Sunday, May 31, 2009

ಅವಳೆಲ್ಲಿ ಹೋಗ್ತಾಳೆ?


ಮನೆಗೆ ಬಂದು ಬಾಗಿಲು ತೆಗೆದು, ಕೈಕಾಲು ಮುಖ ತೊಳೆದು ಸೀದಾ ಅವಳ ಪಾಕಶಾಲೆಗೆ ಕಾಲಿಟ್ಟೆ, ಅವಳಾ ಮಲಗಿರ್ತಾಳಲ್ಲ ಎಲ್ಲಿ ಹೋಗ್ತಾಳೆ, ಆದರೆ ಪಾಕಶಾಲೆಯಲ್ಲೇನಿದೆ, ಏನಿದೆ ಅಲ್ಲಿ.. ಏನಿಲ್ಲ! ಅದೇ ಟೀ ಕುಡಿದು ಖಾಲಿ ಮಾಡಿಟ್ಟ ಕಪ್ಪು, ಅದನ್ನು ಮಾಡಿದ ಬೋಗುಣಿ, ಸೋಸಿದ ಜಾಳಗಿ(ಜಾಲರಿ) ಮಾತ್ರ. ಪ್ರತೀ ದಿನ ಬಂದಾಗ ಅಲ್ಲಿರುತ್ತಿದ್ದ ನೀಟಾಗಿ ಊಟ ಬಡಿಸಿಟ್ಟ ತಟ್ಟೆ ಎಲ್ಲಿ?... ಏನಾಯ್ತು ಅವಳಿಗೆ, ಅಡಿಗೆ ಮಾಡಿಲ್ವೇ ಇಂದು, ಹುಷಾರಿಲ್ವೇ, ಮರೆತು ಹೋದಳೇ. ಅಯ್ಯೊ ಎಲ್ಲ ನಾನೇ ಯೋಚಿಸ್ತಿದೀನಲ್ಲ, ಇಲ್ಲೇ ಮಲಗಿರ್ತಾಳೆ ಎಲ್ಲಿ ಹೋಗ್ತಾಳೆ, ಎಬ್ಬಿಸಿ ಕೇಳೊಣ ಅಂತ ಬೆಡರೂಮಿಗೆ ಬಂದೆ, ಅಲ್ಲೇನಿದೆ, ಏನಿಲ್ಲ... ಅಲ್ಲೂ ಏನಿಲ್ಲ... ಎಲ್ಲಿ ಅವಳು? ಹಾಲ್, ಹಿತ್ತಿಲು, ವರಾಂಡ, ಕೊನೆಗೆ ಬಾತರೂಮ್ ಟಾಯ್ಲೆಟ್ ಎಲ್ಲ ಕಡೇ ಹುಡುಕಾಡಿಯಾಯ್ತು ಎಲ್ಲಿ ಅವಳು, ಎಲ್ಲೂ ಇಲ್ಲ. ಎಲ್ಲಿ ಹೋದ್ಲು ಅದೂ ಇಷ್ಟೊತ್ತಿನಲ್ಲಿ ಅದೂ ನನಗೇನೂ ಹೇಳದೇ ಎಲ್ಲೂ ಹೋಗಲ್ಲ, ಹೋದರೂ ಇಷ್ಟೊತ್ತು ಲೇಟಾದರೂ ಫೋನು ಮಾಡಿ ಇಲ್ಲಿದೀನಿ ಬರ್ತೀನಿ ಅಂತಾದರೂ ಹೇಳೊಳು, ಇಂದೇನು ಇಲ್ಲ, ಇಲ್ಲೆ ಪಕ್ಕದ ಮನೆಗೆ ಹೋಗೀದಾಳ, ಪಕ್ಕದ ಮನೆ ಪದ್ದು ಹತ್ರ ಬಿಟ್ರೆ ಎಲ್ಲೂ ಹೋಗಲ್ಲ, ಅದೊ ಅವರ ಮನೇಲಿ ಒಂದು ಲೈಟೂ ಉರೀತಿಲ್ಲ, ಕಿಟಕೀಲಿ ಕಾಣಿಸ್ತಿದೆ, ಎಲ್ಲ ಮಲಗೀದಾರೆ, ಎಲ್ಲಿ ಹೋದಳು. ಹಾಗೇ ಸೊಫಾದ ಮೇಲೆ ಕುಸಿದ ಕುಳಿತರೆ, ಅವಳ ಮೊಬೈಲ ಕೆಳಗಿತ್ತು ಪುಟಿದೆದ್ದೆ, ಅದನ್ನು ತೆಗೆದು ಪಕ್ಕಕ್ಕಿಟ್ಟೆ, ಮೊಬೈಲೂ ಇಲ್ಲೇ ಇದೆ ಎಲ್ಲಿ ಹೋದ್ಲು. ನಿಧಾನ ಬೆವರ ತೊಡಗಿದೆ.... ಹೊರಗೆ ಜಿಟಿ ಜಿಟಿ ಮಳೆಯಾಗುತ್ತಿದ್ದರೂ...

ಈ ವಾರವೆಲ್ಲ ಬಹಳೇ ಬಹಳ ಕೆಲಸದಲ್ಲಿ ನಿರತನಾಗಿದ್ದೆ, ಅವಳೊಂದಿಗೆ ಸರಿಯಾಗಿ ಮಾತನಾಡಲೂ ಆಗಿರಲಿಲ್ಲ, ಮುಂಜಾನೆ ಟಿಫಿನ್ನು ಮಾಡುತ್ತ ಡೈನಿಂಗ ಟೇಬಲ್ಲಿನ ಮೇಲೂ ಅದೇ ಆಫೀಸು, ಕೆಲ್ಸ, ಬಹಳ ಟೆನ್ಷನ್ ಇತ್ತು, ಸಂಜೆ... ಅಲ್ಲಲ್ಲ ಅದು ರಾತ್ರಿ, ಬರೋದು ಕೂಡ ಲೇಟಾಗುತ್ತಿತ್ತು, ಹೀಗೇ ಈವತ್ತೂ ಲೇಟಾಗಿದ್ದುದು, ಎಲ್ಲಿ ಹೋಗ್ತಾಳೆ ಮನೇಲೇ ಇರ್ತಾಳೆ ಅಂತನಕೊಂಡಿದ್ದು ಸುಳ್ಳಾಗಿತ್ತು, ನಾನೆಲ್ಲಿ ಮಾತಾಡಿಲ್ಲ ಅಂತ ಬೇಜಾರಾಗಿ ಹೊರಟು ತವರಿಗೆ ಹೋದಳಾ, ಫೋನು ಮಾಡಿ ಕೇಳೋಣ ಅಂತ ಫೋನು ಕೈಗೆತ್ತಿಕೊಂಡೆ, ಏನಂತ ಕೇಳಲಿ? ಅವಳಲ್ಲಿ ಬಂದೀದಾಳ ಅಂತಾನಾ? ಅಲ್ಲಿರದಿದ್ದರೆ, ಮರುಪ್ರಶ್ನೆ ಗ್ಯಾರಂಟಿ ಎಲ್ಲಿ ಹೋಗಿದಾಳೆ ನಿಮಗೆ ಹೇಳದೇ? ಅಂತ, ಏನಂತ ಹೇಳಲಿ ಆಗ, ಮೊದಲೇ ನನಗೆ ಗೊತ್ತಿಲ್ಲ ಇನ್ನು ಅವರೂ ಟೆನ್ಷನ್ ಮಾಡ್ಕೋತಾರೆ, ಅವಳಿಗೇನಾಗಿರಲ್ಲ ಇಲ್ಲೇ ಎಲ್ಲೊ ಹೋಗಿರ್ತಾಳೆ, ಬರ್ತಾಳೆ, ಸುಮ್ನೇ ನಾನೇ ಬಹಳ ಯೋಚಿಸ್ತಿದೀನಿ, ಅಂತ ಸಮಾಧಾನಿಸಿಕೊಂಡೆ, ಅದರೂ ತಲೇಲಿ ಪ್ರಶ್ನೆ ಕೊರೆಯುತ್ತಿತ್ತು ಹುಳುಕೊರೆದಂತೆ. ಅಮ್ಮನಿಗೆ ಫೋನು ಮಾಡಿದರೆ? ಅಯ್ಯೊ ಹಾಗೇನಾದ್ರೂ ಮಾಡಿದ್ರೆ ಚೆನ್ನಾಗಿ ಬೈಸಿಕೋತೀನಿ, ಪಾಪ ಒಬ್ಳೆ ಮನೇಲಿ ಇರ್ತಾಳೆ, ಹುಷಾರಾಗಿ ನೋಡ್ಕೊ ಅಂತ ಮೊದಲೇ ಅಮ್ಮ ಎಚ್ಚರಿಕೆ ಕೊಟ್ಟಿದ್ದು ನೆನಪಿಗೆ ಬಂತು,
ಮೊದಲೇ ಬೆಂಗಳೂರು ಮಹಾನಗರ ಬೆಳೆದಂತೆ ಅಪರಾಧ ದುಷ್ಕೃತ್ಯಗಳು ಜಾಸ್ತಿ ಆಗ್ತಿವೆ, ಯಾರಾದರೂ ಅಪಹರಿಸಿದರೋ?

ಏನಿದು ಏನೇನೊ ಯೊಚಿಸ್ತಿದೀನಿ, ಹಾಗೇನು ಆಗಿರಲ್ಲ ಅಂತ ಮನಸಂದರೂ ಯೋಚನೆಗಳು ಬಿಡಬೇಕಲ್ಲ, ಒಂದು ತಿಳಿ ಅಂದ್ರೆ ಹತ್ತು ತಿಳಿಯುತ್ತಿತ್ತು, ಯಾರಾದರೂ ಅಪಹರಿಸಿದ್ರೆ ಫೋನು ಮಾಡಿ ಇಷ್ಟೊತ್ತಿಗೆ ದುಡ್ಡು ಕೇಳಿರೊರು, ನಾನೇ ಬಂದು ಅರ್ಧ ಘಂಟೆ ಆಯ್ತು, ಅದೂ ಇಲ್ಲ, ಮತ್ತೆ ಇನ್ನೂ ಎನೊ ಭಾರಿ ಅನಾಹುತ ಛೇ ಹಾಗಾಗಿರಲ್ಲ, ಬಿಟ್ತು ಅನ್ನು, ಎಲ್ಲ ಒಳಿತಾಗಲಿ, ಯಾರನ್ನ ಕೇಳಲಿ ಈಗ ಅಂತ ಶತಪಥ ಅತ್ತಿಂದಿತ್ತ ತಿರುಗಿದೆ, ಕೂತರೆ ಕೈಬೆರೆಳು ಹಾಗೇ ಟೀಪಾಯಿ ಬಾರಿಸುತ್ತಿದ್ದವು, ಕೋಡಿಂಗ ಮಾಡುವಾಗ ಕಂಪ್ಯೂಟರ್ ಕೀಬೋರ್ಡ ಮೇಲೂ ಅಷ್ಟು ಜೋರಾಗಿ ಓಡಾಡಿರಲಿಕ್ಕಿಲ್ಲ, ಕೊನೇಪಕ್ಷ ಪಕ್ಕದಮನೇಲಿ ಹೇಳಿ ಹೋಗಿರ್ತಾಳೆ ಅವರನ್ನೇ ಕೇಳಿದ್ರೆ, ಪದ್ದು ನೆನಪಿಗೆ ಬಂದ್ಲು, ಮಲಗೀದಾರೆ ಅನಿಸತ್ತೆ, ಎಬ್ಬಿಸಿದರಾಯ್ತು, ಏನಂತ "ಪದ್ದು" ಅಂತಾನಾ, ಹಾಗೆ ಹೇಗೆ ಕರೆಯೋಕೆ ಆಗತ್ತೆ, ಹಾಗಾದ್ರೆ ನಿಜ ಹೆಸರೇನು, ಪದ್ಮಾ, ಪದ್ಮಾವತಿ, ಪದ್ಮಲತಾ... ಏನೂ ನೆನಪಿಗೆ ಬರ್ತಾ ಇಲ್ವೇ... ಪದ್ಮಪ್ರಿಯ.. ಅದು ಉಡುಪಿ ಎಂಎಲ್‌ಏ ಹೆಂಡತಿ ಹೆಸರಲ್ವೇ, ಅದೇ ದೆಹಲಿಯಲ್ಲಿ ಅವಳ ಶವ ದೊರಕಿತಲ್ಲ ಆ ಪದ್ಮಪ್ರಿಯ.. ಹಾಗೆ ನನ್ನಾಕೆಯೂ ನನ್ನ ಬಿಟ್ಟು.. ಛೀ ನನ್ನ ಯೋಚನೆಗಳಿಗಿಷ್ಟು... ಹಾಗೆಲ್ಲ ಏನಿಲ್ಲ, ಮನಸು ಇನ್ನೂ ಬಿಡ್ತಿಲ್ಲ, ಹೌದು ಮನೆಗೆ ಬರೋದೆ ಲೇಟು ಅವಳೊಂದಿಗೆ ಸರಿಯಾಗಿ ಮಾತಾಡೂ ಇಲ್ಲ, ಅದಕ್ಕೆ ಬೇಜಾರಾಗಿ ನನ್ನ ಬಿಟ್ಟು ಓಡಿಹೋಗಿದ್ರೆ, ಅಂತ ಇನ್ನೂ ಬಡಕೊಳ್ಳುತ್ತಿತ್ತು. ಅಷ್ಟರಲ್ಲೇ ಪದ್ದು ಹೆಸರು ಜ್ಞಾಪಕಕ್ಕೆ ಬಂತು, ಪದ್ಮಿನಿ ಅಲ್ವಾ, ಅದು ಈಗ ಬೇಡವಾಗಿತ್ತು, ಅವಳು ಮನೆ ಬಿಟ್ಟು ಹೋಗುವಾಗ ಲೇಟರು ಗಿಟರು ಏನಾದ್ರೂ ಬರೆದಿಟ್ಟು ಹೋಗೀದಾಳೊ ಅಂತ ಹುಡುಕುತ್ತಿದ್ದೆ, ಡ್ರಾವರು, ಅವಳ ಡ್ರೆಸಿಂಗ್, ಟೇಬಲ್ಲು, ಟೀವಿ, ಫ್ರಿಡ್ಜು, ಕೊನೆಗೆ ತಲೆದಿಂಬು ಕೆಳಗೂ ನೋಡಿದ್ದಾಯ್ತು.. ಉಹೂಂ ಅಲ್ಲೂ ಇಲ್ಲ. ಎಲ್ಲಿ ಎಲ್ಲಿ ಅಂತ ಬೆಡಶೀಟು, ಹಾಸಿಗೆ, ಹೊದಿಕೆ ಎಲ್ಲ ಕಿತ್ತು ಬೀಸಾಡಿದ್ದಾಯ್ತು. ಮತ್ತೆ ಹೊರಗೆ ಬಂದು ಕೂತು, ಯಾರಿಗೆ ಕೇಳಲಿ ಅಂತ ಯೋಚಿಸುತ್ತ ಅಕ್ಕ ಮಾಮನಿಗೆ ಫೋನು ಮಾಡತೊಡಗಿದೆ, ಬೆಂಗಳೂರಿನಲ್ಲಿ ಈಗ ನಾ ಇಂಥ ಪರಿಸ್ಠಿತಿಯಲ್ಲಿ ಫೋನು ಮಾಡಬಹುದಾಗಿದ್ದರೆ ಅವರಿಗೆ ಮಾತ್ರ, ಅತ್ತಲಿಂದ ಅಕ್ಕ ಲೇಟಾಗಿ ಬರೊ ನನ್ನ ಬಯ್ದಳು, ಮಾಮ ಪೋಲೀಸು ಕಂಪ್ಲೇಂಟ ಎನಾದ್ರೂ ಕೊಡೋದೊ ಹೇಗೆ ಅಂತಂದು, ಏನಕ್ಕೂ ನಾವು ಬರೊವರೆಗೆ ತಾಳು, ಮೊದಲು ಎಲ್ಲರಿಗೂ ಫೋನು ಮಾಡಿ ಕೇಳಿದರಾಯ್ತು ಅಂತ ಫೋನಿಟ್ಟರು.

ಸ್ವಲ್ಪ ಧೈರ್ಯ ಬಂತು, ತಲೆಗೂದಲಲ್ಲಿ ಕೈ ಹುದುಗಿಸಿಟ್ಟುಕೊಂಡು ಹಾಗೆ ಬಾಗಿ ಕೂತಿದ್ದೆ, "ಕೀರರರರ..." ಅಂತ ಶಬ್ದದೊಂದಿಗೆ ಬಾಗಿಲು ತೆರೆದುಕೊಂಡಿತು, ಕೈತುಂಬ ರಾಶಿ ಹೊರೆಬಟ್ಟೆ ತೆಗೆದುಕೊಂಡು, ಒಳಗೆ ಬಂದವಳೇ ಬಾಗಿಲು ಹಾಕಿದಳು, ಹೋದ ಜೀವ ಬಂದಂತಾಯಿತು, ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡೆ, ಉಸಿರುಗಟ್ಟುವಷ್ಟು ಗಟ್ಟಿಯಾಗಿ, "ರೀ ಏನಾಯ್ತು?" ಅಂತ ಅವಳು ಕೇಳುತ್ತಲೇ ಇದ್ಲು, ನಾನೇನು ಹೇಳುತ್ತಿಲ್ಲ, ಬೆನ್ನಿಗೆ ನಾಲ್ಕು ಗುದ್ದು ಕೊಟ್ಟೆ, ಅವಳ ಮುಖವನ್ನೊಮ್ಮೆ ನೋಡಿ ಮತ್ತೆ ಅಪ್ಪಿಕೊಂಡೆ, ಕೈಲಿದ್ದ ಬಟ್ಟೆ ಚೆಲ್ಲಿ, ತಲೆ ಸವರಿದಳು, ನನ್ನ ಪಾದದಮೇಲೆ ಹತ್ತಿ ನಿಂತು ಹಿಮ್ಮಡಿ ಎತ್ತರಿಸಿ ಹಣೆಗೆ ಮುತ್ತನ್ನಿಟ್ಟಳು. ಆಗಲೇ ನಾ ಮತ್ತೆ ಪ್ರಜ್ಞೆಗೆ ಬಂದಿದ್ದು.

