Sunday, April 19, 2009

ನಾ ಚುನಾವಣೆಗೆ ನಿಂತರೆ...


ಬ್ರೆಕಫಾಸ್ಟ ಮುಗಿಸಿ ಬಾಲ್ಕನಿಯಲ್ಲಿ ನಿಂತು ಹಸಿರು ಗಾರ್ಡನಿನಲ್ಲಿ ಬಂದು ಚಿಲಿಪಿಲಿ ಎನ್ನುತ್ತಿರುವ ಹಕ್ಕಿ ಪಕ್ಕಿಗಳ ನೋಡುತ್ತಿದ್ದೆ. "ಕೀಈಈಈಈಈ ರ್..." ಅನ್ನುವ ದನಿಯೊಂದಿಗೆ ದ್ವನಿವರ್ಧಕವೊಂದು ಶುರುವಿಟ್ಟುಕೊಂಡಿತು, ಹಕ್ಕಿಗಳು ಹಾರಿಹೋದವು. "ಬಡವರ ಬಂಧು, ದೀನ ದಲಿತರ ಹಿತರಕ್ಷಕ, ಕಾಯಕಯೋಗಿ, ಸಮಾಜಸೇವಕ ****ಅವರಿಗೆ ತಮ್ಮ ಅತ್ಯಮೂಲ್ಯ ಮತ ನೀಡಬೇಕು ಮತದಾರ ಬಂಧು ಬಾಂಧವರೆ, ಅಕ್ಕತಂಗಿಯರೇ ಅಣ್ಣತಮ್ಮಂದಿರೆ..." ಅಂತ ಚೀರತೊಡಗಿತು. ಒಳಗಿದ್ದ ಇವಳೂ ಹೊರಬಂದು ನಿಂತಳು, ನಾ ಮುಂಜಾನೆ ಮುಂಜಾನೆ ಶಾಂತಿ ಹಾಳು ಮಾಡಿದರೆಂದು ಸಿಟ್ಟಿನಿಂದ ನೋಡುತ್ತಿದ್ದರೆ, ಇವಳು ನಗುತ್ತಿದ್ದಳು.

"ಏನ್ ನಗ್ತಾ ಇದೀಯಾ?" ಅಂದೆ, ಮತ್ತೆ ನಗುತ್ತ ಒಳಗೆ ಹೋದ್ಲು. ನಾನೂ ಒಳಗೆ ಬಂದು ಕೂತು "ಚುನಾವಣೆ ಬಂದ್ರೆ ಸಾಕು.. ಈ ಲೌಡಸ್ಪೀಕರ ಉಪಯೋಗಿಸಬಾರದು ಅಂತ ಕಾನೂನು ಮಾಡಬೇಕು, ಆಗ ಚೆನ್ನಾಗಿರತ್ತೆ" ಅಂದೆ. "ನೀವೇ ಯಾಕೆ ಚುನಾವಣೆಗೆ ನಿಂತು ಗೆದ್ದು ಬಂದು ಕಾನೂನು ಮಾಡಬಾರದು" ಅಂತ ನಕ್ಕಳು. ಪಾಕಶಾಲೆಗೆ ಹೊಕ್ಕೆ, ಗ್ಯಾಸ ಕಟ್ಟೆ ಮೇಲೆ ಪ್ರತಿಷ್ಟಾಪಿತನಾದೆ, ಏನೋ ಬೋಗುಣಿಯಲ್ಲಿ ಹಾಕಿಟ್ಟು ತಿರುವುತ್ತಿದ್ಲು. "ಅಲ್ಲಾ ಚುನಾವಣೆ ಅಂದ್ರೆ ಏನು ಅಂತ ತಿಳಿದಿದೀಯಾ, ಎನ್ ಈ ಸೌಟು ತಿರುವಿದ ಹಾಗಾ?, ನಾ ಚುನಾವಣೆಗೆ ನಿಂತರೆ ಅಷ್ಟೇ..." ಅಂದೆ, "ಎನೀಗ ನಿಮಗೇನು ಚುನಾವಣೆಗೆ ನಿಲ್ಲೋಕೆ" ಅಂದ್ಲು "ಅದಕ್ಕೂ ಅರ್ಹತೆ ಬೇಕೆ" ಅಂದೆ "ಏನು ಅರ್ಹತೆ ಹಾಂ, ಒಂದು ಅರ್ಹತೆ ನಿಮಗಿದೆ ಮೊದ್ಲೇ, ಗುಡಾಣದಂತಾ ಹೊಟ್ಟೆ!" ಅಂತ ಮುಗುಳ್ನಕ್ಕಳು. "ಲೇ ಹೋಗೀ ಹೋಗೀ ನನ್ನ ಹೊಟ್ಟೇ ಮೇಲೆ ಯಾಕೇ ನಿನ್ನ ಕಣ್ಣು" ಅಂತ ಕಿವಿ ಹಿಂಡಿದೆ. ಚೀರಿದ್ಲು. ಕೈಬಿಟ್ಟೆ, ಗ್ಯಾಸ ಆಫ್ ಮಾಡಿ ಹೊರಬಂದ್ಲು. "ನಾಯಕರ್‍ಏ ಹೊರಬನ್ನಿ" ಅಂದ್ಲು "ಏನ ನಾಯಿ ಕರು ಅಂತೀದೀಯಾ, ನಾಯಕರೆಲ್ಲ ನಾಯಿ ಕರುಗಳೇ ಬಿಡು" ಅಂತನ್ನುತ್ತ ಹೊರಬಂದೆ. ಇನ್ನೇನು ಆರಾಮ ಕುರ್ಚಿಯಲ್ಲಿ ಕೂರಬೇಕೆನುವಷ್ಟರಲ್ಲಿ ಇವಳು ಆಕ್ರಮಿಸಿಬಿಟ್ಲು. "ಲೇ ಜಾಗ ಬಿಡೇ ಕೂರಬೇಕು" ಅಂದ್ರೆ. "ಇಲ್ಲೇನು ಕುರ್ಚಿಗಾಗಿ ಜಗಳಾಡ್ತೀರಾ ದಿಲ್ಲೀಲೀ ಅಸೆಂಬ್ಲೀನಲ್ಲಿ ಕುರ್ಚಿಗಾಗಿ ಹೋರಾಡಿ" ಅಂತ ಬಾಣ ಬಿಟ್ಲು. ಇವಳು ನನ್ನ ಚುನಾವಣೆಗೆ ನಿಲ್ಲಿಸಿಯೇ ಕೈಬಿಡುವ ಹಾಗೆ ಕಾಣ್ತಿದೆ. ಅವಳನ್ನು ಸ್ವಲ್ಪ ಆಕಡೆ ತಳ್ಳಿ ಅದರಲ್ಲೇ ಜಾಗ ಮಾಡಿಕೊಂಡು ನಾನೂ ಕೂತುಕೊಂಡೆ, ಮೈತ್ರೀ ಸರ್ಕಾರ ಸೀಟು ಹಂಚಿಕೊಂಡಂತೆ. "ಮುಖ್ಯಮಂತ್ರಿಯ ಪತ್ನಿ ಅನ್ನಿಸಿಕೋಬೇಕಿದೇಯಾ" ಅಂದೆ "ನನಗೆ ಅದೆಲ್ಲ ಬೇಡ ಹೋಮ್ ಮಿನಿಸ್ಟರೀ ಸಾಕು" ಅಂದ್ಲು. ಅಲ್ಲಾ
ನಾನೇ ಇನ್ನೂ ಚುನಾವಣೆಗೆ ನಿಂತಿಲ್ಲ, ಆಗಲೇ ಇವಳು ಗೃಹಖಾತೆ ಮೇಲೆ ಕಣ್ಣೀಟ್ಟಿದಾಳಲ್ಲ ಭಲೇ ಅಂತ "ನಿನಗ್ಯಾಕೆ ಮಂತ್ರಿಗಿರಿ ಎಲ್ಲಾ" ಅಂದ್ರೆ "ರೀ ಹೋಮ್ ಮಿನಿಸ್ಟರೀ ಅಂದ್ರೆ ಮನೆ ಕೆಲ್ಸಾ" ಅಂತ ಸಬೂಬು ಹೇಳಿದ್ಲು.

