Sunday, February 14, 2010

ಮಿಸ್(ಸ್) ವರ್ಡ...

ಮನೆ ತುಂಬಾ ಶಾಂತವಾಗಿತ್ತು, ಯಾವತ್ತೂ ಇರುವುದಿಲ್ಲ, ಇಂದೇಕೊ ಇದೆ, ಒಳ್ಳೆಯದೇ... ಅಂತ ನನ್ನ ಮೆಚ್ಚಿನ ಪುಸ್ತಕದ ಓದಿನಲ್ಲಿ ತಲ್ಲೀನನಾಗಿದ್ದೆ. ಅಚ್ಚುಮೆಚ್ಚಿನ ಪುಸ್ತಕವೆಂದರೆ ಪಕ್ಕದಮನೆ ಪದ್ದು ಪಕ್ಕ ಇದ್ದರೂ ಗೊತ್ತೇ ಇಲ್ಲದಂತೆ ಅದರಲ್ಲಿ ಮುಳುಗಿರುತ್ತೇನೆ. ಒಮ್ಮೆಲೆ ಇವಳ ದನಿ ಕೇಳಿತು "ಲೋ ಪಾಪಿ ಎಲ್ಲಿದೀಯಾ, ನನ್ನ ಫೇರ್ ಆಂಡ ಲವ್ಲೀ ಕ್ರೀಮ್ ಎಲ್ಲ ಮುಗಿಸಿ ಹಾಕೀದೀಯಾ" ಅಂತ ಚೀರುತ್ತಿದ್ದಳು. ಇದ್ಯಾವ ಪಾಪಿಗಳ ಲೋಕದಲ್ಲಿ ಬಂದೆ ಅಂದುಕೊಂಡಿರಾ. ಆ ಪಾಪಿ ಮತ್ತಾರೂ ಅಲ್ಲ, ಅವಳ ತಮ್ಮ. ಪುಟ್ಟ ಪಾಪ ಇದ್ದಾಗಿನಿಂದ ಪಾಪು ಅಂತ ಕರೆದು ಕರೆದು ಈಗ ಪಾಪಿ ಅನ್ನುವ ಮಟ್ಟಿಗೆ ಬೆಳೆದುನಿಂತಿದ್ದಾನೆ. ಆ ಪಾಪಿ ಅಲ್ಲಲ್ಲ, ಪಾಪು ಕ್ರೀಮು ಖಾಲಿ ಮಾಡಿದ್ದೇಕೆ?. ಪಾಪುವಿಗೆ ಬಾಲ್ಯವಿವಾಹ ಮಾಡುತ್ತಿದ್ದಾರೆ!, ಪುಟ್ಟ ಪಾಪ ಅಂದರೆ ಬಾಲ್ಯವಿವಾಹವೇ ತಾನೆ. ಹಾಗಂತ ಹೇಳಿ ಹಲವು ಸಾರಿ ಇವಳಿಂದ ಬೈಸಿಕೊಂಡಿದ್ದರೂ ನಾನು ಹಾಗೇ ಕರೆಯುವುದು. ಪಾಪುವಿಗೆ ಹುಡುಗಿ ಗೊತ್ತಾಯಿತೋ ಆಗಲೇ ನಾನು "ಲೋ ರವೆ ಉಂಡೆ ಪಕ್ಕ ರಾಗಿ ಮುದ್ದೆ ಇಟ್ಟ ಹಾಗೆ ಇದೆ ನಿಮ್ಮ ಜೋಡಿ" ಅಂತ ಕಾಡಿಸಿದ್ದೆ. ಹುಡುಗಿ ನೋಡಲು ಸುಂದರಿ, ಪಾಪು ನೋಡಲು ಸ್ವಲ್ಪ ಕಪ್ಪು, ಆದರೆ ಮುಖದಲ್ಲಿ ಖಳೆ ಇದೆ ಅನ್ನುವುದಂತೂ ಒಪ್ಪಲೇ ಬೇಕು, ಆದರೂ ಕಾಡಿಸಲಿಕ್ಕೇನೀಗ ಅಂತ ಕಾಲೆಳೆದಿದ್ದೆ. ಎನು ಮಾಡೊದು ನಮ್ಮಲ್ಲಿ ಹುಡುಗ ಹೇಗಿದ್ದರೂ ಸರಿ ಮಿಸೆಸ್ ಮಾತ್ರ ಮಿಸ್ ವರ್ಡನಂತೆ ಸುಂದರಿಯೇ ಆಗಿರಬೇಕು.

ಅವನಿಗಾಗಿ ಹುಡುಕಾಡಿ ಸುಸ್ತಾಗಿ ಬಂದು ಕೂತಳು ನನ್ನಾಕೆ, ಫೋನು ಮಾಡಿ ನೋಡು ಸಿಕ್ತಾನೆ ಅಂದೆ. ದುರುಗುಟ್ಟಿ ನೋಡಿದಳು. ಕ್ರೀಮ್ ಖಾಲಿ ಮಾಡಿದ್ದು ಕೇಳಲು ಫೋನು ಮಾಡುವುದಾ ಅಂತ. "ಸರಿ ಬಿಡು, ಹುಡುಗರಿಗೆ ಎಂಗೇಜಮೆಂಟ್ ಆಗ್ತಿದ್ದಂಗೆ ಅವರ ಮೊಬೈಲ್ ಫೋನೂ ಎಂಗೇಜ್ ಆಗಿಬಿಡತ್ತೆ, ಅವನಂತೂ ಸಿಗಲ್ಲ" ಅಂದಿದ್ದಕ್ಕೆ ನಸುನಕ್ಕು, "ರೀ ನೀವು ಹುಡುಗರಂತೂ ತೀರಾ ಅತಿಯಾಗಿ ಮಾಡ್ತೀರಾ. ರಾತ್ರಿ ಊಟ ಏನು ಮಾಡಿದೆ ಅಂತ ಕೇಳಲು ಫೋನು ಮಾಡಿ ಮುಂಜಾನೆ ಬ್ರೇಕ್‌ಫಾಸ್ಟ ಟೈಮ್‌ವರೆಗೂ ಮಾತಾಡ್ತೀರಾ" ಅಂತ ನನ್ನ ಮೇಲೆ ರೇಗಿದಳು. "ಹ್ಮ್ ಅದೆಲ್ಲ ನಿಮ್ಮಿಂದಾಗೇ, ನಾವೇನೊ ಊಟ ಆಯ್ತಾ ಅಂತ ಕೇಳಿ ಸುಮ್ಮನಾಗ್ತೀವಿ. ನೀವು ಹಾಗಲ್ಲ, ಏನು ಊಟ?, ಚಪಾತಿನಾ? ಯಾಕೆ ಅನ್ನ ಇಲ್ವಾ?, ಎಷ್ಟು ತಿಂದಿರಿ?, ಮೂರಾ?, ಬಕಾಸುರನ ವಂಶಾನಾ ನಿಮ್ದು? ನಂಗೆ ಚಪಾತಿ ಮಾಡೋಕೆ ಬರಲ್ಲ ಕಣ್ರೀ... ಅಂತ ಪಾಕ ಪುರಾಣ ತೆಗೆದುಬಿಡ್ತೀರಾ" ಅಂತ ತಿರುಗೇಟು ನೀಡಿದ್ದಕ್ಕೆ ಸುಮ್ಮನಾದಳು. "ಸರಿ ಈಗ ಅವನಿಗೆ ಕ್ರೀಮ್ ಹಚ್ಚಿಕೊಂಡು ಬೆಳ್ಳಗೆ ಆಗು ಅಂತ ಐಡಿಯಾ ಕೊಟ್ಟಿದ್ದು ನೀವೇ ತಾನೆ?" ಅಂತ ಮರುವಿಷಯಕ್ಕೆ ಬಂದಳು. ಮೆಲ್ಲಗೆ ಮುಗುಳ್ನಕ್ಕೆ, ನಾನೇ ಅದು ಅನ್ನುವುದನ್ನು ಒಪ್ಪಿಕೊಂಡು. "ನಂಗೊತ್ತಿತ್ತು, ನಮ್ಮ ಮದುವೆ ಮುಂಚೆ ಮನೇಲಿರೊ ಸೌತೆಕಾಯಿ ಎಲ್ಲ ನಿಮ್ಮ ಫೇಸ್‌ಪ್ಯಾಕ್ ಆಗುತ್ತಿತ್ತು ಅಂತ ನಿಮ್ಮ ತಂಗಿ ಹೇಳಿದ್ದಳಲ್ಲ. ಇಂಥ ಐಡಿಯಾ ನಿಮ್ಮದಲ್ಲದೇ ಮತ್ತಾರದು" ಅಂತ ನನ್ನ ಇತಿಹಾಸ ಕೆದಕಿದಳು. ಇಂಥ ಸಿಕ್ರೇಟುಗಳನ್ನೆಲ್ಲ ಹೊರಗೆಡವಿದ್ದಕ್ಕೆ ತಂಗಿಯನ್ನು ಶಪಿಸುತ್ತ "ನಾನು ನ್ಯಾಚುರಲ್ಲಿ ಸ್ಮಾರ್ಟ್ ಇದ್ದೆ" ಅಂತ ಹೊಗಳಿಕೊಂಡೆ. "ರೀ ಹುಡುಗರಿಗೆ ಅಂದ ಚಂದ ಯಾರು ನೋಡ್ತಾರೆ, ಕೈಕಾಲು ನೆಟ್ಟಗಿದ್ದು, ಕೆಲಸ, ಕೈತುಂಬ ಸಂಬಳ, ಕುಟುಂಬ, ಒಳ್ಳೆ ಮಾನ, ಮನೆತನ ಇದ್ರೆ ಮುಗೀತು" ಅಂತನ್ನುತ್ತ ಅಲ್ಲಿಂದ ಜಾಗ ಖಾಲಿ ಮಾಡಿದಳು, ನನ್ನ ತಲೆಯಲ್ಲಿ ಹುಳುಬಿಟ್ಟ ಹಾಗೆ ಆಯ್ತು.