ಮೊದಲು ಮೊಬೈಲು ತೆಗೆದುಕೊಂಡು, ಮಾಮನಿಗೆ ಫೋನು ಮಾಡಿ ಅವಳೆಲ್ಲಿ ಹೋಗಿಲ್ಲ, ಇಲ್ಲೇ ಇದಾಳೆ ಉಳಿದದ್ದು ನಾಳೆ ಹೇಳ್ತೀನಿ, ನಾನೆ ಸುಮ್ನೆ ಹೆದರಿದ್ದೆ ಅಂದೆ, ಅಕ್ಕ "ಹುಚ್ಚಾ, ನಮಗೂ ಹುಚ್ಚು ಹಿಡಿಸಿಬಿಡ್ತೀಯಾ.." ಅಂತ ಬಯ್ದಳು ನಗುತ್ತ... ಅಷ್ಟರಲ್ಲಿ ಬಿದ್ದ ಬಟ್ಟೆಗಳನ್ನೆಲ್ಲ ಎತ್ತಿ ಅವಳು ಇಡಲು ಬೆಡರೂಮಿಗೆ ಹೋಗಿದ್ದಳು ಅಲ್ಲಿನ ಸ್ಠಿತಿ ನೋಡಿ ಹೊರಗೆ ಬಂದು, "ಏನ್ರೀ ಆಯ್ತು, ಹಾಸಿಗೆ ಎಲ್ಲ ಯಾಕೆ ಹಾಗೆ ಚೆಲ್ಲಾಪಿಲ್ಲಿಯಾಗಿದೆ, ಮೊದ್ಲು ಏನಾಯ್ತು ಹೇಳಿ ನನಗೆ" ಅಂತ ಬಟ್ಟೆ ಅಲ್ಲೇ ಬೀಸಾಡಿ ಬಂದ್ಲು, ಅವಳ ಕೈ ಹಿಡಿದುಕೊಂಡು ಸೊಫಾದಲ್ಲಿ ಕುಳಿತೆ, "ನನ್ನೆಂದಾದರೂ ಬಿಟ್ಟು ಹೋಗ್ತೀಯ" ಅಂದೆ "ಹಾಂ!!! ಯಾಕೆ ಬೇರೆ ಯಾರದ್ರೂ ಹುಡುಗಿ ಇಷ್ಟವಾಗಿ ಬಿಟ್ಲಾ ಹೇಗೆ, ಅವಳ ಮದುವೆ ಆಗಬೇಕಂತ ನಾ ಬಿಟ್ಟು ಹೊಗ್ತೀನಾ ಅಂತ ಕೇಳ್ತಿದೀರಾ?" ಅಂದ್ಲು ಅವಳ ಯಾವತ್ತಿನ ತರಲೇ ಧಾಟಿಯಲ್ಲೇ. ನಾ ಸುಮ್ಮನೆ ನಕ್ಕೆ "ನಾನ್ಯಾಕ್ರಿ ಬಿಟ್ಟು ಹೋಗ್ಲಿ, ಈಗ ಏನಾಯ್ತು ಅಂತ ಹೇಳ್ತೀರೊ ಇಲ್ವೊ, ಇಲ್ಲಂದ್ರೆ ಬಿಟ್ಟು ಹೋಗ್ತೀನಿ ನೋಡಿ" ಅಂತ ಹೆದರಿಸಿದ್ಲು, "ಎಲ್ಲಿದ್ದೆ" ಅಂದೆ, "ಮೇಲೇ ಟೆರೆಸಿನಲ್ಲಿ, ಆ ತಗಡಿನ ಶೀಟು ಹಾಕಿ ನೀರು ಬೀಳದಂತೆ ಮರೆ ಮಾಡಿಲ್ವಾ ಅಲ್ಲಿ ಕೂತಿದ್ದೆ, ಮಳೆ ಬರ್ತಿದೆ ಅಂತ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ನಾ, ಮಳೆ ಒಮ್ಮೆಲೆ ಜೋರಾಗಿ ಬಿಟ್ತು, ಹಾಗೆ ಕೆಳಗೆ ಬಂದ್ರೆ ಎಲ್ಲ ಬಟ್ಟೆ ಮತ್ತೆ ತೋಯ್ದು ಹೋಗ್ತವೆ, ಸ್ವಲ್ಪ ಮಳೆ ಕಮ್ಮಿ ಆಗಲಿ ಅಂತ ಅಲ್ಲೇ ಕೂತಿದ್ದೆ" ಅಂದ್ಲು. "ಮಳೆ ಇನ್ನೊಂದು ಸ್ವಲ್ಪ ಹೊತ್ತು ಹೀಗೆ ಸುರಿದಿದ್ದರೆ, ಇಲ್ಲಿ ದೊಡ್ಡ ರಾಧ್ಧಾಂತವಾಗಿರೋದು" ಅಂದೆ, ಏನು ಅನ್ನುವಂತೆ ನೋಡಿದ್ಲು, ಆದ ಸಂಗತಿಯನ್ನೆಲ್ಲ ಒಂದೊಂದಾಗಿ ಹೇಳಿದೆ, ಬಿದ್ದು ಬಿದ್ದು ನಕ್ಕಳು. "ನೀನೇನು ನಗ್ತೀಯಾ ನಂಗೇನಾಗಿತ್ತು ನನಗೇ ಗೊತ್ತು" ಅಂದೆ, "ಅಲ್ಲ ಏನೇನು ಯೊಚ್ನೆ ಮಾಡ್ತೀರೀ ನೀವು, ಅಲ್ಲ ನಾನ್ಯಾಕೆ ನಿಮ್ಮನ್ನ ಬಿಟ್ಟು ಹೋಗ್ಲಿ ಹೇಳಿ, ಮದುವೆಗೆ ಮುಂಚೇನೆ, ನಿಮ್ಮ ಈ ಲೇಟಾಗಿ ಬರೋದು, ಟೆನ್ಷನ್ ಕೆಲಸ ಎಲ್ಲ ಹೇಳಿದ್ರಲ್ಲ, ನಂಗೊತ್ತಿತ್ತು, ಇತ್ತೀಚಿನ ಕೆಲಸದ ಅನಿಶ್ಚಿತತೆ ಬಹಳ ತಲೆನೋವಾಗಿರೊವಾಗ, ನಾನು ಹಾಗ್ಯಾಕೆ ಯೋಚಿಸಲಿ" ಅಂದ್ಲು. ಹಾಗೆ ಅಲ್ಲೇ ಒರಗಿಕೊಂಡೆ, "ನಿಂಗೆ ನೆನಪಿದ್ಯಾ ಮದುವೆಯಾದ ಹೊಸತರಲ್ಲಿ" ಅಂತಿದ್ದಂಗೆ, "ಈಗ ಅದ್ಯಾಕೆ" ಅಂತ ನಾಚಿದಳು,
"ಬೇಗ ಬರ್ತಿದ್ದೆ, ಘಂಟೆಗಟ್ಲೆ ನಿನ್ನೊಂದಿಗೆ ಮಾತು, ಹರಟೆ, ನಗು, ಎಲ್ಲಿ ಹೋಯ್ತು ಅದು" ಅಂದೆ. "ಆಫೀಸಲ್ಲಿ ಏನೇನು ನೆಪ ಹೇಳ್ತಾ ಇದ್ರಿ, ಅದೇ, ಗ್ಯಾಸ್ ಕನೆಕ್ಷನ್ ಮಾಡಿಸಬೇಕು ಅಂತ ಒಂದು ದಿನ ಆದ್ರೆ, ಇನ್ನೊಂದು ದಿನ ಸಿಲಿಂಡರ ತರೋಕೆ, ಮತ್ತೊಂದಿನ ತಲೆ ನೋವು ಅಂತ ರಜೆ, ಇನ್ನೊಮ್ಮೆ ಯಾರನ್ನೊ ಪಿಕ‌ಅಪ್ ಮಾಡ್ಬೇಕಿತ್ತು ಅಂತ ಲೇಟಾಗಿ ಹೋಗೊದು, ಒಂದೆ ಎರಡೇ, ಹೊಸದಾಗಿ ಮದುವೆ ಆಗಿದೆ ಅಂತ ನಿಮ್ಮ ಮ್ಯಾನೇಜರ್ರೂ ತತಾಸ್ಥು ಅನ್ನೊರೊ ನೀವು ಕೇಳೊ ರಜೆಗಳಿಗೆ, ಹೇಳೊದೆಲ್ಲ ನೆಪಗಳು ಅಂತ ಅವರಿಗೂ ಗೊತ್ತಾಗಿರಬೇಕು" ಅಂತ ನಕ್ಕಳು, ನಾನೂ ನಕ್ಕೆ, ಹಾಗೆ ಇಬ್ಬರೂ ಕೂತು ಹರಟೆ ಹೊಡೆದು ಎಷ್ಟೋ ದಿನಗಳಾಗಿತ್ತು.

ಮದುವೆಯಾದ ಹೊಸತರಲ್ಲಿ ಎಲ್ಲ ಹಾಗೆ ಅಲ್ವ, ಅದೇನೊ ವಿಚಿತ್ರ ಸೆಳೆತ ಇರತ್ತೆ, ಪ್ರತೀ ಮಾತಿಗೂ ಪುಳಕಗೊಳ್ಳುತ್ತದೆ ಮನಸು, ಮತ್ತೆ ಮತ್ತೆ ಮಾತಾಡಲು ಹಾತೊರೆಯುವಂತೆ ಮಾಡುತ್ತದೆ, ಆ ಒಂದು ಸಣ್ಣ ಸ್ಪರ್ಷ, ಒಂದಿಷ್ಟು ನೋಟ, ಮತ್ತೊಂದಿಷ್ಟು ನಗು, ಮಧುರ ಅನುಭೂತಿ. ಅದೇ ದಿನಗಳೆದಂತೆ ಜವಾಬ್ದಾರಿ ಹೆಚ್ಚುತ್ತವೆ, ಹೊಸತು ಹಳೆಯದಾಗುತ್ತದೆ, ನಿತ್ಯ ದಿನಚರಿಗೆ ಹೊಂದಿಕೊಳ್ಳತೊಡಗುತ್ತೇವೆ, ಉದಾಸೀನತೆ ಬಂದು ಬಿಡುತ್ತದೆ, ಅವಳೆಲ್ಲಿ ಹೋಗ್ತಾಳೆ? ಮನೇಲೆ ಇರ್ತಾಳಲ್ಲ ಅಂತ. ಆಫೀಸಿನಲ್ಲಿ ಗೆಳೆಯನೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದು ಬರುತ್ತೇವೆ ಹೊರತು, ಬೇಗ ಬಂದು ಹೆಂಡತಿಯೊಂದಿಗೆ ನಾಲ್ಕು ಮಾತನಾಡಿದರೆ ಅಂತ ಹೊಳೆಯೋದೇ ಇಲ್ಲ, ಯಾಕೆ?... ಅವಳೆಲ್ಲಿ ಹೋಗ್ತಾಳೆ ಮನೇಲೇ ಇರ್ತಾಳಲ್ಲ. ದಿನಾ ಘಂಟೆ ಕಾದು ಅವಳ ಭೇಟಿಯಾಗುತ್ತಿದ್ದ ಪ್ರೇಮಿಗಳು ಕೂಡ, ಘಂಟೆ ಲೇಟಾಗಿ ಬರುತ್ತಾರೆ ಕಾರಣ ಅವಳೆಲ್ಲಿ ಹೋಗ್ತಾಳೆ?.
ಹೊಸತು ಚಪ್ಪಲಿಯನ್ನು ಹಾಕಿದರೆಲ್ಲಿ ಏನಾದೀತು ಅಂತ ಎತ್ತಿ ಜತನವಾಗಿ ಕಪಾಟಿನಲ್ಲಿ ಇಟ್ಟವರು ಹಳೆಯದಾಗುತ್ತಿದ್ದಂತೆ ಅಲ್ಲೇ ಬೀಸಾಡಿ ಬರತೊಡಗುತ್ತೇವೆ. ಸಂಬಂಧಗಳೂ ಹಾಗೆ... ಹಳೆಯದಾದಂತೆ ಮತ್ತೆ ಮತ್ತೆ ಹೊಳಪು ಹಾಕಿ ಪಾಲೀಷು ಮಾಡಿದಂತೆ ಮತ್ತೆ ಮತ್ತೆ ಹೊಸದಾಗಿಸುತ್ತ ಬಂದರೆ ಬಾಳಿಕೆ ಬಂದೀತು, ಬಾಳು ಬಂಗಾರವಾದೀತು.

