ಸ್ನಾನ ಮಾಡಿ ತಲೆ ಒರೆಸಿಕೊಳ್ಳುತ್ತಾ ಪಡಸಾಲೆಗೆ(ಹಾಲ್) ಬಂದೆ ಗಡಿಯಾರದತ್ತ ಕಣ್ಣು ಹಾಸಿದರೆ ಆಗಲೇ ಏಳೂವರೆಯಾಗಿತ್ತು, ಅಯ್ಯೋ ಇನ್ನು ತಯ್ಯಾರಾಗಿ ಹೊರಡಬೇಕೆಂದರೆ ಎಂಟಾಗುತ್ತದೆ, ಆಫೀಸಿನಲ್ಲಿ ಕೆಲಸ ಒಟ್ಟಿದೆ, ವಾರ ರಜೆ ತೆಗೆದುಕೊಂಡಿದ್ದರ ಪರಿಣಾಮ ಅಲ್ವೇ, ಅಂತ ಗಡಬಡಿಸಿದೆ, ಅವಳಿಗೂ ಟಿಫಿನ್ನು ಮಾಡುತ್ತೀನೊ ಇಲ್ವೋ ಅಂತ ಗುಮಾನಿ ಎದ್ದಿರಬೇಕು, ಮಾಡಿದ ಚಪಾತಿಗೆ ಸ್ವಲ್ಪ ತುಪ್ಪ ಶೇಂಗಾ(ನೆಲಗಡಲೆ)ಚಟ್ನಿ ಸವರಿ ಸುರುಳಿ ಮಾಡಿ ಕೊಟ್ಟಳು, ಮೆಚ್ಚಿಗೆಯಿಂದ ಮುಗುಳ್ನಕ್ಕು ಅದನ್ನೇ ಮೆಲ್ಲುತ್ತ ಹಾಗೇ ಬ್ಯಾಗಿಗೆ ಎನೇನೋ ತೂರಿಸಿಕೊಳ್ಳುತ್ತಿದ್ದೆ. "ಇಂದೂ ಕರೆಂಟ ಬಿಲ್ಲು ತುಂಬೊದು ಆಗಲ್ಲ ಅಲ್ವಾ, ಬಾಡಿಗೆ ಕೊಟ್ಟಿಲ್ಲ, ಗ್ಯಾಸ್ ಬೇರೆ ಬರುತ್ತೆ." ಅಂದ್ಲು. ಕಳೆದ ನಾಲ್ಕು ದಿನಗಳಿಂದ ಇದೇ ಆಗಿದೆ, ಕೆಲಸದೊತ್ತಡದಲ್ಲಿ ಏನೂ ಮಾಡಲಾಗಿಲ್ಲ, ಇಂದು ಬಿಡಲಾಗಲ್ಲ, ಎಲ್ಲ ಆನಲೈನ ತುಂಬಿ ಕೈತೊಳೆದುಕೊಳ್ಳುತ್ತಿದ್ದ ನನಗೆ ಇದೊಂದು ಕರೆಂಟು ಬಿಲ್ಲು ಆನಲೈನ ಮಾಡಿಕೊಳ್ಳಲಾಗಿರಲಿಲ್ಲ, ಅಲ್ಲದೇ ಮನೇಲೂ ದುಡ್ಡಿರಲಿಲ್ಲ. "ಒಂದು ಕೆಲ್ಸ ಮಾಡು ಈ ಕಾರ್ಡ್ ತುಗೊ, ಪಿನ್ ****(ನಿಮಗೆ ಹೇಳ್ತೀನಿ ಅನ್ಕೊಂಡ್ರಾ!!) ದುಡ್ಡು ತೆಗೆಸಿಕೊಂಡು ಬಂದು ಬಿಲ್ ತುಂಬಿ, ಬಾಡಿಗೆ ಕೊಡು, ನನಗೆ ಬಹಳ ಲೇಟಾಗುತ್ತದೆ, ಮೀಟಿಂಗ ಬೇರೆ ಇದೆ" ಅಂತಂದೆ. ಅವಳು ಆಕಾಶವೇ ತಲೆ ಮೇಲೆ ಬಿದ್ದವರ ಹಾಗೆ ಮುಖ ಮಾಡಿ "ನಂಗೆಲ್ಲ ಗೊತ್ತಾಗಲ್ಲ, ನಾಳೆ ನೊಡೋಣ" ಅಂದ್ಲು. ಸಿಟ್ಟು ಬಂತು ಆದರೆ ತಡೆದುಕೊಂಡು ಏನೂ ಮರು ಮಾತಾಡದೇ ಹೊರಟೆ.
