ಮುಂಜಾನೆ ಎಂಟಾಗಿತ್ತು, ಏಳೋಕೆ ಮನಸೇ ಇರಲಿಲ್ಲ, ಹಾಗೆ ಹಾಸಿಗೆಯಲ್ಲೇ ಬಿದ್ದುಕೊಂಡು ರಾತ್ರಿ ಕನಸು ಕಂಡಿದ್ದು ಸಾಕಾಗಲಿಲ್ಲವೆಂದು, ಮುಂಜಾನೆ ಹಗಲುಗನಸು ಕಾಣುತ್ತಿದ್ದೆ, ಇವಳು ಸುಮಾರು ಏಳು ಘಂಟೆಗೇ ಎದ್ದಿರಬೇಕು, ದಿನಾಲೂ ಕಾಡಿಸಿ ಏಳಿಸೋದು ಇದ್ದೇ ಇದೆ, ಇಂದಾದರೂ ರಜೆ ಪಾಪ ಮಲಗಲಿ ಬಿಡು ಅಂತ ಅವಳೂ ಏಳಿಸಿರಲಿಲ್ಲ, ಕಿಟಕಿಯಲ್ಲಿ ಮೋಡ ಕವಿದು, ಚೂರು ಹನಿ ಹನಿ ಮಳೆಯಾಗಿ ತಣ್ಣನೆ ಸೂಸುಗಾಳಿ ಬೀಸುತ್ತಿದ್ದರೆ, ಹಾಸಿಗೆಯಲ್ಲಿ ಹೊದ್ದು ಮಲಗಿದ್ರೆ ಏನು ಸುಖ ಅಂತೀರಾ, ಈಗ ಬಿಸಿ ಬಿಸಿ ಚಹ, ಕೈಯಲ್ಲಿ ದಿನಪತ್ರಿಕೆಯೊಂದಿದ್ದರೆ, ಇನ್ನೂ ಘಂಟೆ ಎರಡು ಘಂಟೆ ಇಲ್ಲಿಂದ ಕದಲಿದರೆ ಕೇಳಿ.
ಅವಳ ಕರೆದು ಕೇಳಿದರಾಯ್ತು ಅಂತ ಎದ್ದು ಅಲ್ಲೇ ಕೂತೆ, "ರೀ" ಅಂದ್ಲು ಮಂಚ ಕದಲಿ ಸದ್ದು ಕೇಳಿರಬೇಕು, "ಹಾಂ ಎದ್ದೆ ಎದ್ದೆ ಟೀ ಕೊಡ್ತೀಯಾ" ಅಂದೆ, "ಹೂಂ ಹಾಲು ಕರೆಯೋಕೆ ಹೊಗೋಣಂತೆ, ನಿಮ್ಮ ಪ್ರೆಸಿಡೆಂಟ ಏನೊ ಹೇಳ್ತೀದಾರೆ ನೋಡಬನ್ನಿ ಇಲ್ಲಿ" ಅಂದ್ಲು, ಹಾಲು ಕರೆಯೋದಾ, ನಾವ್ಯಾವಾಗ ಎಮ್ಮೆ ಸಾಕಿದ್ವಿ, ಒಮ್ಮೆ ಚಿವುಟಿ ನೋಡಿಕೊಂಡೆ ಇನ್ನೂ ಕನಸಲ್ಲಿ ಇದ್ದೀನೇನೊ ಅಂತ,(ಹೇ ನಾನೇ ಚಿವುಟಿಕೊಂಡ್ರೆ ಕನಸಲ್ಲೂ ನೋವಾಗುತ್ತೆ!) ಅವಳನ್ನು ಒಮ್ಮೆ ಕೇಳಿ ಖಚಿತ ಮಾಡಿಕೊಂಡು ಬಿಡೋಣ ಅಂತ "ಇದೇನು ಕನಸಾ" ಅಂದೆ, "ಬಂದೆ ತಾಳಿ ಚಿವುಟಿ ಬಿಡ್ತೀನಿ" ಅಂದ್ಲು, ಅಯ್ಯೋ ಅವಳು ಚಿವುಟೋದಾ!, ಸಿಕ್ರೆ ಚಾನ್ಸು ಬಿಡ್ತಾಳಾ ಅಂತಾ ಹೆದರಿ, ಇದ್ದ ಸ್ವಲ್ಪ ನಿದ್ದೆ ಹಾರಿಹೋಗಿ "ಏ ಕನಸಲ್ಲ, ಕನಸಲ್ಲ... ಗೊತ್ತಾಯ್ತು ಬಿಡು, ಅಂದ ಹಾಗೆ ಏನೊ ನಮ್ಮ ಪ್ರೆಸಿಡೆಂಟು ಏನೋ ಹೇಳ್ತಾ ಇದಾರೆ ಅಂತಿದ್ದೆ, ಮೊದಲೇ ಮಹಿಳಾ ಪ್ರೆಸಿಡೆಂಟು ಮಹಿಳಾ ಮೀಸಲಾತಿ ಜಾರಿ ಮಾಡಿ ಬಿಟ್ರೊ ಏನ್ ಕಥೆ!" ಅಂದೆ, ಅದರಿಂದ ಏನು ಉಪಯೋಗ ಆಗುತ್ತೊ ಇಲ್ವೊ ಗೊತ್ತಿಲ್ಲ ಆದ್ರೆ, ಇವಳು ನನ್ನ ಸಂಬಳದಲ್ಲಿ ತನಗಿಷ್ಟು ಮೀಸಲು ಬೇಕು ಅಂತ ಹಕ್ಕು ಸಾಧಿಸಿ ಬಿಡ್ತಾಳೆ ಅನ್ನೊ ಭಯ ನಂಗೆ!. "ರೀ ಅದಲ್ಲ ಇಲ್ನೋಡಿ, ಸೇ ನೋ ಟು ಬ್ಯಾಂಗಲೋರ್, ಸೇ ಯೆಸ್ ಟು ಬಫೆಲೊ ಅಂತೀದಾರೆ, ಬೆಂಗಳೂರು ಬಿಟ್ಟು, ಎಮ್ಮೆ ಕೋಣಾ ಸಾಕಿಕೊಂಡು ಹಾಲು ಕರೆಯೋಕೆ ಹೋಗಿ ಅಂತೀದಾರೆ, ಅಲ್ಲ ನಿಮ್ಮ ಹಳ್ಳಿಲಿರೊ ಮಾವ ಏನದ್ರೂ ಅವರನ್ನ ಭೇಟಿ ಆಗಿ ಈ ಐಡಿಯಾ ಕೊಟ್ಟು ಬಂದ್ರಾ ಅಂತಾ.." ಅಂದ್ಲು, ಅಲ್ಲಾ ಅಮೇರಿಕಾ ಪ್ರೆಸಿಡೆಂಟು ನಮ್ಮ ಪ್ರೆಸಿಡೆಂಟು ಆಗಿದ್ದು ಯಾವಾಗ ಅಂತ, ಏನು ಅಮೇರಿಕಾ ಕಂಪನಿಗಳಿಗೆ ಕೆಲ್ಸಾ ಮಾಡ್ತೀವಿ ಅಂತ ಅಮೇರಿಕಾಕ್ಕೇ ಕಳಿಸಿಬಿಡ್ತೀದಾಳಲ್ಲ, ಅಂತಾ ತರಾಟೆಗೆ ತೆಗೆದುಕೊಳ್ಳೋಣ ಅನಿಸಿದ್ರೂ, ಬೇಡ ಬಿಡು ಅಂತ ಬಿಟ್ಟು, ಅವಳು ಅದನ್ನು ಅರ್ಥೈಸಿದ ರೀತಿಗೆ ನಗು ಬಂದು "ಲೇ ಬಫೆಲೊ ಅಂದ್ರೆ ಅಲ್ಲಿನ ಊರು, ಅಲ್ಲಿ ಕಂಪನಿ ಬೆಳೆಸಿ ಅಂತಾ ಹೇಳ್ತೀದಾರೆ, ನಮಗೆ ಎಮ್ಮೆ ಕೋಣ ಸಾಕಿ ಬೆಳೆಸಿ ಅಂತಲ್ಲ" ಅಂದೆ.
ಹಳ್ಳೀಲಿರೊ ಮಾವನಿಗೆ ರಿಸೆಶನ್ ಕೆಲ್ಸಾ ಎಲ್ಲ ಹೋಗ್ತಾ ಇವೆ ಅಂದಿದ್ದಕ್ಕೆ, "ಏಯ ಏನ್ ಚಿಂತೆ ಮಾಡ್ಬೇಡಾ ಎರಡು ಎಮ್ಮೆ ಸಾಕಿದರೆ ಜೀವನಾ ಅಗ್ತದೆ" ಅಂತ ಧೈರ್ಯ ಹೇಳಿದ್ದ! ಅವ್ನಿಗೆ ಗೊತ್ತಿದ್ದ ಮಟ್ಟಿಗೆ, ಈಗ ಅದ್ದನ್ನೇ ಇವರು ಹೇಳ್ತಾ ಇದಾರೆ ಅಂತ ನನ್ನಾಕೆ. ಅಲ್ಲದೆ ಬಫೆಲೊ, ಬೈಸನು, ಅಂದ್ರೆ ಕೋಣ, ಕಾಡುಕೋಣ ಹಾಗೆ ಎಮ್ಮೆ ಕೂಡ ಅಂದ ಮೇಲೆ ಅದನ್ನೇ ಹೇಳಿರಬೇಕು ಅಂತ ಅಂದುಕೊಂಡಿದ್ರೆ ಎನ್ ಮಾಡ್ತೀರಾ. ಅವಳು ಒಳಗೆ ಬಂದು ಕೂತು, "ನನಗೇ ಹೇಗ್ರೀ ಗೊತ್ತಾಗಬೇಕು, ಬಫೆಲೊ ಅಂತ ಊರು ಇರತ್ತೆ ಅಂತ, ನಮ್ಮಲ್ಲಿ ಇದೆಯಲ್ಲ ಕೋಣನಕುಂಟೆ, ಎಮ್ಮಿಕೇರಿ ಅಂತ ಆ ಥರ ಇದೂ ಬಿಡಿ ಹಾಗಾದ್ರೆ" ಅಂದ್ಲು, "ಹೂಂ ಅದೇ ನೋಡು" ಅಂದೆ. "ರೀ ಮತ್ತೆ ನಮ್ಮ ಕಥೆ" ಅಂದ್ಲು, "ನಮ್ಮ ಕಥೆನಾ, ಅದೊಂದು ಒಂಥರಾ ಹಸಿರು ಕಾನನದೂರಿನ ಕಥೆ" ಅಂದೆ "ಓಹ್, ಆ ಥರಾ ಕಥೆನಾ! ರೀ ಹೇಳಿ ಪ್ಲೀಜ್...." ಅಂತಂದ್ಲು, "ಲೇ ಮುಂಜಾನೆ ಮುಂಜಾನೆ ಕಥೆನಾ, ಕಥೆ ಎಲ್ಲಾ ರಾತ್ರಿ ಮಲಗೋವಾಗ" ಅಂತ ಎದ್ದೇಳೋಕೆ ನೋಡಿದೆ, ಹೊದಿಕೆಯೊಂದಿಗೆ ನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿ "ಈಗ ಹೇಳ್ತೀರೊ ಇಲ್ವೊ" ಅಂತೆ ರಚ್ಚೆ ಹಿಡಿದಳು, ಇನ್ನು ಕಥೇ ಹೇಳದೆ ಬೇರೆ ದಾರಿಯಿರಲಿಲ್ಲ, ಅವಳಿಗಾಗಿ ಕಥೆ ಕಟ್ಟತೊಡಗಿದೆ...
ಹಸಿರು ಕಾನನದೂರಿನಲ್ಲಿ ಚುನಾವಣೆ ನಡೆದಿತ್ತು, ಅದೇ ಸಮಯದಲ್ಲಿ ಬರಗಾಲ ಅಪ್ಪಳಿಸಿ, ಕಾನನದೂರು ತತ್ತರಿಸಿತ್ತು, ಆ ಬರಗಾಲದ ಕಾವು ಹಳ್ಳಿಯೂರಿಗೆ ತಟ್ಟಿತ್ತಲ್ಲ, ಹಳ್ಳಿಯೂರು ಕೂಡ ಕಾನನದ ಚುನಾವಣೆಯ ಎದುರು ನೋಡುತಿತ್ತು, ಆರಿಸಿ ಬರಲು, ಚುನಾವಣೆಗೆ ನಿಂತ ಹುಲಿರಾಯ, ಹೇಳಿಕೆಗಳ ಕೊಡುತ್ತಿದ್ದ, ಕಾನನದ ಪ್ರಾಣಿ ಪಕ್ಷಿಗಳೆಲ್ಲ ಅವನನ್ನೇ ಬೆಂಬಲಿಸುವಂತೆ... ಬೆರಳೆಣಿಕೆಯ ತೋಳಗಳನ್ನು ಸದೆ ಬಡೆಯುತ್ತೇನೆ, ಇಲ್ಲಿ ಭಯೋತ್ಪಾದನೆ ಮಾಡುವ ಯಾರನ್ನೂ ಬಿಡೋದಿಲ್ಲ, ಅಂತ ಕುರಿಗಳನ್ನೆಲ್ಲ ಸೆಳೆದರೆ, ಮರಗಳನ್ನು ನೆಡುತ್ತೇನೆ, ಹಸಿರು ಬೆಳೆಸುತ್ತೇನೆ ಅಂತಿದ್ದಂಗೆ ಪ್ರಾಣಿ ಪಕ್ಷಿಗಳಿಗೆ ಹಣ್ಣಿನಾಸೆಯಾಗಿ ಬಿಡುತ್ತಿತ್ತು. ಹೀಗಿರುವಾಗ ಕಾನನದ ಕೋಣಗಳಿಗೆ ಹೆಚ್ಚು ಹೊಲಗಳನ್ನು ಮಾಡಿ, ನಿಮಗೆ ಕೆಲಸ ಸಿಗುವಂತೆ ಮಾಡುತ್ತೇನೆ, ಅಂತ ಹೇಳಿಕೆ, ಹಳ್ಳಿಯೂರಿನ ಎತ್ತು ಹಸುಗಳು ಕಾನನದಲ್ಲಿ ಹೆಚ್ಚಾದವೆಂದು ನಮ್ಮ ಕೆಲಸ ಎಲ್ಲ ಹೋಗುತ್ತಿವೆಯೆಂದು ಬೇಸತ್ತಿದ್ದ ಅವೂ ಖುಷಿಯಾಗಿದ್ದವು, ಹಳ್ಳಿಯೂರಿನ ಹೋರಿಗಳೂ ಅಲ್ಲಿ ಹೊಲಗಳು ಹೆಚ್ಚಾದರೆ ನಮಗೂ ಕೆಲ್ಸ ಸಿಗುತ್ತೆಂದು ಖುಷಿ ಪಟ್ಟವು.
ಅಂತೂ ಇಂತೂ ಚುನಾವಣೆ ಮುಗಿಯಿತು, ಹುಲಿರಾಯ ಆರಿಸಿ ಬಂದ, ಕಾನನದ ತುಂಬ ಸಮಸ್ಯೆಗಳಿದ್ದವು, ಅದನ್ನೆಲ್ಲಾ ನಿಭಾಯಿಸಬೇಕಿತ್ತು, ಒಂದೊಂದೇ, ಕಾರ್ಯಕ್ರಮಗಳು ಶುರುವಾದವು, ಹಾಗೆ ಬಂದದ್ದೆ ಕಾನನದ ಕೆಲಸವಿಲ್ಲದ ಕೋಣಗಳ ಸಮಸ್ಯೆ, ಮೊದಲೇ ಬರಗಾಲ ಹೊಲಗಳಲ್ಲಿ ಬಿತ್ತನೆಯಿಲ್ಲ, ಬೆಳೆಯಿಲ್ಲ ಎಲ್ಲಿ ಕೆಲಸ, ಕೋಣಗಳು ಕಂಗಾಲಾಗಿದ್ದವು. ಹುಲಿರಾಯನ ಮುಂದೆ ಸಮಸ್ಯೆ ಬಂತು, ಮೊದಲೇ ಬರಗಾಲ ಕೋಣಗಳಿಗೆ ಕೆಲಸ ಕೊಡಿ ಅಂತ ಅಂದ್ರೆ ಜಮೀನುದಾರರು ಎಲ್ಲಿ ಕೆಲಸ ಕೊಟ್ಟಾರು, ಜಮೀನುದಾರರೇ, ಬಿತ್ತನೆ ಬೀಜಗಳಿಗೆ ಹುಲಿರಾಯನಿಂದ ಏನಾದರೂ ಕಡಿತ, ಸಬ್ಸಿಡಿ ಸಿಗುತ್ತೊ ಅಂತ ಎದುರು ನೋಡುತ್ತಿದ್ದರೆ, ಕೆಲಸ ಎಲ್ಲಿ. ಹುಲಿರಾಯ ಇಕ್ಕಟ್ಟಿನಲ್ಲಿ ಸಿಕ್ಕ, ಎಲ್ಲ ಅಂಕಿ ಅಂಶಗಳು ನೋಡಿದಾಗ ಕಾನನದ ಬಹಳ ಕೆಲಸ ಹಳ್ಳಿಯೂರಿನ ಹೋರಿ, ಎತ್ತುಗಳಿಂದಾಗುತ್ತಿದೆ ಅಂತ ತಿಳಿದು ಬಂತು, ಹುಲಿರಾಯನಿಗೆ ಸಧ್ಯದ ಪರಿಹಾರ ಬೇಕಿತ್ತು, ಅದಕ್ಕೇ "ಕೆಲಸಕ್ಕೆ ಹಳ್ಳಿಯೂರಿನ ಹೋರಿಗಳು ಬೇಡ, ಕಾನನದ ಕಾಡುಕೊಣಗಳೇ ಸರಿ" ಅಂತ ಫರ್ಮಾನು ಹೊರಡಿಸಿಬಿಟ್ಟ...
ಹಳ್ಳಿಯೂರಿನಲ್ಲಿ ಹಾಹಾಕಾರವೆದ್ದಿತು, ಹಳ್ಳಿಯೂರಿನ ಕಥೆ ಮುಗಿಯಿತು ಅಂದ್ರು, ಹಳ್ಳಿಯೂರಿನ ಹೋರಿ ಎತ್ತುಗಳು ಚಿಂತಾಕ್ರಾಂತರಾದವು, ಎತ್ತುಗಳ ಜೀವನ ಎತ್ತೊ ಎನ್ನೋಹಾಗೆ ಆಯಿತು, ಕಾನನದೂರಿನ ಕೋಣಗಳಿಗೆ ಖುಷಿಯಾಯ್ತು. ಆದರೆ ಜಮೀನುದಾರರಲ್ಲಿ ತಳಮಳ ಶುರುವಾಯ್ತು, ಕಾನನದ ಕೋಣಗಳಿಗೆ ಕೆಲಸ ಕೊಟ್ಟರೆ, ಸಬ್ಸಿಡಿ, ಬಿತ್ತನೆ ಬೀಜ, ಕಡಿಮೆ ದರದಲ್ಲಿ ಹೊಸ ಹೊಲಗಳು, ಕೊಡುವುದೇನೊ ಸರಿ ಆದರೆ ಇದೆಲ್ಲ ಸಾಧ್ಯವೇ ಅನ್ನೊ ಪ್ರಶ್ನೆ ಎದುರಾಯಿತು.
ಕಾನನದಲ್ಲಿ ಮೊದ ಮೊದಲು ಒಕ್ಕಲುತನ ಶುರುವಾದಾಗ ಬೆರಳೆಣಿಕೆಯಷ್ಟೇ ಕೋಣಗಳಿದ್ದವು ಅವೇ ಊಳುತ್ತಿದ್ದವು, ಬೆಳೆ ಬರುತ್ತಿತ್ತು, ಬೆಳೆ ಬೇಡಿಕೆ ಹೆಚ್ಚು ಹೆಚ್ಚು ಆಗುತ್ತಿದ್ದಂತೆ, ಹೊಲಗಳು ಹೆಚ್ಚಾದವು, ಊಳಲು, ನೇಗಿಲು ಎಳೆಯಲು ಬಂಡಿ(ಚಕ್ಕಡಿ) ಕಟ್ಟಲು, ಕೋಣಗಳು ಸಾಕಾಗಲಿಲ್ಲ, ಆಗ ಕಂಡಿದ್ದೇ, ಹಳ್ಳಿಯೂರಿನ ಹೋರಿಗಳು... ತಂದು ತರಬೇತಿ ಕೊಟ್ಟರೆ ಇನ್ನೂ ಹೆಚ್ಚು ಇಳುವರಿ ತೆಗೆಯಬಹುದು, ಅಂತ ಜಮೀನುದಾರರು ಅಂದರು ಕಾನನದ ಆಗಿನ ರಾಜ ಹೂಂಗುಟ್ಟಿದ್ದ, ಕಾನನಕ್ಕೆ ಹೋರಿಗಳು ಬಂದವು, ತರಬೇತಿ ಪಡೆದವು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರತೊಡಗಿತು, ಹೆಚ್ಚು ಕೆಲಸಗಳು, ಹಳ್ಳಿಯೂರಿಗೆ ಬಂದವು, ಕಾನನದ ಹೊಲದಲ್ಲಿ ಬಿತ್ತುವ ಬೀಜಗಳು ಹಳ್ಳಿಯಲ್ಲಿ ಹಸನಾದವು, ಬೆಳೆದ ಧಾನ್ಯಗಳು ಹಿಟ್ಟಾದವು, ಎಣ್ಣೆ ಕಾಳುಗಳಿಂದ ಎಣ್ಣೆ ಹಳ್ಳಿಯೂರಿನಲ್ಲಿ ತಯ್ಯಾರಾಯ್ತು, ಗಾಣಕ್ಕೆ ಹಳ್ಳಿಯೂರಿನ ಹೋರಿ ಎತ್ತುಗಳು ಸುತ್ತು ಹೊಡೆದವು. ಕಾನನದಿಂದ ನೇಗಿಲು, ಕೊಡಲಿ, ಕುಡುಗೋಲು, ಕುಂಟೆ, ಬಂಡಿಯ ಗಾಲಿ, ಎಲ್ಲದರ ರೂಪ ರೇಷೆಗಳು ಬಂದರೆ, ಇಲ್ಲಿ ತಯ್ಯಾರಾದವು. ಒಟ್ಟಿನಲ್ಲಿ ಹಳ್ಳಿಯೂರು ಹೋರಿಗಳು, ಕಾನನದ ಕೆಲಸಗಳನ್ನೆಲ್ಲ ಮಾಡತೊಡಗಿದವು ಅದೂ ಕಡಿಮೆ ಖರ್ಚಿನಲ್ಲಿ., ಜಮೀನುದಾರರು ಹೆಚ್ಚು ಹೆಚ್ಚು, ಕೆಲಸ ಇಲ್ಲಿ ಕಳಿಸಿದರು, ಹಿಡುವಳಿದಾರರು ಹಿಗ್ಗಿ ಹೋದರು. ಹಳ್ಳಿಯೂರು, ಕಾನನದೂರಿನ ಕೆಲಸದ ಕೇಂದ್ರಬಿಂದುವಾಯಿತು.