ಮನೆಯಲ್ಲಿ ಅವರೂ ಅಷ್ಟೇ, ಬರೀ ಪ್ರೀತಿಯೊಂದರಿಂದ ಜೀವನ ಸಾಗಲ್ಲ, ಕೆಲ್ಸ ಮಾಡಬೇಕು ದುಡ್ಡು ಗಳಿಸಬೇಕು, ದಿನ ದಿನ ಕೆಲ್ಸ ಜಾಸ್ತಿಯಾಗಿ ಮೊದಲಿನಂತೆ ಇರಲಾಗುವುದಿಲ್ಲ, ದಿನವೂ ಚಕ್ಕರ ಹೊಡೆದರೆ ನಡೆಯಲ್ಲ ಅಂತ ತಿಳಿದುಕೊಳ್ಳಬೇಕು, ಅವಳೆಲ್ಲಿ ಹೋಗ್ತಾಳೆ ಅಂತ ಉದಾಸೀನತೆ ಬರದಂತೆ, ನವೀನತೆ ಕಾಪಾಡಿಕೊಳ್ಳಬೇಕು, ಮನೇ ಮಕ್ಕಳು ಅಯ್ತು ಇನ್ನೇನಿದೆ ಜೀವನ ಅಂತ ನೀರಸವಾಗಬಾರದು. ಪ್ರತೀ ದಿನ ಹೊಸತು, ಪ್ರತೀ ಮಾತು ಹೊಸತು, ಅಂತ ಅದೇ ಚೈತನ್ಯ ಕಾಪಾಡಿಕೊಂಡರೆ ಬದುಕು ಬೊರಾಗಲ್ಲ,(ಬೇಜಾರು).

"ಎಲ್ಲೇ, ನನ್ನ ಊಟದ ತಟ್ಟೆ" ಅಂದೆ, "ದಿನಾ ಬಂದು ಆ ಹಚ್ಚಿಟ್ಟ ತಟ್ಟೆ ಊಟ ತಿಂದು ಮಲಗಿ ಬಿಡ್ತೀರಾ ಒಂದು ಮಾತಿಲ್ಲ ಕತೆಯಿಲ್ಲ, ಅದಕ್ಕೆ ಈವತ್ತು ನಾನೇ ಬಡಿಸೋಣ ಅಂತ ಹಚ್ಚಿಟ್ಟಿಲ್ಲ" ಅಂದ್ಲು. "ಒಳ್ಳೆ ಐಡಿಯಾ" ಅಂದೆ. "ಹೂಂ ಸಾಕು ಸರೀನಿ ಇನ್ನ, ಸಾರು ಬಿಸಿ ಮಾಡಬೇಕು" ಅಂತ ನನ್ನ ಅತ್ತ ನೂಕಿ ಮೇಲೆದ್ದಳು, ಫ್ರಿಡ್ಜು ಬಾಗಿಲು ತೆಗೆದು ಅವಳು ಒಂದೊಂದೆ ಪಾತ್ರೆ ಹೊರಗೆ ತಗೀತಿರಬೇಕಾದ್ರೆ, ನಾನೂ ಒಂದು ಪಾತ್ರೆ ಎತ್ತಿಕೊಂಡು ಅವಳ ಕೆನ್ನೆಗೆ ತಾಕಿಸಿದೆ, "ರೀ, ತಂಪು" ಅಂತ ಓಡಿದಳು. ಗ್ಯಾಸಿನ ಕಟ್ಟೆ ಮೇಲೆ ನಾ ಹತ್ತಿ ಕೂತು, ನೆನೆಸಿದ ಬಟಾಣಿ ಒಂದೊಂದೇ ತಿನ್ನುತ್ತ ಮಾತಾಡುತ್ತಿದ್ದೆ, "ನಾಳೆ ಏನು ಪಲ್ಯ ಏನು ಮಾಡೊದು" ಅಂತ ಅದನ್ನು ಕಸಿದುಕೊಂಡಳು, ಉಳಿದ ನಾಲ್ಕು ಕಾಳು "ಕ್ಯಾಚ್" ಅನ್ನುತ್ತ ಒಂದೊಂದೇ ಅವಳ ಬಾಯಿಗೆಸೆದೆ, ಅದನ್ನೇ ಮೆಲ್ಲುತ್ತ "ಮತ್ತೇ ಏನ ನಡೀತಿದೆ ಅಫೀಸಲ್ಲಿ ಬಹಳ ಬೀಜೀ ಆಗೀದೀರಾ" ಅಂದ್ಲು. "ಅದಾ ಪ್ರೊಜೆಕ್ಟು ಮುಗೀತಿದೆ, ಕಂಪನೀ ಮಾರಾಟ ಮಾಡ್ತಿದಾರೆ, ಮೀಟಿಂಗ ಮೇಲೇ ಮೀಟಿಂಗು ಅದೇ ಟೆನ್ಷನ್ ಈಗ" ಅಂದೆ. "ಅದೆಲ್ಲ ಇದ್ದದ್ದೇ ಬಿಡ್ರೀ, ಹೊಸಾ ಹುಡುಗೀ ಯಾವ್ದೂ ಜಾಯಿನ(ಸೇರಿಕೊ) ಆಗಿಲ್ವ" ಅಂದ್ಲು. "ಇರೊ ಹುಡುಗೀರದು ಮದುವೆ ಆಗ್ತಿದೆ, ಅದ್ರೂ ಹೊಸಾ ರೆಸೆಪ್ಷನಿಸ್ಟ ಬಂದೀದಾಳೆ ಗೊತ್ತ" ಅಂದೆ "ಹಾಗಾದ್ರೆ, ನೀವು ಆಫೀಸು ಒಳಗೇ ಹೋಗ್ತಾನೇ ಇಲ್ಲ ಅನಿಸಿತ್ತೆ ಅಲ್ಲೇ ಬಾಗಿಲಲ್ಲೇ ಅವಳ ನೋಡ್ತಾ ನಿಂತ್ಕೋತಿರಬೇಕು" ಅಂದ್ಲು "ಹಾಗೇನಿಲ್ಲಪ್ಪ, ಏನು ಲೇಟರ ಬರೋದಿಲ್ಲ ಅಂದ್ರೂ ಆಗಾಗ ಹೋಗಿ ಸ್ವಲ್ಪ ಲೇಟರು ಬಂದಿದೇನಾ ಅಂತ ವಿಚಾರಿಸಿಕೊಂಡು ಬರ್ತೀನಿ ಅಷ್ಟೇ" ಅಂದೆ. "ಅಷ್ಟೇ ಅಂತೆ ಅಷ್ಟೇ" ಅಂತ ಕಾದ ಸೌಟಿನಿಂದ ತಿವಿದಳು, ಚೀರಿದೆ. "ಅಂತೂ ನಿಗಾ ಇಟ್ಟಿದೀರಾ ಅವಳ ಮೇಲೆ" ಅಂದ್ಲು, ಬಿಸಿಗೆ ಕೆಂಪಗಾಗಿದ್ದ, ಕೈ ಸವರಿಕೊಳ್ಳುತ್ತ "ಅವಳೆಲ್ಲಿ ಹೋಗ್ತಾಳೆ ಅಲ್ಲೇ ಇರ್ತಾಳೆ" ಅಂದೆ. "ಅವಳು ಅಲ್ಲೇ ಇರಲಿ, ಇಲ್ಲಾಂದ್ರೆ ಇಲ್ಲಿ ನಾನಿರಲ್ಲ" ಅಂತಂದಳು, ಜೋರಾಗಿ ನಗುತ್ತ, ಆದ ಘಟನೆಗಳು ಮತ್ತೆ ನೆನಪಿಗೆ ಬಂದು ನಾನೂ ನಗತೊಡಗಿದೆ. ಊಟ ಮಾಡಿ ಮಲಗೊ ಹೊತ್ತಿಗೆ ಲೇಟಾಗಿತ್ತು, "ನಾಳೆ ಲೇಟಾಗಿ ಹೋಗ್ತೀನಿ" ಅಂದೆ.. "ಯಾಕೆ?"... "ಯಾರನ್ನೊ ಪಿಕ್‌ಅಪ್ ಮಾಡಬೇಕು" ಅಂದೆ... ಅವಳು ನಕ್ಕಳು, ನೆಪ ಅಂತ ಗೊತ್ತಾಗಿರಬೇಕು. "ನಿಮ್ಮ ಮ್ಯಾನೇಜರಿಗೆ ಫೋನ ಮಾಡಿ ಹೇಳ್ತೀನಿ" ಅಂತ ಹೆದರಿಸ್ತಾ ಇದ್ಲು, ಹೀಗೆ ಬಿಟ್ರೆ ಅವಳು ಮಾತಾಡ್ತಾನೇ ಇರ್ತಾಳೆ ಅಂತ, ಬರಸೆಳೆದು ಮುಸುಗೆಳೆದುಕೊಂಡೆ.

ಹೀಗೆ ಮತ್ತೆ ಸಿಕ್ತೀನಿ, ಅವಳನ್ನು ಹುಡುಕಾಡುತ್ತ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/avalelli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

32 comments:

Nisha said...