ಅವಳಿಗೆ ಗೊತ್ತಿಲ್ಲ ಅಂತಲ್ಲ, ಪ್ರಶ್ನೆ ಅದಲ್ಲ ಇಲ್ಲಿ, ಕೇಳಿದರೆ ಹೇಗೆಂದು ನಾ ಹೇಳುತ್ತಿದ್ದೆ, ಆದರೆ ಅವಳಿಗೆ ಅದೆಲ್ಲ ಮಾಡಲು ಹೆದರಿಕೆ ಒಂಥರಾ ಹಿಂಜರಿತ. ತನ್ನಿಂದ ಮಾಡಲಾಗಲಿಕ್ಕಿಲ್ಲ ಎನ್ನೊ ಭಯ, ಒಬ್ಬಳೇ ಹೋಗಬೇಕಲ್ಲ ಅಂತ ಹಿಂದಡಿಯಿಡುತ್ತಿದ್ದಾಳೆ ಅಷ್ಟೇ. ಇದೇ ನಾ ಹೋಗಲಾಡಿಸಬೇಕಿತ್ತು. ಅವಳಲ್ಲಿ ಆತ್ಮವಿಶ್ವಾಸ ತುಂಬಿ ನನ್ನ ಮೇಲಿನ ಅವಲಂಬನೆ ಕಡಿಮೆ ಮಾಡಿಸಬೇಕಿತ್ತು.
ರಾತ್ರಿ ಬಂದಾಗ ಲೇಟಾಗಿತ್ತು, ದುಡ್ಡು ತೆಗೆಸಿಕೊಂಡು ಬಂದಿದ್ದೆ, ಅವಳಿಗೆ ಕೊಟ್ಟು ಗ್ಯಾಸಗೆ ಕೊಡು ಅಂಥೇಳಿ ಉಳಿದದ್ದು ನಿನ್ನಹತ್ರ ಇರ್ಲಿ ಬೀರುನಲ್ಲಿಡು ಅಂದೆ. ಮತ್ತೇನು ಮಾತಾಡಲಿಲ್ಲ, ಅವಳಿಗೆ ಗೊತ್ತಾಗಿತ್ತು ತಾನು ಮಾಡಲ್ಲ ಅಂದಿದ್ದು ಸಿಟ್ಟು ತರಿಸಿದೆಯೆಂದು, ಆದ್ರೆ ಮಾತಾನಾಡಲಾಗದೇ ಸುಮ್ಮನಾದ್ಲು. ಮರುದಿನ ಬಿಲ್ಲು ತುಂಬಿ ಬಾಡಿಗೆ ಕೊಟ್ಟು ಮುಗಿಸಿದೆ.
ಅಂತೂ ಕೆಲಸ ಒಂದು ಹಂತಕ್ಕೆ ಬಂದು, ಸ್ವಲ್ಪ ಬಿಡುವಾಯಿತು. ಅಂದು ಶುಕ್ರವಾರ, ಸಂಜೆ ಟೀವೀ ನೊಡುತ್ತಾ ಕುಳಿತಿರಬೇಕಾದರೆ, ಹತ್ತಿರ ಬಂದು ಕುಳಿತಳು, ಬೇರೆ ಯಾವಾಗಲೂ ಹಾಗೆ ಆಕೆ ಬಂದು ಕುಳಿತರೆ ಜಾರಿ ಮಡಿಲಲ್ಲಿ ಬಿದ್ದು ಬಿಡುವವ, ಇಂದು ಬೇಕೇಂದಲೇ ಸುಮ್ಮನಿದ್ದೆ ತಾನೇ ಎಳೆದು ಮಡಿಲಲ್ಲಿ ಬೀಳಿಸಿಕೊಂಡು, "ಏನು ನನ್ನ ಮೇಲೆ ಬೇಜಾರಾ... ಒಂಥರಾ ಇದೀರಾ, ನಾ ಬ್ಯಾಂಕಿಗೆ ಹೋಗಿ ಬರಲ್ಲ ಅಂದಿದ್ದಕ್ಕೆ ತಾನೇ, ನಂಗೊತ್ತು" ಅಂತ ತಾನೇ ಪ್ರಶ್ನೆ ಕೇಳಿ ಉತ್ತರವನ್ನೂ ಹೇಳಿದಳು, ಸುಮ್ಮನೇ ನಕ್ಕೆ ರೇಜಿಗೆದ್ದಳು "ರೀ ಬಯ್ಯೋದಿದ್ರೆ ಬಯ್ದು ಬಿಡಿ, ಆದರೆ ಹೀಗೆ ಸುಮ್ಮನಿದ್ದು ಸತಾಯಿಸಬೇಡಿ" ಅಂತ ಮುಖ ತಿರುಗಿಸಿದಳು, ಈಗ ಮತ್ತೆ ನಕ್ಕಿದ್ರೆ ಹಿಡಿದುಕೊಂಡು ನಾಲ್ಕು ಬಾರಿಸಿರೋಳು ಅದಕ್ಕೇ ಬಾಯಿ ತೆರೆದೆ "ಹೂಂ, ಮತ್ತೆ ನಾ ಹೇಳಿದ್ದೊಂದು ಮಾತು ಕೇಳುತ್ತಿಯೆಂದಾದರೆ ಮಾತ್ರ" ಅಂದೆ "ನಾನ್ಯಾವಾಗ ಕೇಳಿಲ್ಲ?" ಅಂತ ಮರುಪ್ರಶ್ನೆ ಬಂತು "ಹಾಗಾದ್ರೆ ಬಯ್ಯಲಾ" ಅಂದೆ "ಏನು ನೀವೀಗ ಬಯ್ಯಲು ನಾನ್ ನಿಮ್ಮ ಮಾತು ಕೇಳ್ಬೇಕಾ" ಅಂತ ಕಚಗುಳಿಯಿಟ್ಟಳು, ಎದ್ದು ಕುಳಿತೆ. "ನಾಳೆ ನಿನಗೊಂದು ಬ್ಯಾಂಕ ಅಕೌಂಟ ತೆಗೆಯೋಣ" ಅಂದೆ, "ನನಗ್ಯಾಕೆ ಬ್ಯಾಂಕ ಅಕೌಂಟ ಎಲ್ಲಾ, ನಾನೇನು ಮಾಡಿ ಅದನ್ನ, ಅದೆಲ್ಲ ನಂಗೆ ಗೊತ್ತಾಗಲ್ಲ ಬಿಡಿ" ಅಂದ್ಲು ಮತ್ತದೇ ವರಸೆ... "ನಾನ್ಯಾವಾಗ ಕೇಳಿಲ್ಲ ಅಂತನ್ನೋದು, ಹೇಳಿದ್ದಕ್ಕೆಲ್ಲ ಸುಮ್ನೆ ವಾದ ಹಾಕೋದು" ಅನ್ನುತ್ತ ಎದ್ದು ಹೊರಟೆ. ಹಿಡಿದೆಳೆದು ಕೂರಿಸಿ "ಜೀ ಹುಜೂರ, ತಮ್ಮ ಅಪ್ಪಣೆಯಂತಾಗಲಿ" ಅಂದ್ಲು. ತಲೆಮೇಲೆ ಇನ್ನೂ ಪ್ರಶ್ನಾರ್ಥಕ ಚಿಹ್ನೆಯಿನ್ನೂ ಕಾಣುತ್ತಿತು...
ಮರುದಿನ ಫೊನು ಮಾಡಿದರೆ, ಬ್ಯಾಂಕಿನ ಹುಡುಗನೊಬ್ಬ ಬಂದು ಫಾರ್ಮು ತುಂಬಿಸಿದ, ಅವಳ ಸಹಿ ಮಾಡಿ ಕಳಿಸಿದ್ದಾಯ್ತು. ಒಹ್ ಅಕೌಂಟ್ ಅಂದ್ರೆ ಇಷ್ಟೇನಾ ಅಂತ ಅವಳೂ ಖುಶಿಯಾದಳು, ಅವಳಿಗೇನು ಗೊತ್ತಿತ್ತು ಇನ್ನೂ ಏನೇನು ಕಾದಿದೆಯೆಂದು...
