Sunday, February 20, 2011

ಏನೇ ಈರುಳ್ಳಿ...

ಅವಳು ಮಗ್ಗಲು ಬದಲಿಸಿ, ಅಮರಿಕೊಂಡಿರುವ ಕೈಗಳ ಅಗಲಿಸಿ ಏಳುವಾಗಲೇ ನನಗೂ ಎಚ್ಚರವಾಗಿರುತ್ತದೆ ಆದರೂ ಎನೋ ಅವಳಿಂದ ತೆಗಳಿಸಿ ತಿವಿಸಿಕೊಂಡು ಎದ್ದಾಗಲೇ ಸಮಾಧಾನ. ಬೇಗ ಎದ್ದು ಏಳಿಸುವ ತಾಪತ್ರಯ ಮಾತ್ರ ಅವಳಿಗೆ ತಪ್ಪುವುದಿಲ್ಲ. ತನ್ನ ಪಾಡಿಗೆ ತನಗಿರಲು ಅವಳಿಗೂ ಆಗುವುದಿಲ್ಲ, ತನ್ನಷ್ಟಕ್ಕೆ ತಾನೇ ಏಳುತ್ತೀನೇನೋ ಅಂತ ಕಾಯ್ದು, ಸೂರ್ಯ ಪಶ್ಚಿಮಕ್ಕೆ ಹುಟ್ಟಿದ ದಿನ ಮಾತ್ರ ಅದು ಸಾಧ್ಯವೆಂದು ಕೂಗಿ ಕರೆದು ಎದ್ದೇಳಿಸದೇ ವಿಧಿಯಿಲ್ಲ. ಇಂದು ಕೂಡ ಮಾಡಿದ್ದು ಅದನ್ನೇ ಆದರೂ ಎದ್ದೇಳಿಸಿ ಕೀಟಲೆಗಿಳಿಯದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಅವಳ ಪಾಡಿಗೆ ಅವಳಿದ್ದರೆ ನನಗೇನೊ ಕಸಿವಿಸಿ, ನಾ ಮನೆಯಲ್ಲಿದ್ದರೆ, ಅವಳನ್ನು ಗೋಳುಹೊಯ್ದುಕೊಂಡಾಗಲೇ ಸಮಾಧಾನ. ಪೇಪರು ಓದುತ್ತಿದ್ದವನಿಗೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಕಂಡಿತ್ತು ಅದೇ ಸುದ್ದಿ ನನ್ನಾಕೆಯನ್ನು ಮುದ್ದಿನಿಂದ ಕರೆಯಲು ಕಲ್ಪನೆ ತಂದಿತು. ಕೂಗಿದೆ "ಏನೇ ಈರುಳ್ಳಿ, ಈರುಳ್ಳಿ ಪುಟ್ಟಾ, ಎಲ್ಲಿದೀಯಾ?". ಈರುಳ್ಳಿಯೇ ಹೆಚ್ಚುತ್ತಿದ್ದಳೇನೊ, ನಸುನಗುತ್ತ ಹೊರಬಂದು, "ಈ ಈರುಳ್ಳಿನೇ ಎಸೀತೀನಿ ನೋಡಿ, ಈರುಳ್ಳಿ ಪುಟ್ಟಾ ಅಂತೆ" ಅಂದು ಈರುಳ್ಳಿ ಎಸೆದಂತೆ ಮಾಡಿ ಹೋದಳು. "ಅಯ್ಯೋ ಎನು ತಪ್ಪೇ, ಎಲ್ರೂ ಏನೇ ಚಿನ್ನಾ, ಬಂಗಾರಿ ಪುಟ್ಟಾ ಅಂತಾರೆ, ಬೆಲೆ ಏರಿದೆ ಅಂತ ಈರುಳ್ಳಿ ಅಂದೆ" ಅಂತನ್ನುತ್ತ ಪಾಕಶಾಲೆಗೆ ಪಾದಾರ್ಪಣೆ ಮಾಡಿದರೆ, ಈರುಳ್ಳಿಯೇ ಹೆಚ್ಚುತ್ತಿದ್ದಳು, ಕಣ್ಣಲ್ಲಿ ಮಾತ್ರ ಒಂದು ಹನಿ ಕಣ್ಣೀರಿಲ್ಲ. "ಏನು ಈರುಳ್ಳಿ ಹೆಚ್ತಾ ಇದ್ರೂ ಕಣ್ಣಲ್ಲಿ ನೀರಿಲ್ಲ" ಅಂದ್ರೆ. "ಈಗಿನ ಕಾಲದ ಈ ಹೈಬ್ರೀಡ್ ಈರುಳ್ಳಿ ಘಾಟು ಎಲ್ಲಿರತ್ತೇರೀ, ಕೊಳ್ಳೋವಾಗ ಬೆಲೆ ಕೇಳಿ ಕಣ್ಣೀರು ಬಂದರೆ ಬರಬೇಕು ಅಷ್ಟೇ" ಅಂತನ್ನುತ್ತ ಹೆಚ್ಚಲು ಇನ್ನೊಂದು ಈರುಳ್ಳಿ ಎತ್ತಿಕೊಂಡಳು, "ಏನು ಈರುಳ್ಳಿ ಬಾಜಿ(ಪಲ್ಯ) ಮಾಡ್ತಾ ಇದೀಯಾ?" ಅಂದೆ, ಕೇಳಿದ್ದೇ ಮಹಾಪರಾಧವಾಯಿತೊ ಏನೊ ಅನ್ನುವಂತೆ ನೋಡಿದಳು, "ಈರುಳ್ಳಿ ಬಾಜಿ, ಚಪಾತಿ ಸೂಪರ್ ಕಾಂಬಿನೇಶನ್ ಇರತ್ತೆ" ಅಂದುಕೊಳ್ಳುತ್ತ ಹೊರಬಂದೆ, ಏನು ಸಿಗೊದಿಲ್ಲ, ಬೆಲೆ ಜಾಸ್ತಿ ಅನ್ಸತ್ತೋ ಅದೇ ಬೇಕೆನಿಸತ್ತೆ, ಅದೊಂಥರ ಇರುವುದು ಬಿಟ್ಟು ಇರದುದರೆಡೆಗಿನ ತುಡಿತ, ಈ ನನ್ನ ಮನಸು ತಿಂಡಿಪೋತ.