ಅಯ್ಯೋ ಎಸ್ಟೊಂದು ಹೆದರಿಸಿಬಿಟ್ಟಿರಿ ಪ್ರಭು. ಬೆಂಗಳೂರು ಮಹಾನಗರ ಬೆಳೆದಂತೆ ಅಪರಾಧ ದುಷ್ಕೃತ್ಯಗಳು ಜಾಸ್ತಿ ಆಗ್ತಿವೆ, ಯಾರಾದರೂ ಅಪಹರಿಸಿದರೋ?, ಈ ವಾಕ್ಯ ನೋಡಿ ಇನ್ನೂ ಭಯ ಆಯಿತು. ಅಯ್ಯೋ ದೇವರೇ, ಈ ರಸಿಕ ರಾಜ ಪ್ರಭುರಾಜನ ಕಲ್ಪನಾ ಸುಂದರಿಗೆ ಕೆಟ್ಟದ್ದೇನೂ ಆಗಿರದಿರಲಿ ಅಂತ ಬೇಡಿಕೊಂಡು ಮುಂದೆ ಓದಿದೆ. ನಿಮ್ಮಾಕೆ ವಾಪಸ್ಸು ಬಂದಾಗ ಸಮಾದಾನ ಆಯಿತು. ನಿಮ್ಮ ಕಥೆಗಳಲ್ಲಿ ಹಾಸ್ಯ, ಶೃಂಗಾರದ ಜೊತೆಗೆ ಜನರಿಗೆ ಒಂದು ಒಳ್ಳೆಯ ಸಂದೇಶ ಕೂಡ ಇರುತ್ತೆ. ಈಗಿನ ಯಂತ್ರಿಕ ಜೀವನದಲ್ಲಿ ಮನುಷ್ಯ ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಜೀವನ ಎಸ್ಟೊಂದು ಸುಖಮಯವಾಗಬಹುದು ಅಲ್ಲವೇ ಎಂಬ ಚಿಂತನೆಗೂ ಹಚ್ಚುತ್ತದೆ.

ಪ್ರೀತಿಪೂರ್ವಕ ಧನ್ಯವಾದಗಳೊಂದಿಗೆ
ನಿಶಾ.

Roopa said...

>>ಮನೇ ಮಕ್ಕಳು ಅಯ್ತು ಇನ್ನೇನಿದೆ ಜೀವನ ಅಂತ ನೀರಸವಾಗಬಾರದು. ಪ್ರತೀ ದಿನ ಹೊಸತು, ಪ್ರತೀ ಮಾತು ಹೊಸತು, ಅಂತ ಅದೇ ಚೈತನ್ಯ ಕಾಪಾಡಿಕೊಂಡರೆ ಬದುಕು ಬೊರಾಗಲ್ಲ,(ಬೇಜಾರು).
ತುಂಬಾ ಸಾಂಧರ್ಭಿಕ ಮಾತು. ಏಕಾತಾನತೆಯಿಂದ ನರಳುವವರು ಇದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ವೈವಿಧ್ಯತೆಯಿಂದ ಕೂಡಿರುತ್ತದೆ
ಮತ್ತೆ ನಿಮ್ಮ ಓವರ್ ಆಲ್ ಲೇಖನ(ಸ್ವಾನುಭವ) ಚೆನ್ನಾಗಿದೆ
ದೈನಂದಿನ ಘಟನೆಗಳನ್ನು ರಸವತ್ತಾಗಿ ಬರವಣಿಗೆಯಲ್ಲಿ ಇಳಿಸುವ ಪರಿ ನನಗಿಷ್ಟವಾಯ್ತು.
ನಾನೂ ಕೆಲವೊಮ್ಮೆ ನಿತ್ಯ ಜೀವನದ ಘಟನೆಗಳನ್ನು ಬರೆಯಲು ಪೆನ್ ಹಿಡಿಯುತ್ತೇನಾದರೂ ಆ ಘಳಿಗೆಗಳನ್ನು ಕಣ್ಣಮುಂದಿನ ಪ್ರಸಂಗಗಳಾಗಿ ರೂಪಿಸಲು ಬಾರದೆ ಸೋಲುತ್ತೇನೆ.
ಒಂದು ಚೆಂದದ ಅನುಭವ ಹಂಚಿಕೊಂಡದ್ದಕ್ಕೆ , ಬೆಳಗ್ಗೆ ಬಂದೊಡನೆ ಮನಸ್ಸನ್ನು ಪ್ರಫುಲ್ಲವಾಗಿಸೋ ಲೇಖನಕ್ಕೆ ಧನ್ಯವಾದಗಳು

ರೂಪ

Unknown said...

Nice post..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಭು,
ಸಿಕ್ಕಾಪಟ್ಟೆ ಚೆನ್ನಾಗಿದೆ, ಓದುವಾಗ ಒಂದು ರೀತಿ ಭಯ ಮತ್ತು ಆತಂಕ ಇತ್ತು ಏನಾಯ್ತೋ ಅಂತ. ಬರಹದ ಸುಖಾಂತ ಮತ್ತು ಕೊನೆಯ ಸಂದೇಶ ಎರಡು ಇಷ್ಟವಾಯಿತು.

Veena DhanuGowda said...

abbba namgu swalpa baya aytu
sadya ale idrala
thank god :)
Keep writing
chennagide....

PARAANJAPE K.N. said...

ನವಿರು ಹಾಸ್ಯ, ಇನಿತಿನಿತು ರಸಿಕತೆ, ಭಯ-ಆತ೦ಕ ಮೂಡಿಸುವ ಸನ್ನಿವೇಶಗಳೊ೦ದಿಗೆ ನಿಮ್ಮ ಲೇಖನ ಚೆನ್ನಾಗಿದೆ.

ಮನಸು said...

ಒಳ್ಳೆಯ ಬರಹ!!!! ಓದುವಾಗ ಒಂದು ರೀತಿ ಭಯ ಮತ್ತು ಆತಂಕ ಎರಡು ಇತ್ತು... ಕೊನೆ ಸುಖಾಂತವಾಯಿತು ಇಷ್ಟವಾಯಿತು
ಹೀಗೆ ಬರೆಯುತ್ತಲಿರಿ
ವಂದನೆಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಓಡಿಸಿಕೊಂಡು ಹೋಗುತ್ತೆ ಪ್ರಭು.
ಅಲ್ಲಲ್ಲಿ ಕುತೂಹಲ ಇರುವ ಕಾರಣ ಓದಿಗೂ ಒಂತರ ಮಜಾ ನಿಡತ್ತೆ. ಇನ್ನಸ್ಟು ಸೆನ್ಸೇಷನ್ ಕ್ರಿಯೇಟ್ ಮಾಡಬಹುದಿತ್ತೇನೋ...

maaya said...

ಚೆನ್ನಾಗಿದೆ ಪ್ರಭು ಅವರೇ,

ನೀವು ಹೇಳಿದ್ದು ಸರಿ, ಮದುವೆ ಹೊಸದರಲ್ಲಿ ಎಷ್ಟು ಮಾತಾಡೋಕ್ಕೆ ಇರುತ್ತೆ, ಅದೇನೋ ಹೇಳ್ತಾರಲ್ಲ ಅಗಸ ಮೊದಮೊದಲು ಬಟ್ಟೆನಾ ಎತ್ತಿ ಎತ್ತಿ ಹೊಗೆದ... ಬರ ಬರುತ್ತಾ.... ಹಾಗೆ.. ಈ ಹುಡುಗರು.. ಎಲ್ಲಿ ಹೋಗ್ತಾಳೆ ನನ್ನ ಬಿಟ್ಟು.. ಈಗ ಹೆಂಡ್ತಿ ಅಲ್ವ ಅನ್ನೋ ತಾತ್ಸಾರ.. ಚೆನ್ನಾಗಿದೆ ನಿಮ್ಮ ಬರಹ.. ಒಳ್ಳೆ ಕಿವಿ ಮಾತು....

ಧನ್ಯವಾದಗಳು,
ಹೇಮಾ..

ವಿನುತ said...

ಹಿ೦ದಿ ಚಲನಚಿತ್ರ 'ಸಾಥಿಯಾ' ನೆನಪಾಯಿತು :) ನಿರೂಪಣೆ ಹಾಗು ಸ೦ದೇಶ ಎರಡೂ ಅಭಿನ೦ದನಾರ್ಹ.

sunaath said...

ಉಸಿರು ಬಿಗಿ ಹಿಡಿದು ಓದಿದೆ,ಪ್ರಭುರಾಜಾ!

SSK said...

ಪ್ರಭು ಅವರೇ,
ನೀವು ಒಂದು ದಿನಕ್ಕೆ ಇಷ್ಟೊಂದು ಹಗರಣ ಮಾಡಿಕೊಂಡು ಬಿಟ್ಟಿರಲ್ಲ! ಹೋಗಲಿ ಬಿಡಿ, ನೀವು ನಿಮ್ಮವಳನ್ನು ಕಂಡ ತಕ್ಷಣ ಕೂಗಾಡಿ, ರೇಗಾಡದೆ ನಿಮ್ಮಲ್ಲಿ ಎಷ್ಟೇ ಆತಂಕವಿದ್ದರೂ ಅದನ್ನು ನಿಮ್ಮಲ್ಲೇ ಬಚ್ಚಿಟ್ಟುಕೊಂಡು ನಿಮ್ಮವಳನ್ನು ಪ್ರೀತಿಯಿಂದ ಬರಮಾಡಿಕೊಂಡಿರಲ್ಲ ಅಷ್ಟೇ ಸಾಕು!!