ಶುರುವಾಯಿತು ನೋಡಿ... ಐನೂರು ಕೈಗಿತ್ತೆ, "ಬ್ಯಾಂಕಿಗೆ ಹೋಗಿ ತುಂಬಿ ಬಾ" ಅಂದೆ, ಇದ್ಯಾಕೆ ಅನ್ನುವಂತೆ ನನ್ನತ್ತ ನೋಡಿದಳು, ಮತ್ತೆ ಅಕೌಂಟ್ ತೆಗೆದದ್ದು ಯಾಕೆ... ಅವಳ ಸಿಧ್ಧ ಉತ್ತರ ಬಂತು "ನಂಗೊತ್ತಿಲ್ಲ" ಅಂತ, "ನಾ ಹೇಳುತ್ತೀನಲ್ಲ" ಅಂತ ನಾ, "ರೀ ನೀವೂ ಜತೆಗೆ ಬನ್ನಿ, ಪ್ಲೀಜ ನಂಗೊತ್ತಾಗಲ್ಲ" ಅಂತಂದ್ಲು, "ಒಬ್ಬಳೇ ಹೋಗಬೇಕು ತುಂಬಿ ಬರಬೇಕು" ಅಂತ ನಿರಾಕರಿಸಿದರೆ, "ನಂಗೊತ್ತಿಲ್ಲ ನನಗ್ಯಾಕೆ ಇದೆಲ್ಲ, ಬೇಡ, ಅಕೌಂಟ ತೆಗೆಯಲು ಹೇಳಿದಿರಿ ಮಾಡಿದೆ, ಇದೆಲ್ಲ ನನ್ನ ಕೈಲಾಗಲ್ಲ" ಅಂತ ಕೈಚೆಲ್ಲಿದಳು. ನಾ ಬಿಡಬೇಕಲ್ಲ. "ಯಾಕೆ ನಿನ್ನ ಕೈಲಾಗಲ್ಲ, ಇದೇ ನಿನ್ನ ತೊಂದ್ರೆ, ಬರೀ ಎಲ್ಲದಕ್ಕೂ ಹಿಂಜರಿತ, ಮಾಡಾಕಾಗಲ್ಲ, ಗೊತ್ತಿಲ್ಲ, ಕೈಲಾಗಲ್ಲ... ಇದೇ ಮಾತು, ಮಾಡಬೇಕೆಂದರೆ ಎಲ್ಲ ಆಗುತ್ತದೆ, ನಾ ಹೇಳುತ್ತೇನೆ ಹೇಗೆ ಎಲ್ಲ ಅಂತ, ನಡೆ" ಅಂತಂದೆ. "ನಾನೊಲ್ಲೆ, ನಾ ಉಳಿಸಿ ಮಾಡಬೇಕೇನಿದೆ ಈಗ" ಅಂತ ಮತ್ತದೇ ರಾಗ, "ಪ್ರಶ್ನೆ ಉಳಿಸುವುದಲ್ಲ, ನೀ ಮುಂದೆ ಹೋಗಿ ಮಾಡುವುದು, ಇಷ್ಟಕ್ಕೂ ಆರ್ಥಿಕ ಹಿಂಜರಿತದಿಂದ ಎಲ್ಲ ತತ್ತರಿಸಿರುವಾಗ ಉಳಿಸಿದರೇನು ಕೇಡು, ಆ ಆರ್ಥಿಕ ಹಿಂಜರಿತಕ್ಕಿಂತ ನನಗೆ ನಿನ್ನ ಮಾನಸಿಕ ಹಿಂಜರಿತ ಬಹಳ ತಲೆ ತಿನ್ನುತ್ತಿದೆ" ಅಂದೆ. ಪಾಕಶಾಲೆಗೆ ಹೋಗಿ ಯಾವುದೊ ಒಂದು ಸ್ಟೀಲ ಡಬ್ಬಿ ಎತ್ತಿಕೊಂಡು ಬಂದು ನನ್ನ ಮುಂದೆ ಸುರಿದಳು, ಒಂದು ಎರಡು ಹತ್ತು ಐವತ್ತು ನೂರು ರೂಪಾಯಿಗಳ ರಾಶಿ. ನನಗೆ ಮನೆಯಲ್ಲಿ ಅಷ್ಟು ದುಡ್ಡಿದೆ ಅಂತ ಗೊತ್ತಾಗಿದ್ದೆ ಆವಾಗ. "ಎಲ್ಲೇ ಇತ್ತು ಇದೆಲ್ಲ" ಅಂದರೆ, "ಅದೇ ನೀವು ಕೊಟ್ಟಿದ್ದರಲ್ಲೇ ಉಳಿದದ್ದು ಸೇರಿಸಿ ಇಟ್ಟಿದ್ದು, ನಾನು ಉಳಿಸಲ್ವಾ, ಈಗ ಹೇಳಿ ಬ್ಯಾಂಕ ಯಾಕೆ" ತಿರುಗಿ ಬಿದ್ಲು. ಒಂದು ನೂರು ರೂಪಾಯಿ ನೋಟು ಎತ್ತಲು ಹೋದೆ, ಛಟೀರೆಂದು ಏಟು ಬಿತ್ತು, ಹಲ್ಲು ಕಿರಿದೆ... ಎಲ್ಲ ಎತ್ತಿ, ಅದರಲ್ಲಿ ತುಂಬಿ, "ನಾಳೆ ಇದೇ ಡಬ್ಬದಲ್ಲಿ ಇರುತ್ತೆ ಎತ್ತಬಹುದು ಅನ್ಕೋಬೇಡಿ, ಜಾಗ ಬದಲಾಗತ್ತೆ" ಅಂತ ತಾಕೀತು ಬೇರೆ ಮಾಡಿದಳು, ಅವಳ ಜಾಣ್ಮೆಗೆ ನಿಜವಾಗಲೂ ಮೆಚ್ಚಿದೆ.