ಪಕ್ಕದಲ್ಲೊಂದು ಟೀ ಲೋಟ ಇಟ್ಟು, ಕೂತಳು, ಒಂದು ನಗೆಯಿಲ್ಲ, ಪ್ರೀತಿಯಿಂದ ಕೊಡಲೂ ಇಲ್ಲ. "ಮುಗುಳು ನಗುವಿಗೂ ಬೆಲೆಯೇರಿಕೆ ಬಿಸಿಯೋ, ಪ್ರೀತಿಯದೊಂದು ಮಾತು ತುಟಿಯಿಂದ ಬರದಷ್ಟು ತುಟ್ಟಿಯೋ" ಅಂತ ಕಾವ್ಯಮಯವಾಗಿ ಕೇಳಿದ್ದಕ್ಕೆ, ಉತ್ತರ ಕೂಡ ಹಾಗೇ ಬಂತು "ಪ್ರೀತಿಯಾ ಮಾತಲ್ಲಿ ಅಳೆಯಬೇಕೆ, ಮಾತಲ್ಲೇ ಚಿನ್ನ ಬಂಗಾರಿ ಅಂದರೆ ಸಾಕೇ". ಸುಮ್ಮನಿರದೇ ಪರಚಿಕೊಂಡ ಹಾಗಾಯ್ತು, ಅದರೂ ಜಗ್ಗದೆ, "ನಾನೆಲ್ಲಿ ಚಿನ್ನ ಅಂದೆ, ಈರುಳ್ಳಿ ಅಂದೆ" ಅಂದರೆ. "ಹೋಗ್ಲಿ ಬಿಡಿ ನಿಮ್ಮದು ಬರೀ ಮಾತಾಯಿತು, ಪಕ್ಕದಮನೆ ಪದ್ದುಗೆ ಅವಳ ಗಂಡ ಅವಲಕ್ಕಿ ಸರ ಮಾಡಿಸಿಕೊಟ್ಟಿದ್ದಾರೆ ಗೊತ್ತಾ" ಅಂತ ಮೂಗು ಮುರಿದಳು.
"ಹೇಳಬೇಕಿತ್ತು, ನನ್ನವರು ಈರುಳ್ಳಿ ಸರ ಮಾಡಿಸಿಕೊಡ್ತೀನಿ ಅಂದಿದಾರೆ ಅಂತ"
"ಹ್ಮ್ ಈರುಳ್ಳಿ ಸರ ಅಂತೆ, ಅವಲಕ್ಕಿ ಸರ ಅಂದ್ರೆ ಅವಲಕ್ಕಿ ಅಲ್ಲ, ಅದು ಚಿನ್ನದ್ದು"
"ಹೌದಾ, ಹ್ಮ್ ಮತ್ತೆ, ನನಗಂತೂ ಪದ್ದುಗೆ ಸರ ಕೊಡಿಸಲು ಆಗ್ತಾ ಇರಲಿಲ್ಲ, ಅವಳ ಗಂಡ ಆದ್ರೂ ಕೊಡಿಸಿದನಲ್ಲ ಬಿಡು" ಅಂದೆ ವಿಕಟ ನಗೆ ಸೂಸುತ್ತ.
"ಓಹೋ, ಬೇಡ ಅಂದವರು ಯಾರೋ, ಅವಳಿಗೇ ಕೊಡ್ಸಿ" ಅಂದು ಎದ್ದು ಹೋದಳು.

ಸರಿ ಮುನಿದವಳ ಮನ ತಣಿಸಲು ಏನಾದರೂ ತಂದರಾಯಿತು, ಅವಳಿಗೇನೂ ಅವಲಕ್ಕಿ ಸರವೇ ಬೇಕಂತಿಲ್ಲ, ಪ್ರೀತಿಯಿಂದ ಪುಟ್ಟ ಮೂಗುತಿ ತಂದರೂ ಆದೀತು ಅಂದು, ಚಿನ್ನದ ಬೆಲೆ ಗಮನಿಸಿದರೆ, ಬರೊಬ್ಬರಿ ಇಪ್ಪತ್ತು ಸಾವಿರಕ್ಕೆ ಏರಿ ಕೂತಿದ್ದು ಕಂಡು, ಈರುಳ್ಳಿಯೇ ಎರಡು ಕೇಜಿ ಜಾಸ್ತಿ ತಂದರಾಯಿತಂದುಕೊಂಡೆ. "ಏನೇ ಇದು ಚಿನ್ನದ ಬೆಲೆ ನೋಡಿದ್ಯಾ" ಕೇಳಿದೆ. "ದಿನಾಲೂ ನೋಡ್ತಾನೇ ಇದೀನಿ" ಅಂದ್ಲು ನಿರಾಳವಾಗಿ. "ಹ್ಮ್, ಚಿನ್ನದ ಬೆಲೆ ಹೀಗೇ ಜಾಸ್ತಿ ಆಗ್ತಿದೆ ಅಂದ್ರೆ, ಹೋದವರ್ಷ ಹನ್ನೊಂದು ಸಾವಿರ ಇರೋವಾಗ ಒಂದು ಎರಡು ಕೇಜಿ ತೆಗೆದುಕೊಂಡಿದ್ರೆ" ಅಂತ ಬೇಸರಿಸಿದೆ.
"ಓಹೊ ಏನು ಮಹರಾಜರಿಗೆ ಕಿರೀಟ ಮಾಡಿಸುವುದಿತ್ತೊ?" ಅಂತ ಹಿಯಾಳಿಸಬೇಕೆ. "ಇಲ್ಲ, ಮಹರಾಣಿಯವರು ಅವಲಕ್ಕಿ ಸರ ಇಲ್ಲ ಅಂತ ಅಲವತ್ತುಕೊಳ್ಳುವುದು ತಪ್ಪುತ್ತಿತ್ತು" ಅಂತ ತಿರುಗೇಟು ಕೊಟ್ಟೆ. ಮೂಗು ಮುರಿದು ಹೋದವಳ ಮೂಗುತಿಯೇಕೊ ಮಂಕಾದ ಹಾಗೆ ಕಾಣಿತು.

ಪಾಕಶಾಲೆಯಲ್ಲಿ ಮತ್ತಿನ್ನೇನು ಕುದಿಯಲಿಟ್ಟು ಬಂದು ಮತ್ತೆ ಕೂತಳು ನನ್ನ ಜತೆ. ಪೇಪರಿನಲ್ಲಿ ಅದಿನ್ನೇನನ್ನೊ ಹುಡುಕಾಡಿದಂತೆ ಚರ ಪರ ಸದ್ದು ಮಾಡುತ್ತ ಆಕಡೆ ಈಕಡೆ ಪುಟಗಳ ತಿರುವಿ, ಕೊನೆಗೆ ಕೊಡವಿ ನೀಟಾಗಿ ಮಡಿಚಿ ಕೊಳವೆಯಂತೆ ಸುತ್ತಿ, ಕೋಲಿನಂತೆ ಮಾಡಿಕೊಂಡು ತಲೆಗೊಂದು ಕೊಟ್ಟು, ಹುಬ್ಬುಹಾರಿಸಿದಳು. ಏನು ಯೋಚನೆ ಮಾಡ್ತಾ ಇದೀಯಾ ಅಂತ ಕೇಳಿದಂಗೆ ಇತ್ತು. "ಲೇ, ಸುಮ್ನಿರೇ. ದೇಶದ ಬಗ್ಗೆ ಎಲ್ಲಾ ಹಾಗೆ ಗಹನವಾಗಿ ಚಿಂತನೆ ಮಾಡ್ತಾ ಇರಬೇಕಾದ್ರೆ ತೊಂದ್ರೆ ಕೊಡಬೇಡ" ಅಂದೆ.
"ಹ್ಮ್ ಹೌದು, ಅದೇ ಈ ಬೆಲೆ ಯಾಕೆ ಜಾಸ್ತಿ ಆಗತ್ತೆ?"
"ಅದೇ ಈ ಬೆಲೆ ಮಾತ್ರ ಯಾಕೆ ಜಾಸ್ತಿ ಆಗತ್ತೆ? ಬೆಲೆ ಜತೆ ಸಂಬಳ ಕೂಡ ಜಾಸ್ತಿ ಆಗಲ್ವೇ" ಅಂತ ಬೇಸರಿಸಿದೆ.
"ಬೆಲೆನೂ ಜಾಸ್ತಿ ಆಗಬಾರದು, ಸಂಬಳಾನೂ ಕೂಡ. ಹಾಗೆ ಮಾಡೋಕೆ ಆಗಲ್ವೇ, ಆಗ ಎಲ್ಲಾ ಸೂಪರ್ ಆಗಿರತ್ತೆ"
"ಹ್ಮ್, ರಿಸರ್ವ್ ಬ್ಯಾಂಕ್ ಗವರ್ನರ್ ನೀನೇ ಆಗಬೇಕಿತ್ತು ಒಳ್ಳೇದಾಗಿರೋದು" ಅಂದ್ರೆ
"ರೀ, ಹೇಳ್ರಿ ಬೆಲೆ ಹೇಗೆ ಜಾಸ್ತಿ ಆಗತ್ತೆ?" ಅಂತ ದುಂಬಾಲು ಬಿದ್ದಳು.
"ಇದಕ್ಕೆ ಡಿಮಾಂಡ್ ಆಂಡ್ ಸಪ್ಲಾಯ್ ಚೇನ್ ಅಂತಿದೆ ಅಂದ್ರೆ, ಬೇಡಿಕೆಗೆ ತಕ್ಕ ಪೂರೈಕೆ, ಈಗ ಏನಾಗತ್ತೆ ಅಂದ್ರೆ, ಮಳೆ ಜಾಸ್ತಿ ಆಯ್ತು ಅಂತಿಟ್ಕೊ, ಬೆಳೆ ಎಲ್ಲ ಹಾಳಾಯ್ತು, ಬಂದಿದ್ದೇ ಮೂರು ಮೂಟೆ, ಆದರೆ ಬೇಕಿರುವುದು ಆರು ಮೂಟೆ ಆರು ಜನ ಕಾದು ನಿಂತಿದ್ದರೆ, ಹೆಚ್ಚು ಬೆಲೆ ತೆತ್ತಾದರೂ ಕೊಳ್ಳುತ್ತೀವಿ ಅನ್ನುವ ಹಾಗಿದ್ರೆ, ಅಷ್ಟು ಬೇಡಿಕೆ ಇದೆ ಆದರೆ ಪೂರೈಕೆ ಇಲ್ಲ, ನನಗೂ ಬೇಕು, ನನಗೂ ಬೇಕು ಅಂತ ಆ ಆರು ಜನ ಮೂರು ಮೂಟೆಗೆ ಹೆಚ್ಚು ಬೆಲೆ ಕೊಡಲು ನಿಂತರೆ, ಆಗ ಬೆಲೆ ಜಾಸ್ತಿ ಆಗತ್ತೆ. ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳು, ಈಗ ನಂಗೆ ಮೂರು ಮುತ್ತು ಬೇಕಿದೆ ಹೆಂಡ್ತಿ ಕೊಡಲ್ಲ ಅಂತಾಳೆ, ಆದ್ರೆ ನಂಗೆ ಬೇಕು..."
"ನಂಗರ್ಥ ಆಯ್ತು ಬಿಡಿ, ಈ ಬೇರೆ ಉದಾಹರಣೆ ಏನೂ ಬೇಕಿಲ್ಲ" ಅಂತ ಹೊರಟೆದ್ದು ನಿಂತಳು."ಕೇಳಿದ ಮೇಲೆ ಪೂರ್ತಿ ಉತ್ತರ ಕೇಳಬೇಕು, ಅದೆಲ್ಲ ಆಗಲಿಕ್ಕಿಲ್ಲ" ಅಂತ ಎಳೆದು ಕೂರಿಸಿದೆ.
"ಹ್ಮ್, ಹೆಂಡ್ತಿ ಕೊಡೊದೇ ಇಲ್ಲ ಅಂತಾಳೆ, ಆಗೇನು ಎಷ್ಟು ಬೆಲೆ ತೆತ್ತರೂ ಕೂಡ ಕೊಡಲ್ಲ ಅಂತಾಳೆ ಆಗೇನು..." ಅಂತ ಕೈ ಮುಷ್ಟಿ ಮಾಡಿ ಅಂಗೈ ಮೇಲೆ ಗುದ್ದಿಕೊಳ್ಳುತ್ತ ಕೇಳಿದಳು. "ಹ್ಮ್, ಆಗ ಏನಾಗತ್ತೆ ಅಂದ್ರೆ, ಅಂಥ ಪರಿಸ್ಥಿತಿಯಲ್ಲಿ ಬೇಕಾದದ್ದನ್ನು ಹೊರಗಡೆಯಿಂದ ಆಮದು ಮಾಡಿಕೊಳ್ಳಬೇಕಾಗತ್ತೆ ಅದೇ ಇಂಪೋರ್ಟ್ ಅಂತಾರಲ್ಲ ಅದು, ಸ್ವಲ್ಪ ಹೆಚ್ಚು ಬೆಲೆ ತೆರಬೇಕಾಗಬಹುದು. ಆಗ ಕೂಡ ಬೆಲೆ ಜಾಸ್ತಿ ಆಗತ್ತೆ ಅಷ್ಟೇ" ಅಂದು ಕಳ್ಳ ನೋಟ ಬೀರಿದೆ. "ಹ್ಮ್, ಹೂಂ... ಈ ಹೊರಗಡೆ ಅಂದ್ರೆ ಅದೆಲ್ಲಿ, ಆಂ... ಎನು ಕಥೆ, ಯಾಕೆ ಅಂತ, ಎಲ್ಲ ಇಲ್ಲೇ ಇದೆ, ಹೊರಗಡೆ ಏನಾದ್ರೂ ಅಂದ್ರೆ ಅಷ್ಟೇ ಮುಷ್ಕರ ಹೂಡ್ತೀನಿ..." ಅಂತ ಹೆದರಿಸಿದಳು. "ಇದೇ ನೋಡು ಇಲ್ಲಿ ಎಲ್ಲ ಇದ್ದರೂ, ತಾತ್ಕಾಲಿಕ ಅಭಾವ ಸೃಷ್ಟಿ ಮಾಡೋದು ಅಂತ, ಇದ್ದರೂ ಮುಚ್ಚಿಟ್ಟು ಇಲ್ಲ ಅನ್ನೋದು, ಆಗ ಗ್ರಾಹಕ ಹೆಚ್ಚು ಬೆಲೆ ತೆರಲು ಸಿಧ್ದವಾದರೆ, ಪೂರೈಕೆ ಮಾಡಿ ಲಾಭ ಮಾಡಿಕೊಳ್ಳುವ ದಲ್ಲಾಳಿಗಳ ತಂತ್ರ" ಅಂತ ವಿವರಿಸಿದೆ, ಖುಶಿಯಾದ್ಲು. "ಸೂಪರ್, ಚೆನ್ನಾಗಿದೆ, ಇದೆಲ್ಲ ಹೇಳಿದ್ದಕ್ಕೆ ಅಂತ ಒಂದು... ಉಮ್ಮ್" ಅಂತೊಂದು ಮುದ್ದು ಕೊಟ್ಟು, ಕಾಲು ಕಿತ್ತಳು. "ಲೇ ಇನ್ನೂ ಎರಡು... ಬೇಡಿಕೆ ಮೂರು ಇದೆ, ಒಂದೇ ಪೂರೈಕೆಯಾದದ್ದು..." ಅಂತ ಚೀರುತ್ತಿದ್ದರೆ. "ಅದಕ್ಕೆ ಜಾಸ್ತಿ ಬೆಲೆ ತೆರಬೇಕು..." ಅನ್ನಬೇಕೇ. "ಜಾಸ್ತಿ ಬೆಲೆ ಅಂದ್ರೆ, ಎರಡು ಕೇಜಿ ಈರುಳ್ಳಿ ತಂದರಾಯಿತು ಬಿಡು" ಅಂತನ್ನುತ್ತ ನಾನೂ ಮೇಲೆದ್ದೆ...