ಹುಡುಗರಿಗೆ ಅಂದ ಚಂದ ಏನೂ ಬೇಕಿಲ್ವಾ, ಯಾಕೆ? ಅಂತ ಯೋಚನೆ ಶುರುವಾಯಿತು. ಈಗ ಹೇಳಿದವರನ್ನೇ ಕೇಳಿದರಾಯ್ತು ಅಂತ ಅವಳಲ್ಲಿಗೆ ನಡೆದೆ. "ನೀನು ನನ್ನ ಯಾಕೆ ಮದುವೆ ಆದೆ ಹಾಗಿದ್ರೆ?" ಅಂತ ನೇರ ಪ್ರಶ್ನೆ ಎಸೆದೆ. ತಲೆಯಿಂದ ಬುಡದವರೆಗೆ ಒಂದು ಸಾರಿ ನೋಡಿ "ಹ್ಮ್, ನಮ್ಮಪ್ಪ ಹುಡುಗ ಸಾಪ್ಟವೇರ್ ಇಂಜನೀಯರು, ಒಳ್ಳೆ ಮನೆತನ, ಇನ್ನೇನು ಜಾಸ್ತಿ ನೋಡೋದು ಮದುವೆ ಆಗು ಅಂದ್ರು, ಓಕೇ ಅಂದೆ" ಅಂತಂದಳು. "ಹೌದಾ?" ಅಂತ ಪೆಚ್ಚುಮೋರೆ ಹಾಕಿ ಹೊರ ನಡೆದೆ, ಕೈಹಿಡಿದು ಎಳೆದು "ಹುಡುಗ ಸ್ಮಾರ್ಟು, ಕ್ಯೂಟಾಗೂ ಇದ್ದ" ಅಂತ ಹುಬ್ಬುಹಾರಿಸಿದಳು. "ಸುಮ್ನೆ ಬೆಣ್ಣೆ ಸವರಬೇಡ, ನೋಡೊಕೆ ಚಿಂಪಾಂಜಿ ಕೂಡ ಕ್ಯೂಟ್ ಆಗೇ ಇರ್ತದೆ." ಅಂತ ಬೇಜಾರಾದರೆ. ತಲೆ ಕೂದಲು ಹಾಗೆ ಬಾಚಿದಂತೆ ಸವರಿ ಸ್ಟೈಲ್ ಮಾಡಿ "ಆದರೆ ಈ ಚಿಂಪಾಂಜಿ ಸ್ಮಾರ್ಟ ಕೂಡ ಇದೆ." ಅಂತ ನಕ್ಕಳು, ನಾನೂ ನಕ್ಕೆ.

"ಸರಿ ಬಿಡು, ಹುಡುಗೀರು ಹುಡುಗ ಶ್ರೀಮಂತ ಆಗಿದ್ರೆ ಓಕೆ ಅಂತಾರೆ, ಅಂದ ಹಾಗಾಯ್ತು." ಅಂದ್ರೆ, "ರೀ ಅದು ಹಾಗಲ್ಲ, ಒಂದು ಹುಡುಗಿಗೆ ಹುಡುಗನ್ನ ಹುಡುಕೋವಾಗ ಆರ್ಥಿಕ ಸಬಲತೆ ಮುಖ್ಯ ಆಗ್ತದೆ, ನಾಳೆ ಹೆಂಡತಿನಾ ಚೆನ್ನಾಗಿ ನೋಡ್ಕೊತಾನಾ ಇಲ್ವಾ, ಹುಡುಗನ ಸ್ವಭಾವ ಹೇಗೆ, ಮನೆತನ ಹೇಗೆ, ಅದಾದಮೇಲೆ ರೂಪಕ್ಕೆ ಮನ್ನಣೆ, ಆದರೆ ರೂಪಕ್ಕೆ ಅಷ್ಟು ಪ್ರಾಮುಖ್ಯತೆ ಇರೋದೇ ಇಲ್ಲ, ಲಕ್ಷಣವಾಗಿದ್ರೆ ಆಯ್ತು, ಅಂತಾರೆ ಶಹರದಲ್ಲಿ ಹುಡುಗೀರು ಹುಡುಗ ನೋಡೊಕೂ ಚೆನ್ನಾಗೂ ಇರಬೇಕು ಅಂತಾರೆ ಅದು ಬೇರೆ ಮಾತು" ಅಂದ್ಲು. "ಅದಕ್ಕೇ ಸುಂದರ ಹುಡುಗಿಯರು ಶ್ರೀಮಂತರನ್ನು ಮದುವೆಯಾಗಿಬಿಡುವುದು, ತನ್ನಂತೇ ಸುಂದರ ಹುಡುಗನನ್ನು ಮದುವೆ ಆಗಬೇಕು ಅಂತ ನಿಮಗೆ ಅನ್ನಿಸುವುದೇ ಇಲ್ವಾ?" ಅಂತ ಅವಳನ್ನೇ ಕೇಳಿದೆ, "ನಿಮಗೆ ಹೇಗೆ ಮಿಸ್ ವರ್ಡ ಬೇಕು ಅಂತ ಆಸೆ ಇರ್ತದೊ, ನಮಗೂ ಹಾಗೆ ಆಸೆಗಳು ಇರ್ತವೆ ಆದ್ರೆ ಜೀವನದಲ್ಲಿ ಸ್ವಲ್ಪ ಹೊಂದಾಣಿಕೆ ಅನಿವಾರ್ಯ ಆಗ್ತದೆ, ವರದಕ್ಷಣೆ ಕೊಡಲಾಗದೊ, ಮತ್ತೆ ಒಳ್ಳೆ ವರ ಸಿಕ್ಕಾನೊ ಇಲ್ವೋ ಅನ್ನೊ ಭೀತಿಯಲ್ಲಿ ತಂದೆ ತಾಯಿ ಕೂಡ ಒತ್ತಾಯ ಮಾಡಿ ಮದುವೆ ಮಾಡಿ ಬಿಡ್ತಾರೆ" ಅಂತ ಮನ ಬಿಚ್ಚಿಟ್ಟಳು. "ಬಡವರ ಮನೆಯಲ್ಲಿ ಸುಂದರ ಹುಡುಗಿ ಹುಟ್ಟುವುದೇ ತಪ್ಪು ಅನ್ನು." ಅಂದರೆ. "ಬಡವರ ಮನೆಯಲ್ಲಿ ಕುರೂಪಿಯಾಗಿ ಹುಟ್ಟುವುದು ಇನ್ನೂ ತೊಂದ್ರೆ, ಸುಂದರವಾಗಿದ್ರೆ ಹೇಗೊ ಮದುವೆಯಾಗುತ್ತದೆ" ಅಂತ ಇನ್ನೊಂದು ಹೆಜ್ಜೆ ಮುಂದೆ ಹೋದಳು. "ಆದರೆ ರೂಪ ಅವಳ ಕೈಲಿಲ್ಲವಲ್ಲ ಹುಟ್ಟಿನಿಂದ ಬಂದಿದ್ದು, ಅವಳದೇನು ತಪ್ಪು... ಹಾಗೇ ಒಬ್ಬ ಪೆದ್ದ, ಹುಟ್ಟಿನಿಂದಲೇ ಬುದ್ಧಿ ಕಮ್ಮಿ, ನೋಡಲು ಸುಂದರ ಏನು ಪ್ರಯೋಜನ, ಆರ್ಥಿಕವಾಗಿ ತನ್ನನ್ನು ತಾನು ನೋಡಿಕೊಳ್ಳಲಾಗಲ್ಲ ಇವರೆಲ್ಲರ ಬಗ್ಗೆ ಏನು ಹೇಳೊದು" ಅಂತ ಸುಮ್ಮನಾದೆ.