ಹೀಗೆ ಹಳ್ಳಿಯೂರಿನ ಹೋರಿಗಳ ಮೇಲೆ ಅವಲಂಬಿತರಾಗಿದ್ದ ಜಮೀನುದಾರರಿಗೆ ಒಮ್ಮೆಲೆ ಎಲ್ಲೆಡೆ ಕೋಣಗಳನ್ನು ಉಪಯೋಗಿಸಿ ಅಂತ ಫರ್ಮಾನು ಕಸಿವಿಸಿ ಉಂಟು ಮಾಡಿತು, ಹುಲಿರಾಯನ ಶೀಘ್ರ ಪರಿಹಾರ ಸರಿ ಹೋಗುವಂತೆ ಕಾಣಲಿಲ್ಲ, ಮೊದಲಿಗೆ ತರಬೇತಿ ಹೊಂದಿದ ಅಷ್ಟೊಂದು ಕೋಣಗಳ ಕೊರತೆ, ಎರಡನೆಯದಾಗಿ ಬರಗಾಲದಲ್ಲಿ ಮೊದಲೇ ಹುಲ್ಲಿನ ಕೊರತೆ, ಹಿಡಿ ಹುಲ್ಲಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಹೋರಿಗಳಿರುವಾಗ ಹೊರೆಗಟ್ಟಲೇ ಹುಲ್ಲು ತಿನ್ನುವ ಕೋಣಗಳಿಗೆ ಎಲ್ಲಿಂದ ಹುಲ್ಲು ತರಬೇಕೆಂಬ ಚಿಂತೆ. ಹೋರಿಗಳೊಂದಿಗೆ ಹೊಸ ಹೊಸ ಊಳುಮೆ ತಂತ್ರಗಳನ್ನು ಕಂಡು ಹಿಡಿದ ಹಿಡುವಳಿದಾರರಿಗೆ ಅವುಗಳನ್ನು ಬಿಟ್ಟುಬಿಡಲು ಹಿಂಜರಿಕೆ. ಇತ್ತ ಹುಲಿರಾಯನ ಅಪ್ಪಣೆ, ಅದೇ ಕಥೆ ಎಲ್ಲ ಕಡೆ, ಕೆಲ ಪತ್ರಿಕೆಗಳು ಬರೆದವು, ಚರ್ಚೆಗಳಾದವು ಇದೇ ಪರಿಹಾರ ಯಾರಲ್ಲೂ ಇಲ್ಲದಂಥ ಪರಿಸ್ಥಿತಿ ಆಯ್ತು.
ಅಷ್ಟೊತ್ತು ಕಥೆ ಕೇಳುತ್ತ ಸುಮ್ನೆ ಕೂತವಳು "ಮತ್ತೆ ಇನ್ನೇನಾಗತ್ತೆ ಹಳ್ಳಿಯೂರಿಗೆ ಪರಿಹಾರವಿಲ್ವಾ" ಅಂದ್ಲು, "ಹಾಗೆ ನೋಡಿದ್ರೆ ಈಗ ಕಾನನದೂರಿಗೂ ಪರಿಹಾರ ಸಿಕ್ಕಿಲ್ಲ", ಅಂದೆ "ಅಯ್ಯೋ ಕಾನನದೂರು ಹಾಳಾಗಿ ಹೋಗ್ಲಿ, ಹಳ್ಳಿಯೂರಿನ ಕಥೆ ಹೇಳಿ" ಅಂದ್ಲು. "ನೋಡು ಇದೆ ತಪ್ಪು" ಅಂದೆ, "ಏನ್ ತಪ್ಪು, ಹಳ್ಳಿಯೂರಿನ ಚಿಂತೆ ನಮಗೇ ಅಲ್ವಾ" ಅಂದ್ಲು, ಅವಳು ಭಾವುಕಳಾಗಿರುವುದು ಗೊತ್ತಾಗುತ್ತಿತ್ತು, ಈ ಕಥೆ ಬಿಡು ನಮ್ಮ ಕಥೆ ಏನು ನಾಳೆ ಅನ್ನೋ ಭೀತಿ ಆಗಿತ್ತು, ಹತ್ತಿರ ಕರೆದು ತಲೆ ನೇವರಿಸುತ್ತ "ಮಾವನಿಗೆ ಎರಡು ಎಮ್ಮೆ ಕೊಂಡು ಕೊಡು ಅಂತ ಫೋನು ಮಾಡೋದು" ಅಂದೆ, ಮುಖದಲ್ಲಿ ಮಂದಹಾಸ ಮಿನುಗಿತು, ಎದೆಗೆರಡು ತಟ್ಟಿ "ತರಲೆ ಬೇಡ ಪರಿಹಾರ ಹೇಳಿ" ಅಂದ್ಲು. "ಅಯ್ಯೋ ನಾನು ಪರಿಹಾರ ಕೊಡೊ ಹಾಗಿದ್ರೆ ಇಲ್ಲಿ ಯಾಕೆ ಇರ್ತಿದ್ದೆ ಆದ್ರೂ ಮನಸಿಗೆ ಅನಿಸಿದ್ದು ಹೇಳಬೇಕೆಂದ್ರೆ ಹೇಳಬಲ್ಲೆ" ಅಂದೆ. "ಹೇಳಿ ಮತ್ತೆ" ಅಂದ್ಲು.
ಇದು ಬರೀ ಹಳ್ಳಿಯೂರಿನ ಸಮಸ್ಯೆಯಲ್ಲ, ಕಾನನದ್ದೂ ಕೂಡ, ಹಾಗೆ ಕಾನನದ ಹುಲಿರಾಯ ಕೊಟ್ಟ ಪರಿಹಾರ ಕಾನನಕ್ಕೇ ಸರಿಹೋಗುತ್ತಿಲ್ಲ, ಆದರೆ ಹಾಗೆ ಮಾಡಿದ್ದಕ್ಕೆ ದೂರುವಂತಿಲ್ಲ, ಯಾಕೆಂದರೆ ಈಗ ನಾವು ಹಳ್ಳಿಯೂರಿನ ಬಗ್ಗೆ ಚಿಂತಿಸಿದಂತೆ.. ಕಾನನದ ರಾಜ ಕಾನನದ ಬಗ್ಗೆ ಚಿಂತಿಸಿದ್ದರಲ್ಲಿ ತಪ್ಪಿಲ್ಲ, ಆದರೆ ಸಮಸ್ಯೆ ಇಬ್ಬರದೂ ಆಗಿರುವುದರಿಂದ ಪರಿಹಾರ ಇಬ್ಬರಿಗೂ ಬೇಕು.
ಎಲ್ಲಾ ರಾಜಕೀಯ... ಈಗ ಜಮೀನುದಾರರು ಏನು ಮಾಡಬಹುದು, ಹುಲಿರಾಯನ ಚುನಾವಣೆಗೆ ಸಹಾಯ ಮಾಡಿದವರು ಇವರೇ, ಅವನ ಪ್ರಚಾರ ಸಭೆಗಳಿಗೆ ಜಾಗ, ಅಲ್ಲಲ್ಲಿ ಸಭೆಗಳಿಗೆ ತಿರುಗಲು ಬಂಡಿ ಕೊಟ್ಟು, ಹುಲ್ಲು ಹಣ್ಣುಗಳ ವ್ಯವಸ್ಥೆ ಎಲ್ಲ ಮಾಡಿದವ್ರು ಇವರು, ಈಗ ಈ ಫರ್ಮಾನು ಹಿಂತೆಗೆಯುವಂತೆ ಒತ್ತಡ ತರುವ (ಲಾಬಿ ಅಂತಾರೆ ಅದಕ್ಕೆ) ಕೆಲಸ ಮಾಡಬಹುದು, ಹಾಗೆ ಹುಲಿರಾಯ ಅದಕ್ಕೆ ಮಣಿದು ಒಪ್ಪಿಕೊಳ್ಳಲೂಬಹುದು, ಯಾಕೆಂದರೆ ಮತ್ತೆ ಚುನಾವಣೆಗೆ ಇವರಿಲ್ಲದೇ ಎನೂ ಆಗಲ್ಲ. ಹಾಗೇ ಹುಲಿರಾಯನ ಸಲಹೆಗಾರರೂ ಪರಿಸ್ಥಿತಿ ಅವಲೋಕನ ಮಾಡಿ ಇರುವ ಕೆಲವೇ ಕೋಣಗಳಿಂದ ಕೆಲಸ ಸಾಗದು, ಅಲ್ಲದೇ ಹೀಗೆ ಕಟ್ಟುನಿಟ್ಟು ನೀತಿಗಳು ಜಾರಿಗೆ ಬಂದ್ರೆ ಕೆಲವು ಜಮೀನುದಾರರು ಒಕ್ಕಲುತನವನ್ನೇ ಬಿಡಬಹುದು, ಮೊದಲೇ ಬರಗಾಲ ಅದರ ಮೇಲೆ ಇದು ಇನ್ನೂ ದುಷ್ಪರಿಣಾಮ ಮಾಡಬಹುದು ಅಂತ ಮನವರಿಕೆ ಮಾಡಿ ಕೊಡಬಹುದು. ಅಲ್ಲದೆ ಕಡಿಮೆ ಖರ್ಚು ಮತ್ತು ಕ್ವಾಲಿಟಿಗೆ ಹೆಸರಾದ ಹಳ್ಳಿಯೂರಿನೊಂದಿಗೆ ಸೇರಿ ಹುಲಿರಾಯ ಹಳ್ಳಿಯ ಸಹಭಾಗಿತ್ವದಲ್ಲಿ ಹನಿ ನೀರಾವರಿಯಂಥ ಪರಿಹಾರದ ಯೋಜನೆಗಳಿಗೆ ಪ್ರಯತ್ನಿಸಬೇಕು. ಕಾನನಕ್ಕಷ್ಟೆ ಅಲ್ಲದೇ ಹಳ್ಳಿಯೂರಿಗೂ ಹೀಗೆ ತಾತ್ಕಾಲಿಕ ಪರಿಹಾರ ಸಿಗಬಹುದು.
ಆದರೆ ಹುಲಿರಾಯ ಕಾನನದ ಚಿಂತೆ ಮಾಡೇ ಮಾಡುತ್ತಾನೆ, ಕೋಣಗಳ ಕಳವಳಕ್ಕೆ ಅವನು ಕಿವಿಯಾಗಾಲೇಬೇಕು, ಹಳ್ಳಿಯೂರಿಗೆ ಇದೊಂದು ಎಚ್ಚರಿಕೆ, ಸರಿಯಾಯಿತಲ್ಲ ಅಂತ ನಿಟ್ಟುಸಿರು ಬಿಡಲು ಸಾಧ್ಯವಿಲ್ಲ, ಹೀಗೆ ಸಧ್ಯ ಹಳ್ಳಿಯೂರಿನ ಸಮಸ್ಯೆಗೆ ಪರಿಹಾರ ಸಿಕ್ಕರೂ, ಮುಂದೆ ಭವಿಷ್ಯದಲ್ಲಿ ಹಳ್ಳಿಯೂರು ಎಲ್ಲದಕ್ಕೂ ಹಸಿರು ಕಾನನದತ್ತ ಮುಖಮಾಡಿ ನಿಲ್ಲದೇ ಸ್ವತಂತ್ರವಾಗಲು ಪ್ರಯತ್ನಿಸಬೇಕು, ಸರಿ ಆವಾಗ ಸಿಕ್ಕ ಕೆಲಸಗಳನ್ನು ತಂದು ಇಲ್ಲಿ ಮಾಡಿ ಕಾನನಕ್ಕೆ ಕಳಿಸಿದ್ದಾಯ್ತು, ಇನ್ನು ಹಳ್ಳಿಯೂರಲ್ಲೂ, ಭೂಮಿಯಿದೆ ಅದನ್ನೂ ಊಳಿದರೆ ಹೇಗೆ ಅಂತ ಚಿಂತಿಸಬೇಕು, ಪರಿಣಿತ ಎತ್ತು ಹೋರಿಗಳೂ ಇರುವ ಹಳ್ಳಿಯೂರಲ್ಲೂ ಹಸಿರು ಕ್ರಾಂತಿಯ ಶಕೆ ಶುರು ಮಾಡಬೇಕು, ಕಾನನದೂರಿನ ಗುತ್ತಿಗೆ ಕೆಲಸ ಮಾಡಿ ಗಳಿಸಿದ ಗುತ್ತಿಗೆದಾರರು, ಇಲ್ಲೂ ಬಿತ್ತನೆ ಕಾರ್ಯಕ್ಕೆ ಕೈ ಹಾಕಬೇಕು, ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗಲಿಕ್ಕಿಲ್ಲ, ಆದರೆ ಆ ಕಡೆಗೆ ಮುಂದಡಿಯಿಡಬೇಕು.
ಅವಳಿಗೂ ಸರಿಯೆನ್ನಿಸಿರಬೇಕು "ಹೀಗೆ ಆದ್ರೆ ಎಲ್ಲ ಚೆನ್ನಾಗಿರುತ್ತಲ್ವಾ" ಅಂದ್ಲು, "ಹೂಂ ಇರತ್ತೆ, ಆದರೆ ಎಲ್ಲ ಆಗಬೇಕಲ್ಲ, ಆಗತ್ತೆ ಅನ್ನೋ ಆಶಾಭಾವನೆ ಇರಬೇಕು ಅಷ್ಟೇ, ಅಲ್ದೆ ಇದು ಬರೀ ನನ್ನ ಅನಿಸಿಕೆ, ಸರಿಯೊ ತಪ್ಪೊ ನನಗೂ ಗೊತ್ತಿಲ್ಲ, ಬರಗಾಲ ಕಳೆದು ಬೇಗ ಮಳೆಗಾಲ ಬೇಗ ಬಂದು ಬಿಡಲಿ, ಬೆಳೆ ಬೆಳೆದು ಒಕ್ಕಿ, ರಾಶಿ ಹಾಕಿ ಜಾತ್ರೆ ಮಾಡಿಬಿಡೋಣ" ಅನ್ನೋಷ್ಟರಲ್ಲಿ, ಹೊರಗೆ ಚೂರು ಚೂರು ಹನಿಯಾಗುತ್ತಿದ್ದ ಮಳೆ ಧೋ ಎಂದು ಸುರಿಯತೊಡಗಿತು, ಸೂರು ಹನಿಗಳೆರಡು ಅವಳ ಕೆನ್ನೆಗೆ ಸಿಡಿದವು, ಅದ ತಪ್ಪಿಸಲು ನನ್ನ ಮತ್ತಷ್ಟು ಅವುಚಿಕೊಂಡಳು, "ಒಂದು ಕಪ್ಪು ಟೀ ಸಿಕ್ಕಿದ್ದರೆ ಚೆನ್ನಾಗಿರೋದು" ಅಂದೆ, "ಪಕೊಡಾ ಜತೆಗೆ" ಅಂದ್ಲು ಬಾಯಲ್ಲಿ ನೀರೂರಿತು... "ಚಹಕ್ಕೆ ಎಮ್ಮೆ ಹಾಲೇ ಹಾಕು ದಟ್ಟವಾಗಿರ್ತದೆ" ಅಂದೆ ಬೇಕಂತಲೇ... "ಕಾನನದೂರಿನಂತೆ ಎಮ್ಮೆ ಹಾಲೇ ಅಂದ್ರೆ ಆಗಲ್ಲಾರೀ, ಹಳ್ಳಿಯೂರಿಂದ ಹಸುಗಳ ಹಾಲು ಜಾಸ್ತಿ ಬರೋದು, ಎಲ್ಲ ಸೇರಿ ನಂದಿನಿಯಾಗೋದು, ನಂದಿನಿ ಹಾಲಿನದು ಚಹ ಸಿಗತ್ತೆ ಬೇಕಂದ್ರೆ, ಎಮ್ಮೆ ಹಾಲೇ ಅಂದ್ರೆ, ಮೊದಲು ಎಮ್ಮೆ ಸಾಕಿ ಅದು ಹಾಲು ಕರೆಯೋವರೆಗೆ ಕಾಯ್ತೀರಾ" ಅಂದ್ಲು. ನನ್ನ ಕಥೆ ಅರ್ಥವಾದಂತೆ ಕಾಣಿಸಿತು... "ಸಧ್ಯ ಬಾಯಾರಿದೆ, ಬೇಕಿರೊದು ಹಾಲಿನ ಚಹ ಅಲ್ವಾ ಅದೇ ತಾ" ಅಂದೆ. ನಸುನಗುತ್ತ ಪಾಕಶಾಲೆಗೆ ನಡೆದಳು... ಮಳೆ ಸುರಿಯುತ್ತಿದ್ದ ಕಿಟಕಿ ಕಡೆಗೆ ಮುಖ ಮಾಡಿ ಕುಳಿತೆ...
ಈ ಲೇಖನ ನನ್ನ ಅನಿಸಿಕೆ ಅಷ್ಟೆ ಇಲ್ಲಿ ಯಾರು ತಪ್ಪು ಯಾರು ಸರಿ ಅಂತ ಹೇಳುವ ಉದ್ದೇಶ ನನ್ನದಲ್ಲ, ಹಾಗೆ ಯಾವುದಕ್ಕೊ ಯಾರನ್ನೊ ಹೋಲಿಸಿ ಅವಮಾನಿಸಿಲ್ಲ, ಬರೀ ಸಮಸ್ಯೆಯ ಸರಳ ತಿಳುವಳಿಕೆಗೆ ತೆಗೆದುಕೊಂಡ ಉದಾಹರಣೆಗಳು ಮಾತ್ರ. ಕೊಟ್ಟ ಪರಿಹಾರವೊ ನನ್ನ ಮನಸಿಗನ್ನಿಸಿದ್ದು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಅದು ಸರಿಯಾಗಿರಲೂ ಬೇಕಿಲ್ಲ, ಹಸಿರು ಕಾನನದೂರಿನಿಂದ ಲೇಖನಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಈ ಲೇಖನ ಬರೆಯಲು ಪ್ರೇರಣೆ, ಇನ್ನೂ ಕೂಡ ದಿನಾಲೂ ಹತ್ತು ಹದಿನೈದು ಪ್ರತಿಕ್ರಿಯೆಗಳು ಬರುತ್ತಿರುತ್ತವೆ, ಎಲ್ಲರಿಗೂ(ಹೌದು ಪ್ರತಿಯೊಬ್ಬರಿಗೂ) ಮರುಪತ್ರ ಬರೆದಿದ್ದೇನೆ, ಯಾರಿಗಾದರೂ ಸಿಕ್ಕಿಲ್ಲದಿದ್ದಲ್ಲಿ ನಿಮ್ಮ ಕಂಪನಿಯ ಈ-ಮೇಲ ಗಳಲ್ಲಿ ಬ್ಲಾಕ ಆಗಿರಬಹುದು ಅಷ್ಟೇ, ಅದನ್ನು ಹಂಚಿ ಹಾಗೂ ಪ್ರತಿಕ್ರಿಯೆ ಬರೆದು ಪ್ರೊತ್ಸಾಹಿಸಿದ ಎಲ್ಲರಿಗೂ ನಾನು ಚಿರಋಣಿ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
Combined (hasiru kanana + codekoNa)Document in PDF format www.telprabhu.com/kaanan-kodakona.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, June 28, 2009
ಕಾಡಿನ codeಕೋಣ
Sunday, June 21, 2009
ನೀಳ.. ನೀಲವೇಣಿ, Nil ವೇಣಿಯಾದಾಗ
ಊರಲ್ಲಿ ಮದುವೆಯಿದೆ ಹೋಗಿ ಬರ್ತೀನಿ ಅಂದವಳು, ಇಂದು ಬರುವಳಿದ್ದಳು. ಅವಳು ಬಂದು ಫೋನು ಮಾಡಿ ಬನ್ನಿ ಅಂತ ಕರೆಯುವ ಮೊದಲೇ ನಾನೇ ಅಲ್ಲಿ ಹೋಗಿ ನಿಂತು ಕಾಯ್ದು ಅವಳಿಗೆ ಒಂದು ಸರಪ್ರೈಜ (ಅಶ್ಚರ್ಯ) ಕೊಡೋಣ ಅಂತ ತೀರ್ಮಾನಿಸಿದ್ದೆ. ಹಾಗಾಗಿ ಆರೂವರೆಗೆ ಬಸ್ ನಿಲ್ದಾಣದಲ್ಲಿದ್ದೆ, ಬಸ್ಸು ಯಾವಾಗ ಬರುತ್ತದೆಂದು ಕೇಳಿದ್ದು ಏಳೂವರೆ ಅಗಬಹುದು, ಬಸ್ ನಂ ಕೂಡ ಗೊತ್ತಾಗಿತ್ತು, ಏಳು ಘಂಟೆ ಇವಳ ಫೋನು ಬಂತು, "ರೀ ಬಸ್ ನಿಲ್ದಾಣಕ್ಕೆ ಕರೆಯೋಕೆ ಏನೂ ಬರಬೇಡಿ, ನಾನೇ ಬರ್ತೀನಿ" ಅಂತ ಅಂದ್ಲು, "ಲೇ ಬ್ಯಾಗ್ ಬಹಳ ಇರ್ತವೆ ನಾ ಬರ್ತೀನಿ" ಅಂತಂದೆ, "ಇಲ್ಲ ಬ್ಯಾಗ ಯಾವುದೂ ಇಲ್ಲ, ಇರೋದು ಒಂದೇ ಸೂಟಕೇಸ ನಾನೇ ಬರ್ತೀನಿ" ಅಂತ ಅವಳು. ನಾನಿಲ್ಲಿ ಬಂದು ನಿಂತೀದೀನಿ ಅಂತ ಹೇಗೆ ಹೇಳಲಿ, "ಇಲ್ಲಾ ನಾ ಬರ್ತೀನಿ" ಅಂತ ಫೋನಿಟ್ಟೆ. ಅವಳಿಗೂ ಅನಿಸಿರಬೇಕು ಯಾವಗ್ಲೂ ಬಾ ಅಂದ್ರೆ, ಬರಲೇಬೇಕಾ ಅನ್ನೋರು ಇಂದ್ಯಾಕೆ ಬರ್ತೀನಿ ಅಂತೀದಾರೆ, ಅಲ್ದೇ ಎದ್ದು ರೆಡಿ ಆಗಿರೊ ಹಾಗಿದೆ, ನಿದ್ದೆಗಣ್ಣಲ್ಲಿ ಮಾತಾಡೊರು, ಹಾಗೇನು ಅನಿಸಲಿಲ್ಲ ಇಂದು ಅಂತ.