"ನಾ ಚುನಾವಣೆಗೆ ನಿಂತರೆ ಯಾರೇ ಓಟು ಹಾಕ್ತಾರೆ" ಅಂದೆ, "ಒಂದು ಓಟಂತೂ ಗ್ಯಾರಂಟೀ" ಅಂದ್ಲೂ "ಓಹ್ ನಿಂದಾ" ಅಂದೆ, "ಯೇ ಇಲ್ಲಾಪ್ಪಾ, ಸೀರೆ ಬಂಗಾರ ಎನಾದ್ರೂ ಕೊಟ್ಟು ಮನೆಗೆ ಟೀವೀ ಕೊಟ್ರೆ ಮಾತ್ರ ನಾ ಓಟು ಹಾಕೊದು". "ಆಹಾ ಆಸೆ ನೋಡು" ಅಂತ ತಿವಿದೆ. "ಮತ್ತಿನ್ನೇನ್ರೀ ಈಗೆಲ್ಲಾ ಚುನಾವಣೆ ಅಂದ್ರೆ ಸುಮ್ನೆನಾ ಮನೆಗ ಬಂದು ಅರಿಷಿಣ ಕುಂಕುಮಾ ಹಚ್ಚಿ ಸೀರೆ ಕೊಟ್ಟು ಟೀವೀ ಎಲ್ಲಾ ಕೊಡ್ತಾರೆ, ನಿಮ್ಮ ಮತ ಅತ್ಯಮೂಲ್ಯ ಅಂತ, ಸುಮ್ನೇನಾ ಹೇಳ್ತಾರೆ" ಅಂತ ತಿರುಗು ಬಿದ್ಲು. "ಲೇ ನಾ ನಿಂತರೆ ನಿಯತ್ತಿಂದಾ ಮತ ಕೇಳ್ತಿನಿ" ಅಂದೆ. "ಅಂದ್ರೆ ಒಂದೇ ಓಟು ಅಷ್ಟೇ" ಅಂದ್ಲು. "ನಂದೊಂದೇ ಓಟು ಅಲ್ವಾ" ಅಂದೆ ಮತ್ತೆ ಮನಸು ಕರಗಿ ತಾನೂ ಓಟು ನಿಮಗೆ ಹಾಕ್ತೀನೀ ಅಂತಾಳೇನೊ ಅಂತ. "ನಿಮ್ಮದಲ್ಲಾರೀ, ನೀವು ಮೊದಲೇ ವಾಜಪೇಯೀ ಅಭಿಮಾನಿ, ನೀವ ಅವರ ಪಾರ್ಟಿಯಿಂದ ಯಾರು ನಿಲ್ತಾರೆ ಅವರಿಗೇ ಹಾಕಿ ಬರ್ತೀರಾ, ನಿಮ್ಮ ಓಟೂ ನಿಮಗಿಲ್ಲಾ" ಅಂದ್ಲು. "ಲೇ ವಾಜಪೇಯಿ ವ್ಯಕ್ತಿತ್ವ ಅಂದ್ರೆ ನನಗೆ ಅಷ್ಟು ಇಷ್ಟ ಕಣೇ, ಅವರನ್ನು ಬೇರೆ ಪಕ್ಷದವರೂ ಇಷ್ಟ ಪಡ್ತಾರೆ, ಆದ್ರೆ ನನ್ನ ಓಟು ನನಗೇ" ಅಂದೆ. "ಹಾಗಾದ್ರೆ ಎರಡು ಓಟು ಗ್ಯಾರಂಟಿ" ಅಂದ್ಲು. "ಓಹ ಒಂದು ನಂದು ಇನ್ನೊಂದು ನಿಂದು, ನಂಗೊತ್ತಿತ್ತು ನೀನ್ ನನಗೇ ಓಟು ಹಾಕ್ತೀಯಾ ಅಂತಾ" ಅಂತ ಚುನಾವಣೇಲೀ ಗೆದ್ದೇ ಬಂದೆನೇನೂ ಅನ್ನೋವಂತೆ ಮುಖ ಇಷ್ಟಗಲ ಮಾಡಿಕೊಂಡು ಹಲ್ಲು ಗಿಂಜಿದೆ. "ರೀ ನಂದು ಅಂತ ನಾನೆಲ್ಲಿ ಹೇಳಿದೆ, ಅದು ಪಕ್ಕದ ಮನೆ ಪದ್ದೂದೂ, ನಿಮ್ಮ ದೊಡ್ಡ ಫ್ಯಾನ್ ಅಲ್ವಾ ನೀವು ಕೇಳದಿದ್ರೂ ನಿಮ್ಗೇ ಓಟು ಹಾಕ್ತಾಳೆ" ಅಂದ್ಲು, ವಿಶ್ವಾಸಮತದಲ್ಲಿ ಸರ್ಕಾರ ಉರುಳಿದಾಗ ಸೋತ ಮಂತ್ರಿಯ ಥರ ಆಗಿತ್ತು ನನ್ನ ಮುಖಾ, ಸಿಗಬಹುದಾಗಿದ್ದ ಸ್ವಂತ ಪಾರ್ಟಿಯ ಒಂದು ಮತ ಸಿಗಲಿಲ್ಲವಲ್ಲ, ಸಿಕ್ಕರೆ ಸರ್ಕಾರ ಉರುಳುತ್ತಿರಲಿಲ್ಲವಲ್ಲ ಅನ್ನೋ ಹಾಗೆ.

