Monday, April 6, 2009

ಹಿಂಜರಿತ ಆರ್ಥಿಕವಾಗಿ, ಮಾನಸಿಕವಾಗಿ...


ಸ್ನಾನ ಮಾಡಿ ತಲೆ ಒರೆಸಿಕೊಳ್ಳುತ್ತಾ ಪಡಸಾಲೆಗೆ(ಹಾಲ್) ಬಂದೆ ಗಡಿಯಾರದತ್ತ ಕಣ್ಣು ಹಾಸಿದರೆ ಆಗಲೇ ಏಳೂವರೆಯಾಗಿತ್ತು, ಅಯ್ಯೋ ಇನ್ನು ತಯ್ಯಾರಾಗಿ ಹೊರಡಬೇಕೆಂದರೆ ಎಂಟಾಗುತ್ತದೆ, ಆಫೀಸಿನಲ್ಲಿ ಕೆಲಸ ಒಟ್ಟಿದೆ, ವಾರ ರಜೆ ತೆಗೆದುಕೊಂಡಿದ್ದರ ಪರಿಣಾಮ ಅಲ್ವೇ, ಅಂತ ಗಡಬಡಿಸಿದೆ, ಅವಳಿಗೂ ಟಿಫಿನ್ನು ಮಾಡುತ್ತೀನೊ ಇಲ್ವೋ ಅಂತ ಗುಮಾನಿ ಎದ್ದಿರಬೇಕು, ಮಾಡಿದ ಚಪಾತಿಗೆ ಸ್ವಲ್ಪ ತುಪ್ಪ ಶೇಂಗಾ(ನೆಲಗಡಲೆ)ಚಟ್ನಿ ಸವರಿ ಸುರುಳಿ ಮಾಡಿ ಕೊಟ್ಟಳು, ಮೆಚ್ಚಿಗೆಯಿಂದ ಮುಗುಳ್ನಕ್ಕು ಅದನ್ನೇ ಮೆಲ್ಲುತ್ತ ಹಾಗೇ ಬ್ಯಾಗಿಗೆ ಎನೇನೋ ತೂರಿಸಿಕೊಳ್ಳುತ್ತಿದ್ದೆ. "ಇಂದೂ ಕರೆಂಟ ಬಿಲ್ಲು ತುಂಬೊದು ಆಗಲ್ಲ ಅಲ್ವಾ, ಬಾಡಿಗೆ ಕೊಟ್ಟಿಲ್ಲ, ಗ್ಯಾಸ್ ಬೇರೆ ಬರುತ್ತೆ." ಅಂದ್ಲು. ಕಳೆದ ನಾಲ್ಕು ದಿನಗಳಿಂದ ಇದೇ ಆಗಿದೆ, ಕೆಲಸದೊತ್ತಡದಲ್ಲಿ ಏನೂ ಮಾಡಲಾಗಿಲ್ಲ, ಇಂದು ಬಿಡಲಾಗಲ್ಲ, ಎಲ್ಲ ಆನಲೈನ ತುಂಬಿ ಕೈತೊಳೆದುಕೊಳ್ಳುತ್ತಿದ್ದ ನನಗೆ ಇದೊಂದು ಕರೆಂಟು ಬಿಲ್ಲು ಆನಲೈನ ಮಾಡಿಕೊಳ್ಳಲಾಗಿರಲಿಲ್ಲ, ಅಲ್ಲದೇ ಮನೇಲೂ ದುಡ್ಡಿರಲಿಲ್ಲ. "ಒಂದು ಕೆಲ್ಸ ಮಾಡು ಈ ಕಾರ್ಡ್ ತುಗೊ, ಪಿನ್ ****(ನಿಮಗೆ ಹೇಳ್ತೀನಿ ಅನ್ಕೊಂಡ್ರಾ!!) ದುಡ್ಡು ತೆಗೆಸಿಕೊಂಡು ಬಂದು ಬಿಲ್ ತುಂಬಿ, ಬಾಡಿಗೆ ಕೊಡು, ನನಗೆ ಬಹಳ ಲೇಟಾಗುತ್ತದೆ, ಮೀಟಿಂಗ ಬೇರೆ ಇದೆ" ಅಂತಂದೆ. ಅವಳು ಆಕಾಶವೇ ತಲೆ ಮೇಲೆ ಬಿದ್ದವರ ಹಾಗೆ ಮುಖ ಮಾಡಿ "ನಂಗೆಲ್ಲ ಗೊತ್ತಾಗಲ್ಲ, ನಾಳೆ ನೊಡೋಣ" ಅಂದ್ಲು. ಸಿಟ್ಟು ಬಂತು ಆದರೆ ತಡೆದುಕೊಂಡು ಏನೂ ಮರು ಮಾತಾಡದೇ ಹೊರಟೆ.

ಅವಳಿಗೆ ಗೊತ್ತಿಲ್ಲ ಅಂತಲ್ಲ, ಪ್ರಶ್ನೆ ಅದಲ್ಲ ಇಲ್ಲಿ, ಕೇಳಿದರೆ ಹೇಗೆಂದು ನಾ ಹೇಳುತ್ತಿದ್ದೆ, ಆದರೆ ಅವಳಿಗೆ ಅದೆಲ್ಲ ಮಾಡಲು ಹೆದರಿಕೆ ಒಂಥರಾ ಹಿಂಜರಿತ. ತನ್ನಿಂದ ಮಾಡಲಾಗಲಿಕ್ಕಿಲ್ಲ ಎನ್ನೊ ಭಯ, ಒಬ್ಬಳೇ ಹೋಗಬೇಕಲ್ಲ ಅಂತ ಹಿಂದಡಿಯಿಡುತ್ತಿದ್ದಾಳೆ ಅಷ್ಟೇ. ಇದೇ ನಾ ಹೋಗಲಾಡಿಸಬೇಕಿತ್ತು. ಅವಳಲ್ಲಿ ಆತ್ಮವಿಶ್ವಾಸ ತುಂಬಿ ನನ್ನ ಮೇಲಿನ ಅವಲಂಬನೆ ಕಡಿಮೆ ಮಾಡಿಸಬೇಕಿತ್ತು.

ರಾತ್ರಿ ಬಂದಾಗ ಲೇಟಾಗಿತ್ತು, ದುಡ್ಡು ತೆಗೆಸಿಕೊಂಡು ಬಂದಿದ್ದೆ, ಅವಳಿಗೆ ಕೊಟ್ಟು ಗ್ಯಾಸಗೆ ಕೊಡು ಅಂಥೇಳಿ ಉಳಿದದ್ದು ನಿನ್ನಹತ್ರ ಇರ್ಲಿ ಬೀರುನಲ್ಲಿಡು ಅಂದೆ. ಮತ್ತೇನು ಮಾತಾಡಲಿಲ್ಲ, ಅವಳಿಗೆ ಗೊತ್ತಾಗಿತ್ತು ತಾನು ಮಾಡಲ್ಲ ಅಂದಿದ್ದು ಸಿಟ್ಟು ತರಿಸಿದೆಯೆಂದು, ಆದ್ರೆ ಮಾತಾನಾಡಲಾಗದೇ ಸುಮ್ಮನಾದ್ಲು. ಮರುದಿನ ಬಿಲ್ಲು ತುಂಬಿ ಬಾಡಿಗೆ ಕೊಟ್ಟು ಮುಗಿಸಿದೆ.

