Wednesday, July 7, 2010

WEದೇಶ - ನಾನು ನನ್ನಾಕೆ & ವಿದೇಶ...

ಒಳ್ಳೆ ನಿದ್ದೆಯಲ್ಲಿದ್ದೆ, ಕನಸು ಬಿದ್ದರೂ ನಿದ್ದೆ ಮಾಡುವ ಕನಸೇ ಬೀಳುವಷ್ಟು... ಇಂಥ ಸಮಯದಲ್ಲಿ ಇವಳು ಏಳಿಸಿದರೆ ಹೇಗಾಗಬೇಡ... "ರೀ ಎದ್ದೇಳ್ರಿ ಇನ್ನೂ ಎಷ್ಟೊತ್ತು ಅಂತ ಮಲಗೋದು" ಅಂತ ಚೀರುತ್ತಿದ್ದಳು... ಮಲಗಿದಲ್ಲಿಂದಲೇ ಕೇಳಿದೆ "ಟೈಮ್ ಎಷ್ಟು ಈಗ?", ಉತ್ತರ ಬಂತು, "ಹ್ಮ್... ರಾತ್ರಿ ಹನ್ನೊಂದೂವರೆ..." ಅಲ್ರೀ ನೀವೇ ಹೇಳಿ ಈ ಟೈಮ್ಗೆ ಯಾರಾದ್ರೂ ಎಳಿಸ್ತಾರಾ... ಮುಂಜಾನೆ ತಾನೇ ಎದ್ದೇಳಿಸಬೇಕು... ಅದಕ್ಕೆ ತರಾಟೆ ತೆಗೆದುಕೊಳ್ಳುವ ಮೂಡಿನಲ್ಲಿ "ರಾತ್ರಿ ಈ ಟೈಮ್ಗೆ ಮಲಗಿರದೆ ಇನ್ನೇನೇ ಮಾಡೋಕಾಗುತ್ತೆ?..." ಅಂದೆ... "ಯಜಮಾನ್ರೆ, ಟೈಮ್ ಇಲ್ಲಿ ರಾತ್ರಿ ಹನ್ನೊಂದೂವರೆ, ಅಲ್ಲಿ ಈಗ ಮುಂಜಾನೆ ಹನ್ನೊಂದಾಗಿದೆ. ಕಿಟಕಿ ಪರದೆ ಸ್ವಲ್ಪ ಸರಿಸಿ ಸೂರ್ಯ ದರ್ಶನ ಮಾಡಿ" ಅಂದ್ಲು... ನಾನೇನು ಈ ಸೂರ್ಯನ ಟೈಮ್ ಕೀಪರಾ... ಅವನು ಟೈಮ್ ಟೈಮ್ಗೆ ಸರಿಯಾಗಿ ಬಂದು ಹೋಗ್ತಾನಾ ಇಲ್ವಾ ಅಂತ ನೋಡೋಕೆ ಇನ್ನು ದೇವರ ದರ್ಶನ ಅಂತ ಮಾಡೋದಾದ್ರೆ ಚಂದ್ರದೇವ ದರ್ಶನ್ ಮಾಡಿದ್ರಾಯ್ತು ಅಲ್ವಾ... ಅಂತ ಮನದಲ್ಲೇ ಮಂಥನ ನಡೆಸಿದ್ರೆ... "ವಿದೇಶದಲ್ಲಿದೀರಿ... ನಿದ್ರೆ ಮಂಪರಿನಲ್ಲಿ ಅದೂ ಮರೆತು ಹೋಯ್ತಾ?" ಅಂತ ಕೇಳಿದಾಗಲೇ ನಿದ್ರಾದೇವಿಯ ಮಡಿಲಿನಿಂದಿಳಿದು ವಾಸ್ತವಕ್ಕೆ ಬಂದು... "ಹೀ ಹೀ..." ಅಂತ ಹಲ್ಲು ಕಿರಿದೆ... "ಎಲ್ಲಿದ್ರೂ ನೀವಂತೂ ಸುಧಾರಿಸಲ್ಲ" ಅಂತ ಬಯ್ದಳು "ಎಲ್ಲಿದ್ದರೇನಂತೆ, ನಾವು ನಾವೇ ಅಲ್ವೇ ಅದಕ್ಕೆ ವಿದೇಶದಲ್ಲಿ ನಾವು ಅಂದ್ರೆ, WEದೇಶ" ಅಂದಿದ್ದಕ್ಕೆ "ಇಂಥ ಮಾತಿಗೇನು ಕಮ್ಮಿಯಿಲ್ಲ" ಅಂದು ಫೋನಿಟ್ಟಳು...

ಎರಡು ಸಾರಿ ಹೊರಟು ಕ್ಯಾನ್ಸಲ್ ಆಗಿದ್ದರಿಂದ ಈ ಸಾರಿ ಅವಳಿಗೆ ಕೊನೆವರೆಗೂ ಹೇಳಿಯೇ ಇರಲಿಲ್ಲ, ಅದೊಂದು ದಿನ ಟಿಕೆಟ್ಟು ಕೈಗೆ ಬಂದಾಗ... ಕೋಳಿ ಜಗಳ ಸೃಷ್ಟಿ ಮಾಡಿ, ಕೊನೆಗೆ "ಲೇ ನಿಂಜತೆ ಇದ್ದು ಇದ್ದು ಇನ್ನು ಸಾಕಾಯ್ತು ಕಣೆ, ದೇಶಾಂತರ ಹೊರಟೋಗಿಬಿಡ್ತೀನಿ" ಅಂದಿದ್ದಕ್ಕೆ, "ಆಫ್ರಿಕಾ ಕಾಡಿಗೆ ಇಲ್ಲ, ಅರಬಸ್ಥಾನದ ಮರಳುಗಾಡಿಗೆ ಹೋಗಿ" ಅಂತ ಶಾಪ ಹಾಕಿದರೆ, "ಆಫ್ರಿಕಾ ಯಾಕೆ ಅಮೇರಿಕಾ ಹೊರಟೀದೀನಿ" ಅಂತ ಟಿಕೆಟ್ಟು ತೋರಿಸಿದಾಗ ಮುದ್ದು ಗುದ್ದುಗಳ ಸುರಿಮಳೆಯೇ ಆಗಿತ್ತು. ಈಗಲೇ ಎಲ್ಲಿ ಹಾರಿ ಹೊರಟು ಹೋಗುತ್ತೇನೋ ಅನ್ನುವಂತೆ ಅವುಚಿಕೊಂಡು ಕೂತುಬಿಟ್ಟಿದ್ದಳು. ಸ್ವಲ್ಪ ಹೊತ್ತಿನ ನಂತರ ಪ್ರಶ್ನೆಗಳ ಸೋನೆ ಮಳೆ ಶುರುವಾಗಿತ್ತು...