ಏನಪ್ಪಾ ಈರುಳ್ಳಿ ರೇಟು, ನಲವತ್ತು, ಐವತ್ತು ಅಂತ ತೊಂಬತ್ತು ನೂರು ರೂಪಾಯಿವರೆಗೆ ಏರಿಬಿಟ್ಟಿತ್ತು, ಈರುಳ್ಳಿ ಇಲ್ಲದೇ ಅಡುಗೆ ಇಲ್ಲ, ಮಾಡಲೇಬೇಕು ಅಂದ್ರೆ ಹೆಚ್ಚು ಬೆಲೆ ತೆರಲೇಬೇಕು. ರೈತನಿಗಂತೂ ಲಾಭ ಆಗಿದ್ದು ಅಷ್ಟಕ್ಕಷ್ಟೇ, ಬೆಲೆ ಬರುತ್ತಂತ ಕಾದು ಕೂತವರಂತೂ, ರೋಡಿಗೆ ಈರುಳ್ಳಿ ಸುರಿವ ಮಟ್ಟಿಗೆ ಬೆಲೆ ಕುಸಿತ ಕೂಡ ಕಂಡರು. ದಲ್ಲಾಳಿಗಳ ಅಕ್ರಮ ದಾಸ್ತಾನು ಒಂದೆಡೆ ಬೆಲೆ ಏರಿಸಿದ್ದು, ಇನ್ನೊಂದೆಡೆಗೆ ಬೇರೆ ದೇಶದಿಂದ ಆಮದು ಮಾಡಿಕೊಳ್ಳುವ ಸರಕಾರದ ನಿರ್ಧಾರದಿಂದ ಮಾರುಕಟ್ಟೆ ಬಂದಿಳಿದ ಈರುಳ್ಳಿ, ಏರಿದಷ್ಟೇ ಬೆಲೆ ಇಳಿಕೆ ಆಯ್ತು. ಇನ್ನೂ ಬೆಲೆ ಜಾಸ್ತಿಯಾದೀತೆಂದು ಎರಡು ಕೇಜಿ ಜಾಸ್ತಿ ಈರುಳ್ಳಿ ತಂದಿದ್ದ ಅಮ್ಮ ಕೂಡ ಬಯ್ದುಕೊಂಡಳು. ಈ ಬೆಲೆ ಏರಿಕೆ ಇಳಿಕೆ ಇದ್ದದ್ದೇ, ಏರಿತೆಂದು ಸರ್ಕಾರದ ಮೇಲೆ ಹಾರಾಡಿ, ಇಳಿಯಿತೆಂದು ಚೆಲ್ಲಿ ಚಲ್ಲಾಪಿಲ್ಲಿ ಮಾಡುವರೂ ನಾವೇ. ಪೆಟ್ರೊಲ್, ಡೀಸಲ್ ಬೆಲೆಯಂತೂ ಏರುತ್ತಲೇ ಇದೆ, ಅದು ಏರಿದಂತೆ ಎಲ್ಲ ಬೆಲೆ ಏರಲೇಬೇಕು.
ಈರುಳ್ಳಿ ಬೆಲೆ ಇಳಿಯಿತು, ಹಾಲು ಕುಡಿದಷ್ಟು ಸಂತೋಷವಾಯ್ತು ಅನ್ನಬೇಕೆನ್ನುವಷ್ಟರಲ್ಲಿ ಹಾಲಿನ ಬೆಲೆ ಲೀಟರಿಗೆ ಎರಡು ರೂಪಾಯಿ ಏರಬೇಕೆ...

