ಮಲಗಿದ್ದೆ, ಇನ್ನೂ ಹತ್ತು ಘಂಟೆಯಾಗಿದ್ದರೂ... ಅವಳೂ ಎದ್ದೇಳಿಸುವ ಗೋಜಿಗೆ ಹೋಗಿರಲಿಲ್ಲ, ರಾತ್ರಿ ಎಲ್ಲ ಜಾಗರಣೆ ಮಾಡಿ ಈಗ ಸ್ವಲ್ಪ ಕಣ್ಣು ಮುಚ್ಚಿದೆ ಬಿಡು ಅಂತ, ಆದ್ರೆ ನಾನಾಗಲೇ ಕಣ್ಣು ಬಿಟ್ಟದ್ದು. ಅಲ್ಲೇ ಪಕ್ಕದಲ್ಲೇ ಕೂತಿದ್ದಳು ನನ್ನನ್ನೇ ನೋಡುತ್ತ, ಮತ್ತೆ... ಅದೇ ತಿಂಗಳುಗಟ್ಟಲೇ ಬಿಟ್ಟು ಇದ್ದವಳಲ್ಲ, ವಾರ ದೂರವಿದ್ದರೇ ಜಾಸ್ತಿ, ಅದಕ್ಕೇ ಏನೊ ಎಂದೂ ಕಾಣದ ಹಾಗೆ ನನ್ನನ್ನೇ ಎವೆಯಿಕ್ಕದೇ ನೋಡುತ್ತ ಕೂತಿದ್ದಳೇನೊ. "ಯಾಕೆ ನಿದ್ರೆ ಬರಲಿಲ್ವಾ? ಹಾಗೇ ಕಣ್ಣು ಮುಚ್ಚಿ ಪ್ರಯತ್ನಿಸಿ, ಬರತ್ತೆ" ಅಂತಂದ್ಲು, ಮತ್ತೆ ಹಾಗೇ ನೋಡುತ್ತ ಕೂತಳು. ನಾನೂ ಕಣ್ಣು ಮತ್ತೆ ಮುಚ್ಚಿದವ, ಒಂದೇ ಒಂದು ಅರೆಗಣ್ಣು ತೆರೆದು ನೋಡಿದೆ, ಅರೇ ಇನ್ನೂ ನನ್ನೇ ನೋಡುತ್ತಿದ್ದಾಳೆ. ಹೀಗೆ ನೋಡುತ್ತಿದ್ದರೆ ನಾನು ನಿದ್ರೆ ಮಾಡುವುದಾದರೂ ಹೇಗೆ? ಏನು ಅಂತನ್ನುವ ಹಾಗೆ ಹುಬ್ಬು ಕುಣಿಸಿದೆ. ಹುಬ್ಬು ಗಂಟಿಕ್ಕಿ ಏನಿಲ್ಲ ಅಂತನ್ನುವ ಹಾಗೆ ತಲೆ ಅಲ್ಲಾಡಿಸಿದಳು. ಜೆಟ್ ಲ್ಯಾಗ್ ಅಂತ ನಿದ್ರೆಯೆಲ್ಲ ಎಡವಟ್ಟಾಗಿತ್ತು. ಎದ್ದು ಕೂತೆ. ಅಬ್ಬ ಮೊಟ್ಟ ಮೊದಲಿಗೆ ಬಾರಿಗೆ ಇರಬೇಕು ನನ್ನಾಕೆ ಮಲಗಿ ಅಂತ ಬಯ್ದಿದ್ದು.. "ಮಲಗಿ ಇನ್ನೂ ಕಣ್ಣು ಕೆಂಪಗಿದೆ, ರಾತ್ರಿಯೆಲ್ಲ ಮಲಗಿಲ್ಲ, ಯುಎಸ್ನಲ್ಲಿ ಈಗ ರಾತ್ರಿಯೇ". ಅವಳು ಹೇಳುವ ಸಬೂಬೂ ಕೇಳಿ ನಗು ಬಂತು. ಕೈಯಗಲಿಸಿ ಬಾ ಅಂತ ಕರೆದೆ, "ಹೊತ್ತು ಗೊತ್ತು ಏನೂ ಇಲ್ಲಾಪ್ಪಾ ನಿಮಗೆ" ಅಂತ ಎದ್ದು ಹೊರಟವಳ ತಡೆದು "ಯುಎಸ್ ಬಗ್ಗೆ ಹೇಳ್ತೀನೀ ಕೇಳಲ್ವಾ..." ಅಂದೆ. ಯುಎಸ್ ಅಂದ್ರೆ ಅವಳಿಗೇನೊ ಕುತೂಹಲ ಇಲ್ಲವೆನ್ನಲ್ಲ ಅಂತ ಗೊತ್ತಿತ್ತು. ಪಕ್ಕ ಒರಗಿದವಳು ಎದೆಗೆರಡು ಮೆಲ್ಲಗೆ ಗುದ್ದಿ, ಕೈ ಊರಿ ಕೆನ್ನೆಗೆ ಕೈಯಾನಿಸಿ "ಹೇಳ್ರಿ ಯುಎಸ್ ಬಗ್ಗೆ, ಯುಎಸ್ ಆಂಡ್ ಅಸ್, ಹೌ ಡು ಯು ಫೀಲ್!" ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು.