"ಹ್ಮ್ ಮತ್ತೆ ಫ್ಲೈಟ್ ನಲ್ಲಿ ಹೋಗ್ತೀರಾ ಹಾಗಿದ್ರೆ?" ಹುಬ್ಬು ಹಾರಿಸಿದ್ಲು, "ಇಲ್ಲಾ ಸೈಕಲ್ ತೆಗೆದುಕೊಂಡು ಹೋದ್ರೆ ಹೇಗೆ ಅಂತ ಯೋಚ್ನೆ ಮಾಡ್ತಾ ಇದೀನಿ" ಅಂತ ಕಿಚಾಯಿಸಿದೆ. ಕಣ್ಣು ಕೆಕ್ಕರಿಸಿ ನೋಡಿದ್ಲು, ನಾ ನಕ್ಕೆ. "ಯಾವ್ ಫ್ಲೈಟ್ ಸಿಕ್ಕಿದೆ?" ಕೇಳಿದ್ಲು,
"ಕಿಂಗ್ ಫಿಷರ್ ಸಿಕ್ಕಿದ್ರೆ ಚೆನ್ನಾಗಿತ್ತು ಏನ್ ಮಾಡೋದು ಅಲ್ಲಿಗೆ ಅವರ ಸರ್ವೀಸ್ ಇಲ್ವೆ" ಅಂದರೆ, "ಯಾಕೆ ಕಿಂಗ್ ಫಿಷರ್ ಟೈಮ್ ಸರಿಯಾಗಿ ಹೋಗುತ್ತಾ?" ಅಂತ ಮುಗ್ಧ ಪ್ರಶ್ನೆ ಬಂತು, "ಆ ಫ್ಲೈಟ್ ಲೇಟಾಗಿ ಹೋದಷ್ಟು ಒಳ್ಳೇದೆ ಕಣೇ, ಗಗನ ಸಖಿಯರು ಹೇಗೆ ಇರ್ತಾರೆ ಗೊತ್ತಾ? ಅಂತಿದ್ದರೆ, ಮುನಿಸಿಕೊಂಡು ಸುತ್ತುಬಳಸಿದ್ದ ಕೈ ಬಿಡಿಸಿಕೊಂಡು ಎದ್ದು ಹೋದಳು, ನಂಗೊತ್ತು ಇನ್ನೊಂದಿಷ್ಟು ಹೊತ್ತಲ್ಲಿ ಬಂದು ಮತ್ತೆ ಮಾಮೂಲಿ ಮಾತಿಗಿಳಿಯುತ್ತಾಳೆ ಎಂದು. ಹಾಗೇ ಆಯ್ತು ಒಳ್ಳೇ ಒಂದು ಕಪ್ಪು ಟೀ ಮಾಡಿಕೊಂಡು ಬಂದು ಕೂತಳು, ನಿಂಗೆ ಕೊಡಲ್ಲ ಹೋಗು ಅನ್ನುವಂತೆ ನನಗೇನೂ ಕೊಡದೇ. "ಗಗನ ಸಖಿಯರು ಬಹಳ ಸ್ಮಾರ್ಟ್ ಇರ್ತಾರೆ ಅಲ್ವಾ?" ಅಂದ್ಲು ಒಂದೇ ಒಂದು ಸಿಪ್ಪು ಹೀರುತ್ತಾ. "ಇರ್ತಾರೆ ನಿನ್ನಷ್ಟು ಸ್ಮಾರ್ಟ್ ಇರಲ್ಲ ಬಿಡು" ಅಂತ ಸ್ವಲ್ಪ್ ಬೆಣ್ಣೆ ಸವರಲು ನೋಡಿದೆ, ಇಲ್ಲಾಂದ್ರೆ ಟೀ ಸಿಗಲ್ಲವಲ್ಲ ಅದಕ್ಕೆ... "ಆಹಾಹಾ ಈ ಡೈಲಾಗ್ ಎಲ್ಲ ಬೇಡ" ಅಂತ ಮುಖ ತಿರುವಿ ಕೂತಳು, ಸುಂದರಿ ಮುಖ ತೋರಿಸಲು ನಾಚಿದಂತೆ. ಖುಷಿಯಾಗಿದ್ದಾಳೆ ಅಂತ ಖಾತರಿ ಆಗುತ್ತಿದ್ದಂತೆ, ಹಿಂದಿನಿಂದ ಆವರಿಸಿಕೊಂಡು ಒಂದು ಸಿಪ್ಪು ಅವಳ ಕಪ್ಪಿನಿಂದಲೇ ಹೀರಿದೆ. ಕೊಸರಿಕೊಂಡು "ಪಾಕಶಾಲೆಯಲ್ಲಿ ಇನ್ನೊಂದು ಕಪ್ಪಿದೆ ನಿಮಗೆ" ಅಂತ ತಳ್ಳಿದಳು. ನಂಗೊತ್ತು, ಟೀ ಮಾಡಿದರೆ ನನಗೆ ಇಲ್ಲದೆ ಅವಳು ಹೇಗೆ ಒಬ್ಬಳೇ ತನಗಾಗಿ ಮಾಡಿಕೊಂಡಾಳು ಅಂತ. ಟೀ ಹೊಟ್ಟೆಗೆ ಬಿದ್ದ ಮೇಲೆ ಸಮಾಧಾನ ಆಯ್ತು.

ಟೀ, ಮುಗಿಯುತ್ತಿದ್ದಂತೆ ಅವಳ ತುಟಿಗಳಿಗೆ ಬೇರೆ ಕೆಲಸ ಬೇಕಲ್ಲವೇ, ಮುತ್ತುಗಳಿಗೆ ಸಮಯ ಇದಲ್ಲವಾದ್ದರಿಂದ ಮತ್ತೆ ಕೆಲ ಪ್ರಶ್ನೆಗಳನ್ನೇ ಉದುರಿಸಿದಳು. "ಯಾವಾಗ ಹೊರಡ್ತೀರಿ?" ಅಂದ್ಲು. "ನಾಳೆ ನಾಡಿದ್ದು..." ಅಂದೆ. "ಮೊದಲೇ ಹೇಳೋಕೇನಾಗಿತ್ತು? ಹೀಗೆಲ್ಲ ದಿಢೀರನೆ ಹೊರಟು ನಿಂತರೆ ಹೇಗೆ?" ಅಂತ ತಿವಿದಳು, "ಅದನ್ನ ನಮ್ಮ ಮ್ಯಾನೆಜರಗೆ ಕೇಳು, ನನಗೂ ಇಂದೇ ಗೊತ್ತಾಗಿದ್ದು" ಅಂದೆ. "ಎಷ್ಟು ದಿನ?..." ಹೋಗೋದು ಹೋಗ್ತೀಯಾ ಬೇಗಾ ಆದರೂ ಬರ್ತೀಯ ಅಂತ ಕೇಳಿದಂತಿತ್ತು. "ಕೆಲವೇ ತಿಂಗಳು ಅಷ್ಟೇ" ಸಮಾಧಾನಿಸುವಂತೆ ಹೇಳಿದೆ. "ತವರುಮನೆಗೆ ನಾಲ್ಕು ದಿನ ಹೋದ್ರೆ ಎಷ್ಟೋ ದಿನಗಳಾದಂತೆ ಅನಿಸತ್ತೆ, ಕೆಲವೇ ತಿಂಗಳು ಅಂತ ಏನು ಸಲೀಸಾಗಿ ಹೇಳ್ತೀರಾ ನೀವು" ಅಂತ ಭಾವುಕಳಾದಳು. "ಅದಕ್ಕೆ ಯೋಚ್ನೆ ಮಾಡ್ತಾ ಇದೀನಿ ಅಲ್ಲೊಂದು ಟೆಂಪರರಿ ಮದುವೆ ಆದ್ರೆ ಹೇಗೆ ಅಂತಾ" ಅಂತ ಹೇಳಿ ನಗಿಸಿದ್ರೆ, "ಹ್ಮ್ ಒಂದು ಕೆಂಪು ಟೊಮ್ಯಾಟೋ ಹಣ್ಣಿನಂತಾ ಹುಡುಗಿ ಸಿಕ್ರೆ ನೋಡಿ..." ಅಂತ ಮತ್ತೆ ತುಂಟಾಟಕ್ಕಿಳಿದಳು. "ರೀ... ಅಷ್ಟು ದಿನಾ ಹೋಗ್ತಾ ಇದೀರಾ, ಪಕ್ಕದಮನೆ ಪದ್ದುನಾ ಮಿಸ್ ಮಾಡ್ಕೊತೀರ ಪಾಪ..." ಅಂದ್ಲು. ತನ್ನ ಮಿಸ್ ಮಾಡ್ಕೊತೀನಾ ಇಲ್ವಾ ಅನ್ನೋದು ಕೇಳದಿದ್ದರೂ ಪರವಾಗಿಲ್ಲ ಪದ್ದು ಬಗ್ಗೆ ಕೇಳದೆ ಇರಲಾರಳು ನನ್ನಾಕೆ. "ಪದ್ದುಗೆ ಹೇಗೆ ಹೇಳೋದು ಅನ್ನೋದೇ ಚಿಂತೆ ಆಗಿದೆ ನಂಗೆ" ಅಂತಿದ್ದಂಗೆ, ಇಂಥ ವಿಷಯ ಎಲ್ಲ ಹೇಳಿ ಪದ್ದು ಹೊಟ್ಟೆ ಉರಿಸೋದರಲ್ಲಿ ತಾನೇ ಮೇಲು ಅನ್ನುವಂತೆ "ನಾನಿದೀನಲ್ಲ, ಇಂಥಾ ಚಾನ್ಸ್ ಹೇಗೆ ಮಿಸ್ ಮಾಡ್ಲಿ" ಅಂತ ಎದ್ದೊಡಿದಳು. ಇನ್ನು ಪದ್ದು ಜತೆ ಘಂಟೆ ಕಾಲ ಮಾತಾಡಿ, ಪದ್ದು ಹೊಟ್ಟೇಲಿ ಖಾರ ಕಲಿಸಿ ಇಟ್ಟು ಬರಲಿಲ್ಲ ಅಂದ್ರೆ ಕೇಳಿ.