"ರೀ, ಹಾಲಿನ ಬೆಲೆ ಜಾಸ್ತಿ ಆಯ್ತು, ಟೀ ಕುಡಿಯುವುದನ್ನು ಕಡಿಮೆ ಮಾಡಿ" ಅಂತನ್ನುತ್ತ ತಪ್ಪದೇ ಟೈಮ್ ಟೈಮ್‌ಗೆ ಟೀ ಸಪ್ಲೈ ಮಾಡುವ ನನ್ನಾಕೆಗೆ "ಹಾಲು ಬೆಲೆ ಜಾಸ್ತಿ ಅದ್ರೆ ಅಲ್ಕೊಹಾಲು ಕುಡಿದರೆ ಹೇಗೆ?" ಅಂದೆ. "ಯಾಕೆ ಎಂದೂ ಇಲ್ಲದ್ದು, ಅದು ಬೇರೆ ಶುರು ಮಾಡಿಕೊಳ್ಳುವ ಇರಾದೆಯಾಗಿದೆಯೋ" ಅಂತ ಬಯ್ಯುತ್ತ, "ಹಾಗೇನಾದರೂ ಇದ್ದರೆ, ಮನೆಗೇ ತನ್ನಿ, ಹಾಲಾಹಲ ಕುಡಿದು ಕೋಲಾಹಲ ಮಾಡೋಣ" ಅಂತ ತಾನೂ ಸಜ್ಜಾದಳು. ಈರುಳ್ಳಿ ಬೆಲೆ ಜಾಸ್ತಿ ಇದ್ದರೇನಂತೆ, ನನಗೆ ಬೇಕೆಂದ ಮೇಲೆ ಚಪ್ಪಾತಿ ಈರುಳ್ಳಿ ಬಾಜಿಯೇ ಮಾಡಿದ್ದಳು. ಚೆನ್ನಾಗಿತ್ತು, ಜಾಸ್ತಿಯೇ ತಿಂದು ತೇಗಿದೆ. ರಾತ್ರಿ ಮಲಗಲು ಹೊದಿಕೆ ಹೊಂದಿಸುತ್ತಿದ್ದರೆ, "ಕಣ್ಣು ಮುಚ್ಚು" ಅಂದೆ. "ಈ ಟ್ರಿಕ್ ಎಲ್ಲ ಬೇಡ, ಸುಮ್ನೇ ಮಲಗಿ" ಅಂತ ತಳ್ಳಿದಳು. "ಹೇಳಿದ ಮೇಲೆ ಕೇಳಬೇಕು" ಅಂತ ಕಣ್ಣಿಗೆ ಕೈ ಅಡ್ಡ ಹಿಡಿದೆ, ಕಣ್ಣು ಮುಚ್ಚಿಕೊಂಡಳು, ಕಣ್ತೆರೆದಾಗ, ಮುಂದೆ ಚಿನ್ನದ ಸಾಮಾನುಗಳ ಪುಟ್ಟ ಬಾಕ್ಸಿನಲ್ಲಿ, ಪುಟಾಣಿ ಈರುಳ್ಳಿ ಇಟ್ಟು ಮುಂದೆ ಹಿಡಿದಿದ್ದೆ. "ರೀ...!!!.. ಈರುಳ್ಳಿ ಕೊಡ್ತೀರಾ" ಅಂತ ಪಟ ಪಟ ಬಡಿದು ನಗತೊಡಗಿದಳು. ಬಡಿಯುತ್ತಿದ್ದ ಕೈಗಳ ಹಿಡಿದು ಮುಷ್ಟಿ ಮಾಡಿಸಿ, ಆಗಲೇ ತಂದಿಟ್ಟಿದ್ದ ಚಿನ್ನದ ಮೂಗುತಿ ಇರಿಸಿದೆ. ತೆಗೆದು ನೋಡಿ. "ಈಗ ಇದೆಲ್ಲ ಬೇಕಿತ್ತಾ" ಅಂತ ಇನ್ನೊಂದು ಕೊಟ್ಟಳು. "ವಜ್ರ, ಅದನ್ನ ಕೂಡಿಸಿರುವ ಸ್ಟೈಲ್ ಚೆನ್ನಾಗಿದೆ" ಅಂದ್ಲು ಅದನ್ನೇ ದಿಟ್ಟಿಸಿ ನೋಡುತ್ತ. "ವಜ್ರದ ಬದಲು ಒಂದು ಚಿಕ್ಕ ಈರುಳ್ಳಿ ಕೂರಿಸಲಾಗತ್ತ ಅಂತ ಕೇಳಿದೆ ಕಣೆ, ಆಗಲ್ಲ ಅಂದ್ರು, ವಿಧಿಯಿಲ್ಲದೇ ಇದನ್ನೇ ತಂದೆ" ಅಂದೆ. "ಸ್ಮಾರ್ಟಿ" ಅಂತ ಕೆನ್ನೆ ಗಿಲ್ಲಿದಳು. "ಈ ಬಡಪಾಯಿ ಕೈಲಿ ತರಲಾದದ್ದು ಇಷ್ಟೇ, ಬೇಡಿಕೆ ಈಡೇರಬೇಕೆಂದರೆ, ಬೆಲೆ ತೆರಬೇಕಲ್ಲವೇ, ಬೆಲೆ ತೆತ್ತ ಮೇಲೆ ಪೂರೈಕೆ ಮಾಡಿ" ಅಂದೆ. ಏನು ಅನ್ನುವಂತೆ ನೋಡಿದಳು. "ಮಧ್ಯಾಹ್ನ ಕೊಟ್ಟಿದ್ದು ಒಂದೇ ಮುತ್ತು, ಬೇಡಿಕೆಯಿದ್ದದ್ದು ಮೂರು" ಅಂದ್ರೆ, "ಮೂರು ಸಾಕಾ, ನೂರು ಬೇಕಾ?" ಅಂತನ್ನಬೇಕೆ ತುಂಟಿ... ಮುಂದೇನಾಗಿರಬಹುದೆಂದು ಊಹಿಸಿಕೊಳ್ಳಿ, ಹಾಗೆಲ್ಲ ಬರೆಯಲಾಗದು... ಒಂದು ತುಂಬಾ ಬೆಲೆ ಬಾಳುವ ಸಲಹೆ ಪುಕ್ಕಟೆಯಾಗಿ ಕೊಡುತ್ತೀನಿ ಕೇಳಿ, ಬಾಳಿನಲ್ಲಿ ಇಂಥ ಚಿಕ್ಕಪುಟ್ಟ ಸಂತೋಷಗಳು ಬಹಳ ಇವೆ ಅವಕ್ಕೇನು ಬೆಲೆ ಏರಿಕೆಯ ಬಿಸಿಯಿಲ್ಲ, ಬಳಸಿ ನೋಡಿ ಅಷ್ಟೇ... ಮತ್ತೆ ಸಿಗೋಣ...