ಏನಂತ ಹೇಳಲಿ, ನನ್ನೊಳಗೇ ನನಗೇ ಗೊಂದಲ. ಹೇಳ್ತೀನಿ ಅಂದದ್ದೇನೊ ಸರಿ, ಹೀಗೆ ಒಮ್ಮೆಲೆ ಹೋಲಿಕೆ ಮಾಡು ಅಂದ್ರೆ ಏನಂತ ಶುರು ಮಾಡುವುದು. ಮಾತಿನಲ್ಲೇ ಮರಳು ಮಾಡಲು, "ಲೇ, ಏನು ವಿದೇಶಕ್ಕೆ ಹೋಗಿ ಬಂದ್ರೆ ಇಂಗ್ಲೀಷಲ್ಲೇ ಪ್ರಶ್ನೇನಾ!" ಅಂತ ಮಾತು ತಿರುವಿದೆ. "ಏನೊಪ್ಪಾ, ಇಲ್ಲೇ ಕಾನ್ವೆಂಟ್ ಶಾಲೆಗೆ ಮಕ್ಳು ಸೇರಿಸಿದ್ರೆ ಸಾಕು ಮನೇಲಿ ಇಂಗ್ಲೀಷೇ ಮಾತಾಡ್ತಾರೆ, ನೀವೂನೂ ವಿದೇಶ ಸುತ್ತಿ ಬಂದೀದೀರಾ, ನಿಮ್ಮ ಹೆಂಡ್ತಿ ಅಂತ ಸ್ವಲ್ಪ್ ಸ್ಟೈಲ್ ಮಾಡ್ದೆ ಅಷ್ಟೇ" ಅಂತ ಕಣ್ಣು ಹೊಡೆದಳು. ಅವಳು ಹಾಗೇನೇ ಎಲ್ಲಕ್ಕೂ ಉತ್ತರ ಸಿದ್ಧವಿಟ್ಟುಕೊಂಡೆ ಮಾತಿಗಿಳಿಯುವುದು. "ಅಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲ ಏನ್ ಚೆನ್ನಾಗಿ ಇಂಗ್ಲೀಷ್ ಮಾತಾಡ್ತವೆ ಅಂತೆ" ಕೇಳಿದಳು. "ಇದೊಳ್ಳೆ ಪ್ರಶ್ನೇ ಕಣೇ, ನಮ್ಮೂರಲ್ಲಿ ಚಿಕ್ಕ ಮಕ್ಳು ಕನ್ನಡ ಚೆನ್ನಾಗೇ ಮಾತಾಡಲ್ವಾ, ಅದು ಅವಕ್ಕೆ ಮಾತೃಭಾಷೆ ಮಾತಾಡದೇ ಇನ್ನೇನು, ನಮಗೆ ಇಂಗ್ಲೀಷ್ ಬರಲ್ಲ ಅಂತ ನಾವು ಬೆರಗಾಗಿ ನೋಡ್ತೀವಿ ಅಷ್ಟೇ" ಅಂದ್ರೆ. "ಹೌದಲ್ವಾ! ವಿದೇಶದಲ್ಲೇ ಇರೊ ದೊಡ್ಡಮ್ಮನ ಮಗ, ನಮ್ಮ ಅಣ್ಣ ಏನ್ ಅದೇ ದೊಡ್ಡ ವಿಷ್ಯ ಅಂತನ್ನೊ ಹಾಗೆ ಹೇಳ್ತಿದ್ದ" ಅಂತಂದು. "ಹೂಂ ಮತ್ತೆ ಯು ಎಸ್ ಬಗ್ಗೆ ಹೇಳ್ತೀನಿ ಅಂದ್ರಲ್ಲ ಹೇಳಿ" ಅಂತ ಮತ್ತದೇ ಟ್ರ್ಯಾಕಿಗೆ ಬಂದಳು. "ಯು.ಎಸ್. ಅಂದ್ರೆ ಯುನೈಟೆಡ್ ಸ್ಟೇಟ್ಸ ಅಂತ ಅಷ್ಟೇ... ಸಿಂಪಲ್!" ಅಂದೆ ಈ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ. "ಇಲ್ಲ ಮತ್ತೆ, ನಾನೇನು ಯು.ಎಸ್. ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್.. ಅಂತದ್ನಾ" ಅಂತ ಕಣ್ಣು ಕೆಂಪಾಗಿಸಿದಳು. ಉಪ್ಪಿಟ್ಟು ಅಂತಿದ್ದಂಗೇ ಬಾಯಲ್ಲಿ ನೀರೂರಿತು. "ಉಪ್ಪಿಟ್ಟು ಮಾಡಿ ಕೊಡ್ತೀಯಾ?" ಅಂತ ಆಸೆಗಣ್ಣಿಂದ ಕೇಳಿದೆ, ಅವಳಿಗೂ ಅರ್ಥವಾಗಿರಬೇಕು "ಹಸಿವಾ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ!!!" ಅಂತ ಅನುಕಂಪದಿಂದ ನೋಡಿ, ಪಾಕಶಾಲೆಗೆ ನಡೆದಳು, ಬಸುರಿ ಬಯಕೆಗೆ ಬೇಡ ಅನಬೇಡ ಅಂತಾರಲ್ಲ ಹಾಗೇ ಈ ಬೇರೆ ದೇಶದಿಂದ ಬರಗೆಟ್ಟು ಬಂದ ನನ್ನ ಬಯಕೆಗೂ ಬೇಡವೆನ್ನಬಾರದಂತಲೋ ಏನೊ.