"ನೋಡ್ರೀ ಹುಡುಗಿಗೆ ರೂಪ, ಹುಡುಗನಿಗೆ ಪ್ರತಿಭೆ ಮುಖ್ಯ, ಈಗೇನು ಹಿಂದಿನ ಕಾಲದಲ್ಲೂ ಹೀಗೇ ಇತ್ತು, ಶೌರ್ಯ ಪರಾಕ್ರಮಿ ರಾಜರಿಗೇ ಸುಂದರ ರಾಣಿಯರನ್ನು ಮದುವೆ ಮಾಡಿಕೊಡಲಾಗುತ್ತಿತ್ತು. ಈಗ ಶೌರ್ಯ ಧೈರ್ಯ ಎಲ್ಲ ಕೇಳದೇ ಸಂಬಳ, ಸಂಪತ್ತು ಕೇಳ್ತಾರೆ" ಅಂತ ವಿವರಿಸಿದರೂ ಇನ್ನೂ ನನ್ನ ಪ್ರಶ್ನೆಗಳು ಮುಗಿದಿರಲಿಲ್ಲ. "
ರೂಪ ವಯಸ್ಸಿನೊಂದಿಗೆ ಕ್ಷಯಿಸಿ ಹೋಗ್ತದೆ, ಹಣ ವ್ಯಯಿಸಿ ಹೋಗ್ತದೆ ಇವುಗಳ ಮೇಲೆ ಸಂಬಂಧಗಳ ನಿರ್ಧಾರ ಎಷ್ಟು ಸರಿ" ಅಂದರೆ. "ಹಾಗಾದ್ರೆ ನೀವು ಯಾಕೆ ಕುರೂಪಿಯಾದರೂ ಗುಣವಂತ ಹುಡುಗಿ ಇದ್ರೆ ಸಾಕು ಅಂತ ಯಾಕೆ ಅನ್ನಲಿಲ್ಲ, ಹಾಗೆಯೇ ಗುಣ, ವ್ಯಕ್ತಿತ್ವ ಒಳ್ಳೆಯದು ಇದ್ರೆ ಸಾಕು ಹುಡುಗ ಬಡವನಾದರೂ ಸರಿ ಅಂತ ನಾನ್ಯಾಕೆ ಅನ್ನಲಿಲ್ಲ" ಅಂತ ಕೇಳಿದಳು. "ನಾನು ಹಾಗೆ ಅಂತಿದ್ದೆ ಏನೊ, ಆದ್ರೆ ಅದ್ಕೆ ಮುಂಚೆ ನೀನು ಸಿಕ್ಕು ಒಪ್ಪಿಬಿಟ್ಟೆ" ಅಂತ ಡೈಲಾಗು ಹೊಡೆದೆ. "ನಾನಿದ್ದರೂ ಇನ್ನೂ ಪಕ್ಕದಮನೆ ಪದ್ದು ಮೇಲೆ ಆಸೆ ಇದೆ, ನೀವು ಹಾಗೆ ಹೇಳ್ತಾ ಇದ್ರಾ" ಅಂತ ತಲೆ ಅಲ್ಲಾಡಿಸಿದಳು. ನಸುನಗುತ್ತ "ಎಷ್ಟು ಜನ ಮಿಸ್ ವರ್ಡೇ ಬೇಕು ಅಂತ ಹುಡುಕುತ್ತ ಹೋಗಿ, ಕೊನೆಗೆ ಸಿಕ್ಕಿದವಳೇ ಸುಂದರಿ ಅಂತ ಮದುವೆಯಾಗಿಲ್ಲ" ಅಂತ ವಾಸ್ತವಕ್ಕಿಳಿದೆ. "ಅದನ್ನೇ ನಾನು ಹೇಳಿದ್ದು, ಅದೆಲ್ಲ ಅವರವರ ಅನುಕೂಲಕ್ಕೆ ತಕ್ಕಂತೆ ಸಂಬಂಧಗಳು ಕೂಡುತ್ತವೆ, ಕೆಲವರು ಕಲಿತು ಕೆಲಸ ಮಾಡುವ ಹುಡುಗಿ ನೋಡಲು, ಲಕ್ಷಣವಾಗಿದ್ದರೆ ಸಾಕು ಅಂದರೆ, ರೂಪವತಿಯಾಗಿದ್ದರೆ ಸಾಕು ಓದಲು ಬಾರದಿದ್ದರೂ ಸರಿ ಅಂತ ಮತ್ತೊಬ್ಬರು. ಹಾಗೇ ಹುಡುಗ ಹೇಗಿದ್ದರೂ ಸರಿ ಶ್ರೀಮಂತನಾಗಿದ್ದರೆ ಸಾಕು ಅಂತ ಕೆಲವರೆಂದರೆ, ಬಡವನಾದರೂ ಸರಿ ಗುಣವಂತ ಬೇಕೆಂದು ಮತ್ತೊಬ್ಬರು. ಆಸ್ತಿ ಅಂತಸ್ತುಗಳಿಗೆ ಕೆಲವರು ಒಪ್ಪಿದರೆ, ವರದಕ್ಷಿಣೆಗೆ ಇನ್ನೊಬ್ಬರು." ಅಂತ ವಿಷಯಕ್ಕೆ ವಿರಾಮ ಹಾಕಿದಳು.