ಬಹಳ ದಿನಗಳಾದ ಮೇಲೆ ಬರೆಯುತ್ತಿದ್ದೇನೆ, ಈರುಳ್ಳಿ ಬೆಲೆಯೇರಿದಾಗ ಶುರುವಿಟ್ಟುಕೊಂಡ ಲೇಖನ, ಬೆಲೆ ಇಳಿದಾಗ ಪೂರ್ತಿ ಆಗಿದೆ ನೋಡಿ, ಮೂರು ನಾಲ್ಕು ವಾರಗಳಿಂದ, ಅಷ್ಟು ಇಷ್ಟು ಬರೆದು ಇಟ್ಟಿದ್ದೇ ಆಯ್ತು, ಇಂದು ಬರೆದು ಮುಗಿಸಲೇಬೇಕೆಂದು ಪಟ್ಟು ಹಿಡಿದು ಕೂತಿದ್ದಕ್ಕೆ ಸಾಧ್ಯವಾಯ್ತು. ಬ್ಲಾಗ್ ಓದಲು ಬರುವವರನ್ನಂತೂ ಬಿಡಿ, ನನ್ನ ಬ್ಲಾಗ್‌ಗೆ ನಾನೇ ಬಂದು ಎಷ್ಟೋ ದಿನಗಳಾಗಿತ್ತು. ಬ್ಲಾಗ್‌ಗಿಂತ ಇತ್ತೀಚೆಗೆ ಈ ಮೈಕ್ರೊಬ್ಲಾಗಿಂಗ್ ಅಂತ ಟ್ವಿಟ್ಟರಿನಲ್ಲಿ (@telprabhu) ಚಿಲಿಪಿಲಿಗುಟ್ಟಿದ್ದೇ ಜಾಸ್ತಿ. ಮತ್ತೆ ಸಾಧ್ಯವಾದಾಗ ಬರೆಯುತ್ತೇನೆ, ಓದುತ್ತಿರಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/eerulli.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

23 comments:

ಜ್ಯೋತಿ said...

US ಹೋದಮೇಲೆ ಬರೆಯೋದೇ ಬಿಟ್ಟಿದ್ರಿ, you are back with a nice blog! :-)

Subrahmanya said...

ಈರುಳ್ಳಿ ಕಾರಣವಾಯ್ತಲ್ಲ ನಿಮ್ಮ ಬರಹಕ್ಕೆ !, ಒಳ್ಳೇದಾಯ್ತು. ಚೆನ್ನಾಗಿದೆ.

sunaath said...