ಅವಳು ಬರೊ ಹೊತ್ತಿಗೆ ಏಳೂವರೆ ಆಗಿತ್ತು, ಎರಡು ರೌಂಡ ಟೀ ಮುಗಿದಿತ್ತು, ಖಾಲಿ ಕೂತು ಬೇಜಾರು ಏನ್ ಮಾಡ್ಲಿ, ಟೀನಾದ್ರೂ ಕುಡಿಯೋಣ ಅಂತ. ಅದೇ ಬಸ್ಸು ನಂ ಕರೆಕ್ಟಾಗಿ ನೋಡಿದೆ, ಬಸ್ ನಿಲುಗಡೆ ಆಕಡೆ ಇತ್ತು, ಸರಿ ಅವಳು ಅಲ್ಲಿ ಇಳಿದು ಖಚಿತವಾಗಿ, ರೋಡಿನ ಆಕಡೆ ನೋಡುತ್ತ ನಿಂತಿರುತ್ತಾಳೆ, ಯಾಕೆಂದ್ರೆ ನಾ ಆಕಡೆಯಿಂದ ತಾನೇ ಯಾವಾಗ್ಲೂ ಬರೊದು ಅಂತ, ಈಕಡೆ ಹಿಂದಿನಿಂದ ನಿಧಾನವಾಗಿ ಹೋಗಿ ಅವಳಿಗೆ ಕಣ್ಣು ಮುಚ್ಚಿ ಹಿಡಿದು ಸರಪ್ರೈಜ್ ಮಾಡಬೇಕು ಅಂತ ಹೊರಟೆ. ಬಸ್ ಮರೆಗೆ ನಿಂತು ನೋಡುತ್ತಿದ್ದೆ, ಇಬ್ಬರು ಮೂರು ಜನ ಮಹಿಳೆಯರಿದ್ರು, ಇವಳು? ಅಲ್ಲಿಲ್ಲ, ಅಯ್ಯೊ ನನ್ನ ಪ್ಲಾನ ಗೊತ್ತಾಗಿ ಇಲ್ಲಿ ನನ್ನ ಹಿಂದೆ ಏನಾದ್ರೂ ಬಂದು ನಿಂತೀದಾಳ ಅಂತ ಹಿಂತಿರುಗಿ ನೋಡಿದೆ ಅಲ್ಲೂ ಯಾರೂ ಇಲ್ಲ, ಬೇರೆ ಎಲ್ಲಾದ್ರೂ ಇಳಿದಳಾ? ಬಸ್ಸು ಮುಂದೆ ಹೊರಟಿತು, ಮರೆ ಇಲ್ಲದಾಯಿತು, ಅದೊ ಅಲ್ಲಿ ಆ ಬಿಳಿ ಸೀರೆ ತಿಳಿ ನೀಲಿ ಅಂಚಿನದು ಎಲ್ಲೊ ನೋಡಿದ ಹಾಗಿದೆ, ಸೂಟಕೇಸ್ ಕೈಯಲ್ಲಿದೆ, ಅವಳೇನಾ, ಅಲ್ಲಲ್ಲ ಅವಳಿಗೆ ಉದ್ದ ಜಡೆಯಿದೆ ಇದ್ಯಾರೋ ಬೇರೆ!!! ಚೋಟುದ್ದ ಕೂದಲು ಇರುವ ಇವಳಾರೊ ಬೇರೆ ಇರಬೇಕೆಂದು ಅಂದುಕೊಂಡರೂ ನಿಧಾನಕ್ಕೆ ಗೊತ್ತಾಯಿತು ಅದು ನನ್ನಾಕೆಯೇ...
ಅವಳಿಗೆ ಸರಪ್ರೈಜ್ ಕೊಡಲು ಬಂದ ನನಗೇ ಆಶ್ಚರ್ಯವಾಗಿತ್ತು. ಅಲ್ಲಾ ಅಷ್ಟು ಉದ್ದ ಜಡೆ ಕತ್ತರಿಸಲು ಏನಾಗಿತ್ತು?. ಹೇಳಿದ್ಯಾರು ಕತ್ತರಿಸಲು? ಹೀಗೆ ಪ್ರಶ್ನೆಗಳು ಎಳುತ್ತಿದ್ದವು, ನಿಧಾನವಾಗಿ ಅವಳತ್ತ ನಡೆದೆ, ಕಣ್ಣು ಮುಚ್ಚಿ ಚಕಿತಗೊಳಿಸಲಂತೂ ಅಲ್ಲ, ಅಷ್ಟರಲ್ಲಿ ಅವಳೆ ಇತ್ತ ತಿರುಗಿದಳು. ಒಳ್ಳೇದೇ ಆಯ್ತು, ಕಂಗಳು ಅರಳಿದ್ದವು, ನಾ ಅವಳ ಮುಖದತ್ತ ನೋಡಲಿಲ್ಲ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕೆನಿಸಲಿಲ್ಲ, ಕಣ್ಣು ತಪ್ಪಿಸಿ, ಅವಳ ಸೂಟಕೇಸಗೆ ಕೈ ಚಾಚಿದೆ. ಕೊಡದೆ ಹಿಂತೆಗೆದಳು, ನಾನೇನು ಅನ್ನಲಿಲ್ಲ, "ಅಟೋ!!" ಅಂತ ಚೀರಿದೆ, ಅದನ್ನೇ ಕಾಯುತ್ತಿದ್ದವನಂತೆ ಅವನೋಡಿ ಬಂದ, "ಸೂಟಕೇಸ ಒಂದೇ ಇದೆ ಅಟೊ ಯಾಕೆ" ಅಂತ ಅವಳನ್ನುತ್ತಿದ್ದರೂ ನಾ ಹತ್ತಿ ಕುಳಿತಿದ್ದೆ.
ಅಟೊ ನಿಧಾನವಾಗಿ ಸಾಗುತ್ತಿದ್ದರೆ, ಅದೆಲ್ಲೊ ಆಚೆ ನೋಡುತ್ತ ಕುಳಿತಿದ್ದೆ, ಅಲ್ಲಿ ರೋಡಿನಲ್ಲೇನು ಇತ್ತು, ಅದೇನು ಮಹಾ ಪ್ರೇಕ್ಷಣೀಯ ಸ್ಥಳವಂತೂ ಅಲ್ಲ, ಅದೇ ಧೂಳು, ಹೊಗೆ, ನಾಲ್ಕು ಗಾಡಿಗಳು, ಸಾಲು ಸಾಲು ಅಂಗಡಿಗಳು, ಆದರೂ ಅಲ್ಲೆ ನೋಡುತ್ತಿದ್ದೆ, ಅವಳೊಂದಿಗೆ ಮಾತಾಡುವ ಮನಸಿರಲಿಲ್ಲ, ಅಷ್ಟರಲ್ಲಾಗಲೇ ಅವಳೀಗೂ ಗೊತ್ತಾಗಿತ್ತು ನನಗೆ ಬೇಜಾರಾಗಿದೆಯೆಂದು.
ಅವಳ ಕೂದಲು ಅವಳ ಜಡೆ ಅವಳು ಕತ್ತರಿಸಿದರೇನು ಉದ್ದ ಬೆಳೆಸಿದರೇನು ಅಲ್ವಾ, ಆದರೇನು ಮಾಡಲಿ ಅದರೊಂದಿಗೆ ನನ್ನ ಹಲವಾರು ಸುಂದರ ನೆನಪುಗಳು ಇದ್ದವಲ್ಲ, ಒಂದೇ ಎರಡೆ, ಅವಳ ನೋಡಲು ಹೋದಾಗ, ಅಮ್ಮ ಮೊದಲೇ ಹೇಳಿದ್ದಳು ಉದ್ದ ಜಡೆಯ ಹುಡುಗಿ ಅಂತ ಅಂತಿರ್ತೀಯಲ್ಲ ಈ ಹುಡುಗಿಯದಿದೆ ಅಂತ, ಅವಳು ಬಂದು ಮುಂದೆ ಕುಳಿತರೆ ನನಗೆ ಮುಖಕ್ಕಿಂತ ಆ ಉದ್ದ ಜಡೆ ನೋಡುವ ತವಕ. ಅಮ್ಮನಿಗೆ ಅದರಲ್ಲೂ ಸನ್ನೆ ಮಾಡಿ ಎಲ್ಲಿ ಕಾಣುತ್ತಿಲ್ಲ ಅಂತ ಹುಬ್ಬು ಹಾರಿಸಿದ್ದೆ, "ಲೋ ಪೆಕರ, ಮುಂದೆ ಕೂತೀದಾಳಲ್ಲ ಅವಳೇ ಹುಡುಗಿ" ಅಂತ ಕಿವಿಯಲ್ಲಿ ಪಿಸುಗುಟ್ಟಿದ್ದರು, ನಾ ಹುಡುಗಿ ಎಲ್ಲಿ ಅಂತ ಕೇಳಿದ್ದಿರಬೇಕು ಅಂತ ಅವರು ತಿಳಿದದ್ದು, "ಜಡೆ' ಅಂದಾಗ!!... ಅಮ್ಮನ ಮುಖ ಕೆಂಪಾಗಿತ್ತು, ಬರುತ್ತಿದ್ದ ನಗು ತಡೆದುಕೊಂಡು, "ಬಾಮ್ಮ ಇಲ್ಲಿ ನಮ್ಮ ಹತ್ರ ಕೂತ್ಕೊಬಾ" ಅಂತ ಹತ್ತಿರ ಕರೆದಾಗ ಅವಳು ಎದ್ದು ಬರುತ್ತಿರಬೇಕಾದರೆ, ಕಂಡಿತ್ತು ನನಗೆ ಆ ನೀಳ ನೀಲವೇಣಿ... ನೋಡಿ ಬಂದಾದ ಮೇಲೆ ಅಮ್ಮ ಕಾಡಿಸಿದ್ದೇ ಕಾಡಿಸಿದ್ದು ನೀ ಗಳಿಸಿದ್ದೆಲ್ಲಾ ಅವಳ ಕೂದಲಿಗೆ ಎಣ್ಣೆ, ಶಾಂಪೂಗೆ ಹಾಕೋದರಲ್ಲೇ ಖಾಲಿ ಆಗುತ್ತದೆ ಅಂತ. ಆ ಮೊದಲ ನೋಟದಲ್ಲೇ ಅಷ್ಟು ಆಕರ್ಷಿಸಿಬಿಟ್ಟಿತ್ತು. "ಹುಡುಗಿ ಹೇಗಿದಾಳೊ" ಅಂತ ಅಮ್ಮ ಕೇಳಿದ್ರೆ, "ಜಡೆ ಸೂಪರ್" ಅನ್ನೋನು, ಅಪ್ಪ "ಬರೀ ಜಡೆ ನೋಡಿ ಬಂದೀದಾನೆ ಏನು ನೋಡು, ಮುಖ ನೋಡಿದಂತೇ ಇಲ್ಲ" ಅನ್ನೋರು ಅಮ್ಮನಿಗೆ. ಅಪ್ಪನಿಗೂ ಖುಷಿ, ಸೊಸೆಯಾಗಿ ಅವಳು ಬಂದರೆ ಮುಂದೆ ಬೋಳಾಗಿರುವ ತನ್ನ ತಲೆಯಲ್ಲಿ ಕೂದಲು ಹುಟ್ಟಿಸಲು ಅವಳಲ್ಲಿ ಏನಾದ್ರೂ ಉಪಾಯ ಸಿಗಬಹುದೆಂದು!.
ಜಡೆಯೂ ಒಂದು ಕಾರಣ ಸೇರಿ ಅಂತೂ ಅವಳೇ ನನ್ನಾಕೆಯಾಗುವಳೆಂದು ತೀರ್ಮಾನವಾಗಿತ್ತು, ತಂಗಿ, "ಅಣ್ಣಾ, ನನಗೆ ಡೌಟು ಎಲ್ಲೊ ಸಪ್ಲಿಮೆಂಟ್ ಎನಾದ್ರೂ ಹಾಕಿದಾರಾ" ಅಂತ ಬೇರೆ ಅನುಮಾನಿಸಿ ನನಗೆ ನಿದ್ದೆ ಬಾರದ ಹಾಗೆ ಮಾಡಿಟ್ಟಿದ್ದಳು, ಅದು ನಿಜವಾದ ಕೂದಲೇ ಅನ್ನೊ ತನಿಖೆ ಮಾಡೊ ವರದಿ ಒಪ್ಪಿಸುವ ಕಾರ್ಯ ಅವಳಿಗೆ ಕೊಟ್ಟಿದ್ದೆ, ಅದಕ್ಕೆ ಪ್ರತಿಯಾಗಿ ಎರಡು ಡ್ರೆಸ್ಸು, ಒಂದು ಜತೆ ಚಪ್ಪಲಿ ತಂಗಿಗೆ ತನಿಖೆಯ ಶುಲ್ಕವಾಗಿ ಸಂದಾಯವಾಗಿತ್ತು, ವರದಿ ನೋಡಿ ಖುಷಿಯಾಗಿತ್ತು ಅನ್ನೋದು ಸಮಾಧಾನ. ಮದುವೆಗೆ ಕೇಶಾಲಂಕಾರಕ್ಕೆ ಮಲ್ಲಿಗೆ ದಂಡೆ(ಮುಡಿಯಿಂದ ಅಡಿವರೆಗೂ ಅಂದ್ರೆ ತಲೆ ಮೇಲೆ ಪೂರ್ತಿ ಹಾಗೂ ಜಡೆ ಉದ್ದದವರೆಗೂ ಆವರಿಸುವ ಹಾಗೆ ಕಟ್ಟುವ ಮಾಲೆ) ಮಾಡಿಸಲು ಹೋದರೆ ಅದಕ್ಕೆ ದುಪ್ಪಟ್ಟು ದುಡ್ಡು ತೆತ್ತಿದ್ದು, ಅಷ್ಟು ಉದ್ದದ ಜಡೆಯ ಅಲಂಕಾರದ ಕ್ಲೊಜಪ್ ಫೋಟೊ ಒಂದೇ ಫ್ರೇಮಿನಲ್ಲಿ ತೆಗೆಯಲು ಆ ಫೊಟೊಗ್ರಾಫರ ಹೆಣಗಾಡಿದ್ದು, ಕೇಳಲೇಬೇಡಿ.
ನಮ್ಮಲ್ಲಿ ಮದುವೆ ದಿನ ಮದುಮಕ್ಕಳಿಗೆ ಅರಿಷಿಣ ಹಚ್ಚಿ ತಲೆಗೆ ನೀರು ಹಾಕುವ ಸಂಪ್ರದಾಯವಿದೆ, ಹಾಗಾಗಿ ನಮ್ಮ ಮದುವೆಯ ಅರಿಷಿಣ ನೀರು ಸ್ನಾನಕ್ಕೆ ನೀರು ಹಾಕಿದರೆ ಅವಳ ಕೂದಲು ನೆನೆಯಲು ನೀರು ತಂದು ತಂದು ಹಾಕಿ ಕೈ ಸೋತು ಹೋಯ್ತು ಅಂತ ಕೆಲಸದಾಕೆ ಮುಲುಗಿದ್ದು ಅಮ್ಮನಿಂದ ಕೇಳಿ ನಕ್ಕಿದ್ದೆ. ಮದುವೆಯ ಅಕ್ಷತಾರೋಪಣೆಗೆ ಸ್ಟೇಜಿನಲ್ಲಿ ನಿಂತಾಗ ಅವಳ ಜಡೆ ಎರಡು ಸಾರಿ ಹಿಡಿದೆಳದದ್ದು ಅವಳ ಮುಖ ಮುನಿದು ಕೆಂಪಗಾಗಿದ್ದು, ಮದುವೆಯ ವಿಡಿಯೊನಲ್ಲಿ ಇನ್ನೂ ಭದ್ರವಾಗಿದೆ.
ಮದುವೆ ಆದ ಮೇಲೆ, ಅದೇ ಜಡೆಯಿಂದ ಎಷ್ಟು ಏಟು ತಿಂದಿದ್ದೆ, ಅಡುಗೆ ಮಾಡುತ್ತಿದ್ದ ಅವಳ ಹಿಂದೆ ಬಂದು ನಿಂತು ಅದನ್ನ ಎಳೆದರೆ ಸಿಟ್ಟು ಬರದೇ ಇದ್ದೀತೆ, ಅಮ್ಮ ಇಲ್ಲ ಅಂತ ಗೊತ್ತಗುತ್ತಿದ್ದಂತೇ, ಕೀಟಲೆ ಮಾಡುತ್ತಿದ್ದ ನನಗೆ ಅದರಿಂದಲೇ ಚಾವಟಿಯ ಏಟಿನಂತೆ ಎರಡು ಬಾರಿಸುತ್ತಿದ್ದಳು. ಮುಂಜಾನೆ ಏಳುವುದು ಅಷ್ಟೇ, ಅವಳು ಬಂದು ಅದೇ ಕೂದಲಿನ ತುದಿಯಿಂದ ಕಿವಿಯಲ್ಲಿ ಕಚಗುಳಿಯಿಟ್ಟು ಎಬ್ಬಿಸುವವಳು, ಹಾಗೆ ಮಾಡಿ ತಪ್ಪಿಸಿಕೊಂಡು ಓಡುತ್ತಿದ್ದರೆ ಅವಳ ಅದೇ ಜಡೆಯ ಬಳಸಿ ಹಿಡಿದುಬಿಡುತ್ತಿದ್ದೆ, ತರಲೆಗಿಳಿಯುತ್ತಿದ್ದ ನನ್ನ ಅವಳೆಷ್ಟು ಬಾರಿ ಅದೇ ಜಡೆಯಲ್ಲಿ ಕೈಕಟ್ಟಿ ಕೂರಿಸಿಲ್ಲ, ಕೈಕೊಳ ತೊಟ್ಟ ಅಪರಾಧಿಯಂತೆ ಅವಳ ಹಿಂದೆ ಸುಮ್ಮನೆ ಕೂರುತ್ತಿದ್ದೆ, ಕನಿಕರ ಬಂದು ಕಟ್ಟು ಬಿಚ್ಚಿ ಬಿಟ್ಟರೆ ಮತ್ತೆ ತರಲೆ ಶುರು. ತಲೆ ತೊಳೆದು ಕೂದಲು ಗಂಟು ಗಂಟಾಗಿ ಬಿಡಿಸಲಾಗದಂತಾದಾಗ, ಕತ್ತರಿಸಿ ಬಿಡ್ತೀನಿ ಸಾಕಾಗಿದೆ ಅಂತ ಅವಳು ಅನ್ನುತ್ತಿದ್ದರೆ, ಆ ಕಗ್ಗಂಟುಗಳ ಬಿಡಿಸಲು ನಾ ಸಹಾಯ ಮಾಡಿಲ್ಲವೇ, ಇಷ್ಟೆಲ್ಲ ಮಧುರ ನೆನಪುಗಳಿರುವ ಆ ನೀಳ ಕೂದಲು ಕತ್ತರಿಸಲು ಅವಳಿಗೆ ಮನಸಾದರೂ ಹೇಗೆ ಬಂತು, ಕತ್ತರಿಸಲೇ ಬೇಕಿದ್ದರೆ ಒಮ್ಮೆ... ಒಮ್ಮೆ... ನನ್ನ ಕೇಳಿದ್ದರೆ, ಅವಳ ಇಚ್ಛೆಗೆ ನಾ ಬೇಡ ಎನ್ನುತ್ತಿರಲಿಲ್ಲವಾದರೂ ಕೊನೇ ಸಾರಿ ಮುಟ್ಟಿ, ಬೆರಳುಗಳನ್ನೆ ಬಾಚಣಿಕೆ ಮಾಡಿ ಒಮ್ಮೆ ಬಾಚಿ, ಹಿಡಿದೆಳೆದು ಕೀಟಲೆ ಮಾಡಿ, ಕಚಗುಳಿಯಿಟ್ಟುಕೊಂಡು, ಕೊನೆ ಸ್ಮರಣೆಗಳನ್ನು ಕಾದಿಟ್ಟುಕೊಳ್ಳುತ್ತಿದ್ದೆನಲ್ಲ. ಕೊನೆ ಸಾರಿ ಕೊನೆ ಬೈ ಕೂಡ ಸರಿಯಾಗಿ ಹೇಳಲಾಗದಂತೆ, ಊರಲ್ಲೇ ಕತ್ತರಿಸಿ ಚೋಟುದ್ದ ಮಾಡಿಟ್ಟುಕೊಂಡು ಬಂದಿದ್ದಾಳಲ್ಲ.