"ನಾ ಚುನಾವಣೆಗೆ ನಿಂತು ಏನಾಗಬೇಕಿದೆ ಹೋಗು, ಬೀಳೊದೇ ಎರಡು ಓಟು ಅಂದಮೇಲೆ" ಅಂತ ಎದ್ದೆ, ಎಳೆದು ಕೂರಿಸಿಕೊಂಡ್ಲು, ಪಕ್ಷ ಬಿಟ್ಟು ಹೋಗುತ್ತೀನೆನ್ನುವವನಿಗೆ ಏನೊ ಖಾತೆ ಕೊಟ್ಟು ಕೂರಿಸಿದಂತೆ. "ನಾನೂ ನಿಮಗೇ ಓಟು ಹಾಕ್ತೀನಿ ಆಯ್ತಾ" ಅಂದ್ಲು, "ಸಿಗೋ ಮೂರು ಓಟಿಗೆ ಚುನಾವಣೆಗೆ ನಿಲ್ಬೇಕಾ ಠೇವಣಿ ಕಳ್ಕೋತೀನೀ ಅಷ್ಟೇ" ಅಂದೆ. "ರೀ, ನಿಮ್ಮ ಬ್ಲಾಗಿನಲ್ಲಿ ಓಟು ಹಾಕಿ ಅಂತ ಪ್ರಚಾರಾ ಮಾಡೋಣ ಬಹಳ ಓಟು ಬರ್ತವೆ" ಅಂದ್ಲು. "ರಾತ್ರಿ ನಿದ್ದೆಗೆಟ್ಟು ಬರೆದಿರೋ
ಲೇಖನಕ್ಕೇ ಇಪ್ಪತ್ತು ಕಾಮೆಂಟು ಬರಲ್ಲ, ಇನ್ನು ಓಟು ಬರ್ತಾವಾ, ಚುನವಣೆಗೆ ನಿಂತೆ ಅಂದ್ರೆ ಬರೂ ನಾಲ್ಕು ಓದುಗರೂ ಕಮ್ಮಿಯಾಗಿ ಹೋಗ್ತಾರೆ ಅಷ್ಟೇ" ಅಂದೆ. "ಇರ್ಲಿ ಬಿಡಿ ಬೇರೆ ಪ್ರಚಾರಾ ಮಾಡೊಣಾ, ನಾನು ಮನೆಮನೆಗೆ ಹೋಗಿ ಮತ ಕೇಳ್ತೀನಿ" ಅಂದ್ಲು "ಅರಿಶಿಣ ಕುಂಕುಂಮ ಹಚ್ಚಿ ಸೀರೆ ಕೊಟ್ಟು ಮತ ಕೇಳ್ತೀಯಾ, ನಿನಗೇ ಒಂದು ಸೀರೆ ಕೊಡಿಸೋಕೆ ಆಗ್ತಿಲ್ಲ ನನ್ನ ಕೈಲಿ ಇನ್ನು ಎಲ್ರಿಗೂ!!!" ಅಂತ ನಿಟ್ಟುಸಿರು ಬಿಟ್ಟೆ. "ಎನಾದ್ರೂ ಮಾಡಿ ಪ್ರಚಾರ ಮಾಡೊಣ, ಲೌಡಸ್ಪೀಕರನಲ್ಲಿ, ಬಡವರ ಬಂಧು ಹಳೆಯದಾಯ್ತ್ರಿ... 'ಹುಡುಗಿಯರ ಹೃದಯ ಚೋರ, ಕನ್ಯೆಯರ ಕಲ್ಪನೆಯ ಹುಡುಗ, ಮಾತಿನ ಮಲ್ಲನಿಗೆ ನಿಮ್ಮ ಮತ' ಅಂತ ಹೊಸಾ ಸ್ಟೈಲಿನಲ್ಲಿ ಪ್ರಚಾರಾ ಮಾಡೋಣ ಎಲ್ಲಾ ಹುಡುಗೀರ್ ಓಟೂ ನಿಮ್ಗೇ" ಅಂತ ಬಾಂಬಿಟ್ಟಳು. "ಅಹಾಹಾ.. ಮೊದಲೇ ಹೇಳಬಾರದಿತ್ತಾ ಈ ಲೋಕಸಭೆಗೆ ನಿಂತ್ಕೊತಾ ಇದ್ದೆ, ನಾಮಿನೇಶನ ಟೈಮ ಆಗಿ ಹೋಯ್ತು, ಚುನಾವಣೇನೇ ಹತ್ರ ಬಂತು" ಅಂದೆ. "ಅಹಾ ಆಸೆ ನೋಡು, ರೀ ಮೊದ್ಲು ಬಡಾವಣೆಯ ಮುನ್ಸಿಪಲ್ ಕಾರ್ಪೊರೇಶನ್ನಿಗೆ ಆಯ್ಕೆ ಆಗಿ ಆಮೇಲೆ ಹಾಗೆ ಒಂದೊಂದೇ ಹೆಜ್ಜೆ" ಅಂದ್ಲು "ಓಹ್ ಹಾಗಾದ್ರೆ ನಾನು ಪ್ರಧಾನ ಮಂತ್ರಿ ಆಗೋಷ್ಟೊತ್ತಿಗೆ ಮುದುಕಾ ಆಗಿರ್ತೀನಿ" ಅಂದೆ. "ಇನ್ನೇನು ನೀವ್ ಗಾಂಧಿ ಮೊಮ್ಮಗನಾ, ಇಂದು ಹುಟ್ಟೀ ನಾಳೆ ಪ್ರಧಾನೀ ಆಗೋಕೇ, ಆ ಅದೃಷ್ಟ ನಿಮಗೆಲ್ಲಿ ಇಲ್ಲ ಬಿಡಿ" ಅಂದ್ಲು. "ಆಯ್ತು ನೀನು ಹೇಳಿದ ಹಾಗೆ ಆಗ್ಲಿ" ಅಂದೇ. "ಆಗ್ಲಿ ಅಂದ್ರೆ ಆಯ್ತಾ, ಬಡಾವಣೆಯಲ್ಲೇ ಜನರಿಗೆ ಹೆಲ್ಪ ಆಗೋ ಹಾಗೆ ಕೆಲ್ಸ ಮಾಡಬೇಕು, ನೀರು ಬರದಿದ್ರೆ, ಬರೋ ಹಾಗೆ ಮಾಡೋದು, ಕರೆಂಟು, ರೋಡು ಹೀಗೆ ಏನಾದ್ರೂ ಸಮಾಜ ಸೇವೆ ಮಾಡಿ ಹೆಸರು ಮಾಡ್ಬೇಕು ಆಮೇಲೇ ನಿಂತ್ಕೊಳ್ಳೊದು". "ಓಹ್ ಹೌದಾ, ನೀರು ಬಂದು ಮೂರು ದಿನಾ ಆಯ್ತಲ್ಲ, ಪಾಪ ಪಕ್ಕದ ಮನೆ ಪದ್ದೂಗೆ ತೊಂದ್ರೆ ಆಗಿರಬೇಕು ಹೆಲ್ಪ ಮಾಡಿ ಬರ್ಲಾ" ಅಂದೆ. "ಮೊದಲು ನಮ್ಮ ಮನೇಲಿ ನೀರಿಲ್ಲ ಅದನ್ನ ನೋಡಿ" ಅಂತ ದುರುಗುಟ್ಟಿದ್ಲು.