ಊರಲ್ಲಿ ಎಲ್ರಿಗೂ ಫೋನು ಮಾಡಿ ಹೇಳಿದ್ದಾಯ್ತು, ಅಜ್ಜಿಗೆ ಭೇಟಿ ಮಾಡಿ "ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟೀದೀನಿ" ಅಂದ್ರೆ, ಅಷ್ಟರಲ್ಲೇ ಮನೆಕೆಲಸದ ಪಾರಮ್ಮಜ್ಜಿ "ಸಣ್ಣ ಪರಾನ್ಸಿಸ್ಕೋಕ ಹೊರಟೀ.. ನಮ್ಮಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಂಗ್ ಅಲ್ಲಿ ಸಣ್ಣ ಪರಾನ್ಸಿಸ್ಕೋ, ದೊಡ್ಡ ಪರಾನ್ಸಿಸ್ಕೋ ಅದಾವೇನು" ಅಂತ ಕೇಳಬೇಕೆ. ನಮ್ಮಜ್ಜಿ "ಅಲ್ಲಿ ಕನ್ನಡ ಮಾತಾಡ್ತಾರೆನ್ ಪಾರಮ್ಮ, ಎಲ್ಲ ಇಂಗ್ಲೀಸ್ ಅಲ್ಲಿ, ಅದ ಇಂಗ್ಲೀಸ್ ಹೆಸರ ಇರಬೇಕ" ಅಂತ ತಿಳಿಹೇಳಿದಳು. "ಅದ ಸ್ಪಾನಿಶ್ ಹೆಸರ" ಅಂದೆ. ತನ್ನ ಬಗ್ಗೆ ಹೇಳಿಕೊಳ್ಳಲೇ ಕಾದಿದ್ದನೇನೋ ಅನ್ನುವಂತೆ ವಿದೇಶ ಪ್ರಯಾಣ ಮಾಡಿದ್ದ ದೊಡ್ಡಪ್ಪನ ಮಗ ತನ್ನ ವಿದೇಶ ಜ್ಞಾನ ತೆರೆದಿಟ್ಟ, ಅಲ್ಲಿ ಬಗ್ಗೆ ಎಲ್ಲ ಹೇಳತೊಡಗಿದ. ಅವರಿಗೆ ಅವನನ್ನ ಜತೆ ಮಾಡಿ ಮಾತಾಡಲು ಬಿಟ್ಟು ಬಂದರೆ ಪಾರಮ್ಮಜ್ಜಿ ಮುಗ್ಧ ಪ್ರಶ್ನೆ ನನಗೆ ನನ್ನಾಕೆಗೆ ನಗೆ ಬುಗ್ಗೆ ಉಬ್ಬರಿಸಿತ್ತು...

ಅದೊಂದು ದಿನ ಹೊರಡುವ ಸಮಯ ಬಂದೇ ಬಿಟ್ಟಿತು, ನಮ್ಮೂರಲ್ಲಿ ಬೆಂಗಳೂರಿಗೆ ಹೊರಟರೇ ಸಾಕು ಆ ಹೈಟೆಕ್ ಬಸ್ ವರೆಗೆ ಬೀಳ್ಕೊಡಲು ಸಹ ಕುಟುಂಬ ಪರಿವಾರ ಸಮೇತರಾಗಿ ಬರುವಾಗ... ಇನ್ನು ವಿದೇಶಕ್ಕೆ ವಿಮಾನದಲ್ಲಿ ಅಂದ್ರೆ ಕೇಳಬೇಕೆ... ಅಪ್ಪ ಅಂತೂ... "ಬೆಂಗಳೂರಿನವರೆಗೆ ಎಲ್ರಿಗೂ ಒಂದು ಬಸ್ ಮಾಡಿಕೊಂಡು ಬರಬೇಕಾಗತ್ತೆ ನಿನ್ನ ವಿದೇಶಕ್ಕೆ ಬೀಳ್ಕೊಡಲು" ಅಂತ ನಗಾಡಿದ್ದರು. ವಿದೇಶಕ್ಕೆ ಹೊರಟರೆ ಸಾಕು ದಿನಪತ್ರಿಕೆಯಲ್ಲಿ ಫೋಟೋ ಹಾಕಿ ಶುಭಾಶಯ ಬೇರೆ ಕೋರುತ್ತಾರೆ. ಅಲ್ಲೇನೋ ಒಂದು ಹೆಮ್ಮೆ, ಪ್ರೀತಿ ಅದಕ್ಕೆ ಏನೂ ಹೇಳಲಾಗಲ್ಲ... ಅಂತೂ ಎಲ್ಲ ಟಿಕೆಟ್ಟು ತೆಗೆದುಕೊಂಡವರ ಫೋಟೋಗಳ ಮಧ್ಯೆ ನನ್ನ ಫೋಟೋ ಕೂಡ ರಾರಾಜಿಸಿತ್ತು. ಎಲ್ಲ ಟಿಕೆಟ್ಟು ತೆಗೆದುಕೊಂಡವರು ಅಂದ್ರೆ, ಸತ್ತು ಸ್ವರ್ಗಕ್ಕೆ ಟಿಕೆಟ್ಟು ತೆಗೆದುಕೊಂಡವರು, ಇಲ್ಲ ಚುನಾವಣೆ ಪಾರ್ಟಿ ಟಿಕೆಟ್ಟು ತೆಗೆದುಕೊಂಡವರು, ವಿದೇಶಕ್ಕೆ ವಿಮಾನದ ಟಿಕೆಟ್ಟು ತೆಗೆದುಕೊಂಡವರು ಎಲ್ಲರನ್ನೂ ಸೇರಿಸಿ ದಿನಪತ್ರಿಕೆಯವರು ಒಂದೇ ಕಡೆ ಕ್ಲಾಸಿಫೈಡ್ ಹಾಕಿರುವುದರಿಂದ, ಹಾಗಂದರೇ ಸರಿಯೇನೋ. ಅಮ್ಮ ನನ್ನಾಕೆ ಸೇರಿ ಬ್ಯಾಗು ಒತ್ತರಿಸಿ ತುಂಬಿಯಾಗಿತ್ತು, ನಾ ಅಡಿಗೆ ಮಾಡಿಕೊಂಡು ತಿನ್ನುವುದು ಅಷ್ಟರಲ್ಲೇ ಇದೆ ಅಂತ ಮ್ಯಾಗಿ ನೂಡಲ್ಸ್ ಪ್ಯಾಕೆಟ್ಟು ಕೂಡ ಸ್ಥಾನ ಆಕ್ರಮಿಸಿಕೊಂಡಿದ್ದವು, ಅಲ್ಲಿ ತೂಕದ ಮಿತಿಯಿದೆ ಎಲ್ಲ ಹೊತ್ತುಕೊಂಡು ಹೋಗಲಾಗಲ್ಲ ಅಂತ ತಿಳಿಹೇಳಿ ಕೆಲ ಸಾಮಗ್ರಿ ಎತ್ತಿಟ್ಟು ಪ್ರೀತಿಯ ಭಾರ ಕಮ್ಮಿ ಮಾಡಿಕೊಳ್ಳುವ ಹೊತ್ತಿಗೆ ನನಗೆ ಸಾಕಾಗಿತ್ತು. ಅಮ್ಮನಿಗೋ ನನ್ನ ಊಟದ ಚಿಂತೆ, "ಹಣ್ಣು ಸಿಕ್ರೆ ತಿನ್ನು, ಬ್ರೆಡ್ಡು ಎಲ್ಲ ಸಿಗತ್ತಂತೆ ಅಲ್ಲಿ" ಹೇಳುತ್ತಲೇ ಇದ್ದಳು.


ನಿಲ್ದಾಣದಲ್ಲಿ ಬೀಳ್ಕೊಡಲು ನಿಂತಾಗ, ಅದೇ ವಾರ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಮಂಗಳೂರಿನ ವಿಮಾನ ಅಪಘಾತ ಅಮ್ಮನ ಧೃತಿಗೆಡಿಸಿತ್ತು. "ವಿಮಾನ ಸೇಫ್ ಇರತ್ತಲ್ಲ" ಅಂತ ಸಂಕೊಚದಲ್ಲೇ ಕೇಳಿದ್ದಳು. ನನ್ನಾಕೆ "ಅತ್ತೆ, ಅಲ್ಲಿ ವಿದೇಶದಲ್ಲಿ ನಿಲ್ದಾಣ ಎಲ್ಲ ಸರಿ ಇರ್ತವೆ ಏನಾಗಲ್ಲ ಬಿಡಿ" ಅಂತ ಸಮಾಧಾನ ಹೇಳುತ್ತಿದ್ದರೂ ಅವಳ ಮುಖದಲ್ಲೂ ಆತಂಕದ ಗೆರೆಗಳು ಮೂಡಿದ್ದವು... ಅಪ್ಪ ದೂರದಲ್ಲಿ ನಿಂತು ನಂಬಿಕೆ ಇದೆ ಬಿಡು.. ಹೋಗಿ ಬಾ ಏನಾಗಲ್ಲ ಅಂತ ಹೇಳಿದಂತಿತ್ತು... ಅಮ್ಮ "ದೇವರ ನೆನೆಯುತ್ತಾ ಕೂತು ಬಿಡು ಏನಾಗಲ್ಲ" ಅಂತಿದ್ದಳು. "ಸುತ್ತಲೂ ಸುಂದರ ಅಪ್ಸರೆಯಂತಾ ಗಗನಸಖಿಯರು ಸುತ್ತುವರೆದಿದ್ದರೆ ದೇವರ ಧ್ಯಾನ್ ಎಲ್ಲಿ ಮಾಡೋಕಾಗತ್ತೆ" ಅಂತಂದು ಎಲ್ಲರನ್ನೂ ನಗಿಸಿ ಪರಿಸ್ಥಿತಿ ತಿಳಿಯಾಗಿಸಿದೆ. ನನ್ನಾಕೆ, "ರೀ ಯಾವ ಗಗನಸಖಿಯನ್ನೂ ನೋಡಲ್ಲ, ಅಂತ ಪ್ರಮಾಣ ಮಾಡ್ರೀ" ಅಂತ ಗಂಟು ಬಿದ್ದಿದ್ದಳು.

ಹಾಂಗಕಾಂಗ್ ಮೂಲಕ ಪ್ರಯಾಣಿಸುತ್ತಿದ್ದರಿಂದ, ಪಕ್ಕದ ಸೀಟಿನಲ್ಲಿ ಹಾಂಗಕಾಂಗ್ ಹುಡುಗಿ ಕೂರಬೇಕೆ!... ನನ್ನಾಕೆಗೆ ಕಾಡಿಸಲು ಒಳ್ಳೆ ವಿಷಯ ಸಿಕ್ತು ಅಂದುಕೊಂಡೆ, ಅವಳೋ ಕಣ್ಣು ತೆರೆದಿದ್ದಳೋ ಇಲ್ಲ ಮುಚ್ಚಿದ್ದಳೋ ಒಂದೂ ತಿಳಿಯದು, ಕಣ್ಣುಗಳೇ ಅಷ್ಟು ಚಿಕ್ಕವು. ನನಗೂ ಎಲ್ಲ ಹೊಸದು... ಕಿಟಕಿ ತೆರೆ ತೆರೆದು ಮೋಡಗಳ ನೋಡುತ್ತಿದ್ದರೆ ಆ ಪುಟ್ಟ ಕಣ್ಣುಗಳಲ್ಲೇ ತನಗೆ ಕಿರಿಕಿರಿಯಾಗುತ್ತಿದೆಯಂತ ಹೇಳಿದ್ದಂತೂ ಅಚ್ಚರಿಯೇ ಸರಿ. ಸರಿ ಕಿಟಕಿ ಮುಚ್ಚಿ ಕೂತೆ, ನಮ್ಮ ಸಿಟಿ ಬಸ್ಸಿನಂತಾಗಿದ್ದರೆ ಗಾಳಿ ಬರಲೆಂದು ತೆರೆದಿದ್ದೇನೆ ಅಂತ ಹೇಳಬಹುದಿತ್ತೇನೋ ಆದರೆ ಇಲ್ಲಿ ಅದೂ ಸಾಧ್ಯವಿರಲಿಲ್ಲ. ಅಷ್ಟರಲ್ಲೇ ಅಪ್ಸರೆ ಬಂದು.. ಅಲ್ಲಲ್ಲ ಗಗನಸಖಿ ಬಂದು, ತಿನ್ನಲು ತಿಂಡಿ ತಂದಿಟ್ಟಳು. ಅವಳಿಗೆ ವೆಜಿಟೇರಿಯನ್, ಸಸ್ಯಹಾರಿ ಊಟ ಕೇಳಿದರೆ ಮೊದಲೇ ಟಿಕೆಟ್ಟಿನಲ್ಲಿ ನಮೂದಿಸಿರಬೇಕೆಂದಳು, ಟಿಕೆಟ್ಟು ಮಾಡಿದ ಏಜೆಂಟ ಶಪಿಸಿದೆ, ಒಂದು ಮುಗುಳ್ನಗೆ ಇತ್ತಿದ್ದಕ್ಕೆ, ಕೊನೆಗೆ ಹೇಗೋ
ಒಂದು ಸಸ್ಯಹಾರಿ ಊಟ ಸಿಕ್ತು, ನಿಜಕ್ಕೂ ಸಸ್ಯಾಹಾರಿಯೇ... ಸಸ್ಯಗಳನ್ನು ಹಾಗೇ ಕತ್ತರಿಸಿ ಇಟ್ಟಿದ್ದರು... ವಿಧಿಯಿಲ್ಲದೇ ಪಾಲಿಗೆ ಬಂದಿದ್ದು ತಿಂದದ್ದಾಯ್ತು.

