿನಗಾ....ಮತ್ತ...ಹಹಹಹಹಹಹ
@Nisha
ಥ್ಯಾಂಕ್ಯೂ, ಕೋಡ್ ಕುಟ್ಟುವ ಕೆಲಸ ವೃತ್ತಿ, ಇದೊಂದು ಪ್ರವೃತ್ತಿ. ಅದೇನೊ ಸುಮ್ಮನೇ ಜನರ ಹಾವಭಾವಗಳನ್ನು ಗಮನಿಸುವ ಅಭ್ಯಾಸ, ಚಟ ಅಂತ್ ಬೇಕಾದ್ರೂ ಕರೆಯಬಹುದು. ಹಾಗೆ ಗಮನಿಸುವಾಗಲೇ ಇಂಥ ವಿಷಯಗಳು ಕಣ್ಣಿಗೆ ಬೀಳುವುದು.
ಅಯ್ಯೊ ನಾನು ಅಷ್ಟು ಒಳ್ಳೆಯ ಅಳಿಯ ಏನೂ ಆಗಲ್ಲ ಬಿಡಿ, ಆದ್ರೆ ನನ್ನ ಈ ಕಲ್ಪನೆಯ ಲೇಖನದಲ್ಲಿನ ಹಾಗೆ ನನ್ನತ್ತೆ ಕಷ್ಟ ಪಡದಿರದಿರಲಿ ಅಂತ ನನ್ನ ಆಶಯ.
@ವನಿತಾ / Vanitha
ಹೌದು ಪ್ರತಿನಿತ್ಯ ನಡೆಯುವ ಘಟನೆ, ನಮಗೇ ಗೊತ್ತಿಲ್ಲದ ಹಾಗೆ ಹೀಗೆ ವರ್ತಿಸುತ್ತಿರುತ್ತೇವೆ. ಒಂದೊಮ್ಮೆ ಗಮನಿಸಿದಾಗ ನಮಗೇ ಬೇಜಾರೆನಿಸಿಬಿಡುತ್ತದೆ.
@Ranjita
ಅಳಿಯಂದಿರು ಅನ್ನೊಕಿಂತ, ಎಲ್ರೂ ತಿಳಿದುಕೊಳ್ಳಬೇಕಾದ್ದು. ಯಾಕೆಂದ್ರೆ ಹೀಗೆ ಹತ್ತಿಕ್ಕಲ್ಪಟ್ಟ ಮನಸ್ಸಿನ ಜೀವಗಳು ನಮ್ಮ ತಾಯಿ, ಅಜ್ಜಿ, ಅತ್ತಿಗೆ, ಅಕ್ಕ ಯಾರೊ ಒಬ್ಬರು ನಮ್ಮಲ್ಲೇ ಇರಬಹುದು.
ಎಲ್ಲ ಅತ್ತೆಯರೂ ಹೀಗೆ ಇರದಿರಲಿ.
ಪದ್ದು ಇಲ್ದೇ ಯಾವ ಲೇಖನ ಪೂರ್ತಿ ಆಗಿದೆ ಹೇಳಿ, ಮೊಟ್ಟ ಮೊದಲ ಲೇಖನದಿಂದ ನಮ್ಮ ಪಕ್ಕದಮನೆ ಪದ್ದು ನಮ್ಮೊಂದಿಗಿದ್ದಾಳೆ.
@ಮನಸು
ಥ್ಯಾಂಕ್ಯೂ, ಇದು ಮೌನ ಮನಗಳ ಕಥೆ ಕೂಡ ಅಲ್ವೇ.
@ರಾಜೀವ
ಇದ್ದಾರೆ ಸರ್, ಆದ್ರೆ ಅತ್ತೆ ಕೂಡ ಹಾಗೆ ತೆಗಳದಂತೆ ಇರಬೇಕಲ್ಲ. ಕೆಲ ಅತ್ತೆಯರ ಮೊಟ್ಟ ಮೊದಲ ಕೆಲಸ ಮನೆಬೇರೆಮಾಡಿ ಮಗಳನ್ನು ಹೊರಗಿಡುವುದು, ಮನೆ ಮನೆತನ ಕುಟುಂಬವನ್ನು ಮಗಳಿಗೆ ಕಟ್ಟಿ ಕೊಡುವ ಪ್ರಯತ್ನ ಮಾಡುವುದೇ ಇಲ್ಲ, ಆಗಲೇ ತೆಗೆಳಿಕೆ ಶುರುವಾಗುವುದು.