ಹತ್ತು ಕೊಡ ನೀರು ಹೊತ್ತು ತಂದು ಹಾಕಿದ್ದಾಯ್ತು, ಉಸ್ಸಪ್ಪಾ ಅಂತ ಕೂತೆ, "ಲೇ ಚುನಾವಣೆಗೆ ನಿಲ್ಲಕಾಗಲ್ಲ ಕಣೇ ಕೂತ್ಕೋಬಹುದಾ" ಅಂತ ಕಿಚಾಯಿಸಿದೆ, "ಗೆದ್ದು ಬಂದ ಮೇಲೆ ಸೀಟಿನಲ್ಲಿ ಕೂರೋದೇ ಇರ್ತದೆ, ಚುನಾವಣೆಲಾದ್ರೂ ನಿಂತೊಕೊಳ್ಳಿ ಅಂತಾ ಇರೋದು, ನೀತಿ ಸಂಹಿತೆ ಉಲ್ಲಂಘನೆ ಮಾಡೋಕೆ ಆಗಲ್ಲಾ" ಅಂತ ಅವಳು. "ಅಂದ ಹಾಗೆ ಯಾವ ಪಕ್ಷ ನಿಮ್ದು" ಅಂದ್ಲು. "ಪಕ್ಷನೂ ಇಲ್ಲ ಎನೂ ಇಲ್ಲ ಪಕ್ಷೇತರ ನಾನು" ಅಂದೆ. "ಹಾಗಾದ್ರೆ ಚಿಹ್ನೆ?"... "ಹೌದಲ್ವಾ, ಚಿಹ್ನೇ ಬೇಕು, ಹೂಂ.... ಕಂಪ್ಯೂಟರ್...." ಅಂತ ಹಲ್ಲುಕಿರಿದೆ. "ಯಾವಾಗ ನೋಡಿದ್ರೂ ಕಂಪ್ಯೂಟರ್.. ಅದನ್ನ ಚಿಹ್ನೆ ಮಾಡಿಕೊಂಡ್ರೆ, ಅಷ್ಟೇ ನಿಮ್ಮ (ಕೆಲವು)ಐಟೀನವ್ರು ನಾಲ್ಕು ಜನ ಓಟು ಹಾಕಬಹುದು, ಅದೂ ವೀಕೆಂಡು ಇದ್ರೆ ಮಾತ್ರ, ರೀ ಚಿಹ್ನೆ ಅಂದ್ರೆ ಹೇಗಿರಬೇಕು, ಗೌಡರ ಪಕ್ಷದ್ದು ನೋಡಿ, ಹೊರೆ ಹೊತ್ತ ಮಹಿಳೆ, ರೈತರು, ಮಹಿಳೆಯರು ಇಬ್ರನ್ನೂ ಹಿಡಿದುಕೊಂಡು ಬಿಟ್ರು, ಒಂದೇಟಿನಲ್ಲಿ ಎರಡು ಹಕ್ಕಿ, ಇನ್ನು ಹಸ್ತ, ಪೊಲಿಂಗ್ ಬೂತ್ ಮುಂದೆ ನಿಂತೂ ಕೈ ತೊರಿಸಿ, ನಮಗೇ ಮತ ಹಾಕಿ ಅಂತ ಕೇಳಬಹುದು, ಯಾವ ನೀತಿಸಂಹಿತೆಯೂ ಏನೂ ಮಾಡೋಕೆ ಆಗಲ್ಲ, ಇನ್ನು ಕಮಲ, ಕೆಸರಿನಲ್ಲಿ ಅರಳಿದ ಕಮಲ, ಈ ರಾಜಕೀಯ ಕೆಸರನಲ್ಲಿ ಅರಳಿದ ಹೂವು ನಾವು ಅಂತ ಹೇಳಿಕೊಳ್ಳಬಹುದು... ಹಾಗಿರಬೇಕು ಗುರುತು ಅಂದ್ರೆ" ಅಂತ ನೀತಿ ಬೋಧನೆ ಮಾಡಿದ್ಲು, ಇವಳೇನು ಯಾವ ರಾಜಕೀಯ ನಾಯಕರಿಗಿಂತ ಕಮ್ಮಿಯಿಲ್ಲ ಅನಿಸಿತು. "ಹಾಗಾದ್ರೆ,
ಕಂಪ್ಯೂಟರ ಆಪರೇಟ್ ಮಾಡುತ್ತಿರುವ ರೈತ" ಹೇಗಿರ್ತದೆ ಅಂದೆ. ಬುಸುಗುಡುತ್ತ ನೋಡಿದ್ಲು... "ನೇಗಿಲು ಹೊತ್ತ ಸಾಫ್ಟವೇರ ಇಂಜನೀಯರು, ರಿಸೆಷನ್ ಟೈಮಿನಲ್ಲಿ ಚೆನ್ನಾಗಿರತ್ತೆ" ಅಂದೆ, ಅಟ್ಟಿಸಿಕೊಂಡು ಬಂದ್ಲು, ಒಡಾಡಿ ಸುಸ್ತಾಗಿ ಬಂದು ಕುಳಿತೆವು. "ರೀ ನಿಜವಾಗ್ಲೂ ಚುನಾವಣೆಗೆ ನಿಂತು ಹೀಗೆಲ್ಲ ಮಾಡಿದ್ರೆ" ಅಂದ್ಲು, "ನಿನ್ನ ಚುನಾವಣೇನೂ ಬೇಡಾ... ನಾ ನಿಲ್ಲೋದು ಬೇಡ.. ಮಲಗ್ತೀನಿ ಬಿಡು" ಅಂದೆ, "ಎದ್ದೇಳಿ ಯುವಕರೇ ದೇಶ ಕಟ್ಟಲು ಎದ್ದೇಳಿ" ಅಂತ ಎಬ್ಬಿಸಲು ಪ್ರಯತ್ನಿಸಿದ್ಲು, ನಾ ಏಳಲೇ ಇಲ್ಲ.

ಚುನಾವಣೆ ಅಂತಿದ್ದಂಗೆ ಹೇಸಿಗೆ ಬರುವಷ್ಟು ರಾಜಕೀಯ ಗಬ್ಬೆದ್ದು ಹೋಗಿದೆ, ಯಾರಾದ್ರೂ ಎಲ್ಲ ಒಮ್ಮೇಲೇ ಸರಿ ಮಾಡಲು ಹೋಗಬೇಕೆಂದ್ರೆ. ಕೊಳಚೆಗೆ ಫಿನಾಯ್ಲು ಸುರಿದಂತೇ ಸರಿ, ಕೊಳಚೆಗೇನೂ ಆಗಲ್ಲ, ಅದಕ್ಕೇ ಕೊಳಚೆ ಹರಿದು ಹೋಗಿ ಹೊಸ ಹರಿವು ಬರಬೇಕು, ಆಗ ಹೊಸ ತಿಳಿನೀರು ಎಲ್ಲ ತೊಳೆಯುತ್ತ ಹೋಗುತ್ತದೆ, ಇತ್ತೀಚೆಗೆ ಕೆಲವು ಪ್ರತಿಭಾನ್ವಿತರು, ನಿಜ ನಾಯಕರು ಹೊರಹೊಮ್ಮುತ್ತಿರುವುದೇ ಅದರ ಲಕ್ಷಣ, ಆದರೆ ಎಲ್ಲ ಸರಿಯಾಗುವವರೆಗೆ ಈ ಕೊಳಚೆ ಸ್ವಲ್ಪ ನಾರುವುದೇ...

ಮಧ್ಯಾಹ್ನ ಗಡದ್ದಾಗಿ ನಿದ್ದೆ ಹೊಡೆದು ಎದ್ದೆ, ಬಿಸಿಬಿಸಿ ಟೀ ಸಿಕ್ಕಿತ್ತು, ಮತ್ತೆ ಕೇಳಿದ್ಲು, "ಚುನಾವಣೆಗೆ ನಿಲ್ಲದಿದ್ರೂ ಸರಿ, ಓಟಾದ್ರೂ ಹಾಕ್ತೀರಲ್ವಾ" ಅಂತ... "ಏನಂತ ಹಾಕಲಿ, ಯಾರಿಗೆ ಹಾಕಲಿ, ಎಲ್ಲ ನಾಯಕರು, ನಾಲಾಯಕರ್‍ಏ ನಿಂತಿದ್ದರೆ... ಈ ಪ್ರಶ್ನೆಗೆ ಉತ್ತರಿಸಿ ಅಂತ, ನಾಲ್ಕು ಆಯ್ಕೆ ಕೊಟ್ಟಿರ್ತಾರಲ್ಲ, ಅಲ್ಲಿ ಕೊನೇ ಆಯ್ಕೆ "ಮೇಲಿನದಾವೂದೂ ಅಲ್ಲ(none of the above)" ಅಂತ ಇರುತ್ತಲ್ಲ ಹಾಗೇ ಇಲ್ಲೂ "ಮೇಲಿನವರಾರೂ ಅಲ್ಲ" ಅಂತ ಕೊನೇ ಆಯ್ಕೆ ಅಂತಿದ್ದರೆ ಚೆನ್ನಾಗಿತ್ತು ಅದನ್ನೇ ಒತ್ತಿ ಬರುತ್ತಿದ್ದೆ" ಅಂದೆ ನಗುತ್ತಿದ್ಲು. "ಹೌದು ಹಾಗೆ ಮಾಡಿದ್ರೆ ಹೇಗಿರುತ್ತದೆ ಒಟ್ಟು ಮತದಾನದ ಪೈಕಿ ಅರ್ಧಕ್ಕಿಂತ ಜಾಸ್ತಿ ಪಡೆದರೆ ಮಾತ್ರ ಗೆಲುವು, ಹೆಚ್ಚಿಗೆ ಜನ "ಮೇಲಿನವರಾರೂ ಅಲ್ಲ" ಅಂದು ಯಾರೂ ಗೆಲ್ಲದಿದ್ರೆ, ಈಗ ನಿಂತವರು ಬಿಟ್ಟು ಮತ್ತೆ ಹೊಸಬರು ನಿಲ್ಲಬೇಕು ಅವರಲ್ಲಿ ಆಯ್ಕೆ ನಡೆಯಬೇಕು, ಹಾಗಿದ್ದರೆ ಹೇಗೆ, ಈ ರೀತಿ ಮಾಡಿದರೂ ಲೋಪದೋಷಗಳಿವೆ, ಎಷ್ಟು ಸಾರಿಯಂತ ಚುನಾವಣೆ ಮಾಡೊದು?, ಹಾಗೆ ಮತ್ತೆ ಹೊಸಬರು ನಿಲ್ಲದಿದ್ರೆ? ಆದರೂ ಎನೋ ಆಗ ಎಲ್ರೂ ಓಟು ಮಾಡಬಹುದು ಅಂತ ನನಗನ್ನಿಸುತ್ತದೆ, ಈಗ ಆಗುತ್ತಿರುವ ಐವತ್ತು ಅರವತ್ತು ಪ್ರತಿಶತಕ್ಕಿಂತ ಹೆಚ್ಚು ಮತಾದಾನವಾಗಬಹುದೇನೊ... ಬಹಳ ಜನರಿಗೆ ಓಟು ಹಾಕಬಾರದೆಂದಿಲ್ಲ, ಸರಿಯಾದ ಅಭ್ಯರ್ಥಿಗಳಿಲ್ಲದೇ ಓಟು ಹಾಕಲು ಮುಂದೆ ಬರುತ್ತಿಲ್ಲ ಅಷ್ಟೇ..." ಅಂದೆ. "ರೀ ಒಳ್ಳೇ ಭಾಷಣ ಮಾಡ್ತೀರ್ರೀ, ನೀವು ಚುನಾವಣೆಗೆ ನಿಂತರೆ..." ಅಂತ ಇವಳು ಮತ್ತೆ ಶುರುವಿಟ್ಟುಕೊಂಡ್ಲು...