ಅಂತೂ ಕೆಲಸ ಒಂದು ಹಂತಕ್ಕೆ ಬಂದು, ಸ್ವಲ್ಪ ಬಿಡುವಾಯಿತು. ಅಂದು ಶುಕ್ರವಾರ, ಸಂಜೆ ಟೀವೀ ನೊಡುತ್ತಾ ಕುಳಿತಿರಬೇಕಾದರೆ, ಹತ್ತಿರ ಬಂದು ಕುಳಿತಳು, ಬೇರೆ ಯಾವಾಗಲೂ ಹಾಗೆ ಆಕೆ ಬಂದು ಕುಳಿತರೆ ಜಾರಿ ಮಡಿಲಲ್ಲಿ ಬಿದ್ದು ಬಿಡುವವ, ಇಂದು ಬೇಕೇಂದಲೇ ಸುಮ್ಮನಿದ್ದೆ ತಾನೇ ಎಳೆದು ಮಡಿಲಲ್ಲಿ ಬೀಳಿಸಿಕೊಂಡು, "ಏನು ನನ್ನ ಮೇಲೆ ಬೇಜಾರಾ... ಒಂಥರಾ ಇದೀರಾ, ನಾ ಬ್ಯಾಂಕಿಗೆ ಹೋಗಿ ಬರಲ್ಲ ಅಂದಿದ್ದಕ್ಕೆ ತಾನೇ, ನಂಗೊತ್ತು" ಅಂತ ತಾನೇ ಪ್ರಶ್ನೆ ಕೇಳಿ ಉತ್ತರವನ್ನೂ ಹೇಳಿದಳು, ಸುಮ್ಮನೇ ನಕ್ಕೆ ರೇಜಿಗೆದ್ದಳು "ರೀ ಬಯ್ಯೋದಿದ್ರೆ ಬಯ್ದು ಬಿಡಿ, ಆದರೆ ಹೀಗೆ ಸುಮ್ಮನಿದ್ದು ಸತಾಯಿಸಬೇಡಿ" ಅಂತ ಮುಖ ತಿರುಗಿಸಿದಳು, ಈಗ ಮತ್ತೆ ನಕ್ಕಿದ್ರೆ ಹಿಡಿದುಕೊಂಡು ನಾಲ್ಕು ಬಾರಿಸಿರೋಳು ಅದಕ್ಕೇ ಬಾಯಿ ತೆರೆದೆ "ಹೂಂ, ಮತ್ತೆ ನಾ ಹೇಳಿದ್ದೊಂದು ಮಾತು ಕೇಳುತ್ತಿಯೆಂದಾದರೆ ಮಾತ್ರ" ಅಂದೆ "ನಾನ್ಯಾವಾಗ ಕೇಳಿಲ್ಲ?" ಅಂತ ಮರುಪ್ರಶ್ನೆ ಬಂತು "ಹಾಗಾದ್ರೆ ಬಯ್ಯಲಾ" ಅಂದೆ "ಏನು ನೀವೀಗ ಬಯ್ಯಲು ನಾನ್ ನಿಮ್ಮ ಮಾತು ಕೇಳ್ಬೇಕಾ" ಅಂತ ಕಚಗುಳಿಯಿಟ್ಟಳು, ಎದ್ದು ಕುಳಿತೆ. "ನಾಳೆ ನಿನಗೊಂದು ಬ್ಯಾಂಕ ಅಕೌಂಟ ತೆಗೆಯೋಣ" ಅಂದೆ, "ನನಗ್ಯಾಕೆ ಬ್ಯಾಂಕ ಅಕೌಂಟ ಎಲ್ಲಾ, ನಾನೇನು ಮಾಡಿ ಅದನ್ನ, ಅದೆಲ್ಲ ನಂಗೆ ಗೊತ್ತಾಗಲ್ಲ ಬಿಡಿ" ಅಂದ್ಲು ಮತ್ತದೇ ವರಸೆ... "ನಾನ್ಯಾವಾಗ ಕೇಳಿಲ್ಲ ಅಂತನ್ನೋದು, ಹೇಳಿದ್ದಕ್ಕೆಲ್ಲ ಸುಮ್ನೆ ವಾದ ಹಾಕೋದು" ಅನ್ನುತ್ತ ಎದ್ದು ಹೊರಟೆ. ಹಿಡಿದೆಳೆದು ಕೂರಿಸಿ
"ಜೀ ಹುಜೂರ, ತಮ್ಮ ಅಪ್ಪಣೆಯಂತಾಗಲಿ" ಅಂದ್ಲು. ತಲೆಮೇಲೆ ಇನ್ನೂ ಪ್ರಶ್ನಾರ್ಥಕ ಚಿಹ್ನೆಯಿನ್ನೂ ಕಾಣುತ್ತಿತು...

ಮರುದಿನ ಫೊನು ಮಾಡಿದರೆ, ಬ್ಯಾಂಕಿನ ಹುಡುಗನೊಬ್ಬ ಬಂದು ಫಾರ್ಮು ತುಂಬಿಸಿದ, ಅವಳ ಸಹಿ ಮಾಡಿ ಕಳಿಸಿದ್ದಾಯ್ತು. ಒಹ್ ಅಕೌಂಟ್ ಅಂದ್ರೆ ಇಷ್ಟೇನಾ ಅಂತ ಅವಳೂ ಖುಶಿಯಾದಳು, ಅವಳಿಗೇನು ಗೊತ್ತಿತ್ತು ಇನ್ನೂ ಏನೇನು ಕಾದಿದೆಯೆಂದು...