ಸ್ಯಾನ್ ಫ್ರಾನ್ಸಿಸ್ಕೋಗೆ ಬರುತ್ತಿದ್ದಂತೇ ಸಮುದ್ರ ಇನ್ನೂ ಹತ್ತಿರ ಹತ್ತಿರವಾಗುತ್ತ ಬಂದು ಕಾಣತೊಡಗಿತು, ಅಪ್ಪಿ ತಪ್ಪಿ ಅವಘಡವಾಗಿ ಎಲ್ಲಾದ್ರೂ ದೂರ ದ್ವೀಪದಲ್ಲಿ (ಐಲ್ಯಾನ್ಡ) ಹೋಗಿ ಬಿದ್ರೆ ಅಂತ ಯೋಚಿಸಿದೆ, ಹಾಗೇನಾದರೂ ಆದ್ರೆ ಅಪ್ಪಾ ದೇವ್ರೇ ಇರೋ ನಾಲ್ಕು ಗಗನಸಖಿಯರಲ್ಲಿ ಯಾರನ್ನಾದರೂ ನನ್ನ ಜತೆ ಮಾಡು ಅಂತ ಬೇಡಿಕೊಂಡೆ! ಅದನ್ನ ನನ್ನಾಕೆಗೆ ಹೇಳಿ ಉಗಿಸಿಕೊಂಡೆ ಕೂಡ... ಅಂತೂ ಇಂತೂ ಅಮೇರಿಕ ತಲುಪಿಯಾಗಿತ್ತು. ಹೋಟೆಲಿಗೆ ಬಂದು ಇಳಿದುಕೊಳ್ಳುತ್ತಿದ್ದಂತೆ ನನ್ನಾಕೆ ಆಗಲೇ ನಾಲ್ಕು ಸಾರಿ ಫೋನು ಮಾಡಿಯಾಗಿತ್ತು, ಕೊನೆಗಂತೂ "ಇದೇನು ನಮ್ಮ ಸಿಟಿ ಬಸ್ನಲ್ಲಿ ಮೆಜೆಸ್ಟಿಕ್ ಬಂದಂತೆ ಅನ್ಕೊಂಡಿದೀಯ" ಅಂದ್ರೆ, "ರೀ ಹೋಟೆಲ್ ರಿಸೆಪ್ಶನಿಸ್ಟ್ ನೋಡೋಕೆ ಹೇಗಿದಾಳೆ? ಕೇಳೋಕೆ ದ್ವನಿ ಸೂಪರಾಗಿದೆ..." ಅಂತ ಶುರುವಿಟ್ಟುಕೊಳ್ಳಬೇಕೆ... "ಛೆ ನಾನು ಅವಳ್ನಾ ನೋಡಲೇ ಇಲ್ವೆ" ಅಂದೆ.. "ನಂಬಿದೆ.." ಅಂದ್ಲು, ಇಂಥ ಸುಳ್ಳುಗಳೆಲ್ಲ ಅವಳು ನಂಬಿದಂತೆಯೇ... ವಿದೇಶದಲ್ಲಿದ್ದರೂ ನಮ್ಮ ತುಂಟಾಟಗಳಿಗೇನೂ ಕೊನೆಯಿಲ್ಲ ಬಿಡು ಅನಿಸ್ತು...

ವಿದೇಶ ಪ್ರಯಾಣ ವಿಮಾನ ಯಾನ ಒಂಥರಾ ಹೊಸ ಅನುಭವ, ಹೊಸ ದೇಶ, ಹೊಸ ಜನ... ಹೊಸಾ ಭಾಷೆ... ಎಲ್ಲ ಹೊಸತು... ಮೊಟ್ಟ ಮೊದಲ ಪ್ರಯಾಣಕ್ಕೆ ಸ್ವಲ್ಪ ತಯ್ಯಾರಿ ಅತ್ಯಗತ್ಯ, ಯಾರಾದರೂ ಮೊದಲೇ ಹೋಗಿ ಬಂದವರನ್ನು ಕೇಳಿ ತಿಳಿಯುವುದೊಳಿತು. ಎಲ್ಲಿ ಬ್ಯಾಗ ಕೊಡಬೇಕು, ಎಲ್ಲಿ ಯಾವ ಸೈಜ್ ಬ್ಯಾಗ ಇರಬೇಕು, ಎಷ್ಟು ತೂಕಕ್ಕೆ ಅನುಮತಿಯಿದೆ, ಏನೇನು ತೆಗೆದುಕೊಂಡು ಹೋಗಬಹುದು, ಎಲ್ಲ ಗೊತ್ತಿದ್ದರೆ ಒಳ್ಳೆಯದು ಇಲ್ಲವಾದರೆ ಅನಗತ್ಯ ಗೊಂದಲ ಉಂಟಾಗುತ್ತದೆ. ಕೆಲ ಸಲಹೆ ಕೊಡುವುದಾದರೆ ಕ್ಯಾಬಿನ್ ಬ್ಯಾಗ್ನಲ್ಲಿ ಒಂದು ಜತೆ ಬಟ್ಟೆ ಇರಲಿ, ಕೆಲವೊಮ್ಮೆ ಚೆಕ್ ಇನ್ ಮಾಡಿದ ಬ್ಯಾಗ ಬರುವುದು ತಡವಾಗಬಹುದು. ತೀರ ಸಣ್ಣ ಪುಟ್ಟ ಖಾಯಿಲೆಗಳಿಗೆಲ್ಲ ಸೇರಿಸಿ ವೈದ್ಯರ ಪ್ರಿಸ್ಕ್ರಿಪ್ಶನ್ ಸಮೇತ ಕೆಲ ಮಾತ್ರೆ ಗುಳಿಗೆ ತೆಗೆದುಕೊಳ್ಳುವುದು ಉಚಿತ. ವಿಮಾನ ಎತ್ತರದಿಂದ ಇಳಿಯುವಾಗ ವಾತಾವರಣದ ಒತ್ತಡದಿಂದಾಗಿ ಅಸಾಧ್ಯ ಕಿವಿ ನೋವು ಕಾಣಿಸಿಕೊಳ್ಳುವುದುಂಟು, ಬಬಲ್ ಗಂ ಅಗಿಯುವುದು ಇಲ್ಲ, ಸುಮ್ಮನೆ ಬಾಯಿ ತೆರೆದು ಮುಚ್ಚಿ ಆಕಳಿಸಿದಂತೆ ಮಾಡಿದರೆ ಸ್ವಲ್ಪ ಸರಿ ಹೋಗುತ್ತದೆ. ಜೆಟ್ ಲ್ಯಾಗ್ ಅಂತ ಕೆಲ ದಿನ ಹಗಲೆಲ್ಲ ನಿದ್ರೆ ಬರುವುದು, ರಾತ್ರಿ ನಿದ್ರೆ ಬರದೆ ಇರುವುದು ಸಾಮಾನ್ಯ. ಎರಡು ದಿನ ಹಗಲು ಒತ್ತಾಯದಿಂದ ಎಚ್ಚರಿದ್ದರೆ ಎಲ್ಲ ಸರಿಯಾಗುತ್ತದೆ, ತಪ್ಪಿ ಹಗಲು ಸಮಯವಿದೆ ನಿದ್ರೆ ಬರುತ್ತಿದೆ ಎಂದು ಮಲಗಿದರೆ ಅಷ್ಟೇ, ಹೊಂದಾಣಿಕೆ ಕಷ್ಟವಾಗುತ್ತದೆ. ಏನೇ ಹೇಳಿ ಮೊದಲ ಸಾರಿ ಒಂಥರಾ ಏನೋ ಖುಷಿಯಾಗಿರುತ್ತದೆ...