ಆದರೆ ನಾ ಅಷ್ಟಕ್ಕೇ ಬಿಡಬೇಕಲ್ಲ, "ರೆಡಿ ಆಗ್ತೀಯಾ" ಅಂದೆ, "ರೀ ನಿಮಗೆ ಏನ್ ತೊಂದ್ರೆ, ಯಾಕೆ ಸುಮ್ನೆ ಕಾಡ್ತಾ ಇದೀರಾ, ನಾ ಹೋಗಲ್ಲ" ಹಠ ಹಿಡಿದಳು. "ಯಾಕೆ" ಅಂದ್ರೆ, "ನೀವ್ ಹೇಳಿ ಯಾಕೆ" ಅಂತ ವಾಪಸ್ಸು ನನಗೇ ಕೇಳಿದಳು. "ನಾಳೆ ನನಗೇ ಏನಾದ್ರೂ ಆದ್ರೆ, ಎನ್ ಮಾಡ್ತೀಯಾ" ಅಂತಿದ್ದಂಗೆ "ರೀ ಬಿಟ್ತು ಅನ್ನಿ" ಅಂತ ನಡುವೆ ಬಾಯಿ ಹಾಕಿ, ಬಾಯಿ ಮೇಲೆ ಬೆರಳಿಟ್ಟಳು, ಬೆರಳಿನೊಂದಿಗೆ ಅವಳನ್ನೂ ಹತ್ತಿರ ಎಳೆದು ಕೂರಿಸಿಕೊಂಡು "ನೀನ್ ಬಿಟ್ತು ಅನ್ನು ಅಂದ್ರೆ ಆಗೋದು ಬಿಡುತ್ತಾ, ಕೆಟ್ಟದ್ದನ್ನೇ ಯೋಚನೆ ಮಾಡು, ಆದರೆ ಏನು ಮಾಡ್ತೀಯಾ, ನೀನೇ ನಿನ್ನ ಪಾಡಿಗೆ ನಿನ್ನೆಲ್ಲ ಕೆಲಸ ಮಾಡಿಕೊಳ್ಳೊದು ಹೇಗೆ, ನಂಗೊತ್ತಿಲ್ಲ ಅಂತ ಕೂರುತ್ತೀಯಾ" ಹೀಗೆ ಹೇಳುತ್ತಿದ್ದರೆ ತಲೆಗೆ ಇಳಿಯುತ್ತಿತ್ತು ಅಂತ ಕಾಣುತ್ತದೆ. ಕೊನೆಗೂ ಸ್ವಲ್ಪ ರಾಜಿಯಾಗಿ, ಬರಲು ತಯ್ಯಾರಾದರೂ, "ರೀ ಅಲ್ಲಿ ಎಲ್ಲ ನನ್ನೇ ನೋಡುತ್ತಾರೆ, ನಂಗೊಂಥರಾ ಆಗುತ್ತೆ, ಹೆದರಿಕೆ ಆಗತ್ತೆ" ಅಂತಂದಳು, "ಅಷ್ಟು ಅಂದವಾಗಿದೀಯಾ ಮತ್ತೆ ನೊಡದೇ ಇರ್ತಾರಾ" ಅಂದ್ರೆ ಮುಖ ನಾಚಿ ಕೆಂಪಾಯಿತು. ಆದರೂ ಇನ್ನೂ ಹೆದರುತ್ತಲೇ ಇದ್ದಳು, ಕೊನೆಗೆ ನಾನೂ ಬರುತ್ತೇನೆ ಆದರೆ ನನ್ನ ಅಲ್ಲಿ ಎನೂ ಕೇಳೋ ಹಾಗಿಲ್ಲ ಎಲ್ಲ ನೀನೆ ಮಾಡಬೇಕು , ನಾನ್ಯಾರೊ ನೀನ್ಯಾರೊ ಅನ್ನೊ ಹಾಗೆ, ಏನಾದ್ರೂ ತೊಂದ್ರೆ ಆದ್ರೆ ಬರ್ತೀನಿ, ಇದೊಂದು ಸಾರಿ ಮಾತ್ರ ಅಂತ ಹೊರಡಿಸಿದೆ, ಯಾವ ಸ್ಲಿಪ್ ತುಂಬ ಬೇಕು ಹೇಗೆ, ತೊಂದ್ರೆಯಾದ್ರೆ, ಹೆಲ್ಪಡೆಸ್ಕಗೆ ಕೇಳೊದು, ಎಲ್ಲ ಹೇಳಿಕೊಟ್ಟೆ.