ಶುರುವಾಯಿತು ನೋಡಿ... ಐನೂರು ಕೈಗಿತ್ತೆ, "ಬ್ಯಾಂಕಿಗೆ ಹೋಗಿ ತುಂಬಿ ಬಾ" ಅಂದೆ, ಇದ್ಯಾಕೆ ಅನ್ನುವಂತೆ ನನ್ನತ್ತ ನೋಡಿದಳು, ಮತ್ತೆ ಅಕೌಂಟ್ ತೆಗೆದದ್ದು ಯಾಕೆ... ಅವಳ ಸಿಧ್ಧ ಉತ್ತರ ಬಂತು "ನಂಗೊತ್ತಿಲ್ಲ" ಅಂತ, "ನಾ ಹೇಳುತ್ತೀನಲ್ಲ" ಅಂತ ನಾ, "ರೀ ನೀವೂ ಜತೆಗೆ ಬನ್ನಿ, ಪ್ಲೀಜ ನಂಗೊತ್ತಾಗಲ್ಲ" ಅಂತಂದ್ಲು, "ಒಬ್ಬಳೇ ಹೋಗಬೇಕು ತುಂಬಿ ಬರಬೇಕು" ಅಂತ ನಿರಾಕರಿಸಿದರೆ, "ನಂಗೊತ್ತಿಲ್ಲ ನನಗ್ಯಾಕೆ ಇದೆಲ್ಲ, ಬೇಡ, ಅಕೌಂಟ ತೆಗೆಯಲು ಹೇಳಿದಿರಿ ಮಾಡಿದೆ, ಇದೆಲ್ಲ ನನ್ನ ಕೈಲಾಗಲ್ಲ" ಅಂತ ಕೈಚೆಲ್ಲಿದಳು. ನಾ ಬಿಡಬೇಕಲ್ಲ. "ಯಾಕೆ ನಿನ್ನ ಕೈಲಾಗಲ್ಲ, ಇದೇ ನಿನ್ನ ತೊಂದ್ರೆ, ಬರೀ ಎಲ್ಲದಕ್ಕೂ ಹಿಂಜರಿತ, ಮಾಡಾಕಾಗಲ್ಲ, ಗೊತ್ತಿಲ್ಲ, ಕೈಲಾಗಲ್ಲ... ಇದೇ ಮಾತು, ಮಾಡಬೇಕೆಂದರೆ ಎಲ್ಲ ಆಗುತ್ತದೆ, ನಾ ಹೇಳುತ್ತೇನೆ ಹೇಗೆ ಎಲ್ಲ ಅಂತ, ನಡೆ" ಅಂತಂದೆ. "ನಾನೊಲ್ಲೆ, ನಾ ಉಳಿಸಿ ಮಾಡಬೇಕೇನಿದೆ ಈಗ" ಅಂತ ಮತ್ತದೇ ರಾಗ, "ಪ್ರಶ್ನೆ ಉಳಿಸುವುದಲ್ಲ, ನೀ ಮುಂದೆ ಹೋಗಿ ಮಾಡುವುದು, ಇಷ್ಟಕ್ಕೂ ಆರ್ಥಿಕ ಹಿಂಜರಿತದಿಂದ ಎಲ್ಲ ತತ್ತರಿಸಿರುವಾಗ ಉಳಿಸಿದರೇನು ಕೇಡು, ಆ ಆರ್ಥಿಕ ಹಿಂಜರಿತಕ್ಕಿಂತ ನನಗೆ ನಿನ್ನ ಮಾನಸಿಕ ಹಿಂಜರಿತ ಬಹಳ ತಲೆ ತಿನ್ನುತ್ತಿದೆ" ಅಂದೆ. ಪಾಕಶಾಲೆಗೆ ಹೋಗಿ ಯಾವುದೊ ಒಂದು ಸ್ಟೀಲ ಡಬ್ಬಿ ಎತ್ತಿಕೊಂಡು ಬಂದು ನನ್ನ ಮುಂದೆ ಸುರಿದಳು, ಒಂದು ಎರಡು ಹತ್ತು ಐವತ್ತು ನೂರು ರೂಪಾಯಿಗಳ ರಾಶಿ. ನನಗೆ ಮನೆಯಲ್ಲಿ ಅಷ್ಟು ದುಡ್ಡಿದೆ ಅಂತ ಗೊತ್ತಾಗಿದ್ದೆ ಆವಾಗ. "ಎಲ್ಲೇ ಇತ್ತು ಇದೆಲ್ಲ" ಅಂದರೆ, "ಅದೇ ನೀವು ಕೊಟ್ಟಿದ್ದರಲ್ಲೇ ಉಳಿದದ್ದು ಸೇರಿಸಿ ಇಟ್ಟಿದ್ದು, ನಾನು ಉಳಿಸಲ್ವಾ, ಈಗ ಹೇಳಿ ಬ್ಯಾಂಕ ಯಾಕೆ" ತಿರುಗಿ ಬಿದ್ಲು. ಒಂದು ನೂರು ರೂಪಾಯಿ ನೋಟು ಎತ್ತಲು ಹೋದೆ, ಛಟೀರೆಂದು ಏಟು ಬಿತ್ತು, ಹಲ್ಲು ಕಿರಿದೆ... ಎಲ್ಲ ಎತ್ತಿ, ಅದರಲ್ಲಿ ತುಂಬಿ, "ನಾಳೆ ಇದೇ ಡಬ್ಬದಲ್ಲಿ ಇರುತ್ತೆ ಎತ್ತಬಹುದು ಅನ್ಕೋಬೇಡಿ, ಜಾಗ ಬದಲಾಗತ್ತೆ" ಅಂತ ತಾಕೀತು ಬೇರೆ ಮಾಡಿದಳು, ಅವಳ ಜಾಣ್ಮೆಗೆ ನಿಜವಾಗಲೂ ಮೆಚ್ಚಿದೆ.

ಆದರೆ ನಾ ಅಷ್ಟಕ್ಕೇ ಬಿಡಬೇಕಲ್ಲ, "ರೆಡಿ ಆಗ್ತೀಯಾ" ಅಂದೆ, "ರೀ ನಿಮಗೆ ಏನ್ ತೊಂದ್ರೆ, ಯಾಕೆ ಸುಮ್ನೆ ಕಾಡ್ತಾ ಇದೀರಾ, ನಾ ಹೋಗಲ್ಲ" ಹಠ ಹಿಡಿದಳು. "ಯಾಕೆ" ಅಂದ್ರೆ, "ನೀವ್ ಹೇಳಿ ಯಾಕೆ" ಅಂತ ವಾಪಸ್ಸು ನನಗೇ ಕೇಳಿದಳು. "ನಾಳೆ ನನಗೇ ಏನಾದ್ರೂ ಆದ್ರೆ, ಎನ್ ಮಾಡ್ತೀಯಾ" ಅಂತಿದ್ದಂಗೆ "ರೀ ಬಿಟ್ತು ಅನ್ನಿ" ಅಂತ ನಡುವೆ ಬಾಯಿ ಹಾಕಿ, ಬಾಯಿ ಮೇಲೆ ಬೆರಳಿಟ್ಟಳು, ಬೆರಳಿನೊಂದಿಗೆ ಅವಳನ್ನೂ ಹತ್ತಿರ ಎಳೆದು ಕೂರಿಸಿಕೊಂಡು "ನೀನ್ ಬಿಟ್ತು ಅನ್ನು ಅಂದ್ರೆ ಆಗೋದು ಬಿಡುತ್ತಾ, ಕೆಟ್ಟದ್ದನ್ನೇ ಯೋಚನೆ ಮಾಡು, ಆದರೆ ಏನು ಮಾಡ್ತೀಯಾ, ನೀನೇ ನಿನ್ನ ಪಾಡಿಗೆ ನಿನ್ನೆಲ್ಲ ಕೆಲಸ ಮಾಡಿಕೊಳ್ಳೊದು ಹೇಗೆ, ನಂಗೊತ್ತಿಲ್ಲ ಅಂತ ಕೂರುತ್ತೀಯಾ" ಹೀಗೆ ಹೇಳುತ್ತಿದ್ದರೆ ತಲೆಗೆ ಇಳಿಯುತ್ತಿತ್ತು ಅಂತ ಕಾಣುತ್ತದೆ. ಕೊನೆಗೂ ಸ್ವಲ್ಪ ರಾಜಿಯಾಗಿ, ಬರಲು ತಯ್ಯಾರಾದರೂ, "ರೀ ಅಲ್ಲಿ ಎಲ್ಲ ನನ್ನೇ ನೋಡುತ್ತಾರೆ, ನಂಗೊಂಥರಾ ಆಗುತ್ತೆ, ಹೆದರಿಕೆ ಆಗತ್ತೆ" ಅಂತಂದಳು, "ಅಷ್ಟು ಅಂದವಾಗಿದೀಯಾ ಮತ್ತೆ ನೊಡದೇ ಇರ್ತಾರಾ" ಅಂದ್ರೆ ಮುಖ ನಾಚಿ ಕೆಂಪಾಯಿತು. ಆದರೂ ಇನ್ನೂ ಹೆದರುತ್ತಲೇ ಇದ್ದಳು, ಕೊನೆಗೆ ನಾನೂ ಬರುತ್ತೇನೆ ಆದರೆ ನನ್ನ ಅಲ್ಲಿ ಎನೂ ಕೇಳೋ ಹಾಗಿಲ್ಲ ಎಲ್ಲ ನೀನೆ ಮಾಡಬೇಕು , ನಾನ್ಯಾರೊ ನೀನ್ಯಾರೊ ಅನ್ನೊ ಹಾಗೆ, ಏನಾದ್ರೂ ತೊಂದ್ರೆ ಆದ್ರೆ ಬರ್ತೀನಿ, ಇದೊಂದು ಸಾರಿ ಮಾತ್ರ ಅಂತ ಹೊರಡಿಸಿದೆ, ಯಾವ ಸ್ಲಿಪ್ ತುಂಬ ಬೇಕು ಹೇಗೆ, ತೊಂದ್ರೆಯಾದ್ರೆ, ಹೆಲ್ಪಡೆಸ್ಕಗೆ ಕೇಳೊದು, ಎಲ್ಲ ಹೇಳಿಕೊಟ್ಟೆ.