ಅದೇ ರೀತಿ.........,
ಈಗಲಾದರೂ ಗೊತ್ತಾಯಿತಾ ಹೊರಗೆ ಕೆಲಸಕ್ಕೆ ಹೋದ ಗಂಡಸರು ಮನೆಗೆ ಬಂದು ತಲುಪುವವರೆಗೆ ಹೆಂಗಸರು ಎಷ್ಟು ಪರಿತಪಿಸುತ್ತಾರೆ ಅಂತ?
ನಾವುಗಳು ಎಂದಿಗೂ, ಪತಿ ರಾಯರು ಮನೆಗೆ ಬರುವುದು ತಡವಾದರೆ, ಅವರ ಕೆಲಸ ಮತ್ತು ಅವರುಗಳ ಕೆಲಸದ ಒತ್ತಡಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ, ದಿನಾ ಹೋಗಿಬರುವ ಕೆಲಸವೇ ತಾನೇ, ಎಲ್ಲಿಗೆ ಹೋಗುತ್ತಾರೆ ಬಂದೇ ಬರುತ್ತಾರೆ ಎಂದು ಎಂದಿಗೂ ಅಂದುಕೊಳ್ಳುವುದೇ ಇಲ್ಲ!!! ಬದಲಿಗೆ ನಮಗೆ ಪ್ರತಿ ದಿನ, ಪ್ರತೀ ಕ್ಷಣ ಅವರು ಬರುವವರೆಗೂ ಆತಂಕ, ಭಯ ತಪ್ಪಿದ್ದಲ್ಲ!! ಇದಕ್ಕೆ ಕಾರಣ ನೀವೇ ಹೇಳಿರುವ ಹಾಗೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧಗಳು, ದುಷ್ಕೃತ್ಯಗಳು, ಟ್ರಾಫಿಕ್ ಜಾಮ್ ಇವೇ ಮುಂತಾದುವು!

{ಈಗ ನಾನು ಧೈರ್ಯವಾಗಿ ನಮ್ಮ ಹುಡುಗಿ (ಕಥಾ ನಾಯಕಿ) ವಸುಧಾಳನ್ನು, ಅಲ್ಲ ಅಲ್ಲ ನಿಮಗೆ ಅಭ್ಯಂತರವಿಲ್ಲದಿದ್ದರೆ ಅವಳ ತಂಗಿ ಭೂಮಿಕಾಳನ್ನು ನಿಮಗೆ ಕೊಟ್ಟು ಮಾಡುವೆ ಮಾಡಿಸಬಹುದು ಅಲ್ವಾ! ಯಾಕೆಂದರೆ ವಸು already engaged ! ಭೂಮಿಕಾ ಕೂಡ ಅಕ್ಕನಷ್ಟೇ ಒಳ್ಳೆಯವಳು. ಇದಕ್ಕೆ ನೀವೇನಂತೀರಿ? ಕೊಡಲೇ ಇವಳ ಮೊಬೈಲ್ ನಂಬರ್ ?!}

ಶಿವಪ್ರಕಾಶ್ said...

ha ha ha.
nice article prabhu.

Prabhuraj Moogi said...

Nisha ಅವರಿಗೆ
ನನ್ನ ಕಲ್ಪನಾ ಸುಂದರಿಯ ಅಷ್ಟು ಬೇಗ ಬಿಟ್ಟು ಕೊಡುತ್ತೀನಾ, ಬೆಂಗಳೂರು ಬೆಳೆದಂತೆ ಅಪರಾಧ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ, ನಮ್ಮ ನಮ್ಮ ಹುಷಾರಿನಲ್ಲಿ ನಾವಿದ್ದರೆ ಒಳ್ಳೆಯದು. ಮೊದಮೊದಲು ಬರೀ ಹಾಸ್ಯ ಇತ್ತು, ಆದರೆ ಇತ್ತೀಚೆಗೆ ಏನೊ ಅಲ್ಪ ಸ್ವಲ್ಪ ಒಳ್ಳೇ ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದೇನೆ. ಯಂತ್ರಗಳೊಂದಿಗೆ ಏಗಿ ಏಗಿ ನಾವೂ ಯಂತ್ರಗಳಾಗುತ್ತಿದ್ದೇವೆ, ಆದರೂ ನಾವಿಷ್ಟಪಟ್ಟರೆ ಬದುಕನ್ನು ಚೆನ್ನಾಗಿ ಸವಿಯಬಹುದು.

ರೂಪಾ ಅವರಿಗೆ
ಕೆಲವೊಮ್ಮೆ ಏಕಾಂಗಿಯಾಗಿ ಕೂತು ಬಿಡಬೇಕು ಅನ್ನಿಸುತ್ತದೆ ಆದರೂ, ಏಕತಾನತೆ ಕೆಲವೊಮ್ಮೆ ಬಹಳೇ ಕೆಟ್ಟದ್ದು, ಮಾನವ ಮೂಲತ: ಸಂಘಜೀವಿ. ದೈನಂದಿನ ಜೀವನ ದಿನಚರಿಯಂತೆಯಾಗದೇ ಪ್ರತೀ ದಿನ ಏನೊ ಹೊಸತಿದೆ ಅಂತ ಹುಡುವವ ನಾನು, ಹಾಗಾಗಿ ಪ್ರತೀ ದಿನ ನನಗೆ ವಿಶೇಷ ಅದನ್ನೆ ಬರವಣಿಗೆಯಲ್ಲಿ ಇಳಿಸೋದು. ನೀವು ಕಥೆಗಳನ್ನು ಚೆನ್ನಾಗಿ ಬರೆಯುತ್ತೀರಿ, ಅದು ನಿಮ್ಮ ವೈಶಿಷ್ಟ್ಯ. ನಿತ್ಯ ಘಟನೆಗಳನ್ನೂ ಪ್ರಯತ್ನಿಸಿ ಅದೇನು ಕಠಿಣವಲ್ಲ.

roopa ಅವರಿಗೆ
ಥ್ಯಾಂಕ್ಸ, ಬರ್ತಾ ಇರಿ.

Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ
ಇನ್ನೂ ಆತಂಕ ಸೃಷ್ಟಿ ಮಾಡಬಹುದಿತ್ತು, ಆದರೆ ಲೇಖನ ಬಹಳ ದೊಡ್ಡದಾಗಿರೋದು. ದುಃಖಾಂತಕ್ಕ್ಕಿಂತ ಸುಖಾಂತ ಚೆನ್ನಗಿರುತ್ತಲ್ಲ ಅದೇ ನಮ್ಮ ಸಿನಿಮಾಗಳ ಥರ, ಕೊನೆಗೆ ಹೀರೋಗೆ ಹೀರೋಯಿನ ಸಿಗಲೇಬೇಕಲ್ಲ, ಅವಳೆಲ್ಲಿ ಹೋಗ್ತಾಳೆ!

ಪ್ರೀತಿಯಿ೦ದ ವೀಣಾ :) ಅವರಿಗೆ
ಯಾಕೆ ಭಯ, ಅವಳಿಲ್ಲದೇ ನನಗೆ ಅಸ್ತಿತ್ವವಿಲ್ಲ, ಅವಳಿದ್ದೇ ಇರ್ತಾಳೆ, ನೀವು ಬರ್ತಾ ಇರಿ, ಅವಳನ್ನ ಭೇಟಿ ಆಗಲು.

PARAANJAPE K.N. ಅವರಿಗೆ
ಹಾಸ್ಯ, ಹರಟೆ ಯಾವಾಗಲೂ ಇರುತ್ತಿತ್ತು, ಸ್ವಲ್ಪ ಆತಂಕ ಸೃಷ್ಟಿಗೆ ಪ್ರಯತ್ನಿಸಿದೆ, ಇನ್ನೂ ಸಫಲನಾಗಿರುವಂತೆ ಅನಿಸಿಲ್ಲ. ಮತ್ತೆ ಪ್ರಯ್ತ್ನ ಇದ್ದೇ ಇದೆ.

ಮನಸು ಅವರಿಗೆ
ಸುಖಾಂತ ಮಾಡಲೇಬೇಕಿತ್ತು, ಇಲ್ಲಾಂದ್ರೆ ಅವಳು ನನ್ನ ಬಿಟ್ಟು ಹೋಗಿರೋಳು, ಆಮೇಲೆ ನನಗೆ ಬರೆಯಲೇನಿರುತ್ತಿರಲಿಲ್ಲ!

agni ಅವರಿಗೆ
ನನ್ನ ಬ್ಲಾಗನ ಕಲ್ಪನಾಲೊಕಕ್ಕೆ ಸ್ವಾಗತ, ಇನ್ನಷ್ಟು ಸೆನ್ಸೇಷನ ಕ್ರಿಯೇಟ ಮಾಡಬಹುದಿತ್ತು, ಇದೆ ನನ್ನ ಮೊದಲ ಪ್ರಯತ್ನ, ಅಲ್ಲದೇ ಬರಹ ಬಹಳ ದೊಡ್ಡದಾಗಿ ಬಿಡೋದು, ಆಗಲೇ ಎರಡು ಸಾರಿ ಬಹಳ ದೊಡ್ಡ ದೊಡ್ಡ ಲೇಖನ ಬರೆಯುತ್ತೀನಿ ಅಂತ ಬಯ್ಯಿಸಿಕೊಂಡಿದ್ದೀನಿ(ಅದು ಸರಿ ಕೂಡ, ನನಗೆ ಚಿಕ್ಕದಾಗಿ ಬರೆಯಲು ಬರುವುದಿಲ್ಲ.) ಅದಕ್ಕೆ ಸಾದ್ಯವಾದಷ್ಟು ಪ್ರಯತ್ನಿಸಿದೆ, ನಿಮ್ಮ ನೇರ ಹಾಗೂ ನಿರ್ಭಿಡೆಯಿಂದ ಬರೆದ ಅನಿಸಿಕೆ ನನಗೆ ಬಹಳ ಇಷ್ಟವಾಯಿತು, ಹೀಗೆ ಹೇಳಿದರೆ ತಾನೆ ನನಗೂ ನನ್ನ ತಪ್ಪುಗಳು ತಿಳಿಯೋದು ಅಲ್ಲದೇ ಮತ್ತೆ ಇನ್ನೂ ನಾನು ಸುಧಾರಿಸೋದು. ಹೀಗೆ ನಿಮ್ಮ ಸಲಹೆಗಳು ಬರುತ್ತಿರಲಿ.

maaya ಆವರಿಗೆ
ಅಗಸನ ಬಟ್ಟೆ ಉದಾಹರಣೆ ಚೆನ್ನಾಗಿದೆ, ಎಲ್ಲಿ ಹೋಗ್ತಾಳೆ ನನ್ನ ಹೆಂಡ್ತಿ ಅಲ್ವಾ ಅಂತ ತಾತ್ಸಾರ ಉದಾಸೀನತೆ ಬರುತ್ತದೆ, ಅದು ಬರದಂತೆ ತಡೆದರೆ ಬದುಕು ಉಲ್ಲಾಸಮಯವಾಗಿರುತ್ತದೆ. ಹಾಗೇ ಗೃಹಿಣಿಯರು ಮದುವೆ ಆಯ್ತು ಮಕ್ಕಳೆರಡು ಆಯ್ತು ಅಂದ್ರೆ ಬದುಕು ಮುಗೀತು ಅಂತ ವಿಮುಖರಾಗಿಬಿಡ್ತಾರೆ ಅದೂ ಸಲ್ಲ.

ವಿನುತ ಅವರಿಗೆ
ನನಗೂ ಸಾಥಿಯಾ ಬಹಳ ಇಷ್ಟವಾಗಿತ್ತು, ಹಾಗೇ "ಚಲ್ತೇ ಚಲ್ತೇ" ಕೂಡ ಇಂಥ ಸನ್ನಿವೇಷಗಳ ಇನ್ನೊಂದು ಸುಂದರ ಸಿನಿಮಾ,

sunaath ಅವರಿಗೆ
ನಿಮ್ಮ ಕಾಮೆಂಟಿಗೆ ಏನು ಉತ್ತರಿಸಲಿ ನನ್ನ ಕೈ ಕಟ್ಟಿದಂತಾಗಿದೆ. ನಿಮ್ಮ ಕಮೆಂಟುಗಳು ಬಹಳ ಚೆನ್ನಾಗಿರುತ್ತವೆ.

SSK ಅವರಿಗೆ
ಅವಳು ಸಿಕ್ಕದ್ದು ಸಂತೋಷವಾಗಿತ್ತು ಯಾಕೆ ಕೂಗಾಡಲಿ, ನನಗೆ ಮುಂಗೋಪ ಜಾಸ್ತಿ ಈಗೀಗ ಕಂಟ್ರ್‍ಓಲ ಮಾಡೋದು ಕಲಿತಿದ್ದೇನೆ.
ದಿನಾ ಹೋಗಿ ಬರ್ತಾರೆ ಅಂತ ಬಿಡಲ್ಲ, ಅದು ನಿಜ, ಬರುವವರೆಗೆ ಕಾಯುವ ಬಹಳ ಜನ ನೋಡಿದ್ದೇನೆ, ಅಮ್ಮ ಕೂಡ ಹಾಗೇ.
ಅಯ್ಯೋ ಅಪ್ಪಿತಪ್ಪಿಯೂ ಹಾಗೆ ಮಾಡಿಬಿಟ್ಟೀರಿ, ಹಾಗೇನಾದರೂ ಆದರೆ ನನ್ನವಳೆಲ್ಲಿ ಹೋಗ್ತಾಳೆ ನನಗೇ ಗೊತ್ತಿಲ್ಲ. ಇವಳ ತರಲೇನೇ ಸಾಕಾಗಿದೆ ಮತ್ಯಾರೂ ಬೇಡ ಕಣ್ರೀ, ಅಂದ ಹಾಗೆ ಭೂಮಿಕ ಹೆಸರು ಬಹಳ ಚೆನ್ನಾಗಿದೆ(ಹಾಗಂದೆ ಅಂತ ನನ್ನಾಕೆಗೆ ಹೇಳ್ಬೇಡಿ ಪ್ಲೀಜ್)

ಶಿವಪ್ರಕಾಶ್ ಅವರಿಗೆ
ನಿಮಗೇನೊ ನಗು, ಎಲ್ಲಿ ಹೋದಳೊ ಅಂತ ನನ್ನ ಸಂಕಟ(ತಮಾಷೆಗೆ)... ಥ್ಯಾಂಕ್ಸ, ಬರ್ತಾ ಇರಿ.

Raghavendra said...

good one ....
bhaya aatanka .. konege matta ade sarasa sallapa...:) baravanige mecchuvantahudu... sanniveshavanna tumba chennagi chitrikarisiddira.....
keep it up and keep writing

Roopa said...

ಪ್ರಭು
ಮೊದಲು ನನ್ನ ಪೆದ್ದುತನಕ್ಕೆ ತಲೆ ಮೇಲೆ ಹೊಡೆದುಕೊಂಡು ನಂತರ
ನಿಮ್ಮ ಬ್ಲಾಗ್‌ನ ಲೇಖನಗಳನ್ನೆಲ್ಲಾ ಓದಿದ ಮೇಲೆ ನಿಮ್ಮಾಕೆ ಕಲ್ಪನಾ ಸಂಗತಿ ಎಂದು ತಿಳಿದು ಪೆಚ್ಚಾದೆ. ಇದನ್ನ ನಿಮ್ಮ ಸ್ವಾನುಭವ ಎಂದು ಬೇರೆ ಕರೆದು ಮಂಕಳಾಗಿದ್ದು ನೆನಪಿಸಿಕೊಂಡು ನಗು ಬಂತು.
ಜೊತೆಗೆ ನಿಮ್ಮ ಕಲ್ಪನಾ ಶಕ್ತಿಗೆ ದೊಡ್ಡ ಚಪ್ಪಾಳೆ . ಸಂಸಾರ ಸಾಗರದಲ್ಲೇ ಈಜುತ್ತಾ ಇದ್ದರೂ ಅದರ ಸೊಬಗನ್ನು ಪದಗಳಲ್ಲಿ ಹಿಡಿಯಲಾರದ ನನಗೆ ಆ ಸಾಗರದಿಂದ ದೂರವಿದ್ದು ಅದರ ಉದ್ದಳತೆಗಳನ್ನು ಪದಗಳಲ್ಲಿ ಕಟ್ಟಿಹಾಕುವವರನ್ನು ಕಂಡರೆ ಬೆರಗಾಗದೀತೆ?

shivu.k said...

ಪ್ರಭು,

ಈ ಲೇಖನ ಸ್ವಲ್ಪ ಗಂಭೀರವಾಗಿತ್ತಲ್ಲ ಅಂತ ಒಂದೆ ಉಸುರಿಗೆ ಓದಿಕೊಂಡು ಹೋದೆ..ನಂತರ ವಿಚಾರ ಗೊತ್ತಾಗಿ ನಗು ಬಂತು...

Prabhuraj Moogi said...

Raghavendra ಅವರಿಗೆ
ಭಯ ಆತಂಕದ ಲೇಖನದ ಮೊದಲ ಪ್ರಯತ್ನ ಇದು, ಮೆಚ್ಚಿದ್ದಕ್ಕೆ ಧನ್ಯವಾದಗಳು.

ರೂಪಾ ಅವರಿಗೆ
ನಿಮ್ಮ ಅನಿಸಿಕೆಯಲ್ಲಿ "ಸ್ವಾನುಭವ" ಅಂತ ನೋಡಿದಾಗಲೇ ಅನುಮಾನ ಬಂದಿತ್ತು ಇದು ನೀವು ನಿಜ ಎಂದು ತಿಳಿದಿರಬಹುದೆಂದು, ಆದರೆ ಮುಂದೆ ಗೊತ್ತಾಗುತ್ತೆ ಬಿಡು ಅಂತ ನಾನು ಹೇಳಿರಲಿಲ್ಲ, ಅಲ್ಲದೆ ಹೀಗೆ ಮೋಸ ಹೋದವರು ಬಹಳ... ಹೌದು ಎಲ್ಲ ಕಲ್ಪನೆಗಳೇ.. ದಿನನಿತ್ಯದ ಕೆಲ ಸನ್ನಿವೇಶಗಳನ್ನು ಆರಿಸಿ ಅದಕ್ಕೆ ಕಲ್ಪನೆಯ ಸ್ವಲ್ಪ ಕಥೆ ಸೇರಿಸಿ ನಾನು ಬರೆಯೋದು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಸಾಗರದಲ್ಲಿ ಇಳಿದರೆ ನಾನೂ ಮುಳುಗಿಬಿಡುತ್ತೀನಿ ಏನೋ ಆದರೆ ಈಗ ಹೊರಗೆ ನಿಂತಿರುವುದರಿಂದ ಉದ್ದಳತೆಗಳು ಕಂಡಿರಬಹುದು ಅಲ್ಲವೇ.

shivu ಅವರಿಗೆ
ನನ್ನ ಲೇಖನಗಳು ಗಂಭೀರವಾಗಿರಲ್ಲ, ನಮ್ಮದೇನಿದ್ದರೂ ನವಿರು ಹಾಸ್ಯ ಮಾತ್ರ.

Greeshma said...

ಚೆನ್ನಾಗಿ ಹೆದರಿಸಿದ್ರಿ ನಮ್ಮನ್ನ!
btw ಒಳ್ಳೆ message.

Prabhuraj Moogi said...

Greeshma ಅವರಿಗೆ
ಇನ್ನೂ ಚೆನ್ನಾಗಿ ಬರೀಬಹುದಿತ್ತು ಅಂತ ನನಗನಿಸುತ್ತಿದೆ, ಯಾಕೋ ಬರೆದದ್ದು ಇನ್ನೂ ನನಗೆ ತೃಪ್ತಿ ಕೊಟ್ಟಿಲ್ಲ ಆದರೂ ತಾವು ಮೆಚ್ಚಿದ್ದು ನೋಡಿ ಖುಷಿಯಾಯ್ತು.

ಬಾಲು said...

ಹೊಸತು ಚಪ್ಪಲಿಯನ್ನು ಹಾಕಿದರೆಲ್ಲಿ ಏನಾದೀತು ಅಂತ ಎತ್ತಿ ಜತನವಾಗಿ ಕಪಾಟಿನಲ್ಲಿ ಇಟ್ಟವರು ಹಳೆಯದಾಗುತ್ತಿದ್ದಂತೆ ಅಲ್ಲೇ ಬೀಸಾಡಿ ಬರತೊಡಗುತ್ತೇವೆ. ಸಂಬಂಧಗಳೂ ಹಾಗೆ... ಹಳೆಯದಾದಂತೆ ಮತ್ತೆ ಮತ್ತೆ ಹೊಳಪು ಹಾಕಿ ಪಾಲೀಷು ಮಾಡಿದಂತೆ ಮತ್ತೆ ಮತ್ತೆ ಹೊಸದಾಗಿಸುತ್ತ ಬಂದರೆ ಬಾಳಿಕೆ ಬಂದೀತು, ಬಾಳು ಬಂಗಾರವಾದೀತು.

e saalugalu thumba chennagide.
lekhana olle suspence ninda koodittu...