ಹೀಗೇ ಬರುತ್ತಿರಿ, ಬ್ಲಾಗ್ ಬಂಧು ಬಾಂಧವರೇ!!! ಓಟು ಹಾಕದಿದ್ರೂ ಪರವಾಗಿಲ್ಲ, ಕಾಮೆಂಟಾದರೂ ನನಗೇ ಹಾಕಿ... :)


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ. ಎಲ್ಲ ವಿಚಾರಗಳೂ ಕೇವಲ ಹಾಸ್ಯಕ್ಕಗಿ ಬರೆದಿದ್ದು, ಯಾರಿಗೂ ನೋವುಂಟು ಮಾಡುವ ಉದ್ದೇಶವಿರುವುದಿಲ್ಲ, ಇವೆಲ್ಲ ಕೇವಲ ಲೇಖಕರ ವೈಯಕ್ತಿಕ ಅಭಿಪ್ರಾಯಗಳು, ಎಲ್ಲರೂ ಒಪ್ಪಬೇಕೆಂದಿಲ್ಲ, ಇಷ್ಟವಾದರೆ ಓದಿ ಇಲ್ಲವಾದ್ರೆ, ಹುಚ್ಚು ಹುಡುಗನ ಹತ್ತು ಮಾತುಗಳೆಂದು ಮರೆತುಬಿಡಿ.

The PDF document can be found at http://www.telprabhu.com/chunaavane.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

29 comments:

Ittigecement said...

ಪ್ರಭು...

ವಾವ್,,,!

ಮತ್ತದೆ ತೆಳು ಹಾಸ್ಯ...
ಸರಸ ಸಂಭಾಷಣೆ...
ಕುಟುಕು ವ್ಯಂಗ್ಯ....

ನಿಮ್ಮ ಬರಹಗಳ ಫ್ಯಾನ್ ಆಗಿಬಿಟ್ಟಿದ್ದೇನೆ....

ಮುಂದುವರೆಯಲಿ...

ನನ್ನ ವೋಟ್ ನಿಮಗೆ...!

ಮನಸು said...

ha ha ha chennagide nimma haasyamaya jeevana... nammelara vote nimage ha ha

Greeshma said...

ಹ್ಹಾ ಹ್ಹಾ! ಈ ಸಲದ್ದು ಬೊಂಬಾಟ್!
ನಿಮ್ಮಾಕೆಯನ್ನೇ ನಿಲ್ಲಿಸಿ, ಗೆಲ್ಲಿಸೋಣ ;)

PARAANJAPE K.N. said...

ಪ್ರಭು
ನಿಮ್ಮ ಲೇಖನ ಓದಿದೆ, ಅದರಲ್ಲಿರುವ ತಿಳಿಹಾಸ್ಯ, ವ್ಯಂಗ್ಯ, ವಿಡ೦ಬನೆ ಚೆನ್ನಾಗಿದೆ. ಹೇಗಿದ್ರು ಚುನಾವಣಾ ಕಾಲ, ಸಮಯೋಚಿತವಾಗಿದೆ ನಿಮ್ಮ ಲೇಖನ. ಈ ಬಾರಿ ನಿ೦ತಿಲ್ಲಾ೦ದ್ರು ಪರವಾಗಿಲ್ಲ ಮು೦ದಿನ ಸಲ ಒ೦ದು ಕೈ ನೋಡೇ ಬಿಡಿ, ಎಷ್ಟು ವೋಟು ಬರುತ್ತೋ ಗೊತ್ತಾಗುತ್ತಲ್ಲ.

Prabhuraj Moogi said...

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಧನ್ಯವಾದಗಳು ಸರ್, ಹಾಸ್ಯ, ಕುಟುಕುವಿಕೆ ಎಲ್ಲಾ ನನ್ನಾಕೆಯದ್ದು ನಾನೇನಿದ್ದರೂ ಬರೆಯುವುದು ಮಾತ್ರ!
ಕಾಮೇಂಟಿನೊಂದಿಗೆ, ವೋಟೂ ಕೊಟ್ಟಿದ್ದರಲ್ಲ,ತುಂಬಾ ಥ್ಯಾಂಕ್ಸ್...

ಮನಸು ಅವರಿಗೆ:
ತುಂಬಾ ಥ್ಯಾಂಕ್ಸ್, ತಮ್ಮ ನಿರಂತರ ಬೆಂಬಲಕ್ಕೆ!

Greeshma ಅವರಿಗೆ:
"ನೀ ಚುನಾವಣೆಗೆ ನಿಂತರೆ ಗೆಲ್ಲಿಸ್ತೀನಿ ಅಂತೀದಾರೆ" ಅಂದೆ, ಅವಳೇನೂ ಚುನಾವನೆಗೆ ನಿಲ್ಲಲ್ಲವಂತೆ, "ನಾನೇನಿದ್ರೂ ಕಿಂಗ್ ಮೇಕರ!!?? ನೀವು ನಿಲ್ಲಿ ನಾನೇನಿದ್ರೂ ಪರದೇ ಹಿಂದಿನಿಂದಾನೇ ಆಟ ಆಡಿಸ್ತೀನಿ" ಅಂತಾಳೆ. ಒಂಥರಾ ನಮ್ಮ ಪ್ರಸ್ತುತ ರಾಷ್ಟ್ರ್ರಿಯ ಆಡಳಿತದ ತರಹ! ಅದಕ್ಕೇ "ಏಸ್ ಮ್ಯಾಡಮ್" ಅಂದೆ.

PARAANJAPE K.N. ಅವರಿಗೆ:
ಸಂಜೆ ಸುಮ್ನೇ ಕೂತಿದ್ದೆ, ನಮ್ಮ ಬಡಾವಣೆಲೀ ಚುನಾವಣಾ ಪ್ರಚಾರ ಅಂತ ಲೌಡಸ್ಪೀಕರ ಹಾಕೆ ಚೀರತೊಡಗಿದರು, ಅದನ್ನೇ ಯಾಕೆ ಬರೀಬಾರದು ಅನ್ನಿಸಿತು ಬರೆದೆ. ಬೇಡ ಸಾರ ವೋಟು ಎಷ್ಟು ಬೀಳುತ್ತವೆಂದು ಗೊತ್ತು, ಮನೇಲೇ ನನ್ನಾಕೆ ವೋಟು ಹಾಕಲು ಹಿಂದೆ ಮುಂದೆ ನೋಡುತ್ತಿರಬೇಕಾದ್ರೆ, ಸುಮ್ನೇ ಠೇವಣಿ ನಷ್ಟ!

SSK said...