ಬ್ಯಾಂಕಿನೆದರು ಗಾಡಿ ನಿಲ್ಲಿಸಿದಾಗ, ಬೆವತಿದ್ದಳು, ಬಿಸಿಲಿಗೊ, ಹೆದರಿಯೊ ಗೊತ್ತಿಲ್ಲ, ಅವಳು ಮುಂದೆ ಹೋದರೆ, ನಾ ನಂತರ ಒಳ ಸೇರಿದೆ. ದೂರ ಕುಳಿತು ಅವಳು ಮಾಡುವುದು ನೋಡತೊಡಗಿದೆ. ಒಳಗೆ ಹೋದವಳು, ಅಲ್ಲಿ ಇಲ್ಲಿ ತಡಕಾಡಿ ಸ್ಲಿಪ್ ತಂದು ಬರೆದಳು, ಅದೇನು ಬರೆದಳೊ, ಹೇಳಿಕೊಟ್ಟಿದ್ದು ನೆನಪಿತ್ತೊ ಇಲ್ವೊ, ಯಾರಿಗೆ ಗೊತ್ತು, ನನಗೆ ಮಾತ್ರ ಹಿಗ್ಗು ಅಂತೂ ಅವಳು ಆತ್ಮ ವಿಶ್ವಾಸದಿಂದ ಮಾಡುತ್ತಿದಾಳಲ್ಲ ಅಂತ, ಅಷ್ಟರಲ್ಲೇ ಎಡವಟ್ಟಾಯಿತು, ಅವಳಿಗೆ ಏನೊ ತಿಳಿಯದಾಯಿತು, ಯಾರನ್ನ ಕೇಳೊದು ಅನ್ನುವಂತೆ ನನ್ನೆಡೆಗೆ ನೋಡಿದಳು, ಆಕಡೆ ಹೆಲ್ಪ್ ಡೆಸ್ಕಿನೆಡೆಗೆ ನೋಡಿದೆ, ಎರಡು ಅಂತ ಸನ್ನೆಯಲ್ಲೆ ಎರಡನೇ ಹೆಲ್ಪಡೆಸ್ಕಗೆ ಹೋಗಲು ಸೂಚಿಸಿದೆ, ಮೇಡಮ್ಮು ಕೂತಿದ್ದರಲ್ಲ ಅಲ್ಲಿ ಅದಕ್ಕೆ, ಯಾಕೆಂದರೆ, ಈಕಡೆ ಹುಡುಗ ಇದ್ದ, ಇವಳಂದವ ನೋಡಿ ಆ ಮಹಾಶಯ ಹೆಲ್ಪು ಮಾಡಲೆಂದು ಪೂರ್ತಿ ಸ್ಲಿಪ್ಪ ತುಂಬಿ ಕೊಡಬಹುದಿತ್ತು, ಆದರೆ ನನಗದು ಬೇಕಿರಲಿಲ್ಲ. ಮೇಡಮ್ಮು ಹಾಗೆ ಮಾಡಲ್ಲ ಅನ್ನುವುದು ಖಾತ್ರಿಯಿತ್ತು. ಅಂತೂ ಅಲ್ಲಿಗೆ ಹೋಗಿ ಕೇಳಿ ಏನೊ ತುಂಬಿ, ಕ್ಯೂನಲ್ಲಿ ನಿಂತಳು ದುಡ್ಡು ಕಟ್ಟಲು. ಅದೋ ಅಲ್ಲಿ ಅವಳ ಮುಂದೆ ನಿಂತ ಸುಂದರಿಯ ನಾ ನೊಡುತ್ತಿದ್ದಂತೆ ಅವಳಿಗೆ ಗೊತ್ತಾಗಬೇಕೆ, ಅವಳು ಕಾಣದಂತೆ ಮರೆ ಮಾಡಿ ನಿಂತ ಹಲ್ಲು ಕಿರಿದಳು. ಅಂತೂ ಇಂತೂ ತುಂಬಿ ಹೊರಬಂದಳು. ಅವಳ ಮುಖದಲ್ಲಿ ಆನಂದ ನೋಡಬೇಕಿತ್ತು, ಏನೊ ಸಾಧಿಸಿದ ತೃಪ್ತಿ, ಆತ್ಮವಿಶ್ವಾಸ ತುಂಬಿದಂತೆ ಕಾಣುತ್ತಿತ್ತು.

ಹೊರ ಬಂದವಳೇ "ನೋಡಿದ್ರಾ ಹೇಗೆ ತುಂಬಿ ಬಂದೆ" ಅಂತ ಹೆಮ್ಮೆಯಿಂದ ಹೇಳುತ್ತಿದ್ದಳು,
ನನಗೆ ಅವಳ ಮೇಲೆ ವಿಶ್ವಾಸವಿತ್ತು, ಅವಳಿಗೆ ತನ್ನ ಮೇಲೆ ತನಗಿರಲಿಲ್ಲ, ಅದು ಈಗ ಅಲ್ಪಸ್ವಲ್ಪವಾದರೂ ಬಂದಾಗಿತ್ತು. ನೋಡಿ ನಾ ಸುಮ್ಮನೇ ನಕ್ಕೆ "ನಾಳೆ ನೀನೊಬ್ಬಳೇ ಬರ್ತೀಯಾ" ಅಂದ್ರೆ "ಒಹ್ ನಾನೊಬ್ಬಳೇ ಬರ್ತೀನಿ, ನೀವು ಬೇಡ, ಬ್ಯಾಂಕನಲ್ಲೂ ಹುಡುಗೀರ ನೋಡ್ತೀರಾ" ಅಂತ ಗುದ್ದಿದ್ದಳು, ಮುಂಜಾನೆಯಿಂದ ಏಟು ತಿನ್ನುವುದೇ ಆಗಿತ್ತು. ಏನಾದ್ರೂ ತಿನ್ನೋಣವೆಂದು ಅಲ್ಲೇ ಹೊಟೇಲಿಗೆ ನುಗ್ಗಿ ತಿಂದು ಮನೆ ಸೇರಿದೆವು.