ಅಂತೂ ನನ್ನಾಕೆ ನನ್ನ ಏಳಿಸುವುದರಲ್ಲಿ ಸಫಲಳಾಗಿದ್ದಳು , ಬಾತ್ ಟಬ್ಬಿನಲ್ಲಿ ಬಿದ್ದುಕೊಂಡು ಸ್ವಲ್ಪ್ ಬಾತ್ ಚೀತ್... ಖಾಸ್ ಬಾತ್ ಮಾಡಿಯಾಯ್ತು... ಮತ್ತೇನೂ ಮಾಡಲಾಗದ ನಮ್ಮಂಥವರಿಗೆ ಅಂಥ ತಯ್ಯಾರಾದ ಮ್ಯಾಗಿ ನೂಡಲ್ಸು ಕುದಿಸಿ ಮಾಡಿಟ್ಟಿದ್ದು ತಿಂದೆ. ನಾಲ್ಕು ಬ್ರೆಡ್ಡು ಹಸಿಬಿಸಿ ಬೇಯಿಸಿ ಬ್ಯಾಗಿಗೆ ಹಾಕಿಕೊಂಡು... ಆಫೀಸಿಗೆ ಹೊರಟು ನಿಂತರೆ ಅರೆ ತೆರೆದ ಬಾಗಿಲಲ್ಲಿ ತುಸು ಬಾಗಿ ನಿಂತು ಕೈಬೀಸುವ ನನ್ನಾಕೆ ನೆನಪಾದಳು... ತುಸು ದೂರ ಹೋಗುತ್ತಿದ್ದಂತೆ ಕಾಣುತ್ತಿದ್ದ ಪಕ್ಕದ ಮನೆ ಪದ್ದು ಕೂಡ ನೆನಪಾದಳು.. ಪಕ್ಕದಮನೆ ಪದ್ದು ಇಲ್ಲಾಂದ್ರೆ ಏನಂತೆ?... ಮುತ್ತಿನಂತಾ ಮೂವತ್ತೆರಡೂ ಹಲ್ಲುಗಳು ಕಾಣುವಂತೆ ಮುಗುಳ್ನಗುತ್ತಿದ್ದ ಪಕ್ಕದ ರೂಮ್ ಪರ್ಲ್ ಕಾಣಿಸಬೇಕೆ... ಅವಳು ಯಾರಂತ ಕೇಳಬೇಡಿ... ಯಾರೋ ಏನೋ... ಕಾಣಿಸಿದಾಗೊಮ್ಮೆ ಮುಗುಳ್ನಕ್ಕು ಗುಡ್ ಮಾರ್ನಿಂಗ್ ಹೇಳೋ ಪಕ್ಕದ ರೂಮ್ ಹುಡುಗಿ, ಮುತ್ತಿನಂತ ಹಲ್ಲು ನೋಡಿ ಪರ್ಲ ಅಂತ ಹೆಸರಿಟ್ಟಿದೀನಿ... ನಾವು ಎಲ್ಲಿದ್ರೆನಂತೆ ನಾವು ನಾವೇ.. Weದೇಶದಲ್ಲಿ ಹೀಗೆ ಮತ್ತೆ ಪಕ್ಕದ ರೂಮ್ ಪರ್ಲ್ ಗೆ ಹಾಯ್ ಹೇಳ್ತಾ ಮತ್ತೆ ಸಿಕ್ತೀನಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/wedesha.pdf

ಸಧ್ಯ ವಿದೇಶದಲ್ಲಿರುವುದರಿಂದ,ಸಾಕಷ್ಟು ಸಮಯ ಸಿಗದೇ ಬಹಳ ದಿನಗಳಿಂದ ಬರೆಯಲಾಗಿರಲಿಲ್ಲ ಅದಕ್ಕೆ ಕ್ಷಮಿಸಿ, ಪ್ರತಿಕ್ರಿಯೆಗಳಿಗೂ ಉತ್ತರಿಸದೇ ತಿಂಗಳಾಗಿದೆ... ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ... ಓದುತ್ತಿರಿ.. PDF ಪ್ರತಿ ಕೂಡ ಸಧ್ಯ ಮಾಡಲಾಗಿಲ್ಲ, ಅಲ್ಲಿಯವರೆಗೆ ಬ್ಲಾಗಿನಲ್ಲೇ ಲೇಖನ ಓದಿ...

ಹಸಿರು ಕಾನನದೂರಿನಿಂದ...
ನಿಮ್ಮ ಪ್ರಭು..
Updated Aug/8/2010

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

21 comments:

ಮನಸು said...

ಬೆಳ್ಳಿಗ್ಗೆಯಷ್ಟೆ ಯೋಚಿಸುತ್ತಿದೆ ಏಕೋ..!!? ಪ್ರಭು ಬ್ಲಾಗ್ ನಲ್ಲಿ ಲೇಖನವೇ ಬರಲಿಲ್ಲವೆಂದುಕೊಂಡೆ, ತಾವು ವಿದೇಶದಲ್ಲಿ ಗಂಡ ಹೆಂಡತಿ ಸುತ್ತಾಡುತ್ತಲಿದ್ದೀರಾ.... ಹಹಹ ಒಳ್ಳೆಯದಾಗಲಿ ಚೆನ್ನಾಗಿ ಹೊರದೇಶ ನೋಡಿ ಬನ್ನಿ...ನಿಮಗೆ ಶುಭವಾಗಲಿ.
ಲೇಖನ ಚೆನ್ನಾಗಿದೆ.......

sunaath said...

Weದೇಶದಲ್ಲಿ ಸುಖವಾಗಿ ಸಮಯ ಕಳೆಯಲಿ. ಅಲ್ಲಿಯ ಬೆಡಗಿನ ಹೂವುಗಳನ್ನು ಕಂಡು ‘ಮೈಸೂರು ಮಲ್ಲಿಗೆ’ಯನ್ನು ಮರೆಯದಿರಿ!
Good luck!

Subrahmanya said...

hmmm...ವಿದೇಶ ಸೊಗಸಾಗಿ ಕಾಣಲೆಂದು ಹಾರೈಸುತ್ತೇನೆ. All the best

Raghu said...

ಲೇಖನ ಮಸ್ತ್ ಮಸ್ತ್ ಆಗಿದೆ ಪ್ರಭುಗಳೇ..
ಒಳ್ಳೆದಾಗಲಿ ಹೋದ ಕೆಲಸದ ಮುಗಿಸಿ.. ಎಂಜಾಯ್ ಮಾಡಿ..
ನಿಮ್ಮವ,
ರಾಘು.

ಸಾಗರದಾಚೆಯ ಇಂಚರ said...

ತುಂಬಾ ದಿನ್ದದಿಂದ ನಿಮ್ಮ ಬರಹ ಇಲ್ದೆ ವಿಚಾರಿಸುವ ಹಾಗೆ ಆಗಿತ್ತು
ಈಗ ಅರ್ಥ ಆಯಿತು ಏನು ಕಥೆ ಅಂತ
ಒಳ್ಳೆಯ ಬರಹ

ದಿನಕರ ಮೊಗೇರ said...

prabhu sir,
nimma barahagaLannu tumbaa miss maadikondidde..... dhanyavaada oLLeya barahakke...... enjoy the work and WEdesha

Greeshma said...
This comment has been removed by the author.
Greeshma said...

chenaagide lekhana.
enjoy! b
arovaaga allinda en en tarbeku anta nimmaake doDD listE kottilva?