ಪ್ರಭು ಅವರೇ, ಖಂಡಿತವಾಗಿ ನನ್ನ ಮತವನ್ನು ನಿಮಗೇ ನೀಡುತ್ತೇನೆ. ಆದರೆ ಮತ ಚಲಾಯಿಸುವ ಹಕ್ಕು ಬಂದು ಕೆಲವು ವರ್ಷಗಳೇ ಕಳೆದಿದ್ದರೂ ಇದುವರೆಗೂ ಯಾವುದೇ ಗುರುತಿನ ಚೀಟಿ (voter ID) ನೀಡಿಲ್ಲಾ. ಮತ್ತು ನಿಜವಾಗಿಯು ಇದುವರೆಗೂ ನನಗೆ ಮತ ಚಲಾಯಿಸಿದ ಅನುಭವವೇ ಇಲ್ಲಾ! ಜೀವನದಲ್ಲಿ ಒಮ್ಮೆಯಾದರೂ ಮತ ಚಲಾಯಿಸುವ ಭಾಗ್ಯ ದೊರೆಯಲಿ ಎಂದು ಹಾರೈಸುತ್ತೇನೆ. (ಇದು ಕೇವಲ ನನ್ನ ಅನುಭವ ಅಷ್ಟೇ ಅಲ್ಲ, ನನ್ನ ಹಾಗೆ ಎಷ್ಟು ಮಂದಿ ಇದ್ದಾರೋ ಹೀಗೆ !?!)

ನೀವು ಗೆದ್ದು ಬಂದು ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸಿ ಸುವ್ಯವಸ್ಥೆಯ ಹಾದಿಯಲ್ಲಿ ನಡೆಯುತ್ತೀರಿ ಎಂದು ನಂಬಿ ಮೊದಲ ಬಾರಿಗೆ, ತಮಾಷೆಗಾಗಿಯಾದರು ಪರವಾಗಿಲ್ಲ ನಿಮಗೇ ಮತ ನೀಡಿದ್ದೇನೆ!

ಗೆದ್ದರೆ ನಿಮಗೆ ಮತ್ತು ನಿಮ್ಮ ಕನಸಿನ ಶ್ರೀಮತಿ ಗೆ ಅಭಿನಂದನೆಗಳು
ಸೋತರೆ ನಿಮ್ಮ ಲೇಖನಕ್ಕೆ ಅಭಿನಂದನೆಗಳು! ಹ ಹ ಹಾ ಹ್ಹಾ ......!!

Prabhuraj Moogi said...

SSK ಅವರಿಗೆ:
ಅಯ್ಯೊ ನಾನು ಇನ್ನೂ ಚುನಾವಣೆಗೇ ನಿಂತಿಲ್ಲ ಆಗಲೇ ಎಲ್ಲರೂ ವೋಟು ಹಾಕುತ್ತಿದ್ದೀರಲ್ಲ, ನಿಜ ಹೇಳಬೇಕೆಂದರೆ ನನಗೂ ಇನ್ನೂ ವೊಟರ ಕಾರ್ಡ ಮಾಡಿಸಲಾಗಿಲ್ಲ, ನಾನು ಸುವ್ಯವಸ್ಥೆ ತರುತ್ತೀನೆಂದು ಹೇಗೆ ನಂಬುತ್ತೀರಿ, ಮನೆಯಲ್ಲಿ ಕನಸಿನ ಶ್ರೀಮತಿಗೇ ಆ ನಂಬಿಕೆಯಿಲ್ಲ... ನಿಮಗೆಲ್ಲರಿಗೊ ಲೇಖನ ಇಷ್ಟವಾಗಿದ್ದು ನನಗೆ ಗೆದ್ದಂತೆಯೇ ಲೆಕ್ಕ, ಕನಸಿನ ಶ್ರೀಮತಿ ಸಭಾತ್ಯಾಗ ಮಾಡಿ ಹೊರಗೆ ಹೋಗಿದ್ದಾಳೆ, ಬಂದಮೇಲೆ ನಿಮ್ಮ ಅಭಿನಂದನೆ ತಿಳಿಸುತ್ತೀನಿ, ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು!

Nisha said...

ರಾಜಕೀಯ ದೊಂಬರಾಟದಲ್ಲಿ ನೀವು ಕೂಡ ಲಾಗ ಹಾಕಲು ರೆಡಿ ಎಂದಾಯ್ತು. ನಮ್ಮ ಮನೆಯ ೨ ವೋಟು ನಿಮಗೆ ಗ್ಯಾರೆಂಟಿ. ನೇಗಿಲು ಹೊತ್ತ ಸಾಫ್ಟವೇರ ಇಂಜನೀಯರನ ಕೈಯಲ್ಲಿ ಒಂದು ಲ್ಯಾಪ್ ಟಾಪ್ ಕೂಡಾ ಕೊಟ್ಬಿಡಿ, ಆಗ ರೈತರ, IT ಮಂದಿಯ ವೋಟು ಕೂಡ ನಿಮಗೇನೇ.

shivu.k said...

ಪ್ರಭುರಾಜ್,

ನೀವು ಚುನಾವಣೆಗೆ ನಿಂತರೆ ನನ್ನ ಓಟು ಖಂಡಿತ ನಿಮಗೆ...ಏಕೆಂದರೇ ಸರಸ ಸಲ್ಲಾಪದ ಮನೆವಾರ್ತೆಯನ್ನು ಚೆನ್ನಾಗಿ ಬರೆಯುತ್ತೀರಲ್ಲ ಅದಕ್ಕೆ...

ಮತ್ತದೆ ತೆಳುಹಾಸ್ಯ, ಹಿತವಾದ ರಂಜನೆ, ಸರಸ ಸಲ್ಲಾಪ, ಮುನಿಸು, ನಗು, ಕಾಲೆಳೆಯುವಿಕೆ, ಎಲ್ಲವೂ ಚೆನ್ನಾಗಿ ಮೂಡಿಬಂದಿದೆ...

ಧನ್ಯವಾದಗಳೂ..

Prabhuraj Moogi said...

Nisha ಅವರಿಗೆ:
ಅಯ್ಯೊ ರಾಜಕೀಯ ಎಲ್ಲ ನನಗ್ಯಾಕೆ, ಎಲ್ಲ ನನ್ನಾಕೆಯ ಕಿತಾಪತಿ, ಅವಳೇ ಚುನಾವಣೆಗೆ ನಿಲ್ಲಿ ಅಂತ ದುಂಬಾಲು ಬಿದ್ದಿದ್ದು. ಲ್ಯಾಪ್‌ಟಾಪ್ ಕೊಡೊಣ ಎಕ್ಸೆಲ್ ಶೀಟನಲ್ಲಿ ಬೇಕಾದ್ರೆ ಯಾವ ಹೊಲದಲ್ಲಿ ಎಷ್ಟು ಬೆಳೆ ಅಂತ ಲೆಕ್ಕ ಹಾಕಲು ಬೇಕಲ್ಲ!!!

shivu ಅವರಿಗೆ:
ಮನೆವಾರ್ತೆ ಬರೆಯಲು ಮಾತ್ರ ಬರುತ್ತದೆ ಸರ್, ಮನೇನೇ ಚೆನ್ನಾಗಿ ನಡೆಸಲು ಆಗಲ್ಲ, ಇನ್ನು ದೇಶವನ್ನೇನು ಮುನ್ನಡೆಸಿಯೇನು?... ನನ್ನಾಕೆಯ ತುಂಟ ಕಲ್ಪನೆಗಳೆ ಹಾಗೆ. ರಂಜನೆ ಒದಗಿಸಿದ್ದರೆ ಸಂತೋಷ ನನಗೆ...

ವಿನುತ said...

ಸಕಾಲಿಕ ಸು೦ದರ ಬರಹ. ಸ೦ಸಾರದಲ್ಲಿ ರಾಜಕೀಯ! ಪಾಪ ಏನೋ ಆಸೆ ಪಡ್ತಾ ಇದಾರೆ, ನಿಜವಾದ ಹೋಂ ಮಿನಿಸ್ಟರ್ ಮಾಡಿ ಬಿಡಿ ನಿಮ್ಮಾಕೆಯನ್ನ :)

maaya said...