ಹುಡುಗರು ಹಾಗೇನೇ, ಮದುವೆಯಾಗಲು ಹುಡುಗಿ ಸುಂದರಿಯಾಗಿರಬೇಕೆಂದೇ ಬಯಸುತ್ತೇವೆ, ನಾವು ಹೇಗಿದ್ದರೂ ಸರಿ. ಹುಡುಕುತ್ತ ಹೊರಟು, ಹೊತ್ತುಗಳೆದಂತೆ ಹುಡುಗಿ ಸಿಕ್ಕರೆ ಸಾಕು ಅಂತ ತೀರ್ಮಾನಕ್ಕೆ ಬಂದು, ರಾಜಿಯಾಗಿಬಿಡುತ್ತೇವೆ. ರೂಪ ದಿನಗಳೆದಂತೆ ಕಳೆದುಹೋಗಬಹುದಾದರೂ, ಇರುವಷ್ಟು ದಿನವಂತೂ ಮನ್ನಣೆ ಪಡೆದೇ ಪಡೆಯುತ್ತದೆ. ಎಲ್ಲೋ ಓದಿದ ನೆನಪು ರೂಪವತಿ ಯುವತಿಯರು, ಪ್ರತಿಭಾವಂತ ಪುರುಷರ ಎಲ್ಲೆಡೆ ಸಲ್ಲುವರು ಅಂತ. ವ್ಯಕ್ತಿತ್ವ, ನೀತಿ, ನಿಯತ್ತು ಎಲ್ಲದರ ಬಗ್ಗೆ ಮಾತಾಡಿದ ಹುಡುಗ ಕೊನೆಗೆ ಕಂಪನಿಯಲ್ಲಿ ಕೆಲಸಕ್ಕಾಗಿ ಮಾಲಿಕನ ಮಗಳನ್ನು ಒಪ್ಪಬಹುದು. ತನಗೆ ಅನುರೂಪನಾದ ಹುಡುಗನನ್ನು ಇಷ್ಟಪಟ್ಟ ಹುಡುಗಿ, ಅವನಿಗೆ ಕೆಲಸವಿಲ್ಲ, ನಿಲ್ಲಲು ನೆಲೆಯಿಲ್ಲ ಅಂತ ನಿಲುವು ಬದಲಿಸಬಹುದು. ಮದುವೆ ಒಂದು ಬರೀ ಭಾವನಾತ್ಮಕ ಸಂಬಂಧವಲ್ಲ, ಸಾಮಾಜಿಕ ಬಂಧನ ಕೂಡ, ಅಲ್ಲಿ ಸಮಾಜದ ಎಲ್ಲ ನಿಯಮಗಳೂ ಅನುಗುಣವಾಗುತ್ತವೆ, ಜಾತಿ, ನೀತಿ, ಆಸ್ತಿ, ಅಂತಸ್ತು ಎಲ್ಲವೂ ಗಣನೆಗೆ ಬರುತ್ತದೆ. ಹುಡುಗಿಯರೂ ಆರ್ಥಿಕವಾಗಿ ಸಬಲರಾಗುತ್ತಿರುವುದರಿಂದ ಹುಡುಗ ಸುಂದರನೂ ಆಗಿರಲಿ ಅಂತ ಹುಡುಗಿಯರೂ ಕೇಳುತ್ತಿದ್ದಾರೆ, ಒಬ್ಬಂಟಿಯಾಗಿ ಜೀವನ ನಿಭಾಯಿಸುವುದು ಕಷ್ಟವಾಗಿರುವ ಹುಡುಗರು, ಕಲಿತು ಕೆಲಸ ಮಾಡುವ ಹುಡುಗಿಯಾದರೆ ರೂಪವತಿಯೇ ಆಗಿರಬೇಕೆಂದೇನಿಲ್ಲ ಅಂತ ಬದಲಾಗುತ್ತಿದ್ದಾರೆ ಕೂಡ.

"ಹ್ಮ್, ಪಾಪು ಕಪ್ಪಗಿದ್ದು, ಆ ಹುಡುಗಿ ಬೆಳ್ಳಗಿದ್ದರೇನಾಯ್ತು, ಕಪ್ಪನೇ ಟೀ ಕುದಿಸಿ ಅದಕ್ಕೆ ಬೆಳ್ಳನೇ ಹಾಲು ಹಾಕಿದಾಗಲೇ ಸೂಪರ ಟೀ ಆಗೊದು ಅಲ್ವಾ" ಅಂದೆ. "ರೀ, ಟೀ ಬೇಕಿದ್ರೆ ನೇರವಾಗಿ ಕೇಳಿ ಸುತ್ತು ಬಳಸಿ ಎಲ್ಲ ಬೇಡ" ಅಂತ ನೀರು ಹಾಕಿ ಪಾತ್ರೆ ಗ್ಯಾಸ ಸ್ಟವ್ ಮೇಲೆ ಇಟ್ಟಳು. "ಕಪ್ಪಗಿದ್ದವರ ಮುಖದಲ್ಲಿ ಖಳೆ ಇರ್ತದೆ, ನಮ್ಮಜ್ಜ ಏನಂತಿದ್ರು ಗೊತ್ತಾ ಪರಮನಂಟ್ ಕಲರು ಇದು, ಬಿಸಿಲಿರಲಿ, ಚಳಿಯಿರಲಿ ಒಂಚೂರೂ ಬದಲಾಗಲ್ಲ ಅಂತ." ಅಂತಿದ್ದರೆ "ನನ್ನ ಮುಂದೆ ಹೀಗೆ ಅಂತೀರಾ, ಆ ನನ್ನ ತಮ್ಮ ಪಾಪು ಕಂಡ್ರೆ ನಿಮ್ಮ ಜೋಡಿ ಬ್ಲಾಕ ಆಂಡ್ ವೈಟ್ ಟೀವೀ ಆಯ್ತಲ್ಲೊ ಅಂತ ಗೋಳುಹೊಯ್ಕೊತೀರಾ. ಅದಕ್ಕೇ ಕ್ರೀಮ ಪೂರಾ ಖಾಲಿ ಮಾಡಿ, ಪೌಡರ ಬಡಿದುಕೊಂಡು ಹಿಟ್ಟಿನಲ್ಲಿ ಬಿದ್ದ ಇಲಿಯ ಹಾಗೇ ಓಡಾಡ್ತಾ ಇರ್ತಾನೆ ಅವನೀಗ." ಅಂತ ಬಯ್ದಳು, ಅಲ್ಲಿಗೆ ಅವನು ಬರುವುದಕ್ಕೂ ಸರಿ ಹೋಯ್ತು. ಅಕ್ಕ, ತಮ್ಮ ಕ್ರೀಮು ಖಾಲಿ ಮಾಡಿದ್ದಕ್ಕೆ ಕಿತ್ತಾಡಿದರು, ಟೀ ಕುಡಿಯುತ್ತ ಕೂತು ಖುಶಿಪಟ್ಟೆ! "ಭಾವ ಈಗ ನೀವೇ ಹೇಳಿ, ಸುಂದರವಾಗಲು ನಾನೇನು ಮಾಡ್ಲಿ ಅಂತ" ನನ್ನನ್ನೇ ಕೇಳಿದ. "ಆ ಹುಡುಗಿ ರೂಪ ನೋಡಿದರೂ ನಿನ್ನ ಮೆಚ್ಚಿ ತಾನೆ ಮದುವೆಯಾಗ್ತಾ ಇರೋದು, ಇಲ್ಲದಿದ್ದರೆ ಬೇಡ ಅಂತ ಹೇಳಬಹುದಿತ್ತೊ ಇಲ್ವೊ, ಹೇಳಿಲ್ಲವೆಂದರೆ ಇನ್ನೇನೊ ಇಷ್ಟವಾಗಿದೆ. ಹಾಗಿರುವಾಗ ಚಿಂತೆ ಬಿಡು. ಒಂದು ಗೊತ್ತಾ, ನಮ್ಮಜ್ಜ ನಮ್ಮಜ್ಜಿನಾ ಮದುವೆ ಆದಾಗ ಕಾಗೆ ಬಾಯಲ್ಲಿ ಅಕ್ಕಿರೊಟ್ಟಿ ಕೊಟ್ಟಹಾಗೆ ಆಯ್ತಲ್ಲ ಅಂತ ಜನ ಮಾತಾಡಿದ್ದರಂತೆ, ಆದರೆ ನಮ್ಮಜ್ಜ ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ನನಗೆ ಈಗ ಅಷ್ಟು ಒಳ್ಳೇ ಬೇರೆ ಗಂಡ ನಮ್ಮಜ್ಜಿಗೆ ಸಿಕ್ತಾ ಇರಲಿಲ್ಲ ಅನ್ಸತ್ತೆ." ಅಂತ ಸಮಾಧಾನಿಸಿದೆ ಅವನ ಮುಖದೊಂದಿಗೆ ನನ್ನವಳ ಮುಖ ಕೂಡ ಅರಳಿತು. ಹುಡುಗಿ ಫೋನು ಕರೆ ಬಂತೆಂದು ಅವನು ಓಡಿದ. "ನಂಗೆ ಕೂಡ ಈ ಕೀಟಲೆ ಮಾಡೋ ಕೋತಿಗಿಂತ ಒಳ್ಳೆ ಹುಡುಗ ಸಿಕ್ತಾ ಇರಲಿಲ್ಲ" ಅಂತ ಅಪ್ಪಿ ಪಪ್ಪಿ ಕೊಟ್ಟಳು. "ಛೇ ನೀನು ಸಿಗುವ ಮುಂಚೆ ಪಕ್ಕದಮನೆ ಪದ್ದು ಏನಾದ್ರೂ ನನ್ನ ಕಣ್ಣಿಗೆ ಕಾಣಿಸಿದ್ದಿದ್ರೆ... " ಅಂತಿದ್ದಂಗೇ, ಲಟ್ಟಣಿಗೆ ತೆಗೆದುಕೊಂಡು ಬೆನ್ನು ಹತ್ತಿದಳು...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/miss-world.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