Prabhuraj Moogi said...

@ಮನಸು
ಹ್ಮ್ ನಿಜ ಈಗಂತೂ ವಾರಕ್ಕೊಮ್ಮೆ ಬರೆಯುವುದು ಸಾಧ್ಯವಾಗುತ್ತಿಲ್ಲ, ಅಪರೂಪಕ್ಕೊಮ್ಮೆ ಆಗೊಮ್ಮೆ ಈಗೊಮ್ಮೆ ಬರೆದರೇ ಹೆಚ್ಚು... ನನ್ನಾಕೆ ಇಲ್ಲ.. ನಾನೊಬ್ಬನೇ ಸುತ್ತುತ್ತಿದ್ದೇನೆ...

@sunaath
ಅಯ್ಯೋ ಹಾಗೆಲ್ಲ ಮರೆಯಲಾದೀತೇ... ನಮ್ಮ ಸ್ಯಾಂಡಲ್ ವುಡ್ ಸುಂದರಿಯರ ರೂಪವೇ ಬೇರೆ... ಹಾಲಿವುಡ್ ಸುಂದರಿಯರು ಹಾಲುಬಣ್ಣದ ಹೆಂಗಳೆಯರು... ದಂತದ ಬೊಂಬೆಯಂತೆ...
ಈಗ ಶ್ರೀಗಂಧದ ಬೆಂಬೆ ಬೇಕಾ ದಂತದ ಬೊಂಬೆ ಬೇಕಾ ಅಂದ್ರೆ ಹೇಗೆ ಹೇಳಲಾದೀತು? ಒಂದೊಂದು ಒಂದು ರೀತಿ ಸುಂದರ...

@Subrahmanya
ಥ್ಯಾಂಕ್ಯೂ

@Raghu
ಥ್ಯಾಂಕ್ಯೂ ಸರ್ ಎಂಜಾಯ್ ಮಾಡಿದೆ... ಒಂದು ಹೊಸ ಅನುಭವ...

@ಸಾಗರದಾಚೆಯ ಇಂಚರ
ಹೌದೌದು ಕೆಲವರು ಮೇಲ್ ಮಾಡಿ ಎಲ್ಲಿ ಕಳೆದು ಹೋಗಿದೀಯಪ್ಪ ಅಂತ ಕೇಳಿದ್ರು ಕೂಡ... ನಾನೇ ಲೇಖನದೊಂದಿಗೆ ಸರ್ಪ್ರೈಜ್ ಮಾಡೋಣ್ ಅಂತ ಸುಮ್ಮನಿದ್ದೆ... ಕೊನೆಗೆ ಈಗ ಬರೆಯಲಾಯ್ತು..

@ದಿನಕರ ಮೊಗೇರ..
ಇಲ್ಲ ಸರ್ ಈ ಕೆಲಸದ ನಡುವೆ ಬರೆಯಲೇ ಆಗುತ್ತಿಲ್ಲ... ಓದುತ್ತಿರಿ ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ....

@Greeshma
ಅವಳು ದೊಡ್ಡ ಲಿಸ್ಟ್ ಕೊಟ್ಲು ನಾನ್ ಈ ಲಿಸ್ಟಲ್ಲಿರೋ ಎಲ್ಲ ಐಟೆಮ್ ತಂದರೆ ಒಂದು ವಿದೇಶಿ ಸವತಿ ಫ್ರೀ ಸಿಕ್ತಾಳೆ ನೋಡು ಅಂದೆ... buy for wife and get one more wife free!!! ಅಂತಾ ಅದಕ್ಕೆ ಏನೂ ಬೇಡ ನೀವು ಹೀಗೆ ಹೋಗಿ ಹಾಗೆ ಬನ್ನಿ ಅಂದ್ಲು :)

SSK said...

ಪ್ರಭು ಅವರೇ,
ವಿದೇಶ ಪ್ರಯಾಣ, ವಿಮಾನದಲ್ಲಿ ಮೊದಲ ಸಲ ಪ್ರಯಾಣಿಸುವ ಅನುಭವ ನಿಜಕ್ಕೂ ವಿನೂತನ!!
ವಿಮಾನ ಪ್ರಯಾಣದಲ್ಲಿ ಆಗುವ ತೊಂದರೆಗಳ ಬಗ್ಗೆ ಸರಿಯಾಗಿ ವಿವರಿಸಿದ್ದೀರ.
ನನಗೂ (ಬಹುಶ ಪ್ರತಿಯೊಬ್ಬರಿಗೂ) ಈ ರೀತಿ ಅನುಭವವಾಗಿತ್ತು!
ಮತ್ತೆಂದೂ ವಿಮಾನ ಪ್ರಯಾಣವೇ ಬೇಡ ಅನ್ನಿಸಿಬಿಟ್ಟಿತ್ತು !
ಆದರೆ ವಾಪಸ್ ಬರಬೇಕಾಗಿರುವುದು ವಿಮಾನದಲ್ಲೇ ಅಲ್ಲವೇ?! ಹ್ಹ ..ಹ್ಹ ..ಹಾ !

ಅಂದಹಾಗೆ ಪಾಪ ನಿಮ್ಮಾಕೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರೇ, ಎರಡನೇ ಹನಿಮೂನ್ ಆಚರಿಸಿಕೊಳ್ಳಬಹುದಿತ್ತಲ್ಲ ::)) (ತಮಾಷೆಗೆ!) ಆಕೆ ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅಲ್ಲವೇ?

shaamala said...

<>
ಹಹ್ಹಾಹಾ , ಚೆನ್ನಾಗಿದೆ.

ಸಣ್ಣ ಫ್ರನ್ಸಿಸ್ಕೋನಲ್ಲಿ ಬಿದ್ರಿ, ದೊಡ್ಡ ಫ್ರಾನ್ಸಿಸ್ಕೋನಲ್ಲಿ ಎದ್ಬಿಡಿ :)

ಬಾಲು said...

ಲೇಖನ ತುಂಬಾ ಚೆನ್ನಾಗಿದೆ. We ದೇಶದಲ್ಲಿ ಸುಖವಾಗಿ ಸಮಯ ಕಲೆಯಿರಿ, ಒಳ್ಳೆ ಟೊಮ್ಯಾಟೋ ಗಳನ್ನೂ ನೋಡದೆ ಸುಕ್ಷ್ಮೆಮವಾಗಿ ಮರಳಿ ಬನ್ನಿರೆಂದು ಹಾರೈಸುವೆ.

ವನಿತಾ / Vanitha said...

ಹ್ಹ ಹ್ಹ ..ಚೆನ್ನಾಗಿದೆ..
ಆಕೆ ಪಕ್ಕದಲ್ಲಿಲ್ಲ; ವೇಗಸ್ ಅಲ್ಲೇ ಪಕ್ಕ.ಹೋಗಿ ಎಂಜಾಯ್ ಮಾಡಿ ಬನ್ನಿ:)

Prabhuraj Moogi said...