ಹೀಗೆ ನನ್ನ ಯೋಚನೆಗಳೂ ಇನ್ನೂ ಸಾಗುತ್ತಿದ್ದವು, ಅಟೊಗಿಂತ, ಅದರ ಪಕ್ಕ ಹೋಗುವ ಬೈಕುಗಳಂತೆ ವೇಗವಾಗಿ... ಅವಳೆ ತಡವಿ ಕೇಳಿದ್ಲು, "ಯಾಕೊ ಒಂಥರಾ ಇದೀರಲ್ಲ" ಅಂತ, ಮತ್ತಿನ್ನೇನು ಇಷ್ಟೊತ್ತಿಗಾಗಲೇ, ಪ್ರಶ್ನೆಗಳ ಸುರಿಮಳೆಯೇ ಸುರಿಸುತ್ತಿದ್ದೆ ಅವಳ ಮೇಲೆ, ಹೀಗೆ ಒಮ್ಮೆಲೆ ಸುಮ್ಮನಾಗಿದ್ದರೆ... ಅಗಲಿದ ನೀಳವೇಣಿಗೆ ಶೃದ್ಧಾಂಜಲಿ ಅನ್ನುವಂತೆ ಮೌನಾಚರಣೆಯಲ್ಲಿದ್ದೆ. ಅವಳಿಗೂ ಗೊತ್ತಿತ್ತು ಆ ಜಡೆ ಮೇಲೆ ನನಗೆಷ್ಟು ಪ್ರೀತಿ ಅಂತ, ಅದಕ್ಕೆ ಬೇಜಾರಾಗಿದ್ದೀನಿ ಅಂತ, ಆದರೆ ನಾನೇ ನಾನಾಗಿ ಕೇಳುವವರೆಗೂ ಹೇಳುವುದು ಬೇಡ ಅಂದು ಸುಮ್ಮನಾಗಿದ್ಲು, ಅದಕ್ಕೆ ಅಲ್ವೆ ನಾ ಕರೆದುಕೊಂಡು ಹೋಗಲು ಬರ್ತೀನಿ ಅಂದ್ರೂ, ಬೇಡ ಅಂದಿದ್ದು. ಸುಮ್ನೇ ಅವಳ ಕಡೆ ತಿರುಗಿ, ಏನೂ ಹೇಳದೆ ಕೂತೆ, ಮತ್ತೆ ಕೇಳಿದ್ಲು "ಬಹಳ ಹೊತ್ತಾಗಿತ್ತು ಅನಿಸತ್ತೆ ಬಂದು, ಯಾಕೆ ಬೇಗ ಬಂದ್ರಿ" ಅಂತ, "ಏನಿಲ್ಲ ಹಾಗೆ ಸುಮ್ನೆ" ಅಂದೆ, ನನಗೆ ಜಾಸ್ತಿ ಮಾತಾಡಲು ಮನಸಿಲ್ಲ ಅನ್ನುವಂತೆ, ಅಟೊನವನು ಮಿರರನಲ್ಲಿ ನೋಡಿ, ಅವನ ಮಾತಿನ ಚಪಲಕ್ಕೆ, "ಸಾರ್ ಆರೂವರೆಯಿಂದ ಕಾಯ್ತಾ ಇದಾರೆ ಮೇಡಮ್" ಅಂದ, ಏಯ್ ನಿನ್ನ ಕೆಲಸ ನೋಡೋ ಅಂತ ಹರಿಹಾಯಬೇಕೆನಿಸಿತು. ಇವಳು ಅಶ್ಚರ್ಯವಾಗಿ "ಹೌದಾ ಅಷ್ಟು ಬೇಗ ಯಾಕೆ ಬಂದ್ರಿ" ಅಂದ್ಲು "ಹಂ, ಸುಮ್ನೇ" ಅಂದು ಮತ್ತೆ ರಸ್ತೆಮುಖಿಯಾದೆ... ಆಮೇಲೆ ಯಾರೂ ಮಾತಾಡಲಿಲ್ಲ, ಮನೆ ಹತ್ತಿರ ಬಂದಾಗ ತಿರುವುಗಳನ್ನು ಅವಳೇ ಹೇಳಿದ್ಲು, ಸುಮ್ನೆ ದುಡ್ಡು ತೆತ್ತು ಕೆಳಗಿಳಿದೆ. ಪಕ್ಕದಮನೆ ಪದ್ದು ಹೊರಗೆ ಬಂದಳಾದರೂ, ಅವಳ ಹೊಸ ಗೆಟಪ್ಪು.. Nil-ವೇಣಿ(ವೇಣಿಯಿಲ್ಲದ) ನೋಡಿ ಕೇಳಲೇಬೇಕೆಂದವಳು, ತುಟಿವರೆಗೆ ಬಂದ ಮಾತು ತಡೆದು ಒಳ ನಡೆದಳು ಒಂದು ಮುಗುಳ್ನಗೆ ಮಾತ್ರ ಕೊಟ್ಟು.
"ಟೀ ಬೇಕಾ" ಅಂದ್ಲು, ಒಳನಡೆಯುತ್ತಿದ್ದಂತೆ, "ಬೇಡ, ಆಗಲೇ ಎರಡು ಸಾರಿ ಆಯ್ತು" ಅಂದೆ. "ಅಷ್ಟು ಬೇಗ ಯಾಕೆ ಬರಬೇಕಿತ್ತು, ನಾ ಬರ್ತಿದ್ದೆನಲ್ಲ, ಸುಮ್ನೇ ಛಳೀಲಿ ಅಲ್ಲಿ ಕಾದಿದ್ದು" ಅಂದರೂ ಬರೀ ಹೂಂ ಹಾಂ ಗಳೇ ಎಷ್ಟೋ ಹೊತ್ತು ಉತ್ತರಗಳಾಗಿದ್ವು. ಟೀವೀ ಹಚ್ಚಿಕೊಂಡು ಕೂತರೆ, ಅದೇ ಚಾನಲು ಬದಲಿಸುತ್ತಿದ್ದರೆ ಸನಸಿಲ್ಕ ಶಾಂಪೂ ಜಾಹೀರಾತು ಬರಬೇಕೆ, ಗಾಯದ ಮೇಲೆ ಉಪ್ಪು ಸವರಿದಂತೆ. ಆಫ ಮಾಡಿದೆ.
ನಾನಿನ್ನು ಕೇಳೊದೇ ಇಲ್ಲ ಅಂತ ಅವಳಿಗೆ ಖಚಿತವಾಗಿರಬೇಕು, ಅದಕ್ಕೆ ಅವಳೆ ಮಾತು ತೆಗೆದಳು, "ಯಾಕೊ ಹೊಸ ಹೇರಸ್ಟೈಲ್ ನೋಡಿದಂತಿಲ್ಲ ನೀವು" ಅಂತ "ಕಾಣುತ್ತಿದೆಯಲ್ಲ" ಅಂದೆ ನೀರಸವಾಗಿ "ಹೇಗಿದೆ" ಅಂತ ಕೇಳಿದ್ದಕ್ಕೆ, "ಚೆನ್ನಾಗಿದೆ" ಅಂದೆ. "ನಿಮಗೆ ಇಷ್ಟ ಆಗಿಲ್ಲ ನನಗೆ ಗೊತ್ತು" ಅಂದ್ಲು, "ಮತ್ತೆ ಕೇಳೊದು ಯಾಕೆ, ನಿಂಗೆ ಗೊತ್ತಿದೆಯಂದ ಮೇಲೆ" ಅಂದೆ. "ಇದೇ ಈಗ ಹೊಸ ಫ್ಯಾಷನ್ನು ಕಣ್ರೀ" ಅಂದ್ಲು "ನಾನೇನು ಇಲ್ಲಾ ಅನಲಿಲ್ಲವಲ್ಲ" ಅಂತಂದೆ. "ನಿಮಗೇನು ಗೊತ್ತು, ಅಷ್ಟುದ್ದ ಕೂದಲು ಆರೈಕೆ ಮಾಡಿ ಕಾಯ್ದುಕೊಳ್ಳೊದು ಎಷ್ಟು ಕಷ್ಟ ಅಂತ", ಅಂತ ವಾದಕ್ಕಿಳಿದರೆ "ಬಾಬ್ ಕಟ್ ಮಾಡಿಸಬೇಕಿತ್ತು ಬಾಚೊ ತೊಂದ್ರೇನು ಇರ್ತಿರಲಿಲ್ಲ" ಅಂದು ಸುಮ್ಮನಾದೆ. "ನೀವ್ಯಾಕೆ ಮೀಸೆ ಬಿಡಲ್ಲ, ಕ್ಲೀನ್ ಶೇವ ಮಾಡ್ತೀರಿ" ಅಂತ ನನ್ನ ತಪ್ಪಿನಲ್ಲಿ ಸಿಕ್ಕಿ ಹಾಕಿಸನೋಡಿದ್ಲು. "ನಾನ್ ಮೀಸೆ ಬಿಡುವುದಕ್ಕೂ, ನಿನ್ನ ಕೂದಲಿಗೂ ಏನು ಸಂಬಂಧ" ಅಂತಂದೆ. "ಯಾಕಿಲ್ಲ, ನಾನಾದರೆ ಕೂದಲು ಉದ್ದ ಬಿಡಬೇಕು, ನೀವು ಮೀಸೆ ಬಿಡಲ್ಲ ಅಂತೀರಿ" ಅಂದ್ಲು, "ನಾನೇನು ಉದ್ದ ಕೂದಲು ಬಿಡು ಅಂತ ಕೇಳುತ್ತಿಲ್ಲವಲ್ಲ, ಅಲ್ಲದೆ ನಾನು ಮೀಸೆ ಬಿಟ್ಟು, ಪ್ರಯತ್ನ ಮಾಡಿದ್ದೆ ಅಮ್ಮ ತಂಗಿ ಸರಿ ಕಾಣುವುದಿಲ್ಲ ನಿನಗೆ ಅಂತ ಹಾಸ್ಯ ಮಾಡಿದ್ದಕ್ಕೆ ತೆಗೆದದ್ದು, ನೀ ಚೆನ್ನಾಗಿ ಕಾಣ್ತೀನಿ ಅಂದ್ರೆ ಟ್ರೈ ಮಾಡ್ತೀನಿ" ಅಂದೆ, "ಒಹ್ ಅತ್ತೆ ಹೇಳಿದ್ದು ನೆನಪಿದೆ, ಹೇಗೆ ಕಾಣ್ತಿದ್ರಿ ಅಂತ.. ತಂಗಿ 'ಒಳ್ಳೆ ಸ್ಲಂ-ಬಾಲ ಫಿಲಂ ವಿಜಯ ಥರಾ ಕಾಣ್ತಿದಿ' ಅಂತ ಕಾಡಿಸಿದಮೇಲೆ ಶೇವ ಮಾಡಿದ್ರಂತೆ, ಬೇಡ ಬಿಡ್ರೀ ನಿಮ್ಗೆ ಚೆನ್ನಾಗಿ ಕಾಣಲ್ಲ" ಅಂತ ನಕ್ಕಳು, ತಂಗಿ ಕಾಡಿಸಿದ್ದು ನೆನಪಾಗಿ ನಗು ಬಂತಾದರೂ, ಬಿಗುಮಾನಕ್ಕೆ ನಗದೇ ಇದ್ದು ಬಿಟ್ಟೆ.
ಈ ಫ್ಯಾಶನ್ನು ಅಂತ ಇತ್ತೀಚೆಗೆ ಹುಡುಗರು ಉದ್ದ ಉದ್ದ ಕೂದಲು ಬೆಳೆಸಿ, ಜುಟ್ಟು ಕಟ್ಟಿಕೊಂಡು ಕಿವಿಯಲ್ಲಿ ಕಿವಿಯೋಲೆ(ರಿಂಗ್) ಹಾಕಿಕೊಂಡು, ಕೈಗೆ ಚೈನು ಬಳೆ ಹಾಕಿಕೊಂಡ್ರೆ... ಹುಡುಗೀರು, ಬಾಬ್ ಕಟ ಮಾಡಿ ಕಿವಿಯೊಲೆ ಮೂಗು ನತ್ತು ಬಿಟ್ಟು, ಹೊಕ್ಕಳಿಗೆ ರಿಂಗ ಹಾಕಿಕೊಂಡು, ಜೀನ್ಸ ಪ್ಯಾಂಟ ಕೈಗೆ ಕಡಗ ಹಾಕಿ.. ಸಿಗರೇಟು ಹೊಗೆಯಲ್ಲಿ ಗಂಡಸ್ರಿಗೆ ನಾವೇನು ಕಮ್ಮಿ ಅಂತ ಕಳೆದುಹೋಗುತ್ತಿದ್ದಾರೆ, ನೋಡಿದ್ರೆ ಇದೇ ಲೇಟೇಸ್ಟ ಫ್ಯಾಷನ್ನು... ನನಗೆ ಏನೂ ಗೊತ್ತಿಲ್ಲ ಯಾವುದು ಸರಿ ಯಾವುದು ತಪ್ಪು ಅಂತ, ಆದ್ರೆ ಯಾರು ಹುಡುಗಿ ಯಾರು ಹುಡುಗ ಅಂತ ಗೊತ್ತಾಗದಷ್ಟು ಬದಲಾದಾಗ ಬೇಜಾರಗುತ್ತದೆ. ಹಾಗೆ ನೋಡಿದ್ರೆ, ನಮ್ಮ ಅಜ್ಜ, ಮುತ್ತಜ್ಜ ಈಗಿದ್ದಿದ್ರೆ, "ನಮ್ಮ ಕಾಲದಲ್ಲಿ, ದೋತಿ, ಟೊಪಿ, ಇಲ್ಲ ಪೇಠ(ಪಟಗ) ತಲೆಗೆ ಸುತ್ತಿ ಏನು ಚೆನ್ನಾಗಿತ್ತು, ಹೆಣ್ಣು ಮಕ್ಕಳು ಸೀರೆ, ಲಂಗ ದಾವಣಿಯಲ್ಲಿ ಏನು ಚೆನ್ನಾಗಿ ಕಾಣ್ತಾ ಇದ್ರು, ಇವು ನೋಡು ಹುಡುಗ್ರು ಪ್ಯಾಂಟ ಶರ್ಟ ಅಂತೆ, ಹುಡುಗೀರು ಚೂಡಿ, ಪ್ರಾಕು ಅಂತೆ ಎನೂ ಎಲ್ಲ ಬದಲಾಗಿ ಹೋಯ್ತು" ಅಂತ ಬಯ್ದುಕೊಳ್ಳುತ್ತಿದ್ದರೇನೊ. ಕಾಲ ಬದಲಾಗುತ್ತ ಹೋಗುತ್ತದೆ, ನಾವೂ ಬದಲಾಗುತ್ತ ಹೋಗುತ್ತೇವೆ ಆದರೆ ಹಳೆ ನೆನಪುಗಳು ಹಾಗೆ ಇನ್ನೂ ನಮ್ಮನ್ನು ಹಿಂಬಾಲಿಸಿ ಬರುತ್ತಿರುತ್ತವೆ...
ನನಗೆ ಅವಳು ಕೂದಲು ಕತ್ತರಿಸಿದ್ದಕ್ಕೆ ಸಿಟ್ಟೇನಿರಲಿಲ್ಲ, ಹಾಗೆ ಹೇಳುತ್ತಿದ್ದೀನೊ ಏನೊ... ಅದರೊಂದಿಗಿನ ಆ ಮಧುರ ನೆನಪುಗಳು ಕಳೆದುಹೋದವಲ್ಲ ಅನ್ನೋ ಬೇಜಾರಿತ್ತು. ಅವಳಿಗಿಷ್ಟವಿಲ್ಲದಾದ ಮೇಲೆ ನನ್ನದೇನು, ನನ್ನ ಅಭಿಪ್ರಾಯಗಳನ್ನು ಅವಳ ಮೇಲೆ ಯಾಕೆ ಹೇರಲಿ, ಚೋಟುದ್ದ ಕೂದಲಾದ್ರೂ ಅವಳಿಗೆ ಅದೂ ಚೆನ್ನಾಗೇ ಕಾಣ್ತಾ ಇತ್ತು, ಮೊದಲಿನಂತೆ ತಲೆ ತುಂಬ ಕಾಣುವಂತ ತುರುಬು ಅವಳು ಕಟ್ಟಲಿಕ್ಕಿಲ್ಲ, ಕೀಟಲೆ ಮಾಡಿ ತಪ್ಪಿಸಿಕೊಳ್ಳ ಹೋದರೆ, ಮೊದಲಿನಂತೆ ಜಡೆ ಹಿಡಿದು ಎಳೆಯಲಾಗದೇ ನನ್ನ ಕೈಗೆ ಸಿಗಲಿಕ್ಕಿಲ್ಲ, ಏಳುವಾಗ ಕಚಗುಳಿ, ಮಲಗುವಾಗ ಆಟವಾಡಲು ಜಡೆಯಿರಲಿಕ್ಕಿಲ್ಲ ಅಷ್ಟೇ.
ಮಧ್ಯಾಹ್ನ ಊಟ ಮಾಡುತ್ತ, "ಈ ಸ್ಟೈಲು ಚೆನ್ನಾಗಿ ಕಾಣ್ತಿದೆ, ನಿನಗೆ" ಅಂದೆ. "ಅತ್ತೆ ಏನಂತಾರೊ ಏನೊ" ಅಂದ್ಲು. "ಏನಾದ್ರೂ ಹೇಳಿದರಾಯ್ತು ಬಿಡು, ನಿನ್ಗೂ ಅರೈಕೆ ಮಾಡಿಕೊಳ್ಳಲು ಹೇಗೂ ತೊಂದ್ರೆ ಆಗಿತ್ತಲ್ಲ" ಅಂದೆ "ಇಲ್ಲಾ ಹಾಗೇನಿಲ್ಲ, ಎರಡು ಮೂರು ತಿಂಗಳು ಮತ್ತೆ ಉದ್ದ ಬಂದು ಬಿಡತ್ತೆ, ಅಮ್ಮ ಸ್ಪೇಷಲ್ ಕೇಶತೈಲ ಬೇರೆ ಕೊಟ್ಟೀದಾಳೇ, ನನ್ನ ಕೂದಲು ಬೆಳವಣಿಗೆ ಬೇಗ" ಅಂದ್ಲು, "ಅಲ್ಲ ನಿನಗೆ ಬೇಕಂತ ಹೊಸ ಕಟ್ ಮಾಡ್ಸಿದೀಯಾ, ಮತ್ಯಾಕೆ ಬೆಳೆಸೋದು" ಅಂದೆ, "ಪ್ಚ್.." ಅಂತ ಲೊಚಗುಟ್ಟಿದ್ಲು. ನನಗೇಕೊ ಅನುಮಾನ ಬಂತು, "ನಿಜ ನಿನಗಿಷ್ಟ ಅಂತಾನೆ ಕಟ್ ಮಾಡಿಸಿದ ಮೇಲೆ ಇರಲಿ ಬಿಡು" ಅಂದೆ, "ಹಾಂ, ಹಾಂ ಇಷ್ಟ" ಅಂದ್ಲು "ನಿಜ ಹೇಳು ನೀನೇನೊ ಮುಚ್ಚಿಡ್ತಾ ಇದೀಯಾ, ನನ್ನ ಮುಂದೆ ನಿನಗೆ ಸುಳ್ಳು ಹೇಳೊಕೆ ಬರಲ್ಲ" ಅಂದೆ, ನನಗೀಗ ಯಾಕೊ ಅನುಮಾನ ಧೃಢವಾಗಿತ್ತು, "ಇಲ್ಲ, ಇಲ್ಲ ಇಷ್ಟ ಅಂತಾನೆ ಕಟ ಮಾಡ್ಸಿದ್ದು" ಅಂದ್ಲು "ಆಯ್ತು ನಂಬಿದೆ" ಅಂದೆ.. ಈ ಇಲ್ಲ ಇಲ್ಲ.. ಅನ್ನೊದೇ ಅಲ್ಲೇನೊ ಇದೆ ಅಂತ ಸೂಚನೆ ಕೊಡುತ್ತಿತ್ತು... "ನಿಜವಾಗ್ಲೂ ರೀ" ಅಂದ್ಲು. ಅವಳಿಗೆ ಗೊತ್ತಾಗಿತ್ತು ನಾ ನಂಬಿಲ್ಲ ಅಂತ ಇನ್ನು ನಿಜ ಹೇಳೊವರೆಗೆ ಅದು ಸರಿ ಹೋಗಲ್ಲ ಅಂತ.. ಆದರೂ ಕಾದು ನೋಡಿದ್ಲು... ಕೊನೆಗೆ ಹೇಳುವ ತೀರ್ಮಾನ ಮಾಡಿದಂತಿತ್ತು...