"ನಾಳೆ ಡಿಡಿ ಮಾಡಿಸುವಂತೆ" ಅಂತಂದೆ ದುರುಗುಟ್ಟಿ ನೋಡಿದ್ಲು, "ಆಗಲ್ಲ ಅಂದ್ರೆ ಬಿಡು" ಅಂತ ಅಹಂಗೆ ಚುಚ್ಚಿದೆ. "ಯಾಕೆ ಆಗಲ್ಲ, ಮಾಡಿ ತರ್ತೀನಿ ಬಿಡಿ" ಅಂದ್ಲು. ಇದೇ ಉತ್ತರಕ್ಕಾಗಿ ಕಾದಿದ್ದೆ ನಾನು... ಅವಳಿಗೀಗ ನಾನೂ ಮಾಡಬಹುದು ಅಂತ ಧೈರ್ಯ ಬಂದಿತ್ತು, ಮೊದಲೂ ಮಾಡಬಹುದಿತ್ತು ಆದರೆ ಆರಂಭ ಶುರುವಿಡದಿರಲು ಹಿಂಜರಿತ ಕಾರಣವಾಗಿತ್ತು, ಮೊದಲ ಅಡಿಯಿಟ್ಟ ಮೇಲೆ, ಮುಂದೆ ಹೊದೀನೆಂಬ ಅತ್ಮವಿಶ್ವಾಸ ಬಂದಿತ್ತು. "ಇದೇ ಘಂಟೆ ಮೊದಲು, ಆಗಲ್ಲ ಅಂತಿದ್ದೆ" ಅಂದೆ. "ರೀ ಇಷ್ಟು ಸಲೀಸೆಂದು ಗೊತ್ತಿರಲಿಲ್ಲ, ನೀವಿದೀರಲ್ಲ, ನನ್ನಿಂದ ಏನೆಲ್ಲ ಮಾಡಿಸುತ್ತೀರಿ ಅಂತೀನಿ" ಅಂತ ಬಹುಮಾನವೆನ್ನುವಂತೆ ಮುತ್ತಿಕೊಂಡು ಗಲ್ಲಕೊಂದು ಮುತ್ತನಿಟ್ಟಳು. "ಮಾಡಬೇಕೆಂದರೆ ಎಲ್ಲ ಆಗತ್ತೆ, ಕೇಳಿ ತಿಳಿದುಕೊಂಡು ಮಾಡಲು ಮುಂದಡಿಯಿಡು ಸಾಕು, ಎಲ್ಲ ಆಗತ್ತೆ, ನಾಳೆ ನಾನೇನು ಹೇಳಲ್ಲ, ಅಲ್ಲೇ ಕೇಳಿ, ಡಿಡಿ ಮಾಡಿಸಿ ತರಬೇಕು" ಅಂದರೆ, ಸ್ವಲ್ಪ ಅನುಮಾನದ ಗೆರೆಯಾಡಿತು ಆದ್ರೂ ಧೈರ್ಯ ಮಾಡಿದ್ಲು. ಮರುದಿನ ಡಿಡಿ ನನ್ನ ಕೈ ಸೇರಿತ್ತು.

ಇಂದು ಬ್ಯಾಂಕಿನಲ್ಲಿ ಎಲ್ಲ ಕೆಲಸ ಮಾಡಿಕೊಂಡು ಬರುತ್ತಾಳೆ, ಎಷ್ಟೋ ಸಹಾಯವಾಗಿದೆ. ಅವಳ ಉಳಿತಾಯ ಖಾತೆ ಎಷ್ಟು ತುಂಬಿದೆಯೋ, ಆರ್ಥಿಕ ಹಿಂಜರಿತದಲ್ಲಿ ನಮಗೂ ಕೂಡಿಡುವುದು ಕಲಿತಾಗಿದೆಯೋ ಅದಕ್ಕಿಂತ ಅವಳ ಆತ್ಮವಿಶ್ವಾಸದ ಖಾತೆ ದ್ವಿಗುಣಗೊಳ್ಳುತ್ತ ಸಾಗಿ ಆರ್ಥಿಕ ಹಾಗೂ ಮಾನಸಿಕ ಹಿಂಜರಿತಗಳು ಹಿಂಜರಿದಿವೆ. ಬ್ಯಾಂಕಿನ ಮೇಡಮನೊಂದಿಗೆ ಇವಳ ಗೆಳೆತನವಾಗಿದೆ, ಹೋದಾಗೊಮ್ಮೆ ಒಂದರ್ಧ ಘಂಟೆ ಹರಟೆ ಹೊಡೆದು ಬಂದಿರುತ್ತಾಳೆ. ಅವಳ ದುಡ್ಡಿನ ಡಬ್ಬಗಳು ಬ್ಯಾಂಕಿಗೆ ವರ್ಗವಾಗಿವೆ, ನಿನ್ನೇನೇ ಸಾವಿರ ತುಂಬಿ ಬಂದವಳು, ಇಂದು ಮತ್ತೆ ಮತ್ತೆ ತುಂಬುತ್ತೇನೆಂದು ಜೇಬಿಗೆ ಕೈಹಾಕಿದ್ಲು, ಇವಳಿಗೆ ಕಲಿಸಿದ್ದೆ ತಪ್ಪಾಯಿತೇನೊ ಅಂತ ನಾನೂ ಕೈಗೊಂದು ಏಟು ಕೊಟ್ಟೆ, ಕಳ್ಳಿ ಹಾಗೆ ಕೈ ಜಾರಿಸಿ ಹಿಂದಿನಿಂದ ಹೊಟ್ಟೆ ಸುತ್ತ ಅಮರಿಕೊಂಡು ಕಟ್ಟಿಹಾಕಿದಳು..


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


The PDF document can be found at http://www.telprabhu.com/himjarita.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

20 comments:

ಮನಸು said...

ಪ್ರಭು,
ತುಂಬಾ ತುಂಬಾನೇ ಚೆನ್ನಾಗಿದೆ.. ನಮಗೆಲ್ಲ ಒಂದು ಆತ್ಮವಿಶ್ವಾಸದ ಕಿವಿಮಾತು ಹೇಳಿದೀರಿ.. ನಾನು ಕೂಡ ಹೀಗೆ ಬ್ಯಾಂಕ್ ವ್ಯವಹಾರ ಹೆಚ್ಚು ತಲೆಕೆಡಿಸಿಕೊಳ್ಳೋಲ್ಲ... ನನ್ನ ಮನೆಯವರು ಹೆಚ್ಚು ತಿಳಿಸಿ ಹೇಳಿದರು ಆದರು ಇನ್ನು ಸೋಮರಿಯೇ ಹ ಹ ಹ ... ಆರ್ಥಿಕ ಹಿಂಜರಿಕೆಗೆ ಮೊದಲೇ ನಿಮ್ಮಾಕೆನ ತಯಾರಿಮಾಡಿದ್ದೀರಿ ಹ ಹ..
ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು..

guruve said...

ಚೆನ್ನಾಗಿದೆ.. :)
ಆರ್ಥಿಕ ಹಿಂಜರಿತಕ್ಕೂ , ಮಾನಸಿಕ ಹಿಂಜರಿತಕ್ಕೂ ತಳುಕು ಹಾಕಿ ಚೆನ್ನಾಗಿ ಬರೆದಿದ್ದೀರ..
ಹೀಗೆ ತಮ್ಮವಳಿಗೆ ಆತ್ಮವಿಶ್ವಾಸವನ್ನು ತುಂಬಿ ಮಾನಸಿಕ ಹಿಂಜರಿತವನ್ನು ಹೋಗಲಾಡಿಸಿದ ಹಾಗೆ, ಜಾಗತಿಕ ಆರ್ಥಿಕ ಹಿಂಜರಿತಕ್ಕೂ ಏನಾದರು ಮದ್ದು ಕಂಡು ಹಿಡೀಯಿರಿ.. :)

SSK said...

ಒಂದು ನೂರು ರೂಪಾಯಿ ನೋಟು ಎತ್ತಲು ಹೋದೆ, ಚಟೀರೆಂದು ಏಟು ಬಿತ್ತು, ಹಲ್ಲು ಕಿರಿದೆ..... ಈ ಸನ್ನಿವೇಶ ಓದುವಾಗ ನನಗೆ ಟಾಮ್ ಅಂಡ್ ಜೆರಿ ಯ ಕಾರ್ಟೂನ್ ನಲ್ಲಿ ಬರುವ ತುಂಟಾಟಗಳು ನೆನೆಪಿಗೆ ಬಂದವು!
ಲೇಖನ ತುಂಬಾನೇ ಚೆನ್ನಾಗಿದೆ ಪ್ರಭು ಅವರೇ, ನಿಮ್ಮ ಕಲ್ಪನೆಯ ಬರವಣಿಗೆಗೆ ನೀವೇ ಸಾಟಿ!!!