ಬ್ಯಾಂಕಿನೆದರು ಗಾಡಿ ನಿಲ್ಲಿಸಿದಾಗ, ಬೆವತಿದ್ದಳು, ಬಿಸಿಲಿಗೊ, ಹೆದರಿಯೊ ಗೊತ್ತಿಲ್ಲ, ಅವಳು ಮುಂದೆ ಹೋದರೆ, ನಾ ನಂತರ ಒಳ ಸೇರಿದೆ. ದೂರ ಕುಳಿತು ಅವಳು ಮಾಡುವುದು ನೋಡತೊಡಗಿದೆ. ಒಳಗೆ ಹೋದವಳು, ಅಲ್ಲಿ ಇಲ್ಲಿ ತಡಕಾಡಿ ಸ್ಲಿಪ್ ತಂದು ಬರೆದಳು, ಅದೇನು ಬರೆದಳೊ, ಹೇಳಿಕೊಟ್ಟಿದ್ದು ನೆನಪಿತ್ತೊ ಇಲ್ವೊ, ಯಾರಿಗೆ ಗೊತ್ತು, ನನಗೆ ಮಾತ್ರ ಹಿಗ್ಗು ಅಂತೂ ಅವಳು ಆತ್ಮ ವಿಶ್ವಾಸದಿಂದ ಮಾಡುತ್ತಿದಾಳಲ್ಲ ಅಂತ, ಅಷ್ಟರಲ್ಲೇ ಎಡವಟ್ಟಾಯಿತು, ಅವಳಿಗೆ ಏನೊ ತಿಳಿಯದಾಯಿತು, ಯಾರನ್ನ ಕೇಳೊದು ಅನ್ನುವಂತೆ ನನ್ನೆಡೆಗೆ ನೋಡಿದಳು, ಆಕಡೆ ಹೆಲ್ಪ್ ಡೆಸ್ಕಿನೆಡೆಗೆ ನೋಡಿದೆ, ಎರಡು ಅಂತ ಸನ್ನೆಯಲ್ಲೆ ಎರಡನೇ ಹೆಲ್ಪಡೆಸ್ಕಗೆ ಹೋಗಲು ಸೂಚಿಸಿದೆ, ಮೇಡಮ್ಮು ಕೂತಿದ್ದರಲ್ಲ ಅಲ್ಲಿ ಅದಕ್ಕೆ, ಯಾಕೆಂದರೆ, ಈಕಡೆ ಹುಡುಗ ಇದ್ದ, ಇವಳಂದವ ನೋಡಿ ಆ ಮಹಾಶಯ ಹೆಲ್ಪು ಮಾಡಲೆಂದು ಪೂರ್ತಿ ಸ್ಲಿಪ್ಪ ತುಂಬಿ ಕೊಡಬಹುದಿತ್ತು, ಆದರೆ ನನಗದು ಬೇಕಿರಲಿಲ್ಲ. ಮೇಡಮ್ಮು ಹಾಗೆ ಮಾಡಲ್ಲ ಅನ್ನುವುದು ಖಾತ್ರಿಯಿತ್ತು. ಅಂತೂ ಅಲ್ಲಿಗೆ ಹೋಗಿ ಕೇಳಿ ಏನೊ ತುಂಬಿ, ಕ್ಯೂನಲ್ಲಿ ನಿಂತಳು ದುಡ್ಡು ಕಟ್ಟಲು. ಅದೋ ಅಲ್ಲಿ ಅವಳ ಮುಂದೆ ನಿಂತ ಸುಂದರಿಯ ನಾ ನೊಡುತ್ತಿದ್ದಂತೆ ಅವಳಿಗೆ ಗೊತ್ತಾಗಬೇಕೆ, ಅವಳು ಕಾಣದಂತೆ ಮರೆ ಮಾಡಿ ನಿಂತ ಹಲ್ಲು ಕಿರಿದಳು. ಅಂತೂ ಇಂತೂ ತುಂಬಿ ಹೊರಬಂದಳು. ಅವಳ ಮುಖದಲ್ಲಿ ಆನಂದ ನೋಡಬೇಕಿತ್ತು, ಏನೊ ಸಾಧಿಸಿದ ತೃಪ್ತಿ, ಆತ್ಮವಿಶ್ವಾಸ ತುಂಬಿದಂತೆ ಕಾಣುತ್ತಿತ್ತು.