22 comments:

Nisha said...

Miss word adru word perfect agide. Ella hudugaru "ಯಾಕೆ ಕುರೂಪಿಯಾದರೂ ಗುಣವಂತ ಹುಡುಗಿ ಇದ್ರೆ ಸಾಕು" ಅಂತ hagu ella hudugiyaru "ಗುಣ, ವ್ಯಕ್ತಿತ್ವ ಒಳ್ಳೆಯದು ಇದ್ರೆ ಸಾಕು ಹುಡುಗ ಬಡವನಾದರೂ ಸರಿ" ಅಂತ yochane madidre estu chennagirathe. Aaga baduku bangara agodralli samshayane illa.

shivu.k said...

ಪ್ರಭು,

ಕುರೂಪಿಯಾದರೂ ಗುಣವಂತೆಯಾಗಿರಬೇಕು, ಗಂಡು ಕಪ್ಪಗಿದ್ದರೂ ಕೈತುಂಬಾ ಸಂಬಳ....ಇತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಒಂದು ಸುಂದರ ರಸಾಯನವನ್ನು ಕೊಟ್ಟಿದ್ದೀರಿ...

ಚೆನ್ನಾಗಿದೆ.

ಸವಿಗನಸು said...

ಪ್ರಭು,
ಎಂದಿನಂತೆ ಒಳ್ಳೆ ವಿಚಾರಗಳ ಬಗೆ ಬರೆದಿದ್ದೀರ.......
ಹೆಣ್ಣಿಗೆ ರೂಪ ಮುಖ್ಯ ಅಲ್ಲ... ಗುಣವಂತೆಯಾಗಿರಬೇಕು...
ಗಂಡು ಕಪ್ಪಗಿದ್ದರೂ ವ್ಯಕ್ತಿತ್ವ ಒಳ್ಳೆಯದು ಇರಬೇಕು......

ಚೆಂದದ ಲೇಖನ

sunaath said...

ಕೀಟಲೆ ಮಾಡೋ ಕೋತಿಗೆ ಕೊನೆಗೂ ಬುದ್ಧಿವಂತಳಾದ ಮಿಸ್ ವರ್ಲ್ಡ ಸಿಕ್ಕಳಲ್ಲಾ ; ಅದೇ ಸಂತೋಷ!

V.R.BHAT said...

ಪ್ರಭುರಾಜರೇ, ತಮ್ಮ ರಸಾಯನ ಬಹಳ ಸಿಹಿಯಾಗಿದೆ,ಚೆನ್ನಾಗಿ ಮೂಡಿಬಂದಿದೆ,ಧನ್ಯವಾದಗಳು

ದಿನಕರ ಮೊಗೇರ said...

ಪ್ರಭು ಸರ್...
ತುಂಬಾ ಚೆನ್ನಾಗಿದೆ.... ನಿಮ್ಮ ವರಸೆ...... ಎಲ್ಲರ ಮನದ ಮಾತನ್ನು ಹೇಳಿದ್ದೀರಿ...... ಧನ್ಯವಾದ....

Ranjita said...

ಪ್ರಭು ಸರ್ ಸಕ್ಕತ್ತಾಗಿದೆ .... ಚಂದ ನೋಡಿ ಮದ್ವೆ ಆದ್ರೆ ಛತ್ರಿ ಹಿಡಿಯೋ ಹಾಗಾಗಬಹುದು ನೋಡಿ ...
ಹೀಗೆ ಇದ್ದರು ಗುಣ ನಡವಳಿಕೆ ಚೆನ್ನಾಗಿ ಇರ್ಬೇಕು ಅಂತಾರಪ್ಪ .. :P

Manasa said...

anda chenada yella.. yake tolakondu kudiyoka anta samanya vaagi.. Gandu kai tumba sambala taruvavniddaga aado matu...

adare hudagi kai tumaba sambaLa taratidaru ee matu barolla nodi... Hennige anda mukhya.. ee equation yaavag change agatado gotilla..

Chanagi barediddiraa..

ಮನಸು said...

nannavaru kappu vyaktitvadalli oLLeyavaru hahaha nanna bagge avaranne keLabeku.

nimma lekhana ondu oLLeya sandEsha needutte.

kShamisi kaLeda sanchike odalaagalilla indu odide chennagide

ಶ್ವೇತ said...

ತುಂಬಾ ಚೆನ್ನಾಗಿದೆ. ಇದೆ ರೀತಿಯ ಲೇಖನ ನಾನು ಬರೆಯಲು ಶುರು ಮಾಡಿದ್ದೆ. ಅಂದ ಚಂದ ನೋಡಿ ಮದುವೆ ಆಗುವವರ ಬಗ್ಗೆ. ಆದರೆ ಚೆನ್ನಾಗಿ ಬರದೇ ಸುಮ್ಮನಾಗಿದ್ದೆ. ಹಾಗೆಯೇ ಭಾರತದಲ್ಲಿ ದೇಹದ ಬಣ್ಣದ ಬಗೆಗಿನ ಕೀಳರಿಮೆ ಬಹಳ ಎನ್ನುವುದು ಸತ್ಯ. ದೊಡ್ಡ ದೊಡ್ಡ ಸಿನಿಮಾ ನಟಿಯರು ಸಹ ಫೇರ್ನೆಸ್ಸ್ ಕ್ರೀಂ ಎನ್ಡೋರ್ಸ್ ಮಾಡುವುದು ಇದ್ದಿದ್ದೆ. ಐಶ್ವರ್ಯ ಕೂಡ ಇದಕ್ಕೆ ಹೋರತಲ್ಲ. ಆದರೆ ಅವಳ ಟ್ಯೈರಾ ಬ್ಯಾಂಕ್ ಇಂಟರ್‌ವ್ಯೂ ನಲ್ಲಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ ನೋಡಿ. ಲಿಂಕ್ ಇಲ್ಲಿದೆ.

http://www.youtube.com/watch?v=yeRe_zU5fVg

see from 3rd minute of the video

Prabhuraj Moogi said...