ಪ್ರಭುರಾಜ,
ದೀರ್ಘ ವಿಲಂಬದ ನಂತರ, ನಿಮ್ಮ ಲೇಖನ ಓದುತ್ತಿರುವದು ಈರುಳ್ಳಿಯನ್ನು ಭುಂಜಿಸಿದಷ್ಟೇ ಸಂತೋಷ ನೀಡಿತು. ನಿಮ್ಮ ಪುಕ್ಕಟೆ ಸಲಹೆಯಂತೂ ತುಂಬಾ ಚೆನ್ನಾಗಿದೆ. ಅದನ್ನು ತತ್ ಕ್ಷಣ ಪ್ರಯೋಗಿಸುವೆ!

ಶಾನಿ said...

ಏನೇ ಆದ್ರೂ, ಬ್ಲಾಗ್ ಅಪ್‌ಡೇಶನ್ ಈರುಳ್ಳಿಯಷ್ಟು ದುಬಾರಿ ಆಗಬಾರದಿತ್ತು!

ಮನಸು said...

ಹಹಹ ಬಹಳ ದಿನಗಳ ನಂತರ ಒಳ್ಳೆ ಬೆಲೆಬಾಳುವ ಲೇಖನವನ್ನೇ ಕೊಟ್ಟಿದ್ದೀರಿ. ತುಂಬಾ ಚೆನ್ನಾಗಿದೆ ಪ್ರಭು ಬರಹ ಎಂದಿನಂತೆ ಓದಿಸಿಕೊಂಡು ಹೋಗುತ್ತೆ. ಬಿಡಬೇಡಿ ಹೀಗೆ ಬರೆಯುತ್ತಲಿರಿ.

Veena DhanuGowda said...

Hi,

Nice, that ur back :)
Happy to see ur article :)
that to with "ಈರುಳ್ಳಿ" concept...

Santhosh Rao said...

nice.. chennagide baraha..

Chaithrika said...

ಯಾವತ್ತಿನಷ್ಟು ಖುಷಿ ಆಗಲಿಲ್ಲ. :-(

Prabhuraj Moogi said...

@ಜ್ಯೋತಿ
ಹಾಗೇನಿಲ್ಲ, ಬರೆಯಬೆಕೆಂದು ಬಹಳ ಆಸೆ ಇತ್ತು, ಆದ್ರೆ ಟೈಮ್ ಸಿಕ್ತಾ ಇರಲಿಲ್ಲ, ಈ ಲೇಖನವೇ ನಾಲ್ಕು ವಾರಗಳಿಂದ ಹಾಗೇ ಕೂತಿತ್ತು... ಈ ವಾರ ಅದಕ್ಕೆ ಮುಕ್ತಿ ಸಿಕ್ತು...

@Subrahmanya
ಈರುಳ್ಳಿ ಕಣ್ಣಲ್ಲಿ ನೀರು ಬರಿಸತ್ತೆ... ಆದ್ರೆ ನನ್ನ ಕಡೆಯಿಂದ್ ಬರೆಸಿತು (ಬರೆಯಿಸಿತು) ;)

@sunaath
ಸರ್, ಹೌದು ಬಹಳ ದಿನಗಳ ನಂತರ ಮತ್ತೆ ಹಾಜರು... ಗೈರುಹಾಜರಿಗೆ ಕ್ಷಮೆ ಇರಲಿ.
ಪುಕ್ಕಟೆ ಸಲಹೆ ಪಾಲಿಸಲು ಹೋಗಿ ಜೇಬಿಗೆ ಏನಾದರೂ ಕತ್ತರಿ(ಮೂಗುತಿ, ಓಲೆ ಏನಾದ್ರೂ ತರಬೇಕಾಗಿ) ಬಿದ್ದರೆ ನಾವು ಜವಬ್ದಾರರಲ್ಲ ;)

@ಶಾನಿ
ಕರೆಕ್ಟ್, ಈರುಳ್ಳಿ ದುಬಾರಿ ಆಯ್ತು ಅಂತ ಚೀನಾದಿಂದ ಈರುಳ್ಳಿ ತರೊಕೆ ನನ್ನಾK ಕಳಿಸಿದ್ಲು ಬರೋಕೆ, ಬರೆಯೋಕೆ ತಡ ಆಯ್ತು ನೋಡಿ ;)

@ಮನಸು
ಪುಕ್ಕಟೆ ಪೋಲಿ ಕಥೆಗಳು ನಂದು, ನೀವೆಲ್ಲ್ ಓದಿ ಇಷ್ಟ ಪಡ್ತೀರ ಅನ್ನೋದೇ ಖುಷಿ.
ಬರೆಯುತ್ತಿರುತ್ತೇನೆ, ಆದರೆ ಮೊದಲಿನಂತೆ ವಾರಕ್ಕೊಮ್ಮೆ ಬರೆಯಲು ಆಗಲಿಕ್ಕಿಲ್ಲ...

@ವೀಣಾ
Well, I had to come back... Actually, I had not gone anywhere, whole heart was here with nannaake :)
ಇನ್ನೂ ಬಹಳ ಕಾನ್ಸೆಪ್ಟ್ ಇದ್ದವು ಬರೆಯಲು ಆಗಿಲ್ಲ, ನೊಡೋಣ್, ಟೈಮ್ ಸಿಕ್ರೆ ಮತ್ತೆ ಬರೀತೀನಿ...

@ಸಂತೋಷ್ ಚಿದಂಬರ್
ಥ್ಯಾಂಕ್ಯೂ..

@ಶಿವಶಂಕರ ವಿಷ್ಣು ಯಳವತ್ತಿ
ಥ್ಯಾಂಕ್ಯೂ ಸರ್, ಏನೊ ಹುಚ್ಚು ಯೋಚನೆಗಳು ಗೀಚೋದು...