ಹೊರ ಬಂದವಳೇ "ನೋಡಿದ್ರಾ ಹೇಗೆ ತುಂಬಿ ಬಂದೆ" ಅಂತ ಹೆಮ್ಮೆಯಿಂದ ಹೇಳುತ್ತಿದ್ದಳು, ನನಗೆ ಅವಳ ಮೇಲೆ ವಿಶ್ವಾಸವಿತ್ತು, ಅವಳಿಗೆ ತನ್ನ ಮೇಲೆ ತನಗಿರಲಿಲ್ಲ, ಅದು ಈಗ ಅಲ್ಪಸ್ವಲ್ಪವಾದರೂ ಬಂದಾಗಿತ್ತು. ನೋಡಿ ನಾ ಸುಮ್ಮನೇ ನಕ್ಕೆ "ನಾಳೆ ನೀನೊಬ್ಬಳೇ ಬರ್ತೀಯಾ" ಅಂದ್ರೆ "ಒಹ್ ನಾನೊಬ್ಬಳೇ ಬರ್ತೀನಿ, ನೀವು ಬೇಡ, ಬ್ಯಾಂಕನಲ್ಲೂ ಹುಡುಗೀರ ನೋಡ್ತೀರಾ" ಅಂತ ಗುದ್ದಿದ್ದಳು, ಮುಂಜಾನೆಯಿಂದ ಏಟು ತಿನ್ನುವುದೇ ಆಗಿತ್ತು. ಏನಾದ್ರೂ ತಿನ್ನೋಣವೆಂದು ಅಲ್ಲೇ ಹೊಟೇಲಿಗೆ ನುಗ್ಗಿ ತಿಂದು ಮನೆ ಸೇರಿದೆವು.
"ನಾಳೆ ಡಿಡಿ ಮಾಡಿಸುವಂತೆ" ಅಂತಂದೆ ದುರುಗುಟ್ಟಿ ನೋಡಿದ್ಲು, "ಆಗಲ್ಲ ಅಂದ್ರೆ ಬಿಡು" ಅಂತ ಅಹಂಗೆ ಚುಚ್ಚಿದೆ. "ಯಾಕೆ ಆಗಲ್ಲ, ಮಾಡಿ ತರ್ತೀನಿ ಬಿಡಿ" ಅಂದ್ಲು. ಇದೇ ಉತ್ತರಕ್ಕಾಗಿ ಕಾದಿದ್ದೆ ನಾನು... ಅವಳಿಗೀಗ ನಾನೂ ಮಾಡಬಹುದು ಅಂತ ಧೈರ್ಯ ಬಂದಿತ್ತು, ಮೊದಲೂ ಮಾಡಬಹುದಿತ್ತು ಆದರೆ ಆರಂಭ ಶುರುವಿಡದಿರಲು ಹಿಂಜರಿತ ಕಾರಣವಾಗಿತ್ತು, ಮೊದಲ ಅಡಿಯಿಟ್ಟ ಮೇಲೆ, ಮುಂದೆ ಹೊದೀನೆಂಬ ಅತ್ಮವಿಶ್ವಾಸ ಬಂದಿತ್ತು. "ಇದೇ ಘಂಟೆ ಮೊದಲು, ಆಗಲ್ಲ ಅಂತಿದ್ದೆ" ಅಂದೆ. "ರೀ ಇಷ್ಟು ಸಲೀಸೆಂದು ಗೊತ್ತಿರಲಿಲ್ಲ, ನೀವಿದೀರಲ್ಲ, ನನ್ನಿಂದ ಏನೆಲ್ಲ ಮಾಡಿಸುತ್ತೀರಿ ಅಂತೀನಿ" ಅಂತ ಬಹುಮಾನವೆನ್ನುವಂತೆ ಮುತ್ತಿಕೊಂಡು ಗಲ್ಲಕೊಂದು ಮುತ್ತನಿಟ್ಟಳು. "ಮಾಡಬೇಕೆಂದರೆ ಎಲ್ಲ ಆಗತ್ತೆ, ಕೇಳಿ ತಿಳಿದುಕೊಂಡು ಮಾಡಲು ಮುಂದಡಿಯಿಡು ಸಾಕು, ಎಲ್ಲ ಆಗತ್ತೆ, ನಾಳೆ ನಾನೇನು ಹೇಳಲ್ಲ, ಅಲ್ಲೇ ಕೇಳಿ, ಡಿಡಿ ಮಾಡಿಸಿ ತರಬೇಕು" ಅಂದರೆ, ಸ್ವಲ್ಪ ಅನುಮಾನದ ಗೆರೆಯಾಡಿತು ಆದ್ರೂ ಧೈರ್ಯ ಮಾಡಿದ್ಲು. ಮರುದಿನ ಡಿಡಿ ನನ್ನ ಕೈ ಸೇರಿತ್ತು.
ಇಂದು ಬ್ಯಾಂಕಿನಲ್ಲಿ ಎಲ್ಲ ಕೆಲಸ ಮಾಡಿಕೊಂಡು ಬರುತ್ತಾಳೆ, ಎಷ್ಟೋ ಸಹಾಯವಾಗಿದೆ. ಅವಳ ಉಳಿತಾಯ ಖಾತೆ ಎಷ್ಟು ತುಂಬಿದೆಯೋ, ಆರ್ಥಿಕ ಹಿಂಜರಿತದಲ್ಲಿ ನಮಗೂ ಕೂಡಿಡುವುದು ಕಲಿತಾಗಿದೆಯೋ ಅದಕ್ಕಿಂತ ಅವಳ ಆತ್ಮವಿಶ್ವಾಸದ ಖಾತೆ ದ್ವಿಗುಣಗೊಳ್ಳುತ್ತ ಸಾಗಿ ಆರ್ಥಿಕ ಹಾಗೂ ಮಾನಸಿಕ ಹಿಂಜರಿತಗಳು ಹಿಂಜರಿದಿವೆ. ಬ್ಯಾಂಕಿನ ಮೇಡಮನೊಂದಿಗೆ ಇವಳ ಗೆಳೆತನವಾಗಿದೆ, ಹೋದಾಗೊಮ್ಮೆ ಒಂದರ್ಧ ಘಂಟೆ ಹರಟೆ ಹೊಡೆದು ಬಂದಿರುತ್ತಾಳೆ. ಅವಳ ದುಡ್ಡಿನ ಡಬ್ಬಗಳು ಬ್ಯಾಂಕಿಗೆ ವರ್ಗವಾಗಿವೆ, ನಿನ್ನೇನೇ ಸಾವಿರ ತುಂಬಿ ಬಂದವಳು, ಇಂದು ಮತ್ತೆ ಮತ್ತೆ ತುಂಬುತ್ತೇನೆಂದು ಜೇಬಿಗೆ ಕೈಹಾಕಿದ್ಲು, ಇವಳಿಗೆ ಕಲಿಸಿದ್ದೆ ತಪ್ಪಾಯಿತೇನೊ ಅಂತ ನಾನೂ ಕೈಗೊಂದು ಏಟು ಕೊಟ್ಟೆ, ಕಳ್ಳಿ ಹಾಗೆ ಕೈ ಜಾರಿಸಿ ಹಿಂದಿನಿಂದ ಹೊಟ್ಟೆ ಸುತ್ತ ಅಮರಿಕೊಂಡು ಕಟ್ಟಿಹಾಕಿದಳು..
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/himjarita.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