ಸುಂದರವಾಗಿದೆ ರೀ ಪ್ರಭು,
ನಿಮಗಿಂತ ನಿಮ್ಮವರೇ ಸ್ವಲ್ಪ ಹೆಚ್ಚು ಚುರುಕು ಅವರನ್ನೇ ನಿಲ್ಲಿಸಿ ಗೆದ್ದರು ಗೆಲ್ಲಬಹುದು, ಚೆನ್ನಾಗಿದೆ ನಿಮ್ಮ ಈ ಲೇಖನ ಆದರೆ ವೋಟು ಹಾಕದಿದ್ದರೂ ಪರವಾಗಿಲ್ಲ ಕಾಮೆಂಟ್ ಹಾಕಿ ಅಂದದ್ದು ತಪ್ಪು, ಹ ಹ ಹ ಸುಮ್ಮನೆ ತಮಾಷೆ ಮಾಡಿದೆ, ಇವತ್ತಿನ ಕಲಿಯುಗದಲ್ಲಿ ವೋಟು ಮಾಡುವುದಕ್ಕಿಂತ ನಿಮ್ಮ ಲೇಖನ ಓದಿದರೆ ಬುದ್ದಿಯಾದರು ತಿಳಿಗೊಳ್ಳುತ್ತದೆ ಅಲ್ಲವೇ..

ಹೀಗೆ ಬರೆಯುತ್ತಿರಿ ನಾವು ಬರುತ್ತಿರುತ್ತೇವೆ,

ಹೇಮಾ

ವಿ.ರಾ.ಹೆ. said...

ರಾತ್ರಿ ನಿದ್ದೆಗೆಟ್ಟು ಬರೆದಿರೋ ಲೇಖನಕ್ಕೇ ಇಪ್ಪತ್ತು ಕಾಮೆಂಟು ಬರಲ್ಲ, ಇನ್ನು ಓಟು ಬರ್ತಾವಾ?

hha hha. mastaagide. :)

Anonymous said...

Looks more like a time pass article. Could have added a bit of depth into the topic, i am sure you have concepts which can form a message. Especially in these election times, where everywhere there is a call for change, but no one knows what that change is for.

Nice writing though..could have been a bit heavier too.

Unknown said...

:-) nice post ... u r wife is too smart .... compare to u :-) :-).... very lucky ... :-):-).. i enjoyed the every line....
very nice .... no words to explain ...

ಸಾಗರದಾಚೆಯ ಇಂಚರ said...

ಪ್ರಭುರವರೆ,
ನನ್ನ ವೋಟು ನಿಮಗೆ, ಬರಹ ತುಂಬಾ ಇಷ್ಟವಾಯಿತು

Anonymous said...

ನಮ್ಮ ಓಟು ನಿಮಗೇ, ನಿಮ್ಮ ಚುನಾವಣಾ ಚಿಹ್ನೆ ಕೂಡಾ ಚೆನ್ನಾಗಿದೆ. "ಕಂಪ್ಯೂಟರ ಆಪರೇಟ್ ಮಾಡುತ್ತಿರುವ ರೈತ??"
ಬರಹ ಯಾವಾಗಿನಂತೆ ತುಂಬಾ ಚೆನ್ನಾಗಿದೆ. ನೀವೂ, ನಿಮ್ಮ ಹೋಂ ಮಿನಿಸ್ಟರ್ ಇಬ್ಬರೂ ಈ ಸರ್ತಿ ಚುನಾವಣೆಗೆ ನಿಂತು ಬಿಡಿ.
ಒಬ್ಬರಾದರೂ ಗೆಲ್ಲುತ್ತೀರಾ ;-)

Prabhuraj Moogi said...

Vinutha ಅವರಿಗೆ:
ಅವಳಿಗೆ ಹೊಮ್ ನಲ್ಲಿ ಮಾತ್ರ ಮಿನಿಸ್ಟರಿ ಸಾಕಂತೆ... ಕಿಂಗ್ ಮೇಕರ್ ಆಗಬೇಕಿದೆಯಂತೆ...

maaya ಅವರಿಗೆ:
ಅವಳು ಯಾವಾಗಲೂ ಚುರುಕು, ಅದಕ್ಕೆ ನನ್ನ ಹರಕೆಯ ಕುರಿ ಮಾಡಿ ಚುನಾವಣೆ ನಿಲ್ಲಿ ಅಂತಿರೋದು... ನನಗೆ ವೊಟು ಹಾಕದಿದ್ದರೂ ಪರವಾಗಿಲ್ಲ ಕಾಮೆಂಟಾದರೂ ಹಾಕಿ ಅಂದಿದ್ದೆ, ವೋಟು ಮಾಡಲು ಮರೆಯದಿರಿ, ಅದೂ ಒಳ್ಳೆಯ ಅಭ್ಯರ್ಥಿಗೆ...

ವಿಕಾಸ್ ಹೆಗಡೆ ಅವರಿಗೆ:
ನಿಜವೇ ಅಲ್ವಾ ಇಷ್ಟೆಲಾ ಶ್ರಮ ಪಟ್ಟು ಬರೆದರೆ ಯಾರೂ ಓದಲ್ಲ, ಇನ್ನು ಬನ್ನಿ ವೋಟು ಹಾಕಿ ಅಂದ್ರೆ ಹಾಕ್ತಾರಾ...

Anonymous ಅವರಿಗೆ:
yes this is time pass article, I just try to send some message with fun and humor, If article goes in depth discussion then people might loose the interest and message might not reach also, but my main intention is just to add some humorous moments to people life that's it... so I concentrate on that...

roopa ಅವರಿಗೆ:
ya she is very smart after all she is my creation and so she has to be!!!... I think you are misunderstanding, I am not married, these are just some fantasies... keep visiting to know more about us...

ಸಾಗರದಾಚೆಯ ಇಂಚರ ಅವರಿಗೆ;
ವೊಟೆಲ್ಲ ಬೇಡಿ ಸಾರ್ ಕಾಮೆಂಟ್ ಸಾಕು...

ಜ್ಯೋತಿ ಅವರಿಗೆ:
ಕಂಪ್ಯೂಟರ್ ಆಪರೇಟ್ ಮಾಡುತ್ತಿರುವ ರೈತ ಯಾಕಾಗಬಾರದು ಅನಿಸಿತು, ನಾವು ರೈತರವರೆಗೂ ಆಧುನಿಕ್ ತಂತ್ರಜ್ಞಾನವನ್ನು ತರುತ್ತೇವೆ ಅಂತ ಹೇಳಬಹುದಲ್ಲ!!! ಅವಳು ಬಹಳ ಪ್ರಸಿದ್ಧ ಗೆದ್ದರೂ ಗೆಲ್ಲಬಹುದು, ಆದರೂ ನಮಗ್ಯಾಕೆ ರಾಜಕೀಯ ಬಿಡಿ... ಈಗ ಅಪ್ಪ-ಮಕ್ಕಳು, ಅಣ್ಣ-ತಮ್ಮಂದಿರು, ಮಾಡುತ್ತಿಲ್ಲವೇ ಹಾಗೆ.. ನಾಳೆ ಅವಳೊಂದು ಪಾರ್ಟಿ ನಾನೊಂದು ಆಗಿ ಕಚ್ಚಾಡತೊಡಗಿದರೆ!!! .

Unknown said...

I know u r not married ... in ur creation also u r supporting u r wife know ..that is great .. like KSN ... it is really great ...

ಶಿವಪ್ರಕಾಶ್ said...