@NiSha
ಚೆನ್ನಾಗಿರ್ತದೆ, ಆದರೆ ಯೋಚಿಸಬೇಕಲ್ಲ. ಈಗ ನನ್ನನ್ನೇ ತೆಗೆದುಕೊಳ್ಳಿ, ಈ ಲೇಖನ ಬರೆದಿದ್ದೇನೆ ಆದರೆ ನನಗೂ ಸುಂದರ ಹುಡುಗಿಯೇ ಸಿಗಲಿ ಅಂತ ಆಸೆಯಿದೆ,ಮಿಸ್ ವರ್ಡ್ ಬೇಕು ಅಂತಲ್ಲ ನೋಡೋಕೆ ಲಕ್ಷಣವಾಗಿರಬೇಕು ಅಂತ ಆಸೆ ನಾವು ಹುಡುಗರಿಗೆ ಇದ್ದೇ ಇರುತ್ತದೆ ಅದು ಸೃಷ್ಟಿನಿಯಮ... ಆದರೆ ತೀರ ಅಪ್ರತಿಮ ಸುಂದರಿ ಬೇಕು ಅಂತ್ ಕೂರುತ್ತಾರಲ್ಲ ಅದು ಸರಿಹೋಗಲಿಕ್ಕಿಲ್ಲ ಅಲ್ವೇ...

@shivu.k
ಸರ್, ಒಬ್ಬರು ನನ್ನ ಲೇಖನದ ಓದುಗರು ಈ ಪ್ರಶ್ನೆ ಕೇಳಿ, ಇದನ್ನು ಬರೆಯುವಂತೆ ಪ್ರೇರಣೆ ಮಾಡಿಬಿಟ್ಟರು. ಧನ್ಯವಾದಗಳು.

@ಸವಿಗನಸು
ಕರೆಕ್ಟ ಸರ್, ವ್ಯಕ್ತಿತ್ವ ಒಳ್ಳೆಯದಾಗಿರಲೇಬೇಕು ಅದಿಲ್ಲದಿದ್ದರೆ ರೂಪ ಶೂನ್ಯ... ಆದ್ರೂ ಪಕ್ಕ ನಿಂತ ಸತಿ ತಕ್ಕವಳಾಗಿ ಕಾಣುವಂತಿದ್ದರೆ ಚೆಂದವಲ್ಲವೇ...

@sunaath
ಸಿಕ್ಕಿಲ್ಲ ಸರ್, ಸಿಕ್ಕರೂ ಬೇಡ... ಮಿಸ್ ವರ್ಡ ಎಲ್ಲಾ ಬೇಡ... ಜತೆ ನಿಂತರೆ ಜೋಡಿ ಚೆನ್ನಾಗಿದೆ ಅನ್ನುವಂತ ಮಿಸ್ ಸಿಕ್ಕರೆ ಸಾಕು...

@ವಿ.ಆರ್.ಭಟ್
ಧನ್ಯವಾದಗಳು, ಓದುತ್ತಿರಿ ನಮ್ಮ ಪಾಕಶಾಲೆಯಲ್ಲಿ ಇನ್ನೂ ಹಲವು ರಸಾಯನಗಳು ಹೊರಬರಲಿವೆ.

@ದಿನಕರ ಮೊಗೇರ..
ಮನದಲ್ಲಿ ಮಿಸ್ ವರ್ಡ ಬೇಕು ಅಂತಾನೇ ಇರುತ್ತದೆ, ಆದ್ರೆ ವಾಸ್ತವಕ್ಕೆ ಹೊಂದಾಣಿಕೆ ಮಾಡಿಕೊಂಡುಬಿಡುತ್ತೇವೆ...

@Ranjita
ಹೌದು, ಬರೀ ಅಂದ ಚೆಂದ ಅಂದ್ರೆ ಛತ್ರಿ ಸಿಗಬಹುದು... ಅಂದದ ಜತೆ ಅದರಷ್ಟೇ ಅನುರೂಪವಾದ ಗುಣ ಇದ್ರೆ ಓಕೇ...

@Manasa
ಹ್ಮ್ ಒಪ್ಪಬೇಕಾದ ಮಾತು, ನಿಜ ಹುಡುಗಿ ಸಂಬಳ ತರುತ್ತಿದ್ದರೂ, ರೂಪ ಕೂಡ ಬೇಕೇಬೇಕು ಅಂತಾರೆ ಆದ್ರೂ ಈಗೀಗ ಸ್ವಲ್ಪ ಬದಲಾವಣೆ ಆಗಿದೆ... ಹೆಣ್ಣಿಗೆ ರೂಪ ಮುಖ್ಯ, ಅದು ಹೆಣ್ಣಿಗೆ ತಕ್ಕುದಾದುದು... ಗಂದಸು ಎಷ್ಟೇ ಅಂದವಾಗಿದ್ದರೂ ಕೆಲಸವಿಲ್ಲದೇ ಖಾಲಿಯಿದ್ದರೆ ಎನೂ ಉಪಯೋಗವಿಲ್ಲ...

@ಮನಸು
ನಿಮ್ಮ ಮನದ ಮಾತನ್ನು ಬಹಳ ಚೆನ್ನಾಗಿ ಹೇಳಿದ್ದೀರಿ, ಬಣ್ಣ ಬಿಸಿಲಿಗೆ ಬಾಡಿಹೋಗಬಹುದು ಆದರೆ ವ್ಯಕ್ತಿತ್ವ ಮುಖ್ಯ ಅದು ಏನಾದರೂ ಹೊಳೆಯುತ್ತಲೇ ಹೋಗುತ್ತದೆ...
ಈಗ ನನ್ನದೇ ಕಥೆ ಕೇಳಿ, ಬಿಸಿಲಿನಲ್ಲಿ ಎರಡು ದಿನ ಸುತ್ತಿದರೆ ಮುಖ ಕಪ್ಪಿಟ್ಟು ಬಿಡುತ್ತದೆ...
ಒಂದು ಮಾತಂತೂ ನಾವು ಹೇಗಿದ್ದರೂ ನಮಗೆ ಅಂದದ ಹುಡುಗಿಯೇ ಬೇಕು :) ಅಂತೀವಿ... ಸೃಷ್ಟಿಯೇ ಹಾಗಿದೆ...
ನನಗೂ ಯಾವ ಬ್ಲಾಗ್ ಓದಲೂ ಆಗುತ್ತಿಲ್ಲ, ಸಮಯದಭಾವ... ಈ ವಾರಾಂತ್ಯ ಸಾಧ್ಯವಾಗುತ್ತದೋ ನೋಡಬೇಕು...