ಹಲ್ಲುಜ್ಜಿ, ಮುಖ ತೊಳೆದು ಪಾಕಶಾಲೆಗೆ ಬಂದ್ರೆ, "ಅಮೇರಿಕದಲ್ಲೇನು ತಿನ್ನೊಕೆ ಸಿಗಲಿಲ್ವಾ, ಏನು ಹೀಗೆ ಸೊರಗಿ ಸಣಕಲಾಗಿದೀರಿ" ಅಂತ ಮತ್ತೆ ಪ್ರಶ್ನೆ ಮಾಲಿಕೆ ಶುರುವಾಯ್ತು. "ಅಯ್ಯೊ ಅಲ್ಲಿ ಸಸ್ಯಾಹಾರಿಗಳು ಹುಲ್ಲು ಹುಳು ತಿಂದೇ ಬದುಕಬೇಕು ಅಷ್ಟೇ" ಅಂದ್ರೆ. "ಹುಲ್ಲು ಹುಳು?" ಹಣೆಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿತು, "ಅದೇ ಕಣೇ, ಹಸಿರು ಸೊಪ್ಪು, ತರಕಾರಿನೇ ಹುಲ್ಲು, ಮ್ಯಾಗಿ ನೂಡಲ್ಸು ಅನ್ನೊ ಹುಳುಗಳು" ಅಂದ್ರೆ. "ನೀವೊ ನಿಮ್ಮ ಹೋಲಿಕೆಗಳೊ" ಅಂತ ತಲೆ ಚಚ್ಚಿಕೊಂಡಳು. "ನಿಜವಾಗ್ಲೂ ಅಲ್ಲಿ ನನಗೆ ತಿನ್ನೊಕಾಗಿದ್ದು ಅದೇ, ವೆಜಿಟೇರಿಯನ್ ಅಂದ್ರೆ.. ಎರಡು ಬ್ರೆಡ್ ನಡುವೆ ಹಸಿರು ಸೊಪ್ಪು ಕತ್ತರಿಸಿ ಇಡೋರು" ಅಂದ್ರೆ ನಗುತ್ತ ವಗ್ಗರಣೆ ಘಾಟು ಏರಿಸಿದಳು, ವಾಸನೆಗೆ ಮತ್ತೆ ಬಾಯಲ್ಲಿ ನೀರು ಒತ್ತರಿಸಿ ಬಂತು. "ಹಾಂ ಅಲ್ಲಿ ಮೆಕ್ಸಿಕನ್ ಅಡಿಗೆ ಸ್ವಲ್ಪ ನಮ್ಮ ಹಾಗೆ ಇರತ್ತೆ, ಬರಿಟೊ, ಟೊರ್ಟಿಲಾಸ್ ಅಂತ ನಮ್ಮ ಚಪಾತಿ ಹಾಗೆ ಏನೊ ತಿನ್ನೋಕೆ ಸಿಗತ್ತೆ" ಅಂದೆ. ಹಾಗೇ ನನ್ನ ಅಡುಗೆ ಆವಾಂತರಗಳನ್ನು ಮಾತಾಡುತ್ತ ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿಯಾಯ್ತು. ಅನ್ನ ಮಾಡಲು ಕುಕ್ಕರ್ ತುಂಬ ನೀರಿಟ್ಟು ಸ್ಟವ್ ಮೇಲೆಲ್ಲ ಉಕ್ಕಿಸಿದ್ದು, ಆಮ್ಲೇಟ್ ಮಾಡಲು ಹೋಗಿ ಎಗ್ ಬುರ್ಜಿಯಾಗಿದ್ದು, ಕೆಲವೊಮ್ಮೆ ಹೊತ್ತಿ ಕಲ್ಲಿದ್ದಲಾಗಿದ್ದು ಕೇಳುತ್ತ ಚಹ ಹೀರುತ್ತ ನಕ್ಕಿದ್ದಾಯ್ತು.
"ಊಟದ್ದೆಲ್ಲ ಕೇಳಿಯಾಯಾಯ್ತು, ಓಡಾಟದ ಕಥೆ ಏನು?" ಅಂತ ವಿಷಯ ಪಲ್ಲಟ ಮಾಡಿದಳು. "ಅಲ್ಲಿ ಎಲ್ಲ ಕಾರ್ ಜಾಸ್ತಿ ಕಣೇ, ಬೈಕಲ್ಲಿ ಯಾರೂ ಕಾಣಲ್ಲ, ಇನ್ನೂ ಸೈಕಲ್ ಉಪಯೋಗಿಸ್ತಾರೆ" ಅಂದೆ. "ಕಾರ್ ಇಲ್ಲದವರ ಗತಿ?" ಅಂದ್ರೆ ನಿನ್ನ ಗತಿ ಏನು ಅಂತಲೇ ಪ್ರಶ್ನೆ. "ಪುಕ್ಕಟೆ ಪಬ್ಲಿಕ್ ಬಸ್ ಇತ್ತು, ಅಲ್ಲಿ ಒಬ್ಳು ಮೆಕ್ಸಿಕನ್ ಹುಡುಗಿ ದಿನಾ ನನ್ನ ಜತೆ ಬರ್ತಾ ಇದ್ಲು" ಅಂತ ಹಲ್ಲು ಕಿರಿದೆ. "ನಾನ್ ಬಸ್ ಬಗ್ಗೆ ಕೇಳಿದ್ದು, ಬಸ್ಸಲ್ಲಿನ ಹುಡುಗಿ ಬಗ್ಗೆ ಅಲ್ಲ" ಅಂತ ಮುನಿಸಿಕೊಂಡ್ಲು. "ಏನೊಪ್ಪಾ ಮೆಕ್ಸಿಕನ್ ಜನ ಥೇಟ್ ನೋಡಲು ನಮ್ಮಂಗೇ ಇರ್ತಾರೆ ಅದಕ್ಕೆ ಹೇಳಿದೆ" ಅಂದ್ರೆ "ಹ್ಮ್, ನಮ್ಮಂಗೇ ಇರ್ತಾರೆ ಹಾಗೆ ಪ್ರೆಂಡಶಿಪ್ ಮಾಡ್ಕೊಂಡು ಅವಳ್ನೇ ಮದುವೆ ಆಗಿ ಅಲ್ಲೇ ಸೆಟಲ್ ಆಗಬೇಕಿತ್ತು, ಮನೇಲಿ ಬರಿಟೊ, ಟೊರ್ಟಿಲಾಸ್ ಅನ್ನೊ ಚಪಾತಿ ಮಾಡಿ ಹಾಕ್ತಾ ಇದ್ಲು" ಅಂತ ಸಿಡುಕಿದಳು. ಹೀಗೆ ಬಿಟ್ಟರೆ ಮಧ್ಯಾಹ್ನದ ಚಪಾತಿಗೆ ಕುತ್ತು ಬರುತ್ತೆ ಅನಿಸಿ ಮತ್ತೆ ಮಾತು ತಿರುವಿದೆ. "ಎಲೆಕ್ಟ್ರಿಕ್ ಬಸ್ಸು, ಮಾಜಿ ಕಾಲದ ಟ್ರೇನುಗಳು ಒಡಾಡ್ತವೆ ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಗೊತ್ತಾ". "ಹೌದಾ ಮತ್ತೆ, ಹ್ಮ್ ಪುಕ್ಕಟೆ ಬಸ್ ಯಾಕೆ?" ಅಂತ ಕೇಳಿದ್ಲು. "ಅಲ್ಲಿ ಅದೊಂದು ಹಾಗೆ ಜನರಿಗೆ ಸರ್ವೀಸ್ ಅಂತ ಮಾಡ್ತಾರೆ" ಅಂದ್ರೆ. "ನಮ್ಮಲ್ಲೂ ಬಿಎಂಟಿಸಿ ಹಾಗೇ ಮಾಡಿದ್ರೆ ಚೆನ್ನಾಗಿರತ್ತೆ ಅಲ್ವಾ" ಅನ್ನಬೇಕೆ. "ಆಗೊಯ್ತು, ಹಾಗೇನಾದ್ರೂ ಆದ್ರೆ ಅರ್ಧ ಬೆಂಗಳೂರು ಬಸನಲ್ಲೇ ಇರತ್ತೆ, ಕೆಲಸ ಇರ್ಲಿ ಇಲ್ಲದಿರಲಿ ಬಸ್ಸಲ್ಲಿ ಸುತ್ತೋರೆ ಜಾಸ್ತಿ ಆಗ್ತಾರೆ, ಅಲ್ಲಿ ಆ ಪಬ್ಲಿಕ್ ಟ್ರಾನ್ಸಪೋರ್ಟ್ ಉಪಯೋಗಿಸೊ ಜನ ಕಮ್ಮಿ ಅದಕ್ಕೆ ಅಲ್ಲಿ ಅದು ಸರಿಹೋಗತ್ತೆ" ಅಂತ ತಿಳಿ ಹೇಳಬೇಕಾಯ್ತು. "ಅಲ್ಲಿ ಟ್ರಾಫಿಕ್ ಜಾಮ್ ಎಲ್ಲಾ ಆಗಲ್ಲ ಅಂತೆ ಸೂಪರ್ ಅಲ್ವಾ" ಅಂದ್ಲು. "ಯಾರ್ ಹೇಳಿದ್ದು? ಅಲ್ಲೂ ಟ್ರಾಫಿಕ್ ಜಾಮ್ ಆಗ್ತವೆ... ಆದ್ರೆ ಜನಕ್ಕೆ ಶಿಸ್ತು ಜಾಸ್ತಿ, ಸಾಲಾಗಿ ನಿಂತು ಸರಿಯಾಗಿ ಹೋಗ್ತಾರೆ, ಅಲ್ಲದೇ ಅಲ್ಲಿ ದೊಡ್ಡ ಊರುಗಳು ಇರೊ ಜನ ಕಮ್ಮಿ ಅದಕ್ಕೆ ಎಲ್ಲಾ ಸರಿಯಾಗಿರತ್ತೆ" ಅಂದೆ. ನಮ್ಮಲ್ಲಿನ ಹಾಗೆ ಇಷ್ಟೇ ಇಷ್ಟು ಊರುಗಳು ಲಕ್ಷಾನುಗಟ್ಟಲೇ ಜನ ಇದ್ದಿದ್ದರೆ ಅಲ್ಲೂ ಪರಿಸ್ಥಿತಿ ಬೇರೆಯೇ ಇರ್ತಿತ್ತೊ ಏನೊ. "ಮತ್ತೆ ಅಲ್ಲಿ ಜನ ಪ್ರಾಮಾಣಿಕವಾಗಿ ನಿಯತ್ತಾಗಿ ಇರ್ತಾರಂತೆ ಅದಕ್ಕೆ ಎಲ್ಲಾ ರೂಲ್ಸ್ ಸರಿಯಾಗಿ ಪಾಲಿಸ್ತಾರೆ ಬಿಡಿ" ಅಂದ್ಲು. "ಎಲ್ರೂ ಅಂತೇನಿಲ್ಲ, ಅಲ್ಲೂ ಸಿಗ್ನಲ್ ಜಂಪ್ ಮಾಡಿ ಟಿಕೆಟ್ ತೆಗೆದುಕೊಳ್ಳೊರು ಇದಾರೆ, ಟಿಕೆಟ್ ಅಂದ್ರೆ ಅಲ್ಲಿ ದಂಡ ಕಟ್ಟೊ ರಸೀತಿ, ರೋಡಲ್ಲಿ ಎಲ್ಲಾ ಕ್ಯಾಮೆರ ಇಟ್ಟು ಕಾಯ್ತಾರೆ ಅಂಥವರನ್ನ. ಆದ್ರೂ ನೀನಂದ ಹಾಗೆ ನಿಯತ್ತಿರೋ, ಶಿಸ್ತು ಇರೊ ಜನರ ಪ್ರಮಾಣ ಜಾಸ್ತಿ ಅದಕ್ಕೆ ಅಲ್ಲಿ ಎಲ್ಲಾ ಚೆನ್ನಾಗಿದೆ ಅನಿಸ್ತದೆ" ಅಂದೆ. "ಹ್ಮ್ ಅದೂ ನಿಜಾನೆ, ನಮ್ಮಲ್ಲೂ ಅಲ್ಲಿ ಇಲ್ಲಿ ಕೆಲವ್ರು ಒಳ್ಳೆವ್ರು ಸಿಕ್ತಾರಲ್ಲ ಹಾಗೆ ಅನ್ನಿ" ಅಂತ ನಿಟ್ಟುಸಿರು ಬಿಟ್ಟಳು. "ರೋಡ್ ಕ್ರಾಸ್ ಮಾಡೋಕೆ ನಾವೇನಾದ್ರೂ ನಿಂತಿದ್ರೆ ಸಾಕು, ಕಾರು ಅಷ್ಟು ದೂರದಲ್ಲಿ ನಿಧಾನ ಮಾಡಿ ಸ್ಟಾಪ್ ಮಾಡ್ತಾರೆ, ಪಾದಚಾರಿಗೆ ಮೊದಲ ಆದ್ಯತೆ ಅಲ್ಲಿ" ಅಂತ ಹೇಳಿದ್ದು ಕೇಳಿ "ಇಲ್ಲಿ ಎಲ್ಲಿ ಯಾರು ಬೇಕಾದ್ರೂ ನುಗ್ತಾರೆ, ನುಗ್ಗಿ ನಡೆ ಮುಂದೆ ಅಂತ ಹೋದವರಿಗೇ ಹೋಗಲಾಗ್ತದೆ ಇಲ್ಲಾಂದ್ರೆ ಅಷ್ಟೇ" ಅಂತಂದ್ಲು. "ಇಲ್ಲಿ ಪಾದಚಾರಿಗಳೇ ಜಾಸ್ತಿ ಕಣೇ, ಅಲ್ಲಿನ ಹಾಗೆ ನಿಲ್ಲಿಸ್ತಾ ಹೋದ್ರೆ, ಇಂದು ಹೊರಟವ ಆಫೀಸಿಗೆ ನಾಳೆ ತಲುಪಿದರೆ ಅದೃಷ್ಟ, ಅಲ್ಲಿ ಮಾಡಿರೋ ರೊಡುಗಳು ಅಷ್ಟು ಚೆನ್ನಾಗಿರ್ತವೆ, ಓಡಾಡೊ ಜನಾನೂ ಕಮ್ಮಿ, ಇಲ್ಲಿ ಹತ್ತು ಗಾಡಿಗಳಿಗೆ ರೋಡು ಮಾಡಿದ್ರೆ ಓಡಾಡೋದು ನೂರು, ಮಾಡಿರೋ ರೋಡು ಒಂದು ಮಳೆಗೆ ಕಿತ್ತು ಬರಬೇಕು. ಕಿತ್ತು ಬರದಿದ್ರೂ, ಚರಂಡಿ, ಕೇಬಲ್ ಹಾಕಲು ಅಂತ ಅಗೆದು ಗುಂಡಿ ಮಾಡಲು ಬೇರೆ ಡಿಪಾರ್ಟಮೆಂಟ್ಗಳಿವೆ. ಅಲ್ಲಿನ ಹಾಗೆ ಇಲ್ಲಿ ಆಗಲ್ಲ, ಇಲ್ಲಿನ ಹಾಗೆ ಅಲ್ಲಿ ಆಗಲ್ಲ" ಅಂದದ್ದು ಕೇಳಿ ಅವಳಿಗೂ ಸರಿಯೆನ್ನಿಸಿತೇನೋ ಸುಮ್ಮನಾದಳು.