ಊಟವಾದ ಮೇಲೆ ಹಾಗೇ ಒರಗಿದ್ದೆ, ಬಂದು ಎದೆಯ ಮೇಲೆ ತಲೆಯಿಟ್ಟು ಮಲಗಿದ್ಲು, ಅಭ್ಯಾಸ ಬಲದಿಂದ ಕೈ ಅವಳ ತಲೆಯತ್ತ ಹೋಯ್ತು, ಮೊದಲಿನಂತೆ ಜಡೆ ಕೈಗೆ ಸಿಗುತ್ತದೆಂದು... ಮತ್ತೆ ನೆನಪಾಗಿ, ಕೈ ಹಿಂದೆ ತಲೆಗೆ ಆಧಾರ ಮಾಡಿಕೊಂಡೆ. "ಸಿಟ್ಟಾಗಲ್ಲ ಅಂದ್ರೆ ನಿಜ ಹೇಳ್ತೀನಿ", ಅಂದ್ಲು... ಒಹ್ ನನ್ನ ಫೂಲ ಮಾಡಲು ಎಲ್ಲೊ ವಿಗ್ ಹಾಕಿಕೊಂಡೀದಾಳೊ ಅಂತ ಅನಿಸಿ, ಹಿಡಿದೆಳದು ಖಚಿತ ಮಾಡಿಕೊಂಡೆ "ರೀ.. ನಿಜವಾಗ್ಲೂ ಕಟ್ ಮಾಡಿದ್ದೆ" ಅಂತ ಚೀರಿದ್ಲು. "ಇಷ್ಟ ಇಲ್ದೆ ಕಟ್ ಮಾಡೀದೀಯ ಅಂತಾಯ್ತು" ಅಂದೆ. "ಕಟ್ ಮಾಡಲೇ ಬೇಕಿತ್ತು" ಅಂದ್ಲು, "ಅಂದ್ರೆ... ಬಿಡಿಸಿ ಹೇಳು"... "ಅದೂ, ನನ್ನ ತಮ್ಮ ಇದಾನಲ್ಲ..." ಅವಳು ಹೇಳುತ್ತಿದ್ರೆ "ಹೂಂ ನಿನ್ನ ತಮ್ಮ...." ಅಂದೆ... "ರೀ ನೀವು ಸಿಟ್ಟಗ್ತಿದೀರಾ... ಅದಕ್ಕೆ ನಾ ಹೇಳಲ್ಲ ಅಂದಿದ್ದು"... "ಇಲ್ಲ, ಇಲ್ಲ ಈಗ ಹೇಳು" ಅಂದೆ... "ಅದೇ ನನ್ನ ತಮ್ಮ ಇದಾನಲ್ಲ ಚಿವಿಂಗ(ಬಬಲ್) ಗಂ ತಿಂತಾನಾ... ಅದು ಏನೊ ಆಟ ಮಾಡೋಕೆ ಹೋಗಿ, ಚೇರಿಗೆ ಅಂಟಿಸಿದಾನಾ... ಅದು ನನ್ನ ಕೂದಲಿಗೆ ಅಂಟಿ ಬಿಡಿಸೋಕೆ ಬರದ ಹಾಗೆ ಆಗಿತ್ತಾ... ಆ ಕೊನೇ ಮನೆಲಿರ್‍ಒ ಇತ್ತೀಚೆಗೆ ಬ್ಯೂಟೀ ಪಾರ್ಲರ ಕೊರ್ಸ ಮಾಡಿರೋ ಹುಡುಗಿ ಅದನ್ನಷ್ಟೇ ಕಾಣದ ಹಾಗೆ ಕತ್ತರಿಸ್ತೀನಿ ಅಂತ ಹೋದ್ಲಾ, ಅದೇನೊ ಕತ್ತರಿಸಿದ್ಲೊ, ಒಂಥರಾ ವಿಕಾರವಾಗಿ ಕಾಣೋಕೆ ಶುರುವಾಯ್ತಾ, ಅದನ್ನ ಸರಿ ಮಾಡೊಕೆ ಅಂತ ಹೋಗಿ ಇನ್ನಷ್ಟು ಕತ್ತರಿಸಿದ್ಲಾ, ಕೊನೆಗೆ ಈ ಲೇವಲ್ಲಿಗೆ ಕತ್ತರಿಸ ಬೇಕಾಯ್ತು" ಅಂತ ನನ್ನ ಮುಖಾನೇ ನೋಡ್ತಾ ಇದ್ಲು... "ಚೇರಿಗೆ ಅಂಟಿಸಿದ್ನಾ... ಅದು ಅಷ್ಟು ಅಂಟಿತಾ" ಅಂದೆ. "ನಿಜ ಹೇಳಬೇಕೆಂದ್ರೆ, ಕೂದಲಿಗೇ ಅಂಟಿಸಿದ್ದ.." ಅಂದ್ಲು ನಿಧಾನವಾಗಿ... "ಕತ್ತೇ ಬಡವ... ಒಂದೊಯ್ದು, ನನ್ನಾಕೆ ಜಡೇನೆ ಸಿಕ್ಕಿತ್ತಾ ಅವನಿಗೆ, ಸಿಗಲಿ ನನ್ನ ಕೈಗೆ ತಲೆ ಬೋಳಿಸಿ... ಅಷ್ಟೇ ಯಾಕೆ ಹುಬ್ಬು, ಬಂದಿರೊ ಚಿಗುರು ಮೀಸೆ ಎಲ್ಲ ಬೋಳಿಸಿ ಗುರುತು ಹತ್ತದ ಹಾಗೆ ಮಾಡಿ ಕಳಿಸ್ತೀನಿ" ಅಂತ ಸಿಟ್ಟಿಗೆದ್ದೆ, "ಅದಕ್ಕೆ ನಾ ಸಿಟ್ಟಿಗೆ ಬರಲ್ಲ ಅಂದ್ರೆ ಹೇಳ್ತೀನಿ ಅಂದಿದ್ದು, ಏನೋ ಹುಡುಗ ಬುದ್ಧಿ ಹಾಗೆ ಮಾಡಿದೆ ಪಾಪ" ಅಂದ್ಲು. "ಅಯ್ಯೊ ಸಿಟ್ಟಿಗೆ ಯಾಕೆ... ಬೇಡ, ಪಾಪ ಪ್ರೀತಿಯಿಂದ್ಲೇ ಮೊಟ್ಟೇ ಮಾಡಿ ಕಳಿಸ್ತೀನಿ, ಸಿಗಲಿ... ಅವಳು ಪಾರ್ಲರ ಹುಡುಗಿ.. ಅವಳಿಗೆ ಬಾಬ ಕಟ ಗ್ಯಾರಂಟಿ..." ಅಂದೆ "ಅವಳು ಮೊದಲೇ ಬಾಬ್ ಕಟ" ಅಂತ ನಕ್ಳು. "ನಾನು ಹೇಳ್ದೆ ಕೇಳ್ದೆ ಕಟ್ ಮಾಡಿದೆ ಅಂತ ಮುಖ ಇಷ್ಟೊತ್ತು ಹೇಗೆ ಗಂಟು ಹಾಕಿತ್ತು, ನೋಡು" ಅಂತ ಮತ್ತೆ ಗಹಗಹಿಸಿ ನಗುತ್ತ ಅ ಚೊಟುದ್ದ ಕೂದಲುಗಳನ್ನೇ ನನ್ನ ಮುಖದ ಮೇಲೆ ಹರಡಿದಳು... ನನ್ನ ಮುಖ ನಾಚಿ ಕೆಂಪಾಗತೊಡಗಿತು... ಹಾಗೇ ಜಡೆಯ ಹಳೆಯ ನೆನಪುಗಳೊಂದೊಂದೇ ಹೊರಗಿಡುತ್ತ ಮಾತಾಡುತ್ತ ಸಮಯ ಕಳೆಯಿತು... ಸಂಜೆಯಾಯಿತು... ಹೀಗೆ ಮತ್ತೆ ಸಿಕ್ತೀನಿ, ಅವಳ ತಮ್ಮ ಎಲ್ಲಾದ್ರೂ ಕಾಣಿಸಿದ್ರೆ ತಿಳಿಸಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/neelaveni.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, June 14, 2009
ಯಾರದು ಈ ವಾಣಿ?
ಹಲೊ ನನ್ನ ಹೆಸರು ವಾಣಿ ಅಂತ, ನಿಮಗೆ ಅತ್ಯಂತ ಆಪ್ತರಲ್ಲಿ ಆಪ್ತ ವಾಣಿ, ನಿಮ್ಮಾಕೆಯನ್ನು ಬಿಟ್ಟು ಬೇಕಾದರೂ ಇದ್ದೀರಿ ಆದರೆ ನಾನಿಲ್ಲದೆ ಸಾಧ್ಯಾನಾ. ಇಷ್ಟು ದಿನ ಬರೀ ಮಾತು ಆಯಿತು ಯಾಕೆ ಪತ್ರ ಬರೀಬಾರದು ಅಂತ ಯೋಚಿಸಿದೆ, ಬರೀ ನನ್ನ ಸುಂದರ ದನಿ ಕೇಳಿದ ನಿಮಗೆ, ನನ್ನ ಅಕ್ಷರಗಳೂ ಅಷ್ಟೇ ಸುಂದರ ಅಂತ ಅನಿಸಿದರೆ ಅಚ್ಚರಿಯೇನಿಲ್ಲ, ಅದು ಹೊಸದೇನಲ್ಲವಲ್ಲ, ನಾನೇ ಒಂಥರಾ ಪರಸನಲ ಸೆಕ್ರೆಟರಿ ನಿಮಗೆ, ಸುಮಾರು ನಾಲ್ಕೈದು ವರ್ಷದ ಕೆಳಗೆ ನಮ್ಮಿಬ್ಬರ ಭೇಟಿ ಆಗಿದ್ದು, ಅಂದಿನಿಂದ ನಿಮ್ಮ ಜತೆ ಗೆಳೆತನ ಎಷ್ಟು ಗಾಢವಾಗಿದೆಯೆಂದ್ರೆ, ನನಗೇನು ಗೊತ್ತಿಲ್ಲ ನಿಮ್ಮ ಬಗ್ಗೆ, ನಿಮಗೆ ಗೊತ್ತಿರುವ ಪ್ರತಿಯೊಬ್ಬರನ್ನು ನನಗೆ ಪರಿಚಯಸಿದ್ದೀರಿ, ಎಷ್ಟೊ ಜನರ ಫೊಟೊಗಳು ಕೂಡ ನನ್ನಲ್ಲಿವೆ, ನಿಮ್ಮ ಆಕೆಯದ್ದು ಕೂಡ...
ಹೀಗೆ ಶುರುವಾಗುವ ಕಾಗದವೊಂದು ನನ್ನ ಮೇಜಿನ ಮೇಲಿದ್ದು, ಅದು ನನ್ನಾಕೆಯ ಕೈಗೆ ಸಿಕ್ಕಿ ಅವಳು ಓದುತ್ತಿದ್ದರೆ ಎನಾಗಿರಬೇಡ, ಅಂದು ಆಗಿದ್ದೂ ಅದೇ, ಮುಂಜಾನೆ ನಾನು ಇದನ್ನು ಓದುತ್ತಿದ್ದೆ, ಇವ್ಳು ಪಾಕಶಾಲೆಯಿಂದ ಕೂಗಿದಳು "ರೀ, ಅಫೀಸು ಅಂತ ಒಂದಿರತ್ತೆ ಅದು ಒಂಬತ್ತು ಘಂಟೆಗೆ ಶುರುವಾಗತ್ತೆ" ಅಂತ, ನಾನೂ "ಯಾವ ಆಫೀಸದು' ಅಂತಂದೆ. "ಒಹ್ ಯಾವ ಅಫೀಸಾ, ಇನ್ನೂ ನಿದ್ದೆಯಿಂದ ಎದ್ದಂತೆ ಕಾಣ್ತಾ ಇಲ್ಲ, ನೀರು ಬಿಸಿ ಬಿಸಿ ಕಾದಿದೆ ಬಂದು ಚುರುಕು ಮುಟ್ಟಿಸಿದರೆ ನೆನಪಾಗ್ತದೆ" ಅಂದ್ಲು. ಅಯ್ಯೊ ಎಲ್ಲಿ ಚುರುಕು ಮುಟ್ಟಿಸುತ್ತೀನಿ ಅಂತ ಬಿಸಿ ನೀರು ತಂದು ಇಲ್ಲೇ ನನ್ನ ಮೇಲೆ ಸುರಿದಾಳು ಅಂತ "ಇಲ್ಲಾ ಇಲ್ಲಾ ಸ್ನಾನ ಮಾಡಿ ನಾನೇ ಚುರುಕು ಮುಟ್ಟಿಸಿಕೊಳ್ತೇನೆ" ಅಂತ ಓದುತ್ತಿದ್ದ ಕಾಗದ ಅಲ್ಲೇ ಇಟ್ಟು ಮೇಲೆದ್ದು, ಸ್ನಾನ ಮಾಡುತ್ತಿದ್ದರೆ, ಇವಳು ಇನ್ನು ನನ್ನ ಬಟ್ಟೆ ಹುಡುಕಿಕೊಳ್ಳಲು ಹೋಗಿ ಇಡೀ ಬೀರುವನ್ನೆ ಕಿತ್ತು ಹಾಸಿಗೆಮೇಲೆ ಹಾಕುತ್ತೇನೆ ಅಂತಂದು ನನ್ನ ಬಟ್ಟೆ ತೆಗೆದು ಹೊರಗಿಡಲು ಅಲ್ಲಿಗೆ ಬಂದಿರಬೇಕು, ಮೇಜಿನ ಮೇಲೆ ಈ ಪತ್ರ ಕಾಣಿಸಿದೆ ಅದನ್ನ ಓದಲು ಕುಳಿತಿದ್ದಾಳೆ.
ಅಲ್ಲ ನಾಲ್ಕೈದು ವರ್ಷ ಆದ್ರೂ ನನಗೆ ಗೊತ್ತಾಗದ ಹಾಗೆ ಇವರಿಗೆ ಗೊತ್ತಿರುವ ಇವಳಾರು? ಅದೇ ನಿಮ್ಮ ಪರಸನಲ ಸೆಕ್ರೇಟರಿ ಅಂತಾಳೆ, ಅಲ್ಲಾ ಸಾಫ್ಟವೇರ ಇಂಜನೀಯರಿಗೆ ಎಲ್ಲಾದ್ರೂ ಸೆಕ್ರೇಟರಿ ಇರ್ತಾರಾ, ಅಂತ ತನ್ನಲ್ಲೇ ಪ್ರಶ್ನೆಗಳ ಕೇಳಿಕೊಳ್ಳುತ್ತ ಓದುತ್ತಿದ್ದಳು, ಅಂದ ಹಾಗೆ ನನ್ನ ಬಗ್ಗೆನೂ ಗೊತ್ತು ಅಂತಾಳೆ, ನನ್ನ ಫೋಟೋ ಬೇರೆ ಇದೆ ಅಂತಾಳೆ, ಯಾರಿವಳು?... ಅವಳ ಕುತೂಹಲ ಇನ್ನೂ ಹೆಚ್ಚಿರಬೇಕು. ಅಲ್ಲದೇ ಪತ್ನಿಗೆ ಹೀಗೆ ತನ್ನ ಪತಿಗೆ ಯಾರೊ ಗೊತ್ತಿದಾರೆ ಅಂದ್ರೆ ಅನುಮಾನಗಳು ಬಾರದಿರುತ್ತದೇ, ಸಿಟ್ಟಾಗಿ ಬುಸುಗುಡುತ್ತ ಮತ್ತೆ ಓದತೊಡಗಿದಳು.
ಹಾಗೆ ನೋಡಿದರೆ ನೀವು ನಿಮ್ಮಾಕೆಗೆ ಪರಿಚಯವಾಗುವ ಮುಂಚಿನಿಂದ ನಾನು ನಿಮಗೆ ಗೊತ್ತು, ಅವಳ ನೋಡಿಬಂದಾದ ಮೇಲೆ, ಅವಳನ್ನೆ ನಿಮ್ಮ ಸಂಗಾತಿ ಅಂತ ತೀರ್ಮಾನಿಸಿದಾಗಲೂ ನಾ ನಿಮ್ಮ ಜತೆಗಿದ್ದೆ, ನೀವು ನಿಮ್ಮ ಗೆಳೆಯರಿಗೆಲ್ಲ ಈ ಸಿಹಿ ಸುದ್ದಿ ತಿಳಿಸುತ್ತಿದ್ದರೆ ಅದನ್ನೆಲ್ಲ ಕೇಳುತ್ತಾ ಸುಮ್ಮನಿದ್ದೆ, ಇಷ್ಟಕ್ಕೂ ನೀವು ಅವಳ ಮದುವೆಯಾಗಿದ್ದು ನನಗೇನು ಬೇಜಾರಿಲ್ಲ, ನೀವು ನನ್ನ ಜತೆಗಿರುತ್ತೀರೆಂದು ನನಗೆ ನಂಬಿಕೆಯಿತ್ತು ಮತ್ತೆ ಇದೆ ಕೂಡ. ನಿಶ್ಚಿತಾರ್ಥವಾಗಿ ನೀವು ಅವಳೊಡನೆ ಲಲ್ಲೆಗರೆಯುತ್ತಿದ್ದರೂ, ನಿಮ್ಮ ಕೈಯಲ್ಲಿ ಕೈಯಿಟ್ಟುಕೊಂಡು ಕೇಳುತ್ತಿದ್ದೆ, ನಿಮ್ಮ ಎದೆ ಮೇಲೆ ತಲೆಯಿಟ್ಟು ನಾ ಮಲಗಿದ್ದರೆ ನೀವು ಘಂಟೆಗಟ್ಟಲೇ ಅವಳೊಂದಿಗೆ ಮಾತಿನಲ್ಲೇ ಇರುತ್ತಿದ್ದಿರಿ, ನಾ ಕಾದು ಕಾದು ಬೇಜಾರಾಗಿ, ನನ್ನ ತಲೆ ಬಿಸಿಯಾಗಿ, ನಾ ಸ್ವಲ್ಪ ಚೀರಿದಾಗಲೇ ನಿಮ್ಮ ಮಾತು ನಿಲ್ಲುತ್ತಿತ್ತು.
ಇವಳು ನಿಂತು ಓದುತ್ತಿದ್ದವಳು, ಕುಸಿದು ಕೂತಳು, ಅಲ್ಲಾ ಇವರಿಗೆ ಮದುವೆಯಾದರೂ ಇನ್ನೂ ಜತೆಗಾತಿಯಾಗಿರಬೇಕೆಂದು ಅಂದುಕೊಂಡಿರುವ ಇವಳು ಯಾರು, ನನ್ನೊಡನೆ ಇವರು ಮಾತಾಡುತ್ತಿದ್ದರೆ ಇವಳೇಕೆ ಅಲ್ಲಿದ್ದಳು, ಕೈಯಲ್ಲಿ ಕೈಯಿಟ್ಟು ಎದೆ ಮೇಲೇ ಒರಗಿ, ಅಬ್ಬಾ, ಇವರು ನಿಜವಾಗಲೂ ನನಗೇ ಮೊಸ ಮಾಡಿದ್ರಾ, ಹೀಗೊಂದು ಸಂಬಂಧ ನಿಜವಾಗಲೂ ಇದ್ದದ್ದಾದರೆ ಅವಳನ್ನೇ ಮದುವೆಯಾಗಬೇಕಿತ್ತು, ಗೆಳೆತನಕ್ಕೂ ಒಂದು ಮಿತಿ ಅಂತ ಇರುತ್ತೆ ಇದು ಯಾಕೊ ಅತಿಯಾಯ್ತು. ಇನ್ನೂ ಇವರೊಂದಿಗೆ ಸಂಪರ್ಕದಲ್ಲಿದ್ದಾಳಲ್ಲ. ಸ್ನಾನ ಮುಗಿಸಿ ಹೊರಗೆ ಬರಲಿ ಇಂದು ಒಂದು ತೀರ್ಮಾನ ಆಗಲೇ ಬೇಕು ಒಂದು ಅವಳೊ ಇಲ್ಲ ನಾನೋ. ಮತ್ತೆ ಮುಂದುವರೆಸಿದಳು...
ನಿಮ್ಮವಳಿಗೆ ಮೊದಲು ಉಡುಗೊರೆ ಅಂತ ರೇಶಿಮೆ ಸೀರೆ ತರಲು ನನ್ನ ಕರೆದುಕೊಂಡು ಹೋಗಿದ್ದಿರಲ್ಲ, ನಿಮ್ಮ ಎದೆಗಾತು ಕೂತುಕೊಂಡು ಸೀರೆ ನಾನೂ ನೋಡಿದ್ದೆ, ನನಗೆ ಬೇಜರಾಗದಿರಲಿ ಅಂತ ನನಗೂ ಒಂದು ಪೋಷಾಕು ಕೊಡಿಸಿದ್ದಿರಿ ನೆನೆಪಿದೆಯಾ, ಅದನ್ನೇ ನಾನೀಗಲೂ ಪ್ರೀತಿಯಿಂದ ಹಾಕಿಕೊಳ್ಳೊದು, ಆ ಜಾಕೆಟ್ಟಿನಲ್ಲಿ ನಾ ಹುದುಗಿಕೊಂಡರೆ, ನಿಮ್ಮ ಅಪ್ಪುಗೆಯಷ್ಟೇ ಬಿಸಿ... ಶ್! ಯಾರಿಗಾದ್ರೂ ಗೊತ್ತಾದೀತು. ನಿಮ್ಮಾಕೆಗೆ ಗೊತ್ತಾದರೆ ಅಷ್ಟೇ ನನ್ನ ಕಥೆ ಮುಗೀತು.