ವಿನುತ said...

ಪ್ರಭು,

ಭಾಳ ಛಲೋ ಬರೀತೀರ್ರಿ. ನಿಮ್ಮ ಹಳೆಯ ಬರಹಗಳನ್ನೂ ಓದಿದೆ. ಇದು ಎಲ್ಲದಕ್ಕೂ ಸೇರಿ ಪ್ರತಿಕ್ರಿಯೆ ಅನ್ಕೊಳಿ :) ಮೊದಲು ಎಲ್ಲರಂತೆಯೇ ನಾನು ಸಹ ನಿಮ್ಮನ್ನು ವಿವಾಹಿತರು ಅನ್ಕೊ೦ಡಿದ್ದೆ. ಆದ್ರೆ ಇನ್ನು ಸ್ವಲ್ಪ ಬರಹಗಳನ್ನ ಓದಿದ ಮೇಲೆ ಸ್ವಲ್ಪ ಅನುಮಾನ ಬಂತು. ಏನೋ ಮಿಸ್ಸಿ೦ಗ ಅಂತ. ಆಮೇಲೆ ಕೆಲವು ಪ್ರತಿಕ್ರಿಯೆಗಳನ್ನ ನೋಡಿದ್ಮೇಲೆ ಗೊತ್ತಾಯ್ತ, ಇದು ಅವಿವಾಹಿತ ತರುಣನ ವೈವಾಹಿಕ ಜೀವನದ ಕಾಲ್ಪನಿಕ ರಸನಿಮಿಶಗಳೆ೦ದು :) ಅ೦ತೂ ಐ.ಟಿ ಜಗತ್ತಿನ, ಆಧುನಿಕ, ಕೆ.ಎಸ್.ನ ಕಾಣಿಸಿದರು. ಅವರ ಮೈಸೂರು ಮಲ್ಲಿಗೆಯ ಒ೦ದೊದು ಗೀತೆಯು ಇಲ್ಲಿ ಕಥೆಯಾಗಿದೆಯೇನೋ ಅನಿಸ್ತದೆ. ಆರ್ಥಿಕ ಹಿ೦ಜರಿತದ ಹಿನ್ನೆಲೆಯಲ್ಲಿ ಮದುವೆ ಮಾರ್ಕೆಟ್ (ಈ ಮಾರ್ಕೆಟ್ ಪದ ಪ್ರಯೋಗವೇ ಮುಜುಗರ ಆಗತ್ತೆ. ಆದ್ರೆ, ಅದೇ ಸತ್ಯ) ಬೇ೦ದ್ರೆಯವರ 'ನಾನು ಬಡವಿ ಆತ ಬಡವ, ಒಲವೆ ನಮ್ಮ ಜೀವನ ..' ಕೂಡ ಕಳೆದು ಹೋಗಿದೆ. ಆದರೆ ನಿಮ್ಮ ಲೇಖನಗಳಲ್ಲಿ, ಅದರ ಭಾವ ಜೀವ೦ತವಾಗಿದೆ. ಸುಂದರ ಲೇಖನಗಳಿಗಾಗಿ ಅಭಿನ೦ದನೆಗಳು.

sunaath said...

ಹೆಂಡತಿಗೆ ಜಾಸ್ತಿ ಹೇಳ್ಕೊಡಬಾರ್ದು ಅನ್ನೋದು ಗೊತ್ತಾಯ್ತಿಲ್ಲೊ ಪ್ರಭು? ಇನ್ನು ಮೇಲೆ ಹುಶಾರಾಗಿರಿ.

Ittigecement said...

ಪ್ರಭು...

ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ..
ಮನೆಯಲ್ಲಿ ಅದರ ಪ್ರಭಾವ ಚೆನ್ನಾಗಿ ಬರೆದಿದ್ದೀರಿ...

ನೀವು ಅವಿವಾಹಿತರೆಂದರೆ ನಂಬುವದು ಕಷ್ಟ...!

ಸೊಗಸಾದ ವಾಸ್ತವಿಕ ಕಲ್ಪನೆ...!

ಅಭಿನಂದನೆಗಳು...

Prabhuraj Moogi said...

ಮನಸು ಅವರಿಗೆ:
ಬ್ಯಾಂಕಿನ ಕೆಲಸಗಳು ಅಷ್ಟೇನೂ ಕಷ್ಟವಲ್ಲ, ಈಗ ಖಾಸಗಿ ಬ್ಯಾಂಕುಗಳು ಬಂದಾಗಿಂದ ಸಿಬ್ಬಂದಿಗಳು ಪೈಪೊಟಿಯಲ್ಲಿ ಚೆನ್ನಾಗಿ ಸಹಾಯ ಮಾಡುತ್ತಿದ್ದಾರೆ, ಪ್ರಯತ್ನಿಸಿ, ಕಲಿತುಕೊಳ್ಳೊದು ಒಳ್ಳೇದು.

guruve ಅವರಿಗೆ:
ಅಯ್ಯೋ ಜಾಗತಿಕ ಹಿಂಜರಿತಕ್ಕೆ ಪರಿಹಾರ ಕಂಡು ಹಿಡಿಯುವಷ್ಟು ಜಾಣನಲ್ಲ ನಾನು. ನಮ್ಮದೇನಿದ್ದರೂ ನನ್ನವಳ ಸಮಸ್ಯೆಗಳಿಗೆ ಪರಿಹಾರ ಕೊಡುವ ಮಟ್ಟಿಗೆ ಸೀಮಿತ. ಒಂದು ಮಾತ್ರ ಹೇಳಬಲ್ಲೆ ಜಾಗತಿಕ ಹಿಂಜರಿತ ಕೂಡ ಮಾನಸಿಕ ಹಿಂಜರಿತಗಳ ಸಮೂಹ ಸನ್ನಿಯ ಪರಿಣಾಮ, ಸ್ವಲ್ಪ ಆತ್ಮವಿಷ್ವಾಸದಿಂದ ಮತ್ತೆ ಮುನ್ನುಗ್ಗಿದರೆ ಒಳ್ಳೇದಾಗಬಹುದು.

SSK ಅವರಿಗೆ:
ಹ ಹ ಹ, ನಮ್ಮದೂ ಒಂಥರಾ ಟಾಮ ಆಂಡ್ ಜೆರ್ರಿ ಕಾಮಿಡಿಯೆ ಸರಿ, ಏನೊ ಕಲ್ಪನೆಗಳೇ ತುಂಟತನದಾಗಿವೆ :)