"ಮತ್ತಿನ್ನೇನಿದೆ ಯುಎಸ್ನಲ್ಲಿ" ಅಂತಂದವಳಿಗೆ, "ಮತ್ತಿನ್ನೇನು, ಯುಎಸ್ನಲ್ಲಿ ಏನಿಲ್ಲ, ಎಲ್ಲಾ ಇದೆ, ನೀಟಾದ ರಸ್ತೆಗಳು ಕ್ಯೂಟ್ ಆದ ಮಕ್ಕಳು, ಚೂಟಿ ಚೆಲುವೆಯರುಗಳು. ಉದ್ದ ಫ್ಲೈ ಓವರಗಳು, ಎತ್ತರದ ಟಾವರುಗಳು, ಬಹುಮಹಡಿ ಬಿಲ್ಡಿಂಗಗಳು, ಭಾರಿ ಬ್ರಿಡ್ಜಗಳು, ರಭಸದ ರೈಲುಗಳು, ಎಲೆಕ್ಟ್ರಿಕ್ ಏಸಿ ಬಸ್ಸುಗಳು, ಕಾಸ್ಟ್ಲಿ ಕಾರುಗಳು. ಮಾಡೊದೆಲ್ಲ ಮಶೀನುಗಳು, ದುಡ್ಡಂದ್ರೆ ಡಾಲರ್ ಸೆಂಟ್ಗಳು, ಮಾರಾಟಕ್ಕೆ ಮಾಲ್ಗಳು, ಸೆಳೆಯಲು ಸೇಲ್ಗಳು, ತೆರೆದು ಬೀಳಲು ತೀರಗಳು, ಬಾಯಿಗೆ ಬರ್ಗರುಗಳು, ಕುಡಿಯಲು ಕೋಕ್ ಬಿಯರುಗಳು..." ಇನ್ನೂ ಹೇಳುತ್ತಿದ್ದವನನ್ನು ನಡುವೇ ನಿಲ್ಲಿಸಿ "ಪಂಚರಂಗಿ ಫಿಲ್ಮ್ ಏನಾದ್ರೂ ನೋಡಿದೀರಾ?" ಅಂತ ಕೇಳಿದ್ಲು, "ಇಲ್ಲ, ಯಾಕೇ?" ಅಂದ್ರೆ "ಈ 'ಗಳು'ಗಳು ಜಾಸ್ತಿ ಆಯ್ತು, ಅದಕ್ಕೆ" ಅಂದು ಫೋಟೊಗಳನ್ನು ನೋಡುತ್ತ ಕೂತಳು, ಅದೇನು ಇದೇನು ಅಂತ ಕೇಳುತ್ತ.
ಕೆಲವರಿಗೆ ಯುಎಸ್ ಇಷ್ಟ ಆಗಬಹುದು, ಕೆಲವರಿಗೆ ನಮ್ಮ ಭಾರತವೇ ಸರಿಯೆನ್ನಿಸಬಹುದು. ಹೋಲಿಕೆ ಮಾಡಲು ಕೂತರೆ ಭಿನ್ನತೆಗಳಿಗೆ ಬರವೇ ಇಲ್ಲ. ಆ ಆ ದೇಶಕ್ಕೆ ಅದರದೇ ಆದ ಸ್ವಂತಿಕೆಯಿದೆ, ನಮ್ಮ ದೇಶ ಹೆಚ್ಚು ಅದು ಕೀಳು ಅಂತೆಲ್ಲ ಹೇಳಲೇ ಆಗದು. ಹಾವಾಡಿಗರು, ಬಿಕ್ಷುಕರ ದೇಶ ಭಾರತ ಅದನ್ನುವುದ ಕೇಳಿದ್ದ ನನಗೆ... ಶಿಸ್ತು, ಶ್ರೀಮಂತಿಕೆಗೆ ಹೆಸರಾಗಿರುವ ಅಮೇರಿಕದ ಸ್ಯಾನ್ಫ್ರಾನ್ಸಿಸ್ಕೊನಲ್ಲಿ ಸುತ್ತಾಡುವಾಗ ಕಂಡ "ವಾಯ್ ಲೈ, ಆಯ್ ನೀಡ್ ಬೀಯರ್ (ಯಾಕೆ ಸುಳ್ಳು ಹೇಳಲಿ, ನನಗೆ ಬೀಯರ್ ಬೇಕಿದೆ)" ಅಂತ ಬೋರ್ಡ್ ಬರೆದುಕೊಂಡು ಬೇಡುವ ಸೋಫೇಸ್ಟಿಕೇಟೆಡ್ ಭಿಕ್ಷುಕರು, ದಾರಿಯಲ್ಲಿ ನಿಂತು ಏನೊ ವಾದ್ಯ ಊದಿ, ಬಾರಿಸಿ, ನಮ್ಮಲ್ಲಿನ ದೊಂಬರಾಟದ ಹಾಗೆ ಕಸರತ್ತು ಮಾಡುವ "ಸ್ಟ್ರೀಟ್ ಪರಫಾರಮರ್ಸ್" ಎಲ್ಲ ನಮ್ಮಲ್ಲಿಗಿಂತ ಬೇರೆಯೆಂದೇನೆನಿಸಲಿಲ್ಲ. ಅಲ್ಲಿ ಮನೆ ಮಕ್ಕಳು ಏನೂ ಇಲ್ಲ, ಕಲ್ಚರ್ ಇಲ್ಲ ಅನ್ನುವುದ ಕೇಳಿದವನಿಗೆ, ಅವರು ಪಾಲಿಸುವ ಶಿಸ್ತು, ಮಕ್ಕಳಿಗೆ ಕೊಡುವ ಸ್ವಾತಂತ್ರ್ಯ, ಕತ್ತೆಯಂತೆ ಆಫೀಸಿನಲ್ಲಿ ಕೊಳೆಯದೇ ಪರಸನಲ್ ಟೈಮ್ಗೆ ಕೊಡುವ ಪ್ರಾಮುಖ್ಯತೆ ನೋಡಿದಾಗ ನಮಗೇ ಮನೆ ಮಕ್ಳು ಹೆಂಡ್ತಿ ಇಲ್ವೇನೊ, ಕೆಲಸ ಮಾಡುವ ಕಂಪನಿಗೇ ನಮ್ಮನ್ನು ನಾವು ಬರೆದು ಕೊಟ್ಟಿದ್ದೇವೇನೊ ಅನ್ನಿಸದಿರಲಿಲ್ಲ. ಒಂದೊಂದು ಒಂಥರಾ ಒಳ್ಳೆಯದು. ಅಲ್ಲಿನ ಶಿಸ್ತು, ನಿಯತ್ತು, ಸಮಯ ಪ್ರಜ್ಞೆ ಬಹಳ ಇಷ್ಟವಾಗಿದ್ದು, ಹಾಗೇ ನಮ್ಮಲ್ಲಿನ ವಿಭಿನ್ನ ಯೋಚನಾ ಮನೋಭಾವ, ಕುಟುಂಬ ಕಲ್ಪನೆ, ಸಾಮಾಜಿಕ ಜೀವನ, ಸಂಪ್ರದಾಯಗಳು ಬಹಳ ಅಚ್ಚುಮೆಚ್ಚು. ಈ ವಿದೇಶದಿಂದ ಬರುತ್ತಿದ್ದಂತೆ ಕೇಳುವುದು ಹೇಗನ್ನಿಸಿತು ಆ ದೇಶ ಅಂತ... ಇವೆಲ್ಲ ಕೇವಲ ಕೆಲವು ಅನಿಸಿಕೆಗಳಷ್ಟೇ... ಅಭಿಪ್ರಾಯ ಹೇಳಲು ನಾನು ಯುಎಸ್ ಪೂರ್ತಿ ಸುತ್ತಿಲ್ಲ, ಅದು ಬಿಡಿ ಭಾರತವೇ ಬಹುಪಾಲು ಕಂಡಿಲ್ಲ.
ಇಷ್ಟೆಲ್ಲ ಕಂತೆ ಪುರಾಣ ಹರಟುವ ಹೊತ್ತಿಗೆ, ಇಲ್ಲಿ ಮಧ್ಯಾಹ್ನವಾಗಿತ್ತು ಯುಎಸ್ನಲ್ಲಿ ಮಧ್ಯರಾತ್ರಿ... ನಿಧಾನವಾಗಿ ಕಣ್ಣು ಎಳೆಯುತ್ತಿತ್ತು. ಸರಕಾರಿ ಕಛೇರಿಯಲ್ಲಿ ಕುರ್ಚಿಯಲ್ಲೇ ತೂಕಡಿಸಿದಂತೆ, ತೂಗಿ ಅವಳ ಮೇಲೆ ವಾಲಿದೆ. ಭುಜ ತಟ್ಟಿ ಏಳಿಸಿದವಳು, ನಿದ್ರೆನಾ ಅಂತ ಕಣ್ಣಲ್ಲೇ ಕೇಳಿದಳು, ನಾ ಹೇಳಲೂ ಕೂಡ ಆಗದಷ್ಟು ಜೊಂಪಿನಲ್ಲಿದ್ದೆ, ಅವಳೇ ತಲೆದಿಂಬಾಗಿದ್ದು ಎದ್ದಾಗಲೇ ಗೊತ್ತಾಗಿದ್ದು. ಎದ್ದೇಳುತ್ತಿದ್ದಂತೇ ಚಹ, ಬಿಸ್ಕಿಟ್ಟು ಕೂತಲ್ಲೇ ಸರ್ವ್ ಆಯ್ತು. ಚಹ ಹೀರುತ್ತಿದ್ದರೆ ನನ್ನೇ ತಿಂದು ಬಿಡುವಂತೆ ನೋಡುತ್ತ "ರೀ ಕ್ಯೂಟ್ ಆಗಿ ಕಾಣ್ತಾ ಇದೀರಾ" ಅಂತ ಕಾಂಪ್ಲಿಮೆಂಟು ಕೊಟ್ಟು ಮಾದಕ ನಗೆಯಿತ್ತಳು. ನೋಟದಲ್ಲೇ ಹುಡುಗಾಟಿಕೆ ಕಾಣುತ್ತಿತ್ತು, "ಏನೊಪ್ಪಾ ಇತ್ತೀಚೆಗೆ ನಿಮಗೆ ಪಕ್ಕದ ಮನೆ ಪದ್ದು ನೆನಪೇ ಆಗಲ್ಲ? ಪರದೇಶಿ ಪಕ್ಕದ ರೂಮ್ ಪರ್ಲ್ ಸಿಕ್ಳು ಅಂತ ಹೀಗೆಲ್ಲ ಮರೆತುಬಿಡೋದಾ?" ಅಂತ ತಗಾದೆ ತೆಗೆದಳು, ತುಂಟಿ! ಪರದೇಶದಲ್ಲಿ ತನ್ನ ನೆನಪು ಕಾಡಿಲ್ಲವಾ ಅಂತ ಕೇಳಲ್ಲ, ಏನಿದ್ದರೂ ಪಕ್ಕದಮನೆ ಪದ್ದು ನೆಪ ಬೇಕು... "ಪಕ್ಕದಲ್ಲಿ ನನ್ನಾಸೆಗಳ ಪರಮಾವಧಿಯಾದ ನನ್ನಾಕೆಯಿರಬೇಕಾದರೆ, ಪರರ ಧ್ಯಾನ ನನಗೇಕೆ" ಅನ್ನುತ್ತ ಹತ್ತಿರ ಹೋದರೆ, "ರೀ ಇದು ಯುಎಸ್ ಅಲ್ಲ ಪಬ್ಲಿಕ್ನಲ್ಲಿ ಹೀಗೆಲ್ಲ ಮಾಡೋಕೇ, ಬಾಲ್ಕನಿಯಲ್ಲಿ ಇದೀರಾ ಬೆಡ್ರೂಮ ಅಲ್ಲ" ಅಂತ ತಳ್ಳಿದಳು, ಅಪ್ಪಟ ಭಾರತೀಯ ನಾರಿಯ ಭಾರ ಅತಿಯಾದರೂ ಹೊತ್ತುಕೊಂಡು ಒಳ ನಡೆದೆ... ಕಿರುಚಿ ಕೊಸರಾಡುತ್ತಿದ್ದರೂ...