ಕಥೆ ಮುಗೀತಾ, ನೀ ನನ್ನ ಕೈಗೆ ಸಿಕ್ಕು ನೋಡು, ಹರಿಕಥೆ ಹರಿಕಥೆ ಹೇಳಿಸಿಬಿಡ್ತೀನಿ ನಿನ್ನ ಕೈಲಿ, ನನ್ನ ಗಂಡಾನೆ ಬೇಕಿತ್ತ ನಿನಗೆ, ಆಹಾಹ ಜಾಕೆಟ್ಟು ಕೊಡಿಸಿದ್ರಂತೆ ಇವಳು ಅದನ್ನೇ ಹಾಕೊಳ್ಳೊದಂತೆ!, ನಂಗೆ ಅಷ್ಟೊಳ್ಳೇ ಸೀರೆ ತಂದಾಗಲೇ ಅನುಮಾನ ಬಂದಿತ್ತು, ಇವರ ಸೆಲೆಕ್ಷನ ಏನ್ ಇಷ್ಟು ಚೆನ್ನಾಗಿದೆ ಅಂತ, ತರಕಾರಿ ತುಗೊಂಬಾ ಅಂದ್ರೇ ನಾಲ್ಕು ಕೊಳೆತ ಟೋಮ್ಯಾಟೊ ತಂದಿರ್ತಾರೆ, ಇವರಿಗೆಲ್ಲಿ ತಿಳೀಬೇಕು ಸೆಲೆಕ್ಷನ ಮಾಡೊದು, ಈ ವಾಣಿನೇ ಸೆಲೆಕ್ಟ ಮಾಡಿರಬೇಕು. ಅಂತ ಬಯ್ಯುತ್ತ ಬೀರುವಿನಿಂದ ಆ ಮೊದಲು ಉಡುಗೊರೆಯ ಸೀರೆ ತೆಗೆದು ಹಾಸಿಗೆ ಮೇಲೆ ಬೀಸಾಕಿದ್ಲು, ಬರಲಿ ಹೊರಗೆ ಮುಖದ ಮೇಲೆ ಬೀಸಾಕ್ತೀನಿ, ಯಾರಿಗೆ ಬೇಕು ಆ ಸೀರೆ ಅಂತನ್ನುತ್ತ. ಬಹುಶ: ಈಗಾಗಲೇ ಹೊರಗೆ ಬರುತ್ತಿದ್ದಂತೆ ನನಗೆ ಯಾವುದರಲ್ಲಿ ನಾಲ್ಕು ಕೊಡಬೇಕು ಅಂತ ಯೋಚಿಸಿಯೂ ಆಗಿರಬೇಕು, ಪೊರಕೆ, ಇಲ್ಲ ಲಟ್ಟಣಗಿ, ಇಲ್ಲ ಕಡಗೋಲು, ಸೌಟು, ಇಲ್ಲ ಕತ್ತರಿಸಿಯೇ ಬಿಡಲು ಚಾಕು!!! ಮಚ್ಚು... ಅಬ್ಬ ದೇವರೇ ನೂರು ವರ್ಷ ಅವಳು ಮುತ್ತೈದೆಯಾಗಿ ಬಾಳಲಪ್ಪ ಅಂತ ಬೇಡಿಕೊಳ್ಳೊದೊಂದೆ ಬಾಕಿ ನನಗೆ(ಅವಳು ಮುತ್ತೈದೆಯಾಗಿರಲು, ನಾನಿರಬೇಕಲ್ಲ ಅದಕ್ಕೇ!!!).
ಏನೇ ಅನ್ನಿ ನಿಮ್ಮಾಕೇ ನೋಡಲು ಬಹಳ ಅಂದವಾಗಿದಾಳೆ, ನನಗಿಂತ ಕೂಡ, ನಾ ಪಿಳಿ ಪಿಳಿ ಕಣ್ಣು ಬಿಡುತ್ತ ನೊಡುತ್ತಿದ್ದರೆ, ನನ್ನೇ ನೋಡುತ್ತಿರಬೇಕು ಅನಿಸತ್ತೆ ಅಂತೀರಿ, ಆದರೆ ನಿಮ್ಮಾಕೆ ಕಣ್ಣಲ್ಲಿರೊ ಪ್ರೀತಿ ನನ್ನಲ್ಲಿ ಎಲ್ಲಿ ಬರಬೇಕು ಬಿಡಿ. ಆದರೂ ನಿಮ್ಮಾಕೆಗಿಂತ ನಾನೇ ನಿಮ್ಮ ಜತೆ ಜಾಸ್ತಿ ಇರೋದು, ನನ್ನ ನೀವು ಮರೆತರೆ, ಇಲ್ಲ ನಾನಿಲ್ಲದಿದ್ರೆ, ನಾನೆಷ್ಟು ಬಾರಿ ಕೂಗಾಡಿರಬಹುದೆಂದೇ ನಿಮ್ಮ ಯೋಚನೆಯಾಗಿರುತ್ತೆ, ನನ್ನ ಬಿಟ್ಟು ನೀವೊಂದು ದಿನಾನೂ ಊಹಿಸಿಕೊಳ್ಳಲ್ಲ, ನಿಮ್ಮಾಕೆ ತವರುಮನೆಗೆ ಹೋದರಂತೂ ನಾನೇ ನಿಮ್ಮ ಜತೆ, ನನ್ನ ಪಕ್ಕ ಕೂರಿಸಿಕೊಂಡು ಯಾವುದೋ ಹಾಡು ಹೇಳು ಅನ್ನುತ್ತೀರಿ, ನಾ ಹಾಡುತ್ತಿದ್ದರೆ ಹಾಗೆ ಎಷ್ಟೋ ಸಾರಿ ನಿದ್ದೆ ಹೋಗಿರುತ್ತೀರಿ, ಮತ್ತೆ ನಾನೇ ಚೀರಿ ಎಬ್ಬಿಸಬೇಕು ನಿಮ್ಮನ್ನ. ಯಾಕೊ ಏನೊ ಇತ್ತೀಚೆಗೆ ನೀವು ನನ್ನ ಮಾತೇ ಕೇಳಲ್ಲ ಅಂತೀರಿ, ಕೆಲವೊಂದು ಸಾರಿ ನಾನೇನು ಮಾಡಬಾರದು ಅಂತ ಸುಮ್ಮನಿರು ಅಂತ ಅಪ್ಪಣೆ ಕೊಟ್ಟಿರುತ್ತೀರಿ. ಕೆಲಸ ಬಹಳ ಆಗಿದೆ ಅಲ್ವಾ. ಅಯ್ಯೊ ಮರೆತೇ ಬಿಟ್ಟಿದ್ದೆ, ಈಗ ಜಾಸ್ತಿ ಬರೆಯಲು ಟೈಮಿಲ್ಲ, ಹೂಂ ಈವತ್ತು ಸೋಮವಾರ ಅಲ್ವಾ, ಒಂಬತ್ತಕ್ಕೇ ಮೀಟಿಂಗ ಇದೆ ಬೇಗ ಹೊಗೋಣ ಬನ್ನಿ, ಕಾಯ್ತಿರ್ತೀನಿ.
ಸುಮ್ನೆ ಆಫೀಸು, ಆಫೀಸು ಕೆಲಸಾ ಅಂತ ಅವಳ ಹಿಂದೆ ಸುತ್ತತಾ ಇದಾರೆ ಅನಸತ್ತೆ, ಅದಕ್ಕೆ ನನ್ನ ಜತೇನೇ ಜಾಸ್ತಿ ಇರೊದು ಅಂತ ಹೇಗೆ ಹೇಳ್ತಾಳೆ ನೋಡು, ನಾನು ತವರು ಮನೆಗೆ ಹೊದ್ರೆ, ಮನೆಗೆ ಬಂದು ಠಿಕಾಣಿ ಹೂಡ್ತಾಳೆ ಅಂದ್ರೆ, ಬಹಳಾನೆ ಮುಂದುವರೆದೀದಾರೆ, ಅಲ್ಲ ನನಗೇನು ಕಮ್ಮಿ ಆಗಿದೇ ಅಂತ, ಅವಳೇ ನಾನು ಬಹಳ ಅಂದವಾಗಿದ್ದೀನಿ ಅಂತಾಳೆ, ಮತ್ಯಾಕೆ ಅವಳು ಬೇಕು ಇವರಿಗೆ, 'ಛೇ ಈ ಗಂಡಸರೇ ಇಷ್ಟೇ, ಮನೇಲಿ ಪಂಚ ಪಕ್ವಾನ್ನ ಮಾಡಿ ಹಾಕಿದರೂ, ಹೊಟೇಲ ಬಿರಿಯಾನಿ ಆಸೆ ಬಿಡಲ್ಲ' ಅಂತ ಅಮ್ಮ ಹೇಳ್ತಾ ಇದ್ದದ್ದು ನಿಜಾನೆ ಇರಬೇಕು ಅಂತ ಬಯ್ಕೊಂಡು. ಅಹಾಹ ಮೀಟಿಂಗ ಅಂತೆ ಮೀಟಿಂಗ, ಆಫೀಸ ಮೀಟಿಂಗ ಅಂತ ನನಗೆ ಹೇಳಿ ಅವಳ ಮೀಟ ಆಗೋಕೆ ಹೋಗ್ತಿದಾರಾ, ಮಾಡ್ತೀನಿ ತಾಳು. ಅಂತ ಹೊರಬಂದ್ಲು, ನಾ ಸ್ನಾನದ ಮನೇಲಿ ಜೋರಾಗಿ ಹಾಡ್ತಾ ಇದ್ದೆ, "ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನೇ, ಭೂಮಿಯೆ ಬಾಯ್ತೆರೆದು..." ಅಷ್ಟರಲ್ಲೇ ಇವಳು ಬಾಯ್ತೆರೆದಳು, "ಭೂಮಿ ಏನು ಬಾಯಿ ತೆರೆಯೋದು, ನಿಮ್ಮ ಬಾಯಿ ತೆರೆಸ್ತೀನಿ ಹೊರಗೆ ಬನ್ರಿ, ನಿನ್ನವನೇ ಅಂತೀರಲ್ಲ, ಯಾರವನು ಅಂತ ಇಂದೇ ತೀರ್ಮಾನ ಆಗ್ಲಿ..." ಅಂತ ಎರಡು ಬಾರಿ ಬಾಗಿಲು ಬಾರಿಸಿದಳು, "ಲೇ ಬಾಗಿಲು ಕಿತ್ತು ಬರುತ್ತೆ ನಿಧಾನ, ಬೆತ್ತಲೆ ಇದೀನಿ ಹಾಗೆ ಬರ್ಲಾ ಹೀ ಹೀ ಹೀ" ಅಂದೆ. "ಇನ್ನೇನು ನಿಧಾನ ಮಾಡೊದು, ಆಗೊದೆಲ್ಲ ಆಗೋಗಿದೆ, ಎಲ್ಲ ನಿಮ್ಮ ಪರದೆ ಕಳಚಿ ಬಿದ್ದು ಬೆತ್ತಲೆನೇ ಆಗಿದೆ, ಹೊರಗೆ ಬನ್ರಿ ಬೇಗ" ಅಂದ್ಲು "ಯಾವ ಪರದೇನಪ್ಪಾ", ಅಂತ ಅತ್ತಿತ್ತ ನೋಡಿ ಇಲ್ಲೇನು ಪರದೆ ಇಲ್ವಲ್ಲ, ಅಂದು ಟವೆಲ್ಲು ಸುತ್ತಿಕೊಂಡು ಹೊರಬಿದ್ದೆ.
ಬುಸುಗುಡುತ್ತ ನಿಂತಿದ್ಲು, "ಏನಾಯ್ತು" ಅಂದೆ "ಆಗೊಕೆ ಇನ್ನೇನಿದೆ" ಅಂದ್ಲು, "ಒಹ್ ಟಿಫಿನ್ನು ರೆಡಿ ಆಗೊಯ್ತಾ" ಅಂದೆ. "ಹಂ ಪಾಪ ನಿಮ್ಗೆ ಮೀಟಿಂಗ್ ಇದೆ ಅಲ್ವಾ, ಬೇಗ ಹೊರಡುಬನ್ನಿ" ಅಂದ್ಲು "ಅಲ್ವೇ, ಲೇಟಾದ್ರೆ ತೊಂದ್ರೆ, ಅಫೀಸು ಮೀಟಿಂಗ ಅಂದ್ರೆ ಸುಮ್ನೇನಾ" ಅಂದೆ. "ನಾನೇನು ಆಫೀಸು ಮೀಟಿಂಗ ಅಲ್ಲ ಅಂದ್ನಾ, ಇನ್ನೇನು ವಾಣಿನಾ ಮೀಟ ಮಾಡೋಕೆ ಹೋಗ್ತಿದೀರ ಅಂದ್ನಾ" ಅಂದ್ಲು "ವಾಟ್!!! ವಾಣೀನಾ, ಯಾರದು ಈ ವಾಣಿ?" ಅಂತ ಆಶ್ಚರ್ಯದಲ್ಲಿ ಕೇಳಿದೆ, "ಅದು ನೀವಲ್ಲ, ನಾನ ಕೇಳಬೇಕಿರೊ ಪ್ರಶ್ನೆ"... ಸ್ವಲ್ಪ ತಲೆ ಕೆರೆದುಕೊಂಡೆ ಒಮ್ಮೆಲೇ ನೆನಪು ಬಂತು "ಅಯ್ಯೊ ಆ ವಾಣಿನಾ" ಅಂದೆ "ಅದೇನು ಅಷ್ಟು ಸಲೀಸಾಗಿ ಹೇಳಿಬಿಟ್ರಿ, ಅಲ್ಲ ಇಷ್ಟೆಲ್ಲ ಹಗರಣ ಇತ್ಕೊಂಡು ಅದ ಹೇಗ್ರೀ ಅಷ್ಟು ಸಲೀಸಾಗಿ ಮಾತಾಡ್ತೀರಿ ನೀವು" ಅಂತ ಬಯ್ಯುತ್ತ ಹೋಗಿ ಸೊಫಾ ಮೇಲೆ ಕುಳಿತವಳು, "ಇಂದು ನಾನೊ ಅವಳೊ ನಿರ್ಧಾರ ಆಗಲೇ ಬೇಕು" ಅಂದ್ಲು, ನನಗಿಬ್ಬರೂ ಬೇಕೆಂದೆ, "ರೀ ಸುಮ್ನೆ ಕೊಪ ತರಿಸಬೇಡಿ" ಅಂದ್ಲು "ಆ ಪತ್ರ ಇನ್ನೊಮ್ಮೆ ಓದು ನಿನಗೇ ಎಲ್ಲ ನಿಜ ಗೊತ್ತಾಗುತ್ತೆ" ಅಂದೆ, "ಮತ್ತೊಮ್ಮೆನಾ ಒಂದೊಂದು ಅಕ್ಷರಾನೂ ಇನ್ನೂ ನನ್ನ ತಲೇಲೆ ಕೊರೆದು ಅಚ್ಚಾಗಿದೆ, ಯಾರ್ರೀ ಈ ವಾಣಿ. ನಿಜ ಹೇಳಿ... ಮೊದಲು ನಿಮ್ಮ ಬ್ಲಾಗ ಓದೊ ಯಾವುದೊ ಹುಡುಗಿ ಇರಬೇಕು ಅನ್ಕೊಂಡೆ, ಆದ್ರೆ ಮುಂದೆ ಓದಿದ್ರೆ... ಯಾರ್ರೀ ಅದು" ಅಂತ ಕೂಗಾಡಿದಳು, "ನೀನು ನೋಡಿದೀಯಾ ಅವಳ್ನ" ಅಂದೆ, "ನೋಡಿದ್ರೆ, ನೋಡಿದ್ದೆ ಏನೀಗ ಅದನ್ನ ಕಟ್ಕೊಂಡು ನನ್ಗೆನಾಗಬೇಕಿದೆ, ನೀವ್ ಬೇಕಿದ್ರೆ ಅವಳ್ನೇ ಕಟ್ಕೊಳ್ಳಿ, ಅದ್ಯಾರು ಹೇಳಿ ಹೋಗಿ" ಭಾವುಕಳಾದಳು, ಇನ್ನು ಹೇಳ್ದಿದ್ರೆ ಅವಳು ಅಳುವುದು ಗ್ಯಾರಂಟಿ, ನಾ ಮಾಡುವ ತರಲೆ ಬಗ್ಗೆ ನನಗೇ ಬೇಜಾರೆನಿಸಿತು. "ಅವಳು ವಾಣಿ, ದೂರವಾಣಿ" ಅಂದೆ.
ಸ್ವಲ್ಪ ಹೊತ್ತು ಮೌನ ಆವರಿಸಿತ್ತು, ಅವಳು ಒಂದೊಂದೇ ಸಾಲು ಯೋಚಿಸುತ್ತಿರಬೇಕು, ಒಮ್ಮೇಲೆ ಶಾಂತ ಸಾಗರದಲ್ಲಿ ಸುನಾಮಿ ಎದ್ದಂತೆ ಪ್ರಶ್ನೆಗಳ ಅಲೆ ಅಪ್ಪಳಿಸಿತು.
"ನಾಲ್ಕು ವರ್ಷದ ಹಿಂದೆ ನಿಮ್ಮ ಭೇಟಿ ಆಯ್ತಾ?",
"ಆವಾಗ್ಲೇ ಅಲ್ವಾ ಮೊಬೈಲು ಕೊಂಡ್ಕೊಂಡಿದ್ದು ನಾನು",
"ನಿಮಗೆ ಗೊತ್ತಿರೊ ಎಲ್ಲರ ಪರಿಚಯ ಅವಳಿಗಿದೆ",
"ನನ್ನ ಕಾಂಟಾಕ್ಟ ಲಿಸ್ಟ್(ಗೊತ್ತಿರೋ ಎಲ್ಲರ ದೂರವಾಣಿ ಸಂಖ್ಯೆ ಪಟ್ಟೀ ಅಲ್ಲೇ ಇಟ್ಟೀರೊದು ಅಲ್ವ)",
"ಮತ್ತೆ ನನ್ನ ಪೊಟೊ?",
"ಅದರ, ಕ್ಯಾಮರಾದಲ್ಲಿ ನಿನ್ನ ಫೋಟೊಗಳನ್ನು ಎಷ್ಟು ತೆಗೆದಿಲ್ಲ, ಅವೆಲ್ಲ ಆ ಮೆಮೊರಿ ಕಾರ್ಡನಲ್ಲೇ ಇರೋದು",
"ನಮ್ಮ ನಿಸ್ಚಿತಾರ್ಥದ ಸುದ್ದಿ ಹೇಳೊವಾಗ ಅವಳಲ್ಲಿ ಇದ್ಲು ಅಂತಿದೆ",
"ಫೋನು ಮಾಡಿ ತಾನೆ ಎಲ್ರಿಗೂ ಹೇಳಿದ್ದು",
"ನಾವು ಮಾತಾಡೊವಾಗ ಅವಳು ಎದೆ ಮೇಲೆ ತಲೆಯಿಟ್ಟೂ ಮಲಗಿದ್ದು ಸುಳ್ಳಾ",
"ಸುಳ್ಳಂತ ನಾನೆಲ್ಲಿ ಅಂದೆ, ನಿನ್ನ ಜತೆ ಕೈಯಲ್ಲಿ ಮೊಬೈಲು ಹಿಡಿದುಕೊಂಡು ಮಾತಾಡಿ ಸಾಕಾಗಿ, ಹಾಗೆ ಒರಗಿ ಕಿವಿಗೆ ಇಯರ ಫೊನು ಹಾಕೊಂಡು, ಮೊಬೈಲು ಎದೆ ಮೇಲೆ ಇಟ್ಕೊಂಡು ಮಾತಾಡ್ತಿದ್ದೆ, ಅದೂ ಘಂಟೆಗಟ್ಲೇ, ಅದಕ್ಕೆ ಬ್ಯಾಟರಿ ಖಾಲಿ ಆಗಿ ಮೊಬೈಲು ಬಿಸಿ ಆಗಿ, 'ಲೋ ಬ್ಯಾಟರಿ' ಅಂತ ಅದು ಬಡಕೊಂಡಾಗಲೇ ಮಾತು ಮುಗಿಯುತ್ತಿತ್ತು ಅಲ್ವಾ, ಅದೇ ತಲೆ ಬಿಸಿ, ಮತ್ತು ಚೀರೋದು",
"ನನಗೆ ಸೀರೆ ತರೊವಾಗ ಅದೇನು ಎದೆಗಾತು ಕೂತಿದ್ದು?",
"ಮೊಬೈಲು, ಅಂಗಿಯ ಮೇಲಿನ ಜೇಬಿನಲ್ಲಿ ಇತ್ತು, ಎದೆಗಾತಂಗೇ ಅಲ್ವಾ, ಇನ್ನು ನಿನಗೆ ಸೀರೆ ತುಗೊಂಡು, ಅದಕ್ಕೊಂದು ಮೊಬೈಲ್ ಕವರ ತುಗೊಂಡು ಬಂದಿದ್ದೆ, ಅದೇ ಕವರ್ ಇನ್ನೂ ಇರೊದು, ಅದನ್ನೇ ಪೋಷಾಕು ಅಂದಿದ್ದು",
"ಅವಳ ಮರೆತರೆ ನಿಮಗ್ಯಾಕೆ ಚಿಂತೆ",
"ಚಿಂತೆ ಅಲ್ದೇ ಏನು ಮನೇಲಿ ಬಿಟ್ಟು ಹೊದರೆ ಎಷ್ಟು ಜನರ ಫೋನು ಬಂದಿತ್ತೊ, ಎಷ್ಟು ಸಾರಿ ರಿಂಗ ಆಗಿ ಕೂಗಿತೊ, ಅನ್ನೊ ಚಿಂತೆ. ಅದಿಲ್ದೇ ಇರೊಕೆ ಆಗತ್ತಾ, ಮೊಬೈಲ್ ಇಲ್ದೇ ಒಂದು ದಿನ ಊಹಿಸಿಕೊ, ನೀನು ಕೇಳೊಕಿನ್ನ ಮುಂಚೇನೆ ಹೇಳ್ತೀನಿ ಕೇಳು, ಅದರ ಪಿಳಿ ಪಿಳಿ ಕಣ್ಣು ಅದರ ಮೇಲಿರೊ ಎಲ್.ಈ.ಡಿ ಇಂಡಿಕೇಟರ, ನೀನು ಇಲ್ಲಾಂದ್ರೆ ಯಾವುದೊ ಹಾಡು ಅದರ ಎಂಪಿತ್ರೀ ಪ್ಲೇಯರನಲ್ಲಿ ಹಾಕೊಂಡು ಪಕ್ಕಕ್ಕಿಟ್ಟು ನಿದ್ದೆಗೆ ಜಾರೋದು, ಅದರ ರಿಂಮೈಂಡರ್ ಅಲಾರ್ಮ್ ಚೀರಿದಾಗಲೇ ಏಳೋದು. ಅದಕ್ಕೆ ಸುಮ್ನಿರು ಅಂತ ಅಪ್ಪಣೆ ಅಂದ್ರೆ, ಸೈಲೆಂಟ ಮೋಡ್ ತಿಳೀತಾ" ಅಂದೆ. ಅವಳೂ ಸೈಲೆಂಟ(ಮೌನ) ಆದ್ಲು.