ಜಲನಯನ said...

ಪ್ರಭು ದೂರನಿಂತು ಕೆರಯ ಅಥ್ವಾ ಕುಂಟೆಯ ಆಳದ ಲೆಕ್ಕ ಹಾಕ ಬಹುದು..ಸಮುದ್ರದ್ದಲ್ಲ...ಯಾಕಂದ್ರೆ ಸಮುದ್ರದಲ್ಲಿ ಅದೂ ಆಳಕ್ಕೆ ಹೋಗಿಯೂ ಸಾಗರಗಳ ಅತೀ ಆಳವಾದ ಕಮರಿ (trench) ಯ ಆಳವನ್ನು ಈಗಲೂ ಅಂದಜೆಂದೇ ಹೇಳುತ್ತಾರೆ...
ನಿಮ್ಮ ಲೇಖನದ ಸಂಸಾರದ ನವಿರು ನೋಕು-ಝೋಕು ಅಂತಾರಲ್ಲ ಅದನ್ನ ಚನ್ನಾಗಿ ಮೂಡಿಸಿದ್ದೀರ...ಬಹುಶಃ ಸಮುದ್ರಕ್ಕೆ ಹೋಗುವ ತಯಾರಿ ಚನ್ನಾಗಿದೆ ಎನ್ನಬಹುದೇ..

ಸಾಗರದಾಚೆಯ ಇಂಚರ said...

ಪ್ರಭುರಾಜ,
ಹಾಟ್ಸ್ ಆಪ್,
ತುಂಬಾ ಚೆನ್ನಾಗಿ ಬರೆದಿದ್ದೀರ,
ನಿಮ್ಮ ಶೈಲಿ ಸೊಗಸಾಗಿದೆ, ಹೀಗೆ ಒಂದು ಕಾದಂಬರಿ ಬರೇರಿ ಸರ್,

Prabhuraj Moogi said...

ಪ್ರತಿಕ್ರಿಯೆ ಕೊಡಲು ತಡವಾದದ್ದಕ್ಕೆ ಕ್ಷಮೆಯಿರಲಿ,

ಬಾಲು ಅವರಿಗೆ
ಅದು ನಿಜವೇ ಅಲ್ವೇ ಚಪ್ಪಲಿ ಹೊಸದಿದ್ದಾಗ ಅದೇನು ತಲೆ ಮೇಲೆ ಹೊತ್ತು ತಿರುಗೋದೇ ಬಾಕಿ ಅನ್ನೊ ಹಾಗೆ ಮಾಡಿದೋರು ಸಮಯ ಕಳೆದಂತೆ ಉದಾಸೀನ ಮಾಡುತ್ತೆವೇ, ಅದೇ ತೊಂದ್ರೆ ಸಂಭಂಧಗಳಲ್ಲಿ ಕೂಡ..

ಜಲನಯನ ಅವರಿಗೆ
ನೀವನ್ನೋದೂ ಸರೀನೇ, ದೂರದಲ್ಲಿ ನಿಂತು ಸಮುದ್ರದ ಆಳ ಲೆಕ್ಕ ಹಾಕಲು ಆಗಲಿಕ್ಕಿಲ್ಲ, ಅದಕ್ಕೆ ಕೆಲವು ಸಾರಿ ಬರೆಯೋದ್ರಲ್ಲಿ ತಪ್ಪು ಮಾಡುತ್ತಿರುತ್ತೇನೆ... ಆದರೂ ಒಂದು ಅಂದಾಜು ಮಾತ್ರ ಮಾಡಿಕೊಳ್ಳಬಹುದು. ಸಧ್ಯ ಇನ್ನೂ ಸಮುದ್ರಕ್ಕೆ ಇಳಿಯುವ ವಿಚಾರವಿಲ್ಲ, ಸ್ವಲ್ಪ ಕಡಲತೀರದಲ್ಲಿ ಕುಳಿತು ಕಾಲ ಕಳೆಯೋಣ ಅಂತ, ತೀರ ಚೆನ್ನಾಗಿದೆ, ಸಮುದ್ರದ ಅಲೆಗಳು ಕಾಲಿಗೆ ಬಂದು ತಾಕುತ್ತ ತಿಳಿಗಾಳಿಗೆ ಹಾಯಾಗಿದ್ದೇನೆ, ಆಮೇಲೆ ನೋಡೊನ ಬಿಡಿ, ಸಮುದ್ರಕ್ಕೆ ಇಳಿಯೋದು ಇದ್ದೇ ಇದೆ.

ಸಾಗರದಾಚೆಯ ಇಂಚರ ಅವರಿಗೆ
ಮೆಚ್ಚುಗೆಗೆ ಧನ್ಯವಾದಗಳು, ಕಾದಂಬರಿ ಎಲ್ಲ ಬರೆಯಲು ಸಮಯ, ಮತ್ತು ಇನ್ನೂ ಪರಿಣಿತಿ ಬೇಕು ಹಾಗಾಗಿ ಸಧ್ಯ ಬೇಡ ಅಂತ.

Unknown said...

Super.....prabhu thumba chennagi varnisiddera practical (padma priya Udpi) incident touch kottidira realyty na thumba athra madidera.

Very good
Best Regards,
Venkatesh

Prabhuraj Moogi said...

Venki ಅವರಿಗೆ
ಬರೆಯೋದು ಕಲ್ಪನೆಗಳೇ ಆದರೂ ವಾಸ್ತವಕ್ಕೆ ಹತ್ತಿರ ಮಾಡಬೇಕು ಅಂತ ಏನೋ ಪ್ರಯತ್ನ ಮಾಡ್ತಿರ್ತೀನಿ ನಿಮಗೆ ಇಷ್ಟ ಆಗಿದ್ದು ಖುಷಿ ಕೊಟ್ಟಿತು.. ಹೀಗೇ ಬರ್ತಾ ಇರಿ

Nagesh said...

bahala chenagidhe .... aadre nija jeevandali manushya yochane mado reethiya THEEVRATHE jaasthi iruthadhe.. idakintha sanna vishayakke jagla madkondu divorce madkoloru idaare.. but idhu chenagithu.. divorce agilla nanna life tar !lol!

Prabhuraj Moogi said...

Goodman ಅವರಿಗೆ
ಹೌದು ನೈಜ ಜೀವನದಲ್ಲಿ ಮನುಷ್ಯ ಯೋಚಿಸುವ ರೀತಿಯೇ ಬೇರೆಯಾಗಿರುತ್ತದೆ, ಸ್ವಲ್ಪ ಚಿಕ್ಕ ಚಿಕ್ಕ ವಿಷಯಗಳಿಗೂ ಅತೀ ತೀವ್ರತೆಯ ಪ್ರತಿಕ್ರಿಯೆ ಕೊಟ್ಟು ಬಿಡುತ್ತಾರೆ.. ನಿಮ್ಮ ಡಿವೊರ್ಸ ವಿಷಯ ಕೇಳಿ ಬಹಳ ಖೇದವೆನಿಸಿತು, ಸಾಧ್ಯವಾದರೆ ಇನ್ನೊಮ್ಮೆ ಇಬ್ಬರೂ ಕೂತು ಮಾತಾಡಿ ನೋಡಿ(ನೀನು ಹಾಗೆ ಮಾಡಿದ್ದೆ, ನೀನು ಹೀಗಂದಿದ್ದೆ ಅಂತ ಅಲ್ಲ), ಹಳೆಯ ವಿಷಯಗಳನ್ನು ಅಲ್ಲಿಗೇ ಬಿಟ್ಟು ಬಿಡಿ ಮತ್ತೆ ಹೊಸ ಮುಂದಿನ ಜೀವನದ ಬಗ್ಗೆ ಚರ್ಚಿಸಿ ನೋಡಿ ಸರಿಯಾದರೂ ಆಗಬಹುದು, ಆದರೆ ಆಗಲೇ ವಿಷಯ ಬಹಳ ಮುಂದುವರೆದು ಹೋಗಿದ್ದರೆ, ಹಳೆಯದ್ದನ್ನು ಮರೆತು ಮತ್ತೆ ಹೊಸ ಸಂಗಾತಿಯ ಹುಡುಕಿ ತಕ್ಕವರು ಸಿಗಬಹುದು.(ಇದು ಕೇವಲ ನನ್ನ ಅನಿಸಿಕೆ, ನಿಮಗೆ ಇಷ್ಟವಾಗದಿದ್ದರೆ ಬೇಡ, ಕ್ಷಮಿಸಿ.)

Nagesh said...

thanks a lot prabhu for your wishes..

I am one of those who things what happens in life or on a film screen can always happen in real life too... but somewhere some thin line of diff or gap is there b/w stories and real life - which every one of us has to find it and balance it out to lead a happy life.

Prabhuraj Moogi said...

To Goodman
Life is all the reality, and life can take turn anywhere, but its a journey what we have started and need to go ahead with it, keep up the spirit, things will move on... keep visiting, hope my posts give some relief to you and cheer you up.

javal said...

enu guru neenu onde dinakke ishtondu bayana adru neenu ninna madadi nodi kushi agutte nangu ninna hendathi tharada manassina hendathi beku ansutte. hagene bareyodanna munduvaresi.

ninna hosa friend
srikanth

Prabhuraj Moogi said...

@javal
ಹ್ಮ್ ಮತ್ತೆ ಹೆಂಡತಿ ಹಾಗಿದ್ದರೆ, ಒಂದೇ ದಿನಕ್ಕೂ ಭಯ ಆಗದೇ ಇನ್ನೇನು ಸರ್... ನಿಮಗೆ ಹಾಗೇ ಒಳ್ಳೆ ಹೆಂಡ್ತಿ ಸಿಗಲಿ ಅಂತ ಹಾರೈಸ್ತೀನಿ... ಓದ್ತಾ ಇರಿ...