@ದಿನಕರ ಮೊಗೇರ..
ಹೌದು ಎಲ್ರಿಗೂ ಮನಸಿದೆ, ಆ ಮನಸಿಗೂ ಏನೇನೊ ಕನಸಿವೆ ಅಂತ ಗೊತ್ತಾಗುವುದೇ ಇಲ್ಲ, ಅದು ನಮ್ಮ ಅಮ್ಮ, ಹೆಂಡತಿ, ಮಗಳು ಯಾರೇ ಆಗಿರಬಹುದು... ಸುಮ್ಮನೇ ನಮ್ಮ ನಿರ್ಧಾರಗಳನ್ನು ಇತರರ ಮೇಲೆ ಹೇರುತ್ತ ಸಾಗುತ್ತೇವೆ...
@ಸವಿಗನಸು
ಅಳಿಯನೇ ಎಲ್ಲ ಸರಿ ಮಾಡಬೇಕಿಲ್ಲ, ಮೊದಲೇ ಮಗ, ಮಗಳು ಇದೆಲ್ಲ ಅರಿತಿದ್ದರೆ ಇನ್ನೂ ಚೆನ್ನ ಅಲ್ವೇ.
@sunaath
ಅತ್ತೆಗೆ ಆದರ ಅನ್ನೊಕಿಂತ ಹೀಗೆ ಸುಮ್ಮನೆ ಸುಪ್ತವಾಗಿರುವ ಮನಸುಗಳಿಗೆ ಹೊರಬರಲು ಹೊಸ ಅವಕಾಶ ಕೊಟ್ಟಂತೆ ಅಲ್ವಾ.
@Manasa
ಮನೆಗಳಲ್ಲಿ ಹೀಗೆ ರಾಮಾಯಣ ಮಹಾಭಾರತಗಳು ನಡೆಯುತ್ತಲೇ ಇರುತ್ತವೆ ಸ್ವಲ್ಪ ಗಮನವಿಟ್ಟು ನೋಡಿದರೆ ಕಾಣುತ್ತವೆ. ಹಾಗೇ ನನ್ನ ಅನುಭವಕ್ಕೆ ಬಂದಿದ್ದು ಕೂಡ ಇಲ್ಲಿ ಕಲ್ಪನೆಯಾಗಿದೆ.
@ಜ್ಯೋತಿ ಶೀಗೆಪಾಲ್
ಅದು ಹಾಗೆ ಮಕ್ಕಳಾದ ನಾವೆಲ್ಲ ಅವರ ಮೇಲಿನ ಪ್ರೀತಿಯಿಂದಲೇ ಹಾಗೆ ಮಾಡುತ್ತಿರಬಹುದು ಆದ್ರೆ ಅವರಿಗೂ ಅವರದೇ ಆದ ಆಸೆಗಳಿವೆ ಅಂತ ತಿಳಿದುಕೊಂಡು ಸ್ವಲ್ಪ ಸ್ವತಂತ್ರವಾಗಿರಲು ಬಿಟ್ಟರೆ ಉತ್ತಮ... ಇಲ್ಲದಿದ್ದರೆ ಆ ಜೀವಗಳು ಒಳಗೊಳಗೇ ಕೊರಗುತ್ತ ಉಳಿದುಬಿಡುತ್ತವೆ..
@Annapoorna Daithota
:) ಸುಮ್ನೇ ಎನೊ ಒಂದು ಯೋಚನೆ, ಅಥವಾ ಕಣ್ಣ ಮುಂದೆ ನಡೆಯುವ ಘಟನೆ ಹೀಗೆ ಬರೆಯಲು ಪ್ರೇರೇಪಿಸುತ್ತದೆ. ಅದಕ್ಕೆ ಸ್ವಲ್ಪ ಕಲ್ಪನೆ ಕಲೆಸಿ ನಿಮ್ಮೆಲ್ಲರ ಮುಂದೆ ಇಡುವುದಷ್ಟೇ ನನ್ನ ಕೆಲಸ.