Updated Title Oct/4/2010
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/USandUS.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
19 comments:
Nicely written..So are you back to India?
ಟೆಕ್ಸಾಸ್ SFOಕ್ಕಿಂತ ಸ್ವಲ್ಪ ಬಿನ್ನ, ಇಂಡಿಯನ್ ಹೋಟೆಲ್ಗಳು, public transportation, ಸಿಟಿ ಬಿಟ್ಟರೆ ಬೇರೆಲ್ಲೂ ಇರುವುದಿಲ್ಲ!!
ಪ್ರಭು,
ಹೇಗಿತ್ತು ಯು.ಎಸ್. ಪ್ರವಾಸ...ಎಷ್ಟು ದಿನ ಹೋಗಿದ್ದು....
ಮರಳಿ ಬಂದು ಒಳ್ಳೆ ಲೇಖನ ಕೊಟ್ಟಿದ್ದೀರ....
ಮಿಸ್ ಮಾಡಿಕೊಂಡೆವು ಇಷ್ಟು ದಿನ ನಿಮ್ಮ ಬರವಣಿಗೆ....
nimma lekhana baruttilla endu nannavaru yaavagalu heLutiddaru...
chennagide lekhana, oLLeya anubhavagaLu....
Hi Prabhu,
Very Nice blog. You got real talent. Keep it up.
While reading your article it feels it is real story:).
All the best.
hi,nimma lekhana odtha idre,brama lokakke horatu hogthene...you are simply rocked....
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಬರಹ... ನಿಮ್ಮಾk ಯಂತೂ ಸೂಪರ್...
ಪ್ರಭು,
Welcome back! ನೀವಿಲ್ದೇ ಬೇಜಾರಾಗಿತ್ತು.
" ನೀಟಾದ ರಸ್ತೆಗಳು ಕ್ಯೂಟ್ ಆದ ಮಕ್ಕಳು..... " paragraph ಇಷ್ಟ ಆಯ್ತು :)
Welcome back!
@ವನಿತಾ / Vanitha
Yeah, I'm back long ago.
ಹೌದು ಟೆಕ್ಸಾಸ್ ಬಗ್ಗೆ ನಾನೂ ಕೇಳಿದ್ದೆ, ಬಾರ್ಡರ್ ಸ್ಟೇಟ್ಗಳು ಸ್ವಲ್ಪ ಹಾಗೇ ಅನಿಸತ್ತೆ.
@ಸವಿಗನಸು
ಯು ಎಸ್... ಯೆಸ್ ಚೆನ್ನಾಗಿತ್ತು... ಕೆಲವೇ ತಿಂಗಳು ವಾಸ್ತವ್ಯದಲ್ಲಿ ಅಂಥ ಜಾಸ್ತಿ ಏನೂ ಸುತ್ತಲಿಕ್ಕೆ ಆಗಲಿಲ್ಲ...
ಬರೆಯಬೇಕು ಅಂತ ಬಹಳ ದಿನದಿಂದ ಪ್ರಯತ್ನ ಮಾಡ್ತಾ ಇದ್ದೆ ಆದ್ರೆ ಸಮಯ ಸಿಕ್ಕಿರಲಿಲ್ಲ ಅಷ್ಟೇ...
@ಮನಸು
ಈ ಹುಚ್ಚು ಹುಡುಗನ ಕನಸುಗಳನ್ನು ತಪ್ಪದೇ ಓದುವ ಪರಿವಾರ ನಿಮ್ಮದೇ ಅನಿಸತ್ತೆ. ಏನೊ ಈಗೀಗ ಸಮಯವೇ ಸಿಗುತ್ತಿಲ್ಲ, ಅದಕ್ಕೇ ಮೊದಲಿನಂತೆ ಬರೆಯಲಾಗುತ್ತಿಲ್ಲ.
ಥ್ಯಾಂಕ್ಯೂ ಓದ್ತಾ ಇರಿ...
@jayasheela
Hi,
Thank you for such wonderful appreciation, Just I put together some of my random thoughts, glad you liked it.
fantasy feels better than reality for me, wish I could live the same life in reality... :)
@Vinayak
ಭ್ರಮಾ ಲೋಕ... ಹ್ಮ್... ಈ ಬ್ರಹ್ಮ ಸೃಷ್ಟಿಸಿರುವ ಲೋಕದಲ್ಲಿ ಅದ್ಯಾವ ಹುಡುಗಿಯನ್ನು ನನಗಾಗಿ ಬರೆದಿಟ್ಟಿದ್ದಾನೊ... ಆದರೆ ನನ್ನ ಭ್ರಮಾಲೋಕದಲ್ಲಿ ನನ್ನಾk ನನ್ನ ಸೃಷ್ಟಿ... ನನ್ನ ಬರವಣಿಗೆ :) ಏನಂತೀರಾ....
@ಪ್ರಗತಿ ಹೆಗಡೆ
ಥ್ಯಾಂಕ್ಯೂ... ಹ್ಮ್.. ಬರಹಕ್ಕಿಂತ ನನ್ನಾkಯೇ ಸೂಪರ್...
@sunaath
ಥ್ಯಾಂಕ್ಯೂ ಸರ್, Well, I came back...
@Greeshma
ಇನ್ನೂ ಬರೆಯುತ್ತಿದ್ದೆ... ಗಳು.. ಹುಳು.. ಅಂತೆಲ್ಲ... ನನ್ನಾkಯೇ ನಿಲ್ಲಿಸಿದಳು ನೋಡಿ...
ಅವಳನ್ನು ಬಿಟ್ಟು "ಪಂಚರಂಗಿ" ನೋಡಿ ಬಂದಿದ್ದೀನಿ ಅಂತ ಇನ್ನೂ ಅನುಮಾನ ಅವಳಿಗೆ!
ಪ್ರಭು...ಪುನಃ ಸ್ವಾಗತ...ನನ್ನಾk ಇಲ್ಲದೆ ಯಾಕೋ ಒಂಥರಾ ಇತ್ತು ಸುನಾಥಣ್ನ ಹೇಳಿದ್ದು ದಿಟ ಕಣ್ರೀ...ಅಂದ್ ಹಾಗ್ ಹ್ಯಾಂಗಿತ್ತಲ್ಲಿ...ಮತ್ತೆ ನಿಮ್ಮ ಮಾತು ಶುರುವಾಗಿದೆ...ನಿಮ್ಮಾk ನೂ ಬೇಗ ಬರ್ಲಿ....
ಪ್ರಭು,
ತುಂಬಾ ಚೆನ್ನಾಗಿ ಬರೆದಿದೀರ.
ಆಲ್ ದಿ ಬೆಸ್ಟ್..
Chennaagide :)
Hmmm... ene aagli, US hogbandroo (T & P)trade mark bittilla neevu :D
ಬಹಳ ದಿನಗಳ ನಂತರ ನನ್ನ ಬ್ಲಾಗ್ಗೆ ನಾನು ಕಾಲಿಟ್ಟಿದ್ದೇನೆ... ಬರೆಯುವುದಂತೂ ಆಗಿಲ್ಲ, ಬರೆದರೆ ಖಂಡಿತ ಬ್ಲಾಗ್ಗೆ ಹಾಕುತ್ತೇನೆ ಓದುತ್ತಿರಿ...
@ಜಲನಯನ
ಸರ್, ಅಲ್ಲಿ ಎಲ್ಲ ಚೆನ್ನಾಗಿತ್ತು... ಬಹಳ ದಿನ ಆಯ್ತು ಬರೆಯಲು ಸಮಯವೇ ಸಿಕ್ತಾ ಇಲ್ಲ... ಮಾತು ಶುರುವಾದರೂ ಮುಂದುವರೆದಿಲ್ಲ... ನನ್ನಾಕೆ ಬಂದ್ರೆ ಹೇಳ್ತೀನಿ... ಸಧ್ಯಕ್ಕಂತೂ ಸುದ್ದಿಯೇನಿಲ್ಲ...
@ramyaprapancha
ಥ್ಯಾಂಕ್ಸ್... ಓದ್ತಾ ಇರಿ...
@Annapoorna Daithota
ಥ್ಯಾಂಕ್ಯೂ...
ಎಲ್ಲಿ ಹೋದ್ರೂ ಅದೆಲ್ಲ ಬಿಡೊಕಾಗಲ್ಲ ಬಿಡಿ... T&P will be there... ಪಕ್ಕದಮನೆ ಪದ್ದು ಪಕ್ಕದ್ ರೂಮ್ ಪರ್ಲ್ ಆಗಬಹುದು ಟೀ ಬಿಟ್ಟು ಕಾಫಿ ಆಗಬಹುದು ಆದ್ರೆ ಅದೇ ಕಥೇ...
ತುಂಬಾ ಚೆನ್ನಾಗಿದೆ ಸರ್ ಇದನ್ನ ಓದಿ ನಮ್ಮ ದೇಶಕಿಂತ ಯು.ಎಸ್.ಎ ಬಗ್ಗೆ ತುಂಬಾ ತಿಳ್ಕೊಂದಂಗಾಯಿತು. ಸುಪರ ಸರ್ ಇನ್ನು ಮುಂದೆ ಇದೆ ಓದಬೇಕು ಅನಿಸ್ತ ಇತ್ತು........
ತ್ಯಾಂಕ್ ಯು ಸರ್ ...! thank u so much
ನಮಸ್ಕಾರ
ತುಂಬ ಸಮಯದ ನಂತರ ನಿಮ್ಮ ಬ್ಲಾಗ್ ಓದಿದೆ. ಇತ್ತೀಚಿಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟೆ. ಇತ್ತೀಚಿಗೆ ಬರೆಯೋದನ್ನ ಕಮ್ಮಿ ಮಾಡಿದ್ದೀರಾ ಹೇಗೆ?
ಸುಲತಾ
Nice Prabhu...i got some time to read your recent article....chennagide!!
@Anonymous
ಥ್ಯಾಂಕ್ಯೂ, ಓದ್ತಾ ಇರಿ, ನಮ್ಮ ದೇಶ ಕೂಡ ಅವರ ದೇಶದ ಹಾಗೆ ಬೇಗ ಆಗಲಿ, ಮುಂದುವರೀಲಿ ಅಂತ ಅಂದುಕೊಳ್ಳೊಣ...
@Sulatha
ಹೌದು, ಸ್ವಲ್ಪ ಬೀಜೀ, ಸಮಯ ಸಿಕ್ತಾ ಇಲ್ಲ, ಎನ್ ಮಾಡೋದು ಎಲ್ಲಾ ನಿಭಾಯಿಸಬೇಕು... ಬರೆಯುತ್ತಿದ್ದೇನೆ ಅದರೆ ಕಮ್ಮಿ ಅಷ್ಟೇ...
@tyre
Thanks you for spending some time reading some of my mad thoughts :) enjoy maaDi
Prabhu, you really have an amazing talent..
I like your blogs, Gtalk and FB status messages..OMG its really very creative.
good one!!
Post a Comment