@Chaithrika
ಬಹಳ ದಿನಗಳಾದ ಮೇಲೆ ಬರೀತಾ ಇದೀನಿ ಅಲ್ವಾ, ಅದಕ್ಕೆ ಮೊದಲಿನ ಹಾಗೆ ಬರೆಯೋಕೆ ಆಗ್ತಿಲ್ಲ್ ಏನೊ, ಇಲ್ಲ ಹಾಗೆ ಬರೆಯೊ ಸ್ಟೈಲ್ ಕಳೆದುಕೊಂಡೆನೊ ಏನೊ ಗೊತ್ತಿಲ್ಲ... ಮುಂದಿನ ಲೇಖನದಲ್ಲಿ ಟ್ರೈ ಮಾಡ್ತೀನಿ...

ಅನಿಲ್ ಬೇಡಗೆ said...

ಪ್ರಭು, ಉಳಾಗಡ್ಡಿ ಕತಿ ಚ್ಹೊಲೋ ಅದ ನೋಡ್ರಿ..
ಬಿಡುವು ಇದ್ದಾಗ ಭೇಟಿ ಕೊಡ್ರಿ : www.pennupaper.blogspot.com

Mallamma Virupakshi said...

Hi........

Really nice.........Nijvagallu jeevandalli sanna putta vishayagalle tumba kushi kodutte..

So......ur earulli concept ended with sweet romanti giggling night....

Good Luck....Come up with more such nice blog.

shivu.k said...

ಪ್ರಭು,

ತುಂಬಾ ದಿನಗಳ ನಂತರ ನಿಮ್ಮ ಬ್ಲಾಗಿಗೆ ಬಂದೆ. ನಿಮ್ಮ ಈರುಳ್ಳಿ ಬರಹ ಸಕ್ಕತ್ ಮಜವಾಗಿದೆ..

Keshav.Kulkarni said...

Very nice! Nice to read your blog again! Please do write more!!

Guru said...

ಪ್ರಭು,

ಚೆನ್ನಾಗಿ ಮೂಡಿ ಬಂದಿದೆ,

keep writing..

Jyoti Hebbar said...

hahahahh... superb...

Geethashri Ashwathaiah said...

Superb.....complete mind refreshner:) awesome - narration, imagination, expression - the way you have put that.....keep posting articles...

Geetha

Sulatha Shetty said...

ಬಹಳ ದಿನಗಳಾದ ಮೇಲೆ ಬರೀತಾ ಇದ್ದಿರ. ಮುಂದೆ ವಾರ ವಾರ ಬರೀತಿರ ಎಂಬ ನಿರೀಕ್ಷೆಯಲ್ಲಿ.................
ಸುಲತಾ

Rudru said...

ರೀ ಪ್ರಭು,
ನನ್ನಾಕೆ ಲೇಖನ ಓದಿದ್ದೆ, ಅದು ತುಂಬಾ ಚೆನ್ನಾಗಿತ್ತು. ಆದರೆ ಇದು ಈರುಳ್ಳಿ ಕಥೆ ಓದಿದ ಮೇಲೆ , ಹಾಲು ಜೀನು ಸೇರಿಸಿ ಕುಡಿದಸ್ಟು ಸಂತೋಷ್ ಅಯಿತುರಿ
ಈ ಕಥೆ ಓದುವಾಗ ನಾನು ಪೂರ್ತಿ ಕನಸಿನಲ್ಲಿ ತೇಲಿ ಹೋಗಿದ್ದೆ, ನನಗೆ ನನ್ನ ಭಾವಿ ಪತ್ನಿಯಾ ನೆನಪು ಬರ್ತಾ ಇತ್ತು. ನೀವು ಹೀಗೆ ಬರಿತ ಇರಬೇಕು ಎಂದು ಅಶಿಶುವ್.

ಈತಿ ನಿಮ್ಮ
ರುದ್ರು ನಂದಿಕೊಲ್ ಮಟ

Annapoorna Daithota said...

ತಡವಾಗಿ ಓದಿದೆ.... ಚೆನ್ನಾಗಿದೆ :)

ಟೀ ಅಂತೂ ಕುಡುದ್ರಿ, ಪದ್ದುನ ಅವಲಕ್ಕಿ ಸರ ನೋಡಿದ್ರೋ ಇಲ್ವೋ :p

Shruthikumar TD said...

Gurugale,
Thumbakushiaythu, blog odthaidre, always i keep smiling on every line. Please keep going on

Nimma Abimani

Unknown said...

ಈರುಳ್ಳಿ ಲೇಖನ ಚೆನ್ನಾಗಿದೆ ....

Phaniraj said...

ಡಿಯರ್ ಪ್ರಭು,

ನಿಮ್ಮ ಬರಹ ಸೂಪರ್. ನಂಗೆ ನನ್ನ ಫ್ರೆಂಡ್ ಒಬ್ಬ ನಿಮ್ಮ 'ನನ್ನಾಕೆ' PDF vershion ಕೊಟ್ಟಿದ್ದ. ಅದುನ್ನ ಓದಿ ನಿಮ್ಮ ಫ್ಯಾನ್ ಆಗ್ಬಿಟ್ಟೆ. ನಿಮ್ಮ ಬರವಣಿಗೆ ಶೈಲಿ ತುಂಬ ಚನ್ನಾಗಿದೆ.ಎಲ್ಲಿಂದ ತಗೊಂಡ್ರಿ ಈ ಅನಭವಗಳನ್ನ... ಎದುರ್ಗೆ ಕುತ್ಕೊಂಡು ನಮಗೆ ನಮ್ಗೆ ಹೇಳ್ತ್ಹ ಇದಿರೆನೋ ಅನ್ನೋ ಹಾಗೆ ಇರುತ್ತೆ. ಹೀಗೆ ಬರೀತಾ ಇರಿ. ನಾವು ಓದ್ತಾ ಇರ್ತೀವಿ.

ಇಂತಿ ನಿಮ್ಮ
ಫಣಿ

Heege Summane said...

Hello Prabhu,
After marraige yaav post barta illa. Pls start madi.. Naanu 5 years back odta idde and today again read and feeling relaxed. Pls start again.