ಪದ್ದುಗೆ ಇಂಥ ಗಂಡ ಸಿಕ್ಕಿದ್ದರೆ ನನ್ನ ಕಡೆ ತಿರುಗಿ ಕೂಡ ನೋಡಲ್ಲ ಸುಮ್ನಿರಿ ;)
ಹೌದೌದು ಪಕ್ಕದಮನೆ ಪದ್ದು, ಟೀ ಇಲ್ಲದೇ ಲೇಖನ ಪೂರ್ತಿಯೇ ಆಗಲ್ಲ ನೋಡಿ.
@vidyalakshmi
ನಾ ಲೇಖನದಲ್ಲಿ ಹೇಳಿದ್ದನ್ನು ಕವನದಲ್ಲಿ ಇಳಿಸಿದ್ದೀರಲ್ಲ. ಬಹಳ ಇಷ್ಟ ಆಯ್ತು.. ಸೂಪರ್...
ಅತಿ ಪ್ರೀತಿಯ ಬಾಹು ಬಂಧನದಲಿ ಬಿಗಿಯಾಗಿಸಿ ಉಸಿರು ಕಟ್ಟಿಸಿ ಬಾವನೆಗಳಿಗೆ ಬೀಗ ಹಾಕಿ ಬಚ್ಚಿಡುವವರು ಮನ ಬಿಚ್ಚಿ ಮಾತಾಡುವಂತಾಗಲಿ ಎಂದೇ ನನ್ನ ಆಶಯ ಕೂಡಾ...
@ಸಾಗರದಾಚೆಯ ಇಂಚರ
ಧನ್ಯವಾದಗಳು ಸರ್
@Anonymous
ಮೀನಾ, ಎಲ್ಲೊ ಹೀಗೆ ಗಮನಿಸಿದ ಘಟನೆಯೇ ಕಲ್ಪನೆಯಲ್ಲಿ ಮಿಳಿತವಾಗಿ ನಿಮ್ಮ ಮುಂದೆ ಬಂದಿದೆ...
@ವಿ.ಆರ್.ಭಟ್
ಥ್ಯಾಂಕ್ಯೂ ಸರ್
@ಜಲನಯನ
ಅಯ್ಯೊ ಇನ್ನೂ ಮದುವೆ ಆಗಿಲ್ಲ ಬಿಡಿ ಸರ್, ನಿಮಗೆಲ್ಲ ಗೊತ್ತಾಗದ ಹಾಗೆ ಆಗುವುದು ಉಂಟಾ...
:) ಅಮ್ಮನಂತೆ ಮಗಳು ಅಂತಾರೆ ಅಮ್ಮನಿಗೆ ಇಷ್ಟ ಆದ ಹುಡುಗ ಮಗಳಿಗೂ ಇಷ್ಟ ಆದ್ರೆ ಒಳ್ಳೇದೇ ಬಿಡಿ...
ಭಾವಿ ಅತ್ತೆ ಕೂಡ ಅಷ್ಟು ಒಳ್ಳೆಯವರಾಗಿದ್ದರೆ ನಾನೂ ಒಳ್ಳೇ ಅಳಿಯ ಆಗಿರ್ತೀನಿ. ಇಲ್ಲಾಂದ್ರೆ ... ಏನ್ ಮಾಡೊದು...
ಮಗಳ ಜತೆ ಮನೆ ಒಡೆಯಲು ನಿಂತರೆ!... ಮೊದಲೇ ನನಗೆ ಈ ನಾನು ನನ್ನ ಹೆಂಡ್ತಿ ಅನ್ನೂ ಮೈಕ್ರೂ ಫ್ಯಾಮಿಲಿಗಿಂತ, ಮ್ಯಾಕ್ರೊ ಫ್ಯಾಮಿಲಿ ಇಷ್ಟ...