Vinutha ಅವರಿಗೆ:
ಮೊದಲಿಗೆ ನನ್ನ ಬ್ಲಾಗಗೆ ಸ್ವಾಗತ.
ಏನೊ ಮನಸಿಗೆ ಅನಿಸಿದ್ದನ್ನು ಬರೀತೀನ್ರಿ. "ಅವಿವಾಹಿತ ತರುಣನ ವೈವಾಹಿಕ ಜೀವನದ ಕಾಲ್ಪನಿಕ ರಸನಿಮಿಶ.." ಅಂದಿದ್ದು ಬಹಳ ಚೆನ್ನಾಗಿತ್ತು ಇಡೀ ಬ್ಲಾಗನ್ನು ಒಂದೇ ಸಾಲಿನಲ್ಲಿ ಹೇಳಿದ ಹಾಗೆ. ಅಬ್ಬಾ ಕೆ.ಎಸ್.ಎನ್ ರಿಗೆ ಎಲ್ಲ ಹೋಲಿಸಬೇಡಿ ಅವರ ಎತ್ತರಕ್ಕೆ ಏರಲು ನನಗೆ ಸಾಧ್ಯವಿಲ್ಲ, ಅವರ ಮೈಸೂರ ಮಲ್ಲಿಗೆಗೆ ಹೋಲಿಸಿದಲ್ಲಿ ನನ್ನದು ಹುಲ್ಲು ಅಷ್ಟೇ, ಬಹಳ ಪಕ್ವತೆ ಬರಬೇಕಿದೆ, ತಮ್ಮ ಪ್ರೋತ್ಸಾಹ ಸಲಹೆಗಳು ಅವಶ್ಯಕ. ಒಲವೇ ಜೀವನವೆನ್ನುವುದು ಸತ್ಯ, ಸುಂದರ ಅನಿಸಿಕೆಗೆ ಧನ್ಯವಾದಗಳು ಹೀಗೇ ಬರುತ್ತಿರಿ.

sunaath ಅವರಿಗೆ:
ಹೇಳಿ ಕೊಡೋದು ಎಲ್ಲಿಂದ ಬಂತು ಸರ್, ಮೊದಲೇ ಎಲ್ಲ ಗೊತ್ತಿದೆ ಅವಳಿಗೆ.

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಅವಿವಾಹಿತನೆನ್ನುವುದು ಸತ್ಯ, ಕಲ್ಪನೆಗಳ ಓದಿ ಎಲ್ಲರೂ ಅನುಮಾನಿಸಿದ್ದಾರೆ, ಅಪ್ಪ ಅಮ್ಮನೂ ಸೇರಿ. ಕಲ್ಪನೆಗೆ ಸ್ವಲ್ಪ ವಾಸತವ ಸೇರಿಸುತ್ತೇನೆ, ಅದಕ್ಕೆ ಹಾಗೆ ಅನಿಸುತ್ತದೆ, ಭಾವೀ ಸಂಗಾತಿ ಅನುಮಾನಿಸದಿದ್ದರೆ ಸಾಕು, ಇಷ್ಟಕ್ಕೂ ಇದೆಲ್ಲ ಬರೆಯುತ್ತಿರುವುದು ಅವಳಿಗಾಗಿ ತಾನೇ...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಭುಗಳೇ,
ಬೊಂಬಾಟ್ ಬರಹ... ನಡೆದಿದ್ದೇನೋ ಅಂತ ಅನ್ನಿಸುತ್ತೆ ಓದುತ್ತ ಹೋಗುವಾಗ...

Prabhuraj Moogi said...

Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ:
ಧನ್ಯವಾದಗಳು, ನಡೆದಿಲ್ಲ, ನಡೆದರೆ ಹೇಗಿರಬಹುದಿತ್ತು ಅನ್ನೊ ಕಲ್ಪನೆ ಮಾತ್ರ.

Anonymous said...

ಯಾವುದೇ ವಿಷಯ ಇದ್ರೂ, ತುಂಬಾ simple ಆಗಿ ಬರೀತೀರ.
ನಿಮ್ಮವಳಿಗೆ ಎಲ್ಲಾ ಹೇಳಿ ಕೊಡುತ್ತಿದ್ದೀರಾ! ಮದುವೆಗೂ ಮುಂಚೆ! ಅವಳು ನಿಮ್ಮ ಬ್ಲಾಗ್ ಓದಿ ಈಗಲೇ ಎಲ್ಲ ಕಲಿತುಕೊಳ್ಳಲಿ ಅಂತಾನಾ? ತಮಾಷೆಗೆ ಹೇಳಿದೆ.

ಉತ್ತಮ ವಿಷಯ. ಖಂಡಿತಾ ತುಂಬಾ ಜನಕ್ಕೆ ಸಹಾಯ ಆಗುವಂತದ್ದು. ಹೀಗೆ ಬರೀತಾ ಇರಿ.

ನಾನೂ ಮೊದಲು bank ಹೋಗೋದು ಅಂದ್ರೆ ತುಂಬಾ ಭಯ ಪಟ್ಕೋತಿದ್ದೆ.
ಹಾಗೆ ಅಪ್ಪ ಅಮ್ಮನ್ನ ಬಿಟ್ಟು ಬೇರೆ ಊರಿಗೆ ಬರೋದು ಅಂದ್ರೂ ಅಷ್ಟೇ, ಆದರೆ ಈಗ ಮೈಸೂರು/ಬೆಂಗಳೂರು ಬಂದ್ ಮೇಲೆ ಎಲ್ಲಾ ಅಭ್ಯಾಸ ಆಗಿದೆ.

Prabhuraj Moogi said...

ಜ್ಯೋತಿ ಅವರಿಗೆ:
ಲೇಖನ ಶೈಲಿ ಮೆಚ್ಚಿದ್ದಕ್ಕೆ ಧನ್ಯವಾದಗಳು, ಸಧ್ಯಕ್ಕೆ ಯಾರೂ ಇಲ್ಲ, ಮುಂದೆ ಬಂದರೆ ಓದಲಿ ಅನ್ನೋ ಆಸೆ, ಅಲ್ಲೀವರೆಗೆ ಯಾರಿಗಾದರೂ ಸಹಾಯವಾದರೆ ಆಗಲಿ ಬರೆದದ್ದು ಸಾರ್ಥಕವಾಗುತ್ತದೆ. ಬ್ಯಾಂಕ ಬಗ್ಗೆ ಸ್ವಲ್ಪ ಹೆದರಿಕೆಗಳಿರುವುದು ಸಹಜ, ಅಪ್ಪ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರಿಂದ ನನಗೇ ಹಾಗೆ ಆಗಿಲ್ಲ ಅಷ್ಟೇ, ಆದ್ರೆ ಒಮ್ಮೆ ಹಿಂಜರಿತ ಮೆಟ್ಟಿ ನಿಂತರೆ ಎಲ್ಲ ಸಲೀಸು...

Greeshma said...

ಒಬ್ಬರೇ ಹೊರಗೆ ಹೋಗಿ ಕೆಲಸ ಮಾಡೋದಕ್ಕೆ ಸ್ವಲ್ಪ ಹಿಂಜರಿಕೆ ಇರುತ್ತೆ ಹೆಣ್ಣುಮಕ್ಕಳಿಗೆ. starting problem ಅಷ್ಟೇ :)
ಒಳ್ಳೆಯ ವಿಷಯ, ಚೆಂದದ ಲೇಖನ.

Prabhuraj Moogi said...

Greeshma ಅವರಿಗೆ:
ಹೌದು ಹೆಣ್ಣುಮಕ್ಕಳಿಗೆ ಆ ಹಿಂಜರಿತ ಇದ್ದೆ ಇರುತ್ತೆ, ಹುಡುಗರಿಗೂ ಇರುತ್ತೆ ಇಲ್ಲ ಅಂತಲ್ಲ, ಆದ್ರೆ ಅದನ್ನ ಮೆಟ್ಟಿ ನಿಲ್ಲಬೇಕೆಂದು ಹೇಳುವುದೇ ಲೇಖನದ ಆಶಯ.. ಬರುತ್ತಿರಿ...

Nisha said...