@ಶ್ವೇತ
ನಿಜ ನಮ್ಮಲ್ಲಿ ಬಣ್ಣದ ಬಗ್ಗೆ ಕಾಂಪ್ಲೆಕ್ಸ ಇದ್ದೇ ಇದೆ, ಅದಕ್ಕೇ ಈ ಕ್ರೀಮಗಳು ದುಬಾರಿಯಾದರೂ ಬಿಕರಿಯಾಗುವುದು...
ಲೇಖನ ಬರೆದಿದ್ದರೆ, ಮುಂದುವರಿಸಿ... ನಾನೂ ಹಾಗೇ ಏನೊ ಬರೆಯಲು ಶುರು ಮಾಡಿದ್ದು...
ಲಿಂಕ್ ನೋಡಲಾಗುತ್ತಿಲ್ಲ, ನನ್ನ ಕನೆಕ್ಷನ್ ಬಹಳ ಸ್ಲೋ ಇದೆ... ಬೇರೆಲ್ಲಾದರೂ ನೋಡಿ ಅದರ ಬಗ್ಗೆ ಮತ್ತೆ ಪ್ರತಿಕ್ರಿಯಿಸುತ್ತೇನೆ ಕ್ಷಮಿಸಿ...

Deepa said...

Prabhu avare Nimma miss world haage ithare lekhana galu tumba hidisidvu. Ondvele nimmaK ee blognalli sikkidre vivaahavaagtheera.Yakandre nimage hudugi abhimanigale jaasthi iddare ;-).Haage ondu salahe nimmakya jothege nimma kalpaneyalli nimma maguvina bagge lekhanagalannu odalu utsukaraagiddeve. Nimmak bandu ishtu varshavadru nimma kalpaneya maguvina bagge lekhana baribahudalva. Illi makkala bagge sandeshavannu nimma itare lekhanagalanthe kodabahudalve.Nimma lekhanagalannu oduvaaga nimma vyakthitvada parchaya kooda agutthide neevu sookshma samvedaneya vyakthitva kooda namage tiliyutthide.

Annapoorna Daithota said...

:-)

Prabhuraj Moogi said...

@Deepa
ಲೇಖನಗಳು ನಿಮಗಿಷ್ಟವಾಗಿದ್ದರೆ ನನಗೂ ಖುಷಿ.
"ನಿಮ್ಮಾಕೆ ಬ್ಲಾಗನಲ್ಲಿ ಸಿಕ್ಕರೆ ವಿವಾಹವಾಗ್ತೀರ?" ಈ ಪ್ರಶ್ನೆ ಹಲವು ಬಾರಿ ನನಗೆ ಈಮೇಲ್ ಮುಖಾಂತರ ಕೇಳಲಾಗಿದೆ, ಹುಡುಗಿ ಅಭಿಮಾನಿಗಳು ಅನ್ನೊಕಿಂತ ಹೆಚ್ಚು ಓದುತ್ತಾರೆ ಅಂದರೆ ಸರಿ, ನನಗೆ ಈ ಅಭಿಮಾನಿ,ಫ್ಯಾನ್ ಎಲ್ಲದರಲ್ಲಿ ಆಸಕ್ತಿ, ಇಷ್ಟ ಇಲ್ಲ.
ನೀವು ಕೇಳಿದ್ದೀರಲ್ಲ ಹಾಗೆ ಇತರರ ಮನದಲ್ಲೂ ಈ ಪ್ರಶ್ನೆ ಇರಬಹುದು, ಎಲ್ಲ ವಿವರವಾಗೇ ಹೇಳುತ್ತೇನೆ. ಬ್ಲಾಗ್ ನನ್ನ ಮನದಲ್ಲಿನ ಭಾವನೆಗಳನ್ನು ಹೊರಗೆಡವಲು ಮಾಧ್ಯಮ ನನಗೆ, ನನ್ನ ಕಲ್ಪನೆಗಳು ಇತರರಿಗೆ ಖುಶಿ ಕೊಡುತ್ತವೆ ಅಷ್ಟೇ. ಇಲ್ಲಿ ಹುಡುಗಿ ಹುಡುಕುವ ಪ್ರಯತ್ನವಂತೂ ಇಲ್ಲ. ನನಗೆ ಆಕರ್ಷಣೆಯನ್ನೇ ಪ್ರೀತಿ ಅಂದುಕೊಳ್ಳುವ, ಪ್ರೀತಿ ಪ್ರೇಮಗಳಲ್ಲಿ ನಂಬಿಕೆ ಇಲ್ಲ, ಅಪ್ಪ ಅಮ್ಮ ಮನೆಯವರೆಲ್ಲ ಜತೆ ನನಗೂ ಒಪ್ಪಿದ ಹುಡುಗಿ ಮದುವೆಯಾಗುವಾಸೆ. ಮನೆಯಲ್ಲೇ ಯಾರಾದ್ರೂ ಇಶ್ಟ ಇದ್ರೆ ಹೇಳೊ ಅಂತಾರೆ, ಅಷ್ಟು ಸ್ವಾತಂತ್ರ್ಯ ಸಿಕ್ಕಿರುವುದೇ ನನ್ನ ಅದೃಷ್ಟ, ಆದರೆ ನನಗೆ ಈ ಹಳೆಯ ಪದ್ದತಿಗಳಲ್ಲಿ ವಿಶ್ವಾಸ, ಮನೆಯರೊಂದಿಗೆ ನೋಡಿದ ನಂತರವೇ ನನ್ನ ಆಯ್ಕೆ. ಈ ಬ್ಲಾಗನಲ್ಲಿ ಎಲ್ಲ ಸಿಕ್ಕರೆ ಅದೆಲ್ಲ ದೂರದ ಮಾತು. ನನ್ನಿಶ್ಟ ಬಹಳ ವಿಚಿತ್ರ, ಹಾಗೆ ಇರುವ ಹುಡುಗಿ ಅದೂ ನನ್ನ ಗಮನಕ್ಕೆ ಬರುವುದು ಬಲುಕಷ್ಟ, ನಾನಿದರ ಬಗ್ಗೆ ಎಲ್ಲ ಬಹಳ ಅಂತರ ಕಾಯ್ದುಕೊಳ್ಳುತ್ತೇನೆ. ನನ್ನ ತೀರಾ ಖಾಸಗಿ ಜೀವನಕ್ಕೆ ಹತ್ತಿರವಾಗುವವರು ತೀರ ಕಮ್ಮಿ, ಆ ನನ್ನ inner circle ಅಂತಾರಲ್ಲ ಅದನ್ನು ಬಹಳೇ ಚಿಕ್ಕದಾಗಿಟ್ಟುಕೊಳ್ಳುತ್ತೇನೆ. ಮದುವೆಯನ್ನೋದು ಬರೀ ಇಬ್ಬರಿಗೆ ಸೀಮಿತ ವಿಷಯವಲ್ಲ ಅದು ಕೌಟುಂಬಿಕ ವಿಷಯ ಅದು ಹಾಗಿದ್ದರೇ ಚೆನ್ನ. ಇದಕ್ಕೂ ಮೀರಿ ಯಾರಾದ್ರೂ ಇಷ್ಟವಾದರೂ ಅದು ಮತ್ತೆ ಫ್ಯಾಮಿಲಿ ಪರವಾನಿಗೆಯಿಲ್ಲದೇ ಮುಂದೆ ಸಾಗದು, ಹಾಗೆ ಇಷ್ಟವಾಗುವ ಸಾಧ್ಯತೆ ತೀರಾ ಕಮ್ಮಿ.