ಪ್ರಭು,
ಈ ಬಾರಿ ನಿಮ್ಮ ಅತ್ತೆಯನ್ನು ಹಿಡಿದಿದ್ದೀರಿ..ಆಳಿಯಂದಿರು ಹೇಗೆ ಇರಬೇಕೆನ್ನುವುದಕ್ಕೆ ನಿಮ್ಮ ಈ ಲೇಖನವೊಂದು ಸಾಕು ತಿಳಿದುಕೊಳ್ಳಲು.
ಒಳ್ಳೆಯ ಅಬ್ಸರ್ವೇಷನ್. ಅದನ್ನು ಮಂಡಿಸಿರುವ ರೀತಿಯೂ ಸೊಗಸಾಗಿದೆ. ಇಲ್ಲಿ ನಾವೇ ಅನೇಕರು ಪಾತ್ರಧಾರಿಗಳಾಗಿರುವುದು ಇನ್ನೊಂದು ಪ್ಲಸ್ ಪಾಯಿಂಟ್.
ಅತ್ತೆ ಆದ್ಮೇಲೆ ಇನ್ನಾರು ಬರಬಹುದು ಅಂತ ಕುತೂಹಲ..
ಯಾರು ಬರ್ತಾರೆ....??!!!
ಯಾವಾಗಾ ಬರ್ತಾರೆ ಪ್ರಭುರವರೆ??!!!!
tumba chennagide lekhana, eshtondu hennu makkalu hige tamma aase aakankshegalannu hididittukonduruvudannu naanu nodiddene.
@shivu.k
ಥ್ಯಾಂಕ್ಯೂ, ಆ ಅತ್ತೆಯಂತೆ ಪರಿಸ್ಥಿತಿ ಯಾರಿಗೂ ಬರದಿರಲಿ... ಆಗ ಇಂಥ ಅಳಿಯನ ಅವಶ್ಯಕತೆಯೆ ಇರಲಿಕ್ಕಿಲ್ಲ...
@ವಿನುತ
ನಾವೇ ಪಾತ್ರಧಾರಿಗಳು, ಬದುಕೇ ರಂಗಮಂಚ ಕೆಲವೊಮ್ಮೆ ಹೀರೊ ಮತ್ತೊಮ್ಮೆ ವಿಲನ್ ಮಗುದೊಮ್ಮೆ ಪೋಷಕನಟರು...
@vidyalakshmi
ನನಗೂ ಗೊತ್ತಿಲ್ಲ, ಯಾರು ಬರಬಹುದೆಂದು, ಮನಸಲ್ಲಿ ಯಾರು ಬರುತ್ತಾರೊ ಅವರೇ ಬರವಣಿಗೆಯಲ್ಲಿ ಇಳಿಯುತ್ತಾರೆ... ವೈಯಕ್ತಿಕ ಕಾರಣಗಳಿಂದಾಗಿ ಈ ವಾರ ಕೂಡ ಬರೆಯಲಾಗುತ್ತಿಲ್ಲ, ಹಾಗಾಗಿ ಮುಂದಿನ ವಾರ ಏನಾದರೂ ಬರೆದೇನು...
@ಶ್ವೇತ
ನಿಜ, ಬಹಳ ಜನ ಹೀಗೆ ಮನಸಲ್ಲೇ ಬೆಟ್ಟದಷ್ಟು ಆಸೆ ಬಚ್ಚಿಟ್ಟುಕೊಂಡು ಹುಟ್ಟಿ ಸತ್ತು ಹೋಗುತ್ತಾರೆ... ಮುಕ್ತವಾಗಿ ಮಾತನಾಡಲೂ ಕೂಡ ನಾವು ಬಿಡುವುದಿಲ್ಲ...
ಮನಸೊಳಗೆ ಬರುವವರು...
ಬದುಕೊಳಗೇ ಇರುವವರು.!!!???
ಜೀವನ ಜ೦ಜಾಟದೊಳಗೆ ನಲುಗದೆ..
ನುಸುಳುತಿರಲಿ ವಾರಕೊಮ್ಮೆಯಾದರೂ.!!!???
Prabhu,
One of your best.....
@vidyalakshmi
ಚೆನ್ನಾಗಿದೆ ನಿಮ್ಮ ಕಮೆಂಟ್...