@SSK
ಹೌದೌದು ಮೊದಲ ಸಲ ಬಹಳ ಚೆನ್ನಾಗಿರುತ್ತೆ...
ಸೂಪರ್ ಅನುಭವ ಅಂದ್ರೆ, ನನಗೆ ಹಾಂಗ್ ಕಾಂಗ್ ನಲ್ಲಿ ಟ್ರಾನ್ಸಿಟ್ ಇತ್ತು... ಇದೇ ಮೊದಲ ಪ್ರಯಾಣ, ಟರಮಿನಲ್ 4ರಲ್ಲಿ ಫ್ಲೈಟ್ ಅಂತ ಬೋರ್ಡ ನೋಡಿ ಡೈರೆಕ್ಷನ್ ಎಲ್ಲಿದೆ ಆಕಡೆ ಹೊರಟವನು, ಸುಮ್ನೇ ರಿಸ್ಕ್ ಯಾಕೆ ಅಂತ ಅಲ್ಲಿದ್ದವನೊಬ್ಬನ್ನ ಅದು ಎಲ್ಲಿ ಅಂತ್ ಕೇಳಿದೆ ಅವನೆಲ್ಲೊ ಕ್ಯೂ ತೋರಿಸಿದ, ಅಲ್ಲಿ ನಮ್ಮ ಪ್ಲೇನನಲ್ಲಿದ್ದವರು ಕೆಲವರಿದ್ದರು... ಅದೇ ಮುಂದಿನ ಫ್ಲೈಟಗೆ ಹೋಗಲು ಕ್ಯೂ ಅಂತ ಅಲ್ಲೇ ನಿಂತೆ, ಎಲ್ರೂ ಹಾಂಗ ಕಾಂಗ್ ಇಮಿಗ್ರೇಶನ್ ಫಾರ್ಮ ತುಂಬ್ತಾ ಇದ್ರು, ತುಂಬಬೇಕೇನೊ ಅಂತ ನಾನು ತುಂಬಿ ಆಪೀಸರ್ ಹತ್ರ ಹೋದೆ... ಹಾಂಗ್ ಕಾಂಗನಲ್ಲಿ ಎಲ್ಲಿರ್ತೀಯಾ ಅಂತ್ ಕೇಳಿದ... ಇಲ್ಲ ನಾನು ಸ್ಯಾನ್ ಫ್ರಾನ್ಸಿಸ್ಕೊ ಹೊರಟೀದೀನಿ ಅಂದೆ... ದಂಗಾಗಿ ಹೋದ!!! ತಲೆಯಿಂದ ಅಡಿವರೆಗೂ ನೋಡಿ, ಟಿಕೇಟ್ಟು ಬೋರ್ಡಿಂಗ್ ಪಾಸ್ ಕೇಳಿ.. ಅಪ್ಪಾ ದೊರೆ ಇದು ಹಾಂಗ ಕಾಂಗ್ ಹೋಗಲು ದಾರಿ ನಿನ್ನ ಫ್ಲೈಟ್ ಅಲ್ಲಿ ಬರತ್ತೆ ಅಂತ ದಾರಿ ತೋರಿಸಿದ :) ಹಲ್ಲು ಕಿರಿದು ಬೆಪ್ಪು ತಕ್ಕಡಿಯಂತೆ ಹೊರಟೆ...
ಸುಮ್ನಿರಿ... ಅವಳನ್ನ ಕರೆದುಕೊಂಡು ಹೋಗಿದ್ರೆ ಅಲ್ಲಿನ ಹಾಲಿವುಡ್ ಹುಡುಗಿಯರ ನೋಡಲು ಬಿಡ್ತಾ ಇದ್ಳಾ...

@banavathi
ಸಣ್ಣ ಫ್ರಾನ್ಸಿಸ್ಕೋನಲ್ಲಿ ಬಿದ್ದು ದೊಡ್ಡ ಬಳ್ಳಾಪುರ ಹತ್ರ ಎದ್ದದ್ದಾಯ್ತು... :)
ಥ್ಯಾಂಕ್ಯೂ

@ಬಾಲು
ಟೊಮ್ಯಾಟೊ ಹಣ್ಣಿನಂತೇ ಕೆಂಪು ಕೆನ್ನೆಯ ಕನ್ಯೆಯರಿಲ್ಲಿ... ನೋಡದೇ ಹೇಗೆ ಇರೊಕಾಗುತ್ತೆ ನೀವೇ ಹೇಳಿ...
ಮೆಕ್ಸಿಕನ್ನ್ರಂತೂ ನೋಡಲು ಥೇಟ್ ಬಿಳಿ ಭಾರತೀಯರಂತೆ ಕಾಣ್ತಾರೆ...

@ವನಿತಾ / Vanitha
ಆಕೆ ಪಕ್ಕದಲ್ಲಿಲ್ಲ... ಪಕ್ಕದ ರೂಮ್ ಪರ್ಲ್ ಅಂತೂ ಇದಾಳೆ ಬಿಡಿ...
ಅಯ್ಯೊ ಲಾಸ್ ವೇಗಸ್(Las Vegas) ಹೋದ್ರೆ ಲೊಸ್ ವೇಗಸ್(Loss Vegas) ಆಗತ್ತೆ ಬಿಡ್ರೀ... (ಲಾಸ್ ವೇಗಸ್ ಹಣದ ಜೂಜಿನ ಕಸಿನೊಗಳಿಗೆ ಜನಪ್ರಿಯ ಅಲ್ವಾ ಅದಕ್ಕೆ..)

shivu.k said...

ಪ್ರಭು,

ಕೆಲಸದ ಒತ್ತಡದಿಂದಾಗಿ ತಡವಾಗಿ ಬರುತ್ತಿದ್ದೇನೆ. ನಿಮ್ಮ ಬರಹವೇಕೆ ಇರಲಿಲ್ಲವೆಂದುಕೊಂಡೆ ಕಾರಣ ಗೊತ್ತಾಯಿತು. ವಿದೇಶ ಸುಂದರವಾಗಿರಲಿ. ಒಳ್ಳೆಯದಾಗಲಿ.

Green India said...

Nimma videsh pravas sukhakarvagirli... haaage samaya sikkag dayavittu bareeta iri...:)

ವಾಣಿಶ್ರೀ ಭಟ್ said...

ನಿಮ್ಮ ವಿದೇಶ ಪ್ರವಾಸ ಕಥನ ತುಂಬಾ ಸುಂದರ ವಾಗಿದೆ..

Prabhuraj Moogi said...

@shivu.k ನನ್ನದೂ ಕೂಡ ಅದೇ ತೊಂದರೆ, ಕೆಲಸ ಅಂತ ಅಲ್ಲಿ ಇಲ್ಲಿ ಸುತ್ತುವುದೇ ಆಗಿ ಬರೆಯುತ್ತಿಲ್ಲ, ಸಾಧ್ಯವಾದಾಗಲೆಲ್ಲ ಬರೆಯುತ್ತೇನೆ ಓದುತ್ತಿರಿ...

@Green India
ಥ್ಯಾಂಕ್ಯೂ ಸರ್, ಸಾಧ್ಯವಾದಾಗಲೆಲ್ಲ ಬರೆಯುತ್ತೇನೆ ಓದುತ್ತಿರಿ...

@ವಾಣಿಶ್ರೀ ಭಟ್
ಹ್ಮ್, ಇನ್ನೂ ಬರೆಯಲಿಕ್ಕೆ ಬಹಳ ಇದೆ... ಒಟ್ಟಿನಲ್ಲಿ ವಿದೇಶಯಾನ ಸೂಪರ್...

Anonymous said...

really nice.. i m reading ur blog after a long time.. still felt the same theme feeling as i read a year back.. nice.. keep it up..
by the way r u still in SFO.. ?

ನಾಗರಾಜ್ .ಕೆ (NRK) said...

mastaagide :-)

Prabhuraj Moogi said...

@Raghavendra
Thank you for reading it always... Its like same tea, different flavors ;) I came back long ago... Keep reading...

@"ನಾಗರಾಜ್ .ಕೆ" (NRK)
ಥ್ಯಾಂಕ್ಯೂ...