ಅಯ್ಯೊ ಮದುವೇನೇ ಆಗಿಲ್ಲ ಆಗ್ಲೇ ಇದೆಲ್ಲ ಬರೆದಿದ್ದೇನೆ ಇನ್ನು ಮಗು ಬೇರೆ? ನೋಡೊಣ... ಸಾಧ್ಯವಾದ್ರೆ, ಕಲ್ಪನೆ ಬಂದ್ರೆ ಅದೂ ಬರೆದೇನು... ಅಲ್ಲೀವರೆಗೆ ನವದಂಪತಿ ಸುಖವಾಗಿರಲಿ ಬಿಡಿ, ಅಮೇಲೆ ಮಕ್ಕಳು ಮರಿ ಇದ್ದದ್ದೇ!!! :)
ಬಹಳ ಕೂಲಂಕುಷವಾಗಿ ಓದಿದ್ದೀರಿ ಲೇಖನಗಳನ್ನ, ನಿಜ ನನ್ನ ಪರಸನ್ಯಾಲಿಟಿ ಸ್ವಲ್ಪ ಹಾಗಿದೆ... ಇಶ್ಟವಾದರೆ ಓದುತ್ತಿರಿ.

@Annapoorna Daithota
:) ಥ್ಯಾಂಕ್ಯೂ.

ಜಲನಯನ said...

ಪ್ರಭು, ಬಹಳ ದಿನಗಳ ನಂತರ ಬ್ಲಾಗ್ ಪೋಸ್ಟ್ ಮಾಡಿದ್ದೀರಿ..? ಏನು ಹುಡುಗೀನ ನೋಡ್ತಿದ್ದೀರೋ ಅಥವಾ ಆ ಶಾಸ್ತ್ರ ನಡೀತಿದ್ಯೋ..?..
ಎಂದಿನಂತೆ ಲವಲಿಕೆಯಿಂದ ಕೂಡಿದ ಓದಿಸಿಕೊಂಡು ಹೋಗುವ ನಿಮ್ಮದೇ ಛಾಪಿನ, ಕೀಟಲೆ, ನೋಕ್-ಝೊಕ್ ಎನ್ನುವಂತಹ ಸಂಭಾಷಣೆಯ ಕಚಗುಳಿಯಿಡುವ ಲೇಖನ....
ನನ್ನ www.jalanayana.blogspot.com ನೋಡೀಪಾ..ಹಾಗೇ ನಿಮ್ಮ ಪ್ರತಿಕ್ರಿಯೆಯೂ ಮುಖ್ಯ...ಮತ್ತೆ ನೀವು ತಪ್ಪಿಸ್ಕೋ ಬಾರ್ದು ನಮ್ಮ ಯೋಜಿತ ಕಾರ್ಯಕ್ರಮವನ್ನ...?

Prabhuraj Moogi said...

@ಜಲನಯನ
ಸರ್ ಈಗೀಗ ಕೆಲಸದೊತ್ತಡ, ವೈಯಕ್ತಿಕ ಕೆಲಸಗಳ ನಡುವೆ ಸಮಯವೇ ಸಿಕ್ಕುತ್ತಿಲ್ಲ, ಮೊದಲಾದರೆ ಪಟ್ಟಾಗಿ ಕೂತು ಏನೊ ಬರೆಯುತ್ತಿದ್ದೆ... ಈಗ ಹಾಗೆ ಮಾಡಲಾಗುತ್ತಿಲ್ಲ.
ಇಲ್ಲ ಸರ್ ಇನ್ನೂ ಹುಡುಕಾಟ ಶುರುವಾಗಿಲ್ಲ, ಶುರುವಾದ್ರೆ ಲೇಖನಗಳಲ್ಲೇ ಗೊತ್ತಾಗುತ್ತದೆ ಬಿಡಿ ನಿಮಗೆ :)
ನಿಮ್ಮ ಬ್ಲಾಗ್ ನೋಡಿ ಪ್ರತಿಕ್ರಿಯಿಸುತ್ತೇನೆ.

Deepa said...

prabhu avare dayavittu tappu tiliyabedi.. naanu sumne haage prashniside .. jeevana kalpanege meeriddu emba mathu satya.Nimma lekhanagalu uttama sandeshavannu kooda odugarige koduthide. Innu uttama sandeshadondige nimma lekhanagalu munduvareyali endu aashisutheene.

Prabhuraj Moogi said...

@Deepa
ನಿಮ್ಮ ಪ್ರಶ್ನೆ ಬಗ್ಗೆ ನನಗೇನೂ ಬೇಜಾರಿಲ್ಲ. ತಪ್ಪು ತಿಳಿಯುವ ಪ್ರಶ್ನೆ ಎಲ್ಲಿದೆ...
ಓದುಗರಾಗಿ ನಿಮಗೆ ಹೀಗೆ ಪ್ರಶ್ನೆ ಬರುವುದು ಸಹಜ. ಮತ್ತೆ ನನಗೆ ಹಲವು ಬಾರಿ ಕೇಳಲಾಗಿದೆ.
ಓದುತ್ತಿರಿ, ನನಗೆ ಸಾಧ್ಯವಾದ ಮಟ್ಟಿಗೆ ಬರೆಯಲು ಪ್ರಯತ್ನಿಸುತ್ತೇನೆ.

ವಿನುತ said...

ಈ ಬರಹಕ್ಕೆ ನೋ ಕಾಮೆಂಟ್ಸ್ ಅಂದರೆ ಸೂಕ್ತವೇನೋ ಅಂತ ಯೋಚನೆ ಬಂತು! ಬರಹದಲ್ಲಿರುವ ವಿಷಯ ಎಲ್ಲರ ಸಾಮಾನ್ಯ ಜ್ಞಾನಕ್ಕೆ ನಿಲುಕುವಂತದ್ದಾಗಿದ್ದರೂ, ಸಮಸ್ಯೆಗಳೇಕೆ ಇನ್ನೂ ಇವೆ ಎನ್ನುವುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಬಿಟ್ಟಿದೆ!

Prabhuraj Moogi said...

@ವಿನುತ
ನನ್ನದೂ ಅದೇ ಪ್ರಶ್ನೇ, ಈಗ ನನ್ನನ್ನೇ ಕೇಳಿದರೂ ನನ್ನ ಹೆಂಡತಿ ಮಿಸ್ ವರ್ಡ್ ಆಗಿಲ್ಲದಿದ್ದರೂ ನೊಡೋಕೆ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇರಲಿ ಅಂತೀನಿ... ನಾವು ಹುಡುಗರು ಹೀಗೇ ಏನೊ ಹುಡುಗಿ ಸುಂದರವಾಗಿರಲಿ ಅಂತಲೇ ಬಯಸುತ್ತೇವೇನೊ...

Unknown said...

Hello Sir,
Blog martbittiri yenu.... No article from so many daz :( Bare aave article oodod aageda... Next article yavagri? Waiting for ur new artcile.

Prabhuraj Moogi said...

@veena
ವೀಣಾ, ಸರ್ ಎಲ್ಲ ಬೇಡ ಪ್ರಭು ಅನ್ನಿ ಸಾಕು.. ಅಯ್ಯೋ ಬ್ಲಾಗ್ ಮರೆತಿಲ್ಲ, ಸಧ್ಯ ಹೊಸ ಲೇಖನ ಓದಿದರೆ ನಿಮಗೆ ಗೊತ್ತಾಗಿರತ್ತೆ.. ಸಧ್ಯ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಇದೀನಿ... ಸಮಯ ಸಿಗದೇ ಬಹಳ ದಿನಗಳಿಂದ ಬರೆಯಲಾಗಿರಲಿಲ್ಲ ಇಂದು ಸ್ವಲ್ಪ್ ಪಟ್ಟಾಗಿ ಕೂತು ಬರೆದೆ.. ಬರೆಯಲು ಬಹಳ ಇದೆ ಸಮಯ ಇಲ್ಲ ಏನು ಮಾಡ್ಲಿ... ಹೀಗೆ ಹಸಿರು ಕಾನನದೂರಿನ ಬಗ್ಗೆ ಬರೀತಾ ನಾನೇ ಹಸಿರು ಕಾನನದೂರಿಗೆ ಬಂದೀದೀನಿ ನೋಡಿ...