ಪ್ರಭು
ಇದೇ ಘಟನೆ ನನ್ನ ಜೀವನದಲ್ಲೂ ನಡೆದಿದೆ. ನಿಮ್ಮ ಹಾಗೆ ನನ್ನ ಪತಿ ಕೂಡ ಬ್ಯಾಂಕಿಂಗ್ ಬಗ್ಗೆ ಎಲ್ಲ ತಿಳಿಸಿಕೊಟ್ಟರು. ಅವರು ಇದನ್ನು ಓದಿ, ನೀವು ನನ್ನ ಫ್ರೆಂಡ್ ಅದಕ್ಕೆ ನಾನೆ ನಿಮಗೆ ಈ ವಿಷಯ ತಿಳಿಸಿರಬೇಕು ಎಂದು ನನ್ನನ್ನು ಕೇಳಿದರು. ನೀವು ನನ್ನ ಬ್ಲಾಗ್ ಫ್ರೆಂಡ್ ಅಸ್ಟೇ, ಆದರು ನಾನು ಈ ವಿಷಯ ನಿಮಗೆ ಹೇಳ್ಲಿಲ್ಲ ಅಂತ ಹೇಳಿದಾಗ ತುಂಬ ಆಶ್ಚರ್ಯ ಪಟ್ಟರು. ನಿಮ್ಮ ಹಿಂದಿನ ಬರಹಗಳನ್ನೂ ಓದಲು ಹೇಳಿದ್ದೇನೆ ಅವರಿಗೆ.

shivu.k said...

ಪ್ರಭುರಾಜ್,

ಸುಂದರವಾಗಿ ಅನುಭವವಾಗಿರುವಂತೆ ಬರೆಯುತ್ತೀರಿ....ನಿಮಗೆ ಗೊತ್ತಾ...ಹೆಂಗಸರ ಅಹಂಗೆ ಆಗಾಗ ಸ್ವಲ್ಪ ಹಿತವಾಗಿ[ಜಾಸ್ತಿಯಾದರೆ ಕಷ್ಟ ಕಣ್ರಿ]ಪೆಟ್ಟುಕೊಟ್ಟರೆ....ಆಗೊಲ್ಲ ಅನ್ನುವ ಎಲ್ಲಾ ಕೆಲಸವನ್ನು ನಮಗಿಂತ ಸುಲಭವಾಗಿ ಮಾಡಿಬಿಡುತ್ತಾರೆ...ಇದು ನನ್ನ ಅನುಭವ....
ಅಯ್ಯೋ ಸೀಕ್ರೇಟನ್ನೆಲ್ಲಾ ಹೇಳೀಬಿಡ್ತೀದ್ದೀನಿ....ಸಾರಿ....
ಓದುತ್ತಾ....ಒಳ್ಳೇ ಮಜ ಬರುತ್ತೇ..ನಿಮ್ಮ ಬರಹ..ಮುಂದುವರಿಯಲಿ..

Prabhuraj Moogi said...

Nisha ಅವರಿಗೆ:
ಇದೇ ಘಟನೆ ನಿಮ್ಮ ಜೀವನದಲ್ಲೂ ನಡೆದಿದ್ದರೆ ಅದು ಕಾಕತಾಳೀಯ ಮಾತ್ರ, ಅದಲ್ಲದೇ ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳನ್ನೇ ನಾನು ಆರಿಸಿ ಬರೆಯುವುದರಿಂದ ಹಾಗಾಗುತ್ತದೆ. ನೀವೇನೂ ತಿಳಿಸಿಲ್ಲ, ಪ್ರತೀ ವಾರ ನಾನು ಒಂದು ವಿಷಯಕ್ಕಾಗಿ ಹುಡುಕುತ್ತಿರುತ್ತೇನೆ, ಮೊನ್ನೆ ನಮ್ಮ ಮನೆ ಕರೆಂಟ್ ಬಿಲ್ ಹುಡುಕುತ್ತಿದ್ದಾಗ ಸಿಗಲಿಲ್ಲ... ಅದೇ ಯೊಚನೆಯಲ್ಲಿ ಹೀಗೆ ಬರೆದರೆ ಹೇಗೆ ಅನ್ನಿಸಿತು, ಅದೇ ಈ ಬರಹ ಬರೆಯಲು ಕಾರಣ. ಹಾಗೆ ಆ ಎಳೆಯನ್ನು ಇಟ್ಟುಕೊಂಡು ಈ ರೀತಿ ವಿಸ್ತರಿಸಿದೆ ಅಷ್ಟೇ... ಪ್ರತೀ ವಾರ ಓದಿ ಅನಿಸಿಕೆ ತಿಳಿಸುವುದಲ್ಲದೆ, ತಮ್ಮವರಿಗೂ ಓದಲು ಹೇಳಿ ಪ್ರೊತ್ಸಾಹಿಸುತ್ತಿರುವ ತಮಗೆ ನನ್ನ ಧನ್ಯವಾದಗಳು. ಹಾಗೆ ನಿಮವರೂ ಓದಿ ನಿಮ್ಮ ಜೀವನದಲ್ಲಿ ಇನ್ನಷ್ಟು ಸಂತೋಷ ತುಂಬಲಿ ಎಂದು ನನ್ನ ಮತ್ತು ನನ್ನವಳ ಹಾರೈಕೆಗಳು... ಹೀಗೇ ಬರುತ್ತಿರಿ...

shivu ಅವರಿಗೆ:
ತಮ್ಮ ಅನುಭವದ ಮಾತು ಸತ್ಯ, ಜಾಸ್ತಿಯಾದ್ರೆ ಬಲು ತೊಂದರೆ... ಸೀಕ್ರೆಟ್ ನಿಮ್ಮ ಶ್ರೀಮತಿಯವರಿಗೆ ಗೊತ್ತಾಗದಿದ್ದರೆ ಸರಿ, ನಮಲ್ಲಿ ಮಾತ್ರ ಹಂಚಿಕೊಳ್ಳಲು ಮರೆಯದಿರಿ, ಈ ಅನನುಭವಿಗೆ ಬರೆಯಲು ಸಹಾಯವಾಗುತ್ತದೆ ಅಲ್ಲದೇ ಮುಂದೆ ಸಂಸಾರೀ ಜೀವನದಲ್ಲೂ ಸಹಾಯವದೀತು ಅಲ್ಲವೇ. ಓದಿ ಹೀಗೆ ನೀವು ಸಲಹೆ ಸೂಚನೆಗಳ ಕೊಡುತ್ತಿದ್ದರೆ ನಾ ಖಂಡಿತ ಮುಂದುವರೆಸುತ್ತೇನೆ...

Raghavendra said...

chalo baridiri... arthik mattu manasik hinjarita chennagi vistarisiddira...
keep writing

Prabhuraj Moogi said...

To: Raghavendra
maanasika hiMjaritavE aarthika hiMjaritakkoo kaaraNa enisitu... adakke ee lEkhana barede...

Veena DhanuGowda said...

Hi Prabhu :)

prathiyondu article nalu ondu moarl ide yalri
good :) swalpa tamashe jothe jothe churu jeevana patanu ide :)
higge barithiri

Prabhuraj Moogi said...

ಪ್ರೀತಿಯಿ೦ದ ವೀಣಾ :) ಅವರಿಗೆ:
ಬರೀ ತಮಾಷೆಯಾದರೆ ಏನು ಚೆನ್ನ ನೀವೇ ಹೇಳಿ, ಸ್ವಲ್ಪ ಅನ್ನದ ಜತೆಗೆ ಉಪ್ಪಿನಕಾಯಿ ಹಾಗೆ ಸಂದೇಶಗಳೂ ಇರಬೇಕು ಅಲ್ವೇ, ಅದಕ್ಕೆ ಪ್ರತೀ ಬರಹದಲ್ಲೂ ಏನಾದರೂ ಮೆಸೇಜ ಕೊಡಲು ಪ್ರಯತ್ನಿಸುತ್ತೇನೆ..