ಒಳಗೆ ಹೋದೆ ಬಟ್ಟೆ ಹಾಕೊಂಡು ಬರಲು, ಹಾಸಿಗೆ ಮೇಲೆ ನಾ ಕೊಟ್ಟ ಮೊದಲ ಉಡುಗೊರೆ ಸೀರೆ ಬಿದ್ದಿತ್ತು, ಬೀರು ಕಡೆಗೆ ಹೋಗಬೇಕೆನ್ನುವಷ್ಟರಲ್ಲಿ, ಅವಳೇ ಹಿಂದ ಹಿಂದೇ ಬಂದು, ನನ್ನ ಬಟ್ಟೆ ತೆಗೆದು ಕೊಟ್ಲು, ಹಾಸಿಗೆ ಮೇಲೆ ಬಿದ್ದಿದ್ದ ಸೀರೆ ಮಡಿಕೆ ಹಾಕಿ, ಒಂದು ಸಾರಿ ಹಾಗೆ ನೀವಿ ಸವರಿ ಬೀರುನಲ್ಲಿಟ್ಟು ನಿಟ್ಟುಸಿರು ಬಿಟ್ಟಳು. ಹೆಚ್ಚಿಗೆ ಮಾತಿಗೆ ಅವಕಾಶ ಇರ್ಲಿಲ್ಲ, ಟಿಫನ್ನು ತಿಂದು ಆಫೀಸಿಗೆ ಹೊರಟೆ.
ಯೊಚಿಸಿ ನೋಡಿ ನಾವೆಲ್ಲ ಹೀಗೆ ಎಷ್ಟು ಸಾರಿ ದುಡುಕಿ ಏನೊ ಒಂದು ನಿರ್ಧಾರಕ್ಕೆ ಬಂದಿರಲ್ಲ, ಯಾವುದೊ ಒಂದು ಪತ್ರ ಓದಿ ಕೆಂಡ ಕಾರಿರಲ್ಲ, ಯಾರದೋ ಒಂದು ಗುಸುಗುಸು ಮಾತು ಕೇಳಿ ಅವರ ಬಗ್ಗೆ ಒಂದು ಭಾವನೆ ಬೆಳೆಸಿಕೊಂಡಿರಲ್ಲ, ಹತ್ತಾರು ವರ್ಷಗಳ ಗೆಳೆತನಗಳು, ತಪ್ಪಾಗಿ ಅರ್ಥೈಸಿಕೊಂಡ ಒಂದೇ ಒಂದು ಎಸ್.ಎಂ,ಎಸ್ ನಿಂದ ಹಾಳಾಗಿರಲ್ಲ. ಹಿರಿಯರು ಹೇಳಿದ್ದು ಅದಕ್ಕೇ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತ, ಪತಿ ಅಥವಾ ಪತ್ನಿಯ ಮೊಬೈಲಿನಲ್ಲಿ ಕಂಡ ಯಾವುದೊ ಒಂದು ಸಂದೇಶ, ಚಾಟಿನಲ್ಲಿ, ಈ-ಮೈಲ್ ನಲ್ಲಿ ಕಂಡ ಒಂದು ಸಾಲು ಎಷ್ಟೊಂದು ಸಮರಗಳಿಗೆ ಕಾರಣವಾಗಿ ಸಂಬಂಧಗಳಿಗೆ ಹುಳಿ ಹಿಂಡಿಲ್ಲ. ಯಾವುದೇ ಒಂದು ಸಂಬಂಧ ನಿಂತಿರುವುದು ನಂಬಿಕೆಯ ಮೇಲೆ ಅದೇ ಇಲ್ಲದಿದ್ರೆ ಅದನ್ನೇನು ಅಂತ ಕರೆಯೋದು. ನಂಬಿ ಮೊಸಹೋದವರು ಇಲ್ಲ ಅಂತ ನಾ ಹೇಳುತ್ತಿಲ್ಲ, ಆದರೆ ದುಡುಕಿ ಪಶ್ಚಾತಾಪ ಪಟ್ಟವರೂ ಇದ್ದಾರೆ, ಅವರಿಗೆ ಮಾತ್ರ ಇದು ಅನ್ವಯ
ಮೀಟಿಂಗ ಮುಗಿಸಿ ಬರೋ ಹೊತ್ತಿಗೆ, ನಾಲ್ಕು ಮಿಸ ಕಾಲ ಬಂದಿದ್ದವು, ನನ್ನಾಕೆಯದೆ ,ಇನ್ನಾರದು. ವಾಣಿ ಎಲ್ಲ ನನ್ನಿಂದಾಗಿ ನಿಮ್ಮಿಬ್ಬರಿಗೂ ಹೀಗೆ ಆಯ್ತು ಅಂತ ಬೇಜಾರಾದವರಂತೆ ಮುಖ ಮಾಡಿ ಕೂತಿತ್ತು. ನಾನೇ ಫೋನು ಮಾಡಿದೆ, "ಮೀಟಿಂಗನಲ್ಲಿ ಇದ್ದೆ ಏನಾಯ್ತು" ಅಂದೆ "ಏನಿಲ್ಲ ವಾಣಿ ಜತೆ ಮಾತಾಡೊಣ ಅಂತ ಫೋನು ಮಾಡಿದ್ದೆ" ಅಂದ್ಲು, ನಕ್ಕೆ. "ಅಬ್ಬಾ, ನಗ್ತಿದ್ದೀರಾ ಬೇಜಾರಗಿಲ್ವಾ ನಿಮ್ಗೆ" ಅಂದ್ಲು. "ತಪ್ಪು ನಂದೆ, ಬ್ಲಾಗಿಗೆ ಹಾಕಲು ಬರೆದ ಲೇಖನ ಮೇಜಿನ ಮೇಲೆ ಹಾಗೆ ಇಡಲೇಬಾರದಿತ್ತು, ನೀನಾಗಿದ್ದಕ್ಕೆ ಸರಿ ಹೊಯ್ತು ಬೇರೆ ಯಾರಾದ್ರೂ ಆಗಿದ್ರೆ ನನ್ನ ಗತಿ ಅಧೊಗತಿ ಆಗಿರೋದು" ಅಂದೆ "ಹಿಂದೆ ಮುಂದೆ ಯೋಚಿಸದೆ ನಿಮ್ಮ ಬಗ್ಗೆ ತಪ್ಪಾಗಿ ತಿಳಿದ್ನಲ್ಲ ನಾನು... ಅದು ನನ್ನ ತಪ್ಪು" ಅಂತ ಅವಳಂದ್ಲು. "ಇರಲಿ ಬಿಡು, ವಾಣಿಗೆ ಬೇಜಾರಾಗಿದೆ, ಒಂದು ಮುದ್ದು ಬೇಕಂತೆ" ಅಂದೆ. "ಒಂದೇನು ಸಾವಿರ ಕೊಟ್ಕೊಳ್ಳಿ" ಅಂದ್ಲು. "ನೀನು ಕೊಡಲ್ವಾ" ಅಂದೆ "ಮನೆಗೆ ಬೇಗ ಬಂದ್ರೆ ಸಿಗುತ್ತಪ್ಪಾ" ಅಂದ್ಲು. ಫೋನಿಡುವಾಗ ಸ್ಯಾಂಪಲ್ಲು ಅಂತ ಒಂದು ಕೊಟ್ಲು ಕೂಡ. ಮೊನ್ನೆ ಅಮ್ಮ ಬಂದಾಗ ಮುಂಜಾನೆ "ಲೇ ವಾಣಿ ಎಲ್ಲಿದಾಳೆ" ಅಂತ ಇವಳ ಕೇಳುತ್ತಿದ್ದರೆ, "ರೀ ಅಲ್ಲೇ ಬೆಡರೂಮಿನಲ್ಲಿ ಮಲಗಿರಬೇಕು ನೋಡಿ" ಅಂತ ಅವಳು ಉತ್ತರಿಸುತ್ತಿದ್ಲು, ಅಮ್ಮ ಹೌಹಾರಿ "ಏಯ್, ನನ್ನ ಮುದ್ದಿನ ಸೊಸೆಗೆ ಸವತಿಗೆ ಏನಾದ್ರೂ ತಂದೆಯೇನೊ" ಅಂತ ಕೇಳುತ್ತ ಒಳ ಬಂದ್ಲು, ಈಗ ಬೇಸ್ತು ಬೀಳುವ ಸರದಿ ಅಮ್ಮನದಾಗಿತ್ತು... ನಾವಿಬ್ಬರೂ ನಗುತ್ತಿದ್ರೆ, ಅಮ್ಮ ಕೇಳುತ್ತಿದ್ಲು "ಯಾರದು ಈ ವಾಣಿ?"
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ನನ್ನ ಬ್ಲಾಗ ಓದುಗರು ಯಾರಾದ್ರೂ ವಾಣಿ ಅಂತ ಇದ್ರೆ ದಯವಿಟ್ಟು ಕ್ಷಮಿಸಿ, ಈ ಪಾತ್ರಕ್ಕೆ ಇದಕ್ಕಿಂತ ಚೆಂದವಾದ ಹೆಸ್ರು ನನಗೆ ಸಿಕ್ಕಲಿಲ್ಲ, ಹಾಗೆ ಈ ಪಾತ್ರ ಕಾಲ್ಪನಿಕ, ಹಾಗಾಗಿ ಬೇಜಾರಾಗಬೇಕಿಲ್ಲ. ನಿಜ ಜೀವನದಲ್ಲಿ ಹೀಗೆ ಇಂಥ ಘಟನೆಗಳು ಇಷ್ಟು ಧೀರ್ಘಕ್ಕೆ ಹೋಗುತ್ತವೊ ಇಲ್ವೊ ಗೊತ್ತಿಲ್ಲ, ಆದರೆ ದುಡುಕಿ ಪಶ್ಚಾತ್ತಾಪ ಪಟ್ಟವರಿಗೆ ಒಂದು ಒಳ್ಳೆ ಮೆಸೇಜು ಕೊಡಲು ನನಗೆ ಇದಕ್ಕಿಂತ ಒಳ್ಳೆ ಕಥೆ ಹೆಣೆಯಲಾಗಲಿಲ್ಲ. ಬರೆದದ್ದೆಲ್ಲ ಸಂತೊಷ ಮತ್ತು ಸಂದೇಶಕ್ಕಾಗಿ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/vaani.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, June 7, 2009
ಥಟ ಅಂತ ಹೇಳ್ಬೇಡಿ ಸುಮ್ನೇ ಕೇಳಿ.
ಗೋಡೆಗೆ ಆತು ಕೂತ್ಕೊಂಡು, ಕಾಲು ಅಷ್ಟುದ್ದ ಚಾಚಿಕೊಂಡು, ತಲೆ ಕೆರಕೊಂಡು ಉದುರುತ್ತಿದ್ದ ಕೂದಲುಗಳನ್ನು ಒಂದೆಡೆ ರಾಶಿ ಹಾಕುತ್ತ, ಯಾವದೋ ಹಳೆಯ ಸಾಪ್ತಾಹಿಕ ವಿಜಯದ ಊರ್ವಶಿ ಅಂಕಣ ಒದ್ತಾ ಕೂತಿದ್ದೆ, ಇವಳು ಬಂದು
"ಎನ್ ಮಾಡ್ತಾ ಇದೀರಾ" ಅಂದ್ಲು
"ಊರ್ವಶಿ ಎನಂತಾಳೇ ನೋಡ್ತಿದೀನಿ".
"ಅಲ್ಲಾ, ಅಲ್ಲೂ ಹುಡುಗೀರ ಕಾಲ್ಂ ಓದೋದಾ"
"ಅದು ಹುಡುಗೀನೆ ಬರೆದಿರೊದು ಅಂತ ಹೇಗೆ ಹೇಳ್ತೀಯಾ, ಹುಡುಗಾನೆ ಊರ್ವಶಿ ಅಂತ ಹೆಸರಿಟ್ಟುಕೊಂಡು ಬರೆದಿರಬಹುದು, ಇಷ್ಟಕ್ಕೂ ಅದೇನು ಮಹಿಳೆಯರ ಕಾಲಂ ಅಲ್ವಲ್ಲ, ಟೆಕೀಟೀಸಿ ಅಂತ ಎಲ್ರ ಕಾಲೆಳೆಯೊ ಹಾಸ್ಯ ತುಣುಕುಗಳು" ಅಂದೆ.
"ಎನ್ ಕೇಳಿದ್ರೂ ಥಟ ಅಂತ ರೆಡಿಮೇಡ ಆನ್ಸರ ಇರತ್ತೆ ನಿಮ್ಮ ಹತ್ರ"
ಹಾಗೇ, ಬಯ್ದವಳು, ನನ್ನ ಕಾಲುಗಳನ್ನೇ ತಲೆದಿಂಬಿನಂತೆ ಮಾಡಿಕೊಂಡು, ಅಲ್ಲೇ ಒರಗಿಕೊಂಡು ಟೀವೀ ಆನ್ ಮಾಡಿಕೊಂಡು ನೋಡತೊಡಗಿದ್ಲು. ನನ್ನ ಪಾಡಿಗೆ ನಾ ಓದತೊಡಗಿದೆ. ಟೀವೀ ಅಂದ್ರೆ ಒಂದೇ ಚಾನೆಲ್ಲು ಏನಿಲ್ಲವಲ್ಲ, ಅದಕ್ಕೆ ಇಲ್ಲಿ ಜಾಹೀರಾತು ಬಂದ್ರೆ ಅಲ್ಲಿ, ಅಲ್ಲಿ ಬಂದ್ರೆ ಮತ್ತೊಂದಲ್ಲಿಗೆ, ಚಾನೆಲ್ಲು ಬದಲಾಗುತ್ತಿತ್ತು, ಅವಳ ಕೈಯಲ್ಲೇ ರಿಮೋಟು ಅರ್ಧ ಸವೆದಿದ್ದು, ಅಕ್ಷರಗಳೆಲ್ಲ ಅಳಿಸಿಹೋಗಿ "ಲೇ ಮ್ಯೂಟ್ ಬಟನ್ನು ಯಾವುದೇ" ಅಂತ ಕೇಳಿ, ಅವಳು ಹೇಳಿ, ನಾ ಮ್ಯೂಟ್ ಮಾಡೊ ಹೊತ್ತಿಗೆ ಬಂದ ಮೊಬೈಲ್ ಕಾಲ್ ಹೋಗಿರುತ್ತಿತ್ತು. ಆದರೆ ಇಂದೇಕೋ ಅದೇ ಒಂದೇ ಚಾನಲ್ಲಿನಲ್ಲಿದೆ, ಜಾಹೀರಾತು ಬಂದಾಗಲೂ ಬೇರೆ ಬದಲಾಯಿಸುತ್ತಿಲ್ಲ ಅವಳು. ಅವಳ ಗಮನ ಬೇರೆಲ್ಲೊ ಇರಬೇಕು ಅನಿಸಿತು. ಪೇಪರು ಆಕಡೆ ಬೀಸಾಕಿ. "ಎನ್ ಯೋಚಿಸ್ತಿದೀಯಾ" ಅಂದೆ. "ಆಂ" ಅಂತ ಅಂದವಳು ಯೋಚನೆಗಳಿಂದ ಹೊರಗೆ ಬಂದಳಂತೆ ಕಾಣುತ್ತೆ. "ಏನಿಲ್ಲ" ಅಂದ್ಲು. "ಹೇಳು, ನಂಗೊತ್ತು ಏನೊ ಯೋಚಿಸ್ತಿದೀಯಾ" ಅಂದೆ, "ಹೇಳಿದ್ರೆ ಅದಕ್ಕೂ ಒಂದು ಥಟ ಅಂತ ಉತ್ತರ ಹೇಳಿ ಬಾಯಿ ಮುಚ್ಚಿಸಿಬಿಡ್ತೀರ" ಅಂತ ಆರೋಪಿಸಿದಳು. ನಾ ಮತ್ತೆ ಮಾತಾಡಲಿಲ್ಲ.
ಅವಳ ಯೋಚನೆಗಳೆಲ್ಲಾ, ನನ್ನ ತಲೆ ತುಂಬಾ ತುಂಬಿ ಬಿಟ್ಟಿತ್ತು, ನಿಜವಾಗ್ಲೂ ಹಾಗೆ ಮಾಡ್ತೀನ, ನನ್ನ ಹತ್ರ ಅಷ್ಟೊಂದು ಉತ್ತರಗಳಿವೆಯಾ, ಮತ್ತೆ ಪ್ರಶ್ನೆ ಕೇಳಿದ್ರೆ ಉತ್ತರ, ತೊಂದ್ರೆ ಹೇಳಿದಮೇಲೆ ಸಲಹೆ ಕೊಡೋದು ತಪ್ಪಾ! ಯೋಚಿಸ್ತಾನೇ ಇದ್ದೆ. ಅಂಗಾತ ಮಲಗಿ ಟೀವೀ ನೊಡುತ್ತಿದ್ದವಳು, ಬೋರಲಾಗಿ ಮೇಲೆ ಸರಿದು, ಹೊಟ್ಟೆ ಸುತ್ತ ಕೈ ಸುತ್ತಿ ಅವುಚಿಕೊಂಡು ಅಪ್ಪಿ ಮಲಗಿದ್ಲು, ಅವಳ ಜಡೆ ಕೈಯಲ್ಲಿ ತೆಗೆದುಕೊಂಡು ಅತ್ತಿತ್ತ ಬೀಸುತ್ತ ಇನ್ನೂ ಯೋಚನೆಗಳಲ್ಲೇ ಕುಳಿತೆ. ಬಹಳ ಹೊತ್ತು ಮಾತಿಲ್ಲದ್ದು ನೋಡಿ, "ರೀ ನಾ ಹಾಗಂದದ್ದಕ್ಕೆ ಬೇಜಾರಾಯ್ತಾ" ಅಂದ್ಲು, ಇಲ್ಲ ಅನ್ನುವಂತೆ ತಲೆ ಅಲ್ಲಾಡಿಸಿದೆ, ಬೊರಲಾಗಿ, ಮುಖ ನನ್ನ ಮಡಿಲಲ್ಲಿ ಮುಚ್ಚಿಕೊಂಡು ಮಲಗಿದ್ದವಳಿಗೆ ಕಾಣಿಸಿರಲಿಕ್ಕಿಲ್ಲ, ತಲೆ ಮೇಲೆತ್ತಿ ಮತ್ತೆ ಕೇಳಿದ್ಲು, ಮತ್ತೆ ತಲೆ ಆಲ್ಲಾಡಿಸಿದೆ, "ರೀ ಬಾಯಿ ಬಿಡಿ, ನಾನೇನು ಮಾತಾಡಲೇಬೇಡಿ ಅಂದ್ನಾ" ಅಂತದದ್ದಕ್ಕೆ ತಡವರಿಸಿ "ಇಲ್ಲ" ಅಂದೆ.
"ಮತ್ತೆ ಎನೊ ಯೋಚನೆ ಮಾಡ್ತಾ ಇದೀರ"
"ಇಲ್ಲ ಹಾಗೇನಿಲ್ಲ, ಈ ರಿಮೋಟ್ ನಲ್ಲಿ ಆಫ್ ಮಾಡೊ ಬಟನ್ನು ಯಾವ್ದು"
"ಅಷ್ಟೂ ಗೊತ್ತಿಲ್ವ, ಕೆಂಪು ಬಟನ್ನು" ಅಂದ್ಲು.
ಟೀವಿ ಆಫ್ ಮಾಡಿದೆ, ಗೊತ್ತಿದ್ದೂ ಗೊತ್ತಿದ್ದೂ ಆಫ್ ಬಟನ್ನು ಯಾವುದು ಅಂತ ಕೇಳಿದ್ದೆ, ಅವಳು ಥಟ ಅಂತ ಉತ್ತರ ಕೊಡ್ತಳಾ ಇಲ್ವಾ ಅಂತ ನೋಡೋಕೆ. "ನಿಜವಾಗ್ಲೂ ಹಾಗೆ ನಾನು ಯಾವಾಗ್ಲೂ ಮಾಡ್ತೀನಾ, ಪ್ರಶ್ನೆ ಕೇಳಿದ್ರೆ ಉತ್ತರ ಹೇಳೊದು ತಪ್ಪಾ, ಈಗ ನಾನು ಬಟನ್ನು ಯಾವ್ದು ಅಂತ ಕೇಳಿದ್ರೆ ನೀನು ಹೇಳಿದೆ" ಅಂತ ಅವಳನ್ನೇ ಕೇಳಿದೆ. "ರೀ ಅದೆಲ್ಲ ಏನಿಲ್ಲ ಬಿಟ್ ಹಾಕಿ ಸುಮ್ನೇ ಹೇಳಿದೆ" ಅಂದ್ಲು, "ಇಲ್ಲ, ನೀನೇನೊ ಮುಚ್ಚಿಡ್ತಾ ಇದೀಯಾ ಹೇಳು" ಅಂತ ಮತ್ತೆ ಕೆದಕಿದೆ, "ಸುಮ್ನೇ ಅಂದನಲ್ಲ" ಅಂತ ಮತ್ತೆ ಸಿಡುಕಿದ್ಲು, ನಾನೂ ಸುಮ್ಮನಾದೆ, ಅವಳ ಸರಿಸಿ ಎದ್ದು ಹೋಗಲು ನೋಡಿದೆ, ಬಿಡಲಿಲ್ಲ, ಮುಖ ಸಿಂಡರಿಸಿಕೊಂಡು ಸುಮ್ನೆ ಕೂತೆ, ಅವಳು ನನ್ನ ನೋಡಿದ್ರೂ, ಮತ್ತೆ ಪೇಪರು ಎತ್ತಿಕೊಂಡು ಕೂತೆ, ಈಗ ಹೇಳದಿದ್ರೆ ನಾನಿನ್ನು ಮಾತಾಡಲಿಕ್ಕಿಲ್ಲ ಅನಿಸಿರಬೇಕು ಅವಳಿಗೆ. "ನೀವ ಬೇಜಾರ ಮಾಡ್ಕೊಳ್ಳಲ್ಲ ಅಂದ್ರೆ ಹೇಳ್ತೀನಿ" ಅಂತಂದ್ಲು, ಪೇಪರು ಬೀಸಾಕಿ ಮೈಯೆಲ್ಲ ಕಿವಿಯಾಗಿಸಿಕೊಂಡು ಕೂತೆ".