ಪ್ರಭು ಅವರೇ,
ಸೂಪರ್ ರೀ..
"ಲೇಖನಕ್ಕೇ ಇಪ್ಪತ್ತು ಕಾಮೆಂಟು ಬರಲ್ಲ, ಇನ್ನು ಓಟು ಬರ್ತಾವಾ" ಅಂತ ಬೇಜಾರ್ ಆಗ್ಬೇಡಿ...
ನಾನೆ ನಿಮಗೋಸ್ಕರ ಕಳ್ಳ ವೋಟು ಹಾಕ್ತೀನಿ, ಅಲ್ಲ ಅಲ್ಲ ಕಳ್ಳ ಕಾಮೆಂಟ್ ಬರಿತೀನಿ...... ಹ್ಹಾ ಹ್ಹಾ ಹ್ಹಾ...
ಮತ್ತೆ ನಮ್ಮ ಪಾರ್ಟಿ ಚಿನ್ನೆ "ನೇಗಿಲು ಹೊತ್ತ ಸಾಫ್ಟವೇರ ಇಂಜನೀಯರು" ಚನ್ನಾಗಿದೆ.. ನೇಗಿಲು ಜೊತೆ ಒಂದು labtop ಹಕೊನಾ...

ತುಂಬಾ ಚನ್ನಾಗಿ ಬರೆದಿದ್ದೀರಿ...

Prabhuraj Moogi said...

To roopa:
Oh, I misunderstood then... I am not at all a comparison to KSN sir... I am just simply a blogger with some writing hobby...

ಶಿವಪ್ರಕಾಶ್ ಅವರಿಗೆ
ಲೇಖನಕ್ಕೆ ಇಪ್ಪತ್ತು ಕಾಮೆಂಟು ಬರಲ್ಲ ಅಂತಿದ್ದಂಗೆ ಇಪ್ಪತ್ತು ಮೀರಿದೆ. (ನಿಮ್ಮದೇ ಇಪ್ಪತ್ತನೆ ಕಾಮೆಂಟು). ಜನರಿಗೆ ಅನಿಸಿಕೆ ತಿಳಿಸೋದು ಅಭ್ಯಾಸವೇ ಇಲ್ಲವೇನೋ, ಅದಕ್ಕೆ ವೋಟು ಹಾಕಿ ಅಭ್ಯರ್ಥಿ ಬಗ್ಗೆ ಅನಿಸಿಕೆ ತಿಳಿಸಲ್ಲ, ಹಾಗೆ ಬರಹ ಓದಿ ಕೂಡ.. ಅಯ್ಯೋ ಕಳ್ಳ ವೋಟೆಲ್ಲಾ ಬೇಡಿ ಸರ್, ನಿಮ್ಮ ಕಾಮೆಂಟು ಸಾಕು.

Raghavendra said...

negil hotta software engineer chihne chennagide...
adu itkond nodi, nanna dashte alla yella IT hudugru nimge vote haaktare...
article is very nice.. keep writing :)

Prabhuraj Moogi said...

To: Raghavendra
chihne chennaagide, aadare chunaaVaNege nilluttilla biDi... vOtell bEDi saar.. commenT saaku...

ಬಾಲು said...

nanage voter id ide, mathadaara list nallu ide. aadre e sala election mugithu. next time nilli nan vote na nimge koduve. aadare ondu vote ge 5K ?(Recession alva, adu jasti aadru aagabahudu, mane inda booth varege innova car, amele andina oota haagu upahaara ishte.)


mundina baari nilthira thane?

Prabhuraj Moogi said...

ಬಾಲು ಅವರಿಗೆ:
ಅಯ್ಯೋ ಈ ಬಾರಿಯೂ ಚುನಾವಣೆಗೆ ನಿಲ್ಲದೆ ಇದ್ದಿದ್ದು ಒಳ್ಳೆದಾಯ್ತು ಬಿಡಿ ಇಲ್ಲಾಂದ್ರೆ ಒಂದು ವೋಟಿಗೆ ಇಷ್ಟು ಖರ್ಚು ಮಾಡಬೇಕೆಂದರೆ ಇನ್ನು ಗೆಲ್ಲಲು...!!!!
ಮುಂದಿನ ಬಾರಿ ಚುನಾವಣೆ ಮಾತೆತ್ತಿದರೆ ಕೇಳಿ...

Vasudeesha said...

ಅಂಕಣ ತುಂಬಾ ಚೆನ್ನಾಗಿತ್ತು ...

Prabhuraj Moogi said...

Vasudeesha ಅವರಿಗೆ:
ಸ್ವಾಗತ ನನ್ನ ಬ್ಲಾಗಗೆ... ಬರ್ತಾ ಇರಿ

ಧರಿತ್ರಿ said...

ನಿನ್ನೆ ಕರ್ನಾಟಕದ ಎರಡೂ ಹಂತಗಳ ಚುನಾವಣೆ ಮುಗಿದಿದೆ. ಇವತ್ತು ಬ್ಲಾಗ್ ಓದಿದೆ.ಯಾಕಂದ್ರೆ ಅದು ಎಷ್ಟು ಓದಿದರೂ ಹನುಮಂತನ ಬಾಲದ ಥರ ತುಂಬಾ ಉದ್ಧ ಇತ್ತು..ಆದ್ರೆ ಬರಹ ತುಂಬಾ ಚೆನ್ನಾಗಿದೆ. ಮೊದಲೇ ಓದ್ತಾ ಇದ್ರೆ ನಾನು ನಿಮಗೇ ಓಟು ಹಾಕುತ್ತಾ ಇದ್ದೆ ಅಂತ ಈಗ ಹೇಳಿದ್ರೆ ಬೈಬೇಡ್ರಿ..ಅಂತೂ ಒಂದು ಓಟಿನಿಂದ ಮಿಸ್ ಆದ್ರೆ..ಅದು ನನ್ನ ಓಟಿನ ಫಲ ಅಂದುಕೊಳ್ಳಿ!! ಗೆದ್ರೆ ನಮಗೆಲ್ಲಾ ಬಾಡೂಟ ಹಾಕಿಸಿ..ಊರಿಗೆಲ್ಲಾ ಸೀರೆ ಕೊಡಿಸಿ..ಥೇಟ್ ನಮ್ಮ ಮುಖ್ಯಮಂತ್ರಿಗಳ ಥರ!! ಆದರೆ ಢೋಂಗಿ ರಾಜಕಾರಣ ಮಾಡಿದ್ರೆ..??!!! ಆಮೇಲೆ ಹೇಳ್ತೀನಿ.

ತುಂಬಾ ಒಳ್ಳೆಯ ಹಾಸ್ಯ ಬರಹ..ಬರಿತಾ ಇರಿ. ಶುಭವಾಗಲೀ.
-ಧರಿತ್ರಿ

Prabhuraj Moogi said...

ಚಿಕ್ಕದಾಗಿ ನನಗೆ ಬರೆಯಲು ಬರಲ್ಲ ಬಿಡಿ, ಆದರೂ ನೀವು ಸಹನೆಯಿಂದ ಓದಿದ್ದು ಕೇಳಿ ಖುಶಿಯಾಯ್ತು, ನಾನು ಚುನಾವಣೆಗೆ ನಿಲ್ಲಲೇ ಇಲ್ಲ ಬಿಡಿ, ನನ್ನಾಕೆ ಐಡಿಯಾ ಕೊಡಲು ಲೇಟು ಮಾಡಿದ್ಲು. ಅಯ್ಯೊ ಊರಿಗೆಲ್ಲ ಸೀರೆ ಎಲ್ಲಿ ಕೊಡಿಸಲಿ ನನ್ನವಳೊಬ್ಬಳಿಗೇ ಕೊಡಿಸಲು ಸಾಧ್ಯವಾಗದಿರುವಾಗ...ಢೊಂಗಿ ರಾಜಕಾರಣ ಮಾಡಲ್ಲ ಬಿಡಿ, ನನ್ನಾಕೆಯೆ ಮನೆಯಲ್ಲಿ ತರಾಟೆಗೆ ತೆಗೆದುಕೊಂಡು ಬಿಟ್ಟಾಳು!!!.. ನಿಮ್ಮ ಕಾಮೆಂಟೂ ಅಷ್ಟೆ ಹಾಸ್ಯಮಯವಾಗಿತ್ತು, ಹೀಗೆ ಬರುತ್ತಿರಿ.. ಧನ್ಯವಾದಗಳು