ಬರೆಯಲೇನು ದಿನವೂ ಬರೆದೇನು
ಸಮಯದ ಕೊರತೆ ಮಾಡಲಿ ಏನು
ಇರಲಾದೀತೇ ನನ್ನಾkಯಿಲ್ಲದ ನಾನು
ಬಹುದಿನಗಳಾದರೂ ಬರೆವುದ ಬಿಡೆನು
ಸುಮ್ನೇ ಗೀಚಿದ್ದು, ಪ್ರಾಸ ಸೇರಿಸಿ :) ವಾರಗಳು ಕಳೆದರೂ ನನ್ನಾk ನನ್ನ war ಮತ್ತೆ ಮುಂದುವರೆಯುತ್ತಲೇ ಇರುತ್ತದೆ, ಓದುತ್ತಿರಿ...
@Complicated..
Thank you, I also felt good about it... Nevertheless Hasiru kananadooriniMda, Seere khareedi, ChunaavaNe, Biruku are my favorites... Might have missed some more... actually I myself haven't read article again after writing... Wish to do once...
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
thumbaa olle vishaya heliddiri. Kushi aithu. :)
@ವಿ.ಆರ್.ಭಟ್
ತಡವಾಗಿಯಾದರೂ ತಮಗೂ ಯುಗಾದಿಯ ಶುಭಾಶಯಗಳು...
@ಬಾಲು
ಹೇಳುವುದಷ್ಟೇ ಅಲ್ಲದೇ ಪಾಲಿಸಲೂಬೇಕೆಂದಿದ್ದೇನೆ... ನೊಡೋಣ.. ಥ್ಯಾಂಕ್ಯೂ...
Hi Prabhu...
Nimma bahalashtu postings blog nalli post agiruvudanna odidini. pratiyondu ondakondu vibhinna, vishesha. Yelladarallu ondalla ondu msg. Nange nimma style of writing tumba ishta. Abba atte na example agi itkondu yella vishayagalannu bahala achchukattagi heliddira. Neevu heliddu 100kke 100 satya. Namma ishta kashtagallannu hege innobbara mere hertivi!!
Keep up d good work..
@Sumana
ತುಂಬಾ ಚೆನ್ನಾಗಿತ್ತು ನಿಮ್ಮ ಪ್ರತಿಕ್ರಿಯೆ, ನನ್ನ ಲೇಖನಗಳು ನಿಮಗಿಷ್ಟವಾದದ್ದು ನನಗೆ ಖುಷಿ... ಹೊಸ ಹೊಸ ವಿಭಿನ್ನ ವಿಷಯಗಳನ್ನು ಬರೆಯಲು ಪ್ರಯತ್ನ ಮಾಡುತ್ತಿರುತ್ತೇನೆ, ಏನೊ ಒಂದು ಒಳ್ಳೆ ಸಂದೇಶ ಕೊಡೋಣ ಅಂತ ಅದರಲ್ಲಿ ಸ್ವಲ್ಪ ಎನಾದ್ರೂ ಒಳ್ಳೇ ಮಾತು ಸೇರಿಸ್ತೀನಿ...
ನೀವು ಕರೆಕ್ಟಾಗಿ ಅರ್ಥ ಮಾಡಿಕೊಂಡಿದ್ದೀರಿ, ಅತ್ತೆ ಇಲ್ಲಿ ಒಂದು ವ್ಯಕ್ತಿ ಉದಾಹರಣೆ, ಹೀಗೆ ಯಾವ ವ್ಯಕ್ತಿಯ ಮೇಲೆ ಬೇಕಾದ್ರೂ ನಮ್ಮ ದಬ್ಬಾಳಿಕೆ ನಡೆಯುತ್ತಿರಬಹುದು, ಅದನ್ನರಿತು ಸ್ವಲ್ಪ ಎಲ್ರಿಗೂ ಮನಸಿದೆ, ಅವರಿಗೂ ಭಾವನೆಗಳಿವೆ ಅಂತ ನಾವು ತಿಳಿದುಕೊಂಡರೆ ಎಷ್ಟು ಚೆನ್ನ ಅಲ್ವೇ...
ಓದ್ತಾ ಇರಿ, ಅನಿಸಿಕೆ ತಿಳೀಸ್ತಾ ಇರಿ...
Post a Comment