"ಯಾವಾಗ್ಲೂ ಏನಾದ್ರೂ ಕೇಳಿದ್ರೆ, ಎಲ್ಲದಕ್ಕೂ ಉತ್ತರ ಹೇಳ್ಬೇಕು ಅಂತ ಇರಲ್ಲಾರೀ, ಕೆಲವೊಮ್ಮೆ ಬರೀ ಮನಸಿಲ್ಲಿರೋದನ್ನ ಹೇಳ್ಬೇಕು ಅಂತಿರತ್ತೆ, ಯಾರೊ ನಮ್ಮ ನೋವು ಕೇಳಲಿ ಅಂತ ಇರತ್ತೆ, ನಿಮ್ಮ ರೆಡಿಮೇಡ ಸೊಲುಶನ್ ಗಳು ಬೇಕಿರಲ್ಲ, ಸುಮ್ನೆ ಮಾತು ಕೇಳೋ ಕಿವಿ ಬೇಕಿರತ್ತೆ" ಅಂದ್ಲು, ಯಾಕೊ ತಿಳೀದವರ ಹಾಗೆ ಮುಖ ಮಾಡಿದ್ದೆ, ಮತ್ತೆ ಹೇಳತೊಡಗಿದ್ಲು "ತಿಳೀಲಿಲ್ವಾ, ಹೇಳ್ತೀನಿ ಕೇಳಿ ಈಗ ನನಗೆ ತಲೆ ನೋವಿದೆ ಅಂತ ಇಟ್ಕೊಳ್ಳಿ, ನಾನು ನಿಮ್ಮ ಹತ್ರ ಬಂದು ತಲೆ ನೋವಿದೆರೀ ಅಂದ್ರೆ, ಮಾತ್ರೆ ತುಗೊ ಎಲ್ಲ ಸರಿಯಾಗತ್ತೆ ಅಂತೀರಿ ಥಟ ಅಂತ!, ಆದ್ರೆ ಅದು ನಂಗೂ ಗೊತ್ತು, ಅದನ್ನ ನಿಮ್ಮಿಂದ ನಾನು ಕೇಳೊಕೆ ಅಂತ, ನಿಮ್ಮನ್ನ ಕೇಳಿಲ್ಲ, ನಿಮ್ಮ ಹತ್ರ ನನ್ನ ನೋವು ಹೇಳ್ಕೊಬೇಕು ಅಂತ ಆಸೆ ಇರತ್ತೆ, ಯಾರಾದ್ರೂ ನನ್ನ ನೋವು ಕೇಳಲಿ ಅಂತ ಅಷ್ಟೆ, ಅದನ್ನ ಕೇಳದೆ, ಸುಮ್ನೇ ಮಾತ್ರೆ ತುಗೊ ಅಂದ್ರೆ" ಅಂದ್ಲು "ಹಂ... ಮತ್ತೆ ಎನ್ ಮಾಡ್ಬೇಕು ಅಂತೀಯ" ಅಂದೆ, "ಏನೂ ಬೇಡ, ಸುಮ್ನೆ ಯಾಕೆ ಏನಾಯ್ತು, ಬಹಳ ನೋವಿದೆಯಾ, ಅಂತ ನಾಲ್ಕು ಸಾಂತ್ವನದ ಮಾತು ಸಾಕು, ಅದನ್ನೇ ಎದುರಿನ ವ್ಯಕ್ತಿ ನಿರೀಕ್ಷಿಸೋದು, ಇದೇ ಈಗ ನೋಡಿ, ತಲೆ ಕೂದಲು ಉದುರಿ ಬೀಳ್ತಾ ಇದೆ ನಿಮಗೆ, ಇನ್ನೊಂದಿಷ್ಟು ದಿನದಲ್ಲಿ ಬೋಡು ತಲೆ ಬಾಣಲಿ ಆಗೋದು ಗ್ಯಾರಂಟಿ, ಅದಕ್ಕೆ ನೀವು ಬಂದು ನನ್ನ ಹತ್ರ, ಕೇಳಿದ್ರೆ, ತಲೆಗೆ ಏಣ್ಣೆ ಸ್ನಾನ, ಶಾಂಪೂ ಹಾಕಿ ತೊಳೀರೀ ಹೊಟ್ಟು ಆಗಿರಬೇಕು, ಟೆನ್ಷನ ಸ್ವಲ್ಪ ಕಡಿಮೆ ಮಾಡ್ಕೋಳ್ಳಿ ಅಂತ ಉಪದೇಶ್ ಕೊಟ್ರೆ!?. ಅದು ನಿಮಗೂ ಗೊತ್ತಿದೆ, ಅದನ್ನ ನೀವು ಮಾಡ್ತಾ ಇದೀರಿ, ಅದೇ ಬದಲಿಗೆ, ರೀ ಯಾವಾಗಿಂದ ಹೀಗೆ ಆಗ್ತಿದೆ? ಅಂತ ವಾಪಸ್ಸು ಕೇಳಿ, ಕೂದಲೇನು ಬಿಡ್ರೀ, ನೀವು ಹೇಗಿದ್ರೂ ಚೆನ್ನಾಗಿ ಕಾಣ್ತೀರಿ ಅಂತ, ಸ್ವಲ್ಪ ಉಬ್ಬಿಸಿ, ಆ ಮೇಲೆ, ಏನೇನು ಉಪಚಾರ ಪ್ರಯತ್ನ ಮಾಡೀದೀರಾ ಅದಕ್ಕೆ, ಅಂತ ಕೇಳಿ ಆಮೇಲೆ ನನ್ನ ಸಲಹೆ ಅಂತ ಕೊಟ್ರೆ ಅದು ಚೆನ್ನಾಗಿರತ್ತಲ್ವಾ" ಅಂದ್ಲು ಭಲೇ ಕಿಲಾಡಿ ಇವಳು, ಅಲ್ಲಾ ಎನೇನು ತಿಳೀದುಕೊಂಡೀದಾಳೆ ಅಂತೀನಿ, ನನಗೆ ನನ್ನವಳ ಬಗ್ಗೆ ವಿಚಿತ್ರ ಹೆಮ್ಮೆಯುಂಟಾಯಿತು. "ಸೂಪರ್, ಅಲ್ಲ ಇದೆಲ್ಲ ಹೇಗೇ ತಿಳೀತು ನಿಂಗೆ" ಅಂದೆ "ನಿಮ್ಮ್ ಥಟ ಅಂತ ಉತ್ತರ ಕೇಳಿ, ಕೇಳಿ ಆದ, ಅನುಭವ" ಅಂದ್ಲು. "ಅಂದಹಾಗೆ ನಾನೇನು, ಬಾಣಲಿ ಆಗಲ್ಲ" ಅಂದೆ "ಆದ್ರೂ ನೀವು ನಂಗೆ ಚೆನ್ನಾಗೇ ಕಾಣ್ತೀರಾ" ಅಂದ್ಲು, ಮುಗುಳ್ನಕ್ಕೆ.
"ಮೊದಲೇ ಹೇಳೊದು ತಾನೆ" ಅಂದೆ "ಹೇಳ್ಬೇಕು ಅನ್ಕೊಂಡೆ ಬಹಳ ಸಾರಿ, ಅಂದು ಮದುವೆಲಾದದ್ದು ನೆನಪಿದೆಯಾ, ನಾನು ನನ್ನ ಗೆಳತಿ ಮಾತಾಡ್ತಾ ನಿಂತಿದ್ವಿ, ಅವಳು ನಂಗೆ ಶೀತ ಆಗಿದೆ ಕಣೇ ಅಂತ ಹೇಳ್ತಿದ್ದಂಗೆ, ಮಾತ್ರೆ ತುಗೊಳ್ಳಿ ಡಿ-ಕೊಲ್ಡ ಚೆನ್ನಾಗಿರತ್ತೆ ಅಂತ ಥಟ ಅಂತ ಉತ್ತರದೊಂದಿಗೆ ನಡುವೆ ಬಾಯಿ ಹಾಕಿದ್ರಿ, ಅವಳು ಕೊಟ್ಟ ಉತ್ತರ ನೆನಪಿದೆ ತಾನೆ" ಅಂದ್ಲು "ಹೂಂ ಅದಹೇಗೆ ಮರೆಯೋಕಾಗತ್ತೆ 'ನಾನು ಡಾಕ್ಟರು ನಂಗೊತ್ತಿದೆ' ಅಂತಂದಿದ್ಲು, ಡಾಕ್ಟರಿಗೆ ಮಾತ್ರೆ ಹೇಳಿದ್ದೆ ನಾ" ಅಂತ ನಕ್ಕೆ..."ನಂಗೆಷ್ಟು ಮುಜುಗರ ಆಗಿತ್ತು ಗೊತ್ತಾ, ಅಂದೇ ಹೇಳಬೇಕೆಂದಿದ್ದೆ, ಅದ್ರೆ ಹೇಳ್ಲಿಲ್ಲ" ಅಂದ್ಲು. "ಎಲ್ಲಿದಾಳೆ ಅವಳು ಈಗ" ಅಂದೆ, "ಯಾಕೆ ಮಾತ್ರೆ ತುಗೊಂಡ್ಲಾ ಇಲ್ಲಾ, ಅಂತ ಕೇಳ್ಬೇಕಿತ್ತಾ" ಅಂತ ರೇಗಿದಳು.
"ಮೊನ್ನೆ ತಾನೆ ಅತ್ತೆ ಮಾವ ಬಂದಿದ್ರಲ್ಲ ಅದೇ ನಿಮಗೆ ಆಕ್ಸಿಡೆಂಟ್ ಆದಾಗ, ಊರಿಂದ ಇಲ್ಲೀವರೆಗೆ ಕೊನೇ ಸೀಟ್ನಲ್ಲಿ ಕೂತು ಮೈಕೈ ನೋವು ಅಂತಿದ್ರೆ, ನೀವು 'ಸ್ಲೀಪರನಲ್ಲಿ ಬರೋದು ತಾನೆ, ರೆಸ್ಟ ತುಗೊಳ್ಳಿ ಸರಿ ಹೋಗತ್ತೆ' ಅಂದಿದ್ರಿ. ಅವರೇನು ಬೇಕು ಅಂತ ಲಾಸ್ಟ ಸೀಟಲ್ಲಿ ಕೂತು ಬಂದಿದ್ರಾ, ರೆಸ್ಟ ಕೂಡ ತುಗೊಂಡಿದ್ರೂ, ನೀವೆನು ಅದೇ ನಿಮ್ಮ ರೆಡಿಮೇಡ ಉತ್ತರಗಳ ಬುಟ್ಟಿಯಿಂದ ಎರಡು ಉತ್ತರ ತೆಗೆದು ಹಲ್ಲು ಕಿರಿದಿದ್ರಿ" ಅಂತ ಚೆನ್ನಾಗೆ ತರಾಟೆಗೆ ತೆಗೆದುಕೊಂಡ್ಲು, "ಅಲ್ಲಾ ಸ್ಲೀಪರ ತುಗೊಬೇಕಿತ್ತು ಅಂತ ಹೇಳಿದ್ದು ತಪ್ಪಾ" ಅಂದೆ, "ರೀ ಸ್ಲೀಪರ್ ಸಿಕ್ಕಿರಲಿಲ್ಲ, ಆದ್ರೂ ನಿಮಗೆ ಆಕ್ಸಿಡೆಂಟ್ ಆಗಿ ಏನಾಯ್ತೊ ಅಂತ ನೋಡ್ಲಿಕ್ಕೆ ಓಡೋಡಿ ಬಂದಿದ್ರು, ಅದಕ್ಕೆ ಪ್ರತಿಯಾಗೆ, ಆ ನೋವು ನಿಮ್ಮೊಂದಿಗೆ ಹಂಚಿಕೊಂಡು ನಾಲ್ಕು ಮಾತಾಡ ಬಯಸಿದ್ರೆ, ನಿಮ್ಮ ಥಟ ಅಂತ ಹೇಳಿ ಉತ್ತರಗಳು" ಅಂದ್ಲು "ಅಯ್ಯೊ ನಾನ್ ಹಾಗೆ ಮಾತಾಡಬಾರ್ದಿತು ಎನ್ ಅನ್ಕೊಂಡ್ರೊ ಏನೊ" ಅಂದೆ "ಏನೂ ಇಲ್ಲಾ, ನಾನಿದ್ನಲ್ಲಾ, ಎಲ್ಲ ಕೇಳಿದೆ, ಅವರು ಎಷ್ಟೇ ಕಷ್ಟ ಆದ್ರೂ ಬಂದಿರೋರು, ಅದನ್ನ ನಿಮಗೆ ಹೇಳಬಯಸಿದ್ದರು ಅಷ್ಟೇ" ಅಂದ್ಲು. "ಅಂತೂ ಸೂಪರ್ ಸೊಸೆ ಅಂತ ಒಳ್ಳೇ ಛಾಪು ಮೂಡಿಸಿದೆ ಅನ್ನು" ಅಂದೆ. "ನಿನ್ನೆ ನಿಮ್ಮ ತಂಗಿ ಫೋನು ಮಾಡಿದ್ಳಲ್ಲ, ಹಾಸ್ಟೆಲ್ನಲ್ಲಿ ಅಡಿಗೆ ಸರಿ ಮಾಡ್ತಿಲ್ಲಾ ಅಂತ, 'ಹೊಟೆಲಗೆ ಹೋಗು' ಅಂತ ನಿಮ್ಮ ಪುಕ್ಕಟೆ ಸಲಹೆ, ಆಮೇಲೆ ನಾ ರಾತ್ರಿ ಫೋನು ಮಾಡಿ ಘಂಟೆ ಕಾಲ ಮಾತಾಡಿದೆ, ಅಲ್ಲಿನ ಅಡುಗೆ, ಅದತಿಂದು ಹೊಟ್ಟೆ ಕೆಟ್ಟಿದ್ದು ಎಲ್ಲಾ, ಫೋನಿಡೊವಾಗ, ಅವಳೇ ಹೇಳಿದ್ಲು, 'ಏನ್ ಅತ್ತಿಗೆ ಇನ್ನೊಂದು ವರ್ಷ ಹೇಗೊ ಕಳೆದು ಹೋಗುತ್ತೆ, ಅಲ್ಲದೇ ಯಾವ ಹಾಸ್ಟೆಲನಲ್ಲಿ ಅಷ್ಟು ಚೆನ್ನಾಗಿ ಊಟ ಸಿಗುತ್ತೆ, ಅದಕ್ಕೆ ಆವಾಗಾವಾಗ ಸ್ವಲ್ಪ ಬದಲಾವಣೆ ಅಂತ ಹೊಟೇಲಿಗೆ ಹೋಗ್ತೀನಿ' ಅಂತ, ಅಲ್ಲಿ ನಿಮ್ಮ ಹೊಟೆಲಿನ ಸಲಹೆ ಅವಳಿಗೆ ಬೇಕಿರಲಿಲ್ಲರೀ, ಅಲ್ಲಿರೊ ಕಷ್ಟ ಯಾರಿಗಾದ್ರೂ ಹೇಳ್ಕೊಬೇಕು ಅಂತಿತ್ತು" ಅಂದ್ಲು. ಹೀಗೆ ಒಂದೊಂದೇ ಘಟನೆ ಪುರಾವೆ ಸಮೇತ ಅವಳು ಹೊರಗೆ ತೆಗೀತಾ ಇದ್ರೆ, ನನ್ನ ತಪ್ಪುಗಳು ನನಗೆ ಗೊತ್ತಾಗ್ತಾ ಇದ್ವು. ಹಗರಣ ಹೊರಬಂದ ರಾಜಕಾರಣಿಯಂತೆ ಹತಾಶನಾಗಿದ್ದೆ, "ನಂಗೆ ಮೊದ್ಲಿಂದಾನೂ ಅಷ್ಟೆ, ಶಾಲೇಲಿ ಕೂಡ ನಾ ಮೊದಲು ತಾ ಮೊದಲು ಅಂತ ಪ್ರಶ್ನೆಗೆ ಉತ್ತರ ಹೇಳ್ತಾ ಇದ್ದೆ, ಅದೇ ರೂಢಿ, ಕೇಳಬೇಕು ಅಂತ ಯಾವಾಗ್ಲೂ ಅನಿಸಿರಲಿಲ್ಲ, ಈಗ ನೀ ಹೇಳಿದಾಗಲೇ ಗೊತ್ತಾಗಿದ್ದು" ಅಂತಂದೆ, "ರೀ ಸಪ್ಪೆ ಮುಖ ಯಾಕೆ ಮಾಡಿದ್ರಿ, ಯಾರು ತಪ್ಪು ಮಾಡಲ್ಲ, ನನ್ನ ಎಷ್ಟೊ ತಪ್ಪು ನೀವು ತಿದ್ದಿಲ್ವಾ" ಅಂದು ಹೊಟ್ಟೆಗೆ ಕಚಗುಳಿಯಿಟ್ಟು ನಗಿಸಿದ್ಲು. "ಹೋದ ಜನ್ಮದಲ್ಲಿ ಲಾಯರ(ವಕೀಲ) ಎನಾದ್ರೂ ಆಗಿದ್ಯಾ, ಅಧಾರ ಸಮೇತ ಎಲ್ಲವಾದ ಮಂಡಿಸಿ ಸೋಲಿಸಿ ಬಿಡ್ತೀಯ" ಅಂದೆ "ಎಲ್ಲಾ ನಿಮ್ಮಂಥ ಲೈಯರ್(ಸುಳ್ಳುಗಾರ) ಗಂಡ ಸಿಕ್ಕ ಮೇಲೆ ಕಲಿತದ್ದು" ಅಂದ್ಲು, "ನಾನ್ಯಾವಾಗ್ಲೇ ಸುಳ್ಳು ಹೇಳಿದೆ" ಅಂತ ಕೇಳಬೇಕೆನಿಸಿತು, ಆದ್ರೆ ಇನ್ನೊಂದು ಕಂತೆ ತಪ್ಪುಗಳನ್ನು ಎಲ್ಲಾದ್ರೂ ಹೊರತೆಗೆದಾಳು ಅಂತ ಸುಮ್ಮನಾದೆ.
ಯೋಚನೆ ಮಾಡಿ ಎಷ್ಟು ಸಾರಿ, ಹೀಗೆ ಮಾಡಿಲ್ಲ, ಗೆಳೆಯ ಫೋನು ಮಾಡಿ ಬೈಕು ಕಳೆದುಹೊಯ್ತೋ, ಅಂದ್ರೆ ಪೋಲೀಸ ಕಂಪ್ಲೇಂಟ ಕೊಡೊ ಅಂತೀವೆ, ಅದನ್ನ ಅವ ಆಗ್ಲೇ ಮಾಡಿರ್ತಾನೆ, ಟ್ರೇನ ಮಿಸ್ಸ ಆಯ್ತೊ ಅಂದ್ರೆ ಬೇಗ ಹೊಗಬೇಕಿತ್ತು, ಅಂತೀವಿ, ಅವರೂ ಪ್ರಯತ್ನ ಮಾಡಿರ್ತಾರೆ ಆಗಿರಲ್ಲ, ಗಂಡ ಮನೆಗೆ ಲೇಟಾಗಿ ಬಂದು, ಆಫೀಸಲ್ಲಿ ಕತ್ತೆ ಥರ ಕೆಲ್ಸಾ ಮಾಡಿ ಬಂದ್ರೆ ಈ ಬಸ್ಸು ಬೇರೆ ರಶು ಸಾಕಾಗಿದೆ ಎನ್ ಮಾಡ್ಲಿ ಅಂದ್ರೆ, ಹೇಂಡ್ತಿ ಥಟ್ ಅಂತ ಬೈಕು ತುಗೊಂಡು ಹೋಗಿ, ಅಂದ್ರೆ, ಅದು ಅವನಿಗೂ ಗೊತ್ತು, ಗ್ಯಾಸ ತೀರಿ ಹೋಗಿ ಸ್ಟವ್ ಮೇಲೆ ಅಡುಗೆ ಮಾಡಿ ಸಾಕಾಯ್ತು ಅಂತ ಅವಳು ಹೇಳಿದ್ದಕ್ಕೆ, ಮೊದಲೇ ಗ್ಯಾಸ್‌ಗೆ ಬುಕ್ ಮಾಡಬೇಕಿತ್ತು ಅಂದ್ರೆ. ಅಲ್ಲಿ ಯಾರಿಗೂ ಸಲಹೆ ಅಥವಾ ಉತ್ತರ ಬೇಕಿಲ್ಲ, ಬೇಕಿರೋದು ಕೇಳೊ ಕಿವಿಗಳು ಮಾತ್ರ.
ಸಂಜೆ ಊರಿಗೆ ಫೋನು ಮಾಡಿ ಘಂಟೆ ಮೇಲೆ ಮಾತಾಡಿದೆ, ಏನೊ ಮನಸ್ಸಿಗೆ ಶಾಂತಿ ಅನಿಸಿತು, ಫೋನು ಬಿಲ್ಲು ಬಂದಾಗ ಸ್ವಲ್ಪ ಅಶಾಂತಿ ಆಗಬಹುದು, ಆದರೆ ಇಂಥ ಸಂಭಾಷಣೆಗೆ ಆ ಬೆಲೆ ಇನ್ನೂ ಕಮ್ಮಿಯೇ ಅನಿಸಿಬಿಡುತ್ತದೆ, ಹೀಗೆ ಎನೊ ಮತ್ತೆ ಥಟ ಅಂತ ಹೇಳ್ತಾ, ಅಲ್ಲಲ್ಲ ನಿಮ್ಮಿಂದ ಕೇಳ್ತಾ ಕೂಡ ಮತ್ತೆ ಸಿಕ್ತೀನಿ... ನಿಮಗೇನನ್ನಿಸಿತೊ ಹೇಳಿ ನಾನು ಕೇಳ್ತೀನಿ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/that-amta.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು